ಸಂಗ್ಯಾ : (ಹಣದ ಚೀಲದೊಂದಿಗೆ ಪ್ರವೇಶಿಸಿ) ಸೇಡಜಿ ತಗೊಳ್ರಿ ನಿಮ್ಮ ರೊಕ್ಕಾ : ಬಿಡರಿ ನಮ್ಮ ಬಾಳಣ್ಣನ ಕರಕೊಂಡು ಹೋಗತೇನಿ.

ಯಾಕೊ ಸೇಡಜಿ ಎಷ್ಟsತ್ಯೋ ನಿನ ಲೆಕ್ಕಾ
ತಂದ ಕೊಡತೇನಂದರ ಕೇಳಲಿಲ್ಲೊ ಪಕ್ಕಾ ॥1 ॥

ಮಾರವಾಡಿ : ಶೇಂಗಾಪಾ ನಿಮ್ಮ ಬೇಲಾಪಾ ಅಲ್ಲೇ ಕೋಣೆಯೊಳಗೆ ಮಲಕೊಂಡಾನು, ತಗೊಂಡ ಹೋಗ.

ಸಂಗ್ಯಾ : ಬಾಳಣ್ಣಾ, ಏ ಬಾಳಣ್ಣ : ಏಳೇಳು…… ಯಕ ಮಲಗೀದಿ ? ಯಾಕ ಮಾರವಾಡ್ಯಾ ನಮ್ಮ ಬಾಳಣ್ಣಗ ನೀ ಏನ ಮಾಡಿದೀ ಖರೆ ಹೇಳು, ಖರೇ ಹೇಳತಿಯೊ ಏನ ಒಂದೆರಡು ಸದಗ ಅಂದ್ಯೊ ? ಬಾಳಣ್ಣನ ಬಡದೆ ಕೊಂದೀದಿ ಅಲ್ಲಾ.

ಮಾರವಾಡಿ : (ಗದಗದ ನಡಗುತ್ತ) ಶೇಂಗಾಪಾ, ನಿಮ್ಮ ಬೇಲ್ಯಾ ನಿಮ್ಮ ಹಿಂಬಾಲೇ ಹೋಗಬೇಕಂತ ಓಡತಾ, ಓಡತಾ ನಮ್ಮದು ಕುದುರಿ ಗೂಟಾ ಎಡವಿ ಬಿದ್ದಾ ಸತ್ತಾಂವ, ಅವನ್ನ ಬಡದಿಲ್ಲ. ಬೇದಿಲ್ಲ; ನಿಮ್ಮದು ಕಾಲ ಬೀಳ್ತಾವ, ಕೈ ಮುಗಿತಾವ ಕರಕೊಂಡ ಹೋಗ ಶೇಂಗಾಪಾ.

ಸಂಗ್ಯಾ : ಕಾಲ ಬಿದ್ದೀ ಕೈ ಮುಗದೀ, ಅದರ ಸುತ್ತ ಜೀಂವಾ ತಿರಗಿ ಬರತೈತೇನೊ ಸೊಟ್ಟ ಮಾರ್ವಾಡ್ಯಾ. ನಡೀ ಪೋಲೀಸರ ಕಡೆ (ಎಂದು ಸಿಟ್ಟಿನಿಂದ ಡುಬ್ಬದ ಮೇಲೆ ಗುದ್ದ ಹೋಗುವನು)

ಮಾರವಾಡಿ : (ಗದಗದ ನಡುಗಿ) ಶೇಂಗಾಪಾ ನಮ್ಮದು ಇರವ ಗಂಟ ಬಿಡ್ತಾವ, ಮ್ಯಾಲ ಎರಡಸಾವಿರ ರೂಪಾಯಿ ಕೊಡತಾವ, ಪೋಲಿಸ ತನಕಾ ಒಯ್ಯಬ್ಯಾಡಾ ಮ್ಯಾಲೆ ಕಾಲ ಬೀಳ್ತಾವ ಕೈ ಮುಗಿತಾವ.

ಸಂಗ್ಯಾ : ಬಾಳಣ್ಣ, ಬಾಳಣ್ಣ ಏಳು ಹೋಗೋಣ ನಡಿ.

ಬಾಳ್ಯಾ : (ಎದ್ದು) ನಡೀ ಸಂಗಣ್ಣಾ, ಹೋಗೋಣು ಮಾರವಾಡೀ ಹೊಡೆತಾ ಹ್ಯಾಂಗಂತಿ
ಸಂಗಣ್ಣಾ.

ಮಾರವಾಡಿ :

ಯಾಪಾರ ಮಾಡೂದು ಕಟೀನತಿ
ಫಟಿಂಗರು ಮಾಡತಾರ ಫಜೀತಿ ॥1 ॥

ಕಲಿಯುಗದೊಳಗ ದಾಟೂದು ಕಟೀನತಿ
ಯಾಪಾರ ಮಾಡೋದು ಯಾವ ರೀತಿ ॥2 ॥

ಸಭಿಕರೆ, ಇಂದಿನ ಕಾಲದಲ್ಲಿ ವ್ಯಾಪಾರ ಮಾಡೋದು ಕಠಿಣತಿ, ಗುಂಡಾ ಜನರು ಹೆದರಿಸಿ, ಮೋಸಮಾಡಿ ಮನೆ ಹಾಳು ಮಾಡುತ್ತಾರೆ. ನನ್ನ ಹಾಗೆ ನೀವೂ ಇಂಥ ಗುಂಡಾಗಿರಿಗೆ ಬಲಿಬಿದ್ದು ಯಾಪಾರ ಮಾಡಿ ಮೋಸ ಹೋಗಬಾರದೆಂದು ಕಳಕಳಿಯಿಂದ ಪ್ರಾರ್ಥಿಸಿಕೊಳ್ಳುತ್ತೇನೆ.

(ಬಳ್ಳಾರಿ ಹಳಬನ ಪ್ರವೇಶ)

ಹಳಬ :

ಬಳ್ಳಾರಿ ಸಾವುಕಾರಾಕಳುವಿದ ಪತ್ತರಾ
ಪತ್ರ ಬಂದಿತ ಒತ್ತರಾ ॥ಪ ॥

ಈರಪ್ಪ ಸಾವುಕಾರನಡೆಸಿದ ಕಾರಾಭಾರಾ ॥1 ॥
ಹೊಂಗಲದ ಊರಾಅದ್ಯಾವ ದೊಡ್ಡ ಶಾರಾ ॥2 ॥

ಹೋ ! ಹೋ ! ಇಲ್ಲಿ ಯಾರೊ ನಿಂತಂತೆ ಕಾಣುತ್ತದೆ. ಎಲೊ ತಮ್ಮಾ ನೀನು ಯಾರು ? ಲಗಳಿ ಈರಪ್ಪ ಸಾವುಕಾರರ ಮನಿ ನೀ ನೋಡಿದಿಯೇನೋ ತಮ್ಮಾ.

ಹುಡುಗ : ನೋಡ್ರಿ, ಅತೂತು ಹೋಗ್ರಿ, ಅಲ್ಲಿ ನೋಡ್ರಿ ಕಾಣಸ್ತತಿ….. ಗ್ವಾಡ್ಯಾಗ ಬಾಗಲಾ ಹಚ್ಚೇತಿ ನೋಡ್ರಿ….. ಅದs ಸಾವುಕಾರರ ಮನಿ.

ಹಳಬ : ಹತ್ ನಿನ್ನ, ಗ್ವಾಡ್ಯಾಗ ಬಾಗಲಾ ಹಚ್ಚದ ಮುಗಲಮ್ಯಾಲ ಹಚ್ಚತಾರs ಮಗನs…… ರಗಡ ಶ್ಯಾಣಾ ಆದಿ…… ಹೋಗs ಪೆದ್ದ ಸೂಳೀ ಮಗನ.

ಹುಡುಗ : ಏನೋಪಾ ಇಂವಾ, ಅಲ್ಲಾ ಇವಗ ಮನಿಬ್ಯಾರಿ ತೋರಸ ಬೇಕು, ಇವನ ಕೈಲೆ ಬೇಸಿಗೋಬೇಕ ಬ್ಯಾರ, ಇಂಥ ಎಬಡ ತಬಡ ಮಂದೀಗೂಡ ಮಾತಾಡೋದ ಕಠೀನsತಿ.

ಹಳಬ : (ಸಾವುಕಾರರ ಮನೆಯ ಮುಂದೆ ಹೋಗಿ) ಈರಪ್ಪ ಸಾವುಕಾರ‌್ರ, ಈರಪ್ಪ ಸಾವುಕಾರ‌್ರ, ಏನ ಮಾಡಕ ಹತ್ತೇರಿ, ಬರ‌್ರೀ ಹೊರಗ ಬಳ್ಳಾರಿಯಿಂದ ಸಾವುಕಾರ‌್ರ ಕಳಿಸ್ಯಾರ‌್ರಿ, ಇದ ತಗೊಳ್ರಿ ಒತ್ತರ ಮಾಡಿ ಪತ್ತರಾ ತಂದೇನ್ರಿ.

ಈರಪ್ಪ : ಯಾರೋ ತಮ್ಮಾ ನೀನು ?

ಹಳಬ : ನಾ, ಬಳ್ಳಾರಿ ಹಳಬರೀ, ರಾಮರಾವ ಸೇಡಜಿ ಪತ್ರಾ ಕೊಟ್ಟಾರ‌್ರಿ

ಈರಪ್ಪ : (ಪತ್ರ ಒಡೆದು ಓದುತ್ತಾನೆ)
ರಾ ರಾ ಶ್ರೀ ಈರಪ್ಪ ಸಾವುಕಾರರಿಗೆ,

ಬಳ್ಳಾರಿಯಿಂದ ರಾಮರಾವ ಸೇಡಜಿ ಮಾಡುವ ಕೃತಾನೇಕ ನಮಸ್ಕಾರಗಳು. ಸಾಂಪತ್ರು ಚೆನ್ನಾಗಿದ್ದೇವೆ ವ್ಯಾಪಾರ ಈ ವಾರದಲ್ಲಿ ಸ್ವಲ್ಪ ಮಂದಿ ಇದೆ. ಈಗ ನಿಮಗೆ ಹತ್ತುವಷ್ಟು ಖರೀದಿ ಮಾಡಲು ಅಡ್ಡಿಯಿಲ್ಲಾ ಮುಂದೆ ಚಾನ್ಸ ಇದೆ. ಪತ್ರ ಮುಟ್ಟಿದ ಕೂಡಲೆ ಎಲ್ಲಾ ವ್ಯವಸ್ಥೆ ಮಾಡಿಕೊಂಡು ಬರಬೇಕು.

ಇತಿ ಸಪ್ರೇಮ ವಂದನೆಗಳು,

ತಮ್ಮ ವಿಶ್ವಾಸದ
ರಾಮರಾವ ಸೇಡಜಿ

ಈರಪ್ಪ : (ಪತ್ರ ಓದಿ ಮಜಕೂರು ತಿಳಿದುಕೊಂಡು) ಎಲೋ ಹಳಬಾ, ಈ 5 ರೂಪಾಯಿ ತೆಗೆದುಕೊ, ಫಳಾರ ವಗೈರೆ ಮಾಡಿಕೊ. ನಾನು ಒಂದೆರಡು ದಿನಗಳಲ್ಲಿ ಬರುತ್ತೇನೆಂದು ಸೇಡಜಿಯವರಿಗೆ ತಿಳಿಸುವಂತವನಾಗು.

ಹಳಬ : ನಮಸ್ಕಾರ‌್ರೀ ಎಪ್ಪಾ ಹೇಳ್ತೆನ್ರಿ.

ಈರಪ್ಪ : (ಹೆಂಡತಿಯನ್ನು ಉದ್ದೇಶಿಸಿ) ಗಂಗಾ, ಏ ಗಂಗಾ, ಏನು ಮಾಡುತ್ತಿರುವಿ, ಹೊರಗೆ ಬರುವಂಥವಳಾಗು.

ಸಖಿ ಬಾ ಬಾ ಮುದ ಬೀರುತಮುಖ ತೋರುತ
ಸದರ ಮಾಲಕ ಸಖಿ ಬಾ ಬಾ ಬಾ ॥ಪಲ್ಲ ॥

ಮಲ್ಲಿಗೆ ಮುಡಿತುಂಬಮೀನಾಕ್ಷಿ ಮೆಲ್ಲಕ
ಹೆಜ್ಜಿ ಚೆಲ್ಲುತ ಕಮಲಾಕ್ಷಿ ಕರಿವರ ಗಮನಿ ॥1 ॥

ಗಂಗಾ : (ಪ್ರವೇಶಿಸಿ)

ಕರಸೀದ ಕಾರಣೇನುಕಾಂತಾಹರುಷದಿಂದಲಿ
ಸರಸಿಜವೊಲು ನಯನಾ ॥ಪಲ್ಲ ॥

ಎಳಿಬಾಳಿಯೊಳು ಸುಳಿದಾಡುತ
ಸುಳಿಗಾಳಿಯೊಳು ನಲಿದಾಡುತ
ಪ್ರಿಯಾ ನಿಮಗೆ ಕೈಯಾ ಮುಗಿವೆ
ನಡಿರಿ ಒಳಗೆ ತಡವು ಯಾತಕೆ ॥1 ॥

ಕಾಂತಾ, ನಾನು ನನ್ನ ಓರಿಗೆಯ ಗೆಳತಿಯರಗೂಡ ಹಿತ್ತಲದಲ್ಲಿದ್ದೆನು. ಮಲ್ಲಿಗಿ ಗುಲಾಬಿ ಶಾವಂತಿಗಿ ಮಕರಂದ ಮೊದಲಾದ ಸುವಾಸನೆಯ ಹೂವುಗಳ ವಾಸನೆಯಿಂದ ಸುಳಿಗಾಳಿಯು ಮನಸಿಗೆ ಇಂಪಾಗಿ ಸುಳಿದಾಡುವ ಸಮಯದಲ್ಲಿ ಆತುರದಿಂದ ಕರೆದ ಕಾರಣವೇನು ?

ಈರಪ್ಪ :

ಬಳ್ಳಾರಿ ಸೀಮಿಯಿಂದ ಪತ್ರವು ಬಂದsತೇ
ಹೋಗ್ತೇನ ವ್ಯಾಪಾರಕ
ನಡಿಯೇ ಒಳಗೆ ತಡವು ಯಾತಕ ॥1 ॥

ಮುತ್ತು ರತ್ನ ಮಾಣಿಕ ಮತ್ತು ಜೀನಸುಗಳ
ಖರೇದೀ ಮಾಡುದಕ
ಬಳ್ಳಾರಿ ಸೀಮಿಂದ ಪತ್ರವು ಬಂದತೇ ॥2 ॥

ಏ ಗಂಗಾ ! ಬಳ್ಳಾರಿ ಸೀಮಿಯಿಂದ ಪತ್ರ ಬಂದಿರುವದು. ಆ ಪತ್ರದ ಪ್ರಕಾರಾ ನಾನು ಬಳ್ಳಾರಿಗೆ ಮುತ್ತು ರತ್ನದ ಖರೀದಿಗೆ ಹೋಗಬೇಕಾಗಿದೆ. ಯಾಕೆಂದರೆ ಈ ಧಾರಣಿ ಮಂದೀ ಇದೆಯಂತೆ. ಈಗ ಖರೀದಿ ಮಾಡಿದರೆ ಮುಂದೆ ನಮಗೆ ಲಾಭ. ಅದಕ್ಕಾಗಿ ಬುತ್ತೀ ಕಟ್ಟು ನಾನು ಹೋಗ್ತೇನಿ.

ಗಂಗಾ :

ಪ್ರಾಣಕಾಂತಾಎನ್ನ ಅಗಲಿ ಹೋಗಬ್ಯಾಡ್ರಿ
ಇಂತಾ ದೊಡ್ಡ ಮಾಲಿನೊಳು
ಬಾಲಿ ನಾ ಒಬ್ಬವಳ ಹ್ಯಾಂಗ ಜೀವಿಸಲ್ಯೋ
ಪ್ರಾಣಕಾಂತಾಹ್ಯಾಂಗ ಜೀವಿಸಲ್ಯೋ ॥

ಪ್ರಾಣಕಾಂತಾ ನೀವು ಯಾಪಾರಕ್ಕೆ ಹೋಗಬಾರದು. ಇಂಥಾ ದೊಡ್ಡ ಮಾಲಿನಲ್ಲಿ ನನಗೊಬ್ಬಳಿಗೆ ಇರಲು ಆಗೋಹಾಂಗಿಲ್ಲ. ನೀವು ಹೋಗಬ್ಯಾಡರಿ.

ಈರಪ್ಪ :

ಚಂದದಿಂದ ಹೇಳತೇನ ಗಂಗಿ ನಿನಗ
ಕೇಳವಲ್ಲೆ ನೀ ಈಗ
ಎಲ್ಲಾ ಕಡೆ ನದರಿರ‌್ಲೆ ಮನಿಮ್ಯಾಗ ॥
ಇರಪಕ್ಷಿ ಬಸವಂತ ಸಣ್ಣವರಾ
ಬಲ್ಲಂಗ ತಿರಗವರಾ
ಅವರೀಗಿ ಬುದ್ದಿ ಹೇಳಕೋತಾ ಇರ ನೀನಾ ॥

ಏ ಗಂಗಾ ಹಾಗೆ ಅನಬಾರದೇ. ನಾನು ಯಾಪಾರ ಮಾಡುವವನು, ಯಾಪಾರ ಮಾಡಲೇ ಬೇಕಾಗುತ್ತದೆ. ಇರಪಕ್ಷಿ ಬಸವಂತ ಸಣ್ಣವರು ಅವರಿಗೆ ಬುದ್ಧಿ ಮಾತು ಹೇಳುತ್ತ ನೀನು ಇರುವಂತವಳಾಗು.

ಗಂಗಾ :

ಮೂರಂತಸ್ತಿನ ಮನಿಯಾಗ ಯಾರ‌್ಯಾರ ಸುಳಿವಿಲ್ಲಾ
ನಾರಿ ನಾ ಒಬ್ಬವಳು ನಾ ಒಬ್ಬವಳು ಇರುವ ದಿವಸಲ್ಲಾ
ಒಂದು ಹಡದಿಲ್ಲೊ ಪ್ರೀಯಾ ಕಂದಿಲ್ಲೊ ಎನ್ನ ದೇಹಾ
ನೊಂದಿತೊ ಎನ್ನ ಪ್ರಾಯಾ ಮಂದೇನುಪಾಯಾ ॥
ಇರಪಕ್ಷಿ ಬಸವಂತ ಕೇಳೊದಿಲ್ಲೊ ಎನ್ನ ಮಾತಾ
ಎಲ್ಲಾರೊ ಇಲ್ಲೆ ಇರಲಿ ನಾನೂ ಬರುವೇನೊ ॥
ದೇಶದೊಲು ಬೈಲವಾಡ ಈಶ ಬಸವೇಶ್ವರಾ
ಆತನ ದಯವಿರಲ್ಯೋ ನಮ್ಮ ಮ್ಯಾಲಾ ಪೂರಾ ॥

ಈರಪ್ಪ : ಗಂಗಾ, ಹಾಗೆಲ್ಲಾ ಅನಬ್ಯಾಡಾ, ನಾನು ತಮ್ಮಂದಿರನ್ನು ಕರೆದು ಅವರಿಗೂ ಬುದ್ದೀ ಮಾತು ಹೇಳುತ್ತೇನೆ.

ಎಲೋ ಇರಪಕ್ಷಿ ಬಸವಂತ ತಮ್ಮಗಳಿರಾ, ಇತ್ತ ಕಡಿಗೆ ಬರುವಂಥವರಾಗಿರಿ.

(ಇರಪಕ್ಷಿ ಬಸವಂತ ಬರುವರು)

ಇರಪಕ್ಷಿ ಬಸವಂತ ಕೇಳ್ರ್ಯೋ ಮಾತಾಕೇಳ್ರೋರ‌್ಯೃ ಮಾತಾ
ಯಾಪಾರಕ ಹೋಗತೇನೊ ಈ ಹೊತ್ತಾ
ಮೂರು ಮಂದಿ ಇರಬೇಕೊ ನಕ್ಕೊಂತಾ ॥1 ॥

ಹೊಲಮನಿ ಮಾಡಿಕೊಂತಾ
ಗಂಗಾಗ ಬುದ್ಧೀ ಮಾತ ಹೇಳಿಕೊಂತಾ ॥2 ॥

ತಮ್ಮಗಳಿರಾ, ನಿಮ್ಮನ್ನು ಈಗ ಕರದಿರುವ ಬಗಿಯೇನಂದರೆ ಬಳ್ಳಾರಿಯಿಂದಾ ಪತ್ರ ಬಂದಿರುವದು. ಆ ಪತ್ರದ ಪ್ರಕಾರ ನಾನು ಯಾಪಾರಕ್ಕೆ ಯೋಗಬೇಕಾಗಿದೆ. ನೀವು ಮೂವರು ಚೆನ್ನಾಗಿ ಮನೆಯ ಕಡೆಗೆ ಲಕ್ಷ ಹಾಕಿ ನಡೆಸಬೇಕು.

ಇರಪಕ್ಷಿ :

ಅಣ್ಣಾ ಕೇಳೋ ನಮ್ಮ ಮಾತಿನ ಜುಳಕ
ಹುಣವಿ ಚಂದ್ರನ ಬೆಳಕಾ
ಇನ್ನೂ ಸಣ್ಣವ್ರದೇವ ನಾವುಭಾಳ ಎಳಕಾ ॥1 ॥
ಹಿರೇತನಾ ಮಾಡುದಭಾಳ ಕೆಡಕ

ಮನಿತಾನಾ ನಡೆಸುದಕ
ಸರಿಯಾಗಿ ಹೋಗುವದಿಲ್ಲಸೋಸಿ ನಡಿಯದಕ ॥2 ॥

ಅತ್ತೀಗಿ ಗಂಗೌನ ಕರೀಇಲ್ಲೀತನಕ
ಬುದ್ಧಿ ರೀತಿ ಹೇಳುದಕ
ಸದ್ದೇಕ ಹೋಗುವದಲ್ಲೋ ಅಣ್ಣಾ ಸುಮ್ಮ ಸುಮ್ಮಕ ॥3 ॥

ಅಣ್ಣಾ, ನೀನು ಸರ್ವಥಾ ಯಾಪಾರಕ್ಕೆ ಹೋಗಬೇಡಾ. ಯಾಕಂದರೆ ನಾವು ಇನ್ನೂ ಸಣ್ಣವರು. ಈ ಮನಿತನದ ಕಾಳಜಿ ನಿನ್ನ ಮೇಲಿದ್ದು, ನೀನೇ ಹೀಗೆ ಅಂದಮೇಲೆ ನಾವು ನಡೆಸುವದು ಹೇಗೆ ? ಹಿರೇತನ ಎಂದೂ ಮಾಡಿದವರಲ್ಲ. ನೀನು ಹೋಗಬೇಡ : ಅಣ್ಣಾ.

ಈರಪ್ಪ : ತಮ್ಮಾ, ಇರಪಕ್ಷಿ, ನೀನು ಒಕ್ಕಲುತನ ಮಾಡುವವನು ಒಕ್ಕಲತ ಮಾಡಿಕೊಂತ ಇರು. ತಮ್ಮಾ ಬಸವಂತಾ ನೀನು ಉಂಡುಂಡು ಗರಡಿ ಮನೆಗೆ ಹೋಗುವವನು ಗರಡೀ ಮನೆಗೆ ಹೋಗು. ನಾನು ಯಾಪಾರ ಮಾಡುವವನು ಯಾಪಾರಕ್ಕೆ ಹೋಗುವೆ. ನಾನು ಹೋಗುವ ಕಾಲಕ್ಕೆ ಬೇಡ ಅಂದರೆ ಅಪಶಕುನವಾಗುತ್ತದೆ.

ಬಸವಂತ : ಅಣ್ಣಾ, ಇಷ್ಟು ಬಗಿಲಿಯಿಂದ ಹೇಳಿಕೊಂಡರೂ ನಿನಗೆ ಅರಿಕೆಬಾರದಿದ್ದರೆ ಈಗ ಏನು ಮಾಡುವದದೆ. ಇನ್ನು ಹೆಚ್ಚಿಗೆ ಮಾತಾಡೋಕಾರಣವಿಲ್ಲಾ ಮತ್ತು ಅತ್ತಿಗೆ ಗಂಗೌನನ್ನಾದರೂ ಕರೆದು ಬುದ್ಧಿ ರೀತಿ ಹೇಳಿ ಹೋಗುವಂಥವರಾಗಿರಿ.

ಈರಪ್ಪ : ತಮ್ಮಗಳಿರ‌್ಯಾ ನಿಮಗೆ ಹೇಳಿದಂತೆ ಅವಳಿಗಾದರೂ ಹೇಳಿದ್ದೇನೆ.

ಇರಪಣ್ಣ : ಅಣ್ಣಾ ನೀನು ಹೋದರೂ ಚಿಂತೆಯಿಲ್ಲಾ, ತಿರುಗಿ ಬರುವಾಗ್ಗೆ ನನಗೇನು ತರುತ್ತೀ ಹೇಳು.

ಈರಪ್ಪ : ಏನು ತರಲಿ ಹೇಳು ತರುತ್ತೇನೆ.

ಇರಪಣ್ಣ : ಅಣ್ಣಾ, ನನಗೆ ಉತ್ತಮವಾದ ರೇಶಮಿ ಕಡ್ಡೀ ಪಟಗಾ ಒಂದು ತೆಗೆದುಕೊಂಡು ಬರುವಂಥವನಾಗು.

ಬಸವಂತ : ಅಣ್ಣಾ, ನನಗೇನು ತರುತ್ತೀ ?

ಈರಪ್ಪ : ತಮ್ಮಾ ಬಸವಂತಾ ನಿನಗೇನು ತರಬೇಕು ಹೇಳು ?

ಬಸವಂತ : ಅಣ್ಣಾ, ನೀನು ಯಾಪಾರ ಮಾಡಿಕೊಂಡು ಬರುವಾಗ್ಗೆ ನನಗೆ ಮನಸಿಗೆ ಖುಸಿಯಾಗುವಂಥಾ ರೇಶಿಮೆಯ ಕುತನಿ ಚಡ್ಡೀ ತರುವಂಥವನಾಗು.

ಈರಪ್ಪ : ತರುತ್ತೇನೆ ನಿಮ್ಮ ನಿಮ್ಮ ಕೆಲಸಗಳನ್ನು ಸರಿಯಾಗಿ ಮಾಡಿಕೊಂಡು ಇರುವಂಥವರಾಗಿರಿ. ಗಂಗಾ ಬೇಗನೇ ಬರುವಂಥವಳಾಗು. (ಗಂಗಾನ ಪ್ರವೇಶ) ನೀನು ಹೇಳಿದಂತೆ ಇರಪಕ್ಷಿ ಬಸವಂತ ತಮ್ಮಗಳನ್ನಾದರೂ ಕರೆದು ಬುದ್ಧಿ ರೀತಿ ಹೇಳಿದ್ದೇನೆ. ನಾನೀನಗಲೇ ಹೋಗಬೇಕು. ಬೇಗನೆ ಬುತ್ತಿ ವ್ಯವಸ್ಥೆ ಮಾಡು.

ಗಂಗಾ : ಹೇ ! ಪ್ರಾಣಕಾಂತಾ, ನಾನೊಬ್ಬಳೇ ಈ ಮೂರಂತಸ್ತ ಮಹಲಿನಲ್ಲಿ ಇರುವ ಬಗೆ ಹ್ಯಾಗೆ ಹೇಳಿರಿ. ಪ್ರಾಯದವಳಾದ ನನ್ನ ಮನಸ್ಸು ನೋಯಿಸಬೇಡಿರಿ. ನೀವು ಹೋಗಬೇಡಿರಿ. ಒಂದು ವ್ಯಾಳೆ ಹೋಗುದಾದರೆ ನನ್ನನ್ನು ಕರೆದುಕೊಂಡು ಹೀಗಿರಿ.

ಈರಪ್ಪ : ಪ್ರಿಯೆ, ಗಂಗಾ ! ಕೇಳು ಕೂತು ಉಣ್ಣುವವನಿಗೆ ಕುಡಿಕೆ ಹೊನ್ನಾದರೂ ಸಾಲದು ಎಂಬ ನಾಡನುಡಿ ಇದೆ. ನಾನು ಯಾಪಾರದವನು ಯಾಪಾರ ಮಾಡಲಿಕ್ಕೇ ಬೇಕು. ನೀನು ಅಡ್ಡ ಬರಬೇಡ, ನೀನು ಒಬ್ಬಳೇ ಇರೋದಕ್ಕೆ ಅಂಜಿಕೆ ಬರುತ್ತಿದ್ದರೆ ನಿನ್ನ ಕೂಡ ಇರಲಿಕ್ಕೆ ನೆರಮನಿ ಪರಮ್ಮಗ ಕರೆದು ಹೇಳ್ತೇನಿ. ಅವಳ ಕೂಡ ಇರುವಂಥವಳಾಗು. (ಹೊರಗು ಬಂದು) ಪರಮ್ಮಾ, ಏ ಪರಮ್ಮಾ, ಏನ ಮಾಡತೀಬೇ, ಬಾ ಹೊರಗೆ ದಗದ ಐತಿ.

ಪರಮ್ಮ : ಯಾರವಾ, ಯಾಕಪಾ, ಈರಪ್ಪ ಸಾವುಕಾರಯೇನೊ ನನ ಮಗನ ಯಾಕ ಕರದೀಪಾ.

ಈರಪ್ಪ : ಪರಮ್ಮಾ, ಏನಾರ ಕೆಲಸ ಇದ್ರs ಕರ‌್ಯೋದವ್ವಾ.

ಪರಮ್ಮ : ಐ ನನ ಮಗನ, ಆ ಕೆಲಸಾ ಬಿಟ್ಟ ಬಾಳ ದಿನಾ ಆತೋಯಪ್ಪಾ, ಮತ್ತೊಂದೇನಾರಾ ಇದ್ರ ಹೇಳ.

ಈರಪ್ಪ : ಹಾಂಗಲ್ಲ ಪರಮ್ಮಾ, ನೀ ಮುದುಕಿ ಆದರೂ ನಿನ್ನ ಚೇಷ್ಟಾ ಬಿಡುದಿಲ್ಲಲಾ, ನಾ ಹೇಳೋದಟ ಕೇಳ.

ಪರಮ್ಮ : ಈರಪ್ಪಾ, ನೀ ಹೆಂಥಾ ಹುಚ್ಚೋ ನನಮಗನs, ಹುಣಸಿಗಿಡಾಮುಪ್ಪ ಆದರೂ ಹುಳಿ ಮುಪ್ಪ ಆದೀತೇನೋ ಯಪ್ಪಾ !………

ಈರಪ್ಪ : ಇರಲಿ ಪರಮ್ಮ, ಯಾಕ ನಿನ್ನ ಕರದ್ದೇನಂದ್ರs….. ನಾ ಯಾಪಾರಕ ಹೋಗಾಂವ ಅದೇನಿ….ಹೋಗಿ ಬರೂತನಾ ನನ್ನ ಹ್ಯಾಣತಿ ಗಂಗಾನ ಕೂಡ ಇರಬೇಕು. ಈ ಕೆಲಸಕ್ಕ ಕರದದ್ದು.

ಪರಮ್ಮ : ಐ ! ಬಿಡೊ ನನ ಮಗನ, ಇದೇನ ದೊಡ್ಡ ಕೆಲಸಾ ! ನನ್ನ ಮಗಳ ಹಿಂಬಾಲೆ ಬೇಕಾದ್ದ ಉಂತೇನ, ತಿಂತೇನ, ಇಷ್ಟ ಕೆಲಸಾ ಮಾಡದೇನ ಮಾಡ್ಲಿ.

ಈರಪ್ಪ : (ಒಳಗೆ ಬಂದು)

ಬುತ್ತೀ ಕಟ್ಟ ಗಂಗಾ ನೀನಾ
ತಡಾ ಮಾಡೂದ್ಯಾಕ ॥ಪ ॥

ಹೋಗತೇನ ಯಾಪಾರಕ
ಕೇಳ್ ಗಂಗಾ ನೀನಾs ॥1 ॥

ಬಳ್ಳಾರಿ ಸಾವುಕಾರ !
ಕಳುವಿನ ಪತ್ತರಾ ॥2 ॥

ಹೋಗಬೇಕ ಒತ್ತರಾ
ಕೇಳ್ ಗಂಗಾ ನೀನಾ ॥3 ॥

ಮುತ್ತು ಮಾಣಿಕ ಹವಳಾ
ಯಾಪಾರಾ ಬಾಳ ನಿವಳಾ ॥4 ॥

ಮನಿಕಡೆ ಹುಸ್ಯಾರ ಬಾಳಾ
ಕೇಳ್ ಗಂಗಾ ನೀನಾ ॥5 ॥

ಏ ಗಂಗಾ ! ನೀನು ಹೇಳಿದಂತೆ ಆ ನೆರಮನಿ ಪರಮ್ಮನಿಗಾದರೂ ಹೇಳಿ ಬಂದಿದ್ದೇನೆ. ಅವಳೂ ನೀನೂ ಕೂಡಿ ಬೇಗನೆ ರೊಟ್ಟೀ ಕಟ್ಟೋ ವ್ಯವಸ್ಥೆ ಮಾಡಿರಿ, ನನಗೆ ಹೋಗಲಿಕ್ಕೆ ದಿನಮೇಕಾಗುತ್ತದೆ.

ಗಂಗಾ : ಏ ಪರಮ್ಮಾ, ಬಾರs ಇಲ್ಲೇ

ಪರಮ್ಮ :

ಯಾಕೆ ಕರಸೀದಿ ಮಗಳ ತುರ್ತು ಇಲ್ಲಿತನಕ
ಹಂತಾದೇನ ಐತೆವ್ವಾ ನಾಜೂಕ ॥ಪ ॥

ದವಡ ಹೇಳ ಮಗಳ ಯಾವ ಕೆಲಸಾ
ಮನ್ಯಾಗ ಹೋಗಿ ಹೇಳತೇನ ಭರೋಸಾ ॥1 ॥

ಉಣ್ಣೂದ ಬಿಟ್ಟ ಬಂದಿದ್ದೇನs ನಿನ್ನ ದಸೆಕಾ
ಮಾರಿ ಎತ್ತಿ ಮಾತಾಡs ಮಗಳs ತಗಿ ಮುಸಕಾ ॥2 ॥

ನನ್ನ ಮಾರಿ ಈಟs ಹೊತ್ತ ಇಲ್ಲದಿದ್ದರಂವಗಾ
ಹುಚ್ಚ ಹತ್ತಿ ಓಡ್ಯಾಡ್ತಾನ ಊರೊಳಗಾ ॥3 ॥

ಯಾಕ ಕರದೀ ಅಲಬತ್ತ ದಗದತಿ
ಮನಿಯಾಗ ಮುದಕsತಿ ಹೇಳತೇನ ಯುಗತಿ ॥4 ॥

ಗಂಗಾ : ನಮ್ಮವರು ನಿನಗ ಏನ ಹೇಳಿದ್ರು ಅದನ್ನಷ್ಟ ನನ ಮುಂದ ಹೇಳವ್ವಾ.

ಪರಮ್ಮ : ಐ ಏನs ಹುಡುಗೀ, ಅದ ಮಂದ್ಯಾಗ ಹೇಳೊ ಮಾತ ಅಲ್ಲ ಬಿಡ. ಹೇಳಿದರ ಮತ್ತ ಪರಕ ಆದೀತ ?….

ಗಂಗಾ : ಏನಂದ್ರೂ ? ಯಾವ ಮಾತ ಹೇಳಿದ್ರು.

ಪರಮ್ಮ : ನನ ಮಗಳ ಅಂವಾ ಯಾವೂರಿಗೋ ಹೋಗತಾನಂತ, ತಿರುಗಿ ಬರೋತನಾ ಆಕಿನ್ನ ಕಾಯ ಅಂದಾನ ನೋಡವ್ವಾ.

ಗಂಗಾ : ರಮ್ಮಾ, ಆಕಿ್ನ ಅಂದ್ರ….. ಯಾರನ್ನ ಕಾಯ ಅಂದ್ರು ? ನನ್ನ ಕಾಯ ಅಂದ್ರೇನಾ ? ನೀ ಹೆಂಗ ಕೇಳಿದಿ ?

ಪರಮ್ಮ : ಗಂಗವ್ವಾ, ಇದೇನ ಬಂತ ಅನ್ನಿ, ನಾ ನೋಡಿದರ ಅರವತ್ತ ವರಸದ ಮುದುಕೀ. ಅಬರುಕ ಬರ ಹಾಕಿದಾಕಿ. ಇಚೀ ಕವೀಲೆ ಕೇಳಿ, ಆಚಿ ಕಿವೀಲಲೆ ಬಿಟ್ಟೀನಿ ನೋಡ ನನ ಮಗಳ. ನನಗೇನ ತಿಳಿದತಿ ಅಂದ್ರ…… ನಿನ್ನ ಕಾಯತಾನಂತ ತಿಳದತೇ ಯವ್ವಾ, ಇನ್ನೇನ ಮಾಡಲೇ ಹುಡುಗೀ ?

ಗಂಗಾ : ಪರಮ್ಮಾ, ಅವರು ಅಂಥವರಲ್ಲಾ. ಈ ಮಾತಿನ ಅರ್ಥ ನಿನಗ ಗೊತ್ತ ಆಗೇ ಇಲ್ಲ. ಹೊಂಗಲದೂರಾಗ ಲಗಳ್ಯಾರ ಮನಿತಾನಾ ಅಂದ್ರ….. ದೊಡ್ಡ ಸಾವುಕಾರ‌್ರ ಮನಿತಾನಾ. ದೊಡ್ಡ ಬದಕ. ಆ ಬಕಕೀಗೆ ಲಕ್ಷ್ಮೀ ಅಂತಾರ. ತಾವು ತಿರಗಿ ಬರುವವರೆಗೂ ಆಕಿನ್ನ ಅಂದ್ರ. ಆ ಲಕ್ಷ್ಮೀನ್ನ ಕಾಯಂದಾರ ಪರಮ್ಮಾ… ನನ್ನ ಕಾಯ ಅಂದಿಲ್ಲಾ. ಮಾತ ಆಡಿದರ ಹೋತು. ಮುತ್ತ ಒಡದರ ಹೋತು. ಬಾಯಿ ಮುಚ್ಚಿಗೊಂಡ ಮಾತಾಡು. ಚ್ಯಾಷ್ಟಿ ಮಾಡುತೀ ಅಂತ ಬಿಡತೇನ, ಇರಲಿ ಅವರಿಗೆ ಬುತ್ತೀ ರೊಟ್ಟಿ ಕಟ್ಟಾಕ ಅಕ್ಕಟ್ಟ ಮಾಡಬೇಕಾಗೇತಿ, ಬಾ ದಗದ ಅತಿ.

ಪರಮ್ಮ : ಬಿಡವ್ವಾ ನೀ ಬಾ ಅಂದ ಗಳಿಗ್ಗೆ ಬರಾಕ, ಹೋಗ ಅಂದ ಕೂಡ್ಲೆ ಹೋಗಾಕ ನಾ ಒಬ್ಬಾಕೇ ಇಲ್ಲ ಮನ್ಯಾಗ. ನಮ್ಮ ಅರವಾಳಿ ಮುದುಕ ಅತಿ, ಅದನ್ನಟ ಕೇಳಿ ಬರತೇನ ನಿಂದರ ಹುಡಗೀ.

ಗಂಗಾ : ಏನ ಪರಮ್ಮಾ, ನಿನ್ನ ಹಿರ‌್ಯಾ ಅದಾನನ್ನು, ಹಿರ‌್ಯಾ ಇದ್ದದಿಂದ ಕೇಳಿ ಬಾ ಹೋಗು.

ಪರಮ್ಮ : ಏನ ಹುಡುಗಿ ಹಿರ‌್ಯಾ ಅದಾನ್ಯಾಕೆ ?…. ಮಿಸಿಕಿ ಮಾತಾಡಗೊಡದ ಮುಸಕ ಹಾಕ್ಕೊಂಡ ಮಲಕೊಳ್ಳೋಣ ಬಾ ಅಂತತಿ, ಹಿಂತಾದ ಗಂಟ ಬಿದ್ದತಿ ನನಗ.

ಗಂಗಾ : ಹೋಗ ಪರಮ್ಮಾ, ಮುದುಕಿ ಆದರೂ ನಿನ್ನ ಮುರಕಾನ ಬಿಡುದಿಲ್ಲಾ ಹೊಗಿನ್ನ, ಹೋಗಿ ದವಡ ಬಾ ಹೋಗು.

ಪರಮ್ಮ : ಏ ಮುದುಕಾ, ಏ…. ಮುದಕಾ

ಮುದುಕ : (ಒಳಗಿನಿಂದ) ಯಾಕ ?….

ಪರಮ್ಮ : ಬಾ ಇಲ್ಲಿ, ಏನ ಮಾಡತಿ ಒಳಗ ?….

ಮುದುಕ : ಯಾಕ್ಯಾಕ ?…. ಗಾಡೀ ಬಾಳೇ ಒತ್ತರ ಬಿಟ್ಟೀದಿ ಅಲಾ.

ಪರಮ್ಮ :

ಗಂಗಾ ನನಗ ಬಾ ಅಂತ ಹೇಳ್ಯಾಳಲ್ಲಾ

ಹೋಗತೇನೋ ಮುದುಕಾ ನಾನು ನಿಲ್ಲಾಣಿಲ್ಲಾ

ಗಂಗಾನ ಮಾತು ಇಂದಿಗೆ ನಾನು ಮೀರಾಣಿಲ್ಲಾ
ಹೋಗತೇನೋ ಮುದುಕಾ ನಾನು ನಿಲ್ಲಾಣಿಲ್ಲಾ ॥

ಕಡಬು ಬ್ಯಾಳಿ ಮಡಿಗಿಣ್ಣಾ ಕಾಸೇನಲ್ಲಾ
ವಲಿಮ್ಯಾಲ ಇಟ್ಟುದೇನ ಹಸೀಹಾಲಾ

ಏ ಮುದುಕಾ, ಕೇಳಿತೊ ಇಲ್ಲೊ, ಲಗಳಿ ಈರಪ್ಪ ಸಾವಕಾರನ ಹೇಣ್ತಿ ಗಂಗಾ ಅದಾಳ ನೋಡ, ಆಕಿ ನನ್ನ ಕರದ್ದಾಳು ಹೋಗತೇನ. ಅಲ್ಲೇ ಒಲಿಮ್ಯಾಲೆ ಕಡಬಾ ಬ್ಯಾಳಿ ಮಾಡಿ ಮುಚ್ಚಿ ಇಟ್ಟೀದೇನ, ಹಿಂದೊಲಿಮ್ಯಾಲ ಹಸಿಹಾಲ ಬೋಗೋಣ್ಯಾಗ ಹಾಕಿದೇನ. ಕುಡದಕಾರ ಮಲಕೋ ಏನ ?

ಮುದುಕ :

ಹೋಗಬ್ಯಾಡ ಮುದಕಿ ಥಂಡಿ ತಾಳಾಣಿಲ್ಲ
ತೆಕ್ಕಾಗಿದ್ರ ರಾತ್ರಿ ಹಗಲಿ ಏನೇನಿಲ್ಲ॥ಪಲ್ಲ ॥

ನಿನ್ನ ಬಿಟ್ಟ ನನ್ನ ಜೀವ ಗಮಸಾಣಿಲ್ಲಾ
ಹೋಗಬ್ಯಾಡ ಮುದಕಿ ನಿನ್ನ ಬಿಡಾಣಿಲ್ಲಾ ॥

ಯಾವ ಮಗನ ಅಂಜಿಕೆ ನಮಗೇನಿಲ್ಲಾ
ಕಾಲಮ್ಯಾಲ ಕಾಲಹಾಕಿ ಕುಂಡ್ರೋನಲ್ಲಾ॥

ಮುದಕಿ ಆದರೂ ನಿನ್ನ ಮುರಕಾ ಬಿಡಲಿಲ್ಲಾ
ಹರಕ ಪರಕ ಮಾತ ನಿನ್ನ ಹಂತೇಲೆಲ್ಲಾ ॥

ಮುದಿಕ್ಕಾಗಿ ಮನ್ಯಾಗಿರೋದ ಕಲತೇಯಿಲ್ಲಾ
ಸಿಟ್ಟೀಗಿ ಬಂದ್ರ ಮುರದೇನ್ ಬಾಯಾನ ಹಲ್ಲಾ ॥

ಮುದುಕಿ ನಿನ್ನ ಬಿಟ್ಟ ನನ್ನ ಜೀಂವಾ ಹ್ಯಾಂಗ ಗಮಸಬೇಕು. ಥಂಡೀ ದಿನಾ ನಿದ್ದೇ ಹತ್ತುದುಲ್ಲಾ. ಕಾಲಮ್ಯಾಲ ಕಾಲಹಾಕಿ ಆರಾಮ ಮಲಕೊಳ್ಳೋಣ. ಬಿಟ್ಟ ಹ್ವಾದಿ ಅಂದ್ರ ಖೋಡೀ…..ಬಾಯಾನ ಹಲ್ಲ ಮುರದೇನ ನೋಡ….