ಇರುವುದನ್ನು ಮರೆಸುವ ಸದ್ಯತನ ಮಗ್ನತೆ

 

 ದೊಡ್ಡವರದೆಲ್ಲವೂ ದೊಡ್ಡದೆನ್ನುವ ಮಾತು ಸುಳ್ಳಲ್ಲ

ಕೃತಿಯು ಘನ, ಜಾಗೃತಿಯು ಘನ, ವಿಸ್ಮೃತಿಯು ಘನ
ದೊಡ್ಡವರು! (ಬೇಂದ್ರೆ)

 

ಚರಿತ್ರೆಯಲ್ಲಾದ ಮಹಾವಿಸ್ಮೃತಿಗಳನ್ನು ಬರೆಯಲೇಬೇಕೆಂದು ಹಠ ತೊಟ್ಟ ಕಾಲವಿದು. “ಚರಿತ್ರೆಗೆ ನಿನ್ನೆಗಳಿರುವಂತೆ ನಾಳೆಗಳೂ ಇರುತ್ತವೆ,” ಎನ್ನುವ ತಾತ್ವಿಕ ಚೌಕಟ್ಟಿನಲ್ಲಿಯೇ ವ್ಯಕ್ತಿ ಸಮಾಜ-ಸಂಸ್ಕೃತಿಯನ್ನು ಚರ್ಚಿಸಲಾಗುತ್ತಿದೆ. ವಸಾಹತುಶಾಹಿಯ ಅನುಭವಗಳ ಹಿನ್ನೆಲೆಯಲ್ಲಿ ಚರಿತ್ರೆ, ಪುರಾಣಗಳನ್ನು ಒಂದು ಪಠ್ಯವನ್ನಾಗಿ ಮತ್ತು ಆ ಪಠ್ಯಗಳು ರೂಪುಗೊಳ್ಳಲು ಇದ್ದಂತಹ ಒತ್ತಡಗಳನ್ನು, ಎಚ್ಚರಿಕೆಗಳನ್ನು ಸಿದ್ಧಾಂತಗಳ ನೆಲೆಯಲ್ಲಿ ವಿವರಿಸುವ `trend’ ಇಂದು ಹೆಚ್ಚು ಚಾಲ್ತಿಯಲ್ಲಿದೆ. ಅಂತಹ ಸಿದ್ಧಾಂತಿಮುಖಿ ಯೋಚನೆಗಳಲ್ಲಿ ಮಹಿಳಾವಾದವೂ ಒಂದು. ಪರಿಸರ ಸ್ನೇಹಿಯಾದ ಹೆಣ್ಣು ಪುರುಷ ಸ್ನೇಹಿಯಾಗಲಿಲ್ಲ ಏಕೆ? ಎನ್ನುವ ಪ್ರಶ್ನೆ ಕೇವಲ ‘ಸ್ತ್ರೀ’ಗೆ ಸಂಬಂಧಿಸಿದ್ದಲ್ಲ. ಅದು ಸಾಂಸ್ಕೃತಿಕ ಬಿಕ್ಕಟ್ಟಿಗೆ ಸಂಬಂಧಿಸಿದ್ದು. ವ್ಯಕ್ತಿ-ಸಮಾಜ-ಸಂಸ್ಕೃತಿಗಳು ವಿಕಾಸ ಹೊಂದಿದಂತೆ ಗಂಡು-ಹೆಣ್ಣಿನ ಅಸ್ತಿತ್ವದ ಪ್ರಶ್ನೆ ಕಾಡುತ್ತಲೇ ಇದೆ.

ವಿಕಾಸತತ್ವದ ಪ್ರತಿಪಾದಕ ಬ್ಯಾಪಿಸ್ಟ ಲೇಮಾರ್ಕ್‌ನು ಹೇಳುವಂತೆ “ಜೀವಿಯು ಅಂಗವನ್ನು ನಿರಂತರವಾಗಿ ಉಪಯೋಗ ಅಥವಾ ನಿರುಪಯೋಗ ಮಾಡುವುದರಿಂದ ಆಗುವುದು. ಅಂಗವು ಉಪಯೋಗದಲ್ಲಿದ್ದಾಗ ಬಲಿಷ್ಠವಾಗುವುದಲ್ಲದೇ, ಒಳ್ಳೆಯ ಬೆಳವಣಿಗೆಯನ್ನು ಹೊಂದುವುದು. ಅದು ನಿರುಪಯೋಗ ಮಾಡುವುದರಿಂದ ಚಿಕ್ಕದಾಗಿ ತನ್ನ ಕಾರ್ಯಗಳನ್ನು ಕಳೆದುಕೊಂಡು ಕೆಲವು ಸಲ ಕಾಣೆಯಾಗುವುದು.” ಲೇಮಾರ್ಕ್‌ನು ಜೀವವಿಕಾಸದ ಲಕ್ಷಣಗಳನ್ನು ಹೇಳುತ್ತಿರುವನಾದರೂ, ಕಾಲಾನಂತರದ ಸಮಾಜದಲ್ಲಿ ಅಸ್ತಿತ್ವದ ಆತಂಕದಲ್ಲಿ ಒಂದು ಸಮಾಜ ಮತ್ತೊಂದು ಸಮಾಜ ಜೀವಿಯನ್ನು ಉದ್ದೇಶಪೂರ್ವಕವಾಗಿಯೇ ಇದೇ ಸೂತ್ರವನ್ನು ಪ್ರಯೋಗಿಸಿದೆ. ಉತ್ಪಾದನಾಂಗಗಳ ಬೆಳವಣಿಗೆಗಳು ಒಂದು ಜೀವಿಯನ್ನು ಬಲಹೀನಗೊಳಿಸುವ ತಂತ್ರಗಾರಿಕೆಯಲ್ಲಿ ಅತ್ಯಂತ ಸೂಕ್ಷ್ಮವಾಗಿಯೇ ನಡೆದುಕೊಂಡಿವೆ. ಆ ಜೀವಿಯಲ್ಲಿ ಪ್ರಮುಖ ಬಲಿದಾನವೆಂದರೆ ‘ಹೆಣ್ಣು’ ಯಾವ ಕಾಲದಲ್ಲಾದರೂ (ಮಾತೃ ಪ್ರಧಾನ) ಸಮಾನತೆಯ ಸಮಾಜ ಇರುವುದರ ಬಗ್ಗೆ ಅನುಮಾನಗಳಿವೆ. ಆದರೆ ಈ ಅಸಮಾನತೆಯ ಚರಿತ್ರೆಯಲ್ಲಿ ಹೆಣ್ಣಿನ ಕತ್ತಲೆಯ ವಾಸ ಸ್ಥಾನ ಯುಗಾಂತರವಾದದ್ದು.

ಈ ಅಸಮಾನತೆಯ ವ್ಯವಸ್ಥೆ ರೂಪಿಸಿದ ಸಂಸ್ಕೃತಿಯ ಚಿಂತನೆಯನ್ನು ಪ್ರಧಾನ, ಅಧೀನ, ಕಿರು ಉಪ, ಪ್ರತಿ, ಪರ್ಯಾಯ ಆದಿಮ, ತಳಸಂಸ್ಕೃತಿಗಳೆಂಬ ಪರಿ ಭಾಷೆಯಲ್ಲಿ ಕಂಡುಕೊಳ್ಳುವ ಪ್ರಯತ್ನ ನಡದೇ ಇದೆ. ಬಹುರೂಪಿಯಾಗಿರುವ ಸಂಸ್ಕೃತಿಯನ್ನು ಇದುವರೆಗೂ ನಿಯಂತ್ರಿಸುತ್ತಾ ಬಂದಿರುವ ಎರಡು ಜಾಲಗಳೆಂದರೆ ಒಂದು ರಾಜಕೀಯ ಮತ್ತೊಂದು ಧರ್ಮ. ಇವು ಪರಸ್ಪರ ಸಂಘರ್ಷಿಸಿದಂತೆ, ಹೊಂದಾಣಿಕೆಯೂ ಆಗಿವೆ. ಅವಕಾಶಗಳನ್ನು ಹಂಚಿಕೊಳ್ಳುವಲ್ಲಿ ಇವೆರಡೂ ತೋರಿದ ಹಾದಿಗಳು ನೀತಿ ಮಾರ್ಗಗಳೆಂದೇ ಪರಿಗಣಿಸಲ್ಪಟ್ಟಿವೆ. ಇವೆರಡರ ಸಂಯೋಗದಿಂದ ಹುಟ್ಟಿದ ಸಂಸ್ಕೃತಿಯನ್ನು ಪ್ರಧಾನವೆಂಧು ಇದನ್ನು ವಿರೋಧಿಸುವ ಸಮಾಜಗಳನ್ನು ಅಧೀನ ಸಂಸ್ಕೃತಿಯೆಂದು ಕರೆಯಲಾಗಿದೆ. ಆದರೆ ಮಾನವಶಾಸ್ತ್ರಜ್ಞ ಇ.ಬಿ.ಟೈಲರ್ ತನ್ನ ‘ಪ್ರಿಮಿಟಿವ್‌ಕಲ್ಚರ್’ ಪುಸ್ತಕದಲ್ಲಿ ವ್ಯಾಖ್ಯಾನಿಸುವುದೇನೆಂದರೆ “Culture is that complex whole which includes knowledge, belief, arts morals, laws, customs, and any other capability, acquired by man as a member of society” ಎಂದು ಸಾಧನೆ, ಸಾಮರ್ಥ್ಯಗಳ  ಸಂಕೀರ್ಣ ವ್ಯವಸ್ಥೆಯಾದ ಸಂಸ್ಕೃತಿಯನ್ನು ನಿರ್ವಚನೆ ಮಾಡುವುದು ಅಷ್ಟು ಸುಲಭವಲ್ಲ ಎನ್ನುವುದು ಇತ್ತೀಚಿನ ನಿಲುವು. ಸಂಸ್ಕೃತಿಯ ಹಿಂದೆ ನಿಸ್ಸಂದೇಹವಾಗಿಯೂ ರಾಜಕೀಯ ಮತ್ತು ಆರ್ಥಿಕ ಶಕ್ತಿಗಳ ಯಾಜಮಾನ್ಯದ ಒತ್ತಡವಿದೆ ಎನ್ನುವ ವೈಚಾರಿಕ ನಿಲುವಿನೊಂದಿಗೆ ಸಂಸ್ಕೃತಿಗಳ ಪುನರ್ ಮೌಲ್ಯೀಕರಣ ನಡೆದಿದೆ. ಅದಕ್ಕೆಂತಲೇ ‘ಸಬಾಲ್ಟರ್ನ್ ಸ್ಟಡೀಸ್‌’ಹುಟ್ಟಿಕೊಂಡಿದ್ದು ಮತ್ತು ಹೆಚ್ಚು ಮಹತ್ವ ಪಡೆದದ್ದು. ಗುಹಾ ಅವರ ಪ್ರಕಾರ ‘ಸಬಾಲ್ಟರ್ನ್’ ಎಂದರೆ ಅಧೀನತೆಯನ್ನು ಮೀರಲಾಗದವನು. ಈ ಅಧೀನತೆಯನ್ನು ಮಾನಸಿಕವಾಗಿ ಒಪ್ಪಿಕೊಳ್ಳುವ ಪೂರ್ವದ ಅನೇಕ ಸಂಘರ್ಷಗಳನ್ನು ಈ ಅಧ್ಯಯನವೂ ಗಮನಿಸುತ್ತದೆ. ಪ್ರತಿರೋಧದದ ಮಧ್ಯೆ ಬದುಕುವ ವಿಧಾನ ಒಂದು ಸಂಸ್ಕೃತಿಯ; ಜನಾಂಗದ ವೈಶಿಷ್ಟ್ಯವೂ ಹೌದು! ಗುಹಾರವರ ಮಾತನ್ನು ಪುನಃ ಎತ್ತಿಕೊಂಡು ಹೇಳುವುದಾದರೆ, ಅಧೀನತೆಯಲ್ಲಿ ಇಂದಿಗೂ ಬದುಕುತ್ತಿರುವ ಸಾಂಸ್ಕೃತಿಕ ವಸಾಹತುಶಾಹಿಯ ಬಲೆಯಲ್ಲಿ ಬದುಕುತ್ತಿರುವ ಸಾಂಸ್ಕೃತಿಕ ವಸಾಹತುಶಾಹಿಯ ಬಲೆಯಲ್ಲಿ ಬದುಕುತ್ತಿರುವ ಈ ಹೆಣ್ಣು, ಲಿಂಗ ತಾರತಮ್ಯಕ್ಕೆ ಒಳಗಾದ ವಾಸ್ತವ ಸ್ಥಿತಿಯನ್ನು ಅನೇಕ ಸಮುದಾಯಗಳ ಹಿನ್ನೆಲೆಯಲ್ಲಿ ಗೃಹಿಸುವ ಅಗತ್ಯವಿದೆ. ಇಂತಹ ಅಂಶಗಳನ್ನು ಜೀವಪರ ಎಂತಲೇ ಭಾವಿಸಿ ಸಮುದಾಯಗಳ ಹಿನ್ನೆಲೆಯಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಗುರುತಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.

ಲಿಂಗ ಎನ್ನುವುದು ಜೈವಿಕತೆಗೆ ಸಂಬಂಧಿಸಿದರೆ, ಲಿಂಗವ್ಯವಸ್ಥೆ ಎನ್ನುವುದು ಜೈವಿಕತೆಯನ್ನೇ ಆಧರಿಸಿ ಸಂಸ್ಕೃತಿಯನ್ನು ವ್ಯಾಖ್ಯಾನಿಸುವುದು. ಪುರುಷ ಉತ್ಪಾದನಾಕಾರ, ಮಹಿಳೆ ಬಳಕೆದಾರಳು ಎನ್ನುವ ಪ್ರವೃತ್ತಿ ಎಲ್ಲ ಸಮುದಾಯಗಳಲ್ಲಿಯೂ ಇದೆ. ಆದರೆ ಅದರ ಸ್ವರೂಪ, ಪ್ರಮಾಣಗಳಲ್ಲಿ ಕೊಂಚ ವ್ಯತ್ಯಾಸ ವಿರಬಹುದು. ಅಂತೆಯೇ ಮಹಿಳಾ ವರ್ಗವನ್ನು ‘ಮಾತನಾಡದ ಚಿಹ್ನೆಗಳು’ ಎಂದು ಕರೆದದ್ದು. ಪುರುಷ ಪ್ರಧಾನ ವ್ಯವಸ್ಥೆ ಎನ್ನುವುದು ನಿರಂತರ ಅಪೋಷಣೆಗೈಯುತ್ತಿರುವ ಕಾರಣಕ್ಕೆ ಮಹಿಳಾ ಸಹಜತೆಗಳು ನಮಗೆ ಕಾಣುತ್ತಿಲ್ಲ. ಸಂಸ್ಕೃತಿಯ ನಿಜದ ನೆಲೆಗಳನ್ನು ಹುಡುಕಲು ಲಿಂಗ ತಾರತಮ್ಯವೂ ಒಂದು ಮಾನದಂಡವಾಗಬೇಕು. ಪ್ರಭುತ್ವ ದುಡಿಯುವ ವರ್ಗವನ್ನು ಶೋಷಿಸಿದಂತೆ, ಪುರುಷ ಮನಸ್ಥಿತಿ ಮಹಿಳಾ ಸಂವೇದನೆಯನ್ನು ದಮನಿಸಿ. ಪ್ರಭುತ್ವಕ್ಕೂ ದುಡಿಯುವ ವರ್ಗಕ್ಕೂ ನಡುವಿನ ಸಂಘರ್ಷಕ್ಕೆ ಆರ್ಥಿಕ ಕಾರಣವಾದರೆ, ಮಹಿಳಾ ಶೋಷಣೆಗೆ ಗಂಡಸಿನ ಲೈಂಗಿಕ ಅಹಂಕಾರದ ಅಸ್ತಿತ್ವವೇ ಕಾರಣವಾಗಿದೆ. ಪ್ರಭುತ್ವದ ವಿರುದ್ಧದ ಎತ್ತಿದ ಮಹಿಳಾ ದನಿಗಳನ್ನು ಸಂಸ್ಕೃತಿಗಳಲ್ಲಿ ಹುಡುಕಬೇಕಿದೆ. ಈ ಕಾರಣಕ್ಕಾಗಿಯೇ ಚರಿತ್ರೆಯಿಂದ ನಿರ್ಮಾಣಗೊಂದ ಸಂಸ್ಕೃತಿ ಮತ್ತು ಜನರಿಂದ ಗೃಹಿತವಾದ ಸಂಸ್ಕೃತಿಯನ್ನು ಮುಖಾಮುಖಿಗೊಳಿಸಬೇಕಿದೆ. ಈ ಜನ ಸಂಸ್ಕೃತಿಯಲ್ಲೂ ಶೋಷಣೆಯ ಅಯಾಮಗಳಿವೆ. ವಿಸ್ಮೃತಿಗೆ ಒಳಗಾದ ಹೆಣ್ಣಿನ ಅಸ್ತಿತ್ವವನ್ನೇ ಅಧ್ಯಯನದ ಒಂದು ಶಿಸ್ತೆಂದು ಭಾವಿಸಿ, ಸಂಸ್ಕೃತಿಗಳ ಸ್ವರೂಪದಲ್ಲಿ ಹೆಣ್ಣಿನ ಅಸ್ಮಿತೆಯ ಶೋಧವನ್ನು ಮಾಡಲಾಗಿದೆ. ಅಸ್ಮಿತೆಯ ಹುಡುಕಾಟ ಆತ್ಮವಿಶ್ವಾಸದ ಒಂದು ಭಾಗ. ಇದನ್ನು ಮರೆಯುವಂತಿಲ್ಲ.

ಸಂಸ್ಕೃತಿಯ ಸಂರಕ್ಷಣೆಗಾಗಿ ಹೆಣ್ಣು ವಹಿಸಿದಂತಹ ಪಾತ್ರವನ್ನು ಬಹುತೇಕ ಸಮಾಜಗಳು ಒಪ್ಪಿಕೊಂಡರೂ, ಸಾಂಸ್ಕೃತಿಕ ಸಮಾನತೆಯನ್ನು ಹಂಚುವುದನ್ನು ಇಚ್ಛಿಸಿಲ್ಲ. ಸಾಮಾಜಿಕ, ಧಾರ್ಮಿಕ ಮೂಲಭೂತವಾದದಿಂದಾಗಿ ಹೆಣ್ಣನ್ನು ಸಾಂಸ್ಕೃತಿಕ ರಾಯಭಾರಿಗಳೆಂದು ಪರಿಗಣಿಸಿಲ್ಲ. ಅಂತೆಯೇ ತಾಯ್ತನಕ್ಕೆ ಸಿಕ್ಕಷ್ಟು ಮನ್ನಣೆ, ಸತಿತನಕ್ಕೆ ಸಿಕ್ಕಿಲ್ಲ. ನಿತ್ಯ ಪರೀಕ್ಷೆಗಳನ್ನು ಎದುರಿಸುವ, ಸಹಿಸುವ ಕೊನೆಗೆ ‘ಇರುವುದನ್ನು ಮರೆಸುವ ಸದ್ಯತನದಲ್ಲಿಯೇ ಮಗ್ನ’ವಾಗಿರುವ ಸಂಸ್ಕೃತಿಯಲ್ಲಿಯ ಮಹಿಳಾ ಪ್ರತಿಮೆಗಳನ್ನು ಕಾಣುವಂತಾಗಿದೆ. ಈ ಕಾರಣಕ್ಕಾಗಿಯೇ ಹೆಣ್ಣು ಹೇಳಿಕೊಳ್ಳುವಂತದ್ದು ‘ನನ್ನ ಸ್ತ್ರೀ ದೇಹ ನನ್ನ ಭವಿಷ್ಯವಲ್ಲ” ಎಂದು.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಈ ಮಹತ್ವಾಕಾಂಕ್ಷೆಯ ಯೋಜನೆಯು ಪೂರ್ಣಗೊಳ್ಳಲು ಸಹಕರಿಸಿದ ಎಲ್ಲ ಲೇಖಕರಿಗೂ ಮೊದಲಿಗೆ ನನ್ನ ಕೃತಜ್ಞತೆಗಳು. ಸಮುದಾಯದ ಸಂಸ್ಕೃತಿಗಳನ್ನು ಕ್ಷೇತ್ರಕಾರ್ಯದ ಮೂಲಕ ಕಟ್ಟಿ ಕೊಟ್ಟ ಲೇಖಕರ ಶ್ರಮ ನಿಜಕ್ಕೂ ಸಾರ್ಥಕವಾಗಿದೆ. ವಸ್ತುನಿಷ್ಠವಾದ ಕೆಲವಾಋಉ ಮಾನದಂಡಗಳನ್ನಿಟ್ಟುಕೊಂಡು ಮುಖ್ಯ ವಾಹಿನಿಯಲ್ಲಿರುವ ಮತ್ತು ಪ್ರಧಾನವೆಂದೇ ಭಾವಿಸಿಕೊಂಡ ನಾಗರೀಕತೆಗಿಳಿಂದ ಇಂದಿಗೂ ದೂರವಿದ್ದು ಜೀವಿಸುತ್ತಿರುವ ಬುಡಕಟ್ಟು ಜನಾಂಗಗಳಲ್ಲಿಯ ಮಹಿಳಾ ಸ್ಥಿತಿಗತಿಗಳನ್ನು ಅಂಕಿ ಅಂಶಗಳೊಂದಿಗೆ ವಿಶ್ಲೇಷಣೆಗೆ ಒಳಪಡಿಸಿರುವುದು ಅಧ್ಯಯನದ ದೃಷ್ಟಿಯಿಂದ ಮಹತ್ವದ್ದಾಗಿದೆ. ಸಂಸ್ಕೃತಿ ಎನ್ನುವುದು ಹೇಗೆ ಒಂದು ಸಮರೂಪವ್ಯವಸ್ಥೆಯಲ್ಲವೋ ಹಾಗೆ ಮಹಿಳಾ ಸಂಸ್ಕೃತಿಯೂ ಸಮರೂಪವಾದ ಒಂದು ವರ್ಗವಲ್ಲ ಎನ್ನುವುದನ್ನು ಇಲ್ಲಿಯ ಲೇಖನಗಳು ಖಚಿತ ಪಡಿಸುತ್ತವೆ. ಪ್ರತಿಯೊಂದು ಸಮುದಾಯವೂ ತನ್ನ ಪರಿಸರಕ್ಕೆ ಅನುಗುಣವಾಗಿ ಜವಾಬ್ದಾರಿಗಳನ್ನು ವಹಿಸಿದೆ ಎನ್ನುವುದನ್ನು ಸೂಕ್ಷ್ಮವಗಿಯೇ ತಿಳಿಸುತ್ತವೆ. ಪ್ರಮುಖ ಧರ್ಮಗಳಲ್ಲಿಯ ಹೆಣ್ಣಿನ ಸ್ಥಾನವನ್ನು ನಿಕಷಕ್ಕೆ ಒಡ್ಡುತ್ತಲೇ ಸಮಕಾಳೀನಗೊಳ್ಳುವುದಕ್ಕೆ ಒತ್ತಾಯಿಸುತ್ತವೆ. ಧರ್ಮಸೂತ್ರಕ್ಕೂ ಮತ್ತು ಮೂಲಭೂತವಾದಿಗಳು ಹೇರುವ ಒತ್ತಡಕ್ಕೂ ಅಗಾದ ವ್ಯತ್ಯಾಸಗಳಿರುವುದನ್ನು ಮುಸ್ಲಿಂ ಸಮುದಾಯ ದ ಮಹಿಳಾ ಲೇಖನ ಚರ್ಚಿಸಿದೆ. ಒಂದೆಡೆ ಧರ್ಮವು ನೀಡಿದ ಅವಕಾಶಗಳನ್ನು ಪೂರಕವಾಗಿ ಬಳಸಿಕೊಳ್ಳುತ್ತಲೇ, ಕಾಲಾನಂತರದಲ್ಲಾದ ಬದಲಾವಣೆಗಳನ್ನು ಲೇಖನವೂ ವಿರೋಧಿಸುತ್ತದೆ. ಅದೇ ಈ ರೀತಿಯ ಸಮರ್ಥನೆಗಳನ್ನು ಜೈನ ಧರ್ಮದ ಸಂಸ್ಕೃತಿಯ ಲೇಖನದಲ್ಲಿ ಕಾಣುವುದಿಲ್ಲ. ನೇರವಾಗಿಯೇ ಆ ಧರ್ಮ ಮಹಿಳೆಗೆ ಸ್ಥಾನವನ್ನು ನಿರಾಕರಿಸಿರುವುದನ್ನು ಈ ಲೇಖನ ಹೇಳುತ್ತದೆ. ಆಯಾ ಸಮಾಜದ ಸಂಸ್ಕೃತಿಯ ಪೋಷಣೆಗೆ ಹೆಣ್ಣು ಮುಕ್ತವಾಗಿ ಅರ್ಪಿಸಿಕೊಂಡಿದ್ದನ್ನು ಇಲ್ಲಿಯ ಲೇಖನಗಳು ಸೂಚಿಸುತ್ತವೆ. ತಳವರ್ಗದ ಸಮುದಾಯಗಳಿಗೆ ಆರ್ಥಿಕ ಸ್ವಾವಲಂಭನೆಯನ್ನು ತಂದುಕೊಟ್ಟ ‘ಮಹಿಳೆ’ಯನ್ನು ಇಲ್ಲಿ ಕಾಣುತ್ತೇವೆ. ಮದುವೆ, ಸಂಪ್ರದಾಯಗಳಲ್ಲಿ ಹೆಣ್ಣು ವಹಿಸುವ ಪಾತ್ರವನ್ನು, ಕೆಲವೊಂದು ಸಮುದಾಯಗಳು ಸಹಜವಾಗಿಯೇ ‘ವಿಧವೆ’ಯ ಪಟ್ಟವನ್ನು ಕಳೆದುಕೊಂಡಿರುವುದು ಆರೋಗ್ಯಕರ ಬದಲಾವಣೆ ಎಂದಿದ್ದಾರೆ. ಪಾತಿವ್ರತ್ಯ, ಮಡಿವಂತಿಕೆ, ಮುಟ್ಟು ಮುಂತಾದವು ಭಯಾನಕವಾಗುವ ಬದಲಾಗಿ ಮಾನವಂತವಾಗುವ ಅಂಶಗಳನ್ನು ಶ್ರಮ ಸಮುದಾಯಗಳಲ್ಲಿ ಕಾಣಬಹುದಾಗಿದೆ.

ಸಂಸ್ಕೃತಿಯ ಭಾಗವಾಗಿರುವ ವಿಶಿಷ್ಟವಾದ ಅನೇಕ ಅಂಶಗಳನ್ನು ಇಲ್ಲಿಯ ಏಳು ಲೇಖನಗಳು ದಾಖಲಿಸಿವೆ. ಹೆಣ್ಣಿಗೆ ಆದ ಶೋಷಣೆಯನ್ನು, ಆಗುತ್ತಿರುವ ಹೊಸ ವಿನ್ಯಾಸಗಳನ್ನು ಗುರುತಿಸುವಲ್ಲಿ ಈ ಲೇಖಕರು ಹಿಂಜರಿದಿಲ್ಲ. ವ್ಯಕ್ತಿ ನೆಲೆಯಲ್ಲಿ ‘ಸ್ತ್ರೀ’ ವಾದಿಗಳಾಗಿಯೇ, ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತಮಗೆ ಸಾಧ್ಯವಾದಷ್ಟು ಮಾಹಿತಿಯನ್ನು ಪ್ರಾಮಾಣಿಕವಾಗಿಯೇ ನೀಡಿ ಯೋಜನೆಯ ಯಶಸ್ಸಿಗೆ ಕಾರಣರಾಗಿದ್ದಾರೆ. ಆದರೆ ಈ ಸಂಪುಟದ ಮೂಲಕ ಸಂಸ್ಕೃತಿಯಲ್ಲಿಯ ಪ್ರತಿರೋಧದ ನೆಲೆಗಳನ್ನು ಢಾಳಾಗಿ ಸಂಗ್ರಹಿಸಲು ಸಾಧ್ಯವಾಗಿಲ್ಲ. ಹಾಗೇ ನೋಡಿದರೆ ಅದು ನಮ್ಮ ಉದ್ದೇಶವೂ ಆಗಿರಿಲಿಲ್ಲ. ಆದರೂ ಅಸ್ತಿತ್ವವಾದದ ನೆಲೆಯಲ್ಲಿ ಗಂಡು-ಹೆಣ್ಣಿನ ಸಂಬಂಧಗಳನ್ನು ನೋಡಿದಲ್ಲಿ ಸ್ತ್ರೀವಾದಕ್ಕೆ ಅಥವಾ ಸ್ತ್ರೀ ಸಂಬಂಧಿಕ ಅಧ್ಯಯನಕ್ಕೆ ಹೊಸ ಆಯಾವೂ ಸಿಕ್ಕಂತಾಗುತ್ತದೆ. ಏಕೆಂದರೆ ಅಸ್ತಿತ್ವವಾದಿಗಳು ಗಂಡು-ಹೆಣ್ಣಿನ ಸಂಬಂಧವನ್ನು ಏಕೆ ಮುಖವಾಗಿ ನೋಡುವುದಿಲ್ಲ. “ಯಜಮಾನ-ಗುಲಾಮ ಸಂಬಂಧದಲ್ಲಿ ಎಲ್ಲವನ್ನು ನಿಯಂತ್ರಿಸುವ ವ್ಯಕ್ತಿ ಯಜಮಾನ ಎಂದು ತಿಳಿಯುವುದು ಏಕಮುಖ ಗ್ರಹಿಕೆ. ಆದರೆ ಗುಲಾಮತನದಲ್ಲಿರುವ ವ್ಯಕ್ತಿ ಕೂಡ ತನ್ನ ಆಯ್ಕೆಗಳ ಮೂಲಕ ಈ ಸಂಬಂಧದ ಸ್ವರೂಪವನ್ನು ನಿರ್ಧರಿಸಲು ಸಾಧ್ಯ.” (ಡಾ. ಕೆ.ವಿ. ನಾರಾಯಣ, ಕನ್ನಡ ಓದಿಗೆ ಮೊದಲು ಒಂದು ಮಾತು: ದಿ ಸೆಕೆಂಡ್‌ ಸೆಕ್ಸ್: ಅನು: ಡಾ.ಎಚ್‌. ಎಸ್‌. ಶ್ರೀಮತಿ, ಪು.೪೮.) ಬಹುಶಃ ಇದೇ ಹಿನ್ನೆಲೆಯಲ್ಲಿ ಪುಕೋ ಹೇಳುವುದೆನಿಸುತ್ತದೆ. “ಅಧಿಕಾರ ಎಲ್ಲ ಕಡೆಯೂ ಇದೆ.” ಎಂದು. ಆದರೆ ಎಲ್ಲ ಕಡೆ ಇರುವ ಈ ಅಧಿಕಾರ ಹೆಣ್ಣಿನಲ್ಲಿ ಎಷ್ಟು ಪ್ರಮಾಣದಲ್ಲಿದೆ? ಎನ್ನುವ ಪ್ರಶ್ನೆ ಮತ್ತು ಆತಂಕವೇ, ಸಮಾನತೆಯಿಂದ ಆಕೆಯನ್ನು ದೂರೀಕರಿಸಿದೆ. “ಆಗುವಿಕೆ” ಮತ್ತು “ಮೀರುವಿಕೆ”ಗೆ ಒಳಗಾಗಬೇಕು. ಇದರರ್ಥ “ಮೀರುವುದು ಎಂದರೆ ಕಳೆದುಕೊಳ್ಳುವುದಲ್ಲ. ತನ್ನ ವೈಶಿಷ್ಟ್ಯಗಳನ್ನು ಬಿಟ್ಟುಕೊಟ್ಟೂ ಕೂಡ ಜೀವಂತವಾಗಿ ಉಳಿಯುವುದು. ಈ ವೈಚಾರಿಕ ನೆಲೆಯನ್ನು ಹೆಣ್ಣಿನ ಸಂದರ್ಭಕ್ಕೆ ಅನ್ವಯಿಸಿದರೆ ವಿಶಿಷ್ಟ ಪರಿಸ್ಥಿತಿ ಗೋಚರಿಸುತ್ತದೆ. ಹೆಣ್ಣು ತನಗೆ ಸಾಮಾಜಿಕ, ಜೈವಿಕ ಮತ್ತು ನೈತಿಕ ನೆಲೆಗಳಲ್ಲಿ ದೊರೆತ ಚೌಕಟ್ಟನ್ನು ಮೀರುವ ಮೂಲಕವೇ ಸದಾ ಜೀವಂತವಾಗಿ ಉಳಿಯಲು ಸಾಧ್ಯ. ಆದರೆ ಮೀರುವ ಅಪೇಕ್ಷೆಗಳಿದ್ದರೂ ಮೀರುವ ಅವಕಾಶಗಳಿಲ್ಲದಿರುವುದು ಒಂದು ವಿಪರ್ಯಾಸ. ಮತ್ತೆ ಕೆಲವೊಮ್ಮೆ ಇಂತಹ ಮೀರುವಿಕೆಯ ‘ನಟನೆ’ಗಳನ್ನು ಮಾತ್ರ ಆಕೆ ಮಾಡುತ್ತಿರುತ್ತಾಳೆ. ಈ ‘ನಟನೆ’ಯಲ್ಲಿ ಕ್ರಿಯೆಯ ಎಲ್ಲ ಹೊಣೆಗಳಿದ್ದರೂ ಕೊನೆಯ ಫಲಿತವಾಗಿ ಏನೂ ಬದಲಾವಣೆ ಆಗಿರುವುದಿಲ್ಲ” (ಅದೇ:ಪು.೪೮.) ಆದರೆ ಬದಲಾವಣೆಯ ಭರವಸೆಯನ್ನು ಕನಸನ್ನು ಹೆಣ್ಣು ಕಳೆದುಕೊಂಡಿಲ್ಲ. ಕೃತಿಯ ಘನತೆ (ರಾಜಕೀಯ, ಸಾಮಾಜಿಕ, ಆರ್ಥಿಕ, ಧಾರ್ಮಿಕತೆ)ಯನ್ನು ಪ್ರಶ್ನಿಸುವ ಆಯ್ಕೆಯನ್ನು ಇನ್ನು ಮುಂದೆಯೂ ಬಿಟ್ಟುಕೊಡುವ ಸಂದರ್ಭಗಳಿಲ್ಲ ಎನ್ನುವ ಸಂಗತಿಗಳನ್ನು ಇಲ್ಲಿಯ ಲೇಖನಗಳು ಹೊಂದಿವೆ ಎನ್ನುವ ಸಮಧಾನವೂ ಇದೆ.

ಇಂತಹ ಮಹತ್ವದ ಯೋಜನೆಯಲ್ಲಿ ನನ್ನನ್ನು ತೊಡಗಿಸಿಕೊಂಡ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ನಾಡೋಜ ಗೀತಾ ನಾಗಭೂಷಣ ಅವರಿಗೆ, ರಿಜಿಸ್ಟ್ರಾರ ಆದ ವ್ಹಿ.ಎನ್‌. ಮಲ್ಲಿಕಾರ್ಜುನ ಸ್ವಾಮಿಯವರಿಗೆ, ನನ್ನ ಮಾರ್ಗದರ್ಶಕರಾದ ಡಾ. ಮಲ್ಲಿಕಾ ಘಂಟಿಯವರಿಗೆ, ಅಕಾಡೆಮಿಯ ಎಲ್ಲ ಸದಸ್ಯರಿಗೂ ನನ್ನ ಕೃತಜ್ಞತೆಗಳು. ಕರಡು ತಿದ್ದುವಲ್ಲಿ ನೆರವಾದ ಡಾ. ಬಸವರಾಜ ಡೋಣೂರ ಹಾಗೂ ಡಾ.ಬಿ. ಎಸ್‌. ಬಿರಾದಾರ ರವರಿಗೆ, ಅಕ್ಷರ ಸಂಯೋಜಿಸಿದ ಮಂಜುನಾಥ ಅವರಿಗೂ ನನ್ನ ಕೃತಜ್ಞತೆಗಳು.

ಡಾ. ವೆಂಕಟಗಿರಿ ದಳವಾಯಿ

text-�!*�so�����rcase’>ಸಾಹಿತ್ಯ ಅಕಾಡೆಮಿ ಹಮ್ಮಿಕೊಂಡಿರುವ ಸಂಸ್ಕೃತಿ ಮಹಿಳಾ ಮಾಲಿಕೆ ಯೋಜನೆಯ ಮೇರೆಗೆ ಒಬ್ಬೊಬ್ಬ ಸಂಪಾದಕರಿಗೆ ತಲಾ ಹತ್ತು ಸಂಸ್ಕೃತಿಗಳನ್ನು ಒಪ್ಪಿಸಿ, ಹತ್ತು ಜನ ಲೇಖಕ/ಲೇಖಕಿಯರಿಂದ ಪ್ರತಿಯೊಬ್ಬರೂ ಒಂದೊಂದು ಸಂಸ್ಕೃತಿಯನ್ನು ಮಹಿಳಾ ಕೇಂದ್ರೀಕೃತ ನೆಲೆಯಲ್ಲಿ ಸಂಶೋಧನಾತ್ಮಕ ಅಧ್ಯಯನವನ್ನು ನಡೆಸಿ ಸುಮಾರು ಐವತ್ತು ಪುಟಗಳ ಲೇಖನ ಬರೆದುಕೊಡಲು ಕೋರಲಾಗಿತ್ತು. ಈ ಅಧ್ಯಯನದಲ್ಲಿ ವಿಶೇಷವಾಗಿ ಮಹಿಳೆಗೆ ಹೆಚ್ಚು ಒತ್ತು ಕೊಡಲಾಗಿದೆ. ಪ್ರತಿಯೊಂದು ಸಂಸ್ಕೃತಿಯಲ್ಲಿ ಜವಾಬ್ದಾರಿಯ ಬಹುಪಾಲು ಪುರುಷರಿಗಿಂತ ಹೆಚ್ಚಾಗಿ ಸ್ತ್ರೀಯೇ ನಿಭಾಯಿಸುತ್ತಾಳೆ. ಒಂದು ಸಂಸ್ಕೃತಿ ಬೆಳೆದು ರೂಢಿಗತವಾಗಿ ಮುಂದುವರೆಯುವಲ್ಲಿ ಆ ಸಂಸ್ಕೃತಿಯ ಮಹಿಳೆಯ  ಪಾಲು ಹೆಚ್ಚಿನದು. ಆದ್ದರಿಂದ ಮಹಿಳೆಯನ್ನೇ ಪ್ರಮುಖವಾಗಿಟ್ಟು ಕೊಂಡು ಒಂದು ನೂರು ಸಂಸ್ಕೃತಿಗಳ ಅಧ್ಯಯನ ಮಾಡಿದ ಈ ಯೋಜನೆಯ ಒಂದು ಸಂಪುಟ ಹತ್ತು ಲೇಖನಗಳನ್ನೊಳಗೊಂಡಂತೆ ಒಟ್ಟು ಹತ್ತು ಸಂಪುಟಗಳನ್ನು ಹೊರತರುವ ಆಶಯ ಹೊಂದಿದೆ.

 

ಈ ಯೋಜನೆಯಡಿಯಲ್ಲಿ ಪ್ರಕಟವಾಗುತ್ತಿರುವ ಎಲ್ಲ ಸಂಪುಟಗಳ ಎಲ್ಲ ಲೇಖನಗಳ ಮೌಲಿಕತೆ ಒಂದೇ ಮಟ್ಟದಲ್ಲಿ ಇಲ್ಲದಿರಬಹುದು. ಆದರೆ ಸಂಪೂರ್ಣ ಯೋಜನೆಯೇ ಒಂದು ಘಟಕವಾಗಿ ತನ್ನದೇ ಆದ ವಿಶಿಷ್ಟ ಮೌಲಿಕತೆಯನ್ನು ಹೊಂದಿದೆಯೆಂಬುದು ಸತ್ಯ.

ಈ ಯೋಜನೆಯಲ್ಲಿ ಬಹಳಷ್ಟು ಜನ ಲೇಖಕ ಲೇಖಕಿಯರು ಪರಿಶ್ರಮಪಟ್ಟು, ಕ್ಷೇತ್ರಕಾರ್ಯ ನಿರ್ವಹಿಸಿ ಸಂಶೋಧನಾತ್ಮಕ ಅಧ್ಯಯನದಲ್ಲಿ ತೊಡಗಿ ಲೇಖನಗಳನ್ನು ಸಿದ್ಧಪಡಿಸಿಕೊಟ್ಟಿದ್ದಾರೆ ಅವರನ್ನು ಕೃತಜ್ಞತೆಯಿಂದ ನೆನೆಯುವುದು ನನ್ನ ಮೊದಲ ಕರ್ತವ್ಯ. ಈ ಯೋಜನೆಯ ಸಂಪಾದಕರಾಗಿ ಕಾರ್ಯನಿರ್ವಹಿಸಿದ ಮತ್ತು ಅಕಾಡೆಮಿಯ ಎಲ್ಲ ಕೆಲಸ ಕಾರ್ಯಗಳಿಗೆ ತುಂಬು ಹೃದಯದಿಂದ ಸಹಕಾರ ನೀಡುತ್ತ ಬಂದಿರುವ ಸದಸ್ಯರಿಗೂ ನನ್ನ ಪ್ರೀತಿಯ ಕೃತಜ್ಞತೆಗಳು ಸಲ್ಲಲೇಬೇಕು. ಅಂತೆಯೇ ರಿಜಿಸ್ಟ್ರಾರ್ ಆಗಿರುವ ನನ್ನ ಪ್ರೀತಿಯ ಹುಡುಗ ವಿ.ಎನ್‌. ಮಲ್ಲಿಕಾರ್ಜುನ ಸ್ವಾಮಿ ಮತ್ತು ಸಿಬ್ಬಂದಿವರ್ಗ, ಅರ್ಥಪೂರ್ಣ ಮುಖಪುಟ ರಚಿಸಿಕೊಟ್ಟ ಕಲಾವಿದ ಸುಧಾಕರ್ ದರ್ಬೆಯವರು ಅಂದವಾಗಿ ಮುದ್ರಿಸಿಕೊಟ್ಟ ಪ್ರಿಂಟ್‌ಪಾರ್ಕ್ ಮುದ್ರಣ ಸಂಸ್ಥೆ ಮಾಳೀಕರು ಇವರೆಲ್ಲರ ಸಹೃದಯದ ಸಹಕಾರವನ್ನು ನೆನೆಯುತ್ತೇನೆ. ಅಗಣಿತ ಹಿತೈಷಿಗಳನ್ನು ಹೃತ್ಪೂರ್ವಕವಾಗಿ ಸ್ಮರಿಸುತ್ತೇನೆ.

ಮತ್ತೊಮ್ಮೆ ಎಲ್ಲರಿಗೂ ಧನ್ಯವಾದಗಳು.

ಡಾ.ಗೀತಾ ನಾಗಭೂಷಣ
ಮಾರ್ಚ್ ೨೦೦೮