ತಮ್ಮ ಸೃಜನಶೀಲ ಸಾಹಿತ್ಯ ನಿರ್ಮಿತಿಯಲ್ಲಿಯೇ ಒಂದು ಪ್ರಬುದ್ಧ ಮಾಸ ಪತ್ರಿಕೆಯನ್ನೂ ನಡೆಸುತ್ತ ಆನಂದಕಂದರು, ಹನ್ನೊಂದು ಇತರ ಗ್ರಂಥಗಳನ್ನು  ಸಂಪಾದಿಸಿದ್ದು ಅವರ ಸಾಹಿತ್ಯ ಕಾಳಜಿಯ ಇನ್ನೊಂದು ಮುಖವನ್ನು ತೋರಿಸುತ್ತದೆ. ‘ಮೃಚ್ಛಕಟಿಕ’(೧೯೬೧) ಪುರಂದರದಾಸರ ನಾಲ್ಕು ನೂರನೆಯ ಉತ್ಸವಕ್ಕಾಗಿ ಸಂಪಾದಿಸಿ ಕೊಟ್ಟ ‘ ಪೂಜಾತತ್ವ’ (೧೯೬೩) ‘ಆರ್ತಭಾವ’(೧೯೬೪)’ಮಹಾತ್ಮರ ಜ್ಞಾನ’(೧೯೬೫) ‘ಕೃಷ್ಣಲೀಲಾ’ (೧೯೬೫)‘ಲೋಕ ನೀತಿ’(೧೯೬೫) ‘ಸಂಕೀರ್ಣ ಸಂಗ್ರಹ’ (೧೯೬೧) ಈ ಆರು ಪುಸ್ತಕಗಳಲ್ಲದೆ ‘ಕನಕದಾಸರ ಭಕ್ತಿಗೀತೆಗಳು’(೧೯೬೧) ಕರ್ನಾಟಕ ವಿಶ್ವವಿದ್ಯಾಲಯಕ್ಕಾಗಿ ಒಂದು ಗ್ರಂಥ ‘ಅಕ್ರೂರ ಚರಿತ್ರ’(೧೯೬೯)‘ಪ್ರಸನ್ನ ವೆಂಕಟದಾಸರ ಭಾಗವತ’(೧೯೬೯) ‘ಹರಿದಾಸ ಭಕ್ತಿ ಸಾಧನೆ’(೧೯೬೬)’ ಇವುಗಳನ್ನು ಸಂಪಾದಿಸಿ ಕೊಟ್ಟಿದ್ದಾರೆ.

ಸೃಜನ ಸಾಹಿತ್ಯ ರಚನೆಗಿಂತ ಸಂಪಾದನಾ ಕಾರ್ಯ ತುಂಬ ಕಷ್ಟಕರವಾದುದು.ಇದಕ್ಕೆ ಆಳವಾದ ಅನುಭವ ಹಾಗೂ ವ್ಯಾಪಕವಾದ ದೃಷ್ಟಿಕೋನಬೇಕು. ನೂರಾರು ಸಾಂದರ್ಭಿಕ ಗ್ರಂಥಗಳನ್ನು ಹೆಕ್ಕಿ ತೆಗೆದು, ಶೋಧಿಸಿ ಒಂದು ಖಚಿತ ನಿರ್ಧಾರಕ್ಕೆ ಬರಬೇಕು. ಅನಂತರ ವಸ್ತುನಿಷ್ಠ ಬರವಣಿಗೆಯಾಗಬೇಕು. ಇಷ್ಟಿದ್ದರೂ ತಮ್ಮ ಅನಾರೋಗ್ಯದತ್ತ ಗಮನವೀಯದೇ, ಹನ್ನೊಂದು ಕೃತಿಗಳನ್ನು ಸಂಪಾದಿಸಿ ಆನಂದಕಂದರು ಮಹತ್ತರ ಸಾಧನೆಗೈದಿದ್ದಾರೆ.

ಶೂದ್ರಕನ ಮೃಚ್ಛಕಟಿಕವನ್ನು ಧೋಂಡೊ ನರಸಿಂಹ ಮುಳಬಾಗಿಲ ಇವರು ೧೮೮೯ರಲ್ಲಿ ಕನ್ನಡಕ್ಕೆ ತಂದಿದ್ದು, ಅದನ್ನೇ ಆನಂದಕಂದರು ಅಚ್ಚುಕಟ್ಟಾಗಿ ಪರಿಷ್ಕರಿಸಿದರು. ಆಕರ್ಷಕವಾದ ಹೊಸಗನ್ನಡ ಶೈಲಿಯಲ್ಲಿ ನಿರೂಪಿಸಿದರು. ಆನಂದಕಂದರು ಪುರಂದರದಾಸರು ಆರು ಸಂಪುಟಗಳನ್ನು ಸಂಯೋಜಿತವಗಿ ಸಹಕರಿಗಳ ಜತೆ ಸಂಪಾದಿಸಿದ್ದು, ಇವು ಶಾಸ್ತ್ರೋಕ್ತವಾಗಿಯೂ ಖಚಿತ ಸ್ವರೂಪದಲ್ಲಿಯೂ ಹೊರಬಂದಿವೆ. ದಾಸ ಸಾಹಿತ್ಯದ ಪರಂಪರೆಯನ್ನು ಆಳವಗಿ ಅಧ್ಯಯನ ಮಾಡಿದ ಆನಂದಕಂದರ ಮಾರ್ಗದರ್ಶನ ಎಲ್ಲರ ಮೆಚ್ಚುಗೆ ಪಡೆಯಿತು.

‘ಕನಕದಾಸರ ಭಕ್ತಿ ಗೀತೆಗಳು’ ಇದನ್ನು ನಾಲ್ಕಾರು ತಾಳೆಗರಿ ಪ್ರತಿಗಳನ್ನು ಸಂಶೋಧಿಸಿ ಕನಕದಾಸರ ಬಗೆಗಿದ್ದ ಅನೇಕ ಭಿನ್ನಾಭಿಪ್ರಾಯಗಳಿಗೆ ಅವಕಾಶವಿಲ್ಲದಂತೆ, ಕನಕದಾಸರ ಮತ, ಕಾಲ, ದೇಶ, ಅಂಕಿತ ಮುಂತಾದವುಗಳನ್ನು ಒಂದು ಖಚಿತ ನಿರ್ಧಾರಕ್ಕೆ ಒಳಪಡಿಸಿದ್ದಾರೆ. ಅಕ್ರೂರ ಚರಿತ್ರೆಯು ಭಾಗವತ ಪರಂಪರೆಗೆ ಸೇರಿದ ಕಾವ್ಯ. ಇದರ ಮೂಲ ಕರ್ತೃ ಸೋಮನಾಥ ಕವಿಯು ಕೃಷ್ಣಭಕ್ತನಾದ ಅಕ್ರೂರನ ಚರಿತ್ರೆಯ ಜತೆ ಕೃಷ್ಣನ ಮಹಿಮೆಯನ್ನು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾನರೆ. ಆನಂದಕಂದರು ವಿವಿಧ ತಾಡೋಲೆಗಳನ್ನು ಸಂಶೋಧಿಸಿ, ಪರಿಷ್ಕರಿಸಿ ಇದನ್ನು ಬೆಳಕಿಗೆ ತಂದಿದ್ದಾರೆ.

ಕೌಜಲಗಿ ಬಂಡೇರಾಯರ ಜೊತೆಯಲ್ಲಿ ಸಂಪಾದಿಸಿದ ‘ಪ್ರಸನ್ನ ವೆಂಕಟದಾಸರ ಭಾಗವತ’ ಕೂಡ ಆನಂದಕಂದರ ಸಂಶೋಧನಾ ಸಾಮರ್ಥ್ಯಕ್ಕೆ ಪ್ರಮಾಣವಾಗಿದೆ. ಮೂಲ ವೆಂಕಟದಾಸರ ಈ ಕೃತಿಯ ಹಾಡುಗಳು ಬಾಯಿಂದ ಬಾಯಿಗೆ ವಿಪರ್ಯಾಸವಾಗುತ್ತ ಬಂದಿದ್ದು, ಇದನ್ನು ಮತ್ತೆ ಆನಂದಕಂದರು ವ್ಯವಸ್ಥಿತವಾಗಿ ಪರಿಷ್ಕರಿಸಿ ಮೂಲ ಕೃತಿಯ ಮಹತ್ತ್ವವನ್ನೇ ಮೂಡಿಸಿದರು.