ಗಂಗಾ :

ಯಾಕ ಬನ್ನೆ ಎವ್ವ ನಾಲ್ಕ ಮಂದೊಯೊಳಗ
ಕಳದ ಹೋತೇ ಎನ್ನ ಡಾಗೀಣಾ ॥ಪಲ್ಲ ॥

ಸರಗಿಯ ಮಾರಿಗಿ ಉರಿಯ ಹಚ್ಚಲೆವ್ವಾ
ಕಳದ ಹೋತೆ ಎನ್ನ ಡಾಗೀಣಾ ॥

ಏನ ಘಾತವಾದೀತ ಪರಮ್ಮ ನಂದಾ
ಅಂತಿಂಥ ಸರಿಗ್ಯಲ್ಲಸೇರ ಬಂಗಾರ ಸರಿಗಿ ॥

ಗಂಡ ಭಾವ ಮೈದುನರಿಗೀ
ಏನ ಹೇಳ್ಳೆ ಮನಿಗ್ಹೋಗಿ ॥

ಪರಮ್ಮಾ, ನನ್ನ ಕೊರಳಾಗಿನ ಸರಗಿ ಯಾರೋ ಹೊಡೆದರಮ್ಮ, ಮನ್ಯಾಗ ಕೇಳಿದರ ಏನ ಹೇಳ್ಳೆ : ಪರಮ್ಮಾ.

ಪರಮ್ಮಾ : ಆದ್ಹಕ್ಯಾಕ ಅಂಜತಿ ನಡಿ ನನ ಮಗಳ ಬಸವಣ್ಣ ದೇವರಿಗಿ ವರಸ ತುಂಬಗೊಡದ ಗಂಡ ಮಗನ್ನ ಕೊಡ ಅಂತ ಹೇಳಿ ಬೇಡಿಕೊಂಡ….ಅದೊಂದ ಸರಿಗಿ ದೇವರಿಗೆ ಮುಡುಪು ಇಟ್ಟ ಬಂದೇವ ಅಂತ ಹೇಳಿದರಾತಿ. ನಡೀ ನನ ಮಗಳ.

ಸಂಗ್ಯಾ : ಬಾಳಣ್ಣಾ, ನೋಡಿದಿಯಾ ?

ಬಾಳ್ಯಾ : ಇಲ್ಲ ಗೆಳೆಯಾ, ನಾನೋಡಿಲ್ಲಾ, ಅದು ಏನ ಮಿತ್ರಾ ?

ಸಂಗ್ಯಾ : ಬಾಳಣ್ಣಾ ಇದು ಸರಿಗಿ

ಬಾಳ್ಯಾ : ಮಿತ್ರಾ ಎಲ್ಲಿ ಬಿದ್ದಿತ್ತು ?

ಸಂಗ್ಯಾ : ಮಿತ್ರಾ ಇಲ್ಲೇ ಬಿದ್ದಿತ್ತು

ಬಾಳ್ಯಾ ಯಾರಾಕೀಬಾಳ್ಯಾ ಯಾರಾಕೀ
ಆಕಿನ ಕಂಡ ಬಂತೋ ಯನಗ ಬವಳಿಕೀ ॥ಪಲ್ಲ ॥

ಕುಡಿಹಬ್ಬ ಕುಣಿಸುತಮೂಗ ಮುರಿಯುತ
ಆಕಿನ ನೋಟಾವಾರಿಗಣ್ಣಾ ॥

ಮೂಗು ಸಂಪಿಗಿ ಗೊನಿನಾಗರ ಫಣೀ
ಆಕಿಯ ನೋಟಾವಾರಿಗಣ್ಣಾ ॥

ಬಾಳಣ್ಣಾ, ಆ ನಾರಿಯ ವರ್ಣನೆ ನೋಡಿದಿಯಾ ? ಏನು ಹೇಳಲಿ ಬಾಳಣ್ಣಾ ಅವಳ ತೋಳ, ತೊಡಿಗಳು ಬಾಳಿಯ ದಿಂಡಿನಂತೆ ಕಣ್ಣುಗಳು ತಾವರಿಯಂತೆ, ಬಾಳಣ್ಣಾ ಗಲ್ಲಗಳು ಕನ್ನಡಿಯಂತೆ ಕುಚಗಳು ಲಿಂಬಿಯ ಹಣ್ಣಿನಂತೆ, ಹಲ್ಲುಗಳು ದಾಳಿಂಬರ ಬೀಜದಂತೆ ಹೀಗೆ ತೋರುವ ಆ ಹೆಣ್ಣನ್ನು ನೋಡಿದ ಕೂಡಲೆ ಎನ್ನ ಮನಸಿಗೆ ಸಮಾಧಾನವಿಲ್ಲ. ಗೆಳಿಯಾ ನನಗೆ ಹ್ಯಾಂಗ್ಯಾಂಗರಾ ಆಗಲಿಕ್ಕೆ ಹತ್ತಿರುವದು.

ಬಾಳಣ್ಣಾ :

ಸಂಗಣ್ಣಾ ಕೇಳೊ ನನ್ನ ಮಾತಾ
ರಾವಣಾ ಪರ ಹೆಣ್ಣಿಗೆ ಮನಸೋತಾ ॥

ಅವನಂತೆ ಅದೀಯೋ ನೀನು ನಷ್ಟಾ
ಸಭಾದಾಗ ನಿಂತ ಹೇಳುವೆ ಸ್ಪಷ್ಟಾ ॥

ಸಂಗಣ್ಣಾ, ಅವಳು ಯಾರೇ ಇರಲಿ : ಅವಳ ಗೊಡವಿ ನಮಗ್ಯಾತಕ್ಕೆ ಬೇಕು. ಅವಳ ವರ್ಣನೆಯನ್ನು ತೆಗೆದುಕೊಂಡು ನಾವು ಮಾಡುವುದೇನದೆ ? ಮತ್ತು ಅವಳು ನಮ್ಮನ್ನು ನೋಡುತ್ತ ಹೋದಳೆಂದು ಯಾವ ಮಾತಿನಮೇಲಿಂದ ಹೇಳುತ್ತೀ? ಅವರು ವಾರಿಗೆಯ ಸ್ತ್ರೀಯರು ತಮ್ಮ ತಮ್ಮೊಳಗೆ ಒಬ್ಬರನ್ನೊಬ್ಬರು ನೋಡುತ್ತ ಅವರು ಹೋಗಿರಬಾರದ್ಯಾಕೆ ? ಪರಸ್ತ್ರೀಯರ ಮೇಲೆ ಮನಸ್ಸು ಮಾಡಿದ ರಾವಣನು ತನ್ನ ಕುಲಕೋಟೆಯಲ್ಲಾ ನಾಶ ಮಾಡಿಕೊಂಡನು. ನನ್ನ ಮಾತನ್ನು ಕೇಳು. ಪರ ಸ್ತ್ರೀಯರ ಹವ್ಯಾಸಕ್ಕೆ ಹೋಗಬೇಡ ಮಿತ್ರಾ.

ಸಂಗ್ಯಾ : ನಿನಗ ಹೇಳುವದೇನಂದ್ರ ಬಾಳಣ್ಣಾ, ಈ ಸರಗಿ ಬಹಳ ಮಾಡಿ ಅವಳದೇ ಆಗಿರಬಹುದು.ಅವಳನ್ನು ವಿಚಾರಿಸಿ. ಅವರ ಗುರ್ತಾ ಕೇಳಿಕೊಂಡು, ಸರಿಗಿಯ ಗುರ್ತಾ ಕೇಳಿ : ಅವಳದಾದರೆ ಅವಳಿಗೆ ಕೊಟ್ಟು ಬೇಗನೆ ಬರುವಂಥವನಾಗು. ಇಷ್ಟ ಮಾಡಿದರೆ ನನ್ನ ಮೇಲೆ ನೀನು ದೊಡ್ಡ ಉಪಕಾರ ಮಾಡಿದಂತಾಗುತ್ತದೆ ಗೆಳೆಯಾ ತಗೋ ಈ ಸರಿಗಿ (ಹಾಗೆಯೇ ಬಾಳ್ಯಾ ಗಂಗಾನ ಕಡೆ ತೆರಳುತ್ತಾನೆ).

ಬಾಳ್ಯಾ : (ಗಂಗಾನಿಗೆ ಅಡ್ಡಗಟ್ಟಿ)

ಯಾಕ ತಂಗೀ ಎಲ್ಲಿಗ್ಹೊಂಟಿ ಅವಸರಾ
ಆಗಿದೊಳಿ ಸಿಂಗಾರಶೀಲವಂತಿ
ಹಣಿಮ್ಯಾಲ ಚಂದುರಾ॥ಪಲ್ಲ ॥

ವಸ್ತಾ ವಡವಿ ಇಟ್ಟಿದೊಳೇ ಅಲಂಕಾರ
ದವಡ ಮಾಡಿ ಹಿಡದ ನಡದೇ ಬಾಜ್ಯಾರ ॥

ಏನದ ತಂಗಿ ! ನೀವು ಯಾವೂರವರು ? ಎಲ್ಲಿಗ್ಹೊಂಟಿದೇರಿ ? ನಿಮ್ಮ ಖೂನಾ ಗುರ್ತಾ ಹೇಳ್ರಿ

ಗಂಗಾ : ಏನಪಾ ಯಣ್ಣಾ ? ನಮ್ಮ ಗುರ್ತ ತೆಗೆದಕೊಂಡ ನೀಯೇನ ಮಾಡಾವದೀ ? ನಮಗ್ಯಾಳೆ ಆಗತತಿ ನಾವ ಹೋಗತೇವ…. ತಗಿ, ಬಿಡ ದಾರೀ…..

ಬಾಳ್ಯಾ : ಅಲ್ಲವಾ ತಂಗೀ ಬಸವಣ್ಣ ದೇವರ ಗುಡ್ಯಾಗ ನಿಮ್ಮನ್ನ ನೋಡಿದ್ದಾಂಗ ಆಗಿತ್ತು. ನೀವ ಯಾರಂತ ಕೇಳದಿವಿ, ಹೇಳಿ ಮುಂದ ದಾಟಿ ಹೋಗರಿ.

ಗಂಗಾ : ಅಣ್ಣಾ, ನಿನ್ನ ಹೆಸರ ಹೇಳುದ ವಿನಾ ನಮ್ಮ ಹೆಸರ ಹೇಳೋದಿಲ್ಲ. ನೀನ ಯಾರಾಂವಾ ? ಯಾವೂರಾಂವಾ ? ಮೊದಲ ನಿನ್ನ ಹೆಸರ ಹೇಳು.

ಬಾಳ್ಯಾ : ತಂಗೀ ನಿಮ್ಮ ಖೂನಾ ಗುರ್ತಾ ಎಲ್ಲಾ ಹೇಳಿದರ ಮಾತ್ರ ನನ್ನ ಹೆಸರ ಹೇಳ್ತೇನಿ. ಇಲ್ಲದಿದ್ರ ನಾ ದಾರೀ ಬಿಡೋದಿಲ್ಲ ನೋಡವಾ.

ಪರಮ್ಮ : ಯಾಕಪೂ ಯಾಕ ದಾರೀ ಬಿಡುದಿಲ್ಲಾ ಅಂತ. ಏನ ನಿನ್ನ ಗಂಟ ತಿಂದೇವು ? ಎಲ್ಲಿಂದ ಬಂತ ನನ ಮಗಳ ಇದ ಹಸಗೇಡಿ. ಹಸಗೇಡಿನ್ನ ಹಾಸಿಗ್ಯಾಗ ಕರಕೊಂಡ್ರ ಮಿಸಿಕ್ಯಾಡಿ ಮೂರುಮಳ ಕೌಂದೀ ಹರದಿತ್ತ ಅಂತ ಅವ್ವಾ !….ಏನ ಗಂಟ ಬಿತ್ತ ಇದೇನ ನಮ್ಮ ಬಿಡೋ ಹಂಗ ಕಾಣುದಿಲ್ಲಾ. ಇರಲಿ ನನ ಮಗಳ ಇನ್ನೇನ ಗತಿ ಅನ್ನೀ

ಗಂಗಾ :

ಬಿಡೋದಾರೀ ಹುಡುಗಾಟ ತರವಲ್ಲಾ
ಹೊತ್ತ ಏರಿ ಬಂದಿತೊ ನೆತ್ತಿ ಮ್ಯಾಲಾ ॥ಪಲ್ಲ ॥

ಕೈಯಾಗಿದ್ದಾವ ಕಾಯೀ ಕಪ್ಪರಾ
ಕಾಡಬ್ಯಾಡ್ರಿ ಬೀಳುವೆ ನಿಮ್ಮ ಕಾಲಾ ॥

ಅಣ್ಣಾ ! ನಮಗೆ ಬಿಸಿಲು ಆಗಿರುವದು. ನಾವು ಹೋಗತೇವು, ದಾರೀ ಬಿಡುವಂಥವನಾಗು ಅಣ್ಣಾ ಇಷ್ಟ ಪ್ರಯಾಸಪಟ್ಟ ನಮ್ಮ ಗುರ್ತಾ ಯಾಕ ಕೇಳತೀ ? ಯೇನರಾ ಮಾಡಾವ ಅದಿಯೇನ್ ? ಹೇಳಪ್ಪಾ.

ಬಾಳ್ಯಾ : ತಂಗೀ, ನಿಮಗೂ ನಮಗೂ ಅಷ್ಟ ಮನಸಿನ ಮ್ಯಾಲ ಪರಿಣಾಮ ಆಗೋ ಮಾತ ಇದ್ರ ಕೇಳಬೇಕಾತು.

ಗಂಗಾ : ಅಣ್ಣಾ, ನನ್ನ ಹೆಸರು ಲಗಳ್ಯಾರ ಗಂಗಾ, ನನ್ನ ಪ್ರಿಯನು ಯಾಪಾರ ಹೋಗ್ಯಾನು ಇರಪಕ್ಷಿ, ಬಸವಂತ ನನ್ನ ಮೈದುನರ, ನನ್ನ ತವರಮನಿ ಬೈಲವಾಡ. ನನ್ನನ್ನು ಶಾರಹೊಂಗಲ ಲಗಳೇರ ಈರಭದ್ರ ಸಾವುಕಾರಗ ಕೊಟ್ಟಾರು. ನಾವು ಬಸವಣ್ಣ ದೇವರಿಗೆ ಬಂದಿದ್ವಿ, ನಿಮ್ಮ ಗುರ್ತಾ……

ಬಾಳ್ಯಾ : ತಂಗೀ ! ನಾನ ಹುರಕಡ್ಡಿ ಬಾಳಣ್ಣ, ಾನೂ ಮ್ಯಾಲಿನ ಮನಿ ಸಂಗಪ್ಪ ಸಾವುಕಾರನೂ ಬಸವಣ್ಣ ದೇವರಿಗಿ ಹೋಗಿದ್ವಿ. ಅಲ್ಲಿ ತಲಬ ಮಾಡಿ ಒಳಗೆ ಹೋಗ್ವಾಗ ಅಲ್ಲಿ ಒಂದ ಸರಿಗಿ ಬಿದ್ದಿತ್ತು. ಆ ಸರಿಗಿ ಗುರ್ತಾ ಹೇಳಿದರ ನಿನ್ನ ಸರಿಗಿ ನಿನಗ ಕೊಟ್ಟ ಗುರ್ತಾ ಮಾಡಿಕೊಂಡ ಹೋಗಬೇಕಂತ ಬಂದೇನಿ.

ಗಂಗಾ : ಬಾಳಣ್ಣಾ, ಇದೊಂದ ನನ್ನ ಮ್ಯಾಲ ದೊಡ್ಡ ಉಪಕಾರ ಮಾಡಿದ್ದಂಗಾತು ತಗಿ ನೋಡೋಣ ಸರಿಗಿ.

ಬಾಳ್ಯಾ : ಅದನ್ನ ತಗೆದುಲ್ಲಾ ಅದರ ಗುರ್ತಾ ಹೇಳಿದರ ಕೊಡತೇನಿ. ಅದನಿಂದ ಅಂತ ಹ್ಯಾಂಗ…..

ಗಂಗಾ : ಅಯ್ಯ ಯಣ್ಣಾ ಎಡ್ಡೂ ಕೆಂಪ ಗೊಂಡೆ ಹೆಣದದ್ದ ಅತಿ, ನಡು ಲೋಲಕದ ಹಳ್ಳ ಅತಿ…….

ಬಾಳ್ಯಾ : ಹೌದ ತಂಗೀ ನಿಂದ ಅಂದಾಂಗಾತು. ಗುರ್ತ ಇರಲಿ, ಮರಿ ಬ್ಯಾಡಾ ಹೋಗಲಿ ಇನ್ನ…….. (ಸರಗಿ ಕೊಡುವನು)

ಗಂಗಾ : ಅಣ್ಣಾ, ಭಾಳ ಚಲೊ ಮಾಡಿದಿ, ನಿಮ್ಮನ್ನ ಹ್ಯಾಂಗ ಮರ‌್ಯೋದಪಾ ನಾವೂ ಹೋಗ್ತೇವಿ ಬಾಳಣ್ಣಾ…..

(ಗಂಗಾ : ಪರಮ್ಮಾ ಮನೆಯ ಕಡೆಗೆ ತೆರಳುತ್ತಾರೆ)

ಸಂಗ್ಯಾ : ಬಾಳಣ್ಣಾ, ಹೋದ ಕೆಲಸಾ ಏನಾತಿ ಮಿತ್ರಾ !

ಬಾಳ್ಯಾ : ಸಂಗಣ್ಣಾ, ಸರಗಿ ಕೊಟ್ಟು ಬನ್ನಿಪಾ, ನಮ್ಮ ಹೊಂಗಲದ ಲಗಳೇರ ಈರ‌್ಯಾನ ಹೆಂಡತಿ ಗಂಗಾ ಅಂತೊ ಆಕಿ……

ಸಂಗ್ಯಾ : ಹಾಂ ! ಈರ‌್ಯಾನ ಹೇಣ್ತಿ ಗಂಗಾ ! …… ಅಬ್ಬಾ…….

ಬಾಳ್ಯಾ : ಅಂವಾ ಯಾಪಾರಕ ಹೋಗ್ಯಾನಂತ ಆಕಿ ಮೈದನರ ಇರಪಕ್ಷಿ ಬಸವಂತ ಅಂತ ಆದಾರಂತ.

ಸಂಗ್ಯಾ : ಹೌದ, ಬಾಳಣ್ಣಾ ನನಕೂ ಸಣ್ಣವರು…… ಈರ‌್ಯಾ ಯಾಪಾರಕ ಹ್ವಾದದ್ದ ಲಕ್ಕ ಆತಲ್ಲಾ ಬಾಳಣ್ಣಾ.

ಬಾಳ್ಯಾ : ಯಾಕ ಸಂಗಣ್ಣಾ……. ನಿನಗೇನಾಗಬೇಕ ಅದರಿಂದ…..

ಸಂಗ್ಯಾ :

ಸಾಹಸ ಮಾಡಿ ಒಡಿಸೊ ಬಾಳ್ಯಾ ಆಕಿ ಮನಸಾ
ಆಗತಾಳೊ ಕೈವಶಾ
ಹಂಗಾದರ ಕುಸಿ ಆತೊ ನನ್ನ ಮನಸಾ ॥ಪಲ್ಲ ॥

ರಾತ್ರಿ ಹಗಲಿ ಬೀಳ್ತಾವೂ ಗಂಗಿ ಕನಸಾ
ಆದರ ಕೈವಶಾ
ಕಡಕೊಂಡ ಬಿದ್ದಾಂಗಪ್ಪಾ ಕೈಲಾಸಾ ॥

ಮರ ಮರ ಮರಗತೇನೊ ಮನದಾಗಾ
ಅರವಿಲ್ಲೊ ಶಂಕರಗ
ಮರತಬಿಟ್ಟ ಮರತಾನಪ್ಪ ಭೂಮಿಮ್ಯಾಗ ॥

ಮನಿ ಕಡೆ ಇಲ್ಲೊ ಬಾಳ್ಯಾ ನನ್ನ ಧ್ಯಾಸಾ
ಸಾಯತೇನೊ ಉಪಾಸಾ
ಗಂಗಾನ ಮ್ಯಾಲೆ ಆಗೇತೋ ನನ್ನ ಮನಸಾ ॥

ಗೆಳಿಯಾ, ಹ್ಯಾಂಗಾದ್ರೂ ಮಾಡಿ ಅವಳನ್ನ ನನಗ ದೊರಕಿಸಿ ಕೊಡು ಇಲ್ಲಾಂದ್ರ ನಾನ ಉಳ್ಯಾಕ ಸಾಧ್ಯ ಇಲ್ಲಾ.

ಬಾಳಾ :

ಸಂಗಪ್ಪಣ್ಣಾ ! ಆಗದೋ ಎನ್ನ ಕೈಲೆ ॥ಪಲ್ಲವಿ ॥

ಕೆಟ್ಟವರ ಮನಿತಾನಾ
ಕೊಟ್ಟೆ ಸೂಳಿ ಮಕ್ಕಳಾ
ಕಡದ ಹಾಕ್ಯಾರೊ ನನ್ನ……
ಬಡವಪ್ಪ ಬಾಳ್ಯಾ ನಾನಾ ॥

ಹೊಂಗಲದೂರೊಳಗೆ
ಬೆಳೆದ ಹುಡಗ ನಾನಾ
ಆಗದೊ ಎನ್ನ ಕೈಲಿ
ಹಿಂತಾ ಕುಂಟಲತಾನ ॥

ಸಂಗಣ್ಣಾ, ನಾನು ಬಡವ, ಇಂಥ ಕೆಲಸಕ್ಕ ನನ್ನನ್ನು ನುಗಸಬೇಡಾ. ನನ್ನ ಕಡಿಂದ ಮರ‌್ಯೋ ಆಗುದುಲ್ಲಾ.

ಸಂಗ್ಯಾ : ಬಾಳಣ್ಣ, ನೀನು ನನ್ನ ಜೀವದ ಗೆಳಿಯಾ ನೀನಿದ್ದು ನನಗೆ ಇಷ್ಟು ಉಪಕಾರಾ ಮಾಡದಿದ್ರ ನಾನಾದರೂ ಇರಬೇಕ ಯಾಕ ? ನೀನು ಹೋಗದಿದ್ರ ನಾನಿಲ್ಲೆ ಪ್ರಾಣ ಬಿಟ್ಟು ಬಿಡುತ್ತೇನೆ.

ಬಾಳ್ಯಾ :

ಯಾರ ಮುನಿಗಿಂತ ಹೋಗಲ್ಯೋ ನಾನಾ
ತೋರಿಸ ಒಂದ ಕೂನಾ
ಹೇಳಿದರ ಹೋಗಿ ಬರುವೆನು ನಾನಾ ॥

ಆಕಿ ಇರೋದ್ಯಾವಲ್ಲಿ ಯಾ ತಿಕಾಣಾ
ಕೇಳಿಕೊಂತ ಹೋಗಲೇನಾ
ಕೂನಾ ಹೇಳು, ಹೋಗಿ ಬರುವೆನು ನಾನಾ ॥

ಸಂಗ್ಯಾ :

ಕೇಳೊ ನನ್ನ ಜೀವದ ಗೆಳೆಯಾ
ಬಾಳ್ಯಾ ಹಿಡೊಯೊ ಗುರತಾ ॥ಪಲ್ಲ ॥

ಗಂಗಾನ ಮನಿ ಪ್ಯಾಟಿ ಕೂಟಿಗೆ ಲಗತಾ
ಅಲ್ಲೋಗಿ ನಿತ್ತ ಹೇಳೊ ಮನದಾನ ಮಾತಾ ॥

ಚದರಂಗ ಚಾವಡಿ ಗೊಂಬೀ ಗುಡಿ
ಚಿನಿವಾಲರಂಗಡಿ ಲಗತಾ ॥

ಇರಪಕ್ಷಿ ಬಸವಂತ ಹಿಡದಾರೊ ನಿನ್ನ ಗುರತಾ
ಆಕಿ ಬಾಗಿಲ ಮುಂದ ಒಂದ ಮರಾ ತೆಂಗಿನದಾ ॥

ಬಾಳಣ್ಣಾ, ಗಂಗಾನ ಮನಿ ಪ್ಯಾಟಿ ಕೂಟಿಗೆ ಇರುವದು. ಗೊಂಬಿಗುಡಿ, ಚಿನಿವಾಲ ಅಂಗಡಿಗೆ ಲಗತದ. ಆಕಿ ಮೈದುನರು ನಿನ್ನ ಗುರ್ತಾ ಹಿಡದಗಿಡದಾರು. ಅವರ ಇಲ್ಲದ್ದ ನೋಡಿಕೊಂಡ ಹೋಗುವಂಥವನಾಗು. ಹ್ಯಾಂಗರs ಮಾಡಿ ಮನಸಿನ ಲೆಕ್ಕ ಮಾಡಿಕೊಂಡ ಬಾ ಮಿತ್ರಾ.

ಬಾಳ್ಯಾ :

ಅವರ ಮುನಿಗಿ ಹೋಗಂತೀ
ಹ್ಯಾಂಗ ಹೋಗಲ್ಯೋ ಅಂಜಿಕಿ ಬರತತಿ ॥ಪಲ್ಲ ॥

ಏಕಾಯೇಕಿ ಹೋಗುದು ಯಾವ ರೀತಿ
ದೊಡ್ಡ ಪತಿವ್ರತ ಮಾಡ್ಯಾಳೊ ಫಜೀತಿ ॥

ಅಣ್ಣ ತಮ್ಮರಂಜಿಕಿ ಹೇಳತೀ
ಬಾಜ್ಯಾರ ಕೂಟತಿ ಇರುವರೊ ಜನ ವಸ್ತಿ ॥

ಸಂಗಣ್ಣಾ, ಏಕಾಯೇಕಿ ಅವರ ಮನೆಗೆ ಹ್ಯಾಂಗ ಹೋಗೋದು. ಅವಳು ಮೇಲಾಗಿ ಪತಿವರತಿ. ಬಾಜಾರ ಕೂಟದು. ಯಾವತ್ತು ಗದ್ದಲ. ಮೇಲಾಗಿ ಮೈದುನರ ಅಂಜಿಕಿ ಬ್ಯಾರಿ. ಸಂಗಣ್ಣಾ ನೀ ಯಾವದಾರಾ ನೆವಾ ಹೇಳಿಕೊಟ್ರ ಮಾತ್ರ ಅಲ್ಲಿಗೆ ಹೋಗ್ತೇನಿ.

ಸಂಗ್ಯಾ :

ಬತ್ತೀ ಕಟ್ಟೀ ನೆವ ಮಾಡೋ ಬೆಂಕೀದಾ
ಬೆಂಕಿ ತಗೊಂಡ ಬರತಾಳೊ ವಳಗಿಂದಾ ॥ಪಲ್ಲ ॥

ಬಾಗಿಲ ಮುಂದ ಮರವತ್ಯೋ ಟೆಂಗಿಂದಾ
ಆಕಿ ಮುಂದ ಬೆಳಬೆಳಸಿ ಹೇಳೊ ನಂದಾ ॥

ಕೇಳೊ ಮಿತ್ರಾ ನಂದ ಮಾತೊಂದಾ
ಆಕಿ ಮ್ಯಾಲ ಭಾಳ ಮನಸೋ ನಂದಾ ॥

ಸುತ್ತ ರಾಜೇಕ ಶಾಪೂರ ಶಾರಾ
ಕವಿ ಬರದ ಪದಗಳ ಮಜಕೂರಾ ॥

ಬಾಳಣ್ಣ, ಹಂಗಾದ್ರ ನೀ ಹಿಂಗ ಮಾಡು. ಹೆಗಲಮ್ಯಾಲ ಒಂದ ಕಂಬಳಿ ಹಾಕ್ಕೊ ಕೈಯಾಗ ಒಂದ ಪಾವ ಹಿಡಿ. ಕಾಳ ಅಳಸೊ ನೆವಾ ಮಾಡಿ. ಯಕ್ಕೀ ಎಲಿ ಬತ್ತೀ ಕಟ್ಟಿ ತಂಬಾಕ ಸೇದೊ ನೆವಾವೊಡ್ಡಿ ಅವಳ ಮನಿಗಿ ಬೆಂಕಿಗಿ ಹೋಗ ಗೆಳಿಯಾ. ಬೆಂಕಿ ಆತ ಕೊಡ್ರಿ ಅಂತ ಕೇಳು. ಅವಳು ಮುಂದ ಬೆಳ ಬೆಳಸಿ ಹೇಳ. ನನಗ ಅವಳ ಅನುಕೂಲ ಆಗೊ ಹಂಗ ಮಾಡ ಗೆಳಿಯಾ.

ಬಾಳ್ಯಾ : ಹಂಗ ಮಾಡ್ತೇನಿ ಸಂಗಣ್ಣಾ…. ಹೋಗಿ ಬರ‌್ತೇನಿ.

(ಆತ ಹೇಳಿದ ಹಾಗೆ : ವೇಷ ಕಟ್ಟಿಕೊಂಡು ಗಂಗಾನ ಮನೆಗೆ ಹೋಗುತ್ತಾನೆ)

ಬಾಳ್ಯಾ :

ಯಾರದೇರಿ ತಂಗೀ ಮನಿಯಾಗ
ನಾ ಬಡವ ಬಂದೇನ ಬಾಗಿಲದಾಗ ॥ಪಲ್ಲ ॥

ಜ್ವಾಳಾ ಅದಾವೇನವ್ವಾ ಮನಿಯಾಗ
ದರಾ ಇರುವದು ಹೇರಿಗೆ ಮುನ್ನೂರೀಗ ॥

ಜರಾ ಬೆಂಕಿನಾದರ ಕೊಡಾ ನೀನಾ
ಬತ್ತೀ ಕಟ್ಟಿ ತಂಬಾಕ ಸೇದುವೆ ನಾ ॥

ನಿಮ್ಮುವೇನರೆ ನಿಮ್ಮವೇನರೆ
ದಾಗಿನ ಹೋಗಾವೇನಾದಾಗಿನ ಹೋಗ್ಯಾವೇನಾ ॥

ಯಾರದೇರಿ ಮನ್ಯಾಗ ತಂಗೀ….. ಅದೇರೋ ಇಲ್ಲೊ…. ಏ ತಂಗೀ ಕೊಡೊ ಜ್ವಾಳಾ ಏನಾರ ಅವ ಏನವಾ….. ದೊಡ್ಡ ಮನಿ ಕೇಳೋದೆ ಇಲ್ಲಾ.

ಗಂಗಾ :

ಯಾರಪಾ ಯಣ್ಣಾ ನೀನಾಇಲ್ಲೀತನಾ
ಬಂದ ಕಾರಣವೇನಾ ॥ಪಲ್ಲ ॥

ಗುರತಾ ನನಗೇನಾ
ಹಿಂದಕ ಒಂದ ದಿನಾ ॥

ಜಾತ್ರ್ಯಾಗ ಭೆಟ್ಟಿಯಾಗಿದ್ಯೋ ನೀನಾ
ಬಾಳಣ್ಣಾ ಹೌದೇನಾ ॥

ಬಾರಪ್ಪ ಬಾ ನೀನಾ
ಅಂಜಬ್ಯಾಡೊ ಯಾರಿಲ್ಲೋ ಮನಿಯಾಗ ॥

ನಮಗ ಭಯವೇನಾ
ದಾಗೀನ ಕಳದದ್ದು ಹೇಳಬ್ಯಾಡೊ ನೀನಾ ॥

ಯಾರ ಬಾಳಪ್ಪಣ್ಣಾ ಬಾರಪ್ಪ ಒಳಗ. ಏನ ಕೆಲಸ ಇತ್ತು ಹೇಳಪ್ಪಾ, ಐ ಮನ್ಯಾಗ ಯಾರಿಲ್ಲ ಬಾರಪ್ಪ. ನಾ ಒಬ್ಬಾಕೇ ಅದೇನ. ಕಾಳ ಅಳಸಾಕ. ಹತ್ತೀದಿಯೇನಪ್ಪಾ ಈಗ ? ಹೇರಿಗೆ ಎಷ್ಟ ಆಗತತೋಯಪ್ಪ ರೂಪಾಯಿ ಹೇಳು ?

ಬಾಳ್ಯಾ : ಯೇನವಾ : ಜ್ವಾಳ ಇದ್ದಾಂಗ ನೂರರಿಂದ ಮುನ್ನೂರ ಮಟಾ ಅದಾವ ನೋಡವಾ.

ಗಂಗಾ : ಯಣ್ಣಾ ! ಬತ್ತೀ ಕಟ್ಟೀದಿ ಬೆಂಕಿ ತರತೇನು ಕುಂತ ತಂಬಾಕ ಸೇದಯಣ್ಣಾ !

ಬಾಳ್ಯಾ : ತಾರವಾ ತಲಬ ಭಾಳ ಆಗೇತಿ. ಮೊದಲ ತಂಬಾಕ ಸೀದತೇನಿ.

ಗಂಗಾ : ಬಾಳಪ್ಪಣ್ಣ ಕಾಳೀಗೇ ಬಂದಿದ್ಯೊ ? ಮತ್ತೇನಾರ ದಗದ ಇತ್ತೇನ.

ಬಾಳ್ಯಾ :

ತಂಗೀ ಗಂಗಾ ಕೇಳವ್ವಾ ನನ ಮಾತಾ
ಸಾವಕಾರ ಸಂಗ್ಯಾ ನಿನಮ್ಯಾಲ ಮನಸೋತಾ
ಯಾರಿಲ್ಲ ಕೇಳವ್ವಾ ನಿನ ಹೊರ್ತಾ ॥ಪಲ್ಲ ॥

ಹುಚ್ಚ ಹತ್ತೆ ನಿತ್ತತೆ ನಿನಗ ಬೇರ್ತಾ
ನೀ ಬೇಡಿದ್ದ ಕೊಡತಾನ ಇದ ಶರ್ತಾ
ಸೀರಿ ತಂದಾನ ಹೊಂಗಲ ಚಂದ ಚಂದಾ ॥

ಕುಬಸಾ ತಂದಾನ ಎಲ್ಲಕೂ ಹೆಚ್ಚಿಂದಾ
ಒಂದೇ ಸರಗಿ ಪುತಳಿ ಬಾಜು ಬಂದಾ
ಸಂಗ್ಯಾನ ಮನಿ ಮುಚ್ಚೇತಿ ಭಂಗಾರದಿಂದಾ ॥

ತಂಗೀ, ಗಂಗವ್ವನೋಡು ಆ ಸಾವುಕಾರ ಸಂಗ್ಯಾ ಆದಾನಲ್ಲಾ…..

ಗಂಗಾ : ಬಾಳಪ್ಪಣ್ಣ ಇದ್ದಾ ಅವ ಸತ್ತೇನಾ !….

ಬಾಳ್ಯಾ : ಅಂವಾ ನಿನ್ನ ಕೇಳಿ ಬಾ ಅಂತ ನನ್ನ ಕಳಿಸಿದ್ದವ್ವಾ, ಈ ಮಾತಿಗೆ ನೀ ಯೇನಂತಿ ?

ಗಂಗಾ :

ಎಂಥ ಕೆಲಸಾ ಕಲತ್ಯೊಬಾಳ್ಯಾ ನೀನಾ
ಕುಂಟಲತನಾ ಮಾಡೋದು ತರವೇನಾ ॥
ಯಾವ ತಾಯಿ ಹಡದಾಳೊ ಬಾಳ್ಯಾ ನಿನ್ನಾ
ನಿನಗೆ ಸ್ಪಲ್ಪೂ ನಾಚೀಕಿ ಇಲ್ಲಯೇನಾ ॥
ಕೇಳುವರೇನೊ ಗಂಡುಳ್ಳ ಬಾಲ್ಯಾರನಾ
ಹರಿಸಿಬಿಟ್ಟಿ ಹೋಗೋ ಒಗತಾನಾ ॥
ಹರಿಸಿಬಿಟ್ಟಿ ಹೋಗೋ ಒಗತಾನಾ ॥

ಏನೋ ಬಾಳಪ್ಪಣ್ಣ, ಇಂಥಾ ಕೆಲಸಾ ಕಲಿತ ಎಷ್ಟ ದಿನಾ ಆತಿ ? ಇದ ಗಂಡಸರ ಮಾಡೋ ಕೆಲಸ ಅಲ್ಲಪಾ. ಗಂಡಸಾಗಿ ನೀ ಕುಂಟಲತಾನಾ ಮಾಡತೀ ಅಂದ್ರ……. ನಿನ್ನ ಮಾರೀ ಮ್ಯಾಲ ಮೀಸಿ ಇಲ್ಲದಾಂಗ ಅತಿ, ನೋಡು.

ಬಾಳ್ಯಾ : ತಂಗೀ ಗಂಗವ್ವ ಇದಕ್ಕ ಕುಂಟಿಲತನಾ ಅನ್ನುದಿಲ್ಲಾ. ವಕೀಲ ಅಂತಾರ ನೋಡು. ಗಂಡಸರ ಮಾಡಿದರೆ ವಕೀಲತಾನಾ. ಹೆಂಗ ಸರ ಮಾಡಿದರ ಕುಂಟಲತಾನಾ ಅಂತಾರ ನೋಡ ತಂಗೀ.

ಗಂಗಾ : ಅಣ್ಣಾ ಬಾ ಇತೂತು ನಮ್ಮಣ್ಣಾ ವಕೀಲಾಗಿದಾನಂತ ಮುರುವು ತಂದೇನಿ ಇಡಸತೇನ ಬಾ ಬಾಳಪ್ಪಣ್ಣಾ (ಅವನ ಕಿವಿಯನ್ನು ಹಿಂಡುವಳು)