ವೇದಕಾಲದ ಹೊತ್ತಿಗೆ ಸಾಂಸ್ಥಿಕ ರೂಪವನ್ನು ಪಡೆದುಕೊಂಡ ವಿವಾಹ ಸಂಸ್ಥೆಯಲ್ಲಿ ಹೆಣ್ಣಿಗೆ ಆಯ್ಕೆ ನಿರಾಕರಣೆಗೆ ಅವಕಾಶವಿತ್ತು. ವಿವಾಹ ಮೊದಲು ಗಂಡು-ಹೆಣ್ಣಿನ ಸಂಬಂಧವಾಗಿತ್ತೇ ವಿನಃ ಮನೆತನದ ಸಂಬಂಧವಾಗಿರಲಿಲ್ಲ. ಮನುವಿನ ಕಾಲಕ್ಕೆ ಬರುವ ಹೊತ್ತಿಗೆ ಅತ್ಯಂತ ಸಂಕೀರ್ಣ ಸ್ವರೂಪ ಪಡೆದುಕೊಂಡ ವಿವಾಹಸಂಸ್ಥೆಯಿಂದ ಹೆಣ್ಣಿನ ಲೈಂಗಿಕತೆ ಮತ್ತು ತಾಯ್ತತನದ ಮೇಲೆ ಸಂಪೂರ್ಣ ನಿಯಂತ್ರಣವನ್ನು ಸಾಧಿಸುವುದರ ಮೊದಲ ನೆಲೆಯೆ ಹೆಣ್ಣಿನ ನೆಲೆಯನ್ನು ನಿರಾಕರಿಸುವುದಾಗಿತ್ತು. ಪಿತೃ ವ್ಯವಸ್ಥೆಯ ಚಿಂತನೆಗಳೆಲ್ಲವೂ ಹೆಣ್ಣಿಗೆ ಅಭದ್ರತೆ, ಅರಕ್ಷತೆಯನ್ನುಂಟುಮಾಡಲು ಹಲವು ಆಯಾಮಗಳನ್ನು ಶೋಧಿಸಿದವು. ಅವುಗಳಲ್ಲಿ ಬಲಿಷ್ಠವಾದುದು ಮಹಿಳಾ ಅಸ್ತಿತ್ವದ ನಿರಾಕರಣೆಯನ್ನು ಬಯಸುವುದು. ವಿವಾಹ ಸಂಸ್ಥೆಯಡಿಯಲ್ಲಿಯೇ ಸಾಗಬೇಕಾದುದು ಸಂತಾನ ಪ್ರಕ್ರಿಯೆಯಾದ್ದರಿಂದ, ಮಹಿಳೆಯ ಸಂತಾನಾರೋಗ್ಯದ ಮೇಲೆ ಆ ಸಮಾಜದ ಪರಿಣಾಮಗಳು ಕಾಣಬಹುದಾಗಿದೆ. ಹಾಗಾಗಿ ಸಂತಾನಾ ರೋಗ್ಯದ ಚರ್ಚೆಯ ಪೂರ್ವಭಾವಿಯಾಗಿ ಈ ಸಂಗತಿಗಳನ್ನು ವಿವರಿಸಿಕೊಳ್ಳುವುದು ಅಗತ್ಯವಾಗಿದೆ.

ಸಂತನಾರೋಗ್ಯದ ಮೇಲೆ ಸಮಾಜ ಬೀರುವ ಪ್ರಮುಖ ಸಮಸ್ಯೆಗಳಾದ ಲೈಂಗಿಕತೆ, ತಾಯ್ತನ, ವಿವಾಹ ಸಂಪೂರ್ಣವಾಗಿ ಸಾಮಾಜಿಕ ನೆಲೆಯಲ್ಲಿಟ್ಟು ನೋಡಿದಾಗ ಅಲ್ಲಿನ ಸಮಸ್ಯೆಗಳು ಅನಾವರಣಗೊಳ್ಳುತ್ತವೆ. ಮೇಲ್ನೋಟಕ್ಕೆ ಆರೋಗ್ಯ ಪರಿಪೂರ್ಣವೆನಿಸಿದರೂ ಕೂಡ ಹೆಣ್ಣು ಒಳೊಗೊಳಗೆ ಸಮಸ್ಯೆಗಳಿಂದ ನರಳುತ್ತಿರುತ್ತಾಳೆ. ಅದರಲ್ಲೂ ಲೈಂಗಿಕತೆ-ತಾಯ್ತನ ಎರಡು ನಿಸರ್ಗ ಸಹಜವಾದವು. ಆದರೆ ವಿವಾಹ ಸಂಪೂರ್ಣ ಸಾಮಾಜಿಕ ರಚನೆ, ಇವೆರಡನ್ನೂ ನಿಯಂತ್ರಿಸಲೆಂದೇ ರೂಪಿತವಾದುದು, ಇಂತಹ ನಿರ್ಬಂಧದಿಂದಾಗಿ ಮಹಿಳಾ ಆರೋಗ್ಯ ಅದರಲ್ಲೂ ಸಂತಾನಾರೋಗ್ಯ ಭೀಕರ ಸಮಸ್ಯೆಗಳನ್ನು ಎದುರಿಸುತ್ತಿದೆ. ಆಧುನಿಕತೆಯ ಈ ಸಂಬಂಧಿ ಪ್ರಯೋಗಗಳು ಹೆಣ್ಣಿನ ಆರೋಗ್ಯವನ್ನು ನಿರ್ಲಕ್ಷಿಸುವುದಲ್ಲದೇ ಆರೋಗ್ಯದ ಮೇಲೆ ವಿಚಿತ್ರ ಪ್ರಹಾರಗಳನ್ನು ಎಸಗುತ್ತಿದೆ. ಈ ಹಿನ್ನೆಲೆಯನ್ನಾಧರಿಸಿ ಸಂತಾನಾರೋಗ್ಯ ಮತ್ತು ತಂತ್ರಜ್ಞಾನವನ್ನು ಇಲ್ಲಿ ಚರ್ಚೆಗೊಳಪಡಿಸಲಾಗುತ್ತಿದೆ.

ಮನುಷ್ಯ ತಾನು ಗತಿಸಿದ ನಂತರ ತನ್ನ ಪ್ರತಿನಿಧಿ ಜೀವವನ್ನು ಭೂಮಿಯ ಮೇಲೆ ಉಳಿಸಿ ಹೋಗುವ ಪ್ರಕ್ರಿಯೆಯ ಸಂತಾನದ ಉತ್ಪಾದನೆ. ಎರಡು ಭಿನ್ನ ಗುಣವಿರುವ ಜೀವಗಳು ಸಮಾಗಮಗೊಳ್ಳುವ ಮೂಲಕ ಇನ್ನೊಂದು ಜೀವದ ಸೃಷ್ಟಿಗೆ ಕಾರಣವಾಗುತ್ತವೆ. ಈ ಪ್ರಕ್ರಿಯೆಯಲ್ಲಿ ಹೆಣ್ಣು-ಗಂಡಿನ ಭಾಗವಹಿಸುವಿಕೆ ಪ್ರಾರಂಭದ ಹಂತದಲ್ಲಿ ಇರುತ್ತದೆ. ಆದರೂ ಇಲ್ಲಿ ಬಹು ದೀರ್ಘ ಅವಧಿಯವರೆಗೂ ಮುಂದುವರೆಯಬೇಕಾಗಿರುವುದು ಹೆಣ್ಣೆ. ಅಣು ಮಾತ್ರದ ಅಂಶವು ಮಗುವಾಗಿ ರೂಪುಗೊಳ್ಳುವಲ್ಲಿ ಹೆಣ್ಣಿನ ಪಾತ್ರ ಅತ್ಯಂತ ಹಿರಿದಾದುದು. ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಮಗು ಭೂಮಿಗೆ ಬಂದ ನಂತರವೂ, ಅದು ಸ್ವತಂತ್ರ್ಯವಾಗುವವರೆಗಿನ ಹೊಣೆಗಾರಿಕೆಯನ್ನು ಮಹಿಳೆಗೆ ಹೊರಿಸಲಾಗಿದೆ. ತನ್ನ ಬದುಕಿನ ಬಹುಮುಖ್ಯ ಅವಧಿಯನ್ನು ವಿನಿಯೋಗಿಸುವ ಈ ಮಹತ್ತರ ಕ್ರಿಯೆಗಳೆಲ್ಲವೂ ಮನುಕುಲದ ಮುಂದುವರಿಕೆಗಾಗಿ. ತನ್ನ ಜೀವಿತವನ್ನೇ ಬಲಿಯಾಗಿಸುವಂತಹ ಮಹಿಳೆಯ ಕುರಿತು ವ್ಯವಸ್ಥೆಯಲ್ಲಿರುವ ನಿರ್ಲಕ್ಷವು ಇವತ್ತು ಪ್ರಶ್ನಿಸಲೇಬೇಕಾದ ಜರೂರಿದೆ.

ಮೂಲಭೂತವಾದ ಪ್ರಶ್ನೆಯೆಂದರೆ ಈಗಾಗಲೇ ಜಾರಿಗೊಂಡಿರುವ ಯಾವುದೇ ಬಗೆಯ ಚಿಂತನೆಗಳು ಕೂಡ ಪಿತೃ ಸಂಸ್ಕೃತಿಯ ಮೌಲ್ಯವನ್ನು ಸ್ಥಿರಿಕರಿಸುವ, ಪೋಷಿಸುವ ಚಿಂತನೆಗಳಾಗಿಯೇ ರೂಪುಗೊಳ್ಳುತ್ತಿವೆ. ಸಾಮಾನ್ಯೀಕರಿಸಿದ ಯಾವುದೇ ಚಿಂತನೆಯು ಮಾನವರೆಲ್ಲರನ್ನು ಒಳಗೊಂಡಿದೆಯೆಂದು ಹೇಳುತ್ತಿರುವಾಗಲೂ ಅಲ್ಲಿ ಮಹಿಳೆಯರ ಗೈರು ಹಾಜರಿಯಿದೆ. ಸಮುದಾಯದ ಆರೋಗ್ಯವನ್ನು ಕಾಪಾಡವ ಹೊಣೆಹೊತ್ತಿರುವ ಆರೋಗ್ಯ ವ್ಯವಸ್ಥೆಯ ಚಿಂತನೆಗಳನ್ನು ಪರಿಶೀಲನೆಗೊಳಪಡಿಸಿದಾಗ, ಅದರೊಳಗೆ ಅಡಕವಾಗಿರುವ ಪಕ್ಷಪಾತದ ಧೋರಣೆಗಳು ಅನಾವರಣಗೊಳ್ಳುತ್ತವೆ.

ಸಮಾಜದ ಒಂದು ಹೊರೆಯೆಂದು ಭಾವಿಸಲಾಗಿರುವ ಹೆಣ್ಣು ಜೀವವು ಮನುಕುಲದ ಮುಂದುವರಿಕೆಗಾಗಿ ಇರುವವಳಾದರೂ ಈ ವ್ಯವಸ್ಥೆಯು ಅವಳನ್ನು ಕಡೆಗಣಿಸಿದೆ. ಒಬ್ಬ ಮಹಿಳೆಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಸಾಮಾಜಿಕ ವ್ಯವಸ್ಥೆಯ ಪ್ರತಿಫಲಿತ ನಿಯಮವಾಗಿರುತ್ತದೆ. ದೈಹಿಕ, ಮಾನಸಿಕ, ಭೌದ್ಧಿಕ ಮತ್ತು ಸಂತಾನ ಸಂಬಂಧಿ ನಾಲ್ಕು ಬಗೆಯ ಆರೋಗ್ಯವನ್ನು ಮಹಿಳೆಯು ಕಾಪಾಡಿಕೊಳ್ಳಬೇಕಾಗಿದೆ. ಈ ಸಂಬಂಧಿ ಸಮಸ್ಯೆಗಳು ಸಾಮಾಜಿಕ ಸಮಸ್ಯೆಗಳಾಗದೆ ವೈಯಕ್ತಿಕ ಸಮಸ್ಯೆಗಳಾಗುತ್ತವೆ. ಕುಟುಂಬದಲ್ಲಿನ ಬಡತನದ ಪರಿಣಾಮಗಳು ಯಾವುದೇ ಕಾರಣಕ್ಕೂ ಪುರುಷನ ಮೇಲಾಗುವುದಿಲ್ಲ. ಕೌಟುಂಬಿಕ ಬಡತನದಿಂದಾಗಿ ಮಹಿಳೆ ಪೌಷ್ಠಿಕ ಆಹಾರದ ಕೊರತೆಯಿಂದ ಬಳಲುತ್ತಾಳಾದರೆ, ಶ್ರೀಮಂತ ಕುಟುಂಬದ ಮಹಿಳೆಯು ಕೂಡ ಅದೇ ಅಪೌಷ್ಠಿಕತೆಯನ್ನು ಅನುಭವಿಸುತ್ತಾಳೆ ಉದಾ: ಸಮಾಜ ವ್ಯವಸ್ಥೆಯಲ್ಲಿ ಕಟ್ಟಲ್ಪಟ್ಟ ಮಹಿಳಾ ಸೌಂದರ್ಯದ ಪರಿಕಲ್ಪನೆಯು ಮಹಿಳೆಯ ಆಹಾರ ಸೇವನೆಯನ್ನು ನಿಯಂತ್ರಿಸುತ್ತದೆ. ಪ್ರಭಾವಿತ ಮತ್ತು ನಿಯಂತ್ರಿತ ಸಮಾಜ ವ್ಯವಸ್ಥೆಗಳೆರಡೂ ಸೇರಿ ಮಹಿಳೆಯ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರುತ್ತಿವೆ. ಅವಳ ಅನುಕೂಲ-ಪ್ರತಿಕೂಲ ಪರಿಸ್ಥಿತಿಗಳೆರಡರಲ್ಲೂ ಅವಳು ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳಲು ಆಗದಂತಹ ಪ್ರಸಂಗಗಳು, ಚಿಂತನೆಗಳೂ ಸಾಮಾಜಿಕ ವ್ಯವಸ್ಥೆಯಲ್ಲಿವೆ. ಮಹಿಳೆಯ ಬದುಕು ಸಾಮಾಜಿಕ ನೆಲೆಯಿಂದಲೇ ನಿರ್ವಚನಗೊಳ್ಳುವುದರಿಂದ ಅವಳ ಸಮಸ್ಯೆಗಳ ಬಹುಪಾಲು ಕಾರಣಗಳು ವೈಯಕ್ತಿಕತೆಗಿಂತ, ಸಾಮಾಜಕತೆಯಲ್ಲಿಯೇ ಅಡಕವಾಗಿವೆ. ಆದರೆ ಇಂದಿಗೂ ಸಹ ಸಾಂಪ್ರದಾಯಿಕ ಚಿಂತನೆಗಳನ್ನು ಬಲವಾಗಿ ನೆಚ್ಚಿಕೊಂಡಿರುವ ಸಮುದಾಯಗಳು ಅದನ್ನು ಪ್ರಶ್ನಿಸಿದಂತಹ ಭ್ರಮಾತ್ಮಕ ಸ್ಥಿತಿಯಲ್ಲಿರುವಷ್ಟು ಪ್ರಧಾನಧಾರೆಯ ಪರಿಣಾಮ ಗಾಢವಾಗಿದೆ.

ಮಹಿಳೆಯ ಆರೋಗ್ಯದಲ್ಲಿ ಸಂತಾನಾರೋಗ್ಯವು ಬಹುಮುಖ್ಯವಾದುದು. ಇದು ಯಾವುದೇ ಒಂದು ಕ್ಷಣದ ಸಂಗತಿಯಲ್ಲ. ಮಹಿಳೆಯು ಋತುಮತಿಯಾದಂದಿನಿಂದ ಋತುಬಂಧದವರೆಗೂ ಸಂತಾನಾರೋಗ್ಯದ ಪ್ರಕ್ರಿಯೆಯಲ್ಲಿ ತೊಡಗುತ್ತಾಳೆ. ಸಂತಾನ ಉತ್ಪತಿಯು ಮಹಿಳಾ ಬದುಕಿನ ಕೇಂದ್ರಬಿಂದುವಾದ ಅಂಶವಾಗಿದೆ. ಈ ಕುರಿತು ಸಾಮಾಜಿಕವಾಗಿ ಕಟ್ಟಲ್ಪಟ್ಟ ವ್ಯಾಖ್ಯಾನಗಳು ಮಹಿಳೆಯ ಬದುಕಿನ ಮೇಲೆ ಹಲವು ನಿರ್ಬಂಧಗಳನ್ನುಂಟು ಮಾಡಿದೆ. ಸರಳವಾಗಿ ನಡೆಯಬೇಕಾದ ಪ್ರಕ್ರಿಯೆಯು ಸಾಮಾಜಿಕ ವ್ಯವಸ್ಥೆಯ ಹಿಡಿತಕ್ಕೆ ಸಿಲುಕಿ ಮಹಿಳಾ ಬದುಕನ್ನು ಅಧೀನತೆಯತ್ತ ತಿರುಗಿಸಿದೆ.

ಮಹಿಳಾ ಬದುಕಿನ ಪ್ರತಿಯೊಂದು ಸನ್ನಿವೇಶವು ಮೂಲಭೂತವಾಗಿ ಸಾಮಾಜಿಕತೆಯನ್ನಾಧರಿಸಿದೆ. ನಿರಂತರವಾಗಿ ಸಮಾಜ, ಕುಟುಂಬದ ನಿರ್ದೇಶನದಲ್ಲಿ ಒತ್ತೆಯಾಳಿನಂತೆ ಬದುಕುತ್ತಿರುವ ಮಹಿಳೆಯ ಮೇಲಿನ ಆಕ್ರಮಣಗಳಲ್ಲಿ ಪ್ರಭುತ್ವವು ಹಸ್ತಕ್ಷೇಪ ಮಾಡಲಾರಂಭಿಸಿತು. ಇದಕ್ಕೆ ಪೂರಕವಾಗಿ ಹೆಚ್ಚುತ್ತಿರುವ ವಿಜ್ಞಾನ-ತಂತ್ರಜ್ಞಾನಗಳಿಂದ ಮಹಿಳೆಯ ಗರ್ಭಾಶಯವು ಶಕ್ತಿ ಕೇಂದ್ರವಾಗುವ ಬದಲು ಸಾಮಾಜಿಕ ವ್ಯವಸ್ಥೆಯಲ್ಲಿ ಬಳಕೆಯಾಗುತ್ತಿರುವ ಪ್ರಯೋಗಾಲಯದಂತಾಗಿ ನಿರಂತರ ಆಕ್ರಮಣಕ್ಕೊಳಗಾಗುತ್ತಿದೆ. ಸಂತಾನದ ಅಂತರ ಮತ್ತು ಮಿತಿಯ ನೆಪದಲ್ಲಿ ಅವಳ ದೇಹವನ್ನು ಪುರುಷ ಚಿಂತನೆ ಬಳಸಿಕೊಳ್ಳುತ್ತಿದೆ.

ಪುರುಷ ಸಂಸ್ಕೃತಿಯಲ್ಲಿ ಈವರೆಗೂ ಶೋಧಿತವಾಗಿರುವ ಬಹುತೇಕ ಸಂತಾನ ಸಂಬಂಧಿ ತಂತ್ರಜ್ಞಾನಗಳು ಮಹಿಳೆಯ ಆರೋಗ್ಯದ ಮೇಲೆ ಎಸಗುತ್ತಿರುವ ಆಕ್ರಮಣಗಳೇ ಆಗಿವೆ. ಆದ್ದರಿಂದ ಬಿಡುಗಡೆಯ ಪ್ರತೀಕವಾಗಬೇಕಾದ ಹೊಸ ಆವಿಷ್ಕಾರಗಳು ಮಹಿಳಾ ವಿರೋಧಿ ಆಯುಧಗಳಾಗಿ ಬಳಕೆಯಾಗುತ್ತಿವೆ. ವ್ಯಾಸೆಕ್ಟೊಮಿಯಂತಹ ಸರಳ ಸಂತಾನ ಹರಣ ಚಿಕಿತ್ಸೆಗಳಿದ್ದರು,ಅವುಗಳ ಬಳಕೆಯಲ್ಲಿ ತೀರಾ ಗೌಣವಾಗಿವೆ. ದೇಶದ ಜನಸಂಖ್ಯೆಯ ಹೆಸರಿನಲ್ಲಿ ಜನರಿಗೆ ರಕ್ಷಣೆಯನ್ನು ಒದಗಿಸಬೇಕಾದ ಪ್ರಭುತ್ವ ಮತ್ತು ಸರ್ಕಾರಗಳೇ ಕುಟುಂಬ ಯೋಜನೆಯಡಿಯಲ್ಲಿ ಮಹಿಳೆಯರ ವಿರುದ್ಧ ದೌರ್ಜನ್ಯವನ್ನು ನಡೆಸುತ್ತಿದೆ.

ಮಹಿಳೆಯ ಸಂತಾನಾರೋಗ್ಯವು ವ್ಯವಸ್ಥೆಯ ಹಿಡಿತಕ್ಕೆ ಸಿಲುಕಿ ಅನುಭವಿಸುತ್ತಿರುವ ಪರಿಣಾಮಗಳನ್ನು ಸಂತಾನ ಸಂಬಂಧಿ ತಂತ್ರಜ್ಞಾನಗಳ ಆಧಾರದ ಹಿನ್ನೆಲೆಯಲ್ಲಿ ಚರ್ಚೆಗೊಳಪಡಿಸಲಾಗುತ್ತಿದೆ. ಮೇಲೆ ಪ್ರಸ್ತಾಪಿಸಲಾದ ಸಂಗತಿಗಳೆಲ್ಲವೂ ತಂತ್ರಜ್ಞಾನದ ಶೋಧವನ್ನು ನಿರಾಕರಿಸುವ ಉದ್ದೇಶವಲ್ಲ. ಆದ್ದರಿಂದ ತಂತ್ರಜ್ಞಾನಗಳ ಶೋಧದ ಮೂಲ ಆಶಯ ಮತ್ತು ಸಾಮಾಜಿಕ ಸಂದರ್ಭದಲ್ಲಿ ಅವುಗಳು ಬಳಕೆಯಾಗುತ್ತಿರುವುದರ ಬಗೆಯನ್ನು ಆಧರಿಸಿ ವಿಶ್ಲೇಷಣೆಗೊಳಪಡಿಸಲಾಗುತ್ತಿದೆ. ಜೈವಿಕ ಭಿನ್ನತೆಯನ್ನು ಆಧರಿಸಿ ಸಾಮಾಜಿಕ ವ್ಯವಸ್ಥೆಯಲ್ಲಿ ಸಂರಚಿತಗೊಂಡ ಲಿಂಗತಾರತಮ್ಯವು ಮಹಿಳಾ ಬದುಕನ್ನು ಸಂಪೂರ್ಣವಾಗಿ ದಮನಗೊಳಿಸುತ್ತಿದೆ ಎಂಬ ಸಂಗತಿಯನ್ನು ‘ಸಂತಾನಾರೋಗ್ಯ ಮತ್ತು ತಂತ್ರಜ್ಞಾನ’ವೆಂಬ ಶೀರ್ಷಿಕೆಯಡಿಯಲ್ಲಿ ವಿವರಿಸಿಕೊಳ್ಳಲಾಗುತ್ತಿದೆ. ಯಾವುದೇ ಅಂಶವು ಸಹ ಸಕಾರಾತ್ಮಕ-ನಕಾರಾತ್ಮಕ ಪರಿಣಾಮಗಳೆಡರನ್ನು ಒಳಗೊಂಡಿರುತ್ತವೆ. ಸಂತಾನ ಸಂಬಂಧಿ ತಂತ್ರಜ್ಞಾನವು ಕೂಡ ಇದಕ್ಕೆ ಹೊರತಾಗಿ ಉಳಿದಿಲ್ಲ.

ಪ್ರಸ್ತುತ ಪುಸ್ತಕವನ್ನು ಪ್ರಮುಖವಾಗಿ ಎರಡುಭಾಗಗಳಲ್ಲಿ ವಿಭಜಿಸಿಕೊಳ್ಳಲಾಗಿದೆ. ಭಾಗ ಒಂದರಲ್ಲಿ ‘ಸಂತಾನಾರೋಗ್ಯ ಮತ್ತು ತಂತ್ರಜ್ಞಾನ’ ಮತ್ತು ಭಾಗ ಎರಡನ್ನು ಸಂತಾನಾರೋಗ್ಯದಲ್ಲಿ ಬಹುಮುಖ್ಯವಾದ ಭಾಗವಾಗಿರುವ ‘ಕುಟುಂಬ ಯೋಜನೆ’ಯ ಕುರಿತು ಚರ್ಚೆಗೊಳಪಡಿಸಲಾಗಿದೆ. ಇವೆರಡೂ ಭಾಗಗಳಲ್ಲಿ ಮಹಿಳಾ ಬದುಕನ್ನು ಸುಸಂಗತಗೊಳಿಸುವ ನಿಟ್ಟಿನಲ್ಲಿ ಸಂತಾನ ಸಂಬಂಧಿ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕಾದ ಸಂಗತಿಯತ್ತ ಗಮನಹರಿಸಲಾಗುತ್ತಿದೆ. ಹಾಗೆಯೇ ಜನಸಂಖ್ಯೆ ನಿಯಂತ್ರಣದ ಕಾರಣದಿಂದಾಗಿ ನಡೆಯುತ್ತಿರುವ ಕುಟುಂಬ ಯೋಜನೆಯೆಂಬುದು ಕೇವಲ ಮಹಿಳೆಯ ಹೊಣೆಯನ್ನಾಗಿಸಲಾಗಿದೆ ಎಂಬುದಕ್ಕೆ ಇಲ್ಲಿ ಚರ್ಚೆಗೆ ಸಂತಾನ ನಿಯಂತ್ರಣ ಮತ್ತು ಸಂತಾನ ಹರಣ ಚಿಕಿತ್ಸೆ ಮೊದಲಾದವುಗಳ ಕುರಿತಾದ ತಂತ್ರಜ್ಞಾನದ ಹೊಸ-ಹೊಸ ಆವಿಷ್ಕಾರಗಳನ್ನು ಬಳಸಿಕೊಳ್ಳಲಾಗಿದೆ.

ಭಾಗ
ಸಂತನಾರೋಗ್ಯ
ಮತ್ತು ತಂತ್ರಜ್ಞಾನ

ಎಲ್ಲ ಜೀವಿಗಳಿಗಿಂತಲೂ ಭಿನ್ನವಾಗಿರುವ ಮನುಷ್ಯ ಪ್ರಾಣಿಗೆ ಈ ಸೃಷ್ಟಿ ಆಲೋಚಿಸುವ, ವಿಶ್ಲೇಷಿಸುವ, ತರ್ಕಿಸುವ, ಹೊಸದನ್ನು ಹುಡುಕುವ ಕುತೂಹಲ ಮತ್ತು ಅದನ್ನು ಅನುಭವಿಸುವ ಶಕ್ತಿಯೊಂದು ಲಭ್ಯವಾಗುವಂತಾಗಿಸಿದೆ. ಹಾಗೆಯೇ ತನ್ನ ಬದುಕನ್ನು ತನ್ನಿಚ್ಛೆ, ಅಗತ್ಯಕ್ಕನುಗುಣವಾಗಿ ರೂಪಿಸಿಕೊಳ್ಳಬಲ್ಲ ಸಾಮರ್ಥ್ಯ ಮನುಷ್ಯ ಜೀವಿಗಿದೆ. ಪ್ರಕೃತಿಗೆ ಸವಾಲನ್ನೆಸೆದು ಇಡೀ ಪ್ರಕೃತಿಯನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಮಣಿಸಿಕೊಳ್ಳುವಲ್ಲಿ ಮನುಕುಲ ಬಹುಪಾಲು ಯಶಸ್ವಿಯಾಗಿದೆ. ಅಂಥ ಶೋಧ, ಆಲೋಚನೆಗಳಲ್ಲಿ ವಿಜ್ಞಾನ-ತಂತ್ರಜ್ಞಾನವು ಒಂದಾಗಿದೆ.

ಸಾಮಾಜಿಕ ವ್ಯವಸ್ಥೆಯಲ್ಲಿ ಪಿತೃ ಸಂಸ್ಕೃತಿಗೆ ದಕ್ಕಿದ ತಂತ್ರಜ್ಞಾನದ ಸಾಮರ್ಥ್ಯವನ್ನು ಕುರಿತು ಅದು ರೂಪುಗೊಂಡ ಮಕೂಲ ಉದ್ದೇಶ, ವ್ಯವಸ್ಥೆಯಲ್ಲಿ ಅವುಗಳ ಬಳಕೆಯಿಂದ ಆಗುತ್ತಿರುವ ಅನುಕೂಲ-ಅನಾನುಕೂಲಗಳು ಮತ್ತು ವ್ಯಕ್ತಿಗತ ಬದುಕಿನ ಅಭಿವೃದ್ಧಿಯಲ್ಲಿ ವಿಜ್ಞಾನ-ತಂತ್ರಜ್ಞಾನ ಬಳಕೆಗೊಳ್ಳಬೇಕಾದ ಕ್ರಮದ ಕುರಿತ ಚರ್ಚೆಯನ್ನು ಈ ಭಾಗವು ಒಳಗೊಂಡಿವೆ.

ಒಟ್ಟು ಲೋಕವನ್ನು ನಮ್ಮ ಅರಿವಿನ ಪರಿಧಿಯೊಳಗೆ ತಂದುಕೊಳ್ಳುವ ವಿಜ್ಞಾನ ತನ್ನ ಸುತ್ತಣ ಪರಿಸರವನ್ನು, ಅಲ್ಲಿನ ಹಲವಾರು ಸಂಗತಿಗಳನ್ನು ಅಧ್ಯಯನಕ್ಕೊಳಪಡಿಸಿ ಜ್ಞಾನವನ್ನು ಸಂಪಾದಿಸುತ್ತದೆಯಾದರೆ, ತಂತ್ರಜ್ಞಾನವು ಪ್ರಕೃತಿಯಲ್ಲಿರುವುದನ್ನು ನಿಯಂತ್ರಿಸುವತ್ತ ಕಾರ್ಯ ನಿರ್ವಹಿಸುತ್ತದೆ. ಪ್ರಕೃತಿ ಸಹಜವಾದ ಕ್ರಿಯೆಗಳನ್ನು ತನ್ನ ಅವಶ್ಯಕತೆಗೆ ಉಪಯುಕ್ತವಾಗುವಂತೆ ಬಳಸಿಕೊಳ್ಳುವುದಕ್ಕೆ ತಂತ್ರಜ್ಞಾನವು ವಿಜ್ಞಾನ ಶೋಧಿಸಿದ ಸಂಗತಿಗಳ ಮುಂದುವರಿಕೆಯಾಗಿ ಸಾಗುತ್ತದೆ. ಉದಾ: ಹೆಣ್ಣನ್ನು-ಪ್ರಕೃತಿಯೆಂದು; ಗಂಡನ್ನು-ತಂತ್ರಜ್ಞಾನವೆಂದು ವಿವರಿಸಿಕೊಳ್ಳುವುದಾದರೆ, ಸಂತಾನ ಸಂಬಂಧಿ ವಿಜ್ಞಾನದಲ್ಲಿ ಹೆಣ್ಣಿನ ದೇಹದೊಳಗೆ ಆಗುವ ಪ್ರಕೃತಿ ಸಹಜ ಸಂತಾನ ಪ್ರಕ್ರಿಯೆಯನ್ನು ವಿಜ್ಞಾನದ ಮೂಲಕ ಗ್ರಹಿಸಿಕೊಂಡರೆ, ಹೆಣ್ಣಿನ ಈ ಅದ್ಭುತ ಶಕ್ತಿಯನ್ನು ತಂತ್ರಜ್ಞಾನ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದೆ.

ಮಹಿಳೆ ಮತ್ತು ಸಂತನಾರೋಗ್ಯವೆಂಬ ಸಂಗತಿಯು ಹೆಚ್ಚು ಸಂಕೀರ್ಣತೆಯಿಂದ ಕೂಡಿದೆ. ಅಧಿಕಾರದ ಕಾರಣಕ್ಕಾಗಿ ಸೃಷ್ಟಿಯಾದ ಅಸಮಾನ ಲಿಂಗ ಸಂಬಂಧಗಳು ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಹಂತದಲ್ಲೂ ಬೃಹತ್‌ ಪ್ರಮಾಣದಲ್ಲಿ ಪರಿಣಾಮವನ್ನು ಬೀರುತ್ತಿವೆ. ರಾಜಕೀಯ ಅರ್ಥವನ್ನು ಒಳಗೊಂಡ ಸಾಮಾಜಿಕ ಸಂರಚನೆಯಿಂದಾದ ಕೌಟುಂಬಿಕ ಚೌಕಟ್ಟಿನಲ್ಲಿ ಮಹಿಳೆ ಯನ್ನು ಕೇವಲ ಹೆರುವ ಯಂತ್ರವೆಂಬಂತಾಗಿಸಲಾಗಿದೆ. ಅಲ್ಲದೆ ಮಹಿಳೆಯ ಒಟ್ಟು ಚಲನಶೀಲತೆಯ ಮೇಲೆ ಮತ್ತು ಲೈಂಗಿಕತೆಯ ಮೇಲೆ ನಿಯಂತ್ರಣವನ್ನು ಸಾಧಿಸಲು ಪ್ರಯತ್ನವನ್ನು ನಿರಂತರವಾಗಿ ಪಿತೃ ಸಂಸ್ಕೃತಿ ಮಾಡುತ್ತಲೇ ಇದೆ. ಮಹಿಳೆಯ ಲೈಂಗಿಕತೆಗೂ-ಸಂತಾನೋತ್ಪಾದನೆಗೂ ತೀರಾ ಹತ್ತಿರದ ಸಂಬಂಧವಿದೆಯಾದ್ದರಿಂದ ಸಂತಾನೋತ್ಪಾದನೆಯನ್ನು ನಿಯಂತ್ರಿಸುವ ಮೂಲಕ ಮಹಿಳಾ ಅಧೀನತೆಯನ್ನು ಇನ್ನಷ್ಟು ಗಟ್ಟಿಗೊಳಿಸುವಂತಾಗುತ್ತಿದೆ. ವಿಜ್ಞಾನದ ಮಧ್ಯಸ್ಥಿಕೆಯಿಂದಾಗಿ ಹೆಚ್ಚು ವಿಸ್ತೃಗೊಳ್ಳುತ್ತಿರುವ ಸಂತಾನೋತ್ಪಾದನೆಯು ತಂತ್ರಜ್ಞಾನದಿಂದಾಗಿ ಸಂಪೂರ್ಣ ಅರ್ಥವೆ ಬದಲಾವಣೆಗೊಳಪಟ್ಟಿದೆ. ವಿಜ್ಞಾನದ ಮಧ್ಯಸ್ಥಿಕೆಯಿಂದಾಗಿ ಸಂತಾನೋತ್ಪಾದನೆಯು ಹೆಚ್ಚು ತಾಂತ್ರಿಕವಾಗಿದೆ ಹಾಗೂ ಶೋಧಿತವಾಗುತ್ತಿರುವ ತಂತ್ರಜ್ಞಾನಗಳು ಪುರುಷ ಸಂಸ್ಕೃತಿಯ ಪ್ರಭಾವದಿಂದ ಪುರುಷ ಕೇಂದ್ರಿತವಾಗಿ ರೂಪಿತವಾಗುತ್ತಿರುವುದು ಒಂದು ಆಯಾಮವೆಂದರೆ ಶೋಧಿತವಾದ ತಂತ್ರಜ್ಞಾನಗಳೆಲ್ಲವೂ ಸಾಮಾಜಿಕತೆಯ ನಿಯಂತ್ರಣಕ್ಕೊಳಪಟ್ಟಿರುವುದು ಇನ್ನೊಂದು ಆಯಾಮವಾಗಿದೆ.

ಸಂತಾನ ಸಂಬಂಧಿ ತಂತ್ರಜ್ಞಾನಗಳು ಮಹಿಳೆಗೆ ಅವಳ ಬದುಕಿನಲ್ಲಿ ಸ್ವಾತಂತ್ರ್ಯವನ್ನು ಒದಗಿಸುತ್ತದೆ ಎಂಬ ಭ್ರಮೆಯನ್ನು ಸೃಷ್ಟಿಸುತ್ತ ಪರೋಕ್ಷವಾಗಿ ಮತ್ತು ಪ್ರತ್ಯಕ್ಷವಾಗಿ ಮಹಿಳೆಯ ಅಧೀನತೆಯನ್ನು ಸ್ಥೀರಿಕರಣಗೊಳಿಸಲು ವ್ಯವಸ್ಥೆ ಯತ್ನಿಸುತ್ತಿದೆ. ಆದ್ದರಿಂದ ಇದಕ್ಕೆ ಪೂರಕವಾಗಿ ಪ್ರಭುತ್ವ, ಧಾರ್ಮಿಕ ಮುಖಂಡರು, ಸಂತಾನರೋಗ್ಯದ ಸಂಬಂಧದಲ್ಲಿ ವೈದ್ಯಕೀಯ ವ್ಯವಸ್ಥೆ ಮೊದಲಾದವುಗಳು ಪೂರಕವಾಗಿವೆ. ಮಹಿಳೆಯರ ಮೇಲಿನ ನಿರ್ಬಂಧದ ಪಾತ್ರವನ್ನು ಕಡಿಮೆಗೊಳಿಸುವಲ್ಲಿ ಪುಷ್ಟಿಕರವಾಗಬೇಕಾದ ತಂತ್ರಜ್ಞಾನಗಳು ಮಾನವ ಸಂತತಿಯ ಉತ್ಪಾದನೆಗಾಗಿ ಮಹಿಳೆಯ ದೇಹವನ್ನು ನಿರಂತರವಾಗಿ ಘಾಸಿಗೊಳಿಸುತ್ತಿವೆ.

ಸ್ತ್ರೀವಾದಿ ವೈದ್ಯ ಇತಿಹಾಸ ತಜ್ಞರು ಹೇಳುವುದೇನೆಂದರೆ ಮಹಿಳೆ ಮತ್ತು ವಿಜ್ಞಾನದ ನಡುವಿನ ಸಂಬಂಧವನ್ನು ಗಮನಿಸಿದರೆ ಮಹಿಳೆಯರ ಮೇಲಿನ ನಿಯಂತ್ರಣವು ಮೊದಲಿಗಿಂತಲೂ ಹೆಚ್ಚಾಗಿಸಲು ಬಳಸುವ ಆಯುಧಗಳಾಗಿ ತಂತ್ರಜ್ಞಾನಗಳು ಬಳಕೆಯಾಗುತ್ತಿವೆ. ಪ್ರಾಚೀನ ಕಾಲದಲ್ಲಿ ಗರ್ಭಧಾರಣೆಗಳು ಮತ್ತು ಬಾಣಂತನ ಮೊದಲಾದವುಗಳು ಮನೆಯೊಳಗೆ ನಡೆಯುತ್ತಿದ್ದವು. ಆಧುನಿಕ ಸಮಾಜದಲ್ಲಿ ವೈದ್ಯಕೀಯಯ ಸಂಶೋಧನೆಗಳಿಂದಾಗ ಇಂದು ಮಹಿಳೆಯರು ವೈದ್ಯಕೀಯ ಲೋಕಕ್ಕೆ ಮುಖಾಮುಖಿಯಾಗುವಂತಾಗಿದೆ. ಮುಂದುವರೆದಂತೆ ತಂತ್ರಜ್ಞಾನಗಳು ಪ್ರಕೃತಿ ಸಹಜಕ್ರಿಯೆಯಾದ ಸಂತಾನ ಸಂಬಂಧಿ ಪ್ರಕ್ರಿಯೆಯನ್ನು ನಿಯಂತ್ರಿಸುವಲ್ಲಿ ಬಳಕೆಗೊಳ್ಳುತ್ತಿವೆ. ಹೀಗೆ ಸಂತಾನೋತ್ಪಾದನೆಯ ಮೇಲೆ ನಿಯಂತ್ರಣ ಸಾಧಿಸುವ ಮೂಲಕ ಪ್ರಮುಖವಾಗಿ ಲೈಂಗಿಕ ಸಂಭೋಗವಿಲ್ಲದೆಯೂ ಸಂತಾನ ಸೃಷ್ಟಿ ಸಾಧ್ಯವಾಗಿಸುವುದರ ಮೂಲಕ ಜೈವಿಕ ಸಂಪರ್ಕವನ್ನು ಕಡಿತಗೊಳಿಸುವುದರೊಂದಿಗೆ, ಮಾತೃತ್ವ-ಪಿತೃತ್ವದಂತಹ ಪರಿಕಲ್ಪನೆಗಳನ್ನು ಪುನರ್ ಸಂರಚಿಸುವಂತಾಗುತ್ತಿದೆ. ಇದರಿಂದ ಮಹಿಳೆ ದೇಹದಲ್ಲಾಗುವ ಸಹಜ ಪ್ರಕ್ರಿಯೆಗಳಲ್ಲಿ ತಂತ್ರಜ್ಞಾನವು ಪಾಲ್ಗೊಳ್ಳುವುದರಿಂದ ಅವಳ ದೇಹದ ಮೇಲೆ ದುಷ್ಪರಿಣಾಮವನ್ನು ಬೀರುತ್ತಿದೆ.

ಬದಲಾಗುತ್ತಿರುವ ಜೀವನ ಶೈಲಿಯ ಮೇಲೆ ಸಮಾಜ ವ್ಯವಸ್ಥೆಯಲ್ಲಾಗುವ ಪರಿವರ್ತನೆಗಳು, ವಿಜ್ಞಾನ-ತಂತ್ರಜ್ಞಾನಗಳು ಮತ್ತು ಜಾಗತೀಕರಣದ ಪರಿಣಾಮ ಮೊದಲಾದವುಗಳಿಂದಾಗಿ ಹದಗೆಡುತ್ತಿರುವ ಆರೋಗ್ಯ ಸ್ಥಿತಿಗೆ ವೈದ್ಯಕೀಯ ನೇರವು ಇಲ್ಲದೆ ಜೀವಿಸುವ ಸಂದರ್ಭಗಳೆ ಇಲ್ಲವೆಂಬಂತಾಗಿದೆ. ಇಂತಹ ವೈದ್ಯಕೀಯ ವ್ಯವಸ್ಥೆಯು ಸಂತಾನೋತ್ಪಾದನೆಯ ವಿವಿಧ ಹಂತಗಳಲ್ಲಿ ಬಳಕೆಯಾಗುತ್ತಿದೆ. ನಿಸರ್ಗದತ್ತ ಕ್ರಿಯೆಯ ಮೇಲೆ ಹಿಡಿತ ಸಾಧಿಸುವ ಮೂಲಕ ಗರ್ಭಧಾರಣೆಯಾಗದಂತೆ ಗರ್ಭನಿರೋಧಕಗಳನ್ನು ಬಳಸುವುದರಿಂದ ತಡೆಯುವುದು ಒಂದೆಡೆಯಾದರೆ, ಬೇಕಾದ ಸಂದರ್ಭದಲ್ಲಿ ಗರ್ಭಧರಿಸುವಂತಾಗಿಸುವುದು ಇನ್ನೊಂದು ಆಯಾಮವಾಗಿದೆ. ಫಲವಂತಿಕೆಯಲ್ಲಿ ತೊಂದರೆಗಳಿದ್ದರೆ ಅದೆಲ್ಲವನ್ನು ನಿವಾರಿಸುವುದು ತಂತ್ರಜ್ಞಾನದಿಂದ ಸಾಧ್ಯವಾಗಿದೆ. ಇವತ್ತಿನ ಸಂದರ್ಭದಲ್ಲಿ ಗರ್ಭಧರಿಸುವುದು ಅದನ್ನು ಮುಂದುವರಿಸುವ ಹಾಗೂ ನಿರಾಕರಿಸುವಂತಹ ಸ್ವಾತಂತ್ರ್ಯ ವಿಜ್ಞಾನ-ತಂತ್ರಜ್ಞಾನದಿಂದ ಲಭ್ಯವಾಗಿದೆ. ಹಾಗೆಯೇ ನಿರಂತರವಾದ ಪ್ರಕ್ರಿಯೆಯ ಉದ್ದಕ್ಕೂ ಹೆಣ್ಣು ವೈದ್ಯರ ಮೇಲ್ವಿಚಾರಣೆಯಲ್ಲಿರುವಂತಾಗಿದೆ. ಗರ್ಭಧಾರಣೆ ಮತ್ತು ಮಗುವಿನ ಜನನವು ವೈದ್ಯಕೀಯ ಸಂಗತಿಗಳೆಂಬಂತಾಗಿದೆ.

ಸಂತಾನ ಸಂಬಂಧಿ ತಂತ್ರಜ್ಞಾನಗಳನ್ನು ಕೆಲವರು ವೈಜ್ಞಾನಿಕ ಮತ್ತು ತಾಂತ್ರಿಕ ಬೆಳವಣಿಗೆಯೆಂದಿದ್ದಾರೆ. ಸಾಮಾನ್ಯವಾಗಿ ಇವುಗಳನ್ನು ಸಕರಾತ್ಮಕವೆಂದು ನಂಬಿಸಲಾಗಿದೆ. ತಂತ್ರಜ್ಞಾನವು ತನ್ನಷ್ಟಕ್ಕೆ ಪ್ರಶ್ನಾರ್ಹವಲ್ಲವೆಂಬ ಕೆಲವು ಸ್ತ್ರೀವಾದಿಗಳು ಅದರಲ್ಲೂ ಲೆಸ್ಬಿಯನ್‌ ಸ್ತ್ರೀವಾದಿಗಳು ಇದರ ಪರವಾಗಿದ್ದಾರೆ. ಸಾಧಾರಣವಾಗಿ ಪ್ರತಿಯೊಂದು ವಿಷಯಕ್ಕು ಪರ-ವಿರೋಧಗಳಿರುವಂತೆ ಇಲ್ಲಿಯೂ ಕೂಡ ತಂತ್ರಜ್ಞಾನದ ಹೊಸ ಬೆಳವಣಿಗೆಯು ಇದನ್ನು ಬಳಸುವವರ ಮತ್ತು ಅದನ್ನು ಉತ್ಪಾದಿಸುವವರನ್ನು ಆಧರಿಸಿ ಅದನ್ನು ಪ್ರಶ್ನಿಸಬೇಕಾಗಿದೆಯೆಂಬ ನಿಲುವು ತಳೆದಿದ್ದಾರೆ. ಇವರುಗಳು ತಂತ್ರಜ್ಞಾನಗಳಿಂದಾಗುವ ಆಕ್ರಮಣವನ್ನು ಮಾನವ ಹಕ್ಕುಗಳ ಉಲ್ಲಂಘನೆಯೆಂದು ಮತ್ತು ಮಹಿಳೆಯರ ಆರೋಗ್ಯದ ಜವಾಬ್ದಾರಿ ಎಂಬ ಮೊದಲಾದ ಅಂಶಗಳನ್ನು ಗುರುತಿಸಿದ್ದಾರೆ. ಸಂತಾನ ಸಂಬಂಧಿ ತಂತ್ರಜ್ಞಾನಗಳು ಲೈಂಗಿಕತಾವಾದಿಯಾಗಿ ಮತ್ತು ಸಂತತಿಗಾಗಿ ಮಾತ್ರ ಇವೆಯಲ್ಲದೆ, ಮಹಿಳೆಯ ದೇಹದ ಮೇಲಿನ ನಿಯಂತ್ರಣವನ್ನು ವಿಸ್ತರಿಸುವುದರ ಜೊತೆಗೆ ಮಹಿಳೆಯ ದೇಹವನ್ನು ನಿರ್ಬಂಧಿಸುವಂತಾಗಿದೆ.

ತಂತ್ರಜ್ಞಾನದ ಲಕ್ಷಣಗಳನ್ನು ವಿಮರ್ಶಾತ್ಮಕವಾಗಿ ನೋಡುತ್ತಿರುವ ಈ ಗುಂಪು ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ತಂತ್ರಜ್ಞಾನಗಳನ್ನು ಪುನರ್ ಪರಿಶೀಲನೆಗೆ ಒಳಪಡಿಸಬೇಕಾದುದರತ್ತ ಇವರು ಹೆಚ್ಚು ಗಮನಹರಿಸುತ್ತಾರೆ. ಹೀಗೆ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ವಿವಿಧ ದೃಷ್ಟಿಕೋನಗಳಲ್ಲಿ ಪರಿಗಣಿಸಲಾಗಿದೆ. ಜಗತ್ತಿನ ಎಲ್ಲ ಮಹಿಳೆಯರನ್ನು ಏಕಾಕೃತಿಯಲ್ಲಿ ಅಧ್ಯಯನಕ್ಕೊಳಪಡಿಸುವುದು ಸಾಧ್ಯವಿಲ್ಲ. ಏಕೆಂದರೆ ವ್ಯವಸ್ಥೆಯಲ್ಲಿರುವ ಶ್ರೇಣಿಕರಣಗಳಿಂದಾಗಿ ಮಹಿಳೆಯು ಎಲ್ಲದರೊಳಗೂ ಸಿಲುಕಿಕೊಂಡಿದ್ದಾಳೆ. ಆದ್ದರಿಂದ ಪ್ರತಿಯೊಂದು ಸಂಗತಿಗಳು ಆಯಾ ವರ್ಗ, ಜಾತಿ ಮೊದಲಾದ ಮಹಿಳೆಯರ ಮೇಲೆ ಭಿನ್ನವಾಗಿ ಪರಿಣಮಿಸುತ್ತವೆಯೆಂಬುದಾದರೂ ಕೆಲವು ಸಾಮಾನ್ಯ ಲಕ್ಷಣಗಳು ಎಲ್ಲರಲ್ಲೂ ಕಂಡುಬರುತ್ತವೆ. ಸಂತಾನ ಸಂಬಂಧಿ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಅಭಿವೃದ್ಧಿ ಸಾಧಿಸುವಲ್ಲಿ ಸಂಕೀರ್ಣತೆಯಿದೆ. ಸಾಕಷ್ಟು ಸಂಖ್ಯೆಯ ಮಹಿಳಾ ವಿಜ್ಞಾನಿಗಳು, ವೈದ್ಯರು, ಅದರಲ್ಲೂ ಗೈನಾಕಾಲಜಿಸ್ಟಗಳು ಮೊದಲಾದವರು ತಂತ್ರಜ್ಞಾನಗಳ ಕುರಿತು ಕಾರ್ಯನಿರ್ವಹಿಸುತ್ತಿರುವವರು, ಲಿಂಗತ್ವದ ಪರಿಣಾಮದಿಂದಾಗಿ ಮಹಿಳೆಯ ಆಸಕ್ತಿ ಮೇಲೆ ಬೀರುವ ಪರಿಣಾಮಗಳನ್ನು ತೋರಿಸಿದ್ದಾರೆ.

ತಂತ್ರಜ್ಞಾನವು ವಿಜ್ಞಾನದ ಆಯುಧವಾಗಿದೆಯಷ್ಟೇ. ಇದು ನೈಸರ್ಗಿಕವಲ್ಲ, ನಿಷ್ಪಕ್ಷಪಾತವಲ್ಲ ಅಥವಾ ನಮ್ಮ ಅಭಿಪ್ರಾಯಗಳಿಂದ ಹೊರಗುಳಿಯವಂತಹುದಲ್ಲ. ಹಾಗೆಯೆ ಇದು ಐತಿಹಾಸಿಕ, ಸಾಂಸ್ಕೃತಿಕವಾಗಿ ನಿರ್ಧರಿಸಲ್ಪಟ್ಟದ್ದು ಮತ್ತು ಆರ್ಥಿಕ-ರಾಜಕೀಯ ಆಸಕ್ತಿಯಿಂದಾಗಿ ರೂಪು ತಳೆದಿರುವಂತಹುದು. ಸಂತಾನ ಸಂಬಂಧಿ ತಂತ್ರಜ್ಞಾನಗಳು ಸಮಾಜೋ-ಆರ್ಥಿಕವಾಗಿ ಅಧಿಕಾರವನ್ನು ಹೊಂದಿರುವವರ ನಿಯಂತ್ರಣಂದಲ್ಲಿರುವ ಶಕ್ತಿಶಾಲಿಯಾದ ಆಯುಧವೆಂಬಂತಾಗಿದೆ.

ವಿಜ್ಞಾನ -ತಂತ್ರಜ್ಞಾನದ ಕುರಿತ ಸ್ತ್ರೀವಾದಿಗಳು ನಡೆಸಿದ ಅಧ್ಯಯನಗಳ ಫಲಿತವೇನೆಂದರೆ. ಪುರುಷ ಪ್ರಧಾನ ಸಂಬಂಧಗಳಿಂದ ಆವೃತವಾದ ಸಾಮಾಜಿಕ ಸಂಬಂಧಗಳು ತಂತ್ರಜ್ಞಾನವನ್ನು ಒಳಗೊಂಡಿದೆ. ತಂತ್ರಜ್ಞಾನಗಳೆಲ್ಲವೂ ಲಿಂಗ ಪಕ್ಷಪಾತಿಯಗಿವೆ. ಲಿಂಗಾಧಾರಿತ ಸಮಾಜದ ಲಕ್ಷಣಗಳು ಮತ್ತು ಮೌಲ್ಯಗಳೆರಡು ತಂತ್ರಜ್ಞಾನದ ರೂಪಿಕೆಯಲ್ಲೂ ಪ್ರಭಾವ ಬೀರಿವೆಯಲ್ಲದೆ, ಈ ತಂತ್ರಜ್ಞಾನಗಳಿಂದ ಪುರುಷ ಪ್ರಧಾನತೆ ಇನ್ನಷ್ಟು ಗಟ್ಟಿಗೊಳ್ಳುವಂತೆ ಮರು ಸಂರಚನೆಯಾಗಿದೆ. ಅಲ್ಲದೆ ಇಲ್ಲಿನ ಮೌಲ್ಯಗಳು ಮತ್ತು ಅಗತ್ಯಗಳಿಗೆ ಅನುಗುಣವಾಗಿ ಆಧುನಿಕ ಜಗತ್ತಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಗಳು ಅಭಿವೃದ್ಧಿ ಹೊಂದುತ್ತಿರುವುದರ ಉದ್ದೇಶವಾಗಿ ಪರಿಣಮಿಸುತ್ತಿದೆ. ಸಾಮಾನ್ಯವಾಗಿ ಪಾಶ್ಚಾತ್ಯ ಸಂಶೋಧಕರು ಮತ್ತು ಸಂತಾನ ಉತ್ಪಾದನೆಯಲ್ಲಿ ಆಸಕ್ತಿ ತೆಳೆದಿರುವ ವಿಜ್ಞಾನಿಗಳ ಕೆಲವು ನಿರೀಕ್ಷೆಗಳೊಂದಿಗೆ ತಂತ್ರಜ್ಞಾನವು ಅಭಿವೃದ್ಧಿ ಹೊಂದುತ್ತಲೆ ಇದೆ. ಆದರೆ ಇವುಗಳು ಬಳಕೆಗೊಳ್ಳುತ್ತಿರುವ ಮಹಿಳೆಯರ ದೇಹದಲ್ಲಿ ಅತ್ಯಂತ ಕಷ್ಟಕರ, ಅನಿರೀಕ್ಷಿತ ಸಮಸ್ಯೆಗಳನ್ನು ಹುಟ್ಟುಹಾಕುತ್ತಿವೆ. ಮಹಿಳೆಯನ್ನು ವ್ಯಕ್ತಿಯಾಗಿ ಗ್ರಹಿಸದೆ ವಸ್ತುವಾಗಿ ನೋಡಲಾಗುತ್ತಿರುವ ವ್ಯವಸ್ಥೆಯಲ್ಲಿ ಮಹಿಳೆಯ ದೇಹವನ್ನು ಅಧಿಕಾರ ಶಾಹಿಗಳು ಆಟದ ಮೈದಾನದಂತೆ ಪರಿಭಾವಿಸಿದ್ದಾರೆ.

ಸಂಶೋಧನಾವಲಯದಲ್ಲಿ ಘಟನಾತ್ಮಕವಾಗಿ ಶೋಧಿತವಾಗುತ್ತಿರುವ ತಂತ್ರಜ್ಞಾನವು ತನ್ನಷ್ಟಕ್ಕೆ ಸಾಮಾಜಿಕವಾದ ಆಕಾರವನ್ನು ತಳೆಯುತ್ತಿದೆ. ಮಹಿಳೆಯ ಅವಲಂಬಿತನವನ್ನು ನಿವಾರಿಸಬಹುದೆಂದು ಆಶಿಸಲಾದ ಸಂತಾನ ಸಂಬಂಧಿ ತಂತ್ರಜ್ಞಾನಗಳನ್ನು ಬಳಕಸುವ ಅಧಿಕಾರವಾಗಲಿ, ಸ್ವಾತಂತ್ರ್ಯವಾಗಲಿ ಇಲ್ಲವಾದ್ದರಿಂದ ಮಹಿಳೆಯ ದೇಹದ ಮೇಲಿನ ಹಕ್ಕನ್ನು ಪುರುಷ ಸಂಸ್ಕೃತಿ ಇನ್ನಷ್ಟು ಗಟ್ಟಿಗೊಳಿಸಿಕೊಳ್ಳುತ್ತಿದೆ. ಸಂತಾನ ಸಂಬಂಧಿ ತಂತ್ರಜ್ಞಾನಗಳಿಂದಾಗಿ ಸಂತಾನೋತ್ಪಾದನೆಯೆಂಬುದು ಕೈಗಾರೀಕರಣದಂತೆ ಬಳಕೆಗೊಳ್ಳುತ್ತಿರುವ ಇಲ್ಲಿ ಮಹಿಳೆಯ ಸಾಮರ್ಥ್ಯ ಉತ್ಪಾದನೆಯ ಅರ್ಥದಲ್ಲಿ ಬಳಕೆಯಾಗುತ್ತಿದೆ. ಆದರೂ ಉತ್ಪಾದನಾ ವಲಯದಲ್ಲಿ ಮಹಿಳೆಯ ಸಂತಾನೋತ್ಪತ್ತಿಯೆಂಬುದು ಅಂಚಿಗೆ ಸರಿಸಲಾಗಿದೆಯಲ್ಲದೆ ಜೈವಿಕ ತಂತ್ರಜ್ಞಾನವೇ ಸಂತಾನ ಉತ್ಪಾದನೆಯ ಮೂಲವೆಂಬಂತಾಗಿದೆ. ಕೃಷಿ ತಂತ್ರಜ್ಞಾನದಿಂದಾಗಿ ಜನರು ಬಹುರಾಷ್ಟ್ರೀಯ ಆಗ್ರೋ ಏಜೆನ್ಸಿಗಳ ಮೇಲೆ ಅವಲಂಬಿತರಾದಂತೆ, ಸಂತಾನೋತ್ಪತ್ತಿ ತಂತ್ರಜ್ಞಾನದಲ್ಲಿ ಮಹಿಳೆಯರು ಅವುಗಳನ್ನು ರೂಪಿಸುವ ಕಂಪೆನಿಗಳನ್ನು ಅವಲಂಬಿಸುವಂತಾಗಿದೆ. ಸಂತಾನ ಸಂಬಂಧಿ ತಂತ್ರಜ್ಞಾನಗಳು ಮಹಿಳೆಯರಿಗೆ ಇದುವರೆಗೂ ಲಭ್ಯವಾದ ಅಧೀನತೆಯಿಂದ ವಿಮುಕ್ತವಾಗಿಸುವಲ್ಲಿ ಉಪಯುಕ್ತವಾಗುತ್ತಿಲ್ಲ. ಯಥೇಚ್ಛವಾಗಿ ಮಾರುಕಟ್ಟೆಗೆ ಬರುವ ತಂತ್ರಜ್ಞಾನಗಳು ಲಾಭದ ಉದ್ದೇಶದಿಂದ ಬಳಕೆಯಾಗುತ್ತಿವೆ. ಇವುಗಳು ಮಹಿಳೆಯ ಪರಾಧೀನತೆಯನ್ನು ಇನ್ನಷ್ಟು ಭದ್ರವಾಗುವೆಡೆಗೆ ವಿಸ್ತೃತಗೊಳ್ಳುತ್ತಿವೆಯೇ ಹೊರತು ಮಹಿಳಾ ಬದುಕಿನ ಕಾಳಜಿಯನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ.

ಸಂತಾನೋತ್ಪಾದನೆಯಿಲ್ಲದ ಲೈಂಗಿಕತೆ ಮತ್ತು ಲೈಂಗಿಕತೆಯಿಲ್ಲದ ಸಂತಾನೋತ್ಪದನೆಯು ಅಗತ್ಯವೆಂಬ ಹಿನ್ನೆಲೆಯಲ್ಲಿ ನೂತನ ತಂತ್ರಜ್ಞಾನಗಳು ಆವಿಷ್ಕಾರಗೊಳ್ಳುತ್ತಿವೆ. ಹಾಗೆಯೇ ಸಂತಾನ ಸಂಬಂಧಿ ಈ ತಂತ್ರಜ್ಞಾನಗಳಿಂದಾಗಿ ತಂದೆಯ-ತಾಯಿಯ ಹಕ್ಕು ಮೊದಲಾದವುಗಳು ಚರ್ಚಾಸ್ಪದವಾಗುತ್ತಿವೆ. ಮಾತೃತ್ವ, ಪಿತೃತ್ವ ಮತ್ತು ಬಂಧುತ್ವದ ಪ್ರತಿಯೊಂದು ಪರಿಕಲ್ಪನೆಗಳು ಮರುವ್ಯಾಖ್ಯಾನಕ್ಕೊಳಪಡಿಸಬೇಕಾಗಿದೆ.

ಮಹಿಳಾ ಅಭಿವೃದ್ಧಿಗಾಗಿ ರೂಪಿಸಲಾದ ತಂತ್ರಜ್ಞಾನಗಳು ಅನ್ವಯಿಕತೆಗೆ ಒಳಪಟ್ಟಾಗ ಅವುಗಳ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸ್ವರೂಪದಿಂದಾಗಿ ಸಾಮಾಜಿಕ ಸಮಸ್ಯೆಗಳನ್ನು ನಿವಾರಿಸುವಲ್ಲಿ ಹೆಚ್ಚು ಸಹಕಾರಿಯಾಗುತ್ತಿವೆ. ವ್ಯವಸ್ಥೆಯು ತನ್ನ ಅಗತ್ಯಕ್ಕನುಗುಣವಾಗಿ ಮಗುವನ್ನು ಪಡೆಯುವತ್ತ ಗಮನಹರಿಸುತ್ತದೆಯೆ ಹೊರತು ಅವುಗಳ ಪರಿಣಾಮದಿಂದಾಗಿ ನಲುಗುತ್ತಿರುವ ಮಹಿಳಾ ಬದುಕನ್ನು ಕಡೆಗಣಿಸುತ್ತಿದೆ.

ತನ್ನ ಅನುಕೂಲಕ್ಕೆ ತಕ್ಕಂತೆ ಬಳಕೆಗೊಳ್ಳುವಂತೆ ಹೆಣ್ಣನ್ನು ಪುರುಷ ಪ್ರಧಾನ ಸಮಾಜ ನಿಯಂತ್ರಣಕ್ಕೊಳಪಡಿಸಿಕೊಂಡಿದೆ. ಆದ್ದರಿಂದಲೇ ಹೆಣ್ಣು-ಗಂಡನ್ನು ಪ್ರಕೃತಿ ಮತ್ತು ತಂತ್ರಜ್ಞಾನಕ್ಕೆ ಹೋಲಿಸಲಾಗಿದೆ. ಮಹಿಳೆಯ ಸಂತಾನಾರೋಗ್ಯಕ್ಕೆ ಸಂಬಂಧಿಸಿದಂತೆ ವಿಜ್ಞಾನ ಮತ್ತು ತಂತ್ರಜ್ಞಾನಗಳ ಪರಿಣಾಮವನ್ನು ಗಮನಿಸುತ್ತ ಬಂದರೆ, ಇವುಗಳು ಸಾಮಾಜಿಕ ಸಮಸ್ಯೆಗಳ ಇನ್ನೊಂದು ಮುಖವಾಗಿ ಗೋಚರಿಸುತ್ತಿವೆ. ಪಿತೃ ಸಂಸ್ಕೃತಿಯ ಕಲ್ಪನೆಯಾಗಿ ರಚನೆಗೊಂಡಿರುವ ವಿವಾಹ ಸಂಸ್ಥೆಯಲ್ಲಿ ಆಸ್ತಿ ಹಕ್ಕಿನಿಂದ ಹೊರಗಿಡಲು, ಉತ್ಪಾದಕವಲಯದ ಮೇಲಿನ ನಿಯಂತ್ರಣವನ್ನು ತಪ್ಪಿಸಲು ಸಹೋದರತೆಯ ಪರಿಕಲ್ಪನೆ ಸೃಷ್ಟಿಸಲಾಯಿತು. ಈ ಮೂಲಕ ರಕ್ತ ಸಂಬಂಧಿಗಳಲ್ಲಿ ವಿವಾಹ ನಡೆಯುವುದನ್ನು ನಿರಾಕರಿಸಲಾಯಿತು. ಇಂತಹ ನಿರಾಕರಣೆಯಿಂದ ಹೆಣ್ಣು ಎರಡು ಕುಟುಂಬಗಳಲ್ಲಿಯೂ ತನ್ನ ನೆಲೆಯನ್ನು ಕಳೆದುಕೊಂಡು ಅತಂತ್ರತೆಯನ್ನು ಅನುಭವಿಸುವಂತಾಗುತ್ತಿದೆ. ಅಲ್ಲದೆ ಸಹಜವಾಗಿ ಎಂಬಂತೆ ಕುಟುಂಬದ ಒಡೆತನ, ಯಜಮಾನಿಕೆ, ಆಸ್ತಿಹಕ್ಕು, ಉತ್ಪಾದನಾ ವಲಯದ ಒಡೆತನವನ್ನು ಗಂಡಿಗೆ ದಕ್ಕಲು ಪ್ರಾರಂಭವಾಯಿತು. ಪುರುಷ ಪ್ರಧಾನತೆಯನ್ನು ಗಟ್ಟಿಗೊಳಿಸುವ ಈ ಚಿಂತನೆಗಳು ತಂತ್ರಜ್ಞಾನದಲ್ಲೂ ಕಾಣಿಸಿಕೊಳ್ಳುತ್ತಿವೆ. ಸಂತಾನಾರೋಗ್ಯದ ಸಮಸ್ಯೆಗಳ ಮೂಲವನ್ನು ಶೋಧಿಸಲು ತಂತ್ರಜ್ಞಾನವನ್ನು ಪುನರವಲೋಕಿಸುವ ಅಗತ್ಯತೆಯು ಕಂಡುಬರುತ್ತಿದೆ. ಇಂದು ಮಹಿಳೆ ಸಾರ್ವಜನಿಕ ವಲಯದಲ್ಲಿಯೂ ಪಾಲ್ಗೊಳ್ಳುತ್ತಿರುವುದರಿಂದ ವಿಶಾಲ ವ್ಯಾಪ್ತಿಯಲ್ಲಿ ತಂತ್ರಜ್ಞಾನದ ಬಳಕೆಗೆ ಮುಖಾಮುಖಿಯಾಗುತ್ತಿದ್ದಾಳೆ. ಆದರೂ ಪ್ರಸ್ತುತ ಸಂದರ್ಭದಲ್ಲಿ ಮಹಿಳೆಯ ಸಂತಾನಾರೋಗ್ಯಕ್ಕೆ ಸಂಬಂಧಿಸಿದ ತಂತ್ರಜ್ಞಾನವನ್ನು ಮಾತ್ರ ಚರ್ಚೆಗೆತ್ತಿಕೊಳ್ಳುವ ಮೂಲಕ ಮಹಿಳಾ ಬದುಕಿನ ಮೇಲೆ ತಂತ್ರಜ್ಞಾನವು ಬೀರುತ್ತಿರುವ ಪರಿಣಾಮವನ್ನು ಗ್ರಹಿಸಲು ಯತ್ನಿಸಲಾಗುತ್ತಿದೆ.

ಆರಂಭಿಕ ದಿನಗಳಲ್ಲಿ ತಂತ್ರಜ್ಞಾನದ ಹೊಸ-ಹೊಸ ಸಂಶೋಧನೆಗಳನ್ನು ಗಮನಿಸಿದಾಗ ಇವುಗಳು ಮಹಿಳಾ ಬಿಡುಗಡೆಯ ಸಾಧನಗಳಾಗಿ ನಿಲ್ಲುತ್ತವೆಯೆಂದು ಭಾವಿಸಿ ಕೆಲವು ಸ್ತ್ರೀವಾದಿಗಳು ಮಹಿಳೆಯರ ಬದುಕನ್ನು ಆವರಿಸಿರುವ ಸಂತಾನ ಉತ್ಪತ್ತಿಯ ಅವಧಿ ಮತ್ತು ಸಾಧನೆಯ ಅವಧಿ ಒಂದೇ ಆಗಿರುವುದರಿಂದ, ಬಹುಬಗೆಯ ಸಾಧನೆಗಳಿಂದ ಹಿನ್ನಡೆಯುವ ಅನಿವಾರ್ಯತೆಗಳನ್ನು ತಂತ್ರಜ್ಞಾನವು ಮುಕ್ತವಾಗಿಸುತ್ತಿದೆ ಎಂಬ ಅಭಿಪ್ರಾಯವನ್ನು ತಳೆದಿದ್ದರು. ಶುಲಾಮಿತ ಫೈರ್ಸ್ಟನ್‌ “ಸಂತಾನ ನಿರೋಧಕಗಳ ಆಗಮನಕ್ಕೆ ಮೊದಲು ಹೆಣ್ಣು ತನ್ನ ಸಂಪೂರ್ಣ ದೇಹರಚನೆಯ ಫಲವಾಗಿ ಮುಟ್ಟು, ಬಸಿರು, ಬಾಣಂತನಗಳಲ್ಲಿ ಕಟ್ಟುಬಿದ್ದು ಪುರುಷನ ಮೇಲೆ ಅವಲಂಬಿಸಿದ್ದಳು. ಹೆಣ್ಣಿನ ಸಂತಾನೋತ್ಪತ್ತಿ ಕ್ರಿಯೆಯೆ ಆಕೆಯ ಶೋಷಣೆಗೆ ಮೂಲ ಕಾರಣವಾಯಿತು ಎಂದು ಹೇಳುತ್ತ, ವಿಜ್ಞಾನ-ತಂತ್ರಜ್ಞಾನದಿಂದಾಗಿ ಹೆಣ್ಣು-ಗಂಡು ಜೀವ ಶಾಸ್ತ್ರೀಯವಾಗಿ ಹೇರಲ್ಪಟ್ಟ ಪಾತ್ರಗಳಿಂಧ ಮುಕ್ತರಾಗುತ್ತಾರೆ” ಎಂದು ಪ್ರತಿಪಾದಿಸಿದಳು. ವಿಜ್ಞಾನ-ತಂತ್ರಜ್ಞಾನಗಳು ಆವಿಷ್ಕಾರಗೊಂಡ ಉದ್ದೇಶವನ್ನು ಆಧರಿಸಿ ಬಳಕೆಗೊಂಡರೆ ಸ್ತ್ರೀವಾದಿಗಳ ಈ ಆಶಯವು ಸರಿಯಾಗುತ್ತಿತ್ತು.

ಯಾವುದೇ ಸಂಗತಿಯೂ ಸಮಾಜ ವ್ಯವಸ್ಥೆಯಲ್ಲಿ ಪುರುಷನ ಹಿಡಿತದಲ್ಲಿರುವುದರಿಂದ ಅವುಗಳು ಪುರುಷಾನುಕೂಲವಾಗಿ ಬಳಕೆಯಾಗುವತ್ತ ಗಮನ ಹರಿಸಲಾಗುತ್ತದೆಯೇ ವಿನಃ ಮಹಿಳೆಯ ಮೇಲೆ ಆಗುವ ಪರಿಣಾಮಗಳತ್ತ ಗಮನ ಹರಿಸುವುದಿಲ್ಲ. ಆದ್ದರಿಂದ ವ್ಯವಸ್ಥೆಯಲ್ಲಿನ ಬಹುಪಾಲಲು ಸಂಗತಿಗಳು ಪ್ರಾರಂಭದಲ್ಲಿ ಎಲ್ಲರಿಗೂ ಒಂದೇ ಎಂಬ ಆಶಯವನ್ನು ಹೊಂದಿದರೂ, ಬಳಕೆಯ ಸಂದರ್ಭದಲ್ಲಿ ಅವುಗಳು ತರತಮತೆಯನ್ನು ಅನುಸರಿಸುತ್ತವೆಯಾದ್ದರಿಂದ, ಎಲ್ಲಾ ಆವಿಷ್ಕಾರಗಳು ಪುರುಷ ವ್ಯವಸ್ಥೆಯನ್ನು ಇನ್ನಷ್ಟು ಬಲಗೊಳಿಸುವ ಚಿಂತನೆಗಳಾಗಿ ರೂಪು ಪಡೆಯುತ್ತಿವೆ. ಆದ್ದರಿಂದ ಸಂತಾನ ಸಂಬಂಧಿ-ತಂತ್ರಜ್ಞಾನಗಳು ಇದಕ್ಕೆ ಹೊರತಾಗಿಲ್ಲ. ಇವುಗಳು ಕೂಡ ಮಹಿಳಾ ಅಸ್ತಿತ್ವನ್ನು ರೂಪಿಸಿಕೊಳ್ಳುವಲ್ಲಿ ಸಹಕಾರಿಯಾಗುವ ಬದಲು, ಅದಕ್ಕೆ ವಿರೋಧಿಯಾಗಿ ನಿಲ್ಲುತ್ತಿವೆ.

ಹಾಗಾದರೆ ಇದುವರೆಗೆ ಶೋಧಿತವಾಗಿರುವ ಸಂತಾನ ಸಂಬಂಧಿ ತಂತ್ರಜ್ಞಾನಗಳು ಮಹಿಳಾ ಬದುಕಿಗೆ ಉಪಯುಕ್ತವಾಗಿಲ್ಲವೇ? ಎಂದರೆ ಬಹುಪಾಲು ಉಪಯುಕ್ತವಾಗುವಂಥವೆ. ಆದರೆ ಅವುಗಳ ಬಳಕೆಯಿಂದಾಗಿ ಅವು ಮಹಿಳಾ ಬದುಕಿಗೆ ಸಕಾರಾತ್ಮಕವಾಗಿ ನಿಲ್ಲುವಲ್ಲಿ ತೊಡಕುಂಟು ಮಾಡುತ್ತಿವೆಯೆಂಬುದನ್ನು ಕೆಲವು ಉದಾಹರಣೆಗಳ ಮೂಲಕ ಗಮನಿಸೋಣ

ಅಮ್ನಿಯೋ ಸಿಂಥೆಸಿಸ್‌:- ತಂತ್ರಜ್ಞಾನಗಳಲ್ಲೆ ಇದು ಬಹುಮುಖ್ಯವಾದಂತಹುದು ಭ್ರೂಣವನ್ನು ಆವರಿಸಿರುವ ದ್ರವವನ್ನು ಹೊರತೆಗೆದು ವರ್ಣತಂತುಗಳನ್ನು ಪರೀಕ್ಷೆ ಮಾಡುವ ಮೂಲಕ ಭ್ರೂಣದ ಗುಣ-ದೋಷವನ್ನು ಪತ್ತೆ ಹಚ್ಚುವ ತಂತ್ರಜ್ಞಾನವೇ ಅಮ್ನಿಯೋ ಸಿಂಥೆಸಿಸ್‌. ಇದು ಮೂಲ ಉದ್ದೇಶವನ್ನು ಹೊಂದಿದ್ದೇನೆಂದರೆ ಅಸಹಜ ಗರ್ಭಗಳು ಅಂದರೆ ದೋಷ ಪೂರಿತ ಮಗುವಿನ ಜನನವಾಗದಂತೆ ತಡೆಯುವುದಾಗಿದೆ. ಗರ್ಭಜಲದ ಈ ಪರೀಕ್ಷೆಯಲ್ಲಿ ಕೇವಲ ಭ್ರೂಣದ ಲೋಪ-ದೋಷಗಳಷ್ಟೇ ಅಲ್ಲದೆ ಲಿಂಗದ ಶೋಧವು ಸಾಧ್ಯವಾಗುತ್ತದೆ. ಈ ಒಂದು ಸಂಗತಿಯೇ ಮಹಿಳಾ ಬದುಕಿನ ಮೇಲೆ ಬಹುದೊಡ್ಡ ಆಘಾತಕಾರಿ ಪರಿಣಾಮವನ್ನುಂಟು ಮಾಡಿತ್ತಾದ್ದರಿಂದ, ಸಕಾರಾತ್ಮಕವಾದ ಈ ಸಂಗತಿಯು ಮಹಿಳಾ ಬದುಕಿಗೆ ಪ್ರೇರಕವಾಗುವ ಬದಲು ಮಾರಕವಾಯಿತು.

ಎಂಬತ್ತು-ತೊಂಬತ್ತರ ದಶಕದಲ್ಲಿ ಅಮ್ನಿಯೋ ಸಿಂಥೆಸಿಸ್‌ ಪರೀಕ್ಷೆ ಸುಲಭವಾಗಿ ನಡೆಯಲು ‘ಅಲ್ಟ್ರಾಸೋನೂಗ್ರೊಫಿ’ ಯಂತ್ರವೊಂದನ್ನು ತಂತ್ರಜ್ಞಾನವು ಶೋಧಿಸಿತು. ಯಾವುದೇ ಪ್ರಯೋಗ ಶಾಲೆಯ ಅಗತ್ಯವಿಲ್ಲದೆ, ಗಾಯಗಳಿಲ್ಲದೆ ಭ್ರೂಣದ ಪರೀಕ್ಷೆಗೊಳಪಡಿಸುವಲ್ಲಿ ಇದು ಅತ್ಯಂತ ಸಹಕಾರಿಯಾಯಿತು ಇಪ್ಪತ್ತು ಸಾವಿರಕ್ಕಿಂತಲೂ ಮಿಗಿಲಾದ ಶ್ರವಣಾತೀತ ತರಂಗಗಳನ್ನು ದೇಹದ ಮೇಲೆ ಹಾಯಿಸುವುದರಿಂದ, ಇವುಗಳು ದೇಹದ ಒಳಹೊಕ್ಕು, ಅಂಗಾಂಗಳ ಮೂಲಕ ಪ್ರತಿಫಲನಗೊಳ್ಳುತ್ತವೆ. ಇವುಗಳನ್ನು ಸಂವೇದಕಗಳು ಗ್ರಹಿಸುವುದರೊಂದಿಗೆ ವಿದ್ಯುತ್‌ ಸಂಕೇತಗಳಾಗಿ ಪರಿವರ್ತಿಸಿ ಗಣಕಯಂಥ್ರಕ್ಕೆ ತೊಡಗಿಸಿದಾಗ ದೇಹದಲ್ಲಿರುವ ಅಡೆ-ತಡೆಗಳನ್ನು ಇದು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ. ಆರೋಗ್ಯಕಾರಿ ದೃಷ್ಟಿಯಿಂದ ಬಳಕೆಯಾಗಬೇಕಾದ ಈ ತಂತ್ರಜ್ಞಾನವು ಇಂದು ಯಥೇಚ್ಛವಾಗಿ ಬಳಕೆಯಾಗುತ್ತಿರುವುದು ಲಿಂಗಪತ್ತೆಯ ಕೆಲಸಕ್ಕಾಗಿ.ಲಾಭವೇ ಗುರಿಯಾಗಿಸಿಕೊಂಡ ಈ ಹೊತ್ತಿನ ಸಂದರ್ಭದಲ್ಲಿ ಇಂಥ ಲಿಂಗ ಪತ್ತೆಯ ಕೇಂದ್ರಗಳು ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತವೆ. ಈ ತಂತ್ರಜ್ಞಾನ ಆವಿಷ್ಕಾರಿ ಯಂತ್ರವನ್ನು ಸುಲಭವಾಗಿ ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸಬಹುದಾದ್ದರಿಂದ ರೋಗಿಗಳ ಮನೆಗೆ ಕೊಂಡೊಯ್ದು ಲಿಂಗ ಪತ್ತೆಯನ್ನು ಮಾಡಿಸಿರುವ ಸಂಗತಿಗಳು ಇಲ್ಲದಿಲ್ಲ.

ಪಿತೃ ಸಂಸ್ಕೃತಿಯಲ್ಲಿ ಗಂಡು ಸಂತಾನಕ್ಕಿರುವ ಪ್ರಾಮುಖ್ಯದಿಂದಾಗಿ ಸಹಜವಾಗಿಯೇ ಇಂಥ ತಂತ್ರಜ್ಞಾನಗಳು ಕಾನೂನಿನ ನಿಷೇಧವಿದ್ದರೂ ತೆರೆ ಮರೆಯಲ್ಲಿ ಸಾಗುವಂತಹ ಕ್ರಿಯೆಗಳಾಗಿವೆ. ಹೀಗೆ ಭ್ರೂಣ ಪತ್ತೆಯಿಂದಾಗಿ ಹೆಣ್ಣು ಸಂತಾನವನ್ನು ಭೂಮಿಗೆ ಬರದಂತೆ ತಡೆಯಲು ಯಶಸ್ವಿಯಾಗುತ್ತಿವೆ. ಲಿಂಗಾನುಪಾತದ ವ್ಯತ್ಯಾಸದಿಂದ ಮುಂಬರುವ ಸಮಸ್ಯೆಯ ಪರಿವೆಯೇ ಇಲ್ಲದೆ ಸಾಗುತ್ತಿರುವ ಭ್ರೂಣ ಹತ್ಯೆಯು ಮಹಿಳೆಯ ಆರೋಗ್ಯದ ಜೊತೆ ಜೊತೆಗೆ ಒಟ್ಟು ಮಹಿಳಾ ಸಂತತಿಯನ್ನೆ ಇನ್ನಿಲ್ಲವಾಗಿಸುವತ್ತ ಸಾಗುತ್ತಿರುವುದು ಅಪಾಯದ ದ್ಯೋತಕ. ಇರುವ ಮಹಿಳಾ ಸಮಸ್ಯೆಗಳ ನಿವಾರಣೆಯಾಗುವ ಬದಲು ಹೊಸ ಬಗೆಯ ಸಮಸ್ಯೆಗಳು ಸೇರಿಕೊಳ್ಳುವಂತಾಗಿವೆ. ಲಿಂಗಾನುಪಾತದಿಂದ ಆಗುವ ಮಹಿಳಾ ಸಂಖ್ಯೆಯ ಕೊರತೆಯು ಮಹಿಳೆಯ ಬೇಡಿಕೆ ಹೆಚ್ಚಿಸುತ್ತದೆ, ಅಲ್ಲದೆ ವರದಕ್ಷಿಣೆಯು ನಿರ್ಣಾಮವಾಗಿ ವಧು ದಕ್ಷಿಣೆ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ ಎಂಬ ಸಂಗತಿಗಳು ಅಲ್ಲಲ್ಲಿ ಕೇಳಿ ಬರುತ್ತಿವೆ. ಆದರೆ ವಾಸ್ತವದಲ್ಲಿ ಹೆಣ್ಣು ಗಂಡಿನ ಸಂಖ್ಯೆಯಲ್ಲಾಗುತ್ತಿರುವ ವ್ಯತ್ಯಾಸವು ಅತ್ಯಾಚಾರ, ಅನೈತಿಕ ಹೆಣ್ಣು ಮಕ್ಕಳ ಸಾಕಾಣಿಕೆಯಂತಹ ಸಮಸ್ಯೆಗಳು ಉಲ್ಬಣಗೊಳ್ಳುತ್ತಿವೆ. ಮಹಾಭಾರತದ ದ್ರೌಪದಿಯ ಸ್ಥಿತಿಯು ಮುಂದಿನ ಮಹಿಳೆಯರಿಗೆ ಬಂದೆರಗುವ ಸಮಯ ದೂರವೇನಿಲ್ಲ ಈಗಾಗಲೇ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಮನೆಕೆಲಸದ ಹೆಂಗಸೊಬ್ಬಳು ಮನೆಯ ಗಂಡಸರ ಕಾಮ ತೃಷೆಯನ್ನು ಪೂರೈಸಬೇಕೆಂಬ ಸಂಗತಿಗಳು ಅಲ್ಲಲ್ಲಿ ಅನಾವರಣಗೊಳ್ಳುತ್ತಿವೆ. ಹೀಗೆ ತಂತ್ರಜ್ಞಾನದ ಸಕಾರಾತ್ಮಕ ಬಳಕೆಯ ಕೊರತೆಯು ಹಲವಾರು ಕ್ರೂರ ಸಮಸ್ಯೆಗಳಿಗೆ ಎಡೆಕೊಟ್ಟು ಮಹಿಳೆಯ ಮೇಲಿನ ದೌರ್ಜನ್ಯಗಳನ್ನು ಹೆಚ್ಚಿಸುತ್ತಿದೆ.