ಕನ್ನಡ ಜೈಮಿನಿ ಭಾರತವನ್ನು ಮೈಸೂರು ಸರ್ಕಾರದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಕಾರ್ಯಕ್ರಮದ ಅಂಗವಾಗಿ ಪ್ರಕಟಿಸಬೇಕೆಂದು ಘನ ಸರ್ಕಾರದವರು ಸಂಕಲ್ಪಿಸಿ, ಆ ಕಾರ್ಯವನ್ನು ಕೃಪೆಮಾಡಿ ನಮಗೆ ಒಪ್ಪಿಸಿದರು. ಈ ಕೆಲಸವನ್ನು ನಾವು ಶ್ರದ್ಧೆಯಿಂದಲೂ, ಕನ್ನಡದ ಮೇಲಿನ ಅಭಿಮಾನದಿಂದಲೂ, ಯಥಾಶಕ್ತಿಯಾಗಿ ನಿರ್ವಹಿಸಿದ್ದೇವೆ. ಸಂಪಾದಕ ಮಂಡಲಿಯವರು ಈಗ ಅಚ್ಚಾಗಿರುವ ಗ್ರಂಥಗಳನ್ನೂ ತಾಳೆಯೋಲೆ ಗ್ರಂಥಗಳನ್ನೂ ಪರೀಕ್ಷಿಸಿ, ಶುದ್ಧವಾದ ಪಾಠವನ್ನು ಕಂಡುಹಿಡಿದು ಈ ಗ್ರಂಥದಲ್ಲಿ ಪ್ರಕಟಿಸಬೇಕೆಂದೂ, ಇದು ಜನ ಸಾಮಾನ್ಯರಿಗೆ ಉಪಯೋಗವಾಗುವ ಆವೃತ್ತಿಯಾದುದರಿಂದ ಪಾಠಾಂತರಗಳ ಪಟ್ಟಿ ಬೇಕಿಲ್ಲವೆಂದೂ ನಿರೂಪಿಸಿದರು. ಅಲ್ಲದೆ, ಈ ಗ್ರಂಥವು ಕರ್ಣಾಟಕ ಭಾಷಾರತ್ನಂ, ಮಹಾವಿದ್ವಾ, ಕೈ|| ಕರಿಬಸವಶಾಸ್ತ್ರಿಗಳ ಕನ್ನಡ ಜೈಮಿನಿ ಭಾರತದ ಪಾಠವನ್ನು ಅನುಸರಿಸಬೇಕೆಂದೂ ಸಲಹೆಮಾಡಿದರು. ನಾವು ಈ ಎಲ್ಲ ವಿಷಯಗಳನ್ನೂ ಗಮನದಲ್ಲಿಟ್ಟುಕೊಂಡು ಈ ಗ್ರಂಥವನ್ನು ಸಂಪಾದಿಸಿದ್ದೇವೆ. ಮುದ್ರಣ ಕಾಲದಲ್ಲಿ ಓದುಗರಿಗೂ ಗಮಕಿಗಳಿಗೂ ಅನುಕೂಲವಾಗಲೆಂದು ಕೆಲವೆಡೆ ಒತ್ತಕ್ಷರಗಳನ್ನು ಬಿಡಿಸಿ ಅಚ್ಚು ಮಾಡಿಸಿದ್ದೇವೆ. ಕವಿಕಾವ್ಯ ವಿಚಾರವನ್ನು ಕುರಿತು ವಿಸ್ತಾರವಾದ ಪ್ರಸ್ತಾವನೆಯನ್ನು ಬರೆಯಲಾಗಿದೆ. ಈ ಗ್ರಂಥದ ಕಡೆಯಲ್ಲಿ ಕಠಿಣ ಶಬ್ದಗಳ ಅರ್ಥಕೋಶ ಮತ್ತು ವಿಶೇಷ ವಿಚಾರಗಳು ಅಗತ್ಯವೆಂದು ನಮಗೆ ತೋರಿದರೂ ಇಲಾಖೆಯವರ ಇಷ್ಟದಂತೆ ಗ್ರಂಥಪ್ರಕಟಣೆ ತಡವಾಗುವುದೆಂಬ ನಿಮಿತ್ತದಿಂದ ಆ ಕಾರ‍್ಯವನ್ನು ನಾವು ಮಾಡಲಿಲ್ಲ. ದೇವನೂರಿನ ಶ್ರೀ ಲಕ್ಷ್ಮೀರಮಣಸ್ವಾಮಿ ದೇವಾಲಯದ ಚಿತ್ರಗಳು ಈ ಗ್ರಂಥವನ್ನು ಅಲಂಕರಿಸಿದ್ದು ಓದುಗರಿಗೆ ಹೆಚ್ಚು ಹುರುಪನ್ನುಂಟುಮಾಡುತ್ತದೆಂದು ಭಾವಿಸಿದ್ದೇವೆ. ಈ ಗ್ರಂಥ ಸಂಪಾದನೆಯ ಮಹತ್ಕಾರ‍್ಯದಲ್ಲಿ ನಮ್ಮ ಬಗ್ಗೆ ಸಹಾನುಭೂತಿಯಿಂದ ವರ್ತಿಸಿದ ನಿವೃತ್ತ ಡೈರೆಕ್ಟರಾದ ರಾಜಸೇವಾಸಕ್ತ ಶ್ರೀ ಸಿ. ಕೆ. ವೆಂಕಟರಾಮಯ್ಯನವರು ಮತ್ತು ಈಗಿನ ಡೈರೆಕ್ಟರಾದ ಪ್ರೊ|| ಎ. ಎ. ಮೂರ್ತಿರಾಯರು, ಇವರ ಸಹಾಯ ಅಧಿಕಾರಿ ಶ್ರೀ ಜೀರಗೆ ಕಟ್ಟೆ ಬಸವಪ್ಪನವರು ಮೊದಲಾದ ಅಧಿಕಾರಿ ವರ್ಗದವರಿಗೂ ಸರ್ಕಾರಿ ಮುದ್ರಣಾಲಯದವರಿಗೂ ನಮ್ಮ ಕೃತಜ್ಞತಾ ಪೂರ್ವಕವಾದ ವಂದನೆಗಳನ್ನು ಸಮರ್ಪಿಸುತ್ತೇವೆ.

ನಾವು ಈ ಗ್ರಂಥವನ್ನು ಪ್ರಕಟಿಸುವ ಸಂದರ್ಭಲ್ಲಿಯೇ ಲಕ್ಷ್ಮೀಶ ಕವಿ ವಿರಚಿತಗಳಾದ ಹತ್ತು ಹಾಡುಗಳು ನಮ್ಮ ಗಮನಕ್ಕೆ ಬಂದುವು. ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆಯಲ್ಲಿ ಪ್ರಕಟವಾದ ಅವನ್ನು ಈ ಗ್ರಂಥದ ಕಡೆಯಲ್ಲಿ ಪರಿಶಿಷ್ಟದಲ್ಲಿ ಕೊಟ್ಟಿದ್ದೇವೆ. ಈ ಹಾಡುಗಳನ್ನು ಗ್ರಂಥದ ಕಡೆಯಲ್ಲಿ ಕೊಡಬೇಕೆಂದು ಉಪಯುಕ್ತ ಸಲಹೆ ಕೊಟ್ಟ ಪ್ರೊ|| ಡಿ. ಎಲ್. ನರಸಿಂಹಾಚಾರ್ ಅವರ ಉಪಕಾರವನ್ನು ಇಲ್ಲಿ ಸ್ಮರಿಸುವುದು ಅಗತ್ಯ.

ಪ್ರಮಾದವಶಾತ್ ಈ ಗ್ರಂಥದಲ್ಲಿ ಕೆಲವು ಅಚ್ಚಿನ ತಪ್ಪುಗಳು ಹಾಗೆಯೇ ಉಳಿದುಹೋಗಿವೆ. ಇದಕ್ಕಾಗಿ ನಾವು ವಿಷಾದಿಸುತ್ತೇವೆ. ಒಟ್ಟಿನಲ್ಲಿ ಬಹಳ ಪ್ರಮಾದವಾದವುಗಳೆಂದು ಕಂಡುಬಂದ ದೋಷಗಳ ಶುದ್ಧ ಪಾಠಗಳನ್ನು ಈ ಗ್ರಂಥದ ಕೊನೆಯಲ್ಲಿ ಶುದ್ಧಾಶುದ್ಧ ಪತ್ರಿಕೆಯಲ್ಲಿ ಸೂಚಿಸಲಾಗಿದೆ.

ಇಂತು

ದೇವುಡು ನರಸಿಂಹಶಾಸ್ತ್ರೀ

.ಶಿವಮೂರ್ತಿಶಾಸ್ತ್ರೀ

(ಸಂಪಾದಕರು)

ಬೆಂಗಳೂರು,

ತಾ|| ೧೫-೬-೧೯೫೬.