ಸಂಸ್ಕೃತಿ ಸದಾ ಚಲನಶೀಲ ’ವೃಷ್ಟಿ”ಯಿಂದ ಸಮೃಷ್ಟಿ ಗುಣ, ಸ್ವಭಾವ ಶಕ್ತಿಯನ್ನು ಹೊಂದಿದ ಸಂಸ್ಕೃತಿಯ ಬಹುಮುಖಗಳ ಕುರಿತಂತೆ ಕಾಲಕಾಲಕ್ಕೆ ’ಚಿಂತನೆ’ಗಳು, ’ವಾದ”ಗಳು ನಡೆಯುವುದು, ಇನ್ನೂ ನಡೆಯುತ್ತಲೇ ಇರುವುದು, ಸಂಸ್ಕೃತಿಯ ’ಸತ್ವ’ ಮಹತ್ವ’ದ ಸಂಕೇತವಾಗಿದೆ. ”ವ್ಯಕ್ತಿ’ಯ ’ವ್ಯಕ್ತಿತ್ವ’ಕ್ಕೆ ಸಂಸ್ಕೃತಿಯು”ಬಲ’”ನೆಲೆ’ಗಳನ್ನು ಒದಗಿಸುವುದರಿಂದಲೇ ಸಂಸ್ಕೃತಿಯ ತಲೆಯ ಮೇಲೆ ಸದಾ ಅನಿವಾರ್ಯತೆಯ ಕಿರೀಟ, ವಿಚಾರವಂತರ ಪಕ್ಷಿನೋಟ.

”ಜೀವನ’ ಸರಳ ಸಮೀಕರಣವಲ್ಲ, ಗಂಟು – ಕಗ್ಗಂಟುಗಳು ಬದುಕಿನ ಅನಿವಾರ್ಯ ಅಂಗಗಳು, ಭಾರತದಂತಹ ಬೃಹತ್ ದೇಶದಲ್ಲಿ ಸಂಸ್ಕೃತಿಯ ಮಹಾಸಾಗರಕ್ಕೆ ಹಲವು ನದಿಗಳ ಕೂಡುವಿಕೆ ಅನಿವಾರ್ಯ, ಬೆಳವಣಿಗೆ ದೃಷ್ಟಿಯಿಂದ ಅಗತ್ಯ.

’ತನೆಗೆ’ ಹಸಿವಾದಾಗ ’ತಾನು’ ಉಣ್ಣುವುದು. ’ಪ್ರಕೃತಿ’ ತನಗೆ ಹಸಿವಾದಾಗ, ತನ್ನ ಜೊತೆಗಿರುವ”ಇನ್ನೊಬ್ಬ’ ಹಸಿದವನನ್ನು ಕೂಡಿಕೊಂಡು ಉಣ್ಣುವುದೇ. ’ಸಂಸ್ಕೃತಿ’ ಎಂಬ ವಿಚಾರವು ಸಂಸ್ಕೃತಿಯ ಹಲವು ಮುಖ್ಯ ಉದ್ದೇಶಗಳಲ್ಲಿ ಒಂದು ಮುಖ ಮಾತ್ರ ಎಂಬುದಾಗಿ ಸ್ವೀಕರಿಸಿದರೂ, ’ಸಂಸ್ಕೃತಿ” ’ಶೋಷಣೆ”ಯ ರೂಪವನ್ನು ಹೊಂದುವುದು ಅತ್ಯಂತ ಅಪಾಯಕಾರಿ! ಎಂಬುದನ್ನು ಅಲ್ಲಗಳೆಯಲಾಗದು. ಇಂತಹ ಪ್ರಸಂಗಗಳಲ್ಲಿ ಅಂತಹ ’ಸಂಸ್ಕೃತಿ”ಯನ್ನು ’ಸಂಸ್ಕೃತಿ’ ಎಂದು ಕರೆಯಬಹುದೆ? ಬಹು ತೊಡಕಿನ ಪ್ರಶ್ನೆ ಆಚಾರ -ವಿಚಾರ ನಡೆನುಡಿಗಳಲ್ಲಿ ಹೊಂದಾಣಿಕೆಯಾಗದಿದ್ದಾಗ ಸಂಸ್ಕೃತಿ ವಿಕೃತಿಯಾಗುತ್ತದೆ. ವ್ಯಕ್ತಿ, ಸಮಾಜದ ಬೆಳವಣಿಗೆ ಕುಂಠಿತವಾಗುತ್ತದೆ. ಇಂತಹ ವಿಕೃತ ಸಂಸ್ಕೃತಿಯ ಬಗ್ಗೆ ಸಕಾಲಿಕ ಎಚ್ಚರ, ಚಿಂತನ ಮಂಥನ ಬೇಕಾಗುತ್ತದೆ. ಈ ಉದ್ದೇಶವನ್ನು ಪ್ರಮುಖವಾಗಿಟ್ಟುಕೊಂಡು ಕರ್ನಾಟಕ ಸಾಹಿತ್ಯ ಅಕಾಡೆಮಿಯ ’ಮಹಿಳಾ ಸಂಸ್ಕೃತಿ”ಮಾಲಿಕೆಯ ಮೂಲಕವಾಗಿ ಮಹಾಸಾಗರ ಸ್ವರೂಪದ ಸಂಸ್ಕೃತಿಗೆ ಸೇರಿದ ವಿವಿಧ ನದಿಗಳ ರೂಪದ, ಉಪಸಂಸ್ಕೃತಿಯಲ್ಲಿ ಮಹಿಳೆಯರ ಗತಿ-ಸ್ಥಿತಿ, ಪರಿಸ್ಥಿತಿಯ ಅವಲೋಕನ, ಪರಿಶೀಲನೆಯ ಮೊದಲ ಹೆಜ್ಜೆಯ ಪ್ರಯತ್ನವನ್ನು ಈ ಕೃತಿಯ ಮೂಲಕ ಮಾಡಲಾಗಿದೆ.

ಈ ಸಂಪುಟದಲ್ಲಿ ಹತ್ತು ಉಪಸಂಸ್ಕೃತಿಗಳ ಕುರಿತಂತೆ ಲೇಖನಗಳು ಇರಬೇಕಾಗಿತ್ತು. ಹತ್ತು ಲೇಖಕರಿಗೆ ವಿನಂತಿಸಿದಾಗ ಪ್ರತಿಕ್ರಿಯಿಸಿ ಬರೆದುಕೊಟ್ಟವರು ಐವರು ಮಾತ್ರ. ಇದರಿಂದ ಎರಡು ವಿಷಯಗಳು ಸ್ಪಷ್ಟ. ಒಂದು ಇಂತಹ ವಿಷಯಗಳ ಕುರಿತು ಬರೆಯುವುದು ಸುಲಭವಲ್ಲ, ಅದಕ್ಕಾಗಿ ಬರೆದಿಲ್ಲ, ಎರಡು ಲೇಖಕರಲ್ಲಿ ಬರವಣಿಗೆಯ ಬಗೆಗಿರುವ ಉದಾಸೀನತೆ, ನಿರ್ಲಕ್ಷ್ಯತೆ ಸ್ವಭಾವ. ’ಏನೂ ಮಾಡದೇ ಇರುವುದಕ್ಕಿಂತ ಏನಾದರೂ ಮಾಡುವುದು ಒಳ್ಳೆಯದು’ ಎಂಬ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಅತ್ಯಂತ ಮೌಲಿಕವಾದ ಆ ಐವರ ಪ್ರಬಂಧಗಳನ್ನು ಸಂಪುಟರೂಪದಲ್ಲಿ ಪ್ರಕಟಿಸಿ, ತಮ್ಮ ಕೈಗೆ ನೀಡಲಾಗುತ್ತಿದೆ.

’ಹೂಗಾರರ (ಜೀರ್) ಸಂಸ್ಕೃತಿಯ ಬಗ್ಗೆ ಡಾ. ವ್ಹಿ.ಜಿ. ಪೂಜಾರ, ಒಡ್ಡರು, ಬೋವಿ ಜನಾಂಗ, ಮೇನೆಯವರ ಸಂಸ್ಕೃತಿ ವಿಷಯದ ಮೇಲೆ ಡಾ. ಅಮೃತಾ ಕಟಕೆ, ಬುಡಬುಡಿಕೆ (ಶಕುನದವರು) ಸಂಸ್ಕೃತಿ ವಿಷಯದ ಮೇಲೆ ಶ್ರೀ ಎ.ಕೆ. ರಾಮೇಶ್ವರ, ರಂಗಾರೇರು ಸಂಸ್ಕೃತಿಯ ಮೇಲೆ ಡಾ. ಸರಸ್ವತಿ ಚಿಮ್ಮಲಗಿ, ಪೂಜಾರ ಹಾಗೂ ದುರಗಮುರಗಿ ಸಂಸ್ಕೃತಿಯ ಕುರಿತಂತೆ ಡಾ. ಕಾವ್ಯಶ್ರೀ ನಾಗಭೂಷಣ ಅವರು ಬರೆದ ಅಪರೂಪದ, ಮೌಲಿಕವಾಗಿರುವ ಐದು ಲೇಖನಗಳು ಈ ಸಂಪುಟದಲ್ಲಿವೆ. ಈ ಐವರೂ ಲೇಖಕರು ತಮಗಿರುವ ಇತಿ-ಮಿತಿಯಲ್ಲಿ ತಮ್ಮ ತಮ್ಮ ವಿಷಯಗಳಿಗೆ ನ್ಯಾಯ ಒದಗಿಸುವ ಪ್ರಯತ್ನ ಮಾಡಿದ್ದಾರೆ. ಕ್ಷೇತ್ರ ಕಾರ್ಯ ಮಾಡಿದರೂ ಮಹಿಳೆಯ ಸ್ಥಾನಮಾನ, ಸ್ಥಿತಿಗತಿಯ ಕುರಿತು ದಕ್ಕಬೇಕಾದ, ಸಿಕ್ಕಬೇಕಾದ ವಿವರಗಳು ಸಿಕ್ಕಿಲ್ಲ ಎಂಬುದು ಖೇದದ ಸಂಗತಿ. ನೂರಕ್ಕೆ ನೂರರಷ್ಟು  ಉದ್ದೇಶಿತ ಗುರಿಸಾಧನೆ ಸಾಧ್ಯವಾಗಿಲ್ಲವೆಂಬ ನೋವಿನೊಂದಿಗೆ ಈ ಕುರಿತು ಹೊಸ ಚಿಂತನೆಯ ಬೀಜಗಳನ್ನು ಬಿತ್ತಿದ ಸಂತಸವೂ ಇದೆ. ತಮ್ಮ ಸ್ವಪ್ರಯತ್ನ, ಶ್ರಮ ಪರಿಶ್ರಮದ ಮೂಲಕ ಲೇಖನಗಳನ್ನು ಸಕಾಲದಲ್ಲಿ ಒದಗಿಸಿ ಸಹಕರಿಸಿದ ಆತ್ಮೀಯರಾದ ಶ್ರಿ ಎ.ಕೆ.ರಾಮೇಶ್ವರ, ಡಾ. ವ್ಹಿ.ಜಿ. ಪೂಜಾರ, ಡಾ. ಸರಸ್ವತಿ ಚಿಮ್ಮಲಗಿ, ಪೂಜಾರ, ಡಾ. ಅಮೃತಾ ಕಟಕೆ ಹಾಗೂ ಡಾ. ಕಾವ್ಯಶ್ರೀ ಅವರಿಗೆ ಕೃತಜ್ಞತೆಗಳು.

ಈ ಸಂಪುಟದ ಸಂಪಾದನೆಯ ಜವಾಬ್ದಾರಿಯನ್ನು ನನಗೆ ವಹಿಸಿ ಉಪಕರಿಸಿದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಹಿರಿಯ ಲೇಖಕಿ ಶ್ರೀಮತಿ ಗೀತಾ ನಾಗಭೂಷಣ ಅವರಿಗೆ ಹಾಗೂ ಈಗಿನ ಅಧ್ಯಕ್ಷರಾಗಿರುವ ಶ್ರೀ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ಅವರಿಗೆ ಧನ್ಯವಾದಗಳು. ಅಕಾಡೆಮಿಯ ಉದ್ಯೋಗಿ ಬಂಧುಗಳಾದ ಶ್ರೀಮತಿ ವಿಜಯ, ಶ್ರೀಮತಿ ಸೌಭಾಗ್ಯ, ಶ್ರೀ ಹರೀಶ್, ಶ್ರೀ ಕೃಷ್ಣಾ ಅವರ ಸಹಕಾರ ಸ್ಮರಣೀಯ. ಈ ಗ್ರಂಥವನ್ನು ಅತ್ಯಂತ ಅಚ್ಚುಕಟ್ಟಾಗಿ ಮುದ್ರಿಸಿದ ಕೀರ್ತಿ ಪ್ರಿಂಟರ್ಸ್ ಅವರಿಗೆ ಕೃತಜ್ಞತೆಗಳು.

ಡಾ. ಸ್ವಾಮಿರಾವ ಕುಲಕರ್ಣಿ.
ಸಂಪಾದಕರು.