ಹಗಲ ಬೆಳಕಿನ ಗಡಿಗೆ-
ಯೊಡೆದು ಚೂರಾಯಿತದೊ
ಪಶ್ಚಿಮಾದ್ರಿಯ ಶಿಖರದರೆಯೊಂದರಲ್ಲಿ !
ಗಡಿಗೆಯಲ್ಲಿದ್ದ ರಸ ದಿಕ್ಕು ದಿಕ್ಕಿಗೆ ಹರಿದು
ಮೋಡಗಳಿಗೂ ಸಿಡಿದು
ಅಲ್ಲೆಲ್ಲ ಇಂಗುತಿದೆ ಮೌನದಲ್ಲಿ
ಬಾನ್ನೀರೆ ಬೆಪ್ಪಾಗಿ ನಿಂತಿರುವಳಲ್ಲಿ !

ಅಯ್ಯೋ ಏನಪಘಾತ !
ಎಂದು ಕಂದಿ ಕುಂದಿದ ಮೋರೆಯಲ್ಲಿ ಜಗ-
ವತ್ತ ನೋಡಿತು ಆಗ ದುಗುಡದಲ್ಲಿ !
ಸಾಲು ತೆಂಗಿನ ತೋಟದಲ್ಲಿರುವ ಗರಿಗರಿಯು
ಬಿಕ್ಕಿ ಮರ್ಮರಿಸಿದುವು ಗಾಳಿಯಲ್ಲಿ.
ಸುದ್ದಿ ತಿಳಿದೊಡನೆಯೇ ವಾಯುದೇವನು ನಡೆದ
ವಾರ್ತೆ ಹಬ್ಬಿತು ಜಗಕೆ ನಿಮಿಷದಲ್ಲಿ.

ಭಗ್ನ ಮಂದಿರ ಮೌನ ಇಳೆಯನಾವರಿಸಿತ್ತು
ಹಗಲ ಬೆಳಕಿನ ಚೂರು ನರಳಿ ಕರಗುತಲಿತ್ತು
ಮೌನಭೂತದ ತೆಕ್ಕೆಯಲ್ಲಿ ಸಿಕ್ಕು ಜಗದ ಉಸಿರಡಗಿತ್ತು
ನೂರು ಜೀರುಂಡೆಗಳು ಹುಯ್ಯಲಿಟ್ಟುವು ಕಿವಿಯ ಕೊರೆಯುವಂತೆ
ಮುಗಿಲ ಕಾಳ್ಮೊಗದಲ್ಲಿ ಚಿಕ್ಕೆಗಳು ಮಿನುಗಿದುವು
ಚಿಂತೆಗಳೆ ಕಣ್ತೆರೆದು ನೋಡುವಂತೆ.
ಅಲ್ಲಲ್ಲ ; ಹಗಲ ಗೋರಿಯ ಮೇಲೆ ಹಚ್ಚಿಟ್ಟ ದೀಪದಂತೆ !