ಸಾಹಿತ್ಯ ಸಂಸ್ಕೃತಿ, ಧರ್ಮ, ವಿಚಾರ, ವಿಜ್ಞಾನ, ಸಮಾಜ ಮುಂತಾದವುಗಳ ಬಗೆಗಿನ ಚರ್ಚೆ, ಚಿಂತನೆ ಎಂದರೆ; ಅದು ಬೇರೇನೂ ಅಲ್ಲದೆ ಬದುಕಿನ ಬಗೆಗಿನ ಚರ್ಚೆ, ಚಿಂತನೆ ಅಂತಲೆ ಅರ್ಥ. ಈ ದೃಷ್ಟಿಯಿಂದ ಮಹಿಳಾ ಸಂಸ್ಕೃತಿಯ ಕೆಲಸ ಕೂಡ ಒಟ್ಟು ಬದುಕಿಗೆ ಸಂಬಂಧಿಸಿದ್ದೆ ಆಗಿದೆ. ಬದುಕು ರೂಪುಗೊಂಡಿರುವುದು ಸ್ತ್ರೀ -ಪುರುಷನ ಸಮಾಗಮದಿಂದಲೇ ಹೊರತು; ಅದು ಕೇವಲ ಪುರುಷನಿಂದಲೋ ಅಥವಾ ಕೇವಲ ಸ್ತ್ರೀಯಿಂದಲೋ ಮಾತ್ರ ರೂಪಿತವಾಗಿಲ್ಲ. ವೈದಿಕಶಾಹಿಯ ಆರ‍್ಯರು ಇಂಡಿಯಾಕ್ಕೆ ಬರುವ ಮುಂಚೆ; ಬದುಕು, ಸಂಸ್ಕೃತಿ ಸಾಮಾಜಿಕ ಸಂಬಂಧ ಇವುಗಳೆಲ್ಲವುಗಳು ಬಹುಮುಖಿ ಸಂಸ್ಕೃತಿ ನೆಲೆಯವುಗಳೆ ಆಗಿದ್ದವು. ಅವುಗಳ ಆರೋಗ್ಯಕರವಾದವುಗಳಾಗಿದ್ದವು ಕೂಡ. ಶ್ರಮಸಂಸ್ಕೃತಿಗೆ ತುಂಬ ಮಹತ್ವದ ಸ್ಥಾನವೆ ಇತ್ತು. ಜಗತ್ತಿಗೆ ಪ್ರೀತಿ, ಪ್ರೇಮ, ದಯೆ, ಕರುಣೆಯಂಥ ಮಹಾಮಾನವೀಯ ಮೌಲ್ಯಗಳನ್ನು ಸಾರಿದ ಬುದ್ಧಗುರುವಿನ ವಿಚಾರಧಾರೆಗಳ ನೆಲೆಯಿತ್ತು. ತುಂಬು ವಿಷಾದದ ಸಂಗತಿ ಎಂದರೆ ಅರ್ಥಹೀನವಾದ ಮನುಪ್ರಣೀತ ವ್ಯವಸ್ಥೆಯು ವ್ಯವಸ್ಥಿತವಾಗಿ ಈ ನಾಡಿಗೆ ನುಸುಳಿಕೊಂಡ ನಂತರ ತುಂಬ ಕ್ರೂರವಾದ ಜಾತೀಯತೆ ಹಾಗೂ ಅಸ್ಪೃಶ್ಯತೆ ಆಚರನೆಯನ್ನು ಆಚರಣೆಗೆ ತಂದಿತು. ’ನ ಸ್ತ್ರೀ ಸ್ವತಂತ್ರ‍್ಯಂ’ ಎಂಬ ಅರ್ಥಹೀನ ಮೌಢ್ಯವು ಪ್ರಜಾಸಂಖ್ಯೆಯ ಅರ್ಧದಷ್ಟಿರುವ ಹೆಣ್ಣನ್ನು ಹಲವು ಬಗೆಯ ಶೋಷಣೆಗೆ ಗುರಿ ಮಾಡಿತು. ಸತಿಸಹಗಮನದಂಥ ಕ್ರೂರ ಪದ್ಧತಿಯನ್ನು ಹೇರಿತು. ದೇವರು – ಧರ್ಮದ ಹೆಸರಿನಲ್ಲಿ ಆಚರಿಸಿಕೊಂಡು ಬಂದ ಮೌಢ್ಯಗಳು ಹೆಣ್ಣು ಜೀವಗಳ ಮೇಲೆ ನಿರಂತರ ಶೋಷಣೆಯನ್ನು ನಡೆಸಿಕೊಂಡು ಬಂದವು. ಆದರೆ ಹೆಣ್ಣು ನಿಜವಾದ ಅರ್ಥದಲ್ಲಿ ಬದುಕನ್ನು ಕಟ್ಟಿದ ಮಹಾನ್ ನಿಸರ್ಗ ಪ್ರೇರಣಗಾರ್ತಿ. ಒಂದರ್ಥದಲ್ಲಿ ಜನಪದ ಇದ್ದಂಗೆ. ನಾಶದ ಪ್ರಶ್ನೆಯೇ ಇಲ್ಲ.  ಈ ಎಲ್ಲ ಬಗೆಯ ಅಪಮಾನ ಶೋಷಣೆಗಳ ನಡುವೆಯೂ ಕೂಡ ತನ್ನ ನಿಸರ್ಗ ಸಹಜವಾದ ಚೈತನ್ಯದಿಂದ ತನ್ನ ಗಟ್ಟಿಯಾದ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದ್ದಾಳೆ. ಜಗತ್ತಿನ ಸಾಂಸ್ಕೃತಿಕ ಸಾಹಿತ್ಯಕ ಪರಂಪರೆಗೆ ಪ್ರೇರಕಳಾಗಿದ್ದಾಳೆ. ಇಂಡಿಯಾದ ರಾಮಾಯಣ – ಮಹಾಭಾರತಗಳು ಒಂದರ್ಥದಲ್ಲಿ ಹೆಣ್ಣಿನ ಬದುಕಿನ ಸುತ್ತುಮುತ್ತವೆ ಹರಡಿಕೊಂಡಿವೆ. ಜಾನಪದ ಕ್ಷೇತ್ರದಲ್ಲಿ ಪ್ರಧಾನ ಪಾತ್ರವಹಿಸಿದ ಮಹಿಳೆ ಸಂಸ್ಕೃತಿ ನೆಲೆಯ ಕಾರಣಳು ಆಗಿದ್ದಾಳೆ. ಈ ಎಲ್ಲಾ ಹಿನ್ನೆಲೆಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು ರೂಪಿಸಿರುವ ಈ ಮಹಿಳಾ ಸಂಸ್ಕೃತಿ ಮಾಲೆಯ ಕೆಲಸವು ತುಂಬು ಮಹತ್ವದ್ದೇ ಆಗಿದೆ. ಪ್ರಧಾನವಾಗಿ ಗಮನಿಸಬೇಕಾದ ಅಂಶವೆಂದರೆ ಈ ನಿಟ್ಟಿನಲ್ಲಿ ನಡೆಯುತ್ತಿರುವ ಈ ಸಾಂಸ್ಕೃತಿಕ ಕೆಲಸ ಬಹುಮುಖಿ ನೆಲೆಗಟ್ಟಿನಲ್ಲಿ ಸಾಂಸ್ಕೃತಿಕ ವಾರಸುದಾರರಾಗಿರುವ ಕೆಳವರ್ಗದ, ಬುಡಕಟ್ಟಿನ, ದಲಿತವರ್ಗದ ಹಿನ್ನೆಲೆಯ ಸಾಂಸ್ಕೃತಿಕ ಕೆಲಸಗಳೇ ಆಗಿವೆ. ಈ ನೆಲದ ನಿಜ ವಾರಸುದಾರರಾಗಿದ್ದ ಬಹುಜನರ ಸಾಂಸ್ಕೃತಿಕ ದಾಖಲೆಗಳನ್ನು ದಾಖಲು ಮಾಡುವುದು ತುಂಬ ಅಗತ್ಯದ ಕೆಲಸವಾಗಿದೆ. ವಾಸ್ತವವಾಗಿ ಈ ಬಗೆಯ ಸಾಂಸ್ಕೃತಿಕ ಜವಾಬ್ದಾರಿಯ ಕೆಲಸಗಳು ಬಹಳ ಹಿಂದೆಯೆ ದಲಿತವರ್ಗದ, ಬುಡಕಟ್ಟಿನ ಸಾಂಸ್ಕೃತಿಕ ನೆಲೆಗಳು ನಿಜವಾದ ಈ ದೇಶದ ಸಾಂಸ್ಕೃತಿಕ ಸಂಪತ್ತೇ ಆಗಿವೆ. ಬುಡಕಟ್ಟು ಹಾಗೂ ಕೆಳವರ್ಗದ ಸಾಂಸ್ಕೃತಿಕ ನಾಯಕಿಯರ ಬದುಕೆ ಒಂದೊಂದು ವೀರಗಾಥೆಯಂತಿವೆ. ನಾನು ಸಂಪಾದಿಸಿರುವ ಈ ಸಂಪುಟ ಒಟ್ಟು ಆರು ಸಮುದಾಯದ ಮಹಿಳಾ ಸಂಸ್ಕೃತಿಯನ್ನು ಒಳಗೊಂಡಿದೆ. ಸಾಂಸ್ಕೃತಿಕ ಕ್ಷೇತ್ರದಲ್ಲಿ ಗುರುತರವಾದ ಕೆಲಸ ಮಾಡಿರುವ ಈ ಆರು ಜನ ವಿದ್ವಾಮಸರು ಆಯಾಯ ಜನಾಂಗದ ಮಹಿಳಾ ಸಂಸ್ಕೃತಿ ನೆಲೆಗಳನ್ನು ತುಂಬು ಸೂಕ್ಷ್ಮ ಸಂವೇದನೆಯ ನೆಲೆಗಟ್ಟಿನಲ್ಲಿ ದಾಖಲಿಸಿದ್ದಾರೆ. ತುಂಬು ಶ್ರದ್ಧೆಯಿಂದ, ಅಪಾರ ಶ್ರಮದಿಂದ ಕ್ಷೇತ್ರಕಾರ‍್ಯ ಕೈಗೊಂಡು ವಿಭಿನ್ನ ಮಾಹಿತಿಗಳನ್ನು ಸಂಗ್ರಹಿಸಿ ಅವುಗಳನ್ನೆಲ್ಲ ಅರ್ಥಪೂರ್ಣವಾಗಿ ಬರಹಕ್ಕಿಳಿಸಿದ್ದಾರೆ.

ಮುಸ್ಲಿಂ ಸಮುದಾಯದ  ಉಪಪಂಗಡವಾಗಿ ಉಳಿದುಕೊಂಡಿರುವ ಇಸ್ಲಾಂ ಆಚರಣೆ- ಗಳನ್ನುಳ್ಳ ಪಿಂಜಾರ ಜನಾಂಗ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿಯೂ ಕಂಡುಬರುತ್ತಾರೆ. ಆದರೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಅವರ ಜನಸಂಖ್ಯೆ ಹೆಚ್ಚಿರುವುದು ಕಂಡುಬರುತ್ತದೆ. ಹಾಸಿಗೆ, ದಿಂಬನ್ನು ತಯಾರಿಸುವ ವೃತ್ತಿಯನ್ನು ಪ್ರಧಾನವಾಗಿಸಿಕೊಂಡಿರುವ ಈ ಜನಾಂಗದ ಮಹಿಳೆಯರು ಸಾಂಸ್ಕೃತಿಕವಾಗಿ ವಿಭಿನ್ನ ರೀತಿನೀತಿಗಳನ್ನು ಉಳಿಸಿಕೊಂಡಿರುವುದನ್ನು ಗೆಳೆಯ ಡಾ. ಬಿ.ಸಿ.ದಾದಾಪೀರ‍್ ಅವರು ಅರ್ಥಪೂರ್ಣವಾಗಿ ದಾಖಲಿಸಿದ್ದಾರೆ. ಕರ್ನಾಟಕ-ತಮಿಳುನಾಡಿನ ಗಡಿಭಾಗದಲ್ಲಿ ನೆಲೆಸಿರುವ ಕಪ್ಪೆ ಹೊಲಯ ಜನಾಂಗದ ಮನೆಮಾತು ತಮಿಳು. ವ್ಯವಹಾರಿಕ ಭಾಷೆ ಕನ್ನಡ. ಕಠಿಣ ಪರಿಶ್ರಮಕ್ಕೆ ಹೆಸರಾದ ಈ ಜನಾಂಗ ರಸ್ತೆಗೆ ಡಾಂಬರು ಹಾಕುವುದು, ರಸ್ತೆ, ಸೇತುವೆ ನಿರ್ಮಾನ ಮುಂತಾದ ಕೆಲಸಗಳಲ್ಲಿ ಸ್ತ್ರೀ – ಪುರುಷರಿಬ್ಬರೂ ಸಮಾನವಾಗಿ ಪಾಲ್ಗೊಳ್ಳುತ್ತಾರೆ. ಈ ಜನಾಂಗದ ವಿಶೇಷ ಎಂದರೆ ಮಾತೃಪ್ರಧಾನ ಕುಟುಂಬ ಪದ್ಧತಿ ಇಂದಿಗೂ ಉಳಿದುಕೊಂಡು ಬಂದಿರುವುದು. ಈ ಬಗೆಯ ಶ್ರಮದ ಕೆಲಸಕ್ಕಾಗಿ ಈಗ ಯಂತ್ರವನ್ನು ಬಳಸುತ್ತಿರುವುದರಿಂದ ಈ ಜನಾಂಗ ಜೀವನದಲ್ಲಿ ಅತಂತ್ರ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಈ ಎಲ್ಲಾ ಸಾಂಸ್ಕೃತಿಕ -ಸಾಮಾಜಿಕ ಬದುಕನ್ನು ಮಹಿಳಾ ಸಂಸ್ಕೃತಿಯ ನೆಲೆಯಲ್ಲಿ ಡಾ. ಎಸ್. ನರೇಂದ್ರಕುಮಾರ‍್ ಅವರು ತುಂಬ ಸೂಕ್ಷ್ಮವಾಗಿ ಗ್ರಹಿಸಿ ಅಚ್ಚುಕಟ್ಟುತನದಿಂದ ದಾಖಲುಮಾಡಿದ್ದಾರೆ.

ಮಾಲೇರು ಬುಡಕಟ್ಟು ಜನಾಂಗದಲ್ಲಿಯೇ ಅತ್ಯಂತ ಕಡಿಮೆ ಜನಸಂಖ್ಯೆಯವರಾಗಿದ್ದರೆ. ದಕ್ಷಿಣ ಕನ್ನಡ ಜಿಲ್ಲೆ, ಮೂಡಿಗೆರೆ, ಶೃಂಗೇರಿ, ಕೊಪ್ಪ ಹಾಗೂ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಸುತ್ತಮುತ್ತ ಈ ಸಮುದಾಯ ಕಂಡುಬರುತ್ತದೆ. ಕಟ್ಟುಮಸ್ತಾದ ದೇಹವನ್ನು ಒಳಗೊಂಡ ಈ ಜನಾಂಗ ಕಠಿಣ ಪರಿಶ್ರಮಕ್ಕೆ ಹೆಸರಾಗಿದ್ದಾರೆ. ಹೊಲಗದ್ದೆಗಳಲ್ಲಿ ದುಡಿಯು-ವುದಲ್ಲದೆ ದೇವಾಲಯಗಳ ಸೇವೆಯನ್ನು ಮಾಡುತ್ತಾರೆ. ಈ ಜನಾಂಗದ ಮಹಿಳೆಯರು ’ನಾಟಿವೈದ್ಯ ಪದ್ಧತಿ’ಯಲ್ಲಿ ನುರಿತವರಾಗಿರುವುದು ವಿಶೇಷವೆನಿಸುತ್ತದೆ. ಈ ಜನಾಂಗದ ಮಹಿಳಾ ಸಂಸ್ಕೃತಿಯ ಬಗ್ಗೆ ಡಾ. ಕುಶಾಲಬರಗೂರು ಅವರು ತುಂಬ ಪರಿಶ್ರಮದಿಂದ ಮಾಹಿತಿ ಸಂಗ್ರಹಿಸಿ ದಾಖಲಿಸಿದ್ದಾರೆ.

ತೆಲುಗು ಮೂಲದವರಾದ ದೊಂಬಿದಾಸ ಜನಾಂಗವನ್ನು ಹೆಣ್ಣು ವೇಷದವರು ಎಂದು ಕರೆಯುತ್ತಾರೆ. ವೃತ್ತಿಗಾಯಕರಾದ ಇವರು ಅಲೆಮಾರಿ ಜನಾಂಗವಾಗಿರುವುದರಿಂದ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿಯೂ ಕಂಡುಬರುತ್ತಾರೆ. ಇವರ ಮಾತೃಭಾಷೆ ತೆಲುಗಾದರೂ ಕೂಡ ಇವರು ಮಾಡುವ ನಾಟಕಗಳೆಲ್ಲವೂ ಕನ್ನಡದಲ್ಲಿಯೇ ಇರುತ್ತವೆ. ತುಂಬಿದ ಕಂಠದಿಂದ ಹಾಡುವ ಇವರ ಮೂಲಮಟ್ಟು ವಿಶೇಷವಾಗಿರುತ್ತದೆ. ಈ ಬಗೆಯ ಅಲೆಮಾರಿ ಜನಾಂಗದ ಮಹಿಳಾ ಸಂಸ್ಕೃತಿಯನ್ನು ಡಾ. ಮಾದಯ್ಯಮಾಕನಹಳ್ಳಿ ಅವರು ತುಂಬು ಪರಿಶ್ರಮದಿಂದ ದಾಖಲು ಮಾಡಿದ್ದಾರೆ.

ಮುಸ್ಲಿಂ ಸಮುದಾಯದ ಉಪಜಾತಿಗಳಲ್ಲಿಯ ಕೆಳವರ್ಗಕ್ಕೆ ಸೇರಿರುವ ದುರ್‌ವೇಶ್ ಜನಾಂಗದ ಕರ್ನಾಟಕದ ಉದ್ದಗಲಕ್ಕೂ ಕಂಡುಬರುತ್ತಾರೆ. ಇಸ್ಲಾಂ ಧರ್ಮದಲ್ಲಿಯ ತುಂಬು ಅಪರೂಪದ ಸಂಸ್ಕೃತಿ, ಆಚಾರ ವಿಚಾರಗಳನ್ನು ಒಳಗೊಂಡಿರುವ ಈ ಜನಾಮಗದ ಮಹಿಳಾ ಸಂಸ್ಕೃತಿಯನ್ನು ಡಾ. ಷಹಾಸೀನಬೇಗಂ ಅವರು ಸಂಗ್ರಹಿಸಿ ದಾಖಲಿಸಿದ್ದಾರೆ.

ಜಲಗಾರರನ್ನು ಚಮ್ಮಾರ, ಧೇಡ್, ಮೋಚಿ, ಜಾಡಮಾಲಿಗಳು ಎಂದೆಲ್ಲ ಕರೆಯುವರು. ಈ ಜನಾಂಗ ವ್ಯವಸ್ಥೆಯ ಅಡಿಗೆ ಸಿಕ್ಕಿ ನಗ್ಗಿ ನಲುಗಿದವರು. ರಂಗುರಂಗಾಗಿ ಕಾಣುವ ಈ ದೇಶದ ನಗರಗಳನ್ನೆಲ್ಲ ಸ್ವಚ್ಛ ಮಾಡುವ ಈ ಜನಾಂಗ ಕನಿಷ್ಠ ಒಂದು ವಾರ ನಗರಗಳ ಸ್ವಚ್ಛತೆಯ ಕೆಲಸ ನಿಲ್ಲಿಸಿದರೆ ಈ ದೇಶದ ನಗರಗಳು ಈ ಗಬ್ಬು ನಾತ ಹಿಡಿಯುತ್ತವೆ. ಹೀಗೆ ಕಟ್ಟಕಡೆಯದೆಂದು ಸಮಾಜದಿಂದ ಪರಿಗಣಿತವಾಗಿರುವ ಈ ಕೆಲಸವನ್ನು ಈ ಜನಾಂಗದ ಸ್ತ್ರೀ ಪುರುಷರಿಬ್ಬರೂ ಸೇರಿಯೇ ನಿರ್ವಹಿಸುತ್ತಾರೆ. ಈ ಹಿನ್ನೆಲೆಯಲ್ಲಿ ಈ ಜನಾಂಗದ ಮಹಿಳಾ ಸಂಸ್ಕೃತಿಯನ್ನು ಡಾ. ಅಪ್ಪಗೆರೆ ಸೋಮಶೇಖರ‍್ ಅವರು ಶ್ರದ್ಧೆಯಿಂದ ಮಾಹಿತಿಗಳನ್ನೆಲ್ಲ ಕಲೆಹಾಕಿ ದಾಖಲು ಮಾಡಿದ್ದಾರೆ. ಈ ಮಹಿಳಾ ಸಂಸ್ಕೃತಿ ಮಾಲೆಯ ಸಂಪುಟಕ್ಕೆ ಅಕಾಡೆಮಿಯ ಆಹ್ವಾನವನ್ನು ಒಪ್ಪಿ, ಪರಿಶ್ರಮದಿಂದ ಕ್ಷೇತ್ರ ಕಾರ‍್ಯಕೈಗೊಂಡು ಅಚ್ಚುಕಟ್ಟುತನದಿಂದ ಮಾಡಿಕೊಟ್ಟ ಡಾ. ಬಿ.ಸಿದಾದಾಪೀರ‍್, ಡಾ. ಎಸ್. ನರೇಂದ್ರಕುಮಾರ‍್, ಡಾ. ಕುಶಾಲಬರಗೂರು, ಡಾ. ಮಾದಯ್ಯ ಮಾಕನಹಳ್ಳಿ, ಡಾ. ಷಹಾಸೀನಾ ಬೇಗಂ, ಡಾ. ಅಪ್ಪಗೆರೆ ಸಮಶೇಖರ ಇವರಿಗೆಲ್ಲ ನನ್ನ ವಂದನೆಗಳು. ಇಲ್ಲಿನ ಎಲ್ಲ ಲೇಖನಗಳನ್ನು ಹಸ್ತ ಪ್ರತಿ ರೂಪದಲ್ಲಿದ್ದಾಗಲೆ ಪರಿಶೀಲಿಸಿ ಉಪಯುಕ್ತವಾದ ಸೂಕ್ಷ್ಮ – ಸಲಹೆಗಳನ್ನು ನೀಡಿ ಸಹಕರಿಸಿದ ಅಪ್ಪಟ ಮನುಷ್ಯ ಪ್ರೇಮದ ಸಂಸ್ಕೃತಿ ಚಿಂತಕರು, ಪ್ರೀತಿಯ ಮೇಷ್ಟ್ರಾದ ಪ್ರೊ. ಕಾಳೇಗೌಡ ನಾಗವಾರ ಅವರಿಗೂ – ಈ ಬಗೆಯ ಮಹತ್ವ ಕಾರ‍್ಯ ಯೋಜನೆಯ ರೂವಾರಿಗಳೂ, ಪ್ರಖ್ಯತ ಲೇಖಕಿಯೂ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರೂ ಆಗಿರುವ ನಾಡೋಜ ಗೀತಾನಾಗಭೂಣ ಅವರಿಗೂ – ಕರ್ನಾಟಕ ಸಾಹಿತ್ಯ ಅಕಾಡೆಮಿಯ ಕ್ರಿಯಾಶಿಲ ರಿಜಿಸ್ಟ್ರಾರ‍್ ಆಗಿರುವ ಶ್ರೀ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ಅವರಿಗೂ  ಕರಡು ತಿದ್ದುವಲ್ಲಿ ಸಹಕರಿಸಿದಿ ಡಾ. ಎಸ್.ನರೇಂದ್ರಕುಮಾರ‍್ – ಅವರಿಗೂ ಈ ಯೋಜನೆ ಯಶಸ್ವಿಯಾಗಲೂ ಶ್ರಮಿಸಿರುವ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಎಲ್ಲ ಸಿಬ್ಬಂದಿ ವರ್ಗದವರಿಗೂ – ಅಚ್ಚುಕಟ್ಟಾಗಿ ಡಿ.ಟಿ.ಪಿ. ಮಾಡಿಕೊಟ್ಟ ಗೆಳೆಯ ಶ್ರೀ ಚನ್ನಕೇಶವ – ಇವರೆಲ್ಲರಿಗೂ ನನ್ನ ಕೃತೃಜ್ಞತೆಗಳು ಸಲ್ಲುತ್ತವೆ.

ಡಾ. ಎಂ.ಎಸ್. ಶೇಖರ‍್

*