ಜಾನಪದ ಅಧ್ಯಯನ ಇಂದು ಒಂದು ಶಿಸ್ತಿಗೊಳಪಟ್ಟು ಮುನ್ನಡೆದಿರುವುದು ಹೆಮ್ಮೆಯ ಸಂಗತಿ. ವಿಶ್ವವಿದ್ಯಾಲಯ, ಅಕ್ಯಾಡೆಮಿ, ಟ್ರಸ್ಟು, ಖಾಸಗಿ ಸಂಘಸಂಸ್ಥೆಗಳು ಇದರತ್ತ ತೀವ್ರ ಗಮನಹರಿಸಿ ವ್ಯವಸ್ಥಿತ ಕ್ಷೇತ್ರಕಾರ್ಯ, ಕಮ್ಮಟ, ವಿಚಾರ ಸಂಕಿರಣ, ಸಮ್ಮೇಲನ, ಕಲಾಮೇಳ, ಪ್ರಾತ್ಯಕ್ಷಿಕೆಗಳ ಮೂಲಕ ಜನಪದ ಸಾಹಿತ್ಯ, ಕಲೆ, ಜೀವನ, ಸಂಸ್ಕೃತಿಗಳ ವೈಜ್ಞಾನಿಕ ಅಧ್ಯಯನ ನಡೆಸಿ, ಅದರ ಹಿರಿಮೆ-ಗರಿಮೆಗಳನ್ನು ಎತ್ತಿತೋರುತ್ತ ನಡೆದಿದೆ. ಈ ದಿಶೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನಪೀಠ ಪ್ರತಿವರ್ಷ ಕ್ರಮವಿಡಿದು ಜರುಗಿಸುತ್ತ ಬಂದ ‘ಅಖಿಲ ಕರ್ನಾಟಕ ಜಾನಪದ ಸಮ್ಮೇಲನ’ ಒಂದು ಅನುಕರಣೀಯ ಉಪಕ್ರಮವೆನಿಸಿದೆ.

ಕರ್ನಾಟಕದ ಬೇರೆ ಬೇರೆ ಪಟ್ಟಣ-ಗ್ರಾಮಗಳಲ್ಲಿ ನಡೆಯುತ್ತ ಬಂದ ಈ ಸಮ್ಮೇಲನ ವಿಚಾರಸಂಕಿರಣ ಮತ್ತು ರಂಗದರ್ಶನ ಎಂಬ ಎರಡು ಆಯಾಮಗಳನ್ನು ಹೊಂದಿದೆ. ಹಗಲು ಒಂದು ನಿರ್ದಿಷ್ಟ ವಿಷಯ ಕುರಿತು ವಿದ್ವಾಂಸರಿಂದ ಪ್ರಬಂಧ ಮಂಡನೆ, ಚರ್ಚೆ, ಸಮಾಲೋಚನೆ; ರಾತ್ರಿ ಆ ವಿಷಯಕ್ಕೆ ಪೂರಕವಾದ ಕಲೆಗಳ ಪ್ರದರ್ಶನ. ತಾತ್ವಿಕ ವಿವೇಚನೆ, ಪಾಯೋಗಿಕ ದರ್ಶನ-ಏಕಕಾಲಕ್ಕೆ ಎರಡರ ಸಮಾರಾಧನೆ. ಹಿಂದಿನ ಸಮ್ಮೇಲನದ ವಿಚಾರಸಂಕಿರಣದಲ್ಲಿ ಮಂಡಿಸಿದ ಪ್ರಬಂಧಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸಿ, ಮುಂದಿನ ಸಮ್ಮೇಲನದಲ್ಲಿ ಬಿಡುಗಡೆಮಾಡುವುದು ನಿರಂತರವಾಗಿ ನಡೆದು ಬಂದ ಪರಂಪರೆ. ಹಾಗೆ ಪ್ರಕಟಿಸುತ್ತ ಬಂದ ಪುಸ್ತಕಗಳಲ್ಲಿ ಪ್ರಸ್ತುತ ‘ಜಾನಪದ ಸಾಹಿತ್ಯ ದರ್ಶನ’ ಹದಿನಾಲ್ಕನೆಯದು.

ಇದು ೧೯೮೭ ಮಾರ್ಚ ೯ ಮತ್ತು ೧೦ ರಂದು ದಾವಣಗೆರೆಯಲ್ಲಿ ನಡೆದ ೧೪ನೆಯ ಅಖಿಲಕರ್ನಾಟಕ ಜಾನಪದ ಸಮ್ಮೇಲನದಲ್ಲಿ ಮಂಡಿಸಿದ ಪ್ರಬಂಧಗಳನ್ನೊಳಗೊಂಡ ಸಂಪುಟ. ಇದರಲ್ಲಿ ‘ಜನಪದ ಕುಣಿತ-ವಾದ್ಯ-ಸಂಗೀತ’ ಈ ವಿಷಯಗಳಿಗೆ ಸಂಬಂಧಿಸಿದ ೧೨ ಪ್ರಬಂಧಗಳಿವೆ. ವ್ಯಾಪಕವಾದ ಕ್ಷೇತ್ರಕಾರ್ಯ, ವೈಜ್ಞಾನಿಕ ವಿಭಜನೆ, ವ್ಯವಸ್ಥಿತ ಚಿಂತನೆ, ವಿವರಣೆ ಮತ್ತು ವಿಶ್ಲೇಷಣೆಗಳಿಂದ ಕೂಡಿದ ಇವು ಜಾನಪದ ಕ್ಷೇತ್ರಕ್ಕೆ ಅನೇಕ ನೂತನ ಅಂಶಗಳನ್ನು ಒದಗಿಸುವುದರ ಮೂಲಕ ಈ ಕೃತಿಯ ಮಹತ್ವವನ್ನು ಹೆಚ್ಚಿಸಿವೆ. ಪ್ರಾಮಾಣಿಕ ಪರಿಶ್ರಮದಿಂದ ಈ ಪ್ರಬಂಧಗಳನ್ನು ಸಿದ್ಧಪಡಿಸಿದ ವಿದ್ವಾಂಸರಿಗೆ ನಮ್ಮ ಕೃತಜ್ಞತೆಗಳು.

ಈ ಸಮ್ಮೇಲನದ ಅಧ್ಯಕ್ಷತೆಯನ್ನು ವಹಿಸಿದವರು ಕನ್ನಡದ ಹಿರಿಯ ವಿದ್ವಾಂಸರೂ, ಗುಲಬರ್ಗಾ ವಿಶ್ವವಿದ್ಯಾಲಯದ ಮಾಜಿ ಕುಲಪತಿಗಳೂ ಆದ ಡಾ. ಹಾ. ಮಾ. ನಾಯಕ ಅವರು. ‘ಜಾನಪದಸ್ವರೂಪ’ದ ಮೂಲಕ ಕನ್ನಡ ಜಾನಪದಕ್ಷೇತ್ರಕ್ಕೆ ಹೊಸ ಗವಾಕ್ಷವನ್ನು ತೆರೆದ ಅವರು ತಮ್ಮ ವಿಚಾರಪೂರಿತ ಅಧ್ಯಕ್ಷೀಯ ಭಾಷಣದಲ್ಲಿ ಮುಂದಿನ ‘ಜಾನಪದದ ದಾರಿ’ಯನ್ನು ತೋರಿ, ಘನ ವ್ಯಕ್ತಿತ್ವ ಹಾಗೂ ವಿದ್ವತ್ತುಗಳಿಂದ ಈ ಸಮ್ಮೇಲನದ ಘನತೆ ಗೌರವಗಳನ್ನು ಹೆಚ್ಚಿಸಿದ್ದಾರೆ. ಅವರಿಗೆ ನಮ್ಮ ತುಂಬು ಹೃದಯದ ನಮನಗಳು.

ಈ ಸಮ್ಮೇಲನವನ್ನು ಪ್ರೀತಿಯಿಂದ ಉದ್ಘಾಟಿಸಿ ಶುಭಹಾರೈಕೆ ನೀಡಿದ, ಅಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಡಾ. ಎಸ್. ಜಿ. ದೇಸಾಯಿ ಅವರಿಗೆ, ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ಸುಜನಾ, ಅಧ್ಯಕ್ಷತೆ ವಹಿಸಿದ್ದ ಡಾ. ಎಂ. ಎಂ. ಕಲಬುರ್ಗಿ, ಪ್ರಶಸ್ತಿ ವಿತರಣೆ ಮಾಡಿದ ಶ್ರೀ ಕೆ. ಆರ್. ಲಿಂಗಪ್ಪ ತರೀಕೆರೆ ಹಾಗೂ ರಂಗದರ್ಶನ ಉದ್ಘಾಟನೆ ಮಾಡಿದ ಶ್ರೀ ಮುದೇನೂರ ಸಂಗಣ್ಣ ಇವರಿಗೆಲ್ಲ ನಮ್ಮ ನಮಸ್ಕಾರಗಳು.

ಸಮ್ಮೇಲನ ತುಂಬ ವ್ಯವಸ್ಥಿತವಾಗಿ, ವೈಭವಪೂರ್ಣವಾಗಿ ನೆರವೇರಲು ಕಾರಣರಾದವರು ಬಾಪೂಜಿ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಶಾಮನೂರ ಶಿವಶಂಕರಪ್ಪನವರು. ಅದರ ಯಶಸ್ಸಿಗಾಗಿ ಹಗಲಿರುಳು ನಮ್ಮೊಡನೆ ಸಹಕರಿಸಿದವರು ಪ್ರಿ. ಬಿ.ಜಿ. ನಾಗರಾಜ, ಪ್ರೊ. ಎಂ.ಜಿ. ಈಶ್ವರಪ್ಪ, ಪ್ರೊ. ಬಿ.ವಿ. ವೀರಭದ್ರಪ್ಪ ಹಾಗೂ ಬಾಪೂಜಿ ವಿದ್ಯಾಸಂಸ್ಥೆಯ ಪ್ರಾಧ್ಯಾಪಕವೃಂದ. ಅವರ ಕಾರ್ಯದಕ್ಷತೆ, ಸಹಕಾರಮನೋಭಾವಕ್ಕೆ ನಾವು ಋಣಿಯಾಗಿದ್ದೇವೆ.

ನಮ್ಮ ಆದರದ ಆಮಂತ್ರಣವನ್ನು ಸ್ವೀಕರಿಸಿಸ, ಕರ್ನಾಟಕದ ಬೇರೆ ಬೇರೆ ಪ್ರದೇಶಗಳಿಂದ ಆಗಮಿಸಿ ತಮ್ಮ ಕಲಾಪ್ರೌಢಿಮೆಯನ್ನು ಮೆರೆದು, ಜನಮನ ತಣಿಸಿದ ಎಲ್ಲ ಜಾನಪದ ಕಲಾವಿದರ ಶ್ರೀಮಂತ ಹೃದಯಕ್ಕೆ, ತಮ್ಮ ಮುಕ್ತ ಮನಸ್ಸಿನ ಸಹಾಯ ಸಹಕಾರ ನೀಡಿ ಸಮ್ಮೇಲನದ ಯಶಸ್ಸಿನಲ್ಲಿ ಪಾಲ್ಗೊಂಡ ಕನ್ನಡ ಅಧ್ಯಯನಪೀಠದ ಎಲ್ಲ ಪ್ರಾಧ್ಯಾಪಕ ಮಿತ್ರರಿಗೆ ವಂದನೆಗಳು.

ಜಾನಪದ ಸಮ್ಮೇಲನಗಳು ನಿರಂತರವಾಗಿ ನಡೆಯಲು ವಿಶೇಷ ಪ್ರೋತ್ಸಾಹ ತೋರುತ್ತಿರುವ ಇಂದಿನ ಕುಲಪತಿಗಳಾದ ಡಾ. ಎಸ್. ರಾಮೇಗೌಡ ಅವರ ಸಾಂಸ್ಕೃತಿಕ ಶ್ರೀಮಂತ ಹೃದಯಕ್ಕೆ ಅನಂತ ನಮನಗಳು. ಈ ಕೃತಿ ಪ್ರಕಟಣೆಯ ವಿಷಯದಲ್ಲಿ ವಿಶೇಷ ಆಸಕ್ತಿವಹಿಸಿದ ಪ್ರಸಾರಾಂಗದ ನಿರ್ದೇಶಕರಾದ ಶ್ರೀ ಸದಾನಂದ ಕನವಳ್ಳಿ ಅವರಿಗೆ, ಅಂದವಾಗಿ ಮುದ್ರಿಸಿಕೊಟ್ಟ ರಾಜಶ್ರೀ ಪ್ರೆಸ್ಸಿನ ಒಡೆಯರಾದ ಶ್ರೀ ಶಿದಪುತ್ರಪ್ಪನವರು ತಡಕೋಡ, ವೀರೇಶ ತಡಕೋಡ ಮತ್ತು ಅವರ ನಿಷ್ಠಾವಂತ ಕೆಲಸಗಾರರಿಗೆ ನಮ್ಮ ಕೃತಜ್ಞತೆಗಳು.

ವೀರಣ್ಣ ರಾಜೂರ
೨೦-೭-೯೨