ಗಂಗಾ :

ನಿನ್ನ ಮಾತ ಕೇಳಿದರೆ ಒಗತಾನಾ ಹರದೀತಾ
ನಾ ಕೈ ಮುಗದ ಹೇಳತೇನ ಬ್ಯಾಡವ್ವಾ ಹಿಂತಾ ಮಾತಾ

ಹಿಂತಾ ನಾಡ ಹರಲೀತಂದ ನನ್ನ ಕೊರಳಿಗೆ ಹಾಕತೀ
ನಿಂದು ಕುಂಟಲತಾನಾನನಗೆಲ್ಲಾ ಗೊತ್ತsತಿ ॥

ದೇಶದೊಳು ಬೈಲವಾಡ ಬಸವಣ್ಣ ನೆಲಿಸೇತಿ
ಆತನ ಪಾದಾ ಹಿಡದ ಹೇಳ್ತೇನಿ ಬ್ಯಾಡವ್ವಾ ಇಂಥಾ ನಡತೀ ॥

ಪರಮ್ಮಾ, ನಾಡಸುದ್ದಿ ನನ್ನ ಮುಂದ ಹೇಳಬ್ಯಾಡಾ, ನಾ ಗಂಡುಳ್ಳ ಬಾಲಿ ಇದ್ದೀನಿ. ಯಾರದಾರಾ ಒಗತಾನಾ ಹರಸೀ ಸುಮ್ಮನs ಹೋಗು. ಇದಬಿಡ ನಿನ್ನ ಕುಂಟಲತಾನಾ.

ಪರಮ್ಮ :

ಒಲ್ಲೆನೆನಬ್ಯಾಡ ಮಗಳಒಗತಾನಾ ನಿವಳ
ಮೆಲ್ಮನಿ ಸಂಗ್ಯಾಗೊಳ ॥

ಹಂಚಿನ ಧಡಿದೋತರದವನಚೆಲಿವೀಕಿಯೇನ
ಮೇಲ್ಮನಿ ಸಂಗ್ಯಾಗೊಳ್ ॥

ಸೀರಿ ಕುಬಸ ತಗೋರಉಟಿಗೊಂಡ ಮೆರಿಯ
ಮೇಲ್ಮನಿ ಸಂಗ್ಯಾಗೊಳ್ ॥

ಸರಗಿ ಬಂಗಾರ ಬಳಿಯಇಟಗೊಂಡ ಮೆರಿಯೆ
ಮೇಲ್ಮನಿ ಸಂಗ್ಯಾಗೊಳ್ ॥

ಗಂಗಾ, ನಿನಗ ತಿಳ್ಯಾಕಿಲ್ಲಾ. ಇದೇನs ಜಗತ್ತಿನಾಗ ನಡದಿದ್ದ ತಿಳದವರು ಒಂದ ಟೀಪನಿ ಬ್ಯಾರೆ ಇಟ್ಟಿರತಾರ. ನೀ ಯೇನ ಬ್ಯಾರೆ ತಿಳಕೊಬ್ಯಾಡಾ. ಈ ಊರ ಮೇಲ್ಮನಿ ಸಂಗ್ಯಾ ಭಾಳ ಚಂದ. ಸಾವುಕಾರಾ. ಬಿಡಬ್ಯಾಡ ಎವ್ವಾ.

ಗಂಗಾ :

ನೀ ಬೋಧಾ ಹೇಳಿ ವಾದಾ ಮಾಡೀ
ಛೀ ಹೋಗ ಹುಚಮುಂಡಿ ॥

ಗುಂಡುಳ್ಳ ಬಾಲ್ಯಾರನಾ ಅಡಿವಿ ಹೊಗಿಸಿಬಿಟ್ಟೀ
ನನ್ನ ಗಂಡ ಭಾವ ಕೇಳಿದರ ಕೊರದಾರ ನಿನ್ನ ಗೋಣ ॥

ಈ ಮಂಡಲದೊಳು ಗಂಡಮೆಟ್ಟ ಗದಗಿನ ಶಾಪೂರಾ
ಅಲ್ಲಿ ನೆನದಾನ ಭಕ್ತ ಬಸವೇಸೂರಾ ॥

ಪರಮ್ಮ ಸಾಕs ನಿನ್ನ ಬೋಧಾ ನಮ್ಮವರ ಕೇಳಿದರ ನಿನ್ನ ಚೂರ ಚೂರ ಮಾಡ್ಯಾರು. ಹೋಗ ಇನ್ನ ಬಂದ ದಾರಿ ಹಿಡದ. ಈ ಸುದ್ದಿ ಮುಚ್ಚೋದಲ್ಲ…..ಹೋಗು ದಣದ್ದಿ ಬಾಳ.

ಪರಮ್ಮಾ :

ನಾ ಬಲ್ಲೀನೇಳ ಬಡಿವಾರ
ನನಗೆಲ್ಲಾ ಗೊತೈತೀ ॥

ನೀ ಕಣ್ಣ ಚಿವುಟಿ ಸೊನ್ನಿ ಮಾಡಿ
ಕರೆಯೋದು ಗೊಂತೈತಿ ॥

ಗಂಗಿ ಯಾರದೇನ ಸ್ಥಿರವೈತಿ
ಮೂರ ದಿನದ ಸಂತೀ ॥

ಆ ಸಂಗ್ಯಾ ನೀನು ಒಂದಾಗಿ
ನನಮುಂದ ಪಂಟ ಹೇಳ್ತಿ ॥

ಬಿಡs ಗಂಗಾ ನಿಂದೆಲ್ಲಾ ನನಗೆ ಗೊತ್ತಿಲ್ಲ ಅನಬ್ಯಾಡ. ಯಾಕ ಕರದ ಹೇಳ್ಲೇನ……ನಿಂದ ಎಲ್ಲಾ ಇರಪಕ್ಷಿ ಬಸವಂತಗ. ಈರ‌್ಯಾ ಬರಲಿ ನಿನ್ನ ತಲಿ ಬೋಳ್ಸಾಕ ಹಚ್ಚತೇನಿ. ಮೊದಲ ಇಬ್ಬರೂಬೆಸಗೊಂಡೇರಿ ಮತ್ತು ನನಗ ಕಲಸಾಕ ಬರತೀ ಏನ. ಅಮ್ಮಗ ಮೊಮ್ಮಗಳ ಕೆಮ್ಮ ಕಲಿಸಿದಾಂಗ ಏನಂತಿ ?……

ಗಂಗಾ :

ಕೊಟ್ಟೆ ವಚನಾ ! ತಪ್ಪುವಳಲ್ಲ ನಾನಾಕೇಳ ನೀನಾ
ಮೂರು ಸಂಜೀಲೆ ಕರಕೊಂಡ ಬಾರs ಸಂಗ್ಯಾನ್ನಾ ॥

ಲೇಪ ತಡಿಯ ಹಾಸಿ ಜಮಖಾನಾಜಮಖಾನಾ
ನಾಲ್ಕು ದಿಕ್ಕೀಗೆ ಇಡತೇನಾ ಸಮೇನಾ ॥

ಅದರ ಬೆಳಕ ಮಾಡಿ ಇಡತೇನಾಇಡತೇನಾ
ಊಂಚ ಗುಲಾಬ ಎಣ್ಣಿ ತರಸುವೆ ನಾ ॥

ಪರಮ್ಮಾ, ನಿನ್ನ ಮಾತಿಗಿ ಮಳ್ನಾದ್ನಿ. ಕೊಟ್ನಿ ವಚನಾ, ಹೋಗಿ ಹೇಳ ಸಂಗ್ಯಾಗ ಸಂಜಿಮುಂದಬಾ ಅನ್ನs, ಹೌದಲ್ಲs ಪರಮ್ಮಾ ಮತ್ತ ಯಾವ ಯಾಳೆದಾಗ ಕರಕೊಂಡ ಬರ‌್ತೀ ?

ಪರಮ್ಮ : ಹೀಂಗ ಅನ್ನ ನನ ಮಗಳs ಬೇಕಾದಾಗ, ನಿನಗ ಅನುಕೂಲ ಇರಬೇಕಷ್ಟೆ. ಹರೇದ ಒಗರ ಹುಡಗಿ ನಿನಗ ಗೊತ್ತ ಇದ್ದಾಂಗ ನನಗೇನ ಗೊತ್ತ ಎವ್ವಾ.

ಗಂಗಾ : ಕೇಳ ಹಂಗಾರ, ಕಟ್ಟೀಕಲ್ಲ ಕದಲಿರಬೇಕ. ಮರಕ ಮರಾ ಹೊಂದಿರಬೇಕು. ಮಲಗಿ ಹೂ ಅಳ್ಳಿರಬೇಕ ಅವಾಗ ಬರ‌್ಲಿ.

ಪರಮ್ಮ : ಅಯ್ಯ ನನ ಮಗಳ ಇದೇನ ಯವ್ವಾ ಒಗಟಾಬಿಡಿಸಿ ಹೇಳಯವ್ವಾ…..

ಗಂಗಾ : ಇಷ್ಟ ತಿಳಿದುಲ್ಲಾ ಪರಮ್ಮ ಕೇಳು :

ಕಟ್ಟಿ ಕದಲಿರಬೇಕು ಅಂದ್ರ : ಕಟ್ಟೇ ಮ್ಯಾಲಿನ ಮುಂದೆಲ್ಲಾ ಒಳಗ ಹೋಗಿರಬೇಕ. ಮರಕ ಮರಾ ಹೊಂದಿರಬೇಕ ಅಂದ್ರs…… ಬಾಗಲ ಇಕ್ಕಿರಬೇಕ. ಮಲಗೀ ಹೂ ಅಳ್ಳಿರಬೇಕ ಅಂದ್ರ ತಾರಕ್ಕಿ ಬಿದ್ದಿರಬೇಕು. ಇಂಥಾ ವ್ಯಾಳೆದಾಗ ಸಂಗ್ಯಾನ ಕರಕೊಂಡ ಬಾ.

ಪರಮ್ಮ : ಅಯ್ ! ಬಿಡs ನನ ಮಗಳ ಇಷ್ಟಾದರ ಅವನ್ನೇನ ಕೇಳೊದ ಅಂತರಲೇ ಬರತಾನ ಯವ್ವಾ. (ಹೋಗುವಳು)

ಸಂಗ್ಯಾ : (ಸ್ವಲ್ಪ ಹೊತ್ತು ತಾನೇ ವಿಚಾರ ಮಗ್ನನಾಗಿ)

ಮಾನಿನಿ ಸಂಗ ಮಾಡಲಾರೆನೊ ನಾನಾ
ದುಷ್ಟ ರಾವಣಾ ಕೊಟ್ಟೊ ಸೀತಾಗ ಪ್ರಾಣಾ
ಯಾರಾರ‌್ನು ಬಿಟ್ಟಿಲ್ಲೊ ಈ ಕೆಟ್ಟ ವ್ಯಸನಾ ॥

ತುಡುಗ ಪಟಿಂಗತನ ಅಡಗದೊ ಮೂರ ದಿನಾ
ಮಿಕ್ಕಿದ್ದ ಮಾಡಿದವರು ದಿಕ್ಕಿಲ್ದ ಹೋಗ್ಯಾರೊ
ನಾನೀ ಅಂಬೋರೆಲ್ಲಾ ಹಿಂಗs ಅಂದಾರೊ ॥

ಬಾಳಣ್ಣಾ, ಪರಮ್ಮಾ ನಾನು ಹೇಳಿದಂತೆ ಆ ಗಂಗಿಯ ಕಡಿಂದ ವಚನ ತೆಗೆದುಕೊಂಡು ಒಲಿಸಿಕೊಂಡು ಬಂದಳು. ನನಗ್ಯಾಕೊ ಹೇಸಿಗೆ ಅನಿಸಹತ್ತಿದೆ.

ಬಾಳ್ಯಾ : ಸಂಗಣ್ಣ ಧೈರ‌್ಯ ಬೇಕು. ಗಂಡಸ್ತಾನಾ ಇದ್ರ ಹೆದರೋದ ಯಾಕ ? ಹಿಡಿದ ಕೆಲಸ ಬಿಡಬಾರದು. ನಾನೂ ನಿನ್ನ ಜೊತೆಗಿರುವೆನು ಗೆಳೆಯಾ. ಗಂಗಾ ನಿನ್ನ ದಾರೀ ಕಾಯುವಳು ಹೋಗಿ ಬರುವಂತವನಾಗು.

(ಸಂಗ್ಯಾಗಂಗನ ಮನೆಗೆ ಬರುವನು)

ಗಂಗಾ :

ರತಿಗಾಗಿ ಉಮೇದ್ವಾರಿ, ಸೂರ‌್ಯಚಂದ್ರನ ಸರಿ
ದೊರತಾನ ಪುರುಷದೊರೀ ॥ಪಲ್ಲ ॥

ಬಾ ಪ್ರಿಯಾ ಒಳಿಯಾಕನೀರ ಕಾದಾವ ಜಳಕಕ
ಜಳಕ ಮಾಡರಿ ಸಂಗ್ಯಾ ನೀವಾ ॥

ಗಡಗಿ ತೊಳದ ಇಟ್ಟೀನ ಎಸರಶ್ಯಾಂವಿಗಿ ಬಸದ ತಯ್ಯರಾ
ಸಣ್ಣಕ್ಕಿ ಅನ್ನ ಚಿನ್ನಿಯ ಸಕ್ಕರಿ ॥

ಕರಚಿಕಾಯಿ ಕರದಿದೇನ ಐದಾರಾಅದ್ರಾಗ ತುಪ್ಪ ಒಂದ ಸೇರಾ
ಊಟಾ ಮಾಡರಿ ಸಂಗ್ಯಾ ನೀವಾ ॥

ಎಲಿ ಅಡಿಕಿ ತಂಬಾಕಾತುಂಬಿ ಇಟ್ಟೇನ ತಬಕಾ
ವೀಳೆ ತಗೋರಿ ಸಂಗ್ಯಾ ನೀವಾ ॥

ಹೇ ಪ್ರಿಯಕರಾ, ಬರ‌್ರಿ ಒಳಿಯಾಕ್ಕೆ, ನೀರ ಕಾಸೇನಿ, ಜಳಕ ಮಾಡ್ರಿ. ಊಟಾ ಮಾಡರಿ. ಎಲಿ ಅಡಿಕಿ ತಿನ್ನರಿ.

ನಡಿ ನಡಿ ಆಲಯಕs
ಸಂಗ್ಯಾ ಮೈಗೆ ಗಂಧಾ ಕಸ್ತೂರಿ ತೀಡು ॥

ನಿನ್ನ ಮ್ಯಾಲ ಮೋಹ ಮಾಡಿ
ತರಸೇನು ಇಬ್ಬರು ಜೋಡಿ ಜೋಡಿ ॥

ಈರ‌್ಯಾನಂಜಿಕಿ ಇಂದ ನಾವು ದೂಡಿ
ಹಾಲ ಹಣ್ಣಿನ್ಹಾಂಗ ನಾವು ಕೂಡಿ ಕೂಡಿ ॥

ಸರಳ ಮಂಚದ ಮ್ಯಾಲಕ
ಹವಳ ಮಲ್ಲಿಗಿ ಹಾಸಿದೇನ ॥

ಪ್ರಾಣ ಪ್ರಿಯಾ, ಬೇಗನೆ ಕಾಮಶಾಂತ ಸುಖವಿಲಾಶ ಸೈನಮಂಚಕ್ಕೆ ಹೋಗೋಣ ನಡಿವಂಥವರಾಗಿರಿ.

ಸಂಗ್ಯಾ : ಹೊರಗ ಬಾಳಣ್ಣ ಅದಾನು. ಅಂವಗ ಸ್ವಲ್ಪ ಹೇಳಿ ಬರ‌್ತೇನಿ. ಬಾಳಣ್ಣಾ, ಹೊರಗೇ ಅಡ್ಡಾಡಿಕೋತ ನೋಡ್ತಾ ಇರು.

ಬಾಳ್ಯಾ : ಸಂಗಣ್ಣಾ, ಅದರ ಕಾಳಜಿ ಬಿಡು. ನಾನೆಲ್ಲಾ ನೋಡ್ತಾನs ಇರ‌್ತೇನಿ.
(ಗಂಗಾ : ಸಂಗ್ಯಾ ಒಳಗೆ ಹೋಗುವರು)

ಗಂಗಾ :

ರಂಗಮಂಚಕ ಹೋಗುನು ನಡಿ
ಅಲ್ಲಿ ವಿಲಾಸ ಮಾಡೋಣ ಕೂಡಿ ॥ಪಲ್ಲವಿ ॥

ಹಾಲಿಗಿ ಹಾಕಿದಾಂಗ ಹೆಪ್ಪಾ
ಕಣ್ಣಿಗಿ ಹೆತ್ತಿದಾಂಗ ಜಂಪಾ ॥

ಸೈನ ಮಾಡೋಣ ಇಬ್ಬರು ಕೂಡಿ
ರಂಗ ಮಂಚಕ ಹೋಗೋಣು ನಡಿ ॥

ನಿನ್ನ ಮ್ಯಾಲ ಹೊಚ್ಚೇನs ಶಾಲ ಜೋಡಿ
ಪ್ರಿಯಾ ಅಂತೇನು ಘಾಸಿ ಮಾಡಬೇಡಿ ॥

ಹವಳ ಮುತ್ತ ಜೋಡಿಲೆ ಕೂಡಿಸಿದಾಂಗ
ಪುರಮಾಸೆ ಭಗವಾನ ಕೂಡಿಸಿದಾನ ॥

(ಕೆಲವು ದಿನಗಳಾದ ಮೇಲೆ ಈ ಸುದ್ದಿ ಊರಲ್ಲಿ ಹಬ್ಬುತ್ತದೆ. ಎಲ್ಲರೂ ಗಂಗಿ, ಸಂಗ್ಯಾರ ಹಾದರದ ಸುದ್ದಿಯನ್ನೇ ಮಾತನಾಡುವವರು. ಕಿವಿಯಾರೆ ಕೇಳಿದ ಬಾಳಣ್ಣ ತನ್ನಷ್ಟಕ್ಕೆ ತಾನೇ ಸಂಗ್ಯಾನ ಭವಿಷ್ಯ ನುಡಿಯುತ್ತಾನೆ).

ಬಾಳ್ಯ :

ಈ ಊರಾಗ ಎಲ್ಲರಿಗಿ ತಿಳಿದsತಿ ಅವರ
ಕೈಯ್ಯಗ ಸಿಕ್ಕರಾಗುದು ಫಜೀತಿ ॥ಪಲ್ಲ ॥

ಓಣಿ ಒಳಗ ಜನರು ಮಾತಾಡಿ
ಕೈ ಬಡದ ನಗತಾರೊ ನಮ್ಮನ ನೋಡಿ
ಸಂಗ್ಯಾ ಹೋದs ಅಂತಾರ ಮಣ್ಣಗೂಡಿ ॥

ಈಗ ಸಂಗ್ಯಾಗ ಸವಿ ಭಾಳ ಹತ್ತೇತಿ
ಮುಂದ ಆಗೋದು ಯಾರಿಗೇನs ತಿಳದsತೀ
ಅಣ್ಣ ತಮ್ಮ ಮೂವರಿಗಿ ಸುದ್ದಿ ಹತ್ತೇತಿ ॥

ಅಬ್ಬಾ !….. ಊರಲ್ಲಿ ಸಂಗ್ಯಾನ ಸುದ್ದೇ ಸುದ್ದಿ. ಇದರಾಗ ಬೀಳಬ್ಯಾಡಾ ಅಂತ ಅವಗ ಮೊದಲs ಹೇಳಿದೆ ಕೇಳಲಿಲ್ಲಾ. ನಾನೂ ಬಡವ. ಇವನ ಕಾಲಾಗ ನಾನೂ ಅವಗ ಸಾಮೀಲ ಆದ್ನಿ. ಸೂಳಿ ಪಾಪ ಸನ್ಯಾಸಿಗಂತ ನನಗೂ ಎಲ್ಲಿ ಬಡಕೋತತ್ಯೋ ಏನೋ ಸಂಗ್ಯಾ ಅಂತೂ ಹೋಗತಾನ ಇನ್ನ : ಕುಡಗೋಲ ಬಾಯಿಗೆ. ಮಾಡಿದ್ದ ಉಣವಲ್ಯ್‌ಕs…..ನಾ ಅರೆ ಹ್ಯಾಂಗ ವಿರೋಧಿಸಲಿ ನನಗೂ ಉಣಸ್ತಾನು, ತಿನಸ್ತಾನು. ಮನಿತನದ ಖರ್ಚು ಕೊಡತಾನು…….ಈಗ ಊರಾಗ ನನ್ನ ಅಂಜಿಕಿಗಿ ನಾನs ತಿರಗಾಡಾಕ ಹತ್ತೇನಿ. ಎಲ್ಲಿ ನೋಡಿದಲ್ಲಿ ಸಂಗ್ಯಾ : ಗಂಗಿ ಇವರ ಸುದ್ದಿ ಕೇಳ ಬರಾಕ ಹತ್ತೇತಿ. (ವೇಳೆಗೆ ಮೊದಲೇ ಏನೇನೋ ಕನಸು ಕಂಡ ಈರ‌್ಯಾ ಬಳ್ಳಾರಿಯಿಂದ ಹೊರಟು ಬರುತ್ತಾನೆ. ಈರ‌್ಯಾ ಮನೆಗೆ ಬಂದಾಗ ಸಂಗ್ಯಾ ಒಳಗೇ ಸಿಕ್ಕಿ ಬೀಳುತ್ತಾನೆ).

ಈರ್ಯಾ :

ಏನ ಮಾಡತಿದ್ದಾಳಪ್ಪಾ ಗಂಗಿ ಒಳಗs :
ಕದಾ ತಗಿವಳ್ಳೊ ನನಗ
ಈರ‌್ಯಾ ಬಂದ ಬಾಳೊತ್ತಾತೊ ಬಾಗಿಲದಾಗ ॥ಪಲ್ಲ ॥

ಹಣಿಕಿ ಹಾಕಿ ನೋಡಲೇನ ಕಿಡಿಕ್ಯಾಗs
ಮ್ಯಾಲಿನ ಮ್ಯಾಳಿಗ್ಯಾಗ
ಸಂಗ್ಯಾನ ಸುದ್ದಿ ಮಾತಾಡತಾರೊ ಊರಾಗ ॥

ಖಾತ್ರಿಯಾದೀತಪ್ಪಾ ನನ್ನ ಮನದಾಗ
ಯೆನ್ನ ಪ್ರಾಣ ಹೋಗಲೀಗ
ಬಿಡೋದಿಲ್ಲ ಕಡಿತೇನೊ ಸಂಗ್ಯಾಗs ॥

ಕುಡಗೋಲ ಹಿಡಕೊಂಡ ಕುಂಡ್ರತೇನೊ ಬಾಗಿಲದಾಗ
ಸಂಗ್ಯಾ ಸಿಗಲ್ಯೋ ಕೈಯಾಗ
ಅವನ ಪ್ರಾಣಾ ತಗೀತೇನೊ ಘಳಿಗ್ಯಾಗ ॥

ಹೊಂಗಲದೂರಾಗ ಅಣ್ಣ ತಮ್ಮರ ಇದ್ದೂ ಇಲದಂಗ
ಹೇಡಿತನ ಬಂದಿತೋ ನಮಗ
ನಮ್ಮ ಅಬುರೂ ಸಂಗ್ಯಾ ಗಂಗೀ ಕಳದಾರೀಗ ॥

(ಸಂಗ್ಯಾ : ಗಂಗೀ ಒಳಗೇ ಸಿಕ್ಕು ಬಿದ್ದಾಗ ಒಬ್ಬರಿಗೊಬ್ಬರ ನಡುವೆ)

ಗಂಗಾ :

ಅಯ್ಯೋ ಸಂಗ್ಯಾಮಾಡಲೆಂಗಾ
ಬಾಗಿಲದ್ಹೊರಗ ಈರ‌್ಯಾ ಬಂದಾ ॥ಪಲ್ಲ ॥

ಹೆಸರಗೊಂಡ ಕರಿಯತಾನ
ಎನ್ನ ಕಡಿಯತಾನ ॥

ಈರ‌್ಯಾ ಬಂದಾನ ವೈರಿ
ಕೈಯಾಗ್ಹಿಡದಾನ ಚೂರಿ ॥

ಕೂಡಿದ ಗೆಳಿತಾನಾ
ನಡಿಲಿಲ್ಲೊ ಬಾಳ ದಿನಾ ॥

ಬೇಕಾದ ಮಾತಿಗಿ ಬೆಂಕಿ ಹಚ್ಚಲ್ಲೊ
ಅಯ್ಯ ! ಸಂಗ್ಯಾ ಮಾಡಲ್ಹೆಂಗಾ ॥

ಕಾಂತಾ, ನಾನೂ ನೀನೂ ಕೂಡಿ ಕೆಲ ದಿನ ಕಾಲ ಕಳದೀವಿ ಮನಸಿನ ಸಂತೋಷ ಇನ್ನೂ ಮುಗದಿಲ್ಲ. ಇಷ್ಟರಾಗಾ ಈರ‌್ಯಾ ಬಂದು ಬಾಗಿಲದಾಗ ಆರ್ಭಟ ಮಾಡಾಕತ್ಯಾನ. ಇನ್ನು ಹ್ಯಾಂಗೆ ಮಾಡೋಣ. ನನ್ನ ಕಡಿದು ಹಾಕ್ತಾನ.

ಸಂಗ್ಯಾ :

ಘೋರವದೀತಲ್ಲ ರಮಣೀ
ಪಾರಗಾಣಿಸು ಯನ್ನ ಸುಗುಣೀ ॥ಪಲ್ಲ ॥

ಬಂದೆ ಸಿಕ್ಕೀನಲ್ಲ ರಮಣೀ
ಇಂದು ಪಾರ ಮಾಡ ಸುಗುಣಿ ॥

ದ್ವಾರ ಬಾಗಿಲದೊಳು ರಮಣೀ
ಈರ‌್ಯಾ ನಿಂತಿರುವನು ಸುಗುಣೀ ॥

ರಮಣೀ, ಗಂಗಾ ಈ ಹೊತ್ತು ಹ್ಯಾಗಾದರೂ ಮಾಡಿ ನನ್ನ ಪಾರು ಮಾಡುವಂತವಳಾಗು.

ಗಂಗಾ :

ಅಯ್ಯಯ್ಯೋ ಎಲೊ ಪ್ರಿಯಾ
ಅಂಜಬ್ಯಾಡಲೊ ನೀನಾ ॥ಪಲ್ಲ ॥

ಹ್ಯಾಂಗ್ಯಾರ ಮಾಡಿ ನಿನ್ನಾ
ಉಳಿಸುವೆನ ಪ್ರಾಣ ॥

ಕೇಳೊ ಸಂಗ್ಯಾ ನೀನಾ
ನಂದೊಂದು ವಚನಾ ॥

ಬಚ್ಚಲದೊಳು ನಿನ್ನ
ಬಚ್ಚಿ ಇಡುವೆನಾ ॥

ಕಪ್ಪು ಕತ್ತಲದೊಳು
ಗಪ್ಪ ಮಾಡುವೆ ನಿನ್ನಾ ॥

ಚಾಪಿಯ ಸುರುಳ್ಯಾಗ
ಮುಚ್ಚಿ ಇಡುವೆನೊ ನಿನ್ನಾ ॥

ಸಂಗ್ಯಾ, ನೀನೇನೂ ಚಿಂತೆ ಮಾಡಬ್ಯಾಡಾ, ಮೈಮೇಲೆ ಬರುವ ಪ್ರಸಂಗ ಬಂದರೆ ಬಚ್ಚಲದಲ್ಲಿ ಇಲ್ಲವೆ ಹಾಸಿಗಿ ಸುಳ್ಯಾಗ ಸುತ್ತಿ ಮುಚ್ಚಿ ಇಡ್ತೇನಿ.

ಸಂಗ್ಯಾ :

ಹೊಂಗಲದೂರಾಗ ಮೆರೆದ ಹುಡುಗ ನಾನಾ
ಬಚ್ಚಲಾಗ ಹೆಂಗ ಡೊಗ್ಗಲೆ ನಾನಾ ॥

ಹೊಂಗಲದೂರಾಗ ಬೆಳೆದ ಹುಡುಗ ನಾನಾ
ಚಾಪ್ಯಾಗ ಹೆಂಗ ಡೊಗ್ಗಲೆ ನಾನಾ ॥

ಹ್ಯಾಂಗೆ ಮಾಡಲೇ ನಾನೆಲ್ಲಿಗೆ ಹೋಗಲೇ
ಬಂದ ಸಿಕ್ಕೀನಿ ಈರ‌್ಯಾನ ಕೈಯಾಗ ॥

ಸುತ್ತಮುತ್ತ ಹಿತ್ತಲ ಗ್ವಾಡಿ ಭಾಳೆತ್ತರಾ
ಮೊದಲೀಗಿ ತಿಳಿಲಿಲ್ಲs ಮಾಯಾ ಮಾಡಿದಿ ॥

ಗಂಗಾ, ಹೊಂಗಲದೂರಲ್ಲಿ ಮೀಸಿ ಮೆರೆದ ಮಗ ನಾ. ಬಚ್ಚಲ ಇಲ್ಲಾ ಚಾಪಿ ಸುರುಳ್ಯಾಗ ಡೊಗ್ಗುವದು ನನ್ನಿಂದಾ ಆಗದು. ಹಿತ್ತಲದಲ್ಲಿ ಜಿಗಿಯಬೇಕೆಂದರೆ ಗೋಡೆ ಎತ್ತರ ಹ್ಯಾಂಗ ಮಾಡಲೇ ಗಂಗಾ.

ಗಂಗಾ :

ಚಿಂತಿಯ ಮಾಡಬ್ಯಾಡೊಕೇಳ್ ಸಂಗ್ಯಾ ॥ಪಲ್ಲ ॥

ನಂದೊಂದ ವಚನಾನಿನ್ನ ಪಾರಮಾಡೊ
ಶಂಕರೇಶಾನ ಮರತಿರಬ್ಯಾಡೊ ನೀನಾ ॥

ನಿನ್ನ ಮ್ಯಾಲ ಮೋಹವಿಟ್ಟಆಗಿಲ್ಲೊ ಬಾಳದಿನಾ
ನಮ್ಮ ಇಬ್ಬರಿಗಿ ಕೂಡಿದಂಗಆಗೇತೊ ಹಾಲು ಜೇನಾ ॥

ಮನಸಿಲ್ಲ ಮದ್ವಿಗಂಡಾಖೊಟ್ಟೆ ನನ್ನ ದೈವಾನಾ
ನಾಳೆ ಸೆರಗ್ಹರದಬಿಡತೇನಯಾರ ಮಾಡೋದೇನಾ ॥

ಪ್ರಾಣೇಶ್ವರಾ, ನಾನೂ ನೀನೂ ಕೂಡಿ ಭಾಳದಿನ ಆಗಿಲ್ಲಾ. ಇಬ್ಬರದೂ ಪಿರತಿ ಹಾಲೂ ಜೇನ ಕೂಡಿದಾಂಗ. ಆ ಈರ‌್ಯಾ ನನ್ನ ಮನಸಿಗೆ ಬಂದೇ ಇಲ್ಲಾ. ಏನಾರ ಮಾಡಾಕ ಬಂದ್ರ ಅವನ ಶೆರಗ ಹರದ ಬಿಡತೀನಿ.

ಈರ್ಯಾ : ಗಂಗಿ, ಏ ಗಂಗೀ, ಕದಾ ತಗಿಂತಿಯೊ ಏನ ಕದಾ ಒದ್ದ ಮುರಿಲ್ಯೋ (ಕದಾ ಒದ್ದರೂ ಮುರಿಲಿಲ್ಲ) ಏ !….ತಗಿನs ಬೇಗಾ………

ಗಂಗಾ : (ಒಳಗೇ) ಸಂಗ್ಯಾ, ನಾನೀಗ ಕದಾ ತಗೇತೇನಿ ನೀ ನನ್ನ ಕೂಡನs ಬಾ ಮುಚ್ಚೀ ಬಾಗಲತನಕಾ. ಬಾಗಲಾ ತಗದ ಕೊಡಲೇನs……..ನೀ ಕದ್ದ ಸಂದ್ಯಾಗ ನಿಲ್ಲು. ಅಂವಾ ಒಳಗೆ ಬರ‌್ತಾನು ನೀ ಹೊರಗ ಜಿಗಿ.

ಈರ್ಯಾ : ಎಷ್ಟ ವದರಿದರೂ ಕದಾ ತಗಿಲಿಲ್ಲ. ಏನ ಮಾಡ್ತಾ ಇದ್ದಿ ಗಂಗೀ ?…….

ಗಂಗಾ : ಕಾಂತಾ ನಾನು ನಿದ್ದೆ ಹತ್ತಿ ಮಲಗಿದ್ದರಿಂದ ನನಗೆ ಬೇಗನೆ ಕದಾ ತಗ್ಯೋದ ಆಗಲಿಲ್ಲ. ಕಡ್ಡೀ ಪೆಟ್ಟಿಗೀನೂ ಸಿಗಲಿಲ್ಲs………

ಈರ್ಯಾ : ಯಾಕ ಗಂಗೀ, ಹತ್ತಿ ಮಾರಿ ಹತ್ತ ಡಜನ ಕಡ್ಡೀಪೆಟ್ಟಿಗಿ ಬುರ್ಜ ತಂದಿಟ್ಟೀನಿ. ಇದೆಲ್ಲಾ ಬಡಿವಾರಾ ಯಾರ ಮುಂದ ಹೇಳುತ್ತಿ ?….. ನೀನು ಒಳಗಿಂದೊಳಗs ಅಲ್ಲದ್ದ ಕಾರಭಾರ ಮಾಡಿದ್ದು ನನಗ ಗೊತ್ತ ಇಲ್ಲಂತ ತಿಳಿದಿದೀ ಏನು? ಏನು ಕೇಳಿದರೂ ಗಂಗಿ, ಸಂಗ್ಯಾ, ಈಗಿಂದೀಗಲೇ ನಿನ್ನನ್ನು ಕಡಿದು ಹಾಕುತ್ತೇನೆ.

ಗಂಗಾ : (ಬಾಗಿಲು ತೆಗೆಯುತ್ತಾಳೆ : ಕತ್ತಲಲ್ಲಿ ಆರ್ಭಟೆಯಿಂದ ಈರ‌್ಯಾ ನೇರವಾಗಿ ಒಳಗೇ ಹೋಗುತ್ತಾನೆ. ಕದ್ದ ಸಂದಿಯಿಂದ ಸಂಗ್ಯಾ ಹೊರ ಓಡಿ ಹೋಗುತ್ತಾನೆ. ಆದರೆ ದಾಟಿ ಹೋಗುವಾಗ ಅವನ ಜರಕಟಿ ರುಮಾಲ ಬಿದ್ದಿರುತ್ತದೆ. ಅದನ್ನು ಈರ‌್ಯಾ ಕಂಡು)