ಉತ್ತರ ಕನ್ನಡದ ರೈತರಲ್ಲಿ ಒಂದು ಪ್ರಮುಖವಾದ ಜಾತಿಯು ಗಾಮೊಕ್ಕಲದು. ಮುಖ್ಯವಾಗಿ ಕುಮಟಾ ತಾಲೂಕಿನಲ್ಲಿಯೂ ಹೊನ್ನಾವರ ತಾಲೂಕಿನಲ್ಲಿಯೂ ಇವರು ವಾಸವಾಗಿರುತ್ತಾರೆ. ಹೊನ್ನಾವರ ಕಡೆ ಇವರ ಅಡ್ಡ ಹೆಸರು ಗೌಡ ಎಂಬುದಾಗಿರುತ್ತದೆ. ಇವರಲ್ಲಿ ಜಾನಪದ ಸಾಹಿತ್ಯವು ಮುಖ್ಯವಾಗಿ ಗೀತಗಳು ಉತ್ತಮವಾಗಿವೆ ಗಾಮೊಕ್ಕಲ ಮಹಾಭಾರತ ಸಂ. ಡಾ. ಎನ್. ಆರ್. ನಾಯಕ, ಕ.ವಿ.ವಿ. ಧಾರವಾಡ, ನನ್ನ ಸಂಗ್ರಹದ ಗೀತೆಗಳು ಸ್ವಲ್ಪ ಮಾತ್ರ ಪ್ರಕಟವಾಗಿವೆ). ಜನಪದಸ ಕಥಾ ಸಾಹಿತ್ಯಕ್ಕೂ ಇವರ ಕಾಣಿಕೆಯು ಹಿರಿದಾಗಿದೆ. ದಿ. ದುರ್ಗು ತಿಮ್ಮಣ್ಣ ಪಟಗಾರರು ಹೇಳುತ್ತಿದ್ದ ಕಥೆಗಳಲ್ಲಿ ಹಲವು ಹೆಂಡತಿಯ ಸಾಪೋಸು, ನವರತ್ನದ ಹುಂಜ, ಮಂಗನ ಬಸಪ್ಪ (ಕರ್ಮವೀರ), ಕು. ವಿದ್ಯಾ ಪಟಗಾರರ ಸ್ವಾರ್ಥಿ ಪರಾರ್ಥಿ, ದಿ. ಹನಮಿ ದುರ್ಗ ಪಟಗಾರರ ಮಾರಹಂಚು, ಉ.ಕ. ಜನಪದ ಕಥೆಗಳು ಓದುಗರ, ಕೇಳುಗರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವಷ್ಟು ಪ್ರಭಾವಕಾರಿಯಾಗಿವೆ. ಮದ್ಗಣಿಯ ಜಟ್ಟಿ ಪಟಗಾರರ ಠಕ್ಕ ಠಕ್ಕ ಜಗಠಕ್ಕ ಹಾಗೀ ಜೀವರತ್ನದ ಸಣ್ಣಕ್ಕಿ (ಅಪೂರ್ವ ಮೃದಂಗ ಸಂಗ್ರಹ), ಕೂಡ್ಲ ಪಟಗಾರರ ಹೆಂಡತಿಯನ್ನು ಪಳಗಿಸುವ ವಿದ್ಯೆ (ನಮ್ಮ ಜನಪದ ಕಥೆಗಳು) ಹೆಗಡೆಯ ದಿ. ಪಟಗಾರರ ಸತ್ತ ಮೀನ ನಡೆಯಾಡಿತು. (ಕರ್ನಾಟಕ ಜನಪದ ಕಥೆಗಳು ಸಂ. ಶ್ರೀ. ನಾಗೇಗೌಡ ಕಸಾಪ ಬೆಂಗಳೂರು).

ಪ್ರಕೃತ ಸಂಕಲನವು ಇನ್ನೂ ಕೆಲವರು ಉತ್ತಮ ಕಥೆಗಳ ಪರಿಚಯಕ್ಕೆ ಅನುವಾಗಿದೆ. ಮೊಸಳೆ ಸಾಲಿನ ಶ್ರೀ ಥಾಕು ಪಟಗಾರರ ನಿರೂಪಣೆಯಲ್ಲಿ ಶುದ್ಧಭಾಷಾ ಸರಣಿಯನ್ನು ಕಾಣಬಹುದು. ಒಂದೆರಡು ಕಥೆಗಳ ಮುಂದಿನ ಭಾಗ ಮರೆತಿದ್ದರು ಅವರು

“ರಾಗಿ ಕಲ್ಲು ತರಲು ಹೊರಟವ” ಕಥೆಯ ಇರುಳುಗಳ್ಳರ ಕೂಡ ಸೇರಿದ ಮರುಳನಂತೆ ಇರುವ ಅಜ್ಜಿ ಮೊಮ್ಮಗನ ಸರಳತೆಯನ್ನು ನಾವು ಮೆಚ್ಚುತ್ತೇವೆ. “ನಗದರಸು ಮಗ” ಕಥೆಯಲ್ಲಿ ಮುಂದಿನ ಕಥೆಯನ್ನು ತಕ್ಕೊಳ್ಳದೆ ಮೊದಲನೆಯ ಭಾಗದಲ್ಲಿ ರಾಣಿಯು ಕುದುರೆಯ ಕಾಸದಾರನನ್ನು ಮೋಹಿಸಿದ ತೀರ ಪ್ರಾಚೀನ ಕಾಲದಿಂದಲೂ ಇದ್ದ ಕಥೆಯ ಒಂದು ಉತ್ತಮ ಪಾಠವನ್ನು ಉಳಿಸಿಕೊಂಡಿರುತ್ತೇನೆ. ಇಲ್ಲಿ ಬೇರೆ ಪಾಠದಲ್ಲಿ ಕುರುಬನು ಕಾಸದಾರ ಮತ್ತು ರಾಣಿಯ ಏಕಾಂತ ಪ್ರಸಂಗವನ್ನು ನೋಡಿದಂತೆ ಹೇಳದೆ ಗಂಡನೇ ಅಲ್ಲಿ ಹಾಜರಿದ್ದ ಎಂದೂ ಅವನೇ ಅವಳು ಕಾಸದಾರ ಪೆಟ್ಟು ಕೊಟ್ಟು “ಆಗಿನ ಹೊಡೆತಕ್ಕೆ ಈಗಿನ ಜಡಿತಕ್ಕೆ ನಿನ್ನ ಉದರದೊಳಗೆ ಹೇಗೆ ಕಾಣ್ತದೆ” ಎಂದು ಕೇಳಿದಾಗ “ಮೂರುಲೋಕ ಕಾಣ್ತದೆ” ಎಂದು ಬೇರೆ ಪಾಠದಲ್ಲಿ ಅವಳ ಉತ್ತರ ಬಂದಾಗ “ಹಾಗಾದರೆ ಕಳೆದು ಹೋದ ತನ್ನ ಕಂಬಳಿ ಎಲ್ಲಿದೆ?” ಎಂದು ಕೇಳಿದ್ದು ಉಂಟು. ಇಲ್ಲಿ ಸ್ವಾಮಿ, “ಆ ಲೋಕ ಈ ಲೋಕ ಹದ್ನಾಲ್ಕೆ ಲೋಕಸಗೆ ನನ್ನ ಉದರದಲ್ಲಿ ಕಾಣ್ತದೆ” ಎಂದು ಹೇಳಿದಾಗ ಗಂಡನೇ “ತನ್ನ ಕಳೆದು ಹೋದ ಕಂಬಳಿ ನಿನ್ನ ಉದರದಲ್ಲಿ ಕಾಣ್ತದೋ?” ಎಂದು ಕೇಳುವ ಸರಣಿಯಲ್ಲಿ ವೈಶಿಷ್ಟ್ಯವಿದೆ. ಗಂಡನ ಗುರುತು ತಿಳಿದು ತಂದೆಗೆ ದೂರು ಕೊಟ್ಟ ಮೇಲೆ ಇವನಿಗೂ ವಧಿಸಲು ರಾಜ ಹೇಳಿದ್ದು ಪೊಲೀಸರು ಕೊಲ್ಲದೆ ಬಿಟ್ಟರು.

‘‘‘ತಪ್ಪಿಸಲಾಗದ ಗಂಟು’’’ ಕಥೆಯ ಪ್ರಾರಂಭವೇ ಬಹಳ ಕುತೂಹಲವನ್ನುಂಟು ಮಾಡುವಂತಿದೆ. ಈ ಗಂಡಿಗೆ ಈ ಹೆಣ್ಣು ಎಂದು ಬ್ರಹ್ಮನೇ ಗಂಟು ಹಾಕುವನೆಂಬ ನಂಬಿಕೆಯು ಈ ಆಶಯವನ್ನು ರೂಪಿಸಿರುವುದಾದರೂ ಮುದಿ ಬ್ರಾಹ್ಮಣ ಬ್ರಹ್ಮನೇ ಎಂದು ತಿಳಿವಂತಿಲ್ಲ. ಬ್ರಾಹ್ಮಣ ತರುಣನು ಚಮಗಾರ ಹುಡುಗಿಯನ್ನು ಲಗ್ನವಾಗುವನೆಂದು ತಿಳಿದ ಹುಡುಗನು ಅದನ್ನು ತಪ್ಪಿಸಿಕೊಳ್ಳಲು ಮಾಡಿದ ಹಂಚಿಕೆ ಇವನೀಗೆ ಎರಗಿತು. ಹುಡುಗಿಯನ್ನು ಇಲ್ಲಿ ನೀರಿಗೊಗೆದ ಪೆಟ್ಟಿಗೆ ರಾಜನ ಮನೆ ಸೇರಿತು. ಅರಸನ ಮನೆಯಲ್ಲಿ ದೇವರ ಪೂಜೆ ಮಾಡುತ್ತಿದ್ದ ಹುಡುಗ ಅಲ್ಲಿ ಶಿಶುವನ್ನಿಟ್ಟು ಬಿಟ್ಟಿದ್ದ ಪೆಟ್ಟಿಗೆಯನ್ನು ನೋಡಿ ಸಂಶಯ ಬಂದು ಕೇಳಿದ್ದು ಮತ್ತು ಹಣೆ ಬರಹ ತಪ್ಪದಿದ್ದ ನಿರೂಪಣೆ ಒಳ್ಳೇ ಕಲಾತ್ಮಕವಾಗಿದೆ. ಒಂದು ಮಾತು ಹೆಚ್ಚಿಲ್ಲ ಒಂದು ಕಡಿಮೆಯಿಲ್ಲ ಎಂಬಂತೆಅತಿಶಯ ಕಲಾತ್ಮಕವಾದ ರೀತಿಯಲ್ಲಿ ಕತೆ ಹೇಳಲಾಗಿದೆ.

ಈ ಕಥೆಯ ಮಹತ್ವ ಇಷ್ಟೇ ಅಲ್ಲ. ಪ್ರಾಚೀನ ಕಾಲದಲ್ಲಿ ಸಾವಿರ ವರ್ಷಗಳ ಹಿಂದೆ ಜಾತಿಕಟ್ಟು ರೂಠವಾದ ಕಾಲದಿಂದಲೂ ಕೀಳು ಜಾತಿ ಸೇರಿಸಿಕೊಳ್ಳದಿದ್ದರೂ ಅನುಲೋಮ ವಿವಾಹಗಳನ್ನು (ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು ಕಡಿಮೆ ದರ್ಜೆಯ ಜಾತಿಗಳ ಹೆಣ್ಣುಗಳನ್ನು ಮದುವೆಯಾಗುವುದು) ಸಮಾಜ ಒಪ್ಪಿಕೊಳ್ಳುತ್ತಿತ್ತು. ಇದನ್ನು ಇಂಥ ಕಥೆಗಳು ಸಮರ್ಥಿಸುತ್ತದೆ.)

ಅರಸರು ಯಾವುದೇ ಜಾತಿಗಳವರ ಹೆಣ್ಣುಗಳನ್ನು ಭೇದ ಎಣಿಸದೆ ಮದುವೆಯಾಗುತ್ತಿದ್ದರು. ಈ ಕಥೆಯಲ್ಲಿನ ಮದುವೆಗೆ ದೈವ ಸಂಕಲ್ಪ ಕಾರಣ ಎಂಬುದು ಸೂಚಿತವಾಗಿದೆ. ಬದುಕು ಜಟಕಾಬಂಡಿ ವಿಧಿಯದರ ಸಾಹೇಬ.

ಮೇಲ್ಜಾತಿಗಳ ಹೆಣ್ಣುಗಳು ತಿಳಿದೋ ತಿಳಿಯದೆಯೋ ಹೇಗೋ ಕೆಳಜಾತಿಯ ಗಂಡುಗಳನ್ನು ಮದುವೆಯಾಗುತ್ತಿದ್ದರು. ಪ್ರತಿಲೋಮ ವಿವಾಹಗಳನ್ನು ಸಾಮಾನ್ಯವಾಗಿ ನಿಷೇಧಿಸಿದ್ದರೂ ಇವು ಸಹ ಗಣನೀಯ ಸಂಖ್ಯೆಯಲ್ಲಿ ನಡೆಯುತ್ತಿದ್ದವು. ಪಂಥ ಗೆದ್ದಾಗಲಾಗಲಿ, ಪ್ರೀತಿ ಬಿದ್ದಾಗಲಾಗಲಿ ಜಾತಿಯ ವಿಷಯಕ್ಕೆ ಮಹತ್ವವಿರಲಿಲ್ಲ. ನಲವು ಜಾತಿಯ ಮೀರಿ ನೆಲಸಿರುವುದು.

‘‘ಅರೆಬರೆ ಕತೆ’’ ಅಪ್ರಬುದ್ಧನಾದ ಹುಡುಗನನ್ನು ಪ್ರಬುದ್ಧ ಸ್ತ್ರೀಯು ಅನುಭವಿ ತರುಣಿಯಾಗಲಿ, ವೇಶ್ಯೆಯಾಗಲಿ ಹೇಗೆ ಆಕರ್ಷಿಸಿ ತನ್ನ ವಶ ಮಾಡಿಕೊಳ್ಳುವಳೆಂಬುದನ್ನು ಚಿತ್ರಿಸುತ್ತದೆ. ದೊಡ್ಡ ಕಥೆಯನ್ನು ಕೇಳಿದ್ದರೂ ಶ್ರೀ ಥಾಕು ಅವರು ಅದನ್ನು ಮರೆತು ತೀರ ಸಂಕ್ಷಿಪ್ತವಾಗಿ ಹೇಳಿರುವುದು ಮತ್ತು ಮುಂದಿನ ಭಾಗ ಮರೆತಿರುವುದು ಸ್ಪಷ್ಟವಾಗುತ್ತದೆ.

‘‘ಮೂರು ಕೊಡ ನೀರನ್ನು ತಂದವಳು’’ ಕಥೆಯಲ್ಲಿ ಆಳಿನ ಮಗಳು ಕೊಡ ತಕ್ಕೊಂಡು ಹೊಳೆ ನೀರಿಗೆ ಹೋಗಿದ್ದಳು. ಇದರಿಂದ ಬಾವಿಯಿಂದಲೇ ನೀರನ್ನು ಸೇದಿ ಉಪಯೋಗ ಮಾಡಿಕೊಳ್ಳುವ ಕರಾವಳಿಯ ಕಥೆಯಲ್ಲ ಇದು ಘಟ್ಟದ ಮೇಲಿನ ಕಥೆ ಎಂದು ಅನುಮಾನಿಸಬಹುದು. ಇಲ್ಲಿ ರಾಜನು ಅವಳನ್ನು ನೋಡಿ ಮರುಳಾಗಿ ಆಳಿನ ಮಗಳೆಂದು ಗೊತ್ತಿಲ್ಲದೆ ಅವಳನ್ನು ಹುಡುಕಿ ತರಲು ಹೇಳಿ ಅದು ತನ್ನ ಮಗಳೆಂದು ತಿಳಿದ ಮೇಲೆ ಆಳು ರಾಜನಿಗೆ ಹೇಳಲಿಲ್ಲ. ರಾಜನು ಕಾಮತುಲಸಿ ಗಿಡದ ತೆನೆ ತಗೊಂಡು ಬಾ ಎಂದು ಆಳಿಗೇ ಆಜ್ಞೆ ಮಾಡಿದ ಮೇಲೆ ಹುಡುಗಿಯು ಗಂಡು ವೇಷಧರಿಸಿ ಗಿಳಿ ಸಮೇತ ರಾಜನ (ಆ ಗಿಡ ಇದ್ದವನ) ಮನೆಗೆ ಹೋಗಲಿ ಇವಳ ಗಿಳಿಯೇ ತಿಳಿವಳಿಕೆಯನ್ನು ಕೊಟ್ಟಿದ್ದಿರುವಂತಿದೆ. ಇದನ್ನು ಹೇಳಲಿಲ್ಲ. ಆ ಮತ್ತೊಬ್ಬ ರಾಜನ ಗಿಳಿಯು ರಾಜನಿಗೆ ಇವಳು ಹುಡುಗಿಯೇ ಹುಡುಗನಲ್ಲ ಎಂದು ಹೇಳಿ ಪರೀಕ್ಷೆ ಮಾಡುವ ಎರಡೇ ಆಶಯಗಳು ಇಲ್ಲಿವೆ. ಅದರಲ್ಲಿ ಹೆಚ್ಚು ಪರೀಕ್ಷೆ ನಮ್ಮ ಬೇರೆ ಕಥೆಗಳಲ್ಲಿರುವಂತೆ ಇದ್ದಿರಬೇಕು. ಗಿಳಿಗಳ ಸಲಹೆ ಬೇರೆ ಕಥೆಗಳಲ್ಲೂ ಇವೆ. ಕಥೆಯೂ ಚಿಕ್ಕದಾದರೂ ಚೆನ್ನಾಗಿದೆ.

“‘ಪದ್ಮಾಕ್ಷಿ ಸೂಳೆ ಕತೆ’” ಚಿಕ್ಕ, ಆದರೆ ವಿಶಿಷ್ಟ ರೀತಿ ಕತೆ. ಪ್ರಾರಂಭದಲ್ಲಿ ಮೂವರು ಗಂಡು ಮಕ್ಕಳು ಅರಸನ ಹತ್ತರ ಹಾಸಿಗೆ ಪಡೆದು ಒಂದೊಂದು ತರದ ತಕರಾರು ಹೇಳಿದ್ದು ‘ನಾಲ್ವರು ಜಾಣರು’ ಜನಪದ ಮತ್ತು ಗಿರಿಜನರ ಕಥೆಯ ಹೋಲಿಕೆಯ ಆಶಯಗಳುಳ್ಳದ್ದಾದರೂ ವೈಶಿಷ್ಟ್ಯಗಳಿಲ್ಲದೆ ಇಲ್ಲ. ಮೂರನೆಯವನ ಹಾಸಿಗೆಗೆ ಹೆಣದ ವಾಸನೆ ಎಂಬಲ್ಲಿ ಹೆಣ ಸುಟ್ಟು ಬೂದಿ ಬಿದ್ದು ಬೆಳೆದ ಗದ್ದೆಯ ಬದಿ ಬೆಳೆದ ಮುಂಡಿಗೆ ಚಾಪೆಯಲ್ಲಿ ಹೆಣದ ಪರಿಮಳವಿದ್ದುದರ ಸೂಕ್ಷ್ಮ ವಾಸನೆ ಬಡಿದ ಕಿರಿಯವನು ಆ ವಾಸನೆ ಪತ್ತೆ ಹಚ್ಚಿದ್ದ ನಾಜೂಕು ಹೆಚ್ಚಿನದಾಗಿದೆ. ಹಣ ಪಡೆದು ಸೂಳೆ ಮನೆಗೆ ಹೋದವರಲ್ಲಿಯೂ ಕಿರಿಯವನೇ ಬುದ್ದಿವಂತ.

ಬೋಕಣಾಚಾರಿಗೆ ಬಂದಿ ಸೇದರು ತಂದುಕೊಟ್ಟ ಮೇಲೆ ಸೂಳೆಯ ಮನೆಗೆ ಹೋಗುವ ಅಲ್ಲಿಯ ಗಂಡಾಂತರ ತಪ್ಪಿಸಿಕೊಳ್ಳುವ ಉಪಾಯ ಬೊಕಣಾಚಾರಿ ತಿಳಿಸುವಲ್ಲಿ ಬಾಗಿಲಲ್ಲಿ ಬೊಂಬೆ ನಿಂತು ಕತ್ತಿ ಹಿಡಿದು ಕಡಿವ ವ್ಯವಸ್ಥೆಯ ಆಶಯ ಭಾಗ ತುಂಬಾ ಕಲ್ಪನಾರಮ್ಯವಾಗಿದೆ. ಕತ್ತಿಯಿಂದ ಕಡಿಯುತ್ತಿತ್ತು ಬೊಂಬೆ; ಅದರ ಕಂಕುಳಲ್ಲಿ ಮೊಳೆ ಹಾಕಿ ತಿರುಗಿಸಿದರೆ ಕೈ ಕಳಚಿ ಬೀಳುತ್ತದೆ; ವಾ? ಎಂಥ ಚಮತ್ಕಾರದ ಆಶಯ; ಅದರಂತೆ ಹೊಳೆದಾಟಲು ಬೊರಡಗಾಯಿ (ನೀರು ಬರಿದಾದ ಕಾಯಿ) ಬಿಟ್ಟು ಅದು ಹೋದ ಹಾದಿಗೆ ದಿಕ್ಕಿನ ಗುಂಡ ಹೋಗಬೇಕು. ಹಿಂದಿನ ಕಾಲದಲ್ಲಿ ಯಂತ್ರಮಾನವ ಹಾಗೂ ಯಂತ್ರ ಪ್ರಾಣಿಗಳನ್ನು ಉಪಯೋಗಿಸುತ್ತಿದ್ದುದು ತಿಳಿದು ಬರುತ್ತದೆ. ಬಾಸನ ಪ್ರತಿಜ್ಞಾ ಯೌಗಂಧರಾಯಣ ನಾಟಕದಲ್ಲಿ ಯಂತ್ರದಿಂದ ಮಾಡಿದ ಆನೆ ಬರುತ್ತದೆ.

ಸೂಳೆಯ ಮನೆಯಲ್ಲಿ ಪದ್ಮಾಕ್ಷಿ ತನ್ನ ಬದಲು ದಾಸಿಯರನ್ನು ಕಳಿಸಿದ್ದು, ಇವರ ಪತ್ತೆ ಮಾಡಿ ಅವರನ್ನು ಹೊಡೆದು ಕಳಿಸಿದ್ದು ಕಿರಿಯನ ಚತುರತನಕ್ಕೆ ನಿದರ್ಶನ.

ಕಿರಿಯವ ಬೇರೋಬ್ಬನ ಮನೆಗೆ ಹೋಗಿದ್ದಾಗ ಅಲ್ಲಿ ತೀಡಿದ (ಅತ್ತ) ಮಗನನ್ನು ಒಲೆಯಲ್ಲಿ ಹಾಕು ಎಂದು ಸಿಟ್ಟಿನಿಂದ ಗಂಡ ಹೇಳಿದಂತೆ ಅವಳು ಬೆಂಕಿಯಲ್ಲಿ ಹಾಕಿ ಶಿಶು ಸತ್ತ ಆಶಯವು ವಿಚಿತ್ರತರದ್ದು.

ಐವರು (ನಾಲ್ವರು?) ಉಳಿದವರು ಸೂಳೆ ಮನೆಗೆ ಸುರಕ್ಷಿತವಾಗಿ ತಲ್ಪಲು ಸಾಧ್ಯವಾದದ್ದು ಕಿರಿಯ ಉಪಾಯಗಳಿಂದ; ಅದರಿಂದಲೇ ಪದ್ಮಾಕ್ಷಿ ಸೂಳೆ ಇವನನ್ನು ಕೊಂಡಕ್ಕೆ ಹಾಕಿ ಕೊಲ್ಲಿಸದೆ ಲಗ್ನವಾದದ್ದು.

ಒಂದೆರಡು ವಾಕ್ಯ ಬಿಟ್ಟು ಹೋದಂತಿದ್ದರೂ ಕಥೆಯು ಉತ್ತಮವಾಗಿದೆ.

ಪ್ರಾಚೀನ ಕಾಲದಲ್ಲಿ ಯಂತ್ರ ಮಾನವ, ಯಂತ್ರ ಪ್ರಾಣಿಗಳು ಇರುತ್ತಿದ್ದುದು (ಪ್ರತಿಜ್ಞಾ ಯೌಗಂಧರಾಯಣ ಎಂಬ ಭಾಸನ ರೂಪಕದ್ದು ಯಂತ್ರಮಯವಾದ ಆನೆ ಬರುತ್ತದೆ.) ರೊಬೋಟ್ ಬರೇ ಕಲ್ಪನೆಯಾಗಿರಲಿಲ್ಲ. ವಾಸ್ತವಿಕವಾಗಿ ಅವು ಇದ್ದವು ಎಂದು ತಿಳಿಯುತ್ತದೆ.

“‘ಹೆಂಡತಿಯಲ್ಲ, ತಂಗಿ’” ಕಥೆಯಲ್ಲಿ ಬದಲಿಸಿದ ಪತ್ನಿ ಸಬ್‌ಸ್ಟಿಟ್ಯೂಟ್ ಬ್ರ್ಯಾಡ್ ಎಂಬ ಮುಖ್ಯ ಆಶಯವಿದೆ. ತನ್ನ ಮಗಳನ್ನು ಹಿರಿಯಳ ಮಗಳ ಬದಲಿಗೆ ಅಳಿಯನ ಹೆಂಡತಿಯನ್ನಾಗಿ ಮಾಡಲು ಆ ಹೆಂಡತಿಯ ಕೊಲೆ ಮಾಡಿದುದ್ದಲ್ಲದೆ (ಗಂಡನ ಒಂದನೆ ಹಂಡತಿ) ಪಾಯಖಾನೆಯಲ್ಲಿ ಹಾಕಿದಳು. ರಾತ್ರಿ ಮಗಳನ್ನು ಅವನ ಹಾಸಿಗೆಗೆ ಕಳುಹಿಸಿದಾಗ ಅವಳನ್ನು ಮುಟ್ಟಲೂ ಇಲ್ಲ. ಅವನು ತನ್ನ ಹೆಂಡತಿಯಲ್ಲ, ತಂಗಿ ಎಂದು ಆಕೆಯ ತಾಯಿಗೆ ಹೇಳಿ ಹೆಂಡತಿಯನ್ನು ಕೊನೆ ಮಾಡಿದ್ದನ್ನು ತಿಳಿಸಿದನು. ಇಲ್ಲಿ ಸಾಮಾನ್ಯವಾದ ಜನಪದ ಕಥೆಯ ಮುಕ್ತಾಯವು ಹೆಂಡತಿಗೆ ಜೀವ ಬಂದು ಪುನಃ ಗಂಡನನ್ನು ಸೇರಿಕೊಳ್ಳುವುದು; ಇಲ್ಲಿ ಹಾಗಾಗಲಿಲ್ಲ. ಹೆಣ ತೆಗೆದು ಅದನ್ನು ಸುಟ್ಟು ಹಾಕಿಸಿದ್ದು ಅತಿಶಯ ವಿಶೇಷವಾದ ಮುಕ್ತಾಯ. ಮುಂದೆ ಅವನು ಮತ್ತೆ ಮದುವೆಯಾದನೋ ಎಂದು ನಿರೂಪಕ ಹೇಳದೆ ಕತೆ ಮುಗಿಸಿದ.

“‘ದೈವಗತಿ’” ಕಥೆಯಲ್ಲಿನ ಅಣ್ಣಂದಿರು ಮತ್ತು ಹೆತ್ತ ತಾಯಿಯ ಕ್ರೌರ್ಯವನ್ನು ಅಸಾಮಾನ್ಯವಾದ ರೀತಿಯಲ್ಲಿ ಚಿತ್ರಿಸಲಾಗಿದೆ. ಬೇರೆ ಊರ ಅರಸನ ಮಗಳು ಕಟ್ಟೆಯ ಮೇಲೆ ಮಲಗಿದ್ದವನನ್ನು ಮೋಹಿಸಿ ಆಹಾರ ತಂದು ಅವನಿಗೆ ಉಣಿಸಿ ಅಪ್ಪನ ಸಮ್ಮತಿಯಿಂದ ಮದುವೆಯಾಗಿ ರಾಜನ ಅಳಿಯನಾಗುತ್ತಾನೆ ಆತ. ಆತನ ಕಿರಿ ಅತ್ತಿಗೆ ಅವನ ಮನಮುಚ್ಚಲು ಬಟ್ಟೆಕೊಟ್ಟಿದ್ದಕ್ಕೆ ಅವಳಿಗೆ ಮನ್ನಣೆ ಮಾಡಿದ್ದು ಸಹಜವಾದರೂ ಅಣ್ಣಂದಿರ ಹಾಗೂ ತಾಯ ತಮ್ಮನಿಗೆ ಬಂದ ಭಾಗ್ಯವನ್ನು ಸ್ವಲ್ಪದರಲ್ಲಿ ನಿರೂಪಿಸಲಾಗಿದೆ.

‘‘ಕೆಪ್ಪ-ಕೆಪ್ಪಿಯ ಕಥೆ’’ ತುಂಬಾ ಸ್ವಾರಸ್ಯವಾಗಿ ನಿರೂಪಿತವಾಗಿದೆ.

‘‘ಮಾಲಕ್ಷ್ಮಿಯ ಭಾಗ್ಯ’’ ಸಾಮಾನ್ಯ ಜನರಲ್ಲಿ ಕಾಣುವ ಕವಿ ಹೃದಯದ ನಿರೂಪಣೆಯಿಂದ ಮೆಚ್ಚಿಗೆ ಪಡೆಯುತ್ತದೆ. ಇದು ಮೊದಲ ಗೀತ ರೂಪದಲ್ಲಿ ರಚಿತವಾಗಿದ್ದರಬಹುದು ಎನ್ನಲು ಇಲ್ಲಿಯ ಪ್ರಾಸಬದ್ಧ ಮತ್ತು ಲಯಬದ್ಧ ಶೈಲಿ ಸೂಚಕವಾಗುತ್ತದೆ. ಹಣಕ್ಕಾಗಿ ದಾಗೀನಗಳಿಗಾಗಿ ತಮ್ಮ ಸ್ವಂತ ತಂಗಿಯನ್ನೇ ಕೈಯಾರೆ ನೂಕಿ ಸಾಯಿಸುವ ದೃಷ್ಟವೃತ್ತಿಯನ್ನು ಇಲ್ಲಿಯ ಅಕ್ಕತಂಗಿಯರು ತೋರುತ್ತಾರೆ.ಆದರೆ ಅವಳು ಇವರು ತಿಳಿದಿದ್ದಂತೆ ಸಮುದ್ರದಲ್ಲಿ ಮುಳುಗಿ ಸತ್ತಿರಲಿಲ್ಲ. ಕೇದಿಗೆ ಮುಂಡಿಗೆ ಗಿಡದ ಆಶ್ರಯದಲ್ಲಿ ಅವಳು ಉಳಿದಿದ್ದು ಹೂವಾಗಿ, ಬೇರೆ ತರ ಗಿಡ ಮುಂತಾದ ಪರಿವರ್ತನೆ ಪಡೆದು ಮುಂದೆ ಬದುಕಿದ್ದ ಕಥೆಗಿಂತಲೂ ಈಸಿ ಹೋಗಿ ಸಾಹಸ ಮಾಡಿ ಅವರನ್ನು ಹಿಡಿದು ಹೆಗಲಿಗೇರಿಸಿಕೊಂಡು ಈಸುತ್ತ ದಡ ಸೇರಿದ ಸಾಹಸವು ಪ್ರಶಂಸನೆಗಳಿಸುತ್ತದೆ. ಅದರಂತೆಯೇ ಅವನ ಔದಾರ್ಯವೂ ಮೆಚ್ಚಿಗೆ ಪಡೆಯುತ್ತದೆ.

‘ಉಪಾಯ’ ಕಥೆಯಲ್ಲಿನ ವಿಶೇಷ- ಸೊಸೆಯು ತನ್ನನ್ನು ಈಡಿಗಮೇಲೆ ಭಾರ ಹೇರಿ ಮಲಗಿಸಿದ್ದರೂ ಸಂಧ ಸಾಧಿಸಿ ಎದ್ದು ಬಂದು ಅತ್ತೆಯನ್ನು ಸತ್ತ ಮಾವ ಕರೆದಿದ್ದಾನೆಂದು ಅವಳನ್ನು ಸಾವಿಗೆ ಗುರಿ ಮಾಡುವ ಉಪಾಯ ಶ್ಲಾಘನೀಯವಾಗಿದೆ.

‘ಕಾಗದ-ಶಾಯಿ’ ಕಥೆಯ ರಾಜನು ಹೆಂಡಂದಿರ ಜಗಳವನ್ನು ಪರಿಹರಿಸಿದ ಜಾಣ್ಮೆ ನಿರೂಪಕನ ಜಾಣ್ಮೆಯ ದ್ಯೋತಕವೂ ಆಗಿದೆ.

‘‘ಮಾಯಾ ರಾಕ್ಷಸಿ’’’ ಕಥೆಯು ಸ್ಥೂಪವಾಗಿ ‘ರಾಕ್ಷಸಿ ರಾಣಿ’ (ಅಪ್ರಕಟಿತ) ಕಥೆಯ ಹೊಲಿಕೆ ಪಡೆದಿರುವುದರಿಂದ ಪ್ರತ್ಯೇಕ ವೈಶಿಷ್ಟ್ಯಗಳುಳ್ಳ ಕಥೆಯೆಂದು ಪರಿಗಣಿಸಬಹುದು. ರಾಕ್ಷಸಿಯು ನಮ್ಮ ಪುರಾಣ ಕಲ್ಪನೆಯಲ್ಲಿಯಂತೆ ಕಾಮರೂಪಿಣಿಯು. ಬೇಕಾದ ಆಕಾರ ಪಡೆವ ಶಕ್ತಿ ಅವಳಲ್ಲಿತ್ತು. ಇಲ್ಲಿ ದೇವಾಲಯಗಳಲ್ಲಿ ರಾತ್ರಿಯಲ್ಲಿ ಜಗ್ಗನೆ ದೀಪವು ಹೊತ್ತಿಕೊಂಡು ಸುಂದರ ತರುಣಿಯು ತಂಬೂರಿ ತಾಳ ಹಿಡಿದುಕೊಂಡು ಭಜನೆ ಮಾಡುತ್ತ ಕುಣಿಯಹತ್ತಿದಳು. ಮೂರು ತಾಸು ಕಾಯುತ್ತಿದ್ದ ಪ್ರಧಾನಿ ಹುಡುಗ ಮರುಳಾದ ಅವಳಿಗೆ (ಬುದ್ಧಿವಂತನಾಗಿರಬೇಕಾಗಿದ್ದ ಈತ ರಾಕ್ಷಸಿಯ ಮೊದಲನೆ ಬಲಿಯಾದುದು ವಿಶೇಷ) ಅವನು ಬುದ್ದಿವಂತನಲ್ಲದಿದ್ದರೆ ಅರಸು ಮಗನಿಗೆ ಬಂದ ಕಂಟಕಗಳನ್ನು (ಹಕ್ಕಿಗಳ ಸಂಭಾಷಣೆಯಿಂದ ತಿಳಿದು) ಅವನಿಗೆ ರಹಸ್ಯಕೊಡನೆ ಅವನ ಕಂಟಕಗಳಿಂದ ಪಾರು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಮೋಹದ ಬಲೆಯಲ್ಲಿ ಬಿದ್ದಿದ್ದವನು. ದೀಪ ನೊಂದಿಸಿ ಭಯಂಕರ ರಾಕ್ಷಸಿ ರೂಪದಿಂದ ಅವನನ್ನು ತಿಂದು ಬಿಟ್ಟಳು.

ಅರಸನ ಹುಡುಗನು ಪಾಟಿವಾಲ, ಪ್ರಧಾನಿ ಹುಡುಗ ಇವರಿಗೆ ಆಗಿದ್ದ ಮರಣದ ರೀತಿ ತಿಳಿದು ಗಂಡಾಂತರ ಊಹಿಸಿ ಓಡಿ ಹೋದ. ರಾಕ್ಷಸಿ ಅವನ ಬೇತನ್ನು ತಿಳಿದು ಪ್ರಧಾನಿ ಮಗನ ಕುದುರೆ ಹತ್ತಲು ಅವಕಾಶ ನೀಡದೆ, ಅದನ್ನೂ ತಿಂದು ಅವನ ಹಿಂದೆ ಕುದುರೆ ಹತ್ತಿ ಓದಿ ಬಂದಳು (ಇಲ್ಲಿ ಬೇರೆ ಕಥೆಗಳ ಹೋಲಿಕೆ ಕಾಣುತ್ತದೆ)

ಮುಂದಿನ ಊರಿನ ಅರಸು ಇವಳಿಗೆ (ಮಾಯಾ ರೂಪಿಗೆ) ಮರುಳಾಗಿ ತನ್ನ ರಾಣಿಯಾಗಲು ಒಪ್ಪಿಸಿದುದರಿಂದ ಕಥೆಗೆ ಬೇರೆ ತಿರುವು  ಬರುತ್ತದೆ.

ರಾಜನ ಮೂವರು ಹಿರಿರಾಣಿಯರು ಗರ್ಭಿಣಿ ಆದ ಮೇಲೆ ಅವರ ಕಣ್ಣು ಕೀಳಿಸಲು ರಾಜನಿಗೆ ಒತ್ತಾಸೆ ಮಾಡಿದುದು ನಮ್ಮ “ಸಿದ್ಧಿಯರ ಕಥೆಗಳು” ಗ್ರಂಥದ “ಹರಕೆಯ ಹುಡುಗ” ಕಥೆಯ ಬೇರೆಯೇ ಸನ್ನಿವೇಶದ ನೆನಪನ್ನು ತರುತ್ತದೆ. ಅಷ್ಟೇ, ಆ ರಾಣಿಯರು ಶಿಶುಗಳ ಪಾಲು ಮಾಡಿಕೊಂಡು ತಿನ್ನುವ ಸಂದರ್ಭದಲ್ಲಿ ಮೂರನೇ ರಾಣಿ ತನ್ನ ಶಿಶುವನ್ನು ಕಾಪಾಡಿ, ಅವರ ಕೊಟ್ಟು ಶಿಶುಗಳ ತುಂಡುಗಳನ್ನೇ ಅವರಿಗೆ ನೀಡಿದ್ದು ಬೇರೆ ಇಂಥ ಕಥೆಗಳಲ್ಲಿದೆ.

ಮುಂದಿನ ಘಟನೆಗಳು (ಗೂಗೆ ಮರಿ ಕಾಪಾಡಿ ಸಹಾಯ ಪಡೆದದ್ದು) ಬೇರೆ ಕಥೆಗಳ ಆಶಯಳನ್ನು ಹೋಲುತ್ತಿದ್ದು ವ್ಯತ್ಯಾಸ ವಿವರಗಳಲ್ಲಿವೆ. ಮೂರನೆಯ ರಾಣಿಯ ಮಗನನ್ನು ಕಠಿಣ ಕೆಲಸ ಮಾಡಲು ರಾಕ್ಷಸಿ ರಾಣಿ ಕಳಿಸಲು ಯೋಜಿಸಿದ ಕಠಿಣ ಕಾರ್ಯ ವಿವರಗಳು ಇಲ್ಲಿ ಬೇರೆಯಾಗಿವೆ.

ಹಿರಿರಾಕ್ಷಸಿ ಮಗಳಿಗೆ ಹುಡುಗನ ಮೇಲೆ ಪ್ರೇಮವಾಗಿ ಒಳ್ಳೆ ಸ್ವಭಾವದ ತಾಯಿಯ ಸಹಾಯ ಅವಿಗೆ ದೊರಕುತ್ತದೆ. ಇಂಥ ಕಥೆಗಳಲ್ಲಿ ಹರಳು ಮಂತ್ರಿಸಿಕೊಟ್ಟು ಅವುಗಳಿಂದ ಕಾರ್ಯಸಾಧನೆ ಮಾಡುವುದು ಜನಪದ ಕಥೆಗಳಲ್ಲಿ ಸಾಮಾನ್ಯವಾದರೂ ಕಥಾ ಕೌತುಕ ಕಡಿಮೆಯಾಗುವುದರಿಂದ ಇವು ಕಥೆಯ ದೌರ್ಬಲ್ಯ ಸಂಧಿಗಳು. ಒಟ್ಟಿನಲ್ಲಿ ಉತ್ತಮ ಕಥೆ. ದಿ. ಡಾ. ಏ.ಕೆ. ರಾಮಾನುಜನ್‌ ಅನುವಾದಿಸಿ ಪ್ರಕಟಿಸಿದ್ದ “The Oqress queen” ಎಂಬ ಕಾಶ್ಮೀರಿ ಕಥೆಯನ್ನು ಇಲ್ಲಿನ ಕಥೆ ಸ್ಥೂಲವಾಗಿ ಹೋಲುತ್ತದೆ. “Folk Tales from India” (Penguin)

‘‘ಚಂದ್ರಕಾಂತಿ-ಸೂಲಿಕಾಂತಿ’’ ಕಥೆಯು ಒಂದು ರಮ್ಯ ಕಥೆಯಾಗಿದೆ. ಮಕ್ಕಳೇ ಇಲ್ಲದ ರಾಜನಿಗೆ ಚಂದ್ರಕಾಂತಿ ಎಂಬ ಹೆಸರನ್ನು ಇಡುವಂತೆ ಹೇಳಿ ಈಶ್ವರ ದೇವರು ಅನುಗ್ರಹ ಮಾಡಿದ್ದಲ್ಲದೆ ಮುಂದೆ ಪ್ರಧಾನಿಯ ಹುಡುಗನು ಅರಸು ಮಗನ ಕೈ ಕಾಲು ಕಡಿಸಿ ಹಾಕಿದ ಮೇಲೆ ಭಕ್ತನ ಇಚ್ಛೆಯಂತೆ ಬೇಕಾದಾಗ ಅವು ಹೋಗಲಿ, ಬರಲಿ ಎಂದು ವರ ನೀಡಿದ್ದು ಕಥೆ ಸುಖಾಂತವಾಗಲು ಮುಖ್ಯ ಕಾರಣವಾಗುತ್ತದೆ.

ಚಂದ್ರಕಾಂತಿ ಹುಟ್ಟಿದ ಕೂಡಲೆ ತಾಯಿಗೆ ಕಣ್ಣು ಕಾಣದಂತಾದುದು ದೇವರ ಇಚ್ಛೆಯಾಗಿತ್ತೇನೋ ಸರಿ. ಚಂದ್ರಕಾಂತಿ ಶಿಶುವಿನ ಅಸಾಧಾರಣ ಪ್ರಭೆಯು ಕಣ್ಣು ಕುಕ್ಕಿ ತಾಯಿಯ ಕಣ್ಣು ಕುರುಡಾದೀತೇನೋ ಎಂದೂ ಭಾವಿಸುವಂತಿದೆ.

ರಾತ್ರಿಯಲ್ಲಿ ಚಂದ್ರಕಾಂತಿಯು ತೊಟ್ಟಿಲಿನಲ್ಲಿ ಎದ್ದು ಕೂತ ಕೂಡಲೆಯೇ ಏಳು ಸಮುದ್ರದಾಚೆ ಇದ್ದ ಮಹಾಶೇಷನಿಗೆ ಕಣ್ಣು ಕುಕ್ಕಿ ಅದು ಶಿಶುವನ್ನು ಎತ್ತಿಕೊಂಡು ಹೋಗಲು ನಿಮಿತ್ತವಾಗುವ ಅವ್ಯಕ್ತಿ ತುಂಬಾ ನಾಟಕೀಯವಾಗಿದೆ.

ಅಜ್ಜಿ ಮುದುಕಿ ಆ ರಾತ್ರಿಯಲ್ಲಿ ಹೊರಗೆ ಏಕೆ ಬಂದಳೋ ನಿರೂಪಕ ತಿಳಿಸಲಿಲ್ಲ. ಮೈನೀರು (ಮೂತ್ರ) ಮಾಡಲು ಬಂದಿದ್ದಿರಬೇಕು; ಮಹಾಶೇಷ ಹೊತ್ತುಕೊಂಡು ಹೋಗುವುದನ್ನು ನೋಡಿ ತಿಳಿದ ಅವಳು ನಾಯಕನಿಗೆ ಅದನ್ನು ತಿಳಿಸಲು ಅನುವಾಗುತ್ತದೆ, ನಿರೂಪಕನ ನೈಪುಣ್ಯಕ್ಕೆ ಇದು ಸಾಕ್ಷಿ.

ಮಹಾಶೇಷ ಚಂದ್ರಕಾಂತಿಯನ್ನು ಅಪಹರಿಸಿದರೆ ತಿಳಿಯಲು ಎಲೆಎಲೆಗೆಲ್ಲ ಒಂದೊಂದು ಗಂಟೆಯನ್ನು ಕಟ್ಟಿ ಇಟ್ಟಿತ್ತು. ತನ್ನ ಹೆಡೆಗಳಿಂದ, ಇಲ್ಲಿ ಮಾಂತ್ರಿಕ ಹರಳು ಕೊಟ್ಟಿದ್ದು ಕಲ್ಲು ಹರಳಲ್ಲ, ನಾಣ್ಯದ ಹರಳು, ಮಾಣಿಕ್ಯ, ಹರಳೇ ನಾಣ್ಯದ್ದಾಗಿದ್ದೀತು. ತರುಗಿ ಚಂದ್ರಕಾಂತಿಯನ್ನು ನಾಯಕ ಕರೆತರುವಾಗ ತಿಳಿದ ಮಹಾಶೇಷ ಅನುಸರಿಸಿಕೊಂಡು ವೇಗವಾಗಿ ಬರುವಾಗ ಓಟದ ಮಧ್ಯೆ ಅಡಚಣೆ (obstacle alight) ನಿರ್ಮಿಸುವ ಆಶಯ ವಿಶೇಷವಲ್ಲ. ಮುತ್ತಿನ ಸರದ ಮುತ್ತು ಬೀರುವ ಆಶಯ ಅದಕ್ಕಿಂತ ಸುಂದರವಾಗಿದೆ.

ಮಂತ್ರಿಮಗ ಚಂದ್ರಕಂತಿಯ ಆಸೆಗೆ ಮೋಸ ಮಾಡಿ ಅವಳನ್ನು ಅಪಹರಿಸಿದ ಆಶಯ ರೂಪ ಹಲವು ಕಥೆಗಳಲ್ಲಿದೆ. ಅದರಂತೆ ಅಜ್ಜಿಯ ಮನೆಯಲ್ಲಿ ಹೂದಂಡೆ ಮಾಡಿ ಕೊಡುವ ಆಶಯವೂ ಬಹಳ ಕಥೆಗಳಲ್ಲಿದ್ದು ವಿಶೇಷವೇನಲ್ಲ. ಆದರೂ ಕಥೆ ನಿರೂಪಣೆಯ ಸರಣಿ ಸಂಜಸವಾಗಿದೆ.

ನೀತಿ ಕಥೆ ಎಂಬ ವರ್ಗದಲ್ಲಿ ಸೇರಬೇಕಾದ ‘‘ಅನ್ನದಾನದ ಫಲ’’ ಎಂಬ ಕಥೆಯು ಜೈನರ ಜನ್ಮಾಂತರ ಕಥೆಗಳನ್ನು ನೆನಪಿಗೆ ತರುವ ಒಳ್ಳೇ ಸುಂದರವಾದ ಕಥೆಯಾಗಿದೆ. ಅನ್ನದಾನ ಮಾಡಿದ್ದ ಮರಾಟಿಯು ರಾಜನ ಹೆಂಡತಿಯ ಹೊಟ್ಟೆಯಲ್ಲಿ ಹುಟ್ಟುವನೆಂದು ಬಾವಾಜಿಯು ಭಟ್ಟನಿಗೆ ಹೇಳಿರುವಲ್ಲಿ ಬಾವಾಜಿಯು ತಪಸ್ಸಿನ ಶಕ್ತಿಯಿಂದ ಭೂತ ಭವಿಷ್ಯ ಸಹ ಹೇಳಬಲ್ಲ ಶಕ್ತಿಯುಳ್ಳವನೆಂದು ಸೂಚಿಸಿರುವಲ್ಲಿ ಜೈನ ಮುನಿಯು ಜನ್ಮಾಂತರ ಕಥೆ ಹೇಳುವುದರ ನೆನಪನ್ನು ಕಾಣಬಹುದಾದರೂ ಭಟ್ಟನು ಮಂತ್ರ ಶಕ್ತಿಯಿಂದ ಶಿಶುವನ್ನು ಮಾತಾಡಿಸುತ್ತಾನೆ ಎಂಬ ವಿಶಿಷ್ಟವಾದ ವಿರಳವಾಗಿ ಒಂದೆರಡೇ ಕಥೆಗಳಲ್ಲಿ ಸುಂದರ ಕಲ್ಪನೆ ಮೆಚ್ಚುಗೆ ಪಡೆಯುತ್ತದೆ. ಮತ್ತು ಶಿಶುವೇ ತಾನೇ ತಾನು ಉಪವಾಸವಿದ್ದು ನಿನಗೆ ಅನ್ನದಾನ ಮಾಡಿದ ಪುಣ್ಯದಿಂದ ಅರಸನ ಮಗನಾಗಿ ಹುಟ್ಟಿದುದನ್ನು ತನ್ನ ಹೆಂಡತಿಯು ಕರುಣೆಯಿಲ್ಲದ ಸ್ವಾರ್ಥಿಯಾಗಿ ಮಡಿದದ್ದರಿಂದ ಹಂಪಿಯ ಜನ್ಮ ಪಡೆದಳೆಂದು ಹೇಳುವುದು ತುಂಬಾ ನಾಟಕೀಯವಾದ ಮುಕ್ತಾಯ ಸಾಧಿಸುತ್ತದೆ.

ದಿ. ಗಣಪಿ ಶಂಕರ ಗೌಡ ಹೇಳಿದ್ದ ‘‘ದಾನ ಹೇಗೆ ಧರ್ಮ ಹೇಗೆ?’’ ಕಥೆಯಲ್ಲಿ ಪರಮಾತ್ಮನನ್ನು ಕೇಳಲು ಹೋದ ಆ ಪ್ರಸಿದ್ಧ ಆಶಯಗಳುಳ್ಳ ಕಥೆಯ ಹೋಲಿಕೆಯಿಂದ ಕಥೆ ಬೆಳೆದರೂ ಕೊನೆಗೆ ಶಿಶುವಿನ ಹತ್ತಿರ ಕೇಳು-ದಾನದ ಫಲ ಕುರಿತು ಎಂದು ಪರಮಾತ್ಮ ಹೇಳಿದ್ದ ಎಂಬಲ್ಲಿ ‘‘ಅನ್ನದಾನದ ಫಲ’’ ಕಥೆಯ ಸ್ವಲ್ಪ ಹೋಲಿಕೆ ಬರುತ್ತದೆ. ಅಲ್ಲಿ ಕಳ್ಳ-ಕಳ್ಳನ ಹೆಂಡತಿ ಮಾಳದಿಂದ ಬಿದ್ದು ಅವರನ್ನು ಹುಲಿ ತಿಂದಿತ್ತು. ಕಳ್ಳನೇ ರಾಜನ ಮಗನಾಗಿ ಹುಟ್ಟಿ ಆ ಶಿಶು ಹಿಂದಿನ ಸಂಗತಿ ಹೇಳುತ್ತದೆ. ಕಳ್ಳನ ಹೆಂಡತಿ ನಾಯಿ ಜನ್ಮ ಪಡೆದುದೂ ಇದೆ.

ಆದರೆ ‘‘ಅನ್ನದಾನದ ಫಲ’’ ಕಥೆಯೇ ಹೆಚ್ಚು ಕಲಾತ್ಮಕವಾಗಿದೆ.

ಪ್ರಸಿದ್ಧವಾದ “ಬಿಂಬಾಲಿ” ಕಥೆಯಲ್ಲಿ ತನ್ನನ್ನು ಮದುವೆಯಾಗ ತಿಳಿಸಿದ ಅಣ್ಣನನ್ನು ಒಲ್ಲದೆ ಮನೆ ಬಿಟ್ಟು ಹೊರಟ ಬಿಂಬಾಲಿ (ಇಲ್ಲಿನ ಗೆಜ್ಜೆ ಕಾಲ ಮೊಮ್ಮಗ ಕಥೆಯ ಮಾದೇವಿ) ಸೂರ್ಯ ಲೋಕಕ್ಕೆ ಹೋದುದು ಕಾಲ್ಪನಿಕ ಜಗತ್ತಿನಲ್ಲಿ ಸಾಧ್ಯವಾದ ಸಂಗತಿ. ಇಲ್ಲವೆ ಸೂರ್ಯ ಎಂಬ ರಜು ಅವಳನ್ನು ಕರೆದುಕೊಂಡು ಹೋಗಿ ಮದುವೆಯಾದನೇ? ಎಂದು ನನಗೆ ದೊರೆತ ಇಲ್ಲವೆ ಬೇರೆಯವರ ಸಂಗ್ರಹದ ಪಾಠಗಳಲ್ಲಿಯೂ ಇಲ್ಲವೇ ಇಲ್ಲ. ಅವಳು ಸೂರ್ಯಲೋಕಕ್ಕೆ ಹೋಗಿ ಅಲ್ಲಿ ಮುದ್ದು ಮಗನನ್ನು ಪಡೆದು ಅವನೊಡನೆ ತನ್ನ ತೌರುಮನೆಗೆ ಬಂದಳೇ? ಎಂದು ಕೇಳಿದವರು ಯಾರೂ ಪ್ರಶ್ನಿಸಲಾರರು. ಈ ಲೋಕದಲ್ಲಿ ಒಪ್ಪಿಕೊಂಡ ನೀತಿ ನಡವಳಿಕೆಯನ್ನು ಅವಳು ಪಾಲಿಸಿದಳು. ಮತ್ತು ತನ್ನ ತಂದೆ, ತಾಯಿ, ಅಣ್ಣ ಎಲ್ಲರನ್ನೂಅವಳು ತಾನು ನಂಬಿದ ನೀತಿಗಾಗಿ (ಜನರಲ್ಲಿ ಇದು ಸತ್ಯ ಧರ್ಮ ಎಂದೇ ತಿಳಿಯಲಾಗುತ್ತದೆ) ತ್ಯಜಿಸಿ ಹೋಗುವ ದೃಢ ಮನಸ್ಸನ್ನು ತೋರಿಸಿದಳು ಎಂಬುದು ಮುಖ್ಯವಾಗುತ್ತದೆ.