ರಾಮ-ರಾವಣರ ಯುದ್ಧದಲ್ಲಿ ವೈರಿಯ ಶರವೆರಗಿ ಧರೆಗೊರಗಿದ ರಾಮಾನುಜನನ್ನು ಬದುಕುಳಿಸಿದ್ದು ಸಂಜೀವನಿ ಎನ್ನುವ ಮೂಲಿಕೆ. ಇದನ್ನು ಹುಡುಕಿ ಹೊರಟ ಹನುಮಂತ ಮೂಲಿಕೆಯನ್ನು ಗುರುತಿಸಲಾಗದೆ ಅದು ಬೆಳೆಯುತ್ತಿದ್ದ ಪರ್ವತವನ್ನೇ ಕಿತ್ತೊಯ್ದನೆಂದು ರಾಮಾಯಣ ಹೇಳುತ್ತದೆ. ಅದರಿಂದಾಗಿ ಸಂಜೀವನಿ ಎನ್ನುವ ಹೆಸರು ಅಜರಾಮರವಾಗಿರುವುದಷ್ಟೆ ಅಲ್ಲ, ಜೀವ ಕಾಯುವ ಔಷಧಕ್ಕೆ ಉಪಮೆಯಾಗಿಯೂ ಉಳಿದಿದೆ. ಅಂತಹ ಸಂಜೀವನಿಯನ್ನು ಹುಡುಕುವ ಕೆಲಸಕ್ಕೆ ಬೆಂಗಳೂರಿನ ವಿಜ್ಞಾನಿ, ಕನ್ನಡ ಕಥೆಗಾರ ಡಾ. ಕೆ. ಎನ್. ಗಣೇಶಯ್ಯ ಎಳಸಿದ್ದಾರೆ. ಪುರಾಣದಲ್ಲಿ ಹೇಳಿದಂಥ ಸಂಜೀವನಿ ಎನ್ನುವ ಗಿಡ ನಿಜಕ್ಕೂ ಇರಬಹುದೇ? ಇದ್ದರೆ ಅದು ಹೇಗಿರಬಹುದು? ಅದರ ಗುಣಗಳೇನು? ಎಂಬ ಪ್ರಶ್ನೆಗಳ ಬೆನ್ನು ಹತ್ತಿದ್ದಾರೆ ಗಣೇಶಯ್ಯ.  ವಿಜ್ಞಾನ ಆಧರಿಸಿದ ಕಥೆ ಬರೆವ ಗಣೇಶಯ್ಯನವರು ಈಗ ಪುರಾಣ ಆಧರಿಸಿ ನಡೆಸಿರುವ ಈ ಸಂಶೋಧನೆಯ ವಿವರಗಳನ್ನು ಕರೆಂಟ್ ಸೈನ್ಸ್ ತನ್ನ ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟಿಸಿದೆ.

ಸಂಜೀವನಿ ಎನ್ನುವ ಸಸ್ಯವೊಂದಿತ್ತೆ ಎನ್ನುವುದು, ರಾಮಾಯಣ ನಿಜಕ್ಕೂ ಟಿಸಿದ ಕಥೆಯೇ ಎನ್ನುವಷ್ಟೆ ವಿವಾದಾಸ್ಪದ ಪ್ರಶ್ನೆ. ಆದರೂ ಅಂತಹ ಸಸ್ಯವೊಂದು ಇದ್ದರೆ ಎಷ್ಟು ಚೆನ್ನ ಎನ್ನುವ ಆಶಯ ವಿಜ್ಞಾನಿಗಳಿಗೂ ಇದೆ.  ರೂಢಿಗತವಾಗಿಯೋ, ಸಾಂಪ್ರದಾಯಿಕವಾಗಿಯೋ ನಡೆದು ಬಂದ ಚಿಕಿತ್ಸಾ ಪದ್ಧತಿಗಳಲ್ಲಿ ಬಳಸುವ ಮೂಲಿಕೆಗಳಲ್ಲಿ ಔಷಧಗಳ ಪರಿಶೀಲನೆ ನಡೆದಿರುವುದರ ಜೊತೆ, ಜೊತೆಗೇ ಹೊಸ ಮೂಲಿಕೆಗಳನ್ನು, ಚಿಕಿತ್ಸಾ ಗುಣವಿರುವ ಜೀವಿಗಳನ್ನು ಹುಡುಕುವ ಕಾರ್ಯವೂ ಸಾಗಿದೆ. ಕೈಗೆ ಸಿಕ್ಕ ಸಸ್ಯಗಳಲ್ಲೆಲ್ಲ ಔಷಧ ಗುಣ ಹುಡುಕುವುದೂ ನಡೆದಿದೆ. ಕಸಂಜೀವನಿ ಎನ್ನುವ ಪರಿಕಲ್ಪನೆ ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವುದರಿಂದ ಅದರಲ್ಲಿ ಏನೋ ತಥ್ಯವಡಗಿರಬೇಕು. ಏಕೆಂದರೆ ಹೀಗೆ ಜೀವವನ್ನು ಮರಳಿಸುವ ಮೂಲಿಕೆಯೊಂದರ ಉಲ್ಲೇಖ ರಾಮಾಯಣದಲ್ಲಿಯಷ್ಟೆ ಅಲ್ಲದೆ ಅನಂತರದ ಹಲವು ಕಥೆಗಳಲ್ಲಿಯೂ ಮರುಕಳಿಸಿದೆ. ಸಂಜೀವನಿ ಎನ್ನುವ ಸಸ್ಯ ಯಾವುದು ಎನ್ನುವುದನ್ನು ಪತ್ತೆ ಮಾಡುವುದು ಸಾಧ್ಯವಾದರೆ, ಅದೊಂದು ಅಮೂಲ್ಯ ಸಂಪನ್ಮೂಲವಾಗಬಹುದು,ಕಿ ಎನ್ನುವ ಆಶಯದಿಂದ ಗಣೇಶಯ್ಯ ಶೆರ್ಲಾಕ್ ಹೋಮ್ಸ್ನಂತೆ ತರ್ಕದ ಬೆನ್ನೇರಿ ಈ ಪೌರಾಣಿಕ ಮೂಲಿಕೆಯ ಹುಡುಕಾಟ ನಡೆಸಿದ್ದಾರೆ. ಸಂಜೀವನಿ ಎನ್ನುವ ಬಿರುದಿಗೆ ಪಾತ್ರವಾಗಬಹುದಾದ ಮೂರು ಮೂಲಿಕೆಗಳನ್ನೂ ಗುರುತಿಸಿದ್ದಾರೆ.

ಪ್ರಪಂಚದಲ್ಲಿರುವ ಲಕ್ಷಾಂತರ ಸಸ್ಯಗಳಲ್ಲಿ ಸಂಜೀವನಿ ಎನ್ನುವ ಮೂಲಿಕೆಯನ್ನು ಹುಡುಕುವುದು ಬಣವೆಯಲ್ಲಿನ ಸೂಜಿಯನ್ನು ಹುಡುಕಿದಷ್ಟೇ ಸುಲಭ. ಸಂಜೀವನಿ ಎನ್ನುವುದು ಜೀವವನ್ನು ಮರಳಿಸುವ ಸಾಮಥ್ರ್ಯವಿರುವ ಸಸ್ಯವೋ, ಅಂತಹ ಸಾಮಥ್ರ್ಯವಿರುವ ಸಸ್ಯಗಳನ್ನು ಪ್ರತಿನಿಧಿಸುವ ಶಬ್ದವೂ ಇರಬಹುದು. ಅಥವಾ ಉತ್ತಮ ಔಷಧಗುಣವಿರುವ ಮೂಲಿಕೆಗೆ ಗುಣವಾಚಕವೂ ಆಗಿರಬಹುದು. ಅಥವಾ ಕವಿಯ ಅಮೋ ಕಲ್ಪನೆಯೂ ಇರಬಹುದು. ಹೀಗಿರುವಾಗ ಕೇವಲ ಈ ಶಬ್ದದ ಬೆನ್ನು ಹತ್ತಿ ಸಸ್ಯವನ್ನು ಹುಡುಕುವುದಾದೀತೇ? ಅದಕ್ಕಾಗಿ ಸಂಜೀವನಿ ಎನ್ನುವ ಬಿರುದು ಪಡೆಯುವ ಸಸ್ಯದ ಗುಣಗಳು ಏನಿರಬೇಕು ಎಂದು ಮೊದಲಿಗೆ ನಿಶ್ಚಯಿಸಿಕೊಂಡು ಅನಂತರ ಅದರ ಹುಡುಕಾಟಕ್ಕೆ ಗಣೇಶಯ್ಯ ಹೊರಟಿದ್ದಾರೆ. ಗಣೇಶಯ್ಯನವರ ಪ್ರಕಾರ, ಕಾಶಿಯಿಂದ ಕನ್ಯಾಕುಮಾರಿಯವರೆಗೆ ಪ್ರಚಲಿತವಿರುವ ರಾಮಾಯಣಗಳ ಕಥನದಲ್ಲಿ ಸಾಕಷ್ಟು ವ್ಯತ್ಯಾಸಗಳಿದ್ದರೂ, ಸಂಜೀವನಿಯ ಕುರಿತ ಕಥೆಯಲ್ಲಿ ಕೆಲವು ಅಂಶಗಳು ಸಾಮಾನ್ಯವಾಗಿವೆ. ಇವು ಸಂಜೀವನಿಯನ್ನು ಪತ್ತೆ ಹಚ್ಚುವಲ್ಲಿ ನೆರವಾಗಬಹುದು. ಮರಣಶಯ್ಯೆಯಲ್ಲಿರುವವರಿಗೆ ಮರುಜೀವ ನೀಡುವ ಸಾಮಥ್ರ್ಯವಿದ್ದರೆ ಸಾಲದು, ಸಂಜೀವನಿ ಎನ್ನಿಸಿಕೊಳ್ಳಲು ಇನ್ನೂ ಕೆಲವು ಗುಣಗಳಿರಬೇಕು ಎನ್ನುತ್ತಾರೆ ಗಣೇಶಯ್ಯ.  ಅವರ ಪ್ರಕಾರ ವಿವಿಧ ಭಾರತೀಯ ಭಾಷೆಗಳಲ್ಲಿ ಸಂಜೀವನಿ ಅಥವಾ ಅದರ ಅರ್ಥಕ್ಕೆ ಸಮೀಪವಿರುವ ಅರ್ಥವಿರುವ ಹೆಸರುಗಳಿಂದ ಕರೆಸಿಕೊಳ್ಳುವ ಗಿಡಗಳಲ್ಲಿ ಒಂದು ಸಂಜೀವನಿಯಾಗಿರಬಹುದು. ಅದನ್ನು ತರುವುದಕ್ಕಾಗಿ ಹನುಮಂತ ಪರ್ವತವನ್ನೇ ಕಿತ್ತು ತರಬೇಕಾದ್ದರಿಂದ ಅದು ಪರ್ವತ ಪ್ರದೇಶದ ಸಸ್ಯ ಎನ್ನುವುದು ಸುಸ್ಪಷ್ಟ. ಸಂಜೀವನಿಯಾದ್ದರಿಂದ ಅದರ ಚಿಕಿತ್ಸಕ ಗುಣವೂ ಪ್ರಬಲವಾಗಿಯೇ ಇರಬೇಕು.

ಈ ತರ್ಕಗಳಿಗೆ ಅನುಗುಣವಾಗಿರುವ ಸಸ್ಯಗಳು ಇವೆಯೇ ಎನ್ನುವ ಹುಡುಕಾಟ ಸಂಜೀವನಿ ಮೂಲಿಕೆಯ ಶೋಧದ ಮುಂದಿನ ಹೆಜ್ಜೆ. ಸಂಸ್ಕೃತ ಹಾಗೂ ಇತರೆ ಭಾರತೀಯ ಭಾಷೆಗಳಲ್ಲಿ ಸಂಜೀವನಿ ಅಥವಾ ಜೀವನಿ ಎನ್ನುವ ಹೆಸರಿರುವ ಸಸ್ಯಗಳನ್ನು ಗುರುತಿಸಿದಾಗ ಒಟ್ಟು 17 ಸಸ್ಯ ಪ್ರಬೇಧಗಳು ದೊರೆತವು. ಇವುಗಳಲ್ಲಿ ಹಲವು ಭಾಷೆಗಳಲ್ಲಿ ಸಂಜೀವನಿ ಅಥವಾ ಜೀವನಿ ಎನ್ನುವ ಹೆಸರಿರುವ ಆರು ಸಸ್ಯಗಳನ್ನು ಆಯ್ದುಕೊಳ್ಳಲಾಯಿತು.  ಇವುಗಳಲ್ಲಿಯೂ ರುದಾಂತಿ ಎಂದು ಗುರುತಿಸಿದ ಕ್ರೆಸ್ಸಾ ಕ್ರೆಟಿಕಾ, ಸಂಜೀವನಿ ಭೂತಿ ಎಂದು ಹೆಸರಾದ ಸೆಲಾಜಿನೆಲ್ಲ ಬ್ರಯೋಪ್ಟೆರಿಸ್ ಹಾಗೂ ಜೀವಕ, ಜೀವಭದ್ರ ಮುಂತಾದ ಹೆಸರಿನಿಂದ ಪ್ರಸಿದ್ಧವಾದ ಡೆಸ್ಮೊಟ್ರೈಕಮ್ ಫಿಂಬ್ರಿಯಾಟಮ್ ಗಳು ಸಂಜೀವನಿ ಎನ್ನಿಸಲು ಉತ್ತಮ ಉಮೇದುವಾರರಾದುವು. ಹೆಸರು ಸಂಜೀವನಿಯಾಗಿದ್ದರೂ, ಕರಾವಳಿ ಪ್ರದೇಶದಲ್ಲಿ ಬೆಳೆಯುವುದರಿಂದ ರುದಾಂತಿ ಸಂಜೀವನಿಯಾಗಿರಲಿಕ್ಕಿಲ್ಲ ಎನ್ನುತ್ತಾರೆ ಗಣೇಶಯ್ಯ.

 

ಜೀವವರ್ಧಕ ಅಥವಾ ಆರೋಗ್ಯವರ್ಧಕ ಗುಣಗಳೇನಾದರೂ ಈ ಸಸ್ಯಗಳಲ್ಲಿ ಇವೆಯೇ ಎನ್ನುವುದು ಮುಂದಿನ ಪರೀಕ್ಷೆ. ಗಣೇಶಯ್ಯ ಮತ್ತು ಸಂಗಡಿಗರೇ ಸಿದ್ಧಪಡಿಸಿರುವ ಜೀವಸಂಪದ ಎನ್ನುವ ವೈದ್ಯಕೀಯ ಸಸ್ಯಗಳ ಡಾಟಬೇಸ್ (ಯಾದಿ) ಇದರಲ್ಲಿ ನೆರವಾಯಿತು. ಇದರಲ್ಲಿ ಪರಿಶೀಲಿಸಿದಾಗ ಇಲ್ಲಿಯೂ ಸೆಲಾಜಿನೆಲ್ಲ ಬ್ರಯೋಪ್ಟೆರಿಸ್ ಹಾಗೂ ಡೆಸ್ಮೊಟ್ರೈಕಮ್ ಫಿಂಬ್ರಿಯಾಟಮ್ ಸಸ್ಯಗಳೂ ದಾಖಲಾಗಿದ್ದುವು. ಹಾಗಿದ್ದರೆ ಈ ಸಸ್ಯಗಳೇ ಸಂಜೀವನಿಗಳೇ? ಮರಣಶಯ್ಯೆಯಲ್ಲಿರುವವರಿಗೆ ಇವು ಜೀವ ಮರಳಿಸುವವೇ? ಜೀವ ಮರಳಿಸದಿದ್ದರೂ, ಸಾವಿಗೆ ಸಮೀಪವೆನ್ನಿಸಿದ ಹಾಗೂ ನಾವು ಕಕೋಮಕಿ ಎಂದು ಹೆಸರಿಸುವ ಸ್ಥಿತಿಯಿಂದ ರೋಗಿಗಳನ್ನು ಮರಳಿಸುವ ಸಾಮಥ್ರ್ಯ ಇವುಗಳಲ್ಲಿ ಇರಬಹುದು ಎನ್ನುತ್ತಾರೆ ಗಣೇಶಯ್ಯ. ಕೋಮ ಎನ್ನುವ ಸ್ಥಿತಿಯಲ್ಲಿ ದೇಹದ ಎಲ್ಲ ಅಂಗಗಳು ಚಟುವಟಿಕೆಯಿಂದ ಇದ್ದರೂ ಮಿದುಳಿಗೆ ಗರಬಡಿದಂತಾಗಿರುತ್ತದೆ. ವಿಷ ಸೇವನೆ, ತಲೆಗೆ ತೀವ್ರ ಗಾಯವಾದಾಗಲೂ ಈ ಸ್ಥಿತಿ ಉಂಟಾಗುತ್ತದೆ. ಕೆಲವೊಮ್ಮೆ ಇದು ಸಾವಿಗೆ ಕಾರಣವೂ ಆಗುತ್ತದೆ. ಇಂತಹ ಸ್ಥಿತಿಯಿಂದ ಪ್ರಜ್ಞಾವಸ್ಥೆಗೆ ರೋಗಿಗಳು ಮರಳಿದ ಟನೆಗಳೂ ಇವೆ. ಲಕ್ಷ್ಮಣನಿಗೆ ಬಂದೊದಗಿದ್ದು ಇಂತಹ ಕೋಮ ಸ್ಥಿತಿಯೇ ಇದ್ದಿರಬಹುದು, ಸಾವಲ್ಲ ಎನ್ನುವ ಅಭಿಪ್ರಾಯ ಗಣೇಶಯ್ಯನವರದ್ದು. ಅರ್ಥಾತ್ ಕೋಮ ಸ್ಥಿತಿಯಲ್ಲಿ ಇರುವ ರೋಗಿಗಳಿಗೆ ಪ್ರಜ್ಞೆಯನ್ನು ಮರಳಿಸುವ ಸಾಮಥ್ರ್ಯ ಸಂಜೀವನಿಗಿರಬೇಕು.

ಇಂತಹ ಸಾಮಥ್ರ್ಯ ಈ ಸಸ್ಯಗಳಿಗೆ ಇವೆಯೋ ಇಲ್ಲವೋ ಎನ್ನುವುದನ್ನು ಇನ್ನು ಮುಂದೆ ತಿಳಿಯಬೇಕಷ್ಟೆ. ಆದರೆ ಸಾವಿನಂಚಿನಿಂದ ಮರಳಿ ಜೀವ ಪಡೆಯುವ ಗುಣ ಸೆಲಾಜಿನೆಲ್ಲ ಬ್ರಯೋಪ್ಟೆರಿಸ್ಗೆ ಇದೆ. ಒಣ ಪರಿಸರದಲ್ಲಿ  ಸತ್ತಂತೆ ಮುರುಟುವ ಈ ಗಿಡ, ಮಳೆ ಬಂದು ಅನುಕೂಲ ಸ್ಥಿತಿ ನಿರ್ಮಾಣವಾದ ಕೂಡಲೆ ಮರಳಿ ನಳನಳಿಸುತ್ತದೆ. ಆಯುರ್ವೇದ, ಸಿದ್ಧ ಹಾಗೂ ಹೋಮಿಯೋಪತಿ ವೈದ್ಯ ಪದ್ಧತಿಗಳು ಔಷಧಿಗಳಲ್ಲಿ ಆಯಾ ಸಸ್ಯಗಳ ಸಹಜ ಗುಣಗಳೇ ಕಾಣಿಸುತ್ತವೆ ಎಂದು ನಂಬುತ್ತವೆ. ಹಾಗಿದ್ದರೆ ಸಾವಿನಂಚಿನಿಂದ ಮರಳುವ ಸೆಲಾಜಿನೆಲ್ಲ ಬ್ರಯೋಪ್ಟೆರಿಸ್ ಅನ್ನು ಅದೇ ಕಾರಣಕ್ಕಾಗಿ ಸಂಜೀವನಿ ಎಂದು ಕರೆದಿರಬಹುದೇ? ನರಕೋಶಗಳಿಗೆ ಾಸಿ ಮಾಡುವ ಹೈಡ್ರೊಜನ್ ಪರಾಕ್ಸೈಡ್ನ ಪ್ರಭಾವಕ್ಕೊಳಗಾದ ಇಲಿ ಮತ್ತು ಕೀಟಗಳ ಜೀವಕೋಶಗಳಿಗೆ ಈ ಸಸ್ಯದ ಸಾರ ಮರುಚೇತನ ನೀಡುತ್ತದೆನ್ನುವುದು ಕೆಲವು ಪ್ರಯೋಗಗಳಿಂದ ತಿಳಿದಿದೆ. ಕೋಮ ಸ್ಥಿತಿಯಲ್ಲಿ ಬಾಧಿತವಾಗುವ ನರಕೋಶಗಳ ಮೇಲೆ ಪ್ರಭಾವ ಬೀರುವ, ಪರ್ವತ ಪ್ರದೇಶಗಳಲ್ಲಿ ಬೆಳೆಯುವ, ಸಾವಿನಂಚಿನಲ್ಲಿದ್ದರೂ ಜೀವಿಸಿರುವ ಹಾಗೂ ಸಂಜೀವನಿ ಎಂಬ ಹೆಸರೂ ಇರುವುದರಿಂದ ಸೆಲಾಜಿನೆಲ್ಲ ಬ್ರಯೋಪ್ಟೆರಿಸ್ ರಾಮಾಯಣದ ಸಂಜೀವನಿ ಇರಬಹುದೇ ಎನ್ನುವ ಕೌತುಕದ ಪ್ರಶ್ನೆಯನ್ನು ಗಣೇಶಯ್ಯ ಮುಂದಿಟ್ಟಿದ್ದಾರೆ.

ಅಂದ ಹಾಗೇ, ಭಾರತೀಯ ಪುರಾಣಗಳಲ್ಲಿ ಇರುವಂತೆಯೇ ಗ್ರೀಕ್ ಹಾಗೂ ಇತರೆ ಪುರಾತನ ಸಂಸ್ಕೃತಿಗಳಲ್ಲೂ ಅಮೃತ, ಸಂಜೀವನಿಯಂತಹ ಪರಿಕಲ್ಪನೆಗಳಿವೆ. ಅಲ್ಲಿಯೂ ಇದೇ ತರ್ಕವನ್ನು ಅನುಸರಿಸಿದಲ್ಲಿ, ಇನ್ನೂ ಹಲವು ಸಂಜೀವನಿಗಳ ಅನಾವರಣ ಆಗಬಹುದು.  ಏನೇ ಆಗಲಿ. ಆಡುಮಾತಿನಲ್ಲಿ ಕಥೆಯಾದ ಪದದ ಜಾಡು ಹಿಡಿದು ತರ್ಕಗಳಿಂದ ಅದಕ್ಕೊಂದು ರೂಪ ಕೊಡುವ ಈ ಪ್ರಯತ್ನ ನಿಜವಾಗಿಯೂ ಹನುಮಂತ ಪ್ರಯತ್ನವೇ ಸರಿ.

Ganeshiah, K. N. et al., In search of Sanjeevani, Current Science, Vol. 97, No. 4, Pp 484-489, (25 August 2009), 2009.