ಕನ್ನಡ ವಿಶ್ವವಿದ್ಯಾಲಯದ ಮುಖ್ಯ ಉದ್ದೇಶ ವಿದ್ಯೆಯನ್ನು ಕಲಿಯಲು ಅನುವು ಮಾಡಿಕೊಡುವುದೇ ಹೊರತು ಅದು ವಿದ್ಯೆಯನ್ನು ಕಲಿಸುವ ಸಂಸ್ಥೆಯಲ್ಲ ಎಂಬ ಸಂಸ್ಥಾಪನಾ ಕುಲಪತಿಗಳಾದ ಡಾ.ಚಂದ್ರಶೇಖರ ಕಂಬಾರರ ಆಶಯದಂತೆ ವಿಶ್ವವಿದ್ಯಾಲಯವು ಇದುವರೆಗೆ ಕನ್ನಡ ಸಂಸ್ಕೃತಿಯ ಬಹುತ್ವದ ನೆಲೆಗಳನ್ನು ಹುಡುಕುವ ಗಟ್ಟಿಗೊಳಿಸುವ ಹರಡುವ ಕಾರ್ಯವನ್ನು ಕಳೆದ ಹದಿನಾರು ವರ್ಷಗಳಿಂದ ಕೈಗೊಳ್ಳುತ್ತಾ ಬರುತ್ತಿದೆ. ಈ ಕಾರ್ಯದಲ್ಲಿ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗ ತನ್ನದೆಯಾದ ಛಾಪು ಮೂಡಿಸಿದೆ. ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಡಾ.ತಂಬಂಡ ವಿಜಯ್ ಪೂಣಚ್ಚ ಹಾಗೂ ಸಹೋದ್ಯೋಗಿಗಳ ಸಂಪಾದಕತ್ವದಲ್ಲಿ ಹೊರಬಂದ ಚರಿತ್ರೆ ವಿಶ್ವಕೋಶ ಈ ಹಂತದಲ್ಲಿ ಒಂದು ಮಹತ್ವದ ಕೃತಿ. ಈ ಕೃತಿಯು ಕರ್ನಾಟಕದ ಚರಿತ್ರೆ ಓದುಗರಿಗೆ ಒಂದು ಮೈಲಿಗಲ್ಲಾಗಿ ಹೊರಬಂದಿತು. ಈ ಕೃತಿಯ ಮುಖ್ಯ ಆಶಯವೆಂದರೆ ಚರಿತ್ರೆ ಎಂದರೆ ಕೇವಲ ಮಾಹಿತಿಯನ್ನು ಸಂಗ್ರಹಿಸುವುದು ಅಥವಾ ದೃಢೀಕರಿಸಿ ಒಂದೆಡೆ ಸೇರಿಸುವ ಕೆಲಸವಲ್ಲ. ಸಂಗ್ರಹಿಸಿದ ಮಾಹಿತಿಯನ್ನು ಲೋಕಾರ್ಪಣೆ ಮಾಡಿ ಆ ಮೂಲಕ ಜನಮುಖಿ  ಚರಿತ್ರೆಯನ್ನು ಬಹುವಿಸ್ತೃತವಾಗಿ ನೋಡುವ ವಿಧಾನವನ್ನು ಮನಗಾಣಿಸುತ್ತದೆ.  ಇಂದು ಪದವಿಪೂರ್ವ ಮತ್ತು ಪದವಿ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡು ಈ  ಕೃತಿಯನ್ನು ಬಿಡಿಬಿಡಿಗೊಳಿಸುವ ಕಾರ್ಯವನ್ನು ಮನಗಾಣಲಾಯಿತು. ಈ ಕೃತಿಯ ಬಿಡಿ ಬಿಡಿ ರೂಪವೇ ಸಮಕಾಲೀನ ಕರ್ನಾಟಕ.

ಇಂದು ಚರಿತ್ರೆಯು ಮನುಷ್ಯನ ಮೂಲಕ ಹುಟ್ಟಿ ಅವನ ಮೂಲಕವೇ ಎಲ್ಲ ಸ್ಥಿತಿ ಸತ್ಯಗಳ, ವಿವರಗಳ ಗ್ರಹಿಕೆಯಿಂದ ನಿರಂತರ ವಿಕಾಸವಾಗುತ್ತಲೇ ನಾಳಿನ ಎಚ್ಚರಗಳನ್ನೂ, ನಿನ್ನೆಯ ನೆನಪುಗಳನ್ನು ಸದ್ಯದ ಸಾಮಾಜಿಕ ಸತ್ಯಗಳನ್ನು ನಿರೂಪಿಸುವ ಸಮಷ್ಟಿಯಾದ ಕಾಲದೇಶ ಸಮುದಾಯಗಳ ಒಂದು ವಿಸ್ತಾರ ಕಥನವೆನಿಸಿಕೊಂಡಿದೆ. ಏಕೆಂದರೆ ಈ ಕಥನವು ತನ್ನ ಕಾಲಕ್ಕನುಗುಣವಾಗಿ ಮನುಷ್ಯನ ಎಲ್ಲ ಜೀವಂತ ಮಾಹಿತಿಯನ್ನು ನೆನೆಯುವುದರ ಜೊತೆಗೆ ಸಂಯೋಗಿಸುತ್ತ ತನ್ನ ಅಗತ್ಯಗಳನ್ನು ಚರಿತ್ರೆಯಲ್ಲಿ ಪುನರ್ ಸೃಷ್ಟಿಸಿಕೊಳ್ಳುತ್ತದೆ. ಒಂದರ್ಥದಲ್ಲಿ ಆಧುನಿಕ ಜಗತ್ತಿನ ಇತಿಹಾಸವೆಂದರೆ ಇದೇ. ಸಮಕಾಲೀನ ಕರ್ನಾಟಕದ ಸಂದರ್ಭದಲ್ಲಿ ಇಂಥ ಅಧ್ಯಯನಗಳು ಹೆಚ್ಚಾಗಿ ನಡೆಯ ಬೇಕಾಗಿದೆ. ಈ ದೃಷ್ಟಿಯಿಂದ ಇಂಥ ಮಹತ್ವದ ಸಮಕಾಲೀನ ಚರ್ಚಿತ ವಿಷಯಗಳನ್ನು ಕೇಂದ್ರೀಕರಿಸಿ ಹಾಗೂ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿರಿಸಿ ಕೃತಿಗಳನ್ನು ಹೊರತರಲಾಗಿದೆ. ಸಮಕಾಲೀನ ಕರ್ನಾಟಕ ಈ ಸಂಕಲನ ಕೃತಿಯು ಸಮಕಾಲೀನ ಕರ್ನಾಟಕದ ಒಂದು ಮಹದ್ದರ್ಶನವನ್ನು ಕಟ್ಟಿಕೊಡುತ್ತದೆ. ಸ್ವಾತಂತ್ರ್ಯ ಹೋರಾಟ, ಏಕೀಕರಣ ಚಳುವಳಿ, ಕನ್ನಡ ಚಳವಳಿ, ಸಾಹಿತ್ಯ ಚಳವಳಿ, ದಲಿತ ಚಳವಳಿ, ಕಾರ್ಮಿಕ, ರೈತ, ಗಡಿ, ಜಲ ಹಾಗೂ ಭೂಮಿಗೆ ಸಂಬಂಧಿಸಿದ ಹೋರಾಟದ ಐತಿಹಾಸಿಕ ಹಾಗೂ ಚಾರಿತ್ರಿಕ ಅಂಶಗಳನ್ನು ಹೊರಚೆಲ್ಲುವ ಲೇಖನಗಳು ಓದುಗರ ಹಾಗೂ ಸಂಶೋಧಕರ ಕುತೂಹಲ ಹಾಗೂ ಸಮಾಜವನ್ನು ಪರಿಭಾವಿಸುವ ಕ್ರಮಗಳ ಜೊತೆಗೆ ಸಂಭ್ರಮ ಆಶ್ಚರ್ಯಗಳನ್ನು ನೀಡುತ್ತವೆ. ಲೇಖಕರು ತಮ್ಮ ತಮ್ಮ ಕ್ಷೇತ್ರದಲ್ಲಿ ಪರಿಣತರಾದ್ದರಿಂದ ವಿಷಯಕ್ಕೆ ಎಲ್ಲೂ ಲೋಪ ಬರದ ಹಾಗೆ ಅದರ ಗಂಭೀರತೆಯನ್ನು ಕಾಪಾಡಿಕೊಂಡಿದ್ದಾರೆ. ಇದು ಕೃತಿಯ ಉದ್ದಕ್ಕೂ ಕಂಡುಬರುವ ಮಹತ್ವದ ಅಂಶವಾಗಿದೆ.

ಕರ್ನಾಟಕವು ಬಹು ಹಿಂದಿನಿಂದಲೂ ಏಕ ಹಾಗೂ ಅಖಂಡ ರಾಜ್ಯವೆಂಬಂತೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಗಣಿತವಾಗಿದೆ. ಈ ರಾಜ್ಯ ಸದಾ ವಿವಿಧ ಮತಧರ್ಮ ಹಾಗೂ ಭಾಷೆಗಳ ಬಹುಜನ ಸಮುದಾಯಗಳನ್ನು ಒಳಗೊಂಡದ್ದಾಗಿದೆ. ಇದರಿಂದಾಗಿ ರಾಜ್ಯದ ಜನತೆಯಲ್ಲಿ ವೈವಿಧ್ಯದ ನಡುವೆಯೂ ಏಕತೆಗೆ ಅವಕಾಶವಾಗಿದೆ. ಹತ್ತೊಂಬತ್ತನೆಯ ಶತಮಾನದ ಕೊನೆಯ ಭಾಗದಿಂದ, ಇಪ್ಪತ್ತನೇ ಶತಮಾನದುದ್ದಕ್ಕೂ, ರಾಜ್ಯಾದ್ಯಂತ ವ್ಯಾಪಕವಾದ ರಾಷ್ಟ್ರೀಯ ಜಾಗೃತಿಯು ಪ್ರಾದೇಶಿಕವಾದ ಪ್ರಾಂತಾಭಿಮಾನ ವನ್ನು ಕೆರಳಿಸಿದ್ದು ಅನಿವಾರ್ಯವಾಗಿದೆ. ಈ ಪ್ರಾಂತಾಭಿಮಾನ ಈಗ ಭಾಷಾವಾರು ಪ್ರಾಂತಗಳ ರಚನೆಯಲ್ಲಿ ಪರಿಣಮಿಸಿದೆ. ಹೀಗೆ ಪ್ರಕಟವಾದ ಈ ಶಕ್ತಿಯನ್ನು ಕೇವಲ ಸ್ವಾರ್ಥ ಹಾಗೂ ಪ್ರಾದೇಶಿಕ ಸ್ವಪ್ರಯೋಜನ ಸಾಧನೆಗೆ ಸೀಮಿತವಾಗಲು ಬಿಡದೆ ವಿವಿಧ ಕ್ಷೇತ್ರಗಳಲ್ಲಿ ಕಂಡು ಬಂದ ಬದಲಾವಣೆಯ ಸಂಪೂರ್ಣ ವಿವರದ ವಿಸ್ತೃತ ರೂಪ ವಾಗಿ ಈ ಕೃತಿಯನ್ನು ಹೊರತರಲಾಗಿದೆ. ಸಂಶೋಧಕರು ಹಾಗೂೊವಿದ್ಯಾರ್ಥಿಗಳು ತಮ್ಮ ಜ್ಞಾನಾರ್ಜನೆಯ ಜೊತೆಗೆ ಉನ್ನತ ಅಧ್ಯಯನಕ್ಕೆ ಇಂತಹ ಅಧ್ಯಯನಗಳನ್ನು ಕೈಗೊಳ್ಳಬೇಕಾದ ಜರೂರಿದೆ.

ಕೃತಿಯಲ್ಲಿ ಸ್ವಾತಂತ್ರ್ಯ ಹೋರಾಟದ ನಂತರ ಕರ್ನಾಟಕದ ಜನತೆ ಹೇಗೆ ಬದುಕಿ ದ್ದಾರೆ, ಸಮಸ್ಯೆಗಳಿಗೆ ಹೇಗೆ ಸ್ಪಂದಿಸಿದ್ದಾರೆ, ಪರಿಹಾರಗಳನ್ನು ಕಂಡುಕೊಂಡಿದ್ದಾರೆ ಎಂಬುದಕ್ಕೆ ಇಲ್ಲಿ ಸ್ಥೂಲವಾದ ನಿರೂಪಣೆ ದೊರಕುತ್ತದೆ. ರಾಜಕೀಯ ಚರಿತ್ರೆಯಂತೂ ಬಹು ಮುಖ್ಯವೆಂಬುದರಲ್ಲಿ ಸಂದೇಹವಿಲ್ಲ. ಆದರೆ ಅದಕ್ಕಿಂದ ಮಿಗಿಲಾದದ್ದು ಇಲ್ಲಿನ ಜನಜೀವನ, ಧಾರ್ಮಿಕ ಶ್ರದ್ಧೆಗಳು, ಅವರ ತಾತ್ವಿಕ ನೆಲೆಗಟ್ಟು, ನೈತಿಕ ನಿಯಮಗಳು, ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಗಳು, ಅವರ ಸಂಸ್ಕೃತಿ ಮತ್ತು ಕಲೆಗಳು ಬಹು ಮುಖ್ಯವಾದ ವಿಷಯಗಳಾಗಿವೆ. ಈ ವಿಷಯ ಕುರಿತು ಇಲ್ಲಿ ತಕ್ಕಷ್ಟು ವಿಷಯ ಸಂಗ್ರಹ ಮಾಡಿ ನಿರೂಪಿಸಲು ಲೇಖಕರು ವಿಶೇಷ ಪ್ರಯತ್ನ ಮಾಡಿದ್ದಾರೆ. ರಾಷ್ಟ್ರೀಯ ಮಹತ್ವವನ್ನುಳ್ಳ ಈ ವಿಚಾರಗಳ ಬಗ್ಗೆ ವಿಶೇಷ ಗಮನ ಕೊಡಬೇಕಾದ ಸಂದರ್ಭ ಈಗ ಬಂದಿದೆ.

ಕಳೆದ ಅರವತ್ತು ವರ್ಷಗಳಲ್ಲಿ ಪ್ರವಹಿಸುತ್ತ ಬಂದಿರುವ ಕರ್ನಾಟಕದ ಸಮಕಾಲೀನ ಚರಿತ್ರೆಯನ್ನು ಕನ್ನಡ ಜನ ತಿಳಿಯಲಿ ಎಂಬುದೇ ಈ ಸಂಕಲನದ ನಮ್ರವಾದ ಆಶಯ ವಾಗಿದೆ. ಒಂದರ್ಥದಲ್ಲಿ ಕರ್ನಾಟಕದ ಈ ಹೋರಾಟದ ಅಂಶಗಳು, ಇಡೀ ಭಾರತೀಯ ಹೋರಾಟದ ಜೀವಂತ ಕ್ರಮದಿಂದ, ಅಲ್ಲಿನ ಒಂದೆರಡು ವಿಶೇಷ ಅಂಶಗಳನ್ನು ಬಿಟ್ಟರೆ ಹೆಚ್ಚಿಗೆ ಏನೂ ಭಿನ್ನವಾಗಿಲ್ಲ ಎಂಬುದನ್ನು ಓದುಗರು ಗಮನಿಸದೆ ಇರಲಾರರು.

ಇಂಥದೊಂದು ಮಹತ್ವದ ಕೃತಿ ಪ್ರಕಟವಾಗುವಾಗ ಸಂಪಾದಕ ಸಮಿತಿಯ ಸದಸ್ಯರ ಬಗ್ಗೆ ನೆನೆದುಕೊಳ್ಳುವುದು ಸಂತೋಷದ ಸಂಗತಿ. ಚರಿತ್ರೆ ವಿಶ್ವಕೋಶದಂತಹ ಮಹತ್ವದ ಕೃತಿಯನ್ನು ಪ್ರಕಟಿಸುವಾಗಿನಿಂದ ಇಂದಿನ ಸಂದರ್ಭದವರೆಗೂ ಬೌದ್ದಿಕ ಶಿಸ್ತಿನೊಂದಿಗೆ ಕಾರ್ಯನಿರ್ವಹಿಸಿ, ನಮ್ಮನ್ನು ಈ ದಿಸೆಯಲ್ಲಿ ಕಾರ್ಯಮಗ್ನರಾಗಲು ತೊಡಗಿಸಿದ ವಿಭಾಗದ ಪ್ರಾಧ್ಯಾಪಕರಾದ ಡಾ.ತಂಬಂಡ ವಿಜಯ್ ಪೂಣಚ್ಚ ಅವರನ್ನು ಕೃತಜ್ಞತೆಯಿಂದ ನೆನೆಯಲೇಬೇಕು. ಸಂಪುಟ ರಚನೆಯ ಸಂದರ್ಭದಲ್ಲಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದ ಚರಿತ್ರೆ ವಿದ್ವಾಂಸರೂ ಹಾಗೂ ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಎಸ್.ಎ.ಬಾರಿ ಅವರಿಗೆ ಹಾಗೂ ಪ್ರಾಧ್ಯಾಪಕರಾದ ಡಾ.ರಾಜಾರಾಮ ಹೆಗಡೆ ಅವರಿಗೆ ಕೃತಜ್ಞತೆಗಳು. ಸಹೋದ್ಯೋಗಿಗಳಾದ ಪ್ರೊ.ಲಕ್ಷ್ಮಣ್ ತೆಲಗಾವಿ, ಡಾ.ಸಿ.ಆರ್. ಗೋವಿಂದರಾಜು, ಡಾ.ಕೆ.ಮೋಹನ್‌ಕೃಷ್ಣ ರೈ, ಡಾ.ವಿರೂಪಾಕ್ಷಿ ಪೂಜಾರಹಳ್ಳಿ ಅವರ ನೆರವು ಗಣನೀಯವಾದದ್ದು. ಈ ಕೃತಿಗೆ ವಿಶ್ವವಿದ್ಯಾಲಯದ ಒಳಗಿನ ಹಾಗೂ ಹೊರಗಿನ ವಿದ್ವಾಂಸರು ಮಹತ್ವದ ಲೇಖನಗಳನ್ನು ಒದಗಿಸಿದ್ದಾರೆ. ಇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಈ ಕೃತಿಯು ಹೊರಬರಲು ಒಪ್ಪಿಗೆ ನೀಡಿದ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ.ಎ.ಮುರಿಗೆಪ್ಪ ಅವರಿಗೆ, ಕುಲಸಚಿವರಾದ ಹಾಗೂ ಪ್ರಸಾರಾಂಗದ ನಿರ್ದೇಶಕರಾದ ಡಾ.ಮಂಜುನಾಥ ಬೇವಿನಕಟ್ಟಿ ಹಾಗೂ ಪ್ರಸಾರಾಂಗದ ಹಿಂದಿನ ನಿರ್ದೇಶಕರಾದ ಡಾ.ಮೋಹನ ಕುಂಟಾರ್ ಅವರಿಗೆ ಕೃತಜ್ಞತೆಗಳು. ವಿಶೇಷಸೂಚಿ ಮಾಡಲು ಸಹಕರಿಸಿದ ಡಾ.ಗಿರಿಜಾ ಹಾಗೂ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳಾದ ಹಿರಿಬಿದ್ರಿ ಹೋಳಿಬಸಪ್ಪ, ಎಸ್.ಮುನಿರಾಜು, ಅಮರೇಶ ಆಲ್ಕೋಡ್,  ಕೆ.ವೆಂಕಟೇಶ್, ಬಿ.ಎಚ್.ಸಂತೋಷಕುಮಾರ್ ಹಾಗೂ ಜಿ. ವಿಜಯಲಕ್ಷ್ಮಮ್ಮ ಅವರನ್ನು ಆತ್ಮೀಯವಾಗಿ ನೆನೆಯುತ್ತೇನೆ.

ಈ ಕೃತಿಯನ್ನು ಅಚ್ಚುಕಟ್ಟಾಗಿ ಪ್ರಸಾರಾಂಗದ ವತಿಯಿಂದ ಪ್ರಕಟಿಸಲು ಶ್ರಮಿಸಿದ ಸಹಾಯಕ ನಿರ್ದೇಶಕರಾದ ಶ್ರೀ ಬಿ.ಸುಜ್ಞಾನಮೂರ್ತಿ, ಶ್ರೀ ಎಚ್.ಬಿ.ರವೀಂದ್ರ  ಹಾಗೂ ಡಾ.ಎಸ್.ಮೋಹನ್ ಅವರ ಸಹಕಾರಕ್ಕೆ ಹಾಗೂ ಮುಖಪುಟ ಹಾಗೂ ಅಕ್ಷರ ಸಂಯೋಜನೆ ಮಾಡಿದ ಶ್ರೀ ಸಾವಳಗಿ ಶಿವಲಿಂಗೇಶ್ವರ ಗ್ರಾಫಿಕ್ಸ್‌ನ ಶ್ರೀಮತಿ ಬಿ.ರಶ್ಮಿ ಕೃಪಾಶಂಕರ್ ಅವರಿಗೆ ಕೃತಜ್ಞತೆಗಳು.