(ಬಾಳ್ಯಾ , ತನ್ನ ಗೆಳೆಯ ಸಂಗ್ಯಾನನ್ನು ಹುಡುಕುವಂತೆ ಆಭಿನಯಿಸುತ್ತ ಬರುವನು)

 

ಬಾಳ್ಯಾ : ಹುಡುಕಲಿನ್ನೆಲ್ಲಿ ನೋಡಲಿನ್ನೆಲ್ಲಿ
ಎನ್ನ ಗೆಳೆಯನಾ
ಸಾವ್ಕಾರ ಸಂಗ್ಯಾನ ||||
ಓಣ್ಯೋಣಿ ತಿರುಗುತ ಬಂದೇನ ಲಗುಮಾಡಿ
ಎನ್ನ ಬಿಟ್ಟ ಅಗಲಿ ಹೋದಾನೊ ದಾವಲ್ಲಿ||
ಲಂಗೋಟಿ ಗೆಳಿತಾನ ಅಗಲುದು ಬ್ಯಾಡಿನ್ನ
ಎಲ್ಲಿ ಹುಡುಕಲಿ ನನ್ನ ಬಲ್ಲಿದ ಗೆಳೆಯಾನ||

ಓಹೋ! ನನ್ನ ಗೆಳೆಯಾ ಸಂಗಣ್ಣ ಹೋಗಿ ಇಂದಿಗಿ ಎಂಟ ದಿನಾ ಆದುವು. ಅವನ ಭೇಟಿ ನನಗಿಲ್ಲಾ ನನ್ನ ಭೇಟಿ ಅವನಿಗಿಲ್ಲಾ. ಹಿಂಗs  ಹುಡುಕುತ್ತಾ ಹೋದರ ಅವನೆಂದೂ ಸಿಗಾಕಿಲ್ಲಾ. ಇಲ್ಲಿ ಒಬ್ಬ ಹಿರ್ಯಾ ನಿಂತಾನ. ಅವನ್ನಾದರು ಕೇಳಿ ನೋಡೋಣು. ಏನಪಾ ಹಿರ್ಯಾ….

ಮೇಟಿತಾಳ : ಹಾ.

ಬಾಳ್ಯಾ : ನನ್ನ ಗುರುತ ಸಿಗಲಿಲ್ಲೇನಪಾ?

ಮೇಟಿತಾಳ : ಏನಪಾ ನಿನ್ನ ಗುರುತು ಸಿಗಲಿಲ್ಲ ನೋಡು.

ಬಾಳ್ಯಾ : ಬಡವನ ಗುರುತಾ ಬೆನ್ನಿಗಿ ಬಿದ್ದ ಅಣ್ಣ ತಮ್ಮರs  ಹಿಡಿಯೋದಿಲ್ಲ, ನಿನಗ್ಹೆಂಗೆ ಸಿಕ್ಕಿತು?

ಮೇಟಿತಾಳ : ಏನೋ ಹುಡುಗಾ, ಮನಿ ಪ್ಯಾಟ್ಯಾಗ ಹರಕ ದೋತರ ಉಟಗೊಂಡ ತುಂಡ ಬೀಡಿ ಆರಿಸಿಕೊಂಡ ಅಡ್ಡಾಡತಿದ್ದಿ: ನೀನs ಅಲ್ಲಾ?

ಬಾಳ್ಯಾ : ಏನಪಾ, ಅವನೆಲ್ಲಾದರು ನಿನ್ನ ಮಗ ಆಗಿದ್ದಾನು, ಬರೋಬರಿ ಗುರುತ ಹಿಡಿ ಅಂತಿದ್ದೇನ್ನೋಡು.

ಮೇಟಿತಾಳ : ಏನಪಾ, ನಿನ್ನಿ ಏನೋ ತುಡುಗ ಮಾಡಿ ಕೈಯಾಗ ಕಾಲ್ಮರಿ ಹಿಡಕೊಂಡ ಓಡುತ್ತಿದ್ದಿ. ನೀನs ಅಲ್ಲೇನ?

ಬಾಳ್ಯಾ : ಅವನೆಲ್ಲಾದರು ನಿನ್ನ ತಮ್ಮ ಆಗಿದ್ದಾನು, ಬರೋಬರಿ ಗುರುತ ಹಿಡಿ ಅಂತಿದ್ದೇನ್ನೋಡಪಾ.

ಮೇಟಿತಾಳ : ಹಾಂಗಿದ್ದರ ನನಗೇನ ನಿನ್ನ ಗುರುತ ಸಿಗಲಿಲ್ಲ. ನೀನ ಹೇಳಂತಿದ್ದೇನ್ನೋಡು.

ಬಾಳ್ಯಾ : ಏನಪಾ ಹಿರ್ಯಾ. ನಾ ಬಂದ ಬೈಲಹೊಂಗಲದಾಗಿನ ಒಬ್ಬ ಬಡವ ಅಂತ ತಿಳಿಕೊ.

ಮೇಟಿತಾಳ : ಏನಪಾ, ಬೈಲಹೊಂಗಲದ ಬಡವರಿಗೆ ಹೆಸರ ಇರೋದಿಲ್ಲೇನು?

ಬಾಳ್ಯಾ : ನನಗ ಬಂದ ಬಡವ ಬಾಳ್ಯಾ, ಬಡವ ಬಾಳ್ಯಾ ಅಂತಾರ ನೋಡು.

ಮೇಟಿತಾಳ : ಏನಪಾ, ನೀ ಬಡವ ಬಾಳ್ಯಾ ಅನ್ನೋದು ನನಗಾದರು ತಿಳೀತು, ಕುಂತ ಮಂದಿಗಾದರು ತಿಳಿದಬಂತು. ಬಡವ ಬಾಳಣ್ಣ ನನ್ನ ಕರದಂಥಾ ಕಾರಣೇನು?

ಬಾಳ್ಯಾ : ಏನೋ ಹಿರ್ಯಾ, ನನ್ನ ಗೆಳೆಯಾ ಸಾವ್ಕಾರ ಸಂಗಣ್ಣನ ನೋಡಿದ್ದರ ಹೇಳ ಬೇಕಾದೀತ ನೋಡು.

ಮೇಟಿತಾಳ : ಬಡವ ಬಾಳಣ್ಣ, ಸಾವ್ಕಾರ ಸಂಗಣ್ಣಂದರ ಯಾರಂತ ನನ್ನಗ್ಗೊತ್ತಿಲ್ಲಾ. ಖೂನಾ ಗುರುತಾ ಹೇಳಿದರ ಹೇಳೇನ್ನೋಡು.

ಬಾಳ್ಯಾ : ಹತ್ತೂ ಬೆಳ್ಳಗಿ ಹತ್ತ ಉಂಗುರಾ ಇಟ್ಟಗೊಂಡ, ತಲಿಮ್ಯಾಲ ಜರದ ರುಂಬಾಲ ಸುತ್ತಿಕೊಂಡ, ನಡಕೊಂಡ ಬಾರೋ ಆಂದರ ಕುಣಕೋತ ಬರತಾನು,  ಮಾತಾಡಿಕೊಂಡ ಬಾ ಅಂದರ, ಹಾಡಿಕೋತ ಬರುವಂಥಾ ಚಿಗರಮೀಸಿ ಹುಡುಗ ಯಾವನಾದರೂ ಇದ್ದರ, ಅವನs ಸಾವ್ಕಾರ ಸಂಗ್ಯಾ ಅಂತ ತಿಳಿ  ನೋಡು.

ಮೇಟಿತಾಳ : ಛೇ ಛೇ, ಹಿಂತಾ ಹುಡುಗನ್ನ ನಾ ಏನ ನೋಡಿಲ್ಲಾ. ಕೆಳಗಿನ ಪ್ಯಾಟಿಗಿ  ಹೋಗಿ ನೋಡಿದರೆ ಸಿಕ್ಕಾನ ನೋಡು.

ಬಾಳ್ಯಾ : ಎನಪಾ, ನಾನಾದರು ಕೆಳಗಿನ ಪ್ಯಾಟಗಿ ಹೋಗತೇನು, ನೀನಾದರು ಹೋಗುವಂಥವನಾಗು.

(ಮೇಟಿತಾಳ ಹಿಂದೆ ಸರಿಯುವನು. ಬಾಳ್ಯಾ ರಂಗದ ಒಂದು ಮಗ್ಗಲಿಗೆ ಮತ್ತೆ ಹುಡುಕುತ್ತ ಸರಿಯುವನು.)