ನಮ್ಮ ಸಮಿತಿ ಪ್ರಕಟಿಸಿದ  ‘ಬಿಂಬ-ಪ್ರತಿಬಿಂಬ’ ಗ್ರಂಥದಲ್ಲಿ ಈ ಕಥೆಯ ಒಂದು ಉತ್ತಮ ಪಾಠವೂ ಆ ಕುರಿತ ನನ್ನ ವಿವೇಚನೆಯೂ ಬಂದಿವೆ. ಅಲ್ಲಿ ಅವಳ ಹೆಸರು ಹೊನ್ನಮ್ಮ.

ಇಲ್ಲಿ ನನಾಗಿ ಪಟಗಾರರ ಪಾಠವು ತೀರಾ ಸಂಕ್ಷಿಪ್ತವಾಗಿರುವುದರಿಂದ ಕೆಲವು ಸ್ವಾರಸ್ಯವಾದ ಸಂದರ್ಭ (ಆಶಯ) ಗಳು ಕಾಣುವುದಿಲ್ಲ. ಅಷ್ಟು ಮಟ್ಟಿಗೆ ಈ ಪಾಠದ ಸ್ವಾರಸ್ಯ ಕಡಿಮೆಯಾಗಿದೆ.

ಈ ಪಾಠದಲ್ಲಿ ಗೆಜ್ಜೆ ಕಾಲ ಮೊಮ್ಮಗನು ಕುಣಿಯುತ್ತಲೇ ‘ಅಜ್ಜಾ ಕದ ತೆಗೆಯೋ’, ಎಂದು ಹೇಳುವುದು ಬೇರೆ ಪಾಠಗಳಲ್ಲಿಲ್ಲ. ಕೊನೆಯಲ್ಲಿ ಅಪ್ಪನು ಮಗಳಿರುವ ಲೋಕಕ್ಕೆ ಹೋಗಿ ನಾಲ್ಕುದಿನ ಉಳಿದಿದ್ದು, ಕಳಿಸುವಾಗ ಅಳಿಯನು ಹುಸಿನೊಲನ್ನು ಬಿಟ್ಟು ಅರ್ಧದಾರಿಯಲ್ಲಿ ಅದು ತುಂಡಾಗಿ ಬಿದ್ದು ಅವನು ಸತ್ತೇ ಹೋದನು. ಚಿಕ್ಕಂದಿನಲ್ಲಿ ನಾನು ಕತೆ ಹೇಳಿದ್ದಾಗ ಇದೆ ರೀತಿಯ ಕೊನೆಯಲ್ಲಿ ಅಪ್ಪನು ಹುಸಿನೂಲಲ್ಲಿ ಬಂದು ಬಿದ್ದು ಸತ್ತುದನ್ನು ನಿರೂಪಕರು ಹೇಳಿದ್ದರು. ಅಪ್ಪನ ತಪ್ಪು ಇದರಲ್ಲಿದ್ದರೂ ಶಿಕ್ಷೆಯು ಅತಿಯಾಯಿತು. ಅಪ್ಪನಿಗೆ ಅಳಿಯನು ಹೀಗೆ ಶಿಕ್ಷೆ ಕೊಟ್ಟುದು ಕೇಳುಗರಿಗೆ ಚಮತ್ಕಾರವಾದ ಆಶಯವೆಂದು ಭಾವನೆಯಿದ್ದಂತಿದೆ ನಿರೂಪಕರಿಗೆ.

ಗೊಂಡೆ ಹೂ ‘‘‘ಚಂಡು ಹೂ’’’ ಗಿಡ ಎರಡು ತರ ಹೂ ಬಿಡುತ್ತವೆ. ಒಂದು ಅಗಲವಾಗಿ ಹೆಚ್ಚು ಪಕಳೆ ಹೊಂದಿ ಸುಂದರವಾಗಿರುವ ರೀತಿಯದು; ಇನ್ನೊಂದು ಸೀರಾಗಿ ಸ್ವಲ್ಪ ಉದ್ದವಾಗಿ ಬೂರು ಹೂ ಬಿಡುವದು. ಕಥೆಯ ಪ್ರಾರಂಭದಲ್ಲಿ ಅಣ್ಣ ನೆಟ್ಟ ಗಿಡದ ಹೂಗಳನ್ನೆ ಕೊಯ್ದು ಮುಡಿಯುತ್ತಾಳೆ ಎಂದಿದೆ. ಅವಳು ನೆಟ್ಟಿದ್ದ ಗಿಡ ಬೂರುಗೊಂಡೆ ಹೂಗಿಡ ಇದೂ ನಾನು ಕೇಳಿದ್ದ ಪಾಠದಲ್ಲಿ ಕೊಟ್ಟ ಕಾರಣ ಆಗಿದೆ.

“‘ಕೊತಗಾಲ ಸಾಯ್ಬ’” ಕಥೆಯ ಬೇರೆ ಕಥೆಗಳ ಹೋಲಿಕೆಯುಳ್ಳದಾಗಿದ್ದರೂ ತನ್ನ ವೈಶಿಷ್ಟ್ಯ ಪೂರ್ಣವಾದ ಆಶಯಗಳಿಂದ ಒಳ್ಳೇ ಕಲಾತ್ಮಕವಾಗಿ ಬೆಳೆದಿದೆ. ಇದು ಹೆಣ್ಣಿನ ಸಾಹಸದ ಕುರಿತು ಪ್ರಚಾರದಲ್ಲಿರುವ ಕಥೆಗಳಲ್ಲಿ ಒಂದು, ಜನಪದ ಕಥೆಯ ಆಧಾರದಿಂದ ಗುಬ್ಬಿ ಕಂಪನಿಯವರು ‘ಸದಾರಮೆ’ ಎಂಬ ನಾಟಕವನ್ನು ಬರೆಯಿಸಿ ಅದನ್ನು ಪ್ರಯೋಗದಲ್ಲಿ ತಂದು ಅತಿಶಯ ಜನಪ್ರಿಯತೆ ಅದಕ್ಕೆ ಲಭಿಸಿದ್ದಿತು. ಕಥೆಯ ಹಲವು ಪಾಠಾಂತರ ರೂಪಗಳು ದೊರೆಯುತ್ತಿದ್ದು ಜನಪದ ಕಥೆಗಳು ಹೇಗೋ ಪ್ರಚಾರ ಹೊಂದಿ ಬೇರೆ ಬೇರೆ ರೂಪ ಪಡೆಯುತ್ತವೆ.

ಇಲ್ಲಿ ನಾಯಕಿಯೇ ಕಥೆಯ ಕೇಂದ್ರವ್ಯಕ್ತಿ. ಅವಳು ಹುಟ್ಟನಿಂದಲೇ ಅತಿಮಾನುಷ ಶಕ್ತಿಯನ್ನು ಪಡೆದವಳು. ರಾಜಕುಮಾರನ ಭೇಟಿಯು ದೊರೆತಂದಿನಿಂದ ರಾಜಕುಮಾರಿಯ ಬುದ್ದಿಮತ್ತೆ, ಕೆಚ್ಚೆದೆ, ಬಹು ಸೊಗಸಾಗಿ ವ್ಯಕ್ತವಾಗಿದೆ. ಅವಳು ಒಳ್ಳೇ ಮನೋಬಲವುಳ್ಳ ಧೀರ ಮಹಿಳೆ. ‘ಕನ್ಯಾ ವರಯತೇ ರೂಪಂ’ ಕನ್ಯೆಯು ರೂಪವನ್ನು (ರೂಪವಂತನನ್ನು) ಆಯ್ದುಕೊಳ್ಳುತ್ತಾಳೆ. ಗಂಡು ವೇಷ ಧರಿಸಿದ ರಾಜಕುಮಾರಿ ತನ್ನನ್ನು ಅನುಸರಿಸಿದ ಸಂದರ್ಭದಲ್ಲಿ ಈತ ತನ್ನನ್ನು ವಧಿಸಲು ಬಂದವನೆಂದು ಹೆದರಿ ಓಡುವ ಹಾಗೂ ಅವಳ ತಾನು ನಿನ್ನನ್ನು ಮದುವೆಯಾಗುವ ಹುಡುಗಿಯೇ ಎಂದರೂ ನಂಬದೆ ಅವನಾಡುವ ಎಚ್ಚರಿಕೆಯ ಮಾತು ಮಾಡುವ ಹಂಚಿಕೆಯೂ ಸಹನವಾಗಿದ್ದು ರಂಜನೆಯನ್ನುಂಟು ಮಾಡುತ್ತವೆ.

ಕಳ್ಳರಿಂದ ತಪ್ಪಿಸಿಕೊಳ್ಳಲು ರಾಜಕುಮಾರಿ ಮಾಡಿದ ಸಾಹಸ ನಮ್ಮ ‘ಸರದಾರದ ಪರಾಜಯ’ ನಮ್ಮ ಜನಪದ ಕಥೆಗಳು (ನೆನಪನ್ನು) ತರುತ್ತವೆ. ಕಳ್ಳನು ಕೊಂಡ ತನ್ನ ಪುರುಷನನ್ನು ಬದುಕಿಸಿಕೊಳ್ಳಲು ಕಾಳಿಕಾ ದೇವಿಯ ಮೊರೆಹೋಗುವುದು ಇಂಥ ಕಥೆಯಲ್ಲಿ ಸಹಜವಾದರೂ ಅದರಂತೆ ಮಾಟಗಾತಿ ಮುದುಕಿ ಅವನನ್ನು ಕುರಿಯಾಗಿ ಪರಿವರ್ತಿಸಿದುದೂ ಕಥೆಯ ದುರ್ಬಲ ಆಶಯಗಳು. ಆದರೆ ಕುರಿ (ಕೋಳಿ) ಜತೆಗೆ ಲಡಾಮಿ ಮಾಡಿಸಿ ಗಂಡನನ್ನು ಪುನಃ ಮನುಷ್ಯ ರೂಪಕ್ಕೆ ತರುವಂತೆ ಉಪಾಯ ಯೋಜಿಸಿದ್ದ, ಬಹಳ ಒಳ್ಳೇ ಕಥನ ಕೌಶಲದ ದ್ಯೋತಕವಾಗಿದೆ.

‘‘‘ಹೆಣ್ಣೋ ಗಂಡೋ?’’ ’ಎಂಬ ಪರೀಕ್ಷೆ  ಮಾಡುವ ಹಲವು ಆಶಯಗಳಲ್ಲಿ ತೆಂಗಿನ ಮರ ಹತ್ತಿ ಕಾಯಿ ಗೊಂಚಲು ಇಳಿಸಿ ತರುವುದೂ ಹೊಳೆಯನ್ನು ಈಸಿ ಹೋಗುವ ಸ್ಪರ್ಧೆಯೂ ಹೊಸ ಆಶಯಗಳು ಮಾತ್ರ ಹಾಡಿಸುವ ಪರೀಕ್ಷೆ ಬೇರೆ ಕಥೆಗಳಲ್ಲೂ ಇದೆ. ನಿರೂಪಕರು ಸೊಗಸಾಗಿ ಕಥೆಯನ್ನು ಹೇಳಿದ್ದಾರೆ.

‘‘‘ಪರೋಪಕಾರಕ್ಕೆ ಪ್ರತ್ಯುಪಕಾರ’’’ ಕಥೆಯಲ್ಲಿ ಹಕ್ಕಿಯ ತಲೆ ತಿಂದವ ರಾಜನಾಗುವುದು ಹೊಸ ಆಶಯವು. ದೇಹ ತಿಂದವನ ಹೊಟ್ಟೆಯಲ್ಲಿ ವಜ್ರ ಬೆಳೆಯುತ್ತದೆ ಎಂಬುದು ಸ್ವಲ್ಪ ವಿಶಿಷ್ಟವಾದರೂ ನಿರೂಪಕಿ ಮುಂದೆ ಅಜಾಗರೂಕತೆಯಿಂದ ಚಿನ್ನವನ್ನು ಆತ ಕಾರುತ್ತಾನೆ ಎಂದುದು ತಪ್ಪು.

ಹಡಗು ಚಲಿಸಿದಾಗಲು ಬಲಿ ಕೊಡಬೇಕು ಎಂಬುದೂ ಬೇರೆ ಕಡೆಗಳಲ್ಲಿ ಉಂಟು. ಇಲ್ಲಿ ಮುಖ್ಯ ವಿಶಿಷ್ಟ ಆಶಯವು ತಮ್ಮನು ರಾಜಕಿಮಾರಿಯ ಮದುವೆಯ ಪಣದ ರಹಸ್ಯ ಬಿಡಿಸಿದುದು. ಈ ರಹಸ್ಯವು ಇವನಿಗೆ ಹೇಗೆ ತಿಳಿಯಿತು ಎಂಬುದು ಇಲ್ಲಿ ಸೂಚಿತವಾಗದುದು ಒಂದು ಲೋಪ. ಜೈನ ಕಥಾ ಸಾಹಿತ್ಯದ ಪ್ರಭಾವವು ನಮ್ಮ ಜೋಗಿಯರು ಹೇಳುವ ಕಥೆಗಳ ಮೇಲೆ ಆಗಿರುವಂತೆಯೇ ನಮ್ಮ ಜಿಲ್ಲೆಯ ಜನಪದ ಕಥೆಗಳ ಮೇಲೆಯೂ ಆಗಿರುತ್ತದೆ.

‘‘‘ನೊಂದವರು ಶಾಪ ಹಾಕಿದರು’’’ ಇದೊಂದು ನೀತಿಕಥೆಯೆಂದು ಹೇಳಬಹುದಾದ ಈ ಶಾಪಾನುಗ್ರಹ ಶಕ್ತಿಯುಳ್ಳ ಅತಿಮಾನುಷ ವ್ಯಕ್ತಿಗಳ ಕಥೆಯೆಂದೂ ಹೇಳುವಂತಿದೆ. ಸೊಸೆ ಕತ್ತೆಯಂತೆ ಎಂದು ಯಾತ್ರಿಕರು ಹೇಳಿದ ಮೇಲೆ ಅವಳು ಕತ್ತೆಯೇ ಆದುದು ಮಕ್ಕಳಿಗೆ ಮನರಂಜನೆಗಾಗಿ ಹೇಳಿದಂತೆ ಕಾಣುತ್ತದೆ.

‘‘‘ಶಾಪ-ಹುರಿಶಾಪ’’’ ಕಥೆಯು ಆದ್ರೀಶ ಕವಿಯ ‘‘‘ಪ್ರೌಢರಾಯನ ಕಾವ್ಯ’’’ ಗ್ರಂಥದ ಅನಲಾಯಿಯ ಕಥೆಯನ್ನು ನೆನಪಿಗೆ ತರುವಂತಿದೆ. ಅನಲಾಯಿಯ ಗಂಡು ಕುಷ್ಠರೋಗಿ, ಹೆಳವ; ಪತಿವ್ರತೆ ಅನಲಾಯಿ ಅವನ ಅಭೀಷ್ಠ ಸಲ್ಲಿಸಲು ವೇಶ್ಯೆಯ ಸಹವಾಸ ಮಾಡಲು ಹೊತ್ತುಕೊಂಡು ಹೋದಳು, ಇಲ್ಲಿಯೂ ಶಾಪಹಾಕಿದ ಮುನಿಯ ಮಾತನ್ನು ಸುಳ್ಳು ಮಾಡಲು ಸೂರ್ಯನು ಮೂಡದಂತೆ ಆ ಪತಿವ್ರತೆಯು ನಿಲ್ಲಿಸುತ್ತಾಳೆ. ಇದೊಂದು ಪುರಾಣ ಕಥೆಯಂದು ನಿರೂಪಕಿಯು ತಿಳಿಸಿದ್ದಾಳೆ.

‘‘‘ಪತಿವ್ರತೆ’’’ ಕಥೆಯು ಅತಿಮಾನುಷ ಸ್ತ್ರೀಯರಾದ ಸರಸ್ವತಿ, ಲಕ್ಷ್ಮಿ, ಪಾರ್ವತಿಯರು ಬರುವುದನ್ನು ದೇವತೆಗಳೆಂದು ಗಣಿಸಿದೆ. ಮನುಷ್ಯ ಸ್ತ್ರೀಯರೆಂದೇ ಬಗೆದರೆ ಇದೊಂದು ವಾಸ್ತವಿಕ ಕಥೆ ಎಂದು ಹೇಳಬಹುದು. ಇಲ್ಲಿ ದ್ರೌಪದಿಯೂ ಸೀತೆಯಂತೆ ಅಲೌಕಿಕ ಸ್ತ್ರೀಯೇ. ಅವಳು ಶಕ್ತಿ ದೇವತೆ ಮತ್ತು ಯಾಜ್ಞಸೇನಿ ಯಜ್ಞದಲ್ಲಿ ಹುಟ್ಟಿದವಳೆಂಬ ಕಾರಣದಿಂದಲೂ ಅಲೌಕಿಕ ಸ್ತ್ರೀ ಅವಳು.

‘‘‘ಪತಿವ್ರತೆ’’’ ಕಥೆಯಲ್ಲಿ ನಮ್ಮ ಹೊಲಿನಗದ್ದೆ ಊರಿನ ಗುಡ್ಡಿ ಕೊಪ್ಪದ ಹೆಣ್ಣು ಎಲ್ಲರಿಗಿಂತ ಪತಿವ್ರತೆ ಎಂದು ಕಥೆ ಕಟ್ಟಿದವರು ಯಾರಾದರೂ ನನಗೆ ಸಂತೋಷಕರ, ಒಂದೆಂದರೆ ಗೌರಮ್ಮ ಗಾಮೊಕ್ಕಲ ಜಾತಿ ಹೆಣ್ಣು ನಿರೂಪಕರ ಜಾತಿಯವಳೇ; ಇಲ್ಲಿ ನಿರೂಪಣೆಯಲ್ಲಿ ಅಸಾಧಾರಣ ಕೌಶಲ್ಯ ಕಾಣುತ್ತದೆ. ಈ ಪುರಾಣ ದೇವತೆಗಳನ್ನು ವಿಮಾರ್ಶೆಯ ಓರೆಗಲ್ಲಿಗೆ ಹಚ್ಚಿ ತಿಕ್ಕಿ ಅವರ ದೌರ್ಬಲ್ಯಗಳನ್ನು ಸ್ವಾರಸ್ಯವಾಗಿ ತಿಳಿಸಲಾಗಿದೆ. ಮತ್ತು ಈಗಿನ ಸ್ತ್ರೀ ಸ್ವಾತಂತ್ಯ್ರ ಪ್ರತಿಪಾದಕಿಯರು ಈ ಪಾತಿವ್ರತ್ಯದ ಸೇವಾ ಮೌಲ್ಯವನ್ನು ಒಪ್ಪದಿರಬಹುದಾದರೂ ತುಂಬಾ ಸ್ವಾರಸ್ಯವಾಗಿ ಗೌರಮ್ಮನ ಪತಿ ಸೇವೆಯನ್ನು ಉದಾಹರಣೆ ನೀಡಿ ತಿಳಿಸಲಾಗಿದೆ.

“‘ನಕ್ಕರೆ ಮಲ್ಲಿಗೆ ಹೂ, ಅತ್ತರೆ ಮುತ್ತು ಉದುರುತ್ತದೆ’” ಇದರ ನಾಯಕಿಯು ದೇವಲೋಕದ ಹೆಣ್ಣು ಎಂದು ನಿರೂಪಕರು ಹೇಳಿದ್ದಾರೆ. ಬಿಳಿಯ ಬೆಳ್ಳಿಯಂತೆ ತಳತಳಿಸುವ ಹಲ್ಲುಗಳುಳ್ಳವರು ನಕ್ಕರೆ ಮಲ್ಲಿಗೆ ಹೂ ಉದುರಿದಂತೆ ಕಾಣಬಹುದು. ಆದರೆ ಕಥೆಯಲ್ಲಿ ಅಸಾಧ್ಯ ಘಟನೆ ಸಂಭವಿಸುವುದು ಕಲ್ಪನಾರಮ್ಯ.

ಮಹಾಶ್ವೇತೆಯ ಕಣ್ಣೀರು ಅವಳ ಬಿಳಿ ಮೈ ಬಣ್ಣದ ಪ್ರತಿಫಲನದಿಂದ ಮುತ್ತಿನ ಹಾಗೆ ಕಾಣಬಹುದಾಗಿತ್ತು. ಎಂಬುದು ಬಾಣ ಕಾದಂಬರಿಯಲ್ಲಿ ಬಂದುದು ಇಲ್ಲಿ ನೆನಪಿಗೆ ಬರುತ್ತದೆ.

ನಿರೂಪಕ ಚಮತ್ಕಾರದಿಂದ ಒಮ್ಮೆ ಮಾಸ್ತರ ಹೊಡೆದಾಗ ಹುಡುಗಿ ನಕ್ಕು ಮಲ್ಲಿಗೆ ಉದುರಿತು. ಮತ್ತು (ಸಿಟ್ಟಿನಿಂದ ಇರಬೇಕು) ಹೊಡೆದಾಗ ಕಣ್ಣೀರ ಸಂಗಡ ಮುತ್ತು ಸುರಿಯಿತು ಎಂದು ತಿಳಿಸಿದ್ದಾನೆ.

ರಾಜಕುಮಾರನಿಗೆ ಇಂಥ ಹುಡುಗಿಯೇ ತನ್ನ ಮಡದಿಯಾಗಬೇಕು ಎಂದು ಯಾಕೆ ಆಸೆಯಾಯಿತೋ! ಸ್ವಪ್ನದಲ್ಲಿ ಅಂಥವಳನ್ನು ಅವನು ನೋಡಿದ್ದನೇನೋ ಎಂದು ನಿರೂಪಕರು ಹೇಳಲಿಲ್ಲ.

ಈ ಕಥೆಯಲ್ಲಿ ಕಂಚಿನ ಭವನದ ಆಶಯವು ಅತಿ ಶ್ರೇಷ್ಠ ಕಲ್ಪನೆಯ ಆಶಯವಾಗಿದೆ. ಅದು ತುಂಬುವಷ್ಟು ಹಣ ತುಂಬಲು ಯಾಕೆ ಸಾಧ್ಯವಾಗಲಿಲ್ಲ ಎಂದರೆ ಅದು ರಾಕ್ಷಸಿಯ ಮಾಯಾ ರೂಪವೇ ಆಗಿತ್ತು. ಮುದುಕಿಯಿಂದ ರಹಸ್ಯ ಮತ್ತು ಉಪಾಯ ಎರಡೂ ನಾಯಕನಿಗೆ ಸಿಕ್ಕವು. ಆತ ರಾಕ್ಷಸಿಯ ವಧೆ ಮಾಡಿದ್ದು ಸಾಹಸವೇ ಸರಿ.

ಆಕೆಯು ಗಂಟನ ಬದಲು ಮುದಿ ಕಳ್ಳನ ಸಂಗಡ ಅರಿಯದೆ ಹೋದ ಸಂದರ್ಭದಲ್ಲಿ ಮುದಿಕಳ್ಳ ಎಂದು ಆಶಯದಲ್ಲಿ ವಿಶಿಷ್ಟತೆ ತಂದುದು ಮತ್ತು ಆಸ ಅವಳ ಮಗ್ಗಲಿಗೆ ರಾತ್ರಿ ಹೋದುದು ತುಂಬಾ ಸ್ವಾರಸ್ಯ ಹೆಚ್ಚಲು ಕಾರಣವಗುತ್ತದೆ. ಮುಂದೆ ಮೂವರು ಕಳ್ಳರನ್ನು ವಂಚಿಸಲು ದೂರಬಾಣ ಪ್ರಯೋಗ ಮಾಡಿ ತಂದವನನ್ನು ಪಗ್ನವಾಗುವೆ ಎಂದ ಆಶಯ ತೀರ ಹೊಸದಲ್ಲ. ಬಂಡಿ ಬಕಾಸುರನೊಡನೆ ಹೋರಾಟದ ಬಣ್ಣನೆಯೂ ಸ್ವಾರಸ್ಯವಾಗಿದೆ. ಮುಂದೆ ಪುರುಷ ವೇಷದಲ್ಲಿದ್ದರೂ ಹೆಣ್ಣೇ ಎಂದು ಪ್ರಧಾನಿ ಹೇಳಿ ಪರೀಕ್ಷೆ ಮಾಡುವಲ್ಲಿ ಮಾತ್ರ ಹಾರಿಸುವುದು ಇಲ್ಲೂ ಇದೆ. ನೆಲ್ಲಿಕಾಯಿ ರಾಶಿಯ ಮೇಲೆ ನಡೆವ ಪರೀಕ್ಷೆ ಹೊಸದು.

ಮುಂದೆ ತನ್ನಂತೆ ಗೊಂಬೆ ಮಾಡಿಸಿ ಗಂಡ ಮತ್ತು ಇತರರ ಅನಿಸಿಕೆ ಪರೀಕ್ಷಿಸುವುದು ಇಂಥ ಕಥೆಯ ಕೊನೆಗೆ ಸಾಮಾನ್ಯವಾದುದು. ಒಳ್ಳೇ ನಿರೂಪಣೆಯ ಕಥೆ ಇದೆ.

“ಸ್ವಪ್ನ ಫಲ” ರಾಜನು ಸ್ವಪ್ನದಲ್ಲಿ ಅಪೂರ್ವ ವಸ್ತುವನ್ನುಕ ಡು ಅದನ್ನು ತಂದು ಹೊಡುವವರಿಗೆ ಹೆಚ್ಚಿನ ಪ್ರತಿಫಲ ನೀಡುವ ಇಚ್ಛೆಯನ್ನು ವ್ಯಕ್ತಪಡಿಸುತ್ತಾನೆ. ಈ ಸಾಹಸಕ್ಕಾಗಿ ಹೊರಟು ಕುಮಾರನೊ ಕುಮಾರಿಯೊ ಪ್ರಯತ್ನ ಪಡುವ ಯಾತ್ರೆಗಳು ಬಹು ಜನಪ್ತಿಯವಾಗಿರುವಂತೆ ಕಾಣುತ್ತವೆ. ಇಂಥ ವಸ್ತುಗಳ ಕುರಿತು ಹಲವಾರು ಕಥೆಗಳು ಲಭ್ಯವಾಗುತ್ತವೆ. ರಕ್ತದ ಕೆರೆಯೊಳಗೆ ವಜ್ರದ ಕಂಬ ಮುತ್ತಿನ ಹಣ್ಣ ಸ್ವಪ್ನ ಫಲ. “ರತ್ನ ಕಟ್ಟೆ ಮುತ್ತಿನ ಜಲ್ಲಿ ನವರತ್ನದ ಹರಳು, ಇವೇ ಅಲ್ಲದೆ ಸ್ವಲ್ಪ ಮಾತ್ರ ತಕ್ಕೊಂಡು ಹೊಸದಲ್ಲವೆಂದು ನಾನು ಬರೆದುಕೊಳ್ಳದೆ ಬಿಟ್ಟ ಪಾಠಗಳು ಹಲವು.

ಈ ಸಂಗ್ರಹದಲ್ಲಿ ತೆಗೆದುಕೊಂಡಿರುವ ಎರಡು ಕಥೆಗಳು ‘ರತ್ನ ಜಲ್ಲಿ ಮುತ್ತಿನ ಕಟ್ಟಿ ಚಿನ್ನದ ಗಿಡ’ ಮತ್ತು ‘ರತ್ನ ಕಟ್ಟೆ ಮುತ್ತಿನ ಜಲ್ಲಿ ನವರತ್ನದ ಕೋಳಿ’ ಎಲ್ಲಾ ಇಂಥ ಕಥೆಗಳಲ್ಲಿ ದುಸ್ಸಾಧ್ಯವಾದ ಅಸಾಧ್ಯವಾದ ವಸ್ತು ತರುವುದು ಇಲ್ಲವೆ ಲೋಕದಲ್ಲಿ ಎಲ್ಲಿಯೂ ಇರದ ವಸ್ತುಗಳನ್ನು ಲೋಕದ ತುದಿಯಲ್ಲಿ, ಆಕಾಶ, ಪಾತಾಳಗಳಲ್ಲಿ ಸಹಾ ತಿರುಗಿ ತರುವ ಆಶಯಗಳನ್ನು ನೋಡಬಹುದು. ಸುಲಭವಾಗಿ ಎಲ್ಲಾ ಕಡೆ ದೊರೆವ ವಸ್ತು, ಮಾಡುದ ಕಾರ್ಯಗಳಿಗಿಂತ ಇಂಥವುಗಳ ಕುರಿತಾಗಿಯೇ ಜನಮನ ಸ್ಪಂದಿಸುತ್ತದೆ ಎಂದು ತಿಳಿವಂತಿದೆ. ಹೀಗೆಂದ ಮಾತ್ರಕ್ಕೆ ವೈಜ್ಞಾಜಿಕವಾದ ಅದ್ಭುತ ಸಾಧನೆಗಳನ್ನು ಜನರು ಅಲಕ್ಷಿಸುತ್ತಾರೆ ಎಂದು ಅರ್ತ ಮಾಡಬೇಕಿಲ್ಲ. ಅತೀಂದ್ರಿಯ ಶಕ್ತಿಗಳ ಕುರಿತಾಗಿ ಜನರಲ್ಲಿರುವ ಕುತೂಹಲವನ್ನು ಇಂಥ ಜಾನಪದ ಕಥೆಗಳು ಕೆಣಕುತ್ತವೆ. ಇಂಥ ಕಥೆಗಳನ್ನು ಇಂದು ನಂಬದಿದ್ದರೂ ಮಾನವನ ಆರ್ಪೇಯ, ಪರಂಪರಾಗತನಾಗಿ ಬಂದ ನಂಬಿಕೆಯ ವಿನ್ಯಾಸಗಳ ಅಘಟಿತ ಘಟನೆಗಳ ಕಾಲ್ಪನಿಕ ಜಗತ್ತಿನ ಮಾಟ ಆಟಗಳಿಂದ ಮಾನವ ಮನಸ್ಸಿಗೆ ಆನಂದ ದೊರೆಯುವಂತೆ ಕಾಣುತ್ತದೆ. ಆಗಾಧ ಪರಿಶ್ರಮಗಳಿಂದ ಸಂಪತ್ತಿನಿಂದ ಈ ಸ್ವಪ್ನ ಫಲಗಳು ಸಾಧ್ಯವಾಗುವಂತೆ ಸ್ವಪ್ನಗಳಿಂದ ಪ್ರೇರಣೆ ಪಡೆವಂತೆ ಕಥಾಲೋಕದಲ್ಲಿ ಸಾಧ್ಯತೆ ಪಡೆದು ಮನಸ್ಸಿಗೆ ತೃಪ್ತಿ ನೀಡುತ್ತವೆ.

ಸಾಮಾನ್ಯವಾಗಿ ಕಲ್ಲು ಹರಳು ಮಂತ್ರಿಸಿ ಮುನಿ ಕೊಟ್ಟ ಮೇಲೆ ಕಥಾ ನಾಯಕನು ಅವುಗಳ ಸಹಾಯದಿಂದ ಸ್ವಪ್ನ ಫಲ ತರುವಾಗ ಮೂವರು (ನಾಲ್ವರು, ಐವರಾದರೂ) ಹೆಂಗಸರನ್ನು ಕಡಿದಾಗ ಈ ವಸ್ತುಗಳಾಗುತ್ತವೆ ಎಂದು ತೋರಿಸುವಲ್ಲಿ ಕಥೆಗಾರನು ಇಂದ್ರಜಾಲವನ್ನೇ ಪ್ರದರ್ಶಿಸುತ್ತಾನೆ. ಸ್ವಪ್ನ ಫಲ ವಸ್ತು ಕಥೆಗಳಲ್ಲಿ ಮಾತ್ರವಲ್ಲ, ಇತರ ಬಹಳ ಜನಪದ ಕಥೆಗಳಲ್ಲಿ ಅತೀಂದ್ರಿಯ ವ್ಯಕ್ತಿ, ವಸ್ತು, ಘಟನೆಗಳನ್ನು ಎದುರುಗೊಳ್ಳಬಹುದು.

ಅತಿಮಾನುಷ ಶಕ್ತಿಗಳಿಂದ ಆಗುವ ಸಹಾಯ ಈ ಸಂಗ್ರಹದಲ್ಲಿ ಸೇರಿಸಿದ ‘ರತ್ನಜ ಲ್ಲಿ, ಮುತ್ತಿನ ಕಟ್ಟೆ, ಚಿನ್ನದ ಗಿಡ’ ಹಾಗೂ ‘ರತ್ನ ಕಟ್ಟೆ, ಮುತ್ತಿನ ಜಲ್ಲಿ, ನವರತ್ನದ ಕೋಳಿ’ ಮೊದಲನೇ ಕಥೆಯಲ್ಲಿ ಹಕ್ಕಿಗಳು ಕಿರಿರಾಹಕುಮಾರ ಇವನ್ನು ತರಲು ಉಪಾಯ ಸೂಚಿಸುತ್ತವೆ. ಈ ಕಥೆಯಲ್ಲಿ ಋಷಿಗಳು ಮಂತ್ರಿಸಿದ ಕಲ್ಲು, ಹರಳು ದೇವಕನ್ಯೆಯ ಸೀರೆ ಕದ್ದುದು ಇದೆ. ಇಲ್ಲಿ ವಸ್ತು ತರಲು ಕಟ್ಟುದೊಣ್ಣಿ ಕಟ್ಟು ಹಗ್ಗ ಆಶಯವಿದೆ. ಕಲ್ಲು ಹರಳು ಹೊಡೆದು ಸರಕ್ಕಿ (ಬಗಸೆ ಅಕ್ಕಿ) ದರಕ್ಸಿ (ದ್ರಾಕ್ಷಿ) ಆಗುವ ಆಶಯ ಇದೆ.

ಇಲ್ಲಿ ಸುಂದರಿಯರ ಹತ್ತರ ಈ ವಸ್ತು ಇರುವುದೇ ಹೊರತು ಬೇರೆ ಕಥೆಗಳಲ್ಲಿಯಂತೆ ಹೆಂಗಸರನ್ನೇ ಕಡಿದಾಗ ಈ ವಸ್ತುಗಳಾಗುವುದಿಲ್ಲ.

೨ನೇ ಕಥೆ ಚಿಕ್ಕದು, ಇಲ್ಲಿ ಸಹ ಹೆಂಗಸರನ್ನು ಕಡಿದು ಮಾಟದ ವಸ್ತುಗಳಾಗುವ ಆಶಯಗಳಿಲ್ಲ. ಮರಿಗಳನ್ನು ಹದ್ದು ತಿನ್ನುವುದನ್ನು ಅದನ್ನು ಕೊಂದು ಮರಿಗಳನ್ನು ರಕ್ಷಿಸಿದ್ದಕ್ಕೆ ಮಹಾಶೇಷ ಸಹಾಯ ಮಾಡುವುದು. ಸುಂದರಿಯರು ಈ ವಸ್ತು ಕೊಡುವುದು, ಇಲ್ಲಿ ಅಣ್ಣಂದಿರು ತಮ್ಮನನ್ನು ಹೆಣ್ಣುಗಳ ಆಶೆಗೆ ಬಾವಿಯಲ್ಲಿ ನೂಕಿದ್ದು ಇದೆ. ಇಲ್ಲಿ ಮಾಂತ್ರಿಕ ಬೆತ್ತ ದೇವಕನ್ಯೆ ಕೊಟ್ಟಿದ್ದ ನಾಗಬೆತ್ತ-ಮಾಂತ್ರಿಕ ಶಕ್ತಿಯುಳ್ಳದು, ಅದೇ ಅವನನ್ನು ಪಾರು ಮಾಡುತ್ತದೆ.

ಶ್ರೀ ಧಾಕು ಪಟಗಾರರು ಹೇಳಿದ್ದ ಉಳಿದ ಕಥೆಗಳು “ಪರಿವರ್ತನೆ” ಮತ್ತು “ಚಿನ್ನದ ಕೂದಲಿನ ಚೆಲುವಿ” ಉತ್ತಮ ಕಥೆಗಳು. “ಪರಿವರ್ತನೆ” ಕಥೆಯ ಸಾಧುವಿಗೆ ರಾಣಿಯ ಮೇಲಿನ ಮೋಹವಾದುದರಲ್ಲಿ ರಾಣಿಯನ್ನು ತನ್ನ ವಶದಲ್ಲಿ ಕೊಡಬೇಕೆಂಬ ಅಪೇಕ್ಷೆಯನ್ನು ಸಹಜವಾದ ಸಾಮಾನ್ಯ ಮಾನವನ ವರ್ತನೆ ಎಂದು ಹೇಳಬಹುದು. ಆದರೆ ಮಾತಿಗೆ ಕಟ್ಟು ಬಿದ್ದು ರಾಣಿಯನ್ನು ಒಪ್ಪಿಸಿದ ರಾಜನ ವರ್ತನೆಯೂ ಪತಿಯಾಜ್ಞೆಯನ್ನು ಶಿರಸಾವಹಿಸಿ ಪರಮಾತ್ಮನು ತನ್ನ ಶೀಲವನ್ನು ಕಾಪಾಡುವನು ಎಂಬ ದೃಢನಿಷ್ಠೆಯಿಂದ ಸಾಧುವನ್ನು ಹಿಂಬಾಲಿಸಿದ ರಾಣಿಯ ವತ್ನೆಯೂ ಅಸಾಧಾರಣವಾದವು. ಬತ್ತಲೆಯಾಗಿದ್ದ ತನ್ನನ್ನು ಸೇರಲು ಸಾಧು ಬತ್ತಲೆಯಾಗಿಯೇ ಬರಬೇಕು ಎಂದು ಕರಾರನ್ನು ಹೇಳಿದ್ದ ರಾಣಿಯ ಸಾಧುವಿನ ಮನಸ್ಸಿನ ಪರಿವರ್ತನೆ ಆಗುವುದನ್ನು ಊಹಿಸಿದ್ದಳೋ ಏನೆಂಬುದು ತಿಳಿಯುವುದು ಕಷ್ಟ. ಸಾಧುವು ನಂಗಾ (ಬತ್ತಲೆ) ಸಾಧುವೇನು ಆಗಿದ್ದಿರಲಿಲ್ಲ. ಅದರಿಂದ ಬೆಳಕಿರುವಾಗ ಬತ್ತಲೆಯಾಗೆ ಬರಬೇಕು ಎಂಬ ರಾಣಿಯ ಕರಾರು ಸಾಧಿವಿಗೆ ಅವಳು ಬತ್ತಲೆಯಾಗಿ ಮಲಗಿದ್ದ ಕಾರಣದಿಂದಲೂ ಎರಡೂ ರೀತಿಗಳಿಂದ ಜಿಗುಪ್ಸೆಯಾಗಿ ಮನಃ ಪರಿವರ್ತನೆಯಾಗಲು ಕಾರಣವಾಯಿತು. ಸಂದರನೀವ್ಯಾಮೋಹದಿಂದ ತಾನು ಬತ್ತಲೆಯಾಗಿ ಬಂದುದೂ ಅವನ ಜಿಗುಪ್ಸೆಗೆ ಕಾರಣವಾಯಿತು. ಹೇಮರೆಡ್ಡಿ ಮಲ್ಲಮ್ಮನು ಮೈದುನನು ವೇಶ್ಯೆಯ ಸಂಗ ಮಾಡಬಾರದೆಂದು ಅವಳು ಬತ್ತಲೆಯಾಗಿರುವಾಗ ಹಿಂಬದಿಯನ್ನು ನೋಡಬೇಕು ಎಂದುದು ವೇಮನನ ವೈರಾಗ್ಯಕ್ಕೆ ಅಲಂಬನವಿಭಾವವಾಯಿತು ಎಂಬುದನ್ನು ನೆನಪಿಸಿಕೊಳ್ಳಬಹುದು. “ಪರಿವರ್ತನೆ” ಒಂದು ಅಪೂರ್ವವಾದ ಕಥೆ.

“ಚಿನ್ನದ ಕೂದಲಿನ ಚೆಲುವಿ” ಕಥೆಯು ಹಲವು ರೀತಿಗಳಿಂದ ವಿಶಿಷ್ಟವಾಗಿದೆ. ಇದರಲ್ಲಿ ಸಾಹಸಮಾಡುವವ ಅಜ್ಜಿಮೊಮ್ಮಗ. ಆದರೆ ಅವನು ಚೆಲುವಿಯನ್ನು ತರಲು ಪ್ರಾಣದ ಹಂಗುದೊರೆದು ಸಾಹಸಮಾಡುವ ಅಸಾಮಾನ್ಯ ಸಾಹಸಿ. ಆದರೆ ಈ ಸಾಹಸವನ್ನು ಅವನು ತನಗಾಗಿ ಮಾಡಲಿಲ್ಲ. ಇದೊಂದು ಅಸಾಧಾರಣವಾದ ಬೆಳವಣಿಗೆ. ಆ ಸಮುದ್ರದಲ್ಲಿ ಈಸಿ ಹೋಗುವ ಆಶಯವು ಅಸಾಮಾನ್ಯವಾದದ್ದು. ತೀರ ಅಸಹಜವಾದುದೇನಲ್ಲ. ಅದರಂತೆಯೇ ರಾಕ್ಷಸಿಯೆಂಬುದನ್ನು ದುಷ್ಟ ಹೆಂಗಸು ಎಂದು ತಿಳಿವಂತಿದೆ. ಇಲ್ಲಿ ನಾಲ್ವರು ಹುಡುಗರ ಸನ್ನಿವೇಶವೂ ಕಥೆಯಲ್ಲಿ ಹೊಸತನವನ್ನು ತಂದಿದೆ. ರಾಕ್ಷಸಿಯು ಮಂತ್ರದಿಂದ ಹುಡುಗರನ್ನು ಬಂಧಿಸಲು ಉಪಯೋಗಿಸಿದ ಅಧೋರೋಮದ ಆಶಯವು ರಾಕ್ಷಸಿಯ ಸಾಮರ್ಥ್ಯವನ್ನು ತೋರ್ಪಡಿಸಲು ಒಂದು ಸಾಧನವಗಿರುವಂತೆ ಹಳ್ಳಿಗರ ಮನರಂಜನೆಯ ಅಶ್ಲೀಲ ಪ್ರವೃತ್ತಿಯ ದ್ಯೋತಕವೂ ಆಗುತ್ತದೆ. ಎಲ್ಲರನ್ನು ದಡಕ್ಕೆ ಸೇರಿಸಲು ಅಜ್ಜಿ ಮೊಮ್ಮಗನು ದಿವ್ಯ ರಥವನ್ನು ಮಾಡುವ ಆಶಯವು ಇದು ಮಾಂತ್ರಿಕ ಕಥೆ ಎಂದು ಹೇಳಲು ಸಹಾಯಕವಾದರೂ  ಅದಕ್ಕೆ ತಕ್ಕ ಹಿನ್ನೆಲೆಯನ್ನು ಸೂಚಿಸದಿದ್ದುದರಿಂದ ದುರ್ಬಲವಾದ ಅಂಶವಾಗಿದೆ. ನಮ್ಮ ‘ಉತ್ತರ ಕನ್ನಡ ಕಥೆಗಳು’ ಗ್ರಂಥದ ಅಂಬರದ ರಥ ಕಥೆಯ ಮುಕ್ತಾಯವನ್ನು ಇದು ಹೋಲುತ್ತದೆ.

ಅತ್ಯುತ್ತಮವಾದ ‘ನಾಗದೇವತೆ’ ಕಥೆಯು ಅತಿಮಾನುಷ ವ್ಯಕ್ತಿಗಳನ್ನು ಒಳಗೊಂಡಿರುವ ಕಥೆಯಾಗಿದೆ. ಈ ಕಥೆಯಲ್ಲಿ ಪ್ರಾರಂಭದಿಂದ ಕೊನೆಯವರೆಗೂ ಅನಿರೀಕ್ಷಿತವಾದ ತಿರುವುಗಳು ಬರುತ್ತವೆ; ಮತ್ತು ಆಶಯಗಳು ಬೆರಗುಗೊಳಿಸುತ್ತವೆ. ಏಳು ಜನ ಗಂಡು ಮಕ್ಕಳು ಸಾಮಾನ್ಯವಾಗಿ ಹೋಗುವಂತೆ ಯುದ್ದ ಮಾಡಲು ಹೋಗದೆಯೇ ರಾಗಿ ಕುಂಬ್ರಿ ಬೆಳೆ ಬೆಳೆಯಲು ಬೆಟ್ಟಕ್ಕೆ ಹೋಗಿ ಅಲ್ಲಿಯೇ ಇರುತ್ತಾರೆ. ಅವರ ತಾಯಿ ಗರ್ಭಿಣಿಯಾಗಿ ಹಡೆದ ಸುದ್ಧಿ ತಿಳಿಯಲು ಎತ್ತರವಾದ ಮರದ ಮೇಲೆ ಹೆಣ್ಣು ಹುಟ್ಟಿದರೆ ಮಸಿಯಲ್ಲಿ ಬರೆಯಬೇಕೆಂದೂ, ಗಂಡು (ತಮ್ಮ) ಹುಟ್ಟಿದರೆ ಶೇಡಿ (ಜೇಡಿ)ಯಲ್ಲಿ ಬರೆಯಬೇಕೆಂಬ ವ್ಯವಸ್ಥೆಯ ಆಶಯವೂ ಅತಿ ನೂತನವಾದುದು.

ಇಲ್ಲಿ ಹೆಣ್ಣು ಹುಟ್ಟಿದರೂ ಕೆಲಸಗಾರರು ಅವರ ತಾಯಿಯ ಇಚ್ಛೆಗೆ ವ್ಯತಿರಿಕ್ತವಾಗಿ ಶೇಡಿಯಲ್ಲಿ ಬರೆಯುವುದು ನಿರೀಕ್ಷೆಯ ವಿರುದ್ಧವಾದ ತಿರುವು.

ಬಹಳ ಬಡವರ ಮನೆಯಲ್ಲಿ ಹುಡುಗಿಗೆ ಆಡಲು ಪುತ್ಲಿ ಸರ ಕೊಡುತ್ತಾಳೆ ತಾಯಿ; ಇದು ಅವಳ ಮದುವೆಯಲ್ಲಿ ಅವಳ ತಾಯಿ ಮನೆಯಲ್ಲಿ ಮದುವಣಗಿತ್ತಿಗೆ ಹಾಕಿದ್ದ ಪುತ್ಲಿಸರವಾಗಿದ್ದರಬಹುದು ಎಂದು ವಿವರಿಸಬಹುದು. ಆಟದ ತಲೆಯಲ್ಲಿ ಹುಡುಗಿಯು ಪುತ್ಲಿಸರವನ್ನು ಅವಸರದಿಂದ ಮಣ್ಣಿನಲ್ಲಿ ಹುಗಿದು ಆಡಲು ಹೋದ ಮೇಲೆ ತಿಂಡಿಯ ಪೊಟ್ಲವೆಂದು ಕಾಗೆಯು ಮಣ್ಣನ್ನು ಕೆದರಿ ಕಚ್ಚಿಕೊಂಡು ಅಣ್ಣಂದಿರಿದ್ದ ಮನೆಯ ಮೇಲೆ ಕೂತು ಬಿಡಿಸಿ ನೋಡಿ ತಿಂಡಿಯಲ್ಲ ಎಂದು ಬಿಟ್ಟು ಹಾರಿ ಹೋಯಿತು ಎಂಬಲ್ಲಿ ಸಹಜತೆಯ ಬಣ್ಣನೆಯಿದೆ.

ಕುದುರೆಯು ಕಟ್ಟಿದ ಹಗ್ಗವ್ನನು ಹದಿರುಕೊಂಡು ಹೋಗಿ ಹೂವಿನ ಗಿಡವನ್ನು ತಿನ್ನುವಾಗ ಹುಡುಗಿಯು ಹೋಗಿ ಅದರ ಕೆನ್ನೆಗಳ ಮೇಲೆ ಹಸ್ತದಿಂದ ಹೊಡೆದು ಹಸ್ತವು ಮೂಡಿ ಬಂದ ಮೇಲೆ ಹುಡುಗಿಯ ಬೆರಳುಗಳ ಗುರುತಾಗಿರುವುದನ್ನು ತಾನು ನೋಡಿದ್ದ ಸುಂದರ ಹುಡುಗಿಯ ಅಲ್ಲಿದ್ದುದಕ್ಕೆ ಆಧಾರವಾಗಿ ರಾಜಕುಮಾರ ಹೇಳುವುದನ್ನು ನಿರೂಪಿಸಿದ ಕಥೆಗಾರಿಕೆಯು ಬಹಳ ಮೇಲ್ತರಗತಿಯದು.

ರಾಜನ ಮಗನು ಮಲ್ಲಿಗೆ ಮೊಗ್ಗೆ ದಂಡೆಯನ್ನು ಕಟ್ಟಿಕೊಂಡು ಅದರು ಅರಳಿದರೆ ಹುಡುಗಿಯಿದ್ದಾಳೆ ಎಂದು ಹೇಳುವ ಆಶಯವು ನನ್ನ ಸಂಗ್ರಹವಾದ ‘ಹೂವಾಗಿ ಅರಳದ ಮಲ್ಲಿಗೆ’ (ಕರ್ಮವೀರ ೨೨-೧೨-೬೦) ಎಂಬ ಕಥೆಯಲ್ಲಿ ಸಹ ಇತ್ತು. ಅದರಂತೆ ಅವಳು ಆ ಮಲ್ಲಿಗೆಯ ಮೊಗ್ಗನ್ನು ಬಾಯಲ್ಲಿಟ್ಟುಕೊಂಡು ಮಲಗಿದ್ದಾಗ ಅದರ ರಸನುಂಗಿ ಗರ್ಭಿಣಿಯಾಗುವುದೂ ಅದರಲ್ಲಿತ್ತು. ಇಲ್ಲಿ ಪೆಟ್ಟಿಗೆಯಲ್ಲಿನ ಸೂಜಿ ಚುಚ್ಚಿ ಶಿಶು ಸಾಯುವುದುದೆ. ಅಲ್ಲಿ ಮೊಳೆ ಚುಚ್ಚಿ ಶಿಶು ಸಾಯುವುದಿದೆ. ಇಲ್ಲಿ ಸೂಜಿ ಚುಚ್ಚಿದ್ದನ್ನು ತೆಗೆದಾಗ ಜೀವ ಬರುವುದೂ ಇದೆ.

“ಮುತ್ತು ಮಾಣಿಕ ತಂದಾರೆ” (ಸುಧಾ ೧೩-೧೧-೭೦) ಕಥೆಯಲ್ಲಿ ಕದ ತೆಗೆಯದ ತಂಗಿಯ ಮೇಲಿನ ಸಿಟ್ಟಿನಿಂದ ರಾಕ್ಷಸ ತನ್ನ ಒಂದು ವಿಷದ ಹಲ್ಲನ್ನು ಬಾಗಿಲಿನ ಮೇಲ್ಪುಟ್ಟಿಗೆ ಚುಚ್ಚಿ ಹೋಗುತ್ತಾನೆ. ಬಾಗಿಲು ದಾಟಿ ಬರುವಾಗ ಅದು ಚುಚ್ಚಿ ಹುಡುಗಿ ಸಾಯುತ್ತಾಳೆ. ಬೆಟ್ಟದ ಮೇಲೆ ಮಂಗಗಳು ಬಂದಾಗ ರಾಣಿ ಮಂಗವು ಹುಡುಗಿಯ ತಲೆಗೆ ನಟ್ಟಿದ್ದ ವಿಷದ ಹಲ್ಲನ್ನು ತನ್ನ ಹಲ್ಲಿನಿಂದ ಕಿತ್ತು ತೆಗೆದಾಗ ಹುಡುಗಿಗೆ ಜೀವ ಬರುತ್ತದೆ. ಆದರೆ ಇಂಥ ಹೋಲಿಕೆಗಳು ಇದ್ದರೂ ಕಥೆಗಳು ಬೇರೆ ರೀತಿಯವು.

ಪುರುಷನ ಲೈಂಗಿಕ ಸಂಪರ್ಕವಿಲ್ಲದೆ ಗರ್ಭಿಣಿಯಾಗುವುದು ಸಾಧ್ಯವೆಂದು ಚಿಜ್ಷಾನದ ತಿಳುವಳಿಕೆಯಾಗಿದೆ. ಹೀಗೆ ಹುಟ್ಟಿದ ಶಿಶುವು ಹೆಣ್ಣೇ ಆಗಿರುತ್ತದೆ ಎಂದು ವಿಜ್ಞಾನಿಗಳು ತಿಳಿಸಿದುದುಂಟು.

ಉದ್ದಾಲಕನ ಕಥೆಯು ಪುರಾಣದ ಆಧಾರದಿಂದ ಜನರಲ್ಲಿ ಪರಿಚಿತವಾಗಲು ಪುರಾಣಿಕರ ವ್ಯಾಖ್ಯಾನವು ಕಾರಣವಾಗಿದೆ. ಅಲ್ಲಿ ಅಪ್ಸರೆಯು ಕೊಳದಲ್ಲಿದ್ದ ಕಮಲವನ್ನು ಮೂಸಿದುದರಿಂದ ಗರ್ಭಿಣಿಯಾದುದುಂಟು. (ನನ್ನ ಸಂಗ್ರಹದ ಅಪ್ರಕಟಿತ ಕಥೆ).

ನಮ್ಮ “ಸುತ್ತ ಮೀನು ನಗೆಯಾಡಿತು” (ಕರ್ನಾಟಕದ ಜನಪದ ಕಥೆಗಳು ಸಂ. ಶ್ರೀ ಎಚ್. ಎಲ್. ನಾಗೆಗೌಡರು, ಕ.ಸಾ.ಪ. ಬೆಂಗಳೂರು) ಕಥೆಯಲ್ಲಿ ರಾಜನ ಮೈನೆರಳು ಅವಳ ಮೈಮೇಲೆ ಬಿದ್ದು ರಾಣಿಯು ಗರ್ಭಿಣಿಯಾದುದು ಸತ್ತ ಮೀನು ನಗಲು ಕಾರಣವಾಗುತ್ತದೆ.

‘‘ನಾಗದೇವತೆ’’ ಕಥೆಯ ತಂಗಿಯ ಪಾತ್ರವು ಕೇಳುಗರ ಮನಸ್ಸಿನಲ್ಲಿ ನಾಟಿ ನಿಲ್ಲುತ್ತದೆ. ಮುಂದೆ ಅವಳ ಮಗಳ ಕಥೆಯು ಇನ್ನಿಷ್ಟು ಚಮತ್ಕಾರಗಳಿಂದ ಬೆಳೆಯುತ್ತದೆ. ಅವಳ ಮೈಗೆ ಮಸಿ ಹಚ್ಚಿದ್ದ ಅಣ್ಣಂದಿರ ಹೆಂಡಿರ ಉಪಾಯವು ಅವಳ ಮಾವಂದಿರು ಕರಿಗುಂಬರಿ ಎಂದು ಅವಳನ್ನು ಕರೆವುದೂ ಸ್ವಾರಸ್ಯವಾಗಿದೆ.

ಋಷಿಯಿಂದ ಚಕಮಕಿ ಕಲ್ಲು ದೊರೆವ ಭಾಗವೂ ತುಂಬಾ ಸ್ವಾರಸ್ಯವಾಗದೆ. ಕೊನೆಯಲ್ಲಿ ಈ ಚಕಮಕಿ ಕಲ್ಲು ನಾಗದೇವತೆಯ ರೂಪಹೊಂದಿ ದೊಡ್ಡದಾಗಿ ಆ ದೇವತೆ ಬೆಳೆಯುವುದೂ ಅತಿಶಯ ಅಚ್ಚರಿಯ ಆಶಯವಾಗಿದ್ದು, ಅತಿಶಯ ಅನಿರೀಕ್ಷಿತವಾದ ರೂಪವನ್ನು ಪಡೆಯುತ್ತದೆ. ಇಂಥ ವಿಚಿತ್ರವಾದ ಕಥಾನಕದಲ್ಲ ಅತ್ತೆಯರ ಪಾತ್ರ ಚಿತ್ರಣವೂ ಮರೆಯಲಾರದುದಾಗಿರುತ್ತದೆ. ನಾಗದೇವತೆ ಮದುವೆಯಾಗದಿರುವ ನಿರ್ಧಾರವು ಕಥೆಯ ವೈಶಿಷ್ಟ್ಯವನ್ನು ಹೆಚ್ಚಿಸಿದೆ.

‘‘ಮನೆಗೆ ಬಂದ ಲಕ್ಷ್ಮಿ’’ ಕಥೆಯ ಲಕ್ಷಿಯು ಬಡವರ ಮನೆ ಸೇರಿ ಬೇರೆಯವರ ಗದ್ದೆಗಳಲ್ಲಿ ದುಡಿದು ತಂದ ಬತ್ತದ ಸಸಿಗಳನ್ನು ನೆಟ್ಟಳು. ಅವಳ ದುಡಿತ ಹಾಗೂ ಭಾಗ್ಯ ವಿಶೇಷಗಳಿಂದ ಐದು ಕಣಜ ತುಂಬುವಷ್ಟು ಬತ್ತ ಬೆಳೆಯಿತು. ಹಿರಿಯನ ಮಡದಿಯಾದ ಅವಳು ತಂಗಿಯರು ತಮ್ಮಂತೆ ದುಡಿಯಲಿ ಎಂದು ಹಂಗಿಸಿದ ಮೇಲೆ ಗಂಡನೊಡನೆ ಮನೆ ಬಿಟ್ಟು ಹೊರಟುಹೋಗಿ ಅವಳ ಪುಣ್ಯದ ಬಲದಿಂದ ಸಿರಿವಂತಿಕೆ ಬರುತ್ತದೆ. ಉಳಿದವರಿಗೆ ಬಡತನ ಬಂದು ಅವರಿಗೆ ಇವಳೇ ಔದಾರ್ಯದಿಂದ ಆಸರೆ ನೀಡುತ್ತಾಳೆ. ಈ ಸರಳ ಕಥೆಯಲ್ಲಿ ಲಕ್ಷ್ಮೀಯ ಸಿರಿವಂತಿಕೆಗೆ ಬೇರೆ ಕಾರಣವನ್ನು ತಿಳಿಸಿದ್ದರೆ ಅದಕ್ಕೆ ಹೆಚ್ಚು ಮಹತ್ವ ಬರುತಿತ್ತು.

‘‘ಕಷ್ಟ ಸುಖ’ ’ಕಥೆಯೂ ಬಹಳ ಶ್ರೇಷ್ಠವಾಗಿದೆ. ಇಲ್ಲಿ ತಿರುಪತಿಗೆ ಹರಕೆ ಒಪ್ಪಿಸಲು ಹೋದ ತಂದೆ-ತಾಯಿಗಳು ರೈಲುಗಾಡಿಯನ್ನು ಹತ್ತುವಾಗ ಶಿಶುವನ್ನು ಕಳೆದುಕೊಳ್ಳುವುದು ಸಿನಿಮಾದ ಕಥೆಯ ಪ್ರಭಾವವನ್ನು ಸೂಚಿಸುವುದೆಂದು ಶಂಕಿಸುವಂತಿದೆ. ಶಿಶುವನ್ನು ಒಬ್ಬ ಮಡಿವಾಳನು ಎತ್ತಿಕೊಂಡು ಹೋಗಿ ಸಾಕಿ ಓದುಬರಹ ಕಲಿಸಿದ, ಅನಂತರ ಈ ಸಾಕು ಮಗ ಮಾಸ್ತರನಾದನು. ಮಾಸ್ತರನ ಮತ್ತು ನಾಯಕಿಯ (ವಿದ್ಯಾರ್ಥಿನಿಯ) ಪ್ರೇಮದ ಅಂಕುರವಾದುದು ಮಾಸ್ತರನ ನಿಸ್ವಾರ್ಥ ಪ್ರೇಮದ ಬಣ್ಣನೆಯೂ ಹೃದಯಂಗಮವಾಗಿನ ರೂಪಿತವಾಗಿದೆ.

ಮಾಸ್ತರನ ಬಲತೋಳಿನಲ್ಲಿ ಸರ್ಪದ ಹೆಡೆಯ ಗುರುತು ಇರುವುದು ಹಚ್ಚೆ ಚುಚ್ಚುವುದರಿಂದಲೂ ದೈವೀ ಕೃಪೆಯಿಂದಲೋ ಎಂಬುದನ್ನು ಕಥಾ ನಿರೂಪಕಿಯು ಸ್ಪಷ್ಟವಾಗಿ ಹೇಳಲಿಲ್ಲ. ಆದರೆ ಅದು ಅಭಿಜ್ಞಾನಕ್ಕೆ (ಗುರುತು ಹಿಡಿಯಲು) ಉತ್ತಮವಾದ ಒಂದು ಚಿಹ್ನೆಯಾಗಿ ಮಹತ್ವವನ್ನು ಪಡೆಯುತ್ತದೆ.

ತಿರುಪತಿ ದೇವಸ್ಥಾನದಲ್ಲಿ ತಂದೆ-ತಾಯಿ ಹೋದವರು ಕಳೆದು ಹೋದ ಮಗನ ಭವಿಷ್ಯದ ಕುರಿತು ಪ್ರಸಾದ ಕಟ್ಟಿ ಕೇಳಿದಾಗ ಪೂಜೆ ಮಾಡುವ ಭಟ್ಟರಿಗೆ ಭಾರ ಆಗುತ್ತದೆ. ಅಂದರೆ ಅವನ ಮೈ ಮೇಲೆ ದೇವರು ಬಂದು ಅವನಿಗೆ ಆವೇಶ ಬಂದು ಅವನು ದೈವಪಾತ್ರಿಯಾಗುವುದು ಜನಜೀವನದ ನಂಬಿಕೆ ಹಾಗೂ ಆಚರಣೆಗಳನ್ನು ಸೂಚಿಸುವುದು. ಇಲ್ಲಿ ಪ್ರಸಾದ ಕಟ್ಟಿ ತನ್ನ ಸಮಸ್ಯೆಯ ಉತ್ತರವನ್ನು ದೇವರಿಂದ ಪಡೆಯಲು ಶ್ರೀಗಂಧದ ಎರಡು ಉಂಡೆಗಳಲ್ಲಿ ಒಂದೊಂದು ಬಣ್ಣದ ಹೂ ಸೇರಿಸಿ ನೀರಿನಲ್ಲಿಟ್ಟು ಉಂಡೆ ಒಡೆದು ಬೇಕಾದ ಹೂ, ತಾನು ಕೇಳಿದ ಹೂ ಬಂದರೆ ಕಾರ್ಯಸಿದ್ಧಿಯಾಗುವುದೆಂದು ನಂಬುವರು. ರಾಣಿಯು ತನ್ನ ಪ್ರಿಯಕರನನ್ನು ಆಳಿನ ರೂಪದಲ್ಲಿ ತವರಿನಿಂದ ಕರೆತಂದುದೂ ಕಥೆಯಲ್ಲಿ ಬಹಳ ಉತ್ತಮವಾದ ತಿರುವು ಬರಲು ಕಾರಣವಾಗುತ್ತದೆ. ರಾಣಿಯು ರಾಜನ ಎರಡನೇ ಹೆಂಡತಿಯೆಂಬುದರಿಂದ ಅವಳು ಮಾಡಿದ ಮೋಸ ಅರ್ಥ ವಾಗುವಂಥದು. ಕೊನೆಗೆ ಪ್ರಿಯಕರನು ಗಂಟು ಕಟ್ಟಿಕೊಂಡು ಅವಳಿಗೆ ಮೋಸ ಮಾಡಿ ಓದಿ ಹೋಗುವುದು ಅಸಹಜವಾದುದೇನಲ್ಲ.

‘‘ಶೇಕರಾಜ’’ ಕಥೆಯು ಸಹಾ ದೇವಕನ್ಯೆಯರು ಮಾಂತ್ರಿಕ ಹರಳನ್ನು ನೀಡಿ ಕಾರ್ಯ ಸುಗಮವಾಗುವ ದೌರ್ಬಲ್ಯವನ್ನು ಬಿಟ್ಟರೆ ಒಳ್ಳೇ ಸೊಸಾಗಿ ನಿರೂಪಿಸಿದ ಉತ್ತಮ ಕಥೆಯಾಗಿದೆ. ಈ ಕಥೆಯಲ್ಲಿಯೂ ನಿಪುತ್ರಿಕ ರಾಜನನ್ನು ಅಪಮಾನಿಸುವ ಸ್ತ್ರೀಯರ ಚರ್ಯೆ ಹಾಗೂ ರಾಜನ ರಾಣಿಯ ಪ್ರತಿಕ್ರಿಯೆ ಮತ್ತು ನಿಸರ್ಗ ಶಕ್ತಿಗಳು ರಾಜನನ್ನು ತಿರಸ್ಕರಿಸುವ ಹಾಗೂ ಅವನ ಸಂಕಷ್ಟಗಳ ಬಣ್ಣನೆಯು ಓದುಗರಿಗೂ ದೇವರಿಗೂ ಅವನ ಬಗ್ಗೆ ಸಹಾನುಭೂತಿಯಾಗುವಂತೆ ಬಣ್ಣಿತವಾಗಿದೆ. ದೇವರು ಹೇಳಿದ್ದಕ್ಕಿಂತಹ ಚ್ಚು ಮಾವಿನ ಹಣ್ಣು ಕೊಯ್ದ ರಾಜನ ಲೋಕಹಿತ ಬುದ್ದಿಯು ಮೆಚ್ಚುಗೆ ಪಡೆಯುತ್ತದೆ.

ಹಿರಿರಾಣಿ ಗರ್ಭಿಣಿಯಾಗಲು ದೈವೀಶಕ್ತಿಯಿಂದ ಕೂಡಿದ ಮಾವಿನ ಹಣ್ಣಿನ ಸಿಪ್ಪೆ ಸಾಲುತ್ತದೆ. ಕಿರಿರಣಿಯ ಹೀನಬುದ್ಧಿಯು ಲೋಕದಲ್ಲಿ ಕಾಣುವಂಥದೇ. ಅವಳು ಎರಡೂ ಹಣ್ಣು ತಿಂದು ರಾಕ್ಷಸ ಮಗ ಹುಟ್ಟಿದನು. ಆದರೆ ರಾಕ್ಷಸನ ಚರ್ಯೆ ಇಲ್ಲಿ ಬಹಳ ಆಹಾರ ಉಣ್ಣುವದರಲ್ಲಿ ಮಾತ್ರ ವ್ಯಕ್ತ. ರಾಕ್ಷಸ ಎನ್ನುವುದಕ್ಕಿಂತ ಕೂಳಬಕ್ಕ ಎನ್ನುವುದೇ ಸರಿಯಾಗುತ್ತಿತ್ತು. ಮಾವಿನ ಹಣ್ಣು ಸಂತಾನಫಲ ನೀಡುವುದೆಂಬುದು ಪುರಾಣ ಕಥೆಯ ಆಶಯವಾಗಿದೆ. ಶೇಕರಾಜನಿಗೆ ಮೈಯಲ್ಲಿ ಬಹಳ ಬೆಳಕು ಸೂಸುವುದೆಂಬುದು ಆತ ದೇವ ಸಂತಾನ ಎಂದು ಸೂಚಿಸಿ ದೇವಕನ್ಯೆಯ ಮದುವೆಯಾಗುವ ಮುಂದಿನ ಸನ್ನಿವೇಶಕ್ಕೆ ತಕ್ಕ ಹಿನ್ನೆಲೆಯಾಗುತ್ತದೆ.

ಇಲ್ಲಿ ರಾಜಕುಮಾರಿಯ ಮದುವೆಯ ಪಣವನ್ನುಪ ರೈಸಿದರೂ ಶೇಕರಾಜನನ್ನು ಆಕೆ ಮದುವೆಯಾಗದೆ ಬೇರೆಯವನನ್ನು ಮದುವೆಯಾಗುವ ಮುಕ್ತಾಯವೂ ಆಶ್ಚರ್ಯಕಾರಿಯಾಗಿದ್ದು, ನೂತನ ರೀತಿಯ ಕಥಾ ಸರಣಿಯಾಗಿದೆ. ಇದು ಆಧುನಿಕ ಯುವತಿಯ ಸ್ವಾಭಿಮಾನದ ಸರಣಿಯದು. ವಿಧವೆಯರು ತನ್ನ ಪಾಲಕಿಯನ್ನು ಹೊತ್ತರೆ ಮಾತ್ರ ತಾನು ಮದುವೆಯಾಗುವೆ ಎಂಬ ಕಿರಿರಾಣಿಯ ಮಗನ ಹಟದ ಆಶಯ ಸ್ವಾರಸ್ಯವಾಗಿದೆ. ಮಂಡೆ ಕೆತ್ತಿಸಕೊಂಡು ಬೋಳು ತಲೆ ಆದ ವಿಧವೆಯರು ಎಂದು ನಿರೂಪಣೆಯು ಸ್ಪಷ್ಟವಾಗಿ ಹೇಳದಿದ್ದರೂ ಅದೇ ರೀತಿ ತಿಳಿಯಬೇಕು.

ತುಂಬಿಯು ಕಿರಿದೇವ ಕನ್ಯೆಯ ತಲೆಯ ಮೇಲೆ ಹಾರಿ ರಾಜಕುಮಾರನು ಅವಳನ್ನೊಬ್ಬಳನ್ನೇ ಮದುವೆಯಾಗುವ ಆಶಯವು ಇಲ್ಲಿ ಅಪೂರ್ವವಾಗಿ ಏಕಪತ್ನೀ ವಿವಾಹದ ಆಧುನಿಕವಾದ ವಿಚಾರವನ್ನು ಎತ್ತಿ ಹಿಡಿಯುತ್ತದೆ. ಇಲ್ಲಿ ತುಂಬಿಗೆ ರಾಜಕುಮಾರ ಹಿಂದೆ ಸಹಾಯ ಮಾಡಿದ್ದ ಸಂದರ್ಭ ಇಲ್ಲ. ಇಲ್ಲಿನ ತುಂಬಿ-ಭ್ರಮರವಲ್ಲ ಅದಕ್ಕಿಂತ ದೊಡ್ಡದಾದ ಹಾರುವ ಕಪ್ಪು ಹುಳ ‘ಕನ್ಯಾ ವರಯತೇ ರೂಪಂ’ ಎಂಬ ಉಕ್ತಿಯು ಇರುವದಾದರೂ ಉಳಿದ ದೇವಕನ್ಯೆಯರು ಶೇಕರಿ ಜನನ್ನು ಮದುವೆಯಾಗದಿರುವಲ್ಲಿಯೂ ಆಧುನಿಕ ದೃಷ್ಟಿಯೇ ಇದೆ. ಕಥಾ ನಿರೂಪಣೆಯ ಅನಿರೀಕ್ಷಿತ ತಿರುವುಗಳಲ್ಲಿ ನಾಗದೇವತೆಯನ್ನು ವಧಿಸದಿರುವುದು ಒಂದು ಮಹತ್ವದ ತಿರುವಾಗಿದೆ.

‘‘ನಂಬಿ ಕೆಟ್ಟವರಿಲ್ಲ’’ ಎಂಬ ಕಥೆಯು ಹೆಚ್ಚು ಹುರುಳುಳ್ಳದಾಗಿದ್ದು, ಕಷ್ಟ ಸಹಿಷ್ಣುತೆಯ ಮನೋಬಲವನ್ನು ಪ್ರಕಟಪಡಿಸುತ್ತದೆ. ಕೆರೆಯಲ್ಲಿ ಇಡೀ ದಿನ ನೀರಿನಲ್ಲಿ ನಿಂತು ಬದುಕಿ ಬಂದವನಿಗೆ ಮಗಳನ್ನು ಕೊಡುವ ಪಣ ರಾಜನದು. ‘ಕೆರೆಯಲ್ಲಿ ಓಂ ನಮಃ ಶಿವಾಯ ಎಂದು ಜಪಿಸುತ್ತ ನಿಲ್ಲು’ ಎಂದು ತಾಯಿ ಹೇಳಿದುದನ್ನು ನಂಬಿದ ಗುಡುಗನಿಗೆ ನಿಂತಲ್ಲೇ ನೀರು ಬಿಸಿಯಾಗಿ ಪಣ ಪೂರೈಸಿದನು. ಆದರೆ ಅವನು ಕುರೂಪಿ ಎಂದು ರಾಜಕುಮಾರಿಗೂ ಮನಸ್ಸು ಇರಲಿಲ್ಲ. ಕುರೂಪಿ ಸುರೂಪಿಯಾದ ಪವಾಡವು ಕಥೆಯಲ್ಲಿ ನಂಬುವಂಥದಾದರೂ ದೇವರು ನೀರಲ್ಲಿ ಜಗ್ ಎಂದು ಪ್ರಕಾಶ ರೂಪದಿಂದ ಕಂಡುದು ಅದೇ ದೇವರ ರೂಪ ಎಂದು ತಾಯಿ ಇಲ್ಲಿ ಮನುಷ್ಯ ಪ್ರಯತ್ನಕ್ಕೆ ದೇವರ ಸಹಾಯ ಬರುತ್ತದೆ ಎಂಬ ತತ್ವವು ಕಥೆಯನ್ನಾವರಿಸಿದೆ. ಹುಡುಗನ ಕಷ್ಟ ಸಹಿಷ್ಣುತೆಯು ಇಲ್ಲಿ ಗಮನಿಸುವಂಥದು. ವೇಶ್ಯೆಯ ಮನೆಯ ಹೊರಗೆ ಮಲುಹಣಿಯ ಸಂಗದ ಆಸೆಯಿಂದ ಇಡೀ ರಾತ್ರಿ ಹಿಮಪಾತವಾದರೂ ನಿಂತದ್ದು ಎಚ್ಚರ ತಪ್ಪಿ ಬಿದ್ದ ಹರಿಹರನ ಮೆಲುಹಣನ ನೆನಪಾಗುತ್ತದೆ.

‘‘ದೇವರು ಕೊಟ್ಟ ಹೆಂಡತಿ’’ ಕಥೆಯಲ್ಲಿ ಅಂಬಿಗನ ಕಷ್ಟವನ್ನು ಪರಮೇಶ್ವರನು ನಿವಾರಿಸಿದ ಕ್ರಮದಲ್ಲಿ ದೇವರು ಬಡವರ ಕೈವಾರಿ ಎಂದು ತಿಳಿಸಲಾಗಿದೆ.ದ ವರಿಗೆ ಅಸಾಧ್ಯವಾದುದು ಯಾವುದೂ ಇಲ್ಲ. ದೇವರು ನೀಡಿದ್ದ ಹುಡುಗಿಗೆ ಮಂತ್ರಶಕ್ತಿಯಿತ್ತು. ಅದರಿಂದ ಇದು ಮಾಂತ್ರಿಕ ಕಥೆಯೂ ಹೌದು.

ಬೇರೆ ಕಥೆಯಂತೆ ನಾಯಕನ್ನು ನಾಶಮಾಡಲು ಬಾವಿಗೆ ಇಳಿಸುವುದೂ ಕೊಂಡದಲ್ಲಿ ಬೀಳಿಸುವುದೂ ಇದ್ದರೂ ಇಲ್ಲಿ ಪ್ರತಿಸಾರೆಯೂ ಸುಂದರ ಹುಡುಗಿಯನ್ನು ತರುವುದರಿಂದ ಪಾತಾಳಕ್ಕೆ ಹೋದರೆ ದಿವ್ಯ ಸುಂದರಿಯ ಲಾಭವಾಗುವುದೆಂದು ರಾಜ-ಮಂತ್ರಿ ತಿಳಿಯುವಂತೆ ಕಥೆಯನ್ನು ಬಹಳ ಸ್ವಾರಸ್ಯವಾಗಿ ನಿರೂಪಿಸಿದುದರಲ್ಲಿ ಈ ಕಥಾ ರಚನೆಯ ಹಾಗೂ ನಿರೂಪಣೆಯ ಜಾಣ್ಮೆ ವ್ಯಕ್ತವಾಗುತ್ತದೆ. ಕೊನೆಗೆ ಅಂಬೀರಣ್ಣ ರಾಜಗೆ ಮತ್ತು ಮಂತ್ರಿ ಪತ್ನಿಯರಿಗೆ ಹೇಳುವ ಮಾತಿನಲ್ಲೂ ಜಾಣ್ಮೆಯಿದೆ. ಮೀನ ತಿನ್ನುವ ಅತ್ಯಾಸೆಯಿದ್ದ ರಾಜನಿಗೆ ಮೀನಾಕ್ಷಿಯರ ಮೋಹವುಂಟಾದುದರಲ್ಲಿ ರಸಿಕತೆಯೊಡನೆ ಸ್ತ್ರೀಲಂಪಟತನವೂ ರಾಜನಿಗೂ ಮಂತ್ರಿಗೂ ಇದ್ದಿರುವುದು ಕಾಣುತ್ತದೆ. ಮಂತ್ರಿಯು ‘ಅಂಬಿಗನ ಹೆಂಡತಿ ನಿಮಗೆ, ನಿಮ್ಮ ಹೆಂಡತಿ ನನಗೆ’ ಎನ್ನುವುದು ನಮ್ಮ ಕಥಾ ನಿರೂಪಕರ ಹಾಸ್ಯ ದೃಷ್ಟಿಯ ಸೂಚಕ. ಇದರಲ್ಲೂ ಬೇರೆ ಇಂಥ ಕಥೆಗಳಲ್ಲೂ ಇದನ್ನು ತಿಳಿಯಬಹುದು.

“‘ತಿರುಗೇಟು’” ಕೋಡ ಮೊಮ್ಮಗ ದುಷ್ಟ ಅಣ್ಣ-ತಮ್ಮಂದಿರಿಗೆ ಮಾಡಿದ ಪ್ರತೀಕಾರದ ಸ್ವಾರಸ್ಯವಾದ ಕಥೆ. ಇಲ್ಲಿ ಬಹಳ ಪ್ರಚಾರದಲ್ಲಿದ್ದ ಆಶಯಗಳನ್ನೇ ಹೊಸ ರೀತಿಗಳಿಂದ ಹೆಣೆದು ಮಾಡಿದ ಕತೆ ಇದೆ. ಹಬ್ಬ ದಡಕಲ, ಬೋರಿಗುಡಕಲ ಈ ಹೆಸರುಗಳಲ್ಲೇ ಹಾಸ್ಯದ ಹೊಳಕಿದ.

ಅಜ್ಜಿಯನ್ನು ಹೊರಹಾಕಿದ್ದಕ್ಕೆ ಇಬ್ಬರ ಸ್ವಾರ್ಥ ಭಾವನೆ ಸ್ಪಷ್ಟವಾಗಿದೆ. ಅಜ್ಜಿ ಮುದುಕಿಗೆ ಆಧಾರವಾಗಿ ಒಬ್ಬ ಹುಡುಗ ಬೇಕೆಂಬ ಆಸೆಗೆ ಈ ದುಷ್ಟರು ಕೋಡಗವನ್ನು ಚೀಲದಲ್ಲಿ ತುಂಬಿಕೊಂಡು ತಂದು ಇವ ನಿನ್ನ ಮೊಮ್ಮಗ ಎಂದು ಕಿಡಿಗೇಡಿತನದಿಂದ ಕೊಟ್ಟುದ ಸ್ವಾರಸ್ಯವಾದ ವಿಶಿಷ್ಟ ಆಶಯವಾಗಿದೆ. ಕೋಡಗವು ಹುಡುಗನಂತೆಯೇ ವರ್ತಿಸಿ “ಶರಂ ಪ್ರತಿ ಶೌರ್ಯಂ” ಎಂದು ಯುಕ್ತಿ ಮಾಡಿದ ಆಶಯಗಳಿಗೆ ಹೊಸ ಸ್ವಾರಸ್ಯ ತಂದುಕೊಟ್ಟಿರುವುದು ತುಂಬಾ ಮೆಚ್ಚಿಕೊಳ್ಳುವಂತಿದೆ.

ಕಳ್ಳರು ಕದ್ದ ಮಾಲನ್ನು ಹಣವನ್ನು ಹಂಚಿಕೊಳ್ಳುತ್ತಿದ್ದಾಗ ಸದ್ದು ಮಾಡಿಯೋ ಮಾತಿನಿಂದ ಬೆದರಿಸಿಯೊ ಓಡಿಹೋಗುವಂತೆ ಮಾಡಿದ ಆಶಯ ಹಲವು ಕಥೆಗಳಲ್ಲಿದೆ. ಆದರೆ ಇಲ್ಲಿ ಸತ್ತ ಕರುವನ್ನು ಎಳೆದುಕೊಂಡು ಹೋಗುವಾಗ ಹೋ, ಯಾ! ಎಂದು ಕೂಗುತ್ತ ಶ್ರಮವನ್ನು ಮರೆಯಿಸುವ ಕ್ರಮವು ಲೋಕದಲ್ಲಿನ ಸಹಜರೀತಿಯದೇ. ಇದನ್ನು ಕಳ್ಳರು ಬೆದರಿಕೆ ಎಂದು ಓಡಲು ಬಳಸಿದ ಕ್ರಮದಿಂದ ಇದಕ್ಕೆ ಹೊಸತನ ಬಂದಿದೆ. ಇದರಂತೆಯೇ ಅಜ್ಜಿಯ ಮನೆಗೆ ಬೆಂಕಿ ಹಾಕಿದ ಮೇಲೆ ಬೂದಿಯನ್ನು ಗಾಡಿಯಲ್ಲಿ ತಕ್ಕೊಂಡು ಹೋಗುವ ಆಶಯದ ಪರಿಣಾಮದಲ್ಲಿ ತೀರಾ ಹೊಸತನ ಕಂಡು ಬರುತ್ತದೆ. ಇಲ್ಲಿ ದುಡ್ಡಿನ ಚೀಲ ಹೊತ್ತು ತಂದ ಚಕ್ಕಡಿಗೆ ಡಿಕ್ಕಿ ಕೊಟ್ಟು ಮಾತಿನಂತೆಯೇ ಅವನ ದುಡ್ಡಿನ ಚೀಲವನ್ನು ತನ್ನ ಗಾಡಿಯಲ್ಲಿ ಹಾಕಿಕೊಂಡು ತಂದ ಆಶಯವು ಹೊಸದೇ. ದುಷ್ಟ ಅಣ್ಣ-ತಮ್ಮಂದಿರಿಗೆ ಮಾರಿದ ಬೂದಿ ಚೀಲಕ್ಕೆ ಹಣಬಂತು ಎಂದು ಮೋಸಗೊಳಿಸುವುದು ಸ್ವಾರಸ್ಯವಾಗಿದೆ.

ಅದರಂತೆ ಕೋಡನನ್ನು ಚೀಲದಲ್ಲಿ ಕಟ್ಟಿಹಾಕಿ ಹೊತ್ತುಕೊಂಡು ಹೋಗಿದ್ದು ದನ ಕಾಯುವವನನ್ನು ಮದುವೆಯಾಗುವ ಆಸೆಯಿಂದ ಕೋಡಣ್ಣನನ್ನು ಚೀಲದಿಂದ ಬಿಡಿಸಿ ಹೊರ ಹಾಕಿ ತಾನು ಚೀಲದಲ್ಲಿ ಕೂತು ಕಟ್ಟಿಸಿಕೊಳ್ಳುವುದೂ ಬೇರೆ ಕಥೆಯ ಸರಣಿಯು. ದುಷ್ಟರು ಹಳ್ಳದಲ್ಲಿ ಹಾಕಿ ದನ ಕಾಯುವವನನ್ನು ಕೋಡ ಎಂದು ತಿಳಿದು ಸಾಯಿಸಿದ ಮೇಲೆ ಎಲ್ಲಾ ದನಗಳನ್ನು ಹೊಡೆದುಕೊಂದು ಕೋಡಣ್ಣ ತಂದುದು ಅವರ ದುಷ್ಟರ ಅತ್ಯಾಸೆಗೆ ಕಾರಣವಾಗಿ “ತಮ್ಮಿಬ್ಬರನ್ನೂ ಚೀಲದಲ್ಲಿ ಹಾಕಿ ಹೊಳೆಗೆ ಕೊಂಡು ಹೋಗಿ ಹೊಳೆಯಲ್ಲಿ ಹಾಕು” ಎಂದು ಅವರು ಸಾಯುವ ಸನ್ನಿವೇಶವು ಕಥೆಗೆ ವಿಶಿಷ್ಟವಾಗಿದೆ. ಹಿತ ಮಿತವಾದ ನಿರೂಪಣೆ ಕಥೆಯ ಹಿರಿಮೆಯ ಇನ್ನೊಂದು ಕಾರಣವಾಗಿದೆ.