ಸಂಜಯನ ವಿಚಾರ ಮಹಾಭಾರತದಲ್ಲಿ ಬಹಳ ಕಡೆ ಬರುತ್ತದೆ. ಅವನು ಧೃತರಾಷ್ಟ್ರನ ಸಾರಥಿ. ವಿದ್ಯಾವಂತ, ಬುದ್ಧಿಶಾಲಿ ಮತ್ತು ಧರ್ಮಾತ್ಮ. ಧೃತರಾಷ್ಟ್ರನಿಗೆ ಸಂಜಯನಲ್ಲಿ ತುಂಬ ನಂಬಿಕೆ ಇತ್ತು. ಅವನನ್ನು ತನ್ನ ಮಂತ್ರಿಯಂತೆಯೂ ಆಪ್ತನಾದ ಸ್ನೇಹಿತನಂತೆಯೂ ನಡೆಸಿಕೊಳ್ಳುತ್ತಿದ್ದನು. ಧೃತರಾಷ್ಟ್ರನು ಕುರುಡನಾದ್ದರಿಂದ ಸಂಜಯನು ಅವನ ಬಳಿಯಲ್ಲಿ ಇದ್ದು ಅವನಿಗೆ ಹಿತೋಪದೇಶ ಮಾಡುತ್ತ ಅವನಿಗೆ ಸಹಾಯಕನಾಗಿದ್ದನು. ಕಡೆಯವರೆಗೂ ಅವನು ಧೃತರಾಷ್ಟ್ರನ ಜೊತೆಯಲ್ಲಿಯೇ ಇದ್ದನು.

ಸಂಜಯನ ತಂದೆ ಗವಲ್ಗಣ ಎಂಬ ಸಾರಥಿ.  ಆದ್ದರಿಂದ ಅವನನ್ನು ಗಾವಲ್ಗಣಿ ಎಂದೂ ಕರೆಯುತ್ತಿದ್ದರು. ಗಾವಲ್ಗಣಿ ಎಂದರೆ ಗವಲ್ಗಣನ ಮಗ ಎಂದರ್ಥ.

ಸಂಜಯನೂ ವಿದುರನೂ ಸಮಯವರಿತು ಧೃತರಾಷ್ಟ್ರನಿಗೆ ಹಿತೋಪದೇಶವನ್ನು ಮಾಡುತ್ತಲೇ ಇದ್ದರು. ಆದರೂ ಧೃತರಾಷ್ಟ್ರನು ತನ್ನ ಮಕ್ಕಳಾದ ಕೌರವರ ಮೇಲಿನ ವ್ಯಾಮೋಹದಿಂದ ಅವರ ಮಾತನ್ನು ಕೇಳದೆ ಕಷ್ಟಕ್ಕೆ ಒಳಗಾದನು. ಅವರ ಮಾತನ್ನು ನಡೆಸದೇ ಇದ್ದುದರಿಂದ ಭಾರತ ಯುದ್ಧವೇ ಆಗಿಹೋಯಿತು.

ಇಲ್ಲಿ ನಿನ್ನದೇ ಅಪರಾಧ

ಪಾಂಡುವಿನ ಮಕ್ಕಳು ಪಾಂಡವರು. ಅವರಲ್ಲಿ ಹಿರಿಯನಾದ ಧರ್ಮರಾಯನನ್ನು ಧೃತರಾಷ್ಟ್ರನ ಮಗ ದುರ್ಯೋಧನ ಮೋಸದಿಂದ ಜೂಜಿನಲ್ಲಿ ಸೋಲಿಸಿದ. ಪಾಂಡವರು ಹನ್ನೆರಡು ವರ್ಷ ವನವಾಸ , ಒಂದು ವರ್ಷ ಅಜ್ಞಾತವಾಸಗಳಿಗೂ ಹೋಗಬೇಕಾಯಿತು. ಜೂಜು ಬೇಡವೆಂದು ವಿದುರ ಧೃತರಾಷ್ಟ್ರನಿಗೆ ಬುದ್ಧಿ ಹೇಳಿದ. ಪ್ರಯೋಜನವಾಗಲಿಲ್ಲ.

ಪಾಂಡವರು ವನಕ್ಕೆ ಹೊರಟು ಹೋದಮೇಲೆ ಧೃತರಾಷ್ಟ್ರನಿಗೆ ಚಿಂತೆ ಹುಟ್ಟಿತು. ಭೀಮಾರ್ಜುನರು ತನ್ನ ಮಕ್ಕಳನ್ನು ಕೊಲ್ಲದೆ ಬಿಡುವುದಿಲ್ಲ ಎಂದು ತಳಮಳಿಸಲಾರಂಭಿಸಿದರು. ಅವನು ನಿಟ್ಟುಸಿರು ಬಿಡುತ್ತ ಮುಂದೆ ತನ್ನ ಮಕ್ಕಳ ಗತಿ ಏನಾಗುವುದೋ ಎಂದು ದುಃಖಿಸುತ್ತಿರುವಾಗ ಸಂಜಯನು “ಮಹಾರಾಜ, ಇಲ್ಲಿ ನಿನ್ನದೇ ಅಪರಾಧ. ನನ್ನ ಮಾತನ್ನು ನೀನು ಕಿವಿಯ ಮೇಲೆ ಹಾಕಿಕೊಳ್ಳಲಿಲ್ಲ. ಜೂಜಿನ ಮಾತಿರಲಿ, ದ್ರೌಪದಿಯನ್ನು ಸಭೆಗೆ ಕರೆಸಿ ನಿನ್ನ ಮಗ ದುರ್ಯೋಧನ ಅವಳಿಗೆ ಅವಮಾನ ಮಾಡಿದನಲ್ಲವೆ? ಒಂದು ತಪ್ಪಿನಿಂದ ಇನ್ನೊಂದು ತಪ್ಪು ಹೇಗೆ ನಡೆಯುತ್ತದೆ, ನೋಡು! ದ್ರೌಪದಿ ರಾಜಪುತ್ರಿ, ನಿನ್ನ ಸೊಸೆ.  ಸಭಾಮಧ್ಯದಲ್ಲಿ ಅವಳ ಸೀರೆಯನ್ನು ಹಿಡಿದು ಎಳೆಸಬಹುದೆ? ಅವಳು ಮಾಡಿದ ತಪ್ಪಾದರೂ ಏನು? ಮನುಷ್ಯನಿಗೆ ಕೇಡುಗಾಲ ಬಂದಾಗ ಮೊದಲು ಅವನ ಬುದ್ಧಿ ಕೆಡುತ್ತದೆ. ಕೆಟ್ಟೆದ್ದು ಅವನಿಗೆ ಸರಿಯೆಂದು ತೋರುತ್ತದೆ. ದುರ್ಯೋಧನ, ಅವನ ಸ್ನೇಹಿತ ಕರ್ಣ- ಇವರು ದ್ರೌಪದಿಗೆ ಆಡಿದ ಕೆಟ್ಟ ಮಾತುಗಳು ಎಷ್ಟು! ನೀನೂ ಸಭೆಯಲ್ಲಿ ಸುಮ್ಮನೆ ಕುಳಿತಿದ್ದೆ. ಒಟ್ಟಿನಲ್ಲಿ ಅನರ್ಥ ಕಾದಿದೆ. ಈಗಲಾದರೂ ನೀನು ವಿವೇಕವನ್ನು ತಂದುಕೊಳ್ಳಬೇಕು” ಎಂದನು. ಧೃತರಾಷ್ಟ್ರನಿಗೆ ಬಹಳ ಪಶ್ಚಾತ್ತಾಪವಾಯಿತು. ಅವನು “ಸಂಜಯ, ನೀನು ಹೇಳಿದ್ದು ನಿಜ. ವಿದುರನೂ ಸಹ ಈ ಜೂಜು ಬೇಡವೆಂದು ನನಗೆ ಹೇಳದ್ದ. ನಿಮ್ಮಿಬ್ಬರ ಮಾತನ್ನೂ ನಾನು ಕೇಳದೆ ಹೋದೆ. ಮುಂದೇನಾಗುವುದೋ” ಎಂದು ಹಲುಬಿದನು.

ವಿದುರನ ಬುದ್ಧಿವಾದ
ಧೃತರಾಷ್ಟ್ರನ ಮನಸ್ಸಿಗೆ ನೆಮ್ಮದಿ ದೊರೆಯಲಿಲ್ಲ. ಆತನು ವಿದುರನನ್ನು ಕರೆಸಿ “ಅಪ್ಪಾ ವಿದುರ, ಪರಿಸ್ಥಿತಿ ಈ ರೀತಿ ಆಗಿಬಿಟ್ಟಿತು, ಈಗ ಏನು ಮಾಡೋಣ, ಹೇಳು. ಪ್ರಜೆಗಳು ನಮ್ಮ ವಿಷಯದಲ್ಲಿ ಅಸಮಾಧಾನಗೊಳ್ಳದೆ ಪ್ರೀತಿಯಿಂದ ಇರಬೇಕು. ಪಾಂಡವರು ನಮ್ಮ ಮೇಲೆ ಯುದ್ಧಕ್ಕೆ ಬರಬಾರದು. ಅಂಥ ಉಪಾಯವಿದ್ದರೆ ಹೇಳು” ಎಂದನು. ಅದಕ್ಕೆ ವಿದುರನು “ಧೃತರಾಷ್ಟ್ರ, ಯಾವಾಗಲೂ ಧರ್ಮಕ್ಕೆ ಜಯವಾಗುತ್ತದೆ. ನಿನ್ನ ಮಗ ದುರ್ಯೋಧನ ಬಹಳ ತಪ್ಪು ಮಾಡಿದ. ನೀನು ಅವನಿಗೆ ಬೆಂಬಲ ಕೊಡುತ್ತಲೇ ಇದ್ದೀಯೆ. ಪಾಂಡವರನ್ನು ಕಾಡಿಗೆ ಕಳಿಸಿದ್ದರಿಂದ ಪ್ರಜೆಗಳಿಗೆ ಕೋಪ ಬಂದಿದೆ. ಭೀಮಾಜುನರು ಬಹಳ ಗಟ್ಟಿಗರು. ತಮ್ಮ ಪ್ರತಿಜ್ಞೆಯನ್ನು ಸಾಧಿಸುತ್ತಾರೆ. ಆದ್ದರಿಂದ ಪಾಂಡವರನ್ನು ಕರೆಸಿ ಅವರಿಗೆ ಅರ್ಧ ರಾಜ್ಯ ವನ್ನು ಕೊಡಿಸಿಬಿಡು. ಇದರಿಂದ ಪ್ರಜೆಗಳಿಗೂ ಸಮಾಧಾನವಾಗುತ್ತದೆ. ದುರ್ಯೋಧನನು ಇದಕ್ಕೆ ಒಪ್ಪದಿದ್ದರೆ ಅವನನ್ನು ರಾಜ್ಯದಿಂದ ಓಡಿಸಿಬಿಡು. ಅವನೊಬ್ಬನಿಗಾಗಿ ನಿನ್ನ ಎಲ್ಲ ಮಕ್ಕಳಿಗೂ ವಿಪತ್ತನ್ನು ತರಬೇಡ” ಎಂದು ಹೇಳಿದನು.

ಮುದುಕ ಧೃತರಾಷ್ಟ್ರನಿಗೆ ಸಿಟ್ಟು ಬಂದಿತು. ಅವನು “ವಿದುರ, ಇಂಥ ಮಾತನ್ನು ನೀನು ಹೇಳಬಹುದೆ? ಪಾಂಡವರಿಗೆ ರಾಜ್ಯವನ್ನು ಕೊಟ್ಟು ನನ್ನ ಹಿರಿಯ ಮಗನನ್ನು ರಾಜ್ಯದಿಂದ ಒಡಿಸಬೇಕೆ? ನೀನು ಪಾಂಡವರ ಪಕ್ಷಪಾತಿ. ನನಗೆ ಕೇಡನ್ನು ಬಯಸುತ್ತಿದ್ದೀಯೆ! ನೀನು ಇಲ್ಲಿಂದ ಹೊರಟುಹೋಗುವುದು ಲೇಸು” ಎಂದು ಬಿಟ್ಟನು. ವಿದುರನ ಮನಸ್ಸಿಗೆ ಬೇಸರವಾಯಿತು. ಅವನು ಪಾಂಡವರಿದ್ದ ಕಾಮ್ಯಕವನಕ್ಕೆ ಹೊರಟುಹೋದನು.

ಆಮೇಲೆ ಧೃತರಾಷ್ಟ್ರನಿಗೆ ಪಶ್ಚಾತ್ತಾಪ. ಸಂಜಯನನ್ನು ಕರೆದು “ಸಂಜಯ, ನನ್ನ ತಮ್ಮ ವಿದುರ ಕಾಡಿಗೆ ಹೊರಟುಹೋದ. ಅವನು ಪಾಂಡವರ ಜೊತೆಯಲ್ಲಿರಬಹುದು. ನೀನು ಹೋಗಿ ಅವನನ್ನು ಕರೆದುಕೊಂಡು ಬಾ. ವಿದುರನಿಲ್ಲದೆ ನಾನು ಬದುಕಿರಲಾರೆ” ಎಂದನು. ಸಂಜಯನು ಕಾಮ್ಯಕವನಕ್ಕೆ ಹೋಗಿ ವಿದುರನಿಗೆ ಧೃತರಾಷ್ಟ್ರನ ಗೋಳಾಟವನ್ನು ತಿಳಿಸಿ, ಮತ್ತೆ ಹಸ್ತಿನಾವತಿಗೆ ಬರುವಂತೆ ಕೇಳಿಕೊಂದನು. ವಿದುರ ಒಳ್ಳೆಯ ಮನುಷ್ಯ. ಅವನು ಹಸ್ತಿನಾವತಿಗೆ ಸಂಜಯನೊಡನೆ ತಿರುಗಿ ಬಂದನು. ಧೃತರಾಷ್ಟ್ರನು ವಿದುರನನ್ನು ಆಲಂಗಿಸಿಕೊಂಡು “ತಮ್ಮಾ ವಿದುರ, ನನ್ನನ್ನು ಮನ್ನಿಸು” ಎಂದನು. ವಿದುರನು “ಮಹಾರಾಜ, ನೀನು ನನಗೆ ಹಿರಿಯ, ನೀನು ಆಡಿದ ಮಾತನ್ನು ಮರೆತಿದ್ದೇನೆ. ನನಗೆ ನಿನ್ನ ಮಕ್ಕಳೂ ಒಂದೇ , ಪಾಂಡವರೂ ಒಂದೇ. ಇಬ್ಬರಿಗೂ ಒಳ್ಳೆಯದಾಗಲೆಂದು ನನ್ನ ಹಾರೈಕೆ. ತಂದೆಯಿಲ್ಲದ ಅನಾಥರೆಂದು ಪಾಂಡವರಲ್ಲಿ ಮರುಕ,. ಅಷ್ಟೆ” ಎಂದನು.

ನನಗೆ ಬಹಳ ಚಿಂತೆಯಾಗಿದೆ

ಇತ್ತ ಪಾಂಡವರು ವನವಾಸದಲ್ಲಿದ್ದರು. ವನವಾಸವು ಮುಗಿದ ಮೇಲೆ ಕೌರವರು ಅರ್ಧ ರಾಜ್ಯವನ್ನು ತಮಗೆ ಕೊಡುವುದಿಲ್ಲವೆಂದೂ ಅವರೊಡನೆ ಯುದ್ಧ ಒದಗಬಹುದೆಂದೂ ಅವರು ಊಹಿಸಿದ್ದರು. ಅದಕ್ಕಾಗಿ ತಮ್ಮ ಬಲವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಅರ್ಜುನನು ಇಂದ್ರಕೀಲ ಪರ್ವತಕ್ಕೆ ಹೋಗಿ ತಪಸ್ಸು ಮಾಡಿದನು. ಪರಮೇಶ್ವರನನ್ನು ಮೆಚ್ಚಿಸಿ ಪಾಶುಪತಾಸ್ತ್ರ ಮೊದಲಾದ ದಿವ್ಯಾಸ್ತ್ರಗಳನ್ನು ಸಂಪಾದಿಸಿದನು. ದೇವೇಂದ್ರನು ಅರ್ಜುನನನ್ನು ದೇವಲೋಕಕ್ಕೆ ಕರೆದುಕೊಂಡು ಹೋಗಿ ಉಪಚರಿಸಿ ಕಳಿಸಿಕೊಟ್ಟನು.

ಈ ಸುದ್ದಿ ಧೃತರಾಷ್ಟ್ರನಿಗೆ ತಿಳಿಯಿತು. ಅವನು ಸಂಜಯನನ್ನು ಕುರಿತು ‘ಸಂಜಯ, ಕೇಳಿದೆಯಾ ಹೊಸ ಸುದ್ದಿಯನ್ನು? ಅರ್ಜುನ ಈಶ್ವರನನ್ನು ಮೆಚ್ಚಿಸಿ ದಿವ್ಯಾಸ್ತ್ರಗಳನ್ನು ಪಡೆದು ಬಂದನಂತೆ. ದೇವೇಂದ್ರನು ತನ್ನ ಅರಮನೆಯಲ್ಲಿ ಅವನಿಗೆ ಸನ್ಮಾನ ಮಾಡಿದನಂತೆ. ಅರ್ಜುನ ಮೊದಲೇ ಮಹಾಶೂರ. ಈಗ ದಿವ್ಯಾಸ್ತ್ರಗಳನ್ನು ಪಡೆದ ಮೇಲೆ ಅವನನ್ನು ಎದುರಿಸತಕ್ಕವರು ಯಾರು? ನನಗೆ ಬಹಳ ಚಿಂತೆಯಾಗಿದೆ. ನಿದ್ರೆಯೇ ಬರುತ್ತಿಲ್ಲ’ ಎಂದನು.

ಮಹಾರಾಜ, ಕೇಳು

ಆಗ ಸಂಜಯ ಹೇಳಿದ: “ಮಹಾರಾಜ, ಅದೆಲ್ಲವೂ ನನಗೆ ಗೊತ್ತಾಗಿದೆ. ನಾನು ಗೂಢಚಾರರನ್ನು ಕಳಿಸಿ, ಪಾಂಡವರು ಕಾಡಿನಲ್ಲಿ ಏನು ಮಾಡುತ್ತಿದ್ದಾರೆಂಬುದನ್ನೆಲ್ಲ ತಿಳಿದುಕೊಂಡಿದ್ದೇನೆ. ಇನ್ನೂ ಒಂದು ಸಂಗತಿಯನ್ನು ಹೇಳುತ್ತೇನೆ,ಕೇಳು. ಧರ್ಮರಾಯನು ಜೂಜಿನಲ್ಲಿ ಸೋತು ದ್ರೌಪದಿಯೊಡಗೂಡಿ ತಮ್ಮಂದಿರೊಡನೆ ಕಾಡಿಗೆ ಹೋದನಷ್ಟೆ. ಈ ವಾರ್ತೆಯನ್ನು ಕೇಳಿ ದ್ವಾರಕೆಯಿಂದ ಶ್ರೀಕೃಷ್ಣನೂ ದ್ರೌಪದಿಯ ಅಣ್ಣ ಧೃಷ್ಟದ್ಯುಮ್ನ ಮೊದಲಾದವರೂ ಪಾಂಡವರನ್ನು ನೋಡಲು ಅರಣ್ಯಕ್ಕೆ ಹೋದರು. ಪಾಂಡವರ ದುಃಸ್ಥಿತಿಯನ್ನು ನೋಡಿ ಶ್ರೀಕೃಷ್ಣ ಮರುಗಿದನಂತೆ. ಆಮೇಲೆ ಕೋಪದಿಂದ ಹೀಗೆ ಹೇಳಿದನಂತೆ: ‘ಧರ್ಮರಾಜ, ಆದದ್ದು ಆಗಿ ಹೋಯಿತು. ರಾಜಸೂಯಯಾಗದಲ್ಲಿ ನಿನ್ನ ಸಂಪತ್ತು, ವಯಭವ ಎಷ್ಟಿದ್ದಿತೆಂಬುದನ್ನು ನಾವೆಲ್ಲರೂ ನೋಡಿದ್ದೇವೆ. ಧರ್ಮಾತ್ಮನಾದ ನಿನಗೆ ಈ ಗತಿ ಬಂದಿತೆ? ಇರಲಿ. ನಾನು, ಬಲರಾಮ, ಧೃಷ್ಟದ್ಯುಮ್ನ ಮೊದಲಾದವರೊಡನೆ ಹೋಗಿ ಕೌರವರೆಲ್ಲರನ್ನೂ ಸಂಹರಿಸಿ ಎಲ್ಲ ರಾಜ್ಯವನ್ನೂ ನಿನ್ನ ವಶ ಮಾಡುವೆನು. ಧೃತರಾಷ್ಟ್ರನ ಸಂಪತ್ತೆಲ್ಲವನ್ನೂ ನೀನೇ ಅನುಭವಿಸು’. ಆಗ ಧರ್ಮರಾಜನು “ಶ್ರೀಕೃಷ್ಣ, ನಿನಗೆ ಆ ಸಾಮರ್ಥ್ಯ ಉಂಟು. ಆದರೆ ನಾನು ಹನ್ನೆರಡು ವರ್ಷ ವನವಾಸವನ್ನೂ ಒಂದು ವರ್ಷ ಅಜ್ಞಾತವಾಸವನ್ನೂ ಮಾಡುವೆನೆಂದು ಒಪ್ಪಿಕೊಂಡಿದ್ದೇನೆ. ನನ್ನ ಮಾತು ಸತ್ಯವಾಗಲಿ. ಹದಿಮೂರು ವರ್ಷಗಳು ಕಳೆದ ಮೇಲೆ ನಿನಗೆ ತಿಳಿದಂತೆ ಮಾಡು. ಅಲ್ಲಿಯವರೆಗೆ ಸೈರಿಸಿಕೊಂಡಿರು’  ಎಂದು ಬೇಡಿಕೊಂಡನಂತೆ. ದ್ರೌಪದಿಯನ್ನು ಎಲ್ಲರೂ ಸಂತೈಸಿ, ಹದಿಮೂರು ವರ್ಷಗಳಾದೊಡನೆ ಕೌರವರನ್ನು ಸಂಹರಿಸಿ ಸೇಡನ್ನು ತೀರಿಸಿಕೊಳ್ಳುತ್ತೇವೆಂದು ಪ್ರತಿಜ್ಞೆ ಮಾಡಿದರಂತೆ”. ಈ ಮಾತುಗಳನ್ನು ಕೇಳಿ ಧೃತರಾಷ್ಟ್ರನು ತಳಮಳಿಸಿಹೋದನು.

ಹನ್ನೆರಡು ವರ್ಷಗಳ ವನವಾಸ ಮುಗಿಯಿತು. ಆಮೇಲೆ ಒಂದು ವರ್ಷದ ಅಜ್ಞಾತವಾಸವನ್ನು ಪಾಂಡವರು ವಿರಾಟನಗರದಲ್ಲಿ ಮಾಡಿ ಮುಗಿಸಿದರು. ಮುಂದೇನು? ಎಂಬ ಪ್ರಶ್ನೆ ಹುಟ್ಟಿತು. ಶ್ರೀಕೃಷ್ಣ, ಬಲರಾಮ, ದ್ರುಪದ, ವಿರಾಟ ಮೊದಲಾದವರು ವಿರಾಟನಗರದಲ್ಲಿ ಸೇರಿ ಆಲೋಚಿಸಿದರು. “ಪಾಂಡವರಿಗೆ ರಾಜ್ಯದಲ್ಲಿ ಒಂದು ಪಾಲನ್ನು ಕೊಡಬೇಕೆಂದು ದುರ್ಯೋಧನನನ್ನು ಸಾಮದಿಂದ ಕೇಳಬೇಕು. ಅವನು ಕೊಡಲು ಒಪ್ಪದಿದ್ದರೆ ಯುದ್ಧ ನಡೆಯಲಿ” ಎಂದು ನಿರ್ಣಯವಾಯಿತು. ಅದರಂತೆ ದ್ರುಪದ ರಾಜನು ತನ್ನ ಪುರೋಹಿತನನ್ನು ಹಸ್ತಿನಾವತಿಗೆ ಕಳಿಸಿದನು. ಆತನು ಕೌರವರನ್ನು ಕಂಡು ರಾಜಸಭೆಯಲ್ಲಿ ದ್ರುಪದನ ಸಂದೇಶವನ್ನು ತಿಳಿಸಿದನು. ಪಾಂಡವರು ತಮ್ಮ ಪ್ರತಿಜ್ಞೆಯಂತೆ ವನವಾಸ ಅಜ್ಞಾತ ವಾಸಗಳನ್ನು ಮುಗಿಸಿದ್ದಾರೆಂದೂ ಅವರಿಗೆ ರಾಜ್ಯವನ್ನು ಹಿಂದಿರುಗಿಸಬೇಕೆಂದೂ ಹೇಳಿದನು. ಇಲ್ಲದಿದ್ದರೆ ಯುದ್ಧಕ್ಕೆ ಸಿದ್ಧರಾಗಬೇಕೆಂದೂ ತಿಳಿಸಿದನು. ದುರ್ಯೋಧನನು ಆತನ ಮಾತನ್ನು ಒಪ್ಪದೆ ತಳ್ಳಿಹಾಕಿದನು.

ಶಾಂತಿದೂತನಾಗಿ ಸಂಜಯ

ಧೃತರಾಷ್ಟ್ರನು ಹೆದರುತ್ತಲೇ ಯಾವ ಸಂದರ್ಭ ಬಂದೀತೆಂದು ಚಿಂತಿಸುತ್ತಿದ್ದನೋ ಅದು ಬಂದೇಬಿಟ್ಟಿತು. ಅವನು ಚಡಪಡಿಸುತ್ತ ಸಂಜಯನನ್ನು ಕರೆದು ಹೀಗೆಂದನು: “ಅಯ್ಯಾ ಸಂಜಯ, ನಾನು ಊಹಿಸಿದಂತೆಯೇ ಆಯಿತು. ನನ್ನ ಮಗ ಪಾಂಡವರಿಗೆ ರಾಜ್ಯವನ್ನು ಕೊಡಲು ಒಪ್ಪುವುದಿಲ್ಲ. ಅವರಾದರೋ ಯುದ್ಧಕ್ಕೆ ಸಿದ್ಧರಾಗಿದ್ದಾರೆ. ಶ್ರೀಕೃಷ್ಣ, ಸಾತ್ಯಕಿ- ಮೊದಲಾದವರು ಪಾಂಡವರ ಪಕ್ಷವನ್ನು ವಹಿಸುತ್ತಾರೆ. ಭೀಮನು ಸೇಡನ್ನು ತೀರಿಸಿಕೊಳ್ಳಲು ಕಾದಿದ್ದಾನೆ. ಅರ್ಜುನನನ್ನು ಎದುರಿಸತಕ್ಕವರು ನಮ್ಮಲ್ಲಿ ಯಾರಿದ್ದಾರೆ? ಮನಸ್ಸಿಗೆ ಬಹಳ ಸಂಕಟವಾಗುತ್ತಿದೆ. ನೀನು ಹೋಗಿ ಅವರೆಲ್ಲರಿಗೂ ಸಮಾಧಾನವನ್ನು ಹೇಳು. ಯುದ್ಧ ಬೇಡವೆಂದು ತಿಳಿಸು. ಅದರಿಂದ ಇಬ್ಬರಿಗೂ ಕಷ್ಟ ಸಂಭವಿಸುತ್ತದೆಯೆಂಬುದನ್ನು ಮನಗಾಣಿಸು. ಈ ಮಾತನ್ನು ನಾನು ಹೇಳಿಕಳಿಸಿದ್ದೇನೆಂದೂ ಅವರಿಗೆ ಹೇಳು. ನೀನು ಬಹಳ ಬುದ್ಧಿಶಾಲಿ. ಹೇಗಾದರೂ ನಿನ್ನ ಜಾಣ್ಮೆಯನ್ನು ಪ್ರಯೋಗಿಸಿ ಪಾಂಡವರನ್ನು ಸಂತೈಸು”.

ಧೃತರಾಷ್ಟ್ರನ ಮಾತು ಅರ್ಥವಿಲ್ಲದ್ದೆಂದು ಸಂಜಯನಿಗೆ ಗೊತ್ತು. “ರಾಜ್ಯವನ್ನು ಕೊಡುವುದಿಲ್ಲ. ಆದರೆ ಯುದ್ಧವನ್ನು ಮಾಡಬೇಡಿರಿ!” ಎಂದರೆ ಪಾಂಡವರು ಒಪ್ಪುತ್ತಾರೆಯೇ? ಆದರೂ ಧೃತರಾಷ್ಟ್ರನಿಗೆ ಸಮಾಧಾನವಾಗಲೆಂದು ಸಂಜಯನು ಹೊರಟನು.

ಸಂಜಯನು ಅಲ್ಲಿಗೆ ಬಂದು ಯುಧಿಷ್ಠಿರನನ್ನು (ಧರ್ಮರಾಯನನ್ನು) ಕಂಡು ನಮಸ್ಕರಿಸಿ ಸಮೀಪದಲ್ಲಿ ಕುಳಿತುಕೊಂಡನು. ಸಂಜಯನನ್ನು ನೋಡಿದ್ದರಿಂದ ಧರ್ಮರಾಯನಿಗೆ ಬಹಳ ಸಂತೋಷವಾಯಿತು.

ಸಂಜಯ: ಯುಧಿಷ್ಠಿರ,  ನೀವೆಲ್ಲರೂ ಕ್ಷೇಮವಾಗಿದ್ದೀರಾ? ನಿನ್ನನ್ನು ಕಂಡು ನನಗೆ ಬಹಳ ಆನಂದವಾಯಿತು. ವೃದ್ಧನಾದ ಧೃತರಾಷ್ಟ್ರನು ನಿಮ್ಮೆಲ್ಲರ ಕುಶಲವನ್ನು ವಿಚಾರಿಸಿದ್ದಾನೆ. ಭೀಮ, ಅರ್ಜುನ, ನಕುಲ, ಸಹದೇವರು ಕುಶಲವಷ್ಟೆ? ರಾಜಪುತ್ರಿಯಾದ ದ್ರೌಪದಿ ಚೆನ್ನಾಗಿದ್ದಾಳೆಯೆ?

ಯುಧಿಷ್ಠಿರ: ಸಂಜಯ, ನಿನಗೆ ಸ್ವಾಗತ. ನಾವೆಲ್ಲರೂ ಚೆನ್ನಾಗಿದ್ದೇವೆ. ದೊಡ್ಡಪ್ಪನಾದ ಧೃತರಾಷ್ಟ್ರನನ್ನು ನೋಡಿ ಬಹಳ ಕಾಲವಾ ಯಿತು. ನಿನ್ನನ್ನು ಕಂಡದ್ದರಿಂದ ಅವನನ್ನೇ ಕಂಡಷ್ಟು ಹರ್ಷವಾಯಿತು. ಅವನು ಆರೋಗ್ಯವಾಗಿದ್ದಾನೆಯೇ? ಭೀಷ್ಮ, ದ್ರೋಣ-ಮೊದಲಾದವರು ಚೆನ್ನಾಗಿದ್ದಾರೆಯೇ? ದುರ್ಯೋಧನ ಏನು ಮಾಡುತ್ತಿದ್ದಾನೆ? ಅವನಿಗೆ ನಮ್ಮ ನೆನಪಿದಯೊ? ಭೀಮಾರ್ಜುನರನ್ನು ಮರೆತಿಲ್ಲವಷ್ಟೆ!

ಸಂಜಯ: ಎಲ್ಲರೂ ಕುಶಲದಿಂದಿದ್ದಾರೆ. ಧರ್ಮರಾಯ, ವೃದ್ಧನಾದ ಧೃತರಾಷ್ಟ್ರನು ನಿನಗೆ ಒಂದು ಸಂದೇಶ ಕಳಿಸಿದ್ದಾನೆ. ನಿನ್ನ ತಮ್ಮಂದಿರನ್ನೂ ಬಂಧುಗಳನ್ನೂ ಸ್ನೇಹಿತರನ್ನೂ ಬರಮಾಡು. ಎಲ್ಲರೆದುರಿಗೆ ಆ ಸಂದೇಶವನ್ನು ಹೇಳುವೆನು.

ಶಾಂತಿಯೇ ಉತ್ತಮ

ಧರ್ಮರಾಜನು ಅದರಂತೆ ಹೇಳಿಕಳಿಸಿದ . ಅವರೆಲ್ಲರೂ ಬಂದು ಕುಳಿತರು. ಆಗ ಸಂಜಯ ಹೇಳಿದ: “ಹಿರಿಯನಾದ ಧೃತರಾಷ್ಟ್ರನು ಮನಃಪೂರ್ವಕವಾಗಿ ಹೇಳಿಕಳಿಸಿದ ಸಂದೇಶವನ್ನು ತಿಳಿಸುತ್ತಿದ್ದೇನೆ. ಈಗಿನ ಸಂದರ್ಭವೇನೆಂಬುದು ನಿಮ್ಮೆಲ್ಲರಿಗೂ ಗೊತ್ತಿದೆ. ನೀವೆಲ್ಲರೂ ಮಹಾ ವೀರರು. ಹಾಗೆಯೇ ದುರ್ಯೋಧನನ ಕಡೆಯಲ್ಲಿಯೂ ವೀರರಿದ್ದಾರೆ. ಯುದ್ಧ ನಡೆದರೆ ಎರಡು ಪಕ್ಷಗಳಲ್ಲಿಯೂ ಬಹುಮಂದಿ ಸಾಯುವುದು ನಿಶ್ಚಯ. ಅದರಲ್ಲಿ ನಿಮಗೆ ಜಯವಾಗಬಹುದು. ಅಥವಾ ಸೋಲಾಗಬಹುದು. ಎರಡೂ ಒಳ್ಳೆಯದಲ್ಲ. ಗುರುಹಿರಿಯರನ್ನೂ ನೆಂಟರಿಷ್ಟರನ್ನೂ ಕೊಂದ ಮೇಲೆ ರಾಜ್ಯ ದೊರಕಿದರೂ ಸುಖವಾದೀತೆ? ಆದ್ದರಿಂದ ನೀವು ಯುದ್ಧಕ್ಕೆ ಎಂದಿಗೂ ಇಳಿಯಬಾರದು. ಶಾಂತಿಯೇ ಉತ್ತಮ.

ಧರ್ಮರಾಯ: ಸಂಜಯ, ನೀನು ಹೇಳುವುದೇನು? ಯುದ್ಧ ಕೆಟ್ಟದೆಂದೂ ಶಾಂತಿ ಉತ್ತಮವೆಂದೂ ನಾನು ಒಪ್ಪುತ್ತೇನೆ. ದುರ್ಯೋಧನನಿಂದ ನಾವು ಎಷ್ಟು ಕಷ್ಟಕ್ಕೆ ಸಿಕ್ಕಿದೆವು. ಎಂಥ ಅವಮಾನಕ್ಕೆ ತುತ್ತಾದೆವು ಎಂಬುದು ನಿನಗೆ ಗೊತ್ತಿದೆ. ಬುದ್ಧಿಶಾಲಿಯಾದ ವಿದುರನೂ ನೀನೂ ಹೇಳಿದ ಬುದ್ಧಿವಾದಕ್ಕೆ ಧೃತರಾಷ್ಟ್ರನು ಬೆಲೆಯಿತ್ತನೆ? ಈಗ ಶಾಂತಿಸಂದೇಶವನ್ನು ಕಳಿಸುವುದರ ಅರ್ಥವೇನು? ಮಾತುಕೊಟ್ಟಂತೆ ನಾವು ನಡೆದುಕೊಂಡಿದ್ದೇವೆ. ಮೊದಲಿನಂತೆ ಇಂದ್ರಪ್ರಸ್ಥ ರಾಜ್ಯವನ್ನು ನಮಗೆ ಕೊಟ್ಟುಬಿಡಲಿ. ಯುದ್ಧ ಯಾರಿಗೆ ಬೇಕಾಗಿದೆ? 

‘ಶಾಂತಿಯೇ ಉತ್ತಮ’

 ಸರ್ವನಾಶವಾದೀತು

 

ಸಂಜಯ: ಯುಧಿಷ್ಠಿರ, ನೀನು ಯಾವಾಗಲೂ ಧರ್ಮವನ್ನು ಪಾಲಿಸಿದ್ದೀಯೆ. ಈಗ ಅಧರ್ಮಕ್ಕೆ ಕೈ ಹಾಕಬೇಡ. ಭೀಷ್ಮ ದ್ರೋಣರು ನಿಮಗೆ ಹಿರಿಯರಲ್ಲವೆ? ಅವರೊಡನೆ ನೀವು ಹೋರಾಟಕ್ಕೆ ಇಳಿಯಬಹುದೆ? ಯುದ್ಧವು ನಡೆದರೆ ಸಣ್ಣದಾಗಿ ನಡೆಯದು. ಅತಿಘೋರವಾಗಿಯೇ ನಡೆದೀತು. ಸರ್ವನಾಶವಾದೀತು. ಲಕ್ಷಗಟ್ಟಲೆ ಜನರು ಸಾಯುವರು, ಅದಕ್ಕೆ ನೀನು ಕಾರಣನಾಗಬೇಡ.

ಶ್ರೀಕೃಷ್ಣನನ್ನು ಕೇಳೋಣ

ಯುಧಿಷ್ಠಿರ: ಯುದ್ಧವು ಘೋರವಾಗಿಯೇ ನಡೆಯವುದೆಂದು ನಾನು ಬಲ್ಲೆ. ಸರ್ವನಾಶವಾದರೆ ಅದಕ್ಕೆ ಕೌರವರು ಹೊಣೆಯೇ ಹೊರತು ನಾವಲ್ಲ. ನ್ಯಾಯಕ್ಕಾಗಿ ಹೋರಾಟ ಅಧರ್ಮವಲ್ಲ. ಸಂಜಯ, ಸುಖಕ್ಕಾಗಿ ಪಾಂಡವರು ಅಧರ್ಮ ಮಾರ್ಗದಲ್ಲಿ ಎಂದಿಗೂ ಇಳಿಯುವುದಿಲ್ಲ. ಕೌರವರಂತೆ ನಾವೂ ಧೃತರಾಷ್ಟ್ರನಿಗೆ ಮಕ್ಕಳಲ್ಲವೆ? ಅವನ ತಮ್ಮನ ಮಕ್ಕಳು ಎಂಬುದಿಷ್ಟೇ ವ್ಯತ್ಯಾಸ. ಕೌರವರು ಸುಖದಲ್ಲಿಯೇ ಇರಬೇಕು, ನಾವು ಕಷ್ಟದಲ್ಲಿಯೇ ಇರಬೇಕು ಎಂಬ ಆತನ ಆಲೋಚನೆ ಧರ್ಮವೆ?

ಸಂಜಯ: ನೀನು ಹೇಳುವುದು ಸರಿ, ಆದರೆ ದುರ್ಯೋಧನ ಹಠಮಾರಿ. ತಂದೆಯ ಮಾತನ್ನು ಕೇಳುವುದಿಲ್ಲ. ಧೃತರಾಷ್ಟ್ರನಿಗೆ ನಿಮ್ಮ ಮೇಲೆ ಪ್ರೀತಿ ಉಂಟು. ಇಲ್ಲವೆಂದು ತಿಳಿಯಬೇಡ. ಈ ಬಿಕ್ಕಟ್ಟಿಗೆ ಪರಿಹಾರ ತೋರದೆ ಅವನು ವ್ಯಥೆ ಪಡುತ್ತಿದ್ದಾನೆ. ನೀವು ಶಾಂತಿಯಿಂದಿರಿ. ನೀವು ನಂಬಿದ ಧರ್ಮ ನಿಮ್ಮನ್ನು ಹೇಗಾದರೂ ಕಾಪಾಡುತ್ತದೆ ಎಂದು ನಿಮಗೆ ಹೇಳಿ ಕಳಿಸಿದ್ದಾನೆ.

ಯುಧಿಷ್ಠಿರ: ಸಂಜಯ, ನಾನು ಎಂದಿಗೂ ಧರ್ಮಮಾರ್ಗದಿಂದ ಕದಲತಕ್ಕವನಲ್ಲ. ದುರ್ಯೋಧನ ಅಧರ್ಮದ ದಾರಿಯನ್ನು ಹಿಡಿದು ಪಾಪಕೃತ್ಯವನ್ನು ಮಾಡುತ್ತಿದ್ದಾನೆ.  ಯಾವ ಬೇರೆ ಉಪಾಯವೂ ಅವನಲ್ಲಿ ನಡೆಯದಾಗಿದೆ. ಇಂಥ ಸಂದರ್ಭದಲ್ಲಿ ಅಧರ್ಮವನ್ನು ಯುದ್ಧದಿಂದ ಎದುರಿಸಿ ಹೋರಾಡುವುದೇ ಕ್ಷತ್ರಿಯರಾದ ನಮಗೆ ಧರ್ಮ. ಇದು ನನ್ನ ಅಭಿಪ್ರಾಯ. ಶ್ರೀಕೃಷ್ಣನು ನಮ್ಮೆಲ್ಲರಿಗೂ ಪೂಜ್ಯನಾಗಿ ನಮಗೆ ದಾರಿ ತೋರಿಸತಕ್ಕವನಾಗಿದ್ದಾನೆ. ಅವನ ಅಭಿಪ್ರಾಯವನ್ನು ಕೇಳೋಣ.

ನಾನು ಬಯಸುವುದು ಶಾಂತಿಯನ್ನೇ, ಆದರೆ–’

ಶ್ರೀಕೃಷ್ಣನು ಹೀಗೆಂದನು, “ಸಂಜಯ, ಧೃತರಾಷ್ಟ್ರನಿಗೆ ವಯಸ್ಸಾಗಿದೆ. ಬಹಳ ಮಂದಿ ಮಕ್ಕಳಿದ್ದಾರೆ. ಅವರಿಗೂ ಒಳ್ಳೆಯದಾಗಲಿ, ಪಾಂಡವರಿಗೂ ಒಳ್ಳೆಯದಾಗಲಿ ಎಂದು ನನ್ನ ಬಯಕೆ. ನಾನು ಬಯಸುವುದು ಶಾಂತಿಯನ್ನೇ. ಆದರೆ ಅದಕ್ಕೆ ಕೌರವರು ಅವಕಾಶವನ್ನೇ ಕೊಡುತ್ತಿಲ್ಲ. ಈ ಶಾಂತಿಮಾರ್ಗವನ್ನು ಪಾಂಡವರಿಗೆ ಹೇಳುವ ಬದಲು ಕೌರವರಿಗೆ ಏಕೆ ಹೇಳಬಾರದು? ಹೇಗಾದರೂ ಧರ್ಮ ಇವರನ್ನು ಪಾಲಿಸುತ್ತದೆ. ಎಂದು ಧೃತರಾಷ್ಟ್ರನು ಹೇಳುವನಲ್ಲ, ಇದರ ಅಭಿಪ್ರಾಯವೇನು? ಪಾಂಡವರು ಭಿಕ್ಷೆ ಬೇಡುತ್ತ ಎಲ್ಲಾದರೂ ಜೀವಸಬಹುದು ಎಂದು ಅರ್ಥವೇನು? ಕ್ಷತ್ರಿಯರಿಗೆ ಪ್ರಜೆಗಳನ್ನು ಪಾಲಿಸುವುದು ಧರ್ಮವೇ ಹೊರತು ಭಿಕ್ಷೆ ಬೇಡುವುದಲ್ಲ.  ಶಾಂತಿಯಿಂದ ಕೆಲಸವಾಗುವುದಾದರೆ ಸಂತೋಷವೇ. ಇದಕ್ಕಾಗಿ ನಾನು ಸ್ವತಃ ಹಸ್ತಿನಾವತಿಗೆ ಬಂದು ಯುದ್ಧವು ಬೇಡವೆಂದು ಸಾರಿ ಹೇಳುತ್ತೇನೆ. ಸಂಧಾನಕ್ಕಾಗಿ ಪ್ರಯತ್ನಿಸುತ್ತೇನೆ. ಧೃತರಾಷ್ಟ್ರನ ಎದುರಿಗೇ ಇದು ನಡೆಯಲಿ. ಆಗಲೂ ಕೌರವರು ಶಾಂತಿಗೆ ಒಪ್ಪದಿದ್ದರೆ ಯುದ್ಧವನ್ನು ತಪ್ಪಿಸಲಾಗುವುದಿಲ್ಲ.

ಸಂಜಯನಿಗೆ ಏನು ಉತ್ತರ ಹೇಳಬೇಕೆಂಬುದು ತೋರಲಿಲ್ಲ. ‘ಧೃತರಾಷ್ಟ್ರನೆದುರಿಗೆ ಮಾತು ನಡೆಯುತ್ತದೆ. ಆಗ ಭೀಷ್ಮ ಮೊದಲಾದವರು ಇರುತ್ತಾರಲ್ಲ, ಅವರು ಏನು ಹೇಳವರೋ ನೋಡೋಣ’- ಎಂದುಕೊಂಡನು. ಹಸ್ತಿನಾವತಿಗೆ ಹಿಂದಿರುಗಿದನು.

ನೀನು ವಿಪತ್ತನ್ನು ತಂದುಕೊಳ್ಳುತ್ತಿದ್ದೀಯೆ 

ಸಂಜಯನು ಧೃತರಾಷ್ಟ್ರನಿಗೆ ಮಹಾಭಾರತ ಯುದ್ಧದ ವೃತ್ತಾಂತವನ್ನೆಲ್ಲ ಹೇಳಿದನು.

 ಸಂಜಯನು ಹಸ್ತಿನಾವತಿಗೆ ಬಂದನು. ಅಲ್ಲಿ ಧೃತರಾಷ್ಟ್ರನನ್ನು ಕಂಡು ನಮಸ್ಕರಿಸಿ ಹೀಗೆಂದನು. “ಮಹಾರಾಜ, ನಿನ್ನ ಆಜ್ಞೆಯಂತೆ ಉಪಪ್ಲವ್ಯ ನಗರಕ್ಕೆ ಹೋಗಿ ಪಾಂಡವರನ್ನು ಕಂಡೆನು. ಯುಧಿಷ್ಠಿರನು ಸಂತೋಷದಿಂದ ನನ್ನನ್ನು ಸ್ವಾಗತಿಸಿ ನಿನ್ನ ಮತ್ತು ನಿನ್ನ ಮಕ್ಕಳ ಯೋಗಕ್ಷೇಮಗಳನ್ನು ಪ್ರೀತಿಯಿಂದ ವಿಚಾರಿಸಿದನು. ಪಾಂಡವರ ಸದ್ಗುಣವನ್ನೂ ತೇಜಸ್ಸನ್ನೂ ಶೌರ್ಯವನ್ನೂ ಕಂಡು ನನಗೆ ಹೀಗೆನ್ನಿಸಿತು: ‘ಆಹಾ! ಮನುಷ್ಯ ಯತ್ನಿಕ್ಕಿಂತ ದೈವವೇ ಹೆಚ್ಚು ಬಲಶಾಲಿ. ಇಂತಹ ಪಾಂಡವರೂ ಸಹ ಕಷ್ಟದಲ್ಲಿ ಸಿಕ್ಕಿ ನವೆಯುತ್ತಾರಲ್ಲವೆ!’ ಎಂದು ಮಹಾರಾಜ, ನಿನ್ನ ಮಕ್ಕಳು ತುಳಿಯುವ ದಾರಿ ಸರಿಯಲ್ಲ. ಅವರ ಮಾತನ್ನು ಕೇಳಿ ನೀನು ವಿಪತ್ತನ್ನು ತಂದುಕೊಳ್ಳುತ್ತಿದ್ದೀಯೆ. ನೀನು ಹೇಳಿದ ಶಾಂತಿ ಸಂದೇಶವನ್ನು ನಾನು ಪಾಂಡವರಿಗೆ ತಿಳಿಸಿದೆ. ಅದಕ್ಕೆ ಧರ್ಮರಾಯನು ಕೊಟ್ಟ ಉತ್ತರವನ್ನು ನಾಳೆ ತಿಳಿಸುತ್ತೇನೆ. ಈಗ ನನಗೆ ತುಂಬ ಆಯಾಸವಾಗಿದೆ. ರಾತ್ರಿಯೂ ಬಹಳ ಆಯಿತು”. ಧೃತರಾಷ್ಟ್ರನು ‘ಆಗಲಿ ಸಂಜಯ, ನಾಳೆ ರಾಜಸಭೆಯಲ್ಲಿ ಎಲ್ಲವನ್ನೂ ಹೇಳಬಹುದು’ ಎಂದನು. ಸಂಜಯನು ಅವನ ಅನುಜ್ಞೆಯನ್ನು ಪಡೆದು ಮನೆಗೆ ಹೋದನು.

ಇತ್ತ ಧೃತರಾಷ್ಟ್ರನಿಗೆ ನಿದ್ರೆಯೇ ಬರಲಿಲ್ಲ. ಸಂಜಯನು ತಂದ ವಾರ್ತೆ ಹಿತಕರವಾಗಿಲ್ಲ ಎಂದು ಅವನಿಗೆ ಅನ್ನಿಸಿತು.

ಮಾರನೆಯ ದಿನ ರಾಜಸಭೆ ಸೇರಿತು. ಧೃತರಾಷ್ಟ್ರನ ಅಪೇಕ್ಷೆಯಂತೆ ಭೀಷ್ಮ, ದ್ರೋಣ, ಕೃಪ, ವಿದುರ ಮೊದಲಾದವರು ಸಭೆಗೆ ಬಂದರು. ದುರ್ಯೋಧನ, ಕರ್ಣ, ದುಶ್ಯಾಸನ, ಶಕುನಿ ಮೊದಲಾದವರೂ ಬಂದು ಒಂದೆಡೆಯಲ್ಲಿ ಕುಳಿತರು. ಧೃತರಾಷ್ಟ್ರನು ಸಂಜಯನನ್ನು ಕುರಿತು “ಅಯ್ಯಾ ಸಂಜಯ, ಪಾಂಡವರ ಬಳಿಗೆ ಹೋಗಿದ್ದೆಯಲ್ಲ, ಅಲ್ಲಿ ಏನು ನಡೆಯಿತು? ಅವರೇನು ಹೇಳಿದರು? ಎಲ್ಲವನ್ನೂ ತಿಳಿಸು” ಎಂದನು.

ಶಾಂತಿ ಸಂದೇಶವು ಸಫಲವಾಗಲಿಲ್ಲ

ಆಗ ಸಂಜಯನು, “ಮಹಾರಾಜ, ನಿನ್ನ ಆಜ್ಞೆಯಂತೆ ನಾನು ಉಪಪ್ಲವ್ಯ ನಗರಕ್ಕೆ ಹೋಗಿ ಪಾಂಡವರನ್ನು ಕಂಡೆನು. ಶ್ರೀಕೃಷ್ಣ, ದ್ರುಪದ, ವಿರಾಟ, ಸಾತ್ಯಕಿ-ಮೊದಲಾದ ಅವರ ಬಂಧುಗಳೂ ಅವರನ್ನು ಪ್ರೀತಿಸುವ ಅನೇಕ ರಾಜರೂ ಅಲ್ಲಿಗೆ ಬಂದು ಸೇರಿದ್ದರು. ನೀನು ಯುಧಿಷ್ಠಿರನಿಗೆ ಹೇಳಿಕಳಿಸಿದ ಎಲ್ಲ ಮಾತುಗಳನ್ನೂ ವಿವರವಾಗಿ ತಿಳಿಸಿ ಶಾಂತಿಯಿಂದಿರಬೇಕೆಂದು ಪ್ರಾರ್ಥಿಸಿದೆನು. ಅದಕ್ಕೆ ಆತನು ಈ ಶಾಂತಿಸಂದೇಶವನ್ನು ನಮಗೆ ಕಳಿಸುವುದರ ಬದಲು ಧೃತರಾಷ್ಟ್ರನು ತನ್ನ ಮಕ್ಕಳಿಗೇಕೆ ಬುದ್ಧಿವಾದವನ್ನು ಹೇಳಬಾರದು? ನಮಗೆ ಸಲ್ಲಬೇಕಿದ್ದ ಅರ್ಧ ರಾಜ್ಯವನ್ನು ಕೊಟ್ಟರೆ, ಹಿಂದಿನ ಕಹಿಯನ್ನು ಮರೆತು ಸ್ನೇಹದಿಂದ ಇರುತ್ತೇವೆ. ಇಲ್ಲದಿದ್ದರೆ ಯುದ್ಧವು ನಡೆಯುವುದು ಅನಿವಾರ್ಯ ಎಂದು ಹೇಳಿದನು. ಧರ್ಮರಾಜನು ಅಷ್ಟು ಬಿಗಿಯಾಗಿರುವುದನ್ನು ನೋಡಿ ನನಗೆ ಅಚ್ಚರಿಯಾಯಿತು. ಮತ್ತೊಮ್ಮೆ ನಾನು ಸಮಾಧಾನ ಹೇಳಲು ಯತ್ನಿಸಿದೆನು. ಅದಕ್ಕೆ ಧರ್ಮರಾಜನು ಶ್ರೀಕೃಷ್ಣನ ಕಡೆ ಕೈದೋರಿ ಶ್ರೀಕೃಷ್ಣನು ಹೇಳಿದಂತೆ ನಾವು ಕೇಳುತ್ತೇವೆ ಎಂದನು. ಶ್ರೀಕೃಷ್ಣನು ಕ್ಷತ್ರಿಯ ಧರ್ಮವನ್ನು ಮುಂದುಮಾಡಿ ರಾಜ್ಯವನ್ನು ಕೊಡದಿದ್ದರೆ ಯುದ್ಧವೇ ಸರಿ ಎಂದು ಬಿಟ್ಟನು. ಶಾಂತಿಸಂದೇಶವು ಸಫಲವಾಗಲಿಲ್ಲ” ಎಂದನು.

ಧೃತರಾಷ್ಟ್ರನಿಗೆ ಬಹಳ ಚಿಂತೆಯಾಯಿತು. ಅವನೂ ಭೀಷ್ಮನೂ ದುರ್ಯೋಧನನಿಗೆ ಬುದ್ಧಿವಾದ ಹೇಳಿದರು. ಅವನು ತನ್ನ ಮೊಂಡುತನವನ್ನು ಬಿಡಲಿಲ್ಲ. ರಾಜ್ಯವನ್ನು ಪಾಂಡವರಿಗೂ ಕೊಡಲು ಸಾಧ್ಯವೇ ಇಲ್ಲವೆಂದು ಹಟ ಹಿಡಿದನು. ಕರ್ಣನು ಅವನನ್ನು ಹುರಿದುಂಬಿಸಿದನು.

ಶ್ರೀಕೃಷ್ಣನು ಬರುತ್ತಾನೆ

ಧೃತರಾಷ್ಟ್ರನೂ ಕೊರಗುತ್ತ ಸಂಜಯನ ಕಡೆಗೆ ತಿರುಗಿ “ಸಂಜಯ, ಧರ್ಮರಾಜನು ಮತ್ತೇನೆಂದನು? ಭೀಮಾರ್ಜುನರು ಏನು ಹೇಳುತ್ತಾರೆ?” ಎಂದು ಕೇಳಿದನು. ಆಗ ಸಂಜಯನು “ಮಹಾರಾಜ, ನನ್ನ ಬುದ್ಧಿವಂತಿಕೆಯನ್ನೆಲ್ಲ ಬಳಸಿ ಧರ್ಮರಾಜನೊಡನೆ ಮಾತನಾಡಿದೆ. ಅವನು ಕಡೆಯಲ್ಲಿ ಐದು ಗ್ರಾಮಗಳನ್ನಾದರೂ ನಮಗೆ ಬಿಟ್ಟುಕೊಟ್ಟರೆ ಶಾಂತಿ ನೆಲಸುವುದು ಎಂದು ಹೇಳಿದ. ಆಮೇಲೆ ಭೀಮಾರ್ಜುನರನ್ನು ಪ್ರತ್ಯೇಕವಾಗಿ ಕಂಡೆ . ಭೀಮನಂತೂ ಸಿಟ್ಟಿನಿಂದ ಬೆಂಕಿಯಾಗಿದ್ದಾನೆ. ಮಾತೆತ್ತಿದರೆ ಮೀಸೆ ತಿರುವುತ್ತಾನೆ. ಗದೆಯೆನ್ನುತ್ತುತ್ತಾನೆ. ದುಯೋಧನನ ತೊಡೆಯನ್ನು ಮುರಿಯುತ್ತೇನೆಂದು ಮತ್ತೆ ಮತ್ತೆ ಹೇಳಿದ. ಅರ್ಜುನ, ನಕುಲ, ಸಹದೇವರೆಲ್ಲರೂ ಯುದ್ಧವೇ ನಡೆಯಲೆಂದು ಸಾರಿದರು. ಯುಧಿಷ್ಠಿರನ ಕಡೆಗೆ ಬಹಳ ಜನರ ರಾಜರು ಬಂದು ಸೇರಿದ್ದಾರೆ. ಅವರೆಲ್ಲರ ಸೈನ್ಯ ಏಳು ಅಕ್ಷೋಹಿಣಿ ಆಗಬಹುದೆಂದು ನನಗೆ ತಿಳಿದುಬಂದಿತು” ಎಂದನು.

ಧೃತರಾಷ್ಟ್ರನ ವ್ಯಥೆ ಹೆಚ್ಚಿತು. “ಶ್ರೀಕೃಷ್ಣನು ವಿದ್ಯಾವಂತ; ಮಹಾತ್ಮ; ಅವನು ಶಾಂತಿಗೆ ಒಪ್ಪುತ್ತಾನೆಂದು ನಾನು ತಿಳಿದಿದ್ದೆ” ಎಂದು ನಿಟ್ಟುಸಿರುಬಿಟ್ಟನು. ಆಗ ಸಂಜಯನು “ಮಹಾರಾಜ, ನೀನು ಹೇಳುವಂತೆ ಶ್ರೀಕೃಷ್ಣನು ಶಾಂತಿಯ ಮಾತನಾಡಿದನು. ‘ಕೌರವರು ಪಾಂಡವರು ಇಬ್ಬರೂ ನನಗೆ ಬೇಕಾದವರು. ಅವರೆಲ್ಲರ ಹಿತವನ್ನೂ ನಾನು ಬಯಸುತ್ತೇನೆ. ಶಾಂತಿಯ ಬಗ್ಗೆ ಸಂಧಾನ ಮಾಡಲು ನಾನೇ ಹಸ್ತಿನವತಿಗೆ ಬರುತ್ತೇನೆ’ ಎಂದು ಅವನು ಹೇಳಿದ್ದಾನೆ. ಶೀಘ್ರದಲ್ಲಿಯೇ ಶ್ರೀಕೃಷ್ಣನು ಇಲ್ಲಿಗೆ ಬರಬಹುದು” ಎಂದನು. ಅದನ್ನು ಕೇಳಿ ಧೃತರಾಷ್ಟ್ರನಿಗೆ ಸ್ವಲ್ಪ ಸಮಾಧಾನವಾಯಿತು.

ಶ್ರೀಕೃಷ್ಣನೂ ವಿಫಲನಾದನು

ಇತ್ತ ಶ್ರೀಕೃಷ್ಣನು ತಾನು ಹೇಳಿದ್ದಂತೆ ಹಸ್ತಿನಾವತಿಗೆ ಬಂದನು. ಧೃತರಾಷ್ಟ್ರ, ಭೀಷ್ಮ, ದ್ರೋಣ ಮೊದಲಾದವರೆಲ್ಲರ ಎದುರಿಗೆ ದುಯೋಧನನಿಗೆ ಬುದ್ಧಿವಾದವನ್ನು ಹೇಳಿದನು. ಅರ್ಧರಾಜ್ಯವನ್ನು ಪಾಂಡವರಿಗೆ ಕೊಟ್ಟು ಶಾಂತಿಯನ್ನು ಕಾಪಾಡಿಕೊಳ್ಳಬೇಕೆಂದು ಬೋಧಿಸಿದನು. ಇಲ್ಲದಿದ್ದರೆ ಮುಂದೆ ಘೋರಯುದ್ಧವೇ ನಡೆಯುವುದೆಂದೂ ಅದರಲ್ಲಿ ದುರ್ಯೋಧನ, ದುಶ್ಯಾಸನ ಮೊದಲಾದವರೆಲ್ಲರ ನಾಶವಾಗುವುದು ನಿಶ್ಚಯವೆಂದೂ ಘೋಷಿಸಿದನು. ಅವನ ಉಪದೇಶವೆಲ್ಲವೂ ಬೆಟ್ಟದ ಮೇಲೆ ಮಳೆ ಸುರಿದಂತಾಯಿತು. ಶ್ರೀಕೃಷ್ಣನನ್ನು ಅಲ್ಲಿಯೇ ಸೆರೆಹಿಡಿಯಬೇಕೆಂದು ಕೌರವರು ಯತ್ನಿಸಿದರು. ಅದು ಸಾಧ್ಯವಾಗಲಿಲ್ಲ. ಕಡೆಯಲ್ಲಿ ಶ್ರೀಕೃಷ್ಣನು ಅಂತಿಮವಾದ ಎಚ್ಚರಿಕೆಯನ್ನಿತ್ತು ಸಭೆಯಿಂದ ಹೊರಟನು

ಶ್ರೀಕೃಷ್ಣನು ಹೋಗುವಾಗ ತನ್ನ ರಥದಲ್ಲಿ ಕರ್ಣನನ್ನೂ ಸಂಜಯನನ್ನೂ ಕುಳ್ಳಿರಿಸಿಕೊಂಡು ಹೋದನು. ಇದು ಧೃತರಾಷ್ಟ್ರನಿಗೆ ಗೊತ್ತಾಯಿತು. ಸಂಜಯನು ಹಿಂದಿರುಗಿ ಬಂದ ಮೇಲೆ “ಸಂಜಯ, ಶ್ರೀಕೃಷ್ಣನು ಕರ್ಣನನ್ನು ರಥದಲ್ಲಲಿ ಕರೆದುಕೊಂಡು ಹೋದನಲ್ಲ, ಅಲ್ಲಿ ಏನಾಯಿತು? ಕರ್ಣನಿಗೆ ಏನು ಹೇಳಿದ?” ಪ್ರಶ್ನೆ ಮಾಡಿದನು. ಅದಕ್ಕೆ ಸಂಜಯನು ಹೇಳಿದ್ದೇನೆಂದರೆ “ಧೃತರಾಷ್ಟ್ರ, ಶ್ರೀಕೃಷ್ಣ ಬಹಳ ಬುದ್ಧಿಶಾಲಿ. ದುರ್ಯೋಧನನ ಪರವಾಗಿ ಹೋರಾಡತಕ್ಕವರಲ್ಲಿ ಕರ್ಣನೇ ಗಟ್ಟಿಗನೆಂದು ಅವನಿಗೆ ಗೊತ್ತಿದೆ. ಅದಕ್ಕಾಗಿ ಒಂದು ಭೇದೋಪಾಯವನ್ನು ಅವನು ಹವಣಿಸಿದ. ಕರ್ಣನು ನಿಜವಾಗಿ ಕುಂತಿಯ ಮಗನೆಂದೂ ಪಾಂಡವರೆಲ್ಲರಿಗೂ ಹಿರಿಯನೆಂದೂ ಹೇಳಿದ. ಕುಂತಿ ತಂದೆಯ ಮನೆಯಲ್ಲಿದ್ದಾಗ ಸೂರ್ಯನ ವರದಿಂದ ಕರ್ಣನು ಹುಟ್ಟಿದನಂತೆ. ಅವಳು ನಾಚಿಕೆಯಿಂದ ಮಗುವನ್ನು ತ್ಯಜಿಸಿಬಿಟ್ಟಳಂತೆ. ಆಧಿರಥನೆಂಬ ಮೀನುಗಾರ ಕರ್ಣನನ್ನು ಸಾಕಿ ಬೆಳೆಸಿದ. ಆದ್ದರಿಂದ ಈಗ ಪಾಂಡವರ ಪಕ್ಷವನ್ನು ಸೇರಬೇಕೆಂದು ಶ್ರೀಕೃಷ್ಣನು ಕರ್ಣನಿಗೆ ಹೇಳಿದ. ಈ ವಿಷಯವನ್ನು ಕೇಳಿ ಕರ್ಣನಿಗೆ ಅಚ್ಚರಿಯಾದರೂ ಪಾಂಡವರ ಕಡೆ ಸೇರಲು ಒಪ್ಪಲಿಲ್ಲ. ತಾನು ದುರ್ಯೋಧನನ ಸ್ನೇಹಿತನಾಗಿ ಬೆಳೆದಿದ್ದೇನೆಂದೂ ಇಂಥ ಕಷ್ಟದ ಸಮಯದಲ್ಲಿ ಅವನನ್ನು ಬಿಡಲು ಸಾಧ್ಯವಿಲ್ಲವೆಂದೂ ಸ್ಪಷ್ಟವಾಗಿ ತಿಳಿಸಿದ. ಶ್ರೀಕೃಷ್ಣನು ಮುಂದಿನ ಏರ್ಪಾಡಿಗಾಗಿ ಪಾಂಡವರ ಬಳಿಗೆ ಹೊರಟು ಹೋದನು.”

ಸಂಜಯನಿಗೆ ವ್ಯಾಸರ ವರ

ಇತ್ತ ಧೃತರಾಷ್ಟ್ರನು ಮಗನನ್ನು ಕರೆಸಿಕೊಂಡು ಮತ್ತೆ ಬುದ್ಧಿವಾದ ಹೇಳಿದ. ಯುದ್ಧದಲ್ಲಿ ಸೋಲು ಸಂಭವಿಸಬಹುದೆಂದು ತಿಳಿಸಿದ. ದುರ್ಯೋಧನ ಅದನ್ನು ಒಪ್ಪಲಿಲ್ಲ. ಯುದ್ಧದಲ್ಲಿ ತಾವೇ ಗೆಲ್ಲುವುದು ನಿಶ್ಚಯವೆಂದು ತಿಳಿಸಿದ.  ಧೃತರಾಷ್ಟ್ರನು ಸುಮ್ಮನಾದ. ಒಟ್ಟಿನಲ್ಲಿ ಆ ಮುದುಕನ ಮನಸ್ಸಿನಲ್ಲಿ ಒಂದು ಬಗೆಯ ತೊಳಲಾಟವಿತ್ತು. ಅವನು ಈ ಹೊಡೆದಾಟವನ್ನು ತಪ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿಲಿಲ್ಲ.

ಮಹಾಭಾರತ ಯುದ್ಧ ಸಮೀಪಿಸಿತು. ಕುರುಕ್ಷೇತ್ರವೆಂಬ ದೊಡ್ಡ ಬಯಲಿನಲ್ಲಿ ಎರಡು ಸೇನೆಗಳೂ ನೆರದವು. ಆಗ ವ್ಯಾಸಮುನಿಗಳು ಧೃತರಾಷ್ಟ್ರನ ಬಳಿಗೆ ಬಂದು “ಧೃತರಾಷ್ಟ್ರ, ಯಾರು ಎಷ್ಟು ಪ್ರಯತ್ನ ಮಾಡಿದರೂ ಯುದ್ಧವನ್ನು ತಪ್ಪಿಸಲಾಗಲಿಲ್ಲ. ಬಹಳ ಜನರು ಯುದ್ಧದಲ್ಲಿ ಮಡಿಯುವರು . ಇದು ದೈವೇಚ್ಛೆ. ನಿನ್ನಿಂದ ಇನ್ನೇನೂ ಮಾಡಲಾಗುವುದಿಲ್ಲ. ನಿನಗೆ ಯುದ್ಧವನ್ನು ನೋಡುವ ಬಯಕೆ ಇದ್ದರೆ ಹೇಳು ನಿನಗೆ ದಿವ್ಯದೃಷ್ಟಿಯನ್ನು ಕೊಡುವೆನು” ಎಂದರು. ಅದಕ್ಕೆ ಧೃತರಾಷ್ಟ್ರನು “ಮುನಿಗಳೇ, ನಾನು ಹುಟ್ಟು ಕುರುಡ . ಈ ಕಣ್ಣುಗಳಿಂದ ಒಳ್ಳೆಯದೇನನ್ನೂ ನೋಡಲಿಲ್ಲ. ಈಗ ಬಂಧುಗಳ ಮತ್ತು ಮಕ್ಕಳ ಕೊಲೆಯನ್ನು ನೋಡಲು ಕಣ್ಣುಗಳನ್ನು ಬೇಡಲೆ? ಬೇಡ. ಆದರೆ ಯುದ್ಧ ಹೇಗೆ ನಡೆಯುವುದೆಂದು ಅದರ ಸುದ್ಧಿಯನ್ನು ಕೇಳಿ ತಿಳಿದುಕೊಳ್ಳಬೇಕೆಂದಿದ್ದೇನೆ” ಎಂದನು. ವ್ಯಾಸಮುನಿಗಳು “ಹಾಗಾದರೆ ಈ ಸಂಜಯನಿಗೆ ದಿವ್ಯದೃಷ್ಟಿಯನ್ನು ಕೊಡುವೆನು. ಅವನಿಗೆ ಕುಳಿತಲ್ಲಿಯೇ ಯುದ್ಧರಂಗದ ವಿಷಯವೆಲ್ಲವೂ ಕಾಣುವುದು. ಯಾರು ಯಾರು ಏನು ಹೇಳಿದರು. ಮನಸ್ಸಿನಲ್ಲಿ ಏನು ಆಲೋಚಿಸಿದರು- ಎಂಬುದೆಲ್ಲವೂ ಸಂಜಯನಿಗೆ ಗೋಚರಿಸುವುದು ಅವನು ಯುದ್ಧವಾರ್ತೆಯನ್ನು ನಿನಗೆ ತಿಳಿಸಲಿ” ಎಂದು ನುಡಿದು ಸಂಜಯನಿಗೆ ದಿವ್ಯದೃಷ್ಟಿಯನ್ನು ಕೊಟ್ಟರು. ಅಲ್ಲದೆ ಧೃತರಾಷ್ಟ್ರನನ್ನು ಕುರಿತು “ಯುದ್ಧದಲ್ಲಿ ದೊಡ್ಡದಾದ ಪ್ರಾಣಿಹಿಂಸೆ ನಡೆಯುತ್ತದೆ. ಪಾಂಡವರೂ ನಿನ್ನ ಮಕ್ಕಳೇ. ಅವರಿಗೆ ಅರ್ಧರಾಜ್ಯವನ್ನು ಕೊಡಿಸು. ನೀನು ಹಟ ಹಿಡಿದರೆ ಈಗಲಾದರೂ ಯುದ್ಧವನ್ನು ತಪ್ಪಿಸಬಹುದು.  ನರಹತ್ಯೆ ಬೇಡ” ಎಂದರು. ಧೃತರಾಷ್ಟ್ರನು “ಋಷಿಗಳೆ, ಪ್ರತಿಯೊಬ್ಬ ಮನುಷ್ಯನೂ ಸ್ವಾರ್ಥವನ್ನು ಬಯಸುತ್ತಾನೆ. ನಾನೂ ಒಬ್ಬ ಮನುಷ್ಯ. ನೀವೇ ಹೇಳಿದ್ದೀರಿ ದೈವೇಚ್ಛೆಯೆಂದು. ನನ್ನಿಂದೇನಾದೀತು?” ಎಂದನು. ವ್ಯಾಸರು ಅದಕ್ಕೆ ಏನೂ ಹೇಳದೆ ಹೊರಟುಹೋದರು.

ಸಂಜಯನು ಯುದ್ಧಭೂಮಿಯಲ್ಲಿ ತಿರುಗಾಡಿ ಅಲ್ಲಿಯ ವಿಷಯವನ್ನು ನೋಡುತ್ತಿದ್ದ. ನೋಡದೆ ಇದ್ದ ವಿಚಾರವೂ ವ್ಯಾಸಮುನಿಗಳ ವರದಿಂದ ಅವನಿಗೆ ತಿಳಿಯುತ್ತಿತ್ತು. ಯುದ್ಧವು ಆರಂಭವಾಗಿ ಹತ್ತನೆಯ ದಿನ ಭೀಷ್ಮನು ಅರ್ಜುನನ ಬಾಣಗಳಿಗೆ ಈಡಾಗಿ ಶರತಲ್ಪದಲ್ಲಿ ಮಲಗಿದ. ಒಡನೆಯೇ ಈ ಸುದ್ಧಿಯನ್ನು ಸಂಜಯನು ಧೃತರಾಷ್ಟ್ರನಿಗೆ ಮುಟ್ಟಿಸಿದ. ಧೃತರಾಷ್ಟ್ರನು ದುಃಖದಿಂದ ಕಂಗೆಟ್ಟು ಹೋದನು. ಯುದ್ಧದ ಎಲ್ಲ ವಿವರಗಳನ್ನು ತನಗೆ ಸಂಜಯನಿಗೆ ತಿಳಿಸಿದನು. ಆಗ ಸಂಜಯ ಮೊದಲದಿನದಿಂದ ನಡೆದ ವೃತ್ತಾಂತದಿಂದ ಎಲ್ಲವನ್ನೂ ಧೃತರಾಷ್ಟ್ರನಿಗೆ ಹೇಳಿದನು. ಶ್ರೀಕೃಷ್ಣನು ಅರ್ಜುನನಿಗೆ ಹೇಳಿದ ಭಗವದ್ಗೀತೆ, ತೋರಿಸಿದ ವಿಶ್ವರೂಪ ಇವೆಲ್ಲವೂ ಸಂಜಯನಿಗೆ ತಿಳಿದಿತ್ತು. ಅದೆಲ್ಲವನ್ನೂ ಅವನು ಧೃತರಾಷ್ಟ್ರನಿಗೆ ವಿಸ್ತಾರವಾಗಿ ತಿಳಿಸಿದ. ಭಗವದ್ಗೀತೆಯ ನಡುವೆ ಅಲ್ಲಲ್ಲಿ “ಸಂಜಯನು ಹೇಳಿದನು” ಎಂಬ ಮಾತು ಬರುತ್ತದೆ. “ಸಂಜಯನು ಹೇಳಿದನು” ಎಂದು ಅದರ ಅರ್ಥ. ಹದಿನೆಂಟು ದಿನ ನಡೆದ ಭಾರತ ಯುದ್ಧದ ವೃತ್ತಾಂತವೆಲ್ಲವೂ ಸಂಜಯನೇ ಹೇಳಿದ್ದು.

ಈಗ ದುಃಖಿಸಿ ಫಲವೇನು,’

ಭಾರತಯುದ್ಧ ಹದಿನೆಂಟು ದಿನ ನಡೆಯಿತು. ಅದರಲ್ಲಿ ಒಂದೊಂದು ಸಲ ಕೌರವರಿಗೂ ಇನ್ನೊಂದು ಸಲ ಪಾಂಡವರಿಗೂ ಜಯವಾಗುತ್ತಿತ್ತು. ಕೌರವರಿಗೆ ಜಯವಾದಾಗ ಧೃತರಾಷ್ಟ್ರನಿಗೆ ಹರ್ಷವಾಗುತ್ತಿತ್ತು. ಪಾಂಡವರಿಗೆ ಜಯವಾಯಿತೆಂದು ಕೇಳಿದಾಗ ದುಃಖವಾಗುತ್ತಿತ್ತು. ಆ ಸಮಯದಲ್ಲಿ ಸಂಜಯನು ಅವನನ್ನು ಸಂತೈಸುತ್ತ ಒಮ್ಮೊಮ್ಮೆ ಚುಚ್ಚು ಮಾತುಗಳನ್ನು ಆಡುತ್ತಿದ್ದನು. ಒಂದು ಸಲ ಸಂಜಯನು ಹೇಳಿದ್ದೇನೆಂದರೆ: ಮಹಾರಾಜ, ಈಗ ದುಃಖಿಸುವುದರಿಂದ ಫಲವೇನು? ಯುಧಿಷ್ಠಿರನನ್ನು ನೀನು ಸೂಜಿಗೆ ಕರೆಸದೆ ಇದ್ದರೆ ಈ ಕಷ್ಟ ಬರುತ್ತಿರಲಿಲ್ಲ. ಆಮೇಲಾದರೂ ಭೀಷ್ಮಾದಿಗಳು ಹೇಳಿದಂತೆ ನೀನು ನಡೆದುಕೊಳ್ಳಲಿಲ್ಲ. ದುರ್ಯೋಧನನನ್ನು ರಾಜ್ಯದಿಂದಲೇ ಹೊರಡಿಸಬೇಕಾಗಿತ್ತು ಅಥವಾ ಸೆರೆಹಿಡಿದು ಬಂದೀಖಾನೆಯಲ್ಲಿ ಇರಿಸಬೇಕಾಗಿತ್ತು.  ಶ್ರೀಕೃಷ್ಣನ ಬುದ್ಧಿವಾದವನ್ನು ನೀನು ಕೇಳಲಿಲ್ಲ. ಕೈಲಾಗದವನಂತೆ ಸುಮ್ಮನಿದ್ದೆ. ನೀನು ಶಾಂತಿಯನ್ನು ಸ್ಥಾಪಿಸಬಹುದೆಂದು ಶ್ರೀಕೃಷ್ಣ ನಂಬಿಕೊಂಡಿದ್ದ. ನಿನ್ನ ವಿಷಯದಲ್ಲಿ ಅವನಿಗೆ ಬಹಳ ಗೌರವವಿತ್ತು . ಪಾಂಡವರು ನಿನ್ನನ್ನು ತಂದೆಯಂತೆ ಪ್ರೀತಿಸಿ ಗೌರವಿಸುತ್ತಿದ್ದರು. ದುರ್ಯೋಧನ, ದುಶ್ಯಾಸನ – ಇವರಿಬ್ಬರನ್ನು ಬಿಟ್ಟು ಉಳಿದ ಮಕ್ಕಳೊಡನೆ ನೀನು ಸುಖವಾಗಿ ಇರಬಹುದಾಗಿತ್ತು. ಮೊದಲು ತಪ್ಪು ಮಾಡಿ ಈಗ ಪಶ್ಚಾತ್ತಾಪ ಪಟ್ಟರೆ ಏನಾಗುವುದು?

ಸಂಜಯನು ಸೆರೆಸಿಕ್ಕಿದ್ದು

ಸಂಜಯನು ಯುದ್ಧ ವಿದ್ಯೆಯನ್ನೂ ಕಲಿತಿದ್ದನು. ಭೀಷ್ಮನು ಸೋತು ಶರತಲ್ಪದಲ್ಲಿ ಮಲಗಿದನು. ದ್ರೋಣ, ಕರ್ಣರ ಸಂಹಾರವಾಯಿತು. ಕೌರವರಿಗೆ ಎಲ್ಲೆಲ್ಲಿಯೂ ಸೋಲಾಗುತ್ತ ಬಂದಿತು. ಪಾಂಡವರ ಕೈ ಮೇಲಾಯಿತು. ಆಗ ಕೌರವರ ಸಹಾಯಕ್ಕಾಗಿ ಸಂಜಯನು ಯುದ್ಧಕ್ಕೆ ಹೋದನು. ಅಲ್ಲಿ ದ್ರೌಪದಿಯ ಅಣ್ಣನಾದ ಧೃಷ್ಟದ್ಯುಮ್ನನಿಗೂ ಸಂಜಯನಿಗೂ ಹೋರಾಟವಾಯಿತು. ಸಂಜಯನು ಸೋತು ತಪ್ಪಿಸಿಕೊಂಡು ಹೋಗುತ್ತಿರುವಾಗ ಎದುರಿಗೆ ಸಾತ್ಯಕಿ ಬಂದನು. ಸಾತ್ಯಕಿಗೂ ಇವನಿಗೂ ಯುದ್ಧವಾಯಿತು. ಅವನು ಸಂಜಯನನ್ನು ಸೆರೆ ಹಿಡಿದು ತನ್ನ ರಥದಲ್ಲಿ ಕಟ್ಟಿ ಹಾಕಿದನು. ಸ್ವಲ್ಪ ಹೊತ್ತಿನ ಮೇಲೆ ಧೃಷ್ಟದ್ಯುಮ್ನನಿಗೆ ಸಾತ್ಯಕಿಯ ರಥದಲ್ಲಿದ್ದ ಸಂಜಯನು ಕಂಡನು! ಅವನು ಹತ್ತಿರ ಬಂದು ಸಾತ್ಯಕಿಯನ್ನು ಕುರಿತು ಸಂಜಯನ ಕಡೆಗೆ ಕೈ ತೋರಿಸಿ “ಇವನನ್ನು ಏಕೆ ಉಳಿಸಿದ್ದೀಯೆ? ಇವನು ಬದುಕಿದ್ದರಿಂದ ಏನು ಪ್ರಯೋಜನ?” ಎಂದು ಕೇಳಿದನು. ಆಗ ಸಾತ್ಯಕಿ ಕತ್ತಿಯನ್ನು ಹಿರಿದು ಸಂಜಯನನ್ನು ಕೊಲ್ಲಬೇಕೆಂದು ಹೊರಟನು. ಅಷ್ಟರಲ್ಲಿ ವ್ಯಾಸಮುನಿಗಳು ಬಂದು ಸಂಜಯನನ್ನು ಕೊಲ್ಲಬಾರದೆಂದು ಹೇಳಿ ಅವನನ್ನು ಸೆರೆಯಿಂದ ಬಿಡಿಸಿದರು. ಸಂಜಯ ನೆಟ್ಟಗೆ ಧೃತರಾಷ್ಟ್ರನ ಬಳಿಗೆ ಬಂದು ಸೇರಿಕೊಂಡನು.

ನಿನ್ನ ಮಗ ವೀರಸ್ವರ್ಗ ಸೇರಿದ

ಭಾರತ ಯುದ್ಧ ಮುಗಿಯುತ್ತ ಬಂದಿತು. ದುರ್ಯೋಧನನು ಓಡಿಹೋಗಿ ದ್ಕೈಪಾಯನ ಸರೋವರದಲ್ಲಿ ಅಡಗಿಕೊಂಡಿದ್ದನು. ಇದು ಗೊತ್ತಾಗಿ ಪಾಂಡವರು ಅಲ್ಲಿಗೆ ಬಂದರು. ಭೀಮಸೇನನಿಗೂ ದುರ್ಯೋಧನನಿಗೂ ಗದಾಯುದ್ಧ ನಡೆಯಿತು. ಭೀಮನು ದುರ್ಯೋಧನನ ತೊಡೆಗಳನ್ನು ಅಪ್ಪಳಿಸಲಾಗಿ, ಅವನ ತೊಡೆಗಳು ಮುರಿದು ಹೋದವು. ಅವನು ಸಾಯುವ ಸ್ಥಿತಿಯಲ್ಲಿ ಬಿದ್ದನು. ಅಂದು ರಾತ್ರಿ ಪಾಂಡವರ ಶಿಬಿರದಲ್ಲಿ ಎಲ್ಲರೂ ನಿದ್ರಿಸುತ್ತಿದ್ದರು. ಅಶ್ವತ್ಥಾಮನು ಆಗ ನುಗ್ಗಿ, ಪಂಚಪಾಂಡವರು, ಕೃಷ್ಣ ಮತ್ತು ಸಾತ್ಯಕಿ ಇವರನ್ನು ಬಿಟ್ಟು ಎಲ್ಲರನ್ನೂ ಕೊಂದನು.

ಸಂಜಯನು ಈ ವೃತ್ತಾಂತವೆಲ್ಲವನ್ನೂ ಧೃತರಾಷ್ಟ್ರನಿಗೆ ಹೇಳುತ್ತ “ಧೃತರಾಷ್ಟ್ರ, ನಿನ್ನ ಮಗನು ವೀರೋಚಿತವಾದ ಸ್ವರ್ಗವನ್ನು ಸೇರಿದನು. ಅಶ್ವತ್ಥಾಮ, ಕೃಪ, ಕೃತವರ್ಮರು ಅವನನ್ನು ನೋಡಿ ಕಣ್ಣೀರು ಸುರಿಸುತ್ತ ರಥವನ್ನೇರಿ ಹೊರಟುಹೋದರು. ಈ ರೀತಿಯಲ್ಲಿ ಅತ್ಯಂತ ಘೋರವಾದ ಯುದ್ಧ ಮುಗಿಯಿತು.  ನನಗೆ ವ್ಯಾಸ ಮುನಿಗಳು ಕೊಟ್ಟಿದ್ದ ದಿವ್ಯದೃಷ್ಟಿ ಹೋಗಿಬಿಟ್ಟಿತು. ಈಗ ಮುಂದಿನ ವಿಚಾರ ನನಗೇನೂ ತಿಳಿಯದು” ಎಂದನು.

ಕರ್ಮದ ಫಲವನ್ನು ಉಣ್ಣಲೇಬೇಕು

ಧೃತರಾಷ್ಟ್ರನ ಶೋಕಕ್ಕೆ ಪಾರವೇ ಉಳಿಯಲಿಲ್ಲ. ಕಣ್ಣೀರು ಸುರಿಸುತ್ತ ಅವನು ಗೋಳಾಡಿದನು. “ಮಕ್ಕಳು, ಮಂತ್ರಿಗಳು, ಸ್ನೇಹಿತರು- ಎಲ್ಲರೂ ಸತ್ತುಹೋದರು. ನಾನು ರೆಕ್ಕೆಪುಕ್ಕಗಳುದುರಿದ ಮುದಿಹಕ್ಕಿಯಾದೆ. ಮೊದಲೇ ನನಗೆ ಕಣ್ಣುಗಳಿಲ್ಲ. ಕಣ್ಣುಗಳಂತಿದ್ದ ಬಂಧು ಜನರನ್ನೂ ಕಳೆದುಕೊಂಡೆ. ಸಂಜಯ, ನೀವೆಲ್ಲರೂ ಹೇಳಿದ ಬುದ್ಧಿವಾದದಂತೆ ನಡೆಯಲಿಲ್ಲ. ನನ್ನಿಂದ ಲಕ್ಷಗಟ್ಟಲೆ ಜನರು ಪ್ರಾಣತೆತ್ತರು. ನಾನಿನ್ನು ಬದುಕಿರಬಾರದು” ಎಂದು ಹಲುಬಿದನು.

ಆಗ ಸಂಜಯನು ಅವನನ್ನು ಸಂತೈಸುತ್ತ “ಮಹಾರಾಜ, ಶೋಕಿಸಬೇಡ. ನೀನು ವೇದಶಾಸ್ತ್ರಗಳನ್ನು ಕಲಿತವನು.ವಿದ್ಯಾವಂತ,ಮರಣವು ಯಾರಿಗೂ ತಪ್ಪಿದ್ದಲ್ಲ. ಇಂದೋ ನಾಳೆಯೋ ಮರಣವು ಎಲ್ಲರಿಗೂ ಬರುತ್ತದೆ. ಕರ್ಮದ ಫಲವನ್ನು ಉಣ್ಣಲೇಬೇಕು. ಎಷ್ಟು ಮೇಲೇರಿದರೂ ಒಂದು ದಿನ ಕೆಳಗಿಳಿಯಲೇಬೇಕು. ಜೀವನದಲ್ಲಿ ಎಷ್ಟೋ ಕಷ್ಟಗಳು ಬರುತ್ತವೆ. ಭಯಪಡಬೇಕಾದ ಸಂದರ್ಭಗಳು ಎಷ್ಟೋ ಒದಗುತ್ತವೆ. ಅವನ್ನು ಧೈರ್ಯದಿಂದ ಎದುರಿಸಬೇಕಲ್ಲದೆ ಶೋಕಿಸಬಾರದು. ಒಳ್ಳೆಯ ಕೆಲಸಕ್ಕೆ ಒಳ್ಳೆಯ ಫಲವೂ ಕೆಟ್ಟ ಕೆಲಸಕ್ಕೆ ಕೆಟ್ಟ ಫಲವೂ ಕಟ್ಟಿಟ್ಟ ಗಂಟು. ನಿನ್ನ ಮಕ್ಕಳು ವೀರತನದಿಂದ ಹೋರಾಡಿ ಯುದ್ಧದಲ್ಲಿ ಪ್ರಾಣವನ್ನು ಬಿಟ್ಟಿದ್ದಾರೆ. ಅವರಿಗೆ ವೀರಸ್ವರ್ಗವೇ ದೊರೆಯುವುದು. ಪಾಂಡವರೇ ನಿನ್ನ ಮಕ್ಕಳೆಂದು ತಿಳಿ.  ಅವರು ನಿನ್ನನ್ನು ತಂದೆಯೆಂದು ಭಾವಿಸಿ ಉಪಚರಿಸುತ್ತಾರೆ. ಇದರಲ್ಲಿ ಸಂದೇಹವೇ ಬೇಡ” ಎಂದನು. ವಿದುರನೂ ಬಂದು ನಾನಾ ಬಗೆಯಲ್ಲಿ ಆ ವೃದ್ಧನನ್ನು ಸಂತೈಸಿದನು. ಅವರಿಬ್ಬರೂ ಧೃತರಾಷ್ಟ್ರನ ಬಳಿಯೇ ಇದ್ದರು. ಅವರ ಸಾಂತ್ವನೆಯಿಂದ ಧೃತರಾಷ್ಟ್ರನ ಮನಸ್ಸಿಗೆ ಸ್ವಲ್ಪ ಹಗುರವೆನ್ನಿಸಿತು. ಪಾಂಡವರು ಬಂದು ಧೃತರಾಷ್ಟ್ರನಿಗೆ ನಮಸ್ಕರಿಸಿ ತಮ್ಮನ್ನು ಕ್ಷಮಿಸಬೇಕೆಂದು ಕೇಳಿಕೊಂಡರು. ಯುದ್ಧದಲ್ಲಿ ಮೃತರಾದವರ ಉತ್ತರ ಕ್ರಿಯೆ ನಡೆಯ ಇತು.

ಧೃತರಾಷ್ಟ್ರನೊಡನೆ ಕಾಡಿಗೆ

ಸಂಜಯನು ಬುದ್ಧಿವಂತನೂ ಅನುಭವಶಾಲಿಯೂ ಆದ್ದರಿಂದ ಧರ್ಮರಾಜನು ಅವನನ್ನು ತನ್ನ ಮಂತ್ರಿಯಾಗಿ ನೇಮಿಸಿಕೊಂಡನು. ಸರ್ಕಾರದ ಆದಾಯ ವ್ಯಯ, ಸರ್ಕಾರವು ಮಾಡಬೇಕಾದ ಕಾರ್ಯಗಳಲ್ಲಿ ಎಷ್ಟು ನಡೆಯಿತು – ಎಷ್ಟು ಉಳಿಯಿತು ಎಂಬುದನ್ನು ಸಂಜಯ ನೋಡಿಕೊಳ್ಳುತ್ತಿದ್ದನು. ಅಲ್ಲದೆ ಧೃತರಾಷ್ಟ್ರನ ಬಳಿಯಲ್ಲಿದ್ದು ಅವನ ಮತ್ತು ಅವನ ಹೆಂಡತಿ ಗಾಂಧಾರಿಯ ಯೋಗಕ್ಷೇಮಗಳನ್ನು ವಿಚಾರಿಸಿಕೊಳ್ಳುತ್ತಿದ್ದನು.

ಹೀಗೆ ಕೆಲವು ವರ್ಷಗಳು ಕಳೆದವು. ಧೃತರಾಷ್ಟ್ರನು ಜಪ-ಧ್ಯಾನಗಳಲ್ಲಿ ಕಾಲವನ್ನು ಕಳೆಯುತ್ತ ಚಾಫೆಯ ಮೇಲೆ ಮಲಗುತ್ತಿದ್ದನು. ಆಹಾರವನ್ನು ಬಹಳ ಕಡಿಮೆ ಮಾಡಿದನು. ಮನಸ್ಸಿನಲ್ಲಿ ಕೊರಗು ಇದ್ದೇ ಇತ್ತು. ಆದರೆ ಯಾರೂ ಅವನಿಗೆ ಬೇಸರವಾಗುವಂತೆ ನಡೆದುಕೊಳ್ಳುತ್ತಿರಲಿಲ್ಲ. ಭೀಮನು ಮಾತ್ರ ಧರ್ಮರಾಜನಿಗೆ ಗೊತ್ತಾಗದಂತೆ ಒಂದೊಂದು ಕಠೋರವಾದ ಮಾತನ್ನಾಡುತ್ತಿದ್ದನು. “ನೋಡಿರಿ! ಈ ಗದೆಯಿಂದಲೇ ನಾನು ದುರ್ಯೋಧನನ ತೊಡೆಗಳನ್ನು ಮುರಿದ! ಈ ತೋಳುಗಳಿಂದ ದುಶ್ಯಾಸನನನ್ನು ಹಿಸುಕಿ ಕೊಂದ!” ಎಂದು ಧೃತರಾಷ್ಟ್ರನಿಗೆ ಕೇಳುವಂತೆ ಹೊರಗಡೆ ಹೇಳುತ್ತಿದ್ದನು. ಕಡೆಕಡೆಗೆ ಧೃತರಾಷ್ಟ್ರನು ಇನ್ನು ಅರಮನೆಯಲ್ಲಿರಬಾರದೆಂದು ಆಲೋಚಿಸಿ, ವನವಾಸಕ್ಕೆ ಹೋಗಬೇಕೆಂದು ನಿಶ್ಚಯಿಸಿದನು. ಅವನು ಧರ್ಮರಾಜನು ಎಷ್ಟು ಆದರದಿಂದ ಹೋಗಬೇಡಿ ಎಂದು ಬಲವಂತ ಮಾಡಿದರೂ ಕೇಳಲಿಲ್ಲ.

ಧೃತರಾಷ್ಟ್ರನು ಗಾಂಧಾರಿಯೊಡನೆ ವನಕ್ಕೆ ಹೊರಡಲು ಸಿದ್ಧನಾದನು. ಸಂಜಯ ಮತ್ತು ವಿದುರ – ಇವರಿಬ್ಬರೂ ಸಿದ್ಧನಾದನು. ಸಂಜಯ ಮತ್ತು ವಿದುರ  ಇವರಿಬ್ಬರೂ ಮಾತನಾಡಿಕೊಂಡು ದೃತರಾಷ್ಟ್ರನೊಡನೆ ತಾವೂ ಹೋಗಬೇಕೆಂದು ನಿಶ್ಚಯಿಸಿದರು. ಕುಂತಿಯೂ ಹೊರಟಳು. ಕುಂತಿ ವನವಾಸಕ್ಕೆ ಹೊರಟಿದ್ದರಿಂದ ಪಾಂಡವರಿಗೆ ಬಹಳ ದುಃಖವಾಯಿತು.

ವಿದುರ, ಸಂಜಯರು ಧೃತರಾಷ್ಟ್ರನನ್ನು ದೂರದಲ್ಲಿದ್ದ ವ್ಯಾಸಾಶ್ರಮದ ಕಡೆಗೆ ಕರೆದುಕೊಂಡು ಹೋದರು. ವ್ಯಾಸಾಶ್ರಮದಲ್ಲಿ ಶತಯೂಪನೆಂಬ ಒಬ್ಬ ರಾಜರ್ಷಿ ತಪಸ್ಸು ಮಾಡುತ್ತಿದ್ದನು. ಶತಯೂಪನು ತಪಸ್ಸು ಮಾಡುವ ಬಗೆಯನ್ನು ಧೃತರಾಷ್ಟ್ರನಿಗೆ ತಿಳಿಸಿದನು.

ವಿದುರನ ಮರಣ

ಹತ್ತಿರದಲ್ಲಿದ್ದ ಒಂದು ಅರಣ್ಯದಲ್ಲಿ ಅವರೆಲ್ಲರೂ ನೆಲೆಸಿದರು. ಧೃತರಾಷ್ಟ್ರ, ಗಾಂಧಾರಿ, ಕುಂತಿ, ವಿದುರ ಇವರು ಕಷ್ಟಕರವಾದ ತಪಸ್ಸಿನಲ್ಲಿ ತೊಡಗಿದರು. ಸಂಜಯನು ಅವರಿಗೆ ಕಾಡಿನಲ್ಲಿ ದೊರಕಿದ ಗೆಡ್ಡೆ ಗೆಣಸುಗಳನ್ನು ಆಹಾರಕ್ಕಾಗಿ ತಂದುಕೊಡುತ್ತ ಉಳಿದ ಸಮಯವನ್ನು ಜಪಧ್ಯಾನಗಳಲ್ಲಿ ಕಳೆಯುತ್ತಿದ್ದನು.

ಧರ್ಮರಾಜನು ಹಸ್ತಿನಾವತಿಗೆ ಬಂದು ತಮ್ಮಂದಿರೊಡನೆ ರಾಜಕಾರ್ಯದಲ್ಲಿ ತೊಡಗಿದನು. ಮನಸ್ಸು ಮಾತ್ರ ವನದಲ್ಲಿಯೇ ಇದ್ದಿತು. ಒಮ್ಮೆ ಪಾಂಡವರೂ ದ್ರೌಪದಿಯೂ ಅವರೆಲ್ಲರನ್ನು ನೋಡಲೆಂದು ಅರಣ್ಯಕ್ಕೆ ಹೋದರು. ಕ್ಷೇಮಸಮಾಚಾರವನ್ನು  ವಿಚಾರಿಸಿದರು. ಸಂಜಯನು ಕಾಡಿನ ಹಣ್ಣು ಹಂಪಲುಗಳನ್ನು ಎಲ್ಲರಿಗೂ ಒದಗಿಸಿದನು.

ವಿದುರನು ಎಲ್ಲಿಯೂ ಕಾಣಲಿಲ್ಲ. ಅವನೆಲ್ಲಿರುವನೆಂದು ಧರ್ಮರಾಜನು ಕೇಳಿದಾಗ, “ಅವನು ಕಠೋರ ತಪಸ್ಸನ್ನು ಮಾಡುತ್ತಿದ್ದಾನೆ. ದೇಹದಲ್ಲಿ ಬಹಳ ಕೃಶವಾಗಿದ್ದಾನೆ. ಎಲ್ಲಾದರೂ ಒಮ್ಮೆ ಇಲ್ಲಿಗೆ ಬರುವುದುಂಟು’’ ಎಂದು ಧೃತರಾಷ್ಟ್ರನು ಹೇಳಿದನು. ಆಗ ದೂರದಲ್ಲಿ ವಿದುರನು ಬರುತ್ತಿರುವುದು ಕಾಣಿಸಿತು. ಆಶ್ರಮದಲ್ಲಿ ಹೆಚ್ಚು ಜನರಿದ್ದುದನ್ನು ಕಂಡು ಅವನು ಹಿಂದಿರುಗಿದನು. ಒಡನೆಯೇ ಧರ್ಮರಾಜನು “ವಿದುರ ವಿದುರ” ಎಂದು ಕೂಗುತ್ತ ಅವನ ಹಿಂದೆ ಬೇಗೆ ಬೇಗನೆ ಹೋದನು. ವಿದುರನು ಹಿಂದಿರುಗಿ ನೋಡದೆ ಹೋಗುತ್ತಲೇ ಇದ್ದನು. ಧರ್ಮರಾಜನು “ವಿದುರ, ನಾನು ಯುಧಿಷ್ಠಿರ” ಎನ್ನುತ್ತಾ ಹಿಂದೆಯೇ ಹೋದನು. ಕಾಡಿನೊಳಗೆ ಹೋಗಿ ವಿದುರನು ಒಂದು ದೊಡ್ಡ ಮರಕ್ಕೆ ಒರಗಿ ನಿಂತನು. ಯಾವ ಮಾತನ್ನು ಆಡಲಿಲ್ಲ. ಎದುರಿಗೆ ಬಂದು ನಿಂತ ಧರ್ಮರಾಜನನ್ನು ದಿಟ್ಟಿಸಿ ನೋಡುತ್ತ ಸ್ವಲ್ಪ ಹೊತ್ತಿನಲ್ಲಿ ಪ್ರಾಣವನ್ನು ತ್ಯಜಿಸಿದನು.

ಕಾಡಿನಲ್ಲಿ ಬೆಂಕಿ

ಧೃತರಾಷ್ಟ್ರನು ಕಾಡಿಗೆ ಹೋಗಿ ಸುಮಾರು ಮೂರು ವರ್ಷಗಳಾದವು. ಅವನು ಆಹಾರವನ್ನು ತ್ಯಜಿಸಿ ಘೋರವಾದ ತಪಸ್ಸಿನಲ್ಲಿ ನಿರತನಾದನು. ಕುಂತಿ ಗಾಂಧಾರಿಯರೂ ಆಹಾರವನ್ನು ಬಿಟ್ಟರು. ಸಂಜಯನು ನಾಲ್ಕು ದಿನಗಳಿಗೊಮ್ಮೆ ಸ್ವಲ್ಪ ಆಹಾರವನ್ನು ಸೇವಿಸುತ್ತಿದ್ದನು. ಧೃತರಾಷ್ಟ್ರನು ಅಗ್ನಿಯಲ್ಲಿ ಹೋಮ ಮಾಡಲಾಗದೆ ಅದನ್ನು ವಿಸರ್ಜಿಸಿದನು. ಅದನ್ನು ದೂರ ಒಯ್ದು ಚೆಲ್ಲಲಾಯಿತು.

ದೈವೇಚ್ಛೆ ಇನ್ನೊಂದು ಬಗೆಯಾಯಿತು. ಅಗ್ನಿಯನ್ನು ದೂರದಲ್ಲಿ ಚೆಲ್ಲಿದ್ದರಷ್ಟೆ. ಅದು ಗಾಳಿಗೆ ಹತ್ತಿಕೊಂಡು ಕಾಳ್ಗಿಚ್ಚಾಯಿತು. ಧಗಧಗಿಸಿ ಉರಿಯುತ್ತ ಸುತ್ತಲೂ ಆವರಿಸಿಕೊಂಡು ಬಂದಿತು. ಏನು ಮಾಡುವುದೆಂದು ಸಂಜಯನು ಪೇಚಾಡಿದನು. ಧೃತರಾಷ್ಟ್ರ, ಗಾಂಧಾರಿ , ಕುಂತಿಯರನ್ನು ಕಾಳ್ಗಿಚ್ಚಿನಿಂದ ತಪ್ಪಿಸಿ ಬೇರೆಡೆಗೆ ಕರೆದೊಯ್ಯಲು ಯತ್ನಿಸಿದನು. ಧೃತರಾಷ್ಟ್ರನು ಒಪ್ಪಲಿಲ್ಲ. ಗಾಂಧಾರಿ ಕುಂತಿಯರೂ ಒಪ್ಪಲಿಲ್ಲ. ತಾವು ಅಲ್ಲಿಯೇ ಇರುವುದಾಗಿ ಹಠ ಹಿಡಿದರು. ಸಂಜಯನಿಗೆ ಇನ್ನೂ ಮೈಯಲ್ಲಿ ಶಕ್ತಿ ಇದ್ದುದರಿಂದ ಅವನು ಹೊರಟು ಹೋಗಿ ತಪಸ್ಸು ಮಾಡಿ ಜನ್ಮವನ್ನು ಸಾರ್ಥಕ  ಮಾಡಿಕೊಳ್ಳಬೇಕೆಂದು ಒತ್ತಿ ಹೇಳಿದರು. 

ಸಂಜಯನು ನಮಸ್ಕರಿಸಿ ಹೊರಟನು.

 ಬೇರೆ ಉಪಾಯ ಕಾಣದೆ, ಸಂಜಯನು ಅವರಿಗೆ ನಮಸ್ಕರಿಸಿ, ಹೊರಟು ಬೆಂಕಿಯಿಂದ ಪಾರಾದನು. ನೋಡು ನೋಡುತ್ತಿರವಂತೆ ಬೆಂಕಿ ಆವರಿಸಿ, ಧೃತರಾಷ್ಟ್ರ, ಗಾಂಧಾರಿ, ಕುಂತಿಯರನ್ನು ಸುಟ್ಟು ಭಸ್ಮಮಾಡಿತು. ಸಂಜಯನು ತಪಸ್ಸಿಗಾಗಿ ಹಿಮಾಲಯಕ್ಕೆ ಹೊರಟು ಹೋದನು.

ಈ ಸುದ್ದಿ ಧರ್ಮರಾಜನಿಗೆ ಮುಟ್ಟಿತು. ಅರಮನೆಯಲ್ಲಿಯೂ ನಗರದಲ್ಲಿಯೂ ಹಾಹಾಕಾರ, ಅಳು ತುಂಬಿ ಹೋಯಿತು. ಪಾಂಡವರು ಶೋಕದಲ್ಲಿ ಮುಳುಗಿದರು. ಅರಣ್ಯಕ್ಕೆ ಹೋಗಿ ಕುಂತಿ, ಧೃತರಾಷ್ಟ್ರ, ಗಾಂಧಾರಿಯವರ ಅಸ್ಥಿತಗಳನ್ನು ತಂದು ಗಂಗಾನದಿಗೆ ಹಾಕಿ ಮುಂದಿನ ಉತ್ತರಕ್ರಿಯೆಯನ್ನು ನಡೆಸಿದರು.

ಇದಿಷ್ಟು ಸಂಜಯನ ಕಥೆ. ಅವನು ರಥವನ್ನು ನಡೆಸುವ ಸಾರಥಿಯಾಗಿದ್ದರೂ ತನ್ನ ವಿದ್ಯೆ, ವಿವೇಕ, ಸದ್ಗುಣ, ಸ್ವಾಮಿಭಕ್ತಿಗಳಿಂದ ತುಂಬ ಪ್ರಸಿದ್ಧನಾಗಿ ಎಲ್ಲರ ಗೌರವಕ್ಕೂ ಪಾತ್ರನಾದನು. ವ್ಯಾಸರು ಅವನ ಯೋಗ್ಯತೆಯನ್ನು ತಿಳಿದೇ ದಿವ್ಯದೃಷ್ಟಿಯನ್ನು ಕೊಟ್ಟಿದ್ದರು. ಯುಧಿಷ್ಠಿರನು ಆತನಿಗೆ ಮಂತ್ರಿಪದವಿಯನ್ನಿತ್ತನು. ತನ್ನ ಒಡೆಯನಾದ ಧೃತರಾಷ್ಟ್ರನನ್ನು ಕಡೆಯವರೆಗೂ ಸೇವಿಸಿ ತನ್ನ ಸ್ವಾಮಿಭಕ್ತಿಯನ್ನೂ ಕರ್ತವ್ಯ ನಿಷ್ಠೆಯನ್ನೂ ಸಂಜಯನು ವ್ಯಕ್ತಪಡಿಸಿದ್ದಾನೆ.