ಕುಟುಂಬ ಯೋಜನೆ: ಸಂಕ್ಷಿಪ್ತ ನೋಟ

ಮನುಕುಲವನ್ನು ಬೆಳೆಸುವಲ್ಲಿ ಮಹಿಳೆಯ ಪಾತ್ರ ನಿಜಕ್ಕೂ ಹಿರಿದು. ಸಂತಾನದ ಸೃಷ್ಟಿಯಲ್ಲಿ ಹೆಣ್ಣು-ಗಂಡುಗಳಿಬ್ಬರು ಪಾಲ್ಗೊಳ್ಳುವರಾದರು ಹೆಣ್ಣಿನ ಭಾಗವಹಿಸುವಿಕೆ ಅವಧಿ ದೀರ್ಘವಾದುದು. ಅಷ್ಟೇ ಅಲ್ಲದೆ ಹೆಣ್ಣು ಒಂದು ಅಣುವನ್ನು ಜೀವವಾಗಿ ರೂಪಿಸುವಲ್ಲಿ ತನ್ನ ರಕ್ತ, ಮಾಂಸ, ಮಜ್ಜೆ ತನ್ನ ಆಯಸ್ಸನ್ನು, ಒಟ್ಟು ಬದುಕನ್ನೇ ಪಣವಾಗಿಡಬೇಕಾದುದು ಅನಿವಾರ್ಯ. ಪ್ರಕೃತಿ ಹೊರಿಸಿರುವ ಈ ಜವಾಬ್ದಾರಿಯಲ್ಲಿ ಹೆಣ್ಣು ತನ್ನ ಪ್ರಾಣವನ್ನೇ ಪಣಕ್ಕಿಡುವ ಸಂದರ್ಭಗಳು ಇವೆ. ಇಂತಹ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಹೆಣ್ಣು-ಗಂಡುಗಳು ಮನುಕುಲದ ವಿಸ್ತರಣೆಗೆ ಕಾರಣರಾದರೂ ಕಾಲಕಳೆದಂತೆಲ್ಲ ಭೂಮಿ ತೂಕವನ್ನು ಮೀರಿ ಬೆಳೆಯುತ್ತಿರುವ ಜನಸಂಖ್ಯೆಗೆ ತಂತ್ರಜ್ಞಾನವು ಬಹುಮುಖ್ಯ ಕಾರಣವಾಗಿದೆ. ಹಾಗೆಯೇ ವಾಸ್ತವದಲ್ಲಿ ಈ ಜನಸಂಖ್ಯೆಯ ನಿಯಂತ್ರಣವು ಕೂಡ ಬಹುಮುಖ್ಯ ಸವಾಲಾಗಿದೆ. ಆದ್ದರಿಂದ ಜನಸಂಖ್ಯೆಯ ನಿಯಂತ್ರಣಕ್ಕಾಗಿ ಕುಟುಂಬ ಯೋಜನೆಯನ್ನು ಜಾರಿಗೊಳಿಸಲಾಯಿತು ಪ್ರಾರಂಭದಲ್ಲಿ ಆರತಿಗೊಂದು-ಕೀರ್ತಿಗೊಂದು ಎಂಬಂತೆ ಕುಟುಂಬಕ್ಕೆ ಎರಡು ಮಕ್ಕಳು ಎಂದು ಹೇಳಲಾಯ್ತು. ಮುಂದುವರೆದಂತೆ ಹೆಣ್ಣಿರಲಿ-ಗಂಡಿರಲಿ ಮಗು ಒಂದೇ ಇರಲಿ ಎಂಬ ನೀತಿಯು ಜಾರಿಗೆ ಬಂದಿತು. ಈ ನಿಯಮಗಳನ್ನು ಪಾಲಿಸಲು ಸಂತಾನ ನಿಯಂತ್ರಣಕ್ಕಾಗಿ ಜಾರಿಗೊಳಿಸಲಾದ ಯೋಜನೆಯ ಕುಟುಂಬ ಯೋಜನೆ.

ಜನಸಂಖ್ಯಾ ಬೆಳವಣಿಗೆಯ ಗತಿಯನ್ನು ಮತ್ತು ಜನನ ಪ್ರಮಾಣವನ್ನು ನಿಯಂತ್ರಿಸಲು ಭಾರತವು ರೂಪಿಸಿರುವ ಜನಸಂಖ್ಯಾ ನೀತಿ ಮತ್ತು ಅದರ ಪ್ರಧಾನ ಸಾಧನವೇ ಕುಟುಂಬ ಯೋಜನೆ ಎಂದು ಡಾ.ಬಿ. ಶೇಷಾದ್ರಿಯವರು ಅಭಿಪ್ರಾಯಪಟ್ಟಿದ್ದಾರೆ. ಮದ್ರಾಸ್‌ ಹಿಂದೂ ಮಾಲ್ಥೂಸಿಯನ್‌ ಲೀಗ್‌ನವರು ೧೮೮೨ ರಲ್ಲಿ ಭಾರತದಲ್ಲಿನ ಬಡತನಕ್ಕೆ ಮೂಲ ಕಾರಣವೇ ಜನಸಂಖ್ಯೆ. ಆ ಕಾರಣಕ್ಕಾಗಿ ಜನನ ನಿಯಂತ್ರಣದ ಹೊರತು ಬಡತನ ನಿವಾರಣೆ ಸಾಧ್ಯವಿಲ್ಲವೆಂದು ಗ್ರಹಿಸಲಾಯಿತು. ಅಲ್ಲದೆ ಅದಕ್ಕಾಗಿ ಕೆಲವು ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಜನರಲ್ಲಿ ಈ ಕುರಿತು ಅರಿವು ಮೂಡಿಸಬೇಕೆಂದು ಹೇಳಲಾಯಿತು. ನವ ಮಾಲ್ಥೂಸಿಯನ್‌ ಸಿದ್ಧಾಂತದಿಂದ ಬಲವಾಗಿ ಪ್ರಭಾವಿತರಾದ ಕೆಲವು ಭಾರತೀಯ ಮತ್ತು ಬ್ರಿಟಿಷ್‌ ಆಡಳಿತಾಧಿಕಾರಿಗಳು, ಸಮಾಜ-ವಿಜ್ಞಾನಿಗಳು, ವಿಶೇಷವಾಗಿ ಅರ್ಥಶಾಸ್ತ್ರಜ್ಞರು ಸಂತಾನ ನಿಯಂತ್ರಣಕ್ಕೆ ಶಿಫಾರಸ್ಸು ಮಾಡಿದರು.

೧೯೧೬ ರಲ್ಲಿ ಪಿ.ಕೆ. ವಟ್ಟಾಲರವರು ಜನಸಂಖ್ಯೆಯ ಮಿತಿಗೊಳಿಸುವುದರ ಅವಶ್ಯಕತೆಯ ಕುರಿತು ಬರವಣಿಗೆ ಮೂಲಕ ಜನರಿಗೆ ತಿಳಿಸಲು ಪ್ರಯತ್ನಿಸಿದರು. ನಂತರ ಮಹಾರಾಷ್ಟ್ರದ ಬಾಂಬೆಯಲ್ಲಿ ನೇಪಥ್ಯದಲ್ಲಿರುವ ಕೆಲವು ಕೇಂದ್ರಗಳು ಜನನ ನಿಯಂತ್ರಣದ ಕುರಿತು ಚರ್ಚೆಗಳನ್ನು ನಡೆಸಿದವು. ಗಣಿತ ಶಾಸ್ತ್ರದ ಪ್ರಾಧ್ಯಾಪಕರಾದ ಆರ್.ಡಿ.ಕರ್ವೆಯವರು ಸಂತಾನ ನಿಯಂತ್ರಣದ ಅಗತ್ಯತೆಯ ಕುರಿತ ಬರಹಗಳನ್ನು ಭಾಷಾಂತರಿಸಿದರು. ಅದೇ ರೀತಿಯಾಗಿ ತತ್ತ್ವಶಾಸ್ತ್ರದ ಪ್ರಾಧ್ಯಾಪಕರಾದ ಎನ.‌ಎಸ್‌.ಫಾಡಕೆಯವರು ಸಂತಾನ ನಿಯಂತ್ರಣ:ಪುನರವಲೋಕನ ಎಂಬ ಲೇಖನವನ್ನು ಬರೆದರು. ಅಲ್ಲದೆ ಬಾಂಬೆಯಲ್ಲಿ Bombay birth control league ನ್ನು ಸ್ಥಾಪಿಸಿದರು. ಹೀಗೆ ಕುಟುಂಬ ಯೋಜನೆಯ ಕುರಿತು ಈವರೆಗೂ ಸಾಕಷ್ಟು ಚರ್ಚೆಗಳು ಬೆಳೆದು ಬಂದಿವೆ. ೧೯೫೨ ರಲ್ಲಿ ರಾಷ್ಟ್ರೀಯ ಕುಟುಂಬ ಯೋಜನೆ ನೀತಿಯನ್ನು ಪರಿಚಯಿಸಿದ ಭಾರತ ಮೊಟ್ಟಮೊದಲ ದೇಶವೆಂಬ ಕೀರ್ತಿಗೆ ಪಾತ್ರವಾಗಿದೆ. ಅಂದಿನಿಂದ ಇಂದಿನವರೆಗೂ ಕುಟುಂಬ ಯೋಜನೆಯ ಕುರಿತು ಸಾಕಷ್ಟು ಚರ್ಚೆಗಳು ಕೇಳಿ ಬರುತ್ತಲೇ ಇವೆ. ವಿವಿಧ ಪಂಚವಾರ್ಷಿಕ ಯೋಜನೆಗಳಡಿಯಲ್ಲೂ ಜನನ ನಿಯಂತ್ರಣಕ್ಕಾಗಿ ಕೈಗೊಳ್ಳುತ್ತಿರುವ ಹಲವಾರು ಕ್ರಮಗಳನ್ನು ಕಾಣಬಹುದಾಗಿದೆ. ಆದರೆ ತಂತ್ರಜ್ಞಾನಗಳ ಸೃಷ್ಟಿಯನ್ನು ಗಮನಿಸುತ್ತಾ ಬಂದರೆ ಕುಟುಂಬ ಯೋಜನೆಯೆಂಬುದು ಕೇವಲ ಮಹಿಳೆಯ ಜವಾಬ್ದಾರಿಯೆಂಬಂತಾಗಿಸುತ್ತಿದೆ. ಅಲ್ಲದೆ ಮಹಿಳೆಯ ದೇಹವನ್ನು ಈ ಬಗೆಯ ಆವಿಷ್ಕಾರಗಳಿಂದಾಗಿ ಜರ್ಜರಿತಗೊಳಿಸಲಾಗುತ್ತಿದೆ.

ಪಂಚವಾರ್ಷಿಕ ಯೋಜನೆಕುಟುಂಬ ಯೋಜನೆ

ಮಹಿಳಾ ಆರೋಗ್ಯದ ಕುರಿತು ೧೯೪೬ ರ ರಲ್ಲಿ ಭೋರ್ ಕಮಿಟಿಯು ರಾಷ್ಟ್ರೀಯ ಆರೋಗ್ಯ ಮತ್ತು ಅಭಿವೃದ್ಧಿ ಸಮಿತಿಯು ಸಲ್ಲಿಸಿದ ವರದಿಯ ಆಧಾರದ ಮೇಲೆ ಕೆಲಸ-ಕಾರ್ಯಗಳು ರಚನೆಗೊಂಡವು. ೧೯೮೩ರಲ್ಲಿ ರಾಷ್ಟ್ರೀಯ ಆರೋಗ್ಯ ಕಾರ್ಯನೀತಿಯನ್ನು ಭಾರತವು ರೂಪಿಸಿ ಜಾರಿಗೆ ತಂದಿದೆ.

೧೯೫೧-೧೯೫೬೭ರಲ್ಲಿ ಜಾರಿಯಾದ ಮೊದಲ ಪಂಚವಾರ್ಷಿಕ ಯೋಜನೆಯಡಿ ರಾಷ್ಟ್ರೀಯ ಕುಟುಂಬ ಯೋಜನೆಯ ಕಾರ್ಯಕ್ರಮವನ್ನು ೧೯೫೨ರಿಂದ ರೂಪಿಸಲಾಯಿತು. ಇದು ರಾಷ್ಟ್ರೀಯ ಜನಸಂಖ್ಯಾ ನೀತಿಯ ಪ್ರಮುಖ ಗುರಿಯೇ ಜನಸಂಖ್ಯೆಯ ಪ್ರಮಾಣವನ್ನು ದೇಶದ ಆರ್ಥಿಕ ಪರಿಸ್ಥಿತಿಯ ಅಗತ್ಯಗಳಿಗೆ ಹೊಂದುವಂತಹ ಹಂತಕ್ಕೆ ತಗ್ಗಿಸುವುದಾಗಿತ್ತು. ಇಲ್ಲಿ ಕುಟುಂಬದ ಆರೋಗ್ಯ ಮತ್ತು ಕಲ್ಯಾಣದ ಹೆಸರಿನಲ್ಲಿ ಜನಸಂಖ್ಯೆಯನ್ನು ನಿಯಂತ್ರಿಸುವುದಾಗಿತ್ತು.

೧೯೫೬-೬೧ ರ ಸಂದರ್ಭದಲ್ಲಿ ಕುಟುಂಬ ಯೋಜನೆಯ ಮಹಿಳೆಯ ಬಿಡುಗಡೆಯ ಅಂಶವಾಗಿ ಪರಿಗಣಿಸಲಾದ್ದರಿಂದ, ಬೇಡದ ಬಸಿರು, ಪದೇ ಪದೇ ಗರ್ಭಿಣಿಯಾಗುವ, ಹೆರಿಗೆಯ ಪ್ರಕ್ರಿಯೆಗಳಿಂದ ಮುಕ್ತತೆಯನ್ನು ಹೊಂದುವುದಾಗಿತ್ತು. ಆದರೆ ಮೊದಲನೆ ಮತ್ತು ಎರಡನೆ ಪಂಚವಾರ್ಷಿಕ ಯೋಜನೆಗಳಲ್ಲಿ ಸಂತಾನ ನಿರೋಧಕ ಶಸ್ತ್ರಕ್ರಿಯೆಯು ಕಾಣಿಸಿಕೊಳ್ಳುವುದಿಲ್ಲ. ಅದರ ಬದಲಾಗಿ ಮಾತ್ರೆಗಳು, ಕ್ರೀಂಗಳಲು, ಜೆಲ್ಲಿಗಳು ಕುಟುಂಬ ಯೋಜನೆಗೆ ಬಳಸುವುದಾಗಿತ್ತು.

ಮೂರನೆ ಪಂಚವಾರ್ಷಿಕ ಯೋಜನೆಯ ೧೯೬೧-೬೪ ರ ಅವಧಿಯಲ್ಲಿ ಕುಟುಂಬ ಯೋಜನೆಯತ್ತ ಜನರನ್ನು ಸೆಳೆಯಲು ವಿವಿಧ ಬಗೆಯ ಪ್ರೋತ್ಸಾಹ ಧನ ಮತ್ತಿತ್ಯಾದಿ ಬಗೆಯ ಆಮಿಷಗಳನ್ನು ಒಡ್ಡುವ ಮೂಲಕ ರಾಷ್ಟ್ರದ ಸಮಸ್ಯೆಯನ್ನು ನಿವಾರಿಸುವ ಪ್ರಯತ್ನಕ್ಕೆ ತೊಡಗಲಾಯಿತು. ಅಂತರರಾಷ್ಟ್ರೀಯ ಸಂಸ್ಥೆಗಳ ಮಾರ್ಗದರ್ಶನಕ್ಕನುಗುಣವಾಗಿ ೧೯೬೯-೭೪ ರ ನಾಲ್ಕನೆಯ ಪಂಚವಾರ್ಷಿಕ ಯೋಜನೆಯಡಿ ಎಂ.ಟಿ.ಪಿ. ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಕುಟುಂಬ ಯೋಜನಾ ವಿಧಾನವನ್ನು ಕಾನೂನುಬದ್ಧವಾಗಿ ಗರ್ಭಪಾತ ಮಾಡಿಸಿಕೊಳ್ಳಲು ಜಾರಿಗೊಳಿಸಲಾಯಿತು. ಇಲ್ಲಿ ಪುರುಷರ ಶಸ್ತ್ರಚಿಕಿತ್ಸೆಗೆ ಹೆಚ್ಚಿನ ಆದ್ಯತೆ ನೀಡಿ ಶಿಬಿರಗಳನ್ನು ನಡೆಸುವ ಮೂಲಕ ಸಾಮಾಜಿಕ ಸಂತಾನ ಹರಣ ಶಸ್ತ್ರಕ್ರಿಯೆಯನ್ನು ಮಾಡುವ ಈ ಶಿಬಿರ ಮೊದಲು ಕೇರಳದಲ್ಲಿ ನಡೆಸಲಾಯಿತು.

ಐದನೆ ಪಂಚವಾರ್ಷಿಕ ಯೋಜನೆ ೧೯೭೪-೭೮ರಲ್ಲಿ ಕುಟುಂಬ ಯೋಜನೆಗೆ ಕುಟುಂಬ ಕಲ್ಯಾಣ ಯೋಜನೆಯೆಂದು ಹೊಸ ಹೆಸರಿನಿಂದ ಕರೆಯುವುದು ಆರಂಭವಾಯಿತು. ೧೯೭೭ರ ವೇಳೆಗೆ ಸಂತಾನ ನಿಯಂತ್ರಣ ಮಾತ್ರೆಗಳಿದ್ದರು, ಸ್ತ್ರೀ ಯರ ಸಂತಾನ ಹರಣ ಚಿಕಿತ್ಸೆಯು ಹೆಚ್ಚು ವ್ಯಾಪಕವಾಗಿ ಹರಡಿಕೊಂಡಿತ್ತು. ೧೯೮೦-೮೫ರ ಆರನೇ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ಪ್ರಾಥಮಿಕ ಆರೋಗ್ಯ ಪಾಲನಾ ಪರಿಕಲ್ಪನೆಯೂ ಕುಟುಂಬ ಯೋಜನೆಯ ಮೇಲೆ ತನ್ನ ಪ್ರಭಾವವನ್ನು ಬೀರಿತು. ರಕ್ತಹೀನತಾ ಪ್ರತಿಬಂಧಕ ಕಾರ್ಯಕ್ರಮವನ್ನು ರೂಪಿಸಲಾಯಿತು.

೧೯೮೫-೯೨ ಏಳನೆಯ ಪಂಚವಾರ್ಷಿಕ ಯೋಜನೆಯಡಿಯಲ್ಲಿ ಸರ್ಕಾರದೊಂದಿಗೆ ಸಂಬಂಧಿತ ಸಂಘ-ಸಂಸ್ಥೆಗಳು ಮತ್ತು ಮಹಿಳಾ ಸಂಘಟನೆಗಳಿತ್ಯಾದಿಯಾಗಿ ಕುಟುಂಬ ಕಲ್ಯಾಣ ಯೋಜನೆಯ ಸಾಫಲ್ಯಕ್ಕಾಗಿ ಶ್ರಮಿಸಬೇಕೆಂದು ಬೇಡಿಕೆಯನ್ನು ಮುಂದಿಟ್ಟಿತು. ಹಾಗೂ ಮಕ್ಕಳ ಜನನದ ಮಧ್ಯದಲ್ಲಿ ಅಂತರವಿರಿಸಲು ತಾತ್ಕಾಲಿಕ ಗರ್ಭನಿರೋಧಕಗಳು, ಮಾತ್ರೆಗಳು, ಕಾಪರಟಿಗಳ ಬಳಕೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಯಿತು.

ಎಂಟನೆ ಪಂಚವಾರ್ಷಿಕ ಯೋಜನೆ ೧೯೯೨-೯೭ರಲ್ಲಿ ಜಾಗತೀಕರಣದ ಪ್ರಭಾವವು ಈಗಾಗಲೇ ಬಲವಾಗಿ ಬೇರೂರಿರುವುದರಿಂದ, ಆರೋಗ್ಯ ವಲಯವು, ಸರ್ಕಾರಿ ವಲಯದಿಂದ ಖಾಸಗಿ ಉದ್ಯಮಗಳ ಕೈ ಸೇರಿತು. ಈ ಹೊಸ ಆರ್ಥಿಕ ನೀತಿಯಿಂದಾಗಿ ಆರೋಗ್ಯದ ಬಜೆಟನ್ನು ಕಡಿತಗೊಳಿಸಿತು. ಈ ನಿಧಿಯನ್ನು “ಬಡವರಿಗೆ ಮಾತ್ರ”ವೆಂದು ಸೀಮಿತಗೊಳಿಸಲಾಯಿತು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಂಖ್ಯೆ ಕಡಿಮೆಯಾಯಿತು. ಸುರಕ್ಷಿತ ತಾಯ್ತನ ಮತ್ತು ಎರಡಕ್ಕಿಂತ ಹೆಚ್ಚು ಮಕ್ಕಳಿರುವುದನ್ನು ‘ಅನರ್ಹತೆ’ಯೆಂದು ಹೇಳಲಾಯಿತು. ವ್ಯಾಸೆಕ್ಟೋಮಿ ಶಸ್ತ್ರಕ್ರಿಯೆಯನ್ನು ಜಾರಿಗೊಳಿಸಲಾಯಿತು.

೧೯೯೭-೨೦೦೨ ರ ಒಂಬತ್ತನೇ ಪಂಚವಾರ್ಷಿಕ ಯೋಜನೆಯಲ್ಲಿ ಕೇಂದ್ರ ಸರ್ಕಾರವು ಸಂಬಂಧಿಸಿದ ಸಂಗತಿಗಳು ನಿರ್ಣಯಿಸುವುದನ್ನು ಕೈ ಬಿಟ್ಟು ಅವುಗಳ ಜವಾಬ್ದಾರಿಯನ್ನು ವಿಕೇಂದ್ರೀಕರಣಗೊಳಿಸಲಾಯಿತು. ಗರ್ಭನಾಳದ ಸೋಂಕುಗಳನ್ನು ಮತ್ತು ಲೈಂಗಿಕ ಸೋಂಕುಗಳನ್ನು ಚಿಕಿತ್ಸೆಗೊಳಪಡಿಸುವುದು ಪ್ರಮುಖವಾದ ಅಂಶವೆಂದು ಪರಿಗಣಿಸಲಾಯಿತು. ಹತ್ತನೆ ಪಂಚವಾರ್ಷಿಕ ಯೋಜನೆಯಡಿಯಲ್ಲಿ ತಾಯಂದಿರ ಮರಣ ಪ್ರಮಾಣವನ್ನು ಕಡಿಮೆಮಾಡುವತ್ತ ಯೋಜನೆಯನ್ನು ರೂಪಿಸಲಾಯಿತು.

ಹೀಗೆ ಪಂಚವಾರ್ಷಿಕ ಯೋಜನೆಯ ಆರಂಭದಿಂದಲೂ ಕುಟುಂಬ ಯೋಜನೆಯನ್ನು ಒಳಗೊಂಡು ಚರ್ಚೆಗೊಳಪಡಿಸಲಾಯಿತು. ಜನಸಂಖ್ಯಾ ನಿಯಂತ್ರನಕ್ಕಾಗಿ ಬಳಸಲಾದ ಕುಟುಂಬ ಯೋಜನೆಯತ್ತ ಗಮನಹರಿಸುತ್ತಿರುವ ಪ್ರಭುತ್ವ ಮತ್ತು ಸರ್ಕಾರಗಳು ಮಹಿಳೆಯ ಸಂತಾನಾರೋಗ್ಯದತ್ತ ಲಕ್ಷ್ಯವಹಿಸದೇ ರಾಷ್ಟ್ರದ ಸಮಸ್ಯೆಯನ್ನು ನಿವಾರಿಸುವ ಹೊಣೆ ಹೆಣ್ಣಿನದು. ಅದರಲ್ಲೂ ಜನಸಂಖ್ಯೆಯು ಕೇವಲ ಹೆಣ್ಣಿನಿಂದ ಹೆಚ್ಚಾಗುತ್ತಿದೆಯೆಂಬಂತೆ ವರ್ತಿಸಿದವು. ಈ ಮೂಲಕ ಪ್ರಭುತ್ವ ಮತ್ತು ಸರ್ಕಾರಗಳು ಮಹಿಳೆಯ ಗರ್ಭಾಶಯದ ಮೇಲೆ ಆಕ್ರಮಣವೆಸಗುವಲ್ಲಿ ಸ್ವಯಂ ಪಾಲುದಾರರಂತಗೆ ವರ್ತಿಸಲಾರಂಭಿಸಿವೆ. ರಕ್ಷಣೆಯನ್ನು ಒದಗಿಸಬೇಕಾದ ಸರ್ಕಾರ ಮತ್ತು ಪ್ರಭುತ್ವಗಳು ಮಹಿಳೆಯ ಸಂತಾನಾರೋಗ್ಯದ ಸಂಬಂಧದಲ್ಲಿ ಅತ್ಯಂತ ಕ್ರೂರವಾಗಿ ನಡೆದುಕೊಳ್ಳುತ್ತಿರುವುದು ಗಮನಾರ್ಹ.

ಕುಟುಂಬ ಯೋಜನೆಯ ಮೂಲ ಉದ್ದೇಶವೇ ಸಂತಾನ ನಿಯಂತ್ರಣ, ಜನಸಂಖ್ಯೆಯ ನಿಯಂತ್ರಣಕ್ಕಾಗಿ ರೂಪಿಸಿಕೊಳ್ಳಲಾದ ಈ ಯೋಜನೆಯಲ್ಲಿ ಶಾಶ್ವತ, ತಾತ್ಕಾಲಿಕ ಸಂತಾನ ನಿಯಂತ್ರಣಗಳೆಂಬ ಎರಡು ವಿಧಾನಗಳನ್ನು ಗುರುತಿಸಿಕೊಳ್ಳಲಾಗಿದೆ.

ಶಾಶ್ವತ ನಿರೋಧಕಗಳು

ಶಾಶ್ವತ ಸಂತಾನ ನಿರೋಧಕಗಳು ಸಂತಾನ ಹರಣಕ್ಕಾಗಿ ಬಳಕೆಗೊಳ್ಳುತ್ತವೆ. ಇವುಗಳಲ್ಲಿ ಸ್ತ್ರೀ-ಪುರುಷರೀರ್ವರಿಗೆ ಮಾಡುವ ಚಿಕಿತ್ಸೆಗಳು ಒಳಗೊಂಡಿವೆ. ಸ್ತ್ರೀಯರಿಗೆ ಮಾಡುವ ಶಸ್ತ್ರಕ್ರಿಯೆಯು ಅಂಡನಾಳವನ್ನು ಕತ್ತಿರಸುವ ಮೂಲಕ ಅಂಡಾಣುವು ಗರ್ಭಾಶಯವನ್ನು ಸೇರದಂತೆ ಮಾಡಲಾಗುತ್ತದೆ. ಈ ಶಸ್ತ್ರಕ್ರಿಯೆಯೂ ಅತ್ಯಮತ ಕಠಿಣಕರವಾದುದು ಮತ್ತು ಹೆಚ್ಚು ಕಾಲ ವಿಶ್ರಾಂತಿಯ ಅಗತ್ಯತೆಯಿರುತ್ತದೆ. ಇತ್ತೀಚೆಗೆ ಉದರ ದರ್ಶಕ ಸಂತಾನ ಹರಣ ಶಸ್ತ್ರಕ್ರಿಯೆಯು ಬಳಕೆಗೆ ಬರುತ್ತವೆಯಾದರೂ ಬಹುಪಾಲು ಸಂದರ್ಭಗಳಲ್ಲಿ ಇದು ವಿಫಲವಾಗುತ್ತಿರುವುದು ಕೇಳಿ ಬರುತ್ತಿದೆ. ಈ ಚಿಕಿತ್ಸೆಯಲ್ಲಿ ಅಂಡನಾಳಗಳಿಗೆ ಉಂಗುರವನ್ನು ಹಾಕಲಾಗುತ್ತದೆ. ಇವುಗಳು ಕಳಚಿ ಬೀಳುವ ಸಾಧ್ಯತೆಗಳಿಂದ ಮಹಿಳೆಯರು ಮತ್ತೆ ಗರ್ಭಧರಿಸುವ ಸಂದರ್ಭಗಳಿರುತ್ತವೆ.

ಟ್ಯೂಬೆಕ್ಟೊಮಿ ಶಸ್ತ್ರಕ್ರಿಯೆ ಅತ್ಯಂತ ಕಠಿಣಕರವಾದುದಾದರು ಸಾಮಾಜಿಕ ವ್ಯವಸ್ಥೆಯಲ್ಲಿನ ಪ್ರಧಾನ ಧಾರೆಯ ಚಿಂತನೆಗಳು ಮಹಿಳೆಯರನ್ನು ಈ ಬಗೆಯ ಕ್ರಿಯೆಗಳಿಗೆ ಒಳಗು ಮಾಡುತ್ತಿವೆ. ಟ್ಯೂಬೆಕ್ಟೊಮಿಗಿಂತ ಪುರುಷರಿಗೆ ಮಾಡಬಹುದಾದ ವ್ಯಾಸೆಕ್ಟೊಮಿ ಶಸ್ತ್ರ ಚಿಕಿತ್ಸೆಯು ಅತ್ಯಂತ ಸರಳವಾದುದು. ಇಲ್ಲಿ ವೀರ್ಯನಾಳಗಳನ್ನೂ ವೀರ್ಯವೂ ಅಂಡಾಣುವನ್ನು ಸಂಧಿಸದಂತೆ ಮಾಡಲಾಗುತ್ತದೆ. ಅಗತ್ಯ ಬಿದ್ದಲ್ಲಿ ಇದನ್ನು ಪುನಃ ಶಸ್ತ್ರಕ್ರಿಯೆಯ ಮೂಲಕ ಮೊದಲಿನಂತಾಗಿಸಬಹುದು.

ಸಮಾಜ ವ್ಯವಸ್ಥೆಯಲ್ಲಿನ ಗಂಡು ಸಂತಾನದ ಬಗೆಗಿರುವ ಮೋಹ ಮತ್ತು ನಂಬಿಕೆಗಳು ಗಂಡನ್ನು ಸುರಕ್ಷಿತವಾಗಿಡುವುದರತ್ತಲೇ ಆಲೋಚಿಸುತ್ತವೆ. ಗಂಡಸರು ಈ ಬಗೆಯ ಶಸ್ತ್ರಕ್ರಿಯೆಗಳಿಗೆ ಒಳಗಾದರೆ ಅವರು ದುರ್ಬಲರಾಗುತ್ತಾರೆ, ಪುರುಷತ್ವವನ್ನು ಕಳೆದುಕೊಳ್ಳುತ್ತಾರೆಂಬ ಮೌಢ್ಯತೆಯನ್ನು ಬಿತ್ತರಿಸಲಾಗುತ್ತಿದೆ. ವ್ಯವಸ್ಥೆಯಲ್ಲಿ ದುಡಿಮೆ ಎಂದರೆ ಗಂಡು ಮಾತ್ರವೆಂದು ವ್ಯಾಖ್ಯಾನಿಸಲಾದ್ದರಿಂದಾಗಿ ಈ ಶಸ್ತ್ರಕ್ರಿಯೆಯಿಂದ ಗಂಡು ದುಡಿಯುವ ಶಕ್ತಿಯನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬಂತಹ ಸಂಗತಿಗಳನ್ನು ಪ್ರಚುರ ಪಡಿಸುವ ಮೂಲಕ ಈ ಬಗೆಯ ಸಂತಾನ ಹರಣ ಚಿಕಿತ್ಸೆಗೆ ಹೆಣ್ಣನ್ನು ಒಡ್ಡಲಾಗಿದೆ. ಗಾಢವಾಗಿ ಬೇರೂರಲಾದ ಪಿತೃಸಂಸ್ಕೃತಿಯ ಚಿಂತನೆಗಳಲ್ಲಿ ಹೆಣ್ಣು ಪುರುಷಾನುಕೂಲವರ್ತಿಯಷ್ಟೇ ಎಂಬಂತಾಗಿದೆ. ಆದ್ದರಿಂದ ಈ ಬಗೆಯ ಮೂಢ ನಂಬಿಕೆಗಳನ್ನು ಸೃಷ್ಟಿಸುತ್ತ ಹೆಣ್ಣನ್ನು ಮಾತ್ರ ಬಲಿಪಶುವಾಗಿಸಲಾಗುತ್ತಿದೆ.

ತಾತ್ಕಾಲಿಕ ಸಂತಾನ ನಿರೋಧಕಗಳು

ಸಂತಾನದಲ್ಲಿನ ಅಂತರ ಕಾಪಾಡಿಕೊಳ್ಳಲು ಹಾಗೆಯೆ ಬೇಕಾದಾಗ ಮಗುವನ್ನು ಪಡೆಯುವ ಸ್ವಾತಂತ್ರ್ಯವನ್ನು ಈ ತಂತ್ರಜ್ಞಾನಗಳು ಕಲ್ಪಿಸಿವೆ. ಆದರೆ ಈ ಆಯ್ಕೆ, ನಿರಾಕರನೆಯ ಹಕ್ಕು ಮಾತ್ರ ಪುರುಷನಿಗಿರುವುದು ಸ್ಪಷ್ಟವಾದುದಾಗಿದೆ. ಈ ವಿಧಾನವು ಮಾತ್ರೆಗಳು, ಚುಚ್ಚುಮದ್ದುಗಳು, ಗರ್ಭಕೋಶದಲ್ಲಿರಿಸುವ ಸಾಧನಗಳು, ಕಾಂಡೋಮ್‌ಗಳನ್ನು ಒಳಗೊಂಡಿದೆ.

ತಾತ್ಕಾಲಿಕ ಸಂತಾನ ನಿರೋಧಕಗಳಲ್ಲಿ ಪುರುಷರು ಬಳಸುವ ವಿಧಾನವೆಂದರೆ ಕಾಂಡೋಮ್‌ಗಳು ಮಾತ್ರ. ಉಳಿದೆಲ್ಲ ಮಾತ್ರೆ ಚುಚ್ಚುಮದ್ದು ಇತರೆ ಸಾಧನಗಳನ್ನು ಮಹಿಳೆಯರನ್ನು ಗುರಿಯಾಗಿಸಿಕೊಂಡೆ ಶೋಧಿಸಲಾಗಿದೆ. ಬಹುಪಾಲು ಸಂದರ್ಭಗಳಲ್ಲಿ ಕಾಂಡೋಮ್‌ಗಳು ಲೈಂಗಿಕ ಸಂತೃಪ್ತಿಯನ್ನು ಪಡೆಯುವಲ್ಲಿ ಅಡ್ಡಿಯಾಗುತ್ತವೆಯೆಂದು ಪುರುಷರು ಇದನ್ನು ಬಳಸಲು ನಿರಾಕರಿಸುತ್ತಾರೆ. ಪುರುಷರು ಇದನ್ನು ಸಮರ್ಪಕವಾಗಿ ಬಳಸಿದ್ದೆ ಆದಲ್ಲಿ ಮಹಿಳೆಯರು ಹೆಚ್ಚು ಸುರಕ್ಷಿತವಾಗಿರುವ ಸಾಧ್ಯತೆಗಳಿವೆ. ಆದರೆ ಪುರುಷ ಕೇಂದ್ರಿತ ವ್ಯವಸ್ಥೆಯಲ್ಲಿ ಅದನ್ನು ಬಳಸುವ, ನಿರಾಕರಿಸುವ ಸ್ವಾತಂತ್ರ್ಯ ಗಂಡಿಗೆ ಲಭ್ಯವಾಗಿದೆ. ಆದ್ದರಿಂದ ಮಹಿಳೆಯರು ಅನಿವಾರ್ಯವಾಗಿ ಈ ಬಗೆಯ ತಂತ್ರಜ್ಞಾನಗಳನ್ನು ಬಳಸಬೇಕಾಗುತ್ತದೆ.

ಗರ್ಭನಾಳದಲ್ಲಿ ಕಾಪರಟಿಯನ್ನು ಇರಿಸುವ ಮೂಲಕ ಗರ್ಭಧಾರಣೆಯನ್ನು ತಡೆಗಟ್ಟಬಹುದು. ಈ ಕಾಪರಟಿಯು ಪ್ಲಾಸ್ಟಿಕ್‌ ತಂತಿಯಂತಿರುವುದನ್ನು ಗರ್ಭನಾಳದಲ್ಲಿ ಹಾಕಲಾಗುತ್ತದೆ. ಒಂದು ದೇಹದಲ್ಲಿ ಹೊರಗಿನ ವಸ್ತುಗಳನ್ನು ಇರಿಸುವುದು ಅತ್ಯಂತ ಅಪಾಯಕರ. ಕೆಲವೊಮ್ಮೆ ಅವುಗಳನ್ನು ಬಳಸಿದರೆ ಅಡ್ಡ ಪರಿಣಾಮಗಳುಂಟಾಗಿರುವ ಪ್ರಕರಣಗಳು ಉಂಟು. ಈ ಕಾಪರಟಿಯು ಕೆಲವೊಮ್ಮೆ ಇರಿಸಲಾದ ಸ್ಥಳದಿಂದ ಮೇಲಕ್ಕೆ ಸರಿಯುವುದು, ವಿಪರೀತ ರಕ್ತಸ್ರಾವವಾಗುವುದು ಮೊದಲಾದ ಸಂಗತಿಗಳು ಇತರೆ ಬಗೆಯ ಸೋಂಕುಗಳಿಗೆ ದಾರಿ ಮಾಡಿಕೊಡುತ್ತವೆ.

ಇಷ್ಟೇ ಅಲ್ಲದೆ ತಂತ್ರಜ್ಞಾನವು ಗರ್ಭ ನಿರೋಧಕ ಮಾತ್ರೆಗಳನ್ನು ಶೋಧಿಸಿದೆ. ಕೆಲವು ಮಾತ್ರೆಗಳು ಸಂಭೋಗದ ಪೂರ್ವದಲ್ಲಿ ಮಹಿಳೆಯರು ತೆಗೆದುಕೊಳ್ಳುವಂತಹವು. ದಿನಾಲೂ ತಪ್ಪದೆ ಈ ಮಾತ್ರೆಗಳನ್ನು ಸೇವಿಸಬೇಕಾಗುತ್ತದೆ. ಅಲ್ಲದೆ ಈ ಮಾತ್ರೆಗಳು ಬಹುಪಾಲು ಮಹಿಳೆಯರಿಗೆ ಸುದೀರ್ಘ ಅವಧಿಯವರೆಗೆ, ಕೆಲವೊಮ್ಮೆ ಶಾಶ್ವತವಾಗಿ ಗರ್ಭಧಾರಣೆ ಮತ್ತು ಮಕ್ಕಳಾಗದಂತಹ ಸ್ಥಿತಿಗೆ ಮಹಿಳೆಯರನ್ನು ತಲುಪಿಸಿವೆ. ಇನ್ನು ಕೆಲವು ಮಾತುಗಳು ಸಂಭೋಗದ ಸಮಯದಲ್ಲಿ ಯೋನಿ ದ್ವಾರದಲ್ಲಿ ಇರಿಸಿಕೊಳ್ಳುವುದರಿಂದ ಇದು ಬಿಡುಗಡೆಯಾದ ವೀರ್ಯದ ಶಕ್ತಿಯನ್ನು ಪತನಗೊಳಿಸುತ್ತದೆ. ಆದರೆ ಇದು ಕೂಡ ಯೋನಿಯಲ್ಲಿ ಸೊಂಕುಂಟು ಮಾಡುವ ಸಾಧ್ಯತೆಗಳಿರುತ್ತವೆ. ಈ ಬಗೆಯ ಗರ್ಭನಿರೋಧಕ ಮಾತ್ರೆಗಳು ತಾಯಂದಿರ ಎದೆಹಾಲು ಕಡಿಮೆಯಾಗುವಂತಹ ಅಡ್ಡ ಪರಿಣಾಮಗಳನ್ನು ಬೀರುತ್ತವೆ.

ಮೊದಮೊದಲು ಮಲೇರಿಯಾ ಔಷಧಿಯಾಗಿ ಬಳಕೆಗೊಂಡ ಕ್ವಿನಾಕ್ಷೈನ್‌ನನ್ನು ೬೦ರ ದಶಕದ ಅಂತ್ಯ ಮತ್ತು ೭೦ರ ದಶಕದ ಪ್ರಾರಂಭದಲ್ಲಿ ಜೈಮ್‌ಸ್ಟರ್ ಎನ್ನುವ ವಿಜ್ಞಾನಿ ಗರ್ಭನಿರೋಧಕವಾಗಿ ಮಹಿಳೆಯರ ಗರ್ಭನಾಳದಲ್ಲಿ ತಡೆಯಂತೆ ವರ್ತಿಸುವ ಸಾಮರ್ಥ್ಯ ಇದಕ್ಕಿದೆಯೆಂದು ವರದಿಯನ್ನು ಹೊರಡಿಸ ಇದರು. ಈಗಾಗಲೇ ೧೯೯೧ ರ ವಿಶ್ವ ಆರೋಗ್ಯ ಸಂಸ್ಥೆಯ ವಿಷವಿಜ್ಞಾನ (Toxicology) ಪ್ಯಾನಲ್‌ ವರದಿಯು ಕ್ವಿನಾಕ್ವೈನ್‌ ಬ್ಯಾಕ್ಟೀರಿಯ ಭೌತ ವ್ಯವಸ್ಥೆಯಲ್ಲಿ ಉತ್ಪರಿವರ್ತನಕ್ಕೆ ಕಾರಣವಾಗುವ ನಿಯೋಗಿಯಾಗಿವೆ. ಇದಕ್ಕೆ ಸಸ್ತಿನಿಗಳ ಭೌತ ವ್ಯವಸ್ಥೆಯಲ್ಲಿ ನಿದರ್ಶನಗಳಿರುವುದುಂಟು. ಪ್ರಾಣಿಗಳಲ್ಲಿ ಇದು ಕ್ಯಾನ್ಸರ್ ತರುವ ಸಾಮರ್ಥ್ಯದ ಬಗ್ಗೆ ಖಚಿತ ಮಾಹಿತಿ ಇಲ್ಲ. ಆದರೆ ಮನುಷ್ಯರಲ್ಲಿ ಕ್ಯಾನ್ಸರ್ ತರುವುದೆನ್ನುವುದಕ್ಕೆ ಕೆಲ ದಾಖಲೆಗಳಿವೆ(ಉಲ್ಲೇಖ:ಮಾನಸ, ಜುಲೈ-ಆಗಸ್ಟ್‌,೧೯೯೭) ಯೆಂಬ ಸಂಗತಿಯನ್ನು ಮನಗಂಡ ಮೇಲೂ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು(ICMR) ೧೯೯೩-೯೪ರಲ್ಲಿ ಹೆಂಗಸರ ಮೇಲೆ ನಡೆಸಿದ ಎರಡನೇ ಹಂತದ ಕ್ಲಿನಿಕಲ್‌ ಟ್ರಯಲ್ಸನಲ್ಲಿ ಶೇ ೫೦% ರಷ್ಟು ಅಸಾಫಲ್ಯತೆ ಕಂಡು ಬಂತು. ಹೀಗೆ ವಿಷಕಾರಿ ವಸ್ತುವೆಂದು ಸಾಬೀತಾದ ಮೇಲೂ ಅದನ್ನು ಮಹಿಳೆಯರ ಸಂತಾನ ನಿಯಂತ್ರಣ ಸಾಧನವಾಗಿ ಬಳಸಿರುವುದು ಮಹಿಳೆಯ ಪ್ರಾಣಕ್ಕಿಂತ ದೇಶದ ಜನಸಂಖ್ಯೆಯ ನಿಯಂತ್ರಣವೇ ಪ್ರಮುಖ ಸಂಗತಿಯಾಗಿ ಪ್ರಭುತ್ವಕ್ಕೆ ಗೊಚರಿಸಿರುವುದು ವಿಷಾದನೀಯ.

ಹೀಗೆಯೆ ಡಿ.ಎಂ.ಪಿ.ಎ,ನೆಟ್‌.ಎನ್‌ ಡಿಪೊಪ್ರೊವೇರಾ, ನಾರಾಪ್ಲಾಂಟ್‌ ಮೊದಲಾದ ಗರ್ಭನಿರೋಧಕ ವಿಧಾನಗಳು ಇಲಿ, ನಾಯಿಗಳ ಮೇಲೆ ಪ್ರಯೋಗಿಸಲಾಗಿದ್ದು ಅವುಗಳು ಮಹಿಳೆಯರಿಗೆ ಅಡ್ಡ ಪರಿಣಾಮವನ್ನುಂಟುಮಾಡುವುದಿಲ್ಲ ಎಂದು ಹೇಳುವುದಲ್ಲದೆ ಇನ್ನ್ಯಾವುದೋ ಕಾಯಿಲೆಗೆ ಕಂಡು ಹಿಡಿದ ಮಾತ್ರೆಗಳನ್ನು ಗರ್ಭನಿರೋಧಕಗಳನ್ನಾಗಿ ಬಳಸುವ ಮೂಲಕ ಮಹಿಳೆಯ ದೇಹವನ್ನು ಪ್ರಯೋಗಾಲಯದಂತೆ ಬಳಸಲಾಗುತ್ತಿದೆ. ಅರೆಸಂಶೋಧಿತ, ಕಾನೂನುಬಾಹಿತರವಾದ ಗರ್ಭನಿರೋಧಕಗಳನ್ನು ಲಾಭದಾಸೆಯಿಂದ ಮಾರುಕಟ್ಟೆಗೆ ತರುತ್ತಿರುವುದು ಮಹಿಳೆಯ ಬಗ್ಗೆ ಕುರಿತ ಅಪಾರ ನಿರ್ಲಕ್ಷ್ಯವನ್ನು ಸೂಚಿಸುತ್ತಿದೆ.

ಕೆಲವು ಮಾತ್ರೆಗಳು ತಲೆನೋವು, ವಾಂತಿ, ಸೊಂಟ ನೋವುಗಳಂತಹ ಸಣ್ಣ ಪ್ರಮಾಣದ ಅಡ್ಡ ಪರಿಣಾಮಗಳಿಂದ ಮೊದಲುಗೊಂಡು ದೇಹದ ತೂಕ ಹೆಚ್ಚಾಗುವ, ಗರ್ಭಕೋಶದ ಕ್ಯಾನ್ಸರ್ ಗಳು, ಸ್ತನದ ಕ್ಯಾನ್ಸರ್ ಗಳಂತಹ ಭೀಕರವಾದ ಕಾಯಿಲೆಗಳಿಗೆ ಆಸ್ಪದ ಕೊಡುವಷ್ಟು ಪ್ರಭಾವಯುತವಾಗಿ ಗರ್ಭನಿರೋಧಕ ಮಾತ್ರೆಗಳಿವೆ. ನಿಸರ್ಗ ಸಹಜ ಪ್ರಕ್ರಿಯೆಯ ಮೇಲೆ ನಿಯಂತ್ರಣ ಸಾಧಿಸಲು ಹೊರಟಿರುವ ವ್ಯವಸ್ಥೆಯಲ್ಲಿ ಮಹಿಳೆಯನ್ನು ಒಬ್ಬ ವ್ಯಕ್ತಿಯಾಗಿಯೂ ಪರಿಗಣಿಸದೆ ಸಂತಾನ ಸಂಬಂಧಿ ನಿರೋಧಕಗಳನ್ನು ಹೆಣ್ಣಿನ ಗರ್ಭಾಶಯದಲ್ಲಿ ಪ್ರಯೋಗ ನಡೆಸಲಾಗುತ್ತದೆ. ಸಂಭೋಗ ಪೂರ್ವ ಕೆಲವಾದರೆ, ಸಂಭೋಗದ ನಂತರದ ೭೨ ಗಂಟೆಗಳೊಳಗೆ ಸೇವಿಸುವಂತಹ ಮಾತ್ರೆಗಳು ಹೆಣ್ಣನ್ನು ವಿವಿಧ ಕಾಯಿಲೆಗಳಿಗೆ ತುತ್ತಾಗಿಸುತ್ತಿವೆ.

ಸಂತಾನ ಸಂಬಂಧಿ ತಂತ್ರಜ್ಞಾನಲಿಂಗತಾರತಮ್ಯ

ತಂತ್ರಜ್ಞಾನದ ನೂತನ ಆವಿಷ್ಕಾರಗಳು ಮಹಿಳಾ ಸ್ನೇಹಿಯಾಗುವ ಬದಲು ವ್ಯವಸ್ಥೆಯ ಹಿಡಿತಕ್ಕೆ ಸಿಲುಕಿ ಮಹಿಲಾ ವಿರೋಧಿಯಾಗಿ ನಿಲ್ಲುತ್ತಿವೆ. ಅಮ್ನಿಯೋ ಸಿಂಥೆಸಿಸ್‌ನಿಂದ ಮೊದಲುಗೊಂಡು ಕ್ವಿನಾಕ್ವೈನವರೆಗೂ ಕೂಡ ಶೋಧಿತವಾಗಿರುವ ಸಂತಾನ ಸಂಬಂಧಿ ತಂತ್ರಜ್ಞಾನಗಳು ಮಹಿಳೆಯನ್ನು ಮಾತ್ರ ಗುರಿಯಾಗಿಸಿಕೊಂಡಿವೆ. ಲಿಂಗಶ್ರೇಣಿಕೃತ ಸಾಮಾಜಿಕ ವ್ಯವಸ್ಥೆಯಲ್ಲಿ ಪುರುಷ ಪರ ಮತ್ತು ಪುರುಷ ಯಶಸ್ಸನ್ನು ಪ್ರೇರೇಪಿಸುವ ಸಂಗತಿಗಳೇ ಹೆಚ್ಚಾಗಿ ಕಂಡುಬರುತ್ತವೆ.

ಈ ನಿಟ್ಟಿನಲ್ಲಿ ಕುಟುಂಬ ಯೋಜನೆಯು ರಾಷ್ಟ್ರದ ಸಮಸ್ಯೆಯನ್ನು ನಿವಾರಿಸಲು ರೂಪಿಸಲಾಗಿದೆಯಾದರೂ, ಈ ಕುಟುಂಬ ಯೋಜನೆಯ ಹೊರೆಯು ಸಂಪೂರ್ಣವಾಗಿ ಮಹಿಳೆಗೆ ಹೊರಿಸಲಾಗಿದೆ. ಶೋಧಿತವಾದ ಒಟ್ಟು ಸಂತಾನ ಸಂಬಂಧಿ ತಂತ್ರಜ್ಞಾನದಲ್ಲಿ ಗಂಡಿಗಾಗಿ ವ್ಯಾಸೆಕ್ಟೋಮಿ ಮತ್ತು ಕಾಂಡೋಮ್‌ಗಳನ್ನು ಹೊರತುಪಡಿಸಿದರೆ, ಜೀವ ತೆಗೆಯುವಂತಹ ಸಂತಾನ ಸಂಬಂಧಿ ತಂತ್ರಜ್ಞಾನಗಳೆಲ್ಲವೂ ಮಹಿಳೆಯರಿಗಾಗಿಯೇ ರೂಪಿತವಾಗುತ್ತಿವೆಯೆಂಬುದು ಇದುವರೆಗಿನ ಚರ್ಚೆಗಳಲ್ಲಿ ಗಮನಿಸಬಹುದಾಗಿದೆ. ಈ ಮೂಲಕ ಕುಟುಂಬ ಯೋಜನೆ, ಸಂತಾನ ನಿಯಂತ್ರಣವು ಕೇವಲ ಹೆಣ್ಣಿನಿಂದಾಗುವುದೆಂಬಂತೆ ಹೆಣ್ಣಿನ ಹೆಗಲಿಗೆ ಹೊರೆಯನ್ನು ಹೊರಿಸಿ ಹಲವು ಬಗೆಯಲ್ಲಿ ಮಹಿಳೆಯನ್ನು ದುರ್ಬಳಕೆಗೆ ಈಡು ಮಾಡಲಾಗುತ್ತಿದೆ. ಹೆಣ್ಣು ಒಮ್ಮೆ ಗರ್ಭಧರಿಸಿದರೆ ಮಗುವಿಗೆ ಜನ್ಮ ನೀಡುವ ೯ ತಿಂಗಳ ಸುದೀರ್ಘ ಅವಧಿಯವರೆಗೂ ಅವಳು ಸಂತಾನ ಪ್ರಕ್ರಿಯೆಯಲ್ಲಿ ತೊಡಗಿರಬೇಕಾಗುತ್ತದೆ. ಇದರರ್ಥ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಲು ೯ ತಿಂಗಳ ಕಾಲಾವಧಿ ಬೇಕು. ಆದರೆ ಅದೇ ಅವಧಿಯಲ್ಲಿ ಒಂದು ಗಂಡು ಅದೆಷ್ಟು ಮಕ್ಕಳ ಸೃಷ್ಟಿಗೆ ನಾಂದಿಯಾಗಿರುತ್ತಾನೆಂಬುದು ಗಮನಿಸಿದರೆ, ಏರುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸಲು ನಡೆಸಬೇಕಾದ ಸಂತಾನ ಹರಣ, ನಿಯಂತ್ರಣ ಶಸ್ತ್ರಕ್ರಿಯೆಗಳಿಗೆ ಮೊದಲು ಯಾರನ್ನು ಒಳಪಡಿಸಬೇಕೆಂಬುದು ಸ್ಪಷ್ಟವಾಗುತ್ತದೆ. ಪುರುಷ ಪ್ರಧಾನ ಸಮಾಜ ವ್ಯವಸ್ಥೆಯಲ್ಲಿ ಹಕ್ಕುಗಳೆಲ್ಲ ಗಂಡಿಗೆ, ಬಾಧ್ಯತೆಗಳೆಲ್ಲ ಹೆಣ್ಣಿಗೆಂಬಂತೆ ಸಂತಾನ ಸಂಬಂಧಿ ತಂತ್ರಜ್ಞಾನವನ್ನು ರೂಪಿಸಿ ಬಳಸಲಾಗುತ್ತದೆ.

ಒಟ್ಟಾರೆ ತಂತ್ರಜ್ಞಾನವು ನಿರುಪಯುಕ್ತವೆಂದು ಅಲ್ಲಗಳೆಯುವ ಉದ್ದೇಶವಲ್ಲ. ಬಹುಪಾಲು ತಂತ್ರಜ್ಞಾನಗಳು ಶೋಧಿತವಾದ ಉದ್ದೇಶದ ಹಿನ್ನೆಲೆಯಲ್ಲಿ ಬಳಕೆಗೊಂಡರೆ ಮಹಿಳಾ ಬದುಕು ಬಹುತೇಕ ಸುಸಂಗತವಾಗುತ್ತದೆ. ಅಲ್ಲದೆ ಸಂತಾನ ನಿಯಂತ್ರಣ ತಂತ್ರಜ್ಞಾನದಲ್ಲಿ ಮಹಿಳೆಯನ್ನು ಬಲಿಯಾಗಿಸುವಂತಹ ಅಂಶಗಳನ್ನು ಕೈ ಬಿಡುವುದರ ಜೊತೆ-ಜೊತೆಗೆ, ಕುಟುಂಬ ಯೋಜನೆ ಪುರುಷನ ಹೊಣೆಯು ಹೌದು ಎಂಬುದನ್ನು ಮನವರಿಕೆ ಮಾಡಿಸುವ ಮೂಲಕ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಬೇಕಾದುದು ಸೂಕ್ತ. ಈಗಾಗಲೇ ಪುರುಷರಿಗಾಗಿ ರೂಪಿತವಾದ ಸಂತಾನ ನಿಯಂತ್ರಣ ನಿರೋಧಕಗಳಾದ ವ್ಯಾಸೆಕ್ಟೊಮಿ ಮತ್ತು ಕಾಂಡೋಮ್‌ಗಳು ಮೂಢನಂಬಿಕೆಗಳನ್ನು ಮೀರಿ ಬಳಕೆಗೊಂಡಿದ್ದೆ ಆದರೆ ಮಹಿಳೆಯರು ನೂತನ ಬಗೆಯ ತಂತ್ರಜ್ಞಾನಗಳನ್ನು ಬಳಸುವ ಮೂಲಕ, ಭಯಾನಕವಾದ ಕಾಯಿಲೆಗಳಿಗೆ ಬಲಿಯಾಗುವುದು ತಪ್ಪುತ್ತದೆಯಲ್ಲದೆ, ಆರೋಗ್ಯಕರ ಸಾಮಾಜಿಕ ವ್ಯವಸ್ಥೆಯ ರೂಪಿಕೆಗೆ ಸಹಕಾರಿಯಾಗುತ್ತದೆ.

ಸಮಾರೋಪ

ಮನುಕುಲ ಬೆಳೆದಂತೆಲ್ಲ ವಿಸ್ತೃತವಾಗುತ್ತಿರುವ ಜ್ಞಾನ ಚಿಂತನೆಗಳು ಆಧುನಿಕೋತ್ತರ ಸಂದರ್ಭದಲ್ಲಿ ಹೊಸ ಹೊಸ ಸಂಗತಿಗಳಿಗೆ ಮುಖಾಮುಖಿಯಾಗುತ್ತಲಿದೆ. ಪ್ರತಿಯೊಂದು ಸಂಗತಿಯೂ ಜಾಗತೀಕರಣದ ಪ್ರಭಾವದಿಂದಾಗಿ ವ್ಯಾಪಾರೀಕರಣಕ್ಕೊಳಗಾಗುತ್ತಿದೆ. ದೇಶದಲ್ಲಿ ಸಮಪ್ರಮಾಣದಲ್ಲಿರುವ ಮಹಿಳಾ ಸಮುದಾಯವನ್ನು ಸಮಾನತೆಯ ನೆಲೆಯಲ್ಲಿ ಸ್ವೀಕರಿಸದಿರುವಷ್ಟು ವ್ಯವಸ್ಥೆ ಗಾಢವಾದುದಾಗಿದೆ. ಮಹಿಳೆಯರ ಪರಿಸ್ಥಿತಿಗಳು ಮೊದಲಿನಷ್ಟು ಇವತ್ತಿನ ಸಂದರ್ಭದಲ್ಲಿ ಬಿಕ್ಕಟ್ಟಿನಿಂದ ಕೂಡಿಕೊಂಡಿಲ್ಲವೆಂಬುದು ಎಷ್ಟು ಸತ್ಯವೊ, ಅಷ್ಟೇ ಪ್ರಮಾಣದಲ್ಲಿ ಬದಲಾಗುತ್ತಿರುವ ಪಿತೃ ಪ್ರಧಾನ ಸ್ವರೂಪವು ತನ್ನ ಆಳವಾದ ಬೇರುಗಳಿಂದಾಗಿ ಮಹಿಳೆಗೆ ಹೊಸ ಹೊಸ ಸಮಸ್ಯೆಗಳಿಗೆ ಈಡು ಮಾಡುತ್ತಿದೆ.

ಸಂತಾನ ಸಂಬಂಧಿ ಪ್ರಕ್ರಿಯೆಯನ್ನೇ ಆಧರಿಸಿ ಹೇಳುವುದಾದರೆ ಇದುವರೆಗು ಚರ್ಚಿಸಲಾದ ಸಂಗತಿಗಳು ಮಹಿಳೆಯ ವಿರುದ್ಧ ಸಾಮಾಜಿಕತೆಯಲ್ಲಿ ರೂಪಿತವಾಗುತ್ತಿರುವ ಸಮಸ್ಯೆಗಳು ಸ್ಪಷ್ಟವಾಗಿ ಗಮನಕ್ಕೆ ಬರುತ್ತವೆ. ಸಾಮಾಜಿಕ ವ್ಯವಸ್ಥೆಯ ಎಲ್ಲ ಚಿಂತನೆಗಳ ಮೇಲೆ ಪಿತೃ ಸಂಸ್ಕೃತಿಯ ಪ್ರಭಾವ ಗಾಢವಾಗಿ ಬೀರುತ್ತಿದೆಯಾದ್ದರಿಂದ, ಮಹಿಳೆಯನ್ನು ಕೇಂದ್ರವಾಗಿಸಿಕೊಂಡು ಚಿಂತನೆಗಳನ್ನು ರೂಪಿಸಲಾದರೂ ಅವುಗಳು ಮಹಿಳಾ ಬದುಕನ್ನು ಸುಸಂಗತಗೊಳಿಸುವ ಬದಲು ಹೆಚ್ಚು ಸಂಕೀರ್ಣತೆಗೆ ಒಳಗಾಗಿ ಸುತ್ತಿವೆ. ಇದೆಲ್ಲದಕ್ಕೂ ಮೂಲಭೂತವಾಗಿ ಕಾರಣವಾಗಿರುವುದು ಸಾಮಾಜಿಕತೆಯಿಂದಲೆ. ಅದರಲ್ಲೂ ಸಾಮಾಜಿಕವಾಗಿ ಕಟ್ಟಲ್ಪಟ್ಟ ಲೈಂಗಿಕತೆಯ ನೆಲೆಯಿಂದಲೆ. ಇದುವರೆಗಿನ ಯಾವುದೇ ಚಿಂತನೆಯ ಆಯಾಮವನ್ನು ಪರಿಶೀಲನೆಗೊಳಪಡಿಸಿದರೂ ಸ್ಪಷ್ಟವಾಗಿ ಗೊಚರಿಸುವುದೆಂದರೆ ಮಹಿಳೆಯನ್ನು ಒಮದು ದೇಹವಾಗಿ ಮಾತ್ರ ಪರಿಗಣಿಸಲ್ಪಟ್ಟಿದೆ.

ಸಂತಾನ ಸಂಬಂಧಿ ಪ್ರಕ್ರಿಯೆಯೂ ಪರಿಪೂರ್ಣವಾಗಿ ಮಹಿಳೆಯ ದೈಹಿಕ ಸಂಗತಿಯನ್ನು ಅವಲಂಬಿಸಿದೆ. ಹಾಗಾಗಿ ವ್ಯವಸ್ಥೆಯಲ್ಲಿ ಸಂಶೋಧಿತಗೊಳ್ಳುತ್ತಿರುವ ತಂತ್ರಜ್ಞಾನಗಳು ಮಹಿಳಾ ಬದುಕಿಗೆ ಅತ್ಯಂತ ಸಶಕ್ತತೆಯನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವಷ್ಟು ಸಮರ್ಥವಾಗಿವೆ. ಸಾಂಪ್ರದಾಯಿಕ ಸಮಾಜ ವ್ಯವಸ್ಥೆಯು ಮಹಿಳೆಯನ್ನು ನಿರಂತರವಾಗಿ ಅಧೀನ ಸ್ತರದಲ್ಲಿರಿಸುವ ಮೂಲಕ ಸಾಮಾಜಿಕವಾಗಿ ಪುರುಷರಿಗೆ ದತ್ತವಾದ ಅಧಿಕಾರವನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಾಗುತ್ತಿದೆ. ಆದ್ದರಿಂದ ಮಹಿಳಾ ಪರವಾಗಿ ಬಳಕೆಗೊಳ್ಳಬೇಕಾದ ಸಂತಾನ ಸಂಬಂಧಿ ತಂತ್ರಜ್ಞಾನಗಳು ಮಹಿಳೆಯ ಬದುಕನ್ನು ಸುಸಂಗತಗೊಳಿಸುವ ಬದಲು ಇನ್ನಷ್ಟು ಸಂಕೀರ್ಣ ಸಮಸ್ಯೆಗಳನ್ನು ಹುಟ್ಟುಹಾಕುತ್ತಿವೆ.

ಅಸ್ತಿತ್ವವೆಂಬುದು ಪ್ರತಿಯೊಂದು ಜೀವಿಗೂ ಬಹುಮುಖ್ಯವಾದುದು. ಮನುಷ್ಯರ ಎಲ್ಲ ಹೋರಾಟಗಳು ಅಸ್ತಿತ್ವರೂಪಿಕೆಗಾಗಿಯೇ, ಸ್ತರ ವಿನ್ಯಾಸದಿಂದ ಸಂರಚಿಸಲ್ಪಟ್ಟ ಸಾಮಾಜಿಕ ವ್ಯವಸ್ಥೆಯಿಂದಾಗಿ ಕೆಲವು ಸಮುದಾಯಗಳ ಅಸ್ತಿತ್ವವನ್ನು ದಮನಗೊಳಿಸಲು ನಿರಂತರವಾಗಿ ಕಾರ್ಯತಂತ್ರಗಳು ರೂಪುಗೊಳ್ಳುತ್ತಲೇ ಇವೆ. ಇದೇ ಸಾಮಾಜಿಕ ವ್ಯವಸ್ಥೆಯಲ್ಲಿ ಕಾಲಘಟ್ಟದಲ್ಲಾದ ಕೆಲವು ಪರಿವರ್ತನೆಗಳಿಂದಾಗಿ ದಮನಿತ ಸಮುದಾಯಗಳು ಇಂದು ತಮ್ಮ ಅಸ್ತಿತ್ವದ ಶೋಧಕ್ಕೆ ತೊಡಗಿವೆ. ಈ ಎಲ್ಲ ಸಮುದಾಯಗಳೊಳಗೆ ಸಿಲುಕಿಕೊಂಡಿರುವ ಮಹಿಳಾ ಅಸ್ತಿತ್ವದ ಶೋಧ ಅತ್ಯಂತ ಕ್ಲಿಷ್ಟಕರವಾದುದಾಗಿದೆ. ಆದ್ದರಿಂದ ಮಹಿಳಾ ಸಮುದಾಯವೊಂದು ಪ್ರತ್ಯೇಕವಾಗಿ ತಮ್ಮ ಅಸ್ತಿತ್ವದ ರೂಪಿಕೆಗಾಗಿ ಹೋರಾಡುವ ಅಗತ್ಯತೆಯನ್ನು ತೀರಾ ಇತ್ತೀಚೆಗೆ ಗುರುತಿಸಿಕೊಳ್ಳಲಾಗಿದೆ. ಇಂಥ ಸಂದರ್ಭದಲ್ಲಿ ಜಾರಿಗೊಳ್ಳುತ್ತಿರುವ ಸಂತಾನ ಸಂಬಂಧಿ ತಂತ್ರಜ್ಞಾನಗಳು ಅತ್ಯಂತ ಉಪಯುಕ್ತತೆಯನ್ನು ಹೊಂದಿವೆ. ಆದರೆ ಇವುಗಳು ರಾಷ್ಟ್ರದ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವಲ್ಲಿ ಕೇವಲ ಮಹಿಳೆಯ ಗರ್ಭಾಶಯವನ್ನು ದುರ್ಬಳಕೆಗೆ ಈಡುಮಾಡುವ ಬದಲು, ಮಹಿಳಾ ಅಸ್ತಿತ್ವದ ರೂಪಿಕೆಗೆ ಅನುಕೂಲ ಕರವಾಗುವ ನಿಟ್ಟಿನಲ್ಲಿ ಬಳಕೆಯಾದಾಗ ಮಾತ್ರ ಇವುಗಳು ಶೋಧಗೊಂಡ ಉದ್ದೇಶವು ಈಡೇರುತ್ತದೆ. ಅಷ್ಟೇ ಅಲ್ಲದೆ ಮುಂದೆ ಸಂಭವಿಸುವ ಸಾಮಾಜಿಕ ಅಧಃಪತನವನ್ನು ತಪ್ಪಿಸಿದಂತಾಗುತ್ತದೆ. ಈ ಮೂಲಕ ಸುವ್ಯವಸ್ಥಿತ ಸಾಮಾಜಿಕ ವ್ಯವಸ್ಥೆಯನ್ನು ರೂಪಿಸುವ ಆಶಯವನ್ನು ಮಹಿಳಾ ಅಧ್ಯಯನ ಮತ್ತು ಸ್ತ್ರೀವಾದಗಳು ಹೊಂದಿವೆ.