ನನ್ನ ದೇಹ; ನನ್ನ ಮನಸ್ಸಿಗೆ ಹೊಸ ಆಯಾಮ ನೀಡಿದ ಸುಧಾರಿತ ವ್ಯಾಯಾಮ

ಕಳೆದ ೧೨ ವರ್ಷಗಳಿಂದ ನಾನು ರುಮಟಾಯಿಡ್‌ ಆರ್ಥ್ರೈಟಿಸ್‌ನಿಂದ ತೊಂದರೆ ಪಡುತ್ತಿದ್ದೇನೆ. ಆದರೆ, ಸಂಧಿವಾತಕ್ಕೆ ಸಂಬಂಧಿಸಿದ ಹಲವು-ಹತ್ತು ಇಂಗ್ಲೀಷ್‌ ವೈದ್ಯಕೀಯ ಪುಸ್ತಕಗಳನ್ನು ಅಧ್ಯಯನ ಮಾಡಿದ ನಂತರ, ಸಂಧಿವಾತದಿಂದ ಉಂಟಾಗುವ ಅಂಗವೈಕಲ್ಯವನ್ನು ತಡೆಗಟ್ಟಿಕೊಳ್ಳಬೇಕಾದರೆ ಸುಧಾರಿತ ವ್ಯಾಯಾಮ ಸಹಾಯ ಮಾಡುತ್ತದೆಂದು ಅರಿತುಕೊಂಡೆನು.

ವ್ಯಾಯಾಮದ ಮಹತ್ವವನ್ನು ಅರಿತುಕೊಂಡನಂತರ ದಿನಬಿಟ್ಟು ಮಧ್ಯಾಹ್ನ ೪ ರಿಂದ ೪-೩೦ ಗಂಟೆಯವರೆಗೂ ಸುಧಾರಿತ ವ್ಯಾಯಾಮವನ್ನು ಮಾಡಲು ಆರಂಭಿಸಿದ ನಂತರ ಅಂಗವೈಕಲ್ಯದಿಂದ ತಪ್ಪಿಸಿಕೊಂಡಿದ್ದೇನೆ. ಅಲ್ಲದೆ, ನನ್ನ ಮನಸ್ಸು ಸ್ಟ್ರೈಸ್‌ (ಒತ್ತಡ) ನ ಉಪದ್ರವದಿಂದ ಮುಕ್ತವಾಗಿದೆ.

ವ್ಯಾಯಾಮದಿಂದಾಗಿ, ನಾನು ಇತರೆ ಆರೋಗ್ಯವಂತರಂತೆಯೆ ಚಟುವಟಿಕೆಯಿಂದ ಕೂಡಿರುವುದರಿಂದ ಹಾಗೂ ದೇಹ-ಮನಸ್ಸಿಗೆ ಆಯಾಸ ಉಂಟಾದಾಗ, ಅರ್ಧ ಗಂಟೆ ರಿಲ್ಯಾಕ್ಸ್‌ ಆಗುತ್ತಿರುವುದರಿಂದ, ನನ್ನ ದೇಹದ ಕೀಲುಗಳು ಕ್ರಿಯಾಶಾಲಿಗಳಾಗಿವೆ. ಅಲ್ಲದೆ, ಸಂಧಿವಾತದ ಆರಂಭಿಕ ದಿನಗಳಲ್ಲಿದ್ದ ಅತಿಯಾದ ನೋವು ಈಗ ಮಾಯವಾಗಿದೆ.

ವ್ಯಾಯಾಮ, ನನ್ನ ದೇಹ-ಮನಸ್ಸಿನಲ್ಲಿ ಹೊಸ ಆಯಾಮವನ್ನುಂಟು ಮಾಡಿದೆ. ಜೊತೆಗೆ, ಸಂಧಿವಾತದ ಆರಂಭಿಕ ವರ್ಷಗಳಲ್ಲಿದ್ದ ಭಯ-ಆತಂಕ- ನರಳಿಕೆ-ಶೇಕಡ ೮೦ ರಷ್ಟು ಕಡಿಮೆಯಾಗಿದೆ ಎಂದರೆ ಅತಿಶಯೋಕ್ತಿ ಆಗಲಾರದು.

ಸುಧಾರಿತ ವ್ಯಾಯಾಮದಿಂದಾಗಿ, ನನ್ನ ದೇಹದ ಹೊರ-ಒಳ ಅಂಗಗಳು ಹೊಸ ಶಕ್ತಿಯನ್ನು ಪಡೆದುಕೊಂಡಿವೆ; ನನ್ನನ್ನು ಹೊಸ ಮನುಷ್ಯನನ್ನಾಗಿ ಮಾಡಿದೆ.

ಬಹುಶಃ ವ್ಯಾಯಾಮದಿಂದಾಗಿ ನನ್ನ ಮಿದುಳಿನಲ್ಲಿ ಎಂಡಾರ್ಪಿನ್‌ ಎಂಬ ನರವಾಹಕ ಉತ್ಪತ್ತಿಯಾಗುವುದರಿಂದ, ನೋವನ್ನುಂಟು ಮಾಡುತ್ತಿಲ್ಲವೆಂದು ನನ್ನ ನಂಬಿಕೆ.

ನಾನು, ಸ್ವಂತ ಪರಿಶ್ರಮದಿಂದ ಕಲಿತ ಸಂಧಿವಾತಕ್ಕೆ ಸಂಬಂಧಿಸಿದ ಸುಧಾರಿತ ವ್ಯಾಯಾಮವನ್ನು ನೂರಾರು ಜನರಿಗೆ ಪ್ರಾತ್ಯಕ್ಷಿಕೆ ಮಡಿ ತೋರಿಸಿದ್ದರಿಂದ, ನನಗೆ, ಸಂಧಿವಾತದ ಸಂಕಟ ಇಲ್ಲವಾಗಿದೆ. ಅಲ್ಲದೆ, ಆರಂಭದ ದಿನಗಳಲ್ಲಿ ಸಂಧಿವಾತದ ನರಳಿಕೆಯಿಂದ ಊಟ ಸರಿಯಾಗಿ ಸೇರುತ್ತಿರಲಿಲ್ಲ. ಈಗ ಮೊದಲಿಗಿಂತಲೂ ಹೆಚ್ಚಾಗಿ ಊಟ ಮಾಡುತ್ತೇನೆ; ಹಣ್ಣು-ಹಂಪಲು ಸೇವಿಸುತ್ತಿದ್ದೇನೆ . ಪಾದರಸದಂತೆ ಓಡಾಡುತ್ತೇನೆಂದರೆ ನೀವು ನಂಬುವುದಿಲ್ಲ.

ವ್ಯಾಯಾಮವನ್ನು ದಿನಬಿಟ್ಟು ದಿನ ಮಾಡುವುದರಿಂದ, ವ್ಯಾಯಾಮದ ನಂತರ ಅರ್ಧಗಂಟೆ ವಿಶ್ರಮಿಸಿಕೊಳ್ಳುವುದರಿಂದ, ನನ್ನ ಬದುಕು ಭಾವನೆಗಳಲ್ಲಿ ಚೈತನ್ಯ ಚೇತೋಹಾರಿಯಾಗಿದೆ.

ಸಂಧಿವಾತ ಆರಂಭವಾದ ನಂತರ, ಪ್ರಾರಂಭದ ಐದಾರು ವರ್ಷ ಯಾವ ಚಟುವಟಿಕೆಯಲ್ಲೂ ತೊಡಗದೆ, ಮನೆಯಲ್ಲೆ ಮಂಚದಲ್ಲೆ ಮಲಗಿರುತ್ತಿದ್ದುದರಿಂದ, ಸ್ಟ್ರೈಸ್‌ ಹೆಚ್ಚಾಗುತ್ತಿದ್ದುದಲ್ಲದೆ, ತಲೆಯಿಂದ ಪಾದಗಳವರೆಗೂಫ ನೋವಿನ ನೃತ್ಯ ನಡೆಯುತ್ತಿತ್ತು! ಅಂದರೆ ಕತ್ತು, ಸೊಂಟ, ಭುಜಗಳು, ತೊಡೆಗಳು, ಕೈಗಳು, ಕಾಲುಗಳು, ಬೆರಳುಗಳು, ಪಾದಗಳಲ್ಲಿ ಅತಿಯಾದ ನೋವು ಇರುತ್ತಿತ್ತು. ಕೆಲವೊಮ್ಮೆ, ನನ್ನನ್ನು ಹಾಸಿಗೆಯಿಂದ ಎಬ್ಬಿಸಲು ಇಬ್ಬರು ವ್ಯಕ್ತಿಗಳು ಬೇಕಾಗುತ್ತಿತ್ತು. ಸರಾಗವಾಗಿ ನಡೆಯಲು ಆಗುತ್ತಿರಲಿಲ್ಲ. ನೆಟ್ಟಗೆ ಕೂರಲು ಆಗುತ್ತಿರಲಿಲ್ಲ. ನೆಟ್ಟಗೆ ನಿಲ್ಲಲು ಸಹ ಆಗುತ್ತಿರಲಿಲ್ಲ. ವ್ಯಾಯಾಮದ ಮಹತ್ವವನ್ನು ಅರಿತು, ಆಚರಣೆಗೆ ತಂದ ನಂತರ, ನನ್ನ ಜೀವನದಲ್ಲಿ ಪವಾಡವೇ ನಡೆದುಹೋಯಿತು. ಆರಂಭದ ವರ್ಷಗಳಲ್ಲಿ ಬಾಧೆಯ ಭಾವನೆಗಳಿಂದ ನಾನು, ಖಿನ್ನತೆಗೊಳಗಾಗಿದೆ, ಅದರಿಂದ ಹೊರಬರಲು ಮನೋವೈದ್ಯರಾದ ಡಾ. ಸಿ.ಆರ್. ಚಂದ್ರಶೇಖರ್ ರವರಿಂದ ಚಿಕಿತ್ಸೆಯನ್ನು ಸಹ ಪಡೆದುಕೊಂಡಿದ್ದೆ.

ಸಂಧಿವಾತ ಇದೆಯೆಂದು, ಪ್ರಯೋಗ ಶಾಲಾ ಪರೀಕ್ಷೆಗಳಿಂದ ಗೊತ್ತಾದ ನಂತರ, ವೈದ್ಯರು ಸ್ಪಷ್ಟಪಡಿಸಿದ ನಂತರ, ವೈದ್ಯರ ಸಲಹೆಯ ಮೇರೆಗೆ ಔಷಧಿಯನ್ನು ಸೇವಿಸುತ್ತಾ, ಸುಧಾರಿತ ವ್ಯಾಯಾಮವನ್ನು ಕ್ರಮವಾಗಿ ಮಾಡುತ್ತಿದ್ದರೆ, ಹಾಗೂ ಪ್ರತಿದಿನ ಸಮಯಕ್ಕೆ ಸರಿಯಾಗಿ ಪೌಷ್ಠಿಕ ಆಹಾರವನ್ನು ಮತ್ತು ವಿಟಮಿನ್‌ ‘ಸಿ’ ಇರುವ ಹಣ್ಣು ಹಂಪಲುಗಳನ್ನು ಸೇವಿಸುತ್ತಿದ್ದರೆ, ಸಂಧಿವಾತ, ಸಮಸ್ಯೆಯಾಗುವುದಿಲ್ಲವೆಂದು ನನ್ನ ಭಾವನೆ.

ವ್ಯಾಯಾಮದ ಜೊತೆಗೆ ಏನು ಮಾಡಬೇಕು?

ಪ್ರತಿದಿನ ಬೆಳಿಗ್ಗೆ ಹಾಸಿಗೆಯಿಂದ ಎದ್ದ ಕೂಡಲೇ ಮತ್ತು ರಾತ್ರಿ ಮಲಗುವ ಮೊದಲು ೫ ರಿಂದ ಹತ್ತು ನಿಮಿಷ ದೇವರ ಪ್ರಾರ್ಥನೆಯನ್ನು ಮಾಡುವುದರಿಂದ, ಮನಸ್ಸು ಮುದಗೊಳ್ಳುತ್ತದೆ. ೧೫ ರಿಂದ ೨೦ ನಿಮಿಷ ಧ್ಯಾನವನ್ನು ಮಾಡಿದರೆ, ದೇಹ-ಮನಸ್ಸುಗಳಲ್ಲಿ ಉದ್ವೇಗದ ಉಪಟಳವಿರುವುದಿಲ್ಲ. ಉಲ್ಲಾಸ-ಉತ್ಸಾಹ ಉಂಟಾಗುತ್ತದೆ.

ಆದರೆ, ವ್ಯಾಯಾಮವಾಗಲಿ, ವಾಕಿಂಗ್‌ ಆಗಲಿ, ಚಟುವಟಿಕೆಯಾಗಲಿ ಯಾವುದೇ ಆಗಲಿ, ನಿಯಂತ್ರಿತ ರೀತಿಯಲ್ಲಿ ನಡೆಯಬೇಕೆ ಹೊರತು, ಅತಿಯಾಗಬಾರದು. ಅತಿಯಾದರೆ, ಅಪಾಯವನ್ನು ನಾವು ಆಹ್ವಾನಿಸಿದಂತಾಗುತ್ತದೆ.

ವ್ಯಾಯಾಮವನ್ನು ಎಲ್ಲಿ ಮಾಡಬೇಕು? ಹೇಗೆ ಮಾಡಬೇಕು?

ವ್ಯಾಯಾಮವನ್ನು ಬೆಳಗಿನ ಹೊತ್ತು ಮಾಡುವ ಇಚ್ಛೆ ನಿಮಗಿದ್ದರೆ, ಬಿಸಿ ನೀರಿನಿಂದ ಸ್ನಾನವನ್ನು ಮಾಡಿ, ಲಘು ಉಪಾಹಾರವನ್ನು ಸೇವಿಸಿ, ಅರ್ಧ ಗಂಟೆ ರಿಲ್ಯಾಕ್ಸ್‌ ಆದ ನಂತರ ಮಾಡಬೇಕು. ಬಿಸಿನೀರಿನ ಸ್ನಾನವನ್ನು ಮಾಡದೆ, ಹಾಸಿಗೆಯಿಂದ ಎದ್ದ ಕೂಡಲೇ ವ್ಯಾಯಾಮವನ್ನು ಮಾಡುವುದರಿಂದ, ಇನ್ನೂ ಸಡಿಲಗೊಳ್ಳದ, ಬಿಗಿತದ ಕೀಲುಗಳಲ್ಲಿ ನೋವು ಹೆಚ್ಚು ಕಾಣಿಸಿಕೊಳ್ಳುತ್ತದೆ. ಅಲ್ಲದೆ, ವ್ಯಾಯಾಮ ಮಾಡುವ ಬಗ್ಗೆಯೇ ಜುಗುಪ್ಸೆ ಮೂಡುತ್ತದೆ. ವ್ಯಾಯಾಮವನ್ನು ಮಧ್ಯಾಹ್ನ ೪ ರಿಂದ ೫ ಗಂಟೆಯೊಳಗೆ ಮಾಡಿ, ರಿಲ್ಯಾಕ್ಸ್‌ ಆದರೆ, ತೊಡಕುಗಳು ಉಂಟಾಗುವುದಿಲ್ಲ.

೧೦ ರಿಂದ ೧೫ ನಿಮಿಷಗಳ ಕಾಲ ಮೈ ಬೆಚ್ಚಗಾಗುವ ಸರಳ ವ್ಯಾಯಾಮವನ್ನು ಮಾಡದೆ, ನೇರವಾಗಿ ಸಂಧಿವಾತಕ್ಕೆ ಸಂಬಂಧಿಸಿದ ವ್ಯಾಯಾಮಗಳನ್ನು ಮಾಡುವುದರಿಂದ, ದೇಹದ, ಕೀಲು-ಮಾಂಸಖಂಡಗಳಲ್ಲಿ ನೋವು-ನರಳಿಕೆ ಕಾಣಿಸಿಕೊಳ್ಳುತ್ತದೆ. ಇದು ನನ್ನ ಸ್ವಾನುಭವ. ಯಾವುದೇ ಕಾರಣಕ್ಕೂ ಸಂಧಿವಾತ ರೋಗಿಗಳು ನೆಲದ ಮೇಲೆ ಕೂತು ವ್ಯಾಯಾಮವನ್ನು ಮಾಡುವುದು ಸೂಕ್ತವಲ್ಲ. ಅದಕ್ಕೆ ಬದಲಾಗಿ,  ಹಾಸಿಗೆಯ ಮೇಲೆ ಅಥವಾ ಸ್ವಲ್ಪ ಎತ್ತರವಾಗಿರುವ ಜಾಗದಲ್ಲಿ ಕುಳಿತು ವ್ಯಾಯಾಮವನ್ನು ಮಾಡುವುದರಿಂದ, ಕುಳಿತುಕೊಳ್ಳಲು, ನಿಂತುಕೊಳ್ಳಲು, ಚಲಿಸಲು ಸುಲಭವಾಗುತ್ತದೆ.

ಯಾವುದೇ ಕಾರಣಕ್ಕೂ ಸುಧಾರಿತ ವ್ಯಾಯಾಮವನ್ನು ಖಾಲಿ ಹೊಟ್ಟೆಯಲ್ಲಿ ಮಾಡಬಾರದು. ಲಘು ಉಪಾಹಾರ ಸೇವಿಸದ ಅರ್ಧ ಗಂಟೆಯ ನಂತರ ವ್ಯಾಯಾಮವನ್ನು ಮಾಡಬೇಕು.

ಕೆಲವೊಂದು ವ್ಯಾಯಾಮಗಳನ್ನು ಕಬ್ಬಿಣದ ಅಥವಾ ಮರದಿಂದ ಮಾಡಲ್ಪಟ್ಟ ಕುರ್ಚಿಯಲ್ಲಿ ಕುಳಿತು ಮಾಡಬೇಕೆ ಹೊರತು, ಪ್ಲಾಸ್ಟಿಕ್‌ ಕುರ್ಚಿಯಲ್ಲಿ ಕುಳಿತು ಮಾಡುವುದರಿಂದ, ಕೆಳಗೆ ಬಿದ್ದು ಬೀಳುವ ಸಂಭವಗಳು ಹೆಚ್ಚು.

ವ್ಯಾಯಾಮವನ್ನು ಸಡಿಲವಾದ ಉಡುಪನ್ನು ಧರಿಸಿ ಮಾಡಬೇಕೆ ಹೊರತು, ಬಿಗಿಯಾದ ಉಡುಪನ್ನು ಧರಿಸಿ ಮಾಡಬಾರದು. ವ್ಯಾಯಾಮಕ್ಕೆ ಮೊದಲು ಒಂದೆರಡು ಲೋಟ ಶುದ್ಧವಾದ ನೀರನ್ನು ಕುಡಿದಿದ್ದರೆ ವ್ಯಾಯಾಮ ಮಾಡುವಾಗ ಆಯಾಸ ಉಂಟಾಗುವುದಿಲ್ಲ.