ಮುದುಕಿ :

ತಂಗಳ ರೊಟ್ಟಿ ಪುಂಡೀ ಪಲ್ಲೆ ನೆಲವಿನ ಮ್ಯಾಲ
ಹಾಲ ತಂದ ಇಟ್ಟೀದೇನೋ ಕುಡಿಯೊ ಮುಲ್ಲಾ ॥

ಮುದುಕ :

ತಂಗಳ ಬಂಗಳ ನನ್ನ ಹಲ್ಲಿಗೆ ಬರಾಣಿಲ್ಲಾ
ಹಸಿ ಹಾಲ ನನ್ನ ಹೊಟ್ಟೆಗೆ ಹತ್ತಾಣಿಲ್ಲಾ

ಮುದುಕಿ :

ಸಣ್ಣ ಅಕ್ಕಿ ಅನ್ನಾ ನಾನು ಮಾಡೇನಲ್ಲಾ
ಉಣ್ಣ ಹೋಗೊ ಮುದಕಾ ನಾನೂ ನಿಲ್ಲಾಣಿಲ್ಲಾ
ಮಾವಿನ ಕಂಚೀ ಉಪ್ಪಿನ ಕಾಯಿ ಗಡಂಚಿ ಮ್ಯಾಲ
ಒಟ್ಟ ಗುಣದ ಕೆಟ್ಟ ಮುದಕಾ ಎಷ್ಟ ಹೇಳಲಿ ॥

ಏನೋ ಮುದಕಾ, ನೀ ಎಷ್ಟು ಹೇಳಿದರೂ ನಾ ಕೇಳುದಿಲ್ಲಾ, ನಾ ಹೋಗವಾಕೇ, ಸಣ್ಣಕ್ಕಿ ಅನ್ನಾ, ಮಾವಿಂದು ಕಂಚಿಂದು ಉಪ್ಪಿನಕಾಯಿ ಅಲ್ಲೆ ಗಡಂಚೀಮ್ಯಾಲ ಇಟ್ಟೇನಿ, ತಗೊಂಡ ಉಣ್ಣು, ದೂರ ಹೋಗೋದತಿ ಲಗೂನ ಬಾ ಅಂದಾಳ ಗಂಗಾ, ನಾ ಹೋಗತೇನಿ.

ಮುದುಕ :
ಕೆಟ್ಟರಂಡೆ ಎಟ್ಟ ಹೇಳಿದರ ಕೇಳೂದುಲ್ಲಾ
ಹಾಳಾಗಿ ಹೋಗ ನಿಲ್ಲಬ್ಯಾಡಾ ಎನ್ನಮ್ಯಾಲಾ ॥

ಏ ಮುದುಕಿ, ಹೋಗ ಅತ್ತ, ಆದ್ರ…… ಬಾ ಇಲ್ಲೆ… ಹ್ವಾದ್ರ ಹೋಗ್ವಲ್ಲಿ ನೀ ಬರುವಾಗ ಅದನ್ನ ತಗೊಂಡ ಬಾ ಅನ್ನಿ.

ಮುದುಕಿ : ಅದನ್ನ ಅಂದ್ರ ಏನ ಎವ್ವಾ, ಲಂಗಟ ಏನೋ ಮುದುಕಾ.

ಮುದುಕ : ಹೂಂ, ಹೂಂ….. ಅದ ಲಂಗಟಾ, ಮೂರ ಮೂಲೀದುಗೊಂಡೇ ಹಚ್ಚಿದ್ದ ಇರಬೇಕು ನೋಡ ಮತ್ತೆ….

ಮುದುಕಿ : ಹೂಂ… ಬರ‌್ತೇನಿ…. ತರ‌್ತೇನಿ…..ಮುದುಕಾ…ಗೊಂಡೇ ಹಚ್ಚಿದ್ದ…..

ಮುದಕ : ಹೂ…ಹೋಗೆ ಲಗ್ಗ ಬಾ ಅನ್ನಿ….ಬಂದ್ರ ಆತ, ಬರದಿದ್ರ ನೋಡ ಈ ಬಡಿಗಿ ಹೊಡತ.. (ಪರಮ್ಮ ಗಂಗಾನ ಮನೆಗ ಹೋಗಿ)

ಪರಮ್ಮ : ಗಂಗವ್ವ !….. ಏ ಗಂಗಾ, ಏನ ಮಾಡಾಕ ಹತ್ತೀದಿಯೆ ಹುಡುಗಿ ? ಹುಶ್ ! ಅಯ್ಯ ಎವ್ವಾ, ಆ ಮುದುಕನ ಕಯ್ಯಗಿಂದ ದಾಟಿ ಬರಬೇಕಾದ್ರ ಮನಾರ ಆತೆ ಎವ್ವಾ, ಇನ್ನ ಹರೇದವರ ಕೈಯಾಗ ಸಿಕ್ಕರಂತೂ….

ಗಂಗಮ್ಮ : ಬಾ ಪರಮ್ಮಾ, ಎಷ್ಟೊತ್ತ ಮಾಡಿದಿ, ಆಗಲಿ ! ನಮ್ಮ ಹಿರೇರ ಅವಸರಾ ಮಾಡಾಕ ಹತ್ತೀದಾರು, ಕೂಡ್ರ ಕಲ್ಲಿಗೆ. ಜ್ವಾಳಾ ಒಂದೆರಡ ಸೇರ ಬೀಸೋಣು.

(ಬೀಸುವ ಸಪ್ಪಳ ಇಬ್ಬರೂ ಬೀಸುತ್ತ ಹಾಡು ಹೇಳುವರು)

ಗಂಗಮ್ಮ :

ಸರದಾರ ನನ್ನ ಗಂಡ ಸರಿಗೆ ಮಾಡಿಸಿ ಕೊಟ್ಟ
ಸರದಾಳಿ ಕೆಳಗ ಬರಿಗೊಳ್ಳಗೆಳತೆವ್ವ
ನಗಿ ನಮಗ್ಯಾತಕ ॥ಪಲ್ಲ ॥

ಕಟ್ಟೀಮ್ಯಾಲಿನ ಹಲ್ಲಿಗಟ್ಟಿಸಿನುಡದಾವ
ಕೆಟ್ಟ ಸವತೇರ ನುಡಿ ನೋಡಯವ್ವಾ
ನಗಿ ನಮಗ್ಯಾತಕ ॥

ಹಾಸಗಲ್ಲಿನ ಮ್ಯಾಲಹಾದ ಹೋಗವನ್ಯಾರ
ಮಾಸಗುದುರ‌್ಯಾಂವವೀರಭದ್ರ ಯವ್ವಾ
ನಗಿ ನಮಗ್ಯಾತಕ ॥

ಕುಂಡಿ ಚೆಣ್ಣದ ಮ್ಯಾಲಗೊಂಡೇದ ನಡಕಟ್ಟಿ
ದುಂಡ ಮಾರ‌್ಯಾಂವ ಬಸವಂತಯವ್ವಾ,
ನಗಿ ನಮಗ್ಯಾತಕ ॥

ಒಕ್ಕಲತನದಾಗಮಿಕ್ಕಿದ ಸೂರವ್ವಾ
ನಕ್ಕು ನಲಿಯುವ ಇರಪಕ್ಷೆಯವ್ವಾ
ನಗಿ ನಮಗ್ಯಾತಕ ॥

ಕುಸ್ತಿಯ ಕಣದಾಗಕೂಡಿದ ಜನದಾಗ
ವಸ್ತಾದಿನೊಗದ ಬರತಾನಯವ್ವಾ
ನಗಿ ನಮಗ್ಯಾತಕ ॥

ಆದ್ವು ಬೀಸುವ ಜೋಳತೀರ‌್ಯಾದ ಬಳಗದ ಹಾಡ
ತೂರ‌್ಯಾಡಿ ಹಿಟ್ಟ ತುಂಬೂನಬಯವ್ವಾ
ನಗಿ ನಮಗ್ಯಾತಕ ॥

ಪೊಡವಿಯೊಳ್ ಶಾಪೂರಒಡಿಯ ಬಸವಣ್ಣ
ಬಿಡದೆ ಅವನ ಪಾದಾ ಹಿಡಬೇಕಯವ್ವಾ
ನಗಿ ನಮಗ್ಯಾತಕ ॥

ಪರಮ್ಮಾ ಹಿಟ್ಟೆಲ್ಲಾ ತುಂಬು, ಭಾಳ ವ್ಯಾಳೆ ಆತು.

ಗಂಗಮ್ಮ : ನಡೀ ಪರಮ್ಮಾ, ರೊಟ್ಟೀ ಗಂಟ ತಯ್ಯರ ಮಾಡು. ಹಂಗ ಹಿಟ್ಟಕ್ಕೀನೂ ಆಟ ಹಾಕು.

ಪರಮ್ಮ : ಹೂಂ, ಗಂಗಮ್ಮ

ಈರಪ್ಪ : ಏಗಂಗಾ, ಬುತ್ತೀ ಗಂಟ ಕೊಡುವಂಥವಳಾಗು.

ಗಂಗಮ್ಮ : ಪ್ರಿಯಾ ಈ ಗಂಟನ್ನು ತೆಗೆದುಕೊಳ್ಳಿರಿ.

ಈರಪ್ಪ : ಗಂಗಾ, ಅಡ್ಡಗ್ವಾಡಿ ಮ್ಯಾಲಿರೊ ದೊಡ್ಡ ಕುಡಗೋಲಾದರೂ ಕೊಡುವಂಥವಳಾಗು.

ಗಂಗಮ್ಮ : ಕಾಂತಾ, ಈವರೆಗೂ ಕುಡಗೋಲ ಒಯ್ಯದವರು ಈಗ ಅದನ್ನು ಯಾಕ ಹಿಂಬಾಲಿಒಯ್ಯತೇರಿ ?

ಈರಪ್ಪ : ಏನೇ ಗಂಗಾ, ಈಗಿನ ಕಾಲ ಭಾರ ಕೆಡಕ ಐತಿ. ಹಾದಿಯಲ್ಲಿ ಕಳ್ಳಕಾಕರ ಉಪದ್ರಾಭಾಳ. ಅದೊಂದು ಕುಡಗೋಲ ಹತ್ತರ ಇದ್ರ ಹತ್ತಮಂದಿ ಇದ್ದಂತಾಗುತ್ತದೆ. ಬೇಗನೆ ಕೊಡುವಂಥವಳಾಗು.

ಗಂಗಾ : ಕಾಂತಾ, ತೆಗೆದುಕೊಳ್ಳುವಂಥವರಾಗಿರಿ ಈ ಕುಡಗೋಲನ್ನು.

ಈರಪ್ಪ : ಏನೇ ಗಂಗಾ, ನಾವು ವರಸಕ್ಕೊಮ್ಮೆ ಸಣ ಸೋಮಾರಕ್ಕ ಮಡ್ಡೀ ಬಸವಣ್ಣನ ಜಾತ್ರೆಗೆ ಹೋಗುವ ನೇಮವದೆ. ನಾನು ಹೋದೆನೆಂದು ನೀನು ಬಿಟ್ಟಗಿಟ್ಟೀ. ಸಂಗಡ ಪರಮ್ಮನನ್ನು ಕರಕೊಂಡು ಹೋಗಿ ಬರುವಂತವಳಾಗು. ಇನ್ನು ನಾನು ಹೋಗ್ತೇನಿ ಮನಿಕಡೆ ಜ್ವಾಕೀ……..

ಗಂಗಾ : ಕಾಂತಾ, ತಮ್ಮ ಪಾದವನ್ನು ಕೊಡಿರಿ. ದೇವರು ಕಲ್ಯಾಣ ಮಾಡಲಿ ಹೋಗಿ ಬರುವವಂತರಾಗಿರಿ.

(ಈರಪ್ಪ ಯಾಪಾರಕ್ಕೆ ಹೋಗುತ್ತಾನೆ)

ಗಂಗಾ :

ಬಾರ ಪರಮ್ಮಾ ನೀನು ಒಳಿಯಾಕ
ನನ್ನ ಗಂಡ ಹೋಗ್ಯಾನವ್ವಾ ಯಾಪಾರ‌್ಕ ॥ಪ ॥

ನಿನ್ನ ಕರಕೊಂಡು ಮಡ್ಡಿ ಬಸವಣ್ಣಗ
ಹೋಗಿ ಬಾ ಅಂತ ಹೇಳಿದಾರ ನಮ್ಮವರ ॥

ಇರಪಕ್ಷಿ ಬಸವಂತ ಮನಿಯಾಗ
ನಾವು ಹೋಗಿ ಬರೋಣು ಬಸವಣ್ಣಗ ॥

ಎಮ್ಮಾಕೆಲಸಾ ಐತಿ ನಡಿ ಒಳಗ
ಒಡಿ ಹೋಳಿಗಿ ಮಾಡೋಣು ದೇವರಿಗ ॥

ಪರಮ್ಮಾ, ಅವರು ಯಾಪಾರಕ್ಕೆ ಹೋದರು. ಹೋಗುವ ಕಾಲಕ್ಕೆ ಪರಮ್ಮನನ್ನು ಸಂಗಡ ಕರಕೊಂಡು ಮಡ್ಡೀ ಬಸವಣ್ಣನ ಜಾತ್ರಿಗೆ ಹೋಗಿ ಬಾ ಅಂತ ಹೇಳಿ ಹೋಗಿದಾರು. ಹೋಗೋಣು ನಡೀವಾ. ಇನ್ನ ಬಾ ಒಳಗೆ ಹೊತ್ತ ಆಗತತಿ.

ಪರಮ್ಮ : ಹೋಗುನು ನಡಿ ನನ ಮಗಳ ದೇವರಿಗೆ ಹ್ವಾದರ ಏನ ಕೆಟ್ಟಾ…..ದೇವರ ಫಲಾಕೊಟ್ಟs ತೀರತಾನ.

ಗಂಗಾ : ಏನೇ ಪರಮ್ಮ. ದೇವರಿಗೆ ಹೋಗಬೇಕಾದ್ರ ಏನೇನ ಸಾಹಿತ್ಯ ಒಯ್ಯಬೇಕು.

ಪರಮ್ಮಾ : ಐ ಬಿಡ ನಮ್ಮವ್ವಾ ಇದ, ಗೊತ್ತಿಲ್ಲಾ….. ಎಲ್ಲಾ ಒಯ್ಯಬೇಕ ನನ ಮಗಳ….

ಗಂಗಾ : ಎಲ್ಲಾ ಅಂದ್ರ….. ನೀರ, ಎಣ್ಣಿ, ವಿಭೂತಿ, ಪತ್ರಿ, ಕಪ್ಪರಾ, ಹಣ್ಣ, ನೈವೇದ್ಯ, ಕಾಯಿ, ಕುಂಕುಮ, ಧೂಪಾ, ದೀಪ ಇಷ್ಟಲ್ಲಾ ಒಯ್ಯಬೇಕಲ್ಲ ಪರಮ್ಮಾ.

ಪರಮ್ಮಾ : ಇಷ್ಟೆಲ್ಲಾ ಸರಾ ಹಚ್ಚಿ ಹೇಳಿದಿ, ಮ್ಯಾಲಿನ ಮಾತಿಗೆ ನನ್ನ ಕೇಳತಿ ಅಲ್ಲಾ ನೀ ಹೆಂತಾ ಬಂಗಾಲಿ ಆದಿ

ಗಂಗಾ :

ಹೋಗೋಣು ನಡಿಯಮ್ಮಾ ಸ್ವಾಮಾರಾ
ಹೋಗಿ ಬಾ ಅಂತ ಹೇಳಿದಾರ ನಮ್ಮವರಾ ॥ಪಲ್ಲ ॥

ನಮ್ಮವರ ಭಾರೀ ಸಾವುಕಾರಾ
ಬಸವಣ್ಣ ಮನೀ ದೇವರಾ ॥

ನಮ್ಮ ಮನಿ ಹೆಸರಾ ಲಗಳೇರಾ
ಈರ‌್ಯಾ ನನ್ನ ಪ್ರಾಣದೇವರಾ ॥

ಇರಪಕ್ಷಿ ಬಸವಂತ ಮೈದುನರಾ
ಶಾರ ಗದುಗಿನ ಶಾಪೂರಾ ॥

ನಡಿ ಪರಮ್ಮಾ, ಹೊರಡೋಣು ಮತ್ತ ಹೊತ್ತಾಗತದ

ಪರಮ್ಮಾ :

ನಾ ಮುಟ್ಟಾಗಿದೇನ ಗಂಗಾ ಬರುದುಲ್ಲ ಗುಡಿತನಕಾ
ಹಂಡೆ ತುಂಬ ನೀರ ಕಾಸಿ ಮಾಡಿ ಬರತೇನಿ ಜಳಕಾ ॥ಪಲ್ಲ ॥

ನೀ ವಸ್ತಾ ವಡವಿ ಕೊಟ್ಟರ ಆಗಿ ಬರುವೆನು ಠೀಕಾ
ನನ್ನ ಕೊಳ್ಳಾಗೊಂದ ಟಕ್ಕೆ ಕೊಟ್ರ ಬರುವೇನ ಗುಡಿತನಕಾ ॥

ಗಂಗಾ, ಮುಟ್ಟಾಗಿದೇನ ಜಳಕಾ ಮಾಡಿ ಬರತೇನಿ, ವಸ್ತಾ ವಡವಿಕೊಡ ಮತ್ತ ನಾನು

ಠೀಕಾಗಿ ಬರತೇನಿ.

ಗಂಗಾ : ಅಯ್ಯ ಪರಮ್ಮಾ, ಮೊದಲ ಹೇಳ್ಬಾರದ…..ಹೋಗ ಲಗೂ ಬಾ ತಗೊ ಈ ಬಂಗಾರದ ತೀಕೆ…(ಪರಮ್ಮಾ ಹೋಗುತ್ತಾಳೆ)

ಏ ಎಮ್ಮ ಕೇಳಗುಲಾಬಿ ಹೂವ ಮೂರ ನಾಕ
ಏ ಎವ್ವಾ ಕೇಳಸಂಪಿಗಿ ಹೂವಿನ ಸರಾ ಬೇಕ

ಪರಮ್ಮ : (ಪ್ರವೇಶಿಸಿ) ಬಂದೆ ಗಂಗಾ, ನಡಿ ಹೋಗೋಣು.

ಗಂಗಾ : ನಡಿ ಪರಮ್ಮಾ,

ಪರಮ್ಮ :

ಹುಡುಗಿ ಹೋಗತಾಳ ಹೆಂಗಾಬರತಾಳ ಹೆಂಗಾ
ಹಾದಿ ಹಿಡದ ಟಪಾಲ ಗಾಡೀಬಿಟ್ಟಾಂಗಾ ॥ಪಲ್ಲ ॥

ಹುಡುಗಿ ಮೈಕಟ್ಟಕಾಲ ಥೇಟಬಾಳಿ ದಿಂಡಿನ್ಹಾಂಗಾ
ಸೂತ್ರದ ಗೊಂಬೀ ಸೂತ್ರದ ಗೊಂಬಿಸುಳದ್ಹಾಂಗ್ ॥

ಹಡಗಿ ಚಾಕಪಾಕ ಜೋಕನಾರೀಹೊಂಟಿದಾಳ ಹೆಂಗಾ
ಚಕಮಕಿ ಕಡದ್ಹಾಂಗತಾರಕ್ಕಿ ಮೂಡಿದ್ಹಾಂಗಾ ॥

ಮೂಗಿನಾಗ ಇಟ್ಟಿದಾಳ ನತ್ತಉಟ್ಟಿದಾಳ ರೇಶ್ಮಿ ಸೀರೀ
ಕೊರಳಾಗ ಹಾಕಿದಾಳ ಸರಗಿಈಕಿ ಭಾಳ ಸುಂದರೀ ॥

ಗಂಗಾ :

ಎಷ್ಟ ದೂರ ಐತಿ ಎವ್ವಾ ದೇವರಾಆಹಾ ದೇವರಾ
ನಡೆದ ಬಂತ ಎನಗ ಬ್ಯಾಸರಾ ॥ಪಲ್ಲ ॥

ಗಿಡದ ಜಿಡಪನ್ಯಾಗ ಕಾಣದು ದೇವರಾ
ಕೇಳ ಎವ್ವಾ ಜಾತರೀ ಸಡಗರಾ ॥

ಸಾಲಮೇಲ ಹೊಡದ್ದಾವ ಗುಡಾರಾ
ನೋಡ ಎವ್ವಾ ದೇವರ ಸಡಗರಾ ॥

ದೇಶಕ ಜಾಹೀರಾ ಮರಡಿ ಬಸವೇಸೂರಾ
ಹಣಿಮ್ಯಾಲ ಈಬತ್ತಿ ರುದ್ರಾಕ್ಷಿ ಕೊರಳಾ ॥

ಪರಮ್ಮಾ, ಎಷ್ಟು ದೂರ ಇದ್ದೀತ ಎವ್ವಾ ಗುಡಿ ಇನ್ನೂ, ಬಂದs ಬರಾಕ ಹತ್ತೇವಿ ?….

ಪರಮ್ಮ :

ನಡದ ನಡದ ಬಂತವ್ವಾ ಬ್ಯಾಸರಾ
ಎಷ್ಟ ದೂರ ಐತ್ರೆವ್ವಾ ದೇವರಾ ॥ಪಲ್ಲವಿ ॥

ಹೋಗಬ್ಯಾಡಂತ್ಹೇಳಿತ್ತ ನನ್ನ ಮುದುಕಾ
ನಿನ್ನ ಮಾತಕೇಳೆ ಬಂದ್ನೆ ಗೆಳಿತನಕಾ

ಏನ ಹೇಳ್ಳೇ ನನ ಮಗಳ, ನಿನ್ನ ಮಾತ ಕೇಳಿ ಬರಬಾರದ ಬಂದ ಫಜೀತಿ ಆದಿನೇಯವ್ವಾ, ಮಾಡಿಕೊಂಡ ಗಂಡಾ ಬೇಡಿಕೊಂಡರೂ ಬಿಡುದಲ್ಲ ಅಂತ, ಮನ್ಯಾಗ ಮುದುಕ ಹೋಗಬ್ಯಾಡಂತ ಚ್ಯಾಲಿ ಉರಿತು ಅದರ ಮಾತ ನಾ ಕೇಳಲಿಲ್ಲ. ಮ್ಯಾಗಿನ ಉಸಲಾ ಮ್ಯಾಲ, ಕೆಳಗಿನ ಉಸಲಾ ಕೆಳಗ ಆಗಿ ಕೈಕಾಲ ಸುರು ಸುರು ಅಂದ, ನಡೆದಾಗ ರುಮ್ಮ ಅಂದ, ಕಿಪ್ಪಟ್ಯಾಗ ಕಿರ‌್ರ ಅನ್ನಾಕ ಹತ್ತಿತ ನಮ್ಮವ್ವಾ, ನಾ ಒಂದೀಟ ಕುಂಡ್ರತೇನ.

ಗಂಗಾ :

ಇದು ದೇವಾಲಯಾಇದು ದೇವಾಲಯಾಕಂಡು
ಧನ್ಯಳಾದೇನ ನಾನೂಮುಗಿದೇನ ಕೈಯರ ॥ಪಲ್ಲ ॥

ಬಸವಣ್ಣ ದೇವರ ನೋಡೀಹಸವ ಹಾರೀತ ನಂದಾ
ಕುಸಿಯಾತೇ ಎನ್ನ ಮನಕುಸಿಲಿಂದ ಕೇಳಯಮ್ಮಾ ॥

ಇಂದು ಸೋಮಾರ ದಿನಾಭಾಳ ಕೂಡೇತೆ ಜನಾ
ಅಲ್ಲಲ್ಲಿ ಮಾಡ್ಪರು ಭಜನಾನುಡಿವರು ಶಿವಧ್ಯಾನಾ ॥

ಏನೇ ಪರಮ್ಮ, ಗುಡಿ ಸನೇಕ ಬಂತ ಏಳ… ಗುಡಿ ಎಷ್ಟ ಚಂದತೇ, ಎದ್ದ ಬರೋಹಂಗ ಕಾಣಪತಿ ನೋಡ ಪರಮ್ಮಾ.

ಪರಮ್ಮ : ಗಂಗಾ ಹೌಲ್ಲ, ದೇವರ ಚಂದತಿ, ಗುಡಿನೂ ಚಂದತಿ, ಆದ್ರ ಪೂಜೇರಿ ಕಾಣುದುಲ್ಲ ಹುಡುಗೀ, ಕರೀತಿ ಏನನೋಡ ಏನ ನಾನ ಕರಿಲ್ಯೋ ನೀ ದಣದ್ದೀ ಮತ್ತ….

ಗಂಗಾ : ಏನೇ ಪರಮ್ಮಾ, ಎಲ್ಲಾ ನೀನ ಾತಾಡತೀಲಾ.

ಪರಮ್ಮ : ಹಂಗಲ್ಲ ನಮ್ಮವ್ವ, ನಾನು ಗುತಗೀನ ಹಿಡದ್ದೇನ.

ಗಂಗಾ : ಏನ ಬೆರಕಿ ಅದೀಯ ನೀನು. ಗುತಗಿ ಹಿಡ್ಯಾಕ ಅದೇನ ಹೊಲದ ಕಳೇ ಅಂತ ತಿಳಿದ್ದಿಯೇನಾ : ಇರಲಿ ಯಾರ ಕರದರೂ ಅಷ್ಟ. ನೀನS ಕರಿವಾ.

ಪರಮ್ಮ : ಪೂಜೇರಿ, ಏ ಪೂಜಾರಿ….. ಅದೀ ಇಲ್ಲಲಾ.. ಏನ ಮಾಡುತಿಯೋ ನೀನ ಬಾಯಾಗ ಮಣ್ಣು ಹಾಕಲಿ…..ಗುಡ್ಯಾಗ ಇರುದುಲ್ಲ….ಏ ಪೂಜೇರಿ.

ಪೂಜಾರಿ :

ಕೂಗ ಹೊಡ್ದ ಕರಿಯುವಾಕಿ ಯಾರದಿ ಹೇಳಮ್ಮಾ
ಬೆದರುತ ಬಂದೇನಮ್ಮಾ ಹತ್ತವಲ್ದ ಖೂನಾ
ಶೀಲವಂತ ಹಣಿಮ್ಯಾಲ ಚಂದರಾ ॥ಪಲ್ಲ ॥

ಹಿಂದಿನಾಕಿ ಮೈಯ ಬಣ್ಣ ಲಿಂಬೀ ಹಣ್ಣಾ
ನೋಡಿ ಮುಚ್ಯಾವೋ ಕಣ್ಣಾ
ಯಾವ ಸಾವಕಾರನ ಹೇಣತಿ ಹೇಳಿರಿನ್ನಾ ॥

ಹುರಿಗೆಜ್ಜಿ ಎತ್ತನ್ಹಾಂಗ ಏರಿಬರ‌್ತಿ
ಮೈಯ ಮ್ಯಾಲ ನಡಸಣ್ಣಕಾಡಿಗಿಗಣ್ಣಾ
ನಾಗರ ಬಣ್ಣ ನೋಡಲಾರ‌್ಯೋ ಈಕಿ ಬಣ್ಣಾ ॥

ಏನವ್ವಾ, ಇವರು ಯಾವ ದೊಡ್ಡ ಸಾವುಕಾರನ ಹೆಂಡರ ಇರಬಹುದು ? ಇವರನ್ನ ಕಂಡ ಕೂಡಲೇ ನನ್ನ ಕಣ್ಣ ಮುಚ್ಚಿದುಪಾ…ಹ…ಹ…ನೀವು ಯಾವುರವರು ? ಹಿಂದಿನ್ನಾಕಿ ಯಾರಬೇ ಆಕಿ. ಆಕಿನ್ನ ನೋಡಿ ನನ್ನ ಕಣ್ಣಿಗೆ ಬವಳಿಕೆ ಬಂದಾಂಗ ಆತಿ.

ಗಂಗಾ : ಏನೇ ಪರಮ್ಮಾ, ಆ ಪೂಜೇರಿ ಏನಂತಾನು

ಪರಮ್ಮಾ : ಅದೇನ ನನ ಮಗಳ ಪಡಪೋಸಿ ಇದ್ದಾಂಗ ಅತಿ. ಅದ ನಿನ್ನ ನೋಡಿದ ಕೂಡಲೇ ಕಣ್ಣ ಮುಚ್ಚಿತ ಅನ್ನಾ ಕತ್ತತೀ.

ಗಂಗಾ :

ಎಂಥಾ ಪೂಜೇರಿ ನೀನು
ಮಂಗ್ಯಾ ಪೂಜೇರಿ ನೀನು
ಬಂದ ಕೇಳತೋ ನಮಗ ॥ಪಲ್ಲ ॥

ಲಗಳೇರ ಗಂಗಾ ಮಾಯ್ತಿಲ್ಲೇನೋ ನಿನಗ
ಇರಪಕ್ಷಿ ಬಸವಂತ
ಈರ‌್ಯಾ ನನ್ನ ಪ್ರಾಣಕಾಂತ ॥

ಮತ್ತ್ಯಾರಾದ್ರ ಬಿಡಾಕಿಲ್ಲಾ
ಕಿತ್ತಾರ ಬಾಯ್ಯನ ಹಲ್ಲಾ
ಕಡದ ಹಾಕ್ಯಾರೊ ನಿನಗ ॥

ಏನೋ ಪೂಜೇರಿ, ನಾವು ಯಾರಂತ ತಿಳಿದಿದೀ? ಲಗಳೀ ಈರಭದ್ರನ ಹೇಣತಿ ಗಂಗಾ ಅಲ್ಲೇ ನಾ,ಏನಕೇನಾರ ಮಾತಾಡಿಕೊಂತ ನಿಂತೀದಿ.

ಪರಮ್ಮಾ : ಇವನ ಕಣ್ಣ ನೋಡಯವ್ವಾ, ಗುಡಿ ಬಿಟ್ಟ ಎಲ್ಲಿ ಹೋಗಿದ್ಯೆಲ್ಲಾ….ಹೀಂಗ ಮಾತಾಡಕ ಕಲಕೊಳ್ಳಾಕ ಹೋಗಿದ್ದೇನ. ನಮ್ಮನ್ನೇನ ನಾಡಾಡಿ ಹೆಂಗಸರ‌್ನ ಮಾಡಿದಿ ? ನಿನ್ನ ಚೆಟ್ಟಾ ನಿಗರಿಸಿ ಬಿಟ್ಟೇವ…… ಇರವತ್ತೂ, ದೇವರ ಪೂಜಾ ಮಾಡಿನ್ನ

ಗಂಗಾ : (ದೇವರಿಗೆ ತಂದ ಸಾಹಿತ್ಯವನ್ನೆಲ್ಲಾ ದೇವರ ಮುಂದೆ ಇಟ್ಟು ) ಪೂಜೇರಿ, ತಗೊ ಸಾಮಾನೆಲ್ಲಾ, ಪೂಜಾ ಮಾಡೂ ನೆಟ್ಟಗ……

ಪರಮ್ಮಾ : ಹೂಂ ತಗೊ ಈ ಕಾಯಿ, ಒಡಿ ದೇವರಿಗೆ.

ಪೂಜಾರಿ : ತಗೊರಬೆ ಪೂಜಾ ಆತು. ತೊಟ್ಲಗಾಯಿ ಒಡಿತಬೇ, ತಗೋ ಒಡ್ಡ ಕೈ, ನೀವೂ ಒಡ್ರಿ….ತಗೊರಿ….ತೀರ್ಥಾ.

ಗಂಗಾ : ಅಮ್ಮಾ, ಪೂಜಾರಿ ಯೇನಂತಾನ ?

ಪರಮ್ಮಾ : ತೊಟ್ಲಗಾಯಿ ಒಡಿತ ಅಂತಾನ ನನ ಮಗಳೆ….ಚಲೋ ಅತಿ ಬಿಡ ಅತ್ತ. ನಾವು ಬೇಡಿದ್ದು ಹಾಲು ಅನ್ನಾ : ದೇವರ ಕೊಟ್ಟದ್ದೂ ಹಾಲೂ ಅನ್ನಾ, ಎರಡೂ ಒಂದೇ ಆಗಲಿಲ್ಲೇನ ? ವರಸ ತುಂಬಗೊಡ್ಡದ ದೇವರ ಗಂಡ ಮಗನ್ನ ಕೊಡತಾನ. ಹುಡುಗನ ತೂಕಾತೂಕ ಕಾಯಿವಡಿಸಿ ಪನಿವಾರ ಮಾಡೋಣ ನನ ಮಗಳ. ನೀಯೇನ ಅಂಜಬ್ಯಾಡಾ.

ಗಂಗಾ : ಪೂಜಾರಿ ಕೈಯಾಗ ಕಾಯ ಯಾರ ಕೊಟ್ಟರು ?

ಪರಮ್ಮಾ : ನಾ ಕೊಟ್ಟಿನಿ, ನಾ ಕೊಟ್ರಯೇನಾತು ? ಕಾಯಿನಿಂದು

ಗಂಗಾ : ಪರಮ್ಮಾ, ಗಂಡ ಮಗಾ ಅಂದೆಲ್ಲಾ, ನನಗೊ ನಿನಗೋ.

ಪರಮ್ಮಾ : ಅಯ್ಯ ! ಇಷ್ಟೂ ತಿಳಿದುಲ್ಲೇನ ! ಕಾಯಿ ಯಾರದು ಅವರಿಗೆ ಗಂಡ ಮಗಾ. ಚೋಳಿನಂಗ ಬೆನ್ನಲಿ ಹಡೀ ಅಂದೇನ ನನಗ. ಭಾಳ ಆತಿ ನಡಿ.

ಗಂಗಾ : ಪೂಜೇರಿ ಒಂದ ಬಟ್ಟಲಾ ಹಿಡದ ಕೊಟ್ಟಿದಾನು ?…..ಯಾಕೊ ಇವನ…. ಅದೊಂದು ಬಟ್ಟಲಾ ಕೊಡಲಾ ? ಅದನ್ಯಾಕ ಹಿಡಕೊಂಡಿ.

ಪೂಜಾರಿ : ಹಾಸಿಲಬೇ, ಹಾಸೀಲ ಕೊಟ್ಟ ನಿಮ್ಮ ಬಟ್ಟಲಾ ಒಯ್ಯಿರಿ ? ಮುಂಜಾನೆ ಎದ್ದು ಜಳಕ ಮಾಡಿದ ಕೂಲಿ ಬಿಟ್ಟೀನೇನ…..ಗುರ್ತ ಆಗಲಿಲ್ಲಾ ?

ಗಂಗಾ : ಪರಮ್ಮಾ ನಿನ್ನ ಹಂತೇಲಿ ಒಂದ ದುಡ್ಡು ಇದ್ದರ ಕೊಡಡಾಲ್ಲಾ………….ಯಾರ ಕೊಡಾಕಯೇನಾ ?

ಪರಮ್ಮಾ : ಹಿಡಿ ಪೂಜಾರಿ, ನಿನ್ನ ಹೆಣಕ ಬಡಕೋ ಈ ದುಡ್ಡು…….

ಪೂಜಾರಿ : ನಿಂದು ದುಡ್ಡು ಹಳೀದ ಆಗೇತಿಬೇ. ಅಂಚಿಯೆಲ್ಲಾ ಹರದತಿ. ಗಂಗವ್ವನ ಹಂತೇಕಿಂದು ಹೊಸಾ ತೂತಿನ ದುಡ್ಡ ಕೊಡಸಲಾ.

ಗಂಗಾ : ಯೇನಮ್ಮಾ, ಪೂಜೇರಿ ಏನಂದಾ, ಯೇನೇನೋ ಅಂತಾನಲ್ಲಾ ಕೇಳು.

ಪರಮ್ಮಾ : ಅಯ್ಯ ಮಗಳ…… ನೀ ಹೋಗೆ ದುಡ್ಡು ಕೊಟ್ಟ ಬಾ ಅಂದಿ, ನಾ ಕೊಡಾಕ ಹ್ವಾದ್ರ….ತಗೋಲಿಲ್ಲ. ನಿನ್ನ ದುಡ್ಡು ಹಳೀದಾಗೇತಿ ಅಂಚೆಯೆಲ್ಲಾ ಹರಿದೇತಿ….ಇದ ಬ್ಯಾಡ ಗಂಗಾನ ಹಂತೇಲಿ ಹೊಸಾ ದುಡ್ಡ ಇಸಗೊಂಡ ಬಾ ಅಂದ ಎವ್ವಾ.

ಗಂಗಾ : ಪರಮ್ಮಾ ಪೂಜೇರಿ ಹಿಂಗ ಅಂದಾ. ಬಿರೀ ಬಂತಲ್ಲ, ನನ್ನ ಹತ್ರ ಚಿಲ್ಲರ ಇಲ್ಲಾ. ಹೊರಗ ಯಾರರಾ ಇದ್ರ ಕೇಳೋಣ ಬಾ ಚಿಲ್ಲರ

( ಸಂಗ್ಯಾ ಬಾಳ್ಯ ಪ್ರವೇಶ)

ಸಂಗ್ಯಾ :

ನಡಿ ನಡಿಯೋ ಗೆಳೆಯಾ ಬಾಳಣ್ಣಾ
ಮರಡೀ ಬಸವಣ್ಣಾ ॥ಪಲ್ಲ ॥

ಮಾಡ್ಯಾರೊ ಜಾತರಿಮಾಡ್ಯಾರೊ ಜಾತರೀ
ಹೊಡೆದಾರ ಗುಡಾರ ಡೇರಿಹೂಡಿಕೊಂಡ ಬಂಡಿ ಕೊಲ್ಲಾರಿ ॥

ಕುಂಡ್ರೋಣು ಬೇತವಾರಿಕೂಡ್ರೋಣು ಉಮೇದ್ವಾರಿ
ಒಡಿಸಿಕೊಂಡು ಬರೋಣುಕಾಯಿಕಪ್ಪೂರ ॥

ಹಚ್ಚಿ ದುಂದುಕಾರಕೇಳ್ ಗೆಳಿಯಾ ಜಾತಿರಿ
ಎಳಿಯತಾರ ತೇರಕೇಳ್ ಸಡಗರ್ ॥

ಬಾಳಣ್ಣಾ, ಮಡ್ಡೀ ಬಸವಣ್ಣನ ಜಾತ್ರಿ ಬಾಳ ಕೂಡೇತಿ. ನಡಿ ಹೋಗೋಣು ಕಾಯಿ ಒಡಿಸಿಕೊಂಡು ಬರೋಣು.

ಬಾಳ್ಯಾ : ಹೋಗೋಣು ನಡೀ ಮಿತ್ರಾ, ನಾನೂ ಜಾತ್ರಿ ನೋಡೇ ಇಲ್ಲಾ.

ಸಂಗ್ಯಾ : ಮಿತ್ರಾ, ಬಸವಣ್ಣ ಎಷ್ಟ ಚೆಂದ ಕಾಣುತ್ತಿರುವದು ನೋಡಿದಿಯಾ ?

ಬಾಳ್ಯಾ : ಮಿತ್ರಾ ಒಳಗೆ ಯಾರೋ ದೇವರಿಗೆ ಬಂದಂತೆ ಕಾಣುತ್ತದೆ.

ಸಂಗ್ಯಾ : ಅವರು ದಾಟಿ ಹೋಗುವವರೆಗೆ ಇಲ್ಲೇ ತಲಬ ಮಾಡೋಣ. ಅವರ‌್ಯಾರು ? ನಮ್ಮ ಕಡೆ ನೋಡತಾರ ಬಾಳಣ್ಣಾ……

ಗಂಗಾ : ಪರಮ್ಮಾ, ಚಿಲ್ಲರ ಸಿಕ್ಕುವು ಏನ

ಪರಮ್ಮಾ : ಯಾರಪೂ ತಮ್ಮಗೋಳರ‌್ಯಾ ನೀವು ? ಚಿಲ್ಲರ ಇದ್ರ ಕೊಡರ‌್ಯೊ ನಿಮ್ಮ ಹಂತೇಲಿ.

ಸಂಗ್ಯಾ : ಅರೆರೇ ಏನಬೇ, ನೀ ಕೇಳೋದ ಹೆಚ್ಚೊ, ನಾ ಕೊಡೋದ ಹೆಚ್ಚೊ, ಹೂಂ !….. ಚಿಲ್ಲರ ಇಲ್ಲಾ ಇದೊಂದ ಗಟ್ಟೀ ರೂಪಾಯಿ ಅದ. ತಗೊಂಡ ಹೋಗು. ಉಳಿದ ಹಣ…..

ಪರಮ್ಮಾ : ಏ ನನ ಮಗಳ : ಗಂಗಾ !……ಹೊರಗೆ ಅಲ್ಲೆ ಕುಂತಾರಲ್ಲಾ ತಲಬ ಮಡಿಕೊಂತ ಅವ್ರನ್ನ ಕೇಳಿದೆ ಅವರ ಹತ್ತರಾನೂ ಚಿಲ್ಲರ ಇಲ್ಲ. ಆದ್ರ ಇದೊಂದ ಗಟ್ಟೀ ರೂಪಾಯಿ ಕೊಟ್ರು ನನ ಮಗಳ.

ಗಂಗಾ : ಏನ ಪರಮ್ಮಾ ನೋಡಿಕೊಂಡ ಬಾ ಅಂದ್ರ……ಮಾಡಿಕೊಂಡ ಬಂದೆವಾ. ಅವರ ಉಪಕಾರಾ ನಮ್ಮ ಮ್ಯಾಲ ಆಗುದುಲ್ಯಾನ ? ರಗಡ ಸ್ಯಾಣ್ಯಾಳ ಅದೀ ಅದನ್ನ ಅವರಿಗೆ ಕೊಟ್ಟ ಬಾ ತಿರುಗಿ. ಇದ ನೋಡ ನನ್ನ ಹತ್ರ ಒಂದ ದುಡ್ಡ ಅsತಿ. ಸಿಕ್ಕಿತೀಗ ಪೂಜೇರಿಗೆ ಕೊಟ್ಟು ನಮ್ಮ ಬಟ್ಲಾ ಇಸಗೊಂಡ ಬಾ ಹೋಗು.

ಪರಮ್ಮಾ : ಹಿಡಿ ಪೂಜೇರಿ, ನಿನ್ನ ಹೆಣಕ ಬಡಕೊ, ನಮ್ಮ ಬಟ್ಲಾ ಕೊಡ ನಾವ ಹೋ

ಪೂಜಾರಿ : ಅವ್ವಾರೆ, ಡ್ವಾರ ಮುದಕೀ, ನಮ್ಮ ಹಾಸೀಲ ನಾ ಕೇಳಿದರ ಇಕಿಗಿ ಎಷ್ಟ ಸಿಟ್ಟ ಬಂತೋಪಾ.

ಗಂಗಾ : ಪರಮ್ಮಾ ಹೋಗೋನು ನಡಿ ಇನ್ನ.

ಪರಮ್ಮಾ : ಬಾ ನನ ಮಗಳ, ಗದ್ದಲ ಅsತಿ ಹುಶ್ಯಾರಿ….

ಸಂಗ್ಯಾ :

ಒಂದ ಹೆಣ್ಣಒಂದ ಹೆಣ್ಣ
ಕಂಡಿನೊ ಬಾಳಣ್ಣ॥ಪಲ್ಲ ॥

ಊರ ಒಳಗಊರ ಒಳಗ
ಇದ್ದಾಂಗ ರತಿದೇವಿನ ॥

ನಾಗರಹಾವನಾಗರಹಾವಿನ
ಹಂಗ ನಡ ಸಣ್ಣ ॥

ನಡಿನ್ಯಾಗನಡಿನ್ಯಾಗ
ಇಟ್ಟಾಳೊ ವಡ್ಯಾಣ ॥

ಹೂವ್ವಿನ ಕುಬಸಹೂವಿನ ಕುಬಸ
ಇತ್ತಪ್ಪ ಎದಿಮ್ಯಾಲ ॥

ಡಾಳಂಬರಿಡಾಳಂಬರಿ
ಹಲ್ಲ ಕನ್ನಡಿಗಲ್ಲ ॥

ಬಾಳ್ಯಾ ನಾನು ಮಾಡಿನ್ಯೊ ಮಸಲತ್ತಾ
ಯಾರ ಮುಂದ ಹೇಳಲೆಂತಾ
ಇಲ್ಲಿಗಿ ಬಂದೇನೊ ಬೇಕಂತಾ ॥ಪಲ್ಲ ॥

ಸಹಜಗಡಿ ಜಾತ್ರ್ಯಾಗೇನ ನೋಡಿದಿಯಾ
ನನ್ನ ಮುಂದೆ ಹಾದಾಂಗಾತೊ ಅರಗಿಳಿಯಾ ॥

ವಸ್ತ್ರಾ ಮುಚ್ಚಿದ ತಾಟ ಇತ್ತೊ ತೆಲಿಮ್ಯಾಲ
ಎರಡೂ ಕೈನಾ ಬೀಸಾಡ್ತ ಬಂದಳೊ ಗುಡಿಯಾಗ ॥

ಹುಡುಗಾ ಹೋಗ್ತಾಳೊ ಸುಂದರಿ ಕೈಮೀರಿ
ಇಲ್ಲೆ ಇರು ಕಟ್ಟುವೆ ದಾರಿ ॥

(ಗದ್ದಲದಲ್ಲಿ ಗಂಗಾ ದಾಟಿ ಬರುವಾಗ ಅವಳ ಕೊರಳಲ್ಲಿದ್ದ ಸರಿಗಿ ಕಳಚಿ ಬೀಳುತ್ತದೆ. ನೋಡಿಕೊಂಡಾಗ ಗಂಗಾ ಚಿಟ್ಟನೆ ಚೀರಿ)