ಈರ್ಯಾ :

ಈ ಜರಕಟಿ ರುಮಾಲಯಾವ ಚೋದಿಯ ಮಗಂದಾ
ಅವರ ತಾಯಿ ಹೊಟ್ಟಿತಣ್ಣಗಿತ್ತೊ ಓಡಿ ಹ್ವಾದಾ
ನನ್ನ ಕೈಯಾಗ ಸಿಕ್ಕಿದ್ದರಕಡದ ಮಾಡ್ತಿದ್ದೆ ಚೂರಾ
ಗಂಡಮೆಟ್ಟಿ ಶಾಪೂರಾಬಸವಣ್ಣ ದೇವರಾ……..
ಆತನ ದಯಾ ಇರಲಿನಮ್ಮ ಮ್ಯಾಲಾ

ಗಂಗಿ, ಈ ರುಮಾಲ ಯಾರದಿದು, ಹೂಂ ಬೊಗಳು ಇದು ಸಂಗ್ಯಾಂದು ಈ ಊರಾಗ ಇರೋವು ಇಂಥಾವ ಎರಡ ಎರಡs ಪಟಗಾ. ಒಂದು ನಂದು, ಇನ್ನೊಂದು ಸಂಗ್ಯಾಂದು. ಅಂವ ಕತ್ತಲಾಗ ಓಡಿಹ್ವಾದಾ ಕೈಗಿ ಸಿಕ್ಕಿದ್ರ ಇಲ್ಲೇ ಕಡದ ಹಾಕತಿದ್ನಿ.

ಗಂಗಾ :

ಹಿಂತಾ ಹಾಡಾ ಹರಲಿ ಕೊರಳಿಗಿ ಹಾಕಿ
ಮೋಜಾ ನೋಡಿಯೊ ನೀನಾ ॥ಪಲ್ಲವಿ ॥

ನನಗೇನೂ ಗೊಂತಿಲ್ಲೊ ರಮಣಾ
ಹಿಂತಾ ಮಾತಿನ ಕೂನಾ ॥

ನೀವು ಕಣ್ಣಿಲೆ ನೋಡಿ ಕೈಲೆ ಹಿಡಿದ
ಮಾಡರಿ ಅನ್ಯಾಯ ॥

ಹಿಂತಾ ಅನ್ನೇದ ಮಾತ ಆಡಿಕ್ಯಾರಿ
ಹಾಳಾಗಿ ಹೋದೀ ನೀನಾ ॥

ಪ್ರಾಣಕಾಂತಾ, ನನಗ್ಯಾವುದೇ ಗೊಂತಿಲ್ಲ ಸುಮ್ಮನೆ ನನಗೆ ಅಪವಾದ ಕೊಡಬ್ಯಾಡ್ರಿ.

ಈರ್ಯಾ :

ಬಿಡ ನಿನ್ನ ಬಡಿವಾರಾಬಲ್ಲಿನೇಳ ನಿಂದೆಲ್ಲಾ ಬಡ್ಡ ಬೇರ ॥
ಏನಿದು ವಿಚಾರಾ॥ಪಲ್ಲ ॥

ಹುಲಿಹಂಗ ಮೂವರಾಇರಪಕ್ಷಿ ಬಸವಂತ ಬಾದ್ದೂರಾ
ಕಡದ ಮಾಡ್ಯಾರ ಚೂರಾ ॥

ಮನಿಬಿಟ್ಟ ಹೋಗ ನೀನಾಬೇಕಾದಲ್ಲಿ ಇರಹೋಗು ಸುಮ್ಮನಾ
ಕೇಳುವುದಿಲ್ಲ ನಾನಾ ॥

ಮನಿಯಾಗಿಲ್ಲ ಹಿರಿಯರಾಛೀ ರಂಡೆ ಕಳದೆ ಮಾನಾ
ಹೊರಬೀಳ ನೀನಾ ॥

ಗಂಗಿ : ಪ್ರಾಣಕಾಂತಾ, ನನಗ್ಯಾವುದೊ ಗೊಂತಿಲ್ಲ ಸುಮ್ಮನೆ ನನಗೆ ಅಪವಾದ ಕೊಡಬ್ಯಾಡ್ರಿ.

ಈರ್ಯಾ : ಗಂಗಿ ನಿನ್ನದೆಲ್ಲಾ ನನಗೆ ಗೊತ್ತಾಗಿದೆ. ಹೆಚ್ಚ ಮಾತಾಡಿ ಏನಾಗೋದಿದೆ ಈಗಲೇ ಮನಿಬಿಟ್ಟು ಹೊರಬೀಳು. ಎಲ್ಲಿಯಾದರೂ ನಾಯಿಯ ಹಾಗೆ ಬಿದ್ದುಕೊಳ್ಹೋಗು.

ಇರಪಕ್ಷಿ ಬಸವಂತಾ ಬರ‌್ಯೋ ಬೇಗಾ
ಕುಂದ ಬಂದೀತೋ ನಮಗ
ಸಂಗ್ಯಾನ ಸಂಗ ಮಾಡ್ಯಾಳೊ ಗಂಗಿ ಒಳಗ ॥

ವ್ಯಾಳೆಹೊತ್ತಿಗೆಅದೀರಂತೆ ಕುಸ್ತಿ ಮೇಸಿ
ಬೆಳಸಿದ್ದಿನ್ನೋ ಪುರಮಾಸಿ
ಕುಸ್ತಿ ಬಿಟ್ಟ ಹೋಗುದ ನಿವಳ ದೇಶ ದೇಶೀ ॥

ಮೂರು ಮಂದಿ ಹೊಂಗಲದಾಗ ಇದ್ದೂ ಇಲ್ಲದಾಂಗ
ಸೀರಿ ಬಳೀ ಉಟ್ಟಾಂಗ
ಜನದಾಗ ಮೋತಿ ಎತ್ತಿ ತಿರುಗುವದ್ದ್ಯಾಂಗ ॥

ತಮ್ಮಗಳಿರ‌್ಯಾ, ಬರ‌್ಯೊ ಬೇಗ. ಗಂಗಿ ಒಳಗಿಂದೊಳಗ ಸಂಗ್ಯಾನ ಕೂಡ ಕೂಡಿಕೊಂಡಾಳು. ನಿಮಗೆ ಈ ಸುದ್ದಿ ಗೊತ್ತಿಲ್ಲವೇನು ?

ಇರಪಕ್ಷಿ : ಬಸವಂತ :

ಅತ್ತಿಗಿ ಅಲ್ಲಾ ಕತ್ತಿ ರಂಡೇ ಕಳದೇ ಮಾನಾ
ಬಿಚ್ಚಿಸೆಲ್ಲಾ ದಾಗೀಣಾ ॥
ಖೊಟ್ಟಿ ರಂಡೇ ಬಿಟ್ಟಯೇಳ ಮನಿ ಇನ್ನಾ

ಅಣ್ಣಾ, ಇದೆಳ್ಳಷ್ಟೂ ನಮಗೆ ಗೊತ್ತಿಲ್ಲ, ಈಕಿ ಅತ್ತಿಗಿ ಅಲ್ಲಾ ಕತ್ತಿರಂಡಿ ದಾಗೀಣೆಲ್ಲಾ ಉಚ್ಚಿಸಿಕೊಂಡು ಹೊರದಬ್ಬು ಅಣ್ಣಾ. ನಮ್ಮ ಮನೆಯ ಅಬರೂ ಕಳೆದಳು.

ಗಂಗಾ :

ಇರಪಕ್ಷಿ ಬಸವಂತಾಮತಿವಂತ ಮೈದುನಾ
ಸೇರಬಾರದ ಗಂಡಾಹಾದರ ಹೊರಸೀದಾ ॥ಪಲ್ಲವಿ ॥

ಹಾದರ ಹೊರಿಸುದಕಿಂತಮೊದಲ ಬಿಡಬೇಕೊ ನನ್ನ
ಪಾಪ ಪುಣ್ಯಎರಡೂ ತೂಕಾ ಮಾಡಿರಿ ನೀವಾ ॥

ಬಾ ನನ್ನ ಬಸವಂತಾಮೈದುನಾ ಬುದ್ಧಿವಂತಾ
ಚರಣಕ್ಕೆ ಎರಗುವೆ ಬೇಡಿಕೊಳ್ಳವೆ ನಾನಾ ॥

ದೇಶದೊಳು ಬೈಲವಾಡಾಈಶ ಬಸವೇಸೂರಾ
ಆತನ ದಯವಿರಲ್ಯೋನನ್ನ ಮ್ಯಾಲ ಪೂರಾ ॥

ಎಲೊ ನನ್ನ ಮೈದುನಗಳಿರಾ, ಸೇರಬಾರದ್ದಕ್ಕೆ ನನ್ನ ಗಂಡಸು ಹಾದರ ಹೊರಸಿಹನು. ಹಾದರ ಹೊರಿಸುದಕಿಂತ ಮೊದಲೆ ಬಿಟ್ಟಿದ್ದರೆ ನನ್ನ ಗತಿಯು ಹೀಗೇಕೆ ಆಗುತ್ತಿತ್ತು ? ನನ್ನ ಕಡೆ ಏನೂ ತಪ್ಪಿಲ್ಲಾ. ಮೈದುನರ‌್ಯಾ ನೀವೆ ವಿಚಾರ ಮಾಡಿರಿ. ನಿಮ್ಮ ಕಾಲಿಗೆ ಬೀಳುವೆ.

ಇರಪಕ್ಷಿ : ಬಸವಂತ :

ಕೊಡ ನಮ್ಮ ಸಾಮಾನಾ
ವಾಲಿ ಬುಗುಡಿ ಕೊರಳಾನ ಡಾಗೀನಾ ॥

ಕಳೀ ನಮ್ಮ ಸೀರಿನಾ
ಉಟಕೊಳ್ಳ ಹರಕ ಪಡಕೀನಾ ॥
ಕಳುದೆ ನಮ್ಮ ಮಾನಾ

ಏನೇ ! ಖೊಟ್ಟಿ ರಂಡೇಉಟ್ಟಿರುವಂಥಾ ಪೀತಾಂಬರ, ತೊಟ್ಟಿರುವಂತಾ ಜರತಾರ ಮೈಮೇಲೆ ಇಟ್ಟ ವಸ್ತುಗಳನ್ನು ಕಳದು ಚಲ್ಲುವಂಥವಳಾಗು.

ಈರ್ಯಾ :

ಹಿಂತಾ ಬಣ್ಣದ ಮಾತ ಹೇಳಬ್ಯಾಡ
ಕೇಳಾಂವಲ್ಲೇಳ ನಾನಾ॥ಪಲ್ಲ ॥

ಜರಾ ಕೈ ಬಿಡರ‌್ಯೋ ತಮ್ಮಗಳಿರಾ
ಬಿಚ್ಚುವೆ ಬೆನ್ನ ತ್ವಾಟೀನಾ ॥

ಇವಳ ಕಾಲಮೇಲ ಮಾಡಿಕ್ಯಾರಿ
ತೂಗ ಹಾಕುವೆ ಗಿಡಕಾ ॥

ಇವಳ ಕೊರಳ ಕೋದ ಶಿರಾ
ಬಿಡಿಸಿ ಚೆಲ್ಲುವೆ ಬಾಂವ್ಯಾಗ ॥

ತಮ್ಮಗಳಿರ‌್ಯಾ, ಇವಳ ತ್ವಾಟಿ ಸುಲಿಯುವೆ, ಈ ಹಾದರಗಿತ್ತಿಯ ಶಿರವನ್ನು ಕೋದು ಬಾವಿಯಲ್ಲಿಬೀಸಾಡುವೆ ಕೈಯ ಬಿಡಿರಿ.

ಇರಪಕ್ಷಿ : ಬಸವಂತ :

ಅಣ್ಣಾ ನೀ ಕೇಳಯ್ಯ ಪುಣ್ಯೇವ ಅಲ್ಲಿದು ॥ಪಲ್ಲವಿ ॥

ಘಾತಕ ಗಂಗೀನ ಯಾತಕ ಕೊಲ್ಲೋದು
ಹೆಣ್ಣಿನ ಕೊಲ್ಲೋದು ಕಲ್ಯಾಣವಲ್ಲಿದು

ಸೆರಗ ಹರದ ಬಿಡೋಣು ಗಂಗಾನ್ನ
ಪಾಶೇಕ ಹೋಗೋಣು ಕಡದ ಸಂಗ್ಯಾನ್ನ ॥

ಅಣ್ಣಾ, ಅತ್ತಿಗೆಯನ್ನು ಕೊಲ್ಲುವುದು ಬೇಡ, ಅವಳ ಸರಗ ಹರಿದು ಕೊಂಡು ಬಿಡಿರಿ. ಹೂಂ ಗಂಗಿ ಬಟ್ಟೆಗಳನ್ನೆಲ್ಲಾ ಕಳಚು.

ಈರ್ಯಾ : ಗಂಗಿ, ಕೊಳ್ಳಾನ ಗುಳದಾಳೆ, ಪೀತಾಂಬರ ದಾಗೀನ ಎಲ್ಲಾ ಉಚ್ಚಿಕೊಟ್ಟು. ಹೂಂ ಇಲ್ಲಿಂದ ಹೊರಬೀಳು.

ಗಂಗಾ :

ಈರ‌್ಯಾ ನಿನ್ನ ಗುಳದಾಳಿ ನಾನಾ
ಹ್ಯಾಂಗ ಹರಿಯಲೊ ಪ್ರಿಯನೆ ॥ಪಲ್ಲ ॥

ಉಟ್ಟ ಪೀತಾಂಬರ ತೊಟ್ಟಿರು ಜರತಾರ
ಹ್ಯಾಂಗ ಕೊಡಲ್ಯೊ ಪ್ರಿಯನೆ ॥

ಮನದಾಗ ಬಳಕುತ ಸುಮ್ಮನೆ ನಡೆಯೂತ
ಹೆಂಗ ಹರಿಯಲ್ಯೊ ಪ್ರಿಯನೆ ॥

ಮನದಾಗ ಬಳಕುತ ಸುಮ್ಮನೆ ನಡೆಯೂತ
ಹೆಂಗ ಹರಿಯಲ್ಲ್ಯೊ ಪ್ರಿಯನೆ ॥

ಪ್ರಿಯಕರಾ ಇವುಗಳನ್ನು ಹ್ಯಾಗೆ ಉಚ್ಚಿಕೊಡಲಿ ?

ಈರ್ಯಾ : ಸುಮ್ಮನೆ ಹೇಳಿದಷ್ಟು ಕೇಳಿಕೊಂಡ ಹೊರಟು ಹೋಗು ನಿನ್ನ ಪಾಪಕ್ಕೆ ನೀನೇ ಪಶ್ಚಾತ್ತಾಪ ಪಟ್ಟುಕೋ

ಗಂಗಾ :

ಪಾಪ ಪುಣ್ಯ ಅಂಬೋದು
ಇರಲೇಳೊ ನಿನ್ನ ಸುತ್ತಾ ॥
ಕಣ್ಣಿಲೆ ಕಂಡು ಕೈಲೆ ಹಿಡಿದು
ಅನಬೇಕೊ ಹಿಂತಾ ಮಾತಾ ॥

ಪಾಪ ಕಟ್ಟಿಕೋರೊ ಪದರಾಗ
ಮರಗುವೆ ಮನದಾಗ ॥
ಸುಳ್ಳ ಅನ್ನೇದ ಮಾತ ಆಡಬ್ಯಾಡ
ಹ್ವಾದಿಯೊ ನರಕಕ್ಕ ॥

ಹೀಂಗ ಯೋಳ್ಯೊಳು ಜನ್ಮಕ ಬ್ಯಾಡ
ನನ್ನಂಥ ಹೆಣ್ಣ ಮಾರಿ ॥
ಸತ್ಯುಳ್ಳ ಬಸವಣ್ಣ ನೋಡಿಕೊಳ್ಲಿ
ಚಂಡಿಯ ಚಿವುಟಲಿ ॥

ಪಾಪ ನಿನ್ನ ಪದರಾಗೆ ಕಟ್ಟಿಕೊ……ಅನ್ನೇದ ಮಾತ ಆಡಿಕ್ಯಾರ ನೀನs ಹೋಗ್ತಿ ನರಕಕ್ಕ ಬಸವಣ್ಣ ನೋಡಿಕೊಳ್ಲಿ.

ಈರ್ಯಾ :

ಹೆಂತಾ ಮಾತ ಬೊಗಳದಿ ರಂಡಿ ನೀನಾ
ಇಡುದುಲ್ಲ ಮನ್ಯಾಗಿನ್ನ ॥
ಈಗಿಂದೀಗ ಹೊರಬಿದ್ದ ಹೋಗ ಸುಮ್ಮನಾ ॥ಪಲ್ಲವಿ ॥

ತಾಬಡ ತೋಬಡ ವಸ್ತ್ರಾವಡಿವಿ ಬಿಚ್ಚಿಕೊಡ
ಸಿಸ್ತಿಲೆ ಸಂಗ್ಯಾನ ಕೂಡ
ಸುಸ್ತ ಮಾಡಿದರ ಆಗತಿಯ ಎರಡ ॥

ಛೀ ಏನ ಕೇಳ್ತೀಯಾ ಇಕಿ ಹಾದರಾ
ಎಳದೊಯ್ಯ ದರದರಾ
ಸೀರೀ ಕುಬಸಾ ಬಿಚ್ಚಿಕೊಳ್ಯೊ ಎಕಸರಾ ॥

ಮುಚ್ಚಿ ಮನಿ ಬಿಟ್ಟ ಏಳ ರಂಡೆ ನೀನಾ
ನಿಲಬ್ಯಾಡ ನಮ್ಮ ಇದರಾ
ಕಡದ ಒಗದ ಚೆಲ್ಲತೇನ ಈಗಿಂದೀಗಾ ॥

ಸೀರಿ ಕುಬಸಾ ಬಿಚ್ಚೆ ಚೆಲ್ಲ ಸರಸರಾ
ಮೇಲಾದ ಸಿಂಗಾರ ಸರಾ
ಎದ್ದೇಳೀಗ ನಾಜೂಕ ಸರಕಾರಾ ॥

(ಗಂಗಿ ಉಟ್ಟ ಸೀರೆಯಲ್ಲಿಯೆ ಕಣ್ಣೀರು ಸುರಿಸುತ್ತ ಮನೆಬಿಟ್ಟು ಹೊರ ಬೀಳುತ್ತಾಳೆ. ತವರೂರಾದ ಬೈಲವಾಡಕ್ಕೆ ಬಿಟ್ಟು ಬರಲು ಬಾಳ್ಯಾನನ್ನು ಕರೆದುಕೊಂಡು ಹೋಗುತ್ತಾಳೆ).

ಗಂಗಾ :

ಬಾ ಬಾರೊ ಬಾಳಪ್ಪಣ್ಣಾ
ಏನಾತೊ ಎನ್ನ ಜನ್ಮಾ ॥ಪಲ್ಲ ॥

ಕಸಗೊಂಡ್ರೊ ದಾಗಿನಾ
ತಿರಿವ್ಯಾರೊ ಎನ್ನಾ ॥
ಮೀರಿತುಪಾಯ
ಮಾಡಲಿನ್ನೇನಾ ॥

ಉಟ್ಟ ಸೀರಿಯ ಹೊರೆತ
ಏನೂ ಬಿಟ್ಟಿಲ್ಲ ಮತ್ತಾ ॥
ಮನಿ ಬಿಟ್ಟ ಹೋಗಂತಾ
ಇರಪಕ್ಷಿ ಬಸವಂತಾ ॥

ಹರಸೀದ್ಯೊ ಒಗತಾನ
ಕಳಕೋಣ್ಯೊ ಅಭಿಮಾನ ॥
ಹೆಣ್ಣಿನ ತಳಮಳ
ಕಾಯಸ ನಿಂಗ ಕೊಳ ॥

ಗಂಡ ರಟ್ಟಿಯ ಹಿಡಿದ
ಜಗ್ಗಿ ಹೊರಗ ಒಗದ ॥
ಇರಪಕ್ಷಿ ತಮ್ಮನ ಕರದ
ಜರತಾರಿ ಉಚ್ಚಿಕೊಂಡ ॥

ಬಸವಂತ ಮುಂದ ನಿಂತಾ
ದಾಗೀನ ಬಿಚ್ಚಿಗೊಂಡ ॥
ಏನಾತೊ ಬಾಳ್ಯಾ ನಂದ
ಮನಿಬಿಟ್ಟ ಹೋಗಂದ ॥

ಕೆಟ್ಟು ಹೆಣ್ಣಿನ ಶಾಪಾ

ಬಿಡಲಿಕ್ಕಿಲ್ಲೇಳೊ ಪಾಪಾ
ನಂದಿ ಹೋಗಲೋ ದೀಪಾ

ನಿಂದು ಆಗಲೊ ಲೋಪಾ ॥

ಏನ ಮಾಡಲಿ ಬಾಳಣ್ಣಾ ನನ್ನ ಬಾಳೆ ಹರಕಾತು

ಬಾಳ್ಯಾ :

ನಾಯೇನ ಮಾಡಲಿ ಗಂಗಾನಿನ್ನ ನಸೀಬಕ
ಈಗ ಆಗೋದು ಆತುಹೋಗೋದು ಹೋತು ॥

ಸುಖದುಃಖ ಕುಂಡ್ರಬ್ಯಾಡಗಂಗಾ ನನ್ನ ಬಾಗಿಲದಾಗ
ಈಗಿಂದೀಗ ಹೋಗಿ ಸೇರಸಂಗ್ಯಾನ ಮನಿಯಾಗ ॥

ನಾ ಏನ ಮಾಡಲಿ ಗಂಗಾ, ಸಂಗ್ಯಾನ ಮನಿಮುಂದ ಕೊಂಡ್ರೋಗು

ಗಂಗಾ :

ನೀನೂ ಬರಬೇಕಪ್ಪಾಬಾಳಣ್ಣಾ ಹಿಂಬಾಲಾ ॥
ತವರಮನಿಗಿ ಹಚ್ಚಿಹಿಂದಕ ಬಾರೊ ತಿರಗಿ ॥
ಸಂಗ್ಯಾನ ಬೆನ್ನ ಹತ್ತಿಆದೇನ ನಾ ಫಜೀತಿ ॥
ಬೈಲವಾಡ ಊರಭಾಳ ದೂರ ಅಯ್ತಿ ॥

ಬಾಳಣ್ಣಾ, ನಾನು ಅಲ್ಲೂ ಹೋಗೋದಿಲ್ಲ. ನನ್ನ ತವರಮನಿಗೇ ಹೋಗ್ತೇನಿ. ನೀ ನನ್ನ ಕಳಿಸಿಕೊಟ್ಟ ಬರುವಂತ್ಯಾ ನಡೀ ನನ್ನ ಬೈಲವಾಡಕ.

(ಗಂಗಾ ಬಾಳಣ್ಣನನ್ನು ಕರೆದುಕೊಂಡು ಬೈಲವಾಡಕ್ಕೆ ಹೋಗುತ್ತಾಳೆ).

(ಇತ್ತ ಸಂಗ್ಯಾನನ್ನು ಕೊಲ್ಲಲು ಹೊಂಚು ಹಾಕುತ್ತಾರೆ. ಬಾಳಣ್ಣನನ್ನು ಒಲಿಸಿಕೊಂಡರೆ ಕೆಲಸವಾಗುದೆಂದು ನಂಬಿ ತಮ್ಮಂದಿರನ್ನು ಜಡ್ಡಾಗಿದೆಯೆಂದು ನೆವ ಹೇಳಿ ಕರೆದುಕೊಂಡು ಬರಲು ಈರ‌್ಯಾ ಕಳಿಸಿಕೊಡುತ್ತಾನೆ).

ಇರಪಕ್ಷಿ : ಬಸವಂತ :

ಬಾಳಪ್ಪಣ್ಣ ಮಾಡತೇವ್ರಿ
ನಿಮಗ ಶರಣಾ ॥ಪಲ್ಲ ॥

ಸಣ್ಣ ಹುಡುಗೋರು ನಾವಾ
ಮಾಡತೇವ್ರಿ ನಿಮಗs ಶರಣಾ ॥

ಹಿರಿ ಅಣ್ಣಗ ಆಗೇತಿ ಜೋರಾ
ಹೋಗುದುಲ್ಲೊ ಮುಕ್ಕ ನೀರಾ ॥

ಹೊಕ್ಕಾತ್ಯೊ ಅಣ್ಣನ ಪ್ರಾಣಾ
ಜೀವದಾಗ ಇಲ್ಲೊ ಚೈನಾ ॥

ಬಾಳಪ್ಪಣ್ಣ, ನಮ್ಮ ಹಿರಿ ಅಣ್ಣ ಈರಭದ್ರನು ಜಡ್ಡಾಗಿ ಮಲಗಿದ್ದಾನೆ. ಮುಕ್ಕು ನೀರೂ ದಕ್ಕಲೊಲ್ಲದು. ಅದಕ್ಕಾಗಿ ನಿಮ್ಮನ್ನು ಕರೆದುಕೊಂಡು ಬರಲು ಹೇಳಿದ್ದಾನೆ. ಬರುವಂತವನಾಗು.

ಬಾಳಣ್ಣ : ನಡೀರೆಪ್ಪಾ, ಪಾಪ ! ಗಂಗಿ ಕಾಲಾಗ ಮನಸಿಗಿ ಹಚ್ಚಿಕೊಂಡಂಗ ಕಾಣ್ತತಿ.

ಈರ್ಯಾ :

ಮಾಡತೇನೊ ನಿಮಗೆ ಶರಣಾ
ಬಾಳಪ್ಪಣ್ಣಾ ॥ಪಲ್ಲವಿ ॥

ಮೇಲ್ಮನಿ ಸಂಗ್ಯಾನ್ನತಂದ ಕೊಡಬೇಕೊ ನೀನಾ ॥
ನೂರಾರು ರೂಪಾಯಿನಿನಗೆ ಕೊಡುವೆನು ಮುಚ್ಚಿ ॥
ಹದಿನಾರೆತ್ತು ಹಳವಿನ ಬಂಡಿನಿನಗ ಕೊಡುವೆನೊ ತರಸಿ ॥
ಮನಿ ಹೊಲನಾದರೂನಿನಗೆ ಕೊಡುವೆನು ಬರದಾ ॥

ಬಾಳಪ್ಪಣ್ಣಾ, ಹೇಗಾದರೂ ಮಾಡಿ ಸಂಗ್ಯಾನನ್ನು ತಂದುಕೊಡು. ಈ ಉಪಕಾರಕ್ಕಾಗಿ ಏನು ಬೇಡಿದರೂ ಕೊಡುತ್ತೇನೆ.

ಬಾಳ್ಯಾ :

ವಲ್ಲಿನಪ್ಪಾ ಹಿಂತಾ ಕೆಲಸಾ
ಅವನ ನನ್ನS ಭಾಳ ದಿನದ ಇಸವಾಸಾ ॥

ಆದೀತೊ ಬಲುಮೋಸಾ
ಚಿಕ್ಕಂದಿರತ ಗೆಳಿತಾನಾ ॥

ಬೇಕಾಧಾಂಗ ಉಂಡೇನೊ ಹಾಲೈನಾ
ಆದೀತೊ ಅಪಮಾನಾ ॥

ಈರಪ್ಪಣ್ಣ ಈ ಕೆಲಸ ನನಗ ಮರ‌್ಯೋ ಆಗದಪ್ಪ. ಯಾಕಂದ್ರ ಚಿಕ್ಕಂದಿರತ ಅವಂದೂSನಂದೂ ಗೆಳಿತಾನಾ. ಊರಾಗಿನ ಜನರರಾ ನನಗೇನಂದಾರು ನೀವSಯೇನರೆ ಮಾಡಿಕೊಳ್ಳಿರೆ.

ಈರ್ಯಾ : ಬಾಳಪ್ಪಣ್ಣ ಹಂಗ ಹೇಳಬ್ಯಾಡಾ ನಿನಗ ಯೇನುಬೇಕ ಅದನ್ನ ಕೊಡತೇನಿ ಹದಿನಾರೆತ್ತ ಹಳವಿನ ಬಂಡಿ. ಹೊಲಾಬೇಕಾದ್ರ ಹೊಲಾ ಏನ ಬೇಡು, ಹ್ಯಾಂಗಾದರೂ ಮಾಡಿ ಸಂಗ್ಯಾನ್ನ ತಾ.

ಬಾಳ್ಯಾ :

ತಾ ಆಂತಿ ಸಂಗ್ಯಾನ ಕೈಯಾಗ
ಹ್ಯಾಂಗ ತರಲ್ಯೊ ಈಗ
ಹದಿನಾರೆತ್ತಾ ಹಳವಿನ ಬಂಡಿ ಬ್ಯಾಡೊ ನನಗ ॥ಪಲ್ಲವಿ ॥

ಜಳಕ ಆಗೋದು ಅವನ ಮನಿಯಾಗ
ಬಿಸಿ ಬಿಸಿ ನೀರಿನೊಳಗ
ಮಡಿ ಅರಿವಿ ದೋತರ ಮೈಮ್ಯಾಗ ॥

ಊಟ ಆಗೋದು ಅವನ ಮನಿಯಾಗ
ಹಾಲು ಹೈನದ ಒಳಗ
ಶಿವಾ ಕೊಟ್ಟ ಮರತಾನಪ್ಪ ಸಂಗ್ಯಾಗ ॥

ಹಿಂತಾದ ಮರ‌್ಯೂ ಹೇಳಬ್ಯಾಡ ನನಗಾ
ಚಿಕ್ಕಂದಿರತ ಗೆಳಿತಾನಾ
ಕೂಡಿದೊವೊ ಹಾಲ ಸಕ್ಕರಿ ಹಾಂಗ ॥

ನನಗ ಆಗುದುಲ್ರಿ ಈರಣ್ಣ ಈ ಒಂದ ಮಾತ ಬಿಟ್ಟ ಮತ್ತೇನ ಹೇಳ್ರಿ. ತಲೀಲೆ ನಡಿಸ್ತೇನಿ.

ಈರ್ಯಾ : ಬಾಳ್ಯಾ, ಹೇಳಿದ್ದ ಕೇಳಿಕೊಂಡ ಅದರಂತ ವಚನಾ ಪಾಲಿಸಲಿಲ್ಲಂದ್ರ ನಿನ್ನ ಕಡದ ಬಿಡ್ತೇವಿ. ಇರಪಕ್ಷಿ ಬಸವಂತಾ……

ಇರಪಕ್ಷಿ ಬಸವಂತ : ಏನಂತೀಲೇ ಬಾಳ್ಯಾ…….

ಬಾಳ್ಯಾ :

ಕೊಲ್ಲಬ್ಯಾಡರೋ ನನ್ನಈರಪ್ಪಣ್ಣಾ ॥ಪಲ್ಲವಿ ॥

ನಿಮ್ಮ ಹೆಣಮಗಳ ಸರೀ
ಇರತೇನೊ ನಾನಾ ॥

ಮೇಲ್ಮನಿ ಸಂಗ್ಯಾನ್ನ
ತಂದ ಕೊಡುವೆನು ನಾನಾ ॥

ನೂರಾರು ರೂಪಾಯಿ
ಕೊಡರೆಪ್ಪ ಕೈಯಾಗ ॥

ಮನಿ ಹೊಲಾ ಎತ್ತು ಬಂಡಿ
ಬರದು ಕೊಡರಿ ಈಗ ॥

ಬುಧವಾರ ರಾತರಿ
ಸುಳ್ಳಲ್ಲ ಖಾತರಿ ॥

ಬೈಲವಾಡ ದಾರ‌್ಯಾಗ
ಕ್ಯಾದಿಗ ಮೆಳಿಯಾಗ ॥

ಕೊಡಲಿ ಕುಡಿಗೋಲ
ಇರಲೆಪ್ಪಾ ಕೈಯಾಗ ॥

ಈರಪ್ಪಣ್ಣ, ಈ ಸುದ್ದಿ ಯಾರಿಗೂ ಹೇಳಬ್ಯಾಡರಿ ಸಂಗ್ಯಾನ್ನ ನಿಮಗ ತಂದ ಕೊಡತೇನಿ. ನೀವ ಹೇಳಿದ ಮಾತ ಬರಕೊಡರಿ. ಬುಧವಾರ ರಾತ್ರಿ ಬೈಲವಾಡ ದಾರ‌್ಯಾಗ ಕ್ಯಾದಗಿ ಮೆಳ್ಯಾಗ ಕುಂಡಿರಿ. ಸಂಗ್ಯಾನ್ನ ಕರಕೊಂಡ ಬಂದ ಬಿಡ್ತೇನಿ.

(ಬಾಳ್ಯಾನನ್ನು ಈರ‌್ಯಾ ಒಡಿಸಿಕೊಂಡ ವಿಷಯ ಗಂಗಿಗೆ ಹೇಗೊ ತಿಳಿದಿರುತ್ತದೆ. ಆಕೆ ಸಂಗ್ಯಾನಿಗೆ ಬರಬಾರದೆಂದು ಪತ್ರವೊಂದನ್ನು ಬರೆಯಿಸಿ ಹಳಬನ ಕಡೆಯಿಂದ ಬೈಲವಾಡಕ್ಕೆ ಕೊಟ್ಟು ಕಳಿಸುತ್ತಾಳೆ).