ಬರುತ್ತವೆ ಈ ಹಾಳು ಸಂಪಾದಕರ ಪತ್ರಗಳು :
‘ಪದ್ಯ ಬೇಕು ಪದ್ಯ.’
ನಾವೇನು ಯಂತ್ರಗಳೆ ? ನೀವೇ ಹೇಳಿ
ನಮಗೆ ಬಿಡುವಿಲ್ಲ ಸದ್ಯ.

‘ಪದ್ಯ ಬೇಕು ಪದ್ಯ’-
ಕ್ಯೂ ನಿಂತು ಕಾಡುವುವು ನೂರಾರು ದನಿ :
‘ಕೊಡು ಈಗಲಾದರೂ ನಮಗೊಂದು ರೂಪ.’
ಈಗ ಬಿಡುವಿಲ್ಲ ಬೇಡಿರೋ ಎಂದು ಹೇಳಿದರೆ
ಬಿರುಗಾಳಿಯಂಥ ಕೋಪ.

ಅಲ್ಲಿರಲಿ, ಇಲ್ಲಿರಲಿ, ಎಲ್ಲೇ ಇರಲಿ,
ಇವುಗಳ ಕಾಟವೇ ಕಾಟ.
ಈಗೀಗ ಕೃಷಿಯಿಲ್ಲ, ಕಳೆ ಕಿತ್ತಿಲ್ಲ,
ಹಾಳುಬಿದ್ದಿದೆ ತೋಟ.
ಬೆಳೆದು ನಿಂತಿದೆ ಎಂತೆಂಥದೋ
ಹಾಳು ಮೂಳಿನ ಕೂಳೆ.
ಇದನೆಲ್ಲ ಅಗೆದು ತೆಗೆದು, ಯಾತವ ಹೊಡೆದು
ನೀರನು ಹಾಯಿಸುವುದೂ ಸಾಕು,
ಇಷ್ಟೆಲ್ಲ ಶ್ರಮವಹಿಸಿ ಬೆಳೆದರೂ
ಆಮೇಲೆ ಇದು ಯಾರಿಗೆ ಬೇಕು?

ಆದರೂ ಬೆನ್ನ ಬಿಡದಂತೆ ಬರುವುವು ಪತ್ರ :
‘ಪದ್ಯ ಬೇಕು ಪದ್ಯ.’
‘ಹೊರಟು ನಿಂತಿದೆ ನೋಡಿ ಸರ್ವಾಂಗ ಸುಂದರವಾಗಿ
ವಿಶೇಷ ಸಂಚಿಕೆ.
ಒಂದು ಪುಟ ಹಾತೊರೆದು ನಿಂತಿದೆ ನಿಮ್ಮ ಪದ್ಯಕ್ಕೆ.’
ಇದು ಇವರ ಹೊಂಚಿಕೆ.

ಸ್ವಾಮಿ ಸಂಪಾದಕರೆ
ನಮಗೊ ನೂರಾರು ತಾಪತ್ರಯ ;
ಇಪ್ಪತ್ತನೆಯ ಶತಮಾನ, ಹಾಳು
ವಿಪರೀತ ಗಲಭೆ, ಜೊತೆಗೆ ಪುರುಸೊತ್ತಿಲ್ಲ.
(ಇಷ್ಟರಮೇಲೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಿರುವ ವಿಷಯವೂ
ನಿಮಗೆ ತಿಳಿಯದೆ ಇಲ್ಲ.)

ಆದರೂ ಬರೆಯದೆಯೆ ವಿಧಿಯಿಲ್ಲ.
ಇಗೋ ತೆಗೆದುಕೊಳ್ಳಿ ಈ ಕೃತಿಯ.
ಮರೆಯದೆಯೆ ಕಳುಹಿಸುತ್ತೀರೋ ಹೇಗೆ
ಕಡೆಗೊಂದು ಉಚಿತ ಪ್ರತಿಯ ?