ಎನ್ನ ನಾನರಿಯದಂದು ಮುನ್ನ ನೀನೇನಾಗಿರ್ದೆ ಹೇಳಾ?

ಮುನ್ನ (ನೀ) ಬಾಯಿ ಮುಚ್ಚಿಕೊಂಡಿರ್ದೆ ಎಂಬುದ,
ನಾ ನಿನ್ನ ಕಣ್ಣಿಂದ ಕಂಡೆನು
ಎನ್ನ ನಾನರಿದ ಬಳಿಕ ಇನ್ನು ನೀ ಬಾಯಿತೆರೆದು ಮಾತನಾಡಿದಡೆ
ಅದನೆನ್ನ ಕಣ್ಣಿಂದ ಕಂಡು ನಾಚಿದೆ ನೋಡಾ
ಎನ್ನ ಕಾಬ ನಿನಗೆ, ನಿನ್ನ ಕಾಬ ಎನಗೆ ಸಂಬಂಧ ಒಂದೆ ನೋಡಾ!
(ಅಲ್ಲಮ ಪ್ರಭು)

ಆಧ್ಯಾತ್ಮದ ಪರಿಭಾಷೆಯ ಬೆಡಗಿನ ಬೆರಗು ಮಾತ್ರ ಅಲ್ಲಮನ ಈ ವಚನ ಹೊರಡಿಸಲಾರದು. ಪಠ್ಯಗಳನ್ನು ಓದುವ ದಾಟಿಗಳು ಬೇರೆಯಾಗಿರುವುದರಿಂದ ಅರ್ಥದ ಸ್ವರಗಳು ಭಿನ್ನವಾಗಿವೆ. ಹೀಗಾಗಿ ಸ್ತ್ರೀವಾದಿ ಸಿದ್ಧಾಂತದ ನೆಲೆಗಟ್ಟಿನಿಂದ ಈ ವಚನವನ್ನು ನಮ್ಮ ಕಾಲಕ್ಕೆ ಎಳೆದು ತಂದರೆ (ಲಿಂಗರಾಜಕಾರಣದ) ದೇಹಾಧಾರಿತವಾದ ಅಸಮಾನತೆಯನ್ನು ವಾಸ್ತವಿಕವಾಗಿ ಅರಿಯಲು ಅರಿವಿನ ಗುರುವಂತೆ ಕಾಣಿಸುತ್ತದೆ. ಹೆಣ್ಣು ತನ್ನನ್ನು ಗಂಡಿನ ಕಣ್ಣಿನಿಂದಲೇ ನೋಡಿರುವುದರಿಂದ, ನೋಡುತ್ತಿರುವುದರಿಂದ ಸಾಂಸ್ಕೃತಿಕ ಲಿಂಗರಾಜಕಾರಣ ಬದುಕಿನ ಮೂಲವಾಗಿದೆ. ಸ್ತ್ರೀವಾದಿ ಸಿದ್ಧಾಂತಕ್ಕೆ ಬೇಕಾದ ತಾತ್ವಿಕತೆ ಈ ನೆಲದ ಸೊಗಡಿನಲ್ಲಿ ಸಹಜವಾಗಿ ಇರುವುದರ ಗ್ರಹಿಕೆಯ ಕೊರತೆಯಿಂದ ಹೊಸ ಓದು, ತಿಳುವಳಿಕೆ ಸಮಾಜವನ್ನು ದಿಗಿಲುಗೊಳ್ಳುವಂತೆ ಮಾಡಿದೆ. ಅಲ್ಲಮನ ತಾತ್ವಿಕ ಪರಿಭಾಷೆಯನ್ನು ಸಾಮಾಜಿಕಲಿಂಗ ಅಸಮಾನತೆಯನ್ನು ಕಂಡುಕೊಳ್ಳಲು ಕೈದೀವಿಗೆ ಯಾಗಿಟ್ಟುಕೊಂಡರೆ ಚರಿತ್ರೆಯ ಕತ್ತಲೆಯಲ್ಲಿ ಕರಗಿರುವ ಸ್ತ್ರೀಯಾಕಾರವನ್ನು ಕಾಣಲು ಸಾಧ್ಯವಾಗಬಹುದೆಂಬ ಆಶಯವಿದೆ.

ಪಿತೃ ಸಪ್ತಾಧಾರಿತ ಸಮಾಜ ನೀಡಿದ ವಿವೇಕದಿಂದಲೇ ಜ್ಞಾನದ ಕ್ಷಿತಿಜ ವಿಸ್ತಾರಗೊಂಡಿರುವುದರಿಂದ ಸಹಜವಾಗಿಯೇ ಎಲ್ಲವೂ ಪುರುಷಮಯಗೊಂಡಿದೆ. ಪುರುಷ ನಿರ್ದೇಶನದ, ನಿಯಂತ್ರಣದ ಬದುಕಿನಲ್ಲಿ ಸಹಜವಾಗಿಯೇ ಸ್ತ್ರೀಯರು ಅಂಚಿಗೆ ಸರಿಸಲ್ಪಟ್ಟಿರುತ್ತಾರೆ ಎಂದು ಭಾವಿಸಲಾಗಿದೆ. ಹೀಗೆ ಸಹಜವೆಂದು ಭಾವಿಸಿದ ಲೋಕದೊಳಗಿನ ಸತ್ಯಗಳನ್ನು ನಗ್ನಗೊಳಿಸುವ ಒತ್ತಡಗಳು ಕಾಲದ ಅಗತ್ಯಗಳಾಗಿ ಕಾಣಿಸಿಕೊಂಡಿವೆ. ಚರಿತ್ರೆಯಲ್ಲಿ ಅವಜ್ಞತೆಗೆ ಕೇಂದ್ರವಾಗಿಟ್ಟುಕೊಂಡು ಸಂಸ್ಕೃತಿಗಳ ಶೋಧವೆಂಬುದು ತುಂಬಾ ಅಗತ್ಯವಾಗಿ ಆಗಬೇಕಾಗಿದೆ. ಪ್ರಧಾನ ಸಂಸ್ಕೃತಿಯಿಂದ ಪ್ರಾರಂಭಿಸಿ ಉಪಸಂಸ್ಕೃತಿಗಳವರೆಗೆ ಒಂದು ಮಾಹಿತಿಯಾಧಾರಿತ ದಾಖಲಾತಿಯೆಂಬುದು ನಮ್ಮ ಕೈಗೆಟಕುತ್ತಿದೆ. ಆದರೆ  ಸಂಸ್ಕೃತಿಯೆಂಬ ಬೀಜಕ್ಕೆ ಅಂಟಿಕೊಂಡಿರುವ ಪಕಳೆಗಳೆರಡನ್ನು ನೋಡುವ ಅಗತ್ಯ ಕಾಣಿಸದೆ ಹೋದದ್ದರ ಬಗ್ಗೆ ಸಹಜ ಕುತೂಹಲ ಮೂಡಿದ್ದೆ ಆಧುನಿಕ ಭಿನ್ನ ದಾಟಿಯ ಓದಿನ ಮೂಲಕವೆನ್ನಬಹುದು. ಬೀಜ ಬಿರಿದು ಹೊರ ಬಂದ ಸಸಿಗೆ ಮೈಗಂಟಿಕೊಂಡ ಏಕ ಪಕಳೆ (ಪಿತೃ ಪಕ್ಷ) ಯನ್ನೇ ಬೆರಗಿನಿಂದ ನೋಡಿದ ಜಗತ್ತಿಗೆ ಮಣ್ಣಲ್ಲಿ ಹುದುಗಿರುವ ಇನ್ನೊಂದು ಪಕಳೆ (ಮಾತೃಪಕ್ಷ)ಯನ್ನು ಮುಖಾಮುಖಿಯಾಗಿಸುವ ಪ್ರಾರಂಭದ ಹೆಜ್ಜೆ ಈ ಮಾಲಿಕೆ.

ಮಾನವ ಶಾಸ್ತ್ರಜ್ಞರು ’ಸಂಸ್ಕೃತಿ’ ಎಂದರೆ ಸಮುದಾಯಗಳ ಸಮಗ್ರ ಜೀವನ ವಿಧಾನಗಳ ಮೊತ್ತ ಎಂದು ವ್ಯಾಖ್ಯಾನಿಸಿದರೆ ಖ್ಯಾತ ಸಮಾಜಶಾಸ್ತ್ರಜ್ಞನಾದ ವೈಲ್ಡ್ ’ಮನುಷ್ಯನ ಶ್ರಮ ಎಷ್ಟೆಷ್ಟು ಬಳಕೆಯಾಗುತ್ತದೆಯೋ ಅಷ್ಟಷ್ಟು ಸಂಸ್ಕೃತಿಯ ವಿಕಾಸವಾಗುತ್ತದೆ’ ಎಂಬ ವ್ಯಾಖ್ಯಾನದಲ್ಲಿ ಮಹಿಳೆ ಸೇರಿರುವಳು  ಎಂಬುದರ ಬಗ್ಗೆ ಅನುಮಾನಗಳಿವೆ. ಏಕೆಂದರೆ ಅವಳನ್ನು ಬೆನ್ನ ಹಿಂದಿಟ್ಟುಕೊಂಡ ಅವನ ಯಶೋಗಾಥೆಯ ಇತಿಹಾಸವಾಗಿರುವುದರಿಂದ ಅವಳು ಕಾಣೆಯಾಗಿರುವಳು. ಮೌನವಾಗಿರುವಳು, ಕಳೆದುಹೋಗಿರುವಳು. ಮನುಷ್ಯನೆಂದು ಕರೆಯುವಾಗ, ಭಾವಿಸುವಾಗ ಪುರುಷಾಕಾರ ಮಾತ್ರ ದಕ್ಕುವುದರಿಂದ ಸಂಸ್ಕೃತಿಯ ವಿಕಾಸವೆಂದರೆ ಪುರುಷ ಬದುಕಿನ ವಿಕಾಸವಾಗಿ ಮಾತ್ರ ಕಾಣಿಸುವುದು. ಇದು ಅರ್ಧ ಸತ್ಯ.  ಇಂತಹ ಅರ್ಧ ಸತ್ಯಗಳನ್ನು, ಮಿಥ್ಯಗಳನ್ನು ಭಂಜಿಸುವುದುರ ಜೊತೆಗೆ ಪೂರ್ಣ ಸತ್ಯಗಳನ್ನು ಲಿಂಗ ಅಸಮಾನತೆಯನ್ನು ನೀಗಿಸುವ ಮೂಲಕ ದಕ್ಕಿಸಿಕೊಳ್ಳಬೇಕಾಗಿದೆ. ಸಂಸ್ಕೃತಿಯ ವಿಕಸನದಲ್ಲಿ ಮಹಿಳಾ ಶ್ರಮ ಬೆರೆತುಕೊಂಡಿದೆ. ಈ ಶ್ರಮದ ಸ್ವರೂಪ, ಅದರ ಪ್ರಮಾಣವನ್ನು ಒರೆಗೆ ಹಚ್ಚುವ ಕೆಲಸವನ್ನು ಆಯಾ ಸಮುದಾಯದ ಹಿನ್ನೆಲೆಯಲ್ಲಿ ಇಲ್ಲಿ ಮಾಡಲಾಗಿದೆ.

ಚರಿತ್ರೆಯಲ್ಲಿ ವಿಸ್ಮೃತಿಗೆ ಒಳಗಾದ ಸಂಗತಿಗಳಲ್ಲಿ ’ಮಹಿಳೆ’ಯೂ ಸೇರಿಕೊಂಡಿರುವಳು. ವಸಾಹತೋತ್ತರ ಚಿಂತನಾಕ್ರಮವಾದ ’ವಿಸ್ಮೃತಿ’ ಪರಿಕಲ್ಪನೆಯಾಗಲಿ, ಆಧುನಿಕೋತ್ತರ ಚಿಂತನೆಯಿಂದ ಪ್ರೇರಿತವಾದ ಸ್ತ್ರೀವಾದಿ ತಾತ್ವಿಕತೆಯಾಗಲಿ ಈ ನೆಲದ ಸ್ತ್ರೀ ಮೂಲದ ಬಿಕ್ಕಟ್ಟುಗಳಿಗೆ ನ್ಯಾಯೋಚಿತವಾದ ಪರಿಹಾರಗಳಲ್ಲ. ಭಾರತೀಯ ಸಮಾಜದಲ್ಲಿ ಮಹಿಳೆಯರು ಒಂದು ಸಮರೂಪವಾದ ವರ್ಗ, ಸಮುದಾಯವಲ್ಲ. ಹಾಗೇನೇ ಸಂಸ್ಕೃತಿಯೆಂಬುದು ಕೂಡಾ ಏಕಾಕೃತಿಯದಲ್ಲ. ಏಕಾದಿಪತ್ಯದ ಸಂಸ್ಕೃತಿಗೆ ಮುಖಾಮುಖಿಯಾಗಿ ಹಲವು ಸಮುದಾಯಗಳು ನಿಂತುಕೊಂಡು ಮೌನ ಮುರಿದಿರುವುದರಿಂದ ಬಹುತ್ವದ ಭಿನ್ನ ಭಿನ್ನ ಸ್ವರಗಳು ಕೇಳಿಸುತ್ತಿವೆ. ಜಾತಿಯಾಧಾರಿತ ಸಮುದಾಯಗಳ ಆರ್ಥಿಕ ವಿನ್ಯಾಸಕ್ಕನುಗುಣವಾಗಿ ಬದುಕು ರೂಪುಗೊಂಡಿರುವುದರಿಂದ ಮೌಲ್ಯಗಳು, ಜೀವನ ವಿಧಾನ, ಆಚರಣೆ, ನಂಬಿಕೆಗಳು ಬೇರೆ ಬೇರೆಯಾಗಿವೆ. ಈ ಭಿನ್ನತೆಯನ್ನು ಮಹಿಳೆಯ ಬದುಕಿಗೆ ಅನ್ವಯಿಸಲು ಸಾದ್ಯವಾಗದ ವೈರುಧ್ಯಗಳಿವೆ. ಪ್ರಧಾನ ಸಂಸ್ಕೃತಿಯಲ್ಲಿಯು ನಿಚ್ಚಳವಾಗಿ ಕಾಣಿಸುತ್ತದೆ. ಇಂಥದಲ್ಲಿ ವರ್ಣಾಧಾರಿತವಾದ ತಾತ್ವಿಕತೆ ಅರ್ಥ ಕಳೆದುಕೊಳ್ಳುತ್ತದೆ.

ಒಂದು ಕಾಲಕ್ಕೆ (ಹೆಚ್ಚಿನ ಜೈವಿಕ ಭಿನ್ನತೆಯಿಂದಲೇ) ಮಾತೃಪ್ರಧಾನ ಸಂಸ್ಕೃತಿಯೊಂದಿತ್ತು. ಲಿಂಗರಾಜಕಾರಣದ ತಂತ್ರಗಾರಿಕೆಯಿಂದ ಮಾತೃಪ್ರಧಾನತೆ ಪಲ್ಲಟಗೊಂಡು ಪಿತೃಪ್ರಧಾನತೆ ಸ್ಥಾಪಿತಗೊಂಡಿತು ಎಂದು ಕಾಲದ ತಕ್ಕಡಿಯಲ್ಲಿ ತೂಗಿ ಹೇಳಲು ಸರಿಯಾದ, ಖಚಿತವಾದ ಆಧಾರಗಳಾಗಲಿ, ಸಾಕ್ಷಿಗಳಾಗಲಿ ಇಲ್ಲ. ಆದರೆ ಕೆಲವು ಬುಡಕಟ್ಟು ಸಮುದಾಯಗಳಲ್ಲಿ ಮಾತೃಪ್ರಧಾನತೆಯನ್ನು ಸಾರುವ ನಂಬಿಕೆ, ಆಚರಣೆಗಳಿವೆ. ಇವು ಮಾತೃಪ್ರಧಾನ ಸಂಸ್ಕೃತಿ, ಬದುಕು ಇರಬೇಕು ಎಂಬುದರ ಕಡೆಗೆ ಗಮನ ಸೆಳೆಯುತ್ತವೆ. ಹೆಣ್ಣಿನ ಕೈಯಲ್ಲಿಯ ಉತ್ಪಾದನಾ ಸಾಧನಗಳು ಪುರುಷನಿಗೆ ಹಸ್ತಾಂತರಗೊಂಡಂದಿನಿಂದ ಸ್ತ್ರೀ ಬದುಕಿನ ಪತನ ಪ್ರಾರಂಭವಾಯಿತು ಎಂಬುದನ್ನು ಚಾರಿತ್ರಿಕವಾಗಿ ಒಪ್ಪಿಕೊಳ್ಳಲಾಗಿದೆ. ಆಶ್ಚರ್ಯದ ಮತ್ತು ಭಯಾನಕವಾದ ಸಂಗತಿಯೆಂದರೆ ಉತ್ಪಾದನಾ ಸಾಧನಗಳು ಕೇವಲ ಭೌತಿಕ ವಸ್ತುಗಳಾಗಿರಲಿಲ್ಲ. ಹೆಣ್ಣಿನ ಪಾಲಿಗೆ. ಹೆಣ್ಣಿನ ದೇಹದಲ್ಲಿಯ ಗರ್ಭಚೀಲ ಮತ್ತು ಹಾಲು ಉತ್ಪತ್ತಿ ಮಾಡುವ ಸ್ತನಗಳ ಕಾರಣದಿಂದಲೂ ಆಕೆ ಪ್ರಧಾನತೆಯನ್ನು ಪಡೆದುಕೊಂಡು ಹಾಗೇನೇ ಅತ್ಯಂತ ಕ್ರೌರ್ಯ, ದಬ್ಬಾಳಿಕೆಗೂ ಒಳಗಾಗಿರುವಳು. ಇಲ್ಲಿ ಮತ್ತೆ ಮತ್ತೆ ಮಹಾಶ್ವೇತಾದೇವಿಯವರ ’ಸ್ತನದಾಯಿನಿ’ ಕಣ್ಮುಂದೆ ಬರುವಳು. ವರ್ಗ ಮೂಲದ ತುತ್ತ ತುದಿಯಲ್ಲಿದ್ದವರಿಗೆ ಕೆಳಗಿರುವವರನ್ನು ಸಮಲಿಂಗಿಗಳೇ ಹೇಗೆ ಶೋಷಣೆಗೆ ಒಳಪಡಿಸುವರು ಎಂಬುದಕ್ಕೆ ಚರಿತ್ರೆ ಪುರಾಣಗಳು ಸಾಕ್ಷಿ ಹೇಳುತ್ತವೆ.

ವರ್ಗಾಧಾರಿತವಾದ ಕ್ರೌರ್ಯ, ಹಿಂಸೆ, ದಬ್ಬಾಳಿಕೆ ಜಾತಿ ಸಮುದಾಯಗಳಲ್ಲಿಯ ಅಸಹಾಯಕರಿಗೆ ಮಾತ್ರ ಸೀಮಿತವಾದದ್ದಲ್ಲ. ಸಮಲಿಂಗಿಗಳಲ್ಲಿಯ ಜಾತಿ, ವರ್ಗಾಧಾರಿತವಾದ ಕಂದಕಗಳಿವೆ. ಇದಕ್ಕೆ ಪ್ರಧಾನ ಸಂಸ್ಕೃತಿಯ ಆಕರ್ಷಣೆ, ಸೆಳೆತ ಅಥವಾ ಅದರ ದಬ್ಬಾಳಿಕೆಯು ಕಾರಣವಾಗಿರಬಹುದು. ಪ್ರಧಾನ ಸಂಸ್ಕೃತಿಯನ್ನು ಹೊರತುಪಡಿಸಿದ ಹಾಗೇ ಇರುವ ಜಾತಿ ಸಮುದಾಯಗಳ ಒಳಲೋಕದಲ್ಲಿ ಸ್ತ್ರೀ ಪುರುಷರು ಸಮಾನವಾಗಿ ಶ್ರಮದಿಂದ ಸಂಸ್ಕೃತಿಯ ವಿಕಸನಗೊಳಿಸಿರುವವರು ಎಂಬುದು ಕೆಲವು ಪ್ರಸಂಗದಲ್ಲಿ  ಸುಳ್ಳಾಗುತ್ತದೆ. ಧರ್ಮಕಾರಣದಿಂದ ಅಸ್ಪೃಶ್ಯಗೊಂಡವರೆಲ್ಲ ಧರ್ಮ ರಕ್ಷಕರಾಗಿರುವುದು, ಅದರ ಆಚರಣೆಯನ್ನು ಭಯದಿಂದ ಭಕ್ತಿಯ ಹೆಸರಿನಲ್ಲಿ ಮಾಡುತ್ತಿರುವವರ ಸಂಖ್ಯೆ ಸ್ತ್ರೀಯರದೆ ಹೆಚ್ಚಾಗಿರುವುದು ಆಶ್ಚರ್ಯವನ್ನುಂಟು ಮಾಡುತ್ತಿದೆ. ಪ್ರಭುತ್ವದ ಆಕೃತಿ ಕೇವಲ ಆರ್ಥಿಕ ಮೂಲದಲ್ಲಿ ಕಾರ್ಯೋನ್ಮುಖವಾಗಿರುವುದಿಲ್ಲ. ಲಿಂಗನೆಲೆಯಲ್ಲಿ ಪ್ರಭುತ್ವವೆಂಬುದು ಸಂಸ್ಕೃತಿ ಕಾರಣದಿಂದ ಮೈದಳೆದಿರುತ್ತದೆ. ಹೀಗೆ ಹುಟ್ಟಿಕೊಂಡಿರುವ ಪ್ರಭುತ್ವದ ಪೋಷಕರು ಮಹಿಳೆಯೇ ಆಗಿರುವುದು ಮತ್ತು ಶೋಷಣೆಗೆ ಕೂಡಾ ಆಕೆಯೇ ಒಳಗಾಗುವುದನ್ನು ಕೇವಲ ಸಮಾಜಶಾಸ್ತ್ರದ ಮೂಲಕ ಅರ್ಥೈಸಿಕೊಳ್ಳಲು ಸಾಧ್ಯವಾಗದು. ಇದಕ್ಕೆ ಮನಃಶಾಸ್ತ್ರದ ತಿಳುವಳಿಕೆಯು ಬೇಕಾಗುತ್ತದೆ. ಹೆಣ್ಣಿನ ಶ್ರಮವನ್ನು ಬೇಡುವ ಸಂಸ್ಕೃತಿ ಹೆಣ್ಣಿಗೆ ಸಂಸ್ಕೃತಿಯ ಫಲವನ್ನು ನೀಡುವಲ್ಲಿ ಸಮಾಜದ ಪಾರುಪತ್ತೆಯನ್ನು ಬಯಸುತ್ತದೆ. ಸ್ತ್ರೀಯ ಬಹುರೂಪಗಳನ್ನು ವ್ಯಕ್ತಿತ್ವವನ್ನು ಧಾರ್ಮಿಕವಾಗಿ ವಿಜೃಂಭಿಸುವಂತೆ ಮಾಡುವ ಮನಸ್ಸುಗಳ ಸಾಂಸ್ಕೃತಿಕವಾಗಿ ಅಸ್ಪೃಶ್ಯಳಂತೆ ನೋಡುತ್ತದೆ.

ಈ ಕೃತಿಯಲ್ಲಿರುವ ಐದು ಲೇಖನಗಳು ಸಂಸ್ಕೃತಿಯ ಪಾಲುದಾರಳಾದ ಸ್ತ್ರೀ ಸಮ್ಮಂದಿ ವಿಶಿಷ್ಟ ಸಂಗತಿಗಳನ್ನು ದಾಖಲಿಸಿವೆ. ಪುರಾಣ ಪುಣ್ಯಕಥೆಗಳು ಹೇಗೆ ಸ್ತ್ರೀ ಪುರುಷರನ್ನು ಅರ್ಥೈಸಿವೆ ಮತ್ತು ಅವುಗಳನ್ನು ನಿಜ ಬದುಕಿಗೂ ಎಲೆತಂದು ಸಹಜವಾಗಿಸಿವೆ ಎಂಬುದನ್ನೆಲ್ಲ ಇಲ್ಲಿಯ ಲೇಖನಗಳು ಚರ್ಚಿಸುತ್ತವೆ. ಭೌತಿಕ ಬದುಕಿನ ವ್ಯವಹಾರಿಕ ಸಂಗತಿಗಳೆಲ್ಲ ಭಾವಕೋಶದೊಳಗಿನ ಜೀವಪರವಾದ ವಿಷಯಗಳ ಕತ್ತು ಹಿಚುಕಿ ಜೀವ ವಿರೋಧಿಯಾಗಿಸುತ್ತದೆ ಎಂಬುದೆಲ್ಲ ಸಂಸ್ಕೃತಿಯ ಹೆಸರಿನಲ್ಲಿಯೇ ಕರೆಯಿಸಿಕೊಂಡಿದೆ. ದೇಹವನ್ನು ಎಡಬಲವೆಂದು ಸೀಳುವುದರಲ್ಲಿಯ ತಣ್ಣನೆಯ ಕ್ರೌಯವೇ ಸತ್ರೀ ಬದುಕಿನ ನಿಯಂತ್ರಕ ಶಕ್ತಿಯಾಗಿರುವುದರಿಂದ ಸೀಳುವ ಕೈಗಳಿಗೆ ಲಿಂಗಾತೀತವಾದ ಒತ್ತಡಗಳಿವೆ. ಇಲ್ಲಿಯ ಸಂಸ್ಕೃತಿ ಸಮುದಾಯಗಳು ಪ್ರಾದೇಶಿಕ ಗೆರೆಗಳನ್ನು ಅಳುಕಿಸಿ ಅಖಂಡ ಕರ್ನಾಟಕವನ್ನು ವ್ಯಾಪಿಸಿರುವುದರಿಂದ ಆಚರಣೆ, ನಂಬಿಕೆ, ಬದುಕಿನ ಕ್ರಮಗಳೆಲ್ಲ ಆಯಾ ಪ್ರದೇಶದ ಉತ್ಪಾದನಾ ವ್ಯವಸ್ಥೆಯ ಮೇಲಿಂದ ರೂಪಗೊಂಡಿರುವುದು ಅತ್ಯಂತ ಕುತೂಹಲದ ವಿಶಿಷ್ಟವಾದ ಸಂಗತಿಗಳು ಆಯಾ ಆಯಾ ಸಮುದಾಯಗಳಲ್ಲಿವೆ.

ಪ್ರೊ. ಚೆನ್ನಪ್ಪ ಕಟ್ಟಿಯವರು ’ಹಾಲುಮತ ಸಮುದಾಯ: ಸಂಸ್ಕೃತಿ ಮಹಿಳೆ’ (ಗೊಂಡ, ರಾಜಗೊಂಡ, ಕುರುಬ) ಕರ್ನಾಟಕದ ತುತ್ತತುದಿಯಾದ ಬೀದರಿನಿಂದ ಹೊರಟು ಕರಾವಳಿ ತೀರದಲ್ಲಿ ನಿಂತು ಹಾಲುಮತ ಸಂಸ್ಕೃತಿಯೊಳಗೆ / ಹೊರಗಿನ ಮಹಿಳೆಯನ್ನು ನೋಡಿರುವ ರೀತಿ ಬೆರಗುಗೊಳಿಸುವುದು. ಹೊಕ್ಕಳ ಬಳ್ಳಿಗಂಟಿಕೊಂಡಿರುವ ಮಾಸಕ್ಕೂ ಹೊರ ಬದುಕಿನ ಲಿಂಗನ್ಯಾಯ ಬಿಡದೆ ಕಾಡಿರುವ ಸಂಗತಿ ಮತ್ತು ಹೆಣ್ಣಿನ ದೇಹ ಸಮ್ಮಂದಿ ನಂಬಿಕೆಗಳನ್ನು ಶುದ್ಧ ಸಮಾಜ ಶಾಸ್ತ್ರಜ್ಞನ ನೆಲೆಯಲ್ಲಿ ದಾಖಲಿಸಿರುವರು. ಡಾ. ಜಾಜಿ ದೇವೇಂದ್ರಪ್ಪರವರ ’ನೇಕಾರ ಸಮುದಾಯ: ಸಂಸ್ಕತಿ ಮಹಿಳೆ’ ಯಲ್ಲಿ ಜಾತಿಯಾಧಾರಿತ ಸಂಗತಿಗಳು ಹೇಗೆ ಹೆಣ್ಣಿಗೆ ಲಿಂಗಕಾರಣದಿಂದ ಆಚರಣೆಯ ನೆಲೆಯಲ್ಲಿ ಆಕೆಯನ್ನು (ಮಾದಿಗರ ಮಾಡೋದು) ಅಸ್ಪೃಶ್ಯಗೊಳಿಸುತ್ತವೆ ಎಂಬ ಬಹು ಸೂಕ್ಷ್ಮ ಸಂಗತಿಗಳನ್ನು ಈ ಲೇಖನದಲ್ಲಿ ಲೇಖಕರು ದಾಖಲೆಗೊಳಿಸಿರುವರು. ’ಮರಾಠಿ – ನಾಯ್ಕ ಸಮುದಾಯ : ಸಂಸ್ಕತಿ’ ಮಹಿಳೆಯ ಕುರಿತು ಡಾ. ನಂದಾ ಕುಮಾರಸ್ವಾಮಿ ಮತ್ತು ಡಾ. ವಾಣಿ ನಾರಾಐನ ಉಚ್ಚಿಲ್ಕರ್ ರವರು ’ಕರಾವಳಿ ಬೋವಿ (ಮೋಯ) ಸಮುದಾಯ : ಸಂಸ್ಕೃತಿ ಮಹಿಳೆ’ ಲೇಖನಗಳಲ್ಲಿ ಹೆಣ್ಣಿನ ಒಳಲೋಕದ ಒತ್ತಡಗಳನ್ನು ಎಲ್ಲ ಶಾಸ್ತ್ರಗಳನ್ನು ಮೀರಿದ ಮನೋಭಾವದಿಂದ ಗ್ರಹಿಸಿರುವರು. ಡಾ. ಹರಿಲಾಲ ಪವಾರರು ’ಲಂಬಾಣಿ ಸಮುದಾಯ : ಸಂಸ್ಕೃತಿ ಮಹಿಳೆ’ ಲೇಖನವು ಕೂಡ ಜಗತ್ತು ನೋಡದ ಹಲವು ಸತ್ಯಗಳನ್ನು ದಾಖಲಿಸಿದೆ. ಈ ಎಲ್ಲ ಲೇಖನಗಳನ್ನು ಕ್ಷೇತ್ರ ಕಾರ್ಯದ ಪರಿಶ್ರಮದ ಮೂಲಕ ಬರೆದುಕೊಟ್ಟ ಎಲ್ಲರನ್ನು ಪ್ರೀತಿಯಿಂದ ಸ್ಮರಿಸುವೆ. ಇಂತಹ ಮಹತ್ವದ ಯೋಜನೆಯೊಂದನ್ನು ರೂಪಿಸಿದ ಅಕಾಡೆಮಿಯ ಅಧ್ಯಕ್ಷರಾದ ನಾಡೋಜ ಗೀತಾ ನಾಗಭೂಷಣ ಮತ್ತು ಎಲ್ಲ ಸದಸ್ಯರುಗಳಿಗೂ ಅಕಾಡೆಮಿಯ ರಿಜಿಸ್ಟ್ರಾರ್ ಆದ ಮಲ್ಲಿಕಾರ್ಜುನಸ್ವಾಮಿ ಮತ್ತು ಸಿಬ್ಬಂದಿವರ್ಗಕ್ಕೂ ಅಕ್ಷರ ಜೋಡಣೆ ಮಾಡಿದ ಹೊಸಪೇಟೆಯ ಯಾಜಿ ಗ್ರಾಫಿಕ್ಸ್ ಶ್ರೀಮತಿ ಸವಿತಾ ಯಾಜಿ ಮತ್ತು ಕರಡು ತಿದ್ದಿದ ಡಾ. ರಾಜಶೇಖರ ಅವರಿಗೆ ಕೃತಜ್ಞತೆಗಳು.

ಡಾ.ಮಲ್ಲಿಕಾ ಘಂಟಿ