ಸ್ನೇಹಿತ ಗಣೇಶ ದೂರವಾಣಿಯ ಮುಖಾಂತರ ಸಂಪರ್ಕಿಸಿ, ಮರುದಿವಸ ತಾನು ಕೆಲಸ ನಿರ್ವಹಿಸುತ್ತಿರುವ ಶಾಲೆಗೆ ಬರಲು ಕೋರಿಕೊಂಡದ್ದರಿಂದ ನಾನು ಅಲ್ಲಿಗೆ ಹೋದೆ.

ನನ್ನನ್ನು ಪ್ರಯೋಗಶಾಲೆಯ ಕೋಣೆಗೆ ಕರೆದುಕೊಂಡು ಹೋಗಿ, ತಾನು ಸಂಗ್ರಹಿಸಿದ ಪಕ್ಷಿಗಳ ಖಾಲಿಗೂಡುಗಳನ್ನೆಲ್ಲಾ ತೋರಿಸುತ್ತಾ ಇಹೋದ. ಕೋಣೆಯ ಗೋಡೆಯ ಮೇಲೆ ಮೊಳೆಗಳಿಗೂ ಕೂಡ ಕೆಲವೊಂದು ಗೂಡುಗಳನ್ನು ನೇತು ಹಾಕಲಾಗಿತ್ತು. ಅವನ ಸಂಘ್ರಹದ ಕೌಶಲ್ಯಕ್ಕೆ ಮೆಚ್ಚುಗೆ ಸೂಚಿಸಿದೆ. “ನೀನು ತಿಳಿದಿರುವಂಥೆ ಇಲ್ಲಿಯ ಎಲ್ಲ ಗೂಡುಗಳು ಖಾಲಲಿಯಾಗಿಲ್ಲ. ಆ ಗೀಜಗ ಪಕ್ಷಿಯ ಗೂಡು ನೋಡು; ಪಕ್ಷಿಯ ಸಂಸಾರವೊಂದು ಅಲ್ಲಿ ನಡೆಯುತ್ತಿದೆ” ಎಂದ. “ಅರೆ! ಗೀಜಗ ಹಕ್ಕಿಯೊಂದು ಕೋಣೆಯೊಳಗೆ ಬಂದು ಸಂಸಾರ ಹೂಡುವಷ್ಟು ಅದ್ಹೇಗೆ ಧೈರ್ಯ ತೋರಸ್ತು?” ಎಂದು ಅಲೋಚನೆಯಲ್ಲಿ ಮುಳುಗಿದ್ದಾಗಲೇ “ಗೂಡಲ್ಲಿ ಸಂಸಾರ ಹೂಡಿದ್ದು ಗೀಜಗ ಹಕ್ಕಿಯಲ್ಲ, ಗೀಜಗದಷ್ಟೇ ಗಾತ್ರವಿರುವ ಗುಬ್ಬಚ್ಚಿ, ವಿದ್ಯಾರ್ಥಿಗಳು ತಂದುಕೊಟ್ಟ ಖಾಲಿಯಾದ ಗೀಜಗ ಹಕ್ಕಿಯ ಗೂಡನ್ನು ಗೋಡೆಗೆ ತೂಗು ಹಾಕಿದ್ದೆ. ಒಂದೆರಡು ದಿನ ಬಿಟ್ಟು ನೋಡಿದರೆ ಗುಬ್ಬಿಯ ಸಂಸಾರವೊಂದು ಬಂದು ಬೀಡು ಬಿಟ್ಟಿತ್ತು. ಗೂಡಿನಲ್ಲಿ ಇಣಿಕಿ ನೋಡಿದರೆ ಎರಡು ಚಿಕ್ಕ ಗಾತ್ರದ ಮೊಟ್ಟೆಗಳು. ಮೊಟ್ಟೆ ಒಡೆದು, ಮರಿಗಳು ಬಂದು ಸಂಸಾರ ದೊಡ್ಡದಾಯಿತು. ಈಗ ಮರಿಗಳು ದೊಡ್ಡದಾಗಿವೆ. ಇಂದು ಅವುಗಳನ್ನು ಪರಿಸರಕ್ಕೆ ಮುಕ್ತವಾಗಿ ಕಳುಹಿಸಿಕೊಡುವ ಸಮಾರಂಭ. ಅದಕ್ಕೆ ನಿನ್ನನ್ನು ಕರೆಸಿದ್ದು….” ಎಂದು ನನ್ನೆಡೆ ನೋಡಿ ನಗೆಯಾಡಿದ.

ಗುಬ್ಬಚ್ಚಿ ನಮ್ಮ ಸುತ್ತ ಮುತ್ತ ಹಾರಾಡಿಕೊಂಡು, ಓಡಾಡಿಕೊಂಡಿರುವ ಪಕ್ಷಿ. ಮಕ್ಕಳ ಬಾಲ್ಯದ ಬದುಕಿನಲ್ಲಿ ಪರಿಚಯಕ್ಕೆ ಬರುವ ಮೊದಲ ಹಕ್ಕಿಯೇ ಅದು. ಮಕ್ಕಳಿಗೆ ನಾವು ಪಕ್ಷಿಗಳನ್ನು ಕುರಿತು ಹೇಳುವಾಗ, ಪರಿಚಯಿಸುವಾಗ ಇದೇ ಮೊದಲು. “ಚಿಂವ್‌, ಚಿಂವ್‌ ಗುಬ್ಬಿ…. ಕಾಳನು ಕೊಡುವೆ ಬಾ…….” ಎಂದು ಪುಟಾಣಿಗಳಿಗೆ ಪದ್ಯ ಕಲಿಸುತ್ತ, ಪರಿಸರದ ಕಲಿಕೆಯ ಭಾಗವಾದ ಪುಟ್ಟ ಹಕ್ಕಿ ಗುಬ್ಬಚ್ಚಿ.

ಗುಬ್ಬಚ್ಚಿ ಪ್ಯಾಸೆರಿಫಾರ್ಮಿಸ್‌ ಗಣ, ಪ್ಲೋಸ್ಯೆಯಿಡೆ ಕುಟುಂಬಕ್ಕೆ ಸೇರಿದ ಚಿಕ್ಕ ಗಾತ್ರದ ಪಕ್ಷಿ. ವೈಜ್ಞಾನಿಕ ನಾಮ ಪ್ಯಾಸರ್ ಡೊಮೆಸ್ಟಿಕಸ್‌. ಯುರೋಪ್‌, ಪಶ್ಚಿಮ ಏಷ್ಯ ಹಾಗೂ ಉತ್ತರ ಆಫ್ರಿಕಗಳ ಮೂಲನಿವಾಸಿಯಾದ ಇದು ಪ್ರಪಂಚದಾದ್ಯಂತ ಮಾನವ ನೆಲೆ ಇರುವೆಡೆಯಲ್ಲ ವ್ಯಾಪಿಸಿದೆ. ಗುಂಚಕ್ಕಿ, ಮನೆಗುಬ್ಬಿ ಎಂಬ ಸ್ಥಳೀಯ ಹೆಸರುಗಳುಂಟು.