ಇನ್ವಿಟ್ರೋ ಫರ್ಟಿಲೈಜೇಷನ್‌ (ಐವಿಎಫ್‌)

ಗರ್ಭದ ಹೊರಗೆ ಹೆಣ್ಣು-ಗಂಡಿನಲ್ಲಿರುವ ಅಂಡಾಣುವನ್ನು ಫಲಿಸುವಂತೆ ಮಾಡಿ ನಂತರ ಅದನ್ನು ಗರ್ಭಾಶಯಕ್ಕೆ ವರ್ಗಾಯಿಸಿ ಭ್ರಣವನ್ನು ಬೆಳೆಯಲು ಸಹಾಯಕವಾಗುವ ತಂತ್ರಜ್ಞಾನ ಐವಿಎಫ್‌. ಈ ತಂತ್ರಜ್ಞಾನವು ಸಾಂಪ್ರದಾಯಿಕ ನಂಬಿಕೆಗಳನ್ನು ಮುರಿದು ಹಾಕುವಲ್ಲಿ, ಬಂಜೆತನವನ್ನು ನಿವಾರಿಸುವಲ್ಲಿ ಬಹುಪಾಲು ಉಪಯುಕ್ತವಾದಂತಹ ತಂತ್ರಜ್ಞಾನವಾಗಿದೆ. ಇದರಡಿಯಲ್ಲಿ ಬರುವ ಎರಡು ಪ್ರಮುಖ ಸಂಗತಿಗಳೆಂದರೆ ಪ್ರನಾಳಶಿಶು ಮತ್ತು ಬಾಡಿಗೆ ತಾಯಿ. ಹೀಗೆ ತಂತ್ರಜ್ಞಾನವು ಹೊಸ ತಾಯ್ತನದ ವ್ಯಾಖ್ಯಾನಗಳನ್ನು ನೀಡಿತು. ಮಕ್ಕಳಾಗದಂತಹವರ ಕೊರತೆಯನ್ನು ನಿವಾರಿಸುವಲ್ಲಿ ಸಶಕ್ತಿವಾದಂತಹ ತಂತ್ರಜ್ಞಾನಗಳು ಇವುಗಳಾಗಿವೆ.

ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆಯ ಬದುಕಿಗೆ ಹಾಗೂ ಅವಳ ವ್ಯಕ್ತಿತ್ವವನ್ನು ಉಳಿಸಿ, ಬೆಳೆಸುವ ಯಾವುದೇ ರೀತಿಯ ಸೌಲಭ್ಯಗಳು ಇಂದು ಲಭ್ಯವಾಗುತ್ತಿದ್ದರೂ, ಅವುಗಳು ಮಹಿಳೆಗೆ ತಲುಪದಂತೆ ಪಿತೃ ವ್ಯವಸ್ಥೆ ತೊಡಕುಗಳನ್ನುಂಟು ಮಾಡುತ್ತಲೇ ಇದೆ. ಹಾಗೊಮ್ಮೆ ಅವುಗಳು ಬಳಕೆಗೊಳ್ಳುವುದಾದರೂ ಆ ಮೂಲಕ ಪುರುಷ ಬದುಕಿನ ಉಪಯುಕ್ತತೆಯನ್ನು ಆಧರಿಸಿ ಮಾತ್ರ. ಇಂಥ ಏಕಪಕ್ಷೀಯ ದೋರಣೆಗಳು ಮಹಿಳೆಯ ಸಂತಾನಾರೋಗ್ಯವನ್ನು ತೀವ್ರ ಬಗೆಯಲ್ಲಿ ಘಾಸಿಗೊಳಿಸುತ್ತಿವೆ. ಅಲ್ಲದೆ ಅವಳ ಗರ್ಭಾಶಯವನ್ನು ವ್ಯಾಪಾರೀಕರಣಕ್ಕೊಳ್ಳಪಡಿಸಲಾಗಿದೆ. ತಂತ್ರಜ್ಞಾನದ ಸದುದ್ದೇಶವು ವ್ಯವಸ್ಥೆಯಲ್ಲಿ ನಕಾರಾತ್ಮಕ ಪರಿಣಾಮ ಬೀರಲು ಇರುವ ಮೂಲ ಕಾರಣ ಅದರ ಬಳಕೆಯನ್ನು ಅವಲಂಬಿಸಿದೆ.

ಪ್ರನಾಳ ಶಿಶು

ತಂತ್ರಜ್ಞಾನವು ನೈಸರ್ಗಿಕ ತಾಯ್ತನವನ್ನು ಭಿನ್ನವಾಗಿಸಿತು. ತಾಯಿಯಾಗುವಲ್ಲಿ ವ್ಯಕ್ತಿ ಸಹಜ ದೋಷಗಳಿದ್ದರೆ, ಅದನ್ನು ನಿವಾರಿಸಿಯೋ ಅಥವಾ ಪರ್ಯಾಯ ಸಾಧ್ಯತೆಗಳಿಂದಲೋ ತಾಯ್ತನವನ್ನು ಕಲ್ಪಿಸಿದ್ದು ತಂತ್ರಜ್ಞಾನ. ಹಲವಾರು ದೈಹಿಕ ನ್ಯೂನತೆಗಳಿಂದ ತಾಯಿಯಾಗದಂತಹ ಸ್ಥಿತಿಯಲ್ಲಿರುವ ಮಹಿಳೆಗೆ ತಾಯ್ತನವನ್ನು ಒದಗಿಸುವಲ್ಲಿ ಸಹಕಾರಿಯಾದಂತಹ ತಂತ್ರಜ್ಞಾನದ ಆವಿಷ್ಕಾರಗಳಿಂದ ಸಾಮಾಜಿಕ ವ್ಯವಸ್ಥೆಯಲ್ಲಿರುವ ಬಂಜೆತನದಂತಹ ಸಾಮಾಜಿಕ ನಿಂದನೆಗೆ ಗುರಿಯಾಗಿ ನರಳುವುದನ್ನು ತಪ್ಪಿಸಲು ಸಾಧ್ಯವಾಯಿತು.

ಅಂಡಾಣು ಮತ್ತು ವೀರ್ಯಾಣು ಎರಡನ್ನು ಸೇರಿಸಿ ಪ್ರನಾಳದಲ್ಲಿ ಮಿಲನಗೊಳಿಸಿ, ತಾಯಿ ಗರ್ಭದ ವಾತಾವರಣವನ್ನು ಒದಗಿಸಿ, ಭ್ರೂಣವಾಗಿಸಿ ಅದನ್ನು ನೇರವಾಗಿ ತಾಯಿಯ ಗರ್ಭಕ್ಕೆ ಸೇರಿಸಲಾಗುತ್ತದೆ. ಇದನ್ನೆ ‘ಪ್ರನಾಳ ಶಿಶು’ವೆಂದು ಕರೆಯಲಾಗುತ್ತದೆ. ಅಂಡಾಣು-ವೀರ್ಯಾಣುಗಳು ಸಂಧಿಸಿ ಗರ್ಭಧರಿಸುವಲ್ಲಿ(ಭ್ರೂಣವಾಗುವಲ್ಲಿ) ತೊಂದರೆಗಳಿದ್ದರೆ, ಆಗ ತಾಯ್ತನವನ್ನೇ ಅನುಭವಿಸಲಾರದಂತಹ ಸ್ಥಿತಿಯನ್ನು ತಪ್ಪಿಸಿರುವ ಈ ತಂತ್ರಜ್ಞಾನದಲ್ಲಿ x+x ಮತ್ತು x+y ಕ್ರೋಮೊಸೋಮುಗಳನ್ನು ಸಮ್ಮಿಲನಗೊಳಿಸಿ ಅದನ್ನು ಗರ್ಭಾಶಯಕ್ಕೆ ಸೇರಿಸಲಾಗುತ್ತದೆ. ಜೊತೆಗೆ ಇದು ವೀರ್ಯಾಣುಗಳ ಚಲನೆಯ ವೇಗೆ ಕೊರತೆಯಿದ್ದರೂ ಅದರಿಂದಾಗದಿರುವ ಗರ್ಭಧಾರಣೆಯ ತೊಂದರೆಯನ್ನು ನಿವಾರಿಸಿ ತಾಯ್ತನವನ್ನು ಒದಗಿಸುವಲ್ಲಿ ಉಪಯುಕ್ತವಾಗಿದೆ.

ಬಾಡಿಗೆ ತಾಯಿ

ಗರ್ಭನಾಳದಲ್ಲಿ ಯಾವುದೇ ತೊಂದರೆಯಿರದೆ, ಗರ್ಭಾಶಯದಲ್ಲಿ ತೊಂದರೆ ಕಾಣಿಸಿಕೊಂಡು ಗರ್ಭಪಾತವಾಗುತ್ತಿದ್ದರೆ ಅದಕ್ಕೆ ಪರಿಹಾರಗಳನ್ನು ಕಂಡುಕೊಳ್ಳಬಹುದಾಗಿದೆ. ಆದರೆ ಅದಕ್ಕಿಂತ ಸಂಕೀರ್ಣವಾದ ಸಮಸ್ಯೆಯೆಂದರೆ ಗರ್ಭಾಶಯಕ್ಕೆ ಮಗುವನ್ನು ಹೆರುವ, ಪೋಷಿಸುವ ಶಕ್ತಿಯಿಲ್ಲದಿದ್ದರೆ ಅಂಥ ಮಹಿಳೆಯು ಮಗುವಿನ ಕೊರತೆಯನ್ನು ಅನುಭವಿಸಿ, ಕುಟುಂಬದಿಂದ ನಿರಾಕೃತರಾದಂತಹ ಮಹಿಳೆಯರ ಪ್ರಕರಣಗಳಲು ಸಾಕಷ್ಟು ಲಭ್ಯ ಇವೆ. ತಂತ್ರಜ್ಞಾನದಿಂದಾಗಿ ಇಂತಹ ಸಂದಿಗ್ಧ ಸಮಸ್ಯೆಗಳು ಸಹಜವೆಂಬಂತೆ ನಿವಾರಿಸಿಕೊಳ್ಳುವಲ್ಲಿ ಸಹಕಾರಿಯಾಗಿವೆ.

ಗಂಡ-ಹೆಂಡತಿಯರಲ್ಲಿನ ಅಂಡಾಣು-ವೀರ್ಯಾಣುವನ್ನು ಸೇರಿಸಿ ಅದನ್ನು ಸಶಕ್ತ ಗರ್ಭವಿರುವ ಮಹಿಳೆಯ ಗರ್ಭಕ್ಕೆ ಸೇರಿಸಿ ಆ ಮೂಲಕ ಮಗುವನ್ನು ಪಡೆಯುವ ಕ್ರಮವೇ ಬಾಡಿಗೆ ತಾಯಿ. ರಕ್ತ, ಮಾಂಸವನ್ನು ನೀಡಿ ಬೆಳೆಸುವ ಮಹಿಳೆಯು ಸಹಜವಾಗಿಯೇ ಏರ್ಪಡುವ ಭಾವನಾತ್ಮಕ ಸಂಬಂಧದಿಂದಾಗಿ ನಿಜವಾಗಿ ಮಗುವಿನ ತಾಯಿಯಾಗುವ ಹಕ್ಕು ಯಾರದು? ಎಂಬಂತಹ ಪ್ರಶ್ನೆಗಳು ಸಂಘರ್ಷವನ್ನು ಸೃಷ್ಟಿಸಿ ಕಾನೂನಿನ ಮೆಟ್ಟಿಲೇರಿದ್ದರಿಂದ ‘ಬಾಡಿಗೆತಾಯಿ’ ಕ್ರಮವು ಒಪ್ಪಂದವಾಗಿ ಮಾರ್ಪಟ್ಟಿತ್ತಾದರಿಂದ, ಬಹುಬೇಗನೆ ಇದು ವ್ಯಾಪಾರೀಕರಣಕ್ಕೆ ಲಗ್ಗೆ ಇಟ್ಟಿತು. ಭಾರತದಲ್ಲಿ ಬಾಡಿಗೆ ತಾಯಿಯಿಂದ ಮಗುವನ್ನು ಪಡೆಯುವುದು ಇತರೆ ಸ್ಥಳಗಳಿಗಿಂತ ಕಡಿಮೆಯ ಖರ್ಚಿನದ್ದಾಗಿದೆ. ಆದ್ದರಿಂದ ಇಂದು ಇದು ಕೋಟಿಗಟ್ಟಲೆ ಸಂಪಾದಿಸುವ ಬೃಹತ್‌ ಉದ್ಯಮವಾಗಿ ಬೆಳೆಯುತ್ತಿದೆ.

ಕ್ಲೋನಿಂಗ್

ಒಂದು ಮಗುವು ಗಂಡಾಗಬೇಕು, ಹೆಣ್ಣಾಗಬೇಕು ಎಂಬುದನ್ನು ಆಧರಿಸಿ x+x (ಗಂಡು) x+y (ಹೆಣ್ಣು) ಈ ಕ್ರೋಮೊಸೋಮುಗಳನ್ನು ಸೇರಿಸಿ ಅಗತ್ಯವಿರುವ ಮಗುವನ್ನು ಪಡೆಯುವ ಸಾಧ್ಯತೆಯ ತಂತ್ರಜ್ಞಾನದಿಂದ ಲಭ್ಯವಾಯಿತು. ಹೆಣ್ಣಿನ x+x ಕ್ರೋಮೊಸೋಮುಗಳಿಂದಾಗಿ ಹೆಣ್ಣು ಮಗುವಿನ ಜನನವು ಸಾಧ್ಯವಾಗುವುದಾದ್ದರಿಂದ ವಿವಾಹವನ್ನು ಪ್ರತಿರೋಧಿಸುವ ತೀವ್ರವಾದಿ ಸ್ತ್ರೀವಾದಿಗಳು ಸಲಿಂಗರತಿಯನ್ನು ಅವಲಂಬಿಸಿದರು. ಅಲ್ಲದೆ ಇವರುಗಳು ಗಂಡು ಮಗುವನ್ನು ನಿರಾಕರಿಸುವಲ್ಲಿ ಮುಂದಾದರು. ತಂತ್ರಜ್ಞಾನಗಳು ಆಶ್ಚರ್ಯಕರವಾದ ಸಂಗತಿಗಳನ್ನು ಒದಗಿಸುವಲ್ಲಿ ಯಶಸ್ವಿಯಾಗಿದೆ. ಅಷ್ಟೆ ಅಲ್ಲದೆ ಮಹಿಳಾ ಬದುಕಿನ ಮಹತ್ತರ ಸಮಸ್ಯೆಘಳನ್ನು ನಿವಾರಿಸಲು ಉಪಯುಕ್ತವಾಗಿವೆ. ಆದರೆ ವ್ಯವಸ್ಥೆಯ ಹಿಡಿತಕ್ಕೆ ಒಳಪಟ್ಟಿರುವ ಸಂಗತಿಗಳು ಮಹಿಳಾ ವಿಚಾರಗಳಿಗೆ ಪೂರಕವಾಗಿ ಬಳಕೆಗೊಳ್ಳದಂತಿರಲು ಪಿತೃ ಸಂಸ್ಕೃತಿ ಜಾಗೃತಿ ವಹಿಸುತ್ತದೆ. ಇನ್ನೊಂದು ಜೀವಿಯ ಪರಿವೆಯಿಲ್ಲದೆ ಅದನ್ನು ನಿರಂತರವಾಗಿ ನಿಯಂತ್ರಣದಲ್ಲಿರಿಸಿಕೊಳ್ಳುವುದರಿಂದ ಮಹಿಳಾ ಸಬಲೀಕರಣಕ್ಕೆ ಪೂರಕವಾಗುವ ಸಂಗತಿಗಳ ಬಳಕೆಗೆ ವ್ಯವಸ್ಥೆ ಆದ್ಯತೆಯನ್ನು ನೀಡುವುದಿಲ್ಲ. ಕ್ಲೋನಿಂಗ್‌ನ ಮೊಟ್ಟ ಮೊದಲನೆಯ ಪ್ರಯೋಗ ನಡೆದಿರುವುದು ಪ್ರಾಣಿವರ್ಗದ ಮೇಲೆ. ಡಾಲಿ ಎಂಬ ಕುರಿಯು ಈ ಪ್ರಯೋಗದ ಫಲಿತವಾಗಿದೆ. ಮನುಷ್ಯ ಜೀವಿಯ ಮೇಲೂ ಈ ಪ್ರಯೋಗವನ್ನು ನಡೆಸಬಹುದೆಂದು ತಿಳಿಸಿರುವ ವಿಜ್ಞಾನಿಗಳಿಂದು ಅತ್ಯಾಶ್ಚರ್ಯ ಮೂಡಿಸುವಂತಹ ಸಂಗತಿಗಳನ್ನು ಶೋಧಿಸುತ್ತಲಿದ್ದಾರೆ.

ಸುಸಂತತಿ

ತಂದೆ-ತಾಯಿಯರು ಹೊಂದಿರುವ ವಿವಿಧ ಜೀನ್ಸ್ ಗಳ ಆಧಾರದ ಮೇಲೆ ಮಗುವಿನ ಬುದ್ಧಿ-ಸಾಮರ್ಥ್ಯ, ಗುಣ-ದೋಷ ಎಲ್ಲವು ಅವಲಂಬಿಸಿರುವುದರಿಂದ, ಒಳ್ಳೆಯ ಜೀನ್ಸ್‌ ಗಳ ಬಳಕೆಯ ಮೂಲಕ ಸುಸಂತತಿಯನ್ನು ಪಡೆಯಬಹುದಾಗಿದೆ. ಇದರಿಂದಾಗಿ ದೋಷಗಳ ನಿವಾರಣೆಯಿರುವ ಸಾಧ್ಯತೆಯನ್ನು ಕೈ ಬಿಟ್ಟು ದೋಷರಹಿತ ಗುಣವಿರುವ ಭ್ರೂಣವನ್ನು ಸಿದ್ಧಪಡಿಸಿಕೊಳ್ಳವಂತಹ ಅವಕಾಶವನ್ನು ತಂತ್ರಜ್ಞಾನವು ರೂಪಿಸಿಕೊಟ್ಟಿದೆ. ಅನಾರೋಗ್ಯಕರ ಜೀವಿಗಳ ಸೃಷ್ಟಿಯನ್ನು ತಡೆಯುವ ಈ ತಂತ್ರಜ್ಞಾನವು ಆಯ್ಕೆ-ನಿರಾಕರಣೆಯ ರಾಜಕಾರಣವನ್ನು ಹುಟ್ಟುಹಾಕುತ್ತದೆ.

ಸಂತಾನ ಸಂಬಂಧಿ ತಂತ್ರಜ್ಞಾನಗಳಲ್ಲಿ ಅತೀ ಪ್ರಮುಖವಾದವುಗಳನ್ನು ಇಲ್ಲಿ ಸ್ಥೂಲವಾಗಿ ಪ್ರಸ್ತಾಪಿಸಲಾಗಿದೆ. ಇದುವರೆಗು ತಂತ್ರಜ್ಞಾನಗಳು ರೂಪಿಕೆಯಾದ ವಾಸ್ತವ ಉದ್ದೇಶವನ್ನು ಮಾತ್ರ ಇಲ್ಲಿ ವಿವರಿಸಲಾಗಿದೆ. ಆದರೆ ಇವುಗಳು ತಮ್ಮ ಉದ್ದೇಶಾನುಸಾರಿಯಾಗಿ ಬಳಕೆಗೊಳ್ಳುವ ಮೂಲಕ ಮಹಿಳಾ ಆರೋಗ್ಯಕ್ಕೆ ಪೂರಕವಾಗಿವೆಯೆ? ಸಂತಾನ ಸಂಬಂಧಿ ಕ್ರಿಯೆಗಳನ್ನು ಸಂತಾನ ಸೃಷ್ಟಿ, ಸಮಸ್ಯೆಗಳ ನಿವಾರಣೆ, ನಿಯಂತ್ರಣ, ನಿರ್ವಹಣಾ ಕ್ರಿಯೆಯನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿವೆಯೆ? ಎಂಬುದನ್ನು ಪರಿಶೀಲಿಸಿದಾಗ ಮಾತ್ರ ತಂತ್ರಜ್ಞಾನಗಳ ಉಪಯೋಗದ ಮಹತ್ವ, ಕೊರತೆ ಮತ್ತು ಅವುಗಳು ಉಪಯೋಗಗೊಳ್ಳಬೇಕಾದ ಹೊಸ ಮಾರ್ಗಗಳತ್ತ ಸಾಗಲು ಸಾಧ್ಯವಾಗುತ್ತದೆ. ಮೇಲೆ ವಿವರಿಸಿಕೊಳ್ಳಲಾದ ತಂತ್ರಜ್ಞಾನಗಳನ್ನೆ ಆಧರಿಸಿ, ಅವುಗಳು ಮಹಿಳೆಯ ಸಂತಾನಾರೋಗ್ಯದ ಮೇಲೆ ಯಾವ ಬಗೆಯ ಪರಿಣಾಮಗಳನ್ನು ಬೀರುತ್ತಿವೆಯೆಂಬುದನ್ನು ಗ್ರಹಿಸಿಕೊಳ್ಳುವುದರೊಂದಿಗೆ ಆ ಮೂಲಕ ಹಾಕಬೇಕಾದ ಹೊಸ ಹೆಜ್ಜೆಗಳನ್ನು ಗುರುತಿಸುವ ಪ್ರಯತ್ನವನ್ನು ಮಾಡಲಾಗಿದೆ.

ಸಂತಾನ ಸಂಬಂಧಿ ತಂತ್ರಜ್ಞಾನಪರಿಣಾಮ

ಸಹಜವಾದ ಪ್ರಕ್ರಿಯೆಗಳನ್ನು ನಿಯಂತ್ರಣಕ್ಕೆಳೆದುಕೊಂಡು ಅವುಗಳು ನಮ್ಮ ಅಗತ್ಯಕ್ಕೆ ಅನುಗುಣವಾಗಿ ಬಳಸಿಕೊಳ್ಳಲು ಪ್ರಾರಂಭಿಸಿದಾಗ ಅದರಿಂದಾಗುವ ಲಾಭ-ನಷ್ಟಗಳೆರಡನ್ನು ಸ್ವೀಕರಿಸಬೇಕಾಗುತ್ತದೆ. ಪ್ರತಿಯೊಂದು ಅಂಶವು ಮೂಲತಃ ಸತ್ಪರಿಣಾಮಗಳನ್ನು ಒಳಗೊಂಡಿರುವುದಿಲ್ಲ. ಆದ್ದರಿಂದ ಅವುಗಳ ಬಳಕೆ ಬಹಳಷ್ಟು ಜಾಗರೂಕತೆಯಿಂದ ನಡೆಯಬೇಕಾಗುತ್ತದೆ. ತಂತ್ರಜ್ಞಾನ(ಸಂತಾನ ಸಂಬಂಧಿ)ದ ಸಂಗತಿಗಳು ನಿಜಕ್ಕೂ ಆಶ್ಚರ್ಯವನ್ನು ಹುಟ್ಟಿಸುವಂತಹವೇ ಆಗಿವೆ. ಮಹಿಳಾ ಬದುಕಿನ ಬಹು ಪ್ರಮುಖ ಅವಧಿಯನ್ನು ಪ್ರಕೃತಿ ಸಂತಾನ ಕ್ರಿಯೆಗೆ ಆಯ್ದಕೊಂಡಿರುವುದರಿಂದ ಅವಳ ಬದುಕು ಅಲ್ಲಿಯೇ ಮೊಟಕುಗೊಳ್ಳದಂತಾಗುವಂತೆ ಕಾಪಾಡಿಕೊಳ್ಳುವಲ್ಲಿ ತಂತ್ರಜ್ಞಾನಗಳು ಆಶಾದಾಯಕ ಶೋಧಗಳಾಗಿವೆ.

ಕುಟುಂಬದ ಹೊರ ವಲಯಕ್ಕೂ ಪ್ರವೇಶ ಪಡೆಯುತ್ತಿರುವ ಮಹಿಳೆ ಸಾಮಾಜಿಕ ನಿರ್ಬಂಧಗಳ ಜೊತೆಯಲ್ಲಿಯೇ ತಾಯ್ತನವನ್ನು ಮತ್ತು (ಸಂತಾನ ಪ್ರಕ್ರಿಯೆ) ತನ್ನ ವೈಯಕ್ತಿಕ ಸಾಧನೆಯನ್ನು ಯಶಸ್ವಿಯಾಗಿ ನಿಭಾಯಿಸುವಲ್ಲಿ ತಂತ್ರಜ್ಞಾನಗಳು ಮಹಿಳಾ ಸಬಲೀಕರಣದ ಆಯುಧದಂತೆ ಬಳಸಿಕೊಳ್ಳಬಹುದಾಗಿದೆ. ಆದರೆ ಮಹಿಳೆಯ ಯಾವೊಂದು ಸಣ್ಣ ಸಂಗತಿಯನ್ನು ಕೂಡ ಸಾಮಾಜಿಕತೆಯ ಚೌಕಟ್ಟಿನಾಚೆಗೆ ವಿವರಿಸಿಕೊಳ್ಳುವುದು ಅಸಾಧ್ಯ. ಸಾಮಾಜಿಕತೆ ವ್ಯಕ್ತಿ ಬದುಕಿನಲ್ಲಿ ಬಹು ಮುಖ್ಯವಾದ ಪಾತ್ರವಹಿಸುವುದರಿಂದ, ಅದು ಯಾರ ಪರವಾಗಿದೆಯೆಂಬುದನ್ನು ಗ್ರಹಿಸುವುದು ಅಷ್ಟೇ ಅಗತ್ಯವಾಗುತ್ತದೆ. ಹಲವು ಸ್ತರ ವಿನ್ಯಾಸಗಳಿಗೆ ಒಳಪಟ್ಟ ನಮ್ಮ ಸಾಮಾಜಿಕ ಸಂರಚನೆ ಲಿಂಗ ಶ್ರೇಣಿಕರಣದಿಂದ ಮಹಿಳಾ ಬದುಕಿಗೆ ಬಲವಾದ ಪೆಟ್ಟನ್ನು ಕೊಟ್ಟಿದೆ. ಪುರುಷ ವ್ಯವಸ್ಥೆಯ ಕಪಿಮುಷ್ಟಿಯಲ್ಲಿ ಸಮಾಜ ವ್ಯವಸ್ಥೆಯು ಇರುವುದರಿಂದ, ಇಲ್ಲಿನ ಎಲ್ಲ ಶೋಧಗಳು ಪುರುಷ ಕೇಂದ್ರಿತವಾಗಿವೆ ಮತ್ತು ಅವುಗಳು ಮಲಹಿಳಾ ಬದುಕಿಗೆ ಉಪಯುಕ್ತವೆನಿಸಿದರೂ, ಬಳಕೆಗೊಳ್ಳುವ ಕ್ರಮದಿಂದಾಗಿ ಮಹಿಳಾ ವಿರೋಧಿ ಅಸ್ತ್ರಗಳಾಗಿ ಕಾರ್ಯನಿರ್ವಹಿಸುತ್ತಿವೆ. ಪ್ರತಿ ಚಿಂತನೆಯ ಬೇರುಗಳು ಸರ್ವವ್ಯಾಪಿಯಾದುದರಿಂದ ಸಾಮಾಜಿಕವಾಗಿ, ಏಲ್ಲ ಆಯಾಮಗಳಿಂದಲೂ ಪ್ರಹಾರವನ್ನು ಎಸಗುತ್ತಿದೆ. ಈ ನಿಟ್ಟಿನಲ್ಲಿ ಸಂತಾನ ಸಂಬಂಧಿ ತಂತ್ರಜ್ಞಾನಗಳನ್ನು ವಿಶ್ಲೇಷಣೆಗೊಳಪಡಿಸಿದಾಗ, ತಂತ್ರಜ್ಞಾನವು ಕೂಡ ಮಹಿಳಾ ಸ್ನೇಹಿಯಾಗಿ ವರ್ತಿಸುವಲ್ಲಿ ವಿಫಲವಾಗಿದೆ.

ಪ್ರನಾಳ ಶಿಶುವಿನ ಅಂಶವನ್ನೆ ನೋಡುವುದಾದರೆ ಈ ತಂತ್ರಜ್ಞಾನವು ನಿಜಕ್ಕೂ ಅತ್ಯುಪಯುಕ್ತವಾದಂತಹ ತಂತ್ರಜ್ಞಾನ. ಸಣ್ಣಪುಟ್ಟ ತೊಂದರೆಗಳಿಂದಾಗಿ ಕನಸಾಗುವಂತಹ ತಾಯ್ತನದ ಸಮಸ್ಯೆಯನ್ನು ಇದು ನಿವಾರಿಸುತ್ತದೆ. ಆದರೆ ಇದರೊಳಗೆ x+x ಮತ್ತು x+y ಕ್ರೊಮೊಸೊಮುಗಳನ್ನು ಪ್ರನಾಳದಲ್ಲಿ ಸೇರಿಸಿ ಭ್ರೂಣವನ್ನು ಸಿದ್ಧಪಡಿಸುವುದರಿಂದಾಗಿ ಸಾಂಪ್ರದಾಯಿಕ ಸಾಮಾಜಿಕ ವ್ಯವಸ್ಥೆಯಲ್ಲಿರುವ ಆಸ್ತಿ, ವಂಶ ಮತ್ತು ಗಂಡು ಸಂತಾನದ ಕುರಿತ ಅಪರಿಮಿತ ನಂಬಿಕೆಗಳಿಂದಾಗಿ ಈ ತಂತ್ರಜ್ಞಾನವನ್ನು ದುರಪಯೋಗಪಡಿಸಿಕೊಳ್ಳುತ್ತಿವೆ. ಮಹಿಳಾ ಸಮಸ್ಯೆಗಳು ಭ್ರೂಣದ ಹಂತದಿಂದ ಆರಂಭಗೊಳ್ಳುವುದಕ್ಕಿಂತ ಮುಂದುವರೆದಿದೆ. ಇಲ್ಲಿ ಹೆಣ್ಣು ಸಂತಾನದ ಸೃಷ್ಟಿಯ ನಿರಾಕರಣೆಯಲ್ಲಿ ಈ ತಂತ್ರಜ್ಞಾನ ಹೆಚ್ಚು ಬಳಕೆಗೊಳ್ಳುತ್ತದೆ. ಈ ಬಗೆಯ ಬಳಕೆಯಿಂದ ಸಾಮಾಜಿಕ ವ್ಯವಸ್ಥೆಯಲ್ಲಿ ಆಗುತ್ತಿರುವ ಲಿಂಗಾನುಪಾತ ವ್ಯತ್ಯಸ್ತಗೊಳ್ಳುವುದಕ್ಕೆ ಇದು ಪೂರಕವಾಗಿ ನಿಲ್ಲುತ್ತದೆ. ಭ್ರೂಣಹತ್ಯೆಯಂತಹ ಸಂಗತಿಗಿಂತಲೂ ಸಂಕೀರ್ಣವಾಗಿರುವ ಈ ಅಂಶವು ಪುರುಷ ಪ್ರಧಾನ ಚಿಂತನೆಗಳಿಗೆ ಪೂರಕವಾಗಿ ನಿಲ್ಲುತ್ತಿದೆ. ಸಾಂಪ್ರದಾಯಿಕ ನೈತಿಕ-ಅನೈತಿಕ ಸಂಗತಿಗಳನ್ನು ಮೀರಿ ನಿಲ್ಲಬೇಕಾದ ಈ ತಂತ್ರಜ್ಞಾನವು ಬಳಕೆಗೊಳ್ಳುತ್ತಿರುವ ಪರಿಯು ನಿಜಕ್ಕೂ ಸಮಾಜ ವಿನಾಶದ ಅಂಚನ್ನು ತಲುಪುವಂತಹ ಸ್ಥಿತಿಯನ್ನು ಸೃಷ್ಟಿಸುತ್ತಿದೆ.

ವೀರ್ಯಾಣುಗಳ ಕೊರತೆಯಿರುವ ಸಂದರ್ಭದಲ್ಲೂ ಸಹ ಹೆಣ್ಣಿಗೆ ತಾಯ್ತನವನ್ನು ಒದಗಿಸಲು ಅನುಕೂಲಕರವಾದ ವೀರ್ಯಾಣು ಘೋರಮ್‌ಗಳ ಸ್ಥಾಪನೆಯ ಮೂಲಕ ಬಂಜೆತನದಂತಹ ಸಮಸ್ಯೆಗಳು ಸುಲಭವಾಗಿ ನಿವಾರಿಸುವಂತಹ ಇವುಗಳು ಹೊಸ ತಾಯ್ತನದ ವ್ಯಾಖ್ಯಾನಕ್ಕೆ ಎಡೆ ಮಾಡಿಕೊಟ್ಟಿದೆ. ಆದರೆ ವಾಸ್ತವದಲ್ಲಿ ಇದರ ಬಳಕೆಯು ವ್ಯವಸ್ಥೆಯ ಹಿಡಿತಕ್ಕೆ ಸಿಲುಕಿ ಚಿಂತಾಜನಕ ಸ್ಥಿತಿಯನ್ನು ತಲುಪುವಂತಾಗಿದೆ.

ವಂಶಾಭಿವೃದ್ಧಿಯು ಸಾಧ್ಯವೇ ಇಲ್ಲ ಮತ್ತು ಮಕ್ಕಳನ್ನು ಪಡೆಯಲು ಆಗುವುದಿಲ್ಲವೆಂಬಂತಹ ಸ್ಥಿತಿಗೆ ಸವಾಲೆಸದಿದ್ದು ಈ ಬಾಡಿಗೆತಾಯಿ ತಂತ್ರಜ್ಞಾನ. ತಮ್ಮ ಮಗುವನ್ನು ಇತರೆ ಹೆಣ್ಣಿನ ಗರ್ಭದಲ್ಲಿ ಬೆಳೆಸಿ ಮಗುವನ್ನು ಪಡೆಯುವ ಅಂಶ ಬದುಕಿನಲ್ಲಿ ಆಶಾವಾದವನ್ನು ಸೃಷ್ಟಿಸುವಂತಹುದು. ಆದರೆ ಈ ಸಂಗತಿಯು ಹೆಣ್ಣಿನ ದೇಹವನ್ನು ಅದರಲ್ಲೂ ಗರ್ಭಕೋಶವನ್ನು ಮಾರಾಟಕ್ಕಿಡುವ ವಸ್ತುವಿನಂತಾಗಿಸಿತು. ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳಾ ಬದುಕನ್ನು ದಮನ ಮಾಡುವಲ್ಲಿ ಈ ತಂತ್ರಜ್ಞಾನ ಬಹುಮುಖ್ಯವಾದ ಕಾರ್ಯವನ್ನು ನಿರ್ವಹಿಸುತ್ತಿದೆ.

‘ಬಾಡಿಗೆತಾಯಿ’ಯ ಕೆಲಸಕ್ಕೆ ವಿವಾಹಿತ-ಅವಿವಾಹಿತ ಹೆಣ್ಣು ಮಕ್ಕಳು ಅದರಲ್ಲೂ ಬಡ ಮತ್ತು ಮಧ್ಯಮವರ್ಗದ ಮಹಿಳೆಯರು ಬಳಕೆಯಾಗುತ್ತಿದ್ದಾರೆ. ವಿವಾಹಿತ ಬಡ ಮಹಿಳೆಯರೂ ತಮ್ಮ ಗಂಡಂದಿರ ಒತ್ತಾಯಕ್ಕೊ? ಬಡತನದ ನಿವಾರಣೆಗಾಗಿಯೋ? ಇಂಥ ಕೆಲಸಕ್ಕೆ ಸಮ್ಮತಿಯನ್ನು ನೀಡುವ ಮೂಲಕ ಗರ್ಭಾಶಯವನ್ನು ಬಂಡವಾಳವಾಗಿ ತೊಡಗಿಸುತ್ತಿದ್ದಾರೆ. ಅವಿವಾಹಿತ ಯುವತಿಯರು ಕೌಟುಂಬಿಕ ಸಮಸ್ಯೆಗಳ ನಿವಾರಣೆಗೋ? ದುಡ್ಡು ಮಾಡುವ ಆಸೆಯಿಂದಲೋ ಈ ಕ್ರಿಯೆಗೆ ನಿರಂತರವಾಗಿ ಒಳಗಾಗುತ್ತಿದ್ದಾರೆ. ವಿದೇಶಿಯರು ಭಾರತದಲ್ಲಿ ಬಾಡಿಗೆ ತಾಯಂದಿರಿಂದ ಮಗುವನ್ನು ಪಡೆಯುವುದು ಕಡಿಮೆ ಖರ್ಚಿನಿಂದ ಸಾಧ್ಯವೆಂಬುದರಿಂದಾಗಿ ಇಲ್ಲಿನ ಹೆಣ್ಣು ಮಕ್ಕಳನ್ನು ಬಳಸಿಕೊಳ್ಳುತ್ತಿದ್ದಾರೆ. ಹೀಗೆ ಮಗುವನ್ನು ಪಡೆಯಲು ಬರುವ ಇವರುಗಳು ವಸ್ತುವೊಂದರ ತಯಾರಿಗೆ ಹೇಳಿ ಹೋಗುವಂತೆ ತಮ್ಮ ಅಂಡಾಣು ಮತ್ತು ವೀರ್ಯಾಣುವನ್ನು ಮಿಲನಗೊಳಿಸಿ ಇನ್ನೊಂದು ಹೆಣ್ಣಿನ ಗರ್ಭದೊಳಗೆ ಬೆಳೆಸುವಂತೆ ಮಾಡಿ, ನಂತರ ಮಗುವಾದ ಕೂಡಲೇ ಅದನ್ನು ಕೊಂಡೊಯ್ಯಲು ಬರುತ್ತಾರೆ. ಇನ್ನು ಕೆಲವರು ಮರಳಿ ಬಾರದಂತಹ ಸಂದರ್ಭದಲ್ಲಿ ಆ ಮಗುವಿನ ಹೊಣೆಯನ್ನು ಹೊರುವರಾರು? ಎಂಬಂತಹ ಸಂದಿಗ್ಧ ಸನ್ನಿವೇಶಗಳು ಎದುರಾಗುತ್ತಿವೆ. ಹಾಗೆಯೆ ಸಲಿಂಗ ರತಿಯ ಸಂಬಂಧ ಹೊಂದಿರುವ ಗಂಡಸರು ಈ ಮೂಲಕ ಮಕ್ಕಳನ್ನು ಪಡೆಯುತ್ತಿದ್ದಾರೆ. ಇದರಿಂದಾಗಿ ಶೀಲ-ಅಶ್ಲೀಲದಂತಹ ಸಂಗತಿಗಳು ಮುರಿದು ಬೀಳುತ್ತಿರುವುದು ಸಂತಸದ ಸಂಗತಿಯಾದರೂ ಇವುಗಳೆಲ್ಲ ಮಹಿಳಾ ಬದುಕಿನ ಮೇಲೆ ಭಯಾನಕವಾದ ಪರಿಣಾಮಗಳನ್ನು ಬೀರುತ್ತಿವೆ.

ಇದೆಲ್ಲದಕ್ಕಿಂತಲೂ ಮಿಗಿಲಾಗ ಬಹುಪಾಲು ಮಗುವನ್ನು ಪಡೆಯ ಬಯಸುವವರು ನಮ್ಮ ವ್ಯವಸ್ಥೆಯ ಚಿಂತನೆಗನುಗುಣವಾಗಿ ಗಂಡು ಸಂತಾನವನ್ನು ಪಡೆಯಲು ಬಯಸುತ್ತಿದ್ದಾರೆ. ಇದರಿಂದಾಗಿ ಮಹಿಳೆಯರ ಸಂಖ್ಯೆಯು ದಿನೇ ದಿನೇ ಕಡಿಮೆಯಾಗುತ್ತಲಿದೆ. ಲಿಂಗಾನುಪಾತದಲ್ಲಿನ ವ್ಯತ್ಯಾಸದ ಈ ಬಗೆಯ ಸಂಗತಿಗಳಿಂದ ಮಹಿಳಾ ಸಮುದಾಯ ಮುಂಬರುವ ದಿನಗಳಲ್ಲಿ ಯಾವ ಬಗೆಯ ಭೀಕರ ಸಮಸ್ಯೆಗಳಿಗೆ ಬಲಿಯಾಗುವುದು ಎಂಬುದಂತೂ ಊಹೆಗೂ ಎಟುಕದ ವಿಷಯವಾಗಿದೆ. ಬಾಡಿಗೆ ತಾಯಿಯಾಗಲು ಒಪ್ಪಿರುವ ಮಹಿಳೆಗೆ ಮೊದಲು ಅರ್ಧ ಹಣವನ್ನು ನೀಡಲಾಗುವುದು. ಉಳಿದ ಮೊತ್ತ ಮಗುವು ಸುರಕ್ಷಿತವಾಗಿ ಕೈಗೆ ತಲುಪಿದಾಗ ಈ ನಡುವೆ ಅವಳ ಆರೋಗ್ಯದ ವ್ಯತ್ಯಾಸಗಳಿಂದ ಗರ್ಭ ಪಾತವೋ? ಮತ್ತೊಂದೋ ಸಮಸ್ಯೆಯುಂಟಾದರೆ ಅವಳು ಪಡೆದ ಹಣವನ್ನು ಹಿಂತಿರುಗಿಸಬೇಕಾಗುತ್ತದೆ. ಇಲ್ಲಿ ವ್ಯವಹಾರದ ಸಂಗತಿ ಮುಖ್ಯವಾಗುತ್ತಿದೆಯೇ ವಿನಃ ಆ ಕಾರಣದಿಂದಾಗಿ ನರಳುವ ಮಹಿಳೆಯ ಮನಸ್ಸು ಮತ್ತು ದೇಹದ ಕುರಿತು ಯಾರಿಗೂ ಪರಿವೆಯಿಲ್ಲದಂತಾಗಿದೆ. ಹೆಣ್ಣಿನ ದೇಹವು ಒಂದು ಪ್ರಯೋಗಾಲಯದ ಹಾಗೆ ವಿಭಿನ್ನ ಬಗೆಯ ಪರೀಕ್ಷೆಗೊಳಗಾಗುತ್ತಿದೆ. ಇನ್ನೂ ಅವಿವಾಹಿತ ಮಹಿಳೆಯರು ಇದಕ್ಕೆ ತಲೆಕೊಟ್ರೆ ಸಮಾಜದಲ್ಲಿನ ನೈತಿಕತೆಯ ಪ್ರಶ್ನೆಗಳಿಂದಾಗಿ ಅವಳು ಅವಿವಾಹಿತಳಾಗಿಯೇ ಉಳಿಯುತ್ತಿದ್ದಾಳೆ. ಹಾಗೊಮ್ಮೆ ವಿವಾಹವಾದರೂ ಅವಳದು ನೆಮ್ಮದಿಯುತ ಬದುಕಾಗಿ ಉಳಿಯುತ್ತಿಲ್ಲ.

ಕ್ಲೋನಿಂಗ್‌ನಂತಹ ತಂತ್ರಜ್ಞಾನದಿಂದ ಗಂಡನ್ನೇ ನಿರಾಕರಿಸುವುದು ತೀವ್ರವಾದಿಗಳ ವಾದವಾದರೂ ಪಿತೃ ಸಂಸ್ಕೃತಿಯ ಆಳವಾದ ಬೇರುಗಳು ಮಹಿಳಾ ಬದುಕನ್ನು ತನ್ನ ಅಧೀನತೆಯಿಂದ ತಪ್ಪಿಸಿಕೊಳ್ಳಲಾಗದಂತಹ ಸಂಧಿಗ್ಧತೆಗಳನ್ನು ಮಹಿಳೆಗೆ ಸೃಷ್ಟಿಸಲಾಗುತ್ತಿದೆ. ಗಂಡಿಗೆ ವ್ಯವಸ್ಥೆಯಲ್ಲಿರುವ ಸ್ವೇಚ್ಛಾಚಾರದ ಅವಕಾಶಗಳು ಹೆಣ್ಣಿಗೆ ನೆಮ್ಮದಿಯುತವಾದ ನಿರಾಳವಾದ ಬದುಕನ್ನು ಸಾಗಿಸುವುದು ಸಾಧ್ಯವಿಲ್ಲವೆಂಬಂತಾಗಿಸಿವೆ.

ಸುಸಂತತಿ ತಂತ್ರಜ್ಞಾನದ ವಿಷಯದಲ್ಲಿಯೂ ಕೂಡ ಬುದ್ಧಿವಂತ ಮಗನನ್ನೇ ಪಡೆಯುವಲ್ಲಿ ಬಳಸಲಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಪುರುಷಾಧಿಕಾರಕ್ಕೆ ಪುಷ್ಟಿಯನ್ನು ಒದಗಿಸುವಲ್ಲಿ ಮಾತ್ರ ತಂತ್ರಜ್ಞಾನಗಳು ಬಳಕೆಯಾಗುತ್ತಿವೆಯೇ ವಿನಃ ಮಹಿಳಾ ಪ್ರಶ್ನೆಯೊಂದು ಇಲ್ಲಿ ಗಣನೆಗೆ ಬರುತ್ತಿಲ್ಲ. ತಂತ್ರಜ್ಞಾನವು ಸ್ವತಃ ಅಪಾಯಕಾರಿಯಲ್ಲದಿದ್ದರೂ ವ್ಯವಸ್ಥೆಯ ಹಿಡಿತಕ್ಕೆ ಸಿಲುಕಿ ಅವುಗಳು ಅತ್ಯಂತ ಅಪಾಯಕಾರಿ ರೀತಿಯಲ್ಲಿ ಬಳಕೆಯಾಗುತ್ತಿವೆ.

ವ್ಯಕ್ತಿಗತ ಬದುಕಿಗೆ ವ್ಯಕ್ತಿಯ ಪರಿಪೂರ್ಣ ವ್ಯಕ್ತಿತ್ವ ರೂಪಿಕೆಗೆ ಸಾಮಾಜಿಕತೆಯು ಬೆನ್ನೆಲುಬಾಗಿದೆ. ಮಹಿಳಾ ಬದುಕಿನ ಬಹುಪಾಲು ಸಂಗತಿಗಳನ್ನು ನಿರ್ಧರಿಸುವ ಮೂಲಕ, ನಿಯಂತ್ರಿಸುತ್ತಿರುವುದು ಸಾಮಾಜಿಕ ವ್ಯವಸ್ಥೆಯೆ ಆಗಿದೆ. ಸಾಮಾಜಿಕ ವಾತಾವರಣ ಬದಲಾಗದ ಹೊರತು ಮಹಿಳಾ ಬದುಕು ಸುಧಾರಣೆಗೊಳ್ಳುವುದು ಸಂಕೀರ್ಣತೆಯೆ ಸರಿ. ಸಮಾಜ ಮತ್ತು ಗಂಡು ಬೇರ್ಪಡಿಸಲಾರದಷ್ಟು ಸಮಾನಾರ್ಥದಲ್ಲಿ ಬಳಕೆಯಾಗುತ್ತಿದೆ. ಎಲ್ಲ ಆವಿಷ್ಕಾರ, ಚಿಂತನೆಗಳು ಸಮಾಜ ಸುಧಾರಣೆಗೆ ಎಂದು ಹೇಳಿದರೂ ಅಲ್ಲಿ ಗಂಡಿನ ಅಭಿವೃದ್ಧಿ ಮಾತ್ರ ಕೇಂದ್ರಿಕೃತವಾಗಿರುತ್ತದೆ. ಪಿತೃ ಸಂಸ್ಕೃತಿಯ ಪ್ರಭಾವವು ವಾಸ್ತವವನ್ನು ಗ್ರಹಿಸದಂತಹ ಭ್ರಮಾತ್ಮಕತೆಯನ್ನು ಸೃಷ್ಟಿಸುವಷ್ಟು ಗಾಢವಾಗಿ ಬೇರೂರಿದೆ. ತಂತ್ರಜ್ಞಾನ ಅಪಾಯಕಾರಿಯಾದುದೆಂದು ಅದನ್ನು ಸಂಪೂರ್ಣವಾಗಿ ನಿರಾಕರಿಸುವಂತಿಲ್ಲ. ಏಕೆಂದರೆ ತಂತ್ರಜ್ಞಾನವು ವಾಸ್ತವದ ಉದ್ದೇಶವನ್ನು ಆಧರಿಸಿ ಬಳಕೆಗೊಂಡಿದ್ದೆ ಆದರೆ ಮಹಿಳಾ ಬದುಕಿನಲ್ಲಿ ಸಂತಾನ ಸಂಬಂಧಿ ಸಮಸ್ಯೆಗಳು ಬಹುಪಾಲು ನಿವಾರಣೆಯಾಗುತ್ತವೆ. ಮೂಲತಃ ಮಹಿಳೆಗೆ ತನ್ನ ಸಂತಾನ ಸಂಬಂಧಿ ಪ್ರಕ್ರಿಯೆಯೆ ಮೇಲೆ ಹಕ್ಕು ಸಾಧಿಸಬೇಕಾಗಿದೆ. ಅಲ್ಲದೆ ಸಮಾಜ ತಾಯ್ತನಕ್ಕೆ ಹೇರಿರುವ ನಿರ್ಬಂಧಗಳು ಮುಕ್ತವಾಗಬೇಕಾದುದು ಅವಶ್ಯಕವಾಗಿದೆ.

ಸಿಮೋನ್‌ ದ ಬೊವಾ ಪ್ರತಿಪಾದಿಸುವಂತೆ ನಮ್ಮ ದೇಹದ ಮೇಲೆ ಮೊದಲು ನಮ್ಮ ಹಕ್ಕನ್ನು ಸ್ಥಾಪಿಸಿದಾಗ ನಮ್ಮ ಅಧೀನತೆಯ ಸ್ವರೂಪವನ್ನು ಗ್ರಹಿಸಿಕೊಳ್ಳಲು ಅದರಿಂದ ಬಿಡುಗಡೆ ಹೊಂದಲು ಸಾಧ್ಯವಾಗುತ್ತದೆ. ಮಹಿಳೆಯ ನಿರ್ವಚನವೆ ಲೈಂಗಿಕತೆಯನ್ನು ಆಧರಿಸಿದ್ದರಿಂದ ಮಹಿಳೆಯ ಎಲ್ಲ ಸಮಸ್ಯೆಗಳಿಗೂ ಮೂಲ ನೆಲೆ ಲೈಂಗಿಕತೆಯಾಗಿದೆ. ಮಹಿಳಾ ಲೈಂಗಿಕತೆಯು ಪುರುಷಾಧೀನಗೊಂಡಿದ್ದರಿಂದಲೇ ಮಹಿಳೆಯ ಸಂಪೂರ್ಣ ವ್ಯಕ್ತಿತ್ವದ ಮೇಲೆ ಪುರುಷ ಸಂಸ್ಕೃತಿ ಹಿಡಿತ ಸಾಧಿಸಿದೆ. ಸಂತಾನಾರೋಗ್ಯದ ಬಹುಪಾಲು ಸಮಸ್ಯೆಗಳ ನಿವಾರಣೆಗಾಗಿ ಮಹಿಳೆಯು ಸಂತಾನ ಸಂಬಂಧಿ ಹಕ್ಕುಗಳನ್ನು ಪಡೆದುಕೊಳ್ಳಬೇಕು. ತನ್ನ ಗರ್ಭಾಶಯ ಎಲ್ಲಿ? ಯಾವಾಗ? ಹೇಗೆ? ಕಾರ್ಯನಿರ್ವಹಸಿಬೇಕೆಂಬುದನ್ನು ತಾನೆ ನಿರ್ಧರಿಸುವಂತಾಗಬೇಕು. ಅವಳ ಶಕ್ತಿ ಕೇಂದ್ರವಾದ ಗರ್ಭಾಶಯಕ್ಕೆ ಸಮಸ್ಯೆಗಳನ್ನು ಒಡ್ಡುವ ಮೂಲಕ ಅವಳ ಪ್ರಾಬಲ್ಯವನ್ನು ದೌರ್ಬಲ್ಯವಾಗಿ ಪರಿವರ್ತಿಸುವಲ್ಲಿ ಪುರುಷ ಚಿಂತನೆಗಳ ತಂತ್ರಗಾರಿಕೆಯನ್ನು ಕಾಣಬಹುದು. ಆ ಕಾರಣವಾಗಿ ತಾನು ಹೆರುವ ಮಗುವಿನ ಆಯ್ಕೆ, ಮಕ್ಕಳ ಸಂಖ್ಯೆ, ಸಂತಾನದ ಅಂತರ ಎಲ್ಲವೂ ಅವಳ ನಿಯಂತ್ರಣಕ್ಕೊಳ ಪಡುವಂತಾಗಬೇಕು.

ಹೊಸ ತಾಯ್ತನದ ವ್ಯಾಖ್ಯಾನಗಳನ್ನು ಹುಟ್ಟು ಹಾಕಿದ ಸಂತಾನ ಸಂಬಂಧಿ ತಂತ್ರಜ್ಞಾನಗಳು ರೂಪಗೊಂಡಿರುವ ಮೂಲ ಉದ್ದೇಶಕ್ಕನುಗುಣವಾಗಿ ಬಳಕೆಯಾಗಬೇಕು. ಮಹಿಳೆಯನ್ನು ಆಸ್ತಿಯೆಂದು ಪರಿಗಣಿಸಿ ಅವಳ ಆರೋಗ್ಯವನ್ನು ನಿರ್ಲಕ್ಷಿಸಿ, ಅವಳ ಗರ್ಭಾಶಯವನ್ನು ಬಳಕೆಮಾಡದೆ, ಹೆಣ್ಣನ್ನು ವ್ಯಕ್ತಿಯೆಂದು ಸಮಾಜ ವ್ಯವಸ್ಥೆಯು ಗ್ರಹಿಸಬೇಕಾಗಿದೆ. ನಿಸರ್ಗದತ್ತ ತಾಯ್ತನವು ಕೆಲವು ಸಮಸ್ಯೆಗಳಿಂದಾಗಿ ಕನಸಾಗಿರುವ ಸಂದರ್ಭಗಳನ್ನು ನನಸಾಗಿಸುವತ್ತ ಸಾಗಬೇಕಾದ ತಂತ್ರಜ್ಞಾನದ ಹೊಸ ಆವಿಷ್ಕಾರಗಳು ಮಹಿಳಾ ಪರವಾಗಿ ಬಳಕೆಗೊಂಡರೆ ಆರೋಗ್ಯಕರ ಸಮಾಜವನ್ನು ಸ್ಥಾಪಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಇಲ್ಲವಾದರೆ ಇವುಗಳ ದುರ್ಬಳಕೆಯಿಂದ ಸಮಾಜ ಅರ್ಧಪತನದೆಡೆಗೆ ಸಾಗುವುದನ್ನು ತಪ್ಪಿಸಲಾರದಂತಹ ಸ್ಥಿತಿ ನಿರ್ಮಾಣವಾಗುತ್ತದೆ.

ಮನುಕುಲದ ಮುಂದುವರಿಕೆಯಲ್ಲಿ ಮಹಿಳೆಯ ಮಹತ್ತರ ಪಾತ್ರವನ್ನು ಗುರುತಿಸುವ ಮುಖೇನ ಅವಳ ಸಂತಾನಾರೋಗ್ಯವನ್ನು ಹದಗೆಡಿಸುವಂತಹ ಆಕ್ರಮ ಬಗೆಯನ್ನು ಸಮಾಜ ವ್ಯವಸ್ಥೆ ಕೈಬಿಡಬೇಕು. ಅಣುವೊಂದನ್ನು ಮಗುವಾಗಿ ಸಮಾಜಕ್ಕೆ ನೀಡುವಲ್ಲಿ ಮಹಿಳೆ ತನ್ನ ಪ್ರಾಣವನ್ನೇ ಪಣವಾಗಿಡುವುದನ್ನು ಗ್ರಹಿಸಿ, ಅದಕ್ಕೆ ಪೂರಕವಾದ ವಾತಾವರಣ ಸೃಷ್ಟಿಸುವ ಹೊಣೆ ಸಮಾಜದ ಮೇಲಿದೆ. ಅವಳ ದೇಹ ಯಾವ ಪ್ರಮಾಣದಲ್ಲಿ ಕಾರ್ಯನಿರ್ವಹಿಸಬೇಕೆಂಬ ನಿರ್ಧಾರವನ್ನು ಕೈಗೊಳ್ಳುವ ಹಕ್ಕು ಮಹಿಳೆಗೆ ಪ್ರಾಪ್ತವಾಗಬೇಕು. ಗಂಡು ಸಂತಾನ, ಆಸ್ತಿ, ವಂಶ, ಒಡೆತನದಂತಹ ಸಮಾಜ ದಮನವಾಗುವ ಸಂಗತಿಗಳ ಆಲೋಚನೆಗಳಿಂದ ಮುಕ್ತವಾಗಿ ಹೆಣ್ಣು-ಗಂಡುಗಳೆರಡು ಸಹ ಸಮಾಜದ ಮುಂದುವರಿಕೆಗೆ ಅವಶ್ಯಕವೆಂಬುದು ಗ್ರಹಿಸಿ ಭ್ರೂಣಪತ್ಯೆ, ಕೇವಲ ಗಂಡು ಭ್ರೂಣದ ರಚನೆಯಂತಹ ಕ್ರೌರ್ಯಗಳಿಂಧ ಮುಕ್ತವಾಗಿ ಲಿಂಗಾನುಪಾತವು ಸಮ ಪ್ರಮಾಣದಲ್ಲಿರುವಂತೆ ಗಮನ ಹರಿಸಿದಾಗ ಮಾತ್ರ ಸಮಾಜವು ಮುಂಬರುವ ಅಪಾಯಗಳಿಂದ ತಪ್ಪಿಸಿಕೊಳ್ಳುವುದು ಸಾಧ್ಯ. ಇಲ್ಲವಾದರೆ ಹೆಣ್ಣು ಸಂತತಿಯೆ ಇಲ್ಲವಾಗುವ ಸಂದರ್ಭಗಳಲು ಬಂದೊದಗಬಹುದು ಅಥವಾ ಹೆಣ್ಣಿನ ಕೊರತೆಯಿಂದ ಘರ್ಷಣೆಗಳು ಆರಂಭವಾಗಬಹುದು. ಆಗ ಹೆಣ್ಣಿನ ಮೇಲಾಗುವ ಕ್ರೌರ್ಯ ಒಂದೆಡೆಯಾದರೆ ಸಮಾಜದ ಉಳಿವು ಕಷ್ಟಕರವಾಗಬಹುದು.

ಪ್ರಕೃತಿಗೆ ಸವಾಲೆಸೆದು ಪ್ರಕೃತಿದತ್ತ ಕ್ರಿಯೆಗಳನ್ನು ತನ್ನ ಅನುಕೂಲಕ್ಕೆ ಅಗತ್ಯವಾಗಿ ಬಳಕೆಗೊಳ್ಳುವಂತಹ ತಂತ್ರಜ್ಞಾನಗಳ ಆವಿಷ್ಕಾರವು ಮನುಷ್ಯ ಜೀವಿಯ ಚಾಣಾಕ್ಷತೆಯ ಕುರುಹು ಹೌದು. ಆದರೆ ಈ ಶೋಧಗಳು ಅಗತ್ಯತೆಯ ರೀತಿಯಲ್ಲಿ ಬಳಕೆಯಾಗುವ ಬದಲು, ಇನ್ನೊಂದು ಜೀವಿಯ (ಸಹಜೀವಿಯ) ದಮನಕ್ಕೆ ಬಳಸಲಾಗುತ್ತಿರುವುದು ಸಲ್ಲದು. ಇಂಥ ಕ್ರಮವು ಮುಂದುವರೆದಾಗ ಮುಂದೊಂದು ದಿನ ಪ್ರಕೃತಿ ಎಸೆಯುವ ಸವಾಲುಗಳಿಗೆ ಮನುಕುಲವು ತತ್ತರಿಸಿ ಹೋಗಬೇಕಾದ ಸಂದರ್ಭಗಳು ಒದಗುತ್ತವೆ.

ಸಂತಾನ ಸಂಬಂಧಿ ತಂತ್ರಜ್ಞಾನಗಳ ಆಶಯವು ಅತ್ಯಂತ ಮಹತ್ವಾದಾಗಿದ್ದು, ಮಹಿಳಾ ಸಬಲೀಕರಣಕ್ಕೆ ಪೂರಕವಾಗಿವೆ. ಹೆಣ್ಣನ್ನು ಕೇವಲ ಹೆರುವ ಯಂತ್ರವಾಗಿಸದೆ, ಅವಳ ಅಸ್ತಿತ್ವ ರೂಪಿಕೆಗೆ, ಸಾಧನೆಗಳಿಗೆ ಆಸ್ಪದ ಕೊಡುವಂತೆ, ಅವಳ ಆರೋಗ್ಯದ ದೃಷ್ಟಿಯಿಂದ ರೂಪಿತವಾದ ತಂತ್ರಜ್ಞಾಣಗಳು ವ್ಯವಸ್ಥೆಯ ನಿಯಂತ್ರಣಕ್ಕೆ ಸಿಲುಕಿ ಹೆಣ್ಣನ್ನು ಯಂತ್ರವಾಗಿಸಿ, ಅವಳ ಗರ್ಭಾಶಯವನ್ನು ಪ್ರಯೋಗಾಲಯವಾಗಿ ಸುತ್ತಿರುವುದರಿಂದ ಮಹಿಳಾ ಸ್ನೇಹಿಯಾಗುವ ತಂತ್ರಜ್ಞಾನ, ಮಹಿಳಾ ಬಿಡುಗಡೆಯ ಅಸ್ತ್ರವಾಗಬೇಕಾದ ತಂತ್ರಜ್ಞಾನ, ಮಹಿಳಾ ವಿರೋಧಿಯಾಗಿ ಮಹಿಳೆಯ ಅಧೀನತೆಯನ್ನು ಪುಷ್ಠಿಗೊಳಿಸುವ, ಮಹಿಳಾ ಸಂತತಿಯನ್ನು ನಾಶಗೊಳಿಸುವಂತಹ ಶತೃವಾಗಿ ತಿರುವು ಪಡೆದುಕೊಳ್ಳುತ್ತಿದೆ. ಮಹಿಳಾ ಬದುಕಿಗೆ ಆಶಾಕಿರಣವಾಗುತ್ತದೆಯೆಂದು ಭಾವಿಸಿದ ತಂತ್ರಜ್ಞಾನ ಪ್ರಧಾನ ಧಾರೆಯ ಹಿಡಿತಕ್ಕೆ ಸಿಲುಕಿ, ಮಹಿಳೆಯ ಮೇಲೆ ಹೊಸ ಬಗೆಯ ದೌರ್ಜನ್ಯಗಳನ್ನು ಎಸಗುವಲ್ಲಿ ಪೂರಕವಾಗಿ ನಿಲ್ಲುತ್ತಿದೆ. ಯಾವುದೇ ಸಂಗತಿಯೂ ಅನುಕೂಲ-ಅನಾನುಕೂಲಗಳೆರಡನ್ನು ಹೊಂದಿರುತ್ತದೆ. ಬಳಸಿಕೊಳ್ಳಬೇಕಾದ ವ್ಯವಸ್ಥೆ ಅದರ ಅನುಕೂಲಗಳನ್ನು ಆಯ್ದುಕೊಂಢಾಗ ಅದು ಹಿತಕರವಾದ ಫಲ ನೀಡುವುದರೊಂದಿಗೆ, ಅದು ಸೃಷ್ಟಿಗೊಂಡ ಆಶಯವು ಸಫಲತೆಯನ್ನು ಪಡೆಯುತ್ತದೆ.

ಭಾಗ
ಕುಟುಂಬ
ಯೋಜನೆತಂತ್ರಜ್ಞಾನ

ನಿರಂತರ ನವೀನ ಶೋಧಗಳತ್ತ ಮುಖಮಾಡುತ್ತಿರುವ ಮಾನವ ಸಮುದಾಯ ಪ್ರಕೃತಿಗೆ ಸವಾಲೆಸೆಯುತ್ತ ಹೊಸ ಬಗೆಯ ತಂತ್ರಜ್ಞಾನಗಳನ್ನು ಕಂಡು ಹಿಡಿಯುತ್ತಲೇ ಇದೆ. ಪ್ರಕೃತಿಯಲ್ಲಿನ ಹಲವು ಸಂಗತಿಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಮೂಲಕ ಅವುಗಳನ್ನು ತನ್ನ ಅಗತ್ಯಕ್ಕೆ ತಕ್ಕಂತ ಬಳಸಿಕೊಳ್ಳುವಲ್ಲಿ ಮನುಕುಲ ಯಶಸ್ಸನ್ನು ಪಡೆಯುತ್ತಲೆ ಇದೆ. ಇಂತಹ ತಂತ್ರಜ್ಞಾನಗಳ ಚರಿತ್ರೆ ಬಹು ಸುದೀರ್ಘವಾದುದು. ಈ ಬಗೆಯಲ್ಲಿ ಬೆಳೆದು ಬರುತ್ತಿರುವ ತಂತ್ರಜ್ಞಾನ ಮಹಿಳಾ ಬದುಕಿನಲ್ಲಿ ಬಹುಮುಖ್ಯವಾದ ಪಾತ್ರವನ್ನು ನಿರ್ವಹಿಸುತ್ತದೆ. ಮಹಿಳೆಯ ಅವಲಂಬನೆಯ ಮೂಲ ಕಾರಣವಾದ ಸಂತಾನ ಪ್ರಕ್ರಿಯೆಯು ತಂತ್ರಜ್ಞಾನದ ಶೋಧದಿಂದ ಹಗುರಗೊಳಿಸುತ್ತದೆಯೆಂಬ ಆಶಾದಾಯಕ ಅಂಶದ ಬಿನ್ನಲ್ಲಿಯೇ ಅದು ಬಳಕೆಯಾಗಬೇಕಾಗಿರುವ ಪರಿಸರ ಮಹಿಳಾ ಪರವಾಗಿದೆಯೇ? ಎಂಬುದು ಬಹುಮುಖ್ಯ.

ಕೆಲವು ಕಾಲಘಟ್ಟಗಳಲ್ಲಾದ ಪರಿವರ್ತನೆಯಿಂದ ಮಹಿಳಾ ಸಮುದಾಯ ಅಧೀನ ನೆಲೆಗೆ ತಳ್ಳಲ್ಲಪಟ್ಟಿದೆ. ಹಾಗಾಗಿ ವ್ಯವಸ್ಥೆಯಲ್ಲಿ ರೂಪಿತವಾದ ಬಹುಪಾಲು ಚಿಂತನೆಗಳು ಪ್ರಧಾನ ನೆಲೆಯಿಂದ ಪ್ರಭಾವಿತವಾಗಿ ನಿಯಂತ್ರಣಕ್ಕೊಳಪಟ್ಟಿವೆ. ಅವುಗಳಲ್ಲಿ ಸಂತಾನ ಸಂಬಂಧೀ ತಂತ್ರಜ್ಞಾನವು ಒಂದಾಗಿದೆ. ಪ್ರಾಕೃತಿಕ ಕ್ರಿಯೆಯಾದ ಸಂತಾನ ಪ್ರಕ್ರಿಯೆಯು ವ್ಯವಸ್ಥೆಯಲ್ಲಿ ಕೆಲವು ನಿಗದಿತ ನಿಯಮಗಳಡಿಯಲ್ಲಿ ನಿರ್ವಹಿಸಬೇಕಾದ ಕ್ರಿಯೆಯಾಗಿದೆ. ಅಲ್ಲದೇ ಮಹಿಳೆಯ ಬದುಕಿನ ಬಹು ಮಹತ್ತರವಾದ ಕಾಲವನ್ನು ಸಂತಾನ ಪ್ರಕ್ರಿಯೆಗೆ ಪ್ರಕೃತಿಯು ಆಯ್ದುಕೊಂಡಿದೆ. ಈ ಕಾರಣದಿಂದಾಗಿ ಆರಂಭದ ಹಂತದಲ್ಲಿ ಸಂತಾನ ಸಂಬಂಧೀ ತಂತ್ರಜ್ಞಾನ ಮಹಿಳೆಯನ್ನು ಅಧೀನ ನೆಲೆಯಿಂದ ಮುಕ್ತಗೊಳಿಸುವ ಆಯುಧವೆಂಬಂತೆ ಸ್ತ್ರೀವಾದಿಗಳು ಆಶಾವಾದವನ್ನು ಹೊಂದಿದ್ದಾರೆ. ಆದರೆ ಅವುಗಳು ಬಳಕೆಗೊಳ್ಳಬೇಕಾದ ಮೂಲ ಉದ್ದೇಶವನ್ನು ಕಡೆಗಣಿಸಿ, ಮಹಿಳಾ ಅಧೀನತೆಯನ್ನು ಇನ್ನಷ್ಟು ಗಟ್ಟಿಗೊಳಿಸುವಂತೆ ಬಳಕೆಯಾಗತೊಡಗಿದವು. ಕುಟುಂಬ ಯೋಜನೆಯ ಕುರಿತ ಅಂಶಗಳನ್ನು ಆಧರಿಸಿ ಇದನ್ನು ಸ್ಪಷ್ಟಪಡಿಸಿಕೊಳ್ಳಬಹುದು.

ಕುಟುಂಬ ಯೋಜನೆ ಎನ್ನುವುದು ಪ್ರಭುತ್ವವು ಮಹಿಳೆಯ ಆರೋಗ್ಯದ ಮುಖ್ಯ ಕಾರ್ಯಕ್ರಮವೆಂದು ಪ್ರಸ್ತುತ ಪಡಿಸುತ್ತಿದೆ. ಇದು ಮಹಿಳಾ ಬದುಕಿಗೆ ಅತ್ಯಂತ ಅನುಕೂಲಕಾರಿಯೆಂದು ಬಿಂಬಿಸಲಾಗುತ್ತಿದೆ. ಅಲ್ಲದೇ ಮಹಿಳೆಯನ್ನು ಕೇಂದ್ರವಾಗಿಸಿಕೊಂಡಿರುವ ಈ ಸಂಗತಿಯು ಮಹಿಳೆಯ ಸಂತಾನ ಶ್ರಮವನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ. ಮಹಿಳೆಗೆ ಪ್ರಕೃತಿದತ್ತವಾಗಿ ಬಂದ ಪ್ರಕ್ರಿಯೆಯ ಕಾರ್ಯದಿಂದ ಬಿಡುಗಡೆಯನ್ನುಂಟುಮಾಡುತ್ತದೆ. ಇಷ್ಟಾದರೆ ಮಹಿಳೆಯ ಭಾಗ್ಯಕ್ಕೆ ಎಡೆಯಿಲ್ಲ. ಏಕೆಂದರೆ ಮಹಿಳೆಯ ಸಮಗ್ರ ಬದುಕು ಅವಲಂಬಿತವಾಗಿರುವುದೇ ಈ ಕಾರಣಕ್ಕಾಗಿ.

ಜನಸಂಖ್ಯಾ ನಿಯಂತ್ರಣವನ್ನು ಕೇಂದ್ರವಾಗಿಸಿಕೊಂಡಿರುವ ಕುಟುಂಬ ಯೋಜನೆ ಎಂಬ ಹೆಸರೇ ವ್ಯವಸ್ಥೆಯ ಗುರಿಯನ್ನು ಈಡೇರಿಸಿಕೊಳ್ಳಲು ಮಾಡಲಾದ ರಾಜಕಾರಣವಾಗಿದೆ. ಜನಸಂಖ್ಯಾ ನಿಯಂತ್ರಣವೆಂದು ಹೆಸರಿಸಿದರೆ ಇದನ್ನು ಯಾರೊಬ್ಬರೂ ತಮ್ಮ ಜವಾಬ್ದಾರಯನ್ನಾಗಿ ಸ್ವೀಕರಿಸಲಾರರು ಎಂಬ ಕಾರಣಕ್ಕೆ ಕುಟುಂಬಕ್ಕೆ ಅತ್ಯಂತ ಅವಶ್ಯಕವೆಂಬ ನೆಲೆಯಲ್ಲಿ ವಿಸ್ತರಿಸಲಾಯಿತು. ಅಲ್ಲದೇ ಕಲುಟುಂಬ ಯೋಜನೆಯಲ್ಲಿ ಬಳಕೆಯಾಗುತ್ತಿರುವ ತಂತ್ರಜ್ಞಾನಗಳು ಮಹಿಳಾ ಬದುಕಿಗೆ ಪೂರಕವಾಗಿವೆ. ಎಂಬುದಕ್ಕಿಂತ ರಾಷ್ಟ್ರದಲ್ಲಿ ದ್ವಿಗುಣವಾಗುತ್ತಿರುವ ಜನಸಂಖ್ಯೆ ಸ್ಫೋಟದ ಸ್ಥಿತಿಗೆ ಬಂದಿದ್ದು, ಅದನ್ನು ನಿಯಂತ್ರಿಸುವ ಕಾರಣಕ್ಕಾಗಿ ಕುಟುಂಬ ಯೋಜನೆ ಹೆಸರಿನಲ್ಲಿ ಮಹಿಳೆಯ ಬದುಕಿನ ಮೇಲೆ ಆಕ್ರಮಣವನ್ನು ಮಾಡಲಾಗುತ್ತಿದೆ. ಮಹಿಳೆಯ ಬದುಕಿನ ಹಕ್ಕನ್ನು ಕಸಿದುಕೊಳ್ಳುವಲ್ಲಿ ಪ್ರಮುಖವಾದದ್ದೇ ಕುಟುಂಬ ಯೋಜನೆ. ಕುಟುಂಬ ಯೋಜನೆಯಲ್ಲಿ ಮುಖ್ಯವಾದದ್ದು ಸಂತಾನ ನಿಯಂತ್ರಣ. ಈ ಮೂಲಕ ರಾಷ್ಟ್ರದ ಜನಸಂಖ್ಯೆಯನ್ನು ಸಮತೋಲನಕ್ಕೆ ಇಳಿಸುವ ಪ್ರಯತ್ನ ತಂತ್ರಜ್ಞಾನದ ಹೊಸ ಅವಿಷ್ಕಾರಗಳಿಂದಾಗಿ ಜನನ ಪ್ರಮಾಣ ಹೆಚ್ಚಾಗಿದ್ದು, ಮರಣ ಪ್ರಮಾಣವು ಕಡಿಮೆಯಾಗುತ್ತಿರುವುದೇ ಈ ಬಗೆಯ ಅಸಮತೋಲನಕ್ಕೆ ಕಾರಣವಾಗಿದೆ. ಅಲ್ಲದೆ ಹೆಚ್ಚುತ್ತಿರುವ ಜನಸಂಖ್ಯೆ ಹಲವು ಬಗೆಯ ಆರ್ಥಿಕ ಮುಗ್ಗಟ್ಟಿನ ಸಮಸ್ಯೆಗೆ ಎಡೆಮಾಡಿಕೊಡುತ್ತಿದೆ.

ಕುಟುಂಬ ಯೋಜನೆಯಲ್ಲಿ ಬಳಸಲಾಗುತ್ತಿರುವ ತಂತ್ರಜ್ಞಾನಗಳು ಮಹಿಳೆಗೆ ಬಿಡುಗಡೆಯನ್ನು ನೀಡುವ ಬದಲಿಗೆ ಅವಳ ದೇಹದ ಮೇಲೆ ಭೀಕರವಾದ ಆಕ್ರಮಣಗಳನ್ನು ಎಸಗುತ್ತಿದೆ. ಕುಟುಂಬ ಯೋಜನೆಯ ಭಾರ ಕೇವಲ ಹೆಣ್ಣಿನ ಹೆಗಲ ಮೆಲೆ ಹೊರಿಸಲಾಗಿದೆ. ಆದ್ದರಿಂದ ಕುಟುಂಬ ಯೋಜನೆ ಹೆಸರಿನಲ್ಲಿ ಮಹಿಳೆಯ ಗರ್ಭಾಶಯ ತಂತ್ರಜ್ಞಾನದ ಹಿಡಿತಕ್ಕೆ ಸಿಲುಕಿ ಸಮಾಜದ ಆಕ್ರಮಣಕ್ಕೆ ಬಳಕೆಯಾಗುತ್ತಿದೆ. ಜನಸಂಖ್ಯಾ ನಿಯಂತ್ರಣದಂತಹ ರಾಷ್ಟ್ರದ ಸಮಸ್ಯೆಯ ನಿವಾರಣೆಗಾಗಿ ರೂಪಿತವಾದ ಕುಟುಂಬ ಯೋಜನೆಯು ಮಹಿಳಾ ಸಬಲೀಕರಣಕ್ಕಾಗಿ, ಮಹಿಳೆಯ ಆರೋಗ್ಯವನ್ನು ಕಾಪಾಡುವುದಕ್ಕೆಂಬ ಭ್ರಾಮಕ ಕಲ್ಪನೆಗಳನ್ನು ಸೃಷ್ಟಿಸುವ ಮೂಲಕ ಪ್ರಭುತ್ವ-ಸರಕಾರಗಳೇ ಹೆಣ್ಣಿನ ದೇಹದ ಮೇಲೆ ನಡೆಯುವ ದೌರ್ಜನ್ಯಕ್ಕೆ ಪೂರಕವಾಗಿ ನಿಲ್ಲುತ್ತಿವೆ. ಕುಟುಂಬ ಯೋಜನೆಯನ್ನು ವಿಸ್ತೃತವಾಗಿ ಅಧ್ಯಯನಕ್ಕೆ ಒಳಪಡಿಸಿದಾಗ ‘ಸಂತಾನಾರೋಗ್ಯ ಸಂಬಂಧೀ ತಂತ್ರಜ್ಞಾನ’ ಬಳಕೆಗೊಳ್ಳುತ್ತಿರುವ ಪರಿ ಮಹಿಳಾ ಅಧೀನತೆಯನ್ನು ಹೇಗೆ ಸ್ಥಿರೀಕರಿಸುತ್ತಿದೆ ಎಂಬುದನ್ನು ಗ್ರಹಿಸಬಹುದಾಗಿದೆ.