ಕರ್ನಾಟಕ ಸಾಹಿತ್ಯ ಅಕಾಡೆಮಿಯ ಈ ಅವಧಿಯಲ್ಲಿ ಹಾಕಿಕೊಂಡಿರುವ ಯೋಜನೆಗಳಲ್ಲಿ “ಸಂಸ್ಕೃತಿ ಮಹಿಳಾ ಕಲಿಕೆ”ಯೂ ಒಂದು ಪ್ರಮುಖವಾದ ಯೋಜನೆ. ಕರ್ನಾಟಕದಲ್ಲಿ ವೈವಿಧ್ಯಮಯವಾದ ಜನಸಮುದಾಯಗಳಿವೆ. ಆ ಸಮುದಾಯಗಳ ಹಿಂದೆ ಒಂದು ಜೀವಂತ ಸಂಸ್ಕೃತಿ ಇದೆ. ಆಯಾ ಸಮುದಾಯಗಳ ಸಂಸ್ಕೃತಿಯನ್ನು ಪರಂಪರಗತವಾಗಿ ಕಾಪಿಟ್ಟುಕೊಂಡು ಬರುವಲ್ಲಿ; ಉಳಿಸಿ ಬೆಳೆಸುವಲ್ಲಿ ಮಹಿಳೆರಯರು ವಹಿಸಿದ ಪಾತ್ರ ಅನನ್ಯವಾದುದು. ಅಂತಹ ಜನ ಸಮುದಾಯವನ್ನು ಮಹಿಳಾ ಸಂಸ್ಕೃತಿಯ ಹಿನ್ನೆಲೆಯಲ್ಲಿ ಅಧ್ಯಯನಕ್ಕೊಳಪಡಿಸುವ; ಅದರ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ನೆಲೆಗಳನ್ನು ಶೋಧಿಸಿ ದಾಖಲಿಸುವ ಒಂದು ಯತ್ನ ಈ ಮಾಲೆಯದು.

ನಾಡಿನ ಬಹುಪಾಲು ಜನ ಸಮುದಾಯಗಳು ಆಯಾ ಕಾಲ ಘಟ್ಟಕ್ಕೆ ಅನುಗುಣವಾಗಿ ಜೀವನ ವಿಧಾನ, ಆಚಾರ ವಿಚಾರ, ನಂಬಿಕೆಗಳಲ್ಲಿ ಸಾಕಷ್ಟು ಸ್ಥಿತ್ಯಂತರಗಳನ್ನು ಕಂಡುಕೊಂಡಿವೆ. ಅದರಲ್ಲೂ ಜಾಗತೀಕರಣದ ಈ ಹೊತ್ತಿನಲ್ಲಿ ಮೂಲ ಸಂಸ್ಕೃತಿಯು ಮೂಲೆಗುಂಪಾಗುತ್ತಿದೆ. ಜನ ಸಮುದಾಯದ ಮೇಲೆ ನೇರವಾದ ಪ್ರಭಾವ ಪಶ್ಚಿಮದ ಗಾಳಿ ಮಾಧ್ಯಮಗಳ ಮೂಲಕ ಬೀಸುತ್ತಿದೆ. ಸಮಾಜಕ್ಕೆ ಪೂರಕವಾದ, ಆರೋಗ್ಯಕರವಾದ ಸಂಸ್ಕೃತಿ ಚಿಂತನೆಯನ್ನು ನಾವೆಲ್ಲರೂ ಸ್ವೀಕರಿಸಬೇಕಾದುದು ಕಾಲದ ಅಗತ್ಯ ಮತ್ತು ಅನಿವಾರ್ಯ ಕೂಡ ಹೊಸದನ್ನು ಒಳಗು ಮಾಡಿಕೊಂಡು ದೇಸೀಯತೆಯನ್ನು ಕಳೆದುಕೊಳ್ಳದೇ ಸಾಗಿರುವುದು ಹಲವು ಜನಸಮುದಾಯಗಳಲ್ಲಿ ಕಾಣಬಹುದು. ಇಂತಹ ವಿಚಾರವನ್ನು ಅರ್ಥ ಮಾಡಿಕೊಳ್ಳಲು ಇಲ್ಲಿನ ಬರಹಗಳು ಕೈದೀವಿಗೆಯಂತೆ ನೆರವಾಗಬಲ್ಲ ಶಕ್ತಿ ಪಡೆದುಕೊಂಡಿವೆ ಎಂದು ಭಾವಿಸಿರುವೆ.

ಮಹಿಳೆಯೆಂದರೆ ಸಂಸ್ಕೃತಿಯನ್ನು ಪ್ರತಿನಿಧಿಸುವ ಸಮರ್ಥ ಜೀವ; ಬೆಳಕು. ಸಮುದಾಯದಿಂದ ಸಮುದಾಯಕ್ಕೆ ಸಂಸ್ಕೃತಿಯನ್ನು ಬೆಸೆಯುವ ಕೊಂಡಿ. ಆಯಾ ಜನಸಮುದಾಯದ ಭಾಷೆ, ವೇಷ, ಸಂಸ್ಕೃತಿ, ವೃತ್ತಿ, ಆಚರಣೆ, ದೇಸಿಯತೆ, ಸಾಹಿತ್ಯ, ಜೀವನಪದ್ಧತಿ, ಕೌಟುಂಬಿಕ ಸ್ಥಾನಮಾನ, ಅಸ್ಮತೆಯನ್ನು ಉಳಿಸಿಕೊಳ್ಳಲು ನಿರಂತರ ಹೆಣಗುವ ರೀತಿ ಮುಂತಾದ ಚಿಂತನೆಗಳ ಹಿನ್ನೆಲೆಯಲ್ಲಿ ಇಲ್ಲಿನ ಬರಗಳಿವೆ.

ಲೇಖಕರಾದ ಡಾ.ಜಿ.ಸೋಮಣ್ಣ – “ಕೆಂಬಟ್ಟಿ ಹೊಲೆಯರ ಸಂಸ್ಕೃತಿ”, ಲಕ್ಕೂರು ಸಿ. ಆನಂದ- “ಮಾದಿಗ (ಮತಂಗ)ರ ಸಂಸ್ಕೃತಿ”, ಡಾ.ವೈ.ಎಫ್‌.ಸೈದಾಪುರ-“ಕಂಜರ ಭಾಟ ಸಂಸ್ಕೃತಿ”, ಗುರುಮೂರ್ತಿ ಪೆಂಡಕೂರು-ಕೋಮಟಿಗರ ಸಂಸ್ಕೃತಿ” ಮತ್ತು ಡಾ. ಲಿಂಗಣ್ಣ ಗಾಣದಾಳ – “ಮಡಿವಾಳ ಸಂಸ್ಕೃತಿ”ಯನ್ನು ಕುರಿತು ಪ್ರಬಂಧಗಳನ್ನು ಬರೆದಿದ್ದಾರೆ. ಅವರ ಬರಹಗಳ ಹಿಂದೆ ಕ್ಷೇತ್ರ ಕಾರ್ಯ ಮಾಡಿ ಆಕರ ಸಂಗ್ರಹಿಸಿದ ಅನುಭವ ಗಮನಕ್ಕೆ ಬಾರದಿರದು. ಪ್ರತಿ ಲೇಖಕನಿಗೂ ತನ್ನದೇ ಆದ ಮಿತಿ ಇದ್ದರೂ ಆ ಮಿತಿಗಳೊಳಗೇ ತನ್ನದೇ ಆದ ವ್ಯಾಪಕತೆ, ಆಳ-ಅಗಲಗಳಿರುವುದು ಇಲ್ಲಿಯ ಬರಹಗಳ ಧನಾತ್ಮಕ ಅಂಶ. ಇಂತಹ ಯೋಜನೆಯ ಕನಸಿಗೆ ಅರ್ಥಪೂರ್ಣವಾಗಿ ಕೈಜೋಡಿಸಿ ಸಕಾಲದಲ್ಲಿ ಪ್ರಬಂಧಗಳನ್ನು ಬರೆದುಕೊಟ್ಟ ಎಲ್ಲ ಲೇಖಕರಿಗೂ, ಪ್ರಬಂಧಗಳನ್ನು ಪರಿಶೀಲಿಸಿದ ಸಲಹಾ ಸಮಿತಿಯ ಸದಸ್ಯರಲ್ಲೊಬ್ಬರಾದ ಡಾ.ಡಿ.ಬಿ.ನಾಯಕರವರಿಗೂ ನನಗೆ ಈ ಸಂಕಲನದ ಸಂಪಾದಕತ್ವದ ಜವಾಬ್ದಾರಿಯನ್ನು ಹೊರಿಸಿ ಕೆಲಸ ಮಾಡಲು ಅನುವು ಮಾಡಿಕೊಟ್ಟ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಡಾ.ಗೀತಾ ನಾಗಭೂಷಣರಿಗೂ, ರಿಜಿಸ್ಟ್ರಾರ್‌ರಾದ ವಿ.ಎನ್‌.ಮಲ್ಲಿಕಾರ್ಜುನ ಸ್ವಾಮಿಯವರಿಗೂ ಹಾಗೂ ಎಲ್ಲ ಸದಸ್ಯರಿಗೂ ಪ್ರೀತಿಯ ನೆನಕೆಗಳು.

ಡಾ. ದಸ್ತಗೀರಸಾಬ್‌ದಿನ್ನಿ