ಸಂಧಿವಾತ ಅಥವಾ ಆರ್ಥ್ರೈಟಿಸ್‌ ಇರುವವರು, ವ್ಯಾಯಾಮ ಮಾಡಬಾರದೆಂದು ಅನೇಕ ವರ್ಷಗಳಿಂದ ಆಲೋಚಿಸಲಾಗಿತ್ತು. ಸಂಧಿವಾತ ಇರುವವರು, ವ್ಯಾಯಾಮವನ್ನು ಮಾಡಿದರೆ, ಕೀಲುಗಳಿಗೆ ಹಾನಿ ಉಂಟಾಗುತ್ತದೆಂದು ಭಾವಿಸಿದ್ದರು. ಆದರೆ,  ಈಗ ಸಂಧಿವಾತವನ್ನು ನಿಭಾಯಿಸಬೇಕಾದರೆ ವ್ಯಾಯಾಮ ಅತ್ಯಗತ್ಯವೆಂದು ಸಂಶೋಧನೆಗಳು ತೋರಿಸಿವೆ.

ಕ್ರಮಬದ್ಧ, ಸುಧಾರಿತ ವ್ಯಾಯಾಮವನ್ನು ಸಂಧಿವಾತ ರೋಗಿಗಳು ಮಾಡುವುದರಿಂದ ಹೆಚ್ಚು ಲಾಭಗಳಿವೆ. ವ್ಯಾಯಾಮವನ್ನು ಮಾಡುವುದರಿಂದ ಕೀಲುಗಳ ನೋವು ಮತ್ತು ಬಿಗಿತ ಕಡಿಮೆಯಾಗುತ್ತದೆ. ಅಲ್ಲದೆ, ಕೀಲುಗಳ ಸುತ್ತ ಇರುವ ಮಾಂಸಖಂಡಗಳು ಬಲಗೊಳ್ಳುತ್ತವೆ ಮತ್ತು ಬಾಗುವಿಕೆ ವೃದ್ಧಿಗೊಳ್ಳುತ್ತದೆ ಮತ್ತು ಸಹಿಷ್ಣುತೆಯು ಹೆಚ್ಚುತ್ತದೆ.

ವ್ಯಾಯಾಮದಿಂಧ ಇಡೀ ಶರೀರದ ಆರೋಗ್ಯ ಅಭಿವೃದ್ಧಿಗೊಳ್ಳುತ್ತದೆ ಮತ್ತು ದೃಢತೆಯಿಂದಾಗಿ ನಿಮಗೆ ಹೆಚ್ಚು ಶಕ್ತಿಯನ್ನು ನೀಡುತ್ತದೆ ಹಾಗೂ ಉತ್ತಮವಾಗಿ ನಿದ್ರಿಸುತ್ತೀರಿ. ಅಲ್ಲದೆ, ನಿಮ್ಮ ಶರೀರದ ತೂಕ ನಿಯಂತ್ರಣದಲ್ಲಿರುವುದಲ್ಲದೆ, ಖಿನ್ನತೆ ಅಥವಾ ಡಿಪ್ರೆಷನ್‌ ಕಡಿಮೆಯಾಗುತ್ತದೆ. ಜೊತೆಗೆ, ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ವ್ಯಾಯಾಮವನ್ನು ಮಾಡುವುದರಿಂದ ಇತರ ಆರೋಗ್ಯ ಸಮಸ್ಯೆಗಳಾದ ಟೊಳ್ಳು ಮೂಳೆರೋಗ (ಆಸ್ಟಿಯೋ ಪೋರೋಸಿಸ್‌) ಮತ್ತು ಹೃದ್ರೋಗವನ್ನು ತಡೆಗಟ್ಟಬಹುದು.

ವ್ಯಾಯಾಮವನ್ನು ಹೇಗೆ ಆರಂಭಿಸಬೇಕು?

ವ್ಯಾಯಾಮವನ್ನು ನಿಧಾನವಾಗಿ ಆರಂಭಿಸಬೇಕು ಮತ್ತು ಅದೊಂದು ಆರೋಗ್ಯ ಪೂರ್ಣ ಮನೋರಂಜನೆ ಎಂದು ಭಾವಿಸಿ, ವ್ಯಾಯಾಮದಲ್ಲಿ ತೊಡಗಿಸಿಕೊಳ್ಳಬೇಕು. ಯಾವಾಗಲೂ, ಬಾಗಿಸುವಿಕೆಯ ವ್ಯಾಯಾಮ (Flexbility exercises) ದಿಂದ ಆರಂಭಿಸುವುದು ಒಳ್ಳೆಯದು. ಮೂಲಭೂತವಾಗಿ ಬಾಗಿಸುವಿಕೆಯ ವ್ಯಾಯಾಮ, ಹಿಗ್ಗಿಸುವ (Stretching exercises) ವ್ಯಾಯಾಮವಾಗಿರುತ್ತದೆ. ಅದು ನಿಮ್ಮ ಚಲನಾಶಕ್ತಿಯನ್ನು ಅಭಿವೃದ್ಧಿಗೊಳಿಸುತ್ತದೆ. ಮತ್ತು ನಿಮ್ಮ ದೈನಂದಿನ ಚಟುವಟಿಕೆಗಳನ್ನು ಮಾಡಲು ಸಹಾಯ ಮಾಡುತ್ತದೆ. ವ್ಯಾಯಾಮವನ್ನು ವಾಕಿಂಗ್‌ ಕಾರ್ಯಕ್ರಮದಿಂದ ಅಥವಾ ಸುಧಾರಿತ ಯೋಗ ಅಥವಾ ಸರಳವಾದ ಆಟಗಳನ್ನು ಆಡುವುದರಿಂದ ಆರಂಭಿಸಬಹುದು.

ನೀವು, ಯಾವುದೇ ವ್ಯಾಯಾಮವನ್ನು ಆರಂಭಿಸುವ ಮೊದಲು, ನಿಮಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರನ್ನು ಸಂಪರ್ಕಿಸಿ, ಸೂಚನೆ ಪಡೆಯುವುದನ್ನು ಮರೆಯಬಾರದು.

ನೀವು ಮೂರು ವಿಧದ ವ್ಯಾಯಾಮಗಳನ್ನು ಮಾಡಬೇಕು.

ನಿಮಗೆ ಸಂಧಿವಾತವಿದ್ದರೆ, ನೀವು ಆರೋಗ್ಯವಾಗಿರಲು ಸಹಾಯ ಮಾಡುವುದು ವ್ಯಾಯಾಮ. ಕ್ರಮವಾದ ಸುಧಾರಿತ ಶಾರೀರಿಕ ಚಟುವಟಿಕೆಯಿಂದ ಆಯಾಸ ಕಡಿಮೆಯಾಗುತ್ತದೆ; ಮಾಂಸಖಂಡಗಳು ಮತ್ತು ಎಲುಬುಗಳು ಬಲಗೊಳ್ಳುತ್ತವೆ. ವ್ಯಾಯಾಮವು ಬಾಗಿಸುವಿಕೆಯನ್ನು ಮತ್ತು ತಾಕತ್ತನ್ನು ಹೆಚ್ಚಿಸುತ್ತದೆ. ಅಲ್ಲದೆ, ನಿಮ್ಮ ಸಾಮಾನ್ಯ ಆರೋಗ್ಯ ಚೆನ್ನಾಗಿರುವಂತೆ ಮಾಡುತ್ತದೆ. ನಿಮಗೆ ಸಂಧಿವಾತವಿದ್ದಾಗ, ಕೀಲುಗಳ ಬಾಗಿಸುವಿಕೆ ಬಹಳ ಮುಖ್ಯ. ಸುಧಾರಿತ ವ್ಯಾಯಾಮದಿಂದ ಕೀಲುಗಳನ್ನು ಬಾಗಿಸಲು ಸುಲಭವಾಗುತ್ತದೆ.

ನೀವು, ಕ್ರಮಬದ್ಧವಾಗಿ ವ್ಯಾಯಾಮವನ್ನು ಮಾಡಬೇಕು. ಆ ವ್ಯಾಯಾಮಗಳಲ್ಲಿ ಮೂರು ವಿಧವಾದ ಚಟುವಟಿಕೆಗಳು ಸೇರ್ಪಡೆಯಾಗಿರಬೇಕು. ಅವುಗಳೆಂದರೆ:

೧) ಬಾಗಿಸುವಿಕೆ (Flexibility: Stretching, range of motion) (ಹಿಗ್ಗಿಸುವಿಕೆ, ಕೀಲುಗಳನ್ನು ನಿಧಾನವಾಗಿ ಚಲಿಸುವುದು)

೨) ಬಲವರ್ಧಕ ವ್ಯಾಯಾಮ (Strengthening exercises ) ಗಳು.

೩) ಕಾರ್ಡಿಯೋವ್ಯಾಸ್ಕುಲರ್ (ಏರೋಬಿಕ್‌ ವ್ಯಾಯಾಮ ) (Cardio Vascular  (aerobic exercise) ಗಳು.

ನಿಮ್ಮ ಕೀಲುಗಳಲ್ಲಿ ನೋವಿದ್ದಾಗ, ಯಾವ ಚಟುವಟಿಕೆಯನ್ನು ಮಾಡಬೇಕೆಂಬುದನ್ನು ನಿಮ್ಮ ವೈದ್ಯರು, ಫಿಸಿಯೋಥೆರಪಿಸ್ಟ್ ರನ್ನು ಸಂಪರ್ಕಿಸಿ, ತಿಳಿದುಕೊಳ್ಳುವುದೂ ಅತ್ಯಗತ್ಯ. ಯಾವಾಗ ಕೀಲು ಬಿಸಿಯಾಗಿರುತ್ತದೊ, ನೋವು, ಉರಿ ಮತ್ತು ಊತವನ್ನು ಹೊಂದಿರುತ್ತದೋ, ಆಗ ನೀವು ವಿಶ್ರಾಂತಿಯನ್ನು ಪಡೆಯುವುದರಿಂದ, ತೊಂದರೆ ಕಡಿಮೆಯಾಗುತ್ತದೆ.

ಬಾಗಿಸುವಿಕೆಯ ವ್ಯಾಯಾಮ  (ಹಿಗ್ಗಿಸುವುದು, ಕೀಲುಗಳನ್ನು ಚಲಿಸುವುದು)ಗಳು:

ಹಿಗ್ಗಿಸುವಿಕೆಯ ವ್ಯಾಯಾಮಗಳನ್ನು ಪ್ರತಿದಿನವೂ ಮಾಡಬೇಕು. ಎಲ್ಲ ವ್ಯಾಯಾಮಗಳಿಗಿಂತ ಇವು ಬಹಳ ಮುಖ್ಯವಾದುವು. ಫ್ಲೆಕ್ಸಿಬಿಲಿಟಿ ಎಕ್ಸರ್ ಸೈಸಸ್ ಅಥವಾ ಬಾಗಿಸುವಿಕೆಯ ವ್ಯಾಯಾಮಗಳು ನಿಮ್ಮ ಕೀಲುಗಳನ್ನು ರಕ್ಷಿಸುವುದಲ್ಲದೆ, ಕೀಲಿಗೆ ಹಾನಿ ಆಗುವುದನ್ನು ಕಡಿಮೆ ಮಾಡುತ್ತವೆ. ವ್ಯಾಯಾಮವನ್ನು ಮಾಡುವುದರಿಂದ, ಶರೀರ ಬೆಚ್ಚಾಗಾಗುತ್ತದೆ ಮತ್ತು ನಿಮ್ಮ ಶರೀರ ಚಲಿಸುತ್ತದೆ ಹಾಗೂ ನಿಮ್ಮ ಶರೀರದಿಂದ ಟೆನ್ಷನ್‌ ಅನ್ನು ಬಿಡುಗಡೆಗೊಳಿಸುತ್ತದೆ.

ಬಾಗಿಸುವಿಕೆ, ಹಿಗ್ಗಿಸುವಿಕೆಯ ವ್ಯಾಯಾಮದಿಂದ, ನಿಮ್ಮ ಕೀಲುಗಳ  ಬಿಗಿತ ನಿವಾರಣೆಯಾಗುತ್ತದೆ. ಇದನ್ನು ಪ್ರತಿದಿನ ನಿರಂತರವಾಗಿ ೧೫ ನಿಮಿಷಗಳ ಕಾಲ ಮಾಡಬೇಕು.

ಬಲವರ್ಧಕ ವ್ಯಾಯಾಮಗಳು

ನಿಮಗೆ ಸಂಧಿವಾತವಿದ್ದಾಗ, ಬಲವಾದ ಮಾಂಸಖಂಡಗಳಿರುವುದು ಅಗತ್ಯ. ಏಕೆಂದರೆ, ಬಲವಾದ ಮಾಂಸಖಂಡಗಳಿಂದ, ನಿಮ್ಮ ಕೀಲುಗಳ ಮೇಲೆ ಒತ್ತಡ ಕಡಿಮೆಯಾಗುತ್ತದೆ. ಬಲವರ್ಧಕ ವ್ಯಾಯಾಮಗಳಿಂದ, ನಿಮ್ಮ ಮಾಂಸಖಂಡ (ಸ್ನಾಯು)ಗಳು ಬಲಗೊಳ್ಳುವುದಲ್ಲದೆ, ಅವು ಶಾಖವನ್ನು ಹೀರಿಕೊಂಡು, ಕೀಲುಗಳಿಗೆ ಹಾನಿ ಉಂಟಾಗುವುದನ್ನು ತಪ್ಪಿಸುತ್ತವೆ.

ಬಲವರ್ಧಕ ವ್ಯಾಯಾಮಗಳಲ್ಲಿ ಎರಡು ವಿಧಗಳಿವೆ:

ಐಸೋಮೆಟ್ರಿಕ್‌ ಮತ್ತು ಐಸೋಟೋನಿಕ್‌. ಐಸೋಮೆಟ್ರಿಕ್‌ ವ್ಯಾಯಾಮಗಳು ಸಂಧಿವಾತದವರಿಗೆ ಒಳ್ಳೆಯವು. ಏಕೆಂದರೆ, ಇವುಗಳಲ್ಲಿ ಕೀಲುಗಳನ್ನು ಚಲಿಸದೆಯೇ, ಮಾಂಸಖಂಡಗಳು ಬಿಗಿ ಮಾಡಲ್ಪಡುತ್ತವೆ. ಅಲ್ಲದೆ, ಇವುಗಳಿಂದ ಕೀಲುಗಳ ಮೇಲೆ ಉಂಟಾಗುವ ಒತ್ತಡವು ಕಡಿಮೆಯಾಗುತ್ತದೆ.

ಐಸೋಟೋನಿಕ್‌ ವ್ಯಾಯಾಮಗಳಲ್ಲಿ ಕೀಲುಗಳನ್ನು ಚಲಿಸುವುದರ ಮೂಲಕ, ಮಾಂಸಖಂಡಗಳನ್ನು ಬಲಗೊಳಿಸಲಾಗುತ್ತದೆ. ಉದಾಹರಣೆಗೆ: ಕುರ್ಚಿಯಲ್ಲಿ ಕುಳಿತು, ನಿಮ್ಮ ಮೊಣಕಾಲನ್ನು ನೇರ ಮಾಡುವುದು ಐಸೋಟೋನಿಕ್‌ ವ್ಯಾಯಾಮವಾಗಿರುತ್ತದೆ. ಈ ವ್ಯಾಯಾಮದಿಂದ, ನಿಮ್ಮ ತೊಡೆಯ ಮಾಂಸಖಂಡ ಬಲಗೊಳ್ಳುತ್ತದೆ. ಮೈ ಬೆಚ್ಚಗೆ ಆಗುವ ವ್ಯಾಯಾಮ (Warmup exercise) ಗಳನ್ನು ೧೫ ನಿಮಿಷಗಳ ಕಾಲ ಪ್ರತಿದಿನ ಮಾಡಿದ ನಂತರ, ಬಲವರ್ಧಕ ವ್ಯಾಯಾಮಗಳನ್ನು ಹತ್ತ ನಿಮಿಷ ಮಾಡಬೇಕು.

ಏರೋಬಿಕ್ವ್ಯಾಯಾಮಗಳು: (ಕಾರ್ಡಿಯೋ ವಾಸ್ಕುಲರ್ ಎಕ್ಸರ್ ಸೈಸಸ್‌) (Cardio vasuclar  (Arobic) Exercise)

ಶಾರೀರಕ ಚಟುವಟಿಕೆಯಲ್ಲಿ ದೇಹದ ಯಾವುದೇ ಸ್ನಾಯು  (ಮಾಂಸಖಂಡ)ಗಳನ್ನು ನಿರಂತರವಾದ ಲಯಬದ್ಧತೆಯಿಂದ ಚಲಿಸಿದರೆ, ಅದನ್ನು ಏರೋಬಿಕ್‌ ವ್ಯಾಯಾಮ ಎನ್ನುತ್ತಾರೆ. ಇದರಲ್ಲಿ ವಾಕಿಂಗ್‌, ಡ್ಯಾನ್ಸಿಂಗ್‌, ಸ್ವಿಮ್ಮಿಂಗ್‌ ಮತ್ತು ಬೈಸೈಕ್ಲಿಂಗ್‌ ಮೊದಲಾದುವು ಸೇರಿರುತ್ತವೆ. ನಿಮ್ಮ ಹೃದಯ, ಶ್ವಾಸಕೋಶಗಳು, ರಕ್ತನಾಳಗಳು ಮತ್ತು ಮಾಂಸಖಂಡಗಳು ಹೆಚ್ಚು ಸಾಮರ್ಥ್ಯದಿಂದ ಕಾರ್ಯನಿರ್ವಹಿಸಬೇಕೆಂಬ ಉದ್ದೇಶದಿಂದ ನೀವು, ಈ ವ್ಯಾಯಾಮಗಳನ್ನು ಮಾಡಬೇಕು.

ಏರೋಬಿಕ್‌ ವ್ಯಾಯಾಮಗಳನ್ನು ಮಾಡುವುದರಿಂದ, ಮೂಳೆಗಳು ಬಲಗೊಳ್ಳುತ್ತವೆ; ನಿದ್ರೆ ಅಭಿವೃದ್ಧಿಗೊಳ್ಳುತ್ತದೆ; ದೇಹದ ತೂಕ ನಿಯಂತ್ರಣಗೊಳ್ಳುತ್ತದೆ ಮತ್ತು ಒತ್ತಡ (ಸ್ಟ್ರೆಸ್‌), ಖಿನ್ನತೆ (ಡಿಪ್ರೆಷನ್‌) ಮತ್ತು ಆತಂಕಗಳು ಕಡಿಮೆಯಾಗುತ್ತವೆ. ಏರೋಬಿಕ್‌ ವ್ಯಾಯಾಮವನ್ನು ೧೫ ರಿಂದ ೨೦ ನಿಮಿಷಗಳ ಕಾಲ ಮಾಡಬೇಕು.