ಸಂಸ್ಕೃತಿಯ ಸ್ವರೂಪವನ್ನು ಸಮಾಜದ ಬೇರೆ ಬೇರೆ ನೆಲೆಗಳಲ್ಲಿ ಅಥವಾ ಘಟಕಗಳಲ್ಲಿ ಕಂಡುಕೊಳ್ಳಬಹುದಾಗಿದೆ. ಸಮಾಜದ ಮೂಲ ಘಟಕವಾದ ವ್ಯಕ್ತಿಯ ಸಂಸ್ಕೃತಿಗೆ ಕುಟುಂಬವೆ ನೆಲೆ. ಮಹಿಳೆಯು ಸಮಾಜದ ನಡುವಿದ್ದು, ಅದರ ಗತಿ, ಪ್ರಗತಿ-ವಿಗತಿ, ಪರಂಪರೆಗೆ ಕಾರಣಳಾಗುವ ಜೀವಂತ ಘಟಕವಾಗಿದ್ದರೂ ಅವಳಿಗೆ ಸ್ವಾತಂತ್ರ್ಯ, ಸಮಾನತೆಗಳನ್ನು ನಿರಾಕರಿಸುತ್ತ ಬಂದಿರುವದರಿಂದ ಸಾಮಾಜಿಕ ಪಾತ್ರ ನಿರ್ವಹಣೆ ಅವಳಿಗೆ ಇರುವಂತೆಯೇ ಇಲ್ಲವೆಂದು ಪೂರ್ವಗ್ರಹಿಸಲಾಗಿದೆ. ಈ ಪೂರ್ವಗ್ರಹದ ಪರಿಣಾಮವಾಗಿ ರಾಜಕೀಯ, ಆರ್ಥಿಕ ರಂಗಗಳಲ್ಲಿ ಅವಳಿಗೆ ಪ್ರವೇಶವೇ ಇಲ್ಲದಂತೆ ಮಾಡಲಾಗಿತ್ತು. ಇದಕ್ಕೆ ಪೂರ್ವಭಾವಿಯಾಗಿ ಶಿಕ್ಷಣದಿಂದ ಅವಳನ್ನು ವಂಚಿಸಲಾಗಿತ್ತು. ‘ಅಬಲೆ’ ಎಂದು ಆಪಾಧಿಸಿ ಅವಳ ಆತ್ಮವಿಶ್ವಾಸಕ್ಕೆ ಧಕ್ಕೆ ತರಲಾಗಿತ್ತು. ಮಹಿಲೆಯ ಈ ‘ಶೂನ್ಯ ಚರಿತೆ’ಯನ್ನು ಅಲ್ಲಗಳೆದು ಅವಳಿಗೆ ಸಾಮಾಜಿಕ, ರಾಜಕೀಯ ಹಕ್ಕು ಬಾಧ್ಯತೆ ದೊರಕಿಸುವ ಪ್ರಯತ್ ೧೭೮೯ರ ‘ಫ್ರೆಂಚ್‌ರಾಜ್ಯ ಕ್ರಾಂತಿ’ಯ ನಂತರ ನಿಧಾನವಾಗಿ ನಡೆಯುತ್ತ ೨೦ನೆಯ ಶತಮಾನದ ಹೊತ್ತಿಗೆ ಮಹಿಳೆಗೆ ಶಿಕ್ಷಣಾವಕಾಶಗಳು ವಿಪುಲವಾಗಿ ಲಭಿಸುವಂತಾಯಿತು.

ಅರಿವಿನ ಸ್ಫೋಟ ಸಾಮೂಹಿಕವಾಗಿ ಆದಾಗ ವ್ಯಕ್ತಿಪ್ರಜ್ಞೆಗೆ ಚಾಲನೆ ‘ವೇಗ ಸಿಗುತ್ತದೆ. ಇವತ್ತಿನ ಮಹಿಳೆ ಒಬ್ಬ ಸಾಮಾಜಿಕ. ಉತ್ಪಾದಕ ವ್ಯಕ್ತಿಯೂ ಆಗಿ ತನ್ನ ಸಂಸ್ಕೃತಿಯ ಕಡೆಗೆ ಗಮನ ಹರಿಸಲು ಒತ್ತಾಯಿಸುತ್ತಿದ್ದಾಳೆ. ೧೯೭೫ರಲ್ಲಿ ಯುನೆಸ್ಕೋ ಪ್ರಣೀತ ‘ವಿಶ್ವ ಮಹಿಳಾ ವರ್ಷಾಚರಣೆ’ ನಡೆದಂದಿನಿಂದ ಭಾರತದಲ್ಲಿ ಮಹಿಳಾ ಜಾಗೃತಿ ವ್ಯಾಪಕಗೊಂಡಿದೆ. ಸವಾಲುಗಳನ್ನು ಎದುರಿಸುವ ಬೌದಧಿಕ, ಮಾನಸಿಕ ಸಿದ್ಧತೆಸಾಹಿತ್ಯದಿಂದ, ರಾಜಕೀಯ ಚಳವಳಿಗಳಿಂದ ಮಹಿಳೆಗೆ ಸಿಗುತ್ತಿದೆ. ಹೀಗಿದ್ದರೂ ಮಹಿಳೆಯ ವ್ಯಕ್ತಿ ಸಂಸ್ಕೃತಿ: ‘ಕುಟುಂಬ’ದ ಪರಿಧಿಯಲ್ಲಿ ಅನೂಚಾನವಾಗಿದೆ. ಸಾಮಾಜಿಕವಾಗಿ ಆಕೆ ‘ಅಬಲೆ’ಯಾಗಿ ಪರಿಗಣಿತಳಾಗಿರಬಹುದು; ಆರ್ಥಿಕವಾಗಿ ಪರಾವಲಂಬಿಯಾಗಿರಬಹುದು-ಆದರೆ ಕುಟುಂಬವೆಂಬ ಜಗತ್ತಿನಲ್ಲಿ ಸಂಪೂರ್ಣ ಕ್ರಿಯಾಶೀಲಳಾಗಿರುವ ಆಕೆ ಮನೆಯೊಡತಿಯಂತೂ ಆಗಿ ಉಳಿದಿದ್ದಾಳೆ. ಅವಳಿಗೆ ಅನಾಯಾಸ ದಕ್ಕಿರುವ ಮನೆಯೊಡೆತನದ ಈ ಅಧಿಕಾರ ಭಾವನಾ ಮೂಲದ್ದೆಂದು ಗಮನಿಸಬೇಕಾದ ಸತ್ಯ. ‘ಕುಟುಂಬದ ಕಣ್ಣು, ಹೆಣ್ಣು-(ಗೃಹಲಕ್ಷ್ಮೀ, ಭಾಗ್ಯದಲಕ್ಷ್ಮೀ, ಸೌಭಾಗ್ಯವತಿ-ಹೀಗೆ) ಎಂಬುದು ಹಳೆಯ ಮಾತಾದರೂ, ಹೊಸಕಾಲದಲ್ಲಿ ಹೆಣ್ಣು ಅದರಿಂದ ಚ್ಯುತಿಗೊಂಡಿಲ್ಲ. ಹೆಣ್ಣು-ತಾಯಿಯಾಗಿ, ಹೆಂಡತಿಯಾಗಿ, ಮಮತೆ-ಮರ್ಯಾದೆ ಪೂರೆವವಳಾಗಿ ನಿರ್ವಹಿಸುವ ಗೃಹಿಣೆ(ಗರತಿ)ಯ ಪಾತ್ರ, ಭಾವನಾ ಪ್ರಧಾನವಾದದ್ದು.

ಅಲ್ಲಿ ವಿಚಾರ, ಸಂಘರ್ಷಕ್ಕೆ; ಅನ್ಯತರ್ಕಕ್ಕೆ ಅವಕಾಶವಿಲ್ಲ. ಗರತಿಯ ಹಾಡುಗಳಲ್ಲಿ ಇದನ್ನು ಗುರುತಿಸುತ್ತೇವೆ. ಮಹಿಳಾ ಸಂಸ್ಕೃತಿಯನ್ನು ‘ಕುಟುಂಬ ಸಂಸ್ಖೃತಿ’ ಎಂದೇ ಪರಿಗಣಿಸಿದಾಗ, ನಮಗೆ ಗೃಹಿಣಿ(ಗರತಿ)ಯ ಸ್ಥಿತಿ-ಗತಿಗಳ ಅರಿವು ಬರುತ್ತದೆ.

ಒಂದಲ್ಲ ಒಂದು ಸಂಪ್ರದಾಯ; ದೈನಂದಿನ ಪದ್ಧತಿ, ಪರಂಪರಾಗತ ನಂಬಿಕೆ, ನಡವಳಿ ಮತ್ತು ವೈಯಕ್ತಿಕವಾದ ಭಾವೈಕ್ಯದ ತಳಹದಿಯ ಮೇಲೆ ‘ಕುಟುಂಬ’ವನ್ನು ನಿರ್ವಹಿಸುವ ಮಹಿಳೆ, ಜಾತಿ, ಪ್ರಾದೇಶಿಕ ಭಿನ್ನತೆ, ವೃತ್ತಿ ಅಥವಾ ಸಾಮಾಜಿಕ ವರ್ಗದ ಕಾರಣದಿಂದ ವಿಶಿಷ್ಟಳಾಗಿ ಬದುಕಿರುವುದು ಸಾಧ್ಯವಿದೆ. ಈ ಭಿನ್ನತೆಯನ್ನು ಗುರುತಿಸುವ ಸಮೀಕ್ಷಕರು ಪಟ್ಟಿ ಮಾಡಿದ ನೂರಾರು ನಮೂನೆಯ ‘ಸಂಸ್ಕೃತಿ’ ಸಾಲಿನಲ್ಲಿ ನಾನು ಆಯ್ದುಕೊಂಡ ೧೦ ಮಹಿಳಾ ಸಂಸ್ಕೃತಿ ಶೀರ್ಷಿಕೆಯ ಪೈಕಿ ಐವರು ಮಾತ್ರ ಪ್ರಬಂಧ ರಚಿಸಿ ಸಹಕರಿಸಿದ್ದಾರೆ. ಇವುಗಳಲ್ಲಿ ಗಾಮೊಕ್ಕಲು, ಮುಕರಿ, ಆಗೇರ ಮತ್ತು ಹವ್ಯಕ ಜನ ಸಮುದಾಯಗಳು ಈಗಲೂ ದಟ್ಟವಾಗಿ ಕಾಣಸಿಗುವುದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ, ಕುಮಟಾ, ಅಂಕೋಲಾ, ಶಿರಶಿ, ಸಿದ್ದಾಪುರ, ಯಲ್ಲಾಪುರದ ಗ್ರಾಮೀಣ ಭಾಗಗಳಲ್ಲಿ, ‘ರಜಪೂತ’ ಕುಲ ಸಮುದಾಯದ ನೆಲೆ ಮಾತ್ರ ಬಯಲಸೀಮೆಯ ಪಟ್ಟಣ -ನಗರ ಭಾಗಗಳಲ್ಲಿ ಹವ್ಯಕ ಮಹಿಳೆ ಜಾತಿ ಸಮಾಜ ವ್ಯವಸ್ಥೆಯಲ್ಲಿಮುಂದುವರಿದ ಬ್ರಾಹ್ಮಣ (ವೈದಿಕ) ಸಂಪ್ರದಾಯಕ್ಕೆ ಸೇರದಿವಳಾದರೂ ವ್ಯಕ್ತಿಯಾಗಿ ಆಕೆಯ ನಿಯಮ ನಿರ್ಬಂಧಗಳ ಚೌಕಟ್ಟಿನಲ್ಲಿದ್ದವಳು. ಗಾಮೊಕ್ಕಲು ಮಹಿಳೆಯ ಜತೆ ದಿನನಿತ್ಯ ಒಡನಾಟವಿರುವ ಹೊನ್ನಾವರದ ಡಾ||ಶಾಂತಿ ನಾಯಕರು ಆಕೆಯ ಮನೆ ಸಂಸ್ಕೃತಿಯ ಸಾಕ್ಷ್ಯಚಿತ್ರವನ್ನೇ ನಮಗೆ ತೋರಿಸಿದ್ದಾರೆ. ಮುಕರಿ ಮಹಿಳೆಯ ದುಸ್ಥಿತಿಗಳ ಬಗ್ಗೆ ಕನಿಕರ ತೋರಿಸುತ್ತಲೇ ಅವಳ ಹಾಡು-ಪಾಡುಗಳ ಅನನ್ಯತೆಯನ್ನು ವಿವರಿಸುವ ಶಿರಸಿಯ ಲೇಖಕ ಎಂ.ವಿ.ಶರ್ಮಾ (ತದ್ದಲಸೆ) ಯವರು ಪ್ರಬಂಧಕ್ಕೆ ಭಾವಾವೇಶದ ಚೌಕಟ್ಟು ಕಟ್ಟಿದ್ದಾರೆ. ರಜಪೂತರೇ ಆದ ಪತ್ರಕರ್ತ ಆರ್.ಕೆ. ಜಮಾದಾರರು ತಮ್ಮ ಮನೆ-ಕುಟುಂಬವನ್ನು ಎದುರಿಟ್ಟುಕೊಂಡು, ರಜಪೂತ ಮಹಿಳೆಯ ಸಾಂಸ್ಕೃತಿಕ ಬದುಕಿನ ಪರಿಗಳನ್ನು ಬಿಡಿಸಿಟ್ಟಿದ್ದಾರೆ. ಕವಿ, ಉಪನ್ಯಾಸಕಿಯಾಗಿರುವ ಮಾಧವಿ ಭಂಡಾರಿಯವರು ಚಿತ್ರಿಸಿದ ಆಗೇರ ಮಹಿಳೆಯು ಸಂಧಿಕಾಲದಲ್ಲಿದ್ದಾಳೆ. ಅವಳಿಗೆ ವಿಮೋಚನೆ ಅಗತ್ಯವಾಗಿದೆ. ಶಿರಸಿಯ ಹವ್ಯಕ ಗೃಹಿಣೆ ತಾರಾಹೆಗಡೆಯವರು, ಹವ್ಯಕ ಕುಟುಂಬದ ಹಿರಿಯ ಜೀವಗಳನ್ನು ನಿದರ್ಶನವಾಗಿಟ್ಟುಕೊಂಡು, ಅಡಿಗೆ, ಮದುವೆಯಂತಹ ಗೃಹಕೃತ್ಯಗಳಲ್ಲಿಯ ವಿಶಿಷ್ಟ ರೀತಿ, ರುಚಿಗಳನ್ನು ಪ್ರಬಂಧದಲ್ಲಿ ಉಣಬಡಿಸಿದ್ದಾರೆ. ಐದೂ ಪ್ರಬಂಧಗಳು, ನಾಳೆ-ನಾಡಿದ್ದು ಮತ್ತೆ ನೋಡಲು ಸಿಗದಂತಹ, ಬದಲಾವಣೆಯ ಅಂಚಿನಲ್ಲಿರುವ ಮಹಿಳೆಯ ಕಥನಗಳಾಗಿದ್ದು, ನಾಡಿನ ಸಾಮಾಜಿಕ ಚರಿತ್ರೆ ಬರೆಯುವವರಿಗೆ ಆಕರಗಳಾಗಿವೆ.