ಕರ್ನಾಟಕ ಸಾಹಿತ್ಯ. ಅಕಾಡೆಮಿಯ ಸಂಸ್ಕೃತಿ ಮಹಿಳಾ ಮಾಲಿಕೆ ಎಂಬ ಈ ಯೋಜನೆ ಹಲವು ಕಾರಣಗಳಿಗಾಗಿ ವಿಶಿಷ್ಟವಾಗಿದೆ. ಶೀರ್ಷಿಕೆಯೇ ಸೂಚಿಸುವಂತೆ ಇದು ವಿವಿಧ ಸಮುದಾಯಗಳ ಒಳಜಗತ್ತನ್ನು ಮಹಿಳೆಯರ ದೃಷ್ಟಿಕೋನದಿಂದ ನೋಡುವ ಉದ್ದೇಶವನ್ನು ಹೊಂದಿದೆ. ಒಂದು ಸಮುದಾಯದ ಒಳಜಗತ್ತು ಎಂಬುದು ಅಲ್ಲಿಯ ಜೀವನ ಕ್ರಮ, ಆಚಾರ-ವಿಚಾರ, ನಂಬಿಕೆ-ಶ್ರದ್ಧೆಗಳನ್ನು ಒಳಗೊಂಡಿರುವಂತೆ, ಅಲ್ಲಿಯ ಸ್ತ್ರೀ-ಪುರುಷರ ಸಹಭಾಗಿತ್ವದ ವಿನ್ಯಾಸಗಳನ್ನು, ಅದಕ್ಕಿರುವ ಅವಕಾಶ ಮತ್ತು ಮಿತಿಗಳನ್ನು, ಅವರ ವ್ಯಕ್ತಿತ್ವ ಮತ್ತು ಕರ್ತೃತ್ವ ಶಕ್ರಿಗಳಿಗೆ ದೊರಕುವ ಮಾನ್ಯತೆ-ಅಮಾನ್ಯತೆ ಇತ್ಯಾದಿಗಳೆಲ್ಲವನ್ನೂ ಒಳಗೊಂಡಿರುತ್ತದೆ. ಇದನ್ನು ಗ್ರಹಿಸಬೇಕಾದರೆ, ಅಧ್ಯಯನಕಾರರಿಗೆ ಸ್ತ್ರೀವಾದಿ ಚಿಂತನಾಕ್ರಮ ಅಗತ್ಯವಾಗಿ ಬೇಕಾಗುತ್ತದೆ. ಜಾನಪದ ಅಧ್ಯಯನದಲ್ಲಿ ಇಂತಹ ಪ್ರಯತ್ನಗಳು ನಡೆದಿರುವುದು ತೀರ ವಿರಳ. ಹೀಗಾಗಿ “ಸಂಸ್ಕೃತಿ ಮಹಿಳಾ ಮಾಲಿಕೆ”ಯ ಸಂಪುಟಗಳಿಗೆ ವಿಶಿಷ್ಟ ಸ್ಥಾನವಿದೆ.

ಮಹಿಳೆಯರು ಮತ್ತು ಪುರುಷರು ಜೊತೆಜೊತೆಯಾಗಿಯೇ ಬದುಕಿದರೂ ಇಬ್ಬರ ಭಾವಪ್ರಪಂಚಗಳ ನಡುವಿನ ಅಂತರ ಅಗಾಧವಾಗಿದೆ. ಹಾಗೆಯೇ ಒಬ್ಬರು ಇನ್ನೊಬ್ಬರ ಕಾರ್ಯಲೋಕವನ್ನು ವೀಕ್ಷಿಸುತ್ತಲೇ ಬಂದಿದ್ದರೂ, ಅವುಗಳ ಮಹತ್ವವಾಗಲಿ, ಅವುಗಳ ವ್ಯಾಪಕತ್ವವಾಗಲಿ ಪರಸ್ಪರರ ಅರಿವಿಗೆ ಬಂದಿರುವುದು ಕಡಿಮೆ. ಅದಕ್ಕೆ ಕೆಲಸ ಕಾರ್ಯಗಳನ್ನು ನಾವು ಗ್ರಹಿಸುವ ನೆಲೆಯೂ ಕಾರಣವಾಗಿದೆ. ಕೆಲವು ಕೆಲಸಕಾರ್ಯಗಳನ್ನು ನಾವು ಕರ್ತವ್ಯ ಎಂದು ಭಾವಿಸಿದಾಗ, ಅವುಗಳ ನಿರ್ವಹಣೆಯ ಗುರುತ್ವವಾಗಲಿ, ಕೌಶಲವಾಗಲಿ, ವ್ಯಾಪಕತ್ವವಾಗಲಿ ಅರಿವಿಗೆ ಬರುವುದಿಲ್ಲ. ಅವೇ ಕಾರ್ಯಗಳನ್ನು “ವೃತ್ತಿ” ಎಂಬ ನೆಲೆಯಲ್ಲಿ ಗ್ರಹಿಸಿದ ತಕ್ಷಣ ಅವುಗಳಿಗೆ ಆರ್ಥಿಕ ಮಾನ್ಯತೆ, ಸಾಮಾಜಿಕ ಮಾನ್ಯತೆ ಮತ್ತು ಕೌಶಲ್ಯದ ಮಾನ್ಯತೆಗಳೆಲ್ಲ ಒದಗಿಬುಡುವುದು ಬದುಕಿನ ಒಂದು ದುರಂತ ಎನ್ನಬೇಕೇನೋ. ಈ ಎಲ್ಲ ಮಾತುಗಳನ್ನು ಮಹಿಳೆಯರ “ಕರ್ತವ್ಯ” ಎನಿಸಿದ ಕೆಲಸಕಾರ್ಯಗಳನ್ನು-ಎಂದರೆ ಮನೆ ನೈರ್ಮಲ್ಯ, ಆಹಾರದ ಸಿದ್ಧತೆ, ಕಿರಿಯರ ಪಾಲನೆ, ವೃದ್ಧರ ಆರೈಕೆ, ಮನೆಯ ಸದಸ್ಯರ ಸಕಲ ಅವಶ್ಯಕತೆಗಳ ಪೂರೈಕೆ…. ಇವೇ ಮೊದಲಾದ ಎಲ್ಲ ಕಾರ್ಯಗಳನ್ನು ಪುರುಷಲೋಕವು ಮನೆಯ ಹೊರಗೆ ನಿರ್ವಹಿಸತೊಡಗಿದಾಗ ಅವು ವೃತ್ತಿಗಳಾಗಿ ಮಾರ್ಪಡುವುದನ್ನು ನಾವೆಲ್ಲರೂ ಕಾಣುತ್ತಿದ್ದೇವೆ. ಇದೇ ರೀತಿ ವಿವಿಧ ಸಮುದಾಯಗಳ ಮಹಿಳೆಯರ ಕರ್ತೃತ್ವ ಶಕ್ತಿ, ಕ್ರಿಯಾಶೀಲತೆ, ಸೃಜನಶೀಲತೆ, ಲೋಕದೃಷ್ಟಿಗಳು ಸಿದ್ಧಚಿಂತನೆಯ ಜಾನಪದೀಯ ಅಧ್ಯಯನದ ವೇಳೆ ಅಂಚಿಗೆ ಸರಿದುಬಿಟ್ಟಿರುತ್ತವೆ. ಉದಾಹರಣೆಗೆ, ಭೂತ ಕಟ್ಟುವ ಕಲಾವಿದನ ಕುರಿತು ಅಧ್ಯಯನ ನಡೆಸಿದಂತೆ, ಆತನಿಗೆ ಸರಿಸಮವಾಗಿ ಆ ಆರಾಧನೆಯಲ್ಲಿ ದುಡಿಯುವ ಮಹಿಳೆಯ ಸಾಧನೆಯ ಅಧ್ಯಯನ ನಡೆಯುವುದಿಲ್ಲ. ಭೂತಕಟ್ಟುವ ಕಲಾವಿದನಿಗೆ ಅವಶ್ಯಕವಾದ ಆತನ ನೇಮವನ್ನು “ಮಡಿ” ಕಾಪಾಡುವಿಕೆಗೆ ಸಂಬಂಧಿಸಿದಂಥ ಸಿದ್ಧತೆ, ಅಣೆಕಟ್ಟುವಿಕೆಯಲ್ಲಿ ಮಹಿಳೆಯ ಪಾಲ್ಗೊಳ್ಳುವಿಕೆ, ಆಯಾ ದೈವಗಳ ಪಾಡ್ದನಗಳನ್ನು ಹೇಳುವಲ್ಲಿನ ಆಕೆಯ ಭಾಗವಹಿಸುವಿಕೆ, ಪಾಡ್ದನ ಪಠ್ಯಗಳನ್ನು ತಲೆತಲಾಂತರಗಳಿಗೆ ಮುಂದುವರಿಸಿಕೊಂಡು ಬರುವಲ್ಲಿನ ಅವಳ ಪಾಲ್ಗೊಳ್ಳುವಿಕೆ ಇತ್ಯಾದಿಗಳನ್ನು ಅಧ್ಯಯನಕಾರರು ಒಂದೋ ಗಮನಿಸುವುದಿಲ್ಲ; ಅಥವಾ ಒಂದೊಮ್ಮೆ ಗಮನಿಸಿದರೂ ಅವು ಹೇಳಿಕೆಗಗಳಾಗಿ ಬರುತ್ತವೆ. ಆದರೆ ಸಂಸ್ಕೃತಿ ಮಹಿಳಾ ಮಾಲಿಕೆಯ ಪ್ರಬಂಧಗಳಲ್ಲಿ ಅವುಗಳೇ ಮುನ್ನೆಲೆಗೆ ಬರುವಂತಾಗುತ್ತವೆ. ಇದನ್ನು ಈ ಅಧ್ಯಯನದಲ್ಲೂ ಗುರುತಿಸಬಹುದಾಗಿದೆ.

ಪ್ರಸ್ತುತ ಈ ಸಂಪುಟದಲ್ಲಿ ಮೊಗೇರ, ಮನ್ಸ, ಬಿಲ್ಲವ, ನಲಿಕೆ, ಪರವ ಮತ್ತು ಕೋಟೆ ಜನಾಂಗಗಳ ಮಹಿಳಾ ಸಂಸ್ಕೃತಿಯನ್ನು ವಿಶ್ಲೇಷಿಸುವ ಪ್ರಬಂಧಗಳಿವೆ. “ಮಹಿಳೆಯರ ಸಂಸ್ಕೃತಿ” ಮತ್ತು “ಸಂಸ್ಕೃತಿಯಲ್ಲಿ ಮಹಿಳೆಯರು” ಎಂಬ ಎರಡು ಪ್ರಧಾನ ಆಯಾಮಗಳನ್ನು ಇಲ್ಲಿನ ಪ್ರಬಂಧಗಳು ಗ್ರಹಿಸಲು ಉದ್ದೇಶಿಸಿವೆ. ಈಗಾಗಲೇ ಲಭ್ಯವಿರುವ ಲೇಖನ ಮತ್ತು ಗ್ರಂಥಗಳ ಆಧಾರದ ಜೊತೆಜೊತೆಗೆ ವಿಶೇಷವಾಗಿ ಕ್ಷೇತ್ರಕಾರ್ಯವನ್ನು ಮಾಡಿ ಈ ಎಲ್ಲ ಪ್ರಬಂಧಗಳನ್ನೂ ಸಿದ್ಧಪಡಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಸಮುದಾಯಗಳ ಕುರಿತ ಜಾನಪದ ಅಧ್ಯಯನಗಳು ಸಾಕಷ್ಟು ನಡೆದಿವೆ. ಈ ಸಂಪುಟದಲ್ಲಿ ಇರುವ ಸಮುದಾಯಗಳ ಕುರಿತೂ ಸಂಶೋಧನಾ ಗ್ರಂಥಗಳು ಬಂದಿವೆ. ಆದರೂ ಈ ಸಂಪುಟದ ಪ್ರಬಂಧಗಳು ಅಂತಹ ಅಧ್ಯಯನಗಳ ಪುನರಾವರ್ತನೆಗಳಲ್ಲ ಎಂಬುದನ್ನು ಮೊತ್ತಮೊದಲು ಹೇಳಬಯಸುತ್ತೇನೆ. ಈ ಲೇಖನಗಳನ್ನು ಬರೆಯಲು ಈ ಭಾಗದ ಜಾನಪದ ಕ್ಷೇತ್ರದಲ್ಲಿ ಪರಿಶ್ರಮ ಇರುವ ಹಲವರನ್ನು ಆಯ್ಕೆ ಮಾಡಲಾಗಿತ್ತು. ಆರಂಭದಲ್ಲಿ ಹಲವರು ತುಂಬ ಸಂತೋಷದಿಂದ ಈ ಯೋಜನೆಯಲ್ಲಿ ತೊಡಗಿಸಿಕೊಳ್ಳಲು ಮುಂದಾದರು. ಕ್ರಮೇಣ ಯೋಜನೆಯ ಉದ್ದೇಶ ಮತ್ತು ಪ್ರಬಂಧಗಳ ಸ್ವರೂಪದ ಕುರಿತು ಸ್ಪಷ್ಟ ನಿಲುವು ಅರಿವಿಗೆ  ಬರತೊಡಗಿದಂತೆ ಹಲವರಿಗೆ ಸ್ವಲ್ಪ ಯೋಚಿಸುವಂತಾದುದಂತೂ ನಿಜ. ಯಾಕೆಂದರೆ, ಇದುವರೆಗೆ ಜಾನಪದದ ಅಧ್ಯಯನ ಪುರುಷಕೇಂದ್ರಿಕ ಚಿಂತನಾಕ್ರಮದಲ್ಲೇ ಸಾಗಿತ್ತು. ಹೀಗಾಗಿ “ಸಂಸ್ಕೃತಿ ಮಹಿಳಾ ಮಾಲಿಕೆ”ಯಲ್ಲೂ ಮಹಿಳೆಗೆ ಸಂಬಂಧಿಸಿದ ಆಚರಣೆ, ಆರಾಧನೆ ಇತ್ಯಾದಿಗಳನ್ನು ಸಂಗ್ರಹಿಸಿಕೊಟ್ಟರೆ ಸಾಕು ಎಂಬಂತೆ ಭಾವಿಸಿದ್ದರು. ಮಹಿಳಾ ಕ್ಷೇತ್ರಕಾರ್ಯ ಮಾಡಬೇಕು ಮತ್ತು ಮಹಿಳೆಯರ ಸಂದರ್ಶನ ಎಂದಾಗ, “ಇದು ಹೀಗೆ” ಎಂದು ಕೆಲವರು ಆತಂಕಿತರಾದದ್ದಂತೂ ನಿಜ. ಇದರಿಂದಾಗಿ ಈ ಸಂಪುಟಕ್ಕೆ ಬರಬೇಕಾದ ಕೆಲವು ಪ್ರಬಂಧಗಳು ಕೊನೆಗೂ ನನ್ನ ಕೈಸೇರಲೇ ಇಲ್ಲ. ಇದನ್ನು ಹೇಳುವುದಕ್ಕೆ ಕಾರಣವಿದೆ. ಈ ಸಂಪುಟದಲ್ಲಿ ಬಂದ ಲೇಖನಗಳ ಕರ್ತೃಗಳ ಈ ಎಲ್ಲಾ ಕಷ್ಟಗಳನ್ನು ಹಾದು, ಇಂಥ ವಿಶಿಷ್ಟ ಅಧ್ಯಯನದ ಸುಖವನ್ನು ಅನುಭವಿಸಿದವರು ಹೀಗಾಗಿ ಅವರಿಗೆ ಅಭಿನಂದನೆ ಸಲ್ಲಬೇಕಾಗಿದೆ.

ಕರಾವಳಿ ಭಾಗದ ಜಾನಪದದ ಬಗ್ಗೆ ಪ್ರೊ. ಕೆ. ಚಿನ್ನಪ್ಪಗೌಡ ಅವರು ದೀರ್ಘಕಾಲದಿಂದ ಸಂಶೋಧನೆ, ಅಧ್ಯಯನ ನಡೆಸುತ್ತಾ ಬಂದವರು. ಕರ್ನಾಟಕ ಜಾನಪದ ತಜ್ಞರಲ್ಲಿ ಓರ್ವರಾದ ಪ್ರೊ. ಕೆ. ಚಿನ್ನಪ್ಪಗೌಡ ಅವರು “ಸಂಸ್ಕೃತಿ ಮಹಿಳಾ ಮಾಲಿಕೆ” ಯೋಜನೆಯ ಆರಂಭದ ಸಭೆಯಿಂದಲೂ ಜೊತೆಗಿದ್ದವರು. ಯೋಜನೆಯ ಸಲಹಾ ಸಮಿತಿಯ ಓರ್ವ ಸದಸ್ಯರಾಗಿ, ಕರಾವಳಿ ಭಾಗದ ಸಮುದಾಯಗಳ ಈ ಪ್ರಬಂಧಗಳ ರೂಪು-ರೇಷೆಗಳನ್ನು ಸಿದ್ಧಪಡಿಸುವಲ್ಲಿ ಉದ್ದಕ್ಕೂ ಸಲಹೆ ಸೂಚನೆಗಳನ್ನು ನೀಡುತ್ತ ಬಂದವರು. ಇವೆಲ್ಲದರ ಜೊತೆಗೆ ಈ ಸಂಪುಟದ ಪ್ರಬಂಧಗಳ ಸಿದ್ಧತೆ ಮತ್ತು ಸ್ವರೂಪಗಳ ಬಗ್ಗೆ ತುಂಬ ಅಚ್ಚುಕಟ್ಟಾದ ಹಾಗೂ ಮಾಹಿತಿಪೂರ್ಣವಾದ ಲೇಖನವನ್ನು ಬರೆದುಕೊಟ್ಟಿದ್ದಾರೆ. ಅವರ ಈ ಎಲ್ಲ ಸಹಕಾರಗಳಿಗೆ ನಾನು ಅಭಾರಿಯಾಗಿದ್ದೇನೆ.

ಈ ಸಂಪುಟದ ಸಂಪಾದಕಳಾಗಿ ನನ್ನ ಪರಿಶ್ರಮ ತುಂಬ ಕಡಿಮೆ. ಪ್ರಬಂಧಕಾರರೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡಿದ್ದು, ಅವರ ಪ್ರಬಂಧಗಳ ಕೆಲಸವನ್ನು ಕೈಬಿಡದಂತೆ ಪ್ರೇರೇಪಿಸಿದ್ದು ಮಾತ್ರ ನನ್ನಿಂದ ಆದ ಕೆಲಸ. ವೈಯಕ್ತಿಕವಾಗಿ ಇಂತಹ ಯೋಜನೆಯಲ್ಲಿ ತೊಡಗಿಸಿಕೊಂಡದ್ದಕ್ಕೆ ನನಗೆ ಲಾಭ ಆಗಿದೆ. ಈ ಲಾಭ “ವ್ಯವಹಾರಿಕ” ಅರ್ಥದ್ದಲ್ಲ; ಬೌದ್ಧಿಕ ನೆಲೆಯದು. ದಕ್ಷಿಣ ಕನ್ನಡ ಜಿಲ್ಲೆಯ ಮೊಗೇರ, ಮನ್ಸ, ಬಿಲ್ಲವ, ನಲಿಕೆ, ಪರವ ಮುಂತಾದ ಸಮುದಾಯಗಳ ಕುರಿತು ಈ ಅವಧಿಯಲ್ಲಿ ಹೆಚ್ಚು ತಿಳಿದುಕೊಳ್ಳಲು ನನಗೆ ಸಾಧ್ಯವಾಗಿದೆ. ಇವೆಲ್ಲವೂ ಮಾತೃಮೂಲೀಯ ಕುಟುಂಬ ಪದ್ಧತಿಯನ್ನು ಒಳಗೊಂಡ ಸಮುದಾಯಗಳು. ಇವುಗಳ ಮೇಲೆ ಪಿತೃಪ್ರಧಾನ ಚಿಂತನೆಗಳ ಪ್ರಭಾವ ಹೇಗೆ ಆಗಿವೆ ಎಂಬುದೂ ಅಧ್ಯಯನ ಯೋಗ್ಯವಾಗಿದೆ. ಈ ಎಲ್ಲ ಪ್ರಬಂಧಗಳನ್ನು ಸಿದ್ಧಪಡಿಸುವ ಕಾರ್ಯದಲ್ಲಿ ಮೇಲಿನ ಸಮುದಾಯಗಳ ಕುರಿತು ತಿಳಿದುಕೊಳ್ಳಲು ಸಾಧ್ಯವಾದುದು ಸಣ್ಣ ಲಾಭ ಎಂದು ನಾನು ಭಾವಿಸಿಲ್ಲ.

ಇಂದು ಪ್ರಬಂಧಗಳನ್ನು ವಿದ್ವಾಂಸರಿಂದ ಬರೆಸುವುದು ಎಷ್ಟು ಕಷ್ಟ ಎಂಬುದು ಹಲವರ ಅನುಭವಕ್ಕೆ ಬಂದಿರಬಹುದಾದ ಸಂಗತಿ. ಈ ಸಂಪುಟದ ಪ್ರಬಂಧಕಾರರೆಲ್ಲ ವಿಷಯದ ಕುರಿತ ಆಸಕ್ತಿಯಿಂದ ಮತ್ತು ನನ್ನ ಮೇಲಿನ ವಿಶ್ವಾಸದಿಂದ ನಿಗದಿತ ಸಮಯದೊಳಗೆ ಪ್ರಬಂಧಗಳನ್ನು ಬರೆದುಕೊಟ್ಟಿದ್ದಾರೆ. ಅವರೆಲ್ಲರ ಶ್ರಮ ಮತ್ತು ಸಹಕಾರದಿಂದ ಈ ಸಂಪುಟ ಸಿದ್ಧವಾಗಿದೆ. ಹೀಗಾಗಿ ಎಲ್ಲ ಬರಹಗಾರರಿಗೂ ನನ್ನ ಕೃತಜ್ಞತೆಗಳು ಸಲ್ಲುತ್ತವೆ.

ಇಂಥ ಯೋಜನೆಯನ್ನು ಹಮ್ಮಿಕೊಂಡ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ನಾಡೋಜ ಗೀತಾ ನಾಗಭೂಷಣ್ ಅವರಿಗೆ ಮತ್ತು ಇದರ ಅನುಷ್ಠಾನದಲ್ಲಿ ಎಲ್ಲ ರೀತಿಯಲ್ಲಿ ಸಹಕರಿಸಿದ ರಿಜಿಸ್ಟ್ರಾರ್ ಮಲ್ಲಿಕಾರ್ಜುನಸ್ವಾಮಿ ಮತ್ತು ಅಕಾಡೆಮಿಯ ಎಲ್ಲ ಸಿಬ್ಬಂದಿ ವರ್ಗದವರಿಗೆ,

ಆಕೃತಿ ಕಂಪ್ಯೂಟರ್ಸನ ಶ್ರೀ ಕಲ್ಲೂರು ನಾಗೇಶ ಅವರಿಗೆ, ಕರಡಚ್ಚು ತಿದ್ದುವುದರಲ್ಲಿ ನೆರವಾದ ಡಾ. ಶೈಲಾ ಯು. ಅವರಿಗೆ

ನನ್ನ ಹೃತ್ಪೂರ್ವಕ ಕೃತಜ್ಞತೆಗಳು.

ಡಾ. ಸಬಿಹಾ ಭೂಮಿಗೌಡ
ಕನ್ನಡ ಅಧ್ಯಯನ ವಿಭಾಗ, ಮಂಗಳಗಂಗೋತ್ರಿ – ೫೭೮೧೯೯