ಪ್ರಸ್ತಾವನೆ

ಮಹಿಳಾ ಬದುಕಿನ ಯಾವುದೇ ಒಂದು ಸಂಗತಿಯನ್ನು ಇಂದು ಚರ್ಚೆಗೊಳಪಡಿಸುತ್ತೇವೆಂದರೆ, ಅಲ್ಲಿ ಸಾಮಾಜಿಕತೆಯ ಪ್ರವೇಶ ಇಲ್ಲದಿರಲು ಸಾಧ್ಯವಿಲ್ಲ. ಏಕೆಂದರೆ ವ್ಯಕ್ತಿಯ ಸಂಪೂರ್ಣ ವ್ಯಕ್ತಿತ್ವದ ನಿರ್ಮಾಣವು ಸಾಮಾಜಿಕತೆಯನ್ನು ಆಧರಿಸಿ ರೂಪಿತವಾಗುತ್ತದೆ. ಅದರಲ್ಲೂ ಮಹಿಳಾ ಬದುಕು ಸಾಮಾಜಿಕತೆಯ ಕಾರಣದಿಂದಲೇ ಹಲವಾರು ಸಮಸ್ಯೆಗಳಿಗೆ ಈಡಾಗುತ್ತಿರುವುದು ಕಾಣಬಹುದು. ಅಷ್ಟೇ ಅಲ್ಲದೆ ಅವಳ ಈ ಬಗೆಯ ಸಮಸ್ಯೆಗಳಿಗೆ ಕಾರಣವನ್ನು ಸಾಮಾಜಿಕ ನೆಲೆಯಲ್ಲಿ ಶೋಧಿಸುವ ಬದಲು, ವ್ಯಕ್ತಿಗತ ಹಿನ್ನೆಲೆಯಲ್ಲಿ ವಿವರಿಸಿಕೊಳ್ಳಲು ಸಾಮಾಜಿಕ ವ್ಯವಸ್ಥೆ ಮುಂದಾಗುತ್ತಿದೆ. ಆದ್ದರಿಂದ ಮಹಿಳೆಯ ಸಮಸ್ಯೆಗಳು ಪರಿಹಾರಗೊಳ್ಳುವ ಬದಲು ಹೊಸ ಹೊಸ ಆಯಾಮಗಳಲ್ಲಿ ವಿಸ್ತರಿಸಿಕೊಳ್ಳುತ್ತಿವೆ. ಸಾಮಾಜಿಕ ವ್ಯವಸ್ಥೆಯನ್ನು ಸಮಗ್ರವಾಗಿ ಗ್ರಹಿಸಿಕೊಳ್ಳುವ ಮೂಲಕ ಮಹಿಳೆಯ ಸಮಸ್ಯೆಗಳ ವಿವರಣೆಗೆ ಯತ್ನಿಸುವುದು ಹೆಚ್ಚು ಉಪಯುಕ್ತ. ಅಂತಿಮವಾಗಿ ಇದುವರೆಗಿನ ಸಾಮಾಜಿಕ ವ್ಯವಸ್ಥೆಯು ರೂಪು ತಳೆದಿರುವುದನ್ನು ಗ್ರಹಿಸಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಮಹಿಳೆಯ ಸಂತಾನಾರೋಗ್ಯವನ್ನು ಸಾಮಾಜಿಕತೆಯ ಹಿನ್ನೆಲೆಯಲ್ಲಿ ಗ್ರಹಿಸಿಕೊಳ್ಳಲು ಬಹು ಮುಖ್ಯವಾಗಿ ಲೈಂಗಿಕತೆ, ತಾಯ್ತನ, ವಿವಾಹಗಳನ್ನು ಸ್ಥೂಲವಾಗಿ ವಿವರಿಸಿಕೊಳ್ಳುವ ಮೂಲಕ ಸಂತಾನಾರೋಗ್ಯವನ್ನು ಚರ್ಚೆಗೊಳಪಡಿಸಲಾಗುತ್ತಿದೆ. ಇಂತಹ ಸಂತಾನಾರೋಗ್ಯ ಆಧುನಿಕತೆಯ ಸಂದರ್ಭದಲ್ಲಿ ಹಲವು ಬಗೆಯ ವಿಜ್ಞಾನ-ತಂತ್ರಜ್ಞಾನದ ಪರಿಶ್ರಮದಿಂದ ಕೆಲವು ಬಗೆಯ ಅನುಕೂಲಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ಪ್ರಧಾನ ಧಾರೆಯ ಸಾಮಾಜಿಕ ವ್ಯವಸ್ಥೆಯಲ್ಲಿ ರೂಪುತಳೆಯುತ್ತಿರುವ ಸಂತಾನ ಸಂಬಂಧಿ ತಂತ್ರಜ್ಞಾನಗಳು ಮಹಿಳಾ ಬದುಕಿನ ಮೇಲೆ ಬೀರುತ್ತಿರುವ ಪರಿಣಾಮಗಳನ್ನು ಗ್ರಹಿಸಲು ಇಲ್ಲಿ ಪ್ರಯತ್ನಿಸಲಾಗುತ್ತಿದೆ.

ಪ್ರಕೃತಿದತ್ತವಾದ ಸಹಜ ಪ್ರಕ್ರಿಯೆಯು ವ್ಯವಸ್ಥೆಯ ಹಿಡಿತಕ್ಕೆ ಸಿಲುಕಿದಾಗ, ಅಲ್ಲಿ ಬಹುಮುಖ್ಯವಾಗಿ ಯಾರು ಭಾಗವಹಿಸುತ್ತಾರೋ ಅವರ ಮೇಲೆ ನಿರ್ಬಂಧಗಳು ಹೇರಲ್ಪಡುತ್ತವೆ. ಸಂತಾನ ಸಂಬಂಧಿ ಪ್ರಕ್ರಿಯೆಯಲ್ಲಿ ಮಹಿಳೆಯ ಪಾಲ್ಗೊಳ್ಳವಿಕೆ ಸುದೀರ್ಘವಾಗಿದ್ದು, ನೈಸರ್ಗಿಕ v/s ಸಾಮಾಜಿಕ ನಿಯಮಗಳಿಗನುಗುಣವಾಗಿ ವರ್ತಿಸಬೇಕಾಗುತ್ತದೆ. ಇಲ್ಲಿ ಸೂಚಿಸಲಾದ ಈ ಎರಡು ಪ್ರಕ್ರಿಯೆಗಳು ವಾದಿ-ಪ್ರತಿವಾದಿಯ ನೆಲೆಯಲ್ಲಿರುವುದರಿಂದ ಇವುಗಳೆರಡರ ಮಧ್ಯದಲ್ಲಿ ಹೆಣ್ಣು ನಲುಗಿ ಹೋಗುತ್ತಾಳೆ. ವಾಸ್ತವವಾಗಿ ಹೆಣ್ಣಿಗೆ ಸಂತಾನ ಸಂಬಂಧಿ ಪ್ರಕ್ರಿಯೆಯಲ್ಲಿ ಸಂಧಿಗ್ಧತೆ ಉಂಟಾಗಲು ಕಾರಣ, ಅವಳ ನಿಸರ್ಗ ಸಹಜ ಕ್ರಿಯೆಗಳು ಸಹಜವಾಗಿ ನಿರ್ವಹಿಸಲು ಸಾಧ್ಯವಾಗದೆ ಸಮಾಜವು ರೂಪಿಸಿರುವ ಕ್ರಮದಲ್ಲಿ ನಡೆಯಬೇಕಾಗಿರುವುದರಿಂದ.

ಸಂತಾನ ಪ್ರಕ್ರಿಯೆಯಲ್ಲಿನ ಪಾಲ್ಗೊಳ್ಳುವಿಕೆ ಅವಳಿಗೆ ಕಷ್ಟಕರವಾದ ಸಂಗತಿಯನ್ನೆಲ್ಲ. ಯಾಕೆಂದರೆ ಪ್ರಕೃತಿ ಅವಳಿಗೆ ಹೊರಿಸಿದ ಕರ್ತವ್ಯಕ್ಕೆ ಪೂರಕವಾಗಿ ಹಲವು ಸವಲತ್ತುಗಳನ್ನು ಕೊಟ್ಟಿದೆ. ನಿಸರ್ಗ ಸಹಜವಾದ ಈ ಕ್ರಿಯೆಯು ಸ್ವಾತಂತ್ರ್ಯ ಮತ್ತು ತೃಪ್ತಿಯ ಅನುಭವವನ್ನು ನೀಡುತ್ತದೆ. ಆದರೆ ಸಮಾಜ ವ್ಯವಸ್ಥೆ, ಸಾಮಾಜಿಕತೆಯ ನಿಯಂತ್ರಣದಿಂದ ರೇಜಿಗೆಯುಂಟುಮಾಡುವಂತಹ ಕೆಲಸಗಳಲ್ಲಿ ಮಹಿಳೆ ಅನಿವಾರ್ಯವೆಂಬಂತೆ ಪಾಲ್ಗೊಳ್ಳುವಂತಾಗಿದೆ. ಆದ್ದರಿಂದ ಆತ್ಮ ತೃಪ್ತಿ ಕೊಡುವ ಪ್ರಕ್ರಿಯೆಯಲ್ಲಿ ಸಾಮಾಜಿಕ ವ್ಯವಸ್ಥೆಯ ಪಾಲ್ಗೊಳ್ಳುವಿಕೆಯು ಆತ್ಮಕ್ಕೆ ಅಪಮಾನವಾಗುವಂತಹ ನಿಯಮಗಳನ್ನು ಸೂಚಿಸುತ್ತಿದೆ.

ಲೈಂಗಿಕತೆ: ಹೆಣ್ಣಿಗೆ ಇಡೀ ಸಂತಾನ ಕ್ರಿಯೆಯ ಮೇಲೆ ಹಕ್ಕಾಗಲಿ, ತನ್ನ ಬೇಕು ಬೇಡಗಳನ್ನು ಅಭಿವ್ಯಕ್ತಿಸುವ ಸ್ವಾತಂತ್ರವಾಗಲಿ ಇಲ್ಲದಿರುವುದರಿಂದ ಪ್ರಾಕೃತಿಕವಾಗಿ ಸಿಗುವ ತೃಪ್ತಿಗೆ ಭಂಗವುಂಟಾಗುತ್ತದೆ. ಮಹಿಳಾ ಲೈಂಗಿಕತೆ ಪರುಷನಿಗೆ ಅಧೀನಗೊಂಡ ಬಗೆ ಹೇಗೆ ಎಂಬುದಕ್ಕೆ ಸುಧೀರ್ಘ ಇತಿಹಾಸವನ್ನು ಸ್ತ್ರೀವಾದಿಗಳು ಶೋಧಿಸಿದ್ದಾರೆ. ಗಂಡು ಹೆಣ್ಣನ್ನು ವಿವಾಹವೆಂಬ ಸಂಸ್ಥೆಯಲ್ಲಿ ಬಂಧಿಸಿದಾಗ ವ್ಯಕ್ತಿಗತ ಆಸೆ-ಆಕಾಂಕ್ಷೆಗಳನ್ನು ಅಭಿವ್ಯಕ್ತಿಸುವ ಸ್ವಾತಂತ್ರ್ಯವಿರುವುದಿಲ್ಲ. ಮಹಿಳಾ ವಿಷಯದಲ್ಲಂತೂ ವಿವಾಹ ಸಂಸ್ಥೆಯ ಮೂಲಕ ಹೇರಲಾಗುವ ಕಟ್ಟುಪಾಡುಗಳು ಮಹಿಳೆಯನ್ನು ಸಂಕೋಲೆಯಿಂದ ಬಂಧಿಸಿದಂತಾಗಿವೆ. ಆಧುನಿಕ ಕಾಲದಲ್ಲಿ ಹಲವಾರು ಪಲ್ಲಟಗಳು ಕಾಣಿಸಿಕೊಂಡರೂ ವಿವಾಹ ಸಂಸ್ಥೆಯಲ್ಲಿನ ನಿರ್ಬಂಧಗಳಲ್ಲಿ ಸಡಲಿಕೆಯೂ ಕಂಡು ಬಂದಿಲ್ಲ. ವಿಭಕ್ತ ಕುಟುಂಬ, ನಗರ ಜೀವನ ಎಂದು ಏನೆಲ್ಲಾ ಸಂಗತಿಗಳನ್ನು ಸಾಕ್ಷೀಕರಿಸಿದರೂ ಪುರುಷ ಪ್ರಧಾನತೆ ತನ್ನ ಬದಲಾದ ಸ್ವರೂಪಗಳಲ್ಲಿ ವ್ಯವಸ್ಥೆಯ ಮೇಲಿನ ಹಿಡಿತ ಕಳೆದುಕೊಳ್ಳುತ್ತಿಲ್ಲ. ಹೆಣ್ಣು ಆಸ್ತಿಯೆಂಬ ಭಾವನೆ, ಅವಳು ಪುರುಷಾಧೀನದಲ್ಲಿರಬೇಕಾದ ವಸ್ತು ಎಂಬ ನಿಲುವು ಕಿಂಚಿತ್ತು ಬದಲಾಗಿಲ್ಲ. ವಿವಾಹದ ಮೂಲಕ ಲೈಂಗಿಕತೆಯನ್ನು ಅಧೀನಕ್ಕೆಳೆದುಕೊಂಡು, ಮಹಿಳೆಯ ಶರಣಾಗತಿಯನ್ನು ಬಯಸುವ ಪಿತೃ ಸಂಸ್ಕೃತಿ ಶರಣಾಗತಿಯಾದವರಿಗೆ ಆತ್ಮ ಗೌರವವಿರುವುದಿಲ್ಲವೆಂಬುದನ್ನು ಖಚಿತವಾಗಿ ಮನಗಂಡಿದೆ. ವಿವಾಹದ ಪ್ರಕ್ರಿಯೆಯಲ್ಲಿ ಗಂಡು-ಹೆಣ್ಣು ಪಾಲ್ಗೊಳ್ಳುವವರಾದರೂ ಅನ್ವಯಿಸುವ ನಿಯಮಗಳು ಭಿನ್ನವಾಗಿವೆ. ಗಂಡು ಇಲ್ಲಿ ಸ್ವಾತಂತ್ರ್ಯ, ಹೆಮ್ಮೆ, ಆಕ್ರಮಣಕಾರಿಯನ್ನು ಸಾಧಿಸಿದರೆ ಹೆಣ್ಣು ಇಲ್ಲಿ ಬಂಧನ ಅಧೀನತೆಯನ್ನು ಅನುಭವಿಸುತ್ತಾಳೆ. ಸಿಮೋನ್‌ದ ಬೊವಾ ಪುರುಷ ಚಿಂತನೆಯ ಈ ಸಂಗತಿಗಳು ಭಾಷೆಯಲ್ಲಿ ಪ್ರತಿನಿಧಿತವಾಗುವುದನ್ನು ಹೀಗೆ ಉದಾಹರಿಸುತ್ತಾಳೆ ಉದಾ: ಹೆಣ್ಣು ಪ್ರೀತಿಗೆ ಸೋತಳು, ಗಂಡು ಅವಳನ್ನು ಗೆದ್ದುಕೊಂಡನು ಎಂದು ಪ್ರೇಮ-ಪ್ರೀತಿ ಎನ್ನುವ ಸಹಜ ಸಂಗತಿಗಳು ಕೂಡ ಯುದ್ಧ, ದೌರ್ಜನ್ಯ, ಹಿಂಸೆಯೆಂಬಂತೆ ಭಾಷೆ (ಪುರುಷ ಭಾಷೆ) ಅಭಿವ್ಯಕ್ತಿಸುತ್ತದೆ. ಹೀಗೆ ಗಂಡು – ಹೆಣ್ಣಿನ ಕೆಲಸ ಪ್ರಾಕೃತಿಕವಾಗಿ ಸಮಾನತೆಯ ಪ್ರಶ್ನೆಯಾದರೆ ಸಾಮಾಜಿಕವಾಗಿ ಆಕ್ರಮಣ-ಅಧೀನತೆಯ ಸಂಗತಿಯಾಗಿ ಪಿತೃ ಚಿಂತನೆಗಳು ರೂಪಿತಗೊಂಡಿವೆ. ತಾಯಿಯ ಗರ್ಭ ಮೂಲದಿಂದಲೆ ಹೆಣ್ಣಿನ ಲೈಂಗಿಕತೆಯು ಸಮಾಜಕ್ಕೆ ಅಧೀನವಾಗಿರುತ್ತದೆ. ಹಾಗೆಯೇ ಬಾಲ್ಯದಿಂದ, ಬದುಕಿನ ಅಂತಿಮ ಘಟ್ಟದವರೆಗೂ ಅವಳ ನಡೆ-ನುಡಿ; ಮಾತು ಪ್ರತಿಯೊಂದು ಕೂಡ ಗಂಡನ್ನು ಆಕರ್ಷಿಸಲೆಂಬಂತೆಯೆ ಸಮಾಜ ಅವಳನ್ನು ತರಬೇತಿಗೊಳಿಸುತ್ತದೆ. ಸಮಾಜದಲ್ಲಿ ಅವಳ ಲೈಂಗಿಕತೆ ಬಾಗಿ, ಬಳುಕಿ, ಕುಗ್ಗಿ, ಕುಂದಿ ಪುರುಷನ ಮೆಚ್ಚುಗೆಗಾಗಿ ಬದುಕಬೇಕಾಗುತ್ತದೆ. ಹೀಗೆ ಪುರುಷಾನು ವರ್ತಿಯಾಗಿ ಸಾಗುವ ಹೆಣ್ಣು ಗಂಡಿನಿಂದ ಆಕ್ರಮಣ, ದೌರ್ಜನ್ಯಗಳಿಗೀಡಾಗುತ್ತಿದ್ದಾಳೆ. ಹೆಣ್ಣಿನ ಕನಸುಗಳೆಲ್ಲವೂ ಕರಕಲಾಗಿ, ಹೆಣ್ಣಿನ ವ್ಯಕ್ತಿತ್ವವೆಲ್ಲವೂ ಕೇವಲ ಹಗಲು ಕನಸುಗಳಲ್ಲಿಯೇ ಕರಗಿ ಹೋಗುವುದರೊಂದಿಗೆ ಅವಳು ತನ್ನದೆ ಆದ ಜೀವನವನ್ನು ಊಹಿಸಿಕೊಳ್ಳದಂತಹ ಭ್ರಮಾತ್ಮಕ ಸ್ಥಿತಿಗೆ ತಲುಪುತ್ತಾಳೆ. ಹೆಣ್ಣಿನ ಈ ಪ್ರತಿಬಿಂಬದ ಬದುಕನ್ನು “this is mistique for her life”’ ಎಂದು ಬೆಟ್ಟಿಫ್ರಿಡನ್‌ ಹೇಳುತ್ತಾರೆ.

ಸಾಮಾಜಿಕ ವ್ಯವಸ್ಥೆಯಲ್ಲಿ ಹೆಣ್ಣಿನ ವ್ಯಾಖ್ಯಾನವು ಲೈಂಗಿಕತೆಯ ಮೂಲಕವೇ ಆಗುತ್ತದೆ. ನೈಸರ್ಗಿಕವಾಗಿ ಈ ಲೈಂಗಿಕತೆಯು ಪ್ರಾಬಲ್ಯದ ಪ್ರತೀಕ. ಆದರೆ ಸಾಮಾಜಿಕತೆಯ ವ್ಯಾಖ್ಯಾನದಲ್ಲಿ ಮಹಿಳೆಯ ಮೇಲೆ ಪ್ರಯೋಗಿಸುವ ಆಯುಧವೆಂಬಂತಾಗಿದೆ. ಪಿತೃ ವ್ಯವಸ್ಥೆಯ ಮೌಲ್ಯಗಳೆಲ್ಲವೂ ಪುರುಷನನ್ನು ಭದ್ರವಾಗಿ ಪೋಷಿಸುವುದರಿಂದ ಹೆಣ್ಣಿನ ಈ ಶಕ್ತಿಯು ವ್ಯವಸ್ಥೆ (ಪುರುಷನ)ಯ ನಿಯಂತ್ರಣದಲ್ಲಿದೆ. ಅವಳ ಲೈಂಗಿಕ ಅಭಿವ್ಯಕ್ತಿಯೂ ಅವಳನ್ನು ಅನೈತಿಕತೆಯ ಪಟ್ಟವೊದಗಿಸುವಂತಹ ಸಂಕಿರ್ಣತೆ ಸಾಮಾಜಿಕತೆಯಲ್ಲಿದೆ. ಈ ಹಿನ್ನೆಲೆಯಲ್ಲಿ ಲೈಂಗಿಕತೆಯನ್ನು ಎರಡು ಬಗೆಗಳಲ್ಲಿ ವ್ಯಾಖ್ಯಾನಿಸಬಹುದು ೧ ನೈಸರ್ಗಿಕ ವ್ಯಾಖ್ಯಾನ ೨ ಸಾಮಾಜಿಕ ವ್ಯಾಖ್ಯಾನ ನೈಸರ್ಗಿಕವಾಗಿರುವ ಲೈಂಗಿಕತೆ ಬಿಡುಗಡೆ, ಸಂತೃಪ್ತಿ, ಸಂತೋಷದ ಸಂಗತಿಯಾದರೆ, ಸಾಮಾಜಿಕ ವ್ಯಾಖ್ಯಾನ ದೀನ, ದರಿದ್ರ, ಶರಣಾಗತಿಯತ್ತ ಸಾಗುತ್ತಿದೆ.

ಸಾಮಾಜಿಕ ಪ್ರಕ್ರಿಯೆಯಲ್ಲಿ ಅವಳ ಗುಣ, ವರ್ತನೆಗಳೆಲ್ಲವೂ ಸಹ ಪ್ರಾಕೃತಿಕ ವ್ಯಾಖ್ಯಾನವನ್ನು ಕಳೆದುಕೊಳ್ಳುವ ಮೂಲಕ ಸ್ವಚ್ಛಂದ ಸ್ವರೂಪ ತಳೆಯಬೇಕಾದ ಅವಳ ಬದುಕು ‘ಲೈಂಗಿಕತೆ’ಯ ಸಾಮಾಜಿಕ ವ್ಯಾಖ್ಯಾನದಿಂದಾಗಿ ಸೆರೆವಾಸ, ಬಂಧನ, ಮುಳ್ಳುಬೇಲಿಯಂತಾಗಿ, ಸಂತತಿಯ ಮುಂದುವರಿಕೆಯನ್ನು ಆಧರಿಸಿದ ಲೈಂಗಿಕತೆಯ ಮೂಲ ಉದ್ದೇಶ ತಾಯ್ತನ, ಇಂಥ ತಾಯ್ತನವು ಸಾಮಾಜಿಕ ವ್ಯವಸ್ಥೆಯಲ್ಲಿ ಪಡೆದು ಕೊಳ್ಳುವ ಸ್ವರೂಪ ಅವಳ ಸಮಗ್ರ ಬದುಕನ್ನು ನಿಯಂತ್ರಣಕ್ಕೆಳೆದುಕೊಳ್ಳುತ್ತದೆ. ಸಮಾಜ ರೂಪಿತವಾದ ನಿಯಮ, ನಿಬಂಧನೆಗಳಡಿಯಲ್ಲಿಯೇ ತಾಯಿಯಾದಾಗ ಮಾತ್ರ ಮಾತೃ ಮಾನ್ಯತೆ ದೊರೆಯುತ್ತದೆ. ಇಲ್ಲವಾದರೆ ಅವಳು ಅಪರಾಧಿಯಾಗಿ ಅಪನಿಂದನೆಗೊಳಗಾಗಿ ತಾಯ್ತನ, ಮಗು, ಬಹುಪಾಲು ತಾಯಿಯ ನಿರ್ನಾಮದಂತಹ ಕ್ರೂರ ಶಿಕ್ಷೆಗೆ ಬಲಿಯಾಗುತ್ತಾಳೆ.

ಸಾಮಾಜಿಕವಾಗಿ ಲೈಂಗಿಕತೆಯು ಅವಳ ಆಸ್ತಿಯಾಗಿ ಉಳಿಯದೆ ಸಮಾಜದಲ್ಲಿ ಬಳಕೆಗೊಳ್ಳುವ ಉಪಕರಣವಾಗಿ ಬಿಟ್ಟಿದೆ. ಅವಳ ದೇಹವು ಅವಳ ನಿಯಂತ್ರಣದಲ್ಲಿರದೆ ಹೋಗುತ್ತಿದೆ. ಆ ಕಾರಣವಾಗಿ ಸ್ತ್ರೀವಾದದಲ್ಲಿ ಬಹುಮುಖ್ಯವಾಗಿ ಚರ್ಚೆಗೊಳಪಡುತ್ತಿರುವ ಸಂಗತಿಯೆಂದರೆ assert your body and control over your body. ಹೆಣ್ಣು ಮೊದಲು ತನ್ನ ದೇಹದ ಮೇಲೆ ಹಕ್ಕು ಸ್ಥಾಪಿಸಬೇಕು. ಇಲ್ಲವಾದರೆ ಹೆಣ್ಣು ಜೀವಂತ ಶವವಾಗುತ್ತಾಳೆ. ಬೋವಾ ಮಹಿಳೆಯ ಅಧೀನತೆಯನ್ನು ಅವಳು ಎರಡನೆ ದರ್ಜೆಯ ಪ್ರಜೆಯೆಂದು ನಿರೂಪಿಸುವುದೇ ಈ ನೀತಿಯಿಂದ. ಹಾಗಾಗಿ ಮಹಿಳೆಯರು ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಕೇವಲ ಉಪಕರಣವಾಗಿ ಜೀವಿಸುತ್ತಿದ್ದಾರೆ.

ಸಂತಾನ ಪ್ರಕ್ರಿಯೆಗಾಗಿ ದೇಹ ಸಜ್ಜುಗೊಳ್ಳುವ ಪ್ರತಿಯೊಂದು ಭಾಗವು ಸಹ ಲೈಂಗಿಕತೆಯಡಿಯಲ್ಲಿಯೇ ಬರುತ್ತದೆ. ಸಂತಾನ ಮುಂದುವರಿಕೆಗೆ ಪ್ರಕೃತಿ ರೂಪಿಸಿರುವ ಒಂದು ಅದ್ಭುತ ಶಕ್ತಿಯೆ ಲೈಂಗಿಕತೆಯೆಂಬುದು ಪ್ರಾಕೃತಿಕ ನಿರ್ವಚನವಾದರೆ, ಸಂತಾನ ಕಾರ್ಯಕ್ಕಾಗಿ ವಿವಾಹ ಸಂಸ್ಥೆ ನಿಗದಿಪಡಿಸಿದ ಗಂಡು-ಹೆಣ್ಣು ನಡೆಸುವ ಬಾಹ್ಯಕ್ರಿಯೆಯೆ ಲೈಂಗಿಕತೆ, ಸಮಾಜದ ಈ ವ್ಯಾಖ್ಯಾನವು ಲೈಂಗಿಕತೆಗೆ ನೈತಿಕತೆ-ಅನೈತಿಕತೆ, ಶ್ಲೀಲ – ಅಶ್ಲೀಲ, ಅತ್ಯಾಚಾರ- ವ್ಯಭೀಚಾರದಂತಹ ನಿಯಮಗಳನ್ನು ಸೇರಿಸಿದೆ. ವ್ಯವಸ್ಥಿತ ಸಮಾಜಕ್ಕೆ ನಿಯಮಗಳು, ರೀತಿ-ರಿವಾಜುಗಳು ಅಗತ್ಯ ಆದರೆ ಇವುಗಳು ಕೇವಲ ಒಂದು ಲಿಂಗವನ್ನು ಅಧೀನಸ್ತರಕ್ಕೆ ತಳ್ಳಲು, ನಿಯಂತ್ರಣಕ್ಕೆ ತೆಗೆದುಕೊಳ್ಳಲು ಬಳಸುವ ಆಯುಧಗಳಾದಾಗ ಅವುಗಳು ಸಮಾಜದಲ್ಲಿ ಜೀವಿಗಳೊಂದಿಗೆ ತರತಮತೆಯನ್ನು ಸೃಷ್ಟಿಸುತ್ತದೆ. ಇದು ಸಾಮಾಜಿಕ ಅನಾರೋಗ್ಯಕರ ಸ್ಥಿತಿಗೆ ನಾಂದಿಯಾಗುತ್ತದೆ. (ವಿವಾಹದ ಈ ನಿಯಮಗಳು) ಲೈಂಗಿಕತೆಯ ಮೇಲಿನ ಈ ನಿಯಮ, ನಿರ್ಬಂಧಗಳಡಿಯಲ್ಲಿ ವಿವಾಹ ವ್ಯವಸ್ಥೆಯನ್ನು ನಿರ್ಮಿಸಿದ್ದು ಸಂರ್ಘರ್ಷಗಳನ್ನು ತಡೆಯುವುದಕ್ಕಾಗಿ ಆದರೂ ಎಷ್ಟರ ಮಟ್ಟಿಗೆ ಇದು ಸಫಲವಾಗಿದೆ. ಅಲ್ಲದೆ ಶೀಲ-ಅಶ್ಲೀಲಗಳ ಹೆಸರಿನಲ್ಲಿ ಮಹಿಳೆಯರ ಮೇಲೆ ಮಾತ್ರ ಆಕ್ರಮವೆಸಗುತ್ತ, ಗಂಡಿಗೆ ಸ್ವೇಚ್ಛೆಯನ್ನು ಕಟ್ಟಿಕೊಟ್ಟಿದೆ. ಸಮಾಜವ್ಯವಸ್ಥೆಯಲ್ಲಿ ಪ್ರತಿಜೀವಿಗೂ ಸ್ವಾತಂತ್ರ್ಯದ ಅವಕಾಶವಿರಬೇಕು, ಆದರೆ ಅದು ಇನ್ನೊಂದು ಜೀವಿಯ ಸ್ವಾತಂತ್ರ್ಯಕ್ಕೆ ಧಕ್ಕೆ ತರುವುದಾದರೆ ಅದು ಸ್ವೇಚ್ಛೆಯನ್ನು ತಲುಪುತ್ತದೆ. ಪ್ರಧಾನ ಧಾರೆಯಲ್ಲಿ ಪುರುಷರಿಗೆ ಒದಗಿಸಲಾದ ಸ್ವಾತಂತ್ರ್ಯವು ಸ್ವಾತಂತ್ರ್ಯ ಎನ್ನುವುದಕ್ಕಿಂತ ಸ್ವೇಚ್ಛೆಯೆ ಆಗಿದೆ. ಲೈಂಗಿಕತೆಯನ್ನೇ ಉದಾಹರಿಸುವುದಾದರೆ, ಹೆಣ್ಣಿಗೆ ಸ್ವಯಂ ಅವಳ ಲೈಂಗಿಕತೆಯ ವಿಷಯದಲ್ಲಿ ಸ್ವಾತಂತ್ರ್ಯ ಕಲ್ಪಿಸದೆ, ಗಂಡಿಗೆ ಸ್ವೇಚ್ಛೆಯನ್ನು ಒದಗಿಸುತ್ತಿದೆ. ಒಂದು ಗಂಡಿಗೆ ಒಂದು ಹೆಣ್ಣು -ಒಂದು ಹೆಣ್ಣಿಗೆ ಒಂದು ಗಂಡು ಎಂದು ಹೇಳುವುದಾದರೂ ವಾಸ್ತವದಲ್ಲಿ ಮಹಿಳಾ ಬದುಕಿಗೆ ಮಾತ್ರ ಶಾಸನ ಬದ್ಧವಾಗಿ ಈ ನಿಯಮ ಜಾರಿಯಲ್ಲಿದೆ. ತನ್ನ ಗಂಡ ಗತಿಸಿದರೂ ಅವಳಿಗೆ ಪರ್ಯಾಯ ಆಯ್ಕೆಗಳಿಲ್ಲ. ಅಲ್ಪ ಬದಲಾವಣೆಯೆಂದರೆ ಅವಳನ್ನು ಸಜೀವವಾಗಿ ಅವನ ಚಿತೆಯಲ್ಲಿ ಬೇಯಿಸುವ ಪದ್ಧತಿ ನಿಂತು ಹೋಗಿದೆ. ಸಮಾಜ ನಿಗದಿತ ಮೌಲ್ಯಗಳೆಲ್ಲವೂ ಪಾಲಿಸುವ ಹೊಣೆ ಹೆಣ್ಣಿನದೆಂಬಂತಾಗಿಸಿ ಅದಕ್ಕೆ ನೈತಿಕತೆಯೆಂದು ಹೆಸರಿಸಲಾಗಿದೆ. ಅದಕ್ಕೆ ವಿರೋಧವಾದ ಸಣ್ಣ ಆಲೋಚನೆಯು ಅವಳು ಮಾಡಿದ್ದೆ ಆದಲ್ಲಿ ಅದು ಅನೈತಿಕತೆಯೆನಿಸಿಕೊಳ್ಳುತ್ತದೆ. ಗಂಡಿಗೆ ಈ ಮೌಲ್ಯಗಳು ಕಟ್ಟುನಿಟ್ಟಿಲ್ಲ, ಕೆಲವೊಮ್ಮೆ ಅದನ್ನು ಮೀರುವುದು ಹೆಮ್ಮೆಯ ಪ್ರತೀಕವಾಗುತ್ತದೆ ಈಗ ಅತ್ಯಾಚಾರ, ವ್ಯಭಿಚಾರಗಳನ್ನು ಚರ್ಚಿಸುವುದಾದರೆ –

ಗಂಡಸು ಸಾಮಾಜಿಕ ನಿಯಮಗಳನ್ನು ಮೀರಿ ಹೆಣ್ಣಿನ ಲೈಂಗಿಕತೆಯ ಮೇಲೆ ಆಕ್ರಮಿಸುವುದೆ ಅತ್ಯಚಾರ. ಆದರೆ ದಾಖಲಾದ ಅದೆಷ್ಟು ಪ್ರಕರಣಗಳಿಗೆ ಪ್ರಭುತ್ವ, ಸರ್ಕಾರಗಳು ಶಿಕ್ಷೆಯೊದಗಿಸಿವೆ. ಒಂದೋ ಎರಡೋ ಉದಾಹರಿಸಬಹುದಾದರೂ ಅವುಗಳ ತೀರ್ಪುಗಳಿಗಾಗಿ ನಡೆದ ಮಹಿಳಾ ಹೋರಾಟಗಳು ಹಾಗೂ ತೀರ್ಪು ಹೊರ ಬರುವ ಅವಧಿಯನ್ನು ನೋಡಬಹುದು. ಹಾಗೆಯೇ ಇಂಥ ಪ್ರಕರಣಗಳಲ್ಲಿ ನಾಲ್ಕು ಗೋಡೆಯ ಮಧ್ಯದಲ್ಲಿರಬೇಕಾದ ಸಂಗತಿ ಎಂದು ಹೇಳುವ ಸಮಾಜದಲ್ಲಿ ಬಹಿರಂಗವಾಗಿ ನ್ಯಾಯಾಲಯದ ಕಟಕಟೆಯಲ್ಲಿ ಹೆಣ್ಣನ್ನು ವಿಚಾರಿಸುವ ಕ್ರಮ, ಕೇಳುವ ಸಾಕ್ಷಿಗಳು ನಿಜಕ್ಕೂ ಅವಳ ಆತ್ಮಾಭಿಮಾನಕ್ಕೆ ಅಪಚಾರವೆಸಗುವಂತಹವು. ಅವಳ ಮೇಲೆ ನಡೆದ ಆ ಆಕ್ರಮಣಕ್ಕಿಂತ ಇದು ಭೀಕರವಾಗುತ್ತದೆ. ತನ್ನದಲ್ಲದ ತಪ್ಪಿಗೆ ಹೆಣ್ಣು ಅನುಭವಿಸುವ ಯಾತನೆಗಳೆಲ್ಲವೂ ಸಮಾಜ ವ್ಯವಸ್ಥೆಯಲ್ಲಿರುವ ಪಕ್ಷಪಾತಿಯ ಧೋರಣೆಗಳಿಂದ.

ವಿಧವೆ, ಅವಿವಾಹಿತೆ, ವಿವಾಹಿತೆ ಯಾರೇ ಆಗಲಿ ತನ್ನ ಗಂಡನನ್ನು ಬಿಟ್ಟು ಬೇರೆಯವರೊಂದಿಗೆ ವಿವಾಹದ ನಿಯಮಗಳನ್ನು ಮೀರಿ ಸಂಬಂಧ ಬೆಳೆಸುವುದು ವ್ಯಭಿಚಾರವೆಂದು ವ್ಯಾಖ್ಯಾನಿಸುವ ಈ ವ್ಯವಸ್ಥೆ ಸ್ವೇಚ್ಛೆಯಿಂದ ಬಂದ ಪುರುಷರಿಗೆ ತಮಗೆ ಇಷ್ಟವಿದ್ದೊ, ಇಲ್ಲದೆಯೋ ತಮ್ಮನ್ನು ಅರ್ಪಿಸಿಕೊಳ್ಳುವುದು ವೇಶ್ಯಾವಾಟಿಕೆ. ಗಂಡಸಿನ ಸ್ವೇಚ್ಛಾಚಾರಕ್ಕೆ ಒಂದು ವ್ಯವಸ್ಥೆಯನ್ನು ನಿರ್ಮಿಸುವ ವೇಶ್ಯಾವೃತ್ತಿಯಲ್ಲಿಯೂ ನಲುಗುವವಳು ಹೆಣ್ಣೆ ಎಂಬುದು ಸ್ಪಷ್ಟ.

ಹೆಣ್ಣಿನ ನೈಜವಾದ ವ್ಯಕ್ತಿತ್ವವನ್ನು ಸಂಪೂರ್ಣವಾಗಿ ದಮನ ಮಾಡುವಲ್ಲಿನ ಮೊದಲ ಅಂಶವೇ ಲೈಂಗಿಕತೆ. ಇಷ್ಟೇಲ್ಲ ನಿರ್ಬಂಧವನ್ನು ಲೈಂಗಿಕತೆಯ ಮೇಲೆ ಹೇರಿದ್ದಷ್ಟೇ ಅಲ್ಲದೆ ಅವಳ ಸಂತಾನಾರೋಗ್ಯದ ಮೇಲೆ ಭಯಂಕರವಾದ ಹಲ್ಲೆಯನ್ನು ವ್ಯವಸ್ಥೆ ಮಾಡುತ್ತಿದೆ. ಲೈಂಗಿಕ ಸ್ವಾತಂತ್ರ್ಯಕ್ಕೆ ಮತ್ತು ಅವಳ ಸಂತಾನಾರೋಗ್ಯಕ್ಕೆ ಗಾಢವಾದ ಸಂಬಂಧವಿದೆ. ಲೈಂಗಿಕ ಸ್ವಾತಂತ್ರ್ಯವೆಂದರೆ ಹೆಣ್ಣು ತನಗೆ ಬೇಕಾದವನೊಂದಿಗೆ ತನ್ನ ಮನಃ ಪೂರ್ವಕವಾಗಿ ತನ್ನನ್ನು ಸಮರ್ಪಿಸಿಕೊಳ್ಳುವ ಮೂಲಕ ಅದರಿಂದ ಅವಳಿಗೆ ಲಭ್ಯವಾಗುವ ತೃಪ್ತಿಯನ್ನು ಅನುಭವಿಸುವುದರ ಜೊತೆಗೆ ವ್ಯಕ್ತಿತ್ವದ ಆತ್ಮಾಭಿಮಾನವನ್ನು ಕಾಪಾಡುವ ತನ್ನೊಳಗೆ ನೋವು, ಭಯ, ಅವಮಾನ ಹಿಂಸೆಯನ್ನು ಅನುಭವಿಸದೆ ಇರುವುದೆ ಸ್ವಾತಂತ್ರ್ಯವಾಗಿದೆ. ಆದರೆ ಸಮಾಜದಲ್ಲಿ ಅವಳಿಗೆ ಈ ರೀತಿಯ ಸ್ವಾತಂತ್ರ್ಯದ ಅವಕಾಶವಿಲ್ಲದೆ ಗಂಡು ತನಗೆ ಬೇಕಾದಾಗ ಬೇಕಾದಂಥೆ ಹೆಂಗಸಿನ ಲೈಂಗಿಕತೆಯ ಮೇಲೆ ಮಾಡುವ ಆಕ್ರಮಣ ಪ್ರತಿಷ್ಠೆಯ ದ್ಯೋತಕವಾಗುವ ಸಂಗತಿಗಳು ನಿಜಕ್ಕೂ ಪ್ರಶ್ನಾರ್ಹ. ವಿವಾಹದ ಚೌಕಟ್ಟಿನಲ್ಲಿ ಕೇವಲ ಮಹಿಳಾ ಲೈಂಗಿಕತೆಯ ಮೇಲೆ ಆಕ್ರಮಣವಾಗುತ್ತಿದೆ. ತನ್ನದಲ್ಲದ ತಪ್ಪಿಗೆ ತನ್ನ ಮೇಲಾದ ದೌರ್ಜನ್ಯಕ್ಕೆ ತಾನೆ ಶಿಕ್ಷೆಗೊಳಗಾಗುವುದು ಅಸಹನೀಯ ಕ್ರೌರ್ಯ. ಯಾವುದೆ ಕೋಮುಗಲಭೆಗಳಾಗಲಿ, ಜನಾಂಗೀಯ ದ್ವೇಷಗಳಾಗಲಿ, ಸಣ್ಣ-ಪುಟ್ಟ ಕದನಗಳಲ್ಲಿಯೂ ಸಹ ಮೊದಲ ಆಕ್ರಮಣ ಮಹಿಳೆಯ ಲೈಂಗಿಕತೆಯ ಮೇಲೆ ಎಂಬುದಕ್ಕೆ ಹಲವು ಸಾಕ್ಷಿಗಳಿವೆ. ಹೆಣ್ಣಿನ ಲೈಂಗಿಕತೆಯನ್ನು ಪುರುಷನು ಅವಳ ವ್ಯಕ್ತಿತ್ವದ ಸಂಪೂರ್ಣ ದಮನಗೈಯುವ ಮೂಲಲಕ ಅವಳನ್ನು ಅಧೀನ ದರ್ಜೆಗೆ ಇಳಿಸಲಾಗಿದೆಯಲ್ಲದೆ ನಿರಂತರ ನಿಯಂತ್ರಣ ಸಾಧಿಸಲಾಗುತ್ತಿದೆ.

ಲೈಂಗಿಕತೆ ಸಮಾಜಕ್ಕೆ ಪರಭಾರೆಯಾದರೆ ಅಧೀನತೆ ಸಹಜವಾಗಿಯೇ ಒಪ್ಪಿತವಾಗುತ್ತದೆ. ಹೀಗೆ ಸ್ವಾತಂತ್ರ್ಯವು ಕಳೆದು ಹೋದ ಪರಿಸ್ಥಿತಿಯಲ್ಲಿ ವ್ಯಕ್ತಿತ್ವದ ಅಭಿವೃದ್ಧಿಯಾಗಲಿ, ವೈಯಕ್ತಿಕ ಸಾಧನೆಯಾಗಲಿ ಸಾಧ್ಯವಾಗುವುದಿಲ್ಲ. ಅದರಲ್ಲೂ ಲೈಂಗಿಕತೆ ಪ್ರತಿ ವ್ಯಕ್ತಿಯ ವ್ಯಕ್ತಿತ್ವದ ಎಳೆ, ಸಂತಾನಾರೋಗ್ಯವನ್ನು ಚರ್ಚಿಸುವ ಪ್ರಸಂಗದಲ್ಲಿ ಇದನ್ನು ವಿಸ್ತೃತವಾಗಿ ವಿವರಿಸಿಕೊಳ್ಳುವುದು ಅತ್ಯಾವಶ್ಯಕ.

ಲೈಂಗಿಕತೆಯ ಕುರುಹು ಸಿಗುವುದು ಭ್ರೂಣಧ ಹಂತದಿಂದ ಲಿಂಗ ಪತ್ತೆಯಾದ ನಂತರ ಅದು ಹೆಣ್ಣೋ – ಗಂಡೋ ಎಂದು ತಿಳಿಯುವ ಮೂಲಕ ಹೆಣ್ಣು ಭ್ರೂಣಧ ಗರ್ಭಪಾತಕ್ಕೆ ಸಮಾಜ ವ್ಯವಸ್ಥೆ ಮುಂದಾಗುತ್ತಿದೆ. ಮಹಿಳಾ ಲೈಂಗಿಕತೆಯ ಮೇಲಿನ ಈ ಆಕ್ರಮಣವು ಆರಂಭವಾದ ಹಂತದಿಂದ ಅವಳ ಸಾವಿನವರೆಗೂ ವಿವಿಧ ಆಯಾಮಗಳಲ್ಲಿ ಸಾಗುತ್ತಲೇ ಇರುತ್ತದೆ. ಮಹಿಳೆಯ ಪ್ರಾಬಲ್ಯದ ಪ್ರತೀಕವಾದ ಈ ಲೈಂಗಿಕತೆಯನ್ನು ಗುರುತಿಸಿದ ಪಿತೃ ಸಂಸ್ಕೃತಿಯು ಇದರ ಮೇಲಿನ ಆಕ್ರಮಣದಿಂದ ಸಮಸ್ತ ಮಹಿಳಾ ಅಭಿವೃದ್ಧಿಯನ್ನು ತಡೆ ಹಿಡಿಯುವ ಅಸ್ತ್ರವಾಗಿ ಇದನ್ನು ಬಳಸಲಾಗುತ್ತಿದೆ. ಲೈಂಗಿಕ ಆಕ್ರಮಣದ ಪ್ರಮುಖ ವ್ಯವಸ್ಥೆಗಳೆಂದರೆ ವಿವಾಹ ಮತ್ತು ವೇಶ್ಯಾವೃತ್ತಿ. ಇವುಗಳಲ್ಲಿ ಭಿನ್ನತೆಯಿದೆಯಾದರೂ ಉದ್ದೇಶ ಮಾತ್ರ ಒಂದೇ ಆಗಿರುವುದಾದ್ದರಿಂದ, ಗಾಂಧೀಜಿಯವರು ಇವೆರಡರಲ್ಲೂ ನಡೆಯುವುದು ಆಕ್ರಮಣವೇ ಆಗಿದೆ ಎಂದಿದ್ದಾರೆ.

ಆದ್ದರಿಂದ ಸ್ತ್ರೀವಾದ ಮತ್ತು ಮಹಿಳಾ ಅಧ್ಯಯನಗಳು ಲೈಂಗಿಕತೆ ಮಹಿಳೆಯರ ಪಾಲಿಗೆ ಏನು? ಸಮಾಜ ಏಕೆ ಮಹಿಳಾ ಲೈಂಗಿಕತೆಯ ಮೇಲೆ ಆಕ್ರಮಣವೆಸಗುತ್ತಿದೆ. ಈ ಆಕ್ರಮಣದ ಸ್ವರೂಪಗಳೇನು? ಅದಕ್ಕೆ ಶೋಧಿಸಿಕೊಳ್ಳಬೇಕಾದ ಸೂಕ್ತ ಪರಿಹಾರಗಳು ಯಾವವು ಎಂಬುದನ್ನು ಚರ್ಚೆಗೊಳಪಡಿಸಿಕೊಳ್ಳುತ್ತಿದೆ. ಬಹುಪಾಲು ಸನ್ನಿವೇಶದಲ್ಲಿ ಹೆಣ್ಣೇ ಮಾನಸಿಕವಾಗಿ ಈ ಸಾಮಾಜಿಕ ನಿಯಮಗಳಿಗೆ ಬದ್ಧವಾಗಿರುವಂತೆ ಅವಳನ್ನು ತರಬೇತುಗೊಳಿಸಲಾಗಿದೆ. ತನ್ನ ಬದುಕು ಇಷ್ಟೇ ಎಂಬಂತಹ ವಿಸ್ಮೃತಿಯಲ್ಲಿರುವುದು ಒಂದು ಬಗೆಯಾದರೆ, ಇದರಿಂದ ಪಲಾಯನ ಮಾಡಲು, ಪ್ರತಿರೋಧಿಸಲು ಸಾಧ್ಯವಾಗದಂತಹ ಸಂಕೀರ್ಣತೆಯನ್ನು ವ್ಯವಸ್ಥೆ ಸೃಷ್ಟಿಸಿದೆ. ಇದೇ ಸಮಾಜ ಗಂಡಿಗೆ ನೀಡುವ ಸಂಪೂರ್ಣ ಸ್ವಾತಂತ್ರ್ಯದ ಹಕ್ಕನ್ನು ಎಲ್ಲಿಯೂ ಅನೈತಿಕವೆಂದು ವ್ಯಾಖ್ಯಾನಿಸುವುದಿಲ್ಲ. ಬದಲಿಗೆ ಕೆಲವು ಆಕ್ರಮಣಗಳಿಗೆ ಪ್ರತ್ಯುತ್ತರವಾಗಿ ಹೆಣ್ಣು ಧರಿಸುವ ಉಡುಪುಗಳನ್ನು ನಿಯಂತ್ರಿಸಲು ಹೋಗುವುದು, ಇತ್ಯಾದಿಗಳೆಲ್ಲವುಗಳ ಮೂಲಕ ಗಂಡಸಿನ ಆಕ್ರಮಣಕ್ಕೆ ಅಲಿಖಿತ ಪರವಾನಗಿಯನ್ನು ಒದಗಿಸಿದೆ. ಅಲ್ಲದೆ ಹೆಣ್ಣು ತನ್ನನ್ನು ತಾನು ಪ್ರತಿ ಹಂತದಲ್ಲೂ ಬಂಧಿಸಿಕೊಳ್ಳುವ ಅನಿವಾರ್ಯತೆಯನ್ನು ಹುಟ್ಟುಹಾಕುತ್ತಿದೆ. ಹೆಣ್ಣು-ಗಂಡಿನ ಮಿಲನದಲ್ಲಿ ದೈಹಿಕ ಬದಲಾವಣೆಯ ಸ್ಥಿತಿ ಹೆಣ್ಣಿಗೆ ಪ್ರಕೃತಿ ಸೃಷ್ಟಿಸಿದೆ.

ಪ್ರಾಕೃತಿಕವಾಗಿ ನಿರ್ಬಂಧವಿಲ್ಲದ ಈ ಸಂಗತಿ ಇವುಗಳಿಗೆ ತಡೆಯಾಗುವುದಿಲ್ಲ. ಆದರೆ ಸಾಮಾಜಿಕ ವ್ಯವಸ್ಥೆಯಲ್ಲಿನ ನೈತಿಕ – ಅನೈತಿಕ ವ್ಯಾಖ್ಯಾನಗಳು ಹೆಣ್ಣನ್ನು ಹೆಜ್ಜೆ-ಹೆಜ್ಜೆಗೂ ನಿಯಂತ್ರಣಕ್ಕೊಳಪಡಿಸುತ್ತಿವೆ. ಹೆಣ್ಣಿನ ನೈತಿಕ ಜವಾಬ್ದಾರಿಯನ್ನು ಕಟ್ಟುನಿಟ್ಟಾಗಿಸಿದ ಸಮಾಜ ವ್ಯವಸ್ಥೆ ಸಭ್ಯ ನಾಗರೀಕತೆಯ ಹೆಸರಿನಲ್ಲಿ ನಡೆಸುವ ಸೌಂದರ್ಯ ಸ್ಪರ್ಧೆ, ವೇಶ್ಯಾವೃತ್ತಿಯಂತಹ ವ್ಯಾಪಾರೀಕರಣದ ಸಂಗತಿಗಳು ಗಂಡಿನ ಸ್ವೇಚ್ಛಾಚಾರವನ್ನು ಪೋಷಿಸುವುದರ ಕುರಿತಾಗಿ ರೂಪುಗೊಂಡಿದ್ದು ಎಲ್ಲಿಯೂ ಅನೈತಿಕವಾದುದೆನಿಸುವುದಿಲ್ಲ. ಬಹುಪಾಲು ಸಂದರ್ಭದಲ್ಲಿ ಅತ್ಯಾಚಾರದ ಚರ್ಚೆಗಳು ಬಂದಾಗ ಹೆಣ್ಣಿನ ಉಡುಪನ್ನು ದೂಷಿಸುವ ಸಮಾಜ, ಅದೇ ಹೆಣ್ಣನ್ನು ಸೌಂದರ್ಯ ಸ್ಪರ್ಧೆಯಲ್ಲಿ, ಮಾಧ್ಯಮಗಳಲ್ಲಿ ಬಳಸುವ ಪರಿ, ಆಯ್ಕೆಯ ಮಾನದಂಡಗಳಿಗೆ ಉತ್ತರಿಸುವ ಗೋಜಿಗೆ ಹೋಗದಿರುವುದು ಹೆಣ್ಣನ್ನು ತನ್ನ ಅಗತ್ಯದ ಸರಕಾಗಿ ಬಳಸುವ ಉದ್ದೇಶವಷ್ಟೆ.

ಹೆಣ್ಣಿನ ದೇಹದ ಪ್ರತಿಯೊಂದು ಭಾಗವು ಹೇಗಿರಬೇಕೆಂದು ಪುರುಷನೇ ನಿರ್ಧರಿಸುವ ಸೌಂದರ್ಯ ಸ್ಪರ್ಧೆಯನ್ನು ಒಂದು ಕಲೆಯೆಂದು ಸಾಬೀತುಗೊಳಿಸಲಾಗಿದೆ. ನೈಜ ಸೌಂದರ್ಯವನ್ನು ಗುರುತಿಸದ ಇಂಥ ಸ್ಪರ್ಧೆಗಳು ಪುರುಷನ ದೃಷ್ಟಕೋನಕ್ಕನುಗುಣವಾಗಿ ಕಾಮಲಾಲಸೆಯಿಂದ ಭಾವ-ಭಂಗಿಗಳನ್ನು ನಿರ್ಧರಿಸುವ ಈ ಬಗೆಯಲ್ಲಿ ಲೈಂಗಿಕತೆಯ ಮಾರಾಟವಾಗುತ್ತಿದೆ. ಲೈಂಗಿಕತೆಯ ಅರ್ಥ, ವ್ಯಾಖ್ಯಾನವು ಸಮಾಜದಲ್ಲಿ ಅದು ಬಳಕೆಗೊಳ್ಳುವ ಬಗೆಗಳೆಲ್ಲವೂ ಸಹ ಮಹಿಳೆಯ ವ್ಯಕ್ತಿತ್ವವನ್ನು ಅಡವಿಡುವಂತಿವೆ. ಸದಾ ಸರ್ವದಾ ಹೆಣ್ಣಿನ ಲೈಂಗಿಕತೆ ಪುರುಷನ ನಿಯಂತ್ರಣಕ್ಕೊಳಪಡಿಸಲಾಗುತ್ತಿದೆ. ಅವಳ ಆತ್ಮಾಭಿಮಾನವನ್ನು ಕುಗ್ಗಿಸುವಂತಾದ ವ್ಯಾಖ್ಯಾನಗಳು ಅವಳನ್ನು ದೌರ್ಬಲ್ಯದ ಪ್ರತೀಕವಾಗಿಸುತ್ತಿರುವುದು ಸಮಾಜ ವ್ಯವಸ್ಥೆ. ಹೆಣ್ಣಿನ ವ್ಯಕ್ತಿತ್ವ ನಿರ್ಣಯದಲ್ಲಿ ಲೈಂಗಿಕತೆ ಮತ್ತು ಸಮಾಜದ ಪಾತ್ರ ಬಲು ದೀರ್ಘವಾದುದು. ಆದ್ದರಿಂದ ಇವುಗಳೆಲ್ಲವನ್ನು ಪುನರ್ ವ್ಯಾಖ್ಯಾನಿಸುವತ್ತ ಸಾಗಬೇಕಾಗಿದೆ. ಇದರ ಮುಂದುವರಿಕೆಯಾಗಿ ಕಂಡುಬರುವುದೇ ತಾಯ್ತನದ ಹಂತ.

ತಾಯ್ತನ: ಲೈಂಗಿಕತೆ ಹೆಣ್ಣಿನಲ್ಲಿ ಅಡಕಗೊಂಡಿರುವ ಒಂದು ಶಕ್ತಿಯಾದರೆ, ತಾಯ್ತನ ಈ ಲೈಂಗಿಕತೆ ಬಳಕೆಗೊಂಡಾಗ ಫಲಿಸಬಹುದಾಂತಹ ಒಂದು ಪರಿಣಾಮ. ಪ್ರಾಕೃತಿಕವಾಗಿ ತಾಯ್ತನವೆನ್ನುವುದು ಉತ್ಪಾದಕ ಕ್ರಿಯೆ. ಹೆಣ್ಣು ಸಂಪೂರ್ಣ ಕ್ರಿಯಾತ್ಮಕವಾಗಿ ಈ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ ಹಾಗೂ ಇದು ದೀರ್ಘಾವಧಿಯನ್ನು ಬಯಸುವ ಹಂತ. ಹೆಣ್ಣು-ಗಂಡು ಇಲ್ಲಿ ಬಂಡವಾಳ ಹೂಡಿದರೂ ಶ್ರಮದ ಸಂಗತಿಯಲ್ಲಿ ಬಹುಪಾಲು ಹೆಣ್ಣಿನದೇ ಆಗಿದೆ. ಯಾವುದೇ ಉತ್ಪಾದನೆಯ ಮೇಲೆ ಸಮಾಜದಲ್ಲಿ ಹಕ್ಕಿರುವುದು ಗಂಡಸಿಗೆ ಮಾತ್ರ. ಹೆಣ್ಣು ನಿರಂತರ ದುಡಿಮೆಯಲ್ಲಿ ತೊಡಗುವುದಾದರೂ ಒಡೆತನ, ಹಕ್ಕು ಮಾತ್ರ ಗಂಡಸಿನದೇ ಆಗಿದೆ. ಪ್ರಾಕೃತಿಕವಾದ ತಾಯ್ತನದಲ್ಲಿ ಸಮಾಜದ ಪಾತ್ರ ಅಗತ್ಯವಿಲ್ಲ. ಆದರೆ ಸಾಮಾಜಿಕವಾದ ವ್ಯಾಖ್ಯಾನದಲ್ಲಿ ತಾಯ್ತನದ ಅರ್ಥವೇ ಭಿನ್ನವಾಗಿದೆ. ಸಮಾಜ ನಿರ್ಮಿಸಿದ ಚೌಕಟ್ಟಿನಡಿಯಲ್ಲಿ ಮಗುವನ್ನು ಹೆತ್ತಾಗ ಆ ತಾಯ್ತನಕ್ಕೆ ಮನ್ನಣಡಯಿದೆ. ಹಾಗೆಯೇ ತಾಯ್ತನದ ಎಲ್ಲ ಕರ್ತವ್ಯಗಳನ್ನು ಪಾಲಿಸುವುದು ಹೆಣ್ಣಿಗೆ ಮಾತ್ರ ಹೇರಲಾಗಿದೆ. ಹೀಗೆ ಸಮಾಜ ಒಪ್ಪಿತ ಮತ್ತು ನಿರಾಕೃತ ತಾಯ್ತನಗಳೆರಡಲ್ಲೂ ಆಗುವ ನಷ್ಟ ಕೇವಲ ಹೆಣ್ಣಿಗೆ ಮಾತ್ರ ಸೀಮಿತವಾಗಿದೆ. ಸಮಾಜದಲ್ಲಿ ತಾಯ್ತನಕ್ಕೆ ಎಲ್ಲಿಲ್ಲದ, ಮನ್ನಣೆಯಿದೆಯೆಂಬುದು ವೈಭವೀಕರಣದ ಸಂಗತಿಯಷ್ಟೆ. ಹೆಣ್ಣಿನ ಲೈಂಗಿಕತೆಯ ಮೇಲೆ ಹೇರುವ ಇನ್ನೊಂದು ಬಗೆಯ ನಿರ್ಬಂಧವೇ ತಾಯ್ತನ. ಮೂಲಭೂತವಾಗಿ ‘ತಾಯ್ತನ’ಕ್ಕೆ ಸಿಗುತ್ತಿರುವ ಗೌರವವು ನೈಜತೆಯನ್ನು ಮೀರಿದ್ದು, ಹುಸಿಗೌರವವು, ಭ್ರಮೆಯು ಆಗಿದೆ. ಅಲ್ಲದೆ ಇದು ಹೆಣ್ಣಿಗೆ ಸಿಗಬೇಕಾದ ಸಹಜ ಸ್ವಾತಂತ್ರ್ಯವನ್ನೆ ಬಂಧನವಾಗಿಸಿದೆ. “ತಾಯಿ ದೇವರು” ಎಂಬುದಾದರೆ ಇಲ್ಲಿ ಎಲ್ಲ ತಾಯಂದಿರಿಗೂ ಗೌರವವಿದೆಯೇ? ಮೇಲ್ನೊಟದಲ್ಲಿ ಹಿರಿಮೆಯ ಗರಿಯಾದ ತಾಯ್ತನ, ವಾಸ್ತವದಲ್ಲಿ ಮಹಿಳಾ ಲೈಂಗಿಕತೆಯನ್ನು ನಿರಂತರವಾಗಿ ಪ್ರಶ್ನಿಸುವ, ಆಕ್ರಮಿಸುವ ಅತ್ಯಂತ ನಯಗಾರಿಕೆಯ ರೂಪವಾಗಿದೆ. ತಾಯ್ತನ – ಲೈಂಗಿಕತೆಯೆರಡು ಪ್ರಾಕೃತಿಕವಾಗಿ ವರವಾದರೂ, ಸಾಮಾಜಿಕವಾಗಿ ಶಾಪವಾಗಿದೆ. ಪಿತೃ ಚಿಂತನೆಯಲ್ಲಿ ಮಹಿಳೆಯನ್ನು ನಿಯಂತ್ರಿಸಲು, ಅವಳ ವ್ಯಕ್ತಿತ್ವವನ್ನು ದಮನಗೈಯಲು ಬಳಸುವ ಆಯುಧಗಳಾಗಿವೆ. ತಾಯ್ತನವೆಂಬುದು ಹುಸಿಗೌರವ, ಬಂಜೆತನವೆಂಬುದು ಹೆಣ್ಣನ್ನು ಶೋಷಿಸಲು ಬಳಸುವ ಅಸ್ತ್ರವಾಗಿದೆ. ಬಂಜೆತನ ಯಾರಿಂದ? ಯಾವಾಗ? ಏಕೆ? ಸಂಭವಿಸುತ್ತದೆ ಎಂಬಂತಹ ಸಂಗತಗಳಿಗೆ ಉತ್ತರಗಳನ್ನು ಕಂಡುಕೊಳ್ಳುವತ್ತ ಯೋಚಿಸದ ಸಮಾಜವು ಹೆಣ್ಣನ್ನು ಸಂಪೂರ್ಣವಾಗಿ ಕುಗ್ಗಿಸಲು ಯತ್ನಿಸುತ್ತಲೇ ಇದೆ.

ಬದುಕಿನುದ್ದಕ್ಕೂ ವ್ಯವಸ್ಥೆ ತಾಯ್ತನಕ್ಕೆ ಒಡ್ಡುವ ಸವಾಲುಗಳನ್ನು ಬಿಡಿಸುವುದರಲ್ಲಿಯೇ ಹೆಣ್ಣಿನ ಜೀವನವು ಸವೆದು ನಲುಗಿ ಹೋಘುತ್ತಿದೆ. ಸಂತಾನಾರೋಗ್ಯದ ಮೇಲೆ ಬೀಳುವ ಪ್ರಭಾವವನ್ನು ಗುರಿಯಿಟ್ಟುಕೊಂಡಾಗ, ಅದರ ಆಕ್ರಮಣ ಲೈಂಗಿಕತೆ ಮತ್ತು ತಾಯ್ತನದ ಮೇಲಾಗುತ್ತದೆ. ಏಕೆಂದರೆ ಉಳಿದೆಲ್ಲ ಸಂಗತಿಗಳು ಕಳೆದುಕೊಂಡರೆ ಪಡೆದುಕೊಳ್ಳಬಹುದು, ಆದರೆ ಈ ಎರಡು ಸಂಗತಿಗಳು ಕಳೆದು ಹೋದರೆ ವ್ಯಕ್ತಿತ್ವವೇ ಕಳೆದು ಬಿಡುವುದೆಂಬಂತಹ ಅಪಾಯಕಾರಿ ಸನ್ನಿವೇಶವನ್ನು ವ್ಯವಸ್ಥೆ ನಿರ್ಮಿಸಿದೆ. ಮಹಿಳೆಯ ಈ ಎರಡು ಶಕ್ತಿಗಳು ಸಮಾಜದ ಇತರ ವಲಯಗಳಲ್ಲಿ ಪ್ರವೇಶ ಪಡೆದರೂ, ಇವುಗಳ ನಿರ್ಬಂಧದಿಂದ ಹೆಣ್ಣು ಹೊರತಾಗಿರಲೂ ಸಾಧ್ಯವಿಲ್ಲ. ತಾಯ್ತನದ ಹುಸಿ ಗೌರವವನ್ನು ಘನತೆಯ ಬಲಗಳನ್ನು ಸೃಷ್ಟಿಸಿ, ಆ ಮೂಲಕ ಮಹಿಳೆಯನ್ನು ನಿರ್ಬಂಧಿಸುತ್ತದೆ. ಮಹಿಳೆಗೆ ಎಲ್ಲ ಸಂಪನ್ಮೂಲಗಳಿಂದ ದೂರವಿರಿಸುವ ಪಿತೃಚಿಂತನೆಯ ಉದ್ದೇಶವು, ಅವಳಿಗೆ ಆಸ್ತಿ ಹಕ್ಕನ್ನು ನಿರಾಕರಿಸುವುದು, ವಂಶದ ಪರಿಕಲ್ಪನೆ ಮೂಲವಾಗಿ ಉತ್ಪಾದನೆ ತಾಯಿಯಿಂದ ತಂದೆಗೆ ವರ್ಗವಾದ್ದರಿಂದ ಅದು ಪಿತೃವ್ಯವಸ್ಥೆಯ ಬಲವಾಗಿದೆ. ಲೈಂಗಿಕತೆಯಂತೆ ತಾಯ್ತನವು ಬಾಹ್ಯ ಆಕ್ರಮಣಕ್ಕೆ ಸದಾ ಸಿಗುವ ಸಂಗತಿಯಲ್ಲದೆ, ತಿಂಗಳುಗಟ್ಟಲೆ ಅವಳ ದೇಹದಲ್ಲಿ ನಡೆಯುವ ಕ್ರಿಯೆ.

ಮಗುವು ವಯಸ್ಕ ಹಂತಕ್ಕೆ ತಲುಪಿದಾಗ ತಂದೆಯ ಮಾತಿಗೆ ಮಾತ್ರ ಬೆಲೆಯಿರುತ್ತದೆ. ವ್ಯವಸ್ಥೆಯಲ್ಲಿನ ಯಾವುದೇ ವಿಚಾರದಲ್ಲಿಯ ಗಂಡಸಿನ ದುಡಿಮೆ ಮಾತ್ರ ಪರಿಗಣಿತವಾಗುತ್ತದೆ. ಆಗಿರುತ್ತದೆ. ದೈನಂದಿನ ವರ್ತನೆಗಳಿಂದ ತಂದೆ-ಪ್ರಧಾನ; ತಾಯಿ-ಅಧೀನವೆಂಬುದು ನಿರಂತರ ತರಬೇತಿಯಂತಾಗುತ್ತದೆ. ಮಕ್ಕಳಿಗೆ ಭಾಷಾ ಬಳಕೆಯಂತಹ ಸಂಗತಿಗಳು ಮೊದಲುಗೊಂಡು ಎಲ್ಲವು ಪಿತೃಕೇಂದ್ರಿತವಾಗಿವೆ. ಸಣ್ಣ-ಪುಟ್ಟ ಚಿಂತನೆಗಳು ಸಾಮಾಜಿಕ ವರ್ತನೆಯ ಅಭಿವ್ಯಕ್ತಿಯಾಗಿದೆ. ತಾಯ್ತನದ ಗೌರವ, ಹೊಗಳಿಕೆ ಎಲ್ಲವು ನಿರಾಳತೆಯಲ್ಲದೆ, ಅದರ ಹಿಂದೆ ಅಡಗಿರುವ ಕಾರ್ಯತಂತ್ರವಾಗಿದೆ. ಹೆಣ್ಣು ತಾನೇ ತಾನಾಗಿ ಈ ಕಾರ್ಯದಲ್ಲಿ ತಲ್ಲೀನಳಾಗುವಂತೆ ಬೌದ್ಧಿಕವಾಗಿ ಅವಳನ್ನು ಸಿದ್ಧಗೊಳಿಸಬೇಕಾಗುತ್ತದೆ. ಇದು ನಿರಂತರವಾಗಿ ತಾಯಿ ತನ್ನ ಮಕ್ಕಳಲ್ಲಿಯೂ ಪುರುಷ ಚಿಂತನೆಗಳನ್ನು ರೂಢಿಸುತ್ತಾಳೆ. ಇಲ್ಲಿ ಹೆಣ್ಣು ಶೋಷಿತಳು ಹಾಗೂ ಶೋಷಣೆಯ ಮಧ್ಯವರ್ತಿಯು ಆಗಿರುತ್ತಾಳೆ.

ಕೌಟುಂಬಿಕ ಚಟುವಟಿಕೆಗಳೆಲ್ಲವೂ ಹೆಣ್ಣನ್ನು ನಿರ್ಬಂಧಿಸುತ್ತಲೆ ಬರುತ್ತಿವೆ. ತಾಯ್ತನದ ಹುಸಿ ವೈಭವೀಕರಣವು ಹೆಣ್ಣನ್ನು ತ್ಯಾಗ ಮತ್ತು ದುಡಿಮೆಗೆ ಹಚ್ಚಲು ಬಳಸುವ ತಂತ್ರವಷಟೇ. ಸಾಮಾಜಿಕ ಚಿಂತನೆ ಮತ್ತು ವಿಚಾರಗಳು ಮಹಿಳೆಯ ಸಮಸ್ತ ಬದುಕಿನ ಮೇಲೆ ಹಿಡಿತವನ್ನು ಸಾಧಿಸಿವೆ. ಸಾಮಾಜಿಕ ಸಮಸ್ಯೆಗಳಿಂದಾಗಿ ಸಹಜ ಪ್ರಕ್ರಿಯೆಗಳ ನಿರ್ಬಂಧದಿಂದಾಗಿ ಹೆಣ್ಣಿನ ದೇಹ-ಮನಸ್ಸುಗಳು ಅಪಾಯಕ್ಕೆ ಸಿಲುಕಿ ನರಳುತ್ತಿವೆ. ಹೆಣ್ಣು ತನ್ನದೇ ಆಸ್ತಿಯ (ಲೈಂಗಿಕತೆ-ತಾಯ್ತನ)ನ್ನು ತನ್ನದೇ ಭೂಮಿ (ದೇಹ)ಯನ್ನು ಒತ್ತೆ ಇಡುವಂತಾಗಿ ಹಿಡಿ ಅನ್ನಕ್ಕಾಗಿ ಪರದಾಡುತ್ತಾ ಕುಳಿತುಕೊಳ್ಳುವುದು, ಸಮಾಜವು ಅವಳ ಶಕ್ತಿಯನ್ನು ಸಾಮಾಜಿಕ ನಿಯಂತ್ರಣಕ್ಕೆಳೆದುಕೊಂಡು ಅವುಗಳನ್ನು ಅವಳಿಗೆ ಶಾಪವೆಂಬಂತಾಗಿಸಿವೆ.

ಹೆಣ್ಣಿನ ಸಂಪೂರ್ಣ ವ್ಯಕ್ತಿತ್ವವನ್ನು ಕಬಳಿಸುವ ತಾಯ್ತನದ ಹುಸಿ ವೈಭವೀಕರಣಕ್ಕೆ ಮರುಳಾಗಿ ತನ್ನ ಬದುಕೇ ಕಳೆದು ಹೋದರು ಅರಿವಿಗೆ ಬಾರದಂತಹ ವಿಸ್ಮೃತಿಯನ್ನು ಹೆಣ್ಣಿಗೆ ವ್ಯವಸ್ಥೆ ಸೃಷ್ಟಿಸಿದೆ. ಹಾಗಾಗಿ ಸ್ತ್ರೀವಾದ-ಮಹಿಳಾ ಅಧ್ಯಯನಗಳು ಮೂಲಭೂತವಾಗಿ ಎತ್ತುತ್ತಿರುವ ಪ್ರಶ್ನೆಗಳು ಪಿತೃ ವ್ಯವಸ್ಥೆಯ ಬೇರನ್ನು ಅಲುಗಾಡಿಸುತ್ತಿರುವುದರಿಂದ, ಇವುಗಳ ಮೇಲೆ ಪ್ರಹಾರಗಳು ನಡೆಯುತ್ತಿವೆ. ಸ್ತ್ರೀವಾದ-ಮಹಿಳಾ ಅಧ್ಯಯನಗಳು ನೆಮ್ಮದಿ ಕೆಡಿಸುವಂತಹ, ಕುಟುಂಬವನ್ನು ಛಿದ್ರಗೊಳಿಸುವಂತಹ, ಪುರುಷ ದ್ವೇಷಿ ಚಿಂತನೆಯೆಂಬ ಅಪಪ್ರಚಾರಕ್ಕೀಡು ಮಾಡಲಾಗುತ್ತಿದೆ. ಹೀಗೆ ಲೈಂಗಿಕತೆ ಮತ್ತು ತಾಯ್ತನಗಳೆರಡು ಪ್ರಾಕೃತಿಕವಾದರೆ ವಿವಾಹವೆಂಬುದು ಸಂಪೂರ್ಣ ಸಮಾಜ ನಿರ್ಮಿತವಾಗಿದೆ. ಸ್ವಚ್ಛಂಧತೆಯನ್ನು ಕಲ್ಪಿಸುವ ಪ್ರಾಕೃತಿಕ ಸಂಗತಿಗಳೆರಡನ್ನು ನಿಯಂತ್ರಣಕ್ಕೊಳಪಡಿಸುವುದು ವಿವಾಹ ಸಂಸ್ಥೆ ರೂಪಿಕೆಯ ಮೂಲ ಉದ್ದೇಶವಾಗಿದೆ.

ವಿವಾಹ: ಲೈಂಗಿಕತೆ-ತಾಯ್ತನವನ್ನು ನಿರ್ಬಂಧಿಸಲು ಜಾರಿಯಾದ ವ್ಯವಸ್ಥೆಯ ವಿವಾಹ, ಹೆಣ್ಣಿನ ಲೈಂಗಿಕತೆ, ತಾಯ್ತನದ ಶಕ್ತಿಯನ್ನು ಗಂಡಿನ ಅಧೀನಕ್ಕೊಳಪಡಿಸುವಲ್ಲಿ ವಿವಾಹವು ಬಹುಮುಖ್ಯ ಪಾತ್ರವನ್ನು ವಹಿಸುತ್ತಿದೆ. ಮುಕ್ತ ಲೈಂಗಿಕತೆಗೆ ನೈಸರ್ಗಿಕವಾಗಿ ಅವಕಾಶವಿದೆಯಾದರೆ ಇಲ್ಲಿ ಗಂಡು ದುರ್ಬಲತೆಯನ್ನು ಅನುಭವಿಸುವುದು ಸಹಜವಾಗಿದೆ. ಯಾಕೆಂದರೆ ಹೆಣ್ಣು ಬಹುದೀರ್ಘಕಾಲ ಈ ಪ್ರಕ್ರಿಯೆಯಲ್ಲಿ ಗೋಚರವಾಗುವುದು, ಅಲ್ಲದೆ ಈ ಮೂಲಕ ಅವಳಲ್ಲಾಗುವ ದೈಹಿಕ ಪರಿವರ್ತನೆಗಳಿಂದಾಗಿ ತಾಯಿಯ ಚಹರೆ ಸುಲಭವಾಗಿ ಗುರುತಿಸಬಹುದಾಗಿದೆ. ಒಂದು ಗಂಡು-ಹೆಣ್ಣಿನ ನಡುವೆ ನಡೆಯುವ ಮಿಲನವನ್ನು ಪುರುಷ ಚಿಂತನೆ ಒಪ್ಪದೇ ಹೆಣ್ಣು ಸಂಪೂರ್ಣವಾಗಿ ಒಂದು ಗಂಡಿಗೆ ನಿಷ್ಠವಾಗಿರಬೇಕೆಂದು ರೂಪಿತವಾದ ಸಂಸ್ಥೆಯೇ ವಿವಾಹ. ಇದರಲ್ಲಿನ ನಿಯಮಗಳು ಗಂಡಿಗೂ ಅನ್ವಯಿಸುವುದಾದಲ್ಲಿ ಸಂಘರ್ಷ, ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೆ ಹೀಗಾಗದೆ ಹೆಣ್ಣಿನ ಚಲನಶೀಲತೆ ಹಾಗೂ ಲೈಂಗಿಕತೆಯ ಮೇಲೆ ಹಕ್ಕು ಸಾಧಿಸಲು ಒಂದು ಹೆಣ್ಣು ಒಂದು ಗಂಡನ್ನು ವಿವಾಹವಾಗುವಂತಾಯಿತು. ವಾರಸುದಾರಿಕೆ, ವಂಶದ ಹಕ್ಕು, ಆಸ್ತಿ ಹಕ್ಕುಗಳೆಲ್ಲವುಗಳ ಕುರಿತು ಆಲೋಚಿಸ ಹೊರಟ ಪುರುಷ ಚಿಂತನೆ ಮಹಿಳೆಯ ಅಸ್ತಿತ್ವವನ್ನು ದಮನಗೈಯಲು ಅವಳಿಗಿರುವ ಹಕ್ಕುಗಳೆಲ್ಲವನ್ನು ಕಸಿದುಕೊಳ್ಳಲು ಮುಂದಾಯಿತು.

ವಿವಾಹ ಮಹಿಳಾ ಬದುಕಿನ ಅತ್ಯಂತಿಕ ಸಂಗತಿಯೆಂಬಂತೆ ಸಮಾಜ ವ್ಯವಸ್ಥೆಯಲ್ಲಿನ ಚಿಂತನೆಗಳು ಬೆಳೆದು ಬಂದವು. ಹೀಗೆ ಅನಿವಾರ್ಯತೆಯನ್ನುಂಟು ಮಾಡುವ ವಿವಾಹ ಸಂಸ್ಥೆಯಲ್ಲಿ ಹೆಣ್ಣಿಗೆ ತನ್ನ ಸಂಗಾತಿಯ ಆಯ್ಕೆಯ ಚರ್ಚೆಗಳು ಒಳಗೊಳ್ಳಲಿಲ್ಲ. ಹೀಗೆ ಹೆಣ್ಣಿಗೆ ಆಯ್ಕೆಯಿಲ್ಲದ, ಅವಳ ಬದುಕಿನ ಬಹುಮುಖ್ಯವಾದ ಸಂಗತಿಯಾಗಿ ವಿವಾಹವು ಕಾರ್ಯನಿರ್ವಹಿಸುತ್ತಿದೆ. ಈ ಕಾರಣದಿಂದಲೇ ಹೆಣ್ಣು ತಾನು ಭೂಮಿಗೆ ಬಂದ ತಕ್ಷಣವೇ ತನ್ನ ನೆಲೆಯನ್ನು ಕಳೆದುಕೊಳ್ಳುವಂತಾಯಿತು. ಹುಟ್ಟಿದ ಮನೆಯಲ್ಲಿ ಕೆಲವು ದಿನಗಳ ಕಾಲ ಅತಿಥಿಯಂತಾದ ಹೆಣ್ಣು ಹೆತ್ತವರಿಗೆ ಹೊರೆಯೆನಿಸುವುದು ಪ್ರಾರಂಭವಾಯಿತು. ಹೆಣ್ಣನ್ನು ವಿವಾಹ ಮಾಡಿ ಇನ್ನೊಂದು ಕುಟುಂಬಕ್ಕೆ ಸಾಗಿಸುವುದೇ ಸಾಮಾಜಿಕವಾಗಿ ಹೆತ್ತವರ ಆದ್ಯ ಕರ್ತವ್ಯವಾಯಿತು. ಆದರೆ ಹೀಗೆ ಅತಿಥಿಯಾದ ಹೆಣ್ಣು ಮುಂದೆ ಹೋಗುವ ಕುಟುಂಬದಲ್ಲಿ ಹೊರಗಿನಿಂದ ಬಂದವಳೆಂದು ಅಲ್ಲಿಯೂ ಕೂಡ ಭದ್ರವಾದ ನೆಲೆಯನ್ನು ಕಳೆದುಕೊಳ್ಳಬೇಕಾಯಿತು. ಅವಳು ಅಲ್ಲಿ ವಿವಾಹದ ಎಲ್ಲ ನಿಯಮಗಳನ್ನು ಪಾಲಿಸುವಾಗಲೂ ತನ್ನದೆಂಬ ಹಕ್ಕನ್ನು ಸಾಧಿಸುವಂತಿಲ್ಲ ಪಾಲಿಸದೇ ಇರುವಾಗಲಂತೂ ಅವಳು ಆ ಮನೆಯಿಂದ ನಿರ್ದಾಕ್ಷಿಣ್ಯವಾಗಿ ಹೊರ ಹಾಕಲ್ಪಡುತ್ತಾಳೆ. ಅಲ್ಲದೆ ಸಾಮಾಜಿಕ ಮಾನ್ಯತೆಯನ್ನು ಕಳೆದುಕೊಂಡು ಅತಂತ್ರತೆಯನ್ನು ಅನುಭವಿಸುವಂತಾಗುತ್ತದೆ. ಹಾಗಾಗಿ ತನ್ನ ರಕ್ಷಣೆ, ಭದ್ರತೆಗಾಗಿ ಅವಳು ಅಲ್ಲಿನ ಎಲ್ಲ ನಿಯಮಗಳನ್ನು ಪಾಲಿಸುತ್ತ, ಹೀನಾಯ ಸ್ಥಿತಿಯನ್ನು ಅನುಭವಿಸಿ ಅನಿವಾರ್ಯವಾಗಿ ಬಾಳಬೇಕಾಗುತ್ತದೆ.

ವಿವಾಹದ ನಿಯಮಗಳಿಗೆ ಅವಳು ಬದ್ಧಳಾಗುವಮತೆ ಬಾಲ್ಯದಿಂದಲೂ ತರಬೇತಿಯನ್ನು ನೀಡಲಾಗುತ್ತಿದೆ. ವಿವಾಹವಾಗಿ ತನ್ನ ಲೈಂಗಿಕತೆ ಮತ್ತು ತಾಯ್ತನವನ್ನು ಒತ್ತೆಯಿಡುವಂತಾಗಿ ತನ್ನ ರಕ್ಷಣೆ ಭದ್ರತೆಗಾಗಿ ಅವಳು ಪುರುಷನ ಮೇಲೆ ಅವಲಂಬಿತಳಾಗುವ ಸ್ಥಿತಿಯನ್ನು ವ್ಯವಸ್ಥೆಯಲ್ಲಿ ನಿರ್ಮಿಸಲಾಗಿದೆ. ಇನ್ನೂ ಕ್ರೂರವಾಗಿ, ಅತಿರೇಕವಾಗಿ ಹೇಳಬಹುದಾದರೆ ಹೆಣ್ಣು ಅನ್ನ, ನೀರು ಸೂರಿನ ಆಶ್ರಯಕ್ಕಾಗಿ ಗಂಡಿಗೆ ಹಾಗೂ ಅವನ ಕುಟುಂಬಕ್ಕೆ ಅಧೀನಳಾಗಿ ದಾಸಿಯಾಗುತ್ತಾಳೆ. ಈ ವಿವಾಹವೆನ್ನುವುದು ಹೆಣ್ಣಿನ ಪಾಲಿಗೆ ನಿರಾಶ್ರಿತರ ಶಿಬಿರದಂತಾಗಿದೆ. ಇಂತಹ ಶಿಬಿರಗಳಲ್ಲಿ ಯಾವುದೇ ರೀತಿಯ ಬೇಕು ಬೇಡಗಳಿಗಾಗಲಿ ಆಸ್ಪದವಿರುವುದಿಲ್ಲ. ಮೂಲಭೂತ ಅಗತ್ಯಗಳ ಪೂರೈಕೆಗಾಗಿ ಅವಳು ಎಲ್ಲ ರೀತಿಯ ಅಧೀನತೆಗೆ ಒಳಗಾಗುತ್ತಾಳೆ. ಮಹಿಳೆಯ ಎಲ್ಲಾ ಸಮಸ್ಯೆಗಳು ವಿವಾಹ ಮೂಲದಿಂದಲೆ ಹುಟ್ಟುತ್ತವೆ. ವಿವಾಹ ಸಂಸ್ಥೆ ಮಹಿಳಾ ಶೋಷಣೆಯ ಕೇಂದ್ರಬಿಂದು ಎಂಬ ತೀವ್ರವಾದಿ ಸ್ತ್ರೀವಾದಿಗಳ ತರ್ಕ ಸ್ಪಷ್ಟವಾದುದು. ವಿವಾಹ ಸಂಸ್ಥೆಯು ಪ್ರತ್ಯಕ್ಷ, ಪರೋಕ್ಷವಾಗಿ ಸಂತಾನಾರೋಗ್ಯಕ್ಕೆ ಸಂಬಂಧಿಸಿದೆ. ಏಕೆಂದರೆ ವಿವಾಹವು ಅವಳ ಲೈಂಗಿಕತೆಯನ್ನು ಕೇಂದ್ರವಾಗಿಸಿಕೊಂಡಿದೆ. ಭ್ರೂಣದ ಹಂತದಿಂದ ಸಾವಿನವರೆಗೂ ಅವಳ ಜೀವಿತಾವಧಿಯಲ್ಲಿ ಸಮಾಜ ಅವಳ ಲೈಂಗಿಕತೆಯನ್ನು ಗುರಿಮಾಡಿಕೊಂಡು ಅದನ್ನು ನಿಯಂತ್ರಿಸುವುದೆ ವಿವಾಹ ಸಂಸ್ಥೆ.

ಸಮಾಜ ವ್ಯವಸ್ಥೆಯಲ್ಲಿ ಮಹಿಳೆಯ ಸಮಸ್ಯೆಗಳೆಂದು ಕಾಣಿಸಿಕೊಳ್ಳುತ್ತಿರುವ ಭ್ರೂಣಹತ್ಯೆ, ಬಾಡಿಗೆತಾಯಿ, ದೇವದಾಸಿ ಪದ್ಧತಿ, ಅನೈತಿಕ ಹೆಣ್ಣುಮಕ್ಕಳ ಸಾಗಾಣಿಕೆ, ವೇಶ್ಯಾವೃತ್ತಿ, ವಿಚ್ಛೇದನ, ವೈಧವ್ಯ, ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ, ಸಾರ್ವಜನಿಕ ವಲಯದ ದೌರ್ಜನ್ಯ ಮೊದಲಾದವುಗಳ ಮೂಲ ನೆಲೆ ವಿವಾಹವೇ ಆಗಿದೆ. ಮಹಿಳಾ ಲೈಂಗಿಕತೆಯನ್ನು ನಿಯಂತ್ರಿಸಲೆಂದು ರೂಪಿತಗೊಂಡ ವಿವಾಹ ಸಂಸ್ಥೆಯು ಮಹಿಳೆಯ ಬದುಕಿನಲ್ಲಿ ಹಲವಾರು ಸಮಸ್ಯೆಗಳನ್ನು ಹುಟ್ಟು ಹಾಕುತ್ತಿದೆ, ಅಲ್ಲದೆ ಮಹಿಲೆಯ ಸಂಪೂರ್ಣ ಅಸ್ತಿತ್ವವನ್ನು ದಮನ ಮಾಡುವಲ್ಲಿ ಯಶಸ್ವಿಯಾಗುತ್ತಿದೆ.