ಬಾಳ್ಯಾ : ತಂಗೀ ಮುರವ ಇಡಸತಿ ಏನವ್ವಾ, ಬಿಡ ಯವ್ವಾ……

ಗಂಗಾ : ಅಣ್ಣಾ ಮುರವ ಅಲ್ಲಾ, ತಿರುವು, ಕೂಡ್ರು, ಏಳು ! ಕೂಡ್ರು ಏಳು. (ಎಂದು ಅವನನ್ನು ಬಗ್ಗಿಸಿ ಡುಬ್ಬದ ಮೇಲೆ ಗುದ್ದುವಳು) ಬಾಳಣ್ಣಾ, ಅಣ್ಣ ಅಂತ ಮರ್ಜಿ ಕಾದ ಮುರುವು ಅಷ್ಟ ಕೊಟ್ಟಿದೇನು, ನಿನ್ನ ಗೆಳೆಯಾ ಸಂಗ್ಯಾಗ ಮೂರ ಸೇರಿನ ಭಂಗಾರದ ಖಡೇ ಕೈಯಾಗ ಇಡಸ್ತಾಳಂತ ಹೇಳ. ಮರತಗಿರತೀ……. ಇಂಥಾ ಕೆಲಸಾ ಎಂದೂ

ಬಾಳಾ : ಬಿಡ ನಮ್ಮವ್ವಾರಗಡ ಅತಿ ಮರ‌್ಯೋ ಮಾಡೋದಿಲ್ಲ.

ಗಂಗಾ : ನೋಡ ಮತ್ತ……. ಮಾಡಿಗೀಡಿ, ಮಾಡುದಿಲ್ಲಂತ ಕೈಮ್ಯಾಗ ಕೈ ಹಾಕಿದರೆ ನಿನ್ನ ಬಿಡುತೇನ. ಇಲ್ಲಂದ್ರ ನಿನ್ನ ಬಿಡೋದೇ ಇಲ್ಲ. ಇದೇನ ಹುಡುಗಾಟಕಿ ಮಾಡಿದಿ ಏನ?

ಬಾಳ್ಯಾ : ಇಲ್ಲ ಬಿಡವ್ವಾ ಮಾಡುದಿಲ್ಲ. ಕೈ ಮ್ಯಾಲ ಹಾಕೇನಿ, ಖರೇ ಮಾಡುದುಲ್ಲ ಅಂದ್ರ ತೀರಿತವ್ವಾ ಹೋಗತೇನ ಗಂಗವ್ವಾ.

ಗಂಗಾ : ಹೋಗಿ ಬಾರಪ್ಪಾ.

(ಬಾಳಣ್ಣ ಸಂಗಣ್ಣನ ಮನೆಗೆ ಬರುತ್ತಾನೆ)

ಸಂಗ್ಯಾ : (ಬಾಳಣ್ಣ ಬಂದುದನ್ನು ಕಂಡು ಆತುರವಾಗಿ)

ಬಾಳಣ್ಣಾ, ಹೋದ ಕೆಲಸಾ ಏನ ಆತಿ ಗೆಳೆಯಾ

ಬಾಳ್ಯಾ :

ನಿನ್ನ ಮಾತ ಕೇಳಿ ಹೋದೆನಪ್ಪಾ ನಾ ಇಂದಾ
ಬಾಜಾರ ಹಿಡಕೊಂಡಾ
ಗಚ್ಚಿನ ಕಟ್ಟಿ ಟೆಂಗಿನ ಮರಾ ದೊಡ್ಡದೊಂದಾ ॥ಪಲ್ಲ ॥

ಹೋಗಿ ನಿತ್ತೇನಪ್ಪಾ ಗಳಿಗಿ ಹೊತ್ತಾ
ಯಾರಿಲ್ಲೊ ಸುತ್ತ ಮುತ್ತ
ಅಂಜಿ ಗಾಬರಿ ಆದೇನೊ ಈ ಹೊತ್ತಾ ॥

ಗಂಗಾ ಬಂದಾಳಪ್ಪಾ ಆಕಿ ಒಳಗಿಂದಾ
ತಂಬಿಗಿ ತುಂಬಿಕೊಂಡಾ
ಭಾಳ ಮೇರ್ಬಾನಕಿ ಮಾಡಿದಳಪ್ಪಾ ನನಗಿಂದಾ ॥

ಕಡಬ ಮಾಡಿದ್ದಳಪ್ಪಾ ನನಗಿಂದಾ
ಕರದಾಳೊ ಪಸಂದಾ
ಅದರಾಗ ತುಪ್ಪಾ ನೀಡ್ಯಾಳಪ್ಪಾ ಗಿಂಡಿ ತುಂಬಾ ॥

ಊಟಾ ಆತೆಪ್ಪಾ ಗೆಳಿಯಾ ಪಸಂದಾ
ಸಂಗಪ್ಪಣ್ಣನದಸಿಂದಾ
ಮುತ್ತ ಕೊಟ್ಟಾಳಪ್ಪಾ ಆಕಿ ನನಗೊಂದಾ ॥

ಸಂಗಣ್ಣಾ, ಬೀಗರ ಮನಿಗಿ ಹ್ವಾದರೂ ಆಕಿ ಅಷ್ಟ ಪೋಲಿಮಿ ಆಗಾಕಿಲ್ಲಾ ಗೆಳಿಯಾ, ನಾ ಹೋದ ಕೂಡಲೇ ಅವಳು ತಂಬಿಗಿ ತೆಗೆದುಕೊಂಡು ಕಾಲಿಗಿ ನೀರ ಕೊಟ್ಟಳು ಮತ್ತು ತಿನಲಿಕ್ಕೆ ಲಾಡು, ಜಿಲೆಬಿ ಕೊಟ್ಟಳು. ಕಡಬ ಮಾಡಿದ್ದಳು ತುಪ್ಪಾ ಸುರವಿ ನೀಡೇ ನೀಡಿದಳು. ಬರೊಕಾಲಕ್ಕೆ ಮತ್ತ ಒಂದಡುಮಕ ಲಡ್ಡು ಕೊಟ್ಟ ಮುರವ ಇಡಿಸಿ ಕಳಿಸಿದಳೊ ಗೆಳಿಯಾ ಸಾಕಾತೆಪ್ಪಾ ತಿಂದ ತಿಂದ.

ಸಂಗ್ಯಾ : ಬಾಳಣ್ಣಾ, ಡುಮಕ ಲಡ್ಡು ಅಂದ್ರೇನ್ ?…..

ಬಾಳ್ಯಾ : ಬಾ ಇಲ್ಲಿ ; ಕಿವಿ ತಾ ಹೇಳ್ತೇನಿ. (ಎಂದು ಅವನ ಕಿವಿಯನ್ನು ಹಿಡಿದು ಬಗ್ಗಿಸಿ ಕೂಡ್ರಿಸಿ, ಎಬಿಸಿ, ಡುಬ್ಬದ ಮ್ಯಾಲ ಒಂದ ಗುದ್ದಿ) ತಿಳೀತ ಗೆಳಿಯಾ ! ಡುಮಕ ಲಡ್ಡು ಇದS ನೋಡ (ಎಂದು ಗುದ್ದಿ ತೋರಿಸುತ್ತಾನೆ)

ಸಂಗ್ಯಾ : ಬಾಳಣ್ಣಾ, ಎಂಥಾ ಮಾತಪಾ ಇದು. ಹೀಂಗ ಮಾಡಿದಳು ?

ಬಾಳ್ಯಾ : ಹೌದ ಸಂಗಣ್ಣ, ನನಗೂ ಮೋಸ ಮಾಡಿದಳು ಅದಕ್ಕ

ಇನ್ನಾರಾ ಬಿಟ್ಟ ಬಿಡಪಾ ಆಕಿ ಧ್ಯಾಸಾ.
ಸಾಕೊ ಸಾಕೊ ಸಂಗಪ್ಪಣ್ಣಾ ನಿನ್ನ ಗೆಳೀತಾನ ॥ಪಲ್ಲ ॥

ಅಂದಾಕರಾ ಒಟ್ಟ ಹೆಣ್ಣಾಬಟ್ಟೆ ಹಾಕ್ತಾಳ ನನ್ನ ॥
ಕಿವಿ ಹಿಡಿದ ಮಾಡಿದಳೊಮರಿಯಲಾರದ ಕೂನಾ ॥
ಅಬ್ರೂ ಹೋಗಿ ಮಾನ ಹೋಗಿಆದೀತ ಅಪಮಾನ ॥

ಸಂಗ್ಯಾ : ಹಂಗಾದರ ನಾನs ಹೋಗತೇನಿ(ಗಂಗಾನ ಮನೆಗೆ ತೆರಳುತ್ತಾನೆ)

ಸಂಗ್ಯಾ :

ಏನ ಬಗೆ ಬೈಲಕ ಬಿದ್ದೆ ಭಾಳ ದಿನಕಾ
ಹುಣ್ಣೀಗಿ ದೀಪ ಹಚ್ಚಿದ್ಹಂಗ ನಿನ್ನ ಬೆಳಕಾ ॥ಪಲ್ಲವಿ ॥

ಜರದ ಶಲ್ಲೆ ಹಾಸಲೇನ ಪಾದ ಬುಡಕಾ
ಹುಡಿಗೀ ನೀ ಮಾತನಾಡ ಜರಾ ಸೋಕಾ
ಬಾಳೆ ಬದುಕು ಜಿಂದಗಾನಿ ಯಾತಕ ಬೇಕ ॥

ಗಂಗಾ, ಏ ಗಂಗಾ, ಭಾಳ ದಿನಕ ಕಾ ನಿನ್ನ ನೋಡಿದ್ನಿ. ನೋಡಿದಾಗಿಂದ ನನ್ನ ಬಾಳೆ ಎಲ್ಲಾ ಮರ್ತೆ, ನೀನು ನನಗೆ ಬೇಕಂತ ವ್ಯಸನಿಕ ಆದೆ. ಗಂಗಾ, ನೀ ಮಾತಾಡಿದ್ರ ಸಾಕು. ನನಗೆ ಜೀವ ಬಂದಾಂಗ.

ಗಂಗಾ :

ಹೆಂತಾ ಮಾತೆನಾಡಿದೆಪ್ಪಾ ಎಣ್ಣಾ ನೀನಾ
ಹತ್ತವಲ್ಲದ ಕೂನಾ
ನನ್ನ ಮುಂದ ಹೇಳಪ್ಪಾ ಯಾರೊ ನೀನಾ ॥ಪಲ್ಲ ॥

ಕೇಳೋದೇನ ಗಂಡಸುಳ್ಳ ಬಾಲ್ಯಾರನಾ
ಹರಿಸಿಯೊ ಒಗತಾನಾ
ಮಾಡುದಲ್ಲ ಹೋಗಿಂಥಾ ಕೆಲಸವನಾ ॥

ಯಾರಪ್ಪಾ ಯಣ್ಣಾ ನೀನು, ಗಂಡವುಳ್ಳ ಗರತಿ ನಾನು, ಇಂಥಾ ಕೆಲಸಾ ನಮ್ಮಿಂದ ಆಗುದುಲ್ಲ ಬಂದ ದಾರಿಯಿಂದ ತಿರುಗಿ ಹೋಗು.

ಸಂಗ್ಯಾ :

ನೀ ಯಾಕಲೇ ಗಂಗೀ ಏನಂತಿ
ನಿನ ಮ್ಯಾಲ ನನ್ನ ಪ್ರೀತಿ
ನಾ ಬಾಯಿ ತೆರೆದಕೇಳಿದರ
ಮೂಗ ಮುರದ ಹೋಗತೀ ॥ಪಲ್ಲವಿ ॥

ನೀ ಒಲ್ಲಿನನ್ನೊ ಬಗಿ ಹೇಳು
ನೀ ಯಾವ ದೊಡ್ಡ ಗರತೀ
ನಿನ್ನ ಬಿಟ್ರ ನಾನು
ಹುಡುಗನಲ್ಲ ಮಾಡತೇನ ಫಜೀತಿ ॥

ಈ ಜನಮನದಾಗ ಏನತೀ
ಮೂರ ದಿನದ ಸಂತೀ
ಹ್ಯಾಂತಿ ಮಕ್ಕಳ ಆಸೆಯಿಲ್ಲ
ಹತ್ತೇತಿ ನಿನ್ನ ಭ್ರಾಂತಿ ॥

ಗಂಗೀ, ನಾನೇ ಸಂಗ್ಯಾ, ನನ್ನ ಮಿತ್ರ ಬಾಳಣ್ಣನ ನಾನೇ ಕಳಿಸಿದ್ದೆ. ಅವನಿಗೆ ಮುರುವು ಇಡಿಸಿ, ಲಡ್ಡು ತಿನಿಸಿ ಕಳಿಸಿದಿಯಂತೆ, ಅದೇನೇ ಇರಲಿ, ನನ್ನ ಪ್ರೀತಿ ನಿನ್ನ ಮ್ಯಾಲೆ ಕುಂತತಿ, ನಿನ್ನದೇ ನನಗೆ ಭ್ರಾಂತಿ. ಅದಕ್ಕೆ ಏನಂದಿಕೇಳು. ಈ ಜಲ್ಮದಲ್ಲಿ ಬಂದು ಸಂಗ ಸುಖಾ ಅಂದ್ರ ಹೆಚ್ಚಿಂದು. ಅದೂ ಮೂರು ದಿನದ ಸಂತಿ.

ಗಂಗಾ :

ನೀ ಏನ ಗಂಟ ಬಿದ್ದ್ಯೋ ಸಂಗ್ಯಾ
ಹರಲಿ ಹೊರಲಾರ‌್ಯೊ ನಾನಾ
ಇದ ಬಾಳ ದಿನಾ ನಡಿಯಾಕಿಲ್ಲಾ
ಧಕ್ಕೀ ತಿಂದಿಯೋ ನೀನಾ ॥ಪಲ್ಲವಿ ॥

ಮನಸಿಟ್ಟ ಮನ್ಮಥ ಕೆಟ್ಟಹೋದಾನೊ ತಾನಾ
ಶಿವಾ ಸಿಟ್ಟಗೆದ್ದಾ ಸುಟ್ಟ ಬಿದ್ದಾ
ಖೊಟ್ಟಿ ಕಾಮನು ಅವನಾ ॥

ಕೆಟ್ಟ ಇಂಗ್ರೇಜಿ ಸರಕಾರಾ
ಬುದ್ಧಿ ಹೇಳುವೆ ನಾನಾ
ನಾಳೆ ಸುಣ್ಣಾತಿಂದ ಮಂಗ್ಯಾನ್ಹಂಗ
ಹಲ್ಲ ತಗದೀಯೊ ನೀನಾ ॥

ಇದು ಕಪ್ಪತಗುಡ್ಡ ಕಣ್ಣಿಗೆ ಛಾಯಾ
ಹೋದೇನಂತಿಯೋ ನೀನಾ
ಬಾಳೆ ಮಾಡ ಹೋಗೊ ಹೆಣತಿಗೂಡ
ಒಲ್ಲಿನ್ಹೋಗೋ ನಾನಾ ॥

ದೇಶದೊಳು ಬೈಲವಾಡಾ
ಬಸವಣ್ಣ ನೆಲಿಸೇತಿ
ಆತನ ಪಾದಾ ಹಿಡದ ಹೇಳ್ತೇನ
ಬ್ಯಾಡಪ್ಪಾ ಇಂಥಾ ನಡತೀ ॥

ಸಂಗ್ಯಾ, ಇದು ಮಾಡೋದು ಚಂದಲ್ಲ, ಬಾಳ ದಿನದ ಮಾತಲ್ಲ, ಪರ ಸ್ತ್ರೀಯರ ಮೇಲೆ ಮನಸ ಮಾಡಿ ಎಂತೆಂತಾವರ ಗತಿ ಯಾವ ಪ್ರಕಾರ ಆಗೇತಿ ನಿನಗ ಗೊತ್ತಿಲ್ಲಯೇನಾ ? ಸೇದೂ ಬಾವಿ ಕಂಡು ನಾಯಿ ಸಂತೋಷಪಟ್ಟಂಗ ನಿನ್ನ ಗತಿ ಆದೀತ. ಸುಮ್ಮನ ಹೋಗ, ನನ್ನ ಉಸಾಬರೀಗಿ ಬೀಳಬ್ಯಾಡ. ನಾನು ಗಂಡುಳ್ಳ ಬಾಲಿ, ನನ್ನ ನೀ ಮುಟ್ಟಿದರ ಮಂಗ್ಯಾನಂಗ ಹಲ್ಲ ಕಿಸದೀ. ಸುಮ್ಮನ ಹೋಗ, ನಿನ್ನ ಹೆಣತಿ ಗೂಡ ಬಾಳೆ ಮಾಡ ಹೋಗು.

ಸಂಗ್ಯಾ :

ಊರಾಗಿದ್ದ ಬಾಳೇ ಮಾಡsಎಲೆ ರಮಣೀ
ಬಿಡುದುಲ್ಲ ಗಂಗೀ ನಿನ್ನಾ
ನಿನ್ನ ಮ್ಯಾಲ ಹೋಗಲೆ ನನ್ನ ಪ್ರಾಣಾ ॥ಪಲ್ಲವಿ ॥

ಸೂತರಗೊಂಬಿ ಹಂತಾ ಹೆಣ್ಣಏನ ಬಣ್ಣಾ
ಕಸರಿಲ್ಲ ಯಾತ್ರಾಗೇನ
ನೆಂವಾ ಹೇಳಿದರ ಕೇಳಾಂವಲ್ಲ ಗಂಗಿ ಇನ್ನಾ ॥

ಥೇಟ ಪಾತರದಾಕಿ ಹಾಂಗಕಾಣಸ್ತಿ
ಮಾತಾಡ ಒಂದ ಸರತಿ
ತೆಕ್ಕಿ ಹಾಯೋ ಹಾಂಗ ನನಗ ಆಗೇತಿ ॥

ಏ ಗಂಗಿ, ನಿನ್ನ ಮ್ಯಾಲ ನಾ ಕುಂತೇನಿ…… ನಿನ್ನ ಉಪದೇಶ ಗಿಪದೇಶ ನನ್ನ ಮುಂದ ನಡ್ಯಾಂಗಿಲ್ಲಾ. ನಿನ್ನ ಬಣ್ಣಕ್ಕ. ರೂಪಕ್ಕ ಮಳ್ಳ ಆಗೇನಿ ತೆಕ್ಕಿ ಹಾಯೋ ಹಂಗ ಆಗೇತಿ ಏನಂದಿ ?….

ಗಂಗಿ :

ಮುಟ್ಟ್ಯಾರ ಮುಟ್ಟೊ ನಿನ್ನ ದಿಟ್ಟತನ ನೋಡತೇನಿ
ಬಾಳ ಮಂದಿ ಹೋಗಿದಾರೊ ಹಾಳಾಗೀ ॥

ಅಲ್ಲದ್ದ ಆಡಬ್ಯಾಡಾ ಸಲ್ಲದೊ ನಮಗಿದಾ
ಬಲ್ಲವನಾಗಿ ತಿಳಕೋರೊ ಸತ್ತ ಹ್ವಾದೀ ॥

ಸಂಗ್ಯಾ :

ಕೊಲ್ ಮಿಂಚ ಹೊಡೆದ್ಹಾಂಗಾತ ಏಕಾಏಕಿ
ಸಿಗವಲ್ಲೆ ಕಟಬೆರಕೀ
ಎದಿ ಬಾಗಲಾ ದೂಡಿಕ್ಯಾರಿ ಒಳಗ ಹೊಕ್ಕೀ ॥

ರಾಜ ಹೆಣ್ಣ ಸಾಜ ನಡಿಗಿ ನಾಜೂಕಾ
ಸಿಕ್ಕಿ ಬಿದ್ದಿ ಬಯಲಕಾ
ಬೆಳ್ಳಿ ಚಿಕ್ಕಿ ಮೂಡಿದಾಂಗ ಮುಗಲಮ್ಯಾಕಾ ॥

ನಿನ್ನ ಸಮೀಪದಾಗ ಬರಾನಾ ಏ ಗಂಗಿ ಏನ ಹೇಳ್ಲೆ ಮಿಂಚ : ಮಿಂಚ ಹೊಡದ್ಹಾಂಗಾತು. ಏನ ಬೆರಿಕೇ ನನ್ನ ಕೈಯಾಗ ಸಿಗವಲ್ಲೀ……

ಗಂಗಿ :

ಅಲ್ಲೇಳೊ ನಿನ್ನ ರೀತಿಮಾಯಕ ಬಿದ್ದs ಕೆಡsತಿ
ಬೆಲಿಗೇಡಿ ತಿಳಕೋರೋನಡತಿ ಗಿಡತೀ ॥

ದಶಮುಖದ ರಾವಣಾಒಯ್ದನೊ ಸೀತಾನ್ನಾ
ಆತೇನೊ ಏ ಕ್ವಾಣಾಅವನ ಗತೀ ॥

ಪರಿಪರಿ ನಗಿಮೂಡಿಪಿರಿ ಪಿರಿ ಓಡಿ ಬಂದಿ
ಸರಿ ದೂರ ಮೂಢಾಮಾನಾ ಕಳಕೊಂಡೀ ॥

ದುರಪತಿನೆಳದೊಯ್ದದುಶ್ಯಾಸನೇನನಾದಾ
ಚಾಲಿವರದ ಹೇಳತೇನೊ ಹುಚ್ಚಾ ತಿಳೀ ॥

ಮಾಯಕ ಬಿದ್ದು ನೀನು ಹಾಳಾಗಿ ಹೋಗಬೇಡಾ. ಇದು ಹುಚ್ಚರ ಹವ್ಯಾಸ, ದುಶ್ಯಾಸನಾ, ರಾವಣಾ ಹೆಣ್ಣಿನ ಮಾನಭಂಗ ಮಾಡಾಕ ಹೋಗಿ ಹಾಳಾದ್ರು….ಚಾಲಿವರದ ಹೇಳ್ತೀನಿ…ಬಿಟ್ಟ ಬಿಡು.

ಸಂಗ್ಯಾ :

ದುಂಡಮೋತಿ ತುಟಿಯ ತೊಂಡಿ ಹಣ್ಣ
ಬಟ್ಟ ಮಲಿಯ ಹಾಲಿನಗಿ ಹೆಣ್ಣಾ ॥

ಕೈಯ ಮುಗಿವೆ ಮಾಡs ಗಣಿತಾನಾ
ಕಾಲ ಬೀಳುವೆ ತೋರಿಸ ದಯಾ ಕರುಣಾ ॥

ನಂಬಿಕೊಂಡ ಹಂಬಲಿಸುವೆ ನಾನಾ
ಹೆಂಗಾರ ಮಾಡತೋರ ದಯಾ ಕರುಣಾ ॥

ಗಂಗಾ ನಿನ್ನ ಕಾಲ ಬೀಳ್ತೇನೆ, ಹ್ಯಾಂಗಾರ ಮಾಡು ನನ್ನ ಮ್ಯಾಲ ದಯಾತೋರs.

ಗಂಗಾ :

ಕರಿಬ್ಯಾಡೊ ಸಂಗ್ಯಾ ನನ್ನಕಂಡಾರ ನಮ್ಮವರಾ
ಭಾ ಮೈದುನರು ಪುಂಡಾಚಂಡ ಕಡದಾರೊ ನಿಂದಾ ॥

ಮರಳಾದಿಯೊ ರೂಪಕsಅಡರೀದಿ ದೀಪಕ್ಕs
ಸುಟ್ಟ ಸಾಯತಿ ಯಾಕತಿಳಕೋರೋ ನಿನ್ನ ಮನಕ ॥

ಈರ‌್ಯಾ ಊರಿನ ದೊರಿಬಿಡುವುದು ಹುಲಿದಾರಿ
ಕಡದಾನೊ ಹಾಡಾ ಹಗಲಿಕೊಡಬ್ಯಾಡೊ ಜೀವಬಲಿ ॥

ನನ್ನ ಮೈದುನರ ಭಾಳ ಪುಂಡರು. ನಿನ್ನ ನೋಡಿದರ ಕೊಂದ ಬಿಡ್ತಾರು. ಅದಕ್ಕ ಸುಮ್ನ. ಹೋಗು ಸಂಗ್ಯಾ ನನ್ನ ಮಾತಾಡ್ಸಬ್ಯಾಡಾ ನಾನು ನಿನಗೆ ಎಂದೂ ವಲಿಯಲಾರೆ. ವಲಿದರ ಪರಮ್ಮನ ಬಳಿ ಸಮಾನ ಎಂದು ತಿಳಿ.

ಸಂಗ್ಯಾ :

ಬಿಡುದುಲ್ಲ ಗಂಗಿ ನಿನ್ನಾಹಿಡಿಯ ಕೂನಾ
ಹೋಗಲೆ ನನ್ನ ಪ್ರಾಣಾ ॥ಪಲ್ಲವಿ ॥

ಇರಪಕ್ಷಿ ಬಸ್ವಂತಾ ಮೈದುನರು ಕೂಸಿನಂಥಾ
ಬಿಟ್ಟ ಒಳಗಾಗೊ ಸುಮನಾ ॥

ಈರ‌್ಯಾ ನಿನ್ನ ಪ್ರಾಣಕಾಂತಾಗೋತ್ತತೆ ಕುವ್ವತ್ತಾ
ಮರತ ಬಿಟ್ಟ ಬಾರ ಸುಗುಣಾ ॥

ನಿನ್ನ ಮೇಲಿನ ಮೋಹ ಹೆಚ್ಚೇ ಆಗ ಹತ್ತಿದೆ. ನಿನ್ನನ್ನು ಬಿಟ್ಟರೆ ನಾನು ಬಾಳಣ್ಣನ ಧೋತರಕ್ಕೆ ಸಮ (ಎಂದು ಹಲ್ಲು ಕಡಿಯುತ್ತ ಬಾಳ್ಯಾನ ಕಡೆಗೆ ಹೊರಟು ಹೋಗುತ್ತಾನೆ).

ಸಂಗ್ಯಾ :

ಮನಿ ಕಡೆ ಇಲ್ಲೊ ಬಾಳೂ ನನ್ನ ಧ್ಯಾಸಾ
ಸಾವತೇನೋ ಉಪವಾಸಾ
ಗಂಗಾನ ಮ್ಯಾಲ ಆಗೇತೂ ನನ್ನ ಧ್ಯಾಸಾ ॥ಪಲ್ಲವಿ ॥

ರಾತ್ರಿ ಹಗಲಿ ಬೀಳತಾವ ಆಕೀ ಕನಸ
ನನ್ನ ಜೀವಕಿಲ್ಲ ಸೊಗಸಾ
ಕಡಕೊಂಡ ಬಿದ್ಹಾಂಗಾದೀತ ಕೆಲಸಾ ॥

ಸಾಸ ಮಾಡಿ ಒಡಿಸೊ ಬಾಳೂ ಆಕೀ ಮನಸಾ
ಅನ್ನ ಅಂಬೋದು ಆಗೇತೋ ಇಸಾ
ಹಿಂಗಾದರ ಕುಸಿ ಬಾಳೂ ನನ್ನ ಮನಸಾ ॥

ಬಾಳಣ್ಣ, ಆ ಬೈಲವಾಡ ಗಂಗಿನ್ನ ನೋಡಿದಾಗಿಂದ ಕಣ್ಣಿಗಿ ನಿದ್ರೆ ಇಲ್ಲ ಮನಸಿಗೆ ಏಟೂ ಸಮಾಧಾನವಿಲ್ಲ. ಊಟಂತೂ ಇಸಾ. ಬಾಳಣ್ಣಾ ಆಕಿ ನನ್ನ ಸ್ವಾದೀನ ಆಗೊ ಹಂಗ ಮಾಡಪ್ಪಾ. ಯಾವದಾರs ಒಂದ ಯುಗತಿ ತಗಿ ಗೆಳಿಯಾ.

ಸಾಸ ಮಾಡಿ ಒಡಿಸೊ ಬಾಳೂ ಆಕೀ ಮನಸಾ
ಹೆಂಗ ಮಾಡೋಣು ಬಾಳ್ಯಾ ಮಸಲತ್ತಾ ॥

ಕಾಸಡೆ ಹೆಂಗಸಾಮಾತಿಲೆ ಬಾಳ ಬಿರಸಾ
ಹ್ಯಾಂಗ ಮಾಡೋಣು ಬಾಳ್ಯಾ ಮಸಲತ್ತಾ ॥

(ಕೊರವಂಜಿ)

ಕೊರವಂಜಿ :

ಏ ! ಬಾಳಪ್ಪ ಬಸಪ್ಪ ಗಂಗವ್ವ ಗೌರವ್ವs….ನೀಡ ನಾ ಕೊರವಂಜಿ ಬಂದೇನಿ…..

ಅ ನಾಡ ಕೊರಿವೆಲ್ಲಈ ನಾಡ ಕೊರಿವೆಲ್ಲ
ನಾ ದೇವಲೋಕದ ಕೊರಿವೆಮ್ಮ

ಕಂಡ ಕನಸನು ಬಲ್ಲೆ ಉಂಡ ಊಟವ ಬಲ್ಲೆ
ಹಲ್ಲಿ ಸಕನಾ ಹೇಳಲು ಬಲ್ಲೆ ಕೊರಿವೆಮ್ಮಾ ॥

ಆರಕಾಲಿನ ನೆಲವಾ ಅಂಗೈಯಾಗ ಹಿಡಕೊಂಡ
ದೇವಲೋಕದಿಂದsಬಂದೇನಮ್ಮಾ ॥

ಹರಿಸೋದು ನಾ ಬಲ್ಲೆ ಹಚ್ಚೋದು ನಾ ಬಲ್ಲೆ
ಒಟ್ಟ ಹೆಣ್ಣ ಒಲಿಸೋದು ನಾ ಬಲ್ಲೇನಮ್ಮಾ ॥

ಸಂಗ್ಯಾ : ಬಾಳಣ್ಣ, ಕೇಳಿದೇನಪ್ಪಾ ಕಡೀವಾಕ್ಯಾ ? ಒಲೆ ಲಕ್ಕಾತು ನೋಡಿ ಅದ ಮೊದಲs ಒಟ್ಟ ಹೆಣ್ಣ ಅತಿ. ಈಕಿನ್ನ ಕೇಳೋಣ.

ಬಾಳ್ಯಾ : ಯಾಕಾಗವಲ್ದ ಕೇಳೋಣ : ಏ ! ಕೊರವಂಜಿ ಬಾರಮ್ಮಾ ಇಲ್ಲಿ. ನಮ್ಮದು ಚೂರ ಕೇಳೋದ ಅತಿ ಬಾ ಇಲ್ಲಿ.

ಕೊರವಂಜಿ : ಬರ‌್ರೆಪ್ಪಾ, ಕೇಳ್ರಿ….ಏನ ಕೇಳ್ತೇರಿ ಜ್ವಾಳಾ ಒಂದ ಸೆರಿ ತರ‌್ರಿ.

ಬಾಳ್ಯಾ : ಯಾರ ಕೇಳಾವ್ರಾ, ಬರ‌್ರಿ ಇತೂತು. ಇದರಾಗಿನ ಜ್ವಾಳದ ಕಾಳ ತಗೊಳ್ರಿ.

ಸಂಗ : (ಜ್ವಾಳಾ ತೆಗೆದು ತೋರಿಸಿ)

ಕೋರವಂಜಿ : ಕಡಿದ ಕಾಳು ಐದಾಗಲು ನಿನಗೆ ಕೈದು ಆಗುತ್ತದೆ. ಇನ್ನೊಮ್ಮೆ ಕಡಿರಿ.

ಸಂಗ್ಯಾ : (ಜ್ವಾಳಾ ಹಿಡಿಯುತ್ತಾನೆ)

ಕೊರವಂಜಿ : ಹಿಡಿದ ಕಾಳು ಏಳಾಗಲು ನಿನಗೆ ಗೋಳಾಗುತ್ತದೆ. ಕಡಿದರಿ ಇದು ತಗಿರಿ ಜ್ವಾಳಾ.

ಸಂಗ್ಯಾ : (ಎಂಟು ಕಾಳು ಎತ್ತುತ್ತಾನೆ)

ಕೊರವಂಜಿ : ಹಿಡಿದ ಕಾಳು ಎಂಟಾಗಲು ನಿನಗೆ ಹೆಣ್ಣೊಂದು ಗಂಟು ಬೀಳುತ್ತದೆ.

ಸಂಗ್ಯಾ :

ಎಮ್ಮಾ ಆಗಬೇಕ ಒಂದ ಕೆಲಸಾ
ಲಗಳೇರ ಗಂಗಿ ಆಗಬೇಕ ಕೈವಶಾ ॥ಪಲ್ಲವಿ ॥

ತಾಯಿಯಂಥಾ ನಿನ ಮುಂದ
ಹೇಳ್ತೇನ ಹೊಟ್ಯಾಗಿಂದ ॥

ಆಕಿಯ ರೂಪಾ…..s
ಹಚ್ಚಿಧಾಂಗ ದೀಪಾ ॥

ಉಂಡಾಂಗಾದೀತ ನೋಡ
ಹೋಳಿಗಿ ತುಪ್ಪಾ ॥

ಎಮ್ಮಾ ಕೊರವಂಜಿ, ನನ್ನ ಮನಸ್ದಾಗ ಆ ಗಂಗೀನ್ನ ಒಲಿಸಿಕೊಳ್ಳೋದ ಅತಿ. ಆಕಿ ಒಲಿಬೇಕಾದ್ರ ಏನ ಮಾಡಬೇಕ ಹೇಳು : ನೀ ಬೇಡಿದ್ದ ಕೊಡ್ತೇನಿ.

ಕೊರವಂಜಿ : ಮೇಲುಮನೆ ಪರಮ್ಮನನ್ನು ಹಿಡದ್ರ ಕೆಲಸ ಅಗತsತಿ

ಸಂಗ್ಯಾ : ಬಾಳಣ್ಣಾ, ಕೇಳಿದಿ ಏನಪಾ, ಮುಂದಿಂದು ನಿನ್ನ ಕೆಲಸ ಇನ್ನs ಆ ಪರಮ್ಮಗ ಭೆಟ್ಟಿಯಾಗಿ ಕೆಲಸಾ ಮಾಡಿಸಿಕೊಳ್ಳೋಣು ಮಿತ್ರಾ : ಏನಮ್ಮಾ ಕೊರವಂಜಿ ತಗೊ ಈ ಬಕ್ಷಿಸ. (ಮುಟಿಗ್ಯಾಗ ಮುಚ್ಚಿ ಹಣ ಕೊಡುತ್ತಾನೆ ಕೊರವಂಜಿ ಹೋಗುತ್ತಾಳೆ)

ಸಂಗ್ಯಾ : ಎಮ್ಮಾ, ಏ ಪರಮ್ಮಾ, ಅದೀ ಇಲ್ಲಬೇ ಮನ್ಯಾಗs………

ಪರಮ್ಮ : ಯಾರವಾ, ಅಯ್ ! ದನಿ ಗೊತ್ತ ಹತ್ತವಲ್ತಲಾ

ಸಂಗ್ಯಾ : ಬಾರಬೇ ಏನ ಮಾಡಾಕ ಹತ್ತೀದಿ ಒಳಗ ? ಕುಡಿಕ್ಯಾಗ ಕುಂತಿಯೇನ ? ಮಾತಾಡವಲ್ಲಿ? ಬಾ ಹೊರಗ.

ಪರಮ್ಮ : ಏನೋ ಹೆದಗೇಡಿ….ಗಂಡಸ ! ಗಸಾ ಗಸಾ ಬರ‌್ತೀ ಕಿಸಿ ಕಿಸಿ ಮಾತಾಡ್ತೀ ? ಏನಂದಿ? ಎಲ್ಲಾರು ಹುಟ್ಟಿ ಬಂದದ್ದ ಕುಡಿಕ್ಯಾಗನs ಯಾಕೋ ನನ ಮಗನ ನನ್ನ ಕಡೆ ಏನ ದಗದಿತ್ತು ? ಸಂಗಪ್ಪ ನೀ ಯಾಕೋ ಗಡಬಿಡ್ಯಾಗ ಇದ್ದಾಂಗ ಕಾಣತತಿ ಅಲೊ ನನ ಮಗನ ? ಹೇಳಪಾ…..

ಸಂಗ್ಯಾ : ಅಲ್ಲಬೆ ದಗದ ಇದ್ರ ಬರೋದು.

ಎಮ್ಮಾ ನಂದೊಂದ ಕೆಲಸತೇ
ಸಾಸಮಾಡ ನೀನಾ
ಬೈಲವಾಡದ ಗಂಗಿನ್ನ
ಕರತಂದ ಕೊಡ ನೀನಾ ॥
ಏನ ಬೇಡ್ತಿ ಬೇಡ ಎಮ್ಮಾ
ಬೇಡಿದ್ದಾ ಕೊಡುವೆನಾ ॥
ನಿನಗ ಜೋಡ ಎಮ್ಮಿ ಕೊಡಸ್ತೇ
ಉಣ್ಣೋಗ ಹಾಲು ಹೈನಾ ॥

ಪರಮ್ಮಾ, ನಿನಗ ಹೇಳೋದೇನಂದ್ರ……ಲಗಳಿ ಈರಪ್ಪ ಸಾವುಕಾರನ ಹೇಣತಿ ಆ ಬೈಲವಾಡ ಗಂಗಾ ಅದಾಳಲಾ ಆಕೀನ್ನ ನೀ ನನ್ನ ಸ್ವಾದೀನ ಮಾಡಿಕೊಟ್ರ ನಿನಗೆ ಉಡಾಕ ಎರಡ ಸೀರಿ. ತೊಡಾಕ ಎರಡ ಕುಬಸಾ, ಹೈನಾ ಉಣ್ಣಾಕ ಎರಡ ಎಮ್ಮೀ ಕೊಟ್ಟ ನಿನ್ನ ಜೀಮಾನ ಇರೊತನಕಾ ನಿನ್ನ ಮನಿತಾನಾ ನಡಸಿಕೊಡತೇನಿ.

ಪರಮ್ಮ : ಅಯ್ ನನ ಮಗನ, ನಿನಗೇನ ಹುಚ್ಚ ಹತ್ತೇತೇನ ಸಂಗಪ್ಪಾ ? ಹೊಂಗಲದೂರಾಗ ಲಗಳೇರ ಗಂಗವ್ವ ಅಂದ್ರ ದೊಡ್ಡ ಸಾವುಕಾರನ ಹೇಣ್ತಿ. ಆಕೀನ್ನ ಕೇಳಿ ಬಾ ಅಂತೀ. ಹ್ಯಾಂಗ ಕೇಳ್ಯೊ ನನ ಮಗನs ಮುಂದ ಇದ ಸುದ್ದಿಗಿದ್ದಿ ಹತ್ತಿದರ ಮುದಿಕಿ ಮನಿಸೇಳನಾ.. ಮುಂದೇಲಿ ಬೋಳಿಶ್ಯಾರ. ಇದೇನ ಆಗಾಕಿಲ್ಲಪ್ಪಾ ನನಗ.

ಸಂಗ್ಯಾ : ಹಂಗನಬ್ಯಾಡಬೇ, ಇದೊಮ್ಮೆ ಸಾವಕಾರ ಸಂಗಪ್ಪನ ಕೈನೋಡ ಈಗೇನಂದಿ?…… ಯಮ್ಮಿಗೊಳ ಹೊಡಕೊಂಡ ಬಾ ಅಂದೇನು ?

ಪರಮ್ಮ : ಬಿಡಪ್ಪ, ಹೊಡಕೊಂಡ ಬಂದಕಿಂತಾ ಹೆಚ್ಚಾತಿ ಬಿಡ : ಹೋಗಿ ಕೇಳಿ ಬರ‌್ತೇನಿ…. (ಹೋಗುತ್ತಾಳೆ)

ಪರಮ್ಮ :

ಅವು ಗಂಗಾ ಅದಿಯೇನ ಮನಿಯಾಗ
ಬಾಗಿಲ ಬಿಟ್ಟ ಬಾರ ಹೊರಗ
ಹಿಂತಾ ದೊಡ್ಡ ಮನಿಯೊಳಗೆ ಇರತೀ ಹ್ಯಾಂಗ ॥ಪಲ್ಲವಿ ॥

ಅಂಜಿಕಿ ಬರುದುಲ್ಲ ಏನ ನಿನಗ
ಯಾರ‌್ಯಾರಿಲ್ಲ ಮನಿಯಾಗ
ಹೋಗ್ಯಾರೇನ ಎಲ್ಲಾರು ಹೊಲದೊಳಗ ॥

ಗಂಗಾ, ಏ ಹುಡಗೀ, ಏನ ಮಾಡಾಕ ಹತ್ತೀದೆವಾ ಬಾ ಹೊರಗ ಮುದಕ ಮನಿಸೇಳನಾ ಕರದ ಕರ‌್ಯಾಕ ಹತ್ತೇನಿ. ಓsನs ಅನವಲ್ಲಿ…..ಎಲ್ಲಾರು ಹೊಲಕ ಹೋಗ್ಯಾರೇನs ಗಂಗಾ.

ಗಂಗಾ :

ಬಾರ ಎಮ್ಮಾ ಬಂದೆಮ್ಮಾ ಬಾಳ ದಿನಕ
ಬಿಸಿನೀರ ಕೊಡತೇನ ಕೈಕಾಲಕ ॥

ಹೋಳಿಗೆ ಮಾಡಿದೇನ ಹದಿನಾಲ್ಕ
ಅದರಾಗ ತುಪ್ಪ ಹಾಕೂಕ ॥

ಬಣ್ಣದ ಮಣಿ ಕೊಡಲೇನs ಕುಂಡೀ ಬುಡುಕ
ಉಣ್ಣ ಏಳ ನೀನು ಮನದಾಕ ॥

ದೇಶದೊಳು ಶಾಪೂರ ಬಸವಣ್ಣ ದೇವರ
ಕವಿ ಮಾಡಿ ಹೇಳ್ಯಾರ ಈ ಜುಳಕ ॥

ಏನ ಪರಮ್ಮಾ, ಬಾಳದಿನಕ ಬರಾಣ ಆತೆಲ್ಲಾ ನೀರ ತಗೊ ಕಾಲಿಗೆ. ಅಮ್ಮಾ ಹಸದಿದ್ದೀ ಊಟಕ್ಕೆ ನಡಿ…..

ಪರಮ್ಮ :

ಗಂಗೀ ಕೇಳ ಪದವಿಯ ಮಾತೊಂದಾ
ಏನ ಚೆಂದ ಸಂಗ್ಯಾ ರೂಪದಿಂದಾ ॥

ಸೀರಿ ತಂದಾನ ಹೊಂಗಲ ಚಂದ ಚಂದಾ
ಕುಬಸಾ ತಂದಾನ ಎಲ್ಲಕ ಹೆಚ್ಚಿಂದಾ ॥

ಹೊಂಗಲದೂರಾಗ ಸಾವುಕಾರ ಸಂಗ್ಯಾನs ಮುಂದಾ
ಅದರ‌್ಹಂಗ ಇರುವನು ಅವ ಬಲು ದುಂದಾ ॥

ಏನ ನನ ಮಗಳ ಗಂಗವ್ವಾ, ಹೊಂಗಲದೂರಾಗ ಸಾವುಕಾರ ಸಂಗ್ಯಾ ಅಂದ್ರs….. ಬಲಿಮಂದಿ ಹುಬ್ಬಗೈ ಹಚ್ಚಿ ನೋಡತಾರ ನೋಡವಾ. ಏನ ಚಂದಾ, ಏನ ಡೌಲಾ, ಏನ ದುಂದಾ, ಗಂಗವ್ವ ನಿನಗ ಹೆಚ್ಚಿಗಿ ಹೇಳೂದ್ಯಾಕs ಹೊಂಗಲ ಪ್ಯಾಟಿಗೇ ಮೇಲ. ತಗೋ ನನ ಮಗಳ ಮನ್ನೆ ಸವದತ್ತಿ ಯಲ್ಲಮ್ಮಗ ಹೋಗಿದ್ನಿ. ಪರಸಾದಾ ತಂದೇನಿ, ಹಿಡಿವಾ ತಿನ್ನ, ಮಗಳಿಗೆ ಕೊಡಬೇಕಂತs ಬಂದಿನ್ನಿ.

ಗಂಗಾ : ಪರಮ್ಮ ದೇವರಿಗೆ ಹೋಗಿದ್ದಿ ? ತಾ ಮತ್ತ ದೇವರ ಪ್ರಸಾದಾ ಒಲ್ಲಿ ಅನಬಾರದ ಜಾತ್ರಿ ಭಾಳ ಕೂಡಿತ್ತು ?

ಪರಮ್ಮ : ಕೂಡಿತ್ತ, ಮಗಳs……ಭಾಳ ಕೂಡಿತ್ತ, ಎತ್ತ ಬೇಕಾದತ್ತ ಮಂದೇ ಮಂದಿ, ಗದ್ದಲs ಗದ್ದಲ ಯವ್ವಾ, ಇನ್ನಮ್ಯಾಗ ಈ ಗದ್ದಲಕ ಬೀಳಬಾರದ ಅನಿಸ್ತ ನೋಡವ್ವಾ.

ಗಂಗಾ : ಅಮ್ಮಾ, ಪರಮ್ಮಾ, ಈ ಪರಸಾದಾ ಭಾಳ ರುಚಿ ಹತ್ತಿತ್ತು. ಇಷ್ಟಾಕ ರುಚಿ ಹತ್ತಿತು. ಇಷ್ಟಾಕ ರುಚಿ ಇದ್ದೀತು ? ತಿಳಿಧಾಂಗ ಆತೇನವ್ವಾ.

ಪರಮ್ಮ : ಗಂಗವ್ವ, ಅದ ಯಾರ ಕೊಟ್ಟಿದ್ದಂತ ತಿಳದೀದೀ ? ಅಂದಲ್ಲೇ ನಿನಗದು ರುಚಿ ಹತ್ತೇತಿ ಅದಾ ಸಾವಕಾರ ಸಂಗ್ಯಾ ಕೊಟ್ಟದ್ದಾs ಎವ್ವಾ.

ಗಂಗಾ : ಥೂ ಉಗಳಿನಿ ಪರಮ್ಮಾ, ನೀ ಮೋಸಾ ಮಾಡಿದೇ ಎವ್ವಾ.

ಪರಮ್ಮ : ಉಗಳಿದರ ಏನಾತ ಗಂಗಾ, ರಸಾ ಒಳಗೆ ಹೋತಿ, ಚೆಟ್ಟಾ ಹೊರಗೆ ಬಂತು. ಇನ್ನೇನ ಮಾಡತಿ ನೋಡs.

ಗಂಗಾ : ಆಗಲಿ ಪರಮ್ಮಾ, ನೀನ ಮುದುಕಿ ಆದ್ರೂ ಚೇಷ್ಟಾ ಮಾಡೂದ ಬಿಡಲಿಲ್ಲಾ. ಅಲ್ಲಾ ಯಾಕ ಬಂದಿದ್ದಿ ಲಗೂ ಹೇಳು…..

ಪರಮ್ಮಾ : ಗಂಗವ್ವಾ, ನನ ಮಗಳ…..ನಿನಗ ಹೇಳೋದೇನಂದ್ರs……ಸಾವುಕಾರ ಸಂಗಪ್ಪ ನಿನ್ನ ಕಡೇ ಕೆಲಸ ಅತಿ ಅಂತ ಹೇಳಿದ್ದಾ ಅದಕ್ಕ ಬಂದೇನವಾ.