ನೀ ಬಳಿಯೊಳಿರುವಾಗ್ಗೆ
- ನೀ ಬಳಿಯೊಳಿರುವಾಗ್ಗೆ-ಒಂದು ವಿಶ್ಲೇಷಣೆ
- ಗೂಢಚಾರಿಯ ನಕಲು-ನಗಲು
- ಮೂರು ಕವನಗಳು
- ಆಧ್ಯಾತ್ಮಿಕ ಪರಂಪರೆಯ ಕಲ್ಪನೆ
- ಸಿಸಿಫಸ್
- ಟುವಟಾರ
- ಕ್ರಿಸ್ಮಸ್ಸಿನ ಮೂರು ಮುಖಗಳು
- ದಕ್ಷಿಣೆ-ಒಂದು ವಿಶ್ಲೇಷಣೆ
- ಭಾಷೆ ಸಮಾಜ ಮತ್ತು ಸಂಸ್ಕೃತಿ
- ಕವಿ ಮತ್ತು ಕಾಲಧರ್ಮ
- ಬೇತಾಳ
- ಅಮೇರಿಕಾ-ಎರಡು ಕಿರುಕವನಗಳು
- ಕಿಟಕಿ
- ಸಾಹಿತ್ಯ ಮತ್ತು ಪ್ರತಿಭಟನೆ
- ಬಿಚ್ಚು
- ಇಂಗ್ಲಿಂಡಿನಲ್ಲೊಬ್ಬ ಇಂಡಿಯನ್
- ಗತಿ, ಸ್ಥಿತಿ: ಮರುಚಿಂತ
- ನೆಲೆ
- ಮುಗಿಯದ ಹಾದಿ
- ಕೃಷ್ಣ ಆಲನಹಳ್ಳಿಯವರ ಕಾಡು
- ಖಾಸನೀಸ ಮುಖೇನ ಸಣ್ಣಕಥೆ
- ಹಕ್ಕಿ ಹಾರುತಿದೆ ನೋಡಿದಿರಾ-ವಿಶ್ಲೇಷಣೆ
- ವೇದನೆ
- ಅದೆ ಅದೆ ಅದೇ
- ಜೀವಂತ ಧೋರಣೆಗಳು
ನೀ ಬಳಿಯೊಳಿರುವಾಗ್ಗೆ
ನೀ ಬಳಿಯೊಳಿರುವಾಗ್ಗೆ
ಗೋಪಾಲಕೃಷ್ಣ ಅಡಿಗ
ನೀ ಬಳಿಯೊಳಿರುವಾಗ್ಗೆ ಹೃದಯಕಮಲದ ಹಾಗೆ,
ಪುಪ್ಪುಸದ ಹಾಗೆ, ನರನಾಡಿಯಲ್ಲಿ ನಿಶ್ಯಬ್ದ ಹರಿಯುವ ರಕ್ತ
ಪರಿಸರಣದಪ್ರಜ್ಞ ಬಗೆ ಹೊತ್ತು ಹೊತ್ತಿಗೆ ಕಾಫಿ
ತಿಂಡಿ ಊಟದ ನಡುವೆ ಹೊತ್ತಿಕೊಳ್ಳುವ ಧಗೆಗೆ
ಆಳುದ್ದ ತೆರೆಯೆದ್ದು ಅಲ್ಲೋಲ ಕಲ್ಲೋಲ
ರಕ್ತದೊತ್ತಡ ಹೆಚ್ಚಿ, ಎದೆ ಬಡಿತ ಚಡಪಡಿಸಿ
ಜ್ವರವೇರಿ ಹೆಂಚೆಲ್ಲ ಕಾದು ಕೆಂಪಾದಾಗ್ಗೆ
ಅರಳು ಹುರಿಯುವ ಮಾತಿಗಷ್ಟೇ ನಿನ್ನರಿವು ನೀನೇ ಗುರಿ.
ಜ್ವರವಿಳಿದು ಸರೋವರದ ಮೇಲೆ ಯಥಾಪ್ರಕಾರ
ಸಣ್ಣಲೆಗಳುರುಳತೊಡಗಿದ ಮೇಲೆ ಈ ಎರಡು
ಅಕ್ಕಪಕ್ಕದ ಹಾಯಿದೋಣಿಗಳು ತಮ್ಮಷ್ಟಕ್ಕೆ
ಅತ್ತಿತ್ತ ಸರಿದು ಬಳಿಬಳಿಯೆ ಬಿಳಿಬಿಳಿಹಾಯಿ
ಕಾಯುವುವು ಬಿಸಿಲಲ್ಲಿ, ಸಂಜೆಗೆಂಪಲ್ಲಿ ಇರುಳಿನ ಇರಸು
ಮರಸಲ್ಲಿ; ಸಮಾಂತರ ರೇಖೆಗಳ ಮೇಲೆ
ಯಾವ ಕನಸುಗಳೊ, ಕರ್ಮದುಣಿಸುಗಳೊ, ನಾಳ
ನಾಳದೊಳತಾಳಕ್ಕೆ ಯಾವ ಭಂಗಿಯೊ ಭಾವವೋ ಬವಣೆ
ಯೋ-ಕೇಳಿದರೆ ಹೇಳಬಾರದ, ಹೇಳಿದರು ಕೂಡ
ತಿಳಿಯಲಾರದ ಕೊಕ್ಕೆ ಕೊಂಕು, ಅಂಕುಡೊಂಕು,
ಶಂಕೆ ಶಂಕು ಆತಂಕಗಳು. ಮಾತುಮತಿಗಳ ನಡುವೆ
ಯಾತರವೊ ಆತತಾಯಿಗಳು : ಇತಿಹಾಸಪೂರ್ವಕಾಲದ ಹೇಳ
ಹೆಸರಿಲ್ಲದಲೆವ ಬೃಹದಾಕೃತಿಯ ಮುಸ್ಸಂಜೆ ನೆಳಲುಗಳು;
ನಿದ್ದೆ ಮಖಮಲ್ಲುಗಳ ಹರಿದು ಮುಖರವಾಗುವ ವ್ಯಾಘ್ರ
ನಖದ ಹೊಸಗೀರುಗಳು.
ಆದರೀ ಎಲ್ಲವೂ ಸಹ್ಯ; ಅಥವಾ ನೈಮಿತ್ತಿಕದ ಕುದಿಮಡಕೆತಳದಲ್ಲಿ
ನಿತ್ಯದ ನಿರಾತಂಕ ಗಟ್ಟಿಯೋಡು ; ತಾಳತಪ್ಪಿ ಅಥವಾ
ತಾಳದಿಂದ ತಾಳಕ್ಕೆ ಜಿಗಿಯುವ ಬಗೆಗೆ ಸದಾ ಶ್ರುತಿ ಹಿಡಿದು
ಮೂಲತಾಳದ ಲಯವ ಹೊತ್ತು ನಿಲ್ಲುವ ಪುಂಗಿ. ಸೋರೆಬುರುಡೆ ಬಳಿ
ಬಳಿಯುತ್ತಲಿರುವವರೆಗೂ ತೂಕತಪ್ಪಿ ಮುಳುಗಿ ಬರಿ
ಬುರುಡೆಯಾಗುವಪಾಯ ಅಸಂಭವ. ಹೃದಯಮಧ್ಯವೆ ರೂಪು
ತಳೆವ ತ್ರಿಜ್ಯೆಗಳಸಂಖ್ಯಕ್ಕೆ ಗುರಿ, ಮುಡಿ, ತಣಿವು
ತರುವ ಪರಿಧಿಯ ಸಾಮತೇಜಸ್ಸೇ ನಮಸ್ಕಾರ.
ನೀ ಬಳಿಯೊಳಿರುವಾಗ್ಗೆ-ಒಂದು ವಿಶ್ಲೇಷಣೆ
-ಜಾ.ಗೋ.
“ಪ್ರಜಾವಾಣಿ’ಯಲ್ಲಿ ಈಚೆ ಪ್ರಕಟವಾದ ಮತ್ತು ಇಲ್ಲಿ ಪುನಃ ತಪ್ಪಿಲ್ಲದೆ ಪ್ರಕಟವಾಗುತ್ತಿರುವ “ನೀ ಬಳಿಯೊಳಿರುವಾಗ್ಗೆ” ಇದು ಅಡಿಗರ ಅತ್ಯಂತ ಸಂಕೀರ್ಣವಾದ ಮತ್ತು ಯಶಸ್ವಿಯಾದ ಕವನಗಳಲ್ಲಿ ಒಂದಾಗಿದೆ. ಕವನದ ಶೀರ್ಷಿಕೆಯು ನಮಗೆ ಉಮರ ಖಯ್ಯಾಮನ ಸಾಕೀಯನ್ನು ನೆನಪಿಗೆ ತರುತ್ತದಾದರೂ ಈ ಕವನದಲ್ಲಿ ವಿಷಯ ಖಯ್ಯಾಮನ ಕಾವ್ಯದಲ್ಲಿಗಿಂತ ಹೆಚ್ಚು ಆಳಕ್ಕೆ ಹೋಗುತ್ತದೆ. ಇಲ್ಲಿನ ಸಂಗಾತಿ ಕೇವಲ ಕವಿಯ ಬಳಿಯಿರುವ ಮತು, ಕವಿ ಕಾವ್ಯ, ರಚಿಸುತ್ತಿರುವಾಗ ಅವನ ಮದ್ಯದ ಅಥವಾ ಕಾಫಿಯ ಪಾತ್ರೆಯನು ತುಂಬುವಂಥ ಸಂಗಾತಿಯಲ್ಲ. ಅದರಂತೆಯೇ ಇಲ್ಲಿನ ಕವಿ ಖಯ್ಯಾಮನಂತ ಕೇವಲ ತನ್ನ ಕನಸಿನ ಮತ್ತು ಕಾವ್ಯದ ಖಯಾಲಿಯಲ್ಲಿ ಪ್ರಪಂಚವನ್ನೇ ಮರೆಯುವ ಮತ್ತು ಮರೆಯಬೇಕೆಂದು ಹೇಳುವ ಕನಸುಗಾರ-ಕವಿಯಲ್ಲ.
ಇಲ್ಲಿ ಕವಿಯ ಸಂಗಾತಿ (Companion) ಅವನ ಹೃದಯದಲ್ಲಿ ಅರಳಿರುವ ಕಮಲದಂತೆ, ಅವನ ಉಸಿರಿನಂತೆ (‘ಪುಫ್ಫುಸದ ಹಾಗೆ’) ಮತ್ತು ಅವನ ನರನಾಡಿಗಳಲ್ಲಿ ನಿಶ್ಯಬ್ದವಾಗಿ ಹರಿದಾಡುವ ರಕ್ತದಂತೆ ಅವನಿಗರಿವಿಲ್ಲದಂತೆ ಅಥವಾ ಅವನ ಅನೈಚ್ಛಿಕ ಕ್ರಿಯೆ (Reflex action) ಯಂತೆ ಅವನೊಂದಿಗಿರುತ್ತಾಳೆ.
ಅಲ್ಲಿನ ಕನಸುಗಾರ ಖಯ್ಯಾಮನಂತೆ ಇಲ್ಲಿ ಕವಿ ವಾಸ್ತವ ಜಗತ್ತನ್ನು ಮತ್ತು ದಿನನಿತ್ಯದ ದಿನಚರಿಗಳನ್ನು ಮರೆಯುವದಿಲ್ಲ ಅಥವಾ ಅವುಗಳಿಂದ ಓಡಿಹೋಗುವದಿಲ್ಲ, ಉದಾ : ‘ಹೊತ್ತು ಹೊತ್ತಿಗೆ ಕಾಫಿ ತಿಂಡಿ, ಊಟದ ನಡುವೆ ಹೊತ್ತಿಕೊಳ್ಳುವ ಧಗೆ…’ ಇಲ್ಲಿ ಧಗೆ ಅನ್ನುವುದು ಮಹತ್ವದ ಮಾತು-ಮಹತ್ವದ ವಿಚಾರ ಯಾಕೆಂದರೆ ಈ ‘ಧಗೆ’ ಮುಂದೆ ಈ ಕವನದುದ್ದಕ್ಕೂ ಕವಿಯ ಮನಸ್ಸಿನಲ್ಲಿ (ಮತ್ತು ಕವನದ ಸಾಲುಗಳಲ್ಲಿ) ಹೊತ್ತಿಕೊಂಡು ಉರಿಯುತ್ತಿರುವುದನ್ನು ನಾವು ಕಾಣುತ್ತೇವೆ. ಈ ಧಗೆಯು ಇಲ್ಲಿ ಕವಿಯ ಮಾನಸ-ಸರೋವರದ ಅಥವಾ ಮಾನಸ-ಸಮುದ್ರದ ವಡಬಾಗ್ನಿಯಿದ್ದ ಹಾಗೆ. ಅದು ಇಲ್ಲಿ ಅವನ ಕದಡಿದ ಮನಸ್ಸಿನಲ್ಲಿ ಬಿರುಗಾಳಿಯಿಂದ ಅಲ್ಲೋಲ-ಕಲ್ಲೋಲವಾದ ಸಮುದ್ರದಲ್ಲಿ ವಡಬಾಗ್ನಿ ಕುದಿವ ಹಾಗೆ ಕುದಿಯುತ್ತದೆ. ಅದರಿಂದ ಕವಿಯ ಎದೆಯ ಬಡಿತ ಚಡಪಡಿಸುತ್ತದೆ. ಅವನ ಮನಸ್ಸಿನ-ಅವನ ಹೃದಯದ-ರಕ್ತದ ಒತ್ತಡವು ಹೆಚ್ಚಿ ಕವಿಗೆ ಜ್ವರವೇರುತ್ತದೆ. ಕವಿಯ ಈ ತಪ್ತ ಸ್ಥಿತಿಯಲ್ಲಿ ಅವನ ಸಂಗಾತಿ ಆಡುವ ಮಾತುಗಳು ಒಳ್ಳೇ ಉರಿಯುವ ಹೆಂಚಿನ ಮೇಲೆ ಹುರಿಯುವ ಅರಳುಗಳಂತೆ ಅನಿಸುತ್ತವೆ. ಆ ಮಾತುಗಳು ಕವಿಯ ಮನಸ್ಸಿನಲ್ಲಿಯ ತಮ್ಮ ಗುರಿಯನ್ನು ಮುಟ್ಟುವದಿಲ್ಲ. ಇದು ಈ ಕವನದ ಮೊದಲ ಭಾಗದಲ್ಲಿ ಚಿತ್ರಿತವಾದ ಪ್ರತಿಮೆ ಅಥವಾ ರೂಪಕ. ಇಷ್ಟರೊಳಗಾಗಲೇ ಈ ಕವನ ಸಾಕಷ್ಟು ಪ್ರತಿಮಾಸಾಂದ್ರತೆಯನ್ನಷ್ಟೇ ಅಲ್ಲ, ಸಾಕಷ್ಟು ಮನೋವೈಜ್ಞಾನಿಕ ಆಳವನ್ನೂ ಪಡೆದುಕೊಂಡುಬಿಡುತ್ತದೆ.
‘ಜ್ವರವಿಳಿದು ಸರೋವರದ ಮೇಲೆ ಯಥಾಪ್ರಕಾರ……’ ಎಂದು ಪ್ರಾರಂಭವಾಗುವ ಈ ಕವನದ ಎರಡನೆಯ ಭಾಗದಲ್ಲಿನ ದೀರ್ಘಾಕ್ಷರಗಳ ಶಬ್ದಗಳು ಮತ್ತು ವಿಲಂಬಿತ ಲಯವು ಅಲ್ಲಿ ಉದ್ದಿಷ್ಟವಾದ ಶಾಂತಪರಿಸ್ಥಿತಿಯನ್ನು ಮತ್ತು ಭಾವವನ್ನು ಅತ್ಯಂತ ಸಮರ್ಪಕವಾಗಿ ನಿರೂಪಿಸುತ್ತವೆ. ಈ ಭಾಗದಲ್ಲಿ ಕವನದ ಅರ್ಥವು ಹೆಚ್ಚಿನ ವಿಸ್ತಾರವನ್ನು ಪಡೆದುಕೊಳ್ಳುತ್ತದೆ. ಇಲ್ಲಿ ಶಾಂತವಾದ ಮಾನಸ ಸರೋವರದ ಮೇಲೆ ಜೀವನ ಪಥದಲ್ಲಿ ಜೊತೆಯಾಗಿ ಸಾಗಬೇಕಾಗಿರುವ ‘ಎರಡು ಅಕ್ಕ-ಪಕ್ಕದ ಹಾಯಿ ದೋಣಿಗಳು’ ತಮ್ಮಷ್ಟಕ್ಕೆ ತಾವು ಅತ್ತಿತ್ತ ಸರಿದು ‘ಬಿಸಿಲಲ್ಲಿ’, ‘ಸಂಜೆಗೆಂಪಲ್ಲಿ’ “ಬಳಿ-ಬಳಿಯಲ್ಲಿಯೆ ಬಿಳಿ-ಬಿಳಿ ಕಾಯಿ ಕಾಯುವುವು, ಇಲ್ಲಿ ‘ಹಾಯಿ ಕಾಯುವುವು’ ಎಂಬ ಪದಕ್ಕಿರುವ ದ್ವಂದ್ವಾರ್ಥವನ್ನು ಗಮನಿಸಬೇಕು. ಇಲ್ಲಿ ದೋಣಿಯ ಹಾಯಿಗಳು ಬಾಳಿನ ಬಿಸಿಲಿನಲ್ಲಿ ಕಾಯುವವು. ಎಂದರೆ ಬಿಸಿಯಾಗುವವು ಎಂಬ ಅರ್ಥದ ಜೊತೆಗೆ (ಜೀವನದ ಯಾವುದೋ ದೂರದ ಗುರಿಗಾಗಿ) ದಾರಿ-ಕಾಯುವವು ಎಂಬ ಅರ್ಥ ಕೂಡ ಹೊರಡುತ್ತದೆ ; ಮತ್ತು “ಇರುಳಿನ ಇರಸುಮರಸಲ್ಲಿ’ ಎಂಬುದಕ್ಕೆ ಈ ಎರಡನೇ ಅರ್ಥವೇ ಸರಿಹೋಗುತ್ತದೆ. ಯಾಕೆಂದರೆ ಇರುಳಿನಲ್ಲಿ ಹಾಯಿಗಳು ಬಿಸಿಯಾಗಿ ಕಾಯುವ ಪ್ರಸಂಗವಿರುವದಿಲ್ಲ. ಮುಂದೆ ಬರುವ ‘ಸಮಾಂತರ ರೇಖೆ’ (Parallel lines) ವಿಚಾರವು ಕವನದ ಮುಖ್ಯ ಆಶಯದ ದೃಷ್ಟಿಯಿಂದ ಬಹಳ ಮಹತ್ವದ್ದಾಗಿದೆ. ಈ ಬಾಳಿನಲ್ಲಿ ಜೊತೆಗಾರರಾಗಿರುವವರಲ್ಲಿ ಅನೇಕರು. ನಿಜವಾಗಿ ಪರೀಕ್ಷೆಮಾಡಿ ನೋಡಿದಲ್ಲಿ, ರೈಲು ಕಂಬಿಗಳಂತೆ ಬರೀ ಸಮಾಂತರ ರೇಖೆಗಳ ಮೇಲೆ ನಡೆದ ಸಹ-ಪ್ರಯಾಣಿಕರೆಂಬುದು ಗೊತ್ತಾಗದಿರದು. ಈ ಮನೋವೈಜ್ಞಾನಿಕ ಹಾಗೂ ತಾತ್ವಿಕ ಅಂಶವನ್ನು ಈ ಕವನ ಅತ್ಯಂತ ಸೂಕ್ಷ್ಮವಾಗಿ, ಸಂಕೀರ್ಣವಾಗಿ ಮತ್ತು ಮೂರ್ತವಾಗಿ ನಿರೂಪಿಸುತ್ತದೆ, ಇಲ್ಲಿ ಈ ವಿಚಾರವು ಎಷ್ಟರ ಮಟ್ಟಿಗೆ ಕವಿಯ ವೈಯಕ್ತಿಕ ಅನುಭವದಿಂದ ಹೊರಹೊಮ್ಮಿದೆ ಯೆಂಬುದಕ್ಕಿಂತ ಅದು ಎಷ್ಟರ ಮಟ್ಟಿಗೆ ಕವನದಲ್ಲಿ, ಎಲಿಯಟ್ ಹೇಳುವಂತೆ, ವಸ್ತುಪ್ರತಿರೂಪ (Objective correlative) ವನ್ನು ಪಡೆಯುತ್ತದೆ ಮತ್ತು ಎಷ್ಟರ ಮಟ್ಟಿಗೆ ಅದು ವ್ಯಕ್ತಿ-ನಿರಪೇಕ್ಷವಾದ ಸಾರ್ವತ್ರಿಕ ಸತ್ಯವಾಗಿ ರೂಪುಗೊಳ್ಳುತ್ತದೆ ಎನ್ನುವುದು ಕಾವ್ಯದ ದೃಷ್ಟಿಯಿಂದ ಹೆಚ್ಚು ಮಹತ್ವದ್ದು. ಭವಸಾಗರದಲ್ಲಿ, ಅಥವಾ ಮಾನಸ ಸರೋವರದಲ್ಲಿ ಸಮಾನಾಂತರ ರೇಖೆಗಳ ಮೇಲೆ ಚಲಿಸಿದ ಈ ಇಬ್ಬರು ಜೊತೆಗಾರರ ಹಾಯಿ ದೋಣಿಗಳು ಯಾವ-ಯಾವುದೋ ಕನಸುಗಳು ಮತ್ತು ತಮ್ಮ ಯಾವ-ಯಾವುದೋ ಪೂರ್ವ-ಕರ್ಮಗಳ ಉಣಿಸುಗಳು ಇತ್ಯಾದಿಗಳ ಎಳೆತ-ಸೆಳೆತಗಳಿಗೆ ಸಿಕ್ಕು ಮುಂದೆ ಸಾಗುತ್ತವೆ. ಆಗ ಅವರಿಬ್ಬರ ನಾಳ-ನಾಳಗಳ ಒಳ ತಾಳಗಳ ಭಂಗಿಗಳು, ಭಾವಗಳು ಮತ್ತು ಅವರುಗಳು ಒಳಗೊಳಗೇ ಪಡುವ ಬವಣೆಗಳು ಬೇರೆ-ಬೇರೆ. ಅವು ಒಬ್ಬರೊಬ್ಬರಿಗೆ ಹೇಳಬರದಂಥೆ, ಹೇಳಿದರೂ ತಿಳಿಯದಂಥ “ಕೊಕ್ಕೆ-ಕೊಂಕುಗಳು’, ‘ಅಂಕು-ಡೊಂಕುಗಳು, ಮತ್ತು ‘ಶಂಕೆ-ಆತಂಕಗಳು.
ಮುಂದೆ `ಮಾತು ಮತಿಗಳ ನಡುವೆ ಯಾತರವೊ ಆತತಾಯಿಗಳು…’ ಎಂದು ಪ್ರಾರಂಭವಾಗುವ ಕವನದ ಈ ಭಾಗದ ಉತ್ತರಾರ್ಧವು, ನನ್ನ ಅಭಿಪ್ರಾಯದಲ್ಲಿ, ಈ ಕವನದ ಅತ್ಯುತ್ತಮವಾದ ಭಾಗ (ಅರ್ಥಾತ್ ನಾವು ಭಾಗಶಃ ಈ ಕವನವನ್ನು ಪರಿಗಣಿಸಿದಲ್ಲಿ) ಆಗಿದೆಯಷ್ಟೇ ಅಲ್ಲ, ಇಡೀ ಕನ್ನಡದ ಆಧುನಿಕ ಕಾವ್ಯ-ಶರೀರದ ಒಂದು ಅತ್ಯುತ್ತಮವಾದ ಭಾಗ ಸಹ ಆಗಿದೆ. ಈ ಮಾತು ಅತಿಶಯೋಕ್ತಿಯೆಂದು ಕೆಲವರಿಗೆ ಅನಿಸಿದರೂ ಅನಿಸಬಹುದು. ನನಗಂತೂ ಹಾಗನಿಸುವುದಿಲ್ಲ. ಕಾರಣ ಈ ಕೆಳಗಿನಂತಿದೆ :
‘ಮಾತು ಮತಿಗಳ ನಡುವೆ
ಯಾತರವೂ ಆತತಾಯಿಗಳು’
ಈ ಸಾಲುಗಳಲ್ಲಿ ನಮಗೆ ಅತ್ಯಂತ ಸ್ವಾಭಾವಿಕವಾಗಿ ಮತ್ತು ಓತಪ್ರೋತವಾಗಿ ಕಂಡು ಬರುವ ಅನುಪ್ರಾಸಗಳ ಛಂದೋವಿಲಾಸವನ್ನು ಕುರಿತು ಕಾವ್ಯವನ್ನು ಶಾಸ್ತ್ರೀಯವಾಗಿ ನೋಡುವವರಿಗೆ ಹೆಚ್ಚು ಹೇಳಬೇಕಾದ ಅಗತ್ಯವಿಲ್ಲ. ನನಗೆ ಇಲ್ಲಿ ಹೆಚ್ಚು ಒತ್ತಿ ಹೇಳಬೇಕಾಗಿರುವುದು ಇಡೀ ಕವನದ ಒಟ್ಟು ಆಶಯಕ್ಕೆ, ಅದರ ಮುಖ್ಯ ವಿಚಾರಕ್ಕೆ, ಈ ಸಾಲುಗಳು ನೀಡುವ ಕೊಡುಗೆಯನ್ನು ಕುರಿತು, ಈ ಸಾಲಿನ ಅರ್ಥವು, ನಾನು ಅರ್ಥ ಮಾಡಿಕೊಂಡಿರುವ, ಹೀಗಾಗುತ್ತದೆ, ಅಭಿವ್ಯಕ್ತವಾದ ಮಾತುಗಳು ಮತ್ತು ಹೊರಗೆ ಅಭಿವ್ಯಕ್ತವಾಗದ ಒಳಗೇ ಅವಿತುಕೊಂಡಿರುವ “ಮತಿ’ (ಬುದ್ದಿ, ಬಗೆ) ಇವುಗಳ ನಡುವೆ ಯಾವ-ಯಾವುದೋ ‘ಆತತಾಯಿಗಳು”, ಎಂದರೆ ಮೋಸಗಳು, ಕಳ್ಳತನಗಳು ಅಥವಾ ಅಪರಾಧಗಳು.
‘ಆತತಾಯಿ’ ಇದು ಒಂದು ಸಂಸ್ಕೃತ ನಾಮಪದವೆಂದೂ, ಇದರ ಅರ್ಥ ಕೊಲೆಗಾರ, ಅಪರಾಧಿ, ವಂಚಕ ಅಥವಾ ಪಾತಕಿ ಎಂಬುದಾಗಿರುತ್ತದೆಂದೂ ಪಂಡಿತ ಕವಲಿ ಅವರ `ಕಸ್ತೂರೀಕೋಶ’ವುವು ನನಗೆ ತಿಳಿಸಿತು, ನಾನು ಈ ಶಬ್ದದ ಸರಿಯಾದ ಮತ್ತು ಖಚಿತ ವಾದ ಅರ್ಥಕ್ಕಾಗಿ ‘ಕಸ್ತೂರಿಕೋಶ’ವನ್ನು ನೋಡುವುದಕ್ಕಿಂತ ಮೊದಲು ಇದೊಂದು (ಹಾಶೀಮ ತಾಯಿ ಎಂಬಂತೆ) ಅರಬ್ಬಿ ಇಲ್ಲವೇ ಪರ್ಶಿಯನ್ ಶಬ್ದವಾಗಿರಬಹುದೆಂದೂ ಇದರ ಅರ್ಥವು ಸ್ಥೂಲವಾಗಿ ಭೂತ ಅಥವಾ ಬೇತಾಳ ಇಲ್ಲವೆ ಸೈತಾನ ಎಂಬುದಾಗಿರಬಹುದೆಂದೂ ತಿಳಿದಿದ್ದೆ. (ನಾನು ಹೀಗೆ ಭಾವಿಸುವುದಕ್ಕೆ ‘ಹಾಶೀಮ ತಾಯಿ’ ಎಂಬ ಶಬ್ದದೊಡನೆ ‘ಆತ ತಾಯಿ’ಗೆ ಇರುವ ಅಂತ್ಯ ಪ್ರಾಸ ಸಾಮ್ಯವೊಂದೇ ಅಲ್ಲದೆ ನನ್ನ ಮನಸ್ಸಿನಲ್ಲಿದ್ದ ಉಮರ ಖಯ್ಯಾಮನ ಪರ್ಶಿಯನ್ ಕಾವ್ಯ ಮತ್ತು ಪರಿಸರದ ವಿಚಾರಗಳೂ ಸಾಕಷ್ಟು ಕಾರಣವಾಗಿರಬೇಕು.) ಆದರೆ ಈ ಶಬ್ದ ಸಂಸ್ಕೃತದ್ದೆಂದೂ, ಇದರ ಅರ್ಥ ಸಾಕಷ್ಟು ಕೆಟ್ಟದ್ದಾಗಿಯೇ ಇದ್ದರೂ ನಾನು ತಿಳಿದಷ್ಟು ಕೆಟ್ಟದ್ದಾಗಿಲ್ಲ ಎಂದೂ, ಆರ್ಥಕೋಶವು ನನಗೆ ತಿಳಿಸಿ ನಾನು ಅರ್ಥಕೋಶವನ್ನು ನೋಡದೆಯೇ ನನಗೆ ತಿಳಿದಂತೆ ಬರೀ ‘ಮೊಘಂ’ (ಅಜಮಾಸು) ಅರ್ಥ ಹಚ್ಚಿದರೆ ಆಗಬಹುದಾಗಿದ್ದ ಸ್ವಲ್ಪ ಮಟ್ಟಿನ ಅರ್ಥವನ್ನು ತಪ್ಪಿಸಿತು; ಇರಲಿ, ಅಂತೂ ‘ಆತತಾಯಿ’ ಅನ್ನುವುದನ್ನು ಇಲ್ಲಿ ‘ಆಪರಾಧಿ, ‘ಮಂಚಕ’ ಅಥವಾ ‘ಪಾತಕಿ’ ಎಂಬ ಅರ್ಥದಲ್ಲಿ ತೆಗೆದುಕೊಳ್ಳಬೇಕು ಎದಂತಾಯ್ತು.
‘ಮಾತು ಮತಿಗಳ ನಡುವೆ ಯಾತರವೂ ಆತತಾಯಿಗಳು’ ಎಂದು ಇಲ್ಲಿ ಕವಿ ಹೇಳುವಲ್ಲಿ ನಮ್ಮ ಮಾತುಗಳ ಶಾಬ್ದಿಕ ಸ್ವರ ಅಥವಾ ಶಾಬ್ದಕ-ಜಗತ್ತು ಮತ್ತು ನಮ್ಮ ಮಾತುಗಳ ಹಿಂದೆ ತಮ್ಮ ಅಂತರಾಳದ ಆಳವಾದ ಸ್ತರದಲ್ಲಿರುವ ನಮ್ಮ ಮತಿ ಅಥವಾ ಬುದ್ಧಿಯ ಬೇರುಗಳು ಇವುಗಳ ನಡುವಿನ ಅಂತರ, ಸಂಬಂಧಶೂನ್ಯತೆ ಮತ್ತು ಅವುಗಳ ನಡುವಿನ ದಾರಿತಪ್ಪಿಸುವ ವಂಚನೆಗಳು ಇವೆಲ್ಲವನ್ನು ಕುರಿತು ಹೇಳುತ್ತಿದ್ದಾರೆ.
ಈ ಸಾಲುಗಳಲ್ಲಿ ನಾವಾಗಲೇ ಫ್ರಾಯ್ಡನ ‘ಸುಪ್ತ-ಪ್ರಜ್ಞೆ’ (Sub-conscious) ಯನ್ನು ತಲುಪಿಬಿಡುತ್ತೇವೆ. ಇಲ್ಲಿ ಕವಿ ಹೇಳುವ ಅನುಭವ ಅನೇಕ ಮಾನಸಿಕ ಸಂದರ್ಭಗಳಲ್ಲಿ ಅನುಭವಕ್ಕೆ ಬರುವಂಥದು ; ಅದರಲ್ಲೂ ಆತ್ಮೀಯರಿಬ್ಬರ ಮನಸ್ಸುಗಳು ಆತಂಕಕ್ಕೊಳಗಾದಾಗ ತೀವ್ರವಾಗಿ ಅವರ ಅನುಭವಕ್ಕೆ ಬರುವಂಥದು, ಅಂಥ ಕದಡಿದಂತಹ ಸ್ಥಿತಿಯಲ್ಲಿ ಮಾತನಾಡುವುದು ಮತ್ತು ಮಾತನಾಡದೇ ಇರುವುದು ಇದರಡೂ ಅಷ್ಟೇ “Suspect’ ಅನಿಸಿಬಿಡುವವು. ಈ ಆಂತರಿಕ ಶಂಕೆ-ಆತಂಕಗಳನ್ನು ಕವನದ ಮುಂದಿನ ಸಾಲು ಯುಂಗ (Jung) ನ ಪ್ರಸಿದ್ಧವಾದ “Collective or Racial sub-conscious” (ಜಾನಾಂಗಿಕ ಸುಪ್ತಪ್ರಜ್ಞೆ) ಯ ಬೆಳಕಿನಲ್ಲಿ ನೋಡುವದು ಹಾಗೂ ತೋರಿಸುವದು. ಯುಂಗನ ಮನೋವಿಜ್ಞಾನದ ಸಿದ್ಧಾಂತದ ಪ್ರಕಾರ ನಮ್ಮ ಅತಿ ಪ್ರಾಚೀನ (ಇತಿಹಾಸ ಪೂರ್ವಕಾಲದ) ಮನೋವೃತ್ತಿ ಮತ್ತು ಸಂಸ್ಕಾರ-ವಿಸೇಷಗಳು ಈಗ ಸಹ ನಮ್ಮ ಸಾಮೂಹಿಕ ಸುಪ್ತ ಪ್ರಜ್ಞೆಯಲ್ಲುಳಿದಿದ್ದು, ಅವು ಆಗಾಗ ನಮ್ಮ ಸಾಮಾಜಿಕ ರೂಢಿ, ಸಂಪ್ರದಾಯ, ಧಾರ್ಮಿಕ ವಿಧಿಗಳು, ಮಂತ್ರ-ತಂತ್ರಗಳು ಹಾಗೂ ಯಜ್ಞ-ಯಾಗಾದಿಗಳು ಇತ್ಯಾದಿಗಳಲ್ಲಿ ಪ್ರಚ್ಛನ್ನ ಸ್ವರೂಪದಲ್ಲಿ (in dinguise) ವ್ಯಕ್ತವಾಗುತ್ತಿರುತ್ತವೆ. ಹೀಗೆ ನಮ್ಮ ಸಾಮೂಹಿಕ ಸುಪ್ತ ಪ್ರಜ್ಞೆಯಲ್ಲುಳಿದಿರುವ ಮೂಲಭೂತವಾದ ಚಿತ್ತವೃತ್ತಿಗಳಲ್ಲಿ ಆದಿಕಾಮ (Premieval Sex) ಪ್ರವೃತ್ತಿಯು ಅತಿ ಮುಖ್ಯವಾದದ್ದು. ಈ ಎಲ್ಲ ಮನೋವೈಜ್ಞಾನಿಕ ವಿಚಾರಗಳನ್ನು ಕವಿ ಈ ಸಾಲಿನಲ್ಲಿ ಅತ್ಯಂತ ಸಂಗ್ರಹವಾಗಿ, ಸೂಚ್ಯವಾಗಿ ಮತ್ತು ಪರಿಣಾಮಕಾರಿಯಾಗಿ ಹಿಡಿದಿಟ್ಟಿದ್ದಾರೆ. ಇನ್ನು ಈ ಸಾಲಿನ ಸಾಹಿತ್ಯಕ ಗುಣವನ್ನು ಕುರಿತು ಹೇಳಬೇಕೆಂದರೆ: ಇಲ್ಲಿ ಬರುವ `ಬೃಹದಾ ಕೃತಿಯ ಮುಸ್ಸಂಜೆ ನೆಳಲುಗಳು’ ಎಂಬ ಪ್ರತಿಮೆಗೂ “ಇತಿಹಾಸ ಪೂರ್ವಕಾಲದ’ ಎಂಬ ವಿಚಾರಕ್ಕೆ ಅತ್ಯಂತ ಪರಿಣಾಮಕಾರಿಯಾದ ಸಂಬಂಧ ಏರ್ಪಟ್ಟಿದೆ. ‘ಇತಿಹಾಸ ಪೂರ್ವಕಾಲ’ (pre-historic time’) ಅನ್ನುವುದನ್ನು ಇಂಗ್ಲಿಷಿನಲ್ಲಿ ಅಲಂಕಾರಿಕವಾಗಿ “The dim and distant past’ ಎಂದು ಹೇಳುವುದುಂಟು. ಇಂಥ ಅತಿ ದೂರದ ಮಸುಕುಮಸುಕಾದ, ಕಾಲಕ್ಕೂ, ಮುಸ್ಸಂಜೆಯ ಮಬ್ಬು-ಬೆಳಕಿನಲ್ಲಿ ಗೋಚರಿಸುವ ಬೃಹದಾಕೃತಿಯ ನೆಳಲುಗಳಿಗೂ ಒಳ್ಳೆ ಸ್ವಾಭಾವಿಕವಾದ ನಂಟುತನ ಇಲ್ಲಿ ಉಂಟಾಗಿದೆ. “ಹೇಳ ಹೆಸರಿಲ್ಲದಲೆವ ಬೃಹದಾಕೃತಿಯ ಕಪ್ಪು ಛಾಯೆಗಳು ಇಲ್ಲಿ ಭೂತದ ಮತ್ತು ಭೀತಿಯ ವಾತಾವರಣವನ್ನು ಪರಿಣಾಮಕಾರಿಯಾಗಿ ಉಂಟುಮಾಡುತ್ತವೆ. ಕವನದ ಈ ಸಾಲನ್ನು ನಾವು ಇಂಗಿಷಿಗೆ ಭಾಷಾಂತರಿಸಿ ನೋಡಿದಾಗ ಕೂಡ (ಆದರೆ ಅಡಿಗರ ಈ ಸಾಲು ಇಂಗ್ಲಿಷ್ ಸಾಲಿನೊಂದರ ಭಾಷಾಂತರವಾಗಿದೆಯೆಂದು ಇದರರ್ಥ ವಲ್ಲ) ಇದರ ಅದ್ಭುತ ಪರಿಣಾಮವನ್ನು ನಾವು ಕಾಣುತ್ತೇವೆ, ಉದಾ :
“The namelessly wandering
Gigantic-hadows of the dim
And distant pre-historic evening”.
(ಈ ಭಾಷಾಂತರವು-ಅದರ ಎಲ್ಲ ಗುಣಾವಗಣಗಳೊಂದಿಗೆ ನನ್ನದೇ.)
ಕವನದಲ್ಲಿನ ಇದರ ಮುಂದಿನ ಸಾಲು ಮತ್ತೊಂದು ‘Poetic master-piece’ ಆಗಿದೆ.
ಆ ಸಾಲು ಹೀಗಿದೆ:
“ನಿದ್ದೆ ಮಖಮಲ್ಲುಗಳ ಹರಿದು
ಮುಖರವಾಗುವ ವ್ಯಾಘ್ರ-ನಖದ
ಹೊಸಗೀರುಗಳು.’
ಕೇವಲ ಶಬ್ದಾಲಂಕಾರಿಕ ಸ್ತರದ ಖ-ಕಾರಗಳ (ಉದಾ: ಮಖಮಲ್ಲು, ಮುಖದ ವ್ಯಾಘ್ರ-ನಖ) ಚಮತ್ಕಾರದಿಂದ ಹಿಡಿದು ಅರ್ಥಾಲಂಕಾರದ ಸ್ವರವನ್ನೂ ದಾಟಿ, ಆಳವಾದ ಧ್ವನಿಯನ್ನು ವ್ಯಂಜಿಸುವ ಮತ್ತು ಇಡೀ ಕವನಕ್ಕೆ ವ್ಯಾಘ್ರದ ರುದ್ರ-ಗಂಭೀರತೆಯ ಒಂದು ಗುಹ್ಯ-ಆಯಾಮವನ್ನು ತಂದುಕೊಡುವ ಈ ಸಾಲು ಕನ್ನಡದ ಇತ್ತೀಚಿನ ಕವನಗಳ ಅತ್ಯುತ್ತಮವಾದ ಸಾಲುಗಳಲ್ಲೊಂದಾಗಿದೆ. (ಕವನದ ಸಾಲುಗಳನ್ನು ಒಟ್ಟಾರೆ ಕವನದಿಂದ ಬೇರ್ಪಡಿಸಿ ನೋಡಿ ನಾನು ಈ ಮಾತುಗಳನ್ನು ಹೇಳುತ್ತಿಲ್ಲ.) ಈ ಸಾಲಿನಲ್ಲಿ ರೂಪಿತವಾದ ವ್ಯಾಘ್ರ-ಪ್ರತಿಮೆಯು ಎಷ್ಟೊಂದು ಪರಿಣಾಮಕಾರಿಯಾಗಿದೆಯೆಂದರೆ ಮತ್ತು ಅದು ಈ ಕವನದ ಮುಖ್ಯ ವಿಷಯಕ್ಕೆ ಎಷ್ಟೊಂದು ಆಳವಾದ ಮತ್ತು ರುದ್ರ-ರಮಣೀಯವಾದ ಆಯಾಮವನ್ನು ಕೊಡುತ್ತದೆಯೆಂದರೆ ಅಡಿಗರ ಈ ಕವನವು ಈ ವ್ಯಾಘ್ರ ಪ್ರತಿಮೆಯ ಅತ್ಯಂತ ಸಾರ್ಥಕವಾದ ಉಪಯೋಗದಿಂದಾಗಿ, ನನ್ನ ಅಭಿಪ್ರಾಯದಲ್ಲಿ, ಬ್ಲೇಕನ ಜಗತ್ಪ್ರಸಿದ್ಧವಾದ ‘Tyger’ ಕವನಕ್ಕಿಂತಲೂ (ಆ ಕವನದ ನಿಟ್ಟಿನಲ್ಲಿಯೇ) ಒಂದರ್ಥದಲ್ಲಿ ಹೆಚ್ಚಿನ ಆಳವನ್ನೂ, ಎತ್ತರವನ್ನೂ ಪಡೆಯುತ್ತದೆ. ಮೊದಲನೆಯದಾಗಿ, ಕೇವಲ ಶಾಬ್ಲಿಕ-ಮಟ್ಟದಲ್ಲಿ ಕೂಡ ಅಡಿಗರ ಈ ಸಾಲು ಬ್ಲೇಕನ ಆ ಕವನದ ಅತ್ಯುತ್ತಮ ಸಾಲುಗಳಿಗೆ ಸವಾಲಾಗಿ ನಿಲ್ಲುತ್ತದೆ. ಉದಾಹರಣಾರ್ಥವಾಗಿ, ಬ್ಲೇಕನ ಕವನದ ಮೊದಲಿನ ಎರಡು ಸಾಲುಗಳಾದ
“Tyger ! Tyger ! burning bright
In the forests of the night’
ಇವು ಅನೇಕ ವಿಮರ್ಶಕರ ಅಭಿಪ್ರಾಯದಲ್ಲಿ ಆ ಕವನದ ಅತ್ಯುತ್ತಮ ಅಥವಾ ಉತ್ತಮ ಸಾಲುಗಳೆನ್ನಿಸಿಕೊಳ್ಳುತ್ತವೆ. ಇನ್ನು ಉತ್ತಮ ಸಾಲುಗಳೆನ್ನುವುದನ್ನು ನಾನೂ ಒಪ್ಪೊಕೊಳ್ಳುತ್ತೇನೆ, ಬ್ಲೇಕನ ಕವನದಲ್ಲಿ ಈ ಪ್ರಸಿದ್ಧ ಸಾಲುಗಳ ಪರಿಣಾಮ ಮತ್ತು ಅರ್ಥ ವಂತಿಕೆಗಳನ್ನು ಕುರಿತು ‘The Tyger’ ಕವನದ ಅತ್ಯುತ್ತಮ ವಿಮರ್ಶಕರಲ್ಲಿ ಒಬ್ಬನಾದ ರಾಯ್ ಬ್ಯಾಸ್ಲರ್ (Roy P. Basler, in “Master Poems”, edited
by Oscar Williams) ಹೀಗೆ ಬರೆಯುತ್ತಾನೆ: ”Consider the image presented in the first stanza of ‘The Tyger’, and the question asked. What is the simplest communication made by the image ? Terror in the beholder, power to harm in the image. Beyond this there is communication of something not wholly of this world. Tigers do not burn, though the colour of the tiger may suggest fire : jungle forests may be so dark as to suggest night“ but could not be with strict rational logic called ‘forests of the night’. What we have in the image is of the mind, surely, but not wholly of the rational, conscious mind. It is Something of & dream images Conveying terror before a symbol of power to harm, and, like all dream images, made of the stuff known to the conscious mind but given in a fusion of nonsequitors (fire-tiger-forest-night) that have nevertheless, linking associations and anologies : Tigers roam the forests, and darkness and fire (light) are archetypal opposites in any language or experience. The communication of fear before power to harm lies in what the poet and reader see as a mental image.” ಈಗ ಅಡಿಗರ ಕವನದ ಸಾಲುಗಳನ್ನು ವಿಶ್ಲೇಷಣೆಗೆ ಎತ್ತಿಕೊಳ್ಳೋಣ. ಆ ಸಾಲುಗಳು ಹೀಗಿವೆ :
“ನಿದ್ದೆ ಮಖಮಲ್ಲುಗಳ ಹರಿದು
ಮುಖರವಾಗುವ ವ್ಯಾಘ್ರನಖದ
ಹೊಸಗೀರುಗಳು.’
ವ್ಯಾಘ್ರ ಪ್ರತಿಮೆಯ ಸುತ್ತ ರಚಿಸಲಾದ ಅಡಿಗರ ಕವನದ ಈ ಸಾಲುಗಳು ಇದೇ ವಿಷಯವನ್ನು ಕುರಿತ ಭ್ಲೇಕನ ಕವನದ ಮೊದಲಿನ ಎರಡು ಪ್ರಸಿದ್ಧವಾದ ಸಾಲುಗಳಿಗೆ ಸವಾಲಾಗಿ ನಿಲ್ಲುತ್ತವೆ ಎಂದು ಈ ಮೊದಲೇ ಹೇಳಿದ್ದೇನಷ್ಟೆ. ಅದು ಹೇಗೆ ಎಂಬುದನ್ನು ಈಗ ನೋಡೋಣ. ಶಾಬ್ದಿಕ ಮಟ್ಟದಲ್ಲಿ ನೋಡಿದರೆ, ಬ್ಲೇಕನ ಸಾಲುಗಳಲ್ಲಿ ಪರಿಣಾಮವನ್ನು ಬೀರುವ ‘ಟ’-ಕಾರಗಳ ಟಂಕಾರಕ್ಕಿಂತಲೂ ಅಡಿಗರ ಸಾಲುಗಳಲ್ಲಿ ಬರುವ “ಖ-ಕಾರಗಳ ಅನುಪ್ರಾಸ ಹೆಚ್ಚು ಪರಿಣಾಮಕಾರಿಯಾದದ್ದು. ಯಾಕೆಂದರೆ ಖ–ಕಾರಗಳ ಪುನರುಕ್ತಿಯಿಂದ ನಮ್ಮ ಕಿವಿಯಲ್ಲಿ ತುಂಬುವ ಖ್ಖಖ್” ಎಂಬ ನಾದವು ಹುಲಿಯ ಹಲ್ಲು ಮಸೆತ ಮತ್ತು ನಖಗಳ ಮಸೆತಗಳ ನಾದಕ್ಕೆ ಅಥವಾ ಶಬ್ದಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ. ಅದರಂತೆಯೇ ‘ವ್ಯಾಘ್ರ’ ಮತ್ತು ‘ಮುಖರ’ ಈ ಶಬ್ದಗಳಲ್ಲಿನ ಘ್ರ-ಕಾರ ಮತ್ತು ಖ್ರ-ಶಾರಗಳು ಹುಲಿಯ ಗರ್ಜನೆಯ ಶಬ್ದಕ್ಕೆ ಬಹು ಸಮೀಪ ಬರುತ್ತವೆ. ಈ ಶಾಬ್ದಿಕ, ನಾದದ ಗುಣಗಳು ಭ್ಲೇಕನ ಸಾಲುಗಳ ಟ – ಕಾರಗಳ ಟಂಕಾರಕ್ಕೆ (ಅಲ್ಲಿನ ‘ಟೈ – ಗರ್’ ಮತ್ತು ‘ಬರ್ನಿಂಗ್ ಬ್ರೈಟ್’ ಎಂಬ ಶಬ್ದಗಳು ಹುಲಿಯ ಗರ್ಜನೆಯ ಶಬ್ದಕ್ಕೆ ಸ್ವಲ್ಪ ಸಮೀಪ ಬರುತ್ತವಾದರೂ) ಇಲ್ಲ.
ಅಡಿಗರ ಈ ಸಾಲು ಬ್ಲೇಕನ ಆ ಸಾಲುಗಳಿಗೆ ಕೇವಲ ಈ ಶಾಬ್ದಿಕ ಅಥವಾ ನಾದದ ಮಟ್ಟದಲ್ಲಷ್ಟೇ ಅಲ್ಲ. ಭಾವದ ಮತ್ತು ಅರ್ಥದ ಮನೋವೈಜ್ಞಾನಿಕ ಹಾಗೂ ಕಾವ್ಯಕ ಮಟ್ಟಗಳಲ್ಲಿ ಕೂಡ ಸವಾಲಾಗಿ ನಿಲ್ಲುತ್ತದೆ. ಬ್ಲೇಕನ ಕವನದ ಸಾಲುಗಳಿಗಿರುವ ಈ ಆಂತರಿಕ ಅಂಶಗಳನ್ನು ರಾಯ್ ಬ್ಯಾಸ್ಲರ್ (ಮೇಲೆ ಉದ್ಧರಿಸಿದಂತೆ) ಬಹಳ ಚೆನ್ನಾಗಿ ಗುರುತಿಸಿದ್ದಾನೆ ಬ್ಯಾಸ್ಟರ್‌ನ ಹೇಳಿಕೆಗಳನ್ನು ನಾವು ಅಡಿಗರ ಕವನದ ಈ ಸಾಲಿಗೂ ಅಪೂರ್ಣವಾಗಿ ಅನ್ವಯಿಸಿ ನೋಡಬಹುದು. ಅಲ್ಲಿ, ಬ್ಯಾಸ್ಟರ್ ವಿವರಿಸುವಂತೆ, ಹುಲಿಯ ಪ್ರತಿಮೆಯು (ಅಲ್ಲಿ ಹುಲಿಯು ಅಡಿಗರ ಈ ಕವನದಲ್ಲಿಯಂತೆ ಬರೀ ಪ್ರತಿಮೆಯಷ್ಟೇ ಆಗಿ ಬರದೇ ವಾಸ್ತವ ಪ್ರಾಣಿಯೂ ಆಗಿ ಬರುತ್ತದೆ) ಮುಖ್ಯವಾಗಿ ನೋಡುವವರ ಮನಸ್ಸಿನಲ್ಲಿ ಅದು ಹುಟ್ಟಿಸುವ ಭಯದ ಮತ್ತು ಅದು ಅವರಿಗೆ ಉಂಟುಮಾಡಬಹುದಾದ ಅಪಾಯದ ಪ್ರತೀಕವಾಗಿ ಬರುತ್ತದೆ. ಇಲ್ಲಿ ಅಡಿಗರ ವ್ಯಾಘ್ರ-ಪ್ರತಿಮೆಯಲ್ಲಿ ಕೂಡ ನಾವು ಈ ಎರಡೂ ಅಂಶಗಳನ್ನು ಪರಿಣಾಮಕಾರಿಯಾದ ರೀತಿಯಲ್ಲಿ ಕಾಣುತ್ತೇವೆ: ಅಷ್ಟೇ ಅಲ್ಲ, ಇವೆರಡರ ಜೊತೆಗೆ ಬ್ಲೇಕನ ಕವನದಲ್ಲಿ ನನಗೆ ಕಂಡು ಬರದ ಒಂದು ಸಂಚಲನ-ಶಕ್ತಿ (a dynamism) ಮತ್ತು ಒಂದು ಕ್ರಿಯೆ (an action)
ಇವು ಅಡಿಗರ ಸಾಲಿನಲ್ಲಿ ನಮಗೆ ಕಂಡುಬರುತ್ತವೆ. ಅಡಿಗರ ಕವನದಲ್ಲಿ ಹುಲಿಯು ನಿದ್ದೆಯ ಮಖಮಲ್ಲನ್ನು ಹರಿದು ಮುಖರವಾಗುತ್ತದೆ. ಇದಲ್ಲದೆ ಅಡಿಗರ ಸಾಲಿನಲ್ಲಿ ಬ್ಯಾಸ್ಲರ್ ಬ್ಲೇಕನ ಸಾಲುಗಳನ್ನು ಕುರಿತು ಹೇಳುವ ಇನ್ನೂ ಒಳಗಿನ ಸ್ತರಗಳೂ ಉಪಸ್ಥಿತವಿವೆ. ಉದಾಹರಣೆ : ಅಲ್ಲಿ ಬ್ಯಾಸ್ಲರ್ ಹೇಳುತ್ತಾನೆ.
“.. … … … Beyond this there is communication of something not wholly of this world …… What we have in the image is of the mind, surely, but not wholly of the conscious mind. It is something of a dream–image, conveying :error before a symbol of power harm, and, like all dream images, made of the stuff known to the conscious mind, but given in a fusion of nonsequitors (fire-tiger-forest-night) that have, nevertheless, linking associations and analogies : tigers roam the forests, and darkness and fire (ligbt) are archetypal opposites in any language or experience.” ಬ್ಯಾಸ್ಲರ್‌ನ ಈ ಆಳವಾದ ಮನೋವೈಜ್ಞಾನಿಕ ಮತ್ತು ಕಾವ್ಯತಾಂತ್ರಿಕ ವಿವರಣೆಯು ಬ್ಲೇಕನ ಕವನದ ಸಾಲುಗಳಿಗೆ ಅನ್ವಯಿಸುವಷ್ಟೇ, ಅಥವಾ ಅದಕ್ಕಿಂತ ಹೆಚ್ಚು ಅರ್ಥಪೂರ್ಣವಾಗಿ ಅಡಿಗರ ಕವನದ ಈ ಸಾಲುಗಳಿಗೆ ಅನ್ವಯಿಸುತ್ತದೆ. ಅಡಿಗರ ಈ ಕವನದಲ್ಲಿ ವ್ಯಾಘ್ರವು, ದುಃಸ್ವಪ್ನದಂತೆ, ನಿದ್ರೆಯ ಮಖಮಲ್ಲನ್ನೇ ಹರಿದು ಹೊರಬರುತ್ತದೆ. ಇಲ್ಲಿ ‘ನಿದ್ರೆಯ ಮಖಮಲ್ಲು’ ಎಂಬ ರೂಪಕ ಸುಂದರವಾಗಿದೆಯೋ ಅಷ್ಟೇ, ಅಥವಾ ಅದಕ್ಕಿಂತ ಹೆಚ್ಚು, ಅರ್ಥಪೂಣವಾಗಿದೆ. ಬ್ಯಾಸ್ಲರ್ ಹೇಳುವ ‘Linking Associations’ ಅತ್ಯಂತ ಸುಂದರವಾಗಿ ಮತ್ತು ಅರ್ಥಪೂರ್ಣವಾಗಿ ಬಂದಿವೆ. ಇಲ್ಲಿ ನಿದ್ರೆ’ ಗೂ ‘ಮು (ಮ)ಖಮಲ್ಲಿ’ ಗೂ ಇರುವ ಸಂಬಂಧ (Association) ವನ್ನು ನಾವು ಎರಡು ವಿಧವಾಗಿ ಗ್ರಹಿಸಬಹುದು. ಮೊದಲನೆಯದಾಗಿ, ನಿದ್ರೆಗೂ ಮಖಮಲ್ಲಿನ ದಿಂಬು, ಹಾಸಿಗೆ ಮುಂತಾದುವುಗಳಿಗೂ ಇರುವ ಸಂಬಂಧ. ಈ ಸಂಬಂಧ ಶೃಂಗಾರದ ಮತ್ತು ಪ್ರಣಯದ ವಾತಾವರಣವನ್ನು ನಿರ್ಮಿಸುತ್ತದೆ. ಎರಡನೆಯದಾಗಿ, ನಿದ್ರೆ ಎಂಬುದೇ ಒಂದು ಮಖಮಲ್ಲಿನ ವಸ್ತ್ರವಾಗಿ ಅದನ್ನು ಹರಿದು ಹೊರಬರುವ ಬರುವ ವ್ಯಾಘ್ರದ ವಿಚಾರ. ಅನಿಯಂತ್ರಿತ ಕಾಮದ ಭೀಕರ, ಅಪಾಯಕಾರಿ, ದುಃಸ್ವಪ್ನ ಸದೃಶ ಭಾವನೆಯನ್ನು ಇಲ್ಲಿ ವ್ಯಾಘ್ರದಲ್ಲಿ ಪ್ರತಿಮೀಕರಿಸಿ, ಇಂಥ ವ್ಯಾಘ್ರವು ದುಃಸ್ವಪ್ನದಂತೆ ನಿದ್ರೆಯೆಂಬ ಮಖಮಲ್ಲನ್ನೇ ಹರಿದು ಹೊರಬರುತ್ತದೆ ಎಂದು ಅರ್ಥಪೂರ್ಣವಾಗಿ ಮತ್ತು ಧ್ವನಿಪೂರ್ಣವಾಗಿ ಹೇಳಿರುವುದು ಅಡಿಗರ ಈ ಕವನದ ಮಹಾತ್ಸಾಧನೆಯಾಗಿದೆ ಎಂದು ಹೇಳಬಹುದು. ಇದಕ್ಕೆ ಸರಿಜೋಡಿಯಾದ ನಿಗೂಢ ಭಯಂಕರ ಹಿನ್ನೆಲೆಯಾಗಿ, ಹಿಂದಿನ ಸಾಲಿನಲ್ಲಿ “ಇತಿಹಾಸ ಪೂರ್ವ ಕಾಲದ ಹೇಳಹೆಸರಿಲ್ಲದಲೆವ ಬೃಹದಾಕೃತಿಯ ಮುಸ್ಸಂಜೆ ನೆಳಲುಗಳು’ ಇಳಿ ಬಿದ್ದಿವೆ. ಒಟ್ಟಿನ ಮೇಲೆ ಇಲ್ಲಿ ಅಡಿಗರು ಉಂಟುಮಾಡಿರುವ ವಾತಾವರಣ ಅಲ್ಲಿ ಬ್ಲೇಕನು ಉಂಟುಮಾಡಿರುವುದಕ್ಕಿಂತ ಹೆಚ್ಚು ಭಯಂಕರವಾಗಿದೆ, ಹೆಚ್ಚು ನಿಗೂಢವಾಗಿದೆ ಮತ್ತು ಮನೋವೈಜ್ಞಾನಿಕವಾಗಿ ಹೆಚ್ಚು ಆಳವೂ ವಿಸ್ತಾರವೂ ಆಗಿದೆ. (ಉದಾ: ‘ಇತಿಹಾಸ ಪೂರ್ವಕಾಲದ…) ಬ್ಲೇಕನಿಗೆ ‘ಟೈಗರ್’ ಕವನ ಬರೆಯುವಲ್ಲಿ ಇದ್ದ ಉದ್ದೇಶಕ್ಕಿಂತ ಇಲ್ಲಿ ಈ ಕವನ ಬರೆಯುವಲ್ಲಿ ಅಡಿಗರಿಗಿಯುವ ಉದ್ದೇಶ ಸಾಕಷ್ಟು ಭಿನ್ನವಾಗಿದೆಯೆಂಬುದು ನಿಜ. ಆದರಂತೆಯೇ ಇಲ್ಲಿ ಬ್ಲೇಕವ ವಸ್ತು (Theme) ವಿಗೆ ಸ್ವಾಭಾವಿಕವಾಗಿ ಇದ್ದ ವಿಸ್ತಾರಕ್ಕಿಂತ ಮತ್ತು ಆಳಕ್ಕಿಂತ ಇಲ್ಲಿ ಅಡಿಗರ ವಸ್ತುವಿಗೆ ಸ್ವಾಭಾವಿಕವಾಗಿಯೇ ಹೆಚ್ಚಿನ (ಮನೋವೈಜ್ಞಾನಿಕ) ಆಳ ಮತ್ತು ವಿಸ್ತಾರಗಳು ಇವೆಯೆಂಬುದೂ ನಿಜ. ಆದರೂ ತಮ್ಮ ವಸ್ತುವನ್ನು ಹೆಚ್ಚು-ಕಡಿಮೆ ಬ್ಲೇಕನ ಆ ಕವನದ ವಸ್ತುವಿನ ಪರಿಮಿತಿಯೊಳಗೇ ನಿರೂಪಿಸುವಾಗ (ಉದಾ: ಮೇಲೆ ವಿಶ್ಲೇಷಿಸಿದ ಸಾಲಿ ನಲ್ಲಿ ಕೂಡ) ಅಡಿಗರು ಹೆಚ್ಚಿನ ಕಾವ್ಯ-ಕೌಶಲವನ್ನು ತೋರಿಸುತ್ತಾರೆಂಬುದು ಗಮನಾರ್ಹ. ಆಡಿಗರ ಈ ಮೇಲಿನ ಸಾಲಿನಲ್ಲಿ ನಮಗೆ ಕಂಡುಬರುವ ಇನ್ನೊಂದು ಗಮನಾರ್ಹ ಅಂಶವೆಂದರೆ ಇಲ್ಲಿನ ಶಬ್ದಗಳ ಸ್ಪರ್ಶಗುಣ (Tactile quality). ಉದಾ : ಮುಖಮಲ್ಲಿಗೂ ವ್ಯಾಘ್ರ-ಚರ್ಮಕ್ಕೂ ಸ್ಪರ್ಶ-ಗುಣದಲ್ಲಿ ಇರುವ ಹೋಲಿಕೆ. ಹುಲಿಯ ಚರ್ಮವೂ ಮಖಮಲ್ಲಿನಂತೆ ಮೆತ್ತಗೇ ನುಣುಪಾಗಿ ಹೊಳೆಯುತ್ತಿರುತ್ತದೆ. ಕೆಲವೊಂದು ಮಖಮಲ್ಲುಗಳು ವರ್ಣದಲ್ಲಿ ಸಹ ವ್ಯಾಘ್ರಚರ್ಮವನ್ನು ಹೋಲುವುದುಂಟು ಮುಂದೆ ಅಡಿಗರ ಕವನದ ಈ ಸಾಲು ‘ನಖದ ಹೊಸ ಗೀರುಗಳು’ ಎಂದು ಮುಕ್ತಾಯವಾಗುವಲ್ಲಿ ಹೊಸ’ ಎಂಬ ವಿಶೇಷಣವು ಇಲ್ಲಿ ನಿರೂಪಿತವಾದ ಅರ್ಥಕ್ಕೆ ಮತ್ತು ಭಾವಕ್ಕೆ ಒಂದು ಹೊಸ ತಿರುವನ್ನೇ ಕೊಡುತ್ತದೆ. ಆ ವಿಶೇಷಣವು ಇಲ್ಲಿ ವ್ಯಾಘ್ರ -ನಖವು ಉಂಟುಮಾಡುತ್ತಿರುವ ಗೀರುಗಳು (Scratches) ಅಥವಾ ಗಾಯಗಳು (Wounds) ಹೊಸ-ಹೊಸವಾದಂಥವು-‘New Wounds and new pains’ ಎಂಬರ್ಥದಲ್ಲಿ–ಎಂದು ಹೇಳುತ್ತ ಕವನದ ಓಘವನ್ನು ಮುಂದುವರಿಸುತ್ತದೆ.
ಕವನದ ಇವರ ಮುಂದಿನ ಭಾಗವು (ಅದು ಈ ಕವನದ ಕೊನೆಯ ಭಾಗವೂ ಹೌದು) ಅದರ ಈ ವರೆಗಿನ ಭಾಗಗಳಿಗಿಂತ ಹೆಚ್ಚು ಅಮೂರ್ತ (Abstract) ವೂ, ಹೆಚ್ಚು ತಾತ್ವಿಕ (Philosophical) ವೂ ಆಗಿದೆ. ಈ ಭಾಗವು ಇಡೀ ಕವನದ ಸಂಕೀರ್ಣವಾದ ಮನೋವೈಜ್ಞಾನಿಕ ವಸ್ತು (Theme) ವಿಗೆ ಒಂದು ಗಟ್ಟಿಮುಟ್ಟಾದ ತಾತ್ವಿಕ ನೆಲೆ ಗಟ್ಟನ್ನು ಒದಗಿಸುತ್ತದೆ. ಇಲ್ಲಿ ಕಾರಣಾಂತರದಿಂದ ಚಿತ್ರದಲ್ಲಿ ಒಮ್ಮೊಮ್ಮೆ ಉಂಟಾಗುವ ಚಾಂಚಲ್ಯ, ಕ್ಷೋಭೆ ಮತ್ತು ವಿಪರೀತ ಭಾವನೆಗಳಿಗೂ ನಿತ್ಯದ ರೂಢಿನಿಷ್ಠವಾದ ಆಚಾರ-ವಿಚಾರಗಳ ಮತ್ತು ಭಾವನೆ-ಧೋರಣೆಗಳ ‘ನಿರಾತಂಕ ಗಟ್ಟಿ ಓಡಿಗೂ’ ಇರುವ ಮನೋವೈಜ್ಞಾನಿಕ ಅಂತರವನ್ನು ಕುರಿತು ಕವಿ ಕೇಳುತ್ತಾರೆ. ಈ ಅಂತರವೇ (Distance) ಅಥವಾ ಈ ಮಾನಸಿಕ ಕೊರಕಲ (Psychological fissure) ವೇ ಈ ಕದನದ ದಿನ ನುಡಿಗಳಲ್ಲಿ ಮೂರ್ತ (Concrete) ವಾಗಿ ವ್ಯಕ್ತವಾದ ಮಾನಸಿಕ ‘Tension’ ಮತ್ತು ಸಂಘರ್ಷ (Conflict) ದ ಮೂಲ ಕಾರಣ. ಆ ಹಿಂದಿನ ನುಡಿಗಳಲ್ಲಿ ‘ತಾಳತಪ್ಪಿ’ ಅಥವಾ ‘ತಾಳದಿಂದ ತಾಳಕ್ಕೆ ಜಿಗಿವ’ ಬಗೆಯು. ಈ ನುಡಿಯಲ್ಲಿ ನಿತ್ಯದ ಏಕ ದಾರಿಯ ಏಕಶೃತಿಯನ್ನು ಹಿಡಿದು, ಬಾಳಿನ ಮೂಲ, ತಾಳದ ಲಯವನ್ನು ಹೊತ್ತು ನಿಲ್ಲುವ ಪುಂಗಿಯ ಸೋರೆ-ಬುರುಡೆಯನ್ನು ಆಶ್ರಯಿಸಿ, ಆ ಪುಂಗಿಯ ನಾದಕ್ಕೆ ಸಾದಾಗಿ (Getting tamed) ತನ್ನ ತಲೆಯನ್ನು ಸ್ಥಿರವಾಗಿ ಎತ್ತಿ ನಿಲ್ಲುವ ಹಾವಿನಂತೆ ಸ್ಥಿರವಾಗಿ ನಿಲ್ಲುತ್ತದೆ. ಈ ಸ್ಥಿರ ಶೃತಿಯ ಪುಂಗಿಯ ಸೋರೆ-ಬುರುಡೆಯು ತಲೆಯ ಬಳಿ ಸುತ್ತುತ್ತಿರುವವರೆಗೆ ತಲೆಯ ತೂಕ ತಪ್ಪಿ, ಅದು ಉರುಳಿ, ಬುಡಮೇಲಾಗಿ, ಖಾಲಿಯಾಗಿ ಬರೀ ಬುರುಡೆಯಾಗಿ ಬಿಡುವ ಅಪಾಯ ಅಸಂಭವ ಎಂಬ ಧೈರ್ಯ ಇಲ್ಲಿ ಕವಿಗೆ ಬರುತ್ತದೆ. ಮುಂದಿನ ಅಂದರೆ ಕವನದ ಕೊನೆಯ ಸಾಲಿನಲ್ಲಿ, ಕವನದ ಈ ಮೊದಲಿನ ಭಾಗಗಳಲ್ಲಿ ನಿರೂಪಿತವಾದ ಭಾವನೆಗಳ ಅಲ್ಲೋಲ-ಕಲ್ಲೋಲವು ಒಂದು ಶಾಂತ, ಸಮಾಧಾನಕರ ನಿಲುಗಡೆಗೆ ಬಂದಿರುವುದರ, ಮತ್ತು ಆ ಸಮಾಧಾನ ಸ್ಥಿತಿಯ (ದೈವೀ) ಶಕ್ತಿಗೆ ಅಥವಾ ತೇಜಸ್ಸಿಗೆ ಕವಿ ಋಣಿಯಾಗಿ ತಲೆಬಾಗುತ್ತಿರುವುದರ ಚಿತ್ರಣವಿದೆ. ಕವನದ ಈ ಭಾಗವನ್ನು ನಾವು ಸರಿಯಾಗಿ ಅರ್ಥಮಾಡಿಕೊಳ್ಳಬೇಕಾದರೆ ನಮಗೆ ಸ್ವಲ್ಪ ಭೂಮಿತಿ (Geometry) ಯ ಪರಿಚಯ ಇರಬೇಕಾಗುವುದು. ಯಾಕೆಂದರೆ ಇಲ್ಲಿ ಒಂದು ವರ್ತುಲ (Circle) ದ ಮತ್ತು ಅದಕ್ಕೆ ಸಂಬಂಧಪಟ್ಟ ತ್ರಿಜ್ಯ (Radius), ಪರಿಧಿ (Circumference) ಮುಂತಾದುವುಗಳ ಪ್ರತಿಮೆಗಳ ಮುಖಾಂತರ ಕಾವ್ಯಾರ್ಥ ರೂಪಿತವಾಗುತ್ತದೆ ಮತ್ತು ಪ್ರಕಾಶಿತವಾಗುತ್ತದೆ. ಬಹುಶಃ ಅಡಿಗರು ಹಿಂದೆ ಕೆಲವು ಕಾಲ ಹೈಸ್ಕೂಲಿನಲ್ಲಿ ಶಿಕ್ಷಕರಾಗಿದ್ದಾಗ ಭೂಮಿತಿಯನ್ನು ಕಲಿಸುತ್ತಿದ್ದರೋ ಏನೋ ! ಅಂತೂ ಇಲ್ಲಿ ಭೂಮಿತಿಯ ತತ್ವಗಳು ಕವಿಗೆ ಬಹಳ ಚೆನ್ನಾಗಿ ಹಸ್ತಗತವಾಗಿರುವುದಷ್ಟೇ ಅಲ್ಲ, ಕವಿ ಅವುಗಳನ್ನು ಅತ್ಯಂತ ಕುಶಲತೆಯಿಂದ ಕಾವ್ಯ-ವಸ್ತುಗಳನ್ನಾಗಿ-ಕಾವ್ಯಾರ್ಥರೂಪಗಳನ್ನಾಗಿ ಮತ್ತು ಕಾವ್ಯಾರ್ಥನಿರ್ವಾಹಕಗಳನ್ನಾಗಿ ಪರಿವರ್ತಿಸಿದ್ದಾರೆ. ಇಲ್ಲಿನ ಭೂಮಿತಿ-ಶಾಸ್ತ್ರ, ಕಾವ್ಯ ಮತ್ತು ತತ್ವ – ಚಿಂತನೆ ಇವುಗಳ ಅದ್ಭುತವಾದ ಸಂಯೋಜನೆಯನ್ನು ನೋಡಿದರೆ ನನಗೆ ಪ್ರಾಚೀನ ಗ್ರೀಸದ ಪ್ರಸಿದ್ಧ ಭೂಮಿತಿ ಶಾಸ್ತ್ರಜ್ಞ ಮತ್ತು ದಾರ್ಶನಿಕ ಪೈಥಾಗೋರಸ್ (Pythagaras) ನ ನೆನಪಾಗುತ್ತದೆ; ಇರಲಿ. ಈ ಕವನದ ಸಾಲು ಹೀಗಿದೆ:
“ಹೃದಯ ಮಧ್ಯವೆ ರೂಪು
ತಳೆವ ತ್ರಿಜ್ಯೆಗಳಸಂಖ್ಯಕ್ಕೆ ಗುರಿ, ಮರಿ, ತಣಿವು
ತರುವ ಪರಿಧಿಯ ಸಾಮತೇಜಸ್ಸೇ, ನಮಸ್ಕಾರ.
ಇಲ್ಲಿ ಹೃದಯವನ್ನು ಒಂದು ವರ್ತುಲ ಎಂಬುದಾಗಿ ಭಾವಿಸಿದರೆ ‘ಹೃದಯಮಧ್ಯ’ ಅನ್ನುವುದು ಆ ವರ್ತುಲದ ಕೇಂದ್ರಬಿಂದು (centre) ಆಗುವದು. ಭೂಮಿಯಲ್ಲಿ ಒಂದು ಸ್ಥಾಯಿ (fixed) ಯಾದ ಬಿಂದು (point) ವಿನ ಸುತ್ತಲೂ ಸಮಾಂತರ ಅಂತರ (At equidistance) ದಲ್ಲಿ ಒಂದು ಗೆರೆ ಹೊಡೆದರೆ ಅದು ವರ್ತುಲ (circle)ಎಂದೆನಿಸುವುದು. ಈ ಕವನದಲ್ಲಿನ ಮನೋ-ಭೂಮಿಕೆಯಲ್ಲಿ ಹೃದಯ – ಮಧ್ಯವೇ, ಅಥವಾ ಹೃದಯ-ಮಧ್ಯದಿಂದ ಹೊರಟು ರೂಪುತಳವ ಅಸಂಖ್ಯ (ಮುರಿತ, ಸುಳಿ ಸುತ್ತುವಿಕೆ ಅಥವಾ ಮಣಿಯುವಿಕೆ) ಯನ್ನು ಅಥವಾ ಗುರಿಯನ್ನು, ಮುರಿಯನ್ನು ಹಾಗೂ ತಣಿವನ್ನು (ತೃಪ್ತಿ ಅಥವಾ ಸಮಾಧಾನ) ತರುವ ‘ಪರಿಧಿ’ (Circumference, Boundary or Halo) ಯ ‘ಸಾಮ’ (ಸೌಮ್ಯ, ಸಮಾಧಾನಕರ ಅಥವಾ ಶಾಂತಿಯುತ) ತೇಜಸ್ಸಿಗೆ ನಮಸ್ಕಾರ ಎಂದು ಕವಿ ಹೇಳುತ್ತಾರೆ. ಇಲ್ಲಿ ತ್ರಿಜ್ಯೆ’ ಅನ್ನುವುದಕ್ಕೆ ನಾವು ಇನ್ನೊಂದು ಅರ್ಥವನ್ನೂ ಹಚ್ಚಬಹುದಾಗಿದೆ. ತ್ರಿಜ್ಯೆ=ತ್ರಿ+ಜ್ಯ, ಎಂದರೆ ‘ಸತ್ವ+ ರಜ+ತಮ – ಈ ತ್ರಿಗುಣಗಳಿಂದ ಜನ್ಯವಾದ’ ಎಂಬ ಮನೋವೈಜ್ಞಾನಿಕ ಅರ್ಥವನ್ನೂ ಹಚ್ಚಬಹುದು. ಈ ಆಥವ ‘ಹೃದಯ ಮಧ್ಯ’ಕ್ಕೂ, ಅದು ತಳೆವ ಅಸಂಖ್ಯ ರೂಪ (ಈ ತ್ರಿಗುಣಗಳ ಅಸಂಖ್ಯ ಮಿಶ್ರಣ -ಅವುಗಳ innumerable permutations and combinations’ ಎಂಬ ಅರ್ಥದಲ್ಲಿ) ಗಳಿಗೂ ಅತ್ಯಂತ ಸಮರ್ಪಕವಾಗಿ ಅನ್ವಯಿಸುತ್ತದೆ. ಹೀಗೆ ಮನಸ್ಸಿನ ಚಾಂಚಲ್ಯ ಮತ್ತು ಚಡಪಡಿಕೆಗಳಲ್ಲಿ ಪ್ರಾರಂಭವಾಗಿ ಮುಂದ ತೀವ್ರವಾದ ಹಾಗೂ ಆಳವಾದ ಮನೋಕ್ಷೋಭೆಯಲ್ಲಿ ಬೆಳೆಯುವ ಅಡಿಗರ ಈ ಕವನವು ಕೊನೆಗೆ ಒಂದು ವಿಧವಾದ ಸಮತೋಲ-ಭಾವದಲ್ಲಿ ಮುಕ್ತಾಯವಾಗುತ್ತದೆ. ಕವನದ ಕೊನೆಯಲ್ಲಿ ನಮಗೆ ಕಂಡುಬರುವ ಈ `ಸಮತೋಲ-ಭಾವ’, ಈ “ಸಮಾಧಾನದ-ರಸ’ (ಬರೀ ತಟಸ್ಥವಾದಿ ಮತ್ತು ನಿಷ್ಕ್ರಿಯವಾದ ಶಾಂತ-ರಸವಲ್ಲ) ಒಂದು ಜೀವಂತವಾದ, ಸಂಚಲನ ಶೀಲವಾದ ಮತ್ತು ಶಕ್ತಿಪೂರ್ಣವಾದ, ಆದರೆ ಸಂಯಮನಿಯಂತ್ರಿತವಾದ ಸಂಕೀರ್ಣ ಅನುಭವದ ಅಭಿವ್ಯಕ್ತಿಯ ಅಂತಿಮಾವಸ್ಥೆಯಾಗಿ ಹೊರಹೊಮ್ಮುತ್ತದೆ. ನನ್ನ ಅಭಿಪ್ರಾಯದಲ್ಲಿ ಅಡಿಗರ ಈ ಕವನವು ಅವರ ‘ಗೊಂದಲಪುರ’, ‘ಹಿಮಗಿರಿಯ ಕಂದರ’, ‘ದೆಹಲಿಯಲ್ಲಿ’ ಮುಂತಾದ ಇತರ ಕೆಲವು ಕವನಗಳಂತೆ ಅತಿವಿಸ್ತಾರವಾಗಿ ಬೆಳೆದು ತೆಳ್ಳಗಾಗಿರದೆ, ಮತ್ತು ಅವರ “ಕೂಪ ಮಂಡೂಕ’ದಂತೆ ಸಂಗ್ರಹವಾಗಿದ್ದು ಅನಿಶ್ಚಿತ ಧೋರಣೆಯ ಸಂದಿಗ್ಧತೆಗೆ ಒಳಗಾಗಿರದೆ (ಇಲ್ಲಿ ನಾನು ಅಡಿಗರ ಇತರ ಕವನಗಳ ಬಗ್ಗೆ ಹೇಳಿರುವ ಅಭಿಪ್ರಾಯಗಳನ್ನು ಸಮರ್ಥಿಸಿಕೊಳ್ಳಲು ಅಥವಾ ವಿವರಿಸಲು ಆ ಕವನಗಳ ಬಗ್ಗೆ ಪ್ರತ್-ಪ್ರತ್ಯೇಕವಾದ ಲೇಖನಗಳನ್ನು ಬರೆಯಬೇಕಾಗುವುದೆಂಬುದರ ಅರಿವು ನನಗಿದೆ) ಸಂಕೀರ್ಣವೂ, ಸೂಕ್ಷ್ಮವೂ, ಸಮ್ಯಕ್ ಸಂಘಟಿತ (Well Organised) ವೂ ಆದ ಅತ್ಯಂತ ಯಶಸ್ವಿಯಾದ ಕವನವಾಗಿದೆ. ನನ್ನ ಈ ಲೇಖನವು, ನಾನು ಇದರ ಶೀರ್ಷಿಕೆಯಲ್ಲಿ ತಿಳಿಸಿದಂತೆ, ಮುಖ್ಯವಾಗಿ ಒಂದು ವಿಶ್ಲೇಷಣೆ (Analysis) ಆಗಿದೆಯೇ ವಿನಾ ಸರ್ವಾಂಗ-ಸಂಪನ್ನವಾದ ವಿಮರ್ಶೆ (Critique) ಆಗಿಲ್ಲ. ನಾವು ಯಾವುದೊಂದು ಸಾಹಿತ್ಯ-ಕೃತಿಯನ್ನು ಹೊಗಳುವುದಕ್ಕಿಂತ ಮೊದಲು, ಅಥವಾ ತೆಗಳುವುದಕ್ಕಿಂತ ಮೊದಲು, ಅಥವಾ ಅದರ ಸಾರಾಸಾರ ವಿಮರ್ಶೆಯನ್ನು ಮಾಡುವುದಕ್ಕಿಂತ ಮೊದಲು ಆ ಕೃತಿಯನ್ನು ಸರಿಯಾಗಿ ವಿಶ್ಲೇಷಿಸುವುದು ಅತ್ಯಗತ್ಯ. ಈ ಮಾತು ಅಡಿಗರ ಈ ಕದನದಂಥ ಸಂಕೀರ್ಣವಾದ ಕೃತಿಗಳಿಗೆ ವಿಶೇಷವಾಗಿ ಅನ್ವಯಿಸುತ್ತದೆ. ಇಲ್ಲಿ ನಾನು ಮುಖ್ಯವಾಗಿ ಅಂಥ ವಿಶ್ಲೇಷಣೆಯ ಕೆಲಸವನ್ನು ಮಾಡಿದ್ದೇನೆ. ಈ ಲೇಖನದಲ್ಲಿ ಅಡಿಗರ ಈ ಕವನದ ಬಗ್ಗೆ ಅಲ್ಲಲ್ಲಿ ಪ್ರಶಂಸೆದು ಮಾತುಗಳು ಬಂದಿವೆಯಾದರೂ ಅವು ವಿಶ್ಲೇಷಣೆಯ ಮೊದಲಾಗಲಿ (Prior to Analysis), ಅಥವಾ ವಿಶ್ಲೇಷಣೆಯ ಬದಲಾಗಲೀ (instead of Analysia) ಬಂದಿರದೆ ವಿಶ್ಲೇಷಣೆಯು ಪರಿಣಾಮ (As a Result of Analysis) ವಾಗಿ ಬಂದಿರುತ್ತವೆ – ಅಥವಾ ಹಾಗೆಂದು ನಾನು ತಿಳಿದಿದ್ದೇನೆ.
ಗೂಢಚಾರಿಯ ನಕಲು-ನಗಲು
ಗೂಢಚಾರಿಯ ನಕಲು-ನಗಲು
ಆರ್. ಮೋಹನ
ಮಳೆ ತೊಳೆದ ಎಳೆ ಬಿಸಿಲು.
ಚಹದ ತೋಟಗಳ ಅಶೇಷ ಚದುರಂಗ. ಅವುಗಳ ಮಧ್ಯ ತಗ್ಗು ಭೂಮಿಯ ಗದ್ದೆ. ಅವೆರಡಕ್ಕೂ ಸೇರದೇ, ಅವರಿಬ್ಬರೂ ಬಿಟ್ಟ, ಅತ್ತ ಏರಿಲ್ಲದೆ ಇತ್ತ ಬೀಳಿಲ್ಲದ, ಕಾಡು ಭೂಮಿಯ ಮೇಲೆ ನಮ್ಮ ಸೇನೆ. ಚಹದ ಹಸಿರೆಲೆಗಳ ಸಮತಟ್ಟು, ಗದ್ದೆ ನೀರಿನ ಸುಕ್ಕಿಲ್ಲದ ಹಾಸಿಗೆ, ಮಧ್ಯೆ ನಮ್ಮ ಶಿಬಿರದ ಡುಬುರಿಗಳು, ಬಾಷಾಗಳೆಂಬ ಗುಡಿಸಲುಗಳು, ಹಸಿರಿನ ಹರವಿಗೆ ಹುಣ್ಣಿದ್ದಂತೆ.
ಅದೊಂದು ಅಪೂರ್ವ ನೋಟ-ಅದಕ್ಕದನ್ನೇ ಗಮನಿಸಿದರೆ ಹಿಮಾಲಯದ ಮರಿ ತಪ್ಪಲುಗಳ ಪರಿಧಿ. ನೋಟ ಹರಿದಂತೆಲ್ಲ ದೂರಕ್ಕೆ ಮೇಘಾಚ್ಛಾದಿತ ಬಾಂದಳವೀಯುವ ಮಸುಕು ಚಲುವು. ಸದಾ ಬಾನು ಭೂಮಿಗಳ ನಡುವೆ ಇಳಿಬಿಟ್ಟ ತುಂತುರು ಸೋನೆಯ ತೆರೆ. ವಾತಾವರಣದ ಮಬ್ಬು ಎಲೆ ಹೂಗಳನ್ನು, ಪಶು ಪಕ್ಷಿಗಳನ್ನು ನನ್ನನ್ನು, ನನ್ನ ಬಯಕೆಗಳನ್ನು ತಬ್ಬಿ ಹಿಡಿಯುತ್ತದೆ. ಮೈ ಉಬ್ಬಿ ಅದೆಲ್ಲವನ್ನೂ ತೆಕ್ಕೆಗೆ ತೆಗೆದುಕೊಂಡರೂ ಆಸೆಗಳು ಮಾತ್ರ ಮಂಪರಿನ ತೆರೆ ಮುಸುಕಿನಲ್ಲಿಯೇ, ಏಳಬಯಸಿ ಏಳಲಾರದೇ ತೆವಳುತ್ತವೆ.
ಸೈನ್ಯಾಧಿಕಾರಿಯ ಬಾಡಿದ ಹಸಿರಿನ ಸಮವಸ್ತ್ರದಲ್ಲಿ ವ್ಯಾಯಾಮಕ್ಕೆ ಒಗ್ಗದ ಮೈ, ಸಹಸ್ರ ರಂಧ್ರಗಳಿಂದ ಪ್ರಕೃತಿಯನ್ನು ಮೂಸುತ್ತದೆ. ಮುಂದೆ ಹರಡಿದ ಈ ಮಬ್ಬು ಸೌಂದರ‍್ಯ, ಹಿಂದೆ ಭೂಮಿಗೆ ಹಾಕಿದ ಬರೆಯಂತೆ ವಾಯು ನಿಲ್ದಾಣದ ಸಿಮೆಂಟ್ ಹಾಸಿಗೆಗಳು. ಸೆಟೆದ ರೆಕ್ಕೆಗಳ ವಿಮಾನಗಳು, ಕರ್ತವ್ಯ !
ಆ ಸಾರಿಗೆ ವಿಮಾನಗಳಿಂದ ಬೀಳುವ ಪ್ಯಾರಾಚೂಟ್ (Parachute). ಮೂರು ಲಾರಿಗಳನ್ನೇ ತನ್ನ ಹೊಟ್ಟೆಯಲ್ಲಿ ಹಿಡಿಯಬಲ್ಲ AN 12 ವಿಮಾನ, ಕರ್ತವ್ಯದ ಕರೆ…ಅತ್ತ ಹೋಗದು ನನ್ನ ನೆನಪು. ನಾವು ಕಟ್ಟಬೇಕಾದ ತಿಂಡಿ ತುಪಾಕಿಯ ಪ್ಯಾಕುಗಳು, ಅವುಗಳನ್ನು ಪ್ಯಾರಾಚೂಟಿನ ಕೊಕ್ಕಿಗೆ ಕಟ್ಟಿ ವಿಮಾನದಿಂದ ತಳ್ಳಬೇಕಾದ ಕೆಲಸ, ಅದೆಲ್ಲ ಕ್ಲೀನಾಗಿ ಕಳಚಿ ಹೋಗಿದೆ. ಹಾಂ…ಅದೇ ಆ ವಿಮಾನದಿಂದ, ಮಿರುಗುವ ನೀಲಿಯ ಆಗಸದಲ್ಲಿ ಮಲ್ಲಿಗೆಯ ರಂಗವಲ್ಲಿ ಹಾಕಿದಂತೆ, ಉದುರುವ ಪ್ಯಾರಾಚೂಟ್‌ಗಳು. ಅದು ನೆನಪು. ಹಾಲುಕ್ಕಿದಂತೆ ಹೃದಯ ಬರಿದೇಳುತ್ತದೆ.
ಹೌದು. ಅವಳ ನೆನಹಿನೊಡನೆ ಇದೆಲ್ಲಿ. ಅದೇ ಆ ದೂರದ ಮುಸುಕಿನಿಂದ, ಬೆಟ್ಟಗಳ ವರ್ತುಲದಿಂದ ಅವಳು ಗಿಡಗಳ ತುದಿಯ ಮೇಲಿಂದ ನಡೆದು ಬಂದಂತೆ. ಮಳೆಯಲ್ಲಿ ನೆನೆದ ಮೈ. ಮೈಗಂಟಿಕೊಂಡ ಬಿಳಿಯ ಸೀರೆ, ತೊಯ್ದ ಕೂದಲು. ಆ ಚೀನೀ ಕಣ್ಣುಗಳ ಚೀನೀ ಹುಬ್ಬುಗಳ ಮೇಲೆ ಮಳೆಯ ಹನಿ. ನಗುತ್ತಿರಬಹುದು. ಆ ಕಣ್ಣುಗಳೇ ಹಾಗೆ, ಭಾವ ಅರ್ಥವಾಗದು, ಚೈನಾಕ್ಕೆ ಹೋಗಿದ್ದರೆ ತಿಳಿಯುತ್ತಿತ್ತೇನೋ.
ಬೇಡ, ಬೇಡ ಎಂದು ಬೊಬ್ಬೆ ಇಟ್ಟರೂ ಆ ದೃಶ್ಯದ ಚೆಲುವೆಲ್ಲ ಹೊಲಸು ನಾರುವಂತೆ ಆ ವಾಸನೆ ಮೂಗನ್ನು ಕವಿಯುತ್ತದೆ. ದುರ್ದೈವ ಎಂದರೆ ಇದೇ. ಅನುಭವವನ್ನ ಬೇರೆ ಬೇರೆ ಗೂಡುಗಳಲ್ಲಿ ಅಡಗಿಸುವಂತೆ ಕಡಿದು ಕೊರೆಯಬೇಕೆಂದರೆ ಆಗದು. ಅದಕ್ಕೆಂದೇ ಅಮಿಶ್ರಿತ ಸುಖವಿಲ್ಲ ನನಗೆ. ತಪ್ಪು ನನ್ನದಲ್ಲ.
ಆ ಮೂಗು ಕಟ್ಟುವ ವಾಸನೆ ಬರುತ್ತಿದ್ದುದು ಒಂದು ಎಮ್ಮೆಯ ಸತ್ತ ಕಳೇಬರದಿಂದ. ನನ್ನ ಬಾಷಾದ ಮುಂದುಗಡೆ ನಮ್ಮ ಸೀಮೆ ಮುಗಿಯಿತೆಂದು ಘೋಷಿಸುವ ಮುಳ್ಳು ತಂತಿಯ ಬೇಲಿ. ಅದರಾಚೆ ಬೇಡದ ನೀರು ಎತ್ತಲೋ ಹೋಗಲು ತಾನಾಗಿಯೇ ಮೂಡಿದ ಚರಂಡಿ, ಅದರ ದಂಡೆಗೆ ಆ ಕಳೇಬರ. ಯಾರೋ ಹಳ್ಳಿಗ ಎಸೆದು ಹೋಗಿರಬೇಕು ರಾತ್ರಿ.
ಕಳೇಬರಹದ ಮಾಂಸವನ್ನು ಕಚ್ಚಿ, ಎಳೆದು, ಹರಿದು ತುರಿದು ತಿನ್ನುತ್ತಿದ್ದ ಎರಡು ರಣ ಹದ್ದುಗಳು. ಮೊಣಕೈಗಿಂತ ಉದ್ದ ಆ ಕ್ರೂರ ಕೊಕ್ಕು. ಭೀತಿ ಹುಟ್ಟುವುದಕ್ಕೆ ಆ ಎರಡು ಕಣ್ಣುಗಳೇ ಸಾಕು. ರೆಪ್ಪೆಯಿಲ್ಲದಂತೆ, ಮೈಯಿಂದ ಉಬ್ಬಿ ಬಾತುಕೊಂಡಂತೆ, ಮಾಂಸ ಬಿಟ್ಟರೆ ಬೇರೇ ಕಾಣೆನೆಂಬಂತೆ, ಎಮ್ಮೆಯ ಕರುವಿನಷ್ಟು ದೊಡ್ಡ ಮೈ, ಕಳೇಬರದ ಪಕ್ಷದಲ್ಲಿ ಅತ್ತಿತ್ತ ಪ್ರಯಾಸಪಟ್ಟು ವಿಕಾರವಾಗಿ ಎರಡು ಕಾಲುಗಳ ಮೇಲೆ ನಡೆಯುವ ನಡಿಗೆ. ಆಗ ನಸು ತೆರೆಯುವ ರೆಕ್ಕೆಗಳಲ್ಲಿ ಎಂತಹ ಶಕ್ತಿ! ಅರೆಕ್ಷಣದಲ್ಲಿ ಮೈಲಿ ಮೇಲಕ್ಕೆ ಹಾರಬಲ್ಲ ಜಾಗ್ರತೆ. ಒಂದು ಗಳಿಗೆಯೂ ನಿರರ್ಥಕವಾಗದಂತೆ ಮಾಂಸ ಹರಿಯುವ ಚಾಕಚಕ್ಯತೆ. ಎಂದು ಸಾಧಿಸೀತು ಆ ಭವ್ಯ ಯೋಜನೆ, ನಮ್ಮ ಕುಸ್ತಿ ವಿಮಾನ ಗಳಿಗೆ?
ಆ ವಾಸನೆ, ಅವಳ ಆಗಮನ. ಸುಮ್ಮನೆ ನರ್ಸಿಂಗ್ ಆಫೀಸರ್ ಮಿಸ್ ದಾಸಳ ಕಪ್ಪು ಮೈಯಲ್ಲೇ ತೃಪ್ತಿಪಡೆದರಾಗುತ್ತಿತ್ತು. ಆದರೆ ನನಗಾಶೆ. ಅವಳದು ಹೇಗಿರುತ್ತದೋ! ಚೈನಾದ ತಾಯಿಯಂತೆ, ಭಾರತದ ತಂದೆಯಂತೆ.
ಕಣ್ಣು, ಬಾಯಿ, ಕೆನ್ನೆ, ಚೈನಾ. ಹಣೆ, ಕೂದಲು, ತುಟಿ, ಭಾರತ. ಅವಳು ಚಲುವೆ ಮಾತ್ರವಲ್ಲ, ಅವಳಲ್ಲಿ ಹೊಡಕರಿಸುವ ಕಾಮ ನನ್ನಂತಹ ಸಾವಿರ ಅಧಿಕಾರಿಗಳನ್ನು ತಬ್ಬಿಬ್ಬಾಗಿಸಿತ್ತು. ಎಲ್ಲರಲ್ಲೂ ಬಾರದು ಅ ತೀವ್ರ ಒತ್ತಡದ ಎಳೆತ.
ಮೊದಲನೆಯ ಸಲ ಅವಳು ನಮ್ಮ ಆಫೀಸರ‍್ಸ್ ಮೆಸ್ಸಿಗೆ ಬಂದಾಗ ಗುಂಡು ತಗಲಿದಂತೆ. ಮೊಟ್ಟೆಯಾಕಾರದ ಮುಖ. ಕಣ್ಣಿನಲ್ಲಿ ಭಾವ ಕಾಣದಿದ್ದರೂ ಚೆಂದುಟಿಗಳಲ್ಲಿ ಮುಗುಳ್ನಗೆ. ಬಹಳ ಸಾದಾ ಬಿಳಿಯ ಕುಪ್ಪಸವಿದ್ದರೂ ದುಂಡಾದ ಕಠಿನವಾದ ಮೊಲೆಗಳ ಬಣ್ಣ ತಿಳಿಯುವಂತೆ, ಕಾಲರ್ ಬೋನಿನಿಂದ ಮೊಲೆಯವರೆಗೆ ಉಬ್ಬಿಳಿಯುವ ಆ ಮಾಂಸ ತುಂಬಿದ ಚರ್ಮದ ಸೊಂಪು-ಮೆಸ್ಸಿನ ಗ್ಯಾಸ್ ದೀಪ ಪ್ರತಿಬಿಂಬಿಸುವಂತೆ. ಸೀರೆಯ ಮಡಿಕೆಗಳನ್ನೆಲ್ಲ ಧಿಕ್ಕರಿಸಿ ತನ್ನ ನುಣುಪನ್ನು ಘೋಷಿಸುವ ಒಳ್ದೊಡೆಗಳು. ಸಪುರವಾಗಿ ಕಲಾಮಯ ವಕ್ರತೆಯಿಂದ, ತೊಡೆಯುಬ್ಬಿ ಸೊಂಟಕ್ಕೆ ತಳಕು ಹಾಕಿದಂತೆ ನಿಶಂಬ. ಅವಳ ಜೊತೆ ಬಂದ ಕ್ಯಾಪ್ಟನ್ ಖಾನ್ ನಮಗೆ ಕಾಣಿಸಲಿಲ್ಲ. ಅವಳ ಗಂಡ ಬೇರೆ ಠಾಣೆಯಲ್ಲಿದ್ದನಷ್ಟೆ. ಅಬ್ಬಾ ಖಾನನ ದೈವವೇ!
ಮೆಸ್ಸಿನಲ್ಲಿದ್ದ ಮೂವರ ತಲೆಯಲ್ಲಿ ಅವಳಾಗಲೇ ಬಟ್ಟೆ ಕಳಚಿಬಿಟ್ಟಿದ್ದಳು, ಅವಳ ಕಣ್ಣುಗಳ ಆಳಕ್ಕೆ ಇಳಿಯಲೆತ್ನಿಸಿದೆ – ಗೋಡೆಗೆ ಹಾಯ್ದಂತಾಯಿತು She was sex, pure and simple. ಆ ಆಕೃತಿಗೆ ಬೇರೆ ವಿನ್ಯಾಸಗಳೇ ಇರಲಿಲ್ಲ.
ಕ್ಯಾಪ್ಟನ್ ತ್ಯಾಗಿ ಅವರಿಬ್ಬರನ್ನೂ ಕರೆದಿದ್ದ. ನಲವತ್ತು ವರ್ಷದ ತ್ಯಾಗಿ ಎಂದರೆ ನಂಬಿಕೆ ಬಂದಿತೇನೋ. ಡಿನ್ನರ್‌ಗೆ ಬಂದಿದ್ದರು, ಡಿನ್ನರ್‌ಗೆ, ನಾನೂ, ಮೇಜರ್ ಆಲೂ ವಾಲಿಯೂ ಅವಳನ್ನು ನೋಡಿದದ್ದು ಮೊಟ್ಟ ಮೊದಲನೆಯ ಸಲ. ಆಲೂ ವಾಲಿಯೂ ನಾಯಿಯಾದ. ಆದರೆ ನೆಕ್ಕಲು ಪ್ರಾರಂಭಿಸಿದುದು ತ್ಯಾಗಿ.
ಆಗ ಒಳಗೆ ಪ್ರವೇಶಿಸಿದ ಅವಳ ಅಣ್ಣ. ನಾವು ಚೀನಿ ಸರದಾರ್ ಎಂದು ಕರೆಯುತ್ತಿದ್ದ ವಾಯುಸೇನೆಯ ಅಧಿಕಾರಿ ಚೀಮಾ. ಭಾರತದ ತಂದೆ ಸೀಖ್, ಅದಕ್ಕೆ ತಲೆಯ ಮೇಲೆ ಸೀಖ್ ಜನರ ಪೇಟ, ಅವನ ಕೆನ್ನೆಯ ಮೇಲೆ ಕೂದಲೇ ಇರಲಿಲ್ಲ.
ತಂಗಿಯ ಕಣ್ಣುಗಳಲ್ಲಿ ಕಲ್ಲಿದ್ದರೆ ಅವನ ದೃಷ್ಟಿ ಕೂರಲಗು. ಕುಳ್ಳಗಿನ ದೇಹವಾದರೂ ಉಕ್ಕಿನ ಮೈ. ಚಿರತೆಯಂತೆ, ಅದೇನೋ, ಅನಿರ್ವಚನೀಯ ಕ್ರೌರ‍್ಯ ಅವನ ಅಂಗಾಂಗಗಳಲ್ಲಿ, ತ್ಯಾಗಿ ಅವನನ್ನು ಕರೆದಿರಲಿಲ್ಲ. ತಮ್ಮ ಮೆಸ್ಸಿನಿಂದ ಸಾಕಷ್ಟು ಕುಡಿದೇ ಬಂದಿದ್ದ. ವಿಸ್ಕಿಯ ಅಮಲೆಲ್ಲ ಇಳಿದು ಹೋಯಿತು ನನಗೆ.
“Welcome welcome” ಎಂದು ಗಡಬಡಿಸಿ ಎದ್ದ ಆಲೂ ವಾಲಿಯಾ, ತಾನೂ ಸೀಖನಲ್ಲವೆ!
ಕೈ ಕುಲುಕಿಯಾಯಿತು, ತ್ಯಾಗಿ ಏಳಲಿಲ್ಲ.
ಒಂದೇ ಗ್ಯಾಸ್ ದೀಪದ ಬೆಳಕಲ್ಲಿ ನಮ್ಮ ಮೆಸ್ಸಿನ ಸೋಫಾಗಳು, ಜಮಖಾನೆ, ಶೀಶೆ ಗ್ಲಾಸುಗಳು ತಮ್ಮ ಅಸ್ತಿತ್ವವನ್ನು ಮಾತ್ರ ಬೀರುತ್ತಿದ್ದವು. ಸಿಗರೇಟಿನ ಹೊಗೆ ಬೇರೆ.
ಸಾಕು, ಈ ಕುಡಿತ ಮುಗಿದರಾಯಿತು. ಊಟ ಮಾಡಿ ಮಲಗಿಬಿಡೋಣ ಎನ್ನಿಸಿತು ನನಗೆ. ತ್ಯಾಗಿಗೂ ಚೀನೀ ಸರದಾರನಿಗೂ ನಡುವೆ ಬಲಿಯುತ್ತಿರುವ ರೋಷ ಹುರಿಯಂತೆ ಮೆಸ್ಸಿನ ಮಧ್ಯೆ ಸೆಟೆದು ತೂಗಿತ್ತು.
ಅರ್ಧ ಗಂಟೆ ಆಗಿತ್ತೋ ಇಲ್ಲವೋ, ಚಿರತೆಯಂತೆ ನೆಗೆದ ಚೀನೀ ಸರದಾರ. ತ್ಯಾಗಿಯ ಕೆನ್ನೆಗೆ ಮುಷ್ಟಿಯಿಂದ ಬಾರಿಸಿದಾಗ ನಾನು ಮಂಪರಿನಿಂದ ಎಚ್ಚೆತ್ತೆ. ತ್ಯಾಗಿ ಸೋಫಾದ ಒಂದು ತುದಿಯಿಂದ ಇನ್ನೊಂದು ತುದಿಗೆ ಮೂರು ಸಲ ಉರುಳಿದ. ಅವನ ಬಾಯಿ ಮೂಗಿನಿಂದ ರಕ್ತ ಸೋರಿ ಹಸಿರು ಸಮವಸ್ತ್ರದ ಮೇಲೆ ಬಿದ್ದಿತು. ಆಲೂವಾಲಿಯಾ ಎದ್ದು ಚೀನೀ ಸರದಾರನನ್ನು ಹಿಡಿದರು. ತ್ಯಾಗಿ ಸೋಡಾ ಶೀಶೆಯ ತುದಿಯನ್ನು ಒಡೆದ ಸರದಾರನ ಸೊಂಟದಿಂದ ಚಾಕು ಮಿಂಚಿತು. ಆಲೂವಾಲಿಯಾನ ಹಿಡಿತದಿಂದ ಜಿಗಿದು ತ್ಯಾಗಿಯ ಮೇಲೆ ಬಿದ್ದಾಗ ಅವನ ಎದೆಯಲ್ಲಿ ಮುರಿದ ಸೋಡಾ ಶೀಷೆ.
ಯಾರಿಗೂ ತಿಳಿಯಬಾರದು. ಇಲ್ಲದಿದ್ದರೆ ಅವರಿಬ್ಬರೂ ಅಧಿಕಾರಿಗಳ ಪಟ್ಟವನ್ನು ಕಳೆದುಕೊಳ್ಳುವುದು ಖಂಡಿತ, ಖಾನ್ ಮತ್ತು ಆ ಮೋನಿ ಹೊರಗೆ ಹೋಗುವುದನ್ನು ಕಂಡೆ. ಅವರು ಯಾರಿಗಾದರೂ ಫೋನ್‌ಮಾಡಿಯಾರೆಂದೆನಿಸಿತು. ಐದು ನಿಮಿಷ ಕಳೆದಿರಲಿಲ್ಲ. ಹಿಂಬಾಲಿಸಿದೆ. ಮಿಂಚು, ಕತ್ತಲೆ, ಕಣ್ಣಲ್ಲಿ ಕಣ್ಣಿಟ್ಟು ನೋಡಿದೆ. ಖಾನನ ಜೀಪಿನಲ್ಲಿ ಅವರಿಬ್ಬರ ತಬ್ಬುಗೆ, ಚುಂಬನ.
“ಖಾನ್ !” ಎಂದೆ.
ಅವಳು ದೂರ ಸರಿದಳು, ನನ್ನ ಕಡೆ ನೋಡಿ ನಕ್ಕಳೆ?
Yes ?” ಎಂದ ಖಾನ್, ಖಾರವಾಗಿ.
“ಚೀನೀ ಸರದಾರನನ್ನ ಈಚೆ ತೆಗೆದುಕೊಂಡು ಬಾ”
ಅವನಿಳಿದ, ಮೆಸ್ಸಿನೊಳಗೆ ಹೋದ. ನಾನು ಅವನನ್ನು ಹಿಂಬಾಲಿಸಲು ತಿರುಗಿದೆ.
“ನನ್ನನ್ನೊಬ್ಬಳನ್ನೇ ಬಿಟ್ಟು ಹೋಗುತ್ತೀರಾ!”
ಜೀಪನ್ನೇರಿದೆ. ಮಳೆ ಜೀಪನ್ನು ತೋಯಿಸಿತ್ತು. ಅದರ ಆರ್ಭಟೆಯಲ್ಲಿ ಮಾತಿಗೆ ಬೆಲೆ ಇರಲಿಲ್ಲ. ಮಿಂಚಿನಲ್ಲಿ ಆಗಾಗ ಅವಳ ಮುಖ. ಯಾವ ಭಾವವೂ ಇರಲಿಲ್ಲ.
“ನನ್ನನ್ನ ಮನೆಗೆ ಮುಟ್ಟಿಸಿಬಿಡಿ”.
ಮೆಸ್ಸಿನಿಂದ ಸೋಫಾ ಉರುಳಿದ, ಚೇರು ಮುರಿದ, ಶೀಸೆ ಗ್ಲಾಸುಗಳೊಡೆದ ಶಬ್ದ.
ಜಿಪ್ ಸ್ಟಾರ್ಟ್ ಮಾಡಿದೆ. ಹೆಡ್‌ಲೈಟಿನ ಬೀಮಿನಲ್ಲಿ ಮಳೆಯ ಗೆರೆಗಳು, ಹುಲ್ಲು ಹೊದರು, ಕಪ್ಪು ರೋಡು.
ಶಿಬಿರವನ್ನು ದಾಟಿ ಇಪ್ಪತ್ತು ಮೈಲಿಗೆ ಊರು. ಅಲ್ಲಿ ಅವಳ ಮನೆ, ಮಳೆಗೆ ಹೆದರಿ ಒಂದೇ ದೀಪವನ್ನು ಉರಿಸಿಕೊಂಡು ನಿಂತಿತ್ತು. ಸುತ್ತಲೂ ತೂರಾಡುತ್ತ ಸುಯ್ಯನ್ನುವ ಈಚಲು ಮರಗಳು. ಜೀಪಿನಿಂದ ಇಳಿದಳು, “ಬನ್ನಿ”.
ಪರವಾ ಇಲ್ಲ. ನಮ್ಮ ಮೆಸ್ಸಿನಿಂದ ಇಲ್ಲಿಯವರೆಗೆ ತೋಡಿಕೊಂಡ ಆಸೆಗೆ ಪ್ರತಿಫಲ. ಇಳಿದೆ.
ಮನೆ ಚೆನ್ನಾಗಿತ್ತು. ಒಳಗೆ ಹೋಗುತ್ತಿರುವಂತೆ ಕರೆಂಟ್ ಕಡಿದು ಕತ್ತಲೆ. ಅವಳು ಕೈ ಹಿಡಿದುಕೊಂಡಳು. ಆಶ್ಚರ್ಯ. ಒಳ್ಳೆ ಕಟ್ಟುಮಸ್ತಾದ ಪೈಲವಾನನ ಕೈ ಹಿಡಿದಂತಾಯಿತು, ಎದೆ ನಡುಗಿದರೂ ತರಬೇತಿಯನ್ನು ನೆನೆದೆ-ದಾಸಳನ್ನು ನೆನೆದೆ.
ದಾಸನ ಕೈ ಹಿಡಿಯಬೇಕಾದರೆ ಮೂರು ತಿಂಗಳ ಕೃಷಿ, ಕೋಲ್ಮುಖ, ಸೋತ ಕೆನ್ನೆ. ಗೆರೆಗಳು ಮುತ್ತಿದ ಕಣ್ಣು. ಅದೇ ಕುಸಿಯುತ್ತಿರುವ ಸ್ತನಗಳು, ಮೆತ್ತನೆಯ ನಿತಂಬ.
ಅವನ್ಯಾವನೋ ಪ್ರವಾಹಗಳಿಗೆ ಸಂಬಂಧಿಸಿದ ಇಂಜಿನೀಯರ್‌ನ ಪಾರ್ಟಿ. ಬ್ರಹ್ಮಪುತ್ರದ ಉಪನದಿಯೊಂದರ ಮೇಲೆ ಅವನ ದೋಣಿಯೇ ಮನೆ. ಅವಳೊಡನೆ ಹೋಗಿದ್ದೆ. ನಟಿಸುತ್ತಿರಲಿಲ್ಲ ದಾಸ್. ಹೋಗೋಣ ನಾಳೆ ಎಂದರೆ ಓಕೇ ಎಂದಳು.
ಆ ರಾತ್ರಿ ಸೂಟ್ ಹಾಕಿದೆ. ನರ್ಸಿಂಗ್ ಆಫೀಸರ್ ಮೆಸ್ಸಿನ ಹಿಂದಿನ ಬೇಲಿಯ ಪಕ್ಕಕ್ಕೆ ಜೀಪ್ ನಿಲ್ಲಿಸಿ ಎರಡು ಸಲ ಹೆಡ್‌ಲೈನ್ಸ್ ಉರಿಸಿ ಆರಿಸಿದೆ. ಅವಳ ಕೋಣೆಯಲ್ಲಿ ಒಂದು ಸಲ ದೀಪ ಆರಿ ಹೊತ್ತಿತು.
ಆ ಬೇಲಿಯ ಪಕ್ಕಕ್ಕೇ: ನಮ್ಮ ಸಂಕೇತ ಸ್ಥಾನ. ಯಾವಾಗಲೂ ಬೇಲಿಯ ಆಚೆ ಅವಳು, ಈಚೆ ನಾನು “ಉಂ…ಆಂ” ಎಂದು ಅವಳು ನನ್ನ ಕೈಗಳಲ್ಲಿ ನುಸುಳಿ ನುಸುಳಿ ಅವಯವಗಳನ್ನೀಯುತ್ತಿದ್ದರೆ ಮುಳ್ಳು ತಂತಿ ಕೈಗಳನ್ನು ಕೊರೆಯುತ್ತಿತ್ತು. ಶಬ್ದವಾಗಬಾರದು, ಕಾವೇರುವ ಮೈ, ನೀಡಿದ ದೇಹ, ನಡುವೆ ಆ ತಂತಿ, ಅತೃಪ್ತವಾಗಿ ಎರಡು ಗಂಟೆ ಚಳಿಯಲ್ಲಿ ಬೆವತು ಹಿಂದಿರುಗುವಾಗ ‘ಏಯ್” ಎಂದು ಪಿಸುದನಿಯಲ್ಲಿ ಅವಳು ಕರೆಯುತ್ತಿದ್ದಳು. ಹಾಳು ಮರೆವೆ : ಹೂಕ್ ಹಾಕಲು ಮರೆಯುತ್ತಿದ್ದೆ.
ಕಡೆಗೆ ಒಂದು ದಿನ ತಂತಿ ಹರಿಸುವ ಕತ್ತರಿ ತಂದು, ಅವಳ ಪುಟ್ಟ ದೇಹ ತೆವಳಿ ಬರುವಷ್ಟು ತಂತಿ ತೆಗೆದು ಹಾಕಿದೆ. ಆಗ ಅವಳ ಚಿನ್ನಾಟ. ಅವಳು ಕಳ್ಳ ಹೆಜ್ಜೆಯಲ್ಲಿ ಬರುವವರೆಗೆ ಈ ರಾತ್ರಿ ಬಂದಾಳೋ ಎನ್ನುವುದೇ ಅನುಮಾನ. ಬಂದರೆ ಬೇಲಿಯನ್ನು ದಾಟಿಯಾಳೋ ಎನ್ನುವುದೇ ಸಂಶಯ… ಆಮೇಲೆ ರೇನ್‌ಕೋಟ್ ಹಾಸಿದರೆ ನಡೆದಿತೇ ಎನ್ನುವುದೇ ಸಂದೇಹ. ಒಂದೊಂದು ಘಟ್ಟವೂ ದಾಟಿದರೆ ಅದೇನೋ ಸಾಧಿಸಿದಂತೆ ಪುಳಕ.
ಕಡೆಯ ರತಿ ಹಾಗಿರಲಿ, ದಾಸಳೊಡನೆ ಚಿನ್ನಾಟದ ಸೊಗಸೇ ಸೊಗಸು. ಕದ್ದು ಪಡೆದ ಆ ಸುಖದ ಪ್ರತಿ ಗಳಿಗೆಗೆ ಜೇನು ಎರೆಯುವ ಹುಡುಗಾಟ, ತುಂಟತನ ಅವಳದು. ಹೆಚ್ಚಿನ ಬೇಡಿಕೆ ಅವಳಲ್ಲಿ ಇರಲಿಲ್ಲ, ಅವಳ ಇತಿಹಾಸದ ಚರ್ಚೆ ಬೇಕಾಗಿರಲಿಲ್ಲ. ಎಂದೆಂದಿಗೂ ನೀನೇ ನನ್ನ ನಲ್ಲ ಎಂದವಳಲ್ಲ, ನಲ್ಲೆ ಎಂದೆನ್ನು ಎಂದು ಕೇಳಿದವಳಲ್ಲ. ನಾನಿರುವವರೆಗೆ ಬೇರೆಯವರನ್ನು ನೋಡಿದವಳಲ್ಲ. ಅಲ್ಲಿ ನೀತಿಯನ್ನು ಹೊಗಿಸಿ ತಲೆ ಕೆಡೆಸಿಕೊಂಡಿದ್ದೇನೆ. ನನ್ನ ಮದುವೆಗೆ ಅವಳು ಕಳಸಿದ ಬೆಳ್ಳಿಯ ಪಾತ್ರೆ ಇಂದಿಗೂ ಸವಾಲು ಹಾಕುತ್ತದೆ. ಅವಳ ಮನೆ ಹೆಸರು, ದಾಸ್. ನಿಜವಾದ ಹೆಸರೇ ಇನ್ನೂ ತಿಳಿಯದಲ್ಲ ಎಂದು ಸಂಕೋಚ. ಅವಳ ಬೆನ್ನ ಮೇಲೆ ಹೂಕ್ ಹಾಕಿ ಹಿಂತಿರುಗುವಾಗ ಕೆಸರು ಮೊಣಕಾಲಿನವರೆಗೆ ಅಂಟಿಕೊಂಡಿರುತ್ತದೆ. ರಕ್ತ ಹೀರುವ ಲೀಚ್ ನಾಲ್ಕಾದರೂ ತೊಡೆಯ ಮೇಲೆ ಇರುತ್ತವೆ. ಸಿಗರೇಟಿನ ಉರಿಯುವ ತುದಿ ಸೋಕಿದರೇನೇ ಕೆಳಗೆ ಬೀಳುವ ಹುಳ.
……ಚೀನೀ ಹುಡಿಗೆಯು ಕೈ ಒಳಗೆಳೆಯಿತು. ಅವಳ ಹೆಸರು ಮೃದುಲಾ ! ಭಲೆ. ಟಾರ್ಚ್ ಸಿಕ್ಕಿತು.
“ನಾನು ಹೊರಡಲೆ?”
ನಕ್ಕಳು, “ನಮ್ಮ ಅಣ್ಣ ಇಲ್ಲಿರುವುದಿಲ್ಲ, ನಿಮ್ಮಂತೆ ಆಫೀಸರ‍್ಸ್ ಮೆಸ್ಸಿನಲ್ಲಿರುತ್ತಾನೆ”.
ರಕ್ತ ಸೋರುವ ತ್ಯಾಗಿಯ ಮುಖ ನೆನಪಾಯಿತು.
“ಇಲ್ಲಿ ಕುಳಿತುಕೊಳ್ಳಿ”
ಚೇರು. ಆಕೆ ಒಳಗೆ ಹೋದಳು. ಮೇಣ ಬತ್ತಿ, ಶೀಶ, ಗ್ಲಾಸು.
“ನನ್ನಿಂದಾಗಿ ನಿಮ್ಮ ಸಂಜೆ ಕೆಡಬಾರದು”
“ಹಿ” ಎಂದೆ. ನಕ್ಕೆ ಎಂದು ಕಾಣುತ್ತದೆ.
ಮನೆಯ ಹೆಂಚುಗಳ ಮೇಲೆ ಮಳೆಯ ಇರಿತ.
ತ್ಯಾಗಿ ಬಯಸಿದ, ಆಲೂವಾಲಿಯೂ ಬಾಯಿಬಿಟ್ಟ ವಸ್ತು ನನ್ನದಾಯಿತು.
ಬೆಳಗಿನ ಜಾವ ಎರಡು ಗಂಟೆಗೆ ಎಚ್ಚರವಾಗಿ ಗಾಬರಿಯಾದೆ. ಅಂತಹ ಕತ್ತಲು. ಕೈಗೆ ಟಾರ್ಚ್ ಸಿಕ್ಕಲಿಲ್ಲ. ತಡಕಾಡಿ ಪ್ಯಾಂಟು ಬೆಲ್ಟುಗಳನ್ನು ಹಾಕಿಕೊಂಡೆ ಬೂಟು ಎಳೆದುಕೊಂಡಾಗಲೂ ಅವಳು ಏಳಲಿಲ್ಲ.
ಪ್ಯಾಂಟಿನ ಜೇಬಿನಲ್ಲಿದ್ದ ಕಾಗದಗಳೇನೋ ಭದ್ರವಾಗಿದ್ದವು. ಅಭ್ಯಾಸದಿಂದಲೋ ಮತ್ತೆದರಿಂದಲೋ ಶರ್ಟಿನ ಎಡ ಜೇಬಿಗೆ ಕೈಹಾಕಿದೆ-ನನ್ನ Identity Card ಇರಲಿಲ್ಲ. ಎದೆ ಧಸ್ಸೆಂದಿತು.
ಪ್ಯಾಂಟಿನ ಜೇಬಿನಲ್ಲಿ ಬೆಂಕಿ ಪೊಟ್ಟಣವಿತ್ತು. ಗೀರಿ ನೋಡಿದೆ. ಅವಳು ನಿದ್ರೆಯಲ್ಲಿ. ನಗ್ನ ದೇಹವನ್ನು ಕಂಡರೂ ಕಾವೇರಲಿಲ್ಲ.
ತಲೆಬಾಗಿಲಿಗೆ ಅಗುಳಿ ಹಾಕಿತ್ತು.
ಡ್ರಾಯಿಂಗ್ ರೂಮಿನ ಸೋಫಾದ ಮೇಲೆ ಚೀನೀ ಸರದಾರ ಗೊರಕೆ ಹೊಡೆಯುತ್ತಿದ್ದ. ರಕ್ತವಿನ್ನೂ ಕಾಣಿಸುತ್ತಿತ್ತು, ದೇಹದ ಮೇಲೆ.
ಪ್ರಾಣವನ್ನು ಅವಚಿ ಹಿಡಿದುಕೊಂಡು ಮನೆಯನ್ನೆಲ್ಲ ಹುಡುಕಿದೆ. ಕಡೆಗೆ ಬಾತ್‌ರೂಮು ನೀರಿನ ಸರಪಳಿಯನ್ನೆಳೆದೆ, ನೀರು ಭರ‍್ರೆಂದಿತು. ನೀರಿರುವ ಪಟ್ಟಿಗೆ ಒಂದು ತುದಿಯಿಂದ ವೈರ್‌ಲೆಸ್ಸ್ ಸೆಟ್ಟಿನ ತಂತಿ, ಅದನ್ನು ತೆರೆದು ನೋಡುವ ಮುಂಚೆ ಬಾಗಿಲಲ್ಲಿ ಚೀನೀ ಸರದಾರ, ಅವನ ಕೈಯಲ್ಲಿ ಪಿಸ್ತೂಲು, ನನ್ನ ಕೈಯೊಳಗಿನ ಕಡ್ಡಿ ಆರಿ ಕತ್ತಲೆ.
ನಾನಿದ್ದ ಸ್ಥಳಕ್ಕೆ ಗುರಿಯಿಟ್ಟು ಹೊಡೆದ ಗುಂಡು. ನಾನು ಅಲ್ಲಿ ಇರಲಿಲ್ಲ. ಇನ್ನೊಂದು ಬಾಗಿಲಿನಿಂದ ಈಚೆ ಬಂದು ಓಡಿದೆ. ಎಂದೂ ಓಡಿರಲಿಲ್ಲ ಹಾಗೆ. ಕೆಸರು, ಜಾರಿಸುವ ಹುಲ್ಲು, ನೆನೆಯಿಸುವ ಮಳೆ, ಕರ್ಕಶವಾಗಿ ಕೈ ಹೊಯ್ದು ನಗುವ ಆಕಾಶ.
ಖಾನನ ಜೀಪಿನಲ್ಲಿ ಚೀನಿ ಸರದಾರ ಹಿಂಬಾಲಿಸಿದಾಗ, ಎತ್ತೆತ್ತಲೋ ಸುಳಿದು ದಾಸಳೊಡನೆ ಮುಂಚೆ ಇದ್ದ ಸಂಕೇತ ಸ್ಥಾನಕ್ಕೆ ಬಂದೆ. ಅವಳಿಗಾಗಿ ಮಾತ್ರ ಕಡಿದ ಮುಳ್ಳು ತಂತಿಯ ಬಿರುಕಿನಲ್ಲಿ ತೆವಳಿದೆ, ಮೈ ಎಲ್ಲ ತರೆದು ರಕ್ತ ಸೋರುವಂತೆ.
ಬೆಳಗಾಗುವವರೆಗೆ ಹುದುಗಿದ್ದು ಮುಂಜಾವಿಗೆ ಎದ್ದು ನಿಂತೆ. ನರ್ಸಿಂಗ್ ಆಫೀಸರ‍್ಸ್ ಮೆಸ್ಸಿಗೆ ಹೊಂದಿಯೇ ಆಸ್ಪತ್ರೆ. ಅಲ್ಲಿ ಹೋಗಿ ಏರಿಯಾ ಅಜುಟೆಂಟ್‌ನಿಗೆ (Adjutant) ಫೋನ್ ಮಾಡಿದೆ.
ಅವಳು-ಅವಳ ಅಣ್ಣ-ಗೌಹಾತಿಯಲ್ಲಿ ಸಿಕ್ಕರಂತೆ-ಅಲ್ಲ, ಜಯರಾಮ್‌ಪುರ್‌ನ ಗಡಿಯ ಬಳಿಯಂತೆ, ಅವಳು ಸಿಕ್ಕಲಿಲ್ಲ. ಅವನು ಸತ್ತ.
ಅವಳು ಬರುತ್ತಾಳೆ ಮತ್ತೆಂದೋ. ಆ ಮಬ್ಬಿನಲ್ಲಿ ಆ ವಾಸನೆಯಲ್ಲಿ, ನನ್ನ Identity Card ಕಳೆದುದಕ್ಕೆ ಸೈನ್ಯವನ್ನು ಬಿಟ್ಟೆ.
ಮೂರು ಕವನಗಳು
ಮೂರು ಕವನಗಳು
-ರಘುರಾಮರಾನ್ ಬೈಕಂಪಾಡಿ
೧ ರಿಕ್ತ
ಬೇಡ ನನಗೆ
ಈ ಮಾತು ಮಾತಿನ ಮೋಡಿ ; ಮೌನದ
ಮುಚ್ಚು ಬಾಗಿಲ ಮುಂದೆ ಸದಾ ಮನದ ಬುಡುಬುಡಿಕೆ; ಲಾಗ, ಲೇವಡಿ.
ಅಗೆದಗೆದು ನೆನಪಿನಂಗಳ ಮತ್ತೆ
ಎತ್ತಲಾರೆ ಅದಿರ ಮೊರೆ: ಹೊತ್ತು ಹೂತಿಟ್ಟ ಪಳಿಯುಳಿಕೆ.
ಬರಿದೆ ಕಾಯುತ್ತೇನೆ ಬರಿದಾಗಿ ಹೊರಗೆ
ತಾನಾಗಿ ತೆರೆಯುವನಕ.
ನನಗಿಲ್ಲ
ಹರಿವ ನೀರನು ಹಿಡಿದು ಹಿಡಿದು
ಕುಡಿಕೆಗಳಲ್ಲಿ ಕೂಡಿಡುವ ಬಯಕೆ.
ತಪಿಸಿದ್ದೇನೆ ಕಂಡು :
ಚೊಕ್ಕ ಚಿನ್ನದಂಥ ನೀರು ಮಲೆತು ಮಾಸುವ ತರಕೆ.
ಮಾತು ಮಾತಿನ ಸುತ್ತಲೂ ಆಲಿಸಿದ್ದೇನೆ
ಹಸಿದ ಮೌನದ ಮುಲುಕು.
ಕುಡಿಕೆಗಂಟಲಿನೊಳಗೆ ಮೀನಿನುಬ್ಬಸ, ಬಿಕ್ಕು.
ಶೋಧಿಸಿದ್ದೇನೆ ಸೇದಿ ಸೇದಿ ಶೇಖರಿಸಿ
ಕೆರೆ ಬಾವಿ ಮಡು ಮದಗ ಹೊಯ್ಲು ಹೊನಲುಗಳುದಕ
ಗಾಳಿ ಬೆಂಕಿಗೆ ಬೆರಸಿ
ಕತ ಕತ ಕುದಿಸಿ ಕುಲುಮೆಯಲಿ
ಬಟ್ಟಿ ಇಳಿಸಿ ಇಳಿಸಿ : ಮುಗಿಲು ಮುಟ್ಟಿದೆ ಕವಿದು
ಬಾನ ಚಾವಣಿ ಚಂದ್ರ ಸೂರತಾರಗೆ ಕಿಟಿಕೆ;
ಆದರೂ ಇಂಗಿಲ್ಲ ನನ್ನ ನೀರಡಿಕೆ.
ಸೋಂಕಿಲ್ಲ ಹರಣಕ್ಕಿನ್ನು
ಕುರುಡು ಕೊರಡಿಗೆ, ಕಳೆಗೆ
ಹೂ ಹಸಿರು ಹಣ್ಣು ರಸ ಕಣ್ಣು ಕರುಣಿಸಿ ಪೊರೆವ
ಪ್ರೇಮ ಸಲಿಲದ ಹರಕೆ.
ಬಂದ ಬಂದಂತೀಗ ಹರಿವ ನೀರನೆ ಮೊಗೆದು ಕೈಯಾರೆ
ಬೊಗಸೆಯಿಂದಲೆ ಕುಡಿದು
ಮಿಕ್ಕುದೊಗೆಯುತ್ತೇನೆ ಕೆಳಗೆ.
ತೊಲಗುತ್ತಿದೀಗೀಗ ಕುಡಿಕೆ ಮಡಕೆಯ ತರಲೆ.
ಜಲ ಜಮಾವಣೆಯೆಣಿಕೆ.
ಬರಿದೆ ಕಾದಿದ್ದೇನೆ ಬರಿದಾಗಿ ಕೆಳಗೆ
ತಾನಾಗಿ ಹರಿಯುವನಕ.
೨ ಅವನದೊಂದೇ ಸ್ಕೂಲು
ಹೇಗೆ ಬರೆಯಲಿ ನಾನು ಏನು ಓದಲಿ ಎಂತ
ಚಿಂತೆ ಯಾತಕೆ ನಿನಗೆ ? ಕಲಿಸುತ್ತಾನೆ ಅವನೆ
ಹೇಗಿದ್ದರೂ ನಮಗೆ ಅವನದೊಂದೇ ಸ್ಕೂಲು;
ಕಲಿಸಿದ್ದು ಪಾಠ, ಅವನಾಡಿಸಿದ್ದೇ ಆಟ !
ಅವನ ಸ್ವಂತದ ಕುರಿತೊ? ನಮಗು ಗೊತ್ತಷ್ಟಷ್ಟೆ
ಹೇಗೇ ಇರಲಿ ಮರ್ಜಿಯರಿತು ನಡೆಯುತ್ತೇವೆ.
ಮನಸಿದ್ದವರಿಗೆ ಮನದಣಿಯೆ ತಿಳಿಸುತ್ತಾನೆ
ಮತ್ತೆ ನಮಗೇಕವನ ಮಿಕ್ಕ ಖಾಸಗಿ ವಿಷಯ?
ಅಂದಿನಿಂದಲೂ ಅವನ ನಾವು ನೋಡಿದ್ದಿಂತು,
ಕಪ್ಪು ಕನ್ನಡಕ ತಲೆಮುಚ್ಚಿ ನಿಂತ ರುಮಾಲು!
ಅಂದದ್ದುಂಟು ರೇಗಿ ಏಟು ತಿಂದವರಿವಗೆ
ಕಣ್ಣಿಲ್ಲ ತಲೆಯಿಲ್ಲ ನಂಬಲಾಗದು ಎಂತ !
ತುಂಟರಂತೂ ಪಟ್ಟು ಹಿಡಿದೆ ಕಾಡಿದ್ದಾರೆ.
ತೆಗೆಸಲೇ ಬೇಕೆಂತ ಕನ್ನಡಕ ರೂಮಾಲು ;
ಅವನಿಗೂ ಹುಡುಗಾಟ. ತೆಗೆದಂತೆ ಒಗೆದಂತೆ
ನಟಿಸುತ್ತಲೇ ಅವರ ಮಂಗಾಡಿಸಿದ್ದಾನೆ:
ಅವನ ನಿಷ್ಟುರ ನಿಯಮ, ನಿಯಮಕೆಟುಕದ ನಿಲುಮೆ
ಅರ್ಥವಾಗದೆ ಹೆಚ್ಚಿಬಿದ್ದದ್ದುಂಟು ನಾವು.
ಆದರೆಂದೂ ಅನ್ಯನೆನಿಸಿಲ್ಲಾತ, ನಮಗೆ.
ಮೆಚ್ಚದವರೂ ಅಷ್ಟೆ ! ಬಿಟ್ಟು ಹೋದುದು ಕಡಿಮೆ;
ಯಾರಾದರೂ ಸರಿಯೆ ! ಮಣ್ಣೂರಿನೊಳಗಿವನ
ಗರಡಿಯಲ್ಲಾಡಿ ಮೈಗೂಡಿ ಹೊರಡದೆ ಇಲ್ಲ.
ಹುಚ್ಚಾಗದವರಿಲ್ಲ ಆತ ಹೇಳುವ ಕಥೆಗೆ !
ಚಿತ್ರ ಚಿತ್ತದಿ ಬರೆವ ಭವ್ಯ ಚಿತ್ತಾರಕ್ಕೆ!
ಸೋಜಿಗದ ಮಾತಿಷ್ಟೆ! ಎಷ್ಟು ಕಲಿತರು ಭೂಪ
ಕೊಟ್ಟಿಲ್ಲ ಯಾರಿಗೂ ಮಾರ್ಕು ಸರ್ಟಿಫಿಕೇಟು
ಕಾಡದೆಯು ಬಿಟ್ಟಿಲ್ಲ ಯಾರನಾದರೂ ಕೊನೆಗು
ಕಲಿಸಿದ್ದು ಏನಿವನು ಎಂಬ ಶಂಕೆಯ ಪಿಡುಗು !
ಒಮ್ಮೊಮ್ಮೆ ಮತ್ತೆ
ಇದ್ದಕ್ಕಿದ್ದ ಹಾಗೆ ಅತ್ತಿತ್ತ ಹೊಯ್ದಾಡಿ
ಕತ್ತು ಹಿಸುಕಿದಂತೊರಲಿ ಉಸಿರುಡುಗಿ ಮರಗಟ್ಟಿ ನಿಂತಾಗ ಗಾಳಿ
ಕತ್ತಲಿನ ಹುತ್ತಗಳಲ್ಲಿಂಗಿ ಬೆಳಕಿನ ಸುಳುವೂ ಹತ್ತದಾಗ
ಕಿಟಕಿಯಿಂದಲೇ ಹಣಿಕುವ ಆಕಾಶ
ನನ್ನ ನೋಡಿ ಬೆಚ್ಚಿಬಿದ್ದು ಮೋಡದೊಳಗೆ ಮುಖ ಮುಚ್ಚಿದಾಗ,
ಒಂದೊಂದಾಗಿ ಬಿಳಿಚಿ ಕಳಚುತ್ತಿರಲು ಪಾತಿಯೆಲೆ ಮುಗುಳುಗಳು,
ದಿಗಿಲು ಬಿದ್ದು
ಧಿಗ್ಗನೆ ಎದ್ದು
ಒಂದೇ ಸವನೆ ಕುಟ್ಟುತ್ತೇನೆ ಗೋಡೆಗೊಡೆಗಳನ್ನು !
ಕಿತ್ತು ಕಿತ್ತು ಎಸೆಯುತ್ತೇನೆ ಕಲ್ಲುಕಲ್ಲುಗಳನ್ನು !
ಎತ್ತಿ, ಮಾಡಸೂರನ್ನೇ ಹಾರಿಸಿ ಬಿಟ್ಟು,
ನೆಲದ ಹೆಕ್ಕಳನೊಕ್ಕಿ ಒಕ್ಕಿ ಹೆರೆಮಣ್ಣ ತೆಕ್ಕೆಯಲಿ
ಅಂಗಾತ ಮಲಗಿ ಕಾಯುತ್ತಿರುತ್ತೇನೆ –
ಆಕಾಶವೇ ನನ್ನೊಳ ನುಗ್ಗಲೆಂದು
ವಾರಿಧಿಯನೇ ಹೀರಿ ಗುಟುಕರಿಸಲೆಂದು
ಮಲೆತ ತೆಂಕಣಗಾಳಿ ನರನರವ ಹೊಸಕಿ
ಕಸುವನುಕ್ಕಿಸಲೆಂದು.
ಹೆಪ್ಪುಗಟ್ಟಿದ ಹರಣವನ್ನೇ ಬಿಚ್ಚಿ ಬಯಲಿಗಿಡುತ್ತೇನೆ
ವಿಶ್ವಲೋಚನದಗ್ನಿ ಕಾವನುಣ್ಣಿಸಲೆಂದು.
ದಂಗಾಗಿ ನಿಲ್ಲುತ್ತೇನೆ ಒಮ್ಮೊಮ್ಮೆ ಈ
ಕಟ್ಟಿಕುಟ್ಟುವ ಆಟದೊಡಲಗುಟ್ಟಿಗೆ ಸಂದು !
೩ ಭೀತ
ಕರೆದಾಗ
ಲಕ್ಷ ಲಕ್ಷ ನಕ್ಷತ್ರಮಂಡಲಗಳನ್ನಾಂತು ನಿಮಿರಿನಿಂತ
ಸಹಸ್ರಾಕ್ಷ ಸಹಸ್ರಪಾದ
ಕಲ್ಪ ಕಲ್ಪವ ಕುಡಿವ ಖಂಡ ಬ್ರಹ್ಮಾಂಡ ವಟವೃಕ್ಷ, ಸುತ್ತ
ತಬ್ಬಿಕೊಂಡಿದೆ ಭೀಮ ವಲ್ಮೀಕ
ಕಾಲಕುಕ್ಷಿಯನಂತ ಅಂತರಿಕ್ಷದ ಶೂನ್ಯ
ಪಾದಮೂಲದಿ
ನಾನು
ನಿಸ್ಸಗಿ
ನಿತಾಂತ ಭೀತ ಮೃತ್ಪಿಂಡ!
ಸುತ್ತ ದಿಗ್ಗಂಧ ಹಾಕಿ
ನಿಗೂಢ ನೀಲದಾಳದೊಳದ್ದಿ, ಅರಗಿಸಿ ನನ್ನ
ಬಿಂದುಬಿಂದುವಾಗಿ ಹೀರುವೀ ಅಸೀಮ
ಭೂಮ ಭೂತಕೆ ಬೆದರಿ, ಹೌಹಾರಿ.
ಕಲ್ಲುಮಣ್ಣನ್ನೆಲ್ಲ ಒಟ್ಟಿ
ಭದ್ರ ಭಿತ್ತಿಗಳನ್ನೆತ್ತಿ ನಿಲಿಸಿ
ದಟ್ಟಗೆ ಮುಚ್ಚಿ ಹೊಚ್ಚಿ
ಕಟ್ಟಿಕೊಳ್ಳುತ್ತೇನೆ ನನ್ನದೆನ್ನುವ ಮನೆಯ:
ದಿಕ್ಕು ದಿಕ್ಕಿಂದ ಘೀಳಿಟ್ಟು ಬರುವ
ದಾಳಿಖೋರ ಗಾಳಿಗಳನ್ನೆಲ್ಲ
ಕಿಟಕಿ ಸಂದಿನಿಂದಲೆ ಹೊಗಿಸಿ ಪಳಗಿಸಿಕೊಳ್ಳುತ್ತೇನೆ.
ದಿಗಂತದುದ್ದಕೂ ಲಗ್ಗೆಯಿಕ್ಕಿ, ನುಗ್ಗುವ
ಬೆಳ್ಳಿಕಡಲಿಗೂ ಕಟ್ಟಿ ಅಣೆಕಟ್ಟು, ನಾಲೆಗಳಲ್ಲಿ
ಬೇಕಷ್ಟೆ ತಿಳಿನೀರ ಹಾಯಿಸಿಕೊಳ್ಳುತ್ತೇನೆ ಒಳಗೆ
ಒಂದೆರಡು ಪಾತಿಗಳಲ್ಲಿ ಬಳ್ಳಿಗಳ ನಟ್ಟು
ನಳ್ಳಿನೀರ ಸಿಂಪಡಿಸಿ ಪೋಷಿಸುತ್ತೇನೆ.
ಕಡೆಗೆ ನೆಮ್ಮದಿಯ ದಿಂಬಿಗೊರಗಿ
ನೊಚ್ಚಗೆ ಬೆಚ್ಚಗೆ ನಿದ್ರಿಸುತ್ತೇನೆ ನನ್ನ ಮನೆಯೊಳಗೆ.
ಆಧ್ಯಾತ್ಮಿಕ ಪರಂಪರೆಯ ಕಲ್ಪನೆ
ಆಧ್ಯಾತ್ಮಿಕ ಪರಂಪರೆಯ ಕಲ್ಪನೆ
-ಡಿ. ಎಲ್. ಪಾಟೀಲ್
ಈ ಶತಮಾನದ ಫ್ರೆಂಚ್ ತತ್ವಜ್ಞಾನಿಗಳಲ್ಲಿ ಶ್ರೇಷ್ಠ ಹಾಗೂ ಮಹತ್ವಪೂರ್ಣ ತತ್ವ ಜ್ಞಾನಿಯೆನಿಸಿಕೊಂಡ ಗೇಬ್ರಿಯಲ್ ಮಾರ‍್ಸೆಲ್‌ರ ಮೇಲಿನ ತಲೆಬರಹದ ಒಂದು ವಿಚಾರಪೂರಿತ ಪ್ರಬಂಧದ ಮುಖ್ಯ ಅಂಶಗಳನ್ನು ಸಂಗ್ರಹವಾಗಿ ಮಾಡಿಕೊಡುವುದು ಈ ಲೇಖನದ ಉದ್ದೇಶ ನಮ್ಮ ಆಧ್ಯಾತ್ಮಿಕ ಪರಂಪರೆಯನ್ನು ಜೀವಂತವಾಗಿ ಮುಂದುವರೆಸಿಕೊಂಡು ಹೋಗಬೇಕೇ ಅಥವಾ ಬೇಡವೇ ಎಂಬ ಬೌದ್ಧಿಕ ಗೊಂದಲದಲ್ಲಿರುವ ನಮಗೆ ಮಾರ‍್ಸೆಲ್‌ರ ವಿಚಾರಗಳು ತುಂಬಾ ಮಹತ್ವವಾದವುಗಳೆಂದು ನನಗೆ ಅನಿಸಿದೆ.
ಮಾರ‍್ಸೆಲ್‌ರು ತಮ್ಮ ಪ್ರಬಂಧವನ್ನು ಎರಡನೇ ಮಹಾಯುದ್ಧ ಮುಗಿದ ನಂತರ ಆ ಯುದ್ಧದಲ್ಲಿ ನೆಲಸಮವಾದ ಸಾಂಸ್ಕೃತಿಕವಾಗಿ ಮಹತ್ವವಾದ ಅನೇಕ ನಗರಗಳನ್ನು ನೋಡಿ ತಮಗಾದ ಮಾನಸಿಕ ಅನಿಸಿಕೆಯಿಂದ ಪ್ರಾರಂಭಿಸುತ್ತಾರೆ. ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯ ಜೀವಂತ ಅಸ್ತಿತ್ವಗಳಂತಿದ್ದ ಆ ನಗರಗಳನ್ನು ನೆಲಸಮ ಮಾಡುವಾಗ ಅವುಗಳ ಭೌತಿಕ ನಿರ್ನಾಮವು ಅಷ್ಟು ಮುಖ್ಯವಲ್ಲದಿದ್ದರೂ ಅಂಥ ಕೆಲಸದ ಹಿಂದೆ ಇದ್ದ ಮಾನಸಿಕ ಸ್ಥಿತಿ ಎಂಥದು? ಆ ಮಾನಸಿಕ ಸ್ಥಿತಿಯೇ ಆ ಧ್ವಂಸಕ್ಕೆ ಕಾರಣವಾಗಿದ್ದರೂ ಆ ಧ್ವಂಸ ಒಂದು ಮಟ್ಟದಲ್ಲಿ ಮಾನವನು ಸಾಧಿಸಿದ ತಾಂತ್ರಿಕ ಅಭಿವೃದ್ಧಿ ತನ್ನ ಹಿನ್ನೆಲೆಯಲ್ಲಿದೆ ಎಂದು ಸೂಚಿಸುತ್ತದೆ. ಅಲ್ಲದೆ ಆ ಅಭಿವೃದ್ಧಿ ಮಾನವರಿಗೆ ಆ ನಗರಗಳ ಬಗ್ಗೆ ಇದ್ದ ಕೃತಜ್ಞತಾ ಮತ್ತು ಪೂಜ್ಯ ಭಾವನೆಗಳನ್ನು ಅಪ್ರತ್ಯಕ್ಷವಾಗಿ ಬಲಹೀನಗೊಳಿಸಲು ಸಹಾಯವಾಯಿತೆಂಬುದು ಸತ್ಯ. ನಮಗೆ ನಮ್ಮ ಆಧ್ಯಾತ್ಮಿಕ ಪರಂಪರೆಯಲ್ಲಿ ಕೃತಜ್ಞತಾ ಭಾವನೆ ಮತ್ತು ಪೂಜ್ಯ ಭಾವನೆಗಳಿಲ್ಲದಿದ್ದರೆ ಅದರ ಪ್ರತೀಕಗಳಾದ ನಗರಗಳನ್ನೂ ಅಲ್ಲಿರುವ ಸ್ಮಾರಕಗಳನ್ನೂ ಶಾಶ್ವತವಾಗಿ ಕಾದಿಡುವುದು ಅಸಾಧ್ಯವೆಂದು ಮಾರ‍್ಸೆಲ್‌ರ ಅಭಿಪ್ರಾಯ. (ನಮ್ಮ ಗ್ರಾಮಾಂತರ ಪ್ರದೇಶಗಳಲ್ಲಿರುವ ಅನೇಕ ದೇವಾಲಯಗಳಿಂದ ಕಲ್ಲುಗಳನ್ನು ಕದ್ದು ಒಯ್ದು ತಮ್ಮ ಮನೆಗಳಿಗೆ ಮೆಟ್ಟಲು ಮುಂತಾದವನ್ನು ಮಾಡಿಕೊಳ್ಳುವುದು ಮಾರ‍್ಸೆಲ್ ಸೂಚಿಸುವ ಮನಸ್ಥಿತಿಯನ್ನು ಸೂಚಿಸಬಹುದೆಂದು ನನಗನಿಸುತ್ತದೆ.)
ಹಳೆಯದೆಂದೆನಿಸುವ ಪರಂಪರೆಯ ಕುರುಹುಗಳನ್ನು ಮತ್ತು ಸ್ಮಾರಕಗಳನ್ನು ಧ್ವಂಸ ಮಾಡಿದುದರ ಉದ್ದೇಶ ಹೊಸ ಜಗತ್ತನ್ನು ಅಥವಾ ಹೊಸ ಮಾನವತೆಯನ್ನು ಸೃಷ್ಟಿಬೇಕನ್ನುವದರ ಬಗ್ಗೆಯ ಅವಸರವಿರಬಹುದು. ಈ ಸಂದರ್ಭದಲ್ಲಿ ಮಾರ‍್ಸೆಲ್‌ರು ಅಮೆರಿಕನ್ ಅಫೀಸರ್ ಒಬ್ಬ ತನ್ನ ಸ್ನೇಹಿತನಿಗೆ ಹೇಳಿದ ಮಾತನ್ನು ಉದಾಹರಿಸುತ್ತಾರೆ. ಆ ಅಮೆರಿಕನ್ ಆಫೀಸರ್ ಸಂಪೂರ್ಣ ಧ್ವಂಸವಾಗಿ ಹೋದ ಒಂದು ನಗರದ ಬಗ್ಗೆ ಮಾರ‍್ಸೆಲ್‌ರ ಸ್ನೇಹಿತನಿಗೆ ಹೇಳಿದ ಮಾತುಗಳಿವು: “ಈ ಹಳೆಯದನ್ನೆಲ್ಲ ಬಾಂಬ್ ಮಾಡಿದ ನಮಗೆ ನೀವು ಕೃತಜ್ಞರಾಗಿರಬೇಕು. ಈಗ ನೀವು ಸ್ವಚ್ಛವಾದ ಪಟ್ಟಣದಲ್ಲಿ ಇರಬಹುದು”.
ನಮ್ಮ ಪರಂಪರೆಯನ್ನು ಗುರುತಿಸಲಾಗದ ಜನರ ಸಂಖ್ಯೆ ಹೆಚ್ಚುತ್ತಿದೆ ಅಥವಾ ಅವರು ಪರಂಪರೆಯನ್ನು ಒಂದು ಹೊರಲಾಗದ ಹೊಣೆಗಾರಿಕೆಯೆಂಬಂತೆ ತಿರಸ್ಕರಿಸುತ್ತಾರೆ. ಆಫ್ರಿಕೆಯ ನಾಗರಿಕತೆಯನ್ನು ಹೊಗಳಿದ ಒಬ್ಬ ಆನುವಂಶಿಕ ಶಾಸ್ತ್ರಜ್ಞನನ್ನು ಒಬ್ಬ ನಿಗ್ರೊ ಕಮ್ಯುನಿಸ್ಟ್ ಯುವಕ ಕೋಪೋದ್ರಿಕ್ತನಾಗಿ ಖಂಡಿಸಿದ್ದು ನನಗೆ ನೆನಪಿದೆ. ದ್ವೇಷಯುಕ್ತವಾಗಿದ್ದು ತಾನೇ ತಳ್ಳಿಹಾಕಲಿಚ್ಚಿಸುವ ನೊಗದಂತಿರುವ ತನ್ನ ಸಂಪ್ರದಾಯಕ್ಕೆ ತನ್ನನ್ನು ಬಂಧಿಸಿಡುವುದೇ ಹೊಗಳಿಕೆಯ ಉದ್ದೇಶವಿರಬೇಕೆಂದು ಆ ಯುವಕನಿಗೆ ಅನಿಸಿತು”
ಪರಂಪರೆಯ ವಿಷಯದಲ್ಲಿ ಇಂಥ ಮನೋಭಾವನೆಗೆ ಒಂದು ಕಾರಣ ತರುಣ ಪೀಳಿಗೆದು ಪ್ರತಿಷ್ಠೆ ಮತ್ತು ವಯಸ್ಸಾದುದರ ಬಗ್ಗೆ ಅವಹೇಳನೆ. ಮೌಲ್ಯ ನಿರ್ಧಾರವನ್ನು ಹೆಚ್ಚು ಹೆಚ್ಚು ಆರ್ಥಿಕ ಉತ್ಪಾದನೆಯು ದೃಷ್ಟಿಯಿಂದ ಮಾಡುತ್ತಿರುವುದೇ ವಯಸ್ಸಾದುದು ನಿಷ್ಪ್ರಯೋಜಕವೆಂದು ತಿಳಿಯುವುದಕ್ಕೆ ಕಾರಣ. ಆದರೆ ಕಾತರಪೂರ್ವಕ ವಿಶ್ಲೇಷಣೆ ಮಾಡದೇ ಮೌಲಿಕ ನಿರ್ಧಾರಕ್ಕೆ ಬರಲಾಗುವುದಿಲ್ಲ. ತತ್ವಜ್ಞಾನಿ ಇದೆಲ್ಲದರ ಬಗ್ಗೆ ವಿವೇಚಿಸಬೇಕಾಗುತ್ತದೆ.
ಆಧ್ಯಾತ್ಮಿಕ ಪರಂಪರೆಯ ಕಲ್ಪನೆಯು ವ್ಯಾಘಾತ (Contradictory) ದಿಂದ ಕೂಡಿರಬಹುದು. ಯಾಕೆಂದರೆ ಪರಂಪರೆ ಒಂದು ವಸ್ತುನಿಷ್ಟ ಪದಾರ್ಥದಂತೆ ತೋರಿ ಬರುತ್ತದೆ. ಪೀಳಿಗೆಯಿಂದ ಪೀಳಿಗೆಗೆ ವರ್ಗಾಯಿಸಲಾಗುವುದು ಒಂದು ವಸ್ತುವಲ್ಲವೇ ? ಆದರೆ ಆಧ್ಯಾತ್ಮ (spirit) ಪದಾರ್ಥವಲ್ಲ. ಅದನ್ನು ಪರಂಪರೆಯಂತೆ ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ವರ್ಗಾಯಿಸಲಿಕ್ಕಾಗುವುದಿಲ್ಲ. ಯಾಕೆಂದರೆ ಆಧ್ಯಾತ್ಮ (Spirit) ಪ್ರೇರಣೆ ಮತ್ತು ಸೃಷ್ಟಿಯಲ್ಲವೆ? ಪರಂಪರೆ ಪದಾರ್ಥವಾದರೆ, ಯಾವಾಗಲೂ ನವ್ಯವಾಗಿರುವುದು, ಯಾವಾಗಲೂ ಪುನರ್ಜನಿಸುವುದು, ಯಾವಾಗಲೂ ಚಿಹ್ನೆಯಿಂದ ಜೀವಂತ ಅಸ್ತಿತ್ವಕ್ಕೇರುವುದು ಆಧ್ಯಾತ್ಮ. ಈ ಅರ್ಥದಲ್ಲಿ ಆಧ್ಯಾತ್ಮವನ್ನು ಪರಂಪರೆಯಂತೆ ಪೀಳಿಗೆಯಿಂದ ಪೀಳಿಗೆಗೆ ವರ್ಗಾಯಿಸುವುದಕ್ಕಾಗುವುದಿಲ್ಲ. ನಿರಂತರವೂ ಅದನ್ನು ಪುನಶ್ಯೋಧಿಸಬೇಕು.
ಆಧ್ಯಾತ್ಮಿಕ ಪರಂಪರೆ ಒಂದು ಬರಿಯ ಚಿಹ್ಹೆ ಅಥವಾ ಭೌತಿಕ ಚಿಹ್ಹೆಗಳ ಸಮುದಾಯವಲ್ಲ. ಅದು ಜೀವಂತವಾದುದರಿಂದ (ಯಾಕೆಂದರೆ ಅದು ಸ್ಪಿರಿಟ್) ಜೀವಂತ ಪ್ರಜ್ಞೆಯಿಂದಲೇ ಅದರೊಂದಿಗೆ ಸಂಬಂಧಪಡೆದುಕೊಳ್ಳಬೇಕಾಗುತ್ತದೆ. ಆಧ್ಯಾತ್ಮಿಕ ಪರಂಪರೆ ಎಂದರೆ ಒಂದು ಶ್ರೇಷ್ಠ ಕಲಾಕೃತಿ ಇದ್ದ ಹಾಗೆ ಉದಾಹರಣೆಗೆ ರೆಂಬ್ರಾಟ್‌ನ ಒಂದು ವರ್ಣಚಿತ್ರವಾಗಲಿ ಅಥವಾ ಕಾಳಿದಾಸನ ಒಂದು ನಾಟಕವಾಗಲೀ ಜಡ ಚಿಹ್ಹೆಗಳಲ್ಲ. ಅವು ಅಕ್ಷರ ಮಾಲೆಯ ಅಕ್ಷರಗಳಲ್ಲ. ಅವುಗಳ ಕಲಾತ್ಮಕ ಸತ್ಯ ಅಥವಾ ಏಕತೆಯನ್ನು ಜೀವಂತ ಸಹಾನುಭೂತಿಯಿಂದ ಗ್ರಹಿಸಬೇಕು. ಆದ್ದರಿಂದ ಆಧಾತ್ಮಿಕ ಪರಂಪರೆಯನ್ನು ಒಂದು ವಸ್ತುವಿನಂತೆ (ಉದಾಹರಣೆಗೆ ಪಿತ್ರಾರ್ಜಿತ ಆಸ್ತಿ) ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ವರ್ಗಾಯಿಸುವುದಕ್ಕಾಗುವುದಿಲ್ಲ.
ಗೇಬ್ರಿಯಲ್ ಮಾರ‍್ಸೆಲ್‌ರ ಪ್ರಬಂಧದಲ್ಲಿಯ ಅತ್ಯಂತ ಮಹತ್ವವಾದ ಅಂಶವೆಂದರೆ ಇದು: ಆಧ್ಯಾತ್ಮಿಕ ಪರಂಪರೆಯ ಬಗ್ಗೆ ಅರ್ಥಪೂರ್ಣವಾಗಿ ಮಾತಾಡುವುದು ಎಲ್ಲಿ ಆ ಪರಂಪರೆಯ ಬಗ್ಗೆ ಪ್ರಜ್ಞೆ ಅಥವಾ ಅರಿವು ಇದೆಯೋ ಅಲ್ಲಿ ಮಾತ್ರ ಸಾಧ್ಯ. ಆದರೆ ಆ ಅರಿವು ಅಥವಾ ಪ್ರಜ್ಞೆ ಇರುವುದು ನಮಗೆ ಅದರ ಬಗ್ಗೆ ಇರುವ ಸರ್ವತ್ರ ಹಬ್ಬಿರುವ ಕೃತಜ್ಞತಾ ಭಾವದ (Diffused Gatitude) ವಾತಾವರಣದಲ್ಲಿ ಈ ಪ್ರವರಿಸಿದ ಕೃತಜ್ಞತಾಭಾವವೇ ಮಾರ‍್ಸೆಲ್‌ರ ಆಧ್ಯಾತ್ಮ ಪರಂಪರೆಯ ಮೂಲಭೂತ ಕಲ್ಪನೆಯ ಸೂತ್ರ. ನಮ್ಮ ಪ್ರಜ್ಞೆಯಲ್ಲಿ ನಮ್ಮ ಪರಂಪರೆಯ ಬಗ್ಗೆ ಈ ಕೃತಜ್ಞತಾಭಾವ ಜೀವಂತವಾಗಿ ಪ್ರಸರಿಸಿಲ್ಲದಿದ್ದರೆ ಅದು ಉಳಿದುಕೊಂಡು ಬರಲಾರದು. ಅದು ಉಳಿದುಕೊಂಡು ಬರುವುದು ಅಂಥ ಪ್ರಜ್ಞೆಯಲ್ಲಿಯೇ. ಅದೊಂದು ಸಂಸ್ಕಾರ ಅಥವಾ ವಾಸನಾ. ಅದರ ವಿಷಯದಲ್ಲಿ ಮಾರ‍್ಸೆಲ್ ಹೀಗೆ ಬರೆಯುತ್ತಾರೆ: “ನಾನು ಈ ಪುಸ್ತಕ
________________
(Decline of Wisdom) ತಯಾರಿಸುವಾಗ, ಅದಕ್ಕೆ (ಕೃತಜ್ಞತಾಭಾವಕ್ಕೆ) ಹೆಚ್ಚು ಹೆಚ್ಚು ಮಹತ್ವ ಕೊಟ್ಟೆ. ಅದರ ಜೊತೆಗೆ ಅಂಥ ಒಂದು ಮನೋಭಾವ ಇಂದು ಒಂದು ರೀತಿ ಕಡಿಮೆಯಾಗುತ್ತಿರುವುದು ನನ್ನ ಮನಕ್ಕೆ ಬಂತು”.
ಕೃತಜ್ಞತಾಭಾವ ಮತ್ತು ಮೆಚ್ಚಿಕೆ ಕಡಿಮೆಯಾಗುವುದು ಪರಂಪರೆಯ ಬಗ್ಗೆ ಸೃಷ್ಟ್ಯಾತ್ಮಕ ಶಕ್ತಿ ಕ್ಷೀಣಿಸಿದಾಗ ಹೊಸದನ್ನು ಪ್ರಾರಂಭಿಸುತ್ತೇವೆಂಬುವ ಜಂಬ ಅಂಥ ಕೃತಜ್ಞತಾಹೀನ ಮನೋಭಾವವನ್ನು ಆವರಿಸುತ್ತದೆ. ಸ್ವಯಂ ಆರೋಪಿತ (self-styled) ನವ್ಯ ನಿರ್ಮಾಪಕ (innovator) ತನ್ನಲ್ಲಿಯೇ ಕೇಂದ್ರೀಕೃತನಾಗಿರುತ್ತಾನೆ. ಆದ್ದರಿಂದಲೇ ಅವನು ಕೃತಜ್ಞನಾಗಿರಲು ಅಥವಾ ಮೆಚ್ಚಿಕೆ ವ್ಯಕ್ತಪಡಿಸಲು ಸಿದ್ದನಿರುವುದಿಲ್ಲ. ನಿಸ್ಸಂದೇಹವಾಗಿ ಅವನಿಗೆ ಹಾಗೆ ಮಾಡಿದರೆ ತಾನು ಅಪಮಾನಕ್ಕೆ ತುತ್ತಾಗುವ ಅಥವಾ ತನ್ನ ಕೀರ್ತಿ ಕಡಿಮೆಯಾಗುವ ಅಪಾಯವಿದೆಯೆಂದು ಅನಿಸುತ್ತದೆ. ಆದರೆ ಸೃಷ್ಟಿಸಿದವನು (creator) ಹಾಗೆ ತನ್ನ ಬಗ್ಗೆ ಯೋಚಿಸುವುದಿಲ್ಲ ಮತ್ತು ತನ್ನಲ್ಲಿಯೇ
ತೊಡಗಿ ಕಾರ‍್ಯತತ್ಪರನಾಗಿರುವುದಿಲ್ಲ. ಸೃಷ್ಟ್ಯಾತ್ಮಕ ಕಾರ್ಯ ಮುಖ್ಯವಾಗಿ ಅಕೃತ್ರಿಮವೆಂದು ನೀವು ಹೇಳಬಹುದು – ಒಂದು ವೇಳೆ ಕಲೆಗಾರ ಆಮೇಲೆ ತನ್ನ ಕೃತಿಯನ್ನು ನೋಡಿ ತನಗೆ ಸರಿಸಮಾನರಾದವರು ಯಾರೂ ಇಲ್ಲ ಎಂದು ಹೇಳಿದರೂ”.
ಪರಂಪರೆಯ ಬಗ್ಗೆ ನಮಗಿರಬೇಕಾದ ಕೃತಜ್ಞತಾಭಾವ ಯಾವ ಸ್ವರೂಪದ್ದು ? ಅದು ಬರೀ ಅನಿಸಿಕೆಯೆಂದು ಹೇಳಿದರೆ ಸಾಕೆ? ಅಥವಾ ಅದು ಅಂಥ ಒಂದು ಭಾವವನ್ನುಂಟು ಮಾಡುವುದರ ವಿಷಯದಲ್ಲಿಯ ಅರಿವೆ? ಅದು ಏನಿದ್ದರೂ ಅಭ್ಯಾಸ, ತರಬೇತಿಯಿಂದ ಉಂಟಾದ ಅನಿಸಿಕೆಯಲ್ಲ. ಅದು ನಮ್ಮ ಮೂಲಭೂತ ಚೈತನ್ಯಕ್ಕೆ ಸಂಬಂಧಿಸಿದುದು. ಕೃತಜ್ಞತಾಭಾವದಲ್ಲಿ ಗುರುತಿಸುವ ಭಾವ ಅವಶ್ಯವಾಗಿರುತ್ತದೆ. ಉದಾರತೆ ಇರುತ್ತದೆ. ಪರಂಪರೆಯಿಂದ ನಮಗೆ ಒದಗುವ ಕೊಡುಗೆಯ ಬಗ್ಗೆಯ ಕೃತಜ್ಞತಾಭಾವದಲ್ಲಿ ಚೈತನ್ಯದ ಉದಾರತೆಯಲ್ಲಿ ವ್ಯಕ್ತವಾಗುತ್ತದೆ. “ಹೀಗೆ ಹೇಳಲೂ ಸಾಧ್ಯ. ಕೃತಜ್ಞತಾಭಾವ ಉದಾರತೆಯಲ್ಲಿ ಬೇರೂರಿದೆ. ಕೊಡುಗೆಗಳಿಂದ (gift) ಹಿಂಸೆಪಟ್ಟುಕೊಳ್ಳುವ ಮತ್ತು ಅವು ತಮ್ಮನ್ನು ಬಂಧಿಸಿಡುವ ಸರಪಳಿಯಿಂದು ತಿಳಿಯುವ ಆತ್ಮಗಳು ಕ್ಷುಲ್ಲಕವಾದವುಗಳು.”
ಕೃತಜ್ಞತಾಭಾವ ಕ್ಷಣಕಾಲ ಅನ್ನಿಸಿ ಹೋಗುವಂತಹುದಲ್ಲ. ಅದು ಶಾಶ್ವತವಾದದ್ದು. ಈ ಅರ್ಥದಲ್ಲಿ ಅದು ಒಂದು ಅಭ್ಯಾಸ. ಅದು ಒಂದು ಸ್ಮತಿಯನ್ನು ಅವಲಂಬಿಸಿರುತ್ತದೆ. ಅಲ್ಲಿ ಮರೆವು ಇರಲಾರದು. ಸ್ಮೃತಿಯೆಂದರೆ ಕೇವಲ ಪರಂಪರೆಯಲ್ಲಿ ಮೌಲ್ಯವನ್ನು ಕಾಯ್ದಿಡುವುದಲ್ಲ. ಸ್ಮೃತಿ ಆಧ್ಯಾತ್ಮಿಕ ಪರಂಪರೆಯಲ್ಲಿ ಕೊನೆಯವರೆಗೂ ನಿಲ್ಲುವ ಮೌಲ್ಯವನ್ನು ಕಳೆದುಕೊಳ್ಳದಂತೆ ಚೈತನ್ಯ ಅಥವಾ ಆತ್ಮಕ್ಕಿರುವ ಎಚ್ಚರ. (ವೇದಗಳ ಮಂತ್ರಗಳನ್ನು ನಮ್ಮ ಪಂಡಿತರು ಮತ್ತು ವೈದಿಕರು ಬರೀ ಸ್ಮೃತಿಯಲ್ಲಿ ಕಾಯ್ದಿಡುತಿದ್ದಾರೆ ಅಲ್ಲವೆ?) ಈ ಎಚ್ಚರ ಸಾಧ್ಯವಾಗುವುದು ಮೂರ್ತ, ಜೀವಂತ ಕೃತಜ್ಞತಾ ಭಾವದಿಂದ, ಮರೆವು ಸಾಧ್ಯವಾಗುವುದು ನಂಬಿಕೆಯಿಲ್ಲದಾಗ, ಆದ್ದರಿಂದ ನಂಬಿಕೆ ಸ್ಮೃತಿಗೆ (ಪರಂಪರೆಯ ಮೌಲ್ಯದ ಬಗ್ಗೆ) ಅವಶ್ಯ.
ಆಧ್ಯಾತ್ಮಿಕ ಪರಂಪರೆ ಮತ್ತು ಅದರ ಬಗ್ಗೆ ನಮಗಿರಬೇಕಾದ ಕೃತಜ್ಞತಾಭಾವ ಅದರಲ್ಲಿ ಜೀವಂತ ಭಾಗವಹಿಸುವುದರಲ್ಲಿದೆ. ಪರಂಪರೆಯಲ್ಲಿ ಜೀವಂತತನವಿದ್ದರೆ ಮಾತ್ರ ಇದು ಸಾಧ್ಯ, ಮತ್ತು ಪರಂಪರೆ ಒಂದು ಬರೀ ಯಂತ್ರದಂತೆ ಇದ್ದರೆ ಅಥವಾ ಬರೀ ವಸ್ತುಗಳ ಸಂಘಾತವಾಗಿದ್ದರೆ ಜೀವಂತ ಭಾಗವಹಿಸುವಿಕೆ ಅಸಾಧ್ಯ. ಅದು ಚೈತನ್ಯಯುಕ್ತವಾಗಿರಬೇಕು. ಅದು ಅವೈಯಕ್ತಿಕ (supra-personal) ವಾದುದಾಗಿರಬೇಕು. ಅಂದರೆ ಅದು ಪರಂಪರೆ. ಅಂಥ ಪರಂಪರೆಗೆ ವಾರಸುದಾರರಾಗುವುದು ಸಾಧ್ಯ. “ಸಂಘಾತಗಳಿಂದ (agglomerations) ಕೂಡಿದ ಮನುಷ್ಯ ಯಾವ ಪರಂಪರೆಯೂ ಇಲ್ಲದವ ಮತ್ತು ಅಂಥವನಿಂದ ಯಾರೂ ಯಾವುದಕ್ಕೂ ವಾರಸುದಾರರಾಗುವುದಿಲ್ಲ”, ಅಂಥ ಮನುಷ್ಯ ಅಕೃತಜ್ಞತಾಭಾವದಲ್ಲಿ ನೆಲಸಿರುತ್ತಾನೆ.
ಪ್ರಸಾದ (grace) ಮತ್ತು ಕೃತಜ್ಞತಾಭಾವಗಳಲ್ಲಿ ಅನ್ನೋನ್ಯ ಸಂಬಂಧವಿದೆ. ಈ ಸಂಬಂಧವನ್ನು ನಾವು ಪರಂಪರೆ ನಮಗೆ ನೀಡುವ ಕೊಡುಗೆಯನ್ನು ಗುರುತಿಸುವದರು ಕಂಡುಕೊಳ್ಳಬಹುದು. ಪರಂಪರೆಯ ಕೊಡುಗೆಯನ್ನು ಕೃತಜ್ಞತಾಭಾವದಲ್ಲಿ ಗುರುತಿಸಲಾರದವ ಪರಂಪರೆಗೆ ಸೇರದವ ಪರಂಪರೆ, ಪ್ರಸಾದ, ಕೊಡುಗೆ, ಕೃತಜ್ಞತಾಭಾವ, ಗುರುತಿಸುವುದು ಇವೆಲ್ಲಾ ಒಂದಕ್ಕೊಂದು ಸಂಬಂಧಿಸಿದವುಗಳು.
ಆಧ್ಯಾತ್ಮಿಕ ಪರಂಪರೆ ಅಂದರೇನು ? ಮಾರ‍್ಸೆಲ್‌ರ ಪ್ರಕಾರ ಅದು ಒಂದು ಬಗೆಯ ಮಧ್ಯಸ್ತಿಕೆ (Mediation). ಅದು ಒಬ್ಬ ಶ್ರೇಷ್ಠ ಕಲಾವಿದನಂತೆ, ಒಬ್ಬ ಶ್ರೇಷ್ಠ ಕಲಾವಿದನ ಕೃತಿಯ (ಅದು ಉತ್ಪಾದಿಸಿದ್ದಲ್ಲ ಸೃಷ್ಟಿಸಿದ್ದು) ಮುಂದೆ ನಿಂತಾಗ ನಾವು ಅದನ್ನು ಮೆಚ್ಚುವುದಷ್ಟೇ ಅಲ್ಲದೆ ಅದನ್ನು ಸೃಷ್ಟಿಸಿದ ಕಲಾವಿದನ ಬಗ್ಗೆ ಧನ್ಯತಾಭಾವನೆಗಳನ್ನು ಹೇಗೆ ವ್ಯಕ್ತಪಡಿಸುತ್ತೇವೆಯೋ ಹಾಗೆಯೇ ಶ್ರೇಷ್ಠ ಆಧ್ಯಾತ್ಮಿಕ ಪರಂಪರೆಯ ಬಗ್ಗೆಯೂ ಕೃತಜ್ಞತಾಭಾವವನ್ನು ನಾವು ವ್ಯಕ್ತಗೊಳಿಸುತ್ತೇವೆ. ಆ ಕೃತಿ ಅಥವಾ ಪರಂಪರೆ ನಮ್ಮ ಅಂತರಂಗ ಜೀವನವನ್ನು ಪೋಷಿಸುವುದೇ ನಮ್ಮ ಕೃತಜ್ಞತಾ ಭಾವಕ್ಕೆ ಕಾರಣ. ಕಲಾಕೃತಿಯ ಪ್ರಪಂಚಕ್ಕೂ ನಮಗೂ ನಡುವೆ ಕಲಾವಿದ ಮಧ್ಯಸ್ತಿಕೆ ವಹಿಸುವಂತೆ ಪರಂಪರೆ ನಮಗೂ ಇನ್ನಾವುದೋ ಪ್ರಪಂಚಕ್ಕೂ ಮಧ್ಯಸ್ಥಿಕೆ ವಹಿಸುತ್ತದೆ. ಆದರೆ ಇಂಥ ಮಧ್ಯಸ್ತಿಕೆ ಸಾಧ್ಯವಾಗುವುದಕ್ಕೆ ಕೃತಿ ಅಥವಾ ಪರಂಪರೆ ಉತ್ಪಾದಿಸಿದ್ದು (Produced) ಆಗಿರಬಾರದು, ಸೃಷ್ಟಿಸಿದ್ದು (Created) ಆಗಿರಬೇಕು, ಮಾರ‍್ಸೆಲ್‌ರು ಉತ್ಪಾದನೆ (Production)ಮತ್ತು ಸೃಷ್ಟಿಯ ನಡುವೆ ಅತಿ ಮಹತ್ವದ ಅಂತರವಿದೆಯೆಂದು ಅಭಿಪ್ರಾಯಪಡುತ್ತಾರೆ. ಬರೀ ಉತ್ಪಾದನೆಯಾಗುವ ಅಥವಾ ಯಾವ ಸೃಷ್ಟ್ಯಾತ್ಮಕ ಕಾರ್ಯವೂ ನಡೆಯದ ಸಮಾಜದಲ್ಲಿ ಪರಂಪರೆಯ (ಆಧ್ಯಾತ್ಮಿಕ) ಕಲ್ಪನೆ ಸ್ಥಿರವಾಗಿ ನೆಲೆಯೂರಲಾರದು ಎಂಬುದು ಅವರ ಅಭಿಪ್ರಾಯವಿರಬೇಕು. ಬರೀ ಪಠ್ಯ ಪುಸ್ತಕಗಳನ್ನು ಉತ್ಪಾದಿಸುವುದಕ್ಕೂ ಹಾಗೂ ಸೃಷ್ಟ್ಯಾತ್ಮಕ ಸಾಹಿತ್ಯ ಸೃಷ್ಟಿಸುವುದಕ್ಕೂ ಇರುವ ಇತರ ಎಲ್ಲರಿಗೂ ತಿಳಿದದ್ದೇ. ಆದ್ದರಿಂದಲೇ ಮಾರ‍್ಸೆಲ್ ಬರೀ ವಸ್ತುಗಳನ್ನು ಉತ್ಪಾದಿಸುವ ಅಥವಾ ತಯಾರಿಸುವ ಕೈಗಾರಿಕಾ ಸಮಾಜವನ್ನು ಅಷ್ಟು ತಮ್ಮ ಬರಹಗಳಲ್ಲಿ ಖಂಡಿಸುವುದು. ಅಂತಹ ಸಮಾಜದಿಂದ ಆಧ್ಯಾತ್ಮಿಕ ಪರಂಪರೆ ಉಳಿಯುವುದಾಗಲಿ ಸೃಷ್ಟಿಯಾಗುವುದಾಗಲಿ ಮುಂದುವರೆಯುವುದಾಗಲಿ ಸಾಧ್ಯವೇ ಇಲ್ಲ ಎಂಬುದು ಅವರ ಅಭಿಪ್ರಾಯವೆಂದು ತೋರುತ್ತದೆ. ಆದ್ದರಿಂದ ಪರಂಪರೆ ಎಂದರೆ ನಮಗೂ ಮತ್ತು ಚೈತನ್ಯ ಅಥವಾ ಆಧ್ಯಾತ್ಮಕ್ಕೂ (spirit) ಮಧ್ಯವರ್ತಿಯಾಗಿರುವುದು. ಆಧ್ಯಾತ್ಮದ ಕಲ್ಪನೆ ಕ್ಷೀಣಿಸಿದಂತೆ ಪರಂಪರೆಯ ಕಲ್ಪನೆಯೂ ಕ್ಷೀಣಿಸುತ್ತದೆ. ಇದು ಅಧಾರ್ಮಿಕ ಮನೋಭಾವದ ಪ್ರಗತಿಯಲ್ಲಿ ಕಾಣಿಸಿಕೊಳ್ಳುತ್ತದೆ. “ಧಾರ್ಮಿಕತೆ ಪವಿತ್ರವಾದದ್ದರ ಬಗ್ಗೆ ಅನಿಸಿಕೆ, ಯಾವುದು ಪವಿತ್ರವಾದದ್ದೂ ಅದು ಅಲಂಘ್ಯ” (inviolable).
ಆಧ್ಯಾತ್ಮಿಕ ಪರಂಪರೆಯನ್ನು ಆಮೂಲಾಗ್ರವಾಗಿ ಐತಿಹಾಸಿಕ ಸಂಶೋಧನಾ ಗ್ರಂಥಗಳಲ್ಲಿ ಕಲೆಹಾಕಿದರೆ ಅದರಲ್ಲಿರುವ ಶಾಶ್ವತ ತತ್ವ ಉಳಿದುಕೊಂಡು ಬರಲಾರದು. ಅಂದರೆ ಆಧ್ಯಾತ್ಮಿಕ ಪರಂಪರೆ ಬರೀ ಸುದ್ದಿ ಸಂಗ್ರಹವಾಗಿ ಉಳಿಯಬಾರದು. ಹಾಗಾದರೆ ಇತಿಹಾಸ ತನ್ನೆಲ್ಲ ಮೌಲಿಕ ಮಹತ್ವವನ್ನು ಕಳೆದುಕೊಳ್ಳುತ್ತದೆ. ಬರೀ ಇತಿಹಾಸದ ಮುಖಾಂತರ ಪರಂಪರೆಯೊಡನೆ ಜೀವಂತ ಸಂಬಂಧ ಏರ್ಪಡಲಾರದು. ಪರಂಪರೆಯ ಕಲ್ಪನೆ ವ್ಯಕ್ತಿ ಆದರೊಂದಿಗೆ ನಡೆಸುವ ಅಂತರಂಗ ಸಂಸ್ಕಾರದಿಂದ ಸಾಧ್ಯ.
ತಮ್ಮ ಪ್ರಬಂಧದ ಕೊನೆಯಲ್ಲಿ ಮಾರ‍್ಸೆಲ್‌ರು ಆಧ್ಯಾತ್ಮಿಕ ಪರಂಪರೆಗೂ ಮತ್ತು ಮೌಲ್ಯಗಳಿಗೆ ಇರುವ ಸಂಬಂಧ ಕುರಿತು ಚರ್ಚಿಸುತ್ತಾರೆ. ಇಲ್ಲಿ ಈ ಪ್ರಶ್ನೆಗಳು ಏಳುತ್ತವೆ. “ಮೌಲ್ಯಗಳು ಪರಂಪರಾಗತವಾದುವುಗಳು ಎಂದು ಸಕಾರಣವಾಗಿ ನಾವು ಹೇಳಬಹುದೆ? ನಾವು ಇದನ್ನು ಕೇಳಬಹುದು: ಆಧ್ಯಾತ್ಮಿಕ ಪರಂಪರೆಯಿಂದ ಮುಕ್ತರಾದ ಮೇಲೂ ಮೌಲ್ಯಗಳನ್ನೂ ಕಾಡಬಹುದೆಂದು ನಿಮಗೆ ಖಾತ್ರಿಯಿದೆಯೆ? ಅಂಥ ಮುಕ್ತಿ (ಆಧ್ಯಾತ್ಮಿಕ ಪರಂಪರೆಯಿಂದ) ಪರಿಣಾಮಕಾರಿಯೇ? ಅಥವಾ ಅದು ಒಂದು ಭ್ರಮೆಯೆ?”
ಈ ಪ್ರಶ್ನೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಬೇಕಾದರೆ ಮೌಲ್ಯಗಳ ಅರ್ಥದ ಕಲ್ಪನೆ ಮತ್ತು ಅವುಗಳ ಉಪಯೋಗದ ವಿಚಾರದಲ್ಲಿರುವ ಸಮಸ್ಯೆಯನ್ನು ಬಿಡಿಸಬೇಕಾಗುವುದು. ಮಾರ‍್ಸೆಲ್‌ರ ಪ್ರಕಾರ ಮೌಲ್ಯದ ಕಲ್ಪನೆ ಕೃತಜ್ಞತೆಗೂ ಹಾಗೂ ಭಾವನೆಗೂ ಸಂಬಂಧಿಸಿದ್ದಾಗಿದೆ. ಹೀಗೆ ಅವರು ಹೇಳಿದಾಗ ಆಧ್ಯಾತ್ಮಿಕ ಪರಂಪರೆಗೂ ಮತ್ತು ಮೌಲ್ಯಗಳಿಗೂ ಇರುವ ಸಂಬಂಧ ಸ್ಪಷ್ಟವಾಗುತ್ತದೆ. ಯಾಕೆಂದರೆ ಕೃತಜ್ಞತೆ ಮತ್ತು ಗೌರವ ಭಾವನೆ ಇಲ್ಲದಾಗ ಪರಂಪರೆಯ ಕಲ್ಪನೆ ವ್ಯಕ್ತಿಯಲ್ಲಿ ಜೀವಂತವಾಗಿರುವುದಿಲ್ಲ – ಎಂಬುದು ಮಾರ‍್ಸೆಲ್‌ರ ವಾದವೆಂದು ಹಿಂದೆ ನೋಡಿದ್ದಾಗಿದೆ.
ಈ ಸಂದರ್ಭದಲ್ಲಿ ಮಾರ‍್ಸೆಲ್‌ರು ಮುಖ್ಯವಾಗಿ ಸಾರ‍್ತ್ರನ, ಮಾರ್ಕ್ಸಿಸಿಸಂ ಮತ್ತು ನೀಟ್ಯೆಯ ತತ್ವಗಳಲ್ಲಿ ಪ್ರತಿಪಾದಿಸಿರುವ ಮೌಲ್ಯ ದರ್ಶನವನ್ನು ಸಂಕ್ಷಿಪ್ತವಾಗಿ ಚರ್ಚೆಗೆ ತೆಗೆದುಕೊಳ್ಳುತ್ತಾರೆ. ಅವರು ಸಂಕಲ್ಪ ಬದ್ಧ (will-centered) ಅಥವಾ ವಾಲಂಟೆರಿಸ್ಟ್ ಮೌಲ್ಯ ದರ್ಶನವನ್ನು ವಿರೋಧಿಸುತ್ತಾರೆ. ಈ ದರ್ಶನದ ಪ್ರತಿಪಾದಕ ನೀಟ್ಯೆ ಮತ್ತು ಸಾರ‍್ತ್ರ್. ನೀಟ್ಯೆಯನ್ನು ಈ ವಿಷಯದಲ್ಲಿ ಸಾರ‍್ತ್ರ್ ಅನುಸರಿಸುತ್ತಾನೆ. ಸಾರ‍್ತ್ರನನ್ನು ಮಾರ‍್ಸೆಲ್‌ರು ಕೆಲವು ದೃಷ್ಟಿಗಳಿಂದ ಡಿಜನರೇಟ್ ನೀಟ್ಯೆಯೆಂದು ಕರೆಯುತ್ತಾರೆ. ಅದಕ್ಕೆ ಕಾರಣ: “ಸಾರ‍್ತ್ರನ ತತ್ವಜ್ಞಾನದಲ್ಲಿ ಮೌಲ್ಯಗಳು ಯಾರಿಂದ ಪ್ರತಿಪಾದಿತವಾಗುವುವೋ – ಅವರಿಂದಲೇ ಅವು ಅಕ್ಷರಶಃ ಸೃಷ್ಟಿಯಾಗಿವೆ ಎಂಬ ಸಿದ್ಧಾಂತವಿದೆ. ಮೌಲ್ಯಗಳಿಗಿಂತ ಸ್ವಾತಂತ್ರ್ಯ ಮೂಲಭೂತವಾದದ್ದು, ಮತ್ತು ಅವನ ಆದೇಶಕ್ಕೆ (ಅಸ್ತಿತ್ವ ಸತ್ವ ಪೂರ್ವವಾದದ್ದು) ಇದೇ ನಿಜವಾದ ಅರ್ಥ”.
ಮೇಲೆ ಸಂಕ್ಷಿಪ್ತವಾಗಿ ಉಲ್ಲೇಖಿಸಿದ ಸಾರ‍್ತ್ರ್ ಮೌಲ್ಯದರ್ಶನ ಸರಿಯಾದದ್ದಾರೆ ಆಧ್ಯಾತ್ಮಿಕ ಪರಂಪರೆಯೆಂಬುದಿಲ್ಲ ಮತ್ತು ಮೌಲ್ಯಗಳು ಪರಂಪರೆಯಿಂದ ಸಂಪೂರ್ಣ ಹೊರತಾಗಿ ಇರುವುವೆಂಬುದಾಗಿ ಮಾರ‍್ಸೆಲ್ಲರು ಅಭಿಪ್ರಾಯ ಪಡುತ್ತಾರೆ. ಮಾರ‍್ಸೆಲ್‌ರ ದೃಷ್ಟಿಕೋನ ಸಾರ‍್ತ್ರನಿಗೆ ತೀರ ವಿರುದ್ಧವಾದುದು. ಅವರಿಗೆ ಮೌಲ್ಯಗಳು ಒಬ್ಬ ವ್ಯಕ್ತಿ ಉತ್ಪಾದಿಸಿದವುಗಳಲ್ಲ. (ವ್ಯಕ್ತಿ ಮೌಲ್ಯಗಳನ್ನು ಸೃಷ್ಟಿಸುತ್ತಾನೆಂದು ಹೇಳುವುದು ಮಾರ‍್ಸೆಲ್‌ರ ಪ್ರಕಾರ ತಪ್ಪಾಗುತ್ತದೆ.) ಅವು ಸಾರ್ವಕಾಲಿಕವಾದವುಗಳು ಮತ್ತು ಆಧ್ಯಾತ್ಮಿಕ ಪರಂಪರೆಯಿಂದ ಒದಗುವಂಥವುಗಳು. ಆದ್ದರಿಂದ ಅವರು ವಾದಿಸುತ್ತಾರೆ; “ಸ್ವಾತಂತ್ರ್ಯವನ್ನು ಆದಿಯಲ್ಲಿ ಹಾಕುವುದು (ಅದನ್ನು ಎಲ್ಲದಕ್ಕೂ ಮೂಲಭೂತವಾದುದನ್ನಾಗಿ ಮಾಡುವುದು) ಎಂದರೆ ಕೊಡುಗೆಯ ಸತ್ಯವನ್ನು ಬೇಕಂತಲೇ ನಿರ್ಲಕ್ಷಿಸುವುದು; ವಾಸ್ತವಿಕವಾಗಿ ಇದು ಸೃಷ್ಟ್ಯಾತ್ಮಕ ದೃಷ್ಟಿಕೋನವನ್ನು ಉತ್ಪಾದನಾ ದೃಷ್ಟಿಕೋನಕ್ಕೆ ಬದಲಾಯಿಸುವುದಾಗುತ್ತದೆ. ಇದು ಮೌಲ್ಯಗಳ ಸಾರ್ವಕಾಲಿಕ (universality) ವನ್ನು ಅಲ್ಲಗಳೆದಂತಾಗುತ್ತದೆ.”
ಮಾರ‍್ಸೆಲ್‌ರ ಮೌಲ್ಯದರ್ಶನಕ್ಕೆ ಕೃತಜ್ಞತಾಭಾವ ಮತ್ತು ಪಾವಿತ್ರ್ಯದ ಬಗ್ಗೆ ಇರುವ ಅರಿವು ಮುಖ್ಯವಾದವುಗಳು. ಇವುಗಳಿಗೂ ಆಧ್ಯಾತ್ಮಿಕ ಪರಂಪರೆಗೂ ಇರುವ ನಿಕಟ ಸಂಬಂಧವನ್ನು ಹಿಂದೆ ಅರಿತಿದ್ದೇವೆ. ನಾವು ಒಂದು ಆಧ್ಯಾತ್ಮಿಕ ಪರಂಪರೆಗೆ ಆಧ್ಯಾತ್ಮಿಕವಾಗಿ (spiritually) ಮತ್ತು ಸೃಷ್ಟಾತ್ಮಕವಾಗಿ ವಾರಸುದಾರರಾಗುವುದೆಂದರೆ ಮೇಲಿನ ಭಾವನೆಗಳನ್ನು ನಮ್ಮಲ್ಲಿ ಇಟ್ಟುಕೊಳ್ಳುವುದು. ಅಂದರೆ ಮಾರ‍್ಸೆಲ್‌ರಿಗೆ ಒಬ್ಬ ವ್ಯಕ್ತಿ ಆಧ್ಯಾತ್ಮಿಕ ಹಾಗೂ ಸೃಷ್ಟ್ಯಾತ್ಮಕ ವ್ಯಕ್ತಿ (ಬರೀ ವ್ಯಕ್ತಿಯಲ್ಲ)ಯಾಗಬೇಕಾದರೆ ಆ ವ್ಯಕ್ತಿಗೆ ಆಧ್ಯಾತ್ಮಿಕ ಪರಂಪರೆಯ ಬಗ್ಗೆ ಪವಿತ್ರ ಭಾವನೆ ಮತ್ತು ಕೃತಜ್ಞತಾಭಾವ ಇರುವುದು ಅವಶ್ಯ. ಇದರಿಂದ ಏನಾಗುವುದೆಂದರೆ ವ್ಯಕ್ತಿ ತನ್ನೆಲ್ಲ ಮೌಲ್ಯಗಳನ್ನು ತಾನೇ ಹೊಸದಾಗಿ ಸೃಷ್ಟಿಸುವುದಕ್ಕೆ ಆಗುವುದಿಲ್ಲ. ಕೆಲವೊಂದು ಮೌಲ್ಯಗಳನ್ನಾದರೂ (ಸಾರ್ವಕಾಲಿಕವಾದಂಥವು) ಅವನು ಆಧ್ಯಾತ್ಮಿಕ ಪರಂಪರೆಯಿಂದ ತನಗೆ ದೊರೆತ ಮೌಲ್ಯಗಳೆಂದು ಒಪ್ಪಿಕೊಳ್ಳಬೇಕಾಗುತ್ತದೆ. ಹೀಗೆ ಒಪ್ಪಿಕೊಂಡಾಗ ವ್ಯಕ್ತಿ ಎಲ್ಲ ಮೌಲ್ಯಗಳು ತನ್ನಿಂದಲೇ (ಅಂದರೆ ತನ್ನ ಮೂಲಭೂತ ಸ್ವಾತಂತ್ರ‍್ಯದಿಂದಲೇ) ಸೃಷ್ಟಿಯಾದವುಗಳು ಎಂದು ಸಾರಲಿಕ್ಕಾಗುವುದಿಲ್ಲ. “ಸಾರ‍್ತ್ರ್ ಹೀಗೆ ತನ್ನ ಮೌಲ್ಯದರ್ಶನದಲ್ಲಿ ಸಾರುವುದರಿಂದಲೇ ಮಾರ‍್ಸೆಲ್‌ರು ಅವನ ದರ್ಶನವನ್ನು ವಿರೋಧಿಸುವುದು. “ಸಾರ‍್ತ್ರ್ ಸಿದ್ಧಾಂತ ಸರಿಯಿದ್ದರೆ ಆಧ್ಯಾತ್ಮಿಕ ಪರಂಪರೆಯೆಂಬುದೇ ಇಲ್ಲ ಎಂದು ನಾವು ಹೇಳಬೇಕಾಗುತ್ತದೆ, ಮತ್ತು ಮೌಲ್ಯಗಳು ಅಸ್ತಿತ್ವದಲ್ಲಿಲ್ಲದ ಆ ಪರಂಪರೆಯಿಂದ ಸ್ವತಂತ್ರ ವಾಗಿರುತ್ತವೆಂದಾಗುತ್ತದೆ”, ಮಾರ‍್ಸೆಲ್ ಇಲ್ಲಿ ಪ್ರತಿಪಾದಿಸುವದಿಷ್ಟೆ : ಸಾರ‍್ತ್ರನ ಮೌಲ್ಯ ಸಿದ್ಧಾಂತ ನಾವು ಸರಿಯೆಂದು ಒಪ್ಪಿಕೊಂಡರೆ ಕೆಲವು ಸಾರ್ವಕಾಲಿಕ ಮೌಲ್ಯಗಳನ್ನು ಹೊಂದಿದ ಮತ್ತು ಅವನ್ನು ಪ್ರತಿನಿಧೀಕರಿಸುವ ಆಧ್ಯಾತ್ಮಿಕ ಪರಂಪರೆಯೆಂಬುದೇ ಇಲ್ಲ ಎಂದು ಒಪ್ಪಿಕೊಳ್ಳಬೇಕಾಗುತ್ತದೆ.
ಸಾರ‍್ತ್ರನ ತತ್ವ ಸಿದ್ಧಾಂತದಲ್ಲಿ ಸ್ವಾತಂತ್ರ‍್ಯಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆಯೆಂಬುದು ಸರ್ವವಿದಿತ. ಸ್ವಾತಂತ್ರ್ಯವೇ ಎಲ್ಲಕ್ಕಿಂತ ಮೂಲಭೂತವಾದದ್ದು. ಅಂದರೆ ಸಾರ‍್ತ್ರನಿಗೆ ಒಬ್ಬ ವ್ಯಕ್ತಿಗೆ ಅವನ ಪರಂಪರೆಗಿಂತ ಅವನ ಸ್ವಾತಂತ್ರ‍್ಯ ಹೆಚ್ಚು ಮೂಲಭೂತವಾದದ್ದು, ಆದರೆ ಸ್ವಾತಂತ್ರ‍್ಯವೇ ಎಲ್ಲಕ್ಕೂ ಆದಿ ಅಥವಾ ಮೂಲಭೂತವಾದದ್ದು ಎಂದರೆ-ಆಧ್ಯಾತ್ಮಿಕ ಪರಂಪರೆಯೆಂಬುದೊಂದು ಇದೆ: ಆ ಪರಂಪರೆ ನಮಗೆ ಕೆಲವು ಮಹತ್ವದ ಕೊಡುಗೆಗಳನ್ನು ನಮ್ಮ ಜೀವನಕ್ಕೆ ನೀಡುತ್ತದೆ; ಆದ್ದರಿಂದ ನಮಗೆ ಆ ಕೊಡುಗೆಗಳ ಬಗ್ಗೆ ಕೃತಜ್ಞತಾಭಾವ ಇರಬೇಕು ಎಂಬುದನ್ನು ನಿರ್ಲಕ್ಷಿಸವಂತಾಗುತ್ತದೆ ಎಂಬುದು ಮಾರ‍್ಸೆಲ್‌ರ ಮುಖ್ಯವಾದ. “ಸ್ವಾತಂತ್ರ್ಯವನ್ನು ಆದಿಯಲ್ಲಿಡುವುದು ಎಂದರೆ (ಮೂಲಭೂತವಾಗಿ ಮಾಡುವುದೆಂದರೆ) ಉದ್ದೇಶಪೂರ್ವಕವಾಗಿ ಕೊಡುಗೆಯ ವಾಸ್ತವಿಕತೆಯನ್ನು ನಿರ್ಲಕ್ಷಿಸಿದಂತೆ. ಹೀಗೆ ಮಾಡುವುದು ಸೃಷ್ಟ್ಯಾತ್ಮಕ ದೃಷ್ಟಿಕೋನವನ್ನು ಉತ್ಪಾದನಾ ದೃಷ್ಟಿಕೋನಕ್ಕೆ ಬದಲಾಯಿಸಿದಂತಾಗುತ್ತದೆ. ಇದು ಮೌಲ್ಯಗಳೆಂದು ಕರೆಸಿಕೊಳ್ಳುವವುಗಳಿಂದ ಎಲ್ಲ ಸಾರ್ವಕಾಲಿಕತೆಯನ್ನೂ ಕಸಿದುಕೊಂಡಂತಾಗುತ್ತದೆ.”
ಮಾರ‍್ಸೆಲ್‌ರು ಆಸ್ತಿಕ (Theistic) ಅಸ್ತಿತ್ವವಾದಿಗಳ ಗುಂಪಿಗೆ ಸೇರಿದವರು. ಸ್ವಾಭಾವಿಕವಾಗಿ ಅವರು ಆಧ್ಯಾತ್ಮಿಕ ಪರಂಪರೆ, ಸಂಪ್ರದಾಯ (Tradition) ಇವುಗಳನ್ನು ಸಂಪೂರ್ಣವಾಗಿ ಅಲ್ಲಗಳೆಯಲಾರರು. ಆದ್ದರಿಂದ ಪವಿತ್ರ (Holy) ವಾದುದರ ಬಗ್ಗೆ ಅರಿವು ಮತ್ತು ಕೃತಜ್ಞತಾಭಾವ ಅವರ ಮೌಲ್ಯದರ್ಶನಕ್ಕೆ ಅಥವಾ ಸಿದ್ಧಾಂತಕ್ಕೆ ಅಡಿಗಲ್ಲುಗಳಾಗುತ್ತವೆ. ಆಧ್ಯಾತ್ಮಿಕ ಪರಂಪರೆಯ ಸಾರ್ವಕಾಲಿಕ ಮೌಲ್ಯಗಳು ಕೆಲವು ವ್ಯಕ್ತಿ ಗಳಲ್ಲಿಯಾದರೂ ಜೀವಂತವಾಗಿ ಸೃಷ್ಟ್ಯಾತ್ಮಕವಾಗಿ ಕೆಲಸಮಾಡುತ್ತವೆ. ಅಂಥ ವ್ಯಕ್ತಿಗಳಲ್ಲಿ ಅವು ಅವತರಿಸುತ್ತವೆಂದರೂ ತಪ್ಪಲ್ಲ. ಕ್ರೈಸ್ತ, ಬುದ್ಧ, ಗಾಂಧಿ ಮುಂತಾದವರು ಅಂಥ ಸಾರ್ವಕಾಲಿಕ ಮೌಲ್ಯಗಳನ್ನು ಮೂರ್ತವಾಗಿ ಪ್ರತಿನಿಧಿಕರಿಸುತ್ತಾರೆ. ಅವರು ಮೌಲ್ಯಗಳನ್ನು ಜೀವಂತವಾಗಿ ಮೂರ್ತವಾಗಿ ಪ್ರತಿನಿಧಿಕರಿಸುವದಷ್ಟೇ ಅಲ್ಲದೆ, ಸೃಷ್ಟ್ಯಾತ್ಮಕವಾಗಿ ವಾರಸುದಾರರಾಗುವದಷ್ಟೆ ಅಲ್ಲದೆ, ಅವರೇ ಒಂದು ಪರಂಪರೆಯೂ ಆಗುತ್ತಾರೆ. ಬಹುಶಃ ಈ ವಿಚಾರಗಳು ಮಾರ‍್ಸೆಲ್‌ರ ಕೆಳಗಿನ ಮೌಲ್ಯ ಸಿದ್ಧಾಂತದಿಂದ ವ್ಯಕ್ತವಾಗುತ್ತದೆಂದು ನನಗೆ ಅನಿಸುತ್ತದೆ. ಅವರ ಸಿದ್ಧಾಂತಸಾರವನ್ನು ಅವರ ಮಾತುಗಳಲ್ಲಿ ಇಂಗ್ಲಿಷಿನಲ್ಲಿಯೇ ತಿಳಿಸುವುದು ಕ್ಷೇಮ: “Value Can only be incarnate; the moment we disembody it while trying to make it-objective, we distort it and strip it of its authenticity”.
ತಮ್ಮ ಪ್ರಬಂಧದ ಕೊನೆಯಲ್ಲಿ ಮಾರ‍್ಸೆಲ್‌ರು ತತ್ವಶಾಸ್ತ್ರದಲ್ಲಿ ಮತ್ತು ಇತರ ಕಡೆಗಳಲ್ಲಿ ಸಾಮಾನ್ಯವಾಗಿ ಚರ್ಚಿತವಾಗುವ ವಿಷಯವಾದ ಮೌಲ್ಯಗಳು (ಕೆಲವಾದರೂ) ಸಾರ್ವಕಾಲಿಕವಾದುವುಗಳೋ ಅಥವಾ ಎಲ್ಲ ಮೌಲ್ಯಗಳು ಅ ಐತಿಹಾಸಿಕ ಮತ್ತು ಸಾಮಾಜಿಕ ಪರಿಸರಗಳಿಗೆ ಮಾತ್ರ ಸೀಮಿತವಾದವುಗಳೋ ಎಂಬುದನ್ನು ಸಂಕ್ಷಿಪ್ತವಾಗಿ ಚರ್ಚಿಸುತ್ತಾರೆ. ಅವರ ಒಲವು ಮೌಲ್ಯಗಳ ಸಾರ್ವಕಾಲಿಕತ್ವದ ಕಡೆಗೆ ಎಂದು ಬೇರೆ ಹೇಳಬೇಕಾಗಿಲ್ಲ.
__________
1 “To put freedom at the beginning is deliberately to ignore the reality of gift ; it amounts, in fact, to replacing the point of view of creation by the point of view of production. It also means stripping what are still called values of all possible universality.”
________________
ವೈಯಕ್ತಿಕ ಪರಿಸರಕ್ಕೂ ಅಥವಾ ಸ್ಥಿತಿಗಳಿಗೂ ಮೌಲ್ಯದ ಸಾರ್ವಕಾಲಿಕತ್ವಕ್ಕೂ ಘರ್ಷಣೆಯನ್ನು ಅವರು ಕಾಣುತ್ತಾರೆ. ಮಾರ‍್ಸೆಲ್‌ರು ಕೆಲವು ಮೌಲ್ಯಗಳನ್ನಾದರೂ ಸಾರ್ವಕಾಲಿಕವೆಂದು ಒಪ್ಪಿಕೊಳ್ಳುವದರಿಂದ ಮತ್ತು ಅಂಥ ಮೌಲ್ಯಗಳು ಆಧ್ಯಾತ್ಮಿಕ ಪರಂಪರೆಯಿಂದ ನಮಗೆ ಒದಗುವುದರಿಂದ ಅಂಥ ಪರಂಪರೆಯ ಮಹತ್ವ ಮತ್ತು ಅವಶ್ಯಕತೆ ನಮ್ಮ ಜೀವನಕ್ಕೆ, ಸಮಾಜಕ್ಕೆ ಸಹಜವಾಗಿಯೇ ಗೊತ್ತಾಗುತ್ತದೆ. ಹಿಂದೆ ತಿಳಿಸಿದಂತೆ ಪರಂಪರೆಯ ಮಹತ್ವ ಮತ್ತು ಅದರ ನಿಜವಾದ ಸತ್ಯ ಅದಕ್ಕೆ ಬರೀ ಹುಟ್ಟಿನಿಂದ ವಾರಸದಾರರಾಗುವುದರಲ್ಲಿಲ್ಲ. ಆಧ್ಯಾತ್ಮಿಕ ಪರಂಪರೆ ಒಂದು (ಆಧ್ಯಾತ್ಮಿಕ) ಆಹ್ವಾನ. ಕ್ರಿಯಾತ್ಮಕವಾಗಿ ಮಾತ್ರ ಅದನ್ನು ನಿಜವಾಗಿ ನಮ್ಮದನ್ನಾಗಿಸಿಕೊಳ್ಳಬಹುದು ಕ್ರಿಯಾತ್ಮಕ ಅಥವಾ ಸೃಷ್ಟ್ಯಾತ್ಮಕವಾಗಿದ್ದ ವ್ಯಕ್ತಿಯೊಬ್ಬ ಒಂದು ಆಧ್ಯಾತ್ಮಿಕ ಪರಂಪರೆಯಿಂದ ಮುಕ್ತನಾಗಿರಲು ಸಾಧ್ಯವಿಲ್ಲವೆಂಬುದು ಮಾರ‍್ಸೆಲ್‌ರ ಅಭಿಪ್ರಾಯ. ಬರೀ ಒಂದು ಬದಲಾಗದ ಮತ್ತು ತನ್ನಲ್ಲಿಯೇ ಆವೃತ್ತವಾದ ಸಂಪ್ರದಾಯಕ್ಕೆ ಹೊಂದಿಕೊಂಡಿರುವುದೆಂದರೆ ಒಂದು ಆಧ್ಯಾತ್ಮಿಕ ಪರಂಪರೆಗೆ ವಾರಸುದಾರನಾದಂತಲ್ಲ. ಯಾಕೆಂದರೆ ಆಧ್ಯಾತ್ಮಿಕ ಪರಂಪರೆಯ ಕಲ್ಪನೆ ಮುಕ್ತಮನಸ್ಸಿನಿಂದ ಯೋಚನೆ ಮಾಡುವುದರ ಮೇಲೆಯೂ ಅವಲಂಬಿಸಿದೆ. ಅಂದರೆ ಮಾರ‍್ಸೆಲ್‌ರ ಪ್ರಕಾರ ಆಧ್ಯಾತ್ಮಿಕ ಪರಂಪರೆಗೂ, ಅದಕ್ಕೆ ಕ್ರಿಯಾತ್ಮಕವಾಗಿ ವಾರಸುದಾರರಾಗುವುದಕ್ಕೂ ಯಾವ ವ್ಯಾಘಾತವೂ ಇಲ್ಲ. ಅದು ಪ್ರತಿಯೊಬ್ಬರ ಸದ್ಭಾವನೆಗೆ, ಚೈತನ್ಯದ ನಿರಂತರ ವಿನಂತಿ (appeal) ಗೆ ಸಂಕೇತವಾಗಿರುತ್ತದೆ.
ಆಧಾರ: “The Notion of Spiritual Heritage’ (from Decline of Wisdom) By Gabriel Marcel.
ಸಿಸಿಫಸ್
ಸಿಸಿಫಸ್
-ಬುಡ್ಡಣ್ಣ
ಈ ನಾಯಿಗಳು
ಎಷ್ಟು ಹಚ ಹಚಾ ಎಂದರೂ ನನ್ನನ್ನು
ಮತ್ತೆ ಮತ್ತೆ ಬೆನ್ನಟ್ಟುತ್ತವೆ: ನನ್ನನ್ನಾವರಿಸಿರುವ
ಬೇಲಿಯಂಚನ್ನು ದಾಟಿ ನೆಗೆಯಬೇಕೆಂದು ಹೊಂಚಿದ್ದೆಲ್ಲ
ನಿರರ್ಥಕವಾಗುತ್ತದೆ. ಹಾಗೆ ಸ್ವತಂತ್ರಗೊಳ್ಳುವ ಛಲ
ಗರಿಗೆದರಿ
ಕೈ ಮೈಗೆ ಉಕ್ಕಿನ ಸರಪಣಿ ಕಟ್ಟಿ ಅಪರಾಧಿಯ ಹಾಗೆ
ಕೆಳಮನೆಗೆ ದಬ್ಬಿ ತಗ್ಗಿನಲ್ಲಿಳಿಸಿ
ಖೊಖ್ಖೊಖ್ಖೊ ಎನ್ನುತ್ತವೆ.
ಕತ್ತಲೆ ಹೆಪ್ಪುಗಟ್ಟಿ
ಹೆಬ್ಬಂಡೆಯಾಗುವ ಸ್ಥಳದಲ್ಲಿ ನನ್ನೊಬ್ಬನನ್ನು ಬಿಟ್ಟು
ಹಿಂತಿರುಗುತ್ತವೆ ತಾವಕ್ಕೆ.
ತಲೆಮೇಲೆ ಸದಾ ಹದ್ದು ಹಾರಾಟ.
ನಾಯಿ ಬೊಗಳು ಮಾತ್ರ ಕೇಳಿಸುತ್ತದೆ.
ಕಣ್ಣೆತ್ತಿ ನೋಡುತ್ತೇನೆ :
ನೆಲ
ಆಕಾಶದಷ್ಟು ಅಂತರದಲ್ಲಿ ದೂರ
ಸಿಡಿದು
ನನ್ನಲ್ಲಿರುವ ಸೂರ್ಯನ ಬೇರುಗಳನ್ನು
ಕತ್ತರಿಸಿ ಕಳಿಗೆ
ಕಳಿಗೆ ಮಾಡುತ್ತವೆ.
ಇಚ್ಛೆಯುಕ್ಕನ್ನು ಗಟ್ಟಿಗೊಳಿಸಿ
ಮೇಲಕ್ಕೆತ್ತುತ್ತೇನೆ ಬಂಡೆಗಲ್ಲನ್ನು
ಮೃತ್ಯುವನ್ನು
ಹೇಗೂ.
ಟುವಟಾರ
ಟುವಟಾರ
ಬಿ. ಆರ್. ಲಕ್ಷ್ಮಣರಾವ್
ಟುವಟಾರ
ನ್ಯೂಜಿಲೆಂಡಿನ ಕೆಲವು ದ್ವೀಪಗಳಲ್ಲಿರುವ
ಒಂದು ಸರೀಸೃಪ
ಇದು ಡೈನೊಸಾರ್‌ಗಿಂತ ಹಿಂದಿನದೆಂದು
ಹಲವು ಜೀವಶಾಸ್ತ್ರಜ್ಞರ ಅಂದಾಜು.
ಕೋಟ್ಯಂತರ ವರ್ಷಗಳ ಜೀವವಿಕಾಸವ
ಈ ತಟಸ್ಥ ವೀಕ್ಷಕ
ಬದಲಾವಣೆಯ ಕಡು ವಿರೋಧಿ.
ಮೊದಲ ನೋಟಕ್ಕೆ ಟುವಟಾರ
ಒಂದು ದೊಡ್ಡ ಓತಿಕ್ಯಾತನಂತೆ ಕಂಡರೂ
ಇದು ಓತಿಯಲ್ಲ;
ಇದರದೇ ಒಂದು ವಿಶಿಷ್ಟ ಜಾತಿ.
ಈ ಕನಸುಗಣ್ಣಿನ ಮಂದಗಾಮಿಗೆ
ದಿವ್ಯ ದೃಷ್ಟಿಯ ಮುಚ್ಚಿದ ಮೂರನೆಯ ಕಣ್ಣೊಂದಿದೆ;
ಮಾಸಲುಗೆಂಪು ಮೈಮೇಲೆ ಅಲ್ಲಲ್ಲಿ
ಹಳದಿ ಚಿಕ್ಕೆಗಳು;
ಒಂದಕ್ಕೊಂದು ಅಂಟಿಕೊಂಡು ಒಂದೇ ಎಂಬಂತಿರುವ
ಹಲ್ಲುಗಳು;
ಬೆನ್ನ ಮೇಲೆ ಈ ಉದ್ದಾವುದ್ದಕ್ಕೂ ಗರಗಸದಂತಹ
ದೊಡ್ಡ ದೊಡ್ಡ ಶಲ್ಕಗಳು ;
ಕಾಲುಗಳಲ್ಲಿ ಮೊನಚಾದ ಉಗುರುಗಳು
ಇವೆ.
ಟುವಟಾರ ಸಾಧುವಾದರೂ
ಕೆಣಕಿದರೆ ಕಚ್ಚುತ್ತದೆ,
ಪರಚುತ್ತದೆ,
ಕೈ ಸಾಗದಿದ್ದರೆ ಅರಚುತ್ತದೆ;
ಇದರ ಕೂಗು ನಮ್ಮ ಕಪ್ಪೆಗಳ ವಟವಟದ ಹಾಗೆ.
ಈ ಪ್ರಾಣಿ ಎಂಥ ಸೋಮಾರಿಯೆಂದರೆ
ಇದಕ್ಕೆ ಸ್ವಂತ ಠಾವಿಲ್ಲ;
ಪೆಟ್ರಿಲ್ ಹಕ್ಕಿಗಳು ತೋಡಿದ ಬಿಲದಲ್ಲಿ
ಹಗಲೆಲ್ಲ ಅಡಗಿ ಕೂಡುತ್ತದೆ;
ರಾತ್ರಿಯ ಕುರುಡು ಕತ್ತಲೆಯಲ್ಲಿ ಕೂಳಿನ ಬೇಟೆಗೆ
ಹೊರಡುತ್ತದೆ.
ತಾನು ಸಾಗುವ ಹಾದಿಯಲ್ಲಿ ಸಣ್ಣ ಕಲ್ಲು
ಅಡ್ಡವಾದರೂ
ಅದನ್ನು ಸುತ್ತೀ ಬಳಸೀ ಸಾಗುವುದೇ ವಿನಹ
ಎಂದಿಗೂ
ಅದನ್ನು ದಾಟಿ ಹೋಗುವ ಧಾರ್ಷ್ಟ್ಯ
ಟುವಟಾರಕ್ಕಿಲ್ಲ.
ಇದರ ಸ್ವಭಾವಕ್ಕೆ ತಕ್ಕಂತೆ ಜೀವನಕ್ರಮವೂ
ಅತಿ ನಿಧಾನ:
ಚಳಿಗಾಲದಲ್ಲಿ ಐದು ತಿಂಗಳ ನೀಳ ನಿದ್ದೆ;
ಏಳು ಸೆಕೆಂಡಿಗೊಮ್ಮೆ ಉಸಿರಾಟ ;
ಇಟ್ಟ ಮೊಟ್ಟೆ ಒಡೆದು ಮರಿ ಹೊರಬರಲು
ಮುವ್ವತ್ತು ತಿಂಗಳು;
ಪ್ರಾಯದ ಸೊಕ್ಕೇರಲು ಐವತ್ತು ವರ್ಷಗಳು ;
ಆಯಸ್ಸು ತೀರುವುದು ಐನೂರು ವರ್ಷಗಳಿಗೆ.
ನ್ಯೂಜಿಲೆಂಡಿನ ಆದಿವಾಸಿಗಳ ಪುರಾಣದಂತೆ
ಟುವಟಾರ ಒಬ್ಬ ಅಗ್ನಿದೇವತೆ ;
ತನ್ನ ವಿರುದ್ಧ ಬಂಡೆದ್ದ ತನ್ನ ಮೊಮ್ಮಗನನ್ನು
ತಾನೇ ಕತ್ತರಿಸಿ ಕೊಂದು
ಪ್ರಪಂಚದಲ್ಲಿ ಮೊದಲ ಬಾರಿಗೆ ಸಾವನ್ನು ತಂದಳಂತೆ.
ಸಾವಿನ ಸಂಕೇತವಾದ ಇದರ ಗೊಡವೆಗೆ
ಅವರು ಬರುವುದಿಲ್ಲ.
ನ್ಯೂಜಿಲೆಂಡಿಗೆ ಬಿಳಿಯರು ಆಗಮಿಸುವ ತನಕ
ಟುವಟಾರದ ಜೀವನ
ಸರಾಗವಾಗಿ, ನಿರಾತಂಕವಾಗಿ
ಸಾಗಿತ್ತು:
ಆ ನಂತರ ಈ ಬಡಪಾಯಿ
ಬಿಳಿಯರಿಗೆ
ಅವರ ಮಿಶ್ರತಳಿಯ ನಾಯಿಗಳಿಗೆ
ಆಟದ ಬೇಟೆಯಾಗಿ
ನಿರ್ವಂಶವಾಗುವ ಸ್ಥಿತಿಗೆ ಬಂತು.
ತನ್ನ ಒಂದು ಸನಾತನ ವಿಲಕ್ಷಣ ಪ್ರಾಣಿವರ್ಗವೇ ಹೀಗೆ
ನಶಿಸಿ ಹೋಗುತ್ತಿದ್ದುದನ್ನು ಕಂಡು,
ಮನನೊಂದು,
ನ್ಯೂಜಿಲೆಂಡ್ ಸರ್ಕಾರ
ಟುವಟಾರದ ರಕ್ಷಣೆಗೆ ನಿಂತು,
ಕೆಲವು ಕಟ್ಟಾಜ್ಞೆಗಳನ್ನು ಜಾರಿಗೆ ತಂತು.
ಅದರಂತೆ ಇಂದು ಟುವಟಾರವನ್ನು
ಕೆಣಕುವುದಾಗಲೀ,
ಕಾಡುವುದಾಗಲೀ,
ಕೊಲ್ಲುವುದಾಗಲೀ
ಅಲ್ಲಿ ಮಹಾಪರಾಧ.
ಜೈ ಹಿಂದ್
ಕ್ರಿಸ್ಮಸ್ಸಿನ ಮೂರು ಮುಖಗಳು
ಕ್ರಿಸ್‌ಮಸ್ಸಿನ ಮೂರು ಮುಖಗಳು
-ರಾಮಚಂದ್ರ ಶರ್ಮ
ಒಂದು-ಕೋಪನ್‌ಹೇಗನ್
ಆದಿಭೋಗದ ಕೆಲಸ ಯಥಾವತ್ತಾಗಿ ನಡೆದು
ತೊಟ್ಟಿಕ್ಕುತ್ತ ನಿಂತ
ನಗ್ನ ತರುಣ ತರುಣಿ
ಸುತ್ತ ನೆರೆದವರ ಜೊತೆಗೆ ಧ್ವನಿಯೆತ್ತಿ ಹಾಡಿದರು-
ಮುಗಿಲು ಮುಟ್ಟಿತು ಕ್ರಿಸ್ತನನಂತ
ಅಪಾರ ಕರುಣೆ.
ಎರಡು-ಲಂಡನ್ ಡೆರಿ
ಗುಂಪಿನಂಚಿಂದ ಹೊರಬಂದ ಕೈಗೆ ಮುಸ್ಸಂಜೆ ಬಿಸಿಲು
ತಗುಲಿ ನಿಗನಿಗನೆ ಹೊಳದ ಪಿಸ್ತೂಲು ಕಂಡು
ಯೋಧ ಗುಡುಗಿದ : ನೆಲಕ್ಕೆಸೆದು ಕೈಯೆತ್ತಿ ನಿಲ್ಲು !
ಮಾತು ಕೇಳದೇ ಮುಂದೆ ಮುಂದೆ ಬಂದ ಎಗ್ಗನೆದೆ ಹೊಕ್ಕ ಗುಂಡು
ಬೆನ್ನಿಂದ ಬಂತು. ಹೊಗೆಯಾಡಿತು ಕೆಂಪುಹುಲ್ಲು-
ಹಬ್ಬಕ್ಕೆ ಕೊಂಡ ಪಿಸ್ತೂಲು ಚೆಲ್ಲಿ ಹುಲ್ಲು ಹೂತಾಗ
ಮುದುಕಿ ಶಪಿಸಿದಳು: ಹುಟ್ಟು ಕಿವುಡನ್ನ ಕೊಂದ ಕುಲ ಬೇಗ
ನಾಶವಾಗ!
ಮೂರು-ಮೀಲಾಯ್
ನಿಂತ ನೆಲ ಕೂಡ ಹಡಗಿನಷ್ಟೇ ಅಭದ್ರ
ಎನುವಂತೆ ನಿಂತಿದ್ದ ಯೋಧ
ಕಾಲಗಲಿಸಿ.
ಅವನ ತೊಡೆಗಾಡಲ್ಲಿ
ಮುಖ ಮುಚ್ಚಿ ಮಣ್ಣಲ್ಲಿ ಮೊಣಕಾಲ ಮೇಲೆ
ಕೂತವಳ ತಲೆಗೂದಲಲ್ಲಿ
ರಕ್ಷೆ ಕೊಡುವಂತೆ ಬಿಚ್ಚಿತ್ತು
ಅವನ ಬಲದ ಕೈ, ಎಡದ ಕೈಯೊಳಗಿತ್ತು
ಗ್ರೆನೇಡು-ಸಿಂಬಳ ಸುರಿಸಿ
ಸುಯ್ದು ಸುಯ್ದು ನಿಲುಕದ
ಮೊಲೆಗೆ ಮೊಳೆ
ಜಡಿದ ಕೂಸ ಕಣ್ಣಿನ ತಲೆಗೆ
ಹಿಡಿದ ಗ್ರೆನೇಡು
ಎರಡರಲ್ಲೊಂದು, ಸುಡುಗಾಡು,
ಸಿಡಿಯಬಾರದೆ ಬೇಗ-
ಅಳು ನುಂಗಿಕೊಂಡವಳು
ಕೇಳಿಕೊಂಡಾಗ
ಸಮಾಧಾನ ಹೇಳಿತ್ತು ಚರ್ಚುಗಳ
ಗಂಟೆ ಸದ್ದು.
ದಕ್ಷಿಣೆ-ಒಂದು ವಿಶ್ಲೇಷಣೆ
ದಕ್ಷಿಣೆ-ಒಂದು ವಿಶ್ಲೇಷಣೆ
-ಬಿ. ಭಾಸ್ಕರರಾವ್
ಸಾಮಾಜಿಕ ಜೀವನದಲ್ಲಿ ಹಲವು ಬಗೆಯ ಆಚರಣೆಗಳು ಕ್ರಮಸಂಪ್ರದಾಯಗಳು ಇರುವುದು ಸ್ವಾಭಾವಿಕ, ಕೆಲವೊಮ್ಮೆ ಅಗತ್ಯ ಕೂಡಾ. ಇವುಗಳಲ್ಲಿ ಕೆಲವು ವ್ಯಕ್ತಿಯ ವ್ಯಕ್ತಿತ್ವವನ್ನು ಪೋಷಿಸಿ ಬೆಳೆಸಲು ಸಹಾಯಕವಾದುವುಗಳು ; ಇನ್ನು ಕೆಲವು ಸಂಪ್ರ: ದಾಯಗಳು ವ್ಯಕ್ತಿಯ ಸಮಗ್ರ ಬೆಳವಣಿಗೆಗೆ ಮಾರಕವಾಗಬಲ್ಲವುಗಳು, ಅಂದರೆ ತನ್ನ ವ್ಯಕ್ತಿತ್ವಕ್ಕೆ ಅವಮಾನವಾಗುತ್ತಿದೆ ಎನ್ನುವುದು ಆ ವ್ಯಕ್ತಿಗೆ ಅರಿಯದಂತೆ ಪರೋಕ್ಷವಾಗಿಯೇ ಅವನನು ಸಾಮಾಜಿಕವಾಗಿ ತಟಸ್ಥ (static) ನನ್ನಾಗಿ ಮಾಡುವವುಗಳು. ತನ್ನ ಧಾರ್ಮಿಕ ಜವಾಬ್ದಾರಿಯ ಜೊತೆಗೆ ತನಗೊಂದು ಸಾಮಾಜಿಕ ಜವಾಬ್ದಾರಿಯೂ ಇದೆ ಎನ್ನುವ ಅರಿವು ವ್ಯಕ್ತಿಗೆ, ಆ ವ್ಯಕ್ತಿಯ ಮೇಲೆ ಧಾರ್ಮಿಕ ಪ್ರಭಾವ ಬೀರಬೇಕೆನ್ನುವ ಧಾರ್ಮಿಕ ಗುರುವಿಗೆ ಇಲ್ಲದೇ ಹೋದಲ್ಲಿ ಅಂತಹ ಗುರು ಮತ್ತು ಆ ಗುರುವಿನ ಭಕ್ತಕೋಟಿಯನ್ನು ಸಹಿಸುವುದು ಸಮಾಜಕ್ಕೆ ಕಷ್ಟವಾಗಬಹುದು. ಈ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಬ್ರಾಹ್ಮಣ ಸಮಾಜದಲ್ಲಿ ತಲೆತಲಾಂತರದಿಂದ ನಡೆದು ಬಂದಿರುವ ದಕ್ಷಿಣೆ ಕೊಡುವ-ಕೊಳ್ಳುವ ಸಂಪ್ರದಾಯವನ್ನು ಸ್ವಲ್ಪ ವಿಶ್ಲೇಷಿಸುವ.
ಬ್ರಾಹ್ಮಣನಿಗೆ ಕೊಡುವ ದಕ್ಷಿಣೆ ಧಾರ್ಮಿಕ ಕ್ರಿಯೆ: ಅವರಿಂದ ಇಹಪರಗಳೆರಡಕ್ಕೂ ಒಳ್ಳೆಯದು ಎನ್ನುವುದು ಒಂದು ಪಾಪ, ಪುಣ್ಯ-ಪಾಪ ವಾದವನ್ನು ಬಿಟ್ಟರೆ ಇದಕ್ಕೆ ಕೊಡುವ ಇನ್ನೊಂದು ಸಮರ್ಥನೆ: ಇದು ಒಂದು ಸಾಮಾಜಿಕ ಅಗತ್ಯತೆ ಎನ್ನುವುದು.
ಆದರೆ ಈ ಅವಮಾನಕರ (ಹೇಗೆಂದು ಮುಂದೆ ವಿಶ್ಲೇಷಿಸುತ್ತೇನೆ) ಪದ್ಧತಿ ಧಾರ್ಮಿಕ, ಪುಣ್ಯದಾಯಿ ಎನ್ನುವುದು ಎಷ್ಟರ ಮಟ್ಟಿನ ಸತ್ಯ ಹಾಗೂ ಇದರಲ್ಲಿ ಬಡತನದ ಪಾಲು ಎಷ್ಟು ಎಂದು ವಿಶ್ಲೇಷಿಸುವುದೇ ಈ ಲೇಖನದ ಉದ್ದೇಶ.
ಬಡತನ ಕೊಳಕು, ಭಯಂಕರವಾದದ್ದು ಎಂಬುದು ಪ್ರತಿಯೊಬ್ಬನೂ ಒಪ್ಪಲೇಬೇಕಾದ ವಿಷಯ. ವ್ಯಕ್ತಿಪ್ರಜ್ಞೆ ವ್ಯಕ್ತಿಯ ಆರ್ಥಿಕ ಸ್ಥಿತಿಯಿಂದ ನಿರ್ಧರಿಸಲ್ಪಡುತ್ತದೆಯೇ ಹೊರತು, ವ್ಯಕ್ತಿಯ ಆರ್ಥಿಕ ಸ್ಥಿತಿಯನ್ನು ವ್ಯಕ್ತಿಪ್ರಜ್ಞೆ ನಿರ್ಧರಿಸುವುದಿಲ್ಲ ಎನ್ನುವ ಮಾರ್ಕ್ಸ್‌ನ ಮಾತು ಬಹುಮಟ್ಟಿಗೆ ಸತ್ಯ. Feuerbach ಹೇಳುವಂತೆ-Man thinks differently in a palace and in a hut. If because of hunger, of misery, you have no stuff in your body, you like wise have no tuff for morality in your head, in your mind or heart.” ಆದ್ದರಿಂದ “Poverty is pollution” ಎನ್ನುವುದು ವಾಸ್ತವದ ಮಾತು. ಪಾಪ-ಪುಣ್ಯಗಳ ಕುರಿತು ಮಾತಾಡುವ ಜನ-(ಈಗ ಇಂಥವರ ಸಂಖ್ಯೆ ಕಡಿಮೆಯಾಗುತ್ತಿರುವುದು ಆಗುತ್ತಿದ್ದರೆ ಅಭಿವೃದ್ಧಿ ಹೊಂದುವ ಸಮಾಜದ ಸುದೈವ) ಅಂದರೆ ಮಠಾಧಿಪತಿಗಳು, ತತ್ವಬೋಧಕರು, ಧರ್ಮಪ್ರಚಾರಕರು, ತಮ್ಮ ಆತ್ಮದ ಇರವಿನ ಅದರ ಪರಿಶುದ್ಧತೆಯ ಬಗ್ಗೆ ತಮಗೇ ಸರಿಯಾದ ನಿರ್ದಿಷ್ಟ ಜ್ಞಾನ ಕಾಳಜಿ ಇಲ್ಲದೆ ಸಮಾಜದ ಜನತೆಯ ಆತ್ಮಗಳನ್ನು ಕಾಪಾಡ ಹೊರಟಿರುವವರು-ಬಡತನಕ್ಕಿಂತ ಹೀನವಾದ ಪಾಪ ಬೇರೊಂದಿಲ್ಲ ಎನ್ನುವುದನ್ನು ಮನಗಾಣುವುದೊಳ್ಳೆಯದು. ಆತ್ಮ-ಪರಮಾತ್ಮ, ಇಹ-ಪರ, ಮುಕ್ತಿ-ಮೋಕ್ಷ, ಹರಿವಾಯು ಕೃಪೆ ಎಂದೆಲ್ಲ ಹೊಟ್ಟೆ ತುಂಬಿದಮೇಲೆ ಹೊಟ್ಟೆ ತುಂಬಿಸಿಕೊಂಡು (ಯಾವುದೇ ರೀತಿಯಲ್ಲಿ) ಬಂದು ಕುಳಿತ ಜನಕ್ಕೆ (ಅಥವಾ ಆ ಜನಕ್ಕೆ ತಾವೇ ಚಾರಿಟಿಯ ಅನ್ನಹಾಕಿ) ತುಂಬಿದ ಹೊಟ್ಟೆ ಖಾಲಿಯಾಗುವವರೆಗೆ ಭಾಷಣ ಬಿಗಿಯುವುದು ಬಹಳ ಸುಲಭದ ಕೆಲಸ ಆದರೆ ಆರ್ಥಿಕ ಕಾರಣಗಳಿಗಾಗಿ ಧಾರ್ಮಿಕ ಪ್ರವಚನ ಕೇಳಲು ಬಂದಿರುವ ವ್ಯಕ್ತಿಯ ಬಡತನ ನಿವಾರಣೆ ಮಾಡುವುದು ಬಹಳ ಕಷ್ಟದ ಕೆಲಸ, ಇಂದಿನ ಎಷ್ಟೋ ಧಾರ್ಮಿಕ ಕೇಂದ್ರಗಳಲ್ಲಿ ಪೀಠಾಧಿಪತಿಗಳು ಮಾಡುವ ಧಾರ್ಮಿಕ ವಿಷಯಗಳ ಮೇಲಿನ ಭಾಷಣ ಕೇಳಲು ಬರುವ ಬಹಳಷ್ಟು ಮಂದಿ ಬ್ರಾಹ್ಮಣ ವಿದ್ವಾಂಸರು ಹಾಗೂ ಇತರರು ಊಟ, ದಕ್ಷಿಣೆ, ಸಂಭಾವನೆಯ ಆಶೆಗಾಗಿಯೇ ಬರುತ್ತಾರೆ, ಮನೆಯ ಅರೆಹೊಟ್ಟೆ ಊಟವೇ ಹೆಚ್ಚಿನವರ ಮಠದ ಆಧ್ಯಾತ್ಮಿಕ ಆಸಕ್ತಿಯ ಮೂಲ. ಅಂತರ್‌ರಾಷ್ಟ್ರೀಯ ಖ್ಯಾತಿ ಪಡೆದಿರುವ ಪ್ರಸಿದ್ಧ ಅರ್ಥಶಾಸ್ತ್ರಜ್ಞರಾದ ಡಾ|| ಗುನಾರ್ ಮರ್ಡಾಲ್ (Dr. Gunnar M. Myrdal) ಹೇಳುವ ಮಾತು ಎಷ್ಟು ಸತ್ಯ ನೋಡಿ:
Some of the characteristics commonly ascribed to South Asians their bent to contemplation, their otherworldliness, their passivity, and their appreciation of leisure, etc., sometimes on a more intellectualized level reflected in religious doctrine, philosophy, or the belief in specific ‘Values’ of a country or of all Asia–may, in fact, be due to deficiencies in nutrition and health.”
ಆದ್ದರಿಂದ ಇಲ್ಲಿ ಬಡತನ ಧಾರ್ಮಿಕ ವಿಷಯ ಒಂದರ ಹಿಂದೆ ಸದ್ದುಗದ್ದಲವಿಲ್ಲದೆ ಹೇಗೆ ಪ್ರಭಾವ ಬೀರುತ್ತದೆ ಎನ್ನುವುದನ್ನು ನೋಡಬಹುದು. ಈ ದಿಸೆಯಲ್ಲಿ ಆಸಕ್ತಿ ಕೆರಳಿಸುವ ಪ್ರಶ್ನೆ ಇದು: ಆರ್ಥಿಕವಾಗಿ ಬಲ ಬಲಿಷ್ಠರಾಗಿರುವ, ರಾಜಕೀಯದಲ್ಲಿ ಪ್ರಭಾವ ಬೀರಬಲ್ಲ ಮತ್ತು ಧರ್ಮ ದೇವರುಗಳನ್ನು ಹೇಗೆ ರಾಜಕೀಯದಲ್ಲೂ ಅಳವಡಿಸಿಕೊಳ್ಳಬೇಕೆನ್ನುವುದನ್ನು ಅರಿತಿರುವ ಈ ಧಾರ್ಮಿಕ ಮುಖ್ಯರು (religious heads) ಏಕೆ ತಮ್ಮ ‘ಭಕ್ತಕೋಟಿ’ಯ ಬಡತನ ನಿವಾರಣೆಯ ಬಗ್ಗೆ ಯೋಚಿಸುತ್ತಿಲ್ಲ? ಇದಕ್ಕುತ್ತರ: ಜನರ ಆರ್ಥಿಕ ಅಡಚಣೆಯ ಮೇಲೆಯೇ ಆಧರಿತವಾಗಿರುವ ಧಾರ್ಮಿಕ ಸಂಸ್ಥೆ, ಧರ್ಮ ಗುರು ಮತ್ತು ಅವನ ಪ್ರತಿಷ್ಠೆ, ಕೀರ್ತಿ ಎಲ್ಲವೂ ಆ ಆರ್ಥಿಕ ವಿಷಮತೆ ಇಲ್ಲವಾದಾಗ ಹೇಳ ಹೆಸರಿಲ್ಲದಂತಾಗುತ್ತವೆ. ಬೇರೆ ಮಾತಿನಲ್ಲಿ ಹೇಳುವುದಾದರೆ ದಕ್ಷಿಣೆಗಾಗಿ ಸಂಭಾವನೆಗಾಗಿ ಆಧ್ಯಾತ್ಮದಲ್ಲಾಸಕ್ತಿ ತೋರಿಸುವ ವ್ಯಕ್ತಿ ತಾನು ದಕ್ಷಿಣೆಗಾಗಿ ಕೈಚಾಚುವ ಸ್ಥಿತಿ ತಪ್ಪಿದಾಗ ಅಂದರೆ ತಾನು ಆರ್ಥಿಕವಾಗಿ ಸ್ವಾವಲಂಬಿಯಾದಾಗ ಅಂತಹ ಆಧ್ಯಾತ್ಮಕ್ಕೆ goodbye ಹೇಳದಿರಲಾರ. ಕಡಿಮೆ ಫೀ ತೆಗೆದುಕೊಂಡು ವಿದ್ಯಾರ್ಥಿಗಳಿಗೆ ಊಟ ವಸತಿ ಒದಗಿಸಿ, ಆ ಕಡಿಮೆ ಹಣಕ್ಕೆ ಪರಿಹಾರರೂಪವೋ ಎಂಬಂತೆ ಜಪ, ತಪ, ಭಜನೆ ಮತ್ತು ತಮ್ಮ ಪಂಥ (ಅದು ಯಾವುದೇ ಇರಲಿ) ಧರ್ಮಗ್ರಂಥಗಳನ್ನು ಕಡ್ಡಾಯವಾಗಿ ಕಲಿಸುತ್ತೇವೆ ಎಂದು ಹೊರಟಿರುವ ಧಾರ್ಮಿಕ ಹಾಸ್ಟೆಲುಗಳ ಸಂಸ್ಥಾಪಕರು ಹೆಚ್ಚಿಗೆ ಏನನ್ನೂ ಸಾಧಿಸಲು ಅಶಕ್ಯರಾಗುವುದು ಆರ್ಥಿಕ ಕೊರತೆಯನ್ನು ಧಾರ್ಮಿಕ ಭರ್ತಿಗಾಗಿ ಉಪಯೋಗಿಸಿಕೊಳ್ಳುವಂತಹ ಹುಚ್ಚುತನಕ್ಕೆ ಶರಣು ಹೋಗುವುದರಿಂದ, ಮಠದ ಊಟಕ್ಕಾಗಿ ಪಾಠಶಾಲೆಯಲ್ಲಿ ಸಂಸ್ಕೃತ ಅಭ್ಯಾಸ ಮಾಡುವ ವ್ಯಕ್ತಿ ಊಟದ ಮಟ್ಟಿಗೆ ಸ್ವಾವಲಂಬಿಯಾದಾಗ ಸ್ವಾಭಾವಿಕವಾಗಿಯೇ ದೇವಭಾಷಾಧ್ಯಯನಕ್ಕೆ ಮಾನವೀಯ ತಿಲಾಂಜಲಿಯನ್ನೀಯುತ್ತಾನೆ. ಆದ್ದರಿಂದ ಆ ವಿಧದಲ್ಲಿ ಸಂಸ್ಕೃತ ಪ್ರಚಾರಮಾಡುತ್ತೇನೆಂದು ಹೊರಟಿರುವ ಮಠಾಧಿಪತಿ, ತನ್ನ ಮೂಲಗುರು ಹೇಳಿರುವ ತತ್ವಪ್ರಚಾರ ಮಾಡುತ್ತೇನೆ ಎನ್ನುವ ಸನ್ಯಾಸಿ ಅಂತಹ ಕಾರ್ಯಕ್ರಮಗಳಿಂದ ತಾನೇನೂ ಹೆಚ್ಚಿಗೆ ಸಾಧಿಸಲಾರೆ ಎನ್ನುವುದನ್ನು ತಿಳಿದುಕೊಳ್ಳಬೇಕಾಗುತ್ತದೆ. (ಧರ್ಮಪ್ರಚಾರ ಎನ್ನುವುದೇ rotten thing, ಧರ್ಮ ಎನ್ನುವುದು ವ್ಯಕ್ತಿ ಬೆಳೆಯುವಾಗ ಆತನ ಜೊತೆಯಾಗಿಯೇ ಬೆಳೆದು ಬರುವ ವಿಷಯ. ಒಬ್ಬ ವ್ಯಕ್ತಿಯ ಮೇಲೆ ಯಾವುದೇ ಧರ್ಮವನ್ನು, ತತ್ವವನ್ನು ಧರ್ಮಪ್ರಚಾರ ಎಂದು ಹೊರಿಸ ಹೊರಡುವುದು ಮೂರ್ಖತನ. ತನ್ನ ಧರ್ಮವನ್ನು, ತನ್ನ ತತ್ವವನ್ನು ಪ್ರತಿಯೊಬ್ಬನೂ ತಾನಾಗಿಯ ಮನಗಾಣಬೇಕಾಗುತ್ತದೆ. ತಾನು ತಳೆಯುವ ಧಾರ್ಮಿಕ ನಿಲುವನ್ನು ತನ್ನ ಜವಾಬ್ದಾರಿಯ ಮೇಲಾಧರಿಯೇ ನಿರ್ಧರಿಸಿಕೊಳ್ಳಬೇಕಾಗುತ್ತದೆ. ತಾನೊಂದು ಧಾರ್ಮಿಕ ತತ್ವವನ್ನು ಪ್ರಚಾರ ಮಾಡುತ್ತೇನೆ ಎಂದು ಹೊರಡುವ ವ್ಯಕ್ತಿ ಅಂತಹ ಪ್ರಚಾರದ ಬೆಲೆ ಜಾಹೀರಾತುಗಳ ಬೆಲೆಯಷ್ಟೆ ಮದು ತಿಳಿಯಬೇಕಾದುದೂ ಅವಶ್ಯ.
ಈ ಸಮಾಜದಲ್ಲಿ ಬಳಕೆಯಲ್ಲಿರುವ ದಕ್ಷಿಣೆ ಕೊಡುವ-ಕೊಳ್ಳುವ ಸಂಪ್ರದಾಯವನ್ನು ಒಂದು ಹೊಸ ದೃಷ್ಟಿಕೋನದಿಂದ ವಿಶ್ಲೇಷಿಸಿದಾಗ ಕೆಲವು ವಿಷಯಗಳು ತಿಳಿದು ಬಂದಾವು. ಆತ್ಮೀಯತೆ, ಗೆಳೆತನ, ಸಮಾನತೆ, ಕೊಡು-ಕೊಳ್ಳು ತತ್ವಗಳನ್ನಾಧರಿಸಿ ಕೊಡುವ ಯಾವುದೇ ವಸ್ತುವಿನ-ಅದು ದಕ್ಷಿಣೆಯೇ ಇರಲಿ ಇನ್ನಾವುದೇ ಇರಲಿ – ಕೊಡು-ಕೊಳ್ಳುವಿಕೆಯಿಂದ ಯಾರ ಘನತೆಗೂ ಗೌರವಕ್ಕೂ ಕುಂದು ಬರಲಾರದು. “ನಾನು ಸ್ವತಂತ್ರ ಜೀವಿ ನಾನು ಸ್ವತಂತ್ರ ಜೀವಿಗಳೊಡನೆ ವ್ಯವಹರಿಸ ಬಯಸುತ್ತೇನೆ ಎನ್ನುವ ನ್ಯೂಮನ್‌ನ ಮಾತು ಅರ್ಥಪೂರ್ಣವಾದದ್ದು. ಇನ್ನೊಬ್ಬನ ಸ್ವಾತಂತ್ರ್ಯವನ್ನು, ಆ ಸ್ವಾತಂತ್ರ್ಯವನ್ನಾಧರಿಸಿ ಬೆಳೆಸಿಕೊಂಡಿರುವ ವ್ಯಕ್ತಿತ್ವವನ್ನು ಗುರುತಿಸುವ ಚೈತನ್ಯವಿರುವ ಜೀವದಿಂದ ಇಂತಹ ವಿಷಯಗಳಲ್ಲಿ ತೊಂದರೆಯಾಗಲಾರದು. ಆದರೆ ಚಾರಿಟಿಯ ರೂಪದಲ್ಲಿ ಕೊಡುವ ದಕ್ಷಿಣೆ, ಒಬ್ಬ ಬ್ರಾಹ್ಮಣನ ಕಾಲುಗಳನ್ನು ತೊಳೆದು ಅವನ ಕೈಗಿಡುವ ಹಣ ಅದನ್ನು ಕೊಳ್ಳುವವನ ಆ ರೀತಿ ಕಾಲು ತೊಳೆಸಿಕೊಳ್ಳುವವನ ವ್ಯಕ್ತಿತ್ವಕ್ಕೆ ಧಕ್ಕೆ ತರುತ್ತದೆ ಎನ್ನುವುದನ್ನು ನಾವು ಒಪ್ಪಲೇಬೇಕಾಗುತ್ತದೆ. ಈ ಬಗ್ಗೆ ಡಾ. ಲೋಹಿಯಾರವರು ಹೇಳಿರುವ ಮಾತು ಗಮನಾರ್ಹ: “ಭಾರತದ ರಾಷ್ಟ್ರಾಧ್ಯಕ್ಷನೊಬ್ಬನು ಇನ್ನೂರು ಜನ ಬ್ರಾಹ್ಮಣರ ಕಾಲುಗಳನ್ನು ಕಾಶಿ ಪುಣ್ಯಕ್ಷೇತ್ರದಲ್ಲಿ ತೊಳೆದನು. ಒಬ್ಬನ ಕಾಲನ್ನು ಇನ್ನೊಬ್ಬನು ಸಾರ್ವಜನಿಕವಾಗಿ ತೊಳೆಯುವುದು ನೀಚ ಕೆಲಸ ಮತ್ತು ಈ ಕಾಲು ತೊಳೆಸಿಕೊಳ್ಳುವ ನೀಚ ಸೌಲಭ್ಯವನ್ನು ಬ್ರಾಹ್ಮಣ ಜಾತಿಯೊಂದಕ್ಕೆ: ಕೊಡುವುದು ಶಿಕ್ಷಾರ್ಹವಾದ ಆಪರಾಧ.”
ಭಿಕ್ಷುಕನೊಬ್ಬನಿಗೆ ಒಂದು ಪೈಸೆ ಭಿಕ್ಷೆ ಕೊಟ್ಟಾಗ ಆ ಕೊಳ್ಳುವ ವ್ಯಕ್ತಿಯ ವ್ಯಕ್ತಿತ್ವಕ್ಕೆ ಕೊಡುವಾತ ಅವಮಾನ ಮಾಡುತ್ತಿದ್ದಾನೆ ಎನ್ನುವುದರಲ್ಲಿ ಸಂಶಯವಿಲ್ಲ. ವಿಪರೀತ ಹಣ ಗಳಿಸಿದ (ಹೀಗೆ ಹಣ ಗಳಿಸುವಾಗ ಟ್ರೆಜರಿ ತುಂಬಿದಂತೆಲ್ಲ ತಲೆ ಖಾಲಿಯಾಗುವ ಸಾಧ್ಯತೆಯನ್ನು ಸಂಪೂರ್ಣವಾಗಿ ಅಲ್ಲಗಳೆಯಲು ಸಾಧ್ಯವಿಲ್ಲ.) ಬ್ರಾಹ್ಮಣ ಹೋಟೆಲ್ ಉದ್ಯಮಿಯೊಬ್ಬ ಧಾರ್ಮಿಕ ಕೇಂದ್ರ ಒಂದಕ್ಕೆ ಬಂದು, ತಾನು ತನ್ನ ವ್ಯಾಪಾರದಲ್ಲಿ ಮಾಡಿದ ಪರಿಸ್ಥಿತಿಗನುಗುಣವಾಗಿ ಮಾಡಬೇಕಾಗಿ ಬಂದ ಪಾಪ ಪರಿಹಾರವಾಗಲೆಂದು ದೇವರಿಗೆ ದೊಡ್ಡ ಸೇವೆ ಕೊಟ್ಟು, ಸಾವಿರಾರು ಜನ ಬಡ ಬ್ರಾಹ್ಮಣ ಊಟ ಹಾಕಿಸಿ ಕೈಗೆ ೫೦ ಪೈಸೆಯನ್ನೋ ರೂಪಾಯಿಯನ್ನೋ ವಿಜಯೀಭಾವದಿಂದ ಚೆಲ್ಲುವುದನ್ನು ಕಲ್ಪಿಸಿಕೊಂಡರೆ, ಈ ಧನಿಕ ಇಷ್ಟು ಜನರ ವ್ಯಕ್ತಿತ್ವಕ್ಕೇ ಅವಮಾನ ಮಾಡುತ್ತಿದ್ದಾನೆ ಅನಿಸುತ್ತದೆ. ಅದೇ ವ್ಯಕ್ತಿ ತನ್ನ ಸಂಪನ್ಮೂಲಗಳನ್ನು ಇನ್ನಾವುದೇ ಹಕ್ಕು ಫಲದಾಯಕವಾದ ವಿಧದಲ್ಲಿ ಉಪಯೋಗಿಸಿ ಅದೇ ಬ್ರಾಹ್ಮಣರಿಗೆ ನ್ಯಾಯವಾದ ರೀತಿಯಲ್ಲಿ ಸ್ವತಂತ್ರವಾಗಿ ಬದುಕುವಂತೆ ಅವಕಾಶ ಕಲ್ಪಿಸಿ ಕೊಡಬಾರದೇಕೆ? ಆದರೆ ಆತ ಹಾಗೆ ಮಾಡುವುದಿಲ್ಲ. ಕಾರಣ : ಹಾಗೇನಾದರೂ ಮಾಡಿದಲ್ಲಿ ಸಾವಿರಾರು ಮಂದಿ ಬ್ರಾಹ್ಮಣರೆದುರು ಆತ monetary bero ಆಗುವುದು ಅಸಾಧ್ಯ. ಅದಕ್ಕಾಗಿ ಆತ ಬಡತನವನ್ನು ಪೋಷಿಸಿ ಬೆಳೆಸುವುದಕ್ಕೆ ಯತ್ನಿಸುತ್ತಾನೆ. ಬಿಸ್ಕಿಟ್ ಹಾಕಿದಾಗ ನಾಯಿಗಳು ಬಂದು ಮುತ್ತುವಂತೆ ೫೦ ಪೈಸೆ ಅಥವಾ ರೂಪಾಯಿ ದಕ್ಷಿಣೆಗಾಗಿ ಜನ ತುಂಬವ ಸ್ಥಿತಿ ನಿಂತಾಗ ಆ ಚಿಕ್ಕ ಜನರೆದುರು ದೊಡ್ಡವನಾಗುವ ಸಾಧ್ಯತೆ ಇಲ್ಲವಾಗುತ್ತದೆ. ಈ ಸಾಧ್ಯತೆ ಕಳೆದುಕೊಳ್ಳಲು ಆ ಧನಿಕ ತಯಾರಿಲ್ಲ. ಅಷ್ಟೇ ಅಲ್ಲದೆ ಆತ ಆ ತರಹ ಹಣ ಚೆಲ್ಲುವಾಗ ತಾವು ಕೈಯೊಡ್ಡುವುದು ಒಂದು ದೃಷ್ಟಿಯಲ್ಲಿ ತಮ್ಮ ಗೌರವಕ್ಕೇ ಕಡಿಮೆ ಎನ್ನುವ ಅರಿವು ಈ ಜನಕ್ಕೂ ಇಲ್ಲ. (ಕಮೂ ಹೇಳುವಂತೆ ವ್ಯಕ್ತಿ ಎಷ್ಟೇ ಕಷ್ಟದಲ್ಲಿದ್ದರೂ ಎಂತಹ ಅವಮಾನಕರ ಜೀವನ ನಡೆಸುತ್ತಿದ್ದರೂ ತಾನು ಕಷ್ಟದಲ್ಲಿದ್ದೇನೆ ಅವಮಾನವಾಗುತ್ತಿದೆ ಎನ್ನುವ ಅರಿವು ಇಲ್ಲವಾದರೆ ವೇದನೆ ಸಂಕಟವಿಲ್ಲ. ವೇದನೆ, ಸಂಕಟಗಳ ಹೊರತಾಗಿ ಪ್ರಗತಿಗಾಗಿ, ತನ್ನ ಸ್ಥಿತಿ ಸುಧಾರಣೆಗಾಗಿ ವ್ಯಕ್ತಿ ಯತ್ನಿಸುವುದು ಅಸಾಧ್ಯ.) ಆದರೆ ಈ ಅರಿವು ಕೆಲವರಿಗಾದರೂ ಇದೆ (ಇದ್ದರೂ ಏನೂ ಮಾಡಲಾಗದ ಪರಿಸ್ಥಿತಿಯಲ್ಲಿದ್ದಾರೆ) ಎನ್ನುವುದು ಸಮಾಧಾನದ ಸಂಗತಿ. ಎಷ್ಟೋ ಮಂದಿ ಬ್ರಾಹ್ಮಣ ವಿದ್ವಾಂಸರು, ಪುರೋಹಿತರು, ಹರಿಕಥೆದಾಸರು ತಾವು ತುಳಿದ ಅವಮಾನಕರ ಹಾದಿಯಲ್ಲಿ ತಮ್ಮ ಮಕ್ಕಳು ನಡೆಯುವುದು ಬೇಡ ಎಂದು ಅವರಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿ, ದಕ್ಷಿಣೆ ಸಂಭಾವನೆಯ ಆಸೆಗಾಗಿ ವೇದಾಧ್ಯಯನ ನಡೆಸುವ ದುರಂತವನ್ನು ತಪ್ಪಿಸುತ್ತಿದ್ದಾರೆ. “ಹತ್ತು ಪೈಸೆ ನಾಲ್ಕಾಣೆಗೆ ನಾನು ಕೈಚಾಚಿದ್ದೇ ಸಾಕು, ನನ್ನ ಮಗನಿಗೆ ಆ ‘ಸುಯೋಗ’ ಬೇಡ” ಎಂದು ಹೇಳುವವರನ್ನು ನಾನು ನೋಡಿದ್ದೇನೆ … ಆ ಜನಕ್ಕೆ ಈ ದಕ್ಷಿಣೆಗಾಗಿ ಕೈಚಾಚುವುದು ಅವಮಾನ ಅನ್ನಿಸಿದೆ; ತಮಗೆ ಈ ಹಣಹದ್ದುಗಳಿಂದ ಆಗುತ್ತಿರುವುದು ಉಪಕಾರವಲ್ಲ, ಉಪಕಾರ ರೂಪದ ಪರೋಕ್ಷ ಅವಮಾನ ಎನ್ನುವ ಅರಿವು ಮೂಡಿದೆ. ಹೀಗಾಗುವುದು ಬದಲಾಗುತ್ತಿರುವ ಕಾಲಕ್ಕನುಗುಣವಾಗಿ ಬದಲಾಗಲೇಬೇಕಾದ ಸಾಮಾಜಿಕ ಸಂಪ್ರದಾಯಗಳ ದಿಸೆಯಲ್ಲಿ ಬಹಳ ಒಳ್ಳೆಯದು ಆದರೆ ಇಷ್ಟು ಮಾತ್ರ ಸಾಲದು. ಏಕೆಂದರೆ ಈ ಸಮಾಜ ತನ್ನ ವ್ಯಕ್ತಿತ್ವವನ್ನು ಸಮಾಜಕ್ಕೆ ಮಾರಿಕೊಳ್ಳುವ ಸನ್ಯಾಸಿ, ಪೀಠಾಧಿಪತಿಯನ್ನು ಬಯಸುತ್ತದೆಯೇ ಹೊರತು, ತನಗೂ ಒಂದು ವ್ಯಕ್ತಿತ್ವವಿದೆ ಅವನ್ನು ಅಭಿವ್ಯಕ್ತಗೊಳಿಸಬೇಕು ಎನ್ನುವವನ್ನಲ್ಲ. ಆದ್ದರಿಂದ
ಇನ್ನು ಮುಂದೆ ಪೀಠಾಧಿಪತಿಯಾಗುವ ವ್ಯಕ್ತಿ, ಧಾರ್ಮಿಕ ಕೇಂದ್ರ ಒಂದರ ಮುಖ್ಯಸ್ಥನಾಗುವ ವ್ಯಕ್ತಿ ಈತನಕ ನಡೆದುಬಂದ ಬರೀ ಕಾವಿಬಟ್ಟೆ ಸಂಪ್ರದಾಯವನ್ನುಳಿಸುವವನಾದರೆ ಮಾತ್ರ ಸಾಲದು. ತಾನು ಧರಿಸುವ ಕಾವಿಬಟ್ಟೆ ಸ್ವರ್ಗದಿಂದ ಇಲ್ಲಿಗೆ ಆಮದಾದ್ದಲ್ಲ ಇಲ್ಲಿಯವನೇ ಒಬ್ಬ ನೇಕಾರ ನೇತದ್ದು, ತಾನು ಕಾವಿಬಟ್ಟೆ ಧರಿಸುವುದು ಪರಬ್ರಹ್ಮ ಪ್ರೀತ್ಯರ್ಥವಾಗಿ ಅಲ್ಲ, ಈ ಸಮಾಜದಲ್ಲಿ ತನ್ನ ಬತ್ತಲೆ ಮೈ ಮುಚ್ಚಿಕೊಳ್ಳಲು ಎನ್ನುವ ಪರಿಸರ ಪ್ರಜ್ಞೆ ಇರುವವನೂ ಆಗಬೇಕು. ಹರಿಜನ ಕಾಲೋನಿಗಳಿಗೆ ಹೋಗಿ ಹರಿಜನರ ಕೈಮುಟ್ಟಿ ಮಂತ್ರಾಕ್ಷತೆ ಕೊಟ್ಟತಕ್ಷಣ ತಾನು ದೊಡ್ಡ ಸಾಮಾಜಿಕ ಕ್ರಾಂತಿಯನ್ನು ಸಾಧಿಸಿದಂತಾಯ್ತೆನ್ನುವ ಭ್ರಮೆ ಕಳೆದು, ತಾನು ಮಾಡಿದ್ದು ದೊಡ್ಡ ಕೆಲಸ ಅಂತ ಈ ಸಮಾಜ ಹೇಳುವುದಕ್ಕೆ ಅಸ್ಪದ ಕೊಟ್ಟದ್ದು ಬಹುಮಟ್ಟಿಗೆ ಆ ಹರಿಜನರ ಆರ್ಥಿಕ ವಿಷಮತೆ ಸಾಮಾಜಿಕ ಹಿಂದುಳಿಕೆಗಳೇ ಎಂದು ತಿಳಿಯುವವನು ಆಗಬೇಕು. ಧಾರ್ಮಿಕವ್ಯಕ್ತಿ ಸಮಾಜದಿಂದ ಹೊರತಾಗಿ ಇರಲಾರ. (ಈಗ ಆತನನ್ನು ಹಾಗಿಡುವ ಯತ್ನವೇ ಜಾಸ್ತಿ. ಅದಕ್ಕಾಗಿ ಇಂಗ್ಲಿಷ್ ವಿದ್ಯಾಭ್ಯಾಸ ಪಡೆದವನನ್ನು, ಯಾವುದೇ ನಿಟ್ಟಿನಲ್ಲಿ ಧರ್ಮ ದೇವರುಗಳ ಬಗ್ಗೆ ಸೂಕ್ತವಾಗಿ ಪ್ರಶ್ನಿಸುವವನನ್ನು, ಆಧುನಿಕ ವಿಚಾರಧಾರೆಗಳನ್ನಭ್ಯಸಿಸಿದವನನ್ನು ಸಮಾಜ ಧಾರ್ಮಿಕ ಕೇಂದ್ರಗಳ ಆಡಳಿತವರ್ಗ ಜಾಗ್ರತೆಯಾಗಿ ದೂರವಿಟ್ಟು, ಏನೂ ತಿಳಿಯದ ಹುಡುಗನಿಗೆ ಒತ್ತಾಯದ ಮಾಘಸ್ನಾನ ಮಾಡಿಸಿ ಸನ್ಯಾಸ ದೀಕ್ಷೆ ನೀಡಲು ಯತ್ನಿಸುತ್ತದೆ.) ಏಕೆಂದರೆ ಆತ ಧರ್ಮದಿಂದ, ದೇವರಿಂದ ಏನನ್ನು ಸಾಧಿಸಬೇಕಿದ್ದರೂ ಅದನ್ನು ಸಾಧಿಸಬೇಕಾಗಿರುವುದು ಈಗ ಇಲ್ಲಿ ಈ ಸಮಾಜದಲ್ಲಿ.
ಒಟ್ಟಿನಲ್ಲಿ ನಮಗೆ ತಿಳಿಯುವುದಿಷ್ಟೆ. ಯಾವುದೇ ಧಾರ್ಮಿಕ, ಸಾಮಾಜಿಕ, ತಾತ್ವಿಕ – ನೆಲೆಯಲ್ಲಿ ಏನಾದರೂ ನಡೆಯಬೇಕಿದ್ದರೆ ಅದು ಬಹುಮಟ್ಟಿಗೆ ಆರ್ಥಿಕ ಸ್ಥಿರತೆಯನ್ನಾಧರಿಸಿಯೇ ನಡೆಯಬೇಕಾಗುತ್ತದೆ. ಧರ್ಮ ಪ್ರಚಾರ ಮಾಡುತ್ತೇನೆ, ದಕ್ಷಿಣೆ ಸಂಭಾವನೆ ಕೊಟ್ಟು ಜನರು ತತ್ವಶಾಸ್ತ್ರಗಳ ಅಭ್ಯಾಸ ಮಾಡುವಂತೆ ಮಾಡುತ್ತೇನೆ ಎನ್ನುವ ವ್ಯಕ್ತಿ ಅಂತಹ ಎಲ್ಲ ಅಭ್ಯಾಸಗಳೂ ಪ್ರಚಾರಗಳೂ ದಕ್ಷಿಣೆಗೆ ಸಂಭಾವನೆಗೆ ಕೈ ಚಾಚುವ ಸ್ಥಿತಿ ತಪ್ಪುವವರೆಗೆ ಮಾತ್ರ ಸಾಧ್ಯ ಎಂದು ತಿಳಿಯಬೇಕು. ಆದರೆ ಇಂತಹ ಆರ್ಥಿಕ ವಿಷಮತೆಯನ್ನು ಧಾರ್ಮಿಕ ಕಾರಣಗಳಿಗಾಗಿ ಉಪಯೋಗಿಸಿಕೊಳ್ಳುವ ಬದಲು ಆರ್ಥಿಕ ವಿಷಮತೆಯನ್ನೇ ಹೋಗಲಾಡಿಸಲು ಯತ್ನಿಸುವುದು ಯೋಗ್ಯತರ. ಅದಕ್ಕೆ ಬದಲಾಗಿ ಧರ್ಮಛತ್ರಕ್ಕೆ ಊಟಕ್ಕೆ ಬರುವ ಜನರಿಂದ ಊಟಕ್ಕೆ ಮೊದಲು ಹಸಿದ ಹೊಟ್ಟೆಯಲ್ಲಿ ಭಜನೆ ಮಾಡಿಸಿ ದೇವರ ನಾಮ ಹಾಡಿಸಿ ಅವರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುತ್ತೇನೆ ಎಂದು ತಿಳಿಯುವುದು ಮೂರ್ಖತನ.
ಭಾಷೆ ಸಮಾಜ ಮತ್ತು ಸಂಸ್ಕೃತಿ
ಭಾಷೆ ಸಮಾಜ ಮತ್ತು ಸಂಸ್ಕೃತಿ
-ಟಿ. ಕೆ. ವಾಸುದೇವ ಭಟ್
ಭಾಷೆ ಸಂಸ್ಕೃತಿಯ ಒಂದು ಭಾಗ. ಇದೊಂದು ಭಾವನೆಗಳನ್ನೂ ವಿಷಯಗಳನ್ನೂ ವಿನಿಮಯಮಾಡಿಕೊಳ್ಳಲು ಸ್ವರಗಳಿಂದ ಏರ್ಪಡಿಸಿಟ್ಟ ಸೋಗು. ಇಂತಹ ಸೋಗು ಸಂಸ್ಕೃತಿಯಲ್ಲಿ ಬೇರೆ ಕೂಡಾ ಇವೆ. ಸಂಸ್ಕೃತಿ ಈ ಸ್ವರಗಳಿಂದ ಏರ್ಪಡಿಸಿಟ್ಟ ಕೋಶಗಳಿಗೆ ಬೇರೆ ಬೇರೆ ಅರ್ಥಗಳನ್ನೇರ್ಪಡಿಸಿಟ್ಟಿದೆ, ಮತ್ತು, ಅದನ್ನು ಒಂದು ಸಂಸ್ಕೃತಿಯ ಜನರಿಗೆ ತಿಳಿಸಲು ಬೇಕಾದ ಸಾಮಾಜಿಕ ಏರ್ಪಾಡನ್ನೂ ಮಾಡಿದೆ. ಮಗು ಭಾಷೆಯನ್ನು ಕಲಿಯಲು ಬೇಕಾದ ಸಾಮರ್ಥ್ಯವನ್ನು ಪಡೆದುಕೊಂಡೇ ಹುಟ್ಟಿರುತ್ತದೆ. ಅದರೆ ತಂದೆ ತಾಯಿ ಕುಟುಂಬ ಸಮಾಜ ಮತ್ತು ಗುರುವಿನ ಸಹಾಯವಿಲ್ಲದೆ ಭಾಷೆಯನ್ನು ಕಲಿಯಲಾರದು; ಅಥವಾ ಬೇರಾವ ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ರಿಯೆಯಲ್ಲಿ ಸೇರಿಕೊಳ್ಳಲಾರದು. ಭಾಷೆಯಲ್ಲಿರುವ ಅರ್ಥ ಸಂಸ್ಕೃತಿಯು ಭಾಷೆಗಾಗಿ ಮಾಡಿಟ್ಟ ಸೂತ್ರ ಮತ್ತು ನಿಯಮಗಳಿಂದಾಗಿಯೂ, ಸ್ವರಗಳನ್ನು ಬಾಹ್ಯ ಪ್ರಪಂಚದ ವಸ್ತು, ಕ್ರಿಯೆ, ವಿಷಯ ಮತ್ತು ಅನುಭವಗಳನ್ನು ಸಾಂಕೇತಿಕವಾಗಿ ತೋರಿಸಲು ಮಾಡಿಟ್ಟ ಕೃತಕ ಏರ್ಪಾಡಿನಿಂದಾಗಿ ಹುಟ್ಟಿಬರುತ್ತದೆ. ಭಾಷೆ, ಸಂಸ್ಕೃತಿ ಸಮಾಜ ಮತ್ತು ವ್ಯಕ್ತಿಯ ಪರಸ್ಪರ ವಿನಿಮಯದ ಮಾಧ್ಯಮ ಭಾಷೆಯ ಮೂಲಕ ಜ್ಞಾನ, ನಿಯಮ, ಮತ್ತು ಅನುಭವಗಳನ್ನು ಸಂಸ್ಕೃತಿಯಲ್ಲಿ ಶೇಖರಿಸಿಡಲಾಗಿದೆ. ಇವುಗಳು ಭಾಷೆಯ ಮೂಲಕ ಮನುಷ್ಯನಿಂದ ಮನುಷ್ಯನಿಗೆ ಹೋಗುತ್ತವೆ; ಮತ್ತು ಎಳೆಮಗುವಿನ ಮನಸ್ಸಿನ ಮೇಲೆ ಪರಿಣಾಮವನ್ನು ತರುತ್ತಾ ವ್ಯಕ್ತಿತ್ವವನ್ನು ಬೆಳಸುತ್ತವೆ.
ಮನಸ್ಸು, ವ್ಯಕ್ತಿತ್ವ, ಸಮಾಜ, ಸಂಸ್ಕೃತಿ ಮತ್ತು ಭಾಷೆ ತುಂಬಾ ಅನ್ನೋನ್ಯತೆಯ ಘಟಕಗಳು, ಇವೆಲ್ಲವುಗಳಲ್ಲಿಯ ಭಾಷೆಯ ಪ್ರಭಾವವಿದೆ. ಮತ್ತು ಇವುಗಳಿಂದಾಗಿ ಭಾಷೆ ಇದೆ. ಮನಸ್ಸು ಪಂಚೇಂದ್ರಿಯಗಳಿಂದಾಗಿ ಬಾಹ್ಯಪ್ರಪಂಚದ ಪ್ರಭಾವಗಳ ಬಗ್ಗೆ ಎಚ್ಚರಗೊಳ್ಳುತ್ತದೆ. ಸಮಾಜದಿಂದಾಗಿ ಸಂಸ್ಕೃತಿಯಲ್ಲಿರುವ ಯೋಜನೆಗಳು ಸರಿಯಾಗಿ ಬೆಳೆಯುತ್ತಾ ವ್ಯಕ್ತಿತ್ವವಾಗುತ್ತದೆ. ಭಾಷೆಯ ಮೂಲಕ ಸಮಾಜ ಮನಸ್ಸನ್ನು ವ್ಯಕ್ತಿತ್ವವನ್ನಾಗಿಸುತ್ತದೆ. ಮನಸ್ಸು ಪ್ರಥಮವಾಗಿ ಪಂಚೇಂದ್ರಿಯಗಳಿಂದಾಗಿ ಬಾಹ್ಯ ಪ್ರಪಂಚದ ಬಗ್ಗೆ ಎಚ್ಚರಗೊಂಡರೂ ಅದರ ಬೆಳವಣಿಗೆಗೆ ಅತೀ ಅವಶ್ಯವಾದ ಸಂಪರ್ಕವನ್ನು ಭಾಷೆ ಸಮಾಜದೊಂದಿಗೂ ಸಂಸ್ಕೃತಿಯೊಂದಿಗೂ ಏರ್ಪಡಿಸುತ್ತದೆ. ಆದ್ದರಿಂದ ಭಾಷೆ ಸಂಪರ್ಕವನ್ನು ಏರ್ಪಡಿಸುವ ಮಾಧ್ಯಮ. ಈ ಮಾಧ್ಯಮಕ್ಕೆ ಒಂದು ನಿರ್ದಿಷ್ಟವಾದ ಕೆಲಸವಿದೆ ಮತ್ತು ವ್ಯವಸ್ಥೆ ಇದೆ. ಈ ವ್ಯವಸ್ಥೆ ಸ್ವರಗಳ ಜೋಡಣೆಯಿಂದಾಗಿ ಹುಟ್ಟುವ ವ್ಯವಸ್ಥೆ ಮತ್ತು ಅರ್ಥವನ್ನು ಹುಟ್ಟಿಸಲೋಸುಗ ಮಾಡುವ ವ್ಯವಸ್ಥೆ. ಅರ್ಥವೆಂದರೆ ಮನಸ್ಸು ಬಾಹ್ಯಪ್ರಪಂಚದ ಬಗ್ಗೆ ಎಚ್ಚರಗೊಳ್ಳುವ ರೀತಿ ಬಾಹ್ಯ ಪ್ರಪಂಚದ ಬಗ್ಗೆ ಮನಸ್ಸನ್ನು ಎಚ್ಚರಿಸುವ ಕೆಲಸ ಭಾಷೆಯಿಂದಲ್ಲದೆ ಬೇರೆ ವಿಧಾನಗಳಿಂದಲೂ ಆಗಬಹುದು. ಆದರೆ ಭಾಷೆಯಷ್ಟು ಸುಲಭವೂ ಅನುಕೂಲವೂ ಮತ್ತು ಉತ್ತಮವೂ ಆಗಿರುವ ಬೇರೆ ವ್ಯವಸ್ಥೆ ಇಲ್ಲ. ಆದ್ದರಿಂದಲೇ ಭಾಷೆಗೆ ಪ್ರಾಧಾನ್ಯ.
ವಿವಿಧ ಸ್ವರಗಳನ್ನು ಹೊರಡಿಸುವುದರಲ್ಲಿ ಮನುಷ್ಯನಷ್ಟು ನೈಪುಣ್ಯವನ್ನು ಬೇರಾವ ಪ್ರಾಣಿಯೂ ಪಡೆದಿಲ್ಲ. ಬೇರೆ ಬೇರೆ ವಿಧದ ಸ್ವರಗಳನ್ನು ಭಾಷೆಯ ನಿಯಮಕ್ಕನುಗುಣವಾಗಿ ಮತ್ತು ಯಾವ ರೀತಿಯ ಅರ್ಥವನ್ನು ಸೃಷ್ಟಿಸಬೇಕೋ ಅದಕ್ಕನುಗುಣವಾಗಿ ಹೊರಡಿಸುವುದರಿಂದ ಭಾಷೆ ಹುಟ್ಟುತ್ತದೆ. ಭಾಷೆಯಲ್ಲಿರುವ ನಿಯಮ ಮತ್ತು ಅರ್ಥ ಸಂಸ್ಕೃತಿಯ ಅವಿಭಾಜ್ಯ ಅಂಶ. ಒಂದು ಭಾಷೆಯು ಉಪಯೋಗಿಸುವ ಸ್ವರಗಳನ್ನು ಭೌತವಿಜ್ಞಾನದ ತತ್ವಗಳಿಂದ ತಿಳಿದುಕೊಳ್ಳಬಹುದು. ಸ್ವರಗಳ ಜೋಡಣೆಗೂ ಅದು ಕೊಡುವ ಅರ್ಥ ಅಥವಾ ಅದು ನಿರ್ದೇಶಿಸುವ ವಸ್ತುವಿಗೂ ಯಾವ ಸಂಬಂಧವಿದೆ ಯೆಂದು ಕೇಳಿದರೆ ಅದನ್ನು ಅಷ್ಟು ಸುಲಭವಾಗಿ ಉತ್ತರಿಸಲು ಸಾಧ್ಯ ಇಲ್ಲ. ಸ್ವರಗಳ ಜೋಡಣೆಯನ್ನು ನಿಯಮಬದ್ಧವಾಗಿ ಮಾಡಿದಾಗ ಅರ್ಥದ ಉತ್ಪತ್ತಿಯಾಗುತ್ತದೆ. ಸ್ವರಗಳ ಗುಂಪಿಗೂ ಅರ್ಥಕ್ಕೂ ಇರುವ ಸಂಬಂಧ ಪೂರ್ವ ನಿರ್ಧರಿತ ಸಂಬಂಧವೇ ಹೊರತಾಗಿ ವಿಚಾರಭರಿತ ಸಂಬಂಧವಲ್ಲ. ಇದನ್ನು ಸಾಂಸ್ಕೃತಿಕ ಆಥವಾ ಸಾಂಕೇತಿಕ ಸಂಬಂಧವೆಂದು ಹೇಳಬಹುದು, ಸ್ವರಗಳ ಗುಂಪಿಗೂ ಅರ್ಥಕ್ಕೂ ಇರುವ ಸಂಬಂಧ ವೈಜ್ಞಾನಿಕ ಸಂಬಂಧವಾಗಿದ್ದರೆ ಎಲ್ಲಾ ಮನುಷ್ಯ ಜನಾಂಗಕ್ಕೂ ಒಂದೇ ಭಾಷೆ ಸಾಕಾಗುತ್ತಿತ್ತು. ಇವುಗಳೊಳಗಿನ ಸಂಬಂಧ ಕಾಲ್ಪನಿಕ ಸಂಬಂಧವಾಗಿದ್ದರಿಂದ ಬೇರೆ ಬೇರೆ ಜನಾಂಗಗಳು ಒಂದಕ್ಕೊಂದು ಸಂಪರ್ಕ ಇಲ್ಲದೆ ಬೆಳೆದು ಬರುವಾಗ ತಮ್ಮ ಕಲ್ಪನೆಗಳನ್ನು ಬೇರೆ ಬೇರೆ ರೀತಿಯಲ್ಲಿ ಚಲಾಯಿಸಿ ಭಾಷೆಗಳನ್ನು ಕಾಲಕ್ರಮೇಣ ಬೆಳಸಿಕೊಂಡು ಬಂದವು. ಜಗತ್ತಿನ ಭಾಷೆಗಳಲ್ಲಿರುವ ಸ್ವರಗಳು ಮನುಷ್ಯನಾದವನು ಹೊರಡಿಸಬಲ್ಲ ಸ್ವರಗಳಿಗೆ ಒಂದು ನಿದರ್ಶನ. ಮನುಷ್ಯರೆಲ್ಲರ ಶಾರೀರಿಕ ಏರ್ಪಾಡಿನಲ್ಲಿಯೂ ಅದು ನಡೆಸುವ ಕ್ರಿಯೆಗಳಲ್ಲಿಯೂ ಮುಖ್ಯವಾಗಿ ಮನುಷ್ಯನ ಧ್ವನಿಜನಕ ಅಂಗದಲ್ಲಿ ಸಾಮಾನ್ಯವಾದ ಏಕತೆ ಇರುವುದರಿಂದ ಅವರು ಕೂಗಬಲ್ಲ ಸ್ವರಗಳ ವಿವಿಧತೆಯಲ್ಲಿಯೂ ಏಕತೆ ಸಾಧ್ಯವಾಯ್ತು. ಆದರೆ ಈ ಸ್ವರಗಳ ಗುಂಪನ್ನು ಏರ್ಪಡಿಸಿ ಶಬ್ದ ಮತ್ತು ವಾಕ್ಯಗಳನ್ನಾಗಿಸಿ ಅವುಗಳಿಗೆ ಬೇರೆ ಬೇರೆ ಅರ್ಥವನ್ನು ಕೊಡುವಾಗ ಮಾತ್ರ ತುಂಬಾ ವ್ಯತ್ಯಾಸವಿರುವುದರಿಂದಲೇ ಬೇರೆ ಬೇರೆ ಭಾಷೆಗಳ ನಿರ್ಮಾಣಕ್ಕೆ ಕಾರಣವಾಯ್ತು. ಭಾಷೆ ಮನುಷ್ಯ ಸಾಂಕೇತಿಕವಾಗಿ ಸೃಷ್ಟಿಸಿದ ಪ್ರಪ್ರಥಮ ವ್ಯವಸ್ಥೆ. ಭಾಷೆಗೂ ಸಂಸ್ಕೃತಿಗೂ ನಿಕಟವಾದ ಸಂಬಂಧವಿದೆ. ಅದು ಅರ್ಥದಿಂದಾಗಿ ಏರ್ಪಟ್ಟಿದೆ. ಭಾಷೆಯ ಸೂಕ್ಷ್ಮ ತಂತುಗಳು ಸ್ವರಗಳು ಈ ಸ್ವರಗಳನ್ನು ಗುಂಪಾಗಿಸಿ ಅದಕ್ಕೆ ಕೊಟ್ಟ ಹೆಸರು ಅರ್ಥ. ಸಂಸ್ಕೃತಿಯ ಅತಿ ಚಿಕ್ಕ ಘಟಕಗಳು ಅರ್ಥ ಬಿಂದುಗಳು. ಈ ಅರ್ಥಬಿಂದುಗಳಿಂದ ಹುಟ್ಟಿ ಬಂದ ವ್ಯವಸ್ಥೆ ಸಂಸ್ಕೃತಿ. ಸ್ವರಗಳ ಗುಂಪಿಗೆ ಅರ್ಥವಿಲ್ಲದಾಗ ಅದು ಭಾಷೆಯಾಗಲಾರದು. ಒಂದು ಅರ್ಥವನ್ನು ಅಥವಾ ಅರ್ಥದ ಸಮೂಹವನ್ನು ಸ್ವರಗಳ ವ್ಯವಸ್ಥೆಯಿಂದ ಹುಟ್ಟಿದ ಭಾಷೆಯಿಂದಲೇ ಇತರರಿಗೆ ತಿಳಿಸಬೇಕೆಂದಿಲ್ಲ. ಆದರೆ ಭಾಷೆಯ ಮೂಲಕ ತಿಳಿಸುವುದು ತುಂಬಾ ಅನುಕೂಲವಾದ ಮಾರ್ಗ, ತಿಳಿಸಲು ಏನೂ ಇಲ್ಲದಾಗ ಭಾಷೆ ಬೇಡ. ಮತ್ತು ತಿಳಿಸಲು ಮನುಷ್ಯರಿಲ್ಲದಾಗಲೂ ಭಾಷೆಯ ಅಗತ್ಯ ಇಲ್ಲ. ಯಾವ ಅರ್ಥವನ್ನು ತಿಳಿಸಬೇಕೋ ಅದಕ್ಕನುಗುಣವಾದ ಭಾಷೆ ಬೇಕು. ಹೊಸ ಅರ್ಥವನ್ನು ತಿಳಿಸಲು ಹೊಸ ಸ್ವರಗಳ ಗುಂಪು (ಶಬ್ದ) ಅಥವಾ ಈ ಗುಂಪುಗಳ ಹೊಸ ಜೋಡಣೆ ಬೇಕು. ಅಂದರೆ ಸಂಸ್ಕೃತಿ ಇಲ್ಲದಾಗ ಭಾಷೆ ಇಲ್ಲ. ಸಮಾಜ ಇಲ್ಲದಾಗಲೂ ಭಾಷೆ ಬೇಡವೆಂದು ಹೇಳಬಹುದು. ಮನುಷ್ಯರ ಶರೀರ ಸ್ಥಿತಿಯಲ್ಲಿ ಪರಿವರ್ತನೆ ಬಂದು ಅವರು ಮಾತನಾಡುವ ಶಕ್ತಿಯನ್ನು ಕಳಕೊಂಡರೆ ಈ ತನಕ ಮನುಷ್ಯ ಸಾಧಿಸಿದ ಜ್ಞಾನ ಮತ್ತು ಸೌಕರ್ಯಗಳು ಕ್ರಮೇಣ ಅವನತಿ ಹೊಂದುತ್ತಾ ಬರುತ್ತವೆ. ಆದರೆ ಭಾಷೆಯಂತೆಯೇ ಕೆಲಸ ಮಾಡಬಲ್ಲ ಬೇರಾವುದಾದರೂ ಮಾಧ್ಯಮವನ್ನು ಬಳಸಿದಾಗಲೂ ಮನುಷ್ಯನ ಸಾಂಸ್ಕೃತಿಕ ಮತ್ತು ಸಾಮಾಜಿಕ ಜೀವನ ಅಭಿವೃದ್ಧಿ ಹೊಂದಿಕೊಂಡು ಬರಲು ಸಾಧ್ಯ ಇದೆ. ಈ ಪ್ರಶ್ನೆಗಳು ಅಪ್ರಸ್ತುತವಾಗಿ ಕಂಡು ಬಂದರೂ ಅವು ಭಾಷೆಯ ಗುಣ ಲಕ್ಷಣವನ್ನು ತಿಳಿದುಕೊಳ್ಳಲು ಸಹಾಯಕವಾಗುತ್ತಿವೆ.
ಸಂಸ್ಕೃತಿ ಭಾಷೆಗಿಂತ ವಿಸ್ತಾರವಾದ ಕ್ಷೇತ್ರ. ಭಾಷೆ ಸಂಸ್ಕೃತಿಯ ಒಂದು ಭಾಗ ಮಾತ್ರ. ಭಾಷೆಗೂ ಸಂಸ್ಕೃತಿಗೂ ನಿಕಟವಾದ ಸಂಬಂಧ ಬರಲು ಮುಖ್ಯ ಕಾರಣ ಸಂಸ್ಕೃತಿಯಲ್ಲಿರುವ ವಿಷಯಗಳು ಭಾಷೆಯ ಮಾಧ್ಯಮದ ಮೂಲಕ ಪ್ರಸಾರವಾಗುವುದರಿಂದ, ಮತ್ತು ಸಂಸ್ಕೃತಿಯಲ್ಲಿರುವ ಜ್ಞಾನ ಭಂಡಾರ ಭಾಷೆಯ ಚೌಕಟ್ಟಿನಲ್ಲಿರುವ ಕೋಣೆಗಳಲ್ಲಿ ಜೇನು ತಟ್ಟೆಯಲ್ಲಿ ಜೇನನ್ನು ಸಂಗ್ರಹಿಸಿಟ್ಟಂತೆ ಇರುವುದರಿಂದ. ಭಾಷೆ ಮತ್ತು ಸಂಸ್ಕೃತಿಯನ್ನು ಸಂಪೂರ್ಣ ಬೇರೆ ಬೇರೆಯಾಗಿ ತಿಳಿದುಕೊಳ್ಳಲು ಕಷ್ಟ ಸಾಧ್ಯ. ಏಕೆಂದರೆ ಬರೇ ಸ್ವರಗಳ ಗುಂಪು ಭಾಷೆಯಾಗಲಾರದು. ಭಾಷೆಯನ್ನುವ ವ್ಯವಸ್ಥೆಯಲ್ಲಿ ಅರ್ಥ ಇದ್ದೇ ಇದೆ. ಆದ್ದರಿಂದ ಭಾಷೆಯೆನ್ನುವ ಮಾಧ್ಯಮ ಎಲ್ಲಿ ಅಂತ್ಯವಾಗುತ್ತದೆ ಮತ್ತು ಸಂಸ್ಕೃತಿ ಎಲ್ಲಿ ಪ್ರಾರಂಭವಾಗುತ್ತದೆಯೆಂದು ಗೆರೆ ಎಳೆದು ತೋರಿಸಲು ಅಸಾಧ್ಯ. ಅರ್ಥವೆಂಬುದು ಭಾಷೆಗೂ ಬೇಕು, ಮತ್ತು ಸಂಸ್ಕೃತಿಗೂ ಅತಿಮುಖ್ಯವಾದ್ದು. ಆದ್ದರಿಂದ ಈ ಸಾಮಾನ್ಯ ಘಟಕದ ಮೂಲಕ ಭಾಷೆ ಮತ್ತು ಸಂಸ್ಕೃತಿ ಒಂದರೊಡನೊಂದು ಒಂದೇ ವ್ಯವಸ್ಥೆಯಲ್ಲಿ ಸೇರಿಹೋಗುತ್ತದೆ.
ಮನುಷ್ಯ ಸಂಘಜೀವಿಯಾಗಿ ಪರಸ್ಪರ ಹೊಂದಿಕೊಂಡು ಬಾಳ್ವೆ ಮಾಡಬೇಕಾದ್ದರಿಂದ ಭಾಷೆಯ ಅಗತ್ಯ ಬಿತ್ತು. ಒಂದು ದೋಣಿಯ ಸಹಾಯದಿಂದ ನದಿಯನ್ನು ದಾಟುವಂತೆ ಆಯುಧವನ್ನು ಉಪಯೋಗಿಸಿ ಒಂದು ಪ್ರಾಣಿಯನ್ನು ಕೊಲ್ಲುವಂತೆ ಭಾಷೆಯನ್ನು ಒಬ್ಬ ಮನುಷ್ಯ ಇನ್ನೊಬ್ಬನ ಮೇಲೆ ಪ್ರಯೋಗಿಸಿ ಅವನ ಮನಸ್ಸಿನ ಮೇಲೆ ಪರಿಣಾಮವನ್ನು ತರುತ್ತಾನೆ. ದೋಣಿಯಲ್ಲಿ ನಿಯಮಕ್ಕನುಸಾರವಾಗಿ ಮಾಡಿದರೆ ಸಾಮಾನ್ಯವಾಗಿ ಯಾವ ನದಿಯನ್ನೂ ದಾಟಬಹುದು. ಆದರೆ ಯಾವ ದೋಣಿಯಿಂದ ಯಾವ ನದಿಯನ್ನು ದಾಟಬಹುದು ಎಂಬುದು ನದಿಯ ಪ್ರವಾಹ ಮತ್ತು ಇತರ ಗುಣಲಕ್ಷಣವನ್ನು ಹೊಂದಿಕೊಂಡು. ಒಂದೇ ಗುಣಲಕ್ಷಣದ ನದಿಯಲ್ಲಿ ಅದಕ್ಕೆ ಸರಿಯಾಗುವ ಯಾವ ಹೊಣೆಯನ್ನೂ ಉಪಯೋಗಿಸಬಹುದು. ಆದರೆ ಭಾಷೆ ಮಾತ್ರ ಹಾಗಲ್ಲ. ಭಾಷೆಯನ್ನು ನಾವು ಇನ್ನೊಬ್ಬನ ಮೇಲೆ ಪ್ರಯೋಗಿಸಿ ಅದರ ಪ್ರತಿಫಲವನ್ನು ಪಡೆಯಬೇಕಾದರೆ ಅವನಲ್ಲಿ ಭಾಷೆಯನ್ನು ಅರ್ಥಮಾಡಿಕೊಳ್ಳುವ ಶಕ್ತಿ ಇಲ್ಲದೆ ಸಾಧ್ಯ ಇಲ್ಲ. ಅರ್ಥಮಾಡಿಕೊಳ್ಳುವ ಸಾಧ್ಯತೆ ಇರುವದು ಭಾಷೆಯನ್ನು ಕಲಿಯುವದರಿಂದ, ಭಾಷೆಯಲ್ಲಿರುವ ಭಾವನೆಗಳು ಅವನ ಅನುಭವಕ್ಕೆ ಎಟಕುವುದರಿಂದ ಮಾತ್ರ ಸಾಧ್ಯ. ಭಾಷೆಯನ್ನು ಉಪಯೋಗಿಸುವವನ ಇಚ್ಚೆಯೂ ದೋಣಿಯನ್ನು ನದಿಯಲ್ಲಿ ತೇಲಿಬಿಟ್ಟು ನದಿ ದಾಟುವವನ ಇಚ್ಚೆಯೂ ಒಂದೇ ವರ್ಗಕ್ಕೆ ಸೇರಿವೆ. ಆದರೆ ದೋಣಿ ನದಿಯನ್ನು ದಾಟುವ ಯೋಗ್ಯತೆ ದೋಣಿಯನ್ನು ಮಾಡುವವನು ನದಿಯನ್ನು ಅರ್ಥಮಾಡಿಕೊಂಡದ್ದರಿಂದ ಬರುತ್ತದೆ. ಆದರೆ ಭಾಷೆಯನ್ನು ಇನ್ನೊಬ್ಬನ ಮೇಲೆ ಪ್ರಯೋಗಿಸಿ ಸಫಲವಾಗಬೇಕಾದರೆ ಆರ್ಥಮಾಡಿಕೊಳ್ಳುವ ಕೆಲಸ ಪ್ರಯೋಗಿಸುವವನಿಗಿಂತಲೂ ಹೆಚ್ಚಾಗಿ ಪ್ರಯೋಗಿಸಲ್ಪಟ್ಟವನದ್ದಾಗಿದೆ.
ಸಂಸ್ಕೃತಿ ಅರ್ಥ ಬಿಂದುಗಳ ಒಂದು ಒಕ್ಕೂಟ. ಮನಸ್ಸು ಪಂಚೇಂದ್ರಿಯದ ಸಹಾಯದಿಂದ ಬಾಹ್ಯಪ್ರಪಂಚವನ್ನು ಗ್ರಹಿಸುವ ಶಕ್ತಿಯನ್ನು ಪಡೆದಿದೆ. ಬಾಹ್ಯಪ್ರಪಂಚವನ್ನು ಪಂಚೇಂದ್ರಿಯದ ಮೂಲಕ ಗ್ರಹಿಸುವಾಗ ಐದು ರೀತಿಯ ಅನುಭವ ಸಿಗುತ್ತದೆ. ಅಂದರೆ ಬಾಹ್ಯಪ್ರಪಂಚ ಮನುಷ್ಯನಿಗೆ ಐದು ರೀತಿಯಲ್ಲಿ ಬೇರೆ ಬೇರೆಯಾಗಿದೆಯೆಂದು ಕಂಡು ಬರುತ್ತದೆ. ಪಂಚೇಂದ್ರಿಯ ಬಾಹ್ಯ ಪ್ರಪಂಚವನ್ನು ವರ್ಗೀಕರಿಸುತ್ತದೆ. ಹೀಗೆ ವರ್ಗೀಕರಿಸುವಾಗ ವಸ್ತುಗಳ ಮತ್ತು ವಿಷಯಗಳ ಪರಿಮಾಣ ಮತ್ತು ಗುಣಲಕ್ಷಣಗಳನ್ನು ಗ್ರಹಿಸುತ್ತದೆ. ಈ ಗ್ರಹಣಶಕ್ತಿಯಿಂದಾಗಿ ವರ್ಗೀಕರಣ ಹುಟ್ಟುತ್ತದೆ, ವರ್ಗೀಕರಣದಿಂದಾಗಿ ಮತ್ತು ಅವುಗಳನ್ನು ಒಂದರೊಡನೊಂದು ಹೋಲಿಸುವುದರಿಂದ ಮನಸ್ಸು ವಸ್ತು ಮತ್ತು ವಿಷಯಗಳನ್ನು ಅರ್ಥಮಾಡಿಕೊಳ್ಳುತ್ತದೆ. ವರ್ಗೀಕರಣವನ್ನೂ ಮತ್ತು ಅದರಿಂದ ಹುಟ್ಟಿದ ಅರ್ಥವ್ಯವಸ್ಥೆಗಳನ್ನೂ ಬೇರ್ಪಡಿಸಿ ಇಡುವಾಗ ಮತ್ತು ಹೀಗೆ ಬೇರ್ಪಡಿಸಿ ಇಟ್ಟಿದ್ದನ್ನು ಬೇರೆಯವರಿಗೆ ತಿಳಿಸಲು ಭಾಷೆ ಬೇಕು. ಆದರೆ ಭಾಷೆ ಬೇರೆಯವರಿಗೆ ತಿಳಿಸಲು ಎಷ್ಟು ಬೇಕಾಗುತ್ತದೋ ಅಷ್ಟೇ ರೀತಿಯಲ್ಲಿ ಪಂಚೇಂದ್ರಿಯಗಳು ಗ್ರಹಿಸಿದ ವಿವಿಧ ವಸ್ತು ಮತು ವಿಷಯಗಳಿಗೆ ಹೆಸರನಿಟ್ಟು ಮನಸ್ಸಿನಲ್ಲಿ ಸಂಗ್ರಹಿಸಿಡಲು ಭಾಷೆ ಅತಿ ಅಗತ್ಯ. ಸಮಾಜದಲ್ಲಿರುವ ಪ್ರತಿಯೊಬ್ಬನಿಗೂ ಒಂದೊಂದು ಹೆಸರು ಅಗತ್ಯ. ಈ ಹೆಸರಿನ ಮೂಲಕ ನಾವು ಬೇರೆ ಬೇರೆ ವ್ಯಕ್ತಿಗಳನ್ನು ಸಂಬೋಧಿಸುತ್ತೇವೆ ಮತ್ತು ಜ್ಞಾಪಕದಲ್ಲಿಟ್ಟುಕೊಳ್ಳುತ್ತೇವೆ. ಅಂತೆಯೇ ಭಾಷೆ ಒಂದು ಪರಿಸರದಲ್ಲಿರುವ ವಸ್ತು ಮತ್ತು ವಿಷಯಗಳಿಗೆ ಹೆಸರಿಡುವ ಒಂದು ವ್ಯವಸ್ಥೆ. ಈ ಹೆಸರಿಡುವ ವ್ಯವಸ್ಥೆಯಲ್ಲಿ ನಡೆಯುವ ಮೂಲ ಮಾನಸಿಕ ಕ್ರಿಯೆ ವಸ್ತುಗಳ ಗ್ರಹಣವನ್ನೂ ಶಬ್ದಗಳನ್ನೂ ಒಂದುಗೂಡಿಸಿ ಮನಸ್ಸಿನ ನೆನಪಿನ ಕೋಣೆಯಲ್ಲಿ ಸಂಗ್ರಹಿಸಿರುವುದು ಮತ್ತು ಅಗತ್ಯ ಬಿದ್ದಾಗ ಬೇರೆಯವರಿಗೆ ತಿಳಿಸುವುದು.
ವಸ್ತುಗಳು ಬೇರೆಯಾದಂತೆ, ಅವುಗಳ ಗುಣಲಕ್ಷಣಗಳು ಬೇರೆಯಾದಂತೆ ಮತ್ತು ಅವುಗಳೊಳಗಿನ ಸಂಬಂಧ ಬೇರೆಯಾದಂತೆ ಶಬ್ದಗಳಲ್ಲಿಯೂ ಅವುಗಳ ಜೋಡಣೆಯಲ್ಲಿಯೂ ಸರಿಯಾದ ವ್ಯತ್ಯಾಸವನ್ನು ತರುವುದೇ ಭಾಷೆಯಲ್ಲಿ ಅಡಕವಾಗಿರುವ ಮುಖ್ಯ ತತ್ವ. ಆದ್ದರಿಂದ ಭಾಷೆ ಒಂದು ಸಂಸ್ಕೃತಿಯ ಗ್ರಹಣ ಶಕ್ತಿಯ ಪ್ರತೀಕ. ಮನಸ್ಸು ಬಾಹ್ಯ ಪ್ರಪಂಚದ ಪ್ರೇರಣೆಗನುಗುಣವಾಗಿ ಪ್ರತಿಬಿಂಬವನ್ನೂ ಜ್ಞಾನವನ್ನು ಪಡೆಯುವುದು ಅದಕ್ಕಿರುವ ಮೂಲಭೂತಗುಣವಾಗಿದ್ದರೂ ಈ ಪ್ರತಿಬಿಂಬಗಳೂ ಜ್ಞಾನಾಂಶಗಳೂ ವ್ಯವಸ್ಥಿತವಾಗಿ ಮನಸ್ಸಿನಲ್ಲಿ ನಿಂತು ವ್ಯಕ್ತಿತ್ವವಾಗುವುದು ಅವು ಭಾಷೆಯ ಸಮ್ಮಿಳನ ಹೊಂದುವುದದಿಂದ ಎಂದು ಹೇಳಬಹುದು. ಯಾಕೆಂದರೆ ಒಂದು ವಸ್ತುವನ್ನು ನೋಡಿದಾಗ ಮನಸ್ಸಿನಲ್ಲಿ ಬರುವ ಪ್ರತಿಬಿಂಬಗಳೂ ಜ್ಞಾನಾಂಶಗಳೂ ಒಂದು ಶಬ್ದ ಅಥವಾ ವಾಕ್ಯವನ್ನು ಕೇಳಿದಾಗ ಅಥವಾ ಓದಿದಾಗಲೂ ಬರುತ್ತವೆ. ಆದ್ದರಿಂದ ಒಂದು ವಸ್ತುವನ್ನು ನೋಡಿದಾಗ ಅಥವಾ ಇನ್ನಾವ ರೀತಿಯಲ್ಲಾದರೂ ಪಂಚೇಂದ್ರಿಯಗಳಿಂದ ಗ್ರಹಿಸಿದಾಗ ಮನಸ್ಸಿನಲ್ಲಾಗುವ ಪರಿಣಾಮವನ್ನು ಒಂದು ಶಬ್ದ ಅಥವಾ ಒಂದು ವಾಕ್ಯ ಕೂಡಾ ಮಾಡಬಲ್ಲುದು. ಭಾಷೆ ಮತ್ತು ವಸ್ತು ಈ ದೃಷ್ಟಿಯಲ್ಲಿ ಒಂದೇ ಕೆಲಸವನ್ನು ಮಾಡುತ್ತದೆ. ಕಣ್ಣ ಮುಂದೆ ವಸ್ತು ಇಲ್ಲದಾಗಲೂ ವಸ್ತು ಇದ್ದಂತೆ ಮಾಡಬಲ್ಲ ಶಕ್ತಿ ಭಾಷೆಗಿದೆ. ಈ ಶಕ್ತಿ ಮನುಷ್ಯನ ಒಂದು ಅತಿ ದೊಡ್ಡ ಸಂಪತ್ತು. ಈ ಶಕ್ತಿಯಿಂದಾಗಿ ಭಾಷೆ ಸಮಾಜದ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಕಾರಣವಾಯ್ತು. ಭಾಷೆಯಲ್ಲಿರುವ ಜ್ಞಾನ ಯಾವನಾದರೊಬ್ಬ ಮನುಷ್ಯನ ಗ್ರಹಣ ಶಕ್ತಿಯಿಂದಾಗಿಯೇ ಹುಟ್ಟಿ ಬಂದಿದೆ. ಈ ಗ್ರಹಣ ಶಕ್ತಿ ಭಾಷೆಯಾಗಿ ಮಾರ್ಪಟ್ಟಾಗ ಮಾತ್ರ ಇತರರಿಗೆ ಪ್ರಯೋಜನವಾಗುತ್ತದೆ. ಆದರೆ ಮೂಲತಃ ತನ್ನ ಸ್ವಂತ ಪಂಚೇಂದ್ರಿಯಗಳು ಕೊಟ್ಟ ಅನುಭವದಿಂದ ಒಂದು ವಸ್ತುವಿನ ಬಗ್ಗೆ ಜ್ಞಾನ ಇಲ್ಲದವರಿಗೂ ಇತರರು ಗ್ರಹಿಸಿದ ಜ್ಞಾನವನ್ನು ಭಾಷೆಯ ಮಾಧ್ಯಮದಿಂದ ಪಡೆಯಲೂ ಸಾಧ್ಯವಾಗುತ್ತದೆ. ಇದು ಭಾಷೆಗೂ ಸಮಾಜಕ್ಕೂ ಇರುವ ನಿಕಟ ಸಂಬಂಧವನ್ನು ತೋರಿಸುತ್ತದೆ.
ಭಾಷೆ ಜ್ಞಾನವನ್ನು ಹೊತ್ತು ತರುವ ಮತ್ತು ಸಂಗ್ರಹಿಸಿಡುವ ಮಾಧ್ಯಮವೆಂದು ಈ ಮುಂಚೆಯೇ ಹೇಳಿದೆ. ಭಾಷೆಗೂ ಪರಿಸರಕ್ಕೂ ಇರುವ ಸಂಬಂಧ ಗಮನೀಯವಾದ್ದು. ಭಾಷೆಯ ವಿಸ್ತಾರ ಸಂಸ್ಕೃತಿಯ ವಿಸ್ತಾರಕ್ಕನುಗುಣವಾಗಿದೆ. ಭಾಷೆಯ ಬೆಳವಣಿಗೆ ಸಂಸ್ಕೃತಿಯ ಬೆಳವಣಿಗೆಯೊಂದಿಗೂ ಜನಜೀವನದ ಸಮಸ್ಯೆ ಮತ್ತು ವ್ಯವಹಾರಕ್ಕನುಗುಣವಾಗಿ ನಡೆಯುತ್ತದೆ. ಒಂದು ಜನಾಂಗದ ಅಥವಾ ಸಂಸ್ಕೃತಿಯ ಚರಿತ್ರೆಯನ್ನು ನೋಡುವಾಗಲೂ ಭಾಷೆಗೂ ಸಂಸ್ಕೃತಿಗೂ ಮತ್ತು ಪ್ರಾಕೃತಿಕ ಪರಿಸರಕ್ಕೂ ಇರುವ ಸಂಬಂಧ ವ್ಯಕ್ತವಾಗುತ್ತದೆ. ಶಿಲಾಯುಗದ ಕಾಲದಲ್ಲಿ ಭಾಷೆ ಇತ್ತು ಆದರೆ ಬರಹ ಇರಲಿಲ್ಲ. ನಂತರ ಬರಹದ ಶೋಧನ ಪ್ರಪಂಚದ ಬೇರೆ ಬೇರೆ ಜನಾಂಗಗಳಿಂದ ನಡೆಯಿತು. ಬರಹದ ಸಂಶೋಧನೆ ಭಾಷೆಯ ಸಂಸ್ಕೃತಿಯ ಮತ್ತು ಸಮಾಜದ ಅಭಿವೃದ್ಧಿಗೆ ಕಾರಣವಾಯ್ತು. ಇದಕ್ಕೆ ಮುಖ್ಯ ಕಾರಣ ಭಾಷೆ ಸ್ವರಗಳ ಮಾಧ್ಯಮವನ್ನು ಬಿಟ್ಟು ಚಿತ್ರದ ಮಾಧ್ಯಮಕ್ಕೆ ಬಂದಾಗ ಅದು ಜ್ಞಾನಾಂಶಗಳನ್ನು ಸ್ಥಿರವಾಗಿ ಸಂಗ್ರಹಿಸಿ ಪಸರಿಸುವ ಶಕ್ತಿಯನ್ನು ಪಡೆಯುವುದು. ಭಾಷೆಯ ಮತ್ತು ಸಂಸ್ಕೃತಿಯ ಸಂಬಂಧ ತುಂಬಾ ಜಟಿಲವಾದ ಪ್ರಶ್ನೆ. ಭಾಷೆ ಮತ್ತು ಸಂಸ್ಕೃತಿ ಮನಸ್ಸಿನ ಎರಡು ವಿಧದ ಅವತಾರ; ಆದರೆ ಇವೆರಡು ಒಟ್ಟು ಸೇರಿ ಹರಿಯುವುದರಿಂದಲೇ ಮಾನವ ಸಮಾಜ ನಿರಂತರವಾಗಿ ವಿಕಾಸದ ದಾರಿಯಲ್ಲಿ ಮುಂದುವರಿಯುತ್ತಿದೆಯೆಂಬುದನ್ನು ಮರೆಯಬಾರದು.
ಕವಿ ಮತ್ತು ಕಾಲಧರ್ಮ
ಕವಿ ಮತ್ತು ಕಾಲಧರ್ಮ
-ಎಚ್. ಎಂ. ಚನ್ನಯ್ಯ
ಕವಿಗೂ ಅವನು ಬದುಕುತ್ತಿರುವ ಕಾಲಕ್ಕೂ ಇರುವ ಮತ್ತು ಇರಬೇಕಾದ ಸಂಬಂಧವನ್ನು ಕುರಿತು ಯೋಚಿಸಲು ತೊಡಗಿದಾಗ ಅನೇಕ ಜಟಿಲ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅವುಗಳಿಗೆ ಉತ್ತರಿಸಲು ಯತ್ನಿಸಬೇಕಾಗುತ್ತದೆ. ಏಕೆಂದರೆ, ಕವಿ ತನ್ನ ಜೊತೆಗೆ ಬದುಕುತ್ತಿರುವ ಬಹಳ ಜನಗಳಿಗಿಂತ ಹೆಚ್ಚು ಸಂವೇದನಾಶೀಲನಾದವನು ; ಸಾಮಾಜಿಕವಾದ ವೈಯಕ್ತಿಕವಾದ ಸೂಕ್ಷ್ಮವಾದ ಮುನ್ಸೂಚನೆಗಳು ಅವನಿಗೆ ಬೇಗ ಗಮನಕ್ಕೆ ಬರುತ್ತವೆ. ಅನೇಕ ಸಲ ಉಲ್ಬಣವಾಗುವವರೆಗೆ ಬೇರೆಯವರಿಗೆ ಗೋಚರವಾಗದಿರುವ ಖಾಯಿಲೆಗಳ ಚಿಹ್ನೆಗಳನ್ನು ಒಬ್ಬ ಉತ್ತಮ ವೈದ್ಯ ಪ್ರಾರಂಭದಲ್ಲಿಯೆ ಗ್ರಹಿಸುವಡೆ ಕವಿ, ಆ ಮುನ್ಸೂಚನೆಗಳನ್ನು ಬೇರೆಯವರಿಗಿಂತ ಮೊದಲೆ ಗ್ರಹಿಸಿಬಿಡುತ್ತಾನೆ; ಸಾಮಾಜಿಕ ಜಾಡ್ಯಗಳು ಅವನಿಗೆ ಬೇಗ ಗೋಚರಿಸುತ್ತವೆ.
ಒಬ್ಬ ಲೇಖಕ ಆ ಜಾಡ್ಯಗಳನ್ನು ತನ್ನ ಕೃತಿಗಳಲ್ಲಿ ವೈಯಕ್ತಿಕ ಒತ್ತಡದಿಂದ ಚಿತ್ರಿಸುತಾನೆ. ಹಾಗೆ ಚಿತ್ರಿಸುವುದರ ಮೂಲಕ ಅವು ಬೇರೆಯವರ ಪರಿವೆಗೆ ಬರುವಂತೆ ಮಾಡುತ್ತಾನೆ. ಆ ಜಾಡ್ಯ ಬರಲು ಆ ಸಮಾಜದಲ್ಲಿಯೆ ಇರುವ ಕಾರಣಗಳನ್ನು ಅವನು ಚಿತ್ರಿಸುತ್ತಾನೆ; ಆ ಕಾರಣಗಳನ್ನು ಹೋಗಲಾಡಿಸಿದಾಗ, ಆ ಜಾಡ್ಯವೂ ದೂರವಾಗಬಹುದು ಎನ್ನುವುದನ್ನೂ ಅವನ ಪ್ರಜ್ಞೆ ಮರೆಯುವುದಿಲ್ಲ-ಇದು ಒಂದು ರೀತಿಯ ಸಂಬಂಧ.
ಇನ್ನೊಬ್ಬ ಲೇಖಕನಲ್ಲಿ ಅದು ಇನ್ನೊಂದು ರೀತಿಯಲ್ಲಿ ಕಾಣಬಹುದು. ಇವನಿಗೂ ಈ ಜಾಡ್ಯದ ಪರಿವೆ ಉಂಟು. ಇನ್ನೊಬ್ಬನಂತೆಯೇ ಅದನ್ನು ಇವನೂ ಅಷ್ಟೇ ತೀಕ್ಷ್ಣವಾಗಿ ಅನುಭವಿಸುತ್ತಾನೆ. ಅಭಿವ್ಯಕ್ತಿಗೊಳಿಸುತ್ತಾನೆ. ಆದರೆ, ಇವನಿಗೆ ಮನುಷ್ಯನ ಈ ಒಂದು ವಿಷಮ ಸ್ಥಿತಿ, ಎಂದಿಗೂ ಬದಲಾಗದ್ದು ; ಮನುಷ್ಯ ಬದುಕಿರುವವರೆಗೆ ಅವನು ಹೊತ್ತು ನಡೆಯಬೇಕಾದ ಶಾಪ. ಇಂಥ ಲೇಖಕ, ಮನುಷ್ಯನ ಅಸ್ತಿತ್ವದ ವಿಷಮ ಸ್ಥಿತಿ. ಒಂದು ಸಮಾಜದ ವಿಶಿಷ್ಟ ಪರಿಸ್ಥಿತಿ, ಆ ನಿರ್ದಿಷ್ಟಕಾಲದ ಸಮಾಜದ ವರ್ಗಗಳ ನಂಬಿಕೆಗಳು. ಆರ್ಥಿಕ ಪರಿಸ್ಥಿತಿ, ರಾಜಕೀಯ ಪರಿಸ್ಥಿತಿ, ಬೌದ್ಧಿಕ ವಾತಾವರಣ ಇವುಗಳಿಂದ ನಿಯಂತ್ರಿತವಾದದ್ದಾಗಿರದೆ, ಅದು ಬದಲಾಗದ ಒಂದು ಅನಿವಾರ್ಯ ಪರಿಸ್ಥಿತಿ ಎಂದು ನಂಬುತ್ತಾನೆ.
ಈ ‘ವಿಷಮತೆ’ ಯ ಪರಿವೆಯೆ ಇಲ್ಲದೆ ಕೇವಲ ಪ್ರಗತಿಯನ್ನೆ ಕಾಣುವ, ದೃಷ್ಟಿ ಇನ್ನೊಂದು. ಆಧುನಿಕ ಪರಿಸ್ಥಿತಿಯನ್ನೆ ಗಮನಿಸಿ ಹೇಳುವುದಾದರೆ, ಇಂಥ ಲೇಖಕ ವಿಜ್ಞಾನದಿಂದ ಮನುಷ್ಯ ಸಾಧಿಸಿರುವ ಪ್ರಗತಿಯನ್ನು, ಮನುಷ್ಯನ ಮಹಾನುಭಾವತ್ವವನ್ನು, ಹೊಗಳಿ ಹಾಡುತ್ತಾನೆ. ಅವನಿಗೆ ವಿಜ್ಞಾನ ಈ ಅನುಕೂಲತೆಗಳ ಜೊತೆಯಲ್ಲಿಯೆ ತಂದಿರುವ, ತರುತ್ತಿರುವ ಸಮಸ್ಯೆಗಳು ಕಾಣುವುದಿಲ್ಲ. ಯಂತ್ರೋಪಕರಣ, ಔದ್ಯೋಗೀಕರಣ ಇವುಗಳು ಯೂರೋಪಿನಲ್ಲಿ ಹೋದ ಶತಮಾನದ ಕೊನೆಯಲ್ಲಿ ಯಾವ ಪರಿಣಾಮ ಮಾಡಿದವೊ ಅದನ್ನು ಈಗ ನಮ್ಮ ದೇಶದಲ್ಲಿ ಮಾಡುತ್ತಿವೆ. ಈ ಬಗ್ಗೆ ಅವನು ಕುರುಡ. ಇವುಗಳು ತಂದಿರುವ ತರುತ್ತಿರುವ alienation ಅವನಿಗೆ ಅರ್ಥವಾಗುವುದಿಲ್ಲ ; ಅವು ಸೃಷ್ಟಿಸುತ್ತಿರುವ ಹೊಸ ಸಮಸ್ಯೆಗಳಿಗೆ ಹೊಸ ದೃಷ್ಟಿಗಳಿಗೆ ಅವನು ಹೊರಗು. ಅನಿವಾರ‍್ಯವಾಗಿ ಬರುತ್ತಿರುವ ಈ ಪರಿಸ್ಥಿತಿ ಅವನಿಗೆ ತಿಳಿಯುವುದಿಲ್ಲ. ಅವನು ಹಳೆ ಪ್ರಪಂಚದ ದೃಷ್ಟಿಯಲ್ಲಿಯೆ ಜೀವನವನ್ನು ನೋಡುತ್ತಾನೆ. ಅದನ್ನೇ ಬರೆಯುತ್ತಾನೆ. ಹಳೆಯ ವತೌಲ್ಯಗಳನ್ನೆ ಕುರಿತು ಮನೆಯ ಹೆಂಚಿನ ಮೇಲಿನಿಂದ ಕೂಗುತ್ತಾನೆ-ಇದು ಇನ್ನೂ ಒಂದು ರೀತಿಯ ಸಂಬಂಧ.
ಹೀಗೆ, ಈ ವಿಷಯ ಜಟಿಲವಾದದ್ದಾಗಿದೆ. ಹಾಗಾದರೆ ನಮ್ಮ ‘ಕಾಲಧರ್ಮ’ ಎಂಥದು ? ಎಂಬ ಪ್ರಶ್ನೆ ಏಳುತ್ತದೆ.
ನಮಗೆ ಸ್ವಾತಂತ್ರ ಬಂದ ನಂತರದ ವರ್ಷಗಳಲ್ಲಿ ಅನಿವಾರ್ಯವಾಗಿ ಬಹುಶಃ ನಾವೂ ಅನೇಕ ವಿಷಯಗಳಲ್ಲಿ ಪಾಶ್ಚಾತ್ಯ ರಾಷ್ಟ್ರಗಳನ್ನೇ ಅನುಸರಿಸಬೇಕಾಯಿತು. ಆರ್ಥಿಕವಾಗಿ ಮುಂದುವರಿಯಲು ಕೈಗಾರಿಕೀಕರಣಕ್ಕೆ, ಯಂತ್ರ ವಿದ್ಯೆಗೆ, ವಿಜ್ಞಾನಕ್ಕೆ ಹೆಚ್ಚು ಒತ್ತು ಹಾಕಬೇಕಾಯಿತು. ಈ ಸಂದರ್ಭದಲ್ಲಿ ನಾವೆಷ್ಟೆ ಸಮಾಜವಾದದ ಮೇಲೆ ಮಾತನಾಡಿದರೂ capitalism ನಮ್ಮಲ್ಲಿ ಪ್ರಬಲ ಶಕ್ತಿಯಾಗಿ ಬೆಳೆಯಿತು. ಬೆಳೆಯುತ್ತಿದೆ; ಹೀಗಾಗಿ ಅದು ಪಾಶ್ಚಾತ್ಯ ದೇಶಗಳಲ್ಲಿ ಯಾವ ಸಮಸ್ಯೆಗಳು ಉದ್ಭವವಾಗಲು ಕಾರಣವಾಯಿತೊ ಅದೇ ಸಮಸ್ಯೆಗಳು ನಮ್ಮಲ್ಲೂ ಉದ್ಭವವಾಗಲು ಕಾರಣವಾಗುತ್ತಿದೆ. ಹೊಸ ಪಂಗಡಗಳು ದುಡ್ಡು ಗಳಿಸಿ ಶ್ರೀಮಂತವಾಗಿ, ಸಮಾಜದ ಮೇಲೆ ಹಿಡಿತ ಸಾಧಿಸುತ್ತಿವೆ. ವೈಯಕ್ತಿಕ ಸಂಬಂಧಗಳು ಮಾಯವಾಗಿ ಕೇವಲ ‘ದುಡ್ಡು’ ಎಲ್ಲ ಉಳಿದ ಮೌಲ್ಯಗಳನ್ನು ನಿಯಂತ್ರಿಸುವ ಪರಮ ಮೌಲ್ಯವಾಗಿದೆ. ಎಲ್ಲವನ್ನೂ ಕೊಳ್ಳಬಹುದಾದ ಮಾರಬಹುದಾದ ಸರಕನ್ನಾಗಿ ಅದು ಮಾರ್ಪಡಿಸುತ್ತಿದೆ. ಹಿಂದಿನ ಸಮಾಜದಲ್ಲಿ, ಒಂದು ವಸ್ತುವನ್ನು ತಯಾರಿಸಿದರೆ, ಅದು ಏನು, ಅದನ್ನು ಯಾರಿಗಾಗಿ ತಯಾರಿಸುತ್ತಿದ್ದೇನೆ ಎಂಬ ಪರಿವೆ ತಯಾರಕನಿಗೆ ಇರುತ್ತಿತ್ತು. 1 ಆದರೆ ಈಗ ತಯಾರಾಗುವ ವಸ್ತು ಸಮಗ್ರವಾಗಿ ಏನು ಎನ್ನುವುದೇ ಅದರ ತಯಾರಿಕೆಯಲ್ಲಿ ಭಾಗವಹಿಸುವ ಕೆಲಸಗಾರನಿಗೆ ಗೊತ್ತಿರುವುದಿಲ್ಲ. Division of labour, Over specialization, ಅವನ ಹಿಡಿತಕ್ಕೆ ಸಿಕ್ಕದಿರುವ ಆರ್ಥಿಕ-ಶಕ್ತಿಗಳು, ಮಾನವೀಯ ನೇರ ಸಂಬಂಧಗಳನ್ನು ನಿರ್ನಾಮ ಮಾಡಿ, ವ್ಯಕ್ತಿಯನ್ನು ಅವನ ಅಸ್ತಿತ್ವಕ್ಕೇ “ಆಗಂತುಕ’ ನನ್ನಾಗಿ ಮಾಡುತ್ತವೆ. ಇಂಥ ಪ್ರಪಂಚದಲ್ಲಿ ‘ಕೃತಿ’ ಕೂಡ ಒಂದು ಸರಕಾಗಿ ಕಲೆಗಾರ ಅಂಥ ಸರಕಿನ ತಯಾರಕನಾಗಿ ಪರಿಣಮಿಸಿದರೆ ಆಶ್ಚರ್ಯವಿಲ್ಲ. ದುಡ್ಡೇ ಪ್ರಧಾನವಾದ ಬೂರ್ಜ್ವಾ ಸಮಾಜದಲ್ಲಿ ದುಡ್ಡೇ ಪರಮ ಮೌಲ್ಯವಾದರೆ ಆಶ್ಚರ್ಯವಿಲ್ಲ. ನಾವು, ನಮ್ಮ ನಾಯಕರು ಮತ್ತೆ ಮತ್ತೆ ಹೇಳುವ ‘ವ್ಯಕ್ತಿಸ್ವಾತಂತ್ರ’ ‘ಎಲ್ಲರಿಗೂ ಸಮಾನಾವಕಾಶ’ ಇತ್ಯಾದಿ ಮಾತುಗಳು ಈ ಸಂದರ್ಭದಲ್ಲಿ ಅರ್ಥವಿಲ್ಲದವು. ಏಕೆಂದರೆ ಇಂಥ ಸಮಾಜದಲ್ಲಿ ಈ ಸ್ವಾತಂತ್ರ್ಯಗಳೆಲ್ಲ ಎಲ್ಲರಿಗೂ ಅಲ್ಲ; ಕೇವಲ ದುಡ್ಡಿರುವವರಿಗೆ, ಅಧಿಕಾರ ಇರುವವರಿಗೆ–ಇದು ನಮ್ಮ ಕಾಲಧರ್ಮದ ಒಂದು ಪ್ರಮುಖವಾದ ಮುಖ.
ಇಲ್ಲಿ ಸರಕುಗಳು ತಯಾರಕರನ್ನು ನಿಯಂತ್ರಿಸುತ್ತವೆ ; ವಸ್ತುಗಳು ಮನುಷ್ಯನಿಗಿಂತ ಶಕ್ತಿ ಶಾಲಿಗಳಾಗುತ್ತವೆ. ವ್ಯಕ್ತಿ ತಾನು ಮಾಡುತ್ತಿರುವ ಕೆಲಸಕ್ಕೆ ತಾನೇ ಪರಕೀಯನಾಗುತ್ತಾನೆ ; ನಿಸ್ಸಹಾಯಕನಾಗುತ್ತಾನೆ. ಇಂಥ ತೀವ್ರವಾದ ತ್ಯಕ್ತ ಸ್ಥಿತಿ ಪಾಶ್ಚಾತ್ಯ ಬಂಡವಾಳಶಾಹಿ ದೇಶಗಳನ್ನಾವರಿಸಿದ್ದು, ಅವರನ್ನು ಅನುಸರಿಸುತ್ತಿರುವ ನಮ್ಮನ್ನು ಆವರಿಸುತ್ತಿದೆ. ಆ ಸ್ಥಿತಿಯನ್ನು ಅಲ್ಲಿನ ಲೇಖಕರು, ತತ್ವಶಾಸ್ತ್ರಜ್ಞರು ತೀವ್ರವಾಗಿ ಅನುಭವಿಸಿ
1 ಉದಾಹರಣೆಗೆ ಕುಂಬಾರ, ಮಡಕೆಗಳನ್ನು ತಯಾರಿಸುವಾಗ ತಾನು ತಯಾರಿಸುವ ಆ ವಸ್ತುಗಳ ಜೊತೆ ನಿಕಟ ಸಂಬಂಧ ಹೊಂದಿರುತ್ತಾನೆ. ಮಣ್ಣು ತಂದ ಹದ ಮಾಡಿ, ಕುಲಾಲ ಚಕ್ರದಲ್ಲಿ ಅದಕ್ಕೆ ರೂಪುಕೊಟ್ಟು ತಟ್ಟಿ, ಆವಿಗೆಯಲ್ಲಿ ಸುಟ್ಟು, ಸಂತೆಯಲ್ಲಿ ಮಾರುವವರೆಗೆ ಅವನೊಂದಿಗಿನ ಆ ವಸ್ತುವಿನ ಸಂಬಂಧ ಜೀವಂತವಾದದ್ದಾಗಿರುತ್ತಿತ್ತು.
ದರು; ಅದರ ಪರಿಣಾಮವಾಗಿ ಕಾಮೂನ ‘ಅನ್ಯ’ದಂಥ ಕಾದಂಬರಿ, ಕಾಫ್ಕನ The Trial ನಂಥ ಕಾದಂಬರಿ.
ಇನ್ನು ವಿಜ್ಞಾನವೂ ಸಾಮಾನ್ಯವಾದ ಆಗಂತುಕ ಸ್ಥಿತಿಗೆ ತನ್ನ ಕಾಣಿಕೆ ಸಲ್ಲಿಸುತ್ತಿದೆ. ಸಾಮಾನ್ಯ ಮನುಷ್ಯನನ್ನು, ವಿಜ್ಞಾನದ ಸಂಶೋಧನೆಗಳು, ಅವನು ಬದುಕಿರುವ ಪ್ರಪಂಚದಿಂದಲೇ ಅವನನ್ನು ಆಗಂತುಕನನ್ನಾಗಿ ಮಾಡಿವೆ. ಅಣುವಿನ ಬಗ್ಗೆ, ಸಾಪೇಕ್ಷವಾದದ ಬಗ್ಗೆ Cybernetics ಬಗ್ಗೆ, ಅವನಿಗೆ ಆಸ್ಪಷ್ಟವಾಗಿ ಗೊತ್ತಿರುವ ವಿಷಯಗಳು ಅವನನ್ನು ಅವನಿಗೆ ಇಲ್ಲಿಯವರೆಗೆ ಗೊತ್ತಿದ್ದ ಪ್ರಪಂಚದಿಂದ ದೂರಮಾಡಿವೆ ; ಅಷ್ಟೇ ಅಲ್ಲ. ಅರ್ಥವಾಗದ್ದಾಗಿ ಮಾಡಿವೆ. ಕೇವಲ ವಿಜ್ಞಾನಿಗಳಿಗೆ ಅರ್ಥವಾಗುವ ಈ ಪ್ರಪಂಚ ಸಾಮಾನ್ಯರಿಗೆ ಪರಕೀಯವಾದದ್ದಾಗಿದೆ-ಈ ಮಾತುಗಳು ಪಾಶ್ಚಾತ್ಯರಿಗೆಷ್ಟೋ ಅಷ್ಟೆ ನಮಗೂ ಸತ್ಯವಾಗುತ್ತಿವೆ.
ಹೀಗೆ ಯಾವ ಕ್ಷೇತ್ರದಲ್ಲಿ ನೋಡಿದರೂ, ಯಾವ ಕೋನದಿಂದ ನೋಡಿದರೂ ಅಧುನಿಕ ಮನುಷ್ಯ ಅನುಭವಿಸುತ್ತಿರುವ ಆಗಂತುಕ ಸ್ಥಿತಿ, ಹಿಂದೆಂದ ಮನುಷ್ಯ ಅನುಭವಿಸಿದ “ಆಗಂತುಕ ಸ್ಥಿತಿ”ಗಿಂತ ಹೆಚ್ಚು ತೀವ್ರವಾದದ್ದೂ ಗಾಢವಾದದ್ದೂ ಆಗಿದೆ. ಈ ಒಂದು ಛಿದ್ರಛಿದ್ರವಾದ ಪ್ರಪಂಚದ ಸ್ಥಿತಿಯ ಬಗ್ಗೆ ಪಾಶ್ಚಾತ್ಯ ಆಧುನಿಕ ಸಾಹಿತ್ಯದಲ್ಲಿ ಹೆಚ್ಚಾಗಿ ಕಾಣುತ್ತೇವೆ. 1 ಈ ಒಂದು ಬೆಳವಣಿಗೆಗೆ ಪಾಶ್ಚಾತ್ಯ ಸಮಾಜದ decadence ಕಾರಣವಾದರೂ, ಇದು ಗುಹ್ಯಾತ್ ಗುಹ್ಯತರ ಸೂಕ್ಷ್ಮ ಅನುಭವಗಳನ್ನು ವ್ಯಕ್ತಪಡಿಸುವ ಭಾಷೆಯ ಸಾಧ್ಯತೆಗಳ ಅನ್ವೇಷಣೆಗಳಿಗೆ ಕಾರಣವಾಯಿತು.
ಆಧುನಿಕ ಮನುಷ್ಯನ ಅಸ್ತಿತ್ವದ ವಿಷಮತೆಯನ್ನು ತೀವ್ರವಾಗಿ ಚಿತ್ರಿಸುವ ಕಾಮೂ, ಬೆಕೆಟ್, ಆದು ಮನುಷ್ಯನಿಗೆ ಎಂದೆಂದೂ ಬಿಡದೆ ಅಂಟಿಕೊಂಡಿರುವ ಸ್ಥಿತಿ ಎಂದು ನಂಬುವವರು; ಅದೇ, ಅಷ್ಟೇ ತೀವ್ರವಾಗಿ ಅದನ್ನು ಚಿತ್ರಿಸುವ ಬ್ರೆಃಕ್ಟ್, ಅದು ಕಾಲ ದೇಶದಿಂದ ಬದ್ಧವಾದದ್ದು ಎಂದು ನಂಬುವವನು : ಅಂದರೆ, ಒಂದು ಕಾಲದ ಸಮಾಜದ
1. Rimband ನಲ್ಲಿ ಅಭಿವ್ಯಕ್ತವಾಗುವಾಗ, ಸಾಂಪ್ರದಾಯಿಕವಾದ ಕಾವ್ಯಬಂಧವನ್ನೂ ಅದು ಛಿದ್ರಮಾಡಿತು. ಅವನ ಛಿದ್ರವಾದ ಪ್ರಪಂಚದ ತುಣುಕುಗಳನ್ನು, ಸುಂದರವಾದದ್ದನ್ನು ಆಸುಂದರವಾದದ್ದನ್ನು, ಪೌರಾಣಿಕವಾದದ್ದನ್ನು ವಾಸ್ತವಿಕವಾದದ್ದನ್ನು ಒಟ್ಟಿಗೆ ಬೆಸೆಯುವ, ಅಭಿವ್ಯಕ್ತಿಯ ರೀತಿ ಪಾಶ್ಚಾತ್ಯ ಕಾವ್ಯದಲ್ಲಿಯೇ ದೊಡ್ಡ ಕ್ರಾಂತಿ ಮಾಡಿತು. ಮುಂದೆ ಅದು Eliot ನಂಥ ಕವಿಯನ್ನು ಸಾಧ್ಯಮಾಡಿತು.
ಸ್ಥಿತಿಯಂಥ ಕಾರಣಗಳೂ ಅದಕ್ಕೆ ಕಾರಣ. ಅವುಗಳನ್ನು ಮನುಷ್ಯ ಬದಲಾಯಿಸಬಲ್ಲ; ಹಾಗೆ ಬದಲಾಯಿಸುವುದರ ಮೂಲಕ ಈ ವಿಷಮ ಸ್ಥಿತಿಯನ್ನೂ ಬದಲಾಯಿಸಬಲ್ಲ ಎಂದು ನಂಬುವವನು. ಈ ಪರಿಸ್ಥಿತಿಗೆ ಇರುವ ಈ ಎರಡು ಮೂಲಭೂತ ಧೋರಣೆಗಳು ಒಂದು ಅರ್ಥದಲ್ಲಿ ಸತ್ಯವಾದುವು. ಆದರೆ ಬ್ರೇಃಕ್ಟನ ಆಶಾವಾದದಿಂದ ಕೂಡಿದ ಧೋರಣೆ ಹೆಚ್ಚು ಅರ್ಥಪೂರ್ಣವಾದದ್ದು. ಆದರೆ, ಬ್ರೆಃಕ್ಟನ ಆಶಾವಾದ ಸರಳಗೊಳಿಸಿದ ಆಶಾವಾದದ ಧೋರಣೆಯಿಂದ ಭಿನ್ನವಾದದ್ದು. ಕಮೂ, ಬೆಕೆಟ್ ಮತ್ತು ಬ್ರೆಃಕ್ಟರನ್ನು ಕುರಿತು ಏಕೆ ಹೇಳಬೇಕಾಯಿತೆಂದರೆ, ಇವರು ಎರಡು ಆಧುನಿಕ ಪ್ರಬಲ ಧೋರಣೆಗಳಿಗೆ ಪ್ರತಿನಿಧಿಗಳಂತಿದ್ದಾರೆ.
ಆದರೆ, ಈ ಎರಡು ಧೋರಣೆಗಳೂ, ದುಡ್ಡೆ ಪ್ರಧಾನವಾದ, ಜೀವನದಲ್ಲಿ ಯಶಸ್ಸು ಎಂದರೆ ದುಡ್ಡು ಅಧಿಕಾರ ಸಂಪಾದನೆ ಎಂದು ಭಾವಿಸುವ, ಎರಡು ಮಹಾಯುದ್ಧಗಳಿಗೆ ಕಾರಣವಾದ ಬೂರ್ಜ್ವಾ ಬಂಡವಾಳಶಾಹಿ ಸಮಾಜದ ವಿರುದ್ಧ ಎದ್ದ ಬಂಡುಗಳೆ ಆಗಿವೆ.
ನಮ್ಮಲ್ಲಿ ಇರುವ ಪರಿಸ್ಥಿತಿ ಏನು ? ಅದಕ್ಕಿಂತ ಬೇರೆಯಾಗೇನಿಲ್ಲ. ಧರ್ಮದ ಹೆಸರಲ್ಲಿ ನಡೆದ ನಡೆಯುತ್ತಿರುವ ಅತ್ಯಾಚಾರಗಳೆಷ್ಟು ? ಧರ್ಮ ಎಂಬ ಓಪಿಯಂನ್ನು ಸಾಮಾನ್ಯ ಜನತೆಗೆ ತಿನ್ನಿಸಿ ಲೋಲುಪ್ತರಾಗಿರುವವರು ಯಾರು ? ಸ್ವಾತಂತ್ರ್ಯ, ಎಲ್ಲರಿಗೂ ಸಮಾನಾವಕಾಶ ಇತ್ಯಾದಿ ಮಾತುಗಳನ್ನು ಉಲ್ಬಣಗೊಳಿಸಿ ಹೇಳುತ್ತಾ ಆ ಹಕ್ಕುಗಳನ್ನು ಅನುಭವಿಸುತ್ತಿರುವ ಮಂದಿ ಯಾರು ? ಮೌಡ್ಯದಲ್ಲಿ ಸಾಮಾನ್ಯ ಜನ ಎಲ್ಲಿಯವರೆಗೆ ಬಿದ್ದಿರುತ್ತಾರೋ ಅಲ್ಲಿವರೆಗೆ ಈ ಮಂದಿ ಕ್ಷೇಮವಾಗಿರುತ್ತಾರೆ. ಅದು ಇವರಿಗೆ ಚೆನ್ನಾಗಿ ಗೊತ್ತು.. ಅದಕ್ಕೆ ಈ ಮೌಢ್ಯ ಇನ್ನೂ ಬೆಳೆಯಲು ಈ ಜನಗಳ ಪ್ರಯತ್ನ. ಈ ಸ್ಥಿತಿಯಲ್ಲಿ ನಕ್ಸ್‌ಲೈಟರು, ದಿಗಂಬರ ಪಂಥದವರು ಹುಟ್ಟಿದರೆ ಆಶ್ಚರ್ಯವೇಕೆ ?
ಇಂಥ ಸಮಾಜದ ಒಳಗೇ ಇರುವ ಕವಿ, ಅದರ ಅಂಗವೇ ಆಗಿರುವ ಕವಿ ತಾಳಬೇಕಾದ ಧೋರಣೆ ಏನು? ಇಂಥ ಸ್ಥಿತಿಗೆ ಹೇಸಿ ಪಲಾಯನ ಮಾಡಬೇಕೆ? ಇಂಥ ಸಮಾಜದ ಗೊಡವೆಯೇ ಬೇಡ ಅಂತ ಆಧ್ಯಾತ್ಮಿಕವಾದಿಯಾಗಿ, ಕೇವಲ ಸಾರ್ವಕಾಲಿಕ ಎನ್ನಿಸಿಕೊಳ್ಳುವ ಆಧ್ಯಾತ್ಮಿಕ ವಿಷಯಗಳಲ್ಲಿ ಲಂಪಟನಾಗಬೇಕೆ ? ಅಥವಾ ಈ ಸಮಾಜದ ದುಃಷ್ಕರ್ಮಗಳಲ್ಲಿ ತಾನೂ ಪಾಲುಗಾರನಾಗಿ ಆತ್ಮವಂಚನೆ ಮಾಡಿಕೊಳ್ಳಬೇಕೆ ? ಅಥವಾ ಅದರ ವಿರುದ್ಧ ಸಿಡಿದೇಳಬೇಕೆ ? ಇಂಥ ‘ಯುಗಧರ್ಮ’ದ ಜೊತೆಗಿನ ಸಂಬಂಧ ಕವಿಯದು ಏನಾಗಬೇಕು ?
ಈ ವಿಷಮತೆಗೆ ಬಹುಶಃ ವೈಯಕ್ತಿಕ ಒತ್ತಾಯದಿಂದ ಅಭಿವ್ಯಕ್ತಿ ಕೊಡುವ ಲೇಖಕ ಹೆಚ್ಚು ಅರ್ಥಪೂರ್ಣನಾಗುತ್ತಾನೆ. ಆದರೆ, ಈ ವಿಷಮತೆಗೆ ಕಾರಣವಾದ ಅಂಶಗಳನ್ನು ಜಿಸುವುದರ ಜೊತೆಗೆ, ಅವು ಬದಲಾಗಬಲ್ಲಂಥವು, ಬದಲಾಗಬೇಕಾದಂಥವು ಎಂಬ ಧೋರಣೆಯೂ ಸೇರಿದಾಗ ಅಥ ಲೇಖಕ ಒಂದು ಚಾರಿತ್ರಿಕ ಸತ್ಯವನ್ನು ವ್ಯಕ್ತಪಡಿಸುವಂಥವನಾಗುತ್ತಾನೆ. ಆದರೆ, ಇಂಥ ಸಂದರ್ಭದಲ್ಲಿ ಲೇಖಕ, ಪೂರ್ವನಿರ್ಣಾಯಕ ಮಾರ್ಕ್ಸ್ ಸಿದ್ದಾಂತವನ್ನೂ ಪೂರ್ಣವಾಗಿ ಒಪ್ಪದೆ. ಅತಿ ಸರಳಗೊಳಿಸಿದ ನೈತಿಕ ತತ್ವಗಳನ್ನು ಬೋಧಿಸುವ ತೀವ್ರ ಸುಧಾರಣಾವಾದಿಗಳನ್ನೂ ಒಪ್ಪದೆ, ಇನ್ನೂ ಆಳವಾದ ಆರ್ಥಪೂರ್ಣವಾದ ಸಂಬಂಧವನ್ನು ತಾನು ಬದುಕುತ್ತಿರುವ ಸಮಾಜದ ಜೊತೆಗೆ ಹೊಂದಬೇಕಾಗುತ್ತದೆ.
ಬೇತಾಳ
ಬೇತಾಳ
ಎಂ. ಎಸ್. ರಘುನಾಥ್
ಭೂರಿ ಬೇತಾಳ
ಸ್ಮಶಾನ ‘ರುದ್ರ ನೀರವತೆಯಲ್ಲಿ
ದಟ್ಟ ಹುಣಿಸೆಯಲ್ಲಿ
ಆಕಾಶಕ್ಕೆ
ಕಣ್ಣು ಚಾಚಿದ
ಎಲುಬುಗೂಡುಗಳಲ್ಲಿ.
ಬರಿ ಬಿಳಿಯ ನೆರಳು
ಕಾಡಿಸುವುದು
ದಾರಿಗೆಟ್ಟ ಮನವನ್ನು
ಎದೆ ಕುಗ್ಗಿಸಿ
ಪ್ರವಹಿಸುವುದು
ಬುದ್ಧಿ ಕ್ಷಯದಲ್ಲಿ
ಹಿಪ್ಪಿ ಹಿಂಡಿಯಾಗಿ
ಪಾಪಾಸ್ ಕಳ್ಳಿಗೂ ಕಡೆಯಾಗಿ
ನಿರ್ಜನ ಪ್ರದೇಶದಲ್ಲಲೆಯುವ
ಮನುಷ್ಯ ಮಾತ್ರರ
ನೆರಳಿನ ಆಲೆಯಲ್ಲಿ
ಸಾಗರದ ಎತ್ತರಕೂ
ಹರಿವ ನಾಡಿಗಳಲ್ಲಿ.
ಅಮೇರಿಕಾ-ಎರಡು ಕಿರುಕವನಗಳು
ಅಮೇರಿಕಾ-ಎರಡು ಕಿರುಕವನಗಳು
-ಎಂ. ಸಿ. ಮನೋಹರಚಂದ್ರನ್
ಒಳ್ಳೇ ಹೇಳಿದಿರಿ
ನಾನು ಕಾಣದವನೇ ಅವನು?
ಕಡಲ ದಾಟಿ ಅವನೂರಿಗೆ ಹೋಗಿ ಇದ್ದು
ಬಂದವರೆಂದು ಬೀಗದಿರಿ ಸ್ವಾಮಿ.
ನೆರೆಯ ನಾಣಿಯಷ್ಟೆ ಪರಿಚಯ ನನಗವನು.
ವಿಜ್ಞಾನ ದೀಪ ತಿಕ್ಕಿ ರಾಶಿ ರಾಶಿ ಗೋಧಿ ಬೆಳೆದವನಲ್ಲವೋ
ಹೈಬ್ರಿಡ್ ದನ, ಕುರಿ, ಹಂದಿ ಜಾತಿಗಳ ಬ್ರಹ್ಮನಲ್ಲವೋ
ಹಡೆದ ತಾಯನೊದ್ದು ಚಂದ್ರಿಯ ಬಳಿ ಓಡಿಹೋದವನಲ್ಲವೋ
ಅವನು ?
ನನಗೇ ಹೇಳಲು ಬರುತ್ತೀರಲ್ಲ, ಅಂದಹಾಗೆ ಗೊತ್ತೇ
ನಿಮಗೆ ? ನಿಮ್ಮ ಈ ಅಲ್ಲಾದೀನನಿಗೆ ಆ ದೀಪದ
ಭೂತವೇ ಬಡಿದುಕೊಂಡಿದೆಯಂತಲ್ಲ ಸ್ವಾಮಿ !
ಯಾರಿಗಾದರೂ ಹೇಳಿ ಭೂತೋಚ್ಛಾಟನೆ ಮಾಡಿಸಲೇಬೇಕು.
ಇಲ್ಲದಿದ್ದರೆ
ಆ ಮಹರಾಯ ನಮಗೇ ಭೂತ ಹಿಡಿಸಿಬಿಡುತ್ತಾನಷ್ಟೆ.
ಮೂಟೆ ಮೂಟೆ
ಆಟಂ ಬಾಂಬುಗಳ ರಾಶಿಯ
ಮೇಲೆ
ಅಮೇರಿಕನ್ ಹ್ಯಾಟ್
ಕೆಳಗೆ
ವಿಲಿ ವಿಲಿ ವಿಯಟ್‌ನಾಮ್
ಮಾನವೀಯತೆ.
ಉದ್ದುದ್ದ ಕೂದಲ, ಗಬ್ಬು ನಾರುವ
ಅಮೇರಿಕನ್ ನಾಗರೀಕತೆ
ಯ
ಗೊತ್ತುಗುರಿ ಇಲ್ಲದ ಅಲೆತ.
ಕಳೆದುಹೋದ ಹೃದಯಕ್ಕಾಗಿ
ತಡಕಾಟ.
ಇತ್ತೆ ಹೃದಯ ಎಂದು ಕೇಳುವುದೇಕೆ ?
ಇತ್ತು
ಈಗಲೂ ಇದೆ-ಚಂದ್ರನಲ್ಲಿ.
ಕಿಟಕಿ
ಕಿಟಕಿ
-ಎಂ. ಪಿ. ಮಸೂಪರಚಂದ್ರನ್
ಹೊರಗೆ ಸಂಚಾರವಿಲ್ಲ ; ಆದರೂ ರಣಬಿಸಿಲಲ್ಲಿ
ಒಣಹುಲ್ಲು ಮೆಲುಕುವ ಮುದಿ ಬಸವ.
ಕಿಟಕಿ ಬಂದಾಗ ನಾನಿರಲಿಲ್ಲ ; ನಾನು ಬಂದಾಗ ಕಿಟಕಿ ಇತ್ತು.
ನನಗೆ ಚೆನ್ನಾಗಿ ನೆನಪಿದೆ.
ಎರಡು ವರುಷ ಎಂಟು ತಿಂಗಳ ಪೋರ
ಬಟ್ಟಲುಗಂಗಳಲ್ಲಿ ಕಿಟಕಿಯಾಚೆಯ ಬಣ್ಣಬಣ್ಣದ
ಜಗತ್ತು ನೋಡುವ ತವಕ
ಹೆಬ್ಬೆರಳ ನೆಲಕೊತ್ತಿ ಚಿಮ್ಮಿ ಕಣ್ಣರಳಿಸಿದಾಗ
ಜಗತ್ತು ಬರೀ ಗೊಡೆ !
ನನಗೆ ಚೆನ್ನಾಗಿ ನೆನಪಿದೆ
ನನಗೆ ಹದಿನೆಂಟು ; ಕಿಟಕಿ ಎಮರು ಗೋಡೆಗೆ ಬಂತು
ಕಿಟಕಿ ; ನೇರ ಎದುರಿಗಿರಲಿಲ್ಲ.
ಆ ಕಿಟಕಿಯೊಳಗಿನ ಚಂಚಲಕಣ್ಣುಗಳು-ಹುಡುಕುವ ಈ ಕಿಟಕಿಯೊಳಗಿನ
ಕಣ್ಣುಗಳು. ಫಲ ಕುತ್ತಿಗೆ ಉಳುಕು.
ಹೊರಗೆ ಸಂಚಾರವಿಲ್ಲ ; ಆದರೂ ರಣಬಿಸಿಲಲ್ಲಿ
ಒಣ ಹುಲ್ಲು ಮೆಲಕುವ ಮುದಿಬಸವ.
ಅರರರೇ ! ನನ್ನೆದುರಿಗೇ ಆಟವೇ ಈ ಮಗರಾಯನದು !
ಅದೇನು ಕಣ್ಸನ್ನೆ ಬಾಯ್ಸನ್ನೆ ಕಿಟಕಿಯ ಬಳಿ ನಿಂತು ?
ಓದಿಲ್ಲ; ಬರವಿಲ್ಲ.
ಕಿಟಕಿ ಮುಚ್ಚಿಸಬೇಕು !
ಸಾಹಿತ್ಯ ಮತ್ತು ಪ್ರತಿಭಟನೆ
ಸಾಹಿತ್ಯ ಮತ್ತು ಪ್ರತಿಭಟನೆ
-ಯು. ಆರ್. ಅನಂತಮೂರ್ತಿ
ನಮ್ಮ ಪ್ರತಿಭಟನೆಗಳು ಸಾಮಾನ್ಯವಾಗಿ ಹೇಗೆ ಕೊನೆಗೊಳ್ಳುತ್ತವೆ ? ಬ್ರಿಟನ್ನಿನ ಅಥವಾ ಅಮೆರಿಕದ ಆಥವಾ ದೆಹಲಿಯ ವಿಶ್ವವಿದ್ಯಾನಿಲಯದ ಕ್ಯಾಂಪಸ್ಸುಗಳಲ್ಲಿ ನಾವು ಭೇಟಿ ಮಾಡುವ ಬಹಳಷ್ಟು ಜನ ಭಾರತೀಯ ವಿದ್ಯಾರ್ಥಿಗಳು ಉಗ್ರವಾದಿ ಕಮ್ಯೂನಿಸ್ಟ್ ರಾಗಿರುತ್ತಾರೆ. ದೂರದಿಂದ ನೋಡಿದಾಗ ಅವನಿಗೆ ಕ್ರಾಂತಿಯೊಂದೇ ಭಾರತದ ಸಮಸ್ಯೆಗಳಿಗೆ ಉತ್ತರವಾಗಿ ಕಾಣಿಸುತ್ತದೆ. ಆದರೆ ಅದೇ ವಿದ್ಯಾರ್ಥಿ ಭಾರತಕ್ಕೆ ಹಿಂದಿರುಗಿ ಉದ್ಯೋಗ ಹಿಡಿದ ಮೇಲೆ ಪರಂಪರಾಗತ ವಿಚಾರಧಾರೆಯ ಅವನ ಸಂಸಾರ, ಪರಿಸರ ಅವನನ್ನು ಒಳಗೆ ಸೆಳೆದುಕೊಳ್ಳುತ್ತದೆ; ಅಥವಾ ಇವನೇ ತಾನಾಗಿ ಒಳಪಡುತ್ತಾನೆ.
ಭಾರತದಲ್ಲಿ ಬೂರ್ಜ್ವಾ ಒಬ್ಬನ ಸಿಟ್ಟು ಅವನಿನ್ನೂ ವಿಶೇಷ ಸೌಲಭ್ಯಗಳನ್ನು ಆಯಾಚಿತವಾಗಿ ಪಡೆಯುವ ವರ್ಗಕ್ಕೆ ಸೇರಿದವನಾದ್ದರಿಂದ ನಿಜವಾದದ್ದಲ್ಲ. ಹದಿನೈದು ವರ್ಷಗಳ ಹಿಂದೆ ಒಬ್ಬ ಕಾಲೇಜು ಅಧ್ಯಾಪಕನಿಗೆ ಸಿಗುತ್ತಿದ್ದುದು ನೂರು ರೂಪಾಯಿ ಮತ್ತು ಬಹಳ ಸಣ್ಣ ಮೊತ್ತದ ತುಟ್ಟಿಭತ್ಯ, ಈಗ ಅದು ಕಮ್ಮಿಯೆಂದರೆ ನಾಲ್ಕರಷ್ಟು ಹೆಚ್ಚಾಗಿದೆ. ಆದರೆ ಮೈಸೂರಿನ ಒಬ್ಬ ಟಾಂಗಾವಾಲಾ ಬಾಡಿಗೆಯನ್ನು ದ್ವಿಗುಣಗೊಳಿಸಿಕೊಳ್ಳಲು ಪ್ರತಿನಿತ್ಯ ಚೌಕಾಸಿ ಮಾಡಬೇಕು. ಕ್ಷೌರಿಕ ವರ್ಗದ ಸಂಪಾದನೆಯಂತೂ ಅವರು ಕುಶಲ ಕರ್ಮಿಗಳೂ, ಸಂಗೀತಗಾರರೂ ಆಗಿದ್ದರೂ ಸಹ ಎರಡರಷ್ಟು ಕೂಡ ಹೆಚ್ಚಾಗಿಲ್ಲ. ಸ್ವಂತ ಅನುಭವದಲ್ಲಿ ಬೇರುಗಳಿಲ್ಲದ, ಅವ್ಯಕ್ತದಲ್ಲಷ್ಟೇ ಅನುಭವಿಸಿದ ನಮ್ಮ ಸಿಟ್ಟುಎಷ್ಟು ನಿಜವಾಗುವುದು ಸಾಧ್ಯ ? ನೆಹರೂ ಯುಗ ಮತ್ತು ಇಂದಿರಾಯುಗ ಎರಡೂ ಮಧ್ಯಮ ವರ್ಗದ ಬಗ್ಗೆ ಬಹಳ ಉದಾರವಾಗಿ ನಡೆದುಕೊಂಡಿವೆ ; ಮತ್ತು ನಮ್ಮ ಲೇಖಕರು, ರಾಜಕಾರಣಿಗಳು, ಅಧ್ಯಾಪಕರು ಬಂದಿರುವುದು ಈ ಮಧ್ಯಮ ವರ್ಗದಿಂದ. ಹೀಗಾಗಿ ನಮ್ಮ ಪ್ರತಿಭಟನೆ ಮತ್ತು ಸಿಟ್ಟು ಒಂದೋ ರೊಮ್ಯಾಂಟಿಕ್ ಲೋಲುಪತೆಯಾಗುತ್ತದೆ; ಇಲ್ಲವೇ ನಾವು ಪಟ್ಟಭದ್ರರನ್ನು ಹೆದರಿಸಿ ನಮ್ಮ ಬೆಲೆಯೇರಿಸಿಕೊಳ್ಳಲು ಉಪಯೋಗಿಸುವ ಬಹುಸೂಕ್ಷ್ಮ ತಂತ್ರಗಳಾಗುತ್ತವೆ.
ಅಂದರೆ ನಾನು ಹೇಳುತ್ತಿರುವುದರ ಅರ್ಥ ಪರದೇಶದಲ್ಲಿದ್ದಾಗ ಅಥವಾ ಭಾರತದಲ್ಲೇ ಯಾವುದಾದರೂ ಶ್ರೀಮಂತ ಕಾಲೇಜಲ್ಲಿ ಓದುತ್ತಿರುವಾಗ ಭಾರತೀಯ ವಿದ್ಯಾರ್ಥಿಗೆ ಬರುವ ಸಿಟ್ಟು ಅಪ್ರಮಾಣಿಕವಾದದ್ದು ಅಥವಾ ಸುಳ್ಳು ಎಂದಲ್ಲ; ಇದು ಅವನನ್ನು ಎಲ್ಲಿಗೂ ಮುಟ್ಟಿಸುವುದಿಲ್ಲ ಎಂದು ಭಾರತದ ಮಟ್ಟಿಗೆ ಒಂದು ಭಯಾನಕ ಸತ್ಯವೆಂದರೆ ಪರದೇಶದಲ್ಲಿದ್ದಾಗ ನಮ್ಮನ್ನು ಗೊಂದಲಗೊಳಿಸುವ ವಾಸ್ತವಗಳಿಗೆ ನಾವು ಭಾರತದಲ್ಲಿ ನೆಲೆಯೂರಿದ ಮೇಲೆ ಒಗ್ಗಿ ಹೋಗುತ್ತೇವೆ. ಡಾಸ್ಟವಸ್ಕಿ ತನ್ನ ಕಾದಂಬರಿಗಳಲ್ಲಿ ಚಿತ್ರಿಸುವಷ್ಟು ಆಳವಾಗಿ ಬಡತನವನ್ನು ಚಿತ್ರಿಸುವ ಕಾದಂಬರಿಗಳು ಕನ್ನಡದಲ್ಲಿ ಬಹು ಕಡಿಮೆ. ಭಾರತೀಯ ಲೇಖಕ ತನ್ನೆದುರೇ ಕಾಣುವ ಭಯಾನಕತೆಯ ಸತ್ಯ ಸ್ವರೂಪಕ್ಕೆ ಜಡವಾಗಿದ್ದಾನೆ. ನಾವು ಪ್ರತಿಕ್ರಿಯೆ ವ್ಯಕ್ತಪಡಿಸುವುದು ಅಸ್ಪಷ್ಟಗಳಲ್ಲಿ ; ವಿಶೇಷಣಗಳ ಸರಮಾಲೆಯಲ್ಲಿ ಅಥವಾ ದೆಹಲಿಯ ಇಂಪೀರಿಯಲ್ ಹೋಟೆಲ್‌ನ ಏರ್‌ಕಂಡೀಷನ್ಡ್ ದಾಲ್ ರೂಮಿನಲ್ಲಿ ಕುಳಿತು ಸಾಹಿತ್ಯದ ಕಾಲ ಮುಗಿದು ಹೋಗಿದೆ ಎಂದು ಅಪ್ಪಣೆ ಕೊಡಿಸಿದ ಭಾರತೀಯಾಂಗ್ಲ ಲೇಖಕರೊಬ್ಬರ ಹಾಗೆ ರೆಟರಿಕ್ಕಿನ ಗತ್ತಿನಲ್ಲಿ ಅಥವಾ ನ್ಯಾಷನಲ್ ಬುಕ್ ಟ್ರಸ್ಟಿ ನವರು ಏರ್ಪಡಿಸಿದ್ದ ಒಂದು ಸಭೆಯಲ್ಲಿ ತಾವು ಸಮಾಜವಾದ, ದೇಶದ ಏಕತೆ ಇತ್ಯಾದಿಗಳಲ್ಲಿ ನಂಬಿಕೆಯುಳ್ಳವರೆಂದು ಹೇಳುತ್ತಾ, (ಒಬ್ಬರು ಮಂತ್ರಿಗಳೂ ಅಲ್ಲಿ ಉಪಸ್ಥಿತರಿದ್ದರು) ತಾವು ಸಾಮಾಜಿಕ ಅನ್ಯಾಯವನ್ನು ಖಂಡಿಸಿ ಬರೆದ ಒಂದು ಕಾದಂಬರಿ ಏಳುಸಾವಿರದ ಐನೂರು ರೂಪಾಯಿಗಳ ಬಹುಮಾನ-ತೆರಿಗೆ ವಿನಾಯ್ತಿ ಸಮೇತ (ಅವನದ್ದೇ ಮಾತು)-ಪಡೆಯಿತೆಂದು ಪರಿಚಯ ಮಾಡಿಕೊಂಡ ಒಬ್ಬ ಜನಪ್ರಿಯ ತಮಿಳು ಲೇಖಕರ ಹಾಗೆ. ಈ ವ್ಯಕ್ತಿ ಹಾಗೆ ಪರಿಚಯ ಮಾಡಿಕೊಂಡಾಗ ತಾನು ಮಾರಾಟಕ್ಕಿದ್ದೇನೆ ಎಂದು ಪಟ್ಟಭದ್ರರೆದುರು ಜಾಹೀರು ಮಾಡಿಕೊಳ್ಳುತ್ತಿದ್ದಾನೆಂದು ಯಾರಿಗಾದರೂ ತಿಳಿಯುವಂತಿತ್ತು.
ಮಧ್ಯಮವರ್ಗದ ಒಬ್ಬ ಲೇಖಕ ಪ್ರತಿಭಟನೆಯ ಸಾಹಿತ್ಯ ಬರೆಯುವುದು ಸಾಧ್ಯವೇ ಎಂಬ ಆತಂಕ ನನಗಿದೆ. ನಮ್ಮಲ್ಲಿ ಹೆಚ್ಚಿನವರು ಮಾಡಬಹುದಾದ್ದೆಂದರೆ ನಮ್ಮ ಓದುಗ ರಿಗೆ-ಇವರೂ ಮಧ್ಯಮ ವರ್ಗದವರೇ ಆಗಿರುತ್ತಾರೆ-ತಮ್ಮ ಸ್ಥಿತಿಯ ಬಗ್ಗೆ ಸ್ವಲ್ಪವಾದರೂ ನಾಚಿಕೆಯುಂಟಾಗುವ ಅಪಮಾನದ ಸಾಹಿತ್ಯ ಬರೆಯುವುದು. ನಾವು ಮಾಡಬಹುದಾದ ಅತ್ಯುತ್ತಮ ಕೆಲಸವೆಂದರೆ ನಮ್ಮ ಆತ್ಮವಂಚನೆಯನ್ನು, ನಮ್ಮ ಮಾತಿಗೂ ಕ್ರಿಯೆಗೂ ಇರುವ ಕಂದಕವನ್ನು , ನಮಗೂ ಇಲ್ಲಿನ ಬಡಜನರಿಗೂ ಇರುವ ಸಾಮಾನ್ಯ ಅದೃಷ್ಟದ ಬಗ್ಗೆ ನಮ್ಮ ನಿರ್ಲಕ್ಷತೆಯನ್ನು ಆಳವಾಗಿ ಕೆದಕಿ ಬರೆಯುವುದು. ನಾವು ಸಾಚಾ ಆಗುವುದು ನಮ್ಮ ಮಿತಿಗಳ ಬಗ್ಗೆ ಹೆಚ್ಚು ಹೆಚ್ಚು ಜಾಗೃತರಾಗುತ್ತಾ ಹೋದಾಗ–ನಮ್ಮ ಮಿತಿಗಳ ಬಗ್ಗೆ ಜಾಗೃತರಾಗುವುದು ಎಂದರೆ ನಮ್ಮ ವರ್ಗದ ಮಿತಿಗಳ ಬಗ್ಗೆ ಜಾಗೃತರಾಗುವುದೂ ಕೂಡಾ.
ಸಾಚಾ ಆದ ಪ್ರತಿಭಟನೆಯ ಸಾಹಿತ್ಯವನ್ನು ಬರೆಯಲು ಸಾಧ್ಯವಾಗುವುದು ಬ್ಲೇಕ್ ಮತ್ತು ಲಾರೆನ್ಸ್‌ನಂಥ ಲೇಖಕರಿಗೆ. ಇವರು ದಾರ್ಶನಿಕರೂ ಹೌದು ಎಂಬುದನ್ನು ನೆನಪಿನಲ್ಲಿಡಬೇಕು. ಲಾರೆನ್ಸ್ ಮತ್ತು ಬ್ಲೇಕ್ ನಾವು ಈಗ ಏನಾಗಿದ್ದೇವೆ ಎನ್ನುವ ವಾಸ್ತವವನ್ನು ಮತ್ತು ಏನಾಗಬೇಕು ಎನ್ನುವ ಸಾಧ್ಯತೆಯನ್ನು ಒಟ್ಟಿಗೇ ಗ್ರಹಿಸಿ ಹಿಡಿದಿಟ್ಟವರು. ನಾವು ಏನಾಗಿದ್ದೇವೆ ಎಂಬುದರ ಬಗ್ಗೆ ಮಾತ್ರ ಹೇಳುವ ಸಾಹಿತ್ಯ ಡಾಕ್ಯುಮೆಂಟರಿ ಯಾಗುತ್ತದೆ : ಏನಾಗಬೇಕು ಎನ್ನುವುದರ ಬಗ್ಗೆ ಮಾತ್ರ ಬರೆದಾಗ ಅದು ಪ್ರಚಾರದ ರೆಟರಿಕ್ಕಾಗುತ್ತದೆ. ನಿಜವಾದ ಲೇಖಕ ವಾಸ್ತವ ಮತ್ತು ಆದರ್ಶಗಳ ಡಯಲೆಕ್ಟಿಕ್ಕನ್ನು ಒಟ್ಟಿಗೇ ಗ್ರಹಿಸಿ ಹಿಡಿದಿಡುವುದು ಸಾಧ್ಯವಾಗಬೇಕು. ಆಗ ಮಾತ್ರ ಅದು ನಿಜವಾಗ ಬಲ್ಲುದು.
ನಾವು ಬೌದ್ಧಿಕ ಮಟ್ಟದಲ್ಲಿ ಮಾತ್ರ ಗ್ರಹಿಸಿದ್ದು ಸಾಚಾ ಸಾಹಿತ್ಯವನ್ನು ಕೊಡುವುದು ಸಾಧ್ಯವಿಲ್ಲ : ಭಾರತೀಯಾಂಗ್ಲ ಕವಿಯೊಬ್ಬರು ಉಳಿದ ಲೇಖಕರ ಮುಂದೆ ಸಾಹಿತ್ಯವನ್ನು ಬಿಟ್ಟು ನಿಜವಾದ ಪ್ರತಿಭಟನೆಯಲ್ಲಿ ತೊಡಗಿ ಎಂದು ಸ್ಫೂರ್ತಿಯುತವಾದ ಭಾಷಣ ಕೊಡುತ್ತಿದ್ದಾಗ ಯಾರೊಬ್ಬನೂ ಅವರನ್ನು ನಿಮಗೆ ಭಾರತೀಯರಲ್ಲಿ ನಿಜವಾಗಿಯೂ ಆಸಕ್ತಿಯಿರುವುದಾದರೆ ಭಾರತೀಯ ಭಾಷೆಯಲ್ಲಿ ಬರೆದು ಜನರನ್ನು ಕ್ರಿಯೆಗೆ ಎಚ್ಚರಿಸುವಲ್ಲಿ ಯಾಕೆ ತೊಡಗಬಾರದು ಎಂದು ಯಾಕೆ ಕೇಳಲಿಲ್ಲವೆಂದು ನನಗೆ ಅನ್ನಿಸಿತು. ಹೆಚ್ಚಿನ ಎಲ್ಲರೂ ಅವನ ರೆಟರಿಕ್ಕನ್ನು ಮೆಚ್ಚುತ್ತಾ ಕೂತಿದ್ದರು; ಒಂದಿಬ್ಬರು ಕಮಲಾ ದಾಸಳಂಥ ಕವಿಯ ಪದ್ಯಗಳನ್ನು ಅಷ್ಟುಬೇಗ ತೆಗೆದುಹಾಕುವುವಂತಿಲ್ಲವೆಂದು ಸಣ್ಣ ಧ್ವನಿಯಲ್ಲಿ ಪ್ರತಿಭಟಿಸಿದರು. ಯಾವುದೋ ಅಸ್ಪಷ್ಟ ಆದರ್ಶಕ್ಕೆ ನಮ್ಮನ್ನು ನಾವು ಕೊಟ್ಟು ಕೊಂಡಾಗ ನಾವು ಯೋಚಿಸುವ ಮತ್ತು ಅಭಿವ್ಯಕ್ತಿಸುವ ಕ್ರಮದಲ್ಲಿ ಕೃತಕತೆ ತಲೆದೋರುತ್ತದೆ. ಬಸವಣ್ಣ, ಅಕ್ಕ, ಕಬೀರರುಥ ಅನುಭಾವಿ ಕವಿಗಳ ಕಾವ್ಯದಲ್ಲಿ ನಮಗೆ ಪ್ರಾಮಾಣಿಕವಾದ ಪ್ರತಿಭಟನೆಯ ಸಾಹಿತ್ಯ ಸಿಕ್ಕುತ್ತದೆ. ಈಗಲೂ ಕೂಡಾ ಸಾಮಾನ್ಯ ಜನರು ನಮ್ಮ ಸದ್ಯದ ಸಮಾಜದ ಹುಳುಕುಗಳನ್ನು ಈ ಕವಿಗಳಿಂದ ತಾವು ಪಡೆದ ಮೌಲ್ಯಮಾಪನದಿಂದ ಕಂಡುಕೊಳ್ಳುತ್ತಾರೆ. ಅದೇ ವೈಚಾರಿಕರ ಪ್ರತಿಭಟನೆ ಅವ್ಯಕ್ತವಾಗಿಯೂ ಅಸ್ಪಷ್ಟವಾಗಿಯೂ ಉಳಿದುಕೊಂಡಿದೆ.
ನಮ್ಮ ಸಾಮಾಜಿಕ ಪ್ರತಿಭಟನೆಗಳು ಆಳವಾದದ್ದಾದರೆ ಅದು ತಾತ್ವಿಕ ಆಯಾಮಗಳನ್ನು ಪಡೆದುಕೊಳ್ಳುತ್ತದೆ. ಹಾಗೆಯೇ ಯಾವುದೇ ತಾತ್ವಿಕವಾದ ಪ್ರತಿಭಟನೆಗೂ ಅದು ಜೀವನದಲ್ಲಿ ಬೇರುಬಿಟ್ಟಿದ್ದಾದರೆ, ಸಾಮಾಜಿಕ, ಆರ್ಥಿಕ ತಳಹದಿಗಳು ಇರಬೇಕಾಗುತ್ತದೆ. ಭಾರತೀಯ ಸಾಹಿತ್ಯರಂಗದಲ್ಲಿ ಯಾವ ರೀತಿಯ ಪ್ರತಿಭಟನೆ ಅಗತ್ಯ ಮತ್ತು ನಿಜ ಎನ್ನುವುದರ ಬಗ್ಗೆ ಮಾರ್ಕ್ಸ್‌ವಾದಿಗಳಿಗೂ ನವ್ಯಪಂಥದವರಿಗೂ ಸುಳ್ಳು ಚರ್ಚೆ ನಡೆಯುತ್ತಿರುವುದರಿಂದ ಈ ಮಾತನ್ನು ಹೇಳುತ್ತಿದ್ದೇನೆ.
ಸೃಷ್ಟಿಶೀಲ ಸಾಹಿತ್ಯ ಮುಖ್ಯವಾಗಿ ಯೋಚಿಸುವುದಕ್ಕೆ ನೀಡುವ ಆಹ್ವಾನ ; ಅದು ನಮ್ಮನ್ನು ಕ್ರಾಂತಿಕಾರಿ ರಾಜಕೀಯ ಕ್ರಿಯೆಗೆ ಉದ್ದೀಪಿಸುವಂಥದಲ್ಲ. ಲೆನಿನ್ ಹಾಗೆ ಕ್ರಿಯೆಯಲ್ಲಿ ತೊಡಗುವುದು ಸಾಧ್ಯವಿದ್ದರೆ ಸೃಷ್ಟಿಶೀಲ ಸಾಹಿತ್ಯ ರಚಿಸುವುದನ್ನು ಆರಿಸಬೇಕಾಗಲಿಕ್ಕಿಲ್ಲ. ಒಂದು ಸ್ಲೋಗಾನ್ ಪದ್ಯಕ್ಕಿಂತ ಹೆಚ್ಚು ಪರಿಣಾಮಕಾರಿ ಆಯುಧವಾಗಿರಬಹುದು. ಒಳ್ಳೆಯ ಪ್ರತಿಭಟನೆಯ ಬರವಣಿಗೆ ಒಳ್ಳೆಯ ಸಾಹಿತ್ಯವಾಗಬೇಕೆಂದಿಲ್ಲ. ನನಗೆ ನಮ್ಮ ಸಮಾಜದ ಕೆಡಕುಗಳಿಂದ ನಿಜವಾಗಿ ಸಿಟ್ಟು ಬಂದಿದ್ದರೆ ಸಾಹಿತ್ಯಕ್ಕಿಂತ ಹೊರತಾದ ಉಳಿದ ವಿಧಾನಗಳ ಮೂಲಕ ಪರಿಣಾಮಕಾರಿಯಾಗಿ ನಾನು ಕ್ರಿಯೆಯಲ್ಲಿ ತೊಡಗಲೇಬೇಕಾಗಬಹುದು. ನನ್ನ ಅಸ್ತಿತ್ವ ಸಾಮಾಜಿಕ ಕೆಡುಕುಗಳ ಬಗ್ಗೆ ಮತ್ತು ಅದರ ವಿರುದ್ಧ ಹೋರಾಡುವ ಆಗತ್ಯದ ಬಗ್ಗೆ ಪೂರ್ಣ ಎಚ್ಚೆತ್ತಿದ್ದರೆ ನನ್ನ ಸೃಷ್ಟಿಶೀಲ ಬರವಣಿಗೆಯಲ್ಲಿ ಅದು ಪ್ರೇಮಗೀತವೇ ಆಗಿದ್ದರೂ- ಕ್ರಾಂತಿಕಾರಿ ಸಾಮಾಜಿಕ ಪ್ರಜ್ಞೆ ಮೂಡಬಹುದು. ಆದರೆ ಒಬ್ಬ ಕ್ರಾಂತಿಕಾರಿ ರಾಜಕಾರಣಿ ತನ್ನ ಕ್ಷೇತ್ರದಲ್ಲಿ ಸಾಧಿಸುವಷ್ಟು ತತ್‌ಕ್ಷಣದ ಪರಿಣಾಮವನ್ನು ನನ್ನ ಬರವಣಿಗೆ ಮಾಡದೆ ಇರಬಹುದು ಅಥವಾ ನಾನು ಬರೆಯುತ್ತಿರುವುದು ಜನರ ಭಾವಿಸುವ ಮತ್ತು ಕ್ರಿಯೆಯ ಕ್ರಮವನ್ನು ಬದಲಾಯಿಸಬಹುದಾದ್ದರಿಂದ ಭವಿಷತ್ತಿನಲ್ಲಿ ಅದು ರಾಜಕಾರಣಿಯ ಕ್ರಿಯೆಗಿಂತ ಹೆಚ್ಚು ಪರಿಣಾಮಕಾರಿಯಾಗಲೂಬಹುದು. ಆದರೆ ಸಾಹಿತ್ಯ ಅದನ್ನು ಮಾಡುವುದು ಅದು ಸಾಹಿತ್ಯವಾಗಿದ್ದಾಗ ಮಾತ್ರ: ಆಂದರೆ ಅದು ಯೋಚನೆಗೆ ಆಪ್ಯಾನವಾಗಿದ್ದಾಗ; ಕ್ರಿಯೆಗೆ ಕರೆಯುವ ರೆಟರಿಕ್ಕಿನ ಅಬ್ಬರವಲ್ಲದೆ ಹೋದಾಗ.
Weekly Round Table-June 4, 1972
(ಇಂಗ್ಲೀಷಿನಿಂದ ಅನುವಾದ : ರಾಮಚಂದ್ರದೇವ)
.
ಬಿಚ್ಚು
ಬಿಚ್ಚು
-ಗೋಪಾಲಕೃಷ್ಣ ಮಧ್ಯಸ್ಥ
ಬಟ್ಟೆಯಂಗಡಿಯ ಹುಡುಗಿ ಆಕೆಯನ್ನು ಅಳೆಯುವಂತೆ ನೋಡಿದಳು. ಆಕೆಯ ಕಣ್ಣುಗಳು ಟೇಪಿನಂತೆ, ಬೇಪೇ ಹಾವಾಗಿ ಈಕೆಯ ಮೈಯ ಆಳ ಎತ್ತರಗಳನ್ನು ತನ್ನ ಒದ್ದೆ ಮೂತಿಯಿಂದ ಮೂಸುತ್ತಾ, ಸೀಳು ನಾಲಗೆಯಿಂದ ಮುಟ್ಟುತ್ತಾ, ನಾಲಗೆ ತಾಗಿದಾಗಲೆಲ್ಲ ಕುಚಗುಳಿ ಅನಿಸುತ್ತಾ, ಹಾವು ಕಾಲಿನಿಂದಲೆ: ಏರಿಬುದಂತೆ. ಮೀನಖಂಡವನ್ನು ಸುತ್ತಿದಂತೆ, ಕತ್ತಲಿನ ಕೋಣೆಯಲ್ಲಿ ಭೀತಿಯಾಗಿ ಕಾಲುಗಳಲ್ಲಿ ನಡುಕ ಬರುವಂತಾಗಿ, ಈಕೆ ಸುತ್ತೆಲ್ಲ ಕಣ್ಣು ಹಾಯಿಸಿ ತೂಗುಹಾಕಿದ ಸೀರೆಗಳತ್ತ ನೋಡಿದಾಗ ಸೇಲ್ಸ್ ಗರ್ಲ್ ಕೇಳಿದಳು.
“ಏನು ಮ್ಯಾಡಂ ?”
ಸೀರೆ ನೋಡಬೇಕಾಗಿತ್ತು.
‘ಇಲ್ಲಿ ಬನ್ನಿ’
ಹುಡುಗಿ ನಡೆದತ್ತಲೆ ಒಳಗಿನ ಕೋಣೆಯೊಂದಕ್ಕೆ ನಡೆದಳು ಈಕೆ.
‘ಕೂತ್ಕೊಳ್ಳಿ’
ಫ್ಯಾನು ಹಾಕಿದಳು.
‘ಎಂಥಾ ಸೀರೆ ತೋರಿಸಲಿ ?’
ಟೆರಿಕಾಟ್, ನೈಲಾನ್, ಸಿಲ್ಕ್, ಟೇಬಲ್ ಮೇಲೆ ಸೀರೆಗಳ ರಾಶಿ. ಈಗಲೇ ಬೇಕಾದಷ್ಟು ಇದೆ ನಿನ್ನಲ್ಲಿ. ಹೆಚ್ಚು ತರಬೇಡ. ಒಂದೊ ಎರಡೊ ಒಳ್ಳೆಯದು ತಗೊಂಬಾ. ತಾಯಿಯ ಮಾತು. ತಲೆಯಾಡಿಸಿದಳು.
‘ಇದು ಲೇಟೆಸ್ಟ್ ಡಿಸೈನ್ ಮ್ಯಾಡಂ, ನಿಮಗೆ ಚೆನ್ನಾಗಿ ಒಪ್ಪುತ್ತೆ’.
ಡಿಸೈನ್ ಚೆನ್ನಾಗಿದೆ. ಆದರೆ ಬಣ್ಣ ಕೊಂಚ ಗಾಡಿ ಆಯಿತೇನೊ.
ಬ್ಲೂ ಇಷ್ಟು ಡೀಪ್ ಇರಬಾರದಾಗಿತ್ತು.
ಪರವಾಯಿಲ್ಲ. ನಿಮ್ಮ ಬಿಳಿಗೆ ಚೆನ್ನಾಗಿ ಹೊಂದುತ್ತೆ.
ಹುಡುಗಿಯ ಕಣ್ಣಿನ ಹಾವು ಈಕೆಯ ಮುಖ, ಕುತ್ತಿಗೆ, ತೋಳು, ಹೊಟ್ಟೆಗಳನ್ನು ನೆಕ್ಕಿತು.
‘ಇದು ಫ್ಯಾಬ್ರಿಕ್ ಚೆನ್ನಾಗಿದೆ ಮ್ಯಾಡಂ. ಒಳ್ಳೆ ಫೋಲ್ಡಿಂಗ್ ನಿಲ್ಲುತ್ತೆ’
ಒಂದು ಇದು ಇರಲಿ. ಮದುವೆಗಲ್ಲವೆ ? ಆಗಬಹುದು. ಈ ಸೀರೆ ಉಟ್ಟುಕೊಂಡರೆ ಆತನ ಕಣ್ಣುಗಳು ಹೇಗೆ ನೋಡಬಹುದು ? ಈ ಹುಡುಗಿಯ ಕಣ್ಣುಗಳಂತೆ ಮೈಯುದ್ಧಕ್ಕೆ ಹರಿಯಬಹುದು. ಇಲ್ಲ ನೇವರಿಸಬಹುದು. ಚುಚ್ಚಬಹುದು. ಕಣ್ಣುಗಳೇ ಹಾವಾಗಿ ಹಾವು ಏಡಿಯಾಗಿ, ಕೈಗಳು ಮೂಡಿ. ಕೈಗಳು ನಾಲಗೆಯನ್ನು ಚಾಚಿ ಮೈಯನ್ನು ನೆಕ್ಕಬಹುದು. ಏಡಿ ಮತ್ತೆ ಹಾವಾಗಿ ಫೋಲ್ಡಿಂಗ್‌ಗಳನ್ನು ಹುಡುಕಿ, ಬೆದಕಿ ಕಚ್ಚಬಹುದು. ಕಚ್ಚಿ ವಿಷವನ್ನು ಬಿತ್ತಬಹುದು. ಬಿಳಿಯಾಗಿರುವ ಮೈಯ ನಸುನೀಲಿ ಸೀರೆಯ ಡಿಸೈನಿನಂತೆ ಕಡುನೀಲಿ, ಹುಡುಗಿ ಹೊರಗೆಳೆದು ಟೇಬಲ್ಲಿನ ಮೇಲೆ ಬಿಚ್ಚಿದ, ಕಪ್ಪು ಸೀರೆಯಂತೆ ಕಪ್ಪಾಗಬಹುದು.
“ಇದು ಸಿಲ್ಕ್ ಮ್ಯಾಡಂ, ನೂರಾಐವತ್ತು ರೂಪಾಯಿ”
ಈಕೆಯ ಕೈ ಸೀರೆಯನ್ನು ನೇವರಿಸುತ್ತಿತ್ತು. ಕಪ್ಪು ಮೈಗೆ ಕೆಂಪು ಬಾರ್ಡರ್, ಇದಕ್ಕೆ ಕಪ್ಪು ಬ್ಲೌಸ್ ಬೇಕು. ತುಂಬಾ ಮ್ಯಾಚಾದೀತು. ಸೀರೆ ಚೆನ್ನಾಗಿದೆ. ಇದು ಆಗಬಹುದು.
ಬ್ಲೌಸ್ ಪೀಸ್ ಬೇಕು.
‘ಬನ್ನಿ’
ಕೋಣೆಯ ಇನ್ನೊಂದು ಬದಿಗೆ. ಆ ಬದಿಗೆ ಆ ಟೇಬಲಿಗೇ ತರುಣನೊಬ್ಬನನ್ನು ಕರೆ ತಂದಿದ್ದಳು ಇನ್ನೊಬ್ಬ ಹುಡುಗ ಕಟ್ಟುಮಸ್ತಾದವನು. ಈಕೆ ಓರೆಗಣ್ಣುಗಳಿಂದ ನೋಡಿದಳು. ಆತ ಬ್ಲೌಸ್ ಪೀಸು ಆರಿಸುವುದಕ್ಕೆ ಬಂದಿದ್ದ. ಯಾರಿಗಾಗಿರಬಹುದು. ಹೆಂಡತಿಗೆ ? ಆಕೆ ಬಾರದೆ ಈತ ಯಾಕೆ ಬರುತ್ತಾನೆ ಬಟ್ಟೆ ಕೊಳ್ಳಲು ? ಪ್ರೆಸೆಂಟೇಶನಿಗೆ ಇರಬಹುದು. ಯಾರಿಗಾದರೂ, ಫಿಯಾನ್ಸಿಗೆ. ಇಲ್ಲ ತಂಗಿಗೆ ಬರ್ತ್‌ಡೇ ಉಡುಗೊರೆಗಿರಬಹುದು. ನೀಟಾಗಿ ಬಟ್ಟೆ ಹಾಕಿದ್ದಾನೆ.
ಒಂದೆರಡು ಬಾರಿ ಹೊರಳಿ ನೋಡಿದ. ಮತ್ತೆ ಸಭ್ಯನಂತೆ ಮುಖ ಮಾಡಿ ಬಟ್ಟೆ ಆರಿಸುವುದರಲ್ಲಿ ನಿರತನಾದ. ಆತ ಈಕೆಯನ್ನು ಮದುವೆಯಾಗುವವನು-ಹೆಚ್ಚು ಕಡಿಮೆ ಹೀಗೆಯೇ ಇದ್ದಾನೆ. ಇಷ್ಟು ಕಟ್ಟುಮಸ್ತಾದ ಆಳಲ್ಲ. ಕೊಂಚ ನೀಳ, ಆದರೂ ದೃಢವಾಗಿಯೇ ಇದ್ದಾನೆ. ಈತನಿಗಿಂತ ಹೆಚ್ಚು ಬಿಳಿ ಇದ್ದಾನೆ. ಈಗ ಆತ ಆಕೆಯೊಂದಿಗಿದ್ದರೆ, ಈತ ಆಕೆಯತ್ತ ಕಣ್ಣು ಹಾಯಿಸಿದ್ದರೆ ಮತ್ತೆ ಬರ್ತಿಯಾ ಅಂತ ಪಿಸುಗುಟ್ಟಿದ್ದರೆ ಆತ ಏನು ಮಾಡುತ್ತಿದ್ದ ? ಕಾಲರ್ ಎಳೆದು ಕೆನ್ನೆಗೆ ಫಟಾ ಅಂತ ಏಟು ಕೊಡುತ್ತಿದ್ದನೆ? ಇಲ್ಲ, ಹೋಗೋಣ ಬಾ ಅಂತ ರಟ್ಟೆ ಹಿಡಿದು ಎಳೆದೊಯ್ಯುತ್ತಿದ್ದನೆ? ತಂದೆ ತಾಯಿಗೊಮ್ಮೆ ಫಟಾ ಅಂತ ಕೆನ್ನೆಗೆ ಹೊಡೆದದ್ದು ನೆನಪಾಯಿತು ಆಕೆಗೆ. ಪಟಾ ಅಂತ ಸದ್ದು ಕೇಳಿದಂತಾಗಿ ತಿರುಗಿ ನೋಡಿದಳು. ಸದ್ದು ಹುಟ್ಟಿದ್ದು ಎಲ್ಲಿ ಅಂತ ತಿಳಿಯಲಿಲ್ಲ. ಸದ್ದಿನ ಯಾವ ಗುರುತೂ ಕಾಣಿಸಲಿಲ್ಲ. ಆದರೆ ಸದ್ದಿನ ಸ್ವರೂಪ ಫಟಾ ಅಂತ ಆಕೆಯ ಕಣ್ಣೆದುರು ಈಗ ಕೆಲವು ಕ್ಷಣಗಳ ಹಿಂದೆ ಉದ್ಭೂತವಾಗಿತ್ತು. ಭೂತದಂತೆ, ಎದೆಗೆ ಫಟಾ ಅಂತ ಕತ್ತಿಯನ್ನು ಹೊಡೆದುಕೊಂಡ ಭೂತ ಆವೇಶವಾದ ವ್ಯಕ್ತಿಯಂತೆ. ಸಣ್ಣವಳಿದ್ದಾಗ ತಂದೆತಾಯಿಯೊಂದಿಗೆ ಧರ್ಮಸ್ಥಳಕ್ಕೆ ಹೋಗಿದ್ದಾಗ ಆವೇಶ ಬಂದ ಪಾತ್ರಿ ಪಿಶಾಚಿ ಬಿಡಿಸಲು ತನ್ನ ಬೆನ್ನಿಗೇ ಘಟಾ ಅಂತ ಸೀಳುಬೆತ್ತದಿಂದ ಹೊಡೆದುಕೊಂಡಂತೆ. ಪಾರ್ಕಿನ ಎಕ್ವೇರಿಯಂನ ಗಾಜಿನ ಕ್ಯಾಬಿನಿನ ಹಸಿರು ನೀಲಿ ಬಣ್ಣದ ನೀರಿನಲ್ಲಿ ನೀರನ್ನು ಮುಕ್ಕಳಿಸುತ್ತಾ ಸಿಕ್ಕಿದ್ದನ್ನು ಚುಂಬಿಸಲು ಬರುತ್ತಿರುವಂತೆ, ಈಜುವ ಮೀನಿನಂತೆ ಮೀನು ತಕ್ಷಣ ಮರೆಯಾದಂತೆ ಸದ್ದು ಮರೆಯಾಯಿತು.
ಕಾಲಿನ ಚಪ್ಪಲಿ ನೆಲದ ಮ್ಯಾಟಿನ ಹರಿದ ತೂತಿಗೆ ಸಿಕ್ಕಿ ಎಡವಿದಂತಾದಾಗ ಆಕೆ ತಲೆ ಎತ್ತಿ ನೋಡಿದಳು. ಎದುರಿಗೆ ಕಂಡದ್ದು ದೊಡ್ಡ ಕನ್ನಡಿ. ಕನ್ನಡಿ ಅಂತ ಸ್ಪಷ್ಟವಾಗಿ ತಿಳಿಯದಷ್ಟು ದೊಡ್ಡ ಕನ್ನಡಿ. ಆಕೆ ಚಲಿಸಿದಂತೆ ಎದುರಿಗಿದ್ದ ಹುಡುಗಿ ಹಿಂದ ಹಿಂದಕ್ಕೆ ಹೋಗುತ್ತಿರುವಂತೆ, ಬದಿಗೆ ಚಲಿಸುತ್ತಿರುವಂತೆ ತಕ್ಷಣ ಮುಂದೆ ಬಂದಂತೆ ವರ್ತಿಸಿದಳು. ಕಣ್ಣುಗಳನ್ನು ಹೊರಳಿಸಿ ಹಣೆಯನ್ನು ಪಕ್ಕನೆ ಉದ್ದಕ್ಕೆ ಎತ್ತರಕ್ಕೆ ಚಾಚಿ ಕನ್ನಡಿಯ ಪ್ರೇಮಿಗೆ ಮುಟ್ಟಿಸಿದಳು. ತುಟಿಯ ಮೂಲೆಗಳನ್ನು ಅಡ್ಡಕ್ಕೆ ಎಳೆದಂತೆ ಬದಿಗಳಿಗೆ ಮುಟ್ಟಿದುವು. ಉದ್ದಕ್ಕೆ ಬೆಳೆದ ತುಟಿಯ ಮೇಲೆ ಮೀಸೆಯ ರೋಮಗಳು ಒಂದೊಂದೆ ಮೂಡತೊಡಗಿದುವು. ಮೀಸೆ ದಪ್ಪ ದಪ್ಪವಾಗುತ್ತಾ ಅದು ಆಕೆಯ ಫಿಯಾನ್ಸಿನ ಮೀಸೆಯೇ ಆಗಿ, ಅಲ್ಲವೆ ಅದು ಫಿಯಾನ್ಸಿಯ ಮೀಸೆ ಅಲ್ಲವೇ, ಅಂದುಕೊಂಡು ಅದು ಮುಖ ಯಾರದ್ದು ಹುಡುಕುತ್ತಿರುವಾಗ ಹುಡುಗಿಯ ಎದೆ ಪ್ರಮಾಣಕ್ಕಿಂತಲೂ ದೊಡ್ಡದಾಗಿದೆ.
ಅಲ್ಲಿ ಬೆಳೆಯುತ್ತಿದೆ. ಬೆಳೆಯುತ್ತಾ, ಬೆಳೆಯುತ್ತಾ, ಬೀಗಿ ಬೀಗಿ ಗುಡ್ಡಗಳೇ ಆಗಿ, ಗುಡ್ಡಗಳೆ ಮಗುಚಿ, ಆಕೆಯನ್ನೆ ಅವಚಿ, ಮೈಮೇಲೆಯೇ ಭಾರಬಿದ್ದು, ಆಕೆಯ ಎದೆಯ ಮೇಲೆಯೇ ಬಿದ್ದು ತುಟಿಯ ಮೇಲಿನ ಮೀಸೆ ಒತ್ತಿ, ಒರಟೊರಟಾಗಿ ಹಿಂಸೆಯಾದಾಗ ಆಕೆ ಎದೆಯನ್ನು ನೋಡಿಕೊಂಡಳು. “ಬ್ಲೌಸು ಅಲ್ಲಲ್ಲಿ ಬೆವರಿಂದ ಒದ್ದೆಯಾಗಿತ್ತು. ಮೈಯೆಲ್ಲ ಬೆವರುತ್ತಿತ್ತು. ತಿರುಗಿ ನೋಡಿದಾಗ ಫ್ಯಾನು ನಿಂತಿರುವುದು ತಿಳಿಯಿತು. ಪವರ್ ಫೆಲ್ಯುರ್ ಆಗಿರುವುದರ ಅರಿವಾಯಿತು. ಬಟ್ಟೆಯ ಕಟ್ಟು ಎತ್ತಿಕೊಂಡಳು. ಸೆರಗಿನಿಂದ ಹಣೆಯಬೆವರು ಒರಸಿಕೊಳ್ಳುತ್ತಿದ್ದಾಗ ಅಂಗಡಿಯ ಹುಡುಗಿ ಕನಿಕರದಿಂದ ನೋಡಿದಳು. ಬಿಲ್ ತೆತ್ತು ಹೊರಗೆ ಬಂದಳು. ಪವರ್ ಯಾಕೆ ಫೈಲ್ ಆಗಿತ್ತು ಅನ್ನುವುದು ಹೊರಗೆ ಬಂದಾಗ ತಿಳಿಯಿತು. ಬಾನಿನಲ್ಲಿ ಮುಗಿಲು ಕವಿದಿದ್ದುವು. ಮಿಂಚು ಹೊಳೆಯುತ್ತಿತ್ತು.
ಬಸ್ಸಿಗೆ ಕಾಯಬೇಕು. ಪೀಕ್ ಅವರ್. ದನಗಳಂತೆ ಜನ ನುಗ್ಗುತ್ತಾರೆ. ಆಫೀಸುಗಳಿಂದ ಹೆಂಗಸರೂ ಗಂಡಸರೂ ಮೇವು ಕಂಡಂತೆ ಬಸ್ಸಿಗೆ ನುಗ್ಗುತ್ತಾರೆ. ಆಕೆ ಸ್ಟಾಪಿನತ್ತ ನಡೆದಳು. ಒಂದು ಫರ್ಲಾಂಗು ನಡೆಯಬೇಕು. ಮಳೆಯ ಹನಿಗಳು ಉದುರುತ್ತಿವೆ. ಮಳೆಯೂ ಇಂದೇ ಬರಬೇಕೆ ? ಬಸ್ಸು ಬಂದಾಗ ಜನ ನುಗ್ಗಿದರು. ಮಳೆಯ ಹನಿಗಳು ತೋರತೋರವಾಗುತ್ತಾ ನಡೆದಿದೆ. ಜನ ದನಗಳಂತೆ ನುಗ್ಗುತ್ತಿದ್ದಾರೆ. ಬಸ್ಸಿನ ಕಂಬಿ ಹಿಡಿದು ಇಲ್ಲಿಯೂ ಸಲ್ಲದೆ ಅಲ್ಲಿಯೂ ಸಲ್ಲದವರಂತೆ ಜೋತಾಡುತ್ತಿದ್ದಾರೆ. ಆಕೆ ಕಾಲೇಜು ಓದುತ್ತಿದ್ದಾಗ ಕ್ಲಾಸ್ ಮೇಟ್ ಒಬ್ಬಳು ಬಸಿರುಮಾಡಿಸಿಕೊಂಡು ನೇಣು ಹಾಕಿ ಹಾಗೆಯೇ ಜೋತಾಡಿದ್ದಳು. ಆ ಸ್ಥಿತಿಯಲ್ಲಿ ಕಿಬ್ಬೊಟ್ಟೆಯವರೆಗೆ ಜಾರಿದ ಅವಳ ಸೀರೆಯ ನೆನಪಾದಾಗ ಸೀರೆಯನ್ನು ಕೊಂಚವೇ ಮೇಲೆತ್ತಿ, ಮುಷ್ಟಿಯಲ್ಲಿ ಅಮುಕಿ ಬ್ಯಾಗು ನೇತಾಡುತ್ತಿದ್ದ ಇನ್ನೊಂದು ತೋಳಿನಿಂದ ಬಸ್ಸಿನ ಕಂಬ ಹಿಡಿದು ಒಬ್ಬಾಕೆ ತರುಣಿ ಬಸ್ಸು ಏರುತ್ತಿದ್ದಳು. ಅವಳ ಹಿಂದಿನಿಂದಲೆ, ಒಬ್ಬ ತರುಣ. ಅವನ ಹಿಂದಿನಿಂದ ಮತ್ತಿಬ್ಬರು ದೌಡಾಯಿಸಿದರು. ಯಾರೋ ಒಬ್ಬ ಕಾಫ್‌ಮನ್ ಬರೆದ ಸೆಕ್ಸ್ ನಾವೆಲ್ಲೊಂದರ ಪರಿಚ್ಛೇದ ಒಂದರ ನೆನಪಾಯಿತು ಆಕೆಗೆ.
ಇಟ್ ಗೀವ್ಸ್ ಗುಡ್ ಕಿಕ್ ಯು ನೊ, ಅಂದಿದ್ದಳು. ಆ ಪುಸ್ತಕ ಕೊಡುತ್ತಾ ಅದನ್ನು ಕೊಟ್ಟ ಕ್ಲಾಸ್‌ಮೇಟ್. ಆಕೆ ಹಲವೊಮ್ಮೆ ಒದೆಸಿಕೊಂಡವಳು ಕೂಡ. ಎಲ್ಲ ಒದೆತಗಳ ಅನುಭವದಿಂದಲೆ ಹೇಳುತ್ತಿದ್ದಾಳೆ. ತಿಳಿದಿರಬೇಕಮ್ಮ ಎಲ್ಲಿ ಹಾಗೆಂದರೆ ಹಾಗೆ, ಹೀಗೆಂದರೆ ಹೀಗೆ ಬಿದ್ದಿರಬಾರದು. ಕಲಿಸುವಷ್ಟು ಗೊತ್ತಿರಬೇಕು.
ಪುಸ್ತಕದ ಸಾಲುಗಳು ಬಿಚ್ಚುತ್ತ ಬಿಚ್ಚುತ್ತ ಅಂತೂ ಕೊನೆಗೆ ಬಸ್ಸು ಹತ್ತಿ ಕುಳಿತುಕೊಳ್ಳುವುದಕ್ಕೆ ಜಾಗ ದೊರೆತಾಗ ಬಸ್ಸಿನ ಚಕ್ರಗಳು ಬಿಚ್ಚುತ್ತ ಬಿಚ್ಚುತ್ತ, ಫರ್ ಅಂತ ಸೀರೆ ಹರಿದಂತೆ ಮಾರ್ಗವನ್ನು ಅಳೆಯುತ್ತ ಬಸ್ಸು ಧಾವಿಸುತ್ತಿತ್ತು.
ಬಸ್ಸು ನಿಂತಾಗ ಮಳೆ ನಿಂತು ಸಂಜೆಯ ಹೂಬಿಸಿಲು ಬಿದ್ದು ಆಕೆಗೆ ದಿನಾಲೂ ಸಿಕ್ಕುವ ದೊಡ್ಡ ಕೆರೆಯ ಬದಿಗಳ ಮರಗಳ ಮೇಲೆ ನೀರಿನ ಹನಿಗಳು ಹೊಳೆಯುತ್ತಿದ್ದವು. ಮಳೆ ಬಂದು ಕೆರೆಯ ಮೇಲೆ ಹೊಸ ಕಾರ್ಪೆಟ್ ಹಾಸಿದಂತೆ ನೀರು ತಿಳಿಯಾಗಿತ್ತು. ಅರೆ ಈ ಕೆರೆ ಇಷ್ಟು ಮನೋಹರವಾಗಿತ್ತೆ ಇಷ್ಟು ದಿನ ? ಒಮ್ಮೆಯೂ ಆಕೆ ಇದರ ಬದಿಯಲ್ಲಿ ಕುಳಿತಿರಲಿಲ್ಲ. ಚಿಕ್ಕಂದಿನಿಂದಲೂ ಈ ದಾರಿಯಾಗಿಯೇ ಬರುತ್ತಿದ್ದರು. ಕಲ್ಲು ಬೆಂಚುಗಳನ್ನು ಹಾಕಿದ್ದಾರೆ. ಕುಳಿತುಕೊಳ್ಳಬಹುದೆಂದು ನಿರ್ಧಾರ ಮಾಡಿದಳು. ಎದುರಿಗೆಸಿಕ್ಕುವ ಬೆಂಚುಗಳನ್ನೆಲ್ಲ ದಾಟಿ, ಮಳೆ ಬಂದು ಕೆಸರಾದ ದಾರಿಯನ್ನು ನಿವಾರಿಸುತ್ತಾ, ಸೀರೆಯನ್ನು ಮೇಲಕ್ಕೆತ್ತಿ, ಮುಷ್ಟಿಯಲ್ಲಿ ಹಿಡಿದು ಇನ್ನೊಂದರಿಂದ ಬಟ್ಟೆ ಪ್ಯಾಕೆಟ್, ಬ್ಯಾಗುಗಳನ್ನು ಅವಚಿಕೊಂಡು, ಆಚೆ ನಡೆದು ಕೆರೆಯ ಈ ಬದಿ ಮುಗಿದು ಇನ್ನೊಂದು ಬದಿಗೆ ಹೊರಳಿಕೊಳ್ಳುವ ತಿರುವಿನಲ್ಲಿ ತೂಕಡಿಸುತ್ತಿರುವ ಮರ ಒಂದರ ಬುಡದಲ್ಲಿ ಕಲ್ಲುಬೆಂಚಿನ ಮೇಲೆ ಆಕೆ ಕುಳಿತಳು. ಕೆರೆಯ ದಂಡೆಯನ್ನು ಕರಿಯ ಕಲ್ಲುಗಳಿಂದ ಕಟ್ಟಿ ಎತ್ತಿಸಿದ್ದರು. ಕೆರೆಯ ಮಧ್ಯಭಾಗದಲ್ಲಿ ಇಳಿ ಹೊತ್ತಿನ ಹೊನ್ನಿನ ಬೆಳಕು ಚೆಲ್ಲಿ ಹೊಳೆಯುತ್ತಿತ್ತು.
ಹೆಚ್ಚಾಗಿ ಯಾರೂ ಬಾರದ ಈ ಕಪ್ಪು ಕೆರೆಯಲ್ಲಿಯೂ ಇಂದು ಬೆಳಕು ಯಾಕೆ ನಗುತ್ತಿದೆ? ಮದುವೆಯಾಗಲಿರುವ ಮಾಟವಾದ ಹುಡುಗಿ ಬಂದಿದ್ದಾಳೆಂದೆ ? ಅಂದುಕೊಳ್ಳುತ್ತ ಅಲ್ಲೊಂದು ಇಲ್ಲೊಂದು ಪೊದರು, ಅಲ್ಲೊಂದು ಇಲ್ಲೊಂದು ಕಪ್ಪು ಆದರೆ ಇಂದು ಮಳೆ ಬಿದ್ದು ದ್ರವಿಸಿ ಬಿಸಿಲು ಬಿದ್ದು ಹೊಳೆಯುತ್ತಿರುವ ಎಲೆಗಳು ಒತ್ತೊತ್ತಾಗಿರುವ ಮರಗಳತ್ತ ನಡೆದಳು ಆಕೆ.
ಮಳೆ ನಿಂತು ಘಳಿಗೆ ಆಗಿತ್ತು. ಆದರೂ ಮರದ ಹನಿ ನಿಂತಿರಲಿಲ್ಲ. ಮರದ ಟಿಸಿಲು ಟಿಸಿಲುಗಳಿಂದ ಎಲೆ ಎಲೆಗಳಿಂದ ಇಳಿಯುತ್ತಿರುವ ನೀರು ಅವ್ಯಕ್ತದ ಪ್ರಭಾವಕ್ಕೆ ಪಕ್ಕಾಗಿ ಮುಹೂರ್ತಕ್ಕೆ ಕಾದು ಎಲೆಯ ತುದಿಗಳಲ್ಲಿ ಹನಿಗಟ್ಟಿ ಉತ್ಕಟ ಕ್ಷಣದಲ್ಲಿ ಸ್ಖಲನಗೊಂಡು ಕೆರೆಯ ನೀರಿಗೆ ಫಟ್, ಘಟ್, ಫಳಾ ಅಂತ ಬೀಳುತ್ತಿದ್ದವು. ಕೆರೆಯ ದಂಡೆಯ ಅಂಚಿಗೆ ಹಾಕಿದ್ದ ಕಲ್ಲುಬೆಂಚಿನ ಕೆಳಗೆ ಕೆರೆಯ ದಂಡೆಯ ಒಣಗಿದ ಪಾಚಿಯೇ ಇರಬೇಕು-ಕಪ್ಪು ಕಪ್ಪಾಗಿ ಅವಚಿಕೊಂಡಿತ್ತು. ಕೆರೆಯತ್ತ, ಕೊಡೆಯಂತೆ ಬಾಗಿಕೊಂಡ ಮರದ ರೆಂಬೆಗಳು ನೀರಿನ ಮೇಲೆ ನೆರಳನ್ನು ಹಾಸಿದ್ದವು. ಆಕೆ ನೀರಿನಲ್ಲಿ ಬಗ್ಗಿ ನೋಡಿದಳು.
ನೀರಿನಲ್ಲಿ ಬರೇ ಕಪ್ಪು ಕಾಣಿಸಿ, ಈ ಕಪ್ಪು ಹೇಗಾಯಿತು ? ಬಿದ್ದ ಎಲೆಗಳು ಕೊಳೆತು ಬಿಟ್ಟ ಬಣ್ಣದ ಕಪ್ಪು ಇದಲ್ಲವೆ ಅಂದುಕೊಂಡು ಕೆರೆಯ ಆಳದಿಂದಾಗಿ ಸಂಭವಿಸಿದ ಕಪ್ಪು ಇರಬಹುದಲ್ಲವೆ ಆಂತ ಸಂದೇಹಪಟ್ಟು ಇದರಲ್ಲಿ ಮುಖ ಕಾಣಬಹುದೇ ಅಂತ ನಿರೀಕ್ಷೆಗೊಂಡು, ಇದರಲ್ಲಿ ತನ್ನ ಮುಖವೇ ಕಾಣಬಹುದೆ, ಈಗ ತನಗೆ ಬೇರೆಯವರ ಮುಖ ಕಾಣಿಸಲಾರದೆ ಅಂತ ಮೋಜೆನಿಸಿದಾಗ ಬೇಜಾರಾಯಿತು.
ಬೇಜಾರುಪಟ್ಟುಕೊಳ್ಳುತ್ತಿರುವಾಗಲೇ ಆಳವಾದ ಕಪ್ಪುನೋಡಿ ಭೀತಿಯಾಯಿತು. ಬಗ್ಗಿದ ಆಕೆಯ ತಲೆಯ ಮೇಲೆ ಬಿದ್ದುದು ಏನಿರಬಹುದು ಎಂದು ತಲೆ ಎತ್ತಿ ನೋಡಿಕೊಂಡಾಗ ಏನೂ ಕಾಣಿಸದೆ ಕಲ್ಲುಬೆಂಚಿನ ಹಿಂದೆ ಯಾರೂ ಇಲ್ಲದೆ ತಲೆಯ ಒಳಗೆ ಏನೋ ಹರಿಯಿತು. ತಲೆಯ ಒಳಗೊ ಅಥವಾ ಹೊರಗೊ ಅಂತ ಸಂದೇಹ ಬರುತ್ತಿದ್ದಂತೆ ತಲೆಯಮೇಲೆ ಇರುವೆ ಹರಿಯುತ್ತಿರುವುದು ತಿಳಿದು, ಇರುವೆ ಮೈಮೇಲೆಲ್ಲ ಹರಿದು ಬಾರಿನ ಫ್ಯಾಮಿಲಿ ರೂಮಲ್ಲಿ ಕುಳಿತ ಅವರಿಬ್ಬರ ಬಳಿ ಆವರಿಸಿದ ತೆಳುಗತ್ತಲಿನಲ್ಲಿ ಆತ ಆಕೆಯ ಮೈಮೇಲೆಲ್ಲ ಇರುವೆಗಳನ್ನು ಹರಿಸಿದ್ದು ನೆನಪಾಯಿತು. ಆಕೆಯ ಕೈಯಲ್ಲಿದ್ದ ಶಾಂಪೇನ್ ಗ್ಲಾಸನ್ನು ತೆಗೆದು ಆತ ಟೇಬಲಿನ ಮೇಲಿಟ್ಟು ಕೈಗಳನ್ನು ತನ್ನ ಕೈಗಳಲ್ಲಿ ಅಮುಕಿ ಹಿಡಿದುಕೊಂಡು ಆಕೆಯ ತೊಡೆಗಳನ್ನು ನೇವರಿಸಹತ್ತಿದ್ದ.
ಮೀನಖಂಡದಲ್ಲಿ, ತೊಡೆಯಲ್ಲಿ, ತೊಡೆಯ ಸಂದಿನಲ್ಲಿ ಇರುವೆ ಹರಿದಂತಾದಾಗ ಅವನ ಕೈ ಆಕೆಯ ಹೊಟ್ಟೆಯನ್ನು ಸವರುತ್ತಿತ್ತು.
ಹೊಟ್ಟೆಯಲ್ಲಿ ಹರಿಯುತ್ತಿದ್ದ ಇರುವೆ ತಲೆಗೆ ತಲುಪಿ ಬೈತಲೆಯ ಉದ್ದಕ್ಕೆ ಹರಿದಾಗ ಬಗ್ಗಿದ ಆಕೆ ತಲೆ ಮುಟ್ಟಿ ನೋಡಿಕೊಂಡಳು. ಬೆರಳೆಲ್ಲ ಒದ್ದೆಯಾಯಿತು. ಕೆರೆಯ ಕಪ್ಪು ನೀರಲ್ಲಿ ಕೆಂಪು ಇರುವೆಗಳು ಅಲ್ಲೊಂದು ಇಲ್ಲೊಂದು ತೇಲುತ್ತಿರುವುದು ಕಂಡಾಗ ಸೆರಗು ಜಾರಿದ್ದು ಅಂಥ ನಶಾದಲ್ಲೂ ಅರಿವಿಗೆ ಬಂದು ಸೆರಗು ಮುಚ್ಚಿಕೊಂಡು ಬಿಗಿದು ಕಟ್ಟಿಕೊಂಡಳು. ಆತನ ಕೈ ಪುನಃ ಗ್ಲಾಸನ್ನು ಅವಚಿಕೊಂಡಿತು.
ಪ್ಲೀಸ್, ಪ್ಲೀಸ್ ನೋ ಡೋಂಟ್, ಡೋಂಟ್‌ಗಳು ಕೀಚಲು ಕೀಚಲಾಗಿ, ಆಕೆಯ ಮೆದುಳಲ್ಲಿ ಇರುವೆಗಳಂತೆ ಹರಿದಾಗ ಯೂ ಸಿಲ್ಲಿ ಫೂಲ್ ಅಂತ ಕಾಲಿನ ಚಪ್ಪಲಿ ಕಲ್ಲಿನ ಚಪ್ಪಡಿಗೆ ಬಡಿದದ್ದು ಮನಸ್ಸಿಗೆ ಒಂದು ಫಟ್ ಸದ್ದು ಅಲೆ ಅಲೆಯಾಗಿ ಬಡಿಯಿತು.
ಫಟ್, ಫಟ್, ಸದ್ದು ಎಲ್ಲೊ ಕೇಳಿಸಿದಂತಾಗಿ ಬಗ್ಗಿ ನೋಡಿದಾಗ ನೀರಿನ ಒಳಗಿನಿಂದಲೇ ಹುಟ್ಟಿದ್ದು ಕಾಣಿಸಿತು. ಸದ್ದಿನಿಂದ ಹುಟ್ಟಿಬಂದ ತೋಳುಗಳೆರಡು ಬೀಸಿ ಬೀಸಿ ಆಕೆಯ ಕೆನ್ನೆಗೆ ಹೊಡೆದವು. ನೋವು, ನೋವು ಹಾಮ್ ಅಮ್ಮ-ಆಕೆ ಚೀರಿಕೊಳ್ಳುತ್ತಿರುವಾಗಲೆ ಇದು ತಂದೆಯ ತೋಳುಗಳಲ್ಲವೆ, ತಂದೆಯ ರಟ್ಟೆಗಳಲ್ಲವೆ, ಹೊಡೆಯುತ್ತಿರುವುದು ಅಮ್ಮನ ಕೆನ್ನೆಗಲ್ಲವೆ ಅನ್ನುವುದು ಅರಿವಾಯಿತು. ತಂದೆಯ ರಟ್ಟೆಗಳೇ ಹೌದೇನು ? ಆಕೆ ಬಗ್ಗಿ ನೋಡಿದಳು. ಅಲ್ಲಿ ತಂದೆಯ ತೋಳುಗಳಲ್ಲಿ ತಂದೆಯ ಹಳೆ ವೆಸ್ಟೆಂಡ್ ಮಾಡೆಲ್ ವಾಚ್ ಕಾಣಿಸುತ್ತಿಲ್ಲ. ಬೇರೆ ಯಾವುದೊ ಹೊಸ ಮಾಡೆಲ್ ಕಾಣಿಸುತ್ತಿದೆ. ಆದರೆ ರಟ್ಟೆ ಅದೇ ಅಲ್ಲವೇನು, ಸಂದೇಹವೇ ಇಲ್ಲ. ಆಕೆಗೆ ಈ ವಾಚು
ಯಾರದ್ದು ನೋಡಿದ್ದೇನಲ್ಲ. ಹೌದು ನೋಡಿದ್ದಳು ಆಕೆ. ಗುರುತು ಹತ್ತಿತ್ತು, ಅವು ಆಕೆಯ ಫಿಯಾನ್ಸಿಯ ತೋಳುಗಳು. ಅದೇ ವಾಚು, ಅದೇ ತೋಳು ಎಂದು ನಿರ್ಧರಿಸಿ ಸಂದೇಹ ನಿವಾರಣೆಯಾಯಿತಲ್ಲ. ಇಂಥ ಸಂದೇಹಗಳನ್ನು ಎಷ್ಟೋ ಬಗೆಹರಿಸಬಲ್ಲೆ ಎನ್ನುವ ಸುಖಭಾವದಲ್ಲಿದ್ದಾಗ ರಪ್ಪೆಂದು ಬೀಸಿದ ತೋಳಿನ ಹೊಡೆತಕ್ಕೆ ಹಾಯೆಂದು ಚೀರಿದಳು.
ಲಾರ್ಜ್ ಪೆಗ್ ಶಾಂಪೇನ್ ಹಾಕಿದ ಗ್ಲಾಸು ಈಗ ತಾನೆ ಕೆಳಗಿಟ್ಟು ಚೆಯರಿನ ಹಿಂಬದಿಗೆ ಆರಾಮ ತಲೆಯಿಟ್ಟು ಹಣೆಯಲ್ಲಿ ಏನೊ ಮಿಡಿಯುತ್ತಿದ್ದಂತೆ, ಏನೊ ಚುಚ್ಚುತ್ತಿದ್ದಂತೆ ನಶಾ ಅನುಭವಿಸುತ್ತಿರುವ ತನಗೂ ಈ ಕೈಗಳನ್ನು ನಿಲ್ಲಿಸುವುದು ಸಾಧ್ಯವಿಲ್ಲವೆ ಅಂತ ಛಾಲೆಂಜ್ ಅನಿಸಿದಾಗ ತೋಳುಗಳನ್ನು ಹಿಡಿದಳು.
ಆವು ಶೀತವಾಗಿದ್ದವು. ಶಾಂಪೆನ್ ಗ್ಲಾಸಿನಂತೆಯೆ ಅಥವಾ ಹೆಣದ ತೋಳುಗಳನ್ನು ಹಿಡಿದಿದೇನೆಯೆ ಎಂದು ಸಂದೇಹಪಟ್ಟಳು. ಶರೀರದುದ್ದಕ್ಕೂ ಭೀತಿ ಹಾಯ್ದಿತ್ತು. ಆದರೆ ತೋಳುಗಳೆರಡು ಕೊಸರಿಕೊಳ್ಳುವುದಕ್ಕೆ ಯತ್ನಿಸಿದಾಗ ಸತ್ತಿಲ್ಲ, ಇನ್ನೂ ಪ್ರಾಣವಾಡುತ್ತಿದೆ. ಹಿಡಿದದ್ದು ಜೀವಿಸಿರುವ ವ್ಯಕ್ತಿಯನ್ನೆ ಅಲ್ಲದೆ ಬಲಾಡ್ಯ ವ್ಯಕ್ತಿಯನ್ನು ಅನ್ನುವುದು ದೃಢವಾಯಿತು. ಮೇಲೆಳೆಯುವುದಕ್ಕೆ ಯತ್ನಿಸಿದಾಗ ಶರೀರ ಬಹು ಭಾರವಾಗಿದೆ ಅನಿಸಿತು. ಇನ್ನಷ್ಟು ಶಕ್ತಿ ಬಳಸಿ ತೋಳುಗಳನ್ನು ನೀರಿನಿಂದ ಹೊರಕ್ಕೆಳೆದಳು. ಯುವಕನೋರ್ವನ ತಲೆಭುಜ ಎದೆಗಳು ಕ್ರಮವಾಗಿ ಕಾಣಿಸಿಕೊಂಡವು. ನೀಟಾಗಿ ಕಟ್ ಮಾಡಿದ್ದ ತಲೆಗೂದಲು ನೀರಿಂದ ತೊಯ್ದು ಅವಚಿಕೊಂಡಿತ್ತು.
ಎರಡು ತೋಳುಗಳನ್ನು ಭದ್ರವಾಗಿ ಹಿಡಿದು ಎಳೆಯಲಾರದೆ ಎಳೆದು ಮಿಸುಕಾಡಿ ಆತನ ದೇಹದ ಭಾರದೊಂದಿಗೆ ಹೋರಾಡಿ ಕೆರೆಯ ಕಲ್ಲು ಚಪ್ಪಡಿ ಕಟ್ಟೆಗೆ ಆನಿಸಿ ನಿಧಾನವಾಗಿ ಮೇಲಕ್ಕೆಳೆದು ಎತ್ತಿ ನೀರು ಸುರಿಯುತ್ತಿರುವ ದೇಹವನ್ನು ಧೊಪ್ಪನೆ ಕಲ್ಲು ಚಪ್ಪಡಿಯ ಮೇಲೆ ಮಲಗಿಸಿದಳು. ಆತ ಮಿಸುಕಾಡಲಿಲ್ಲ. ಉಸಿರು ಇಲ್ಲವೇನೋ ಸಂದೇಹ ಪಟ್ಟಳು.
ಮೂಗಿನ ಬಳಿ ಕೈಹಿಡಿದಾಗ ಇಷ್ಟರ ತನಕ ಶೀತವಾದ ನೀರಿನಲ್ಲಿ ಮುಳುಗಿದ್ದರೂ ಆತನ ಮೂಗಿನಲ್ಲಿ ಬಿಸಿಯುಸಿರು ಆಡುತ್ತಿತ್ತು.
ನೀರಿನಿಂದ ಒದ್ದೆಯಾದ ಕಣ್ಣುಗಳು ರೆಪ್ಪೆಯನ್ನು ಮುಚ್ಚಿ ತೆರೆದು ಮುಚ್ಚಿ ತೆರೆದು ಮುಚ್ಚಿ ತೆರೆದು ಮೀನಿನಂತೆ ಆತ ಚಡಪಡಿಸಿದಾಗ ಆಕೆಗೆ ಕನಿಕರವೆನಿಸಿತು.
ಮೇಲೆತ್ತಿ ಹಾಕಿದ ಆತನನ್ನು ಆತ ತನ್ನ ಫಿಯಾನ್ಸಿಯೆ ಹೌದೆಂದು ದೃಢಪಡಿಸಿಕೊಂಡು ಚಪ್ಪಲಿಯಿಂದ ಕೆನ್ನೆಗೆ ಆತ ಮುಲುಕಾಡುವಷ್ಟು, ನೊರೆಕಾರಿ ನರಳುವಷ್ಟು ಏಟು ಬಿಗಿದು ತನ್ನ ಸೆರಗಿನ ತುದಿಗೆ ಕಟ್ಟಿ ಮನೆಗೆ ಎಳೆದುಕೊಂಡೊಯ್ದು ತಾಯಿಯ ಮುಂದೆ ಸಾಷ್ಟಾಂಗ ಉರುಳಿಸಬೇಕೆಂದು ನಿರ್ಧಾರಮಾಡಿಕೊಂಡಿದ್ದ ಆಕೆಗೆ ಕಾಲೆತ್ತಿದಾಗ ಕಂಡದ್ದು ಆತನ ತುಟಿಗಳು. ತುಟಿಯ ಮೇಲಿನ ಕಪ್ಪು ದಪ್ಪ ಮೀಸೆ. ನೀರಿನ ಹನಿಗಳಿಂದ ತೊಯ್ದ ನೆರೆ ನೀರು ಸವರಿಹೋದ ಭತ್ತದ ಪೈರಿನಂತೆ ಅವಚಿ ಮಲಗಿತ್ತು.
ಕೆಂಪು ತುಟಿಗಳು ಎರಡು ನೀರಿನಲ್ಲಿ ಮಿಂದೋ ಏನೋ, ಕೆಂಪಾಗಿ ಕಳಕಳಿಸುತ್ತಾ, ಉಸಿರಿಗಾಗಿ ಪಟಪಟಿಸುತ್ತಾ ಸಿಕ್ಕಿದ್ದನ್ನು ಮುತ್ತಿಡುವುದಕ್ಕೆ ಧಾವಿಸುವ ಅಕ್ವೇರಿಯಂನ ಮೀನಿನ ಬಾಯಿಯಂತೆ ಬಿಚ್ಚಿ ಮುಚ್ಚಿ ಬಿಚ್ಚಿ ಮುಚ್ಚಿ ನಡುಗುತ್ತಿದ್ದವು.
ಈ ತುಟಿಗಳು ಹಾಸಿಗೆಯಲ್ಲಿ ಹೇಗಿರಬಹುದು ಏನನ್ನೆಲ್ಲ ಹುಡುಕಬಹುದು, ಈ ರಟ್ಟೆ ಈ ಎದೆ ನೀರಿನಿಂದ ತೊಯಿದಿರುವ ಪ್ಯಾಂಟು ಅವಚಿಕೊಂಡು, ದುಂಡಾಗಿ ಚಾಚಿಕೊಂಡಿರುವ, ಈ ನೀಳ ತೊಡೆಗಳು ಹೇಗೆ ಬಳಸಿಕೊಳ್ಳಬಹುದು ಆಕೆಯನ್ನು, ಕಾಫ್ ಮನ್‌ನ ಸೆಕ್ಸ್ ನಾವೆಲ್ಲನ್ನು ಈತ ಓದಿರಬಹುದೆ ಎಷ್ಟು ಗೊತ್ತಿರಬಹುದು ಇವನಿಗೆ ಎಂದು ಆಕೆ ಅವನನ್ನೆ ನೋಡುತ್ತಾ ಕಲ್ಲು ಬೆಂಚಿನಲ್ಲಿ ಪುನಃ ಕುಳಿತು ಗಲ್ಲಕ್ಕೆ ಕೈಕೊಟ್ಟು ಚಿಂತಿಸುತ್ತಿರುವಾಗ ಆತ ನರಳಿದ.
ತಾನು ನಿಜವಾಗಿಯೂ ಆತನಿಗೆ ಹೊಡೆದೆನೆ ಎಂದು ಆಕೆ ತನ್ನ ಚಪ್ಪಲಿ ಕಳಚಿ ನೋಡಿಕೊಂಡಳು. ಇಲ್ಲ ಹೊಡೆದಂತೆ ಕಾಣಲಿಲ್ಲ. ಆತನ ಬಳಿಗೆ ಹೋಗಿ ಪಕ್ಕದಲ್ಲಿ ಕುಳಿತು ಕೈಯಿಂದ ಕೆನ್ನೆ ಸವರಿಕೊಂಡಳು. ಹೊಡೆದ ಗುರುತೇನೂ ಕಾಣುತ್ತಿಲ್ಲ. ನುಣುಪಾಗಿದೆ. ಬಾಸುಂಡೆ ಎದ್ದ ಗುರುತಿಲ್ಲ. ಇಂದು ಶೇವ್ ಮಾಡಿರಬೇಕು ಆತ. ಅಷ್ಟು ನುಣಪಾಗಿದೆ. ಶೇವ್ ಮಾಡಿಕೊಂಡಿರುವ ಆತನ ಕೆನ್ನೆ, ಅಂಥ ಕೆನ್ನೆಯನ್ನೆ ಈ ತನಕ ಮುಟ್ಟದಿರುವ ತನ್ನ ಕೈಗೆ ಅಂಟಿಕೊಂಡದ್ದು ಆಕೆಗೆ ಅರಿವಾದಾಗ ಕೆನ್ನೆಯನ್ನು ಮೃದುವಾಗಿ ಸವರ ಹತ್ತಿದಳು.
ಪಟಪಟನೆ ಬಡಿಯತೊಡಗಿದ ತುಟಿಗಳಿಂದ ಆತ ಒಮ್ಮೆಲೇ ನರಳತೊಡಗಿದ. ಅಂಗಾತನೆ ಚಾಚಿಕೊಂಡಿದ್ದ ಆತನ ತೋಳುಗಳು ಚಲಿಸತೊಡಗಿ ನಿಧಾನವಾಗಿ ಹತ್ತಿರಕ್ಕೆ ಬಂದು ಹೊಟ್ಟೆಯನ್ನು ಅವಚಿಕೊಂಡವು.
ತುಟಿಗಳ ಪಟಪಟ ತೀವ್ರವಾದಾಗ ಏನು ಮಾಡೋಣ ಎಂದು ಆಕೆ ಕಂಗಾಲಾಗಿ ಏನು ಮಾಡಲೂ ತೋಚದೆ ಕೆರೆಯ ನೀರು ತಂದು ಕುಡಿಸೋಣವೇ ಎಂದು ಯೋಚನೆ ಹೊಳೆದು ತಕ್ಷಣ ಎಲೆಗಳು ಕೊಳೆತು ನೀರು ಕಪ್ಪಾದುದು ನೆನಪಾಗಿ, ಕಪ್ಪು ಇನ್ನೂ ಇದೆಯೇ ಎಂದು ಬಗ್ಗಿ ಮತ್ತೂ ಬಗ್ಗಿ ಆಕೆಯ ತುಟಿಗಳೆ, ಆತನ ತುಟಿಗಳನ್ನು ಅವಚಿಕೊಂಡವು. ನೀರಿನ ಕಪ್ಪು ಆಳ ಆಳವಾಗುತ್ತಾ ಸಾಗಿ ಕಪ್ಪೆ ಸುತ್ತೆಲ್ಲ ಆವರಿಸಿಕೊಂಡಾಗ ಆದದ್ದು ನಿಜವಾಗಿ ರಾತ್ರಿ ಎಂದು ಆಕೆಗೆ ಅರಿವಾಗಿ ಹಾವು ಒದ್ದೆ ತುಟಿಗಳಿಂದ ನೇವರಿಸುತ್ತ ಸೀಳು ನಾಲಗೆಯಿಂದ ಚಪ್ಪರಿಸುತ್ತ ಮೀನ ಖಂಡವನ್ನು ಸುತ್ತುವರಿದು ಕಿಬ್ಬೊಟ್ಟೆಯನ್ನು ನೆಕ್ಕಿತು.
.
ಇಂಗ್ಲಿಂಡಿನಲ್ಲೊಬ್ಬ ಇಂಡಿಯನ್
ಇಂಗ್ಲಂಡಿನಲ್ಲೊಬ್ಬ ಇಂಡಿಯನ್
-ಚಂದ್ರಶೇಖರ ಪಾಟೀಲ
ಸಾಕ್ಸು ಬನಿಯನ್ನು ಚಡ್ಡಿ ಬೂಟು
ಅಂಡರ್‌ವೇರು ಶರಟು ಪ್ಯಾಂಟು
ಸ್ವೆಟರು ಕೋಟು ನೆಕ್‌ಟಾಯಿ
ಓವರ್ ಕೋಟು ಹ್ಯಾಟು-
ಗಳ ಉಳ್ಳಾಗಡ್ಡಿ ಪದರಗಳಲ್ಲಿ
ಸಿಕ್ಕೊಂಡು ಸೊನ್ನೆಯಾಗಿ
ಕೊಡೆಯ ಬುಡಕ್ಕೆ ಗುಬ್ಬಿಯಾಗಿ
ರೋಡಿನಗುಂಟ ದೆವ್ವನಂತೆ ಉರುಳು-
ರುಳಿ ಹೊರಟಾಗ ಹೂ ಕಳಚಿ ಎಲೆ ಬಿಚ್ಚಿ
ಬರೇ ಬತ್ತಲ ಉದೋಕ ನಿಂತ
ಹಲಕಟ್ಟು ಗಿಡ ಮರ ಕಂಡು
ಹೊಟ್ಟೆಯ ಕಿಚ್ಚು ಕೆಬರುತ್ತಾನೆ.
ಥೂ. ಹೊಟ್ಟೆಕಿಚ್ಚಿಗೂ ಇಲ್ಲಿ ಕಾವಿಲ್ಲ.
ಖಾಲಿ ಹೊಗೆ, ಥಂಡಿ, ಬಾಯಿ ತೆಗೆದರೆ ಸಾಕು
ಬಾಯಿ ತೆಗೆದು ಗಂಟಲು ಕೊರೆದು ಮೈ-ಕೈ-
ಕಾಲು ಸೀಳುವ ಥಂಡಿ, ಬರಿ ಗುಸು ಗುಸು ಮಾತು.
ಸಾಮ್ರಾಜ್ಯ ಉರುಳಿಸುವ ಒಳಸಂಚಿನಂತೆ.
ತಂಪು ಮಾತು, ದಿನಗಟ್ಟಲೆ ರಾತ್ರಿಗಟ್ಟಲೆ
ಫ್ರಿಜ್ಜಿನಲ್ಲಿಟ್ಟ, ಹಳಸದ, ಹಳೆಯ ಮಾತು.
ಮತ್ತೆ ಮೌನ. ಸದಾ ಮುಚ್ಚಿದ ಬಾಗಿಲು.
ಮೌನ. ಅಸಹ್ಯ ಮೌನ. ನಾಯಿ ಬೊಗಳುವದಿಲ್ಲ.
ಕಾರು ಕೂಗುವದಿಲ್ಲ. ಅಪಶಕುನದ ಬೆಕ್ಕು
ಆಡ್ಡ ಹಾಯುವದಿಲ್ಲ. ಗಟಾರದಗುಂಟ
ಅರ್ಧಾಂಗಿಗಳಾಗಿ ಮಕ್ಕಳು ಕೂಡ್ರುವದಿಲ್ಲ.
ಥೂ. ಇಲ್ಲಿಯ ರೋಡುಗಳಿಗೆ ಗಟಾರಗಳೆ
ಇಲ್ಲ. ಎಲ್ಲ ಭೂಮಿಯ ಒಳಗೇ, ಗಟಾರ
ಪಟಾರ ವಿದ್ಯುತ್ತಂತಿ ಕುಡಿಯುವ ನೀರು,
ರಸ್ತೆ ಕೂಟಕ್ಕೆ ಹಸಿರು ಹಳದಿ ಕೆಂಪು ಲೈಟು.
ಇಲ್ಲಿ ರಾಂಗ್ ಸೈಡಿಲ್ಲ. ಸೀಟಿ ಹೊಡೆದು ಕರೆದು
ಹೆಸರು ಬರಕೊಳ್ಳುವಾಗ ಎಂಟಾಣೆ ಕೊಟ್ಟರೆ
ನಗುವ ಕಂಡ ಕಂಡಲ್ಲಿ ಸೆಲ್ಯೂಟ್ ಹೊಡೆಯುವ
ಪೊಲೀಸರಿಲ್ಲ. ಎಂಥ ಸೀಜನ್ನಿನಲ್ಲೂ
ದಾರಿಯ ಮೇಲೆ ನಾಯಿಗಳ ಪ್ರಣಯಲೀಲೆ
ಇಲ್ಲ. ಎಲ್ಲ ನರಮನುಷ್ಯರ ಪಾಲಿಗೇ
ಎಲ್ಲಾ. ಇದ ಕಂಡು ಮತ್ತೂಮ್ಮೆ ಕಿಚ್ಚು
ಕೆಬರುತ್ತಾನೆ. ದೇಶಾಭಿಮಾನದ ಉರಿಗಾಳಿ ಬೀಸಿ
ನನ್ನಜ್ಜ ಮುತ್ತಜ್ಞರನ್ನು ಸುಲಿದವರ
ಮೊಮ್ಮಕ್ಕ- ಮರಿ ಮೊಮ್ಮಕ್ಕಳಲ್ಲವೆ ಇವರು
ಅಂತ ಅವಡುಗಚ್ಚುತ್ತಾನೆ ಯಾರೊ ಹಲೋ ಅಂದು
ನೀಲಿ ಕಣ್ಣುಗಳಲ್ಲಿ ಪಣತಿ ಹಚ್ಚಿದಾಗ ಹಲೋ ಅಂದು
ಬರೋಬರಿ ಆಗುತ್ತಾನೆ. ರೋಡು ದಾಟಲು ದಾರಿ
ಕಾಯುತ್ತಾನೆ. ಹಸಿರು ಆರಿ ಕೆಂಪು ಉರಿದಾಗ
ಕಾರುಪಾರುಗಳೆಲ್ಲ ಗಕ್ಕೆಂದು ನಿಂತಾಗ
ಪುಟು ಪುಟು ಪುಟು ಆತ ರೋಡು ದಾಟುತ್ತಾನೆ.
ಗತಿ, ಸ್ಥಿತಿ: ಮರುಚಿಂತ
ಗತಿ, ಸ್ಥಿತಿ : ಮರುಚಿಂತನೆ
-ಜಿ. ಎನ್. ರಂಗನಾಥರಾವ್
ಗಿರಿಯವರ “ಗತಿ, ಸ್ಥಿತಿ ಕುರಿತು ಜಾ. ಗೋ. ಅವರ ಲೇಖನ (ಸಾಕ್ಷಿ-೧೭) ಮರುಚಿಂತನೆಗೆ ಅವಕಾಶ ಮಾಡಿಕೊಟ್ಟಿದೆ. ನನ್ನ ಒಂದೆರಡು ಅನ್ನಿಸಿಕೆಗಳನ್ನು ಮಂಡಿಸುವ ಮುನ್ನ ಒಂದು ಅಂಶವನ್ನು ಸ್ಪಷ್ಟಪಡಿಸಬೇಕಾಗಿದೆ. ಅದು: ನನಗೆ ಶ್ರೀ ಗಿರಿ ಅವರು ಶ್ರೀ ಜಾ. ಗೋ. ಅವರಷ್ಟೇ ಪರಿಚಿತರು.
ನನ್ನ (ಸಂಕ್ರಮಣ-೪೯) ಮತ್ತು ಶ್ರೀ ಯು. ಆರ್. ಅನಂತಮೂರ್ತಿಯರ (ಸಾಕ್ಷಿ-೧೩) “ಪ್ರಶಂಸನಾತ್ಮಕ” ಲೇಖನಗಳ ಹಿನ್ನೆಲೆಯಲ್ಲಿ ತಾವು “ಗತಿ, ಸ್ಥಿತಿ” ಓದಿದಾಗ ತಮಗೆ ನಿರಾಶೆಯುಂಟಾಯಿತೆಂದು ಹೇಳಿರುವ ಜಾ. ಗೋ. ಅವರು ಸಾಕ್ಷಿ-೧೭ ರ ಲೇಖನದಲ್ಲಿ ವಿಮರ್ಶಕರ ಕಣ್ಣಿಗೆ ಬೀಳದಂಥ ಕೆಲವು ನ್ಯೂನತೆಗಳನ್ನು ಸೂಚಿಸಿ “ಗತಿ, ಸ್ಥಿತಿ” ಪಕ್ವ ಮನಸ್ಸಿನ ಲೇಖಕನೊಬ್ಬನ ಅಪಕ್ಷಕೃತಿ ಎಂದಿದ್ದಾರೆ.
ಜಾ. ಗೋ. ಅವರು ಸೂಚಿಸಿರುವ ನ್ಯೂನತೆಗಳನ್ನು ಚರ್ಚಿಸುವ ಮುನ್ನ ಅವರಿಗಾದ ನಿರಾಶೆ ಕುರಿತು ಒಂದೆರಡು ಮಾತು ಹೇಳಬೇಕಾಗಿದೆ. ಮುಖ್ಯವಾಗಿ ಜಾ. ಗೋ. ಅವರು ಕಾದಂಬರಿ ಪ್ರಕಾರದ ಬಗ್ಗೆ ಸಾಂಪ್ರದಾಯಿಕ ಕಲ್ಪನೆಯಲ್ಲಿ ನಿಷ್ಠರಾಗಿರುವುದು ಹಾಗೂ ಪ್ರಸ್ತುತ `ಗತಿ, ಸ್ಥಿತಿ’ ಬಗ್ಗೆ ಪೂರ್ವನಿಶ್ಚಿತ ಧೋರಣೆ ತಾಳಿರುವುದೇ ಅವರ ನಿರಾಶೆಗೆ ಮೂಲ ಎನ್ನಬಹುದು. ಈ ಪೂರ್ವನಿಶ್ಚಿತ ಮನಸ್ಸು ‘ಗತಿ, ಸ್ಥಿತಿ’ಯ ಧೋರಣೆ ಧಾಟಿಗಳನ್ನು ಗ್ರಹಿಸುವುದರಲ್ಲಿ ವಿಫಲವಾಗಿದೆ. ಹೀಗಾಗಿ ಕತ್ತಲೆಯಲ್ಲಿ ನೆಲುವಿನ ಮೇಲಿರುವ ಹಾಲಿನ ಪಾತ್ರೆ ಹುಡುಕಿಹೊರಟವನ ಕೈಗೆ ಆಲ್ಕೊಹಾಲಿನ ಪಾತ್ರೆ ಸಿಕ್ಕಂತಾಗಿದ್ದರೆ ಅದು ಅಸಹಜವೇನಲ್ಲ.
“ಗತಿ, ಸ್ಥಿತಿ’ ಕುರಿತು ಜಾ. ಗೋ. ಅವರ ಪೂರ್ವನಿಶ್ಚಿತ ಭಾವನೆಗಳೇನೆಂಬುದನ್ನು ನೋಡೋಣ:
೧ ಗಿರಿ ಒಬ್ಬ ಮನೋವಿಜ್ಞಾನಿ ಮತ್ತು ಪ್ರಬುದ್ಧವಿಮರ್ಶಕ.
೨ ಮನೋವಿಜ್ಞಾನಿಯ ಕಾದಂಬರಿ ಮನೋವಿಶ್ಲೇಷಣಾತ್ಮಕವಾಗಿದ್ದು ಪಾತ್ರಗಳ ಮನಸ್ಸು-ಹೃದಯಗಳನ್ನು ಬಿಚ್ಚಿ ಬಿಸಿಲಿಗೆ ಹರವಿರಬೇಕು.
೩ ಕಾದಂಬರಿಯೆಂದ ಮೇಲೆ, ಅದರಲ್ಲೂ ಕಥಾಪ್ರಧಾನವಲ್ಲದ ಕಾದಂಬರಿಯ ಪಾತ್ರಗಳೆಲ್ಲ ಮೈಕೈ ತುಂಬಿಕೊಂಡು ಅಂದವಾಗಿರಬೇಕು.
೪ ಕಾದಂಬರಿ ಕುರಿತ ಸಾಂಪ್ರದಾಯಿಕ ಕಲ್ಪನೆಯಲ್ಲಿ ನಿಷ್ಠೆ.
೫ ವಿಕ್ಷಿಪ್ತ ವ್ಯಕ್ತಿತ್ವ ಚಿತ್ರಣ ಇತ್ತೀಚಿನ ಸಾಹಿತ್ಯದಲ್ಲಿ ಒಂದು ಗೃಹೀತ ಸಂಪ್ರದಾಯ (An accepted tradition) ಆಗುತ್ತಿರುವಂತೆ ಕಾಣುವ ಮನಸ್ಸು ಹಾಗೂ ಅದಕ್ಕೆ ಕಾಮು, ಕಫ್ಕರ ಪ್ರೇರಣೆಯೇ ಕಾರಣ ಎಂಬ ನಿರ್ಧಾರ, ಸಮಾಜ ಮತ್ತು ಅಂಗೀಕೃತ ಮೌಲ್ಯಗಳ ಬಗೆಗಿನ ಪ್ರಚಲಿತ ಅಸಹನೆ ಮತ್ತು ಬೇಸರಿಕೆಗಳು ವ್ಯಕ್ತಿಯ ಸ್ವಯಂಕೃತ ಅಪರಾಧವೆಂಬ ನಿಲುವು.
-ಇವುಗಳ ಜೊತೆಗೆ ‘ಗತಿ, ಸ್ಥಿತಿ’ ಕುರಿತು ಈ ವರೆಗೆ ಬಂದ ಲೇಖನಗಳ ಬಗ್ಗೆ “ಈ ವಿಮರ್ಶಕರಿಗೂ ಗತಿ. ಸ್ಥಿತಿಯ ಲೇಖಕರಿಗೂ ಇದ್ದಿರಬಹುದಾದ ಸಂಬಂಧವನ್ನುಳಿದು” ನವ್ಯವಿಮರ್ಶೆ ಇತ್ತೀಚೆಗೆ ಕೇವಲ ಭಾಷೆ ಮತ್ತು ತಂತ್ರ ಇವುಗಳಿಗೆ ಹೆಚ್ಚಿನ ಪ್ರಾಮುಖ್ಯ ಕೊಡುತ್ತಿರುವುದೂ ಕಾರಣವಿರಬಹುದು ಎಂಬ ಅನುಮಾನ.
ಹೀಗೆ ತೆರೆದ ಮನಸಿಲ್ಲದ ಪೂರ್ವಾಭಿಪ್ರಾಯಗಳಿಂದ ತುಂಬಿದ ಜಾ. ಗೋ. ಅವರಿಗೆ “ಗತಿ, ಸ್ಥಿತಿ’ ಒಂದು ಅಪಕ್ವಕೃತಿ, ಮನೋವೈಜ್ಞಾನಿಕ ವೇಧಶಾಲೆ (Psychological observatory) ಎಂದೆನ್ನಿಸಿ, ತಂತ್ರ-ಭಾಷೆಗಳಷ್ಟೇ: ಪ್ರಧಾನವಾಗಿ ಅವರ ಮನಸ್ಸಿಗೆ ಆಚ್ಚೊತ್ತಿ, ಕಾದಂಬರಿಯ ಒಟ್ಟು ಧೋರಣೆ ಮತ್ತು ಧ್ವನಿ ಹೊರಗೇ ಉಳಿದು ಬಿಟ್ಟಿದೆ. ಕಾದಂಬರಿಯ ನ್ಯೂನತೆಗಳನ್ನೂ, ನಾಯಕನ ವ್ಯಕ್ತಿತ್ವದಲ್ಲಿ ಕಾಣುವ
ಬಿರುಕನ್ನೂ ಥಟ್ಟನೆ ಗುರುತಿಸುವ ಜಾ.ಗೋ. ಅವರು ‘ಗತಿ, ಸ್ಥಿತಿ’ಯ ಮೂಲದ್ರವ್ಯ ಮತ್ತು ನಾಯಕನ ಗುಣಲಕ್ಷಣಗಳನ್ನು ಗುರುತಿಸುವುದರಲ್ಲಿ ವಿಫಲವಾಗಿರುವುದೇ ಅವರ ಪೂರ್ವನಿಶ್ಚಿತ ಮನಸ್ಸಿಗೆ ನಿದರ್ಶನ.
ಜಾ. ಗೋ. ಅವರ ಲೇಖನ ಓದಿದ ಮೇಲೆ ಕೆಲವು ಪ್ರಶ್ನೆಗಳು ಮೂಡುತ್ತವೆ: ‘ಗತಿ, ಸ್ಥಿತಿ’ ಒಂದು ಉತ್ತಮ ಮನೋವಿಶ್ಲೇಷಣಾತ್ಮಕ ಕಾದಂಬರಿಯಾಗಬೇಕಿತ್ತೆ? ಹಾಗಾದರೆ ಏಕಾಗಲಿಲ್ಲ? ಕಾದಂಬರಿಯ ನಾಯಕನಾದ ‘ಆತ’ ಸ್ವಮನೋವಿಶ್ಲೇಷಣೆಯಲ್ಲಿ ತೊಡಗುವುದಿಲ್ಲವೇಕೆ? ‘ಆತ’ನ ಅಂತರಂಗದ ಚಿತ್ರಣಕ್ಕೆ ಒತ್ತು ಬಿದ್ದಿಲ್ಲ ಏಕೆ? ‘ಆತ’ ಕೇವಲ Running Commentator ಅಷ್ಟೆಯೋ ಅಥವಾ ಆತಗೂ ಅವನ ಸುತ್ತ ಮುತ್ತಣ ಪರಿಸರಕ್ಕೂ ಏನಾದರೂ ಸಂಬಂಧ ಉಂಟೊ? ಪರಿಸರದ ವ್ಯಾಖ್ಯಾನದಲ್ಲಿ ಆತ ಮೈಮರೆಯುತ್ತಾನೆಯೆ ? ಇದರಿಂದಾಗಿ ಕಾದಂಬರಿಕಾರನಿಗೆ ನಾಯಕನ ವ್ಯಕ್ತಿತ್ವ ಮತ್ತು ಸಮಸ್ಯೆಗಳ ನಿರೂಪಣೆಯಲ್ಲಿ ತೊಡಕುಂಟಾಗಿದೆಯೆ? ಕಥೆ ಗೌಣವಾಗಿದ್ದರೂ ಜಾ. ಗೋ. ಹೇಳುವಂತೆ ಪಾತ್ರರಚನೆ ಕಣ್ಣಿಗೆ ಕಟ್ಟುವಷ್ಟು ಢಾಳವಾಗಿಲ್ಲವೆ?
ಈ ಪ್ರಶ್ನೆಗಳನ್ನೆಲ್ಲ ಪರಿಶೀಲಿಸಿದಾಗ ಜಾ. ಗೋ. ಅವರು ಕಾದಂಬರಿಯ ಕೇಂದ್ರವನ್ನೇ ಬಿಟ್ಟು ಅದರ ಆಸುಪಾಸಿನ ಪರಿಕರಗಳ ಬಗ್ಗೆಯೇ ಹೆಚ್ಚು ನಿರೀಕ್ಷಣೆ ಇಟ್ಟುಕೊಂಡಿದ್ದಾರೆ ಎನ್ನಿಸುತ್ತದೆ. ‘ಗತಿ, ಸ್ಥಿತಿ’ ಮನೋವಿಶ್ಲೇಷಣಾತ್ಮಕ ಕಾದಂಬರಿಯಾಗಲಿಲ್ಲವೇಕೆ. ನಾಯಕ ಸ್ವಮನೋವಿಶ್ಲೇಷಣೆ ನಡೆಸಲಿಲ್ಲವೇಕೆ ಎಂಬ ಪ್ರಶ್ನೆಗಳೊಂದಿಗೆ psychologist ಆದ ಗಿರಿ ಒಂದು case history ಕೊಡಬೇಕಿತ್ತೆ, psychology ಬಲ್ಲವರೆಲ್ಲ ಮನೋವಿಶ್ಲೇಷಣಾತ್ಮಕ ಕಾದಂಬರಿಯನ್ನೇ ಬರೆಯಬೇಕೆ ಎಂಬ ಪ್ರಶ್ನೆಗಳೂ ಏಳುತ್ತವೆ. ಪಾತ್ರ ರಚನೆಯಲ್ಲಿ ಇದು ಏಕೆ ಅಯಶಸ್ವಿಯಾಯಿತು? ಅಂದರೆ ಇದು ಆತನಿಗೆ ಸೇರುತ್ತದೆ. ಇನ್ನೊಂದು ಸೇರುವುದಿಲ್ಲ. ಅವನು ವಾಮ ಪಂಥೀಯ, ಅವನು ನಿಕ್ಸನ್ ಪ್ರೇಮಿ, ಅವನು ಹೋರಾಟ ಬಯಸುತ್ತಾನೆ, ಇಲ್ಲ ವಿರೋಧಿಸುತ್ತಾನೆ ಎಂದು ಹೇಳುತ್ತ ಹೋಗುವುದೋ ಅಥವಾ ಬಾಲ್ಯ, ವಿದ್ಯಾಭ್ಯಾಸ, ಯೌವನದಾಕಾಂಕ್ಷೆಗಳು, ಗೃಹಸ್ಥ ಧರ್ಮ, ವೃದ್ದಾಪ್ಯಗಳಿಗೆಂದು ಇಷ್ಟಿಷ್ಟು ಪುಟ ಮೀಸಲಿಟ್ಟು ವರ್ಣಿಸಿರುವುದರಿಂದ ಪಾತ್ರ ತುಂಬಿಬಂದೀತೋ? ಇದಾವುದರಿಂದಲೂ ಒಂದು ವ್ಯಕ್ತಿತ್ವ ಧಿಡೀರನೆ ಎದ್ದು ನಿಲ್ಲುವುದಿಲ್ಲವೆಂಬುದು ಯಾರಿಗಾದರೂ ಸರಳ ತಿಳಿಯುವ ವಿಷಯ. ಹೀಗೆ ವಾದ ಬೆಳೆಸುತ್ತ ಹೋಗುವುದರಿಂದ ಪ್ರಶ್ನೋತ್ತರಿಸಿ ಕೊಳ್ಳುವುದೋ-ಪಾಟೀ ಸವಾಲೋ ಆದೀತಷ್ಟೆ. ಆದ್ದರಿಂದ ಜಾ. ಗೋ. ಅವರ ಅನ್ನಿಸಿಕೆಗಳ ಹಿನ್ನೆಲೆಯಲ್ಲಿ ಇಡೀ ಕಾದಂಬರಿಯ ಪುನರ್ ಅವಲೋಕನ ಮಾಡುವುದರಿಂದ “ಗತಿ, ಸ್ಥಿತಿ” ಮತ್ತಷ್ಟು ನಿಚ್ಚಳವಾದೀತು.
ಮುಖ್ಯವಾಗಿ ಗಿರಿಯವರ ‘ಗತಿ, ಸ್ಥಿತಿ ಸಾಂಪ್ರದಾಯಿಕವಾಗಿ ಒಂದು ಕಾದಂಬರಿಗಿರಬೇಕೆಂದು ನಂಬಲಾಗಿರುವ ಗುಣಧರ್ಮಗಳನ್ನೂ ವರ್ಚಸ್ಸು ವೈಖರಿ, ವಜನುಗಳನ್ನೂ ಕೊಡವಿ ನಿಂತಿರುವ ಒಂದು ವಿಭಿನ್ನ ಕೃತಿ. ಈ ಕಾದಂಬರಿಯ ‘ಆತ’ ಅ.ನ.ಕೃ. ಕಾದಂಬರಿಗಳ
ನಾಯಕರಂತೆ ಧಿಡೀರನೆ ಪ್ರಗತಿಶೀಲನೊ, ಕಲಾವಿದನೊ, ಕಲಾ ವಿಮರ್ಶಕನೊ ಆಗಿ ನಕಲಿ ಬುದ್ದಿವಂತಿಕೆ ಮರೆಸುವವನಲ್ಲ. ಅಂತೆಯೇ ಕಾರಂತರ ಕಾದಂಬರಿಗಳ ತಾರ್ಕಿಕ ವಿಚಾರವಂತ ಪಾತ್ರಗಳ ಜಾಡಿನವನೂ ಅಲ್ಲ. ಅಥವಾ ಈತನನ್ನು ರಾಮಾನುರ್ಜ
ಈ “ಹಳದಿ ಮೀನು” ಮತ್ತು ಶಾಂತಿನಾಥ ದೇಸಾಯರ “ವಿಕ್ಷಿಪ್ತ” ಕಾದಂಬರಿಗಳ ನಾಯಕರಿಗೂ ಹೋಲಿಸಲಾಗದು. ‘ಗತಿ, ಸ್ಥಿತಿ’ಯ ಆತನಿಗೆ ಅನಕೃ ಕಾದಂಬರಿಗಳ ನಾಯಕರ ಖೋಟತನ ಇಲ್ಲ: ಕಾರಂತರ ಕಾದಂಬರಿಗಳ ಪಾತ್ರಗಳಂತೆ ವೈಚಾರಿಕತೆಯೇ ಆತನ ಜೀವದುಸಿರಾಗಿಲ್ಲ: ‘ಹಳದಿ ಮೀನಿ’ನ ನಾಯಕನ ತೀವ್ರ ನಿರಾಶೆ, ಉದ್ವಿಗ್ನತೆ, ಭ್ರಮಾವಿಲಾಸಗಳಿಂದ ‘ಆತ’ ಮುಕ್ತ. ‘ವಿಕ್ಷಿಪ್ತ’ದ ನಾಯಕನಂತೆ ‘ಆತ’ ಸ್ವಾನುರಕ್ತನೂ ಅಲ್ಲ. ಹೃದಯದಲ್ಲಿ ಒಂಟಿಯಾಗಿ ಬಾಹ್ಯ ಜಗತ್ತಿನಲ್ಲಿ ಎಲ್ಲರೊಂದಿಗೂ ಬೆರೆಯುತ್ತ, ಲೀಲಾಜಾಲವಾಗಿ ತನ್ನ ವ್ಯಕ್ತಿತ್ವದ ಛಾಪು ಮೂಡಿಸುತ್ತ ಡೌಲುಮಾಡುವ ‘ವಿಕ್ಷಿಪ್ತ’ದ ನಾಯಕನ ಮರೆಯುವಿಕೆಯೂ ಆತನಿಗೆ ಮೈಗೂಡಿಲ್ಲ. ‘ಗತಿ, ಸ್ಥಿತಿ’ಯ ನಾಯಕ ಇವರೆಲ್ಲರಿಗಿಂತ ಎಲ್ಲ ವಿಧದಲ್ಲೂ ವಿಭಿನ್ನ, ಇವನ ಸ್ಪಂದನ, ನೋವು, ನೋಟ, ಪ್ರತಿಕ್ರಿಯೆಗಳೆಲ್ಲ ಬೇರೆಯೇ ಆಗಿದೆ. ಆದ್ದರಿಂದ “ಗತಿ, ಸ್ಥಿತಿ” ಅಳೆಯಲು ಸಾಂಪ್ರದಾಯಿಕ ಅಳತೆಗೋಲಿಗಿಂತ ಮಿಗಿಲಾದ ಬೇರೆ criterion ಹುಡುಕಬೇಕಾಗುತ್ತದೆ. ‘ಗತಿ, ಸ್ಥಿತಿ’ಯ ನಾಯಕನಾದ ಆತ ವಿಶಿಷ್ಟ ವ್ಯಕ್ತಿತ್ವ ಉಳ್ಳವನು, ಆತನ ವಿಭಿನ್ನ ಧೋರಣೆ, ವಿಶಿಷ್ಟ ವ್ಯಕ್ತಿತ್ವವೇ ಈ ಕಾದಂಬರಿಯ ಮೂಲ ದ್ರವ್ಯ. ಪರಿಸರವನ್ನು ಗ್ರಹಿಸುತ್ತ ಜಿಗಿದಾಡುವ ಈತನ ವ್ಯಕ್ತಿತ್ವ ಹರಿಣಿಯಂತೆ ಚಂಚಲ. ಎಲ್ಲೂ establish ಆಗದ ಚಡಪಡಿಕೆಯದು, ಯಾವುದರೊಂದಿಗೂ ಸಂಬಂಧ ಕೂಡಿಸಲಾಗದಂಥ ಸ್ಥಿತ್ಯಂತರ ಸ್ಥಿತಿಯದು. ನನ್ನ ಈ ಮೊದಲ ಲೇಖನದಲ್ಲಿ (ಸಂಕ್ರಮಣ-೪೯) ಹೇಳಿರುವಂತೆ ಆತನದು ಎಲ್ಲೂ ಬೇರುಬಿಡಲಾಗದ ಅಲೆಮಾರಿ ವ್ಯಕ್ತಿತ್ವ. ಹೀಗಾಗಿ “ಗತಿ, ಸ್ಥಿತಿ” ಪಾತ್ರಪ್ರಧಾನವಾದ ಕಾದಂಬರಿಯಲ್ಲ. “ಗತಿ, ಸ್ಥಿತಿ” ವ್ಯಕ್ತಿತ್ವಪ್ರಧಾನವಾದ ಕಾದಂಬರಿ. ಇಲ್ಲಿ ನೋಡುವ ದೃಷ್ಟಿ, ಯೋಚಿಸುವ ಧಾಟಿ ಎಲ್ಲ ವಿಭಿನ್ನ. ಕಾದಂಬರಿಗೆ ಹೊಸ ಸ್ವರೂಪ ಕೊಡುವ ಪ್ರಾಮಾಣಿಕ ಪ್ರಯತ್ನ ಈ ಕೃತಿಯಲ್ಲಿ ಕಂಡುಬರುತ್ತದೆ. ಮನುಷ್ಯ ಜೀವನದ ಆವರಣದ ವಿವರಗಳ ಸುರುಳಿ ಬಿಚ್ಚುತ್ತ ಆತನ ವ್ಯಕ್ತಿತ್ವ ಪ್ರಕಾಶಗೊಳ್ಳುತ್ತದೆ. ಪರಿಸರ ಮತ್ತು ಆವರಣಗಳ ಚಿತ್ರ ವಿಚಿತ್ರಗಳ ವ್ಯಾಖ್ಯಾನ ಅವನ ಧೋರಣೆಯ ಸೂಚಿಯಾಗುತ್ತದೆ. ಈ ನೋಡುವಿಕೆ ಮತ್ತು ವ್ಯಾಖ್ಯಾನಿಸುವ ಕ್ರಿಯೆಯಲ್ಲಿ ಆತನ ವ್ಯಕ್ತಿತ್ವದ ಅನಾವರಣ ನಡೆಯುತ್ತದೆ. ಆದ್ದರಿಂದ ಆತನ ಈ ಸುತ್ತುವಿಕೆ, ನೋಡುವಿಕೆ ಮತ್ತು ವಿವರಿಸುವಿಕೆಗಳ ಕ್ರಿಯೆ ಮತ್ತು ಧಾಟಿಯಲ್ಲಿ ಕಾದಂಬರಿಯ ಒಟ್ಟು ಧೋರಣೆಯನ್ನೂ ಸ್ವರೂಪವನ್ನೂ ಗುರುತಿಸಬೇಕಾಗುತ್ತದೆ.
ಈಗ ‘ಆತನ’ನ ಬಾಯಿಂದ ಹೊರಬೀಳುವ ಈ ಕೆಲವು ಮಾತುಗಳನ್ನು ತಿಳಿಯೋಣ :
“ಅವಸರವೆಂದರೆ ಆತನಿಗೆ ಉದ್ವೇಗ, ಉದ್ವೇಗವೆಂದರ ನಡೆಯಲೇಬಾರದು, ಓಡಬೇಕು…”
(ಪುಟ ೧)
“ಅಯ್ಯೋ ಏನಂತೆ ಬಿಡು. ನಮಗೆ ಎಲ್ಲಾ ಊರೂ ಹೊಸದೆ, ಎಲ್ಲರೂ ಹೊಸಬರೆ…”
(ಪುಟ ೪)
“ಹುಡುಗ ಕೈಹಿಡಿದು ಎಳೆದುಕೊಂಡು ಹೋಗಲು ಶುರುಮಾಡಿದ್ದ ಎಂದಳು. “ಅಷ್ಟೇತಾನೆ ?” ಎಂದು ಕೇಳಿದ…”
(ಪುಟ ೧೧)
“ಅಂದ್ರೆ ಇವರೆಲ್ಲ ಬಾಯಿಂದ ಶಬ್ದಗಳನ್ನು ಆಚೆ ಹಾಕ್ತಾರಷ್ಟೆ. ವಾಕ್ಯವಿಲ್ಲ, ಅರ್ಥವಿಲ್ಲ ಅನ್ನಿಸಿಕೆ ಇಲ್ಲ. ಒಂದು ನಿರ್ಧಾರವಿಲ್ಲ. ಒಂದು ಯೋಚನೆ ಇಲ್ಲ. ವಿಚಾರ ಇಲ್ಲ. ಅವರ ಹಲುಬಿನ ಹಿಂದಿನ ಕತ್ತೆತನವನ್ನು ಬಿಟ್ಟರೆ ಬೇರೇನೂ ಇಲ್ಲ”. (ಪುಟ ೪೬)
“ಬೇಕು, ಬೇಡ, ಒಳ್ಳೆಯದು, ಕೆಟ್ಟದ್ದು, ಹಿತ-ಅಹಿತ ಚೆನ್ನಾಗಿದೆ, ಕೆಟ್ಟದಾಗಿದೆ ಇತ್ಯಾದಿ ಪ್ರಶ್ನೆಗಳು ಇಲ್ಲಿ ಏಳುವುದಿಲ್ಲ. ಅಭ್ಯಾಸ ಬಲವೇ ಬಲ. ಅರೆ ಒಂದು ವಾರದಿಂದ ಮಾಡಿಕೊಂಡೇ ಇಲ್ಲ. ಅಂತ ಮುಷ್ಟಿಮೈಥುನ ಮಾಡಿಕೊಂಡ ಹಾಗೆ”.
(ಪುಟ ೬೫)
“ಏನೂ ಅನ್ನಿಸಲಿಲ್ಲ. ಹೀಗಾಯಿತು, ಹೀಗಾಯಿತು ಅಂತ ಘಟನೆಗಳು ಮರುಕಳಿಸುತ್ತವೆ. ಅನ್ನಿಸುವುದು ಏನೂ ಇಲ್ಲ”.
(ಪುಟ ೯೨)
“ಏನನ್ನು ನೆನೆಸಿಕೊಂಡರೂ ಮನಸ್ಸಿಗೆ ನಿರುತ್ಸಾಹವೇ, ಮಾಡಬಹುದಾದದ್ದೆಲ್ಲ ಚಿಲ್ಲರೆಯಾಗಿ ಮಾಡಲಾಗದ್ದು ಅಗಾಧವಾಗಿ ಕಾಣುತ್ತೆ. ಯಾವುದೊಂದು ಕೆಲಸವೂ ಆಸಕ್ತಿ ಹುಟ್ಟಿಸಿ ನನ್ನನ್ನು ಎಳೆದುಕೊಳ್ಳುವುದಿಲ್ಲ”. (ಪುಟ ೯೩)
“ಅಯ್ಯೋ ಕರ್ಮವೇ ನಾನೇನು ಮಾಡಲಿ… ಹೇಗೆ ಹೊತ್ತು ಕಳೆಯಲಿ, ಹೇಗೆ ಸಾಯುವವರೆಗೆ ಬದುಕಲಿ ಎಂದು ಮನಸ್ಸು ಕಂಗೆಟ್ಟು ಹಲುಬುತ್ತಿತ್ತು…”
(ಪುಟ ೧೦೭)
“ಹಾಗೆ ನಿದ್ದೆ ತಿಳಿದು, ಹೆಂಚಿನಮಾಡು ಕಣ್ಣಿಗೆ ಬಿದ್ದು ಕಾಲ, ಸ್ಥಳದ ಪ್ರಶ್ನೆ ಮೂಡಿದಾಗ ಏನೋ ಇದ್ದಕ್ಕಿದ್ದಂತೆ ಆಳುಬರುವಷ್ಟು ಬೇಸರವಾಯಿತು. ಒಳಗೆ ಅಡಿಗೆ ಮನೆಯಲ್ಲಿ ಕಾಫಿ ತಯಾರಿರಬಹುದು ಎದ್ದು ಹೋಗಿ ಕುಡಿದರೆ ಒಳ್ಳೆಯದಾಗಬಹುದು. ಆದರೆ ಎದ್ದು ಹೋಗಿ ಅಡಿಗೆ ಮನೆಗೆ ನಡೆದು ಹೋಗುವ ಸಂಕಟ ಯಾರಿಗೆ ಬೇಕು? ಅದರ ಬದಲು ಸುಮ್ಮನೆ ಈ ಹಾಸಿಗೆಯ ಮೇಲೆ ಗೊಟಕ್ ಅನ್ನಬಹುದಾದರೆ ಯಾರಿಗೆ ಬೇಡ ?”
(ಪುಟ ೧೨೬)
“ಈ ಊರಲ್ಲಿ ಇಂದ್ರಿಯಗಳೆಲ್ಲ ಸಹಜವಾದ ವಂಚನೆಗೆ ಒಳಗಾಗಿ ಬಿಡುತ್ತವೆ”.
(ಪುಟ ೧೨೮)
“ಥಟ್ಟನೆ ಈಗ ಸೂರ್ಯ ಮುಳುಗಿದರೆ ಅಥವಾ ಪ್ರವಾಹ ಹೆಚ್ಚಾಗಿ ನೀರು ಈ ಕಡೆ ಧಾಮಿದರೆ ನಿಂತ ಈ ಬಂಡೆ ಸರ‍್ರನೆ ಹಾವಿನಂತೆ ಜರುಗಿಬಿಟ್ಟರೆ ಎದುರಿನ ಬೆಟ್ಟದಾಕಾರದ ದರೆ ಜರಿದು ಕುಸಿದರೆ ಈ ಎರಡು ಬಂಡೆಗಳ ಕುಂಡೆಗಳಿಂದ ಹೆಬ್ಬಾವು ಎದ್ದರೆ ಬೇರೆಲ್ಲ ಹೊರಗಾಗಿರುವ ಆ ದೊಡ್ಡ ಮರ ಕೆಳಗೆ ಉರುಳಿದರ ಹಿರೇ ಬಾಸ್ಕರದ ಕಟ್ಟೆ ಒಡೆದುಕೊಂಡರೆ…ನನಗೆ ಮೇಲೆ ಹತ್ತುವ ಪ್ರಯಾಸ ತಪ್ಪುತ್ತದೆ”.
(ಪುಟ ೧೩೧)
ಸಂದರ್ಭ, ಸನ್ನಿವೇಶಗಳಿಂದ ಹೊರಕಳಚಿದ ಈ ಮಾತುಗಳು ಧ್ವನಿಸುವುದು establishment ಗೆ ಮುಖವಾದ ಧೋರಣೆಯನ್ನು, ತನ್ನವಳಾದ ಹುಡುಗಿಯಿಂದ ಹಿಡಿದು ಊರು, ಸಮಾಜ, ಅಂಗಿಕೃತ ವ್ಯವಸ್ಥೆ ಮತ್ತು ಮೌಲ್ಯಗಳವರೆಗೆ ಒಂದು ಬಗೆಯ ಅನ್ಯ ಮನಸ್ಕತೆ, ಮನುಷ್ಯ ಸಂಬಂಧವಾಗಲೀ: ಸಾಮಾಜಿಕ-ಭೌಗೋಳಿಕ ಆವರಣ, ಪರಿಸರಗಳಾಗಲೀ ಅವನಿಗೆ ಪರಿಣಾಮಕಾರಿಯಾಗಿ ತಾಕುವುದೇ ಇಲ್ಲ. ಇದಾವುದೂ ಆತನನ್ನು ಹಿಡಿದಿಡುವಷ್ಟು ಬಲವಾದ ಪ್ರಭಾವ ಅವನ ಮೇಲೆ ಆಗುವುದೇ ಇಲ್ಲ. ಆತನಿಗೆ ಎಲ್ಲಿ ಹರೂ ಅಲ್ಲಿ ಕಾಲ ಕೆಳಗೆ ಕೆಸರು..ವಟಗುಟ್ಟುವ ನೂರೆಂಟು ಕಪ್ಪೆಗಳು. ಹೀಗಾಗಿ ಆತ establish ಆಗದೆ ಯಾವುದರ ಜೊತೆಯೂ identify ಮಾಡಿಕೊಳ್ಳದೇ ಓಡುತ್ತಾನೆ, ಮೂಗುಬ್ಬುಸ ತರುವ ಒಂದು ಪರಿಸರದಿಂದ ಮತ್ತೊಂದಕ್ಕೆ. ಬದುಕಿನಲ್ಲಿ ಯಾವ ಹಂತದಲ್ಲೂ ಸಮನ್ವಯಗೊಳ್ಳದ, involve ಆಗದ ಆತನ ಸ್ಥಿತಿಯೇ ಕಾದಂಬರಿಯ ಧೋರಣೆ. ಹೊರದಾರಿಗಳನ್ನು ಹುಡುಕುವ ಆತನಿಗೆ ವಸ್ತು ಸ್ಥಿತಿಯ ಅರಿವಿದೆ. ಆದ್ದರಿಂದ ಆತ ಯಾವುದೇ ಒಂದಕ್ಕೂ static ಆಗಿ ಅಂಟಿಕೊಳ್ಳದೆ ಬೋರ್ ಅನಿಸಿದ್ದರ ಬಗೆಗೆಲ್ಲ ಮೇಲ್ಮೈ ನೋಟದಲ್ಲೇ ವಿವರವಾಗಿ ನೋಡುತ್ತ, ಟೀಕೆ ಟಿಪ್ಪಣಿ ಮಾಡುತ್ತ ಹೋಗುತ್ತಾನೆ. ಇಲ್ಲಿ ಅವರು ಕಾದಂಬರಿಗೆ ಹೊಸ ಸ್ವರೂಪ ಕೊಡಲು ಪ್ರಯತ್ನಿಸಿರುವುದು ಆತನ ವ್ಯಕ್ತಿತ್ವ, ಆತನ ಸಮಸ್ಯೆಗಳ ನಿರೂಪಣೆಗೆ ಅವಕಾಶವಿಲ್ಲದಂತಾಗಿದೆಯೆಂದೂ ಇದೇ ಕಾದಂಬರಿಯ ಮುಖ್ಯ ದೋಷವೆಂದೂ ಜಾ.ಗೋ. ಹೇಳುತ್ತಾರೆ. ಶುದ್ಧ ಜೀವನಾನುಭವವೇ ಇಲ್ಲಿನ ನಿರೂಪಣೆ, ಆತ ಈ ಸಂಚಾರಿ ಬದುಕಿಷ್ಟು ಎದುರಾಗುವ ಜೀವನಾನುಭವದಲ್ಲಿ, ಇಂದ್ರಿಯಗೋಚರ ವಸ್ತು ವಿವರಗಳ ವ್ಯಾಖ್ಯಾನದಲ್ಲಿ ಆತನ ವ್ಯಕ್ತಿತ್ವ ಮೂಡುತ್ತದೆ. ವ್ಯಾಖ್ಯಾನದ ಭಾಷೆಯಲ್ಲೇ ಆತನ ವ್ಯಕ್ತಿತ್ವ ಕಟ್ಟುವ ಗಿರಿ ಅವರ ಕ್ರಮ ಕಾದಂಬರಿ ಪ್ರಕಾರಕ್ಕೆ ಹೊಸ ಸ್ವರೂಪ ಕೊಡುವ ಪ್ರಯತ್ನವಾಗಿದೆ.
ಇಂಥ ಧೋರಣೆಯ – ಮನಸ್ಥಿತಿಯ ‘ಆತ’ ಹೆಸರಿಲ್ಲದ ಒಂದು ಊರಿನಲ್ಲಿ ನಾಲ್ಕೈದು ದಿನ ಇರಬೇಕಾದ ಪ್ರಸಂಗ ಬಂದುಬಿಡುತ್ತದೆ. ಹೊಸ ಊರಿನ ಪರಿಸರ, ಅಲ್ಲಿನ ವಾತಾವರಣ, ಉರಿಯುವ ಸೂರ್ಯ, ಮೇಲೆ ಬೀಳುವಂತಿರುವ ಬಂಡೆ, ಬಾಗಿಲಿಲ್ಲದ ಕೋಟೆ, ಕೊನೆಮೊದಲಿಲ್ಲದ ದಾರಿಗಳು, ಇತ್ಯಾದಿ ಇವೆಲ್ಲ ಸಾಕ್ಷಚಿತ್ರದ ವಿವರಣೆಯಲ್ಲಿ ಬಿಚ್ಚಿಕೊಳ್ಳುತ್ತ ಹೋಗುತ್ತವೆ. ಬಂದ ಒಂದೆರಡು ಗಂಟೆಗಳಲ್ಲಿ ‘ಆತ’ ಆ ಪರಿಸರಕ್ಕೆ sick ಆಗಲಾರಂಭಿಸುತ್ತಾನೆ. ಬಂದ ದಿನವೇ ಹೊರಡುವ ಮಾತನ್ನಾಡುತ್ತಾನೆ. ಅವನ ಮೂಲ ಧೋರಣೆಗೆ ಸಹಜವಾದ ತಹತಹ, ಅಸಹನೆ ಉಂಟಾಗಿ ಎಲ್ಲಿ oppressive ಆಗುತ್ತವೆ. ಈ ವೇಳೆಗಾಗಲೇ ಮಾನಸಿಕವಾಗಿ ಅವರಿಬ್ಬರೂ ಅಲ್ಲಿಂದ ಓಟಕಿತ್ತಲಾರಂಭಿಸುತ್ತಾರೆ. ಅಲ್ಲಿಂದ ಪಾರಾಗಿ ಬೆಂಗಳೂರಿಗೆ ವಾಪಸಾದ ನಂತರವೂ, ಬೆಂಗಳೂರಿನಲ್ಲಿ ನಾಲೈದು ದಿನಗಳಲ್ಲೇ ಅವನ ಕಾಲಿಗೆ ಗೆದ್ದಲು ಹತ್ತಿದಂತಾಗುತ್ತದೆ. ಅಲ್ಲಿಯ ಊರಿಗೆ…ಊರಿನಿಂದ ಜೋಗಿಗೆ…ಊರಿನಲ್ಲಿ, ಜೋಗಿನಲ್ಲಿ ಅವನ ಸಂಚಾರಿಪ್ರಜ್ಞೆ ಹೆಚ್ಚು ಉದ್ವಿಗ್ನಗೊಳ್ಳುತ್ತದೆ.
ಬಹುಶಃ ಆತನಿಗೊಂದು ಕೆಲಸ ಸಿಕ್ಕಿಬಿಟ್ಟಿದ್ದರೆ ಆತ ಈ ಸ್ಥಿತಿಯಿಂದ ಪಾರಾಗಿ ಎಲ್ಲರಂತೆ ಒಬ್ಬನಾಗಿ ಬಿಡುತ್ತಿದ್ದನೇನೋ ಎಂದೆನ್ನಿಸುವುದೂ ಸಹಜ. ಆದರೆ ಈ ನಿರೀಕ್ಷೆ ಆತನ ಧೋರಣೆ, ಸ್ವಭಾವಗಳಿಗೆ ವಿರುದ್ಧವಾಗಿಯೇ ಇದೆ. ಕೆಲಸದ ಚೀಟಿ, ಮತ್ತೆ ಸಂಬಳ, ಎಲ್ಲರಂತೆ ಹೆಂಡತಿ, ಮಕ್ಕಳು, ಕಚೇರಿ–ಇದು ಆತನ ಜೀವನಧೋರಣೆಯಾಗಿದ್ದಿದ್ದರೆ ಆತ ಬೆಂಗಳೂರಿನಿಂದ ಹೆಸರಿಲ್ಲದ ಊರಿನ ಹಾದಿ ತುಳಿಯುವ ಅಗತ್ಯವಿರಲಿಲ್ಲ ಅನ್ನಿಸುತ್ತದೆ. ಬೆಂಗಳೂರಿನಲ್ಲೇ ಕೆಲಸ ಸಿಕ್ಕಬಹುದಿತ್ತು…ಹೆಸರಿಲ್ಲದ ಊರಿನಲ್ಲೇ ನೆಲಸಬಹುದಿತ್ತು…ಅಥವಾ ಹೆಸರಿಲ್ಲದ ಊರಿನಿಂದ ವಾಪಸಾದ ನಂತರವಾದರೂ ಹದಕ್ಕೆಬರಬಹುದಿತ್ತು. ಮೂರ್ತಿಯ ಒತ್ತಾಯದ ಮೇಲೆ ಬೆಂಗಳೂರಿನಲ್ಲಿ ಡೈರೆಕೊರೇಟ್ಗೆ
ಹೋಗುತ್ತಾನಾದರೂ ಅಲ್ಲಿ ಎದುರಾಗುವುದು ಒಂದು ದೊಡ್ಡ ಗೊಂದಲ…Indecision, ಆತನ ಮನಸ್ಥಿತಿಗೆ ಪೂರಕವಾಗುವಂಥ Indecision.
ಕಾದಂಬರಿಯಲ್ಲಿ ಬಾಹ್ಯಘಟನೆಗಳ ಮತ್ತು ಇತರ ವ್ಯಕ್ತಿಗಳ ಅಂತರಂಗದ ಚಿತ್ರಣದಲ್ಲಿ ನಮಗೆ ಕಂಡುಬರುವ ವಸ್ತುನಿಷ್ಠತೆ ವ್ಯಂಗ್ಯ ಮತ್ತು ಸೂಕ್ಷ್ಮನಿರೀಕ್ಷಣೆ ಆತನದೇ ಮನಸ್ಸಿನ ಸ್ಥಿತಿ-ಗತಿಗಳ ಚಿತ್ರಣದಲ್ಲಿ ನಮಗೆ ಅಷ್ಟೊಂದು ಕಂಡುಬರುವುದಿಲ್ಲ ಎಂಬ ಜಾ. ಗೋ. ಅವರ ಮಾತು ಸರಿಯಲ್ಲ ಎಂದು ಮೇಲಿನ ವಿಶ್ಲೇಷಣೆಯಿಂದ ತಿಳಿಯಬಹುದು. ಆತನಿಗೆ ಸ್ವಲ್ಪವಾದರೂ ಸ್ವಚಿಂತೆ ಇದ್ದಿದ್ದರೆ ಆತ ಪರಿಸರ, ಸುತ್ತಮುತ್ತಣ ಜೀವನ ಗ್ರಹಿಸುತ್ತ ಸುತ್ತುವ ಬದಲು ತನ್ನ ಅಂತರಂಗದೊಳಕ್ಕೆ ಮುಖ ಇಳಿಬಿಟ್ಟಿದ್ದಿದ್ದರೆ ಇಡೀ ಕಾದಂಬರಿಯೇ ಇಲ್ಲವಾಗುತ್ತಿತ್ತೇನೋ ಅಥವಾ ಬುಡ ಮೇಲಾಗುತ್ತಿತ್ತೇನೊ. ಇಂಥ ಸ್ವಚಿಂತೆ ಇದ್ದಿದ್ದರೆ, ಸ್ವಮನೋವಿಶ್ಲೇಷಣೆ ಇದ್ದಿದ್ದರೆ ಅವನಿಗೂ ಒಂದು ಕೆಲಸ ಸಿಕ್ಕಿ establishment ನಲ್ಲಿ ಒಂದಾಗಿಬಿಡುತ್ತಿದ್ದು. ಅವನ ಚೇತನ ಪೂರ್ತಿ ಇದಕ್ಕೆ ವಿರೋಧವಾಗಿರುವುದೇ ಇಲ್ಲಿನ ವಿಶೇಷ. ಯಾವುದರಲ್ಲೂ involve ಆಗದೆ ಹೆಚ್ಚಿನ ಕಾಳಜಿ ಮಾಡದೆ ವಿವರ ಗ್ರಹಿಸಿ, ವ್ಯಾಖ್ಯಾನಿಸುವ ಹಂತದಲ್ಲೆ ಅನಾಸಕ್ತನಾಗಿ ‘ಆತ’ ಆಕ್ಷಣದಲ್ಲೇ ಹೊರಬಾಗಿಲನ್ನೂ ಹೊಸ ಪರಿಸರದ ಬಾಗಿಲನ್ನೂ ಅರಸುತ್ತಿರುತ್ತಾನೆ. ಇಂಥ ಮನಸ್ಸಿನ ಆತ ಒಂದುಕಡೆ stagnate ಆಗಬೇಕಾಗಿ ಬಂದಾಗ ಅಸಹನೀಯವಾಗುತ್ತದೆ; ಪರಿಸರ ಕಲಕಿ, ಅಮುಕುತ್ತಿರುವ ವೇದನೆಗೊಳಗಾಗುತ್ತಾನೆ. ಇಂಥ ನೋವಿನಲ್ಲೇ sweet ಆಗಿ ಕಾಣುವ ಹುಡುಗಿಯರೂ ಇಡ ಹೊಡೆಸಿಕೊಳ್ಳುತ್ತಿರುವ ಹೋರಿಯ ಚಿತ್ರವೂ ಕಣ್ಮುಂದೆ ಬರುತ್ತದೆ.
“ಲೋ ನಿನಗೆ ಆ ಊರಿನಲ್ಲಿ ನಡೆದದ್ದನ್ನ ನೆನೆಸಿಕೊಂಡರೆ ಏನನ್ನಿಸುತ್ತೆ” ಎಂಬ ಮೂರ್ತಿಯ ಪ್ರಶ್ನೆಗೆ “ಏನೂ ಅನ್ನಿಸೋಲ್ಲ….ಹೀಗಾಯಿತು….. ಹಾಗಾಯಿತು ಅಂತ ಮತ್ತೆ ಮತ್ತೆ ಘಟನೆಗಳು ಮರುಕಳಿಸುತ್ತವೆ. ಅನ್ನಿಸುವುದು ಮಾತ್ರ ಮೆಣಸಿನ ಕಾಯಿ ಕಾರವಾಗಿದೆ ಅಂದ ಹಾಗೆ” ಎಂದು ಆತ ಕೊಡುವ ಉತ್ತರ ಮನೋವೈಜ್ಞಾನಿಕವಾಗಿ ಪ್ರಾಮಾಣಿಕವಾದ ಉತ್ತರವಲ್ಲ ಎನ್ನುತ್ತಾರೆ ಜಾ. ಗೋ. ಹಿಂದೆ ಆದ ಯಾವುದೋ ಒಂದು ಅನುಭವವನ್ನು ನೆನಪಿನ ಎಳೆಗಳಿಂದ ಹೆಣೆಯುತ್ತ ಪುನಃ ಸೃಷ್ಟಿಸಿಕೊಳ್ಳುವಾಗ ಅದರ ಪ್ರಖರತೆ ಕಡಿಮೆಯಾಗಬಹುದು ಅಥವಾ ಮೊದಲು shocking oppressive ಅನಿಸಿದ್ದು ಪುನಃ ಸೃಷ್ಟಿಯ ಕಾಲದಲ್ಲಿ ಮನಸ್ಸಿಗೆ ತಾಕದೇ ತೀರ ಸಾಮಾನ್ಯವೆನ್ನಿಸಬಹುದು. ಆತ ಮೂರ್ತಿಯ ಜೊತೆ ಗುಂಡು ಹಾಕುವಾಗ ಹೇಳುವ “ಮೆಣಸಿನಕಾಯಿ ಕಾರವಾಗಿದೆ ಅಂದ ಹಾಗೆ” ಎಂಬ ಮಾತು ಅವನ ಮೂಲ ಅನುಭವ ಕುರಿತ ಪ್ರತಿಕ್ರಿಯೆಯಲ್ಲ. ಆ ಸಂದರ್ಭದಲ್ಲಿ ಹಿಂದಿನ ಅನುಭವವನ್ನು ನೆನಸಿಕೊಂಡಾಗಿನ ಅನ್ನಿಸಿಕೆಯಷ್ಟೆ ಅದು. ಆದ್ದರಿಂದ “ನನಗೆ ಅದನ್ನೆಲ್ಲ ನೆನೆಸಿಕೊಂಡರೆ ವಾಕರಿಕೆ ಬರುತ್ತದೆ” ಎಂದು ಹೇಳಬೇಕಾಗಿತ್ತೆಂಬ ಜಾ. ಗೋ. ಅವರ ಅಭಿಪ್ರಾಯ logic ಮಾತಾಯಿತು ಎಂದು ನನಗನ್ನಿಸುತ್ತದೆ.
“ಕೆಲವು ಸಾರಿ ನಾವು ಬಹಳ philosophical ಅಂತ ನಮ್ಮನ್ನೇ ನಾವು ನಂಬಿಸಿಕೊಳ್ಳಲು ಪ್ರಯತ್ನಿಸುವ ಸಮಸ್ಯೆಯ ಮೂಲ ಸುಮ್ಮನೆ ಖಾಲಿ ಜೇಬಾಗಿರುತ್ತೆ…”
-ಎಂಬ ಆತನ ಮಾತು ಅವನ ವ್ಯಕ್ತಿತ್ವದ ಬಿರುಕನ್ನು ಸೂಚಿಸುತ್ತದೆ ಅನಂತಮೂರ್ತಿ ಹೇಳುವಂತೆ ಆತನಿಗೆ ತನ್ನ ವಿಚಾರದಲ್ಲಿ ಮೂಲಭೂತ ಸಂಶಯವಿದೆ ಎಂಬ ಅನುಮಾನಕ್ಕೆಡೆಕೊಡುವುದಾದರೂ ಮುಂದೆಲ್ಲೂ ಆತನಲ್ಲಿ ಇಂಥ ಭಾವನೆ ವ್ಯಕ್ತವಾಗುವುದಿಲ್ಲವಾದ್ದರಿಂದ ಈ ಮಾತು ಮೂರ್ತಿಯ ಪ್ರತಿಕ್ರಿಯೆಯಾಗಿ ಬಂದ ಕೇವಲ ಸಂಚಾರಿ ಭಾವ ಅನ್ನಿಸುತ್ತದೆ.
ಇನ್ನು, ಸಂಬಂಧದ ಪ್ರಶ್ನೆ ಕುರಿತ ಮಾತು :
“ಆತ ಕಾದಂಬರಿಯ ಕೊನೆಯ ಭಾಗದಲ್ಲಿ ಹಳ್ಳಿಯಲ್ಲಿ ಕಳೆಯುವ ನಾಲ್ಕು ದಿನಗಳಲ್ಲಿ ಒಮ್ಮೆ ಕೂಡ ತನ್ನ ಮನೆಯ ಜನರ ಬಗ್ಗೆ ಮತ್ತು ತನ್ನ ಮನೆಯ ಹಾಗೂ ಅವರ ಸಂಬಂಧದ ಬಗ್ಗೆ ವಿಚಾರಮಾಡುವುದಿಲ್ಲ. ಈತ ಹೋಟಲಿನಲ್ಲಿ ತಂಗಿದ್ದ ‘co-lodgers’ ಬಗ್ಗೆ ಯೋಚಿಸಿದ ಅರ್ಧದಷ್ಟು ಸಹ ತನ್ನ ಮನೆಯ ಜನರ ಬಗ್ಗೆ ಯೋಚಿಸುವುದಿಲ್ಲ”.
-ಎನ್ನುತ್ತಾರೆ ಜಾ. ಗೋ. ಇಂಥ ಅನ್ನಿಸಿಕೆ ಉಂಟಾಗುವುದು ಖರೇ. ಆದರೆ ಇಂಥ ಸಂಶಯ ಮೂಡಿದಾಗ ಆತನ ವ್ಯಕ್ತಿತ್ವವನ್ನೂ ಬಾಹ್ಯ ಜಗತ್ತಿನೊಡನೆ ಅವನ ಸಂಬಂಧವನ್ನೂ ಆಮೂಲಾಗ್ರವಾಗಿ ಶೋಧಿಸಬೇಕಾಗುತ್ತದೆ, ಕಾದಂಬರಿಯಲ್ಲಿ ಮೊದಲಿನಿಂದ ಕೊನೆಯ ವರೆಗೂ ‘ಆತ’ ಯಾವ ಸಂಬಂಧವನ್ನಾಗಲೀ, ಯಾರನ್ನಾದರ ಕುರಿತಾಗಲೀ ಯೋಚಿಸುವುದಿಲ್ಲ. ಇಂಥವರ ಜೊತೆ ಆತನಿಗೆ ಇಂಥ ಸಂಬಂಧವಿದೆಯೆಂಬ ಸೂಚನೆ ಎಲ್ಲಿಯೂ ಕಂಡುಬರುವುದಿಲ್ಲ, ಮೂರ್ತಿ, ಮತ್ತು ಆಕೆ ಅವನ ಆಪ್ತರೆಂದು ಪರಿಗಣಿಸಬಹುದಾದರೂ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಆತ ಹೇಗೆ ವರ್ತಿಸುತ್ತಾನೆ ಎಂಬುದನ್ನು ಗಮನಿಸಬೇಕು. ಹಣ ಬರುವುದು ತಡವಾದಾಗ ಗೆಳೆತನ ಸಣ್ಣಗೆ ಕುಸಿಯುತ್ತ ಹೋಗಿ ಮೂರ್ತಿಯನ್ನೂ ಸಾಮಾನ್ಯೀಕರಿಸಿ ನೀಡಲಾರಂಭಿಸುತ್ತಾನೆ. ಆಕೆ ಮದುವೆಯ ಪ್ರಸ್ತಾಪಮಾಡಿದಾಗ ಆ ಸಂಬಂಧ ಕುರಿತು ಪ್ರಶ್ನಿಸುತ್ತಾನೆ; ಅಂಥ ಸಂಬಂಧ ಏಕೆ ಬೇಕು? ಅದರಿಂದ ಅಂತಹ ವ್ಯತ್ಯಾಸವೇನು ಎಂದು ಕೇಳುತ್ತಾನೆ. ಇದು ಇನ್ನೊಬ್ಬರನ್ನು ನನ್ನ ಬದುಕಿನೊಳಗೆ ಬರಮಾಡಿಕೊಳ್ಳುವುದರ ಬಗೆಗಿನ ಆತನ ವಿರೋಧಿ ಧೋರಣೆಯನ್ನು ಸೂಚಿಸುತ್ತದೆ. ಪ್ರಾರಂಭದಿಂದಲೂ ಯಾವ ಸಂಬಂಧವೂ ಆತನಿಗೆ ಕಾಣುವುದಿಲ್ಲವಾದ್ದರಿಂದ ಆತ ಮನೆಯವರ ಬಗ್ಗೆಯೂ ಯೋಚಿಸುವುದಿಲ್ಲ. ಸಾರ್ವತ್ರಿಕವಾದಂಥ ಸಾಮಾಜಿಕ ಸಂಬಂಧಗಳನ್ನು ಕುರಿತೂ ಯೋಚಿಸುವುದಿಲ್ಲ. ಪರಿಸರದಿಂದ ಅಮುಕುವಂಥ ಯಾತನೆಯುಂಟಾದಾಗ ಮಾತ್ರ ಆತ ವ್ಯಗ್ರಗೊಳ್ಳುತ್ತಾನೆ. ಊರಿನಲ್ಲಿ ಮನೆಯವರ ಬಗ್ಗೆ, ಅಲ್ಲಿನ ವಾತಾವರಣದ ಬಗ್ಗೆ ಆತ ಸಂವೇದಿಸುವುದೇ ಇಲ್ಲ. ಅಲ್ಲಿ ಆತನಿಗೆ ಅಳು ಬರುವಷ್ಟು ಬೇಸರ, ಹೊತ್ತು ಕಳೆಯುವುದಷ್ಟೇ ಸಮಸ್ಯೆ. ಅದೇ ಹೋಟೆಲಿನಲ್ಲಿ ಸಹ ಅವನು co-lodgers ಬಗ್ಗೆ ಯೋಚಿಸುವುದಿಲ್ಲವಾದರೂ ಹೋಟೆಲಿನ ಗಬ್ಬುವಾತಾವರಣ ದುರ್ವಾಸನೆ ಆತನನ್ನು ವ್ಯಗ್ರಗೊಳಿಸುತ್ತದೆ. ಇದು ನಿರ್ಲಕ್ಷಿಸಲಾರದ, ಪ್ರತಿಕ್ರಿಯೆ ತೋರದೇ ಇರಲಾಗದ ಅಸಹನೀಯವಾದ ಇಂದ್ರಿಯಾನುಭವವಾದ್ದರಿಂದ ಆತ ಪರದಾಡುತ್ತಾನೆ. ಆದರೆ ಈ ಪರದಾಟದಲ್ಲಿ ಯಾವುದೇ ಸಂಬಂಧದ ಸೂಚನೆಯಾಗಲೀ co-lodgers ಬಗ್ಗೆ ಆಸಕ್ತಿಯಾಗಲೀ ಕಾಣುವುದಿಲ್ಲ. ಆದ್ದರಿಂದ ‘ಆತ’ನ ಪ್ರಪಂಚದಲ್ಲಿ ಸಂಬಂಧದ ಗಂಟು ಇಲ್ಲವೇ ಇಲ್ಲ. ಆಕೆ ಏನಿದ್ದರೂ ‘ಆತ’ನ ಸುತ್ತ ತಿರುಗುವ ಒಂದು ಉಪಗ್ರಹ ಅಷ್ಟೆ.
ಆತನ ಜೀವನದಲ್ಲಿ ಯಾವುದೂ significant ಎಂದು ಅನ್ನಿಸದಿರುವುದನ್ನೇ ಇಲ್ಲಿ ಕಾದಂಬರಿ ಹೇಳುತ್ತದೆ ಎಂಬ ನನ್ನ ಮಾತನ್ನು ಒಪ್ಪುವ ಜಾ. ಗೋ. ಅವರು ಈ ಜಗತ್ತಿನಲ್ಲಿ ಎಲ್ಲವೂ ನಿರರ್ಥಕ. non-significant, meaningless ಎಂಬ ತೀರ್ಮಾನ ತಾತ್ವಿಕವಾಗಿ ಹೊರಡುವುದಿಲ್ಲ ಎಂದು ಹೇಳುತ್ತಾರೆ. ತಾತ್ವಿಕ ತೀರ್ಮಾನ ಹೊರಡುವುದಿಲ್ಲವೆಂಬ ಜಾ. ಗೋ. ಮಾತು ಒಂದು good point ಹೌದಾದರೂ ಆತನ ವ್ಯಕ್ತಿತ್ವವೇ ಅಷ್ಟು ಚಂಚಲವಾದ್ದರಿಂದ ಆಳಕ್ಕಿಳಿದು, ಒಂದಾಗಿ ಬೆರೆತು, ವಿವೇಚಿಸಿ – ವಿಮರ್ಶಿಸಿ ನೋಡುವ ಜಾಯಮಾನ ಆತನದಲ್ಲ. ಈ ಮೂಲಭೂತ ದೌರ್ಬಲ್ಯದ ಅಡಿಪಾಯದ ಮೇಲೆ ಆತನ ಅಲೆಮಾರಿ ವ್ಯಕ್ತಿತ್ವ ರೂಪುಗೊಂಡಿದೆ. ಓಟದ ಮತದಲ್ಲಿ ಬಹುತೇಕ ಅನುಭವಗಳು passing ಆಗಿ ಬಿಡುವುದರಿಂದ, ಜೊತೆಗೆ ಆಸಕ್ತಿಯೂ ಸೇರುವುದರಿಂದ ‘ಆತ’ ತಾತ್ವಿಕ ಕಾಳಜಿಯ ಗೋಜಿಗೆ ಸಿಕ್ಕಿ ಬೀಳುವದಿಲ್ಲ.
ಜಾ. ಗೋ. ಅವರು ಕೊನೆಯಲ್ಲಿ ಇಡೀ ಕಾದಂಬರಿ ಬರೀ ಒಂದು ಮನೋವೈಜ್ಞಾನಿಕ ವೇಧ ಶಾಲೆ (Psychological observatory) ಯಾಗಿ ಪರಿಣಮಿಸಿದೆ ಎಂದಿದ್ದಾರೆ. ಆದರೆ ಅವರು ಈ ಮಾತನ್ನು ಸಮರ್ಥಿಸುವ ಒಂದು ಚಕಾರವನ್ನೂ ಆಡಿಲ್ಲ. ಕಾದಂಬರಿ ತನ್ನ ಸಫಲತೆಗಾಗಿ ಪ್ರಜ್ಞಾಪ್ರವಾಹ ತಂತ್ರವನ್ನು ಅವಲಂಬಿಸಿದೆ ಎಂಬ ಮಾತೂ ಸಂಪೂರ್ಣ ಖರೆ ಅನ್ನಿಸದು.
ಇನ್ನು ಜಾ. ಗೋ. ಅವರ ಲೇಖನ ವಿಮರ್ಶೆಯ ಬಗ್ಗೆ ಕೆಲವು ಪ್ರಶ್ನೆಗಳಿಗೆ ಅವಕಾಶ ಮಾಡಿಕೊಡುತ್ತದೆ. ‘ಗತಿ, ಸ್ಥಿತಿ’ಯಂಥ ಹೊಸ ಜಾಡಿನ ಕೃತಿಗಳು ಬಂದಾಗ ಅವನ್ನು ಯಾವ ರೀತಿಯಿಂದ ಸ್ವೀಕರಿಸಬೇಕು? ವಿಮರ್ಶಕ ಯಾವ ರೀತಿಯಲ್ಲಿ ಅದನ್ನು ನೋಡಬೇಕು? ಆ ದೃಷ್ಟಿಯಿಂದ, ಈ ಕೋನದಿಂದ ಕೃತಿ ಅಲ್ಲಿ ಸೋಲುತ್ತದೆ: ಇಲ್ಲಿ ಗೆಲ್ಲುತ್ತದೆ ಎಂಬ reservations ನಿಂದ ಕೂಡಿದ ವಿಮರ್ಶಾತತ್ವಗಳಿಂದ ಒರೆ ಹಚ್ಚುವುದು ಸರಿಯೇ? ಪಾತ್ರ ನಿರೂಪಣೆ, ಕಥಾ ಸಂವಿಧಾನ, ಭಾಷೆ, ತಂತ್ರ ಮೊದಲಾದ ಸಾಹಿತ್ಯಕ ಮಾನದಂಡಗಳಿಂದ, ಗುಣಾವಗುಣಗಳನ್ನು ಪಟ್ಟಿ ಮಾಡುವುದಷ್ಟಲ್ಲೇ ಹೊಸ ಕೃತಿಯ ಹಣೆಬರಹ ನಿರ್ಧಾರವಾಗಬೇಕೆ? ಹೊಸ ಕೃತಿಯ ಅನುಭವ ಪ್ರಪಂಚವನ್ನೂ ಹೊಸ ದೃಷ್ಟಿಕೋನದಿಂದ ನೋಡುವ, ಅರ್ಥಯಿಸುವ ಮುಕ್ತ ಮನಸ್ಸು ಅಗತ್ಯವಲ್ಲವೆ?
ಹೆಚ್ಚು ಹೆಚ್ಚು ನಮ್ಮನ್ನು ತಲ್ಲೀನರಾಗಿಸಿ ತನ್ನ ಕಕ್ಷೆಯೊಳಗೆ ಸೆಳೆದುಕೊಳ್ಳುವ ಯಾವುದೇ ಒಂದು ಒಳ್ಳೆಯ ಕೃತಿಯಲ್ಲಿ ಒಳಹೊಕ್ಕು ಆಳವಾಗಿ ನೊಡಿದಂತೆಲ್ಲ ಅನೇಕ ಒಳ್ಳೆಯ ಅಂಶಗಳೂ ಕಾಣಿಸಿಕೊಳ್ಳುತ್ತವೆ. ಪ್ರಸ್ತುತ, ಈ ಲೇಖನದಲ್ಲಿ ಇನ್ನು ಕೆಲವು ಅಂಶಗಳು ಬಿಟ್ಟು ಹೋಗಿವೆಯೆಂಬ ಅರಿವು ನನಗಿದೆ. ನನ್ನ ಹಿಂದಿನ ಲೇಖನದಲ್ಲಿ (ಸಂಕ್ರಮಣ-೪೯) ವಿವೇಚಿಸಿರುವ ಅಂಶಗಳನ್ನು ಪುನರಾವರ್ತನೆ ತಪ್ಪಿಸುವ ದೃಷ್ಟಿಯಿಂದ, ಅವನ್ನು ಇಲ್ಲಿ ಹೇಳಿಲ್ಲ.
ನೆಲೆ
.ವೀಚಿ
ಹೃದಯ ಸುಟ್ಟವನಲ್ಲ
ಮೂರು ಬಿಟ್ಟವನಲ್ಲ
ಸುತ್ತೇಳು ಹಳ್ಳಿಗೂ ಹೆಸರುವಾಸಿಯ ಬಯಸಿ
ವರ್ತಮಾನದ ಒಳಗೆ ಒಣಗಿದವನಲ್ಲ.
ಕಡಲುಗಾಲುವೆ ವರೆಗು
ತನ್ನ ಒಳಮನೆಯಲ್ಲಿ
ಆಚೆ ಜನ ತೋರಿಸುವ ನಿಷ್ಟೆ ತಿಳಿದ ತಿಳಿದು
ಅಲ್ಲಗಳೆಯುವನಲ್ಲ.
ನಮ್ಮಲ್ಲಿ
ಭೂಮಿ ಬಿಟ್ಟು ಲಾಗ.
ಬೊಬ್ಬೆ ಉಬ್ಬಸದಲ್ಲಿ ನಿಬ್ಬೆರಗಿವತ್ತು,
ಹಸುರು ಕಕ್ಕುವ ನಗರ ಬೇವಿನ ನೆರಳ
ನೋಡಿದೇಟಿಗೆ ಹುಟ್ಟೂರ ಹಳ್ಳಿ ಮಾವಿನ
ನೆನಪ ಬೆಳ್ಳಿ ಮೂಡಿದ ತರುಣ
ಎಲ್ಲಿ ಸುಖದಾವರಣ ?
ಉಪ್ಪು ಹುಳಿ ಕಾರವಿಲ್ಲದೆ ಗಾಳಿ ರುಚಿ ರುಚಿ
ಯಾರು ಹಚ್ಚದೆ ಬಣ್ಣಗಳ ದಿಣ್ಣೆ ದಿಕ್ಕು
ಉತ್ಕರ್ಷ ಉತ್ಕರ್ಷ
ಆಕಾಶ ಮುಖದಲ್ಲಿ ಜೀವ ಪರಿವೇಷ
ಹಲವಿಧದ ಹದ ಹೃದಯ ದನಿಯು ಮರಮರದಲ್ಲಿ
ಬಿಚ್ಚುಗರಿ ಹರ್ಷ,
ತೆಂಗು ಬೆಳಕಿಗೆ ಮುಂಚೆ ಬಣ್ಣದಲಿ ತೇಲಿದ್ದು
ಬೆಳಕ ಪಾದಕ್ಕೀಗ ಹಣೆಯ ತಿಕ್ಕುವಿಕೆ,
ಗುಜ್ಜಾರಿ ಹೊಂಗೆಯು ನೆಲಾರಕ್ಕೆ ಹರವಾಗಿ
ಬೆಳಕಿನಲಿ ಒನೆಯುವಿಕೆ,
ಲೊಟಿಕೆ ಹಾಕುವ ಜೀವಿ ಗರಿ ಮೇಯ್ವ ರಾಸುಗಳು
ಬೇಡ ಬೇಡ ಎಂದರೂ ಬೇಗ ಎದ್ದು ಬಂದವರ
ಕಣ್ ಕಣಜ ತುಂಬುವಿಕೆ
ಎಲ್ಲವೂ ಉದಯಕ್ಕೆ ಶರಣಾದ ನಿಲವು
ಕಲ್ಲು ಮುಳ್ಳಿನ ಕಿವಿಯ ಹಿಂಡುತಿದೆ ಗೆಲವು
ಆಮೇಲೆ
ಹೊತ್ತು ಬಲಿತು ನೆತ್ತಿಯನಡರಿ
ಸುರಿದ ರಣ ಬಿಸಿಲು
ಸುಂಟರು ಗಾಳಿಗೆದೆಗೆಡದೆ
ಕಾಡು ಮೇಡಲ್ಲು ಮನೆ ಮಾಡು
ಬೆಟ್ಟ ಗುಡ್ಡದ ಮೇಲೆ ಕೋಟೆ ಕೊತ್ತಲು
ತೋಟ ತುಡಿಕೆಯ ಜೀವ ಜೀಕರಿಸಲು
ಒಂದು ವರ್ಷಕ್ಕಾಗುವಷ್ಟು ಒಂದೇ ಸಂಜೆ
ಜಡತರಾಯಿಸಿ ಜಗ್ಗಿ ಬಗ್ಗಿಸಿದ ಮಳೆ ತಂಪು
ಬಂದ ಛಳಿಯನು ಉಪ್ಪೆಂದು
ಗವ್ವಿರುಳುಗಳ ಹಿಡಿದು ಗಾವು ಸಿಗಿದು
ಊರೂರು ಉಸಿರನೆಳೆದುಳಿವು ನೆನಪಾಗುತಿದೆ
ಮುಗ್ಧ ಸರಳ ವಿಚಾರ ನಂಬಿಕೆಯ ಬಿಂಬಗಳು
ಚಕ್ರಾಧಿಪತ್ಯದುರುಳನು ಕಂಡು ಉಳಿದದ್ದು
ಎಲ್ಲ ಹೋಳಪೇರುತಿದೆ.
ಇರುವುದರ ಒಳಗೆ ಬದುಕುವ ದಾರಿ ಹರಿದಿರಲು
ಕೋಟಿ ಕೋಟಿ ಕುಟುಂಬ ಬೆವರುಗರೆದು
ಯಾವ ರಾಯಗೆ ಎಂಥ ರಾಜ್ಯ ಬಂದೇನು ಗುರು
ರಾಗಿ ಬೀಸುವುದು ಹಿಂಡಿಗೆ ತಪ್ಪದು
ಏರಿದವ ಏಣಿ ಒದೆವುದು ನಿಲ್ಲದು
ಇಷ್ಟು ಸ್ಥಿರವಾಗುತ್ತಿದೆ
ಮಾವು ಮರೆಯಾಗುತ್ತಿದೆ.
ಯಾರೆಷ್ಟು ಉಂಡರೂ ಅವರವರ ಶಕ್ತ್ಯಾನುಸಾರ
ಅನುಭೋಗಿಸಿದರು
ಅಕ್ಷಯ ಪಾತ್ರೆ ಇಟ್ಟ ಹಾಗೆ,
ತಲೆ ತಲಾಂತರದಿಂದ ಬಂದೀ ವಿಶೇಷವನು
ಮುಸುರೆ ಬಾವಿಯಾಗಿ ಉಪಯೋಗಿಸದೆ
ತಿಕ್ಕಿ ತಿಕ್ಕಿ ಕಿಲುಬು ತೊಳೆದು ಚೊಕ್ಕಟಗೊಳಿಸಿ
ಬಳಸುವುದು ಒಂದು ಕಲೆ
ಅದರೊಳಿದೆ ನನ್ನ ನೆಲೆ.
ಮುಗಿಯದ ಹಾದಿ
ಮುಗಿಯದ ಹಾದಿ
-ಉದಯಕುಮಾರ ಹಬ್ಬು
ದಿನವೂ ಉದ್ದಕ್ಕೆ ಹೋಗಿ ಬರುವದು
ಹೆಜ್ಜೆ ಮೂಡದ ನದಿಯಲ್ಲಿ ಬಿಟ್ಟ ಪಾದ
ಕೈ ಜೋತು ಬೀಳುವದು,
ದಿನವೂ ಆ ದಡ ಈ ದಡದ ಮಧ್ಯೆ
ಹಡಗು ಪಯಣ
ಬೇಸರವೆನಿಸಿದಾಗ ಮರದ ನೆರಳಿಗೆ ಕೂತು
ತೂಕಡಿಸಿ ಕನಸು ಕಾಣುವ ಎನ್ನುತ್ತೇನೆ.
ರಣಬಿಸಿಲು ತಲೆಗೆ ಜಪ್ಪಿದ ಆರ್ತ
ನಾನೊಬ್ಬನೆ ಜಗ್ಗಿದ ಗಾಡಿಯ ಏಕಾಂತ
ಒಮ್ಮೆ ಕತ್ತಲಿಸಿದಂತೆ ಎಲ್ಲ ಮರೆಯಾಗಿ
ನೆನಪಾಗುತ್ತವೆ.
(ಬಿಸಿಲಿನಿಂದ ತಂಪಿಗೆ ಬಂದರೆ ಹಾಗೆ ನೋಡಿ)
ಆ ನೆರಳಿನಲ್ಲೂ ಬೇತಾಳ ಕತೆ ಹೇಳಿ
ಜೋಗುಳ ಹಾಡುತ್ತ
ಬಿಸಿಲ ಪ್ರಶ್ನಿಸುತ್ತದೆ.
ನಾ ಬೆಚ್ಚಿ ಮತ್ತೂ ಇನ್ನೆಷ್ಟು ದೂರ
ನಡೆ ನಡೆದರೂ ಮುಗಿಯಲೊಲ್ಲದು ಹಾದಿ
ನೆರಳ ಗುರಿ-
ಯೆಂದು ಭ್ರಮಿಸಿದ ನನಗೆ ಗಹಗಹಿಸುತ್ತದೆ
ನಾ ಕೂತ ಮರದ ತಂಪು.
ಅವರಿವರ ಭೆಟ್ಟಿ
ನನ್ನಂತೆ ಗಾಳಿಗೆ ಮೈಯೊಡ್ಡಿದ
ಮೋಡಗಳು:
ಹಾಗೆ ಕನಸುಗಳ ಆಮದು-ರಫ್ತಿಸಿಕೊಳ್ಳುವದಿದೆ,
ಆದರೂ ನಾನೊಬ್ಬನೆ ಅದಕ್ಕೆ ಅಳುವ ಪ್ರಶ್ನೆ ?
ಸಂಶಯ…
ನಾನು ಬದುಕಿದ್ದೇನೆಯೆ…?
ಗಾಳಿ ಬಂದಾಗ ಅತ್ತ ಇತ್ತ
ಅಲುಗಾಡುತ್ತ ಹೆಂಗರಿಗ ತೂಗಿದ ಅಂಗಿ.
ಅದು-ನಾನು
ಸಿಗರೇಟು ಬೂದಿ ಬದುಕು
ಊಟ, ಮಲ, ಮೂತ್ರ
ಕನಸಲ್ಲಿ ಹೆಣ್ಣ ವ್ಯಭಿಚಾರಿಸುವದು
ಎಲ್ಲ ಸಹಜ.
ಆದರೂ ಸಂಶಯ
ಉದ್ದಕ್ಕೂ ದಾರಿ ಎಡಬಲದಲ್ಲಿ ಬೆಳೆದ
ಪ್ರಕೃತಿಯ ಯಕ್ಷ ಪ್ರಶ್ನೆ
“ನೀ ಬದುಕಿದ್ದೀಯಾ ?’
ಹಾದಿಗೆ ಕೇಳುತ್ತೇನೆ
ನನಗೂ ನಿಂತಲ್ಲೆ ನಡೆದು ನಡೆದು ಬೇಸರ
‘ನಿನ್ನ ಕೊನೆ ಎಲ್ಲಿ ? ಎಂದು ?’
“ನಿನ್ನ ಕೊನೆ ಇಲ್ಲಿಂದ ಅಲ್ಲಿವರೆಗೆ
ನನ್ನ ಕೊನೆಯಳೆಯುವ ನಿನ್ನ ಹುಚ್ಚಿಗೆ
ನನಗೆ ನಗು ಬರುವದು
ಹೇಳಬೇಕಿದ್ದರೆ ಸಮುದ್ರ ಕುಡಿಯಬೇಕಾಗುತ್ತದೆ.
ಬಾನು ಕರಗಿಸಬೇಕಾಗುತ್ತದೆ
ನಕ್ಷತ್ರ ಗುಡಿಸಬೇಕಾಗುತ್ತದೆ.
ಅವೆಲ್ಲ ಬಿಡು.
ಸಂಜೆಯಾದ ಕೂಡಲೆ ಕತ್ತಲು:
ಕಾಲ ಗಿರಗಿರನೆ ಉರುಳಿ ರಾತ್ರಿ ನಿದ್ರೆ
ಆ ದಡದಲ್ಲಿ ನಿನ್ನ ಹಾಸಿಗೆ ಬಿಚ್ಚಿ ಮಲಗು
ನೀ ನಡೆಯುತ್ತಿದ್ದೆ ಎಂದು ಭ್ರಮೆಯಲ್ಲಿದ್ದರೆ
ನಂಬಬೇಡ…ಪೃಥ್ವಿ ತಿರುಗುತ್ತದೆಯಷ್ಟೆ”
ಎಂದು ಕುಣಿಕೆಯೆಸೆಯುತ್ತದೆ.
ನಾ ತುಳಿವ ಮಣ್ಣಿಗೂ ಇಷ್ಟು ಸೊಕ್ಕೆಂದರೆ-
ಊರ್ವಶಿ ನಕ್ಕು ನುಡಿಯುತ್ತಾಳೆ:
“ಅರ್ಜುನ, ನಿನ್ನಪ್ಪನಿಗೆ ನಾ ಸೂಳೆಯಾದರೂ
ಸೂಳೆ ಸೂಳೆಯಲ್ಲವೆ ?…”
“ನೀನೊಬ್ಬನೆ ತುಳಿದ ದಾರಿ ನಾನಲ್ಲ’
ಎನ್ನುವ ಎಂದೂ ಮುಗಿಯದ ದಾರಿಯ
ಅನಂತ ವೈವಿಧ್ಯಕ್ಕೆ ಮಾರು ಹೋಗಿದ್ದೇನೆ.
ಬಾಲ್ಯ ತೆವಳುತ್ತದೆ.
ಕೃಷ್ಣ ಆಲನಹಳ್ಳಿಯವರ ಕಾಡು
ಕೃಷ್ಣ ಆಲನಹಳ್ಳಿಯವರ “ಕಾಡು”
-ಬಿ. ಜಯದೇವಪ್ಪ
ಕೃಷ್ಣ ಆಲನಹಳ್ಳಿಯವರ ‘ಕಾಡು’ ಗಾತ್ರದ ದೃಷ್ಟಿಯಿಂದ ಸಣ್ಣ ಕಥೆಯಾಗಿ ಕಂಡರೂ ಘಟನೆಗಳ ಸಾಂದ್ರತೆ, ವಸ್ತುವಿನ ಹರಹು ಒಂದು ಕಾದಂಬರಿಗಾಗುವಷ್ಟಿವೆ. ಭಾಷೆ, ಸನ್ನಿ ವೇಶಗಳು, ಈ ಕಾದಂಬರಿಗೆ ಎಂಟು ವರ್ಷದ ಬಾಲಕ ಕಿಟ್ಟಿಯನ್ನು ಕೇಂದ್ರ ಪಾತ್ರವನ್ನಾಗಿ ಮಾಡಿಕೊಳ್ಳುವ ಪ್ರಯತ್ನದ ಮೂಲಕ, ನಿರೂಪಣೆಯಲ್ಲಿ ಒಮ್ಮುಖತೆಯನ್ನು ಪಡೆಯುತ್ತವೆ.
ತಾಯಿಯನ್ನು ಬಿಟ್ಟು ಬಂದು ಅತ್ತೆ ಮಾವರ ಮನೆ ಸೇರಿದ ಕಿಟ್ಟಿ ಜವಾಬ್ದಾರಿಗೆ ಪಕ್ವವಾಗದ ವಯೋಮಿತಿಯುಳ್ಳವನು, ಕಾದಂಬರಿಯುದ್ದಕ್ಕೂ ಆತನ ನೋವು ನಲಿವುಗಳು ಹಳ್ಳಿಯವರ ಏರು ಪೇರುಗಳೊಂದಿಗೆ ಪುನರುಕ್ತವಾಗುತ್ತಾ ಹೋಗುತ್ತವೆ, ಸ್ವಾಭಿಮಾನಿಯಾದ ಆತ, ತಾನು ಯಾವುದಕ್ಕೂ ಅಜ್ಞನಲ್ಲವೆಂಬ ಹೆಮ್ಮೆಗೆ ಒಳಗಾದವನು. ಊರಿನ ಆಗು-ಹೋಗುಗಳನ್ನು ನಿರ್ಧರಿಸುವ ಕೆಲವೇ ವ್ಯಕ್ತಿಗಳಲ್ಲಿ ಒಬ್ಬರು ತನ್ನ ಮಾವ. ಹಾಗಾಗಿ ಹಳ್ಳಿಯ ಉತ್ಪಾತಗಳು ಕಟ್ಟಿಗೆ ಸೋಡ ದೊರಕುತ್ತದೆ, ಸಾಮಾಜಿಕ ಒಪ್ಪಂದ -ಸಂಬಂಧ, ಮೌಲ್ಯಗಳ ಅರಿವಿಲ್ಲದೆ ಆತನ ಮನಸ್ಸು ಅಚ್ಚರಿಯ ಅಂಚಿನಲ್ಲಿ ಸನ್ನಿವೇಶಗಳನ್ನು ತನಗೆ ತಿಳಿದಂತೆ ವಿಶ್ಲೇಷಿಸುತ್ತಾ ಹೋಗುತ್ತವೆ, (ತನಗೆ ತಿಳಿದಂತೆ’ ಎಂಬುದೆ ಕೃತಿಕಾರರ ಒಂದು ಉದ್ದೇಶಕ್ಕೆ ಹೇಗೆ ದುಡಿಯುತ್ತದೆಂಬುದನ್ನು ಮುಂದೆ ನೋಡಲಾಗುತ್ತೆ.) ಮೌಲ್ಯಹೀನವಾಗುವ ಸಮಾಜ ಅವನನ್ನು ಗೊಂದಲಗೆಡಿಸಿ ಪುನಃ ಪುನಃ ಅಜ್ಜಿ ಹೇಳುತ್ತಿದ್ದ ರಾಕ್ಷಸರ ಕಥೆಯನ್ನು ನೆನಪಿಗೆ ತಂದುಕೊಡುತ್ತದೆ.
ವಸ್ತುವಿಷ್ಟೇ ಕಾದಂಬರಿಕಾರರ ಉದ್ದೇಶವಾಗುವುದಿಲ್ಲ, ಕಾದಂಬರಿ ಸಾಗುವುದು ಪ್ರಥಮ ಪುರುಷದ ನಿರೂಪಣೆಯಲ್ಲಿ, ವಸ್ತುವಿಗೆ ಹದವಾದ ಭಾಷೆಯಲ್ಲಿ ಕಥೆಯನ್ನು ಭೂತಕಾಲದಲ್ಲಿ ಹೇಳಿಕೊಂಡು ಹೋಗುತ್ತಾರೆ. ಮುಗ್ಧ ಮನಸ್ಪೂಂದು ಜೀವನದ ವಿಕೃತಿಗಳನ್ನು ಹೇಗೆ ಅರ್ಥಸೀತು ?–ಎಂಬುದನ್ನು ಚಿತ್ರಿಸುವುದಷ್ಟೇ ಅವರ ಉದ್ದೇಶವಲ್ಲವೆಂದು ಕಾಣುತ್ತದೆ, 35 ನೇ ಪುಟ ಮುಂತಾದೆಡೆ ಇದನ್ನು ಕಾಣಬಹುದು, ಕೆಲವೆಡೆ ಕಿಟ್ಟಿ ಇಲ್ಲದೆಯೂ ಕಥೆ ಸಾಗುವಂತಿದೆ, ಕೊಪ್ಪಲು, ಹೊಸೂರುಗಳಲ್ಲಿ ಎದ್ದ ವೈಷಮ್ಯ-ಕಾದಾಟಗಳು ಕಿಟ್ಟಿಯು ಜೀವನವನ್ನು ಹೇಗೆ ತೆಗೆದುಕೊಳ್ಳುತ್ತಾನೆ ಎಂಬ ಮನಃಸ್ಥಿತಿಯನ್ನು ಚಿತ್ರಿಸಲು ಸಹಾಯವಾದರೂ ಕೆಲವೆಡೆ ಕಿಟ್ಟಿ ಮಗ್ಗುಲಿಗೆ ಸರಿದು ಕೊಪ್ಪಲಿನ ದುರಂತ ಚಿತ್ರಣಕ್ಕೆ ದಾರಿಮಾಡಿಕೊಡುವ ಪಾತ್ರವಾಗುತ್ತಾನೆ, ಅವನಿಲ್ಲದೆ ನಿರ್ವಹಿಸಲು ಸಾಧ್ಯವಾದ ಚಿತ್ರಣಗಳಿವೆ, ಕಾದಂಬರಿಕಾರರ ಮಹಾತ್ವಾಕಾಂಕ್ಷೆಯಿಂದ ಹೀಗಾಗುತ್ತದೆ. ಘಟನೆಗಳನ್ನು ಅಷ್ಟನ್ನೇ ಹಿಡಿದಿಡುವುದು-ಕೆಲವೆಡೆ-ಕಾದಂಬರಿಕಾರರ ಕೆಲಸವಾಗಿದೆ. ಇವುಗಳ ಅರ್ಥದ ಬೇರೆ ಬೇರೆ ಸ್ತರಗಳನ್ನು ಓದುಗ ಕಂಡುಕೊಳ್ಳಲು ಪ್ರಯತ್ನಿಸುವ ಫಲ ಇದು. ಕಿಟ್ಟಿಯಿಂದ ಏನಾದರೂ ಪ್ರತಿಕ್ರಿಯೆ ಬಂದರೆ ಅದು ಅವನ ಮಟ್ಟದ್ದೇ ಹೊರತು ಕಾದಂಬರಿಕಾರರ ಮಟ್ಟದ್ದಲ್ಲ. ಬಹಳ ಕಡೆ ಕಾದಂಬರಿಕಾರರಿಂದ ಬರುವ ಬಾಬತ್ತೆಂದರೆ ವರದಿಯಷ್ಟೆ, ಹಳ್ಳಿಯ ಅಧಃಪತನ, ಅದಕ್ಕೆ ಹಣೆದುಕೊಂಡೇ ಬರುವ ಕಿಟ್ಟಿಯ ದೃಷ್ಟಿಕೋನಗಳು-ಹೀಗೆ ಎರಡು ಮಗ್ಗುಲಿಂದ ಕಾದಂಬರಿಯನ್ನು ನೋಡಬಹುದಾದರೂ ಹಳ್ಳಿಯ ಆರ್ಥಪತನ ಓದುಗರು ಹುಡುಕಿಕೊಂಡು ಹೋದಾಗ ಮಾತ್ರ ಕಾಣುವಷ್ಟು ಬಡಕಲಾಗಿದ್ದು, ಕಾದಂಬರಿಕಾರರು ಅರ್ಥದ, ಸ್ತರಗಳನ್ನು ತೆರೆಯಲು ಮಾಡಿದ ಪ್ರಯತ್ನದ ಫಲವಿದು ಎನ್ನಿಸುತ್ತದೆ.
ಕಾದಂಬರಿಕಾರರು ಯಾವುದನ್ನೂ ಹೆಚ್ಚು ಒತ್ತುಕೊಟ್ಟು ಹೇಳುವುದಿಲ್ಲ, ಇಲ್ಲಿ ಗ್ರಾಮಾಯಣದ ಪಾದಳ್ಳಿಯನ್ನು ನೆನೆಸಿಕೊಂಡರೆ ‘ಕಾಡು’ವಿನ ಈ ಅಂಶ ಎಷ್ಟು ದುರ್ಬಲವಾಗಿದೆಯೆಂದು ವ್ಯಕ್ತವಾಗುತ್ತದೆ.
ಅಲ್ಲದೆ ಹಳ್ಳಿಯ ಅಧಃಪತನ ಚಿತ್ರಣ ಹೆಚ್ಚು ಹೆಚ್ಚು ಪ್ರಭಾವಪೂರ್ಣವಾಗದೇ ಇರುವುದಕ್ಕೆ ಕಾರಣ ಕಾದಂಬರಿಯ ಪ್ರಾರಂಭದಲ್ಲಿಯ ಉದ್ದೇಶವೇ, ನಂತರ ನಮಗೆ ಕಾಣುವುದಕ್ಕಿಂತ ಬೇರೆಯಾಗಿದೆಯೆಂಬಂತೆ ಚಿತ್ರಿತವಾಗಿರುವುದು.
ಎರಡನೆಯ ಉದ್ದೇಶ ಕಾಮ, ಪಾಪ, ದ್ವೇಷ, ಮೃತ್ಯು ಮುಂತಾದುವುಗಳನ್ನು ಪೆಂಡೀ ಕರಿಸಿ ನಗ್ನ ಸ್ವರೂಪದಲ್ಲಿ ನೋಡುವ ಪ್ರಯತ್ನ, ಇದಕ್ಕಾಗಿ ಪೂರ್ವಗ್ರಹಪೀಡಿತ ವಲ್ಲದ, ಯಾವ ಮೌಲ್ಯಗಳಿಗೂ ಪಕ್ವವಾಗದ ೮ ವರ್ಷದ ಬಾಲಕನನ್ನು ಆಯ್ಕೆ
ಮಾಡಿದ್ದು – ಸಾಕ್ಷಿತ್ವವನ್ನು ಕಾಪಾಡಿಕೊಳ್ಳಲು, ಈ ಪಾತ್ರ ಕಾದಂಬರಿಕಾರರನ್ನು ಕಾದಂಬರಿಯಲ್ಲಿ ತೊಡಗಿಸಿಕೊಂಡು (involve) ಭಾವಪರವಶರಾಗದಂತೆ ನೋಡಿ ಕೊಳ್ಳಲು ಬಳಸಿಕೊಂಡ ತಂತ್ರಕ್ಕಾಗಿ ಬಂದುದು-ಎಂದು ಕಾದಂಬರಿಯ ಮೊದಲ ಭಾಗಗಳಿಂದ ವೇದ್ಯವಾದರೂ, ಕ್ರಮೇಣ ಹಳ್ಳಿಯೂ ಕಿಟ್ಟಿಯಷ್ಟೇ ಸಮಾನ ಸ್ಥಾನ ಪಡೆಯುತ್ತದೆ. ಹೀಗಾಗಿ ಕಾದಂಬರಿಕಾರರ ಮೂಲ ಉದ್ದೇಶವೇ ವಿಕೇಂದ್ರೀಕೃತವಾಗುತ್ತದೆ.
ಕಿಟ್ಟಿಗೆ ಅಜ್ಜನ ಹೆಣ, ಕೆಂಪು ಹಳದಿಯಿಂದ ಉರಿದದ್ದು, ಚೆಂಡು ಹೂವನ್ನು ಸಿಳ್ಳನೊಂದಿಗೆ ತರುವಾಗ ಮುಳುಗುತ್ತಿರುವ ಸೂಯ್ಯನ ಸಮಿಪದ ಆಕಾಶದಲ್ಲಿಯ ಕೆಂಪು ಹಳದಿ ಬಣ್ಣ ದಿಂದ ಜ್ಞಾಪಕವಾಗಿ ನಡುಗುತ್ತಾನೆ. ಕಾಕೀ ಹಣ್ಣನ್ನು ಪೊದೆಯಿಂದ ಹೊರತೆಗೆಯಲು ಕತ್ತಲಾಗುತ್ತ ಬಂತು, ಹಾವು-ಗೀವು ಎಂದು ಹೆದರಿಕೆಯಾಗುತ್ತದೆ. ಸಾವು ಎಂದರೆ ಏನೆಂದು ಯೋಚನೆ ಹುಟ್ಟಿ ಮನೆಗೆ ಬಂದು ಚೆಂಡು ಹೂವನ್ನು ಪೋಣಿಸುತ್ತಾನೆ. ಅಲ್ಲಿಗೆ ಬಂದ ಅತ್ತೆ ಇನ್ನೊಮ್ಮೆ ನೋಡಬೇಕೆನ್ನಿಸುವಷ್ಟು ಸುಂದರವಾಗಿ ಕಾಣುತ್ತಾಳೆ. ಸರ ಉದ್ದವಾಯಿತೆಂದು ಹಿಡಿದುಕೊಂಡು ಹಳದಿ ಕೆಂಪು ಹೂವು ಬೆರಸಿ ಕಟ್ಟಿದಷ್ಟು ಭಾಗವನ್ನೆಲ್ಲ ಅತ್ತೆ ಜರ‍್ರನೆ ಉರುಚಿ ಹಾಕಿದಾಗ ಕಣ್ಣಿಗೆ ರಪ್ಪನೆ ಬಡಿದ ಬಣ್ಣಗಳು ಮನಸ್ಸಿನೊಳಗೆಲ್ಲ ತೊಳಸಲು ಶುರುವಾಗುತ್ತದೆ. ಸರವನ್ನು ಬಾಗಿಲಿಗೆ ಕಟ್ಟಲು ಎರಡು ಕೈ ಎತ್ತಿ ನಿಂತ ಅತ್ತೆಯ ಸೀರೆ, ರವಿಕೆಯು ಮಧ್ಯೆ ಬೆತ್ತಲೆ ಭಾಗ ಚೆಂಡು ಹೂವಿನ ಸರದ ಹಾಗೆ ಕೆಂಪಗಿತ್ತು. ಅಳಲು ಶುರುಮಾಡುತ್ತಾನೆ. ಅತ್ತೆ, ತಾನು ಗಂಡನಿಗೆ `ಅಂತ್ರ’ ಬರೆಸಿದ್ದನ್ನು ಯಾರಿಗಾದರೂ ಹೇಳಿದರೆ ಸತ್ತು ಹೋಗುತ್ತೆನೆಂದಾಗ ತಟ್ಟನೆ “ಹೇಳಲ್ಲ ಅತ್ತೆ”~ ಎನ್ನುತ್ತಾನೆ. ಆಗ ಒಲೆ ಮುಂದೆ ಕುಳಿತ ಅವರ ಕಣ್ಣಲ್ಲಿ ಕೆಂಪು-ಹಳದಿ ಬಣ್ಣ ಉರಿಯುತ್ತಿರುತ್ತದೆ. ಗೌಪಿ ಕಡಸು ಸತ್ತದ್ದು, ಸಾವಿತ್ರಮ್ಮನ ಸೀರೆಗೆ ಉಚ್ಚೆ ಮಾಡಿದ್ದು, ಕೆಂಪು-ಹಳದಿ ಕ್ರಷ್ ಶೀಷೆಗಳು ಕಣ್ಣು ಮುಚ್ಚಿದರೆ ಸಾಕು ಒತ್ತತೊಡಗುತ್ತವೆ. ಗುಡಿಯ ಪೂಜಾರಿಗಳು ಮಾದಿಗರ ಕಾಳಿಯೊಂದಿಗೆ ಬೆತ್ತಲಾಗಿ ಮಲಗಿದ್ದು ಮಾವನಿಗೆ ಸಿಟ್ಟು ಬರಲಿಲ್ಲ, ಅದನ್ನು ಬಾಯಿಬಿಟ್ಟಾಡಿದ ಕಿಟ್ಟಿಗೆ: ಕೆನ್ನೆಗೊಂದು ಹೊಡೆತ ಬಿತ್ತು, ಅದೇ ಕೆಂಚ ದೇವಿಯೊಂದಿಗೆ ಮಲಗಿದ್ದಕ್ಕೆ ಇಷ್ಟೆಲ್ಲ ರುಪವೇಕೆ ? ವಿಧವೆ ಸಾವಿತ್ರಮ್ಮಗೆ ಮೂರು ತಿಂಗಳಾಗಿದೆ ಎಂದರೇನು ? ಇದಕ್ಕೂ ಅವಳ ಆತ್ಮಹತ್ಯೆಗೂ ಏನು ಸಂಬಂಧ ? ಕಲ್ಯಾಣಿಗೆ ಶಿಂಗಾರಪ್ಪಗೌಡ, ಮುದುಕಿ, ಆಷ್ಟೇಕೆ ಹಿಂಸೆ ಕೊಡಬೇಕಾಗಿತ್ತು ? ಅದಕ್ಕೆ ಅವಳು ಆಳು ಮಗನೊಂದಿಗೆ ಓಡಿ ಹೋದಳು. ಹಾಗಾದರೆ ಕಲ್ಯಾಣಿಯನ್ನು ಅಷ್ಟು ಹೊಗಳುತ್ತಿದ್ದ ಅತ್ತೆಯೇ: ಇಂದೇಕೆ ಬೈಯುತ್ತಿದ್ದಾರೆ ? ಮಾವ ಜಿಂಕೆ ಜೋಡು ಮೆಟ್ಟಿ ರಾತ್ರಿ ಮನೆ ಬಿಡುವುದು ತನ್ನ ಪಾಪ ಎನ್ನುತ್ತಾಳೆ ಅತ್ತೆ, ಗೌರಿ ಕಡಸಿನ ಬಾಯಿ ಕೆತ್ತಿದ್ದೂ ಅಯ್ಯೋ ಪಾಪ ಎನ್ನಿಸಿತು, ಅತ್ತೆ, ವಿಧವೆ ಸಾವಿತ್ರಮ್ಮನ ಮಡಿ ಸೀರೆ ಮೇಲೆ ಉಚ್ಚೆ ಮಾಡಿದ್ದು ಪಾಪ ಎನ್ನುತ್ತಾಳೆ.
ದ್ವೇಷಕ್ಕಾಗಿ ಬಣವೆಗೆ ಬೆಂಕಿ ಇಟ್ಟಿದ್ದು, ಗೌರಿ-ಕಡಸು ಮದ್ದಿನ ಗುಳಿಗೆ ಕಡಿದದ್ದು, ಅದರಿಂದ ತನಗಾದ ದುಃಖ ;ಲೋಂಪಿ ಸಂಜೆಗೆ ತಮಗೆ ಬಾಡು ಸಿಗುತ್ತದೆ ಎಂದು ಖಿಸಿ ಪಟ್ಟದ್ದು, ಹಸು ಕೊಯ್ದ ಜಾಗದಲ್ಲಿ ಹದ್ದು ಕಾಗೆಗಳ ಹಾರಾಟ, ಮೊಣ್ಣನ ಕಿರಂಬ ಹೊತ್ತುಕೊಂಡು ಹೋಗಿ ತಿಂದದ್ದು-
-ಇವೆಲ್ಲ-ಮೃತ್ಯು, ಪಾಪ, ಕಾಮ, ದ್ವೇಷಾದಿಗಳು-ಹೇಗೆ ಒಂದಕ್ಕೊಂದು ಅಂತರ್‌ಸಂಬಂಧಿಗಳಾಗಿ ಹೆಣೆದುಕೊಂಡಿವೆಯೆಂಬುದನ್ನು ತುಂಬಾcompact ಆಗಿ ತರಲು ಪ್ರಯತ್ನಿಸಿದ್ದಾರೆ. ಕಾಡು, ಇಲ್ಲಿಯ ಸ್ವೀಕರಿಸುತ್ತಿರುವ ಮುಗ್ಧ ಮನಸ್ಸಿನ ಒಳಗಿನದಾಗುತ್ತದೆ. ಇವುಗಳನ್ನೆಲ್ಲ ವಿಶ್ಲೇಷಿಸುವ, ಅನ್ವೇಷಿಸುವ ಸಾಹಸವಿಲ್ಲ. ಅದು ಕಾದಂಬರಿಕಾರರ ಪ್ರಮುಖ ಉದ್ದೇಶವೂ ಅಲ್ಲ ಎಂಬುದು ಕಿಟ್ಟಿಯು ಇತರ ದೈನಂದಿನ ಚಟುವಟಿಕೆಗಳ ಕಡೆಗೆ ಹೆಚ್ಚು ಗಮನ ಕೊಡುವುದರಿಂದ ತಿಳಿದುಬರುತ್ತದೆ. ಈ ದೃಷ್ಟಿ ಯಿಂದ ಕಾದಂಬರಿಯ ಶೀರ್ಷಿಕೆ ಸಮರ್ಪಕವಾಗಿದೆ, ದೋಷವೆಂದರೆ ಕಾವಂಬರಿ ಇದೇ ಉದ್ದೇಶಕ್ಕಾಗಿ ದುಡಿಯದಿರುವುದು.
ಓಕುಳಿ, ಅತ್ತೆಯ ಶೀಲಭಂಗ, ಮಾವ ಮಾಡಿದ ಕೊಲೆ-ಇವೆಲ್ಲ ಅವನು ತಿಳಿದ ರಾಕ್ಷಸರ ಕತೆಯನ್ನು ಪುನಃ ಪುನಃ ಸ್ಮರಣೆಗೆ ತರುತ್ತವೆ, ಕಾದಂಬರಿಯ ಮುಕ್ತಾಯವೇ ಕಿಟ್ಟಿಯು ಈ ತೀರ್ಮಾನದಲ್ಲಿ ಆಗುತ್ತದೆ. ಸಾಮಾಜಿಕ ಸಂಬಂಧಗಳು, ಮೌಲ್ಯಗಳನ್ನರಿಯದ ಕಿಟ್ಟಿಯ ಮನಸ್ಸು, ಮೌಲ್ಯ ಪತನದ ದುರಂತವಾತಾವರಣದಲ್ಲಿ, ಜೀವನವೇ ರಾಕ್ಷಸ ಎಂಬ ತೀರ್ಮಾನಕ್ಕೆ ಬರುತ್ತದೆ, ಆದರೆ ಈ ತೀರ್ಮಾನ ಕಾದಂಬರಿಯ ಕೊನೆಯಲ್ಲಿ ಬೆಳವಣಿಗೆ ಮಾತ್ರದಿಂದ ಬರಬಹುದಾದದ್ದಾಗದೆ ಕಾದಂಬರಿಯ ಪ್ರಾರಂಭದಿಂದಲೂ ಇದೆ. ಹಳ್ಳಿಯ ಕತೆ ಬೆಳೆಯುತ್ತಾ ಹೋಗುತ್ತದೆ -ಮೊದಲ ಕೆಲ ಭಾಗಗಳ ನಂತರ. ಆದರೆ ಕಿಟ್ಟಿಯ ‘ಜೀವನ ರಾಕ್ಷಸ’ ಎಂಬ ದೃಷ್ಟಿ ಹಾಗೆ ಬೆಳೆದು ಬಂದುದಲ್ಲ. ಘಟನೆಗಳಿಂದ ಕಿಟ್ಟಿಯಲ್ಲಿ ‘ಜೀವನ ರಾಕ್ಷಸ’ ಎಂಬ ತೀರ್ಮಾನಕ್ಕೆ ಬೇಕಾಗುವ ಭೀಭತ್ಸಗಳನ್ನು ಪೇರಿಸುತ್ತಾ ಹೋಗುತ್ತಾರೆ.
ಹೀಗಾಗಿ ಕಾದಂಬರಿಯ ಶಿಲ್ಪಕ್ಕಿರಬೇಕಾದ ಲಕ್ಷಣದ ಒಂದು ಕೊರತೆಯೂ ಇದಕ್ಕಿದೆ. ಕಿಟ್ಟಿಯೂ ಘಟನೆಗಳ ಆಗು-ಹೋಗುಗಳಲ್ಲಿ ಒಂದು ವ್ಯಕ್ತಿಯಾಗಿದ್ದರೆ ಈ ಕೂರತೆ ತಪ್ಪುತ್ತಿತ್ತು, ಘಟನೆಗಳಿಗೆ ಕಿಟ್ಟಿ ಸಂಬಂಧ ಪಡೆದವನು, ಪ್ರತಿ ಘಟನೆಗೂ ಅವನನ್ನು ಒಡ್ಡಿ, ಜೀವನ ರಾಕ್ಷಸ’ ಎನ್ನಿಸಿ, ಅತ್ತೆಯ ಮಗ್ಗುಲಲ್ಲಿ ಮಲಗಿಸಿ ಬಿಡುತ್ತಾರೆ, ಪ್ರತಿ ಅಧ್ಯಾಯವೂ ಕಿಟ್ಟಿ ಮಲಗುವುದರಲ್ಲಿ ಅಂತ್ಯವಾಗುವುದು ಅಥವಾ ಅಧ್ಯಾಯದ ಆರಂಭವೂ ಬೆಳಕು ಹರಿದು ಕಿಟ್ಟಿ ಏಳುವುದರಲ್ಲಿ ಶುರುವಾಗುವುದು ಕಾದಂಬರಿಯ ಶಿಲ್ಪ ದಲ್ಲಿನ ದೋಷದಿಂದಾಗಿ ಪರಿಣಮಿಸಿದುದು. ದ್ವೇಷ, ಪಾಪ, ಪ್ರತೀಕಾರ, ಕಾಮ, ಮೃತ್ಯು, ಕಿಟ್ಟಿಯ ಅಸಹಾಯಕ ಸ್ಥಿತಿಗಳನ್ನು ಪರಸ್ಪರ ಒಟ್ಟುಗೂಡಿಸಿ ನೋಡುವ ದೃಷ್ಟಿಯಿದೆ. ಆದರೆ ಇವೆಲ್ಲ ತಮ್ಮ ತಮ್ಮಲ್ಲೇ ಸಂಬಂಧ ಸಂಘರ್ಷಗಳನ್ನು ಬೆಳೆಯಿಸಿಕೊಳ್ಳುವ ಅವಸರದಲ್ಲಿ, ಹಳ್ಳಿಯ ಅಧಃಪತನಕ್ಕೆ ಕಾರಣವಾಗುವ ಘಟನೆಗಳು ಒಂದರ ಒಡಲಿನಿಂದ ಇನ್ನೊಂದು ಸಮಸ್ಯೆಗಳ ಸುಳಿಯಾಗಿ (ಗ್ರಾಮಾಯಣದಿಂತ ಆತ್ಮೀಯವಾಗಿ, ಅನಿವಾರ್ಯವಾಗಿ) ಉದ್ಭವಿಸದೆ ಬಿಡಿ ಬಿಡಿಯಾಗಿ ನಿಲ್ಲುತ್ತವೆ. ಅಲ್ಲದೆ ಹಳ್ಳಿಯ ಅಧಃಪತನ ಚಂದ್ರೇಗೌಡರೊಬ್ಬರ ಮನೆಯ ಅಧಃಪತನದ ಮೇಲೆ ನಿಲ್ಲದುದರಿಂದ ಒಂದು ಸಮಗ್ರ ಚಿತ್ರ ಮೂಡಿಬರುವುದಿಲ್ಲ. ಇಂಥಲ್ಲಿ ಕಿಟ್ಟಿ ಹಳ್ಳಿಯಲ್ಲಿ ಪಾತ್ರವಾಗದೆ, ಕೃಷ್ಣ ಆಲನಳ್ಳಿಯವರ ಬೇಕಾದೆಡೆಗೆ ಮಾತ್ರ ‘ಸೆಟ್ ‘ ಮಾಡಿಕೊಳ್ಳುವ ‘ಕ್ಯಾಮರಾ ಕಣ್ಣಾಗಿ, ಹಳ್ಳಿಗೂ ಕಿಟ್ಟಿಗೂ ಸಾವಯವ ಸಂಬಂಧ ಕಲ್ಪಿತವಾಗುವುದಿಲ್ಲ, ನಿರೂಪಣೆಗೆ ಸಂಬಂಧಪಟ್ಟ ಈ ಕೊರತೆ ‘ಥೀಮ್’ ಆನ್ನು ಸೃಷ್ಠಿಸದೆ ಮೂಲ ಉದ್ದೇಶಕ್ಕೆ ಎರವಾಗಿದೆ. ಕಿಟ್ಟಿಯೇ ಈ ಕಥೆ ಹೇಳಿಕೊಂಡು ಹೋಗಿದ್ದರೆ ಹೇಗೆಂಬುದು ವಿಚಾರಾರ್ಹವಾದ ಮಾತು.
ಇವೆಲ್ಲ ಕಾಡು ಕಾದಂಬರಿಯ ಸೋಲಾದರೂ, ಮಹತ್ವಾಕಾಂಕ್ಷೆಯಿಂದ ಹೊರಟ ಅವರ ಸೋಲೂ ತನ್ನ ಮಿತಿಯಲ್ಲಿ ಅರ್ಥಪೂರ್ಣವಾಗುತ್ತದೆ.
ಪ್ರಾದೇಶಿಕ ಕೃತಿಯಾಗಿ, ಸನ್ನಿವೇಶ ಚಿತ್ರಣದಲ್ಲಿ ಅದು ಓದುಗನನ್ನು ಬೆರಗುಗೊಳಿಸುತ್ತದೆ. ಕುತೂಹಲ ಉಳಿಸಿಕೊಂಡು ಹೋಗುವ ಅಲ್ಲಿ ರೋಮಾಂಚನಗೊಳಿಸುವ ಅನೇಕ ಭಾಗಗಳಿವೆ. ಮಗುವಿನ ಮುಗ್ಧತೆಗೆ ಪೋಷಕವಾಗುವ ಚಿತ್ರಣಗಳು ಕೆಲವೆಡೆ ಅನುಮಾನ ತರುವಂತಿದ್ದರೂ (ಉದಾ: ಅಯ್ಯನವರೂ ಕಾಳಿಯ ಬೆತ್ತಲೆ ಮಲಗಿದ್ದನ್ನ ಹಾಗೆ ಕೇಳಬಾರದೆಂದು ನಾಡಿಗೆ ಹೇಳಿ ಪ್ರಬುದ್ಧ ಮತ್ತೆ ಕಾಣಿಸುವ ಕಿಟ್ಟಿ ಆತ್ತೆಯ: ಹತ್ತಿರ ಆರಿಯದನಾಗಿ ಹಾಗೆ ಮಲಗಿದ್ದರು ಎಂದು ಕೇಳುತ್ತಾನೆ) ಕಾದಂಬರಿಕಾರರೇ ಜ್ಞಾಪಿಸಿಕೊಳ್ಳುತ್ತಾ ಹೋಗುತ್ತಿರುವರೇನೋ – ಎನ್ನಿಸುವ ರೀತಿ ಕಾದಂಬರಿಯನ್ನು ಓದಿಸಿಕೊಂಡು ಹೋಗುತ್ತದೆ.
ಖಾಸನೀಸ ಮುಖೇನ ಸಣ್ಣಕಥೆ
ಖಾಸನೀಸ ಮುಖೇನ ಸಣ್ಣ ಕಥೆ
ದೇವನೂರ ಮಹಾದೇವ
ಮಾಸ್ತಿ ಅನಂತರದ ಕನ್ನಡದ ಸಣ್ಣ ಕಥೆಗೆ ಅನಂತಮೂರ್ತಿಯವರೂ ಚಿತ್ತಾಲರೂ ರಕ್ತದಂಥವರು, ಮಾಸ್ತಿಯವರೇ ವಿಕಸಿತವಾಗಿ ಬರೆದಂತ ಚಿತ್ತಾಲರ ಕಥೆಗಳು ಕಾಣಬರುತ್ತವೆ. ಚಿತ್ತಾಲರು ಕನ್ನಡದ ಸಣ್ಣಕಥೆಯ ರೂಪಕ್ಕೆ ಕಟ್ಟುಹಾಕಿದರು ಎಂದು ಯಾವ ಮಗನೂ ಹೇಳಬೇಕು ಹಾಗೆ ಅವರ ಕಥೆಗಳಿವೆ, ಅವರ ಕಥೆಗಳು ತುಂಬಾ ಕರಾರುವಾಕ್ಯು ಮತ್ತು ಕುಶಲ ನಿಪುಣತೆಗಳಿಂದಾಗುತ್ತವೆ. ವಾತಾವರಣವನ್ನು ಸೃಷ್ಟಿಸಿದ ಆವರಣದೊಳಗೆ ಇವರ ಕಥೆಗಳು ಮೂಡುತ್ತ ಅದಕ್ಕಾಗಿ, ಬರುವ ಸಂಗತಿಗಳೂ ಪದ ಪದಗಳೂ ಕೆಲಸ ಮಾಡುತ್ತವೆ. ಉದಾಹರಣೆಗೆ “ಛಲ’ ಹೆಸರಿನ ಕಥೆಯಲ್ಲಿ ಛಲ ಇಮ್ಮಡಿಗೊಂಡು ಬೆಳೆದು ನಿಲ್ಲುತ್ತದೆ. ‘ಸೆರೆ’ ಕಥೆಯಲ್ಲಿ ಸೈಕಾಲಜಿ ಥಿಯರಿ ಒಂದು ಕಥೆಯೊಳಗೆ ಹುಟ್ಟಿದಂತೆ ಪ್ರತಿಪಾದಿತವಾಗಿದೆ. ಅಂದರೆ ಆಯಾಯ ಕಥೆ ಹೆಸರುಗಳು ನಿರೀಕ್ಷೆ ಮೀರಿಸಿಕೊಂಡು ರುಜುವಾತು ಆಗುತ್ತವೆ. ಕಥೆ ಓದಿ ಮುಗಿಸಿದ ಮೇಲೆ ಕಥೆ ಹರಳಿನ ಆಕೃತಿ ಪಡೆದುಕೊಂಡು ಚಚ್ಚೌಕವಾಗಿ ಕಣ್ಣಮುಂದೆ ನಿಲ್ಲುತ್ತದೆ. ಇಷ್ಟು ಇದ್ದೂ ಚಿತ್ತಾಲರ ಕಥೆಗಳು ನನಗೆ ಚಂದದ ಅರೆಗೊಡ್ಡು ಕಥೆಗಳಾಗಿ ಕಾಣುತ್ತವೆ.
ಮೇಲಣ ಮಾತಿಗೆ ಮುಂದೆ ಎತ್ತಿ ಕೊಳ್ಳುವ ವಿಷಯ ಸಾಬೀತು ಪಡಿಸುತ್ತದೆ. ಅನಂತಮೂರ್ತಿ ಕನ್ನಡದ ಸಣ್ಣ ಕಥೆಗೆ ಅಭಿವೃದ್ಧಿಯನ್ನು ತಂದುಕೊಟ್ಟಂಥವರು, ಅವರ ಕಥೆಗಳೆಲ್ಲ ಚಿಂತನದ ಎಳೆ ಹಿಡಿದುಕೊಂಡು ಜರಗುತ್ತವೆ ಚಿತ್ತಾಲರಲ್ಲಿ ಕಾಣದ್ದನ್ನು ಇಲ್ಲಿ ಕಾಣಬಹುದು, ಅನಂತಮೂರ್ತಿಯವರ ಸ್ವಸಂವೃದ್ಧಿಯಾದ ಅನುಭವಗಳು
ತಮ್ಮದೇ ಆದ ಇಕ್ಕಟ್ಟಲ್ಲಿ ಸಿಲುಕುವಲ್ಲಿ ಅವರ ಚಿಂತನ ಮೇಲೆ ಬರುತ್ತದೆ, ಈಗಲೊಡನೆ ಸಮಾನಾಂತರವಾದ ಹಿಂದಲನ್ನು ಕೂಡಿಕೊಂಡು ಅನುಭವದ ಎದುರು ಮುಖಕ್ಕೆ ಮುಖಕೊಟ್ಟು ಅವರು ಘರ್ಷಿಸುವ ರೀತಿ ಅವರೇ ಅದಕ್ಕೆ ಮೈಕೊಟ್ಟರೇನೋ ಎಂಬಷ್ಟು ಸ್ವರೀತಿಯದು. ತಿಳಿವು ಒಂದೇ ಇದ್ದು ಕಥೆಯಿಂದ ಕಥೆಗೆ ವಿಕಸಿತವಾಗುವ ಬಗೆ ಇವರಿಂದ ಸ್ಪಷ್ಟತೆ ಕಂಡಿತು.
ಮೇಲಣ ಎರಡನ್ನೂ ಕೂಡಿಕೊಂಡು ಒಂದು ಕಥೆ ಹಿಗ್ಗಲು ಎಷ್ಟೆಲ್ಲಾ ಸೂರೆ ಮಾಡಬಹುದೋ ಆಷ್ಟೆಲ್ಲ ಸೂರೆ ಮಾಡಿದ ಕಡೆ ಖಾಸನೀಸರು ಬರೆದ ‘ತಬ್ಬಲಿಗಳು’ ಎಂಬ ಕಥೆ, ಅದಕ್ಕಾಗೇ ಆ ಕಥೆಯ ಅರ್ಥ ಮಾಡಿಕೊಳ್ಳಲು ಹವಣಿಸುತ್ತ ಹಾಗೇ ಸಣ್ಣಕಥೆ ಹರಿಯುವ ದಿಕ್ಕ ಹಿಡಿಯಲೂ ಯತ್ನಿಸುವೆ. ಹಾಗೆಂದುಕೊಂಡು ನೋಡಿದಾಗ ‘ತಬ್ಬಲಿಗಳು’ ಕಥೆ ಹೀಗಿದೆ:
ತಂದೆ ತಾಯಿ ತಮ್ಮ ತಂಗಿ–ಇವರಿಷ್ಟೂ ಒಂದೇ ಮೂಲದಿಂದ ಬಂದವರಾದರೂ ಒಡಕಾದವರು, ತಂದೆ ತಾಯಿ ತಮ್ಮ ತಂಗಿ–ಅನ್ನುವ ಕಾರಣಕ್ಕೆ ಒಟ್ಟಿಗೆ ಬದುಕುವ ಯತ್ನದಲ್ಲಿ ತೊಡಗಿದವರು, ಸವಾಲಾಗಿ ಸತ್ತಂತೆ ಸತ್ತ ತಮ್ಮನ ಹೆಂಡತಿ ಸಾವನ್ನು ಹೊತ್ತು ಹೊರಲಾರದೆ ಹೊರುತ್ತಿರುವಂಥವರು, ಮತ್ತು ಸತ್ತ ತಮ್ಮನ ಹೆಂಡತಿ ನಿಯಂತ್ರಣಕ್ಕೆ ಒಳಪಟ್ಟವರು. ಅವರು ಮಂತ್ರಾಲಯದ ನಂಬುಗೆ ಎದುರು ತಂತಮ್ಮ ಆಳದ ನಿಜಕ್ಕೆ ಇಳಿಯುವರು. ಆ ನಂಬುಗೆ ಅವರನ್ನು ನಡೆಸಿಕೊಂಡು ಹೋಗುವಲ್ಲೆ ಕ್ರೂರಗತಿಯೊಳಗೆ ಸಿಗುವಂತೆ ಏರ್ಪಡಿಸಿ ದಿಕ್ಕಾಪಾಲು ಮಾಡಿಬಿಡುತ್ತದೆ. ಒಬ್ಬರ ಕೈಯಿ ಒಬ್ಬರಿಗೆ ಸಿಗದೆ ಇವರನ್ನೆಲ್ಲ ಹಿಡಿದಿದ್ದ ಕೈಯೂ ತಪ್ಪಿ ಎಲ್ಲರೂ ಜೋಲಿ ತಪ್ಪುತ್ತಾರೆ, ಅಲ್ಲಿ ನಂಬುಗೆಯ ಮಿಧ್ಯೆ ಪ್ರಕಟಗೊಂಡು horrorನಲ್ಲಿ ಕೊನೆ ಕಂಡು ಬಿಡುತ್ತದೆ. ಮೊದಲೇ ಒಡೆದುಕೊಂಡು ಇದ್ದ ಅವರು ಕೊನೆಗೂ ನಿಷ್ಠುರ ಜಡದ ಎದುರಾ ನಿಷ್ಠುರವಾಗಿ ಒಡೆದುಕೊಂಡು ರಕ್ತದ ಕೆಂಪಿನ ಕ್ರೂರತೆ ಮತ್ತು ರಥದ ಗಾಲಿಯ ಕ್ರೂರಗತಿ ಮಾತ್ರ ಉಳಿಯುತ್ತದೆ.
ಇಂಥ ಒಂದರ ಕಥೆ ಆಗಿಸುವ ಸವಾಲನ್ನು ಪೂರ್ತಿ ಎದುರಿಸಿದಂತೆ ಕಥೆ ಆಗಿದೆ, ಅದಕ್ಕಾಗಿ ಬಳಸುವ ಪ್ರತಿಯೊಂದೂ ಕಥೆಯ ಮೈಯನ್ನು ಸಮಾ ತುಂಬಿ ಗಟ್ಟುಮುಟ್ಟು ಮಾಡುತ್ತದೆ. ಮೊದಲಿನಿಂದಲೂ ಕಥೆ ಒಳಗೆ ಹೇಳಬೇಕು ಅಂತಿರುವ ಒಂದಕ್ಕಾಗಿ ಸಿದ್ಧತೆ ಕಥೆಯೊಳಗೇ ನಡೆಯುತ್ತದೆ. ಎಲ್ಲವೂ ಆ ಒಂದರ ಸುತ್ತವೆ ಸುತ್ತುತ್ತ ಹೆಚ್ಚಿನ ತುಯ್ತುಕ್ಕೆ ಹವಣಿಸುತ್ತವೆ. ಕಥೆಯ ಶುರುವೇ ಅದು ಹೇಳಬೇಕು ಎಂದಿರುವ ದುರಂತಕ್ಕೆ ಸುಳಿವು ಕೊಡುವುದ ಕಾಣಬಹುದು, ಆ ಸುಳಿವು ಸೂಕ್ಷ್ಮವಾಗಿದ್ದು ಅಲ್ಲಾಗುವ ಘಟನಾ
ಕ್ರಮದೊಳಗೆ ವ್ಯಕ್ತ ಆಗುತ್ತದೆ, ‘ನೀರಿಗೆ ಸಾಕಷ್ಟು ಸೆಳವೂ ಇತ್ತು’ನೀರು ನಿಮಿಷ ನಿಮಿಷಕ್ಕೆ ಏರತೊಡಗಿದೆ’-ಇಂಥದು ಅಲ್ಲೆ ಹುಟ್ಟಿ ಅಷ್ಟಕ್ಕೇ ನಿಲ್ಲದೆ ಅದಕ್ಕೂ ಮೀರಿದ ಅರ್ಥಪಡೆದುಕೊಳ್ಳಲು ಚಾಚುತ್ತದೆ, ಮುಂದೆ ಕಥೆ ಜರುಗುವ ಕ್ರಮದಲ್ಲೆ ಅವರವರ ಸಂಬಂಧಗಳು ‘ನಕ್ಷೆಗೊಳ್ಳುತ್ತವೆ; ಟ್ರೇಸ್’ ಆಗುತ್ತವೆ.
ಕಥೆಯು ಮಂತ್ರಾಲಯದ ಆವರಣದೊಳಗೆ ಜರುಗುತ್ತದೆ, ಆವರಣ ಏರ್ಪಡಿಸಲು ಪರಿಣತ ರೀತಿಯಲ್ಲಿ ಹೊರ ವಿವರಗಳು ಬರುತ್ತವೆ, ಉದಾಹರಣೆಗೆ-ಕಂಡಕ್ಟರನ ಬಯ್ಯುವ ಮುದುಕಿ ವ್ಯಕ್ತವಾಗುವಲ್ಲಿ ಆಕೆ ವೃಥಾ ಆಗುತ್ತಾಳೆ, ಬಸ್ಸಲ್ಲಿ ಕುಂತ ಹೆಂಗಸೂ ಹೇಗೆ ವೃಥಾ ಆಗುತ್ತಾಳೆ ಕಾಣಬಹುದು.
‘ಹಣೆಯ ಮೇಲೆ ಬಹಳ ದೊಡ್ಡ ಕುಂಕುಮವಿದೆ, ಅವಳಿಗೆ ಏನಾದರು ರೋಗವಿರ ಬೇಕು’, ಎರಡು ವಾಕ್ಯಗಳ ನಡುವೆ ಕಂದಕ ದುರಂತವಿದೆ, ಕಥೆ ಹೇಳುವುದೂ ಇಂಥದೆ ಒಂದಾದ್ದರಿಂದ ಇದೂ ಕಥೆಗೆ ಕೂಡಿಕೊಳ್ಳುತ್ತದೆ. ಒಟ್ಟಿಗೇ ಆವರಣ ಮೂಡಲೂ ಹೆಣಗುತ್ತದೆ, ಮಂತ್ರಾಲಯದ ಮುತ್ತೈದೆ ಹೇಳುವ ಕಥೆ ಎಲ್ಲರಿಗೂ ಜೀವದಾನದಂತೆ ಕೇಳುತ್ತದೆ. ಆಕೆ ವೈದಿಕಿ ಆದ್ದರಿಂದ ಬುಸಿನೆಸ್ಸೂ ಆಗುತ್ತದೆ, ಹೀಗೆ ಆಗುವಲ್ಲೆ ಕಥೆ ಹೇಳುವುದರ ಯಾಂತ್ರಿಕ ಚಲನೆಯನ್ನೂ ಅದು ಹೇಳುತ್ತದೆ. ಇದು ಚಲಿಸಿ ನಿಷ್ಠುರತೆಗೆ ಗುದ್ದಿದಂತೂ ಅನ್ನಿಸುತ್ತದೆ. ಉದಾಹರಣೆಗೆ ವೈದಿಕಿ ಕಥೆ ನಡುವೆಯೇ ಬರುವ ವಿವರ : “ತುಂಗಾಭದ್ರಾ ನದಿಯು ಮೌನವಾಗಿ ಟಿಸಿಲು ಟಿಸಿಲಾಗಿ ಹರಿಯುವುದು ಕಾಣಿಸುತ್ತಿತ್ತು. ಸುಣ್ಣ ಬಳೆದ ಮಠದ ದೊಡ್ಡ ದೊಡ್ಡ ಗೋಡೆಗಳು ಸರಿದು ಸಮೀಪಕ್ಕೆ ಬರುವಂತೆನಿಸುತ್ತಿತ್ತು”-ಹೀಗೆ ಅವೆರಡನ್ನೂ ಕೊಟ್ಟುಬಿಡುವ ಕ್ರಮದೊಳಗೆ ಜೀವ ಮತ್ತು ಜಡ ಎರಡಕ್ಕೂ ತಂತಾನೆ ಘರ್ಷಣೆ ಉಂಟಾಗುತ್ತದೆ. ಬರುವ ಬಹಳ ಹೊರ ವಿವರಗಳೂ ಹೊರ ಮತ್ತು ಒಳ ಎರಡೂ ಆಗಿ ಪರಿಣಮಿಸುತ್ತ ಹೋಗುತ್ತವೆ.
ಹೀಗೆ ಪ್ರಕಟವಾಗುತ್ತ ಆಗುತ್ತ ಕೂರಗತಿಯತ್ತ ಚಲನೆ ಧಾವಿಸುತ್ತದೆ, ತಮ್ಮ ಸುಮ್ಮನೆ ಹಾಕುವ ಪ್ರದಕ್ಷಿಣೆ ಗತಿಯೇ ಕಥೆಯ ಗತಿಯೂ ಆಗುತ್ತದೆ. ತಂಗಿಯಂತೂ ಎಲ್ಲರ ಒಡಕಿನ ಅಂಶಗಳನ್ನು ಕೂಡಿಸಿಕೊಂಡು ಪ್ರತಿಫಲಿಸುತ್ತಾಳೆ, ರೈಲಿಗೆ ಸಿಕ್ಕಿ ತುಣುಕು ತುಣುಕಾಗಿ ಬಿದಿದ್ದ ತಮ್ಮನ ಹೆಂಡತಿ ದೇಹ ಎಲ್ಲರ ತಲೆಗಳಲ್ಲು ತುಂಬಿ ಆಡಿಸುತ್ತದೆ. ಇಂಥ ಒಂದನ್ನು ಉದ್ವಿಗ್ನವಿಲ್ಲದೆ ನಿರ್ವಹಿಸಿರುವ ಬಗೆಯೇ ಅಪೂರ್ವದ್ದು, ನಿರ್ವಹಣ ಕ್ರಮದೊಳಗೇ ಸತ್ಯ ತಮ್ಮನ ಹೆಂಡತಿ ಒಟ್ಟುಗೂಡುವ ಬಗೆ, ತಾಯಿಯ ಮಾರಿ ಮತ್ತು ಹಠಮಾರಿತನದಿಂದ ಒಡಮೂಡುವುದು ಆಗುತ್ತದೆ, ತಂಗಿಯ ಹುಚ್ಚು, ತಂದೆಯ ಹಿಂಗದ ಹಸಿವು, ತಮ್ಮನ ತೀರದ ಬಯಕೆ ಹಾಗಾಗೆ ಉಳಿಯುತ್ತವೆ. ಹೀಗಾಗಿ ಎಲ್ಲರೂ
ಒಂದೇ ಅಪೂರ್ಣ ವ್ಯಕ್ತಿಯ ತಳದ ಒಡಕುಗಳು ಎಂಬಷ್ಟಕ್ಕೂ ತುಯ್ತ ಹೋಗುತ್ತದೆ. ಮೇಲಣ ಎಲ್ಲವೂ ಎದುರು ಬರುವ ನಿರ್ಣಯ ಕ್ಷಣದ ರೌದ್ರತೆಗೆ ಬಲಕೊಟ್ಟು ನಿಲ್ಲುತವೆ. ಎಲ್ಲಾ ರಥ ಎಳೆಯುವ ನೂಕು ನುಗ್ಗುಲಿನಲ್ಲಿ ಸಿಕ್ಕಿಬೀಳುತ್ತಾರೆ, ಮುಂದೆ. ಬರುವ ಹೊರ ಕ್ರಿಯೆಗಳೆಲ್ಲ ಕಥೆ ಒಳಗೂ ಆಗುತ್ತ ಹೋಗುತ್ತವೆ. ಉದಾ: ರಥ ಎಳೆಯುವ ಅಲ್ಲಿನ ಕುರುಡುತನ ಮತ್ತು ಕ್ರೂರ ಚಲನೆ ಅದನ್ನೂ ಹೇಳಿ ಜೀವನ ಗತಿಯನ್ನೂ ಹೇಳುತ್ತದೆ, ಅಲ್ಲಿ ಸಿಕ್ಕಿದ ಅವರು ಅನಿವಾರ್ಯ ಎಂಬಂತೆ ಆ ಸೆಳವಿಗೆ ಒಪ್ಪಿಸಿ ಒಬ್ಬರನ್ನೊಬ್ಬರು ಕಳೆದುಕೊಂಡುಬಿಡುವರು. ಹೀಗಾಗಿ ಅರ್ಥವಿಲ್ಲದ್ದಾದ ಸಂಬಂಧಗಳು ಅರ್ಥವಿಲ್ಲದ್ದಾಗೆ ನಿರರ್ಥಕವಾಗೆ ಕೊನೆಗೂ ನಿಜವಾದ ಒಂಟಿಯಾಗೆ ತಳ ಕಾಣುವುವು, ಅಷ್ಟು ಹೇಳಲು ಕಥೆಯ ಹೊರವಿವರಗಳು ಹೊರಗಿನದನ್ನೂ ಮೂಡಿಸುತ್ತ ಅದರೊಳಗೆ ಒಳಗಿನ ತಳವನ್ನೂ ಕಾಣಿಸುತ್ತ ಹೋಗುವುದು, ಹೀಗೆ ಹಿಡಿಯುವ ಕ್ರಮದಲ್ಲಿ ಕಾಣಬೇಕಾದ್ದು ಪ್ರಚಂಡವಾಗಿ ಹೊಳೆಯುವುದು.
ತಬ್ಬಲಿಗಳು’ ಕಥೆ ಮುಂದಿಟ್ಟು ಹಿಂಗೆ ಗಣಿಸಬಹುದು:
1. ಶಿಲ್ಪದಂತೆ ಕೆತ್ತಿದ ಭಾಷೆ ಒಳಗೆ ಅನುಭವ ಹೇಳುವುದು.
2. ಗಟ್ಟಿಮುಟ್ಟಾದ ವಿವರಗಳಿಂದ ಅನುಭವಕ್ಕೆ ಮುಯ್ಯಿ ತುಂಬುವುದು.
3. ಆ ಅನುಭವದ ಮಯ್ಯೊಳಗೇ ಹೊಳೆತವಾಗಿ ತಿಳಿವು ಕಾಣಸಿಗುವುದು.
4. ಆ ತಿಳಿವು ಮಾನವನ ತಳದ ಪ್ರಶ್ನೆಯೊಡನೆ ವ್ಯವಹಾರಗೊಂಡಿರುವುದು.
5. ಹಂಗಾದ್ದರಿಂದ ಬದುಕ ಕುರಿತು ನಮ್ಮ ಅರಿವು ಹೆಚ್ಚು ಹಿಗ್ಗುವಂತಾಗುವುದು.
6. ಮೇಲಣ ಎಲ್ಲವೂ ಒಂದು ಸೂಕ್ತ ಹದದಲ್ಲಿ ಬೆರೆತುಕೊಂಡಿರುವುದು.
7. ಪರಿಣಾಮವಾಗಿ ಸಾಧಾರಣದ್ದೆಲ್ಲ ಸಾಧಾರಣವಾಗೇ ಉಳಿಯದೆ ಹೆಚ್ಚುತನಕ್ಕೆ
ಕಿಕ್ಕಾಗುವುದು.
ಇಷ್ಟಿದ್ದೂ ಇಂಥ ಸಂದರ್ಭದಲ್ಲಿ ಸೃಷ್ಟಿಯೊಂದರ ಹಿಂದಣ ತಿಳಿವು ಕುರಿತೂ ಗಮನಿಸುವುದು ವಿವೇಕವಾದುದೆ, ಯಾಕೆಂದರೆ ಪ್ರಮುಖವಾಗಿ ನಮ್ಮ ಬರೆಹಗಳು ಎಲಿಯಟ್, ಕಾಮು, ಕಾಫ್ಕ, ಸಾರ್ತ್ರೆ ಹುಟ್ಟಿದಲ್ಲಿ ಹುಟ್ಟಬೇಕಾದಂಥವುಗಳು ಎಂದು ಇಂದೂ ಅನ್ನುವ ಮಂದಿ ಉಂಟು, ಇದನ್ನು ಒಪ್ಪಿಕೊಂಡರೆ ಸ್ವಲ್ಪವೇ ಇರಬಹುದಾದ ನಿಜವನ್ನು ಅಗಾಧ ಮಾಡಿದಂತಾಗುತ್ತದೆ, ಹಾಗೆಂದು ಕಡೆಗಣಿಸಬೇಕೆಂದೂ ಹೇಳ ಹೊರಟಿಲ್ಲ, ಏಕಾಂಗಿತನ, ಅನಾಥ ಪ್ರಜ್ಞೆ, ನಿರರ್ಥ ಕತೆ ಇಂಥವುಗಳು ನಮ್ಮನ್ನು ಪೂರ್ಣವೆ ಕಾಡಿಲ್ಲದಿರಬಹುದು, ಅಂಥಹದು ನಮ್ಮ ಲಿಟರರಿ ಕೃತಿಯಾಗ ಹೊರಟರೆ ಅದು ಇಲ್ಲಿನ ಮಯ್ಯಿ ಪಡೆದಿದ್ದರೂ ಕೂಡ ಪೂರ್ಣವೆ ನಿಜವಾಗದೆ ಹೋಗಬಹುದು, ಅಥವಾ ಅಂಥ ತಿಳಿವು ವಿಕಸಿತ ಆಗುವುದರ ಬಗೆಗೆ ನಾವು ಶಂಕೆ ತಾಳಬಹುದು, ಆ ಕಾರಣಕ್ಕಾಗೆ ನಮ್ಮ ರಕ್ತ ಪೂರ್ಣ ಸಂವೇದಿಸುವಂತಹದನ್ನೆ ಹಿಡಿಯಹೊರಡುವುದು ಇಂದು ಆಗಬೇಕಾದ್ದು, ಇಲ್ಲಿ ರಾಜೀವ ತಾರಾನಾಥರು ಕೃಷ್ಣನ ಉದಾಹರಣೆ ಕೊಟ್ಟು ದ್ವಾರಕೆ ಮುಳುಗಿದಾಗ ಆತ ಅನುಭವಿಸಿದ್ದು ಏಕಾಂಗಿತನ ನಿರರ್ಥಕತೆಗಳನ್ನೆ ಎಂಬುದು ತೆಗೆದುಕೊಳ್ಳುವುದು ತಕ್ಕುದಾಗಿದೆ. ಯಾಕೆಂದರೆ ನಮ್ಮ ಹುಟ್ಟು ಅಲ್ಲಿಂದಲೆ ಆಗಿ ಬೆಳೆಯಬೇಕಾಗಿದೆ ಎಂಬುದರ ನಿಜವ ಒಪ್ಪಿಕೊಳ್ಳಲೋಸುಗ,
ಮತ್ತೂ ಅಂದರೆ ಭಿನ್ನವಾಗಿ ಕನ್ನಡದ ಸಣ್ಣಕಥೆಗೆ ಅಪರೂಪದ ಅಂಶಗಳನ್ನು ಕೂಡಿಸಿದವರು ಪ್ರಮುಖವಾಗಿ ಪಿ. ಲಂಕೇಶ್, ಉದಾಹರಣೆಗೆ ೧. ಕಾವ್ಯದಷ್ಟೇ ಹೊಳಪಿನ ಭಾಷೆ ಬಳಸಿದ್ದು, ೨, ವರ್ತಮಾನವನ್ನಷ್ಟೆ ಹಿಡಿದಿದ್ದು. ೩. ಕಥೆ ಒಳಗೆ ಸರಕುಕಥೆ ತ್ಯಜಿಸಿದ್ದು, ೪, ನೇತ್ಯಾತ್ಮಕ ತತ್ವದೊಳಗೇ ಹೊಡೆದಾಡಿದ್ದು-ಇಂಥವುಗಳು. ಇವರ ಯಶಸ್ಸಿನ ಮಿತಿ ಅಂದರೆ ನಿರೀಕ್ಷಿತ ಕಟ್ಟಿನೊಳಗೇ ಸುತ್ತುಬಿಡುವುದು, ಆದರೆ ‘ರೊಟ್ಟಿ’ ಮತ್ತು ‘ವಾಸನೆ’ ಕಥೆಗಳಲ್ಲಿ ಅವರು ವಿಸ್ತೃತವಾಗುತ್ತಿರುವ ಕ್ರಮದಲ್ಲಿರುವುದನ್ನು ಸ್ವಷ್ಟವಾಗೇ ಕಾಣಬಹುದು.
ನಮ್ಮ ರಕ್ತ ಪೂರ್ಣ ಸಂವೇದಿಸುವಂತಹ ಎಂದು ಹಿಂದೆ ಒಂದು ಮಾತು ಬಂತು. ಅಂತಹದೆ ಕಥೆಗಳು ಎರಡು ಮೂರಾರು ನಮ್ಮಲ್ಲಿ ಉಂಟು. ಅನಂತಮೂರ್ತಿಯವರ ‘ಮೌನಿ’, ತೇಜಸ್ವಿಯವರ ‘ಅಬಚೂರಿನ ಪೋಸ್ಟಾಫೀಸು’ ಮತ್ತು ‘ಅವನತಿ’ ಇವೇ ಅವು. ಮರು ಮಲೆನಾಡಿನಿಂದ ಕಿತ್ತುಕೊಂಡು ಬಂದಂಥ ಕಥೆಗಳು.
ಕಥೆ ‘ಮೌನಿ’ ಮನುಷ್ಯ ನಿಜಗಳೊಡನೆ ವರ್ತಿಸುತ್ತದೆ, ವಿರೋಧಕ್ಕೆ ಕಾರಣವಾದ ಪರವನ್ನೂ ಕೂಡಿಕೊಂಡು ಬೆಳೆದುನಿಂತ ಸ್ಥಿತಿಯ ನಿಜಸ್ತರವು ತೆರಕೊಳ್ಳುವ ಬಗೆ ಕಥೆ ಒಳಗೆ ಫಲಿಸುತ್ತಿದೆ. ಅಲ್ಲಿ ‘ಮೌನ’ವನ್ನು ನಿಜಮಾಡಲು ಆಯ್ಕೆಮಾಡುವ ಆವರಣ, ಆ ಆವರಣದೊಳಗೇ ಅದು ಹುಟ್ಟುವುದು ಒಂದು ಅಪೂರ್ವತೆ ಗಳಿಸಿಕೊಂಡಿದೆ. ಇದನ್ನು ಸ್ಪಷ್ಟಪಡಿಸಲು ‘ಅಬಚೂರಿನ ಪೋಸ್ಟಾಫೀಸು’ ಕಥೆ ಕಡೆಗೇ ನೋಡಬಹುದು, ಅಲ್ಲಿನ ವ್ಯಕ್ತಿಯ ಕೊನೆ ವರ್ತನೆಗೆ ‘ಮೌನಿ’ ಕಥೆಯಲ್ಲಿ ಸಿಕ್ಕಂತೆ ಬಲ ಸಿಗುವುದಿಲ್ಲ. ಆದರೆ
‘ಅಬಚೂರಿನ ಪೋಸ್ಟಾಫೀಸು’ ಸೋತರೂ ಕೂಡ ಹೆಚ್ಚಿಗೆ ಹಿಡಿಯಲು ಹೋಗಿ ಸೋಲುತ್ತದೆ ಯಾಕಂದರೆ ಟೊಳ್ಳು ಹೊರಪ್ರಭಾವವೊಂದು ಟೊಳ್ಳಾಗಿದ್ದೂ ಗುಮಾನಿ ಮತ್ತು ಮಿಥ್ಯಾಕರ್ಷಣೆಯೇ ಕಾರಣವಾಗಿ ಅದರ ಹಿಡಿತ ವ್ಯಕ್ತಿ ಕುಟುಂಬ ಸಮಾಜವನ್ನು ಒಡೆದುಬಿಡುವಂಥ ಇಂದಿನ ನಿಜವ ಕಾಣುವ ಕಣ್ಣು ಕಥೆ ಒಳಗೆ ಕೆಲಸಮಾಡಿದೆ, ಮತ್ತು
ಸ್ವಲ್ಪವಾರು ಹೊಸದರ ಅರ್ಥಮಾಡಿಕೊಳ್ಳಲು ಒತ್ತಾಯಿಸುತ್ತದೆ. ಅವನತಿ’ ಯಂತು ಕಾಡ ಗಾಢತೆ ಒಳಗೆ ಎಳೆ ತಿಳಿವು ಹಿಡಿದುಕೊಂಡು ಇದ್ದಷ್ಟು ಮೈ ಚಾಚಿಕೊಂಡು ಮಯ್ದಾಳುತ್ತದೆ. ಬದುಕಲ್ಲಿ ಸೃಷ್ಟ್ಯಾತ್ಮಕತೆ ಇಲ್ಲದ್ದೇ ಕಾರಣವಾಗಿ ಹೆಂಗೆ ರಾಜಕೀಯ ಸಮಾಜ ವ್ಯಕ್ತಿ ಹೀಗೆ ಎಲ್ಲವೂ ಕೂಡ ಸ್ಥಗಿತಗೊಂಡು ಬಿಡುವುದು ಎಂಬ ನಮ್ಮ ಇಂದಿನ ದಾರುಣ ಕಥಯು ಕಥೆಯ ಮಯ್ಯ ಹರವಿನೊಳಗೆ ಏಳುತ್ತದೆ, ತೇಜಸ್ವಿಯ ಎರಡು ಕಥಗಳಲ್ಲು ನಮ್ಮ ಕಾಲವನ್ನು ನಕಾಶೆಗೊಳಿಸುವ (ಟ್ರೇಸ್ ಮಾಡುವ) ಸೂಕ್ಷ್ಮತೆಯ ಒಳಗೇ ಅನ್ವೇಷಕ ಚಿತ್ತವೂ ಜೀವ ಇಡುತ್ತದೆ.
ಇದಂತು ಟೀಬಿ ರೋಗಿಯ ಹಾಗೆ ನವ್ಯ ಸಣ್ಣ ಕಥೆಗಳು ಸೊರಗುತ್ತಿದ್ದರೂ ಅದರೊಟ್ಟಿಗೆ ನಯನಾಜೂಕು ವಂಚನೆ ಇಲ್ಲದೆ ಎಲ್ಲ ಹುಸಿಯಾಗದ ಮೇಲಣ ಮಲೆನಾಡ ಜಾತಿ ಕಥೆಗಳು ಆಶೆಯನ್ನೂ ಭರವಸೆಯನ್ನೂ ಹುಟ್ಟಿಸುವಂತೆ ಇವೆ.
ಹಕ್ಕಿ ಹಾರುತಿದೆ ನೋಡಿದಿರಾ-ವಿಶ್ಲೇಷಣೆ
ಹಕ್ಕಿ ಹಾರುತಿದೆ ನೋಡಿದಿರಾ ?-ಒಂದು ವಿಶ್ಲೇಷಣೆ
-ಡಿ. ರಘುನಾಥರಾಜ್
ಕಾವ್ಯದ ಕೆಲಸವೇ ಆಮೂರ್ತವಾದುದನ್ನು ಮೂರ್ತವಾಗಿಸುವುದು, ಕವಿ ತನ್ನ ಅನುಭಕ್ಕೆ
ಸಮರ್ಥವಾದ ವಸ್ತುಪ್ರತಿರೂಪವೊಂದನ್ನು ಕಂಡುಕೊಳ್ಳುವುದು ಅನಿವಾರ‍್ಯವಾಗುತ್ತದೆ. ಅನುಭಾವ ಅಥವಾ ಅನುಭವಗಳು ಸಾಮಾನ್ಯರ ಅನುಭವದ ಕ್ಷೇತ್ರಕ್ಕೆ ಕಾಲಿಡುವುದೇ ಇಲ್ಲ. ಒಂದಲ್ಲ ಒಂದು ಮಟ್ಟದಲ್ಲಿ ನಮಗಾಗಿರುವ ಅನುಭವವನ್ನು ಕವಿ ತನ್ನ ಅನುಭಾವಕ್ಕೆ ವಸ್ತುಪ್ರತಿರೂಪವನ್ನಾಗಿಸಬೇಕಾಗುತ್ತದೆ ಮೂರ್ತ ಪ್ರತಿಮೆಗಳ ಮೂಲಕವೇ ಅಭಿವ್ಯಕ್ತಿಸಬೇಕಾಗುತ್ತದ. ಆದ್ದರಿಂದ, ಅನುಭಾವದಂಥ ಅನುಭವದ ಅಭಿವ್ಯಕ್ತಿ ತೊಡಕಿನದಾಗುತ್ತದೆ.
ಕಾಲದಂಥ ಅಮೂರ್ತವಾದ ವಿಷಯವನ್ನು ಅದರ ವ್ಯಾಪ್ತಿ, ಅದರ ಗತಿ ಅದರ ಪರಿಣಾಮ, ಅದರ ನಿರಂತರತೆ-ಎಲ್ಲವನ್ನು ಮೂರ್ತಗೊಳಿಸುವ ಪ್ರಯತ್ನ `ಹಕ್ಕಿ ಹಾರುತಿದೆ ನೋಡಿದಿರಾ’-ಎನ್ನುವ ಕವನದಲ್ಲಿ ನಡೆದಿದೆ. ಆ ಪ್ರಯತ್ನದಲ್ಲಿ ಯಶಸ್ವಿಯತಾ ಆಗಿದೆ.
ಈ ಕವನವನ್ನು ವಿಶ್ಲೇಷಣೆಗೆ ಆರಿಸಿಕೊಂಡಿದ್ದಕ್ಕೆ ಎರಡು ಮುಖ್ಯ ಕಾರಣಗಳಿವೆ: ಅಮೂರ್ತವಾದುದನ್ನು ಮೂರ್ತ ಪ್ರತಿಮೆಯಲ್ಲಿ ಪ್ರತ್ಯಕ್ಷೀಕರಿಸುವ ಪ್ರಯತ್ನದಲ್ಲಿ ಸಾರ್ಥಕವಾಗಿರುವುದು ; ಇನ್ನೊಂದು ಬೇಂದ್ರೆಯವರ ಯಶಸ್ವಿ ಕವನಗಳೆಲ್ಲಾ ಜಾನಪದ ಧಾಟಿಯಲ್ಲಿರುವುದು, ಮತ್ತು ಈ ಕವನ ಹಾಗಿಲ್ಲದೇ ಯಶಸ್ವಿಯಾಗಿರುವುದು ಬಹು ಮುಖ್ಯವಾದುದು ಎಂಬುದು. (ಅವರ ಯಶಸ್ವಿ ಕವನಗಳೆಲ್ಲ ಜಾನಪದ ಧಾಟಿಯಲ್ಲಿಯೇ ಇರುವುದನ್ನು ಈ ಸಂದರ್ಭದಲ್ಲಿ ಗಮನಿಸಬಹುದು.) ಅವರ ಸಂವೇದನಾ ಕ್ಷೇತ್ರದ ಬೀಸಿನ ಬಗ್ಗೆ ಕೆಲವು ಸಾರಿ ನನ್ನಲ್ಲಿ ಪ್ರಶ್ನೆ ಎದ್ದದ್ದುಂಟು. ಇಂಥಾ ಕವನಗಳು ಆ ಅನುಮಾನಕ್ಕೆ ಸವಾಲು ಹಾಕಿವ, ಅವರ ಸಂವೇದನಾಕ್ಷೇತ್ರ ವ್ಯಾಪಕವಾಗಿದೆ, ಸೀಮಿತವಾಗಿಲ್ಲ ಎನ್ನುವುದನ್ನು ಖಚಿತಪಡಿಸಿವೆ. (ಕೇವಲ ಜಾನಪದ ಧಾಟಿಯಲ್ಲಿ ಬೇಂದ್ರೆ ತಮ್ಮ ಸತ್ವವನ್ನು ಪ್ರಕಟಿಸಬಲ್ಲರು ಎನ್ನುವ ನನ್ನ ಅನ್ನಿಸಿಕೆ ಸರಿಯಲ್ಲ ಎನ್ನಿಸಿದರೂ, ಆ ಬಗ್ಗೆ ಆಳವಾದ ಅಭ್ಯಾಸದ ಅಗತ್ಯವಿದೆ ಎನ್ನಿಸಿದೆ.)
ಈ ಕವನದಲ್ಲಿ ಕಾಲ ಕೇವಲ ಚಿಂತನೆಯ ವಸ್ತುವಾಗಿಲ್ಲ, ಅದನ್ನು ಕವಿ ಅನುಭವಿಸಿರುವುದನ್ನು ಕವನದಲ್ಲಿ ಕಾಣುತ್ತೇವೆ.
-ಕಾಲ ನಮ್ಮ ಅರಿವಿಗೆ ಬರುವುದು-ಬದಲಾವಣೆ, ಪರಿವರ್ತನೆ, ಬೆಳವಣಿಗೆ, ಹುಟ್ಟು -ಸಾವುಗಳ ಮೂಲಕ; ಒಟ್ಟಿನಲ್ಲಿ ಚಲಿಸಿದೆ ಎನ್ನುವ ಭಾಸದಲ್ಲಿ ಚಲನ ರೂಪಿಯಾಗಿರುವ ಕಾಲವನ್ನು ಹಾರುತ್ತಲೇ ಇರುವ ಹಕ್ಕಿಯ ಪ್ರತಿಮೆಯಲ್ಲಿ ಪ್ರತ್ಯಕ್ಷೀಕರಿಸಿದ್ದಾರೆ. ಹಗಲು -ರಾತ್ರಿ: ಸೂರ-ಚಂದ್ರ ಕಾಲಚಕ್ರದ ಒಂದೊಂದು ಬಿಂದುಗಳು, ದೇಶ-ಕಾಲಗಳ ಮಿತಿಯಲ್ಲಿ ಅನುಭವಕ್ಕೆ ಬರುವ-ಕಾಲದ ಅನುಭವ ಕಾಲದೇಶಾತೀತವಾದುದಾಗಿದೆ. ಅಂದು-ಇಂದು-ಮುಂದು ಎಲ್ಲವನ್ನೂ ಒಳಗೊಂಡಿದೆ. ಅದರ ವಿನಾಶಕಾರಿ ಪ್ರವೃತ್ತಿಯನ್ನು, ಭವಿಷ್ಯದ ಬಗ್ಗೆ ಆಸಕ್ತಿಯನ್ನು ಮೂಡಿಸುವಿಕೆಯನ್ನು ತಿಳಿಸಿದ್ದಾ. ಹಕ್ಕಿಯ ಪ್ರತಿಮೆಯಲ್ಲಿ ಎಲ್ಲ ಸಂಗತಿಗಳನ್ನು ಅಂತರ್ಗತಗೊಳಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಿ ದ್ದಾರೆ. ವಿನಾಶದ ಕ್ರಿಯೆಯನ್ನು ಕಂಡು ಕವಿಗೆ ಭಯ, ವಿಷಾದವಾಗಿಲ್ಲ; ಆದರ ಕ್ರಿಯೆ ಅಚ್ಚರಿಯನ್ನುಂಟು ಮಾಡಿದೆ. ‘ಭಾವ ಸಂದರ್ಭ ಸೂಚನೆ’ಯಲ್ಲಿ ಕವಿ ಬರೆದಿರುವುದು ಮೇಲಿನ ಮಾತನ್ನು ಸಮರ್ಥಿಸುತ್ತದೆ. ಅವರು ಹೀಗೆ ಬರೆದಿದ್ದಾರೆ : “ಕಾಲ ಪಕ್ಷಿಯ ರೆಕ್ಕೆ ಹೊಡೆತಕ್ಕೆ ಮಾನವನ ವಿಶ್ವದಲ್ಲಾಗುವ ವೈಚಿತ್ರ‍್ಯದ ವಿಸ್ಮಯದಲ್ಲಿ ಬಂದ ಉದ್ಗಾರವಿದು.” ಕವನದ ಉದ್ದಕ್ಕೂ ವಿಸ್ಮಯದ ಧಾಟಿಯಿರುವುದನ್ನು ಗುರುತಿಸುವುದು ಕಷ್ಟ ವೇನಲ್ಲ. ಹಕ್ಕಿಯ ಅಂಗೋಪಾಂಗಗಳ ವರ್ಣನೆಯಲ್ಲಿ; ಅದರ ವಿನಾಶಕಾರಕ ಶಕ್ತಿಯ ವರ್ಣನೆಯಲ್ಲಿ ; ಅದರ ವ್ಯಾಪಕತೆಯನ್ನು ತಿಳಿಸುವಲ್ಲಿ ವಿಸ್ಮಯದ ಧಾಟಿಯಿದೆ. ಒಟ್ಟಿನಲ್ಲಿ ಕವನ ಕಾಲದೇಶಾತೀತವಾದ ಕಾಲದ ಇರುವಿಕೆಯನ್ನು ತಿಳಿಸುತ್ತದೆ. ಕಾಲಗರ್ಭದಲ್ಲಿ ಉಳಿದ ಎಲ್ಲ ಸೃಷ್ಟಿ ಕರಗಿ ಅರಗಿ ಹೋಗಬಹುದು. ಆದರೆ, ಕಾಲ ಮಾತ್ರ ಹಾಗೇ ಉಳಿಯುತ್ತದೆ ಎಂಬುದರ ಕಡೆಗೇ ಈ ಕವನದ ಒತ್ತು, ವಿನಾಶಕಾರಕ ಅಂಶ ಎಲ್ಲವನ್ನು ನಾಶ ಮಾಡಿ ನಿರಂತರ ಚಲಿಸುತ್ತಿದೆ ಎನ್ನುವುದೇ ಇಲ್ಲಿ ಮುಖ್ಯ. ವಿಸ್ಮಯ ಭಾವ ಪ್ರಧಾನವಾಗಿದೆ. ಈ-ದೃಷ್ಟಿಯಿಂದ ಈ ಕವನ ಸರಳ,________________
ಕವನ ಬೆಳೆದಂತೆಲ್ಲಾ ಹಳ್ಳಿಯ ಪ್ರತಿಮೆಯೂ ಮೈ-ಕೈ ತುಂಬಿಕೊಂಡು ಪ್ರತ್ಯಕ್ಷವಾಗುತ್ತದೆ. ಆ-ಕಾಲಕ್ಕೆ ನಿರೀಕ್ಷಿಸಲಸಾಧ್ಯವಾದ, ಸಾವಯವ ಸಂಬಂಧವನ್ನು ಈ ಕವನದಲ್ಲಿ ಕಾಣುತ್ತೇವೆ, ಇಡೀ ಕವನ ಒಂದು ಪ್ರತಿಮೆಯಾಗಿ ವಿಕಸಿತವಾಗಿದೆ. ‘ಶಿಲ್ಪ’ವೆಂದು ಯಾವುದನ್ನು ನಾವು ಈಗ ಕರೆಯುತ್ತೇವೆಯೋ, ಅದನ್ನು ಈ ಕವನದಲ್ಲಿ ಬೇಂದ್ರೆ, ಸಾಧಿಸಿದ್ದಾರೆ. ಕವನವನ್ನು ವಿಶ್ಲೇಷಿಸಿ ನೋಡಿದಾಗ ಮಾತ್ರ ಮೇಲಿನ ಅಭಿಪ್ರಾಯಕ್ಕೆ ಬೆಲೆ ಬರುತ್ತದೆ.
ಕವನದ ಮೊದಲ ಮೂರು ನುಡಿಗಳು ಹಕ್ಕಿಯನ್ನು ವರ್ಣಿಸುತ್ತವೆ:
ಇರುಳಿರುಳಳಿದು ದಿನದಿನ ಬೆಳಗೆ
ಸುತ್ತುಮುತ್ತಲೂ ಮೇಲಕೆ ಕೆಳಗೆ
ಗಾವುದ ಗಾವುದ ಗಾವುದ ಮುಂದೆ ಎವೆತೆರೆದಿಕ್ಕುವ ಹೊತ್ತಿನ ಒಳಗೆ
ಹಕ್ಕಿ ಹಾರುತಿದೆ ನೋಡಿದಿರಾ ?
ಮೊದಲ ನುಡಿ ಹಾರುತ್ತಿರುವ ಹಕ್ಕಿಯ ವಿಷಯವನ್ನು ಹೇಳುತ್ತದೆ. ಮೊದಲ ನಾಲ್ಕು ಪಾದಗಳು ಹಕ್ಕಿ ಯಾವ ರೀತಿ ಹಾರುತ್ತಾ ಇದೆ ಎನ್ನುವುದನ್ನು ತಿಳಿಸಿವೆ. ಕೊನೆಯಲ್ಲಿ ಹಕ್ಕಿಯ ಪ್ರಸ್ತಾಪ ಬರುತ್ತದೆ. ಮೊದಲ ನುಡಿಯಲ್ಲಿಯೇ ಹಾರುತ್ತಿರುವ ಹಕ್ಕಿಯ ಮೇಲೆ ಒತ್ತು ಬಿದ್ದಿದೆ. ಹಾರುತ್ತಿರುವ ಕ್ರಿಯೆಯ ಕಡೆಗೆ ನಮ್ಮ ಗಮನವನ್ನು ಸೆಳೆದಿದ್ದಾರೆ, ‘ಇರುಳಿರುಳು’ ‘ದಿನ ದಿನ’ ಎಂಬ ಮೊದಲ ಪಾದದ ಶಬ್ದಗಳು ಹಗಲು-ರಾತ್ರಿಗಳ ಸ್ಥಿತ್ಯಂತರದಲ್ಲಿ ಕಾಲ ನಿರಂತರ ಶ್ರಮಿಸುತ್ತಿರುವುದನ್ನು ಸೂಚಿಸಿವೆ. ಸರ್ವ ವ್ಯಾಪ್ತಿಯಾಗಿರುವ ಕಾಲದ ವಿಷಯ ಎರಡನೆಯ ಪಾದದಲ್ಲಿದೆ, ಮೇಲೆ-ಕೆಳಗೆ ಸುತ್ತು ಮುತ್ತಲೆಲ್ಲಾ ಕಾಲ ವ್ಯಾಪಿಸಿರುವುದನ್ನು ಅದು ತಿಳಿಸಿದೆ, ‘ಎವೆ ತೆರೆದಿಕ್ಕುವ ಹೊತ್ತಿನ ಒಳಗೆ’-ಕಾಲ ಹೋಗುತ್ತಿರುವುದನ್ನು ಕವಿ ನಾಲ್ಕನೆಯ ಪಾದದಲ್ಲಿ ಹೇಳಿದ್ದಾರೆ. ಸಟ-ಸಟ-ಪಟ-ಪಟ ಮುಂದೆ ಮುಂದೆ ಕ್ರಮಿಸುವ ಕಾಲದ ಕ್ರಿಯೆಯನ್ನು–“ಗಾವುದ ಗಾವುದ ಗಾವುದ ಮುಂದೆ” -ಎನ್ನುವ ಪಾದ ಅನುಭವಕ್ಕೆ ತಂದುಬಿಡುತ್ತದೆ. (ಪುನರುಕ್ತಿಯನ್ನು ಬೇಂದ್ರೆ, ಅರ್ಥಪುಷ್ಟಿಗಾಗಿ ಬಳಸಿಕೊಂಡು ಯಶಸ್ವಿಯಾಗುತ್ತಾರೆ.) ಒಟ್ಟಿನಲ್ಲಿ, ಮೊದಲ ನುಡಿ ಹಾರುವ ಕ್ರಿಯೆಯನ್ನು ತಿಳಿಸುತ್ತದೆ. ಎರಡನೆಯ ನುಡಿ ಹಾರುವುದಕ್ಕೆ ಅನಿವಾರ್ಯವಾಗಿರುವ ಹಕ್ಕಿಯ ರೆಕ್ಕೆಯನ್ನು ವರ್ಣಿಸುವುದಕ್ಕೆ ತೊಡಗುತ್ತದೆ, ಮೊದಲ ನುಡಿ ಹಾರುವ ಹಕ್ಕಿಯ ವಿಷಯ ತಿಳಿಸಿದರೆ, ಎರಡನೆಯ ನುಡಿ ಹಾರುವುದಕ್ಕೆ ಬೇಕಾಗಿರುವ ರೆಕ್ಕೆ ಮತ್ತು ಅದರ ಬಣ್ಣದ ಬಗ್ಗೆ ಹೇಳುತ್ತದೆ, (ಮೊದಲ ನುಡಿಗೂ ಎರಡನೆಯ ನುಡಿಗೂ ಇರುವ ಸಾವಯವ ಸಂಬಂಧವನ್ನೂ ಗಮನಿಸಬೇಕಾಗುತ್ತದೆ.)
ಕರಿನರೆ ಬಣ್ಣದ ಪುಚ್ಚಗಳುಂಟು
ಬಿಳಿ-ಹೊಳೆ ಬಣ್ಣದ ಗರಿ-ಗರಿಯುಂಟು
ಕೆನ್ನನ ಹೊನ್ನಿನ ಬಣ್ಣ-ಬಣ್ಣಗಳ
ರೆಕ್ಕೆಗಳೆರಡೂ ಪಕ್ಕದಲುಂಟು.
ಹಕ್ಕಿ ಹಾರುತಿದೆ ನೋಡಿದಿರಾ ?
ಹಗಲು-ರಾತ್ರಿಯ ಪ್ರಸ್ತಾಪ ಮೊದಲ ನುಡಿಯಲ್ಲಿಯೇ ಬಂದಿದೆ. ಸೂರ‍್ಯಾಸ್ತ-ಸೂರ‍್ಯೋದಯಗಳು ಕಾಲದ ಮಾಪನಕ್ಕೆ ಸಾಧನಗಳು. ಚಲನಶೀಲವಾದ ಕಾಲ ಪಕ್ಷಿಯ ರೆಕ್ಕೆ-ಪುಚ್ಚಗಳಾಗಿವೆ. ಮೊದಲಪಾದ ರೆಕ್ಕೆಯ ಒಂದಂಶವಾದ ಪುಚ್ಚವನ್ನು ವರ್ಣಿಸುತ್ತದೆ. ನಂತರದ ಮೂರು ಪಾದಗಳು ಇಡೀ ಎರಡು ರೆಕ್ಕೆಗಳನ್ನು ವರ್ಣಿಸುತ್ತವೆ. (ಬಿಳಿ-ಹೊಳೆ ಶಬ್ದವನ್ನು ನೋಡಿ ‘ಗರಿ-ಗರಿಯುಂಟು’ ‘ಬಣ್ಣ ಬಣ್ಣಗಳ’ ಇಲ್ಲಿನ ಪುನರುಕ್ತಿಯ ಶಕ್ತಿಯನ್ನು ಗಮನಿಸಿ, ಹಾಗೇ ಧಾಟಿಯಲ್ಲಿನ ವಿಸ್ಮಯವನ್ನು ಗಮನಿಸಿ. “ರೆಕ್ಕೆಗಳೆರಡೂ’-ಪ್ರಯೋಗದಲ್ಲಿಯ ಕೊನೆಯ ‘ಊ’ ಕಾರವೂ ವಿಸ್ಮಯದ ಧಾಟಿ
ಯನ್ನು ಉಳಿಸಿಕೊಂಡಿದೆ.)
ಎರಡು ಪಕ್ಕದ ರೆಕ್ಕೆಯನ್ನು ಕುರಿತು ಎರಡನೆಯ ನುಡಿ ಹೇಳಿದರೆ, ಮೂರನೆಯ ನುಡಿ, ರೆಕ್ಕೆಗಳ ನಡುವೆ ಇರುವ ಅದರ ಶರೀರ ಮತ್ತು ಅದರ ಬಣ್ಣ, ಅದರ ಕಣ್ಣುಗಳ ಬಗ್ಗೆ ಹೇಳುತ್ತದೆ:
ನೀಲ ಮೇಘಮಂಡಲ-ಸಮ ಬಣ್ಣ !
ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ !
ಚಿಕ್ಕೆಯ ಮಾಲೆಯ ಸೆಕ್ಕಿಸಿಕೊಂಡು
ಸೂರ್ಯ-ಚಂದ್ರರನು ಮಾಡಿದ ಕಣ್ಣಾ
ಹಕ್ಕಿ ಹಾರುತಿದೆ ನೋಡಿದಿರಾ ?
ಎರಡು ನುಡಿಯ ರೆಕ್ಕೆಯ ಪ್ರತಿಮೆ ಇಲ್ಲಿ ಇನ್ನಷ್ಟು ಸ್ಪಷ್ಟವಾಗಿದೆ, ಆಕಾಶವೇ ಆದ ಶರಿ:ರ, ಮೊದಲ ಪಾದ ಆದಿ-ಅಂತ್ಯ ರಹಿತವಾದ ಆಕಾಶವನ್ನು – ಸೂಚಿಸಿದೆ.
ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ!” ಎನ್ನುವ ಎರಡನೆಯ ಪಾದದ ತೀವ್ರತೆಯನ್ನು ಶಕ್ತಿಯನ್ನು ಗಮನಿಸಿ, ಆಕಾಶಕ್ಕೇ ರೆಕ್ಕೆಗಳು ಮಾಡಿದವೋ ಏನೋ ಎನ್ನುವ ಅನ್ನಿಸಿಕೆ ವಿಸ್ಮಯ ಭಾವವನ್ನು ಮುಂದುವರೆಸಿದೆ. ‘ಚಿಕ್ಕೆ’ಯ ಮಾಲೆಯನ್ನು ಸಿಕ್ಕಿಸಿಕೊಂಡು ಹಾರುತ್ತಿದೆ. (‘ಸೆಕ್ಕಿಸಿಕೊಂಡು’ ಶಬ್ದದ ಶಕ್ತಿಯನ್ನು ನೋಡಿ.) ಸೂರ‍್ಯ-ಚಂದ್ರರನ್ನು ಕಣ್ಣಿಗೆ ಹೋಲಿಸಿರುವುದು ಸೂಕ್ತವಾಗಿದೆ, ಮುಂದೆ ಹೋಗುವುದಕ್ಕೆ ಬೆಳಕು ಬೇಕು, ಹಾಗೇ-ಕಣ್ಣಿಲ್ಲದೇ ಚಲಿಸುವುದು ಸಾಧ್ಯವಿಲ್ಲ, ಹಗಲು-ರಾತ್ರಿಗಳ ಮೂಲಕವೇ ಕಾಲದ ಗತಿ ನಮ್ಮ ಅನುಭವಕ್ಕೆ ಬರುವುದರಿಂದ, ಕಾಲಪಕ್ಷಿಯ ಕಣ್ಣುಗಳಿಗೆ ಸೂರ‍್ಯ- ಚಂದ್ರರನ್ನು ಹೋಲಿಸಿರುವುದು ತುಂಬ ಉಚಿತವಾಗಿದೆ. ಮೊದಲ ನುಡಿಗಳ ಕೆತ್ತಲು – ಹಗಲು (ಇಲ್ಲಿನ ಸೂರ‍್ಯ-ಚಂದ್ರ ಶಬ್ದಗಳನ್ನು ಲಕ್ಷಿಸಿ) ಇಲ್ಲಿ ಬೆಳೆದಿದೆ, ಕಾಲಕ್ಕೆ ಕಾರಣವಾಗಿರುವ ಈ ಸಂಗತಿಗಳು ಪಕ್ಷಿಯ ಅಂಗೋಪಾಂಗಗಳಾಗಿ ಹಕ್ಕಿಯ ಚಿತ್ರ ಬೆಳೆಯುತ್ತದೆ. ಹಕ್ಕಿ, ಕ್ರಮಿಸುತ್ತಿರುವ ಕಾಲಕ್ಕೆ ಸಶಕ್ತವಾದ, ಜೀವಂತವಾದ ಪ್ರತಿಮೆಯಾಗಿದೆ. ಆದ್ದರಿಂದ, ಕಾಲ ನಮ್ಮ ಅನುಭವಕ್ಕೆ ಬರುತ್ತದೆ. (ಮೊದಲ ಎರಡು ಪಾದಗಳ ಕೊನೆಯಲ್ಲಿ ಬರುವ ಆಶ್ಚಯ್ಯ ಚಿಹ್ನೆಯನ್ನು, ಅಣ್ಣಾ- ಕಣ್ಣಾ ಎಂಬಲ್ಲಿನ ದೀರ್ಘವನ್ನು ಗಮನಿಸಿ, ಹಾಗೇ, ಎರಡನೆಯ ಪಾದದ-ರೆಕ್ಕೆಗಳೊಡೆದವೊ’ ಎನ್ನುವ ಶಬ್ದ ಪ್ರಯೋಗ ಈ ಕವನದ ವಿಸ್ಮಯದ ಧಾಟಿಯನ್ನು ಬೆಳೆಸಿರುವುದನ್ನು ಕಾಣಬಹುದು.) ಹಕ್ಕಿಯ ಚಿತ್ರ ಮೊದಲ ಮೂರು ನುಡಿಗಳಲ್ಲಿ ಹಂತ ಹಂತವಾಗಿ ಬೆಳೆದಿರುವುದು ನಮ್ಮ ಗಮನಕ್ಕೆ ಬರುತ್ತದೆ.
ಮೊದಲ ಮೂರು ನುಡಿಗಳು ಹಾರುತ್ತಿರುವ ಹಕ್ಕಿಯ ಸ್ವರೂಪವನ್ನು ಚಿತ್ರಿಸಿದರೆ. ಮುಂದಿನ ಎರಡು ನುಡಿಗಳು ಹಕ್ಕಿಯ ಪ್ರತಿಮೆಗೆ ಮತ್ತೊಂದು ಪರಿಮಾಣವನ್ನು ಕೊಡುತ್ತವೆ. ಹಾರುತ್ತಾ ಇರುವ ಹಕ್ಕಿ ಹಾರುವುದಕ್ಕೆ ಎಂದೋ ತೊಡಗಿದೆ. ಅಮಿತವಾದ ಅದರ ಹಾರಾಟದಲ್ಲಿ ಅದೊಂದು ಮಾತ್ರ ಉಳಿದಿದೆ. ಉಳಿದುದೆಲ್ಲಾ ನಾಶವಾಗಿ ಹೋಗಿದೆ. ಕಾಲನ ಕಾಳತ್ವವನ್ನು ಪರಿಚಯಿಸಿದ್ದಾರೆ. ರಾಜ್ಯ-ಸಾಮ್ರಾಜ್ಯಗಳನ್ನು : ರಾಜ-ಮಹಾರಾಜರನ್ನು ನುಂಗಿ ನೊಣೆದಿರುವ ವಿಚಾರವನ್ನು ನಾಲ್ಕನೆಯ ನುಡಿಯಲ್ಲಿ ಹೇಳಿದ್ದಾರೆ :
ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ
ಮಂಡಲ-ಗಿಡಲಗಳ ಗಡ ಮುಕ್ಕಿ
ತೇಲಿಸಿ ಮುಳುಗಿಸಿ ಖಂಡ-ಖಂಡಗಳ
ಸಾರ್ವಭೌಮರಾ ನೆತ್ತಿಯ ಕುಕ್ಕಿ
ಹಕ್ಕಿ ಹಾರುತಿದೆ ನೋಡಿದಿರಾ ?
ಕಾಲದ ವಿನಾಶಕಾರಿ ಶಕ್ತಿಯನ್ನು ಈ ನುಡಿ ತೀವ್ರವಾಗಿ ಅಭಿವ್ಯಕ್ತಿಸಿದೆ. ಮೊದಲ ಎರಡು ಪಾದಗಳು ರಾಜ್ಯಗಳನ್ನು ನಾಶಮಾಡಿ ಮುಂದುವರೆಯುತ್ತಿರುವ ಕಾಲದ ಪರಿಚಯವನ್ನು ಕೊಡುತ್ತವೆ. (‘ತೆನೆ ಒಕ್ಕಿ’-‘ಗಡ ಮುಕ್ಕಿ’-ಎಂಬ ಕ್ರಿಯೆಗಳು ಹಕ್ಕಿಯ ಪ್ರತಿಮೆಗೆ ಸಂಗತವಾಗಿರುವುದನ್ನು, ಮುಕ್ಕಿ ಮುಂದಿನ ಪಾದದ ‘ಕುಕ್ಕಿ’ ಶಬ್ದ ಪ್ರಯೋಗಳ ಶಕ್ತಿಯನ್ನು ನೋಡಿ.)
ಖಂಡಗಳನ್ನು ತೇಲಿಸಿ ಮುಳುಗಿಸಿ, ಸಾರ್ವಭೌಮರ ನೆತ್ತಿಯನ್ನು ‘ಕುಕ್ಕಿ’ ಹಕ್ಕಿ ಹಾರುತ್ತಿದೆ. [*ಸಾರ್ವಭೌಮರಾ’ ಎನ್ನುವಲ್ಲಿನ ಕೊನೆಯ ದೀರ್ಘದ ಪ್ರಭಾವವನ್ನು ಗಮನಿಸಿ, ವಿನಾಶಕ್ಕೆ ಗುರಿಯಾಗಿರುವ ವಸ್ತುಗಳನ್ನು ನೋಡಿ ಕವಿಗೆ ವಿಷಾದವಾಗಿಲ್ಲ ಎನ್ನುವುದನ್ನು ಈ ನುಡಿಯ ಧಾಟಿಯೆ ಸ್ಪಷ್ಟವಾಗಿಸಿದೆ. ಹಕ್ಕಿಯ ಆ ವಿನಾಶಕಾರಕ ಶಕ್ತಿಯ ಬಗ್ಗೆ ಆಶ್ಚರ್ಯಗೊಂಡಿದ್ದಾರೆ. (ವಿಸ್ಮಯ)]
ಐದನೆಯ ನುಡಿಯಲ್ಲಿ, ಇನ್ನೂ ವ್ಯಾಪಕವಾದ ಕಾಲದ ಘಟಕಗಳ ಪ್ರಸ್ತಾಪವಿದೆ. ಹೊಸ ಕಾಲಕ್ಕೆ ಹೊಸ ಭರವಸೆಯನ್ನು ಕೊಡುತ್ತಾ ಹಾರುತ್ತಾ ಇರುವ ಹಕ್ಕಿಯ ವರ್ಣನೆಯಿದೆ.
ಯುಗ-ಯುಗಗಳ ಹಣೆಬರಹವ ಒರಸಿ
ಮನ್ವಂತರಗಳ ಭಾಗ್ಯವ ತೆರೆಸಿ
ರೆಕ್ಕೆಯ ಬೀಸುತ ಚೇತನ ಗೊಳಿಸಿ
ಹೊಸಗಾಲದ ಹಸುಮಕ್ಕಳ ಹರಸಿ
ಹಕ್ಕಿ ಹಾರುತಿದೆ ನೋಡಿದಿರಾ ?
ನಾಲ್ಕನೆಯ ನುಡಿಯಲ್ಲಿ, ರಾಜ್ಯ ಸಾಮಾಜ್ಯ, ಮಂಡಲ ಗಿಂಡಲಗಳ, ಸಾರ್ವಭೌಮರ ನಾಶದ ವಿಚಾರವಿದೆ. ಒಂದು ತಲೆಮಾರಿನ ನಾಶವನ್ನು ಆದು ಸಂಕೇತಿಸಿದರೆ. ಈ ನುಡಿ ತಲೆಮಾರುಗಳ, ಯುಗಗಳ-ಮನ್ವಂತರಗಳ ನಾಶವನ್ನು ಸೂಚಿಸಿದೆ. ಯುಗಗಳ ನಾಶವೊಂದೇ ಅಲ್ಲ-ಹೊಸ ಯುಗಗಳ ನಿರ್ಮಾಣವೂ ಆಗುತ್ತದೆ ಕಾಲದ ಪ್ರವಾಹದಲ್ಲಿ. ಸೃಷ್ಟಿ-ನಾಶ ನಿರಂತರವಾಗಿ ನಡೆದಿದೆ. ಇಷ್ಟೆಲ್ಲಾ ವಿನಾಶಕ್ಕೆ ಕಾರಣವಾಗಿದ್ದರೂ, ‘ಹೊಸಗಾಲದ ಹಸುಮಕ್ಕಳ’ನ್ನು ಮರ, ಬದುಕುವ ಹುಮ್ಮಸ್ಸನ್ನು ಕೊಡುತ್ತಿದೆ. (ಇಲ್ಲಿಯವರೆಗೆ, ನುಡಿಯಿಂದ ನುಡಿಗೆ ಕವನ ಬೆಳೆದುಬಂದಿರುವುದನ್ನು ಸ್ಪಷ್ಟವಾಗಿ ಗುರುತಿಸಬಹುದು.)
ಕೊನೆಯ ಎರಡು ನುಡಿಗಳು ಕವನಕ್ಕೆ ಇನ್ನೊಂದು ಪರಿಮಾಣವನ್ನು ತಂದಿವೆ, ಭೂಮಿ -ಗ್ರಹತಾರೆ-ಬ್ರಹ್ಮಾಂಡಗಳೆಲ್ಲಾ ಅದರ ಬೀಸಿನಲ್ಲಿವೆ, (ವಿಜ್ಞಾನದ ಸಹಾಯದಿಂದ ದೂರದ ಗ್ರಹಗಳಿಗೆ ಹೋಗಲು ಸಾಧ್ಯವಾಗಿದೆ. ಕವಿ ಇದನ್ನು ಆಗಲೇ ಕಂಡಿದ್ದರು ಎನ್ನುವ ಅರ್ಥಕ್ಕಿಂತ, ಕಾಲಪಕ್ಷಿ ಇವುಗಳನ್ನೆಲ್ಲವನ್ನೂ ಒಳಗೊಂಡು ಆಚೆಯೂ ಇದೆ ಎನ್ನುವುದೇ ಸರಿ, ಒಟ್ಟು ಕವನದ ಅರ್ಥದೊಡನೆ ಈ ಅರ್ಥ ಸಂಗತವಾಗುತ್ತದೆ ಎಂಬುದನ್ನೂ ಕಡೆಗಣಿಸುವಂತಿಲ್ಲ.)
ಬೆಳ್ಳಿಯ ಹಳ್ಳಿಯ ಮೇರೆಯ ಮಿರಿ
ತಿಂಗಳಿನೂರಿನ ನೀರನು ಹೀರಿ
ಆಡಲು ಹಾಡಲು ತಾ ಹಾರಾಡಲು
ಮಂಗಳ ಲೋಕದ ಅಂಗಳಕೇರಿ
ಹಕ್ಕಿ ಹಾರುತಿದೆ ನೋಡಿದಿರಾ?
ಶುಕ್ರ-ಚಂದ್ರ-ಮಂಗಳ ಲೋಕಗಳನ್ನು ಅತಿಕ್ರಮಿಸಿ ಮುಂದೆ ಮುಂದೆ ಹೋಗುತ್ತಿದೆ. “ಮೇರೆಯ ಮಿರಿ’, ‘ನೀರನು ಹೀರಿ’, ‘ಅಂಗಳಕೇರಿ’ ಈ ಶಬ್ದಗಳು ಆಯಾ ಗ್ರಹಗಳ ದೂರ ಮತ್ತು ಗುಣಗಳನ್ನು ತಿಳಿಸುತ್ತವೆ. (ಮೇರೆ’-‘ಹಾರಾಡಲು’-ಎನ್ನುವ ಶಬ್ದ ಗಳು ಗ್ರಹಗಳನ್ನು ಮಿರಿ ಹೋಗುತ್ತಿರುವ ಹಕ್ಕಿಯ ಕಲ್ಪನೆಯನ್ನು ಕೊಡುತ್ತವೆ. ‘ಮಂಗಳ ಲೋಕದ ಅಂಗಳಕೇರಿ’ಯೂ ಹಕ್ಕಿ ಅಲ್ಲಿಯೇ ವಿಶ್ರಮಿಸಿಕೊಳ್ಳುವುದಿಲ್ಲ. ಅದರಾಚೆಗೂ ನುಗ್ಗುತ್ತಿದೆ. (ಇದೇ ವಿಚಾರ ಮುಂದಿನ ನುಡಿಯಲ್ಲಿಯೂ ಬೆಳೆದಿರುವುದರಿಂದ ಮೇಲಿನ ವಿವರಣೆಗೆ ಪುಷ್ಟಿಬರುತ್ತದೆ. ಇಲ್ಲದೇ ಹೋದರೆ ಕೊನೆಯ ನುಡಿಗಳನ್ನು ಕವನದ ಒಟ್ಟಿಗೆ ಜೋಡಿಸುವುದಕ್ಕೆ ಸ್ವಲ್ಪ ತೊಡಕಾಗುತ್ತದೆ.)
ಮುಟ್ಟಿದೆ ದಿಙ್ಮಂಡಲಗಳ ಅಂಚ
ಆಚೆಗೆ ಚಾಚಿದ ತನ್ನಯ ಚುಂಚ
ಬ್ರಹ್ಮಾಂಡಗಳನು ಒಡೆಯಲು ಎಂದೊ
ಬಲ್ಲರು ಯಾರಾ ಹಾಕಿದ ಹೊಂಚ
ಹಕ್ಕಿ ಹಾರುತಿದೆ ನೋಡಿದಿರಾ ?
ದಿಕ್ಕುಗಳ ತುದಿಯನ್ನು ಮುಟ್ಟಿರುವುದನ್ನು, ಅದರ ಆಚೆಗೂ ತನ್ನ ‘ಚುಂಚ’ವನ್ನು ಚಾಚಿರುವುದನ್ನು ಮೊದಲ ಎರಡು ಪಾದಗಳು ಹೇಳಿವೆ, (ಆಚೆಗೆ ಚಾಚಿದೆ-ಶಬ್ದ ಪ್ರಯೋಗ ಮೇಲಿನ ನುಡಿಯ ವಿಶ್ಲೇಷಣೆಗೆ ಸಹಾಯಮಾಡುತ್ತದೆಂದು ನನ್ನ ಅನ್ನಿಸಿಕೆ).
ಹಾರುತ್ತಾ-ಹಾರುತ್ತಾ ಎಲ್ಲವನ್ನು ಆಕ್ರಮಿಸುತ್ತಾ ಎಲ್ಲವನ್ನು ಒಳಗೊಳ್ಳುತ್ತಾ ಹೋಗುತ್ತಿರುವ ಹಕ್ಕಿಯ ಚಿತ್ರವನ್ನು ಕವಿ ನಮ್ಮ ಮುಂದಿಟ್ಟಿದ್ದಾರೆ. ಈ ದೃಷ್ಟಿಯಿಂದ ನೋಡಿದಾಗ ಇಡೀ ಕವನದ ಎಲ್ಲ ಭಾಗಗಳು ಸಾವಯವ ಸಂಬಂಧವನ್ನೂ ಹೊಂದಿರುವುದು ನಮ್ಮ ಗಮನಕ್ಕೆ ಬರುತ್ತದೆ. (ಬ್ರಹ್ಮಾಂಡಗಳನು…ಹಾಕಿದ ಹೊಂಚ-ಈ ಎರಡು ಪಾದಗಳು ಕಾಲದೇಶಾತೀತವಾಗಿ ಉಳಿಯುವ ಕಾಲ ಕವಿಯ ಮನಸ್ಸಿನಲ್ಲಿ ಮೂಡಿಸಿರುವ ‘ವಿಸ್ಮಯ’ವನ್ನು ತಿಳಿಸಿವೆ.)
ಸೃಷ್ಟಿಪೂರ‍್ವದಿಂದ ಪ್ರಾರಂಭವಾಗಿ, ಸೃಷ್ಟಿಯಾನಂತರವೂ ಉಳಿಯುವ ಕಾಲದ ಕಲ್ಪನೆಯನ್ನು ನಮ್ಮ ಅನುಭವಕ್ಕೆ ಬರುವಂತೆ ಮಾಡುವುದರಲ್ಲಿ ಕವಿ ಯಶಸ್ವಿಯಾಗಿದ್ದಾರೆ, ಬೇಂದ್ರೆಯವರ ಸಮರ್ಥ ಕವನಗಳಲ್ಲಿ ಇದು ಒಂದು.
ವೇದನೆ
ವೇದನೆ
-ಧರಣೇಂದ್ರ ಕುರಕುಂಠಿ
ಅಂದು.
ನನ್ನ ಬಾಳ
ಗಿಡಕ್ಕೆ
ಹಲವಾರು ವೇದನಾ-
ಟೊಂಗೆಗಳು ಬೆಳೆದು
ಹೂ, ಹೀಚಾಗಬೇಕೆಂದಾಗ,
ನೀ-
ಬಂದು
ಎಲ್ಲ ಟೊಂಗೆಗಳನ್ನು
ಒಂದೊಂದಾಗಿ
ಕಡಿದು
ಮಾರಿಕೊಂಡಿದ್ದಿ.
ಇಂದು ಕಡಿದೊಗೆದ
ಒಂದೊಂದು ಟೋಂಗೆಯ ಗಣ್ಣಿನಲ್ಲಿ
ಎಷ್ಟೋ ಮುಗುಳೊಡೆದು,
ಚೇತರಿಸಿಕೊಂಡ ಟೊಂಗೆ
ಟಿಸಿಲೊಡೆದು ಹಾಯಾಗಿ
ಬೆಳೆಯುತ್ತಿದೆ, ಯಾರ
ಹಂ
ಗು
ನನಗೇನೆನ್ನುತ್ತ.
ದಯವಿಟ್ಟು
ನೀನೀಗ
ಬೆಳೆದು ಮರವಾಗಗೊಡು, ಉಸಿರಾಡಗೊಡು.
ಹೂ, ಹೀಚಾಗಗೊಡು.
ಬೇಕಾದರೆ, ಹಣ್ಣು-
ಕಾಯಿ ಸಹಿತ
ಕೊನೆಗೊಮ್ಮೆ
ಮರವನ್ನೇ ಮಾರಿ-
ಕೊಂಡುಬಿಡು.
ಅದೆ ಅದೆ ಅದೇ
ಅದೆ ಅದೆ ಅದೇ
-ಎ. ಎಸ್. ಜಯರಾಂ
ಪ್ರಿಯ ಶ್ವೇತೆ,
ಪ್ರಿಯ ಅಂದರೇನು ಅಂತ ನೀನು ದಬಾಯಿಸಬಹುದು, ಅರ್ಥವತ್ತಾಗಿ ಮಾತನಾಡುವ ವಿಧಿಯಲ್ಲಿ ನಾನು ಸೋತಿದ್ದೇನೆ, ನಿರರ್ಥಕ ಮಾತು, ಕೆಲಸ, ಒಂದಕ್ಕಿಂತ ಒಂದು ಸೊಗಸು, ಮುಖ್ಯ ಒಂದು ರಿಲೀಫ್, ನಾನು ಸಲೀಸಾಗಿ ಜಾರಬೇಕೋ ಹಾಗೇ ಒದರಿ ಬಿಡಬೇಕು,
ಪ್ರಿಯ ಶ್ವೇತೆ, ಹತ್ತು ವರ್ಷಗಳಾಗಿರಬೇಕು ಹೀಗೆ ನಿನ್ನೊಡನೆ ಚಡಪಡಿಸುವ ಈ ಕ್ರಿಯೆ ನಿಲ್ಲಿಸಿ, ನೀನು ಅಷ್ಟು ದೂರ ಹೋಗಿ ಬಿಟ್ಟಮೇಲೆ ನಾನು ಅದೆಷ್ಟು ದೂರ ಅಂತ ಉದ್ಗಾರಗಳಲ್ಲಿ ಅಳೆದೆ, ನನ್ನ ಸುತ್ತ ಒಂದು ಹುತ್ತ ಬೆಳೆದಿದೆ : ಕನ್ನಡಿಯಲ್ಲಿ ನಾನು ನನಗೇ ಕನಿಕರವಾಗಿ ತರುತ್ತೇನೆ. ಒಂದು ರೀತಿಯ ಆ್ಯಂಟಿ ನಾರಸಿಸ್ ಕಾಂಪ್ಲೆಕ್ಸ್, ಕಥೆ ಹೇಳುವೆ ಎಂದಾಗ ಕೇಳುವೆ ಎನ್ನುವ ಕನಿಕರವಿಲ್ಲದ ವ್ಯಾವಹಾರಿಕ ನಿಷ್ಠುರತೆ ನನಗೆ ತುಂಬ ಪರಿಚಿತವಾಗಿದೆ, ಅದಕ್ಕೆ ನಾನು ಬೆಚ್ಚುವುದಿಲ್ಲ. ಹೇಳಬೇಕಾಗಿತ್ತಲ್ಲ ಅಂತ ಸಫಲ ವಿಫಲವಲ್ಲದ ಎಡಬಡಂಗಿ ಭಾವದಿಂದ ಕುದಿಯುತ್ತೇನೆ, ಗೊತ್ತಾ ? ಹತ್ತುವರ್ಷದ ಹಿಂದಾಗಿದ್ದರೆ ನೀನು ಬಾಲಿಶ ಬುದ್ದಿಯೆಂದು ನಗಬಹುದಾಗಿತ್ತು. ಈಗ ನಗುವ ಕಸುವೇ ಇರಲಾರದು. ಈ ಕಾಲದ ಒತ್ತು ನಿನ್ನ ಮೇಲೆ ಹೇಗೆಲ್ಲಾ ಆಗಿರಬೇಡಾ ?…ಈಗ ನೀನು ನಗಲಾರೆ, ಮೆಚ್ಚಲಾರೆಯಾದರೂ ದುಡುಕಲಾರೆ, ಆಗ ನಾವು ದುಡುಕುವ ಮಿಡುಕು ಇದ್ದಾಗ ದುಡುಕದೆ ಇದ್ದುದನ್ನು ‘ಮೌಲ್ಯ’ ಅಂತ ಪರಸ್ಪರ ಗಿಣಿ ಆಡಿದ್ದೆವು. ನನ್ನ ಈ ಅಂಗಲಾಚುವಿಕೆಯನ್ನು ನೀನು ಇದೇ ಬದುಕು ಎಂಬಂಥ ದಾರ್ಶನಿಕ ಗಾಂಭೀರ‍್ಯದಿಂದ ನೋಡುವುದಾದರೆ ನನಗೆ insult ಮಾಡಿದಂತೆ.
ಪರಿಪಕ್ವತೆಯಲ್ಲಿ ರೋಗದ ಲಕ್ಷಣವೇ ಕಾಣಿಸುತ್ತದೆ ನನಗೆ : ನಾನು ಧನ್ವಂತರಿಯಲ್ಲ.
ಕಥೆ ಹೇಳುತ್ತೇನೆ, ಯಾರದು ಎಂಬುವುದು ಸ್ಪಷ್ಟವಾಗಿಲ್ಲ: ಪುರಾಣದಂತೆ ಸಾಧಾರಣವಾಗಿ, ರಂಜಕವಾಗಿ, ದೀರ್ಘವಾಗಿದೆ, ಪುರಾಣ ವ್ರತಮಹಾತ್ಮೆಗಳಲ್ಲಿ ನನಗೀಗ ಅಪಹಾಸ್ಯ ಕಾಣುತ್ತಿಲ್ಲ. ಬದುಕೆಲ್ಲಾ ಪುರಾಣವಾಗುತ್ತಾ ಹೋಗುವುದನ್ನು ಅಸಹಾಯಕನಾಗಿ ನೋಡುತ್ತೇನೆ: ಹಾಗೆಯೇ ಕಥೆಯೊಳಗೊಂದು ಕಥೆಯಾಗಿ, ಈ ವರ್ತಮಾನದ ನಾಚಿಕೆಯಿಂದ ಪಾರಾಗಿ ಖಾಸಗಿಯ ಹಿತದ ಬಿಸುಪಿನಲ್ಲಿ ಚಿಲಿಮಿಲಿಗುಟ್ಟಬೇಕೆನ್ನುತ್ತದೆ. ನಿನಗೆ ರೊಮ್ಯಾಂಟಿಕ್ ಅಂತ ಕೂಗಿ ಬಿಡಲು ಒಂದು ಅಮೃತ ಮೂಹರ್ತ.
ಮುಪ್ಪ ರಾಜ್ಯವಾಳುತ್ತಿದೆ ಯೌವನದ ನೆನಪನ್ನು ಸಾಮೀಲು ಮಾಡಿಕೊಂಡು.
ಹೂದೋಟಕ್ಕೆ ಬೇಟೆಯಾಡಿ ದಣಿದು ಬಂದ ರಾಜಕುಮಾರ ನೀರಡಿಸಿ ನೀರುಬೇಡಿ ನೀರೆಯನ್ನು ಪ್ರೇಮಿಸಿ ಮದುವೆಯಾದ ಎಷ್ಟೋ ಕಥೆಗಳಿರಬೇಕಲ್ಲ, ಹಾಗೆ, ಯಾವುದನ್ನು ಮಾಡದೆಯೇ ಮದುವೆಯಾದೆ.
ಧಶರಥನಿಗೆ ಎಲ್ಲಾ ಇದ್ದು ಪುತ್ರ ಸಂತಾನವಿರಲಿಲ್ಲ, ಇಲ್ಲಿ ಸ್ವಲ್ಪ ಪಾಠ ಬೇರೆ ಏನೂ ಇರಲಿಲ್ಲ…ಕೊನೆಗೆ ತೀವ್ರವಾದ ಭಿನ್ನಾಭಿಪ್ರಾಯವೂ, ಆದರೂ ಮಗುವಾಗಿತ್ತು, ಅದು ರಪ್ಪ ರಪ್ಪ ಹೆಜ್ಜೆಯಿಟ್ಟು, ತೊದಲಿ…ಪುರಾಣದ ಕವಿಗೆ ನಾಲ್ಕು ಸಂಧಿಗಳನ್ನೆ ಎಳೆದು ಬಿಡುವ ಸುವರ್ಣ ಸಂಧಿ, ನನ್ನೊಡನೆ ಬೆಳೆದವರೆಲ್ಲ ದಾಂಡಿಗರಾಗಿ, ಗಡ್ಡ ಬಿಟ್ಟೋ, ಸಿಸ್ತಾಗಿ ಟೈ ಎಳೆದೋ ಗುಳೆ ಹೋಗುವಂತೆ ಸ್ಕೂಟರ್ ಮೇಲೆ ಸಂಸಾರ ಸಾಗಿಸುತ್ತಾ ರಸ್ತೆ ಯಲ್ಲಿ ಸಿಗುತ್ತಾರೆ. ಇದಕ್ಕೂ ನಾನು ಮತ್ತು ಅವಳು ಮತ್ತು ಅಮ್ಮ ಮಾಡುವ, ಬಿಡುವ, ಎಲ್ಲ ಕಾರ‍್ಯಕ್ಕೂ ನೆಲೆ ಎಲ್ಲಿ ಅಂತ ಬುದ್ದನಂತೆ ಹುಡುಕಿದ್ದೇನೆ. ಹೀಗೆ ದುಡಿದು ತಂದ ದ್ದನ್ನು ಹಾಗೆಲ್ಲಾ ಎರಚಿ ಸಾಲದೆಂದು ಗೊಣಗಿ ಹಣವೇ ಮುಖ್ಯವೇ ಅಂತ ಆದರ್ಶ ನುಡಿದು, ಅದರ ಚಿಂತೆ ಮಾಡುತ್ತಲೆ ದಿನ ಹೋಗುತ್ತದೆ. ಪ್ರವೃತ್ತಿಗಳನ್ನು ಪಳಗಿಸಬೇಕು, ನಾಯಿ ಬೆಕ್ಕುಗಳನ್ನು ಪಳಗಿಸುವಂತೆ ಸುಂದರವಾದ ಆಲಂಕಾರಿಕ ಮಾತುಗಳು ಎಂಥ ಹಿತ: ಅವು ಹೊಳೆಯಂತೆ ; ಗಾಳಿಯಂತೆ ; ಮಣ್ಣಿನಂತ ಅಂತ ಅಂತೆಯ ಚೌಕಟ್ಟನ್ನು ಪಟ್ಟನೆ ಸಿಡಿಸಿ ನಿಲ್ಲುತ್ತವೆ, ಅಮೂರ್ತಗಳಾಗಿ ಅವು, ನೀನು ನಾನು ಮುಸು ಮುಸು ಮಾತನಾಡಿದ್ದನ್ನು …ಹಾಗೆ ಬೆಚ್ಚಗೆ ಇರಲು ಆಗುವುದೇ ಇಲ್ಲ ವೆಂದಲ್ಲ, ಆಗುತ್ತದೆ ಈಗಲೂ, ಅದು ಸುಡುತ್ತದೆ ಜ್ವರವಾಗಿ, ನಾನು ಅಸ್ವಸ್ಥ ನಾಗುತ್ತೇನೆ.
ಜೀಕುವ ಭರ್ಜರಿ ಎತ್ತುಗಳು ಕಾರು ರೋಡಿನ ಮೇಲೆ ತಮ್ಮ ಗೊರಸಿನ ಸಪ್ಪಳಕ್ಕೆ ಭಯಗೊಳ್ಳುತ್ತವೆ. ನಾನು ಉಣ್ಣುತ್ತೇನೆ: ಅವಳು ಕೊಟ್ಟದ್ದನ್ನು, ಮರೆತದ್ದನ್ನು’ ಮುಚ್ಚಿಟ್ಟದ್ದನ್ನು, ನನ್ನ ಅಹಂ ಕಂಡು ಅವಳಿಗೆ ಸಹಾನುಭೂತಿ ಒಮ್ಮೊಮ್ಮೆ, ಬೇಸಿಗೆ ಯಲ್ಲಿ ಒದ್ದೆಯ ಮುದ್ದೆಯಾಗಿ, ಚಳಿಯಲ್ಲಿ ಸೆಡೆತು ಬೆರತು ಹೋದದು, ಜಾಡಿಸಿ ನಿದ್ದೆ ಹೋಗುತ್ತೇನೆ: ಸಾವು ಒಂದು ದೀರ್ಘಸಿದ್ದಿಯೆಂಬ ಕೇವಲಜ್ಞಾನ ಸ್ಟುರಿಸುತ್ತದೆ. ದಿನಾ ಸಾವಿನ ಬಗ್ಗೆ ಆಲೋಚಿಸಿ, ಬದುಕು ಅನಿತ್ಯವೆಂದು ಮನವರಿಕೆಮಾಡಿಕೊಂಡು ಕಛೇರಿಗೆ ಹೋಗಬೇಕು, ಉದ್ದುದ್ದದ ತಲೆಹರಟೆಯ ಶ್ಲೋಕಗಳನ್ನು ದೇವರ ಮನೆ ಯಲ್ಲಿ ಗಟ್ಟಿಯಾಗಿ ಪಠಿಸುವವರ ಪರಿಪಾಟಲು ಒಮ್ಮೆ ನಗೆ ತರಿಸುತ್ತದೆ. ಒಮ್ಮೆ ಗಂಭೀರ ವಾಗಿ ಒಪ್ಪಿಕೊಳ್ಳಬೇಕೊ ಏನೋ. ರಸೆಲ್ಲನ ಕಲೆಯೊಳಗೆ ಈಸಾಡಿ ಬಂದಾಗಲೂ, “ಜಾತಸ್ಯ ಮರಣಂ ಧ್ರುವಂ” ಎಂದು ಪಠಿಸಿದಾಗಲೂ ಅದು ಸಂಪೂರ್ಣ ಅರ್ಥವಾಗುವುದಿಲ್ಲ.
“ಪುನರಪಿಜನನೀ ಜಠರೇ ಶಯನಂ” ಎಂಬ ಸಾಲೂ ಸಹ ಭಾಷಣದಲ್ಲಿ ರಂಜಿಸುವಷ್ಟು ಸ್ಪಂದನಕಾರಿಯಾಗಿ ಇಳಿಯುವುದಿಲ್ಲ, ಮಾತಿನ ಅರ್ಥವನ್ನು ಗಮನಿಸದೆ ನಿರರ್ಗಳವಾಗಿ ಬರೆದಂತೆ ಕ್ರಿಯೆಯ ಅರ್ಥವನ್ನು ಗಮನಿಸದೆ ಕ್ರಿಯೆಯಲ್ಲಿ ತೊಡಗುವುದು ಎಷ್ಟು ಹಿತ! ಕ್ಷೇಮ!
ಕಾಮ ಎಷ್ಟು ಪ್ರಧಾನ ಅಂತ ಫ್ರಾಯ್ಡನ, ಯೂಂಗನ ನಾನು ಸ್ಮರಿಸಿ, ನನ್ನ ಆತುರದ ನಲ್ಲಿ ತಿರುಗಿಸುತ್ತೇನೆ, ಎಷ್ಟೊಂದು ಮೋಹಕತೆ ಮಾದಕತೆ ಈ ಗಂಡ ಹೆಂಡತಿ ಕಟ್ಟಿನಲ್ಲಿ, ಅದನ್ನು ಗಮನಿಸಿ ಗಮನಿಸದಂತಿರುವ ಮಹಾಜನತೆಯ ಔದಾರ್ಯದಲ್ಲಿ, ಎಂಥ ಒಗ್ಗಟ್ಟು ! ಪರಸ್ಪರ ಸಹಕಾರ ಸಂಘ ಇದು.
ಹೊಟ್ಟೆ ತುಂಬಿದ್ದಾಗ ಅದೆ ವಾಕರಿಕೆಯಾಗುತ್ತದೆ : ಹಸಿದಿದ್ದಾಗಲೂ ಒಮ್ಮೊಮ್ಮೆ ಇದು. ಖಾದ್ಯವೇ ಅಂತ ದಿಗಿಲಾಗುತ್ತದೆ. ಆ ದಿಗಿಲಿನಲ್ಲಿ ಬೆಂಕಿ ಹುಡುಕುತ್ತೇನೆ; ನಡುಗುವ ಕೈಯ ದೀಪದಲ್ಲಿ ಏನೋ ಕಾಣುತ್ತದೆ, ಅಸ್ಪಷ್ಟವಾಗಿ,
ಎಲಾ ದಡ್ಡಕತ್ತೆಗಳಾ ಇದೇ ಹೊತ್ತಿನಲ್ಲಿ ಇದೇ ಕೆಲಸದಲ್ಲಿ ರತವಾಗಿರುವ ನಿಮಗೆ ಒಮ್ಮೆಯೂ ಛೇ ಅನ್ನಿಸಿಲ್ಲವೆ ? ವೈರಾಗ್ಯ ಶತಕವನ್ನು ಗೀಚಿಬಿಡುವಷ್ಟು ಪ್ರತಿಭಾವೇಶ. ಹೂ ಬತ್ತಿ ಹೊಸೆಯುವ ಅಜ್ಜಿಯ ಮಾತಿನ ತೀಟಿಯಲ್ಲಿ ಅವಳ ಮಡಿಯಲ್ಲಿ ಉಡಿಯಲ್ಲಿ ಅವಳ ಗಂಡುಬಾಹುವಿನಲ್ಲಿ ಮಿಡುಕು ಹದವಾಗುವುದನ್ನು ಕಾಣುತ್ತೇನೆ, ಸಕೇಶಿ ಮಂಜು ಕೆಂಡವಾಗಿ ಮಕ್ಕಳ ಮೇಲೆ ಹಾಯುವುದನ್ನೂ ಕೊಠಡಿಯಲ್ಲಿ ಕದ್ದುನೋಡುವುದನ್ನೂ ಇವಳು ಹೊರಗೆ ಕೂತಾಗ ಹಗುರಾಗಿ ಹಿಗ್ಗುವುದನ್ನು ದಡ್ಡಿ ಇವಳೂ ಗಮನಿಸುತ್ತಾಳೆ. ನಿಮ್ಮ ಮಂಜುವಿಗೆ “ಹೊಟ್ಟೆಕಿಚ್ಚು” ಅಂತ ಸಾವಿರಾರು ವರ್ಷದ ಹಳೆಯ ಮಾತನ್ನೆ ಹೊಸದೆಂಬಂತೆ ಹೇಳುತ್ತಾಳೆ.
ಫ್ರಾಯ್ಡನನ್ನು ಉದ್ಧರಿಸಿ ಸಮಸ್ಯೆಗೆ ಕಾರಣಗಳನ್ನು ಸೃಷ್ಟಿಸಿಬಿಡಬಹುದು. ಆದರೆ ದಿನವೆಲ್ಲ ಅನ್ನಗಳಿಸಿ ತಿಂದುಂಡು ಎಣೆಯಾಡುವ ಇದೇ ಬದುಕೆ ಅಂತ ಯಾರನ್ನು ಕೇಳುವುದು ?
ರಾಜ್ಯಕ್ಕಾಗಿ ಹೋರಾಡುವ ಸಂದರ್ಭವನ್ನು ಹೇಗೆ ತೆಗೆದುಕೊಂಡು ಕುರುಕ್ಷೇತ್ರದಲ್ಲಿ ಬಾಳುವುದು ? ವಿಶ್ವಾಮಿತ್ರನ ಎದುರಿಗೆ ದಡ್ಡತನದಲ್ಲಿ ಸೆಟೆದುನಿಂತು ನಿಜ ಹೇಳಿ ಕಥಾ ನಾಯಕನಾದರೆ ಏನಾದರೂ ಉದ್ದೇಶ ಕಂಡಂತೆ ಆಗಬಹುದೆ ? ಕಾಮದಹನವಾದ ಹನ್ನೊಂದು ದಿನಗಳಲ್ಲಿ ಘೋರ ತಪಸ್ಸು ಮಾಡುತ್ತೇನೆ. ಮೇನಕೆ ರಂಭೆಯರ ಆಟ ಸೋಲುತ್ತದೆ, ಮತ್ತೆ ಚಕ್ರ ಸುತ್ತುತ್ತದೆ.
ಅವಳ ತವರಿನ ಮೋಹ, ಯೌವನದ ಮೋಹ, ತಿರುಗುವ ಮೋಹ, ಹೆಣ್ಣೆಂಬ ಮೋಹ ಕಂಡು ನಾನು ಸಂತನಾಗಿ ಬೋಧಿಸಲೆ ಎಂದುಕೊಳ್ಳುತ್ತೇನೆ. ಮೋಹ ಕೆಟ್ಟದ್ದು ಅಂತ ಭಗವದ್ಗೀತೆ ಒದರಿಬಿಡಬೇಕು, ತವರ ಮೋಹವನ್ನು ಅವಳು ತ್ಯಜಿಸಲೇಬೇಕಾದ ವಯಸ್ಸು, ಹದಿಬದೆಯ ಧರ್ಮ ಪಾಠ ಹೇಳಿಸಲೆ ? ಮತ್ತೆ ನನ್ನ ಚಿಪ್ಪಿಗೆ ಬರುತ್ತೆನೆ. ನನ್ನ ಕೌಟುಂಬಿಕ ಘನತೆಯ ಬಗ್ಗೆ ಉಪನ್ಯಾಸ ಕೊಟ್ಟು ಅವಳನ್ನು ಆಳುತ್ತೇನೆ. ಭಾರತೀಯ ಸಂಸ್ಕೃತಿ ಅಂತ ವಿವೇಕಾನಂದರ ಗಾಂಭೀರ್ಯದಿಂದ ನೆನಪಿಸಿ ದೂರ ಹಾರಿ ಬಿಡುತ್ತೇನೆ. ನನ್ನ ಮನೆತನದ ಗೌರವ, ರೀತಿ ರಿವಾಜು ಅಂತ ನಾನು ಎಳೆಬಿಡಿಸಿದಾಗ ಅವಳು ತಪ್ಪಿತಸ್ಥಳಂತೆ ಶಿಕ್ಷೆಯನ್ನು ಆಲಿಸುವಂತೆ ನಿಲ್ಲುತ್ತಾಳೆ. ಅವಳು ಸಿಡಿದು ಜಾಡಿಸಿದರೆ ನನ್ನ ಅಭಿನಯ ನಿಲ್ಲುತ್ತಿತ್ತು, ಈ ಭ್ರಷ್ಟ ಪಾತಿವ್ರತ್ಯ ನನ್ನ ಅಭಿನಯಕ್ಕೆ ಸ್ಫೂರ್ತಿಕೊಟ್ಟರೂ ಮತ್ತೆ ನಾನು ಕತ್ತಲಲ್ಲಿ ನಿಂತು ತಡಕಾಡುವಾಗ ಶ್ರೀಯವರ ಅಶ್ವತ್ಥಾಮ ನಂತೆ ಪಶ್ಚಾತ್ತಾಪದಲ್ಲಿ ಸೆರೆಯಾಗಿರುತ್ತೇನೆ.
ಅಲ್ಲ ಈ ಹೆಣ್ಣುಗಳ ಯಾವ ದಡ್ಡ ಎಂಥ ಮಡ್ಡಿ ದ್ರವ್ಯದಿಂದ ತಯಾರಿಸಿರಬಹುದು ?
ಎಂಥ ಬೆಳೆದ ಹೆಣ್ಣೂ ತನ್ನ ಜಾಣ್ಮಯ ಹೆಚ್ಚಿನ, ಅಭಾವತೆಯ ಸುರಂಗಗಳಲ್ಲಿಯೇ ಇಲಿಯಂತೆ ನುಸುಳುತ್ತಿರುತ್ತದೆಯಲ್ಲ ! ನನ್ನಂತೆ ಅವಳೂ ಪುಟಿದು ಕಟ್‌ಲಟ್ ಅಂತ ತಾಕಿದ್ದರೆ ಎಂಥ ಮೋಜಾಗಿರುತ್ತಿತ್ತು, ಸುಂಡಿಲಿಯಾಗಿ ಅವಳು ಸುಳಿದಾಟವಾಗಿದ್ದಾಳೆ. ಅವಳು ನನ್ನನ್ನು ತೀರ ಸೀದಾ ಭಾವಿಸಿದ್ದಕ್ಕೆ ನಾನು ಹೇಗೆ ಹೊಣೆ ? ವ್ಯಕ್ತಿಯ ಗತ ವರ್ಷಗಳ ತಿರುವು ಮುರುವು ವೃತ್ತ ರಚಿಸಿ ಅಲ್ಲಿಗಲ್ಲಿಗೆ ರಾಸಲೀಲೆ ಆಡಿಸಿರುತ್ತದೆ. ಭ್ರಷ್ಟತೆ ಬೆಳವಣಿಗೆ ಸಹಜದಾರಿ…ಡಾರ್ವಿನ್ನನ ಥಿಯರಿಯಂತೆ ಇದು ಸಾಧಾರಣ ಎಂದು ಒಳಗೆ ವಿಜ್ಞಾನಿಯ ಗರ‍್ವದಿಂದ ಬೀಗುತ್ತೇನೆ, ಕುಲಗೆಡದ ಅಖಂಡ ಬ್ರಹ್ಮಚಾರಿಯರ ಭೋಳೆ ವಿಚಾರವನ್ನು ನೋಡಿ ಕನಿಕರವಾಗುತ್ತದೆ ; ಪ್ರತಿಯಾಗಿ ಆ ಶ್ರೀಪತಿ ನನ್ನ ‘ಪತನ’ ಕ್ಕೆ ಕನಿಕರಿಸುತ್ತಾನೆ.
ಸಿನಿಮಾ ನೋಡುತ್ತಾ, ಸ್ನೋ ಪೌಡರ್ ಅವಳಿಗಾಗಿ ಕೊಳ್ಳುತ್ತಾ ಇದ್ದ ಹಸಿರು ದಿನಗಳಲ್ಲೇ ಇವಳು ವಾಕರಿಸಿಕೊಂಡದ್ದು, ಅಮ್ಮನಿಗೆ, ಅಜ್ಜಿಗೆ, ಮಂಜಿಗೆ, ಏನೇನೋ ಸಂಕಟವಾಯಿತಂತೆ, “ಸರಿ ಏನವಸರವಾಗಿತ್ತೊ” ಅಂತ ಅಮ್ಮ ಮೂಗು ಮುರಿದಳು ಎಂದು ಇವಳು ಚಾಡಿ ಹೇಳಿದಳು, ಅಮ್ಮ ಅಪ್ಪನ ನಾಲ್ಕನೆಯ ಮಡದಿಯಾಗಿ ಬಂದ ಮೂರು ವರ್ಷದಲ್ಲಿ ಮೂರು ಹೆತ್ತು, ಮಣ್ಣುಮುಚ್ಚಿ ಮರಳಿಯತ್ನವ ಮಾಡಿದವಳು, ಸಂತಾನ ಸರಪಳಿಯನ್ನು ಇಳಿಬಿಟ್ಟವಳು.
ನಾನು ಆ ಆರು ತಿಂಗಳೂ ಆರ್ಥರಿಯನ್ ರೊಮಾನ್ಸ್‌ನ ನೈಟ್‌ಗಳಂತೆ ಮೆರೆದಿದ್ದೇನೆ. ನನ್ನ ವಿವೇಕ, ಕಜ್ಜಿಬುದ್ಧಿ ನಾಯಿಮನಸ್ಸು, ಆಕ್ರಮಣಕಾರಿ ಪ್ರವೃತ್ತಿ ಹೇಗೆ ಆಡಗಿ, ವಿವರವಾಗಿದ್ದವೋ ? ಇದೆ ಆ ಅನಾದಿಮಾಯೆಯಿರಬೇಕು, ವ್ಯರ್ಥವಾಗಿ ಹರಿಕಥೆ ಕೇಳಿದಾಗ ಎಲ್ಲೋ ಉಳಿದುಕೊಂಡ ಶಬ್ದಗಳಿಗೆಲ್ಲ ಹೇಗೆ ಈಗ ಅರ್ಥ ಮೈಗೂಡುತ್ತದೆ ಅಲ್ಲಾ.
ಇವಳಿಗೆ ಒಂಬತ್ತು ತುಂಬಿ ಹೆರಿಗೆ ಆಗಿ, ಗೊಗ್ಗಯ್ಯನ ವೇಷ ಹಾಕಿ ಎದುರಿಗೆ ಬಂದಿದ್ದರೆ ಪಕ್ ಅಂತ ನಕ್ಕು ಬಿಡುತ್ತಿದ್ದೆ, ಅವಳು ಸಾವಿನ ಹೊಸ್ತಿಲಲ್ಲಿ ನಿಂತಳು. ಅದೆಷ್ಟು ಗಂಭೀರವಾದಳು, ದೇಹ ನೀಲಿಗಟ್ಟಿ ಅಪಾಯದ ಕೇಸ್ ಆದಳು, ದೊಡ್ಡ ಡಾಕ್ಟರುಗಳ ಪಡೆಯೇ ಅವಳ ಕಾಲ ಬಳಿ ನಿಂತಿತು. ಅವರ ಅಪ್ಪ, ಅಮ್ಮ ನನ್ನನ್ನು ನೋಡಿದಾಗ ನಾನು ಅಪರಾಧಿಯೇ ಅಂತ ಅಳುಕಿದೆ, ಎಲ್ಲರ ಆಸಕ್ತಿಯ ಕೇಂದ್ರವಾದಳು. ಯಾವ ತಯಾರಿಯೂ ಇಲ್ಲದೆ ಈ crucifixion ಗೆ ಸಲೀಸಾಗಿ ಸಿದ್ಧವಾದಳು. ಈ ಪಕ್ವತೆ ಯಾವ ಜನ್ಮದಿಂದ ನೇರ ಇವಳಿಗೆ ಬಂತು ?…ಹೊಕ್ಕಳ ಕೆಳಗೆ ಒಂದು ಗೇಣು ಹೊಟ್ಟೆ ಕೊಯ್ಸಿಕೊಂಡು, ಕಂಬಳಿ ಹೊದ್ದು, ಪಕ್ಕದ ಸ್ಟಾಂಡಿನಲ್ಲಿ ತಲೆಕೆಳಗಾದ ಬುಡ್ಡಿಯಲ್ಲಿನ ಗ್ಲೂಕೋಸ್ ತೋಳಿಗೆ ತೊಟ್ಟೆಕ್ಕುತ್ತಿರಬೇಕಾದರೆ ಗುಬ್ಬಚ್ಚಿಯಂತೆ ಮಲಗಿದ್ದಳು. ಪುಟ್ಟ ಕಂದನನ್ನು ಸವರುತ್ತಿದ್ದಳು, “ಸಿಸರಿಯನ್ ಕೇಸ್” ಆಸ್ಪತ್ರೆಯ ತುಂಬ ಹೆಂಗಸರ, ಶತ ಪಥ ತಿರುಗುವ ಗುಡಾಣಿ ಹೆಂಗಸರ ಮಾತಾದಳು. ಅತಿ ಆರ್ಡಿನರಿಯಾಗಿದ್ದ ಈ ಹೆಣ್ಣು ದಿಢೀರನೆ ವ್ಯಾಪಿಸಿ ನಿಂತಳು.
ನಾನು ಮೂಕನಾದೆ : ನಿರುತ್ಸಾಹಿಯಾದೆ ; ದೈನಂದಿನ ಅತಿ ಮಾಮೂಲು ಈ ಪ್ರಸವ ಸಂದರ್ಭ ಸಿಕ್ಕುಸಿಕ್ಕಾದ ತರಲೆಯಾಗಿ, ನನ್ನ ಹೊಣೆಯನ್ನು ಗಂಭೀರವಾಗಿ ಗಮನಿಸುವಂತೆ ಮಾಡಿಬಿಟ್ಟಿತು.
ನನ್ನ ವೈಚಾರಿಕ ಅಭಿನಯವೆಲ್ಲ ಹ್ಯಾಮ್ಲೆಟ್ಟನ ಅನುಕರಣೆಯೇ ಹೌದೆಂದು ಕಂಡು ಹಿಡಿದ ಆ ಮಹಾರಾತ್ರಿ ಯಶೋದೆಯನ್ನೂ ರಾಹುಲನನ್ನೂ ತೊರೆದೇ ಹೊರಡ ಬೇಕೆಂಬಷ್ಟು ಜ್ವರ ಬಂದಿತ್ತು. ಡಾಕ್ಟರರ ಗುಳಿಗೆ, ಇಂಜರ್ಕ್ಷ ಮತ್ತೆ ನನ್ನನ್ನು ಪೂರ್ವ ಸ್ಥಿತಿಗೆ ತಂದಿತು. ಗಂಡನ್ನು ಸೆಣಸುವ, ಸೋಲಿಸಿ ಬೀಗುವ, ಕತ್ತಲೆಯ ಹುಲಿ ಛಾವಣಿ ಮೀರಿ ತೆಂಗಾಗಿ ತಲೆಯೆತ್ತಿದ ಈ ಪವಾಡ ನನ್ನನ್ನು ಕೊಂದಿತು, (ಹೇಡಿ ಸಾವಿರ ಬಾರಿ ಸಾಯುತ್ತಾನಂತೆ).
“ಹೆಣ್ಣ ನರವಾನರ ಪಾಳುಮಾಡಿ ಹೋಮಿಸಿರವನು” ಎಂಬ ಕವನದ ಸಪ್ಪೆ ಸಾಲೊಂದು ಅದು ಹೇಳಬಹುದಾದುದಕ್ಕಿಂತಲು ಹೆಚ್ಚನ್ನು ಎಲ್ಲವನ್ನು ಸುರುಳಿಯಚ್ಚಿತು: ಅನಾದಿ ಅನಂತ, ಮತ್ತೆ ಅದೆ ಹಳೆಯ ನಿಸ್ಸಾರ ಪದಗಳಲ್ಲಿ ಅನಿಸಿಕೆಗಳನ್ನು ತೂರಿ ತೆಪ್ಪಗಾದೆ. ಇವಳಲ್ಲಿ ಯಾವ ಪುನರುತ್ಥಾನವನ್ನು ನಾನು ಕಾಣಲಿಲ್ಲ. ಮತ್ತೆ ಅದೆ ನಾಲಗೆಯಾಗಿ, ಕಣ್ಣಾಗಿ, ಸಿಟ್ಟಾಗಿ, ಮುಟ್ಟಾಗಿ, ಮತ್ತೆ ಹದವಾಗಿ ಮಿದುವಾಗಿ ಬೆಣ್ಣೆಯಾಗಿ ಕರಗುವ ಬಗಿ ಹೆಣ್ಣ ಮೈಯೇ ಇದು.
ಅಮ್ಮ, ಬೇಕೆಂತಲೇ: ಬಿಗಿದಳೊ ಏನೊ ಅಷ್ಟೊಂದು ಮಮತೆಯಿಂದ ಕಸ ಪಡೆದು ಕೊಂಡಾಗಲೆಲ್ಲ ಹಾಲೋಗರುಂಡಂತೆ ನಾನು ಸವಿದಿರಬೇಕು, ಸ್ವಾರ್ಥಕ್ಕಿಂತ ಮಿಗಿಲಾಗಿ. ನನ್ನನ್ನು ಎದೆಗವಚಿಕೊಂಡಳು”. ಜೀವ ತೇದು ದೇಹ ದಂಡಿಸಿದಳು, ಯಾವ ವ್ರತ ಅದು ? ಅಪಾರ ಋಣಭಾರದಲ್ಲಿ ನನ್ನನ್ನು ಅದ್ದಿದಂತೆ ಈಗ ತೋರುತ್ತಿದೆ, ಕೃಷ್ಣ ದ್ವೈಪಾಯನನಂತೆ ಕರೆಸಿ ಆ ತಾಯಿ ನನ್ನ ಗೂಳಿಬಿಟ್ಟಿದ್ದರೆ…ಅಥವಾ ನಾನಾದರೂ ಅವಳೆದೆಯ, ಸೊಂಟದ, ತೊಡೆಯ ಅಂಟಿನ ನಂಟಿಲ್ಲದ ಷೋಡಶ ವರ್ಷದವನಾಗಿ ಚಿಮ್ಮಿನಿಂತು “ತಾಯೆ ನಿನಗೇನುಬೇಕು ?” ಎಂದು ಕೇಳಬಹುದಾಗಿತ್ತು, ಸಾಧ್ಯ ವಾಗಿದ್ದರೆ…
ಅವಳ ಬಣ್ಣ, ಕೆನ್ನೆ, ಹಲ್ಲು, ಸ್ಟ್ರಿಂಗ್ ಹಾಕಿದರೂ ಸುರುಳಿಯಾಗದ ಆ ಮೊಂಡು ಕೂದಲು ಇವೆಲ್ಲಾ ಅವಳದೇ ಋಣ,…ಆ ಪರಾಶರನ ಹೊಣೆಗೇಡಿತನದ ಖುಷಿ ನಮಗೆ ದಕ್ಕಲಾರದಾದರೂ ಕೃಷ್ಣದ್ವೈಪಾಯನನ ಸದ್ಯೋಜಾತ ಪ್ರೌಢಿಮೆಯಾದರೂ ಸಿಗಬೇಡವೆ?
ಈ ಉದ್ದನೆಯ ವರ್ಷಗಳಲ್ಲಿ ಅವಳ ಸೊಂಟಕ್ಕೇ ಜೋತುಬಿದ್ದು, ರಕ್ತಹೀರಿ…ರೋಗದ ಪಿರುಚಲಾಗಿ ಅವಳನ್ನು ಕಾಡಿ ನಾನು ಪ್ಯಾಂಟ್ ತೊಟ್ಟು ನಿಂತಾಗ ಧುಮುಧುಮಿಸುವ ಯೌವನದ ಸತ್ತ್ವದಿಂದ ದೇವ ದೆವ್ವಗಳನ್ನು ಗುದ್ದಿದೆ. ಜನಿವಾರ ಕಿತ್ತೆಸೆದು ಅಮ್ಮ ನನಗಾಗಿ ನವಗ್ರಹ ಶಾಂತಿಮಾಡಿದಳು ಆಗ.
ತಾಯೆದೆಯ ಕೃಪಾಮೃತ್ತಿಕೆ ನನ್ನ ತನದ ವಿಚಿತ್ರವಾಗಿ ವಿಕಸಿಸಿದೆಯೋ ? ಭವ್ಯ ವೈದಿ ಕತೆಯ ರಾಕ್ಷಸ ಶಕ್ತಿಯಿಂದ ಹೆಣಗಾಡಿ ಬಿಡಿಸಿಕೊಂಡು ಸ್ವಾತಂತ್ರ್ಯ ದ ಉಸಿರೆಳೆಯುತಿದ್ದ ಕಾಲವದು, ನೆನಪಿದೆಯಾ ಶ್ವೇತೆ, ಅಂತಹ ಒಂದು ದಿನದಲ್ಲೇ, ನೀತಿ ನಿಯಮಗಳ ನೆಲೆಯನ್ನು ಜಗ್ಗಿ ಅಲ್ಲಾಡಿಸುತ್ತಿದ್ದ ನಾನು ನಿನ್ನನ್ನು ನಿನ್ನ (petty womanly cel1) “ಹುಲು ಹೆಣ್ಣಿನ ಗಡಿ” ನಿಂದ ಸೆಳೆದು ತಂದು ವಿಶಾಲಾಕಾಶದ ಕೆಳಗೆ ಅಂಗಾತ ಮಲಗಿಸಿದ್ದು.
ಪರಮಹಂಸರ ಸ್ಪರ್ಶಕ್ಕೆ ತತ್ತರಿಸಿದ ನರೇಂದ್ರನಂತೆ ನೀನು ಬೇಡ ಬೇಡ ಅಂತ ಕೂಗಿದ್ದು…
ಕಸೂತಿ ಹಾಕುವ, ಹೂಬತ್ತಿ ಹೊಸೆಯುವ ಪ್ಲಾಸ್ಟಿಕ್ ವೈರಿನಲ್ಲಿ ಕಮಲವನ್ನು ಅರಳಿಸುವ, ಸುಧಾ ಪತ್ರಿಕೆ ಓದುವ ನಗುವ, ಅಳುವ, ಅರ್ಥವಾಗದ್ದನ್ನೂ ಬೆರಗಿಲ್ಲದೆ ಹೌದೆಂಬಂತೆ ಆಲಿಸುವ ಈ ಪ್ರಾಣಿಗೆ ಹೆಣ್ಣು ಎಂಬ ಸಂಕೇತವೆ ? ಮನಸಿನಾಳದಲ್ಲಿ ಅಗೆಯುತ್ತಾ ಅಗಿಯುತ್ತಾ, ಹರಟುತ್ತಾ ಹುತ್ತವಾಗಿ ಬೆಳೆದೆ. ಶ್ವೇತೆ ನಿನ್ನ ಕಣ್ಣಿನ ಹೊಳಪು ಗಂಗೆಯಂತೆ ಹರಿದು ನನ್ನ ಸುತ್ತಿ ಮತ್ತೆ ನೀನೆ ಆಗಿ ಉಳಿವ ನಿನ್ನ ಅನಿರ್ದಿಷ್ಟತೆ ನನಗೆಷ್ಟೊಂದು ಬೆರಗು ಆಗ.
ರಾತ್ರಿಯ ಬೀದಿದೀಪದ ಮಬ್ಬಿನಲ್ಲಿ ಆ ಕುಡುಕ, ರಾಮಾಯಣಕಾಲದ ಅಗಸನ ಹೆಂಡತಿ ತಿಮ್ಮಿ ಆಗಾಗ್ಗೆ ಗುಡಾಣದ ಹೊಟ್ಟೆ ಹೊತ್ತು ಅಡ್ಡಾಡುತ್ತಾಳೆ, ತೆರೆದ ತೊರೆದ ಮೊಲೆಗಳ ಕಡೆ ಉದ್ದೇಶಿತ ನಿರ್ಲಕ್ಷದಿಂದ, ಹಿಂಡುವ ಎಮ್ಮೆಯಾಗಿ ನಲಿಯುತ್ತಾಳೆ. ಬೆರಳಿನಲ್ಲಿ ದುಡುಕು ದೇಹದಲ್ಲಿ ಕಾವು ಮನಸ್ಸಿನಲ್ಲಿ ಮುಳೊಂದು ಊರಿದಂತೆ ಅನುಭವವಾದರೂ ಇಲ್ಲೆಲ್ಲಾ ಬರಿ ಮಣ್ಣು ಎಂದುಕೊಳ್ಳುತ್ತೇನೆ, ಆ ಚಿಟ್‌ಫಂಡ್ ಸಂಸ್ಥೆಯ ಆಫೀಸರ್ ಪಾರಿಮೋಲಿಯನ್ನು ಕಂಡಾಗ ಲಾವಣ್ಯ ಲೇಶವಿಲ್ಲದ ಎಗ್ಗಿಲ್ಲದ ಅವಳ ಆಕಾರದಲ್ಲಿ ಬರಿ ಲೆಕ್ಕಾಚಾರವಿದೆ: ಎರಡು ಕೈ, ಕಾಲು, ಇತ್ಯಾದಿ ಎಂದುಕೊಳ್ಳುತ್ತೇನೆ. ಯಾರದೋ ಸ್ಕೂಟರಿನ ಪಿಲಾನಿನಲ್ಲಿ ಇನ್ನಾರದೋ ಕಾರಿನ ಫ್ರಂಟ್ ಸೀಟಿನಲ್ಲಿ… ಅವಳ ನಿರ್ಲಕ್ಷ್ಯ ಸ್ವಭಾವ ಎಂಥ ಘನ ವಸ್ತುವಾಗಿ ಈ ಜನದ ಬಾಯ ‘ಲೈಂಗಿಕತೆ’
ಯಾಗುತ್ತದೆ ಎನ್ನುವುದೇ ನನಗೆ ಕುತೂಹಲ.
ನಾನು ಇವಳೊಡನೆ ಎಲ್ಲೋ ಹೋಗುವಾಗ ಅವಳ ಕಣ್ಣು ಏನೆಲ್ಲವನ್ನು ನೆಕ್ಕುತ್ತದೆಯೆಂಬುದು ಅವಳಿಗೂ ಗೊತ್ತಾಗದ ವಿಚಾರವಿರಬಹುದು : ನನ್ನ ಕಲ್ಪನೆಯ ಜೇಡ ನೆಯುತ್ತದೆ: ಸೂಟು ಬೂಟು ಧಾರಿ ಬೆಳ್ಳನೆಯ, ದುಂಡನೆಯ ಎತ್ತರದ ಗುಂಗುರು ಕೂದಲಿನ, ಕಾರಿನ, ಸ್ಕೂಟರಿನ, ಸುಂದರ ಹಲ್ಲಿನ, ನೀಳ ಮೂಗಿನ ಯಾರೋ ವಿಹಾರ ಮಾಡಿ ಬರುತ್ತದೆ ಈ ಜಮದಗ್ನಿ ಮುನಿ ಪತ್ನಿಯ ಕಣ್ಣಿನೊಡನೆ, ಅವಳು ಬೆಚ್ಚುತ್ತಾಳೆ. ಮನಸ್ಸು ಎಂಥ ಭದ್ರಕೋಟೆ. ಹುಚ್ಚ ಜಮದಗ್ನಿಯ ಪರಮ ಮೂರ್ಖತೆ ನನ್ನಲ್ಲಿಲ್ಲವಲ್ಲ. ಮನಸ್ಸು ಎಂಥ ರಹಸ್ಯ ; ಅಮೂಲ್ಯ ಆಸ್ತಿ ; ಸತ್ಯ: ಸ್ವಾತಂತ್ರ್ಯ, ಈ ಮಾನಸಿಕ ಭ್ರಮರವೃತ್ತಿ ಸ್ವಾತಂತ್ರ್ಯದಂತೆ ಜನ್ಮಸಿದ್ಧ ಹಕ್ಕು ?
ಮನೆಗೆ ಫ್ಯಾನ್ ತಂದ ದಿನವೆ ಈ ಗಾಳಿಯಿಂದ ಬಿಡಿಸಿಕೊಳ್ಳುವುದು ಹೇಗೆಂಬ ವಿಚಿತ್ರ ಪ್ರಶ್ನೆಗೆ ನನಗೆ ದಿಗಿಲಾಗಿತ್ತು, ಹಾಸಿಗೆ, ಪ್ಲಾಸ್ಟಿಕ್ ಸಲಕರಣೆ ಕಂಡಾಗಲೂ ಅಂಥದ್ದೇ ಚಡಪಡಿಕೆ.
ಕಲ್ಪಾಂತಸ್ಥಾಯಿಗಳಂತೆ ಒಂದೊಂದರಲ್ಲೂ ಬೇರು ಬಿಡುತ್ತೆ ಅಮರನಾಗಿಬಿಡಬಹುದೆ ?
ಮನೆಯ ಒಂದೊಂದು ವಸ್ತುವೂ ಸಾಂದರ್ಭಿಕ ಅನಿಸುವಿಕೆಯ ಫಲವಾಗಿ ಶೇಖರಿತವಾಗಿ ಈಗ ಸಂಚಿತ ಪಾಪದಂತೆ ನನ್ನನ್ನು ಬೆದರಿಸುತ್ತವೆ ; ಅಣಕಿಸುತ್ತವೆ.
ಈ ಎರಡು ಮಕ್ಕಳು ಚಂಡಿ ಹಿಡಿದು ರಾಗ ತೆಗೆದಾಗ “ನಿಮ್ಮ ಮಕ್ಕಳನ್ನು ಸುಧಾರಿಸಿ” ಅಂತ ನಾನು ಅವಳಿಗೆ ಅಪರೂಪವಾಗಿ ಕೈಗೆ ಸಿಗುವ ಭಾನುವಾರದ ನಿದ್ದೆಯ ಮಧ್ಯಾಹ್ನ ದಲ್ಲಿ ತೊಡೆಯ ಮೇಲೆ ಕುಕ್ಕಿ ಹೋದಾಗ ಯುಗಯುಗಾಂತರ ವಾಣಿಯೊಂದು ನನ್ನಲ್ಲಿ “ನಾನೆ ? ಇವು ನನ್ನ ಮಕ್ಕಳೆ ?…ಕೋಹಂ ?” ಎಂದು ಕುಚೇಷ್ಟೆ ಮಾಡಿದವು, ಇಲ್ಲ, ನನಗೆ ನಿಜಕ್ಕೂ ಹುಚ್ಚಿಗೆ ಸಮೀಪವಾದ ಒಂದು ಅಸ್ವಸ್ಥತೆ ಉಂಟಾಗಿರಬೇಕು, ಆರೋಗ್ಯವಂತ ಮನಸ್ಸು ದೇಹ ಸಂಪಾದಿಸಲೇಬೇಕು. ನನಗೆ ನಾನೆ ಅಪರಿಚಿತನಾಗಿ ಬಿಡುವಿಕೆಯಿಂದ ಮೋಸಮಾಡಿಯಾದರೂ ಪಾರಾಗಬೇಕು, ನನ್ನ ಸುಟ್ಟ ಬೂದಿಯಲ್ಲೇ ನಾನು ಮತ್ತೆ ಎದ್ದು ನಿಲ್ಲುವ ಪ್ರಯತ್ನ ಮಾಡುತ್ತಿದ್ದೇನೆ. “ಯಾರಿಗೆ ಯಾರೋ ಎರವಿನ ಸಂಸಾರ” ಎಂಬ ದಾಸರ ಪದವನ್ನು ಅರ್ಥಪೂರ್ಣವಾಗಿ ಕುರುಕಿಕೊಳ್ಳುತ್ತೇನೆ.
ಹೊರಗೆ ಪ್ರಳಯದ ಮಳೆ ಹಿಡಿದು ಹೊರಟು ನಿಂತ ನಾನು, ಕ್ಷಣ ಅತ್ತಿತ್ತ ನೋಡಿದಾಗ ತನ್ನಲ್ಲಿ ಸುತ್ತಿಕೊಂಡ ಅಮ್ಮನ ಕುಗ್ಗಿದ ದೇಹ, ಅವಳೊಡನೆ ಎರಡು ಮಾತಾಡಬೇಕು, ಆರಂಭ, ಮುಕ್ತಾಯ ಎರಡೂ ಕಷ್ಟ, ಅವಳು ಏನೋ ನೋವು ತಿನ್ನುತ್ತಿದ್ದಾಳೆ. ಅವಳಿಗೆ ಜೀವನ ಬಿಕೊ ಎನಿಸುತ್ತದೆಯಂತ, ಇದ್ದುದರಲ್ಲಿ ಅವಳೇ ಮೇಲು, ಎಂಥ ಅಚ್ಚುಕಟ್ಟು ಸಿಸ್ತು: ಪಾತ್ರೆ, ಪಡಿಗ, ಸಲಕರಣೆಗಳಲ್ಲಿ ಕೈಯಾಡಿಸುವಾಗ, ಯುಗ ಯುಗಾಂತರಗಳವರೆಗೆ ಇದೇ ಕ್ರಮ, ಮನುವಿನ ಕ್ರಮದಂತೆ ಅವಿಚ್ಛಿನ್ನ ಸಾಗಬೇಕೆಂಬಂಥ ಧೋರಣೆ, ಐವತ್ತು ವರ್ಷ ಅವಳು ಬಳಸಿದ ಸೌಟು ಕಡಾಯಿ ತೋರಿಸುತ್ತಾಳೆ; ಅವಳ ಅಜ್ಜಿಯಕಾಲದ .ಈಳಿಗೆಮಣೆ ಇನ್ನೂ ಹರಿತವಾಗಿರುವುದನ್ನು ನೆನಪಿಸುತ್ತಾಳೆ, ಅವು ಗಳಂತೆಯೇ ಜೀವಿಯನ್ನೂ ಅವಳು ಪರಿಗಣಿಸುವುದು ಮಾತ್ರ ನನಗೆ ಸರಿಕಾಣುವುದಿಲ್ಲ. ಏನು ಕೊಂಡರೂ ತನ್ನ ಜೀವಮಾನಕ್ಕಿಂತ ದೀರ್ಘ ಬಾಳಿಕೆ ಬರಬೇಕೂಂತ ಚಡಪಡಿಸು ತಾಳೆ, ಕಕ್ಕಸ್ಸಿನ ಡಬ್ಬ ಇದೇ ಮೂಲೆಯಲ್ಲಿ ಹೀಗೇ ಇಡಬೇಕೆಂದು ಶಾಸನ ಮಾಡು ತಾಳೆ, ಉಗುಳುವುದಾದರೆ ಚರಂಡಿಯಲ್ಲಿ ಇಂಥಲ್ಲೇ ಉಗುಳಿ, ಅರ್ಧ ಚೊಂಬು ನೀರನ್ನು
ಮಾತ್ರ ಮೇಲೆ ಸುರುವಬೇಕು, ಅವಳ ಶಾಸನಗಳೋ ಬಹಳ, ಐದಾರು ಜೀವಿಗಳ ಈ ಪುಟ್ಟಮನೆಯನ್ನು ಗುಪ್ತ ಸಾಮ್ರಾಜ್ಯವೆಂಬಂತೆ ಆಳುತ್ತಾಳೆ, ಇವಳು ಕಾನೂನು ಭಂಗಮಾಡಿ ಸಿಕ್ಕಿಬಿದ್ದಾಗ ಅಮ್ಮ ಎಷ್ಟೋ ಉದ್ದ ಮಾತನಾಡುತ್ತಾಳೆ, ಆಗ ಅವಳು ತುಂಬ ಆರೋಗ್ಯವಾಗಿರುವಂತೆ ತೋರುತ್ತಾಳೆ.
ಅಮ್ಮನಲ್ಲಿರುವ ಅತ್ತೆ ಎಂಥ ಹಳೆಯ ಅಮೂಲ್ಯ ವಸ್ತು ! ಮತ್ತೆ ಮತ್ತೆ ಈ ನವಯುಗದಲ್ಲೂ ಸಾಯದೆ ಮೂಲಭೂತ ವಸ್ತುವಿನಂತೆ ಎಲ್ಲದರಲ್ಲೂ ಬೆರೆತುಕೊಂಡಿದೆ. ಸೊಸೆ ತಂದ ಚಿನ್ನ ಬೆಳ್ಳಿ ಅಷ್ಟೇ ಅಂತ ಕಾರುರುವಾಕ್ಕಾದ ಲೆಕ್ಕಾಚಾರ ಅವಳಲ್ಲಿದೆ ; ಸೊಸೆ ತಂದ ಲೋಟವನ್ನು ಮುಟ್ಟಿದವಳಲ್ಲ.
ಸೊಸೆಗೆ ಅಕರಾಸ್ತೆಯಿಂದ ತಿನ್ನೂಂತ ಬಲವಂತದಿಂದ ಬಡಿಸುತ್ತಾಳೆ, ಲಲಿತಾಸಹಸ್ರ ನಾಮ ಒದರುತ್ತಾಳೆ, ಅಜ್ಜಿಯೊಡನೆ ಒಮ್ಮೊಮ್ಮೆ ಭಾಗವತದ ಕಟ್ಟೆಗೆ ಹೋಗುತ್ತಾಳೆ. ಪಾರಿಮೋಲಿ ಪುಸಲಾಯಿಸಿದರೆ ಅವಳೊಡನೆ ಒಂದೆರಡು ಇಂಗ್ಲಿಷ್ ಚಿತ್ರಕ್ಕೂ ಹೋಗುತ್ತಾಳೆ.
ಏನು ಬದುಕೋ? “ಊಟ ನಿದ್ದೆ ಊಟ” ಅಂತ ಗಟ್ಟಿಯಾಗಿ ರಾಮಾಕೃಷ್ಣ ಕೇಶವ ಮಾಧವ” ಎಂಬ ರಾಗದಲ್ಲೇ ದಿನಕ್ಕೆ ನಾಲ್ಕು ಬಾರಿಯಾದರೂ ಗೊಣಗಿಕೊಳ್ಳುವುದು ನನ್ನ ಕಿವಿಗೆ ಬೀಳುತ್ತದೆ. ಅವಳಿಗೆ ಕಾಯಕಲ್ಪ ಮಾಡುವುದು ಹೇಗೆ ?
ಇವಳಿಂದ ಅಮ್ಮನಿಂದ, ಮಕ್ಕಳಿಂದ, ಅಜ್ಜಿಯಿಂದ, ಮಂಜಿಯಿಂದ ನನ್ನನ್ನು ಅಳೆಯುತ್ತೇನೆ ಸೇರು ಪಾವು ಚಟಾಕಾಗಿ ತುಂಬಿಕೊಳ್ಳುತ್ತೇನೆ.
ಬ್ರಹ್ಮವೇ ಸತ್ಯ ಜಗತ್ತು ಮಿಥ್ಯ ಎಂಬಂಥ ಲೋಕತಾರಕ ಮಂತ್ರ ನನಗೆ ಸಿದ್ಧಿಸಿದೆ ಎಂಬ ದಿವ್ಯಾನುಭವ ಸ್ಫುರಿಸುತ್ತದೆ, ಬದುಕೆಲ್ಲ ಅಸಹ್ಯ ಕಜ್ಜಿ ಎಂಬಂತೆ ಕವನ ರಾಶಿ ಪೇರಿಸುವ ಯೂನಿವರ್ಸಿಟಿ ಕವಿಗಳು ತಮ್ಮ ಬಡ್ತಿ, ಸ್ಕೂಟರ್, ಮನೆ, ಇನ್ನೊಬ್ಬರ ಹಡತಿಯ ಬಗ್ಗೆ ತೋರುವ ಕಳಕಳಿ ಬದುಕಿನ ನಿಗೂಢತೆಯನ್ನು ನನಗೆ ನೆನಪಿಸುತ್ತದೆ.
ಎರಡು ವರ್ಷದ ಕಿರಣ್ ಯಾವ ಆಟಿಕೆ ಕೊಟ್ಟರು ದಿನಕ್ಕೊಂದು ಹೊಸದು ಕೊಟ್ಟರೂ ಮುಟ್ಟುವುದೇ ಇಲ್ಲ. ಸೌಟು ಹಿಡಿಯುತ್ತಾಳೆ: ತರಕಾರಿ ಹೆಚ್ಚುತ್ತಾಳೆ, ಬಾಲ್ಯಕ್ಕೇಕೆ ಈ ಆಕಾಲ ಪ್ರೌಢೆಮೆಯೆಂದು ಬೆರಗಾಗುತ್ತದೆ. ಹಣ ತರುವ ವಿತರಣೆ ಮಾಡುವ ಮತ್ತೆ ಸಂಗ್ರಹಿಸುವ, “ಬೆರಣಿಯ ಆಯುವ ಅಟ್ಟುಣಲು ತೆರಪಿಲ್ಲದ” ಶಾಪಗ್ರಸ್ಥ ಸ್ಥಿತಿಗೆ ನನ್ನಲ್ಲೇ ಕುದಿಯುತ್ತೇನೆ. ಈ ಆಟ ಮಕ್ಕಳ ‘ಅಲುಗಳಿಮಣೆ ‘ ಆಟಕ್ಕಿಂತ ಅರ್ಥವತ್ತಾದಂದೆ ?……
ಕಿರಣ್ ಗೊಂಬೆ ತೂರಿ ಎಸೆದರೆ, ಅಜ್ಜಿ ಮಡಿಗಂಟು ಬಿಚ್ಚಿ ಸಾಲಗ್ರಾಮವನ್ನಿಟ್ಟು ಆಟವಾಡುತ್ತಾಳೆ, ನನ್ನನ್ನು ಶೂದ್ರನೆಂದು ಹಂಗಿಸುವ ಪಕ್ಕದ ಮನೆಯ ಸಬ್‌ರಿಜಿಸ್ಟ್ರಾರ್ ಆಫೀಸಿನ ಗುಮಾಸ್ತ ಸಂಕಲ್ಪ ಹೇಳುತ್ತಿರುತ್ತಾನೆ: “ಮಮ ಉಪಾತ್ರ ಸಮಸ್ತ ದುರಿತೆ ಕ್ಷಯ ದ್ವಾರಾ ಶ್ರೀ ಪರಮೇಶ್ವರ ಪ್ರೀತ್ಯರ್ಥಂ ಪ್ರಾತಃಸಂಧ್ಯಾಮುಪಾಸ್ಯೇ…’ ಈ ಮಂದಿ ಪ್ರಬುದ್ಧರಾಗುವುದು ಯಾವಾಗ ? ಅಂತ ವಿವೇಕಾನಂದನಂತೆ ಚಡಪಡಿಸುತ್ತೇನೆ. ಎರಡು ಇರುಳಿನ ಮಧ್ಯೆ ಒಂದು ಪುಟ್ಟ ಹಗಲು ಹೇಗೆ ತೂರಿಹೋದಾಗ ಎಲ್ಲ ಮರೆತು ನಿದ್ದೆ ಹೋಗುತ್ತೇನೆ. ಪ್ರೊ. ವಿಷಕಂಠಯ್ಯನವರೊಡನೆ ನನ್ನೆಲ್ಲ ತಾಪತ್ರಯಗಳನ್ನು ಗುರುಕುಲವಾಸದ ಶಿಷ್ಟೋತ್ತಮನಂತೆ ಒಪ್ಪಿಸಿ ಅಂಜಲಿಬದ್ಧನಾಗಿ ನಿಂತಾಗ, ಪ್ರೊಫೆಸರ್ ತಮ್ಮ ಅರವತ್ತು ವರ್ಷದ ಮಹಾಗಾಯತ್ರಿ ಮಂತ್ರವೆಂಬಂತೆ ‘Order’ಇರಬೇಕು ಅಂದಾಗ ತಬ್ಬಿಬ್ಬಾಗುತ್ತೇನೆ. ಒಂದು ಮುಂಜಾನೆ ಬಿಸಿಬಿಸಿ ಮಿಂದು ಬಚ್ಚಲು ಮನೆಯ ಗೂಟದಿಂದ ಚಡ್ಡಿ, ಬನೀನು ಟವೆಲ್ಲುಗಳನ್ನು ಸೆಳೆದುಕೊಂಡಾಗ ಅತ್ಯದ್ಭುತ ಕ್ರಮ ಕಂಡು ನಾನು ನಕ್ಕೆ, ಗೂಟದ ಮೇಲೆ ಮೊದಲು ಬನೀನು, ಅನಂತರ ಚಡ್ಡಿ, ಅನಂತರ ಟವೆಲ್…ಕ್ರಮವಾಗಿ ಬಳಸುವಾಗ ಟವೆಲ್ ಚಡ್ಡಿ ಬನೀನು ಒಮ್ಮೆ ಅವಳಿಗೆ ಈ ಪರೀಕ್ಷೆ ಒಡ್ಡಿ ಅವಳ ಬುದ್ದಿವಂತಿಕೆಯನ್ನು ಪರೀಕ್ಷಿಸಬೇಕು.
ಪ್ರಿಯಶ್ವೇತೇ,
ನನ್ನ ಬದುಕು ಪುರಾಣವಾಗುತ್ತಿದೆ. ತಿರುವಿಗೊಂದು ಭಂಗ, ಹತ್ತೊಂಬತ್ತರ ಕಾವು ಈಗಿಲ್ಲ, ಇಪ್ಪತ್ಮೂರರ ವೈಜ್ಞಾನಿಕತೆ ಈಗ ಉಪಕಥೆಯಂತೆ ತೋರುತ್ತಿದೆ. ಅರ್ಥ ವಿರಹಿತ ಶಬ್ದ ಜಾಲದಂತೆ ಅನಿಸಿದೆ’ ನಾನು ಮತ್ತು ನನ್ನ ಸುತ್ತ ಹೆಣೆದುಕೊಂಡವರೇ, “ಹೊಸ್ತಿಲಕ ಶುಭ ಬರೆಯುವ” ನಿನ್ನ ಅಗಲಿಕೆ ತೀವ್ರವಾಗಿ ಈಗ ಬಾಯ್ದೆರೆದಿದೆ. ಕಾಮ ಒಂದು ರಾಮರಕ್ಷೆ? ಒಂದು ವಿಶ್ರಾಂತಿ ಉದ್ದೇಶರಹಿತತೆಯೇ ಅದರ ಸೊದಸು ರಘುವಂಶದ ಕಾಲಿದಾಸನಂತ ಅದರಲ್ಲಿ ಅರ್ಥ ಕಾಣಲೆ?
“ಬ್ರಾಹ್ಮಣಸ್ಯ ಚ ದೇಹೋsಯ ಕ್ಷೆಂದ್ರ, ಕಾಮಾಯ ನೇಷ್ಯತೇ” ಅಂತ ಮಂತ್ರ
ಪಠಿಸಲೇ?
ಪ್ರೇಮ ರಾಷ್ಟ್ರಪ್ರೇಮವೂ ನನ್ನ ಕರುಳಿನ ರೋಗದ ಮುಂದೆ ಕ್ಷುದ್ರವಾಗಿ ಕಾಣುತ್ತದೆ. ಸಾವು ನನ್ನನ್ನು ಕಂಪಿಸಿದರೂ ಪದ್ಯ ಬರೆಯಲಾರೆ.
ಆಗ ಎಷ್ಟು ಅರ್ಥಪೂರ್ಣವಾಗಿ ಕಂಡ ಆ ಪ್ರೇಮ, ನಿನ್ನೊಡನೆ ಕಳೆದ ದಿನಗಳು ಮಾತುಗಳು ಕೊಟ್ಟ ತೆಗೆದುಕೊಂಡ ಅನುಭವಗಳು ಆಗ ಜೀವಂತವಾಗಿದ್ದಷ್ಟು ಅದರ ನೆನಪು ಸಹ ಹಿತವಾಗುತ್ತಿಲ್ಲ, ಏಕೆ ? “ಕೃತಘ್ನತೆ, ಮೃಗೀಯತೆ” ಅಂತ ನೀನು ಸಲೀಸಾಗಿ ಅಂದುಬಿಡಬಹುದು.
ಆದರೂ “ಆ ಕಾಲವೊಂದಿತ್ತು ದಿವ್ಯ ತಾನಾಗಿತ್ತು” ಎಂದು ರೋಮ್ಯಾಂಟಿಕ್ಕಾಗಿ ಹಾಡ ಲಾಗುವುದಿಲ್ಲ, ಶ್ವೇತೆ, ಬದುಕು ಸೋರುತ್ತಾ ಹೋಗುತ್ತದೆ; ಕಳೆದದ್ದನ್ನು ಪುನರ್‌ರಚಿಸುವುದು ಎಷ್ಟು ಪ್ರಯಾಸ…ನೋಡು ಇದಕ್ಕೆ ತಕ್ಷಣ ಉತ್ತರಿಸು…… ಆ.. ದ….ರೆ…..ನಿನ್ನ ವಿಳಾಸ ?
ಜೀವಂತ ಧೋರಣೆಗಳು
ಜೀವಂತ ಧೋರಣೆಗಳು
ಮಾಧನ ಕುಲಕರ್ಣಿ
ಇತ್ತೀಚಿನ ದಿನಗಳಲ್ಲಿ ಅರ್ಥಪೂರ್ಣವಾದ ಬರಹಗಾರರು ತಮ್ಮ ಕೆಲ ಕೃತಿಗಳನ್ನು ಪ್ರಕಟಿಸಿ ಕನ್ನಡ ಸಾಹಿತ್ಯದ ಜೀವಂತಿಕೆಯನ್ನು ತೋರಿಸುದವರ ಜೊತೆಗೇ ತಮ್ಮ ಧೋರಣೆಗಳನ್ನೂ ಪ್ರದರ್ಶಿಸಿದ್ದಾರೆ. ಇವುಗಳಲ್ಲಿ ನನಗೆ ಮುಖ್ಯವಾಗಿ ತೋರುವವೆಂದರೆ ಅಡಿಗರ ಮೂರು ಕವನಗಳು: ‘ಭಗ್ನ’, ‘ದೆಹಲಿಯಲ್ಲಿ’, ನೀ ಬಳಿಯೊಳಿರುವಾಗ್ಗೆ’ : ಪೂರ್ಣಚಂದ್ರ ತೇಜಸ್ವಿಯವರ ಎರಡು ಕತೆಗಳು : ‘ಅಬಚೂರಿನ ಪೋಸ್ಟಾಫೀಸು’, ‘ಅವನತಿ’ ; ಕಂಬಾರರ ಎರಡು ಕವನಗಳು : ಗುಡು ಗುಡು ಗುಮ್ಮ, ‘ರಾಮಾಯಣವೂ ಗೋದೂ ತಾಯಿಯೂ’ ಹಾಗೂ ಅನಂತಮೂರ್ತಿಯವರ ಕತೆ `ನವಿಲುಗಳು’, ಇವೆಲ್ಲ ಕೃತಿಗಳು ತೀರ ಇತ್ತೀಚೆಗೆ ಪ್ರಕಟವಾಗಿರುವದರಿಂದ ನಮ್ಮಸಾಹಿತ್ಯದ ಮುಂದಿನ ಬೆಳವಣಿಗೆಯ ಬಗ್ಗೆ ಕೆಲವು ಸೂಚನೆಗಳನ್ನೂ ನೀಡಬಹುದು, ಜೀವಂತ ಸಾಹಿತ್ಯದ ಪ್ರಾರಂಭವಾಗಿ ಬಂದ ಈ ಎಲ್ಲ ಲೇಖಕರೂ ಪ್ರಾಯಶಃ ತಮ್ಮ ಸಾಹಿತ್ಯಕ ಜೀವನದಲ್ಲಿ ಅತೀ ಮುಖ್ಯವಾಗಿ ನಿರ್ಧರಿತವಾಗಬೇಕಾದ ಹಂತವೊಂದರಲ್ಲಿದ್ದಾರೆಂಬುನ್ನು ಇಲ್ಲಿ ಮುಖ್ಯವಾಗಿ ಗಮನಿಸಬೇಕು, ಅಡಿಗರೊಬ್ಬರನ್ನುಳಿದು ಉಳಿದವರೆಲ್ಲರೂ ತಮ್ಮ ಮಹತ್ವಾಕಾಂಕ್ಷೆಯ ಕೃತಿಗಳನ್ನು ಬರೆಯಬೇಕಾಗಿದೆ ಎಂದು ನಾವೆಲ್ಲರೂ ಅಂದುಕೊಳ್ಳು ತಿರುವಾಗಲೇ ಅಡಿಗರು ತಮ್ಮ ಮೂರು ಕವನಗಳನ್ನು ಪ್ರಕಟಿಸಿ ತಮ್ಮ ಕಾವ್ಯಜೀವನದ ಮತ್ತೊಂದು ಮಹತ್ವದ ತಿರುವನ್ನು ಸೂಚಿಸಿದ್ದಾರೆ. ಈ ದೃಷ್ಟಿಯಿಂದ ಈ ಕೃತಿಗಳ ವಿಮರ್ಶೆ ಕನ್ನಡದ ಸದ್ಯದ ಮಹತ್ವದ ರಚನಾತ್ಮಕ ಕ್ರಿಯೆಯ ಬಗ್ಗೆ ಅರಿವನ್ನು ಕೊಡಬಹದು.
“ಕೂಪ ಮಂಡೂಕ’, ಮತ್ತು “ನೆನಪುಗಳೆ ಹಾಗೆ’ ಯಂತಹ ಅಪ್ಪಟ ಕಾವ್ಯವನ್ನು ಬರೆದ ಅಡಿಗರು ‘ವರ್ಧಮಾನ’, ‘ಅಜ್ಜ ನೆಟ್ಬಾಲ’ದಂಥ ಸಮಕಾಲೀನ ಪ್ರಜ್ಞೆಯ, ವೈಚಾರಿಕ ನೆಲೆಯ ಕಾವ್ಯವನ್ನೂ, ‘ಡೊಂಕು ಬಾಲಕೆ ಚಿನ್ನದ ನಳಿಗೆ’ಯಂತಹ ವಿಚಾರದ ಆಕಾರದ ಮೇಲೆಯೇ ಬೇರೂರಿದ ಗರಿಗರಿಯಾದ ಕವನವನ್ನೂ ರಚಿಸಿದರು, ಈ ಮಧ್ಯೆ ಮಾನವನಲ್ಲಿ ಸಾಕಾರಗೊಳ್ಳುವ ದೇವತ್ವವನ್ನು ಕೆದಕುವ, ಅರಿಯುವ ಗಾಢ ಪ್ರಯತ್ನ ಭವಿಷ್ಯ ವಾದಿಯ ಧ್ವನಿಯನ್ನು ಹೊತ್ತು, ‘ರಾಮನವಮಿಯ ದಿವಸ’ದಲ್ಲಿ ಪ್ರಕಟವಾದಾಗ, ನಮ್ಮ ಹಿಂದಿನ ತಲೆಮಾರಿನ ಕವಿಗಳ ಕೊನೆಯ ಹಂತವನ್ನು ಕಂಡ ನಮಗೆಲ್ಲ ಅಡಿಗರು ಆಧ್ಯಾತ್ಮಿಕ ಕವಿಗಳಾಗುವ ಯೋಚನೆ ಕೂಡಾ ಬಂತಾದರೂ, ರಾಮನನ್ನು ಚಿತ್ರಿಸುವ ಪ್ರಯತ್ನದಲ್ಲಿ ಅಡಿಗರು ಅಮೂರ್ತವನ್ನು ಮೂರ್ತಕ್ಕಿಳಿಸುವ ಕಾವ್ಯಕರ್ಮದಲ್ಲಿಯ ಶಿಸ್ತನ್ನು ಕಳೆದುಕೊಳ್ಳಲಿಲ್ಲ ವೆಂಬುದು ಅಷ್ಟೇ ಆಶ್ಚರ್ಯವನ್ನೂ ಹುಟ್ಟಿಸಿತ್ತು, ‘ವರ್ಧಮಾನ’ ಕವನ ಸಂಕಲನದಲ್ಲಿಯ ಉಳಿದೆಲ್ಲ ಕವನಗಳಲ್ಲಿ- ‘ಬರುತ್ತಾರೆ’, ‘ಎಡ-ಬಲ’, ‘ಗಜೇಂದ್ರಮೋಕ್ಷ’, ‘ಆನಂದತೀರ್ಥರಿಗೆ’-ವಿಡಂಬನೆಯ ಧ್ವನಿಯೇ ಪ್ರಾಧಾನ್ಯತೆಯನ್ನು ಪಡೆಯುತ್ತದೆ. ಅಡಿಗರ ‘ಭೂಮಿಗೀತ’ದ ನಂತರದ ಮಹತ್ವದ ತಿರುವನ್ನು ಸೂಚಿಸುವ ‘ವರ್ಧಮಾನ’ ಸಂಕಲನದಲ್ಲಿ ಮೂರು ಮಹತ್ವದ ಧೋರಣೆಗಳನ್ನು ಗುರುತಿಸಬಹುದು : ವಿಚಾರದ ಆಕಾರದ ಮೇಲೆಯೇ ಬೇರೂರಿದ ಕವನಗಳು ; ವೈಚಾರಿಕ ನೆಲೆಯಿಂದ ಬಿಡಿಸಿಕೊಂಡ ಬಾಳಿಗೆ ಹತ್ತಿರವಾದ ಕವನಗಳು (‘ಕೂಪಮಂಡೂಕ’, ‘ನೆನಪುಗಳೆ ಹಾಗೆ’) ಹಾಗೂ ವಿಡಂಬನಾತ್ಮಕ ಕಾವ್ಯ, ಇಂತಹ ‘ವರ್ಧಮಾನ’ ಸಂಕಲನವನ್ನು ಪ್ರಕಟಿಸಿದರ ಹೊಸತರಲ್ಲಿಯೇ ತಮ್ಮ ಮುಂದಿನ ಮಜಲಿನ ‘ನೀ ಬಳಿಯೋಳಿ ರುವಾಗ್ಗೆ’ ಎನ್ನುವ ಪ್ರಾಪಂಚಿಕ ಕವನವನ್ನು ಪ್ರಕಟಿಸಿ, ‘ರಾಮನವಮಿಯ ದಿವಸ’ ದಂಥ ಅವನ ಮಣ್ಣಿನ ವಾಸನೆಯುಳ್ಳ ಜೀವನದ ತಾತ್ವಿಕತೆಯ ಕೊನೆಯ ಮೇರೆ ಎನ್ನುವುದನ್ನೂ ತೋರಿಸಿದ್ದಾರೆ.
`ನೀ ಬಳಿಯೊಳಿರುವಾಗ್ಗೆ’ ಕವನಕ್ಕೆ ಅರ್ಥದ ವಿವಿಧ ಛಾಯೆಗಳಿರುವದರಿಂದ ಹಾಗೂ ‘ವರ್ಧಮಾನ, ಸಂಕಲನದಲ್ಲಿಯ ಮೂರು ಸ್ಪಷ್ಟ ಧೋರಣೆಗಳನ್ನು ಏಕಗೊಳಿಸುವ ಪ್ರಯತ್ನಕ್ಕೆ ಅಡಿಗರು ಇಲ್ಲಿ ತೊಡಗುವದರಿಂದ ಈ ಕವನದ ಸ್ಥೂಲವಾದ ವಿಶ್ಲೇಷಣೆ ಅವಶ್ಯಕವಾಗುತ್ತದೆ. ‘ಕೂಪಮಂಡೂಕ’ ದ ಹಾಗೆಯೇ ಈ ಕವನವೂ ಮಾತಿನ ಮಧ್ಯದಿಂದಲೇ ಪ್ರಾರಂಭವಾಗುತ್ತದೆ. ಸಂಬೋಧಿಸಲ್ಪಡುತ್ತಿರುವ ‘ನೀ’ ಕವಿಯ ಅಂತರಾಳದಲ್ಲಿಯೇ ಇರುವ ಪ್ರಜ್ಞೆ, ನಿಶ್ಯಬ್ದವಾಗಿ ಹರಿಯುವ, ಕೇವಲ ದೈಹಿಕ ಪರಿಸರಣವನ್ನು ಹೊಂದಿದ ರಕ್ತದ ‘ಅಪ್ರಜ್ಞೆ’ಯನ್ನು ‘ನಿ’ ಎನ್ನುವ ಪ್ರಜ್ಞೆ ಅರಿಯಬೇಕಾಗಿದೆ ಎನ್ನುವ ಸೂಚನೆಯೊಡನೆ ಕವನ ಪ್ರಾರಂಭವಾಗುತ್ತದೆ. ಇದು ಪ್ರಜ್ಞೆಯು ಜಾಗ್ರತಾ ವಸ್ಥೆಯಲ್ಲಿದ್ದಾಗ ನಡೆಯಬೇಕಾದ ಕೆಲಸ ಸುತ್ತಲಿನ ಪರಿಸರಣದಲ್ಲಿ ನಡೆಯುವ ಕಾಫಿ ತಿಂಡಿ, ಊಟಗಳ ಯಾಂತ್ರಿಕ ಕ್ರಿಯೆಯ ನಡುವೆಯೂ ಈ ಪ್ರಜ್ಞೆ ಜಾಗ್ರತವಾಗುವುದುಂಟ, ಆಗ :
ಆಳುದ್ದ ತೆರೆಯೆದ್ದು ಅಲ್ಲೋಲ ಕಲ್ಲೋಲ
ರಕ್ತದೊತ್ತಡ ಹೆಚ್ಚಿ, ಎದೆಬಡಿತ ಚಡಪಡಿಸಿ
ಜ್ವರವೇರಿ ಹೆಂಚೆಲ್ಲ ಕಾದು ಕೆಂಪಾದಾಗ್ಗೆ
ಅರಳು ಹುರಿಯುವ ಮಾತಿಗಷ್ಟೇ ನಿನ್ನರಿವು, ನೀನೇ ಗುರಿ.
ಪ್ರಜ್ಞೆಯ ಜಾಗ್ರತಾವಸ್ಥೆಯಲ್ಲಿ ಮಾತುಗಳು ಅರಳು ಹುರಿದಂತ ಬಂದರೂ, ಅಲ್ಲಿಯ ಅರ್ಥಕ್ಕೆ ಮೂಲ ಪ್ರಜ್ಞೆಯ ಅರಿವಿದೆ. ಈ ಭಾಗದಲ್ಲಿ ಬರುವದೆಲ್ಲವೂ ಸಂಬೋಧನೆಯ ಧ್ವನಿಯಿಂದೊಡಗೂಡಿದ.
ಎರಡನೆಯ ಭಾಗದ ಪ್ರಾರಂಭದಲ್ಲಿ ಒಮ್ಮೆಲೇ ಕವನದ ಧ್ವನಿ ಬದಲಾಯಿಸಿ ಸ್ವಂತ ಮಾತಿನ ಧ್ವನಿಯೊಂದು ಒಡಮೂಡುತ್ತದೆ, ಜಾಗ್ರತಾವಸ್ಥೆಯ ಪ್ರಜ್ಞೆಯ ಅಲ್ಲೋಲ ಕಲ್ಲೋಲ ಮುಗಿದ ಮೇಲೆ ಸರೋವರದ ಮೇಲೆ ‘ಯಥಾ ಪ್ರಕಾರ ಸಣ್ಣಲೆಗಳುರುಳ ತೊಡಗುತ್ತವೆ.” ಇಲ್ಲಿ ಬರುವ ಸರೋವರದ ಪ್ರತಿಮೆಯ ಬೇರುಗಳು ಮೊದಲ ಭಾಗದ “ಆಳುದ್ದ ತೆರೆಯೆದ್ದು’ ಎನ್ನುವ ಪದಗಳಲ್ಲಿಯೇ ಇವೆ, ಇಲ್ಲಿಯ ಸಣ್ಣಲೆಗಳುರುಳುವದು ಕೂಡ ಮೊದಲ ಭಾಗದಲ್ಲಿಯ ಕಾಫಿ ತಿಂಡಿ ಊಟದ ಪರಿಸರಣದಷ್ಟೇ (ಯಥಾಪ್ರಕಾರ) ಯಾಂತ್ರಿಕ : ಆದರೆ `ರಕ್ತ ಪರಿಸರಣದಪ್ರಜ್ಞೆ’ ಗಿಂತ ಭಿನ್ನ, ಈಗ ಸರೋವರದ ಪ್ರತಿಮೆ ಡೋಣಿಗಳ ಪ್ರತಿಮೆಗೆ ದಾರಿ ಮಾಡಿಕೊಟ್ಟು, ದೈಹಿಕವಾಗಿ ಜೀವಿಸುವ ಮನುಷ್ಯ ಹಾಗೂ ಜಾಗ್ರತಾವಸ್ಥೆಯ ಪ್ರಜ್ಞೆಗಳು, ಉತ್ಕಟಾವಸ್ಥೆಯ ಘಳಿಗೆ ಕಳೆದ ಮೇಲೆ, ಇರುವ ಸ್ಥಿತಿಯನ್ನು ಚಿತ್ರಿಸುತ್ತವೆ. ಈ ಎರಡೂ ಮನುಷ್ಯನ ಅವಸ್ಥೆಗಳು ಸಮಾಂತರ ರೇಖೆಗಳಂತೆ, ಒಂದಕ್ಕೊಂದು ಕೂಡಿಕೊಳ್ಳಲಾರದಂತೆ ಇದ್ದರೂ ಇವೆರಡೂ ಸ್ಥಿತಿಗಳ ಮೇಲೆ,
ಯಾವ ಕನಸುಗಳೊ, ಕರ್ಮದುಣಿಸುಗಳೊ, ನಾಳ
ನಾಳದೊಳತಾಳಕ್ಕೆ ಯಾವ ಭಂಗಿಯೊ ಭಾವವೋ, ಬವಣೆ
ಯೋ-ಕೇಳಿದರೆ ಹೇಳಬಾರದ, ಹೇಳಿದರೂ ಕೂಡ
ತಿಳಿಯಲಾರದ ಕೊಕ್ಕೆ ಕೊಂಕು, ಅಂಕು ಡೊಂಕು
ಶಂಕೆ ಶಂಕು ಆತಂಕಗಳು.
ಆದರೆ ದೈಹಿಕವಾಗಿ, ಸದಾ ಆಡುವ ಮಾತು ಹಾಗೂ ಜಾಗ್ರತಾವಸ್ಥೆಯಲ್ಲಿ ಕೆಲಸ ಮಾಡುವ ಬುದ್ದಿಯ ನಡುವೆ ‘ಯಾತರವೊ ಕೊಲೆಪಾತಕಿಗಳು, ಹಾಗೂ ಇತಿಹಾಸ ಪೂರ್ವಕಾಲದ ಮುಸ್ಸಂಜೆ ನೆಳಲುಗಳು,’ ‘ರಕ್ತ ಪರಿಸರಣಪಪ್ರಜ್ಞೆ’ ಗೂ ಹಾಗೂ ಇಲ್ಲಿಯ ‘ಇತಿಹಾಸ ಪೂರ್ವಕಾಲಕ್ಕೂ ನಿಕಟ ಸಂಬಂಧ ಇದೆ ಎಂಬುದನ್ನು ಗಮನಿಸಬೇಕು, ಇತಿಹಾಸ ಪೂರ್ವಕಾಲದಲ್ಲಿದ್ದ ಕೇವಲ ದೈಹಿಕ ಅನ್ನಿಸಿಕೆಗಳಿಗಾಗಿ ಬರುತ್ತಿದ್ದ ಪ್ರತಿಕ್ರಿಯೆಯ ಪ್ರಜ್ಞೆಯಾಗಿದ್ದಲ್ಲದೇ ಪರಿಸರಣವೂ ಆಗಿತ್ತು, ಆದರೆ ಇಂದು, ಜಾಗ್ರತಾವಸ್ಥೆಯ ಪ್ರಜ್ಞೆಯ ಅರಳು ಹುರಿಯುವ ಬುದ್ಧಿಯ ಮಾತುಗಳು ದೈಹಿಕ ಕ್ರಿಯೆಯಾಗಿ ಸದಾ ಬರುವ ಮಾತಿಗಿಂತ ಭಿನ್ನವಾಗಿರುವವರಿಂದ, ‘ಮಾತು ಮತಿಗಳ’ ನಡುವೆ ‘ಇತಿಹಾಸ ಪೂರ್ವಕಾಲದ ಹೇಳಹೆಸರಿಲ್ಲದಲೆವ ಮುಸ್ಸಂಜೆ ಕೇಳಲುಗಳು’ ಹಾಗೂ ‘ನಿದ್ದೆ ಮಖಮಲ್ಲುಗಳ ಹರಿದು ಮುಖರವಾಗುವ ವ್ಯಾಘ್ರ ನಖದ ಹೊಸ ಗೀರುಗಳು.’ ಮಾತು ಹಾಗೂ ಜಾಗ್ರತೆಯ ನಡುವೆ ಅಪ್ರಜ್ಞೆಯ ಮೃದುವನ್ನು ಹರಿದು, ಧ್ವನಿಗಯ್ಯುವ ಹುಲಿಯುಗುರಿನ ಹೊಸ ಗೀರುಗಳು, ಇತಿಹಾಸ ಪೂರ್ವಕಾಲದ ಧ್ವನಿಗಳು, ಮಾತುಮತಿಗಳ ನಡುವೆ ವಿವಿಧ ರೂಪದಲ್ಲಿ ಜನ್ಮ ತಾಳುತ್ತವೆ.
ಆದರೆ ಜೀವನದಲ್ಲಿ ನಡೆಯುವ ಈ ಎಲ್ಲ ಕ್ರಿಯೆಯ ಸಹ್ಯ, ಅಥವಾ ನಿತ್ಯದ್ದಲ್ಲದ “ಕುದಿಮಡಕೆ ತಳದಲ್ಲಿ ನಿತ್ಯದ ನಿರಾತಂಕ ಗಟ್ಟಿಯೋಡು, ಮೊದಲ ಭಾಗದಲ್ಲಿ ಬರುವ ಜಾಗ್ರತ ಪ್ರಜ್ಞೆಯೇ ಇಲ್ಲಿ “ನಿತ್ಯದ್ದಲ್ಲದ ಕುದಿಮಡಕೆ’ಯ ರೂಪವನ್ನು ತಾಳುತ್ತದೆ. ಈ ಮಡಕೆಯಲ್ಲಿ ಕುದಿಯುವ ವಸ್ತುವೊಂದಿದ್ದರೂ ಇದರ ತಳ ಮಾತ್ರ ಕಾಯಿಗಳ ಒಳ ಭಾಗವನ್ನು ರಕ್ಷಿಸಲು ನಿಸರ್ಗದಿಂದಲೇ ನಿರ್ಮಿತವಾದ ಗಟ್ಟಿಯೋಡು, ನಿತ್ಯದ್ದಲ್ಲದ ಜಾಗ್ರತ ಪ್ರಜ್ಞೆಯ ಅಲ್ಲೋಲ ಕಲ್ಲೋಲವನ್ನು ಕಾಪಾಡುವದು ನಿರಾತಂಕವಾದ ನಿತ್ಯ : ಜೀವನದಲ್ಲಿ ಅಭೇದ್ಯವಾಗಿ ಉಳಿಯುವ ವಿಧಿವಿಧಾನಗಳು, ಕಾಫಿ, ತಿಂಡಿ, ಊಟ ಹಾಗೂ ‘ಸರೋವರದ ಮೇಲೆ ಯಥಾ ಪ್ರಕಾರ ಸಣ್ಣಲೆಗಳುರುಳುವದು,- ಇವೆಲ್ಲ ‘ನಿತ್ಯದ ನಿರಾತಂಕ ಗಟ್ಟಿಯೋಡಿನಲ್ಲಿಯೇ ಒಳಗೊಂಡಿವೆ.
‘ತಾಳ ತಪ್ಪಿ ಅಥವಾ ತಾಳದಿಂದ ತಾಳಕ್ಕೆ ಜಿಗಿಯುವ ಬಗೆಗೆ ಸದಾ ಶ್ರುತಿ ಹಿಡಿದು ಮೂಲ ತಾಳದ ಲಯವ ಹೊತ್ತು ನಿಲ್ಲುವ ಪುಂಗಿ’ಯ ಪ್ರತಿಮೆ ಕೂಡ ಸೂಚಿತವಾಗಿರುವದು ಗಟ್ಟಿಯೋಡಿನಿಂದಲೆ, ಹಾಗೆಯೇ ಕೊನೆಯ ಭಾಗದಲ್ಲಿ ನಿತ್ಯ ಕರ್ಮಗಳೆಲ್ಲವೂ ಪುಂಗಿಯ ಶ್ರುತಿಯ ರೂಪವನ್ನು ತಾಳುತ್ತವೆ. ಮೊದಲ ಎರಡು ಭಾಗದಲ್ಲಿ ಚಿತ್ರಿತವಾಗಿರುವ ಮೂರ್ತರೂಪದ ಕ್ರಿಯಾ ವಿಧಾನಗಳೆಲ್ಲ ಈಗ ಮುಟ್ಟಲು ಮೂಸಲು ಬಾರದ ಪುಂಗಿಯ ಶ್ರುತಿಯ ಧ್ವನಿರೂಪವನ್ನು ತಾಳುತ್ತವೆ. ನಿತ್ಯಜೀವನದಲ್ಲಿ ತಾಳ ತಪ್ಪಿ ಅಥವಾ ಒಂದು ತಾಳದಿಂದ ಇನ್ನೊಂದು ತಾಳಕ್ಕೆ ಜಿಗಿಯುವ ಬಾಹ್ಯ ಜಗತ್ತಿನ ರೀತಿಗೆ ಶ್ರುತಿ ಹಿಡಿದೂ ಮೂಲತಾಳದ ಲಯವ ಹೊತ್ತು ನಿಲ್ಲುವ ಪುಂಗಿಯ ಶ್ರುತಿ, ನಮ್ಮ ನಿತ್ಯ ಕರ್ಮಗಳೆ, ಆದರೆ ಈ ಸೋರೆ ಬುರುಡೆ ಬಳಿ ಅಂದರೆ ಗಟ್ಟಿಯೋಡಿನಿಂದಲೇ ಈಜುವದಕ್ಕೆಂದು ಮಾಡಿದ ಸಾಧನದ ಸಮೀಪ ಇರುವವರೆಗೂ ಜೀವನ ಕೇವಲ ತಲೆ ಬುರುಡೆಯಾಗುವ ಅಪಾಯವಿಲ್ಲ: ನಿತ್ಯದ ವಿಧಿವಿಧಾನಗಳನ್ನು ಮಾಡುತ್ತ ಹೋಗುವದರಿಂದ ಜಾಗ್ರತ ಪ್ರಜ್ಞೆ ಇಲ್ಲದ ಸಾವು ಅಸಂಭವ. ಈಗ ಹೃದಯಕಮಲದ ಹಾಗೆ ಇದ್ದ ಜಾಗ್ರತ-ಪ್ರಜ್ಞೆಯ ‘ಮಧ್ಯವೆ ರೂಪು ತಳೆವ ತ್ರಿಜ್ಯಗಳಸಂಖ್ಯಕ್ಕೆ ಗುರಿಮುಡಿ ತಣಿವು ತರುವ ಸಾಮತೇಜಸ್ಸೇ, ನಮಸ್ಕಾರ’ : ಜಾಗ್ರತ ಪ್ರಜ್ಞೆಯನ್ನು ವರ್ತುಲದ ಕೇಂದ್ರವನ್ನಾಗಿ ಪರಿಗಣಿಸಿ, ಅಲ್ಲಿಂದ ಹೊರಡುವ ಅಸಂಖ್ಯಾತ ವಿಚಾರಗಳಿಗೆ, ‘ಗುರಿ, ಮುಡಿ, ತಣಿವು’, ತರುವ ಸಮಾಧಾನದ ಸೈರಣೆಯ ತೇಜಸ್ಸು, ನಮಸ್ಕಾರಕ್ಕೆ ಪಾತ್ರವಾಗುತ್ತದೆ, ಕವನದ ಕೊನೆಗೆ ಬರುವ ವರ್ತುಲದ ಪ್ರತಿಮೆ ಪ್ರಾಚೀನರ, ಋಗೈದವನ್ನು ಕೇಂದ್ರವನ್ನಾಗಿಯೂ, ಯಜುರ್ವೇದವನ್ನು ತ್ರಿಜ್ಯವನ್ನಾಗಿಯೂ, ಸಾಮವೇದವನ್ನು ಪರಿಧಿಯನ್ನಾಗಿಯೂ ರೂಪಿಸಿದ ಪ್ರತಿಮೆಯನ್ನು ನೆನಪಿಗೆ ತರುತ್ತದೆ. ದೇವತೆಗಳು ಮಾಡಿದ ಯುಜ್ಞದಿಂದಲೇ ಋಗೈದವು ಹೊರಟಿತೆಂಬ ನಂಬುಗೆಯನ್ನು ನೆನೆದುಕೊಂಡರೆ, ಕವನದಲ್ಲಿ ಬರುವ ‘ಇತಿಹಾಸಪೂರ್ವಕಾಲದ’ ಅರ್ಥ ಹೆಚ್ಚು ಸ್ಪಷ್ಟವಾಗುತ್ತದೆ, ಹಾಗೆಯೇ ಯಜುರ್ವೇದವು ಯಜ್ಞಯಾಗಾದಿ ಕರ್ಮಗಳಿಗೋಸ್ಕರ ರಚಿತವಾದದ್ದೆನ್ನುವದನ್ನು ಗಮನಿಸಿದರೆ ಇಲ್ಲಿಯ ‘ನಿತ್ಯದ ನಿರಾತಂಕ ಗಟ್ಟಿಯೋಡಿನಲ್ಲಿ ಸೂಚಿತವಾಗಿರುವ ಧೋರಣೆಯ ಅರಿವು ಬರಬಹುದು. ಇನ್ನು ಸಾಮವೇದವು ಹೆಚ್ಚಾಗಿ ಋಗ್ವೇದಗಳಲ್ಲಿಯ ಮಂತ್ರಗಳನ್ನೇ ಒಳಗೊಂಡಿದ್ದು (ಮೂಲ ತಾಳದ ಲಯವ ಹೊತ್ತು ನಿಲ್ಲುವ ಪುಂಗಿ) ಇಲ್ಲಿ ಸಂಗೀತವೇ ಪ್ರಾಧಾನ್ಯತೆಯನ್ನು ಪಡೆಯುತ್ತದೆ. ವರ್ತುಲದ ಪ್ರಾಚೀನ
ಪ್ರತಿಮೆಯ ಅರಿವನ್ನು ಮೂಡಿಸುವದಕ್ಕಾಗಿಯೇ ಕವನದ ಕೊನೆಯ ಭಾಗದಲ್ಲಿ ಪುಂಗಿಯ ಪ್ರತಿಮೆಯನ್ನು ಬಳಸಲಾಗಿದೆ ಎನ್ನುವದನ್ನು ಗಮನಿಸಬೇಕು.
ಈ ಕವನದ ಅರ್ಥ ಇಷ್ಟಕ್ಕೇ ಸೀಮಿತವಾಗಿದ್ದರೆ ಅಡಿಗರ ಗಂಭೀರ ಕವನಗಳ ಸಾಲಿಗೇ ಈ ಕವನವೂ ಸೇರುತ್ತಿತ್ತು, ಇಲ್ಲಿ ಬರುವ “ನೀ’ ಎನ್ನುವ ಜೀವ ಕವಿಯಿಂದ ಹೊರತಾಗಿ ಹೊರಗೆಯೂ ಇದೆ ಎಂದು ತಿಳಿದು ಅರ್ಥೈಸಿದರೆ ಕವನ ಒಂದು ಬೇರೆ ಅರ್ಥದ ಛಾಯೆಯನ್ನೇ ಪಡೆಯುತ್ತದೆ. ಇದಕ್ಕೆ ಕಾರಣ ಅರ್ಥೈಸುವವರ ಧೋರಣೆಯಲ್ಲ, ಆದರೆ ಕವನದಲ್ಲಿಯೇ ಅದ್ಭುತವಾಗಿ ಬಳಸಲ್ಪಟ್ಟ ಶ್ಲೇಷೆಗಳು. ‘ಬಳಿ’ ಎನ್ನುವ ಪದಕ್ಕೆ ‘ತೊಡೆ’ ಎನ್ನುವ ಅರ್ಥವೂ ಇದೆ ಎಂಬುದನ್ನು ಗಮನಿಸಿದಾಗ ಗಂಡು ಹೆಣ್ಣಿನ ಬಗೆಗಿನ ಸಂಬಂಧದ ಕವನವೂ ಇದು ಹೌದು ಎಂಬುದು ಸ್ಪಷ್ಟವಾಗುತ್ತದೆ. ಅವಳು ಕವಿಯ ದೈಹಿಕ ಭಾಗವೇ ಆದಾಗ, ಹೃದಯ ಕಮಲವೇ ಆದಾಗ, ದೈಹಿಕ ಆಶೆಗೆ ಸಂಪೂರ್ಣ ಪ್ರತಿಕ್ರಿಯೆ ದೊರೆತಾಗ, ‘ನರನಾಡಿಯಲ್ಲಿ ಹರಿಯುವ ರಕ್ತ ಪರಿಸರಣದಪ್ರಜ್ಞೆ’ಯನ್ನು ಬಗೆಯಬೇಕು ಕವಿ, ಮುಂದೆ ಬರುವ ಊಟ, ತಿಂಡಿ, ಕಾಫಿಗಳು ದಾಂಪತ್ಯ ಜೀವನದ ಅವಿಭಾಜ್ಯ ಅಂಗವೆಂಬ ಅಂಶಗಳ ಚಿತ್ರಣವಿದ್ದರೆ, ಈ ನಡುವೆ ‘ಹೊತ್ತಿಕೊಳ್ಳುವ ಧಗೆಗೆ / ಆಳುದ್ದ ತೆರೆಯೆದ್ದು ಅಲ್ಲೋಲ ಕಲ್ಲೋಲ’, ಇತ್ಯಾದಿ-ದಾಂಪತ್ಯ ಜೀವನದ ವಿರಸವನ್ನು ಚಿತ್ರಿಸುತ್ತದೆ. ಈ ವಿರಸದಲ್ಲಿ `ಅರಳು ಹುರಿದಂತೆ’ ಬರುವ ಮಾತಿಗೆಲ್ಲ ಹೆಂಡತಿಯ ಗುರಿ.
ಎರಡನೆಯ ಭಾಗದಲ್ಲಿ ಬರುವ ಸರೋವರದ ಚಿತ್ರ ದಾಂಪತ್ಯದಿಂದೊಡಗೂಡಿದ ಪ್ರತಿ ನಿತ್ಯದ ಜೀವನವನ್ನು ಚಿತ್ರಿಸುತ್ತದೆ.
‘ಅತ್ತಿತ್ತ ಸರಿದು ಬಳಿ ಬಳಿಯೆ ಬಿಳಿ ಬಿಳಿ ಹಾಯಿ ಕಾಯುವವು ಬಿಸಿಲಲ್ಲಿ’ ಎನ್ನುವಲ್ಲಿ ಮತ್ತೆ ಲೈಂಗಿಕ ಪ್ರತಿಮೆಗಳ ಬಳಕೆಯ ಸೂಚನೆ ಇದೆ, ಸಂಜೆಗೆಂಪಲ್ಲಿ’, ‘ಇರುಳಿನ ಇರಸು ಮರಸಲ್ಲಿ’ ಎನ್ನುವಲ್ಲಿ ದಾಂಪತ್ಯ ಜೀವನದ ಅನ್ಯೂನ್ಯತೆಯ ಚಿತ್ರಣವಿದ್ದರೂ ಮುಂದೆ ಬರುವ ‘ಸಮಾಂತರ ರೇಖೆ’ಗಳ ಮೇಲೆ ಎನ್ನುವ ಪದಗಳು ಈ ಅನ್ಯೂನ್ಯತೆ ಎಂಥದು ಎನ್ನುವದನ್ನು ಅರಿವಿಗೆ ತರುತ್ತವೆ (ಎರಡು ಹೃದಯಗಳ ಆಜನ್ಮ ಕೌಮಾರ್ಯತ್ವವೇ ದಾಂಪತ್ಯಜೀವನದ ದುರಂತ ಎನ್ನುವ ಯೋಟ್ಸನ ಮಾತನ್ನು ನೆನಪಿಗೆ ತರುತ್ತವೆ ಈ ಸಾಲುಗಳು) ಮುಂದೆ ಬರುವ ಸಾಲುಗಳು ಗಂಡಹೆಂಡಿರ ಅಂತರಂಗದಲ್ಲಿ ನಡೆಯುವದನ್ನು ಒಬ್ಬರೊಬ್ಬರು ತಿಳಿಯಲಾರರು ಎನ್ನುವದನ್ನು ಧ್ವನಿಸುತ್ತವೆ. ಆದರೆ ಇಬ್ಬರೂ ಕೂಡುವ ಘಳಿಗೆಯಲ್ಲಿ ವ್ಯಕ್ತವಾಗುವ ಪ್ರತಿಕ್ರಿಯೆಯಲ್ಲಿಯೇ ‘ನಿಶ್ಯಬ್ದ ಹರಿಯುವ ರಕ್ಕೆ ಪರಿಸರಣದಪ್ರಜ್ಞೆ’ಯನ್ನು ಬಗೆಯಬೇಕಾಗಿದೆ. ಇಬ್ಬರ ನಡುವೆ ನಡೆಯುವ ಮಾತು ಹಾಗೂ ಕವಿಯ ಬುದ್ದಿಯ ನಡುವೆ ‘ಯಾತರವೊ ಆತತಾಯಿಗಳು’, ‘ಇತಿಹಾಸ ಪೂರ್ವ ಕಾಲದ-‘ ಪ್ರತಿಕ್ರಿಯೆಯಲ್ಲಿಯೇ ಪರಿಸರಣ ನಿರ್ಮಾಣವಾಗುತ್ತಿದ್ದ ಕಾಲದ-ಹೇಳ ಹೆಸರಿಲ್ಲದಲೆವ ಬೃಹದಾಕೃತಿಯ ಮುಸ್ಸಂಜೆ ನೆಳಲುಗಳು’, ಇಬ್ಬರ ನಡುವೆ ಮೂಲ ಭೂತವಾಗಿ ರಕ್ತದಲ್ಲಿಯೇ ಇರುವ ಆಶೆ ಪ್ರತಿಕ್ರಿಯೆಯಲ್ಲಿ ಆವಿಷ್ಕಾರಗೊಳ್ಳುತ್ತದೆ: ಈ ಪ್ರತಿಕ್ರಿಯೆ ಯಲ್ಲಿಯೇ ಇತಿಹಾಸ ಪೂರ್ವಕಾಲದ ಚಿತ್ರಣವಿದೆ. ಇದಲ್ಲದೇ ‘ಮಾತು ಮತಿಗಳ ನಡುವೆ’ ;
ನಿದ್ದೆ ಮಖಮಲ್ಲುಗಳ ಹರಿದು ಮುಖರವಾಗುವ ವ್ಯಾಘ್ರ
ನಖದ ಹೊಸ ಗೀರುಗಳು.
‘ನಿದ್ದೆ ಮಖಮಲ್ಲಗಳ ಹರಿದು’ ಎನ್ನುವ ಪದಗಳು ಸುಖ ನಿದ್ರೆಯ ಚಿತ್ರಣವನ್ನು ಕೊಟ್ಟರೆ ‘ಮುಖರವಾಗುವ ವ್ಯಾಘ್ರ ನಖದ ಹೊಸ ಗೀರುಗಳು’ ಎನ್ನುವ ಪದಗಳು ಇದಕ್ಕೆ ವಿರುದ್ದವಾದ ಸೂಕ್ಷ್ಮವಾದ ಸಿನೆಸ್ಥೇಸಿಯಾವನ್ನು ನಿರ್ಮಿಸುತ್ತವೆ : ಧ್ವನಿಗೈ ಯುವ `ಹುಲಿಯ ಗೀರುಗಳು’ ಮತ್ತೆ ದಿನ ನಿತ್ಯ ನಡೆಯುವ ಹೊತ್ತಿಕೊಳ್ಳುವ ಧಗೆ’ ಯನ್ನೇ ನೆನಪಿಗೆ ತರುತ್ತವೆ.
ಮೂರನೆಯ ಭಾಗದ ಪ್ರಾರಂಭದಲ್ಲಿ ದಾಂಪತ್ಯ ಜೀವನದ ಈ ಎಲ್ಲವೂ ಸಹ್ಯ ಎನ್ನುವ ನಿರ್ಧಾರವಿದೆ. ಮೊದಲ ಭಾಗದ ಅಪ್ರಜ್ಞೆಯನ್ನು ಬಗೆಯುವ ‘ಮತಿ’ ಗೆ ಸಂಬಂಧಿಸಿದ ವಿಚಾರವನ್ನು ಬಿಟ್ಟರೆ ಮೊದಲಿನ ಎರಡು ಭಾಗದಲ್ಲಿ ಬರುವುದೆಲ್ಲವೂ ದಿನ ನಿತ್ಯ ನಡೆಯುವ ವಿಧಿಗಳೆ, ನಿತ್ಯದ್ದಲ್ಲದ (ನೈಮಿತ್ತಿಕದ) ಮತಿಗೆ ಸಂಬಂಧಿಸಿದ ‘ಕುದಿಮಡಕೆ ತಳದಲ್ಲಿ’ ನಿತ್ಯದ ವಿಧಿವಿಧಾನಗಳ ಗಟ್ಟಿಯೋಡಿದೆ. ಇಬ್ಬರೂ ಸೋರೆಬುರುಡೆ ಬಳಿ ಇರುವವರೆಗೂ ಸರೋವರದಲ್ಲಿ ಮುಳುಗುವ ಅಪಾಯವಿಲ್ಲ. ಈ ಮೊದಲು ವಿವರಿಸಿದ ಕೊನೆಯ ಭಾಗದ ಅರ್ಥಕ್ಕೂ ‘ನೀ’ ಎನ್ನುವದು ಹೊರಗಿರುವಾಗ ಸಂಬೋಧಿಸಿದಾಗ ಇರುವ ಅರ್ಥಕ್ಕೂ ಇರುವ ಒಂದು ಮಹತ್ವದ ಭೇದವನ್ನು ಇಲ್ಲಿ ಗಮನಿಸಬೇಕು, ‘ಸಾಮ’ ಎನ್ನುವ ಶಬ್ದಕ್ಕೆ ಹೆಚ್ಚು ಮಾತನಾಡುವ’ ಎನ್ನುವ ಅರ್ಥವೂ ಇದೆ. ಹೃದಯ ಮಧ್ಯವೇ ರೂಪು ತಳೆವ ಅಸಂಖ್ಯ ಭಾವನೆಗಳಿಗೆ ಹೆಚ್ಚು ಮಾತನಾಡುವ ಈ ತೇಜಸ್ಸು ಗುರಿ, ಮುಕ್ಕಿ, ತಣಿವನ್ನು ತರುತ್ತದೆ. ಎರಡನೆಯ ಭಾಗದ ‘ಮಖರ’ (ಧ್ವನಿಮಾಡುವ) ಎನ್ನುವ ಪದ ಈ ಅರ್ಥವನ್ನೇ ಪುಷ್ಟೀಕರಿಸುತ್ತದೆ ಎಂಬುದನ್ನು ಗಮನಿಸಬೇಕು, ಈಗ ಇಂಥ ಸಾಮ ತೇಜಸ್ಸಿಗೆ ಹೇಳುವ ನಮಸ್ಕಾರ ಸೂಕ್ಷ್ಮ ವ್ಯಂಗ್ಯವೂ ಆಗಿ ಪರಿಣಮಿಸುವದರಿಂದ, ಮೊದಲಿನ ಅರ್ಥದ ಛಾಯೆಗಿಂತ ಈ ಅರ್ಥ ತೀರ ಭಿನ್ನವಾಗುತ್ತದಲ್ಲದೇ ಕವನದ ಇನ್ನೊಂದು ಮಗ್ಗುಲನ್ನು ತೆರೆದು ತೋರಿಸುತ್ತದೆ.
ವಯ್ಯಕ್ತಿಕವಾದ ಜಾಗ್ರತ ಪ್ರಜ್ಞೆಯ ಬಗ್ಗೆ ಪ್ರತಿಮಾ ವಿಧಾನವನ್ನು ಉಪಯೋಗಿಸಿಯೇ ಬರೆದ ಗಂಭೀರ ಕವನ, ದಾಂಪತ್ಯ ಜೀವನದ ಬಗೆಗಿನ ಕವನವೂ ಆಗಿರುವದು, ಅಡಿಗರ ಭಾಷೆಯ ಬಗೆಗಿನ ಧೋರಣೆಯಲ್ಲಾಗಿರುವ ಬದಲಾವಣೆಯನ್ನೂ ಸೂಚಿಸುತ್ತದೆ. ಈ ವರಗೆ ಶಬ್ದಗಳನ್ನು ಜೀವಂತ ಗಟ್ಟಿಗಳೆಂದು ಬಗೆದು ವಾತಾವರಣ ನಿರ್ಮಿತಿಯಲ್ಲಿ ತೊಡಗಿದ ಈ ಕವಿ ಈಗ ಭಾಷೆಯ ಪಾರದರ್ಶಕತೆಯನ್ನೂ ಬಳಸಿಕೊಂಡುದಲ್ಲದೇ ಶ್ಲೇಷೆಗಳ ಉಪಯೋಗದ ಅನುಕೂಲತೆಯತ್ತ ನಮ್ಮ ಗಮನವನ್ನೂ ಸೆಳೆದಿದ್ದಾರೆ. ಭಾಷೆಯ ಪಾರದರ್ಶಕತೆಯ ಉಪಯೋಗವೇ ಈ ಕವನಕ್ಕೆ ಗಂಭೀರವಾದ ಹಾಗೂ ವ್ಯಂಗ್ಯದ ಛಾಯೆಗಳನ್ನು ಏಕಕಾಲಕ್ಕೆ ಪ್ರಕಟಗೊಳಿಸುವದಕ್ಕೆ ನೆರವಾಗಿದೆ, ಶ್ಲೇಷೆಗಳ ದುಂದು ಬಳಕೆಯನ್ನು ಕಂಡ ನಮಗೆ ಈ ಕವನ ನಮ್ಮ ಭಾಷೆಗಿರುವ ಶ್ಲೇಷೆಗಳ ಅನು ಕೂಲತೆಯತ್ತ ಗಮನ ಸೆಳೆಯುವದರ ಜೊತೆಗೆ, ಬರಡಾಗುತ್ತಿರುವ ಕನ್ನಡ ಕಾವ್ಯ ಕ್ಷೇತ್ರದಲ್ಲಿ ಆಶಾಕಿರಣವಾಗಿ ಮೂಡಿಬರುತ್ತದೆ. ಆದರೆ ಸಂಬೋಧಿಲ್ಪಡುತ್ತಿರುವ ಜೀವ ಅಂತರಾಳ ದಲ್ಲಿಯೇ ಇರಲಿ ಅಥವಾ ಹೊರಗೆ ಇರಲಿ, ‘ಗಟ್ಟಿಯೋಡು’ ಎನ್ನುವ ಪ್ರತಿಮೆ ಕವಿಯ ಹಾಗೂ ಸಮಾಜದ ಸಂಬಂಧವನ್ನು ಸೂಚಿಸುವ ಪ್ರತಿಮೆ ಎನ್ನುವದು ಸ್ಪಷ್ಟ, ಇಂಥ ವೈಯಕ್ತಿಕ ಜರೂರಿಯ ಕವನಗಳನ್ನು ಬರೆಯುವಾಗ ಸಾಮಾಜಿಕ ಸಂಬಂಧವನ್ನು ಅಡಿಗರು ಕೇವಲ ಪ್ರತಿಮೆಯ ಮೂಲಕ ಸೂಚಿಸಿದರೆ ವೈಯಕ್ತಿಕತೆಗೆ ಇಡೀ ಕವನವೆ ಒಂದು ಸಂಕೇತವಾಗುವದರ ಜೊತೆಗೆ ಆ ವೈಯಕ್ತಿಕತೆಯ ವಿವಿಧ ಮಗ್ಗುಲಗಳನ್ನು ಆಳವಾಗಿ ಸ್ಪರ್ಶಿಸುವ ತುಡಿತವನ್ನು ಕವನದಲ್ಲಿ ಕಾಣುತ್ತೇವೆ, ಇನ್ನು ಅದಕ್ಕೆ ವಿರುದ್ದವಾಗಿ ಕೇವಲ ಸಾಮಾಜಿಕತೆಯ ಬಗ್ಗೆ ಬರೆದ ಕವನಗಳೆಲ್ಲ ವಿಡಂಬನೆಯತ್ತ ತಿರುಗಿ ಅಲ್ಲಿ ಬರುವ ವೈಯಕ್ತಿಕತೆ ವಿಷಾದವನ್ನು ಸೂಚಿಸುವದಕ್ಕೆ ಮಾತ್ರ ಉಪಯೋಗಿಸಲ್ಪಡುತ್ತದೆ, ಇದಕ್ಕೆ ಸ್ಪಷ್ಟವಾದ ಉದಾಹರಣೆ ಎಂದರೆ ‘ದೆಹಲಿಯಲ್ಲಿ’, ಈ ದೇಶದ ಹದಗೆಟ್ಟ ವಾತಾವರಣವನ್ನು ‘ಹೆಣ’ದ ಪ್ರತಿಮೆಯನ್ನು ಕೇಂದ್ರವಾಗಿಟ್ಟುಕೊಂಡು ಚಿತ್ರಿಸಿದಾಗಲೂ,
ಹೆಣದ ವಾಸನೆ ತಡೆಯದಾದೆನಯ್ಯೋ, ದಮ್ಮು
ಕಟ್ಟಿ ಧುಮುಕಿದೆನಿತ್ತ ದಿಳ್ಳಿಯ ಕಡೆ ;
ತುತ್ತು ಕಸಿಯುವ ಹೆಣದ ಕೈಗೆ ಕನ್ನಡದ ತೊಡ
ಇತ್ತು: ಬದುಕುವ ಆಸೆಗಷ್ಟೋ ಎಡೆ.
ಎನ್ನುವ ಸಾಲುಗಳಲ್ಲಿ ಬರುವ ವೈಯಕ್ತಿಕತೆಯಲ್ಲಿ ಆಳವಾದ ವಿಷಾಧವನ್ನು ಕಾಣುತ್ತೇವೆಯಾದರೂ ವೈಯ್ಯಕ್ತಿಕತೆಗೆ ಭಾಷೆಯನ್ನು ತೊಡಿಸುವ ಛಲ ಕಾಣುವದಿಲ್ಲ, ಅಂದರೆ ಅಂತರಾಳವನ್ನು ಬಗೆದು ಬರೆವ ಅಡಿಗರ `ನೀ ಬಳಿಯೊಳಿರುವಾಗ್ಗೆ’ ಕವನದಲ್ಲಿ ಬರುವ ಸಾಮಾಜಿಕ ಸಂಬಂಧ ಸೂಕ್ಷವಾಗಿ ಮೂಡಿದರೂ ನಾಟಕೀಯತೆಯಿಂದ ದೂರವಾಗಿ ಉಳಿದು ಪ್ರತಿಮೆಗಳನ್ನು ಆಶ್ರಯಿಸುತ್ತದೆ. ಇನ್ನು ಕೇವಲ ಸಾಮಾಜಿಕ ಕಾಳಜಿಗಳನ್ನುಳ್ಳ ಕವನ ‘ದೆಹಲಿಯಲ್ಲಿ’ ಒಂದು ಸನ್ನಿವೇಶದ ನಾಟಕೀಯ ಶಕ್ತಿಯುತವಾದ ಚಿತ್ರಣ ದೊಡನೆ ವೈಯಕ್ತಿಕತೆ ವಿಷಾದದ ರೂಪವನ್ನು ತಾಳುತ್ತದೆ.
‘ದೆಹಲಿಯಲ್ಲಿ’ ಮತ್ತು ‘ಭಗ್ನ’ ಕವನಗಳು, ಜನಸಾಮಾನ್ಯರ ಕಾವ್ಯವನ್ನು ಬರೆಯುವ ಕಡೆಗಿನ ಪ್ರಯತ್ನಗಳೆಂಬುದು ಸ್ಪಷ್ಟವಾಗಿದೆ, ‘ನೀ ಬಳಿಯೊಳಿರುವಾಗ್ಗೆ’ ಯಲ್ಲಿಯ ಸುಸಂಬದ್ಧವಾದ ಪ್ರತಿಮಾವಿಧಾನದ ಚೌಕಟ್ಟನ್ನು ಮುರಿದು ‘ದೆಹಲಿಯಲ್ಲಿ’ ಕವನದಲ್ಲಿ ಅಡಿಗರು ಗದ್ಯಕ್ಕೆ ತೀರ ಸಮೀಪವಾದ ಭಾಷೆಯನ್ನು ಬಳಸಿ ಉಸಿರುಕಟ್ಟಿಸುವಂಥ ವಾತಾವರಣ ನಿರ್ಮಿತಿಯಲ್ಲಿ ತೊಡಗುತ್ತಾರೆ, ಇರುವ ವ್ಯಂಗ್ಯವೆಲ್ಲವೂ ನೇರವಾಗಿಯೇ ಇದೆ, ಶ್ರೀಸಾಮಾನ್ಯನೊಬ್ಬ ಓದಿದರೂ ತಟ್ಟುವಂತಹ ಕಾವ್ಯ ಓಘವಿದೆ, ‘ಭಗ್ನ’ ನಾಲ್ಕು ನುಡಿಗಳನ್ನುಳ್ಳ ವಚನಗಳನ್ನು ನೆನಪಿಗೆ ತರುವಂಥ ಕವನವಾದರೂ, ವ್ಯಂಗ್ಯದ ಚಿಗುರೊಡೆದಾಗ ‘ದೆಹಲಿಯಲ್ಲಿ’ ಬರುವಂತಹ ಆರ್ತಧ್ವನಿ ಇಲ್ಲಿ ಇಲ್ಲ. ಅಂತರಂಗದಲ್ಲಿ ನಡೆಯುವ ಬಾಹ್ಯದ ಯೋಚನೆಯನ್ನು ನಿಶ್ಯಬ್ದವಾದ ವಾಕ್ಯಪುಂಜಗಳಿಂದ ಚಿತ್ರಿಸಲಾಗಿದೆ. ಅಡಿಗರ ಪ್ರಾರಂಭದ ಕಾವ್ಯದ ಭಾವಗೀತೆಯ ಲಯಗಳನ್ನು ಇಲ್ಲಿ ಮತ್ತೊಮ್ಮೆ ಕಾಣುತ್ತೇವೆ.
ಕಾರ್ಮೋಡ ಕಿಕ್ಕಿರಿದು ಮುಗಿಲು ಮಿಂಚಿನ ತತ್ತಿ:
ತಳಕ್ಕೆ ಬೆಳಕಿನ ಮರಿಗಳಿಳಿಯಲಿಲ್ಲ ;
ಅಷ್ಟೊಂದು ಮಿಂಚು ಮಿಂಚಿದ್ದಕ್ಕೆ ಅಡಿಗೆ ಮನೆ ಒಲೆಯ ತರಗೆಲೆ ಕೂಡ ಹತ್ತಲಿಲ್ಲ.
ಎರಡು ಹಾಗೂ ಮೂರನೆಯ ನುಡಿಗಳಲ್ಲಿ ‘ಕೂದಲೆಳೆ ಕತ್ತಿ ಕೆಳಕುಳಿತಾಗ’ ಬರುವ ಭೀತಿ, ತ್ಯಾಗದ ಫಲವಾಗಿ ಬಂದ ದೈಹಿಕ ಅನರ್ಥ, ‘ಹಿಡಿ ಮಣ್ಣು ಹಿಡಿ ಹೊನ್ನುಕಲಸಿ ಹೊಳಗೆಸೆದರೂ ಜೀವನದಲ್ಲಿ ಪಡೆದ ನಿರರ್ಥಕತೆ, ಅಯೋಗ್ಯರು ಸ್ಥಾನವನ್ನ ಅಲಂಕರಿಸಿದರೂ ಸ್ನಾನದ ಮಾನ ಕಡಿಮೆಯಾಗದ ರೀತಿ-ಇವೆಲ್ಲ ಸೂಚ್ಯವಾಗಿ, ನುಡಿ ಕಟ್ಟಿನ (Stanza Form) ಚೌಕಟ್ಟಿನಲ್ಲಿ ಮೂಡಿಬಂದಿವೆ, ಆದರೆ ಕೊನೆಯ ನುಡಿ ವ್ಯಂಗ್ಯವಾಗಿ ಪರಿಣಮಿಸದೇ ಜೀವನದ ಕರ್ಮದ ಬಗ್ಗೆ ವ್ಯಾಖ್ಯೆಯಾಗಿ ಮೂಡಿ ಬರುತ್ತದೆ.
ಈ ಮೂರು ಕವನಗಳನ್ನು ಅಭ್ಯಸಿಸಿದ ನಂತರ ಅಡಿಗರು ತಮ್ಮ ಕಾವ್ಯ ಜೀವನದ ಹಂತವೊಂದರಲ್ಲಿದ್ದಾರೆ ಎಂದೆನಿಸುತ್ತದೆ. ವ್ಯಂಗ್ಯ ಬಂದಾಗ ಚೀತ್ಕಾರವಾಗದ ಕಾವ್ಯ ಧ್ವನಿಯನ್ನೂ ಈ ಕವನಗಳಲ್ಲಿ ಕಾಣುವದರ ಜೊತೆಗೇಸಾಮಾಜಿಕ ಹಾಗೂ ವಯಕ್ತಿಕ ಜರೂರಿಗಳನ್ನು ಏಕಗೊಳಿಸಿ ಕಾವ್ಯರಚಿಸುವ ಸಂಭಾವ್ಯತೆಗಳನ್ನು ಈ ಕವನಗಳಲ್ಲಿ ಮತ್ತೆ ಕಾಣುತ್ತೇವೆ. ಇಂತಹ ಸಂಭಾವ್ಯತೆಗಳನ್ನು ಸೂಚಿಸುತ್ತ ಹೋಗುವುದಲ್ಲದೇ ಹೊಸ ಕಾವ್ಯಕ್ಷೇತ್ರಗಳತ್ತ ನಿರುಕಿಸುವಂತೆ ಮಾಡುವುದೇ ಜೀವಂತ ಕವಿಯ ಲಕ್ಷಣವಾಗಿರುವುದರಿಂದ, ಈ ಮೂರು ಕವನಗಳು ಅಡಿಗರ ಕಾವ್ಯಜೀವನದ ದ್ವಿತೀಯ ಹಂತದಮಹಾತ್ವಾ ಕಾಂಕ್ಷೆಯ ಕವನಗಳ ನಿರೀಕ್ಷೆಯಲ್ಲಿ ನಮ್ಮನ್ನು ಮತ್ತೆ ತೊಡಗಿಸುತ್ತವೆ, ಇದೇ ಸಮಯದಲ್ಲಿ ಕಂಬಾರರು ತಮ್ಮ ಎರಡು ಕವನಗಳನ್ನು ಪ್ರಕಟಿಸಿದ್ದಾರೆ. ‘ಗುಡು ಗುಡು ಗುಮ್ಮ’ ಎಂಬ ಕವನದಲ್ಲಿ ತಮ್ಮ ಜಾನಪದ ಶೈಲಿಯ ಬಹು ಅಂಶವನ್ನು ಬಿಟ್ಟುಕೊಟ್ಟು , ಕವನವನ್ನು ಬರೆಯುವುದಕ್ಕೆ ತೊಡಗುತ್ತಾರೆ. ಚಿಕ್ಕ ಮಗುವೊಂದನ್ನು ಹೆದರಿಸಿ ಮಲಗಿಸುವಾಗಿನ ಸಂದರ್ಭವನ್ನು ಚಿತ್ರಿಸುತ್ತ, ಪ್ರಗತಿಗೆ ಸಂಕೇತವಾಗುವ ರೋಡ್ ರೋಲರ್‌ನ್ನು ಕವನದಲ್ಲಿ ಬಿಂಬಿಸುತ್ತಾರೆ, ಕೊನೆಗೆ ಈ ರೋಲರ್ ನಮ್ಮೆಲ್ಲರ ವೈಯಕ್ತಿಕ ಜೀವನದಲ್ಲಿ ಪ್ರವೇಶಿಸಿದಾಗ ನಮ್ಮತನವನ್ನೇ ಮರೆಯುತ್ತೇವೆ ಎನ್ನುವ ಅರ್ಥ ಪ್ರಾಯಶಃ ಕವನದ ಕೊನಗಿದೆ, ಆದರೆ ಈ ಅರ್ಥವನ್ನು ಭರಿಸಲು ಕವನ ಸಮರ್ಥವಾಗಿಲ್ಲ. ಮುಖ್ಯವಾಗಿ, ಕವನ ಶುರುವಾದ Context ನ್ನು ಬೆಳೆದ ಹಾಗೆ ಏಕೆ ಬದಲಾಯಿಸಿಕೊಳ್ಳುತ್ತದೆ ಎನ್ನುವದು ಸ್ಪಷ್ಟವಾಗುವದಿಲ್ಲ; ಚಿಕ್ಕ ಮಗುವಿಗೆ ಗುಮ್ಮನ ಬೆದರಿಕೆ ಹಾಕುವಾಗಿದ್ದ ಚಿತ್ರ ರೋಡ್‌ರೋಲರಿನ ಪ್ರಗತಿಯ ಚಿತ್ರದತ್ತ ಬದಲಾವಣೆ ಹೊಂದಬೇಕಾದಾಗ ಕವನದಲ್ಲಿ ತಯಾರಾಗಬೇಕಿದ್ದ ಭೂಮಿಕೆ ಕವನದಲ್ಲಿ ಇಲ್ಲ, ಇನ್ನು ‘ಪ್ರಗತಿ’ ಎನ್ನುವ ಒಂದು ಅಮೂರ್ತ ಹಾಗೂ ದ್ವಂದ್ವಾರ್ಥಗಳನ್ನುಳ್ಳ, ಸಂಕೀರ್ಣಕ್ರಿಯೆಗೆ ಮಾಡಿಟ್ಟ ವಸ್ತುವೆಂಬಂತೆ ಕವನ ಸ್ವೀಕರಿಸುವದು ನವ್ಯಸಾಹಿತ್ಯದ ಪ್ರಾರಂಭದಲ್ಲಿ ಬಂದ ಸಂಕೇತಗಳ ಬಳಕೆಯನ್ನು ನೆನಪಿಗೆ ತರುತ್ತದೆ. ಕೊನೆಗೆ ಗುರುತಿನ ಚೀಟಿಯನ್ನು ಕಳೆದುಕೊಳ್ಳುವದು ಕೂಡ ನಮ್ಮತನವನ್ನು ಕಳೆದುಕೊಳ್ಳು ವುದನ್ನು ಚಿತ್ರಿಸುವುದಕ್ಕೆ ಭೂಮಿಕೆ ಇಲ್ಲದೇ ಕವನ ಸ್ವೀಕರಿಸುವ ಸಂದರ್ಭವಾಗುತ್ತದೆ. ಒಟ್ಟಾರೆ, ಅಮೂರ್ತ ಹಾಗೂ ಅಸ್ಪಷ್ಟ ಸಂಕೇತನಗಳನ್ನು ಕವನ ನಿರಾಯಾಸವಾಗಿ ಅಳವಡಿಸಿ ಬಿಡುವವರಿಂದ ಅವಳ ಹಿಂದಿರುವ ಜೀವನದ ತಂತುಗಳು ಕವನದಲ್ಲಿ ಮೂಡಿಬಾರದೇ ಕವನ ವಿಫಲವಾಗುತ್ತದೆ.
“ಗೋದೂಬಾಯಿಯೂ ರಾಮಾಯಣವೂ’ ಒಂದು ಆಧುನಿಕ ಲಾವಣಿ (ballad),ಲಾವಣಿಯಲ್ಲಿ ವ್ಯಕ್ತವಾಗುವ ಸಂಗೀತದ ಗೇಯತ, ಕತೆ ಹೇಳುವದು ಹಾಗೂ ಹಿತೋಕ್ತಿ ಈ ಮೂರೂ ಅಂಶಗಳನ್ನು ಕಂಬಾರರ ಈ ಆಧುನಿಕ ಲಾವಣಿಯಲ್ಲಿ ಕಾಣಬಹುದು. ಸಾಂಪ್ರದಾಯಿಕ ಲಾವಣಿಗೆ ದೊಡ್ಡ ನಾಯಕರ ಜೀವನವು ವಸ್ತುವಾದರೆ ಈ ಆಧುನಿಕ ಲಾವಣಿಯಲ್ಲಿ ಗೋದೂಬಾಯಿಯ ವಿಕ್ಷಿಪ್ತ ಜೀವನವೇ ವಸ್ತುವಾಗಿದೆ. ಇಡೀ ಕವನ ಅಲ್ಲಿ ಇಲ್ಲಿ ಆಡಿದ ಮಾತಿನಿಂದ ಹೆಣೆದ ಒಂದು ಕತೆ ಎನ್ನಿಸಿ ಬ್ರೆಕ್ಟನ ಕವನಗಳನ್ನು ನೆನಪಿಗೆ ತಂದರೂ ಗೋದೂಬಾಯಿಯ ವ್ಯಕ್ತಿ ಚಿತ್ರಣ ಒಂದು ಸಂದರ್ಭಕ್ಕೆ ಸೀಮಿತವಾಗಿ ಕವನದ ವಸ್ತು ಇಡೀ ಸಮಾಜದ ಮಾನಸಿಕ ಸತ್ಯವಾಗಿ ಮೂಡಿಬರುವುದಿಲ್ಲ. ಗೋದೂಬಾಯಿಯ ವಿಕ್ಷಿಪ್ತತೆ ನಮ್ಮ ಸುಪ್ತ ಪ್ರಜ್ಞೆಯಲ್ಲಿಯ ವಿಕ್ಷಿಪ್ತತೆಯ ಒಂದು ಅಂಶವಾಗಿ ಬಂದು ಅದನ್ನು ನಮ್ಮ ಅರಿವಿನ ಮಟ್ಟಕ್ಕೆ ಬಡಿದೆಬ್ಬಿಸುವ ಶಕ್ತಿಯನ್ನು ಪಡೆದಿಲ್ಲ. ಈ ಕವನದಲ್ಲಿ ಬರುವ ನಿರೋಧದ ಸಂಕೇತ ಕೂಡ ರೋಡ್‌ರೋಲರಿನ ಸಂಕೇತದಂತೆಯೇ ಅದರ ಹಿಂದಿರುವ ಜೀವನದ ತಂತುಗಳಿಂದ ಕಡಿದುಕೊಂಡು ಮೂಡಿ ಬಂದಿದೆ. ಮಗನಿಗೆ ಕಾಣುವ ಕನಸು ಲಾವಣಿಯ ಚೌಕಟ್ಟಿಗೆ ಅನುಗುಣವಾಗಿ ಮೂಡಿ ಬಂದಿದ್ದರೂ ಕವನದ ಅರ್ಥವನ್ನು ಆಳಕ್ಕೆ ಒಯ್ದು ಧೃಢೀಕರಿಸುವದರಲ್ಲಿ ಸಹಾಯಕವಾಗುವದಿಲ್ಲ, ಕನ್ನಡದಲ್ಲಿ ಬಂದ ಮೊದಲ ಆಧುನಿಕ ಲಾವಣಿ ಇದಾಗಿರುದವರಿಂದ, ಕುಂಬಾರರು ಈ ಚೌಕಟ್ಟಿನಲ್ಲಿ ತಮ್ಮ ಅನ್ನಿಸಿಕೆಗಳನ್ನು ಹೇಗೆ ಮೂರ್ತಗೊಳಿಸಿಕೊಳ್ಳುತಾರೆ ಎಂಬುದನ್ನು ಇನ್ನೂ ನೋಡಬೇಕಾಗಿದೆ. ‘ಗಂಗಾಮಾಯಿ’ ಯಂತಹ ದಟ್ಟ ವಾದ ವಿವರಗಳಿಂದೊಡಗೂಡಿದ ನಮ್ಮ ಜೀವನಕ್ಕೆ ಸಂಕೇತವಾಗಬಹುದಾದ ಕಾವ್ಯ ನಿರ್ಮಿಸಿದ ಹಾಗೂ ಬಹಿರ್ಮುಕ ಧೋರಣೆಗೆ ಸರಿಯಾದ ಭಾಷೆಯನ್ನು ಬಳಸಿ ಸಾಮಾಜಿಕ ಪ್ರಜ್ಞೆಯ ಸಂಕೀರ್ಣತೆಯನ್ನು ಪ್ರಕಟಿಸಿ `ಮಾವೋತ್ಸೆ ತುಂಗನಿಗೆ’ ಯಂತಹ ಕವನವನ್ನು ಬರೆದ ಕಂಬಾರರ ಸದ್ಯದ ವಿಫಲತೆ ಅವರ ಕಾವ್ಯದ ಬಗೆಗೆ ನಿರೀಕ್ಷೆಯನ್ನಿಟ್ಟು ಕೊಂಡವರಿಗೆ ಆಶ್ಚರ್ಯವನ್ನು ಹುಟ್ಟಿಸುತ್ತದೆ.
‘ಅಬಚೂರಿನ ಪೋಸ್ಟಾಫೀಸು’ ಹಾಗೂ ‘ಅವನಲೆ’ ಕತೆಗಳ ಮೂಲಕ ತೇಜಸ್ವಿಯವರು ಕನ್ನಡ ಕಥಾಲೋಕದ ಹೊಸ ಜಾಡಿನತ್ತ ನಿರುರೆಸುವಂತೆ ಮಾಡುತ್ತಾರೆ. ಆತ್ಮಗತವಾದ ಅನುಭವಗಳನ್ನೇ: ಕೇಂದ್ರವಾಗಿಟ್ಟುಕೊಂಡು ಬಂದ ನವ್ಯಸಾಹಿತ್ಯದ ಕತೆಗಳು ಕೊನೆಗೆ ಅನಾರೋಗ್ಯಕರವಾಗಿ ಬೆಳೆದು ಸಣ್ಣ ಕಲೆಗಿರುವ ಅನುಕೂಲತೆಗಳನ್ನೇ ಮರೆಯಬಹುದಾದ ಭಯ ಹುಟ್ಟುತ್ತಿದ್ದ ಕಾಲದಲ್ಲಿ ತೇಜಸ್ವಿಯವರು ಜೀವನದ ತೀಕ್ಷ್ಮ ನಿರೀಕ್ಷಣೆಯ ನಿರೂಪಣೆಯ ಕತೆಗಾರನ ಮಾನಸಿಕ ತುಮುಲಕ್ಕೆ ಪ್ರತಿಮೆಯಾಗಿ ಮೂಡಿರಬಹುದೆಂಬುದನ್ನು ತೋರಿಸಿದ್ದಾರೆ. ‘ಅಬಚೂರಿನ ಪೋಸ್ಟಾಫೀಸಿನಲ್ಲಿ’ಯ ಸರಳವಾದ ನಿರೂಪಣೆ ಬೋಬಣ್ಣನನ್ನು ಇರುವದಕ್ಕಿಂತ ಹೆಚ್ಚು ಸಂಕೀರ್ಣವಾಗಿ ಮಾಡದೇ ದೂರದಲ್ಲಿ ನಿಂತು ಅವನನ್ನು ವಿವರಿಸುವ ವಿಧಾನದಿಂದಲೇ ಬೋಬಣ್ಣನ ಮಾನಸಿಕ ಸ್ಥಿತಿಗೆ ಕರೆದೊಯುವ ರೀತಿ ಇತ್ತೀಚಿನ ಸಣ್ಣಕಥಾ ಸಾಹಿತ್ಯಕ್ಕೆ ಹೊಸದು, ಈ ಕಥೆಯಲ್ಲಿ ಮೂಡಿ ಬಂದಿರುವ ಸಾಮಾಜಿಕ ಕಾಳಜಿ ನಿಜವಾದ ಕಲೆಗಾರಿಕೆಯಿಂದ ಕೂಡಿದಂಥದು, ಇಂಥ ಕಾಳಜಿ ಕೇವಲ ವೈಚಾರಿಕತೆಯ ಉಡುಗೆ ತೊಟ್ಟು ಬಂದಾಗ ವಾಚ್ಯಾರ್ಥವನ್ನು ಮೀರದ ಸಂಕೀರ್ಣತೆಯನ್ನು ಪಡೆಯುತ್ತದೆ. ಆದರೆ ‘ಅಬಚೂರಿನ ಪೋಸ್ಟಾಫೀಸು’ ಜೀವನದ ಒಂದು ತುಣುಕನ್ನು ವೈಚಾರಿಕತೆಯ ಸೋಂಕಿಲ್ಲದೇ ಚಿತ್ರಿಸಿದರೂ ಕತೆಗಾರರ ಸಾಮಾಜಿಕ ಪ್ರಜ್ಞೆಯನ್ನು ಸೆರೆಹಿಡಿಯುತ್ತದೆ. ‘ಅವನತಿ’ ಕೂಡ ಇದೇ ಸಾಲಿಗೆ ಸೇರಿದಂತಹ ಕತೆ. ಇಲ್ಲಿ ಬರುವ ಸೂರಾಚಾರಿಯೂ ಬೋಬಣ್ಣನಂತೆ ಒಬ್ಬ ಸಾಮಾನ್ಯ ಮನುಷ್ಯ: ತಮ್ಮಲ್ಲಿ ರುವ ಅಸಾಮಾನ್ಯ ಕಲೆಗಾರಿಕೆಯನ್ನು ಗುರುತಿಸಿಕೊಳ್ಳಲಾರದವ, ಆದರೆ ಬೋಬಣ್ಣ ಸಿಲುಕುವ ಕ್ರಿಯಾ ಘಳಿಗೆಗಳಿಗೆ, ಸೂರಾಚಾರಿ ಒಳಗಾಗುವದಿಲ್ಲ, ಕಲಾಕಾರನಾದ ಸೂರಾಚಾರಿ ಹೆಣ್ಣಿನ ಸೌಂದರ್ಯವನ್ನು ವೀಕ್ಷಿಸುವ ಕಣ್ಣನ್ನೇ ಕಳೆದುಕೊಂಡು, ಅದೇ ಹೆಣ್ಣಿನ ಮೊಲೆ ಹಾಲಿನಿಂದ ವೃದ್ಧನೊಬ್ಬನಿಗೆ ಔಷಧಿ ತಯಾರಿಸುವುದಕ್ಕೆ ತೊಡಗುವದರವರೆಗೆ ಕತೆ ಬೆಳೆಯುತ್ತದೆ, ಆದರೆ ತನ್ನ ಈ ‘ಅವನತಿಯ’ ಸೋಂಕು ಕೂಡಾ ಸೂರಾಚಾರಿಗೆ ಇಲ್ಲ : ಅದಕ್ಕೇ ಅವನು ವೈಚಾರಿಕತೆಯಿಂದ ದೂರವಾಗಿ ಉಳಿಯುತ್ತಾನೆ: ಆದರೂ ಭಾರತೀಯ ಸಂದರ್ಭವೊಂದರಲ್ಲಿಯ ಅತಿ ಸೂಕ್ಷ್ಮ ಅವನತಿಯ ಅರಿವನ್ನು ಕತೆ ಹೊರಗೆಡವುತ್ತದೆ. ಸೂರಾಚಾರಿಯ ಸುಪ್ತಪ್ರಜ್ಞೆಯಲ್ಲಿ ಕಲೆಗಾರಿಕೆ ಹೂತುಹೋಗಿರುವುದನ್ನು ಕತೆಯ ವಿವರಗಳು, ಮತ್ತು ಘಟನೆಗಳು ಗುಂಜು ಗುಂಜಾಗಿ ಹಬ್ಬಿಕೊಂಡು, ಅರ್ಥಪೂರ್ಣವಾಗಿ ಧ್ವನಿಸುತ್ತವೆ, ಈರೇಗೌಡನೊಡನೆ ಸೂರಾಚಾರಿ ಎಮ್ಮೆಯ ವ್ಯಾಪಾರಕ್ಕೆ ಹೋದಾಗ ನಡೆಯುವ ಘಟನೆ ವಿನೋದಪೂರ್ಣವಾಗಿದ್ದರೂ ಸೂರಾಚಾರಿಯ ಆತಂತ್ರ ಸ್ಥಿತಿಗೆ ಪ್ರತಿಮೆಯಾಗಿಯೇ ಮೂಡುತ್ತದೆ. ಈ ಕತೆಯಲ್ಲಿ ತೇಜಸ್ವಿಯವರು ಅವನತಿಯ ಬಗ್ಗೆ ವೈಚಾರಿಕ ನೆಲೆಯಿಂದಲೇ ಪ್ರಾರಂಭವಾಗಿ ವಾಚ್ಯಾರ್ಥದ ಸಂಕೀರ್ಣತೆಯನ್ನು ಮೀರದ ಕತೆಗಳು ಸಾಧಿಸುವದಕ್ಕಿಂತ ಮಹತ್ವದ್ದನ್ನು ಸಾಧಿಸಿದ್ದಾರೆ.
ವಿವರಗಳಿಂದಲೇ ಕತೆಯನ್ನು ಹೆಣೆದು ಸಾಮಾಜಿಕ ಕಾಳಜಿಗಳನ್ನು ಎಲ್ಲ ಸೂಕ್ಷತೆಯೊಡನ ಪ್ರಕಟಿಸುವದು ಹಾಗೂ ಪರಿಸರದ ಸಾಮಾನ್ಯ ಅನುಭವದಲ್ಲಿಯೂ ಲೀನವಾಗಿ ಕೃತಿ ರಚನೆಗೆ ತೊಡಗುವಾಗ ನಿರ್ಲಿಪ್ತವಾಗಿ ಉಳಿಯುವದು ತುಂಬಾ ಕಠಿಣವಾದ ಕೆಲಸವಾದರೂ ನಿಜವಾದ ಕಲಾಕಾರನು ಮಾಡುವ ಕೆಲಸ, ಇಂಥ ಕೆಲಸ ತೇಜಸ್ವಿಯವರ ಕತೆಗಳಲ್ಲಿ ನಡೆದಿರುವದರಿಂದ ಅವರ ಮುಂದಿನ ಕೃತಿಗಳ ಬಗ್ಗೆ ಸಹಜವಾಗಿ ನಿರೀಕ್ಷೆ ಹುಟ್ಟುತ್ತದೆ.
`ಮೌನಿ’ ಕತೆಯನ್ನು ಬರೆಯುವದರ ಮೂಲಕ ಇಂಥದೇ ಒಂದು ಕತೆಯನ್ನು ನಮಗೆ ಕೊಟ್ಟ ಹಾಗೂ ‘ಪ್ರಶ್ನೆ’ ಕಥಾಸಂಕಲನದಲ್ಲಿಯ ಕತೆಗಳಿಂದ ಭಿನ್ನವಾದ ಕತೆಯನ್ನು ಆ ಮೂಲಕ ರಚಿಸಿದ ಯು. ಆರ್. ಅನಂತಮೂರ್ತಿ ಯವರು ಈಗ ‘ನವಿಲುಗಳು’ ಎನ್ನುವ ಮತ್ತೊಂದು ಕತೆಯನ್ನು ಕೊಟ್ಟಿದ್ದಾರೆ. ‘ನವಿಲುಗಳು’ ಕತೆಯಲ್ಲಿ ಬರುವ ಸಮಸ್ಯೆ ದಾಂಪತ್ಯ ಜೀವನಕ್ಕೆ ಸಂಬಂಧಿಸಿದ್ದಾಗಿದ್ದರೂ ಕತೆ ಭೂತಕಾಲದ ಬಗೆಗಿರುವೆ ಪ್ರೇಮವನ್ನು ಕೆದಕಿ ಪರೀಕ್ಷಿಸಿಕೊಳ್ಳುವದಕ್ಕೂ ತೊಡಗುತ್ತದೆ. ಇಲ್ಲಿ ಬರುವ ಭಾವೆಗೀತಾತ್ಮಕ ಭಾಷೆ ಕ್ರಿಯಾಘಳಿಗೆಯನ್ನು ಮೀರಿದ ಸತ್ಯದತ್ತ ಕರೆದೊಯ್ಯುತ್ತದೆ ಎಂದೆನ್ನಿಸಿದರೂ ಅ ಸತ್ಯದ ಸುಳಿವು ಎಲ್ಲಿಯೂ ಗೋಚರವಾಗುವದಿಲ್ಲ.
ಇದಕ್ಕೆ ಮುಖ್ಯ ಕಾರಣವೆಂದರೆ ಕತೆಯಲ್ಲಿ ಮುಖ್ಯ ಸಮಸ್ಯೆಯಾಗಿರುವ ದಾಂಪತ್ಯ ಜೀವನ ನೆಲಕ್ಕಂಟಿದವರ ಸಮಸ್ಯೆ, ಆದರೆ ಭೂತಕಾಲದ ಪ್ರೇಮದ ಸಮಸ್ಯೆ ಭಾವಗೀತೆಗೆ ಒಗ್ಗುವಂಥದು, ಅಂದರೆ ನೆಲಕ್ಕಂಟಿದ ಸಮಸ್ಯೆಯನ್ನು ಶಕ್ತಿಯುತವಾಗಿ ಚಿತ್ರಿಸುವಲ್ಲಿ ಭಾಷೆ ವಿಫಲವಾಗುತ್ತದೆ. ಇದಲ್ಲದೇ ನವಿಲುಗಳ ಸಂಕೇತ ನವ್ಯಸಾಹಿತ್ಯದ ಪ್ರಾರಂಭದಲ್ಲಿ ಬಂದ ಕತೆಗಳಲ್ಲಿ ಉಪಯೋಗಿಸಿದ ಸಂಕೇತಗಳನ್ನು ನೆನಪಿಗೆ ತರುತ್ತದೆ. ಬಾಲಕನಾಗಿದ್ದಾಗ ಕತೆಗಾರ ನವಿಲುಗಳನ್ನು ನೋಡುವದು ಹಾಗೂ ನಂತರ ದೀರ್ಘ ವರುಷಗಳ ನಂತರ ಅವುಗಳನ್ನು ನೋಡುವದು : ಈ ನೋಡುವಿಕೆಗಳ ಹಿಂದಿರುವ ಮನಃಸ್ಥಿತಿಯ ಭೇದ-ಇವುಗಳನ್ನು ಬಿಟ್ಟು ನವಿಲುಗಳು ಎನ್ನುವ ಸಂಕೇತದ ಬೇರುಗಳು ಎಲ್ಲಿಯೂ ಕಾಣುವದಿಲ್ಲ. ಕಥಾನಾಯಕನೇ ನಿರೂಪಕನೂ ಆಗಿರುವದರಿಂದ ಕತೆಯಲ್ಲಿ ಹೆಂಡತಿಯ ಪಾತ್ರ ಜೀವಂತವಾಗಿ ಮೂಡಿಬಾರದೇ ನಿರೂಪಣೆಯ ಮಟ್ಟದಲ್ಲಿಯೇ ಉಳಿಯುವದರಿಂದ, ಪಾತ್ರಗಳ ಹೋಲಿಕೆಯಿಂದ ವ್ಯಕ್ತವಾಗಬಹುದಾಗಿದ್ದ ನಾಯಕನ ವ್ಯಕ್ತಿತ್ವ ನಮ್ಮ ನಿರೀಕ್ಷಣೆಯ ಹಸ್ತದಿಂದ ಜಾರಿಕೊಳ್ಳುತ್ತದೆ.
ಈ ಎಲ್ಲ ಸಾಹಿತಿಗಳೂ ತಮ್ಮ ಹೊರಳು ದಾರಿಯಲ್ಲಿರುವದರಿಂದ ಹಾಗೂ ಮಹತ್ವಾಕಾಂಕ್ಷೆಯ ಕೃತಿರಚನೆಯಲ್ಲಿ ತೊಡಗಿರುವದರಿಂದ ವರ್ತಮಾನದಲ್ಲಿ ಬಂದಿರುವ ಕೃತಿಗಳನ್ನು ಕುರಿತು ಹೇಳಿದ ಮಾತುಗಳೆ: ಕೊನೆಯ ಮಾತಾಗುವದು ಅಸಂಭವ, ಆದರೆ ನಮ್ಮ ಕೆಲ ಜಿವಂತ ಸಾಹಿತಿಗಳ ಸದ್ಯದ ಕೃತಿಗಳ ವಿಶ್ಲೇಷಣೆ ಹಾಗೂ ನಿರೀಕ್ಷಣೆ, ನಮ್ಮ ರಚನಾತ್ಮಕ ಸಾಹಿತ್ಯದ ತುಳಿಯದ ದಾರಿಯ ಬಗ್ಗೆ ಕುತೂಹಲ ಹುಟ್ಟಿಸುವದಲ್ಲದೇ ಈ ಕೃತಿಗಳನ್ನು ಅರಿಯುವಲ್ಲಿ ಸಹಾಯವನ್ನೂ ಮಾಡಬಹುದು.
Leave A Comment