ಕಣ್ಣೆದುರು ಕಾಣುವುದನ್ನು
ಕಂಡೂ ಕಂಡೂ ಸುಮ್ಮನಿರಲಾರೆ.
ಹಾಗಂತ ಹೋರಾಟಕ್ಕೆ ಇಳಿದರೆ
ಸಮಸ್ತ ಶಸ್ತ್ರಾಸ್ತ್ರಗಳೂ ಬರಿದಾಗಿ
ಅಭಿಮನ್ಯುವಿನ ನೆನಪಾಗುತ್ತದೆ
ಈಗ ಮಾಡುವುದೇನು ?

ಅಥವಾ ನನ್ನಂಥ ಕಲಿಪಾರ್ಥ
ಇವರೊಡನೆ ಹೋರಾಡುವುದು ವ್ಯರ್ಥ
ಎಂಬ ಒಣ ವೇದಾಂತಕ್ಕೆ ಶರಣಾಗಿ
ಮೂಲೆಗೆ ಸೇರಿ ಸುಮ್ಮನಿರಲೆ ?
ಸುಮ್ಮನೆ ಇದ್ದು, ಅಲ್ಲೂ ಸಲ್ಲುವ
ಮತ್ತೆ ಇಲ್ಲೂ ಸಲ್ಲುವ
ಸಮನ್ವಯ ಸಿದ್ಧನಾಗಿ
ಅಡ್ಡ ಗೋಡೆಯ ಮೇಲೆ
ದೀಪವಾಗಲೆ ?
ಹೀಗಿದ್ದವರ ಪ್ರಶಾಂತ ಮುಖಕ್ಕೆ
ಮತ್ತವರ ಜಾಣತನಕ್ಕೆ
ಜೈ ಅನ್ನಲೆ ?