೧೮೬೦ ಸುಮಾರಿಗೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ನಡೆದ ನೈಜ ಘಟನೆಯನ್ನಾಧರಿಸಿ ಈ ಸಣ್ಣಾಟ ರಚನೆಗೊಂಡಿದೆ. ಸಂಗ್ಯಾ ಬೈಲಹೊಂಗದ ಶ್ರೀಮಂತ ರಸಿಕ ತರುಣ. ಬಾಳ್ಯಾ ಅವನ ಗೆಳೆಯ. ಬಡವನಾದ ಬಾಳ್ಯನನ್ನು ಸಂಗ್ಯಾ ತನ್ನ ಸರಿಸಮಾನ ನೋಡಿಕೊಂಡಿರುತ್ತಾನೆ. ಅದೇ ಊರಿನ ಈರ‌್ಯಾ ಶ್ರೀಮಂತ ವ್ಯಾಪಾರಿ. ಅರಸಿಕ.ಕೌಟುಂಬಿಕ ಜೀವನಕ್ಕಿಂತ ವ್ಯಾಪಾರ : ಲಾಭಗಳನ್ನು ಪ್ರೀತಿಸಿದವನು. ತನ್ನ ತರುಣಿ ಹೆಂಡತಿ ಗಂಗಿಯ ಆಸೆ ಆಕಾಂಕ್ಷೆಗಳತ್ತ ಗಮನವೀಯದವನು. ಅವಳ ಅಪೇಕ್ಷೆಯನ್ನು ನಿರಾಕರಿಸಿ ಬಳ್ಳಾರಿಗೆ ವ್ಯಾಪಾರಕ್ಕೆ ಹೋಗುವನು. ಇತ್ತ ಮರಡಿ ಬಸವಣ್ಣನ ಜಾತ್ರೆಗೆ ಹೋದ ಗಂಗಿ ಅಲ್ಲಿ ತನ್ನ ಸರಗಿ ಸರ ಕಳೆದುಕೊಂಡು ಗಾಬರಿಯಾಗುತ್ತಾಳೆ. ಅದು ಸಂಗ್ಯಾನಿಗೆ ಸಿಕ್ಕಿರುತ್ತದೆ. ಅವಳ ಚೆಲುವಿಕೆಗೆ ಮನಸೋತ ಸಂಗ್ಯಾ ಅವಳನ್ನು ಒಲಿಸಿಕೊಳ್ಳುವ ಪ್ರಯತ್ನಕ್ಕೆ ತೊಡಗುವುದು. ಮೊದಲು ತನ್ನ ಗೆಳೆಯ ಬಾಳ್ಯಾನನ್ನು ಗಂಗಿಯ ಮನೆಗೆ ಕಳಿಸುವನು. ಗಂಗಿ ಅನೈತಿಕ ಸಂಬಂಧಕ್ಕೆ ಮನಸ್ಸು ಮಾಡದೆ ಬಾಳ್ಯಾನಿಗೆ ಛೀ ಥೂ ಅಂದು ಕಳಿಸುವಳು. ನಂತರ ಪರಮ್ಮ ಎಂಬ ಮುದುಕಿಯನ್ನು ಗಂಗಿಯ ಹತ್ತಿರ ಕಳಿಸುವನು. ಪರಮ್ಮ ಗಂಗಿಗೆ ಏನೇನೋ ಹೇಳಿ, ಸರಗಿ ಸರ ಮರಳಿ ಕೊಡಿಸುವ ಆಸೆ ತೋರಿಸಿ, ಹೆದರಿಸಿ ಬೆದರಿಸಿ ಸಂಗ್ಯಾನ ಸಂಬಂಧಕ್ಕೆ ಒಪ್ಪಿಸುತ್ತಾಳೆ. ದಾಂಪತ್ಯ ಸುಖದಿಂದ ವಂಚಿತಳಾಗಿದ್ದ ಗಂಗಿ ಮೊದ ಮೊದಲು ಸಂಗ್ಯಾನನ್ನು ತಿರಸ್ಕರಿಸಿದ್ದರೂ ನಂತರ ಅವನ ಪ್ರೇಮದ ಸೆಳವಿಗೆ ಬೀಳುತ್ತಾಳೆ, ಸುಖಪಡೆಯುತ್ತಾಳೆ. ವ್ಯಾಪಾರದಿಂದ ತಿರುಗಿ ಊರಿಗೆ ಬಂದ ಈರ‌್ಯಾ ತನ್ನ ಹೆಂಡತಿಯ ಹಾದರದ ಸುದ್ಧಿ ತಿಳಿದು ಕ್ರುದ್ಧನಾಗಿ ತಾಳಿ ಹರಿದುಕೊಂಡು ಗಂಗಿಯನ್ನು ಅವಳ ತವರೂರು ಬೈಲವಾಡಕ್ಕೆ ಅಟ್ಟುವನು. ತನ್ನ ತಮ್ಮಂದಿರಾದ ಇರಪಕ್ಷಿ ಬಸವಂತರೊಂದಿಗೆ ಸಂಗ್ಯಾನ ಕೊಲೆಯ ಯೋಜನೆ ತಯಾರಿಸುತ್ತಾನೆ. ಈ ಸಂಚಿನಲ್ಲಿ ಹಣದ ಆಸೆಯಿಂದ ಸಂಗ್ಯಾನ ಜೀವದಗೆಳೆಯ ಬಾಳ್ಯಾ ಪಾಲ್ಗೊಳ್ಳುತ್ತಾನೆ. ಬಾಳ್ಯಾನ ನೆರವಿನಿಂದ ಸಂಗ್ಯಾನನ್ನು ಕೊಂದು ಸೇಡು ತೀರಿಸಿಕೊಂಡ ಈರ‌್ಯಾನಿಗೆ ಗಲ್ಲು ಶಿಕ್ಷೆಯಾಗುತ್ತದೆ.

ಸಂಗ್ಯಾಬಾಳ್ಯಾದ ಕರ್ತೃ ಗಂಗಿಯ ತೌರುರು ಬೈಲವಾಡ ಗ್ರಾಮದ ರಾಯಪ್ಪ ಪತ್ತಾರ ಮಾಸ್ತರ್. ಸಂಗ್ಯಾನ ಕೊಲೆ ಮತ್ತು ಅದರ ಹಿನ್ನೆಲೆಗಳು ಜನಾಕರ್ಷಕವೆನಿಸಿದವು. ಜನಪ್ರಿಯ ಸಮಕಾಲೀನ ಘಟನೆಯು ಈ ಸಣ್ಣಾಟ ರಚಿಸಲು ರಾಯಪ್ಪನನ್ನು ಪ್ರೇರೇಪಿಸಿತು. ಈ ಸಣ್ಣಾಟ ಕೂಡಲೇ ಪ್ರಚಾರ ಪಡೆಯಿತು. ಆಗ ಈರ‌್ಯಾನ ತಮ್ಮಂದಿರು ಇದು ತಮ್ಮ ಮನೆತನದ ಮರ್ಯಾದೆ ತೆಗೆಯುವ ಸಣ್ಣಾಟವಾಗಿರುವುದರಿಂದ ಇದನ್ನು ನಿಲ್ಲಿಸಬೇಕೆಂದು ಸರಕಾರಕ್ಕೆ ಅರ್ಜಿಮಾಡಿಕೊಂಡರು. ಬ್ರಿಟಿಷ್ ಸರಕಾರ ಸಂಗ್ಯಾಬಾಳ್ಯಾ ಪ್ರಯೋಗವನ್ನು ನಿಷೇಧಿಸಿತು. ಆದರೂ ಅದು ಗುಪ್ತವಾಗಿ ಅಲ್ಲಲ್ಲಿ ಪ್ರಯೋಗವಾಗುತ್ತಲೇ ಇತ್ತು. ಇದು ಅದರ ಜನಪ್ರಿಯತೆಗೆ ದ್ಯೋತಕ. ಕಾಲಾಂತರದಲ್ಲಿ ನಿಷೇಧದ ಬಿಗಿ ಕಡಿಮೆಯಾಯಿತು. ಬಹಿರಂಗ ಪ್ರದರ್ಶನಗಳು ಧಾರಾಳವಾಗಿ ನಡೆದವು. ಒಂದು ಹಂತದಲ್ಲಿ ಇದು ಹರಿಜನರು ಮಾತ್ರ ಆಡುವ ಆಟವಾಗಿತ್ತೆಂಬುದು ಗಮನಾರ್ಹ ಅಂಶವಾಗಿದೆ.

ಸಂಗ್ಯಾಬಾಳ್ಯಾ ಪ್ರಥಮ ಘಟ್ಟದ ಸಣ್ಣಾಟ. ಪ್ರಥಮಘಟ್ಟದ (1860 : 1920) ಸಣ್ಣಾಟಗಳ ಸಂಭಾಷಣೆಗಳು ಕವಿಕೃತವಲ್ಲ. ಅವು ಮೂಲತಃ ಗೀತರೂಪಕಗಳು. ಕವಿ ಹಾಡುಗಳನ್ನಷ್ಟೇ ಬರೆದಿರುತ್ತಾನೆ. ಹಾಡಿನ ಭಾವಾರ್ಥದಂತಿರುವ ಮಾತುಗಳನ್ನು ಪಾತ್ರಧಾರಿ ಹೇಳುವುದುಂಟು. ಈ ಆಶು ಸಂಭಾಷಣೆಗಳು ಗಟ್ಟಿಗೊಂಡು ಸಿದ್ಧ ಸಂಭಾಷಣೆಗಳಾದವು. ನಂತರ ಈ ಸಿದ್ಧ ಸಂಭಾಷಣೆಗಳು ಹಸ್ತ ಪ್ರತಿಗಳಲ್ಲಿ ಸ್ಥಾನ ಪಡೆದುಕೊಂಡವು. ಪ್ರಸ್ತುತ ಸಂಗ್ಯಾಬಾಳ್ಯಾ ಅಂಥ ಸಿದ್ಧ ಸಂಭಾಷಣೆಯುಕ್ತವಾದ ಬೆಳಗಾಂವಿ ಜಿಲ್ಲೆಯ ಮುತನಾಳ ಗ್ರಾಮದ ಪ್ರತಿಯಾಗಿದೆ*.

 

ಗಣಪತಿ ಸ್ತುತಿ

ಮೇಳ :

ಗಜವದನಾ ನಿಮ್ಮ ಧ್ಯಾನ ಮಾಡುವೆ ನಾವಾ ॥ಪ ॥

ಆರಂಭ ನಡೆಸೇವರಿ ಸಂಗ್ಯಾ ಬಾಳ್ಯಾ ಕತಿನ
ಸಂಗ್ಯಾ ಬಾಳ್ಯಾ ಕತಿನ ಇರಲೆಂತ ಕರುಣ ॥1 ॥

ಕರಿಕಣ್ಣಿನ ತೆಂಗಿನಕಾಯಿ ಗೊನಿಮುರದ ಬಾಳಿಕಾಯಿ
ಕರಕಿ ಪತ್ರಿ : ಹೂವ ತರಸಿ ಮಾಡ್ಯೆವ ಸೇವಾ ॥2 ॥

ಮಂದ ಮತಿಗಳ ನಾವಾ ಬುದ್ಧಿಕೊಡಬೆಕ್ರಿ ನೀವಾ
ವಂದಿಸುವೆವು ನಾವಾ ಪಾರ ಮಾಡಬೇಕ್ರಿ ನೀವಾ ॥3 ॥

ಸಭೆಗೆ ನಿವೇದನೆ

ಮೇಳ :

ಕೂಡಿದ ಜನಾ ಕಲ್ ಕಲ್ಮಾಡಬ್ಯಾಡ್ರಿ ಗುಲ್
ನಿಮ್ಮನ್ನ ನೋಡಿ ಸುಮ್ಮನೆ ನಿಂತೆವ ನಾವಿಲ್ಲಿ ॥ಪ ॥

ಹೆಣ್ಣ ಗಂಡ ಜನಾ ಕೂಡೆತಿ ಸಭಾ ಒಳ್ಳೆ ಭರತೀ
ಸಂಗ್ಯಾ : ಬಾಳ್ಯಾನಸಂಗ್ಯಾ : ಬಾಳ್ಯಾನ
ಕತಿಸಾರ ನಡದೇತಿ ॥1 ॥

ಚಿತ್ತ ವಿಟ್ಟ ಕೇಳ್ರಿ ಹಿರಿಯರಾ ಇದರ ಮಜಕೂರಾ
ಸಂಗ್ಯಾ : ಬಾಳ್ಯಾಸಂಗ್ಯಾ : ಬಾಳ್ಯಾ
ಜೋಡಿಲೆ ಗೆಳೆಯರಾ ॥2 ॥

ಗಂಡುಮೆಟ್ಟ ಗದಗಿನ ಶಾಪೂರ ಬಸವಣ್ಣ ದೇವರ
ಆತಗ್ಹೋಗಿಆತಗ್ಹೋಗಿ
ಮಾಡುವೆ ನಮಸ್ಕಾರಾ ॥3 ॥

(ಸಂಗ್ಯಾ : ಬಾಳ್ಯಾ ಇವರ ವತರ್ುನಕಿ)

ಮೇಳ :

ಸಂಗ್ಯಾ : ಬಾಳ್ಯಾ ಜೋಡಿಲಿ ಗೆಳೆಯರಾಜೋಡಿಲಿ ಗೆಳೆಯರಾ
ಹೊಂಗಲದ ಪ್ಯಾಟ್ಯಾಗ ತಿರಗುವರಾ ॥ಪ ॥

ಸಿಂಗಾರದ ಸಾಲಿಗೆ ಹೋಗುವರಾಸಾಲಿಗೆ ಹೋಗುವರಾ
ವೇದಶಾಸ್ತ್ರಪುರಾಣ ಓದುವರಾ ॥1 ॥

ವಿದ್ಯದಲ್ಲಿ ಬಹಳ ಶಾಣ್ಯಾರಾಬಾಳ ಶಾಣ್ಯಾರಾ
ಕಾತೆ ಕೀರ್ದಿಲೆಕ್ಕಾ ಮಾಡುವರಾ ॥2 ॥

ಗಂಡಮೆಟ್ಟ ಗದುಗಿನ ಶಾಪೂರಾಬಸವಣ್ಣ ದೇವರಾ
ಆತಗ್ಹೋಗಿಮಾಡುವೆ ನಮಸ್ಕಾರಾ ॥3 ॥

(ಸಂಗ್ಯಾನ ಪ್ರವೇಶ)

ಸಂಗ್ಯಾ :

ಎತ್ತ ಹೋದ್ಯೊ ಬಾಳ್ಯಾ ಎನ್ನನಗಲಿಎಲ್ಲ್ಯೆಂತ ಹುಡುಕಲಿ
ಎನ್ನ ಜೀವನ ಗೆಳಿಯಾಎನ್ನ ಜೀವದ ಗೆಳಿಯಾ
ಬಾಳಾ ಹೋದ್ಯೊ ಎನ್ನಗಲಿ ಬಾಳ್ಯಾ ಹೋದ್ಯೊ ಎನ್ನಗಲಿ॥ಪ ॥

ಬಿಟ್ಟ ಹೋಗತಿದ್ದಿಲ್ಲೊ ಎಲ್ಲೆಲ್ಲಿ ಹೋದರ ಹಿಂಬಾಲಿ
ದಿನ್ನಾ ಬಂದದಿನ್ನಾ ಬಂದ
ಕೂಡ್ರಾವೊ ಎನ್ನ ಬದಿಯಲ್ಲಿ ॥1 ॥

ಉಂಡಿಲ್ಲಾ ಕೈಯ ತೊಳದಿಲ್ಲಾ ಇಂದಿಗ ಮೂರದಿನಾ
ಎನ್ನ ಜೀವದ ಗೆಳೆಯಾ ಎನ್ನ ಜೀವದ ಗೆಳೆಯಾ
ಬಾಳಾ ಹೋದ್ಯೊ ಎನ್ನಗಲಿ ॥2 ॥

ಗಂಡ ಮೆಟ್ಟಿನ ಗದುಗಿನ ಶಾಪೂರ ಬಸವಣ್ಣ ದೇವರಾ
ಆತಗ್ಹೋಗಿ ಆತಗ್ಹೋಗಿ
ಮಾಡುವೆ ನಮಸ್ಕಾರಾ ॥3 ॥

ಓಹೋಎನ್ನ ಜೀವದ ಗೆಳೆಯಾ ಎಲ್ಲಿ ಹೋಗಿರಬಹುದು. ನನ್ನ ಗೆಳಿಯಾ ಬಾಳ್ಯಾ ಹೋಗಿ ಇಂದಿಗೆ ಎಂಟು ದಿನವಾಯಿತು. ನನಗೆ ಭೇಟಿಯಾಗಿಯೆ ಇಲ್ಲ. ಅವನು ಇಲ್ಲದ್ದಕ್ಕೆ ನನ್ನ ಮನಸ್ಸಿಗೆ ಸಮಾಧಾನ ಇಲ್ಲ. ಊಟಂತೂ ಬೇವಿನ ಕಾಯಿಗಿಂತಲೀ ಇಸವಾಗಿರವದು. ಕೂಡ್ರುವಾಗ ಏಳುವಾಗ ಅಡ್ಡಾಡುವಾಗ ಎಲ್ಲಿಯಾದರೂ ಮೋಜಿಗಾಗಿ ಹೋಗುವಾಗ ಇಬ್ಬರೂ ಕೂಡಿಯೆ ಇರುವವರು ಕೂಡಿಯೆ ಬರುವವರು. ಹೀಗಿದ್ದ ಮೇಲೆ ಅವನು ಎಲ್ಲಿಗೆ ಹೋಗಿದ್ದಾನೆ. ನೋಡುತ್ತೇನೆ. ಅಲ್ಲಿ ಯಾರೊ ನಿಂತಂತೆ ಕಾಣುತ್ತಾರೆ. (ಸಮೀಪ ಹೋಗಿ)

ಎಲೊ ತಮ್ಮಾ ನೀನು ಯಾರು ?

ಹುಡುಗ : ಯಾಕ್ರಿ ಸಂಗಪ್ಪ ಸಾವುಾರ ನಾನ್ರಿ. ಯಾಕ್ರಿ ಏನ ಕೆಲಸ ಇತ್ರಿ ?

ಸಂಗ್ಯಾ : ಎಲೊ ತಮ್ಮಾ ನನ್ನ ಗೆಳೆಯಾ ಬಾಳ್ಯಾ ಹೋಗಿ ಇಂದಿಗೆ ಎಂಟು ದಿವಸವಾಯ್ತು. ನೀ ನೋಡಿದ್ರ ಹೇಳ ತಮ್ಮಾ ನನಗ ಸಮಾಧಾನ ಇಲ್ಲ

ಹುಡುಗ :

ಹಿಂಗ ಹೋದ್ನೊ ಪ್ಯಾಟಿ ಕೂಟಿನಲಿಬಾಳ ಅವಸರಲಿ
ನಿನ್ನ ಜೀವದ ಗೆಳೆಯಾನಿನ್ನ ಜೀವದ ಗೆಳೆಯಾ ॥
ಬಾಳ್ಯಾ ಹೋದೊ ಗಡಬಿಡಿಲಿ ॥ಪ ॥

ಸಂಗಪ್ಪ ಸಾವುಕಾರ‌್ರ ನಿಮ್ಮ ಗೆಳ್ಯಾ ಬಾಳಪ್ಪ ಹಿಂಗ ಪ್ಯಾಟಿ ಸಂದ್ಯಾಗಿಂದ ಹ್ವಾದಾ ತಮ್ಮ ಮನಿಗೆ. ಬಾಳ ಗಡಿಬಿಡಿಲೆ ಹ್ವಾದ ನೋಡ್ರಿ.

ಸಂಗ್ಯಾ : ಹಾಗಾದರೆ ತಮ್ಮಾ ಅವರ ಹತ್ರ ಹೋಗಿ ನಿನ್ನ ಗೆಳೆಯಾ ಸಂಗಣ್ಣ ದಾರ‌್ಯಾಗ ಕುಂತಾನು, ನಿನ್ನ ಕರಕೊಂಡ ಬಾ ಅಂತ ನನ್ನ ಕಳಿಸಿರುವನು ಎಂದು ಹೇಳಿ ಕರಕೊಂಡು ಬರಹೋಗು.

ಹುಡುಗ :

ಸಾವಕಾರ‌್ರೆ ಈಗಲೆ ಹೋಗುತ್ತೇನಿ,
(ಬಾಳಣ್ಣನ ಮನಿಗೆ ಹೋಗಿ)
ಅದಿಯೇನೊ ಬಾಳಣ್ಣ ಮನಿಯಾಗ
ಏನ ಮಾಡತಿ ಒಳಗ
ಸಂಗ್ಯಾ ಕರಿತಾನಪ್ಪ ಬಾ ಹೊರಗೆ॥ಪ ॥
ಸಂಗ್ಯಾ ಕುಂತಾನಪ್ಪ ದಾರ‌್ಯಾಗ
ಹೇಳಿ ಕಳುವಿದ ನನಗೆ
ಬಾ ಅಂತ ಹೇಳಿದನಪ್ಪ ನಿನಗ ॥1 ॥

ಬಾಳಣ್ಣ, ಏ ಬಾಳಣ್ಣ ! ನಿನ್ನ ಗೆಳೆಯಾ ಸಂಗಣ್ಣಾ ಹೊಂಗಲ ದಾರ‌್ಯಾಗ ಕುಂತಾನು. ಲಗೂ ನಿನ್ನ ಕರಕೊಂಡ ಬಾ ಅಂತ ನನ್ನ ಕಳಿಸಿಕೊಟ್ಟಾನು. ಲಗೂ ಹೋಗೋಣು ಬಾರಪಾ ಬಾಳಣ್ಣ.

ಬಾಳ್ಯಾ : ಹಾಗಾದರೆ ಹೋಗುಣು ನಡಿ ತಮ್ಮಾ

(ಸಂಗ್ಯಾ : ಬಾಳ್ಯಾ ಪ್ರವೇಶ)

ಸಂಗ್ಯಾ :

ಭೆಟ್ಟ್ಯಾಗಿ ಆದಿತೆಂಟ ದಿನಾಹಾ ಮಿತ್ರಾ
ಬ್ಯಾಸರಾದವೊ ಗೆಳಿತನಾ॥ಪ ॥

ಕೂಳ ನೀರ ಸವಿ ಹತ್ತಲಿಲ್ಲ
ಏನ ಕಾರಣ ಹೇಳ ಎನ್ನ ಮುಂದ ॥1 ॥

ನಿನ್ನ ಮುಖವೂ ಇಂದ ಯಾಕ ಬಾಡಿರುದು
ಆಡಿ ಕೂಡಿ ಮಾತಾಡೋಣ ನಕ್ಕೊಂತ ॥2 ॥

ದೇಶದೊಳು ಶಾಪೂರ ಈಶ ಬಸವೇಸೂರ
ಆತನ ದಯವಿರಲಿಪೂರ್ಣಾಹಾಮಿತ್ರಾ ॥3 ॥

ಯಾಕೆ ಮಿತ್ರಾ ಎಲ್ಲಿಗ ಹೋಗಿದ್ದಿ ? ನೀನು ನನಗೆ ಎಂಟು ದಿನಗಳಿಂದ ಭೆಟ್ಟಿಯಾಗದ್ದಕ್ಕೆ ನನಗೆ ಊಟ ಸವಿ ಹತ್ತಿಲ್ಲಾ. ಕಣ್ಣಿಗೆ ನಿದ್ದಿ ಇಲ್ಲಾ. ಮನಸ್ಸಿಗೆ ಸಮಾಧಾನವಿಲ್ಲ. ನನ್ನನ್ನು ಬಿಟ್ಟು ಎಂದೂ ಅಗಲದವನು. ಬಾಳಣ್ಣಾ ನಿನ್ನ ಮುಖವೂ ಈಗ ಹೀಗ್ಯಾಕೆ ಬಾಡಿರುವದು ಗೆಳಿಯಾ? ಅದನ್ನೂ ನನ್ನ ಮುಂದೆ ಹೇಳು ಗೆಳಿಯಾ ಬಾಳಣ್ಣಾ. ಮನಸ್ಸಿಗೆ ಸಮಾಧಾನವಾಗುವದು. ಜಗಲಿ ಪಗಡಿ ಆಡೋಣ.

ಬಾಳ್ಯಾ :

ಬಡವಪ್ಪ ಸಂಗ್ಯಾ ನಾನು ಹೋಗಿನ್ಯೊ ಹ್ವಾರೇಕ
ಮಕ್ಕಳ ಬಾಳಾ ಜನಮತಿ ಗೋಳಾ
ಬೀಸಾಕ ಜ್ವಾಳಿಲ್ಲ ತಿನ್ನಾಕ ಕೂಳಿಲ್ಲ ॥

ಮಿತ್ರಾ ಸಂಗಣ್ಣಾ ಹ್ವಾರೇಕ ಹೋಗಿದ್ದೆನು. ಈಗ ಸಂಗಣ್ಣಾ ಆಡೋಣು ಕೂಡ್ರು.

ಸಂಗ್ಯಾ :

ಆಡೋಣಾ ಬಾ ಮಿತ್ರಾಜೋಡಿಲಿ ಗೆಳಿಯರಾ
ಹೊತ್ತ ಹೋಗುವಂಗ ಒತ್ತರಾ ॥ಪ ॥

ಕೆಂಪು ವರ್ಣದ ಹಾಸಿಗೆ ಹಾಸೋ ಗೆಳಿಯಾ ನೀನಾ
ಕವಡಿ ತಾರೊ ನನ್ನ ಕೈಯಲ್ಲೊ ॥1 ॥

ಹಸರು ಹಳದಿ ನಂದು ಕೆಂಪು ಕರಿದು ನಿಂದು
ಕೂಡಿ ಆಡೋಣ ಬಾ ಪಗಡಿ ॥2 ॥

ಧರೆಯೊಳು ಗದುಗಿನ ಶಾಪೂರ ಬಸವಣ್ಣದೇವರಾ
ಆತನ ದಯವಿರಲೊ ನಮ್ಮ ಮ್ಯಾಲಾ ॥3 ॥

(ಪಡಗಿ ಆಡಿ : ಬಳಿಕ ನಿಲ್ಲಿಸಿ)

ಸಂಗ್ಯಾ :

ನಡಿ ಬಾಳ್ಯಾ ಹೋಗುನು ಪ್ಯಾಟ್ಯಾಗ ಬೆನ್ನವಲ ಗಟ್ಯಾಗ
ಸಾವುತನಾ ಇರಲಿ ಗೆಳೆತನಾ ಹಿಂಗ ॥
ಯಾವುದಕೇನು ಕಡಿಮೆ ಇಲ್ಲ ನನಗ
ಕೊಟ್ಟ ಮರತಾನು ಶಂಕರ ನನಗ
ಬೆಳ್ಳಿ ಬಂಗಾರ ಮಸ್ತ ಐತೊ ಮನಿಯಾಗ
ಕಡಿಮೆ ಇಲ್ಲ ಹಾಲು ಹೈನು ಮನಿಯಾಗ
ಬಾಳ್ಯಾ ಇರಬೇಕು ಬಾಳ್ಯಾ ಇರಬೇಕು ನಿನ್ನಂತ ಗೆಳಿತನಾ

ಗೆಳಿಯಾ ಬಾಳಣ್ಣ ಇಬ್ಬರೂ ಕೂಡಿ ಪಗಡಿ ಆಡಿದೆವು. ಅಂತೂ ಹೊತ್ತು ಹೋಯಿತು. ಮನಸ್ಸಿಗೆ ಸಮಾಧಾನವಾುತು.
ಇನ್ನು ಮೇಲೆ ಪ್ಯಾಟಿ ಕಡೆ ಅಡ್ಡಾಡಾಕ ಹೋಗುಣ ನಡೆ.

ಸಂಗ್ಯಾ :

ನಡಿಯೊ ಬಾಳ್ಯಾ ಹೋಗುಣು ಪ್ಯಾಟ್ಯಾಗ
ಕರವತಕಡ್ಡಿ ಜರದ ರುಮಾಲಾ
ಕಡೆ ತೋಡೆ ಉಂಗುರ ಉಡದಾರಾ
ಕುಂಟಿಗೋಪಾ ಕೊರಳಲ್ಲಿ ಚೆಂದದ ಹಾರಾ
ಇಷ್ಟ ಎಲ್ಲಾ ಕೊಡಿಸುವೆನೊ ಅಂಗಡ್ಯಾಗ
ಗಂಡಮೆಟ್ಟಿ ಗದುಗಿನ ಶಾಪೂರಾ
ಬಸವಣ್ಣ ದೇವರಾ

ಬಾಳಣ್ಣ, ನನಗ ದೇವರ ಯಾತರಿಂದನೂ ಕಡಿಮೆ ಮಾಡಿಲ್ಲಾ. ನಿನ್ನ ಮೈಯಾನ ಅರಿವಿ ಹರದಾವು.ಮಾರವಾಡ್ಯಾನ ಅಂಗಡ್ಯಾಗ ಕೊಡಸ್ತೇನಿ ನಡಿ, ಅಲ್ಲಿ ನೋಡಪಾ ಬಾಳಣ್ಣಾ, ಆ ಮಾರವಾಡ್ಯಾನ ಅಂಗಡಿ ಕದಾನೂ ತಗದತಿ,ನಿನ್ನ ಮನಸಿಗಿ ಬಂದಂಥಾ ಅರಿವಿ ತಗೊವಂಕ್ಯಾ ನಡಿ. (ಮಾರವಾಡ್ಯಾನ ಅಂಗಡಿಗೆ ಬರುತ್ತಾರೆ).

ಮಾರವಾಡಿ :

ನಾವು ಮಾರವಾಡ್ಯಾರುsನಾವು ಮಾರವಾಡ್ಯಾರುs
ಮುತ್ತು ರತ್ನದ ವ್ಯಾಪಾರ ನಾಡುವರುs
ಶಾರ ಮುಂಬೈತನಕ ನಮ್ಮ ಯಾಪಾರ
ಖರೇದಿ ಅತ್ರಿ ನಮ್ಮದು ಭರ್ಪೂರಾ ॥1 ॥

ಸೀರಿ ಮಸರಾಯಿ ಮಲಮಲ್ ನಾವು ಮಾರವರಾ
ಥರ ಥರದರವಿ ನಾವು ತರುವವರಾ ॥2 ॥

ಖಾದಿ ಕಾಪಡದರವಿ ನಾವು ತರಹುವರಾ
ಖಾತೆ ಬರದ ಖಾತ್ರೀಲಿ ನಾವು ನಡ್ಯಾವರಾ ॥3 ॥

ಗಂಡಮೆಟ್ಟ ಗದಗಿನ ಶಹಪೂರಾ
ಬಸವಣ್ಣ ದೇವರ : ದೇವರಾ ॥4 ॥

ಸಂಗ್ಯಾರ : ಮಾರ್ವಾಡಿ ಸೇಡಜಿಯವರೆ ನಮಸ್ಕಾರಾ.

ಮಾರವಾಡಿ : ಶೇಂಗಪಾ ತಮಗೂ ನಮ್ಮದು ನಮಸ್ಕಾರಾ

ಬಾಳ್ಯಾ : ಸೇಡಜಿ ನಂದೂ ನಮಸ್ಕಾರ‌್ರಿ.

ಮಾರವಾಡಿ : ಬೇಲಪಾ ತಮಗೂ ನಮಸ್ಕಾರಾ ಶೇಂಗಪಾ ಏನ ಇರವಿ ಬೇಕಾ. ಏನ ಸಣ್ಣವು : ದೊಡ್ಡವು : ಹೇಲ ಕುಡತಾವ…. (ಹೇಳು, ಕೊಡುತ್ತೇವೆ ಎಂದರ್ಥ)

ಬಾಳ್ಯಾ : ಸರಿ ಸಂಗಣ್ಣ, ಈ ಮಾರವಾಡಿ ಅಂಗಡ್ಯಾಗ ಸಣ್ಣ ಇರವಿ ದೊಡ್ಡ ಇರವಿ ಅದಾವ ಅಂತ. ಕಡದಗಿಡದಾವು ಏಳಪಾ ಹೋಗೋಣು ಮತ್ತೊಂದು ಅಂಗಡಿಗೆ.

ಸಂಗ್ಯಾ : ಮಿತ್ರಾ, ಹಾಂಗೆ ತಿಳಕೊಬ್ಯಾಡ, ಈ ಮಾರವಾಡ್ಯಾರ ಮಾತಾಡೋದs ಹೀಂಗ ಅದಬಿಡು ಮಿತ್ರಾ, ನಿನಗೆ ಬೇಕಾದಂಥಾ ಅರಿವಿತಗಿಸು.

ಮಾರವಾಡಿ : ಶೇಂಗಾಪಾ, ಬೇಲ್ಯಾ ಹಿಂಗ್ಯಾಕ ಮಾಡತಾವ ಸಿಟ್ಟಿಗೇ ಬರ‌್ತಾವ ಸಿಟ್ಟಿಗೆ ಜರಾ ಸಮಾಧಾನ……

ಸಂಗ್ಯಾ : ಸೇಡಜಿ, ನಾನೂ ಬಾಳಣ್ಣಗ ಅದನ್ನs ಹೇಳಿದೆ ನೋಡರಿ. ಉತ್ತಮ ಮಸರಾಯಿ ಫಡಕೀ ಒಂದ ಜೋಡ ತಗೀರಿ.

ಮಾರವಾಡಿ : ಅರೇ…… ಮಲಮಲ್ ಮಸರಾಯಿ ಜೋಡಿ ಏಕ ಲಾವ್. ಮತ್ತೇನಬೇಕ ಶೇಂಗಪ್ಪಾ.

ಸಂಗ್ಯಾ : ಸೇಡಜಿ, ಒಂದು ಜರದ ಸೆಲ್ಲೇ ತಗೀರಿ.

ಮಾರವಾಡಿ : ಅರೇ…… ಜರದ ಸೆಲ್ಲೇ ಏಕ ಜೋಡಿ ಲಾವ್. ಮತ್ತೇನು ಬೇಕ ಶೇಂಗಪ್ಪಾ.

ಬಾಳ್ಯಾ : ಸಂಗಣ್ಣಾ, ನಿನ್ನ ಮನಸಿಗೆ ಬರತಾವೊ ಇಲ್ಲೊ ನೋಡು.

ಸಂಗ್ಯಾ : ಬಾಳಣ್ಣ, ನಿನ್ನ ಮನಸಿಗೆ ಬಂದರೆ ನನ್ನ ಮನಸಿಗೆ ಬಂದ್ಹಂಗ. ಗೆಳಿಯಾ ಮತ್ತೇನ ತಗಸ್ತೀ….. ತಗಸು.

ಬಾಳ್ಯಾ : ಸೇಡಜಿ ಶರಟೀಗ ಆಗೋ ಅಷ್ಟ, ಚೀಟಿನ ಅರಿವಿ ತಗೀರಿ. ಮತ್ತ ಹಂಗs ರೇಶಿಮಿ ಕಡ್ಡಿ ಪಟಕಾ ಒಂದ ತಗೀರಿ.

ಮಾರವಾಡಿ : ಅರೆ ಚೀಟಿ ಮಾಲಾ ಜೋಡಿ ಶರ್ಟಿಂಗ್ ಲಾವ್ ಊಂಚೀ ಪೇಠಾ ಲಾವ್ ಹೂಂ…. ಬೇಲಪ್ಪಾ ಮತ್ತೇನ ಬೇಕ.

ಬಾಳ್ಯಾ : ಸಂಗಣ್ಣ, ನಿನ್ನ ಮನಸಿಗಿ ಬರತಾವ ಏನ ನೋಡ ಗೆಳಿಯಾ, ಅರವಿ ಮಾತ್ರ ಭಾಳ ಆದುವು.

ಸಂಗ್ಯಾ : ಬಾಳಣ್ಣ, ಅರಿವಿ ಭಾಳ ಆದುವು ಅಂತ ನೀಯೇನ ಮನಸಿಗಿ ಹಚಿಕೋಬ್ಯಾಡಾ. ಈಗ ಏನ ತಗೋತಿ ತಗೋ ನನಗೇನ ದೇವರ ತೋಟೆ ಮಾಡಿಲ್ಲಾ.

ಬಾಳ್ಯಾ : ಸಾಕಮಿತ್ರಾ, ಈ ಅರಿವಿ ರೊಕ್ಕಾ ಎಲ್ಲಾ ಕೊಡು, ಎಷ್ಟ ಆತಕೇಳು ಹೋಗೋಣ ಇನ್ನ.

ಸಂಗ್ಯಾ : ಸೇಡಜಿ, ಈ ಅರಿವಿ ಲೆಖ್ಖ ಎಷ್ಟ ಆತ್ರಿ….. ಎಲ್ಲಾ ಜಮಾಸಿ ಹೇಳರಿ.

ಮಾರವಾಡಿ : ಶೇಂಗಾಪ್ಪಾ, ಲೆಖ್ಖಾ ಮಾಡ್ತಾವ ಜರಾ ಬೀಟಾ, ಬೀಟಾ, ಇರವಿಲೆಕ್ಕಾ….. ಮಸರಾಯಿ ಮಲ್ ಮಲ್ 100 ರೂ. ಜರದ ಸೆಲ್ಲೇ ಊಂಚೀ….. 100 ರೂ. ಚೀಟಿನ ಅರಿವಿ ಜೋಡಿ 100 ರೂ. ಮುಂಬೈ ಪ್ಯಾಟಿಗೇ ಮೇಲಾದದ್ದು; ಕಡ್ಡಿ ಪೇಠಾ 500 ರೂ. ಹಮಾಲಿ, ದಲಾಲಿ, ಕುಂತ ಜ್ಯಾಗಾ ಭಾಡಿಗಿ, ಇನಕಂ ಟ್ಯಾಕ್ಸ, ಸೇಲ್ಸಟ್ಯಾಕ್ಸ ನಮ್ಮಪ್ಪನ ಬಡ್ಡಿ ವಗೈರೆ……. ಇವ ಎರಡ ನೂರು….. ಒಟ್ಟು ೇಂಗಾಪ್ಪಾ ಪಂದ್ರಾಸೌ ರೂಪಾಯಿ ಆತು ರೋಖ ಕುಡು ಭಾಳ ಆತು ರೊಕ್ಕಾ.

ಸಂಗ್ಯಾ : ಸೇಡಜಿ, ಮುಂಜಾನೆ ಜಳಕಾ ಮಾಡೋ ಕಾಲಕ್ಕ. ಕೋಟ ಕಳದ ಗೂಟಕ ಹಾಕಿದ್ದೆ. ಕೋಟಿನ ಕಿಸೇದಾಗ ಪಾಕೀಟ ಮರತ ಬಂದೇನಿ, ಹೋಗಿ ತಂದ ಕೊಡತೀನಿ, ಅರಿವಿ ಬಾಳಣ್ಣನ ಕೈಯಾಗ ಕೊಟ್ಟ ಬಿಡರಿ, ರೊಕ್ಕದ ಕಾಳಜಿ ಬಿಟ್ಟ ಬಿಡರಿ.

ಮಾರವಾಡಿ : ಛೇ…..ಛೇ….. ಶೇಂಗಾಪಾ ಉದ್ರಿಖಾತೆ ಬಂದ, ನಮ್ಮ ರೋಖ್ಖಾ ಕೊಡ, ನಿಮ್ಮದು ಇರವಿ ಓದ ಬಿಡ.

ಸಂಗ್ಯಾ : ಯಾಕ ಮಾರವಾಡಿ, ಗುರ್ತು ಇಲ್ಲದ್ಹಂಗ ಮಾತಾಡಲಿಲಾ, ಹತ್ತ ಸಾವಿರ ಕೊಡಾವಾ, ತಗೊಳ್ಳಾವ ಹೊಂಗಲದೂರಾಗ ಮೇಲಮನಿ ಸಾವುಕಾರ ಸಂಗ ಅಂದ್ರ ಲಕ್ಷಗಟ್ರೆ ವ್ಯಾಪಾರದಾವ, ಸೊಟ್ಟ ಅರವಿ ಕಿಮ್ಮತೇನ….. ಕೊಡಕೊಡು ದುಡ್ಡುಪೈದ ಯಾಪಾರಾ.

ಮಾರವಾಡಿ : ಶೇಂಗಾಪಾ, ಕಾಲ ಭಾಳ ಕೆಡಕ ಐತಿ, ಉದ್ರಿ, ನೈ ನೈ.

ಸಂಗ್ಯಾ : ಮಾರವಾಡಿ, ನಿನಗಷ್ಟ ಭರೋಸ ಇಲ್ಲದಿದ್ರ, ನಿನ್‌ನ ರೂಪಾಯಿ ಕೊಟಟ ಹೋಗೋತಾನಾ….. ಈ ಬಾಳಣ್ಣಾ ನಿಮ್ಮಲ್ಲೇ ಇರಲಿ. ಹಣ ಕೊಟ್ಟ ಅರಿವಿ ಮತ್ತ ಬಾಳಣ್ಣನ್ನ ಕರಕೊಂಡ ಹೋಗ್ತೇನಿ. (ಸಂಗ್ಯಾ ಹೋಗುವನು)

ಮಾರವಾಡಿ : ಆಗ್ಲಿ ಶೇಂಗಾಪಾ, ಲಗೂ ರೋಖ್ಖಾ ತಗೊಂಡ ಬಾ….. ಏ ಬೇಲ್ಯಾ ಇದೆಲ್ಲಾ ಕಸಾಗೂಡಸು ಎಲ್ಲಾ ಧೂಳಾ ಜಾಡಸ.

ಬಾಳ್ಯಾ : ಹೂನ್ರಿ, ಸೇಡಜಿ ಎಲ್ಲಾ ಕೆಲಸಾ ಮಾಡತೀನ್ರಿ… (ಕಸಾ ಹೊಡದು ಜಾಡಿಸಿ ಸ್ವಚ್ಚ ಮಾಡುತ್ತಾನೆ).

ಮಾರವಾಡಿ : ಬೇಲ್ಯಾ, ನಿಮ್ಮ ಶೇಂಗ್ಯಾ ರೂಪಾಯಿ ಇನ್ನೂ ತರಲಿಲ್ಲಾ (ಬಾಳ್ಯಾನ್ನ ಎಳದಾಡಿ ಬಡಿಯುತ್ತಾರೆ).

ಬಾಳ್ಯಾ :

ಬಾಸಿ ಕೊಟ್ಟ ಕುಣಿಸಿ ಹ್ವಾದೊ ಸಂಗ್ಯಾ ನನಗ
ಮಾರವಾಡಿ ಅಂಗಡ್ಯಾಗ
ಬಡದ ಬಡವನ ಅಬ್ರು ತಗೊಂದ್ರೊ ಹೀಂಗ ॥1 ॥

ರೂಪಾಯಿ ತರತೇನಂತ ಹ್ವಾದೊ ಸಂಗ್ಯಾ ಬೇಗ
ಕೇಳಲಿಲ್ಲೊ ನನಗ
ಬಡದ ಬಡವನ ಅಬ್ರು ತಗೊಂದ್ರೊ ಹೀಂಗ ॥2 ॥

ಸೇಡಜಿ, ಸಂಗ್ಯಾನ್ನ ಹೋಗಿ ಕರಕೊಂಡ ಬರ‌್ತೇನ್ರಿ…… (ಈಗ ಬರ‌್ತೇನ್ರಿ…. ಎಂದು ಎದ್ದು ಹೊರಡುತ್ತಿರುವಾಗ ಅವನನ್ನು ತಡೆದು)

ಮಾರವಾಡಿ :

ಲೆಕ್ಕಾ ಕೊಟ್ಟ ಹೋಗ ನಮ್ಮ ಇರವೀದಾ
ಸುಮ್ಮನೆದ್ದು ಹೋಗತೀಯೋ ತುಡಗನಂಗ ॥1 ॥

ಬಾಳ್ಯಾ :

ಹೇಳೋ ಮಾರವಾಡಿ ಎಷ್ಟsತೊ ನಿನ್ನ ಲೆಕ್ಕಾ
ಕೊಡತೇನಂದರ ಬರತೀಯೋ ಮೈಮುಟ್ಟ ॥1 ॥

ಮಾರವಾಡಿ :

ಸೇಡಜಿ ಗಂಟಾ ಬಿದ್ದಿಲ್ಲೊ ಫುಕ್ಕಟಾ
ಒದ್ದೇನ ಬಾಳ್ಯಾ ಕೊಟ್ಟ ಹೋಗೊ ನಮ್ಮ ಗಂಟಾ ॥1 ॥

ಮಾರವಾಡ್ಯರ ವ್ಯಾಪಾರ ಮಾಡುದು ಕೆಟ್ಟಾ
ಕೇಳಿದರ ಬರತಾರs ಮೈ ಮುಟ್ಟಾ

(ಎಂದು ಬಾಳ್ಯಾನನ್ನು ಒದೆಯುತ್ತಾನೆ, ಬಾಳ್ಯಾ ನೆಲಕ್ಕೆ ಸತ್ತವರ ಹಾಗೆ ಬಿದ್ದು ಬಿಡುತ್ತಾನೆ)

ಮಾರವಾಡಿ :

ಅರೆ, ಬೇಲಪ್ಪಾ : ಏಲ, ಏಲು, ಬಡದಿಲ್ಲ, ಬೈದಿಲ್ಲಾ ಅರೇ…. ಬೇಲಪ್ಪಾ ಮರ್‌ಗಯಾ…..

ಅರೆರೆ ಏನ ಸೋಜಿಗ ಸುಡಲ್ಯೊ ಈ ಅರಿವಿನಾಡ
ನಾಡಮ್ಯಾಲ ಇರೋದು ಹೆಂಡರ ಮಕ್ಕಳು ಗುಜರಾತಾ ॥1 ॥

ಅಂದಿಲ್ಲ ಆಡಿಲ್ಲ ಬೇದಿಲ್ಲ ಬಡದಿಲ್ಲ ಬಿದ್ದಾ
ದೇಶದೊಳು ಗುಜರಾಥ ನಾದು ಮಾರತಾವ್ರಿ ಮುತ್ತಾ ॥2 ॥

ಬಡವನ ಸಿಟ್ಟು ದವಡಿಗಿ ಮೂಲಾ ಬಂತು ಹುಡಕೂತಾ
ತೋಡ ಹೇಳಿ ಬಾಳ್ಯಾ ಓಡಿ ಹೋಗ್ವಾಗ ಎಡವಿ ಬಿದ್ದ ಸತ್ತಾ ॥3 ॥