ಗಂಗಾ :

ಪತ್ತರ ಬರೆಯಿರಿಮಾಸ್ತರಾ ನನಗೊಂದು ॥ಪಲ್ಲವಿ ॥

ಸರದಾರ ಸಂಗ್ಯಾಗಬರಬಾರದಂತ ॥
ಕಡಿಯಬೇಕಂತಮಡ್ಯಾರ ಮಸಲತ್ತಾ ॥
ಬೈಲವಾಡದೂರಿಗೆಬರಬಾರದಿಲ್ಲಿಗಿ ॥

ಮಾಸ್ತರಾ, ಏ ಮಾಸ್ತರಾ ನನಗೊಂದು ಪತ್ರ ಬರದ ಕೊಡ….. ನನ್ನ ಸರದಾರ ಸಂಗ್ಯಾಗ ಇಲ್ಲಿಗಿ ಬರಬ್ಯಾಡಂತ ಅವ ಬಂದ್ರ ಕಡ್ಯೊ ಹೊಂಚ ಹಾಕ್ಯಾರಂತ ಲಗೂ ಬರದ ಕೊಡರಿ.

(ಪತ್ರ ಬರೆಯಿಸಿ ಹಳಬನ ಕಡೆಯಿಂದ ಬೈಲಹೊಂಗಲಕ್ಕೆ ಸಂಗ್ಯಾಗ ಮುಟ್ಟಿಸಲು ಕೊಟ್ಟು ಕಳಹುತ್ತಾಳೆ. ಆದರೆ ಆ ಪತ್ರವನ್ನು ತೆಗೆದುಕೊಂಡು ಹಳಬ ಸಂಗ್ಯಾನನ್ನು ವಿಚಾರಿಸಿದಾಗ ಅಲ್ಲಿ ಇದ್ದ ಬಾಳ್ಯಾ ತಾನೇ ಸಂಗ್ಯಾ ಎಂದು ಪತ್ರ ತೆರೆದು ನೋಡುತ್ತಾನೆ. ಹಳಬ ಹೋದ ಮೇಲೆ ಅದನ್ನು ಹರಿದು ಹಾಕಿ ಗಂಗೆಯೇ ಬರೆಯಿಸಿದಂತೆ ಮತ್ತೊಂದು ಪತ್ರ ತಯಾರಿಸುತ್ತಾನೆ).

ಬಾಳ್ಯಾ :

ನಾಡಿನೊಳಗ ದೊಡ್ಡ ಹಬ್ಬನಾಗರಪಂಚಮಿ ॥ಪಲ್ಲವಿ ॥

ಒಬ್ಬರಕಿಂತ ಒಬ್ಬರ ಹೆಚ್ಚಆಡೋರು ಜೋಕಾಲಿ ॥
ಗಂಗಿ ಸಂಗ್ಯಾಗ ಬರದ್ದಾಳಬರಬ್ಯಾಡ ಬೈಲವಾಡಕ ॥
ಪತ್ರ ಕೈಯ ತಪ್ಪಿ ದೊರಕೀತಎನ್ನ ನಸೀಬಕ ॥
ನಾ ಸಂಗ್ಯಾಗ ಹೇಳಬೇಕಹೋಗುಣು ಬ್ವೆಲವಾಡಕ ॥
ಗಂಗಿ ಕರದಾಳ ಚಾಲಿವರದನಿಲಬ್ಯಾಡ ಅಲುಬತ್ತ ॥

ಇದು ನನ್ನ ನಸೀಬಾ ಈ ಪತ್ರ ಹರಿದು ಹಾಕಿ. ಸಂಗ್ಯಾನ ಅಲುಬತ್ತ ಬರುವಂತೆ ಅವಳೇ ಬರದ ಹಾಗೆ ಮತ್ತೊಂದು ಪತ್ರ ತಯಾರಿಸುತ್ತೇನೆ. (ಸಂಗ್ಯಾ ಪತ್ರ ಓದಿ ಒಲ್ಲೆನೆಂದರೂ ಬಾಳ್ಯಾ ಬಿಡಲೊಲ್ಲ).

ಸಂಗ್ಯಾ :

ತಾಯಿ ಆರತಿ ಮಾಡತೀಳೊ ಬಾಳ್ಯಾ ನನಗ
ಕಳಸಗಿಂಡಿ ಬಿತ್ತೊ ಕೆಳಗ
ಮನಿ ಕಳಸ ಮುರಿತಂತ ತಿಳಿತೊ ಎನಗ ॥

ತಾಯಿ ಹೇಳ್ಯಾಳೊ ನನಗ ಬ್ಯಾಡಂತಾ
ಹಾಕಿದುಗುಳ ದಾಟಿಕೊಂತಾ
ಮೀರಿ ಬಂದೇನ ಗೆಳಿಯಾ ತಾಯಿ ಮಾತಾ ॥

ನಿನ್ನ ಅವಸರಕಾಗಿ ಉಣಲಿಲ್ಲ
ಕೈಯ ತೊಳಿಲಿಲ್ಲಾ
ಸೋದರತ್ತಿ ಮಾವಾಗ ಹೇಳಲಿಲ್ಲ ॥

ಕೇಳು ಬಾಳಣ್ಣಾ ಇದೂ ಅಲ್ಲದೆ ನನಗೆ ಕನಸು ಒಂದು ಬಿದ್ದಿತ್ತು.

ಎಂಥಾ ಸ್ವಪ್ನವುಎನಗಬಿದ್ದೀತೊ ಗೆಳಿಯಾ ॥ಪಲ್ಲವಿ ॥

ಹಂದರ ಹಾಕತ್ತೋನಿಬ್ಬಣ ಬಂದಿತ್ತೊಲಗ್ನವಾಗತಿತ್ತೊ ॥
ಕೈಯಲ್ಲಿ ಕಂಕಣಮೈಯಿಗಿಅರಿಷಿಣ ಹಚ್ಚತ್ತೊ ॥

ಇದೂ ಅಲ್ಲದೇ ಹತ್ತೆಂಟು ಅಪಶಕುನಗಳೂ ಕಾಣಿಸಿದವು ಬಾಳಣ್ಣಾ ನಾನು ಬೈಲವಾಡಕ್ಕೆ ಬರುವುದಿಲ್ಲಾ.

ಬಾಳ್ಯಾ ಬಾಗಿಲ ಬಡಿದ ಪಾವಡ ಬಿತ್ತೊ
ಬರುದಿಲ್ಲೊ ತುರತSಕ ॥

ಹೀಂಗ ಅಪಶಕುನ ಆತ ಗೆಳಿಯಾ
ಬರುದುಲ್ಲೊ ಬೈಲವಾಡSಕ ॥ ॥

ಬಾಳ್ಯಾ ಸಣಿಕಿ ಗುದ್ದಲಿ ಇದರಿಗಿ ಬಂದು
ಬರುದಲ್ಲೊ ತುರತSಕ ॥

ಹಿಂಗ ಅಪಶಕುನ ಆತ ಗೆಳೆಯಾ
ಬರುದಿಲ್ಲೊ ಬೈಲವಾಡSಕ ॥

ಬಾಳ್ಯಾ ಬೆಕ್ಕನಾದರ ಅಡ್ಡ ಬಂತೊ
ಬರುದುಲ್ಲೊ ತುರತSಕ ॥

ಹೀಂಗ ಅಪಶಕುನ ಆತ ಗೆಳೆಯಾ
ಬರುದುಲ್ಲೊ ಬೈಲವಾಡಕ ॥

ಬಾಳ್ಯಾ :

ಬೈಲವಾಡಕ ಹೋಗುದ ಬಿಟಕೊಟ್ಟಿ
ಛೀ ಸಂಗ್ಯಾ ಸುಮ್ಮಾಕ ॥

ಕರಿಕಳಿಸ್ಯಾಳೊ ಗಂಗಾ ಸದ್ಯೇಕ
ತುರತ ಹೋಗಬೇಕ ಭೆಟ್ಟಿಯಾಗಲಾಕ ॥

ನಾಗರ ಪಂಚಮಿ ಹಬ್ಬಕ ಕೊಬ್ಬರೀ
ಕುಬಸ ಕೊಡಲಾಕ ॥

ದಿನಮಾನ ಬಂದಾವೊ ಈ ಕ್ಷಣಕ
ನಡಿ ಸುಮ್ಮಾಕ ತಡ ಯಾಕ ॥

(ಸಂಗ್ಯಾ, ಬಾಳ್ಯಾ ಇಬ್ಬರೂ ಕೂಡಿ ಬೈಲವಾಡಕ್ಕೆ ಹೋಗುತ್ತಾರೆ ಕೆರೆಯ ದಂಡಯ ಮೇಲೆ ಗಂಗೆಯೂ ಬರುತ್ತಾಳೆ).

ಮುಮ್ಮೇಳ : ಹಿಮ್ಮೇಳ :

ಹೀಂಗ ಸಂಗ್ಯಾ ಬಾಳ್ಯ ಕೂಡಿಕೊಂಡು
ಹೊಂಟಾರೊ ಬೈಲವಾಡಕ ॥ಪಲ್ಲವಿ ॥

ಹೋಗಿ ನಿಂತಾರೊ ಗರಿಕೀಲಿ
ಬೈಲವಾಡ ಕೆರಿಮ್ಯಾಕ ॥

ಲಗಳೇರ ಗಂಗಾ ಬಂದಾಳೊ
ಅಲ್ಲಿಗಿ ಆದ ಯಾಳೇಕ ॥

ಸಂಗ್ಯಾ ಅನ್ನತಾನ ಕೊಬರಿ ಕುಬಸಾ
ಹಿಡಿಗೆಳತಿ ತಡಯಾಕ ॥

ಗಂಗಾ, ನೀನು ತಿಳಿಸಿದ ಹಾಗೆ ಇಂದು ಕೊಬರಿ ಕುಬಸಾ ತೆಗೆದುಕೊಂಡು ಬಂದಿರುವೆ ತೆಗೆದುಕೊ.

ಗಂಗಾ :

ಒತ್ತರದಿಂದಲೆ ಪತ್ತರ ಬರದ
ಮುಟ್ಟಲಿಲ್ಲೇನೊ ಬಂದ ॥ಪಲ್ಲವಿ ॥

ಫಾತ ಬಾಳ್ಯಾ ಬೇತ ಮಾಡಿ
ಕರದ ತಂದಾನ ಇಂದ ॥

ಈರ‌್ಯಾ ಇರಪಕ್ಷಿ ಬಸವಂತ
ಮಾಡ್ಯಾರೊ ಕೊಲ್ಲೂ ಬೇತ ॥

ನಿನ್ನ ಚೆಲ್ವಿಕಿ ಹುಣ್ವಿ ಚಂದ್ರ
ಹ್ಯಾಂಗ ಇರಲ್ಯೋ ಮರತ॥

ಇಂದ ರಾತ್ರಿ ಆದೀತೊ ಘಾತ
ತಾಳಲಾರಿನೊ ತಾಪ ॥

ಇಂದ ಮುಳಗತೈತ್ಯೊ ಕಾಣಾ ಕಾಣಾ
ಚಂದ್ರನಂಥಾ ರೂಪಾ ॥

ಸಂಗ್ಯಾ ನಿನಗೆ ಪತ್ರ ಬರೆಸಿ ಕಳಿಸಿದ್ದೆ ಇಲ್ಲಿಗೆ ಬರಬೇಡವೆಂದು ಯಾಕೆ ಬಂದೀ ಸಂಗಾ…. (ಅಳುತ್ತಾಳೆ).

ಸಂಗ್ಯಾ :

ನನ್ನ ಮಾರಿ ನೋಡಿ ಮತ್ಯಾಕಳತಿ
ಹೇಳಾಕೆ ನನ್ನ ಗೆಳತಿ ॥ಪಲ್ಲವಿ ॥

ಮನಸಿನೊಳಗ ಯಾಕ ಅಳತಿ
ಚಿಂತೇಲೆ ಏವ ಭ್ರಾಂತಿ ॥

ಯಾರ ಬೈದರೇನ ಗಂಗಾ ನಿನ್ನ
ದುಕ್ಕ ಪಡತಾರೇನ ॥

ಹಿಂಗ ಭಾಸಿಕೊಟ್ಟ ಮ್ಯಾಲ ಗಂಗಾ
ಮೋಸ ಮಾಡುವರೇನಾ ॥

ಚಿಕ್ಕಂದಿರತ ಕೂಡಿದ ಮೈತ್ರಿ
ಆಗಲಿಸಬೇಕಂತಿ ॥

ಅಗಲು ಹಾಂಗಿಲ್ಲ ಅಂವಾ ನಾನಾ
ಗಟ್ಯಾಗಿಕೊಳ ಗೆಳತಿ ॥

ಇಸವಾಸ ಗೆಳಿತಾನಾ
ಭಾಳೈತಿ ಬಾಳ್ಯಾಂದಾ ॥

ಗಂಗಾ, ಬಾಳ್ಯಾಂದು ನಂದು ಚಿಕ್ಕಂದಿರತ ಗೆಳಿತಾನ ಅಂವಾ ಮೋಸಾ ಮಾಡಾಕ ಸಾಧ್ಯs ಇಲ್ಲಾ. ಅಷ್ಟೇ ಇಸವಾಸ ನನ್ನ ಮ್ಯಾಲತಿ ಅಂದು ಅವನೇ ಹೇಳಿ ನಿನ್ನಲ್ಲಿಗೀಗ ಕರೆದುಕೊಂಡು ಬಂದಿರುವನು.

ಗಂಗಾ :

ಸಿಟ್ಟ ಮಾಡಬ್ಯಾಡಕೊರಳ ಮುಟ್ಟಿ ಹೇಳುವೆ॥ಪಲ್ಲವಿ ॥

ಬರಬ್ಯಾಡಂತಬರದಿನ್ಯೊ ನಿನಗಾ
ನೀ ಬಂದ್ಯೋ ಜೀವಾ ಕೊಡಲಾಕ ॥

ಪರಿಪರಿ ಹೇಳಿನ್ನೊ ಹೊಂಗಲದೂರಾಗ
ಅಂಥಾದೇನು ಮಾಡಿದ್ದೊ ಬಾಳ್ಯಾ ನಿನಗ ॥

ಉಂಡ ಉಪಕಾರಾ ತೀರಿಸಿದ್ಯೊ ನೀನಾ
ನಿರವಂಶ ಆಗಲಿ ಮನಿಯಲ್ಲಾ ನಿನ್ದಾ ॥

ಬಾಳ್ಯಾನ ಮಾಡಿದೊ ಪಿತೂರಾ ಹಾ
ಸಂಗಾ ತಿಳಿಲಿಲ್ಲೇನೋ ನಿನಗ ಜರಾ ॥

ಬಾಳ್ಯಾನ ಮಾರಿಗೆ ಬೆಂಕೀ ಹಚ್ಚತ್ಯೊ ಸಂಗಾ
ಬಾಳ್ಯಾನ ಗುಣ ಬಾಳ ಹೀನೋ ॥

ಮಾಡತಾರ ಖೂನೊ….ಸಂಗಾ
ತಿಳಿಲಿಲ್ಲೊ ನಿನಗ ಜರಾ ॥

ಪ್ರಾಣಕಾಂತಾ, ನಿನ್ನ ಗೆಳೆಯಾ ನಿನ್ನ ಮೇಲೆ ತಿರಗಿ ಬಿದ್ದರೆ ಯಾರ ಯತ್ನ ಏನದ ? ಬೇಲೆದ್ದು ಹೊಲಾ ಮೇದಂತಾಯ್ತು. ಇಲ್ಲಿಗೆ ನಿನ್ನ ರಿಣಾ ಕಡಿತು. ಕಾಲು ಕೊಡಿರಿ ತಮ್ಮ ಪಾದಕ್ಕೆ ಬೀಳುವೆ.

ಬಾಳ್ಯಾ :

ನಡಿ ಸಂಗ್ಯಾ ಹೋಗಾಣು ಹೊಂಗಲಕ
ತಡವು ಮಾಡುವುದ್ಯಾಕ ॥

ಪುರಸೊತ್ತಿಲ್ಲ ನನಗಿಲ್ಲಿ ಇರೋದಕ
ದವಡ ಮಾಡ ಹೋಗೋಣ ಬಾಜಾರಕ ॥

ಗಂಡಮೆಟ್ಟ ಗದಗಿನ ಶಾಪೂರಾ
ಬಸವಣ್ಣ ದೇವರಾ ಮಾಡುವೆ ನಮಸ್ಕಾರಾ ॥

ಸಂಗಣ್ಣಾ, ಹೋಗೋನು ನಡಿಪಾಯಿನ್ನಾ ಸೂಳಿ ಮುಪ್ಪಾಗಿ ಗರತಿಯ ಹಾಗೆ ಮಾತನಾಡುತ್ತಿದ್ದಾಳೆ. ಸಂಗಣ್ಣ ನನ್ನದ್ಯಾವ ತಪ್ಪು. ಏನ ಅನವಳು ಆಕಿ ಕೂಡ ನೀ ನಾಕ ಮಾತ ಮಾತಾಡಿದ್ದಂಗಾತಿ. ಕೊಬರಿ ಕುಬಸಾ ಕೊಟ್ಟಾಂಗಾತಿ. ಆಕಿ ಅಣ್ಣ ತಮ್ಮಂದೇರ ಬಂದಗಿಂದಾರು ನಡೀಪಾ ಲಗೂನ.

ಸಂಗ್ಯಾ : ನಡಿಯುವಂಥವನಾಗು ಬಾಳಣ್ಣಾ…..(ಸ್ವಲ್ಪ ದೂರ ಹೋಗಿ) ಇಲ್ಲೆ ಬೈಲವಾಡ ಊರಲ್ಲಿ ಇದ್ದರಾಯಿತು. ಬಾಳಣ್ಣಾ ಈಗ ರಾತ್ರಿಯಾಗುತ್ತ ಬಂದಿದೆ. ಹೋಗುದು ಬ್ಯಾಡಾ.

ಬಾಳ್ಯಾ : ಯಾಕ ಸಂಗಣ್ಣಾ, ರಾತ್ರಿ ಆದ್ರ ಏನಾಯ್ತು. ಇಬ್ಬರ ಇರಲಾಕಾಗೀ ಅಂಜೋದ ?… ನನಗೇನೂ ಭಯ ಇಲ್ಲ. ನೀ ಯಾಕ ಅನಮಾನ ಮಾಡಾಕಹತ್ತಿದೀ ಸಂಗಣ್ಣಾ ? ನಡಿ ಭಡಾ ಭಡಾ ಹತ್ತ ಹೆಜ್ಜ್ಯಾಗ ಹೊಂಗಲ ಬರ‌್ತತಿ.

(ಮುಂದಕ್ಕೆ ಹೋಗುವಷ್ಟರಲ್ಲಿ ಬಾಳ್ಯಾ ತಂಬಿಗಿ ತಗೊಂಡ ಹೋಗೊ ನೆವ ಹೇಳಿ ಎಲ್ಲೊ ಮರಿ ಆಗ್ತಾನ. ಆಗ ಕಂಟಿ ಮರ‌್ಯಾಗ ಕುಂತಿದ್ದ ಈರ‌್ಯಾ ಇರಪಕ್ಷಿ ಬಸವಂತ ಢುರ್ ಎಂದು ಮುತ್ತಿಗೆ ಹಾಕುತ್ತಾರೆ)

ಈರ್ಯಾ :

ಸಂಗ್ಯಾನ ತರದಿದ್ರ ಈ ಹೊತ್ತಾ
ಕೊಟ್ಟೀತೊ ಮಸಲತ್ತಾ
ತಗೀರಪ್ಪ ಇನ್ನ ಮ್ಯಾಲ ತಂಬಾಕ ಬೇಡಾ ॥

ದೂರ ದನಿ ಕೇಳತೈತ್ಯೊ ಮತ್ತ ಮತ್ತ
ಬರತಾರವರು ಮಾತಾಡ್ತಾ
ಕುಡಗೋಲ ಕೊಡ್ಲಿ ತಯ್ಯರಿರ‌್ಲಿ ತಾಕಿತ್ತಾ ॥

ಸಂಗ್ಯಾ :

ಬಾಳ್ಯಾ ಅಂತಬಾಳ ನಂಬಿನ್ನೋ ನಾನಾ
ಬಾಳ್ಯಾ ನನಗ ನೀನುಮೋಸ ಮಾಡಿದೀಯಾ ? ॥

ಕಂಠಿಯ ಸರಕಾಗೀಪಂಟ ಹೇಳಿದ್ಯೊ ಬಾಳ್ಯಾ
ಬಂಟರ ಕೈಯಾಗಕೊಟ್ಟ ಹೊಂಟಿಯೊ ॥

ಜೋಡೆಮ್ಮಿ ಆಸೆಕಾಗಿಜೋಡಿಯ ಕಳಕೊಂಡ್ಯೊ
ಜಾಡಾ ನನ್ನನು ನೀನುಜಾಡೀಸೊದ್ದಿಯೋ ॥

ಸಾವಿರ ತೆಗೆದುಕೊಂಡುಸರಿದು ಹೋದೆಲ್ಲೊ ಬಾಳ್ಯಾ ॥
ಸಾವಿಗೆಯನ್ನನುಸೇರಿಸಿ ಹೋದಿಯಾ ॥

ಶಾರ ಗದಗಿನೂರಾಬಸವಣ್ಣ ದೇವರಾ
ಆತನ ದಾರಿನ್ನಾತಪ್ಪಿತೊ ದೂರಾ ॥

ಊರ ದಾರಿಯ ಬಿಟ್ಟು
ದೂರ ಬಂದೆವೂ ನಾವಾ
ಸುಳಿವಿಲ್ಲ ಯಾರ‌್ಯಾರದಾ ॥

ಹಳ್ಳದ ಜರಿ ಹಿಡದ
ಬಾಳ್ಯಾ ಇತ್ತೆಲ್ಲಿ ಹೊಂಟೆ
ಕಾಳರಾತ್ರಿಯ ಕತ್ತಲಿ ॥

ದೂರದಿಂದಲಿ ಕೊಳ್ಳಿ
ಭಾರಿ ಬೆಳಕವ ನೋಡಿ
ಹೆದರಿಕೆ ಆಗತೇತಿ ॥

ಓಡೇನಂದರ ಕಾಲ
ಇಡಲಾಕ ಆಗುದುಲ್ಲ
ಎಲ್ಲಿಗಿ ಕರದೊಯ್ಯುವಿಯೊ ॥

ಬಾಳ್ಯಾ ಬಾಳಪ್ಪಣ್ಣಾ ನೆವ ತಗದ ಹೋದಿಯಾ ನೀನು ಮೊದಲೇ ಮಿತ್ರದ್ರೋಹಿ ಅಂತ ತಿಳಿದಿದ್ದರ ನನಗೆ ಈ ಹಾಡು ಎಲ್ಲಿ ಬರುತ್ತಿತ್ತಪ್ಪ

ಈರ್ಯಾ :

ಗಡಾನ ಬರ್ರ‌್ಯೊ ತಮ್ಮಗಳಿರ‌್ಯಾ ಸಂಗ್ಯಾ ಪೋಗುವಾ
ಕತ್ತಲ ಯಾಳೆ ತಪ್ಪಿಸಿಕೊಂಡು ಊರ ಸೇರುವಾ ॥

ತಡವು ಯಾಕೆ ಮುಂಡಿ ಮಗನ ಚಂಡ ಕೊಯ್ಯುವಾ
ಕಾಲಮೀಟಿ ಸೀಳಿ ಅವನ ಚೆಲ್ಲಿ ಪೋಗುವಾ ॥

ಸಂಗ್ಯಾ :

ಈರಣ್ಣಾ ಕೇಳೊ ಮಾತಾಹ್ವಾದಾರೆಲ್ಲಾರೂ ಸತ್ತಾ ॥ಪಲ್ಲವಿ ॥

ಕಾಲರೆ ಬೀಳುವೆನು ಕೈಯಾರೆ ಮುಗಿವೆನು
ಕೊಲ್ಲಬ್ಯಾಡೊ ಈರಪ್ಪಣ್ಣಾಕೇಳರಿ ಮಾತಾ ॥

ಒಂದ ಹೆಣ್ಣಿಗೆ ನಾನಾಎರಡ ಹೆಣ್ಣ ಮಾಡುವೆನು
ಹೊಂಗಲದೂರಾಗಬೇಡಿದ್ದ ಕೊಡುವೆನು ॥

ನಿಮ್ಮ ಮೂವರೊಳಗನಾವೊಬ್ಬ ಸಣ್ಣ ತಮ್ಮಾ
ಕಾಲರೆ ಬೀಳುವೆನುಕೈಯರೆ ಮುಗಿವೆನು ॥

ಈರ್ಯಾ :

ಇರಪಕ್ಷಿ ಬಸವಂತಬರ್ರ‌್ಯೊ ಬೇಗ
ಸಂಗ್ಯಾ ಸಿಕ್ಕಾನಕೈಯಾಗ

ಸೊಕ್ಕಿಗಿ ಬಂದಸಿಕ್ಕಿದಾನೊ ಹಳ್ಳದಾಗ
ಕಲ್ಲ ಒಗದಮುರಿರೆಪ್ಪಾ ಕೈಕಾಲಾ ॥

ಕಡಿಯಿರೊನೆತ್ತಿಮ್ಯಾಲ
ಹ್ವಾದ ಅಬರುಬಂತೊ ಇಂದು ಕುಶಿಯಾಲಾ ॥

ಈರ್ಯಾ ಇರಪಕ್ಷಿ : ಬಸವಂತ :

ಸಂಗ್ಯಾ ಕೊಬರಿ
ಕುಬಸದ ಗಂಟ ತಗೀ ತಗೀ ॥

ಸಂಗ್ಯಾ ಗಂಗಿ
ಕರದಾಳೊ ಹೀಂಗ ನಡೀ ನಡೀ ॥

ಕಾಲ ಹಿಡದ
ಕಂಟ್ಯಾಗ ಇವನ ಎಳೀ ಎಳೀ ॥

ಇತ್ತಿ ಹಿಡದ
ಇವನ ಶಿರಾ ಹೆರೀ ಹೆರೀ ॥

(ಸಂಗ್ಯಾನನ್ನು ಕೊಲ್ಲುವರು)

ಈರ್ಯಾ :

ತಮ್ಮಗಳಿರ‌್ಯಾ ಯಾಕ ಹಿಂಗಾಗುವದೊ
ತಿಳಿಲಿಲ್ಲ ಮುಂದಿನ ಹೋನಾರಾ
ಸಂಗ್ಯಾನ ಪ್ರಾಣಾ ಸುಳ್ಳ ತಕೊಂಡೆವೊ ನಾವಾ ॥

ಕಣ್ಣಿಗೆ ಕತ್ತಲೆ ಬರುವದು
ಕಣ್ಣಿಗೆ ಕತ್ತಲೆ ಬರುವದು
ಮುಂದ ನನಗ ದಾರಿ ಕಾಣಲೊಲ್ಲದು ॥

ಕಡದ ಮ್ಯಾಲ ಸರಕಾರತಸ್ತಿ ಬಂತೊ
ತಮ್ಮಗಳಿರ‌್ಯಾ ಹಿಂಗ್ಯಾಕಾವದೊ
ತಿಳೀಲಿಲ್ಲೊ ಮುಂದಿನ ಹೋನಾರಾ ॥

ಪರಮ್ಮ :

ಯಾರ ಕೊಂದರೊ ಸಂಗ್ಯಾನ್ನಾ
ನನ್ನ ಅಳಿಯಾನಾ
ಸಂಗ್ಯಾನ ಕೊಂದವರ
ಚೆಂಡಿಯ ಚಿವುಟಲಿ॥

ಸಂಗಪ್ಪ ಎನ್ನ ಅಳಿಯ
ಬಂಗಾರದಂಥವಾ ॥
ಅರ್ಜಿಯ ಹಾಕತೇನಿ
ಮಾಮಲೆದಾರಗ ॥

ಈರ್ಯಾ :

ಯಾರ ಮ್ಯಾಲ ಅರ್ಜಿ ಮಾಡತಿ
ಹುಚ್ಚ ಹಾದರಗಿತ್ತಿ ॥

ಹಣಾ ನಿಂದ ಎಷ್ಟSತಿ ತೆಗಿ
ನೋಡೋಣ ಹೊಯ್ಮಲಿ ॥

ತಳವಾರ :

ಸಲಾಮು ತಂದೆಮುಜರಿಯ ಹೊಡಿತೇನಿ
ಬೈಲವಾಡ ದಾರ‌್ಯಾಗ
ಕೆಲಸವೊಂದ ಆಗೇತಿ ॥

ಯಾತರದತಿ ಯಾಂಬಾಲಾಸತ್ತತಿ
ಹೊಟ್ಟೆ ಹರದSತಿ
ಹೊಲಸರೇ ನಾರತತಿ ॥

ಈರ್ಯಾ :

ರಾವಸಾಹೇಬ ಕೇಳರಿ ಎನ್ನ ಮಾತಾ
ಸಂಗ್ಯಾನ ಕೊಂದೇವರಿ ಬೇಕಂತಾ ॥

ಊರೊಳಗ ಕಳ್ಳಗ ಅದಾನವಾ
ಅದರ ದಸಿಂದ ಸಂಗ್ಯಾನ ಕೊಂದೇವ ॥

ನಮಗ ತಾಯಿ ತಂದಿಬಂಧು ಬಳಗಾ
ಯಾರ‌್ಯಾರಿಲ್ಯೊ ಜೋಡರಾ ॥

ನಮಗ ಗಲ್ಲಕ ಹಾಕಿ ಬಿಡತಾರೊ
ಜಿಲ್ಲಾ ಧಾರವಾಡ ॥

ಈ ಮಂಡಲದೊಳು ಗಂಡಮೆಟ್ಟ
ಶಾಪೂರ ಬಸವಣ್ಣ ದೇವರಾ ॥

ಆತನ ದಯಾ ಇರಲೆಪ್ಪಾ
ನಮ್ಮ ಮ್ಯಾಲಾ ನಮ್ಮ ಮ್ಯಾಲಾ ॥

* * *