ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠವು ೧೯೭೩ರಿಂದಲೂ ಈ ವರೆಗೆ ಅವ್ಯಾಹಿತವಾಗಿ ನಾಡಿನ ವಿವಿಧ ಭಾಗಗಳಲ್ಲಿ ೧೮ ಅಖಿಲ ಕರ್ನಾಟಕ ಮಟ್ಟದ ಜಾನಪದ ಸಮ್ಮೇಳನಗಳನ್ನು ನಡೆಸುತ್ತಾ ಬಂದಿರುವುದು. ಜಾನಪದ ಕ್ಷೇತ್ರದಲ್ಲೊಂದು ಒಂದು ಅಂಗವಾದರೆ- ಆ ಸಮ್ಮೇಳನಗಳಲ್ಲಿ ನಡೆಯುವ ವಿಚಾರ ಸಂಕಿರಣಗಳದ್ದು ಮತ್ತೊಂದು ಮಹತ್ವದ ಅಂಗ. ಜಾನಪದ ಕ್ಷೇತ್ರದಲ್ಲಿ ಕನ್ನಡ ನೆಲವೆನಿಸಿದ, ಕೆಲಸವಾಗದೇ ಉಳಿದ ವಿಭಿನ್ನ ವಿಷಯಗಳಲ್ಲಿ ನಡೆಯುವ ವಿಚಾರ ಗೋಷ್ಠಿಗಳಲ್ಲಿ ನಾಡಿನ ವಿದ್ವಾಂಸರು, ಸಂಶೋಧಕರು ಮಂಡಿಸಿದ ಲೇಖನಗಳನ್ನು “ಜನಪದ ಸಾಹಿತ್ಯ ದರ್ಶನ” ಸ್ಮರಣ ಸಂಪುಟಗಳಾಗಿ ವಿಶ್ವವಿದ್ಯಾಲಯವು ಪ್ರಕಟಿಸುತ್ತಾ ಬಂದಿರುವುದು ಅದ್ವಿತೀಯ ಸಾಧನೆಯೆನಿಸಿದೆ. ಈವರೆಗೆ ಅಂದರೆ “ಜನಪದ ಸಾಹಿತ್ಯ ದರ್ಶನ”ದ ೧೮ ಸಂಪುಟಗಳು ಪ್ರಕಟವಾಗಿವೆ. ಪ್ರಸ್ತುತ ಸಂಪುಟವು ೧೯ನೆಯದು ಧಾರವಾಡದಲ್ಲಿ ೨೬-೨೭ ಮೇ ೧೯೯೨ ರಂದು ಕನ್ನಡ ಅಧ್ಯಯನ ಪೀಠ ಮತ್ತು ಕರ್ನಾಟಕ ಜಾನಪದ ಸಮ್ಮೇಳನದ ಸ್ಮರಣ ಗ್ರಂಥ. ಈ ಸಮ್ಮೇಳನದ ನಾಲ್ಕು ಗೋಷ್ಠಿಗಳ ಮುಖ್ಯ ವಿಷಯ ‘ವಸತಿ ಜಾನಪದ’.

ಗ್ರಾಮ ಮಾದರಿ, ಮನೆ ಮಾದರಿಗಳ ಅಧ್ಯಯನವೂ ಜಾನಪದ ವ್ಯಾಪ್ತಿಗೆ ಸೇರಿದ ಮಹತ್ವದ ವಿಷಯ. ಮನೆ, ಮತ್ತು ಗ್ರಾಮ ಮಾದರಿಗಳು ಆಯಾ ಪ್ರದೇಶದ ಭೌಗೋಳಿಕ ಪರಿಸರವನ್ನು ಅವಲಂಭಿಸಿ, ರೂಪ, ರಚನೆ, ವೈವಿಧ್ಯತೆಯನ್ನು ಪಡೆದುಕೊಳ್ಳುತ್ತವೆ. ಅಲ್ಲಿ ನಿಸರ್ಗದತ್ತವಾಗಿ ಲಭ್ಯವಾಗುವ ಕಲ್ಲು, ಮಣ್ಣು, ಕಟ್ಟಿಗೆ, ಬಿದಿರು ಇತ್ಯಾದಿಗಳೇ ಆಯಾ ವಸತಿ ಗೃಹ ನಿರ್ಮಾಣದ ಪ್ರಧಾನ ವಸ್ತುಗಳಾಗುತ್ತವೆ. ಆ ಕುರಿತಂತೆ ನಂಬಿಕೆ, ಆಚರಣೆಗಳೂ ಸಹಜವಾಗಿ ಬದುಕನ್ನು ಪ್ರವೇಶಿಸುತ್ತದೆ.

‘ವಸತಿ ಜಾನಪದ’ ಅತ್ಯಂತ ವ್ಯಾಪಕವಾದ ವಿಷಯವಾಗಿದ್ದರೂ ಪ್ರಸ್ತುತ ಗೋಷ್ಠಿಗಳಲ್ಲಿ ದಿಕ್ಸೂಚಿಯೆಂಬಂತೆ-ಪ್ರಾಣಿ, ವಸತಿ, ಕೌಟುಂಬಿಕ ಮಾನವ ವಸತಿ, ಸಾಮುದಾಯಿಕ ಮಾನವ ವಸತಿ ಹಾಗೂ ದೈವ ವಸತಿಗಳೆಂದು ಸ್ಥೂಲವಾಗಿ ವಿಭಾಗಿಸಿಕೊಳ್ಳಲಾಗಿದೆ.

ಇವೆಲ್ಲವನ್ನು ಹೊರತುಪಡಿಸಿ ಜಾನಪದ ವಸತಿಗೆ ಸಂಬಂಧಿಸಿದ ಅದೆಷ್ಟೋ ವಿಷಯ ಸಾಮಗ್ರಿ ಅಗಿದಷ್ಟೂ ಆಳವಾಗುತ್ತಾ ಹೋಗುವುದು. ಕ್ರಿಮಿಕೀಟಗಳು ಕಟ್ಟಿಕೊಳ್ಳುವ ಗೂಡುಗಳ ವಿನ್ಯಾಸ, ಹಾವು ಚೇಳು ಇರುವೆಗಳಂಥವುಗಳು ವಾಸಿಸುವ ಹುತ್ತಗಳ ವಿನ್ಯಾಸ, ಹುಲಿ, ಸಿಂಹ, ಕರಡಿ. ಇತ್ಯಾದಿಗಳು ವಾಸಿಸುವ ಗವಿ, ಪೊದರುಗಳ ವಿನ್ಯಾಸ – ಹೀಗೆ ಹಲವಾರು ವಿವಿಧ ವಸತಿ ವಿನ್ಯಾಸದ ಮಾದರಿಗಳ ವೈಜ್ಞಾನಿಕ ಅಧ್ಯಯನ ಇನ್ನೂ ನಡೆಯಬೇಕಾಗಿದೆ. ಅಂಥ ವ್ಯಾಪಕವಾದ ಮಹತ್ವದ ಅಧ್ಯಯನಕ್ಕೆ ಪ್ರಸ್ತುತ ‘ವಸತಿ ಜಾನಪದ’ ಈ ನಿಟ್ಟಿನ ಪ್ರಥಮ ಹೆಜ್ಜೆಯಾಗಿದೆ.

ಕೃತಜ್ಞತೆಗಳು:

ಈ ಸಮ್ಮೇಳನವು ಹೆಚ್ಚು ಅರ್ಥಪೂರ್ಣವಾಗಿ ನಡೆಯುವಂತೆ ಧನಸಹಾಯ ನೀಡಿ ಸಮ್ಮೇಳನಕ್ಕೆ ಮೂಲ್ಯ ಪ್ರೇರಣೆಯನ್ನು ಒಡಗಿಸಿದ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ಜೀ. ಶಂ. ಪರಮಶಿವಯ್ಯ ಹಾಗೂ ರಜಿಸ್ಟ್ರಾರ ಆದ ಶ್ರೀ ಎಂ. ಸಿ. ಸಿದ್ದೇಗೌಡ ಮತ್ತು ಯಾವತ್ತು ಅಕಾಡೆಮಿಯ ಸದಸ್ಯರಿಗೆ.

ಈ ಹತ್ತೊಂಬತ್ತನೆಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಿ ಸಮ್ಮೇಳನದ ಗೌರವವನ್ನು ಹೆಚ್ಚಿಸಿದ ಜಾನಪದ ವಿದ್ವಾಂಸರೂ, ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರೂ ಆದ ಡಾ. ಎಂ. ಎಸ್. ಲಠ್ಠೆ ಅವರಿಗೆ.

ಸಮ್ಮೇಳನಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ- ಕುಲಪತಿ ಡಾ. ಎಸ್. ರಾಮೇಗೌಡ ಅವರ ಅನುಪಸ್ಥಿತಿಯಲ್ಲಿ ಸಮ್ಮೇಳನವನ್ನು ಉದ್ಘಾಟಿಸಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಚಂದ್ರಶೇಖರ ಕಂಬಾರ ಅವರಿಗೆ.

ಸಮ್ಮೇಳನ ಗೋಷ್ಠಿಗಳ ಅಧ್ಯಕ್ಷತೆಯನ್ನು ವಹಿಸಿದ ಡಾ. ಜಿ. ಕೆ. ಗುರುಮೂರ್ತಿ, ಡಾ. ಡಿ.ಕೆ. ರಾಜೇಂದ್ರ, ಡಾ. ಅ. ಸುಂದರ ಹಾಗೂ ಡಾ. ವಿಲ್ಯಂ ಮಾಡ್ತಾ ಅವರಿಗೆ ಮತ್ತು ಆಯಾ ಗೋಷ್ಠಿಗಳಲ್ಲಿ ಭಾಗವಹಿಸಿ ತಮ್ಮ ಅಮೂಲ್ಯವಾದ ಪ್ರಬಂಧ ಮಂಡಿಸಿದ ನಾಡಿನ ಹೆಸರಾಂತ ಜಾನಪದ ವಿದ್ವಾಂಸರಿಗೆ.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಡಾ. ಎಚ್. ಜೆ. ಲಕ್ಕಪ್ಪಗೌಡ, ಶ್ರೀ ಹ. ಕ. ರಾಜೇಂದ್ರಗೌಡ ಹಾಗೂ ಡಾ. ದೇವೇಂದ್ರಕುಮಾರ ಹಕಾರಿ ಅವರಿಗೆ.

ಸಮ್ಮೇಳನದ ಕಾರ್ಯದರ್ಶಿಯಾಗಿ ಎಲ್ಲದರಿಂದಲೂ ಸಮ್ಮೇಳನದ ಯಶಸ್ವಿಗೆ ಕಾರಣಿಭೂತರಾದ ನನ್ನ ಸಹೋಧ್ಯೋಗಿಗಳಾದ ಡಾ. ಶಾಲಿನಿ ರಘುನಾಥ, ಡಾ. ಎಸ್. ಎಸ್. ಭದ್ರಾಪೂರ ಅವರಿಗೆ ಹಾಗೂ ಗೋಷ್ಠಿಗಳನ್ನು ನಿರ್ವಹಿಸಿದ ಪೀಠದ ಎಲ್ಲ ಪ್ರಧ್ಯಾಪಕ ಮಿತ್ರರು ಮತ್ತು ಸಿಬ್ಬಂದಿ ವರ್ಗದವರಿಗೆ. ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಸ್. ರಾಮೇಗೌಡರು ಮತ್ತು ಕುಲಸಚಿವರ ಪ್ರೇರಣೆ ಹಾಗೂ ಸಹಾಯಕ್ಕೆ ಕ.ವಿ.ವಿ. ಪ್ರಸಾರಾಂಗದ ನಿರ್ದೇಶಕರು ಮತ್ತು ಅವರ ಸಿಬ್ಬಂದಿ ವರ್ಗದವರಿಗೆ. ಅದಲ್ಲದೇ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಹಕರಿಸಿದ ಎಲ್ಲ ಮಹನೀಯರಿಗೂ ವೈಯಕ್ತಿಕವಾಗಿ ಕನ್ನಡ ಅಧ್ಯಯನ ಪೀಠದ ಪರವಾಗಿ ನನ್ನ ಅನಂತ ಕೃತಜ್ಞತೆಗಳು.

ಡಾ. ಸೋಮಶೇಖರ ಇಮ್ರಾಪೂರ
ಸಂಪಾದಕರು
ಕನ್ನಡ ಅಧ್ಯಯನ ಪೀಠ
೧ ಜುಲೈ ೧೯೯೨