ರಾಜಾಶ್ರಯದ ಸಾಹಿತ್ಯದಲ್ಲಿ ವೃಷ್ಟಿ ಪ್ರಜ್ಞೆಯ ಸಾಹಿತ್ಯಕ್ಕೆ ದೊರಕಿದ ಸ್ಥಾನ ಇಂದು ಪ್ರಜಾಸತ್ತೆಯ ಕಾಲದಲ್ಲಿ ಮೆಲ್ಲ ಮೆಲ್ಲನೆ ಸಮಷ್ಟಿ ಪ್ರಜ್ಞೆಯ ಸಾಹಿತ್ಯಕ್ಕೆ ದೊರಕುತ್ತಿರುವುದು ಸಹಜ ಹಾಗೂ ಯೋಗ್ಯ. ಇಂದಿನ ಈ ಕಾಲಮಾನ ಚಿಹ್ನೆಗಳನ್ನು ಗುರುತಿಸಿ ವಿಶ್ವವಿದ್ಯಾಲಯಗಳು ಕೂಡ ಜನಪದರ ಸಮಷ್ಠಿ ಜೀವನದ ಅಭಿವ್ಯಕ್ತಿಯ ಅಧ್ಯಯನಕ್ಕೆ ಸ್ಥಾನಮಾನ ಕೊಡುತ್ತಿವೆ. ಈ ಹೊಸ ವಾತಾವರಣಕ್ಕೆ ಸ್ಪಂದಿಸಿ ಕರ್ನಾಟಕವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠವೂ ಕೂಡಾ ಜಾನಪದದ ಅಧ್ಯಯನಕ್ಕೆ ವ್ಯಷ್ಠಿ ಸಾಹಿತ್ಯದ ಜೊತೆಗೆ ಸಮಾನ ಸ್ಥಾನವನ್ನಿತ್ತು. ಜಾನಪದಲ್ಲಿ ಎಂ.ಎ. ಭೋಧಿಸುವದರೊಂದಿಗೆ ಜಾನಪದ ವಸ್ತುಸಂಗ್ರಹಣೆ, ಗ್ರಂಥ ಪ್ರಕಟಣೆ ಹಾಗೂ ಜಾನಪದ ಸಮ್ಮೇಳನವನ್ನು ನಡೆಯಿಸುತ್ತ ಬಂದಿದೆ.

ಕನ್ನಡ ಅಧ್ಯಯನಪೀಠ ಈಗಾಗಲೇ ೧೬ ಜಾನಪದ ಸಮ್ಮೇಳನಗಳನ್ನು ನಡೆಯಿಸಿದೆ. ಈ ಜಾನಪದ ಸಮ್ಮೇಳನಗಳಲ್ಲಿ ಪ್ರತಿವರ್ಷ ಕನ್ನಡ ನಾಡಿನ ವಿವಿಧ ಪ್ರದೇಶದ ಜಾನಪದ ವಿದ್ವಾಂಸರು ಜಾನಪದ ಕಲಾವಿದರು ಭಾಗವಹಿಸುತ್ತಾರೆ. ಅಲ್ಲದೆ ಜಾನಪದ ವಿಷಯವನ್ನು ವಿಶೇಷ ಅಧ್ಯಯನಕ್ಕೆ ಆರಿಸಿ ಅದನ್ನು ಕುರಿತು ಸುಪ್ರಸಿದ್ಧ ಜಾನಪದ ವಿದ್ವಾಂಸರು ಪ್ರಬಂಧಗಳನ್ನು ಮಂಡಿಸುತ್ತಾರೆ. ಈ ಜಾನಪದ ಸಮ್ಮೇಳನಗಳ ಮಾಲಿಕೆಯಲ್ಲಿ ೧೬ನೇಯ ಸಮ್ಮೇಳನ ಫೆಬ್ರವರಿ ೧೭-೧೮, ೧೯೮೯ರಂದು ಕನ್ನಡ ಅಧ್ಯಯನಪೀಠದ ಜಾನಪದ ಕಲಾಭವನದಲ್ಲಿ ನಡೆಯಿತು.

ಈ ಹಿಂದಿನ ಸಮ್ಮೇಳನಗಳು ಆರಂಭದ ನಾಲ್ಕು ವರ್ಷ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿಯೇ ನಡೆದು ಮುಂದೆ ಗುಲಬರ್ಗಾ, ಇಳಕಲ್ಲ, ಗದಗ, ಅಂಕೋಲಾ, ಬನಹಟ್ಟಿ, ಲಕ್ಷೇಶ್ವರ ಸವದತ್ತಿ, ಬೆಳಗಾಂವ, ಧಾರವಾಡ, ದಾವಣಗೆರೆ, ಹೊನ್ನಾವರ ಹೀಗೆ ಕನ್ನಡ ನಾಡಿನ ವಿವಿಧ ಭಾಗಗಳಲ್ಲಿ ನಡೆದು ಈ ವರ್ಷ ಕನ್ನಡ ಅಧ್ಯಯನಪೀಠದಲ್ಲಿಯೇ ನಡೆದುದು ಧಾರವಾಡದ ಸುತ್ತ ಮುತ್ತಲಿನ ಕಲಾವಿದರಿಗೆ ಹಾಗೂ ಜಾನಪದ ವಿದ್ವಾಂಸರಿಗೆ ಅದರಲ್ಲಿಯೂ ನಮ್ಮ ಪೀಠದ ಪ್ರಾಧ್ಯಾಪಕವೃಂದಕ್ಕೂ ವಿದ್ಯಾರ್ಥಿವೃಂದಕ್ಕೂ ಬಹಳ ಅನುಕೂಲವಾಗಿರುವುದರಲ್ಲಿ ಸಂದೇಹವಿಲ್ಲ.

ಈ ಸಲದ ಸಮ್ಮೇಳನದಲ್ಲಿ ವಿಶೇಷ ಅಧ್ಯಯನಕ್ಕಾಗಿ ಆರಿಸಿದ ವಿಷಯ: ತೊಗಲುಗೊಂಬೆಯಾಟ. ಈ ವಿಷಯ ಜಾನಪದ ವಿಜ್ಞಾನದ ವಿಶ್ಲೇಷಣೆಯ ಮೇರೆಗೆ ಅಶಾಬ್ದಕ ಜಾನಪದ (Non verbal Folklore) ಕ್ಕೆ ಸೇರಿದುದಲ್ಲದೆ, ಅದು ಪ್ರದರ್ಶನ ಕಲೆಗಳಲ್ಲಿ (Performing Arts) ಒಂದಾಗಿದೆ. ಈ ಕಲೆಯನ್ನು ಕುರಿತ ಸೈದ್ಧಾಂತಿಕ ಚರ್ಚೆಗೋಸ್ಕರ ’ತೊಗಲುಗೊಂಬೆಯಾಟ’ದ ಪ್ರಾಚೀನತೆ ವೈವಿಧ್ಯತೆ, ಪೂರಕವಾದ ಸಾಹಿತ್ಯ, ಸಂಗೀತ, ಬಣ್ಣಗಾರಿಕೆ, ಅದರ ಪ್ರಯೋಗ, ಅದರ ಮೇಲೆ ಆಧುನಿಕ ಪ್ರಭಾವ ಹಾಗೂ ನವೀಕರಣದ ಸಾಧ್ಯತೆ ಮುಂತಾದವುಗಳನ್ನು ಆರಿಸಿ ವಿವಿಧ ಪ್ರಬಂಧಗಳನ್ನು ಮಂಡಿಸಲಾಯಿತಲ್ಲದೇ, ಅನ್ವಯಿಕವಾಗಿ ರಂಗಪ್ರದರ್ಶನಗಳು ನಡೆದವು.

ಕನ್ನಡ ಅಧ್ಯಯನಪೀಠವು ನಡೆಸುತ್ತ ಬಂದ ಈ ಸಮ್ಮೇಳನಗಳಲ್ಲಿ ಓದಿದ ಪ್ರಬಂಧಗಳನ್ನು ’ಜಾನಪದ ಸಾಹಿತ್ಯದರ್ಶನ’ ಎಂಬ ಹೆಸರಿನಿಂದ ಪ್ರಕಟಿಸುತ್ತ ಬರುತ್ತಲಿರುವುದು ಒಂದು ವಿಶೇಷ. ಅಖಿಲ ಕರ್ನಾಟಕದಲ್ಲಿಯೇ ಈ ಗ್ರಂಥಗಳು ಜಾನಪದ ಅಭ್ಯಾಸಿಗಳಿಗೆ ಅಪೂರ್ವ ಆಕರ ಸಾಮಗ್ರಿಯಾಗಿವೆ. ಪ್ರಸ್ತು ಹದಿನಾರನೆಯ ’ಜಾನಪದ ಸಾಹಿತ್ಯದರ್ಶನ’ ’ತೊಗಲು ಗೊಂಬೆಯಾಟ’ ಕುರಿತ ಪ್ರಬಂಧಗಳ ಸಂಕಲನ ಗ್ರಂಥವಾಗಿದೆ. ಈ ಗ್ರಂಥಕ್ಕೆ ಪ್ರಬಂಧಗಳನ್ನು ಪೂರೈಸಿದ ವಿದ್ವಾಂಸರಿಗೂ ೧೬ನೆಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದ ಸುಪ್ರಸಿದ್ಧ ಜಾನಪದ ವಿದ್ವಾಂಸರೂ, ಕವಿ ನಾಟಕಕಾರರೂ ಆದ ಡಾ. ಚಂದ್ರಶೇಖರ ಕಂಬಾರ ಅವರಿಗೂ, ಸಮ್ಮೇಳನವನ್ನು ಉದ್ಘಾಟಿಸಿದ ಖ್ಯಾತ ಜಾನಪದ ವಿದ್ವಾಂಸರಾದ ಡಾ. ಜೀ.ಶಂ. ಪರಮಶಿವಯ್ಯ ಮೈಸೂರು ಅವರಿಗೂ, ಗೋಷ್ಠಿಗಳ ಅಧ್ಯಕ್ಷತೆ ವಹಿಸಿದ ಡಾ. ಬಿ.ವಿ. ಮಲ್ಲಾಪುರ, ಡಾ. ಹಕಾರಿ, ಡಾ. ಎಂ.ಎಸ್. ಲಠ್ಠೆ, ಡಾ.ಡಿ.ಕೆ. ರಾಜೇಂದ್ರ, ಅವರಿಗೂ ಹಾಗೂ ರಂಗಪ್ರದರ್ಶನವನ್ನು ಉದ್ಘಾಟಿಸಿದ ಜಾನಪದ ಹಾಡುಗಾರ ಶ್ರೀ ನಿಂಗನಗೌಡ ಮುಂಡರಗಿ ಮತ್ತುಕಲಾಪ್ರದರ್ಶನದಲ್ಲಿ ಭಾಗವಹಿಸಿದ ಕಲಾಕಾರರಿಗೂ ಜಾನಪದ ಸಮ್ಮೇಳನದ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಬಂದ ಕುಲಸಚಿವರಾದ ಡಾ. ಆ. ಇ. ಪುನೀತ ಅವರಿಗೂ, ಅಧ್ಯಕ್ಷತೆ ವಹಿಸಿದ ಡಾ.ಕೆ.ಜಿ. ಗುರುಮೂರ್ತಿ ಅವರಿಗೂ ಹಾಗೂ ಕನ್ನಡ ಅಧ್ಯಯನಪೀಠದ ಪ್ರಾಧ್ಯಾಪಕವೃಂದಕ್ಕೂ, ಸಮ್ಮೇಳನದ ಯಶಸ್ಸಿಗಾಗಿ ಅನನ್ಯ ಆಸಕ್ತಿ ವಹಿಸಿದ ಕಾರ್ಯದರ್ಶಿ ಪ್ರೊ. ಎಸ್. ಎಸ್. ಭದ್ರಾಪುರ ಮತ್ತು ಕ.ವಿ.ವಿ. ಪ್ರಸಾರಾಂಗದ ನಿರ್ದೇಶಕರಿಗೂ ನಮ್ಮ ಅನಂತ ಕೃತಜ್ಞತೆಗಳು.

ಸಂಪಾದಕರು.