ಕಣ್ಗಳ ತೊಳೆ ಈ ಕೆಂಪಿನಲಿ
ಸುಂದರ ಸಂಧ್ಯಾರಾಗದಲಿ.

ಲೋಕದ ನಾನಾದೃಶ್ಯವ ನೋಡಿ
ಕೊಳೆಯಾಗಿರುವೀ ಕಣ್ಗಳ ಜೋಡಿ
ನಿರ್ಮಲವಾಗಲಿ, ತೊಳೆಯಿಲ್ಲಿ
ಸುಂದರ ಮಂಗಳ ರಾಗದಲಿ.

ಜಗದ ಕುಹಕಗಳ ಮುಚ್ಚುವ ತೆರದಿ
ಬಹ ಮುನ್ನವೆ ಆ ಕತ್ತಲ ಸರದಿ
ಕಣ್ಗಳ ತೊಳೆ ಈ ಕೆಂಪಿನಲಿ
ಮಂಗಳಕರವಹ ಸ್ರೋತದಲಿ.

ಕೆಂಪನು ಕತ್ತಲೆ ನುಂಗುವ ಮುನ್ನ,
ನಿರ್ಮಲ ತಾರೆಯು ಬೆಳಗುವ ಮುನ್ನ
ಕಣ್ಗಳ ತೊಳೆ ಈ ಕೆಂಪಿನಲಿ
ಸುಂದರ ಸಂಧ್ಯಾರಾಗದಲಿ.