ಮಧುಮಯ ಪ್ರಣಯದೀ ಪ್ರಾಸಾದ ಪಂಕ್ತಿಯಲಿ
ತಾರುಣ್ಯಸಂಜನಿತ ನವನವೋಲ್ಲಾಸದಲಿ
ಸಂಚರಿಪ ಕೆಳೆವಕ್ಕಿ, ನಿನ್ನ ಬಾಳಿನಲಿಂದು
ಅದ್ವೈತ ದ್ವೈತವಾಗುತಿದೆ. ಮತ್ತೆ ಮುಂದೆಂದು
ಚಿರಕಾಲ ಅದ್ವೈತವಾಗಲಿದೆ ಪ್ರೇಮದಲ್ಲಿ.
ಖಚರಪದಪಥ ನಿಮ್ಮ ರಥಕೆ ಗತಿಯಾಗಿರಲಿ
ವ್ಯೋಮದಾಶೀರ್ವಾದದಮಲ ಸಾನಿಧ್ಯದಲಿ
ಎರಡಲ್ಲ ಒಂದೆಂಬ ಬಿಚ್ಚದಿಹ ಬೆಸುಗೆಯಲಿ
ಪೂರ್ಣತೆಯ ಕಡೆಗೆ, ಹೇ ತರುಣ ದಂಪತಿವಕ್ಕಿ
ಲಘುವಾದ ಮರ್ತ್ಯವನು ಮೆಲುಮೆಲನೆ ಹಿಂದಿಕ್ಕಿ
ಪಯಣಗೈಯಲಿ ನಿಮ್ಮ ಪ್ರಣಯರಥ ಮೇಲೇರಿ
ಪರಿಶುದ್ಧ ಪರಿಪೂರ್ಣ ಪರಮಕೃಪೆಯನು ಹೀರಿ
ಕಾಮವನು ಸುಟ್ಟುರುಹಿ ಸತ್ಯತರ ಪ್ರೇಮವಾಗಿ
ಭೂಮವಹ ವಿಶ್ವಸೌಂದರ್ಯದಲಿ ಲೀನವಾಗಿ !