ಒಂದೇ ಔಷಧಿ ಅನೇಕ ಬ್ರಾಂಡ್‌ಗಳ ಹೆಸರಿನಲ್ಲಿ ಸಿಗುತ್ತದೆ ಎಂಬ ವಿಷಯ ಅನೇಕರಿಗೆ ತಿಳಿಯದು. ಔಷಧಿಯ ಮೂಲ ರಾಸಾಯನಿಕ ಹೆಸರನ್ನು ಜೆನೆರಿಕ್‌ ನೇಮ್‌ ಎಂದು, ಔಷಧಿಗಳನ್ನು ಉತ್ಪತ್ತಿ ಮಾಡಿ ಮಾರ್ಕೆಟ್‌ ಮಾಡುವ ಹೆಸರನ್ನು ಬ್ರಾಂಡ್‌ ನೇಮ್‌ ಎಂದು ವೈದ್ಯಕೀಯ ಪರಿಭಾಷೆಯಲ್ಲಿ ಹೇಳುತ್ತಾರೆ. ಗೊಂದಲ ಉಂಟಾಗದಿರಲಿ ಎಂದು, ಒಂದೇ ರಸಾಯನವನ್ನು ಹೊಂದಿರುವ ಎಷ್ಟು ರೀತಿಯ ಬ್ರಾಂಡ್‌ಗಳ ಹೆಸರಿನಲ್ಲಿ ಮಾರಾಟವಾಗುತ್ತವೆ ಎಂಬುದನ್ನು ನೀವು ತಿಳಿದಿರುವುದು ಅಗತ್ಯ. ಇಲ್ಲಿ ಮೂಲ ರಸಾಯನವಾದ ಪಾರಾಸೆಟಮಾಲ್‌ ಔಷಧಿಯ ಬಗ್ಗೆ ಪರಿಚಯಿಸಲಾಗಿದೆ.

ಔಷಧೀಯ ಅಂಗಡಿಗಳಲ್ಲಿ ಈ ಕೆಳಕಂಡ ಬ್ರಾಂಡ್‌ನಲ್ಲಿ ಪಾರಾಸೆಟಮಾಲ್‌ ಔಷಧಿ ಮಾರಾಟವಾಗುತ್ತದೆ.

೧) ಕ್ರೋಸಿನ್‌

೨) ಮೆಟಾಸಿನ್‌

೩) ಪಾನ್ಡಾಲ್‌

೪) ಕಾಲ್ಪಾಲ್‌

೫) ಪಾರಾಸಿನ್‌

೬) ಪೈರಿಜೆಸಿಕ್‌

೭) ರೆಕೊಮಾಲ್‌

೮) ಪಿಪ್ಟಾಲ್‌ ಡ್ರಾಪಸ್‌ (ಆಯಂಟಿ ಪ್ಯಾರೆಟಿಕ್‌)

೯) ಕ್ರೋಸಿನ್‌ ಸಿರಪ್‌

೧೦) ಮೆಟಾಸಿನ್‌ ಸಿರಪ್‌

ಪಾರಾಸೆಟಮಾಲ್ನಲ್ಲಿ ಎರಡು ಗುಣ ಧರ್ಮಗಳಿವೆ.

೧. ಆಯಂಟಿಪೈರೆಟಿಕ್‌ – ಅಂದರೆ, ಜ್ವರವನ್ನು ಇಳಿಸುತ್ತದೆ.

೨. ಅನಾಲ್‌ಜೆಸಿಕ್‌ – ಅಂದರೆ ನೋವನ್ನು ನಿವಾರಿಸುತ್ತದೆ.

ಉಪಯೋಗಗಳು:

  • ತಲೆನೋವು, ಮೈ, ಕೈ, ನೋವು, ಕೀಲು ನೋವು, ಕತ್ತು ನೋವು ಇದ್ದಾಗ ವೈದ್ಯರ ಸಲಹೆಯ ಮೇರೆಗೆ ಬಳಸಬಹುದು.
  • ಜ್ವರವಿದ್ದಾಗ, ನೆಗಡಿ-ಶೀತವಿದ್ದಾಗ ಬಳಸಬಹುದು.

ಡೋಸೆಜ್ಅಥವಾ ಪ್ರಮಾಣ

  • ಒಂದು ಪಾರಾಸೆಟಮಾಲ್‌ ಮಾತ್ರೆ ೫೦೦ ಮಿಲಿ ಗ್ರಾಂಗಳನ್ನು ಹೊಂದಿರುತ್ತದೆ.
  • ವೈದ್ಯರು ತಿಳಿಸಿದ ಪ್ರಮಾಣದಲ್ಲಿ ಸೇವಿಸಬೇಕು.
  • ಮಾತ್ರೆಯನ್ನು ಸೇವಿಸದ ನಂತರ ಜಾಸ್ತಿ ನೀರು ಕುಡಿಯಬೇಕು.

ಅಡ್ಡ ಪರಿಣಾಮಗಳು (ಸೈಡ್ಎಫೆಕ್ಟ್ಸ್‌)

ಆಸ್ಟಿರಿನ್‌ ಮಾತ್ರೆಯಂತೆ, ಪಾರಾಸೆಟ್‌ಮಾಲ್‌ ಮಾತ್ರೆ ಅಷ್ಟು ಪ್ರಮಾದವನ್ನೇನೂ ಉಂಟು ಮಾಡುವುದಿಲ್ಲ. ಕೆಲವರಲ್ಲಿ ಸ್ವಲ್ಪ ಮಟ್ಟಿಗೆ ದದ್ದುಗಳು ಏಳಬಹುದು. ಒಂದೇ ಬಾರಿ ೨೦ ಮಾತ್ರೆಗಳನ್ನು ಸೇವಿಸಿದರೆ ಲಿವರ್ ಗೆ ಹಾನಿಯುಂಟಾಗುತ್ತದೆ.

ಚಿಕ್ಕ ಮಕ್ಕಳ ಕೈಗೆ ಸಿಗದಂತೆ ಔಷಧಿಯನ್ನು ಇಡಬೇಕು. ಆಕಸ್ಮಿಕವಾಗಿ ಮಗು ಪಾರಾಸೆಟಮಾಲ್‌ ಮಾತ್ರೆಗಳನ್ನು ಹೆಚ್ಚಾಗಿ ನುಂಗಿದರೆ ಲಿವರ್ ಗೆ ಹಾನಿ ಉಂಟಾಗುವುದಲ್ಲದೆ, ವಿಷಪೂರಿತವಾಗುತ್ತದೆ.

ಎಚ್ಚರಿಕೆ:

  • ಪಾರಾಸೆಟಮಾಲ್‌ ಮಾತ್ರೆ ಜ್ವರವನ್ನು ತಾತ್ಕಾಲಿಕವಾಗಿ ಕಡಿಮೆ ಮಾಡುತ್ತದೆ. ಆದರೆ, ಜ್ವರದ ಮೂಲ ಕಾರಣವನ್ನು ನಿವಾರಿಸುವುದಿಲ್ಲ. ಆದುದರಿಂದ, ಜ್ವರದ ಮೂಲ ಕಾರಣವನ್ನು ವೈದ್ಯರನ್ನು ಕಂಡೇ ತಿಳಿದುಕೊಳ್ಳಬೇಕು.
  • ಪಾರಾಸೆಟಮಾಲ್‌ ಔಷಧಿ ಅಥವಾ ಮಾತ್ರೆಗಳನ್ನು ಏಳು ದಿನಗಳಿಗೂ ಹೆಚ್ಚು ದಿನ ಸೇವಿಸಬೇಕಾದರೆ ವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯ.