ನಮ್ಮ ಧೀಮಂ{ತ}ವರ್ಗ
ನಮ್ಮ ಧೀಮಂತ ವರ್ಗ
ಗೋಪಾಲಕೃಷ್ಣ ಅಡಿಗ
‘ಇಂಟಲೆಕ್ಚುಅಲ್’ ಎಂಬ ಇಂಗ್ಲಿಷ್ ಶಬ್ದಕ್ಕೆ ಪ್ರತಿಯಾಗಿ ಕನ್ನಡದಲ್ಲಿ ‘ಬುದ್ದಿ ಜೀವಿ’ ಎಂಬ ಶಬ್ದವನ್ನು ಬಳಸಲಾಗುತ್ತಿದೆ. ಆ ಶಬ್ದ ಅಷ್ಟು ಸಮರ್ಪಕ ಎಂದು ನನಗೆ ತೋರುವುದಿಲ್ಲ. ಅದರ ಬದಲಾಗಿ ‘ಧೀಮಂತ’ ಎಂಬ ಶಬ್ದದ ಪ್ರಯೋಗ ನಡೆದರೆ ಮೇಲೆಂದು ತೋರುತ್ತದೆ. ಈ ಶಬ್ದವನ್ನು ಅದರ ಅರ್ಥವ್ಯಾಪ್ತಿಯ ಮತ್ತು ಪ್ರಸಾರದ ಸಂಭಾವ್ಯತೆಯನ್ನು ಗಮನದಲ್ಲಿಟ್ಟುಕೊಂಡು ಈ ಲೇಖನದಲ್ಲಿ ಬಳಸಲಾಗಿದೆ.
ಮನುಷ್ಯನ ಅಂತರಂಗದ ಎರಡು ಪ್ರಮುಖ ಶಕ್ತಿಗಳು ಭಾವನೆ, ಬುದ್ಧಿ. ಈ ಎರಡೂ ಬೇರೆ ಬೇರೆಯಾಗಿ ಕಾಣುವ, ಆದರೆ ಮೂಲತಃ ಒಂದೇ ಆಗಿರುವ ಅನುಭವ ಶಕ್ತಿಯ ಎರಡು ಮುಖಗಳು. ಕೇವಲ ಭಾವನೆ, ಕೇವಲ ಬುದ್ದಿ ಇವು ವಿಚಾರಗಮ್ಯವೇ ಹೊರತು ಅನುಭವಗಮ್ಯವಲ್ಲ. ನಾವು ಅನುಭವಿಸುವಾಗಲೆಲ್ಲ ಈ ಎರಡೂ ಒಂದಲ್ಲ ಒಂದು ಪ್ರಮಾಣದಲ್ಲಿ ಕೆಲಸ ಮಾಡುತ್ತ ಇರುತ್ತವೆ. ಒಂದರ ಪ್ರಭಾವ ಇನ್ನೊಂದಕ್ಕಿಂತ ಹೆಚ್ಚು ಅಥವಾ ಕಡಿಮೆಯಾಗುವ ಸಂಭವವೇ ಹೆಚ್ಚು. ಅಂಥ ಸಂದರ್ಭಗಳಲ್ಲಿ ಮಾನವತೆ ಅಸಮಗ್ರ, ತೂಕತಪ್ಪಿದ್ದು ಎನ್ನಿಸಬಹುದು. ಬುದ್ದಿ, ಭಾವನೆ ಈ ಎರಡರ ನಡುವೆ ತಕ್ಕ ತೂಕ ಏರ್ಪಟ್ಟಾಗ ನಮ್ಮ ಅಂತರಂಗದ ಸರಿಯಾದ ಅಭಿವ್ಯಕ್ತಿ ಸಾಧ್ಯವಾಗಿ ನಮ್ಮಲ್ಲೂ ನಮ್ಮ ಕೃತಿಗಳಲ್ಲೂ ಒಂದು ಹೃದ್ಯವಾದ ಸಾಮರಸ್ಯ ಕಂಡುಬರುತ್ತದೆ. ಅಂಥ ಸಾಮರಸ್ಯದ ಕಡೆಗೆ ಸದಾ ಹೋರಾಡುತ್ತಿರುವವನೇ ಧೀಮಂತ.
ಭಾವನಾವಶರಾಗಿ ಸದಾ ಚಡಪಡಿಸುತ್ತ ಹಿಂದುಮುಂದಿನ ಯೋಚನೆ ಹೆಚ್ಚಾಗಿ ಮಾಡದೆ ಪ್ರತಿಯೊಂದು ಸಮಸ್ಯೆಯನ್ನೂ ಸವಾಲನ್ನೂ ತೀರ ಸರಳಗೊಳಿಸಿಕೊಳ್ಳುತ್ತ ಯಾವುದಾದರೊಂದು ತಾತ್ಕಾಲಿಕವಾದ ಲಾಭ ಅಥವಾ ಸುಖವನ್ನು ಕೊಡುವಂತೆ ಕಾಣುವ ಇಂದ್ರಿಯಚೇಷ್ಟೆಗಳಲ್ಲಿ ಮಗ್ನರಾಗಿರುವ ಮನುಷ್ಯರೇ ಹೆಚ್ಚು. ಇವರೇ ಸದಾಕಾಲದಲ್ಲ ಬಹುಮತದವರು. ಭಾವನೆಗೆ ವಶನಾದರೆ, ಬುದ್ಧಿಯನ್ನು ಬೆಳೆಸಿಕೊಳ್ಳದೆ ಹೋದರೆ ಈ ಎರಡರ ನಡುವೆ ಸಾಂಗತ್ಯವನ್ನು ಕಷ್ಟಪಟ್ಟು ಸಾಧಿಸಿಕೊಂಡು ಸುಸಂಸ್ಕೃತನಾಗದೆ ಹೋದರೆ ಮನುಷ್ಯನ ಬೆಳವಣಿಗೆ ಸಾಧ್ಯವಾಗದು. ಭಾವನೆ ಮತ್ತು ತರಿಸುವಂಥದು, ಮೈ ಮರೆಸುವಂಥದು. ಇದು ಪ್ರಕೃತಿಯ ಅಭಿವ್ಯಕ್ತಿಯ ಸಾಧನ. ಆದರೆ ಮನುಷ್ಯನ ಪ್ರಕೃತಿಯಲ್ಲಿ ಸ್ವಪ್ರಜ್ಞೆ ಎಂಬ ವಿಶೇಷಾಂಶ ಸೇರಿಕೊಂಡಿದೆ. ಈ ವಿಶೇಷಾಂಶದಲ್ಲೇ ಮನುಷ್ಯನ ವಿಶೇಷ ಗುಣವೂ ಇರುವುದು. ಈ ಸ್ವಪ್ರಜ್ಞೆಯ ಉಪಕರಣ ಬುದ್ದಿ, ನಮ್ಮನ್ನು ಎಚ್ಚರಿಸುತ್ತ ಇದ್ದು ನಮ್ಮ ಸುತ್ತ ಮುತ್ತಿನ ಬಗ್ಗೆ, ನಮ್ಮ ಭೂತಕಾಲದ ಬಗ್ಗೆ, ಭವಿಷ್ಯದ ಬಗ್ಗೆ, ನಮ್ಮ ಪ್ರತ್ಯೇಕತೆಯ ಬಗ್ಗೆ, ಸಮಷ್ಟಿಯ ಜೊತೆಗೆ ನಮಗಿರುವ ಸಂಬಂಧದ ಬಗ್ಗೆ ನಾವು ಸದಾ ಜಾಗೃತರಾಗಿರುವಂತೆ ಮಾಡುವಂಥದು ಅದು. ಅಂಥ ಬುದ್ದಿಯ ಮೂಲಕ ಪ್ರಕೃತಿಸಹಜವಾದ ನಮ್ಮ ಭಾವನೆಗಳನ್ನು ಶುದ್ದೀಕರಿಸಿಕೊಳ್ಳುವುದು ಸಂಸ್ಕೃತಿಯ ಲಕ್ಷಣ. ಅಂಥ ಸಂಸ್ಕೃತಿಯನ್ನು ಸಾಧ್ಯ ಮಾಡುವುದು ಮಾಡಬೇಕಾದ್ದು ಸುಶಿಕ್ಷಣ. ಅಂಥ ಶಿಕ್ಷಣದಿಂದ ಸಿದ್ದವಾಗುವಂಥದು ವಿವೇಕ. ಭಾವನೆ ತನಗೆ ತಾನೇ ಎಂದೂ ತಾರಕವಾಗದು. ಏಕೆಂದರೆ ಅದು ಒಳ್ಳೆಯದೂ ಇರಬಹುದು, ದುಷ್ಟವಾದದ್ದೂ ಇರಬಹುದು. ಒಳ್ಳೆಯದೂ ಕಡಾ ಅತಿರೇಕಾವಸ್ಥೆಯನ್ನು ಮುಟ್ಟಿ ಕೆಟ್ಟದ್ದಾಗಬಹುದು-ಕುರುಡು ಪ್ರೀತಿಯ ಹಾಗೆ. ಕೆಟ್ಟದ್ದು ಎನ್ನಿಸಿಕೊಳ್ಳುವುದೂ ಸುಸಂಸ್ಕೃತವಾಗಿ ಬುದ್ದಿಯ ಸಾರಥ್ಯದಿಂದ ಉತ್ತಾರಕವೂ ಆಗಬಹುದು- ಸ್ವಾರ್ಥದ ಹಾಗೆ. ಹಾಗೆ ನೋಡಿದರೆ ಯಾವ ಭಾವನೆಯೂ ತನಗೆ ತಾನೇ ಒಳ್ಳೆಯದೂ ಅಲ್ಲ, ಕೆಟ್ಟದ್ದೂ ಅಲ್ಲ. ಅದು ಇರುವಂಥದಾದ್ದರಿಂದ ಅಗತ್ಯ. ಹಾಗೆಯೇ ಬುದ್ಧಿಯೂ ನಮ್ಮಲ್ಲಿ ಇರುವಂಥದೇ ಆದ್ದರಿಂದ ಅದರ ಮೂಲಕ ನಮ್ಮ ಪ್ರವೃತ್ತಿಗಳನ್ನೂ, ಭಾವಗಳನ್ನೂ ಸಂಸ್ಕರಿಸಿಕೊಳ್ಳುವುದು ಅಷ್ಟೇ ಅಗತ್ಯ. ಆದಕಾರಣ ತ್ಯಾಜ್ಯ ಎನ್ನುವುದು ಯಾವುದೂ ಇಲ್ಲ ; ಯಾವ ಯಾವುದಕ್ಕೆ ಯಾವ ಯಾವ ಸ್ಥಾನ ಎಂದು ನಿರ್ಧರಿಸಿಕೊಳ್ಳುವುದೂ ಕೂಡಾ ನಮ್ಮಲ್ಲಿ ವಿವೇಕ ಇರುವುದರಿಂದ ಅಷ್ಟೇ ಸಹಜವಾದದ್ದು. ಕಾರ್ಯದ ಕಡೆಗೆ, ಅಭಿವ್ಯಕ್ತಿಯ ಕಡೆಗೆ ಪ್ರೇರಿಸುವುದು ಭಾವನೆ–ಬದುಕಿನ ಸಾಫಲ್ಯಕ್ಕೆ ಅದು, ಆದಕಾರಣ, ಅಗತ್ಯ. ಹಾಗೆಯೇ ಬಗೆಯುವುದು, ಸೀಳುವುದು, ಒಂದುಗೂಡಿಸುವುದು, ಒಂದರೊಡನೊಂದನ್ನು ತೂಗುವುದು, ತೂಗಿ ಬೆಲೆ ಕಟ್ಟುವುದು ಬುದ್ದಿಯ ಕೆಲಸ. ನಮ್ಮ ಅಭಿವ್ಯಕ್ತಿಗಳ ಸಾರ್ಥಕತೆಗೆ ಅದೂ ಅಗತ್ಯ. ಯಾವುದನ್ನೇ ಆಗಲಿ ಸರಳಗೊಳಿಸದೆ ಪ್ರತಿಯೊಂದು ಸಂಗತಿಯನ್ನೂ ಇಡಿಯಾಗಿ ಕಂಡು, ಅದರ ಎಲ್ಲ ಅಂಶಗಳನ್ನೂ ಗಣನೆಗೆ
ತಂದುಕೊಂಡು ಅದರ ನಿರ್ವಹಣೆಯ ಮಾರ್ಗದಲ್ಲಿ ಅಡ್ಡಿ ಆತಂಕಗಳನ್ನು ಮುಂದಾಗಿ ಪರಿಭಾವಿಸಿ ಅನಂತರ ಕೆಲಸದಲ್ಲಿ ತೊಡಗುವವನು ಬುದ್ದಿವಂತ. ಕಾರ್ಯ-ಕಾರಣ ಸಂಬಂಧವನ್ನು ಆದಷ್ಟು ಅರಿತುಕೊಂಡು ಆ ಮೂಲಕ ಎಷ್ಟು ದೂರದರ್ಶಿತ್ವ ಸಾಧ್ಯವೋ ಅಷ್ಟನ್ನೂ ಬಳಸಿಕೊಂಡು ಬುದ್ದಿವಂತ ಕೆಲಸ ಮಾಡುತ್ತಾನೆ.
ಹೀಗಿದ್ದರೂ ಬುದ್ಧಿವಂತ ಎದುರಿಸಬೇಕಾದ ದೊಡ್ಡ ಗಂಡಾಂತರವೊಂದಿದೆ. ಅದು ಸ್ವಪ್ರಜ್ಞೆಯ ಜೊತೆಗೇ ಬರುವ ಅಹಂಕಾರಕ್ಕೆ ಸಂಬಂಧಪಟ್ಟದ್ದು. ಪ್ರತ್ಯೇಕ ಭಾವನೆಯ ಅತಿರೇಕ ದುರಹಂಕಾರವಾಗಿ ಪರಿಣಾಮಗೊಂಡು ಬುದ್ಧಿ ರಾಕ್ಷಸತೆಯ ಸಾಧನವಾಗುವ ರೀತಿ ಇತಿಹಾಸದುದ್ದಕ್ಕೂ ನಮಗೆ ಕಂಡುಬರುತ್ತದೆ. ಅಹಂಕಾರ ಅಥವಾ ತನ್ನತನದ ಅರಿವು ತನಗೆ ತಾನೇ ಕೆಟ್ಟದ್ದಾಗಲೀ ಅಗ್ರಾಹ್ಯವಾಗಲಿ ಅಲ್ಲ. ಈ ಅರಿವಿನ ಫಲವಾಗಿ ಮನುಷ್ಯನ ಮನಸ್ಸಿನಲ್ಲಿ ಪರಸ್ಪರ ವಿರುದ್ಧ ಎನ್ನಿಸುವಂಥ ಪ್ರವೃತ್ತಿಗಳು ಹುಟ್ಟುತ್ತವೆ. ಸ್ವಾರ್ಥಾನುಸರಣೆ ; ಪ್ರೀತಿ ವಿಶ್ವಾಸ ಪರೋಪಕಾರಗಳ ಮೂಲಕ ತನ್ನ ಒಂಟಿತನವನ್ನು ಕಳೆದುಕೊಂಡು ತನಗಿಂತ ಭಿನ್ನವಾದುದರ ಜೊತೆಗೆ ಬೆರೆಯುವ, ಲೀನವಾಗುವ ಪ್ರಯತ್ನ. ಈ ಎರಡೂ ಎಲ್ಲ ಕಾಲಗಳಲ್ಲೂ ಪ್ರತ್ಯೇಕವಾಗಿಯೇ ಇರುತ್ತವೆಂತ ಅಲ್ಲ. ಅವು ಸಾಮಾನ್ಯವಾಗಿ ನಾನಾ ಪ್ರಮಾಣಗಳಲ್ಲಿ ಬೆರೆತಿರುವುದು ಸಾಧಾರಣವಾದ ವಿದ್ಯಮಾನ. ಆದರೆ ಬುದ್ದಿಯ ಮಸೆತದ ಮೂಲಕ ಬರುವ ದುರಹಂಕಾರದಿಂದ ಹೊರ ಜಗತ್ತಿನಿಂದ ಪ್ರತ್ಯೇಕವಾಗಿಯೇ ಉಳಿಯುವ ವ್ಯಕ್ತಿಯಲ್ಲಿ ಸ್ವಾರ್ಥಾನುಸಾರಿಯಾದ ಪ್ರವೃತ್ತಿ ನಿರಂಕುಶವಾಗಿ ಮೆರೆಯುವ ಅಪಾಯ ಹೆಚ್ಚು. ಇಂಥ ಬುದ್ಧಿಗೆ ಜನಸಾಮಾನ್ಯರ ಮನಸ್ಸನ್ನು ಆಕರ್ಷಿಸಬಲ್ಲ ಎಲ್ಲ ತತ್ವಜ್ಞಾನ ನೀತಿಪಾಠಗಳ ಅರಿವು ನಿಚ್ಚಳವಾಗಿದ್ದೂ, ಅದಕ್ಕೆ ಬೇಕಾದ ಎಲ್ಲ ಕಲೆಗಳನ್ನೂ ಸ್ವಾಧೀನಪಡಿಸಿಕೊಳ್ಳುವ ಶಕ್ತಿಯಿರುವುದರಿಂದ ಇತರರನ್ನು ಮೋಸಪಡಿಸುವ ಶಕ್ತಿಯೂ ಅದ್ಭುತವಾಗಿ ದೊರೆಯುತ್ತದೆ. ತತ್ವಕ್ಕಾಗಿ, ಪರಾರ್ಥಕ್ಕಾಗಿ ದುಡಿಯುವ ಸೋಗನ್ನು ಹಾಕಿಕೊಂಡು ತನ್ನ ಸ್ವಾರ್ಥವನ್ನೇ ಸಾಧಿಸಿಕೊಳ್ಳುವ ಈ ಬುದ್ದಿ ಸಮಾಜಜೀವನಕ್ಕೆ ಅತ್ಯಂತ ಅಪಾಯಕಾರಿಯಾದದ್ದು, ಇದು ಕುರಿಗಳ ನಡುವೆ ಕುರಿಗಳ ವೇಷದಲ್ಲೇ ಬರುವ ತೋಳ. ಇಂಥ ಬುದ್ದಿವಂತರ ಸಂಖ್ಯೆ ನಮ್ಮ ದೇಶದಲ್ಲಿ ಇತ್ತೀಚೆಗೆ ಅಸಂಖ್ಯವಾಗಿ ಬೆಳೆದಿರುವುದೂ, ಬೆಳೆಯುತ್ತಿರುವುದೂ ಎಲ್ಲರಿಗೂ ತಿಳಿದಿದೆ. ದೇಶದ ಹೆಸರಲ್ಲಿ, ತತ್ವದ ಹೆಸರಿನಲ್ಲಿ, ನ್ಯಾಯ ಧರ್ಮಗಳ ಹೆಸರಿನಲ್ಲಿ, ಬಡವರ ಹೆಸರಿನಲ್ಲಿ, ಸಮಾಜವಾದದ ಹೆಸರಿನಲ್ಲಿ, ಭಾಷೆಯ ಹೆಸರಿನಲ್ಲಿ ಸ್ವಾರ್ಥವನ್ನು ಸಾಧಿಸಿಕೊಳ್ಳುತ್ತ ಪರಾರ್ಥವನ್ನು ಬೋಧಿಸುತ್ತ, ತ್ಯಾಗವನ್ನು ಉಪದೇಶಿಸುತ್ತ ಭೋಗದ ತುತ್ತತುದಿಗೇರಿ ಕೂರುವ ಈ ಬುದ್ದಿವಂತರನ್ನು ಕಂಡರೆ ನಡುಕ ಹುಟ್ಟುತ್ತದೆ. ಇನ್ನೊಬ್ಬರ ಬುದ್ದಿಯನ್ನೇ ತಿಂದು ಬದುಕುವ ಈ ದಾನವರಿಗೆ ಬುದ್ದಿಜೀವಿ ಎಂಬ ಹೆಸರು ತುಂಬ ಚೆನ್ನಾಗಿ ಒಪ್ಪುತ್ತದೆ. ಅಂಥವರ ಕೈಯಲ್ಲೇ ಈಗ ಈ ದೇಶದ ಆಗು-ಹೋಗುಗಳು ಇರುವುದು. ಇದರಿಂದ ಬುದ್ದಿವಂತರ ಬಗ್ಗೆಯೇ ನಮ್ಮ ಜನದಲ್ಲಿ ಒಂದು ಬಗೆಯ ಅಸ್ಪಷ್ಟ ವೈರ ಬೆಳೆಯುತ್ತಿದ್ದರೆ, ಮೂಕ ತಿರಸ್ಕಾರ ರೂಪಗೊಳ್ಳುತ್ತಿದ್ದರೆ ಆಶ್ಚರ್ಯವಿಲ್ಲ. ಪ್ರಜಾತಂತ್ರದ ತಂತ್ರಗಳಾದ ಚರ್ಚೆ, ವಿಚಾರ ವಿನಿಮಯ, ಚುನಾವಣೆ ಈ ಎಲ್ಲದರ ಮೂಲಕವೂ ಸಾಧಿಸತಕ್ಕದ್ದು ಸ್ವಾರ್ಥವೊಂದೇ ಎಂದು ನಮ್ಮ ಜನಕ್ಕೆ ಮನದಟ್ಟಾಗಿರುವ ಹಾಗೆ ತೋರುತ್ತದೆ. ಆದ ಕಾರಣವೇ ಈ ದೇಶದಲ್ಲಿ ಅತ್ಯಗತ್ಯವಾದ ಯಾವ ಬದಲಾವಣೆಯೂ ಶಾಂತ ರೀತಿಯಿಂದ ಸಾಧ್ಯವಾಗದು ಎನ್ನಿಸುತ್ತದೆ. ಅಂಥ ಪರಿಸ್ಥಿತಿ ಈಗ ಇಲ್ಲಿ ಇದೆ. ಇಲ್ಲಿ ಏನೂ ಯಾವುದೂ ಚಲಿಸುವುದಿಲ್ಲ. ಪಟ್ಟಭದ್ರರ ಪೀಠ ಕಂಪಿಸುವುದೂ ಇಲ್ಲ. ಹೆಗಲನ್ನೇರಿ ಕುಳಿತ ಭೇತಾಳ ಕೆಳಗಿಳಿಯಲೊಲ್ಲ-ಎಳೆದರೂ ಕೂಡ. ಮೂರ್ಖರ, ದ್ರೋಹಿಗಳ, ದುರಹಂಕಾರಿಗಳ, ಲಂಚಗುಳಿಗಳ, ಭ್ರಷ್ಟಾಚಾರ್ಯರ, ಶೋಷಕರ, ಸುಲಿಗೆಗಾರರ ಬೇರು ಇನ್ನೂ ಇನ್ನೂ ಆಳಕ್ಕೆ ಇಳಿಯುತ್ತಿದೆ. ಶಾಖೆಗೆ ಉಪಶಾಖೆ ಮೂಡುತ್ತಿದೆ. ಇಂಥ ಕಾಲದಲ್ಲೂ ಕೂಡ ಬುದ್ದಿಯ ಸದುಪಯೋಗ ಮಾಡಿಕೊಂಡು ವಿಷಯಗಳನ್ನೂ, ವ್ಯಕ್ತಿಗಳನ್ನೂ, ಸಂಸ್ಥೆಗಳನ್ನೂ ನಿಷ್ಪಕ್ಷಪಾತವಾಗಿ ಗ್ರಹಿಸಿ ವಿಶ್ಲೇಷಿಸಿ ಬೆಲೆ ಕಟ್ಟಬಲ್ಲ, ಸ್ವಾರ್ಥಪ್ರವೃತ್ತಿ ಪ್ರೀತಿಪ್ರವೃತ್ತಿಗಳ ನಡುವೆ ಸಾಮರಸ್ಯ ತಂದುಕೊಂಡಂಥ ಧೀಮಂತರೂ ಅಲ್ಲಲ್ಲಿ ಇದ್ದಾರೆ – ತೀರ ತೀರ ಅಲ್ಪಸಂಖ್ಯಾತರಾಗಿ, ಸಮುದ್ರದಲ್ಲಿ ಇನ್ನೂ ಕರಗದೆ ಉಳಿದ ಸಣ್ಣ ಸಣ್ಣ ನಡುಗಡ್ಡೆಗಳಾಗಿ.
ನ್ಯಾಯ, ಸತ್ಯ, ಜೀವಕಾರುಣ್ಯ ಮುಂತಾದ ಶಾಶ್ವತ ಮಾನವ ಮೌಲ್ಯಗಳ ಸರ್ವ ಶ್ರೇಷ್ಠತೆಯ ಬಗ್ಗೆ ಕಳಕಳಿಯಿರುವ ಧೀಮಂತರು, ಈ ಮೌಲ್ಯಗಳಿಗಾಗಿ ಹೋರಾಡಬಲ್ಲವರು, ಅವುಗಳನ್ನು ಬದುಕಲು ಯತ್ನಿಸುತ್ತಿರುವವರು-ಇವರ ಸಂಖ್ಯೆ ಈಗ ನಮ್ಮ ದೇಶದಲ್ಲಿ ಬೆರಳೆಣಿಕೆಗೆ ಸಿಕ್ಕುವಂಥದು. ಅವರನ್ನೆಲ್ಲ ಬಹು ಸುಲಭವಾಗಿ ಇಲ್ಲ ಎನ್ನಿಸಬಹುದು ಎನ್ನುವಂಥ ವಾತಾವರಣ ಇಲ್ಲಿ ಈಗ ಸೃಷ್ಟಿಯಾಗುತ್ತಿದೆ. ಇಂಥವರು ಎಲ್ಲ ಕಾಲದಲ್ಲೂ ಬಹಳ ಕಡಿಮೆ ಸಂಖ್ಯೆಯವರಾದರೂ ಉತ್ತಮ ಸಮಾಜದಲ್ಲಿ ಇಂಥವರಿಗೆ ಗೌರವ ಬೆಂಬಲಗಳ ವಾತಾವರಣ ಇರುತ್ತದೆ. ನಮ್ಮ ದೇಶದಲ್ಲೂ ಇಲ್ಲಿಯವರೆಗೆ ಧೀಮಂತರ ಅಭಿವ್ಯಕ್ತಿಗಾದರೂ ಆಸ್ಪದ ದೊರೆಯುತ್ತಿತ್ತು ; ಅಧಿಕಾರಸ್ಥರು ಕೊನೆಯ ಪಕ್ಷ ಧೀಮಂತ ಮೌಲ್ಯಗಳ ಬಗ್ಗೆ ಬಹಿರಂಗವಾಗಿಯಾದರೂ ಗೌರವ ತೋರಿಸುತ್ತಿದ್ದರು. ಗುಟ್ಟಾಗಿ ಕೇವಲ ತಾತ್ಕಾಲಿಕ ಲಾಭದಾಯಕವಾದ ಸ್ವಾರ್ಥವನ್ನೇ
ಅನುಸರಿಸುತ್ತಿದ್ದರೂ ಆ ಬಗ್ಗೆ ನಾಚಿಕೆಪಟ್ಟುಕೊಳ್ಳುತ್ತಿದ್ದರು. ಆದರೆ ನಮ್ಮ ದೇಶದಲ್ಲಿ ಕಾಂಗ್ರೆಸ್ ಸಂಸ್ಥೆ ಒಡೆದು ಹೋದ ಮೇಲೆ ಬಹಿರಂಗವಾಗಿ, ಯಾವ ಸಂಕೋಚವೂ ಇಲ್ಲದೆ ರಾಜಾರೋಷವಾಗಿ ಈ ಎಲ್ಲ ಸಾರ್ವಕಾಲಿಕ ಮೌಲ್ಯಗಳಿಗೂ ತಿಲಾಂಜಲಿಕೊಟ್ಟು ನೀತಿಯೇ ಇಲ್ಲದಿರುವ ಹೊಸ ರಾಜನೀತಿಯನ್ನು ರೂಪಿಸಿಕೊಂಡು ತಾತ್ಕಾಲಿಕ ಲಾಭಕ್ಕಾಗಿ ಎಂಥ ಮೋಸವನ್ನಾಗಲೀ, ಅಧರ್ಮಕಾರ‍್ಯವನ್ನಾಗಲೀ ಮಾಡಲು ಹೇಸದಂಥವರ ಕೈಗೆ ಅಧಿಕಾರ ಸಿಕ್ಕಿ ಅವರ ಮೇಲ್ಪಂಕ್ತಿಯನ್ನು ಇಡೀ ದೇಶದ ಮಹಾಜನತೆ ಅನುಸರಿಸತೊಡಗಿದೆ. ಅಧಿಕಾರ ಕೈಯಲ್ಲಿರುವಾಗ, ಅಜ್ಞ ಜನತೆಗೆ ಮಂಕುಬೂದಿಯೆರಚುವಂಥ ಘೋಷಣೆಗಳ ಉತ್ಪಾದನೆ ಬೃಹತ್‌ಪ್ರಮಾಣದಲ್ಲಿ ಯೋಜನೆಗನುಸಾರವಾಗಿ ಸಾಧ್ಯವಾಗಿರುವಾಗ, ಏನು ಬೇಕಾದರೂ ಮಾಡಬಹುದು ಎಂಬುದು ಇಂದಿನ ನೂತನ ಕಾರ‍್ಯವಿಧಾನ, ರಾಜನೀತಿ. ಇಂಥ ವರ್ತನೆಯನ್ನೂ ನಮ್ಮ ಜನ ಕಣ್ಣುಮುಚ್ಚಿಕೊಂಡು ಅಂಗೀಕರಿಸುತ್ತಾರೆ, ಅನುಮೋದಿಸುತ್ತಾರೆ ಎನ್ನುವುದು ಕಳೆದ ಮಹಾಚುನಾವಣೆಯಲ್ಲಿ ವ್ಯಕ್ತವಾಗಿದೆ. ಎಂದರೆ ನಮ್ಮ ಜನದ ದೃಷ್ಟಿಯಲ್ಲಿ ನೈತಿಕ ಮೌಲ್ಯಗಳೆಲ್ಲವೂ ಅಧಿಕಾರವೆಂಬ ಸರ್ವಶ್ರೇಷ್ಠ ಮೌಲ್ಯಕ್ಕೆ ಅಧೀನವಾದಂಥವು ಎಂಬ ಒಂದು ನೂತನ ಮೌಲ್ಯವಿವೇಕ ರೂಪುಗೊಂಡಂತಿದೆ. ನಮ್ಮ ಜವಾಬುದಾರಿಯನ್ನೆಲ್ಲ ಹೊರಬಲ್ಲ ಒಬ್ಬ ನಾಯಕ ಅಥವಾ ನಾಯಿಕೆ ಬೇಕು ಎಂದು ನಮ್ಮ ಒಳಮನಸ್ಸು ಬಯಸುತ್ತಿರುವ ಹಾಗೆ ತೋರುತ್ತದೆ. ಹಳೆಯ ರಾಜರನ್ನು ತೊಲಗಿಸಿದ ನಮ್ಮ ಜನ ಈಗ ಹೊಸ ರಾಜರನ್ನು
ಹುಡುಕುತ್ತಿದ್ದಾರೆ. ರಾಜತ್ವ ಆನುವಂಶಿಕವಾಗಿರುವ ಹಾಗೆಯೇ ನಮ್ಮ ನೂತನ ಪ್ರಜಾಪ್ರಭುತ್ವದ ನಾಯಕತ್ವವೂ ಆನುವಂಶಿಕವಾಗಬೇಕೆಂದೇ ನಮ್ಮ ಜನರ ಆಸೆಯೋ ಏನೋ. ರಾಜ ಪ್ರತ್ಯಕ್ಷದೇವತೆ, ಅವನು ತಪ್ಪು ಮಾಡುವುದು ಸಾಧ್ಯವೇ ಇಲ್ಲ ಅಲ್ಲವೆ ?
ಧೀಮಂತನ ಬದುಕು ಎಂದಿಗೂ ಲೌಕಿಕವಾಗಿ ಸುಖಮಯವಾದದ್ದಲ್ಲ. ಎಲ್ಲ ಕಾಲಗಳಲ್ಲಿ ಈತ ಕಷ್ಟಕಾರ್ಪಣ್ಯಗಳ ಮೂಲಕವೇ ತನ್ನ ಅಂತರಂಗವನ್ನು ಹದಗೊಳಿಸಿಕೊಂಡು ಅಭಿವ್ಯಕ್ತಿಯನ್ನು ಸಾಧಿಸಿಕೊಂಡವನು. ಇದಕ್ಕೆ ಕಾರಣ ಬಹುಶಃ ಈತನಲ್ಲಿ ಅನಂತಕಾಲದ ಪ್ರಜ್ಞೆ ತತ್ಕಾಲದ ಪ್ರಜ್ಞೆಗಿಂತ ಹೆಚ್ಚು ತೀವ್ರವಾಗಿರುವುದೇ ಇರಬೇಕು. ತತ್ಕಾಲ ಮತ್ತು ಅನಂತಕಾಲದ ನಡುವೆ ಒಂದು ಸಮತೂಕವನ್ನು ತರುವ ಪ್ರಯತ್ನವೇ ಧೀಮಂತನ ಬದುಕಿನ ಹೋರಾಟದ ಅರ್ಥ ಎಂದು ತೋರುತ್ತದೆ. ಬಹುಜನ ತತ್ಕಾಲದ ಕಷ್ಟ ಸುಖಗಳಲ್ಲಿ ತಲ್ಲೀನರಾಗಿದ್ದರೆ ಈತ ಹಿಂದು-ಮುಂದುಗಳ ಇಕ್ಕಳದಲ್ಲಿ ಸಿಕ್ಕಿಕೊಂಡಿರುವ ವರ್ತಮಾನಕ್ಕೆ ತನ್ನ ಬದುಕಿನಲ್ಲೇ ಒಂದು ಅರ್ಥವನ್ನು ಹುಡುಕಲು ಯತ್ನಿಸುತ್ತಾನೆ. ಈ ಯತ್ನ ಯಾವುದಾದರೊಂದು ಕಲೆ, ಶಾಸ್ತ್ರ ಅಥವಾ ವಿದ್ಯೆಯ ಅಂಗದಲ್ಲಿ ತನ್ನ ಮನಸ್ಸನ್ನು ಕೇಂದ್ರೀಕರಿಸಿ ಕೆಲಸ ಮಾಡುವುದರಲ್ಲಿ ವ್ಯಕ್ತವಾಗುತ್ತದೆ. ಹಣಕಾಸುಗಳ ಅಗತ್ಯವಿದ್ದರೂ ಅವುಗಳ ಕೊರತೆ ಸದಾ ಕಾಡುತ್ತಿದ್ದರೂ ಈತನಿಗೆ ಎಂದರೆ ಈ ಜಗತ್ತಿನ ಸಾಮಗ್ರಿಗಳಲ್ಲಿ ಮೋಹಕ ಹುಟ್ಟುವುದಿಲ್ಲ. ಇವನು ಧನ ಸಂಪಾದನೆ ಮಾಡಿದರೂ ಅದನ್ನು ಇಟ್ಟುಕೊಳ್ಳಲಾರ. ಅದನ್ನೆಲ್ಲ ವ್ಯಯಿಸದೆ ಇವನಿಗೆ ನಿದ್ದೆಯೇ ಬಾರದು. ಈ ಜಗತ್ತಿನ ಎಲ್ಲ ಸುಖಸಾಧನಗಳನ್ನೂ ತನ್ನ ಏಕಾಗ್ರ ಅನುಸಂದಾನ ಅಧೀನಗೊಳಿಸಿಕೊಂಡು ಇವನು ಈ ಜಗತ್ತಿನವನಲ್ಲವೋ ಎಂಬ ಹಾಗೆ ಬದುಕು ನಮ್ಮ ನಿಜವಾದ ಸಾಧುಸಂತರು, ಭಕ್ತರು, ಕವಿಗಳು, ದಾರ್ಶನಿಕರು, ವಿಜ್ಞಾನಿಗಳು, ಸಂಗೀತಗಾರರು, ಶಿಲ್ಪಿಗಳು, ಚಿತ್ರಕಾರರು-ಈ ಎಲ್ಲರೂ ಹೀಗೆ ಇಹವನ್ನು ಪರದ ಸನ್ನಿಕರ್ಷದಲ್ಲೇ ಅರ್ಥಮಾಡಿಕೊಳ್ಳಲು ಯತ್ನಿಸುವಂಥವರು. ಇವರು ಧೀಮಂತರು. ಈ ಲೋಕದ ಭೋಗಭಾಗ್ಯಗಳೇ ಪರಮ ಎಂದು ತಿಳಿದವರ ದೃಷ್ಟಿಯಲ್ಲಿ ಇವರು ಹುಚ್ಚರು ಅಥವಾ ವಾಸ್ತವ ದೃಷ್ಟಿಯಿಲ್ಲದ ಆದರ್ಶವಾದಿಗಳು ; ಅಥವಾ ಮಹಾತ್ಮರು. ದೇವಾಂಶ ಸಂಭೂತರು.
ಸ್ಥಿರವೂ ಸುವ್ಯವಸ್ಥಿತವೂ ಆದ ಸಮಾಜದಲ್ಲಿ ಅತ್ಯುತ್ತಮ ಮಾನವ ಮೌಲ್ಯಗಳ ಪ್ರಭಾ ವಲಯದಲ್ಲಿ ದೇಶದ ಆಗುಹೋಗುಗಳು ಸಾಗುತ್ತಿರುವಾಗಿ ಈ ಧೀಮಂತರು ತಮ್ಮ ತಮ್ಮ ವಿಶಿಷ್ಟ ಕ್ಷೇತ್ರಗಳಲ್ಲಿ ಪರಿಣತಿ ಪಡೆಯಲು ಹೆಣಗುತ್ತ ತಮ್ಮ ತಮ್ಮ ಆತ್ಮ ಸಾಫಲ್ಯ ಪಡೆಯಲು ಹೆಣಗುವುದು ಸಹಜವಾದದ್ದೇ. ಏಕೆಂದರೆ ಎಲ್ಲ ಕೆಲಸಗಳನ್ನು ಎಲ್ಲರೂ ಮಾಡಲಾಗುವುದಿಲ್ಲ : ಪ್ರತಿಯೊಬ್ಬನಿಗೂ ಅವನದೇ ಆದ ಒಂದು ವಿಶೇಷ ಕೆಲಸ ಕಟ್ಟಿಟ್ಟದ್ದು ; ಈ ಜಗತ್ತಿನಲ್ಲಿ ಅತ್ಯಂತ ಸುಖಿ ಯಾರೆಂದರೆ ತನಗೆ ತಕ್ಕ ಕೆಲಸವನ್ನು ಕಲಿತುಕೊಂಡ ಭಾಗ್ಯಶಾಲಿಯೇ ಸರಿ-ಎಂಬ ಈ ವಿಚಾರ ಧೀಮಂತರಿಗೆ ತಿಳಿದಿದೆ. ಈ ಮಾತನ್ನು ನಮ್ಮ ದೇಶದ ಧೀಮಂತರು ಬಹಳ ಹಿಂದಿನ ಕಾಲದಿಂದಲೂ ಚೆನ್ನಾಗಿ ತಿಳಿದವರು. ಈ ಲೋಕದ ವ್ಯವಹಾರಗಳನ್ನೆಲ್ಲ ರಾಜಮಹಾರಾಜರುಗಳಿಗೂ ಅವರ ಹಸ್ತಕರಿಗೂ ವಹಿಸಿ ದೂರದ ಕಾಡುಗಳಲ್ಲಿ ಆಶ್ರಮಗಳನ್ನೇರ್ಪಡಿಸಿಕೊಂಡಿದ್ದವರೇ ಹೆಚ್ಚು. ಅನಂತಕಾಲದ ಎದುರು ವರ್ತಮಾನದ ಹಗರಣಗಳು ಕ್ಷುದ್ರವಾಗಿ ಅವರಿಗೆ ಕಂಡಿರಬಹುದು. ಹಾಗೆ ಕಂಡಿದ್ದರೆ ಅದು ಸರಿಯಲ್ಲ ಎಂದು ಹೇಳುವುದು ಹೇಗೆ ? ಆದರೆ ಇನ್ನೊಂದು ದೃಷ್ಟಿಯಿಂದ ಯೋಚಿಸಿದಾಗ ಅನಂತಕಾಲ ಎಷ್ಟು ಮುಖ್ಯವೋ ಅಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚು ಮುಖ್ಯವಾದದ್ದು ಈ ಕಾಲ ; ನಾವು ಇಲ್ಲಿ ಇದ್ದು, ಅನುಭವಿಸಿ, ನಮ್ಮ ನಮ್ಮ ಅವಧಿ ತೀರುವವರೆಗೂ ಹೋರಾಡಬೇಕಾಗಿರುವ ಈ ಜಗತ್ತು, ಈ ಜಗತ್ತಿಗೆ ಸಂಬಂಧಿಸಿದ ಈ ಕಾಲ, ಈ ಕಾಲವನ್ನು ನಮ್ಮ ಹಿಂದಿನವರು ರಾಜರಿಗೆ ವಹಿಸಿದ್ದರು ಎಂಬುದು “ರಾಜಾ ಕಾಲಸ್ಯ ಕಾರಣಂ” ಎಂಬ ಮಾತಿನಿಂದ ವ್ಯಕ್ತವಾಗುತ್ತದೆ. ರಾಜ ಎಂದರೆ ಯಾರು ಪ್ರಭುತ್ವ ನಡೆಸುತ್ತಾರೋ ಅವರು. ಆದರೆ ರಾಜ ಎಂಬುವನು ಧರ್ಮಬದ್ಧನಾಗಿ ನಡೆಯತಕ್ಕದ್ದು. ಆ ಧರ್ಮ ಸನಾತನವಾದದ್ದು ಎಂಬ ಮಾತು ಆ ಕಾಲದಲ್ಲಿ ಸಾರ್ವಜನಿಕ ಸಮ್ಮತಿಯುಳ್ಳ ಸಮಾಜ ಜೀವನ ಸೂತ್ರವಾಗಿತ್ತು ಎಂಬುದನ್ನೂ ನಾವು ಮರೆಯುವಂತಿಲ್ಲ. ಅಂಥ ಸಂದರ್ಭದಲ್ಲಿ ಪ್ರತಿಯೊಬ್ಬ ಧೀಮಂತನೂ ತನ್ನ ತನ್ನ ಕೆಲಸದಲ್ಲಿ ತಲ್ಲೀನನಾಗಿರುತ್ತಿದ್ದದ್ದು ಸರಿಯೇ. ಅಂಥ ಕಾಲದಲ್ಲಿ ಸಮಾಜವ್ಯವಸ್ಥೆ ಕೆಟ್ಟು ಪ್ರಭುವರ್ಗ ಅಧರ್ಮನಿರತವಾದಾಗ ಧೀಮಂತರು ತಮ್ಮ ತಮ್ಮ ಕಾರ್ಯಕ್ಷೇತ್ರಗಳನ್ನು ಬಿಟ್ಟು ಸಮಾಜದ ಸುವ್ಯವಸ್ಥೆಗಾಗಿ ಪ್ರಯತ್ನಿಸಿದ್ದೂ ಉಂಟು ಎಂಬುದಕ್ಕೆ ಭಾರ್ಗವರಾಮನಿಂದ ಹಿಡಿದು ವಿದ್ಯಾರಣ್ಯ ಗಾಂಧಿಯವರ ತನಕವೂ ಉದಾಹರಣೆಗಳುಂಟು. ಆದರೆ ಹೆಚ್ಚಿನವರು ನಮ್ಮ ಈ ದೇಶದಲ್ಲಿ ಈ ಜಗತ್ತಿಗೆ ವಿಮುಖರಾಗಿ ತಮ್ಮ ತಮ್ಮ ಕೆಲಸಗಳಲ್ಲೇ ನಿರತರಾಗಿರುತ್ತಿದ್ದರೆಂಬುದನ್ನು ಒಪ್ಪಬೇಕಾಗುತ್ತದೆ. ನಮ್ಮ ದೇಹ ನಮ್ಮ ಮನೆ ಇವುಗಳನ್ನು ತೊಳೆದು ಚೊಕ್ಕಟವಾಗಿಟ್ಟುಕೊಳ್ಳುವುದು ಎಷ್ಟು ಅಗತ್ಯವೋ ನಮ್ಮ ಸುತ್ತುಮುತ್ತಲನ್ನೂ ನಮ್ಮ ಸುತ್ತುಮುತ್ತಲಿನವರನ್ನೂ ಶುಚಿಯಾಗಿ ಸರಿಯಾಗಿ ಇಟ್ಟುಕೊಳ್ಳಲು ಯತ್ನಿಸಬೇಕಾದ್ದೂ ಅಗತ್ಯ ಎಂದು ಧೀಮಂತರಿಗೆ ಅನ್ನಿಸಿದಂತೆ ತೋರುವುದಿಲ್ಲ. ಹೀಗೆ ತೋರದೆ ಇರುವುದಕ್ಕೆ ಆ ಆ ಕಾಲದ ವಿಶಿಷ್ಟ ಸನ್ನಿವೇಶಗಳೂ ಸಂದರ್ಭಗಳೂ ಕಾರಣವಿರಬಹುದು. ಜನಸಂಖ್ಯೆ ಕಡಿಮೆ ಇದ್ದು, ಜನದಟ್ಟಣೆಯ ಪಟ್ಟಣಗಳು ಜಾಸ್ತಿ ಇಲ್ಲದೆ ಇದ್ದು ಮನುಷ್ಯಸಮಾಜದ ಕಷ್ಟಕಾರ್ಪಣ್ಯಾದಿ ಸಮಸ್ಯೆಗಳು ಎಂದೂ ಈಗಿನಷ್ಟು ಗಂಭೀರವಾಗಿರಲಿಲ್ಲ. ಬಡಬಗ್ಗರ ಆಶನವಸನಗಳಿಗೆ ತಕ್ಕ ವ್ಯವಸ್ಥೆ ಮಾಡಬಲ್ಲ ಅರಮನೆ ಗುರುಮನೆಗಳು, ಅನ್ನ ಸತ್ರಗಳು ಅನ್ನದಾನಿಗಳು ಬೇಕಾದಷ್ಟಿದ್ದು ಧರ್ಮದ ಸಾರ್ವಭೌಮತ್ವವಿದ್ದದ್ದರಿಂದ ಸಮಸ್ಯೆಗಳು ಎಂದೂ ಅಪಾಯದ ಮಟ್ಟವನ್ನು ಮುಟ್ಟ ಲಿಲ್ಲ ಎಂದು ತೋರುತ್ತದೆ. ನಮ್ಮ ಪೂರ್ವಿಕರಾದ ಧೀಮಂತವರ್ಗದಲ್ಲಿ ಕಂಡುಬಂದ ರಾಜಕೀಯ ಸಾಮಾಜಿಕ ಅನಾಸಕ್ತಿಯ ಬಗ್ಗೆ ಟೀಕೆ ಮಾಡುವಾಗ ಈ ಮಾತುಗಳನ್ನು ಮರೆಯದೆ ಇರುವುದು ಅಗತ್ಯ.
ಪರಂಪರಾಗತವಾಗಿ ನಮ್ಮ ಧೀಮಂತರಲ್ಲಿ ಕಂಡುಬರುತ್ತಿರುವ, ಲೌಕಿಕ ವಿಷಯಗಳ ಬಗ್ಗೆ ಇರುವ ಈ ನಿರಾಸಕ್ತಿ ಈಗ ಸಲ್ಲದು. ಹೀಗೆನ್ನಲು ಮುಖ್ಯ ಕಾರಣಗಳು ಇವು ; ಸಮಾಜಜೀವನದಲ್ಲಿ ಧರ್ಮದ ಪರಮಾಧಿಕಾರ ಕ್ಷೀಣಿಸಿರುವದು ಒಂದು ; ಪ್ರಜಾ ಪ್ರಭುತ್ವ ಪದ್ದತಿಯ ಈ ಹೊಸ ರಾಜ್ಯಭಾರ ಕ್ರಮದಲ್ಲಿ ಈ ಪರಮಾಧಿಕಾರದ ಒಂದಂಶ ಎಲ್ಲರಲ್ಲೂ ಇರುವುದಾಗಿರುವುದರಿಂದ ಯಾವ ಪ್ರಜ್ಞೆಯೇ ಆಗಲಿ ರಾಜಕೀಯದಲ್ಲಿ ನಿರಾಸಕ್ತಿ ತೋರುವುದೆಂದರೆ ಕರ್ತವ್ಯಚ್ಯುತಿಯೇ ಆಗುತ್ತದೆ ಎಂಬುದು ಎರಡನೆಯದು; ನ್ಯಾಯ ಸತ್ಯ ಮುಂತಾದ ಮೌಲ್ಯಗಳನ್ನು ಈಗ ಅಧಿಕಾರದಲ್ಲಿರುವವರು ನಿರಾಕರಿಸಿ ಸರ್ವಾಧಿಕಾರವೇ ಪರಮ ಮೌಲ್ಯವೆಂದು ನಿರ್ಧರಿಸುವ ಹಾಗೆ ಕಂಡುಬಂದು ಪ್ರಜಾವರ್ಗದಲ್ಲಿ ಬುದ್ದಿಭೇದ ಉಂಟಾಗಿ ಮೌಲ್ಯಸಂಕರವಾಗಿ ಯಾವುದು ಸರಿ ಯಾವುದು ತಪ್ಪು ಎಂದು ನಿರ್ಣಯ ಕೈಗೊಳ್ಳಲು ತಕ್ಕ ವಿವೇಕಬಲ ಕುಗ್ಗಿ ಎಲ್ಲೆಲ್ಲೂ ಗೊಂದಲವೇರ್ಪಟ್ಟಿರುವ ಈ ಕಾಲದಲ್ಲಿ ಸರಿದಾರಿ ತೋರುವುದು ತಿಳಿದವರ ಕರ್ತವ್ಯವಾಗಿರುವುದು ಮೂರನೆಯದು. ಧೀಮಂತರು ಇಂದು ಈ ಸಂಕ್ರಮಣಕಾಲದಲ್ಲಿ ತೀವ್ರವಾದ ಪ್ರಜಾಶಿಕ್ಷಣ ಕಾರ್ಯದಲ್ಲಿ ನಿಸ್ಪೃಹರಾಗಿ ಧುಮುಕದಿದ್ದರೆ ಈ ದೇಶ ಅತ್ಯಂತ ಅಪಾಯಕಾರಿಯಾದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ; ಪ್ರಜಾಕ್ಷೋಭೆ ಅಸಹನೀಯವಾಗಿ ಭಯಂಕರವಾದ ಸರ್ವಾಧಿಕಾರಿ ರಾಕ್ಷಸ ರಾಜ್ಯ ಇಲ್ಲಿ ಸ್ಥಾಪನೆಯಾಗಿ ಹಿರಣ್ಯಕಶಿಪು, ಕಂಸ, ರಾವಣೇಶ್ವರ ಮುಂತಾದವರಿಗೆ ಇನ್ನೊಂದು ಅವಕಾಶ ಸಿಕ್ಕಿ ಧೀಮಂತರಿಗೆ ಅತ್ಯಗತ್ಯವಾದ ಸ್ವತಂತ್ರ ಮಾನಸಿಕ ಕ್ರಿಯೆಗೇ ಬಾಧೆ ಬಂದು ಗಾಢಾಂಧಕಾರ ಈ ದೇಶವನ್ನು ತುಂಬುವಂತೆ ಕಾಣುತ್ತದೆ.
ನಮ್ಮಲ್ಲಿ ನಿಜವಾದ ಧೀಮಂತರು ಎಲ್ಲಿ ಇದ್ದಾರೆ ? ಈಗ ಏನು ಮಾಡುತ್ತಿದ್ದಾರೆ ? ಹೇಳುವುದು ಕಷ್ಟವೇ. ಎಲ್ಲಿ ನೋಡಲಿ, ಇಂಥವರು ಕಣ್ಣಿಗಂತೂ ಬೀಳುವುದಿಲ್ಲ. ಅಲ್ಲೊಬ್ಬ ಇಲ್ಲೊಬ್ಬ ಇರುವ ಹಾಗೆ ಕಂಡರೂ ಅವನ ಕೆಲಸ ನಿರ್ವಿಘ್ನವಾಗಿ ಸಾಗದ ಹಾಗೆ ಮಾಡುವ ಶಕ್ತಿಗಳು ವಿಜೃಂಭಿಸುತ್ತಿವೆ. ಅಧಮರ ಅಡಿಯಾಳಾಗಿ ಅವನನ್ನು ಕೆಳಕ್ಕೆ ತಳ್ಳುವ ಕೆಲಸ ಅವ್ಯಾಹತವಾಗಿ ನಡೆಯುತ್ತಿದೆ. ಆದರೆ ಧೀಮಂತರು ಎಲ್ಲ ವರ್ಗಗಳಲ್ಲೂ ಜಾತಿಗಳಲ್ಲೂ ಉದ್ಯೋಗಗಳಲ್ಲೂ ಇದ್ದೇ ಇದ್ದಾರೆ ಎಂದು ನನ್ನ ನಂಬಿಕೆ. ಅಂಥವರು ಎದುರಿಗೆ ಬಂದು ತಮ್ಮ ಬುದ್ಧಿ ಪ್ರಕಾಶವನ್ನು ಬೀರಬೇಕಾದ ಕಾಲ ಇದು. ಇಂಥ ಕಾಲಕ್ಕೆ ಆಗದ ಧೀಮಂತರು ಯಾರಾದರೂ ಇದ್ದರೆ ಅವರ ಬಾಳು ನಿರರ್ಥಕ ; ದೇಶದ ದೃಷ್ಟಿಯಿಂದ ಮಹಾದ್ರೋಹ. ಕಾಲದ ಈ ಸವಾಲನ್ನು ಎದುರಿಸಬಲ್ಲ ಧೀಮಂತರು ನಮಲ್ಲಿ ಇದ್ದಾರೋ-ನೋಡಬೇಕು.
ಆನೆಮರಿ
ಆನೆಮರಿ
ಬರ್ಟೋಲ್ಟ್‌ಬ್ರೆಖ್‌ಟ್ ಅವರ ನಾಟಕದ ಅನುವಾದ
ಎನ್.ಎಸ್. ವೆಂಕಟರಾಂ
ಪಾತ್ರಗಳು :
ಪೋಲಿ ಬೇಕರ್
ಯುರಾಯಾ ಶೈಲಿ
ಜೆಸ್ಸಿ ಮಹೋನಿ
ಗ್ಯಾಲಿ ಗೇ
ಸೈನಿಕರು
[ಥಿಯೇಟರ್. ರಬ್ಬರಿನ ಮರಗಳ ನಡುವೆ ಒಂದು ಮೇಜು. ಅದರ ಸುತ್ತಲೂ ಕೆಲವು ಕುರ್ಚಿಗಳು. ಈ ಥಿಯೇಟರ್ ಪಕ್ಕದಿಂದ ಕಾಣಿಸುವಂತಿದ್ದು, ಪರದೆಯ ಹಿಂದೆ ಮತ್ತು ಮುಂದೆ-ಎರಡೂ ಕಡೆಯ ದೃಶ್ಯಗಳು ಪ್ರೇಕ್ಷಕರಿಗೆ ಗೋಚರಿಸುವಂತಿವೆ.] ಪೋಲಿ : (ಪರದೆಯ ಮುಂದೆ ಬಂದು) ಸ್ನೇಹಿತರೇ, ನಾಟಕದ ಅಮಲು ತಮ್ಮನ್ನು ಮೈಮರೆಯುವಂತೆ ಮಾಡಬೇಕು. ಅದಕ್ಕಾಗಿ ತಮ್ಮಲ್ಲಿ ಒಂದು ಸಣ್ಣ ವಿನಂತಿ : ತಾವೆಲ್ಲರೂ ಧಾರಾಳವಾಗಿ ಬೀಡಿ, ಸಿಗರೇಟು, ಸೇದಬಹುದು. ಇವತ್ತು ನಾವು ಆಡೋ ನಾಟಕದಲ್ಲಿ ಜಗತ್ತಿನ ಅತಿ ಶ್ರೇಷ್ಠ ಕಲಾವಿದರಿದ್ದಾರೆ ; ಮಾದಕ ಪಾನೀಯ ವ್ಯರ್ಥವಾಗಿ ಹಾಳಾಗುತ್ತಿದೆ; ಕುರ್ಚಿಗಳಿಗೆ ಮೆತ್ತನೆಯ ಕುಶನ್ ಹಾಕಿಸಿದ್ದೇವೆ.
ನಾಟಕದಲ್ಲಿ ನಡೆಯೋ ಘಟನೆಯ ಬಗ್ಗೆ ಬಾಜಿ ಕಟ್ಟಬಹುದು ; ಬೇಕಿದ್ದರೆ ಷರತ್ತು ಹೂಡಬಹುದು. ಅಷ್ಟೇ ಅಲ್ಲ, ಅಲ್ಲಿ ನೀವು ಬೆಟ್ಟಿಂಗ್ ಕಟ್ಟಿದ ತಕ್ಷಣ, ಇಲ್ಲಿ ನಾವು ಪರದೆ ಎಳೆಯುತ್ತೇವೆ. ಮತ್ತೊಂದು ಪ್ರಾರ್ಥನೆ : ಪಿಯಾನೋ ಬಾರಿಸುವವನ ತಲೆಯ ಮೇಲೆ ಏನನ್ನೂ ಎಸೆಯಬಾರದು. ಪಾಪ, ಅವನು ಬಾರಿಸೋದಕ್ಕೆ ಬಹಳ ಕಷ್ಟಪಡ್ತಾನೆ !
ನಾಟಕ ಯಾರಿಗಾದರೂ ಅರ್ಥವಾಗದೇ ಹೋದರೆ ಕೋಪ ಮಾಡ್ಕೊಬೇಡಿ. ಯಾಕೆ ಅಂದರೆ ಈ ನಾಟಕ ಅರ್ಥವಿಸ್ತಾರದಿಂದ ಸ್ವಲ್ಪ ಹೊರಗಿದೆ. ಕೇವಲ ಅರ್ಥವಾಗೋ ನಾಟಕ ನೋಡೋದ್ರಿಂದ ಮಾತ್ರ ನಿಮಗೆ ಮಜಾ ಬರೋದಿದ್ದರೆ ಬಾತ್‌ರೂಮಿಗೆ ಹೋಗಿ ಇಲ್ಲಿಗೆ ಯಾಕೆ ಬಂದಿದೀರಿ ? ಯಾಕೆ ರಾಯರೇ ! ನಿಮ್ಮ ಹಣಾನ ನಾವು ಯಾವ ಕಾರಣಕ್ಕೂ ವಾಪಸ್ ಕೊಡೋದಿಲ್ಲ.
ಇವರೇ ನಮ್ಮ ಕಾಮ್ರೇಡ್ ಜಿಪ್-ಮುದ್ದು ಜಾಕಿಯಾಗಿ, ಆನೆಮರಿಯಾಗಿ, ಪಾತ್ರವಹಿಸುವ ಸುವರ್ಣ ಅವಕಾಶ ಇವರಿಗೆ ದೊರೆತಿದೆ. ನೀವು ಯೋಚಿಸುತ್ತಿರಬೇಕು : ಕೆಲಸ ಬಹಳ ಕಷ್ಟವಾದದ್ದು, ಹೇಗೆ ಮಾಡಬಹುದೂಂತ. ಇದಕ್ಕೆ ನನ್ನ ಉತ್ತರ ಒಂದೇ : ಕಲಾವಿದರಲ್ಲಿ ದೊಡ್ಡ ದೊಡ್ಡ ಕೆಲಸ ಮಾಡುವ ಪ್ರತಿಭೆ ಇರಬೇಕು! ಶ್ರದ್ಧೆ ಇರಬೇಕು !
ಸೈನಿಕ : (ಮುಂದಿನಿಂದ) ಶಾಭಾಷ್, ಚೆಂದಾಗೈತೆ ಕಣಯ್ಯ !
ಪೋಲಿ : ಆಮೇಲೆ ಜೆಸ್ಸೆ ಮಹೋನಿ, ಪುಟ್ಟ ಜಾಕಿಯ ತಾಯಿಯ ಪಾತ್ರ ವಹಿಸಲಿದ್ದಾಳೆ. ಯುರಾಯ ಶೈಲಿ, ಅಂತರರಾಷ್ಟ್ರೀಯ ಖ್ಯಾತಿ ಪಡೆದಿರುವ ಯುರಾಯಾ ಶೈಲಿ, ಚಂದಮಾಮನ ಪಾತ್ರ ವಹಿಸಲಿದ್ದಾಳೆ. ಅಲ್ಲದೆ ತಾವೆಲ್ಲರೂ ನನ್ನ, ಅಂದರೆ ಪೋಲಿ ಬೇಕರ್‌ನ ಕಲಾಪ್ರದರ್ಶನ ನೋಡುವ ಅವಕಾಶ ಸಿಕ್ಕುತ್ತೆ. ಬಾಳೆಮರದ ಪಾತ್ರವನ್ನು ಸ್ವಯಂ ನಾನೇ ಅಭಿನಯಿಸಲಿದ್ದೇನೆ.
ಸೈನಿಕ : ಸಾಕು ನಿಲ್ಲಿಸಯ್ಯ ನಿನ್ನ ಪುರಾಣ. ದುಡ್ಡು ಕೊಟ್ಟು ಬಂದದ್ದು ಈ ಕಾಡು ಹರಟೆ ಕೇಳೋದಕ್ಕಲ್ಲ. ಇದು ಯಾಕೋ ಬಹಳ ದುಬಾರಿ
ಆಯ್ತು !
ಫೋಲಿ : ನೋಡಿ ! ನಿಮ್ಮ ಬೈಗಳಿಂದ ನನ್ನ ಮೇಲೆ ಯಾವ ಪರಿಣಾಮವೂ ಆಗೋದಿಲ್ಲ. ಹಾಂ, ನಾಟಕ ಆನೆಮರಿ ಮತ್ತು ಅದರ ಅಪರಾಧಗಳಿಗೆ ಸಂಬಂಧಪಟ್ಟದ್ದು. ನಾನು ಈ ವಿಷಯ ಮೊದಲೇ ತಿಳಿಸ್ತಿದೀನಿ. ಯಾಕೆಂದರೆ ನಾಟಕ ಶುರು ಆದ ಮೇಲೆ ಅಡ್ಡಿ ಬರಬಾರದು.
ಯುರಾಯಾ : (ಪರದೆಯ ಹಿಂದಿನಿಂದ) ಅದೂ ನಿನ್ನ ಜವಾಬ್ದಾರಿಯೇನು ?
ಪೋಲಿ : ಗೊತ್ತಿದೆ ! ಎಲ್ಲಾ ಕೆಲಸಾನೂ ನಾನೇ ಮಾಡ್ತಿರೋದ್ರಿಂದ ಅಷ್ಟೂ
ತಿಳಿಯೋದಿಲ್ಲವೇನು ? ನಿಜ ಹೇಳಬೇಕೂಂದರೆ ಆನೆಮರಿ ಏನೂ ತಿಳಿಯದ ಪುಟ್ಟ ಮರಿ.
(ಸೈನಿಕರು ಏಕಕಂಠದಲ್ಲಿ ತಾಳಬದ್ಧವಾಗಿ ಹಾಡತೊಡಗುತ್ತಾರೆ)
ಪೋಲಿ : ಒಂದೇ ಒಂದು ನಿಮಿಷ ತಡೀರಿ. (ಪರದೆಯ ಹಿಂದೆ ಹೋಗಿ) ಟಿಕೇಟಿನ ಬೆಲೆ ನಾವಿಟ್ಟಿರೋದು ಜಾಸ್ತಿ ಆಯಿತೇನೆ ಅನ್ನಿಸ್ತಿದೆ. ಅಲ್ಲವೆ ?
ಯುರಾಯಾ : ಅದನ್ನೆಲ್ಲಾ ಯೋಚಿಸುತ್ತಾ ಕುಳಿತುಕೊಳ್ಳುವ ಸಮಯ ಅಲ್ಲ ಇದು.
ಪೋಲಿ : ಇದಕ್ಕೆಲ್ಲಾ ಕಾರಣ ನಾಟಕದಲ್ಲಿ ಸತ್ವ ಇಲ್ಲದೆ ಇರೋದೇ ! ಜೆಸ್ಸಿ, ನಿನಗೆ ಜ್ಞಾಪಕ ಇದೆಯೇನು ? ನಾವು ಥಿಯೇಟರ್ ಹಾಲ್‌ನಲ್ಲಿ ಇದೇ ನಾಟಕ ಆಡಿದಾಗ ಏನಾಯಿತು ? ನೀನು ಮಾತು ಮರೆತು ಎಂಥಾ ಆಭಾಸ ಆಗಿಹೋಯಿತು ಅಲ್ಲವೆ ? ಸ್ವಲ್ಪ ಇರು, ಒಂದು ನಿಮಿಷ -ನಾನು ಬಾತ್‌ರೂಮಿಗೆ ಹೋಗಿ ಬರ್ತೀನಿ. ನಾನು ಬಾಳೆಮರ. (ಪರದೆ ಮೇಲಕ್ಕೆ ಹೋಗುತ್ತದೆ.)
ಸೈನಿಕ : ಕಡೆಗೂ ಶುರು ಮಾಡೇಬಿಟ್ಟರು !
ಪೋಲಿ : ನಾನು ಬಾಳೇಮರ. ಈ ಕಗ್ಗಾಡಿನಲ್ಲಿರೋ ಕೋರ್ಟಿಗೆ ನಾನೇ ಮ್ಯಾಜಿಸ್ಟ್ರೇಟ್. ಈ ಒಣಗಿದ, ಸ್ಮಶಾನದಂತಿರುವ, ಬಂಜರು ಭೂಮಿಯ ಮೇಲೆ ನಿಂತಿದೀನಿ. ಆನೆಗಳ ಪೂರ್ವಜ ಆದಮ್‌ನ ಕಾಲದಿಂದಲೂ ಹೀಗೇ ನಿಂತಿದೀನಿ. ಆಗಾಗ್ಗೆ ಎಂದಾದರೂ ಸಂಜೆಯ ಹೊತ್ತು ಚಂದಮಾಮ ನನ್ನ ಹತ್ತಿರ ದೂರು ಹೇಳೋದಕ್ಕೆ ಬರ‍್ತಾನೇ ಇರ‍್ತಾನೆ. ಉದಾಹರಣೆಗೆ ಆನೆಮರಿ ವಿಚಾರವಾಗಿ–
ಯುರಾಯಾ : ಅದು ಈಗಲೇ ಅಲ್ಲ. ಆಗಲೇ ಅರ್ಧನಾಟಕ ಮುಗಿಸಿಬಿಟ್ಟೆಯಲ್ಲ ನೀನು
-ಜನ ದುಡ್ಡು ಕೊಟ್ಟು ಬಂದಿದ್ದಾರೆ.
(ಚಂದಮಾಮ ಹುಟ್ಟಿ ಬರುತ್ತಾನೆ.)
ಪೋಲಿ : ಚಂದಮಾಮ, ಏನು ಸಮಾಚಾರ ? ರಾತ್ರಿ ಇಷ್ಟು ಹೊತ್ತಿನಲ್ಲಿ ಎಲ್ಲಿಂದ
ಬರ್ತಿದೀಯಣ್ಣ?
ಯುರಾಯಾ: ಒಂದು ಆನೆಮರಿ ವಿಚಾರವಾಗಿ ಬಹಳ ಕೇಳಿಬರುತ್ತಿದೆ.
ಪೋಲಿ : ಅಂದರೆ ನೀನು ಅದರ ಮೇಲೆ ದೂರುಹೊರೆಸೋದಕ್ಕೆ ಬಂದಿದ್ದೀಯೇನು?
ಯುರಾಯಾ : ಹೌದು ಅಲ್ಲದೆ ಮತ್ತೇನು ?
ಪೋಲಿ : ಹಾಗಿದ್ದರೆ ಆನೆಮರಿ ಅನ್ಯಾಯ ಮಾಡಿದೆ ಅಂತೀಯೇನು ?
ಯುರಾಯಾ : ಖಂಡಿತವಾಗಿ. ನೀವು ಎಷ್ಟು ಬೇಗ ಅರ್ಥಮಾಡಿಕೊಂಡು ಬಿಟ್ಟಿರಿ !
ವಾಹ್-ಎಂಥಾ ಜಾಣತನ ನಿಮ್ಮದು. ಏನು ಕತೆ ! ನಿಮ್ಮ ದೃಷ್ಟಿಯಿಂದ ಯಾವುದಾದರೂ ವಿಚಾರ ಮುಚ್ಚಿಡೋದಕ್ಕೆ ಸಾಧ್ಯವೇನು? ಪೋಲಿ : ಆ ಮಾತಿರಲಿ. ನೀನು ಹೇಳೋದೇನು-ಆನೆಮರಿ ತನ್ನ ತಾಯಿಯ ಕೊಲೆ ಮಾಡಿದೆ ಅಂತ ತಾನೇ ?
ಯುರಾಯಾ : ಹೌದು ಮಹಾಸ್ವಾಮಿ!
ಪೋಲಿ : ಇದು ಅಕ್ಷಮ್ಯ ಅಪರಾಧ ಅಂತ ಅಲ್ಲವೇ ?
ಯುರಾಯಾ : ಆಪರಾಧವೇ ? ಅಲ್ಲ ಸ್ವಾಮಿ, ಮಹಾಪಾತಕ ಅನ್ನಿಬೇಕಾದರೆ.
ಫೋಲಿ : ದಂತದ ಪ್ರೇಂನ ಕನ್ನಡಕ ಎಲ್ಲಿ ಇಟ್ಟುಬಿಟ್ಟೆ ನಾನು ?
ಯುರಾಯಾ : ನೀನೂ ಸರಿ-ಬೇಕಿದ್ದರೆ ನನ್ನ ಕನ್ನಡಕ ತೊಗೊಂಡು ನೋಡು. ನಿನಗೆ ಸರಿಹೋಗಬಹುದು.
ಪೋಲಿ : ಸೈಜೇನೋ ಸರಿಯಾಗಿದೆ-ಆದರೆ ಇದರಲ್ಲಿ ಗಾಜೇ ಇಲ್ಲವಲ್ಲ!
ಯುರಾಯಾ : ಇಲ್ಲದೇ ಇದ್ದರೆ ಇನ್ನೂ ಒಳ್ಳೆಯದು.
ಪೋಲಿ : ನೋಡಿದೆಯಾ, ಈ ಜೋಕಿಗೂ ಜನ ನಗಲಿಲ್ಲ ?
ಯುರಾಯಾ : ಹೂಂ. ಈಗ ಅರ್ಥವಾಗ್ತಿದೆ. ಸರಿ, ಇದಕ್ಕೆಲ್ಲಾ ಚಂದಮಾಮ-ಅಲ್ಲ, ಆನೆಮರೀನೇ ಕಾರಣ.
(ಪುಟ್ಟ ಜಾಕಿ ನಿಧಾನವಾಗಿ ಮೇಲಕ್ಕೆ ಬರುತ್ತದೆ.)
ಪೋಲಿ : ಇಗೋ ಬರ‍್ತಾ ಇದೆಯಲ್ಲ. ಆನೆಮರಿ ! ನಿನ್ನ ಊರು ಯಾವುದು ?
ಗ್ಯಾಲಿ ಗೆ : ‘ಪುಟ್ಟೂ’ ಎಂದು ಕರೆಯುವರೆನ್ನನು
ಮರಿಗಳಲೆಲ್ಲಾ ಮರಿಯಾನೆ
ಏಳು ರಾಜರು ಕಟ್ಟಿಕೊಟ್ಟರು
ಅಂದದ ತೊಟ್ಟಿಲು ಎನಗೆ.
(ಚಂದಮಾಮ ನಗುತ್ತಾನೆ.)
ಗ್ಯಾಲಿ : ಇದರಲ್ಲಿ ನಗೋ ಅಂಥಾದ್ದೇನಿದೆ ?
ಯುರಾಯಾ : ಮೊದಲು ನಿನ್ನ ಮಾತು ಮುಗಿಸು.
ಗ್ಯಾಲಿ : ‘ಜಾಕಿ’ ಎಂದು ನನ್ನಯ ಹೆಸರು ನುಗ್ಗುತ ನಡೆದರೆ ತಡೆಯುವರಾರು ?
ಪೋಲಿ : ನೀನು ನಿನ್ನ ತಾಯಿನ ತುಂಡು-ತುಂಡಾಗಿ ಕತ್ತರಿಸಿ ಕೊಂದು ಹಾಕಿದ್ದು ನಿಜವೇ ?
ಗ್ಯಾಲಿ : ಇಲ್ಲ-ನಾನು ಅಮ್ಮನ ಹಾಲಿನ ಪಾತ್ರೆ ಜಜ್ಜಿ ಹಾಕಿದೆ ಅಷ್ಟೆ.
ಯುರಾಯಾ : ಅದರಿಂದ ಆಕೆಯ ತಲೆಯೂ ಜಜ್ಜಿಹೋಯಿತು ಅಲ್ಲವೆ ?
ಗ್ಯಾಲಿ : ಸುಳ್ಳು. ಅವಳು ಹಳ್ಳದಲ್ಲಿದ್ದ ಬಂಡೆಯ ಮೇಲೆ ಬಿದ್ದು ಬಿಟ್ಟಳು ಚಂದಮಾಮ.
ಪೋಲಿ : ಇದೆಲ್ಲಾನೂ ನೀನೇ ಮಾಡಿದ್ದು, ನಾನು ಬಾಳೆಮರ ಅನ್ನೋದು ಎಷ್ಟುನಿಜವೋ, ಈ ಮಾತೂ ಅಷ್ಟೇ ಸತ್ಯ.
ಯುರಾಯಾ : ಅಲ್ಲದೆ ನಾನು ಚಂದಮಾಮ ಅನ್ನೋದು ಎಷ್ಟು ನಿಜವೋ, ಇದೂ
ಅಷ್ಟೇ ನಿಜ. ನಾನು ಇದನ್ನು ಸಾಬೀತು ಮಾಡಿ ತೋರಿಸ್ತೀನಿ. ನನ್ನ ಮೊದಲ ಸಾಕ್ಷಿ, ಈ ಹೆಂಗಸು.
(ಜೆಸ್ಸಿ ಜಾಕಿಯ ತಾಯಿಯ ರೂಪದಲ್ಲಿದ್ದಾಳೆ.)
ಪೋಲಿ : ಯಾರೀಕೆ ?
ಯುರಾಯಾ : ತಾಯಿ.
ಪೋಲಿ : ಈಕೆ ಒಪ್ಪಿಕೊಂಡುಬಿಟ್ಟರೆ ಎಷ್ಟು ಚೆನ್ನಾಗಿರುತ್ತೆ ?
ಯುರಾಯಾ : ಏನು ಚೆನ್ನಾಗಿರೋದು ?
ಪೋಲಿ : ಅದು ಸರಿ, ಆದರೆ ಈಕೆ ಇಲ್ಲಿಗೆ ಬಂದಿರೋದ್ರಲ್ಲಿ ಏನೋ ನಡೀಬಾರದ್ದು ನಡೆದು ಹೋಗಿದೆ ಅನ್ನಿಸುತ್ತೆ-ಅಂದರೆ–
ಯುರಾಯಾ : ಅಂಥಾದ್ದೇನೂ ಇಲ್ಲ.
ಪೋಲಿ : ಇಲ್ಲವೇನು ? ಹಾಗಿದ್ದರೆ ಅವಳು ಇಲ್ಲೇ ಇರಲಿ. ನಮಗೆ ಸಾಕ್ಷಿ, ಪುರಾವೆ ಅಗತ್ಯವಾಗಿ ಬೇಕೇಬೇಕು.
ಯುರಾಯಾ : ಬೇಡದೇ ಏನು ? ನೀನು ನ್ಯಾಯಾಧೀಶ ಅಲ್ಲವೇನು ?
ಪೋಲಿ : ಹಾಂ! ಆನೆಮರಿ, ಈಗ ನಿನ್ನ ತಾಯಿಯ ಕೊಲೆ ಮಾಡಿದ್ದು ನೀನಲ್ಲ ಅಂತ ಸಾಬೀತು ಮಾಡಿ ತೋರಿಸು.
ಸೈನಿಕ : (ಮುಂದಿನಿಂದ) ಆ ತಾಯಿ ಎದುರಿಗೇ ನಿಂತಿರುವಾಗ !
ಯುರಾಯಾ : (ಅವನೊಡನೆ) ಅದರಲ್ಲೇ ಇರೋದು ಸ್ವಾರಸ್ಯ.
ಸೈನಿಕ : ನಾಟಕ ಪ್ರಾರಂಭ ಆಗೋದಕ್ಕಿಲ್ಲ. ಆಗಲೇ ಶುರುವಾಯಿತು ಇವರ ರಾಮಾಯಣ. ಅವರಮ್ಮ ಅಲ್ಲೇ ನಿಂತಿದಾಳೆ-ಇವನು ಹೇಳ್ತಾನೆ
ಇವರ ನಾಟಕಕ್ಕಿಷ್ಟು ಬೆಂಕಿ ಬಿತ್ತು!
ಜೆಸ್ಸಿ : ನಾನು ಈ ಆನೆಮರಿಯ ತಾಯಿ. ನನ್ನ ಪುಟ್ಟ ಕಂದ ಕೊಲೆ ಮಾಡಿಲ್ಲಾಂತ
ಖಂಡಿತಾ ಸಾಬೀತು ಮಾಡಿ ತೋರಿಸುತ್ತೆ, ಮಾಡಿ ತೋರಿಸ್ತೀಯೆ ಅಲ್ವೇ ಪುಟ್ಕ ?
ಯುರಾಯಾ : ನಾನು ಎಷ್ಟು ಬೇಕಾದರೂ ಷರತ್ತು ಕಟ್ಟೋಕೆ ಸಿದ್ಧ. ಆನೆಮರಿ
ಸಾಬೀತು ಮಾಡೋಕೆ ಖಂಡಿತಾ ಸಾಧ್ಯವಿಲ್ಲ. ಎಂದೆಂದಿಗೂ ಸಾಧ್ಯವಿಲ್ಲ- ಜಗತ್ತೇ ತಲೆಕೆಳಗಾದರೂ ಸರಿ.
ಪೋಲಿ : (ಗರ್ಜಿಸುತ್ತಾ) ಕರ್ಟನ್ !
(ಪ್ರೇಕ್ಷಕರು ಬಾರ್‌ನತ್ತ ಹೋಗುತ್ತಾರೆ, ಮಾತಿಲ್ಲದೆ ಕಾಕ್‌ಟೇಲ್ ಮತ್ತಿತರ ಪಾನೀಯಗಳಿಗಾಗಿ ಜೋರಾಗಿ ಆರ್ಡರ್ ಮಾಡುತ್ತಾರೆ. ಗುಲ್ಲೋ
ಗುಲ್ಲು.)
ಫೋಲಿ : (ಪರದೆಯ ಹಿಂದಿನಿಂದ) ಫಸ್ಟ್‌ಕ್ಲಾಸಾಗಿ ಆಯಿತು ! ಜನ ತುಟಿ ಪಿಟಕ್ಕೆನ್ನಲಿಲ್ಲ.
ಗ್ಯಾಲಿ : ಹಾಗಾದರೆ ಒಬ್ಬರೂ ಚಪ್ಪಾಳೇನೇ ತಟ್ಟಲಿಲ್ಲ ?
ಜೆಸ್ಸಿ : ಅವರೆಲ್ಲಾ ಡಂಗಾಗಿಬಿಟ್ಟಿದ್ದಾರೆ ಅಂತ ಕಾಣುತ್ತೆ.
ಯುರಾಯಾ : ಹೌದು, ಡಂಗಾಗಿಬಿಟ್ಟಿದ್ದಾರೆ ! ತಾವು ಕುಣಿದು, ಅವರನ್ನೂ ಕುಣಿಸೋ ನಾಲ್ಕು ಜನ ಮಸ್ತಾದ ಹುಡುಗೀರನ್ನು ಅವರ ಮುಂದೆ ಬೆತ್ತಲೆ ನಿಲ್ಲಿಸು. ಖುಷಿಯಲ್ಲಿ ಹುಚ್ಚೆದ್ದು ಬೆಂಚುಗಳನ್ನೆಲ್ಲಾ ಮುರಿದು ಹಾಕದಿದ್ದರೆ ಕೇಳು. ಸಾಕು, ಸ್ಟೇಜ್ ಮೇಲೆ ಹೋಗು. ನಾವು ನಾಟಕಕ್ಕೆ ಇನ್ನೂ ಜೀವ ತುಂಬಬೇಕು. ಮೊದಲು ಷರತ್ತು ಕಟ್ಟಿ ಬಾ
ಪೋಲಿ : (ಪರದೆಯಾಚೆಗೆ ಬಂದು) ಮಹನೀಯರೇ
ಸೈನಿಕ : ಯೋ, ಸಾಕು ಮುಚ್ಚಯ್ಯ ಬಾಯಿ. ಇಂಟರ್‌ವಲ್ ಬಹಳ ಚಿಕ್ಕದು, ಆರಾಮವಾಗಿ ಕುಡಿಯೋದಕ್ಕೆ ಬಿಡು. ನಮಗೆ ಇದು ಬಹಳ ಮುಖ್ಯ
–ಅದೂ ಇಂಥ ಪರಿಸ್ಥಿತೀಲಿ,
ಫೋಲಿ : ನೀವೆಲ್ಲರೂ ಷರತ್ತು ಹೂಡಲು ಇಷ್ಟಪಡ್ತೀರೀಂತ ಅಂದುಕೊಂಡಿದ್ದೆ. ಆದರೆ ಇಬ್ಬರ ಮೇಲೂ. ತಾಯಿಯ ಮೇಲೆ ಅಥವಾ ಚಂದಮಾಮನ ಮೇಲೆ-
ಸೈನಿಕ : ಎಂಥೋನಯ್ಯ ಇವನು ! ಹಣ ಲಪಟಾಯಿಸೋದಕ್ಕೆ ಇದೊಂದು ನೆಪ. ಶುರು ಆಗ್ತಾನೇ ಇವರ ನಾಟಕದಲ್ಲಿ ಏನೂ ನಡೆಯೋಲ್ಲ.
ಪೋಲಿ : ಮಹನೀಯರೇ ! ತಮ್ಮಲ್ಲಿ ಯಾರಾದರೂ ತಾಯಿಯ ಪಕ್ಷ ವಹಿಸೋದಾದರೆ ಈ ಕಡೆ ಬನ್ನಿ. (ಯಾರೂ ಬರುವುದಿಲ್ಲ) ಚಂದಮಾಮನ ಪಕ್ಷ ವಹಿಸೋರೆಲ್ಲಾ ಈ ಕಡೆ, (ಯಾರೂ ಮುಂದೆ ಬರುವುದಿಲ್ಲ. ಪೋಲಿ ನಿರಾಸೆಯಿಂದ ಒಳಗೆ ಹೊರಟು ಹೋಗುತ್ತಾನೆ.)
ಯುರಾಯಾ : (ಪರದೆಯ ಹಿಂದಿನಿಂದ) ಯಾರಾದರೂ ಷರತ್ತು ಕಟ್ಟಿದರೇನು ?
ಪೋಲಿ : ಇನ್ನೂ ಇಲ್ಲ. ಚೆನ್ನಾಗಿರೋದು ಇನ್ನು ಮುಂದೆ ಇರಬೇಕೂಂತ ಕಾದಿದಾರೇನೋ. ಇಂಥೋರನ್ನು ಕಂಡರೇ ನನಗೆ ಸಿಟ್ಟು ಬರೋದು.
ಜೆಸ್ಸಿ : ದನಾದನ್ ಅಂತ ಕುಡೀತಾನೇ ಇದಾರಲ್ಲ ! ನಮ್ಮ ಮಾತನ್ನು ಕೇಳೊ ಅಷ್ಟು ವ್ಯವಧಾನವೂ ಇಲ್ಲ ಅವರಿಗೆ ?
ಯುರಾಯಾ : ಒಂದೆರಡು ಹಾಡು ಸೇರಿಸಿದ್ದರೆ ಖುಷಿಯಾಗಿ ಬಿಡುತ್ತಿದ್ದರು.
ಪೋಲಿ : ಹಾಗಾದರೆ ಬ್ಯಾಂಡ್ ಬಾರಿಸೋಕೆ ಹೇಳಲೇನು ? ರೀ, ಬಜಾಯಿಸಿ ಮತ್ತೆ (ಪರದೆ ತೆರೆದು ಕೊಳ್ಳುತ್ತದೆ)
ಚಂದಮಾಮ, ತಾಯಿ, ಆನೆಮರಿ-ಮೂವರೂ ಈ ಕಡೆ ಬನ್ನಿ. ನೋಡಿ, ಅಪರಾಧ ಯಾರೇ ಮಾಡಿರಲಿ, ತಕ್ಕ ಶಾಸ್ತಿ ಆಗೇಆಗುತ್ತೆ, (ಪ್ರೇಕ್ಷಕ ರೊಡನೆ) ನೀವೂ ನೋಡ್ತಿರಿ. (ಜಾಕಿಯೊಡನೆ) ನೀನು, ಪಾಲ್ ಜಾಕಿ, ನಿನ್ನ ತಾಯಿಯ ಕೊಲೆ ಮಾಡಿ ಘೋರ ಪಾತಕ ಮಾಡಿದ್ದೀಯೆ. ಈ ಸತ್ಯಸಂಗತಿಯನ್ನು ನೀನು ಹೇಗೆ ಮುಚ್ಚಿಡಬಲ್ಲೆ ?
ಗ್ಯಾಲಿ : ನಾನು-ನಾನು ಹೇಗೆ ಕೊಲೆ ಮಾಡೋಕೆ ಸಾಧ್ಯ ? ಒಂದು ಪುಟ್ಟಹುಡುಗಿ–ಅದೂ ಅಬಲೆಯಾದ ಪುಟ್ಟ ಹುಡುಗಿ!
ಪೋಲಿ : ಹಾಗೇನು ? ಹಾಗಾದರೆ ನಾನು ಹೇಳೋನಿ-ನೀನು, ಪಾಲ್ ಜಾಕಿ, ಹುಡುಗೀನೇ ಅಲ್ಲ ! ಇದನ್ನು ಸಿದ್ಧಪಡಿಸಿ ತೋರಿಸಲು ನನ್ನ ಮೊದಲ ಸಾಕ್ಷಿ-ನಾನು ಚಿಕ್ಕಂದಿನಲ್ಲಿ ಕೇಳಿದ ಒಂದು ಕತೆ ಜ್ಞಾಪಕಕ್ಕೆ ಬರಿದೆ. ಈ ಕತೇನ ವೈಟ್ ಚಾಪಲ್‌ನಲ್ಲಿ ಕೇಳಿದ್ದೆ-
ಸೈನಿಕ : ದಕ್ಷಿಣ ಪಂಜಾಬ್ ದಕ್ಷಿಣ ಪಂಜಾಬ್.
ಪೋಲಿ : ದಕ್ಷಿಣ ಪಂಜಾಬ್, ಹೂಂ-ಅಲ್ಲಿ ಒಬ್ಬ ಮನುಷ್ಯ ವಾಸ ಮಾಡ್ಕೊಂಡಿದ್ದ. ಅವನು ಯಾವಾಗಲೂ ಹುಡುಗೀರು ಹಾಕ್ಕೊತಾರಲ್ಲ ಅಂಥ ಲಂಗ ಹಾಕ್ಕೊಂಡಿರ್ತಿದ್ದ. ಮೈಮೇಲೆ ಸೆರಗು ಹೊದ್ದುಕೊಳ್ಳೋನು. ಇದರಿಂದ ಯುದ್ಧಕ್ಕೆ ಹೋಗೋದು ತಪ್ಪಿತು. ಒಂದು ದಿನ ಒಬ್ಬ ಸೈನಿಕ ಒಂದು ಗೋಲಿ ತೊಗೊಂಡು ಬಂದ. ಅವನು ಗೋಲೀನ ಆ ಹುಡುಗಿಯ ಕಡೆಗೆ ಎಸೆದ. ಆ ಗೋಲೀನ ಲಂಗದಲ್ಲಿ ಹಿಡಿದುಕೊಳ್ಳೋದಕ್ಕೆ ಅವಳು ಕಾಲು ಅಗಲಿಸಲಿಲ್ಲ- ಎಲ್ಲಾ ಹುಡುಗೀರೂ ಮಾಡೋ ಹಾಗೆ. ಸೈನಿಕನಿಗೆ ಗೊತ್ತಾಗಿ ಹೋಯಿತು ಅವಳು ಹೆಂಗಸಲ್ಲ, ಗುಡಸು ಅಂತ. ಹಾಗೇ-ಈಗ ನಿಮಗೆಲ್ಲಾ ಗೊತ್ತಾಗಿರಬೇಕು ಅಲ್ಲವೇ? ಈ ಆನೆಮರಿ ಗಂಡು ಜಾತಿಗೆ ಸೇರಿದ್ದು.
(ಪರದೆ ಬೀಳುತ್ತದೆ. ಸಣ್ಣ ಚಪ್ಪಾಳೆ)
ಪೋಲಿ : ಕೇಳಿ-ಗಮನವಿಟ್ಟು ಕೇಳಿ ! ಈಗ ನಮ್ಮ ಮಹೋನ್ನತ ದೃಶ್ಯವನ್ನು ಅಭಿನಯಿಸಿ ತೋರಿಸಲಿದ್ದೇವೆ. ಪರದೆ ತೆರೆದು ಬನ್ನಿ ! ಎಲ್ಲರಿಗೂ ನಮಸ್ಕಾರ ಮಾಡಿ!
(ಅಭಿನೇತಗಳು ಬಂದು ನಮಸ್ಕರಿಸುತ್ತಾರೆ. ಮತ್ತೆ ಪರದೆ ಬೀಳುತ್ತದೆ. ಯಾರೂ ಚಪ್ಪಾಳೆ ತಟ್ಟುವುದಿಲ್ಲ.)
ಯುರಾಯಾ : ಅವರೆಲ್ಲಾ ಕೋಪ ಮಾಡ್ಕೊಂಡು ಕೂತಿದಾರೆ. ಅವರನ್ನು ಖುಷಿ ಮಾಡೋಕೆ ನಮ್ಮಿಂದ ಸಾಧ್ಯವೇ ಇಲ್ಲ.
ಜೆಸ್ಸಿ : ನಾವು ನಾಟಕ ಇಲ್ಲಿಗೇ ನಿಲ್ಲಿಸಿ ಅವರವರ ಹಣ ವಾಪಸ್ ಕೊಡಬೇಕಾಗುತ್ತೆ ಅಷ್ಟೆ. ಮಾಡು ಇಲ್ಲ ಮಡಿ-ಅದೊಂದೇ ದಾರಿ ಎಲ್ಲರೂ ಎಷ್ಟೊಂದು ಬದಲಾಯಿಸಿ ಬಿಟ್ಟಿದ್ದಾರೆ ! ಹೊರಗಡೆ ಸ್ವಲ್ಪ ಇಣಿಕಿ ನೋಡು, ನಿನಗೇ
ಗೊತ್ತಾಗುತ್ತೆ.
ಯುರಾಯಾ : ಹಣ ವಾಪಸ್ ಮಾಡೋದೇ ? ಎಂದಿಗೂ ಇಲ್ಲ ! ಹಾಗೆ ಮಾಡಿದ್ದರೆ ಪ್ರಪಂಚದಲ್ಲಿ ಯಾವ ಥಿಯೇಟರೂ ನಡೆಯೋ ಹಾಗೇ ಇಲ್ಲ.
ಸೈನಿಕ : ನೆನ್ನೆ ಪೂರ್ತಿ ಏರಿಬಿಟ್ಟಿತ್ತು. ಜಾರ್ಜ್, ನಿನಗೆ ಗೊತ್ತಿದೆಯೇನು ? ಇದೇ
ಕಡೇಂತ ಕಾಣುತ್ತೆ ಇಲ್ಲಿ ಕಾಕ್‌ಟೇಲ್ ಕುಡಿಯೋದು. ಯುದ್ಧಕ್ಕೆ ಸರಿಯಾದ ಕಾಲವೂ ಅಲ್ಲ. ಸ್ವಲ್ಪ ಹೊತ್ತು ಇಲ್ಲೇ ಇದ್ದು ಯಾಕೆ ಕಾಲ
ಕಳೀಬಾರದು ?
ಮ. ಸೈನಿಕ : ನಾವೇ ಹಾಡು ಹೇಳಿಕೊಂಡು ಕಾಲ ಕಳೆಯೋಣ ಬನ್ನಿ. ಅದು ಯಾವುದಪ್ಪ ನಿನ್ನ ಫೇವರೇಟ್ ಹಾಡು-
(ಒಬ್ಬ ಸೈನಿಕ ಹಳೆಯ ಹಾಡೊಂದನ್ನು ಗುಣಗುಣಿಸುತ್ತಾನೆ.)
ಸೈನಿಕ : ಭೇಷ್, ಬಹಳ ಚೆನ್ನಾಗಿದೆ.
(ಎಲ್ಲರೂ ಹಾಡುತ್ತಾರೆ.)
ಯುರಾಯಾ ; ಅವರೇ ಹಾಡೋದಕ್ಕೆ ಶುರು ಮಾಡಿಬಿಟ್ಟರು. ಮುಂದಿನ ಸೀನ್ ಬೇಗ ಶುರು ಮಾಡೋಣ ಬನ್ನಿ.
ಪೋಲಿ : ನಾನೂ ಹೋಗಿ ಅವರ ಜತೆ ಸೇರ‍್ಕೊಂಡು ಹಾಡೋಣ ಅನ್ನಿಸ್ತಿದೆ. ಆ ಹಾಡಿನಲ್ಲಿ ಏನು ಮಜಾ ಬರುತ್ತೆ ಗೊತ್ತೇನು ? ನಾವೂ ಏನಾದರೂ ಇಂಥಾದ್ದೇ ಮಾಡಬೇಕು. ಬನ್ನಿ, ಶುರು ಮಾಡೋಣ. (ಪರದೆ ಏಳುತ್ತದೆ.) ಅದಾದ ಮೇಲೆ-ಮುಂದೆ ಏನಾಯಿತು ಅಂದರೆ (ಸಮೂಹಗಾನದ ದನಿಗಿಂತಲೂ ಎತ್ತರವಾದ ದನಿಯಲ್ಲಿ ಅರಚುತ್ತಾ) ಈ –ಆ-ಆನೆಮರಿ
ಸೈನಿಕ : ಥತ್ತೇರಿ ಮತ್ತೆ ಆನೆಮರಿ ಅಂತೆ ಆನೆಮರಿ !
ಪೋಲಿ : ನಾನು ಹೇಳಿದ್ದು-ಈಗ ಆ ಆನೆ
ಸೈನಿಕ : ಮರಿ, ಮರಿ!!
ಪೋಲಿ : ಹೂಂ, ಈಗ ಅದು- ನಾನು ಮೊದಲು ನೀಡಿದ ಸಾಕ್ಷ್ಯದಿಂದ ಒಂದು ಮೋಸಗಾರ ಪ್ರಾಣಿ ಅಂತ ನಿರೂಪಿಸಿ ತೋರಿಸಿದ್ದೀನಿ. ಅದಕ್ಕಿಂತಲೂ
ಪಕ್ಕಾ ಸಾಕ್ಷಿ ಈಗ ನಿಮ್ಮ ಮುಂದೆ ಇಡ್ತಿದೀನಿ.
ಸೈನಿಕ : ಇದನ್ನೆಲ್ಲಾ ತೋರಿಸಲೇಬೇಕೇನು ?
ಯುರಾಯಾ : ಹೌದು, ತೋರಿಸಲೇಬೇಕು. (ಪೋಲಿಯೊಡನೆ) ಯಾರು ತಡೀತಾರೆ ನೋಡೇಬಿಡ್ತೀನಿ.
ಪೋಲಿ : ಜಾಕಿ, ನೀನೊಬ್ಬ ಕೊಲೆಗಾರ. ಈಗ ಕೊಲೆಗಾರನಾಗೋದು ಸಾಧ್ಯವೇ ಇಲ್ಲಾಂತ ಸಾಬೀತು ಮಾಡು. ಉದಾಹರಣೆಗೆ ಚಂದಮಾಮನ ಕೊಲೆ ಮಾಡೋದು ನಿನ್ನಿಂದ ಸಾಧ್ಯವಿಲ್ಲಾಂತ ತೋರಿಸು ನೋಡೋಣ.
ಸೈನಿಕ : ಇದು ಎಲ್ಲಿಯ ನ್ಯಾಯ ? ಆನೆಮರಿ ಯಾಕೆ ಸಾಬೀತುಮಾಡಬೇಕು ?
ಬಾಳೆಮರ ಅದನ್ನು ಸಾಬೀತು ಮಾಡಬೇಕು.
ಪೋಲಿ : ನಿಜ ! ಹಾಗೇ ನೋಡ್ತಿರಿ-ಅಲ್ಲೇ ಇರೋದು ನಾಟಕದ ಸ್ವಾರಸ್ಯ. ಆನೆಮರಿ, ನಾನು ಹೇಳಿದ ಹಾಗೆ ಚಂದಮಾಮನ ಕೊಲೆ ಮಾಡೋಕೆ ನಿನ್ನಿಂದ ಸಾಧ್ಯವಿಲ್ಲಾಂತ ನಿರೂಪಿಸಿ ತೋರಿಸಬೇಕು. ಕೈನಲ್ಲಿ ಚಾಕು ಹಿಡಿದು ಇದರ ಮೇಲೆ ಹತ್ತು.
(ಗ್ಯಾಲಿ ಹಾಗೇ ಮಾಡುತ್ತಾಳೆ. ಅದೊಂದು ಹಗ್ಗದ ಏಣಿ. ಮೇಲೆ ಚಂದಮಾಮ ಹಗ್ಗದ ಮತ್ತೊಂದು ತುದಿ ಹಿಡಿದಿದ್ದಾನೆ.)
ಸೈನಿಕ : (ಹಾಡುತ್ತಿರುವವರನ್ನು ಸುಮ್ಮನಿರುವಂತೆ ಹೇಳಿ) ಸದ್ದು ! ಅದರ ಮೇಲೆ ಹತ್ತೋದು ಅಷ್ಟು ಸುಲಭ ಅನ್ನಬೇಡಿ. ಅದೂ ಅಲ್ಲದೆ ಆ
ಮುಖವಾಡ ಬೇರೆ–ಆನೆಮರಿಗೆ ಏನೂ ಕಾಣಿಸೋದೇ ಇಲ್ಲ.
ಜೆಸ್ಸಿ : ಅದರ ಮೇಲೆ ಹತ್ತಲೇಬೇಕು, ಹಾಗೆ ಮಾಡಲೇಬೇಕು, ಯುರಾಯಾ, ಈಗ ಗುಡುಗು, ಮಿಂಚಿನ ಎಫೆಕ್ಟ್!
(ಯುರಾಯಾ ಒಮ್ಮೆ ಜೋರಾಗಿ ಕಿರುಚುತ್ತಾಳೆ.)
ಪೋಲಿ : ಏನಾಯಿತು ಚಂದಮಾಮ ? ಯಾಕೆ ಹಾಗೆ ಕಿರುಚಿದೆಯಲ್ಲ ?
ಯುರಾಯಾ : ಆ ಹಗ್ಗ ಭಾರದಿಂದ ಆಕಡೇನೇ ಎಳೀತಿದೆ. ಮೇಲೆ ಹತ್ತಿ ಬರ್ತಿರೋ ಮನುಷ್ಯ ಖಂಡಿತವಾಗಿ ಕೊಲೆಗಾರನೇ ಇರಬೇಕು.
ಗ್ಯಾಲಿ : ಈ ಹಗ್ಗಾನ ಏಣಿಯ ಕೊನೇಗೆ ಕಟ್ಟಿಬಿಡು ಯುರಾಯಾ. ನಾನು ಸ್ವಲ್ಪ ದಡೂತಿ ಅಲ್ವೇ, ನಿನ್ನ ಕೈಲಿ ತಡೆಯೋಕಾಗೋಲ್ಲ.
ಯುರಾಯಾ : ಓ! ನನ್ನ ಕೈಗೆ ಏನಾಯ್ತು ! ಅಯ್ಯೋ-ನನ್ನ ಕೈ-ನನ್ನ ಕೈ ಕಿತ್ತು ಹೋಗ್ಲಿದೆ!
ಗ್ಯಾಲಿ : ಸ್ವಲ್ಪ ಹುಷಾರಾಗಿ ಹಿಡ್ಕೊ ಹಗ್ಗಾನ !
(ಗ್ಯಾಲಿಯ ಕೈಗೆ ಯುರಾಯಾಳ ಕೃತಕ ಕೈ ಸಿಗುತ್ತದೆ. ಅವಳು ಅದನ್ನು ಮುಂದೆ ಹಿಡಿದು ಎಲ್ಲರಿಗೂ ತೋರಿಸುತ್ತಾಳೆ.)
ಜೆಸ್ಸಿ : ಎಂಥಾ ಕೆಲಸ ಮಾಡಿಬಿಟ್ಟೆ ಜಾಕಿ. ನೀನು ಹೀಗೆ ಮಾಡ್ತೀಯಾಂತ ನಾನು
2
ಕನಸು-ಮನಸಿನಲ್ಲೂ ಎಣಿಸಿರಲಿಲ್ಲ. ತೊಲಗಾಚೆ,–ನೀನು ನನ್ನ ಮಗುವೂ ಅಲ್ಲ, ನಾನು ನಿನ್ನ ತಾಯಿಯೂ ಅಲ್ಲ.
ಯುರಾಯಾ : (ಮುರಿದ ಕೈ ತೋರಿಸುತ್ತಾ) ಇದರಿಂದ ಆನೆಮರಿ ಕೊಲೆ ಮಾಡಿರೋದು ನಿಜಾಂತ ರುಜುವಾತಾಗಿದೆ.
ಪೋಲಿ : ಪಾಲ್ ಜಾಕಿ, ನೋಡು. ರಕ್ತ ಸೋರುತ್ತಿರುವ ಚಂದಮಾಮನ ಭುಜ ನೋಡು. ಇದರಿಂದ ಒಂದು ವಿಷಯ ತಿಳಿದುಬರುತ್ತೆ-ನಿನ್ನಿಂದ ಕೊಲೆ ಮಾಡೋದು ಸಾಧ್ಯವಿಲ್ಲಾಂತ ನೀನು ನಿರೂಪಿಸೋದಕ್ಕೆ ಸಾಧ್ಯವಾಗಲಿಲ್ಲ. ನೀನು ಚಂದಮಾಮನ ಕೈಗಳನ್ನು ಕಿತ್ತು ಹಾಕಿರೋದೇ ಅದಕ್ಕೆ ಸಾಕ್ಷಿ. ಚಂದಮಾಮನ ಮೈನಿಂದ ನಾಳೆ ಬೆಳಿಗ್ಗೆವರೆಗೆ ರಕ್ತ ಸೋರ‍್ತಾನೇ ಇರುತ್ತೆ. ಆಮೇಲೆ ಚಂದಮಾಮ ಸತ್ತುಹೋಗಬಹುದು.
ಕರ್ಟನ್ ! (ಪರದೆ ಬೀಳುತ್ತದೆ. ಪೋಲಿ ಮುಂದೆ ಬರುತ್ತಾನೆ.)
ಪೋಲಿ : ಯಾರಾದರೂ ಮಹನೀಯರು ಷರತ್ತು ಹೂಡೋದಿದ್ದರೆ ಅವರು ಬಾರಿನ ಕಡೆ ಹೋಗಬಹುದು.
ಸೈನಿಕ : (ಬಾಜಿ ಕಟ್ಟುತ್ತಾ) ಚಂದಮಾಮನ ಮೇಲೆ ಒಂದು ಸೆಂಟ್, ಆನೆಮರಿ ಮೇಲೆ ಅರ್ಧ ಸೆಂಟ್ |
ಯುರಾಯಾ : ಎಲ್ಲರೂ ಹಾಸ್ಯ ಮಾಡ್ತಿದಾರೆ. ಜೆಸ್ಸಿ, ಆ ದುಃಖದಿಂದ ಆಳ್ತಿರೋ ತಾಯಿಯ ಹಾಡು ಹೇಳಿಬಿಡು. ಬಾಯಿ ಮುಚ್ಚಿಕೊಂಡು ಎಲ್ಲರೂ ತೆಪ್ಪನಾಗ್ತಾರೆ.
(ಪರದೆ ಏಳುತ್ತದೆ. ಜೆಸ್ಸಿ ಹಾಡಲು ಪ್ರಾರಂಭಿಸುತ್ತಾಳೆ.)
ಸೈನಿಕ : ಒನ್ಸ್ ಮೋರ್ ! ಟಿಕೇಟಿನ ಹಣ ವಸೂಲಾದರೂ ಆಗಲಿ-ಪೂರ್ತಿ ಹತ್ತು ಸೆಂಟ್. ಭೇಷ್. ಹುರ‍್ರೇ, ಹುರ‍್ರೇ 1 ತಾಯಿಗೋಸ್ಕರ-ಹಿಪ್ ಹಿಪ್ ಹುರ‍್ರೇ!, ಹಿಪ್-ಹಿಪ್-ಹುರ‍್ರೇ !
(ಪರದೆ ಬೀಳುತ್ತದೆ.)
ಯುರಾಯಾ : ಮುಂದೆ ಹಾಡು ! ಜನ ಈಕಡೇನೇ ನೋಡ್ತಿದಾರೆ. ಸ್ಟೇಜ್ ಮೇಲೆ
ಹೋಗು.
(ಪರದೆ ಏಳುತ್ತದೆ.)
ಪೋಲಿ : ನಾನು ಸಾಬೀತು ಮಾಡಿ ತೋರಿಸಿದೀನಿ. ಜಾಕಿ, ನೀನು ಕೊಲೆ ಮಾಡಬಲ್ಲೆ. ಈಗ ನಿನ್ನನ್ನು ಒಂದೇ ಒಂದು ಪ್ರಶ್ನೆ ಕೇಳ್ತಿನಿ. ಈಕೆ ನಿಮ್ಮ
ತಾಯಿ ಅನ್ನೋದನ್ನು ಒಪ್ಪಿಕೊಳ್ತಿಯೇನು ?
ಸೈನಿಕ : ಇವನು ಏನು ಬೋರ್ ಮಾಡ್ತಾನಯ್ಯ ? ಅವಳು ತಾಯಿ ಹೇಗಾಗ್ತಾಳೆ ? ಆದರೂ ಏನೋ ಬುದ್ದಿವಂತಿಕೆ ತೋರಿಸೋ ಹಾಗಿದೆ.
ನಡೀಲಿ ಬಿಡು, ಏನೇ ಇರಲಿ ನಾಟಕವಂತೂ ಸುಖಾಂತವಾಗೇ ಮುಗಿಯುತ್ತೆ. ಸ್ವಲ್ಪ ಹೊತ್ತು ಸುಮ್ಮನಿರಿ ನೋಡೋಣ
ಪೋಲಿ : ಇಂಥ ಪರಿಸ್ಥಿತೀಲಿ-ಯಾರೇ ಆಗಲಿ ಮಗ ಅಂದ ಮೇಲೆ ತನ್ನ ಸ್ವಂತ ತಾಯಿಯನ್ನು ನಿಕೃಷ್ಟವಾಗಿ ಕಾಣೋದಿಲ್ಲ. ಅದೂ ಇಂಗ್ಲಿಷರ ರಾಜ್ಯಭಾರದಲ್ಲಿ ಖಂಡಿತಾ ಸಾಧ್ಯವಿಲ್ಲ.
ಸೈನಿಕ : ಸರಿಯಾದ ಮಾತು.
ಪೋಲಿ : ಇಂಗ್ಲಿಷ್ ರಾಜ್ಯಭಾರ ಜಿಂದಾಬಾದ್ ! (ಎಲ್ಲರೂ ಘೋಷಣೆ ಮಾಡಿ ಪ್ರೋತ್ಸಾಹ ನೀಡುತ್ತಾರೆ) ಧನ್ಯವಾದ ಮಹನೀಯರೇ ಧನ್ಯವಾದ. ಎಲ್ಲೀವರೆಗೆ ಹೃದಯ ಭೇದಿಸುವ ಈ ಘೋಷಣೆ ಕೇಳಿಬರುತ್ತೋ ಅಲ್ಲೀವರೆಗೆ ಇಂಗ್ಲಿಷರ ಕಾರುಬಾರು ನಿರಾತಂಕವಾಗಿ ನಡೀತಾನೇ ಇರುತ್ತೆ -ಸಾಕ್ಷಿಯನ್ನು ಕರೆಸೋಣವೇನು ? ಜಾಕಿ, ಇಲ್ಲಿ ಕೇಳು. ನೀನು ಪ್ರಪಂಚದ ಮಮತೆಯ ಖನಿಯಾದ ಈಕೆಯ ಖೂನಿ ಮಾಡಿ ಘೋರ ಪಾತಕಿಯಾಗಿದ್ದೀಯೆ. ಈ ವಿಶ್ವವಿಖ್ಯಾತ ಕಲಾವಿದೆಯ- (ಭೇಷ್” ಎಂಬ ಘೋಷಣೆ ಕೇಳಿಬರುತ್ತದೆ) ಜಾಕಿ, ನೀನು ಇಂಥಾ ಮಹಾಮಾತೆಯ ಮಗ ಅಥವ ಮಗಳು ಆಗಿರೋದಕ್ಕೆ ಹೇಗೆ ಸಾಧ್ಯ ? (ಮತ್ತೆ ಚಪ್ಪಾಳೆ) ಅಷ್ಟೇ ಅಲ್ಲ. ಬಾಳೆಮರ ಏನು ಯೋಚಿಸುತ್ತೊ ಅದನ್ನು ಸಾಬೀತು ಮಾಡಿ ತೋರಿಸುತ್ತೆ. (ಚಪ್ಪಾಳೆ) ಅದರಿಂದ, ಚಂದಮಾಮ, ನೀನು ಸೀಮೆಸುಣ್ಣ ತೊಗೋ. ಸ್ಟೇಜಿನ ಮೇಲೆ ಒಂದು ಸರ್ಕಲ್ ಬರಿ. ಆಮೇಲೆ ಕೈನಲ್ಲಿ ಒಂದು ಹಗ್ಗ ಹಿಡಿದು ನಿಂತಿರು. ಈ ನಿರ್ಭಾಗ್ಯಳಾದ ಮಾತೆ ಆ ಸರ್ಕಲ್ಲಿನೊಳಗೆ ಬಂದು ನಿಂತುಕೊಳ್ಳೋವರೆಗೂ ಅಲ್ಲೇ ಇರು. ಹೂಂ, ಈಗ ಈ ಹಗ್ಗಾನ ಅವಳ ಚಿನ್ನದಂಥ ಕತ್ತಿಗೆ ಹಾಕು.
ಸೈನಿಕ : ಚಿನ್ನದ ಕತ್ತು ! ಅವಳದ್ದು ಚಿನ್ನದ ಕತ್ತು !
ಪೋಲಿ : ನಿಜ, ಆದರೆ ನೀನು, ಪಾಲ್ ಜಾಕಿ, ಕಾನೂನಿನ ಈ ಹಗ್ಗದ ಮತ್ತೊಂದು ಕೊನೆ ಹಿಡಿದು ಆ ಚಂದಮಾಮನ ಮುಂದೆ ನಿಲ್ಲು. ಹಾಂ, ಹಾಗೆ ! ಅಮ್ಮಾ, ಒಂದು ಪ್ರಶ್ನೆ ಕೇಳ್ತೀನಿ, ಜವಾಬು ಕೊಡು : ನೀನು ಒಬ್ಬ ಕೊಲೆಗಾರನಿಗೆ ನಿನ್ನ ಉದರದಿಂದ ಜನ್ಮ ನೀಡಿದೆಯೇನು ? ಜವಾಬಿಲ್ಲ! ಮಹನೀಯರೇ, ಅಲ್ಲಿ ನೋಡಿ ತಾಯಿಯಾದ ಈಕೆ ತನ್ನ ಪಾಪಿ ಮಗನಿಂದ ಮುಖ ತಿರುಗಿಸಿ ನಿಂತಿದ್ದಾಳೆ ! ಇನ್ನು ಸ್ವಲ್ಪ ಹೊತ್ತಿನಲ್ಲೇ ಇದಕ್ಕೂ ಮಿಗಿಲಾದ ದೃಶ್ಯ ನಿಮಗೆ ತೋರಿಸಲಿದ್ದೇನೆ. ಹೆದರಿ ಅವಿತುಕೊಂಡಿರುವ ನ್ಯಾಯದ ಸೂರ್ಯ ಈಗ ಮತ್ತೆ ಕಾಣದ ಅಂತರಾಳದಿಂದ ಮೇಲೆದ್ದು ಬರಲಿದ್ದಾನೆ. ತನ್ನ ಪ್ರಕಾಶವನ್ನು ಸುತ್ತಲೂ ಬೀರಲಿದ್ದಾನೆ.
ಸೈನಿಕ : ಇಲ್ಲ-ಅದೆಲ್ಲಾ ಬೇಡ ಪೋಲಿ. ಅಂತರಾಳಕ್ಕೆ ಹೋಗಬೇಡ. ಸಾಕು. ಬಹಳ ಆಯಿತು.
ಪೋಲಿ : ಪಾಲ್ ಜಾಕಿ, ನಿನ್ನನ್ನು ಕಡೆಯ ಬಾರಿ ಕೇಳ್ತಿದೀನಿ. ನೀನು ಈ ನಿರ್ಭಾಗ್ಯ ತಾಯಿಯ ಮಗ ಅಂತ ಈಗಲೂ ದಾವಾ ಹೂಡ್ತಿಯೇನು ? ಈಗ ಸ್ವಲ್ಪ ಹೊತ್ತಿಗೆ ಮುಂಚೆ ಈಕೆಯ ಮಗಳು ಅಂತ ನೀನು ವಾದ ಮಾಡಿದೆ. ನೀನು ಹೇಳೋದೆಲ್ಲಾ ನೂರಕ್ಕೆ ನೂರು ಸುಳ್ಳು. ಅಂದರೆ ನಾವು ಸಾಕ್ಷಿಗಳ ಆಧಾರದ ಮೇಲೆ ತೀರ್ಮಾನ ಮಾಡಬೇಕಾಗುತ್ತೆ. ಈಗ ಮೊದಲ ಮತ್ತು ಕಟ್ಟಕಡೆಯ ಸಾಕ್ಷಿ. ಮಹನೀಯರೇ, ಇದರಿಂದ ನಿಮಗೆ ಪೂರ್ತಿ ಸಮಾಧಾನವಾಗಲಿದೆ. ಜಾಕಿ, ನೀನು ನಿಜವಾಗಿಯೂ ಈಕೆಯ ಸಂತಾನವಾಗಿದ್ದ ಪಕ್ಷದಲ್ಲಿ–ನಿನಗಿರೋ ಬಲಾನೆಲ್ಲಾ ಉಪಯೋಗಿಸಿ ಈಕೆಯನ್ನು ಈ ಸರ್ಕಲ್‌ನಿಂದ ಆಚೆಗೆ ಎಳಿ-ಗೊತ್ತಾಯಿತೇನು ?
ಸೈನಿಕ : ಗೊತ್ತಾಯಿತು ! ಚೆನ್ನಾಗಿ ಗೊತ್ತಾಯಿತು !! ಇದೆಲ್ಲಾ ಮೋಸ. ಎಲ್ಲಾ
ತಂಚವಂಚ. ಜಾಕಿ, ನೀನು ಸತ್ಯ ಬಿಟ್ಟು ಭ್ರಷ್ಟನಾಗಬೇಡ.
ಪೋಲಿ : ನಾನು ಮೂರರ ತನಕ ಎಣಿಸ್ತೀನಿ. ಒಂದು-ಎರಡು ಮೂರು !
(ಗ್ಯಾಲಿ ಜೆಸ್ಸಿಯನ್ನು ಸರ್ಕಲ್ಲಿನಿಂದ ಹೊರಕ್ಕೆಳೆಯುತ್ತಾಳೆ.)
ಜೆಸ್ಸಿ : ಏಯ್ ! ತಡಿ ! ಬೇಕೂಫ್, ಮೈಮೇಲೆ ಜ್ಞಾನವೇ ಇಲ್ಲ ನಿನಗೆ ! ಎಷ್ಟು ಜೋರಾಗಿ ಎಳೆಯೋದು! ನನ್ನ ಕತ್ತು-ಅಯ್ಯೋ
ಸೈನಿಕ : ಹೋಯ್ ! ಕತ್ತು, ಚಿನ್ನದ ಕತ್ತು ! ಎಲ್ಲಿ ಜಾಕಿ, ಜೋರಾಗಿ ಎಳಿ ! ಹಾಂ, ಸಾಕು ನಿಲ್ಲಿಸು. ಅವಳ ಕತ್ತು ಹೇಗೆ ಹಸಿರುಗಟ್ಟಿದೆ ನೋಡು.
ಜೆಸ್ಸಿ : ಕಾಪಾಡಿ, ಯಾರಾದರೂ ಬಂದು ಬಚಾವು ಮಾಡಿ !
ಗ್ಯಾಲಿ : ಹಾಂ, ಬಂದುಬಿಟ್ಟಳು. ಸರ್ಕಲ್ಲಿನಿಂದಾಚೆಗೆ ಎಳೆದೇಬಿಟ್ಟೆ.
ಪೋಲಿ : ಈಗ ಏನು ಹೇಳ್ತೀರಿ ? ಇಂಥ ಚಮತ್ಕಾರ ಎಲ್ಲಾದರೂ ನೋಡಿದ್ದೀರೇನು ? ನಾನಿಷ್ಟು ಮಾತ್ರ ಹೇಳಬಲ್ಲೆ-ಇಲ್ಲಿ ಒಂದು ಕಪಟ, ಮೋಸ ಅವಿತುಕೊಂಡಿದೆ.
(ಜೋರಾಗಿ ಚಪ್ಪಾಳೆ)
ಪೋಲಿ : ಆನೆಮರಿ, ನೀನು ನಿನ್ನನ್ನೇ ವಂಚಿಸಿಕೊಂಡಿದ್ದೀಯೆ. ಬಹಳ ಚಮತ್ಕಾರದಿಂದ ಆಕೆಯನ್ನು ಹೊರಕ್ಕೆಳೆದು ಏನು ಮಾಡಿದ್ದೀಯೇಂತ ಗೊತ್ತೇನು ? ನಿನಗೇ ಬೇಡವಾಗಿದ್ದ ಒಂದು ಸಂಗತೀನ ನಿರೂಪಿಸಿ ತೋರಿಸಿದ್ದೀಯೆ. ಅದೇನು ಅಂದರೆ, ನೀನು ಈ ನಿರ್ಭಾಗ್ಯ ತಾಯಿಯ ಹೊಟ್ಟೆಯಲ್ಲಿ ಖಂಡಿತಾ ಹುಟ್ಟಿಲ್ಲ. ನನ್ನ ಮುದ್ದು ಮರಿ, ನಿನಗೇ ತಿಳಿಯದೆ ಈ ಸತ್ಯವನ್ನು ಬೆಳಕಿಗೆ ತಂದಿದ್ದೀಯೆ.
ಸೈನಿಕ : ವಾಹ್, ವಾಹ್ ! ಅವನು ಮಾತಾಡೋದು ನೋಡು! ಎಲ್ಲೋ ಲುಚ್ಛಾಂತ ಕಾಣುತ್ತೆ. ಯಾವ ಕೊಳಚೇಲಿ ಬಿದ್ದಿದ್ದನೋ ಏನೋ. ನೀನು ಹೊರಟು ಹೋಗು ಜಾಕಿಮರಿ. ಇದೆಲ್ಲಾ ಕೆಲಸ ಇಲ್ಲದೆ ಇದ್ದೋರ ವ್ಯವಹಾರ ! ಸತ್ಯಾನ ಯಾವತ್ತೂ ಬಿಡಬೇಡ.
ಫೋಲಿ : ಮಹನೀಯರೇ, ಸದ್ಯಕ್ಕೆ ಇಷ್ಟು ಸಾಕು ಅನ್ನಿಸುತ್ತೆ. ಈ ಕಡೆ ಸಾಕ್ಷ್ಯ ಕೂಡ ಸರಿಯಾಗೇ ಇದೆ ಅನ್ನೋದನ್ನು ನೀವು ಯಾರೂ ಅಲ್ಲಗಳೆಯೋ ಹಾಗಿಲ್ಲ. ಈಗ ಗಮನವಿಟ್ಟು ಕೇಳಿ, ಮೊದಲು ಗಲಾಟೆ ಮಾಡ್ತಿದ್ದೋರು ಕೂಡ ಕೇಳಿ. ಅಷ್ಟೇ ಅಲ್ಲ, ಷರತ್ತು ಹೂಡುವ ನೆಪದಲ್ಲಿ ಈ ಆನೆಮರಿ ಮೇಲೆ ಹಣ ಕಟ್ಟಿದ್ದೋರು, ಆನೆಮರಿ ನಿರಪರಾಧಿ ಅಂತ ಹೇಳಿದ್ದೋರೆಲ್ಲಾ ನನ್ನ ಮಾತನ್ನು ಕೇಳಲೇಬೇಕು. ಆನೆಮರಿ ಕೊಲೆ ಮಾಡಿರೋದು ನಿಜ. ಈ ಆನೆಮರಿ ಮೊದಲು ಆ ಮಹಾತಾಯಿಯ ಮಗಳು ಅಂತ ದಾವ ಹೂಡಿತು. ನಾನು ಸಾಬೀತು ಮಾಡಿ ತೋರಿಸಿದೆ ಮಗಳಲ್ಲ, ಮಗ ಅಂತ. ಈಗ ಅದು ಮಗನೂ ಅಲ್ಲ ಅನ್ನೋದನ್ನು ನೀವೇ ನೋಡಿದೀರಿ. ಆನೆಮರಿ ಈ ಸಂಭಾವಿತ ಹೆಂಗಸಿನ ಸಂತಾನವಾಗಿರೋದು ಸಾಧ್ಯವೇ ಇಲ್ಲ. ಯಾಕೆಂದರೆ ಆನೆಮರಿ ಮಾಡಿರೋದು ಆಕೆಯ ಕೊಲೆಯನ್ನೇ ! ಅದನ್ನೂ ಕೂಡ ನೀವೆಲ್ಲರೂ ನೋಡಿದ್ದೀರಿ. ಅದು ಗಪ್‌ಚಿಪ್ ಅಂತ ಏನೂ ನಡೀಲೇ ಇಲ್ಲವೇನೋ ಅನ್ನೋ ಹಾಗೆ ನಿಂತಿರೋದನ್ನು ನೋಡಿ. ಅದು ಇನ್ನೇನು ತಾನೇ ಮಾಡೀತು ಹೇಳಿ ? ಇಂಥ ಹಿಂದೆಂದೂ ನಡೆಯದಂಥ ಸಂಗತೀನ ನಾನು ನಿಮ್ಮ ಮುಂದೆ ನಿರೂಪಿಸಿ ತೋರಿಸಿದೀನಿ. ಅಷ್ಟೇ ಅಲ್ಲ- ನೀವು ಹೇಗೆ ಬೇಕೂಂತ ಹೇಳಿದರೆ ಹಾಗೇ ವಾದ ಮಾಡಿ ನಿರೂಪಿಸಬಲ್ಲೆ. ಪ್ರತ್ಯಕ್ಷವಾಗಿ ಕಂಡಷ್ಟೇ ಸತ್ಯ ಅನ್ನೋ ಮಾತನ್ನು ನಾನು ಮತ್ತೆ ಮತ್ತೆ ನಿಮ್ಮ ಮುಂದೆ ಹೇಳಬಯಸುತ್ತೇನೆ. ಅದನ್ನು ನಾನು ಸಾಬೀತು ಮಾಡಿಯೂ ತೋರಿಸಬಲ್ಲೆ. ನಿಮ್ಮನ್ನೇ ಕೇಳ್ತಿನಿ, ಪ್ರಮಾಣವಿಲ್ಲದೆ ಯಾವುದನ್ನೇ
ಆಗಲಿ ಒಪ್ಪುತ್ತೀರೇನು ?
(ಮತ್ತೆ ಜೋರಾಗಿ ಕರತಾಡನ.)
ಪೋಲಿ : ಸಾಕ್ಷಿ ಇಲ್ಲದೆ ಹೋದರೆ ಮನುಷ್ಯ ಮನುಷ್ಯನೇ ಅಲ್ಲ-ಅವನೊಂದು ಕೋತಿ-ಅನ್ನೋದನ್ನು ಡಾರ್ವಿನ್ ಸಿದ್ಧಾಂತ ಮಾಡಿಯೇ ತೋರಿಸಿದ್ದಾನೆ. ಅದಕ್ಕೇ ಹೇಳಿದ್ದು, ಬೇರೇನು ಬೇಕು ? ಏಯ್ ಅವಿವೇಕಿ, ಕಪಟಿ ಆನೇಮರಿ ನೀನು ಎಳ್ಳಿನಷ್ಟು ಸುಳ್ಳು ಹೇಳಿದ್ದರೂ, ತಲೆಯಿಂದ ಕಾಲಿನವರೆಗೆ ನೀನು ಸುಳ್ಳಿನ ಗಟಾರಾಂತ ನಾನು ಸಾಬೀತು ಮಾಡಬಲ್ಲೆ.
ಅಲ್ಲದೆ ಮತ್ತೊಂದು ಸಂಗತಿ ನಿಮಗೆ ತಿಳಿಸಲಿದ್ದೇನೆ. ಇದನ್ನೂ ಕೂಡ ನಿಮ್ಮ ಮುಂದೆಯೇ ಸಾಬೀತು ಮಾಡಲಿದ್ದೇನೆ. ಮತ್ತೊಂದು ಮುಖ್ಯ ಸಂಗತಿ ಇದೆ ಮಹನೀಯರೇ-ಆನೆಮರಿ ಆನೆಮರಿಯಲ್ಲ. ಅಬ್ಬಬ್ಬ ಅಂದರೆ ಅದು ಒಂದು ಜಿರಾಫೆಯಾಗಿರೋದಕ್ಕೆ ಸಾಧ್ಯ ಅಷ್ಟೆ.
ಸೈನಿಕ : ಹುರ‍್ರೇ ! ಹುರ‍್ರೇ !
ಗ್ಯಾಲಿ : ಸುಳ್ಳು. ಇದು ನಿಜ ಅಲ್ಲ!
ಪೋಲಿ : ಯಾಕೆ ? ಇದು ನಿಜ ಆಗೋಕೆ ಸಾಧ್ಯವಿಲ್ಲವೇನು ?
ಗ್ಯಾಲಿ : ಆದರೆ ನಾಟಕದಲ್ಲಿ ಹಾಗಂತ ಬರೆದಿಲ್ಲವಲ್ಲ ? ಇದೆಲ್ಲಾ ನಡೆಯೋದಿಲ್ಲ.
ಪೋಲಿ : ಏನೇ ಆಗಲಿ, ನೀನು ಕೊಲೆ ಮಾಡಿರೋದಂತೂ ನಿಜ.
ಗ್ಯಾಲಿ : ಅದೂ ಸುಳ್ಳು.
ಪೋಲಿ : ಆದರೆ ನಾನು ಹಾಗಂತ ಸಾಬೀತು ಮಾಡಿ ತೋರಿಸಿದೀನಲ್ಲ. ಸಾಬೀತು ಮಾಡಿದೀನಿ, ಸಾಬೀತು ಮಾಡಿದೀನಿ, ಸಾಬೀತು ಮಾಡಿದೀನಿ!
(ಗ್ಯಾಲಿ ಬಡಬಡಿಸುತ್ತಾ ಬಾಳೆಮರದತ್ತ ನುಗ್ಗುತ್ತಾಳೆ. ಅನಿರೀಕ್ಷಿತ ಆಕ್ರಮಣದಿಂದ ಬಾಳೆಮರ ಕೆಳಗೆ ಬೀಳುತ್ತದೆ.)
ಪೋಲಿ : (ಕೆಳಗೆ ಬೀಳುತ್ತಾ) ನೋಡಿದಿರಾ! ನೋಡಿದಿರಾ!
ಯುರಾಯಾ : ನೋಡಿದೆವು, ಕೊಲೆಗಾರ ನೀನು !
ಪೋಲಿ : (ಗರ್ಜಿಸುತ್ತಾ) ನಾನಾಗಲೇ ಸಾಬೀತು ಮಾಡಿ ತೋರಿಸಿದೀನಿ!
(ಪರದೆ ಬೀಳುತ್ತದೆ.)
ಯುರಾಯಾ : ಅರೆ, ಹಾಡು. ಬೇಗ ಶುರು ಮಾಡಿ.
(ನಾಲ್ಕು ಕಲಾವಿದರೂ ಬೇಗ ಬೇಗ ಪರದೆಯ ಮುಂದೆ ಬಂದು ನಿಂತು ಹಾಡು ಹೇಳುತ್ತಾರೆ.)
ಸೈನಿಕ : ಇಷ್ಟೇ ಏನು ! ಮುಗಿದೇ ಹೋಯಿತೇ ? ಯಾಕೋ ಮಿತಿಮೀರಿ ಹೋಯಿತು. ಇದೂ ಒಂದು ತೀರ್ಮಾನವೇನು ? ನಾಟಕ ಇಲ್ಲಿಗೆ ಮುಗಿಯೋದಕ್ಕೆ ನಾವು ಬಿಡೋದಿಲ್ಲ. ಪರದೆ ತೆಗೆದೇ ಇರಲಿ ನಾಟಕ ಮುಂದುವರಿಸಿ.
ಪೋಲಿ : ಏನು ಹೇಳಿದೀರಿ ನೀವು ? ಮುಂದೆ ಏನೂ ಬರೆದೇ ಇಲ್ಲ. ಹೇಗೆ ಆಡೋದು ? ಸ್ವಲ್ಪ ವಿವೇಕದಿಂದ ನಡ್ಕೊಳ್ಳಿ. ನಾಟಕ ಇಲ್ಲಿಗೆ ಮುಕ್ತಾಯವಾಯಿತು.
ಸೈನಿಕ : ಎಂಥಾ ಮೋಸಾನಯ್ಯ! ಇಂಥಾದ್ದನ್ನು ನಾವು ಇದುವರೆಗೆ ಕಂಡದ್ದೂ ಇಲ್ಲ, ಕೇಳಿದ್ದೂ ಇಲ್ಲ ! ಸರಿಹೋಯ್ತು ! ಎಲ್ಲಾ ತಲೆಕೆಳಗಾಗಿದೆ. (ಸೈನಿಕರು ಸ್ಟೇಜಿನ ಮೇಲೆ ಹೋಗಿ ಗಟ್ಟಿಯಾಗಿ ಮಾತನಾಡಲು ಪ್ರಾರಂಭಿಸುತ್ತಾರೆ.)
ಸೈನಿಕ : ನಮ್ಮ ಹಣ ವಾಪಸ್ ಕೊಟ್ಟುಬಿಡು. ಆನೆಮರಿಗೆ ಸರಿಯಾದ ನ್ಯಾಯ ದೊರಕಿಸಿಕೊಟ್ಟರೆ ಸರಿ. ಇಲ್ಲದೆ ಇದ್ದರೆ ಹಣ ವಾಪಾಸ್ ಕೊಡು. ಒಂದು ಬಿಡಿಗಾಸೂ ಬಿಡೋಲ್ಲ. ಏಯ್ ಚಂದಮಾಮ, ಹೇಳಿದ್ದು ತಿಳೀತೇನು ?
ಪೋಲಿ : ನೀವು ಸ್ಟೇಜಿನ ಮೇಲೆ ನೋಡಿದ್ದು ಕಹಿಯಾದರೂ ಸತ್ಯವಾಗಿತ್ತು. ನೀವೂ ಇದನ್ನು ತಿಳ್ಕೊಬೇಕು.
ಸೈನಿಕ : ಹಾಗೇನು ? ಹಾಗಿದ್ದರೆ ನಿನ್ನ ಕಣ್ಣೊಳಗೆ ಇರೋ ಕಹಿಯಾದ ಸತ್ಯಾನ ಈಗಲೇ ಹೊರಕ್ಕೆಳೀತೀವಿ.
ಪೋಲಿ : ನೀವು ಹೀಗೆ ಯದ್ವಾತದ್ವಾ ಹೊಡೀತಿದೀರಲ್ಲ. ನಿಮಗೆ ಕಲೆ ಅಂದರೆ ಏನು ಅನ್ನೋದೇ ಗೊತ್ತಿಲ್ಲ. ಕಲಾವಿದನ ಹತ್ತಿರ ಯಾವ ರೀತಿ ಗೌರವದಿಂದ ನಡ್ಕೊಬೇಕು ಅನ್ನೋದೂ ತಿಳಿದಿಲ್ಲ.
ಸೈನಿಕ : ಗೊತ್ತಿಲ್ಲದಿದ್ದರೆ ಬೇಡ. ಈ ತಲೆಹರಟೆ ಎಲ್ಲಾ ಇಲ್ಲದಿದ್ದರೂ ನಮ್ಮ ಕೆಲಸ ನಡೆಯುತ್ತೆ.
ಗ್ಯಾಲಿ : ಇಲ್ಲಿ ಕೇಳಿ-ಇಷ್ಟು ಹೊತ್ತೂ ನೀವು ನೋಡಿದ್ದನ್ನೆಲ್ಲಾ ಸರೀಂತ ನಾನೂ ಒಪೀನಿ.
ಪೋಲಿ : ಹಾಗೆ ಹೇಳು ಬಾಸ್.
ಗ್ಯಾಲಿ : ನಾಟಕ ಇನ್ನೂ ನಡೀಬೇಕು ಅಂತ ಯಾರು ಅಂತೀರೋ ಮುಂದೆ ಬನ್ನಿ -ನಾಲ್ಕು ಔನ್ಸಿನ ಗ್ಲೌವ್ಸ್ ಹಾಕ್ಕೊಂಡು ಅವನ ಜತೆ ಬಾಕ್ಸಿಂಗ್ ಮ್ಯಾಚ್ ನಡೆದು ಹೋಗಲಿ. ತಲೆ ತಿರುಗಿದ ಆ ಮನುಷ್ಯ ನನ್ನ ಮುಂದೆ ಬಂದು ನಿಲ್ಲಲಿ. ಯಾರದು ಹಣ ವಾಪಸ್ ಬೇಕೂಂತ ಆತುರದಲ್ಲಿರೋರು ?
ಸೈನಿಕ : ನಮ್ಮ ಟೋನಿ ಹೊಡೆದಾಡ್ತಾನೆ. ಮುಂದೆ ಹೋಗು, ಟೋನಿ. ಹೆದರಬೇಡ. ಆನೆಮರಿ ಮೂಳೇನ ಮುರಿದು ಹಾಕು.
ಗ್ಯಾಳಿ : ಆಗಲಿ ಸ್ನೇಹಿತರೇ-ಒಂದು ಮಾತು ಮಾತ್ರ ಇತ್ಯರ್ಥವಾಗಿದೆ. ಸ್ಟೇಜ್ ಮೇಲೆ ನಿಮ್ಮ ಮುಂದೆ ತೋರಿಸಿದ್ದು ಸತ್ಯವೂ ಹೌದು, ನಾಟಕವೂ ಹೌದು. ಅಪ್ರಿಯ ಸತ್ಯ, ಒಳ್ಳೆಯದು-ಕೆಟ್ಟದ್ದರ ನಾಟಕ.
(ಎಲ್ಲರೂ ಬಾಕ್ಸಿಂಗ್ ಮ್ಯಾಚ್‌ನತ್ತ ತೆರಳುತ್ತಾರೆ.)
ಕುಡಿ
ಕುಡಿ
ಜಿ. ಎಸ್. ಸದಾಶಿವ
ಒಂದು ದಿನ ಒಳ್ಳೆಯ ಶೀಸೆಯೊಂದನ್ನು ತೊಳೆದು, ಒಂದಿಷ್ಟು ನೀರು ಹೊಯ್ದು, ಅದರಲ್ಲಿ ಮನಿಪ್ಲಾಂಟ್ ಇಟ್ಟು, ಜಗಲಿಯ ಗೂಡಿನಲ್ಲಿ ಪ್ರತಿಷ್ಠಾಪಿಸಿ ನನ್ನ ಹೆಂಡತಿ ಈಗ ದಿನಾ ಬೆಳಿಗ್ಗೆ ಎದ್ದು ಚಿಗುರಿದೆಯೇ ಎಂದು ನೋಡುತ್ತಾಳೆ. ಅಂದಿನಿಂದ ಇಂದಿನವರೆಗೂ ಅದು ಒಂದೇ ರೀತಿ. ಇದ್ದ ನಾಲ್ಕು ಎಲೆ ಹಸಿರಾಗಿಯೇ ಇದೆ. ಐದನೆಯ ಎಲೆ ಚಿಗುರಲೇ ಇಲ್ಲ. ಎರಡು ಬಾರಿ ಶೀಸೆ ಒಡೆಯಿತು. ಹೊಸ ಶೀಸೆ, ಹೊಸ ನೀರು, ಹೊಸ ಮನಿಪ್ಲಾಂಟ್ ಬಂತು. ಈ ಬಳ್ಳಿ ಸೊಂಪಾಗಿ ಎಲೆಕೊಡುತ್ತದೆ, ಬೆಡ್ ರೂಮಿನ ಬಾಗಿಲಿಗೆ ಕಮಾನಾಗಿ ಬಳ್ಳಿ ಹಬ್ಬುತ್ತದೆ ಎಂದು ನನ್ನ ಹೆಂಡತಿಗೆ ಸಡಗರ. ಅವಳ ಉತ್ಸಾಹ ಇಳಿದೇ ಇಲ್ಲವಲ್ಲ ಎಂದು ನನ್ನ ಆಶ್ಚರ್ಯ. ಅವಳು ಹಾಕಿದ ಮನಿ ಪ್ಲಾಂಟಿಗೂ, ನಾನು ತಪ್ಪದೇ ತಿಂಗಳು ತಿಂಗಳು ಕೊಳ್ಳುವ ಲಾಟರಿ ಟಿಕೇಟಿಗೂ ಸಂಬಂಧ ಇದ್ದೇ ಇದೆ ಎಂದು ನನ್ನ ನಂಬಿಕೆ. ಈ ಒಂದು ವಿಷಯದಲ್ಲಿ ನಾನು ನನ್ನವಳು ಒಂದು ಪ್ಲಾಂಟ್ ಚಿಗುರಿಟ್ಟಾಗ ಹಣ ಬಂದೇ ಬರುತ್ತದೆ. ಹೇಗೋ ಬರುತ್ತದೆ ಎಂದು ಅವಳ ವಾದ. ಲಾಟರಿಯಿಂದಲೇ ಬರುತ್ತದೆ ಎಂದು ನಾನು. ನನಗೂ ನನ್ನ ಹೆಂಡತಿಗೂ ದಿನಾ ಮಾತಾಡಲು ಇದು ಒಂದು ಒಳ್ಳೆಯ ವಸ್ತು. ಯಾಕಿದು ಹೀಗೆ…ಚಿಗುರುತ್ತಿಲ್ಲ ಎಂದು ಅವಳ ಕೊರಗು. ಯಾಕಿದು ಹೀಗೆ…ಹಣ ಬರುತ್ತಿಲ್ಲ ಎಂದು ನನ್ನ ಚಿಂತೆ.
ಒಂದು ದಿನ ರೇಗಿ ಈ ಬಂಜೆ ಗಿಡ ಯಾಕಿಡ್ತಿಯಾ ಎಂದೆ. ದುಡ್ಡು ಕೊಡದ ಲಾಟರಿ ಟಿಕೆಟ್ ಯಾಕೆ ಎಂದು ಮೂತಿ ಊದಿದಳು. ಸುಮ್ಮನಾದೆ. ಅಷ್ಟಕ್ಕೂ ಅದೇನು ಅಂಥ ಮಹಾ ವಿಷಯ. ಚಿಲ್ಲರೆ ಬಾಬ್ತು ಎಂದು ಮುಸುಕಿಟ್ಟೆ.
ಮಾರನೆಯ ಬೆಳಿಗ್ಗೆ ಲಾಟರಿ ರಿಸಲ್ಟು. ಬೆಳಿಗ್ಗೆ ಬೇಗ ಎದ್ದು ದಿಂಬಿನಡಿಯಿಂದ ಟಿಕೆಟ್ ತೆಗೆದು, ಪೇಪರ್ ಬಿಡಿಸಿ, ಆ ನಂಬರಿಗಾಗಿ ಹುಡುಕಿದೆ. ಅದು ಅಲ್ಲಿ ಎಲ್ಲೂ ಇರಲಿಲ್ಲ. ಕಾಫಿ ಕೊಟ್ಟ ಹೆಂಡತಿ ಮನಿಪ್ಲಾಂಟ್ ಕುಡಿ ಒಡೆದಿದೆ ಎಂದಳು.
ಪ್ರಾಚೀನವಾದ ಸಂಜ್ಞಾಭಾಷೆ
ಪ್ರಾಚೀನವಾದ ಸಂಜ್ಞಾ ಭಾಷೆ
ಎ. ಎಸ್. ಜಯರಾಂ
ಭಾಷೆ ಎಂದಕೂಡಲೆ ಅದರ ಶಬ್ದರೂಪಗಳು ನಮ್ಮ ಕಲ್ಪನೆಗೆ ಬರುತ್ತವೆ. ಶಬ್ದಗಳು ಯಾವುದೇ ಭಾಷೆಯ ಮೂಲಾಂಶಗಳು. ಒಂದು ಅರ್ಥಸಹಿತ ಶಬ್ದಕ್ಕೆ ಭಾಷೆಯಲ್ಲಿ ಚಾಕ್ಷುಷ ಮತ್ತು ಶಾಬ್ದಿಕವೆಂದು ಎರಡು ರೂಪಗಳು. ಪರಂಪರೆಯಿಂದ ವೈಯಾಕರಣಿಗಳು ಇದನ್ನು ಗುರುತಿಸುತ್ತಾ ಬಂದಿದ್ದಾರೆ. ಭಾಷೆಯ ಚಾಕ್ಷುಷರೂಪ ಅಥವಾ ಲಿಪಿರೂಪ ಅದರ ಸಂಕೇತ ಮಾತ್ರ. ಇನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಭಾಷೆಯ ಶಾಬ್ದಿಕರೂಪವೇ ಆಲೋಚನಾಂಶದ ಅಥವಾ ಭಾವನೆಯ ಸಂಕೇತ. ಇಂಥ ಶಬ್ದಕ್ಕೆ ಅರ್ಥ ಇಂಥದ್ದೆಂದು ‘ಸಾಮಾಜಿಕ ಒಪ್ಪಂದ’ವೊಂದು ಏರ್ಪಟ್ಟಿರುವುದರಿಂದ ಆಲೋಚನೆಗಳ ವಿನಿಮಯ ಒಂದು ಭಾಷೆಯ ಮೂಲಕ ನಿರ್ದಿಷ್ಟ ಸಮುದಾಯದಲ್ಲಿ ನಡೆಯುತ್ತದೆ.
ಮಾತನಾಡುವ ವ್ಯಕ್ತಿಯ ಮನಸ್ಸಿನಲ್ಲಿ ಮೂಡಿದ ‘ಸಂಕಲ್ಪ’ ಶಬ್ದದ ಮೂಲಕ ವ್ಯಕ್ತವಾಗಬಹುದು ; ಬರವಣಿಗೆಯ ಮೂಲಕ ವ್ಯಕ್ತವಾಗಬಹುದು. ಇವೆರಡು ತುಂಬ ಪರಿಚಿತವಿರುವ, ಪ್ರಚಲಿತವಿರುವ ವಿಧಾನಗಳು. ಇವಲ್ಲದೆ ಅನಾದಿಕಾಲದಿಂದ ಆಲೋಚನೆಯ ಭಾವನೆಯ ಮಾಧ್ಯಮವಾಗಿ ಸಂಗೀತ ನೃತ್ಯ ಶಿಲ್ಪ ಮೊದಲಾದ ಲಲಿತಕಲೆಗಳು ಒದಗಿ ಬಂದಿವೆಯೆಂಬುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದು. ಸಂಗೀತ ನೃತ್ಯಗಳೂ ಭಾವಲಹರಿಯ ಸಂಕೇತಗಳೇ ! ಬಹುಶಃ ಭಾಷೆಗಿಂತಲು ಹೆಚ್ಚು ಸೂಕ್ಷ್ಮವಾಗಿ ಸಮರ್ಥವಾಗಿ ನೇರವಾಗಿ ಅನುಭವವನ್ನು ತಾಗಿಸುವ ಮಾಧ್ಯಮ ಸೌಲಭ್ಯ ಈ ಲಲಿತಕಲೆಗಳಿಗಿರುವಂತೆ ತೋರುತ್ತದೆ.
3
ನೃತ್ಯ ಸ್ಥೂಲವಾಗಿ ಹೇಳುವುದಾದರೆ ಮೂಲತಃ ಒಂದು ಮೌನಭಾಷೆ. (ಕೆಲವು ನೃತ್ಯ ಸಂಪ್ರದಾಯಗಳಲ್ಲಿ ಅದು ಮೂಕ ಭಾಷೆಯೇ ಆಗಿ ಪರಿಮಿತವಾದದ್ದು ಒಂದು ದೌರ್ಭಾಗ್ಯ.) ಭಾಷೆಗೆ ಮೀರಿದ ಅರ್ಥಪ್ರತೀತಿಯನ್ನು ತಾಳ ಲಯ ರೇಖೆ ಮುದ್ರೆ ವಿನ್ಯಾಸಗಳ ಮೂಲಕ ಅದು ತಂದುಕೊಡುತ್ತದೆ. ಆದರೆ, ನೃತ್ಯ ತನ್ನ ಪ್ರಾಕೃತಿಕಾವಸ್ಥೆಯಲ್ಲಿ ಆಲೋಚನೆಯನ್ನು ಅನುವದಿಸುವ ಕಾರ‍್ಯದಿಂದ ಸಂಪೂರ್ಣವಾಗಿ ಪಾರಾಗಿದ್ದಿರಲಾರದು.
ಸಂಜ್ಞಾ ಭಾಷೆಗಳು ಸ್ಥೂಲವಾಗಿ ನೃತ್ಯವನ್ನು ನೆನಪಿಗೆ ತರುತ್ತವೆ. ಇಲ್ಲಿ ನೃತ್ಯ ಮಾಧ್ಯಮವನ್ನು ವ್ಯಾವಹಾರಿಕ ಉಪಯೋಗಕ್ಕೆ ಬಳಸಿಕೊಂಡಂತೆ ಕಾಣುತ್ತದೆ ಅಥವಾ ಇದರಿಂದ ಅದು ಪರಿಣಮಿಸಿರಬಹುದು.
ಭಾಷೆಯ ಉಗಮದ ಬಗ್ಗೆ ಅನೇಕ ವಾದಗಳಿವೆ. ಅನುಕರಣವಾದ, ಉದ್ಗಾರವಾದ, ಅನುರಣನವಾದ ಇತ್ಯಾದಿ. ಅವುಗಳಲ್ಲಿ ಸಂಜ್ಞಾಭಾಷೆಯೇ ಭಾಷೆಗಳ ಮೂಲವೆಂಬ ವಾದವೂ ಒಂದು. ವುಂಡ್ (Wundt) ಎಂಬ ವಿದ್ವಾಂಸ ಈ ವಾದವನ್ನು ಪ್ರತಿಪಾದಿಸಿದ್ದಾನೆ. ಈ ಮೌನಭಾಷೆ ಭಾಷಾ ಇತಿಹಾಸದಲ್ಲಿ ಪ್ರಾಚೀನತಮವೇ ಇರಬಹುದು. ಇಲ್ಲಿ ಉದ್ದಿಷ್ಟ “ವಸ್ತು”ವನ್ನು ನೇರವಾಗಿ ವಿವರಿಸುವ ಅನುಕರಿಸಿ ತೋರಿಸುವ ಪ್ರಯತ್ನವಿದೆ. ಪ್ರಧಾನವಾಗಿ ಅಭಿನಯದಿಂದ ಅಥವಾ ಸಂಜ್ಞೆಗಳಿಂದ ಅಭಿವ್ಯಕ್ತಿ ಇಲ್ಲಿ.
ಭಾಷಾ ವಿಜ್ಞಾನಿಗಳು ಪ್ರಪಂಚದಲ್ಲಿ ಸುಮಾರು ೩೦೦೦ ಭಾಷೆಗಳಿವೆಯೆನ್ನುತ್ತಾರೆ. ಅವುಗಳಲ್ಲಿ ಅನೇಕ ಭಾಷೆಗಳು ಲಿಪಿಯಿಲ್ಲದ ಆಡುಭಾಷೆಗಳು ಮಾತ್ರ. ಇವು ಸಾಲದೆಂಬಂತೆ ನಿಶ್ಯಬ್ದ ಸಂಕೇತ ಭಾಷೆಗಳೂ ಇವೆಯೆಂಬ ಅಂಶ ಆಶ್ಚರ್ಯಕರವೇ !
ಸಂಜ್ಞಾ ಭಾಷೆ ಎಂದ ಕೂಡಲೇ ನಮಗೆ ಕಿವುಡು ಮೂಗರ ಭಾಷೆ ನೆನಪಿಗೆ ಬರಬಹುದು. ಆದರೆ ಅದರಿಂದ ವಿಭಿನ್ನವಾದ ಅಭಿನಯ ಪ್ರಧಾನವಾದ ಸಂಜ್ಞಾ ಭಾಷೆಯೊಂದು ಇದೆ. ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ೧೮೮೫ ರಲ್ಲಿ ೧೧೧,೦೦೦ ಮಂದಿ ಸಂಜ್ಞಾ ಭಾಷೆಯನ್ನು ಉಪಯೋಗಿಸುವ ಮೂಲನಿವಾಸಿಗಳಿದ್ದರೆಂದು ಸಂಶೋಧನಾ ತಜ್ಞ ಲೆವಿಸ್ ಎಫ್ ಹಾಡ್ಲೇ ತಿಳಿಸುತ್ತಾರೆ. ಆದರೆ ಈಚೆಗೆ ನಾಗರಿಕತೆಯ ಹಬ್ಬುವಿಕೆಯಿಂದಾಗಿ ಇವರ ಸಂಖ್ಯೆ ತುಂಬ ಕಡಿಮೆಯಾಗಿದೆ.
ಉತ್ತರ ಅಮೆರಿಕದ ಹಡ್ಸನ್‌ಕೊಲ್ಲಿಯಿಂದ ಮೆಕ್ಸಿಕೊಕೊಲ್ಲಿಯವರೆಗಿನ ವಿಸ್ತೀರ್ಣದಲ್ಲಿ ಅನೇಕ ಸಂಜ್ಞೆಗಳು ಸಂಭಾಷಣಾ ಮಾಧ್ಯಮವಾಗಿವೆ. ಈ ಸಂಜ್ಞಾಭಾಷೆ ವಿವಿಧ ಬುಡ
ಕಟ್ಟಿನ ಮೂಲನಿವಾಸಿ ಇಂಡಿಯನ್ನರಿಗೆ ಒಂದು ವಿಶ್ವಭಾಷೆ (uiversal language).
ಕಿಯೋವಾಸ್, ಅಪಾಚಿಸ್, ಕಡೂಸ್, ಸ್ನೇಕ್ಸ್, ಕ್ರೌಸ್ ಮತ್ತು ಪೌನೀಸ್ ಮೊದಲಾದ ಹಲವಾರು ಬುಡಕಟ್ಟಿನ ಜನಗಳಿಗೆ ತಮ್ಮದೆ ಆದ ಪ್ರಾದೇಶಿಕ ಭಾಷೆಗಳಿವೆ. ಆದರೆ ಈ ವಿವಿಧ ಬುಡಕಟ್ಟಿನ ಜನ ಪರಸ್ಪರ ಕಲೆತಾಗ ಅವರ ಸಂಭಾಷಣಾ ಮಾಧ್ಯಮ ಸಂಜ್ಞಾ ಭಾಷೆ. ಉತ್ತರ ಅಮೆರಿಕದ ಬಯಲುಸೀಮೆಯಲ್ಲೆಲ್ಲಾ ಈ ಜಾಗತಿಕ ಸಂಜ್ಞಾ ಭಾಷೆ ತುಂಬ ಪ್ರಚಲಿತವಾಗಿದೆ.
ವಿಲಿಯಂ ಟಾಂಕಿನ್ಸ್ ಎಂಬ ಸಂಜ್ಞಾ ಭಾಷಾತಜ್ಞ ತನ್ನ ಬಾಲ್ಯಾವಸ್ಥೆಯ ಹತ್ತು ವರ್ಷಗಳನ್ನು ಅಮೆರಿಕಾ ಸಂಯುಕ್ತ ಸಂಸ್ಥಾನದ ಉತ್ತರಭಾಗದ ಮಧ್ಯಪ್ರದೇಶದಲ್ಲಿ ಅಲ್ಲಿನ ಮೂಲನಿವಾಸಿಗಳೊಡನೆ ಬಾಳಿ ಆ ಭಾಷೆಯನ್ನು ಕುರಿತಾದ ವ್ಯವಸ್ಥಿತವಾದ ವೈಜ್ಞಾನಿಕ ಅಧ್ಯಯನ ಮಾಡಿದ್ದಾನೆ. ಆತನ ಪ್ರಕಾರ ಈ ಸಂಜ್ಞಾ ಭಾಷೆ ಅಮೆರಿಕದ ಪ್ರಪ್ರಥಮ ಭಾಷೆ. ಇದು ಅಮೆರಿಕದ ಮೊದಲ ಮತ್ತು ಏಕೈಕ ಜಾಗತಿಕ ಭಾಷೆ.
ಪ್ರಚಲಿತ ಆಡುಮಾತುಗಳೆಲ್ಲ ಅಭಿವ್ಯಕ್ತಿಗೆ ಧ್ವನ್ಯಂಗಗಳನ್ನು ಆಶ್ರಯಿಸಿದರೆ ಈ ಸಂಜ್ಞಾ ಭಾಷೆ ಮಾನವನ ಎರಡು ಕೈಗಳನ್ನು ಆಶ್ರಯಿಸಿದೆ. ಆದರಲ್ಲೂ ಬಲಗೈ ಈ ಭಾಷೆಯ ಬಲಗೈಯೇ ಸರಿ.
ಈ ಭಾಷೆಯ ಶೇಕಡ ೮೫ ರಷ್ಟು ಸಂಜ್ಞೆಗಳನ್ನು ಬಲಗೈಯಿಂದ ಮಾಡಬೇಕು. ಮೂಲನಿವಾಸಿ ಇಂಡಿಯನ್ನರು ಉಪಯೋಗಿಸುವ ಈ ಸಂಜ್ಞಾ ಭಾಷೆ ಎಲ್ಲ ಭಾಷೆಗಳಿಗೂ ಆಧಾರವಾಗಿರುವುದರಿಂದ, ಮೂಲಭೂತವಾಗಿರುವುದರಿಂದ, ತರ್ಕಬದ್ಧವಾಗಿರುವುದರಿಂದ ಪ್ರಪಂಚದ ಅತ್ಯಂತ ಸರಳವಾದ ಭಾಷೆಯೆಂದು ವಿಲಿಯಂ ಟಾಂಕಿನ್ಸ್ ಪ್ರಶಸ್ತಿ ಕೊಟ್ಟಿದ್ದಾರೆ.
ಸಂಜ್ಞಾ ಭಾಷೆಯಲ್ಲಿ ಸಂಜ್ಞೆಗಳನ್ನು ಉಪಯೋಗಿಸುವಾಗ ಮಿತವ್ಯಯದ ಕಡೆ ಲಕ್ಷ್ಯ. ಸಂಜ್ಞೆಗಳ ದುಂದುಗಾರಿಕೆಗೆ ಆಸ್ಪದವೇ ಇಲ್ಲ. ಹತ್ತಾರು ಸಮಾನಾರ್ಥಕ ಪರ‍್ಯಾಯ ಸನ್ನೆಗಳು ಇಲ್ಲವೇ ಇಲ್ಲ. ಅದರಿಂದಾಗಿ ಸೂಕ್ಷ್ಮಾತಿಸೂಕ್ಷ್ಮ ಭಾವನೆಗಳನ್ನು ವ್ಯಕ್ತ ಪಡಿಸುವುದು ದುಸ್ಸಾಧ್ಯ.
ಸಂಜ್ಞಾ ಭಾಷೆಯ ಒಟ್ಟು ಮೂಲಭೂತ ಸಂಜ್ಞಾಕೋಶ ಸುಮಾರು ಇನ್ನೂರು ಸಂಜ್ಞೆಗಳಿಂದ ಕೂಡಿರಬಹುದು. ಅಷ್ಟೆ. ಪ್ರಾಥಮಿಕ ಸಂಜ್ಞೆಗಳಿಂದ ಇತರ ಸಂಜ್ಞೆಗಳನ್ನು ರಚಿಸಿಕೊಳ್ಳಬಹುದು. ಒಂದು ಉದಾಹರಣೆಯನ್ನು ಪರಿಶೀಲಿಸಬಹುದು :
‘ಮೃದು’ ಎನ್ನುವ ಅರ್ಥವನ್ನು ವ್ಯಂಜಿಸುವ ಮೂಲ ಸಂಜ್ಞೆ ಆ ಭಾಷೆಯಲ್ಲಿಲ್ಲ. ಆದರೆ ಗಟ್ಟಿ (ಕಠಿಣ) ಎನ್ನುವ ಮೂಲ ಸಂಜ್ಞೆಯಿದೆ. ಆದ್ದರಿಂದ ‘ಮೃದು’ ವೆನ್ನಬೇಕಾದರೆ ಗಟ್ಟಿಯಲ್ಲದ್ದು ಎಂದು ನಿಷೇಧಾರ್ಥಕ ಮಾಡಿಕೊಳ್ಳಬೇಕು : (No+Hard) ಎರಡು ಸಂಜ್ಞೆಗಳ ಮೂಲಕ ಸೂಚಿಸಬೇಕು.
ಗಟ್ಟಿ : (ಸಂಜ್ಞೆ) ನೇರವಾಗಿ ಬಿಚ್ಚಿ ಹಿಡಿದ ಎಡ ಅಂಗೈಯನ್ನು ಬಲಮುಷ್ಟಿಯಿಂದ
ಎರಡು ಮೂರು ಬಾರಿ ಕುಟ್ಟುವುದು.
ಇಲ್ಲ: (ಸಂಜ್ಞೆ) ಬಲ ಅಂಗೈಯನ್ನು ಬಿಚ್ಚಿ, ಮಗುಚಿ, ದೇಹದ ಮುಂಭಾಗಕ್ಕೆ ಹಿಡಿದು ಬೆರಳುಗಳು ಎಡಕ್ಕೆ ತಿವಿಯುವಂತಿದ್ದು, ಅದನ್ನು ಬಲಭಾಗಕ್ಕೆ ಸೆಳೆದು ಅಂಗೈ
ಮೇಲ್ಮೊಗವಾಗುವಂತೆ ತಿರುಗಿಸಿ, ಪುನರಾವರ್ತನೆ ಮಾಡುವುದು.
ಇವೆರಡು ಸಂಜ್ಞೆಗಳನ್ನು (No+Hard) ಅಲ್ಪ+ಕಠಿಣ ಎಂಬಂತೆ ಜೋಡಿಸಿದರೆ “ಮೃದು’ವೆಂಬ ಸಂಜ್ಞೆಯಾಗುತ್ತದೆ.
ಹಾಗೆಯೇ ಹೊಸದು ಎಂಬುದಕ್ಕೆ ಒಂದು ಸಂಜ್ಞೆಯಿಲ್ಲ. ಅದನ್ನು “ಹಳೆಯದು+ಅಲ್ಲ” ಎಂಬಂತೆ ಸೂಚಿಸಬೇಕು. ಹಳೆಯದು ಎಂಬುದರ ಮೂಲ ಸಂಜ್ಞಾರ್ಥ ವೃದ್ಧನನ್ನು ಸೂಚಿಸುತ್ತದೆ.
ವೃದ್ಧ : (ಸಂಜ್ಞೆ) ಬಲಮುಷ್ಟಿಯನ್ನು ಬಲಭುಜದ ಹತ್ತಿರ ಒಂದು ಅಡಿ ಅಂತರದಲ್ಲಿರಿಸಿ ಕೈಯನ್ನು ಮೇಲಕ್ಕೆತ್ತಿ, ಮುಂದಕ್ಕೆ ಚಾಚಿ, ಕೆಳಕ್ಕೆ ಇಳಿಸಿ, ಮತ್ತೆ ವರ್ತುಲವಾಗಿ ಪೂರ್ವಸ್ಥಾನಕ್ಕೆ ತರುವುದು.
ಇದು ಕೋಲೂರಿ ನಡೆವ ಮುದುಕನನ್ನು ಅನುಕರಿಸಿ ತೋರಿಸುತ್ತದೆ. ವಸ್ತು ಹಳೆಯದು, ಅವನು ಮುದುಕ, ವಿಚಾರ ಹಳೆಯದು, ಹೀಗೆ ವಿವಿಧಾರ್ಥ ಛಾಯೆಗಳಿಗೆ ಈ ಮೂಲ ಸಂಜ್ಞೆಯೇ ಆಧಾರವಾಗುತ್ತದೆ.
ಈ ಭಾಷೆಯಲ್ಲಿ ಹೌದು, ಇಲ್ಲ, ಒಳ್ಳೆಯದು, ಕೆಟ್ಟದ್ದು, ಬಾ, ಹೋಗು, ನೀರು, ಕುಡಿ, ತಿನ್ನು, ಹಣ, ಚಂದ್ರ, ಸರೋವರ, ನಗು, ನಕ್ಷತ್ರ, ನಾಯಿ, ಕದನ, ನಾನು, ನೀನು…
ಹೀಗೆ ಅತ್ಯಂತ ವ್ಯಾವಹಾರಿಕ ವಸ್ತು ಆಲೋಚನೆಗಳಿಗೆ ಮಾತ್ರ ಸಂಜ್ಞೆಗಳಿರುವುದನ್ನು ಗಮನಿಸಬೇಕು.
ನಾಯಿ ಎನ್ನುವ ಸಂಜ್ಞೆ ನಾಯಿಯನ್ನೂ ಪರ‍್ಯಾಯವಾಗಿ ತೋಳವನ್ನೂ ಸೂಚಿಸುತ್ತದೆ. ಪ್ರಚಲಿತ ಪ್ರೌಢಭಾಷೆಗಳಲ್ಲಿ ಅರ್ಥಘಟಕಗಳಾದ ಶಬ್ದಗಳು ಕೇವಲ ಸಂಕೇತಗಳೇ. ಆದರೆ ಸಂಜ್ಞಾ ಭಾಷೆಯಲ್ಲಿ ಸಂಜ್ಞೆಗಳು ಕೇವಲ ಸಂಕೇತಗಳಲ್ಲ. ಅವು ಅರ್ಥವನ್ನು, ಭಾವವನ್ನು ಅಭಿನಯಿಸಿ ವಿವರಿಸಿ ತೋರಿಸುತ್ತವೆ. ಅವುಗಳಲ್ಲಿ ವಾಚ್ಯತೆ ಹೆಚ್ಚು. ಆದ್ದರಿಂದಲೇ ಅವು ಸಾರ್ವತ್ರಿಕವಾಗಲು ಸಾಧ್ಯವಾಗಿದೆ. ಸಾಮಾನ್ಯ ಬುದ್ಧಿಮಟ್ಟದ ವ್ಯಕ್ತಿಗೆ ಸಂಜ್ಞಾ ಭಾಷೆಯನ್ನು ವಿಶೇಷ ತರಬೇತಿಯಿಲ್ಲದೆ ಗ್ರಹಿಸುವುದು ದುಸ್ಸಾಧ್ಯವಾಗಲಾರದು. ಸಂಜ್ಞಾ ಭಾಷೆಯ ಸಂಜ್ಞೆಗಳಿಗೆ ಪಾರಿಭಾಷಿಕಾರ್ಥವಿಲ್ಲ.
ಒಂದು ವಸ್ತುವನ್ನೋ, ಅಭಿಪ್ರಾಯವನ್ನೋ, ಭಾವವನ್ನೋ ವಿವರಿಸುವ ಪ್ರಯತ್ನವೇ ಇಲ್ಲಿ ಮುಖ್ಯ. ಅದನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುವ ಕೌಶಲ ಇಲ್ಲಿ ಕಾಣುತ್ತದೆ. ಕೆಲವು ಉದಾಹರಣೆಗಳನ್ನು ಪರಿಶೀಲಿಸಬಹುದು :
“ಪುಸ್ತಕ” ಎನ್ನುವ ವಸ್ತುವನ್ನು ಸೂಚಿಸಲು ಜಗತ್ತಿನ ಭಾಷೆಗಳಲ್ಲಿ ನೂರಾರು ಶಬ್ದಗಳಿರಬಹುದು. ಒಂದೇ ಭಾಷೆಯಲ್ಲೂ ಹತ್ತಾರು ಪದಗಳಿರಬಹುದು : ಪುಸ್ತಕ, ಗ್ರಂಥ ಹೊತ್ತಗೆ, ಬುಕ್ಕು, ಇತ್ಯಾದಿ. ಹೀಗೆ ಪರ‍್ಯಾಯ ಪದಗಳಿದ್ದರೆ ಮಾತನಾಡುವವನು ಕೇಳುವವನ ಪದಜ್ಞಾನವನ್ನನುಸರಿಸಿ ಕಠಿಣ ಪದಾರ್ಥವನ್ನು ಸರಳಪದ ಅಥವಾ ಪರಿಚಿತಪದದ ಮೂಲಕ ತಿಳಿಸಬಹುದು. ಸಾಮಾನ್ಯವಾಗಿ ನಿಘಂಟು ಎಲ್ಲ ಭಾಷೆಗಳಲ್ಲೂ ಇದೇ ಕೆಲಸವನ್ನು ಮಾಡುತ್ತದೆ.
ಆದರೆ ಸಂಜ್ಞಾ ಭಾಷೆಯಲ್ಲಿ ಈ ಪ್ರಮೇಯವೇ ಇಲ್ಲ. ಇಲ್ಲಿ ಭಾವ, ಅಭಿಪ್ರಾಯ ನೇರವಾಗಿ ನೋಡುವವನಿಗೆ ವಿವರಿಸಲ್ಪಡುತ್ತದೆ.
ಒಂದೊಂದು ಸಂಜ್ಞೆಯೂ ಒಂದು ಆಲೋಚನಾಘಟಕ, ಸಂಜ್ಞಾ ಭಾಷೆಯಲ್ಲಿ ಪದಗಳಿಗಿಂತ ಆಲೋಚನಾಂಶ ಮುಖ್ಯ. ಒಂದು ಸಂಜ್ಞೆ ಅರ್ಥವ್ಯಕ್ತಿಯ ವ್ಯವಸ್ಥೆಯಲ್ಲಿ ಇತರ ಸಂಜ್ಞೆಗಳೊಡನೆ ಕೂಡಿ ಅಭಿವ್ಯಕ್ತಿಯನ್ನು ಸಾಧಿಸುತ್ತದೆ.
ಎದುರು (ಪ್ರತಿ) : (ಸಂಜ್ಞೆ) ತೋರುಬೆರಳುಗಳನ್ನು ಮಾತ್ರ ಸುಟ್ಟಿ ತೋರಿದ ಎರಡು ಮುಷ್ಟಿಗಳನ್ನು ಒಂದೇ ಎತ್ತರದಲ್ಲಿ ಎದಿರುಬದಿರು ಇರಿಸುವುದು.
ಪುಸ್ತಕ : (ಸಂಜ್ಞೆ) ಬಿಚ್ಚಿದ ಎರಡು ಅಂಗೈಗಳು ಮೇಲ್ಮೊಗವಾಗಿರುವಂತೆ ಜೋಡಿಸಿ ಎದೆಯ ಮಟ್ಟಕ್ಕೆ ಹಿಡಿದು ಓದುವಂತೆ ನಟಿಸುವುದು. ನಾಲಗೆ : (ಸಂಜ್ಞೆ) ಚಾಚಿದ ತುದಿನಾಲಗೆಯನ್ನು ತೋರುಬೆರಳಿನಿಂದ ಮುಟ್ಟಿ ತೋರಿ
ಸುವುದು.
ನಾನು : (ಸಂಜ್ಞೆ) ಮೇಲ್ಮೊಗವಾಗಿರುವ ಬಲ ಹೆಬ್ಬೆರಳು ಎದೆಯ ಕೇಂದ್ರವನ್ನು ಮುಟ್ಟುವುದು.
ನೀನು : (ಸಂಜ್ಞೆ) ಸಂಬೋಧಿಸುವ ಮನುಷ್ಯನ ಕಡೆ ಬಲ ತೋರುಬೆರಳನ್ನು ಸುಟ್ಟಿತೋರುವುದು.
ಹೀಗೆಯೇ ನಿದ್ರೆ, ಸೋಪು, ವಂದನೆ, ಇಲ್ಲ, ದೊಡ್ಡದು ಇವುಗಳನ್ನು ಅಭಿನಯಿಸಿ ವಿವರಿಸುವ ಕೌಶಲವಿದೆ ಈ ಸಂಜ್ಞಾ ಭಾಷೆಯಲ್ಲಿ.
ಆದರೆ ಎಲ್ಲ ಸಂಜ್ಞೆಗಳು ಇಷ್ಟೇ ಸರಳವಾಗಿ, ವಾಚ್ಯವಾಗಿಲ್ಲವೆಂಬುದನ್ನು ಅಗತ್ಯವಾಗಿ ಗಮನಿಸಬೇಕು.
ಉದಾಹರಣೆಗೆ, ಜನ (ಜನತೆ, ಗುಂಪು, ಸಮುದಾಯ)ವನ್ನು ಸೂಚಿಸುವ ಸಂಜ್ಞೆ : ಬಲ ತೋರುಬೆರಳನ್ನು ಭುಜಮಟ್ಟದಲ್ಲಿರಿಸಿ ಮೇಲಕ್ಕೆ ಕೆಳಕ್ಕೆ ಚಲಿಸುವುದು. ಈ ಸಂಜ್ಞೆಯ ಅರ್ಥವ್ಯಂಜಕ ಶಕ್ತಿ ಸಾರ್ವತ್ರಿಕವೆಂದು ಸಾಧಿಸುವುದು ಕಷ್ಟವೇ. ಹಾಗೆಯೇ ಏಕಾಂತವನ್ನು ಸೂಚಿಸುವ ಸಂಜ್ಞೆ:
ಏಕಾಂತ, ಏಕಾಂಗಿ : (ಸಂಜ್ಞೆ) ಬಲ ತೋರುಬೆರಳನ್ನು ಮೇಲ್ಮೊಗವಾಗಿ ಕಂಠದ ಮುಂದೆ ಹಿಡಿದು ಮುಂದಕ್ಕೆ ಚಲಿಸುವುದು. ಇಲ್ಲಿಯೂ ಅಪರಿಚಿತರಿಗೆ ಆಧ್ಯವ್ಯಕ್ತಿ ಸಂದಿಗ್ಧ. ಅಭ್ಯಾಸದಿಂದ ಏಕಾಂತವೆಂಬ ಅರ್ಥ ಗೊತ್ತಾಗಬೇಕು. “ನಾನು ಮುಂದೆ ಹೋಗುತ್ತೇನೆ” ಎಂಬ ಅರ್ಥ ಅಪರಿಚಿತನಿಗೆ ಸ್ಫುರಿಸಬಹುದು.
ಮತ್ತೆ ಕೆಲವು ಸಂಜ್ಞೆಗಳು ಕೆಲವು ಅರ್ಥವನ್ನು ತುಂಬ ಕಲಾತ್ಮಕವಾಗಿ, ಪರಿಣಾಮಕಾರಿಯಾಗಿ, ಬಹುಶಃ ಪ್ರಚಲಿತ ಭಾಷೆಗಳಿಗಿಂತಲೂ ಹೆಚ್ಚು ತೀವ್ರವಾಗಿ ಅಭಿವ್ಯಕ್ತಗೊಳಿಸುತ್ತವೆ. ಉದಾ-ರೋಗ/ಬೇನೆ : ಬಿಚ್ಚಿದ ಬೆರಳನ್ನು ತೂಗಿ ಪಟಪಟ ಒದರಿ ತೋರಿಸುವುದು.
ನಾಚಿಕೆ : (ಸಂಜ್ಞೆ) ತೆರೆದ ಅಂಗೈಗಳಿಂದ ಎರಡು ಕೆನ್ನೆಗಳನ್ನು ಮುಚ್ಚಿಕೊಂಡು ಬಲಗೈಯನ್ನು ಎಡಕ್ಕೂ ಎಡಗೈಯನ್ನು ಬಲಕ್ಕೂ ತರುವುದು. ಇದರ ಅರ್ಥ ಕಂಬಳಿಯಿಂದ ಮುಖ ಮುಚ್ಚಿಕೊಂಡಂತೆ. ಇಲ್ಲಿ ಸಂಜ್ಞೆ ವಾಚ್ಯಾರ್ಥವನ್ನು ದಾಟಿ ವ್ಯಂಗ್ಯಾರ್ಥವನ್ನು ಮುಟ್ಟುತ್ತದೆ. ಕಂಬಳಿಯಿಂದ ಮುಖ ಮುಚ್ಚಿಕೊಳ್ಳುವ ಪ್ರಸಂಗ ಚಳಿಯಿಂದಲೋ ಹುಡುಗಾಟಕ್ಕೋ ಕೀಟಗಳ ಕಾಟಕ್ಕೆ ಒದಗಬಹುದು. ಆದರೆ ಅದಲ್ಲ ಇಲ್ಲಿ ಉದ್ದೇಶಿತ ಅರ್ಥ.
ಮೊದಲೇ ತಿಳಿಸಿದಂತೆ ಈ ಭಾಷೆಯಲ್ಲಿ ಸಂಜ್ಞೆಗಳು ಪರಿಮಿತ. ಅವುಗಳಿಂದಲೇ ಅಪರಿಮಿತ ಅರ್ಥವನ್ನು ಸ್ಪುರಿಸುವ ಪ್ರಯತ್ನವಿದೆ. ಉದಾಹರಣೆಗೆ ಪ್ರಶ್ನಾರ್ಥಕಗಳನ್ನು ಪರಿಶೀಲಿಸೋಣ :
ಏನು, ಎಲ್ಲಿ, ಹೇಗೆ, ಯಾವಾಗ, ಯಾವುದು ಇತ್ಯಾದಿ ಪ್ರಶ್ನಾರ್ಥಕಗಳಿಗೆಲ್ಲಾ ಒಂದೇ ಚಿಹ್ನ, ಸಂಜ್ಞೆ, ಅದು ಸಾಂದರ್ಭಿಕವಾಗಿ ವಿವಕ್ಷಿತಾರ್ಥವನ್ನು ಸೂಚಿಸುತ್ತದೆ.
ಪ್ರಶ್ನಾರ್ಥಕ ಸಂಜ್ಞೆ: ಬೆರಳು ಬಿಡಿಸಿರುವ ಬಲ ಅಂಗೈಯನ್ನು ಹೊರಮೈಯಾಗಿ ಹಿಡಿದು ಭುಜದ ಮಟ್ಟದಲ್ಲಿ ಕೈ ಬಂದಾಗ ಬೆರಳುಗಳನ್ನು ಮತ್ತಷ್ಟು ವಿರಳಗೊಳಸಿ ಮೇಲ್ಮೊಗಕ್ಕೆ ಚಾಚಿ ಮಣಿಕಟ್ಟನ್ನು ತಿರುಗಿಸುವುದರ ಮೂಲಕ
ಕೈಯನ್ನು ಎರಡು ಮೂರು ಬಾರಿ ತಿರುಗಿಸುವುದು.
ನಿನ್ನ ಹೆಸರೇನು ? ನೀನು ಎಲ್ಲಿಗೆ ಹೋಗುತ್ತೀಯೆ ? ನಿನಗೆ ಏನು ಬೇಕು ? ನಿನ್ನದು ಯಾವ ಪುಸ್ತಕ ? ಮೊದಲಾದ ವಾಕ್ಯರಚನೆಗಳು ಈ ಪರಿಯಲ್ಲಿ ರೂಪಗೊಳ್ಳುತ್ತವೆ :
ಪ್ರಶ್ನಾರ್ಥಕ + ನೀನು + ಕರೆಯಲ್ಪಡುವೆ ; ಪ್ರಶ್ನಾರ್ಥಕ-+ನೀನು+ಹೋಗು ; ಪ್ರಶ್ನಾರ್ಥಕ+ ನೀನು+ಬೇಕು ; ಪ್ರಶ್ನಾರ್ಥಕ-ನೀನು+ಪುಸ್ತಕ.
ಲೇಖನದ ಮೂಲಕ ಸಂಜ್ಞಾ ಭಾಷೆಯ ಪರಿಚಯ ಮಾಡಿಕೊಡುವುದು ಪ್ರಯಾಸದ ಕೆಲಸ. ಅತಿ ಪ್ರಾಚೀನತಮ ಮೂಲಭಾಷೆಯೆಂದು ಖ್ಯಾತವಾದ ಅದರ ಸ್ಥೂಲ ಪರಿಚಯವೇ ಈ ಲೇಖನದ ಉದ್ದೇಶ.
ಕೊನೆಯದಾಗಿ ಒಂದು ಪ್ರಶ್ನೆ ಎದುರಾಗುತ್ತದೆ. ವಿವಿಧ ಪ್ರೌಢಭಾಷೆಗಳು ಸುಸಮರ್ಥ ಮಾಧ್ಯಮವಾಗಿರುವಾಗ ಈ ಪ್ರಾಕೃತ ಸೀಮಿತ ಸಂಪತ್ತಿನ ಸಂಜ್ಞಾ ಭಾಷೆಗೆ ಏನಾದರೂ ಭವಿಷ್ಯವಿದೆಯೇ ?
ಬಾಲಚಮೂ ಸಂಸ್ಥಾ ಸಂಸ್ಥಾಪಕನಾದ ಸರ್ ರಾಬರ್ಟ್ ಬೇಡನ್ ಪೊವೆಲ್ ಬಾಲ ಚಮೂಗಳ ಉಪಯೋಗಕ್ಕೆ ರೂಪಿಸಿದ ಸಂಕೇತ ಭಾಷೆಯನ್ನು ಲಕ್ಷಾಂತರ ಯುವಕರು
ಕಲಿಯುವಂತಾಗಲಿ ಎಂದು ಹಂಬಲಿಸುತ್ತಿದ್ದರು. ಅಂತೆಯೇ ಅಮೆರಿಕದ ಇಂಡಿಯನ್ನರ ಜೊತೆ ಸಂಪರ್ಕ ಬೆಳೆಸಿ ಈ ಭಾಷೆಯನ್ನು ಅಭ್ಯಸಿಸಿದ ತಜ್ಞ ಟಾಂಕಿನ್ಸ್ ಸಹ ಆಶಿಸುತ್ತಾರೆ. ಈ ಭಾಷೆ ಅಮರ. ಏಕೆಂದರೆ ಇದು ತರ್ಕಬದ್ಧವಾಗಿದೆ. ಸಹಜವಾಗಿದೆ. ಅಭಿವ್ಯಕ್ತಿ ನೇರವಾಗಿದೆ ಇಲ್ಲಿ. ಇದು ಪ್ರವಾಸಿಗರಿಂದ ಇಂದಿಗೂ ಪುರಸ್ಕರಿಸಲ್ಪಟ್ಟಿದೆ. ಶ್ರವಣಾತೀತ ದೂರದಲ್ಲಿದ್ದರೂ ದೃಕ್‌ಪರಿಧಿಯಲ್ಲಿರಬಹುದಾದವರೊಡನೆ ಬಳಸಬಹುದು. ರಹಸ್ಯ ಅಥವಾ ನಿಶ್ಯಬ್ದ ಅಪೇಕ್ಷಣೀಯವಾದಾಗಲೂ ಸಂಜ್ಞಾ ಭಾಷೆಯನ್ನು ಪ್ರಯೋಜನಕರವಾಗಿ ಉಪಯೋಗಿಸಬಹುದೆಂದು ತಜ್ಞರ ಅಭಿಪ್ರಾಯ. ಅಲ್ಲದೆ ಉತ್ತಮ ಸಂಜ್ಞಾ ಭಾಷಾ ಪರಿಣತ ಆಡುಮಾತಿನ ಮುಮ್ಮಡಿ ವೇಗವಾಗಿ ಮತ್ತು ಧ್ವಜಸಂಕೇತ ಕ್ರಮಕ್ಕಿಂತ ಆರು ಮಡಿ ವೇಗವಾಗಿ ಸಂಭಾಷಣೆ ಮಾಡಬಹುದಂತೆ.
ಇಲ್ಲಿ ಮಾತಿಲ್ಲವಾದ್ದರಿಂದ ಇದನ್ನು ಮೂಗರ ಭಾಷೆಯೆನ್ನಬಹುದಾದರೂ ಅದಕ್ಕೂ ಇದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಅದರಲ್ಲಿ ಪ್ರಯಾಸ ಪೂರ್ಣವಾದ ಅಂಗಚೇಷ್ಟೆ, ಹಾವ ಭಾವ, ಮುಖಭಾವ ಪ್ರದರ್ಶನವುಂಟು. ಸಂಜ್ಞಾ ಭಾಷೆಯಲ್ಲಿ ಹಾವ ಭಾವ ಮುಖಭಾವ ಪ್ರದರ್ಶನಗಳೇ ಇಲ್ಲ. ಸಂಜ್ಞೆಗಳಲ್ಲಿ ಸಹ ತುಂಬ ವ್ಯತ್ಯಾಸವಿದೆ. ಉದಾಹರಣೆಗೆ ಮೂಗ ಕಿವುಡರು ‘ಯೋಚಿಸು’ ಎಂಬುದನ್ನು ಹಣೆಯ ಮೇಲೆ ಕೈಯಿಟ್ಟು ಸೂಚಿಸುತ್ತಾರೆ. ಸಂಜ್ಞಾ ಭಾಷೆಯಲ್ಲಿ “ಯೋಚನೆ” ಎದೆಯಿಂದ ಬಂದದ್ದು ಎಂಬಂತೆ ಅಭಿನಯಿಸಿ ತೋರಿಸುತ್ತಾರೆ. ಆದರೂ ಇವೆರಡಕ್ಕೂ ಸಂಬಂಧವೇ ಇಲ್ಲವೆಂದು ಸಾಧಿಸಲಾಗುವುದಿಲ್ಲ.
ಆ ಭಾಷಾವ್ಯಾಮೋಹಿಗಳು ಏನೇ ಹೇಳಲಿ, ಸಂಜ್ಞಾ ಭಾಷೆ ತನ್ನ ಅವಧಿಯನ್ನು ಮೀರಿ ಬದುಕಿದೆಯೆಂದು ನನ್ನ ಅಭಿಪ್ರಾಯ. ಆ ಭಾಷಾ ಸಂಶೋಧಕರು ತಜ್ಞರು ಅದರ ಮೇಲ್ಮೈಯನ್ನು ಸಾಧಿಸುತ್ತಾ ‘ರಹಸ್ಯ’ ‘ಕಣ್ಣಿನ ದೂರ’ ಇತ್ಯಾದಿ ಮಾತುಗಳನ್ನಾಡಿದ್ದಾರೆ.
ವೈಜ್ಞಾನಿಕ ಉಪಕರಣಗಳ ಅತ್ಯಮೋಘ ಸಿದ್ಧಿ ನಮ್ಮ ಕೈವಶವಾಗಿರುವ ಈ ಕಾಲದಲ್ಲಿ ಅವೆಲ್ಲ ಹುಡುಗಾಟವಾಗಿ ಕಾಣಬಹುದು. ಅಲ್ಲದೆ ಆಧುನಿಕ ಸಂದರ್ಭದಲ್ಲಿನ ಪ್ರಬುದ್ಧ ಚೇತನದ ಆವಶ್ಯಕತೆಗೆ ಅತಿಸೀಮಿತ ಸಮೃದ್ಧಿಯ ಸಂಜ್ಞಾ ಭಾಷೆ ಶೋಚನೀಯವಾಗಿ ವಿಫಲವಾಗುತ್ತದೆ. ಸಂಜ್ಞಾ ಭಾಷೆಯನ್ನಾಡುವ ಮಂದಿ ಕಡಿಮೆಯಾಗುತ್ತಿದ್ದಾರೆ. ಆದರೆ ಇದೊಂದು ಐತಿಹಾಸಿಕ ಕುತೂಹಲವಾಗಿ ನಿರಂತರ ಉಳಿಯಬಹುದು.
[ಗ್ರಂಥ ಋಣ : ಈ ಲೇಖನವನ್ನು ಸಿದ್ಧಪಡಿಸುವಲ್ಲಿ ಶ್ರೀ ವಿಲಿಯಂ ಟಾಂಕಿನ್ಸರ “ಇಂಡಿಯನ್ ಸೈನ್ ಲ್ಯಾಂಗ್ವೇಜ್” (೧೯೧೯; ನ್ಯೂಯಾರ್ಕ್) ಎಂಬ ಪುಸ್ತಕವನ್ನು ಧಾರಾಳವಾಗಿ ಬಳಸಿ ಕೊಂಡಿದ್ದೇನೆ.]
ಜಾಹಿರಾತುಗಳು ಮತ್ತು ನೈತಿಕತೆ
ಜಾಹಿರಾತುಗಳು ಮತ್ತು ನೈತಿಕತೆ
ಜಿ. ಎಸ್. ನಾಗೇಂದ್ರ
ವೃತ್ತಪತ್ರಿಕೆಗಳು ಸಮುದಾಯಸಂಪರ್ಕದ ಒಂದು ಪ್ರತಿಷ್ಠಿತ ಮಾಧ್ಯಮ. ಕಮ್ಮು ನಿಸ್ಟ್ ರಾಷ್ಟ್ರಗಳಲ್ಲಿ ಸರ್ಕಾರವೇ ಬೆನ್ನೆಲುಬಾಗಿ ನಿಂತು ನಡೆಸುತ್ತಿರುವ ಪತ್ರಿಕೆಗಳಲ್ಲಿ ಸರ್ಕಾರ ಒಪ್ಪಿದ ಸುದ್ಧಿ ಹಾಗೂ ದೃಷ್ಟಿಕೋನಗಳು ಪ್ರಕಟವಾಗುತ್ತವೆ. ಆದರೆ ವಿಚಾರ ಸ್ವಾತಂತ್ರ್ಯವಿರುವ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಪತ್ರಿಕೋದ್ಯಮ ಒಂದು ಕೈಗಾರಿಕೆಯೆನಿಸಿಬಿಟ್ಟಿದೆ.
ಹಾಗಾಗಿ ಪತ್ರಿಕೆಗಳು ಸ್ವಾವಲಂಬಿಯಾಗಿ ಬದುಕಬೇಕಾಗಿವೆ. ಪತ್ರಿಕೆಯ ಪುಟಗಳಲ್ಲಿ ಜಾಗವನ್ನು ಕೊಳ್ಳುವ ಜಾಹಿರಾತುಗಳು ಅವಕ್ಕೆ ಆರ್ಥಿಕ ಸ್ಥಿರತೆಯನ್ನು ಕೊಡಬೇಕು. ಯಾಕೆಂದರೆ ಪ್ರಸಾರವೊಂದನ್ನೇ ಆಧಾರವಾಗಿಟ್ಟುಕೊಂಡು ಯಾವ ದೊಡ್ಡ ಪತ್ರಿಕೆಯೂ ಬದುಕಲು ಸಾಧ್ಯವಿಲ್ಲ.
ಅಂತೆಯೇ ಜಾಹಿರಾತುಗಳಿಗೂ ಪತ್ರಿಕೆ ಪ್ರಬಲ ಮಾಧ್ಯವಾಗಿದೆ.
ಒಂದು ಪತ್ರಿಕೆಯ ಉದ್ದೇಶವನ್ನು ಮೂರು ಭಾಗವಾಗಿ ವಿಂಗಡಿಸಬಹುದು : ಬಿತ್ತರ, ಕಲಿಕೆ ಹಾಗೂ ಮನೋರಂಜನೆ ಪತ್ರಿಕೆಯ ಅವಿಭಾಜ್ಯ ಅಂಗ ಎನಿಸಿಕೊಂಡಿರುವ ಜಾಹಿರಾತು ಈ ಉದ್ದೇಶಕ್ಕೆ ಯಾವ ರೀತಿಯಲ್ಲಾದರೂ ಸಹಾಯವಾಗುತ್ತದೆಯೆ ಎಂಬುದನ್ನು ಯೋಚಿಸಿದರೆ ಇಲ್ಲ ಎಂದೇ ಹೇಳಬೇಕಾಗುತ್ತದೆ. ಅದಕ್ಕೆ ಬದಲಾಗಿ, ಈ ಜಾಹಿರಾತುಗಳು ಗಿರಾಕಿಯಾದ ಓದುಗನನ್ನು ತಮ್ಮ ಘೋಷಣೆಗಳಿಂದ ಬುಟ್ಟಿಗೆ ಹಾಕಿಕೊಳ್ಳಲು ನೋಡುತ್ತವೆ.
4
ಪತ್ರಿಕೆಯ ಅಸ್ತಿತ್ವಕ್ಕೆ ಜಾಹಿರಾತುಗಳು ಆರ್ಥಿಕವಾಗಿ ಸ್ಥಿರತೆಯನ್ನು ನೀಡಿದರೂ ಅವು ಜನತೆಯ ಆರ್ಥಿಕ ಮಟ್ಟವನ್ನು ಹಾಳು ಮಾಡುತ್ತವೆ. ಆಸೆಗೆ ಸುಲಭವಾಗಿ ಒಳಗಾಗುವ ಮಾನವ ಸಹಜವಾದ ದೌರ್ಬಲ್ಯವನ್ನು ಉಪಯೋಗಿಸಿಕೊಂಡು ತನಗೆ ಅದುವರೆಗೂ ಯಾವುದು ಅವಶ್ಯವೆನಿಸಿರಲಿಲ್ಲವೋ ಅದನ್ನು ಕೊಳ್ಳಲು ಪ್ರಚೋದಿಸುತ್ತವೆ. ಅಂದರೆ ಇದು ನೈತಿಕ ಅನಾಚಾರವಲ್ಲವೇ ? ಇದರ ಹೊಣೆಗೆ ಈ ಮೂವರು ಬಾಧ್ಯರಾಗುತ್ತಾರೆ: ಜಾಹಿರಾತುದಾರರು, ಪತ್ರಿಕೆಯ ಮಾಲಿಕರು ಹಾಗೂ ಈ ಇಬ್ಬರಿಗೂ ಓಗೊಡುವ ಓದುಗರು.
ಆದರೆ ಓದುಗನಿಗೆ ಯಾವುದು ಉತ್ತಮ, ಯಾವುದು ಅಲ್ಲ ಎಂದು ಹೇಗೆ ತಿಳಿಯಬೇಕು ? ಒಂದು ವಸ್ತುವಿನ ಸತ್ಯವನ್ನು ಹೇಗೆ ಅಳೆಯಬೇಕು ? ಇದು ಉತ್ತರಿಸಲಾಗದ ಪ್ರಶ್ನೆ, ಉತ್ತಮ ವಸ್ತುಗಳು ಜಾಹಿರಾತಿನ ಮೂಲಕ ಓದುಗನಿಗೆ ತಿಳಿಯುವಂತಾಗಬೇಕೆಂದು ನಾವು ಬಯಸಿದರೆ, ಕೆಟ್ಟ ವಸ್ತುಗಳ ಜಾಹಿರಾತು ಮಾಡುವುದನ್ನು ನಿಲ್ಲಿಸಲಾಗುವುದಿಲ್ಲ. ಯಾಕಂದರೆ ಎಲ್ಲ ಉದ್ದಿಮೆದಾರರೂ ತಮ್ಮ ತಮ್ಮ ವಸ್ತು ಅತ್ಯುತ್ತಮವೆಂದು ಘೋಷಿಸುತ್ತಾರೆ.
ಪ್ರಾಮಾಣಿಕತೆಯೊಂದೇ ಜಗತ್ತಿನಲ್ಲಿ ಯಶಸ್ಸು ತರುತ್ತದೆ ಎಂದು ಯಾರೂ ಹೇಳಲಾರರು. ಅದರಿಂದಾಗಿ ಜಾಹಿರಾತಿನ ಕ್ಷೇತ್ರ ಬರೇ ಘೋಷಣೆಗಳ ಸ್ಪರ್ಧೆಯಾಗಿ ಹೋಗಿದೆ. ಉದಾಹರಣೆಗೆ ಹಲ್ಲುಜ್ಜುವ ಸಾಧನಗಳ ಘೋಷಣೆಗಳನ್ನು ಪರಿಶೀಲಿಸೋಣ: ೧. ಇದು ಒಸಡುಗಳ ತೊಂದರೆಯನ್ನೂ ಹಲ್ಲುಗಳ ಉದುರುವಿಕೆಯನ್ನೂ ತಡೆಯುತ್ತದೆ-ಫೋರ್‌ಹಾನ್ಸ್. ೨, ಹಲ್ಲಿನ ಸುರಕ್ಷೆಯೊಂದಿಗೆ ದುರ್ಗಂಧವನ್ನು ತಡೆಯಿರಿ -ಕಾಲ್ಗೇಟ್, ೩. ಅತಿ ಬಿಳುಪು ಹಲ್ಲುಗಳಿಗಾಗಿ ಮ್ಯಾಕ್ಲೀನ್ಸ್. ೪, ಹನ್ನೆರಡು ದಿನಗಳಲ್ಲಿ ಅತಿ ಬಿಳುಪು ಹಲ್ಲುಗಳು-ಪೆಪ್ಸೂಡೆಂಟ್. ಇಷ್ಟನ್ನು ಪರೀಕ್ಷಿಸುವವರು ಯಾರು, ಎಷ್ಟು ಖರ್ಚಿನಲ್ಲಿ ?
ಅಂದಮೇಲೆ ಸಾರ್ವಜನಿಕ ನೈತಿಕತೆಯ ಮೇಲೆ ಜಾಹಿರಾತುಗಳು ದುಷ್ಪರಿಣಾಮ ಬೀರುತ್ತವೆ ಎಂದಂತಾಯಿತು. ತಮ್ಮ ಸಿದ್ಧಾಂತಗಳಿಗೆ ಬಲವಾಗಿ ಅಂಟಿಕೊಳ್ಳುವ ಸ್ವಭಾವವಿದ್ದ ಗಾಂಧೀಜಿ ತಾವು ನಡೆಸುತ್ತಿದ್ದ ‘ಇಂಡಿಯನ್ ಒಪೀನಿಯನ್‌ನ ಮೊದಲ ಕೆಲವು ವರ್ಷಗಳನ್ನು ಬಿಟ್ಟರೆ, ತಮ್ಮ ಐವತ್ತು ವರ್ಷದ ಇಡೀ ಪತ್ರಿಕೋದ್ಯಮ-ಜೀವನದಲ್ಲಿ ಜಾಹಿರಾತುಗಳನ್ನು ಸ್ವೀಕರಿಸಲೇ ಇಲ್ಲ. ಪತ್ರಿಕೋದ್ಯಮದ ಉದ್ದೇಶ ಸೇವೆಯೇ ಹೊರತು ಹಣವಲ್ಲ ಎಂದರು ಅವರು.
ಆರ್ಥಿಕ ಸ್ಥಿರತೆಗಾಗಿ ಜಾಹಿರಾತುಗಳನ್ನು ಅವಲಂಬಿಸುವುದು ಪತ್ರಿಕೋದ್ಯಮದ ಮೂಲ ತತ್ತ್ವವನ್ನೇ ಅಲ್ಲಾಡಿಸಿಬಿಡುತ್ತದೆ ಎಂದು ಗಾಂಧೀಜಿ ನಂಬಿದ್ದರು. ಅವು ಸಂಪಾದಕ ಮಂಡಲಿಯ ಮೇಲೆ ಅನವಶ್ಯಕ ಪ್ರಭಾವ ಬೀರುವುದಲ್ಲದೆ ಸಂಪಾದಕ ವರ್ಗದ ನೈತಿಕ ಪತನಕ್ಕೂ ಕಾರಣವಾಗುತ್ತದೆ ಎಂದರು.
ಆದರೆ ಗಾಂಧೀಜಿ ಪತ್ರಿಕೋದ್ಯಮಿಯಾಗಿ ದುಡಿದ ಕಾಲ ಹಾಗೂ ಸಂದರ್ಭಗಳನ್ನು ಗಮನಿಸಿದರೆ ಈ ಹೇಳಿಕೆಗಳ ಬಗ್ಗೆ ಯಾರದೂ ಭಿನ್ನಾಭಿಪ್ರಾಯ ಇರದು. ಪ್ರಾಯೋಗಿಕ ಆದರ್ಶವಾದಿಯಾಗಿ ಅವರು ಈ ಉದ್ಯಮದಲ್ಲಿ ಯಶಸ್ವಿಯಾದರು.
“ಉದ್ದಿಮೆದಾರರ ಸಂಶಯಾತ್ಮಕ ಸ್ಪರ್ಧೆಗಾಗಿ ಹಣ ಸುರಿಯುವ ಜಾಹಿರಾತುಗಳು ಒಂದು ರಾಷ್ಟ್ರೀಯ ವ್ಯರ್ಥ. ಯಾಕೆಂದರೆ ಆದಾಯದ ಮಾರ್ಗ ತೋರಿಸದೆ ಜನಗಳ ಮನಸ್ಸನ್ನು ಪ್ರಚೋದಿಸಿ ಖರ್ಚುಮಾಡುವ ಬೇಡಿಕೆಗಳನ್ನು ಮುನ್ನುಗ್ಗಿಸುತ್ತವೆ” ಎಂದು ಜೆ. ಕೆನ್ನೆತ್ ಗಾಲ್‌ಬ್ರೇತ್ ಹೇಳಿದ್ದಾರೆ. ಗಿರಾಕಿಗಳ ಮನಸ್ಸನ್ನು ಒಳಹೊಗುವ ಮೂಲಕ ಮನಶ್ಯಾಸ್ತ್ರಜ್ಞರು ವ್ಯಾಪಾರದ ಮಂತ್ರವಾದಿಗಳಾಗಿದ್ದಾರೆ. ಒಂದು ವಸ್ತುವಿನ ಮಾರಾಟ ಜನತೆಯ ಮಾನಸಿಕ ದೌರ್ಬಲ್ಯವನ್ನೂ ಅವಲಂಬಿಸುತ್ತದೆ ಎಂಬುದನ್ನು ಸಿದ್ಧಮಾಡಲು ಹೊರಟಿದ್ದಾರೆ.
ಡಾ| ಡಿಚರ್ ತಮ್ಮ ಗ್ರಂಥ ‘ಪ್ರಚೋದನೆ’ಯಲ್ಲಿ “ಸಾಮಾನ್ಯ ಮನುಷ್ಯನನ್ನು ಆತ ಗಡಿದಾಟಿ ನಲಿಯುವಾಗ, ಮಿತಿಮೀರಿ ಖರ್ಚು ಮಾಡುವಾಗ, ಉಳಿತಾಯದ ಪ್ರಶ್ನೆಯೇ ಇಲ್ಲದಿದ್ದಾಗಲೂ ಅವನಲ್ಲಿ ತಾನು ಸರಿಯೆಂಬ ಭಾವನೆ ಮೂಡಿಸುವ ಯತ್ನ ನಡೆದಿದೆ” ಎಂದಿದ್ದಾರೆ.
ಈ ರೀತಿಯ ಪ್ರಚೋದಕನ ಪಾತ್ರ ಯಾವ ಸಮಾಜದಲ್ಲ ಹಾನಿಕರವೇ, ಜಾಹಿರಾತುಗಳು ಹಂತಹಂತವಾಗಿ ಅತೃಪ್ತಿಯನ್ನುಂಟುಮಾಡುತ್ತವೆ. ಹೆಸರಾಂತ ಚರಿತ್ರಕಾರ ಆರ್ನಾಲ್ಡ್ ಟಾಯ್ನ್‌ಬೀ ಸ್ವಲ್ಪ ಗಡುಸಾಗಿ ಈ ಮಾತು ಹೇಳಿದ್ದಾರೆ: “ನಮ್ಮ ಕಾಲ, ಶಕ್ತಿ ಹಾಗೂ ಇತರ ವಸ್ತುಗಳ ಮುಖ್ಯಾಂಶವನ್ನು ನಾವು ಆದರದರ ಪಾಡಿಗೆ ಬಿಟ್ಟಿ ದ್ದರೆ ನಮಗೆ ಯಾವುದು ಅಗತ್ಯವೆಂದು ತೋರಿಸುತ್ತಿರಲಿಲ್ಲವೋ ಅಂಥದನ್ನೂ ಕೊಳ್ಳುವಂತೆ ಪ್ರಚೋದಿಸಲಿಕ್ಕಾಗಿ ವೃಥಾ ಹಾಳುಮಾಡುತ್ತಿದ್ದೇವೆ.”
ಜಾಹಿರಾತುಗಳಿಂದ ಪತ್ರಿಕೆಯ ವಸ್ತುನಿಷ್ಠತೆಗೆ ಪರೋಕ್ಷವಾಗಿ ಆಘಾತವಾಗುತ್ತದೆ. ವಸ್ತುನಿಷ್ಠತೆ ಕಳೆದುಕೊಂಡ ಪತ್ರಿಕೆ ಸತ್ಯವಾಗಿ ಬಾಳುವುದೆಂತು ಎಂದು ಕೇಳಿದರು. ಗಾಂಧೀಜಿ.
ಗಾಂಧೀಜಿ ತಮ್ಮ ಪತ್ರಿಕೆಗಳಲ್ಲಿ ಭಾರತದ ಅತ್ಯಧಿಕ ಜನಾಂಗವಾದ ರೈತವರ್ಗದ ಮುನ್ನಡೆಗೆ ಅನುಕೂಲವಾಗುವಂತಹ ವಿಶೇಷ ಲೇಖನಗಳನ್ನು ಪ್ರಕಟಿಸುತ್ತಿದ್ದರು. ಅವರೇ ಸ್ವಂತವಾಗಿ ಹೆಚ್ಚು ಎಣ್ಣೆ ತೆಗೆಯಬಹುದಾದಂತಹ ಒತ್ತು ಯಂತ್ರಗಳ ಬಗ್ಗೆ ಜಾಹೀರು ಮಾಡುತ್ತಿದ್ದರು. ಕಡಿಮೆ ಶ್ರಮದಿಂದ ಭತ್ತದಿಂದ ಹೆಚ್ಚು ಅನ್ನಾಂಗಗಳುಳ್ಳ ಅಕ್ಕಿ ತೆಗೆಯುವ ಕೈ ಯಂತ್ರಗಳ ಬಗ್ಗೆ ಹೆಚ್ಚು ವಿಚಾರ ನಡೆಸುತ್ತಿದ್ದರು. ಚರಕಾದ ಬಗ್ಗೆ ಪ್ರಗತಿದಾಯಕವಾದ ಸಂಶೋಧನೆಯ ಬಗ್ಗೆ ಹೆಚ್ಚು ಆಸ್ಥೆ ವಹಿಸುತ್ತಿದ್ದರು. ಸಾಲು ಜಾಹಿರಾತುಗಳ ರೂಪದಲ್ಲಿ ಒಂದು ಲಕ್ಷ ರೂಪಾಯಿಗಳ ಬಹುಮಾನವನ್ನು ಇದಕ್ಕಾಗಿ ಘೋಷಿಸಿದ್ದರು. ಜಾಹಿರಾತಿನಿಂದ ಉದ್ದಿಮೆದಾರನಿಗೆ ಖರ್ಚು ಬೀಳುತ್ತದೆಯಾಗಿ ವಸ್ತುವಿನ ಬೆಲೆಯ ಮೇಲೇರುತ್ತದೆ ; ಪರಿಣಾಮವಾಗಿ ಜನತೆಯ ಮೇಲೆ ಪರೋಕ್ಷ ತೆರಿಗೆಯಾಗುತ್ತದೆಯಾದ್ದರಿಂದ ಭಾರತದ ಬಡ ಜನತೆ ಅದನ್ನು ಭರಿಸಲಾರರು ಎಂಬ ವಾದದಿಂದ ತಮ್ಮ ನಿಲುಮೆಯನ್ನು ಗಾಂಧೀಜಿ ಸಮರ್ಥಿಸಿಕೊಂಡರು.
ಗಾಂಧೀಜಿ ಸೂಚಿಸಿದ ಜಾಹಿರಾತುಗಳಲ್ಲಿನ ಸುಧಾರಣೆಗಳನ್ನು ಭಾರತ ಮತ್ತು ಪೌರ್ವಾತ್ಯ ಪತ್ರಿಕಾ ಸಂಘ ಅರೆಮನಸ್ಸಿನಿಂದ ಪರಿಶೀಲಿಸಿ ಪತ್ರಿಕೆಗಳಿಗೆ ಒಂದು ನಿಯಮಾವಳಿಯನ್ನು ರೂಪಿಸಿತು. ಆದರೆ ಪತ್ರಿಕೆಗಳವರು ಅದನ್ನು ಶಿಫಾರಸು ಎಂದುಕೊಂಡರೇ ಹೊರತು ನಿಯಮಗಳೆಂದು ಪರಿಗಣಿಸಲು ಸಾಧ್ಯವಾಗಲಿಲ್ಲ.
ಪತ್ರಿಕಾ ಆಯೋಗ ಹೇಳಿತು : “ಭಾರತೀಯ ಜಾಹಿರಾತುದಾರರ ಸಂಘ ಹಾಗೂ ಜಾಹಿರಾತು ಪಾರುಪತ್ತೆದಾರರ ಸಂಘಗಳು ಆಕ್ಷೇಪಾರ್ಹವಾದ ಹಾಗೂ ಸಂಶಯಾತ್ಮಕವಾದ ಜಾಹಿರಾತುಗಳನ್ನು ದೂರವಿಡುವುದಾಗಿ ಭರವಸೆ ಕೊಟ್ಟಿದ್ದಾರೆ.”
ಈ ದಿನ ನಾವು ಕಾಣುತ್ತಿರುವ ಜಾಹಿರಾತುಗಳನ್ನು ನೋಡಿದರೆ ಈ ಹೇಳಿಕೆಯಲ್ಲಿ ಎಷ್ಟು ಸಥ್ಯವಿದೆಯೆಂದು ಯಾರಿಗೂ ತಿಳಿಯುತ್ತದೆ.
ಗಾಂಧೀಜಿ ಎಂಥ ಸಮಯದಲ್ಲಿ ಪತ್ರಿಕೆ ಹೊರತರಲೇಬೇಕೆಂಬುದನ್ನು ಒಪ್ಪಲಿಲ್ಲ ; ಹಣವಲ್ಲ ಸೇವೆ ಎಂದು ಒತ್ತಿ ಒತ್ತಿ ಹೇಳಿದರು.
ಅವರು ಮುಂದಿಟ್ಟ ಪ್ರಶ್ನೆ : “ಎಷ್ಟು ಬೆಲೆಯನ್ನಾದರೂ ತೆತ್ತು ಪತ್ರಿಕೆ ತರಲೇಬೇಕೆಂಬ ನಿಯಮವೆ ? ಕೆಟ್ಟ ಜಾಹಿರಾತುಗಳು ಮಾಡುವ ದುಷ್ಪರಿಣಾಮಗಳನ್ನು ಮೀರುವಂತಹ ಒಳ್ಳೆಯ ಕೆಲಸಗಳನ್ನು ಪತ್ರಿಕೆಗಳು ಮಾಡುತ್ತವೆಯೇ ?”
ಪ್ರಶ್ನೆ ಇನ್ನೂ ಹಾಗೆಯೇ ಉಳಿದಿದೆ.
ಬ್ರಹ್ಮಪುತ್ರ
ಬ್ರಹ್ಮಪುತ್ರ
ಆರ್. ಮೋಹನ
ಮೊದಲ ಸಲ ಒಂದೇ ಇಂಜಿನ್ನಿನ, ಗಡ ಗಡ ನಡುಗುವ ಆಟರ್ ವಿಮಾನಿನ ಮೂಗಿನಿಂದ ಕಂಡೆ. ನದಿಯ ಎದೆಯನ್ನು ಕುಕ್ಕುವ ಸಾವಿರ ಹಕ್ಕಿಗಳ ವರ್ತುಲಗಳ ನಡುವೆ ರೇಖೆಯನ್ನು ಬಿಡಿಸಿಕೊಂಡು ಹೋಗುವ, ನಾಯಿಯಂತೆ ಗುರುಗುಡುವ, ಆಟರ್. ಗುಬ್ಬಚ್ಚಿಯಂತಹ ವಿಮಾನ. ಹದ್ದಿನಂತೆ ಮುದ್ದಿಡುವ ದೊಡ್ಡ ಮೋಡಗಳು.
ದಿಗಂತದಿಂದ ಹರಿದು ಬಂದು ಭೂಮಿಯ ಅಂಚಿನ ಆಚೆ ಧುಮ್ಮಿಕ್ಕುತ್ತಿರುವ ಬ್ರಹ್ಮಪುತ್ರ, ಹೆಣ್ಣಲ್ಲ, ನದಿಯಲ್ಲ-ಶಕ್ತಿ, ಆಟರ್, ತೇಕಿ ತೇಕಿ ಕುಂಟಿ ಕುಂಟಿ ಬಾಯ್ ಬಾಯ್‌ಬಿಟ್ಟು ದಾಟಬೇಕಾದ ಹದಿಮೂರು ಮೈಲುಗಳ ಅಗಲ.
ಆಚೆಯ ಬೆಟ್ಟದ ಮೇಲೆ ನೆರೆತ ಕೂದಲು. ಆದರೆ ದಂಡೆಯ ಪಕ್ಕದಲ್ಲೇ ಅಡ್ಡಾದಿಡ್ಡಿ ಜೋಡಿಸಿದ ಬೋರಲು ಜಘನಗಳು. ಮಂಜಿನ ಅರೆ ಸೆರಗು. ಬೆವರಿಡಿದ ದಟ್ಟ ಕೂದಲಿನಂತಹ ಹೊಲಸು ಕಾನನ.
ಹಿಂದೆ, ಈಚೆ, ದಿಬ್ರುಘರ್ ನಗರದ ನಾಯಿ ಕೊಡೆಗಳು. ಅದರ ಕೆಳಗೆ ಬಲು ಬಲು ಗಡಿಬಿಡಿಯಿಂದ ಓಡಿಯಾಡುವ ಗೊಂಬೆಗಳು. ನಗರವೇ ಪ್ರಚಂಡ ಶಕ್ತಿಯ ಅಂಚಿನ ಮೇಲೆ ತತ್ತರಿಸುತ್ತಿರುವಾಗ ! ಬ್ರಹ್ಮಪುತ್ರ ! ಅಂಚಿನ ಮೇಲೆ ಕನಸುಗಳು, ಯೋಜನೆಗಳು, ದುಃಖ, ಸುಖ, ಆಸೆ, ಬೊಬ್ಬೆ, ಅಳು, ನಗು……
ಬ್ರಹ್ಮಪುತ್ರನನ್ನೂ ಬೆಳಗಿಸಬೇಕೆಂಬ ಆಸೆ ಸೂರ್ಯನಿಗೆ. ಕೆಂಪು ಲ್ಯಾಂಪಿನಂತೆ ಉರಿದ, ಮರೆಯಾಗಿ, ಮೂಲೆಯಲ್ಲಿ. ಹೊಳೆಗಳ ಸರ್ಪಗಳು ಗುಲಾಬಿಯಾಗಿ, ಹಳದಿಯಾಗಿ, ಕಾಮನ ಬಿಲ್ಲಾಗಿ ಅರಗಿಸಿದುವು ಅವನನ್ನ.
ಒಂದು ಸಾವಿರ ವಿದ್ಯುತ್ ಉತ್ಪಾದನಾ ಕೇಂದ್ರಗಳು. ಅವುಗಳ ಶಾಕನ್ನು ಲೆಕ್ಕಿಸದೇ ಅಲುಗಿನ ಮೇಲೆ ನಿಂತ ನೊಣದಂತೆ ದ್ವೀಪಗಳು. ನಂಬುತ್ತೀರೋ ! ಅದರಲ್ಲಿ ಜನರು. ಇದರ ಕೊನೆಯನ್ನು ನೋಡಬೇಕು ! ಹೇಗೆ ? ಎಲ್ಲಿ ? ಆಟರ್‌ನಿಂದ ಕೆಳಗೆ ನೋಡಿದರೆ ಒಂದು ಕಡೆ ಆಲದ ಮರವನ್ನೇ ಸೆಳೆದೊಯ್ಯುವ ಭೀಮಶಕ್ತಿ. ಒಮ್ಮೆ ಎಳೆಗರುವಿನ ಚೆಲ್ಲಾಟ. ಅಲ್ಲಿ ಬಳಕುವ ಜವ್ವನೆ. ಇಲ್ಲಿ ಪಾಚಿಗಟ್ಟಿ, ಕೆಂಪು ಕೆಸರು ತುಂಬಿದ ಮುದಿಯ. ತಲೆ ಬ್ರಹ್ಮಾಂಡವನ್ನು ವ್ಯಾಪಿಸಿದರೂ ಮುಳುಗಿಸುವ ವೈಚಿತ್ರ್ಯ. ಎಲ್ಲವನ್ನೂ ಒಳಗಾಗಿಸಿಕೊಂಡು ಸಮಪಾತ್ರ.
ಬೆಟ್ಟಗಳಾಚೆ, ಅವುಗಳ ತೊಡೆಗಳಲ್ಲಿ ಹರಿಯುವ ನದಿಗಳಿವೆ. ಆಟರ್‌ನಿಂದ ಕಂಡರೆ ಬೆಳಕಿನ ಗೆರೆಗಳು. ಇಕ್ಕಡೆ ಏರಿ ನಿಂತ ಮರದ ಒತ್ತು ಒತ್ತಾದ ಗೋಪುರಗಳು. ನಿರಿಗೆಯಂತೆ ಹೆಣೆದುಕೊಂಡ ಬೆಟ್ಟಗಳ ರಾಶಿ. ಮುಂದು ಮುಂದಕ್ಕೆ ವೃದ್ಧ ಪರ್ವತಗಳು. “ಎಲ್ಲವೂ ನಿಸ್ಸಾರ” ಎಂದು ಕಿವಿ ಗಡಚಿಕ್ಕುವಂತೆ, ಅವುಗಳ ಶೂನ್ಯ ಬಿಳುಪು.
ಆ ರಾಶಿಯನ್ನೆಲ್ಲ ಇಷ್ಟಬಂದಂತೆ ಬದಿಗೊತ್ತಿ ಹರಿಯುವ ಬ್ರಹ್ಮಪುತ್ರ. ಬೆಳಕಿನ ಗೆರೆಯಲ್ಲ, ಶಕ್ತಿಯ ಬರೆ.
“ಇದು ನನ್ನ ಉದ್ಯೋಗ. ನನಗೆ ವೇತನವಿದೆ. ನಿನ್ನ ಮೇಲೆ ಹಾರಾಡುತ್ತಿದ್ದೇನೆ. ಬ್ರಹ್ಮಪುತ್ರ” ಎಂದು ಹೇಳಲು ನನಗೇ ನಾಚಿಕೆ. ನನ್ನ ನಾಭಿಯಿಂದ ಹೊರಟ ಶಬ್ದರೂಪ ಅದರ ವಿಶ್ವವೈಶಾಲ್ಯದಲ್ಲಿ ಗಾಳಿಯ ಕಣದಂತೆ, ಅದರ ಎದೆಯ ಬಳಿಗೂ ಸೇರದೇ ಎತ್ತಲೋ ತೂರಿ ಹೋಗಿ, ಆ ಬಿಳಿ ಶೂನ್ಯದಲ್ಲಿ ನಗೆಗೀಡಾಗಬಹುದೆಂಬ ಭಯ. ಆಟರ್‌ನಲ್ಲಿದ್ದೂ, ಬ್ರಹ್ಮಪುತ್ರನ ಮೈ ಅಗಲವನ್ನು ಹಿಡಿತದಲ್ಲಿ ತರಲಾರದವನಾದೆ.
ನಿಸ್ಸಹಾಯನಾದೆ. ಆದರೆ ಹಗುರವಾದೆ. ಮೀನ್ಹಕ್ಕಿಯ ಜೊತೆ ಮಂಡಲ ಹೂಡಿ, ಗಿರ‍್ರನೆ ಸುತ್ತಿ, ನೀರು ಹನಿಗೆ ಮುಖ ಒಡ್ಡಿ, ಪುಳಕಗೊಂಡು, ಮೀನನ್ನೊಲ್ಲದೆ, ತಲೆ ಮುಳುಗಿಸಿ, ಚಟ ಚಟ ಒದರಿ, ಮತ್ತೆ ಅಂಬಿನಂತೆ ಮೇಲೆ ಬಂದೆ. ಶಕ್ತಿ ಘನೀಭೂತವಾಗಿ, ವಿಶ್ವಕ್ಕೆ ಸಂಕೇತವಾಗಿ, ಬ್ರಹ್ಮಪುತ್ರ ಹರಿದರೆ ಥರ ಥರ ನಡುಗುವುದಕ್ಕಿಂತ ಅದರ penumbraದಲ್ಲಿ ಖುಷಿಯಾಗಿ ಇದ್ದುಬಿಡೋಣ ಎಂಬುದು ಅರ್ಥವಾಗದ ಬ್ರಹ್ಮಪುತ್ರನೊಡನೆ ಢಿಕ್ಕಿ ಕೊಟ್ಟು ಸಂಕಟ ಪಡುವುದೇಕೆ ? ಬೆನ್ನು ಕೊಟ್ಟು ಓಡುವು ದಲ್ಲ; ಪರಿಮಿತಿಯನ್ನರಿತು ಉಲಿಯುವ ಪಕ್ಷಿ.
ಮತ್ತೊಂದು ಸಲ ಹಳೆಯ ಇಂಜಿನ್ನೊಂದರ ದೋಣಿಯಿಂದ ಕಂಡೆ. ಬ್ರಹ್ಮಪುತ್ರನ ಮೇಲೆ ಹರಿಯುವ ಅಸಂಖ್ಯ ತೆರೆಗಳಲ್ಲಿ ಒಂದಕ್ಕೆ ಶರಣಾಗಿ, ಸಮಗ್ರತೆಯ ಅರಿವಾಗದೇ ನಿದ್ರೆ ಬಂತು. ಕರ್ತವ್ಯ ನೆನಪಾಯಿತು. ಬ್ರಹ್ಮಪುತ್ರ ತರಿದೊಟ್ಟಿದ ಜನರಾಶಿಯನ್ನು ರಕ್ಷಿಸಬೇಕು. ನಗು ಸಹ ಬರಲಿಲ್ಲ. ಬ್ರಹ್ಮಪುತ್ರನ ಉರ್ಕು, ಸೊರ್ಕು, ಕುರುಕ್ಷೇತ್ರಕ್ಕೆ ಮೀರಿದ್ದು. ಹಿಟ್ಲರ್‌ನ ೧೩೮ ಡಿವಿಜನ್ನುಗಳ ಹೊಡೆತದಲ್ಲಿ ಇಂತಹ ಹಲ್ಲಿರಲಿಲ್ಲ. ಅಣು ಬಾಂಬಿನ ವ್ಯಾಪಕತೆ ಇಲ್ಲ. ನಿಶ್ಚಯವಾದ ಪ್ರಬಲ ಹೊಡೆತ. ಅದನ್ನೆದುರಿಸಲು ಮಳೆಯ ನೀರಿನ ಮೇಲೆ ತೇಲಿಬಿಟ್ಟ ಕಾಗದದ ಹಾಯಿಗಳಂತೆ ದೋಣಿಗಳು. ಅವಕ್ಕೂ ವಿಚಿತ್ರ ಎಂದರೆ ನಮ್ಮ ವಿಚಾರಗಳು. ನಾವು ಎಂಬುದನ್ನು ಮಾಡಿದ ನಿರ್ಬಲ ಶಕ್ತಿಗಳು. ಅಲ್ಲಿಗೇ ದರ್ಭೆಯ ಕಟ್ಟನ್ನು ಹಿಡಿದು ವಜ್ರಾಯುದ್ಧವನ್ನು ಎದುರಿಸಲು ಹೊರಟ ವಿವೇಕಿಗಳು.
ಒಂದು ತೆರೆ ಭುಸ್ ಎಂದರಾಯಿತು. ಉರುಳಿ, ಜೋಲಿ ಹೊಡೆದು ನಡುಗುವ ದೋಣಿ ನಮ್ಮ ಆಧಾರ.
ದಂಡೆಯ ಮೇಲೆ ದಟ್ಟಡವಿಯಂತೆ, ಸಾಲಾಗಿ ನಿಂತ ಜನರು. ನಮ್ಮ ಚಿಕ್ಕೆಯ ರೂಪದಲ್ಲಿ ಏನು ಕಂಡರೋ !
ಬ್ರಹ್ಮಪುತ್ರನಿಗೆ ನಮ್ಮ ಮೇಲೆ ಗಮನವಿದ್ದಂತೆ ಕಾಣಲಿಲ್ಲ. ರಾಕ್ಷಸನನ್ನು ಕಡಿಯುವ ಸೊಳ್ಳೆಗಳಂತೆ ನಾವು ಉದಾಸೀನಕ್ಕೆ ತಕ್ಕವರು. ಕೊಳ್ಳೆ ಹೊಡೆಯಲು, ಆರ್ದು, ಪೀರ್ದು, ಆನೆಗಳ ಹಿಂಡನ್ನೇ ತೊತ್ತುಳಿ ತುಳಿದು, ಪ್ರಕೃತಿಯ ಒಂದು ಮುಖ ಇನ್ನೊಂದು ಮುಖವನ್ನು ಕಬಳಿಸುವಾಗ ನಮ್ಮ ತೂಕವೇ ! ಬೀಸುವ ದೊಣ್ಣೆ ತಪ್ಪಿತಲ್ಲಿ. ದ್ವೀಪ ಮುಟ್ಟಿದ್ದಾಯಿತು.
ಗಹ ಗಹಿಸುತ್ತಿರುವ ತೆರೆಗಳಿಗೆ ನೇಣು ಹಾಕಿಕೊಂಡು ಕೊಚ್ಚಿ ಹೋದವರು ಹೋದರು. ಉಳಿದವರು ಜೋಲಿ ಹೊಡೆಯುತ್ತಿರುವ ರೆಂಬೆ ಕೊಂಬೆಗಳಿಗೆ ಎಲೆಗಳಾಗಿದ್ದರು.
ಸುತ್ತಲೂ ಭೋರ್ಗರೆಯುವ ಉನ್ಮತ್ತ ಬ್ರಹ್ಮಪುತ್ರ.
ಬದುಕಬೇಕು ಎಂಬ ಆಸೆಯೊಂದೇ ಎಂತಹ ಭೀಷಣ ಶಕ್ತಿ. ಗಾಳಿಯಲ್ಲೂ ನಂದದ ಕುಡಿ. ರೆಂಬೆ ಕೊಂಬೆಗಳ ಎಲೆಗಳು ತೆರೆಗಳ ಬೊಬ್ಬೆಯನ್ನು ಮೀರಿ ಗೋಳಿಟ್ಟವು. “ನನ್ನನ್ನು ಮೊದಲು ಉಳಿಸು. ನನ್ನನ್ನು ಮೊದಲು ಉಳಿಸು. ನನ್ನ ಹತ್ತಿರ ಬರಲಿ ದೋಣಿ, ಹಗ್ಗ ಈ ಮರಕ್ಕೆ ಬರಲಿ”
ತಾಯಿ ಕೋತಿ ಮರಿ ಕೋತಿಯ ಮೇಲೆ ನಿಂತಿತು. ನನ್ನ ಜೊತೆಯವ ಹಗ್ಗ ಎಸೆದ ಹೆಣ್ಣು ಹೆಚ್ಚಾದ ಕಡೆಗೆ. ಭಲೆ ಎಂದುಕೊಂಡೆ. ಭೂಮಿಯೇ ಬುಡ ಮೇಲಾದರೇನಂತೆ “ನಡುವಿನ ನಡುವಿನ” ಮೇಲೇ ಗಮನ, ಆದ್ಯತೆ. ಹಾಸ್ಯದ ಹೊನಲೊಂದು ನದಿಯ ಮೇರೆಯನ್ನು ದಾಟಿ, ಸುಳಿದು, ಸುತ್ತಿ, ಆಕಾಶಕ್ಕೆ ಚಿಮ್ಮಿ ತಲೆಯ ಮೇಲೆ ಬಿದ್ದು ನೂರು ಹೋಳಾಯಿತು. ಅಪಹಾಸ್ಯದ ಹೊನಲು ಎಂಬುದು ತಿಳಿಯಲೇ ಇಲ್ಲ. ಒದ್ದೆ ತೊಡೆಗಳನ್ನು ಮುಟ್ಟಿ, ತಟ್ಟಿ, ದೋಣಿಗಿಳಿಸಿದ ಜೊತೆಗಾರ. ಸುಕ್ಕುಗಟ್ಟಿದ ತೊಡೆಗಳು ತಾವೇ ತತ್ತರಿಸಿ, ಕೆಲವು ದೋಣಿಗಳೊಳಗೆ ಉರುಳಿದುವು. ಕೆಲವು ಬ್ರಹ್ಮಪುತ್ರನ ತೆರೆದ ಬಾಯಿಗೆ.
“Good riddance” ಎಂದ ರಸಿಕ.
ಎದೆ ಕಚ್ಚಿಕೊಂಡು ಇಳಿದ ಮರಿ ಕೋತಿಗಳನ್ನು ಕಳಚುವಂತಿರಲಿಲ್ಲ. ಸಾವಿನ ಮಡಿಲಲ್ಲಿ “ಬ್ಯಾ, ಬ್ಯಾ” ಎಂದು ಅಳುವ ಬೀಜದ ಸ್ವರ.
ಮೂರು ದೋಣಿಗಳಲ್ಲಿ ಹೆಚ್ಚಾಗಿ ಒದ್ದೆ ಸೀರೆಗಳೇ ತುಂಬಿದಾಗ ಹೀರೋನಂತೆ ಮುಗುಳ್ನಕ್ಕ ಜೊತೆಗಾರ. ದೋಣಿಗಳು ದಂಡೆಯ ಕಡೆ ತೊಡಕು ತೊಡಕಾಗಿ ಮುಗ್ಗರಿಸಿದಾಗ ಉಳಿದ ಗಿಡಗಳಿಂದ ಆಕ್ರಂದನ.
“ಒಂದು ದೋಣಿಗೆ ಇಪ್ಪತ್ತೇ ಜನ, ಮತ್ತೆ ಬರುತ್ತೇವೆ” ಎಂದು ಗಾಳಿಗೆ ಹೇಳಿದ ಅವನು ಗಾಳಿ ಬಾಯಿಗೆ ನುಗ್ಗಿದ ರಭಸಕ್ಕೆ ಬಿಕ್ಕಿದ. ಮತ್ತೆ ಮೀಸೆಯ ಮೇಲೆ ಕೈ ಆಡಿಸಿ, ಎರಡು ಜೊತೆ ಕಣ್ಣುಗಳನ್ನು ನಿಟ್ಟಿಸಿ ಬೀಗಿದ.
ಸಂಜೆಯವರೆಗೆ ಅದೇ ಕೆಲಸ. ಕೆಲವು ವರ್ಷಗಳ ಜೀವದಾನ ಮಾಡುವ ಕಾಯಕ. ಒಮ್ಮೆ ಒಂದು ದೋಣಿ ಮಗುಚಿ ನನ್ನ ಜೊತೆಗಾರನ ಸಂಪತ್ತೆಲ್ಲ ನೀರಿನಲ್ಲಿ ಮುಳುಗಿತು. ಇಪ್ಪತ್ತು ಜೀವಗಳ ಹೋರಾಟ-ಬ್ರಹ್ಮಪುತ್ರನೊಡನೆ ! ಕೈ ಕಾಲುಗಳನ್ನು ಬಡಿಯುವ ಹುಟ್ಟು ಈಜುಗಾರರನ್ನು “ಅಬೇ ಚಲ್” ಎಂದು ಮೂದಲಿಸಿ ಕೊಚ್ಚಿಕೊಂಡು ಹೋಗುವ ಬೃಹದ್ ರಾಕ್ಷಸ ಶಕ್ತಿ. ನೀರು ಮುಖಕ್ಕೆ ರಾಚಿದಾಗ ನಿಶ್ಚೇಷ್ಟಿತವಾದ ಹಿಡಿ ದೇಹ. ಎದೆಗೆ ಕಚ್ಚಿ ಹಿಡಿದ ಮರಿಗಳನ್ನೂ ಕೈಬಿಟ್ಟ ಬಯಕೆ. ಎಷ್ಟು ಸಲ ಸೋತರೂ ಮತ್ತೆ ಹುಲ್ಲಿಗೆ ಕಚ್ಚಿಕೊಳ್ಳುವ ಒಬ್ಬನ ತಲೆಗೆ ಮರದ ಬೊಡ್ಡೆ ಬಡಿದು, ರಕ್ತದ ಹನಿಗಳು ಅರೆಕ್ಷಣ ಚಿಮ್ಮಿದಾಗ, ಶರಣಾಗತನಾದ ದೃಶ್ಯ. ಸುಖದ ಸಾವು ಮರಿಗಳಿಗೆ ಮೀಸಲು, “ಅಮ್ಮಾ” ಎಂದು ಕಿರುಚುವ ಬಾಯಿಯಲ್ಲಿ ನುಗ್ಗಿದ ನೀರಿನಿಂದ ವಿಶ್ರಾಂತಿ.
ಕಡೆಗೆ ಗಿಡಗಳೆಲ್ಲ ಖಾಲಿ ; ನೀರಿಗೋ, ದೋಣಿಗೋ, ಒಟ್ಟು ಖಾಲಿ. ನಾಲ್ಕನೆಯ ಸಲ ಬಂದಾಗ ಒಂದು ಗಿಡವೇ ಕೊಚ್ಚಿಕೊಂಡು ಹೋಗಿತ್ತು, “ಅಬ್ಬ ! ಇನ್ನೊಂದು ಟ್ರಿಪ್ ಉಳಿತಾಯ” ಎಂದು ನಿಟ್ಟುಸಿರಿದ ಡ್ರೈವರ್ ಅಂಬಿಗ.
೧೯ ಜನ ತುಂಬಿದ ಮೇಲೆ ಇಬ್ಬರೇ ಉಳಿದದ್ದು. ಅವರಿಬ್ಬರನ್ನು ಏರಿಸಿದರೆ ದೋಣಿಯ ೨೦ ರ ಮಿತಿಗೆ ಒಂದು ಹೆಚ್ಚು. ಎಂತಹ ಪ್ರಮಾದವೂ ಇಲ್ಲ, ೨೧ ಆದರೆ ದೋಣಿ ಮುಳುಗುತ್ತದೆ ಎಂಬಂತಿಲ್ಲ. ೧೮ ಆದರೆ ದೋಣಿ ಮುಳುಗುವುದಿಲ್ಲ ಎಂಬಂತಿಲ್ಲ. ಆದರ ಜೆತೆಗಾರನ stunt. ಹುಡುಗೆ, ಅವಳ ಮುದಿ ತಂದೆ.
“ಒಬ್ಬರೇ. ಯಾರು ಬರುತ್ತೀರಿ ?” ಎಂದು ಕೇಳಿದ, ವಿಧಿಯೋ ಎಂಬಂತೆ.
ಹುಡಿಗೆ ಹೆಣ್ಣಾದಳು. ತೊಡೆ ತೆಗೆಯುತ್ತೇನೆ ಎಂದಳು ಕಣ್ಣಿನಿಂದ.
“ದೋಣಿ ಮತ್ತೆ ಬರುವುದಿಲ್ಲವೆ” ಎಂದ ಮುದುಕ.
“ನಾಳೆ ಬರುತ್ತದೆ. ಇದೇ ಕಡೆಯ ಸಲ. ಕತ್ತಲಾಯಿತು.”
“ನಾಲ್ಕು ದಿನದಿಂದ ಅನ್ನವಿಲ್ಲ. ನಾನು ಮುದುಕ. ಇನ್ನೊಂದು ರಾತ್ರಿ ಇರಲಾರೆ”.
“ಛಿ” ಎಂದ ಜೊತೆಗಾರ, “ಹಿಂದಿ ಸಿನೆಮಾ ಇಲ್ಲಿಲ್ಲ” ಎಂದು ಖೇಕರಿಸಿ ಉಗುಳಿದ. ಅದನ ಮುಖಕ್ಕೆ ಉಗ್ಗಿತದನ್ನು ನೀರು.
“ಇಬ್ಬರೂ ಬನ್ನಿ” ಎಂದ ನಿರ್ಲಿಪ್ತನಾಗಿ.
ದಂಡೆ ಸೇರಿದ ಮೇಲೆ : “ಈ ರಾತ್ರಿಯಂತೂ ಅಸಾಧ್ಯ. ಮೈ ಕೈ ಎಲ್ಲ ನೋವು. ನಾಳೆ ಮಜಾ” ಎಂದ. ಮರುದಿನ ಸರ್ಕಾರ ಹೂಡಿದ ಶಿಬಿರಕ್ಕೆ ತೊಡೆಗಳೆಲ್ಲ ಪರಾರಿ.
ಕಡೆಯ ಸಲ ಕಟ್ಟೆಯಿಂದ ಕಂಡೆ. ಹುಟ್ಟಿನ ಪರಮಾವಧಿ. ಬ್ರಹ್ಮಪುತ್ರ ಡಂಡೆಯನ್ನು ಕೊರೆಯುತ್ತಾನೆ. ಅಡ್ಡ ಕಟ್ಟೆಗಳನ್ನು ಕಟ್ಟಿ ಅವನನ್ನು ಮುರಿಯೋಣ ಎಂದು ಕೈ ಬೆರಳುಗಳಂತೆ ಇಪ್ಪತ್ತು ಕಟ್ಟೆಗಳನ್ನು ಕಟ್ಟಿದರು.
ಕಟ್ಟೆಯ ತುದಿಗೆ ನಿಂತರೆ ಅಂಬಿನಂತೆ ಕಿತ್ತು ಹರಿಯುವ ಬ್ರಹ್ಮಪುತ್ರ.
“ಅರ್ಧ ದಿಬ್ರೂಘರ್ ನೀರಿನಲ್ಲಿಯೇ ಇದೆ” ಎಂದ ಕಲ್ಲುಕುಟಿಗ.
“ಅಲ್ಲಿ ಹೈಕೋರ್ಟಿತ್ತು. ಅಲ್ಲಿ ಕಾಲೇಜಿತ್ತು. ಅಲ್ಲಿ ಕಚೇರಿ ಇತ್ತು” ಎಂದು ಬ್ರಹ್ಮಪುತ್ರನ ನೀರಿನ ಹರವಿನಲ್ಲಿ ಅಲ್ಲಲ್ಲಿ ಬೊಟ್ಟು ಮಾಡಿ ತೋರಿಸಿದ.
“ಅದಾದದ್ದು ಯಾವಾಗ ?” ಎಂದೆ.
“ಎರಡು ವರ್ಷವಾಯಿತು.”
“ಆಗ ಕಟ್ಟೆಗಳನ್ನು ಕಟ್ಟಿದ್ದರೆ ?”
“ಕಟ್ಟಿದ್ದರು” ಎಂದ.
ಮಹಾತ್ಯಾಗ
ಮಹಾತ್ಯಾಗ
ಗಿರಡ್ಡಿ ಗೋವಿಂದರಾಜ
ದಿ. ಎಂ. ಆರ್. ಶ್ರೀನಿವಾಸಮೂರ್ತಿಯವರು ಹೊಸಗನ್ನಡ ಸಾಹಿತ್ಯದ ಕುತೂಹಲಗಳಲ್ಲಿ ಒಂದಾಗಿದ್ದಾರೆ. ಮುಖ್ಯವಾಗಿ, ಸಾಹಿತ್ಯವನ್ನು ಅವರು ಅಭಿವ್ಯಕ್ತಿಯ ಏಕಮಾತ್ರ ಸಾಧನವನ್ನಾಗಿ ಅವಲಂಬಿಸಲಿಲ್ಲ. ಅವರು ರಚಿಸಿದ ಒಂದೊಂದು ಕೃತಿಗಳೂ ಒಂದೊಂದು ಜಾತಿಗೆ ಸೇರಿದವುಗಳು. “ನಾಗರಿಕ” ಸರಳ ರಗಳೆಯ ನಾಟಕ ; “ಭಕ್ತಿ ಭಂಡಾರಿ ಬಸವಣ್ಣನವರು” ವಿಮರ್ಶಾಕೃತಿ; “ರಂಗಣ್ಣನ ಕನಸಿನ ದಿನಗಳು” ಕಾದಂಬರಿಗೂ ಸೇರದ, ಸಣ್ಣಕತೆಗಳ ಸಂಗ್ರಹವೂ ಅಲ್ಲದ, ಹರಟೆಗಳ ಜಾತಿಗೂ ಒಗ್ಗದ ವಿಶಿಷ್ಟ ಬರವಣಿಗೆ ; “ಮಹಾತ್ಯಾಗ” ಅವರ ಏಕಮೇವ ಕಾದಂಬರಿ. ಹೀಗೆ ಶ್ರೀನಿವಾಸಮೂರ್ತಿಯವರು ಸಾಹಿತ್ಯದ ಯಾವದೊಂದು ಪ್ರಕಾರವನ್ನೂ ಆಯ್ದುಕೊಂಡು
ಅಭಿವ್ಯಕ್ತಿಯ ಪರಿಪೂರ್ಣ ಸಾಧನವನ್ನಾಗಿ ಮಾಡಿಕೊಳ್ಳಲಿಲ್ಲ. ಅವರು ಮುಖ್ಯತಃ ವಿದ್ವಾಂಸರು. ಕ್ರಿಯಾಶೀಲ ಸಾಹಿತ್ಯದ ರಚನೆ ಅವರಿಗೆ ಕೇವಲ ಒಂದು ಹವ್ಯಾಸವಾಗಿತ್ತು. ಅಲ್ಲದೆ ತಾವು ಕೈಗೆತ್ತಿಕೊಂಡ ಸಾಹಿತ್ಯಪ್ರಕಾರಗಳನ್ನು ಅವುಗಳ ಅಂತಸ್ಸತ್ವಕ್ಕೆ ಕುಂದು ಬಾರದ ಹಾಗೆ ಬಳಸಿಕೊಂಡರೂ, ಅವುಗಳನ್ನು ಉಜ್ವಲ ರೀತಿಯಲ್ಲಿ ಬೆಳಗಿ ಅನನ್ಯ ಕೃತಿಗಳನ್ನು ರಚಿಸಬಲ್ಲ ಸ್ವತಂತ್ರ ಪ್ರತಿಭೆ ಅವರದಾಗಿರಲಿಲ್ಲ. ಕಾರಣ, ಅವರದು ಮುಖ್ಯವಾಗಿ ಸಾಂಪ್ರದಾಯಿಕ ಮನೋಭಾವ. ಶ್ರೀನಿವಾಸಮೂರ್ತಿಯವರಂತೆ ಕಾದಂಬರಿ ತಮ್ಮ ಅಭಿವ್ಯಕ್ತಿಯ ಮಾಧ್ಯಮವಾಗಿರದಿದ್ದು, ಒಂದೆರಡೇ ಅನನ್ಯ ಕೃತಿಗಳನ್ನು ರಚಿಸಿದ ಲೇಖಕರಿದ್ದಾರೆ. ಪುಟ್ಟಪ್ಪನವರ ಕಾದಂಬರಿಗಳು, ಗೋಕಾಕರ “ಸಮರಸವೇ ಜೀವನ”, ಮೊಕಾಶಿಯವರ “ಗಂಗವ್ವ ಮತ್ತು ಗಂಗಾಮಾಯಿ” ಈ ಬಗೆಯ ಕೃತಿಗಳಾಗಿವೆ. ವಿಶಿಷ್ಟ ಅಭಿವ್ಯಕ್ತಿಯ ಅದಮ್ಯ ಬಯಕೆಯಿಂದ ಹುಟ್ಟಿದ
ಕಾದಂಬರಿಗಳಿವು. ಆದರೆ ಶ್ರೀನಿವಾಸಮೂರ್ತಿಯವರು ರಚಿಸಿದ್ದು ಒಂದೇ ಒಂದು ಕಾದಂಬರಿಯಾದರೂ ಇಂಥ ಯಾವ ವಿಶಿಷ್ಟ ಅಭಿವ್ಯಕ್ತಿಯ ಬಯಕೆಯೂ ಇದಕ್ಕೆ ಕಾರಣವಾಗಿಲ್ಲ. ಬದಲಾಗಿ ಒಂದು ಸಾಂಪ್ರದಾಯಿಕ ಕಥೆಯನ್ನು ಸಾಂಪ್ರದಾಯಿಕ ರೀತಿಯಲ್ಲಿ ನಿರೂಪಿಸುವ ಯತ್ನ ಇಲ್ಲಿದೆ.
“ಮಹಾತ್ಯಾಗ” ಪ್ರಕಟವಾದದ್ದು ೧೯೫೫ ರಲ್ಲಿ. ಈ ಹೊತ್ತಿಗೆ ನವೋದಯ ಕಾಲದ ಲೇಖಕರೆಲ್ಲ ತಮ್ಮ ಸಿದ್ದಿಯ ಕೊನೆಯ ಹಂತಗಳನ್ನು ತಲುಪಿಯಾಗಿತ್ತು. ಈ ಲೇಖಕರು ನಿರ್ಮಿಸಿದ ಅಭಿರುಚಿ ಆಗಲೇ ಭದ್ರವಾಗಿ ಬೇರುಬಿಟ್ಟಿತ್ತು. ಬರವಣಿಗೆಯ ಒಂದು ಸಂಪ್ರದಾಯವೇ ನಿರ್ಮಾಣವಾಗಿ ಅದರ ಲಕ್ಷಣಗಳೆಲ್ಲ ಸ್ಪಷ್ಟವಾಗಿ ನಿರ್ಧರಿಸಲ್ಪಟ್ಟ ದ್ದವು. ಹೀಗಾಗಿ ಆ ಕಾಲದಲ್ಲಿ ಬರವಣಿಗೆಯನ್ನು ಆರಂಭಿಸಬೇಕೆಂದು ಹೊರಡುವವರಿಗೆ ಆ ಸಂಪ್ರದಾಯದ ಅನುಕೂಲವಿತ್ತು. ಅಂತೆಯೇ ಅನೇಕರಿಗೆ ಅವಶ್ಯವಾದ ಸಿದ್ಧತೆಯಿಂದಲೇ ಹೊರಡುವುದು ಸಾಧ್ಯವಿತ್ತು.
ಶ್ರೀನಿವಾಸಮೂರ್ತಿಯವರೂ ಈ ಸಂಪ್ರದಾಯದಲ್ಲೇ ತಮ್ಮ ಅಭಿರುಚಿಯನ್ನು ಹದಗೊಳಿಸಿಕೊಂಡವರು. ವಿಕ್ಟೋರಿಯ ರಾಣಿಯ ಕಾಲದ ಇಂಗ್ಲಿಷ್ ಕಾದಂಬರಿಕಾರರ ಅಭ್ಯಾಸವೂ ಇದಕ್ಕೆ ಪೂರಕವಾಗಿತ್ತು. ಜೊತೆಗೆ ಭಾರತೀಯವೆನ್ನಬಹುದಾದ ಜೀವನದ ಶುಚಿ-ರುಚಿಗಳ ಬಗ್ಗೆ ಅವರು ವಿಶೇಷ ಶ್ರದ್ದೆಯನ್ನಿರಿಸಿಕೊಂಡವರು. ಸಹಜವಾಗಿಯೇ ಅವರ ಕಾದಂಬರಿ ಈ ಬಗೆಯ ಮನೋಭಾವದ ಕೃತಿಯಾಗಿದೆ. ನವೋದಯ ಕಾದಂಬರಿಯ ಕೊನೆಗಾಲದ ಪ್ರತಿನಿಧಿಯೆಂಬ ಕಾರಣದಿಂದ ಈ ಕೃತಿಯ ಅಭ್ಯಾಸ ಒಂದು ರೀತಿಯಲ್ಲಿ ಮಹತ್ವದ್ದಾಗಿದೆ.
ಅನೇಕ ನವೋದಯ ಕಾದಂಬರಿಗಳಂತೆ “ಮಹಾತ್ಯಾಗ”ವೂ ಸರಳವಾದ ನೇರ ನಿರೂಪಣೆಯ ತಂತ್ರವನ್ನು ಅನುಸರಿಸಿದೆ. ಕಾದಂಬರಿಕಾರನೇ ಸರ್ವಾಂತಯ್ಯಾಮಿಯಾಗಿ ನಿಂತುಕೊಂಡು ಕಥೆ ಹೇಳುತ್ತಾನೆ ; ಸನ್ನಿವೇಶ, ಪಾತ್ರಗಳ ನಡವಳಿಕೆಯ ಮೇಲೆ ವ್ಯಾಖ್ಯಾನ ಮಾಡುತ್ತಾನೆ ; ಸಮಯ ಸಾಧಿಸಿದಾಗ ಜೀವನದ ಆಗುಹೋಗುಗಳ ಬಗೆಗೆ, ಮನುಷ್ಯ ಸ್ವಭಾವದ ಬಗೆಗೆ ನೀತಿಯ ಮಾತುಗಳನ್ನು ಕ್ರೋಢೀಕರಿಸುತ್ತಾನೆ. ಇವೆಲ್ಲ ನಮ್ಮ ನವೋದಯ ಕಾದಂಬರಿಯ ಸರ್ವಸಾಮಾನ್ಯ ಬರವಣಿಗೆಯ ರೀತಿಗಳು. ಈ ದೃಷ್ಟಿಯಿಂದ “ಮಹಾತ್ಯಾಗ” ಯಾವ ತಾಂತ್ರಿಕ ಮಹತ್ವಾಕಾಂಕ್ಷೆಯನ್ನೂ ಪ್ರಕಟಿಸುವುದಿಲ್ಲ.
ಆದರೆ, ನವೋದಯ ಕಾದಂಬರಿ ಶಿಥಿಲವಾಗುತ್ತ ನಡೆದಿದ್ದ ಕಾಲದಲ್ಲಿಯೂ “ಮಹಾತ್ಯಾಗ” ತನ್ನದೇ ಆದ ಕೆಲವು ವಿಶಿಷ್ಟ ಗುಣಗಳಿಂದ ಗಮನ ಸೆಳೆಯುತ್ತದೆ. ಮುಖ್ಯವಾಗಿ ಇದರ ಅಚ್ಚುಕಟ್ಟುತನ ಎದ್ದು ಕಾಣುವಂತಿದೆ. ಕಥೆಯ ನಿರೂಪಣೆಯಲ್ಲಿ, ವಸ್ತುಸಂವಿಧಾನದಲ್ಲಿ, ಪಾತ್ರರಚನೆಯಲ್ಲಿ, ಸಮಸ್ಯೆಯ ವಿವೇಚನೆಯಲ್ಲಿ, ಹಿತಮಿತವಾದ ಶೈಲಿಯಲ್ಲಿ, ಕೊನೆಗೆ ಇವಕ್ಕೆಲ್ಲ ಮುಖ್ಯ ಕಾರಣವಾಗಿರುವ ಕಾದಂಬರಿಕಾರನ ಜೀವನ ದೃಷ್ಟಿಯಲ್ಲಿ-ಹೀಗೆ ಎಲ್ಲೆಲ್ಲಿಯೂ ಅಚ್ಚುಕಟ್ಟುತನ ಇಡಿಯ ಕಾದಂಬರಿಗೆ ಹೊಸದೊಂದು ಬಣ್ಣ ಕೊಟ್ಟಿದೆ. ಒಂದು ದೃಷ್ಟಿಯಿಂದ ಕಾದಂಬರಿಯ ಗುಣಾವಗುಣಗಳಿಗೆಲ್ಲ ಈ ಅಚ್ಚುಗಟ್ಟುತನವೇ ಕಾರಣವಾಗಿದೆಯೆನ್ನಬಹುದು. ಆದರೆ ಈ ಅಚ್ಚುಕಟ್ಟುತನ ಸಾಂಪ್ರದಾಯಿಕ ಮನೋಭಾವದ ಇನ್ನೊಂದು ಮುಖವೆಂಬುದನ್ನು ಮರೆಯುವಂತಿಲ್ಲ. ಯಾಕೆಂದರೆ ಈ ಅಚ್ಚುಕಟ್ಟುತನಕ್ಕೆ, ಶ್ರೀನಿವಾಸಮೂರ್ತಿಯವರ ಕಾಲಕ್ಕೆ ನವೋದಯ ಕಾದಂಬರಿ ಆಗಲೇ ಸಾಧಿಸಿದ್ದ ಬರವಣಿಗೆಯ ಪರಿಪೂರ್ಣತೆಯೇ ಕಾರಣವಾಗಿದೆ. ತಮ್ಮೆದುರಿಗಿದ್ದ ಉದಾಹರಣೆಗಳ ಮೂಲಕ ತಮ್ಮ ಮೊದಲ ಕೃತಿಯಲ್ಲಿಯೇ ಆ ಎಲ್ಲ ತಾಂತ್ರಿಕ ಪರಿಪೂರ್ಣತೆಯನ್ನೂ ಉಪಯೋಗಿಸಿಕೊಳ್ಳುವುದು ಅವರಿಗೆ ಸಾಧ್ಯವಾಯಿತು. ಆದರೆ ಅದರ ಹರವನ್ನು ಇನ್ನಷ್ಟು ಹಿಗ್ಗಲಿಸಿ ಇನ್ನೂ ಹೆಚ್ಚು ಶಕ್ತಿಪೂರ್ಣವಾಗಿಸುವ, ಈವರೆಗೆ ಕಾದಂಬರಿಯ ಕ್ಷೇತ್ರದಲ್ಲಿ ಬರದಿದ್ದ ಹೊಸ ವಿಷಯಗಳ ನಿರೂಪಣೆಗೆ ತಕ್ಕ ಮಾಧ್ಯಮವನ್ನು ನಿರ್ಮಿಸಿಕೊಳ್ಳುವ ವಿಶೇಷ ಶಕ್ತಿ ಅವರ ಬರವಣಿಗೆಗೆ ಇರಲಿಲ್ಲ. ಮುಖ್ಯವಾಗಿ, ಮೊದಲೇ ಹೇಳಿದಂತೆ, ಶ್ರೀನಿವಾಸಮೂರ್ತಿಯವರು ಸಂಪ್ರದಾಯವಾದಿಗಳು. ಸಂಪ್ರದಾಯದ ಕಟ್ಟಿನಲ್ಲಿಯೇ ಸಾಧ್ಯವಿದ್ದುದನ್ನೆಲ್ಲ ಅವರು ಸಾಧಿಸಿಕೊಂಡರು.
“ಮಹಾತ್ಯಾಗ”ದ ಯಶಸ್ಸಿರುವದು ವಸ್ತುವಿನ ನಿರೂಪಣೆಯಲ್ಲಿ. ಕೈಗೆತ್ತಿಕೊಂಡಿರುವ ಸಮಸ್ಯೆಯನ್ನು ಲೇಖಕರು ಮೊದಲಿನಿಂದಲೂ ಒಂದು ಬಗೆಯ ನಿರ್ಧಾರದಿಂದ ಚಿತ್ರಿಸಿದ್ದಾರೆ. ಅನೇಕ ಜನ ನವೋದಯ ಕಾದಂಬರಿಕಾರರಂತೆ ಅವರು ಎತ್ತಿದ ಸಮಸ್ಯೆಯನ್ನು ಕೊನೆಯವರೆಗೂ ಒಯ್ಯಲಾರದೆ ಅನುಚಿತ ರಿಯಾಯಿತಿಗಳನ್ನು ತೋರಿಸಿ ಪಾರಾಗುವದಿಲ್ಲ. ಸಮಸ್ಯೆಯ ಜೊತೆಗೆ ಯಾವ ಬಗೆಯ ಒಪ್ಪಂದವನ್ನೂ ಮಾಡಿಕೊಂಡು ಹೊಣೆಯನ್ನು ತಪ್ಪಿಸಿಕೊಳ್ಳುವದಿಲ್ಲ. ಅಂತೆಯೇ ಬರವಣಿಗೆ ಮೊದಲಿನಿಂದಲೂ ಶಕ್ತಿಪೂರ್ಣವಾಗಿಯೇ ಬಂದಿದೆ.
ಸಮಸ್ಯೆಯ ಕೇಂದ್ರವ್ಯಕ್ತಿ ಕಾವೇರಮ್ಮ. ಇಡಿಯ ಸಮಸ್ಯೆಯನ್ನು ಹುಟ್ಟಿಸಿದವಳೂ ಒಂದು ರೀತಿಯಲ್ಲಿ ಆಕೆಯೇ. ಅನಂತರ ಪ್ರತಿ ನಿಮಿಷವೂ ಅದರ ಮೇಲಿನ ಹಿಡಿತ ಒಂದಿಷ್ಟೂ ಸಡಿಲಾಗದಂತೆ ನೋಡಿಕೊಳ್ಳುವ ಅದ್ಭುತ ಕ್ರಿಯಾಶಕ್ತಿ ಅವಳಲ್ಲಿದೆ. ಸರೋಜಳ ವಿರುದ್ಧ ಅವಳಿಗೆ ಅವಳವೇ ಆದ ಕಾರಣಗಳಿವೆ. ತಿಳಿವಳಿಕೆಯ ಅಭಾವದಿಂದಲೋ, ಪೂರ್ವಗ್ರಹಗಳಿಂದಾಗಿಯೋ-ಒಂದು ಸಲ ಸೊಸೆಯ ಬಗೆಗೆ ಮೂಡಿದ ಅಸಮಾಧಾನ ಈರ್ಷೆಯ ಮಟ್ಟವನ್ನು ತಲುಪಿದಾಗ ಅವಳ ಕ್ರಿಯಾಶಕ್ತಿ ಒಮ್ಮೆಲೆ ಕಾರ‍್ಯಪ್ರವೃತ್ತವಾಗುತ್ತದೆ. ಆದರೆ ಅದರಿಂದ ತನ್ನ ಮಗನ ಸಂಸಾರ ಒಡೆದುಹೋಗಬಾರದೆಂಬ ಕಳಕಳಿಯೂ ಇದೆ. ಎಷ್ಟು ವಿಧದಿಂದ ಸಾಧ್ಯವೋ, ಅಷ್ಟೂ ವಿಧದಿಂದ ಸೊಸೆಯ ವಿರುದ್ಧ ಮಗ ಸೀತಾರಾಮುವಿನ ಮನಸ್ಸನ್ನು ಕಲಕುವ ಪ್ರಯತ್ನ ಮಾಡುತ್ತಾಳೆ. ಅಜಾಗರೂಕತೆಯಿಂದ ಹೆಂಡತಿಯ ಮನೆಯಲ್ಲಿ ನಡೆದ ಘಟನೆಗಳು ಈ ಮನಃಸ್ಥಿತಿಯಲ್ಲಿದ್ದ ಸೀತಾರಾಮುವಿಗೆ ನಿರಪರಾಧಿಯ ವರ್ತನೆಯಲ್ಲೂ ಅಪರಾಧದ ಬಣ್ಣ ಕಾಣಿಸಿದ್ದು ಈ ಕಾರಣಕ್ಕಾಗಿ. ಈ ಪ್ರಸಂಗವನ್ನು ಕಾವೇರಮ್ಮ ತನ್ನದೇ ಆದ ಉದ್ದೇಶಕ್ಕಾಗಿ ತಿರುಗಿಸಿಕೊಳ್ಳುತ್ತಾಳೆ. ತನ್ನ ಸತ್ತ ಗಂಡನ ನೆನಪು ತೆಗೆದು, ತಾನು ಕಷ್ಟದಿಂದ ಮಗನನ್ನು ಕಾಪಾಡಿದ್ದನ್ನು ಎತ್ತಿ ಹೇಳಿ-ಹೀಗೆ ಸೀತಾರಾಮುವಿನ ಬುದ್ಧಿ. ಅಂತಃಕರಣ, ಜವಾಬ್ದಾರಿಗಳ ಮೇಲೆ ಎಲ್ಲ ರೀತಿಯಿಂದಲೂ ಪ್ರಭಾವ ಬೀರಲು ಯತ್ನಿಸುತ್ತಾಳೆ. ಸೀತಾರಾಮು ಈ ಎಲ್ಲ ರೀತಿಯಿಂದಲೂ ಇಕ್ಕಟ್ಟಿನಲ್ಲಿ ಸಿಲುಕಿದ್ದಾನೆ. ತಾಯಿಯ ಈರ್ಷೆಯನ್ನು, ಅವಳ ಮಾತಿನಲ್ಲಿಯ ಅವಾಸ್ತವ ಅತಿಶಯೋಕ್ತಿಯನ್ನು ಅರ್ಥಮಾಡಿಕೊಳ್ಳಲಾರದಷ್ಟು ಅವನೇನು ಮುಗ್ಗನಲ್ಲ. ಜೊತೆಗೆ ಅವನ ಗೆಳೆಯ ರಾಮಣ್ಣ ಅವನ ವಿವೇಕವನ್ನು ಎಚ್ಚರಿಸಲು ಹತ್ತಿರವೇ ಇದ್ದಾನೆ. ಆದರೆ ಅವನ ಬದುಕಿನಲ್ಲಿ ತಾಯಿಗಿರುವ ಸ್ಥಾನ ಗೆಳೆಯನಿಗೆ ಸಿಕ್ಕಲಾರದು. ಅಲ್ಲದೆ ಕಾವೇರಮ್ಮ ಇಡಿಯ ಸಮಸ್ಯೆಯ ಜೀವಾಳವಾಗಿರುವದಲ್ಲದೆ ತನ್ನ ಕ್ರಿಯಾಶೀಲತೆಯ ಮೂಲಕ, ಅದರಲ್ಲಿ ಪೂರ್ಣವಾಗಿ ಭಾಗವಹಿಸುವದರ ಮೂಲಕ ಸೀತಾರಾಮುವಿನ ಮೇಲೆ ಬೀರಿದಷ್ಟು ಪ್ರಭಾವವನ್ನು ಹೊರಗಿನಿಂದ ಬಂದ ರಾಮಣ್ಣ ಕೇವಲ ಉಪದೇಶದಿಂದ ಬೀರಲಾರ. ಹಾಗಾಗಿ ಗೊತ್ತಿದ್ದೂ ಇದ್ದೂ ಸೀತಾರಾಮು ಅನಿವಾರ‍್ಯವಾಗಿ ಕಾವೇರಮ್ಮನ ಇಚ್ಛಾಶಕ್ತಿಯ ಮುಂದೆ ತಲೆಬಾಗುತ್ತಾನೆ.
ಈ ಇಚ್ಛಾಶಕ್ತಿಯ ಮುಂದೆ ಉಳಿದವರು ಯಾವ ಪ್ರಯೋಜನಕ್ಕೂ ಬರುವದಿಲ್ಲ. ಹಾಗಾಗಿ ಸರೋಜಳ ಬದುಕಿನ ಮೇಲಾದ ಆಘಾತ ಅನಿವಾರ‍್ಯವಾಗುತ್ತದೆ. ಈ ದುರಂತವನ್ನು ತಪ್ಪಿಸುವದಕ್ಕೆ ಕೃಷ್ಣರಾಯರು, ತುಳಸಾಬಾಯಿ, ನಾಗರಾಜ ಎಷ್ಟು ಬಗ್ಗಿಕೊಂಡು ಹೋದರೆ ಏನೂ ಮಾಡಲಿಕ್ಕಾಗುವದಿಲ್ಲ. ಇವರೆಲ್ಲ ಸ್ವಭಾವತಃ ಒಳ್ಳೆಯ ಜನ. ಆದರೆ ಆಕಸ್ಮಿಕವಾಗಿ ನಡೆದುಹೋದ ಒಂದು ಅಚಾತುರ್ಯವನ್ನು ತಿದ್ದಿ ಸರೋಜಳ ಭವಿಷ್ಯವನ್ನು ಸರಿಪಡಿಸುವಷ್ಟು ಬಲ ಇವರಾರಿಗೂ ಇಲ್ಲ. ಕೊನೆಗೂ ಆ ಒಂದು ಅಚಾತುರ‍್ಯವೇ ಸರೋಜಳ ಬಾಳಿನಲ್ಲಿ ನಿರ್ಣಾಯಕವಾಗಬೇಕಾಗುತ್ತದೆ. ಸರೋಜ-ಸೀತಾರಾಮು ಇವರ ಸಂಬಂಧ ಮತ್ತೆ ಕುದುರುವದಕ್ಕೆ ಒಂದೇ ಒಂದು ಆಶೆಯಿತ್ತು. ಸರೋಜಳ ಮಗುವೂ ತೀರಿಹೋಗಿ ಅವರ ನಡುವಿನ ಅಂತರ ಇನ್ನೆಂದೂ ತುಂಬಲಾರದಂತೆ ಉಳಿದುಹೋಗುತ್ತದೆ. ಅಲ್ಲಿಂದ ತಾಯಿಯ ಕಾಟ ತಾಳಲಾರದೆ ಸೀತಾರಾಮು ಪೀಡೆಯಾದರೂ ತೊಲಗಲಿ ಎಂದು ಬೇಸರದಿಂದ ಪದ್ಮಳನ್ನು ಮದುವೆಯಾದಾಗ ಈ ಅಂತರ ಮತ್ತೂ ಆಳವಾಗುತ್ತದೆ. ಅದನ್ನು ತುಂಬಬೇಕಾಗಿದ್ದ ಸೇತುವೆಯ ಸಾಧನಗಳು ದುರ್ಬಲವಾಗುತ್ತ ಹೋಗುತ್ತವೆ. ಇವೆಲ್ಲ ಸಂಗತಿಗಳು ಸಮಸ್ಯೆಯ ಅನಿವಾಯ್ಯತೆಯನ್ನು ಬಿಗಿಗೊಳಿಸುತ್ತಲೇ ಹೋಗುವದನ್ನು ನೋಡಬಹುದು.
ಸರೋಜಳಿಗಾದ ನೋವು ಸೀತಾರಾಮುವಿನ ಮನಸ್ಸಿನಲ್ಲಿ ಮಾಸದಂತೆ ಉಳಿದುಕೊಳ್ಳುವದೇನೋ ಸರಿ. ಆದರೆ ಆ ಕಾರಣದಿಂದ ಪದ್ಮಳನ್ನು ಸ್ವೀಕರಿಸದಿರುವಷ್ಟು ಅವನು ಸಂಯಮಶಾಲಿಯಾಗಿದ್ದನೆಂದು ನಂಬುವದು ಕಷ್ಟ. ಆದರೆ ಇದು ತಾನೇ ಮಾಡಿದ ಕೆಲಸವಾದುದರಿಂದ ಕಾವೇರಮ್ಮ ಸ್ವಾಭಾವಿಕವಾಗಿಯೇ ಅದರ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕಾಗುತ್ತದೆ. ಅವಳ ಕ್ರಿಯಾಶೀಲತೆ ಇನ್ನೂ ತನ್ನ ಸತ್ವ ಕಳೆದುಕೊಂಡಿಲ್ಲ. ಪದ್ಮಳ ಬಾಳನ್ನು ತಿದ್ದುವಲ್ಲಿ ಯಶಸ್ವಿಯಾದದ್ದು ಅವಳ ಇಚ್ಛಾಶಕ್ತಿಯ ಕೊನೆಯ ವಿಜಯವೆನ್ನಬಹುದು. ಕಾದಂಬರಿಯ ಸಮಸ್ಯೆಯನ್ನು ತಹಬಂದಿಗೆ ತರಲು ಯಾರಿಗಾದರೂ ಸಾಧ್ಯವಿದ್ದರೆ ಅದು ಕಾವೇರಮ್ಮನಿಗೆ ಮಾತ್ರ. ಆದರೆ ಸರೋಜಳ ವಿಷಯದಲ್ಲಿ ಅವಳೇ ಹುಟ್ಟಿಸಿದ ಸಮಸ್ಯೆ ಅವಳಿಗೂ ಕೈಮೀರಿ ಹೋಗುತ್ತದೆ. ತನ್ನ ಆಸೆಗಳೆಲ್ಲ ಕೈಗೂಡಿದ ಮೇಲೆ ಅವಳ ಮನಸ್ಸು ಮೃದುವಾದರೂ, ಸರೋಜಳಿಗಾದ ಅನ್ಯಾಯದ ಅರಿವಾದರೂ ಅದನ್ನು ತಿದ್ದಿ ಸರಿಪಡಿಸುವಷ್ಟು ಶಕ್ತಿ ಅವಳಿಗೂ ಇಲ್ಲ. ಹಾಗಾಗಿ ರಾಮಣ್ಣ ಮತ್ತೆ ಸಂಧಾನದ ಆಸೆ ಹೊತ್ತು ಸರೋಜಳ ಬಳಿಗೆ ಬಂದಾಗ ಅದು ಅವಳಿಗೆ ಸ್ವಾಭಿಮಾನದ ಪ್ರಶ್ನೆಯಾಗುತ್ತದೆ. ಗಂಡನ ಮೇಲೆ ಅವಳಿಗೆ ಅಸಮಾಧಾನವಿರದಿದ್ದರೂ ತಿರುಗಿ ಹೋಗಿ ಸಂಸಾರ ಮಾಡುವ ಮನಃಸ್ಥಿತಿಯನ್ನು ಅವಳಿಂದ ನಿರೀಕ್ಷಿಸುವದೇ ಸಾಧ್ಯವಿಲ್ಲ. ಹೀಗೆ ಬೆಳೆದು ನಿಂತ ಸಮಸ್ಯೆಗೆ ಪರಿಹಾರವಿಲ್ಲದೆ ಹೋಗುತ್ತದೆ.
ಈ ದೃಷ್ಟಿಯಿಂದ, ವಸ್ತುವಿನ ನಿರೂಪಣೆಯಲ್ಲಿ ಶ್ರೀನಿವಾಸಮೂರ್ತಿಯವರು ತೋರಿಸುವ ಶ್ರದ್ದೆ ಅನನ್ಯವಾಗಿದೆ. ಇಂಥ ಕೌಟುಂಬಿಕ ಕಥಾವಸ್ತುವನ್ನು ಹೇಳುವ ಅನೇಕ ನವೋದಯ ಕಾದಂಬರಿಗಳಿಗಿಂತ “ಮಹಾತ್ಯಾಗ” ಭಿನ್ನವಾಗಿರುವದು ಈ ವಿಷಯದಲ್ಲಿ. ಈ ಮುಖ್ಯ ಸಮಸ್ಯೆಯೊಂದರ ಕಡೆಗೇ ಲಕ್ಷವನ್ನೆಲ್ಲ ಕೇಂದ್ರೀಕರಿಸಿ ಲೇಖಕರು ಉಳಿದೆಲ್ಲವನ್ನೂ ಅದಕ್ಕೆ ಪೂರಕವಾಗಿಯೇ ಬಳಸಿಕೊಂಡಿದ್ದಾರೆ. ಸಮಸ್ಯೆಯ ಅಪರಿಹಾರ‍್ಯತೆಯನ್ನು ತರ್ಕಬದ್ಧವಾಗಿ ಸಾಧಿಸಿದ್ದಾರೆ.
ಸ್ವಾಭಾವಿಕವಾಗಿಯೇ ಕಾದಂಬರಿಯಲ್ಲಿ ಕಾವೇರಮ್ಮನ ಪಾತ್ರಕ್ಕೆ ಹೆಚ್ಚಿನ ಮಹತ್ವ ಬಂದಿದೆ. ಈ ಪಾತ್ರದ ನಿರ್ವಹಣೆಯಲ್ಲಿ ಲೇಖಕರು ಅಸಾಧಾರಣ ಜಾಣ್ಮೆ ತೋರಿದ್ದಾರೆನ್ನಬಹುದು. ಪಳಗಿದ ರಾಜಕಾರಣಿಯಂತೆ ಎಂಥ ದುರ್ಧರ ಪ್ರಸಂಗವನ್ನೂ ತನ್ನ ಅನುಕೂಲಕ್ಕೆ ಆಕೆ ತಿರುಗಿಸಿಕೊಳ್ಳಬಲ್ಲಳು. ಉದಾಹರಣೆಗೆ ಕೃಷ್ಣರಾಯರೂ ತುಳಸಾ ಬಾಯಿಯೂ ಸರೋಜಳ ಹೆರಿಗೆಯ ನಂತರ ಕಾವೇರಮ್ಮನ ಮನೆಗೆ ಹೋಗಿ ಸೀತಾ ರಾಮುವನ್ನು ಮಗುವಿಗೆ ಹೆಸರಿಡುವ ದಿನ ಊರಿಗೆ ಕಳಿಸಬೇಕೆಂದು ಕೇಳುವ ಪ್ರಸಂಗವನ್ನು ನೋಡಬಹುದು. ಕಾವೇರಮ್ಮನಿಗೆ ಮಗನನ್ನು ಕಳಿಸುವ ಮನಸ್ಸಿಲ್ಲ. ಆದರೆ ಹಾಗೆಂದು ನಿಷ್ಟುರವಾಗಿ ಹೇಳಿ ಹಟಮಾರಿಯೆನಿಸಿಕೊಳ್ಳುವದೂ ಬೇಕಾಗಿಲ್ಲ. ಕೃಷ್ಣರಾಯರ ನಮ್ರತೆಯನ್ನು, ತುಳಸಾಬಾಯಿಯ ಧೂರ್ತ ಆದರೂ ಕಳಕಳಿಯ ಮಾತುಗಳನ್ನು ತನ್ನದೇ ಆದ ರೀತಿಯಲ್ಲಿ ನಿವಾರಿಸುತ್ತಾಳೆ. ಅವಳ ವಾದದ ಬತ್ತಳಿಕೆಯಲ್ಲಿ ಎಲ್ಲ ಬಗೆಯ ಬಾಣಗಳೂ ಇವೆ. ಅವುಗಳನ್ನು ಯಾವ ಹೊತ್ತಿನಲ್ಲಿ ಹೇಗೆ ಬಳಸಿಕೊಳ್ಳಬೇಕೆಂಬುದನ್ನು ಆಕೆ ಚೆನ್ನಾಗಿ ಬಲ್ಲಳು. ಜೊತೆಗೆ ಎದುರಾಳಿಯ ಮರ್ಮಸ್ಥಾನವನ್ನು ಹುಡುಕಿ ಸರಿಯಾಗಿ ಗುರಿಯಿಡಬಲ್ಲಳು.
“…….ನಿನ್ನ ಅತ್ತೆಮಾವ ನೀನು ನನ್ನ ಅಂಕೆಯಲ್ಲಿಯೇ ಇದ್ದೀಯೆ ; ಏಳು ಎಂದರೆ ಏಳುತ್ತೀಯೆ, ಕುಳಿತುಕೋ ಎಂದರೆ ಕುಳಿತುಕೊಳ್ಳುತ್ತೀಯೆ ಎಂದು ತಿಳಿದುಕೊಂಡಿದ್ದಾರೆ. ನೀನು ಸಹ ಆ ದಿವಸ ಶಿವಮೊಗ್ಗದಿಂದ ಅಳುತ್ತ ಹಿಂದಿರುಗಿದವನು ಈ ದಿವಸ ನಗುತ್ತಾ ಅವರ ಹಿಂದೆ ಹೋಗುವದಕ್ಕೆ, ನಾನು ನಾಮಕರಣಕ್ಕೆ ಬರುತ್ತೇನೆ ; ಆದರೆ ತಾಯಿ ಅಡ್ಡ ಬರುತ್ತಾಳೆ ಎನ್ನುವ ಹಾಗೆ ನಟನೆ ಮಾಡುತ್ತೀಯಲ್ಲ, ನನ್ನನ್ನೂ ನಿಷ್ಠುರಕ್ಕೆ ಸಿಕ್ಕಿಸಿದ್ದೀಯಲ್ಲ !”
ಮುಖ್ಯವಾಗಿ ಶಿವಮೊಗ್ಗಕ್ಕೆ ಹೆಂಡತಿಯ ಮನೆಗೆ ಹೋಗಿ ಸೀತಾರಾಮು ಅವಮಾನಿತನಾಗಿ ಬಂದ ಪ್ರಸಂಗದ ನೆನಪು ತೆಗೆದು ಸೀತಾರಾಮುವಿನ ಆತ್ಮಗೌರವವನ್ನೂ, ಆ ರೀತಿ ಅವಮಾನ ಮಾಡಿ ಕಳಿಸಿದ ಬೀಗರ ಮರ್ಮವನ್ನೂ ಕೆಣಕುವದು ಆಕೆಯ ಉದ್ದೇಶವಾಗಿದೆ. ಒಂದೇ ಮಾತಿನಲ್ಲಿ ಆಕೆ ಅವರನ್ನು ನಿರಸ್ತ್ರರನ್ನಾಗಿ ಮಾಡಿಬಿಡುತ್ತಾಳೆ. ಅಷ್ಟಿ ದ್ದರೂ ಆಕೆ ಒಂದಿಷ್ಟೂ ಉದ್ವೇಗಗೊಳ್ಳುವದಿಲ್ಲ; ಭಾವನೆಗಳ ಸೆಳೆತಕ್ಕೆ ಸಿಕ್ಕಿಕೊಳ್ಳುವದಿಲ್ಲ. ತನ್ನ ಶಾಂತವಾದ, ಕಾಳಜಿಪೂರ್ವಕ ಸಿದ್ಧಪಡಿಸಿದ ವಾದದ ಸರಣಿಯಿಂದ ಅವರವರ ಮಾತನ್ನು ಅವರವರಿಗೇ ತಿರುಗಿಸಿ ಅಪ್ರತಿಭರನ್ನಾಗಿ ಮಾಡುತ್ತಾಳೆ.
ಈ ಅಸಾಧಾರಣ ಜಾಣ್ಮೆಯ ಉಪಯೋಗವೂ ವ್ಯರ್ಥವೆಂದು ತೋರಿದಾಗ ಕೊನೆಯ ಅಸ್ತ್ರವೆಂದು ಅಡಿಗೆ ಮನೆಯಿಂದ ಸನ್ನಿ ಬಂದವರಂತೆ ಓಡಿಬಂದು ಗೋಡೆಗೆ ತಲೆ
ಹೊಡೆದು ಗಾಯ ಮಾಡಿಕೊಂಡು ಸೀತಾರಾಮು ಹೆಂಡತಿಯ ಮನೆಗೆ ಹೋಗುವದನ್ನು ತಪ್ಪಿಸುತ್ತಾಳೆ.
ಈ ಸಂಗತಿಗಳು ಕಾದಂಬರಿಯ ನಾಟಕೀಯ ಬರವಣಿಗೆಯ ರೀತಿಯತ್ತ ಲಕ್ಷ್ಯ ಸೆಳೆಯುತ್ತವೆ. ಕಾದಂಬರಿಯ ಒಂದೊಂದು ಪರಿಚ್ಛೇದವೂ ನಾಟಕದ ಒಂದು ದೃಶ್ಯದಂತೆ ಪೂರ್ಣವಾಗಿದೆ. ಅದರಲ್ಲೂ ವಿಶೇಷವಾಗಿ ಕಾವೇರಮ್ಮನ ಪಾತ್ರ ಇಂಥ ನಾಟಕೀಯ ಶಕ್ತಿಯ ಮೇಲೇ ತನ್ನ ಯಶಸ್ಸನ್ನು ಆಧರಿಸಿಕೊಂಡಿದೆ. ಸಂಭಾಷಣೆಯ ರೀತಿ ಕೂಡ ಸಹಜವಾದ ಮಾತಿನಂತಿರದೆ ನಾಟಕದ ಲೆಕ್ಕಾಚಾರವನ್ನೇ ಅನುಸರಿಸುತ್ತದೆ. ಶಿವಮೊಗ್ಗೆಯಲ್ಲಾದ ವಿರಸಪ್ರಸಂಗ, ಕಾವೇರಮ್ಮ-ಸೀತಾರಾಮು ಇವರ ನಡುವಿನ ಮಾತುಕತೆಗಳು, ಪದ್ಮಳಿಂದ ಸೀತಾರಾಮುವಿನ ಪರಿವರ್ತನೆ, ಕೃಷ್ಣರಾಯರು ಮಗನಿಗೆ ಅಧಿಕಾರವನ್ನು ಕುರಿತು ಮಾಡಿದ ಉಪದೇಶ, ನಾಗರಾಜನ ಕನ್ಯಾಪರೀಕ್ಷೆ, ರಾಮಣ್ಣ-ಸೀತಾರಾಮರ ಆಹ್ವಾಲೋಚನೆ, ಕೊನೆಗೆ ರಾಮಣ್ಣನಿಗೆ ಸರೋಜ ಕೊಡುವ ಉತ್ತರ ಹೀಗೆ ಎಲ್ಲ ಕಡೆಗೂ ಕಾಣಿಸುತ್ತಿರುವ ನಾಟಕೀಯ ಅತಿಶಯೋಕ್ತಿಯನ್ನೂ ಆಕಸ್ಮಿಕ (coincidences) ಗಳ ಉಪಯೋಗವನ್ನೂ ನೋಡಬಹುದು. ಇದಕ್ಕೆ ಮುಖ್ಯ ಕಾರಣವೆಂದರೆ ಶ್ರೀನಿವಾಸಮೂರ್ತಿಯವರು ನೇರ ನಿರೂಪಣಾತಂತ್ರವನ್ನು ಅನುಸರಿಸಿದ್ದರೂ ಘಟನೆಗಳನ್ನು ಅವುಗಳ ಕಾಲಾನುಕ್ರಮದಲ್ಲಿ ಒಂದೊಂದಾಗಿ ಹೇಳುತ್ತ ಹೋಗುವದಿಲ್ಲ. ಪ್ರತಿಯೊಂದು ಪರಿಚ್ಛೇದಕ್ಕೂ ಒಂದೊಂದು ಮುಖ್ಯ ಘಟನೆಯನ್ನು ಆರಿಸಿಕೊಂಡು, ಆ ಘಟನೆಯ ಎಲ್ಲ ವಿವರಗಳನ್ನು ಪಾತ್ರಗಳ ಬಾಯಲ್ಲೇ ಆಡಿಸುವದಲ್ಲದೆ, ಹಿಂದೆ-ಮುಂದೆ ಬಿಟ್ಟ ಕೆಲ ವಿವರಗಳನ್ನು ಆ ಸನ್ನಿವೇಶದ ಇಕ್ಕಟ್ಟಿನಲ್ಲಿಯೇ ತರಲು ಪ್ರಯತ್ನಿಸುತ್ತಾರೆ. ಹಾಗಾಗಿ ಪಾತ್ರಗಳು ತಮತಮಗೆ ಗೊತ್ತಿರುವ ವಿಷಯಗಳನ್ನೇ ಮತ್ತೆ ನೆನಪು ಮಾಡಿಕೊಂಡು ಓದುಗರ ಅನುಕೂಲಕ್ಕಾಗಿ ಮಾತಾಡಿಕೊಳ್ಳುತ್ತವೆ. ಇದರ ಹೊರತಾಗಿ ಘಟನೆಗಳ ಮೂಲಕಲ್ಪನೆಯೂ ಕೂಡ ಈ ಹಿಂದೆ ಹೇಳಿದಂತೆ ನಾಟಕೀಯವಾಗಿದೆ. ಪರಿಣಾಮವಾಗಿ ಕಾದಂಬರಿ ವಾಸ್ತವ ಹಾಗೂ ನಾಟಕೀಯ ಅಂಶಗಳ ವಿಚಿತ್ರ ಮಿಶ್ರಣವಾಗಿಬಿಟ್ಟಿದೆ. ಆದರೆ ಕಾದಂಬರಿಯ ಬಂಧ ಒಟ್ಟಿನಲ್ಲಿ ಬಿಗುವಿನಿಂದ ಕೂಡಿರುವದಕ್ಕೆ ರಚನೆಯ ಅಚ್ಚುಕಟ್ಟುತನದೊಂದಿಗೆ ಈ ನಾಟಕೀಯ ಕಲ್ಪನೆಯೂ ಒಂದು ಕಾರಣವಾಗಿರುವಂತೆ ತೋರುತ್ತದೆ.
ಈ ಕಾದಂಬರಿಗೆ ಮುನ್ನುಡಿ ಬರೆಯುತ್ತ ಶ್ರೀ ಡಿ. ವಿ. ಗುಂಡಪ್ಪನವರು ಇದರ ಸಮಸ್ಯೆಯನ್ನು ಸೊಗಸಾಗಿ ಸಂಗ್ರಹಿಸಿದ್ದಾರೆ. “ಸರೋಜ ತನ್ನ ಮನೆಗಾಗಿ ಪಾಯಸ ಮಾಡಲೆಂದು ಹಾಲು ಕಾಯಿಸುತ್ತಿದ್ದಳು. ಪಕ್ಕದಲ್ಲಿ ನಿಂತಿದ್ದೊಬ್ಬರು ಏನೋ ಆತುರದಲ್ಲಿ ನಿಂಬೆಯ ಹಣ್ಣು ಹೆಚ್ಚಿದರು. ಅದರ ಹುಳಿ ತೊಟ್ಟು ಎಗರಿ ಆ ಹಾಲಿನ ಮೇಲೆ
5
ಬಿದ್ದು ಅದು ಒಡೆಯಿತು. ಆಗ ಆಕೆ ಅದನ್ನು ಬಚ್ಚಲಲ್ಲಿ ಚೆಲ್ಲಿ ಗೋಳಾಡುವದಕ್ಕೆ ಪ್ರತಿಯಾಗಿ ಅದರಿಂದ ಮೊಸರು ಮಾಡಿ ಬೇಡಿದವರಿಗೆ ಬಡಿಸಿದಳು. ಒಬ್ಬಳ ಉಪವಾಸದಿಂದ ಊರಿಗೆ ಔತಣವಾಯಿತು. ಸ್ಥೂಲವಾಗಿ ಇದು “ಮಹಾತ್ಯಾಗ’ದ ಕಥಾವಸ್ತು.” ಆದರೆ ಮಾನವೀಯ ಸಂಬಂಧಗಳನ್ನು ಇಷ್ಟು ಸೂತ್ರಬದ್ಧಗೊಳಿಸಿ, ಹಾಲು-ಮೊಸರಿನ ಸಂಬಂಧದಲ್ಲಿ ವಿವರಿಸಲಿಕ್ಕಾಗುವದಿಲ್ಲ. ಕಾರಣವಿಷ್ಟೆ, ಅಲ್ಲಿ ಅನೇಕ ಮಾನಸಿಕ, ಭಾವನಾತ್ಮಕ ವ್ಯವಹಾರಗಳು ತೊಡಕು ತೊಡಕಾಗಿ ಹೆಣೆದುಕೊಂಡಿವೆ. ಸರೋಜಳ ಒಡೆದು ಹೋದ ಸಂಸಾರದಿಂದಾಗಿ ನಿರಪರಾಧಿಯ ಬದುಕಿನ ಮೇಲಾದ ಪರಿಣಾಮಗಳೇನೆಂದು ಇದರಿಂದ ಗೊತ್ತಾಗುವದಿಲ್ಲ. ಅವಳ ಮಾನಸಿಕ ಯಾತನೆ ಎಂಥದೆಂದು ಅರ್ಥವಾಗುವದಿಲ್ಲ, ಈ ಸಮಸ್ಯೆಯ ಸಂಕೀರ್ಣತೆಯನ್ನೆಲ್ಲ ಗ್ರಹಿಸಿ ಕಾದಂಬರಿಯ ಅಳವಿನಲ್ಲೇ ತಂದು ತೋರಿಸಬಹುದಾದ ಮನೋಭಾವವಾಗಲಿ, ಸಾಮರ್ಥ್ಯವಾಗಲಿ ಇಲ್ಲಿ ಕಾಣುವದಿಲ್ಲ.
ಹಾಗೆಂದು ವಸ್ತುವಿನ ಸಂಕೀರ್ಣ ಸೂಕ್ಷ್ಮಗಳನ್ನು ಲೇಖಕರು ಗಮನಿಸಿಲ್ಲವೆಂದೂ ಹೇಳಲಿಕ್ಕಾಗುವದಿಲ್ಲ. ಗಮನಿಸಿದ್ದರೂ ಕೂಡ ಕಥೆಯ ಸಂವಿಧಾನದಲ್ಲೇ ಅವನ್ನೆಲ್ಲ ಹೊಂದಿಸಿಕೊಳ್ಳುವ ತಾಂತ್ರಿಕ ಸಿದ್ಧತೆ ಶ್ರೀನಿವಾಸಮೂರ್ತಿಯವರಿಗೆ ಇದ್ದಿರಲಿಲ್ಲ. ಕಥೆಯಲ್ಲಿ ಆಗಾಗ ಸಾಂದರ್ಭಿಕವಾಗಿ ಸಮಸ್ಯೆಯ ಇನ್ನುಳಿದ ಮುಖಗಳನ್ನು ಉಪಕಥೆಗಳ ಮೂಲಕ ಹೇಳಲೆತ್ನಿಸಿರುವ ರೀತಿಯಲ್ಲಿ ಸಮಸ್ಯೆಯ ಸೂಕ್ಷ್ಮಗಳನ್ನು ಅವರು ಗ್ರಹಿಸಿದ್ದರೆಂಬುದಕ್ಕೆ ಸಾಕಷ್ಟು ಆಧಾರಗಳಿವೆ. ಸೀತಾರಾಮುವಿಗೆ ಪ್ರತಿಪಾತ್ರವಾಗಿ ಬರುವ ರಾಮಣ್ಣ ಒಂದು ರೀತಿಯಲ್ಲಿ ಸಮಸ್ಯೆಯ ಸಮಗ್ರತೆಯ ಅರಿವು ಮಾಡಿಕೊಡಲೆಂದೇ ಬರುತ್ತಾನೆ. ಸೀತಾರಾಮು ತನ್ನ ಆಳವನ್ನು ಮೀರಿ ಹೋಗುತ್ತಿರುವ ಪ್ರವಾಹದ ಸೆಳವಿನಲ್ಲಿ ಸಿಕ್ಕಾಗ ರಾಮಣ್ಣ ತನ್ನ ವ್ಯವಹಾರ ಜ್ಞಾನದಿಂದ ಅವನನ್ನು ಎಚ್ಚರಿಸುತ್ತಾನೆ. ಆದರೆ ರಾಮಣ್ಣನ ಪಾತ್ರ ಅವನು ಹೇಳುವ ಅನೇಕ ಅಡ್ಡಕತೆಗಳಂತೆ ಈ ಕಾದಂಬರಿಯ ವಸ್ತುವಿನಲ್ಲಿ ಬೇರಿಲ್ಲದ್ದು. ಹಾಗಾಗಿ ಲೇಖಕರಿಗೆ ವಸ್ತುವಿನ ಸೂಕ್ಷ್ಮಗಳ ಅರಿವಿದ್ದರೂ ಅದನ್ನು ಸಮರ್ಥವಾಗಿ ವಸ್ತುವಿನಲ್ಲಿ ಬಳಸಿಕೊಳ್ಳುವದು ಸಾಧ್ಯವಾಗದೆ ಹೋಗಿದೆ. ಇದಕ್ಕೆ ಮುಖ್ಯವಾದ ಕಾರಣವೆಂದರೆ ಶ್ರೀನಿವಾಸಮೂರ್ತಿಯವರು ಆರಿಸಿಕೊಂಡಿರುವ ನಿರೂಪಣಾ ವಿಧಾನ. ಒಪ್ಪ-ಓರಣದಿಂದ ಕತೆ ಹೇಳುವ ಅಚ್ಚುಕಟ್ಟುತನ ವಸ್ತುವಿನ ಸೂಕ್ಷ್ಮಗಳನ್ನು ಮುರಿದು ಸಾಪುಗೊಳಿಸಿದೆ.
ಈ ಅಚ್ಚುಕಟ್ಟುತನ ಇನ್ನೊಂದು ರೀತಿಯಲ್ಲಿ ಲೇಖಕರ ದೃಷ್ಟಿಕೋನದ ಅಚ್ಚುಕಟ್ಟು ತನಕ್ಕೂ ನಿದರ್ಶನವಾಗಿದೆ. ಎಂದರೆ ಸಂಕೀರ್ಣತೆಯನ್ನೆಲ್ಲ ಒಂದು ಸರಳವಾದ ರೇಷೆಗೆ ಎಳೆದು ಜೋಡಿಸಿಕೊಳ್ಳುವ ವಿಧಾನವಾಗಿದೆ. ಇಂಥ ಸಂಕೀರ್ಣತೆಯ ಅಭಾವದಿಂದಾಗಿ ಕಥೆಯ ತುಂಬ ಭಾವನಾಪ್ರಧಾನವಾಗಿ ಸನ್ನಿವೇಶಗಳೇ ಒಡೆದು ಕಾಣುತ್ತವೆ. ಸರೋಜಳ ಆಗಲಿಕೆಯ ನೋವಿನಿಂದ ಬಳಲುವಾಗ ಸೀತಾರಾಮು ಆ ಹೆಸರಿನ ಬಡ ಹುಡುಗಿಯೊಬ್ಬಳಿಗೆ ಫೀ ಹಣ ಕೊಡುವದು, ಸರೋಜಳ ಭಗ್ನದಾಂಪತ್ಯದ ಹೊಣೆಯನ್ನೆಲ್ಲ ತನ್ನ ಮೇಲೆ ಹೊತ್ತುಕೊಂಡು ನಾಗರಾಜ ಪ್ರಾಯಶ್ಚಿತ್ತವೆಂಬಂತೆ ಅವಿವಾಹಿತನಾಗಿ ಉಳಿಯುವುದು, ತನಗೊಂದು ಆಸರೆಯಾಗಿ ಉಳಿಯಬಹುದಾಗಿದ್ದ ಮಗುವೂ ತೀರಿಕೊಂಡು ಅನಾಥ ಭಾವನೆಯುಂಟಾದಾಗ ತನ್ನಂಥ ಹತಭಾಗಿನಿ ತಾಯಂದಿರಿಗೆ ಇಂಥ ನೋವು ಬರಬಾರದೆಂಬ ಕಾರಣಕ್ಕಾಗಿ ಸರೋಜ ಡಾಕ್ಟರಾಗುವ ನಿರ್ಧಾರ ಕೈಗೊಂಡದ್ದು, ಸರೋಜಳಿಗೆ ತಾನು ಮಾಡಿದ ಅನ್ಯಾಯಕ್ಕಾಗಿ ಸೀತಾರಾಮು
ಪದ್ಮಳನ್ನು ಮುಟ್ಟದಿರುವುದು, ಸರೋಜಳಂತೆಯೇ ತನ್ನ ನಡತೆಯನ್ನು ರೂಪಿಸಿಕೊಂಡ ಪದ್ಮ ಸೀತಾರಾಮುವಿನ ಮನಸ್ಸನ್ನು ಕರಗಿಸುವದು, ಡಾಕ್ಟರಾದ ಮೇಲೆ ಸರೋಜ ತನ್ನ ಹೆಸರಿನ ಜೊತೆಗೆ ಸೀತಾರಾಮುವಿನ ಹೆಸರನ್ನು ಬೋರ್ಡಿನ ಮೇಲೆ ಬರೆಸುವದು-ಇಂಥ ಘಟನೆಗಳಲ್ಲೆಲ್ಲ ಭಾವನೆಯ ಬಣ್ಣ ಹೆಚ್ಚಾಗುತ್ತದೆ. ಕಾದಂಬರಿಯ ಪಾತ್ರಗಳು ಈ ಬಗೆಯ ಭಾವನಾಪ್ರಧಾನ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಲೇಬಾರದೆಂದು ಇದರ ಅರ್ಥವಲ್ಲ. ಆದರೆ ಇಂಥ ಪ್ರಸಂಗಗಳ ಸೂತ್ರವಾಡಿಸುತ್ತಿರುವ ಲೇಖಕನ ಪ್ರತಿಕ್ರಿಯೆ ಈ ವಿಷಯದಲ್ಲಿ ಹೇಗೆ ವ್ಯಕ್ತವಾಗಿದೆಯೆಂಬುದು ತುಂಬ ಮುಖ್ಯವಾದ ಅಂಶ. ಯಾಕೆಂದರೆ ತನ್ನ ವಸ್ತುವಿನಲ್ಲಿ ಅಡಗಿರುವ ಸೂಕ್ಷ್ಮಾನುಸೂಕ್ಷ್ಮವಾದ ಪ್ರಸಂಗಗಳಲೆಲ್ಲ ಲೇಖಕ ಯಾವ ರೀತಿಯಿಂದ ತನ್ನ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾನೆಂಬುದು ಮಹತ್ವದ್ದಾಗಿದೆ. ಕಾದಂಬರಿಯ ಪ್ರತಿಯೊಂದು ಹೆಜ್ಜೆಯೂ, ಪ್ರತಿಯೊಂದು ತಾಂತ್ರಿಕ ನಿರ್ವಹಣೆಯ ಮೌಲ್ಯ ವಿವೇಚನೆಯ ಅವಕಾಶಗಳಾಗಿವೆ. ಪಾತ್ರಗಳು ಎಷ್ಟೋ ಸಲ ತೊಲ ತಪ್ಪಿ ಭಾವಾವೇಶಕ್ಕೆ ತುತ್ತಾಗಬಹುದು. ಆದರೆ ಹಾಗೆಂದು ಲೇಖಕ ತಾನೂ ಆ ಪಾತ್ರಗಳ ಜೊತೆಗೆ ತೇಲಿಹೋಗಲಿಕ್ಕಾಗುವದಿಲ್ಲ. ಆ ಪಾತ್ರಗಳು ತೋಲ ತಪ್ಪಿ ವರ್ತಿಸುತ್ತಿವೆಯೆಂಬುದರ ಅರಿವು ಅವನಿಗಿರಬೇಕಾಗುತ್ತದೆ. ಇಲ್ಲದೆ ಹೋದರೆ ಲೇಖಕನೂ ಮುಗ್ಧವಾಗಿ ಇಲ್ಲವೆ ಗಂಭೀರವಾಗಿ ಆ ಭಾವುಕ ಪ್ರತಿಕ್ರಿಯೆಗಳನ್ನು ಸಮ್ಮತಿಸುತ್ತಾನೆಂದೇ ಅದರ ಅರ್ಥ. ಹೀಗೆ ಸಾಹಿತ್ಯಕೃತಿಯ ಪ್ರತಿಯೊಂದು ಘಟ್ಟವೂ ಲೇಖಕನ ಮೌಲ್ಯವಿವೇಚನೆಯ ಒರೆಗಲ್ಲಾಗಿದೆ. ಉದಾಹರಣೆಗೆ, ತನ್ನ ದಾಂಪತ್ಯ ಒಡೆದುಹೋದ ಮೇಲೆ ಇದ್ದುದರಲ್ಲೇ ಬದುಕನ್ನು ಸರಿಪಡಿಸಿಕೊಂಡು ಡಾಕ್ಟರಾಗಿ ನಾಲ್ಕು ಜನರ ಸೇವೆ ಮಾಡಬೇಕೆನ್ನುವ ಸರೋಜಳ ಆಕಾಂಕ್ಷೆ ಒಡೆದ ಹಾಲನ್ನು ಮೊಸರು ಮಾಡಿ ಓಣಿಗೆಲ್ಲ ಹಂಚುವ ಕೆಲಸದಷ್ಟೇ ಸುಲಭವಾಗಿದೆ, ಸರಳ ವಾಗಿದೆ. ಇದರ ಹಿಂದಿರುವ ಸರೋಜಳ ಮಾನಸಿಕ ತುಮುಲ ತೀರ ಅಮುಖ್ಯವಾಗಿಬಿಡುತ್ತದೆ. ಇದೇ ಅವಳ `ಮಹಾತ್ಯಾಗ’ ಎನ್ನುವದಾದರೆ ಇದು ಅಗತ್ಯವಿತ್ತೆ ? ಎಂಬ ಪ್ರಶ್ನೆ ಏಳುತ್ತದೆ. ತನ್ನ ಎದುರಿಗಿದ್ದ ಸಮಸ್ಯೆಯನ್ನು ಅಪರಾಧಿಯಂತೆ ಸರೋಜ ಸದ್ದಿಲ್ಲದೆ ಅನುಭವಿಸುತ್ತಾಳೆ. ಅವಳ ಬದುಕನ್ನು ಒಳಗಿನಿಂದ ಕೊರೆದ ನೋವಿಗೆ ಅವಳು ಯಾವ ಪ್ರತಿಭಟನೆಯನ್ನೂ ವ್ಯಕ್ತಪಡಿಸುವದಿಲ್ಲ. ಆಶ್ಚರವೆಂದರೆ ಸರೋಜ ಇಂಥ ಪ್ರತಿಭಟನೆಯನ್ನು ವ್ಯಕ್ತಪಡಿಸಲಾರದಷ್ಟು ದುರ್ಬಲಳಲ್ಲ. ಇದಕ್ಕೆ ಕಾರಣವೆಂದರೆ ಲೇಖಕರ ಭಾವನಾಪ್ರಧಾನವಾದ ಸಾಂಪ್ರದಾಯಿಕ ದೃಷ್ಟಿಕೋನವೇ ಆಗಿದೆ. ಮನುಷ್ಯ ಎಷ್ಟೋ ಸಲ ತನ್ನದಲ್ಲದ ತಪ್ಪಿಗಾಗಿ ಶಿಕ್ಷೆಯನ್ನನುಭವಿಸಬೇಕಾಗುತ್ತದೆ; ಅಂಥ ಹೊತ್ತಿನಲ್ಲಿ ಮನಸ್ಸನ್ನು ಕಹಿ ಮಾಡಿಕೊಂಡು ಇತರರ ಬದುಕಿಗಾಗಿ ಆ ನೋವು ಹರಡುವದು ತಕ್ಕುದಲ್ಲ ; ಇದ್ದುದರಲ್ಲೇ ಸರಿಪಡಿಸಿಕೊಂಡು ನಾಲ್ಕು ಜನರ ಸೇವೆಯಲ್ಲಿ ಆ ವೈಯಕ್ತಿಕ ನೋವನ್ನು ಮರೆಯಬೇಕು-ಇದು ಲೇಖಕರು ಸರೋಜಳ ಮೂಲಕ ಹೇಳಬೇಕೆಂದಿರುವ ಲೋಕನೀತಿ. ಅವರ ದೃಷ್ಟಿಯಲ್ಲಿ ಇದೇ ಜೀವನದ ಶುಚಿಯನ್ನು ಕಾಯ್ದುಕೊಳ್ಳುವ ರೀತಿ. ಇಂಥ ಶುಚಿಯನ್ನು ತೋರಿಸುವ ಸರೋಜಳ ಬದುಕು ಅದಕ್ಕಾಗಿಯೇ ಅವರಿಗೆ ಮಹಾತ್ಯಾಗವಾಗಿ ಕಾಣಿಸುತ್ತದೆ. ವ್ಯಕ್ತಿಯ ಅಂತರಂಗದ ಬದುಕನ್ನು ಈ ಬಗೆಯ ದೃಷ್ಟಿಕೋನ ಗೌಣವಾಗಿ ಕಾಣುತ್ತದೆ. ಸಮಸ್ಯೆಯ ಸಮಗ್ರ ಸೂಕ್ಷ್ಮಗಳನ್ನು ಗ್ರಹಿಸಲಾಗದ ಅಸಮರ್ಥತೆಯೂ ಇದಕ್ಕೆ ಕಾರಣವಾಗಿದೆ. ವ್ಯಕ್ತಿಯ ಅಂತರಂಗ ಹಾಲು ಒಡೆದು ಮೊಸರಾಗುವಷ್ಟು ಸುಲಭವಾಗಿ ನೋವನ್ನು ಮರೆತು ಸಮಾಧಾನ ಹೊಂದಲಾರದು. ನಾಲ್ಕು ಜನರಿಗೆ ಒಳ್ಳೆಯದು ಮಾಡಿದ ಗೆಲುವಿನ ಹಿಂದೆಯೂ ಸುಪ್ತವಾದ ಜ್ವಾಲಾಮುಖಿಯೊಂದು ಹೊರಳುತ್ತಿರುವದನ್ನು ಹೇಗೆ ಮರೆಯಲಿಕ್ಕಾದೀತು ? ಆದರೆ ಲೇಖಕರು ಸರೋಜಳ ಬದುಕಿನ ಈ ಒಳಮುಖವನ್ನು ಗಮನಿಸುವದಿಲ್ಲ. ತನ್ನ ವೈಯಕ್ತಿಕ ಸುಖವನ್ನು ತ್ಯಾಗಮಾಡಿ (ಹಾಗೆ ನೋಡಿದರೆ ಅದು ಅವಳೇ ಮಾಡಿದ ತ್ಯಾಗವಲ್ಲ. ಪ್ರತಿಕೂಲ ಪ್ರಸಂಗಗಳನೇಕ ಸಂಚು ಹೂಡಿದ ಕಾರಣದಿಂದಾಗಿ ಆ ಸುಖ ಅವಳಿಗೆ ನಿರಾಕರಿಸಲ್ಪಟ್ಟಿತು.) ಜನಸೇವೆ ಮಾಡಿದ ಅಂಶವೇ ಅವರಿಗೆ ಹೆಚ್ಚು ಮೌಲಿಕವಾಗಿ ಕಾಣುತ್ತದೆ. ಇದು ನಿರ್ವಿವಾದವಾಗಿ ಸಾಂಪ್ರದಾಯಿಕ ಮೌಲ್ಯಗಳನ್ನು ಗೌರವಿಸುವ ಜೀವನದೃಷ್ಟಿ. ಸ್ವಾಭಾವಿಕವಾಗಿಯೇ ಈ ಬಗೆಯ ಮನೋಧರ್ಮಕ್ಕೆ ವ್ಯಕ್ತಿಯ ಹೋರಾಟ ಸಣ್ಣತನವಾಗಿ, ನೀತಿಬಾಹಿರವಾಗಿ ಕಾಣುತ್ತದೆ. ಇದು ನಮ್ಮ ಪರಂಪರಾಗತ ಜೀವನದೃಷ್ಟಿಯ ಸಂಕುಚಿತತೆಯ ನಿದರ್ಶನವಾಗಿದೆ. ಶ್ರೀನಿವಾಸಮೂರ್ತಿಯವರಂಥವರು ಸಾಂಪ್ರದಾಯಿಕ ಮೌಲ್ಯಗಳ ಹಲವು ಒಳಿತುಗಳೊಂದಿಗೆ ಇಂಥ ಸಂಕುಚಿತತೆಯನ್ನೂ ಸ್ವೀಕರಿಸುತ್ತಾರೆನ್ನುವದೇ ತೊಂದರೆಯಾಗಿದೆ.
ಹೊಸ ಕಾವ್ಯದ ಕಷ್ಟ
ಹೊಸ ಕಾವ್ಯದ ಕಷ್ಟ
ಕೆ. ವಿ. ತಿರುಮಲೇಶ್
ಅಡಿಗರ ತಲೆಮಾರು ದಾಟಿ ಈಚೆ ಬರುತ್ತಿರುವ ಕವನಸಂಕಲನಗಳು, ಬರೆದವರಿಗೆ ಮತ್ತು ಓದುವವರಿಗೆ ಭ್ರಮನಿರಸನವುಂಟುಮಾಡುತ್ತಿರುವುದೇಕೆ ? ಕೆಲವು ಸಂಕಲನಗಳು ಬರುತ್ತವೆ; ಹೋಗುತ್ತವೆ ; ಸಾಹಿತ್ಯಗತಿಗೆ ಯಾವ ವಿಧದಿಂದಲೂ ಸಹಾಯಕವಾಗದೆ, ಹುಟ್ಟುಸತ್ತದ್ದಕ್ಕೆ ಸಾಕ್ಷಿಯೂ ಇಲ್ಲದಂತೆ, ಇವು ಕಾಣದಾಗುವುದನ್ನು ಗಮನಿಸಿದರೆ ಅನುಕಂಪವೆನಿಸುತ್ತದೆ. ಮುನ್ನುಡಿಯ ಗತ್ತಿನಿಂದಲೊ, ಬಳಗದವರ ಪ್ರಯತ್ನದಿಂದಲೂ ಈ ಕೃತಿಗಳು ಅಂತ್ಯದ ತನಕ ಹೋರಾಡುವುದೂ ಉಂಟು. ಆದರೂ ಸಾಹಿತ್ಯಗತಿಯ ನಿಷ್ಟುರದಲ್ಲಿ ಇವೊಂದೂ ಉಳಿಯದೆ ಹೋಗುತ್ತವೆ.
ಇಂತಹ ಪ್ರವೃತ್ತಿಯ ಹಿಂದಿರುವ ಕಾರಣಗಳನ್ನು ಪಟ್ಟಿಮಾಡಿಕೊಡುವುದು ಇಲ್ಲಿನ ಉದ್ದೇಶವಲ್ಲವಾದರೂ ಕೆಲವೊಂದು ವಿಷಯಗಳನ್ನು ನಮೂದಿಸುವುದು ಹೊಸ ಕಾವ್ಯದ ಆರೋಗ್ಯಕರ ಬೆಳವಣಿಗೆಗೆ ಸಹಾಯಕವಾಗಬಹುದೇನೊ. ಹಲವು ‘ಅಡಿಗೋತ್ತರ’ರಲ್ಲಿ ಕಂಡುಬರುತ್ತಿರುವ ವಿಪರೀತ ಆತ್ಮವಿಶ್ವಾಸ ಅವರ ಬೆಳವಣಿಗೆಗೇನೇ ಘಾತುಕ. ಇಂತಹ ಸಂದರ್ಭದಲ್ಲಿ ಬರೆಯುವ ಮುನ್ನುಡಿಯೋ ಹಿನ್ನುಡಿಯೋ ಕವಿಯ ಅತಿರೇಕವನ್ನು ಸೂಚಿಸುವುದುಂಟು. ಹೊಸತೇನನ್ನೋ ಹೊಸತಾಗಿ ಹೇಳಬೇಕೆನ್ನುವ ಉತ್ಸಾಹ ಸ್ವಾಗತಾರ್ಹವಾದರೂ ಸ್ವಂತ ಜಾಡನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿರುವ ಕವಿಗೆ ತನ್ನ ನೆಲೆಯ ಪ್ರಜ್ಞೆಯಿರಬೇಕು. ಹೊಸ ಕಾವ್ಯ ಬೆಳೆಯದಿರುವುದಕ್ಕೆ ಇನ್ನೊಂದು ಮುಖ್ಯ ಕಾರಣವಾಗಿ ನನಗೆ ತೋರುತ್ತಿರುವುದು ಅಡಿಗರ ನೆರಳಿನಲ್ಲಿ ಹೊಸಬರು ಸುತ್ತುತ್ತಿರುವುದು. ಇವರಿಗೆ ಅಡಿಗರು ಇನ್ನೂ ಆದರ್ಶವಾಗಿ ಉಳಿದಿರುವುದು ಆಶ್ಚರ್ಯ.
ಈ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಬರೆಯುತ್ತಿರುವವರಲ್ಲಿ ಪ್ರಮುಖರಾಗಿ ನನಗೆ ಕಾಣಿಸುವವರು: ವ್ಯಾವಹಾರಿಕ ಭಾಷೆ ಲಯಗಳನ್ನು ಉಪಯೋಗಿಸುತ್ತಿರುವ ನರಸಿಂಹಸ್ವಾಮಿ, ಅಸಂಗತ ತಂತ್ರವನ್ನು ಕಾವ್ಯಧರ್ಮಕ್ಕೆ ಒಗ್ಗಿಸುವ ಎ. ಕೆ. ರಾಮಾನುಜನ್ ಹಾಗೂ ಆಡುಮಾತು-ಗ್ರಾಂಥಿಕ ಭಾಷೆಗಳ ಬೆರಕೆಯಿಂದ ಹಳೆ ಮೌಲ್ಯಗಳನ್ನು ಪುನಃ ಸೃಷ್ಟಿಸುತ್ತಿರುವ ಕನ್ನಡದ ಕೊನೆಯ ರೊಮ್ಯಾಂಟಿಕ್ ಗಂಗಾಧರ ಚಿತ್ತಾಲ (ಚಿತ್ತಾಲರನ್ನು ನಾನು ಯೇಟ್ಸ್‌ಗೆ ಹೋಲಿಸಿದರೆ ಅವರನ್ನು ಸಂಪೂರ್ಣವಾಗಿ ಒಪ್ಪುತ್ತೇನೆ ಎಂದರ್ಥವಲ್ಲ.) ಹೀಗೆ ಪ್ರತಿಯೊಬ್ಬ ಕವಿಯೂ ತನ್ನ ಬಿಡುಗಡೆಯನ್ನು ಮಾಡಿಕೊಂಡಾಗ ಮಾತ್ರ ಕಾವ್ಯದ ಬೆಳವಣಿಗೆ ಸಾಧ್ಯ.
ಹೊಸ ಕವಿ ಶ್ರೀನಿವಾಸ ಕುಲಕರ್ಣಿಯವರ ಪ್ರಥಮ ಕವನ ಸಂಕಲನ “ಕೆಥಾರ್ಸಿಸ್” ಪುಸ್ತಕ-ವಿಮರ್ಶೆಗೋಸ್ಕರ ಕೈಗೆತ್ತಿಕೊಂಡಿರುವುದರಿಂದ ಇಷ್ಟು ಪ್ರಸ್ತಾವನೆ ಅಗತ್ಯವೆನಿಸಿತು. “ಕೆಥಾರ್ಸಿಸ್” ಹೊಸ ಕವಿಗಳ ಕಷ್ಟವನ್ನು ಸೂಚಿಸುವಂಥ ಕೃತಿ. ‘ಯಾವ ಮಠಕ್ಕೂ ಸೇರದ’ ಈ ಕವಿ ನವ್ಯದ ತರಹ ಮೂವತ್ತಾರು ಕವಿತೆಗಳನ್ನು ಇಲ್ಲಿ ಕೊಟ್ಟಿ ದ್ದಾರೆ. “ಕೆಥಾರ್ಸಿಸ್” ಎಂಬ ಮೊದಲ ಕವಿತೆಯಲ್ಲಿ ಕೆಲವು ಅಸ್ಪಷ್ಟ ಪ್ರತಿಮೆಗಳನ್ನು ಒಂದೆಡೆ ಹಾಕಿದ್ದು ಇದರಿಂದ ಭಾವಶುದ್ದಿ (catharsis) ಉಂಟಾಗುವದಿಲ್ಲ. ಇದೇ
ಮಾತು ಸಂಕಲನದ ಇನ್ನಿತರ ಕವಿತೆಗಳ ಕುರಿತಾಗಿ ಮತ್ತು ಒಟ್ಟು ಸಂಕಲನದ ಕುರಿತಾಗಿ ಕೂಡ ಸತ್ಯ. ಎಂದರೆ “ಕೆಥಾರ್ಸಿಸ್” ಎಂಬ ಪದವನ್ನು ಯಾವದೇ ವ್ಯಂಗ್ಯಾರ್ಥವಾಗಿ ಉಪಯೋಗಿಸಲಾಗಿದೆಯೆ ಎಂದು ಇನ್ನೊಮ್ಮೆ ಓದಿ ನೋಡಿದಾಗಲೂ ಕೂಡ ನಿರಾಸೆಯುಂಟಾಗುತ್ತದೆ. ಅದಕ್ಕೆ ಬೇಕಾದ ವಸ್ತುನಿಷ್ಠತೆಯಾಗಲಿ, ವ್ಯಂಗ್ಯ ಬೋಧೆಯಾಗಲಿ ಈ ಕವಿಗೆ ಇದ್ದಂತೆ ಕಾಣಿಸುತ್ತಿಲ್ಲ. ಕುಲಕರ್ಣಿಯವರ ಕವಿತೆಗಳು ಓದುಗನಿಗೆ ಯಾವ ಅನುಭವವನ್ನು ಕೊಡುವುದಕ್ಕೂ ಅಸಮರ್ಥವಾಗಿವೆ. ಇವು ಯಾವ ಅನಿಸಿಕೆಯನ್ನೂ ಹುಟ್ಟಿಸುವುದಿಲ್ಲ; ಯಾವ ಹಂತದಲ್ಲೂ ಪರಿಣಾಮಕಾರಿಯೆನಿಸುವುದಿಲ್ಲ.
ಪರ‍್ವತದಡಿ
ಚಪ್ಪಡಿ
ಅಬ್ಬಾ ಕಸಿವಿಸಿ
ಎದ್ದೆ
ಬಿದ್ದೆ
ಎದ್ದೆ
ಎಂಬ “ನಾನು-ಬುದ್ಧ” ಕವಿತೆಯ ಚಿಕ್ಕ ಚಿಕ್ಕ ಸಾಲುಗಳಂತೆ ಇಲ್ಲಿನ ಸಾಲುಗಳು ಕುಂಟುತ್ತಾ ಎಷ್ಟೂ ಮುಂದರಿಯಬಹುದು. ಓದಿದರೆ, ಅದರ ಬೆನ್ನ ಹಿಂದೆಯೆ ಮರೆತುಬಿಡುವಂತೆ ಮಾಡುವ ಕುಲಕರ್ಣಿಯವರ ಕವಿತೆಗಳಲ್ಲಿ ಮೂಲಭೂತವಾದ ಏನೋ ದುರ್ಬಲತೆಯಿದೆ.
ಇಂತಹ ಕವಿತೆಗಳನ್ನು ಯಾರು ಬೇಕಾದರೂ ಬರೆಯಬಹುದು-ಎಂಬ ಹಗುರತನವನ್ನು ಇವು ಉಂಟುಮಾಡುತ್ತಿರುವುದರಿಂದ, ಅನಿವಾರ್ಯವೆಂಬ ಘಟ್ಟದಲ್ಲಿ ಕವಿ ಇವನ್ನು ಬರೆದಿಲ್ಲ ಅನ್ನಬೇಕಾಗುತ್ತದೆ. ಈ ಕವಿತೆಗಳನ್ನೆಲ್ಲ ಒಟ್ಟಿಗೆ ಬರೆದಂಥ ಏಕತಾನವೂ ವೈವಿಧ್ಯಶೂನ್ಯತೆಯೂ ಈ ಸಂಗ್ರಹದ ಇನ್ನೊಂದು ಕೊರತೆ. ಉದಾಹರಣೆಗೆ, “ಆ ಕಟ್ಟಡ”ದಿಂದ
“ಪ್ರಚಂಡ ಜ್ವಾಲೆಯೊಳಿರುವ
ಅರಳೆ ಗಿರಣಿಯ ಹಾಗೆ
ಕಡಲಿನುರಿಯೊಳಗಿರುವ
ಮುಳುಗೊ ನೇಸರಿನಂತೆ
ದಳ್ಳುರಿಯಲೊಳಗೊಂದು
ಸುಡುವ ರೋಮಿನ ಹಾಗೆ
ಆ ನನ್ನ ಕಟ್ಟಡವು
ಬೆಂಕಿಯಲಿ ನಿಂತಿಹುದು”
ಎಂಬಿತ್ಯಾದಿ ಸಾಲುಗಳನ್ನು ಈ ಸಂಗ್ರಹದ ಬೇರೆ ಕೆಲವು ಕವಿತೆಗಳಲ್ಲೂ ಇರಿಸಬಹುದು. ಇಂತಹ ಸಿದ್ಧ ಪ್ರತಿಮೆಗಳಿಂದ ಕವಿ ಹೊಸತೇನನ್ನೂ ಮೂಡಿಸುವುದಕ್ಕೆ ಶಕ್ತನಾಗದಿರುವುದರಿಂದ ನಿಷ್ಪಲ ಪ್ರಯತ್ನದ ಕಷ್ಟ ಮಾತ್ರ ಅರಿವಾಗುತ್ತದೆ.
ಸ್ವಲ್ಪಮಟ್ಟಿಗಾದರೂ ಜಾಗೃತ ಪ್ರಯತ್ನದ ಭಂಡವಾಳ ಹಾಕಿದ್ದರೆ, ಕಾವ್ಯಶಿಲ್ಪದ ಮಟ್ಟಿಗೆ ಕಾಳಜಿ ವಹಿಸಿದ್ದರೆ, ಏನು ಹೇಳುತ್ತೇನೆಂಬುದನ್ನು ತನಗೆ ತಾನು ಸ್ಪಷ್ಟ ಪಡಿಸಿಕೊಂಡಿದ್ದರೆ, “ಕೆಥಾರ್ಸಿಸ್” ಓದಬಹುದಾದ ಕೃತಿಯಾಗಬಹುದಿತ್ತು. ಬರೆಯುವ ಸಿದ್ಧತೆಯನ್ನು ಕವಿ ಮಾಡಿಕೊಳ್ಳಬೇಕಿತ್ತು. ಆದರೂ “ಗುರುತು”, “ಸೆಳೆತ”, “ದಿವ್ಯ ದೃಷ್ಟಾರ” ಎಂಬ ರಚನೆಗಳು ಭರವಸೆ ಹುಟ್ಟಿಸುವ ಮಟ್ಟಕ್ಕೆ ಬಂದಿವೆ. ಇದು ಹೊಸ ಕವಿಯ ಮೊತ್ತಮೊದಲ ಸಂಕಲನವೆಂಬುದನ್ನು ಗಮನದಲ್ಲಿರಿಸಿಕೊಂಡರೆ ಅವರ ಕಷ್ಟವನ್ನು ಹಲವರು ಅನುಭವಿಸಿದ್ದಾರೆ. ಆದ್ದರಿಂದಲೇ. “ಕೆಥಾರ್ಸಿಸ್” ಕುರಿತಾಗಿ ಅಪ್ರಮಾಣಿಕವಾದ ಹೊಗಳಿಕೆಯ ಮಾತುಗಳನ್ನು ಹೇಳಿದರೆ ಅದರಿಂದ ಕವಿಯ ಭವಿಷ್ಯಕ್ಕೆ ಧಕ್ಕೆಯುಂಟಾದೀತು ಎಂಬ ಎಚ್ಚರವಹಿಸಿದ್ದೇನೆ.
(ಕೆಥಾರ್ಸಿಸ್ : ಲೇ-ಶ್ರೀನಿವಾಸ ಕುಲಕರ್ಣಿ, ಪ್ರ-ರೂಪಾ ಪ್ರಕಾಶನ, ಸಪ್ತಾಪುರ, ಧಾರವಾಡ-೧)
Leave A Comment