ಎಲ್ಲಿ ಪರಿಸರ ಸಮೃದ್ದಿಯಾಗಿದೆಯೋ ಅಲ್ಲಿ ಜೀವನವು ಸಮೃದ್ದಿಯಾಗಿರುತ್ತದೆ. ಎಲ್ಲಿ ಪ್ರಕೃತಿ ನಾಶವಾಗಿರುತ್ತದೆಯೋ ಅಲ್ಲಿ ಜೀವನ ಕ್ರಮವೂ ನಾಶಗೊಂಡಿರುತ್ತದೆ. ಪರಿಸರ ನಮ್ಮ ಸಂಪನ್ಮೂಲ ಮಾತ್ರವಲ್ಲ. ನಮ್ಮ ಜೀವ ಮೂಲವೂ ಹೌದು.

ಗ್ರೀಕ ಭಾಷೆಯಲ್ಲಿ ECO ಶಬ್ದಕ್ಕೆ ಮನೆ ಎಂಬ ಅರ್ಥವಿದೆ. ನಾವು ವಾಸಿಸುವ ಪರಿಸರವೇ ನಮ್ಮ ಮನೆ ಎಂಬ ಕಲ್ಪನೆ ಇದರಲ್ಲಿ ಅಡಗಿದೆ. ವಿಶಾಲಾರ್ಥದಲ್ಲಿ ಇಡೀ ಬ್ರಹ್ಮಾಂಡವೇ ನಮ್ಮ ಪರಿಸರದ ವ್ಯಾಪ್ತಿಯಲ್ಲಿ ಬರುತ್ತದೆ. ಭೌತಿಕ ಮತ್ತು ಜೈವಿಕ ಪರಿಸರವನ್ನೊಳಗೊಂಡ ಜೀವಗೋಳದ ಅಧ್ಯಯನ ECOLOGY ಪದದ ವ್ಯಾಪ್ತಿಯಲ್ಲಿದೆ. ಜೀವವಿಜ್ಞಾನ ಹಾಗೂ ಸಮಾಜ ವಿಜ್ಞಾನಗಳ ನೆರವಿನಿಂದ ಪರಿಸರ ಸಂರಕ್ಷಣೆಗಾಗಿ ಹಾಗೂ ಸಂಶೋಧನೆಯ ಉದ್ದೇಶಗಳಿಗಾಗಿ ಪರಿಸರ ವಿಜ್ಞಾನ ಹುಟ್ಟಿಕೊಂಡಿದೆ.

ಸೌರ ಮಂಡಲದಲ್ಲಿ ಜೀವಿಗಳನ್ನು ಹೊಂದಿರುವ ಏಕೈಕ ಗ್ರಹವೆಂದರೆ ಭೂಮಿ. ವೈಜ್ಞಾನಿಕ ಸಿದ್ದಾಂತಗಳ ಪ್ರಕಾರ ಸುಮಾರು ೩೦೦ ಮಿಲಿಯನ್ ವರ್ಷಗಳ ಹಿಂದೆ ಈ ಗ್ರಹದಲ್ಲಿ ಮೊಟ್ಟಮೊದಲು ಜೀವಿಗಳು ಬೆಳವಣೆಗೆಯಾದವು. ನಿಧಾನವಾಗಿ, ನಿರಂತರವಾಗಿ ವಿವಿಧ ರೀತಿಯ ಭೌತಿಕ ಅಂಶಗಳಿಂದ ಈ ಜೈವಿಕ ಲೋಕದಲ್ಲಿ ಜೀವವಿಕಾಸವಾಗಿದೆ. ಒಂದು ಲೆಕ್ಕದ ಪ್ರಕಾರ ಈ ಜೀವಿಗಳ ಸಂಖ್ಯೆ ೧೨ ರಿಂದ ೨೦ ಮಿಲಿಯ. ಇದುವರೆಗೆ ಅಧ್ಯಯನಕ್ಕೆ ಒಳಗು ಮಾಡಿರುವುದು ಸುಮಾರು ೧೪ ಮಿಲಿಯ ಜೀವಿಗಳ ವಿಚಾರವನ್ನು ಮಾತ್ರ, ಅವುಗಳಲ್ಲಿ ೨,೨೫,೦೦೦ ಗಿಡಗಳು ೨೩,೦೦೦ ಶಿಲೀಂದ್ರಗಳು, ೨೫೦೦ ಅಲ್ಗೆಗಳು, ೯೦೦ ರೀತಿಯ ಬ್ರಯೋಪೈಟಗಳು, ೨೫೦ ರೀತಿಯ ಸಸ್ತನಿಗಳು, ೭೫,೦೦೦ ಕೀಟಗಳು, ೩೨,೦೦೦ ಮೀನುಗಳು. ೧೫,೦೦೦ ಇರುವೆಗಳು ೪೫೦ ಸರೀಸೃಪಗಳು ಇವು ವಿವಿಧ ರೀತಿಯ

ಅದರಂತೆ ಸಸ್ಯಗಳು ಸಮೃದ್ದವಾಗಿ ಬೆಳೆಯಬೇಕಾದರೆ ಪರಿಸರಕ್ಕೆ ಅನುಗುಣವಾಗಿ ಪ್ರಾಣೆಗಳ ಅಸ್ತಿತ್ವ ಅಷ್ಟೇ ಮುಖ್ಯವಾಗಿದೆ. ಹೀಗೆ ಮೊದಲಿನಿಂದಲೂ ಪಶು-ಪಕ್ಷಿಗಳು ಮತ್ತು ಸಸ್ಯಗಳು ಪರಸ್ಪರ ಅವಲಂಬಿಗಳಾಗಿ ಜೀವಿಸುತ್ತ ವಿಕಾಸಗೊಳ್ಳುತ್ತ ಬಂದಿವೆ. ಪ್ರಾಚೀನ ಮಾನವನಲ್ಲಿ ಪ್ರಕೃತಿಯನ್ನು ಕುರಿತಂತೆ ಆರಾಧನಾ ಭಾವವಿದ್ದರೂ ಅದು ಅವನ ವಿನಯ ಹಾಗೂ ವಿವೇಕ ಎರಡೂ ಆಗಿತ್ತು. ಪ್ರಪಂಚದಲ್ಲಿ ಯಾವುದೇ ಧರ್ಮವಿರಲಿ, ಪರಿಸರವನ್ನು ರಕ್ಷಿಸಬೇಕೆನ್ನುತ್ತದೆ. ಮಾನವನ ಅತಿ ಆಸೆ, ಅಭಿವೃದ್ದಿಯೆಂಬ ಹುಸಿನಂಬಿಕೆ, ಐಶಾರಾಮೀ ಜೀವನ, ಬೌತಿಕ ಪರಿಸರವನ್ನು ನಾಶಮಾಡಿ ಪ್ರಕೃತಿಯ ಸಮತೋಲನವನ್ನು ಕೆಡಿಸಿವೆ.

ಆದಿವಾಸಿ, ಗ್ರಾಮೀಣ ಸಂಸ್ಕೃತಿಯ ಜನರು ಪರಿಸರದ ಮಹತ್ವವನ್ನು ಕಂಡುಕೊಂಡಿದ್ದರು. ಪರಿಸರದಲ್ಲಿ ಸಮತೋಲನವನ್ನು ಕಾಪಾಡಿಕೊಂಡು ಬರುವಂತೆ ತಮ್ಮ ಜೀವನ ವಿಧಾನಗಳನ್ನು ರೂಪಿಸಿಕೊಂಡಿದ್ದರು. ಕುಮ್ರಿ ಬೇಸಾಯ ಪದ್ದತಿ ಇದಕ್ಕೊಂದು ಉದಾಹರಣೆ. ಕಾಡಿನ ನಡುವೆ ಒಂದಿಷ್ಟು ಜಾಗ ಕಡಿದು ಹಸನು ಮಾಡಿ, ಒಂದೆರಡು ವರ್ಷ ಬೇಸಾಯ ಮಾಡಿ, ನಂತರ ಆ ಜಾಗವನ್ನು ತೆರವು ಮಾಡಿ ಇನ್ನೊಂದು ಸ್ಥಳವನ್ನು ಆರಿಸಿಕೊಳ್ಳುತ್ತಿದ್ದರು. ಹಾಗೆ ತೆರವು ಮಾಡಿದ ಜಾಗ ಕೆಲವೇ ವರ್ಷಗಳಲ್ಲಿ ಕಾಡಾಗಿ ಪರಿವರ್ತನೆಗೊಳ್ಳುತ್ತಿತ್ತು. ಬುಡಕಟ್ಟು ಜನರು ಸಸ್ಯ ಅಥವಾ ಪ್ರಾಣೆಗಳ ಹೆಸರಿನಲ್ಲಿ ತಮ್ಮ ಕುಲಚಿಹ್ನೆಗಳನ್ನು ಗುರುತಿಸಿಕೊಳ್ಳುತ್ತಿದ್ದರು. ಆ ಪ್ರಾಣೆ ಅಥವಾ ಸಸ್ಯವನ್ನು ಪೂಜಿಸುತ್ತಿದ್ದರು. ಮತ್ತು ಅವುಗಳನ್ನು ನಾಶಮಾಡುತ್ತಿರಲಿಲ್ಲ. ಹೀಗೆ ಒಂದೊಂದು ಸಮತೋಲ ಉಳಿದು ಬರುತ್ತಿತ್ತು. ಗ್ರಾಮೀಣ ಜನತೆಯೂ ನಾಗವನ, ಜಟ್ಟಿಗನ ಬನ, ಭೂತದ ಕಾಡು ಮುಂತಾದ ಹೆಸರಿನಲ್ಲಿ ದೇವರ ಕಾಡನ್ನು ರಕ್ಷಿಸಿಕೊಂಡು ಬಂದುದನ್ನು ಇಲ್ಲಿ ಉದಾಹರಿಸಬಹುದು. ಇಂಥ ಪವಿತ್ರ ವನಗಳಿಂದಾಗಿ ಇಂದಿಗೂ ದೊಡ್ಡ ದೊಡ್ಡ ಮರಗಳು. ಔಷಧಿ ಸಸ್ಯಗಳು ಕೆಲಮಟ್ಟಿಗಾದರೂ ಉಳಿದುಬಂದಿವೆ.

ಪ್ರಕೃತಿಯ ಆರಾಧಕರಾಗಿದ್ದ ಜನಪದರ ನಿತ್ಯದ ಬೆಳಗು, ಭೂಮಿತಾಯಿಯ ಸ್ಮರಣೆಯಿಂದಲೇ ಪ್ರಾರಂಭವಾಗುತ್ತಿತ್ತು. ಹಳ್ಳಿಯ ಹಬ್ಬಗಳಲ್ಲಿ ಬಹುಪಾಲು ಪ್ರಕೃತಿ ಪರಿಸರಗಳಿಗೆ ಸಂಬಂಧಿಸಿದ ಗಣೇಶ – ಗೌರಿಹಬ್ಬ, ನಾಗರಪಂಚಮಿ, ಬಸವನಅಮಾವಾಸ್ಯೆ, ಗುಳ್ಳೆವ್ವನ ಪೂಜೆ ಇತ್ಯಾದಿ ಹೆಸರಿಸಬಹುದು. ಕೃಷಿ ಆಧಾರಿತ ಗ್ರಾಮೀಣ ಪರಿಸರದ ಜೀವನ, ಪ್ರಾಣಿಗಳ ಜೊತೆಗೆ ಸೌಹಾರ್ದಯುತ ಸ್ನೇಹಯುತ ರೀತಿಯದಾಗಿತ್ತು. ಜನಪದ ಕತೆಗಳಲ್ಲಿ ಇದಕ್ಕೆ ಸಾಕಷ್ಟು ಉದಾಹರಣೆಗಳು ದೊರೆಯುತ್ತವೆ. ಅಲ್ಲಿ ಪಶು ಪಕ್ಷಿಗಳು ಮಾನವನೊಂದಿಗೆ ಮಾತನಾಡುತ್ತವೆ. ಅವನಿಗೆ ಸಹಾಯ ಮಾಡುತ್ತವೆ. ರಾಮ ಸೀತೆಯನ್ನು ಕಾಡಿಗಟ್ಟಿದಾಗ, ಕಾಡಿನ ಪಶು ಪಕ್ಷಿಗಳೇ ಅವಳ ಆರೈಕೆ ಮಾಡಿದ್ದವು. ಚಂದ್ರಹಾಸನನ್ನು ಕಟುಕರು ಕಾಡಿನಲ್ಲಿ ಬಿಟ್ಟು ಹೋದಾಗ, ಅವನಿಗೆ ಸಾಂತ್ವನಗೈದದ್ದು ಅರಣ್ಯದ ಪಶು-ಪಕ್ಷಿಗಳೇ. ನಾಡು ಬೇಡವಾದವರಿಗೆ ಪರ್ಯಾಯ ಜಗತು ಪ್ರಕೃತಿ, ಕಾಡೇ ಆಗಿತ್ತು. ಶಿಕ್ಷೆಯಾಗಿ ಕಾಡು ಸೇರಿದವರಿಗೂ ಸಸ್ಯ ಪ್ರಾಣಿ ಪರಿಸರದಲ್ಲಿ ಸಾಂತ್ವನ ದೊರೆಯುತ್ತಿತ್ತಲ್ಲದೇ, ಅವರಿಗೊಂದು ಹೊಸಜೀವನ ಅಲ್ಲಿ ದೊರೆಯುತ್ತಿತ್ತು. ಋಷಿ ಸಂಸ್ಕೃತಿ ಕಾಡನದೇ ಆಗಿದೆ. ಮಾನವ ಇಂಥ ಅನ್ಯೋನ್ಯ ಪರಿಸರದಿಂದ ದೂರ ಸರಿಯುತ್ತ ಬಂದು, ತನ್ನ ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದಾನೆ. ನಾಗರಿಕತೆಯ ಹೆಸರಿನಲ್ಲಿ ದಿನೇ ದಿನೇ ಸ್ವಾರ್ಥಿಯಾಗುತ್ತಾ ಹೋಗುತ್ತಿದ್ದಾನೆ. ಅವನಲ್ಲಿ ಅಹಂ ತುಂಬಿಕೊಳ್ಳತೊಡಗಿದೆ. ಮನುಷ್ಯ ತನ್ನ ಭೋಗಕ್ಕಾಗಿ ಕಾಡಿನ ಸಂಪತ್ತನ್ನು ಲೂಟಿ ಮಾಡಿದ. ತನ್ನ ವಿನೋದಕ್ಕಾಗಿ ಕಾಡಿನ ಪ್ರಾಣಿಗಳನ್ನು ಕೊಂದು ಹಾಕಿದ. ಇದರಿಂದ ಅವನು ಸಸ್ಯ ಮತ್ತು ಪ್ರಾಣಿ ಜಗತ್ತಷ್ಟೇ ನಾಶಮಾಡಿದಂತಾಗಿಲ್ಲ. ತನ್ನ ಬುಡಕ್ಕೆ ಕೊಡಲಿ ಏಟು ಹಾಕಿಕೊಂಡಂತೆ ಆಗಿದೆ. ಪ್ರಗತಿಯ ಹೆಸರಿನಲ್ಲಿ ಕಾಡು ಕಡಿದು ಊರು ಕೆಡಿಸಿ ದೊಡ್ಡ ದೊಡ್ಡ ಅಣೆಕಟ್ಟುಗಳ ನಿರ್ಮಾಣ, ಅಪಾರ ಹೊಗೆಯುಗುಳುವ, ಕಲ್ಮಶಗಳ ಹೊಳೆಯನ್ನೇ ಹರಿಸುವ, ಬೃಹತ್ ಕಾರ್ಖಾನೆಗಳ ಸ್ಥಾಪನೆ, ಖನಿಜಗಳ ಗಣಿ ಅಗೆತ, ಅಣು ಸ್ಥಾವರಗಳ ಸ್ಥಾಪನೆ ಇವುಗಳಿಂದಾಗಿ ಪ್ರಕೃತಿಗೆ ವಿರುದ್ಧವಾದುದನ್ನೇ ಅವನು ಮಾಡತೊಡಗಿದ್ದಾನೆ. ಈಗ ನಾನಾ ಬಗೆಯಲ್ಲಿ ಪರಿಸರ ಮಾಲಿನ್ಯವಾಗತೊಡಗಿದೆ. ಭೂಮಾಲಿನ್ಯ, ವಾಯುಮಾಲಿನ್ಯ, ಜಲಮಾಲಿನ್ಯಗಳಿಂದಾಗಿ ಶುದ್ಧವಾದ ಗಾಳಿ, ನೀರು, ನೆಲಗಳ ಅಭಾವ ತಲೆದೋರಿದೆ. ಈ ಹಿಂದೆ ಇದ್ದ ಪ್ರಾಣಿ-ಪಕ್ಷಿಗಳ ಎಷ್ಟೋ ತಳಿಗಳು ಈಗಾಗಲೇ ಅಳಿದು ಹೋಗಿವೆ. ಕೆಲವು ಅಳಿವಿನ ಅಂಚಿನಲ್ಲಿವೆ. ಕಾರ್ಖಾನೆಗಳ ಹೊಗೆ, ಅವು ವಿಸರ್ಜಿಸುವ ವಿಷ ವಸ್ತುಗಳು, ನದಿಗಳನ್ನು ಸೇರುತ್ತಿರುವುದರಿಂದ ಜಲಚರಗಳು ನಾಶವಾಗುತ್ತಿವೆ. ಹೆಚ್ಚುತ್ತಿರುವ ವಾಹನಗಳ ಹೊಗೆ ಕೂಡ ಜನರ ಆರೋಗ್ಯಕ್ಕೆ ಮಾರಕವಾಗಿದೆ. ಅಣುಸ್ಥಾವರಗಳ ಅಣುವಿಕಿರಣದಿಂದ ಆಗಬಹುದಾದ ಅಪಾಯವಂತೂ ಘೋರವಾದದ್ದು. ಭೂಮಿಗೆ ರಕ್ಷಾಕವಚವಾಗಿರುವ ಓಝೋನ್ ಪದರದಲ್ಲಿ ರಂದ್ರಗಳಾಗಿವೆ ಎಂದೂ ವಾಯಮಂಡಲದಲ್ಲಿ ಆಮ್ಲಜನಕದ ಪ್ರಮಾಣ ದಿನೇ ದಿನೇ ಕುಗ್ಗುತ್ತಿದೆ ಎಂದೂ ವಿಜ್ಞಾನಿಗಳೂ ಹೇಳುತಿದ್ದಾರೆ. ಇದರ ಪರಿಣಾಮದಿಂದ ಭೂಮಿಯ ಉಷ್ಣತೆ ಹೆಚ್ಚುತ್ತಿದೆ. ಇದರಂತೆ ಅರಣ್ಯನಾಶ, ಮತ್ತಿತರ ಕಾರಣಗಳಿಂದ ಭೂಮಿಯ ಅಂತರ್ಜಲ ಪ್ರಮಾಣ ಕಡಿಮೆಯಾಗುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಇನ್ನು ಕೆಲವೇ ವರ್ಷಗಳಲ್ಲಿ ಕುಡಿಯುವ ನೀರಿನ ಅಭಾವ ಎಲ್ಲೆಡೆ ಕಾಣಿಸಿಕೊಳ್ಳುತ್ತದೆ.

ಈ ಎಲ್ಲ ವಿದ್ಯಮಾನಗಳನ್ನು ಅರಿತೇ ಪರಿಸರ ಪ್ರೇಮಿಗಳು ಜಗತ್ತಿನಾದ್ಯಂತ ಪರಿಸರದ ಬಗ್ಗೆ ತಿಳುವಳಿಕೆ ನೀಡತೊಡಗಿದ್ದಾರೆ. ಪರಿಸರ ಪ್ರೇಮ ಬೆಳೆಸಿಕೊಳ್ಳಲು ಕರೆಯುತ್ತಿದ್ದಾರೆ. ‘ಪರಿಸರ ಉಳಿಸಿ’ ಚಳುವಳಿ ನಡೆಸಿದ್ದಾರೆ. ಚಿಪ್ಕೊ ಚಳುವಳಿ, ಅಪ್ಪಿಕೋ ಚಳುವಳಿ, ನರ್ಮದಾ ಬಚಾವೋ ಆಂದೋಲನ, ಬೇಡ್ತಿ, ಕೈಗಾ ಚಳುವಳಿಗಳು, ಕೋಜೆಂಟ್ರಿಕ್ಸ್ ಹೋರಾಟ ಮುಂತಾದ ಕೆಲವನ್ನು ಇಲ್ಲಿ ಹೆಸರಿಸಬಹುದು. ಇವುಗಳ ಹಿಂದಿನ ಕರಾಳ ಭವಿಷ್ಯದ ಭಯ ಮತ್ತು ಪರಿಸರ ಪ್ರೇಮ.

ಜಾನಪದ ಅಧ್ಯಯನ ವಿಭಾಗವು ಪರಿಸರದ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ, ೨೪ನೇ ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಅಂಗವಾಗಿ ‘ಪರಿಸರ ಮತ್ತು ಜನಪದ ಸಂಸ್ಕೃತಿ’ ಎಂಬ ವಿಷಯವನ್ನು ಕುರಿತು ವಿಚಾರಗೋಷ್ಟಿಯನ್ನು ಏರ್ಪಡಿಸಿತ್ತು. ವಿಚಾರಗೋಷ್ಠಿಯಲ್ಲಿ ಮಂಡಿಸಿದ ಪ್ರಬಂಧಗಳನ್ನು ಈಗ ‘ಜಾನಪದ ಸಾಹಿತ್ಯ ದರ್ಶನ-೨೪’ ಹೆಸರಿನಲ್ಲಿ ಪ್ರಕಟ ಮಾಡಲಾಗುತ್ತಿದೆ. ಗೋಷ್ಠಿಯಲ್ಲಿ ಪ್ರಬಂಧವನ್ನು ಮಂಡಿಸಿದ ಎಲ್ಲಾ ವಿದ್ವಾಂಸರಿಗೂ, ಚರ್ಚೆಯಲ್ಲಿ ಭಾಗವಹಿಸಿದ ಎಲ್ಲ ಪರಿಸರ ಪ್ರೇಮಿಗಳಿಗೂ, ಜಾನಪದಾಸಕ್ತರಿಗೂ, ಜಾನಪದ ಕಲಾಕಾರರಿಗೂ ನಮ್ಮ ವಂದನೆಗಳು ಸಲ್ಲುತ್ತವೆ.

ಕರ್ನಾಟಕ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ.ಎ.ಎಮ್.ಪಠಾಣ ಅವರ ಸತತ ಪ್ರೋತ್ಸಾಹ, ಸಹಾಯ ಸಹಕಾರಗಳಿಂದಲೇ ಈ ಸಮ್ಮೇಳನವನ್ನು ಜರುಗಿಸಲು ಸಾಧ್ಯವಾಗಿದೆ. ಅವರಿಗೂ ಮಾನ್ಯ ಕುಲಸಚಿವರಿಗೂ ಜಾನಪದ ಅಧ್ಯಯನ ವಿಭಾಗದ ಪರವಾಗಿ ಕೃತಜ್ಞತೆಗಳು. ಈ ಸಂಪುಟ ಪ್ರಕಟಗೊಳ್ಳಲು ಕಾರಣರಾದ ಪ್ರಸಾರಾಂಗದ ನಿರ್ದೇಶಕರಾದ ಡಾ.ಹರಿಲಾಲ ಪವಾರ ಅವರಿಗೂ, ಮುದ್ರಣಾಲಯದ ನಿರ್ದೇಶಕರಾದ ಡಾ.ಎಮ್.ಎಸ್.ಮನ್ನಿಕೇರಿ ಹಾಗೂ ಅವರ ಸಿಬ್ಬಂದಿ ವರ್ಗದವರಿಗೂ ಕೃತಜ್ಞತೆಗಳು.

ಸಂಪಾದಕರು
ಜಾನಪದ ಅಧ್ಯಯನ ವಿಭಾಗ
ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ