ಕೈ ಹಿಡಿದ ಸರಪಳಿಯ ಜಗ್ಗುತಿದೆ ಕರಿನಾಯಿ,
ಹೊಳೆ ಹೊಳೆವ ಕೆಂಗಣ್ಣು ಜೋಲ್ವ ನಾಲಗೆ ಬಾಯಿ !
ಸಂಜೆ ಮುಗಿಲಿನ ಕೆಳಗೆ
ದೂರದೂರದವರೆಗೆ
ಮುಗಿವಿರದ ಪ್ರಶ್ನೆಯೊಲು ಹಾಸಿರಲು ಟಾರ್ ಬೀದಿ
ಕೈ ಹಿಡಿದ ಸರಪಳಿಯ ಜಗ್ಗುತಿದೆ ಕರಿನಾಯಿ ಮುಂದೆ ಮುಂದೆ
ಹಿಡಿದ ಕೈ ಸಾಗುತಿದೆ ಹಿಂದೆ ಹಿಂದೆ !

ಹಗಲೆಲ್ಲ ಗಾಡಿಯನೆಳೆದು ಸೋತು ಸುಸ್ತಾದ
ಜಟಕಾ ಕುದುರೆಯಂತೆ,
ಸೋತ ದಳಪತಿಯಂತೆ,
ಕೆನ್ನವಿರ ತಲೆಗೆದರಿ ಮುಳುಗುತಿಹನಲ್ಲಿ ಅದೊ
ಮುದಿಯ ಸೂರ್ಯ,
ಮುಗಿಲ ಕೊತ್ತಳದಲ್ಲಿ ಮುಳಗುತಿದೆ ಆಗಲೇ
ಇರುಳ ಸೂರ್ಯ !

ಅಳಿದುಳಿದ ಬೆಳಕಿನಲಿ ತಲೆಯನೆತ್ತಿಹುದಲ್ಲಿ
ಆಫೀಸು ಕಟ್ಟಡ ;
ಈಗಲೋ ಆಗಲೋ ನಿದ್ದೆಯಾಳಕೆ ಇಳಿವ
ಹಸುಳೆ ಕಣ್‌ಬಿಡುವಂತೆ ಕಿಟಕಿ ಗಾಜಿನ ಹೊಳಪು,
ನೂರಾರು ನೆನಪು :
ಓ ಅಲ್ಲೆ, ಆ ಮಹಡಿಯಲ್ಲೆ ಇದೆ
ಆಫೀಸು ರೂಮು.
ಬೆಲ್ಲನೊತ್ತಿದರೆ ಸಾಕು, ಬಂದು ನಿಲ್ಲುತಿದ್ದನು ಪ್ಯೂನು,
ಟೇಬಲ್ಲ ಮೇಲೆಯೇ ತಿರುಗುತಿದ್ದಿತು ಫ್ಯಾನು.
ನೂರಾರು ಜನ ಬಂದು ಹೊಡೆಯುತಿರಲು ಸಲಾಮು,
ಜರ್ಬಿತ್ತು, ಅಧಿಕಾರವಿತ್ತು ; ಕೈಕೆಳಗಿನವರನ್ನು
ನಡುಗಿಸುವ ಬಲವಿತ್ತು ;
ಎಲ್ಲವೂ ಇತ್ತು ; ಮೊನ್ನೆ ದಿನ ತಾನೇ ಇತ್ತು ;
ಈಗಿಲ್ಲ ; ಅದು ಹಳೆಯ ನೆನಪು
*     *     *

ಮೂವತ್ತು ವರುಷದ ದುಡಿತ ;
ಅಧಿಕಾರಕ್ಕೆ, ದರ್ಪಕ್ಕೆ, ಬಿಂಕಕ್ಕೆ
ಬೆಲೆಗೊಟ್ಟ ಜನದ ತಾಳದ ಬಡಿತ
ಅದರೊಡನೆ ಕುಣಿತ !

ಯಾವ ಪುರುಷಾರ್ಥವನು ಪಡೆದುದಾಯಿತು ಜೀವ ?
ಇತ್ತು, ಅವಕಾಶವಿತ್ತು ; ತಿಳಿವಿತ್ತು ; ಬೆಳಕಿತ್ತು,
ಎದೆಯ ಹೊಸ್ತಿಲಿನಲ್ಲೆ ಕಾಯುತಿದ್ದನು ದೇವ,
“ಒಳಗೆ ಬರಲಪ್ಪಣೆಯೆ ?” ಎಂಬ ದನಿ ಕೇಳಿದರು
ಅದು ಬೇಡವಾಗಿತ್ತು.
“ಹೊತ್ತು ಹೋದಾಮೇಲೆ ಯಾರು ಬಲ್ಲರೊ ನಿನ್ನ
ಹೊತ್ತು ಹೋಗದ ಮುನ್ನ
ಮೃತ್ಯು ಮುಟ್ಟದ ಮುನ್ನ
ತೊತ್ತುಗೆಲಸವ ಮಾಡು-”
ಅದೋ ಮುಳುಗುತಿದೆ ಹೊತ್ತು ; ಈಗ ಅದು ಸೂಡು !
ಪಡುವಣದ ಚಿತೆಯಲ್ಲಿ ಹಗಲ ಹೆಣ ಉರಿಯುತಿದೆ
ನೋಡು ನೋಡು !
*     *     *

ಮಸಿ ನಿರಾಸೆಯ ನಭದ ಮೇಲೆ ಕರಿಗೆರೆಗಳನು
ಬರೆದ ತಂತಿಯ ಕಂಬ ಸಾಲು ಸಾಲು !
ತಲೆಗೆದರಿ ನಿಂತಿರುವ ಈಚಲಿನ ರೂಕ್ಷತೆಗೆ
ಹಿನ್ನೆಲೆಯ ರಚಿಸಿರಲು ಬೋಳು ಬಯಲು,
ದೂರ ದೂರದವರೆಗೆ
ಸಂಜೆ ಬಾನಿನ ಕೆಳಗೆ
ಮುಗಿವಿರದ ಪ್ರಶ್ನೆಯೊಲು ಮಲಗಿರುವ ಟಾರ್ ಬೀದಿಯಲ್ಲಿ
ಕೈ ಹಿಡಿದ ಸರಪಳಿಯ ಜಗ್ಗುತಿದೆ ಕರಿನಾಯಿ ಮುಂದೆ ಮುಂದೆ
ಹಿಡಿದ ಕೈ ಸಾಗುತಿದೆ ಹಿಂದೆ ಹಿಂದೆ !