ಹಳ್ಳಿಗಾಡಿನ ಮೂಲೆ ಮೂಲೆಗಳಲ್ಲಿ ಕ್ರಿಯಾಶೀಲವಾಗಿದ್ದುಕೊಂಡು, ಅನಕ್ಷರಸ್ಥ ಜನ ಸಮುದಾಯದ ನಡುವೆ ಪರಿಣಾಮಕಾರಿಯಾಗಿ ಸಂಸ್ಕೃತಿ ಪ್ರಸಾರ ಕಾರ್ಯವನ್ನು ನಿರ್ವಹಿಸುತ್ತಾ, ಕನ್ನಡ ನಾಡಿನ ಜನಪದ ಸಂಸ್ಕೃತಿಯನ್ನು ಅರ್ಥಪೂರ್ಣವಾಗಿ ಬೆಳೆಸುತ್ತಾ ಬಂದ ಮಾಧ್ಯಮವೇ ಯಕ್ಷಗಾನ ಬಯಲಾಟ. ಯಾವೊಂದು ಧರ‌್ಮಕ್ಕಾಗಲಿ, ಜಾತಿಗಾಗಲಿ ಮೀಸಲಾಗಿರದೆ ಎಲ್ಲವನ್ನು, ಎಲ್ಲರನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಬಂದ ಮಾನವೀಯ ಮನರಂಜನಾ ಕಲೆ. ಬಯಲಾಟದ ವೈವಿಧ್ಯಮಯ ರಂಗರೂಪಗಳಲ್ಲಿ ಮೂಡಲಪಾಯ ಯಕ್ಷಗಾನವೂ ಒಂದು. ಅಕ್ಷರಜ್ಞಾನದಿಂದ ವಂಚಿತರಾದ ಜನ ಸಮುದಾಯವು ಈ ರಂಗಪ್ರಕಾರವನ್ನು ಬೆಳೆಸಿಕೊಂಡು ಬಂದಿತು. ಮೂಡಲಪಾಯ ಯಕ್ಷಗಾನ ಸಾಹಿತ್ಯವು ಭಾರತೀಯ ಸಂಸ್ಕೃತಿಯ ವಿಶಿಷ್ಟವಾದ ಅಭಿವ್ಯಕ್ತಿಯಾಗಿದ್ದು, ಮೌಖಿಕ ಪರಂಪರೆಯ ಅನಂತ ಸಾಧ್ಯತೆಗಳನ್ನು ದುಡಿಸಿಕೊಂಡಿರುತ್ತಾದರೂ ಪಂಡಿತ ಮಂಡಳಿಯ ತಿರಸ್ಕಾರ ಮತ್ತು ನಿರ್ಲಕ್ಷ್ಯಕ್ಕೊಳಗಾಗಿ ಎಲ್ಲಿಯೂ ದಾಖಲಾಗದೆ ಉಳಿದುಹೋಗಿದೆ. ಕರಾವಳಿ ಯಕ್ಷಗಾನಕ್ಕೆ ಚರಿತ್ರೆ ಇದೆ; ಚರಿತ್ರಕಾರರಿದ್ದಾರೆ. ದಾಖಲಾತಿಯ ಸೌಲಭ್ಯವಿದೆ. ಆದರೆ ಮೂಡಲಪಾಯ ಯಕ್ಷಗಾನಕ್ಕೆ ಸುಮಾರು 500 ವರ್ಷಗಳಷ್ಟು ಹಿಂದಿನ ಪ್ರಾಚೀನತೆ ಇದ್ದಾಗ್ಯೂ ಇದುವರೆಗೂ ಬೆರಳೆಣಿಕೆಯ ಪ್ರಸಂಗಗಳ ಸಾಹಿತ್ಯವು ಪ್ರಕಟಣೆಯ ಬೆಳಕು ಕಂಡಿರುವುದನ್ನು ಬಿಟ್ಟರೆ, ಬಹುಪಾಲು ಸಾಹಿತ್ಯವು ಇನ್ನೂ ಅಜ್ಞಾತವಾಗಿಯೇ ಉಳಿದಿದೆ.

ಸಮೃದ್ಧ ಅಜ್ಞಾತ ಸಾಹಿತ್ಯವನ್ನು ಜನಸಾಮಾನ್ಯರಿಗೆ ತಲುಪಿಸುವುದಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯವು ಸಮಗ್ರ ಜನಪದ ಮತ್ತು ಯಕ್ಷಗಾನ ಸಾಹಿತ್ಯ ಪ್ರಕಟಣೆ ಯೋಜನೆಯನ್ನು ಕೈಗೊಂಡಿರುವುದಕ್ಕಾಗಿ ಮೊದಲಿಗೆ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯವನ್ನು ಅಭಿನಂದಿಸುತ್ತೇನೆ. ಈ ಯೋಜನೆಯ ಅಧ್ಯಕ್ಷರಾದ ಪ್ರೊ. ಹಿ.ಶಿ. ರಾಮಚಂದ್ರೇಗೌಡರು ಈ ನಾಡಿನ ಬಹುದೊಡ್ಡ ಸಂಸ್ಕೃತಿ ಚಿಂತಕರು. ಜಾನಪದವನ್ನು ವೈಜ್ಞಾನಿಕವಾಗಿ ನಿರ್ಣಯಿಸಿಕೊಳ್ಳುವುದರೊಂದಿಗೆ ವರ್ತಮಾನಕ್ಕೆ ಅನ್ವಯಿಸಿ, ವಿಶ್ಲೇಷಿಸಿ ನೋಡುವ ಗುಣವುಳ್ಳವರು. ಮೂಡಲಪಾಯ ಯಕ್ಷಗಾನ ಸಾಹಿತ್ಯ ಸಂಪುಟವನ್ನು ಸಿದ್ಧಪಡಿಸಿಕೊಡುವ ಹೊಣೆಯನ್ನು ಅತ್ಯಂತ ವಿಶ್ವಾಸದಿಂದ ನನ್ನ ಮೇಲಿರಿಸಿದವರು. ಅವರ ಈ ಪ್ರೀತಿಗೆ ನಾನು ಸದಾ ಋಣಿ. ಮೂಡಲಪಾಯ ಯಕ್ಷಗಾನದ ಉಳಿವಿನ ಬಗ್ಗೆ ಸದಾ ಚಿಂತೆನೆಗೈಯುತ್ತಿದ್ದ,  ಪ್ರಯೋಗಶೀಲರಾಗಿದ್ದ ದಿವಂಗತ ನಾಡೋಜ ಎಚ್.ಎಲ್. ನಾಗೇಗೌಡರಿಗೆ ನನ್ನ ಸ್ಮರಣೆಗಳು. ವರ್ತಮಾನದಲ್ಲಿ ಕನ್ನಡದ ಉತ್ತಮ ಸೃಜನಶೀಲ ಬರಹಗಾರರು, ನನ್ನ ಆತ್ಮೀಯರು ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಜಂಟಿ ನಿರ್ದೇಶಕರೂ ಆದ ಶ್ರೀ ಕಾ.ತ. ಚಿಕ್ಕಣ್ಣನವರನ್ನು ಪ್ರೀತಿಪೂರ್ವಕವಾಗಿ ನೆನೆಯುತ್ತೇನೆ.

ಮೂಡಲಪಾಯ ಯಕ್ಷಗಾನದ ಭಾಗವತರು ಮತ್ತು ಪಾತ್ರಧಾರಿಗಳ ಬಳಿ ಅಳಿದುಳಿದಿದ್ದ ಹಸ್ತಪ್ರತಿಗಳನ್ನು ಸಂಗ್ರಹಿಸುವಲ್ಲಿ ನೆರವಾದ ಅರಳಗುಪ್ಪೆಯ ಶ್ರೀ ಚನ್ನಬಸವಯ್ಯ, ಎ.ಎಸ್. ನಂಜಪ್ಪ, ದೊಡ್ಡಬಳ್ಳಾಪುರದ ಎಚ್.ಎಸ್. ಸುಬ್ಬರಾಯಪ್ಪ ಅವರುಗಳಿಗೆ ನನ್ನ ಗೌರವಪೂರ್ವಕ ನಮಸ್ಕಾರಗಳು. ಮೂಡಲಪಾಯದ ಹಸ್ತಪ್ರತಿಗಳನ್ನು ದೊರಕಿಸಿಕೊಡುವಲ್ಲಿ ಸಹಾಯ ಮಾಡಿದ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಮಿತ್ರ ಶಿವಲಿಂಗಯ್ಯ, ಪ್ರಕಾಶ್, ಶ್ರೀಮತಿ ನಾಗರತ್ನ ರಮೇಶ್ ಮತ್ತು ನನ್ನ ಸಹೋದ್ಯೋಗಿ ಜಾದೂಗಾರ ಕಡಬ ಶ್ರೀನಿವಾಸ್ ಇವರುಗಳಿಗೆ ನನ್ನ ನಮಸ್ಕಾರಗಳು ಸಲ್ಲುತ್ತವೆ.

ಮೂಡಲಪಾಯ ಯಕ್ಷಗಾನ ಸಾಹಿತ್ಯ ಸಂಪುಟವನ್ನು ಸಿದ್ಧಪಡಿಸುವಲ್ಲಿ ನನ್ನ ಪತ್ನಿ ಡಾ. ಶಶಿಕಲಾ ನೀಡಿದ ನೆರವನ್ನು ಮರೆಯುವಂತಿಲ್ಲ.

ಸಮಗ್ರ ಜನಪದ ಮತ್ತು ಯಕ್ಷಗಾನ ಸಾಹಿತ್ಯ ಪ್ರಕಟಣೆ ಯೋಜನಾ ಸಮಿತಿಯ ಎಲ್ಲಾ ಸದಸ್ಯರುಗಳಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು.

ಡಾ. ಚಕ್ಕೆರೆ ಶಿವಶಂಕರ್
22 ಮೇ 2006
ಬೆಂಗಳೂರು.