ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠವು ೧೯೭೩ ರಿಂದಲೂ ಅಖಿಲ ಕರ್ನಾಟಕದ ಜಾನಪದ ಕ್ಷೇತ್ರದ ಬೇರೆ ಬೇರೆ ವಿಷಯಗಳ ಬಗ್ಗೆ ಜಾನಪದ ಸಮ್ಮೇಳನಗಳನ್ನು ಪ್ರತಿ ವರ್ಷವೂ ನಡೆಸುತ್ತಾ ಬಂದಿರುವುದು ಒಂದು ದೊಡ್ಡ ಸಾಧನೆಯೆಂದು ನಾವು ಭಾವಿಸುತ್ತೇವೆ. ಎಂ.ಎ. ಜಾನಪದ ಸ್ನಾತಕೋತ್ತರ ಮಟ್ಟದಲ್ಲಿ ಜಾನಪದವನ್ನು ಪ್ರಾರಂಭಿಸಿ ಆ ವರ್ಗದ ಬೋಧನೆಗೆ ಪೂರಕವಾಗಿಯೆ ಶೈಕ್ಷಣಿಕ ಸಾಮಗ್ರಿಗಳಾಗಿ ಬೆಳೆದುಬಂದ ಈ ಜಾನಪದ ಸಮ್ಮೇಳನಗಳು ಮಹತ್ವದ ದಾಖಲೆಗಳಾಗಿವೆ. ಈ ಸಮ್ಮೇಳನಗಳು ಪ್ರತಿ ವರ್ಷವೂ ಕರ್ನಾಟಕದ ವಿವಿಧ ಭಾಗಗಳಲ್ಲಿ ನಡೆದಿದ್ದು. ಈಗ ೧೩ ನೆಯ ಅಖಿಲ ಕರ್ನಾಟಕ ಜಾನಪದ ಸಮ್ಮೇಳನವನ್ನು ಧಾರವಾಡದಲ್ಲಿ ೨೪, ೨೫ ಫೆಬ್ರುವರಿ ೧೯೮೬ ರಂದು ಕನ್ನಡ ಅಧ್ಯಯನ ಪೀಠದಲ್ಲಿ ಇಟ್ಟುಕೊಳ್ಳಲಾಗಿತ್ತು. ಆ ಸಮ್ಮೇಳನದ ಗೋಷ್ಠಿಗಳ ಪ್ರಮುಖ ವಿಷಯ “ಮೈಲಾರಲಿಂಗ” ಆ ಸಮ್ಮೇಳನದ ಸ್ಮರಣೆಯ ಮೈಲುಗಲ್ಲಾಗಿ ಈ ಹದಿಮೂರನೆ ಜಾನಪದ ಸಾಹಿತ್ಯ ದರ್ಶನ ಪ್ರಕಟಗೊಂಡಿದೆ. ಕರ್ನಾಟಕದ ಜನಪ್ರಿಯ ದೇವತೆಗಳಲ್ಲಿ ಒಬ್ಬರಾದ ‘ಮೈಲಾರಲಿಂಗ’ ಸಂಪ್ರದಾಯವನ್ನು ಸಮಗ್ರವಾಗಿ ಅಧ್ಯಯನ ಕೈಗೊಂಡಿದ್ದು ಈ ಸಮ್ಮೇಳನದ ವೈಶಿಷ್ಟ್ಯವಾಗಿದೆ.

ಮೈಸೂರು ವಿಶ್ವವಿದ್ಯಾಲಯದ ಜಾನಪದ ಪ್ರಾಧ್ಯಾಪಕರಾದ ಡಾ. ಜೀ. ಶಂ. ಪರಮಶಿವಯ್ಯನವರ ಸರ್ವಾಧ್ಯಕ್ಷತೆಯಲ್ಲಿ ಜರುಗಿದ ಈ ೧೩ನೇಯ ಜಾನಪದ ಸಮ್ಮೇಳನವನ್ನು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಸ್. ಜಿ. ದೇಸಾಯಿ ಅವರು ಉದ್ಘಾಟಿಸಿದರು. ಸಮ್ಮೇಳನದ ಅಂಗವಾಗಿ ‘ಮೈಲಾರಲಿಂಗ’ ಕುರಿತು ನಡೆದ ಮೂರು ಗೋಷ್ಠಿಗಳ ಅಧ್ಯಕ್ಷತೆಯನ್ನು ಕ್ರಮವಾಗಿ ಡಾ. ಎಂ. ಎಂ. ಕಲಬುರ್ಗಿ, ಡಾ. ಎಸ್. ಜಿ. ಇ‌ಮ್ರಾಪುರ, ಆರ್ವಿಯಸ್ ಸುಂದರಂ ಅವರು ವಹಿಸಿದ್ದರು. ಪ್ರಸ್ತುತ ಗೋಷ್ಠಿಗಳ ಲೇಖನಗಳ ಪ್ರತೀಕವೇ ಈ ಜಾನಪದ ಸಾಹಿತ್ಯ ದರ್ಶನ  ಸಂಪುಟ ಹದಿಮೂರು.

ಸಮ್ಮೇಳನದ ಯಶಸ್ಸಿಗೆ ಕಾರಣವಾದ ಸಮ್ಮೇಳನದ ಕಾರ್ಯದರ್ಶಿಗಳಿಗೂ ಗೋಷ್ಠಿಗಳ ನಿಯೋಜಕರಿಗೂ ಮತ್ತು ಕನ್ನಡ ಅಧ್ಯಯನ ಪೀಠದ ಎಲ್ಲ ಪ್ರಾಧ್ಯಾಪಕರಿಗೂ, ಈ ಸಮ್ಮೇಳನಕ್ಕೆ ಎಂದಿನಂತೆ ಪ್ರೋತ್ಸಾಹ, ಸಹಾಯ ನೀಡುತ್ತಿರುವ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಿಗೂ, ಕುಲಸಚಿವರಿಗೂ ಜಾನಪದ ಸಾಹಿತ್ಯ ದರ್ಶನ ಸಂಪುಟಗಳನ್ನು ಪ್ರಕಟಿಸುತ್ತ ಬಂದಿರುವ ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಂಗದ ನಿರ್ದೇಂಶಕರಿಗೂ ನಾವು ಕೃತಜ್ಞರಾಗಿದ್ದೇವೆ.