Skip to content
ದೂರವಾಣಿ : | 22212487|developkanaja@gmail.com
  • ಕಣಜ ತಿಳಿಯಿರಿ
  • ಮಾಹಿತಿ ಬಳಕೆ ಸೂಚನೆ
  • ಅಬಾಧ್ಯತೆ ಘೋಷಣೆ
  • ಕಣಜವನ್ನು ಕನ್ನಡದಲ್ಲೇ ಕೇಳಿ!
  • ಕಣಜವನ್ನು ತುಂಬಿ!
  • ನಮ್ಮನ್ನು ಸಂಪರ್ಕಿಸಿ
ಕಣಜ Logo ಕಣಜ Logo
  • ಮುಖಪುಟ
  • ವ್ಯಕ್ತಿ ಪರಿಚಯ
  • ವಿಭಾಗಗಳು
    • ಅಂಕಣಗಳು
      • ಋಾ ಬಿಟ್ಟ ಮೇಲೆ ಋ ಬೇಕೇ ?
      • ಸ್ಮಾರ್ಟ್ ಕಾರ್ಡ್ ತಂತ್ರಜ್ಞಾನ
      • ವನ್ಯಜೀವಿಗಳು ಹಾಗೂ ವನ್ಯಜೀವಿ ವಿಜ್ಞಾನ
      • ಶಿಷ್ಟಭಾಷೆ ಎಂದರೆ ಯಾವುದು?
      • ಮಾಹಿತಿ ಕಳವು ತಡೆಯಲು ತಂತ್ರಜ್ಞಾನ
      • ಬ್ರಾಹ್ಮಿ- ಪ್ರಾಕೃತವನ್ನು ಹಿಮ್ಮೆಟ್ಟಿಸಿದ ಸಂಸ್ಕೃತ ಕನ್ನಡ
      • ಪಕ್ಷಿ ವೀಕ್ಷಣೆಯ ದಾಖಲೀಕರಣ
      • ಶಿಕ್ಷಣ ಮಾಧ್ಯಮವಾಗಿ ಕನ್ನಡ
    • ಲೇಖನಗಳು
      • ಉಷ್ಟ್ರಪಕ್ಷಿ ವಿದೇಶಿ ಅಲ್ಲ!
      • ದೆಹಲಿ ಕರ್ನಾಟಕ ಸಂಘ
      • ನವ ದೆಹಲಿಯ ಕರ್ನಾಟಕ ವಾರ್ತಾ ಕೇಂದ್ರ
      • ಆರೋಗ್ಯ
    • ಪತ್ರಿಕೆಗಳು
      • ಮಕ್ಕಳ ಕತೆಗಳು
      • ವಿಜ್ಞಾನ
      • ನಿಯತಕಾಲಿಕೆಗಳು
  • ಶಬ್ದಕೋಶ
  • e-ಲೋಕ
    • e-ಲೋಕ

      ಜಗತ್ತು ನಾಗರಿಕತೆ ಪರಿಕಲ್ಪನೆಗಳು ಅರಳುವ ಮುನ್ನ ದಿನಗಳಿಂದಲೂ ಅಸ್ತಿತ್ವದಲ್ಲಿದ್ದೂ ನಿರಂತರವಾಗಿ ವಿಕಾಸಗೊಳ್ಳುತ್ತಿದೆ. ಸಂಜ್ಞೆಗಳು, ಸಂಕೇತಗಳು, ಶಿಲಾಚಿತ್ರಗಳು, ಲಿಪಿಕಂಡರಣೆಗಳು,ತಾಳೆಗರಿಗಳು, ಶಾಸನಗಳು, ಪುಸ್ತಕಗಳು ಹೀಗೆ ಬಹುಮಾಧ್ಯತಮ ಸಾಧ್ಯತೆಯಲ್ಲಿ ಸಾಗುತ್ತಾ ಬಂದ ಜ್ಞಾನ ಮತ್ತು ಮಾಹಿತಿ ಪ್ರಸಾರಕ್ಕೆ ಇತ್ತೀಚಿನ ಆಧುನಿಕ ಸ್ಪರ್ಶ ದೊರಕಿದ್ದು ತಂತ್ರಜ್ಞಾನದಿಂದ.ಆಧುನಿಕ ತಂತ್ರಜ್ಞಾನದಲ್ಲಿ ಬಹುಮಾಧ್ಯಮ ಸಾಧ್ಯತೆಯನ್ನು ಯಶಸ್ವಿಯಾಗಿ ಬಳಸುತ್ತಾ ಕನ್ನಡ ಭಾಷೆಯಲ್ಲಿ ಜ್ಞಾನವನ್ನು ಒದಗಿಸುವ ಮಹತ್ವದ ಪ್ರಯತ್ನ ಇ-ಲೋಕ.

    • e-ಲೋಕ
      • e-ದಿನ
      • e-ಪುಸ್ತಕ
      • e-ಜಗ
      • e-ದೃಶ್ಯ
      • e-ದನಿ
  • ದೃಶ್ಯಾಂಕಣ
  • ಚಿತ್ರಾಂಕಣ
  • ದಿನಮಣಿಗಳು
  • ಹುಡುಕಿ

ಸಂಪುಟ- ೧೩

Home/ಕನ್ನಡ/ಸಂಪುಟ- ೧೩
Previous Next

ಸಂಪುಟ- ೧೩

  • ಮುನ್ನುಡಿ
  • ಅಸ್ತಿತ್ವ
  • ದಿಗಂಬರ ಕವುಲು/ತೆಲುಗಿನ ನವ್ಯಕವಿಗಳು
  • ಶಾಂತವೇರಿ ಗೋಪಾಲ ಗೌಡರನ್ನು ಕುರಿತು
  • ತುಳು ಮತ್ತು ಕನ್ನಡ
  • ಬಸಳೆ-ನಾನು
  • ಹರಾಜು
  • ತಪ್ತ:ಆಲನಹಳ್ಳಿಯವರ ಮಣ್ಣಿನ ಕಥೆಗಳು
  • ಕ್ರಾಂತಿ ಬಂತು, ಕ್ರಾಂತಿ
  • ಕವಿತೆ
  • ಅನ್ವೇಷಣೆ:ರೂಮು
  • ಅನ್ವೇಷಣೆ:ರೂಮು
  • ನಿಟ್ಟುಸಿರ ಗರ್ಜನೆ
  • ಧರ್ಮದ ಕಲ್ಪನೆ

ಮುನ್ನುಡಿ

ಸಂಪಾದಕನ ಮಾತು

ಗೋಪಾಲಕೃಷ್ಣ ಅಡಿಗ

‘ಸಾಕ್ಷಿ’ ತನ್ನ ಮೂರು ವರ್ಷಗಳನ್ನು ಹಾಗೂ ಹೀಗೂ ಕಳೆದು ನಾಲ್ಕನೆಯ ವರ್ಷಕ್ಕೆ ಕಾಲಿಡುತ್ತಿರುವ ಈ ಸಂದರ್ಭ ‘ಸಾಕ್ಷಿ’ಯ ಪ್ರವರ್ತಕರಿಗೂ ಹಿತಚಿಂತಕರಿಗೂ ಸಂತೋಷ ಕೊಡುವಂಥದು; ಆದರ್ಶಕ್ಕೂ ವಸ್ತುಸ್ಥಿತಿಗೂ ನಡುವೆ ಇರುವ ಸಹಜ ಅಂತರವನ್ನೂ ನೆನಪಿಗೆ ತರುವಂಥದು. ಈ ತ್ರೈಮಾಸಿಕದ ಮೂಲಕ ಸಾಧಿಸಿದ್ದೇನು ಎಂದು ಕೇಳಿದರೆ ಹೇಳುವುದು ಅಷ್ಟು ಸುಲಭವಲ್ಲ. ಸ್ವತಂತ್ರ ವಿಚಾರಕ್ಕೆ ನಿರ್ಭಯವಾದ ಅಭಿವ್ಯಕ್ತಿಗೆ ತಕ್ಕ ವೇದಿಕೆಯಾಗಿ ಇದೆ ಎಂದು ಮಾತ್ರ ಹೇಳಬಹುದು. ಗಂಭೀರವಾದ ವಿಷಯಗಳ ಮೇಲೆ ಆಳವಾಗಿ ವಿಚಾರ ಮಾಡಿ ನಿರ್ಭಯವಾಗಿ ಪ್ರತಿಪಾದಿಸ ಬಲ್ಲವರ ಸಂಖ್ಯೆಯೇ ಬೆರಳೆಣಿಕೆಯದಾಗಿರುವಾಗ ಅಂಥವರ ಬರಹಗಳಿಗೆ ಮುಕ್ತವಾಗಿರುವುದಕ್ಕಿಂತ ಹೆಚ್ಚಿಗೆ ಏನನ್ನೂ ಸಾಧಿಸುವುದು ಸಾಧ್ಯವಲ್ಲ. ‘ಸಾಕ್ಷಿ’ಯ ಮುಖ್ಯವಾದ, ಇನ್ನೂ ತುಂಬಲು ಸಾಧ್ಯವಾಗದ, ಉತ್ತಮ ಲೇಖನಗಳ ಅಭಾವವೊಂದೇ ನಮ್ಮನ್ನು ಕಾಡುತ್ತಿರುವುದು. ಒಟ್ಟಿನಲ್ಲಿ ಬೌದ್ಧಿಕ ಕೆಲಸದ ತೀವ್ರತೆಯೇ ಕುಗ್ಗುತ್ತಿರುವ ಈ ಕಾಲದಲ್ಲಿ ಅಂಥ ಕೆಲಸವೊಂದಿದೆ ಎಂಬುದನ್ನು ಮರೆಯದಂತೆ ಮಾಡುವ ಕೆಲಸವನ್ನು ಮಾತ್ರ ‘ಸಾಕ್ಷಿ’ ನಡಸುತ್ತ ಬಂದಿದೆ ಎಂದು ಸಮಾಧಾನಪಟ್ಟುಕೊಳ್ಳಬಹುದು.
ಆರ್ಥಿಕವಾಗಿ ‘ಸಾಕ್ಷಿ’ ಹೆಚ್ಚು ಕಡಿಮೆ ತನ್ನ ಕಾಲ ಮೇಲೆ ತಾನು ನಿಲ್ಲಲು ಸಮರ್ಥವಾಗಿರುವುದೂ ಒಂದು ಬಗೆಯ ಸಿದ್ಧಿಯೇ ಸರಿ. ಆಸ್ಥಾನಬಲವಿಲ್ಲದ ಭಿನ್ನಮತ ಪ್ರತಿಪಾದಕವಾದೊಂದು ನಿಯತಕಾಲಿಕ ಬದುಕುವುದು ಸಾಧ್ಯವಿದೆ ಎಂಬ ಅನುಭವ ತುಂಬ ಭರವಸೆ ಹುಟ್ಟಿಸುವಂಥದು. ಈ ಸ್ಥಿತಿಯ ಸಾಧನೆಗೆ ಸಂಪಾದಕನ ಪರಿಶ್ರಮ ಕಾರಣವಲ್ಲ. ತುಂಬ ಚಿಕ್ಕವರಂತೆ ಕಾಣುವ ಒಬ್ಬ ದೊಡ್ಡ ಮನುಷ್ಯರ ಸಂಚಾಲಕ ಶಕ್ತಿಯೇ ಕಾರಣ ಎಂದು ನಾನು ಹೇಳಲೇಬೇಕು. ಸಂಪಾದಕನ ಆಲಸ್ಯ, ವಿಳಂಬ ಎಲ್ಲವನ್ನೂ ಮೀರಿ ನಿಂತು ಕರ್ತವ್ಯ ನಿಷ್ಠವಾಗಿ ಕೆಲಸವನ್ನು ನೆರವೇರಿಸಬಲ್ಲ ಶಕ್ತಿ ಇದು-ನಿಸ್ಪೃಹವಾಗಿ, ನಿರಹಂಕಾರಿಯಾಗಿ.
ಲೇಖನಗಳೇ ಇಲ್ಲದೆ ಚಡಪಡಿಸುತ್ತಲಿದ್ದಾಗ ಲೇಖನದಾನ ಮಾಡಿದ ನನ್ನ ಕೆಲವು ಸ್ನೇಹಿತರ ಉಪಕಾರವನ್ನಿಲ್ಲಿ ಸ್ಮರಿಸಲೇಬೇಕು. ಪುಟಗಳನ್ನಷ್ಟು ತುಂಬಲೇಬೇಕಾಗಿ ಬಂದಾಗ ಕೈಗೊಂಡ ನಿರ್ಧಾರದಿಂದ ಕೆಲವು ಸಲ ಅಷ್ಟೇನೂ ಉತ್ತಮವಲ್ಲದ ಲೇಖನಗಳೂ ಪ್ರಕಟವಾಗಿರಬಹುದು. ಆದರೆ ‘ಸಾಕ್ಷಿ’ಯಲ್ಲಿ ಪ್ರಕಟವಾಗಿರುವ ಲೇಖನಗಳಲ್ಲಿ ಕೆಲವಾದರೂ ಅತ್ಯುತ್ತಮ ಮಟ್ಟವನ್ನು ಮುಟ್ಟುವಂಥವು ಎಂಬ ಸಮಾಧಾನದಿಂದ ತೃಪ್ತಿಪಡಬೇಕಾಗಿದೆ. ಬೇರೆ ಬೇರೆ ವಿಷಯಗಳನ್ನು ಆಳವಾಗಿ ಅಭ್ಯಾಸ ಮಾಡಿ ಸಮರ್ಥವಾಗಿ ಬರೆಯಬಲ್ಲವರ ಸಂಖ್ಯೆ ಕ್ರಮೇಣ ಹೆಚ್ಚುತ್ತ ಹೋಗಲಿದೆ ಎಂಬ ಆಶೆಯಿಂದ ಮುಂದಡಿಯಿಡಬೇಕಾಗಿದೆ.
ಉದ್ವೇಗ, ಆಕ್ರೋಶ, ಗೊಂದಲಗಳ ಕಾಲ ಇದು. ಸ್ವಸ್ಥ ಸಮಚಿತ್ತದಿಂದ ಯೋಚಿಸುವುದನ್ನು ಅಸಾಧ್ಯವಾಗಿ ಮಾಡುವ ಸಂಖ್ಯಾಬಲ ಪ್ರದರ್ಶನದ ಬೊಗಳು ಸನ್ನಿರೋಗ ಸಾರ್ವತ್ರಿಕವಾದ ವಾತಾವರಣದಲ್ಲಿ ಅಂತರಂಗದ ಮಿಡಿತ ಕ್ರಮೇಣ ಅಸ್ಫುಟವಾಗುತ್ತ ಬರುತ್ತಿದೆ. ಮಾನಸಿಕ ಶಕ್ತಿಗಳೆಲ್ಲ ಇಂದ್ರಿಯ ಭೋಗಗಳಿಗೆ ಅಡಿಯಾಳಾಗಿ ದುಡಿಯುತ್ತಿವೆ. ಒಳಬದುಕಿನ ಬೆಲೆ ಕಡಿಮೆಯಾಗಿ ಹೊರ ಆಡಂಬರಕ್ಕೆ ಬೆಲೆ ಹೆಚ್ಚುತ್ತ ಇದೆ. ಆದರೆ ಇದು ಮನುಷ್ಯನ ಸಹಜಸ್ಥಿತಿಯಲ್ಲ-ಇದು ಜ್ವರದ ಹಾಗೆ. ಅಂತರಂಗ-ಬಹಿರಂಗ, ಆದರ್ಶ-ವಾಸ್ತವ ಇವುಗಳ ನಡುವೆ ತೂಕ ಇರುವುದೇ ಸಹಜಸ್ಥಿತಿ. ಅಂಥ ತೂಕವನ್ನು ಏರ್ಪಡಿಸುವ ಕೆಲಸ ಧರ್ಮದ್ದು. ಮನುಷ್ಯ ಮನುಷ್ಯರ ನಡುವೆ, ಮನುಷ್ಯ ಮತ್ತು ಪ್ರಕೃತಿಯ ನಡುವೆ, ಭೂತ ಭವಿಷ್ಯತ್ತುಗಳ ನಡುವೆ ಹೊಂದಾಣಿಕೆ ತರುವ ಸೂಕ್ಷ್ಮತಂತು ಅದು. ಇಡೀ ಜಗತ್ತಿಗೆ ಅನ್ವಯಿಸುವಂಥ ಅಂಥ ಒಂದು ಧಾರಣಸೂತ್ರವನ್ನು ಕಂಡುಹಿಡಿಯುವುದು ಅತ್ಯಗತ್ಯ. ಆ ದಿಕ್ಕಿನಲ್ಲಿ ಕತ್ತಲಿಗೆ ಇನ್ನೂ ಶರಣಾಗದ ಬೆಳಕಿನ ಕುಡಿಗಳು ದುಡಿಯಬೇಕು, ದುಡಿಯುತ್ತಲೇ ಇವೆ. ‘ಸಾಕ್ಷಿ’ಯ ಕೆಲಸವೂ ಮೂಲಭೂತವಾಗಿ ಈ ಕೆಲಸವೇ. ಬೇರೆ ಬೇರೆ ವಿಷಯಗಳ ನಾನಾ ಮುಖಗಳ ಮೇಲೆ ಬೆಳಕು ಚೆಲ್ಲಬಲ್ಲ ಚರ್ಚೆಗೂ ವಾಗ್ವಾದಕ್ಕೂ ಹೆಚ್ಚು ಅವಕಾಶ ಕಲ್ಪಿಸಬೇಕೆಂಬ ಯೋಜನೆ ‘ಸಾಕ್ಷಿ’ಗಿದೆ. ಮನಸ್ಸು ಮನಸ್ಸುಗಳ ಸಂಘರ್ಷದಿಂದಲೇ ಕೊಳಕನ್ನೆಲ್ಲ ಸುಡಬಲ್ಲ, ವಸ್ತುವನ್ನು ಶುದ್ಧ ಮಾಡಬಲ್ಲ ತಾರಕ ಅಗ್ನಿ ಹುಟ್ಟಬಲ್ಲುದು. ಇದೇ ಜ್ಞಾನಯಜ್ಞ. ಈ ಯಜ್ಞಕ್ಕೆ ಪಶುವಾಗುವುದು ಅಜ್ಞಾನ, ಅಹಂಕಾರ, ಮಿಥ್ಯಾಜ್ಞಾನ, ಪೂರ್ವಗ್ರಹಿಕೆ ಮುಂತಾದ ಕಿಲ್ಬಿಷಗಳು. ನಮ್ಮ ಬುದ್ಧಿಶಕ್ತಿಯನ್ನು ಪ್ರಚೋದಿಸು ಎಂದು ಬೇಡುವುದೇ ಮಂತ್ರ. ಏಕೆಂದರೆ ಶುದ್ಧ ಬುದ್ದಿಯ ತಾರಕಾಗ್ನಿಯ ಹುಟ್ಟೂ ಕೆಲಸವೂ ಮನುಷ್ಯನ ಶಕ್ತಿಯನ್ನೆಲ್ಲ ಉಪಯೋಗಿಸಿಕೊಂಡು ಅದನ್ನು ಮೀರಿ ಇನ್ನೊಂದು ಮನುಷ್ಯೇತರವಾದ ಶಕ್ತಿಯೊಂದಿಗೆ ಹೊಂದಿಕೊಳ್ಳುವುದರ ಮೇಲೆ ಅವಲಂಬಿಸಿದೆ. ಈ ಕೆಲಸಕ್ಕೆ ತಕ್ಕ ರಂಗಸ್ಥಳವನ್ನು ಸಿದ್ಧಗೊಳಿಸಿ ವೇದಿಕೆಯನ್ನು ಶುಚಿಗೊಳಿಸುವ ಕೆಲಸ ‘ಸಾಕ್ಷಿ’ಯ ಕೆಲಸವಾಗಬೇಕೆಂಬುದು ಗುರಿ.
ಕನ್ನಡನಾಡಿನ ಧೀಮಂತರೆಲ್ಲ ಈ ಕೆಲಸಕ್ಕೆ ನೆರವಾಗಬೇಕು. ಆಲಸ್ಯವನ್ನು ಕೊಡಹಿ ತಮ್ಮ ಅಂತರಂಗಕ್ರಿಯೆಯ ತೀವ್ರತೆಯನ್ನು ಹೆಚ್ಚಿಸಿಕೊಳ್ಳಬೇಕೆಂದು ಮನವಿ ಮಾಡಿಕೊಳ್ಳುತ್ತ, ‘ಸಾಕ್ಷಿ’ಯ ಬೆನ್ನೆಲುಬಾಗಿರುವ ಲೇಖಕರಿಗೆ ಕೃತಜ್ಞತೆ ಸೂಚಿಸಿ ಅವರ ಸಹಕಾರ ಹೆಚ್ಚು ಹೆಚ್ಚಾಗಿ ದೊರೆಯುವಂತೆ ಆಗಲಿ ಎಂದು ‘ಸಾಕ್ಷಿ’ಯ ಬಳಗ ಹಾರಯಿಸುತ್ತದೆ.

Close

ಅಸ್ತಿತ್ವ

ಅಸ್ತಿತ್ವ

ಜಯಂತ ಕಾಯ್ಕಿಣಿ

ನಾನು
ಮೈತುಂಬ ಬಾಯಾಗಿ
ತುಂಬಿ
ತುದಿಯಾಗಿರುವ
ಬದ್ಧ-
ಬುಗುರಿ.

ಗುರುತ್ವ
-ಬಿಂಬದ ಸುತ್ತೂ ಸುತ್ತಾಗಿಸಿ
ಹತ್ತಿ ಹತ್ತಾಗಿಸಿ ಗರಾ ಗರಾ
ತಿರುಗಿಸಿಕೊಂಡು ತಿರುಗಿ ನೇರ
ನಿಗುರಿ ನಿಂತರೆ ಮಾತ್ರ
ನನಗೆ ಏನಾದರೂ
ಅಸ್ತಿತ್ವ -ಒಂದು
ಗುರಿ

ಇಲ್ಲವಾದರೆ-
ತೆಪ್ಪಗೆ ಕೈಕಾಲೆಳೆದು
ಹವೆಯಾಗಿ ಹರಿದೀ
ವರ್ತಮಾನದಲ್ಲಿ
ತೇಲುವ
ಮಿಥುನಾ-ನಂತರದ
ಗಂಗಾಳನಗರಿ

Close

ದಿಗಂಬರ ಕವುಲು/ತೆಲುಗಿನ ನವ್ಯಕವಿಗಳು

ದಿಗಂಬರ ಕವುಲು / ತೆಲುಗಿನ ನವ್ಯ ಕವಿಗಳು

ಬಿ. ಆರ್. ಲಕ್ಷ್ಮಣರಾವ್‌

ಕನ್ನಡದಲ್ಲಿ ೧೯೨೬ ರಲ್ಲಿ ಶ್ರೀ ಬಿ. ಎಂ. ಶ್ರೀಯವರ ‘ಇಂಗ್ಲಿಷ್ ಗೀತಗಳು’ ಪ್ರಕಟವಾದಾಗ ಹೇಗೆ ಅದು ನವೋದಯ ಕಾವ್ಯಯುಗಕ್ಕೆ ನಾಂದಿಯಾಯಿತೋ, ಹಾಗೆ ತೆಲುಗಿನಲ್ಲೂ ಸಹ ಶ್ರೀ ಶ್ರೀ (ಶ್ರೀರಂಗಂ ಶ್ರೀನಿವಾಸರಾವ್) ರವರ ‘ಮಹಾ ಪ್ರಸ್ಥಾನಂ’ ೧೯೪೦ ರಲ್ಲಿ ಪ್ರಕಟವಾದಾಗ ಅಲ್ಲಿನ ನವೋದಯ ಕಾವ್ಯಯುಗ ಪ್ರಾರಂಭವಾಯಿತು. ನನ್ನಯ್ಯ, ವೇಮನ, ಪೋತನ ಮೊದಲಾದ ಪ್ರಾಚೀನ ಕವಿಗಳ ಛಂದೋ ಬದ್ದವಾದ, ಸಾಂಪ್ರದಾಯಿಕ ಕಾವ್ಯರಚನಾ ಪದ್ಧತಿ ಮುರಿದುಬಿದ್ದು ಸ್ವಚ್ಛಂದ ಬಂಧದ, ಸಮಕಾಲೀನ ಪ್ರಜ್ಞೆಯ, ಆಡುಮಾತಿನ ಕಾವ್ಯ ಶುರುವಾಯಿತು. ಶ್ರೀ ಶ್ರೀ ಯವರೇ ಆದ್ಯ ಪ್ರವರ್ತಕರಾದ ಈ ನವೋದಯ ಕವಿಗಳ ಗುಂಪಿಗೆ ಸುಬ್ಬರಾವ್, ದಾಶರಥಿ, ಆರುದ್ರ, ಅಜಂತಾ ಮುಂತಾದವರು ಸೇರುತ್ತಾರೆ. ಈ ನವೋದಯ ಕಾವ್ಯ ತೆಲುಗಿನಲ್ಲಿ ಇನ್ನೂ ಜನಪ್ರಿಯವಾಗಿ, ಸಮೃದ್ಧಿಯಾಗಿ ಬೆಳೆಯುತ್ತಲೇ ಇದೆ.
ಇಂಥ ಸಂದರ್ಭದಲ್ಲಿ ತೆಲುಗಿನಲ್ಲಿ ಹೊಸತೊಂದು ಧ್ವನಿ ೧೯೬೫ ರಲ್ಲಿ ಕೇಳಿಬಂತು. ತಮ್ಮನ್ನು ‘ದಿಗಂಬರ ಕವುಲು’ ಎಂದು ಕರೆದುಕೊಳ್ಳುವ ಆರು ಜನ ಕವಿಗಳು ೧೯೬೫ ನೇ ಮೇ ೬ ರಂದು ತಮ್ಮ ಕವನಗಳ ‘ದಿಗಂಬರ ಕವುಲು’ ಸಂಕಲನವನ್ನು ಅರ್ಧರಾತ್ರಿ ೧೨ ಘಂಟೆಗೆ ಒಬ್ಬ ರಿಕ್ಷಾವಾಲನ ಕೈಯಿಂದ ಬಿಡುಗಡೆ ಮಾಡಿಸಿದರು. ನಂತರ ೧೯೬೬ ರ ಡಿಸೆಂಬರ್ ತಿಂಗಳಲ್ಲಿ ಈ ಕವಿಗಳು ತಮ್ಮ ೩೦ ಕವನಗಳ ಎರಡನೆಯ ಕವನಸಂಕಲನವನ್ನೂ ಸಹ ಮಧ್ಯರಾತ್ರಿ ೧೨ ಘಂಟೆಗೆ ಸರಿಯಾಗಿ ಒಬ್ಬ ವೇಶ್ಯೆಯಿಂದ ಬಿಡುಗಡೆ ಮಾಡಿಸಿದರು.
ಈ ರೀತಿಯ ವೈಪರೀತ್ಯಗಳಿಂದ ಜನರ ಗಮನ ಸೆಳೆದು, ತೆಲುಗು ಸಾಹಿತ್ಯದ ‘ನಕ್ಸಲೈಟ್’ ಎಂದು ಕರೆಸಿಕೊಳ್ಳುತ್ತಿರುವ ಈ ಆರು ಮಂದಿ ದಿಗಂಬರ ಕವಿಗಳೂ ೩೦-೩೫ ರ ಹರೆಯದ ಸುಶಿಕ್ಷಿತ ಯುವಕರು. ಕಾವ್ಯವೇ ಅಲ್ಲದೆ ಕಥೆ, ಕಾದಂಬರಿ, ನಾಟಕಗಳನ್ನೂ ರಚಿಸಿ, ತೆಲುಗಿನ ಜನಪ್ರಿಯ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಇವರು ತಮ್ಮದೇ ಆದ ಕೆಲವು ವೈಶಿಷ್ಟ್ಯಗಳನ್ನು ರೂಪಿಸಿಕೊಂಡಿದ್ದಾರೆ. ಇವರ ನಿಜವಾದ ಹೆಸರುಗಳು ೧) ಕೇಶವರಾವ್ ೨) ಯಾದವ ರೆಡ್ಡಿ ೩) ರಾಘವಾಚಾರಿ ೪) ಭಾಸ್ಕರ ರಾವ್ 5) ಮನಮೋಹನ್ ಸಹಾಯ್ ಮತ್ತು ೬) ಕಮ್ಮಿಶೆಟ್ಟಿ ವೆಂಕಟೇಶ್ವರ ರಾವ್, ತಮ್ಮ ಹೆಸರುಗಳನ್ನು ಇವರು ಕ್ರಮವಾಗಿ ಹೀಗೆ ಬದಲಾಯಿಸಿಕೊಂಡಿದ್ದಾರೆ. ೧) ನಗ್ನಮುನಿ ೨) ನಿಖಿಲೇಶ್ವರ್‌ ೩) ಜ್ವಾಲಾಮುಖಿ ೪) ಚೇರಬಂಡರಾಜು ೫) ಭೈರವಯ್ಯ ಮತ್ತು ೬) ಮಹಾಸ್ವಪ್ಪ. ತಮ್ಮ ಆರು ಮಂದಿಯ ಹೆಸರುಗಳಲ್ಲಿ ಆರು ವರ್ಷಗಳನ್ನು ರೂಪಿಸಿದ್ದಾರೆ. ಪ್ರತಿ ವರ್ಷದ ಆರು ಋತುಗಳಿಗೆ ಆರು ಹೊಸ ಹೆಸರುಗಳನ್ನು ಹೀಗೆ ಕೊಟ್ಟಿದ್ದಾರೆ. ೧) ಆಶಾ ಋತು ೨) ಜ್ವಾಲಾ ಋತು ೩) ಅಶ್ರು ಋತು ೪) ಮದಿರಾ ಋತು ೫) ವಿರಹ ಋತು ಮತ್ತು ೬) ವಿಷಾದ ಋತು. ಇವರ ಪ್ರಕಾರ ವಾರಕ್ಕೆ ದಿನಗಳು ಏಳಲ್ಲ, ಆರು. ಅವುಗಳಿಗೂ ಹೀಗೆ ಹೊಸ ಹೆಸರುಗಳು : ೧) ಸ್ನೇಹವಾರ ೨) ಉಚ್ಛೃಂಖಲವಾರ ೩) ಕ್ರಾಂತಿ ವಾರ ೪) ಸೃಷ್ಟಿವಾರ ೫) ವಿಕಾಸವಾರ ಮತ್ತು ೬) ಅನಂತ ವಾರ.
ಈ ದಿಗಂಬರ ಕವಿಗಳನ್ನು ಕ್ರಾಂತಿವಾದಿಗಳೆಂದು ಕರೆಯಬಹುದು. ಇವರು ಎಲ್ಲ ಕ್ಷೇತ್ರಗಳಲ್ಲಿನ ಭ್ರಷ್ಟಾಚಾರವನ್ನೂ, ಅವನತಿಯನ್ನೂ ಕಂಡು ರೋಸಿ, ರೊಚ್ಚಿಗೆದ್ದು, ಕಟುವಾಗಿ, ಅಶ್ಲೀಲವಾಗಿ ಎಲ್ಲವನ್ನೂ ಟೀಕಿಸುತ್ತಾ, ಹಳಿಯುತ್ತಾ, ಎಲ್ಲ ಕ್ಷೇತ್ರಗಳಲ್ಲೂ ಸಮೂಲ ಬದಲಾವಣೆಯನ್ನು ಉಂಟುಮಾಡಲು, ಶಾಂತಿ, ಸುಖ, ಸೌಹಾರ್ದತೆಯನ್ನು ನೆಲೆಗೊಳಿಸಲು ಆಂದೋಳನವನ್ನು ಬಯಸಿ ಚೀರಿಡುತ್ತಿರುವ ಬಿಸಿರಕ್ತದ ಯುವಕರು. ಇವರು ಯಾವ ರಾಜಕೀಯ ಪಕ್ಷವನ್ನೂ, ಪದ್ಧತಿಯನ್ನೂ ಒಪ್ಪುವುದಿಲ್ಲ. ಏಕೆಂದರೆ ಇಂದಿನ ಎಲ್ಲ ರಾಜಕೀಯ ಪದ್ಧತಿಗಳೂ, ಪಕ್ಷಗಳೂ ಪ್ರಜೆಗಳನ್ನು ಶೋಷಿಸಲು ಉಪಯೋಗಿಸಲ್ಪಡುತ್ತಿವೆ. ಇವರು ಯಾವ ತಾತ್ವಿಕ ಪಂಥವನ್ನೂ ಅನುಸರಿಸುವುದಿಲ್ಲ. ಏಕೆಂದರೆ ಇವರು ಸ್ವಕೀಯತೆಗೆ, ಸ್ವಂತಿಕೆಗೆ ಆದ್ಯ ಪ್ರಾಶಸ್ತ್ರ ಕೊಡುತ್ತಾರೆ. ಇವರು ಯಾವುದನ್ನೂ ಮುಚ್ಚುಮರೆ ಮಾಡುವುದಿಲ್ಲ. ಎಲ್ಲವನ್ನೂ ನೇರವಾಗಿ, ಕಾರವಾಗಿ ಹೇಳುತ್ತಾರೆ. ಇವರು ತಮ್ಮನ್ನು ದಿಗಂಬರ ಕವಿಗಳೆಮ ಕರೆದುಕೊಳ್ಳಲು ಕಾರಣ, ಇವರ ಪ್ರಕಾರ ದಿಗಂಬರತೆಯೇ ಮಾನವನಿಗೆ ಒಂದು ರೀತಿಯಲ್ಲಿ ಸಹಜವಾದ ವಾಸ್ತವವಾದ ಸ್ಥಿತಿ.
‘ಎಷ್ಟೋ ಮಂದಿಯ ಶವಗಳ ಮೇಲೆ ನಿಂತಿರುವ ಕೀರ್ತಿಕಾಮುಕರ, ಅವಕಾಶವಾದಿಗಳ, ಗುಳ್ಳೆನರಿಗಳ ನಡುವೆ ಚಾಚಿರುವ ಶೂನ್ಯ ಹಸ್ತಗಳ ಈ ದಿನದ ತಲೆಗಳ ನಡುವೆ ನಾವು ಏನು ಕೋರುತ್ತೇವೆ ?’ ಎಂಬ ಶೀರ್ಷಿಕೆಯಲ್ಲಿ ಈ ದಿಗಂಬರ ಕವಿಗಳು ತಮ್ಮ ಕಾವ್ಯೋದ್ದೇಶವನ್ನು ಹೀಗೆ ಸ್ಪಷ್ಟಪಡಿಸಿದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲಿ ಇವರು ಬಯಸುವುದು ಅನುಕರಣೆ-ಅನುವಾದಗಳಲ್ಲದ, ಸ್ವಂತ, ಜೀವಂತ, ಮೌಲಿಕ ಧ್ವನಿಯನ್ನು ; ಇಂದು ಟನ್‌ಗಟ್ಟಲೆ ತಯಾರಾಗುತ್ತಿರುವ ಪಾಪ್ ಸಾಹಿತ್ಯವನ್ನೂ, ಅವುಗಳಿಗೆ ಉತ್ತೇಜನ ಕೊಡುತ್ತಿರುವ ಪತ್ರಿಕೆಗಳನ್ನೂ ಸುಡಬಲ್ಲ ಜ್ವಲಂತ ರಚನೆಗಳನ್ನು ; ಆಡಂಬರ ಡಂಭಾಚಾರ ಭ್ರಮೆಗಳಿಲ್ಲದ, ಪ್ರಾಮಾಣಿಕ, ಸರಳ, ಯುಗಸಂದೇಶಗಳನ್ನೂ ಮತ್ತು ಅವುಗಳ ಅಭಿವ್ಯಕ್ತಿಯನ್ನು.
ಇಂದಿನ ಜೀವನಕ್ಷೇತ್ರದಲ್ಲಿ ಇವರು ಬಯಸುವುದು ಮಾನವನು ಪ್ರಾಣಿಗಳಂತೆ ಭೌತಿಕ ಆನಂದದಲ್ಲೇ ಮಗ್ನನಾಗದೆ, ಅದರೊಂದಿಗೆ ಮನಸ್ಸನ್ನು ಸದಾ ಸಚೇತನವಾಗಿ ಇಟ್ಟು ಕೊಳ್ಳುವುದನ್ನು : ಎಲ್ಲರೊಡನೆ ಕಲೆತು ತನ್ನಲ್ಲಿ ತಾನೇ ಜೀವಿಸುವುದನ್ನು ; ತಾಟಸ್ಥ್ಯವಿಲ್ಲದೆ, ದ್ವೀಪದಂತಾಗದೆ, ಜೊತೆಯವರಿಗೆ ಪ್ರೇರಣೆ ಕೊಡುವ ಹೊಳೆಯಾಗುವುದನ್ನು; ಹಣಕ್ಕೆ ದಾಸನಾಗಿ, ಸುಖ ಲಾಲಸೆಗಳ ಹಿಂದೆ ನಾಯಿ ಅಲೆಯದಿರುವುದನ್ನು ; ಮನುಷ್ಯನನ್ನು ಮನುಷ್ಯನಂತೆ ನೋಡುವುದನ್ನು ; ಈ ಇಪ್ಪತ್ತನೆಯ ಶತಮಾನದಲ್ಲಿ ಮಾನವ ವಿಶ್ವ ಯಂತ್ರದ ಒಂದು ಬಿಡಿ ಭಾಗವಾಗದೆ ತನ್ನ ವ್ಯಕ್ತಿತ್ವ ಮತ್ತು ಅಸ್ತಿತ್ವವನ್ನು ಉಳಿಸಿಕೊಳ್ಳುವುದನ್ನು.
ರಾಜಕೀಯ ಕ್ಷೇತ್ರದಲ್ಲಿ ಪ್ರಜೆಗಳನ್ನು ಶೋಷಿಸುವ ಯಾವ ರಾಜಕೀಯ ಪದ್ದತಿಯನ್ನೂ, ಇಜಂಗಳನ್ನೂ ಇವರು ಇಷ್ಟಪಡುವುದಿಲ್ಲ. ಚಿತ್ತಶುದ್ದಿ, ಪ್ರಾಮಾಣಿಕತೆಯ ನೆಲಗಟ್ಟಿನ ಮೇಲೆ ನಿಂತ ಸಂಘ ವ್ಯವಸ್ಥೆ ರಾಜಕೀಯ ಪದ್ಧತಿಯನ್ನು ರೂಪಿಸಬೇಕು. ಇವರ ತಾತ್ವಿಕ ದೃಷ್ಟಿ ಹೀಗಿದೆ : ಇವರು ‘ಮಾನವ ಒಬ್ಬಂಟಿ ; ಅವನ ಬಾಳಿಗೆ ಅರ್ಥವಿಲ್ಲ’ ಎಂಬ ದೃಷ್ಟಿಯನ್ನು ಒಪ್ಪುವರಲ್ಲ. ಇವರು ಆಶಾವಾದಿಗಳು. ಇವರ ಪ್ರಕಾರ ಈ ಜೀವನದಲ್ಲಿ ಪ್ರತಿ ವಸ್ತುವಿಗೂ, ಸಂಘಟನೆಗೂ ಸಾರ್ಥಕತೆಯೂ ಇದೆ. ನಿರರ್ಥಕತೆಯೂ ಇದೆ. ಆದ್ದರಿಂದ ಚೈತನ್ಯವಂತವಾದ, ಆತ್ಮಸಂತೃಪ್ತಿಯಿಂದ ಸಾಗುವ ಜೀವನವೇ ನಿಜವಾದ ಅಸ್ತಿತ್ವ. ಯಾವ ಮುಖವಾಡಕ್ಕೂ ತಲೆಬಾಗದ, ಯಾವ ಹೆದರಿಕೆಗೂ ಜಗ್ಗದ, ಸದಾ ಸಜೀವ ಮಾನವನಿಗಾಗಿ ಈ ದಿಗಂಬರ ಕವಿಗಳು ಕೊರಳೆತ್ತಿ ಕರೆಯುತ್ತಾರೆ.
೨
ಇಷ್ಟೆಲ್ಲ ಆಕರ್ಷಕ ಅಂಶಗಳನ್ನು ಮತ್ತು ಘೋಷಣೆಗಳನ್ನು ಹೊಂದಿರುವ ಈ ದಿಗಂಬರ ಕಾವ್ಯವನ್ನು ಸಾಹಿತ್ಯಕ ಮೌಲ್ಯಗಳಿಂದ ಅಳೆದಾಗ ಎಂಥ ವಿಮರ್ಶಕನಿಗೂ ನಿರಾಶೆಯಾಗದಿರದು. ಏಕೆಂದರೆ ಘೋಷಣೆ, ಖಂಡನೆ, ಧಿಕ್ಕರಣೆಗಳಿಗೆ ಮೀಸಲಾಗಿರುವ ಈ ಕಾವ್ಯದಲ್ಲಿ ಕಾವ್ಯಾಂಶ ತೀರಾ ತೆಳುವಾಗಿದೆ. ವಸ್ತು ವೈವಿಧ್ಯತೆಯಿಲ್ಲ. ಲಯದಲ್ಲಿ ಗದ್ಯದ ಕಸುವಿದ್ದರೂ ಏಕತಾನವಾಗಿದೆ. ಕಾವ್ಯದ ವ್ಯಾಪ್ತಿ ಮಾನವನ ಬಾಹ್ಯ ಪ್ರಪಂಚಕ್ಕೇ ಸೀಮಿತವಾಗಿದೆ. ಅವನ ಅಂತರಂಗದ ತುಮುಲ, ಒಳತೋಟ, ವಿವೇಚನೆಗಳ ಚಿತ್ರಣವಿಲ್ಲ. ಇವರ ಕವನಗಳಲ್ಲಿ ಬರುವ ಉಪಮೆ, ರೂಪಕ, ಪ್ರತೀಕಗಳು ಓದುಗರ ಗಮನ ಸೆಳೆಯಲಿಕ್ಕಾಗಿ, ಷಾಕ್ ಮಾಡಲಿಕ್ಕಾಗಿ, ಬೀಭತ್ಸವಾಗಿ, ಅಶ್ಲೀಲವಾಗಿ, ಅಸಹ್ಯವಾಗಿ ರೂಪಿತವಾಗಿದ್ದರೂ ಅವುಗಳಿಗೆ ಅನಿವಾರ್ಯತೆಯಿಲ್ಲ. ಅವು ಪರಸ್ಪರ ಸಾವಯವ ಸಂಬಂಧವನ್ನು ಹೊಂದಿದ್ದು ಕವಿತೆಯನ್ನು ಒಂದು ಸಮಗ್ರ ಶಿಲ್ಪವನ್ನಾಗಿ ಮಾಡುವುದಿಲ್ಲ. ವ್ಯಂಗ್ಯ, ವಿಡಂಬನೆ, ಶ್ಲೇಷೆ, ಹಾಸ್ಯಗಳಿಗೆ ಬದಲು ಸಿನಿಕತನ, ರೊಚ್ಚು, ಜಿಗುಪ್ಪಗಳೇ ತುಂಬಿವೆ.
ಕನ್ನಡದ ನವ್ಯಕವಿಗಳೊಂದಿಗೆ ಇವರನ್ನು ಹೋಲಿಸುವುದು ಅಸಮರ್ಪಕ. ಅಡಿಗರ ‘ಇಂದು ನಮ್ಮೀ ನಾಡು’, ‘ಗೊಂದಲಪುರ’, ಲಂಕೇಶರ ‘ದೇಶಭಕ್ತ ಸೂಳೇಮಗನ ಗದ್ಯಗೀತೆ’, ನಿಸಾರರ ‘ಕುರಿಗಳು, ಸಾರ್‌, ಕುರಿಗಳು’, ಕಂಬಾರರ ‘ಮಾವೋತ್ಸೆ ತುಂಗನಿಗೆ’ ಮುಂತಾದ ಕವನಗಳ ಮುಂದೆ ಈ ದಿಗಂಬರ ಕವಿಗಳ ಕವನಗಳು ಬಾಲಿಶವಾಗಿ, ಹಾಸ್ಯಾಸ್ಪದವಾಗಿ ಕಾಣುತ್ತವೆ.
ಉದಾಹರಣೆಗೆ ದಿಗಂಬರ ಕವಿಗಳ ಗುಂಪಿನಲ್ಲಿ ಅತ್ಯಂತ ಶಕ್ತನಾದ, ಪ್ರಮುಖನಾವ ‘ನಗ್ನಮುನಿ’ಯ ಕಾಸ್ಮಿಕ್ ಜಾತಿಗಾಗಿ ಕವನವನ್ನು ತೆಗೆದುಕೊಳ್ಳಬಹುದು. ಈ ಕವನ ಧೋರಣೆಯಲ್ಲಿ ಸ್ವಲ್ಪಮಟ್ಟಿಗೆ ಲಂಕೇಶರ ‘ದೇಶಭಕ್ಕೆ ಸೂಳೇಮಗನ ಗದ್ಯಗೀತೆ’ಯನ್ನೂ ಲಯ ಮತ್ತು ಧ್ವನಿಯಲ್ಲಿ ‘ನನ್ನ ಸುತ್ತಾ’ ಕವನವನ್ನೂ ಹೋಲುತ್ತದೆ. ಆದರೆ ಲಂಕೇಶರ ಕವನಗಳಿಗಿರುವ ಆಳ, ವ್ಯಾಪ್ತಿ, ತಾತ್ವಿಕ ನಿಲುವು, ವ್ಯಂಗ್ಯ, ಹಾಸ್ಯ, ಧ್ವನಿ ಮತ್ತು ಲಯದಲ್ಲಿನ ವೈವಿಧ್ಯತೆ ಇಲ್ಲಿ ಕಂಡುಬರುವುದಿಲ್ಲ. ರೊಚ್ಚು ಮತ್ತು ಧಿಕ್ಕರಣೆಯೇ ಇಲ್ಲಿನ ಸ್ಥಾಯಿಭಾವವಾಗಿವೆ. ‘ನಗ್ನಮುನಿ’ಯ ಧೋರಣೆಯನ್ನು ಸ್ಪಷ್ಟಪಡಿಸಲು ಆ ಕವನದ ಈ ಸಾಲುಗಳನ್ನು ಉದ್ಧರಿಸಬಹುದು. ಆಂಧ್ರ ದೇಶದ ಅವನತಿಯ ಬಗ್ಗೆ ಬರೆಯುತ್ತಾ ಕವಿ ಹೀಗೆ ವಿಡಂಬಿಸುತ್ತಾನೆ:
ಕೋಳಿ ಕಾಳಗಗಳಿಗೆ ಕುರಿ ಪಂದ್ಯಗಳಿಗೆ
ರುಂಡ ಚೆಂಡಾಡಿಕೊಳ್ಳುವ
ಓ ಆಂಧ್ರ ದೇಶವೇ,
ನಿನ್ನ ರಸ್ತೆಗಳನ್ನು ದನಗಳನ್ನು ಲಾರಿಗಳನ್ನು ಮೈಕಾ ಗಣಿಗಳನ್ನು
……………………………………………………
ಬಿಸಿಲನ್ನು ಹೆಂಡದಂಗಡಿಗಳನ್ನು
…………………………………………………..
ಬೆಳಕಿನ ಮುಖ ಕಾಣದ ವ್ಯಾಪಾರಿಗಳನ್ನು
ಓ ಹೋ ಹೋ ಅಖಿಲಾಂಧ್ರ ದೇಶವೇ,
ಅಜ್ಞಾನಾಂಧ ಸೌಭಾಗ್ಯ ಸೀಮೆಯೇ,
ಮಿರುಮಿರುಗುವ ನಿನ ನಾಲ್ಕು ಕೋಟಿ ಜನತೆಯನ್ನು,
ಯೋಜನೆಯ ಹುಣ್ಣುಗಳ ಮೇಲೆ ಮುತ್ತುವ ನೊಣಗಳ ರಾಜಕೀಯಗಳನ್ನು,
……………………………………………………..
ಕವಿ ಹಂದಿಗಳನ್ನು
ಬೆಜವಾಡ ಏಲೂರು ಕಾಲುವೆಗಳ ಸೂಳೆಗೇರಿಗಳಲ್ಲಿ ಅರಳುವ
ಮುಂಜಾನೆಗಳನ್ನು,
ಬಾರ್‌ಗಳಲ್ಲಿನ ಹೈದರಾಬಾಧೆಯನ್ನು,
ನಿನ್ನ ಸಾವಿರಾರು ವರ್ಷಗಳ ಬಂಜೆ ಸಂಸ್ಕೃತಿಯನ್ನು,
ಯಾವ ದೇಶಕ್ಕೆ ಹೋದರೂ ಎಲ್ಲಿ ಕಾಲಿಟ್ಟರೂ
ಕಾರದಲ್ಲದ್ದಿದ ಹಾರೆಗಳಿಂದ
ಹಾಡೆ ಹಗಲು
ಸಂಭೋಗಿಸಬೇಕೆನ್ನಿಸುತ್ತೆ.
ಈ ಕವನದಲ್ಲಿ ಕವಿ ಕೋಳಿ ಕಾಳಗವೇ ಕಾರಣವಾಗಿ ಪಾಲ್ನಾಟಿ ಯುದ್ಧವಾದದ್ದನ್ನೂ, ‘ಏ ದೇಶಮೇಗಿನಾ ಎಂದು ಕಾಲಿಡಿನಾ’ ಎಂಬ ಪ್ರಖ್ಯಾತ ತೆಲುಗು ದೇಶಭಕ್ತಿ ಗೀತೆಯ ಒಂದು ಸಾಲನ್ನೂ ವಿಡಂಬನೆಗಾಗಿ ಬಳಸಿಕೊಂಡಿದ್ದಾರೆ.
ಹೀಗೆಯೇ ಉಳಿದೈದು ಕವಿಗಳ ಧೋರಣೆಯನ್ನು ಸ್ಪಷ್ಟಪಡಿಸುವ ಅವರ ಕವಿತೆಗಳ ಕೆಲವು ಸಾಲುಗಳನ್ನು ನೋಡಬಹುದು.
ತಮ್ಮ ‘ಉಸುಕು’ ಕವನದಲ್ಲಿ ಕವಿ ಚೇರಬಂಡರಾಜು ಬೆಳದಿಂಗಳನ್ನು ಹಿಗೆ ವರ್ಣಿಸುತ್ತಾರೆ :
ಬೆಳ್ಳಗೆ ಸೀಳಿದ ಬೈತಲೆ ಕಾಲುವೆಯಲ್ಲಿ
ಕೀವು ಚಿಮ್ಮುತ್ತಿರುವ
ಬುಗ್ಗೆ
ಬೆಳದಿಂಗಳು.
ಈ ರೂಪಕ ಚಂದ್ರಶೇಖರ ಕಂಬಾರರ ‘ಗಂಗಾಮಾಯಿ’ ಕವನದ ‘ಮೂಡಣದ ಮುದಿ ಕುರುವೊಡೆದು ನೆತ್ತರು ಕೀವು ಸೋರಿತೋ,- ಸುರುವಾಯ್ತಿಲ್ಲಿ ಚಲನೆ’ ಎಂಬ ಸಾಲುಗಳನ್ನು ನೆನಪಿಗೆ ತರುತ್ತದೆ. ಎರಡೂ ಕವನಗಳ ಒಟ್ಟಾರೆ ಜಿಗುಪ್ಪೆಯ ಧೋರಣೆಗೆ ಈ ರೂಪಕಗಳು ಸಮರ್ಪಕವಾಗಿವೆ.
‘ನಾನೊಂದು ಅತ್ಯಾಚಾರಕ್ಕೊಳಗಾದ ಹಾಡು’ ಎಂಬ ಕವಿತೆಯಲ್ಲಿ ಕವಿ ಭೈರವಯ್ಯ ಸ್ವಾರ್ಥಿಗಳ, ಬರ್ಬರರ ಸಮಾಜದಲ್ಲಿ ಶೋಷಿತನಾದ ವ್ಯಕ್ತಿಯ ದುಃಸ್ಥಿತಿಯನ್ನು ಹೀಗೆ ವರ್ಣಿಸುತ್ತಾರೆ :
ನಾನೊಂದು ಅತ್ಯಾಚಾರಕ್ಕೊಳಗಾದ ಹಾಡು,
…………………………………………………..
ಸ್ವಾರ್ಥದ ಕಾಂಕ್ರೀಟು ತೊಡೆಗಳ ನಡುವೆ
ಹೊಸಗಲ್ಪಟ್ಟ ರಾಗ,
ಕೀರ್ತಿರತಿ ತೀರದ ಬರ್ಬರರ ಭಯಂಕರ
ನಖಕ್ಷತಗಳಿಗೆ ದಂತಕ್ಷತಗಳಿಗೆ
ಹುಳಿತು ಹೋದ ಮೊಲೆ
…………………………….
ಚಪಲರ ಅಗ್ಗದ ಕಾಮೋದ್ರೇಕಕ್ಕೆ
ಸತ್ತು ಕೊಳೆತ ಭ್ರೂಣ ನಾನು.
‘ನನ್ನ ದೇಶದಲ್ಲಿ ನಾನು ಒಬ್ಬಂಟಿ’ ಎಂಬ ತಮ್ಮ ಕವನದಲ್ಲಿ ಕವಿ ನಿಖಿಲೇಶ್ವರ್ ‘ನನ್ನ ದೇಶ ನನಗೆ ಉಳಿಸಿರುವ ಮಹಾಸಮಸ್ಯೆಗಳ ನೇಣುಗಳು, ಹಸಿವು, ನಿರುದ್ಯೋಗ, ಕುಸಿದ ಸಂಸ್ಕೃತಿ, ಗೆದ್ದಲು ತಿಂದ ಇತಿಹಾಸ, ಇವುಗಳ ನಡುವೆ ನನ್ನ ದೇಶದಲ್ಲಿ ನಾನು ಒಬ್ಬಂಟಿ’.
‘ಸ್ನೇಹವನ್ನು ಕೊಡದ ದೇಶದಲ್ಲಿ
ಸ್ನೇಹವಿಲ್ಲದ ಪ್ರತಿಯೊಬ್ಬನೂ ಒಂದೊಂದು ದ್ವೀಪ.’
ಎನ್ನುತ್ತಾರೆ.
ಕವಿ ಮಹಾಸ್ವಪ್ನ ಗಾಂಧಿಯ ಬಗ್ಗೆ ಹೀಗೆ ಬರೆಯುತ್ತಾರೆ:
‘ಎಷ್ಟು ಭ್ರಮೆಪಟ್ಟೆ ನಮ್ಮ ಉಡುಪನ್ನು ನೋಡಿ ;
ಎಷ್ಟು ಶ್ರಮಪಟ್ಟೆ ನಮ್ಮನ್ನು ನಂಬಿ ;
ನಾವು ಮಾನವರಲ್ಲ, ಇನ್ನೇನೋ ಹೆಸರಿದೆ ನಮಗೆ ;
ಇಷ್ಟು ಕೋಟಿ ಗೋಡ್ಸೆಗಳ ಘಾತಕ ಹಸ್ತಗಳ ನಡುವೆ,
ಸುತ್ತಲೂ ಭೋರ್ಗರೆದು ಮುತ್ತುತ್ತಿರುವ ಅಂಧಕಾರ ಸಾಗರದ ನಡುವೆ,
ನಿಶ್ಚಲವಾಗಿ ಬೆಳಗುತ್ತಿರುವ ನಿನ್ನ ಕಿರುನಗೆ ;
ಬಾಪೂ, ನೀನು ಮೋಸ ಹೋದೆಯೋ ಹೇಗೆ ?
ತಮ್ಮ ‘ಶೃಂಗಾರ ಚೇಷ್ಟೆ’ ಎಂಬ ಕವನದಲ್ಲಿ ಕವಿ ಜ್ವಾಲಾಮುಖಿ ನವೋದಯ ಕವಿಗಳನ್ನು ಹೀಗೆ ಟೀಕಿಸುತ್ತಾರೆ :
ಕವಿಗಳು ;
ಊಹೆಯ ಲೋಕಗಳಲ್ಲಿ
ಭಾವನಾಕಲ್ಪಿತ
ಪ್ರೇಯಸಿಯ ವಕ್ಷೋಜಗಳ ರಸಶಿಖರಗಳಿಗೆ
ಜೋಲಾಡುತ್ತಿರುವ ಗಂಡು ಬಾವಲಿಗಳು ;
ರಸಗಳ ಜೇಡರ ಬಲೆಯನ್ನು ಸೀಳಲಾರದೆ,
ಅಲಂಕಾರಗಳ ಅಂಧಕಾರ ಮಾರ್ಗಗಳನ್ನು ಭೇದಿಸಲಾರದೆ,
ಸಮಕಾಲೀನ ಬೆಳಕಿನಂಬುಧಿಯನ್ನು ಕಾಣಲಾರದೆ,
ಕತ್ತಲಿನ ಗುಲಾಮರು ;
ಗೂಬೆಗಳು :
ಚಕ್ಷು ಗವಾಕ್ಷಿಗಳನ್ನು ಬಿಗಿದು ಮುಚ್ಚುತ್ತಿದ್ದಾರೆ;
ಅಕ್ಷರ ಭಿಕ್ಷೆಯನ್ನು ಆಶಿಸುತ್ತಿದ್ದಾರೆ.
ಮೇಲಿನ ಉದಾಹರಣೆಗಳಿಂದ ದಿಗಂಬರ ಕವಿಗಳ ಧಾಟಿ, ಧೋರಣೆ ಸ್ಪಷ್ಟವಾಗುತ್ತವೆ. ಈ ಕವಿಗಳು ಉತ್ಕಟವಾದ ಸಮಕಾಲೀನ ಪ್ರಜ್ಞೆ. ಗದ್ಯದ ಸತ್ವವುಳ್ಳ ಕಾವ್ಯ ಶೈಲಿ ಹೊಂದಿದ್ದಾರೆ. ತಮ್ಮ ಮೊದಲ ಕವನ ಸಂಕಲನದಿಂದ ಎರಡನೆಯ ಸಂಕಲನಕ್ಕೆ ಕಾವ್ಯಾಂಶದ ದೃಷ್ಟಿಯಿಂದ ಕೊಂಚ ಬೆಳವಣಿಗೆ ತೋರಿದ್ದಾರೆ. ಆದ್ದರಿಂದ ಇವರು ಆರ್ಭಟ, ಆಕ್ರೋಶ, ಖಂಡನೆಗಳಲ್ಲಿ ಕೇಂದ್ರೀಕೃತವಾಗಿರುವ ತಮ್ಮ ಆಸಕ್ತಿಯನ್ನು ಸಾಹಿತ್ಯಕ ಮೌಲ್ಯಗಳ ಕಡೆ ಹರಿಸಿದಲ್ಲಿ ಬದುಕಬಲ್ಲ ಉತ್ತಮ ಕಾವ್ಯವನ್ನು ರಚಿಸಬಹುದೆಂದು ಆಶಿಸಬಹುದು. ಇದುವರೆಗಿನ ಇವರ ಕಾವ್ಯ ತನ್ನ ವೈಪರೀತ್ಯಗಳಿಂದ ಕೇವಲ ಕುತೂಹಲಕಾರಿಯಾಗಿ ಮಾತ್ರ ಉಳಿದಿದೆ.

Close

ಶಾಂತವೇರಿ ಗೋಪಾಲ ಗೌಡರನ್ನು ಕುರಿತು

ಶಾಂತವೇರಿ ಗೋಪಾಲ ಗೌಡರನ್ನು ಕುರಿತು *

ಯು. ಆ‌ರ್‌. ಅನಂತಮೂರ್ತಿ

ಶ್ರೀ ಗೋಪಾಲ ಗೌಡ ಶಾಂತವೇರಿ-ಈ ಹೆಸರನ್ನು ನಾನು ಮೊದಲು ಕೇಳಿದ್ದು ತೀರ್ಥಹಳ್ಳಿ ಹೈಸ್ಕೂಲಲ್ಲಿ ಓದುತ್ತಿದ್ದಾಗ. ಆಗ ನಾನು ಹೊಸ ವಿಚಾರದ ಗೊಂದಲಕ್ಕೆ ಒಳಗಾಗಿದ್ದ ಆಗ್ರಹಾರದ ಬಾಹಣ ಹುಡುಗ. ಮಾರಿಕಲ್ಲು ಕಿತ್ತು ಬಿಸಾಕುವುದು ; ಕದ್ದು ಸಿಗರೇಟು ಸೇದುವುದು ; ಸುತ್ತಿನ ಜನರ ಆಚಾರಕ್ಕೂ ವಿಚಾರಕ್ಕೂ ಇರುವ ಭೇದ ಕಂಡು, ಶೂದ್ರನಿಗೆ ವೇದಾಧಿಕಾರವಿಲ್ಲವೆಂದು ವಾದಿಸುವ ದಡ್ಡರ ಮೌಡ್ಯಕಂಡು ರೇಗುವುದು ; ಗಾಂಧೀಜಿಯನ್ನು ಕಲಿಯ ಅವತಾರವೆಂದು ಹೀಯಾಳಿಸುತ್ತಿದ್ದ ಪ್ರಖ್ಯಾತ ಸನಾತನಿ ‘ಜಗದ್ಗುರು’ ಒಬ್ಬರು ಗಾಂಧೀಜಿ ಸತ್ತಾಗ ಅವರ ಮಗನಿಗೆ ಸಂತಾಪದ ತಂತಿ ಕಳಿಸಿದ ರಾಜಕೀಯಕ್ಕೆ ಹೇಸುವುದು ; ಖುದ್ದಾಗಿ ಕೊಂಕಣಿ ಹೋಟೆಲಲ್ಲಿ ಕಾಫಿ ಕುಡಿಯುವ ಭಂಡ ಧೈರ್ಯ ಪ್ರದರ್ಶಿಸುವುದು. ಆದರೆ ಕದ್ದು ಕೋಳಿ ಮೊಟ್ಟೆ ತಿನ್ನುವುದು; ಜಫ್ತಿ ಹರಾಜುಗಳ ಅಮಾನುಷ ಮಾರ್ಗದಿಂದ ಬೆಳೆಯುತ್ತಿದ ಜಮೀನ್ದಾರರ ಮರ್ಜಿಯನ್ನು ಖಂಡಿಸುವುದು- ಹೀಗೆ ನಮ್ಮ ಬಂಡಾಯ ಅಪಕ್ವವಾಗಿ ಆದರೆ ಜೀವಂತವಾಗಿ ಕುಡಿಯೊಡೆಯುತ್ತಿದ್ದ ಕಾಲ ನನಗೆ ಈಗ ತಮಾಷೆಯಾಗಿ ಒಣ ಹುರುಪಾಗಿ ಕಾಣಬಹುದು. ಆದರೆ ಆ ಭಾವನೆಗಳ ಹಿಂದಿರುವ ವಾಸ್ತವತೆ ಇವತ್ತಿಗೂ ನನಗೆ ನಿಜವಾಗಿ ಉಳಿದಿದೆ. ಈ ನನ್ನ ಹೊಸ ತಹತಹದ ಲೋಕಕ್ಕೆ ಗೋಪಾಲ ಗೌಡರ ಪ್ರವೇಶ ನನ್ನ ಮಟ್ಟಿಗೆ ಅತ್ಯಂತ ಮಹತ್ವಪೂರ್ಣ ಘಟನೆ.
ಮೈಸೂರು ರಾಜ್ಯದ ಸ್ವಾತಂತ್ರ್ಯ ಚಳುವಳಿಯ ಹೀರೋ ಆಗಿ ನಾನು ಗೌಡರ ಹೆಸರು
_____________
* ‘ಶಾಸನಸಭೆಯಲ್ಲಿ ಶಾಂತವೇರಿ’ ಪುಸ್ತಕದ ಬಿಡುಗಡೆ ಸಂದರ್ಭದಲ್ಲಿ ಬರೆದದ್ದು.
_____________
ಕೇಳಿದ್ದು. ಕಛೇರಿಗೊ ಕೋರ್ಟಿಗೊ ಶಿವಮೊಗ್ಗೆಗೆ ಹೋಗಿ ಬರುತ್ತಿದ್ದ ಊರ ಹಿರಿಯರು ಗೌಡರ ಸಾಹಸಗಳನ್ನು ವರ್ಣಿಸುತ್ತಿದ್ದರು. ಗೌಡರ ಹುಡುಗನಾದರೂ ‘ಸಶಷ’ ಚೆನ್ನಾಗಿ ಉಚ್ಚರಿಸುತ್ತಾನೆಂದು : ಚೆನ್ನಾಗಿ ಮಾತಾಡುತ್ತಾನೆಂದು ; ಈಗ ಗಾಂಧಿ ಟೋಪಿಯಲ್ಲಿ ಪ್ರತ್ಯಕ್ಷನಾಗಿ ಪೋಲೀಸರು ಹಾಜರಾಗುವುದರೊಳಗೆ ಪೇಟದಲ್ಲಿ ಮಾಯವಾಗುತ್ತಾನೆಂದು ; ಶಿವಮೊಗ್ಗೆಯ ತುಂಬ ಇವನ ಹೆಸರೆಂದು- ಇತ್ಯಾದಿ, ಇತ್ಯಾದಿ. ನಮ್ಮೂರ ಮಡಿವಂತರಿಗೆಲ್ಲ ಅತ್ಯಂತ ನೋವಿನ ಸಮಸ್ಯೆಯಾಗಿದ್ದ ಕಾಳಿಂಗಯ್ಯನ ರಾಘವೇಂದ್ರರಾಯರ ಶಿಷ್ಯ ಈ ಗೋಪಾಲ ಗೌಡರೆಂದು ತಿಳಿದಾಗ ಬಂಡಾಯಕ್ಕಾಗಿ ಹಾತೊರೆಯುತ್ತಿದ್ದ ನನಗೆ ಇವರು ಕುತೂಹಲದ ವ್ಯಕ್ತಿಯಾದರು. ಅಗ್ರಹಾರದ ಕಟ್ಟುನಿಟ್ಟಿನ ಆಚೆಗಿನ ಲೋಕ ನನಗೆ ದಿಗಿಲು ಹುಟ್ಟಿಸುತ್ತಿತ್ತು ; ಆದರೆ ಮೋಹಕವಾಗಿ ಕರೆಯುತ್ತಿತ್ತು. ಕಟ್ಟು ಕಟ್ಟಳೆಗಳಲ್ಲಿ ಸಿಕ್ಕಿಬಿದ್ದ ಅಗ್ರಹಾರದವರಿಗೆ ಈ ಸ್ವಾತಂತ್ರ್ಯ ಚಳುವಳಿಯ ಮನೆ ಮಠ ಬಿಟ್ಟ ಜನ ಪೋಕರಿಗಳಾಗಿ ಕಾಣುತ್ತಿದ್ದರು. ಆದರೆ ಅವರ ಬದುಕಿನ ನಿರಂಬಳತೆ ನನ್ನನ್ನು ಆಕರ್ಷಿಸಿತ್ತು. ಎಲ್ಲ ಮರ್ಯಾದೆಗಳನ್ನೂ ಮೀರಿ, ಎಲ್ಲೋ ಮಲಗಿ, ಎಲ್ಲೋ ಉಂಡು, ಎಲ್ಲೊ ಕೂತು ಕಾಲ ಕಳೆಯುತ್ತ, ಗಾಂಧಿ ಕರದಾಗ ಜೈಲಿಗೆ ಹೋಗುತ್ತ, ಸರ್ವಸ್ವವನ್ನೂ ಪ್ರಶ್ನಿಸುತ್ತ ಬದುಕುತ್ತಿದ್ದ ಕಾಳಿಂಗಯ್ಯನ ರಾಘವೇಂದ್ರರಾಯರ ಸುತ್ತಲಿನ ಯುವಕರು ಹೊಸಲೋಕವ ಬೈರಾಗಿಗಳಂತೆ ನನಗೆ ಕಾಣುತ್ತಿದ್ದರು. ಭರ್ಜರಿ ಮೀಸೆ ಬಿಟ್ಟು ಖಾದಿ ಧರಿಸಿ ಯಾರಿಗೂ ಹೆದರದೆ ಅಡ್ಡಾಡಿಕೊಂಡಿದ್ದ ರಾಘವೇಂದ್ರರಾಯರ ಬದುಕಿನ ಕ್ರಮವೇ, ಪ್ರಾಪಂಚಿಕ ಮೋಹಗಳಿಗೆ ಸಿಕ್ಕಿಬೀಳದೆ ಸ್ವಾತಂತ್ರ್ಯದ ಕನಸು ಕಾಣುವ ಅವರ ನಿರ್ಲಿಪ್ತ ಜೀವನವೇ ತೀರ್ಥಹಳ್ಳಿಯ ಯುವಕರನ್ನು ಅಯಸ್ಕಾಂತದಂತೆ ಆ ಮುದುಕನ ಸುತ್ತ ಹಿಡಿದಿಟ್ಟಿತ್ತು. ಅವರ ಸುತ್ತ ಬೆಳೆದ ಯುವಕರಲ್ಲಿ ಗೌಡರು ಪ್ರಮುಖರೆನ್ನಬಹುದು.
ಗೌಡರನ್ನು ನಾನು ಮೊದಲು ನೋಡಿದ್ದು ನಮ್ಮ ಆಗ್ರಹಾರಕ್ಕೆ ಅವರು ಸದಾಶಿವರಾಯರ ಜೊತೆ ಸಮಾಜವಾದಿ ಸಮ್ಮೇಳನಕ್ಕೆ ದುಡ್ಡೆತ್ತಲು ಬಂದಾಗ. ಸ್ವಾತಂತ್ರ್ಯ ಚಳುವಳಿಯಲ್ಲಿ ಆಸ್ತಿ ಪಾಸ್ತಿ ಕಳೆದುಕೊಂಡು ಜಮೀಂದಾರರ ತಿರಸ್ಕಾರಕ್ಕೆ ಆದರೆ ಯುವಕರ ಮೆಚ್ಚಿಗೆಗೆ ಪಾತ್ರರಾದ ಇವರಿಗೇನು ಹುಚ್ಚು ಹಿಡಿದಿದೆಯೋ ಎಂದು ಮಧ್ಯಮ ವರ್ಗದವರಿಗೆ ಆಶ್ಚರ್ಯ ಹುಟ್ಟಿಸಿದ್ದ ಇನ್ನೊಬ್ಬ ವ್ಯಕ್ತಿ ಈ ಸದಾಶಿವ ರಾಯರು. ಇವರು ಆಗ್ರಹಾರಕ್ಕೆ ಬಂದಾಗ ಮಧ್ಯಾಹ್ನ ; ಮಠದಲ್ಲಿ ಊಟದ ಹೊತ್ತು. ಇವರ ಜೊತೆ ಇನ್ನೂ ಇಬ್ಬರೊ, ಮೂವರೊ ಇದ್ದರು- ಯಾರುಯಾರು ನೆನಪಿಲ್ಲ. ಗೌಡರು ಮಠದ ಏಜೆಂಟರನ್ನು ತಮಗೆ ವಿಶಿಷ್ಟವಾದ ಐರನಿಯಲ್ಲಿ ಹಾಸ್ಯ ಮಾಡುತ್ತ ಸಮ್ಮೇಳನಕ್ಕೆ ಹಣ ಕೇಳಿದರು. ಚಂದಾ ಎತ್ತಲು ಬಂದವರೊಬ್ಬರು ಹೀಗೆ ನಿಧಾನವಾಗಿ ಮಾತಾಡುವುದು, ಜೊರಾಗಿ ಮಾತಾಡುವುದು, ಸಂಸ್ಥಾನಿಕರನ್ನು ಚುಡಾಯಿಸುವುದು -ನನಗೆ ಹೊಸದು. ಎಷ್ಟು ಸಿಕ್ಕಿತೊ, ಸಿಗಲಿಲ್ಲವೊ ಮರೆತಿದೆ. ಆದರೆ ಮಾತ್ರ ನನ್ನನ್ನು ವೈಯಕ್ತಿಕವಾಗಿ ಅತ್ಯಂತ ಕಟುವಾದ ಮುಜುಗರಕ್ಕೆ ಒಳಪಡಿಸಿದ ಅವತ್ತಿನ ಒಂದು ಘಟನೆ-ಆಗ ನಾನಿನ್ನೂ ಎಳೆಯ-ಮರೆಯಲಾರೆ. ಜಾತಿಪದ್ದತಿ ತಪ್ಪು ಇತ್ಯಾದಿ ನನಗೆ ಗೊತ್ತಿತ್ತು. ಆದರೆ ಅದು ನಮ್ಮನ್ನು ಎಲ್ಲಿ ಕುಬ್ಬವಾಗಿಸುತ್ತೆ, ಉತ್ತಮ ವೆನಿಸಿಕೊಂಡವನಿಗೆ ತನ್ನ ಬಗ್ಗೆಯೇ ಹೇಸಿಗೆಯಾಗುವಂತೆ ಮಾಡುತ್ತೆ ಎಂಬುದು ನನಗೆ ತೀವ್ರವಾಗಿ ತಟ್ಟಿದ್ದು ಅವತ್ತು. ಔದಾರ್ಯ, ಅತಿಥಿಸತ್ಕಾರಗಳ ಪರಂಪರೆ ನಮ್ಮದಲ್ಲವೆ ? ಇದು ನಿಜವೂ ಹೌದು. ಎಲ್ಲರನ್ನೂ ಊಟಕ್ಕೇಳಿ ಎಂದು ಏಜೆಂಟರು ಉಪಚಾರ ಹೇಳಿದರು. ಆದರೆ ಎಲ್ಲರ ತಲೆಯನ್ನೂ ಕಾಡುತ್ತಿದ್ದ ಒಂದು ಅಬ್ಸರ್ಡ್ ಸಮಸ್ಯೆ ಉಪಚಾರದ ನಾಟಕ ನೋಡುತ್ತ ನಿಂತ್ತಿದ್ದ ನನಗೆ ಹೊಳೆದುಬಿಟ್ಟಿತು. ಅತಿಥಿಗಳಲ್ಲಿ ಒಬ್ಬರು ಗೌಡರು, ಉಳಿದವರು ಬ್ರಾಹ್ಮಣರು. ಎಲ್ಲಿ, ಹೇಗೆ ಇವರಿಗೆ ಊಟ ಹಾಕುವುದು ? ಗೌಡರ ಜೊತೆ ಬಂದ ಸಮಾಜವಾದಿ ಬ್ರಾಹ್ಮಣರು ಜಾತಿ ಕೆಟ್ಟವರಿರಬಹುದು. ಆದರೆ ಕಂಡೂ ಕಂಡೂ ಮಠದವರೇ ಎಲ್ಲರಿಗೂ ಒಟ್ಟಿಗೆ ಊಟ ಹಾಕುವುದು, ವರ್ಣಸಂಕರವನ್ನು ಪ್ರೋತ್ಸಾಹಿಸುವುದು ಸಾಧ್ಯವೆ ? ಸಾಧುವೆ ? ಕಾಳ್ಗಿಚ್ಚಿನಂತೆ ಈ ಸುದ್ದಿ ಬೇರೆ ಕಡೆಗಳಲ್ಲಿ ಹರಡದೆ ಇದ್ದೀತೆ ? ಯಾರೂ ಈ ಬಗ್ಗೆ ಚಕಾರವೆತ್ತದಿದ್ದರೂ ಉಪಚಾರದ ಸುಳ್ಳು ಒತ್ತಾಯದಲ್ಲಿ, ಕೊನೆಗೆ ಕಾಫಿಯನ್ನಾದರೂ ಕುಡಿಯಿರಿ ಎನ್ನುವ ಒಪ್ಪಂದದಲ್ಲಿ ಈ ಧರ್ಮಯುದ್ಧ ಪರ‍್ಯಾವಸಾನವಾಯಿತು. ಈಗ ಕಾಲ ಬದಲಾಯಿಸಿದೆ. ಜಾತಿಗೆಟ್ಟ ಲೌಕಿಕ ಬ್ರಾಹ್ಮಣರಿಗೂ ನವಬ್ರಾಹ್ಮಣರಾದ ಶೂದ್ರರಿಗೂ ಒಟ್ಟಿಗೇ ಊಟ ಬಡಿಸುವುದು. ಇದರಿಂದ ಕಂಗಾಲಾಗದಿರುವುದು, ಸ್ವಾಮಿಗಳು ಹರಿಜನ ಕೇರಿಗೂ ಹೋಗಿ ನಂತರ ಪಂಚಗವ್ಯ ತೆಗೆದುಕೊಳ್ಳುವುದು-ಈಗ ಎಲ್ಲರಿಗೂ ಒಗ್ಗಿದೆ.
ನಾನು ಆವತ್ತು ಗೌಡರನ್ನು ಏನು ಕೇಳಿದೆ ಮರೆತಿದೆ. ಆದರೆ ಊಟದ ಈ ಗೊಂದಲದಲ್ಲಿ ಜಾತಿ ಸಮಸ್ಯೆಯ ಎಲ್ಲಾ ನೋವನ್ನೂ ನಾನು ಅನುಭವಿಸಲು ಕಾರಣ ನನ್ನ ಎದುರಿಗೆ ಕೂತಿದ್ದ ಗೋಪಾಲ ಗೌಡರ ಮೌನ. ಬಿಳಿ ಜುಬ್ಬ ಕಚ್ಚೆಪಂಚೆ ಧರಿಸಿ, ತಲೆಗೂದಲನ್ನು ನೀಟಾಗಿ ಮೇಲಕ್ಕೆ ಬಾಚಿ, ಸಪುರಾಗಿ, ಎತ್ತರವಾಗಿ, ಗಂಭೀರವಾಗಿ ನಿಜವಾದ ಅರಿಸ್ಟೋಕ್ರಾಟ್‌ನಂತೆ ನನಗೆ ಕಂಡ ಗೋಪಾಲ ಗೌಡರ ಅಂತರಂಗಕ್ಕೆ ಬ್ರಾಹ್ಮಣ್ಯದ ಈ ಪೆದ್ದುತನ ಹೇಗೆ ಕಾಣಿಸಿರಬಹುದು. ಅವರಿಗೆ ಅವಮಾನವಾಗುತ್ತಿದೆಯಲ್ಲ ಎಂದು, ಹೀಗೆ ಅವಮಾನ ಮಾಡುವುದು ಸಹ್ಯವಾಗುವಂಥ ಪರಂಪರೆ ನಮ್ಮದಲ್ಲವೆ ಎಂದು ನಾನು ತುಂಬ ಒದ್ದಾಡಿದೆ. ಆದರೆ ಗೌಡರಿಗೆ ಇದರಿಂದೆಲ್ಲ ಕಹಿಯಾಗದಂಥ ಸಮಾಜದೃಷ್ಟಿಯಿದೆ ಎಂಬುದು ಕ್ರಮೇಣ ನನಗೆ ಗೊತ್ತಾಯಿತು. ಎಲ್ಲವನ್ನೂ ಹಾಸ್ಯದಿಂದ ನೋಡಬಲ್ಲ, ಸಾಕ್ಷಿಯಾಗಿ ಭಾಗಿಯಾಗಿ ಒಟ್ಟಿಗೆ ಅನುಭವಿಸಬಲ್ಲ ನಿರ್ಲಿಪ್ತತೆ ಇಲ್ಲದಿದ್ದರೆ ಇವರು ಜನನಾಯಕರಾಗುತ್ತಿರಲಿಲ್ಲ. ಬ್ರಾಹ್ಮಣ ಶೂದ್ರ ಎಲ್ಲ ಜಾತಿಯ ಬಡವರ ನಾಯಕ ಗೋಪಾಲಗೌಡರಾಗಲು ಕಾರಣ ಇವರಿಗಿರುವ ವ್ಯಕ್ತಿ ದೂರವಾದ ಐತಿಹಾಸಿಕ ದೃಷ್ಟಿ. ವೈಯಕ್ತಿಕವಾಗಿ ಹೇಳುವುದಾದರೆ ಈ ಪ್ರಥಮ ಭೇಟಿಯಾದಂದಿನಿಂದ -ಸುಮಾರು ಇಪ್ಪತ್ತೆರಡು ವರ್ಷಗಳ ಹಿಂದಿನ ಮಾತಿದು- ಇವತ್ತಿನವರೆಗೂ ಗೌಡರು ನನ್ನ ಜೀವನದಲ್ಲಿ ಬೆಳೆಯುತ್ತ, ನನ್ನ ಅನುಭವಗಳನ್ನು ವಿಸ್ತರಿಸುತ್ತ, ನನ್ನ ವಿಮರ್ಶಾತ್ಮಕ ಅನುಮಾನಗಳನ್ನೆಲ್ಲ ದಾಟಿ ತನ್ನ ವ್ಯಕ್ತಿತ್ವದ ಹೊಸ ಮಗ್ಗುಲುಗಳನ್ನು ತೋರಿಸುತ್ತ ನನಗೆ ಅತ್ಯಂತ ಪ್ರಿಯವಾದವರಲ್ಲಿ ಒಬ್ಬರಾಗಿ ಉಳಿದಿದ್ದಾರೆ. ಸಭೆಯ ಗೊಂದಲದಲ್ಲಿ ನಾನು ಇವರನ್ನು ನೋಡಿದ್ದೇನೆ ; ಚುನಾವಣೆ, ಮೆರವಣಿಗೆ, ಅಸೆಂಬ್ಲಿಯ ಹುಮ್ಮಸ್ಸು ಬಿಸಿಗಳಲ್ಲಿ ನಾನು ಇವರನ್ನು ಕಂಡಿದ್ದೇನೆ-ಆದರೆ ಎಂದೂ ಸಂತೆಯ ಮನೋಭಾವ ಇವರನ್ನು ಆಕ್ರಮಿಸಿದ್ದಿಲ್ಲ. ಸದಾ ಜನದ ಮಧ್ಯ ಬದುಕುವ ಇವರು ಎಷ್ಟು ರಗಳೆ ಹಚ್ಚಿಕೊಂಡಿದ್ದಾಗಲೂ ಏಕಾಂಗಿಯಾದ ಆಪ್ತವ್ಯಕ್ತಿ ಗೋಪಾಲನಾಗಿ ನನಗೆ ಸಿಗುತ್ತಲೇ ಉಳಿದಿದ್ದಾರೆ.
* * * *
ಶಿವಮೊಗ್ಗೆಗೆ ನಾನು ಓದಲು ಬರುವ ಹೊತ್ತಿಗೆ ಗೌಡರು ಅತ್ಯಂತ ವಿವಾದಾಸ್ಪದ ವ್ಯಕ್ತಿಯಾಗಿದ್ದರು. ತೀರ್ಥಹಳ್ಳಿ ಹೈಸ್ಕೂಲಿನಲ್ಲಿ ಗಣಪತಿ ಉತ್ಸವಕ್ಕೆ ಮಾತಾಡಲು ಕರೆದರೆ ಈ ವ್ಯಕ್ತಿ ನಿರೀಶ್ವರ ವಾದವನ್ನು ಸ್ಕೂಲಿನ ಹುಡುಗರಿಗೆ ಬೋಧಿಸಿದರೆಂದು ಬ್ರಾಹ್ಮಣ ಶೂದ್ರರೆಲ್ಲರ ಕೋಪಕ್ಕೆ ಇವರು ತುತ್ತಾದದ್ದು ನನಗಿನ್ನೂ ನೆನಪಿದೆ. ಶಿವಮೊಗ್ಗೆಯ ಒಕ್ಕಲಿಗರ ವಿದ್ಯಾರ್ಥಿ ನಿಲಯದ ಮಹಡಿಯ ಮೇಲೆ ಇವರದೊಂದು ರೂಮು. ಸಿಗರೇಟು ಸೇದುತ್ತ, ಓದುತ್ತ, ಸಮಾಜವಾದದ ಬಗ್ಗೆ ಹರಟುತ್ತ, ಎಷ್ಟು ಆತ್ಮೀಯವಾಗಿ ಬೆರೆತರೂ ಸ್ವಲ್ಪ ದೂರದಲ್ಲಿ ಉಳಿಯುತ್ತಿದ್ದ ಗೌಡರು ನನಗೆ ಸಂದಿಗ್ಧರಾದರು. ಆ ಕಾಲದಲ್ಲಿ ಗೌಡರು ನನಗೆ ಪ್ರಿಯವಾದದ್ದು ನಮ್ಮಿಬ್ಬರಿಗೂ ಸಾಮಾನ್ಯ ವಾದ ಸಾಹಿತ್ಯದ ಆಸಕ್ತಿಯಿಂದಾಗಿ, ಕುಮಾರವ್ಯಾಸ, ಲಕ್ಷ್ಮೀಶ, ಬೇಂದ್ರೆ, ಕುವೆಂಪು -ಇವರ ಕಾವ್ಯದಲ್ಲಿ ಗೌಡರಿಗೆ ಆಗ ಅಪಾರವಾದ ಆಸಕ್ತಿಯಿತ್ತು. ಕಾವ್ಯವನ್ನು ಇವರು ತುಂಬ ಭಾವಪೂರ್ಣವಾಗಿ ಪಠಿಸುತ್ತಾರೆ, ಹಾಡುತ್ತಾರೆ, ವ್ಯಾಖ್ಯಾನಿಸುತ್ತಾರೆ. ಬೇಂದ್ರೆಯವರ ‘ಅನ್ನದೇವರು’, ‘ಕುರುಡು ಕಾಂಚಾಣ’, ಕುವೆಂಪುರವರ ‘ನೀನಂದು ಕನಕ ರಥವು ತಂದು’ ಎನ್ನುವ ಪದ್ಯ-ಥಟ್ಟನೆ ನೆನಪಿಗೆ ಬರುವ ಪದ್ಯಗಳು ಇವು-ನಮ್ಮ ಅನುಭವಕ್ಕೆ ಬಂದದ್ದು ಇವರ ಮೂಲಕ. ಅನೇಕ ಪದ್ಯಗಳನ್ನು ನಾನು ಮತ್ತೆ ಓದುವಾಗೆಲ್ಲ ಗೌಡರು ಹಿಂದೊಮ್ಮೆ ಅವನ್ನು ಓದಿದ ಹೊತ್ತು, ಸಂದರ್ಭ, ಅವರ ಓದುವಿಕೆಯ ಭಾವಪೂರ್ಣ ಗತ್ತು ಈಗಲೂ ನನಗೆ ನೆನಪಾಗುತ್ತವೆ. ಇವರ ಸಂವೇದನೆ ಸಾಹಿತ್ಯದಲ್ಲೂ ಗಾಢವಾದ್ದನ್ನು ಸಾಧಿಸುತ್ತಿತ್ತಂದು ನನ್ನ ಬಲವಾದ ನಂಬಿಕೆ. ಮಲೆನಾಡಿನ ರೈತರ ಜೀವನವನ್ನು ಇವರು ಸ್ನೇಹಿತರಿಗೆ ವಿವರಿಸುವಾಗ, ಇವರ ವರ್ಣನೆಯ ಕ್ರಮ, ದುರಂತವನ್ನು ಐರನಿಯಲ್ಲಿ ದಟ್ಟಗೊಳಿಸುವ ಧಾಟಿ, ಹಳ್ಳಿಯವರ ಮಾತಿನ ರಾಗ ರಂಗುಗಳನ್ನು ಹಿಡಿದು ಹೇಳಬಲ್ಲ ಇವರ ಠಿವಿ, ವಿಶಿಷ್ಟ ಅರ್ಥಪೂರ್ಣ ವಿವರವನ್ನು ಕಾಣುವ ಕಣ್ಣು, ತಾನು ಹೇಳಬೇಕಾದ ಅಮೂರ್ತ ವಿಷಯವನ್ನು ಗಾದೆಗಳಲ್ಲಿ, ಜೀವನ ಸಂದರ್ಭದ ವಿವರಗಳಲ್ಲಿ ಇವರು ಕಾಣಿಸುವ ರೀತಿ, ಎಲ್ಲಕ್ಕಿಂತ ಹೆಚ್ಚಾಗಿ ಇವರ ಹಾಸ್ಯದೃಷ್ಟಿ- ಪ್ರಥಮ ದರ್ಜೆಯ ಕಾದಂಬರಿಕಾರನದು.
ಯಾವ ವಿಷಯವನ್ನಾಗಲಿ -ರಾಜಕೀಯ ತತ್ವವಿರಲಿ ಸಾಹಿತ್ಯವಿರಲಿ- ಫ್ರೆಶ್‌ ಆಗಿ ಗೌಡರು ನೋಡಬಲ್ಲರು. ಕೆಲವು ವರ್ಷಗಳ ಕೆಳಗೆ ಗತಿಸಿದ ನಮ್ಮ ಸಮಾಜವಾದಿ ಮಿತ್ರ ನಾಗಭೂಷಣರ ಸ್ಮರಣೆಗಾಗಿ ಹಣ ಒಟ್ಟುಮಾಡಬೇಕೆಂದು ಮೈಸೂರಲ್ಲಿ ಒಂದು ಕವಿಸಮ್ಮೇಳನ ನಡೆಯಿತು. ಗೌಡರು ಅದರ ಅಧ್ಯಕ್ಷತೆ ವಹಿಸಿದ್ದರು. ನವ್ಯ ಕಾವ್ಯ, ಅಡಿಗರ ಕವನಗಳ ಬಗ್ಗೆ ಕೊನೆಯಲ್ಲಿ ಮಾತಾಡಿದರು. ನಾವೆಲ್ಲ ಉಪಯೋಗಿಸುವ ಒಂದೇ ಒಂದು ಸಾಹಿತ್ಯ ವಿಮರ್ಶಯ ಕ್ಷೀಶೆಯೂ ಅವರ ಮಾತನಲ್ಲಿರಲಿಲ್ಲ. ಆದರೆ ತನ್ನ ಅಂತರಂಗ ಜೀವನ, ಹೊರಗಿನ ರಾಜಕೀಯ, ಈ ಒಳ ಹೊರಗಿನ ತಿಕ್ಕಾಟದಲ್ಲಿರುವ ತನ್ನ ಮನಸ್ಸು ಈ ಹೊಸ ಕಾವ್ಯದ ತಿರುವು ಮುರುವುಗಳಲ್ಲಿ ಓಡಾಡಿ ಪಟ್ಟ ಅನುಭವ -ಎಲ್ಲವನ್ನೂ ಒಂದಕ್ಕೊಂದು ಹೆಣೆದು ಎಷ್ಟು ಚೆನ್ನಾಗಿ ಮಾತಾಡಿದರೆಂದರೆ ನಮ್ಮಲ್ಲಿ ಅನೇಕರಿಗೆ ನಾವು ಎಷ್ಟೋ ಸಾರಿ ಓದಿದ ಅಡಿಗರನ್ನು ಮತ್ತೆ ಹೊಸ ಕಣ್ಣಿಂದ ನೋಡಿದ ಅನುಭವ ಅವತ್ತು ಆಯಿತು. ನಾನು ಏನೇ ಹೊಸದನ್ನು ಓದಲಿ ಗೌಡರಿಗೆ ಅದನ್ನು ವಿವರಿಸುವ ತನಕ ನನಗೆ ಸಮಾಧಾನವಿಲ್ಲ. ಗೌಡರ ಮನಸ್ಸನ್ನು ಒಂದು ಹೊಸ ವಿಚಾರ ಹೊಕ್ಕು ಹೊರಗೆ ಬರುವಾಗ ಪಡೆಯುವ ನವ್ಯರೂಪ, ಅವರ ನುಡಿಕಟ್ಟಿನಲ್ಲಿ ಈ ವಿಚಾರ ಹೊಳೆಯಿಸುವ ತನ್ನ ಇನ್ನೊಂದು ಮಗ್ಗಲ ನನಗೆ ಯಾವಾಗಲೂ ಆಶ್ಚರ್ಯದ ಅನುಭವ. ಇದಕ್ಕೆ ಕಾರಣ ರೈತರ ನುಡಿಕಟ್ಟುಗಳಲ್ಲಿ, ಅನುಭವದ ವಿವರಗಳಲ್ಲಿ ಗೌಡರ ಸಂವೇದನೆ ಬೇರುಬಿಟ್ಟಿರುವುದು : ಎಲ್ಲವನ್ನೂ ಸ್ವಂತಕ್ಕೆ ಅನ್ವಯಿಸಿಕೊಳ್ಳಬೇಕೆಂಬ ಎಚ್ಚರದ ಕೌತುಕವನ್ನು ಇವರು ಯಾವತ್ತೂ ಬಿಟ್ಟುಕೊಡದಿರುವುದು. ಅಮೂರ್ತವಾದ್ದು ದೊಡ್ಡ ಸತ್ಯವೆಂದಾಗಲಿ, ಮೂರ್ತವಾದ ವಿವರ ಕೀಳೆಂದಾಗಲೀ ಗೌಡರಿಗೆ ಅನ್ನಿಸದೇ ಇರುವುದರಿಂದ ಸಮಾಜವಾದದ ಐತಿಹಾಸಿಕ ದೃಷ್ಟಿಯನ್ನೂ ಗೊಬ್ಬರವನ್ನು ತಲೆಯಮೇಲೆ ಹೊತ್ತು ಕೆಸರು ಮಣ್ಣನ್ನು ತುಳಿದು ನಡೆಯುವ ರೈತನೊಬ್ಬನ ಭಾಷೆಯಲ್ಲಿ ದಕ್ಕಿಸಿಕೊಳ್ಳಲು ಇವರು ಸದಾ ಪ್ರಯತ್ನಿಸುತ್ತಲೇ ಇರುತ್ತಾರೆ.
* * * *
ವಾಸ್ತವ ಸತ್ಯವನ್ನು ಬದಲಾಯಿಸಬೇಕೆನ್ನುವ ರಾಜಕೀಯ ಆತುರದ ಜೊತೆಗೆ, ಜೀವನವನ್ನು ಇದ್ದ ಹಾಗೇ ಅರಿಯಬೇಕೆನ್ನುವ ನಿರ್ಲಿಪ್ತದೃಷ್ಟಿ ರಾಜಕಾರಣಿಗಳಲ್ಲಿ ಸಾಮಾನ್ಯವಾಗಿ ಕಾಣುವುದಿಲ್ಲ. ಕಮ್ಯುನಿಸ್ಟರು ಆತುರದ ಜನ ; ಅವರಿಗೆ ಸಾಂಸಾರಿಕನ ಸಾಮಾನ್ಯ ದಿನಚರಿಗಳಲ್ಲಿ ವ್ಯಕ್ತವಾಗುವ ಸತ್ಯ ಕಾಣುವುದಿಲ್ಲ. ಊಟ, ಉಪಚಾರ, ಹಬ್ಬಕ್ಕೆ ಹೊಲಿಸುವ ಬಟ್ಟೆ, ಜಾತ್ರೆಯ ಗೌಜು, ಮಕ್ಕಳನ್ನು ಸಾಕುವ ಗೋಳು, ಸಣ್ಣ ವಿಷಯಗಳಲ್ಲಿ ನಿತ್ಯ ಸಿಗುವ ಸುಖ, ಸಂಸಾರಿಯಾದ ಹೆಣ್ಣು ನಿತ್ಯ ಯೋಚಿಸುವ ವಿಷಯಗಳು- ಇವೂ ಜೀವನ. ಬಹಳ ಜನರ ಜೀವನ ಇಂಥ ಸಾಮಾನ್ಯದಲ್ಲೂ ಸಫಲತೆ ಕಂಡುಕೊಳ್ಳುತ್ತದೆ. ಕನ್ಸರ‍್ವೇಟಿವ್‌ ಜನರಿಗೆ ಜೀವನದ ಈ ವಾಸ್ತವ ಕಾಣಿಸುತ್ತದೆ ; ಆದರೆ ಇವುಗಳನ್ನು ಸೀಳಿಕೊಂಡು ಬರಬೇಕೆನ್ನುವ ಒಳಗಿನ ಕಸಿವಿಸಿ ಕಾಣಿಸುವುದಿಲ್ಲ. ಪ್ರಜಾತಂತ್ರಕ್ಕೂ, ಸಮಾಜಕ್ರಾಂತಿಗೂ ಒಟ್ಟಿಗೇ ಗಂಟುಬಿದ್ದ ಲೋಹಿಯಾ ತತ್ವಕ್ಕೆ ರೈತರ ನಡುವ ಬೆಳೆದ ಗೌಡರಂಥವರು ಆಕರ್ಷಿತರಾಗುವುದು ನನಗೆ ತುಂಬ ಮುಖ್ಯ ವಿಷಯ ವೆನ್ನಿಸುತ್ತದೆ. ಜೀವನದ ದಿನನಿತ್ಯದ ನಿಜಕ್ಕೂ, ಬದಲಾವಣೆಯ ಆತುರಕ್ಕೂ ಒಟ್ಟಿಗೇ ಸ್ಪಂದಿಸಬಲ್ಲ ಗೌಡರಿಗೆ ಚಿಕ್ಕಂದಿನಿಂದಲೂ ತನ್ನ ಸ್ವಭಾವದ ಜನರೇ ಗಂಟುಬಿದ್ದಿರುವುದೂ ಕುತೂಹಲದ ಸಂಗತಿಯಾಗಿದೆ. ಇವರಿಗೆ ಶಾಸ್ತ್ರಿ ಎನ್ನುವ ಹಿರಿಯರೊಬ್ಬು ಸ್ನೇಹಿತರಿದ್ದರು. ಕೆಸೆಂಡ್ರಾನಂತೆ ಭವಿಷ್ಯವನ್ನು ಅರಿಯುವ ಶಕ್ತಿ ಪಡೆದಿದ್ದ ಈ ಅಲೆಮಾರಿ ಅತ್ಯಂತ ವಿಚಿತ್ರ, ಮೋಹಕ ವ್ಯಕ್ತಿ. ಅವರ ಜೀವನ ಒಂದು ಪುರಾಣವೇ ಸರಿ. ಸಂಸ್ಕೃತ ಸಂಗೀತಗಳಲ್ಲಿ ಪಂಡಿತರಾಗಿದ್ದ ಇವರು ಗೌಡರ ಮೇಲೆ ಪ್ರಭಾವ ಬೀರಿರಬೇಕು. ಗೋಲ್ಡ್‌ಸ್ಮಿತ್‌ನನ್ನು ನೆನಪಿಗೆ ತರುವ ಔದಾರ್ಯ ಇವರದು. ಇವರು ಹಾಕಿದ ಕೋಟನ್ನು ಯಾರೋ ಕೇಳಿದಾಗ ಸ್ವಲ್ಪ ತಾಳು ಎಂದು ಅದನ್ನು ಒಗೆಸಿ, ಇಸ್ಮಿ ಮಾಡಿಸಿ ಕೊಟ್ಟದ್ದನ್ನು ನಾನೇ ನೋಡಿದ್ದೇನೆ. ಈ ವಿರಾಗಿ ನಿಜವಾದ ಹಿಪ್ಪಿ. ಒಮ್ಮೆ ನಾನೂ ಲಂಕೇಶ್ ಜೊತೆಯಲ್ಲಿದ್ದಾಗ, ಗೌಡರು ಶಾಸ್ತ್ರಿಗಳ ಅದ್ಭುತವಾದ ಜೀವನವನ್ನು ನಮಗೆ ವರ್ಣಿಸಿದರು. ಒಂದು ಸಾಹಿತ್ಯಕೃತಿಯನ್ನು ಓದಿದ ಅನುಭವ ಆ ದಿನ ನನಗೆ ಆಯಿತು. ಶಾಸ್ತ್ರಿಗಳಂತೆಯೇ ನಾನು ಹಿಂದೆಯೇ ಹೇಳಿವ ರಾಘವೇಂದ್ರರಾಯರೂ ಸಹ ಒಬ್ಬ ‘ಬೈರಾಗಿ’. ಶಾಸ್ತ್ರಿ ಮತ್ತು ರಾಘವೇಂದ್ರರಾಯರಂಥ ಆಥೆಂಟಿಕ್ ಮನುಷ್ಯರ ಜೊತೆ ಬೆಳೆದ ಗೌಡರು ತನ್ನ ಆಚಾರ ವಿಚಾರಗಳಲ್ಲಿ ಏಕಸೂತ್ರ ಸಾಧಿಸಲು ಜೀವನದುದ್ದಕ್ಕೂ ಪ್ರಯತ್ನಿಸುತ್ತ ಬಂದಿರುವುದು ಆಶ್ಚರ್ಯವಲ್ಲ. ಮುಂದೆ ಅಶೋಕ ಮೆಹ್ತಾರಂಥವರ ಸುಲಭ ಸಮಾಜವಾದದ ಸಲೀಸು ರಾಜಕಾರಣ ಬಿಟ್ಟು ಲೋಹಿಯಾ ಶಿಷ್ಯರಾದ ಆಶ್ಚರ್ಯವಲ್ಲ. ಒಂದು ಉದ್ದೇಶದ ಬೆನ್ನು ಹತ್ತಿ ಹೊರಟ ಹುಚ್ಚರೆಲ್ಲರೂ ಯಾವುದೋ ಆಕಸ್ಮಿಕದಿಂದ ಎಂಬಂತೆ ತಾವು ಓದಲೇಬೇಕಾದ್ದನ್ನು ಓದುತ್ತಾರೆ, ಸಂಧಿಸಲೇಬೇಕಾದ ಮನುಷ್ಯರನ್ನು ಸಂಧಿಸುತ್ತಾರೆ ಎಂದು ಏಟ್ಸ್ ಹೇಳಿದ್ದು ನಿಜವೆನ್ನಿಸುತ್ತದೆ.
ಕುಮಾರವ್ಯಾಸನನ್ನು ಸೊಗಸಾಗಿ ವಾಚಿಸುತ್ತಿದ್ದ ಈ ಹುಡುಗ ಆರಗದ ಪೋಸ್ಟ್‌ಮನ್ ಒಬ್ಬರ ಮಗ. ತಂದೆಯ ನಿಯಮ ನೀತಿ, ಮನೆಗೆ ಅವರು ತರುತ್ತಿದ್ದ ಪತ್ರಿಕೆಗಳು, ಅವುಗಳನ್ನು ತಾನು ಓದುತ್ತಿದ್ದುದು-ತನ್ನ ಸಣ್ಣ ಪ್ರಪಂಚದಲ್ಲಿ ಹೊರಗಿನ ಜಗತ್ತು ಅರಳುತ್ತಿದ್ದುದು- ಎಲ್ಲವನ್ನೂ ಈಚೆಗೆ ಗೌಡರು ವರ್ಣಿಸಿ ಬರೆದಿದ್ದಾರೆ. ದನ ಕಾದುಕೊಂಡು, ಬೀಡಿ ಕಟ್ಟಿಕೊಂಡು ಇದ್ದ ಈ ಹುಡುಗ ಸಾಹಿತ್ಯ ಸಂಗೀತಗಳಲ್ಲಿ ಆಸಕ್ತರಾಗಿದ್ದ ಶಾಸ್ತ್ರಿಗಳ ಕಣ್ಣಿಗೆ ಬಿದ್ದ. ಪಕ್ಕಾ ವಿಜ್ಞಾನ ದೃಷ್ಟಿಯುಳ್ಳ ಗೋಪಾಲ ಗೌಡರೂ ಈ ಶಾಸ್ತ್ರಿಗಳ ಭವಿಷ್ಯಜ್ಞಾನದ ಬಗ್ಗೆ ಬೆರಗಿನಿಂದ ಮಾತಾಡುತ್ತಾರೆ. ಆದರೆ ಈ ಬಗ್ಗೆ ನಾನು ಉದಾಸೀನ. ಗೌಡರ ಜೀವನಕ್ರಮ ಬದಲಾಯಿಸಲು ಶಾಸ್ತ್ರಿಗಳು ನೆವವಾದದ್ದು, ಆ ಹೊತ್ತಿಗೆ ಯಾವ ಖಯಾಲಿಯಿಂದಲೋ ಎಲ್ಲಿಂದಲೋ ಬಂದ ಶಾಸ್ತ್ರಿಗಳು ಗೌಡರ ಊರಲ್ಲಿ ಬಿಡಾರ ಹಚ್ಚಿದ್ದು ನನಗೆ ಅದ್ಭುತ ರಮ್ಯಕಥೆ. ಗೋಪಾಲ ಗೌಡರ ಜೀವನದಲ್ಲಿ ಈ ಶಾಸ್ತ್ರಿಗಳು ಹೀಗೆಯೇ ಎಲ್ಲೆಲ್ಲೊ ಪ್ರತ್ಯಕ್ಷರಾಗುತ್ತಾರೆ : ಇದ್ದಕ್ಕಿದ್ದಂತೆ ಮಾಯವಾಗುತ್ತಾರೆ. ಸಾಹಿತ್ಯದಲ್ಲಿ ರೋಮಾಂಟಿಕ್ ಮಾರ್ಗವನ್ನು ತ್ಯಜಿಸಿದ್ದೇನೆಂದು ಭಾವಿಸಿದ ನನಗೆ ನಿಜಜೀವನದಲ್ಲಿ ಶಾಸ್ತ್ರಿಗಳಂಥವರು ಇರುತ್ತಾರೆ. ಗೋಪಾಲನಂಥವರು ಸಮಾಜ ವ್ಯವಸ್ಥೆಯ ಚಕ್ರವ್ಯೂಹ ಭೇದಿಸಿ ಹೊರಬರುತ್ತಾರೆ ಎಂಬುದೆಲ್ಲ ಒಳಗೊಳಗೆ ಸುಖ ಕೊಡುವ ವಿಷಯಗಳು. ಗೌಡರ ಮತ್ತೊಬ್ಬ ಬಾಲ್ಯ ಸ್ನೇಹಿತರಾದ ಪುರುಷೋತ್ತಮ್ ಕೂಡ ಹಾಗೆಯೆ. ಗೌಡರ ಯಾವ ಪ್ರಿಯ ಸ್ನೇಹಿತರೂ ಮಧ್ಯಮ ವರ್ಗದ ಮೌಲ್ಯಗಳಿಗೆ ಒಗ್ಗಿ ಬದುಕಲಿಲ್ಲವೆಂಬುದು ಮುಖ್ಯವಾದ ವಿಷಯ. ತನ್ನ ಈ ಸ್ನೇಹಿತರ ಬಗ್ಗೆ ಗೌಡರು ಮೈಮರೆತು ಮಾತಾಡಬಲ್ಲರು. ಚಿಕ್ಕಂದಿನಲ್ಲಿ ಗೌಡರು ಒಳ್ಳೆ ಈಜುಗಾರರು. ಒಮ್ಮೆ ಪುರುಷೋತ್ತಮ್ ಮತ್ತು ಇವರು ತುಂಗಾ ನದಿಯಲ್ಲಿ ಈಜುತ್ತಿದ್ದಾಗ ಪುರುಷೋತ್ತಮ್ ಕೈಸೋತು ಮುಳುಗಿದರಂತೆ; ಮುಳುಗುವುದಕ್ಕೆ ಮುಂಚೆ ಯಾವ ವಿಕಾರವೂ ಇಲ್ಲದೆ ‘ಗೋಪಾಲ್ ಹೋಗಿಬರುತ್ತೇನೆ’ ಎಂದು ಹೇಳಿ ನೀರಿನಲ್ಲಿ ಮಾಯವಾದರಂತೆ. ಬಂಡೆಯೊಂದು ಅಕಸ್ಮಾತ್‌ ಕಾಲಿಗೆ ಸಿಕ್ಕದಿದ್ದರೆ ಅವತ್ತು ಅವರು ಸಾಯಬೇಕಿತ್ತು. ಇನ್ನೊಮ್ಮೆ ಯಾವುದೋ ಗುಂಗು ತಲೆಗೆ ಹೊಕ್ಕು ತೀರ್ಥಹಳ್ಳಿ ಸೇತುವೆಯ ಅತ್ಯಂತ ಅಪಾಯಕಾರಿಯಾಗಿ ಜಾರುವ ಕಮಾನು ಹತ್ತಿ ಕೂತ ಪುರುಷೋತ್ತಮನಂಥ ಗೆಳೆಯರು ಗೌಡರ ಜೀವನದುದ್ದಕ್ಕೂ ಸಿಗುತ್ತಾರೆ. ಪಟೇಲ್‌, ಶಂಕರ್‌, ಅಣ್ಣಯ್ಯ, ಐತಾಳರು, ಚಂದ್ರಶೇಖರ್‌, ಸದಾಶಿವ ರಾಯರು, ವೆಂಕಟರಾಮ್, ಕಾಗೋಡು ಸತ್ಯಾಗ್ರಹದಲ್ಲಿ ಇವರ ಪ್ರಭಾವಕ್ಕೆ ಸಿಕ್ಕಿದ ತಿಮ್ಮಪ್ಪರಂತಹ ಎಷ್ಟೋ ಯುವಕರು-ಗೌಡರಲ್ಲಿರುವ ಅನೇಕ ಮಾನವೀಯ ದೋಷಗಳನ್ನು ಕಂಡೂ ಎರಡು ಮೂರು ದಶಕಗಳಷ್ಟು ಕಾಲ ಇವರ ಜೊತೆ ನಿಂತವರು ; ಇವರನ್ನು ನಾಯಕನೆಂದು ಯಾವ ಕಪಟವೂ ಇಲ್ಲದೆ ಒಪ್ಪಿಕೊಂಡವರು.
ಗೌಡರ ಬಗ್ಗೆ ಮಾತಾಡಹೋದರೆ ಹೀಗೆಯೆ. ಎಲ್ಲೆಲ್ಲೊ ಸುತ್ತಾಡಬೇಕಾಗುತ್ತೆ. ಸಾಹಿತ್ಯ, ರಾಜಕೀಯ, ಸಂಗೀತ, ರಾಯರು, ಶಾಸ್ತ್ರಿಗಳು, ಪುರುಷೋತ್ತಮ, ರೈತರು -ಹೀಗೆ ನಾನು ಅಲೆಯಬೇಕಾದ್ದರ ಕಾರಣ ಗೌಡರ ಜೀವನ ವೈಖರಿ.
* * * *
ಗೌಡರನ್ನು ಸದ್ಗುಣ ಸಂಪನ್ನನೆಂದು ಹೊಗಳುವುದು ನನ್ನ ಉದ್ದೇಶವಲ್ಲ. ಇವರನ್ನು ತುಂಬ ಪ್ರೀತಿಸುವ, ಇವರಿಗಾಗಿ ಪ್ರಾಣವನ್ನಾದರೂ ಕೊಡಬಲ್ಲಿ ಎಲ್ಲ ಸ್ನೇಹಿತರಿಗೂ ಇವರ ಸ್ವಭಾವದ ವಕ್ರತೆಗಳಿಲ್ಲ ಗೊತ್ತು. ಗೌಡರು ಮುಂಗೋಪಿಗಳೆನ್ನುವುದಕ್ಕೆ ನನ್ನ ಅನುಭವವನ್ನೆ ಹೇಳುತ್ತೇನೆ. ಶಿವಮೊಗ್ಗದಲ್ಲಿ ಇಂಟರ್ ಓಮತ್ತಿದ್ದಾಗ ಹದಿನಾರೊ ಹದಿನೇಳೊ ವರ್ಷ ವಯಸ್ಸಿನ ನಾನು ಸಮಾಜವಾದಿ ವಿದ್ಯಾರ್ಥಿ ಸಂಘದ ಸೆಕ್ರೆಟರಿಯಾಗಿದ್ದೆ. ಯಾವುದೊ ಒಂದು ಸಮಾರಂಭಕ್ಕೆ ಗೌಡರನ್ನು ಮಾತಾಡಲು ನಾನು ಕೇಳಲಿಲ್ಲ. ಅದಕ್ಕೆ ಕಾರಣ ಮಾತಾಡಲು ಅವತ್ತು ಬಹಳ ಜನರಿದ್ದರು; ಅಲ್ಲದೆ ಗೌಡರ ಭಾಷಣ ಯಾವತ್ತೂ ಸ್ವಲ್ಪ ಉದ್ದ. ವಿಪರೀತ ಸಮಯವಾಗುತ್ತದೆಂದು ನನಗೆ ಭಯ. ಸಭೆ ಮುಗಿದ ಮೇಲೆ ಗೌಡರು ನನ್ನ ಹತ್ತಿರ ಜಗಳವಾಡಿದರು. ‘ಜಗಳವಾಡಿದರು’ ಎನ್ನುವುದು ಅತ್ಯಂತ ಸೌಮ್ಯ ಶಬ್ದ-ಹಾಗೆ ಮಾತಾಡಿದರು! ನಾನು ಅತ್ತುಬಿಟ್ಟೆ. ಇದರಿಂದ ಗೌಡರಿಗೆ ಎಷ್ಟು ಕಸಿವಿಸಿಯಾಯಿತೆಂದರೆ ಯಾವ ಸಂಕೋಚವೂ ಇಲ್ಲವೆ ತನ್ನ ತಪ್ಪನ್ನು ಆಮೇಲೆ ಕಂಡುಕೊಂಡರು. ಈಚೆಗೆ ಅಸೆಂಬ್ಲಿಯಲ್ಲಿ ಮೈಕ್ ಕಿತ್ತ ಪ್ರಕರಣದಲ್ಲೂ ಸಹ ಗೌಡರ ಈ ಉದ್ವೇಗಪ್ರವೃತ್ತಿ. ಆದರೆ ನಿಷ್ಕಪಟ ನಿರ್ಮಲ ಮನಸ್ಸು ಕಂಡುಬರುತ್ತದೆ.
ಪ್ರಾಯಶಃ ಇನ್ನು ಯಾರಲ್ಲೂ ಆಷ್ಟು ತಪ್ಪಾಗಿ ಕಾಣದಿರುವುದು ಗೌಡರು ರಾಜಕಾರಣಿಯಾದ್ದರಿಂದ ಕೆಲವರಿಗೆ ಹಿಡಿಸದಿರಬಹುದು. ಇವರ ನಿಧಾನ, ಇವರ ಅರಿಸ್ಟೋಕ್ರಸಿ, ಇವರ ಆತ್ಮಾಭಿಮಾನ, ದೊಡ್ಡಸ್ತಿಕೆಯು ಜನರಿಗೆ ಸೊಪ್ಪು ಹಾಕದ ಇವಮ ಹೆಮ್ಮೆ-ರಾಜಕಾರಣಿಗೆ ತೊಡಕುಗಳೆ. ಆದರೆ ಪೋಸ್ಟ್‌ಮನ್‌ ಮಗನ ಈ ಅರಿಸ್ಟೋಕ್ರಸಿ ನನ್ನ ಹೃದಯವನ್ನು ಖುಷಿಯಲ್ಲಿ ಹಿಗ್ಗಿಸುತ್ತದೆ. ಈ ಆತ್ಮಾಭಿಮಾನ. ಈ ಅರಿಸ್ಟೋಕ್ರಸಿ, ಇಲ್ಲದಿದ್ದಲ್ಲಿ ಗೌಡರು ಎಂದೋ ಮಂತ್ರಿಯಾಗುತ್ತಿದ್ದರು : ದುಡ್ಡು, ಬಂಗ್ಲೆ, ಜಮೀನು ಮಾಡಿಕೊಳ್ಳುತ್ತಿದ್ದರು. ಬಡ ಜನರಿಂದ ದುಡ್ಡನ್ನೂ ಓಟನ್ನೂ ಕೇಳಿ, ಚುನಾವಣೆ ನಡೆಸಿ, ಪ್ರತಿ ಶ್ರೀಮಂತ ಅಭ್ಯರ್ಥಿಯನ್ನೂ ಸೋಲಿಸಿ ನಮ್ಮೂರಿಂದ ಚುನಾಯಿತರಾಗುತ್ತ ಗೌಡರು ಬರುತ್ತಿರುವದರಿಂದಲೇ, ನನಗೆ ಡೆಮಾಕ್ರಸಿಯಲ್ಲಿ ನಂಬಿಕೆ ಉಳಿದುಬಂದಿರುವರು. ಇವರು ಚುನಾವಣೆಯಲ್ಲಿ ಗೆದ್ದರೆಂದು ನಮ್ಮೂರಲ್ಲಿ ಇವರ ಮರ್ಯಾದೆಗಾಗಿ ಯಕ್ಷಗಾನ ನಡೆಯಿತು : ರೈತ ಜನರ ಸಂಭ್ರಮ ಇದು. ಆದ್ದರಿಂದಲೇ ನಿಜವಾದ ಜನಬಲವಿರುವ ಗೌಡರು ಬಹುಸಂಖ್ಯಾತರಿಗೆ ಅಪ್ರಿಯವಾದ ನಿಲುವನ್ನು ತೆಗೆದುಕೊಳ್ಳಲೂ ಹಿಂಜರಿಯುವುದಿಲ್ಲ. ಸತ್ಯಪಕ್ಷಪಾತಿಗಳಾಗಿ ಇವರು ಚಿಕ್ಕಮಗಳೂರಿನ ಜಾತಿ ಗಲಭೆ ಸಂದರ್ಭದಲ್ಲಿ ತೆಗೆದುಕೊಂಡ ನಿಲುವು. ಅದರಿಂದ ಅನುಭವಿಸಿದ ಸಂಕಷ್ಟಗಳು ನಿಜವಾದ ಜನನಾಯಕನಿಗಿರುವ ಧೈರ್ಯವನ್ನು ತೋರಿಸುತ್ತವೆ. ಗೌಡರು ಐಹಿಕಕ್ಕೆ ಗಂಟುಬಿದ್ದ ಸಾಮಾನ್ಯ ರಾಜಕಾರಣಿಯಾಗಿದ್ದರೆ ಹೀಗೆ ತತ್ವಕ್ಕೆ ಗಂಟುಬಿದ್ದು ಲೋಹಿಯಾನ ಪ್ರವಾದಿತನಕ್ಕೆ ಮರುಳಾಗಿ ಹೋರಾಡುತ್ತಿರಲಿಲ್ಲ. ನನಗೊಬ್ಬ ಎಂ. ಎಲ್‌. ಎ. ಒಮ್ಮೆ ಹೇಳಿದರು : ‘ತಾತ್ವಿಕ ರಾಜಕಾರಣ ಗೋಪಾಲ ಗೌಡರಂಥವರಿಗೆ ಸರಿ : ನಮಗೆ ಆ ತಾಕತ್ತಿಲ್ಲ’. ಈ ತಾಕತ್ತೇ ನೈತಿಕ ಜೀವನಕ್ಕೆ ಅತ್ಯವಶ್ಯವಾದ ಮೂಲದ್ರವ್ಯ : ಗೌಡರು ನಿಜವಾಗಿಯೂ ತುಂಬ ತಾಕತ್ತಿರುವ ಮನುಷ್ಯ. ಇವರಿಗೆ ಸರಿಸಾಟಿಯಾದ ತಾತ್ವಿಕ ರಾಜಕಾರಣಿ ಮೈಸೂರು ದೇಶದಲ್ಲಿ ಇನ್ನೊಬ್ಬನಿಲ್ಲ. ಅಮೆರಿಕಾದಲ್ಲೋ, ಇಂಗ್ಲೆಂಡಲ್ಲೂ ಬುಡಾಯವೆದ್ದ ರಾಜಕಾರಣಿಗಳನ್ನು ನಮ್ಮ ಯುವಕ ಸಾಹಿತಿಗಳು ಮೆಚ್ಚಿ ಹೊಗಳುತ್ತಾರೆ. ಗಿನ್ಸ್‌ ಬರ್ಗನ ವರ್ತನೆಯಿಂದ ಪುಳಕಿತರಾಗುತ್ತಾರೆ. ಆದರೆ ಗೌಡರು ಸಿಟ್ಟಿನಲ್ಲಿ ಚಪ್ಪಲಿ ಬಿಚ್ಚಿದ್ದು ಕಂಡು ಇದೇ ಸಾಹಿತಿಗಳೇ ಅಸಭ್ಯವರ್ತನೆಯೆಂದು ಮೂಗು ಮುರಿದದ್ದು ನೋಡಿದ್ದೇನೆ. ನಮ್ಮ ಸಾಮಾಜಿಕ ಪರಿಸರದಲ್ಲೆ ಬಂಡಾಯ ಕಂಡಾಗ ನಾವು ಕನ್ಸರ್ವೆಟಿವ್ ಆಗಿಬಿಡುತ್ತೇವೆ. ಅತ್ಯಂತ ಪ್ರಗತಿಶೀಲ ಸಾಹಿತಿಯೂ ತನ್ನ ಸ್ವಂತದ ಹೆಂಗಸರು ಪತಿವ್ರತೆಯರೂ ದೈವಭಕ್ತರೂ ಆಗಿರಬೇಕೆಂದು ಬಯಸಿದ ಹಾಗೆ, ನಾವು ಹೀಗೆ ಬಿರುಕುಬಿಟ್ಟ ಜನರಲ್ಲದಿದ್ದರೆ ನಮ್ಮ ಸಾಹಿತಿಗಳಿಗೆ ನಮ್ಮೊಳಗಿನ ಗೋಪಾಲ ಗೌಡರಂಥವರೂ ಎಂದೋ ಕುತೂಹಲದ ವ್ಯಕ್ತಿಗಳಾಗುತ್ತಿದ್ದರು. ಲೋಹಿಯಾನ ಬರವಣಿಗೆ, ಬದುಕು ನಮ್ಮ ಸಾಹಿತಿಗಳ ಕಣ್ಣಿಗೆ ಬೀಳಲು ಅಧಿಕಾರದ ಮುದ್ರೆ ಅದರ ಮೇಲೆ ಬೀಳಬೇಕು ! ಆದರೆ ಗೌಡರು ಮಾತ್ರ ಖಾಯಿಲೆಯಿಂದ ಹಾಸಿಗೆ ಹಿಡಿದಾಗಲೂ ಶಂಬಾ ಜೋಷಿಯವರ ಪುಸ್ತಕಗಳು ಖರ್ಚಾಗದೆ ಉಳಿದಿವೆಯೆಂದು, ಸಂಕೇತದ ಬಗ್ಗೆ ಅವರು ಹೇಳುವ ಮಾತು ಬಹಳ ಮುಖ್ಯವೆಂದು, ಅಡಿಗರು ಈಚೆಗೆ ಏನು ಬರೆದಿದ್ದಾರೆಂದು ಯೋಚಿಸುತ್ತಿರುವ ವ್ಯಕ್ತಿ. ಹೀಗೆ ತನ್ನ ಅಂತಃಕರಣವನ್ನು, ಸಂವೇದನೆಯನ್ನು ಜಡ್ಡಾಗದಂತೆ ಉಳಿಸಿಕೊಂಡು ಸಂತ ಗದ್ದಲದಲ್ಲಿ ಬದುಕಿದ ಗೋಪಾಲ ಗೌಡರು ಜೀವಂತ ರಾಜಕಾರಣಿ ಹೇಗಿರಬೇಕೆಂಬುದಕ್ಕೆ ಮಾದರಿ.
* * * *
ಗೌಡರು ಸುಸಂಸ್ಕೃತರು, ರಸಿಕರು ಎನ್ನುವ ಭಾವನೆಯಷ್ಟೆ ನಾನು ಮಾಡಿಕೊಟ್ಟಿರುವ ಪರಿಚಯದಿಂದ ಹುಟ್ಟುವುದಾದರೆ ನಾನು ದೊಡ್ಡ ತಪ್ಪ ಮಾಡಿದಂತೆ. ಒಮ್ಮೆ ನನ್ನ ಪ್ರಿಯ ಗೆಳೆಯರೊಬ್ಬರು “ನಿಮ್ಮಂಥವರಿಂದಾಗಿ ಗೌಡರು ಸಪ್ಪೆಯಾಗುತ್ತಿದ್ದಾರೆ. ಅವರನ್ನು ಸಾಹಿತ್ಯ ಸಂವೇದನೆಯುಳ್ಳವರು ಹೊಗಳಲಿ ನಿಜವಾದ ಕ್ರಾಂತಿ ರಾಜಕಾರಣದಿಂದ ಅವರ ಮನಸ್ಸು ತಿರುಗುವಂತೆ ನೀವೆಲ್ಲ ಫಿತೂರಿ ಹೂಡಿದ್ದೀರಿ’ ಏಂದು ಹೇಳಿದ್ದು ನೆನಪಿದೆ. ಗೌಡರ ನಿಧಾನ ಪ್ರಕೃತಿಯ ಬಗ್ಗೆ ಈ ಬಿರುಸಿನ ಯುವಕ ಮಿತ್ರರಲ್ಲದ ಲೋಹಿಯಾರೂ ರೇಗಿದ್ದಿದೆ. ಗೌಡರು ಒಬ್ಬಂಟಿಯಾಗಿ ಸಮಾಜವಾದಕ್ಕಾಗಿ ಕನ್ನಡನಾಡಿನಲ್ಲಿ ನಿಂತು ಹೋರಾಡುತ್ತಿರುವವರು; ರೈತರ ಸಮಸ್ಯೆಗಳನ್ನು ವಿವರಿಸಿ, ವಿಶ್ಲೇಷಿಸಿ, ಅದಕ್ಕಾಗಿ ಜೈಲಿಗೆ ಹೋಗಿ, ಹೊತ್ತೊತ್ತಿಗೆ ಊಟ ನಿದ್ರೆಯಿಲ್ಲದೆ ಓಡಾಡಿ, ತನ್ನ ಜೀವನವನ್ನು ತೇಯ್ದು, ಆರೋಗ್ಯವನ್ನು ಕಳೆದು ಕೊಂಡವರು. ಹೀಗೆ ಸಮಾಜವಾದದ ಧ್ಯೇಯಕ್ಕಾಗಿ ತನ್ನ ಆರೋಗ್ಯವನ್ನು ಎಲ್ಲ ಸುಖಗಳನ್ನೂ ಗೌಡರು ಕಡೆಗಣಿಸಿರುವಾಗ ಭೂಸುಧಾರಣೆಯ ನಿಜವಾದ ಶಿಕ್ಷೆ ಅವರಾಗಿರುವಾಗ-ಈ ಸಂಗತಿಗಳನ್ನು ಮರೆತು ಗೌಡರ ಸಂವೇದನೆ ಬಗ್ಗೆ ಮಾತಾಡುವುದು ಕ್ಷುಲ್ಲಕವಾಗಿ ಕಾಣುವದು ಸಹಜವೆ. ಆದರೆ ನನ್ನಂಥವರಿಗೆ ರಾಜಕಾರಣಿಗಳನ್ನು ಕಂಡಾಗ ಸಾಹಿತ್ಯದ ಬಗ್ಗೆ, ಸಾಹಿತಿಗಳನ್ನು ಕಂಡಾಗ ಭೂಸುಧಾರಣೆಯ ಅಗತ್ಯದ ಬಗ್ಗೆ ಮಾತಾಡಬೇಕೆನ್ನಿಸುತ್ತದೆ. ಗೋಪಾಲ ಗೌಡರ ರಾಜಕೀಯ ಸಾಧನೆ, ಸೋಲು : ಲೋಹಿಯಾರಂಥವರ ಜೊತೆ ಗೌಡರು ಅಲ್ಪಸಂಖ್ಯಾತರಾಗಿ ಉಳಿಯಬೇಕಾದ್ದರ ಐರನಿ-ಇದು ಇತಿಹಾಸಕ್ಕೆ ಸೇರಿದ್ದು. ಗೌಡರಿಗೆ ನಾವು ಋಣಿಗಳಾಗಿರಬೇಕಾದ್ದು ಹಲವು ಕಡೆ ಜೀವನ ಒಡೆದು ಕೊಳ್ಳುತ್ತಿರುವಾಗ ಒಟ್ಟಂದದ ತುಂಬು ಜೀವನಕ್ಕೆ ಇವರು ಶ್ರಮಿಸುತ್ತಾರೆ ಎಂಬುದಕ್ಕಾಗಿ ; ನೆಹರೂ ಯುಗದ ಬರಿ ಕನಸುಗಾರರಾಗಿ ಉಳಿಯದೆ ಯಾವುದೋ ಹಳ್ಳಿಯ ಉಪಾಧ್ಯಾಯನಿಗೆ ಭಡ್ತಿ, ಎಲ್ಲೋ ಮುರಿವ ಸೇತುವೆಯ ರಿಪೇರಿಗಳಿಂದ ಹಿಡಿದು ಆಮೂಲಾಗ್ರವಾದ ಸಾಮಾಜಿಕ ಬದಲಾವಣೆಗೂ ಹಾತೊರೆಯುತ್ತಾರೆ ಎಂಬುದಕ್ಕಾಗಿ.
* * * *
ತನ್ನ ರಾಜಕೀಯ ಗುರುವಾದ ಗೋಪಾಲ ಗೌಡರು ಶಾಸನ ಸಭೆಯಲ್ಲಿ ಮಾಡಿದ ಕೆಲವು ಭಾಷಣಗಳನ್ನು ಪ್ರಿಯಮಿತ್ರ ಕೋಣಂದೂರು ಲಿಂಗಪ್ಪನವರು ಇಲ್ಲಿ ಶ್ರಮವಹಿಸಿ ಸಂಪಾದಿಸಿದ್ದಾರೆ. ಈ ಸಂದರ್ಭದಲ್ಲಿ ಮಾತು ಮತ್ತು ಬರವಣಿಗೆ ಬಗ್ಗೆ ತೀ ನಂ ಶ್ರೀ ಆಡಿದ ಒಂದು ಮಾತು ನೆನಪಾಗುತ್ತೆ. ಬಾಯಲ್ಲಿ ಆಡಿದ ಮಾತು ಮೇಲಿನಿಂದ ಬೀಳುತ್ತಿರುವ ಸ್ನೋ ಇದ್ದಹಾಗೆ : ಬಲು ಮೃದು, ಹತ್ತಿಯಷ್ಟು ಹಗುರ. ಆದರೆ ಈ ಸ್ನೋ ನೆಲದ ಮಳೆ ಬಿದ್ದಿದ್ದೆ ಗಟ್ಟಿಯಾಗುತ್ತೆ, ಕೆಸರಾಗುತ್ತೆ, ಜಾರುತ್ತೆ. ಆಡಿದ ಮಾತು ಬರೆದಿಟ್ಟಾಗ ನೆಲಕ್ಕೆ ಬಿದ್ದು ಗಟ್ಟಿಯಾದ ಸ್ನೋದಂತೆ. ಗೌಡರು ಮಾತಾಡುವಾಗ ಅವರ ಭಂಗಿ, ಅವರ ಸ್ವರ, ಅವರ ಹಾಸ್ಯಪ್ರಿಯತೆಯನ್ನು ಸೂಚಿಸುವಂತೆ ಮಾತಿನ ಮೇಲೆ ಬೀಳುವ ಘಾತಗಳು-ಎಲ್ಲ ಜೀವಂತವಾಗಿ ನಮ್ಮ ಕಣ್ಣೆದುರಿಗಿರುತ್ತವೆ. ಅವರ ಎಲ್ಲ ಮಾತಿಗೂ ಮುನ್ನೆಲೆ ಹಿನ್ನೆಲೆಗಳು ಬೇರೆ ಇರುತ್ತವೆ. ಅವೆಲ್ಲ ಬರೆದಿಟ್ಟಾಗ ಕಾಣಿಸುವುದಿಲ್ಲ. ಅಲ್ಲದೆ ಗೌಡರಿಗೆ ದೀರ್ಘವಾಗಿ ಮಾತಾಡುವುದು ಅಭ್ಯಾಸವಾದಕ್ಕೆ ಇನ್ನೊಂದು ಕಾರಣವಿದೆ. ಅವರು ಇಡೀ ಜೀವನವನ್ನು ಕಳೆಯುತ್ತಿರುವುದು ರೈತರ ಜೊತೆ. ಡಾರ್ವಿನ್, ಮಾರ್ಕ್ಸ್, ರಸೆಲ್, ಲೋಹಿಯಾ -ತಾನು ಓದಿದ ಎಲ್ಲವನ್ನೂ ರೈತರಿಗೆ ಅರ್ಥವಾಗುವ ಭಾಷೆಯಲ್ಲಿ ಹೇಳಬೇಕೆಂದು ತನ್ನ ವಾಗ್ಮಿತೆ ಬೆಳೆಸಿಕೊಂಡವರು ಗೌಡರು. ಯಾವ ಒಂದು ಶಬ್ದದಲ್ಲೂ ತನ್ನ ವಿಚಾರವನ್ನು ಭಟ್ಟಿಯಿಳಿಸಲು ಪ್ರಯತ್ನಿಸದೆ, ತನ್ನೆದುರಿಗಿರುವ ಜನಕ್ಕೆ ಅರ್ಥವಾಗಲೆಂದು, ಶಬ್ದಗಳಿಂದ ಅವರು ದಿಗಿಲು ಬೀಳದಿರಲೆಂದು ಎಲ್ಲವನ್ನೂ ಅತ್ಯಂತ ಸರಳವಾಗಿ ಬಿಡಿಸಿ ಹೇಳುವುದು ಇವರಿಗೆ ಅಭ್ಯಾಸವಾಗಿದೆ. ಇದೊಂದು ದೊಡ್ಡ ಸಾಧನೆಯೆಂದೇ ನನ್ನ ಭಾವನೆ. ಆದ್ದರಿಂದ ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಗೌಡರ ಭಾಷಣಗಳ ವರದಿಗಳನ್ನು ಓದುವುದು ಒಳ್ಳೆಯದು. ಅಲ್ಲದೆ ಗೌಡರಂತಹ ಸೀರಿಯಸ್ಸಾದ ರಾಜಕಾರಣಿಯನ್ನು ಎಷ್ಟು ಚೆನ್ನಾಗಿ ಬರೆಯುತ್ತಾನೆ ಎಂದು ಹೊಗಳುವುದಕ್ಕಿಂತ, ಇವನು ಹೇಳಿದ್ದು ಮುಖ್ಯವೆ, ಎಷ್ಟು ಮುಖ್ಯ ಎಂದು ಚರ್ಚಿಸುವುದೇ ಹೆಚ್ಚು ಸರಿಯಾದ್ದು.
ಜನರ ಜೀವನ ಬದಲಾಗಬೇಕೆಂಬ ಅವಸರದ ಜೊತೆಗೇ ಅಂತರಂಗದಲ್ಲಿ ಆಲಿಸಿದಾಗ ಮಾತ್ರ ಕೇಳುವ ಪಿಸುಮಾತಿನ ನಿಜಗಳನ್ನೂ ಕೇಳಿಸಿಕೊಳ್ಳಬಲ್ಲ ಈ ತಾತ್ವಿಕ: ಸಂತೆ ಗದ್ದಲಗಳಲ್ಲಿ ಬದುಕಲು ನಿರ್ಧರಿಸಿಯೂ ತನ್ನತನ ಕಳೆದುಕೊಳ್ಳದ ಈ ರಾಜಕಾರಣಿ; ಕಾರ್ಪಣ್ಯ, ದೈನ್ಯ, ಬಡತನಗಳ ಬಗ್ಗೆಯೇ ಯೋಚಿಸುತ್ತಿದ್ದೂ ಈ ಕೆಸರಲ್ಲೂ ಅರಳುವ ಜೀವನದ ಸೊಗಸುಗಳನ್ನು ಮರೆಯದ ಈ ರಸಿಕ : ಕಡುಕೋಪಿಯಾಗಬಲ್ಲನಾದರೂ ಈ ಹಾಸ್ಯಪ್ರಿಯ ; ಅತ್ಯಂತ ಸಭ್ಯನಾದರೂ ನಿಷ್ಠುರನಾಗಿ ಉಳಿದ ಈ ಸಂಕೀರ್ಣ ಮನುಷ್ಯ ನನ್ನ ಗೆಳೆತನದ ಅತ್ಯುತ್ತಮ ಗಳಿಕೆಗಳಲ್ಲಿ ಬಹು ಮುಖ್ಯರಾದವರು. ನಮ್ಮ ರಾಜಕೀಯ ಕ್ಷೇತ್ರದಲ್ಲಿ ಗೌಡರಂಥವರು ಇರುವುದು ಒಬ್ಬರೇ; ಆದ್ದರಿಂದ ಅವರೊಬ್ಬರೇ ಹೀಗೆ ಎದ್ದು ಕಾಣುವುದು -ನಮ್ಮ ಸಮಾಜ ಜೀವನದ ದುರಂತ ಇದು.
– ೧೦ ಸೆಪ್ಟೆಂಬರ್‌, ೭೧

Close

ತುಳು ಮತ್ತು ಕನ್ನಡ

ತುಳು ಮತ್ತು ಕನ್ನಡ

ಮುಕುಂದ ಪ್ರಭು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉತ್ತರಕ್ಕೆ ಕಲ್ಯಾಣಪುರ ಹೊಳೆ, ದಕ್ಷಿಣಕ್ಕೆ ಈಗ ಕೇರಳಕ್ಕೆ ಸೇರಿರುವ ಕಾಸರಗೋಡು ತಾಲ್ಲೂಕಿನಲ್ಲಿರುವ ಚಂದ್ರಗಿರಿ ಹೊಳೆ, ಪೂರ್ವಕ್ಕೆ ಪಶ್ಚಿಮ ಘಟ್ಟಗಳ ಸಾಲು, ಪಶ್ಚಿಮಕ್ಕೆ ಅರಬೀ ಸಮುದ್ರಗಳು ಮೇರೆಗಳಾಗಿರುವ ಪ್ರದೇಶದಲ್ಲಿ ವಾಸಿಸಿರುವ ಜನರಲ್ಲಿ ತುಳು ಭಾಷೆ ಮಾತಾಡುವ ಜನರ ಸಂಖ್ಯೆ ಉಳಿದ ಭಾಷೆಗಳನ್ನು ಆಡುವ ಜನರಿಗಿಂತ ಬಹಳ ಹೆಚ್ಚಿದೆ. ಭಾಷಾವೃಷ್ಟಿಯಿಂದ ಇವರನ್ನು ತುಳುವರೆಂದೂ, ಈ ಪ್ರದೇಶವನ್ನು ತುಳುನಾಡೆಂದೂ ಹೇಳುವುದಿದೆ. ಈ ಭಾಷೆಯನ್ನು ಆಡುವವರಲ್ಲಿ ಸಾಮಾಜಿಕವಾಗಿ ಬಂಟ, ಬಿಲ್ಲವ, ಮೊಗೇರ, ಮೂಲ್ಯ, ಮೊಯಿಲಿ, ಗಾಣಿಗ ಮೊದಲಾದವರೂ, ಪರವ, ಪಂಬದ, ನಲ್ಕೆ ಮೊದಲಾದ ಭೂತಗಳ ವೇಷಕಟ್ಟುವ ವರ್ಗದವರೂ, ನಿಮ್ನ ವರ್ಗದವರೆಂದು ಗಣಿಸಲಾಗುವ ಮುಂಡಾಲ, ಮೇರ, ಮುಗರ, ಗೊಡ್ಡ ಮೊದಲಾದವರೂ, ಆದಿವಾಸಿಗಳಾದ ಕೊರಗರೂ ಇದ್ದಾರೆ. ಬ್ರಾಹ್ಮಣರಲ್ಲಿ ಕೂಡ ಶಿವಳ್ಳಿ, ಸ್ಥಾನಿಕ ಮೊದಲಾದವರು ತುಳು ಭಾಷೆಯನ್ನು ಆಡುವವರೇ. ಜೈನರಲ್ಲಿ ಕೂಡ ತುಳು ಭಾಷಿಕರು ಇದ್ದಾರೆ.
ತುಳು ಭಾಷೆಗೆ ಲಿಪಿ ಇಲ್ಲ. ತುಳು ಲಿಪಿ ಎಂದು ಹೇಳಲಾಗುವ ಲಿಪಿ ಗ್ರಂಥಲಿಪಿಯೇ ಅಲ್ಲದೆ ಬೇರೆ ಅಲ್ಲ. ಈ ಪ್ರದೇಶದ ಬ್ರಾಹ್ಮಣರು ಕರ್ಮಕಾಂಡ, ಜೋತಿಷ್ಯ, ವೈದ್ಯ, ಮಂತ್ರವಾದವೇ ಮೊದಲಾದ ವಿದ್ಯೆಗಳನ್ನು ಕಲಿಯಲು ಕೇರಳಕ್ಕೆ ಹೋಗುತ್ತಿದ್ದು ಈ ಲಿಪಿಯಲ್ಲಿ ಬರೆದಿರುವ ಗ್ರಂಥಗಳು ಹೆಚ್ಚಾಗಿ ತುಳು ಬ್ರಾಹ್ಮಣರಲ್ಲಿ ಸಿಕ್ಕಿದ್ದುದರಿಂದ ಈ ಲಿಷಿಗೆ ತುಳುಲಿಪಿಯೆಂಬ ಹೆಸರನ್ನು ಬರ್ನ್ನೆಲ್ಲರು ಕೊಟ್ಟಿದ್ದಿರಬೇಕು. ತಮ್ಮ ಪುಸ್ತಕದಲ್ಲಿ ಕೊಟ್ಟಿರುವ ಲಿಪಿಗಳ ಹೆಸರುಗಳನ್ನು ತಾವೇ ಬಳಕೆಗೆ ತಂದುದೆಂದು ಅವರು ಒಪ್ಪಿಕೊಂಡಿದ್ದಾರೆ. ಈ ಲಿಪಿಯಲ್ಲಿ ಬರೆದಿರುವ ಗ್ರಂಥಗಳೆಲ್ಲ ಸಂಸ್ಕೃತ ಭಾಷೆಯವು. ಒಂದೇ ಒಂದು ಅಪವಾದವಾಗಿ ಉಡುಪಿಯಲ್ಲಿ ಒಂದು ಕನ್ನಡ ಹರಿಶ್ಚಂದ್ರ ಕಾವ್ಯ ದೊರೆತಿದೆಯಂತೆ. ತುಳು ಭಾಷೆಯಲ್ಲಿ ಲಿಖಿತ ಸಾಹಿತ್ಯವಿಲ್ಲ. ಆದರೆ ಭೂತ ದೈವಗಳ ನೇಮಕೋಲಗಳ ಸಮಯದಲ್ಲಿ ವೇಷಕಟ್ಟುವುದು ತಮ್ಮ ಸಹಾಯಕರೊಡನೆ ಸೇರಿಕೊಂಡು ಹಾಡುವ ಪಾಡ್ದನಗಳು ನೂರಾರು ದೈವಗಳಿಗೆ ಬೇರೆ ಬೇರೆ ಇವೆ. ಇವಲ್ಲದೆ ನೇಜಿಯ ಹಾಡು, ಸಂಧಿಯ ಕತೆಗಳು, ಅಣಕವಾಡುಗಳು, ಗಾದೆಗಳು ಬಹಳವಿದ್ದು ತುಳು ಜಾನಪದ ಸಾಹಿತ್ಯ ಸಮೃದ್ಧವಿದೆ. ತುಳು ವ್ಯಾಕರಣಗಳು ಬ್ರಿಗೆಲ್ಲರಿಂದಲೂ, ಶ್ರೀನಿವಾಸ ಉಪಾಧ್ಯಾಯ ಪಣಿಯಾಡಿಯವರಿಂದಲೂ ಪ್ರಕಟಿಸಲ್ಪಟ್ಟಿವೆ. ಮೇನ್ನರರು ತುಳು ಶಬ್ದಗಳ ಕೋಶವನ್ನು ಸಂಗ್ರಹಿಸಿದ್ದಾರೆ. ಶ್ರೀ ಮರಿಯಪ್ಪ ಭಟ್ಟರೂ ತುಳು ಶಬ್ದ ಕೋಶವನ್ನು ಪ್ರಕಟಿಸಿದ್ದಾರೆ. ಡಾ. ಡಿ. ಯನ್. ಶಂಕರ ಭಟ್ಟರು ತುಳು ಭಾಷೆಯ ಬಗ್ಗೆ ಇಂಗ್ಲೀಷಿನಲ್ಲಿ ಒಂದು ಪುಸ್ತಕವನ್ನು ಬರೆದಿದ್ದಾರೆ (ಆದರೆ ಅದು ನನ್ನ ಓದಿಗೆ ಸಿಕ್ಕಿಲ್ಲ). ಕಡವು ಶಂಭು ಶರ್ಮರು ತುಳು ದೇಶ ಭಾಷಾವಿಚಾರವೆಂಬ ಪುಸ್ತಕವನ್ನು ಬರೆದಿದ್ದಾರೆ. ಇವಲ್ಲದೆ ಬಿಡಿ ಲೇಖನಗಳು ಹಲವಾರು ಪತ್ರಿಕೆಗಳಲ್ಲಿ, ನಿಯತ ಕಾಲಿಕ ಗಳಲ್ಲಿ ಪ್ರಕಟವಾಗಿವೆ, ಆಗುತ್ತಲಿವೆ. ಕಾಲ್ಡ್ವೆಲ್ಲರು ದ್ರಾವಿಡ ಭಾಷೆಗಳ ತುಲನಾತ್ಮಕ ವ್ಯಾಕರಣದಲ್ಲಿ ತುಳುವಿನ ವಿಚಾರ ಬರೆದಿದ್ದಾರೆ.
ತುಳು ಜೀವಂತ ಭಾಷೆ. ಲಿಪಿ ಇಲ್ಲದಿದ್ದರೂ, ಅತ್ಯಂತ ಸಾಂಪ್ರದಾಯಿಕರಾದ ತುಳುವರು ತಮ್ಮ ಭಾಷೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಇತರ ಭಾಷೆಗಳು (ಕನ್ನಡ, ಕೊಂಕಣಿ, ಮಲಯಾಳಿ) ಇದನ್ನು ಸುತ್ತುಗಟ್ಟಿದ್ದರೂ ನಷ್ಟವಾಗುವ ಸಂಭವವಿಲ್ಲೆಂದು ಕಾಲ್ಡ್ವೆಲ್ಲರು ತಮ್ಮ ವ್ಯಾಕರಣದಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಈ ಭಾಷೆಯಲ್ಲಿ ದ್ರಾವಿಡ ಪಂಗಡದ ಭಾಷೆಗಳಲ್ಲೆಲ್ಲ ಇದ್ದಂತೆ ಎರವಲು ಪಡೆವ ಶಬ್ದಗಳು ಹೇರಳವಿವೆ. ಸಂಸ್ಕೃತ ಶಬ್ದಗಳು, ಅವುಗಳ ವಿಕಲ್ಪಗಳು, ಅರಬ್ಬಿ, ಪಾರಸಿ, ಇಂಗ್ಲಿಷ್ ಕೂಡ ಇವೆ. ಆದರೆ ತುಳುವಿನ ಶಬ್ದ ಭಂಡಾರದಲ್ಲಿ ನೂರಕ್ಕೆ ಎಂಬತ್ತರಷ್ಟು ಶಬ್ದಗಳು ಹಳೆ ಕನ್ನಡ, ನುಡಿಗನ್ನಡ, ಹೊಸ ಕನ್ನಡದವೇ ಎಂಬುದನ್ನು ಕಾಣುವಾಗ ಇದು ಬೇರೆಯೇ ಭಾಷೆ ಎಂಬುದು ಸರಿಯೇ, ಕನ್ನಡದ ಒಂದು ಪ್ರಾದೇಶಿಕ ಭೇದವೇ, ಬೆಳವಣಿಗೆ ಯಾವೊಂದು ಕಾಲದಲ್ಲಿ ನಿಂತುಹೋಗಿ ಆಮೇಲೆ ಪುನಃ ಚೇತರಿಸಿಕೊಂಡ ಕನ್ನಡದ ಇನ್ನೊಂದು ರೂಪವೇ ಎಂಬ ಸಂಶಯಗಳು ಏಳುತ್ತವೆ.
ಕನ್ನಡ ಸಾಹಿತ್ಯದಲ್ಲಿ ತುಳುನಾಡಿನ ಮೊದಲ ಉಲ್ಲೇಖ ಕಾಣಬರುವುದು ನಯಸೇನನ ಧರ್ಮಾಮೃತದಲ್ಲಿ. ಇದು ಬರೆದು ಮುಗಿಸಿದ ಕಾಲ ಶಕ ೧೦೩೪ ನಂದನ ಸಂವತ್ಸರ. ಇದರಲ್ಲಿ “ತುಳುನಾಡ ಸತ್ತಮನೆಯಲ್ಲಿ ಪೞಯಿಸುವಂತೆ ಪೞಯಿಸುವರ್” ಎಂದು ಈ ಪ್ರದೇಶದ ವಿಶೇಷ ಸಂಪ್ರದಾಯವೊಂದನ್ನು ಹೇಳಿದೆ. ಆಮೇಲೆ ಹರಿಹರನ ಬಸವರಾಜ ರಗಳೆ, ಮಂಗರಸನ ಅಭಿನವಾಭಿಧಾನ ಮೊದಲಾದುವುಗಳಲ್ಲಿ ತುಳುದೇಶ, ತೌಳವರ ಉಲ್ಲೇಖಗಳು ಕಾಣಸಿಗುತ್ತವೆ. ಶಾಸನಗಳಲ್ಲಿ ತುಳುನಾಡಿನ ಉಲ್ಲೇಖ ಕಾಣುವುದು ಮೊದಲಿಗೆ ಶಕ ೯೩೪ ರ ಕೊಂಗಾಳ್ವರ ಬಲ್ಮುರಿಯ ಶಾಸನದಲ್ಲಿ. ಅಲ್ಲಿಂದ ಮುಂದೆ ಹೊಯ್ಸಳರ ಹಲವಾರು ಶಾಸನಗಳಲ್ಲಿ ತುಳುದೇಶ, ಆಳ್ವಖೇಡ, ಆಳ್ವರ ಖೇಡವೆಂದು ಈ ಪ್ರದೇಶದ ಉಲ್ಲೇಖಗಳು ಸಿಗುತ್ತವೆ. ಅಂತು ಸಾಹಿತ್ಯ ಶಾಸನಗಳಲ್ಲಿ ತುಳುನಾಡಿನ ಉಲ್ಲೇಖ ಕಾಣಬರುವುದು ೧೧ನೇ ೧೨ನೇ ಶತಮಾನಗಳಲ್ಲೇ ಮೊದಲು.
ಈ ಪ್ರದೇಶದಲ್ಲಿ ಸುಮಾರು ಕ್ರಿ. ಶ. ಏಳನೆಯ ಶತಮಾನದಿಂದ ಈಚೆಗಿನ ಶಾಸನಗಳು ನೂರಾರು ಸಿಕ್ಕಿವೆ. ಇವಲ್ಲಿ ಒಂದೆರಡನ್ನು ಉಳಿದರೆ, ಎಲ್ಲವೂ ಕನ್ನಡ ಭಾಷೆಯಲ್ಲಿ ಕನ್ನಡ ಲಿಪಿಯಲ್ಲಿ ಇವೆ. ಪ್ರಾಚೀನವೆನ್ನಬಹುದಾದ ಯಾವ ಶಾಸನದಲ್ಲೂ ಈ ಪ್ರದೇಶವನ್ನು ತುಳುನಾಡೆಂದು ಹೇಳಿಲ್ಲ. ಇವುಗಳಲ್ಲಿ ವೀರಗಲ್ಲುಗಳೂ ದಾನಶಾಸನಗಳೂ ಇವೆ. ಇವುಗಳ ಲಿಪಿ, ಭಾಷೆ ಕನ್ನಡವಿದ್ದುದರಿಂದ, ಆ ಕಾಲಕ್ಕೆ ಇಲ್ಲಿನ ಜನ ಸಾಮಾನ್ಯರಿಗೆ ಕನ್ನಡ ಲಿಪಿ ಭಾಷಗಳು ತಿಳಿದಿದ್ದು ಎಂಬುದನ್ನು ಅನುಮಾನಿಸಬಹುದು.
ನಯಸೇನನ ಧರ್ಮಾಮೃತವನ್ನು ಓದುವಾಗ ಆ ಕಾಲದ ಕನ್ನಡ ಶಬ್ದಗಳು (೧೨ನೆಯ ಶತಮಾನದವು) ಹಲವು ತುಳುವಿನಲ್ಲಿ ಈಗಲೂ ಅದೇ ರೂಪದಲ್ಲಿ, ಅದೇ ಅರ್ಥದಲ್ಲಿ ವರ್ತಿಸುವುದನ್ನು ನೋಡಿ ತುಳು ಎನ್ನಲಾಗುವ ಭಾಷೆ ಹಳೆಗನ್ನಡದಿಂದ ಬೇರೆಯೇ ಎಂಬ ಸಂಶಯ ಬಂದಿತು. ನನ್ನ ಸಂಗ್ರಹದಲ್ಲಿರುವ ಸುಮಾರು ಐವತ್ತು ಪಾಡ್ದನಗಳು, ಸಂಧಿಯ ಕತೆಗಳನ್ನು ತಿರುಗಿ ಓದಿ ನೋಡುವಾಗ ಈ ಸಂಶಯವು ಇನ್ನೂ ಬಲಗೊಂಡಿತು. ಇದಿಷ್ಟು ಈ ಲೇಖನಕ್ಕೆ ಹಿನ್ನೆಲೆ.
ಡಾ. ಡಿ. ಯನ್. ಶಂಕರ ಭಟ್ಟರು “ತುಳು ಮತ್ತು ಕನ್ನಡ” ಎಂಬ ತಮ್ಮ ಲೇಖನದಲ್ಲಿ (ಅರ್ಪಣೆ : ವಿದ್ಯಾದಾಯಿನೀ ಹಯರ್ ಸೆಕೆಂಡರಿ ಶಾಲೆಯ ವತಿಯಿಂದ ಶ್ರೀ ಎಮ್. ವಾಸುದೇವರಾಯರಿಗೆ ಅರ್ಪಿಸಲ್ಪಟ್ಟ ಸಂಭಾವನಾ ಗ್ರಂಥ) ತುಳು ಮತ್ತು ಕನ್ನಡಗಳೊಳಗಿನ ಕೆಲವು ವ್ಯತ್ಯಾಸಗಳನ್ನು ಎತ್ತಿ ತೋರಿಸಿದ್ದಾರೆ. ಅವನ್ನು ಮೊದಲು ನೋಡಿಕೊಂಡು ಮುಂದುವರಿಯುವ.
ಡಾ. ಭಟ್ಟರು ತೋರಿಸಿರುವ ಮೊದಲ ವ್ಯತ್ಯಾಸ-ಹಳೆಗನ್ನಡದಲ್ಲಿ ಶಬ್ದದ ಆದಿಯಲ್ಲಿ ಬರುತ್ತಿದ್ದ “ಪ” ಕಾರಗಳೆಲ್ಲ ಹೊಸಗನ್ನಡದಲ್ಲಿ “ಹ” ಕಾರಗಳಾಗಿ ಮಾರ್ಪಟ್ಟಿವೆ. ತುಳುವಿನಲ್ಲಿ ಆಗಿಲ್ಲವೆಂಬುದು, ತುಳುವು ಹಳೆಗನ್ನಡವೇ ಆಗಿದ್ದಲ್ಲಿ, ಯಾವೊಂದು ಕಾಲಕ್ಕೆ ರಾಜಕೀಯವಾಗಿಯಾಗಲೀ ಇತರ ಕಾರಣಗಳಿಂದಾಗಲೀ ಕನ್ನಡದ ಸಂಪರ್ಕ ತಪ್ಪಿಹೋಗಿ ಕೆಲವು ಕಾಲದವರೆಗೆ ಅದೇ ಸ್ಥಿತಿಯಲ್ಲಿದ್ದುದಾದರೆ ಈ ವ್ಯತ್ಯಾಸವು ವಾಸ್ತವವಾಗಿ ವ್ಯತ್ಯಾಸವಲ್ಲವೆಂಬುದು ಸಿದ್ದವಾಗುತ್ತದೆ. ಡಾ. ಭಟ್ಟರು ಸೂಚಿಸದಿದ್ದರೂ, ಇದೇ ರೀತಿಯಲ್ಲಿ ಹಳೆ ಕನ್ನಡದ ‘ಅ’ಕಾರಾದಿ ಶಬ್ದಗಳು ಕೆಲವು ಹೊಸ ಕನ್ನಡಕ್ಕೆ ‘ಹ’ಕಾರಾದಿಯಾದರೂ ತುಳುವಿನಲ್ಲಿ ‘ಅ’ಕಾರಾದಿಯಾಗಿಯೇ ಇರುವುವು: ಅಲ್ಲದೆ ಕನ್ನಡವು ಆಧುನಿಕತೆಯ ದಾರಿ ಹಿಡಿದ ಮಾತ್ರಕ್ಕೆ ತುಳುವೂ ಅದೇ ರೀತಿ ಆಗಬೇಕೆಂಬ ನಿಯಮವೂ ಇಲ್ಲ.
ಎರಡನೆಯ ವ್ಯತ್ಯಾಸ-ಕನ್ನಡದಲ್ಲಿ ಶಬ್ಬದ ಎರಡನೆಯ ಅಕ್ಷರದಲ್ಲಿ “ಇ” ಇಲ್ಲವೇ “ಉ” ಇದ್ದಾಗ, ಮೊದಲನೆಯ ಅಕ್ಷರದ ಎಕಾರ ಇಕಾರವಾಗಿದೆ. ಒಕಾರ ಉಕಾರವಾಗಿದೆ. ಈ ಬದಲಾವಣೆಯೂ ತುಳುವಿನಲ್ಲಿ ಆಗಿಲ್ಲವೆಂಬುದು, ಪ್ರಾಯಶಃ ಇಲ್ಲಿ ಲೇಖಕರು ಎರಡು ಅಕ್ಷರಗಳು ಮಾತ್ರವಿದ್ದ ಶಬ್ದಗಳಲ್ಲಿ ಎಂದು ಹೇಳಲು ಮರೆತರು. ಅವರು ಕೊಟ್ಟಿರುವ ಉದಾಹರಣೆಗಳಲ್ಲಿ-
(ಕ) ಕಿವಿ (ತು) ಕೆಬಿ ; (ಕ) ಕುಡಿ (ತು) ಕೊಡಿ ; (ಕ) ಉಳಿ (ತು) ಒಳಿ ಇವೆ. ಕನ್ನಡ ಭಾಷೆ ಆಡುವವರಲ್ಲಿ ಕೂಡ ಪ್ರಾದೇಶಿಕ ವಿಶೇಷತೆಗಳು ಇವೆ. ಕನ್ನಡದಲ್ಲಿ ಕಿವಿಯನ್ನು ಕೆಮಿ ಎಂದು ಹೇಳುವವರೂ ಇದ್ದಾರೆ-ಎಂಬುದನ್ನು ಗಮನಿಸಬೇಕು. ಕನ್ನಡದ ಕುಡಿಯನ್ನು ಈ ಜಿಲ್ಲೆಯ ಕನ್ನಡ ಮಾತೇ ಆಡುವ ಕೋಟದವರು ಕೊಡಿ ಎಂದೇ ಹೇಳುತ್ತಾರೆ. ನಿಘಂಟುಗಳಲ್ಲಿ ಕಾಣದ ಎಷ್ಟೋ ರೂಪಗಳು ಭಾಷೆಯಲ್ಲಿ ಇವೆ. ಕನ್ನಡದ ಉಳಿ ತುಳುವಿನಲ್ಲೂ ಉಳಿಯೇ- ಮೇನ್ನರರ ಶಬ್ದಕೋಶದಲ್ಲಿ ಉಳಿಯೆಂದೇ ಇದೆ. ಒಳಿ ಎಂಬುದಕ್ಕೆ ಪ್ರಕಾಶ, ಬೆಳಕು ಎಂಬ ಅರ್ಥವನ್ನು ಕೊಟ್ಟಿದ್ದಾರೆ. ಮರಿಯಪ್ಪ ಭಟ್ಟರೂ ಇದೇ ಅರ್ಥವನ್ನು ಕೊಟ್ಟಿದ್ದಾರೆ.
ಮೂರನೆಯದು, ಸ್ಪರ್ಶಗಳ ಮುಂದಿರುವ ರಕಾರ ಕನ್ನದವಲ್ಲಿ ಸ್ಪರ್ಶವಾಗಿ ಮಾರ್ಪಟ್ಟಿದೆ, ಆದರೆ ತುಳುವಿನಲ್ಲಿ ರೇಫವಾಗಿಯೇ ಉಳಿದಿವೆ ಎಂಬುದು.
ಉದಾಹರಣೆಗಳು-(ಕ) ಹತ್ತಿ (ತು) ಪರ್ತ್ತಿ : (ಕ) ಹಬ್ಬ (ತು) ಪರ್ಬ.
ಕನ್ನಡದ ಹತ್ತಿ ಹಳೆಗನ್ನಡದಲ್ಲಿ ಪಳ್ತಿ. ನಡುಗನ್ನಡದಲ್ಲಿ ಪರ್ತ್ತಿ-ಅದೇ ತುಳುವಿನ ಪರ್ತ್ತಿ ಕೂಡ. ಹಬ್ಬ ಹಳೆ ಕನ್ನಡದ ಪರ್ವ (ಸಂಸ್ಕೃತ ಮೂಖ) ನಡುಗನ್ನಡದಲ್ಲಿ ಪರ್ಬ ರೂಪವಿದೆ (ಕಿಟ್ಟೆಲ್ಲರ ಶಬ್ದಕೋಶ ನೋಡಿ). ಅದೇ ತುಳುವಿನ ಪರ್ಬ. ಇವು ಕನ್ನಡ ತುಳುಗಳೊಳಗಿನ ಹತ್ತಿರದ ಸಂಬಂಧಕ್ಕೆ ಸಾಧಕಗಳೇ ಹೊರತು ಬಾಧಕಗಳಲ್ಲ.
ಇವಲ್ಲ ಮಾರ್ಪಾಟುಗಳು ಸುಮಾರು ಎಂಟನೆಯ ಶತಮಾನದಿಂದ ಈಚಿನವೆಂದೂ, ತುಳು ಕನ್ನಡಗಳ ಕೌಟುಂಬಿಕ ಸಂಬಂಧ ಒಡೆದುಹೋದದು ಇದಕ್ಕಿಂತಲೂ ನೂರಾರು ವರ್ಷಗಳಷ್ಟು ಹಿಂದೆ ಎಂದೂ ಡಾ. ಭಟ್ಟರು ಕೆಲವು ಆಧಾರಗಳನ್ನು ಪೂರೈಸಿದ್ದಾರೆ. ಇವನ್ನೂ ನೋಡೋಣ. ಮೂಲದ್ರಾವಿಡ ಭಾಷೆಯ ಶಬ್ದಗಳಲ್ಲಿ ಮೊದಲಿನ ಅಕ್ಷರದಲ್ಲಿದ್ದಂತಹ ಇಕಾರ ಮತ್ತು ಎಕಾರಗಳು, ಎರಡನೆಯ ಅಕ್ಷರದಲ್ಲಿ ಅಯ್‌ಕಾರವಿದ್ದಾಗಲೆಲ್ಲ ಕನ್ನಡದಲ್ಲಿ ಎಕಾರ ಮತ್ತು ಒಕಾರಗಳಾಗಿಬಿಟ್ಟಿದ್ದುವು; ಈ ಬದಲಾವಣೆ ತುಳುವಿನಲ್ಲಿ ಆಗಿಲ್ಲವೆಂದು ಈ ಉದಾಹರಣೆಗಳನ್ನು ಕೊಟ್ಟಿದ್ದಾರೆ.
ಮೂಲ ದ್ರಾವಿಡ ಕನ್ನಡ ತುಳು
ಬಿದೈ ಬೆದೆ ಬಿದೆ
ಇಳೈ ಎಳೆ ಇಳೆ
ಮುನೈ ಮೊನೆ ಮುನೆ
ಮುಗ್ಗೈ ಮೊಗ್ಗೆ ಮುಗ್ಗೆ
ಮೂಲದ್ರಾವಿಡದ ಇಳ್ಳೆ ಕನ್ನಡಕ್ಕೆ ಎಳೆ ಆಗಿಯೂ ತುಳುವಿನಲ್ಲಿ ಇಳೆ ಆಗಿಯೂ ಇದೆ ಎಂದು ಡಾ. ಭಟ್ಟರ ಹೇಳಿಕೆ. ತುಳುವರ ಬಾಯಿಯಲ್ಲಿ ಈ ಶಬ್ದವು ಎಳೆಯಾಗಿಯೇ ಇದೆ. ಮೇನ್ನರರ ಶಬ್ದಕೋಶದಲ್ಲಿ ‘ಇಳೆ’ ಇಲ್ಲ, ‘ಎಳೆ’ ಇದೆ. ಮರಿಯಪ್ಪಭಟ್ಟರ ಕೋಶದಲ್ಲಿ ಇಳೆ-ಎಳೆ ಎರಡೂ ಇವೆ. ಬಿದ್ಯೆ ಎಂಬುದು ಕನ್ನಡದಲ್ಲಿ ಬೆದೆ ಎಂಬ ರೂಪವನ್ನು ತಳೆದಿದೆಯೆಂಬುದು ಸರಿ. ಇದೇ ಶಬ್ದ ಕನ್ನಡದಲ್ಲಿ ‘ಬಿದೆ’ ಆಗಿಯೂ ವರ್ತಿಸಿರುವುದನ್ನು ಪ್ರಾಯಶಃ ಅವರು ಕಂಡಿರಲಿಕ್ಕಿಲ್ಲ. ಮಂಗಳೂರಿನ ಚಕ್ರಪಾಣಿ ದೇವಾಲಯದ ಶಾಸನದಲ್ಲಿ (೧೮/೧೯೦೧) ಪಂಕ್ತಿ ಎಂಟರಲ್ಲಿ “ಬಿದೆಕಾರು ಮೂ ೨ ಕ್ಕೆ” ಎಂದೂ, ಅಮ್ಮುಂಜೆಯ ಶಾಸನವೊಂದರಲ್ಲಿ (೩೭೬/೧೯೩೨) ಪಂಕ್ತಿ ೧೭ರಲ್ಲಿ “ಪಟಿಲದ ಬಿದಕಾರು ಬಿತ್ತು….” ಎಂದೂ ಇದೆ. ಹೀಗೆ ತುಳುವಿನ ಬಿದೆಯೂ ಸರಿಯೇ. ಮುನೈ ಮುಗ್ಗೈ ಎಂಬುವಕ್ಕೆ ತುಳುವಿನಲ್ಲಿ ಮುನೆ, ಮೊನೆ ; ಮುಗ್ಗೆ, ಮೊಗ್ಗೆ ಎಂದು ಎರಡೂ ರೂಪಗಳಿವೆ. ಮೇನ್ನರರ ಪುಸ್ತಕದಲ್ಲೂ ಇವು ಕಂಡುಬರುತ್ತವೆ. ಮರಿಯಪ್ಪಭಟ್ಟರ ಪುಸ್ತಕದಲ್ಲಿ ಮುಗ್ಗೆ ಇಲ್ಲ. ಮುನೆ-ಮೊನೆ ಎರಡೂ ರೂಪಗಳಿವೆ. ಡಾ. ಭಟ್ಟರು ಇಂತಹ ಶಬ್ದಗಳು ಎಲ್ಲ ಈ ರೀತಿ ಆಗಿವೆ ಎಂದಿದ್ದಾರೆ. ಹೀಗೆ ಆಗಿಲ್ಲದ ಕೆಲವೇ ಶಬ್ದಗಳನ್ನು ನೋಡಿ:
ಪೂ.ದ್ರಾ.-ಕನ್ನಡ-ತುಳು
ಮುಲೈ-ಮೊಲೆ-ಮಿರೆ ಕುಪ್ಪ-ಕೊಪ್ಪ-ಕೊಪ್ಪ
ಕುರೈ-ಕೊರೆ-ಕೊರೆ ಕುವೈ-ಕೊನೆ-ಕೊನೆ
ಸಿರೈ-ಸೆರೆ-ಸೆರೆ ತುಳ್ಳೆ-ತೊಳೆ-ತೊಳೆ
ನಿನ್ನೆ-ನಿನೆ-ನಿನೆ ಮುರೈ-ಮೊರೆ-ಮೊರೆ
ತಮಿಳು, ತೆಲುಗು, ಕನ್ನಡ, ತುಳುಗಳು ಒಂದೇ ತಾಯಿಯ (ಪೂರ್ವ ದ್ರಾವಿಡ, ಮೂಲ ದ್ರಾವಿಡ) ಮಕ್ಕಳೆಂದಾದಲ್ಲಿ ಇವುಗಳೊಳಗೆ ಸಾಮ್ಯಗಳು ಹೆಚ್ಚಿರುವುದು ಸಹಜವೇ. ಕನ್ನಡ ತೆಲುಗುಗಳೊಳಗೆ ಹೆಚ್ಚಿನ ಸಾಮ್ಯತೆ ಇರಲು ರಾಜಕೀಯ, ಭೌಗೋಲಿಕ ಕಾರಣಗಳೂ ಇವೆ. ಕನ್ನಡ ತೆಲುಗು ಪ್ರದೇಶಗಳು ಒಂದನ್ನೊಂದು ತಾಗಿಕೊಂಡಿರುವುದು ಒಂದು ; ಈ ಎರಡೂ ಪ್ರದೇಶಗಳು ಸಾತವಾಹನರ ಕಾಲದಿಂದ ವಿಜಯನಗರ ಕಾಲದವರೆಗೆ ಹೆಚ್ಚಾಗಿ ಒಂದೇ ರಾಜಮನೆತನದ ಆಳ್ವಿಕೆಯಲ್ಲಿದ್ದುದೂ ಇನ್ನೊಂದು. ಎರಡು ಪ್ರದೇಶಗಳು ಒಂದನ್ನೊಂದು ಸಂಧಿಸುವಲ್ಲಿ ಎರಡೂ ಭಾಷೆಗಳನ್ನು ಸಹಜವಾಗಿ ಮಾತಾಡುವ ಜನರೂ ಇದ್ದಾರೆ. ತುಳುವಿಗಂತೂ ತೆಲುಗುವಿನ ಸಂಪರ್ಕವೇ ಇರಲಿಲ್ಲ. ಆದರೂ ಇವೆರಡು ಭಾಷೆಗಳಲ್ಲಿ ಕೆಲವು ಮಾರ್ಪಾಟುಗಳು ಒಂದೇ ರೀತಿಯಲ್ಲಿ ಆಗಿವೆಯಷ್ಟೆ.
ಎರಡು ನುಡಿಗಳು ಒಂದರಿಂದೊಂದು ಬೇರ್ಪಟ್ಟು ಸ್ವತಂತ್ರ ಭಾಷೆಗಳಾದ ಮೇಲೆ ಕೂಡ ಅವುಗಳಲ್ಲಿ ಸಮಾನವಾದ ಪರಿವರ್ತನೆಗಳಾಗಲು ಸಾಧ್ಯವಿದೆ ಎಂದು ಡಾ. ಭಟ್ಟರೇ ಹೇಳಿದ್ದಾರೆ.
ತುಳುವನ್ನು ಕನ್ನಡದಿಂದ ದೂರಮಾಡುವ ಬೇರೆ ಒಂದೆರಡು ಪರಿವರ್ತನೆಗಳನ್ನು ಅವರು ತೋರಿಸಿದ್ದಾರೆ. ಮೂಲ ದ್ರಾವಿಡದ ಶಕಟರೇಫವು ತುಳುವಿನಲ್ಲಿ ದ ಕಾರವಾಗಿದೆ. ಹೊಸ ಕನ್ನಡದಲ್ಲಿ ರ ಕಾರವಾಗಿದೆ ಎಂಬುದು ಒಂದು. ಉದಾ : ಕ. ಮರೆ ತು. ಮದಪ್ಪು ಕ. ಹೆರು ತು. ಪೆದ್ದ್‌ ಕ. ಕೆರ ತು. ಕೆದು ಕ. ಪಾರೆ ತು, ಪಾದೆ.
ಕನ್ನಡದ ಮರೆ (ಅಡಗು) ತುಳುವಿನಲ್ಲಿ ಮದೆಪು ಆಗಿದೆ. ಇದು ‘ಮದಿಲ್’ನಿಂದಲೂ ಬಂದಿರಬಹುದು. ಮರೆ-ಮದಪು ಆಗಿದೆ. ಹೆರು ಎಂಬುದು ಹಳೆಗನ್ನಡದ ಪೆರು. ಕನ್ನಡದಲ್ಲಿ ಪಾದೆ ಎಂಬ ಪ್ರಯೋಗ ಇದೆ. ಪಾರೆ ಎಂಬುದು ಹಾರೆಯಾದರೆ, ತುಳುವಿನಲ್ಲಿ ಪಾದೆ ಎಂಬ ಶಬ್ದವಿಲ್ಲ. ಕಲ್ಲೆಂಬ ಅರ್ಥದಲ್ಲಿ ಪಾದೆ ಎಂಬುದು ತುಳುವಿನಲ್ಲಿದ್ದಂತೆ ಕನ್ನಡದಲ್ಲಿಯೂ ಇದೆ. ಇಂತಹ ಬದಲಾವಣೆ ಆಗದ ಶಬ್ದಗಳು : ಕ್ರಮಶಃ ದ್ರಾವಿಡ, ಕನ್ನಡ, ತುಳು : ಉರೆ-ಉರೆ-ಉರಿ : ಮುರೆ-ಮುರೆ-ಮುರಿ ; ಪರೆ-ಪರೆ-ಪರಿ, ತರೆ-ತರಿ-ತರಿ, ಅರೈ-ಅರೆ-ಅರೆ, ಕರೈ-ಕರೆ-ಕರೆ, ಕಾರು-ಕಾರು-ಕಾರು; ಊರು-ಊರು-ಊರು, ಇತ್ಯಾದಿ. ಪೂರ್ವ ದ್ರಾವಿಡದ ರ ಕಾರ ತುಳುವಿನಲ್ಲಿ ರ ಕಾರವಾಗಿಯೂ, ದ ಕಾರವಾಗಿಯೂ, ಜ ಕಾರವಾಗಿಯೂ ಆಗಿದೆ : ಮೂಱು-ಮೂರು-ಮೂಜಿ, ಆಱು-ಆಱು-ಆಜಿ, ವರೈ-ಬರೆ-ಬಜಿ. ಆದುದರಿಂದ ಈ ಒಂದು ಬದಲಾವಣೆಯಿಂದ ತುಳುವನ್ನು ಮಧ್ಯಭಾರತದ ಕೋಲಾಮಿ, ನಾಯ್ಕಿ ಭಾಷೆಗಳ ಕಡೆಗೆ ಒಯ್ಯಲಾಗದು. ಪೂರ್ವ ದ್ರಾವಿಡದ ೞ ಕಾರ ಱ ಕಾರಗಳು ಈ ರೀತಿ ಬೇರೆ ಬೇರೆ ರೂಪಗಳನ್ನು ಪಡೆಯಲು ಕಾರಣಗಳಿವೆ. ಇವುಗಳ ಉಚ್ಚಾರಣೆಯ ಸ್ಥಾನ ಅನಿರ್ದಿಷ್ಟವಾಗಿದೆ. ‘ವಾಳೈ’ ಎಂಬ ಶಬ್ದವನ್ನು ತಮಿಳರು, ಮಲೆಯಾಳಿಗಳು ಉಚ್ಚರಿಸುವಾಗ ‘ವಾಷೈ, ಎಂದು ಹೇಳಿದಂತೆ ಕೇಳುತ್ತದೆ. ಅವರಲ್ಲಿಯೂ ಈ ಶಬ್ದವನ್ನು ಎರಡು ರೀತಿಗಳಲ್ಲಿ ಉಚ್ಚರಿಸುವವರು ಇದ್ದಾರೆ. ಕೆಲವು ಧ್ವನಿಗಳನ್ನು ಸರಿಯಾಗಿ ಉಚ್ಚರಿಸಲು ಕೆಲವು ಪಂಗಡಗಳಿಂದ ಸಾಧ್ಯವಿಲ್ಲ ಸ್ಕ-ಸ್ತ ಮೊದಲಾಗಿರುವ ಶಬ್ದಗಳಿಗೆ ‘ಇ’ ಸೇರಿಸಿ ಉಚ್ಚರಿಸುತ್ತಾರಷ್ಟೆ.
ಮೂಲದ್ರಾವಿಡದ ೞ ಕಾರವು ಹೊಸಗನ್ನಡದಲ್ಲಿ ಳ ಕಾರವಾಗಿ ತುಳುವಿನ ಕೆಲವು ಉಪಭಾಷೆಗಳಲ್ಲಿ ರ ಕಾರವಾಗಿದೆ ಎಂಬುದು ಇನ್ನೊಂದು.
ಉದಾ : ಕೋಳಿ-ಕೋರಿ, ಕೊಳೆ-ಕುರೆ, ಹುಳ-ಪುರಿ ಇತ್ಯಾದಿ. ಈ ಬದಲಾವಣೆಗೂ ಅಪವಾದಗಳಿಲ್ಲದೆ ಇಲ್ಲ. ತಾಳ್‌-ತಾಳ್‌-ತಾಳ್‌, ಮಾಳ್‌-ಮಾಳ್‌-ಮಾಳ್, ಪಾಳ್‌-ಪಾಳ್‌-ಪಾಳ್, ಕೀಳ್‌-ಕೀಳ್‌-ಕೀಳ್, ಮೂಳೆ-ಮೂಳೆ-ಮೂಳೆ, ಏಳು-ಏಳು-ಏಳು, ಸುಳಿ-ಸುಳಿ-ಸುಳಿ ಮೊದಲಾದುವು. ಡಾ. ಭಟ್ಟರು ತಾವು ಉದಹರಿಸಿದ ಶಬ್ದಗಳು ಕೋಳಿ-ಬಾಳಿ ಎಂದು ಹೇಳುವ ತುಳುವರೂ ಇದ್ದಾರೆಂದು ಹೇಳಿರುವುದರಿಂದ ಈ ಬಗ್ಗೆ ಹೆಚ್ಚು ಚರ್ಚೆ ಅನಗತ್ಯ. ಈ ಪರಿವರ್ತನೆ ತುಳುವಿನಲ್ಲಿ ಇತ್ತೀಚೆಗೆ ನಡೆದುದಾಗಿರಬೇಕೆಂಬ ಅವರ ಅನುಮಾನ ಕೂಡ ಒಪ್ಪಿಕೊಳ್ಳಲು ಕಷ್ಟ. ಈ ಶಬ್ದಗಳು ಎರಡೂ ರೂಪಗಳಲ್ಲಿ ಹಿಂದಿನಿಂದಲೂ ಬಳಕೆಯಲ್ಲಿದ್ದಿರಬೇಕು.
ತುಳುವನ್ನು ಮಧ್ಯಭಾರತದ ದ್ರಾವಿಡಭಾಷೆಗಳ ಕಡೆಗೆ ಸೆಳೆಯುವ ಬೇರೆ ಕೆಲವು ಸಂಗತಿಗಳನ್ನು ಇವರು ಸೂಚಿಸಿದ್ದಾರೆ. ಹಾಗೂ ತುಳುವಿನ ಬಹುವಚನ ಪ್ರತ್ಯಯವನ್ನು ಉಲ್ಲೇಖಿಸಿದ್ದಾರೆ. “ಸಂಬಂಧವಾಚಕ ಶಬ್ಬಗಳು ಮತ್ತು ಅಕಾರಾಂತ ಇಲ್ಲವೇ ಎರಡು ಲಘು ಅಕ್ಷರಗಳನ್ನೊಳಗೊಂಡ ಶಬ್ದಗಳನ್ನು ಬಿಟ್ಟರೆ ಉಳಿದೆಲ್ಲಾ ಕಡೆಗಳಲ್ಲೂ ಈ ಪ್ರತ್ಯಯದ ರೂಪ ‘ಳು’ ಎಂದೇ ಇದೆ” ಎಂದು ಕೆಲವು ಉದಾಹರಣೆಗಳನ್ನು ಕಾಣಿಸಿದ್ದಾರೆ-ಕಂಜಿಳು, ಗಾಡಿಳು, ಕಲ್ಲುಳು ಇತ್ಯಾದಿ, ಕನ್ನಡದಲ್ಲಿ ‘ಗಳು’ ಪ್ರತ್ಯಯವಿದೆಯಲ್ಲದೆ ‘ಳು’ ಪ್ರತ್ಯಯವಿಲ್ಲ, ಎನ್ನುತ್ತಾರೆ. ಮಧ್ಯಭಾರತದ ಪಾರ್ಜಿ, ಕೋಲಾಮಿ ಭಾಷೆಗಳಲ್ಲಿ ಮತ್ತು ತೆಲುಗುವಿನಲ್ಲಿ ಳು (ಲು) ಪ್ರತ್ಯಯದ ಪ್ರಯೋಗ ಹೆಚ್ಚು ಎಂದು ಅವರ ಹೇಳಿಕೆ. ಇದರ ಪರಿಕ್ಷೆ ಇಲ್ಲಿ ಅವಶ್ಯ.
ತುಳುವಿನಲ್ಲಿ ಬಹುವಚನ ಪ್ರತ್ಯಯ “ಳು” ಒಂದೇ ಅಲ್ಲ-“ಕುಳು”, “ರು”, “ಲು” ಕೂಡ ಹತ್ತುತ್ತವೆ. ಳು ಪ್ರತ್ಯಯಕ್ಕಿಂತ ಲು ಪ್ರತ್ಯಯದ ಉಪಯೋಗ ಹೆಚ್ಚು. ಕಂಚಿಳು, ಗಾಡಿಳುಗಳನ್ನು ಕಂಜಿಲು, ಗಾಡಿಲು ಅನ್ನುವ ತುಳುವರೂ ಇದ್ದಾರೆ. ಕನ್ನಡದಲ್ಲಿ “ಅರ್” “ಇರ್” ಹತ್ತುವಂತೆ, ತುಳುವಿನಲ್ಲಿ “ಎರ್” ಹತ್ತುತ್ತದೆ-ಅರಸೆರ್, ಬೆರಣೆರ್‌, ಇರ್ವೆರ್, ನಾಲ್ವೇರ್, ಬಡವೆರ್, ಕೊಂಕಣೆರ್, ಬಲ್ಲಾಳೆರ್ ಇತ್ಯಾದಿ. ತುಳುವಿನ ಅರಸುನಾಕುಳು, ಅಮ್ಮನಾಕುಳು ಮೊದಲಾದುವು ಕನ್ನಡದ ಅರಸರ್ಕಲ್, ಬುಧರ್ಕಳ್, ಮಕ್ಕಳ ಮೊದಲಾದುವಲ್ಲಿ ಇದ್ದಂತೆಯೇ ಇವೆ. ಕನ್ನಡದಲ್ಲಿ ಕೂಡ ಎರಡು ಲಘು ಅಕ್ಷರಗಳಿರುವ ಶಬ್ದಗಳಲ್ಲಿ ಗಳು ಪ್ರತ್ಯಯ ಹತ್ತುವಂತೆ ತುಳುವಿನಲ್ಲಿ ಕುಳು ಪ್ರತ್ಯಯ ಹತ್ತುತ್ತದೆ : ಮರಗಳು-ಮರೊಕುಳು, ಜನಗಳು-ಜನೊಕುಳು, ಇತ್ಯಾದಿ. ಗಳು ಪ್ರತ್ಯಯ ತುಳುವಿನಲ್ಲಿದೆ. ಪ್ರಯೋಗ ವಿರಳವೆಂಬುದು ಸರಿ. ಉದಾಹರಣೆ : ದೈಯ್ಯೊಂಗಳು (ದೈವಂಗಳು), ಕನ್ನಡದಲ್ಲಿ ‘ಕಳು’ ಪ್ರತ್ಯಯವಿಲ್ಲವೇ ? ಮಕ್ಕಳು ಎಂಬುವರ ಏಕವಚನ ಯಾವುದು. ಇದರಲ್ಲಿ ಪ್ರತ್ಯಯ ಯಾವುದು ? ಕನ್ನಡದಲ್ಲಿ ‘ಳು’ ಪ್ರತ್ಯಯದ ಪ್ರಯೋಗ ಹೆಚ್ಚಿಲ್ಲವೇಕೆಂದು ನೋಡುವ. ಹಳೆಗನ್ನಡದಲ್ಲಿ ನಾಮಪದಗಳಲ್ಲಿ ಹೆಚ್ಚಿನವು ಅನ್, ಅಮ್‌ಗಳಲ್ಲಿ ಅಂತ್ಯವಾಗುತ್ತ ಇದ್ದುದರಿಂದ ಈ ಪದಗಳಿಗೆ ‘ಳು’ವನ್ನು ನೇರವಾಗಿ ಹಚ್ಚಿಸಿ ಉಚ್ಚರಿಸಲು ಕಷ್ಟವಾದುದರಿಂದ ‘ಗಳು’ ಪ್ರತ್ಯಯ ಸೇರಲಾರಂಭಿಸಿತು ಹಾಗೂ ಈ ಪ್ರತ್ಯಯವು ಸಾಮಾನ್ಯವಾಗಿ ಹೆಚ್ಚಿನ ಶಬ್ದಗಳಿಗೆ ಹತ್ತಿಕೊಳ್ಳಲಾರಂಭಿಸಿತು ಎಂದು ಕಾಣುತ್ತದೆ. ಮರಂ(ಗ)ಳ್‌, ಜನಂ(ಗ)ಳ್‌, ದನಂ(ಗ)ಳ್‌, ಪೊಲಂ(ಗ)ಳ್‌, ನೆಲಂ(ಗ)ಳ್‌, ಬೆಟ್ಟಂ(ಗ)ಳ್‌ ಇವನ್ನೆಲ್ಲ ಗಕಾರ ಬಿಟ್ಟು ಹೇಗೆ ಉಚ್ಚರಿಸೋಣ ? ಕನ್ನಡದಲ್ಲಿ ಪುರುಷವಾಚಕ ಬಹುವಚನ ಪ್ರತ್ಯಯ ಸಾಮಾನ್ಯವಾಗಿ ‘ಆರ್’ (ಓಜರ್, ಭಟಾರರ್, ಪಾರಾಯಣರ್.)
ತುಳುವಿನಲ್ಲಿ ಇದೇ ಪ್ರತ್ಯಯ, ಆದರೆ ಕನ್ನಡದಲ್ಲಿ ಅಕಾರಾಂತ ಪದಗಳು ತುಳುವಿನಲ್ಲಿ ಎ ಅಥವಾ ಒಕಾರದಿಂದ ಅಂತ್ಯವಾಗುವುದರಿಂದ “ಎರ್” ನಂತೆ ಕಾಣುತ್ತವೆ. ಭಟ್ಟ (ಕ) ಭಟ್ಟೆ (ತು) ಭಟ್ಟರ್-ಭಟ್ಟೆರ್ ; ಮನುಷ್ಯ-ಮನ್ಸೆ ಮನ್ಸೆರ್:-ರಾಜ-ರಾಜೆ-ರಾಜೆರ್, ಇತ್ಯಾದಿ. ತುಳುವಿನಲ್ಲಿ ನಾಮಪದಗಳು ಅನ್, ಅಮ್‌ನಿಂದ ಅಂತ್ಯವಾಗದೆ ಇರುವುದರಿಂದ ‘ಳು’ ಪ್ರತ್ಯಯವನ್ನು ನೇರಾಗಿ ಹಚ್ಚಿ
ಉಚ್ಚರಿಸುವುದು ಸುಲಭವಾಗಿದ್ದುದರಿಂದ ಳು ಪ್ರತ್ಯಯದ ಉಪಯೋಗ ಹೆಚ್ಚು. ಇನ್ನು ಬಹುವಚನ ಪ್ರತ್ಯಯವಿಲ್ಲದೆ, ಸಂಖ್ಯಾವಾಚಕ ಶಬ್ದವನ್ನು ಮುಂದಿನಿಂದ ಸೇರಿಸಿದ ರಡ್ಡ್‌ ಕೈ, ಪತ್‌ ಜನ, ಸಾವಿರ ಆಳ್ ಮೊದಲಾದ ಪ್ರಯೋಗಗಳಿವೆ. ಕನ್ನಡದಲ್ಲಿ ಕೂಡ ಇಂತಹ ಪ್ರಯೋಗಗಳಿವೆ-ಪತ್ತು ಪಯನನುಮಂ, ಸಾಸಿರ ದೀನಾರಮಂ, ಮೂಸಾಸಿರ ಭತ್ತಮಂ, ನಾಲ್ಕು ವೇದಮುಮಾರಂಗಮುಂ ಮೊದಲಾದವು. ಶಾಸನಗಳಲ್ಲಿ ಸಾವಿರ ಕವಿಲೆಯಂ ಎಂಬ ಪ್ರಯೋಗಗಳಿವೆ. ಹೀಗೆ ತುಳುವಿನ ಬಹುವಚನ ಪ್ರತ್ಯಯಗಳಲ್ಲಿ ಒಂದಾದ ‘ಳು’ ಮಾತ್ರದ ಕಾರಣದಿಂದ ಇಂತಹ ನಿರ್ಧಾರ ಮಾಡುವುದು ಸರಿಯಲ್ಲ. ಎರಡು ಲಘು ಅಕ್ಷರಗಳಿಲ್ಲದ ಕೆಲವು ತುಳು ಶಬ್ದಗಳಲ್ಲಿ ಕುಳು ಪ್ರತ್ಯಯವಿರುವುದು ಇದೆ-(ಮರ್ಮಳಡಿಕುಳು). ಎರಡು ಲಘು ಅಕ್ಷರಗಳು ಮಾತ್ರವಿದ್ದಲ್ಲಿ ಳು ಪ್ರತ್ಯಯವಿರುವುದೂ ಇದೆ (ತರೆಳು).
ಒಂದೇ ಮೂಲದ ಭಾಷೆಗಳಲ್ಲಿ ಅವುಗಳ ಪರಸ್ಪರ ಸಂಬಂಧಗಳನ್ನು ತಿಳಿದುಕೊಳ್ಳುವಲ್ಲಿ ಶಬ್ದಭಂಡಾರದ ಸಾಮ್ಯಕ್ಕಿಂತ, ಆ ಭಾಷೆಗಳಲ್ಲಿ ಬಳಕೆಯಲ್ಲಿರುವ ನಾಮಪದಗಳ ವಿಭಕ್ತಿರೂಪಗಳು ಮತ್ತು ಕ್ರಿಯೆಯ ಕಾಲಾರ್ಥಕರೂಪಗಳು ಮುಖ್ಯ ಪ್ರಮಾಣಗಳೆಂದು ಭಾಷಾಶಾಸ್ತ್ರಿಗಳು ಅಭಿಪ್ರಾಯಪಡುತ್ತಾರೆ. ಈ ನಿಯಮವನ್ನು ಕನ್ನಡ ಮತ್ತು ತುಳುವಿಗೆ ಅನ್ವಯಿಸಿದಲ್ಲಿ ಅವುಗಳೊಳಗಿನ ಹತ್ತಿರ ಸಂಬಂಧ ಕೂಡಲೇ ಕಂಡುಬರುತ್ತದೆ.
ಮಾಳ್‌ ಎಂಬ ಒಂದು ಕ್ರಿಯಾಪದವನ್ನು ನೋಡಿದರೆ ಸಾಕು. ಅದೇ ರೀತಿ ಯಾವೊಂದು ನಾಮಪದ ವಿಭಕ್ತಿರೂಪಗಳನ್ನು ಕಂಡರೂ ಸಾಕು. ಇತರ ಭಾಷೆಗಳಲ್ಲಿರುವ ಸಂಬಂಧಕ್ಕಿಂತ ತುಳು ಕನ್ನಡದವು ತೀರ ಹತ್ತಿರವೆಂಬುದು ಖಂಡಿತ. ಶಂಭು ಶರ್ಮರು ಭಾಷಾತೋಲನೆ ಎಂಬ ಅಧ್ಯಾಯದಲ್ಲಿ ಇದನ್ನೆಲ್ಲ ಸುದೀರ್ಘವಾಗಿ ವಿವರಿಸಿದ್ದು ಇಲ್ಲಿ ಪುನರುಚ್ಚರಿಸುವುದು ಬೇಕಿಲ್ಲ. ಹೀಗೆ ತುಳುವನ್ನು ದಕ್ಷಿಣದ ದ್ರಾವಿಡ ಭಾಷೆಗಳಲ್ಲಿ ಇರಗೊಡುವುದು ಸದ್ಯಕ್ಕೆ ಸರಿಯೇ. ತುಳು ಭಾಷೆಯ ವಿಚಾರದಲ್ಲಿ ಇನ್ನೂ ಹೆಚ್ಚಿನ ವಿಮರ್ಶೆ ನಡೆದಲ್ಲಿ ತುಳು ಕನ್ನಡದಿಂದ ಬೇರೆ ಅಲ್ಲವೆಂಬುದೂ ಸಿದ್ಧವಾಗಲಿಕ್ಕೆ ಸಾಕು.
ಒಂದು ಕಾಲಕ್ಕೆ ಸಮಗ್ರ ಕರ್ನಾಟಕದಲ್ಲಿ ಪ್ರಚಾರದಲ್ಲಿದ್ದು ಈಗ ದಕ್ಷಿಣ ಕನ್ನಡದ ತುಳುವಿನಲ್ಲಿ ಮಾತ್ರ ಬಳಕೆಯಲ್ಲಿರುವ ಕನ್ನಡ ಶಬ್ದಗಳನ್ನು ಮುಳಿಯ ತಿಮ್ಮಪ್ಪಯ್ಯನವರು ಹಿಂದೆಯೇ ಸೂಚಿಸಿದ್ದಾರೆ. ಇವರು ತೋರಿಸಿರುವ ಶಬ್ದಗಳಿಗೆ ಇನ್ನೂ ಹಲವು ಶಬ್ದಗಳನ್ನು ಸೇರಿಸಬಹುದು.
ಹೀಗೆ ತುಳು ಕನ್ನಡಗಳಳಗೆ ಇರುವ ಅಂತರಕ್ಕಿಂತ, ಅವುಗಳೊಳಗಿರುವ ತೀರ ಹತ್ತಿರದ ಸಾಮ್ಯವನ್ನು ಸಾಧಿಸುವುದೇ ಸುಲಭವೆಂದು ಕಾಣುತ್ತದೆ. ತುಳು ಕನ್ನಡದ ಒಂದು ಪ್ರಾದೇಶಿಕ ವಿಭೇದವೇ ಎಂಬುದರ ಬಗ್ಗೆ ವಿದ್ವಾಂಸರು ಹೆಚ್ಚಿನ ವಿಮರ್ಶೆ ಮಾಡುವುದು ಅವಶ್ಯವಾಗಿದೆ.

Close

ಬಸಳೆ-ನಾನು

ಬಸಳೆ-ನಾನು

ಜಯಂತ ಕಾಯ್ಕಿಣಿ

ನನ್ನ ಪ್ರೀತಿಯ ಹಿತ್ತಲಲ್ಲಿ
ಅಮ್ಮ ನೆಟ್ಟು ತೊನೆಸಿದ
ಬದನೆಯ ಬಳಿಯೇ
ತಂದು ಸ್ಥಾಪಿಸಿದ್ದೇನೆ
ಬಸಳೆ ಸಾಮ್ರಾಜ್ಯ.
ಚಪ್ಪರಿಸಿದ್ದೇನೆ ಬೆಗ ಬೇಗ.
ಊರು ಕೊಟ್ಟಿದ್ದೇ ತಡ
ಹಬ್ಬಿದ್ದೇ ಹಬ್ಬಿದ್ದು
ತಲೆ ತಗ್ಗಿಸಿ ಮನತುಂಬಿ
ಚಪ್ಪರ ತಬ್ಬಿದ್ದೇ ತಬ್ಬಿದ್ದು.
ಬಚ್ಚಲ ತೀರ್ಥವಾದರೂ ಸರಿ
ಅರಿವಿಲ್ಲದೇ ಹೀರಿ
ಹಸುರಾಗಿ ತುಂಬಿ ಕಂಗೊಳಿಸಿದ್ದು
ಕಂಡಷ್ಟೂ ಸುಖ ಪುಳಕ
ಕಡಿಸಿದಷ್ಟೂ ಚಿಗುರು.
ಜೀವ ಪುಟಿತ.
ಮೊಗ್ಗೆ ಗಿಣ್ಣಿನ ಸಂತೆ
ತಿಂದಷ್ಟೂ ಹಿಂಸೆ ಇತ್ತಷ್ಟೂ
ಚಕ್ರ ಕುಡಿಯೊಡೆತ.

ಅಂದು ಕೊಳ್ಳುತ್ತೇನೆ
ಸೊಪು ಮೆಲುವಾಗ
ದೇಟು ಜಗಿಯುವಾಗ
ನನಗ್ಯಾಕೆ ಇಲ್ಲವೀ-ತೃಪ್ತಸುಖಭೋಗ
ಯಥೇಚ್ಛಯೋಗ.

Close

ಹರಾಜು

ಹರಾಜು

ಎ. ಎನ್‌. ಪ್ರಸನ್ನ

ಅವನು ಮಾತನಾಡುತ್ತಲೇ ಇದ್ದ.
ನನ್ನ ಮನಸ್ಸು ಅಂದು ಬಂದ ಕಾಗದದ ಸುತ್ತ ಗಿರಿಗಿಟ್ಟಲೆಯಾಡುತ್ತಿತ್ತು.
“ಇರಲಿ, ಇಲ್ಲಿ ಕೇಳು” ಎಂದು ಮಾತನ್ನು ನನ್ನ ಕಡೆ ಎಳೆಯಲು ಪ್ರಯತ್ನಿಸಿದೆ. ಆಫ್ರಿಕ, ಅರಬ್ ದೇಶಗಳಲ್ಲಿ ಹುಡುಗಿಯರನ್ನು ಮಾರುವುದು, ಆ ಜನಾಂಗದ ಅನಾಗರಿಕತೆ. ಅವರ ಪಾಡು ಇತ್ಯಾದಿಗಳ ಬಗ್ಗೆ ಲೆಕ್ಚರ್‌ ಕೊಡುತ್ತಿದ್ದ ಜೋಯಿಸ ಮಾತು ನಿಲ್ಲಿಸಿ, ಸಿಗರೇಟು ಹಚ್ಚಿಕೊಳ್ಳುತ್ತಾ, “ಏನು” ಎಂದ.
“ನಮ್ಮಪ್ಪನಿಗೆ ನನ್ನ ಮದುವೆಯ ಬಗ್ಗೆ ಯಾಕಿಷ್ಟು ಆತುರ ?” ಎಂದೆ.
ಮಾತಿನ ಸಂದರ್ಭಕ್ಕೆ ಹೊಂದಿಕೊಳ್ಳಲು ಕೆಲವು ಸಮಯ ಬೇಕಾಯಿತು. ಅನಂತರ, ಹೊಗೆ ಬಿಟ್ಟು, ತನ್ನದೇ ಆದ ಪೋಜು ಕೊಡುತ್ತಾ, “ಬಹಳ ಸಿಂಪಲ್,…ಈ ವಯಸ್ಸಿನಲ್ಲಿ ಅವರಿಗೆ ಸೊಸೆಯನ್ನು ಕಾಣಬೇಕೆಂದು ಆಸೆ ಬರೋದು ತೀರ ಸಹಜ” ಎಂದ.
“ಹಾಗಲ್ಲ, ವಿಷಯ ನೀನಂದುಕೊಂಡಿರುವಷ್ಟು ಸರಳವಲ್ಲ” ಎಂದು ಅನುಮಾನ ಹೇಳಿದೆ.
ಮತ್ತೆ ಅವನ ಲೆಕ್ಚರ್ ಪ್ರಾರಂಭ
“…..ಮನುಷ್ಯನ ಸ್ವಭಾವ ತುಂಬಾ ಕಾಂಪ್ಲೆಕ್ಸ್. ಒಂದೊಂದು ಕ್ರಿಯೆಯನ್ನೇ ಹಿಂಜಿ ಹಿಂಜಿ ಅವುಗಳ ಹೊರನೋಟ, ಒಳಮರ್ಮ ಇತ್ಯಾದಿಗಳನ್ನು ನೋಡುತ್ತಾ ಹೋದರೆ ಸಂಕಟವೇ ಸಿಕ್ಕೋದು…ಅದರ ಬದಲು ಭಾವನೆಗಳನ್ನು ಒಟ್ಟಾಗಿ ನೋಡಿದರೆ ಪರಸ್ಪರ ಹಿತ…”
ತುಂಬಾ ಸಲೀಸಾಗಿ ಪೇರಿಸಿದ ಈ ಮಾತುಗಳನ್ನು ನಾಲ್ಕಾರು ಕಡೆ ಓದಿದ ನೆನಪು. ಅವನ್ನೆಲ್ಲ ಈಗಿನ ಸಂದರ್ಭಕ್ಕೆ ಹೋಲಿಸಿ ಬೆಲೆ ಕಟ್ಟಲು ಪ್ರಯತ್ನಿಸಿದೆ. ಅವನು ಮೂರು ನಾಲ್ಕು ಬಾರಿ ಹೊಗೆ ಬಿಟ್ಟು, “ಇವತ್ತೇನು ವಿಶೇಷ, ಹೀಗಿದೀಯ” ಎಂದದ್ದಕ್ಕೆ ಸುಮ್ಮನೆ ಅವನ ಮುಖ ನೋಡಿದೆ.
‘ನಾನೇ ಹೇಳ್ಲಾ……ಮದುವೆ ಮಾಡ್ಕೊಂಡುಬಿಡು, ಎಲ್ಲ ಸರಿಯಾಗುತ್ತೆ” ಎಂದು ನಕ್ಕು ಬೆನ್ನಿಗೆ ಗುದ್ದಿದ.
ಬೇಜಾರಾಯಿತು, ಹೊರಟೆ.
ಬ್ಯೂಸಿ ನಡೆಯುತ್ತಿದ್ದವನು ತಲೆ ಎತ್ತಿದೆ. ಅರೆ ! ಇವಳು ! ಆಶಾ !! ಕಾಲೇಜಿಗೆ ಸೇರಿದ್ದರೂ ಲಂಗದಲ್ಲಿ ಜಿಗಿಯುತ್ತಿದ್ದ ಮರಿ. ರೂಮಿಗೆ ಬಂದು ಗಂಟೆಗಟ್ಟಲೆ ಚಲ್ಲು ಚಲ್ಲು ಹರಟುತ್ತಾ ಫಿಲ್ಡ್‌ಫೇರ್‌ನಲ್ಲಿ ಮುಳುಗಿರುತ್ತಿದ್ದವಳು. ಇಷ್ಟು ಬೇಗ ಅವಳ ಕಣ್ಣು, ಎದೆಯ ಮೇಲೆ ಪವಾಡ ನಡೆದದ್ದು ಹೇಗೆ ?-ಯೋಚಿಸಿದೆ. ಪಕ್ಕಕ್ಕೆ ಹೋಗುವಾಗ ಪರಿಚಯದ ನಗು ಎಸೆದೆ. ಗುರುತಿಸಿದರೂ ಪ್ರತಿಕ್ರಿಯೆ ವ್ಯಕ್ತಪಡಿಸದೆ ಹೋದ ಅವಳ ವರ್ತನೆಗೆ ಕಾರಣ ಹುಡುಕಲು ಸಾಧ್ಯವಾಗಲಿಲ್ಲ. ಸೊಕ್ಕು ಬಿಟ್ಟು ಸ್ವಲ್ಪ ಮ್ಯಾನರ‍್ಸ್‌ ಕಲಿತುಕೊಂಡರೆ ವಾಸಿ ಎಂದುಕೊಂಡು ಹೆಜ್ಜೆ ಹಾಕಿದೆ. ರೂಮು ಸೇರುವಷ್ಟರಲ್ಲಿ ಮನಸ್ಸಿನೊಳಗೆ ಅವಳ ತುಟಿಯ ರಂಗಿನ ಉಯ್ಯಾಲೆ.
ಬಿಸಿಲಿನಲ್ಲಿ ಬಂದದ್ದಕ್ಕೆ ರೂಮಿನೊಳಗೆ ಬರುತ್ತಲೇ ಗವ್ ಎಂದು ಕತ್ತಲೆ ಕಣ್ಣಿಗೆ ಮೆತ್ತಿತು.
ಬಾಗಿಲು ಬಡಿದ ಶಬ್ದ. ತೆಗೆದಾಗ ಧುತ್ ಎಂದು ಕಂಡದ್ದು ಇನ್‌ಸ್ಪೆಕ್ಟರ್‌ ಕಾಳೆ. ಕಸಿವಿಸಿ, ಭಯ, ಕುತೂಹಲ ಒಟ್ಟಿಗೇ ಗಂಟಲಲ್ಲಿ ಕುಕ್ಕಿದವು. “ಒಳಗೆ ಬನ್ನಿ” ಎಂದೆ.
ನಾನು ಬೆಂಗಳೂರಿನಲ್ಲಿ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಮದನ್‌ ಅಂತ ಒಬ್ಬ ಪಂಜಾಬಿ ನನ್ನ ಸಹೋದ್ಯೋಗಿಯಾಗಿದ್ದ. ಅವನ ಜನಬಳಕೆ ಪ್ರವೃತ್ತಿಯಿಂದ ಯೂನಿಯನ್ನಿನ ಸೆಕ್ರೆಟರಿ ಪಟ್ಟ ಗಿಟ್ಟಿಸಿದ. ಜೊತೆಗೆ ಇತರ ಹಲವಾರು ಹವ್ಯಾಸ. ಅವನ ಮನೆಯ ರಸ್ತೆಯಲ್ಲೇ ನಾನಿದ್ದದ್ದು. ಅವನ ಹತ್ತಿರ ಇದ್ದ ಆಸ್ತಿ ಮೂರಷ್ಟೆ. ಅವನ ಹೆಂಡತಿ ಚಂಚಲ್. ವೆಸ್ಪಾ ಸ್ಕೂಟರ್ ಮತ್ತು ಅಲ್ಸೇಷಿಯನ್‌ ನಾಯಿ. ಆ ಭಯಂಕರ ರೂಪದ ನಾಯಿಗೆ ಹೆದರಿ ಹೆಚ್ಚಾಗಿ ಅವರ ಮನೆಗೆ ಹೋಗುತ್ತಿರಲಿಲ್ಲ. ಇದ್ದಕ್ಕಿದ್ದಂತೆ ಆ ರಾತ್ರಿ ಅವಳು ಬಂದಾಗ ದಿಗಿಲು ಬಿದ್ದೆ. ಅವಳು ಹರಕು ಇಂಗ್ಲಿಷಿನಲ್ಲಿ “ಮೈ ಹಸ್ಬೆಂಡ್……ಸ್ಕೂಟರ್ ಆಕ್ಸಿಡೆಂಟ್” ಎಂದಳು. ಅವಳ ಜೊತೆ ಹೊರಟೆ. ಮೊದ್ದು ಮೊದ್ದಾಗಿದ್ದ ಅವಳು ಗಾಬರಿಯಿಂದ ವಿಚಿತ್ರ, ಆಕರ್ಷಕಳಾಗಿ ಕಂಡಳು. ನನ್ನಲ್ಲಿ ತಮಾಷೆ ಮತ್ತು ಆತಂಕ ಒಟ್ಟಿಗೇ ಹುಟ್ಟಿದವು. ಹುಡುಗನೊಬ್ಬನ ಮೇಲೆ ಸ್ಕೂಟರ್ ನುಗ್ಗಿಸಿ ಹಾಗೆ, ಮೂಗು ಬಾಯಿಗೆಲ್ಲ ಬಲವಾಗಿ ಪೆಟ್ಟು ಬಿದ್ದು ರಕ್ತ ಸುರಿಯುತ್ತಿತ್ತು. ಬಲಗಾಲು ಮುರಿದ ಆ ಹುಡುಗ ಮತ್ತು ಮದನ್ ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಿದೆವು. ಅಂದಿನಿಂದ ಮದನ್‌ಗೆ ಕಾಫಿ, ಊಟ ಇತ್ಯಾದಿಗಳಿಗೆ ಅವನ ಮನೆ, ಆಸ್ಪತ್ರೆಗೆ ಲವಲವಿಕೆಯ ಓಡಾಟ. ಇಷ್ಟಾದರೂ ಬೊಗಳುತ್ತಿದ್ದ ನಾಯಿ ಚಂಚಲ್, “ಥೂ ಕತ್ತೆ……… ಬೊಗಳಬೇಡ. ಇವರು ನಮ್ಮವರೇ” ಎಂದು ಹೇಳಿ ಸುಮ್ಮನಾಗಿಸುತ್ತಿದ್ದಳು. ಅಂದು ಅವಳು, “ನೋಡಿ ಇದು ಹೇಳಿಕೇಳಿ ಹಳೆ ಮನೆ. ಎಲ್ಲೆಂದರಲ್ಲಿ ಸಂದಿಗೊಂದಿಗಳಲ್ಲಿ ಝರಿಗಳು ಸೇರಿಕೊಂಡಿವೆ. ರಾತ್ರಿಯಲ್ಲಿ ತುಂಬ ಭಯವಾಗುತ್ತೆ. ನೀವು ಸ್ವಲ್ಪ ದಿನ ಇಲ್ಲೆ ಬಂದರೆ……” ಎಂದಳು. ನನ್ನ ಇಪ್ಪತ್ತೈದು ವರ್ಷದಲ್ಲಿನ ಹುಡುಗಿಯ ಸಂಪರ್ಕದ ಅಭಾವದಿಂದ ಖುಷಿ. ಭಯಗಳು ಗೋಜಲು ಗೋಜಲಾಗಿ ಕಣ್ಣಲ್ಲಿಳಿದವು. ಅಂದು ಅವಳು ನಗು ಕುಲುಕುತ್ತಾ ಕಾಫಿ ತಂದುಕೊಟ್ಟು ಸ್ನಾನಕ್ಕೆ ಹೊರಟಳು. ಹೋಗುವಾಗ ಮೊಲೆಗಳನ್ನು ಅರ್ಧ ಕಾಣಿಸಿಕೊಂಡು ಹೋದದ್ದು ಕೇವಲ ಆಕಸ್ಮಿಕವೇ ಹೇಗೆ ಎಂದು ಯೋಚಿಸಿದೆ. ಆಗಲೇ ಆ ನಾಯಿಗೆ ನನ್ನದು ವಿಪರೀತ ಬಳಕೆ. ಬೊಗಳುವ ಬದಲು ಬಾಲವಾಡಿಸಲು ಪ್ರಾರಂಭಿಸಿ ಬರುಬರುತ್ತಾ ಜೊಲ್ಲು ಸುರಿಸಿ ಕುತ್ತಿಗೆಗೇ ಜೋತುಬೀಳುತ್ತಿತ್ತು. ಸಮಾಧಾನ ಮಾಡುವುದು ನಾನು ಸುಸ್ತು……ಮದನ್ ಆಸ್ಪತ್ರೆಯಿಂದ ಬಂದ ಮೇಲೆ ಅವನ ಸ್ಕೂಟರ್ ತರಲು ಪೋಲಿಸ್ ಸ್ಟೇಷನ್ನಿಗೆ ಹೋದಾಗ ಕಾಳೆ ಪರಿಚಯವಾದದ್ದು…….
“ಈಗೇನು ಮಾಡ್ಕೊಂಡಿದೀರ”
-ಕುಳಿತುಕೊಳ್ಳುತ್ತಾ ಕೇಳಿದ ಕಾಳೆ.
“ಕಾಲೇಜು ಹೈಸ್ಕೂಲು ಹುಡುಗರಿಗೆ ಪಾಠ ಹೇಳ್ತಾ ಇದ್ದೀನಿ.”
“ನೋಡಿ ಎಂಥ ಅನ್ಯಾಯ………ಅಲ್ರೀ ನಿಮ್ಮ ಫ್ಯಾಕ್ಟರಿ ಮ್ಯಾನೇಜರು ಮನುಷ್ಯನೇನ್ರೀ…”
ಅವನ ಮಾತಿಗಿಂತ ಬಂದ ಕಾರಣವನ್ನು ಅವನ ಕಣ್ಣಲ್ಲಿ ಹುಡುಕಿದೆ.
“ಅಂದಹಾಗೆ ನಿಮ್ಮ ಪಂಜಾಬಿ ದೋಸ್ತ್‌ ಸಮಾಚಾರ ಗೊತ್ತಲ್ಲ ನಿಮ್ಗೆ ?” “ಏನಾಯ್ತು, ಅವನ್ಗೆ ?”
“ಏನಿಲ್ಲ, ಯೂನಿಯನ್ ಕಟ್ಟಿಕೊಂಡು ಅವನ್ನ ಮುಂದೆ ಬಿಟ್ಟು ನೀವೆಲ್ಲ ಹಿಂದೆ ನಿಂತಿರಿ, ಮಾರ‍್ಕೆಟ್ ಇಲ್ಲ ಅಂತ ಆ ಮ್ಯಾನೇಜ್‌ಮೆಂಟಿನವರು ನಿಮ್ಮನ್ನು ಮನೆಗೆ ಕಳಿಸಿದರು… ಅಲ್ರೀ, ಅವರು ಕೊನೇಪಕ್ಷ ನಿಮ್ಮ ಸರ‍್ವೀಸ್ ಸರ್ಟಿಫಿಕೇಟ್ ಕೊಡಬೇಕಿತ್ತಲ್ರೀ…… ಅದಕ್ಕೂ ತರಲೆ ತೆಗೆದರು ಅಲ್ವೆ……”
ತೀರ ಸರಾಗವಾಗಿ ಬಂದ ಅವನ ಮಾತುಗಳಿಗೆ ಎದ್ದು ಕಪಾಳಕ್ಕೆ ಬಿಗಿಯಬೇಕೆನ್ನಿಸಿತು. ಸುಮ್ಮನಿದ್ದೆ.
“ನನಗೊಬ್ಬನಿಗೇ ಅಲ್ಲವಲ್ಲ. ಇನ್ನೂ ಬಹಳ ಜನಕ್ಕೆ ಹಾಗೆ ಆಯ್ತು” ಎಂದು ಮಾಧಾನ ಪಡಿಸಿಕೊಳ್ಳುವನತ ಹೇಳಿದೆ.
“ನಿಜ ರೀ, ಆದರೆ ಅದರ ಲಾಭಾನೆಲ್ಲ ಯಾವನೋ ಪರದೇಶಿ, ಆ ಪಂಜಾಬಿ ಗಿಟ್ಟಿಸಿ ಕೊಂಡನಲ್ರೀ” ಎಂದ.
“ಅಂದ್ರೆ ?”
“ಅಂದ್ರೆ……ಸ್ಟೋರ್‌ನಿಂದ ಸುಮಾರು ಐವತ್ತು ಅರವತ್ತು ಸಾವಿರ ರೂಪಾಯಿನ ಸಾಮಾನನ್ನು ಸ್ಟೋರ್‌ ಕೀಪರ್ ಜೊತೆ ಸಾಮೀಲಾಗಿ ಸಾಗಿಸಿದ ; ಬಚಾವಾದ… ಇದೆಲ್ಲ ನಿಮ್ಗೆ ಗೊತ್ತಿಲ್ವೆ ?”
ನನಗೆ ಅವನು ಬಂದ ಕಾರಣ ಕೇಳುವ ತವಕ ಹೆಚ್ಚಾಯಿತು.
ಕಾಳೆ ಈಗ ಧ್ವನಿ ಬದಲಾಯಿಸಿದ, “ಅಲ್ಲ, ನೀವು ಆತನ ಆಕ್ಸಿಡೆಂಟ್‌ ಆದಾಗ ಬಂದಿದ್ರಲ್ಲ…”
“ಹೌದು”
“ಅದಕ್ಕೆ ಸಾಕ್ಷಿ ಬೇಕಾಗಿದೆ…ನೋಡಿ, ನಿಮ್ಮನ್ನ ಪತ್ತೆ ಹಚ್ಚಿದ್ದೆ ದೊಡ್ಡ ಕಷ್ಟ”
“ಸ್ವಲ್ಪ ವಿವರಿಸಿ ಹೇಳಿ” ಎಂದೆ ಸಾವರಿಸಿಕೊಳ್ಳುತ್ತಾ.
“ಏನಿಲ್ಲ. ನಾವು ಆಕ್ಸಿಡೆಂಟ್ ಕೇಸ್ ಬುಕ್ ಮಾಡಿದ್ವಿ. ಈಗ ಆ ಕೇಸಿನ ಹಿಯರಿಂಗ್‌ ಇದೆ. ನೀವು ಕೋರ್ಟಿಗೆ ಬರಬೇಕಾಗುತ್ತೆ. ಅದಕ್ಕೆ ನಿಮ್ಗೆ ನೋಟೀಸ್ ಸಮನ್ ಮಾಡ್ಲಿಕ್ಕೆ ಬಂದಿದ್ದೇನೆ.”
ಅವನ ಯೂನಿಫಾರಂ ಮಾತಾಡಿತ್ತು. ಈಗವನು ಪಕ್ಕಾ ಧೂರ್ತನ ಹಾಗೆ ಕಂಡ.
ಮುರಿಗಪ್ಪನನ್ನು ಅರ್ಜಂಟಾಗಿ ನೋಡಬೇಕು. ಈಗಿರೋ ಅವಕಾಶ ತಪ್ಪಿಸಿಕೊಂಡರೆ ಆಮೇಲೆ ಚಿಪ್ಪು ಹಿಡಿಯಬೇಕಾಗುತ್ತೆ. ಗುಪ್ಪೆಯಾಗಿ ನಿಂತ ಜವಾಬ್ದಾರಿಯಲ್ಲಿ (ಅಮ್ಮನ ಕಾಯಿಲೆ, ಶಾಮು ಶ್ರೀಧರ ಅವರ ಓದು, ಕುಸುಮ ಲಲಿತರ ಓದು ಮದುವೆ) ನಿಲ್ಲಲೊಂದು ನೆಲೆ ಬೇಕು. ಇದ್ದ ಕೆಲಸ ಮುಂಡಮೋಚಿಕೊಂಡು ಹೋದ ಮೇಲೆ ಪ್ರತಿ ದಿನಕ್ಕೆ ಆ ದಿನಕ್ಕಿಂತ ಹೆಚ್ಚು ಕರಗುತ್ತಿದ್ದೇವೆಂದು ಅನ್ನಿಸಿಕೆ. ಹೇಗಿದ್ದರೂ ಅಪ್ಪನಿಗೂ ಮುರಿಗಪ್ಪನಿಗೂ ಹಳೇ ದೋಸ್ತಿ. ಅದನ್ನುಪಯೋಗಿಸಿಕೊಳ್ಳಬೇಕು… ಅಲ್ಲ. ಈ ಮುರಿಗಪ್ಪನಿಗೆ ಮನೆ ಕಟ್ಟೋದಕ್ಕೆ ಬೇರೆ ಜಾಗ ಇರ‍್ಲಿಲ್ವೆ ? ಎಲ್ಲಾ ಬಿಟ್ಟು ಆ ಸ್ಮಶಾನದ ಹತ್ತಿರ ಭಾರಿ ಬಂಗ್ಲೆ ಕಟ್ಟಿಸಿದ್ದಾನೆ…ಅವನ ಹತ್ತಿರ ಹೋದರೆ ಸಾಯಂಕಾಲದ ಪಾಠ ಚಕ್ಕರ‍್ರು ಹುಡುಗರಿಗೆ…ಅಲ್ಲ. ಆ ಜೋಯಿಸ ಹೇಳಿ ಕಳಿಸೋದು ನೋಡಿದರೆ ಅವನಿಗೆ ನಾಚಿಕೆ ಆಗಬೇಕು. ಅವನ ಸೋದರ ಅಳಿಯ ಒಬ್ಬ ಇದ್ದಾನಂತೆ ಡಿಗ್ರಿ ಪರೀಕ್ಷೆಗೆ. ಅವನಿಗೆ ಬರಿ ನೋಟ್ಸ್ ಮಾತ್ರ ಕೊಟ್ಟರೆ ಸಾಕಂತೆ. ಏನೋ ಒಂದಿಷ್ಟು ಕೊಡುತ್ತಾನಂತೆ…
ದೆವ್ವದಂಥ ಮನೆ. ಪೋರ‍್ಟಿಕೋದಲ್ಲಿ ಹತ್ತಾರು ಜನ. ‘ಸಾಹೇಬರು ಇದ್ದಾರೆ ಬನ್ನಿ’ ಎಂದ ಜವಾನ. ಒಳಕ್ಕೆ ಹೋದೆ. ಅಲ್ಲಿ ನಾಲ್ಕೈದು ಜನ ಕೆಟ್ಟದಾಗಿ ನಗುತ್ತಿದ್ದರು.
ಅವರ ಮಧ್ಯೆ ಕೇವಲ ಡ್ರಾಯರು, ಬನಿಯನ್ನು ಹಾಕಿಕೊಂಡು ಅಸಹ್ಯ ಭಂಗಿಯಲ್ಲಿ ಸೋಫಾದ ಮೇಲೆ ಕುಳಿತಿದ್ದ ವ್ಯಕ್ತಿಯೇ ಮುರಿಗಪ್ಪನೆಂದು ನಂಬುವುದು ಕಷ್ಟವಾಯ್ತು. ಹಲ್ಕಿರಿದು “ನಮಸ್ಕಾರ’ ಎಂದು ಅವರ ಕಡೆ ನೋಡಿ ಕುಳಿತು ಸುತ್ತ ಕಣ್ಣಾಡಿಸಿದೆ. ಅವನು ರಾಷ್ಟ್ರನಾಯಕರ ಜೊತೆ ತೆಗೆಸಿಕೊಂಡ ಫೋಟೋಗಳು, ಷೋಕೇಸು, ಆಲ್ಮೆರ ಇತ್ಯಾದಿ ಸಾಮಾನುಗಳು. ನನ್ನನ್ನು ಅವನು ಗಮನಿಸಿದ ಸೂಚನೆ ಕಾಣಲಿಲ್ಲ. “ಲೋ” ಎಂದು ಕೂಗಿದ. ತಕ್ಷಣ ಒಬ್ಬ ಪಿಲ್ಟು ಓಡಿ ಬಂದ. “ಮೊನ್ನೆ ಮಂತ್ರಿಗಳು ಬಂದಾಗ ತೆಗಿಸಿಕೊಂಡ ಫೋಟೋ ಆಲ್ಬಮ್ ತಾ” ಎಂದ. ಪಿಲ್ಕು ಅವಸರದಿಂದ ಹುಡುಕಿ ತಂದ. ಮುರಿಗಪ್ಪ ಉಳಿದವರಿಗೆಲ್ಲ ತೋರಿಸುತ್ತಾ ವಿವರಣೆ ಕೊಡಲು ಪ್ರಾರಂಭಿಸಿದ. “ನೋಡಿ, ನೋಡಿ, ಹೆಂಗವೆ…ಅವ್ರಿಗೆ ನಾವು ಅಂದ್ರೆ ಎಷ್ಟು ಅಭಿಮಾನ” ಎಂದು ನಕ್ಕ. ಮಿಕ್ಕವರೆಲ್ಲ ಖುಷಿಪಡುತ್ತಿರುವಂತೆ ಕಾಣಿಸಿತು. ಮತ್ತೊಂದು ಫೋಟೋ ತೋರಿಸಿ, “ಹಾ……ಇಲ್ನೋಡಿ…ಹೆಂಗೆ ಕಾರಿನೊಳಕ್ಕೆ ಬಾ ಅಂತ ಕರೀತವ್ರೆ” ಎಂದು ಹೊಟ್ಟೆ ಸವರಿಕೊಂಡ. ಸುಮ್ಮನೆ ನಿಂತಿದ್ದರಿಂದ ಸಂಕೋಚ ಬೆಳೆಯಿತು. ಆದರೆ ಅವನನ್ನು ಮಾತನಾಡಿಸುವ ರೀತಿ ಹೊಳೆಯಲಿಲ್ಲ. ಅವರಲ್ಲೊಬ್ಬ “ಏನು ಸ್ವಾಮಿ, ಸುಮ್ನೆ ಒಣ ಆಹ್ವಾನಾನೋ ಅಥವಾ…” ಎಂದ. ಉತ್ತರವಾಗಿ ಮುರಿಗಪ್ಪ ತೊಡೆ ಕುಣಿಸಿ ನಕ್ಕ. “ದೇಶ ಉದ್ಧಾರ ಆಗಬೇಕಾದರೆ ಇಂಥವರಿಂದ. ಏನು ? ಏನಂತೀರಿ ?” ಎಂದು ಎಲ್ಲರ ಕಡೆ ನೋಡುತ್ತಾ, ನನ್ನ ಕಡೆ ತಿರುಗಿ ದೊಡ್ಡದಾಗಿ ಆಕಳಿಸಿದ. ನನ್ನ ಯೋಚನೆ, ಅಭಿಪ್ರಾಯಗಳೆಲ್ಲ ಅವನ ಬಾಯೊಳಕ್ಕೆ ನುಗ್ಗಿದವು. ಪೆದ್ದನಂತೆ ಹಲ್ಕಿರಿದು “ಹೌದು” ಎಂದೆ.
ಅವರಲ್ಲಿ ಕೆಲವರು ಎದ್ದು ನಿಂತ ನಂತರ, “ಯಾರು ನೀವು ತಿಳೀಲಿಲ್ಲ” ಎಂದ ಕಣ್ಣೊಳಗಿನ ಪಿಸುರು ತೆಗೆಯುತ್ತಾ.
ಮುದುಡಿದ್ದ ಮೈ ಸಡಲಿತು, “ನಾನು….ನಾನು ನಾಗರಾಜರಾಯರ ಮಗ. ನಮ್ಮ ತಂದೆಯವರು ನಿಮ್ಗೆ ಗುರ‍್ತಿರಬೇಕು. ಹಿಂದೆ ಒಂದ್ಸರ‍್ತಿ ಅವರ ಜೊತೆ ಬಂದಿದ್ದೆ. ನಿಮ್ಗೆ ಮರ‍್ತುಹೋಗಿದೆಯೋ ಏನೋ…”
ಮುರಿಗಪ್ಪ ಯೋಚಿಸಬೇಕಾಯಿತು. “ಕೂತ್ಕೊಳ್ಳಿ” ಎಂದ.
“ನೀವು ಊರಲ್ಲಿದ್ದಾಗ ನಮ್ಮನೇಲೆ ಬಾಡಿಗೆಗೆ ಇದ್ದಿರಂತೆ…ಅಪ್ಪ ಹೇಳಿದ್ದರು”.
“ಹಾ….ಹೌದೌದು…ನಾಗರಾಜರಾವ್‌ ಅಲ್ವೆ…ಸರಿ…ಸರಿ….ಈಗ ನಿಮ್ಮ ತಾಯಿ ಆರೋಗ್ಯವಾಗಿದ್ದಾರಾ ?”
“ಪರವಾಗಿಲ್ಲ ಈಗ ಸ್ವಲ್ಪ ವಾಸಿ”.
“ನಿಮ್ಮ ತಂದೆಯವರು ತುಂಬಾ ಸಂಭಾವಿತರು….ಅದಿರ‍್ಲಿ ಏನು ಸಮಾಚಾರ ?” ಹೇಗೆ ಪ್ರಾರಂಭಿಸುವುದು ಎಂದು ಯೋಚಿಸಿದೆ. ನಾನು ಮಾತನಾಡುವ ಮುಂಚೆ “ಲೋ, ಯಾರಿದೀರೋ ಅಲ್ಲಿ” ಎಂದು ಕೂಗಿದ. ಮತ್ತೆ ಆ ಪಿಲ್ಟು ಓಡಿ ಬಂದ. “ಹೊರಗಿರೋರನ್ನೆಲ್ಲ ಕರಿ” ಎಂದ.
ಅವರೆಲ್ಲ ಇನ್‌ಕಮ್ ಸರ್ಟಿಫಿಕೇಟಿಗೆ ಬಂದಿದ್ದರು. ಇದ್ದ ಲಹರಿಯಲ್ಲೇ ಮುಂದುವರೆಯುತ್ತಾ ಎಲ್ಲದಕ್ಕೂ ಸಹಿ ಮಾಡಿ ಪಿಲ್ಟುಗೆ ರಬ್ಬರ್ ಸ್ಟ್ಯಾಂಪ್ ಒತ್ತಲು ಹೇಳಿದ.
“ನೋಡಿ, ಒಂದ್ನಿಮಿಷ ಪುರುಸೊತ್ತು ಕೊಡೋಲ್ಲ ಈ ಜನಗಳು……ಹೆ. ಹೆಹೆ…” ಆದ್ರೂ ಅವರಿಗೇ ತಾನೆ ನಾನಿರೋದು” ಎಂದು ಕುತ್ತಿಗೆ ತಿಕ್ಕಿಕೊಳ್ಳಲು ಪ್ರಾರಂಭಿಸಿದ. ಕೆಲವು ಸೆಕೆಂಡುಗಳು ಇಬ್ಬರಿಂದಲೂ ಮಾತಿಲ್ಲ.
ಅನಂತರ ನಗು ಮುಖ ಮಾಡಿ, ನಗುವನ್ನು ಹಾಗೆಯೇ ಹಿಡಿದಿಟ್ಟು, “ನಾನು ಬೆಂಗಳೂರಿನಲ್ಲಿ ಒಂದು ಫ್ಯಾಕ್ಟರೀಲಿ ಕೆಲಸ ಮಾಡ್ತಿದ್ದೆ……. ನಮಗೂ ಮ್ಯಾನೇಜ್ಮೆಂಟಿಗೂ ಯಾವುದೋ ವಿಷಯದ ಕಾರಣದಿಂದ ಸರಿ ಬರಲಿಲ್ಲ. ಆದ್ದರಿಂದ…… ಒಂದಿಷ್ಟು ಜನರನ್ನು ವಾಪಸ್ಸು ಕಳಿಸಿದರು……ಅವರಲ್ಲಿ ನಾನೂ ಕೂಡ…… ಮುರಿಗಪ್ಪ ಸ್ವಲ್ಪ ಬಿಗಿಯಾದ.
“ಈಗ ಒಂದೆರಡು ಮೂರು ಕಡೆ ಅಪ್ಲಿಕೇಷನ್ ಹಾಕಿದ್ದೀನಿ…ಒಂದೆರಡಕ್ಕೆ ಇಂಟರ್‌ವ್ಯೂ ಕೂಡ ಬಂದಿದೆ……ಅದಕ್ಕೆ ನಿಮ್ಮನ್ನು ನೋಡೋಣಾಂತ ಬಂದೆ……”
ಮುರಿಗಪ್ಪ ಚೂಪುಗಣ್ಣಲ್ಲಿ ನೋಡಿ ಮಂಡಿಯ ಮೇಲೆ ತಾಳ ಕುಟ್ಟುತ್ತಾ ಒಂದೆರಡು ನಿಮಿಷ ಕಳೆದ. ಅವನಿಗೆ ಅತ್ಯಂತ ನಿಕೃಷ್ಟವಾಗಿ ಕಂಡ ಸೆಕೆಂಡುಗಳು ನನಗೆ ತೀರ ಮುಖ್ಯವಾದವು. ಅವನ ಹೊಲಸು ಕಣ್ಣು, ಮೂಗು, ತುಟಿ, ಹಲ್ಲುಗಳ ಮಾತನ್ನೇ ಅತಿ ಉದ್ವಿಗ್ನತೆಯಿಂದ, ಉಸಿರು ಬಿಗಿ ಹಿಡಿದು ಪರೀಕ್ಷಿಸಿದೆ. ಒಂದು ಕ್ಷಣಕ್ಕೆ ಅವನ ನಡವಳಿಕೆ ಜಿಗುಪ್ಸೆ, ಬೇಜಾರು ಹುಟ್ಟಿಸಿತು. ತಕ್ಷಣವೇ ನನ್ನ ನೆಲೆಯ ಪ್ರಶ್ನೆಯಾದ್ದರಿಂದ ತಾಳ್ಮೆಯನ್ನು ಕಲೆ ಹಾಕಿದೆ. ಆದರೆ ಆ ಗುಪ್ಪೆ ತಕ್ಷಣವೇ ಕರಗಿ ಕುಳಿತಿದ್ದ ಸೋಫಾದೊಳಗಿಂದ ತೂರಿಕೊಂಡು ನೆಲದೊಳಕ್ಕೆ ಮೆಟ್ಟಿದಂತೆ ಅನುಭವ. ಮತ್ತೆ ಮೇಲೇಳಲು ವ್ಯರ್ಥ ಪ್ರಯತ್ನ. ಮತ್ತೆಲ್ಲೋ ನಗು……ನೋವು…… ಏನಾದರೂ ಸರಿ. ಅವನು ಮಾತಾಡಿದರೆ ಸಾಕೆನಿಸಿತು. ಹೀಗೆ ಕೇವಲ ನಿರೀಕ್ಷೆಯಲ್ಲಿ ನೆಗೆದು ಬೀಳುವುದು ಬೇಡವೆಂದು ತೀವ್ರ ಅನ್ನಿಸಿಕೆ.
ಮುರಿಗಪ್ಪ ಎದ್ದು ನಿಂತು ಬಾಯಿಬಿಟ್ಟ.
“ನೋಡಿ ಇವರೆ…… ನಿಮ್ಮ ಹೆಸರೇನು ?……ಬರೋರೆಲ್ಲರೂ ಇಂಥ ಯಾವುದಾದರೊಂದು ಕೆಲಸ ಇಟ್ಕೊಂಡೇ ಬರ‍್ತಾರೆ……ಎಷ್ಟು ಜನಕ್ಕೆ ಸಮಾಧಾನ ಮಾಡೋಕೆ ಆಗುತ್ತೆ ?………ಜೊತೆಗೆ ಉಂಗುಷ್ಟದಿಂದ ನೆತ್ತೀವರೆಗೂ ನುಂಗೋರೆ ಇದಾರೆ” ನನ್ನ ಗಂಟಲೊಳಗಿನ ನೆಲ ಕುಸಿಯಿತು.
“….ಇನ್ನೂ ಒಂದು ಪಾಯಿಂಟಿದೆ….ಈಗ ಮಾಮೂಲು ಕೊಡೋರು ಇದ್ರೂ ಕೂಡ ಗ್ಯಾರಂಟಿ ಹೇಳೋದು ಕಷ್ಟ”.
ಅವನ ಶರೀರ ಬೆಳೆಯುತ್ತಿರುವಂತೆ ಭಾವನೆ.
ನನಗೆ ಕೇಳಿಸುವಂತೆ ಉಸಿರೆಳೆದು ಕೊಂಡೆ.
“ಅಲ್ಲ ಸಾರ್…ಸಾಮಾನ್ಯವಾಗಿ…ಎಷ್ಟು ಕೊಡಬೇಕಾಗುತ್ತೆ…” ಎಂದೆ ಪೆದ್ದು ಪೆದ್ದಾಗಿ.
ಧ್ವನಿ ನನ್ನದೆ ?….ಅನುಮಾನ.
“ನೋಡೋಣ, ನಮ್ಮ ಧಣಿಗಳಿಗೆ ಹೇಳೋಣ.”
ಮಾತನ್ನು ಕಣ್ಣಿನಿಂದ ಬಾಚಿಗೊಂಡೆ.
“ಪರ್ಟಿಕ್ಯುಲರ‍್ಸ್‌ ಕೊಡ್ಲೆ ಸಾರ್‌….” ಎಂದು ಪೆನ್ನು ತೆಗೆದೆ.
“ಆಂ….ಏನೂ ಬೇಕಿಲ್ಲ…..ಬೇಕಾದಾಗ ನಾನೇ ಹೇಳಿ ಕಳಿಸ್ತೀನಿ…ಯಾಕೆ …ಅಲ್ಲೆ ಬರ‍್ದಿಟ್ಟು ಹೋಗಿ” ಎಂದು ನಿಲ್ಲಿಸಿ ಪಿಲ್ಟು ತಂದಿಟ್ಟ ಕಾಫಿಯನ್ನು ಒಂದೇ ಉಸುರಿಗೆ ಕುಡಿದ. ಸುಮ್ಮನೆ ಕುಳಿತಿದ್ದ ನನ್ನನ್ನು ನೋಡಿ, “ಹುಂ…ಕುಡೀರಿ….ಕಾಫಿ ಕುಡಿದು ಬರೆದಿಟ್ಟು ಹೋಗಿ” ಎಂದು ತೋಳು ನೀವಿಕೊಳ್ಳುತ್ತಾ ಒಳಗೆ ಹೋದ.
ಎದ್ದು ಬರುವಾಗ ಆಚೆ ಕನ್ನಡಿಯಲ್ಲಿ ಮುಖ ನೋಡಿಕೊಂಡೆ. ಕಿಂಚಬೇಕೆನ್ನಿಸಿತು. ಹೊರಗೆ ಅಷ್ಟುದ್ದಕ್ಕೂ ಬಿದ್ದು ಕೊಂಡಿದ್ದ ಕಪ್ಪು ರಸ್ತೆ. ಬೆವರು ಒರೆಸಿಕೊಳ್ಳಲು ಕರ್ಚೀಫಿಗಾಗಿ ಜೋಬಿಗೆ ಕೈ ಹಾಕಿದೆ : ಸಿಕ್ಕಿದ್ದು ಅಪ್ಪನ ಕಾಗದ. ಮೈಯೆಲ್ಲ ಎಳೆದಂತೆ ನೋವು….ಆಂ ! ಹೌದಲ್ಲ. ಬೆಳಿಗ್ಗೆ ಮಾತ್ರ ಉಚ್ಚೆ ಹೊಯ್ದದ್ದು. ಪಕ್ಕದಲ್ಲಿ ನಿಂತು ಸಾಧ್ಯವಾಗುವಷ್ಟು ದೂರದವರೆಗೆ ಉಚ್ಚೆ ಹೊಯ್ದೆ. ಸಮಾಧಾನವಾಯಿತು.
ಬೆನ್ನಿನ ಮೇಲೆ ಗುದ್ದು ಬಿತ್ತು. ತಿರುಗಿದೆ. ಹಲ್ಕಿರಿದ ಪ್ರಹ್ಲಾದರಾಯ, “ಹೊ…. ಹೊಹೊ….ಏನು ಸಮಾಚಾರ” ಎಂದು ಭುಜ ಹಿಡಿದು ಅಲುಗಿಸಿ ಪ್ರೀತಿಯನ್ನು ಅಭಿನಯಿಸಿದ. ಕಸಿವಿಸಿಯಾಯಿತು. ನಾನು ಮುಖ ಗಂಭೀರ ಮಾಡಿದರೆ ತಾನೂ ಗಂಭೀರನಾಗುತ್ತಾನೆ. ಹೇಳಿ ಕೇಳಿ ಸಖತ್ ಬೋರು ಹೊಡೆಯುವ ವ್ಯಕ್ತಿ. ಅವನಿಗೆ ಅವಕಾಶ ಕೊಡದೆ ನಾನೆ ಕಲ್ಕತ್ತಾದ ಗೋಳಿಬಾರು, ಕಾಂಗ್ರೆಸ್ ಸರ್ಕಾರ, ಕ್ರಿಕೆಟ್‌ನಲ್ಲಿ ಗೆದ್ದದ್ದು ಮುಂತಾದ ವಿಷಯಗಳನ್ನೆತ್ತಿಕೊಂಡು ಕೊರೆದೆ. ಮಧ್ಯೆ “ಆಂ…ಅಂದ ಹಾಗೆ….ನಾಡಿದ್ದು ಸತ್ಯನಾರಾಯಣ ಪೂಜೆ….ಸಾಮಾನು ತೊಗೊಂಡು ಹೋಗ್ತಾ ಇದ್ದೀನಿ…ಬರ‍್ಬೇಕು….ಅದರಿಂದ ನಿಂಗೇನೂ ಕೇಡಾಗೋದಿಲ್ಲ”- ಹಾಗೆಂದಾಗ ಅವನ ಮುಖ ನೋಡಲು ತಿರಸ್ಕಾರ. ಅವನಲ್ಲಿ ಪಕ್ಕಾ ವೈದೀಕ ಕಳೆ ಕುಕ್ಕುತ್ತೆ…ಅಲ್ಲ, ಬಹುಶಃ ದೇವರಲ್ಲಿ ಅವನಿಗಿರುವ ನಂಬಿಕೆ ನನಗಿದ್ದಿದ್ದರೆ ಹೆಚ್ಚು ಸಮಾಧಾನವಿರುವ ಸಾಧ್ಯತೆಯಿತ್ತು.
“ಪಾಠ ಇರುತ್ತಲ್ಲ…ಹೇಗೆ ಬರೋಕಾಗತ್ತೆ ಹೇಳಿ” ಎಂದು ನೆವ ಹುಡುಕಿದೆ.
ಒಳಗೆ ಹೋಗುತ್ತಿದ್ದಂತೆ ಅಪರಾಧದ ಭಾವನೆ ಮುತ್ತಿತು. ಕ್ರೂರವಾಗಿ ಕೇಳಿದ ಜಡ್ಜ್‌, “ಎಲ್ರಿ, ಆ ಪಂಜಾಬಿ ? ನೀವು ಜಾಮೀನಾದ ವ್ಯಕ್ತಿ”
“ಜಾಮೀನು ?…ಯಾರಿಗೆ ?” ತೊದಲಿದೆ.
“ಅದೆಲ್ಲ ನಾಟ್ಕ ಆಡಬೇಡಿ…ಅವನ ಆಕ್ಸಿಡೆಂಟ್ ಕೇಸ್ನಲ್ಲಿ ನೀವು ಜಾಮಿಾನಾಗಿದ್ದೀರಿ.”
ಸಂದರ್ಭ ಅರ್ಥವಾಗಲಿಲ್ಲ. ಜೊತೆಗೆ ಅಲ್ಲಿ ಕುಳಿತವರ ಕಣ್ಣಿನ ಹೊಡೆತ.
“ಸ್ವಲ್ಪ ವಿವರಿಸಿ” ಎಂದೆ.
“ನೋಡಿ ಈ ಫಾರಂನಲ್ಲಿ ನೀವು ಜಾಮೀನಾದದ್ದಕ್ಕೆ ಸಹಿ ಇದೆ. ಇದು ನಿಮ್ಮದೇ ತಾನೆ” ಎಂದು ತೋರಿಸಿದ.
ಹೌದು. ನನ್ನದೇ ಸರಿ. ತಟ್ಟನೆ ಷಾಕು. ನೆನಪಿಗೆ ಬಂತು. ಅಂದು ಸ್ಕೂಟರ್‌ ವಾಪಸ್ಸು ತರುವಾಗ ಕಾಳೆಯ ಮಾತಿಗೆ, ಮದನನ ಮುಲಾಜಿಗೆ, ಅವಿವೇಕಕ್ಕೆ ಸಿಕ್ಕು ಸಹಿ ಮಾಡಿದ್ದೆ…ಕುತ್ತಿಗೆ ನರಗಳನ್ನು ಪುಲ್ಲಿಯಲ್ಲಿ ಹಾಕಿ ಎಳೆದರೆ ?…ಮೆತ್ತಗಾದೆ.
“ಅವನೆಲ್ಲಿದ್ದಾನೋ ಹುಡುಕಿ ತರಬೇಕು. ಇಲ್ಲದಿದ್ದರೆ ದಂಡ ತೆರಬೇಕು” ಎಂದು ನಾನು ಸುಮ್ಮನಿದ್ದದ್ದು ಕಂಡು “ಒಂದೂವರೆ ತಿಂಗಳು ಅವಕಾಶ” ಎಂದ, ಎಲ್ಲರೂ ಮಿಕಿ ಮಿಕಿ ನೋಡುತ್ತಿದ್ದರು. ನಿಜ ಹೇಳಲು ಪ್ರಯತ್ನಿಸಿದೆ. ಪದಗಳು ಕೈಕೊಟ್ಟವು. ಹೊರಗೆ ಬಂದ ಮೇಲೆ ತಲೆಗೊಂದು ಸಲಹೆ ಗುಪ್ಪೆ ಬಿತ್ತು. ಯಾವುದನ್ನೂ ಕೇಳಿಸಿಕೊಳ್ಳದೆ ಊರಿಗೆ ಬಂದು ಎರಡೆರಡು ಪೆಗ್ಗಿನಂತೆ ಬ್ರಾಂಡಿ ನುಂಗಿ ನಿದ್ದೆ ಹೊಡೆದೆ.
“ನಮಸ್ಕಾರ…ನಾನು ಗೋವಿಂದರಾವ್…” ಎಂದು ಒಳಗೆ ಬಂದರು. ನಾನು ತಬ್ಬಿಬ್ಬು. ಆತ ಹುಡುಕಿಕೊಂಡು ಇಲ್ಲಿಗೇ ಬಂದು ಬಿಡಬಹುದೆಂದು ತಿಳಿದಿರಲಿಲ್ಲ. ಮನಸ್ಸಿನಲ್ಲಿ ಅಪ್ಪ ಬರೆದ ಕಾಗದ ಸುರಳಿ ಬಿಚ್ಚಿತು…ಇನ್ಸ್ಟೆಕ್ಟರ್‌ ಆಫ್ ಫ್ಯಾಕ್ಟರೀಸ್: ಗೋವಿಂದರಾವ್ : ಅನುಕೂಲಸ್ಥರು : ಅವರ ಮಗಳು ಮಾಲಿನಿ: ಜಾತಕ ಕೂಡತ್ತೆ : ಹುಡುಗಾಟಿಕೆ ಬಿಡು ಇತ್ಯಾದಿ…ಅವರು ಕುಳಿತರು.
“ನಿಮ್ಮ ತಂದೆಯವರು ನಿಮಗೆ ಕಾಗದ ಬರೆದಿರಬೇಕು…ನನ್ನ ಕೈಲೂ ಒಂದು ಕಾಗದ ಕೊಟ್ಟಿದ್ದಾರೆ. ಮೊನ್ನೆ ನಿಮ್ಮೂರಿಗೆ ಮನೆಯವರೆಲ್ಲ ಹೋಗಿದ್ದೆವು. ಆಗ ನಿಮಗೆ ಅಲ್ಲಿಗೆ ಬರಲಿಕ್ಕೆ ಪುರಸೊತ್ತಿಲ್ಲ ಅಂತ ಬರೆದಿದ್ದಿರಂತೆ….ಹಿಹಿ….ನಿಮ್ಮ ತಂದೆ ತಾಯಿ ಅವರೆಲ್ಲ ತುಂಬ ಸಂತೋಷ ಪಟ್ಟುಕೊಂಡರು” ಎಂದರು.
ಈಗ ಸರಿಯಾಗಿ ನೋಡಿದೆ. ಆತ ಕೋಳಿಯಂತೆ ಕಂಡರೂ ತುಟಿ ಮೂಗುಗಳ ಸ್ಪಷ್ಟ ಗೆರೆಗಳು ಸವಾಲು ಹಾಕಿದವು. ಒರಟಾಗಿ, ‘ನನಗೇನೂ ಬೇಕಿಲ್ಲ ಹೋಗಿ’, ಹಾರಿಕೆಯ, “ಈಗೇನೂ ಅವಸರವಿಲ್ಲ”, ಸಭ್ಯತೆಯ, ‘ಎಲ್ಲ ಅಪ್ಪನಿಗೆ ಬಿಟ್ಟಿದ್ದೀನಿ’, ಸ್ವಪ್ರತಿಷ್ಠೆಯ “ನಾನು ಮದುವೆ ಮಾಡಿಕೊಳ್ಳುವ ಹುಡುಗಿಯನ್ನು ನಾನೇ ಹುಡುಕಿಕೊಳ್ಳಿನಿ”-,
ಈ ಮಾತುಗಳಲ್ಲಿ ಯಾವುದನ್ನು ಹೇಳಬೇಕೆಂದೇ ಬಗೆಹರಿಯಲಿಲ್ಲ.
ಅವರು ಪ್ರಶ್ನಿಸಿ ನೋಡಿದರು. ನನ್ನ ವಯಸ್ಸಿನ ವರ್ಷಕ್ಕೊಂದರಂತೆ ಅವರ ತಲೆಯಲ್ಲಿನ ಕೂದಲೆಷ್ಟಿರಬಹುದೆಂದು ಲೆಕ್ಕ ಹಾಕಿದೆ.
ಗೆದ್ದದ್ದು ಅವರ ವಯಸ್ಸು. “ನನ್ನ ವಿಚಾರವನ್ನೆಲ್ಲ ಅಪ್ಪನಿಗೆ ತಿಳಿಸ್ತೀನಿ. ಅವರೂ ಅದನ್ನು ನಿಮಗೆ ತಿಳಿಸ್ತಾರೆ” ಎಂದು ಕೋಲ್ಡ್ ಧ್ವನಿಯಲ್ಲಿ ಹೇಳಿದೆ. ನನ್ನ ಉತ್ತರಕ್ಕೆ ಅವರು ಮೊದಲೆ ನಿರೀಕ್ಷಿಸಿದ್ದಂತೆ ಕಂಡಿತು.
“ಓ ಅದೇ, ಅವರು ಆಗ್ಲೆ ಡಿಟೇಲಾಗಿ ಹೇಳಿದ್ದಾರೆ. ಅನುಕೂಲ ಮಾಡ್ಕೊಂಡು ನನ್ನ ಡಾಟರು ಮಾಲಿನಿಯನ್ನು ಒಮ್ಮೆ ನೋಡ್ಬಿಟ್ಟು ನಿಮ್ಮ ಅಭಿಪ್ರಾಯ ತಿಳಿಸಿದರೆ ಮುಂದಿಂದೆಲ್ಲ ಎಷ್ಟು ಹೊತ್ತಿನ ಕೆಲಸ…ಅದಕ್ಕೆಲ್ಲ ನೀವು ಪೈಸೆಯಷ್ಟು ಯೋಚನೆ ಮಾಡಬೇಕಾಗಿಲ್ಲ…ಇಷ್ಟಕ್ಕೂ ನಾವಿಲ್ವೆ…ಅಲ್ಲ ಹಿರಿಯರು ಅನ್ನಿಸಿಕೊಂಡು ಅಷ್ಟೂ ಮಾಡ್ದಿದ್ರೆ ಹೇಗೆ, ಹೇಳಿ” ಎಂದು ಸೂಚನೆಯ ನಗು ಹಾರಿಸಿದರು.
ಅವರು ಎದ್ದು ಹೊರಡುವುದನ್ನೇ ಕಾದಿದ್ದೆ. ಹೊರಟಾಗ ಜೊತೆಗೆ ಅಷು ದೂರದವರೆಗೂ ಹೋದೆ. ಅಲ್ಲೊಂದು ಕಡೆ ಭಾರಿ ಗುಂಪು ಕಾಣಿಸಿತು. ಬಾಂಬೆ ಷೋ ಅಂಗಡಿ. ಅವನು ಬಟ್ಟೆ ಇತ್ಯಾದಿಗಳನ್ನು ಹರಾಜು ಮಾಡುತ್ತಿದ್ದ. ನಿಂತು ನೋಡುವ ಕುತೂಹಲ ನನ್ನುದ್ದ ಬೆಳೆಯಿತು. ಇದ್ದೆಲ್ಲ ಶಕ್ತಿಯಿಂದ ತಕ್ಷಣವೇ ಅದರ ಕತ್ತು ಹಿಚುಕಿದೆ.
ಮಾಲಿನಿ ನನ್ನ ಪಕ್ಕದಲ್ಲಿ ಮೈ ಚಾಚಿದ್ದು ಕೆಲವೇ ತಿಂಗಳೊಳಗೆ ಸಂಜೆ ಫ್ಯಾಕ್ಟರಿಯಿಂದ ಬರುವುದನ್ನೇ ಕಾಯುತ್ತಾ ಕುಳಿತಿರುತ್ತಾಳೆ. ರಸ್ತೆಯನ್ನು ಬಿಟ್ಟು ಮನೆಯೊಳಗೆ ಕಾಲಿಡುವ ಕ್ಷಣ ನನ್ನೊಳಗಿನ ಭೂತಕ್ಕೆ ಮರುಹುಟ್ಟು. ಮಾಲಿನಿ ಕತ್ತಿನ ಸುತ್ತ ತೂಗುತ್ತಾಳೆ. ಅವಳು ಮುಡಿದ ಕೆಂಡಸಂಪಿಗೆ ಮತ್ತು ಸುರಿಸುತ್ತದೆ ಕೆಲವು ಕ್ಷಣ. ಅನಂತರ ಸುಡಲು ಪ್ರಾರಂಭ. “ಬೆಳಿಗ್ಗೆಯಿಂದ ಮನೆಯಲ್ಲೆ ಇದ್ದು ಬೇಜಾರು. ಹೊರಗೆ ಹೋಗೋಣ’ ಎನ್ನುತ್ತಾಳೆ. ಅವಳ ಮುಂಗುರುಳ ಗುಂಗು ಕಿವಿಯ ಸುತ್ತ ಜೂಜಾಟವಾಡುತ್ತದೆ. ಎದ್ದು ಬಟ್ಟೆ ಹಾಕಿಕೊಳ್ಳುವುದರಲ್ಲಿ ಉತ್ಸಾಹವೆಲ್ಲ ನೆಲಸಮ. ಕತ್ತಿನ ಮೇಲಿನ ತೋಳು ಕಬ್ಬಿಣವಾಗುತ್ತದೆ. “ಏನೋ ಕೆಲಸವಿದೆ” ಎಂದು ಸುಳ್ಳು ಪೋಣಿಸುತ್ತೇನೆ. ಅವಳ ನಿರಾಸೆ, ಬೇಜಾರು ಇವುಗಳನ್ನು ಐನೂರು ಅಡಿ ದೂರ ನಿಂತು ಗಾತ್ರ ಲೆಕ್ಕ ಹಾಕುತ್ತೇನೆ. ಅವಳು ಬಲವಂತ ಮಾಡುತ್ತಾಳೆ. ಸರಿ ಹೊರಟರೆ ಅಲ್ಲಿ ಹಿಂದೆ ಹೆಜ್ಜೆಯ ಸದ್ದು ; ನಗು. ಅಲ್ಲಿ, ಕತ್ತಲಲ್ಲಿ ಅವಳ ಜೊತೆ ಕೂಡುವುದು ಎಂದರೆ ಕಾವು, ಸಂಕಟ, ಅಶಾಂತಿ, ಅವಳಿಗೆ ನನ್ನ ಪರಿಸ್ಥಿತಿಯ ಸೂಕ್ಷ್ಮ ಅರಿವಿರಬೇಕು. ಹಾಗೆಂದೇ “ಯಾವುದಕ್ಕೀಗ ಕೊರಗಬೇಕು ನೀವು…ನಾನಿಲ್ಲವೇ ?” ಎನ್ನುತ್ತಾಳೆ.
ಅವಳ ಕಣ್ಣಿನ ಕಾಡಿಗೆಯೊಳಗೆ ಇಳಿಯಲು ಭಯ, ತವಕ. ನಾನು ಓಡಾಡುವಾಗ ಬೆಳೆದು ಕುಗ್ಗುವ ನೆರಳನ್ನು ಗಮನಿಸುತ್ತಾಳೆ. ‘ನೀವು ನನ್ನನ್ನು ಪ್ರೀತಿಸುವುದು ಮಾತ್ರ ಮುಖ್ಯ…ಹೇಳಿ…ನನ್ನಮೇಲೆ ಪ್ರೀತಿ…’ ಎಂದು ಕೆನ್ನೆಯೊತ್ತುತ್ತಾಳೆ …… ಅವಳು ನನ್ನನ್ನು ಪ್ರೀತಿಸುತ್ತಿರಬಹುದೆಂಬ ತೀವ್ರ ಅನುಮಾನ ನನಗೆ. ಹಾಗೆನಿಸಿದಾಗ ಸಂದಿಗೊಂದಿಗಳಲ್ಲಿ ನಡುಕದ ಗಾಳಿ….ಪ್ರಶ್ನೆಗೆ ಮಾತಾಡದೆ ಅವಳ ಎದೆಯಲ್ಲಿ ಮುಖ ಮುಳುಗಿಸುತ್ತೇನೆ. ನನ್ನ ವರ್ತನೆ ತರಬಹುದಾದ ಸಮಾಧಾನಕ್ಕೆ ಅವಳಿಗಾಗಿ ಮರಗುತ್ತೇನೆ. ಅವಳನ್ನು ಅತ್ತ ಸರಿಸಿ ನಾನು ಅವಳನ್ನು ಪ್ರೀತಿಸಬಲ್ಲೆನೆ ಎಂದುಕೊಂಡರೆ ಎಕ್ಸಿಬಿಷನ್ನಿನ ಜಯಂಟ್ ವೀಲ್‌ನಲ್ಲಿ ಕುಳಿತು ಮೇಲುಗಡೆಯಿಂದ ಕೆಳಗೆ ನೂಕಿಸಿಕೊಂಡ ಅನುಭವದ ಮರುಕಳಿಕೆ.
ಅವಳು ಮೈತುಂಬ ಹೊದ್ದುಕೊಂಡು ಮಲಗುವುದಿಲ್ಲ. ಮುರಿಗಪ್ಪ, ಗೋವಿಂದರಾವ್, ಜೋಯಿಸ ಇವರ ನೆರಳುಗಳ ಮುಳ್ಳನ್ನು ಕೊಡವಲು ಹಾಸಿಗೆಯಿಂದೆದ್ದಾಗ ಮಾಲಿನಿ ಮಲಗಿದ ಭಂಗಿ ನೋಡ ನೋಡುತ್ತಿದ್ದಂತೆ ಕಿಚ್ಚು ಹುಟ್ಟಿಸುತ್ತದೆ. ಹಾಗೆಯೇ ಅವಳ ಪಕ್ಕಕ್ಕೆ ಸರಿದು ನುಣುಪು ಕುತ್ತಿಗೆ, ಹೊಟ್ಟೆ, ನಿತಂಬಗಳನ್ನು ನೇವರಿಸಬೇಕೆಂದು ಮನಸ್ಸು. ಸೊಂಟದ ಸುತ್ತ ಕೈಹಾಕಿ ಮೃದುವಾಗಿ ಅಪ್ಪಿ ಮುಖದ ಹತ್ತಿರ ಮುಖ ತಂದರೆ ಬೆದರಿಸುತ್ತದೆ ಅವಳ ಬಿಸಿಯುಸಿರಿನ ಗರಗಸ. ಮುಂದುವರಿಯಲು ಸಂಕೋಚಗಳು ಬಿಗಿಯುತ್ತವೆ. ಆದರೆ ತಟ್ಟನೆ ಅವಳ ಬಾಯಲ್ಲಿ ಆಶಾಳ ತುಟಿ ನುಗ್ಗಿ ಬರುತ್ತದೆ. ಸಡಿಲಗೊಳ್ಳುತ್ತೇನೆ. “ಒಂದು ಮುತ್ತು ಕೊಡಲೇ” ಎಂದು ಕೇಳುತ್ತೇನೆ. ಅವಳು ನಿದ್ದೆಗಣ್ಣಿನ ಸುಳಿಗೆ ಆಹ್ವಾನಿಸುತ್ತಾಳೆ. “ಬನ್ನಿ…..ಬನ್ನಿ …. ಹತ್ತಿರ ಬನ್ನಿ” ಎಂದು ಹತ್ತಿರ ಸರಿಯುತ್ತಾಳೆ. ನನ್ನೊಳಗೆ ಬಿರುಗಾಳಿ ಬೆಳೆಯುತ್ತದೆ….ನೋಡುತ್ತೇನೆ: ಅವಳ ಕುತ್ತಿಗೆ, ಕೆನ್ನೆ, ತೋಳು, ತೊಡೆ ಎಲ್ಲಿ ತುಟಿಯಿಟ್ಟರಲ್ಲಿ ಚಂಚಲಳ ನೆರಳು. ಅವುಗಳನ್ನೆಲ್ಲ ಮೂರು ಪೆಗ್ ಬ್ರಾಂದಿಯನ್ನು ಒಂದೇ ಬಾರಿ ನುಂಗಿದ ಹಾಗೆ ಒಳಗೊಳ್ಳಬೇಕೆಂದು ಮನಸ್ಸು…ಆದರೆ….ಆದರೆ ಅವಳು ಬತ್ತಲಾದಷ್ಟೂ ಭಯ ಹೆಚ್ಚು ; ಚಳಿ ಹೆಚ್ಚು…ಅವಳು ಮತ್ತೂ ಬತ್ತಲಾದ ಹಾಗೆ ನಾನು ಕರಗಲು ಪ್ರಾರಂಭ… ಕಂಗಾಲಾಗುತ್ತೇನೆ. ದೇಹವೇ ಇಲ್ಲವಾಗುವ (ಇಲ್ಲವಾದ ?) ಅಂಜಿಕೆ…ಪಕ್ಕಕ್ಕೆ ಮಗ್ಗುಲಾದಾಗ ಆಯಾಸದಿಂದ ಸ್ವಲ್ಪ ಜಂಪು.

Close

ತಪ್ತ:ಆಲನಹಳ್ಳಿಯವರ ಮಣ್ಣಿನ ಕಥೆಗಳು

ತಪ್ತ : ಆಲನಹಳ್ಳಿಯವರ ‘ಮಣ್ಣಿನ ಕತೆಗಳು’

ಕೆ. ವಿ. ತಿರುಮಲೇಶ್‌

ತಪ್ತದ ಒಟ್ಟು ಎಂಟು ಕತೆಗಳ ವಸ್ತು: ಪ್ರೇಮಭಂಗ, ಕಾಮ, ನೈರಾಶ್ಯ, ಮರಣ, ಬಂಡಾಯ ವಿಫಲತೆ-ಎಂದರೆ ಇದನ್ನು ಅತ್ಯಂತ ಸುಲಭ ರೀತಿಯಿಂದ ಸಂಗ್ರಹಿಸಿದಂತಾಯಿತು. ಇಂಥದೇ ವಿಷಯಗಳ ಮೇಲೆ ಕತೆಗಳು ಪ್ರಕಟವಾಗುತ್ತಲೇ ಇವೆ. ಇತ್ತೀಚೆ ಒಂದು ಜನಪ್ರಿಯ ಮಾಸಪತ್ರಿಕೆಯಲ್ಲಿ ಅದರ ಸಂಪಾದಕರು, ಕನ್ನಡದಲ್ಲಿ ಒಳ್ಳೆಯ ಕತೆಗಳು ಬರುತ್ತಿಲ್ಲ, ಎಲ್ಲ ಮಾಮೂಲು ವಸ್ತುಗಳು, ಮಾಮೂಲು ಶೈಲಿ, ಎಂಬುದಾಗಿ ದೂರಿಕೊಂಡರು. ಕತೆಗಳನ್ನು ಓದುಗರಿಗೆ ಮುಟ್ಟಿಸುವ ಪ್ರಭಾವಶಾಲಿ ಮಾಧ್ಯಮವಾದ ಪತ್ರಿಕೆಗಳು ಈ ನಿಟ್ಟಿನಲ್ಲಿ ಚಿಂತಿಸಬೇಕಾದ್ದು ಅಗತ್ಯ. ಆದರೆ ಪತ್ರಿಕೆಗಳ ಸಂಪಾದಕ ಮಂಡಳಿಯಲ್ಲಿ ನಿಜವಾದ ಪ್ರತಿಭೆಯನ್ನು ಗುರುತಿಸಬಲ್ಲ ಎಷ್ಟು ಮಂದಿ ಇದ್ದಾರೆ ಎಂಬ ಪ್ರಶ್ನೆಯೂ ಇದೆ. ನಮ್ಮ ಹೆಚ್ಚಿನ ಕತೆಗಾರರು ಪತ್ರಿಕೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕತೆಗಳನ್ನು ಬರೆಯುತ್ತಾರೆ. ಪತ್ರಿಕೆಗಳ ಕತೆಗಳಿಗೆ ಸಿದ್ಧವಾದ ಫಾರ್ಮುಲಾ ಇದೆ. ಹೀಗೆ ಕನ್ನಡ ಸಾಹಿತ್ಯವಲ್ಲಿ ಫಾರ್ಮುಲಾ ಕತೆಗಳೇ ಹೆಚ್ಚು.
ಈ ರೂಢಿಯನ್ನು ಧಿಕ್ಕರಿಸಿದಾಗ, ಮೊದಲಾಗಿ, ಅಂತಹ ಕತೆಗಾರನಿಗೆ ಪ್ರಕಟಣೆ ಸಿಗದೆ ಹೋಗಬಹುದು ; ಎರಡನೆಯದಾಗಿ ಆತ ರೆಬೆಲ್ ಅನಿಸಿಕೊಳ್ಳಬಹುದು. ರೆಬೆಲ್ ಅನಿಸಿಕೊಳ್ಳಲು ಬಯಸುವವರು ಇದ್ದಾರೆ. ಇವರಲ್ಲಿ ಹಲವರು ‘ಅತಿ ಜಾಣತನ’ದಿಂದಾಗಿ ಬಹು ಬೇಗನೆ ತಮ್ಮ ಸಾಹಿತ್ಯಕ ಉದ್ದೇಶವನ್ನೇ ಮರೆತುಬಿಡುತ್ತಾರೆ. ತಪ್ತದಲ್ಲಿ ಫಾರ್ಮುಲಾ ಕತೆಗಳಿವೆ. ಫಾರ್ಮುಲಾ ಬಿಟ್ಟ ಕತೆಗಳೂ ಇವೆ.
ಮಣ್ಣಿನ ಹಾಡು ಶ್ರೀಕೃಷ್ಣ ಆಲನಹಳ್ಳಿಯವರಿಗೆ ಪ್ರಶಸ್ತಿಯನ್ನೂ, ಸುಲಭ ಜನಪ್ರಿಯತೆಯನ್ನೂ ಗಳಿಸಿಕೊಟ್ಟಿತು. ಆದರೆ ಈ ಕವನಸಂಕಲನ ಜಾಹೀರು ಉಬ್ಬಿಸಿದ್ದೆ ಹೆಚ್ಚು, ವಿಚಾರ ಎಬ್ಬಿಸಿದ್ದು ಕಡಿಮೆ. ವಿಮರ್ಶೆ ಔದಾರ್ಯದ ಉರುಳಲ್ಲಿ ಸಿಲುಕಿದಾಗ ಎಲ್ಲ ಕಾಲದಲ್ಲೂ ಹೀಗಾಗುತ್ತದೆ. ಈ ದೃಷ್ಟಿಯಿಂದ ತಪ್ತಕ್ಕೆ ಡಾ|| ಯು. ಆರ್. ಅನಂತಮೂರ್ತಿ ಬರೆದ ಮುನ್ನುಡಿ ಔಚಿತ್ಯಪೂರ್ಣವಾಗಿದೆ. ‘ಲಿಬರಲ್’ ಮನೋಧರ್ಮ ರೂಢಿಸಿಕೊಂಡ ಕನ್ನಡದ ಬೆರಳೆಣಿಕೆಯ ವಿಮರ್ಶಕರಲ್ಲಿ ಅನಂತಮೂರ್ತಿ ಪ್ರಮುಖರು. ಆಲನಹಳ್ಳಿಯವರ ಕತೆಗಳ ಗುರುತನ್ನು ಇವರ ಮುನ್ನುಡಿ ಮಾಡಿಕೊಟ್ಟಿರುವುದು ಇತರ ವಿಮರ್ಶಕರ ಮಟ್ಟಿಗೆ ಮಾರ್ಗದರ್ಶಕವೂ ಆಗಿದೆ.
ಈ ಕತೆಗಳನ್ನೆಲ್ಲ ಓದಿಯಾದ ಮೇಲೆ, ಇವುಗಳ ಒಟ್ಟಾರೆತನದ ಕುರಿತು ಚಿಂತಿಸಿದರೆ, ನಮಗೆ ಹೊಳೆಯುವುದು ಇಲ್ಲಿನ ಯೌವನಪೂರ್ವ ಮನೋಧರ್ಮ (adolescent mentality), ಈ ಸಿದ್ಧವಸ್ತುಗಳ ಹಿಂದೆ ಈ ಮನೋಧರ್ಮ ಇರುವುದರಿಂದಲೆ ತಪ್ತದ ಆಕ್ರೋಶ, ಉತ್ಕರ್ಷ, ಉತ್ಸಾಹಸ್ಖಲನಗಳಿಗೆ ಒಂದು ಹಂತದಲ್ಲಿ ಅರ್ಥವಿದೆ. ಇವೆಲ್ಲವೂ ಒಂದು ರೀತಿಯಿಂದ ‘ಮಣ್ಣಿನ ಕತೆಗಳು’, ಅಡಿಗರು ಹೇಳುವಂಥ ‘ಮಣ್ಣಿನ ವಾಸನೆ’ ಕೂಡ ಇಲ್ಲಿದೆ. ಆದರೆ, ತಾನು ಹುಟ್ಟಿ ಬೆಳೆದ ಮಣ್ಣಿನಿಂದ ದೂರ ಓಡಿ ಹೋಗಬೇಕೆಂಬ ಛಲ. ಛಲವನ್ನು ಸಾಧಿಸಲಾರದ ವಿಫಲ ಬಂಡಾಯದ ನಿರ್ವೀರ್ಯತೆ ಈ ಕತೆಗಳ ಪ್ರಧಾನ ವಿಷಯು, “ತೊರೆ”ಯ ಪ್ರಭು, “ತಪ್ತ”, “ಸಂಬಂಧ”, “ನೆಲಗುಮ್ಮ” ದ ನಾಯಕರು ಎಲ್ಲ ನಿಸ್ಸಹಾಯಕರೇ. “ಶ್ರಾವಣ”ದ ಶಕುಂತಳ ಮಾತ್ರ ಬಂಡಾಯವೇಳುವ ಸೂಚನೆಯಿದೆ. ಯಾಕೆ ಹೀಗೆ ?
ಇಲ್ಲಿನ ಸಮಸ್ಯೆ ಸಾಮಾಜಿಕವಲ್ಲ. ಇದೊಂದು ರೀತಿಯ ಮಾನಸಿಕ ಕ್ಷೋಭೆ. ಇದರ ಸ್ವರೂಪ ಅಂತರ್ಮುಖವುಳ್ಳದ್ದು. ಇಲ್ಲಿನ ವ್ಯಕ್ತಿ ಪರಿಸರಕ್ಕೆ ಬದ್ಧ. ಈ ವ್ಯಕ್ತಿ ಮತ್ತು ಇವನ ಪರಿಸರದ ನಡುವೆ ‘ಲವ್-ಹೇಟ್’ ಸಂಬಂಧವಿದೆ. “ಗೌರಿ ಇಷ್ಟು ಹಗುರವಾಗಿ, ನನ್ನ ಜೊತೆ ತುಂಬಾ ಸಲಿಗೆಯಿಂದ ನಡೆದುಕೊಳ್ಳುವುದನ್ನು ಕಂಡು ನನಗೆ ರೋಷವಾಯಿತು”-ಎನ್ನುವ “ತಪ್ತ”ದ ನಾಯಕನಿಗೆ ಗೌರಿ ಜೀವಂತ ಸಂಬಂಧವಾಗಿದ್ದಾಳೆ. “ನೆಲಗುಮ್ಮ” ದ ಕಥಾವಸ್ತುವೇ ಇದು. ನಾಯಕ ತನ್ನ ಅಜ್ಜಿಯಿಂದ, ವಳು ಬದುಕಿದ್ದಾಗಲೂ, ಸತ್ತಾಗಲೂ, ಬಿಡಿಸಿಕೊಳ್ಳಲಾರ. ಅಜ್ಜಿಯ ಸಾವು ಅವನಿಗೆ ವಿಚಿತ್ರ ರೀತಿಯಲ್ಲಿ ಹಿಂಸೆ ತರುತ್ತದೆ. The Outsider ನ ನಾಯಕನನ್ನು ಹೋಲಿಸಿ ನೋಡಿರಿ. “ತಪ್ತ”ದ ನಾಯಕ ತಾನು ಪರಕೀಯನೆಂದು ಭ್ರಮಿಸಿಕೊಂಡಿದ್ದಾನೆ. ಅವನು ಪರಕೀಯನಲ್ಲ, ಪರಿಸರದ ಒಳಗಿನವನೆಂಬುದೇ ಅವನ ದುರಂತ. ಕೊನೆಗೂ ಅವನು ಭೂತದಲ್ಲಿ ಬದುಕುತ್ತಾನೆ. ಈ ಕತೆಗಳ ಹೆಚ್ಚಿನ ಪಾತ್ರಗಳಿಗೂ ಭೂತವೇ ವರ್ತಮಾನ. ಇದನ್ನು ಸೂಚಿಸುವುದೇ ಆಲನಹಳ್ಳಿಯವರ ಉದ್ದೇಶ.
ಈ ಲವ್-ಹೇಟ್‌ ಸಂಬಂಧವನ್ನು ಕತೆಗಾರರು ಇನ್ನೊಂದು ಸ್ವರದಲ್ಲಿ ಕೂಡ ಸ್ಥಾಪಿಸಿದ್ದಾರೆ. ಅದೇ ಅವರು ಕೊಡುವ ಪರಿಸರದ ಪ್ರತಿಮಾಶಿಲ್ಪದ ಮೂಲಕ, ಎಲ್ಲವೂ ಮಳೆಯ, ಬೆಳೆಯ, ಋತುಕ್ರಮದ ಮಣ್ಣಿನ ಪ್ರತಿಮೆಗಳು. ಹಟ್ಟಿಯ, ಸೆಗಣಿಯ, ಗೊಬ್ಬರದ, ಕೊಳಚೆಯ ಚಿತ್ರಗಳು. “ಭಾಗ್ಯಕ್ಕನ ಮಗಳು ಜಿಡ್ಡುಗಟ್ಟಿದ್ದ ದಿಂಬನ್ನು ತಂದುಕೊಟ್ಟಳು. ತಲೆಗಿಟ್ಟುಕೊಂಡು ಕಣ್ಣು ಮುಚ್ಚಿದೆ. ದಿಂಬಿನ ಚುಂಗು ವಾಸನೆ, ಅಂಗಳದಿಂದ ಬರುವ ಬಚ್ಚಲು ವಾಸನೆ ಮತ್ತು ಹಜಾರವನ್ನು ಸಾರಿಸಿದ್ದ ಸೆಗಣಿಯ ವಾಸನೆ ಎಲ್ಲ ಕೂಡಿಕೊಂಡು ಒಂದು ಬಗೆಯ ಉಗ್ರವಾಸನೆ ಉಸಿರು ಕಟ್ಟಿಸುತ್ತಿದ್ದರೂ ಅದೆಲ್ಲವನ್ನೂ ಅಮುಕುವ ಕೆಟ್ಟ ನಿದ್ರೆ”. (“ನೆಲಗುಮ್ಮ”).
ಲೇಖಕರು ಉದ್ದೇಶಿಸದೆ ಇದ್ದ ಕೆಲವು ಪ್ರಶ್ನೆಗಳು ನನ್ನಂಥ ಓದುಗರಲ್ಲಿ ಮೂಡುವುದು ಸಾಧ್ಯ. ಉದಾಹರಣೆಗೆ : ಏಕೆ ಈ ತಪ್ತರೆಲ್ಲ ಭೂತಕ್ಕೆ ಮರಳುತ್ತಾರೆ, ಅಥವಾ ಭೂತದಿಂದ ತಪ್ಪಿಸಿಕೊಳ್ಳಲಾರರು ? ಪರಿಸರದ ವಿರುದ್ಧದ ಇವರ ಬಂಡಾಯವೆಲ್ಲ ಕೇವಲ ಕಲ್ಪನೆಯಲ್ಲೇಕೆ ಕೊನೆಗೊಳ್ಳುವುದು ? ಇವರೇಕೆ ಸ್ವತಂತ್ರ ವ್ಯಕ್ತಿತ್ವಗಳನ್ನು ರೂಪಿಸಿ ಕೊಳ್ಳುವುದಕ್ಕೆ ಅಸಮರ್ಥರು ? ಪರಿಸರಕ್ಕಿಂತಲೂ ಇವರೆಲ್ಲರೂ ದುರ್ಬಲರಾಗಿರುವುದೇಕೆ ? ಇಂತಹ ಪ್ರಶ್ನೆಗಳು ಕತೆಗೆ ಹೊರತೆಂದು ತೋರಬಹುದಾದರೂ ಇವನ್ನು ಲೇಖಕರು ಉತ್ತರಿಸಲಾರದ್ದರಿಂದಲೆ ಈ ತಪ್ತರ ಹೋರಾಟದಲ್ಲಿ ನಾವು ಕೆಲವೊಮ್ಮೆ ಭಾಗಿಗಳಾಗುವುದು ಸಾಧ್ಯವಾಗದೆ ಹೋಗುತ್ತದೆ.
ಇವರ ಯೌವನಪೂರ್ವ ಮನೋಧರ್ಮ ಕಪ್ಪು ಬಿಳುಪಿನ ನಡುವಿನ ವರ್ಣವಿನ್ಯಾಸಗಳನ್ನು ಕಾಣಲಾರದು. “ಶ್ರಾವಣದ ಶಕುಂತಳೆ-ಅವಳನ್ನು ವಂಚಿಸಿದ ವ್ಯಕ್ತಿ, “ತೊರೆ”ಯ ಲಕ್ಷ್ಮಿ-ಪ್ರಭುವಿನ ಅಣ್ಣ ಶಂಕರಯ್ಯ, “ಸಂಬಂಧ”ದ ಲಲಿತ -ಅವಳ ರಕ್ಕಸ ಗಂಡ : ಹೀಗೆ ಆಲನಹಳ್ಳಿ ಜನರನ್ನು ಎರಡಾಗಿ ವಿಂಗಡಿಸುತ್ತ ಹೋಗುತ್ತಾರೆ. ಆವರೂ “ಹುತ್ತ”, “ಸೀಮಂತ”ಗಳಲ್ಲಿ ವ್ಯಕ್ತಿ, ವಸ್ತುಗಳ ಅಗೋಚರ ಮೇಖಲೆಗಳನ್ನು ಸಮೀಪಿಸುವುದರಲ್ಲಿ ಅವರು ಯಶಸ್ವಿಯಾಗಿರುವುದು ಬೆಳವಣಿಗೆಯ ಸೂಚನೆ.
ಅನಂತಮೂರ್ತಿಯವರು ಸೂಚಿಸುವಂತೆ, ಅಲನಹಳ್ಳಿ ಕತೆಗಳಲ್ಲಿ ಕಾವ್ಯಶಿಲ್ಪ ಉಪಯೋಗಿಸುತ್ತಾರೆ. ಅಷ್ಟಕ್ಕೆ ನಿಲ್ಲದೆ, ಕಾವ್ಯಮಯವಾದ ಭಾಷೆಯನ್ನೂ ಉಪಯೋಗಿಸುತ್ತಾರೆ. ಕೆಲವು ಕತೆಗಳನ್ನು ಪದ್ಯರೂಪದಲ್ಲಿ ಕೊನೆಗೊಳ್ಳಿಸುವ ಗೀಳೂ ಇವರಿಗುಂಟು. ಇಲ್ಲಿನ ಯಾವ ಕತೆಯೂ ಇದಕ್ಕೆ ಹೊರತಾಗಿಲ್ಲ. ಎಂದರೆ, ಕಾವ್ಯದ ಆಶ್ರಯ ಹೊಂದದೆ ಆಲನಹಳ್ಳಿಯವರಿಗೆ ತಮ್ಮ ಅಭಿವ್ಯಕ್ತಿಯಲ್ಲಿ ನಂಬಿಕೆಯಿಲ್ಲ. ಇಂತಹ ಗದ್ಯ ಪ್ರಬುದ್ಧಮಲ್ಲ. ಪ್ರಖುದ್ದವಾದ ಗದ್ಯಕತೆಗಳಿಗೆ ಕಾರಂತ, ಅನಂತಮೂರ್ತಿ, ಚಿತ್ತಾಲ, ಲಂಕೇಶರು ಉದಾಹರಣೆ.
ಆಲನಹಳ್ಳಿಯ ಕಾವ್ಯತನ್ಮಯತೆಗೆ ಕಾರಣ ಅವರ ಭಾವಾತಿರೇಕತೆ. ತಾನೆ ಕಥಾನಾಯಕನಾಗಿಕೊಂಡು ಸ್ವಂತ ದುಃಖಾಲಾಪ, ಸ್ವಾನುಕಂಪದಲ್ಲಿ ಖುಷಿಪಡುವ ಸರ್ವೇಸಾಮಾನ್ಯ ಪ್ರವೃತ್ತಿಯಷ್ಟೆ ಈ ಕತೆಗಳ ಹಿಂದಿನ ಪ್ರೇರಣೆ. ಆದ್ದರಿಂದ ಕೃತಕತೆ ತಲೆ ಹಾಕುವುದುಂಟು. ಉದಾಹರಣೆಗೆ : ಮೆಲೋಡ್ರಾಮಾದಲ್ಲಿ ಕೊನೆಗೊಳ್ಳುವ “ಆಗಂತುಕ” ಮತ್ತು “ನೆಲಗುಮ್ಮ”, ಲೇಖಕ ಸ್ವಲ್ಪ ಸಂಯಮ ತಂದುಕೊಂಡಿದ್ದರೆ ಇವೆಲ್ಲ ಒಳ್ಳೆಯ ರಚನೆಗಳಾಗುತ್ತಿದ್ದವು ಎನಿಸುತ್ತದೆ. “ತೊರೆ” ಮತ್ತು “ಶ್ರಾವಣ” ಈ ಅಭಿಪ್ರಾಯವನ್ನು ಸಮರ್ಥಿಸುತ್ತವೆ.
ಲಂಕೇಶರಂತೆ, ಚಿತ್ತಾಲರಂತೆ ಆಲನಹಳ್ಳಿಯ ದೃಷ್ಟಿಕೋನ ಪ್ರಬುದ್ಧವೂ ಅಲ್ಲ, ವೈಚಾರಿಕವೂ ಅಲ್ಲ. ಅನಂತಮೂರ್ತಿಯವರ ಪ್ರಕಾರ “ತಪ್ತ” ಮತ್ತು “ನೆಲಗುಮ್ಮ”ಗಳದ್ದು ಪ್ರಬುದ್ಧ ದೃಷ್ಟಿಕೋನ. ಆದರೆ ಪ್ರಬುದ್ಧ ದೃಷ್ಟಿಕೋನಕ್ಕೆ ಅಗತ್ಯವಾದ ನಿರ್ಲಿಪ್ತತೆ ಸಂಯಮ, ವಸ್ತು ನಿಷ್ಠತೆಗಳನ್ನು ಆಲನಹಳ್ಳಿ ಸಾಧಿಸಿಲ್ಲ. ಈ ಎರಡು ಕತೆಗಳಿಗಿಂತ ಹೆಚ್ಚಿನ ಪ್ರಬುದ್ಧತೆಯನ್ನು “ತೊರೆ” ಸೂಚಿಸುತ್ತದೆ. “ಶ್ರೀಕೃಷ್ಣರ ವೈಚಾರಿಕತೆ ಅವರ ಅನುಭವದ ಸಂಕೀರ್ಣತೆಯನ್ನು ಒಳಗಿನಿಂದ ನೋಡುವಷ್ಟು ಇನ್ನೂ ಹರಿತವಾಗಿಲ್ಲ ಎಂದು ಹೇಳಬಹುದೆ?” -ಎಂದು ಅನಂತಮೂರ್ತಿ ಪ್ರಶ್ನಿಸಿದ್ದಾರೆ. “ನೆಲಗುಮ್ಮ”ದಲ್ಲಿ ಇಂಥ ಅನುಭವ ಸಂಕೀರ್ಣತೆಯ ಒಳನೋಟವೇ ಇದೆಯಲ್ಲ ? ಶ್ರೀಕೃಷ್ಣರ ವೈಚಾರಿಕತೆ ಅವರ ಅನುಭವಕ್ಕೆ ಒಂದು ಅರ್ಥ ಅಥವಾ ಸ್ವರೂಪ ಕೊಡುವುದಕ್ಕೆ ಇನ್ನೂ ಸಮರ್ಥವಾಗಿಲ್ಲ ಎಂಬುದು ನನ್ನ ಅಭಿಪ್ರಾಯ.
ಹೇಗಿದ್ದರೂ, ಓದಿದಾಗ ಏನೂ ಅನಿಸದಂಥ ಕೃತಿ ತಪ್ತ ಖಂಡಿತ ಅಲ್ಲ. ಇದು ನಮ್ಮ ಮಾಮೂಲು ಸಂವೇದನೆಗಳನ್ನು ಹುಡುಕುತ್ತದಾದರೂ ಅಷ್ಟನ್ನೇ ಅಲ್ಲ, ಇನ್ನೇನನ್ನೋ ಹೇಳಲು ಆಲನಹಳ್ಳಿಯವರ ಕತೆಗಳು ಪ್ರಯತ್ನಿಸುತ್ತಿವೆ ಅನಿಸುತ್ತದೆ. ಹೇಳುವ ಭಾವಾವೇಗದಲ್ಲಿ ಹೇಳಬೇಕಾದ್ದು ತೆಳುವಾಗಬಾರದೆಂಬುದು ಮುಖ್ಯ. ಒಟ್ಟಾರೆ ಮೇಲಿಂದ ಯುವಕರ ಮನಸ್ಸಿಗೆ ಹಾಗೂ ಇನ್ನಿತರ ಓದುಗರ ನೋಸ್ಟಾಲ್ಜಿಯಾ ಪ್ರವೃತ್ತಿಗೆ ಹಿಡಿಸುವಂಥ ಕತೆಗಳು ಇವು.
———————-
“ತಪ್ತ” ಎಂಟು ಸಣ್ಣ ಕತೆಗಳು : ಶ್ರೀಕೃಷ್ಣ ಆಲನಹಳ್ಳಿ.
ಸಮೀಕ್ಷಕ : ಮೈಸೂರು ೪ : ಬೆಲೆ : ರೂ. ೪ : ೧೦

Close

ಕ್ರಾಂತಿ ಬಂತು, ಕ್ರಾಂತಿ

ಕ್ರಾಂತಿ ಬಂತು, ಕ್ರಾಂತಿ

ಪಿ.ಲಂಕೇಶ್‌

ಪಾತ್ರವರ್ಗ :
ಭಗವಾನ್‌ : ಕಾಲೇಜ್‌ ಅಧ್ಯಾಪಕ
ಸುಧಾ : ಅವನ ಹೆಂಡತಿ
ದಿನಕರ್ : ಭಗವಾನನ ಶಿಷ್ಯ : ನಕ್ಸಲೈಟ್
ಶಂಕರ, ರಾಮದಾಸ : ಭಗವಾನನ ಸಹೋದ್ಯೋಗಿಗಳು
ಲಲಿತ, ಮಾಲತಿ : ಭಗವಾನನ ವಿದ್ಯಾರ್ಥಿನಿಯರು
ಕಳ್ಳ : ಸುಧಾಕರನ ಪ್ರತಿಸ್ಪರ್ಧಿ
ನೆರೆಯವರು ; ಪೊಲಿಸ್ ಇನ್‌ಸ್ಪೆಕ್ಟರ್ ; ಪೋಲಿಸರು :
ಸಭೆಯ ಅಧ್ಯಕ್ಷರು ; ಭಾಷಣಕಾರರು-ಮಾತಾಡದವನು.
ದೃಶ್ಯ ೧[ಸಭೆ, ಶುಭ್ರವಾಗಿ ಬಟ್ಟೆ ಹಾಕಿದ. ಚೊಕ್ಕವಾಗಿ ಶೇವ್‌ ಮಾಡಿಕೊಂಡ ವ್ಯಕ್ತಿಯೊಬ್ಬ ಕುರ್ಚಿಯಿಂದ ಎದ್ದು ಭಾಷಣ ಮಾಡಲು ಮೈಕಿನ ಹತ್ತಿರ ಬರುತ್ತಾನೆ. ಅವನು ಎದ್ದೊಡನೆ ಶುರುವಾದ ರೆಕಾರ‍್ಡೆಡ್ ಚಪ್ಪಾಳೆ ಮೈಕಿನೆದುರು ನಿಂತು ಮಾತಿಗೆ ಆರಂಭಿಸುವ ಹೊತ್ತಿಗೆ ನಿಲ್ಲುತ್ತದೆ. ಈತನ ಭಾಷಣದ ಸಂದರ್ಭದಲ್ಲಿ ಎಲ್ಲೆಲ್ಲಿ ಸೂಚಿತವಾಗಿದೆಯೋ ಅಲ್ಲೆಲ್ಲ ಭಯಂಕರ ರೆಕಾರ್ಡೆಡ್‌‌ ಚಪ್ಪಾಳೆ : ದೊಡ್ಡ ಸಭೆಯೆಂಬ ಪರಿಣಾಮ ಹುಟ್ಟಿಸಲು ಪ್ರೇಕ್ಷಕಾಂಗಣದ ರಂಗದ ಹತ್ತಿರದ ಮೊದಲಸಾಲಲ್ಲಿ ಕೂಡ ನಾಟಕಕ್ಕೆ ಸಂಬಂಧಿಸಿದವರು ಕೂತು ರೆಕಾರ್ಡ್ ಚಪ್ಪಾಳೆಯೊಂದಿಗೆ ತಮ್ಮ ಚಪ್ಪಾಳೆ ಕೂಡಿಸಬಹುದು.] ಭಗವಾನ್ : ಈಗಾಗಲೇ ಸಾಕಷ್ಟು ಹೊತ್ತಾಗಿದೆ. ನನಗಿಂತ ಮುಂಚೆ ಮಾತಾಡಿದ
ಭಾಷಣಕಾರರು ಸಾಕಷ್ಟು ವಿಸ್ತಾರವಾಗಿಯೇ ವಿಷಯವನ್ನು ಪ್ರಸ್ತಾಪಿಸಿದ್ದಾರೆ : ನಾನು ಹೇಳಬೇಕಾದ್ದು ಒಂದೆರಡೇ ಮಾತೆಂದು ಕಾಣತ್ತದೆ.
ನಮ್ಮ ಸುತ್ತ ಸಾಕಷ್ಟು ಸಮಾಜವಾದದ ಗದ್ದಲ ಕೇಳುತ್ತಿದ್ದೇವೆ ; ಪ್ರತಿಯೊಬ್ಬನೂ ಸಮಾಜವಾದದ ಆರಾಧಕನೇ. ಹತ್ತು ಪೈಸೆಯವನಿಂದ ಹಿಡಿದು ಹತ್ತು ಸಾವಿರ ರೂಪಾಯಿಯವನವರೆಗೆ, ಚಿಂದಿಯಲ್ಲಿ ಓಡಾಡುವವರಿಂದ ಬ್ರಾಂದಿಯಲ್ಲಿ
ಮುಳುಗುವವನವರೆಗೆ ಸಮಾಜವಾದದ ಭ್ರಾಂತಿ ಹಬ್ಬಿದೆ. ಬಿರ‍್ಲಾ ಮನೆಯ ನಾಯಿ ಕೂಡ ಕ್ಮಯುನಿಸಂ ಬೊಗಳುತ್ತಿವೆ (ಚಪ್ಪಾಳೆ, ಗಂಟಲೆತ್ತರಿಸಿ) ಸರ್ಕಾರದ ಫೈಲುಗಳು. ಜಿರಳೆ, ಧೂಳು ಕೂಡ ಅದೇ ಮಾತಾಡುತ್ತಿದೆ. ಆದರೆ ರೊಟ್ಟಿ ಚೂರು ಕಾಣದ ಕೋಟ್ಯಂತರ ಮನುಷ್ಯ ಬಾಯಿಗಳು ಉಸಿರೆತ್ತುವ ಶಕ್ತಿಯಿಲ್ಲದೆ ಮುರುಟಿಹೋಗಿವೆ (ಚಪ್ಪಾಳೆ, ಶೇಮ್, ಶೇಮ್‌). ಇದು ನಿಮ್ಮ ಸಮಸ್ಯೆ. ಒಂದಾನೊಂದು ಕಾಲಕ್ಕೆ ಸಮಾಜವಾದ ನಮ್ಮ ಕೋಪ ತಾಪವನ್ನೆಲ್ಲ ವ್ಯಕ್ತಪಡಿಸುತ್ತಿತ್ತು ; ನಮ್ಮನ್ನು ತುಳಿಯುವವರನ್ನು ಅದರ ಗದ್ದುಗೆಯಿಂದ ಇಳಿಸುವ ಸಾಧನವಾಗಿತ್ತು. ಆದರೆ ಅದೆ: ಸಮಾಜವಾದ ಈಗ ಮಂತ್ರಿಯಾಗುವ ಕಾರುಬಾರುಗಳಲ್ಲಿ ಧಿಮಾಕು ತೋರುವ, ಸಮಾಜವಾದೀ ಆರಮನೆಗಳನ್ನು ಕಟ್ಟಿತೋರುವ, ಬಡವರ ಗೋಳಿಗೆ ಕಿವಿ ಕಲ್ಲು ಮಾಡಿಕೊಂಡು ವಿಲಾಸದಲ್ಲಿ ಮುಳುಗುವ ಸಾಧನವಾಗಿದೆ (ಚಪ್ಪಾಳೆ. ರ್ಶಮ್. ಶೇಮ್).ನಾನು ಅಧ್ಯಾಪಕ. ನಾನು ವಿದ್ಯಾರ್ಥಿಗಳ ಕಷ್ಟ ನೋಡಿದ್ದೇನೆ. ಡಿಸೆಂಬರ್ ಚಳಿಯಲ್ಲಿ, ಹಾಕಲು ಅಂಗಿಯಿಲ್ಲದೆ ಹೊಟ್ಟೆಯಲ್ಲಿ ಹನಿ ಗಂಜಿಯಿಲ್ಲದೆ ಬರಿಗಾಲಲ್ಲಿ ನಡೆದು ಬರುವ ವಿದ್ಯಾರ್ಥಿಗಳನ್ನು ನಾನು ಬಲ್ಲೆ. ಅವರಿಗೆ ನಾನು ಪಂಪ, ಕುಮಾರವ್ಯಾಸ ಶೇಕ್ಸ್‌ಪಿಯರ್ ಪಾಠ ಹೇಳಿ ಮನೆಗೆ ಹೋಗಿ ಹೇಗೆ ನಿದ್ರಿಸಲಿ ? (ಧ್ವನಿಯೆತ್ತರಿಸಿ, ನಿಜವಾದ ಪರಿಣಾಮ ಬೀರುತ್ತ) ನಮ್ಮಂಥವರ ಕನಸು ಪಾರ್ಲಿಮೆಂಟ್ ಭವನದ ಫೈಲುಗಳಲ್ಲಿ ಕಮರಿಹೋಗಿದೆ; ನಮ್ಮಂಥವರ ಆದರ್ಶವೆಲ್ಲ ಭ್ರಷ್ಟರ ಹಿಡಿತಕ್ಕೆ ಸಿಕ್ಕು ನಂದಿಹೋಗಿದೆ ; ನಮ್ಮಂಥವರ ಆಸೆ ಈ ಸತ್ತ ಸಮಾಜದ ನಿರ್ಲಕ್ಷ್ಯದಲ್ಲಿ ಕರಗಿಹೋಗಿದೆ (ಚಪ್ಪಾಳೆ, ಹೆಚ್ಚು ನಿಧಾನವಾಗಿ) ಆದ್ದರಿಂದಲೇ ನಮಗೀಗ ಬೇಕಾದದ್ದು ಸಮಾಜವಾದವಲ್ಲ. ಪ್ರಜಾಪ್ರಭುತ್ವವಲ್ಲ, ಅಧಿಕಾರಶಾಹಿಯಲ್ಲ-ನಮ್ಮ ಬದುಕನ್ನು ಮೂಲಭೂತವಾಗಿ ಬದಲಿಸಬಲ್ಲಂಥ ಬಿರುಗಾಳಿ ; ನಮ್ಮ ಎಲ್ಲ ಕನಸುಗಳನ್ನು ನಿಜವಾಗಿಸಬಲ್ಲಂಥ ಕ್ರಾಂತಿ (ಚಪ್ಪಾಳೆ, ಧ್ವನಿಯತ್ತ ಚೀರುತ್ತ) ಸುಳ್ಳರು, ಭ್ರಷ್ಟರು, ವಿಲಾಸಿಗಳು, ಅಪ್ರಾಮಾಣಿಕರು- ಎಲ್ಲರನ್ನೂ ಕೊಚ್ಚಿ ಮತ್ತೆ ಜಡ ಬದುಕನ್ನು ಜೀವಂತಗೊಳಿಸಬಲ್ಲ ಕ್ರಾಂತಿ (ಚಪ್ಪಾಳೆ, ಹಿಯರ್, ಹಿಯರ್-ಇತ್ಯಾದಿ. ಭಗವಾನ್ ನಮಸ್ಕರಿಸಿ ಹೋಗಿ ಕುಳಿತುಕೊಳ್ಳುವನು. ವ್ಯಕ್ತಿಗಳು ಬಂದು ಅಧ್ಯಕ್ಷರಿಗೆ, ಭಗವಾನ್‌ಗೆ, ಇತರ ಭಾಷಣಕಾರರಿಗೆ ಹಾರಗಳನ್ನು ಹಾಕಿದೊಡನೆ ಸಭೆ ಮುಕ್ತಾಯಗೊಳ್ಳುವುದು. ಜನರು ಎಡ ಬಲ ನೇಪಥ್ಯದಿಂದಲೂ ಪ್ರೇಕ್ಷಕಾಂಗಣದಿಂದಲೂ ಬಂದು ಭಗವಾನನನ್ನು ಮುತ್ತಿಕೊಂಡು ಹಸ್ತಾಕ್ಷರ ತೆಗೆದುಕೊಳ್ಳುವರು : ಕೆಲವರು ಅವನಿಗೆ. ದಾರಿಮಾಡಿಕೊಡುತ್ತ ಇರುವರು; ಕೆಲವರು “ಕ್ರಾಂತಿಗೆ- ಜಯವಾಗಲಿ” ಎಂದು ಮುಂತಾಗಿ ಕೂಗುತ್ತಿರುವರು)
ಸಭೆ ಕತ್ತಲಲ್ಲಿ ಕರಗುತ್ತದೆ
ದೃಶ್ಯ ೨[ಭಗವಾನನ ಮನೆಯ ಒಳಭಾಗ. ಆತನ ಪತ್ನಿ ಸುಧಾ ಹಾಡಿಕೊಳ್ಳುತ್ತ ಕೂತಿರುವಳು. ಬಹಳ ಗತ್ತಿನ, ಸಾಕಷ್ಟು ಸುಖ ಕಂಡ, ಧಿಮಾಕಿನ ಹೆಂಗಸಾದ ಈಕೆ ಎಂಥ ಹಾಡು ಹಾಡಿಕೊಂಡಿದ್ದರೂ ಸರಿ ಒಳ್ಳೆಯ ಸೀರೆಯುಟ್ಟು ಹೊರಗಡೆ ಹೋಗಲು ಸಿದ್ಧವಾದಂತಿದ್ದಾಳೆ. ಬಾಗಿಲು ತೆಗೆದುಕೊಂಡು ಗಾಳಿಯಂತೆ ಲಲಿತ ಮತ್ತು ಮಾಲತಿ ಪ್ರವೇಶಿಸುವರು. ಇವರು ಕಾಲೇಜು ಹುಡುಗಿಯರು: ಸರಸರ ಮಾತಾಡುವರು.] ಲಲಿತ : ಸುಧಕ್ಕ, ಸುಧಕ್ಕೆ, ನೀವಿವತ್ತು ಬರಬೇಕಿತ್ತು !
ಮಾಲತಿ : ಎಷ್ಟು ಚೆನ್ನಾಗಿತ್ತು ತಿಂಡಿ !
ಲಲಿತ : ಸುಮ್ನಿರೆ, ತಿಂಡಿಪೋತಿ, ಚಪ್ಪಾಳೆಯೋ ಚಪ್ಪಾಳೆ ! ಕಿವಿ ಕಿವುಡಾಗೋ ತಂಕ ಚಪ್ಪಾಳೆ ! ಜನ ಖುಷಿಯಾಗಿ ಕುಣೀತಿದ್ರು –
ಸುಧಾ : ಚೆನ್ನಾಗಿತ್ತ ಭಾಷಣ ?
ಸಮಾಜದ ನಿರ್ಲಕ್ಷದಲ್ಲಿ ಕರಗಿಹೋಗಿದೆ (ಚಪ್ಪಾಳೆ, ಹೆಚ್ಚು ವಿಧಾನವಾಗಿ) ಆದ್ದರಿಂದಲೇ ನಮಗೀಗ ಬೇಕಾದದ್ದು ಸಮಾಜವಾದವಲ್ಲ. ಪ್ರಜಾಪ್ರಭುತ್ವವಲ್ಲ, ಅಧಿಕಾರಶಾಹಿಯಲ್ಲ-ನಮ್ಮ ಬದುಕನ್ನು ಮೂಲಭೂತವಾಗಿ ಬದಲಿಸಬಲ್ಲಂಥ ಬಿರುಗಾಳಿ ; ನಮ್ಮ ಎಲ್ಲ ಕನಸುಗಳನ್ನು ನಿಜವಾಗಿಸಬಲ್ಲಂಥ ಕ್ರಾಂತಿ (ಚಪ್ಪಾಳೆ. ಧ್ವನಿಯೆತ್ತರಿಸಿ ಚೀರುತ್ತ) ಸುಳ್ಳರು, ಭ್ರಷ್ಟರು, ವಿಲಾಸಿಗಳು, ಅಪ್ರಾಮಾಣಿಕರು- ಎಲ್ಲರನ್ನೂ ಕೊಚ್ಚಿ ಮತ್ತೆ ಜಡ ಬದುಕನ್ನು ಜೀವಂತಗೊಳಿಸಬಲ್ಲ ಕ್ರಾಂತಿ. (ಚಪ್ಪಾಳೆ, ಹಿಯರ್, ಹಿಯರ್-ಇತ್ಯಾದಿ. ಭಗವಾನ್ ನಮಸ್ಕರಿಸಿ ಹೋಗಿ ಕುಳಿತುಕೊಳ್ಳುವನು. ವ್ಯಕ್ತಿಗಳು ಬಂದು ಅಧ್ಯಕ್ಷರಿಗೆ, ಭಗವಾನ್‌ಗೆ, ಇತರ ಭಾಷಣಕಾರರಿಗೆ ಹಾರಗಳನ್ನು ಹಾಕಿದೊಡನೆ ಸಭೆ ಮುಕ್ತಾಯಗೊಳ್ಳುವುದು. ಜನರು ಎಡ ಬಲ ನೇಪಥ್ಯದಿಂದಲೂ ಪ್ರೇಕ್ಷಕಾಂಗಣದಿಂದಲೂ ಬಂದು ಭಗವಾನನನ್ನು ಮುತ್ತಿಕೊಂಡು ಹಸ್ತಾಕ್ಷರ ತೆಗೆದುಕೊಳ್ಳುವರು : ಕೆಲವರು ಅವನಿಗೆ. ದಾರಿಮಾಡಿಕೊಡುತ್ತ ಇರುವರು; ಕೆಲವರು “ಕ್ರಾಂತಿಗೆ ಜಯವಾಗಲಿ” ಎಂದು ಮುಂತಾಗಿ ಕೂಗುತ್ತಿರುವರು)
ಸಭೆ ಕತ್ತಲಲ್ಲಿ ಕರಗುತ್ತದೆ
ದೃಶ್ಯ ೨[ಭಗವಾನನ ಮನೆಯ ಒಳಭಾಗ. ಆತನ ಪತ್ನಿ ಸುಧಾ ಹಾಡಿಕೊಳ್ಳುತ್ತ ಕೂತಿರುವಳು. ಬಹಳ ಗತ್ತಿನ, ಸಾಕಷ್ಟು ಸುಖ ಕಂಡ, ಧಿಮಾಕಿನ ಹೆಂಗಸಾದ ಈಕೆ ಎಂಥ ಹಾಡು ಹಾಡಿಕೊಂಡಿದ್ದರೂ ಸರಿ ಒಳ್ಳೆಯ ಸೀರೆಯುಟ್ಟು ಹೊರಗಡೆ ಹೋಗಲು ಸಿದ್ಧವಾದಂತಿದ್ದಾಳೆ. ಬಾಗಿಲು ತೆಗೆದುಕೊಂಡು ಗಾಳಿಯಂತೆ ಲಲಿತ ಮತ್ತು ಮಾಲತಿ ಪ್ರವೇಶಿಸುವರು. ಇವರು ಕಾಲೇಜು ಹುಡುಗಿಯರು: ಸರಸರ ಮಾತಾಡುವರು.]

ಲಲಿತ : ಸುಧಕ್ಕ, ಸುಧಕ್ಕೆ, ನೀವಿವತ್ತು ಬರಬೇಕಿತ್ತು !
ಮಾಲತಿ : ಎಷ್ಟು ಚೆನ್ನಾಗಿತ್ತು ತಿಂಡಿ !
ಲಲಿತ : ಸುಮ್ನಿರೆ, ತಿಂಡಿಪೋತಿ, ಚಪ್ಪಾಳೆಯೋ ಚಪ್ಪಾಳೆ ! ಕಿವಿ ಕಿವುಡಾಗೋ ತಂಕ ಚಪ್ಪಾಳೆ ! ಜನ ಖುಷಿಯಾಗಿ ಕುಣೀತಿದ್ರು –
ಸುಧಾ : ಚೆನ್ನಾಗಿತ್ತ ಭಾಷಣ ?
ಸುಧಾ : (ಚುಡಾಯಿಸುತ್ತ) ನಾನ್ಯಾಕಮ್ಮ ಆಶ್ಚರ್ಯಪಡಲಿ, ನೀ ಪಡಬೇಕು.
ಮಾಲತಿ : ಹೌದಲ್ಲವ ? ಗಂಡ ನ್ಯಾಷನಲ್ ಪ್ರಾಪರ್ಟಿ ಅನ್ನೋ ಥರ ಮಾತಾಡ್ತಾಳೆ !
ಲಲಿತ : ಸುಮ್ನಿರೇ, ತಿಂಡೀಪೋತಿ.
(ಗೇಟು ತೆಗೆದ ಸಪ್ಪಳ : ಗಂಡಸರ ಧ್ವನಿ)
ಮೇಷ್ಟರು ಬಂದ್ರು ಅಂತ ಕಾಣುತ್ತೆ, ನಾವು ಇನ್ನ-(ಹೊರಡುವರು)
ಭಗವಾನ್ : (ಪ್ರವೇಶಿಸಿ) ಯಾಕೆ ಹೂರಟ್ರಿ, ನಿಲ್ಲಿ. ಏನು ವಿಶೇಷ? ಏನಮ್ಮ ಲಲಿತ ಬಹಳ ಖುಷಿಯಾಗಿದ್ದೀ ?
ಮಾಲತಿ : ಮುಂದಿನ ತಿಂಗಳು ಅವಳ ಮದುವೆ ಸಾರ್.
ಲಲಿತ : ಅದಕ್ಕಲ್ಲ ಸಾರ್ (ಮಾಲತಿ ಚಿವುಟುವಳು) ಸುಮ್ನಿರೇ, ನಿಮ್ಮ ಭಾಷಣ ತುಂಬ ಚೆನ್ನಾಗಿತ್ತು ಸರ್.
ಭಗವಾನ್ : ಥ್ಯಾಂಕ್ಸ್‌. ಏನಮ್ಮ, Who is the lucky boy……
ಲಲಿತ : (ಸಂಕೋಚದಿಂದ) ಅಲ್ಲ ಸಾರ್. ನಿಮ್ಮ ಭಾಷಣದಲ್ಲಿ ಕಮ್ಯುನಿಸಂ ಬೇಡ ಅಂದ್ರಿ-ಕ್ರಾಂತಿ ಬೇಕು ಅಂದ್ರಿ, ಅದು ಹೇಗೆ ಸಾರ್ ?
ಮಾಲತಿ : ಅಷ್ಟೂ ಗೊತ್ತಾಗಲ್ವೇನೇ-
ಭಗವಾನ್ : ಏನಮ್ಮ ಗೊತ್ತಾಯ್ತು, ಹೇಳು.
ಮಾಲತಿ : (ಗೊತ್ತಿಲ್ಲದೆ) ಕಮ್ಯೂನಿಸಂಗೂ ಕ್ರಾಂತಿಗೂ ಯಾಕೆ ಸಂಬಂಧ ಕಲ್ಪಿಸಬೇಕು ಸಾರ್‌ ?
ಭಗವಾನ್ : ಸುಧಾ, ಕಾಫಿ ! ಕಾಫಿ ಬೇಕು, Terribly tired.
ಲಲಿತ : ಅವಳಂದದ್ದು ಸರೀನಾ ಸಾರ್‌ ?
ಭಗವಾನ್ : ಒಂದು ರೀತಿಯಲ್ಲಿ ಸರಿ, ಇನ್ನೊಂದು ರೀತಿಯಲ್ಲಿ ತಪ್ಪು.
(ವಿಷಯ ಬದಲಿಸುತ್ತ) ನಿನ್ನ ಫಿಯಾನ್ಸಿ ಹೆಸರನು ಲಲಿತ ?
ಲಲಿತ : ನಾನು ಹೇಳಲ್ಲ ಸಾರ್ (ನಾಚುವಳು).
ಮಾಲತಿ : ದೊಡ್ಡ ಡಾಕ್ಟರು ಸಾರ್.
ಭಗವಾನ್ : ಹೆಸರೇ ದೊಡ್ಡ ಡಾಕ್ಟರು ಅಂತಾನಾ ? (ಎಂದು ಆಸಕ್ತಿ ಇಲ್ಲದೆ ಇದ್ದಾಗ ಲಲಿತ ವಿಷಯ ಬದಲಿಸಿ)
ಲಲಿತ : ನಿಮ್ಮ ಭಾಷಣಕ್ಕೆ ಎಲ್ಲೂ ಇವತ್ತು ಬೌಲ್ಡ್‌ ಓವರ್, ಸಾರ್.
ಭಗವಾನ್ : ಓ, ಅಷ್ಟು ಮೆಚ್ಚಿದರ ? ಯಾಕೆ ?
ಮಾಲತಿ : ತುಂಬ ಚೆನ್ನಾಗಿತ್ತು ಸಾರ್. Flowery language…
ಭಗವಾನ್ : (ಲಲಿತಾಗೆ) ಹೌದ ?
ಲಲಿತ : ನಾನು ಮೆಚ್ಚಿದ್ದು…..
ಭಗವಾನ್‌ : ಹೇಳು, ಪರವಾಗಿಲ್ಲ.
ಲಲಿತ : ತುಂಬ ಸ್ಪಿರಿಟೆಡ್ ಆಗಿತ್ತು ಅಂತ ಸಾರ್.
(ಸುಧಾ ಶಾಫಿ ತರುವಳು)
ಸುಧಾ : ಅಲ್ಲ, ಹುಡುಗ ಜೊತೆಗಿದ್ದ ಅಂತ ಅಲ್ವ ಲಲಿತ?
ಲಲಿತ : ಹೋಗಮ್ಮ ನೀವು…..
ಭಗವಾನ್ : ಸರಿಯಮ್ಮ, ಕೊಂಚ ಕೆಲಸ ಇದೆ (ಎಂದು ಕಾಫಿಲೋಟ ಇಟ್ಟು ಏಳುವನು. ಹುಡುಗಿಯರು “ನಮಸ್ಕಾರ ಸಾರ್, ಬರ್ತೇವೆ’ ಎಂದು ಹೋಗುವರು.)
ಭಗವಾನ್ : (ಸುಧಾಗ) ಯಾಕೆ ಬಹಳ ಸಪ್ಪಗಿದ್ದೀ.
ಸುಧಾ : (ಮುನಿಸಿನಿಂದ) ನಾನು ಹಾಗಿದ್ದರೇನು ನಿಮಗೆ ? ನೀವಾಯ್ತು ನಿಮ್ಮ ಮಹಾ ಭಾಷಣ ಆಯ್ತು.
ಭಗವಾನ್ : ಹೇಳು ಪರವಾಗಿಲ್ಲ. ಏನಾಯ್ತು ?
ಸುಧಾ : ನನಗೆ ಏನಾದ್ರು ಏನು ನಿಮಗೆ ?
ಭಗವಾನ್ : ಮತ್ತೆ ಮತ್ತೆ ಅದನ್ನೇ ಹೇಳಬೇಡ.
ಸುಧಾ : ನಿಮಗೆ ಹೇಳಿದ್ರೆ ಮಾತ್ರ ಗೊತ್ತಾಗೋದು ಅಲ್ವ ? ನೀವು ಬೆಳಗ್ಗೆ ಏನು ಹೇಳಿದ್ರಿ-ನೆನೆಸಿಕೊಳ್ಳಿ.
ಭಗವಾನ್ : ನೆನಪಾಗ್ತಿಲ್ಲ. ನನಗೀಗ ಸಮಯವಿಲ್ಲ. ಬೇಗ ಹೇಳು.
ಸುಧಾ : ಹಾಗಾದ್ರೆ ಯಾಕೆ ಕೇಳಬೇಕಿತ್ತು ?
ಭಗವಾನ್ : ಸರಿ, ನೆನೆಸಿಕೊಳ್ತೇನೆ ಬೆಳಗ್ಗೆ ನಾನು ನಿನಗೆ -ಇವತ್ತು ಭಾಷಣ ಇದೆ ಅಂದೆ.
(ಸುಧಾ ಸುಮ್ಮನಿರುವಳು)
ಬಿಸಿಲು ತುಂಬ ಚೆನ್ನಾಗಿದೆ ಅಂದೆ.
(ಮೌಸ)
ನಿನ್ನ ತಾಯಿ ಹಬ್ಬಕ್ಕೆ ಬರಬಹುದು ಅಂದೆ.
ನೀನೇ ಹೇಳು. ಈಗ ಮುಖ್ಯ ಕೆಲಸ ಇದೆ.
ಸುಧಾ : ನಿಮಗೆ ಕಣ್ಣಿದ್ದಿದ್ರೆ ಇಷ್ಟು ಹೊತ್ತಿಗೆ ಗೊತ್ತಾಗಿರ್ತಿತ್ತು.
ಭಗವಾನ್ : ಒಳ್ಳೆ ಸೀರೆ ಉಟ್ಟು ರೆಡಿಯಾಗಿದ್ದಿ.
ಸುಧಾ : ಸುಬ್ಬುಲಕ್ಷ್ಮಿ ಸಂಗೀತಕ್ಕೆ ಕರಕೊಂಡು ಹೋಗ್ತೇನೆ. ಬೇಗ ಬಂದ್ಬಿಡ್ತೇನೆ ಅಂತ ಹೇಳಿದ್ರಿ. ನಿಮಗೆ ನೆನಪೆಲ್ಲಿರಬೇಕು. ನೆನಪಿರೋಕೆ ನಾನ್ಯಾರು
ನಿಮಗೆ ? ಮನೆ ಯಾಕೆ, ಹೆಂಡ್ತಿ ಯಾಕೆ ನಿಮಗೆ ?
ಭಗವಾನ : ಸಂಗೀತ, ಸರ್ಕಸ್ಸು, ಮ್ಯಾಜಿಕ್ಕು, ನಾಟಕ-ಎಲ್ಲ ಸ್ವಲ್ಪ ಹೊತ್ತು ಕಟ್ಟಿಡು. ಮುಖ್ಯವಾದ್ದು ಮಾತಾಡೋದಿದೆ.
ಸುಧಾ : ನನಗೆ ಮುಖ್ಯ ಅಲ್ಲದಿರಬಹುದು.
ಭಗವಾನ್ : ನೋಡು, ಇದು ಸೀರಿಯಸ್, ಇಲ್ಲಿ ಕೇಳು.
ಸುಧಾ : (ನಿಂತು) ಹೇಳಿ, ಕೇಳ್ತಿದೇನೆ.
ಭಗವಾನ್ : ನೀನು ನನ್ನ ಹೆಂಡ್ತಿ,
(ಮೌನ)
ಸುಖದಲ್ಲಿ ದುಃಖದಲ್ಲಿ ಸಮಪಾಲು ನಿನ್ನದು
(ಮೌನ)
ನನ್ನ ಹೆಸರು ನಿನ್ನದು ; ನಿನ್ನ ಸುಖ ನನ್ನದು
ಸುಧಾ : ಈ ಉದ್ದ ಪೀಠಿಕೆ ಯಾಕೋ ಗೊತ್ತಾಗಿಲ್ಲ. ನೇರವಾಗಿ ಹೇಳಬಾರದ?
ಭಗವಾನ್ : ಕೇಳು, ನಮಗೆ ಬೇಕಾದ್ದೆಲ್ಲ ಇದೆ ; ಸಂಬಳ, ಸುಖ, ಸ್ನೇಹಿತರು ಎಲ್ಲ. ಇನ್ನೇನು ಮಕ್ಕಳು ಕೂಡ ಆಗುತ್ತವೆ ; ಈ ದೇಶದಲ್ಲಿ ಯಾವದಲ್ಲದಿದ್ರೂ ಅದು ಗ್ಯಾರೆಂಟಿ. ನೀನು ಈ ಮನೆಯಿಂದ ಹೊರಗೆ ಒಂದು ಸಲವೂ ನೋಡಿಲ್ಲ ; ನೀನಾಯು ನಿನ್ನ ಸಂಗೀತ, ಊಟ, ಪಾರ್ಟಿ, ಕಸೂತಿ, ಸಿನಿಮಾ ಆಯ್ತು.
ಸುಧಾ : ನಿಮಗೆ ಇಷ್ಟವಿಲ್ಲದಿದ್ರೆ ಅದನ್ನೂ ಬಿಡ್ತೇನೆ –
ಭಗವಾನ್ : ಇರು, ಹೇಳೋವರೆಗೆ ಇರು. ನನ್ನ ಕಾಲವೆಲ್ಲ ಮಾತ್ತಲ್ಲಿ ಕಳೆದು ಹೋಗ್ತಿದೆ. ಆಡ್ತಾ ಆಡ್ತಾ ನಮ್ಮ ಮಾತು ನಮ್ಮನ್ನೇ ತಿಂದು ಹಾಕುತ್ತೆ. ನಮ್ಮನ್ನ ಸೆರೆಯಾಳೂ ಮಾಡುತ್ತೆ. ಮಾತಿನ ರಾಜ್ಯದಲ್ಲೇ ಇರೋ ಚಟ ಬೆಳೆಯುತ್ತೆ.
ಸುಧಾ : ಇಷ್ಟೇನಾ ಹೇಳಬೇಕೂಂತಿದ್ದದ್ದು –
ಭಗವಾನ್ : ಇಷ್ಟೇ ಅಲ್ಲ, ಇವತ್ತು ಭಾಷಣ ಮಾಡಿದೆನಲ್ಲ : ತುಂಬ ಚೆನ್ನಾಗಿ ಮಾಡಿದ್ದೆ, ಚಪ್ಪಾಳೆಗಳ ಸುರಿಮಳೆ. ಆಟೋಗ್ರಾಫ್ ಕೊಟ್ಟು, ಹುರ ಹಿಡಕೊಂಡು ಅಲ್ಲಿಂದ ಹೊರಟೆ. ರಸ್ತೆಯುದ್ದಕ್ಕೆ ಒಬ್ಬನೇ ಬರ್ತಾ
ಇದ್ದೆ. ಹಾಗೆ ನಡೀತಾ ಬರ್ತಿದ್ದಾಗ ಒಂದು ವಿಚಿತ್ರ ಆಯಿತು –
ಸುಧಾ : (ಮೌನ, ಕುತೂಹಲ, ಅಸಹನೆಯಿಂದ) ಏನದು ಹೇಳಬಾರದೆ? ಯಾಕೆ ಹೀಗೆ ಪತ್ತೇದಾರಿ ಕಾದಂಬರಿ ಥರ ಮುಖ ಮಾಡ್ತೀರಿ? ಏನಾಯ್ತು ?
ಭಗವಾನ್‌ : ಇರು, ಇರು, ಹೇಳ್ತನೆ. ದೂರದಲ್ಲೊಬ್ಬ ಬರ್ತಿದ್ದ. ನನ್ನ ಭಾಷಣ ಕೇಳಿ ಬರ್ತಿದ್ದ ಹಾಗಿತ್ತು. ನಾನು ಹಿಂದಕ್ಕೆ ತಿರುಗಿ ಅವನನ್ನ ನೋಡಿದ್ದೆ ; ನಾನು ತಪ್ಪು ಮಾಡಿದವನ ಹಾಗೆ ಓವಕ್ಕೆ ತಿರುಗಿ ನೋಡಿದ್ದೆ ! ನಾನು ತಿರುಗಿದ ಕೂಡಲೇ ಆತ ಹೆಚ್ಚು ವೇಗವಾಗಿ ನನ್ನತ್ತ ಬಂದ. ನನಗೆ ಓಡಿ ಹೋಗಬೇಕೆಂಬ ಮನಸ್ಸು-ಆದರೆ ತೀರಾ ಹಾಸ್ಯಾಸ್ಪದವಾಗಿ ಕಂಡೀತೆಂದು ನಿಂತೆ. ಹತ್ತಿರ ಬಂದ. ನನ್ನ ಭಾಷಣ ಕೇಳಲು ಬಂದ ಮನುಷ್ಯನಾಗಿರಲಿಲ್ಲ ಆತ. ಆದರೆ
ಸುಧಾ : ಯಾರು ? ಯಾರಾತ ?
ಭಗವಾನ್ : ನನ್ನ ವಿದ್ಯಾರ್ಥಿ.
ಸುಧಾ : ಅದರಲ್ಲೇನು ವಿಶೇಷ ? ಎಂಥ ವಿದ್ಯಾರ್ಥಿ?
ಭಗವಾನ್ : ನಿನಗೆ ಅವನ ಹೆಸರು ಗೊತ್ತು.
ಸುಧಾ : ಗೊತ್ತಿದ್ದರೇನು ಹೇಳಿ.
ಭಗವಾನ್ : (ಮುಖ್ಯ ಗುಟ್ಟು ಹೇಳುವ ಧ್ವನಿಯಲ್ಲಿ) ದಿನಕರ.
ಸುಧಾ : ಏನಂತೆ ಅವನಿಗೆ ? ಏನಾಗಬೇಕಂತೆ ? ಯಾತಕ್ಕೆ ಸಿಕ್ಕಿದ್ದ ?
ಭಗವಾನ್ : ಹೇಳ್ತೇನೆ. ಇರು.
ಸುಧಾ : ಮತ್ಯಾರನ್ನ ಕೊಲ್ತಾನಂತೆ ?
ಭಗವಾನ್ : ಮೆತ್ತಗೆ ಮಾತಾಡು, ಹೊರಗಡೆಯೇ ಇದ್ದಾನೆ !
ಸುಧಾ : ಯಾಕೆ ಮಾತಾಡಬಾರದು ? ಹೊರಗಿದ್ದಾನಂತೆ–ಯಾಕೆ ಹೊರಗಿದಾನೆ ? ಈ ಗುಟ್ಟೆಲ್ಲ ನನಗೆ ಬೇಕಿಲ್ಲ. ಹೆಂಡ್ತಿ ಮನೇಲಿದಾಳೆ ಅನ್ನೋದು ನಿಮಗೆ ನೆನಪಿರೋಲ್ಲ-ಈ ಬೀದಿ ಭಿಕಾರಿಗಳು, ಕೊಲೆಗಡುಕ ನಾಯಿಗಳು ನೆನಪಿರ‍್ತಾರೆ. ಅವರ ಗುಟ್ಟೆಲ್ಲ ನಮ್ಮ ಮನಸ್ಸಿನ ಮೇಲೆ ಓಡುತ್ತಿರುತ್ತವೆ. ಆತ ಯೋಗ್ಯ ಅಲ್ಲ ಅಂತ ಇಡೀ ಊರಿಗೆ ಗೊತ್ತಿದೆ
ಭಗವಾನ್ : (ಅವಳ ಮಾತು ತಡೆಯುತ್ತ) ನನ್ನ ಮಾತನ್ನೂ ಕೇಳು. ನನಗೂ ಗೊತ್ತು, ಅವನು ಕೊಲೆ ಮಾಡಿದ್ದಾನೆ ಅಂತ. ಪೊಲೀಸರು ಅವನ ಬೆನ್ನು ಹತ್ತಿದಾರೆ ; ಗಲ್ಲಿ, ಗಲ್ಲಿ ಹುಡುಕ್ತಿದಾರೆ ; ನಾನು ಮಾತ್ರ; ಅವನಿಗೆ ಆಶ್ರಯ ಕೊಡಬಲ್ಲೆ, ನಾನು ಮಾತ್ರ ಅರ್ಥಮಾಡಿಕೊಳ್ಳಬಲ್ಲೆ.
ಸುಧಾ : ನೀವೂ ಕೊಲೆಯಲ್ಲಿ ಪಾಲುಗಾರರು ಅಂತ ಕಾಣುತ್ತೆ.
ಭಗವಾನ್ ; ಅಲ್ಲ ಅಂತ ನಿನಗೆ ಗೊತ್ತು.
ಸುಧಾ : (Curtly) ಗೊತ್ತಿಲ್ಲ. ಹೇಳಿ.
ಭಗವಾನ್ : (ಈಗಿ) ಅಂಥ ಕೊಲೆಯಲ್ಲಿ ಭಾಗಿಯಾಗಿದ್ರೆ ನಾನ್ಯಾಕೆ ನಿನ್ನಂಥ ಹೆಂಗಸನ್ನ ಕೊರಳಿಗೆ ಕಟ್ಟಿಕೊಂಡು ಬಾವಿಗೆ ಬೀಳ್ತಿದ್ದೆ; ಯಾಕೆ ಹೀಗೆ ಮಾತಾಡಿ ಆಡಿ ಸಾಯ್ತಿದ್ದೆ ; ಯಾಕೆ ಹೀಗೆ ನನ್ನೆದುರಿನ ಗೋಡೆಗೆ ತಲೆ ಚಚ್ಚಿಕೊಳ್ತಿದ್ದೆ ?
(ಸುಧಾ ಅಳುವಳು)
Sorry. ಕೇಳು, ಅಳಬೇಡ, ನನ್ನ ಮಾತು ಕೊಂಚ ಕೇಳು. ಇವತ್ತು ರಾತ್ರಿ ಅವನ್ನ ನಮ್ಮನೇಲಿ ಬಚ್ಚಿಡಬೇಕು ; ಬೆಳಗಿನ ಜಾವ ಕೇರಳಕ್ಕೆ
ಹೋಗ್ತಾನಂತೆ. ಬೇಡ ಅನ್ನಬೇಡ.
ಸುಧಾ : ನಾನು ನಿಮ್ಮನ್ನ ಸೀರೆಗಾಗಿ ಕಾಡಿಸಿಲ್ಲ ಎಲ್ಲರ ಹಾಗೆ. ನನ್ನ ತಂದೆ ಕೊಟ್ಟಒಡವೇಲಿ ತೃಪ್ತಳಾಗಿದ್ದೇನೆ. ನಿಮ್ಮ ಇಷ್ಟಕ್ಕೆ ಅಡ್ಡಿ ಬಂದಿಲ್ಲ. ಆದರೆ –
ಭಗವಾನ್ : ಏನು, ಆದರೆ ?
ಸುಧಾ : ನಾಲ್ಕು ಜನರೆದುರು ಮರ್ಯಾದೆ ತೆಗಿಬೇಡಿ.
ಭಗವಾನ್ : ಹೇಗೆ?
ಸುಧಾ : ನೀವು ದಿನಕರನಿಗೆ ಗೊತ್ತು. ಇದನ್ನು ಪೋಲಿಸರು ಕಂಡಿದಾರೆ ; ಬಂದು ಹುಡುಕ್ತಾರೆ.
ಭಗವಾನ್ : ಬಂದ್ರೆ-ಹಿತ್ತಿಲ ಕಡೆಯಿಂದ –
ಸುಧಾ : ಪೋಲಿಸರು ಬರೋದು ಅಂದ್ರೆ ! ಅಷ್ಟೇ ಸಾಲದೆ ? (ಆತ ಆಕೆಗೆ ಮುಂಚೆ ಕೇಳಿದಂತೆಯೇ, ಹೆಚ್ಚು ಸಿಟ್ಟಿನಿಂದ) ನಾನು ನಿಮ್ಮ ಹೆಂಡತಿಯಾಗಿರುವಂತೆ, ನೀವು ನನ್ನ ಯಜಮಾನರು.
(ಮೌನ)
ಸುಖ ದುಃಖದಲ್ಲಿ ಇಬ್ಬರಿಗೂ ಪಾಲಿದೆ.
(ಮೌನ)
ಅದಕ್ಕೇ ಹೇಳ್ತಿದೇನೆ. ನಿಮ್ಮ ಯಾವ ಕೋಟು ಎಲ್ಲಿರುತ್ತೆ ಅಂತ ನಿಮಗೆ ಗೊತ್ತಿರೋದಿಲ್ಲ; ಎಲ್ಲದಕ್ಕೆ ಸಹಾಯ ಬೇಕು, ಹಾಗೆಯೇ ನಿಮ್ಮ ಯಾವ ಯೋಚನೆ ಎಲ್ಲಿದೆ ಅಂತ ನಿಮಗೆ ಗೊತ್ತಿಲ್ಲ. ನನಗೆ ದಿನಕರನ ಸ್ಥಾನ ಚೆನ್ನಾಗಿ ಗೊತ್ತು.
ಭಗವಾನ್ ; ಮಾತಿಗೆ ಪುರಸೊತ್ತಿಲ್ಲ, ಕತ್ತಲಿನ್ನೂ ಆಗಿಲ್ಲ-ಆತ ಹೊರಗೆ ನಿಂಬೆ ಮರದ ಹತ್ತಿರ ನಿಂತಿದಾನೆ ; ಎಲ್ಲರೂ ನೋಡ್ತಾರೆ. ನಾನು ಒಳಗೆ ಕರೀಬೇಕು. ನೀನು ಬೇಕಾದರೆ ಚೀರು, ನನ್ನ ಕೊಲ್ಲು. ನಾನು ಮಾತ್ರ ಕರೀಲೇಬೇಕು. ಇಲ್ಲದಿದ್ರೆ-
ಸುಧಾ : ಇಲ್ಲದಿದ್ರೆ ? –
ಭಗವಾನ್ : ಇಲ್ಲದಿದ್ರೆ ನನ್ನ ಮಾತೇ ನನ್ನನ್ನು ತಿಂದುಹಾಕುತ್ತವೆ. ಅದೂ ಸಣ್ಣ ವಿಷಯ. ಆದಕ್ಕಿಂತ ಮುಖ್ಯವಾಗಿ-
ಸುಧಾ : ಏನದು ಅದಕ್ಕಿಂತ ಮುಖ್ಯ ?
ಭಗವಾನ್ : ಸುಳ್ಳು ಹೇಳುವ ನನ್ನನ್ನ ಇವತ್ತಲ್ಲ ನಾಳೆ ಕತ್ತು ಕೊಯ್ದು ನೇತು ಹಾಕ್ತಾರೆ : ನಿನ್ನ ಮಾನಭಂಗ ಬೀದೀಲಿ ಮಾಡ್ತಾರೆ. ನಾನು ಮಾತಾಡ್ತಾ ನೀನು ಪುರಂದರದಾಸರ ಪದ ಹಾಡ್ತಾ ಹೀಗೇ ಇದ್ರೆ ಇಡೀ ದೇಶ ಹೊತ್ತಿಕೊಂಡು ಉರಿಯುತ್ತೆ-
ದಯವಿಟ್ಟು ಬೇಡ ಅನ್ನಬೇಡ, ಕರೀತೇನೆ.
(ಹೊರಗೆ ಹೋಗಿ ಮೌನವಾಗಿ ದಿನಕರನನ್ನು ಕರೆದು ತರುವನು. ದಿನಕರ ಸುಮಾರು ಇಪ್ಪತ್ತು ವರ್ಷದ ಕದರಿದ ತಲೆಯ ಮಾಸಿದ ಅಂಗಿಯ ಹೊಳೆವ ಕಣ್ಣುಗಳ ಬಡಕಲು ಹುಡುಗ. ಅವರಿಬ್ಬರೂ ಪ್ರವೇಶಿಸುವವರೆಗೆ ಸುಧಾ ಅಚಲಳಾಗಿ ಸಿಟ್ಟಿನಿಂದ ನಿಂತಿರುವಳು)
ಸುಧಾ : (ದಿನಕರನಿಗೆ) ಯಾಕೆ ಹೀಗೆ ಮಾಡಿದ್ದು ? ನಿನಗೇನಾಗಿತ್ತು ?
(ಮೌನ).
ಕೊಲೆಗಡುಕನನ್ನ ಕೇಳ್ತಿರೋದು ; ಯಾಕೆ ನೀನು ಕೊಂದದ್ದು ?
ದಿನಕರ : ನಿಮಗೆ ಗೊತ್ತಿದೆ ಅಂತ ಸುಮ್ಮನಿದ್ದೆ.
ಸಧಾ : ಗೊತ್ತಿಲ್ಲ. ಹೇಳು.
ಭಗವಾನ್ : ಅದಕ್ಕೆಲ್ಲ ಸಮಯವಿಲ್ಲ, ಸುಧಾ, ಈತ ಈತನ್ನ ಎಲ್ಲಾದರೂ
ಸುಧಾ : ದಯವಿಟ್ಟು ಸುಮ್ಮನಿರಿ. ಹೇಳಲಿ.
ದಿನಕರ : (ಮುಗುಳ್ನಕ್ಕು) ಅದೊಂದು ದೊಡ್ಡ ಕತೆ. ಸ್ವಲ್ಪದರಲ್ಲಿ ಮುಗಿಸಬಹುದು ; ಕೊಲೆ ಸಾಮಾನ್ಯವಾಗಿ ಯಾಕೆ ಆಗ್ತವೆ?
ಸುಧಾ : ಅದರಲ್ಲಿ ಪಂಡಿತನಾಗಿದ್ದೀ. ನೀನೇ ಹೇಳು.
ದಿನಕರ : ಹೊಟ್ಟೆಕಿಚ್ಚಿನಿಂದ. ಅಲ್ಲವೆ?
ಸುಧಾ : ಹೇಗೆ ?
ದಿನಕರ : ಹೊಟ್ಟೆಗಿಲ್ಲದಾಗ ಕಿಚ್ಚು ಬರುತ್ತೆ. ಮೈ ಬೆಳಸಿಕೊಂಡವರ ಕೊಬ್ಬು ಅದಕ್ಕೆ ಸಿಗುತ್ತೆ.
ಸುಧಾ : ಈ ಮನೆಯಲ್ಲಿ ನಿನಗೆ ಜಾಗವಿಲ್ಲ.
ದಿನಕರ : ಇಲ್ಲಿ ಅಂಥವರು ಯಾರೂ ಇಲ್ಲ ಅಂದ್ರೋಂಡಿದ್ದ.
ಸುಧಾ : ನಿನ್ನಂಥವನಿಗೆ ಯಾವ ಮನೆಯಲ್ಲೂ ಜಾಗವಿರಕೂಡದು.
ದಿನಕರ : ಹಾಗಾದರೆ ನಾನಿನ್ನು ಬರ್ತೇನೆ-
ಭಗವಾನ್‌ : No, ಇರು. ಹಾಗೆ ಮಾತಾಡ್ತಾಳಷ್ಟೆ. ಕೋಪ ಮಾಡಿಕೊಳ್ಳಬೇಡ.
(ಬಾಗಿಲು ಭದ್ರವಾಗಿ ಹಾಕಿಕೊಂಡು, ಅದಕ್ಕೆ ಬೆನ್ನು ಹಾಕಿ ನಿಂತು, ಹೆಂಡತಿಗೆ) ಸುಧಾ, ನಿನಗೆ ಗೊತ್ತು: ಈ ಮನೆ ನಮ್ಮದಲ್ಲ.
ಸುಧಾ : ನಾನೇ ನಿಂತು ಕಟ್ಟಿಸಿದ ಮನೆ !
ಭಗವಾನ್ : ಇದು ಇಪ್ಪತ್ತು ವರ್ಷ ತೀರಿಸಬೇಕಾದ ಸಾಲದ ಮನೆ ; ನನ್ನಂಥವರಿಗೆ ಇಪ್ಪತ್ತು ವರ್ಷ ಸುಖ ಕೊಡಲು ಯೋಜನೆ ಹಾಕಿರೋ ಜನ ದಿನಕರನಂಥ ಇವತ್ತಿನ ಜನಕ್ಕೆ ತುತ್ತು ಅನ್ನ ಕೊಡುತ್ತಿಲ್ಲ, ನಿನಗೆ ಇಷ್ಟೂ ಗೊತ್ತಾಗಲ್ಲವೇ ? ಇವತ್ತು ನಿನಗೆ ಮುಖ್ಯವಲ್ಲವೆ? ಇವತ್ತು ಸಾಯುತ್ತಿರೋ ಜನ ನಿಮ್ಮ ಗಮನಕ್ಕೆ ಬರೋಲ್ಲವೆ?
ಸುಧಾ : ಇನ್ನೊಬ್ಬರು ಸಾಯುತ್ತಿದ್ದರೆ ನಾವು ಬದುಕಬಾರದು ಅಂತ ತಮ್ಮ ಅರ್ಥವೆ ?
(ಹೊರಗಡೆ ರಿಸರ‍್ವ್‌ ಪೊಲೀಸರ ‘ಜರ್-ಜರಕ್’ ಗತ್ತಿನ ನಡಗೆ ; ಎಲ್ಲರ ಕಿವಿ ತುಂಬುವಂತೆ)
(ಕೇಳಿ) ಆಗಲೇ ಪೋಲಿಸರು-
ಭಗವಾನ್ : (ಕಿಟಕಿಯಿಂದ ಹೊರಗಡೆ ನೋಡಿ) ಇಲ್ಲ ! ನಿನ್ನ ಕಲ್ಪನೆ. ಅಷ್ಟೆ. ಇಲ್ಲಿ ಯಾರೂ ಇಲ್ಲ. ಯಾರೂ ಬರೋದಿಲ್ಲ. ನೋಡು, ಎಲ್ಲ ಹಚ್ಚಗೆ ಕಾಣಿಸ್ತದೆ ; ಇನ್ನೆರಡು ಕ್ಷಣದಲ್ಲಿ ಕತ್ತಲು ಎಲ್ಲವನ್ನೂ ಮುಚ್ಚುತ್ತೆ. ರಾತ್ರಿ ಹ್ಯಾಗೋ ಕಳೆದುಹೋಗುತ್ತೆ. ಎಲ್ಲ ಸರಿಹೋಗುತ್ತೆ. ಮತ್ತೆ ಎಲ್ಲ ಶಾಂತವಾಗುತ್ತೆ. (ಸುಧಾ ಕಡೆಗೆ ತಿರುಗಿ) ಕೋಪಿಸಬೇಡ ; ನಾವು ಸಮಾಜಕ್ಕೆ ಇಷ್ಟಾದರೂ ಮಾಡಲೇಬೇಕು. ಇಲ್ಲಿ ಮನೆ ಮಾಡಿ ನೆಲಸಿದ್ದಕ್ಕೆ
ಸುಧಾ : ನೆಲಸಿದ್ದಕ್ಕೆ ಪಾಪಿಗಳ ರಕ್ಷಣೆ ಮಾಡಬೇಕ ? (ದಿನಕರನಿಗೆ) ನೀನು ಕೊಂದವನ ಹೆಸರೇನು ?
ದಿನಕರ : ನಿಮಗೆ ಅದು ಬೇಕು ಅನ್ನಿಸೋಲ್ಲ.
ಸುಧಾ : ಬೇಕು, ಹೇಳು.
ದಿನಕರ : ಸುಳ್ಳು ಹೇಳಬಲ್ಲೆ.
ಸುಧಾ : (ಗಂಡನಿಗೆ) ಸುಳ್ಳರಿಗೂ ನಿಮ್ಮ ರಕ್ಷಣೆ !
ಭಗವಾನ್ : ಆ ಹೆಸರು ತಗೊಂಡು ಏನು ಮಾಡ್ಲಿ ?
ಸುಧಾ : ಏನು ಮಾಡ್ತೀನೆ ಕೇಳಿ. (ಫೋನಿನ ಹತ್ತಿರ ಹೋಗಿ) ಪೋಲಿಸರಿಗೆ ಫೋನ್ ಮಾಡ್ತೀನೆ. ಈ ಎಲ್ಲ ಗುಟ್ಟಿನಿಂದ ಹೊರಕ್ಕೆ ಬರ್ತೇನೆ. ಭಗವಾನ್ : (ಸಿಟ್ಟಿನಿಂದ) ಸುಧಾ ! ಮುಟ್ಟಬೇಡ !
ಸುಧಾ : (ತಣ್ಣಗೆ) ಯಾಕೆ ?
(ಮೌನ)
ಯಾಕೆ ಮುಟ್ಟಬಾರದು ?
(ಮೌನ)
ಹೇಳಿ, ಯಾಕೆ ಗೊಂಬೆ ಹಾಗೆ ನಿಂತಿದೀರಿ ? ಯಾಕೆ ನಾನು ಫೋನ್ ಮುಟ್ಟಬಾರದು ? ನಾನು ಮಾಡಿದ ತಪ್ಪಾದರೂ ಏನು ? ಸುಳ್ಳು ಹೇಳಿಲ್ಲ, ಕೊಲೆ ಮಾಡಿಲ್ಲ, ವ್ಯಭಿಚಾರ ಮಾಡಿಲ್ಲ ; ನಿಮ್ಮ ಕೆಡುಕನ್ನ ಕನಸಿನಲ್ಲೂ ಎಣಿಸಿಲ್ಲ. ಆದರೂ ಆತ ದೊಡ್ಡವ ನಿಮಗೆ ? ಊರಿಗೆ ಊರೇ ಪಾತಕಿ ಅಂತ ಹೇಳ್ತಿರೋ ನೀಚ ದೊಡ್ಡವನು ನಿಮಗೆ ! ಈ ಗುಟ್ಟೆಲ್ಲ ತೀರ ಭಾರ ನನಗೆ : ನನ್ನಿಂದ ತಡೆಯೋಕ್ಕಾಗೋಲ್ಲ.
ಅದಕ್ಕೇ ಇದನ್ನ ಉಪಯೋಗಿಸ್ತೇನೆ. (ಫೋನ್ ತೆಗೆದುಕೊಳ್ಳುವಳು)
ಭಗವಾನ್ : ಅದನ್ನಲ್ಲಿಡು ; ಕೊನೇ ಬಾರಿಗೆ ಹೇಳ್ತೇನೆ-ಅಲ್ಲಿಡು.
ಸುಧಾ : ಯಾಕಿಡಬೇಕು ?
ಭಗವಾನ್ : ಅದಕ್ಕೂ ನಿನಗೂ ಸಂಬಂಧವಿಲ್ಲ.
(ಮೌನ)
ಸುಧಾ : ಅಂದರೆ ?
(ಮೌನ)
ಭಗವಾನ್ : ಅಂದರೆ-
ಸುಧಾ : ಅದು ನಿಮ್ಮದು ? ಸ್ವಂತದ್ದು ? ನಿಮ್ಮ ಹೆಸರಲ್ಲಿರೋದು ?
ಭಗವಾನ್ : ಹಾಗಲ್ಲ.
ಸುಧಾ : ಮತ್ತೆ ಹೇಗೆ ?
ಭಗವಾನ್ : ನನ್ನಿಂದ ಕೆಟ್ಟದ್ದನ್ನ ಆಡಿಸಬೇಡ, ದಯವಿಟ್ಟು ಕೆಟ್ಟದ್ದನ್ನ ಆಡಿಸಬೇಡ, ಇತ್ತ ಬಾ.
ಸುಧಾ : ಯಾಕೆ ?
ಭಗವಾನ್ : ಫೋನ್ ಬಿಟ್ಟು ಇತ್ತ ಬಾ.
(ಮೌನ. ಬರುವಳು)
ಸುಧಾ : ಅಂದರೆ ಎಲ್ಲ ನಿಮ್ಮದು. ನೀವು ಈತನ ತರವೇ ನಕ್ಸಲೈಟು !
(ದಿನಕರನಿಗೆ ಗೊತ್ತಾಯ್ತು ? ನಿನಗೆ, ಕೊಲ್ಲಬಲ್ಲ ವೀರಾಧಿವೀರನಿಗೆ ಹೇಳ್ತಿರೋದು ! ಎಲ್ಲ ನಮ್ಮ ಯಜಮಾನರದು. ಈ ಮನೆ, ಈ ರೇಡಿಯೋ, ಈ ಫೋನು, ಫ್ರಿಜ್‌, ಗಾಳಿ, ಮರ-ಎಲ್ಲ ಯಜಮಾನರದು. ನಿನಗೆ ಮಾನವಿದ್ದರೆ ಇಲ್ಲಿಂದ ತೊಲಗಬೇಕು !
ದಿನಕರ : ಅವರೇ ಅದನ್ನ ಹೇಳಲಿ.
ಸುಧಾ : ನಾನೂ ಅವರ ಆಸ್ತಿ ; ನಾನು ಹೇಳ್ತಿದೇನೆ.
ದಿನಕರ : ನಿಮ್ಮ ಹೆದರಿಕೆ ನಿಮ್ಮಿಂದ ಹಾಗನ್ನಿಸುತ್ತೆ.
ಸುಧಾ : ಮಹಾಧೀರ ನೀನು ಅವಿತುಕೊಳ್ಳಬೇಕಲ್ಲವೆ ?
ದಿನಕರ : ನನ್ನದು ಹೆದರಿಕೆ ಅಲ್ಲ : ಕೇವಲ ವರಸೆ.
ಸುಧಾ : ಎನ್ನ ಮಾತು ನನಗೆ ಅರ್ಥವಾಗಬೇಕು.
ಭಗವಾನ್ : ನಾನು ಹೇಳ್ತೇನೆ ಕೇಳು, ಯುದ್ದದ ಸ್ಥಿತಿಯೊಂದನ್ನು ನೆನಸಿಕೋ. ಒಬ್ಬನೇ ಇದ್ದಾಗ ಸಾವಿರಾರು ಜನ ಶತ್ರುಗಳು ಎರಗಿ ಬರ್ತಾರೆ; ಹೋರಾಡಿದರೆ ಅವನು ಸಾಯೋದು ಖಂಡಿತ. ಅದಕ್ಕೇ ಓಡುತ್ತಾನೆ. ಹೆದರಿಕೆಯಿಂದ ಅಲ್ಲ : ಆಮೇಲೆ ಅವರನ್ನ ಮತ್ತೂಮ್ಮೆ ಎದುರಿಸೋ ಅವಕಾಶಕ್ಕಾಗಿ.
ಸುಧಾ : (ದುರ್ಬಲಳಾಗಿ) ನನಗೆ ಏನೂ ಅರ್ಥವಾಗ್ತಿಲ್ಲ. ನಿಮ್ಮ ಒಂದು ಮಾತೂ ತಿಳೀತಿಲ್ಲ. ಹಾಳಾಗಿ ಹೋಗಿ….(ಮತ್ತೆ ಶಕ್ತಿ ಕೂಡಿಸಿಕೊಂಡು) ಇವತ್ತು ಬದುಕೋ ನಿರ್ಧಾರದ ನೀವು ಮತ್ತೊಂದು ಅವಕಾಶಕ್ಕಾಗಿ ಯಾಕೆ ಓಡಬೇಕು ? ನೀವು ಎದುರಿಸೋ ಭರವಸೆ ಏನು? ಹಾಗಿಲ್ಲದಾಗ ಈ ಗುಟ್ಟೆಲ್ಲ ಯಾಕೆ ?
ಭಗವಾನ್ : ದೇವರು ಕೊಟ್ಟ ಮರದಡಿ ಇರಲಾಗದಂಥ ಸ್ಥಿತಿ ಕಟ್ಟಿಕೊಂಡು
ಸೂರಿಗಾಗಿ ಓಡುತ್ತಾನೆ ಮನುಷ್ಯ. ಸುಧಾ. ಈ ಸೂರಿನಡಿ ನಾವು ಎಂಥೆಂಥ ಕ್ರೌರ್ಯ ನಡೆಸಿದ್ದೇವೆ ! ಈ ಕ್ರೌರ್ಯಕ್ಕೆ ನಾವು ಕೊಡೋ ಬೆಲೆ ಇಂಥ ಸಹಾಯ.
(ಬಾಗಿಲ ಕಡೆ ಸದ್ದು)
ಸುಧಾ : ನಿಮ್ಮ ಮಾತೇ ನಿಮ್ಮನ್ನ ಹಾಳು ಮಾಡುತ್ತೆ.
ಭಗವಾನ್ : (ಕಿಟಕಿ ಮೂಲಕ ಹೊರಗೆ ನೋಡಿ) ಯಾರೋ ಬರ್ತಿದಾರೆ-ಕಾಣಿಸ್ತಿಲ್ಲ. ದಿನಕರ. ನೀನು ಒಳಗೆ ಹೋಗು. (ಹೆಂಡತಿಗೆ) ನೀನು
ನಿಮಿಷವಾದರೂ ಸುಮ್ಮನಿರು. (ಮತ್ತೆ ಹೊರಗೆ ನೋಡುತ್ತ) ಮತ್ಯಾರು ಅವರೇ-ಉಂಡಾಡಿಗಳು : ಶಂಕರ, ರಾಮದಾಸ. ನಿನ್ನ
ಹೆದರಿಕೆ ಹೇಗೆ ನನಗೂ ಬಂದಿವೆ ! ಪೊಲೀಸರೋ ಅಂತ ಹೆದರಿದ್ದೆ!
ಸುಧಾ : (ತಾನೂ ನೋಡುತ್ತ) ಅವರು ಈಗ ಯಾಕೆ-
ಭಗವಾನ್ : (ನಗುತ್ತ) ಮತ್ತೆ ಯಾಕೆ ! ಇವತ್ತು ಇಸ್ಪೀಟಿಗೆ ಕೂರಲಿಲ್ಲ ಅಂತ ಕಾಣುತ್ತೆ. ಹರಟೆಗೆ ಬಂದ್ರು ನೋಡು, ಅವರ ಹತ್ತಿರ ದಿನಕರ ಒಳಗಿರೋ ವಿಚಾರ ಚಕಾರ ಎತ್ತಬಾರದು. ಅದು ನೀನು ನನಗೆ ಮಾಡೋ ಸಹಾಯ. (ಬೆಲ್ಲು ಶಬ್ದ ಮಾಡುವುದು. ಭಗವಾನ್ ಬಾಗಿಲಿಗೆ ಬೆನ್ನು ಹಾಕಿ ಹೇಳುವನು) ನಿನಗೆ ಯಾವ ರೀತಿಯಲ್ಲೂ ತೊಂದರೆಯಾಗದ ಹಾಗೆ ನಾನು ನೋಡಿಕೊಳ್ತೇನೆ. ನನ್ನ ವಿದ್ಯಾರ್ಥಿಗಾಗಿ, ನನ್ನ ಆತ್ಮಸಾಕ್ಷಿಗಾಗಿ ನಾವು ಮಾಡ್ತಿರೋ ಚಿಕ್ಕ ಕೆಲಸ ಇದು. (ಮತ್ತೆ ಬೆಲ್ಲು ಶಬ್ದ)
ಸುಧಾ : ನನಗೊಂದು ಅನುಮಾನ. ಬೆಳಗಿನ ಜಾವ ಹೋಗುವಾತ ಈಗಲೇ ಯಾಕೆ ಹೋಗಬಾರದು ?
ಭಗವಾನ್ : ನನಗೂ ಆ ಅನುಮಾನ ಇದೆ. ಆದರೆ ಆತನ ಗೆಳೆಯರು ಬೆಳಗಿನ ಜಾವ ಸಿಕ್ಕಬಹುದು: ಮತ್ತೇನೂ ವ್ಯವಸ್ಥೆ ಮಾಡಿಕೊಂಡಿರಬಹುದು ಅಥವಾ ನನ್ನನ್ನ ಪರೀಕ್ಷಿಸೋದಕ್ಕೆ ಆತ ಹೀಗೆ ಮಾಡುತ್ತಿರಬಹುದು. (ಬಾಗಿಲು ತೆಗೆಯುವನು. ಶಂಕರ ಮತ್ತು ರಾಮದಾಸ ಬರುವರು ; ಇಬ್ಬರೂ ಮಾತುಗಾರರು : ಭಗವಾನನ ಸಹೋದ್ಯೋಗಿಗಳು ;
ಮೋಜುಗಾರರು)
ಶಂಕರ : ಕಾಲೇಜಿಂದ ಬಂದು ಮನೇಲಿ ಪಟ್ಟಾಗಿ ಕೂತುಬಿಟ್ಟೆಯಾ ? ಕ್ಲಬ್ಬಿಗೆ
ಬರ್ತಾನೇಂತ ಕಾಯ್ತಿದ್ದೆವು (ಗಂಡ, ಹೆಂಡತಿ ನೋಡಿ) ಯಾಕೆ ಬಹಳ ಗರಂ ಆಗಿರೋ ಹಾಗಿದೆ ? ಏನು ಸಮಾಚಾರ ?
ರಾಮದಾಸ : (ಭಗವಾನ್‌ಗೆ) ನೀನು ಹೇಳಿದ್ದರೆ ಸಿಸ್ಟರ್‌ ಹೇಳ್ತಾರೆ-ಬಿಡು. ಹೇಳಿ ಸಿಸ್ಟರ್‌
ಸುಧಾ : (ನಕ್ಕು) ಏನೂ ಇಲ್ಲವಲ್ಲ ? ಯಾಕೆ ನಿಮಗೆ ಅನುಮಾನ ?
ಶಂಕರ : ನೋಡಿ, ಅನುಮಾನದ ಮಾತು ಬಂದಕೂಡಲೇ ಅನುಮಾನ ಶುರುವಾಗುತ್ತೆ ? ಏನೋ ಇರಲೆರ್ಬೇಕು.
ಭಗವಾನ್ : (ನಕ್ಕು) ಮಹಾ ಸೈಕಾಲಜಿಸ್ಟ್ ಈತ ! ಕಾಡುಹರಟೆಗೆ ಇಲ್ಲದ ನೆಪ ನಿನಗೆ ! ನಿನ್ನ ಬೋರ್‌ಗೆ ಇವತ್ತು ಯಾರೂ ಸಿಕ್ಕಲಿಲ್ಲವಾ ? ಸುಧಾ : ಒಬ್ಬರನ್ನೊಬ್ಬರು ಯಾಕೆ ಬೋರ್ ಅಂತೀರಿ-ಎಲ್ಲ ಮೇಷ್ಟರೂ-
ರಾಮದಾಸ : ಹಾ ! ಹಾ ! ಜನರಲೈಸೇಶನ್ ತಪ್ಪು ! ತಮಗೆ ಗೊತ್ತಿರೋದ್ರ ಬಗ್ಗೆ ಮಾತ್ರ ತಾವು ಹೇಳಬೇಕು !
ಸುಧಾ : ಅಂದ್ರೆ ನಮ್ಮ ಯಜಮಾನ್ರು ಬೋರ್ ಅಂತ ತಾನೇ, ಸುಳ್ಳು.
ಶಂಕರ : ಲೋ ಬೋರ. ನಿನ್ನ ನೋಡಿದರೇ ಬೋರಾಗುತ್ತೆ-ನೀನು ಭಗವಾನ್
ಬೋರ್ ಅಂತೀಯ ? (ಭಗವಾನ್‌ಗೆ) ಅಲ್ಲಯ್ಯ, ಭಗವಾನ್, ನಿಂತೇ ಇದೀವಿ, ಕೂತ್ಕೋ ಅಂತ ಕೂಡ ಹೇಳ್ತಿಲ್ಲವಲ್ಲೋ.
ಭಗವಾನ್ : ಅರೆ. ಕೂಡ್ರೋ. ದೊಡ್ಡ ಅತಿಥಿಗಳ ಹಾಗೆ ಆಡ್ತೀರಲ್ಲ. ಇವತ್ತು ಏನಾಗಿದೆ ನಿಮಗೆ ?
ರಾಮದಾಸ : ಹೇಳು ಇವತ್ತು ಯಾಕೆ ತುಂಬ ಯೋಚನೇಲಿದ್ದೀ ?
ಭಗವಾನ್ : ಏನಿಲ್ಲ, ಏನಿಲ್ಲ-ನಾವು ಇವತ್ತು-ಈಗ-ನನ್ನ ಹೆಂಡ್ತಿ-
ಶಣಕರ : ಏನು. ಯಾಕೆ ಮಾತಿಗಾಗಿ ತಡಕಾಡ್ತಿ ?
ರಾಮದಾಸ : ಹಾಗೆ ತಡಕಾಡಿದ್ದು ನೋಡಿದ್ದು ಇವತ್ತೆ.
ಭಗವಾನ್ : ತಡಕಾಡ್ತಿಲ್ಲ. ಹೇಳ್ತೇನಿರು (ಸುಳ್ಳು ಹೇಳುತ್ತ) ಇವತ್ತು ಸಿನಿಮಾಕ್ಕೆ ಹೋಗೋಣಾಂತ ಹೊರಟಿದ್ದವು. ಅಷ್ಟರಲ್ಲೇ ನೀವು ಬಂದ್ರಿ-
ಶಂಕರ : ಬರಬಾರದಿತ್ತು ಅನ್ನು. ಹಾಗೆ ಬೊಗಳೋಕೆ ಏನಾಗಿತ್ತು ?
(ಎಂದು ನಗುತ್ತ) ಹಾಗಾದ್ರೆ ಬ ಬರ್ತೀವಿನ್ನು-
ಭಗವಾನ್ : ಇನ್ನೂ ಅರ್ಧ ಗಂಟೆ ಟೈಮಿದೆ. ಇರು. ಅಲ್ಲವೇ ಸುಧಾ ?
ಸುಧಾ : ಆಗಲಿಂದ ನಾ ಹೇಳ್ತಿದೇನೆ ನನಗೆ ತಲೆ ನೋಯ್ತಿದೆ. ಬರೋಲ್ಲ ಅಂತ- ಕೇಳ್ತಿಲ್ಲ.
ಭಗವಾನ್ : ಸುಳ್ಳು ಹೇಳಬೇಡ್ವೆ. ನೋಡಿದಿರಾ. ಅತಿಥಿ ಸತ್ಕಾರದಲ್ಲಿ ಸುಧಾಗೆ ಎಷ್ಟು ಆಸಕ್ತಿ !
ರಾಮದಾಸ : ತಲೆನೋವೇ ? ಈ ಟ್ಯಾಬ್ಲೆಟ್ಸ್ ತಗೊಳ್ಳಿ ಸಿಸ್ಟರ್ -ತುಂಬ ಒಳ್ಳೇದು.
ತಲೆನೋವಿದ್ರೆ ಹೋಗಿಬಿಡುತ್ತೆ. ಇಲ್ಲದಿದ್ರೆ ಬಂದುಬಿಡುತ್ತೆ !
(ಕೊಡಲು ಹೋಗುವನು)
ಸುಧಾ : ಬೇಡ, ಬೇಡ-ಅಷ್ಟಿಲ್ಲ.
ರಾಮದಾಸ : ಹಾಗಾದ್ರೆ ಸುಳ್ಳು ತಲೆನೋವು !
(ನಗುವರು)
ಶಂಕರ : ಕೇಳಿದ್ಯಾ ದಿನಕರನ ವಿಚಾರ ?
ರಾಮದಾಸ : ಅವನು ಕೇಳದೆ ಇರ್ತಾನೇನೊ ! ನಕ್ಸ್‌ಲೈಟ್ ಮೇಷ್ಟ್ರು !
ಸುಧಾ : (ಗೊತ್ತಿಲ್ಲದವಳಂತೆ) ಏನು ? ಏನು ಸಮಾಚಾರ ?
ರಾಮದಾಸ : ನಿಮ್ಮ ಯಜಮಾನ್ರ, ಪ್ರಿಯ ಶಿಷ್ಯ ಆತ- ಕೇಳಿ ಆವನ್ನೇ.
ಭಗವಾನ್ : ನಿನಗ್ಯಾಕೆ ಪ್ರಿಯ ಶಿಷ್ಯ ಅಲ್ಲ ?
ಶಂಕರ : ಪಾಠ ಮಾಡೋಕೆ ಬರೋಲ್ಲ ಅವನಿಗೆ. ಅಷ್ಟೆ.
ರಾಮದಾಸ : (ನಿಜ ಹೇಳಿದ್ದರಿಂದ ನೊಂದು) ನಾನು ಎಲ್ಲ ಮೇಷ್ಟರ ಹಾಗೆ ತಲೆ
ಹರಟೆ ಮಾಡಿ ಪೇಚಿಗೆ ಸಿಕ್ಕಿಹಾಕ್ಕೊಳ್ಳಲ್ಲ. ಅಷ್ಟೆ.
ಭಗವಾನ್ : (ವ್ಯಂಗ್ಯ ಗ್ರಹಿಸಿ) ತಲೆಹರಟೆ ಯಾವುದು ರಾಮವಾಸ : ಹುಡುಗರ ಗೋಳನ್ನೆಲ್ಲ ಅರ್ಥಮಾಡಿಕೊಂಡರೆ ಅದು ತಲೆಹರಟೆನಾ ?
ರಾಮದಾಸ : ಅಲ್ಲ ; ಹಾಗಲ್ಲ ಅಂತ ನಿನಗೇ ಗೊತ್ತಿದೆ.
ಭಗವಾನ್ : ಸಿನಿಮಾಕ್ಕೆ ಹೊತ್ತಾಗುತ್ತೆ : ಗೊತ್ತಿದ್ದರೆ ಬೇಗ ಹೇಳು, ನನಗೊತ್ತಿಲ್ಲ.
ಸುಧಾ : ದಿನಕರನ ಸಮಾಚಾರ ಯಾರೂ ಹೇಳಿಲ್ಲ.
ರಾಮದಾಸ : ನೋಡಿ ಸಿಸ್ಟರ್ : ನನ್ನ ಕೆಲಸ ನಾನು ನೋಡಿಕೊಂಡು ತೆಪ್ಪನಿದ್ರೆ ಅದು ಇವರಿಗೆ ಇಷ್ಟವಿಲ್ಲ ; ಇಲ್ಲದ ನಕ್ಸ್‌ಲೈಟ್ ಕಾರುಬಾರ್ ನಡೆಸಿ ತಲೆತಿರುಕ ಹುಡುಗರಿಗೆ ಹಚ್ಚಿಕೊಟ್ಟು ಕೊಲೆ ಲೂಟಿ ಗೂಂಡಾಗಿರಿ ನಡೆಸಿದ್ರೆ ಮಹಾ ಟೀಚರ‍್ರು!
ಸುಧಾ : (ಮುಗ್ಧತೆ ನಟಿಸುತ್ತ) ಯಾರೀಗ ಹಾಗೆ ಮಾಡಿದಾರೆ ?
ರಾಮದಾಸ : ನಿಮಗೆ ಇಷ್ಟರಲ್ಲೇ ಗೊತ್ತಾಗುತ್ತೆ.
ಭಗವಾನ್ : (ಕೊಂಚ ಮುನಿಸಿನಿಂದ) ಏನಯ್ಯ ಗೊತ್ತಾಗುತ್ತೆ ? ಅದೇಕೆ ತರಲೆ ಹೆಂಗಸರ ಹಾಗೆ ವರ್ಮದ ಮಾತಾಡ್ತಿ ?
ಶಂಕರ : ಹೋಗಲಿ ಬಿಡೋ, ಜಗಳ ಯಾಕೆ ?
ರಾಮದಾಸ : ಜಗಳ ಯಾಕೆ ಅಲ್ಲವಾ (ನಕ್ಕು) ಅದನ್ನ ಅಲ್ಲಿಗೇ ಬಿಡೋಣ. ನಾನು ನಿಮಗೆಲ್ಲ ಗೊತ್ತಿರೋ ಹಾಗೆ ಸ್ಪೋರ್ಟಿವ್ ! (ಉಲ್ಲಾಸ ನಟಿಸುತ್ತ ಎದ್ದು) ಇದನ್ನ ಸೆಲಿಬ್ರೇಟ್ ಮಾಡೋಣ ! ತುಂಬ ಖುಷಿಯಾಗಿರೋಣ, ಅಲ್ಲವೇ ಸಿಸ್ಟರ್‌ ?
ಸುಧಾ : ಹೇಗೆ ?
ರಾಮದಾಸ : (ಭಗವಾನ್‌ಗೆ) ಅಲ್ಲೋ ಮಿತ್ರ ಅವತ್ತು ಉಳಿದಿತ್ತಲ್ಲ ಸ್ಕಾಚ್, ಇನ್ನೂ ಇದೆ ತಾನೆ ? ತರ್ತೇನೆ ಇರು. (ಎಂದು ಒಳಗೆ ಹೋಗಲಿದ್ದಾಗ)
ಭಗವಾನ್ : ನಿಲ್ಲು, ಅವೆಲ್ಲ ಮುಗಿದಿದೆ.
ರಾಮದಾಸ : (ನಿಂತು) ಯಾಕೆ ಒಂಥರಾ ಇದ್ದೀ ? ಏನಾಗಿದೆ ನಿನಗೆ ಇವತ್ತು ?
ಭಗವಾನ್ : ಬಂದು ಕೂತ್ಕೋ. ಸ್ಕಾಚ್ ಇಲ್ಲ.
ರಾಮದಾಸ : ಸುಳ್ಳು ಹೇಳಬೇಡ, ಸ್ಕಾಚ್ ಇಲ್ಲದಿದ್ರೆ ದೇಸಿ ಬಿಯರ್‌ ಆದರೂ ಇರುತ್ತೆ ತರ್ತೇನೆ.
ಭಗವಾನ್ : ನೀನು ತರೋದು ಬೇಡ. ಮುಚ್ಚಿಗಂಡು ಕೂತ್ಕೋ.
ರಾಮದಾಸ : This is Serious.
ಭಗವಾನ್ : ಹೌದು, ಮೊದಲು ಇಲ್ಲಿಂದ ಹೊರಡು.
ರಾಮದಾಸ : ಇದು ಗೊತ್ತಿದ್ರೆ ನಾನು ಬರ್ತಾನೇ ಇರ್ಲಿಲ್ಲ.
ಭಗವಾನ್ : ಇನ್ನು ಇಷ್ಟವಿಲ್ಲದಿದ್ರೆ ಬರಬೇಡ.
ಶಂಕರ : ಜಗಳ ಬೇಡ….
ಸುಧಾ : ತಗೊಳ್ಳಲಿ ಬಿಡಿ.
ರಾಮದಾಸ : ನೀನಿಷ್ಟು ಸಣ್ಣವನು ಅಂತ ಗೊತ್ತಿರಲಿಲ್ಲ.
ಭಗವಾನ್ : ಈಗ ಗೊತ್ತಾಯ್ತು ತಾನೆ–ನಾನು ಸಣ್ಣವ, ನೀನು ದೊಡ್ಡವ, ಈ ಶಂಕರ ಮಹಾವ್ಯಕ್ತಿ, ನಿಮ್ಮ ದಾರಿ ನೀವು ಹಿಡಿದು ಹೋಗಿ. ಕುಡಿದು
ಇಸ್ಪೀಟಾಡಿ ಹಾಳಾಗಿ ; ನನ್ನ ತಂಟೆಗೆ ಬರಬೇಡಿ.
ಶಂಕರ : ನಾನೇನು ಮಾಡಿದೆ ?
ರಾಮದಾಸ : ಏನು ಯಾಕಯ್ಯ ಮಾಡಬೇಕು-ಕ್ರಾಂತಿಕಾರರ ಧಿಮಾಕಿಗೆ ಕಾರಣ ಯಾಕೆ ಬೇಕು ?
ಭಗವಾನ್ : ಹೌದು, ನಾನು ಕ್ರಾಂತಿಕಾರ.
ರಾಮದಾಸ : ನನಗೆ ಗೊತ್ತಿಲ್ಲದ ಕ್ರಾಂತಿಕಾರನ ನೀನು ? ಸ್ನೇಹಿತನಿಗೆ ಒಂದು ತೊಟ್ಟು
ಬಿಯರ್‌ ಕೊಡಲಿಕ್ಕೆ ಸಣ್ಣತನ ; ಅವರ ರೂಮಲ್ಲಿ ಹಂಡೆಗಟ್ಲೆ ಅಭಿಷೇಕ ಆಗಬೇಕು. ಮನೆಗೆ ಬಂದೋರನ್ನ ತೊಲಗು ಆನ್ನೋ ಸಮಾಜವಾದಿ ! ಮತ್ತೆ ಕ್ರಾಂತಿಯ ಮಾತು! ಯಾವುದೂ ಯಾರಿಗೂ ಸೇರಿದ್ದಲ್ಲಿ ಸಮಾಜದ್ದು ! ನೆನಪಿಟ್ಟುಕೋ ಭಗವಾನ್ : ಇದು ಬಹಳ ದಿನ ನಡೆಯೋಲ್ಲ!
ಸುಧಾ : ಇಷ್ಟಕ್ಕೆಲ್ಲ ಯಾಕೆ ಜಗಳ ಕಾಯ್ತೀರಿ ? ನಿಮಗೀಗ ಏನು ಬೇಕು ಹೇಳಿ -ನಾನು ಕೂಡ್ತೇನೆ.
ರಾಮದಾಸ : ಏನೂ ಬೇಡ ಸಿಸ್ಟರ್, ನೆನಪಿಟ್ಟುಕೊಳ್ಳಿ: ಈತನ ಚಟುವಟಿಕೆ ಎಲ್ಲರಿಗೂ ಗೊತ್ತಿದೆ ; ಈತ ಹುಡುಗರಿಗೆ ಏನು ಹೇಳ್ತಾನೆ ಅಂತ ಊರಿಗೆಲ್ಲ ಗೊತ್ತಿದೆ. (ಕೊಂಚ ಸಮಾಧಾನದಿಂದ) ಹೋಗಲಿ ಬಿಡಿ ನಿಮಗೇಕೆ ಬೇಸರ ಪಡಿಸಲಿ. (ಭಗವಾನ್‌ಗೆ) ನೋಡಯ್ಯ ಸಮಾಜವಾದಿ, ಒಳಗಡೆ ಫ್ರಿಜ್ ಇದೆಯಲ್ಲ ಅದರಲ್ಲಿ ಕೊಂಚ ನಿನ್ನ ತಲೆ ಇಡು ; ತಣ್ಣಗಾಗುತ್ತೆ. (ಶಂಕರನಿಗೆ) ಬಾರಯ್ಯ ಹೋಗೋಣ.
ಭಗವಾನ್ : (ಸಮಾಧಾನದಿಂದ) ಏ, ರಾಮ, ಶಂಕರ-
(ಅವರು ತಿರುಗಿ ನೋಡದೆ ಹೋಗುವರು)
ಸುಧಾ : ಹಾಗೆಲ್ಲ ಅನ್ನಬಾರದಿತ್ತು ನೀವು.
ಭಗವಾನ್ : ಜೋಗಲಿ ಬಿಡು. ಅವರ ಕೋಪ ಗೊತ್ತಿಲ್ಲವಾ ? ನಾಳೆ ಬರ್ತಾರೆ. ಎಲ್ಲ ಸರಿಹೋಗುತ್ತೆ. ಈಗ ನಿನಗೆ ಒಪ್ಪಿಗೆ ತಾನೆ ?
ಸುಧಾ : ಯಾವುದಕ್ಕೆ ? ಭಗವಾನ್ : ಸಿನಿಮಾಕ್ಕೆ ಹೋಗೋಣ. ಹೇಗೂ ಬಟ್ಟೆ ಹಾಕ್ಕೊಂಡಿದ್ದೀ. ಈ ಗದ್ದಲವೆಲ್ಲ ಮರೆಯುತ್ತೆ-ಆರಾಮಾಗಿ ಎರಡು ಗಂಟೆ ಹೋಗಿ ಅಲ್ಲಿ ಇಲ್ಲಿ ಅಡ್ಡಾಡಿಕೊಂಡು ಬರೋಣ.
ಸುಧಾ : ನಿಮ್ಮ ಶಿಷ್ಯನಿಗೇನು ಮಾಡ್ತೀರಿ ?
ಭಗವಾನ್ : ಅವನು ಇಲ್ಲೇ ಇರ್ಲಿ, ಬೀಗ ಹಾಕೊಂಡು ಹೋಗೋಣ. ಇದು ಎಂಥ ಪ್ಲಾನ್ ಗೊತ್ತ ? Perfect ! ಬೀಗ ನೋಡಿದ್ರೆ ದಿನಕರ ಇರೋ ಅನುಮಾನ ಯಾರಿಗೂ ಬರೋಲ್ಲ! ನಾವು ಬರೋದ್ರಲ್ಲೇ ಒಂದು ಗಂಟೆ ಆಗಿರುತ್ತೆ ! (ಕರೆಯುತ್ತ) ದಿನಕರ್ ! (ದಿನಕರ ಬರುವನು) ನೋಡು, ನಾವು ಬರೊವರೆಗೆ ಫ್ರಿಜ್ಜಲ್ಲಿ ತಿಂಡಿ ಇದೆ ತಿಂದ್ಕೊಂಡು ಆರಾಮಾಗಿರು.
ಸುಧಾ : ನನಗೇನೋ ಇವನ ಮೇಲೆ ನಂಬಿಕೆ ಇಲ್ಲ!
ಭಗವಾನ್ : (ಗಮನಿಸದೆ) ನಾವು ಬರೋದ್ರಲ್ಲೇ ಒಂದು ಗಂಟೆಯಾಗಿರುತ್ತೆ. ಮಧ್ಯರಾತ್ರಿ ಆದಮೇಲೆ ಪೋಲೀಸರ ಭಯವಿಲ್ಲ. ನೀನು ಬೆಳಗಿನ
ಜಾವ ಹೊರಡಬಹುದು.
ದಿನಕರ : ನಿಮಗೂ ಭಯವಾಗಿರೋ ಹಾಗೆ ಕಾಣತ್ತೆ.
ಭಗವಾನ್ : ಇಲ್ಲ ! ಇಲ್ಲ ! ಯಾಕೆ ಭಯ ? ಹಾಗೇನಿಲ್ಲ.
ಸುಧಾ : ಈತನ ಮೇಲೆ ಹ್ಯಾಗೆ ಮನೆ ಬಿಟ್ಟು
ಭಗವಾನ್ : ಮತ್ತೆ ಅನುಮಾನ ಪಡಬೇಡ. ನನ್ನ ಸ್ಟೂಡೆಂಟ್‌ ಅಲ್ಲವಾ ? ನೀನು ತಿಳಕೊಂಡಷ್ಟು ಬೇಜವಾಬ್ದಾರಿ ಹುಡುಗನಲ್ಲ ! ಅಲ್ಲವೇ ದಿನಕರ ? (ದಿನಕರ ಗೊಂದಲದಲ್ಲಿ ಹೌದೆಂದು ತಲೆಯಲ್ಲಾಡಿಸುವನು) ನೋಡು ! ನಾನು ಹೇಳ್ಳಿಲ್ಲವಾ ?
ದಿನಕರ : ಯಾವ ಪಿಕ್ಚರ್‌ಗೆ ಹೋಗ್ತಿರಿ ?
ಸುಧಾ : ನಿನಗ್ಯಾಕೆ ? ನಿನಗ್ಯಾಕೆ ಅದೆಲ್ಲ ?
ಭಗವಾನ್ : ಸುಮ್ಮನಿರೇ, ಯಾವುದೋ ಒಂದು ಪಿಕ್ಟರ್‌ಗೆ ದಿನಕರ, ಬೇಸರ ಪಟ್ಟು
ಕೊಳ್ಳಬೇಡ. ಬಂದುಬಿಡುತ್ತೇವೆ.
ಸುಧಾ : ಮನೇಕಡೆ ಜೋಕೆ ಅಷ್ಟೆ.
ಭಗವಾನ್ : (ಬೀಗ ತೆಗೆದುಕೊಂಡು ಹೋಗುತ್ತ) ನೋಡಿದೆಯಾ ಸುಧಾ ? ಹೇಗಿದೆ ಎಲ್ಲ ವ್ಯವಸ್ಥೆ ? ಯಾವ ನಾಯಿಗೂ ಗೊತ್ತೇ ಆಗಬಾರದು ! ಬಾ. (ಹೊಗುವರು. ಬಾಗಿಲು ಹಾಕಿಕೊಂಡು ಬೀಗ ಜಡಿದ ಶಬ್ದ. ದಿನಕರ ಉದ್ದೇಶವಿಲ್ಲದೆ, ಸುಮ್ಮನೆ, ಓಡಾಡುತ್ತಿರುವನು. ನಿಶ್ಯಬ್ದ, ಬೆಳಕು ತೀರಾ ಜಾಸ್ತಿಯಾದ್ದರಿಂದ ಚಿಕ್ಕ ದೀಪ ಹಾಕಿ ದೊಡ್ಡದು ಆರಿಸುವನು ; ರೇಡಿಯೋ ಹಾಕುವನು- ಅದು ಇದ್ದಕ್ಕಿದ್ದಂತೆ ದೊಡ್ಡ ಸದ್ದು ಮಾಡುವುದರಿಂದ ತಟ್ಟನೆ ಆರಿಸುವನು; ಗಡಿಯಾರದ ಸದ್ದು ; ಪೇಪರ್ ಓದುವನು. ಪೇಪರ್ ಎಸೆದು ಒಳಗೆ ಹೋಗಿ ಬ್ರೆಡ್ ಚೂರು ತಂದು ತಿನ್ನುತ್ತ ಚಿತ್ರ ನೋಡುತ್ತ ನಿಂತಿರುವನು. ಮತ್ತೆ ಒಳಗೆ ಹೋಗುವನು. ಅವನು ಹೋದೊಡನೆ ಕಿಟಕಿಯ ಮೇಲೆ ಹೊರಗಿನಿಂದ ಪೆಟ್ಟು ಬೀಳುತ್ತದೆ : ಮತ್ತೊಂದು ಹೊಡೆತ. ದಿನಕರ ಒಳಗಿನಿಂದ ಬಂದು ಕುತೂಹಲದಿಂದ ಕಿಟಕಿ ನೋಡುತ್ತಿದ್ದು ತರುವಾಯ ಗೋಡೆಗೆ ಅಂಟಿ ನಿಲ್ಲುವನು. ಕಿಟಕಿಯ ಕದ ತೆಗೆದುಕೊಳ್ಳುವುದು ; ಸರಳು ಬಗ್ಗಿ ಹೊರಕ್ಕೆ ಬೀಳುವುವು. ವ್ಯಕ್ತಿಯೊಬ್ಬ ಕಿಟಕಿಯ ಮೂಲಕ ಒಳಗೆ ಕಾಲಿಟ್ಟು ಕಾಲಿಟ್ಟು ಜಿಗಿಯುವನು ; ದಿನಕರ ಮಂದ ಬೆಳಕಲ್ಲಿರುವುದರಿಂದ ವ್ಯಕ್ತಿಗೆ ಕಾಣಿಸುವುದಿಲ್ಲ. ಕಳ್ಳನ-ಅಂದರೆ ವ್ಯಕ್ತಿಯ-ಗಮನ ಸೆಳೆಯಲು ಅಲ್ಲಿಯೇ ಇರುವ ಸ್ವಿಚ್ ಹಾಕುವನು ; ಲೈಟ್ ಹತ್ತಿಕೊಳ್ಳುವುದು ಕಳ್ಳ ಮತ್ತು ದಿನಕರ ಕ್ರೂರವಾಗಿ ಇಬ್ಬರೂ ಭಯದಿಂದ-ಸವಾಲು ಹಾಕಿ ನೋಡುತ್ತ ಕ್ಷಣ ನಿಲ್ಲುವರು)
ಕಳ್ಳ : ನೀನು ! ಇಲ್ಲೂ!
ದಿನಕರ : ಹೌದು, ನಾನು, ಎಲ್ಲಿ ನೋಡಿದ್ದೆ ನನ್ನ ?
ಕಳ್ಳ : ಹೇಳ್ತೀನಿರು. ಅದಕ್ಕಿಂತ ಮುಂಚೆ ನೀನು ಹೇಳು : ಈಗ ಹ್ಮಂಗೆ ತಪ್ಪಿಸಿಕಂತಿ ?
ದಿನಕರ : ತಪ್ಪಿಸಿಕೊಳ್ಳಲ್ಲ, ಯಾಕೆ ತಪ್ಪಿಸಿಕೋಬೇಕು ?
ಕಳ್ಳ : ಬಿಡಬ್ಯಾಡಪ್ಪ ಬೂಸಿ! ಪೋಲಿಸಪ್ಪ ನಿನ್ನ ಹುಡುಕ್ತದಾನೆ ! ನಂಗೆ ಗೊತ್ತಿಲ್ಲವಾ ?
ದಿನಕರ : ನಾನು ಯಾರು ಹೇಳು?
ಕಳ್ಳ : ಜಾತಿ ಗೊತ್ತಾದಮ್ಯಾಲೆ ಬಾಕಿ ಮಾತ್ಯಾಕೆ ?
ದಿನಕರ : ನಾನು ಕಳ್ಳಲ್ಲ.
ಕಳ್ಳ : ಹಂಗಾರೆ ನಾನೂ ಕಳ್ಳಲ್ಲ.
ದಿನಕರ : ನಾನು ಸುಳ್ಳು ಹೇಳ್ತಿಲ್ಲ. ನೀನು ಹೇಳ್ತಿದ್ದೀ
ಕಳ್ಳ : ನಾ ಸುಳ್ಳು ಹೇಳ್ಳಿಲ್ಲ. ನೀನೂ ಸುಳ್ಳು ಹೇಳ್ತಿಲ್ಲ, ಬಿಡು, ಈಗೇನು ಮಾಡ್ತಿ ಲಗುಲಗು ಕಿರಚು. ತೆಪ್ಪಗಿದ್ದು ಜೀವಸಹಿತ ಉಳ್ಕಂತೀಯೋ, ಇಲ್ಲ ಗದ್ದಲ ಮಾಡಿ ಜೈಲು ಸೇರಂತೀಯೋ ?
ದಿನಕರ : ನನ್ನ ವಿಚಾರ ಗೊತ್ತಿರೋ ಹಾಗಿದೆ. : ತಲಿಂದ ಬಾಲದ ತಂಕ ಗೊತ್ತು ಬಿಡಪ್ಪ, ನಂಗೆಷ್ಟು ಜನ ಪೋಲಿಸ್ ಗೆಣೆಕಾರಿಲ್ಲ! ಎಷ್ಟು ಜನ ನಕ್ಸಲಪ್ಪಗಳು ಗೊತ್ತಿಲ್ಲ! ನಾ ನಿಂಗಾಗಿ ಹುಡುಕೀ ಹುಡುಕೀ ಸಾಕಾಗಿತ್ತು ! (ಎಂದು ಗದ್ದಲ ಹೆಚ್ಚಾಯಿತೆಂದು ಕಿಟಕಿಗೆ ಹಲಗೆ ಇಟ್ಟು ಲೈಟು ಮಂದಗೊಳಿಸುವನು). ಒಂದೀಟು ದನಿ ತಗ್ಗಿ ಮಾತಾಡು, ಆಯ್ತ ? ಬಾಯಿ ದೊಡ್ಡದು ಮಾಡಿದ್ರೆ ಗಲ್ಲಿಗೋ ಜೈಲಿಗೋ ಮೈ ಕೊಡಬೇಕಾಗ್ತದೆ. ಇರು. ಹಸಿವಾಗ್ತತಿ, ಒಳಗೋಗಿ ತಿನ್ನಾಕೇನಾದ್ರ ಐತಾ ನೋಡುತೇನಿ.
(ಕಳ್ಳ ಒಳಗೆ ಹೋಗುವನು. ದಿನಕರ ತನ್ನ ಪ್ಯಾಂಟ್ ಜೇಬಿನಿಂದ ಗನ್ನು ತೆಗೆದು ನೋಡಿಕೊಂಡು ಮನಸ್ಸು ಬದಲಿಸಿ ಮತ್ತೆ ಜೇಬಿಗೆ ಹಾಕಿಕೊಳ್ಳುವುದಕ್ಕೆ ಮುಂಚೆಯೇ ಒಳಗಿನಿಂದ ರೊಟ್ಟಿ ತಿನ್ನುತ್ತ ಕಳ್ಳ ಭರುವನು ; ಗನ್ನು ನೋಡುವನು. ತಿನ್ನುತ್ತಲೇ ಮಾತಾಡುವನು.) ಹಾ 1 ಬಂದೂಕ ! ಅದೆಂಥದು ಮಾಡೀತು ಬಿಡು ದಿನಕರಪ್ಪ: ತನ್ನ ಹೆಸರೂ ಗೊತ್ತಾ ನಿನಗೆ ?
ಕಳ್ಳ : ಮತ್ತೆ ಮತ್ತೆ ಪಿತ್ತರಿಸಿತಿ ಅಲ್ಲೋ ಕಕವಾ ! ನಿನ್ನ ಹೆಸರು ನಂಗೆ ಮಾತ್ರ ಅಲ್ಲ. ನನ್ನ ಜೊತೆಗಾರಿಗೆಲ್ಲ ಗೊತ್ತು. ನೀ ಬಾಸಣ ಮಾಡ್ತಿದ್ದೆ, ನಾವು ಜೋಬು ಕತ್ತರಸ್ತಿದ್ವಿ. ಅಲ್ಲೋ ಹುಡುಗ, ಚೂಬಿನಾಗೆ ದುಡ್ಡಿಲ್ಲದೋರಿಗೇ ಭಾಷಣ ಕೊಡ್ತೀಯಲ್ಲೋ-ಅದರಿಂದ ಏನು ಬಂದಾತು?
(ವಸ್ತು ಬದಲಿಸಿ)
ಹೋಗಲಿ, ನೀ ಬಂದು ಎಸ್ಟೊತ್ತಾತು ? ತಲಾಸ್ ನಡಿಸಿದೆಯ ? ಬೆಳ್ಳಿ, ಎಸ್ಟೈತಿ, ಬಂಗಾರೆಸ್ಟೈತಿ, ರೇಷ್ಮೆ ಎಸ್ಟೈತಿ-ನೋಡಿದ್ಯಾ ? ಸಮಸಮಾ ಹಂಚಕೊಳ್ಳಾನಾ?
ದಿನಕರ : (ರೋಷದಿಂದ, ಕೆಳದನಿಯಲ್ಲಿ) ನಾನು ನಿನ್ನ ಹಾಗೆ ಕಳ್ಳ ಅಲ್ಲ.
ಕಳ್ಳ : ಮತ್ಯಂಥನೋ ನೀನು ?
ದಿನಕರ : ನನ್ನ ಬದುಕು
ಕಳ್ಳ : ಹಾ ಹಾ-ದೊಡ್ಡ ಕತೀನೇ ಹೇಳಬ್ಯಾಡ. ಈ ಮನೇ ಮಂದಿ ಶಿನಿಮಾಕ್ಕೆ ಹೋಗಿರ‍್ತಾರೆ–ನಮ್ಕೆಲಸ ಅರ್ಧ ಗಂಟ್ಯಾಗೆ ಮುಗೀಬೇಕು.
ದಿನಕರ : ನಿಮ್ಮಂಥೋರಿಗೆ ಮಟ್ಟ ಹಾಕೋದಕ್ಕೆ ಪಣ ತೊಟ್ಟಿದೇನೆ.
ಕಳ್ಳ : ಯಾಕಪ್ಪ ! ನಾನೇನು ಮಾಡಿದೆ ?
ದಿನಕರ : ನಿನಗೂ ಬಂಡವಾಳಗಾರರಿಗೂ ಸಂಬಂಧ.
(ಮೌನ)
ಬ್ಲಾಕ್ ಮಾರ್ಕೆಟ್ ಜನ ನಿನ್ನ ಅಣ್ಣ ತಮ್ಮಂದಿರು.
ದಿನಕರ : ಬಿಳಿ ಅಂಗಿಯ ಅಧಿಕಾರಿ ನಿನ್ನ ಯಜಮಾನ.
ಕಳ್ಳ : ಹೇಳು, ಹೇಳು. (ತಿಂದು ಮುಗಿಸುತ್ತಿರುವನು)
ದಿನಕರ : ಪೋಲಿಸಿನ ಇನ್ನೊಂದು ಮುಖ ನೀನು.
ಕಳ್ಳ : ಹೇಳು ಹೇಳಪ್ಪಾ. ದಿನಕರ : ಅದಕ್ಕೆ ನೀನು ಭ್ರಷ್ಟ ಶ್ರೀಮಂತ ರಾಜಕಾರಣಿ, ವರ್ತಕ, ಪೊಲಿಸು.
ಆಧಿಕಾರಿ, ಆಧ್ಯಾಪಕ-ಎಲ್ಲ.
ಕಳ್ಳ : ಪರಾವಾ “ಇಲ್ಲಲ್ಲ ! ನಂಗೆ ಗೊತ್ತಿರಲಿಲ್ಲ, ಅದಕ್ಕೇನು ಮಾಡಬೇಕಂತಿ ?
ದಿನಕರ : ಕತ್ತರಿಸಬೇಕು, ನಿಂದು.
ಕಳ್ಳ : ಹುಚ್ಚ, ಹುಚ್ಚ, ಹಾಲು ಕೊಡೋ ಆಗಳ ಕೆಚ್ಚಲ ಜಾಣರ‍್ಯಾರೂ ಕತ್ತರಿಸಾಕಿಲ್ಲ.
ದಿನಕರ : ನಿನಗೆ ಗೊತ್ತಾಗೊಲ್ಲ.
ಕಳ್ಳ : ಹೇಳಪ್ಪ, ಯಾಕೆ ಗೊತ್ತಾಗಾಕಿಲ್ಲ, ಹೇಳು.
ದಿನಕರ : ನಿನಗೆ ಮಾನಾಮರ್ಯಾದೆ ಗೊತ್ತಿಲ್ಲ.
ಕಳ್ಳ : ಒಳ್ಳೇದು : ಗೊತ್ತಿಲ್ಲ.
ದಿನಕರ : ನಿನಗೆ ಆತ್ಮಸಾಕ್ಷಿ ಇಲ್ಲ.
(ಮೌನ)
ನಿನಗೆ ನೋವು ಅಂದ್ರೇನು ಗೊತ್ತಿಲ್ಲ.
(ಮೌನ)
ನಿನಗೆ ಪ್ರೀತಿ ಅಂದ್ರೇನು ಗೊತ್ತಿಲ್ಲ.
ಕಳ್ಳ : ಅದೆಲ್ಲ ನಿಂಗೆ ಹ್ಯಾಗ್ಗೊತ್ತು ?
ದಿನಕರ : ಹಾಡಹಗಲಲ್ಲಿ ಬದುಕಿದ್ರೆ ಗೊತ್ತಾಗುತ್ತೆ. ಸಾಫ್‌ಸೀದಾ ಇದ್ರೆ ಎಲ್ಲ ಗೊತ್ತಾಗುತ್ತೆ.
ಕಳ್ಳ : ಹಂಗಾದ್ರೆ ಇಲ್ಯಾಕೆ ಬಂದೀ ಹೇಳು ?
ದಿನಕರ : ಕಳ್ಳತನಕ್ಕೆ ಬರಲಿಲ್ಲ ನಾನು.
ಕಳ್ಳ : (ಸಿಟ್ಟಿನಿಂದ) ಮತ್ಯಾಕೆ ಕತ್ತೆ ಕಾಯಾಕೆ ಬಂದ್ಯ? ಗಾಳಿ ಹವಾ ತಗಾಳ್ಳಾಕ್ಕೆ ಬಂದ್ಯಾ ? ನನ್ನ ಮೋರೆ ನೋಡಾಕೆ ಬಂದ್ಯಾ?
ದಿನಕರ : ಈ ಕೊಳಕು ಸಮಾಜದ ವಿರುದ್ಧ ನನ್ನ ದಂಗೆ; ನೀ ಮಾಡೋ ಎಲ್ಲ ಕೆಲಸದ ವಿರುದ್ಧ ನನ್ನ ಕೆಲಸ. ನಾನು ಕದಿಯೋಲ್ಲ, ಕದ್ದಿದ್ದರೆ ನಿನ್ನ ಹಾಗೆ ಪಶು ಥರ ಇದ್ದುಬಿಡ್ತಿದ್ದೆ.
ಪೋಲೀಸರ ಕಣ್ಣು ನನ್ನ ಮೇಲಿದೆ, ಅದಕ್ಕೆ ಇಲ್ಲಿದೇನೆ.
ಕಳ್ಳ : ಇಲ್ಲಿ ಯಾಕೆ ಇದ್ದೀ ?
ದಿನಕರ : ಇದು ನನ್ನ ಮೇಷ್ಟ್ರ ಮನೆ.
ಕಳ್ಳ : ಅಂದ್ರೆ?
ದಿನಕರ : ಅದ್ರೆ ನಾನು ಬಲ್ಲವರ ಮನೆ.
ಕಳ್ಳ : ಬಲ್ಲವರ ಮನೆಗೆ ನುಗ್ಗೋಕೆ ನಾಚಿ ಆಗಬ್ಯಾಡವ ?
ದಿನಕರ : ಅವರೇ ನನ್ನನ್ನ ಇಲ್ಲಿ ಬಿಟ್ಟಿದಾರೆ.
ಕಳ್ಳ : ಹೊರಗಡೆ ಬೀಗ ಯಾಕೆ ಹಾಕಿದಾರೆ. ಬಿಡಬ್ಯಾಡಪ್ಪ ಬೂಸಿ !
ದಿನಕರ : ಪೋಲೀಸರು ಬರದೆ ಇರ್ಲಿ ಅಂತ.
ಕಳ್ಳ : (ನಗುವನು. ಶಬ್ದ ಮಾತ್ರ ಹೆಚ್ಚು ಮಾಡದೆ ಹೊಟ್ಟೆ ಹಿಡಿದು ನಗುವನು)
ದಿನಕರ : ಯಾಕೆ ?
(ಇನ್ನೂ ನಗುತ್ತಿರುವನು)
ಯಾಕೆ ಹಾಗೆ ನಗ್ತೀ ?
ಕಳ್ಳ : ಪೊಲೀಸರು-ಹಹ್ಹ ಹಹ್ಹ-ಪೋಲೀಸರು
ದಿನಕರ : ಯಾಕೆ ? ಹೇಳು.
ಕಳ್ಳ : ಪೋಲೀಸರು ಇಲ್ಲದ ಹತ್ರ-ಹಹಹ…
ದಿನಕರ : ಹೇಳು.
ಕಳ್ಳ : ಪೋಲೀಸರು ಇಲ್ಲದ ಹತ್ರ ನಾನೂ ನೀನೂ ಇರ‍್ತವಿ! ಅಷ್ಟೂ ಗೊತ್ತಿಲ್ಲವಾ ಆ ಲೌಡಿಮಗನಿಗೆ !
ದಿನಕರ : ನೀನು ಇಲ್ಲಿಂದ ತೊಲಗು.
ಕಳ್ಳ : ಯಾಕೆ ?
ದಿನಕರ : ನೀನು ಕಳ್ಳ.
ಕಳ್ಳ : ನೀನು ?
ದಿನಕರ : ಮತ್ತೆ ಮತ್ತೆ ಅದನ್ನೆ ಬೊಗಳಬೇಡ.
ಕಳ್ಳ : ಬರೀ ಕೈಯಾಗೆ ಹೋಗಲ ?
ದಿನಕರ : ಹೌದು.
ಕಳ್ಳ : ಎಲ್ಲ ನಿಂಗೇ ಬೇಕು ಅಂತೀಯ ?
ದಿನಕರ : (ರೋಷದಿಂದ) ನಾನು ಕಳ್ಳಲ್ಲ.
ಕಳ್ಳ : ಹಂಗಾದ್ರೆ ಪೋಲಿಸರಿಗೆ ಯಾಕೆ ಹೆದರ್ತಿ ?
ದಿನಕರ : ನಿನಗೆ ಗೊತ್ತಾಗಲ್ಲ. ಮತ್ತೆ ಮತ್ತೆ ಹೇಳ್ತಿದೇನೆ : ನಿಂಗೆ ಗೊತ್ತಾಗಲ್ಲ.
ಕಳ್ಳ : ಗೊತ್ತಾಗ್ತತಿ. ಗೊತ್ತಾಗ್ತತಿ. ನಾ ಹಣ ಮಾಡಿದ್ರೆ ನಿಂಗೂ ಅನ್ನ ಅಂತ ಗೊತ್ತಾಗ್ತತಿ ; ನಾ ಸಾಲ ಕೊಟ್ರೆ ನಿನ್ನ ಮಾತುಕತೆ ಕಾರ‍್ಬಾರು ಅಂತ ಗೊತ್ತಾಗ್ತತಿ ; ಬೆಳ್ಳಿ, ಬಂಗಾರಕ್ಕಿನ ಕಿಮ್ಮತ್ತು ಐತಿ ಅಂತ ಗೊತ್ತಾಗ್ತತಿ ; ನಾನಿರೋತಂಕ ದೇಸದಾಗೆ ಸುಖ, ಸೌರ್ಯ ಅಂತ ಗೊತ್ತಾಗ್ತತಿ ; ನಮ್ಮ ಪೋಲೀಸರ ಕೈಗೆ ನೀ ಸಿಕ್ರೆ ಫಾಸಿ ಅತ ಗೊತ್ತಾಗ್ತತಿ ; ನೀ ಆಸೆಬುರುಕ ಅಂತ ಗೊತ್ತಾಗ್ತತಿ ; ಸುಳ್ಳಿ ನಾಗ ನಿಸ್ಸೀಮ ಅಂತ ಗೊತ್ತಾಗ್ತತಿ………
(ದಿನಕರ ಬಾಯಿ ತೆರೆಯಲಿದ್ದಾಗ)
ನೀ ಕತ್ತೆ ಥರ ಕಿರಚಿಕೊಂಡ್ರೆ…….ಜನ ಬಂದು ಪೊಲೀಸರಿಗೆ ನಿನ್ನ ಕೊಡ್ತಾರೆ ಅಂತ ಗೊತ್ತಾಗ್ತತಿ.
(ದಿನಕರ ಅರಚಲಾರದೆ, ಮಾತಾಡಲಾರದೆ ಸಿಟ್ಟಿನಿಂದ ಅವನಿದ್ದಲ್ಲಿಗೆ ಬಂದು ಕೆನ್ನೆಗೆ ಹೊಡೆಯುವನು ; ಕಳ್ಳ ಕೆನ್ನೆ ಹಿಡಿದುಕೊಂಡಿದ್ದು ನಿಧಾನಕ್ಕೆ ದಿನಕರನ ಹತ್ತಿರ ಬಂದು ಅಷ್ಟೇ ಗಟ್ಟಿಯಾಗಿ ಕೆನ್ನೆಗೆ ಬಾರಿಸುವನು. ಇಬ್ಬರೂ ಒಬ್ಬರನ್ನೊಬ್ಬರು ದಿಟ್ಟಿಸಿ ನೋಡುತ್ತ ನಿಲ್ಲುವರು. ಕೊನೆಗೆ ಕಳ್ಳ ನಿಧಾನಕ್ಕೆ ಚಲಿಸತೊಡಗುವನು. ರೇಡಿಯೋ, ಸೀರೆ, ಬಳೆ, ತಟ್ಟೆ, ಫೋಟೋ, ಕ್ಯಾಮರಾ, ಬಿಯರ್, ವಿಸ್ಕಿ ಬಾಟ್ಳುಗಳು ಎಲ್ಲವನ್ನೂ ತಂದು ಒಂದು ಕಡೆ ಗುಡ್ಡೆ ಹಾಕುವನು. ದಿನಕರ ನೋಡುತ್ತ
ನಿಂತಿರುವನು. ಕೊನಗೆ)
ಕಳ್ಳ. : ನಿಂಗರ್ಧ ಕೊಡ್ತೀನಿ. ತಗಂಡು ತಿಕ ಮುಚ್ಚಿಗಂಡು ಹೋಗ್ತಿಯೋ-
ಇಲ್ಲ-
ದಿನಕರ : ನನಗೆ ಬೇಡ.
ಕಳ್ಳ : ಹಂಗಾದ್ರೆ ನಾನೇ ತಗಂತನಿ, ನಿಂಗ್ಯಾಕೆ ಬ್ಯಾಡ ?
ದಿನಕರ : ನಾನು ಕಳ್ಳಲ್ಲ.
ಕಳ್ಳ : (ಸಿಟ್ಟಿನಿಂದ) ಮತ್ತೆ ಅದೇ ಬೊಗಳ್ತೀ, ಯಾಕೆ ಬ್ಯಾಡ ?
ದಿನಕರ : ನನಗೆ ಆಸ್ತಿಯಲ್ಲಿ ನಂಬಿಕೆ ಇಲ್ಲ.
ಕಳ್ಳ : ನಿಂಗೆ ಬ್ಯಾಡದಿದ್ರೆ ಬ್ಯಾಡ ; ನಾನೇ-
ದಿನಕರ : ನೀನೇ ತಗಂತೀಯ ? ಎಲ್ಲ ನಿಮ್ಮಪ್ಪಂದ?
ಕಳ್ಳ : ನಿಮ್ಮಪ್ಪಂದ ?
ದಿನಕರ : ನಿಮ್ಮಪ್ಪಂದೂ ಅಲ್ಲ, ನಮ್ಮಪ್ಪಂದೂ ಅಲ್ಲ, ಮೇಷ್ಟ್ರದು.
ಕಳ್ಳ : ಅವರಿಗೆ ಬೇಕಾ ?
ದಿನಕರ : ಬೇಕಿರಬಹುದು. ನಿನಗ್ಯಾಕೆ ?
ಕಳ್ಳ : ನಿಂಗ್ಯಾಕೆ ? ನಿಂಗೆ ತಲೆಗಿಲೆ ಐತ ?
ದಿನಕರ : ಇಲ್ಲಿಂದ ತೊಲಗು.
ಕಳ್ಳ : ನೀನು ?
ದಿನಕರ : ನಾನಿಲ್ಲೇ ಇರತೇನೆ.
ಕಳ್ಳ : ಯಾಕೆ ? ಯಾಕಿರ್ತೀಯ ?
ದಿನಕರ , ಕಾದುಕೊಂಡು ಇರ್ತೆನೆ.
ಕಳ್ಳ : ಹಂಗಾದ್ರೆ ನೀನು ಕಾವಲು ನಾಯಿ! ಅವರು ಸಿನಿಮಾ ನೋಡಿ ಲೋಲ್ ಮಾಡ್ತಾರೆ, ನೀನು ಕಾಯ್ತಾ ಇರ್ತಿ !
ದಿನಕರ : (ರೋಷದಿಂದ, ಹಲ್ಲುಕಚ್ಚಿ) ನೀನು ನಾಯಿ…,
ಕಳ್ಳ : ಅದ್ಯಂಗೆ ?
ದಿನಕರ : ನಿನಗೆ ಮಾನವಿಲ್ಲ.
ಕಳ್ಳ : ನಿಂಗೈತ?
ದಿನಕರ : ನಿನಗೆ ಸಿಟ್ಟಿಲ್ಲ.
(ಕಳ್ಳ ಸಿಟ್ಟಿನಿಂದ ನೋಡುತ್ತಿರುವನು) ನ್ಯಾಯ ಆದ್ರೇನು ಗೊತ್ತಿಲ್ಲ. ಸಮಾಜ ಅಂದ್ರೇನು ಗೊತ್ತಿಲ್ಲ. ಕನಸಿಲ್ಲ ನಿನಗೆ.
ಬರೀ ಹೊಟ್ಟೆ-
ನಿನ್ನ ಇಡೀ ದೇಹ ಹೊಟ್ಟೆ.
ಕಳ್ಳ : ಹೌದು ಬರೇ ಹೊಟ್ಟೆ, ನಿಂಗೆ ? ನಿಂಗೇನೈತಿ ? ನಿನಗೇನು, ಯಂಥದು ಗೊತ್ತೈತೆ ?
(ಮೌನ)
ನಿನಗೆ ಹೊಟ್ಯಾದ್ರೂ ಐತ ?
(ಮೌನ)
ಬೊಗಳೋದು ಬಿಟ್ಟು ಬ್ಯಾರೆ ಕೆಲಸೈತ ?
ದಿನಕರ : ನನ್ನ ನಿನ್ನ ಮಧ್ಯೆ ಮಾತು ಸಾಧ್ಯವಿಲ್ಲ, ತೊಲಗು.
ಕಳ್ಳ : : ಹೋಗೋಮುಟ್ಟ ಇರೋ ನನ್ನ ರಾಜಾ.
(ಕಳ್ಳ ಗುಡ್ಡೆ ಹಾಕಿದ ಸಾಮಾನುಗಳನ್ನು ಚೀಲಕ್ಕೆ ಹಾಕಿಕೊಳ್ಳತೊಡಗುವನು)
ದಿನಕರ : ಬಿಟ್ಟು ಮೇಲಕ್ಕೇಳು.
ಕಳ್ಳ : ಗಳಿಗೆ ತಡಕೋ ನನ್ನ ಗೆಣೆಯ.
ದಿನಕರ : ಏಳ್ತೀಯೊ, ಇಲ್ಲ-
ಕಳ್ಳ : ಇಲ್ಲ.
ದಿನಕರ : ಒಂದು ಚೂರನ್ನೂ ಉಳೀಗೊಡಲ್ಲ.
ಕಳ್ಳ : ಹ್ಯಂಗಪ್ಪ ?
ದಿನಕರ : (ಹಿಯಾಳಿಸುತ್ತ) ಹ್ಯಂಗ ? ಹ್ಯಂಗ ? ಹಿಂಗೆ ! (ಎಂದು ಚೀಲದ ಹತ್ತಿರ ಹೋಗಿ ಶೀಸೆ, ಕಪ್ಪು, ಫೋಟೋ ಮುಂತಾದ್ದು ತೆಗೆದು ನೆಲಕ್ಕೆ ಹಾಕಿ ಕಾಲಲ್ಲಿ ತುಳಿಯುವನು ; ತನ್ನ ಮನಸ್ಸಿನಲ್ಲಿ ಆಸ್ತಿಯ ಬಗ್ಗೆ ಉಳಿದಿರಬಹುದಾದ ಎಲ್ಲ ಅಂಶಗಳನ್ನೂ ನಾಶಗೊಳಿಸುವವನಂತೆ ತುಳಿಯುವನು ; ಎಸೆಯವನು. ಸೀರೆಯೊಂದನ್ನು ಎತ್ತಿಕೊಂಡು ಹರಿಯುವನು; ಕಳ್ಳ ಅದನ್ನು ದಿನಕರನ ಕೈನಿಂದ ಕಿತ್ತುಕೊಳ್ಳುವನು.
ಆಗ ದಿನಕರ ಕುರ್ಚಿಯೊಂದನ್ನು ಎತ್ತಿಕೊಂಡು ಸಾಮಾನುಗಳಿಗೆ ಹೊಡೆಯುವನು. ಕಳ್ಳ “ಏಯ್‌” “ಬ್ಯಾಡ” ಅಂತ ಇಲ್ಲಿಯವರೆಗೆ ಹೇಳುತ್ತಿದ್ದವನು ಈಗ ಸಿಟ್ಟಿನಿಂದ ಅವನನ್ನ ಹಿಡಿದುಕೊಂಡು ಕೆನ್ನೆಗೆ ಹೊಡೆಯುವನು)
ಕಳ್ಳ : (ಕೋಪದಿಂದ) ದಡ್ಡ-ದಡ್ಡ ಬಡ್ಡೀಮಗ ನೀನು.
(ಮೌನ)
ಕಳ್ಳರ ನಿಯತ್ತಿಲ್ಲ ನಿಂಗೆ?
ದಿನಕರ : (ಏದುತ್ತ) ನಿನ್ನ ದರಿದ್ರ ನಿಯತ್ತು
ಕಳ್ಳ : ನಾವೆಂದೂ ಹಿಂಗೆ ಲಕ್ಷ್ಮೀನ ಹಾಳು ಮಾಡಲ್ಲ –
ದಿನಕರ : ಅವುಗಳ ಮೇಲೆ ನಿನ್ನ ಹಕ್ಕಿಲ್ಲ.
ಕಳ್ಳ : ನಿಂಗೈತ? ಹೇಳು, ನಿಂಗೆ ಹಕ್ಕೈತ ?
(ಮೌನ)
ನಿನ್ನ ಕೇಳಿ ಮಳೆ ಬೀಳ್ತತ ? ನಿನ್ನ ಕೇಳಿ ಬೆಳೆ ಬೆಳೀತತ ?
(ಮೌನ)
ನಿನ್ನ ಬುದ್ಧಿ ಬಲ್ಲೆ, ಕಣಲೇ. ಓದಾಕಿಲ್ಲ. ಬರೆಯಾಕಿಲ್ಲ. ಗೇಯಾಕಿಲ್ಲ. ಬೆಳೆಯಾಕಿಲ್ಲ-ಕನಸು ಕಾಣ್ತಾನಂತೆ. ದೇಶ ಕಟ್ಟತಾನಂತೆ. ಮಗ! ಥೂ ! ಮತ್ತೆ ಕೈ ಎತ್ತಿದರೆ ನೀ ಹುಟ್ಟಲಿಲ್ಲ ಅನ್ನಿಸಿಬಿಡ್ತನಿ ! ತಿಳೀತ ? ಹುಟ್ಟಿಲ್ಲ ಅನ್ನಿಸಿಬಿಡ್ತೀನಿ! ಸರಕಾರ ನನ್ನ ಕೈಯಾಗೃತಿ- ಹಣ ನನ್ನ ಕೈಯಾಗೈತಿ, ಮರೀಬ್ಯಾಡ.
(ಎಂದು ಚೀಲದೊಳಕ್ಕೆ ಮತ್ತೆ ಸಾಮಾನುಗಳನ್ನು ಆರಿಸಿ ಹಾಕಿಕೊಂಡು, ಬೀಡಿಯೊಂದನ್ನು ಹಚ್ಚಿಕೊಂಡು ಹೋಗಲು ಸಿದ್ಧನಾಗಿ ನಿಲ್ಲುವನು. ಅಷ್ಟರಲ್ಲಿ ದಿನಕರ ಜೇಬಿನಿಂದ ಪಿಸ್ತೂಲು ತೆಗೆದುಕೊಂಡು ಕಳ್ಳನಿಗೆ ಗುರಿಯಿಟ್ಟು ನಿಶ್ಚಲನಾಗಿ ನಿಂತಿರುವನು. ಕಳ್ಳ ಅವನನ್ನು ನೋಡಿ ಬೀಡಿಯ ಹೊಗೆ ನಿಧಾನವಾಗಿ ಎಳೆದು, ಅವನನ್ನು ನೋಡುತ್ತಲೇ ಬೀಡಿಯನ್ನು ನೆಲಕ್ಕೆ ಎಸೆದು ಹೊಸಕುವನು. ದಿನಕರ ಕಳ್ಳ ಹೋಗಲಿರುವ ಕಿಟಕಿಗೆ ಅಡ್ಡಲಾಗಿ ನಿಂತಿರುವನು)
ದಿನಕರ : ಚೀಲ ಕೆಳಗಿಡು.
(ಮೌನ)
ಕಳ್ಳ : ಅದನ್ನೇ ಯೋಚಿಸ್ತಿದೀನಿ.
ದಿನಕರ : ಇಡದಿದ್ದರೆ ಇವತ್ತು ನಿನ್ನ ಕೊನೆ.
(ಮೌನ)
ಕಳ್ಳ : ಅದು ಹ್ಯಂಗೆ ನೋಡ್ತನಿ.
ದಿನಕರ : ಜೀವಸಹಿತ ಹೋಗೋಕಾಗಲ್ಲ.
(ಮೌನ)
ಕಳ್ಳ : ಆಗ್ತದಪ್ಪ. ಆಗ್ತತಿ.
ದಿನಕರ : ಹ್ಯಾಗೆ ಆಗುತ್ತೆ ನೋಡ್ತೇನೆ.
(ಮೌನ)
ಕಳ್ಳ : ಅವತ್ತು ಆ ಪೆದ್ದ ಸಾವ್ಕಾರನ್ನ ಕೂನಿ ಮಾಡ್ದೆ-ಇದು ಅಷ್ಟುಸಲೀಸಲ್ಲ
ದಿನಕರ : ಈಗ ಎಲ್ಲ ತಿಳಿಯುತ್ತೆ.
ಕಳ್ಳ : ಕೂನಿ ಮಾಡಿದ್ರೆ ನಿನ್ನ ಕಷ್ಟ ಜಾಸ್ತಿ ಆಗ್ತವೆ, ಕಡಮೆ ಆಗಲ್ಲ.
ದಿನಕರ : ನನ್ನ ಕಷ್ಟ ನಿನಗೆ ಬೇಕಿಲ್ಲ.
ಕಳ್ಳ : ಒಂದು ಚೋಟುದ್ದ ಇದೀಯ ! ನಿನ್ನಂಥ ಕೋಳಿ ಪಿಳ್ಳೆಗಳನ್ನ ಭಾಳ ಜನ ನೋಡಿದೇನಿ.
ದಿನಕರ : ನಿನ್ನಂಥ ಕಳ್ಳರನ್ನ ತುಂಬ ಜನ ನೋಡಿದೇನೆ.
ಕಳ್ಳ : ಕಳ್ರನ್ನ ನೋಡಿದೀಯ ? ನೀನು ನೋಡಿದೀಯ ? ಇವತ್ತೇ ನೀ ನೋಡಿದ್ದು ನನ್ನ. ನನ್ನ ನೋಡಿದ ಮ್ಯಾಲೆ ಆತು ನಿನ್ನ ಕತೆ ! ಆ ಪೆದ್ದು ಶಟ್ರು, ಮಾರ‍್ವಾಡೇರು. ಚಿಲ್ರೆ ನನ್ನ ಮಕ್ಕಳೆಲ್ಲ ನನ್ನ ಹಂಗಲ್ಲ ನೋಡು. (ಇಷ್ಟರಲ್ಲಾಗಲೇ ಕಳ್ಳ ಒಂದೊಂದು ವಾಕ್ಯಕ್ಕೆ ಒಂದೊಂದು ಹೆಜ್ಜೆ ಹಾಕುತ್ತ ದಿನಕರನ ಹತ್ತಿರ ಬರುತ್ತಿದ್ದಾನೆ) ನಮ್ಮೂರ ಕರಿಯವ್ವ ದೇವರ ತೀಕಿ ಕದ್ದು ಹೆಂಡ ಕೊಂಡು ಕುಡಿದೋನು ನಾನು. ಅವತ್ತಿಂದ ಖುಲಾಯಿಸ್ತು ನಶೀಬು. ಕರಿಯವ್ವಗೆ ಹತ್ತು ತೀಕಿ ಮಾಡಿಸಿಕೊಟ್ಟೆ ! ನೀನು ಕೊಂದೀಯ ನನ್ನ ? (ಎನ್ನುವಷ್ಟರಲ್ಲಿ ಕಳ್ಳ ಮತ್ತು ದಿನಕರ ತೀರಾ ಹತ್ತಿರದಲ್ಲಿದ್ದಾರೆ ; ಅವರ ಕಿತ್ತಾಟ ಆರಂಭವಾಗಬೇಕಾಗಿದೆ. ಅಷ್ಟರಲ್ಲಿ ಹೊರಗಡೆ ಗೇಟು ತೆರೆದ ಸಪ್ಪಳ. ಕಳ್ಳ ಮತ್ತು ದಿನಕರ ಅತ್ತ ನೋಡುತ್ತಾರೆ ; ಇಬ್ಬರೂ ಗೊಂದಲದಲ್ಲಿದ್ದಾಗ ಕಳ್ಳ ಓಡುತ್ತಾನೆ. ಕಿಟಕಿ ಹತ್ತಿ ಮರೆಯಾಗುವುದರಲ್ಲಿದ್ದಾಗ ದಿನಕರ ಚೀಲ ಹಿಡಿದೆಳೆಯುತ್ತಾನೆ; ಸಾಮಾನು ಚೆಲ್ಲಾಪಿಲ್ಲಿಯಾಗಿ ಬೀಳುತ್ತವೆ. ಭಗವಾನ್ ಮತ್ತು ಸುಧಾ ಬರುವಷ್ಟರಲ್ಲಿ ಚೀಲವನ್ನು ರಂಗದ ಮಧ್ಯಕ್ಕೆ ಒದೆದಿದ್ದಾನೆ ; ಕೈಯಲ್ಲಿದ್ದ ಪಿಸ್ತೂಲನ್ನು ಮಧ್ಯದ ಟೇಬಲ್ಲಿನ ಮೇಲೆ ಇಟ್ಟಿದ್ದಾನೆ. ಬೆವೆತಿದ್ದಾನೆ ; ಬಟ್ಟೆ ಅಸ್ತವ್ಯಸ್ತವಾಗಿ ತಲೆ ಕೆದರಿದೆ. ಬೀಗ ತೆಗೆದು ಸುಧಾ ಮೊದಲು ಪ್ರವೇಶಿಸುವಳು ;
ಚೆಲ್ಲಾಡಿದ ಸಾಮಾನುಗಳನ್ನು ನೋಡಿ ಕೋಪದಿಂದ ನಿಲ್ಲುವಳು. ಭಗವಾನ್ ಪ್ರವೇಶ. ಅವನಿಗೂ ಮನೆಯ ಸ್ಥಿತಿ ನೋಡಿ ದಿಗ್ಭ್ರಾಂತಿಯಾಗಿದೆ. ಮೌನ.)
ಸುಧಾ : ನನ್ನ ಮಾತು ಕಿವಿಗೆ ಹಾಕಿಕೊಳ್ಳಲಿಲ್ಲ.
(ಮೌನ)
ನಿಮ್ಮ ಕಣ್ಣು ಕಾಣಿಸ್ತಿವೆಯ ?
ಭಗವಾನ್ : (ದಿನಕರನಿಗೆ) ಯಾಕೆ ಹೀಗೆ ಮಾಡಿದೆ ?
(ಮೌನ)
ಮಾತಾಡು. ನಿನಗೇನಾಗಿದೆ ? ಯಾಕೆ ಹೀಗೆ ಮಾಡಿದೆ ?
ದಿನಕರ : (ತೀವ್ರ ಅನುಭವಕ್ಕೊಳಗಾಗಿರುವ ಈತ ಗಂಭೀರವಾಗಿ, ಯಾವ ಯೋಚನೆಯೂ ಇಲ್ಲದೆ) ನಾನು ಮಾಡಿದ್ದಲ್ಲ.
ಭಗವಾನ್ : ಮತ್ತೆ ಯಾರು ?
ದಿನಕರ : ನೀವು ನಂಬುವುದಿಲ್ಲ.
ಸುಧಾ : ಅದು ಗೊತ್ತಿದ್ದರೂ ಸುಳ್ಳು ಯಾಕೆ ಹೇಳ್ತಿ?
ಭಗವಾನ್ : ಯಾರು ಮಾಡಿದ್ದು-ಹೇಳು.
ದಿನಕರ : ಇಲ್ಲಿಗೆ ಒಬ್ಬ ಕಳ್ಳ ಬಂದಿದ್ದ.
ಭಗವಾನ್ : ಇದನ್ನ ನಂಬಬಹುದೆಂದು ತಿಳಿದಿದ್ದೀಯ ?
ದಿನಕರ : ನಂಬಿ ಅಂತ ಕೇಳುತ್ತಿಲ್ಲ ನಾನು.
ಸುಧಾ : ಕಳ್ಳ ಯಾರೂಂತ ನಾ ಬಲ್ಲೆ.
ಭಗವಾನ್ : ಯಾರು ?
ಸುಧಾ : ಅದನ್ನ ಬಿಡಿಸಿ ಹೇಳೋ ಅಗತ್ಯವಿಲ್ಲ. (ದಿನಕರನಿಗೆ) ನಿನ್ನನ್ನು ನೋಡಿದಾಗಲೆ ನನಗನ್ನಿಸಿತ್ತು. (ಗಂಡನಿಗೆ) ನನ್ನ ಮಾತ್ಯಾಕೆ ನಿಮಗೆ ? ಈತ ಸುಳ್ಳ ಅಲ್ಲ, ಕಳ್ಳ ಅಲ್ಲ, ಕೊಲೆಗಡುಕ ಅಲ್ಲ-ನಿಮಗೆ ! ಇಂಥವನನ್ನ ಮನೆಯೊಳಗೆ ಬಿಟ್ಟು ನನ್ನ ಬಾಯಿ ಮುಚ್ಚಿಸಿ- ಈಗ ನೋಡಿ ! ನೋಡಿ-ಕಣ್ಣು ತುಂಬಿಕೊಳ್ಳಿ !
ದಿನಕರ : ನಿಮ್ಮ ಅರ್ಥ ಏನು ?
ಭಗವಾನ್ : ಅರ್ಥ ಇಷ್ಟೆ : ನಾವು ಬರೋ ಅಷ್ಟರಲ್ಲಿ ಕದ್ದು ಹೊರಟು ಹೋಗೊಕೆ
ಕಿಟಕಿ ಮುರಿದೆ
ಸುಧಾ : ಎಲ್ಲ ಸಾಮಾನು ಕಟ್ಟಿಕೊಂಡು ಹೋಗೋ ಮಸಲತ್ತು ನಡೆಸಿದೆ
ದಿನಕರ : ಹೌದು, ನಾನು ಮಸಲತ್ತು ನಡೆಸಿದೆ.
(ಗಂಡ-ಹೆಂಡತಿ ಅಚ್ಚರಿಯಿಂದ ಕೇಳುವರು)
ಈ ಮನೆಯ ಕಿಟಕಿ ಮುರಿದೆ; ಎಲ್ಲವನ್ನೂ ಚೂರು ಚೂರು ಮಾಡಿದೆ.
(ಭಗವಾನನಿಗೆ) ನಿನ್ನ ಕ್ರಾಂತಿಯ ಅರ್ಥ ನನಗೆ ಗೊತ್ತಿದೆ.
ಭಗವಾನ್ : ಏನು ಗೊತ್ತಿದೆ?
ದಿನಕರ : ನಿನಗೆ ಯಾವ ಧೈರ್ಯವೂ ಇಲ್ಲ, ಬಂಡಾಯವೂ ಇಲ್ಲ.
ಭಗವಾನ್‌ : ಹ್ಯಾಗೆ, ಹ್ಯಾಗೆ ?
ದಿನಕರ : ನಿನಗೆ ಎಂಥ ಘನತೆಯೂ ಇಲ್ಲ.
ಭಗವಾನ್‌ : ಬಾಯಿ ಮುಚ್ಚು.
ದಿನಕರ : ಮುಚ್ಚೋಲ್ಲ. ಈ ಹೆಂಗಸನ್ನ ನೋಡಿದರೆ ಎಂಥವನಿಗೂ ಗೊತ್ತಾಗುತ್ತೆ-
ಭಗವಾನ್‌ : ನೀನು ಏನು ಮಾತಾಡುತ್ತಿ ನೆನೆಸಿಕೋ
ದಿನಕರ : ಇದರಲ್ಲಿ ಏನು ಜೀವ ಇದ್ದೀತು ? ಎಂಥ ಕೋಪ ಹುಟ್ಟಿತು ?
ಇದರಲ್ಲಿ ಏನು ತಾನೆ ಕಾಣಿಸೀತು ?
ಸುಧಾ : (ಗಂಡನಿಗೆ) ಇದನ್ನೆಲ್ಲ ಕೇಳ್ತಾ ಸುಮ್ಮನಿದೀರಲ್ಲ, ನಾಚಿಕೆಯಾಗಬೇಡವೆ?
ದಿನಕರ : ಇಲ್ಲಿ ಕೇಳು ನೀನು ಈತನ ಮೊದಲನೆ ಆಸ್ತಿ,
ನಿನಗೆ ಬೇರೆ ಮೈ ಇಲ್ಲ ; ಇವನ ತೊಡೆಯ ಒಂದು ಭಾಗ ನೀನು :
ಟೆಲಿಫೋನ್ ರಿಸೀವರ್ ಥರ.
ಇವನೇ ನಿನ್ನ ದೇಹದ ಬಂಡವಾಳಗಾರ.
ಈತ ಇಲ್ಲಿಯ ಕಳ್ಳ,
(ಮುಂದಿನ ಮಾತನ್ನು ಕ್ರೂರವಾಗಿ, ಆಪಾದಿಸುವ ಕಂಠದಲ್ಲಿ ಭಗವಾನನಿಗೆ ಹೇಳುವನು)
ಕೇಳು. ನೀನು ದೊಡ್ಡವನೆಂದು ತಿಳಿದಿದ್ದಿ: ; ಎಲ್ಲರಿಗೂ ಮೋಸ ಮಾಡಬಹುದೆಂದು ಲೆಕ್ಕ ಹಾಕಿದ್ದೀ. ಎಲ್ಲ ಕಲ್ಯಾಣಗುಣಗಳನ್ನೂ ಕೂಡಿಸಿಕೊಂಡು ಗೆಲ್ಲಬಹುದಂತ ಮಾಡಿದ್ದೀ. ಆದರೆ ನೀನು ಎಲ್ಲ ಕ್ರಾಂತಿಯ ಶತ್ರು, ಮನುಷ್ಯಕೋಟಿಯ ಆಜನ್ಮ ವೈರಿ ನೀನು 1 hate you. ನೀನು ಆಸ್ಥಾನದಲ್ಲಿದ್ದೆ- ಬಡವರ ಕತೆ ಹೇಳುತ್ತ ; ನೀನು ಬಡವರ ಹತ್ತಿರ ಇದ್ದೆ-ಕ್ರಾಂತಿಯ ಕತೆ ಹೇಳುತ್ತ, ಈಕೆಯ ದೇಹದ ವೈಯಾರದ ಹಾಗೆ ನಿನ್ನ ಬುದ್ಧಿಯ ವೈಯಾರ ; ನಿನ್ನ ನಂಬಿಕೆ ಎಂದೂ ಇರಲಿಲ್ಲ: ಜಗತ್ತಿನ ದೊಡ್ಡ ಸಮಯಸಾಧಕ ನೀನು. ಯುದ್ಧವಾದಾಗಲೆಲ್ಲ ಪುಸ್ತಕ ಭಂಡಾರದಲ್ಲಿ ನೀನು-ಶಾಂತಿಕಾಲದಲ್ಲಿ ಯುದ್ಧದ ಮಾತಾಡುತ್ತೀ. ಅಕಸ್ಮಾತ್ ಯುದ್ಧಕ್ಕೆ ನಿನ್ನ ಎಳೆದೊಯ್ದರೆ- ಬಂದ ಮೇಲೆ ಹೇಗೆ ಯುದ್ಧದ ಬಗ್ಗೆ ಮಾತಾಡಬೇಕು ಎಂಬ ಚಿಂತೆ ನಿನಗೆ. ಎಲ್ಲ ನಿನ್ನ ಮಾತಿಗೆ ವಸ್ತು : ಎಲ್ಲ ನಿನ್ನ ಪ್ರದರ್ಶನದ ಕತ್ತಲು, ಬೆಳಕು. ನಿನ್ನನ್ನು ಎಲ್ಲೆಲ್ಲೂ ನೋಡಿದೇನೆ ಬೀದಿಯಲ್ಲಿ, ಸಭೆಗಳಲ್ಲಿ, ಶಾಲೆಯಲ್ಲಿ, ಮಠದಲ್ಲಿ, ಮಾರ್ಕೆಟ್ಟಿನಲ್ಲಿ : ನೀನು ಒಮ್ಮೆಗೇ ವ್ಯವಸ್ಥೆ ಮತ್ತು ಕ್ರಾಂತಿಕಾರ ಎರಡೂ ಆಗಬಲ್ಲೆ. ಬಡವ, ಶ್ರೀಮಂತ : ಸೋಷಲಿಸ್ಟ್, ಡೆಮಾಕ್ರಾಟ್ : ಕಳ್ಳ ಮತ್ತು ನ್ಯಾಯವಾದಿ-ಎಲ್ಲ
ಆಗಬಲ್ಲೆ. ಆದರೆ-
ಆದರೆ ಇವತ್ತಿನಿಂದ ನೀನು ಒಂದೇ. ಸುಳ್ಳು ಹೇಳುವ, ಪುಂಖಾನುಪುಂಖ ಬೊಗಳೆ ಬಿಡುವ, ಗೆದ್ದವರ ಪಕ್ಷ ಸೇರುವ, ಮನುಷ್ಯ ಜನಾಂಗಕ್ಕೆ ಮಾರಕವಾದ ಕ್ರಿಮಿ-I hate you.
(ಮೌನ. ಭಗವಾನ್ ಟೇಬಲ್ ಮೇಲಿನ ಪಿಸ್ತೂಲಿನ ಕಡೆಗೆ ಹೋಗುವನು. ತೆಗೆದುಕೊಳ್ಳಲು ಕೈಚಾಚುವನು : ಮಿಕ್ಕ ಇಬ್ಬರೂ ಕುತೂಹಲದಿಂದ ನೋಡುತ್ತಿರುವರು. ಭಗವಾನ್ ಇನ್ನೇನು ತೆಗೆದುಕೊಳ್ಳಲಿರುವಾಗ-)
ದಿನಕರ : ತಗೊಂಡು ಹಾಸ್ಯಾಸ್ಪದ ಆಗಬೇಡ. ಕೊಲ್ಲೋದು ನಿನ್ನಿಂದಾಗಲ್ಲ, (ಭಗವಾನ್ ಟೇಬಲ್ ಬಳಿ ಅನಿಶ್ಚಿತತೆಯಲ್ಲಿ ನಿಲ್ಲುವನು)
ಸುಧಾ : ತಗೊಳ್ಳಿ, ಯಾಕೆ ನಿಂತಿದೀರ.
ದಿನಕರ : ಹ್ಞೂ. ತಗೋ.
ಭಗವಾನ್ : ಮೊದಲು ಇಲ್ಲಿಂದ ಹೊರಟುಹೋಗು.
ದಿನಕರ : ಯಾಕೆ ಹೋಗಬೇಕು ?
ಭಗವಾನ್ : ನನ್ನ ಮನೆ ಬಿಟ್ಟು ತೊಲಗು.
ದಿನಕರ : ನನ್ನ ಪ್ರಕಾರ ಯಾರ ಮನೆಯೂ ಇಲ್ಲ.
ಭಗವಾನ್ : ಇದು ನನ್ನ ಮನೆ !
ದಿನಕರ : ನಿನ್ನ ಹೆಂಡತಿ!
ನಿನ್ನ ಆಸ್ತಿ !
ನಿನ್ನ ಫ್ರಿಜ್‌ !
ನಿನ್ನ ಜನಪ್ರಿಯತೆ !
ನಿನ್ನ ದೇಶೋದ್ದಾರ !
ನಿನ್ನ ಗಾಳಿ ! ನಿನ್ನ ಮಳೆ ! ನಿನ್ನ ನೆಲ !
ಭಗವಾನ್ : (ಭಂಡತನದಿಂದ) ಹೌದು. ಅದಕ್ಕೇ ತೊಲಗು.
ಸುಧಾ : ನಿನಗೆ ? ನಿನಗೆ ಮನೆ ಇಲ್ಲ.
ಹೆಂಡ್ತಿ ಇಲ್ಲ.
ದಾಕ್ಷಿಣ್ಯ ಇಲ್ಲ.
ನಿಲ್ಲೋದಕ್ಕೆ ನೆಲೆ ಇಲ್ಲ.
ಭಗವಾನ್ : ಹೋಗು, ಹೊರಟುಹೋಗು.
ದಿನಕರ : ಹೋದರೆ, ನೀನು ನಾಳೆ-
ಭಗವಾನ್ : ಸಾಕು. ನಿನ್ನ ದರಿದ್ರ ಮಾತು ಸಾಕು.
ದಿನಕರ : ನಾನು ನಾನಾಗಿ ತೊಲಗೋನಲ್ಲ,
ಬೇಕಾದರೆ ಕಳಿಸು.
(ಗಟ್ಟಿಯಾಗಿ) ಥಾಕತ್ತಿದ್ದರೆ ಕಳಿಸು.
ಸುಧಾ : (ಮುಂದೆ ಸಾಗಿ ಟೇಬಲ್ ಮೇಲಿನ ಫಿಸ್ತೂಲು ತೆಗೆದುಕೊಂಡು ದಿನಕರನತ್ತ ಗುರಿಯಿಟ್ಟು ಹೊಡೆಯುವಳು. ಭಗವಾನ್ ‘ಬೇಡ, ಬೇಡ’ ಅಂದರೂ ಕೇಳದೆ ಮತ್ತೆ ಮತ್ತೆ ಹೊಡೆಯುವಳು. ದಿನಕರ ನೆಲಕ್ಕೆ ಬೀಳುವನು. ಹೊರಗಡೆ ಪಿಸ್ತೂಲು ಶಬ್ದಕ್ಕೆ ಜನರ ಗುಜು ಗುಜು. ಭಗವಾನ್ ಹೆಂಡತಿಯಿಂದ ಪಿಸ್ತೂಲು ಕಸಿದುಕೊಂಡು ಟೇಬಲ್ ಮೇಲೆ ಇಡುವನು ; ತಲೆಯ ಮೇಲೆ ಕೈಹೊತ್ತು ಕೂರುವನು. ಜನ ಬರುವರು ; ಅವರಿಬ್ಬರನ್ನೂ ಹೆಣವನ್ನೂ ನೋಡಿ
ನಾನಾ ಬಗೆಯ ಕುತೂಹಲ ತೋರುವರು)
ನೆರೆಯವ ೧ : ಏನು, ಏನಾಯ್ತು ಸಾರ್‌ ?
ನೆರೆಯವ ೨ : ಕೊಲೆ ? ಯಾರೀತ ?
ನರೆಯವ ೩ : ಯಾರು ಗೊತ್ತಾಗಲ್ವೇನ್ರಿ-ಆ ಕಿಟಕಿ ನೋಡಿದ್ರೆ ?
ನೆರೆಯವ ೪ : ಕಳ್ಳ ಅಲ್ವ ? (ಸುಧಾಗೆ) ಏನಮ್ಮ, ನೀನು ಮನೇಲಿರಲಿಲ್ವಾ ?
ನೆರೆಯವ ೧ : (ಭಗವಾನ್‌ಗೆ) ಕಳ್ಳಸೂಳೇಮಕ್ಕಳು ಸಾರ್‌.
ಈಚೆಗೆ ಎಲ್ಲೆಲ್ಲು ಹೆಚ್ಚಿಹೋಗಿದಾರೆ.
ನೆರೆಯವ ೩ : (ಹೆಣದ ಹತ್ತಿರ ಹೋಗಿ) ನೋಡಿದ್ರೆ ಗೊತ್ತಾಗಲ್ವ ?
ಸುಧಾ : (ನಾಲ್ಕನೆಯವನಿಗೆ) ಸಿನಿಮಾಕ್ಕೆ ಹೋಗಿದ್ವು.
ನೆರೆಯವ ೨ : ಸಿನಿಮಾದಿಂದ ಬರೊದ್ರಲ್ಲೇ ನುಗ್ಗಿದಾನಲ್ಲ !
ನೆರೆಯವ ೧ : ಪೊಲೀಸ್‌ಗೆ ತಿಳಿಸಿದ್ರ ಸಾರ್ ?
ಭಗವಾನ್ : ಮಾತಾಡಬೇಡಿ, ನನ್ನ ತಲೆ ನೋಯ್ತಿದೆ.
ನೆರೆಯವ ೨ : ತುಂಬಾ ಹೋರಾಡಿದನ ಸಾರ್‌ ?
ನೆರಯವ ೪ : ನಾನು ಆಗತಾನೇ ಮಲಗಿದ್ದೆ. ಕಟ್ಟ ಆತು, ಓಡಿಬಂದೆ!
ನೆರೆಯವ ೩ : ದುಡಿದು ತಿನ್ನಲಾರದ ಮುಂಡೇಗಂಡ್ರು.
(ರಾಮದಾಸ ಮತ್ತು ಶಂಕರ ಪ್ರವೇಶಿಸುವರು. ಮಾತಾಡುತ್ತಲೇ ಬರುತ್ತಿದ್ದಾರೆ ; ಜನ ದಾರಿ ಮಾಡಿಕೊಡುವರು)
ರಾಮದಾಸ : ಯಾರೋ ಪಟಿಂಗ ಇರಬೇಕು-ನಾನು ಮುಂಚೇನೇ ಹೇಳಿದ ಮನೆ ಕಡೆ ಎಚ್ಚರವಾಗಿರು ಆಂತ.
ಶಂಕರ : (ಹೆಣ ನೋಡಿ) ನಾನು ಮುಂಚೇನೇ ಹೇಳಿದೆ ನಿನಗೆ -ಯಾವನೋ ನಕ್ಸಲೈಟಿರಬೇಕಂತ ! ನೋಡಿದ್ರ, ದಿನಕರ ! ಉರಿದು, ಉರಿದು ಬಿದ್ದು ಸತ್ತ. idiot. ಭಗವಾನ್, ಏಳು, ಬೇಸರಪಟ್ಟುಕೋಬೇಡ. ಎಲ್ಲ ಸರಿಹೋಗುತ್ತೆ.
ರಾಮದಾಸ : Don’t you worry, sister. ನಿಮಗೇನೂ ಆಗಲ್ಲ. ನಾವಾಗಲೇ ಪೊಲೀಸರಿಗೆ ಹೇಳಿಬಂದಿದೇವೆ. ಇನ್ನೇನು ಬಂದುಬಿಡ್ತಾರೆ. ಅವರೂ
ಇವನಿಗಾಗಿ ಊರಲ್ಲೆಲ್ಲ ಹುಡುಕ್ತಿದ್ರು.
ನೆರೆಯವ ೧ : ಆಗಲೇ ಪೋಲೀಸರಿಗೆ ಹೇಳಿದ್ದಾರಂತ್ರೀ.
ನೆರೆಯವ ೨ : ಮತ್ತೇನು-ಇಂಥ ಲೊಕ್ಯಾಲಿಟೇಲಿ ಮನೇ ನುಗ್ಗೋದು ಅಂದ್ರೆ –
ನೆರೆಯವ ೩ : ಆದೆಷ್ಟು ಧೈರ್ಯ ಇರಬೇಕು ?
ನೆರೆಯವ ೪ : (೫ ನೆಯವನಿಗೆ) ಸ್ಟೂಡೆಂಟ್ ಥರ ಕಾಡ್ತಾನೆ.
ನೆರೆಯವ ೫ : ಥರ ಏನು ಬಂತು. ಸ್ಟೂಡೆಂಟೇ. ಎಲ್ಲ ಗಲಾಟೆಗೆ ಆ ನನಮಕ್ಕಳೇ
ಕಾರಣ.
ನೆರೆಯವ ೪ : ಮೊನ್ನೆ ಏನಾಯ್ತು ಅಂತೀ-
ನೆರೆಯವ ೧ : (ಶಂಕರನಿಗೆ) ನೀವು ಇವನ್ನ ನೋಡಿದ್ದೀರಾ ಸಾರ್ ?
ಶಂಕರ : ನೋಡದೆ ಏನು ? ಇಡೀ ಊರಿಗೇ ಗೊತ್ತು.
ನೆರೆಯವ ೩ : ನಕ್ಸಲೈಟಂತೆ.
ನೆರೆಯುವ ೨ : ಅಲ್ಲ ಕಣಯ್ಯ-ಯಾವನೋ ಏಜಂಟಂತೆ.
(ಹೊರಗದೆ ಜೀಪ್ ನಿಂತ ಶಬ್ದ. ಪೋಲಿಸರು ಜನರಿಗೆ ಗದರಿಸುತ್ತ, “ಹೊರಗೆ ಹೋಗ್ರಿ – ಗದ್ದಲ ಮಾಡಬೇಡಿ-ಸುಮ್ಮನೆ ಹೋಗಿ ಮಲಗಿಕೊಳ್ಳಿ” ಅನ್ನುತ್ತ ಬರುವರು. ಇನ್‌ಸ್ಪೆಕ್ಟರ್‌ಗೆ ಎಲ್ಲರೂ ದಾರಿ ಮಾಡಿಕೊಡುವರು. ಕೆಲವರು ಅಲ್ಲಿಂದ ಹೊರಡುವರು : ಕೆಲವರು ದೂರದಲ್ಲಿ ನಿಲ್ಲುವರು. ಇನ್‌ಸ್ಪೆಕ್ಟರ್‌ ಯಾವ ಭಾವನೆಯನ್ನೂ ತೋರದೆ ಹೆಣದ ಹತ್ತಿರ ಬಂದು ನೋಡಿ-)
ಇನ್‌ಸ್ಪೆಕ್ಟರ್‌ : ಈ ಮನೆ ಯಜಮಾನರು ಯಾರು ?
ಭಗವಾನ್ : ನಾನು.
ಇನ್‌ಸ್ಪೆಕ್ಟರ್ : ಇದು ಎಷ್ಟು ಹೊತ್ತಿನಲ್ಲಿ ಆಯಿತು ?
ಭಗವಾನ್ : ಹತ್ತು ನಿಮಿಷದ ಹಿಂದೆ.
ಇನ್‌ಸ್ಪೆಕ್ಟರ್ : ಈತ ನಿಮಗೆ ಗೊತ್ತೆ ?
ಭಗವಾನ್ : ಈತ ಯಾರಿಗೆ ಗೊತ್ತಿಲ್ಲ ?
ಇನ್‌ಸ್ಪೆಕ್ಟರ್‌: ಇಲ್ಲಿ ಎಷ್ಟು ಹೊತ್ತಿನಲ್ಲಿ ನೋಡಿದಿರಿ ?
ಸುಧಾ : ಕಾಲು ಗಂಟೆ ಕೆಳಗೆ.
ಇನ್‌ಸ್ಪೆಕ್ಟರ್ : (ಭಗವಾನ್‌ಗೆ) ಹೌದ ?
(ಭಗವಾನ್ ಹೌದೆಂದು ತಲೆಯಲ್ಲಾಡಿಸುವನು)
ಇನ್‌ಸ್ಪೆಕ್ಟರ್ : ಬನ್ನಿ ಸಾರ್, ಈ ಕಡೆ ಬನ್ನಿ. (ಸುಧಾಗೆ) ನೀವೂ ಬನ್ನಿ (ಅವರನ್ನು ಒಂದು ಮೂಲೆಗೆ ಕರೆದೊಯ್ಯುವನು)
ಮರ‍್ಡರ್ ಬಹಳ complication ತರುತ್ತೆ ನೋಡಿ-
ಸುಧಾ : ಹೇಗೆ ?
ಇನ್‌ಸ್ಪೆಕ್ಟರ್ : ಈತ ದಿನಕರ ಅಂತ-ನಾವು ಹುಡುಕುತ್ತಾ ಇದ್ದದ್ದು ಇವನನ್ನೇ.
ಈಗ ಈ ಮರ‍್ಡರ್ –
ಸುಧಾ : ಇದು ಮರ‍್ಡರ್‌ ಅಲ್ಲ –
ಇನ್‌ಸ್ಪೆಕ್ಟರ್ : ಅಲ್ಲ, ಸರಿ. ಆದರೆ ಅದೇನೇ ಆದ್ರೂ -ನಿಮಗೆ ಕೊಂಚ ತೊಂದರೆ ಆಗುತ್ತೆ-ಅದಕ್ಕೇ-
ಭಗವಾನ್ : ನೆಟ್ಟಗೆ ಎಲ್ಲ ಹೇಳಿಬಿಡಿ.
ಇನ್‌ಸ್ಪೆಕ್ಟರ್ : ನಿಮಗೂ ಒಳ್ಳೇದಾಗಬೇಕು, ನಮಗೂ ಹೆಸರು ಬರಬೇಕು-
ಸುಧಾ : ನಮಗೆ ಟೈಮಿಲ್ಲ, ಹೇಳಿ.
ಇನ್‌ಸ್ಪೆಕ್ಟರ್ : ಅದಕ್ಕಾಗಿ ನೀವು ಒಂದು ಕೆಲಸ ಮಾಡಬೇಕು. ಈತ ಪೊಲೀಸರ ಜೊತೆ encounter ನಲ್ಲಿ ಸತ್ತ ಅಂತ ಹೇಳಿಕೆ ಕೊಡಬೇಕು. ಭಗವಾನ್ : ಆಗಲಿ.
ಸುಧಾ : (ಧ್ವನಿ ಎತ್ತರಿಸಿ) ಏನು ಆಗಲಿ ? ಯಾಕೆ ಹಾಗೆ ಹೇಳಿಕೆ ಕೊಡಬೇಕು ? ನಿಮಗೆಂದೂ ಗೊತ್ತಾಗಲ್ಲ ಸುಮ್ನಿರಿ.
ರಾಮದಾಸ : (ಮುಂದೆ ಬಂದು) ಏನು ಹೇಳಿಕೆ ? ಯಾಕೆ ?
ಸುಧಾ : (ಇನ್‌ಸ್ಪೆಕ್ಟರಿಗೆ) ನೋಡಿ ಇನ್‌ಸ್ಪೆಕ್ಟರೇ, ನಿಮ್ಮ ಕೆಲಸ ನೀವು ಮಾಡಿಕೊಂಡು ಹೋಗಿ. ನೀವಲ್ಲ ಈತನ್ನ ಹಿಡಿದು ಕೊಂದುಹಾಕಿದ್ದು. ನಿಮಗೆ ಹೆಸರು ಬರೋದು ಸಾಧ್ಯವಿಲ್ಲ.
ಶಂಕರ : ತಿಂಗಳುಗಟ್ಟಲೆ ಹುಡುಕಿ ಬರಿಗೈಯಲ್ಲಿ ಓಡಾಡೋ ನಿಮಗೆ ಹೆಸರು ಬೇರೆ ಕೇಡಿಗೆ. ಇನ್‌ಸ್ಪೆಕ್ಟರ್ : ಕ್ಷಮಿಸಿ ಸಾರ್. ಅದು ನನ್ನ ಸೂಚನೆ ಅಷ್ಟೆ. ಏನೂ ತಿಳಕೋಬೇಡಿ….
ನಿಮ್ಮ ಇಷ್ಟ ಬಂದಹಾಗೆ ಮಾಡಿ.
(ಇನ್‌ಸ್ಪೆಕ್ಟರು ಸುಮ್ಮನೆ ಕೂತು ವಿವರಣೆ ಬರೆದುಕೊಳ್ಳತೊಡಗುವನು. ಪೋಲೀಸರು ಜನರನ್ನು ಗದರಿಸುತ್ತ ಹೊರಗೆ ಕಳಿಸುವರು. ಕತ್ತಲು)
ದೃಶ್ಯ ೩[ಮೊದಲನೆಯ ದೃಶ್ಯದಂತೆಯೇ-ಆದರೆ ಅದಕ್ಕಿಂತ ಹೆಚ್ಚು ಸಡಗರದ ಸಭೆ. ಬೆಳಕು ರಂಗಕ್ಕೆ ಬಂದಾಗ ಮಾಲತಿ ನಾಡಗೀತೆಯನ್ನು ಹಾಡುತ್ತಿರುವಳು. ಇದು ನಾಟಕದ ಚಲನೆಗೆ ಅಡ್ಡಿ ಬಾರದಷ್ಟು ಚಿಕ್ಕದಾಗಿರಬೇಕು ಅಂದರೆ ನಾಲ್ಕಾರು ಸಾಲುಗಳನ್ನು ಹಾಕಿದರೆ ಸಾಕು. ಪ್ರೇಕ್ಷಕರಿಗೆ ಕಾಣಿಸಿದಾಗ ಆಕೆ ಆಗಲೇ ಹಾಡುತ್ತಿದ್ದಾಳೆ. ವೇದಿಕೆಯ ಮೇಲೆ ಭಗವಾನ್, ಸುಧಾ, ರಾಮದಾಸ, ಶಂಕರ, ಲಲಿತ ಇದ್ದಾರೆ. ಧೂಪದ ವಾಸನೆ : ಮುಂಚಿನಂತೆಯೇ-ಸೂಚಿತವಾಗಿರುವ ಕಡೆ ರೇಕಾರ್ಡೆಡ್ ಚಪ್ಪಾಳೆ ಇತ್ಯಾದಿ.] ಮಾಲತಿ : (ಹಾಡುತ್ತ) ಜಯ ಭಾರತ ಜನನಿಯ ತನುಜಾತೆ, .
ಜಯ ಹೇ ಕರ್ನಾಟಕ ಮಾತೆ…..
ಲಲಿತ : (ಧ್ವನಿವರ್ಧಕದ ಹತ್ತಿರ ಬಂದು ಸ್ವಾಗತಿಸುವಳು.) ಅಧ್ಯಕ್ಷರೇ ಮತ್ತು ಸಭಿಕರೇ, ನಮ್ಮ ಹೆಮ್ಮೆಯ ಗುರುಗಳೂ, ಶ್ರೇಷ್ಠ ವಿದ್ವಾಂಸರೂ ಆದ ಪ್ರೊಫೆಸರ್ ಭಗವಾನ್‌ ಅವರನ್ನು ಸ್ವಾಗತಿಸಲು ಹರ್ಷವಾಗುತ್ತದೆ. (ಚಪ್ಪಾಳೆ.) ನಮ್ಮ ಸಮಾಜದ ಶತ್ರುಗಳನ್ನು ಖಂಡಿಸುವುದರಲ್ಲಿ ನಮಗೆಲ್ಲ ಮಾರ್ಗದರ್ಶನ ನೀಡುವುದರಲ್ಲಿ ಭಗವಾನ್ ಅವರು ಸದಾ ಉತ್ಸಾಹ ತೋರಿದ್ದಾರೆ. ಸರ್ಕಾರ ಬಂಧಿಸಲು ಸಾಧ್ಯವಾಗದಂಥ ಸಮಾಜ ವಿರೋಧಿಯನ್ನು ಕೊನೆಗಾಣಿಸಿದ ನಮ್ಮ ವಿದ್ಯಾಗುರುಗಳಿಗೂ ಅವರ ಬಲಗೈನಂತಿರುವ ಧರ್ಮಪತ್ನಿ ಸುಧಾ ದೇವಿಯವರನ್ನೂ ತಮ್ಮೆಲ್ಲರ ಪರವಾಗಿ ಸ್ವಾಗತಿಸುತ್ತೇನೆ. ಈಗ ಪ್ರೊಫೆಸರ್ ಅವರೇ ತಮ್ಮನ್ನು ಕುರಿತು ನಾಲ್ಕು ಮಾತಾಡುತ್ತಾರೆ. (ಕಿವಿ ಗಡಚಿಕ್ಕುವಂತೆ ಚಪ್ಪಾಳೆ, ಗದ್ದಲ, ಸಂಭ್ರಮ)
ಭಗವಾನ್ : ಮಾನ್ಯರೆ, ನಾನು ಅವನನ್ನು ಕೊಲ್ಲಲಿಲ್ಲ; ಈ ಸಮಾಜ ಕೊಂದದ್ದು.
(ಚಪ್ಪಾಳೆಯ ಸುರಿಮಳೆ)
ಮತ್ತೆ ಹೇಳುತ್ತೇನೆ ನಿಮಗೆ ಕಿವಿಯಿದ್ದರೆ ಕೇಳಬೇಕು, ದಿನಕರ ನನ್ನ ಶಿಷ್ಯನಾಗಿದ್ದ-ಅಂಥವನು-ಅಂಥವನು-
(ಚಪ್ಪಾಳೆ-)
ಭಗವಾನ್ : ಹೀಗೆ ಮಾತು ಮಾತಿಗೆ ಚಪ್ಪಾಳೆ ಹೊಡವ ಸಮಾಜಕ್ಕೆ ಮುಕ್ತಿ ಇಲ್ಲ. ಆಡಬೇಕೆಂದಿರುವ ಮಾತು ಮರೆತುಹೋಗುತ್ತದೆ. ನಿಜವಾದ ಸಮಸ್ಯೆಗಳು ಮರೆಯಾಗಿ ಮಾತಿನ ಬಲೆ ನಮ್ಮ ಸುತ್ತ ಹೆಣೆದುಕೊಳ್ಳುತ್ತದೆ. ಇಡೀ ದೇಶ ದೊಡ್ಡ ಪೋಲಿಸ್ ಠಾಣೆಯಾಗುತ್ತದೆ. ಅಲ್ಲಿ ನಮ್ಮ ಬಂಡವಾಳ ಶಾಹಿಗಳು, ಸುಳ್ಳರು, ಮೂರ್ಖರನ್ನು (ಚಪ್ಪಾಳೆ ಹಿಯರ್, ಹಿಯರ್)
ನನ್ನ ಮಾತು ಕೇಳಿ, ಈ ದೇಶದಲ್ಲಿ ಯಾವ ಕ್ರಾಂತಿಗೂ ಉಳಿಗಾಲವಿಲ್ಲ. ಇಲ್ಲಿ ಯಾವ ಸುಧಾರಣೆಯೂ ನಡೆಯೋದಿಲ್ಲ. ಇದು ದರಿದ್ರ ದೇಶ. ಈ ದೇಶದಲ್ಲಿ ತಿಗಣೆಯ ಥರ, ಹೇನಿನ ಥರ ತುಂಬಿರುವ ಜನ (ಚಪ್ಪಾಳೆ, ಹಿಯರ್, ಹಿಯರ್, ಶಿಳ್ಳೆ, ಸಂಭ್ರಮ)
ಸುಧಾ : (ಎದ್ದು, ಗಂಡ ಅಪಾಯದ ಮಾತಾಡಬಹುದೆಂದು) ಅಂದರೆ, ನಕ್ಸಲೈಟ್ ದಿನಕರನಂಥ ತಿಗಣೆಗಳು ಇರೋದಕ್ಕೆ ಬಿಡಬಾರದು; ಅಂಥವಕ್ಕೆ ಇಲ್ಲಿ ನೆಲೆ ಇರಕೂಡದು. ಭಾರತದಂಥ ಅಖಂಡ ಸಂಸ್ಕೃತಿಯ, ಅಪೂರ್ವ ನಾಗರಿಕತೆಯ ದೇಶದಲ್ಲಿ ಬೇಜವಾಬ್ದಾರಿಯ ಜನ ಇರಗೊಡಕೂಡದು. (ಚಪ್ಪಾಳ, ಸುಧಾ ಜಾಣತನದಿಂದ ವಿಷಯ ಬದಲಿಸುವಳು) ಇವತ್ತು ನಮ್ಮ ಯಜಮಾನರ ಮೈಯಲ್ಲಿ ಸ್ವಸ್ಥವಿಲ್ಲ ! ಸಭಿಕರು ಕ್ಷಮಿಸಬೇಕು. (ಎಂದೊಡನೆ ಲಲಿತ, ಮಾಲತಿ ಆತನ ಕೈ ಹಿಡಿದು ಕೂರಿಸುವರು) ಅವರು ಹೇಳಬೇಕೆಂದದ್ದು ಇಷ್ಟೆ : ಸಮಾಜ ಎಚ್ಚೆತ್ತುಕೊಳ್ಳಬೇಕು, ನಿಜವಾದ ಕ್ರಾಂತಿಯತ್ತ ನಾವೆಲ್ಲ ಸಾಗಬೇಕು. ಈ ದೇಶದ ಭ್ರಷ್ಟರು, ಮೂರ್ಖರು, ಆಪ್ರಾಮಾಣಿಕರು ತಮ್ಮ ತಪ್ಪಿಗೆ ಪ್ರಾಯಶ್ಚಿತ್ರ ಅನುಭವಿಸುವಂತೆ ಆಗಬೇಕು-ನಮ್ಮ ವಿದ್ಯಾಸಂಸ್ಥೆಗಳು, ನ್ಯಾಯಾಲಯಗಳು, ದೇವಸ್ಥಾನಗಳು, ಮಠ ಮುಂತಾದವು ಸ್ವಚ್ಛವಾಗಬೇಕು. ನಮ್ಮ ದೇಶ ಸ್ವರ್ಗವಾಗಬೇಕು. ಇಷ್ಟನ್ನು ನನ್ನ ಯಜಮಾನರ ಪರವಾಗಿ ಹೇಳಿ ನನ್ನ ಮಾತು ಮುಗಿಸುತ್ತೇನೆ. ಜೈ ಹಿಂದ್. [ಸಭೆ ಹಠಾತ್ತಾಗಿ ಮುಕ್ತಾಯವಾಗುವುದು-ಯಾಕೆಂದರೆ ಉತ್ಸಾಹಿಗಳಾದ ಜನ ಭಗವಾನನ ದರ್ಶನ ಪಡೆಯಲು, ಹಸ್ತಾಕ್ಷರ ಪಡೆಯಲು ನುಗ್ಗುವರು. ಸುಧಾ ಕೂಡ ಜನರಿಂದ ಸುತ್ತುಗಟ್ಟಲ್ಪಟ್ಟಿರುವಳು. ಹಲವರು ಹೂಮಾಲೆಯನ್ನು ಹಿಡಿದು ನುಗ್ಗುವರು. “ಭಗವಾನ್-ಕಿ
-ಜೈ” ಘೋಷಣೆ ಬೇಕಾದರೆ ಇರಬಹುದು. ಜನ ಇಷ್ಟರಲ್ಲೇ ತಮ್ಮ ಅಭಿಮಾನ ತೀರಿಸಿಕೊಳ್ಳದೆ ಭಗವಾನನನ್ನು ಸಂತೋಷದಿಂದ ಎತ್ತಿಕೊಳ್ಳುವರು ; ಹಲವಾರು ಜನ ಹೊತ್ತಿರುವುದರಿಂದ, ಅವರೆಲ್ಲರ ಕೈಗಳ ಮೇಲೆ ಅಡ್ಡಲಾಗಿರುವ ಭಗವಾನ್ ಶವದಂತೆ ಕಾಣುವನು. ರಾಷ್ಟ್ರಗೀತೆ ಆರಂಭವಾಗುವುದು]

ಕತ್ತಲು
ಸೂಚನೆ : ಈ ನಾಟಕವನ್ನು ಯಾವುದೇ ರೀತಿಯಲ್ಲಿ ಪ್ರಯೋಗಿಸಲಿಚ್ಚಿಸುವವರು ಲೇಖಕರಿಂದ ಮುಂಚಿತವಾಗಿ ಲಿಖಿತ ಅನುಮತಿ ಪಡೆಯಬೇಕು.

Close

ಕವಿತೆ

ಕವಿತೆ

ಮಹಾಬಲಗಿರಿ

ಇವಳು
ಮೈಗೂಡಿ
ನಿಂತವಳು.
ಮೂರು ಹದ,
ವಿಧ, ಅವಧಿ
ಇವಳ ಪರಿಧಿ.
ಮಾತೆ
ಮಡದಿ
ಮಗಳು
ಹುಟ್ಟಿಸಿದಳು.
ಅಲ್ಲೆ ಸುಖಪಟ್ಟಳು.
ಹುಟ್ಟಿದಳು.
ಮೊಲೆಯೂಡಿಸಿ
ಆಡಿಸಿ ಕಲಿಸಿ
ಬೆಳೆಸಿದವಳು.
ಸುಖ ಕೊಟ್ಟು
ಜೊತೆಗೂಡಿ
ಹೊಳೆಯಾಗಿ
ಹರಿದಳು.

ಮುಗುಳಾಗಿ
ಅರಳಿ
ಬಳ್ಳಿಕಂಪಿನ
ಹೂವಾದಳು.

Close

ಅನ್ವೇಷಣೆ:ರೂಮು

ಅನ್ವೇಷಣೆ : ರೂಮು

ಕೆ. ವಿ. ತಿರುಮಲೇಶ್

ಸಿನಿಮಾ ಮುಗಿದು ನಾಯಕ ತನ್ನ ಹೊಟೇಲಿಗೆ ಮರಳಿದಾಗ ಸಾಧಾರಣ ಒಂದೂವರೆ ಗಂಟೆಯಾಗಿರಬಹುದು. ಅವನ ವಾಚು ಕೆಟ್ಟುಹೋಗಿತ್ತು. ಹೊಟೇಲು ಕಾಂಪೌಂಡಿನ ಉಕ್ಕಿನ ಗೇಟು ತುಸುವೆ ತೆರೆದಿತ್ತು. ಬದಿಗೆ ಗೂಡಿನಲ್ಲಿ ಕುಳಿತಿದ್ದ ಕಾವಲಿನವ ತೂಕಡಿಸುತ್ತಿದ್ದ. ತೂಕಡಿಸುತ್ತಿದ್ದ ಕಾವಲಿನವನನ್ನು ಎಬ್ಬಿಸಲು ನಾಯಕ ಬರಿಗೈಯಿಂದ ಗೇಟಿಗೆ ಬಡಿದು ಶಬ್ದ ಮಾಡಿದ. ಶಬ್ದದಿಂದ ಎಚ್ಚರವಾಗಿ ಕಾವಲುಗಾರ ಮೆಶೀನಿನಂತೆ ಎದ್ದು ಬಂದ. ಗೇಟಿನ ಒಂದರ್ಧವನ್ನು ಎರಡೂ ಕೈಗಳಿಂದ ಬದಿಗೆ ಸರಿಸಿ ನಾಯಕನನ್ನು ಒಳಕ್ಕೆ ಬಿಟ್ಟ ಮೇಲೆ ಗೇಟು ಮುಚ್ಚಿದ. ಮುಚ್ಚಿಬಿಟ್ಟು ಬೀಗದ ಕೀಲಿಗೈ ತಿರುಗಿಸಿದ ಶಬ್ದ ಕೇಳಿಸಿತು. ತನಗಾಗಿ ಆತ ಕಾದು ಕುಳಿತಿದ್ದಂತೆ ನಾಯಕನಿಗೆ ತೋರಿ, ಅವನಿಗೆ ಥ್ಯಾಂಕ್ಸ್ ಹೇಳಬೇಕೆಂದುಕೊಂಡ. ಆದರೆ ಅಷ್ಟರಲ್ಲಿ ಕಾವಲುಗಾರ ಕತ್ತಲೆಯಲ್ಲಿ ಮಾಯವಾಗಿದ್ದ.
ನಾಯಕನ ಕೈ ಯಾಂತ್ರಿಕವಾಗಿ ಜೇಬಿಗಿಳಿದು ತನ್ನ ರೂಮಿನ ಕೀಯನ್ನು ಹುಡುಕಿದರೆ ಕೀ ಸಿಗಲಿಲ್ಲ. ಶರ್ಟಿನ ಜೇಬುಗಳನ್ನು ಶೋಧಿಸಿದ ಮೇಲೆ ಪ್ಯಾಂಟಿನ ಜೇಬುಗಳನ್ನೂ ಒಂದೊಂದಾಗಿ ಬುಡಮೇಲಾಗುವಂತೆ ಶೋಧಿಸಿ ಹತಾಶನಾದ ಕೈಗಳು ಪುನಃ ಪುನಃ ಒಂದು ಜೇಬಿನಿಂದ ಇನ್ನೊಂದಕ್ಕಿಳಿದು ಒಳಗಿನ ಕತ್ತಲೆಯಲ್ಲಿ ಬೆರಳುಗಳು ತಡಕಾಡಿದವು. ತಡಕಾಡಿದಾಗ ಏನೋ ಬಿಲ್ಲುಗಳು, ಕಾಗದದ ಚೂರುಗಳು, ಚಿಲ್ಲರೆ ಕಾಸುಗಳಲ್ಲದೆ ಕೀ ದೊರೆಯಲಿಲ್ಲ. ಆಮೇಲೆ ಪರ್ಸಿನೊಳಗೆ ಚಿಲ್ಲರೆಯೊಂದಿಗೆ ಒಂದು ಕೀ ಸಿಕ್ಕಿತು. ಅದು ಸಾಧಾರಣ ಅಳತೆಯ ಗಾದ್ರೆಜ್‌ ಕೀ ಎಂಬುದನ್ನು ಮಬ್ಬುಗತ್ತಲೆಯಲ್ಲಿ ನಾಯಕ ಕಂಡುಕೊಂಡ. ಇದೇ ರೂಮಿನ ಕೀ ಆದರೆ ತನ್ನ ಮನೆಯ ಕೀ ಯಾವುದು ? ಮನೆಯದು ಯಾವ ಬ್ರಾಂಡಿನ ಹೀಯೆಂಬುದು ನೆನಪಿರಲಿಲ್ಲ. ಇಷ್ಟು ವರ್ಷಗಳಿಂದ ತಾನವನ್ನು ಉಪಯೋಗಿಸುತ್ತಿದ್ದರೂ ಕೂಡ ನೆನಪಿಲ್ಲ. ಪರಿಚಯವಿಲ್ಲ. ಒಂದೂ ಇಲ್ಲ. ಛೇ. ಹೀಗೆಂದು ಒಪ್ಪಿಕೊಳ್ಳಬೇಕಾದರೆ ಎಷ್ಟೊಂದು ಧೈರ್ಯ ಬೇಕಾಗುತ್ತದೆ ! ತನಗದು ಉಂಟೋ ಎಂಬ ಬಗ್ಗೆ ಅವನಿಗೆ ಸಂದೇಹ ಬಂತು. ಸುಳ್ಳು ಹೇಳುವುದಕ್ಕೆ ಧೈರ್ಯ ಬೇಕು, ಸತ್ಯ ಹೇಳುವುದಕ್ಕೂ ಬೇಕು. ಆದರೆ ತನಗೆ ತಾನೇ ಸತ್ಯ ಒಪ್ಪಿಕೊಳ್ಳುವುವಕ್ಕೆ ಎಲ್ಲಿಲ್ಲದ ಧೈರ್ಯ ಬೇಕಾಗುತ್ತದೆಂಬುದು ಇಂಥ ಸಂದರ್ಭಗಳಲ್ಲಿ ಸ್ಪಷ್ಟ ವಾಗಲು ಪ್ರಯತ್ನಿಸುತ್ತದೆ ಎಂದು ಅವನಿಗೆ ತೋರಿತು.
ಅಂದರೆ, ಒಂದೋ ಮನೆಯ ಕೀ ಇಲ್ಲದಿದ್ದರೆ ರೂಮಿನದ್ದು ಕಳೆದುಹೋಗಿರಬೇಕು. ಯಾವುದು ಕಳೆದುಹೋದರೂ ಕಷ್ಟ ಕಷ್ಟವೇ. ಆದರೆ ರೂಮಿನ ಕೀ ಕಳೆದುಹೋದದ್ದಾದರೆ ತಾನು ಇನ್ನೊಬ್ಬರಿಗೆ ಉತ್ತರ ಹೇಳಬೇಕಾಗುತ್ತದೆಂಬುದು ಹೆಚ್ಚು. ಇಲ್ಲಿ ಜವಾಬ್ದಾರಿಯ ನೈತಿಕ ಪ್ರಶ್ನೆಯಿದೆ. ವಿಶ್ವಾಸದ ಪ್ರಶ್ನೆಯಿದೆ, ತನಗೆ ತಾನು ಜವಾಬ್ದಾರನಾಗಿಸುವುದೇ ಕಷ್ಟ. ಅದಕ್ಕಿಂತಲೂ ಕಷ್ಟ ಇನ್ನೊಬ್ಬನಿಗೆ ಜವಾಬ್ದಾರನಾಗಿರುವುದು, ಪ್ರಾಮಾಣಿಕ ರೀತಿಯಿದ ವರ್ತಿಸುವವರಿಗೆ ಮಾತ್ರ. ಆದರೆ ಈ ಹೊಟೇಲು ಮ್ಯಾನೇಜರ ತನ್ನಂಥ ಅಪರಿಚಿತ ಜನರ ಮೇಲೆ ರೂಮುಗಳ, ಬೀಗದ, ಇನ್ನಿತರ ರಕ್ಷಣೆಯ ಹೊಣೆಯನ್ನು ಅವರು ಹೇಳಿದ ವಿಳಾಸಗಳ, ಹಾಕಿದ ರುಜುಗಳ ಆಧಾರದ ಮೇಲೆ ಮಾತ್ರ ಹೊರಿಸಲು ಸಿದ್ಧನಾಗಿದ್ದಾನಲ್ಲ ! ಅಥವ ಎಲ್ಲಕ್ಕಿಂತಲೂ ಹೆಚ್ಚಾಗಿ ಸ್ವಂತಕ್ಕೆ ತಾನು ಜವಾಬ್ದಾರನಾಗಿರುವುದರಿಂದಲೆ ತಾನೀ ರೀತಿ ಚಡಪಡಿಸುತ್ತಿದ್ದೇನೆಯೇ ? ಇದೆಂಥ ವಿಚಿತ್ರ ಬಂಧ ! ಇದನ್ನು ಕಡಿದುಹಾಕದಿದ್ದರೆ ತನಗೆ ಉಸಿರಾಟವಿಲ್ಲವೆಂಬಷ್ಟು ಕಿರುಕುಳ ಅವನಿಗೆ ಅನುಭವವಾಯಿತು.
ಆದರೂ ಈ ಕೀ ಎಲ್ಲಿ ಕಳೆದುಹೋಯಿತು ? ಥಿಯೇಟರಿನಲ್ಲಿ ತಾನು ಆರಾಮವಾಗಿ ಕೂತು ಮುಂದಿನ ಸೀಟಿನ ಮೇಲೆ ಕಾಲು ಚಾಚಿ ಜೊಂಪು ಹತ್ತಿದ್ದಾಗ ಇದು ಬಿದ್ದು ಹೋಯಿತೆ? ಬಿದ್ದ ಶಬ್ದ ಕೂಡ ಹತ್ತಿರದ ಹೆಣ್ಣಿನ ಬಳೆಗಳ ಶಬ್ದದಲ್ಲಿ ತನಗೆ ಸ್ಪಷ್ಟವಾಗುವಂತಿರಲಿಲ್ಲ. ಅವಳ ಮುಖವನ್ನೂ ನೋಡಿರಲಿಲ್ಲ. ಆದರೆ ಹತ್ತಿರ ಕೂತ ಗಂಡಸಿನೊಂದಿಗೆ ಗುಸುಗುಸು ಮಾತಾಡುತ್ತ ಕೈಯಾಡಿಸುತ್ತಿದ್ದರೆ ಈಚೆಯವನಿಗೆ ತೊಂದರೆಯೆಂಬುದನ್ನು ಯಾರು ತಿಳಿಯುತ್ತಾರೆ ? ಬೇರೆಯವರ ಸುಖದುಃಖ ಯಾರು
ಕೇಳುತ್ತಾರೆ?
ಈ ವಿಚಾರಗಳಿಂದ ನಾಯಕ ಪ್ರಸ್ರುತಕ್ಕೆ ಬಂದ. ರೂಮಿಗೆ ಹೋಗಿ ತನ್ನಲ್ಲಿರುವ ಈ ಕೀ ಯಿಂದ ಬಾಗಿಲು ತೆರೆಯಲು ಶ್ರಮಿಸುವುದು. ಒಂದುವೇಳೆ ಬಾಗಿಲು ತೆರೆಯದೆ ಇದ್ದರೆ ಆಗ ಕಳೆದುಹೋದ ಕೀ ಹೊಟೇಲಿನದ್ದು. ಇರುವುದು ಮನೆಯದ್ದು ಎಂದಾಗುತ್ತದೆ. ತೆರೆದರೆ ಅದು ಹೊಟೇಲಿನದ್ದೇ ಎಂದು ಖಚಿತವಾಗುತ್ತದೆ. ಆದರೆ ಕೆಲವೊಮ್ಮೆ ಒಂದೇ ಕೀಯಿಂದ ಒಂದಕ್ಕಿಂತ ಹೆಚ್ಚು ಬೀಗಗಳನ್ನು ತೆರೆಯುವುದು ಸಾಧ್ಯವಾಗುವುದುಂಟು. ಅಂಥ ಪರಿಸ್ಥಿತಿ ಕಷ್ಟ. ಯಾಕೆಂದರೆ ಆಗ ತನ್ನಲ್ಲಿರುವ ಈ ಸ್ವಂತದ್ದೂ ಹೊಟೇಲಿಗೆ ಸಂಬಂಧಿಸಿದ್ದ ಎಂಬುದರ ನಿರ್ಧಾರವನ್ನು ಹೊಟೇಲಿನವರಿಗೆ ಬಿಟ್ಟು ಕೊಡಬೇಕಾದೀತು.
ನಾಯಕ ಹೊಟೇಲಿನ ಪೋರ‍್ಟಿಕೋಗೆ ಬಂದ. ಅಲ್ಲಿ ಸಣ್ಣ ಜೀರೋವಾಟ್ಟಿನ ಬುರುಡೆ ಉರಿಯುತ್ತಿತ್ತು. ಅದರ ಬದಿಗೇ ಲಿಫ್ಟು. ಲಿಫ್ಟಿನೊಳಗೆ ನಿಂತು ಸ್ವಿಚ್ಚು ಹಾಕಿ ಲಿಫ್ಟ್‌ ಮೇಲೇರುವುದಕ್ಕೆ ಕಾದರೂ ಅದು ಜಗ್ಗದಿರುವಾಗ ಅದಕ್ಕೆ ತೂಗಿಹಾಕಿದ ರಟ್ಟಿನ ಬೋರ್ಡು ಗಮನಕ್ಕೆ ಬಂತು. “ಕೆಲಸ ಮಾಡುವುದಿಲ್ಲ” ಎಂದು ಬರೆದ ಕೆಂಪಕ್ಷರಗಳು ಕತ್ತಲೆಯಲ್ಲಿ ಕಣ್ಣು ಮಿಟುಕಿಸುವಂತಿದ್ದವು. ತಾನು ಸಿನಿಮಾಕ್ಕೆ ಹೋದಾಗ ಅದು ಕೆಲಸ ಮಾಡುತ್ತಿತ್ತೆಂದು ನಾಯಕನಿಗೆ ನೆನಪು. ಈಗ ಸಂಪು ಹೂಡಿದಂತೆ ಸುಮ್ಮನೆ ಕುಳಿತಿದೆ ಎಂದರೆ ಇದಕ್ಕೆ ಕಾರಣವೇನೆಂದು ಹೊಟೇಲಿನ ಅಧಿಕಾರಿಗಳು ವಿಚಾರಿಸಬೇಕಿತ್ತು. ವಿಚಾರಿಸಿ ಈ ಯಂತ್ರವನ್ನು ರಿಪೇರಿ ಮಾಡಿಸಬೇಕಿತ್ತು. ಅಥವಾ ಅದನ್ನಲ್ಲಿಂದ ಕಿತ್ತುಹಾಕಬಹುದಿತ್ತು.
ಹೇಗಿದ್ದರೂ ಈಚೆ ಮೆಟ್ಟಲುಗಳಿರುವುದರಿಂದ ತೊಂದರೆಯಿರಲಿಲ್ಲ. ಮೆಟ್ಟಲೇರುತ್ತಿರುವಂತೆ ತಾನಿಳಿದುಕೊಂಡಿದ್ದ ರೂಮು ಯಾವ ಫ್ಲೋರಿನಲ್ಲಿದೆ ಎಂದು ನೆನಪು ಮಾಡುವುದಕ್ಕೆ ನಾಯಕ ಪ್ರಯತ್ನಿಸತೊಡಗಿದ. ಆಶ್ಚರ್ಯವೆಂದರೆ ನಿಜಕ್ಕೂ ಇದು ಪೂರ್ಣ ಮರೆತುಹೋಗಿತ್ತು. ಆದ್ದರಿಂದ ಒಂದು ವೇಳೆ ಲಿಫ್ಟ್‌ ಕೆಲಸ ಮಾಡುತ್ತಿದ್ದರೂ ಇದರಿಂದ ಪ್ರಯೋಜನವಾಗುತ್ತಿರಲಿಲ್ಲವೆಂಬುದು ಈಗ ಮನವರಿಕೆಯಾಯಿತು. ಬೇಕಾಗಿದ್ದ ಫ್ಲೋರು ಮರೆತುಹೋಗಿರುವ ಕಾರಣ ಲಿಫ್ಟಿಗೂ ತನಗೂ ಈಗ ಯಾವ ಸುಬುಧವೂ ಇಲ್ಲವೆಂದು ಅವನಿಗೆ ತೋರಿತು. ಲಿಫ್ಟಿನೊಳಗೆ ಹೊಕ್ಕದ್ದೂ, ಸ್ವಿಚ್ಚು ಹಾಕಿದ್ದೂ, ಅದು ಹಾಳಾಗಿದೆಯೆಂದು ತಿಳಿದದ್ದೂ, ಹಾಳಾದ್ದರಿಂದ ಅದರ ಇರುವಿಕೆಗೆ ಅರ್ಥವಿಲ್ಲವೆ ದಿಕ್ಕಿನಲ್ಲಿ ಚಿಂತಿಸಿದ್ದೂ ಅವನ ಮಟ್ಟಿಗೆ ನಿಷ್ಪಲವಾದ ಕಾರ್ಯಗಳಾಗಿದ್ದವು. ಫ್ಲೋರು ಮರೆತುಹೋಗಿರುವುದಕ್ಕೆ ಕಾರಣ ಲಿಫ್ಟಿನ ಕುರಿತಾದ ನಿರರ್ಥಕ ಚಿಂತೆಗಳೇ ಆಗಿರಬೇಕೆಂದೆನಿಸಿ ಬೇರಾವುದೇ ನೆನಪುಗಳು ಬರಬೇಕಾದರೆ ಇವನ್ನು ತಲೆಯಿಂದ ಹೊರಗೋಡಿಸಬೇಕೆಂದುಕೊಂಡ. ಅದಕ್ಕಾಗಿ ಸಿನಿಮಾದ ಕುರಿತು ಚಿಂತಿಸಲು ಶ್ರಮಿಸಿದ. ಥಿಯೇಟರು ತಲುಪುವಾಗಲೆ ತಡವಾಗಿಹೋದ್ದರಿಂದ ಸಿನಿಮಾದ ಹೆಸರೇನದು ಕೊನೆಯತನಕವೂ ತಿಳಿಯಲಿಲ್ಲ. ಹತ್ತಿರದಲ್ಲಿ ಕುಳಿತ ಆ ಗಂಡಸನ್ನಾಗಲಿ, ಹೆಂಗಸನ್ನಾಗಲಿ ಕೇಳುವುದು ಅಷ್ಟು ಸರಿಯೆನಿಸಿರಲಿಲ್ಲ. ಆದರೆ ಈಗ ಸಿನಿಮಾದ ಕುರಿತು ಚಿಂತಿಸುವುದಕ್ಕೆ ಸಮಯವಿರಲಿಲ್ಲ. ಆದಷ್ಟು ಬೇಗ ರೂಮಿಗೆ ಹೋಗಿ ಹಾಸಿಗೆಯಲ್ಲಿ ಮೈ ಚಾಚಬೇಕಾಗಿತ್ತು.
ಆದರೆ ರೂಮಿನ ನಂಬರೆಷ್ಟು ? ಎಷ್ಟೆಂದು ನೋಡಿಕೊಳ್ಳುವುದಕ್ಕೆ ಮರೆತು ಹೋಗಿತ್ತು. ನೋಡುವ ಪ್ರಮೇಯವೆ ಬಂದಿರಲಿಲ್ಲ. ನೋಡಿದ್ದರೂ ಅದರ ನೆನಪಿಲ್ಲ. ರೂಮು ತೆಗೆದುಕೊಂಡೊಡನೆ ಅದರ ನಂಬರನ್ನು ನೆನಪಿನಲ್ಲಿಟ್ಟುಕೊಳ್ಳುವುದು ಪ್ರಥಮ ಕರ್ತವ್ಯವಾಗಿತ್ತು. ನೆನಪಿನಲ್ಲಿ ಉಳಿಯದಿದ್ದರೆ ಬರೆದಿಟ್ಟುಕೊಳ್ಳಬಹುದಾಗಿತ್ತು. ಆದರೆ ಇದೆಲ್ಲ ಈಗ ಕಳೆದುಹೋದ ವಿಚಾರಗಳು. ಹೇಳಿ ಫಲವಿಲ್ಲ. ಮಾತ್ರವಲ್ಲ ಇಂತಹ ಪಶ್ಚಾತ್ ಚಿಂತನೆಯಿಂದ ತನ್ನ ರೂಮನ್ನು ಕಂಡುಹಿಡಿಯುವ ಜರೂರು ಸಮಸ್ಯೆಗೆ ಪರಿಹಾರ ದೊರೆಯುವಂತೆ ನಾಯಕನಿಗೆ ಕಾಣಿಸಲಿಲ್ಲ. ಆದ್ದರಿಂದ ಇದಕ್ಕೆ ಸೂತ್ರಗಳು ಯಾವ ಯಾವುವು ಎಂದು ನಾಯಕ ಎಣಿಕೆ ಹಾಕಿದ. ರಿಸೆಪ್ಸನಿನ ಎದುರು ಗೋಡೆಯಲ್ಲಿ ತೂಗು ಹಾಕಿದ ವಿಳಾಸಗಳ ಪಟ್ಟಿಯಲ್ಲಿ ತನ್ನ ಹೆಸರನ್ನು ಗುರುತಿಸುವುದು ಸುಲಭವಾದ ಉಪಾಯವಾಗಿ ತೋರಿತು. ಅಲ್ಲಿ ಇಂತಹ ಎರಡು ಪಟ್ಟಿಗಳು ಕಂಡುಬಂದವು. ಇವುಗಳ ಅನೇಕ ಚೌಕಗಳ ಮೇಲೆ ನಂಬರುಗಳು, ಕೆಲವು ಚೌಕಗಳಲ್ಲಿ ಹೆಸರು ವಿಳಾಸಗಳ ವಿಸಿಟಿಂಗ್ ಕಾರ್ಡುಗಳ ತರಹ ವಿವಿಧ ಕಾರ್ಡುಗಳು ಇದ್ದವು. ಮತ್ತೆ ಮತ್ತೆ ಈ ಹೆಸರುಗಳನ್ನು ಓದಿದರೂ ನಾಯಕನಿಗೆ ತನ್ನ ಹೆಸರು ಕಾಣಿಸಲಿಲ್ಲ. ಒಂದು ಕ್ಷಣ ಇದು ತಾನುಳಿದುಕೊಂಡ ಹೊಟೇಲ್‌ ಅಲ್ಲವೇನೋ ಎಂದು ದಿಗ್ಭ್ರಮೆಯುಂಟಾಯಿತು. ಅದಕ್ಕಾಗಿ ಸ್ವಂತ ಮನಸ್ಸಿನ ಮೇಲೆ ಜಿಗುಪ್ಪೆಯುಂಟಾಯಿತು. ಆದರೆ “ಇಂಪೀರಿಯಲ್ ಹೊಟೇಲ್” ಎಂದು ನಿಯೋನ್ ಬೆಳಕಿನಲ್ಲಿ ಮುಂಬದಿಯಲ್ಲೇ ಮೇಲೆ ಹೆಸರು ಹೊಳೆಯುತ್ತಿತ್ತು. ಅಲ್ಲದೆ ಈ ರಿಸೆಪ್ಸನ್ ರೂಮು, ಫೋರ್ಟಿಕೋ. ವಠಾರದ ಪರಿಚಯವಿದ್ದಂತೆ ತೋರದಿರಲಿಲ್ಲ. ತನ್ನ ಹೆಸರನ್ನು ಇಲ್ಲಿ ತಗಲಿಸುವುದಕ್ಕೆ ರಿಸೆಪ್ಸನಿಸ್ಟ್ ಮರೆತಿರಬಹುದು. ಹಾಗಲ್ಲದಿದ್ದರೆ ತನ್ನ ಹೆಸರಿನಲ್ಲಿ ಯಾವ ಪ್ರಾಧಾನ್ಯವನ್ನೂ ಕಾಣದೆ ಬಿಟ್ಟದ್ದೂ ಆಗಿರಬಹುದು. ಹೆಸರುಗಳಲ್ಲಿ ಇಂತಹ ತಾರತಮ್ಯ ಅವರು ತೋರಿಸುವುದಿದ್ದರೆ ಅದು ಖಂಡನಾರ್ಹ ಎನಿಸಿತು. ಅಂತೂ ಈ ಪಟ್ಟಿಗಳಲ್ಲೀಗ ಅವನ ಹೆಸರು ಇಲ್ಲದ್ದರಿಂದ ಪಟ್ಟಿಗಳ ಈ ಅಪೂರ್ಣಾವಸ್ಥೆಯಲ್ಲಿ ಯಾವ ಅರ್ಥವೂ ಕಾಣದೆ ಅದು ಮೋಜೆನಿಸಿತು.
ಆತ ಇನ್ನೊಂದು ರೀತಿಯಿಂದ ಈ ಸಮಸ್ಯೆಯನ್ನು ಬಗೆಹರಿಸುವುದಕ್ಕೆ ಪ್ರಯತ್ನಿಸತೊಡಗಿದ. ತನ್ನ ರೂಮಿನ ಬದಿಯ ರೂಮಿನಲ್ಲಿ ಒಬ್ಬ ಸಿಖ್ಖ ಉಳಕೊಂಡಿದ್ದಂತೆ ನೆನಪು ಬಂತು. ಆತ ಸಿಖ್ಖನೇ ಆಗಿರಬೇಕೆಂದೇನೂ ಇರಲಿಲ್ಲ. ತಲೆಗೂದಲು ದಾಡಿ ಬೆಳೆಸಿದ ಮಾತ್ರಕ್ಕೆ ಒಬ್ಬ ಸಿಖ್ಖನಾಗುವುದಿಲ್ಲ. ಹಿಂದೂ ಆಗಿರಬಹುದು, ಸಿಖ್ಖನೂ ಹಿಂದುವೂ ಅಲ್ಲದೆ ಬೇರೊಬ್ಬ ಮನುಷ್ಯನಾಗಿರಬಹುದು. ಅಂತೂ ಆತ ದಾಡಿವಾಲನೆಂಬುದು ನಿಶ್ಚಯ. ಆದರೆ ಆತ ತನ್ನ ರೂಮಿನ ಬಲಬದಿಗಿದ್ದನೋ ಎಡಬದಿಗಿದ್ದನೋ ಖಚಿತವಾಗಿ ನಾಯಕನಿಗೆ ನೆನಪಿಗೆ ಬರಲಿಲ್ಲ. ಈ ದಾಡಿವಾಲನ ರೂಮನ್ನು ಕಂಡು ಹುಡುಕುವುದು ಸಾಧ್ಯವಾದರೆ ನಾಯಕನಿಗೆ ಸ್ವಂತ ರೂಮನ್ನು ಪತ್ತೆ ಹಚ್ಚಬಹುದಾಗಿತ್ತು. ಅಂದರೆ ಅವನ ರೂಮು ದಾಡಿವಾಲನ ಏಡಕ್ಕೂ ಬಲಕ್ಕೆ ಇರುತ್ತದೆ. ಆದರೆ ಇದೆಲ್ಲ ಅಸಂಗತ ವಿಚಾರಗಳೆಂದು ನಾಯಕ ಅವನ್ನು ಕೈಬಿಟ್ಟ.
ಕೈ ಬಿಟ್ಟು ಇಂಪೀರಿಯಲ್ ಹೊಟೇಲಿನ ಮೇಲೆ ನೋಡಿದಾಗ ಅಲ್ಲಲ್ಲಿ ವೆರಾಂಡಗಳ ಮಿಣುಕು ದೀಪಗಳು ಮಾತ್ರ ಕಂಡುಬಂದವು. ಆ ದೀಪಗಳ ಆಧಾರದಿಂದ ಒಟ್ಟು ಫ್ಲೋರುಗಳ ಲೆಕ್ಕ ಹಾಕಿದ. ಈ ಲೆಕ್ಕ ಪ್ರಕಾರ ಇಂಪೀರಿಯಲ್ ಹೊಟೇಲಿಗೆ ಐದು ಫ್ಲೋರುಗಳಿರಬಹುದು. ಯಾವ ರೂಮುಗಳೂ ತೆರೆದಿದ್ದಂತೆ ತೋರಲಿಲ್ಲ. ಒಂದನ್ನು ಬಿಟ್ಟು ಬೇರಾವ ರೂಮುಗಳಲ್ಲೂ ಬೆಳಕಿರಲಿಲ್ಲ. ಆ ಒಂದೇ ಒಂದು ರೂಮಿನ ವೆಂಟಿಲೇಟರ್‌ ಮೂಲಕ ಬೆಳಕು ಕಂಡುಬರುತ್ತಿತ್ತು. ಅಂದರೆ ಆ ರೂಮಿನ ವ್ಯಕ್ತಿ ಇನ್ನೂ ನಿದ್ದೆ ಮಾಡಿಲ್ಲ. ಉಳಿದ ಎಲ್ಲರೂ ನಿದ್ದೆ ಹೋಗಿದ್ದಾರೆ. ಹೊಟೇಲಿನ ಇಡಿಯ ವಠಾರವೇ ಸತ್ತುಹೋದಂತೆ ಕಾಣುತ್ತಿರುವಾಗ ಒಂದೇ ಒಂದು ಕೋಣೆಯಲ್ಲಾದರೂ ಬೆಳಕು ಉರಿಯುತ್ತಿರುವುದು ಬದುಕಿನ ನಿರಂತರ ಚಟುವಟಿಕೆಗೆ ಸಾಕ್ಷಿಯೆ? ಹೇಗಿದ್ದರೂ ಈ ವ್ಯಕ್ತಿಯೇ ಶರಣು ಎಂದುಕೊಂಡು ನಾಯಕ ಬೆಳಕಿರುವ ಆ ರೂಮು ಯಾವ ಫ್ಲೋರಿನಲ್ಲಿರಬಹುದೆಂದು ಅಂದಾಜು ಹಾಕಿದ. ಬಹುಶಃ ಅದು ನಾಲ್ಕನೆ ಫ್ಲೋರಿನಲ್ಲಿರಬಹುದು ಎಂದು ತೋರಿತು. ಮತ್ತೆ ಲಿಫ್ಟು, ಅದರ ನಿರರ್ಥಕತೆ ಮನಸ್ಸಿನಲ್ಲಿ ಹಾಯ್ದು ಥತ್ ಎಂದುಕೊಂಡು ಮೆಟ್ಟಲುಗಳನ್ನು ಹತ್ತತೊಡಗಿದ. ವೆರಾಂಡಗಳನ್ನೆಣಿಸುತ್ತ ಆಂದಾಜಿನ ಪ್ರಕಾರ ನಾಲ್ಕನೆ ಫ್ಲೋರಿಗೆ ಬಂದು ತಲುಪಿದ. ಅಂದಾಜು ಸರಿಯಾಗಬೇಕಿದ್ದರೆ ಅಲ್ಲೆಲ್ಲಾದರೂ ಬೆಳಕಿರುವ ಒಂಟಿ ರೂಮು ಕಾಣಿಸಬೇಕಿತ್ತು. ಪರೀಕ್ಷಿಸಿ ನೋಡಿದಾಗ ಅಂತಹ ರೂಮು ಅಲ್ಲೆಲ್ಲೂ ಕಾಣಿಸಲಿಲ್ಲ. ಎಲ್ಲ ರೂಮುಗಳೊಳಗೂ ಕತ್ತಲೆ ತುಂಬಿತ್ತು. ಹಾಗಾದರೆ ಆ ರೂಮು ಏನಾಯಿತು ? ಎರಡು ಸಾಧ್ಯತೆಗಳಿದ್ದವು : ಒಂದೋ ಫ್ಲೋರಿನ ಅಂದಾಜು ತಪ್ಪಿಹೋಗಿದೆ ; ಇಲ್ಲ ಈತ ಮೆಟ್ಟಲೇರುತ್ತಿದ್ದಂತೆ ಆ ವ್ಯಕ್ತಿ ಲೈಟು ಆರಿಸಿದ್ದಾನೆ. ಒಂದೋ ಇನ್ನೂ ಮೇಲೇರಿ ನೋಡಬೇಕು, ಇಲ್ಲವಾದರೆ ಕೆಳಗಿಳಿಯಬೇಕು. ಎರಡರಲ್ಲಿ ಯಾವುದು ಸರಿಯೋ ಅವನ ಊಹೆಗೂ ನಿಲುಕಲಿಲ್ಲ. ಆದ್ದರಿಂದ ಯಾವುದಾದರೂ ಒಂದೇ ಎಂದುಕೊಂಡು ಇನ್ನೊಂದು ಫ್ಲೋರು ಹತ್ತಿದ. ಅವನ ಅದೃಷ್ಟವೋ ಏನೋ ಬೆಳಕಿನ ರೂಮು ಇಲ್ಲೇ ಇತ್ತು. ಅದನ್ನು ಕಂಡಾಗ ನಾಯಕನಿಗೆ ತನ್ನ ರೂಮನ್ನೆ ಕಂಡಷ್ಟು ಸಂತೋಷವಾಯಿತು. ಆದರೆ ಕೆಲವು ಸಂದೇಹಗಳಿದ್ದವು. ಈ ಕೋಣೆಯಲ್ಲಿ ಬೆಳಕು ಇದ್ದ ಮಾತ್ರಕ್ಕೆ ಅದರೊಳಗೆ ವ್ಯಕ್ತಿಯೊಬ್ಬ ಇದ್ದಾನೆಂದೂ, ಇದ್ದರೆ ಆತ ಇನ್ನೂ ನಿದ್ದೆ ಮಾಡಿಲ್ಲವೆಂದೂ ಅರ್ಥ ಮಾಡುವುದು ದುಸ್ತರವಾಗಿತ್ತು. ಬೆಳಕಿಲ್ಲದ ಮಾತ್ರಕ್ಕೆ ಉಳಿದೆಲ್ಲ ಕೋಣೆಯ ಜನರು ನಿದ್ದೆ ಹೋಗಿದ್ದಾರೆಂದೂ ಅರ್ಥವಲ್ಲ. ಮಾತ್ರವಲ್ಲ ಈ ಕೋಣೆಯೊಳಗೆ ಯಾರೂ ಇಲ್ಲವೆಂದಾದರೆ ಅದರ ಬಾಗಿಲನ್ನು ತಟ್ಟುವುದು ವ್ಯರ್ಥವಾಗುವುದು ಅಥವಾ ಒಳಗೆ ವ್ಯಕ್ತಿಯಿದ್ದು ಆತ ನಿದ್ದೆ ಹೋಗಿದ್ದರೆ ಅವನನ್ನೆಬ್ಬಿಸುವುದು ಶಿಷ್ಟಾಚಾರವಾಗುವುದಿಲ್ಲ. ಆದರೆ ಹೀಗೆಲ್ಲ ಲೆಕ್ಕಾಚಾರ ಮಾಡಿ ಒಂದು ನಿರ್ಧಾರಕ್ಕೆ ಬರುವ ಮೊದಲೆ ನಾಯಕನ ಕೈ ಮುಂದೆ ಹೋಗಿ ಬಾಗಿಲು ತಟ್ಟಿ ಆಗಿತ್ತು. ನಾಲ್ಕೈದು ಬಾರಿ ತಟ್ಟಿದ ಮೇಲೆ ಕೋಣೆಯೊಳಗಿಂದ ಏನೋ ಶಬ್ದ ಕೇಳಿಸಿತು. ಆತ ನಿದ್ದೆ ಮಾಡಿದ್ದರೆ ಈಗ ಎಚ್ಚರಾಗಿರಬಹುದು. ಎಂದರೆ ಅವನ ನಿದ್ದೆ ಹಾಳುಮಾಡಿದ ಹಾಗಾಯಿತು. ಅವನು ಎದ್ದು ಬರುತ್ತಿರುವ ಸದ್ದು ಬಂದು ಇದೀಗ ಬಾಗಿಲು ತೆರೆದರೆ ಅವನ ಪ್ರಶ್ನಾರ್ಥಕ ನೋಟವನ್ನು ಹೇಗೆ ಎದುರಿಸಬೇಕು ? ನಾಯಕ ಬಹಳ ತೀವ್ರವಾಗಿ ಯೋಚಿಸಲು ಪ್ರಯತ್ನಿಸಿದ. ವ್ಯಕ್ತಿ ಬಾಗಿಲು ತೆರೆಯಬಹುದಾದ ಕ್ಷಣ ಸಮೀಪಿಸುತ್ತಿತ್ತು. ಆದರೆ ತೀವ್ರ ಯೋಚನೆಗೆ ನಾಯಕನ ಮಿದುಳು ಸಿದ್ಧವಾಗಿರಲಿಲ್ಲ. ಇಡಿಯ ಅವಸ್ಥೆ ಅಸಂಬದ್ಧವಾಗಿತ್ತು. ಯಾಕೆಂದರೆ ಈ ವ್ಯಕ್ತಿಯಿಂದ ನಾಯಕನಿಗೆ ಯಾವ ಪ್ರಯೋಜನವೂ ಆಗುವಂತಿರಲಿಲ್ಲ. ತನಗೇ ಅಪರಿಚಿತವಾಗಿರುವ ತನ್ನ ರೂಮನ್ನು ಈತ ಹೇಗೆ ಕಂಡು ಹುಡುಕಲು ಅಥವಾ ಕಂಡು ಹುಡುಕುವುದಕ್ಕೆ ಸಹಾಯ ಮಾಡಲು ಸಾಧ್ಯ ಎಂಬ ಪ್ರಶ್ನೆ ನಾಯಕನಿಗೆ ಹೊಳೆದು ಇದು ಈ ತನಕ ಹೊಳೆಯದಿದ್ದುದಕ್ಕೆ ವಿಷಾದಿಸಿದ. ಆದ್ದರಿಂದ ಇಲ್ಲಿ ಈತನೊಂದಿಗೆ ಯಾವ ಪ್ರಯೋಜನವೂ ಆಗಲಾರದು. ಇಂತಹ ಸಂದಿಗ್ಧದಲ್ಲೂ ನಾಯಕನಿಗೆ ಹೊಸತೊಂದು ಆಸೆ ಮೂಡಿತು. ಬಾಗಿಲು ತೆರೆಯುವ ವ್ಯಕ್ತಿ ತನ್ನ ದಾಡಿವಾಲನಾದರೆ ಎಂಬುದೇ ಆಸೆ. ಅಷ್ಟರಲ್ಲಿ ಬಾಗಿಲು ತೆರೆಯಿತು. ಬಾಗಿಲು ತೆರೆದ ವ್ಯಕ್ತಿ ದಾಡಿವಾಲನಾಗಿರಲಿಲ್ಲ. ಆತ ನುಣ್ಣಗೆ ಗಡ್ಡ ಬೋಳಿಸಿಕೊಂಡಿದ್ದನಲ್ಲದೆ ತಲೆಯ ಮೇಲೂ ಕೂದಲಿರಲಿಲ್ಲ. ಆ ಬೊಕ್ಕತಲೆಯ ಮೇಲೆ ಒಳಕೋಣೆಯ ಬೆಳಕು ಪ್ರತಿಫಲನಗೊಂಡಿತು. ಅವನ ಪ್ರಶ್ನಾರ್ಥಕ ನೋಟಕ್ಕೆ ಉತ್ತರಿಸುವುದರಿಂದ ಉಪಯೋಗವಿಲ್ಲವೆಂದುಕೊಂಡು ನಾಯಕ ಮೌನವಾಗಿ ನಿಂತ. ವ್ಯಕ್ತಿ ಉತ್ತರಕ್ಕಾಗಿ ಕಾದು ನಿಂತ. ಉತ್ತರ ಸಿಗದಿದ್ದಾಗ ಆತ ಮತ್ತೆ ಬಾಗಿಲು ಹಾಕಿದ. ಈ ವ್ಯಕ್ತಿ ತನ್ನ ಕುರಿತಾಗಿ ಏನು ಗ್ರಹಿಸಿರಬಹುದೆಂದು ನಾಯಕ ಪ್ರಶ್ನಿಸಿಕೊಂಡ. ಕಳ್ಳನೋ ಕುಡುಕನೊ ಹುಚ್ಚನೆ ಆಗಿರಬಹುದೆಂಮ ಗ್ರಹಿಸುತ್ತಾನೆ. ಅವನು ಏನು ಗ್ರಹಿಸಿದರೆ ತಾನೆ ಏನು ಎಂದುಕೊಂಡ.
ಹೇಗಿದ್ದರೂ ಬಾಗಿಲು ಮುಚ್ಚಿದ್ದಾಗಿತ್ತು. ಇನ್ನು ಆತನಿಗೂ ತನಗೂ ಬಂಧವಿಲ್ಲ. ಇಲ್ಲಿ ನಿಲ್ಲುವುದು ಸುಮ್ಮನೆ ಎಂದುಕೊಂಡು ನಾಯಕ ಅಲ್ಲಿಂದ ಹೊರಟ. ಎಲ್ಲ ಪ್ರಯತ್ನಗಳೂ ವ್ಯರ್ಥವಾಗಿದ್ದವು. ಈಗೇನು ಮಾಡೋಣವೆಂದು ಹೊಳೆಯಲಿಲ್ಲ. ಈ ಕುರಿತು ಒಂದೆಡೆ ಕುಳಿತು ಒಂದು ಘಳಿಗೆ ಚಿಂತಿಸುವುದೊಳ್ಳೆಯದು ಎಂದುಕೊಂಡ. ಹೀಗೆ ಮತ್ತೆ ವಾಪಸು ಕೆಳಗಿಳಿದು ಬಂದ. ಎಲ್ಲ ವೆರಾಂಡಗಳೂ ಖಾಲಿ, ಜನರೇ ಇಲ್ಲದಂತೆ. ಈ ಕೋಣೆಗಳೊಳೆಗೆ ಜನ ಮಲಗಿದರೂ ಈ ಹೊಟೇಲು ನಿರ್ಜನ ಪ್ರದೇಶದಂತೆ ಕಂಡಿತು. ಇಲ್ಲಿ ತಾನು ಏಕಾಕಿಯಂತೆ ಅವನಿಗನ್ನಿಸಿತು. ಪೋರ್ಟಿಕೋದಲ್ಲಿ ಹಾಕಿದ್ದ ಒಂದು ಸೋಫಾದಲ್ಲಿ ಕುಳಿತುಕೊಂಡ. ನೇರ ಎದುರಿನಲ್ಲಿ ಕತ್ತಲಿನಲ್ಲಿ ಬೃಹತ್ತಾದ ಇಂಪೀರಿಯಲ್ ಸುಮ್ಮನೆ ನಿಂತಿತ್ತು. ನಾಯಕ ಈ ಪರಿಸರ ಮತ್ತು ತನಗಿರುವ ಸಂಬಂಧಗಳ ಕುರಿತು ಗಾಢವಾಗಿ ಚಿಂತಿಸತೊಡಗಿದ.
ಸುತ್ತುಮುತ್ತಲಿನ ಸದ್ದುಗದ್ದಲದಿಂದ ನಾಯಕನಿಗೆ ಎಚ್ಚರವಾಯಿತು. ಎಚ್ಚರಾದಾಗ ತಾನು ಫೋರ್ಟಿಕೋದಲ್ಲಿ ಸೋಫಾದ ಮೇಲೆ ಒರಗಿರುವುದು ಗೊತ್ತಾಯಿತು. ಒಟ್ಟಾರೆ ಅಸ್ತವ್ಯಸ್ತನಾಗಿ ಬಿದ್ದುಕೊಂಡಿದ್ದ. ಹೊಟೇಲು ಈಗ ಎಚ್ಚರವಾಗಿತ್ತು. ಜನ ಅತ್ತಿತ್ತ ಓಡಾಡುತ್ತಿದ್ದರು. ರಿಸೆಪ್ಸನ್‌ನಲ್ಲಿ ಯಾವುದೋ ಹುಡುಗಿ ಕುಳಿತಿದ್ದಳು. ನಿನ್ನೆ ಅವಳನ್ನು ನೋಡಿದ ನೆನಪಿರಲಿಲ್ಲ.
ಜನ ಏನು ತಿಳಿದುಕೊಂಡಿರಬಹುದು ? ರಾತ್ರಿ ಕುಡಿದು ಬಂದು ರೂಮು ಸೇರಲಾರದೆ ಇಲ್ಲೇ ಬಿದ್ದುಕೊಂಡಿದ್ದಾನೆ ಅಂದುಕೊಂಡಿರಬಹುದು. ಅವರ ಕಣ್ಣುಗಳಲ್ಲಿ ತಿರಸ್ಕಾರವಿರಬಹುದು. ಏನು ಬೇಕಾದರೂ ಇರಲಿ. ಅವರು ಏನು ಬೇಕಾದರೂ ತಿಳಿದುಕೊಳ್ಳಲಿ ತನಗೇನು ? ಅವರಿಗೂ ನನಗೂ ಏನು ಸಂಬಂಧ ? ನಿನ್ನೆ ರೂಮು ಸಿಗದೆ ಕಷ್ಟಪಟ್ಟಾಗ ಇವರಾರೂ ಇರಲಿಲ್ಲವಲ್ಲ. ಮತ್ತೆ ಈಗ ಇವರು ಇದ್ದರೇನು, ಇಲ್ಲದಿದ್ದರೇನು ?
ಹೀಗೆಂದುಕೊಂಡು ನಾಯಕ ಸೋಫಾದಿಂದೆದ್ದು ಆಕಳಿಸಿ ಮೈ ಮುರಿದ, ಮೈ ಕೈ ನೋಯುತ್ತಿದ್ದಂತೆ. ಆಲೆನೋವು ಕೂಡ ಬಂದಂತೆ ಅನಿಸಿತು. ಥಂಡಿಯಲ್ಲಿ ಮಲಗಿದ್ದರಿಂದ ಇರಬಹುದು. ರಾತ್ರಿ ಸರಿಯಾಗಿ ನಿದ್ದೆ ಮಾಡದ್ದರಿಂದ ಇರಬಹುದು ಎಂದುಕೊಂಡ. ಅಸ್ತವ್ಯಸ್ತವಾಗಿದ್ದ ಬಟ್ಟೆಯನ್ನೂ ತಲೆಗೂದಲನ್ನೂ ನೇವರಿಸಿಕೊಂಡು ರಿಸೆಪ್ಸೆನ್‌ ಬಳಿ ಹೋದ. ಆ ಹುಡುಗಿಗೆ ಸ್ವಲ್ಪದರಲ್ಲಿ ತನ್ನ ಪರಿಸ್ಥಿತಿ ವಿವರಿಸಬೇಕಿತ್ತು.. ಅವಳು ಪ್ರಶ್ನೆಯ ಮೇಲೆ ಪ್ರಶ್ನೆ ಕೇಳುವುದಕ್ಕೆ ಶುರುಮಾಡಿದರೆ ? ಎಂಥ ಪ್ರಶ್ನೆಗಳನ್ನು ಕೇಳಬಹುದು ? ಅವುಗಳಿಗೆ ಯಾವ ರೀತಿಯ ಉತ್ತರಗಳನ್ನು ಕೊಡಬೇಕು ? ಛೇ, ಸರಿಯಾದ ಸಿದ್ದತೆಗಳನ್ನು ಮಾಡಿಕೊಳ್ಳದೆ ತರಾತುರಿಯಾಗಿ ಇವಳ ಬಳಿಗೆ ಬರಬಾರದಾಗಿತ್ತು ಎಂದುಕೊಂಡ. ಹೇಗಿದ್ದರೂ ಈಗ ಬಂದುದಾಗಿತ್ತು ಮತ್ತು ಅವಳು ಇವನ ಮುಖವನ್ನೆ ಸಂಶಯದಿಂದ ನೋಡುತ್ತಿದ್ದಳು. ಅವಳ ಧೋರಣೆಯೇನೆಂಬುದು ಅವನಿಗೆ ಮೊದಲು ಸ್ಪಷ್ಟವಾಗಲಿಲ್ಲ.
ಸ್ವಲ್ಪದರಲ್ಲೇ ತನ್ನ ಅವಸ್ಥೆಯನ್ನು ಅವಳಿಗೆ ವಿವರಿಸಲು ನಾಯಕ ಪ್ರಯತ್ನಿಸಿದ ಹಾಗೆ ಪ್ರಯತ್ನಿಸಿದಾಗ ತಾನು ಅಗತ್ಯಕ್ಕಿಂತ ಹೆಚ್ಚು ವಿನೀತನಾಗುತ್ತಿದ್ದೇನೆ-ಸಣ್ಣವನಾಗುತಿದ್ದೇನೆ, ಅಪರಾಧಿಯಾಗುತ್ತಿದ್ದೇನೆ ಎನಿಸಿತು. ಅದೇ ವೇಗದಲ್ಲಿ ಅವಳ ಮುಖಭಾವ, ಮರ್ಜಿಗಳು ದರ್ಪದ, ಅಧಿಕಾರದ ಧೋರಣೆ ವಹಿಸುತ್ತಿದ್ದವು.
ಅವಳು ಕಠಿಣವಾಗಿ ಹೇಳಿದಳು.
“ನಿನಗೆ ಇನ್ನೂ ಅಮಲು ಇಳಿದಿಲ್ಲ ಅಂತ ತೋರುತ್ತದೆ. ನಿನ್ನಂಥವನೊಬ್ಬ ನಿನ್ನೆ ರಾತ್ರಿ ಇಲ್ಲಿ ನೇಣುಹಾಕಿಕೊಂಡಿದ್ದಾನೆ. ನೀವೆಲ್ಲ ಸಾಯುವುದಕ್ಕೆ ಇಲ್ಲೇಕೆ ಬರುತ್ತೀರಿ ? ಹೊಟೇಲುಗಳಿರುವುದು ಜೀವಿಸೋದಕ್ಕೆ, ಸುಖಕ್ಕೆ, ಗೊತ್ತಾಯಿತೆ ?”
ನೇಣಿನ ವಾರ್ತೆಯಿಂದ ಇವನ ಮೇಲೆ ಉಂಟಾಗುವ ಪರಿಣಾಮವನ್ನು ಅವಳು ಗಮನಿಸಿರುವಂತಿತ್ತು. ಬಹುಶಃ ವಿಸ್ಮಯ, ಅನುಕಂಪಭಾವ ಇತ್ಯಾದಿಗಳನ್ನವಳು ನಿರೀಕ್ಷಿಸುತ್ತಿರಬಹುದು. ಆದರೆ ನಾಯಕನಿಗೆ ಬರಿಯ ಕುತೂಹಲ ಮಾತ್ರ ಉಂಟಾಯಿತಷ್ಟೆ. ಕುತೂಹಲದಿಂದ ಅವನು ಈಗ ಮೇಲಿನ ಅಂತಸ್ತಿನಲ್ಲಿ ಸೇರಿದ್ದ ಜನರನ್ನು ನೋಡಿದ. ಆತ್ಮಹತ್ಯೆ ಅಲ್ಲೇ ಸಂಭವಿಸಿರಬಹುದು. ಇಲ್ಲಿ ಇವಳೊಂದಿಗೆ ವ್ಯರ್ಥ ಮಾತನಾಡುವುದಕ್ಕಿಂತ ಅಲ್ಲಿ ಹೋಗಿ ಅದೇನೆಂದು ನೋಡುವಾ ಎಂದುಕೊಂಡು ನಾಯಕ ಮೆಟ್ಟಲುಗಳನ್ನು ಏರತೊಡಗಿದ. ಅದಕ್ಕೆ ಮೊದಲು ಅದು ಯಾವ ಫ್ಲೋರೆಂದು ಖಚಿತಪಡಿಸಿಕೊಳ್ಳಲು ಮೆಟ್ಟಿಲಿಳಿದು, ವರಾಂಡಕ್ಕೆ ಬಂದು, ಆದು ನಾಲ್ಕನೆ ಅಂತಸ್ತಿನಲ್ಲಿ ನಡೆದ ಘಟನೆಯೆಂದು ಖಚಿತಮಾಡಿಕೊಂಡು ಪುನಃ ಮೆಟ್ಟಿಲೇರಿ ಹೋದ.
ಒಂದು ದೊಡ್ಡ ಕೋಣೆಯ ಮುಂದೆ ಹತ್ತಾರು ಜನ ಸೇರಿದ್ದರು. ಹೊಟೇಲಿನ ಒಡೆಯನಂತೆ ಕಂಡುಬರುವ ಠೀವಿಯ ಮನುಷ್ಯನೂ ಇದ್ದ. ಇತರ ಕೆಲವು ಮಂದಿ ಹಣಿಕಿ ಬಾಗಿಲಿನ ಮೂಲಕ, ಕಿಟಕಿಯ ಮೂಲಕ ಒಳಗೆ ನೋಡುತ್ತಿದ್ದರು. ಕೆಲವರು ತಮ್ಮತಮ್ಮಲ್ಲಿ ಸಣ್ಣ ಧ್ವನಿಯಲ್ಲಿ ಮಾತಾಡುತ್ತಿದ್ದರು. ನೇಣಿನ ಸ್ಥಳ ಇದೇ ಎಂಬುದು ನಾಯಕನಿಗೆ ಖಚಿತವಾಯಿತು. ಅವನು ತುದಿಗಾಲಿನ ಮೇಲೆ ನಿಂತು ಕೋಣೆಯೊಳಗೆ ಎತ್ತಿ ನೋಡಿದ.
ಒಳಗೆ ಕೆಲವು ಪೋಲೀಸರಿದ್ದರು. ಮಧ್ಯೆ ಸೀಲಿಂಗ್ ಫ್ಯಾನಿಗೆ ನೈಲಾನಿನ ನೂಲು ಬಿಗಿದು ವ್ಯಕ್ತಿ ನೇಣು ಹಾಕಿಕೊಂಡಿದ್ದ. ಇಡೀ ದೇಹ ಜೋತು ತೂಗಿತ್ತು. ತಲೆ ಒಂದು ಬದಿಗೆ ತೊನೆದುಕೊಂಡು ಬಾಯಿ ತುಸುವೆ ತೆರೆದಿತ್ತು. ವ್ಯಕ್ತಿಯನ್ನು ಕಂಡೊಡನೆ ನಾಯಕನಿಗೆ ತಾನವನನ್ನು ನಿನ್ನೆ ರಾತ್ರಿ ಕಂಡದ್ದು ನೆನಪು ಬಂತು. ಈ ಸತ್ತ ವ್ಯಕ್ತಿಯ ನುಣ್ಣನೆ ತಲೆ ನಿನ್ನೆ ರಾತ್ರಿ ಬಾಗಿಲಿನಿಂದ ಹೊರಚಾಚಿ ನೋಡಿದ್ದು, ದೀಪದ ಬೆಳಕಿನಲ್ಲಿ ಅದು ಹೊಳೆಯುತ್ತಿದ್ದು ನೆನಪಿಗೆ ಬಂತು. ಅದೇ ನುಣ್ಣನೆ ತಲೆ. ಈ ಆ ತಲೆಯೊಳಗಿನ ಮನಸ್ಸು ಈಗ ಖಾಲಿಯಾಗಿರಬಹುದು. ನಿನ್ನೆ ಬಹುಶಃ ಆತನಿಗೆ ನನ್ನ ಮೇಲೆ ಸಿಟ್ಟು ಬಂದಿತ್ತೆ ? ಬಹಳ ರಾತ್ರಿಯತನಕ ಆತ ಎಚ್ಚರವಾಗಿಯೇ ಇದ್ದನಲ್ಲ. ಏನು ಮಾಡುತ್ತಿದ್ದಿರಬಹುದು ? ಸಾಯಬೇಕೆ ಬೇಡವೆ ಎಂದು ಚಿಂತಿಸುತ್ತಿದ್ದನೆ ? ಸಾಯುವುದಕ್ಕೆ ತಕ್ಕುದಾದ ಕಾರಣಗಳನ್ನು ದೃಢೀಕರಿಸುತ್ತಿದ್ದನೆ ? ಸಾಯುವುದು ಹೇಗೆಂದು ಯೋಚಿಸುತ್ತಿದ್ದನೆ ? ಬೆಂಕಿ, ನೀರು, ವಿಷ, ಕೊನೆಗೆ ಹಗ್ಗ ? ಹೀಗೆ ನಿರ್ಧಾರಕ್ಕೆ ಬಂದ ಮೇಲೆ ಆತನ ನುಣ್ಣನೆ ತಲೆಯೊಳಗೆ ಏನೆಲ್ಲ ವಿಚಾರಗಳು ಬಂದು ಹೋಗಿರಬಹುದು ? ಸಾಯುವಾಗ ಹೇಗಾಗುತ್ತದೆ ಎಂದೆ ? ಸತ್ತ ಮೇಲೆ ಏನಾಗುತ್ತದೆ ಎಂದೆ ? ರೂಮಿನ ಕೀಯ ಕುರಿತು, ತನ್ನ ಜವಾಬ್ದಾರಿಯ ಕುರಿತು ಈತ ಚಿಂತಿಸಲಿಲ್ಲವೆ ? ನಿನ್ನೆ ಬಾಗಿಲು ತಟ್ಟಿದಾಗ ಆತನಿಗೆ ಏನೆನಿಸಿದ್ದೀತು ? ಆತನ ವಿಚಾರಗಳು ಅಸ್ತವ್ಯಸ್ತಗೊಂಡವೆ ಅಥವ ಒಂದು ರೂಪಕ್ಕೆ ಬಂದವೆ ? ಆತನ ನಿರ್ಧಾರ ಬದಲಾಗಲಿಲ್ಲವೆ ? ಅಥವ ತನ್ನಿಂದಾಗಿ ಅವನ ಆಸ್ಪಷ್ಟ ವಿಚಾರಗಳು ನಿರ್ಧಾರ ತಳೆದವೆ ? ನಿನ್ನೆ ತಾನು ಅವನಿಗೆ ಏನೂ ಆಗಿರಲಿಲ್ಲ, ಇಂದೂ ಏನೂ ಅಲ್ಲ. ತನಗೂ ಅವನಿಗೂ ಯಾವ ಸಂಬಂಧವೂ ಇಲ್ಲ. ಅವನಿಗೆ ಇನ್ನು ಯಾರೊಂದಿಗೂ ಏನೂ ಸಂಬಂಧವಿಲ್ಲ. ಯಾವ ಹೊಣೆಗಾರಿಕೆಯೂ ಇಲ್ಲ. ಆದರೆ. ಪೋಲಿಸಿನವರು ಮಾತ್ರ ಟೇಪಿನಿಂದ ಅಳತೆ ತೆಗೆಯುತ್ತಿದ್ದಾರೆ. ಒಬ್ಬಾತ ಬರೆದುಕೊಳ್ಳುತ್ತಿದ್ದಾನೆ. ರೂಮಿನ ಉದ್ದಗಲ, ಸಾಮಾನುಗಳ ವಿವರ, ವ್ಯಕ್ತಿಯ ಚಹರೆ ಇತ್ಯಾದಿಗಳಾಗಿರಬಹುದು. ಅವರ ದಾಖಲೆಗೆ ಇವುಗಳ ಅಗತ್ಯವಿದ್ದೀತು. ಅವರು ಸರಕಾರಿ ಡಾಕ್ಟರರಿಗಾಗಿ ಕಾಯುತ್ತಿದ್ದಾರೆಂದೂ, ವ್ಯಕ್ತಿಯ ಸಂಬಂಧಿಗಳನ್ನು ಕಂಡು ಹುಡುಕಲು ಪ್ರಯತ್ನಿಸುತ್ತಿದ್ದಾರೆಂದೂ ಯಾರೋ ಹೇಳಿದರು. ವ್ಯಕ್ತಿ ಸತ್ತದ್ದು ನಿಜವಾದರೂ ಡಾಕ್ಟರರು ಪರೀಕ್ಷಿಸಬೇಕಾಗುತ್ತದೆ. ಶವ ಸಂಸ್ಕಾರಕ್ಕೆ ಸಂಬಂಧಿಗಳ ಅಗತ್ಯವಿರುತ್ತದೆ.
ನಾಯಕ ಜನರಿಂದ ಬಿಡಿಸಿಕೊಂಡು ಈಚಗೆ ಬಂದ. ರೂಮು ಕಂಡು ಹುಡುಕುವ ಕಾರ್ಯ ಇನ್ನೂ ಉಳಿದಿತ್ತು. ಆದ್ದರಿಂದ ಪುನಃ ಕೆಳಗಿಳಿಯತೊಡಗಿದ. ಕೆಳಗಿಳಿಯುತ್ತಿದ್ದಂತೆ ನಾಯಕನ ಮನಸ್ಸಿನಲ್ಲಿ ಈ ಹಿಂದೆಯೇ ಇದ್ದ ಕೆಲವು ವಿಚಾರಗಳು ನಿಖರ ರೂಪದಲ್ಲಿ ಏಳತೊಡಗಿದವು: ನೇಣು ಹಾಕಿಕೊಂಡ ಈ ವ್ಯಕ್ತಿಗೂ ಜಗತ್ತಿಗೂ ಯಾವ ಸಂಬಂಧವೂ ಇಲ್ಲ. ಎಲ್ಲ ಸಂಬಂಧಗಳೂ ಕಳಚಿದ್ದರಿಂದಲೆ ಬಹುಶಃ ಆತ ನೇಣು ಹಾಕಿಕೊಂಡಿರಬಹುದು ಅಥವ ಆತ ನೇಣು ಹಾಕಿಕೊಂಡದ್ದರಿಂದ ಇವೆಲ್ಲ ಕಳಚಿಕೊಂಡಿರಬಹುದು. ಆದರೆ ತಾನು ಇನ್ನೂ ಬದುಕಿದ್ದೇನಲ್ಲ. ಇದು ಆಶ್ಚರ್ಯ ಎಂಬಿತ್ಯಾದಿಯಾಗಿ.

Close

ಅನ್ವೇಷಣೆ:ರೂಮು

ಈಚಿನ ಸಾಹಿತ್ಯದ ಬಗ್ಗೆ

ಯು. ಆರ್. ಅನಂತಮೂರ್ತಿ

ಗೆಳೆಯರ ಜೊತೆ ಹರಟೆ ಆನಿವಾರ‍್ಯವಾಗಿ ಈಚಿನ ಸಾಹಿತ್ಯದ ಕಡೆ ಹರಿಯುತ್ತದೆ. ಎಲ್ಲರೂ ಸ್ವತಃ ಲೇಖಕರು ; ತಮ್ಮ ಬಗ್ಗೆ ತೀವ್ರ ಅತೃಪ್ತರು. ಬೇರೆಯವರ ಕೃತಿಗಳು ಮೆಚ್ಚಿಗೆ ಯಾದರೂ ಸ್ವತಃ ಕಸುಬುಗಾರರಾದ್ದರಿಂದ ಇವರಿಗೆ ಕೊವೆಗಳು ಕಾಣಿಸುತ್ತವೆ. ಇನ್ನೊಬ್ಬರ ಬಗ್ಗೆ ಮಾಡುವ ಟೀಕೆ ಸ್ವಂತದ ಕೊರತೆಗಳ ವಿಮರ್ಶೆ ಆಗುತ್ತದೆ … ಅಥವಾ ತಾನೇ ಈ ಕೃತಿಯನ್ನು ಬರೆದಿದ್ದರೆ ಹೇಗೆ ಬರೆಯುತ್ತಿದ್ದ ಎನ್ನುವ ವ್ಯಾಖ್ಯಾನವಾಗುತ್ತದೆ ; ಅಥವಾ ಇನ್ನೊಬ್ಬರ ಕೃತಿಗಳಲ್ಲಿ ಚೆನ್ನಾಗಿರುವುದನ್ನು ಮೆಚ್ಚಿ ಆಡುವ ಮಾತು, ಈ ಅಂಶ ತನ್ನ ಕೃತಿಗಳಲ್ಲಿ ಇರುವ ಗುಣ ಎಂಬುದನ್ನು ಪರೋಕ್ಷವಾಗಿ ಹೇಳಿಕೊಂಡಂತಾಗುತ್ತದೆ.
ಸಾಮಾನ್ಯವಾಗಿ ಈಚೆಗೆ ಗೆಳೆಯರ ನಡುವೆ ಎಲ್ಲೆಲ್ಲೂ ಚರ್ಚೆಗೆ ಬರುವ ವ್ಯಕ್ತಿಗಳು : ಅಡಿಗ, ಲಂಕೇಶ್, ಗಿರೀಶ್‌, ಪಾಟೀಲ, ಕಂಬಾರ, ತಿರುಮಲೇಶ್‌ ಮತ್ತೆ ಪತ್ರಿಕೆಗಳಲ್ಲೆಲ್ಲ ತುಂಡು ಸಾಲುಗಳಲ್ಲಿ ತೋಡಿಕೊಳ್ಳುತ್ತಿರುವ ಸ್ವಂತ ಮುಖವಿರದ ನೂರಾರು ಮಂದಿ ತರುಣರು. ಯಾಕೆ ನಮ್ಮ ವಾರಿಗೆಯ ಲೇಖಕರ ನಂತರ ಜೀವಂತವಾದ ಒಂದು ಹೊಸ ಜನಾಂಗ ಹುಟ್ಟಲೇ ಇಲ್ಲ ? ಆಲನಹಳ್ಳಿ, ಗೋಪಿ ಮತ್ತು ಗಾಂಡಲೀನ ದ ಲಕ್ಷ್ಮಣ ರಾವ್, ‘ಸಾಕ್ಷಿ’ಯಲ್ಲಿ ಈಚೆಗೆ ಕಥೆ ಪ್ರಕಟಿಸಿದ ರಾಮಚಂದ್ರ ದೇವ ತುಂಬ ಸ್ವಾರಸ್ಯವಾಗಿ ಬರೆಯುತ್ತಾರೆ ನಿಜ; ಆದರೆ ಏನು ಹೊಸದನ್ನೂ ಇವರು ಹೇಳುವಂತೆ ಕಾಣುವುದಿಲ್ಲವಲ್ಲ ಎಂದು ಉದ್ಗಾರವೇಳುತ್ತದೆ. ಈಗಿನ್ನೂ ಬರೆಯುತ್ತಿರುವವರ ಬಗ್ಗೆ ಹೀಗೆ ತೀರ್ಮಾನಿಸೋದು ಅವಸರ ಮಾಡಿದಂತಾಗುತ್ತೆ ಎಂದು ಒಬ್ಬರಿಗೊಬ್ಬರು ಅಂದುಕೊಳ್ಳುತ್ತೇವೆ. ಹಳ್ಳಿಯ ಅನುಭವಗಳನ್ನು ಚೆನ್ನಾಗಿ ಬರೆದಷ್ಟು ಆಲನಹಳ್ಳಿ ಮರದ ಅನುಭವವನ್ನು ಯಾಕೆ ಬರೆಯುವುದಿಲ್ಲ ? ಬಾಲ್ಯದ ಅನುಭವದ ಕ್ಯಾಪಿಟಲ್ ಎಷ್ಟು ದಿನ ಉಳಿದೀತು ? ಲಕ್ಷ್ಮಣರಾವ್‌ ಪೋಲಿ ಮಾತು, ವೈಯಕ್ತಿಕ ವ್ಯಾಕುಲದಲ್ಲೆ ತೃಪ್ತರಾಗಿಬಿಡುತ್ತಾರೊ ಸಾಂಸ್ಕೃತಿಕವಾಗಿ ಮಹತ್ವದ್ದಾಗಬಲ್ಲ ಬರವಣಿಗೆಗೆ ಬೆಕಾದ ಕಳಕಳಿ ಯಾಕೆ ಯಾರಲ್ಲೂ ಕಾಣಿಸುವುದಿಲ್ಲ ?-ಎಂದು ಮಾತು ಮತ್ತೆ ಬೆಳೆಯುತ್ತದೆ
ಕಂಬಾರ ಲಂಕೇಶ, ಗೀರೀಶ, ಪಾಟೀಲ, ತಿರುಮಲೇಶ್ – ಈ ಕಡೆ ಮಾತು ಹೊರಳಿದ್ದೆ ಪರಿಚಿತ ವಿಮರ್ಶಾತತ್ವಗಳೆಲ್ಲ ಸಾಲದೆನ್ನಿಸಿ ಹಾಗೂ ಹೌದು ಹೀಗೂ ಹೌದು ಮಾತುಗಳು ಪ್ರಾರಂಭವಾಗುತ್ತವೆ. ಈ ದಶಕದ ಅತ್ಯುತ್ತಮ ಪದ್ಯಗಳನ್ನು ಬರೆದವರೂ ಅಡಿಗರಲ್ಲವೆ ? ಅವರ ಅತ್ಯಂತ ವೈಯಕ್ತಿಕ ಕಾಳಜಿಗಳೆಲ್ಲವೂ ಸಾಂಸ್ಕೃತಿಕ ಕಾಳಜಿಗಳೂ ಆಗುತ್ತವಲ್ಲವೆ ? ಗದ್ಯ ಬರೆಯುವಾಗ, ಭಾಷಣ ಮಾಡುವಾಗ, ಜನಸಂಘ ಸೇರಿ ಚುನಾವಣೆಗೆ ನಿಂತಾಗ ಇವರು ಎಷ್ಟು ಸರಳವಾಗಿ ನಡೆದುಕೊಂಡರೂ, ಪತ್ರಿಕಾ ಲೇಖನಗಳಲ್ಲಿ ‘ಬೇರೆ ದಿಕ್ಕೇ ಇಲ್ಲ ಇದು ಮಾತ್ರ ಸತ್ಯ’ ಎನ್ನಿಸುವಂತಹ ಒಂದೇ ಧಾಟಿಗೆ ಒಂದೇ ನಿಲುವಿಗೆ ಒಂದೇ ಮಾತಿಗೆ ಸಿಕ್ಕಿಬಿದ್ದಂತೆ ಕಂಡರೂ ಪದ್ಯದಲ್ಲಿ ಮಾತ್ರ ಹೇಗೆ ತನ್ನನ್ನೇ ತಾನು ಮೀರುತ್ತಾರೆ ಎಂದು ಆಶ್ಚರ್ಯವಾಗುತ್ತದೆ. “ಹನುಮದ್ವಿಕಾ ಸತ್ಯ ಇಲ್ಲ ಎಲ್ಲೆ” ಎಂದು ಕೊನೆಯಾಗುವ ‘ವರ್ಧಮಾನ’ ಈಚಿನ ಅತ್ಯುತ್ತಮ ಪದ್ಯವಲ್ಲವೆ? ಏಕಕಾಲದಲ್ಲಿ ಚಿರಸತ್ಯವನ್ನೂ ಸಮಕಾಲೀನತೆಯನ್ನೂ ಒಳಗೊಳ್ಳುವಂತೆ ಬರೆಯುತ್ತಾರಲ್ಲವೆ? ವಯಸ್ಸಾದ ಪ್ರಬುದ್ಧ ಅಡಿಗರು ಕನ್ಸರ‍್ವೇಟಿವ್ ಧೋರಣೆಗೆ, ಯಥಾಸ್ಥಿತಿವಾದಕ್ಕೆ ಜಗ್ಗುತ್ತಿದ್ದರೂ, ಈ ಲೋಕದ ವಾಸ್ತವತೆಗಳೇ ಚಿರಸತ್ಯಗಳು ಬದುಕಿನ ಸಾಧ್ಯತೆ ಇಷ್ಟೇ ಎಂದು ಹೇಳುತ್ತಿರುವಾಗಲೂ ಇದಕ್ಕೆ ವಿರುದ್ಧವಾದ ಭಾವುಕತೆ, ಕನಸು, ಅನುಭಾವ, ಎಲ್ಲೆ ಮೀರುವ ಚಡಪಡಗಳಿಗೂ
ಎಷ್ಟು ಅದ್ಭುತವಾಗಿ ಅವರ ಕವನಗಳಲ್ಲಿ ತೆರೆದುಕೊಂಡು ಬಿಡುತ್ತಾರಲ್ಲವೆ ? ಪ್ರಜಾವಾಣಿಯಲ್ಲಿ ಪ್ರಕಟವಾದ ‘ಅಜ್ಜ ನೆಟ್ಟಾಲ’ ಈ ದೀಪಾವಳಿಯು ಅತ್ಯುತ್ತಮ ಕವನವಲ್ಲವೆ ? ಆಲ ಮೇಲಕ್ಕೇರುತ್ತೆ, ಆದರೆ ಹೆಚ್ಚು ಏರಲಾರದೆ ಕೆಳಗಿಳಿಯುತ್ತೆ ; ಏಳು ಬೀಳಿನ ಈ ಅಧೋಗತಿಯ ಕಲಿಕೆಯಲ್ಲಿ ನೆರಳಾಗುತ್ತೆ : ಬಾಲ್ಯದ ‘ಒಂದು ದಿವಸಕ್ಕೇನೆ ಎಷ್ಟು ಅಬ್ದ’ ಎನ್ನುವ ಅಚ್ಚರಿಯ ನೆನಪಾಗುತ್ತೆ: ರಾತ್ರೆ ಕನಸಿನಲ್ಲಿ
ಎಲ್ಲೆಲ್ಲೋ ಹೋಗಿ ಹಗಲಾದೊಡನೆ “ಯಥಾಪ್ರಕಾರ ವಾಸ್ತವ ಕನಸು | ಸೊಂಡಿಲಾಡಿಸಿ ಮುಜುರೆ ಮಾಡಿ ನಿಲ್ಲುವ ದೊಡ್ಡ | ಹಸುರು ಗುಡ್ಡ”ವಾಗುತ್ತೆ ; ಪರಂವರೆಗೆ ಸಾಂಕೇತಿಕ ಕ್ಲೀಶೆಯಾದ್ದು ಬಾಲ್ಯದ ನೆನಪಿನ ನಿಜವಾದ ಆಲದ ಮರವಾಗಿ. ಈ ಮೂಲಕ ಪರಂಪರೆಯನ್ನು ಕುರಿತ ಆಲೋಚನೆಗೆ ಮತ್ತೆ ಆತ್ಮೀಯ ಪ್ರತಿಮೆಯಾಗಿ ಕವನದೊಳಗೆ “ಮೇಲುಮೇಲಕ್ಕಲ್ಲಿ ಕೆಳ ಕೆಳಕ್ಕೆ ಇಲ್ಲಿ ಏಕಕಾಲಕ್ಕೆ ಬೆಳೆಯುತ್ತೆ. ‘ತುದಿ ಬುಡಗಳನ್ನೊಂದುಗೂಡಿಸುವ’ ಆವಶ್ಯಕತೆಯನ್ನು ಕಲಿಸುತ್ತ ಎಷ್ಟು ಸಮೃದ್ಧವಾಗುತ್ತದೆಂಬುದನ್ನು ಕಂಡಾಗ ಅಡಿಗರ ಬಗ್ಗೆ ತುಂಬ ಕೃತಜ್ಞರಾಗುತ್ತೇವೆ. ಸಂಸ್ಕೃತ ಸಮಾಸ ಪದಗಳಲ್ಲಿ, ಅತಿ ಬಿಗಿಯಾದ ಲಯದಲ್ಲಿ ಇಕ್ಕಟ್ಟಿಗೆ ಸಿಕ್ಕಿ ಇವರ ವಚನ ಕವನಗಳು ಉಸಿರಾಡದೇ ಹೋದಾವು ಎಂಬ ಅನುಮಾನವನ್ನು ‘ಅಜ್ಜ ನೆಟ್ಬಾಲ’ ನಿವಾರಿಸುತ್ತೆ. ಈ ಪದ ಅಲ್ಲಿಲ್ಲಿ ಸಡಿಲವಾಯಿತೇನೊ, ಎರಡನೇ ಭಾಗ ಅನವಶ್ಯಕವಾಗಿ ಬೆಳೆಯಿತೇನೊ ಇತ್ಯಾದಿ ಅನುಮಾನಗಳು ಎದ್ದರೂ ಈಚಿನ ಅತ್ಯುತ್ತಮ ಕವನ ಇದು ಎನ್ನಿಸುತ್ತೆ. ಆದರೆ ಹಿಂದೆ ಹೇಳಿದ್ದೆಲ್ಲವುದಕ್ಕಿಂತಲೂ ಹೆಚ್ಚಿನದೇನನ್ನು ಅಡಿಗ ಹೇಳಿದ್ದಾರೆ ? ಹೇಳಿದ್ದಾರೆಯೆ ? ಎಂಬುದನ್ನು ಯೋಚಿಸುವುದೂ ಅಗತ್ಯವೆನಿಸುತ್ತೆ.
* * * * *
ದೀಪಾವಳಿ ಸಂಚಿಕೆಯ ಪ್ರಜಾವಾಣಿಯಲ್ಲಿ ತೇಜಸ್ವಿ ಬರೆದ ಮಾತುಗಳು ತೀರಾ ಅವಸರದವು ; ನವ್ಯ ವಿಮರ್ಶೆಗೆ ಅನ್ಯಾಯ ಮಾಡುವಂಥವು. “ಆಡುಮಾತಲ್ಲೆ’ ಬರೆಯಬೇಕೆಂದು ಯಾರೂ ಹೇಳಿಲ್ಲ. ಯಾವ ಉತ್ತಮ ನವ್ಯ ಕವಿಯೂ ಬರಿ ‘ಆಡುಮಾತಲ್ಲಿ ಬರೆಯುತ್ತಿಲ್ಲ, ನಮ್ಮ ಭಾಷೆಯ ಎಲ್ಲ ಸಾಧ್ಯತೆಗಳನ್ನೂ ದುಡಿಸಿಕೊಂಡು ಬರೆಯುತ್ತಿರುವ ಲೇಖಕರು ಅಡಿಗರು. ಅಡಿಗರ ಕಾವ್ಯದಲ್ಲಿ ದುಡಿಯುವ ಸಂಸ್ಕೃತಕ್ಕೂ ಕುವೆಂಪು ಕಾವ್ಯದಲ್ಲಿ ಭಾವುಕತೆಯ ತೋರುಗಾಣಿಕೆಯಾಗುವ ಸಂಸ್ಕೃತಕ್ಕೂ ಇರುವ ಅಂತರವನ್ನು ವಿಮರ್ಶಕ ಗಮನಿಸದೇ ಇರುವುದು ಸಾಧ್ಯವೆ ? ಐತಿಹಾಸಿಕವಾಗಿ ಕುವೆಂಪು, ಬಿ ಎಂ ಶ್ರೀ, ಪು ತಿ ನ ಯಾಕೆ ಮುಖ್ಯವೆಂಬುದು ನವ್ಯರಿಗೆ ತಿಳಿದಿಲ್ಲವೆನ್ನುವುದು ತಪ್ಪು ಮಾತು. ಕುವೆಂಪು ಕಾದಂಬರಿಗಳ ಅತ್ಯುತ್ತಮ ವಿಮರ್ಶೆ ಬಂದಿರುವುದೂ ನವ್ಯರಿಂದ. ಜಿ ಎಚ್ ನಾಯಕರು ಅದೇ ಸಂಚಿಕೆಯಲ್ಲಿ ಹೇಳಿದಂತೆ ವ್ಯಕ್ತಿಯ ಅನುಭವ ಮತ್ತು ಸನ್ನಿವೇಶ ಸತ್ಯದಲ್ಲಿ ಜೀವನದ ಅರ್ಥವನ್ನು ನಿರಪೇಕ್ಷವಾಗಿ ಶೋಧಿಸಬೇಕೆಂಬ ನವ್ಯರ ತಿಳುವಳಿಕೆಯೇ ಇವರ ವಿಮರ್ಶೆಯನ್ನು ನಿರ್ದೇಶಿಸುತ್ತಿರುವುದು.
ಇವನು ಮಾಧ್ವ ಆದ್ದರಿಂದ ಇವನು ಹೀಗೆ ಬರೆಯುತ್ತಾನೆನ್ನುವುದು ಬೈಗಳದ ಮಾತು -ಅಥವಾ ತುಂಟತನದ ಮಾತು. ತೇಜಸ್ವಿ ಈ ಧಾಟಿಗೆ ಇಳಿದಿರುವುದು ಆಶ್ಚರ್ಯ : ಅನವಶ್ಯಕ. ನವ್ಯರು ‘ಆಡುಮಾತಿನ ಲಯ’ದಲ್ಲಿ ಬರೆಯಬೇಕೆಂದು ಹೇಳಿದ್ದಾರೆಯೆ ಹೊರತು ‘ಬರಿ ಆಡುಮಾತ’ಲ್ಲೆ ಬರೆಯಬೇಕೆಂದು ಎಲ್ಲೂ ಹೇಳಿಲ್ಲವೆಂದು ತೇಜಸ್ವಿಯಂಥಹ ಪ್ರತಿಭಾವಂತ ಲೇಖಕರು ಗ್ರಹಿಸದೇ ಇರುವುದು ಇನ್ನೂ ದೊಡ್ಡ ಆಶ್ಚರ್ಯ. ಬರಿ ಆಡುಮಾತಲ್ಲೆ ಬರೆಯುತ್ತಿದ್ದವರು ನವೋದಯ ಕಾಲದ ಕೆಲವು ಲೇಖಕರೇ ವಿನಾ ನವ್ಯರಲ್ಲ. ರಾಜರತ್ನಂ ಮಾಡಿದಂತಹ ಪ್ರಯೋಗವನ್ನು ನವ್ಯರಾರೂ ಸೀರಿಯಸ್ಸಾಗಿ ಮಾಡಲು ಹೊರಟಿಲ್ಲ.
ಆಡುಮಾತಿನ ಸತ್ವವನ್ನೂ, ಗ್ರಾಂಥಿಕ ಭಾಷೆಯ ಸಂಭಾವ್ಯತೆಯನ್ನೂ ಏಕಕಾಲದಲ್ಲಿ ಒಳಗೊಂಡ, ಅಚ್ಚಗನ್ನಡದಲ್ಲಿ ಮೂರ್ತವಾದದ್ದರ ಜೊತೆಗೆ ಈ ಅನುಭವವನ್ನು ಅಮೂರ್ತ ವಿಚಾರಕ್ಕೆ ಒಯ್ಯಲು ಅವಶ್ಯವಾದ ಸಂಸ್ಕೃತದಲ್ಲಿ ಹೊಲಿದ ನಿಜವಾದ ಕನ್ನಡ ನಮಗೆ ಸಿಗುವುದು ನವ್ಯಸಾಹಿತ್ಯದ ಭಾಷೆಯಲ್ಲಿ ಅಲ್ಲವೆ ? (ಇಂಗ್ಲೀಷಲ್ಲಿ ಆಂಗ್ಲೊಸ್ಯಾಕ್ಸನ್‌ ಮೂಲದ ಪದಗಳು ಮತ್ತು ಲ್ಯಾಟಿನ್ ಹೀಗೇ ಹೊಲಿದುಕೊಳ್ಳುತ್ತವೆ.) ನಾವು ಈಗ ಸೃಷ್ಟಿಸುತ್ತಿರುವ ಕೃತಿಗಳಲ್ಲಿ ಮೂರ್ತ ವಿವರಗಳಿಗೆ ಜೀವಾಳವಾಗುವ ಆಚ್ಚಗನ್ನಡ, ಪ್ರಬುದ್ಧ ವೈಚಾರಿಕತೆಗೆ ಅವಶ್ಯವಾದ ಸಂಸ್ಕೃತ, ವಚನಕಾರರಲ್ಲಿ ಬೇರಿರುವ ಮಾತುಲಯಗಳು-ಎಲ್ಲವೂ ಜೀವಂತವಾಗಿ ದುಡಿಯುತ್ತಿದ್ದಾನೆಂಬುದನ್ನು ಗಮನಿಸದೆ ತೇಜಸ್ವಿ ನಮ್ಮ ಲೇಖಕರಲ್ಲಿ ಎಷ್ಟು ಜನ ಮಾಧ್ವರೆಂಬ ರಿಸರ್ಚ್ ಮಾಡಿದ್ದಾರೆ. ಗರುಡಪುರಾಣದ ಪ್ರತಿಮೆಗಳನ್ನು ಎತ್ತಿಕೊಂಡು ಬರೆದ ಕವಿ ಮಾಧ್ವರೆ ? ಮಾಧ್ವರು ಮಾತ್ರ ಗರುಡಪುರಾಣ ನಂಬುವವರೆ ? ತೇಜಸ್ಸಿ ಈ ಬಗೆಯ ರಿಸರ್ಚ್ ಮಾಡುವುದರ ಬದಲು ತಾವೇ ಸೃಷ್ಟ್ಯಾತ್ಮಕವಾಗಿ ಬರೆಯುವುದು ಒಳ್ಳೆಯದು. ಯಕೆಂದರೆ ಪ್ರತಿಭಾವಂತರಾದ ತೇಜಸ್ವಿ ಸ್ವತಃ ಬರೆದಾಗ ನವ್ಯಮಾರ್ಗದಲ್ಲಿ ಬರೆಯುತ್ತಾರೆ.
* * * * *
ನವ್ಯಸಾಹಿತ್ಯದ ಕೊರತೆಗಳೇನು ಎನ್ನುವುದು ನಮ್ಮ ಲೇಖಕರಿಗೆ ಸ್ಪಷ್ಟವಾಗಿ, ಒಬ್ಬರನ್ನೊಬ್ಬರು ಹರಿದುಕೊಳ್ಳುವಷ್ಟು ನಿರ್ಧಯವಾಗಿ ಗೊತ್ತಿದೆ ಎನ್ನುವ ನನ್ನ ಹಿಂದಿನ ಮಾತುಗಳಿಗೆ ಮತ್ತೆ ಬರುತ್ತೇನೆ. ತಲೆದೂಗಿಸುವಂತೆ ಬರೆಯೋದೇ ಮುಖ್ಯವಾದರೆ ಕಂಬಾರರನ್ನು ಮೀರಿಸುವವರು ಯಾರಿದ್ದಾರೆ ? ಬೇಂದ್ರ ಸಪ ಕೈ ಹಾಕದ ಜಾನಪದ ಲಯ, ಭಾಷ, ಆದರ ಗತ್ತು ಗಮ್ಮತ್ತು ಇವರಿಗೆ ದಕ್ಕಿದೆ. ಜಾನಪದ ರೀತಿಯಲ್ಲಿ ಬರೆದು ಎಲ್ಲರಿಗೂ ಪ್ರಿಯರಾಗಿ, ಆದರೆ ಅದರಿಂದ ಆತೃಪ್ತರಾಗಿ, ಸಮಕಾಲೀನ ಸಂವೇದನೆಯನ್ನು ತನ್ನ ಸಾಹಿತ್ಯ ನಿರ್ವಹಿಸಬೇಕೆಂದು ರಾಮಾನುಜನ್ನರಿಂದ ಕಲಿಯಬೇಕಾದ್ದನ್ನು ಕಲಿತು ಏಕಾಗ್ರತೆಯಿಂದ ತನ್ನನ್ನು ತಾನು ಸದಾ ತಿದ್ದಿಕೊಳ್ಳುತ್ರ ಸಿದ್ಧಪಡಿಸಿಕೊಳ್ಳುತ್ತ ಇರುವ ಲೇಖಕರು ಇವರು. ಆದರೂ ನಮಗೆ ಇದರಿಂದ ತೃಪ್ತಿಯಿಲ್ಲ. ಯಾಕೆ ಇನ್ನೂ ಮೆಟಫರ್‌ನಲ್ಲಿ ಸಿಕ್ಕಿಬಿದ್ದಿದ್ದಾರಲ್ಲ ? ತನ್ನದೇ ಆದ ಹೊಸದೇನನ್ನೂ ಹೇಳುತ್ತಿಲ್ಲವಲ್ಲ ? ಸಹಜವಾಗಿ ಮಹತ್ವವಾಗಬಲ್ಲ ಕೃತಿ ಬರೆದಿಲ್ಲವಲ್ಲ ? ತಾತ್ವಿಕವಾಗಿ ಇವರು ಅನುಭವವನ್ನು ಗ್ರಹಿಸುವ ಗೋಜಿಗೆ ಹೋಗದಿರುವದರಿಂದ ಹೀಗೆ ಮಟಫರ್‌ನಲ್ಲಿ ಅಲಂಕಾರದಲ್ಲಿ ಸಿಕ್ಕಿಬಿದ್ದಿದ್ದಾರೆಯೇ ? ಅದ್ಭುತವಾದ್ದನ್ನು ಸಾಧಿಸುವ ಶಕ್ತಿಯಿದ್ದೂ ಇವರು ಬೆಳೆಯದೇ ನಿಂತರೆ ? ಹೀಗೆ ಮಾತಾಡುವಾಗ ಎಚ್ಚರ ತಪ್ಪಬಾರದು. ಯಾಕೆಂದರೆ ಬುದ್ಧಿ ಬೆಳೆಯಬಹುದು : ತಾತ್ವಿಕ ಗ್ರಹಣ ಚೂಪಾಗಬಹುದು ; ಆದು ಬರವಣಿಗೆಯಲ್ಲಿ ಮಾಂತ್ರಿಕತೆ ಇಲ್ಲದೇ ಹೋದರೆ ಎಲ್ಲವೂ ಸಪ್ಪೆಯಾಗುತ್ತೆ. ಅಂಥವರ ಬಗ್ಗೆ ಮಾತನಾಡಿ ಏನು ಪ್ರಯೋಜನ ? ಬರೆದದ್ದನ್ನು ಸಾಹಿತ್ಯವನ್ನಾಗಿ ಮಾಡಬಲ್ಲ ಮ್ಯಾಜಿಕ್ ಇಲ್ಲದವನು ಎಷ್ಟು ಬೆಳೆದರೂ ಬೆಳೆದದ್ದು ಉಪಯೋಗಕ್ಕೆ ಬಂದಂತಲ್ಲ. ತನ್ನ ಬೆಳವಣಿಗೆಯನ್ನೆಲ್ಲ ಈ ಮ್ಯಾಜಿಕ್‌ನಲ್ಲಿ ಹಿಡಿದುಕೊಡುತ್ತ, ತನ್ನನ್ನೆ ತಾನು ಬರವಣಿಗೆಯ ಕ್ರಿಯೆಯಲ್ಲೆ ಮೀರುತ್ತ ಹೋಗುವುದಕ್ಕೆ ನಾವು ಬಯಸುವುದು.
ತಾತ್ವಿಕವಾಗಿ ನಾವು ಈಗೊಂದು ಕ್ರೈಸಿಸ್‌ನಲ್ಲಿ ಬದುಕುತ್ತಿದ್ದೇವೆ. ನವೋದಯ ಕಾಲದ ಲೇಖಕರಲ್ಲಿ ಕೆಲವರು ತಮಗೊಂದು ವಿಶಿಷ್ಟ ವ್ಯಕ್ತಿತ್ವವಿಲ್ಲದಿದ್ದರೂ ಇದೆಯೆಂದು, ತಮ್ಮ ಆವರಣದ ಮೌಲ್ಯ ತಮಗೆ ನಿಜವೆಂದು ಅನ್ನಿಸದಿದ್ದರೂ ಅನ್ನಿಸಿದೆಯೆಂದು ಭ್ರಮಿಸಿ ಬರೆಯುತ್ತಿದ್ದರು. ಈಗಿನವರಲ್ಲಿ ನೋಡಿದರೆ ಯಾವ ಮೌಲ್ಯವೂ ನಿಜವಲ್ಲವೆಂದು, ತಮಗೆ ವ್ಯಕ್ತಿತ್ವವೇ ಇಲ್ಲವೆಂದು ಆತ್ಮಾವಹೇಳನೆಯಲ್ಲಿ ತಾನೊಂದು ಹುಳವಿದ್ದಂತೆ ಎಂದು ಹಿಗ್ಗುತ್ತ ಬರೆಯುವವರೇ ಹೆಚ್ಚಾಗಿದ್ದಾರೆ. ಭಾವುಕತೆಯಲ್ಲಿ ಮೇಘತಲ್ಲೀನನಾಗುವುದು ಹಿಂದೆ ಫ್ಯಾಶನ್ನಾಗಿದ್ದಂತೆ, ಆತ್ಮಾವಹೇಳವವೂ ಎಲ್ಲರೂ ಜಡವಾಗಿ ಒಪ್ಪಿಕೊಳ್ಳುವ ಈಗಿನ ಸಾಹಿತ್ಯ ಸಾಮಗ್ರಿಯಾಗಬಹುದು. ಯೂರೋಪಿನ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಯಾರೋ ಮಧ್ಯರಾತ್ರೆ ಬಾಗಿಲು ತಟ್ಟಿ ಎಬ್ಬಿಸಿ, ಎಲ್ಲಿಗೋ ಕರೆದುಕೊಂಡು ಹೋಗಿ, ಆಪಾದನೆ ಹೊರಿಸಿ ಕೊಲ್ಲುತ್ತಿದ್ದ ದುಃಸ್ವಪ್ನದಂತಹ ಅನುಭವಗಳಾಗಿವೆ. ತಾವೇ ಪಾಪಿಗಳಿರಬಹದೆಂದು ಎದೆಗುಂದಿ ತಬ್ಬಲಿಗಳಾಗಿದ್ದ ಇಡೀ ಜನಾಂಗದ ಅನುಭವದಲ್ಲಿ ಬೇರುಬಿಟ್ಟ ಸಾಹಿತ್ಯದ ಕೃತಿಗಳು-ಪಿಂಟರ್‌, ಕಾಪ್ಕ, ಕಮೂರ ಕೃತಿಗಳು-ನಮ್ಮವರಿಗೆ ಫಾರ್ಮುಲಾ ಆಗಿಬಿಟ್ಟರೆ ಹೇಗೆ ? ಬರೆಯುವುದಕ್ಕೆ ಕಲಿಯುತ್ತಿರುವ ಎಲ್ಲರೂ ಲಂಕೇಶರ ‘ತೆರೆಗಳು’ ಎನ್ನುವ ನಾಟಕದ ಕಾಪಿಯನ್ನ ಎತ್ತುತ್ತ ಹೋದರೆ ನಾಟಕದ ಭವಿಷ್ಯವೇನು ಎಂದು ಸಂದೇಹವಾಗುವುದು ಸಹಜ.
ಈ ಸಂದರ್ಭದಲ್ಲಿ ಪಾಟೀಲರ “ಕೊಡೆಗಳು’ ‘ಟಿಂಗರ ಬುಡ್ಡಣ್ಣ’ ತಮ್ಮ ಲಿಂಕಲ್ ಗುಣದಿಂದ, ನಮ್ಮಿಂದ ಹೆಚ್ಚನ್ನು ಬಯಸದೆ ಮೆಚ್ಚಿಸುವ ಸುಖಕರವಾದ ಮಾತಿನ ಮಾಂತ್ರಿಕತೆಯಿಂದ ಮಾತು ಇನ್ನೂ ಸತ್ತಿಲ್ಲ ನಮ್ಮ ಗಮನ ಸೆಳೆಯಲು ಸುಳ್ಳು ಸುಳ್ಳೆ ಪ್ರವಾದಿಗಳಂತೆ ಲೇಖಕ ವೇಷ ಕಟ್ಟಬೇಕಿಲ್ಲ ಎಂದು ಸಮಾಧಾನ ಕೊಡುವ ತಮ್ಮ ಲಾಲಿತ್ಯದಿಂದ ತುಂಬ ಸಂತೋಷ ಕೊಡುತ್ತವೆ. ಏನು ಪಾಟೀಲರು ಯಾವ ಕಥೆಯನ್ನಾದರೂ ಲಿರಿಕಲ್ ಆಗಿ ಬರೆದು ಬಿಡುತ್ತಾರೆ ? ಸೀಳಿಕೊಂಡು ಬರುವುದಿಲ್ಲ ? ಜೀವದ ಬೇರು ಅಲುಗುವಂತೆ ಬರೆಯುವುದಿಲ್ಲ ? ಬೆಳೆಯುವುದಿಲ್ಲ ? ಎಂದೂ ಗೆಳೆಯರು ಟೀಕಿಸುತ್ತಾರೆ. ಆದರೆ ಇಂತಹ ಪ್ರಶ್ನೆಗಳು ಅಪ್ರಕೃತವಲ್ಲವೆ; ಎಲ್ಲ ಗೋಳಿಗೂ ಮೊದಲು ಎಲ್ಲ ಗೋಳಿಗೂ ನಂತರ ಅಥವಾ ಎಲ್ಲ ಗೋಳಿಗೂ ಮಿಕ್ಕು ಉಳಿಯುವ ಕಾಮೆಡಿಯೇ ಪಾಟೀಲರ ವಸ್ತುವಿರಬಹುದಲ್ಲವೆ ಎಂದೂ ಅನ್ನಿಸುತ್ತದೆ. ಟ್ರಾಜೆಡಿ ನಮ್ಮ ಜೀವದ ಬೇರನ್ನು ಅಲುಗಾಡಿಸುತ್ತದೆ : ನಮ್ಮ ವಿಶಿಷ್ಟತನದ ಅಹಂಕಾರದ ಗೋಡೆಗಳನ್ನು ಒಡೆಯುತ್ತದೆ ; ಆದರೆ ಕಾಮೆಡಿ ನಮ್ಮ ವಿಶಿಷ್ಟತನದ ಅಹಮ್ಮಿನ ಮೇಲೇ ತನ್ನ ಬಿಡಾರ ಹೂಡುತ್ತದೆ. ಇದು ಏಟ್ಸನ ವ್ಯಾಖ್ಯಾನ. ಪಾಟೀಲರು ನಮ್ಮ ಜಾನಪದದ ಸೊಗಸುಗಳನ್ನೆಲ್ಲ ದೋಚಿ ಇಂತಹ ಕಾಮೆಡಿ ರಚಿಸುತ್ತಿರಬಹುದಲ್ಲವೆ ?
ನಿಜವಾದ ಮಹತ್ವಾಕಾಂಕ್ಷೆಯ ನಮ್ಮ ನಾಟಕಕಾರರೆಂದರೆ ಗಿರೀಶ ಕಾರ್ನಾಡ. ಇವರು ಆಲ್ ಇಂಡಿಯಾ ನಾಟಕಕಾರರೆಂದು ತುಂಬ ಮೆಚ್ಚಿಕೆಯಲ್ಲಿ ಆದರೆ ಸ್ವಲ್ಪ ವ್ಯಂಗ್ಯದಲ್ಲಿ ನಮ್ಮ ಲೇಖಕರು ಮಾತಾಡಿಕೊಳ್ಳುತ್ತಾರೆ. ಪಾಟೀಲ ಮತ್ತು ಕಂಬಾರರ ನಾಟಕಗಳು ಭಾಷಾಂತರದಲ್ಲಿ ಉಳಿಯಲಾರವು ; ಗಿರೀಶರ ನಾಟಕಗಳಿಗೆ ಭಾಷಾಂತರದಿಂದ ನಷ್ಟ ವಿಲ್ಲ ನಿಜ. ಆದರೆ ತಾತ್ವಿಕವಾಗಿ ಗ್ರಹಿಸಿದ್ದನ್ನು ಅತ್ಯಂತ ವೈಯಕ್ತಿಕವಾಗಿ ಮಾಡಬಲ್ಲ ಜರೂರಿನ ಲೇಖಕ ಗಿರೀಶ್. ‘ತುಗಲಖ್’ ಪ್ರಾಯಶಃ ಕನ್ನಡದ ಅತ್ಯುತ್ತಮ ನಾಟಕ. ಎಷ್ಟು ವಿಶ್ಲೇಷಿಸಿದರೂ ಅದರ ಆಚೆಗೆ ತುಗಲಖ್ ಉಳಿಯುತ್ತಾನೆ ; ನಾಟಕದ ಎಲ್ಲ ಘಟನೆಗಳಲ್ಲೂ ಎಲ್ಲ ಪಾತ್ರಗಳಲ್ಲೂ ತನ್ನನ್ನು ಹಂಚಿಕೊಂಡೂ ಸಂಪೂರ್ಣ ಅರ್ಥವಾಗದಂತ ಮಿಕ್ಕುತ್ತಾರೆ. ಆದರೆ ಗಿರೀಶ್ ಬರೆದ ಹಯವದನ ಹೇಗಿದೆ ? ಒಬ್ಬರಿಗೊಬ್ಬರು ಕುತೂಹಲದಿಂದ ಕೇಳಿಕೊಳ್ಳುವ ಪ್ರಶ್ನೆಯಿದು ಎಷ್ಟು ಪೊಯೆಟಿಕ್ ಆಗಿ ಇದೇರಿ ! ರಂಗದ ಮೇಲೆ ತುಂಬ ಯಶಸ್ವಿಯಾಗಬಹುದು ಅಲ್ಲವೆ ? ಆ ಹೆಣ್ಣಿನ ಪಾತ್ರ, ಗಂಡನ ಅಸೂಯೆ, ಗಾಡಿ ಪ್ರಯಾಣಕ್ಕೆ ಮುಂಚೆ ಅವರ ಮಾತು ನಡತೆ, ತಲೆ ಅದಲು ಬದಲು ಮಾಡಿಕೊಂಡ ಮೇಲೂ ಕೊನೆಗೆ ಕಪಿಲ ದೆವದತ್ತರು ಮೊದಲಿನಂತೆಯೇ ಆಗಿಬಿಡೋದು, ಬೊಂಬೆಗಳ ಉಪಯೋಗ. ಕಾಳಿಯ ಆಕಳಿಕೆ, ಒಟ್ಟಿನಲ್ಲಿ ವಿನೋದದ ಧೋರಣೆಯಲ್ಲಿ ಎಷ್ಟೊಂದು ಸೀರಿಯಸ್ಸಾದ ವಸ್ತುವಿನ ಮಂಡನೆ-ಇವು ಎಲ್ಲರೂ ಮೆಚ್ಚುವ ವಿಷಯಗಳು. ಆದರೆ ಗಿರೀಶ್ ತನ್ನನ್ನು ತಾನು ಕೊಟ್ಟುಕೊಳ್ಳುವುದಿಲ್ಲ ಅಲ್ಲವೆ ? ಯಯಾತಿ, ತುಗಲಖ್‌‌ ನಾಟಕಗಳ ತುರ್ತು ಇಲ್ಲಿ ಇಲ್ಲ ಅಲ್ಲವೆ ? ನಾಟಕ ಕ್ಲೆವರ್‌ ಆಯಿತು ಎಂದು ಅನ್ನಿಸಲ್ಲವೆ ?- ಹೀಗೆ ಅತೃಪ್ತಿ ಹೊಗೆಯಾಡಲು ಶುರುವಾಗುತ್ತದೆ.
ತುಂಬ ಅತೃಪ್ತಿಯಿಂದ ಸದಾ ಚಡಪಡಿಸುತ್ತ, ಕೃತಿಯಿಂದ ಕೃತಿಗೆ ಬೆಳೆಯುತ್ತ, ಅತ್ಯಂತ ಸಮಕಾಲೀನನಾಗಿರುವ ಲೇಖಕ ಲಂಕೇಶ್, ನಾನು ತುಂಬ ಜಗಳವಾಡಿರುವುದು, ಮುಂದೆಯೂ ಆಡಬಹುದಾದ್ದು ಇವರ ಹತ್ತಿರ. ಆದರೆ ನಾನು ತುಂಬ ಕೃತಜ್ಞನಾಗಿರೋದು ಕನ್ನಡದಲ್ಲಿ ಕಾರಂತ, ಅಡಿಗರ ಕೃತಿಗಳನ್ನು ಬಿಟ್ಟರೆ ಇವರ ಕೃತಿಗಳಿಗೇನೆ. ಆದರೂ ಏನೇನೋ ಜಗಳಗಳಿವೆ ನಮ್ಮ ಇಬ್ಬರ ನಡುವೆ. ನಿಮ್ಮ ಕಥೆಗಳಷ್ಟು ನಿಮ್ಮ ನಾಟಕಗಳು ನಿಜವಾಗಲ್ಲ ಎಂದಿದ್ದೇನೆ. ನಿಮ್ಮ ಮೊದಲನೆ ಸಂಕಲನದ ಕಥೆಗಳು ಎರಡನೇ ಸಂಕಲನದವುಗಳಿಗಿಂತ, ಖಂಡಿತಾ ಅಡಿಗರು ಮೆಚ್ಚುವ ‘ರೊಟ್ಟಿ’ ಗಿಂತ ಚೆನ್ನಾಗಿವೆ ಎಂದಿದ್ದೇನೆ. ಆದರೆ ಮನುಷ್ಯನ ವರ್ತನೆಯನ್ನು ಅತ್ಯಂತ ನೈತಿಕವಾಗಿ ನೋಡಿ, ಭಾಷೆಯಲ್ಲಿ ಎಲ್ಲ ಸುಳ್ಳಾಗದೆ, ಆಕರ್ಷಕ ತತ್ವಗಳಿಗೆ ಮೋಸಹೋಗದೆ ನಿಮಗೆ ಕಂಡದ್ದನ್ನು ಅತ್ಯಂತ ಜೀವಂತವಾಗಿ ವ್ಯಂಜಿಸುವ ಲೇಖಕ ಎಂದೂ ಹೇಳಿದ್ದೇನೆ. ನಮ್ಮ ಲೇಖಕರಲ್ಲೆಲ್ಲ ತುಂಬ ಆಥೆಂಟಿಕ್ ಮನುಷ್ಯ ಇವರು.
ಇವರ ಎಲ್ಲ ಕೃತಿಗಳ ಹಿಂದೂ ಇರುವ ಒಂದು ಬಗೆಯ ಮನಸ್ಸಿನ ಪ್ರಕ್ರಿಯೆ- ಇವರನ್ನು ವಸ್ತುವಿನ ಜೊತೆ ಅತ್ಯಂತ ಜರೂರಿನಲ್ಲಿ ತೊಡಗಿಸುವ ಪ್ರಕ್ರಿಯೆ–ನನಗೆ ತುಂಬ ಕುತೂಹಲದ ವಿಷಯ. ಉದಾಹರಣೆಗೆ ಅವರ ಕೆಲವು ಕಥೆಗಳನ್ನು ನೋಡೋಣ. (ನಾನು ನೆನಪಿನಿಂದ ಬರೆಯುತ್ತಿದ್ದೆನೆ.) ‘ನಮ್ಮ ನಡುವಿನ ಹುಡುಗ’ ಕಥೆಯಲ್ಲಿ ಹೆಂಡತಿ ಕನ್ಸರ್ವೇಟಿವ್, ವಸ್ತುಸ್ಥಿತಿಯನ್ನು ತಿಳಿದಿರುವ ಜಾಣೆ ; ಗಂಡ ಆದರ್ಶವಾದಿ. ಗಂಡನ ಪರವಾಗಿ ಮೊದಲೆಲ್ಲ ಕಥೆ ಹರಿದು ಇದ್ದಕ್ಕಿದ್ದಂತೆ ಕೊನೆಯಲ್ಲಿ ಹೆಂಡತಿಯ ಕಡೆ ತಿರುಗಿ ನಿಲ್ಲುತ್ತದೆ, ವಾಮನದಲ್ಲೂ ಹೀಗೆ ಕಥೆ ನಿರೂಪಕನ ವಿರುದ್ಧ ತಿರುಗಿ ನಿಲ್ಲುತ್ತದೆ. ಇವರ ನಾಟಕಗಳಲ್ಲೂ ಸಹ ಈ ಪ್ರಕ್ರಿಯೆ ಕಾಣಬಹುದು. ‘ನನ್ನ ತಂಗಿಗೊಂದು ಗಂಡು ಕೊಡಿ’ನಾಟಕ ನಾಯಕನ ಬಂಡಾಯದ ಪರವಾಗಿ ಇದ್ದದ್ದು ಕೊನೆಯಲ್ಲಿ ವಿರುದ್ಧವಾಗುತ್ತದೆ. ತೆರೆಗಳು ಮೊದಲು ನಮ್ಮನ್ನು ಮೂರು ವ್ಯಕ್ತಿಗಳ ಪರವಾಗಿ ಮೆಚ್ಚಿಸುತ್ತ ಕೊನೆಯಲ್ಲಿ ಮನೆಯ ಯಜಮಾನನ ಬಗ್ಗೆ ಕರುಣೆ ಹುಟ್ಟಿಸುತ್ತದೆ. ಹೀಗೆ ಮೊದಲು ಪರವಾಗಿ ಆಮೇಲೆ ವಿರುದ್ಧವಾಗಿ ಹರಿಯುವ ಲೇಖಕನ ಮನಸ್ಸು, ಹೀಗೆ ಹರಿಯುವುದಕ್ಕೆ ಪೂರ್ವವಾಗಿ ಎರಡು ಅನ್ನಿಸಿಕೆಗಳನ್ನೂ ಒಟ್ಟಾಗಿ ಹಿಡಿದುಕೊಂಡಿತ್ತೋ ಎಂದು ಯೋಚಿಸುವಂತಾಗುತ್ತದೆ. ಲೇಖಕನ ಮನಸ್ಸಿನ ಕ್ಯಥಾರ್ ಸಿಸ್ಗೆ ಕೃತಿಯಾಗುತ್ತದೆ ? ಸಂಚಾರಿ ಭಾವಗಳು ತುಯ್ಯುವ ದಿಕ್ಕಿನಲ್ಲಿ ತುಯುವ, ಸದ್ಯತನವೇ ಮುಖ್ಯವಾದ ಕೃತಿಗಳು ಇವೊ ? ಯಾವುದಾದರೂ ಒಂದು ಸ್ಥಾಯಿಗೆ ಲಂಕೇಶರು ಬಂದು ನಿಲ್ಲುತ್ತಾರೋ ? ಅಥವಾ ಕೃತಿರಚನೆಗೆ ಪೂರ್ವದಲ್ಲಿ, (ನಾನು ಮೊದಲೇ ಹೇಳಿದಂತೆ) ಈ ಕ್ರಿಯೆ-ಪ್ರತಿಕ್ರಿಯೆಗಳನ್ನು ಹಿಡಿದಿಟ್ಟ, ಅವುಗಳ ಸಂಘರ್ಷದ ತೀರ್ಮಾನವನ್ನು ಗ್ರಹಿಸಿದ ಬುದ್ಧಿ ಇದೆಯೂ ”ಗ್ರಹಿಸಬೇಕೆಂಬ ಪ್ರಯತ್ನವಿದೆಯೊ? ಲೇಖಕನಿಗಿರುವ, ತಾತ್ವಿಕ ವೈಚಾರಿಕ ಜವಾಬ್ದಾರಿಯೆದರೆ ಈ ಬಗೆಯ ಅನುಭವದ ಗ್ರಹಿಕೆಯೆ ಅಲ್ಲವೆ ?
ಆದರೆ ಲಂಕೇಶರ ಬರವಣಿಗೆಯ ಕ್ರಮ ಅನುಭವ ಮೈತಾಳುವ ಪ್ರಕ್ರಿಯೆಗೆ ಚೂರೂ ಹೊರತಾಗದಂತೆ ಇರುವುದರಿಂದ ನಾವು ಯಾರೂ ಬರೆಯದ ಅತ್ಯಂತ ವೈಯಕ್ತಿಕವಾದ ಅವಮಾನ, ಸಂಕಟ, ನೋವುಗಳಿಗೆ ಇವರು ಅಭಿವ್ಯಕ್ತಿ ಕೊಟ್ಟು ಬಿಡುತ್ತಾರೆ. ನಮ್ಮ ಸಮಕಾಲೀನ ಲೇಖಕರಲ್ಲೆಲ್ಲ ಇವರು ಅನನ್ಯರಾಗಲು, ಎಲ್ಲರಿಗಿಂತ ಕೆಲವು ವಿಷಯಗಳಲ್ಲಿ ಹೆಚ್ಚು ಮುಖ್ಯರಾಗಲು ಕಾರಣ ಇವರ ಬರವಣಿಗೆಯಲ್ಲಿ ಹರಿಯುವ ಈ ವೈಯಕ್ತಿಕ ತುರ್ತಿನ ಶಕ್ತಿ. ಇವರು ಎಷ್ಟೊಂದು ಪಾಶ್ಚಾತ್ಯ ಸಾಹಿತ್ಯದಿಂದ ಪ್ರಭಾವಿತರಾಗಿದ್ದಾಗಲೂ ತನ್ನತನ ಕಳೆದುಕೊಂಡದ್ದಿಲ್ಲ. ಬಿರುಕು ಕಾದಂಬರಿಯಲ್ಲಿ ಬಸವರಾಜನ ಗೋಸುಂಬೆತನ (ನಾನು ಮೇಲೆ ಹೇಳಿದ ಕ್ರಿಯೆಪ್ರತಿಕ್ರಿಯೆಯಲ್ಲಿ ಹರಿಯುತ್ತಿರುವ ಚಿತ್ರದ ಅಸ್ವಸ್ಥ ಜೀವಂತತೆ) ನಮ್ಮ ಸಮಕಾಲೀನ ಸಮಾಜವನ್ನು ವೈಯಕ್ತಿಕ ತುರ್ತಿನಿಂದ ವಿಶ್ಲೇಷಿಸುತ್ತ, ವಿಶ್ಲೇಷಣೆಯನ್ನು ಅನುಮಾನಿಸುತ್ತ ಓದುಗರ ಮನಸ್ಸನ್ನು ಉತ್ತುತ್ತ ಫ್ರೆಶ್ ಮಾಡುತ್ತದೆ. ಇವರ ಕವನಗಳೂ ಹೀಗೆಯೇ ಕ್ರಿಯೆ ಪ್ರತಿಕ್ರಿಯೆಗಳ ಮಿಂಚಾಗಿ ನಮ್ಮ ಕ್ಲೀಶೆಗಳನ್ನೆಲ್ಲ ಸೀಳಿಬಿಡುತ್ತವೆ. ನಾವು ಉಳಿದವರನ್ನೆಲ್ಲ ಓದುವಾಗ ಇವರು ಸಾಹಿತಿಗಳು ಎಂಬುದನ್ನು ಮರೆಯುವುದಿಲ್ಲ. ಆದರೆ ಲಂಕೇಶರನ್ನು ಓದುವಾಗ ಮಾತ್ರ ವೈಯಕ್ತಿಕವಾಗಿ ಕೃತಜ್ಞರಾಗುತ್ತೇವೆ-ಪ್ರಾಯಶಃ ಮೆಲೆ ಹೇಳಿದ ಕಾರಣಗಳಿಗಾಗಿ.
ಇಷ್ಟು ಜೀವಂತರಾದ ಲಂಕೇಶರು ತಮ್ಮ ಕೃತಿಗಳ ಮೂಲ ದ್ರವ್ಯವಾದ ತಮ್ಮ ಜೀವನವನ್ನು ಕುರಿತು ಸಾಕ್ಷಿಯಲ್ಲಿ ಬರೆಯಲು ತೊಡಗಿದಾಗ ಇವರು ಬರಿದಾಗುತ್ತಿದ್ದಾರೂ ಎಂದು ನನಗೆ ಅನುಮಾನವಾಯಿತು. ವೈಯಕ್ತಿಕವಾಗಿ ಬರೆಯುವಾತ ತಾತ್ವಿಕವಾಗಿ ಗ್ರಹಿಸಿದ್ದ ವೈಯಕ್ತಿಕ ತುರ್ತಿನಿಂದ ಅಭಿವ್ಯಕ್ತಿಸುವುದನ್ನು ಕಲಿತ ಹೊರತು ಬೆಳೆಯುತ್ತ ಹೋಗಲಾರ. ಸೃಷ್ಟಿಸುವ ಶಕ್ತಿ ಇಂಗಿದಾಗ ನಾವು ವಿಮರ್ಶೆ ಬರೆಯುತ್ತೇವೆ. ರಾಜಕೀಯ ಭಾಷಣ ಮಾಡುತ್ತೇವೆ ಎನ್ನುವ ಲಂಕೇಶರೆ ಯಾಕೆ ಹೀಗೆ ತಮ್ಮ ಈ ತನಕದ ಪರೋಕ್ಷ ವಸ್ತುವಾಗಿದ್ದನ್ನು ಈಗ ನೇರವಾಗಿ ಬರೆಯುತ್ತಿದ್ದಾರೆಂದು ನನಗೆ ಅನುಮಾನವಾಗಿದ್ದು ಸಹಜ. ಗೋಪಿ ಗಾಂಡಲೀನದ ಮುನ್ನುಡಿಯಲ್ಲಿ ಲೋಹಿಯಾ ಕಮೂ ಬಗ್ಗೆ ಭಾಷಣ ಬಿಗಿಯುವವರನ್ನು ತರಾಟೆಗೆ ತೆಗೆದುಕೊಳ್ಳುವ ಲಂಕೇಶರು ತಾವೇ ಸ್ವತಃ ಇವಕ್ಕೆಲ್ಲ ಸಿಕ್ಕಿಬೀಳೋದು ಪ್ರಕ್ರಿಯಯಲ್ಲಿ ಜೀವಂತವಾಗುವ ತನ್ನ ಕ್ರಮವನ್ನು ರಿಚುಯಲ್ ಮಾಡಿಕೊಂಡಂತೆ ಎಂದೂ ನನಗೆ ಅನ್ನಿಸಿದೆ. ಜಡವಾಗುತ್ತಿದ್ದಾಗ ನಮಗೇ ನಾವು ಚಾಟಿಯಲ್ಲಿ ಹೊಡೆದುಕೊಂಡಂತೆ ಈ ಬಗೆಯ ರಿಚುಯಲ್. ಏನನ್ನೂ ಹೇಳುವುದು. ಅದಕ್ಕೆ ತದ್ವಿರುದ್ಧವಾದ್ದನ್ನು ಕೂಡಲೇ ಹೇಳಿ ತನಗೇ ತಾನು ತಿರುಗಿ ನಿಲ್ಲೋದು ಅರ್ಥ ಕಳೆದುಕೊಂಡ ಚಾಳಿಯಾಗಬಹುದೆಂದು ನನ್ನ ಮಾತಿನ ತಾತ್ಪರ್ಯ.
ಈ ಸಂದೇಹಗಳನ್ನು ಹೊತ್ತು ಲಂಕೇಶರ ಇನ್ನೂ ಅಪ್ರಕಟಿತ ನಾಟಕ ಸಂಕ್ರಾಂತಿಯನ್ನು ಹಸ್ತಪ್ರತಿಯಲ್ಲಿ ಓದಿ, ಈ ಲೇಖಕ ಹೇಗೆ ತನ್ನನ್ನು renew ಮಾಡಿಕೊಳ್ಳುತ್ತ ಹೋಗಬಲ್ಲನೆಂದು ನನಗೆ ಆಶ್ಚರ್ಯವಾಯಿತು. ಪ್ರಾಯಶಃ ಗಿರೀಶರ ತುಗಲಖ್‌ನ ನಂತರ ಲಂಕೇಶರ ಸಂಕ್ರಾಂತಿ ಅತ್ಯಂತ ಮಹತ್ವದ ನಾಟಕ, ಸಾಂಸ್ಕೃತಿಕವಾಗಿ ಗಿರೀಶರ ತುಗಲಖ್ ಆದರ್ಶವಾದಿತ್ವದ ನೆಹರೂ ಯುಗದ ಮುಖ್ಯ ಕೃತಿ. ಹಾಗೆಯೇ ಲಂಕೇಶರ ಸಂಕ್ರಾಂತಿ ನಮ್ಮ ಸಮಕಾಲೀನ ಸಮಸ್ಯೆಗಳಾದ ಆದರ್ಶವಾದ. ಜಾತಿ ಸಮಸ್ಯೆ, ಸಮಾಜ ಪರಿವರ್ತನೆ, ಕ್ರಾಂತಿ ಎಲ್ಲವನ್ನೂ ತುರ್ತಾಗಿ. ಆದರೆ ಅಷ್ಟೆ: ಚಿರಸತ್ಯಗಳ ಸ್ತರದಲ್ಲೂ ಗ್ರಹಿಸಿಕೊಡುವ ಕೃತಿ. ಬಂಡಾಯ ಮತ್ತು ಕನ್ಸರ‍್ವೇಟಿಸಂಗಳೆ ಕ್ರಿಯೆ-ಪ್ರತಿಕ್ರಿಯೆಗಳಲ್ಲಿ ಈ ತನಕ ಬರೆಯುತ್ತಿದ್ದ ಲಂಕೇಶ ಇಲ್ಲೂ ಬಸವ-ಬಿಜ್ಜಳರ ದ್ವಂದ್ವದಲ್ಲಿ ಬಿಜ್ಜಳ ಪ್ರತಿಪಾದಿಸುವ ಈ ಲೋಕದ ಸತ್ಯವೇ ಹೀಗೆ ಎನ್ನುವ ಯಥಾಸ್ಥಿತಿ ವಾದವನ್ನೆ ಒಪ್ಪುತ್ತಿದ್ದಾರೋ ಎಂದು ನನಗೆ ಅನುಮಾನವಿದೆ. ಆದರೆ ಈ ನಾಟಕವನ್ನು ಲಂಕೇಶ್‌ ಮತ್ತೆ ಮತ್ತೆ ಬರೆಯುತ್ತಿದ್ದಾರೆ. ಬಸವನ ಕ್ರಾಂತಿ, ಬಿಜ್ಜಳನ ಪ್ರಬುದ್ಧವಾದ ವಾಸ್ತವ ಕಲ್ಪನೆ ಎರಡನ್ನೂ ಗಟ್ಟಿಮಾಡಿ ಒಂದಕ್ಕೊಂದನ್ನು ಎದುರಾಗಿಸುವ ನಿಜವಾದ ಟೆನ್ಶನ್ನಿನ ನಾಟಕ ಮಾಡುತ್ತಿದ್ದಾರೆ. ಇದು ಯಶಸ್ವಿಯಾದರೆ ಲಂಕೇಶರ ಲೇಖನದಲ್ಲಿ ಇನ್ನೊಂದು ಘಟ್ಟ-ಸಾಂಸ್ಕೃತಿಕವಾಗಿ ಮಹತ್ವವಾದ ಘಟ್ಟಪ್ರಾರಂಭವಾದಂತೆ. ಈತನಕ ವೈಯಕ್ತಿಕನಾಗಿದ್ದ ಬರಹಗಾರ ಈಗ ಸಾಂಸ್ಕೃತಿಕವಾಗಿಯೂ ಮುಖ್ಯವಾಗುವ, ತತ್ವಗಳ ಮಟ್ಟದಲ್ಲೂ ವೈಯಕ್ತಿಕ ತುರ್ತಿನಿಂದ ಬರೆಯಬಲ್ಲ ಶಕ್ತಿಯನ್ನು ಗಳಿಸಿಕೊಂಡಿರುವುದು ಗಮನಾರ್ಹವಾದ್ದು.
ಬಿಜ್ಜಳ-ಬಸವ ದ್ವಂದ್ವ ಓದುತ್ತಿದ್ದಂತೆ ಬಿಂಬಸಾರ-ಬುದ್ದರ ಒಂದು ಘಟನೆ ನೆನಪಾಗುತ್ತದೆ. ಬುದ್ಧನ ತತ್ವಗಳ ನಿಜವಾದ ಅಗತ್ಯವಿದ್ದದ್ದು ಹಿಂಸೆಯಲ್ಲಿ ಒದ್ದಾಡುತ್ತಿದ್ಧ ಸೈನಿಕರಿಗೆ ಮತ್ತು ಸಂಸಾರದಲ್ಲಿ ತೊಳಲುತ್ತಿದ್ದ ಸಾಲಗಾರರಿಗೆ. ಆದರೆ ಸಿಪಾಯಿ ಸೈನ್ಯ ಬಿಡದಂತೆ, ಸಾಲಗಾರ ತನ್ನ ಸಾಲ ವಾಪಸ್ಸು ಮಾಡದಿದ್ದಲ್ಲಿ ಗುಲಾಮನಾಗಿ ಸಾಲ ಪಡೆದವನಲ್ಲಿ ಜೀತ ಮಾಡಬೇಕಾದ ಕ್ರೂರ ಶಾಸನ ಆಗ ಬಳಕೆಯಲ್ಲಿತ್ತು. ಈ ಅಮಾನುಷ ಕಾನೂನಿನಿಂದ ಮುಕ್ತರಾಗಲು, ಸಂಸಾರದ ಕೋಟಲೆಯಿಂದ ಸ್ವತಂತ್ರರಾಗಲು ಆರ್ತರಾದ ಸಾಲಗಾರರು ಮತ್ತು ಸೈನಿಕರು ಭಿಕ್ಷುಗಳಾಗಲು ತೊಡಗಿದರು. ಬುದ್ಧನ ಪರಮಶಿಷ್ಯನಾದ ದೊರೆ ಬಿಂಬಸಾರನಿಗೆ ಇದರಿಂದ ಹೆದರಿಕೆಯಾಯಿತು. ಈ ಬುದ್ಧನಿಂದಾಗಿ ಆರ್ಥಿಕ ವ್ಯವಸ್ಥೆಯೇ ಬುಡಮೇಲಾದೀತು. ದೇಶ ರಕ್ಷಣೆಗೆ ಸೈನಿಕರೇ ಇಲ್ಲದೇ ಹೋದಾರು ಎಂದು ತನ್ನ ಆಶ್ರಯದಲ್ಲಿದ್ದ ಬುದ್ದನಲ್ಲಿ ಹೋಗಿ ತನ್ನ ಇಕ್ಕಟ್ಟನ್ನು ನಿವೇದಿಸಿಕೊಂಡ. ಬುದ್ದ ಬಿಂಬಸಾರನ ಒತ್ತಾಯಕ್ಕೆ ಬಾಗದೆ ಬೇರೆ ಮಾರ್ಗವಿರಲಿಲ್ಲ. ಆದ್ದರಿಂದ ಸೈನಿಕರನ್ನೂ ಸಾಲಗಾರರನ್ನೂ ಭಿಕ್ಷುಗಳಾಗಿ ಒಪ್ಪಿಕೊಳ್ಳಕೂಡದೆಂದು, ಹೀಗೆ ಸಂಘಕ್ಕೆ ಸೇರಿಸಿಕೊಂಡರೆ “ದುಃಖತಾ’ ಎನ್ನುವ ಶಿಕ್ಷೆಗೆ ತನ್ನ ಅನುಯಾಯಿಗಳು ಒಳಗಾಗಬೇಕೆಂದು ವಿಧಿಸಿದ. ಬುದ್ಧನ ನಿರ್ವಾಣಮಾರ್ಗಕ್ಕೂ ಸಾಮಾಜಿಕ ಅಡಚಣೆಗಳಿವೆ ಎಂದು ಹೇಳುವ ಸ್ವಾತಂತ್ರ್ಯ ಮತ್ತು ಅಗತ್ಯದ ದ್ವಂದ್ವದ ಕಥೆ ಇದು. ಶ್ರೀಮಂತರಿಗೆ ಮಾತ್ರ ಭಿಕ್ಷುಗಳಾಗಲು ಸಾಧ್ಯವಾದ ಈ ಘಟನೆಯ ಐರನಿಯನ್ನು ಗಮನಿಸಬೇಕು. ನಮ್ಮ ಆರ್ಥಿಕ ಸಾಮಾಜಿಕ ಮಿತಿಗಳಲ್ಲೂ ಸಾಧ್ಯವಾಗುವುದು ಮಾತ್ರ ನಿಜವಾದ ಸ್ವಾತಂತ್ರ್ಯ ; ಉಳಿದದ್ದು ಸ್ವಾತಂತ್ರ್ಯದ ಭ್ರಮೆ. ಆದರೂ ಬುದ್ಧ ಹೇಳುವುದರಲ್ಲಿ ನಿಜವಿಲ್ಲವೆ, ನಮ್ಮ ಪಾರಮಾರ್ಥಿಕ ಒತ್ತಾಯಗಳನ್ನು ಅವನ ತತ್ವ ಬಿಂಬಿಸಿಲ್ಲವೆ ?
ನಿರ್ವಾಣ ಸ್ಥಿತಿಯನ್ನು ಜೀವನದಲ್ಲಿ ಪಡೆದ ಬುದ್ಧ ಹೀಗೆ ತನ್ನ ಕಾಲದ ವಾಸ್ತವ ಸತ್ಯಕ್ಕೆ ಆರ್ಥಿಕ ಸಾಮಾಜಿಕ ಮಿತಿಗಳಿಗೆ ತಲೆ ಬಾಗಬೇಕಾದ್ದು ಮನುಷ್ಯನ ಪ್ರಜ್ಞೆಗೂ ಪರಿಸರಕ್ಕೂ ಇರುವ ಸಂಬಂಧದ ಬಗ್ಗೆ ವಿಶೇಷ ಬೆಳಕು ಚೆಲ್ಲುತ್ತದೆ. ಯಥಾಸ್ಥಿತಿಗೆ ಜಗ್ಗುವ ಸಾಮಾಜಿಕ ಆರ್ಥಿಕ ಸತ್ಯಗಳು ಒಂದಕಡೆಯಾದರೆ, ಇನ್ನೊಂದು ಕಡೆ ಸೀಳಿಕೊಂಡು ಹೊರಬರಲು ಪ್ರಯತ್ನಿಸುವ ಮನುಷ್ಯನ ಕ್ರಾಂತಿಯ ವಾಂಛೆ-ಇದೇ ಚರಿತ್ರೆಯ ಡಯಲೆಕ್ಟಿಕ್. ಇವಲ್ಲಿ ಎರಡೂ ನಿಜ. ಬಿಂಬಸಾರನದೂ ನಿಜ ; ಬುದ್ದನದೂ ನಿಜ, ಬಸವಣ್ಣನದೂ ನಿಜ ; ಬಿಜ್ಜಳನದೂ ನಿಜ. ನಮ್ಮ ಅನುಭವದ ನಿಜವನ್ನು ಬಿಜ್ಜಳ ಹೇಳುವಂತೆ ಬಸವಣ್ಣನೂ ಹೇಳುತ್ತಾನೆ. ಈ ಎಳೆತ ಸೆಳೆತಗಳೇ ನಮ್ಮ ಸಂಕಟಕ್ಕೆ, ನಮ್ಮ ಸುಖಕ್ಕೆ, ಜಡ್ಡು ನೆಲದಲ್ಲಿ ಹೊಸ ಮೊಳಕೆ ಸೀಳಿ ಬರುವ ಅದ್ಭುತಕ್ಕೆ, ಮತ್ತೆ ನೆಲ ಜಟ್ಟಾಗುವುದಕ್ಕೆ. ಈ ನಿರಂತರದ ಹೋರಾಟಕ್ಕೆ ಕಾರಣ. ಬಿಜ್ಜಳ ಬಸವಣ್ಣರಿಬ್ಬರನ್ನೂ ನಿಜವಾಗಿ ಮುಖಾಮುಖಿಯಾಗಿಸಿದಲ್ಲಿ ಲಂಕೇಶ್ ಈ ಕಾಲದ ಒಂದು ಅತ್ಯುತ್ತಮ ಕೃತಿಯನ್ನು ಬರೆದಂತೆ.
* * * * *
ನಾವೆಲ್ಲರೂ ಅತ್ಯಂತ ಎಚ್ಚರದಿಂದ ಓದಬೇಕಾದ ಇನ್ನೊಬ್ಬ ಲೇಖಕ ತಿರುಮಲೇಶ್. ಕನ್ನಡ ಕಾವ್ಯದಲ್ಲಿ ನಿಜವಾದ ಹೊಸ ಮಾತು ಸದ್ಯಕ್ಕೆ ಆಡುತ್ತಿರುವವರು ಇವರು. ಮಹಾಪ್ರಸ್ಥಾನ ಈಚಿನ ಅತ್ಯಂತ ಮುಖ್ಯ ಕವನಸಂಕಲನ. ರಾಮಾನುಜನ್ನರ ಮಾರ್ಗ ತೀರಾ ವಿಶಿಷ್ಟವಾಗಿ ಅವರದ್ದು. ತಿರುಮಲೇಶರ ಪ್ರಯೋಗಗಳು ಕನ್ನಡ ಭಾಷೆಯ ದೃಷ್ಟಿಯಿಂದ ಮಹತ್ವದವು. ಇವರು ಯಾವ ಒಂದು ಧಾಟಿಗೂ ಸಿಕ್ಕಿಬೀಳದಂತೆ ಬರೆಯಬಲ್ಲರು ; ಲಯದಲ್ಲೂ ಇವರ ಪ್ರಯೋಗಗಳು ಹೊಸದಾಗಿವೆ. ಸಾಮಾನ್ಯ ಜನರಲ್ಲಿ ಆಸಕ್ತಿಯನ್ನೂ, ಪಾಲುಗಾರಿಕೆಯನ್ನೂ ಕುದುರಿಸಬೇಕೆಂಬುದು, ಜನರನ್ನು ಎಟಕುವುದಕ್ಕೆ ಪ್ರಯತ್ನಿಸಬೇಕೆಂಬುದು ತನ್ನ ಉದ್ದೇಶವೆಂದು ಮಹಾಪ್ರಸ್ಥಾನದ ಮುನ್ನುಡಿಯಲ್ಲಿ ಹೇಳಿದ್ದಾರೆ. ಇವರ ಭಾಷೆ ನಮ್ಮ ಸಮಕಾಲೀನ ಸಮಸ್ಯೆಗಳನ್ನು ತುರ್ತಿನಿಂದ. ಅತಿ ವೈಯಕ್ತಿಕವೂ ಆಗದಂತೆ, ಸಾಧಾರಣವೂ ಆಗದಂತೆ ಹೇಳಬಲ್ಲುದು. ಸಾಂಕೇತಿಕತೆಗೂ ವಿವರದ ವಾಸ್ತವಿಕತೆಗೂ ಇವರು ಒಟ್ಟಿಗೇ ಪ್ರಯತ್ನಿಸುತ್ತಾರೆ. ವಿವರಗಳ ಅತಿ ಮೂರ್ತತೆಯಲ್ಲೂ ಸಿಕ್ಕಿಬೀಳುವುದಿಲ್ಲ: ಹಾಗೆಯೇ ಜಳ್ಳಾದ ಸಾಂಕೇತಿಕತೆಯನ್ನೂ ಪ್ರಯತ್ನಿಸುವುದಿಲ್ಲ :
ಮೂಕ ಸಂಜ್ಞೆಗಳ ಎದುರು ತಲೆತಗ್ಗಿಸುತ್ತೇನೆ ಅಸ್ವಸ್ಥ
ದಿಢೀರನೆ ಏಳುತ್ತೇನೆ ಛತ್ರಚಾಮರ ತೇಜಿಗಳ ಬಿಟ್ಟು ಹೊರ
ಬರುತ್ತೇನೆ ಈ ನಿರ್ಜನ ಬೀದಿಗಳಲ್ಲಿ ಅಲೆಯುತ್ತೇನೆ ಹುಡುಕುತ್ತೇನೆ.
(ಮಹಾಪ್ರಸ್ಥಾನ)
ಇವರ ಲಯಕ್ಕೆ ಹೇಳಿದ್ದೆಲ್ಲವನ್ನೂ ಮೂಡಿಸುತ್ತಾ ಹೋಗುವ ಶಕ್ತಿಯ ಜೊತೆಗೆ, ಭಾವವನ್ನು ವ್ಯಂಜಿಸುವ eloquence ಇದೆ. ‘ದ್ವಾರಕೆ ಮುಳುಗಿದಾಗ’, “ತಿರುವನಂತಪರ ೭೧’, ‘ತೀರ್ಪು’, ‘ಪಾರ್ಟಿ ಕಳೆದಮೇಲೆ’, ‘ಮಹಾನಗರ” ಇತ್ಯಾದಿ ಪದ್ಯಗಳು ನಮಗೆಲ್ಲರಿಗೂ ಈಚೆಗೆ ಬೇಜಾರಾಗುತ್ತಿರುವ ಐರನಿಯ ಧಾಟಿಯಿಲ್ಲದೆ, ಕಳಕಳಿಯಿದ್ದೂ ವಾಚಾಳಿಯಾಗದೆ ಇಡೀ ಮನುಷ್ಯನ ಮಾತಾಗಲು ಹವಣಿಸುತ್ತ ನಮ್ಮನ್ನು ತಮ್ಮ ವ್ಯಾಕುಲದ ಲೋಕದಲ್ಲಿ ಒಳಪಡಿಸುತ್ತವೆ. ಇನ್ನೇನು ಬಿರಿಯುತ್ತದೆ ಎನ್ನಿಸಿ ಬಿರಿಯದೆ, ಹರಿದುಬಿಡುತ್ತದೆ ಎನ್ನಿಸಿ ಹರಿಯದೆ, ಎಲ್ಲ ಹರಟೆಯಾಗದೆ ಶಕ್ತಿಪೂರ್ಣ ಸಂಯಮದಿಂದ, ತೋರಿಕೆ ಪೋಜುಗಳಿಲ್ಲದ ಕಳಕಳಿಯಿಂದ ತಿರುಮಲೇಶ್ ಉದ್ದಕ್ಕೂ ಮಾತಾಡುತ್ತಾರೆ. ಎಲಿಯಟ್ ಜ್ಞಾಪಕವಾಗುವಂತೆ ಬರೆಯುವುದು ಅವನಿಗಿಂತ ತಾನು ಭಿನ್ನ ಎಂಬುದನ್ನು ಸೂಚಿಸುವುದಕ್ಕಾಗಿ ಎಂದು ತಿರುಮಲೇಶ್ ಮುನ್ನುಡಿಯಲ್ಲಿ ಹೇಳಿದ್ದಾರೆ. ಆದರೆ ತನ್ನದೇ ಆದ ದೃಷ್ಟಿಕೋನವನ್ನು ಇನ್ನೂ ಕವನಗಳಲ್ಲಿ ಇವರು ಸಾಧಿಸಿಕೊಂಡಿಲ್ಲ. Take off ಸ್ಥಿತಿಯಲ್ಲಿರುವಂತೆ ಕಾಣುತ್ತದೆ. -ಈ ತನಕದ ಇವರ ಒಟ್ಟು ಸಿದ್ದಿ. ತನ್ನ ವಿಶಿಷ್ಟ ಪ್ರಜ್ಞೆಯೊಳಗೆ ಬದುಕುವುದೆಂದರೆ ಏನೆಂಬುದು ನಮಗೂ ಗೊತ್ತಾಗುವಂತೆ ಮಾತಾಡುತ್ತಾರೆಂಬುದು ಬಹಳ ಮುಖ್ಯವಾಗಿ ಇವರಲ್ಲಿ ಗಮನಿಸಬೇಕಾದ್ದು. ಒಂದು ವಿಶಿಷ್ಟ ಪ್ರಜ್ಞೆಯೊಳಗಿನ ತಡಕಾಟವನ್ನೆಲ್ಲ ನಮಗೂ ತಾಗುವಂತೆ ಮಾಡುವುದು ಕಾವ್ಯದ ಅಥೆಂಟಿಸಿಟಿಗೆ ಅತ್ಯಂತ ಮುಖ್ಯವಾದದ್ದು. ತಿರುಮಲೇಶರು ಈ ದೃಷ್ಟಿಯಿಂದ ನಿಜವಾದ ಹೊಸ ಮಾತನ್ನು ಆಡಬಲ್ಲ ಲೇಖಕರು.
* * * * *
ಗಿರಿ : ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಕೆಲವರಿಗೆ ಆತ್ಮೀಯವಾದ, ಹಲವರಿಗೆ ತಿಳಿಯದ ಹೆಸರು ಇದು. ಬಹಳ ವರ್ಷಗಳ ಹಿಂದೆ ಕೆಲವು ಜಾಣ ಕಥೆಗಳನ್ನು ಬರೆದಿದ್ದರು. ಮತ್ತೆ ಮನೋವಿಜ್ಞಾನಿಯಾಗಿ ಶಾಸ್ತ್ರಕ್ಕೆ ಸಂಬಂಧಪಟ್ಟಂತೆ ಕೆಲವು ಲೇಖನಗಳನ್ನು ಕನ್ನಡದಲ್ಲಿ ಬರೆದರು. ತೇಜಸ್ವಿ, ರಾಮಾನುಜನ್ ಕಾದಂಬರಿಗಳನ್ನು ಕುರಿತು ವಿಮರ್ಶೆ ಬರೆದರು. ಮೈಸೂರಿನಲ್ಲಿದ್ದಾಗ ಒಂದು ಕಾದಂಬರಿ ಬರೆಯುತ್ತಾ ಇದ್ದು ಈಗ ಅಮೇರಿಕಾದಿಂದ ಅದನ್ನು ಮುಗಿಸಿ ಕಳಿಸಿದ್ದಾರೆ. ಹೆಚ್ಚು ಮಾತಾಡದೆ, ಆಡಿದರೆ ನೆನಪಿರುವಂತೆ ಮಾತಾಡಬಲ್ಲ, ಗುಪ್ತವಾಗಿ ತನ್ನೊಳಗೆ ಬೆಳೆಯುವ, ಹೊಚ್ಚ ಹೊಸ ಸಂವೇದನೆಯ ಮನುಷ್ಯ ಈ ಗಿರಿ. ಇವರ ಕಾದಂಬರಿ ಗತಿಸ್ಥಿತಿ ಕನ್ನಡ ಭಾಷೆಗೆ ನಡೆಸಿದ ಚಿಕಿತ್ಸೆ ಎನ್ನಬಹುದು. ಈ ದಶಕದ ಮಹತ್ವದ ಕೃತಿಗಳಲ್ಲಿ ಇದೊಂದು ಎಂಬುದನ್ನಂತೂ ಖಂಡಿತ ಹೇಳಬಹುದು ಅಥವಾ ನಮ್ಮ ಸಮಕಾಲೀನ ನಾಗರಿಕ ಜೀವನವನ್ನು ಕುರಿತು ಇಷ್ಟು ಒಳ್ಳೆ ಕಾದಂಬರಿ ಇನ್ನೂ ಬಂದಿಲ್ಲವೆಂದು ಹೇಳಿದರೆ ಉತ್ಪ್ರೇಕ್ಷೆಯಾಗಲಾರದು.
ಈ ಕಾದಂಬರಿ ಓದಿ ನನಗಾದ ಸಂತೋಷಗಳನ್ನೆಲ್ಲ ಹೇಳಬೇಕಾದರೆ ಕೃತಿಯಿಂದ ಎಷ್ಟು ಭಾಗಗಳನ್ನು ಉದ್ಧರಿಸಿದರೂ ತೀರದು. ನನ್ನ ಕಾಪಿಯಲ್ಲಿ ಪ್ರತಿ ಪೇಜಿನ ಮೇಲೂ ಗುರುತು ಹಾಕಿಕೊಂಡಿದ್ದೇನೆ. ನನ್ನ ಮನಸ್ಸನ್ನು ಕೃತಿ ಆವರಿಸಿಬಿಟ್ಟಿದೆ.
ಕಾಫ್ಕ ಕಮೂರ ಪ್ರಭಾವವಿಲ್ಲದಿದ್ದರೆ ಗಿರಿ ಈ ಕೃತಿ ಬರೆಯುತ್ತಿರಲಿಲ್ಲ ನಿಜ. ಆದರೆ ಈ ಪ್ರಭಾವಕ್ಕೆ ಒಳಗಾದ ಮನಸ್ಸು ತನ್ನ ಪ್ರಜ್ಞೆಯಲ್ಲೆ-ಅಂದರೆ ತನಗೆ ವಿಶಿಷ್ಟವಾದ ರೀತಿಯಲ್ಲಿ-ಬೆಂಗಳೂರಲ್ಲಿ ಮೈಸೂರಲ್ಲಿ ಜೋಗದಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಭಾರತದ ಸದ್ಯದ ನವ ನಗರಗಳಿಗೆಲ್ಲ ಸಾಂಕೇತಿಕವಾದ ಹೆಸರಿಲ್ಲದ ನಗರದಲ್ಲಿ ಬದುಕಿ ಬೇಯದಿದ್ದರೆ ಈ ಕೃತಿ ಹುಟ್ಟುತ್ತಲೇ ಇರಲಿಲ್ಲ. ಕನ್ನಡ ಭಾಷೆಯನ್ನು ಯಾರೂ ಉಪಯೋಗಿಸದ ಹಾಗೆ ಗಿರಿ ಉಪಯೋಗಿಸುವುದನ್ನು ಕಲಿಯದಿದ್ದರೂ ಈ ಕೃತಿ ಹೀಗಿರುತ್ತಿರಲಿಲ್ಲ.
ಕಮೂ ಕಾಫ್ಕ ಓದಿದವರಿಗೆ ತಮಗೆ ಪರಿಚಿತವಾದ ವಿಚಾರವನ್ನು ಈ ಆವರಣದಲ್ಲಿ ಮತ್ತೆ ಜೀವಂತಿಸಿಕೊಂಡ ಅನುಭವದ ಜೊತೆಗೇ, ಗಿರಿಯ ವಿಶಿಷ್ಟ ಪ್ರಜ್ಞೆಯ ಮೂಲಕ ನಮ್ಮ ಸಮಕಾಲೀನತೆಯನ್ನು ಹೊಸದಾಗಿ ಕಂಡಂತೆಯೂ ಆಗುತ್ತದೆ.
ಕಥೆಯ ಅಂಶ ಕಾದಂಬರಿಯಲ್ಲಿ ಗೌಣ. ಇನ್ನೂ ಮದುವೆಯಾಗದ ಈಕೆ ಆತ ನೌಕರಿಗೆ ಸೇರಿಕೊಳ್ಳಲು ಬೆಂಗಳೂರು ಬಿಟ್ಟು ಅಸಾಧ್ಯ ಸೆಖೆಯ ನಗರಕ್ಕೆ ಬರುತ್ತಾರೆ. ಈಕೆಗೆ ಕೆಲಸ ಸಿಗುತ್ತೆ ; ಆತನಿಗೆ ಸಿಕ್ಕಿದ್ದು ಸಿಗದೇಹೋಗುತ್ತೆ. ಅಲ್ಲಿಂದ ಬಿಟ್ಟು ಈತ ಬೆಂಗಳೂರಿಗೆ ಬಂದು ಉದಾಸೀನನಾಗಿ ಕೆಲಸ ಹುಡುಕುತ್ತಾನೆ. ಆಕೆ ಮೈಸೂರಿಗೆ ಹೋಗುತ್ತಾಳೆ ; ಈತನೂ ಮೈಸೂರಿಗೆ ಬರುತ್ತಾನೆ. ಮತ್ತೆ ಊರಿಗೆ ಹೋಗುತ್ತಾನೆ; ಊರಿನಿಂದ ಜೋಗಕ್ಕೆ ಹೋಗುತ್ತಾನೆ. ಇಬ್ಬರೂ ಅಲೆಮಾರಿಗಳು, ತಬ್ಬಲಿಗಳು. ಈ ಅಲೆದಾಟದಲ್ಲಿ ಈತನಿಗೆ ವಿಲಕ್ಷಣವಾದ ಅನುಭವಗಳು ಆಗುತ್ತವೆ.
ಈ ಕಾದಂಬರಿಯನ್ನು ಹೇಗೇಗೋ ವಿಶ್ಲೇಷಿಸಬಹುದು. ವಿಮರ್ಶಕರಿಗೆ ಇಲ್ಲಿ ಔತಣ ಕಾದಿದೆ. ‘ನೋಡುವುದು’ ಎಂತಹ ಕ್ರಿಯೆ ಎನ್ನುವುದರ ಬಗ್ಗೆಯೇ ಈ ಕಾದಂಬರಿ. ಯಾವ ಮನಸ್ಥಿತಿಯಲ್ಲಿದ್ದಾಗ ನಾವು ಹೇಗೆ ನೋಡುತ್ತೇವೆ : ಈ ಗ್ರಹಣಕ್ರಿಯೆ ಪ್ರಜ್ಞೆಗೂ ಆವರಣಕ್ಕೂ ಇರುವ ಸಂಬಂಧದ ಬಗ್ಗೆ, ಜೀವನದ ಬಗ್ಗೆ ತಾತ್ವಿಕವಾಗಿ ಏನು ಹೇಳುತ್ತದೆ- ಇದು ಕಾದಂಬರಿಯ ಉದ್ದೇಶವೆಂದು ತಿಳಿದು ಕೃತಿ ವಿಶ್ಲೇಷಣೆ ಮಾಡಬಹುದು. ಕೃತಿಯಲ್ಲಿ ‘ಈತ’ನಿಗಾಗುವ ಅನುಭವ ಮಾತ್ರ ಸ್ಪಷ್ಟ ; ಆದರೆ ಈತನಿಗೇ ಅನುಭವದ ಅರ್ಥ ತಿಳಿಯದು :
ಗೆಳೆಯ ಮೂರ್ತಿಗೆ ಕತೆ ಹೇಳುತ್ತಾನೆ :
“ಏನೂ ಅನ್ನಿಸಿಲ್ಲ. ಹೀಗಾಯಿತು, ಹೀಗಾಯಿತು ಅಂತ ಮತ್ತೆ ಮತ್ತೆ ಘಟನೆಗಳೇ ಮರುಕಳಿಸುತ್ತವೆ. ಅನ್ನಿಸುವುದು ಮಾತ್ರ ಏನೂ ಇಲ್ಲ ಅಥವಾ ಹೀಗೂ ಹೇಳಬಹುದು: ಇದು ಹೀಗಿದೆ ಅನ್ನಿಸತ್ತೆ. ಮೆಣಸಿನಕಾಯಿ ಕಾರವಾಗಿದೆ. ಅಂದ ಹಾಗೆ” (ಪು. ೯೨).
ಒಟ್ಟಿನಲ್ಲಿ ಇದು ಬೊರ್‌ಡಂ ಎಂದುಕೊಳ್ಳುತ್ತಾನೆ ಈತ. ಆದರೆ ಅವನಿಗೆ ತನ್ನ ವಿಚಾರದ ಬಗ್ಗೆ ಮೂಲಭೂತ ಸಂಶಯವಿದೆ. ಎಷ್ಟೆಂದರೆ-
“ಕೆಲವು ಸಾರಿ ನಾವು ಬಹಳ Philosophical ಅಂತ ನಮ್ಮನ್ನೇ ನಾವು ನಂಬಿಕೊಳ್ಳಲು ಪ್ರಯತ್ನಿಸುವ ಸಮಸ್ಯೆಯ ಮೂಲ ಸುಮ್ಮನೇ ಖಾಲಿ ಜೇಬಾಗಿರುತ್ತೆ” ಎಂದು ಹೇಳಿ ಈತ ನಗುತ್ತಾನೆ. (ಪು. ೯೨)
ಕಾದಂಬರಿ ತನ್ನ ಅರ್ಥವನ್ನೆಲ್ಲ ವಿವರಗಳಲ್ಲಿ ಹುಟ್ಟಿಸಿಕೊಳ್ಳುತ್ತಿದೆ. ಒಂದು ದೃಷ್ಟಿ ಯಲ್ಲಿ ವಿವರಗಳೇ. ಈತ ವಿವರಗಳನ್ನು ಗಮನಿಸುವುದೇ, ಯಾಕೆ ಗಮನಿಸುತ್ತಾನೆಂಬುದೇ ಕಾದಂಬರಿ. ಈತ ಎಲ್ಲವನ್ನೂ ಸೂಕ್ಷ್ಮವಾಗಿ ವಿವರಿಸುತ್ತ ಹೋದರೂ ‘ಆಕೆ’ ಮತ್ತು ಮೂರ್ತಿ ಇಬ್ಬರನ್ನು ಮಾತ್ರ ವಿವರಿಸುವುದಿಲ್ಲವೆಂಬುದು. ಇದು ಯಾಕೆ ಎಂಬುದು ನಮ್ಮನ್ನು ಕಾಡುತ್ತದೆ. ನಮ್ಮ ಸಾಮಾನ್ಯ ಗ್ರಹಣಶಕ್ತಿ ಮಹತ್ವಪೂರ್ಣವಾದ ವಿವರವನ್ನು ಮಾತ್ರ ಗಮನಿಸುತ್ತದೆ. ಒಂದು ವಸ್ತುವನ್ನು ಅತಿಯಾಗಿ ವಿವರಿಸುವುದೆಂದರೆ ಆ ವಸ್ತುವನ್ನು atomise ಮಾಡಿದಂತೆ. ವಿವರಿಸುತ್ತ ವಿವರಿಸುತ್ತ ವಸ್ತುವೇ ಮಾಯವಾಗುತ್ತದೆ. ಎಲ್ಲವನ್ನೂ ವಿವರವಾಗಿ ನೋಡುವ ಈತ, ಆಕೆ ಮತ್ತು ಮೂರ್ತಿಯನ್ನು ಮಾತ್ರ ಹೀಗೆ ವಿವರಿಸದೇ ಇರುವುದು ಯಾಕೆಂದರೆ ಈ ಇಬ್ಬರು ಮಾತ್ರ ಈತನಿಗೆ ಆಪ್ತರಾದ್ದರಿಂದ, ಆಪ್ತಳಾಗಿದ್ದ ಲೀಲಾ ಬಗ್ಗೆ ಬೇಸರ ಬಂದಕೂಡಲೆ ಅವಳನ್ನು ವಿವರವಾಗಿ ನೋಡಲು ಶುರುಮಾಡುತ್ತಾನೆಂಬುದು ಗಮನಾರ್ಹ. ಉಳಿದದ್ದಕ್ಕೆಲ್ಲ ಇವನು ಪರಕೀಯ.
ಕಾದಂಬರಿಯ ಅತ್ಯಂತ ಮಹತ್ವದ ವರ್ಣನೆಗಳೆಂದರೆ ನಗರದ ನಡುವಿನಲ್ಲಿರುವ ಕಲ್ಲಿನ ಬೆಟ್ಟ. ಬೀಡ ಕಟ್ಟುತ್ತಿರುವ ಮನುಷ್ಯ, ಫೈಲುಗಳಲ್ಲಿ ಆರ್ಡರ್ ಹುಡುಕುತ್ತಿರುವ ಗುಮಾಸ್ತ, ಆಕೆ ಈತ ನಗರ ಬಿಟ್ಟೋಡುವುದು ಇತ್ಯಾದಿ. ಈ ಕಾದಂಬರಿಯನ್ನು ಎಲ್ಲಿ ಬೇಕಾದರಲ್ಲಿ ತೆರೆದು ಓದಬಹುದು : ಪ್ರಾಯಶಃ ಬೆಳವಣಿಗೆಯಿಲ್ಲ, ಬೇಕೂ ಇಲ್ಲ ಎಂದು ಈ ಕಾರಣಕ್ಕಾಗಿ ಅನ್ನಿಸುತ್ತದೆ. ಹೊಟೆಲುಗಳ ವರ್ಣನೆ, ಕಛೇರಿಗಳ ವರ್ಣನೆ, ನಿಸ್ಸಹಾಯಕರಾದ ಬಾಸುಗಳ ವರ್ಣನೆ. ಮೈಸೂರು ಹೋಟೆಲ್ಲಿ ದುರ್ವಾಸನೆಗೆ ಕಾರಣವಾದ ಎಲೆಕೋಸನ್ನು ಕತ್ತಲಲ್ಲಿ ಹುಡುಕುತ್ತ ಮೈಯೆಲ್ಲ ಗಲೀಜಾಗುವ ಈತನ ವರ್ಣನೆ, ಒಂದು ವರ್ಣನೆಯಂತೆ ಇನ್ನೊಂದಿಲ್ಲದಂತೆ ಕೃತಿಯಲ್ಲಿ ಹರಿಯುವ ಶಕ್ತಿ -ನಮ್ಮನ್ನು ಗಾಢವಾಗಿ ಕಾಡುತ್ತವೆ. ನಗರ ಬಿಟ್ಟು ಇಬ್ಬರೂ ಓಡಲುಯತ್ನಿಸುವ, ವಿಫಲರಾಗುವ ದೃಶ್ಯ, ಕನಸೆ, ನಿಜವೆ ಎನ್ನುವುದು ಅವಶ್ಯಕವಾಗುವಂತೆ ಇಡೀ ಕಾದಂಬರಿಯ ರಚನೆಯಿದೆ. ಇದು ಕೃತಿಯ ಆಪೂರ್ವ ಯಶಸ್ಸಿಗೆ, ಸಾಂಕೇತಿಕತೆಯನ್ನೂ ನೈಜ ವಿವರವನ್ನೂ ಒಂದೇ ಗ್ರಹಿಕೆಯಲ್ಲಿ ಹಿಡಿದಿಟ್ಟ ಶಿಸ್ತಿಗೆ ಉದಾಹರಣೆ. ಇದರಂತೆಯೆ ಬೀಡ ಕಟ್ಟುವ ಆಕರ್ಷಕ ವ್ಯಕ್ತಿ, “ಈತ’ನ ಆರ್ತ ಪ್ರಶ್ನೆಗಳಿಗೆ ಉತ್ತರ ಕೊಡದ ದೊಡ್ಡ ಹೊಟ್ಟೆ ಬರಿ ಮೈ ಇಳಿ ಮೀಸೆಯ ಈ ಆಕರ್ಷಕ ಮನುಷ್ಯ ಸಾಂಕೇತಿಕವಿರಲೇಬೇಕೆಂದು ನಮಗನ್ನಿಸುತ್ತದೆ. ಇದು ಅದೃಷ್ಟವೆ, ದೇವರೆ, ಇವುಗಳ ಎದುರು ಮನುಷ್ಯನ ನಿಸ್ಸಹಾಯಕ ಸ್ಥಿತಿಯ ಇತ್ಯಾದಿ ಭಾವನೆಗಳು ತರಂಗಗಳಂತೆ ನಮ್ಮಿಂದ ಏಳುತ್ತದೆ… …
ಕಾದಂಬರಿ ರಚನೆಯ ಕೌಶಲ್ಯಗಳಲ್ಲಿ ಹಲವು ಕನ್ನಡಕ್ಕೆ ಈ ತನಕ ಅಪೂರ್ವವಾದುವು ಗತಿ, ಸ್ಥಿತಿಯಲ್ಲಿ ಕಾಣುತ್ತವೆ. ವಾಕ್ಯರಚನೆಯೂ ಅಷ್ಟೆ : ಹಲವಾರು ಬಗೆಯ ರಚನೆಗಳು ಮನಸ್ಸು ಹರಿಯುವ ಕ್ರಮಗಳನ್ನೆಲ್ಲ ಹಿಡಿಯುತ್ತವೆ. (ಉದಾಹರಣೆಗೆ : ಪುಟ ೨೦, ೧೦೭, ೧೧೪ ನೋಡಿ.)…..
ಕಾದಂಬರಿಯೋದುತ್ತ ಹೋದಂತೆ ವಿಲಕ್ಷಣವಾದ ಅನುಭವಗಳಾಗುತ್ತವೆ. ನಮ್ಮ ಮನಸ್ಸು ಎಲ್ಲೆಲ್ಲೊ ತೆರೆದುಕೊಳ್ಳುತ್ತದೆ. ನಗರದಲ್ಲಿ ಹುಡುಗಿಯರೆಲ್ಲ ಈತನಿಗೆ ತುಂಬ ಸೊಗಸಾಗಿ ಕಾಣುತ್ತಾರೆ ; ಅಸಾಧ್ಯ ಸಖೆ ಮತ್ತು ಬೋರ್‌ಡಂನಲ್ಲಿ ಇವನು ಸುಖಿಸುವ ಘಳಿಗೆಗಳು ಈ ದಷ್ಟ ಪುಷ್ಟ ಹುಡುಗಿಯರನ್ನು ನೋಡಿದಾಗ ಮಾತ್ರ. ಮತ್ತೆ ಮತ್ತೆ ಬರುವ ಊರ ನಡುವಿನ ಕಲ್ಲು ಬೆಟ್ಟ oppressive ಆಗುತ್ತ ಹೋಗುತ್ತದೆ. (ಪುಟ ೮೫ ರಲ್ಲಿ ಬರುವ ವರ್ಣನೆ ಅದ್ಭುತವಾಗಿದೆ.) ಜೋಗದ ಜಲಪಾತವೂ ಕೂಡ ಒಂದು mystical ಅನುಭವದಂತೆ ಕಾಡುತ್ತದೆ. ಒಟ್ಟಿನಲ್ಲಿ ಅಸ್ವಸ್ಥತೆಯಲ್ಲಿ, ವಿಚಿತ್ರ ಮಾನಸಿಕ ರೋಗದಲ್ಲಿ, ಎಲ್ಲೆಲ್ಲೂ ಅನೈಸರ್ಗಿಕವಾಗಿ ಸೂಕ್ಷವಾಗಿ ಬಿಟ್ಟ ಕಣ್ಣುಗಳಿಂದ ಈ ಪ್ರಪಂಚವನ್ನು ನೋಡಿ ಬರೆದಂತಿದೆ ಕಾದಂಬರಿ. ಜೊತೆಗೇ ನಮ್ಮ ಇಂದಿನ ದೇಶದ ಬಗ್ಗೆಯೂ : ನಮ್ಮ ಬಾಸುಗಳು ಆಫೀಸುಗಳು ಗುಮಾಸ್ತರು ಇವರ ಔದಾಸೀನ್ಯದ ಬಗ್ಗೆಯೂ ಈ ಕೃತಿ ತೀವ್ರವಾಗಿ ಹೇಳುತ್ತದೆ.
ವಿವರಗಳೇ ಈ ಕಾದಂಬರಿ ತನ್ನ ಅರ್ಥದ ಉತ್ಪತ್ತಿಗೆ ಬಳಸುವ ಸಾಧನಗಳು ಎಂದು ಹೇಳಿದೆ. ವಿವರದಲ್ಲಿ ನೋಡುತ್ತ ಹೋಗುವ ಈ ಕಾದಂಬರಿಯ ಹಿಂದಿರುವ ಪ್ರಜ್ಞೆ ಒಟ್ಟಿನಲ್ಲಿ ಅನುಭವವನ್ನು ಹೇಳಲು ಪ್ರಯತ್ನಿಸಿದಾಗ್ಗೆ ಬರವಣಿಗೆ ಸುಳ್ಳೆನ್ನಿಸುತ್ತದೆ. ಬೇರೆ ಕಾದಂಬರಿಗಳಲ್ಲಿ ಸರಿಯೆನ್ನಿಸುವ ಮಾತುಗಳು ಈ ಕಾದಂಬರಿಗಳಲ್ಲಿ ಯಾಕೆ ನಿಶ್ಚೇಷ್ಟಿತವಾಗುತ್ತವೆಂಬುದನ್ನು ಯೋಚಿಸಬೇಕು. “ರೂಮಿಗೆ ಬಂದು ನೋಡಿದರೆ ಅದು ಚೆನ್ನಾಗಿರಲೇ ಇಲ್ಲ” (ಪುಟ ೧೨) : ಬೆಂಗಳೂರಿನಲ್ಲಿ ಖುಷಿ ಕ್ರಮೇಣ ಕಡಿಮೆಯಾಯಿತು” ಇಂತಹ ಸಾರಾಂಶ ರೂಪವಾದ ಮಾತುಗಳು ಕಾದಂಬರಿಯಲ್ಲಿ foreign body ಎಂದು ನನಗನ್ನಿಸುತ್ತವೆ. ವಿವರಕ್ಕೆ ಗಂಟುಬಿದ್ದ ಕಾದಂಬರಿಯ ಶಿಸ್ತು, ಕಾದಂಬರಿ ನಮಗೆ ಮೊದಲಿನಿಂದ ಕೊನೆತನಕ ಕಾಣಿಸುತ್ತ ಹೋಗುವ ಕ್ರಮವೇ ಈ ಭಾವನೆಗೆ ತಾರಣವಿರಬಹುದು-ಪ್ರಾಯಶಃ. ಯಾವುದರಲ್ಲೂ ಆಸಕ್ತಿಯಿಲ್ಲದ ಕಾದಂಬರಿಯ ‘ಈತ’ ವಿಲಕ್ಷಣ ವ್ಯಕ್ತಿ : ನಮ್ಮೆಲ್ಲರಲ್ಲೂ ಅವನ ಒಂದು ಅಂಶವಿಲ್ಲದಿದ್ದಲ್ಲಿ ಈ ಕಾದಂಬರಿ ನಮ್ಮನ್ನು ಹೀಗೆ ಕವಿದುಬಿಡುತ್ತಿರಲಿಲ್ಲ.
ಕಾದಂಬರಿಯಲ್ಲಿ ಬರುವುದೆಲ್ಲ ಬೋರ್‌ಡಂಗೆ ಕಂಡ ವಿವರಗಳೆಂದರೂ ಎಲ್ಲೆಡೆಯೂ ಇದು ನಿಜವಲ್ಲ. ಕಾಮೆಡಿಯೂ ಇದೆ. ಟ್ರಾನ್ಸ್‌ಫರ್ ಪ್ರಕರಣ (ಪುಟ ೧೧೩, ೧೦೪) : ಯಾವನೋ ಅಪರಿಚಿತ ಧಾಂಡಿಗ ವ್ಯಕ್ತಿ ರೂಮಿಗೆ ಬಂದು ಎಣ್ಣೆ ಬೇಡುವ ದೃಶ್ಯ (ಪುಟ ೪೯, ೫೦) ವಿಲಕ್ಷಣವಾದ ಕಾಮೆಡಿಯಾಗುತ್ತವೆ. ನಮಗೆ ಪರಿಚಿತವಾದ ಸಿಟ್ಟು, ತಾಪ, ಐರನಿಗಳನ್ನು ನಾಯಕನ ಮೂಲಕ ವ್ಯಕ್ತಗೊಳಿಸುತ್ತಿದ್ದೂ ಈ ಕಾದಂಬರಿ ಇವುಗಳೆಲ್ಲವನ್ನೂ ಮೀರಿದ ಬಹಳ ವಿಶೇಷವಾದ ಸಹಾನುಭೂತಿಯನ್ನು ಸಾಧಿಸುತ್ತದೆ.
ಒಂದು ಕಡೆ ಮಾತ್ರ ಗಿರಿ ಜಾರಿದ್ದಾರೆ ಎನ್ನಿಸುತ್ತದೆ. ಇದು ಸಣ್ಣ ವಿಷಯವಾದರೂ ಎದ್ದು ಕಾಣುತ್ತದೆಂದು ಹೀಗೆ ಕಾಣುವುದು ಈ ರೀತಿಯ ಕಾದಂಬರಿಯ ವೈಶಿಷ್ಟ್ಯವೆಂದು ಹೇಳುತ್ತಿದ್ದೇನೆ. ಗುಮಾಸ್ತನೊಬ್ಬ ಮೇಜನ್ನು ಕ್ಷುಲ್ಲಕ ಕಾಗದ ಪತ್ರಗಳ ಗೊಬ್ಬರಗುಂಡಿಯನ್ನಾಗಿಸುವ ದೃಶ್ಯ (ಪುಟ ೧೯, ೨೦) ‘ಈತ’ನ ಕಣ್ಣೆದುರು ನಡೆಯುವುದಿಲ್ಲ. ಆದ್ದರಿಂದ ಈ ವಿವರಗಳು ಯಾಕೆಂದು ನಮಗೆ ಅರ್ಥವಾಗುವುದಿಲ್ಲ.
ಒಂದೇ ಒಂದು ಸಾರಿ ಓದಿ ಅತ್ಯುತ್ಸಾಹದಲ್ಲಿ ಬರೆದ ಮಾತುಗಳು ಮೇಲಿನವು. ಆದರೆ ಇನ್ನೊಮ್ಮೆ ಓದಬೇಕು; ಗೆಳೆಯರ ಜೊತೆ ಚರ್ಚಿಸಬೇಕು. ನನ್ನ ಉತ್ಸಾಹವನ್ನು ಓದುಗರಲ್ಲಿ ಹಂಚಿಕೊಳ್ಳುವುದು ಈಗ ಸದ್ಯದ ನನ್ನ ಉದ್ದೇಶವೇ ಹೊರತು ಕೃತಿಯ ವಸ್ತುನಿಷ್ಠ ವಿಮರ್ಶೆಯಲ್ಲ. ಯಾಕೆಂದರೆ ಇಡೀ ಕಾದಂಬರಿ ಕಾಫ್ಕ ಕಮೂರಿಂದ ಕಲಿತ ಒಂದು ಬೌದ್ದಿಕ ಆಟವೆಂದೂ, ತುಂಬ ಬುದ್ಧಿಶಾಲಿಯೊಬ್ಬ ಆಡಿದ ಆಟವೆಂದು ಮೆಚ್ಚಬೇಕಂದೂ ವಾದಿಸಬಹುದೇನೊ. ಆದರೆ ನನ್ನ ಮಟ್ಟಿಗೆ ಈ ಕಾದಂಬರಿ ಮನಸ್ಸನ್ನು ಗಾಢವಾಗಿ ಕಲಕಿದೆ.
ವಸ್ತುನಿಷ್ಠ ವಿಮರ್ಶೆಯೆಂದರೂ, ಕೃತಿಪರೀಕ್ಷೆಯೆಂದರೂ ನನಗೆ ಈಚೆಗೆ ಬೇಜಾರು. ನಮ್ಮ ವಿಮರ್ಶೆಯ ಭಾಷೆ ಎಷ್ಟು ಉಸಿರು ಕಟ್ಟಿಸುತ್ತಿದೆ ನೋಡಿ. ಯಾರಿಗಾದರೂ ಒಂದು ಪದ್ಯವನ್ನೊ, ಕಥೆಯನ್ನೊ ಕೊಡಿ, ಅವರು ಅದನ್ನು ಓದಿ, ತುಂಬ ಯೋಚಿಸುವ ಗಂಟುಮುಖ ಮಾಡಿ ಇನ್ನೊಮ್ಮೆ ಓದಬೇಕು ಅನ್ನುತ್ತಾರೆ. ಎಲ್ಲಿ ಏನು ಹೇಳಿದರೆ ಸಿಕ್ಕುಬೀಳುತ್ತೇನೋ ಎನ್ನುವ ದಿಗಿಲು. ಉತ್ಸಾಹವೇ ತಪ್ಪನ್ನುವ ಧೋರಣೆ ಕಂಡರೆ ರೇಗುತ್ತದೆ. ಭೇದಿ, ಇಲ್ಲವೇ ಮಲಬದ್ಧತೆಯಿಂದ ನಮ್ಮ ವಿಮರ್ಶಾಪ್ರಜ್ಞೆ ನರಳುತ್ತಿದೆ.
ಎಲ್ಲ ಬಗೆಯ ಸಾಹಿತ್ಯದಲ್ಲೂ ಒಂದಲ್ಲ ಒಂದು ಗುಣವಿದೆ. ಅದನ್ನು ಗ್ರಹಿಸುವುದನ್ನು ಕಲಿಯಬೇಕು ಎನ್ನುವ ಅಕಡೆಮಿಕ್ ವಿಮರ್ಶಕರು ನಿಜವಾಗಿ ಏನನ್ನೂ ಮೆಚ್ಚಲಾರರು. ಪಕ್ಷಪಾತ ಯಾಕೆ ತಪ್ಪು ? ನಮ್ಮ ಅತ್ಯುತ್ತಮ ವಿಮರ್ಶೆ ಬರುವುದು ನಾವು ತುಂಬ ಮಚ್ಚುವ ಸಾಹಿತ್ಯವನ್ನು ತೀವ್ರವಾಗಿ ಅನುಭವಿಸಿದಾಗ ; ಎಷ್ಟು ವಿಮರ್ಶಕ ಧೋರಣೆಯಿದ್ದರೂ ಕೃತಿಯ ಬಗ್ಗೆ ಪಕ್ಷಪಾತಿಯಾಗಬೇಕೆಂದೂ ಉತ್ಸಾಹ ಹುಟ್ಟಿದಾಗ, ಎಲಿಯಟ್, ಪೌಂಡ್, ಲೀವಿಸ್ ಇವರ ಅತ್ಯುತ್ತಮ ವಿಮರ್ಶೆಯಲ್ಲಿ ಈ ಪಕ್ಷಪಾತ, ತುಂಬ ವಿಮರ್ಶಕ ಪ್ರಜ್ಞೆಯಿದ್ದವನ ಪಕ್ಷಪಾತ ಕಾಣಿಸುತ್ತದಲ್ಲವೆ ? ನವ್ಯ ಸಾಹಿತ್ಯದ ಜೀವಂತಿಕೆ ಸಣ್ಣಗೆ ಉರಿಯುತ್ತಿರುವಾಗ ಸಂಕ್ರಾಂತಿ, ಗತಿ ಸ್ಥಿತಿ, ಮಹಾಪ್ರಸ್ಥಾನಗಳಿಂದ ಕನ್ನಡದ ಬಗ್ಗೆ ಭರವಸೆ ಹುಟ್ಟುತ್ತದಲ್ಲವೆ ? ಇವುಗಳ ಬಗ್ಗೆ ವಿವೇಕದ ವಿಮರ್ಶೆಯ ಜೊತೆಗೆ ಉತ್ಸಾಹದಿಂದಲೂ ಮಾತಾಡುವುದು ಸರಿಯಲ್ಲವೆ? ಅವಶ್ಯವಲ್ಲವೆ ?

Close

ನಿಟ್ಟುಸಿರ ಗರ್ಜನೆ

ನಿಟ್ಟುಸಿರ ಗರ್ಜನೆ

ಸೀ. ಹೊಸಬೆಟ್ಟು

ಆಲದೆಲೆ ಮೇಲೆ
ಕಾಲ ಹೆಬ್ಬೆರಳನುಂಡು
ಅಲೆಯ ಸೆಳವಿನಲಿ ತೇಲಿದನು ಹಳವ!
ಇವನಿಗೆ,
ಬೆಳುದಿಂಗಳಿನ ಬುಗ್ಗೆ ಹಾಲೂಡಿ,
ತೂಗು ನಿದ್ದೆಯ ತೊಟ್ಟಿಲಿನ ಬಳ್ಳಿಯಲಿ
ಹೆಜ್ಜೆ ಹೂ ಅರಳಿ, ನಕ್ಕಾಗ-
ಲಂಗರಿನ ಲಗಾಮು ಬಿಗಿದಿತ್ತು.
ರೇಶ್ಮೀಯೆಳೆ ದಾರಗಳ ಜಾಲ
ಕಟ್ಟಿತ್ತು ಸುತ್ತ ಬೇಲಿ!

ಕಾಲ ಕಾಲೆಳೆದಂತೆ, ಅಂಗಣದ ನವಿರು ಮೈ ಕೆದಕಿ
ಗುಟುರು ಹಾಕಿತ್ತು ಮುಳ್ಳುಹಂದಿ !
ನಡುಬಯಲಲ್ಲಿ ಕಾಲ್ಕಟ್ಟಿ
ಬಾವಲಿ ಬದುಕು-
ರಾತ್ರಿಗಳನೆಣಿಸಿ
ಹಗಲುಗುರುಡಾಗಿ ತುಯ್ದಾಡುತ್ತಿದೆ!

ತುಂಬಿಕೊಳ್ಳು ಬುಟ್ಟಿ, ಮುಚ್ಚಿಟ್ಟ ಗುಂಬಜವಾಗಿ,
ಪಿಸುಗುಟ್ಟುವ ಗ್ಯಾಲರಿಯಲಿ
ನಿಟ್ಟುಸಿರೇ ಗರ್ಜನೆಯಾಗಿ-
ಕಾಷ್ಠವಾಗುತಿದೆ ಕಾಂಡ !
ಬಿದಿರ ತುಂಡಾಗಿ ಕೊಳಲು !

Close

ಧರ್ಮದ ಕಲ್ಪನೆ

ಧರ್ಮದ ಕಲ್ಪನೆ

ಗೋಪಾಲಕೃಷ್ಣ ಅಡಿಗ

‘ಧರ್ಮ’ ಎಂಬ ಶಬ್ದವನ್ನು ನಾನಾ ವಿಧದ ಜನರು ನಾನಾ ಅರ್ಥಗಳಲ್ಲಿ ಬಳಸಿ ಅದು ಕುಲಗೆಟ್ಟಿದೆ ಎಂಬ ಮಾತು ನಿಜ. ಆದರೆ ಆ ಶಬ್ದದ ಅರ್ಥ, ಆ ಅರ್ಥದ ಹಿಂದಿರುವ ಕಲ್ಪನೆ ನಮ್ಮ ಸಂಸ್ಕೃತಿಗೆ ವಿಶಿಷ್ಟವಾದುದೂ ಅರ್ಥಪೂರ್ಣವಾದುದೂ ಸಾರ್ವಕಾಲಿಕ ಪ್ರಮಾಣತ್ವಉಳ್ಳದ ಎಂಬುದನ್ನು ಮರೆಯುವುದು ಸರಿಯಲ್ಲ. ನಮ್ಮ ಸಂಸ್ಕೃತಿಯ ಅಂಗವಾಗಿ, ನಮ್ಮ ಜನವನ್ನು ಒಂದುಗೂಡಿಸುವ ಒಂದು ಮೂಲ ಸೂತ್ರವಾಗಿರುವ ಇಂಥ ಕಲ್ಪನೆಗಳನ್ನು ನಿಷ್ಕಾರಣವಾಗಿ ಅಲ್ಲಗಳೆವ ಪುರೋಗಾಮಿ ಪ್ರವೃತ್ತಿ ಸಲ್ಲುವಂಥದಲ್ಲ. ಆದಕಾರಣ ಈ ಶಬ್ದವನ್ನು ಮುಖ್ಯವಾಗಿ ಅದರ ಅರ್ಥವ್ಯಾಪ್ತಿಯನ್ನು ವಿಶ್ಲೇಷಿಸಿ ತಿಳಿಯುವುದು ಅಗತ್ಯ.
ಇಂಗ್ಲಿಷಿನಲ್ಲಿರುವ ರಿಲೀಜನ್ ಎಂಬ ಶಬ್ದಕ್ಕೆ ಸಮವಾದ ಅರ್ಥವುಳ್ಳ ಶಬ್ದ ಇದಲ್ಲ ;ಆ ಅರ್ಥವನ್ನೂ ಒಳಗೊಂಡು ಇನ್ನೂ ಬಹಳವನ್ನು ವ್ಯಾಪಿಸುವಂಥದು. ಧರ್ಮದ ಕಲ್ಪನೆಯ ಉಗಮ ಇರುವುದು ಪ್ರೀತಿ ವಿಶ್ವಾಸ ಗೆಳೆತನ ಮುಂತಾದ ಪ್ರವೃತ್ತಿಗಳಲ್ಲಿ. ಮನುಷ್ಯ ತನ್ನ ಸುತ್ತಮುತ್ತಲಿರುವ, ಈ ಇಡೀ ಜಗತ್ತಿನ ಆದ್ಯಂತ ಹಬ್ಬಿರುವ, ತನಗೆ ಸಮಾನವಾದಂಥ ಮೂಲಗುಣಗಳುಳ್ಳ ಇತರ ಮನುಷ್ಯರನ್ನು ಗಣನೆಗೆ ತೆಗೆದುಕೊಂಡು ಅವರ ಜೊತೆಗೆ ಸಾಂಗತ್ಯವನ್ನು ಏರ್ಪಡಿಸಲು ತಕ್ಕ ಸೂತ್ರಗಳನ್ನೇರ್ಪಡಿಸಿಕೊಳ್ಳಲು ಹೆಣಗುತ್ತ ಬಂದಿದ್ದಾನೆ–ಇದು ಮಾನವ ಧರ್ಮ ಅಥವಾ ಹ್ಯೂಮನಿಸಮ್ ; ಧರ್ಮ ಇದಕ್ಕೂ ಮುಂದೆ ಹೋಗುತ್ತದೆ. ನಮ್ಮ ಸುತ್ತಮುತ್ತಲು ಇರುವುದು ಮನುಷ್ಯರು ಮಾತ್ರವೇ ಅಲ್ಲ-ಪಶು ಪಕ್ಷಿಗಳು, ವನಸ್ಪತಿಗಳು : ಹೊಳೆ ಹಳ್ಳ ಬೆಟ್ಟ ಸಮುದ್ರಗಳು ;
ಮೇಲೆ ನೋಡಿದರೆ ಕಾಣುವ ಆಕಾಶ. ಅಲ್ಲಿ ತೇಲುವ ಬಿಳಿ ಕರಿ ಮೋಡಗಳು ; ಮೋಡಗಳಾಚೆ ಆಗಾಗ ಗೋಚರಿಸುವ ನೀಲಿ ವಿಶಾಲ ಆಕಾಶ: ಆಕಾಶದಲ್ಲಿ ಸೂರ್ಯ ಚಂದ್ರರು, ಕೋಟಿ ಕೋಟಿ ನಕ್ಷತ್ರಗಳು :-ಇವೂ ಹೌದು. ಇವೆಲ್ಲ ಸೇರಿದರೆ ವಿಶ್ವ. ಈ ವಿಶ್ವದ ಒಂದು ಅಂಶ ಮಾನವ ಕುಲ; ಆ ಮಾನವ ಕುಲದ ಒಂದು ಎಸಳು ಪ್ರತ್ಯೇಕ ವ್ಯಕ್ತಿ. ಆದ ಕಾರಣ ಒಬ್ಬ ವ್ಯಕ್ತಿ ಈ ಎಲ್ಲದರ ಜೊತೆಯೂ ಸಾಂಗತ್ಯವನ್ನೇರ್ಪಡಿಸಿಕೊಂಡು ಅವುಗಳಲ್ಲಿ ಒಂದಾಗಿ ಬದುಕಲು ಸಾಧ್ಯವಾದರೆ ಮಾತ್ರ ಅವನ ಬದುಕು ಸಾರ್ಥಕ. ಈ ಹೊಂದುವಳಿಕೆಯ ಸೂತ್ರವೇ ಧರ್ಮ. ಇಂಥ ಹೊಂದುವಳಿಕೆ ಹೇಗಿರಬೇಕೆಂಬುದನ್ನು ಆಯಾ ವ್ಯಕ್ತಿಯೇ ನಿರ್ಧರಿಸಿಕೊಳ್ಳಬಹುದು ; ಆದರೆ ಈ ಹೊಂದುವಳಿಕೆಯ ಆಗತ್ಯದ ಬಗ್ಗೆ ಎಚ್ಚರವಿರುವುದೇ ಧರ್ಮ. ಧರ್ಮದ ಈ ಅರ್ಥವನ್ನು ತಿಳಿಯದೆ ಅದನ್ನು ನಿರಾಕರಿಸಿದರೆ ಅದು ವಿವೇಕವಲ್ಲ. ಈ ವಿಶ್ವದಲ್ಲಿ ತಾನೊಬ್ಬನೇ ಇರುವುದು ಎಂಬ ಹಾಗೆ ಯಾವ ಮಾನವ ವ್ಯಕ್ತಿಯೂ ಭ್ರಮಿಸಬಾರದು ಎಂಬ ಎಚ್ಚರವನ್ನು ಸನಾತನವಾಗಿ ಇಡುವಂಥಮ ಧರ್ಮ. ಈ ಧಾರಣ ಸೂತ್ರವನ್ನು ಪ್ರತಿ ಜನಾಂಗವೂ ತಲೆಮಾರೂ ತನಗೆ ಬೇಕಾದ ಹಾಗೆ ರೂಪಿಸಿಕೊಳ್ಳಬಹುದು ; ಆದರೆ ಹಾಗೆ ಮಾಡುವಾಗ ನಮ್ಮ ಪ್ರಜ್ಞಾಪರಿಧಿಯೊಳಕ್ಕೆ ಬರುವ ಯಾವೊಂದು ಸತ್ಯ ಸಂಗತಿಯನ್ನೂ ನಿರಾಕರಿಸಬಾರದು. ಹಾಗೆ ನಿರಾಕರಿಸದೆ ಚಿಂತಿಸಿದಾಗ, ಈ ಇಡೀ ಸೃಷ್ಟಿಯ ಹಿನ್ನೆಲೆಯಲ್ಲಿ ವ್ಯಕ್ತಿಯ ಮತ್ತು ಮಾನವ ಕುಲದ ಅಂತರಂಗ ಬಹಿರಂಗಗಳೆರಡನ್ನೂ ಗಣನೆಗೆ ತಗದುಕೊಂಡು ಪರಿಭಾವಿಸಿದಾಗ ಕಂಡುಬರುವ ಸೂತ್ರ ಎಲ್ಲ ಕಾಲಕ್ಕೂ ಎಲ್ಲ ದೇಶಕ್ಕೂ ಒಂದೇ ಆದಕಾರಣ ಇದು ‘ಸನಾತನ ಧರ್ಮ’ ಎಂದು ನಮ್ಮ ಹಿರಿಯರು ಹೇಳಿದ್ದಾರೆ. ನಾವೂ ಯೋಚಿಸಿ, ಯೋಚಿಸಿದಾಗ ಬೇರೆ ಸೂತ್ರ ಹೊಳೆಯುತ್ತದೋ, ಆ ಸೂತ್ರ ಎಲ್ಲವನ್ನೂ, ಜಡ ಚೇತನ, ಆಣು, ರೇಣು, ತೃಣಕಾಷ್ಠಗಳೆಲ್ಲವನ್ನೂ ಒಳಗೊಳ್ಳಬಲ್ಲುದೇ ಎಂದು ನೋಡಿ ಆನಂತರ ಇದು ‘ಸನಾತನ’ವಲ್ಲ ಎಂದು ಹೇಳಬಹುದು. ಅಲ್ಲಿಯತನಕ ಏನನ್ನೇ ಆಗಲಿ, ಹೆಳುವುದು ಹೇಗೆ ? ಹೇಳಿದರೆ ಅದು ವೈಜ್ಞಾನಿಕ
ಎನ್ನಿಸಿಕೊಳ್ಳಬಹುದೆ ?
ಈ ವಿಶ್ವ ವಿಶಾಲತೆಯ ಚೌಕಟ್ಟಿನೊಳಗೆ ಧರ್ಮ ಎಲ್ಲ ಸಣ್ಣ ಪುಟ್ಟ ಸಂಗತಿಗಳನ್ನು ಒಳಗೊಳ್ಳುತ್ತದೆ. ಅದು ವ್ಯಕ್ತಿ ವಿಶಿಷ್ಟತೆಯನ್ನು ಗುರುತಿಸುವಾಗ ವ್ಯಕ್ತಿ ಧರ್ಮವಾಗುತ್ತದೆ. ಗುಂಪುಗಳ ವಿಶೇಷ ಲಕ್ಷಣಗಳನ್ನು ಸಂಶೋಧಿಸುವಾಗ ಜಾತಿ ಧರ್ಮವಾಗುತ್ತದೆ; ವಿದ್ಯಾರ್ಥಿ, ಗೃಹಸ್ಥ, ಸನ್ಯಾಸಿಗಳ ಬದುಕು ಸಾರ್ಥಕವಾಗುವ ಸೂತ್ರಗಳನ್ನು ವಿವೇಚಿಸುವಾಗಲೂ ಆ ಆ ವ್ಯವಸ್ಥೇಯ ಧರ್ಮ ಎನ್ನಿಸಿಕೊಳ್ಳುತ್ತದೆ. ಸುಡುವುದು ಬೆಂಕಿಯ ಧರ್ಮ ಎನ್ನುವಾಗ ಅದು ವೈಜ್ಞಾನಿಕವೂ ಆಗಿ ವಸ್ತುಲಕ್ಷಣಗಳನ್ನು ನಿರೂಪಿಸುತ್ತದೆ. ಈ ಸೃಷ್ಟಿಯಲ್ಲಿರುವ ಪ್ರತಿಯೊಂದಕ್ಕೂ ತನ್ನದೇ ಆದ ವಿಶಿಷ್ಟ ಲಕ್ಷಣಗಳಿದ್ದು ಅದು ಇನ್ನೊಂದರಿಂದ ಪ್ರತ್ಯೇಕವಾಗಿ ಇರುತ್ತದೆ. ವ್ಯಕ್ತಿಗಳೂ ಅಷ್ಟೆ. ಒಬ್ಬನು ಇನ್ನೊಬ್ಬನ ಹಾಗೆ ತದ್ವತ್‌ ಇರುವದಿಲ್ಲ. ಒಬ್ಬ ವ್ಯಕ್ತಿಯನ್ನು ಇನ್ನೊಬ್ಬನಿಂದ ಬೇರ್ಪಡಿಸುವ ಸೂಕ್ಷ್ಮವಾದ ಆ ವಿಶಿಷ್ಟ ಲಕ್ಷಣವೇ ಆ ವ್ಯಕ್ತಿಯು ‘ಸ್ವಧರ್ಮ’ ಎನ್ನಿಸಿಕೊಳ್ಳುತ್ತದೆ. ಆ ವಿಶೆಷ ವಿಕಾಸವಾಗುವುದರ ಮೂಲಕವೇ ಆ ವ್ಯಕ್ತಿಯ ಬದುಕು ಸಾರ್ಥಕವಾಗಬಲ್ಲುಗು ; ಹಾಗೆ ವಿಕಾಸವಾಗಲು ತನ್ನ ಅವಕಾಶ ಅನಿರ್ಬದ್ಧವಾಗಿ ದೊರೆಯಬೇಕೆಂದು ಸೂಚಿಸುವಾಗ ಧರ್ಮ ಪ್ರಜಾತಂತ್ರದ ವ್ಯಕ್ತಿಸ್ವಾತಂತ್ರ್ಯ ಎಂಬ ಮೂಲ ಮೌಲ್ಯವನ್ನು ಒಳಗೊಳ್ಳುತ್ತದೆ. ಆದರೆ ವ್ಯಕ್ತಿಯೊಬ್ಬನೇ ಸರ್ವತಂತ್ರ ಸ್ವತಂತ್ರನಾಗಿರಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಮನ್ನಿಸಿ ಅದು ಸಮಾಜದ ಧಾರಣ ಸೂತ್ರವನ್ನು ಸಂಶೋಧಿಸುತ್ತದೆ. ಹಾಗಾಗಿ ಸಮಾಜವಾದದ ತಿರುಳಾದ ಸಮಾನತೆಯ ಮೌಲ್ಯವನ್ನು ಒಳಗೊಂಡು ವ್ಯಕ್ತಿ ಮೌಲ್ಯ ಸಮಾಜ ಮೌಲ್ಯಗಳಲ್ಲಿ ಸಾಂಗತ್ಯ ತರಲು ಮೃತ್ಯುವಿನಾಚೆಯ ಅದೃಶ್ಯ ಲೋಕದ, ಮರಣೋತ್ತರ ಸ್ಥಿತಿಯನ್ನು ಸಂಶೋಧಿಸುತ್ತದೆ. ಇಹಪರಗಳ ಹೊಂದುವಳಿಕೆ ಎಂಬ ಮಾತು ಕೇವಲ ಅಜ್ಞಾನದ ಅಥವಾ ವರ್ಗ ಸ್ವಾರ್ಥದ ಅನುಸಂಧಾನದಿಂದ ಬರುವಂಥದಲ್ಲಿ : ಏಕೆಂದರೆ ಎಲ್ಲ ವರ್ಗದ ಜನರೂ ಸಾಯುತ್ತಾರೆ : ಇಲ್ಲಿನ ಬದುಕೇ ಯಾರಿಗೂ ಪರಮ ಆಗಲಾರದು-ಆದ ಕಾರಣ.
ಹೀಗೆ ಧರ್ಮದ ಕಲ್ಪನೆ ಎಲ್ಲ ಕಾಲಕ್ಕೂ ಎಲ್ಲ ಅವಸ್ಥೆಗಳಿಗೂ ಸಲ್ಲುವಂಥದು. ಅಲ್ಲದೆ ಇದು ಅಂಧವಾಗಿ ನಂಬಬೇಕೆಂದು ಬಲವಂತವಾಗಿ ನಮ್ಮ ಮೇಲೆ ಹೇರುವ ಸೂತ್ರ ಸಮುಚ್ಚಯವೂ ಅಲ್ಲ. ಯಾರೇ ಆಗಲಿ ತಕ್ಕಷ್ಟು ಬುದ್ಧಿಶಕ್ತಿ ಇದ್ದು ಈ ವಿಶ್ವದ ಸನ್ನಿಕರ್ಷದಲ್ಲಿ ಮಾನವನ ಬದುಕನ್ನು ಕುರಿತು ಅದರ ಎಲ್ಲ ಸ್ತರಗಳನ್ನೂ ಗಮನದಲ್ಲಿ ಟ್ಟುಕೊಂಡು ಭೂತ ವರ್ತಮಾನ ಭವಿಷ್ಯತ್ತುಗಳ ಸರಣಿಯನ್ನೂ ಮನುಷ್ಯನ ಆಂತರಿಕ ಬಾಹ್ಯ ಪ್ರಪಂಚಗಳ ಪರಸ್ಪರ ಸಂಬಂಧ ಘರ್ಷಣೆಗಳನ್ನೂ ಸೂಕ್ಷ್ಮವಾಗಿ ಅಭ್ಯಾಸ ಮಾಡಿದರೆ ಈ ಎಲ್ಲಕ್ಕೂ ಅದಕ್ಕದಕ್ಕೆ ಸಹಜ ಸೂತ್ರಗಳು ಯಾವುವು. ಎಲ್ಲವನ್ನೂ ಒಂದುಗೂಡಿಸುವ ಸೂತ್ರ ಯಾವುದು ಎಂದು ತಿಳಿಯಬಲ್ಲದು. ಆದಕಾರಣ ಈ ವಸ್ತುನಿಷ್ಟ ಸೂತ್ರಗಳು ಯಾವೊಂದು ಮತದ, ಕಾಲದ, ಜನಾಂಗವ ಅಥವಾ ವಾದದ ಸಂದರ್ಭದಲ್ಲಿ ಮಾತ್ರ ಸಲ್ಲುವಂಥವಲ್ಲ. ಆದಕಾರಣ ಇವು ಸನಾತನ. ಈಗ ‘ಸನಾತನ’ ಎಂದು ನಮ್ಮ ಧರ್ಮ ಹೇಳುವ ಸೂತ್ರಗಳು ಸರಿಯೋ ಆಲ್ಲವೋ ಎಂದು ತಕ್ಕ ಅರ್ಹತೆಯುಳ್ಳವರು ಪರೀಕ್ಷಿಸಿ ನಿರ್ಧರಿಸಬಹುದು. ಇವು ಸವಿಯಲ್ಲವಾದರೆ ಬೇರೆ ಸೂತ್ರಗಳನ್ನು ಕಂಡುಕೊಳ್ಳಬಹುದು. ಆದರೆ ಮುಖ್ಯ ಪ್ರಶ್ನೆ ಇದು : ಆಂಥ ಸೂತ್ರಗಳ ಅಗತ್ಯವುಂಟೋ ಇಲ್ಲವೋ ? ಕೇವಲ ಆರ್ಥಿಕವಾಗಿ ಅಥವಾ ಯಾವುದಾದರೊಂದು ವರ್ಗದ ತಾತ್ಕಾಲಿಕ ಲಾಭನಷ್ಟಗಳನ್ನು ಮಾತ್ರ ಗಣನೆಗೆ ತಂದುಕೊಂಡು ಯೋಚಿಸಿದರೆ ಸಾಕೆ ಎಂಬುದೇ ಪ್ರಶ್ನೆ. ಆ ರೀತಿಯಲ್ಲಿ ಮಾನವನ ಜೀವನವ ಅಂಶ ಮಾತ್ರವನ್ನು ಗಣನೆಗೆ ತದುಕೊಂಡು ಅದರ ಇಡಿಗೆ ಸಲ್ಲಬಲ್ಲ ಸೂತ್ರಗಳನ್ನು ಕಂಡುಕೊಳ್ಳುವುದು ಸಾಧ್ಯವಲ್ಲ ಎಂಬ ಮಾತನ್ನು ಮಾತ್ರ ಧರ್ಮ ಹೇಳುತ್ತದೆ. ಆದಕಾರಣ ಧರ್ಮ ಅಧಿಕಾರ ಪೀಠದಿಂದ ನಮ್ಮ ಮೇಲೆ ಹೇರುವ ಬಾಬತ್ತು ಅಲ್ಲ: ನಾವು ನಾವೇ ನಮ್ಮ ಸ್ವಂತ ಬುದ್ದಿಯಿಂದ ಕಂಡುಕೊಳ್ಳಬಹುದಾದದ್ದು.
ಉದಾಹರಣೆಗೆ ಆಹಾರವನ್ನು ಕುರಿತ ‘ಧರ್ಮ’ದ ಬಗ್ಗೆ ಚಿಂತಿಸಬಹುದು. ಹಸಿವು ಪ್ರಕೃತಿ ಸಹಜವಾಗಿ ಎಲ್ಲರಿಗೂ ಸಮಾನವಾಗಿರುವುದು ನಿಜ. ಆದರೆ ಹಸಿವಾಗಿದೆ ಎಂದು ಏನನ್ನಾದರೂ, ಕೈಗೆ ಸಿಕ್ಕಿದ್ದನ್ನು ತಿನ್ನಬಹುದೇ ? ಅದು ರುಚಿಯಾಗಿದ್ದರೆ ಸಾಕೆ ? ಅದನ್ನು ಆರೋಗ್ಯ ರಕ್ಷಣೆಗೂ ದೇಹದ ಬೆಳವಣಿಗೆಗೂ ತಕ್ಕ ಹಾಗೆ ತಕ್ಕ ಪ್ರಮಾಣದಲ್ಲಿ ತಕ್ಕ ವೇಳೆಗಳಲ್ಲಿ ತೆಗೆದುಕೊಳ್ಳುವುದು ಅಗತ್ಯವಲ್ಲವೊ ? ದೇಹವೊಂದು ಬೆಳೆದರೆ ಸಾಕೆಂದು ಹೇಳಲು ಸಾಧ್ಯವೇ ? ಮನಸ್ಸು, ಬುದ್ದಿ, ಅಂತಃಕರಣ ಇವುಗಳ ಮೇಲೂ ಆಹಾರದ ಪರಿಣಾಮ ಆಗುತ್ತದೆ ಹೇಗೆ ? ಆಗುವುದಾದರೆ ನಾವು ತೆಗೆದುಕೊಳ್ಳುವ ಆಹಾರದ ಬಗ್ಗೆ ಸರಿಯಾಗಿ ವಿವೇಚಿಸಿ ದೇಹ ಮನಸ್ಸುಗಳೆರಡರ ಬೆಳವಣಿಗೆಗೂ ತಕ್ಕ ಆಹಾರ ತೆಗೆದುಕೊಳ್ಳುವುದು ಅಗತ್ಯವಾಗುತ್ತದೆ. ಈ ಪ್ರಶ್ನೆಗೆ ಉತ್ತರ ಹುಡುಕುವಾಗ ನಮ್ಮ ಬದುಕು ಸಾರ್ಥಕವಾಗುವುದು ಹೇಗೆ. ಬದುಕಿಗೆ ಪರಮ ಮೌಲ್ಯ-ಪರಮ ಪುರುಷಾರ್ಥ ಯಾವುದು ಎಂಬ ಬಗ್ಗೆಯೂ ಯೋಚಿಸಬೇಕಾಗುತ್ತದೆ. ನಾವು ಯಾವುದನ್ನು ಪರಮಪುರುಷಾರ್ಥ ಎಂದು ಭಾವಿಸುತ್ತೇವೋ ಆ ಪುರುಷಾರ್ಥ ಸಾಧನೆಗೆ ತಕ್ಕ ಮನಸ್ಸೂ ದೇಹವೂ ಅಗತ್ಯವಾಗುವುದಿಲ್ಲವೋ ? ಹಾಗಾದರೆ ನಮಗೆ ಯಾವ ಆಹಾರ ಉತ್ತಮವಾದದ್ದು ಎಂದು ನಿರ್ಧರಿಸುವಾಗ ಪುರುಷಾರ್ಥ ಚಿಂತನವೂ ಆಗತ್ಯವಾಗುತ್ತದೆ. ಈ ಎಲ್ಲ ಚಿಂತನೆ, ವಿವೇಚನೆ, ತುಲನೆ ಇವುಗಳ ಮೂಲಕ ನಾವು ನಮಗೆ ಬೇಕಾದ ‘ಆಹಾರ ಧರ್ಮ’ವನ್ನು ರೂಪಿಸಿಕೊಳ್ಳಬಹುದು. ಇದು ಬಹು ಮಟ್ಟಿಗೆ ನಮ್ಮ ಭಾವನೆ. ಮೋಹ ಮಮಕಾರಗಳನ್ನು ಮೀರಿದ ವಸ್ತುಸ್ಥಿತಿಯನ್ನು ಅವಲಂಬಿಸಿರುವುದರಿಂದ ತಕ್ಕ ಪ್ರಯೋಗಗಳ ಮೂಲಕ ನಾವು ಸಿದ್ಧಪಡಿಸಿಕೊಳ್ಳುವ ಈ ಧರ್ಮ ಬಹುಶಃ ಒಬ್ಬೊಬ್ಬರದ್ದೂ ಬೇರೆ ಬೇರೆ ಆಗದೆ ಒಂದೆ ಆಗಬಹುದು ; ಎಲ್ಲ ಕಾಲಕ್ಕೂ ಎಲ್ಲ ಜನಕ್ಕೂ ಸಲ್ಲುವಂಥದೂ ಆಗಬಹುದು.
ಮನುಷ್ಯನ ಬುದ್ದಿ, ತಪಸ್ಸು, ಪ್ರತಿಭೆ ಕಂಡಕೊಳ್ಳುವಂಥ ಸೂತ್ರಗಳೂ ತತ್ವಗಳೂ ನಿರ್ದುಷ್ಟವಾಗಿರುತ್ತವೆ. ಅವುಗಳಲ್ಲಿ ಬದಲಾವಣೆ, ಸುಧಾರಣೆ, ಕ್ರಾಂತಿಕಾರಿ ಪರಿವರ್ತನೆ ಇವು ಅಗತ್ಯವಲ್ಲ ಎಂದು ಹೇಳುವುದು ಈ ಮಾತುಗಳ ಉದ್ದೇಶವಲ್ಲ. ಒಂದುವೇಳೆ ಸನಾತನವಾದೊಂದು ತತ್ವವನ್ನು ಹಿಂದಿನವರು ಕಂಡುಹಿಡಿದಿದ್ದರೂ ಅದನ್ನು ವಿಮರ್ಶೆಯಿಲ್ಲದೆ ಸ್ವೀಕರಿಸುವುದೂ ಸರಿಯಲ್ಲ ; ಹಾಗೆಯೇ ವಿಮರ್ಶೆಯಿಲ್ಲದೆ ನಿರಾಕರಿಸುವುದೂ ಸರಿಯಲ್ಲ. ಆ ತತ್ವವನ್ನೇ ಮತ್ತೆ ಮತ್ತೆ ನಾವು ನಮ್ಮ ಸ್ವಂತ ಪ್ರಯೋಗ ಪರಿಶ್ರಮಗಳ ಮೂಲಕ ಕಂಡುಕೊಳ್ಳುವುದೂ ನಮ್ಮ ಸ್ವತಂತ್ರ ಬುದ್ಧಿಗೆ ಸಹಜ. ಅಂಥ ಕೆಲಸವನ್ನು ಕೈಗೊಳ್ಳುವಾಗ ನಮ್ಮ ಹಿಂದೆ ಈ ಬಗ್ಗೆ ಯಾವ ಯಾವ ಪ್ರಯೋಗ ಸಂಶೋಧನೆಗಳು ನಡೆದಿವೆ, ಯಾವ ಸಿದ್ಧಾಂತಗಳು ರೂಪಿತವಾಗಿವೆ ಎಂದು ತಿಳಿದು ಮುಂದುವರಿಯುವುದು ವೈಜ್ಞಾನಿಕ ದೃಷ್ಟಿಗೆ ಸಹಜ. ನಾವು ಇಂದಿನವರು ಮಹಾ ಧೀಮಂತರು, ಹಿಂದಿನವರು ದಡ್ಡರು, ಅವರಿಂದ ನಾವು ಕಲಿಯಬೇಕಾದ್ದು ಏನೂ ಇಲ್ಲ ಎಂದು ಹೊರಡುವುದು ಮೂರ್ಖತನವೇ ಸರಿ.

Close
By kanaja|2021-01-06T19:39:41+05:30March 22, 2018|ಕನ್ನಡ|0 Comments

ಈ ವಿಷಯವನ್ನು ಆಸಕ್ತರೊಂದಿಗೆ ಹಂಚಿಕೊಳ್ಳಿ ​!! ನಿಮ್ಮ ಉಪಕರಣವನ್ನು ಆಯ್ಕೆ ಮಾಡಿ

FacebookTwitterLinkedInRedditWhatsAppTumblrPinterestVkXingEmail

About the Author: kanaja

Related Posts

  • ಸಂಪುಟ-೩೪

    ಸಂಪುಟ-೩೪

  • ಸಂಪುಟ-೩೩

    ಸಂಪುಟ-೩೩

  • ಸಂಪುಟ-೩೨

    ಸಂಪುಟ-೩೨

  • ಸಂಪುಟ-೩೧

    ಸಂಪುಟ-೩೧

Leave A Comment Cancel reply

ವಿಭಾಗಗಳು

ಹೊಸ ಅಂಕಣಗಳು

  • ನಮ್ಮ ಜೀವನದಲ್ಲಿ ವೈರಾಣುಗಳ ಪಾತ್ರ
  • ಜೀವ-ನಿರ್ಜೀವ ಲೋಕಗಳ ನಡುವಿನ ಕೊಂಡಿ – ವೈರಾಣುಗಳು
  • ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆ
  • ಸೂಕ್ಷ್ಮಾಣುಜೀವಿಗಳ ಲೋಕದ ತೀವ್ರವಾದಿ – ಆರ್ಕಿಯ
  • ಮಕ್ಕಳ ಮೇಲೆ ಸೈಬರ್ ಅಪರಾಧಿಗಳ ದೌರ್ಜನ್ಯ

ಕನ್ನಡ ಭಾಷೆ,ಸಾಹಿತ್ಯ

  • ಸಂಪುಟ-೩೪
  • ಸಂಪುಟ-೩೩
  • ಸಂಪುಟ-೩೨
  • ಸಂಪುಟ-೩೧
  • ಸಂಪುಟ-೩೦

ಕಲೆ,ಸಂಗೀತ

  • ರಂಗ ವಿಮರ್ಶೆಯ ಬೆನ್ನು ಹತ್ತಿ..
  • ರಂಗಭೂಮಿಯೊಂದೇ ಸಮತಾವಾದದ ಪ್ರತೀಕ
  • ರಂಗಭೂಮಿಯ ನಡಿಗೆ
  • ರಂಗ ಪರದೆಗಳು : ಶಬ್ದಪಾರಮಾರ್ಗಮಶಕ್ಯಂ
  • ರಂಗ ಪರದೆಗಳು : ರಂಗ ಪರದೆಗಳ ಹಿನ್ನೆಲೆ

ವಿಜ್ಞಾನ , ತಂತ್ರಜ್ಞಾನ

  • ನಮ್ಮ ಜೀವನದಲ್ಲಿ ವೈರಾಣುಗಳ ಪಾತ್ರ
  • ಜೀವ-ನಿರ್ಜೀವ ಲೋಕಗಳ ನಡುವಿನ ಕೊಂಡಿ – ವೈರಾಣುಗಳು
  • ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆ
  • ಸೂಕ್ಷ್ಮಾಣುಜೀವಿಗಳ ಲೋಕದ ತೀವ್ರವಾದಿ – ಆರ್ಕಿಯ
  • ಮಕ್ಕಳ ಮೇಲೆ ಸೈಬರ್ ಅಪರಾಧಿಗಳ ದೌರ್ಜನ್ಯ

ಕೃಷಿ ,ರೈತರ ಅನುಭವ

  • ಅಂತಾರಾಷ್ಟ್ರೀಯ ಬೇಳೆಕಾಳು ವರ್ಷ: 2016
  • ಪದವಿನ್ಯಾಸ: ೧೨. ಸನಿಕೆ
  • ಪದವಿನ್ಯಾಸ: ೧೩. ಈಚು
  • ಪದವಿನ್ಯಾಸ: ೧೪. ಕಣಜ
  • ಪದವಿನ್ಯಾಸ: ೯. ಬೆಳೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ

http://www.kannadasiri.in

ಇತ್ತೀಚಿನ ಟ್ವೀಟ್‌ಗಳು

Tweets by KannadaKanaja

ಫೇಸ್ಬುಕ್ ಅಲ್ಲಿ ನಮ್ಮನ್ನು ಸಂಪರ್ಕಿಸಿ

ಇತ್ತೀಚಿನ ಕೃತಿಗಳು

ನಿಮ್ಮ ಇಮೇಲ್ ವಿಳಾಸವನ್ನು ನಮೂದಿಸಿ:

ಕೃತಿಸ್ವಾಮ್ಯ 2012 - 2017 ಕಣಜ | ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ |
ಕಣಜ ಯೋಜನೆಯ ಅಧಿಕೃತ ವಿಳಾಸ:
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇ-ಕನ್ನಡ ವಿಭಾಗ, ಮೊದಲನೆಯ ಮಹಡಿ, ಕನ್ನಡ ಭವನ ಜಯಚಾಮರಾಜೇಂದ್ರ ಒಡೆಯರ್ ರಸ್ತೆ,
ಬೆಂಗಳೂರು- 560 002 ದೂರವಾಣಿ: 080-22227478 /22212487, ಮಿಂಚಂಚೆ (ಇ-ಮೇಲ್) - developkanaja@gmail.com

ಸರ್ಕಾರದ ಸಂಪರ್ಕ ಕೈಪಿಡಿ | ಮಹತ್ವದ ಜಾಲತಾಣಗಳು | ಇ ಆಡಳಿತ ಜಾಲತಾಣ  | ಇ-ಸೇವೆಗಳು | ಸಾಮಾನ್ಯ ಅಂಕಿ ಅಂಶ | ಸರ್ಕಾರದ ಆ್ಯಪ್ ಗಳು | ಕೇಂದ್ರ ಸರ್ಕಾರದ ಜಾಲತಾಣಗಳು | ತಾಂತ್ರಿಕ‌ ಜಾಲತಾಣಗಳು | ಕನ್ನಡ ಸಂಬಂಧಿ ಜಾಲತಾಣಗಳು | ಆಯೋಗಗಳು | ನ್ಯಾಯಾಲಯಗಳು | ಡೌನ್‌ಲೋಡ್‌ಗಳು | ಪ್ರವಾಸಿ ಜಾಲತಾಣಗಳು | ಸಾರ್ವತ್ರಿಕ ರಜೆಗಳು

FacebookTwitterInstagramPinterest
Toggle Sliding Bar Area

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Email: developkanaja@gmail.com

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

E-ದಿನ

  • ಗಾಂಧೀ ೧೫೦
  • ನಮ್ಮ ಜೀವನದಲ್ಲಿ ವೈರಾಣುಗಳ ಪಾತ್ರ
  • ಜೀವ-ನಿರ್ಜೀವ ಲೋಕಗಳ ನಡುವಿನ ಕೊಂಡಿ – ವೈರಾಣುಗಳು
  • ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆ
  • ಸೂಕ್ಷ್ಮಾಣುಜೀವಿಗಳ ಲೋಕದ ತೀವ್ರವಾದಿ – ಆರ್ಕಿಯ

ಇತ್ತೀಚಿನ ಕೃತಿಗಳು

ಮಹತ್ವದ ಜಾಲತಾಣಗಳು


  • ವೆಬ್-ಡೈರೆಕ್ಟರಿ


  • ರಾಜ್ಯಪಾಲರ ಕಚೇರಿ


  • ಮುಖ್ಯಮಂತ್ರಿ ಕಚೇರಿ


  • ವಿಧಾನಸಭೆ


  • ವಿಧಾನ ಪರಿಷತ್ತು


  • ಮುಖ್ಯ ಕಾರ್ಯದರ್ಶಿ

ಇ ಆಡಳಿತ ಜಾಲತಾಣ


  • ಸಿ.ಇ.ಜಿ


  • ವೆಬ್ ಪೋರ್ಟಲ್


  • ಆಧಾರ್


  • ಇ-ಆಫೀಸ್


  • ಇ-ಪ್ರೊಕ್ಯೂರ್ಮೆಂಟ್


  • ಎಚ್‌ಆರ್‌ಎಂಎಸ್


  • ಕೆ.ಆರ್.ಡಿ.ಎಚ್


  • ಕೆ.ಎಸ್.ವಾನ್


  • ಡಿ.ಪಿ.ಎ.ಆರ್


  • ಕೆ.ಎಸ್.ಡಿ.ಸಿ

ಇ-ಸೇವೆಗಳು


  • ಸಕಾಲ


  • ಸೇವಾ ಸಿಂಧು


  • ಇ-ಗೆಜೆಟ್


  • ಆನ್‌ಲೈನ್ ಆರ್‌ಟಿಐ


  • ಇ-ಸ್ಪಂದನ


  • ಮಾಹಿತಿ ಕಣಜ

ಸಾಮಾನ್ಯ ಅಂಕಿ ಅಂಶ


  • ಇ-ಪ್ರಗತಿ


  • ಇ-ತಾಲ್


  • ಡೇಟಾ


  • ಕರ್ನಾಟಕ ಗೆಜೆಟ್


  • ಸಿಎಂ ಡ್ಯಾಶ್‌ಬೋರ್ಡ್

ಸರ್ಕಾರದ ಆ್ಯಪ್ ಗಳು


  • ಬಿಎಂಟಿಸಿ


  • ಭೂಮಿ


  • ಇ-ಸೆವಾಯ್ ಕರ್ನಾಟಕ


  • ಡಿಶ್ಯಾಂಕ್


  • ಕೆ.ಎಸ್.ಆರ್.ಟಿ.ಸಿ.


  • ಗ್ರಾಮ ಪಂಚಾಯಿತಿ


  • ಕರ್ನಾಟಕ ರಾಜ್ಯ ಪೊಲೀಸ್


  • ಎಲ್ಲಾ ವೀಕ್ಷಿಸಿ...

ಕೇಂದ್ರ ಸರ್ಕಾರದ ಜಾಲತಾಣಗಳು


  • ಸಂಸತ್ತು


  • ರಾಷ್ಟ್ರಪತಿ ಕಚೇರಿ


  • ಪ್ರಧಾನ ಮಂತ್ರಿಗಳ ಕಚೇರಿ


  • ಪಾಸ್ಪೋರ್ಟ್ ಸೇವಾ


  • Aadhaar


  • Karnataka Bhavan

ತಾಂತ್ರಿಕ‌ ಜಾಲತಾಣಗಳು


  • ಸಿ.ಡಿ.ಎ.ಸಿ


  • ಎನ್ಐಸಿ


  • ಎಸ್.ಟಿ.ಕ್ಯೂ.ಸಿ

ಕನ್ನಡ ಸಂಬಂಧಿ ಜಾಲತಾಣಗಳು


  • ಕನ್ನಡ ಮತ್ತು ಸಂಸ್ಕೃತಿ ಇಲಾಖೆ


  • ಕನ್ನಡ ಸಾಹಿತ್ಯ ಪರಿಷತ್ತು


  • ಕಣಜ


  • ಕನ್ನಡ ಅಭಿವೃದ್ಧಿ ಪ್ರಾಧಿಕಾರ


  • ಇ-ಕನ್ನಡ

ಆಯೋಗಗಳು


  • ಮಾನವ ಹಕ್ಕು ಆಯೋಗ


  • ವಿದ್ಯುತ್ ಆಯೋಗ


  • ಜ್ಞಾನ ಆಯೋಗ


  • ಚುನಾವಣಾ ಆಯೋಗ


  • ಇ-ಕನ್ನಡ


  • ಕರ್ನಾಟಕ ಕಾನೂನು ಪ್ರಾಧಿಕಾರ


  • ಮಕ್ಕಳ ಹಕ್ಕುಗಳ ಆಯೋಗ


  • ಮಹಿಳಾ ಆಯೋಗ


  • ಗ್ರಾಹಕ ವಿವಾದಗಳ ಪರಿಹಾರ ಆಯೋಗ

ನ್ಯಾಯಾಲಯಗಳು


  • ಸರ್ವೋಚ್ಚ ನ್ಯಾಯಾಲಯ


  • ಹೈಕೋರ್ಟ್


  • ಜಿಲ್ಲಾ ನ್ಯಾಯಾಲಯಗಳು


  • ಕೇಂದ್ರ ಆಡಳಿತ ನ್ಯಾಯಮಂಡಳಿ


  • ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ

ಡೌನ್‌ಲೋಡ್‌ಗಳು


  • ಪಿಡಿಎಫ್ ಡೌನ್‌ಲೋಡ್


  • ನುಡಿ


  • ಸಿಡಿಎಸಿ ಭಾಷಾಂತರಿಸಿ


  • ಇ-ಸ್ಪೀಕ್


  • ಕನ್ನಡ ಧ್ವನಿ ಟಿಪ್ಪಣಿಗಳು

Go to Top