Skip to content
ದೂರವಾಣಿ : | 22212487|developkanaja@gmail.com
  • ಕಣಜ ತಿಳಿಯಿರಿ
  • ಮಾಹಿತಿ ಬಳಕೆ ಸೂಚನೆ
  • ಅಬಾಧ್ಯತೆ ಘೋಷಣೆ
  • ಕಣಜವನ್ನು ಕನ್ನಡದಲ್ಲೇ ಕೇಳಿ!
  • ಕಣಜವನ್ನು ತುಂಬಿ!
  • ನಮ್ಮನ್ನು ಸಂಪರ್ಕಿಸಿ
ಕಣಜ Logo ಕಣಜ Logo
  • ಮುಖಪುಟ
  • ವ್ಯಕ್ತಿ ಪರಿಚಯ
  • ವಿಭಾಗಗಳು
    • ಅಂಕಣಗಳು
      • ಋಾ ಬಿಟ್ಟ ಮೇಲೆ ಋ ಬೇಕೇ ?
      • ಸ್ಮಾರ್ಟ್ ಕಾರ್ಡ್ ತಂತ್ರಜ್ಞಾನ
      • ವನ್ಯಜೀವಿಗಳು ಹಾಗೂ ವನ್ಯಜೀವಿ ವಿಜ್ಞಾನ
      • ಶಿಷ್ಟಭಾಷೆ ಎಂದರೆ ಯಾವುದು?
      • ಮಾಹಿತಿ ಕಳವು ತಡೆಯಲು ತಂತ್ರಜ್ಞಾನ
      • ಬ್ರಾಹ್ಮಿ- ಪ್ರಾಕೃತವನ್ನು ಹಿಮ್ಮೆಟ್ಟಿಸಿದ ಸಂಸ್ಕೃತ ಕನ್ನಡ
      • ಪಕ್ಷಿ ವೀಕ್ಷಣೆಯ ದಾಖಲೀಕರಣ
      • ಶಿಕ್ಷಣ ಮಾಧ್ಯಮವಾಗಿ ಕನ್ನಡ
    • ಲೇಖನಗಳು
      • ಉಷ್ಟ್ರಪಕ್ಷಿ ವಿದೇಶಿ ಅಲ್ಲ!
      • ದೆಹಲಿ ಕರ್ನಾಟಕ ಸಂಘ
      • ನವ ದೆಹಲಿಯ ಕರ್ನಾಟಕ ವಾರ್ತಾ ಕೇಂದ್ರ
      • ಆರೋಗ್ಯ
    • ಪತ್ರಿಕೆಗಳು
      • ಮಕ್ಕಳ ಕತೆಗಳು
      • ವಿಜ್ಞಾನ
      • ನಿಯತಕಾಲಿಕೆಗಳು
  • ಶಬ್ದಕೋಶ
  • e-ಲೋಕ
    • e-ಲೋಕ

      ಜಗತ್ತು ನಾಗರಿಕತೆ ಪರಿಕಲ್ಪನೆಗಳು ಅರಳುವ ಮುನ್ನ ದಿನಗಳಿಂದಲೂ ಅಸ್ತಿತ್ವದಲ್ಲಿದ್ದೂ ನಿರಂತರವಾಗಿ ವಿಕಾಸಗೊಳ್ಳುತ್ತಿದೆ. ಸಂಜ್ಞೆಗಳು, ಸಂಕೇತಗಳು, ಶಿಲಾಚಿತ್ರಗಳು, ಲಿಪಿಕಂಡರಣೆಗಳು,ತಾಳೆಗರಿಗಳು, ಶಾಸನಗಳು, ಪುಸ್ತಕಗಳು ಹೀಗೆ ಬಹುಮಾಧ್ಯತಮ ಸಾಧ್ಯತೆಯಲ್ಲಿ ಸಾಗುತ್ತಾ ಬಂದ ಜ್ಞಾನ ಮತ್ತು ಮಾಹಿತಿ ಪ್ರಸಾರಕ್ಕೆ ಇತ್ತೀಚಿನ ಆಧುನಿಕ ಸ್ಪರ್ಶ ದೊರಕಿದ್ದು ತಂತ್ರಜ್ಞಾನದಿಂದ.ಆಧುನಿಕ ತಂತ್ರಜ್ಞಾನದಲ್ಲಿ ಬಹುಮಾಧ್ಯಮ ಸಾಧ್ಯತೆಯನ್ನು ಯಶಸ್ವಿಯಾಗಿ ಬಳಸುತ್ತಾ ಕನ್ನಡ ಭಾಷೆಯಲ್ಲಿ ಜ್ಞಾನವನ್ನು ಒದಗಿಸುವ ಮಹತ್ವದ ಪ್ರಯತ್ನ ಇ-ಲೋಕ.

    • e-ಲೋಕ
      • e-ದಿನ
      • e-ಪುಸ್ತಕ
      • e-ಜಗ
      • e-ದೃಶ್ಯ
      • e-ದನಿ
  • ದೃಶ್ಯಾಂಕಣ
  • ಚಿತ್ರಾಂಕಣ
  • ದಿನಮಣಿಗಳು
  • ಹುಡುಕಿ

ಸಂಪುಟ-೧೯

Home/ಕನ್ನಡ/ಸಂಪುಟ-೧೯
Previous Next

ಸಂಪುಟ-೧೯

  • ಇಂಥ ರಾಷ್ಟ್ರ
  • ತಪ್ಪಿಸಿಕೊಂಡಿದ್ದಾರೆ
  • ಒಂದು ವಿಲಕ್ಷಣ ಊರಿನ ಹೆಸರಲ್ಲಿ ಒಂದು ಅಪೂರ್ವ ಕನ್ನಡ ಪದ
  • ನೀಲಾಂಜನ: ಕವಿತಾಗುಚ್ಛ
  • ಡಾಂಬರು ಬಂದುದು
  • ಎರಡು ಕವನಗಳು
  • ನನ್ನ ಅಂತ್ಯಯಾತ್ರೆ
  • ಪ್ರತಿಭೆಯ ಪಲಾಯನ?
  • ಎರಡು ಕವನಗಳು
  • ಪಾಂಚಜನ್ಯ
  • ಸಮುದ್ರಕ್ಕೆ ಸವಾರು ಭಾಷಾಂತರದ ಕೆಲವು ಸಮಸ್ಯೆಗಳು
  • ಪ್ರತಿಭಾವಂತ ನಾಟಕಕಾರ ಪಿ.ಲಂಕೇಶ್
  • ಕಾವ್ಯ
  • ಅಪೂರ್ಣ
  • ಗತಿ, ಸ್ಥಿತಿ ವಿಮರ್ಶೆ ಬಗ್ಗೆ ಒಂದು ಪ್ರತಿಕ್ರಿಯೆ
  • ಎರಡು ಕವಿತೆಗಳು
  • ಗತಿ, ಸ್ಥಿತಿ-ಒಂದು ವಿಮರ್ಶೆ ಐದು ಅನುಮಾನಗಳು
  • ಗಿರಿಯವರ ಗತಿ-ಸ್ಥಿತಿ: ವಿಮರ್ಶೆಗೆ ಒಂದು ಸೂಚನೆ
  • ಬೀದಿಗೆ ಬಿದ್ದವ
  • ಪುಂಸ್ತ್ರೀಲಿಂಗ
  • ಅನಿವಾರ್ಯ
  • ತುಡುಗುಗವನ
  • ವರ್ಧಮಾನ-ಒಂದು ಟಿಪ್ಪಣಿ
  • ಅವಕಾಶ-ಚಿತ್ರಕಲೆಯ ಒಂದು ಅಂಶ
  • ಸಂಪಾದಕೀಯ: ಸಾಹಿತಿಗಳಲ್ಲಿ ಮನವಿ

ಇಂಥ ರಾಷ್ಟ್ರ

ಇಂಥ ರಾಷ್ಟ್ರ

ತಿರುಮಲೇಶ್ ಕೆ ವಿ

ಎಷ್ಟರೀ ಅರವತ್ತೊ ಎಪ್ಪತ್ತೊ ಕೊಟಿ ಜೀವಸೆಲ್ಲುಗಳ ಶಕ್ತಿ
ಪಂಜು ತಾನೇ ಹೊತ್ತಿ ಸುತ್ತಲೂ ಬೆಂಕಿ ಕಿಡಿ ಸ್ಫುರಿಸುವ
ಸದ್ದೆಬ್ಬಿಸಿ ಸುಸ್ತಾಗಿ ಹೊಗೆ ಕಾರುವ ಹೀಗೆ ಕಮರುವ
ವಿವಿಧ ಮತಧರ್ಮಗಳ ಮಾಂಸಪೇಶಿಗಳು ಕಚ್ಚಿಬಿದ್ದು
ಬಿಡಲಾರದೆ ಬಿಗಿಯುವ ಧೃತರಾಷ್ಟ್ರ ಬಾಹು ಬಂಧದಲ್ಲಿ
ನೀಗುತ್ತಿರುವೆವಲ್ಲಾ ಆಯುಸ್ಸು ಆದರೂ ಈ ಜನ್ಮ
ಭೂಮಿ ಸ್ವರ್ಗಕ್ಕಿಂತ ಮಿಗಿಲು ಇದರ ಸಾನುಗಳಲ್ಲಿ
ಕುಳಿತು ತೂಕಡಿಸುವುದೆ ತಪಸ್ಸು ಇಲ್ಲಿ ಸಾಯುವುದೆ ಸಮಾಧಿ
ಸತ್ತರೆ ಮೋಕ್ಷ ಅಡಿಯ ಮುಂದುಗಡೆ ಸ್ವರ್ಗ
ಗೊತ್ತಲ್ಲ ನಿಮಗೆ ಬೆನ್ನ ಹಿಂದಿನ ಚರಿತ್ರೆ ಎಂದರೆ ಮಹಾ
ಭಾರತ ಕುರುಕ್ಷೇತ್ರ ಹಳದೀಘಾಟ ಬಯಲಾಟ ಧಿಮಿಧಿಮಿತ
ಸತ್ಯಾಗ್ರಹ ಸೋಶಲಿಸಂ ತದಿಗಿಣತೋಂ
ಇಂಥ ರಾಷ್ಟ್ರದಲ್ಲಿ ಹುಟ್ಟುವುದೆ ಒಂದು ಪಂಥಾಹ್ವಾನ
ಇಲ್ಲಿ ತಿನ್ನುವುದು ಗೈಯುವುದು ಮದುವೆಯಾಗುವುದು
ಎಲ್ಲಕ್ಕೂ ಜಗಳದ ಪಟ್ಟು ಇದೆ ಒಂದು ಖುಷಿ

ಮಂದಿ ನಡೆದಲ್ಲಿ ಪಾದಧೂಳಿ ಕವಿಯುವುದು
ಬಿಸಿಲು ಬಿದ್ದಲ್ಲಿ ಪಂಚಾಗ್ನಿ ಏಳುವುದು
ವರ್ಷಕ್ಕೊಂದು ನೆರೆ ಬಂದು ಕ್ಷಾಮ ಧರ್ಮಕ್ಷೇತ್ರದ ಗತಿ
ಇಲ್ಲಿಗೆ ಮುಗಿಯುವುದಿಲ್ಲ ಇಂಥ ರಾಷ್ಟ್ರ ಅನಾದಿ
ಹಕ್ಕು ಬಾಧ್ಯತೆಗಳ ಉದ್ಘೋಷ ಯಾತ್ರೆ ಅನಂತ
ಜನ ಪಥದ ಉದ್ದಕ್ಕೂ ಬದಿಗೆ ಹೆಣ ಹೆಡೆಮುರಿ ಕಟ್ಟಿ
ಟ್ರಕ್ಕಿನೊಳಕ್ಕೆ ಕುಕ್ಕಿದರೆ ಮಾತಿಗೆ ಕೊನೆ ಮೊದಲಿಲ್ಲ
ಅವರಿವರು ನಿಂತಲ್ಲಿಂದ ಆರಂಭ ನಮ್ಮ ಪೀಳಿಗೆ
ಮುಂದರಿವುದು ಹೀಗೆ ಇಂಥ ರಾಷ್ಟ್ರ ತನ್ನೊಳಗೆ
ಜೀರ್ಣಿಸಿಕೊಂಡ ಜೀವ ಸತ್ತು ಒಬ್ಬೊಬ್ಬ ವ್ಯಕ್ತಿಯಲ್ಲೂ
ಸೇರಿಕೊಳ್ಳುತ್ತದೆ ಆದರೂ ನಾವಿಲ್ಲಿ ಬದುಕುತ್ತಿದ್ದೇವಲ್ಲ
ನಮ್ಮ ಪಾರಂಪರ್ಯ ಕಟ್ಟುಗಳ ಅಪರಂಪಾರ ಒಳಗೇ ಲಂಘಿಸಿ
ಟೀ ಕಪ್ಪುಗಳಲ್ಲಿ ಬಂಡಾಯದ ಬಿಸಿ ಎಬ್ಬಿಸಿ
ಕ್ರಾಂತಿಯ ಕನಸು ಕಾಣುತ್ತಿದ್ದೇವಲ್ಲ ಹೀಗೆ
ಇನ್ನೂ ಇದ್ದೇವಲ್ಲ.

Close

ತಪ್ಪಿಸಿಕೊಂಡಿದ್ದಾರೆ

ತಪ್ಪಿಸಿಕೊಂಡಿದ್ದಾರೆ !

ಪ್ರಭು ಎಂ ಎಸ್ ಕೆ

ಯುವಕ
ಮುದುಕ
ಯುವತಿ
ಹುಡುಗ
ಗುಮಾಸ್ತ
ಸೇವಕ
(ಒಂದು ವಸತಿಗೃಹದ ಮುಂಭಾಗ. ಕೌಂಟರಿನ ಹಿಂದೆ ಮಧ್ಯ ವಯಸ್ಸಿನ ಗುಮಾಸ್ತ ಒಂದು ದೊಡ್ಡ ರಿಜಿಸ್ಟರಿನಲ್ಲಿ ಬರೆಯುತ್ತಾ ಕುಳಿತಿದ್ದಾನೆ. ಸಮಯ ರಾತ್ರಿ ೯-೧೦ ಗಂಟೆ. ಗುಮಾಸ್ತ ಪುಸ್ತಕ ಮುಚ್ಚಿ ಎರಡು ಕೈಗಳನ್ನೂ ಝಾಡಿಸಿ, ಮೈಮುರಿದು, ಆಕಳಿಸಿ, ಕೈಗಡಿಯಾರ ನೋಡಿಕೊಳ್ಳುತ್ತಾನೆ. ಟೇಬಲ್ ಡ್ರಾಯರ್‌ನಿಂದ ಒಂದು ಪತ್ತೇದಾರಿ ಕಾದಂಬರಿ ತೆಗೆದು ಮಧ್ಯ ಗುರುತಿಟ್ಟ ಜಾಗದಿಂದ ಓದಲು ಪ್ರಾರಂಭಿಸುತ್ತಾನೆ. ಒಂದೆರಡು ಸಾಲು ಓದಿರಬಹುದಾದ ಸಮಯದಲ್ಲಿ ಹೋಟೆಲಿನ ಸಮವಸ್ತ್ರ ಧರಿಸಿದ ಸೇವಕ ತಲೆಯ ಮೇಲೆ ಹೋಲ್ಡ್‌ ಆಲ್ ಮತ್ತು ಸೂಟ್‌ಕೇಸ್ ಹೊತ್ತು ಬಂದು ಗುಮಾಸ್ತನ ಮುಂದೆ ಇಳಿಸುತ್ತಾನೆ. ಗುಮಾಸ್ತ ಪುಸ್ತಕವನ್ನು ಒಂದು ಬದಿಗಿಟ್ಟು ಸೇವಕನನ್ನು ನೋಡುತ್ತಿದ್ದಂತೆ ಯುವಕನೊಬ್ಬ ಬಂದು ಕೌಂಟರಿನ ಮುಂದೆ ನಿಂತು ಸಿಗರೇಟು ಹಚ್ಚುತ್ತಾನೆ.)
ಸೇವಕ : ರೂಮು…
(ಗುಮಾಸ್ತ ರಿಜಿಸ್ಟರ್‌ ತೆಗೆದು ನೋಡುತ್ತಾನೆ.)
ಯುವಕ : ಸಿಂಗಲ್ ರೂಮ್, ಬಾತ್ ಅಟ್ಯಾಚ್ಡ್‌ …
(ಗುಮಾಸ್ತ್ರ `ಖಾಲಿ ಇಲ್ಲ’ ಎನ್ನುವಂತೆ ತಲೆಯಾಡಿಸುತ್ತಾನೆ.)
ಗುಮಾಸ್ತ : ಸಿಂಗಲ್ ರೂಮು ಯಾವುದೂ ಖಾಲಿ ಇಲ್ಲ. ಒಂದೇ ಒಂದು ಡಬಲ್ ರೂಮು ಖಾಲಿ ಇದೆ, ಬೇಕಾದ್ರೆ. ಹನ್ನೆರಡು ರುಪಾಯಿ ಒಂದಿವ್ಸಕ್ಕೆ.
ಯುವಕ : ಸರಿ, ಅದೇ ಇರಲಿ. ನಂಗೂ ಹೋಟ್ಲಿಂದ ಹೋಟ್ಲಿಗೆ ಅಲೆದೂ ಅಲೆದೂ ಸಾಕಾಗಿದೆ. ಎಲ್ಲೂ ರೂಮೇ ಖಾಲಿ ಇಲ್ಲ.
(ಗುಮಾಸ್ತ ರಿಜಿಸ್ಟರಿನಲ್ಲಿ ಬರೆಯಲು ಅಣಿ ಮಾಡಿಕೊಳ್ಳುತ್ತಾನೆ.)
ಗುಮಾಸ್ತ : ಹೆಸರು ? ಅಡ್ರೆಸ್‌ ?
ಯುವಕ : ಜಿ. ಪಿ. ರಾವ್, ನಂಬರ್ 413, 13th street, New Extension, ಗೊಂದಲಹಳ್ಳಿ.
(ಗುಮಾಸ್ತ ಬರೆದುಕೊಳ್ಳುತ್ತಾನೆ. ಸೇವಕನಿಗೆ ಒಂದು ಬೀಗದ ಕೈ ಕೊಡುತ್ತಾ)
ಗುಮಾಸ್ತ : ರೂಮ್ ನಂ 33. ಊಟ ಕಳಿಸಬೇಕೇನ್ಸಾರ್ ರೂಮಿಗೆ ?
ಯುವಕ : ಈಗ ಊಟ ಗೀಟ ಏನೂ ಬೇಡ. ಬೆಳಗ್ಗೆ ಕಾಫಿ ಕಳಿಸಿಕೊಡಿ
ಗುಮಾಸ್ತ : ರೈಟ್‌.
(ಗುಮಾಸ್ತ ರಿಜಿಸ್ಟರ್‌ಮುಚ್ಚಿ ಪತ್ತೇದಾರಿ ಕಾದಂಬರಿ ತೆಗೆದುಕೊಂಡು ಓದಲು ಶುರುಮಾಡುತ್ತಾನೆ. ತುಂಬಾ ಕುತೂಹಲಕಾರಿಯಾದ ಸನ್ನಿವೇಶವನ್ನು ಓದುತ್ತಿರುವವನಂತೆ ಬೆನ್ನು ನೆಟ್ಟಗೆ ಮಾಡಿಕೊಂಡು ಪುಸ್ತಕದಲ್ಲೇ ತಲ್ಲೀನನಾಗಿರುವಾಗ ಸುಮಾರು ಐವತ್ತೈದು ವರ್ಷ ವಯಸ್ಸಿನ ಮುದುಕ ಒಂದು ತುಂಬಿದ ಕಿಟ್ ಹಿಡಿದು ಬಂದು ಕೌಂಟರಿನ ಮುಂದೆ ನಿಲ್ಲುತ್ತಾನೆ. ಗುಮಾಸ್ತ ತನ್ನ ಕಡೆಗೆ ನೋಡದಿರುವುದನ್ನು ಗಮನಿಸಿ ಒಂದು ಸಾರಿ ಕೆಮ್ಮುತ್ತಾನೆ. ಗುಮಾಸ್ತ `ಸ್ವಲ್ಪ ತಡೆಯಿರಿ’ ಎನ್ನುವಂತೆ ಬಂದವನತ್ತ ತನ್ನ ಹಸ್ತ ತೋರಿಸಿ ಪುಟ ಮಗುಚುತ್ತಾನೆ. ಮುದುಕ ಕಿಟ್‌ ಅನ್ನು ಕೌಂಟರಿನ ಮೇಲಿಡುತ್ತಾನೆ.)
ಮುದುಕ : ರೂಮು ಇದೆಯಾ ?
(ಗುಮಾಸ್ತ್ರ ಪುಸ್ತಕದಲ್ಲೇ ಕಣ್ಣಿಟ್ಟು ಮುದುಕನತ್ತ ಮತ್ತೊಮ್ಮೆ ಹಸ್ತ ತೋರಿಸುತ್ತಾನೆ.)
ಮುದುಕ : ಈ ಊರಲ್ಲಿ ಎಲ್ಲಾ ಹೊಟೇಲೂ ಅಲೆದಾಯ್ತು. ಎಲ್ಲೂ ಖಾಲಿ ಇಲ್ಲ. ನಿಮ್ಮಲ್ಲೂ ಇಲ್ಲದೇ ಇದ್ರೆ ಹೇಳ್ಬಿಡಿ. ನಿಮ್ಮ ಹೋಟಲ ಹೊರಗೆ ಫುಟ್
ಪಾತ್‌ನಲ್ಲೇ ರಾತ್ರಿ ಕಳೀತೀನಿ.
(ಗುಮಾಸ್ತ ಪುಸ್ತಕದ ಹಾಳೆಯ ಮೂಲೆಯನ್ನು ಮಡಿಸಿ, ಮುಚ್ಚಿಟ್ಟು, ಮುದುಕನನ್ನು ನೋಡುತ್ತಾನೆ.)
ಗುಮಾಸ್ತ : ರೂಮೇ ? ಇಲ್ಲಾ ಸಾರ್. ಇದ್ದೊಂದು ರೂಮ್ನ ಈಗ್ತಾನೆ ಒಬ್ರಿಗೆ ಕೊಟ್ಟಾಯ್ತು.
ಮುದುಕ : ಇನ್ನೇನು ಫುಟ್ ಪಾತೇ ಗತಿ ನಂಗೆ.
ಗುಮಾಸ್ತ : ಸಾರಿ ಸಾರ್‌. ಒಂದು ಡಬ್ಬಲ್ ರೂಮ್ ಇತ್ತು. ಈಗ್ತಾನೆ ಒಬ್ರಿಗೆ ಕೊಟ್ಬಿಟ್ಟೆ. ಒಂದ್ಹತ್ನಿಮ್ಷ ಮೊದಲೇ ಬಂದಿದ್ರೆ ನಿಮಗೇ ಸಿಗ್ತಿತ್ತು. ಮುದುಕ : ಏನು, ಡಬ್ಬಲ್ ರೂಮ್ನ ಒಬ್ರಿಗೆ ಕೋಟ್ರಾ ? ಹಾಗಾದ್ರೆ ಅದರಲ್ಲಿ ಇನ್ನೊಬ್ರಿಗೆ ಜಾಗ ಖಾಲಿ ಇರುತ್ತಲ್ಲಾ ಅದನ್ನ……….
ಗುಮಾಸ್ತ : ನನ್ನದೇನೂ ಅಭ್ಯಂತರವಿಲ್ಲ, ನೀವು ಅವರು ಒಪ್ಪಿಕೊಂಡು ಒಟ್ಟಿಗೆ ಇರೋದಾದ್ರೆ ಒಟ್ನಲ್ಲಿ ನಾಲ್ಕು ರೂಪಾಯಿ ಜಾಸ್ತಿ ಕೊಡಬೇಕಾಗುತ್ತೆ.
ಮುದಕ : ಅಷ್ಟೇ ತಾನೇ ? ಕೊಡೋಣ. ಸ್ವಲ್ಪ ಅವರನ್ನ ಕೇಳ್ತೀರಾ ? ಹೇಗೂ ಒಬ್ಬರೇ ಇದ್ದಾರೆ. ನಾನೇನೂ ತೊಂದರೆ ಕೊಡೋಲ್ಲ.
ಗುಮಾಸ್ತ : ಹಾಗೇ ಆಗ್ಲಿ. ಅವರನ್ನ ಕೇಳಿಕೊಂಡು ಬರ‍್ತೇನೆ. ಒಂದ್ನಿಮಿಷ ಕೂತ್ಕೊಳ್ಳಿ.
(ಗುಮಾಸ್ತ್ರ ಒಳಗೆ ಹೋಗುತ್ತಾನೆ. ಮುದುಕ ಅಲ್ಲೇ ಇದ್ದ ಕುರ್ಚಿಯ ಮೇಲೆ ಕೂತುಕೊಂಡು ಗುಮಾಸ್ತ್ರ ಬಿಟ್ಟುಹೋಗಿದ್ದ ಪುಸ್ತಕದ ರಟ್ಟಿನ ಮೇಲಿದ್ದ ಚಿತ್ರವನ್ನು ನೋಡಿ, ಹಿಂಭಾಗದ blurb ನೋಡುತ್ತಿರುತ್ತಾನೆ. ಕ್ಷಣ ಕಾಲ ಮೌನ. ಗುಮಾಸ್ತ ಹಿಂದಿರುಗಿ ಬಂದು ಪುಸ್ತಕವನ್ನು ಮುದುಕನಿಂದ ವಾಪಸ್‌ ಪಡೆದು ಕೌಂಟರಿನ ಹಿಂದೆ ಹೋಗಿ ತನ್ನ ಕುರ್ಚಿಯ ಮೇಲೆ ಕುಳಿತುಕೊಳ್ಳುತ್ತಾನೆ.)
ಗುಮಾಸ್ತ : ಅವರನ್ನ ಒಪ್ಪಿಸಿದ್ದೀನಿ ಸಾರ್, ಬಹಳ ಕಷ್ಟಪಟ್ಟು. ಅವರೂ ನಿಮ್ಮ
ಹಾಗೇ ಊರೆಲ್ಲಾ ಸುತ್ತಾಡಿ ಸುಸ್ತಾಗಿ ಎಲ್ಲೂ ರೂಮು ಸಿಗದೆ ಕಡೇಗೆ ಇಲ್ಲಿಗೆ ಬಂದ್ರು. ಆದ್ರೂ ನಿಮ್ಮ ಕಷ್ಟಾನ ಅವರಿಗೆ ಅರ್ಥವಾಗೋ ಹಾಗೆ ಹೇಳೋದೇ ಸಾಕು ಸಾಕಾಯ್ತು. ಅಂತೂ ಒಪ್ಪಿದಾರೆ.
ಮಂದುಕ : Thanks. ರಿಜಿಸ್ಟರ್‌ನಲ್ಲಿ ಬರ‍್ಯೊದನ್ನೆಲ್ಲಾ ಬೆಳಗ್ಗೆ ಮಾಡೋಣ.
ನಂಗೀಗ ತುಂಬಾ ಸುಸ್ತಾಗಿದೆ. ಕಾಲು ಚಾಚಿ ಅಡ್ಡಾದ್ರೆ ಸಾಕು ಅನ್ನಿಸ್ತಿದೆ.
ಗುಮಾಸ್ತ : ಒಂದ್ ನಿಮಿಷ, ಸಾರ್…….ಜಾಸ್ತಿ ತೊಂದ್ರೆ ಕೊಡೋಲ್ಲ. ಸ್ವಲ್ಪ ಅಡ್ರೆಸ್‌ ಹೇಳ್ಳಿಡಿ, ಬರ‍್ಕೊಂಡ್ ಬಿಡ್ತೇನೆ.
ಮುದುಕ : ಸರಿ, ಬರ‍್ಕೊಳಿ. ಎಸ್. ಕೆ. ಗೋವಿಂದಪ್ಪ, president, Fancy Football Association, ಕಾಡೂರು ಪೋಸ್ಟ್, ಕಾಡೂರು. ಗುಮಾಸ್ತ್ರ : (excited) : ಓಹ್ ! ನೀವೇನಾ ಸಾರ್‌, ಗೋವಿಂದಪ್ನೋರು ! State player ನಿಮ್ಮಾಟ ನೋಡಿದೀನಿ ಸಾರ್ 42-43 ರಲ್ಲಿ ! ಸೆಂಟರ್ ಫಾರ್‌ವರ್ಡ್ ! Football ಅಂದ್ರೆ ನಂಗೆ ಪ್ರಾಣ. ಈ ಊರಲ್ಲಿ ನಡೆದ ನಿಮ್ಮ ಯಾವ ಮ್ಯಾಚ್‌ನ ತಪ್ಪಿಸಿಕೊಂಡಿಲ್ಲ.
ಮುದುಕ : ಹುಂ ! ಸರಿ, ನಂಗೀಗ ತುಂಬಾ ಸುಸ್ತಾಗಿದೆ. ರೂಮು ತೋರಿಸಿದ್ರೆ…
ಗುಮಾಸ್ತ : (ಉತ್ಸಾಹದಿಂದ) ಲೋ ಇವನೇ, ಬಾ ಇಲ್ಲಿ ರೂಮ್ ನಂಬರ್ 33. ಊಟ ಬೇಕಿದ್ರೆ ಹೇಳಿ ಸಾರ್‌ ರೂಮ್‌ಬಾಯ್ ತಂದ್ಕೊಡ್ತಾನೆ.
ಮುದುಕ : ಈಗೇನೂ ಬೇಕಿಲ್ಲ. ಸದ್ಯ, ರೂಮು ಸಿಕ್ತಲ್ಲಾ, ಅಷ್ಟೇ ಸಾಕು !
(ಸೇವಕ ಬಂದು ಮುದುಕನ ಕಿಟ್ ಬ್ಯಾಗ್ ತೆಗೆದುಕೊಂಡು ಹೋಗುತ್ತಾನೆ. ಮುದುಕ ಅವನನ್ನು ಹಿಂಬಾಲಿಸುತ್ತಾನೆ. ಗುಮಾಸ್ತ ರಿಜಿಸ್ಟರ್‌ನಲ್ಲಿ ಬರೆದುಕೊಳ್ಳುತ್ತಾ)
ಗುಮಾಸ್ತ : ಈಗೆಲ್ಲಿ ಬರಬೇಕು ಅಂಥಾ Football players ! ಹುಂ !
(ಗುಮಾಸ್ತ ಯಥಾಪ್ರಕಾರ ಪತ್ತೇದಾರಿ ಪುಸ್ತಕ ತೆಗೆದುಕೊಂಡು ಓದಲು ಶುರು ಮಾಡುತ್ತಾನೆ.)
(ರೂಮ್ ನಂಬರ್ 33. ಎದುರು ಬದರಾಗಿ ಎರಡು ಮಂಚಗಳು, ಎಡ ಬಲಗಳಲ್ಲಿ. ಪ್ರೇಕ್ಷಕರ ಎದುರಾಗಿರುವ ಗೋಡೆಯ ಬದಿಯಲ್ಲಿ ಒಂದು dressing table, ಎರಡು ಕುರ್ಚಿಗಳು. ಟೇಬಲ್ ಮೇಲೆ ಕುಡಿಯುವ ನೀರಿನ ಪಾತ್ರೆ ಗ್ಲಾಸುಗಳು.
ಯುವಕ ಪೈಜಾಮ, ಜುಬ್ಬ ಧರಿಸಿ ಪೇಪರ್ ಓದುತ್ತಾ ಬಲಬದಿಯ ಮಂಚದ ಮೇಲೆ ಕುಳಿತಿದ್ದಾನೆ. ಮುದುಕ ಸೇವಕನ ಹಿಂದೆ ರೂಮೊಳಗೆ ಬರುತ್ತಾನೆ ಸೇವಕ ಎಡಬದಿಯ ಮಂಚದ ಮೇಲೆ ಕಿಟ್ ಇಟ್ಟು ಹೋಗುತ್ತಾನೆ.)
ಮುದುಕ : ಕ್ಷಮಿಸಿ, ತಮಗೆ ತೊಂದರೆ ಕೊಡಬೇಕಾಯ್ತು…ಬೇರೆಲ್ಲೂ ರೂಮ್‌ಸಿಕ್ಕಲಿಲ್ಲ. ಅಂದ್ಹಾಗೇ, ತಮಗೂ ರೂಮು ಸಿಕ್ಕೋದು ಬಹಳ ಕಷ್ಟ ಆಗಿರಬೇಕು…ಬಹಳ ಉಪಕಾರ ಆಯ್ತು ತಾವು accomodate ಮಾಡಿದ್ದು…..
(ಯುವಕ ಪೇಪರ್ ಮಡಿಸಿ ಪಕ್ಕದಲ್ಲಿಟ್ಟು ಮುದುಕನನ್ನು ನೋಡುತ್ತಾನೆ)
ಯುವಕ : ಹುಂ…….ಪರವಾಗಿಲ್ಲ,. ಒಂದು ರಾತ್ರಿ ಮಟ್ಟಿಗೆ ತಾನೆ……ಹೇಗೋ manage ಮಾಡಬಹುದು.
(ಮುದುಕ ಕಿಟ್‌ನಿಂದ ಬಟ್ಟೆಗಳನ್ನು ತೆಗೆಯುತ್ತಿರುವಾಗ ಬಟ್ಟೆಗಳ ಜತೆ ಒಂದು ಫುಟ್‌ಬಾಲ್ ಕವರ್ ಹೊರಗೆ ಬೀಳುತ್ತದೆ. ಅದನ್ನು ಕಿಟ್‌ನೊಳಕ್ಕೆ ತುರುಕಿ, ಒಂದು ಟವಲನ್ನು ಹೆಗಲ ಮೇಲೆ ಹಾಕಿಕೊಂಡು ಬಚ್ಚಲುಮನೆಯ ಕಡೆ ಹೋಗುತ್ತಾ)
ಮುದುಕ : ಅಂತೂ ತಮಗೆ ತೊಂದರೆ ಕೊಡಬೇಕಾಯ್ತು. ನೀವು ಆಗುಲ್ಲ ಅಂದಿದ್ರೆ ನಾನು ಹೊರಗೆ ಫುಟ್‌ಪಾತ್ ಮೇಲೆ ರಾತ್ರಿ ಕಳೀಬೇಕಾಗಿತ್ತು.
(ಯುವಕ ಪೇಪರ್ ಓದುತ್ತಾ ಕುಳಿತಾಗ ಬಚ್ಚಲು ಮನೆಯಲ್ಲಿ ನೀರು ಹರಿಯುವ ಶಬ್ದ. ಕ್ಷಣಕಾಲ ಮೌನದ ನಂತರ ಮುದುಕ ಬಚ್ಚಲುಮನೆಯಿಂದ ಹಿಂದಿರುಗುತ್ತಾನೆ.)
ಯುವಕ : ನಾನೂ ಈ ಊರಲ್ಲಿರೋ ಹೊಟ್ಟಲ್ಲೆಲ್ಲಾ ವಿಚಾರಿಸಿದೆ. ಎಲ್ಲೂ ರೂಂ
ಖಾಲಿ ಇಲ್ಲ. ಸದ್ಯಕ್ಕೆ ಈ ಹೊಟ್ಲಲ್ಲಿ ಸಿಕ್ತು. ಇಲ್ದೇ ಇದ್ರೆ ನನಗೂ ಫುಟ್‌ಪಾತೇ ಗತಿಯಾಗ್ತಿತ್ತೇನೋ!
(ಮುದುಕ ತನ್ನ ಮಂಚದ ಮೇಲೆ ಕುಳಿತುಕೊಳ್ಳುತ್ತಾನೆ. ಯುವಕ ಪೇಪರ್‌ ಓದನ್ನು ಮುಂದುವರಿಸುತ್ತಾನೆ.)
ಮುದುಕ : ಆಯ್ತೇ, ಪೇಪರ್ ಓದಿ ? ನಿದ್ದೆ ಬರ‍್ತಾ ಇದೆ. ಲೈಟ್ ಆರಿಸಬಹುದಾಗಿತ್ತು.
(ಯುವಕ ಅಸಹನೆಯಿಂದ ಮುದುಕನತ್ತ ನೋಡುತ್ತಾನೆ)
ಯುವಕ : ಅದಕ್ಕೇ ನಂಗಿದೆಲ್ಲಾ ಇಷ್ಟವಿಲ್ಲ. ನನ್ನ ಪಾಡಿಗೆ ನಾನು ನನಗೆ ಬೇಕಾದಾಗ ಲೈಟ್ ಆರಿಸಿಕೊಂಡು ನಿದ್ದೆ ಮಾಡ್ತಿದ್ದೆ.
ಮುದುಕ : ಸಿಟ್ಟು ಮಾಡ್ಕೊಬೇಡಿ. ನಾನು ಮುದುಕ. ಏನೋ ಆಯಾಸವಾಗಿದೆ. ಬೆಳಕಿದ್ರೆ ನಿದ್ರೆ ಬರೋಲ್ಲ. ನಿದ್ರೆ ಬರದೆ ಆಯಾಸ ಕಳೆಯೋಲ್ಲ. ಅದಕ್ಕೇ ಕೇಳ್ದೆ, ಪೇಪರ್ ಓದಾಗಿದ್ರೆ……..
ಯುವಕ : ಇಲ್ಲ, ಓದಾಗಿಲ್ಲ. ಇನ್ನೂ ತುಂಬಾ ಇದೆ. ತಮಗೆ ಇಷ್ಟ ಇಲ್ದೇ ಇದ್ರೆ ತಾವು ಬೇರೆ ಎಲ್ಲಾದ್ರೂ…
ಮುದುಕ : ಛೇ, ಪರವಾಗಿಲ್ಲ. ಇನ್ನೊಂದ್ಹತ್ನಿಮಷ, ಕಾಲುಗಂಟೆ ನಾನೂ ಎಚ್ಚರವಾಗಿದ್ರೆ ನಷ್ಟವೇನಿಲ್ಲ. ಓದಿ, ಓದಿ….ಹಾಂ…ಹಾಗೇ ಓದ್ತಾ ಓದ್ತಾ ಮಲಗಿ ನಿದ್ರೆ ಮಾತ್ರ ಮಾಡಬೇಡಿ….ಲೈಟ್ ಆಫ್ ಮಾಡಿ….
(ಮುದುಕ ಮಂಚದ ಮೇಲೆ ಮಲಗುತ್ತಾನೆ)
ಯುವಕ : ಹೌದು, ನಂಗೊತ್ತು. ದಯವಿಟ್ಟು ತಾವು….
ಮುದುಕ : ಸುಮ್ನೆ ಇರ್ತೀನಿ. ತಮಗೆ ಜಾಸ್ತಿ ತೊಂದ್ರೆ ಕೊಡೋಲ್ಲ…ಈಗಾಗ್ಲೇ…….
ಯುವಕ : ಸಾಕಷ್ಟು ಕೊಟ್ಟಾಗಿದೆ.
(ಮುದುಕ ಎದ್ದು ಕುಳಿತುಕೊಳ್ಳುತ್ತಾನೆ).
ಮುದುಕ : ಕ್ಷಮಿಸಿ, ತಮಗೆ ಇಷ್ಟವಿಲ್ಲದಿದ್ರೆ ನಾನು ಹೊರಟು ಹೋಗ್ತಿನಿ. ಫುಟ್ ಪಾತ್ ಖಾಲಿ ಇದೆ..
ಯುವಕ : ಏನು ಗೋಳಪ್ಪಾ ಇದು. ಸುಮ್ನಿರಿ ಅಂದ್ರೆ ಅದೂ ಕೇಳೊಲ್ಲ.
ಮುದುಕ : ತಮಗೆ ತೊಂದ್ರೆ ಕೊಟ್ಟು ನನಗೇನೂ ಸಂತೋಷ ಸಿಗೋಲ್ಲ…ಬೆಳಗ್ಗೆ ಎದ್ದು ಬೀದಿ ಬೀದಿ ಅಲೀಬೇಕು. ಅದಕ್ಕೇ ಈಗ ಸ್ವಲ್ಪ ರೆಸ್ಟ್ ಸಿಕ್ಕಿದರೆ ಒಳ್ಳೇದು ಅನ್ನಿಸ್ತು…ಯಾಕೋ ತಮಗೆ ನಾನು ಇಲ್ಲಿರೋದು ಬೇಡ ಅನ್ನಿಸ್ತಿರೋದ್ರಿಂದ ನಾನು ಹೊರಟೆ.
(ಮುದುಕ ತನ್ನ ಕಿಟ್‌ಗೆ ಬಟ್ಟೆಗಳನ್ನು ತುರುಕಿ ಹೊರಡಲು ಏಳುತ್ತಾನೆ)
ಯುವಕ : ರೀ, ಸ್ವಾಮಿ…ನಾನೇನೂ ನಿಮ್ಮನ್ನ ಹೋಗೀ ಅಂತ ಹೇಳಲಿಲ್ಲ ತಮಗೆ ಇಷ್ಟ ಇಲ್ದೇ ಇದ್ರೆ ಹೋಗಬಹುದು ಅಷ್ಟೇ…
(ಮುದುಕ ಕಿಟ್‌ಅನ್ನು ಕೆಳಗಿಡುತ್ತಾನೆ)
ಮುದುಕ : ಏನೂ ತಪ್ಪು ತಿಳಿದುಕೊಳ್ಳಬೇಡಿ. ರಾತ್ರಿ ಇರೋಕೆ ಜಾಗ ಕೊಟ್ಟುತುಂಬಾ ಉಪಕಾರ ಮಾಡಿದೀರಿ. ನಾನಿನ್ನು ತಮಗೆ ತೊಂದ್ರೆ ಕೊಡೋಲ್ಲ. ಯಾವಾಗ ಬೇಕಾದ್ರೂ ದೀಪ ಆರಿಸಿ…. ಬೆಳಗ್ಗೆ ಎದ್ದು ಬೀದಿ ಬೀದಿ ಅಲೆಯೋದಿದೆ ನನಗೆ.
(ಮುದುಕ ಮಲಗುವನು. ಯುವಕನಿಗೆ ಮುದುಕನ ಕಡೆಯ ಮಾತು ಕುತೂಹಲಕರವೆನಿಸಿ, ಪೇಪರನ್ನು ಮಡಿಸಿ ಟೇಬಲ್ಲಿನ ಮೇಲಿಟ್ಟು ಅವನಡೆಗೆ ನೋಡುತ್ತಾನೆ)
ಯುವಕ : ಹೌದೇ ? ಉದ್ದೇಶ ಏನೂಂತ ಕೇಳಬಹುದೆ ? ಯಾಕೇಂದ್ರೆ ನನಗೂ ನಾಳೆ ಅದೇ ಕೆಲ್ಸ…..
ಮುದುಕ : ಯಾರನ್ನೋ ಹುಡುಕಬೇಕಾಗಿದೆ. ತಾವು ಏನಾದ್ರೂ ಬಿಸಿನೆಸ್‌….
ಯುವಕ : ಬಿಸಿನೆಸ್‌ ಇಲ್ಲ. ನಿಜ ಹೇಳಬೇಕೂಂದ್ರೆ ನಾವೂ ಯಾರನ್ನೂ ಹುಡುಕೋ ಕೆಲ್ಸಕ್ಕೇ ಈ ಊರಿಗೆ ಬಂದಿರೋದು…
ಮುದುಕ : ಆಶ್ಚರ‍್ಯ !
(ಮುದುಕ ಎದ್ದು ಕುಳಿತುಕೊಳ್ಳುತ್ತಾನೆ.)
ಯುವಕ : ತಮಗೆ ಬೇಕಾದೋರ ಅಡ್ರೆಸ್ ಇದ್ರೆ ಹುಡುಕೋದೇನೂ ಕಷ್ಟವಾಗೋಲ್ಲ.
ಮುದುಕ : ಅದೇ ಕಷ್ಟವಾಗಿರೋದು ನೋಡಿ ಅಡ್ರೆಸ್ ಇಲ್ಲ.
ಯುವಕ : ಆಶ್ಚರ‍್ಯ! ನನ್ನ ಹತ್ರಾನೂ ಅಡ್ರೆಸ್ ಇಲ್ಲ.
ಮುದುಕ : ತಾವೇನೂ ತಪ್ಪು ತಿಳಿದುಕೊಳ್ಳದಿದ್ರೆ, ಯಾರನ್ನ ಹುಡುಕ್ತಿದೀರಾ ಅಂತ ಕೇಳಬಹುದೇ ?
ಯುವಕ : ಓಹೋ……. ನಾನೂ ತಮ್ಮನ್ನ ಅದನ್ನೇ ಕೇಳೋಣಾಂತಿದ್ದೆ.
ಮುದುಕ : ಬಹುಶಃ ನಾವು ಒಬ್ಬರಿಗೊಬ್ಬರು ಸಹಾಯ ಆಗಬಹುದು.
ಯುವಕ : ತಾವು ಹುಡುಕ್ತಿರೊ ವ್ಯಕ್ತಿ ನನಗೆ ಕಾಣಿಸಬಹುದು….
ಮುದುಕ : ತಾವು ಹುಡುಕ್ತಿರೋ ವ್ಯಕ್ತಿ ನನಗೆ ಕಾಣಿಸಬಹುದು….
ಯುವಕ : ಆಶ್ಚರ್ಯ ! ನಾವಿಬ್ಬರೂ ಒಂದೇ ಪರಿಸ್ಥಿತೀಲಿ ಹೇಗೆ ಸಿಕ್ಕಿಬಿದ್ದಿದೀವಿ!
ಮುದುಕ : ನಂಗೂ ಹಾಗೇ ಅನ್ಸಿತ್ತು……
(ತಮ್ಮಷ್ಟಕ್ಕೆ ತಾವೇ ಮಾತಾಡಿಕೊಳ್ಳುವಂತೆ ಇಬ್ಬರೂ ಮಾತಾಡಲು ಶುರು ಮಾಡ್ತಾರೆ.)
ಯುವಕ : ಹುಂ ! ನೋಡಿ ನನ್ನ ಕತೆ ಇಷ್ಟು. ನಾನು ಒಬ್ಬಳು ಹುಡುಗೀನ
ಹುಡುಕ್ತಾ ಇದೀನಿ.
ಮುದುಕ : ನಾನು ಒಂದು ಮಗೂನ ಹುಡುಕ್ತಾ ಇದೀನಿ.
ಯುವಕ : ವಯಸ್ಸು ೨೦. ನೋಡೋಕೆ ತುಂಬಾ ಚೆನ್ನಾಗಿದ್ದಾಳೆ.
ಮುದುಕ : ನಿಮ್ಮ ಮುರುಳಿ ವಯಸ್ಸು ೮. ತುಂಬಾ ಮುದ್ದಾಗಿದಾನೆ.
ಯುವಕ : ಆರು ತಿಂಗಳ ಹಿಂದೆ ನಾವಿಬ್ರೂ, ರೈಲಿನಲ್ಲಿ ಪ್ರಯಾಣ ಮಾಡ್ತಿದ್ದಾಗ ಮಧ್ಯೆ ಒಂದು ಸ್ಟೇಷನ್‌ನಲ್ಲಿ ಕಾಫಿ ತಿಂಡಿ ತರೋಕೆ ಅಂತ ನಾನು ಇಳಿದು ಹೋಗಿದ್ದೆ, ಕ್ಯಾಂಟೀನ್‌ನಲ್ಲಿ ತುಂಬಾ ರಷ್ ಇತ್ತು. ಕಾಫಿ ತಿಂಡಿ ಸಿಗೋದು ತಡ ಆಯ್ತು. ಅಷ್ಟರಲ್ಲೇ ರೈಲು ಹೊರಟು ಹೋಯ್ತು.
ಮುದುಕ : ಮುಡಕುತೊರೆ ಜಾತ್ರೇಲಿ ಕಳೆದು ಹೋದ ಹುಡುಗ. ಪೇಪರ್‌ನಲ್ಲಿ ಫೋಟೋ ಕೂಡ ಹಾಕ್ಸಿದ್ದೆ. ಪಾಪ! ಏನೂ ಅರೀದ ಕೂಸು ……. ಎಲ್ಲಿದ್ಯೋ, ಏನು ಕಷ್ಟ ಪಡ್ತಿದ್ಯೋ ಎಲ್ಲಾ ಪೊಲೀಸ್ ಸ್ಟೇಷನ್‌ಗೂ ತಿಳಿಸಿ ಆಯ್ತು.
ಯುವಕ : ನಾನೂ ಓಡೋಡಿ ಬಂದೆ……..ಆದ್ರೆ ರೈಲು ಹೊರಟೇ ಹೋಯ್ತು…
ಮುಂದಿನ ರೈಲಿನಲ್ಲಿ ಹೋಗಿ ಪ್ರತಿ ಸ್ಟೇಷನ್‌ನಲ್ಲೂ ವಿಚಾರಿಸಿದೆ…… ಯಾರ ಕೈಗೆ ಸಿಕ್ಕಿ ಹಾಕ್ಕೊಂಡ್ಳೋ…. ನಾನೂ ಪೇಪರ್‌ನಲ್ಲಿ ಹಾಕ್ಸಿದ್ದೆ.
ಮುದುಕ : ಸಿಕ್ಕಿದೋರ ಕೈಲೆಲ್ಲಾ ಹೇಳಿದೀನಿ. ಯಾರಿಗೂ ಸಿಕ್ಕಿಲ್ಲ ಮಗು…
ಯುವಕ : ಅವಳಿಲ್ಲದೇ ನನಗೆ ಬದುಕೇ ವ್ಯರ್ಥ ಅನ್ನಿಸಿ, ಕಡೇಗೆ ನಾನೇ ಹುಡುಕೋಕೆ ಶುರುಮಾಡಿದೆ. ಒಂದೊಂದು ಊರಿಗೂ ಹೋಗೊದೂ ಬೀದಿ
ಬೀದಿ ಅಲೆಯೋದು, ಎಲ್ಲಾದ್ರೂ ಕಾಣ್ತಾಳೇನೋ ಅಂತ ಹುಡುಕ್ತಾ ಇರೋದೂ……
ಮುದುಕ : ನಾನು ಇದುವರೆಗೆ ಏನಿಲ್ಲಾಂದ್ರೂ ೩೦-೪೦ ಊರು ಸುತ್ತಿದೀನಿ.
ಯುವಕ : ೬೦-೭೦ ಆಗಿರಬಹುದು ನಾನು ನೋಡಿರೋ ಊರುಗಳ ಸಂಖ್ಯೆ.
ಮುದುಕ : ನಾಳೆ ಬೆಳಿಗ್ಗೆ ಎದ್ದು ಈ ಊರಲ್ಲಿ ಹುಡುಕಾಟ ಶುರುಮಾಡಬೇಕು…… ನನ್ನ ಜೀವ ಇರೋವರೆಗೂ ಹುಡುಕೋದನ್ನ ಬಿಡೋದಿಲ್ಲ.
ಯುವಕ : ಜೀವ ಹೋಗೋಕೆ ಮುಂಚೆ ನಾನು ಅವಳನ್ನ ಹುಡುಕಲೇಬೇಕು.
ಮುದುಕ : ಯಾವತ್ತಾದ್ರೂ ಒಂದಿವ್ಸ ಸಿಕ್ಕೇ ಸಿಗ್ತಾನೆ ಅಂತ ನನಗೆ ಆಸೆ ಇದೆ…….
ಎಲ್ಲಾ ಜಾತ್ರೆಗಳಿಗೂ ಹೋಗಿದೀನಿ, ಎಲ್ಲಾ ಸಂತೆಗಳಲ್ಲೂ ಹುಡುಕ್ತಿದೀನಿ……. ಎಲ್ಲಾ ಊರನ್ನೂ ಒಂದೊಂದು ಸಲ ನೋಡಿಬಿಡೋಣ ಅಂತ ಮನಸ್ಸು……..ಛೆ, ಆ ಮುಗ್ಧತೆ. ಆ ಸರಳತೆ………ಅವನು ನಗ್ತಾ ಇದ್ರೆ ಪ್ರಪಂಚದ ಎಲ್ಲಾ ಕಷ್ಟಾನೂ ಮರೆತು ಹೋಗತ್ತೆ……..
ಯುವಕ : ನನಗಿರೋದು ಒಂದೇ ಗುರಿ : ಅವಳನ್ನು ಪತ್ತೆ ಮಾಡಬೇಕು……..
ಆಗಲೇ ನನ್ನ ಜೀವನ ಸಾರ್ಥಕ……..ಅವಳು ಸಿಗೊವರೆಗೂ ನನ್ನ ಜೀವನದಲ್ಲಿ ಕತ್ತಲೆ ತುಂಬಿಕೊಂಡಿರುತ್ತೆ.
ಮುದುಕ : ನನ್ನ ಕನಸುಮನಸಿನಲ್ಲೆಲ್ಲಾ ಅವನೇ, ನನ್ನ ಮುರಳಿ……..
ಯುವಕ : ಅವಳು ಹೋದಾಗ ಒಂದು ವಾರ ನಾನು ಬದುಕಿರೋದೇ ವ್ಯರ್ಥ ಅನ್ನಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದೆ…….
ಮುದುಕ : ಮುರಳೀ, ಮುರಳೀ……..
ಯುವಕ : ಇಲ್ಲಾ, ಇದು ತಪ್ಪು, ಅವಳನ್ನು ಹುಡುಕಿ ಕಳೆದುಹೋದ ಬೆಳಕನ್ನು ಸಂಪಾದಿಸಬೇಕು ಅಂತ ಆಮೇಲೆ ಗಟ್ಟಿ ಮನಸ್ಸು ಮಾಡಿ ಇಡಿ ಜೀವ ಮಾನಾನ ಅವಳಿಗೋಸ್ಕರ ಮೀಸಲಾಗಿಟ್ಟೆ….
ಮುದಕ : ಶಾಸ್ತ್ರ ಕೇಳಿದಾಗ ಒಂದು ವೇಳೆ ಅವನು ಸಿಕ್ಕಿದರೂ ದಕ್ಕಲಾರ ಅಂತ ಬಂತು…
ಯುವಕ : ನನಗೆ ಅದ್ರಲ್ಲೆಲ್ಲಾ ನಂಬಿಕೆ ಇಲ್ಲಾ….
ವಂದುಕ : ಕಡೇ ಪಕ್ಷ ಅವನನ್ನ ಒಂದು ಬಾರಿ ಕಣ್ಣಲ್ಲಾದ್ರೂ ನೋಡದೆ ಸತ್ತರೆ ನನ್ನ ಆತ್ಮಕ್ಕೆ ಶಾಂತಿ ಸಿಕ್ಕೋಲ್ಲ ಅಂತ ಹುಡುಕೋಕೆ ಶುರು ಮಾಡಿದೀನಿ…
ಯುವಕ : ಅವಳೇನಾದ್ರೂ ಒಂದು ಸಲ ಸಿಕ್ಕಲಿ : ಖಂಡಿತಾ ಇನ್ನೊಂದ್ಸಲ ಅವಳನ್ನು ಕಳೆದುಕೊಳ್ಳೋಷ್ಟು ಮೂರ್ಖನಲ್ಲ ನಾನು….ರಶ್ಮೀ…ನನ್ನ
ರಶ್ಮೀ…
ಮುದುಕ : ಭಾಗವತದ ಕೃಷ್ಣ ಇದ್ದ ಹಾಗೆ ನಮ್ಮ ಮುರಳೀ…
ಯುವಕ : ಯಾವುದಿದ್ದರೆ ಮತ್ತೇನೂ ಬೇಕಾಗಲಿಲ್ಲವೋ ಅದೇ ನನ್ನ ರಶ್ಮೀ…..
ಮುದುಕ : ಬೇರೆ ಎಷ್ಟೋ ಜನ ಹುಡುಗರನ್ನ ನೋಡಿದೀನಿ, ಆದ್ರೆ ನಮ್ಮ ಮುರಳೀ ಥರ ಇರೋ ಇನ್ನೊಬ್ಬ ಹುಡುಗ ಸಿಗಲಾರ….ಸಿಕ್ಕಿದ್ರೆ ಬಹುಶಃ ಅವನನ್ನೇ ದತ್ತು ತೊಗೋತಿದೆ ಏನೋ…
ಯುವಕ : ರಶ್ಮೀಗೆ substitute ಹುಡುಕೋದು ಕನಸಿನಲ್ಲೂ ಸಾಧ್ಯವಿಲ್ಲ.
(ಇಬ್ಬರೂ ಪರಸ್ಪರ ನೋಡುತ್ತಾರೆ)
ಮುದುಕ : ನಿಮಗೆ ಮದುವೆ ಆಗಿದೆಯ ?
ಯುವಕ : ಮದುವೆ ? ರಶ್ಮೀ ಇಲ್ಲದೇ ಇರೋವಾಗ ಆಗಿದೆ ಅಂತ ಹೇಗೆ ಹೇಳೋದು ?
ಮುದುಕ : ಹುಂ !….ಒಂದು ಕೆಲ್ಸ ಮಾಡೋಣ. ಈ ಊರನ್ನ ನಾವಿಬ್ಬರೂ ಹಂಚಿಕೊಂಡು ಹುಡೋಣ….ನಿಮ್ಮ ಹುಡುಗೀ ಚಹರೆ ಸ್ವಲ್ಪ ಹೇಳಿ….
ಯುವಕ : (ಸ್ವಲ್ಪ ಯೋಚಿಸಿ) ಸರಿ. ಹಾಗೇ ಮಾಡೋಣ…ಸುಮಾರು ಐದೂವರೆ ಅಡಿ ಎತ್ತರ….ದುಂಡು ಮುಖ…. (ಕಣ್ಣು ಮುಚ್ಚಿಕೊಂಡು) ಹೊಳೆಯುವ ಕಣ್ಣುಗಳು….ಅಗಲವಾದ ಹಣೆ…ಉದ್ದನೆ ಜಡೆ…, ರಶ್ಮೀ….ರಶ್ಮೀ
(ಮುದುಕ ತನ್ನ ಡೈರಿಯಲ್ಲಿ ಮೇಲೆ ಹೇಳಿದುದನ್ನೆಲ್ಲ ಬರೆದುಕೊಳ್ಳುತಾನೆ.)
ಯುವಕ : ಒಮ್ಮೆ ನೋಡಿದರೆ ತಕ್ಷಣ ತಿಳಿಯುತ್ತೆ, ಮತ್ತೆ ಮರೆಯುವುದು ಸಾಧ್ಯವೇ ಇಲ್ಲ.
(ಮುದುಕ ತನ್ನ ಡೈರಿಯನ್ನು ಕಿಟ್‌ನಲ್ಲಿ ಇಡುತ್ತಾನೆ.)
ಮುದುಕ : ನಮ್ಮ ಮುರಳಿ ಸುಮಾರು ಮೂರುವರೆ ಅಡಿ ಇದಾನೆ……..ಅವನ ಮುಖದ ಮೇಲಾಗಲೀ ಮೈಮೇಲಾಗಲೀ ಎಂಥದೂ ಕಲೆ ಇಲ್ಲ… ಬಹಳ ಶುಭ್ರ……ದುಂಡು ಮುಖ……ಮಿನುಗುವ ಕಣ್ಣುಗಳು…… ಮುಖದಲ್ಲಿ ಒಂದು ಥರಾ ಸೆರೆ ಹಿಡಿಯುವ ಮೋಹಕ ಶಕ್ತಿ ಇದೆ……. ನೋಡಿದ ತಕ್ಷಣ ಇವನೇ ಮುರಳೀಂತ ಗೊತ್ತಾಗ್ಬಿಡುತ್ತೆ…….ಅಂಥಾ ಆಕರ್ಷಣೆ……
ಯುವಕ : ಸರಿ, ಬರೊಳೋ ಅಗತ್ಯ ಇಲ್ಲ, ಜ್ಞಾಪಕ ಇರುತ್ತೆ, ನಂಗೆ.
ಮುದಂಕ : ನೋಡಿದ್ರಾ, ಎಂಥಾ ಪರಿಸ್ಥಿತೀಲಿ ಇಬ್ರೂ ಒಟ್ಟಿಗೇ ಇದ್ದೀವಿ !
ಯುವಕ : ಹುಂ ! ಮಲಗೋಣ, ತುಂಬಾ ಹೊತ್ತಾಯ್ತು ಅಂತ ಕಾಣತ್ತೆ ತಮಗೆ.
ಮುದುಕ : ಪರವಾಗಿಲ್ಲ….ಅಂತೂ ತಮ್ಮ ಪರಿಚಯ ಆದದ್ದು ನನಗೆ ಅನುಕೂಲವಾದ ಹಾಗೆ ಆಯ್ತು.
ಯುವಕ : ನನಗೂ ಅಷ್ಟೇ …ಸರಿ. ಉಳಿದ ವಿಚಾರ ಬೆಳಿಗ್ಗೆ ಎದ್ದು ಮಾತಾಡೋಣ.
ಯಾರು ಎಲ್ಲಿ ಹುಡಕಬೇಕು. ಎಷ್ಟು ಹೊತ್ತಿಗೆ ಎಲ್ಲಿ ಸೇರಬೇಕು-ಎಲ್ಲಾ.
ಮುದುಕ : ಸರಿ ಹಾಗೇ ಮಾಡೋಣ.
(ಇಬ್ಬರೂ ದೀಪ ಆರಿಸಲು ಸ್ವಿಚ್ ಕಡೆ ಬರುತ್ತಾರೆ.)
ಮುದುಕ : ನಾನು ಆರಿಸ್ತೀನಿ, ನೀವು ಮಲಗಿಕೊಳ್ಳಿ. ಸ್ವಿಚ್ ನನ್ನ ಹಾಸಿಗೆ ಹತ್ರಾನೆ ಇದೆ.
(ಯುವಕ ಅಷ್ಟರಲ್ಲೇ ದೀಪ ಆರಿಸಿರುತ್ತಾನೆ. ಮಂದವಾದ ಬೆಳಕಿನಲ್ಲಿ ಮಂಚ, ಕುರ್ಚಿ ಇತ್ಯಾದಿಗಳನ್ನು ಮಾತ್ರ ಗುರುತಿಸಬಹುದು.) (ಯುವಕ ತನ್ನ ಹಾಸಿಗೆಯ ಮೇಲೆ ಮಲಗಿಕೊಳ್ಳುತ್ತಾನೆ. ಇಬ್ಬರೂ ನಿದ್ರಿಸುತ್ತಿರುವಾಗ ಇಂಪಾದ ಕೊಳಲಿನ ಶಬ್ದ ಹಿನ್ನೆಲೆಯಲ್ಲಿ ಕೇಳಿಬರುತ್ತದೆ. ಮಂದವಾದ ಬೆಳಕು ಕ್ರಮೇಣ ಕಡಿಮೆಯಾಗಿ ಪೂರ್ತಿ ಕತ್ತಲಾಗುತ್ತದೆ. ಕೊಳಲಿನ ನಾದ ಹೆಚ್ಚು ಹೆಚ್ಚು ಜೋರಾಗಿ ಕೇಳಿಬರುತ್ತಿರುವಂತೆ ರಂಗದ ಮೇಲೆ ತಿಳಿ ನೀಲಿ ಬಣ್ಣದ ಬೆಳಕು ಹರಡುತ್ತದೆ. ಕೊಳಲಿನ ದನಿ ಕ್ರಮೇಣ ಕಡಿಮೆಯಾಗಿ ತಿರ ಕೆಳಮಟ್ಟದಲ್ಲಿ ಮಾತ್ರ ಹಿನ್ನೆಲೆಯಲ್ಲಿ ಕೇಳಿಸುತ್ತಿರುತ್ತದೆ. ಮುದುಕ ಹೊರಳಿ ಏನೋ ಕನವರಿಸಿಕೊಳ್ಳುತ್ತಾನೆ. ಯುವಕ ಮೆಲ್ಲಗೆ ಎದ್ದು ಹಾಸಿಗೆಯ ಮೇಲೆ ಕುಳಿತುಕೊಳ್ಳುತ್ತಾನೆ. “ಉಹುಂ, ಇಲ್ಲ. ಇರಲಾರದು’ ಎಂದು ಆಸ್ಪಷ್ಟವಾಗಿ ಉಚ್ಚರಿಸಿ ಪುನಃ ಮಲಗಿಕೊಳ್ಳುತ್ತಾನೆ. ಮುದುಕ ಮೆಲ್ಲಗೆ ಎದ್ದು ಕುಳಿತುಕೊಂಡು ‘ಎಲ್ಲಿ, ಎಲ್ಲಿ ?” ಎಂದು ಪುನಃ ಮಲಗಿಕೊಳ್ಳುತ್ತಾನೆ.
ಕೊಳಲಿನ ನಾದದ ಮಧ್ಯದಲ್ಲಿ ಕಿಲಕಿಲನೆ ನಕ್ಕ ಶಬ್ದ ಕೇಳುತ್ತದೆ. ಮುದುಕ, ಯುವಕ ಇಬ್ಬರೂ ಏಳುತ್ತಾರೆ)
ಮುದುಕ : ನಾನು ನೋಡಿದೆ, ಇಲ್ಲೇ ಎಲ್ಲೋ ಇರಬೇಕು.
ಯುವಕ : ನನಗೂ ಕೇಳಿಸ್ತು, ಅವಳದ್ದೇ ನಗು ಅದು.
ಮುದುಕ : ಮುರಳೀ, ಮುರಳೀ………
ಯುವಕ : ರಶ್ಮೀ, ಎಲ್ಲಿದ್ದೀಯಾ……ನಾನು ನಿನ್ನನ್ನು ಎಷ್ಟು ದಿನದಿಂದ ಹುಡುಕ್ತಾ ಇದೀನಿ. ನನ್ನ ಮಾತು ಕೇಳಿಸುತ್ತಾ, ನಿನಗೆ ?
ಮುದುಕ : ನಾನು ಕಣ್ಣಾರೆ ಕಂಡೆ, ಇಲ್ಲೇ ಎಲ್ಲೋ ಇರಬೇಕು…
ಯುವಕ : ಎಲ್ಲೂ ಕಾಣಸ್ತಾ ಇಲ್ವಲ್ಲಾ, ಎಲ್ಲಿ ಹೋದ್ಳು… ಈಗ ಕೇಳಿದ ಹಾಗಿತ್ತು ಅವಳ ನಗು……
ಮುದುಕ : ಇಲ್ಲ, ಇಲ್ಲ. ಮುರುಳೀನೇ, ಈಗ ಕಂಡ…… ಸ್ವಕ್ಒ ಹುಡುಕಬೇಕು, ಸಹಾಯ ಮಾಡ್ತೀರಾ ?
ಯುವಕ : ನನಗೆ ಈಗ ಪುರುಸೊತ್ತಿಲ್ಲ…ಇಲ್ಲಿ ಮುರಳಿಗಿರಳಿ ಯಾರೂ ಬರಲಿಲ್ಲ, ನನ್ನ ರಶ್ಮೀ ಬಂದಿದಾಳೆ. ಬನ್ನಿ ಸ್ವಲ್ಪ ಹುಡುಕೋಣ.
ಮುದುಕ : ಇಂಥಾ ಸಮಯ ಹಾಳು ಮಾಡ್ಕೊಳ್ಳೋದೇ ? ಯಾರನ್ನೋ ಕಾಣದೋಳನ್ನ, ಇಲ್ಲದೋಳನ್ನ ಹುಡುಕ್ತಾ ? ಸಾಧ್ಯವೇ ಇಲ್ಲ. ಈಗ ಬಂದಿರೋ ಅವಕಾಶ ಮತ್ತೊಂದ್ಸಲ ಸಿಗೋಲ್ಲ……ಮುರಳೀನ ಈಗಲೇ ಹುಡುಕಬೇಕು. ಏಳಿ, ನೀವು ಆಕಡೆ ಎಲ್ಲಾ ನೀವು ಹುಡುಕಿ….ಈ ಕಡೆ ನಾನು ನೋಡ್ತೀನಿ………
ಯುವಕ : ಏನ್ರೀ, ನಿಮಗೇನು ಬುದ್ಧಿ ಕೆಟ್‌ಗಿಟ್‌ ಇದೆಯೇ ? ಇಲ್ಲಿ ನಾನು ಬಂದಿರೋದು ನಿಮ್ಮ ಮುರಳೀನ ಹುಡುಕೋಕಲ್ಲ. ಚನ್ನಾಗಿ ತಿಳ್ಕೊಳ್ಳಿ. ಸ್ವಲ್ಪ ಎದ್ದು ಬಂದು ಸರ‍್ಯಾಗಿ ನೋಡಿ, ನಮ್ಮ ರಶ್ಮೀ ಸಿಗ್ತಾಳೆ…. ನಿಮ್ಮ ಜೀವನದಲ್ಲಿ ಅಷ್ಟಾದ್ರೂ ಒಳ್ಳೆ ಕೆಲ್ಸ ಮಾಡಿ ಪುಣ್ಯ ಕಳ್ಕೊಳ್ಳಿ…….
(ಇಬ್ಬರೂ ಏಳುತ್ತಾರೆ. ಮಂಚದ ಕೆಳಗೆ, ಟೇಬಲ್ ಮೇಲೆ, ಕೆಳೆಗೆ, ಕಸದ ಬುಟ್ಟಿ ಒಳಗೆ, ಕೋಟ್‌ ರ‍್ಯಾಕ್‌ನಲ್ಲಿ ಹಾಕಿದ್ದ ಕೋಟು, ಶರಟು ಪ್ಯಾಂಟುಗಳ ಜೇಬಿನಲ್ಲಿ, ದಿಂಬಿನಡಿಯಲ್ಲಿ- ಎಲ್ಲಾ ಕಡೆಯಲ್ಲೂ ತಡಕಾಡುತ್ತಾರೆ)
ಮುದುಕ : ಉಹುಂ, ಮುರಳಿ ಎಲ್ಲೂ ಇಲ್ಲ, ಬರ‍್ತಾನೆ ಅಂತ ಕಾಣುತ್ತೆ. ಮತ್ತೆ ಸ್ವಲ್ಪ ಕಾಯಬೇಕು. ಬಂದಾಗ ಓಡಿ ಹೋಗದ ಹಾಗೆ ಹಿಡ್ಕೋಬೇಕು.
ಯುವಕ : ಮುರಳೀ ಮುರಳೀಂತ ಯಾಕೆ ಸುಮ್ನೆ ಬಡಕೋತೀರಾ ? ರಶ್ಮೀನ ಹುಡುಕಿ, ಸಿಕ್ಕೇ ಸಿಕ್ತಾಳೆ.
ಮುದುಕ : ನಂಗೊತ್ತು. ಆವನೆಲ್ಲೋ ನನ್ನ ಆಟ ಆಡಿಸ್ತಿದಾನೆ. ನಾನು ಹೀಗೇ ಕೂತಿರ್ತೀನಿ. ಎಷ್ಟು ಹೊತ್ತಾದ್ರೂ ಪರವಾಗಿಲ್ಲ. ನಂಗೊತ್ತು, ಅವನು ಬಂದೇ ಬರ‍್ತಾನೆ.
(ಮುದುಕ ಮತ್ತು ಯುವಕ ತಮ್ಮ ತಮ್ಮ ಹಾಸಿಗೆಯ ಮೇಲೆ ಕುಳಿತುಕೊಂಡು ಒಬ್ಬರನ್ನೊಬ್ಬರು ತಿರಸ್ಕಾರದಿಂದ ನೋಡುತ್ತಾರೆ.)
ಯುವಕ : ನಿಮ್ಮಿಂದ ಕೈಗೆ ಸಿಕ್ಕಿದ್ದ ನನ್ನ ರಶ್ಮೀ ತಪ್ಪಿಸಿಕೊಂಡು ಹೋದಳು……….
ಮುದುಕ : ಮುರಳೀನ ನೀವು ಹೆದರಿಸಿ ಕಳಿಸಿಬಿಟ್ರಿ……..
ಯುವಕ : ಸಾಕು, ಸುಮ್ನಿರಿ ! ಹುಚ್ಚುಚ್ಚಾಗಿ ಮಾತಾಡ್ಬೇಡಿ………
ಮುದುಕ : ಇನ್ನೊಂದ್ಸಲ ಅವನು ಕಂಡಾಗ ಹೀಗಾಗೋಕೆ ಬಿಡೋಲ್ಲ. ನಿಮ್ಮ ರೋಪ್‌ನೆಲ್ಲಾ ಕಟ್ಟಿಟ್ಬಿಡಿ, ಗೊತ್ತಾಯ್ತಾ ?………
ಯುವಕ : ನೀವು ಹುಡುಕ್ದೇ ಇದ್ರೂ ಪರವಾಗಿಲ್ಲ. ಬಾಯ್ಮುಚ್ಕೊಂಡಿದ್ರೆ, ನನ್ನ ರಶ್ಮೀ ಸಿಗ್ತಾಳೆ ನಂಗೆ.
(ಕ್ಷಣಕಾಲ ಮೌನ. ಹಿನ್ನೆಲೆಯ ಕೊಳಲಿನ ನಾದ ಕೆಳಮಟ್ಟದಲ್ಲಿ ಸ್ಪಷ್ಟವಾಗಿ ಕೇಳುತ್ತದೆ. ಯುವಕ ಯೋಚನಾಪರನಾಗಿದ್ದಾನೆ.)
ಯುವಕ : ಅವಳಿಲ್ಲಿ ನಿಜವಾಗಿ ಬಂದಿರಲಿಲ್ಲೇ, ಹಾಗಾದ್ರೇ ?
ಮುದುಕ : ನಾನು ಮುರಳೀನ ಕಣ್ಣಾರೆ ಕಂಡ••••
ಯುವಕ : ಬಹುಶಃ ಎಲ್ಲಾ ನಮ್ಮ ಕಲ್ಪನೆ ಇರಬಹುದು…,
ರಶ್ಮಿ ನಕ್ಕಿದ್ದನ್ನ ಊಹಿಸಿಕೊಂಡಿರಬಹುದು……….
(ಮುದುಕ ಈಗ ಯೋಚಿಸುತ್ತಾನೆ.)
ಮುದುಕ : ನೀವು ಹೇಳೋದು ನಿಜವೇನೂ ಅನ್ಸುತ್ತೆ……
ಯುವಕ : ಏನು ನಿಜ ?
ಮುದುಕ : ಅದೇ, ಎಲ್ಲಾ ಕಲ್ಪನೆ ಇರಬಹುದು….ಇಲ್ಲ, ಇಲ್ಲ, ಸಾಧ್ಯವಿಲ್ಲ ನಾನು ಕಣ್ಣಾರೆ……..
ಯುವಕ : ಕನಸಿರಬಹುದು.
ಮುದುಕ : (ಕಣ್ಣುಜ್ಜಿಕೊಳ್ಳುತ್ತಾ) ಕನಸು ?
ಯುವಕ : ಹೌದು, ಕನಸಿರಬಹುದು.
(ಬೆಳಕು ತುಂಬಾ ಅಸ್ಪಷ್ಟವಾಗುತ್ತಾ ಬರುತ್ತದೆ. ದೂರದಲ್ಲಿ ಒಬ್ಬ ಯುವತಿ ಗಾಳಿಯಲ್ಲಿ ತೇಲಿ ಬರುವಂತೆ ಬಂದು ಅವರಿಬ್ಬರ ಮುಂದೆ ನಡೆದು ಕಣ್ಮರೆಯಾಗುತ್ತಾಳೆ. ಮುದುಕ ಏನನ್ನೂ ನೋಡುವವನಂತೆ ಕುಳಿತಿರುತ್ತಾನೆ.)
ಮುದುಕ : ಕನಸು! ಕನಸು !
(ಯುವಕ ಚಟ್ಟನೆ ಎದ್ದು ನಿಂತು ಯುವತಿ ಕಣ್ಮರೆಯಾದ ದಿಕ್ಕಿನಲ್ಲಿ ಕೈ ತೋರಿಸುತ್ತಾನೆ.)
ಯುವಕ : ಅಗೋ ! ಅಲ್ಲಿ, ಅವಳೇ ! ರಶ್ಮೀ, ರಶ್ಮೀ…….ನಿಲ್ಲು, ನಿಲ್ಲು……
ಮುದುಕ : ಛೇ, ಯಾಕೆ ಹಾಗೆ ಕಿರುಚ್ಕೋತೀರಾ ? ಸುಮ್ಮನೆ ಕೂತ್ಕಳ್ಳಿ.
ಯುವಕ ನೀವು ನೋಡಲಿಲ್ಲವೇ ? ಈಗ ಬಂದಿದ್ದಳು…. ಈ ಕಡೆ ಹೋದ್ಳು…..
(ಯುವಕ ಆ ದಿಕ್ಕಿನಲ್ಲಿ ನಾಲ್ಕೆಂಟು ಹೆಜ್ಜೆ ಹೋಗಿ ನಿರಾಶನಾಗಿ ಹಿಂದಿರುಗುತ್ತಾನೆ.)
ಮುದುಕ : ಕನಸು !
ಯುವಕ : ಪುನಃ ಬರ‍್ತಾಳೆ. ನನಗೆ ಗೊತ್ತು. ಅವಳು ಬರೋವರೆಗೂ ಕಾದು -ಕೊಂಡು ಕೂತಿರ್ತೀನಿ.
ಮುದುಕ : ಮುರುಳಿ ನನಗೆ ಸಿಗಬಹುದೂಂತ ನಿಮಗನಿಸುತ್ಯೇ ?
(ಒಬ್ಬ ಹುಡುಗ ಬಂದು ಮಾಯವಾಗುತ್ತಾನೆ. ಯುವಕ ಹುಡುಗನನ್ನು ಗಮನಿಸುವುದಿಲ್ಲ. ಮುದುಕ ತಕ್ಷಣ ಎದ್ದು ಹುಡುಗನನ್ನು ಹಿಂಬಾಲಿಸುತ್ತಾನೆ.
ಮುದುಕ : ನೋಡಿ, ನೋಡಿ ! ನಾನು ಹೇಳಲಿಲ್ಲವೇ ? ಮುರಳೀ, ಮುರಳೀ ನಿಲ್ಲು…
ನಿನ್ನ ಹುಡುಕ್ಕೊಂಡ್ಬಂದಿದೀನಿ, ನಿಲ್ಲು ಮುರಳೀ…
(ಮುಂದುಕ ನಿರಾಶನಾಗಿ ವಾಪಸ್ ಬರುತ್ತಾನೆ.)
ಯುವಕ : ಸುಮ್ಮನೆ ಯಾಕೆ ಗಲಾಟೆ ಮಾಡ್ತೀರಾ? ಯಾರೂ ಬಂದಿಲ್ಲ….ರಶ್ಮೀ ಬಂದಿದ್ದು, ನೀವು ಗಲಾಟೆ ಮಾಡಿ ಓಡಿಸಿ ಬಿಟ್ರಿ…….
ಮುದುಕ : ಈ ಸಲ ಖಂಡಿತಾ ನೋಡ್ದೆ, ಅವನೇ ಮುರಳೀ…. ಕನಸಲ್ಲ. ನಿಜವಾಗಲೂ (ಕ್ಷಣಕಾಲ ಮೌನ.)
ಯುವಕ : ಬಹುಶಃ ಕನಸೇ ಇರಬಹುದು.
(ಮುದುಕ ಹತಾಶನಾಗಿ ಹಾಸಿಗೆಯ ಮೇಲೆ ಕೂರುತ್ತಾನೆ.)
ಮುದುಕ : ಕನಸೇ ? ನಿಜವಾಗಲೂ ಕನಸೇ ?
(ಯುವಕ ಎದ್ದು ನಿಲ್ಲುತ್ತಾನೆ. ಅಧಿಕಾರಯುತ ಧ್ವನಿಯಿಂದ ಮಾತನಾಡುತ್ತಾನೆ).
ಯುವಕ : ಹೌದು ! ಇರಬಹುದು. ನಾನು ಹೇಳಿದ ಹಾಗೆ ನೀವು ಕೇಳಬೇಕು.
ಮುದುಕ : (ಪ್ರತಿಭಟನೆ) : ಯಾಕೋ ?
ಯುವಕ : ಯಾಕೇಂತ ಕೇಳೋ ಅಧಿಕಾರ ನಿಮಗಿಲ್ಲ. ಇದು ನನ್ನ ಕನಸು.
ಮುದುಕ : ಸಾಧ್ಯವಿಲ್ಲ. ಇದು ನನ್ನ ಕನಸು. ನನ್ನ ಕನಸಿನಲ್ಲಿ ನೀವು ಬಂದಿರೋದ್ರಿಂದ ನಾನು ಹೇಳಿದ ಹಾಗೆ ನೀವು ಕೇಳಬೇಕು.
(ಮುದುಕ ಎದ್ದು ನಿಲ್ಲುತ್ತಾನೆ.)
ಯುವಕ : ನೀವು ಆ ಬಾಗಿಲಿನಲ್ಲಿ ಅಡ್ಡ ನಿಲ್ಲಿ. ರಶ್ಮಿ ಬಂದರೆ ಈ ಸಲ ತಪ್ಪಿಸಿಕೊಂಡು ಹೋಗಕೂಡದು. ಅದರ ಜವಾಬ್ದಾರಿ ನಿಮ್ಮದು.
ಮುದುಕ : ಸಾಧ್ಯವಿಲ್ಲ. ನನಗೆ ಮುರಳೀನ ಹಿಡಿಯೋ ಕೆಲಸದಲ್ಲಿ ನೀವು ಸಹಾಯ ಮಾಡಬೇಕು. ನನ್ನ ಕನಸಿನಲ್ಲಿ ಬಂದು ನನಗೆ ಅಪ್ಪಣೆ ಮಾಡೋ ಅಧಿಕಾರ
ನಿಮಗಿಲ್ಲ ತಿಳ್ಕೊಳ್ಳಿ.
ಯುವಕ : ಈ ರೀತಿ ಒಡ್ಡೊಡ್ಡಾಗಿ ಮಾತಾಡೋದ್ರಿಂದ ಏನೂ ಪ್ರಯೋಜ್ನ ಇಲ್ಲ. ಸುಮ್ನೆ ಹೇಳಿದ ಹಾಗೆ ಕೇಳಿ.
ಮುದುಕ : ಮೊದಲು ನಾನು ಹೇಳಿದ ಹಾಗೆ ಕೇಳಿ ನೀವು.
ಯುವಕ : ನನ್ನ ಕನಸಾದ್ರಿಂದ್ಲೇ ರಶ್ಮಿ ಕಾಣಿಸಿದ್ದು…
ಮುದುಕ : ಮುರಳಿ ಬಂದಿದ್ರಿಂದಾನೇ ಕನಸು ನಂದು…
ಯುವಕ : (ಅಸಹನ) ಸಾಕು ಸುಮ್ಮಿರ‍್ರೀ, ಬಾಯಿಗೆ ಬುದ್ಹಾಗೆ ಮಾತಾಡ್ಬೇಡಿ.
ಮುದುಕ : ನೀವು ಬಾಯಿಗೆ ಬಂದ ಹಾಗೆ ಮಾತಾಡ್ತಿರೋದು, ನಾನಲ್ಲ, (ಜಗಳ ನಡೆಯುತ್ತಿದ್ದಾಗ ಇಬ್ಬರೂ ಗಮನಿಸದ ಹಾಗೆ ಹುಡುಗ ಮತ್ತು ಯುವತಿ ಪ್ರವೇಶಿಸುತ್ತಾರೆ. ಯುವತಿ ನಗುತ್ತಾಳೆ. ಯುವಕ ಮತ್ತು ಮುದುಕ ಇಬ್ಬರೂ ಒಮ್ಮೆಲೇ ಅವರ ಕಡೆ ನೋಡಿ ಅವರತ್ತ ಧಾವಿಸುತ್ತಾರೆ. ಆದರೆ ಯಾರೂ ಕೈಗೆ ಸಿಕ್ಕುವುದಿಲ್ಲ, ರೂಮಿನಲ್ಲಿ ಅಲ್ಲಿಂದಿಲ್ಲಿಗೆ ಓಡಾಡಿ ಹುಡುಗ ಮತ್ತು ಯುವತಿ ಇಬ್ಬರೂ ಕಣ್ಮರೆಯಾಗುತ್ತಾರೆ. ಅವರನ್ನು ಹಿಡಿಯಲು ಓಡಾಡಿ ಮುದುಕ ಮತ್ತು ಯುವಕ ಇಬ್ಬರೂ ದಣಿದು, ಅವರು ಕಣ್ಮರೆಯಾದ ಮೇಲೆ ತಮ್ಮ ತಮ್ಮ ಹಾಸಿಗೆಗಳ ಮೇಲೆ ಬಂದು ಕುಳಿತುಕೊಳ್ಳುತ್ತಾರೆ.)
ಯುವಕ : ನನ್ನ ಮಾತು ಕೇಳಿದ್ರೆ ಅವರನ್ನು ಹಿಡಿಯಬಹುದಾಗಿತ್ತು.
ಮುದುಕ : ನಿಮ್ಮ ಹಟದಿಂದ ನನ್ನ ಮುರಳೀನ ಕಳೆದುಕೊಂಡೆ.
ಯುವಕ : ಪುನು ತಪ್ಪಿಸಿಕೊಂಡಳು ರಶ್ಮಿ……
ಮುದುಕ : ಇನ್ನೆಲ್ಲಿ ಹುಡುಕಲಿ, ನನ್ನ ಮುರಳೀನ ……
(ಇಬ್ಬರೂ ಎದ್ದು ಮೊದಲು ಹುಡುಕಿದಂತೆ ಮಂಚದ ಕೆಳಗೆ, ಟೇಬಲ್ ಮೇಲೆ, ಕೆಳಗೆ, ಡ್ರಾಯರ್ ಒಳಗೆ, ಕೋಟು ಪ್ಯಾಂಟುಗಳ ಜೇಬಿನಲ್ಲಿ, ಕಿಟ್‌ನಲ್ಲಿ, ದಿಂಬಿನ ಕೆಳಗೆ, ರಗ್ಗನ್ನು ಕೊಡವಿ, ದಿಂಬಿನ ಕವರನ್ನು ಎಳೆದು ತಮ್ಮ ತಮ್ಮ ಮೈ ಮುಟ್ಟಿ ನೋಡಿಕೊಂಡು-ಹುಚ್ಚು ಹುಚ್ಚಾಗಿ
ಹುಡುಕುತ್ತಾರೆ.)
ಯುವಕ : ಇಲ್ಲ, ಇಲ್ಲ, ಎಲ್ಲೂ ಇಲ್ಲ.
ಮುದುಕ : ಹುಂ ! ಕೈತಪ್ಪಿ ಹೋಯಿತು.
(ಕೊಳಲಿನ ನಾದ ಜೋರಾಗುತ್ತಾ ಬಂದು ಮತ್ತೆ ಕ್ರಮೇಣ ಕಮ್ಮಿಯಾಗುತ್ತದೆ. ಇಬ್ಬರೂ ಸುಸ್ತಾಗಿ, ವಿಷಾದದಿಂದ ಒಬ್ಬರನ್ನೊಬ್ಬರು ನೋಡುತ್ತಿರುವಂತೆ ತಿಳಿನೀಲಿ ಬೆಳಕು ಸ್ವಲ್ಪ ಸ್ವಲ್ಪವಾಗಿ ಮಂದವಾಗಿ ಪೂರ್ತಿ ಕತ್ತಲೆ ಆವರಿಸುತ್ತದೆ. ಹಿನ್ನೆಲೆಯ ಕೊಳಲು ನಿಲ್ಲುತ್ತದೆ.)
(ಅದೇ ಕೋಣೆ. ಯುವಕ ಕುರ್ಚಿಯ ಮೇಲೆ ಕುಳಿತಿದ್ದಾನೆ. ಮುದುಕ ಹಾಸಿಗೆಯ ಮೇಲೆ ಕುಳಿತು ತನ್ನ ಕಿಟ್‌ಗೆ ಬಟ್ಟೆಗಳನ್ನು ತುರುಕುತ್ತಿದ್ದಾನೆ. ಪೂರ್ತಿ ಬೆಳಕು ಬಂದಿದೆ. ಕೆಳಗಿನ ಮಾತುಗಳನ್ನು ವಿಶೇಷ ಆಸಕ್ತಿ ಇಲ್ಲದೆ ಆಡುತ್ತಾರೆ.)
ಯುವಕ : ಗಲ್ಲಿಗಲ್ಲೀನೂ ಬಿಡಲಿಲ್ಲ.
ಮುದುಕ : ಪೇಟೆ ಬೀದಿ ಎಲ್ಲಾ ಅಲೆದೆ.
ಯುವಕ : ವ್ಯರ್ಥ !
ಮುದುಕ : ವೃಥಾಶ್ರಮ !
ಯುವಕ : ಕಂಡುಕಂಡೋರ‍್ನೆಲ್ಲಾ ಕೇಳಿದೆ.
ಮುದುಕ : ತಿಳಿದೋರು ಅನ್ನಿಸಿಕೊಂಡೋರ‍್ನೆಲ್ಲಾ ವಿಚಾರಿಸಿದೆ.
ಯುವಕ : ತಿಳೀದ ಬೆಪ್ಪರನ್ನೂ ಕೇಳಿದೆ.
ಮುದುಕ : ಊರರು ಅಲೆದಾಯ್ತು.
ಯುವಕ : ಕೇರಿ ಕೇರೀಲೆಲ್ಲಾ ಡಂಗೂರ ಹೊಡದಾಯ್ತು.
ಮುದುಕ : ರೈಲ್ವೇಸ್ಟೇಶನ್ ಎಲ್ಲಾ ಶೋಧಿಸಿ ಆಯ್ತು.
ಯುವಕ : ಎಲ್ಲಿ ಹೋದ್ರೂ, ಎಲ್ಲಿ ನೋಡಿದ್ರೂ ಇಲ್ಲ!
ಮುದುಕ : ಅಂದ್ಹಾಗೇ ಬೊಂಬಾಯ್ಗೆ ಹೋಗಿದ್ರಾ ? ಯಾಕೇಂದ್ರೆ ಅಲ್ಲಿ ಹುಡುಗೀರನ್ನ ಹಿಡ್ಕೊಂಡ್ಹೋಗಿ ಸೂಳೆಮನೆ ಸೇರಿಸ್ತಾರಂತೆ
ಯುವಕ : ಬೆಂಬಾಯಿ, ಕಲ್ಕತ್ತಾ, ಮದ್ರಾಸ್, ಬೆಂಗಳೂರು…
ಮುದುಕ : ಕಾಳಿ, ತಿರುಪತಿ, ಪಂಡರಪುರ…
ಯುವಕ : ಪಂಡರಪುರದಲ್ಲಿ ಮಕ್ಕಳನ್ನ ಹಿಡ್ಕೊಂಡು ಹೋಗಿ ಕಣ್ ಕಿತ್ತು, ಕಾಲು ಮುರಿದು ತಿರುಪೆಗೆ ಕಳಿಸ್ತಾರಂತೆ…
ಮುದುಕ : ಮಂತ್ರಾಲಯ, ಕನ್ಯಾಕುಮಾರಿ, ಪಟ್ಟ ಪರ್ತಿ, ಪೂರಿ, ಕೋಣಾರ್ಕ, ಉಡಿಪಿ….
ಯುವಕ : ಸಿಮ್ಲಾ, ಆಗ್ರಾ, ಕಾಶ್ಮೀರ, ನಂದಿ, ಕೆಮ್ಮಣ್ಣುಗುಂಡಿ, ಪಾಂಡಿಚರಿ, ಖಜುರಾಹೋ…
ಮಂದುಕ : ಎಲ್ಲಾ ಊರೂ ಹುಡುಕಾಯ್ತು.
ಯುವಕ : ಊರಲ್ಲಿ ನೋಡಿದೆ, ಕೇರೀಲಿ ನೋಡಿದೆ.
ಮುದುಕ : ಜಾತ್ರೇಲಿ ನೋಡ್ದೆ, ಸಭೇಲಿ ನೂಡ್ದೆ, ಸಮಾರಾಧನೇಲಿ ನೋಡ್ದೆ, ಸಂತೇಲಿ ನೋಡ್ದೆ……
(ಇಬ್ಬರೂ ತಮ್ಮ ತಮ್ಮ ಜಾಗಗಳಿಂದ ಎದ್ದು ರಂಗದ ಮುಂಭಾಗದ ಎರಡೂ ತುದಿಯಲ್ಲಿ ನಿಲ್ಲುತ್ತಾರೆ )
ಯುವಕ : ಥಿಯೇಟರ್‌ನಲ್ಲಿ, ದೇವಸ್ಥಾನದಲ್ಲಿ ನೋಡ್ದೆ.
ಮುದುಕ : ಮಠದಲ್ಲಿ ನೋಡಿದೆ.
ಯುವಕ : ಲೈಬ್ರರೀಲಿ ಹುಡುಕಿದೆ.
ಮುದುಕ : ಪಾರ್ಕ್‌ನಲ್ಲಿ ಅಲೆದಾಡಿದೆ.
ಯುವಕ : ಬಯಲಲ್ಲಿ ನೋಡಿದೆ. ಕಾಡಿನಲ್ಲಿ ಹುಡುಕಿದೆ.
ಮುದುಕ : ಮರಳುಗಾಡಿನಲ್ಲಿ ನೋಡ್ದೆ, ಒಯಸಿಸ್‌ನಲ್ಲಿ……..
ಯುವಕ : ಆಕಾಶದಲ್ಲಿ, ದಿಗಂತದಲ್ಲಿ
ಮುದುಕ : ಹೊಳೇಲಿ, ಕೆರೇಲಿ, ಭಾವೀಲಿ
ಯುವಕ : ಯೂನಿವರ್ಸಿಟೀಲಿ, ಪೋಲೀಸ್ ಸ್ಟೇಶನ್‌ನಲ್ಲಿ
ಮುದುಕ : ಹಿಮಾಲಯದಲ್ಲಿ ಕೋರ್ಟ್‌ನಲ್ಲಿ, ರಿಮ್ಯಾಂಡ್ ಹೋಮ್‌ನಲ್ಲಿ.
ಯುವಕ : ಸಾಗರದಲ್ಲಿ
ಮುದುಕ : ಶಿವಮೊಗ್ಗದಲ್ಲಿ ?
ಯುವಕ : ಕನಕನ ಕಿಂಡೀಲಿ
ಮುದುಕ : ಕೋಟೆ ಬಾಗಲಲ್ಲಿ
ಯುವಕ : ಉಕ್ಕಡದಲ್ಲಿ
ಮುದುಕ : ಕೂಲಿಮಠದಲ್ಲಿ
ಯುವಕ : ಪಾಲಿಟೆಕ್ನಿಕ್‌ನಲ್ಲಿ
ಮುದುಕ : ಬಸ್‌ಸ್ಟ್ಯಾಂಡ್‌ನಲ್ಲಿ
ಯುವಕ : ಮ್ಯೂಸಿಯಂನಲ್ಲಿ. ಆರ್ಟ್ ಗ್ಯಾಲರೀಲಿ
ಮುದುಕ : ಸಂಗೀತ ಕಚೇರೀಲಿ, ಭಜನೆಮಂಡಲೀಲಿ
ಯುವಕ : ಹೋಟೆಲ್‌ಗಳಲ್ಲಿ
ಮುದುಕ : ಟೌನ್‌ಹಾಲ್‌ನಲ್ಲಿ
ಯುವಕ : ಬೆಳದಿಂಗಳಲ್ಲಿ ಔತಣಕೂಟದಲ್ಲಿ, ಬಾರ್‌ನಲ್ಲಿ ಪತ್ರಿಕಾಲಯದಲ್ಲಿ, ಯೋಗಾಶ್ರಮದಲ್ಲಿ, ಗರಡೀ ಮನೇಲಿ
ಮುದುಕ : ವರ‍್ಕ್‌ಶಾಪ್‌ನಲ್ಲಿ ಲ್ಯಾಬರೋಟರೀಲಿ
ಯುವಕ : ಗುಹೇಲಿ ಬೆಂಕೀಲಿ ರೀಡರ‍್ಸ್‌ ಡೈಜೆಸ್ಟ್‌ನಲ್ಲಿ
ಮುದುಕ : ಎಲ್ಲಾ ಕಡೆ ಹುಡುಕಾಯ್ತು.
ಯುವಕ : ಮುಗೀತೆ ?
ಮುದುಕ : ಏನು ?
ಯುವಕ : ಇನ್ನೇನೂ ಬಾಕಿ ಇಲ್ವೆ ?
ಮುದುಕ : ಏನು ಸಿಕ್ತು ಕೊನೇಗೆ ?
ಯುವಕ : ಎಚ್ಚರವಿದ್ದಾಗ, ನಿದ್ರೆ ಮಾಡೋವಾಗ…ಹಾಯಾಗಿರೋವಾಗ…
ಮುದುಕ : ಕನಸಲ್ಲಿ ಮನಸಲ್ಲಿ ಧ್ಯಾನದಲ್ಲಿ
ಯುವಕ : ಎಲ್ಲೂ ಸಿಕ್ಕಿಲ್ಲ. ಬಹುಶಃ ಸಿಕ್ಕೋದೂ ಇಲ್ಲ ಅಂತ ಕಾಣುತ್ತೆ.
ಮುದುಕ : ಹಾಗಂತೀರಾ ?
ಯುವಕ : ಅವಳು ಇದಾಳೋ ಇಲ್ವೋ ಅಂತ ಅನುಮಾನ ಬರುತ್ತೆ.
(ಈಗ ಯುವಕ ಮತ್ತು ಮುದುಕ ಒಬ್ಬರಿಗೊಬ್ಬರು ಬೆನ್ನು ಮಾಡಿ ನಿಂತಿರುತ್ತಾರೆ.)
ಮುದುಕ : ಯಾರಿಗೆ ತಾನೆ ಗೊತ್ತು ?
ಯುವಕ : ಮುರಳಿ ಇದಾನೆ ಅಂತ ಹ್ಯಾಗೆ ಹೇಳ್ತೀರಾ ?
ಮುದುಕ : (ಪ್ರತಿಧ್ವನಿ) ಹ್ಯಾಗೆ?
ಯುವಕ : ಹೀಗೇ…ಏನೇನೋ ಅಂಡ್ಕೊಂಡಿರ್ತೀವಿ…
ಮುದುಕ : ಆಹಾ! ಇರಬಹುದು.
ಯುವಕ : ಮುರಳಿ ಬರೀ ಭ್ರಮೆ ಆಗಿದ್ರೆ ?
ಮುದುಕ : ಭ್ರಮೆ
ಯುವಕ : ನಾನು ಸುಸ್ತಾಗಿದೀನಿ.
ಮುದುಕ : ನಾನು ಬೆಂಡಾಗಿದೀನಿ.
ಯುವಕ : ನಾನು ನಿದ್ದೆ ಮಾಡ್ತಿರಬಹುದು.
ಮುದುಕ : ನಾನು ಕನಸು ಕಾಣ್ತಿರಬಹುದು.
ಯುವಕ : ಎಲ್ಲಾ ಹೀಗೇ ಇರುತ್ತೆ.
ಮುದುಕ : ಎಲ್ಲಾ ಬದಲಾಗಿ ಬಿಡುತ್ತೆ.
ಯುವಕ : ಯಾರೂ ಸಿಕ್ಕೋಲ್ಲ.
ಮುದುಕ : ಸಿಗೋದಕ್ಕೆ ಯಾರೂ ಇಲ್ಲ.
(ಮುದುಕ ಮತ್ತು ಇಬ್ಬರೂ ರಂಗದ ಮೇಲೆ ನಿಧಾನವಾಗಿ ಗೊತ್ತುಗುರಿ ಇಲ್ಲದಂತೆ ಸುತ್ತಾಡುತ್ತಾರೆ.)
ಯುವಕ : ಯಾಕೆ ಹುಡುಕಬೇಕು ? ಅವರು ಸಿಕ್ಕಿ ನಮಗೇನು ಆಗಬೇಕಾಗಿದೆ ?
ಮುದುಕ : ಏನೂ ಇಲ್ಲ !
(ಇಬ್ಬರೂ ಓಡಾಟ ನಿಲ್ಲಿಸಿ, ಒಬ್ಬರ ಹೆಗಲಮೇಲೊಬ್ಬರು ಕೈ ಹಾಕಿ ನಿಲ್ಲುತ್ತಾರೆ. ಇಬ್ಬರೂ ಕೈ ಕುಲುಕುತ್ತಾರೆ. ಮುದುಕ ತನ್ನ ಮಂಚದ ಬಳಿ ಬಂದು ಕಿಟ್ ಬಿಚ್ಚಿ ಒಳಗಿಂದ ಒಂದು ಫುಟ್‌ಬಾಲ್ ಕವರ್ ಬ್ಲಾಡರ್‌ ತೆಗೆಯುತ್ತಾನೆ.)
ಯುವಕ : ಏನಿದು ? ಫುಟ್‌ಬಾಲ್ ! ಅದನ್ಯಾಕೆ ತಂದಿದೀರಿ ?
(ಮುದುಕ ಕವರಿನೊಳಕ್ಕೆ ಬ್ಲಾಡರ್ ತುರುಕಿ ಗಾಳಿ ಊದುತ್ತಾನೆ.)
ಮುದುಕ : ಪ್ರಯಾಣ ಮಾಡೋವಾಗ ತಲೆದಿಂಬ್‌ಗೆ ಏನಾದ್ರೂ ಬೇಕಲ್ಲಾ ! (ಗಾಳಿ ತುಂಬಿದ ಫುಟ್‌ಬಾಲನ್ನು ಮುದುಕ ನೆಲದ ಮೇಲೆ ಪುಟಿಸುತ್ತಾನೆ. ಚಂಡು ಉರುಳಿಕೊಂಡು ಹೋಗಿ ಒಂದು ಮೂಲೆಗೆ ಬರುತ್ತದೆ. ಯುವಕ ಅದರ ಹತ್ತಿರ ಹೋಗಿ ಅದನ್ನು ಮೆಲ್ಲಗೆ ಮುದುಕನತ್ತ ಒದೆಯುತ್ತಾನೆ. ಮುದುಕ ಅದನ್ನು ಯುವಕನಿಗೆ ಹಿಂತಿರುಗಿಸುತ್ತಾನೆ. ಒಂದೆರಡು ಸಲ ಈ ತರಹ Idle Play ನಡೆದ ಮೇಲೆ ಮುದುಕ ಚೆಂಡನ್ನು ಬಲವಾಗಿ ಒದೆಯುತ್ತಾನೆ. ಯುವಕ ಅದನ್ನು ಅಷ್ಟೇ ಚುರುಕಿನಿಂದ ತಡೆದು ವಿರುದ್ಧ ದಿಕ್ಕಿನಲ್ಲಿ ಒದೆಯುತ್ತಾನೆ. ಇಬ್ಬರಲ್ಲೂ ಸ್ವಲ್ಪ ಉತ್ಸಾಹ ಮೂಡುತ್ತಿರುತ್ತದೆ. `ಹೋ !” “ಓಹ್!” ಇತ್ಯಾದಿ ಉದ್ಘಾರಗಳೊಡನೆ ರಂಗದ ಮೇಲೆಲ್ಲಾ ಚೆಂಡನ್ನು ಓಡಾಡಿಸುತ್ತಿರುತ್ತಾರೆ.)
(ಹೊಟೆಲಿನ ಸೇವಕ ಮತ್ತು ಗುಮಾಸ್ತ್ರ ಇಬ್ಬರೂ ಓಡೋಡಿ ಬರುತ್ತಾರೆ. ಸೇವಕನ ಬಾಯಲ್ಲಿ ಸೀಟಿಯಿದೆ. ಗುಮಾಸ್ತನ ಕೈಯಲ್ಲಿ ಒಂದು ಚೂರು ಕಾಗದ.).
ಸೇವಕ : ತಡೀರಿ! ತಡೀರಿ! ನಾನು ಅಂಪೈರ್‌, ಸಿಟಿ ಊದೋ ತನಕ ನೀವು ಸುಮ್ಮನಿರಬೇಕು.
ಗುಮಾಸ್ತ : ನಾನು ಪ್ರೇಕ್ಷಕ, ನಾನು ಬರೋವರ‍್ಗೂ ಆಟ ಶುರು ಮಾಡಬಾರ್ದು. ಟಿಕೆಟ್ ಕೊಂಡ್ಕೊಂಡಿದೀನಿ.
ಮುದುಕ : ರೆಡೀನಾ?
ಯುವಕ : ರೆಡೀ !
(ಸೇವಕ ಎರಡು ಕೈಗಳನ್ನೂ ಮೇಲೆತ್ತಿ ಜೋರಾಗಿ ಸೀಟಿ ಊದುತ್ತಾನೆ. ಮುದುಕ ಯುವಕ ಇಬ್ಬರೂ ಚೆಂಡನ್ನು ಒದೆಯುತ್ತಾರೆ. ಚೆಂಡು ರಂಗದ ಎಲ್ಲಾ ಭಾಗಗಳಲ್ಲೂ ಉರುಳಾಡುತ್ತದೆ. ಅದನ್ನನುಸರಿಸಿ ಇಬ್ಬರೂ ಧಾವಿಸುತ್ತಿರುತ್ತಾರೆ. ಮಧ್ಯೆ ಮಧ್ಯೆ ‘ಅಂಪೈರ್‌’ ಸೀಟಿ ಊದಿದಾಗ ‘ಫೌಲ್ !” “ಕಾರ್ನರ್ !” “ಫ್ರೀ ಕಿಕ್‌ !” ಇತ್ಯಾದಿ ಕೂಗುಗಳು ಹಿನ್ನೆಲೆಯಲ್ಲಿ ಪ್ರಚಂಡವಾಗಿ ಕೇಳಿಬರುವುದನ್ನು ಗುಮಾಸ್ತ-ಪ್ರೇಕ್ಷಕ ಪ್ರತಿಧ್ವನಿಸುತ್ತಾನೆ. ಯುವಕ ರಂಗದ ಎಡ ಬದಿಗೆ ಚೆಂಡನ್ನು ಒದ್ದು .)
ಯುವಕ : ಗೋಲ್‌ !
ಸೇವಕ : ಉಹುಂ ! ಗೋಲ್ ಆ ಕಡೆ ಇಲ್ಲಾ!
(ಸೇವಕ ಸೀಟಿ ಊದುತ್ತಾನೆ. ಮುದುಕ ಚೆಂಡನ್ನು ಎದುರು ದಿಕ್ಕಿನಲ್ಲಿ ಒದ್ದು.)
ಮುದುಕ : ಗೋಲ್ |
ಸೇವಕ : ಉಹುಂ ! ಗೋಲ್ ಆ ಕಡೆ ಇಲ್ಲಾ!
(ಮುದುಕ, ಸೇವಕ ಇಬ್ಬರೂ ಚೆಂಡನ್ನು ಎಲ್ಲ ದಿಕ್ಕಿನಲ್ಲಿ ಒದ್ದು ‘ಗೋಲ್‌ ಗೋಲ್” ಎಂದು ಕಿರಿಚುತ್ತಾರೆ. ಅಂಪೈರ್ ಒಂದೇ ಸವನೆ ಸೀಟಿ ಊದಿ ಊದಿ ‘ಇಲ್ಲಾ ಇಲ್ಲಾ ಇಲ್ಲಾ’ ಎಂದು ಸೀಟಿ ಮಧ್ಯೆ ಕಿರಿಚುತ್ತಾನೆ. ಜನಗಳ ಕೂಗು ಕೇಕೆ ಜೋರಾಗುತ್ತದೆ. ಗುಮಾಸ್ತ-ಪ್ರೇಕ್ಷಕ ಒಂದು ಕಡೆ ನಿಲ್ಲಲಾರದೆ ‘ಫೌಲ್ ಫೌಲ್ !” ಎಂದು ಕೂಗುತ್ತಾ, ಕಿರಿಚುತ್ತಾ ಅಲ್ಲಿಂದಿಲ್ಲಿಗೆ ಓಡಾಡುತ್ತಾನೆ. ಆ ವೇಳೆಗೆ ಚಂಡು ನಿಧಾನವಾಗಿ ಉಸಿರು ಕಳೆದುಕೊಳ್ಳುತ್ತಿರುತ್ತದೆ. ಯುವಕ ಅದನ್ನು ಒದ್ದು ‘ಗೋಲ್ !” ಎಂದು
ಕೂಗುತ್ತಾನೆ.)
ಸೇವಕ : ಯಾಕೆ ಹಾಗೆ ಕಿರುಚುತ್ತೀಯಾ ? ಎಲ್ಲಿದೆ ಗೋಲು ?
ಮುದುಕ : ಗೋಲ್ !
ಸೇವಕ : ಇಲ್ಲಾ, ಫೌಲ್ !
(ಸೇವಕ ಸೀಟಿ ಊದುತ್ತಾನೆ. ಚೆಂಡಿನಲ್ಲಿ ಅರ್ಧ ಗಾಳಿ ಹೋಗಿ ‘ತೊಪ್ಟೆಯಾಗಿದೆ. ಯುವಕ ಚೆಂಡನ್ನು ಕೈಗೆತ್ತಿಕೊಂಡು ಪರೀಕ್ಷಿಸುತ್ತಾನೆ.)
ಮುದುಕ : ಗಾಳಿ ಹೂಗಿದೆ. ಆಡೋಕಾಗಲ್ಲ.
ಯುವಕ : (ಚೆಂಡನ್ನು ಅಮುಕುತ್ತಾ) : ಇನ್ನೂ ಸ್ವಲ್ಪ ಇದೆ. ಆದ್ರೆ ಆಟ ಆಡೋಕಾಗೊಲ್ಲ.
ಸೇವಕ : ಎಲ್ಲೀ ಇಲ್ಲಿ ಕೊಡಿ ಬಾಲ್ನ. ನಾನು ನೋಡಿ ಹೇಳೀನಿ, ಆಡೋಕೆ ಸಾಧ್ಯವೋ ಇಲ್ವೋಂತ.
(ಸೇವಕ ಚೆಂಡನ್ನು ತೆಗೆದುಕೊಂಡು ಪರೀಕ್ಷಿಸುತ್ತಾನೆ – ಅಮುಕಿ, ಹಿಚಕಿ, ಕಿವಿಗಿಟ್ಟುಕೊಂಡು-ಇತ್ಯಾದಿ, ಡಾಕ್ಟರ್ ರೋಗಿಯನ್ನು ಪರೀಕ್ಷಿಸುವಂತೆ.)
ಗುಮಾಸ್ತ : ಶುರುಮಾಡಿ, ಶುರುಮಾಡಿ ಬೇಗ, ಹೊತ್ತಾಯ್ತು (ಚಡಪಡಿಸುತ್ತಾನೆ).
ಸೇವಕ : (ಚೆಂಡನ್ನು ನೆಲದ ಮೇಲಿಡುತ್ತಾ) ಇನ್ನೂ ಆಡಬಹುದು, ಶುರುಮಾಡಿ.

(ಸೇವಕ ಸೀಟಿ ಊದುತ್ತಾನೆ. ಯುವಕ ಮುದುಕ ಇಬ್ಬರೂ ಒಬ್ಬರನ್ನೊಬ್ಬರು ನೋಡಿಕೊಂಡು ಬೇರೇನೂ ದಾರಿಯೇ ಇಲ್ಲ ಎಂಬಂತೆ desperate ಆಗಿ ಆಡಲು ಪ್ರಾರಂಭಿಸುತ್ತಾರೆ. ಮೊದಲಿನಂತೆಯೇ ಸೀಟ, ಕೂಗು, ಕೇಕೆ. ಗುಮಾಸ್ತ ಅತ್ತಿಂದಿತ್ತ ಓಡಾಡುತ್ತಿರುವ ಚೆಂಡನ್ನು ಬಹಳ ಆಸ್ಥೆಯಿಂದ ನೋಡುತ್ತಿರುತ್ತಾನೆ. ಚೆಂಡು ಪೂರ್ತಿ ಗಾಳಿ ಕಳೆದುಕೊಂಡು ಚಪ್ಪಟೆಯಾಗಿದೆ: ಅದನ್ನು ಒಡೆಯಲಾರದೆ ಮುದುಕ ಯುವಕ ಇಬ್ಬರೂ ಕೈ ಚೆಲ್ಲಿ ಸುಮ್ಮನೆ ನಿಲ್ಲುತ್ತಾರೆ. ಸೇವಕ ಸೀಟಿ ಊದುವದನ್ನು ನಿಲ್ಲಿಸಿ ಚೆಂಡನ್ನು ಎತ್ತಿಕೊಂಡು ಪರೀಕ್ಷಿಸುತ್ತಿರುವಾಗ–ಕತ್ತಲು.)

Close

ಒಂದು ವಿಲಕ್ಷಣ ಊರಿನ ಹೆಸರಲ್ಲಿ ಒಂದು ಅಪೂರ್ವ ಕನ್ನಡ ಪದ

ಒಂದು ವಿಲಕ್ಷಣ ಊರಿನ ಹೆಸರಲ್ಲಿ ಒಂದು ಅಪೂರ್ವ ಕನ್ನಡ ಪದ

ಚಿದಾನಂದಮೂರ್ತಿ ಎಂ

ದೂರದ ಊರಿಗೆ ಬಸ್ ಪ್ರಯಾಣ ಮಾಡುವವರು ರಸ್ತೆಯ ಬದಿಯಲ್ಲಿ ನಿಲ್ಲಿಸಿರುವ ಊರಿನ ಹೆಸರುಗಳನ್ನು ಸೂಚಿಸುವ ಬೋರ್ಡುಗಳನ್ನು ಗಮನಿಸುವುದರಲ್ಲಿ ಎರಡು ಲಾಭಗಳುಂಟು. ಒಂದು ಮನರಂಜನೆ. ಊರಿನ ಹೆಸರು -ಪುರ ಎಂದೋ,-ಪಟ್ಟಣ ಎಂದೋ ಕೊನೆಯಾಗಿರುತ್ತದೆ; ಆದರೆ ಅಲ್ಲಿರುವುದು ನಾಲ್ಕಾರು ಗುಡಿಸಲು ಜೊತೆಗೆ ಅನೇಕ ವಿಲಕ್ಷಣ ಹೆಸರುಗಳು ನಮ್ಮ ಕಲ್ಪನೆಯನ್ನು ಕೆರಳಿಸುತ್ತವೆ. ಎರಡನೆಯ ಲಾಭ ಊರ ಹೆಸರುಗಳ ಅಧ್ಯಯನ ನಮ್ಮ ಸಮಾಜ, ಭೂಗೋಳ ಸಸ್ಯಶಾಸ್ತ್ರ, ಇತಿಹಾಸ, ಭಾಷೆಗಳಿಗೆ ಸಂಬಂಧಿಸಿದ ಅನೇಕ ಸ್ವಾರಸ್ಯ ಸಂಗತಿಗಳನ್ನು ತಿಳಿಸುತ್ತದೆ. ಹೆಸರುಗಳ ಕೊನೆಯಲ್ಲಿ ಮತ್ತೆ ಮತ್ತೆ ಆವೃತ್ತವಾಗಿ ಬರುವ ಉತ್ತರ ವಾಚಿಗಳ ಬಗ್ಗೆಯೇ ಪ್ರತ್ಯೇಕ ಪ್ರಬಂಧವನ್ನು ಬರೆಯಬಹುದು. ಇಲ್ಲಿ ಎರಡು ಉದಾಹರಣೆಗಳನ್ನು ಮಾತ್ರ ಕೊಡುತ್ತೇನೆ -ಸಂದ್ರ ಎಂದು ಕೊನೆಯಾಗುವ ಊರುಗಳ ಹೆಸರುಗಳು ವಿಶೇಷವಾಗಿ ದಕ್ಷಿಣ ಕರ್ನಾಟಕದ ಪೂರ್ವ ತುದಿಯ ಜಿಲ್ಲೆಗಳಲ್ಲಿ, ಮುಖ್ಯವಾಗಿ ತುಮಕೂರು, ಬೆಂಗಳೂರು ಜಿಲ್ಲೆಗಳಲ್ಲಿ ಕಿಕ್ಕಿರಿದಿವೆ. ಈ ‘-ಸಂದ್ರ’ ಎಂಬುದು ‘ಸಮುದ್ರ’ದಿಂದ ಬಂದಿದೆ: ಇದು ಆ ಊರಲ್ಲಿರುವ ಕೆರೆಯನ್ನು ಸೂಚಿಸುತ್ತದೆ. ಉದಾಹರಣೆಗೆ, ‘ಮಲ್ಲಸಂದ್ರ’ ಎಂಬ ಊರಿನ ಹೆಸರು ಮಲ್ಲ ಎಂಬಾತ ತಾನೇ ಸ್ವತಃ ಕಟ್ಟಿಸಿದ ಅಥವಾ ಇನ್ನಾರೋ ಅವನ ಹೆಸರಲ್ಲಿ ಕಟ್ಟಿಸಿದ ಕೆರೆಯನ್ನು ಸೂಚಿಸುತ್ತದೆ.-‘ಗಾಲ’ ಎಂದು ಕೊನೆಯಾಗುವ ಹೆಸರುಗಳು ಮತ್ತೆ ದಕ್ಷಿಣ ಕರ್ನಾಟಕದಲ್ಲಿ, ವಿಶೇಷವಾಗಿ ಮೈಸೂರು ಜಿಲ್ಲೆಯಲ್ಲಿ ಕಾಣಿಸಿಕೊಳ್ಳುತ್ತವೆ. (ಉದಾ : ಕೊಳ್ಳೇಗಾಲ, ಕೊತ್ತೆಗಾಲ.) ಇದು ‘ಮುಗಲದಿಂದ ಬಂದಿದೆಯೆಂಬುದನ್ನು ಈಚೆಗೆ ಕೊಡಗಿನ ಶಾಸನಗಳನ್ನು ಓದುವಾಗ ಕಂಡುಕೊಂಡೆ. ‘ಮಂಗಲ’ವು ಮೂಲತಃ ಆಗ್ರಹಾರವನ್ನು ಹೇಳುತ್ತದೆ. ತಮಿಳುನಾಡಿನಲ್ಲಿ ಅಗ್ರಹಾರಗಳನ್ನು ‘ಚತುರ್ವೇದಿ ಮಂಗಲ’ಗಳೆಂದು ಕರೆಯುತ್ತಿದ್ದರು. ಎಷ್ಟೋ ಸಾರಿ ಇಂದು ಕನ್ನಡದಿಂದ ಅಳಿದು ಹೋಗಿರುವ ಅನೇಕ ಅಪೂರ್ವ ಪದಗಳನ್ನು ಸೃಳವಾಚಿಗಳು ಉಳಿಸಿಕೊಂಡಿರುತ್ತವೆ. ಅಂತಹ ಸ್ವಾರಸ್ಯವಾದ ಸ್ಥಳವಾಚಿಯೊಂದನ್ನು, ಅದು ಒಳಗೊಂಡಿರುವ ಅಪೂರ್ವ
ಪದವೊಂದನ್ನು ಚರ್ಚಿಸುವುದು ಈ ಚಿಕ್ಕ ಪ್ರಬಂಧದ ಉದ್ದೇಶ.
ಬೆಂಗಳೂರಿನಿಂದ ಕೋಲಾರಕ್ಕೆ ಹೋಗುವ ರಸ್ತೆಯ ಬದಿಯಲ್ಲಿ ‘ಕೊಳತೂರು’ ಎಂಬ ಹೆಸರನ್ನು ಹೊತ್ತ ಬೋರ್ಡು ಇದೆ. ಊರಿಗೆ ಆ ಹೆಸರಿಟ್ಟವರು ಅದನ್ನೇ ಏಕೆ ಆರಿಸಿಕೊಂಡರೋ ಎಂದು ಹಿಂದೆ ಪ್ರಶ್ನಿಸಿಕೊಂಡಿದ್ದೆ. ಆ ಊರಿನವರು ತಮ್ಮ ಊರಿನ ಹೆಸರನ್ನು ಹೇಳಿಕೊಳ್ಳುವುದರಲ್ಲಿ ಅಂತಹ ಉತ್ಸುಕತೆಯನ್ನು ತೋರದಿದ್ದರೂ ಆಶ್ಚರ‍್ಯವೇನಿಲ್ಲ. ಆ ಊರನ್ನು ನಾನು ನೋಡಿಲ್ಲವಾದರೂ, ಬಹುಶಃ ಆ ಊರು ಉಳಿದ ಊರುಗಳಂತೆಯ ಶುಭ್ರವಾಗಿರುತ್ತದೆ ಅಥವಾ ಶುಭ್ರವಾಗಿರುವುದಿಲ್ಲ. ಆದರೆ ಈಚೆಗೆ ಆ ಹೆಸರು ಕೊಳೆತ+ಊರು (=ಕೊಳೆತುಹೋದ ಊರು) ಅಲ್ಲ. ಅದು ವಾಸ್ತವವಾಗಿ ಕೊಳತ+ಊರು (ಕೊಳತ=ಹೊಸ : ಕೊಳತೂರು=ಹೊಸೂರು) ಎಂಬುದು ಹೊಳೆದಾಗ ಬಹಳ ಸಂತೋಷವಾಯಿತು.
ಈ ಕನ್ನಡದಲ್ಲಿ ‘ಕೊಳೆತ’ (=ಹೊಸ) ಎಂಬ ಪದವಲ್ಲ. ಆದರೆ ಅದು ಹತ್ತನೆಯ ಶತಮಾನದ ಕನ್ನಡದಲ್ಲಿದ್ದಿತೆಂಬುದಕ್ಕೆ ಇಂದಿನ “ಆದಿಪುರಾಣ”ದಲ್ಲಿ ಬರುವ ‘ಕೂಳೆತ ಮಾತು ಸಾಕ್ಷಿಯಾಗಿದೆ. 1 ಈ ಪದಕ್ಕೆ ಸರಿಯಾದ ಅರ್ಥವನ್ನು ಕಂಡುಹಿಡಿದವರು

1 ಪೊಳೆವರಮರ್ದಿನ ಕಪ್ಪುರ! ವಳಿಕಿನ ಕತ್ತುರಿಯ ಕೊಚಿತ ದೂರ್ವಾಭರಣಂ |
ಗಳ ಪೊಳೆವ ಮಾಣಿಕಂಗಳ | ಬೆಳಗಿಗೆ ಸೂಚಿಸಿತು ಭರತನಂತ ಪುರಮಂ||
(ಆದಿಪುರಾಣ 11.43)
ಕೆ. ಜಿ. ಕುಂದಣಗಾರರ ಪ್ರತಿಯಲ್ಲಿ ‘ಕೊಳೆತ’ದ ಓದಲು (ಕೊಳೆದ) ಎಂಬ ಊಹೆಯ ಪಾಕವನ್ನಿಟ್ಟುಕೊಳ್ಳಲಾಗಿದೆ. ಆದರೆ ಅದಕ್ಕೆ ಪಾಶಾಂತರವಾಗಿ ಕೊಟ್ಟಿರುವ ‘ಕೊಳೆತ’ ಎಂಬುದೇ ಮೂಲ ಪಾರ. ಹಸ್ತಪ್ರತಿಗಳಲ್ಲಿ ”ಳೆ'” ಬರೆಯುವುದು ಅಪೂರ್ವವಾದ್ದರಿಂದ, ‘ಕೊಳೆತ’ ಎಂಬುದೇ ಸರಿಯಾದ ಪಾಠವೆಂದು ಆಗೀಕರಿಸಬಹುದು.
ದಿವಂಗತ ಡಿ. ಎಲ್. ನರಸಿಂಹಾಚಾರರು. (ಇದನ್ನು ಟಿ. ಎನ್. ಶ್ರೀಕಂಠಯ್ಯನವರು “ಜ್ಞಾನೋಪಾಸಕ” ಗ್ರಂಥಕ್ಕೆ ಬರೆದ ಮುನ್ನುಡಿಯಲ್ಲಿ ನಮೂದಿಸಿದ್ದಾರೆ. “ಕೊಳತೂರು’
ಪದದ ವಿವರಣೆ ಹೊಳೆಯಲು ಕಾರಣ ಈ ಮುನ್ನುಡಿಯೇ.)
“ಆದಿಪುರಾಣ”ದಲ್ಲಿ ಬರುವ ‘ಕೊಳೆತ’ ಸಹ ಏಕೈಕ ಪ್ರಯೋಗ. ಅದು ಮತ್ತೆ ಕನ್ನಡದಲ್ಲಿ ಎಲ್ಲ ಬಳಕೆಯಾದಂತಿಲ್ಲ. ಅದೇ “ಆದಿಪುರಾಣ”ದಲ್ಲಿ “ಕೊಳತ’ ಎಂಬ ಮಾತು (4-34. ಪ.), ಶಾಂತಿನಾಥನ “ಸುಕುಮಾರ ಚರಿತ”ದಲ್ಲಿ ಬರುವ ಅದೇ ‘ಕೊಳತ’ ಮಾತು (10-89. ವಚನ) ಯಾವುದೋ ಸುಗಂಧ ದ್ರವ್ಯವನ್ನು ಹೇಳುವ ಬೇರೆ ಪದ. ಇದು ಸಂಸ್ಕೃತದ ‘ಕಲಸ್ಥ,’ಕೈ ಸಮಾನವಾದುದು. ಯಾವುದರಿಂದ ಯಾವುದು ಬಂತೋ ಹೇಳುವುದು ಕಷ್ಟ.
“ಕೊಳೆತ” ಪದ “ಆದಿಪುರಾಣ”ವನ್ನು ಬಿಟ್ಟರೆ, ನಮಗೆ ದೊರಕುವುದು ಸ್ಥಳವಾಚಿಗಳಲ್ಲಿ ಮಾತ್ರ. ಕೋಲಾರ ಮತ್ತು ಬೆಂಗಳೂರು ಜಿಲ್ಲೆಗಳಲ್ಲಿ ಈ ಹೆಸರಿನ ಇನ್ನೂ ಹಲವು ಹಳ್ಳಿಗಳಿವೆ. ಹಿಂದೆ ಹೇಳಿದ ಕೊಳತೂರು ಬೆಂಗಳೂರು ಜಿಲ್ಲೆಯ ಹೊಸಕೋಟೆ ತಾಲೂಕಿನಲ್ಲಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನಲ್ಲಿ, ಮೈಸೂರ ಜಿಲ್ಲೆಯ ತಿರುಮಕೂಡಲು ನರಸೀಪುರ ತಾಲೂಕಿನಲ್ಲಿ ಅದೇ ಹೆಸರಿನ ಊರುಗಳಿವೆ. ಹುಡುಕಿದರೆ ಇನ್ನೂ ಹಲವು ಹೆಸರುಗಳು ದೊರಕಬಹುದು.
ಪ್ರಾಚೀನ ಮತ್ತು ಈಚಿನ ಶಾಸನಗಳಲ್ಲಿ ಈ ಹೆಸರಿನ ಊರುಗಳು ದೊರೆಯುತ್ತವೆ. ಕ್ರಿ. ಶ 634 ರ ಗಂಗರ ತಾಮ್ರಪಟದಲ್ಲಿ ‘ಕೊಳತ್ತೂರ್’ ಹೆಸರಿದೆ. (Mysore Archaeological Report, 1925, No. 105) ಸು. ಕ್ರಿ. ಶ 800 ರ ಒಂದು ಶಿಲಾಶಾಸನದಲ್ಲಿಯೂ ಈ ಹೆಸರಿದೆ-“ಸ್ವಸ್ತಿ ಶ್ರೀ ಕೊಳತ್ತೂರ ತೋಳುಗೊಳೆ ಸವೆಗ ಮ’ದುದ ತೊಳುವ ಇಕ್ಕಿಸಿ ಸತ್ಯನ್ ಇದಕ್ ಆಮಂಗೆ ಕೊಟ್ಟೊದು ಆಯ್ಗೊಳ ಕವಿನಿ” (Ep. Carn. X. Chintamni. 109) ಇಂತಹ ಇಪ್ಪತ್ತಕ್ಕೆ ಮೇಲ್ಪಟ್ಟ ಉಲ್ಲೇಖನಗಳನ್ನು ಶಾಸನಗಳಲ್ಲಿ ನೋಡಬಹುದು. (ಇಲ್ಲೆಲ್ಲ ‘ಳೆ ‘ಇಲ್ಲದೆ ಕುಳವಿರುವುದು ಬಿಡಿಸಬೇಕಾದ ಒಂದು ಸಮಸ್ಯೆ) 1.
1 ‘ಕೊಳೆತ’ ಪದದ ಬಗ್ಗೆ, ‘ಕೊಳೆತ್ತೂರ್’ ಬಗ್ಗೆ ಇನ್ನೂ ಏಳಬಹುದಾದ ಒಂದೆರಡು ಸಮಸ್ಯೆಗಳನ್ನೊಳಗೊಂಡ ವಿಸ್ತಾರವಾದ ಚರ್ಚೆಯನ್ನು ಮುಂದೆ ಪ್ರತ್ಯೇಕ ಲೇಖನವಾದ ಮೀಸಲಿರಿಸಿಕೊಂಡಿದ್ದೇನೆ. ‘ಆದಿಪ್ರರಾಣ’ದ ‘ಕೊಳೆತ’ ಶಬ್ದದ ಬಗ್ಗೆ ನನಗಿರುವ ಒಂದೆರಡು ಸಂದೇಹಗಳನ್ನು ವ್ಯಕ್ತಪಡಿಸಲು ಆ ಅವಕಾಶವನ್ನು ಬಳಸಿಕೊಳ್ಳುತ್ತೇನೆ.
ಕನ್ನಡದ ‘ಕೊಳೆತ’ ಪದಕ್ಕೆ ಸಂವಾದಿಯಾಗಿ ಬೇರೆ ದ್ರಾವಿಡ ಭಾಷೆಗಳಲ್ಲಿ ಈ ಪದಗಳಿವೆ. (ಬರೋ ಮತ್ತು ಎಮೆನೋ ಅವರ D E D ಯಿಂದ ಆರಿಸಿಕೊಂಡಿದ್ದೇನೆ.)
ತಮಿಳು ಕೊಳುಂದು “Anything young, tenderness”
ಕುಟಿ “Young tender’
ಕುಳೆಂದೈ ‘Infant, childhood’
ಮಲಯಾಳಂ ಕೊಳುಂದು ‘Tender twig, young shoot
ತುಳು ಕೊರೆ ‘Weak, small’
ತೆಲುಗು ಕ್ರೂತ್ತ ‘New, fresh’
ಕೊಲಾಮಿ ಕೊವ್ವೆ ‘Young of bird or animal’
ಇವುಗಳಲ್ಲಿ ತೆಲುಗಿನ ಕ್ರೊತ್ತ ಪದ ಗಮನಾರ್ಹ. ಇದು ಅದೇ ತೆಲುಗಿನಲ್ಲಿ ಹಿಂದೆ ಇದ್ದ ಕೋಳೆತದಿಂದ ಬಂದಿರಬೇಕು. ಕೊಳೆತ > ಕ್ರೊತ್ತ. ಹೀಗೆ ‘ಳೆ’ವು ಪದಾದಿಯ ವ್ಯಂಜನದ ಜೊತೆ ಸೇರಿ ರೇಫವಾಗುವುದಕ್ಕೆ ಅನೇಕ ನಿದರ್ಶನಗಳಿವೆ. *ಪೊಳೆಲ್‌> ಪ್ರೋಲ್‌, “ಕೊಳೆವಿ >ಕ್ರೊವ್ವಿ, ಇತ್ಯಾದಿ. ತೆಲುಗಿನಲ್ಲಿದ್ದಿರಬಹುದಾದ ‘ಕೊಳೆತ’ ರೂಪವೂ ಕನ್ನಡದಲ್ಲಿ ವಾಸ್ತವವಾಗಿ ಇದ್ದ ‘ಕೊಳೆತ’ರೂಪವೂ ಒಂದೇ ಆಗಿದೆ.
ಕೋಲಾರ ಜಿಲ್ಲೆ ಮತ್ತು ಸುತ್ತು ಮುತ್ತಣ ಪ್ರದೇಶಗಳಲ್ಲಿ ‘ಕೊತ್ತ-‘ ದಿಂದ ಆರಂಭವಾಗುವ ನೂರಾರು ಊರಿನ ಹೆಸರುಗಳಿವೆ. ಕೊತ್ತಪಲ್ಲಿ, ಕೊತ್ತೂರು, ಕೊತ್ತಕೋಟೆ, ಕೊತ್ತಹುಡ್ಯ, ಕೊತ್ತಗೆರೆ ಎಂಬ ಕೆಲವನ್ನು ಇಲ್ಲಿ ಹೇಳಬಹುದು. ಮೈಸೂರು ಜಿಲ್ಲೆಯ ಕೂತ್ತಗಾಲ ಎಂಬುದನ್ನು ಇಲ್ಲಿ ನೆನೆಯಬಹುದು. (ಇಲ್ಲಿ ಮಲತ: ‘ಕೊತ್ತಮಂಗಲ’ವೇ ಆಗಿದ್ದಿರಬೇಕು. ಹೆಗ್ಗಡದೇವನಕೋಟೆ ತಾಲೂಕಿನ ಶಾಸನದಲ್ಲಿ ‘ಕೊತ್ತಮಂಗಲ’ದ ಹೆಸರಿದೆ). ಇಲ್ಲಿಯ ‘ಕೊತ್ತ-‘ಎಂಬುದರ ಅರ್ಥ ಹೊಸ ಎಂದು. ಆಂಧ್ರಪ್ರದೇಶದಲ್ಲಿ “ಕ್ರೊತ್ತಕೂಟ”ದಂತಹ ಹೆಸರು ಬರಹದ ಭಾಷೆಯಲ್ಲಿದ್ದರೆ, ಸಾಮಾನ್ಯರ ಉಚ್ಚಾರಣೆಯಲ್ಲಿ ‘ಕೊತ್ತಕೋಟ’ ಎಂದಾಗುತ್ತದೆ. ಬೆಂಗಳೂರು ಜಿಲ್ಲೆಯ ‘ಹೊಸಕೋಟೆಯನ್ನು “ಕೊತ್ತಕೋಡ’ ಎಂದು ವ್ಯವಹರಿಸುತ್ತಾರಂತೆ ಪಕ್ಕದ ಚಿತ್ತೂರು ಜಿಲ್ಲೆ ತೆಲುಗು ಪ್ರದೇಶದಲ್ಲಿ ಕೊಳತ–, ಕ್ರೋತ್ತ – ಕೊತ್ತ-ಇವೆಲ್ಲವೂ ಒಂದೇ: ಮೂಲದಿಂದ ಬಂದ ಪದಗಲೆಂಬುದರಲ್ಲಿ ಅನುಮಾನವಿಲ್ಲ.
‘ಕೊಳತೂರು’ ವಾಸ್ತವವಾಗಿ ‘ಹೊಸೂರು’ ಎಂಬರ್ಥವನ್ನು ಪಡೆದಿದೆಯೆಂದು ಗೊತ್ತಾದರೆ, ಆ ಊರುಗಳವರು ಎಷ್ಟೋ ಸಮಾಧಾನಪಟ್ಟುಕೊಳ್ಳಬಹುದು. ಅರ್ಥದ ದೃಷ್ಟಿ ಯಿಂದ ಅದರಲ್ಲಿ ವಿಶೇಷವೇನೂ ಇಲ್ಲವಾದರೂ, ಆ ಹೆಸರು ಕನ್ನಡದ ಅಪೂರ್ವ ಪದವೊಂದನ್ನು ಹುದುಗಿಕೊಂಡಿದೆಯೆಂದು ಹೆಮ್ಮೆಯನ್ನೂ ಅನುಭವಿಸಬಹುದು. 1

1 ಆನೇಕಲ್ಲು ತಾಲೂಕಿನಲ್ಲಿದ್ದ ‘ಕೊಳತೂರು’ ಎಂಬ ಗ್ರಾಮದ ಹೆಸರನ್ನು ಕೆಲವು ವರ್ಷಗಳ ಹಿಂದೆ ತೆಗೆದು ಹಾಕಿ, ‘ರಾಮಸಮುದ್ರ’ ಎಂಬ ಬೇರೊಂದು ಹೆಸರಿಡಲಾಯಿತೆಂದು ತಿಳಿದು ಬಂದಿದೆ. ಇದಕ್ಕೆ ಕಾರಣಗಳೇನೋ ತಿಳಿಯಲಿಲ್ಲ.

Close

ನೀಲಾಂಜನ: ಕವಿತಾಗುಚ್ಛ

ನೀಲಾಂಜನ : ಕವಿತಾಗುಚ್ಛ

ಲಕ್ಷ್ಮೀನಾರಾಯಣಭಟ್ಟ ಎನ್ ಎಸ್

ನಿನ್ನ ಧಿಕ್ಕರಿಸಿದ ತರ್ಕಕ್ಕೆ ಮೊನ್ನೆ ಕಾಲು ಮುರಿಯಿತು
ಕೈಮುಗಿದು ಹೇಳಿತು
ನಾ ತುಳಿಯದ ನೆಲವಿದೆ
ಕುಡಿಯದ ಗಾಳಿ ನೀರು
ಕಾಣದ ಪ್ರಾಂತ್ಯ
ಅದಕ್ಕೆ ಅವರವರ ಊಹೆ ಅಂತ್ಯ.
ಅಲ್ಲಿಗೆ ಹೋಗಿ ಬಾ
ನಿಧಾನ ಆಗಿ ಬಾ
ಹುಗಿದ ಕೊಪ್ಪರಿಗೆಗಳನ್ನು ಹೆಗಲಿಗೆ ಎತ್ತಿ ಬಾ

ಕೈಕೋಲು ಬಡಿಗೆಯಾಗದ್ದಕ್ಕೆ ನಮಿಸಿದೆ
ಹೆಡಿಗೆ ಹೊತ್ತಾಗಲೆ ನಡಿಗೆ ಮುರಿದಿದೆ
ಚಿಂತಿಲ್ಲ
ಎತ್ತಿದ ಹೆಡೆಯಲ್ಲೇ ರತ್ನದ ದೀಪ ಸಿಕ್ಕು
ಕುಂಟುತ್ತ ಬರುತ್ತೇನೆ ಹೆಳವ
ಕಾಣದ ನೆಲವ
ಹೊಕ್ಕುಳಲ್ಲಿ ಹೂಗುಟ್ಟಿ ಬಾಯಿಗೆ ಬರದವನೆ
ಚಿಣ್ಣರ ಕಣ್ಣುಗಳಲ್ಲಿ ಬಾಗಿಲು ತೆರೆದವನೆ
ಬುದ್ಧಿ ಬಿಕ್ಕಿದಾಗ
ಹಮ್ಮು ಕರುಣೆಯಾಗಿ
ಬದುಕು ಉಕ್ಕಿದಾಗ
ಜಲನಭ ತೆಕ್ಕೆಯಲ್ಲಿ
ಚಿಕ್ಕೆ ಉಕ್ಕಡದಲ್ಲಿ ಹುಟ್ಟುಮೀಟುವೆ
ಆಗ
ಕೂಗಿದರೆ ನಾನು
ಮಾಗಿದ ಹಣ್ಣು
ತೂಗುವ ಜೇನು
ದನಿ ತಾಜಮಹಲಿನ ಕಮಾನು

ಕ್ಷಣಕ್ಕೆ ಹೊಳೆದು ದಿನಕ್ಕೆ ಮುಳಿದವನೆ
ಮುಗಿಲ ವಸ್ತ್ರಗಳಲ್ಲಿ ಮರುಗ ಹಚ್ಚಿಟ್ಟು
ಗಾಳಿಗೈಯಲ್ಲಿ ಪತ್ತಲ ಹರಿದವನೆ
ಆಗೀಗ ಹೀಗೆ ‘ಜೋಗಿ’ ಕರೆವುದು ಸಾಕು
ಈ ಕ್ಷಣ ಅನಂತತೆಗೆ ಬೆಳೆಯುವುದು ಬೇಕು
೩
ಈ ಕೊರಗು
ಹಣ್ಣೆಲೆ ಮಣ್ಣಿಗೆ ಹೆದರಿದ ದನಿ ಬೀಳಲ್ಲ
ಗೇಯದ ಪ್ರಾಯದ ಮಾಯುವ
ಹುಸಿ ಕಂಗಾಲಲ್ಲ
ಗಾಯ ಕರೆದ ಮದ್ದಲ್ಲ
ಡೊಳ್ಳಿನ ಸದ್ದೇ ಅಲ್ಲ

ಹಸಿದ ಕರಣ ಭರ್ತಿಯುಂಡು
ಮರಣದೊಳಿದ್ದಾಗ
ಹರಣ ಕಂಡ ಕನಸು
ಕಾಣುವ ದೃಶ್ಯದ ಟೊಳ್ಳು ನಿಧಾನ ದನಿದ ನನಸು
೪
ಅಚ್ಚರಿ ಕಚ್ಚಿದ ಬದುಕಿನ ಆಸೆ ತೀರದು
ಬಾಯಿ ಬಿಡಲು
ಭಾಷೆ ಸಾಲದು
ಬೆದೆ ಕುದಿವ ಗೂಳಿಯ ಕುರುಡು ಹುಮ್ಮಸ್ಸಿಗೂ
ಬರಡು ಹಸು ಹಯನಾಗದು
ಪಹರೆ ದನಿಗಳು ಮುಜುರೆ ಮಾಡಿ ಸರಿದವು
ಈಗ ನನ್ನದೆ ಕೊರಳು
ಬಿದ್ದರೆ ಕೊರಳಿಗೆ ನನ್ನದೆ ಉರುಳು
ಬಾಕಿ ತೀರಿಸಲು ನಡುವೆ
ನಾಕ ನರಕ ಹೊಲಿಯುವ ನನ್ನದೆ ಬೆರಳು
ನಿಂತ ಬದುಕು ನಿನ್ನ ಚಿಂತೆಯಲ್ಲಿ ಚಲಿಸುತ್ತ
ನೋಡುತ್ತೇನೆ ಸುತ್ತ
ನೆಲ ಬಾನು ಕಡಲಲ್ಲಿ ನಿನ್ನದೆ ಹೆಸರು
ಹರಿಯುವ ಇರುವೆಯಲ್ಲೂ ನಿನ್ನದೆ ಉಸಿರು

ಮಬ್ಬು ಬೆಳಕಿನ ಕಬ್ಬಿನ ಗದ್ದೆ ನಡುವೆ
ಸೋಗೆ ಸರಿಸಿ ನಡೆಯುವಾಗ ಕಾಲಿಗೆ
ಕೂಳೆ ಚುಚ್ಚುತ್ತದೆ
ಹಾಳು ಶನಿ ಎಂದು ಶಪಿಸಿ
ಬಾಗಿದರೆ ಗಜ ದೂರದಲ್ಲೆ ಹೆಡೆ ತೂಗಿ
ಬಾ ಎನ್ನುತ್ತದೆ ಬಂಗಾರದ ಶೂಲದ ಸಾವು
ತುದಿ ಇಲ್ಲದ ಸಿಹಿಗದ್ದೆ ನಡುವೆ ನಿಲ್ಲುವೆ
ತುಂಬಿದ ಮೌನದ ಗಡಿಗೆ
ಅಪಸ್ವರವಿಲ್ಲದೆ ಸಿಡಿಯುವೆ.
೫
ನೆರೆಯವರು ನಕ್ಕರು
ಇವನಿಗೆ ಹುಚ್ಚು ಕಚ್ಚಿದೆ
ದಿಗಿಲು ಬಿಚ್ಚಿದೆ
ಹುಲಿ ಕಣ್ಣೆಲ್ಲೋ ದಿಟ್ಟಿಸಿ ನೋಡಿದೆ
ಮೊಸರನ್ನದ ಬಲಿ ಕೊಟ್ಟರೆ
ಹೊಸದನಿ ಮಾಯುತ್ತದೆ
ಹೊಸಿಲು ದಾಟದಂತೆ ಕಾಯುತ್ತದೆ.

ಅವರಿಗೆ ಗೊತ್ತು ಹೇಗೆ ?
ಪ್ರತಿ ರಾತ್ರಿ ತಳ ಬಿಲ ತೆರೆಯುತ್ತವೆ
ಮೊಲ ಹಾಯುತ್ತವೆ
ನೆಲ ಕೆನೆಯುವಾಗ ನಭ ದನಿಯುತ್ತದೆ
ಅರ್ಥಸಿಗದ ಚೀತ್ಕಾರ ಆಕಾಶದೆತ್ತರ ಪುಟಿದು
ಸದ್ದು ನಿದ್ದೆಯ ನಡುವೆ ಗಡಿಯೆ ಸಿಡಿಯುತ್ತದೆ
ಅರಿಯಬಾರದ ಚಿತ್ರ ಮುಗಿಲ ಪತ್ರದಲ್ಲಿ ಮೂಡಿ
ಒಳಗಿನ ಕತ್ತಲ ಕನ್ನೆಗೆ ಗುರುತು ಹತ್ತುತ್ತದೆ

ಆಗ ಮುಗಿಲಿಗೆ ಕಂಚಿನ ದನಿ
ಮಾತು ಮಣಿ ಹನಿ
ಕನ್ನೆಯ ಒಡಲು ಹೊನ್ನ ರಾಗದ ಗಣಿ
೬
ಕಡಲು ಬೆಟ್ಟಕ್ಕೆ ಹೇಳಿತು
“ನನ್ನ ತಳ ಮಂದರ
ನಿನ್ನ ಶಿಖೆ ತಾರ
ನಡುವಿನ ಸ್ವರ ಸಹಿತ ನಾನೂ ನೀನೂ ಕೂಡಿ
ಭೂಮಿ ಏನು ಗಾನಮನೋಹರ”

ಬೆಟ್ಟ ಕಡಲಿಗೆ ಹೇಳಿತು
“ಅದಕ್ಕೆಂದೇ ನಭ
ಪ್ರತಿ ರಾತ್ರಿ ತೊಡಿಸುತ್ತದೆ
ಇಳೆಯ ಕೊರಳಿಗೆ ನಕ್ಷತ್ರಹಾರ
ಆಗ ಮಂದರದಿಂದ ತಾರದ ವರೆಗೆ
ಧಾರಿಣಿಯ ಎದೆ ತುಂಬ
ಕೋಟಿ ಸ್ವರ ಸಂಚಾರ
ಬದುಕಿನಾಚೆಯದನ್ನೂ
ಹಿಡಿದುಕೊಡುತ್ತದೆ ಆಗ
ಮಣ್ಣಿನ ಪಂಜರ”.

Close

ಡಾಂಬರು ಬಂದುದು

ಡಾಂಬರು ಬಂದುದು

ದೇವನೂರು ಮಹಾದೇವ
ಊರ ಮೇಲು ನೋಟ :

ಊರಿಂದ ಬಂಡಿ ಮಾತ್ರವೆ ಓಡಾಡಲು ಲಾಯಕ್ಕಾದ ಓಣಿ ಥರ ಹೊಂಟ ಹಾದಿ ಮೂರು ಮೈಲಿ ಹೋಗಿ ಬಸ್ಸು ಓಡಾಡುವ ದೊಡ್ಡ ರಸ್ತೆಗೆ ಸೇರಿಕೊಳ್ಳುತ್ತದೆ. ದೊಡ್ಡ ರಸ್ತೆಯಿಂದ ಅದೇ ಹಾದಿ ಹಿಡಿದು ಹಿಂದಕ್ಕೆ ಬಂದರೆ ಕಳ್ಳಿ ಕವುಚಿಕೊಂಡ ಅದು ಗವ್ವನೆ ಊರವರೆಗೂ ಬಂದು ದೆವ್ವ ನಿಂತ ಅರಳಿಮರಗಳ ಬಳಚಿ ಮುಂದೆ ಮೂರು ಸೆಲೆಯಾಗಿ ಒಡೆದುಕೊಂಡು ಊರೋಳಕ್ಕೆ ಧಾವಿಸುತ್ತದೆ. ಹಿಂಗೆ ಸೆಲೆ ಹೊಂಟ ಬೀದಿಯ ಅಕ್ಕ ಪಕ್ಕ ಒತ್ತೊತ್ತು ಹಟ್ಟಿಗಳು ತೆಕ್ಕಿಸಿಕೊಂಡಿದ್ದು ಉಸಿರಾಡಲೂ ಅಡಚಣೆ ಮಾಡುವಂತೆ ಮೊದಲ ನೋಟಕ್ಕೆ ಗಕ್ಕ ಕಾಣಬರುತ್ತದೆ.
ಅದು ಯಾವುದಕ್ಕೂ ಹೇಳಿಕೊಳ್ಳುವಂಥ ಹಳ್ಳಿ ಅಲ್ಲ. ಎಣಿಸಿದರೆ ಹೆಚ್ಚೆಂದರೆ ಎಂಬತ್ತು ಮನೆಗಳು ಇದ್ದೀತು. ಎಲ್ಲ ಕಡೆ ಇರುವಂತೆ ಅಲ್ಲಿ ಒಂದು ತುಂಡು ಹೊಟೆಲ್ಲೂ ಇಲ್ಲ. ಇದ ಹಿಡಿದೇ ಊರ ಊಹಿಸಬಹುದು ಮತ್ತು ಅಲ್ಲೆ ನಂಜನಗೂಡಲ್ಲೋ ಮೈಸೂರಲ್ಲೋ ಎಸ್ಸೆಲ್ಸಿ ಹತ್ತಿ ಬಂದ ನಾಕಾರು ಜನರೂ ಉಂಟು. ಲಕುಮ ರಾಜಪ್ಪ ಮಾದು ಶಂಭು-ಇವು ಅವರ ಹೆಸರುಗಳು.
ಮುಂದಣ ಕಥೆಗೂ ಮೇಲಣ ಹೆಸರುಗಳಿಗೂ ಸಂಬಂಧ ಹಿಂಗಿದೆ : ಈ ಹೆಸರುಗಳಿಗೂ ಪಟೇಲರಿಗೂ ಅಷ್ಟಕ್ಕಷ್ಟೆ. ಇಂದು ಹುಟ್ಟಿದ ಈ ತುಂಡುಗಳು ತಮ್ಮ ಎದುರಾ ತಲೆ ಎತ್ತಿ ತಿರುಗುವುದನ್ನು ಅವರು ಹೆಂಗೆ ಸಹಿಸುವರು. ತಾವು ಕಂಡ ಹಾಗೆ ತಮ್ಮ ಅಪ್ಪನ ಕಾಲದಿಂದಲೂ ಆಗಿದ್ದಿಲ್ಲ. ಆ ಮಕ್ಕಳು ಮೇಲು ಜಾತಿ ಕೀಳು ಜಾತಿ ಅನ್ನದೆ ಒಂದೇ ಹೊಟ್ಟೆಯಿಂದ ಬಿದ್ದಂತೆ ಹೊಲಾರ ಲಕುಮನೊಡನೆ ತಿರುಗುವುದ ಹಿಡಿದು ಅವರವರ ಅಪ್ಪಂದಿರ ಮೂಲಕ ಬೈಸಿದರು. ಅಪ್ಪಂದಿರ ಮಾತ ಕೇಳುತ್ತವೆಯೆ ಅವು. ಆ ಹೈಕಳು ಯಾವುದಾರು ಹೆಣ್ಣ ಕೆಣಕಿ ಸಿಕ್ಕರೆ ಛಾವಡಿಗೆ ಎಳಸಿ ಬರೀ ನಿಕ್ಕರು ಮಾಡಿ ಕಂಬಕ್ಕೆ ಕಟ್ಟಿಸಿ ಸಮಾ ದರಬ್ಬದಲ್ಲಿ ಬಡಿಯುವಂಥ ಟೇಮಿಗೆ ಕಾದಿದ್ದಾರೆ. ಕೆಣಕದೆ ಇರುತ್ತಾವೆಯೇ ಎಂಬ ನಂಬಿಕೆಯೂ ಇದೆ.
ರೋಡು ಮಾಡಲು ಆರ್ಡರು ;
ಇಂಥ ಸಂದರ್ಭದಲ್ಲಿ ಊರ ರೋಡಿಗೆ ಮೇಲಿಂದ ಆರ್ಡರು ಬಂತು. ಪಟೇಲರ ಮಯ್ಯಿ ಇದ್ದಷ್ಟೂ ಹಿಗ್ಗಿತು. ಕಿಚ್ಚು ಹತ್ತಿಕೊಂಡಂತೆ ಊರಿಗೆ ಸುದ್ದಿ ಹಿಡಿಯಿತು. ಈ ಸಂದರ್ಭದಲ್ಲೆ ಏಳೆಂಟು ವರ್ಷಗಳ ಕೆಳಗೆ ಊರಿಗೆ ಮಿನಿಷ್ಟರು ಬಂದಿದ್ದನ್ನೂ ಪಟೇಲರೇ ಕೈಗೆ ನಿಂಬೆಹಣ್ಣು ಕೊಟ್ಟು ಹಾರ ಹಾಕಿ ತಮ್ಮ ಊರು ಒಂದು ಊರು ಅನ್ನಿಸಿಕೊಳ್ಳಬೇಕಾದರೆ ಒಂದು ರೋಡು ಅನ್ನುವುದಾದರೂ ಇರಬೇಕೆಂದೂ ಮಾಸ್ವಾಮಿಯವರು ಮನಸು ಮಾಡಬೇಕೆಂದೂ ಬಿನ್ನೈಸಿಕೊಂಡದ್ದನ್ನು ನೆನೆದುಕೊಳ್ಳಬಹುದು. ಇಂದೇ ಪಟೇಲರು ನಂಜನಗೂಡು ಹತ್ತಿ ಸಂಜೆ ಮಾಡಿಕೊಂಡು ಊರಿಗೆ ಬಂದರು. ಬರುತ್ತ ನಮ್ಮ ಪಟೇಲರೆ ರೋಡಿಗೆ ಕಂಟ್ರಾಕ್ಷರೆಂದೂ ಇನ್ನು ತಿಂಗಳಾನುಗಟ್ಟಲೆ ಯಾರೂ ಕೆಲ್ಸಕ್ಕೆ ಕಯ್ಯಿಬಾಯಿ ನೋಡುವಂತಿಲ್ಲವೆಂದೂ ಮತ್ತು ಸರ್ಕಾರಿ ದುಡ್ಡಲ್ಲಿ ಮಿಗಿಸಿ ದೇವಾಸ್ಥಾನ ಊರ್ಜಿತಗೊಳಿಸುವರೆಂದೂ ಯಾರ ಹಟ್ಟಿ ಬಾಗಿಲು ತೆಗೆದರೂ ಸುದ್ದಿ ಆಯ್ತು.
ಊರ ಮುಂದಲು :
ಅದೆಲ್ಲ ಆಗಿ ಈಗ್ಗೆ ಬಹಳ ದಿನಗಳು ತಿಳಿಯದಂತೆ ಕಳೆದಿವೆ. ಈಗ ಊರ ಮುಂದಲು ಒಂದು ರಣರಂಗವೆ. ಹಿಂದೆ ನೋಡಿದಷ್ಟೂ ಎತ್ತರಕ್ಕೆ ಹಬ್ಬುತ್ತಿದ್ದ ಅರಳಿಮರಗಳು ಈಗ ನೆಲ ಕಂಡವೆ. ಹಿಂದೆ ಸೆಟೆದು ನಿಂತ ಆರಳಿಮರಗಳ ಮರೆಯಲ್ಲಿ ಊರ ಕಂಡವರಿಗೆ ಈಗ ಊರು ಭಿಕೊ ಅನ್ನಿಸಲೇಬೇಕು. ಅವು ಇದ್ದವು ಅನ್ನುವುದಕ್ಕೆ ಎಲ್ಲೂ ಎಳ್ಳಷ್ಟೂ ಸುಳಿವು ಕಾಣದು. ಅವು ಇದ್ದಂಥ ಸ್ಥಳದಲ್ಲಿ ಈಗ ಮಿಷನ್ನು ಓಡಾಡುತ್ತಿವೆ. ಆಳೆತ್ತರ ಕಲ್ಲು ಚಕ್ರದ ಮಿಷನ್ನುಗಳು ಹೊಗೆಬಿಟ್ಟು ಓಡಾಡುವ ಚಂದಕ್ಕೆ ಪಳ್ಳಿ ಹೈಕಳೇನು ಗಂಡಸು ಯಮ್ಕ ಅನ್ನದೆ ನೋಡುತ್ತ ತಮ್ಮ ಮರೆಯುವುದು ಉಂಟು. ಅಲ್ಲಿ ಎದ್ದೇಳುವ ಸದ್ದು ಊರ ಮೀರಿ ಆಚೆಗೂ ಹೋಗುವುದು. ದೂರದಿಂದ ನೋಡಿದ ಯಾವ ಮಗನಿಗೂ ಅಲ್ಲೋಲಕಲ್ಲೋಲ ಆಗುತ್ತಿರುವಂತೆ ಕಾಣಬೇಕು ಹತ್ತಿರ ಬಂದರೆ ಅದೇ ಊರಿನ ಜನರು. ಅವರೇ ಮಾತಾಡಿಸಿದರೆ ಅವರೇ ಎಂದು ತಿಳಿಯಬಹುದು. ಹೊರತು ಗುರುತು ಹತ್ತದಷ್ಟು ಅವರ ಯಾಸ ವರಸೆ ಬದಲಿಸಿಬಿಟ್ಟಿದೆ-ನೆಲಕ್ಕಂಟುಕೊಂಡು ಕಪ್ಪಗಿರುವ ಟಾರಿಗಂಟುಕೊಂಡು ಅವರು ಮೂಡಿದಂತೆ, ಚಲಿಸಿದಂತೆ.
ಒಕ್ಕಡೆ ಕುಂತು ಹತ್ತಾರು ಯಮ್ಕಳು ತಲೆಗೆ ಸೆರಗು ಸುತ್ತಿಕೊಂಡು ಜಲ್ಲಿಕಲ್ಲು ಚಚ್ಚುತ್ತಿರುವರು. ಗುಂಪಲ್ಲೆ ಒಬ್ಬಳು ಸಣ್ಣದನಿ ಎತ್ತರಿಸಿ ಸುವ್ವೀ ಬಾ ಚೆನ್ನ ಬಸವಯ್ಯ
ಮುಳುಗಿಸುತ್ತಿರುವಳು. ಉಳಿದವರು ಕುಮ್ಮಕ್ಕು ಕೊಡುವ ಸೊಲ್ಲು ಅದ ಮೀರಿಸಿಕೂಂಡು ದೂರದಲ್ಲಿ ಕೆಲಸ ಮಾಡುವವರ ಆಚೆಗೂ ಕೇಳಿಸುವಂತೆ. ಕೆಲಸ ಮಾಡುವವರು ಕೆಲಸ ಮಾಡುತ್ತ ಫರ್ಲಾಂಗು ಉದ್ದ ಲವಲವಿಕೆ ತುಂಬಿದೆ. ಅಳೆತ ಮಾಡುವುದು ಅದ ಅಗೆಯುವುದು ಅಗೆದು ಸಮ ಮಾಡುವುದು ಸಮ ಮಾಡಿ ನೀರ ಚಿಂಪರಿಸುವುದು ನೀರ ಚಿಂಪರಿಸಿ ಹದ ಮಾಡಿದ ಚಲ್ಲಿಟಾರ ಕೈಬಂಡಿಯಿಂದ ಎಳತಂದು ಸುರಿಯುವುದು ಸುರಿದುದ ಹರಡುವುದು ಓಕ್ಕಡೆ. ಹಿಂದಕ್ಕೂ ಮುಂದಕ್ಕೂ ಹೋಗುವ ಬರುವ ಮಿಷನ್ನು. ಸಮಾ ಮಾಡುವ ದಗ್ ದಗ್ ವಿಷನ್ನು, ಬೆಂಕಿ ಉಗುಳುತ್ತ ಜಲ್ಲಿ ಟಾರು ಮರಳ ಒಕ್ಕೂಡಿಸುವ ಮಿಷನ್ನು. ಯಾವು ಯಾವುದಕ್ಕೂ ಮಿಷನ್ನು, ಎಷ್ಟಂತ ಹೇಳುವುದು. ಎಲ್ಲವೂ ಕಪ್ಪುಕಪ್ಪಗೆ ಯಾಸ ತಾಳಿ ಮೇಲೇಳುತ್ತಿದೆ.
ಅಳತೆ ಮಾಡುವಲ್ಲಿ ಪಟೇಲರು ಕೈಕಟ್ಟಿ ನಿಂತಿರುವರು. ತಕ್ಷಣವೆ ಹಿಂದಕ್ಕೆ ತಿರುಗುವರು. ಕೊಂಚ ದೂರ ಮುಂದಕ್ಕೆ ಬರುವರು. ಕೆಲಸ ಆಗುತ್ತಿದೆ ಎಂದು ಅವರ ಮೊಖ ನೋಡಿದರೆ ಒಂದು ಕೂಸೂ ಹೇಳಬೇಕು.
ಕೈಯ್ಗೆ ಬಾಯ್ಗೆ ಜಾರು :
ಹೈಕಳು ಅಂದರೆ ಎಲ್ಲ ಊರಿನವೂ ಒಂದೆ. ಪಳ್ಳಿ ಬಿಟ್ಟ ಮೇಲೆ ಅವು ಇಲ್ಲಿ ಜಮಾಯಿಸುತ್ತವೆ. ದೊಡ್ಡವರು ಗದರಿಸಿದಾಗ ದೂರ ಹೋಗುತ್ತವೆ. ಅವರು ಎತ್ತಗೂ ತಿರುಗಿದಾಗ ಮತ್ತದೆ. ಒಟ್ಟಲ್ಲಿ ಹೈಕಳೆಲ್ಲ ಸಂಜೆ ಮಾಡುವುದು ಟಾರು ಕಾಯ್ಸುವಲ್ಲಿ. ಕತ್ತಲು ಇಳಿದ ಶಾಣೆ ಹೊತ್ತಾದರೂ ಹಟ್ಟಿ ಮುಟ್ಟವು. ದೊಡ್ಡವರೆ ಊರ ಮುಂದಲಿಗೆ ಬಂದು ಅವಕ್ಕೆ ನಾಕು ಬಡಿದಾರು ತಂತಮ್ಮ ಜತೆ ಕರಕೊಂಡು ಹೋಗಬೇಕು. ಬಂದವರೂ ರೋಡು ಆಗುವ ಅದ್ಭುತವ ಚಣೋತ್ತಾರು ನೋಡದೆ ಹೋಗರು. ಹಟ್ಟಿ ಕಡೆ ತಿರುಗಲು
ಹೈಕಳ ಹಿಡಿದರೆ ಅವುಗಳ ಕೈಟಾರು ದೊಡ್ಡವರಿಗೂ ಮೆತ್ತಿಕೊಳ್ಳುವುದು. ರಂಗಪ್ಪ
ಎಂಬಾತ ತನ್ನ ಮಗನ ಕರೆದೊಯ್ಯಲು ಬಂದಾಗಲೂ ಹಂಗೇ ಆಯ್ತು. ಅವ ರೇಗಿ ಮಗನಿಗೆ ‘ಮೇಷ್ಟ್ರು ಕಲ್ಸಿಕೊಡೋದು ಇದ ?” ಎಂದು ನಾಕು ಬಿಗಿದ. ಅದು ದೊಡ್ಡಗೆ ಬಾಯಿ ತೆಗೆದು ಅಳಲು ಸುರುಮಾಡಿ ನಿಲ್ಲಿಸಲೆ ಇಲ್ಲ. ರಂಗಪ್ಪನಿಗೆ ಸಹನೆ ಮೀರಿ ಬಾಯಿಗೂ ಒಂದೇಟು ಕೊಟ್ಟಾಗ ಆ ಹೈದ ಅಳು ಜೋರು ಮಾಡುತ್ತ ತನ್ನ ಎರಡು ಕೈಯನ್ನೂ ಬಾಯಿಗೆ ತಂದುಕೊಂಡಿತು. ಕೈಯ್ಗಳ ಟಾರು ಬಾಯಿಗೆ ಬಂದು ಅಳು ನಿಂತಿತು. ಹೀಗೆ ಇಂಥವು, ಸಂಜೆ ಆಗುತ್ತ.
ಮತ್ತೂ ಅಂದರೆ ಯಮ್ಮ ಕೆಲಸ ಬಿಟ್ಟು ಏಳುವಾಗ ಟಾರನ್ನು ಉಂಡೆಮಾಡಿ ಕೈಯ್ಗೆ ತಕ್ಕೊಳ್ಳುವುದು ರೂಡಿ. ಯಾರೋ ಒಬ್ಬಳು ಕೂತು ಮಡಕೆಗೆ ಟಾರು ಮೆತ್ತಿ ಸುರಿಯುವುದು ಏಕ್‌ದಂ ನಿಂತು ಹೋಯ್ತಂತೆ. ಇದಾದ ಮೇಲೆ ಇಂತಹದು ಊರ ಯಾವ ಮೂಲೇಲಿ ಆದರೂ ಅಲ್ಲಿಗೆ ಟಾರು ಹೋಗುತ್ತದೆ ಅಥವಾ ತಂದಿಟ್ಟಿರುವ ಮನೆಯಿಂದ ಈಸಿಕೊಳ್ಳುವಷ್ಟೂ ಚಲಾವಣೆ ಇದೆ.
ಓದುಗರ ಓಲೆಗೊಂದೋಲೆ :
ದೊಡ್ಡ ಮಿಷನ್ನು ನಡೆಸುವ ಒಬ್ಬಾತ ಸಳಕಿನ್ರವನು ಅಲ್ಲುಂಟು. ಅವ ನಂಜನಗೂಡಿಂದ ದಿನಾ ಬಂದು ಹೋಗುವುದು ಮಾಡುತ್ತಾನೆ. ಅದು ಅವ ಕೈಲಿಡಿದು ಬಂದಿದ್ದ ಪೇಪರಲ್ಲಿ ತಮ್ಮ ಊರ ಸುದ್ಧಿ ಬಂದಿದೆಯಂತೆ ನಿಜವೆ ಎಂದು ಗುಲ್ಲು ಎದ್ದು ಯಾರೂ ಕೆಲಸಕ್ಕೆ ಕೈ ಹಾಕದೆ ಸೆಳಕಿನವನ ಸುತ್ತ ಗುಂಪುಗೂಡಿದರು. ಪಟೇಲರು ತುಂಬವೆ ಬಿಸಿ ಬಿಸಿ ಆಗಿದ್ದರು. ಬಂದಿದ್ದ ಊರ ಸುದ್ದಿ ಹಿಂಗಿತ್ತು:
ಸ್ವಾಮಿ, ಮೂರಿಗೆ ರೋಡು ಆಗಬೇಕೆಂದು ದೊಡ್ಡ ಮನಸು ಮಾಡಿ ಸರ್ಕಾರ ನಡೆಸಿಕೊಡುತ್ತಿರುವುದೂ ಈಗ ರೋಡು ಆಗುತ್ತಿರುವುದೂ ಸರಿಯಷ್ಟೆ. ಆದರೆ ಈ ರೋಡಿನ ಕಂಟ್ರಾಕ್ಟರಾದ ಪಟೇಲರು ಸರ್ಕಾರಿ ದುಡ್ಡಲ್ಲಿ ಮಿಗಿಸಿ ದೇವಸ್ಥಾನ ಊರ್ಜಿತಗೊಳಿಸುತ್ತಾರೆಂದು ತಿಳಿದು ಬಂದಿದೆ. ಏನೇ ಆಗಲಿ, ಇದು ಸರ್ಕಾರಿ ಹಣದ ದುರುಪಯೋಗ. ಇಂತಹದು ಆಗದಂತೆ ತಡೆಗಟ್ಟಬೇಕೆಂದು ನಾವು ಸಂಬಂಧಪಟ್ಟವರಲ್ಲಿ ಪ್ರಾರ್ಥಿಸುತ್ತೇವೆ-ನೊಂದವರು.
ನ್ಯಾಯಕ್ಕೆ ಹೇಳಿದರು :
ಅಂದು ರೋಡಿನ ಕೆಲಸ ನಡೆಯಿತು ಅಂತ ನಡೆಯಲಿಲ್ಲ ಅಂತ ಏನು ಅಂತ ಕರಾರುವಾಕ್ಕು ಹೇಳಲು ಬರುವುದಿಲ್ಲ.
ನಡೆದರೂ ನಡೆಯದಂತೆ ನರಯಿತು ಅನ್ನಬಹುದು. ಎಂಥೆಂಥದೊ ಆಗಬೇಕಾದ್ದು ಎಂಥೆಂಥದೋ ಆಗತೊಡಗಿದೆ. ಏನಾಗುತ್ತೊ ಅಂತ ಊರ ಬೀದಿ ಒಳಗೆ ಭಯ ಹರಿದಾಡಿತು. ಸಂಜೆ ಆಗುತ್ರ ಆಗುತ್ತೆ ಅದು ಹೆಚ್ಚು ಹೆಚ್ಚು ದಪ್ಪ ಆಗುತ್ತಿತ್ತು. ನ್ಯಾಯಕ್ಕೆ ಮನೆಗೊಂದಾಳು ಛಾವಡಿಗೆ ಬರಬೇಕೆಂದು ಪಟೇಲರು ತಮ್ಮಡರ ಬಡಿಸಿ ಸಾರಿಸಿದರು. ಈಗ ಈಗಷ್ಟೆ ಕತ್ತಲು ನಿಧಾನ ಇಳಿಯುತ್ತಿದ್ದುದು ಈಗ ತಾನೆ ಪೂರ್ತ ಅಗತುಕೊಂಡಿದೆ. ಹೊರಗೆ ನಡೆದಾಡಿದರ ಒಬ್ಬರ ಮುಖ ಒಬ್ಬರಿಗೆ ಕಾಣದಷ್ಟು ಗವ್ವ. ಹಟ್ಟಿ ಕಿಂಡಿಗಳಿಂದ ಮಂಕು ದೀಪದ ಬೆಳಕು ಹೊರಕ್ಕೆ ನೆಸೆದು ಕತ್ತಲೊಳಗಾಗುತ್ತಿತ್ತು,
ಛಾವಡಿ ;
ಛಾವಡಿ ಒಳಗ ಲಾಟೀನು ದೊಡ್ಡತಗೆ ಹೋಗೆ ಬೆಳಕ ಕಕ್ಕುತ್ತ ಇದೆ. ಆಗಲೇ ನಾಲ್ಕಾರು ಉಂಡಾಂಡಿಗಳು ತಮಗೆ ಯಾವುದೂ ಸಂಬಂಧ ಇಲ್ಲದವರಂತೆ ಯಾಸ ಹಾಕಿ ಮಲಗಿ ಬಿಟ್ಟವರೆ. ಅಲ್ಲಿಗೆ ಒಬ್ಬರಾಗಿ ಇಬ್ಬರಾಗಿ ಜನ ಕೂಡಿಕೊಳ್ಳುತ್ತಿದೆ. ಹೆಚ್ಚು ಹೆಚ್ಚು ಕೂಡಿದಂತೆ ಗಲಗು ಗದ್ದಲ ಹೆಚ್ಚಾಗುತ್ತಿದೆ.
ಚಣೊತ್ತು ಕಳೆದ ಮೇಲೆ ಅಲ್ಲಿಂದ ಹಾ ಹೋ ಹೊ ಹೊ ಎದ್ದು ಊರ ಮುಳಗಿಸತೊಡಗಿತು. ಪಟೇಲರು ನಡುಮಧ್ಯೆ ಕುಂತವರೆ. ಲಾಟೀನು ಬೆಳಕು ನೇರ ಅವರ ಮುಖಕ್ಕೆ ಬೀಳುತ್ತಿತ್ತು. ಅವರ ಮುಖದಲ್ಲಿ ತೆಳ್ಳಗೆ ಬೆವರಾಡುವುದನ್ನೂ ಹಣೆಯ ನೆರಿಗೆ ಎದ್ದು ಮಾಯವಾಗಿ ಎದ್ದು ಹೋಗುವ ಬಗೆಯನ್ನೂ ಕಾಣಬಹುದು. ದೂರ ಮೂಲೆಯಲ್ಲಿ ಕುಂತವರು ಯಾರಾರು ಅಂತ ಬೀಡಿ ಹಚ್ಚಿದಾಗ ಆ ಬೆಳಕಲ್ಲಿ ಗುರುತಿಸಬಹುದು. ಅಂಥ ಕಿಕ್ಕಿರಿದಷ್ಟು ಜನರು.
ಒಬ್ಬ : ಸುರು ಮಾಡ್ರಪ್ಪೊ
ಇನ್ನೊಬ್ಬ : ಎಲ್ಲರ‍್ಗೂ ಗೊತ್ತಿರೋದೆ ಅದು. ಇನ್ನೇನ್ನ ಸುರುಮಾಡೋದು, ಪೂಜೆ ಮಾಡೋದ ಬಿಟ್ಟು.
ರಾಜಪ್ಪ : ಏನಣ್ಣ ಹಂಗಂದ್ರ ಅರ್ಥ.
ಮತ್ತೊಬ್ಬ : ಅರ್ಥಗಿರ್ಥ ನಿಮ್ಗತಾನಿಯಪ್ಪ ಗೊತ್ತು. ನಾವೇನ ಇಸ್ಕೊಲ್ಗೋಗಿ ಮಂಟಾಕಿದ್ದವ ?
ಶಾನುಭೋಗರು : ವಸಿ ಸುಮ್ನಿರ‍್ರಯ್ಯ. ಮಾತಾಡಿ ಪಟೇಲ್ರೆ ನೀವು.
ಪಟೇಲರು : ಮಾತಾಡೊದು ಏನಿದ್ದದು ಹೇಳಿ.
ಶಾನುಭೋಗರು : ಕಾಗ್ದ ಬರ‍್ದು ಊರ‍್ನ ಮಾನ ತೆಗೆದವರು ನೀವುಗಳ ಅಂತ ಎಲ್ಲರ‍್ಗೂ ಗೊತ್ತು. ಅದ ಒಪ್ಪೋಥರ ಅವ್ರಿ ತಾನೆ ನೀವುಗಳು ?
(ಲಕುಮ ರಾಜಪ್ಪ ಶಂಭು ಮಾದು ಕಡೆ ಶಾನುಭೋಗರು ನೋಡುವರು. ಹೌದು ಎಂಬಂತೆ ಅವರು ತಲೆ ಆಡಿಸುವರು. ಹೊರಗೆ ಇದ್ದವರ ಎದೆಗೆ ಗುದ್ದುವಂತೆ ಗದ್ದಲ ಎದ್ದು ಹೊರಬರುವುದು.)
ಪಟೇಲರು : ಅದ್ರಲ್ಲಿ ಏನ್ರಯ್ಯ ನೀವುಗಳು ಅನ್ಯಾಯ ಕಂಡದ್ದು ?
(ಪಟೇಲರ ಮಾತುಗಳಷ್ಟೆ ಒಡೆದು ಕೇಳಿಸುವುದು. ಯಾರು ತುಟಿ ಪಿಟಕ್ಕೆನ್ನುವುದಿಲ್ಲ.)
ರಾಜಪ್ಪ : ಯಾವ ಹಣಾನೊ ಯಾವುದಕ್ಕೊ ಹಾಕಿದ್ರ ಇನ್ನೇನ ಆಗೋದು ?
(ಸದ್ದು ಏಳುವುದು. ಶಾನುಭೋಗರು ಕೈಯಾಡಿಸುವರು. ಸದ್ದು ನಿಧಾನ ಕಮ್ಮಿಯಾಗುವುದು.)
ಪಟೇಲರು : ನಾ ಯಾನ ನನ್ನ ಇರೋ ಮಕ್ಕಳ್ಗಾಗಿ ಹಣ ತಿಂದ್ನೊ. ಊರ‍್ಗಾಗಿ ದೇವ್ರ ಕೆಲ್ಸಕಾಗಿ ಹಂಗ ಮಾಡ್ದನ್ನೊ ?
ಮಾದು : ನೀವು ಯಾಕಾರು ಮಾಡಿ ಸ್ವಾಮಿ. ಆದ್ರ ಮಾಡೊ ಅಂಥದಕ್ಕ ಮಾಡಿಲ್ಲ.
(ಸದ್ದು ಏಳುವುದು. ಮುನ್ನಿಗಿಂತ ಜೋರಾಗೆ. ಯಥಾಪ್ರಕಾರ ಶಾನುಭೋಗರು. ಈ ಸಲ ಒಂದಿಬ್ಬರು ಎದ್ದೂ ನಿಲ್ಲುವರು)
ಒಬ್ಬ : ನಿಮ್ಗ ದೇವ್ರು ದಿಂಡರು ಹಿರೀಕರು ಅಂತ ಒಬ್ರೂ ಇಲ್ವಾ ?
ಇನ್ನೊಬ್ಬ : ಇದ್ದ್ರ ಈ ಯಾಪಾರ ಮಾಡ್ತ ಇದ್ದ ಅವು ?
ಮತ್ತೊಬ್ಬ : ಸಾಕು ಸುನ್ಮಿರ‍್ರಪ್ಪೊ. ತಲಗೊಂದು ಮಾತ್ಯಾಕ ?
ಮಗದೊಬ್ಬ : ಹಿಡ್ಕಂಡು ನಾಕು ಬಡೀರುಡ. ಸರಿಯಾಯ್ತದ. ಕೇಮಿಲ್ದೆ ಮಾತಾಡಿ ಇನ್ನೂವಿ.
ರಾಜಪ್ಪ ಶಂಭು ಶಂಭು ಅಪ್ಪ : ಯಾರಪ್ಪ ಅವ ? ಬಡೀರಿ ಬನ್ನಿ ಮತ್ತ. ಅದ್ನೂ ನೋಡವು. ನಿಮ್ಮ ಮೂಗ್ನ ನ್ಯಾರಕೇ ನಿಮ್ಗೆ ಸರಿ.
ಪಟೇಲರು : (ದನಿ ಎತ್ತರಿಸಿ) ನೀವ್ಗಳು ಮಾಡಿದ್ದೇ ಬೋ ಸರಿ ಕಣ್ರಯ್ಯೋ.
ಶಂಭು : ನೀವು ಮಾಡಿದ್ದೆ ನಿಮ್ಗ ಸರಿ. ಅದ್ಯಾಕ ಮಾತು ?
ಪಟೇಲರು : ಅದೇನ್ರಲ ಅಷ್ಟೂ ಧಿಮಾಕ್ನ ಮಾತ ಆಡ್ತ ಅವ್ರಿ. ಅಷ್ಟ ಸದರ
ಬಿದ್ದೋಗಿದ್ದನ, ನಾನು ?
ಎಂದು ಪಟೇಲರು ಕೈ ಬಿಗಿ ಹಿಡಿದುಕೊಂಡು ತಟಕ್ಕ ಎದ್ದು ನಿಂತರು. ಆ ರಭಸಕ್ಕೆ ಲಾಟೀನಿಗೆ ತಲೆ ಬಡಿದು ಗಾಜು ಒಡೆದು ಟಳಟಳ ನೆಲಕ್ಕೆ ಉದುರಿತು. ಲಾಟೀನ ಬೆಳಕು ಹಾರಾಡಿ ಹಾರಾಡಿ ಕೊನೆಗೆ ಜೀವ ಹೋಗಿ ಕತ್ತಲ ಅಮರಿಕೊಂಡಿತು. ಆಕ್ಷಣವೆ ಹಾ ಹೊ ದಬ್ ದಬ್ ಬಯ್ಗಳು ತುಂಬಿಕೊಂಡವು. ಆದಷ್ಟು ಬೇಗ ಛಾವಡಿಯಿಂದ ಕಿತ್ತುಕೊಂಡು ಹೊರಕ್ಕೆ ಹೋಗಿಬಿಡಲು ಎಲ್ಲ ಹವಣಿಸಿದರು. ಹಿಂಗೆ ಚಣೊತ್ತು ನಡೆದು ಅಲ್ಲಿಂದ ಆಮೇಲೆ ಎಲ್ಲ ನಿಂತುಹೋಯ್ತು. ಊರ ಹಟ್ಟಿದಾರಂದಗಳು ಮುಚ್ಚಿಕೊಂಡುಬಿಟ್ಟವು.
ಹೊಸೂರ ಹೊಸ ಮಾತು :
ಊರು ಇನ್ನೂ ಮಲಗೇ ಇದೆ ಅನ್ನಬಹುದು. ರಾತ್ರಿ ಆದದ್ದ ಕನಸ ಕಾಣುತ್ತ ಇರಬಹುದು. ಕನಸ ಕೆಡಿಸಲೋ ಎಂಬಂತೆ ಆಜುಬಾಜಿನ ಹೊಸೂರಿನವನೊಬ್ಬ ಊರ ಮೇಲೆ ಮೊಬ್ಬಿಗೇ ಹಾದು ಹೋದನು. ಅವ ಬಿಟ್ಟು ಹೋದ ಮಾತುಗಳು ಊರ ಬೀದಿಗುಂಟ ತೆವಳತೊಡಗಿದವು.
ಸ್ವಾಮಿ, ನಾನು ಹೊಸೂರಿನವನು. ನಮ್ಮೂರಲ್ಲೆ ಒಬ್ಬಳು ಕಲಕಿತ್ತಿ ಹೆಣ್ಣು ಇದ್ದಳು. ಅವ್ಳು ತುಂಡು ಹೈಕಳ ಕೆಡಿಸುತ್ತಾ ಇದ್ದುದು ಹಿಂದಿನಿಂದಲೂ ನಡೀತಾ ಇದ್ದುದೆ. ಹೇಳುವವರು ಎಷ್ಟು ದಿನಾಂತ ಹೇಳುವರು ? ಅವಳಿಗೆ ಅವಳದೆ. ಬಯ್ದು ಹೇಳಿ ನೋಡಿದರು. ಅವಳಿಗೆ ಅವಳದೆ. ಕೊನೆಗೆ ಮಾಡುವುದನ್ನೆ ಮಾಡಿದರು. ನ್ಯಾಯಕ್ಕೆ ಕೂಟ ಸೇರಿಸಿ ಅವಳ ಸೆಳತಂದರು. ಅಲ್ಲಿ ಅವಳು ಮೈತುಂಬ ರೋಪು ಮಾಡಿದಳು. ರೇಗು ಹತ್ತಿದವರು ಸುಮ್ಮನಿರಲಿಲ್ಲ. ಅವಳು ಹೊಟ್ಟೇಲಿ ಹುಟ್ಟಿದ ರೂಪು ಮಾಡಿ ಹುಣಿಸೆ ಸೆಬ್ಬದಲ್ಲಿ ಬಡಿದು ಅವಳಿಗೆ ಹುಟ್ಟಿದ್ದ ಕಾಣಿಸಿಬಿಟ್ಟರು.
ಅಷ್ಟಕ್ಕೂ ಅವಳು ಸುಮ್ಮನಿರಲಿಲ್ಲ. ಆ ಮುಖ ಎತ್ತಿಕೊಂಡೆ ಪೋಲಿಸ್ ಸ್ಟೇಷನ್ನಿಗೆ ನಡೆದಳು. ಹಿಂಗಾಯ್ತು ಹಿಂಗಾಯ್ತು ಅಂತ ಎಲ್ಲ ಬಿಚ್ಚಿ ಹೇಳಿಕೊಂಡಳಂತೆ. ಆಮೇಲಿಂದ ಪೋಲಿಸ್ನೋರು ವ್ಯಾನಲ್ಲಿ ಬಂದು, ಇದ್ದ ಬದ್ದ ಯಜಮಾನರುಗಳ ಹಿಡಕಂಡು ಹೋದರು. ಮುಂದ ಏನಾಯ್ತು ಎತ್ತ ಅಂತ ಯಾರ‍್ಗೂ ಗೊತ್ತಿಲ್ಲ.
ರಾತ್ರಿ ಆದ ಗಲಭೆಗೆ ಹೊಸೂರ ಸುದ್ದಿ ಕೂಡಿಕೊಂಡು ಊರು ರಂಗಾಗಿ ಮೇಲೆದ್ದಿತು. ಆದದ್ದಕ್ಕೆ ಅಂದುಕೊಂಡದ್ದು. ಪಟೇಲರು : ಆ. ಶಾನುಭೋಗರು : ಓ, ನಾಲ್ವರು : ವ೦ಕ್ಕಳು ಪಾಳೆಗಾರಿಕೆ ಮಾಡ್ತ ಇದ್ವು, ಗತಿ ಕಂಡ್ವು, ಒಬ್ಬ : ಅಯ್ ಸಿವ್ನ.
ಗುಂಡಿಗೆ ಟಾರು ರಾತ್ರೋರಾತ್ರಿ :
ಅಷ್ಟೆಲ್ಲ ಆದದ್ದು ಅಷ್ಟಕ್ಕೆ ನಿಲ್ಲಲಿಲ್ಲ. ಟಾರಿನ ಡ್ರಮ್ಮುಗಳನ್ನು ಕಾಯಿಸಿ ಊರ ಮುಂದಲು ಇಟ್ಟಿದ್ದು ಸರಿಯಷ್ಟೆ. ಬೆಳಿಗ್ಗೆ ನೋಡಲು ಅವಾವು ಒಂದೂ ಅಲ್ಲಿ ಇರಲಿಲ್ಲ. ಅವು ಹೋದ ದಿಕ್ಕು ಹಿಡಿದು ಹೋಗಿ ನೋಡಿದರೆ ಅವು ಊರಾಚೆಗಿನ ಒಂದು ಗುಂಡಿಯ ಸುತ್ತ. ಇರೋ ತಮ್ಮ ಬಾಯಿಯ ಇದ್ದಷ್ಟೂ ಅಗಲಿಸಿಕೊಂಡು ಒಳಗಿನ ಟಾರನ್ನು ಹಿಂಟು ಹಿಂಟಾಗಿ ಕಪ್ಪಗೆ ಗುಂಡಿಗೆ ಕಕ್ಕುತ್ತ ಬಿದ್ದಿದ್ದವು. ಮೇಲಿಂದ ಬಿಸಿಲು ಏರುತ್ತ ಏರುತ್ತ ಗುಂಡಿಗೆ ಟಾರು ಇಳಿಯುತ್ತ ಇಳಿಯುತ್ತ ಡ್ರಮ್ಮುಗಳ ಕಡೆಗೇ ಟಾರು ನಿಧಾನ ಚಾಚಿಕೊಳ್ಳುವುದು ನಡೆದಿತ್ತು. ಸುತ್ತ ನೋಡುತ್ತ ನಿಂತವರು ನೋಡುತ್ತಲೆ ನಿಂತರು. ನೋಡದವರು ನೋಡಲು ಹಿಂಡು ಹಿಂಡು ಬಂದರು. ನೋಡಿ ನೋಡಿ ಕಣ್ಣಿಗೆ ಕಪ್ಪು
ಹಿಡಿಯಲು ಕಾಲು ತೆಗೆಯುವರು. ಯಾರ ಬಾಯಲ್ಲು ಮಾತಿಲ್ಲ.
ಪಟೇಲರ ಬಾಯಲ್ಲು ಮಾತಿಲ್ಲ. ಒಬ್ಬ ಪಟೇಲರಿಗೆ ನೀವು ಹ್ಞೂ ಅನ್ನಬೇಕಿತ್ತು, ಮಕ್ಕಳಿಗೆ ರಾತ್ರೀನೆ ಹುಟ್ಟಿದ್ದ ಕಾಣಿಸಬಹುದಿತ್ತು ಅಂದನು. ಪಟೇಲರು ಅದಕ್ಕೂ ಅವುಡು ಕಚ್ಚಿದರು. ಮಾತಾಡಲಿಲ್ಲ. ಪೋಲೀಸು ಸ್ಟೇಷನ್ನಿಗೆ ಅಲ್ಲಿಂದಲೆ ಹಾಗೆ ಹೋದರು. ಬುದದ್ದು ಸಂಜೆಯಲ್ಲೆ. ನಾಳೆ ಮೊಬ್ಬಿಗೇ ಪೋಲೀಸಿನವರು ಬಂದು ಮಹಜರು ಮಾಡಿಕೊಂಡು ಹೋಗುವರೆಂದೂ ಮುಂದಣ ಕಥೆ ಹೆಂಗಾಗುವುದೆಂದು ಯಾರಿಗೂ ತಿಳಿಯದೆಂದೂ ತಿಳಿದು ಬಂತು.
ಪಳ್ಳಿಗೆ ಹೋದವ ಬರಲಿಲ್ಲ :
ಹಿಂಗೆ ಒಂದರ ಮೇಲೊಂದು ಬಿದ್ದು ಕಪ್ಪಗೆ ಒಗ್ಗುತ್ತಾ ಹೋಗುತ್ತಿದ್ದ ಇಂಥವಕ್ಕೆ ಕೂಡಿಕೊಳ್ಳಲು ಊರಿಗೆ ಕತ್ತಲು ಹಿಡಿಯುವುದನ್ನೇ ಕಾಯುತ್ತ ಮತ್ತೊಂದು ಕಾದು ಕುಂತಿತ್ತು. ಮುಸ್ಸಂಜೆಗೆ ಎಲ್ಲರ ಹಟ್ಟಿದಾರಂದಗಳೂ ಮುಚ್ಚಿ ಬೀದಿ ಒಳಗೆ ನರಪಿಳ್ಳೆಯ ಸುಳುವಿಲ್ಲದಿದ್ದರೂ ರಂಗಪ್ಪನ ಹೈದ ಮಾತ್ರ ಇನ್ನೂ ಹಟ್ಟಿ ಕಂಡಿರಲಿಲ್ಲ. ಪಳ್ಳಿಗೆ ಮಧ್ಯಾಹ್ನ ಉಂಡು ಹೋದುದಂತೆ. ಮೆಸ್ಸರನ್ನು ಕೇಳಿದರು. ಹಟ್ಟಿ ಕಡೆ ಹೊಂಟುದ ತಾವು ಖುದ್ದು ಕಂಡೆ ಅಂದರು. ಹೊಂಟ ಕಡೆ ಹೊಂಟೇಬಿಡುವ ಬೆಪ್ಪು ಹೈದ ಅದು.
ಲಾಟೀನು ಈಸಿಕೊಂಡು ಹಟ್ಟಿ ಹಟ್ಟಿ ತಟ್ಟಿ ಬಂದು ಆಯ್ತು. ಅವ ಆಡುವ ಗೆಣಕಾರರ ಕೇಳಿ ಆಯ್ತು. ಎಲ್ಲರೂ ಕಂಡಿದ್ದೆವು ಅನ್ನುವವರೆ. ಯಾವ ಕೇರಿ ಯಾವ ಬೀದಿಯನ್ನೂ ಬಿಡಲಿಲ್ಲ. ಹಿಂಗೇ ಎಷ್ಟೊತ್ತು ಆಯ್ತೊ. ಆ ಹೈದನ ಅವ್ವನ ಅಳು ಸದ್ದಡಗಿದ ಊರಲ್ಲಿ ರಾಗವಾದ ಸದ್ದಾಗಿ ಸಮರಾತ್ರಿ ಮೀರಿಯೂ ಇತ್ತು.
ಮಹಜರು :
ಮೊಬ್ಬಿಗೇ ಪೋಲಿಸು ವ್ಯಾನು ಕಷ್ಟಪಟ್ಟುಕೊಂಡು ಊರ ಮುಂದು ಬಂದು ನಿಂತಿತು. ನೋಡ ಬಂದವನಿಗೆ ಪಟೇಲರ ಕರೆತರುವಂತೆ ಇನ್ಸಪೆಕ್ಟರು ಕಳಿಸಿದರು. ಪಟೇಲರು ತಡಬಡಾಯಿಸಿಕೊಂಡು ಬಂದು ನಿಂತರು. ಎಲ್ಲರೂ ಊರಾಚೆಗಿನ ಟಾರು ಗುಂಡಿ ಹತ್ತಿರ ಬಂದು ನೋಡಿ ನೋಡಿದಾಕ್ಷಣ ಚಕ್ಕ ನಿಂತು ಬಿಟ್ಟರು. ರಂಗಪ್ಪನ ಹೈದನ ಕಾಲನ್ನು ಗುಂಡಿಗೆ ಇಳಿದಿದ್ದ ಟಾರು ಹಿಡಿದುಕೊಂಡಿತ್ತು. ಎರಡೂ ಕೈಗಳನ್ನು ಟಾರಿನ ಡ್ರಮ್ಮು ಕಚ್ಚಿಕೊಂಡಿತ್ತು. ಮಯ್ಯಿ ಕಯ್ಯಿ ಮೊಖ ಅನ್ನದೆ ಟಾರು ಟಾರಾಗಿತ್ತು. ಮತ್ತೂ ಹತ್ತಿರದಿಂದ ನೋಡಿದರೆ ಆ ಹೈದನ ಮಯ್ಯೊಳಗ ಇನ್ನೂ ಜೀವ ಆಡುತ್ತಿತ್ತು.

Close

ಎರಡು ಕವನಗಳು

ಎರಡು ಕವನಗಳು

ಲಕ್ಷ್ಮಣರಾವ್ ಬಿ ಆರ್

೧ ಮನವಿ
ಹಿಪ್ಪಿಯಲ್ಲ, ಡ್ಯಾಂಡಿಯಲ್ಲ,
ಕ್ಷುದ್ರ ಕಾಟನ್ ಕ್ಯಾಂಡಿಯಲ್ಲ
ನಾನಿಂದಿನ ಕವಿ.

ನಿಜ, ನಮಗಿದೆ ನೀಳ ಕೇಶ,
ಜೇಬಲ್ಲಿ ಚರಾಸ್, ಹಶೀಷ ;
ಬೀದಿ ಬಸವ, ಬಸವಿ.

ವಿಚಿತ್ರವೇಶ ತೊಟ್ಟಿದ್ದೇವೆ,
ಲಿಂಗಭೇದ ಬಿಟ್ಟಿದ್ದೇವೆ,
ಎಲ್ಲ ಹಕ್ಕೂ ಕೆಡವಿ.

ಹೊರ ನೋಟವ ಜರಿಯಬೇಡಿ,
ಒಳಗೂ ಒಮ್ಮೆ ಇಣುಕಿ ನೋಡಿ:
ನಾವೂ ಮಾನವ, ಮಾನವಿ.

ನಾವಲ್ಲ ಓಡುವವರು,
ಅಲ್ಲ ನಿಂತು ನೋಡುವವರು,
ನಾವಾಗೆವು ನಿಮ್ಮ ಗಿರವಿ.

ನಮ್ಮ ಕಂಗಳಲ್ಲಿ ಕ್ರೋಧ;
ನಿಮ್ಮೊಂದಿಗೇ ಈ ವಿರೋಧ;
ಇದಲ್ಲ ನಮಗೆ ಸವಿ :

ಕೊಳೆತು ನಾರುತ್ತಿದೆ ದೇಶ;
ಪ್ರತಿ ವ್ಯಕ್ತಿಗೂ ಛದ್ಮವೇಶ,
ಎಲ್ಲೆಲ್ಲೂ ತುಳಿ, ತಿವಿ.

ಇದೊ, ಭಾರತಾಂಬೆ ಕರುಳು,
ಕರುಳ ತುಂಬ ಜಂತು ಹುಳು ;
ತಾಯಿ ನಿರುಪದ್ರವಿ !

ನಿಮ್ಮ ಸತ್ತ ಸಂಸ್ಕೃತಿ ಸಾರ,
ಸಾಯುತ್ತಿರುವ ರಾಜ್ಯಭಾರ
ನಮ್ಮ ಯಜ್ಞ ಹವಿ.

ಎಡರು ತೊಡರ ಕೊಚ್ಚಬೇಕು,
ಎಲ್ಲ ದಾರಿ ಬಿಚ್ಚಬೇಕು,
ಸವರುತ ದಟ್ಟಡವಿ,

ನಮಗೆ ಬೇಡ ಮರಳುಗಾಡು,
ಒಂಟಿ ದನಿ, ಅನಾಥ ಪಾಡು,
ದೇವ ಸತ್ತ ದಿವಿ.

ಶುಷ್ಕ ತತ್ವಶಾಸ್ತ್ರವಲ್ಲ,
ಬರೀ ಕಾಮಸೂತ್ರವಲ್ಲ,
ನಮಗೆ ಬೇಕು ರವಿ.

ರಾಕೆಟ್ಟಲಿ ಜಗಿದರೂನು,
ಬ್ರಹ್ಮಾಂಡವ ಬಗೆದರೂನು,
ವಾಪಸ್ಸಿಗೆ ಭುವಿ.

ವೆಸ್ಕೂವಿಯಸ್ ತಪ್ಪಲಲ್ಲಿ
ಹರಿಯಲಿ ನದಿ, ನಗಲಿ ಲಿಲ್ಲಿ ;
ಇದು ನಮ್ಮ ಮನವಿ.
೨ ಮಣ್ಣು ಹುಳ
ನನಗೆ ಬೇಡ :
ಈ ಭೂಮಿಯ ಸೆಳೆತ ಮೀರಿ,
ದೂರ ಬಾಹ್ಯಾಕಾಶಕ್ಕೆ ಹಾರಿ,
ದೆಸೆಗೆಟ್ಟು ತೊಳಲುವ
ಕ್ಷಿಪಣಿಯ ವ್ಯರ್ಥ ಛಲ,
ಶೂನ್ಯ ಫಲ.

ನನಗೆ ಖಂಡಿತ ಬೇಡ :
ಗಗನದಲ್ಲಿ ಹಾರಾಡಿ,
ಭೂಮಿಗೆ ಬಾಂಬ್ ಎಸೆವ
ಧೂರ್ತ ವಿಮಾನ ದಳ
ದಲ್ಲಿ ಸ್ಥಳ.

ನಾ ಹೊಗಬೇಕು ಭೂಮಿಯನ್ನು ;
ಹೊಕ್ಕು, ಗಪಗಪ ಮುಕ್ಕಬೇಕು ಮಣ್ಣನ್ನು ;
ಮಣ್ಣಿನ ಸತ್ವ ನನಗೆ ಸಿಕ್ಕಬೇಕು ;
ನನ್ನ ಕಣಕಣದಲ್ಲೂ ಜೀವ ಉಕ್ಕಬೇಕು ;
ನಂತರ ನೀಳವಾಗಿ, ನಿರಾಳವಾಗಿ
ನುಸುಳಬೇಕು ಹೊರಗೆ :
ತುಂಡರಿಸಿ ಚೆಲ್ಲಿದರೂ ಚೂರು ಚೂರು
ವೃದ್ಧಿಯಾಗುವ ಸ
ಸಮೃದ್ಧಿಯಾಗುವ
ಸಿದ್ದಿ ಬೇಕು ನನಗೆ ;
ನಾನಾಗಬೇಕು ರೈತನ ಬಂಧು
ಒಂದು ಮಣ್ಣು ಹುಳ.

Close

ನನ್ನ ಅಂತ್ಯಯಾತ್ರೆ

ನನ್ನ ಅಂತ್ಯಯಾತ್ರೆ

ಪ್ರಭಾಕರ ನಾನಾವಟಿ

ಅಜ್ಞಾತದ ಸೀಮಾಂತದವರೆಗೆ ಹೋಗಿರುವ
ನನ್ನ ಅಂತ್ಯಯಾತ್ರೆ ನನಗೆ ನಿಚ್ಚಳವಾಗಿ ಕಾಣಿಸುತ್ತದೆ.

ಅಲ್ಲಿ ಅಳುತ್ತಿರುವಳಲ್ಲ,
ಆಕೆ, ನನ್ನ ಹೆಂಡತಿ.
ಆಕೆಯ ದೃಷ್ಟಿಯಲ್ಲಿ ನಾನೊಬ್ಬ ತಪ್ಪದೆ ಹಾಲನ್ನು ತರುವ ಗೌಳಿಗ.

ಅಲ್ಲಿ ನೋಡಿ,
ಕೈಯಲ್ಲಿ ಮಡಿಕೆ ಹಿಡಿದಿರುವವನನ್ನು
ಅವನು ನನ್ನ ಎಲ್ಲ ಯಾತನೆಗಳ ವಾರಸುದಾರ
(ಮಡಿಕೆಯ ಹೊರತಾಗಿ ನಾನು ಅವನಿಗೆ ಏನನ್ನು ಕೊಡಲಿಲ್ಲ.)

ಈ ಹೊರುವ ನಾಲ್ಕು ಜನರು
ಯಾರೇ ಸಾಯಲಿ, ಯಾವಾಗಲೂ ಮುಂದು.
ಹೆಣ ಹೊರುವುದು ಅವರ ಆನುವಂಶಿಕ ವ್ಯವಸಾಯ
ನೋಡಿರಲ್ಲ, ಆ ಚಿತೆಯನ್ನು
ಎಷ್ಟು ಸುಂದರವಾಗಿ ರಚಿಸಿದ್ದಾರೆ
(ಚಿತೆ ರಚಿಸಲಿಕ್ಕೂ ಕೂಡ ಕೈಗಳು ಪಳಗಿರಬೇಕು)
ಕೇಳಿದಿರಲ್ಲ, ಬುರುಡೆ ಒಡೆದ ಸಪ್ಪಳವನ್ನು
ಆದರಲ್ಲಿಯೇ ನನ್ನ ಮೆದುಳು
ಇಷ್ಟು ದಿನ ಸುರಕ್ಷಿತವಾಗಿದ್ದಿತು.
ಈಗೆಷ್ಟು ಚೆನ್ನಾಗಿ ಉರಿಯುತ್ತದೆ.
ಉರಿಯಲಿ ಬಿಡಿ
(ಹೇಗಿದ್ದರೂ ಅದರಲ್ಲಿ ಬಹಳಷ್ಟು ಹೊಲಸೇ ಇತ್ತು.)
ಪ್ರದರ್ಶನದಲ್ಲಿಟ್ಟಿದ್ದರೆ ಸಾಲಾಗಿ ನಿಂತು ನೋಡುತ್ತಿದ್ದರು
ಇಲ್ಲದಿದ್ದರೆ ಪುಕ್ಕಟೆ ಕೂಡ ಯಾರೂ ತೆಗೆದುಕೊಳ್ಳುತ್ತಿರಲಿಲ್ಲ.
ಮತ್ತೇ ಹಾಂ,
ನೀವೆಲ್ಲ ಇಷ್ಟೇಕೆ ಮುದ್ದೆಯಾಗಿರುವಿರಿ ?
ಎರಡೇ ನಿಮಿಷದ ಶಾಂತತೆ………..
(ಇಷ್ಟರಲ್ಲಿಯೇ ಸೀನು ಬರುತ್ತದೆ, ಎಲ್ಲಿ ಬೇಡವೋ ಅಲ್ಲಿಯೇ ತಿಂಡಿ ಬಿಡುತ್ತದೆ. ಅದಕ್ಕೆ ನೀವಾದರೂ ಏನು ಮಾಡಬಲ್ಲಿರಿ ?)
ಈಗ ಅನ್ನೀ, “ಈಶ್ವರನು ಮೃತಾತ್ಮನಿಗೆ ಶಾಂತಿಯನ್ನೀಯಲಿ”.
.

Close

ಪ್ರತಿಭೆಯ ಪಲಾಯನ?

ಪ್ರತಿಭೆಯ ಪಲಾಯನ ?

ಕೃಷ್ಣಾನಂದ ಕಾಮತ್‌

ಕಳೆದ ಕಾಲು ಶತಮಾನದಲ್ಲಿ ನಾವು ಹತ್ತಾರು ಬೃಹತ್ ನೀರಾವರಿ ಯೋಜನೆಗಳನ್ನು ಕೈಕೊಂಡಿದ್ದೇವೆ. ಹಸಿರುಕ್ರಾಂತಿಯಿಂದಾಗಿ ಆಹಾರದ ಆಮದು ನಿಲ್ಲಿಸುವ ಯತ್ನದಲ್ಲಿದ್ದೇವೆ. ಊರೂರು ಹಳ್ಳಿಪಳ್ಳಿಗಳನ್ನು ವಿದ್ಯುತ್ತಿನಿಂದ ಬೆಳಗಿಸಿದ್ದೇವೆ. ರೇಲು-ರಸ್ತೆ ಸಾರಿಗೆಯಲ್ಲಿ ಸುಧಾರಣೆ ಮಾಡಿದ್ದೇವೆ. ಜನಸಾಮಾನ್ಯರಿಗೆ ಉಚ್ಚ ಶಿಕ್ಷಣ ದೊರೆಯುವಂತೆ ಮಾಡಿದ್ದೇವೆ. ನಮ್ಮ ಕಾರಖಾನೆಗಳ ಮುನ್ನಡೆ ಕಂಡಿದ್ದೇವೆ. ಹಲವಾರು ವಿಶ್ವವಿದ್ಯಾಲಯಗಳ ಸ್ಥಾಪನೆ, ರಾಷ್ಟ್ರೀಯ ಸಂಶೋಧನಾಲಯಗಳ ಸ್ಥಾಪನೆಗಳಾಗಿ ಸಂಶೋಧನಾ ಕ್ಷೇತ್ರದಲ್ಲಿ ನಾವು ಭರದಿಂದ ಮುಂದುವರೆಯುತ್ತಿದ್ದೇವೆ ಎಂದು ದೇಶದ ಮುಂದಾಳುಗಳೆನಿಸಿಕೊಂಡವರು ಸಾರುತ್ತ ಬಂದರೂ ನಮ್ಮ ಸುಶಿಕ್ಷಿತರು ಅಸಂತುಷ್ಟರಿದ್ದಾರೆ, ಬೇಸತ್ತಿದ್ದಾರೆ. ತಮ್ಮ ತಾಯ್ತಾಡಿನಿಂದ ಓಡಿಹೋಗಲು ಯತ್ನಿಸುತ್ತಾರೆ. ವಲಸೆ ಹೋಗಲು ವಿಜ್ಞಾನ ಕ್ಷೇತ್ರದವರಷ್ಟು ಇತರರಿಗೆ ಸುಲಭವಾಗಿ ಅವಕಾಶವಿಲ್ಲ. ಅಂತೆಯೇ ಪ್ರತಿಭೆಯ ಅಥವಾ ವಿಜ್ಞಾನಿಗಳ ಪಲಾಯನದ ಬಗ್ಗೆ ನಾಲ್ಕೂ ದಿಕ್ಕಿನಿಂದ ಕೂಗು ಕೇಳಿಬರುತ್ತದೆ. ಈ ವಿಷಯದ ಕುರಿತು ಹಲವಾರು ಬಗೆಯ ತರ್ಕ-ವಿತರ್ಕ, ಲೇಖನ, ಭಾಷಣಗಳು ಸಾಕಷ್ಟು ಬಂದರೂ ನಾವೆಲ್ಲಿ ತಪ್ಪುತ್ತಿದ್ದೇವೆ, ಅದಕ್ಕೆ ನಿವಾರಣೋಪಾಯಗಳು ಯಾವವು ಎಂದು ಈ ಸಮಸ್ಯೆಯ ಕುರಿತು ರಾಜಕಾರಣಿಗಳಾಗಲಿ, ಜನಸಾಮಾನ್ಯರಾಗಲೀ ತಲೆಕೆಡಿಸಿಕೊಂಡಿಲ್ಲ.
ವಿಜ್ಞಾನವನ್ನು ಅಭ್ಯಾಸ ವಿಷಯವನ್ನಾಗಿ ತೆಗೆದುಕೊಂಡವನಿಗೆ, ಕಾಲೇಜು-ವಿಶ್ವವಿದ್ಯಾಲಯಗಳಲ್ಲಿ ವಿಜ್ಞಾನ ಕಲಿಸುವವನಿಗೆ, ಈ ಕ್ಷೇತ್ರದಲ್ಲಿ ಸಂಶೋಧನೆ ಕೈಕೊಂಡವನಿಗೆ, ಎಲ್ಲರಿಗೂ ‘ವಿಜ್ಞಾನಿ’ (Scientist) ಎಂದು ನಾವು ಕರೆಯುತ್ತೇವೆ. ಆದರೆ ಈ ಮೂರನ್ನೂ ವೃತ್ತಿಯನ್ನಾಗಿ ಮಾಡಿಕೊಳ್ಳದವ ವಿಜ್ಞಾನಿಯಾಗಿರಬಹುದು ಅಥವಾ ವಿಜ್ಞಾನ ಕ್ಷೇತ್ರದಲ್ಲಿ ಸೇವಾವಧಿ ಕಳೆದಾತ ವಿಜ್ಞಾನಿಯಾಗಿರದೇ ಇರಬಹುದು. ಆದ್ದರಿಂದ ನಿಜವಾದ ವಿಜ್ಞಾನಿಯನ್ನು ವೈಜ್ಞಾನಿಕ ಕ್ಷೇತ್ರದ ಪರಿಚಯವಿದ್ದ ಇತರರಿಂದ ಬೇರ್ಪಡಿಸುವದು ಅವಶ್ಯ. ಇಂಥ ವಿಜ್ಞಾನಿ ನಿತ್ಯವಾದ, ತನ್ನ ಒಲವಿನ ಯಾವುದಾದರೊಂದು ಸಮಸ್ಯೆಯನ್ನು ಆರಿಸಿ ಅದರ ಬಗ್ಗೆ ಪ್ರೌಢವಾಗಿ, ಆಳವಾಗಿ ವಿಚಾರಿಸಿ ವಿವಿಧ ಹಂತಗಳಲ್ಲಿ ಅದನ್ನು ವಿಂಗಡಿಸಿ, ಪದರು ಪದರಾಗಿ ಬಿಡಿಸಿ, ಬಗೆದು, ಸೀಳಿ, ತಿರುಗಿ ಒಂದುಗೂಡಿಸಲು ಯತ್ನಿಸುತ್ತಾನೆ. ತಾನು ಆರಿಸಿದ ಸಮಸ್ಯೆಯ ನಿರ್ವಹಣೆಯಲ್ಲಿ ಬರಬಹುದಾದ ತೊಡಕುಗಳನ್ನು ಮುಂದಾಗಿ ವಿಚಾರಿಸಿ, ಕೊನೆಯ ನಿರ್ಣಯ ಕೈಕೊಳ್ಳುತ್ತಾನೆ. ತನ್ನ ಸಂಶೋಧನೆಯಲ್ಲಿ ವಿಜಯಿಯಾಗಲಿ, ಸೋಲು ಎದುರಿಸಲಿ ಅದಕ್ಕೆ ಸಂಪೂರ್ಣ ಹೊಣೆಗಾರ ತಾನು ಎಂಬ ಭಾವನೆ ಅವನದು. ತನಗೆ ಸೋಲಾದರೆ ಅಳುಕದೇ, ತಾನು ಎಲ್ಲಿ ತಪ್ಪುತ್ತಿದ್ದೇನೆ ಎಂದು ಪರಾವರ್ಶಿಸಿ, ಉಳಿದವರೊಂದಿಗೆ ಚರ್ಚಿಸಿ ಯಶಸ್ಸು ಸಿಗುವ ತನಕ ತಿರುಗಿ ಯತ್ನಿಸುತ್ತಾನೆ. ಅವನು ಕೈಗೊಂಡ ಸಂಶೋಧನೆ ಜನತೆಯ, ರಾಷ್ಟ್ರದ ಹಿತಸಾಧನೆಯಾಗಿರಬಹುದು. ಇಲ್ಲವೆ ಬೇರೊಂದು ಮಹಾ ಸಾಧನೆಗೆ ಅಡಿಗಲ್ಲಾಗಿ ಪರಿಣಮಿಸಬಹುದು. ಈತ ಹಣಕ್ಕಾಗಿ, ಪ್ರಸಿದ್ಧಿಗಾಗಿ ದುಡಿಯದೇ ಆತ್ಮಸಾಫಲ್ಯಕ್ಕಾಗಿ ಹೆಣಗುವನು. ಆದ್ದರಿಂದ ಧನಸಂಗ್ರಹ, ಸುಖ ಸಾಮಗ್ರಿಗಳತ್ತ ಅವನ ಲಕ್ಷ್ಯವಿರುವದಿಲ್ಲ. ಕಷ್ಟಕಾರ್ಪಣ್ಯಗಳ ಮೂಲಕ ಬುದ್ದಿಯನ್ನು ತೀಕ್ಷ್ಣಗೊಳಿಸಿ ಗುರಿಯನ್ನು ಸಾಧಿಸುವ ಹಟಯೋಗಿ ಈ ವಿಜ್ಞಾನಿ. ಅಂತೆಯೆ, ಪರಿಸರದವರು, ಸಮಾಜ, ಸ್ವತಃ ಕುಟುಂಬದವರು, ಅವನೊಬ್ಬ ಕೆಲಸಕ್ಕೆ ಬಾರದವ, ಅವ್ಯವಹಾರಿಕ, ತತ್ವಜ್ಞಾನಿ ಎಂದೇ ಭಾವಿಸುತ್ತಾರೆ.
ವಿಜ್ಞಾನಿಯಾಗಲು ಪ್ರಥಮದರ್ಜೆಯಲ್ಲಿಯೇ ಪಾಸಾಗಬೇಕೆಂದಿಲ್ಲ. ಮಾಸ್ಟರ್ಸ್‌-ಡಾಕ್ಟರೇಟ್ ಡಿಗ್ರಿ ಪಡೆದಿರಬೇಕೆಂದಿಲ್ಲ. ವೈಜ್ಞಾನಿಕ ಸಂಸ್ಥೆಗಳಲ್ಲಿ ದುಡಿಯಲೇಬೇಕೆಂದಿಲ್ಲ. ವಿಚಾರಪರ, ಪ್ರಗತಿಶೀಲ ಕೇವಲ ಅಡಿಗೆ ಮನೆಗೆ ಸೀಮಿತ ಚಟುವಟಿಕೆಗಳುಳ್ಳ ಗೃಹಿಣಿ ವಿಜ್ಞಾನಿಯಾಗಿರಬಹುದು. ವಿದೇಶಗಳಲ್ಲಿ ಅತಿ ಉಚ್ಛ ಪದವಿ ಪಡೆದ, ವೈಜ್ಞಾನಿಕ ಕ್ಷೇತ್ರದಲ್ಲಿ ದುಡಿಯುತ್ತಲೇ ಇರುವವರು ವಿಜ್ಞಾನಿಗಳಲ್ಲದಿರಬಹುದು. ನಮ್ಮ ದೇಶದಲ್ಲಿ ಸತ್ಯಸಂಶೋಧನೆಯಲ್ಲಿ ತೊಡಗಿವ ವಿಶ್ವದ ಇತರ ವಿಖ್ಯಾತ ವಿಜ್ಞಾನಿಗಳೊಡನೆ ಹೋಲಿಸಬಹುದಾದವರು ಬೆರಳ ಮೇಲೆ ಎಣಿಸುವಷ್ಟು ಇರಬಹುದು. ಉಳಿದ ದೇಶಗಳಲ್ಲಿ ಇಂಥವರನ್ನು ಪ್ರೋತ್ಸಾಹಿಸಿ, ಆವರಿಸಿ, ಗೌರವಿಸಿದರೆ ನಮ್ಮ ದೇಶದಲ್ಲಿ ಹೊಸದೊಂದು ಸ್ವಾರ್ಥಸಾಧಕ ‘ವಿಜ್ಞಾನಿ’ಗಳ ಪಂಗಡ ರಾಕ್ಷಸಾಕಾರವಾಗಿ ಬೆಳೆದು ಇದ್ದ ಇಂತಹ ಕೆಲವರನ್ನು ನುಂಗಲು ಅಣಿಯಾಗಿದ್ದರಿಂದ ಪ್ರತಿಭಾವಂತ ವಿಜ್ಞಾನಿಗಳು ತಮಗೆ ಅನುಕೂಲ ಪರಿಸ್ಥಿತಿ ಒದಗುವ, ಗೌರವ ಸನ್ಮಾನಗಳು ದೊರೆಯುವ ದೇಶಗಳಿಗೆ ವಲಸೆ ಹೋಗುತ್ತಾರೆ. ಇವರಿಗೆ ತಾವು ಹುಟ್ಟಿ ಬೆಳೆದ ದೇಶದ ಬಗ್ಗೆ ಪ್ರೀತಿ-ಅಭಿಮಾನಗಳಿಲ್ಲ ಎಂದು ಯಾರೂ ಹೇಳುವಂತಿಲ್ಲ. ಇವರು ವಿಶ್ವಕುಟುಂಬಿಗಳಾದ್ದರಿಂದ ಸಂಕುಚಿತ ದೃಷ್ಟಿಕೋನ ಇವರಿಗಿಲ್ಲ.
ಇತರ ಕ್ಷೇತ್ರಗಳಲ್ಲಿ ಜನಸಾಮಾನ್ಯರಿಗೆಲ್ಲ ತಪ್ಪು ಕಲ್ಪನೆಯಾಗುವಂತೆ ಭಾಷಣ ಮಾಡುವ ರಾಜಕಾರಣಿಗಳು ವೈಜ್ಞಾನಿಕ ಪ್ರಗತಿಯ ಬಗ್ಗೂ ಅಂಕಿ ಸಂಖ್ಯೆಗಳೊಂದಿಗೆ ವಿವರ ನೀಡುತ್ತಿರುತ್ತಾರೆ. ದೇಶದ ಮುಖ್ಯ ಧುರೀಣರು ವೈಜ್ಞಾನಿಕ ಪರಿಷತ್ತನ್ನು ಉದ್ಘಾಟಿಸುತ್ತ “ನಾವು ಹೆಚ್ಚು ಕಡಿಮೆ ಪಾಶ್ಚಿಮಾತ್ಯ ರಾಷ್ಟ್ರಗಳು ವೈಜ್ಞಾನಿಕ ಪ್ರಗತಿಯ ಮೇಲೆ ಶೇಕಡಾ ಮೀಸಲಿಡುವಷ್ಟೇ ಖರ್ಚು ಮಾಡುವದರಿಂದ ನಮ್ಮ ವೈಜ್ಞಾನಿಕ ಪ್ರಗತಿಯನ್ನು ಈ ರಾಷ್ಟ್ರಗಳೊಡನೆ ಹೋಲಿಸಬಹುದು” ಎಂದು ಕೊಟ್ಟ ಹೇಳಿಕೆ ಹಾಸ್ಯಾಸ್ಪದವಾಗಿದೆ. ಮೊದಲನೆಯದಾಗಿ ನಮ್ಮ ದೇಶದ ವಾರ್ಷಿಕ ಹಣಕಾಸಿನ ಮುಂಗಡಪತ್ರ, ನ್ಯೂಯಾರ್ಕ ರಾಜ್ಯ (ಅಮೇರಿಕೆಯಲ್ಲಿ ಇಂತಹ ಐವತ್ತು ರಾಜ್ಯ ಇವೆ) ಕ್ಕಿಂತ ಕಡಿಮೆ ಇರುವಾಗ ಈ ಎರಡು ದೇಶಗಳ ವೈಜ್ಞಾನಿಕ ಹಣಕಾಸಿನ ವ್ಯವಸ್ಥೆಯನ್ನು ಹೋಲಿಸುವಂತಿಲ್ಲ. ಎರಡನೆಯದಾಗಿ ಅಮೇರಿಕೆಯಲ್ಲಿ ಸಂಶೋಧನೆಗಳಿಗಾಗಿ ಸರಕಾರಕ್ಕಿಂತ ಖಾಸಗೀ ಸಂಸ್ಥೆಗಳು ಹೆಚ್ಚು ಲಕ್ಷ್ಯ ಪೂರೈಸುತ್ತವೆ. ಸರಕಾರ ಹಲವಾರು ಸಂಶೋಧನೆಗಳಿಗಾಗಿ ಇಂಥ ಸಂಸ್ಥೆಗಳನ್ನು ಆಶ್ರಯಿಸುತ್ತದೆ. ಈ ಸಂಸ್ಥೆಗಳ ಸಂಶೋಧನೆಗಳ ವೆಚ್ಚ, ದೇಶದ ಮುಂಗಡಪತ್ರದಲ್ಲಿ ಸಮಾವೇಶವಾಗುವುದಿಲ್ಲ. ಮೂರನೆಯದಾಗಿ, ಯಾವದೇ ಕ್ಷೇತ್ರದ ಪ್ರಗತಿಮಾಪನದ ಅಳತೆಗೋಲು, ಖರ್ಚು ಮಾಡಿದ ಹಣವಾಗಿರದೇ ಸಾಧಿಸಿದ ಪ್ರಗತಿಯಾಗಿದೆ. ಹೀಗೆ ಅಳೆದಾಗ ಕಳೆದ ಕಾಲು ಶತಮಾನದಲ್ಲಿ ನಮ್ಮ ಸಾಧನೆ ತೀರ ಅಲ್ಪ ಎಂದು ಖೇದದಿಂದ ಒಪ್ಪಿಕೊಳ್ಳಬೇಕಾಗುತ್ತದೆ.
ನಾವು ಇಚ್ಛಿಸಿದಷ್ಟು, ಯೋಚಿಸಿದಷ್ಟು ವೈಜ್ಞಾನಿಕ ಪ್ರಗತಿಯಾಗದಿದ್ದುದಕ್ಕೆ ಕಾರಣ, ನಮ್ಮ ದೇಶದಲ್ಲಿ ಬೆಳೆದು ಬಂದ ಸರಕಾರ ವಿಜ್ಞಾನಿಗಳತ್ತ, ವಿಜ್ಞಾನಿಗಳು ರಾಜಕಾರಣಿಗಳತ್ತ ಬೊಟ್ಟು ಮಾಡಿ ತೋರಿಸುವ ಪರಿಪಾಠ. ಆದರೆ ಸಮಗ್ರವಾಗಿ ಯೋಚಿಸಿದಾಗ ನಮ್ಮ ವೈಜ್ಞಾನಿಕ ಶಿಕ್ಷಣ, ತರಬೇತಿ, ಆಯ್ಕೆ ಬಡತಿ ಕೊಡುವ ಪದ್ದತಿ ಎಲ್ಲವೂ ದೋಷಪೂರ್ಣವಾಗಿರುವುದೇ ಕಾರಣವೆಂದು ಅನಿಸದೇ ಇರದು. ಮಾಧ್ಯಮಿಕ ಶಾಲೆಗಳಲ್ಲಿ ಇತಿಹಾಸ, ಭೂಗೋಲಗಳಂತೆಯೇ ವಿಜ್ಞಾನವನ್ನೂ ಒಂದು ವಿಷಯವಾಗಿ ಕಲಿಸಲಾಗುತ್ತದೆ. ಅಲ್ಲಿ ಸ್ವಂತ ವಿಚಾರಕ್ಕೆ, ಪ್ರಯೋಗಗಳಿಗೆ ಅವಕಾಶ ಇಲ್ಲದ್ದರಿಂದ ಈ ಮಟ್ಟದ ಶಿಕ್ಷಣದಲ್ಲಿ ವಿಜ್ಞಾನದ ಕುರಿತು ಪರಿಚಯ ಪಾಠಗಳಷ್ಟೇ ದೊರೆಯುತ್ತವೆಂದು ಹೇಳಬಹುದು. ಭಾರತೀಯರನ್ನೆಲ್ಲ ಭರದಿಂದ ವಿದ್ಯಾವಂತರನ್ನಾಗಿ ಮಾಡುವ ಆತುರತೆಯಲ್ಲಿ ವಿಶ್ವವಿದ್ಯಾಲಯಗಳ ಸಂಖ್ಯೆ ಹೆಚ್ಚಿಸಿ ಅವಕ್ಕೆ ಜೊಡಿಸುವಂತಹ ಅಸಂಖ್ಯ ಕಾಲೇಜುಗಳನ್ನು ತೆರೆಯಲು ಅವಕಾಶ ಕೊಡಲಾಗಿದೆ. ಈ ಖಾಸಗೀ ಕಾಲೇಜುಗಳಲ್ಲಿ ಹಣಕಾಸಿನ ವ್ಯವಸ್ಥೆ ಸರಿ ಇಲ್ಲದ್ದರಿಂದ ಕಡಿಮೆ ವೇತನಕ್ಕೆ ಬರುವ ಪ್ರಾಧ್ಯಾಪಕರನ್ನು ನೇಮಿಸಿ ಹೆಚ್ಚು ಖರ್ಚಿಲ್ಲದೇ ವೈಜ್ಞಾನಿಕ ವಿಷಯಗಳನ್ನು ಕಲಿಸಲಾಗುತ್ತದೆ. ಕೇವಲ ಮಾಧ್ಯಮಿಕ ಶಿಕ್ಷಣ ಪಡೆದಾತನಿಗೆ ಉದರನಿರ್ವಹಣೆಯ ಯಾವ ಮಾರ್ಗವೂ ಇಲ್ಲದ್ದರಿಂದ ಆತ ಕಾಲೇಜು ಸೇರುತ್ತಾನೆ.
ಕಾಲೇಜಿಗೆ ಬರುವ ಬಹುಸಂಖ್ಯಾತರು ಜ್ಞಾನದ ಹಸಿವೆಯಿಲ್ಲದವರು : ಪದವಿಗಳ ಉಪಾಸಕರು. ಹೀಗಾಗಿ ಹೆಚ್ಚಿನವರು, ವಿಜ್ಞಾನದ ಪದವೀಧರರಿಗೆ ನೌಕರಿಯ ಅವಕಾಶ ಹೆಚ್ಚಿಗೆ ಎಂದು ಅದನ್ನೇ ಅಭ್ಯಸಿಸುತ್ತಾರೆ. ಗಣಿತ ಬಾರದವರು ಜೀವಶಾಸ್ತ್ರವನ್ನು ತೆಗೆದುಕೊಳ್ಳುತ್ತಾರೆ. ಕಪ್ಪೆ ಕೊಯ್ಯಲು ಅಸಹ್ಯಪಡುವವರು ಭೌತಶಾಸ್ತ್ರ ವಿಷಯವನ್ನು ತೆಗೆದುಕೊಳ್ಳುತ್ತಾರೆ. ಕಾಲೇಜು ಸೇರಲು ಯಾವ ನಿರ್ಬಂಧಗಳೂ ಇಲ್ಲ. ಯಾವ ಕ್ಲಾಸಿನಲ್ಲಿ ಅನುತ್ತೀರ್ಣನಾದರೂ ಮುಂದಿನ ಪರೀಕ್ಷೆಗೆ ಕಟ್ಟಲು ಅವಕಾಶವಿದೆ. ಒಂದರಿಂದ ನಾಲ್ಕು ಸಲ ನಪಾಸಾದ ವಿದ್ಯಾರ್ಥಿಗೆ ಕೊನೆಯ ವರ್ಷದಲ್ಲಿ ಎಲ್ಲ ಪರೀಕ್ಷೆಗಳನ್ನು ಒಮ್ಮೆಲೇ ಕಟ್ಟಲು ಅವಕಾಶ ದಯಪಾಲಿಸಿರುವದರಿಂದ ನಮ್ಮ ವಿದ್ಯಾರ್ಥಿಗಳಿಗೆ ನಾವೆಂಥ ವೈಜ್ಞಾನಿಕ ಶಿಕ್ಷಣ ಕೊಡಮಾಡುತ್ತಿದ್ದೇವೆ ಎಂಬ ಕಲ್ಪನೆ ಬರುವಂತಿದೆ. ನಮ್ಮ ದೇಶದ ವೈಜ್ಞಾನಿಕರಲ್ಲಿ ತಮ್ಮ ಸ್ವಂತದ ಸಂಶೋಧನೆಗಳಿಂದ, ಅನುಭವಗಳಿಂದ ಬರೆದ ಪಠ್ಯಪುಸ್ತಕಗಳು ಬಹಳ ಕಡಿಮೆ. ಹೆಚ್ಚಿನವು ಪಾಶ್ಚಿಮಾತ್ಯರ ಅನುಕರಣೆಯಲ್ಲಿ ಬರೆದವು. ಇಲ್ಲವೇ ಪಾಶ್ಚಾತ್ಯರೇ ಬರೆದು ಪ್ರಕಟಿಸಿದ ಪಠ್ಯಪುಸ್ತಕಗಳು. ಈ ಶತಮಾನದ ಆದಿಯಲ್ಲಿ ಬರೆದ ಪಠ್ಯಪುಸ್ತಕಗಳನ್ನೇ ಇಂದಿಗೂ ನಮ್ಮ ವಿಶ್ವವಿದ್ಯಾಲಯಗಳಲ್ಲಿ ಬಳಸಲಾಗುತ್ತದೆ. ಕಲಿಸುವವರು ತಮ್ಮ ಪ್ರಾಧ್ಯಾಪಕರು ತಮಗೆ ಬರೆಸಿದ ಟಿಪ್ಪಣಿಗಳನ್ನೇ ಅವಲಂಬಿಸಿದರೆ ವಿದ್ಯಾರ್ಥಿಗಳು ಯಾರಾರೋ ಅನಾಮಧೇಯರು ಬರೆದ ಆಗ್ಗದ ಗಯಿಡುಗಳನ್ನು ನಂಬುತ್ತಾರೆ. ವೈಜ್ಞಾನಿಕ ಕ್ಷೇತ್ರದಲ್ಲಿ ಬೆಳವಣಿಗೆ ಹೇಗಾಯಿತೆಂದು ಕಲಿಸಲಾಗುತ್ತದೆಯೇ ಹೊರತು ವೈಜ್ಞಾನಿಕ ವಿಚಾರಗಳಿಗೆ ಆಸ್ಪದ ಕೊಡಲಾಗುವದಿಲ್ಲ. ಅಂತೆಯೇ ಎವೆಗೆದ್ರೊ, ಡಾಲ್ಪನ್, ಮೆಂಡೆಲ್, ಡಾರ್ವಿನ್‌ರಂತಹ ವಿಜ್ಞಾನಿಗಳು ಕಂಡುಹಿಡಿದದ್ದು ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವ ಪ್ರಯೋಗಗಳು ನಮ್ಮಲ್ಲಿ ನಡೆದಿರುತ್ತವೆ ! ಮುಂದೆ ವಿದ್ಯಾರ್ಥಿಗಳು ಎಮ್‌. ಎಸ್‌ಸಿ. ಪದವಿಗಾಗಿ ವಿದ್ಯಾಭ್ಯಾಸ ಮುಂದರಿಸಿದರೂ ಅಲ್ಲಿ ಅವರು, ಈ ಹಿಂದೆ ಕಲಿತದ್ದನ್ನೇ ಇನ್ನೂ ವಿವರವಾಗಿ ಅಭ್ಯಸಿಸಬೇಕಾಗುತ್ತದೆಯೇ ಹೊರತು ಆ ಕ್ಷೇತ್ರದಲ್ಲಿಯ ಹೊಸ ವಿಚಾರಗಳಿಗೆ, ಪ್ರಯೋಗಗಳಿಗೆ ಆಸ್ಪದವಿರುವದಿಲ್ಲ. ಆದ್ದರಿಂದ ವಿಶ್ವವಿದ್ಯಾಲಯದಿಂದ ಹೊರಗೆ ಬಿದ್ದಾಗ ಸಂಶೋಧನೆಯ ಗಾಳಿಯೂ ಇವರಿಗೆ ಸೋಂಕಿರುವದಿಲ್ಲವೆಂದರೆ ಅತಿಶಯೋಕ್ತಿಯಾಗಲಾರದು. ತಾವು ಮಾಡುವ ಪ್ರಯೋಗಗಳೇ ಸಂಶೋಧನೆಗಳೆಂದು ನಂಬುವ ವಿದ್ಯಾರ್ಥಿಗಳಿಗಂತೂ ಲೆಕ್ಕವೇ ಇಲ್ಲ. ಇಂದಿನ ವಿಶ್ವವಿದ್ಯಾಲಯದ ಶಿಕ್ಷಣ ಧನಿಕರ ಸೊತ್ತಾಗಿದೆಯೇ ಹೊರತು ಜಾಣ ವಿದ್ಯಾರ್ಥಿಗಳದ್ದು ಅಲ್ಲ. ನಮ್ಮಲ್ಲಿ ಇನ್ನೂ ವರ್ಷದ ಕೊನೆಯಲ್ಲಿ ಒಂದು ಪರೀಕ್ಷೆ ಮಾಡಿ ವಿದ್ಯಾರ್ಥಿಯ ಭವಿಷ್ಯವನ್ನು ನಿರ್ಧರಿಸುವ ವರ್ಗ ಕೊಡುವದರಿಂದ ವರ್ಷದ ಉದ್ದಕ್ಕೂ ಅಭ್ಯಾಸವನ್ನು ಅಲಕ್ಷಿಸಿ, ಕ್ಲಾಸಿಗೆ ಹೋಗದವರೂ ಕೂಡ, ಗಾಯಿಡುಗಳನ್ನು ಕಂಠಪಾಠ ಮಾಡಿ ನಿರೀಕ್ಷಿಸಿದ ಪ್ರಶ್ನೆಗಳಿಗಷ್ಟೇ ಉತ್ತರ ಸಿದ್ಧ ಮಾಡಿ, ಎಷ್ಟೋ ಬಾರಿ ನಕಲು ಮಾಡಿ ಪ್ರಥಮವರ್ಗ ಗಿಟ್ಟಿಸುವದು ಸಾಧ್ಯವಿದೆ. ಪರೀಕ್ಷೆ ಮುಗಿದ ನಂತರ ತಪಾಸಕರಿಂದ ಹಿಡಿದು ಗುಮಾಸ್ತರವರೆಗೆ ಎಲ್ಲರನ್ನೂ ಭೆಟ್ಟಿಯಾಗಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಗುಂಪೊಂದು ಕಾಣಿಸಿಕೊಳ್ಳುತ್ತಿದೆ. ಇವೆಲ್ಲ ಕಾರಣಗಳಿಂದಾಗಿ ವಿಶ್ವವಿದ್ಯಾಲಯದ ಸುವರ್ಣಪದಕ ವಿಜೇತರಿಗೆಲ್ಲ ವೈಜ್ಞಾನಿಕ ಒಲವು ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅಂತೆಯೇ ಭಾರತದಲ್ಲಿ ನೆಲೆಸಿದ್ದ ವಿಖ್ಯಾತ ವಿಜ್ಞಾನಿ ಜೆ. ಬಿ. ಎಸ್. ಹಾಲಡೇನರಿಗೆ ಕೆಲಸಗಾರರು ಬೇಕಿದ್ದಾಗ ಅವರು ಸ್ನಾತಕೋತ್ತರ ತರಬೇತಿ ಪಡೆದ ವಿದ್ಯಾರ್ಥಿಗಳನ್ನು ಆರಿಸುವ ಗೋಜಿಗೆ ಹೋಗದೇ ವಿಜ್ಞಾನದಲ್ಲಿ ಅಭಿರುಚಿಯುಳ್ಳ ಸಾಮಾನ್ಯ ವರ್ಗದಲ್ಲಿ ಉತ್ತೀರ್ಣರಾದ ಬಿ. ಎಸ್‌ಸಿ. ಪದವೀಧರರನ್ನೆ ತೆಗೆದುಕೊಂಡು ಕೈತುಂಬ ಸಂಬಳಕೊಟ್ಟು ದಿನವಿಡೀ ಅವರು ದುಡಿಯುವಂತೆ ಮಾಡಿದ್ದರು.
ಧನಬಲವಿರುವವರು, ದೊಡ್ಡ ಅಧಿಕಾರಿಗಳು ಇಲ್ಲವೇ ರಾಜಕಾರಣಿಗಳ ಅಳಿಯಂದಿರಾಗವವರು ಇಲ್ಲವೇ ತಮಗೆ ದೊರೆತ ಪದವಿ, ವರ್ಗಗಳ ಮೇಲೆಯೇ ಶಿಷ್ಯವೇತನ ಗಿಟ್ಟಿಸಲು ಸಾಮರ್ಥ್ಯವುಳ್ಳವರು ಡಾಕ್ಟರೇಟದ ಅಭ್ಯಾಸ ಮುಂದುವರಿಸಬಹುದು. ಯಾವುದಾದರೂ ಹೆಸರಾಂತ ಪ್ರಾಧ್ಯಾಪಕರ, ವೈಜ್ಞಾನಿಕರ ಆಶ್ರಯ ಪಡೆದು, ಅವರು ಸೂಚಿಸಿದ ವಿಷಯದ ಮೇಲೆ ಸಂಶೋಧನೆ ನಡೆಸಿ ಅವರ ಯೋಗ್ಯತೆಗೆ ಒಪ್ಪುವಂತಹ ಪ್ರಬಂಧ ಬರೆದು ಮುಗಿಸಿದರೆ, ಪ್ರಾಧ್ಯಾಪಕರು, ಯಾವ ಆಕ್ಷೇಪಣೆಯನ್ನೂ ಎತ್ತದ ತಮಗೆ ಅನುಕೂಲವಾದಂತಹವರನ್ನೆಃ ಪರಿ:ಕ್ಷಕರನ್ನಾಗಿ ಆರಿಸಿ ವಿದ್ಯಾರ್ಥಿಗೆ ಡಾಕ್ಟರೇಟ ದೊರಕಿಸಿಕೊಡುವ ಜವಾಬ್ದಾರಿ ಹೊತ್ತಿರುತ್ತಾರೆ. ಎಷ್ಟೋ ಸಲ ಪ್ರಯೋಗಗಳನ್ನು ಸ್ನೇಹಿತರಿಂದ ಮಾಡಿಸಿ, ಇಂಗ್ಲಿಷಿನಲ್ಲಿ ಇತರರಿಂದ ಬರೆಸಿ ಆಕೃತಿ, ಚಿತ್ರಗಳನ್ನೂ ಕಲಾಕಾರರಿಂದ ತೆಗೆಯಿಸಿ ತಾವು ಮಾತ್ರ ಡಿಗ್ರಿ ಗಳಿಸಿದ ಮಹನೀಯರೂ ಇದ್ದಾರೆ. ನಂತರ ಪ್ರಾಧ್ಯಾಪಕರು ತಜ್ಞರನ್ನು ಭೆಟ್ಟಿಯಾಗಿ ಇಂಟರವ್ಹ್ಯೂ ಕಮಿಟಿಯ ಸದಸ್ಯರನ್ನು ಭೆಟ್ಟಿ ಯಾಗಿ ಉಮೇದುವಾರನ ಸಂಶೋಧನಾ ವೈಖರಿಯನ್ನು ಬಣ್ಣಿಸಿ ಆತನ ಯೋಗ್ಯತೆಗೆ ಮೀರಿದ ನೌಕರಿ ಕೊಡಿಸುತ್ತಾರೆ. ಈ ಸಹಾಯಕ್ಕಾಗಿ ಆಜನ್ಮ ಕೃತಜ್ಞನಿರುವ ಉಮೆದುವಾರ. ತನ್ನ ನಿಷ್ಠೆಯನ್ನು ತೋರಿಸಲು ಪ್ರಾಧ್ಯಾಪಕರ ಮಗಳನ್ನೊ, ಮೊಮ್ಮಗಳನ್ನೊ ಮದುವೆಯಾಗಬಹುದು. ಬಹುಸಂಖ್ಯಾತರಿಗೆ ನಮ್ಮಲ್ಲಿ ಅವರು ಡಾಕ್ಟರೇಟಿಗಾಗಿ ಮಾಡಿದ ಸಂಶೋಧನೆ ಮೊದಲನೆಯದಿದ್ದಂತೆ ಕೊನೆಯದೂ ಆಗಿ ಪರಿಣಮಿಸುತ್ತದೆ.
ಪಾಶ್ಚಾತ್ಯರ ವೈಜ್ಞಾನಿಕ ಶಿಕ್ಷಣದ ಪದ್ಧತಿಯೇ ದೇಶದ ಮುನ್ನಡೆಯ ಸೂಚಕವಾಗಿದೆ. ಮನೆಯಲ್ಲಿ, ಪ್ರಾಥಮಿಕ ಶಾಲೆಯಲ್ಲಿ ಸಣ್ಣ ಸಣ್ಣ ಸಸ್ಯಗಳನ್ನು ಬೆಳೆಸಿ, ಪ್ರಾಣಿಗಳನ್ನು ಸಾಕಿ ಅವುಗಳ ಜೀವನವನ್ನು ಚಿಕ್ಕ ಮಕ್ಕಳು ನಿರೀಕ್ಷಿಸುವಂತೆ ಅನುವು ಮಾಡಿಕೊಡುತ್ತಾರೆ. ಆಗಾಗ್ಗೆ ಪ್ರವಾಸಕ್ಕೆ ನಿಸರ್ಗದ ಮಡಿಲಲ್ಲಿ ಕರೆದೊಯ್ದು ಪ್ರಕೃತಿಯ ಪರಿಚಯ ನೀಡುತ್ತಾರೆ. ತಮ್ಮ ಆಟಿಗೆಗಳನ್ನು ತಾವೇ ದುರಸ್ತಿ ಮಾಡಿಕೊಳ್ಳುವಂತೆ, ನಿರ್ಮಿಸಿಕೊಳ್ಳುವಂತೆ ಅವರಿಗೆ ಸಲಕರಣೆಗಳನ್ನು ಪೂರೈಸಲಾಗುತ್ತದೆ. ಪ್ರಾಥಮಿಕ ಶಾಲೆಗಳಲ್ಲಿಯೇ ತಮ್ಮ ಮಟ್ಟಕ್ಕೆ ತಕ್ಕಂತೆ ಜ್ಞಾನಕೋಶವನ್ನು ಮಕ್ಕಳು ಅಭ್ಯಸಿಸುತ್ತಾರೆ. ಶಿಕ್ಷಕರ ನೇತೃತ್ವದಲ್ಲಿ ವೈಜ್ಞಾನಿಕ ಪ್ರಯೋಗಗಳನ್ನು ಮಾಡುವರು. ಮಾಧ್ಯಮಿಕ ಮಟ್ಟದಲ್ಲಿ ವಿವಿಧ ಹಂತಗಳಲ್ಲಿ ಪ್ರಯೋಗಗಳಿಗೆ ಹೆಚ್ಚಿನ ಅವಕಾಶ ಕೊಡಲಾಗುತ್ತದೆ. ಈ ಕಿರಿಯ ವಿಜ್ಞಾನಿಗಳಿಗೇ ಕೆಲವು ಪ್ರಯೋಗಗಳನ್ನು ಮೀಸಲಿಟ್ಟಿರುತ್ತಾರೆ. ಮಾಧ್ಯಮಿಕ ಶಿಕ್ಷಣ ಮುಗಿಸಿದವರಿಗೆಲ್ಲ ಉಚ್ಚ ಸಂಸ್ಥೆಗಳಲ್ಲಿ ಸ್ವಾಗತವಿಲ್ಲ. ಮೊದಲಿಗೆ ಅಭಿರುಚಿಯ ಪರ್ರಿಕ್ಷೆ ಕೊಡಬೇಕಾಗುತ್ತದೆ. ಶಿಕ್ಷಕರು ವಿದ್ಯಾರ್ಥಿಯ ಒಲವು ನಿಲುವುಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಆಯ್ಕೆಯ ಸಮಿತಿಗೆ ತಿಳಿಸಿದಾಗ ಅವರನ್ನು ಆಯಾ ಅಭಿರುಚಿಯ ಶಾಖೆಗೆ ಸೇರಿಸಲಾಗುತ್ತದೆ. ಕಾಲೇಜುಗಳಲ್ಲಿ ಅತ್ಯಾಧುನಿಕ, ವ್ಯಾವಹಾರಿಕ, ವೈಜ್ಞಾನಿಕ ಪ್ರಗತಿಗೆ ಅನುಸಾರವಾಗಿ ಅವರಿಗೆ ತರಬೇತಿ ನೀಡುತ್ತಾರೆ. ಹೊಸ ಸಂಶೋಧನೆಗಳ ಆಧಾರದ ಮೇಲೆ ಎರಡು-ಮೂರು ವರ್ಷಗಳಿಗೊಮ್ಮೆ ಹೊಸ ಪಠ್ಯ ಪುಸ್ತಕಗಳನ್ನು ಪ್ರಕಟಿಸುವುದರಿಂದ, ಹಳೆಯವನ್ನು ಓದಬೇಕಾಗಿಲ್ಲ. ಶಿಕ್ಷಕರು “ವಿಜ್ಞಾನದ ಗುಟುಕು”ಗಳನ್ನು ಕೊಡುವ ಗೋಜಿಗೆ ಹೋಗದೇ ಪಠ್ಯಪ್ರಸ್ತಕಗಳ ಜೊತೆಗೆ ವಿದ್ಯಾರ್ಥಿಗಳು ಸಂಶೋಧನಾ ಪತ್ರಿಕೆಗಳನ್ನೂ ಓದುವಂತೆ ಮಾಡುತ್ತಾರೆ. ಓದಿದ್ದೆಲ್ಲ ಅರಗಿಸಿಕೊಂಡು, ಹೊಸ ಪ್ರಯೋಗಗಳನ್ನು ಕೈಕೊಂಡು ನಿಯತ ವರದಿಗಳನ್ನು ಪ್ರಾಧ್ಯಾಪಕರಿಗೆ ಒಪ್ಪಿಸಬೇಕು. ರಜಾ ದಿನಗಳಲ್ಲಿ ವಿವಿಧ ವೈಜ್ಞಾನಿಕ ಸಂಸ್ಥೆಗಳು ಇಂಥವರನ್ನು ಕೆಲಸಕ್ಕೆ ನೇಮಿಸಿಕೊಳ್ಳುವವು. ಆಗ ಹೆಸರಾಂತ ವಿಜ್ಞಾನಿಗಳೊಡನೆ ಬೆರೆತು, ವಿಚಾರವಿನಿಮಯ ಮಾಡಿ ತಮಗೆ ಆಸಕ್ತಿ ಇರುವ ವಿಭಾಗವನ್ನು ಈ ವಿದ್ಯಾರ್ಥಿಗಳು ಕಂಡುಹಿಡಿಯುತ್ತಾರೆ. ಸ್ನಾತಕೋತ್ತರ ವಿದ್ಯಾರ್ಥಿಗಳಂತೂ ವಿಜ್ಞಾನಿಗಳಂತೆಯೇ ದುಡಿಯಬೇಕು. ತನ್ನ ಸಂಶೋಧನಾ ವಿಷಯದ ಜೊತೆಗೆ ಅದರಲ್ಲಿ ಪರಿಣತಿ ಪಡೆಯಲು ಸಹಾಯಕವಾಗುವ ವಿಷಯಗಳನ್ನು ಅಭ್ಯಾಸ ಮಾಡಬೇಕಾಗುತ್ತದೆ. ಡಾಕ್ಟರೇಟಿನ ಸಂಶೋಧನೆ, ವಿದ್ಯಾರ್ಥಿಯ ಕೊನೆಯ ಒಂದೇ ಸಂಶೋಧನೆ ಆಗಿರದೇ ಮುಂದಿನ ಸಂಶೋಧನಾ ಜೀವನಕ್ಕೆ ನಾಂದಿಯಾಗುತ್ತದೆ.
ನಮ್ಮ ದೇಶದಲ್ಲಿ ವೈಜ್ಞಾನಿಕ ಸಂಶೋಧನೆಗಳು, ಸರಕಾರದಿಂದ ಪೋಷಿತ ವಿಶ್ಯವಿದ್ಯಾಲಯಗಳಲ್ಲಿ, ರಾಷ್ಟ್ರೀಯ ಪ್ರಯೋಗ ಶಾಲೆಗಳಲ್ಲಿ, ಇಲ್ಲವೇ ರಾಷ್ಟ್ರೀಕೃತೆ ಕಾರಖಾನೆಗಳಲ್ಲಿ ನಡೆಯತಕ್ಕವು. ಆದ್ದರಿಂದ ಈ ಸಂಸ್ಥೆಗಳು ಉಳಿದ ಸರಕಾರಿ ಸಂಸ್ಥೆಗಳಂತೆಯೇ ನಡೆಯುವವು. ವೈಜ್ಞಾನಿಕ ಪ್ರಗತಿಗೆಂದು ಸರಕಾರ ಧಾರಾಳವಾಗಿ ಖರ್ಚು ಮಾಡುವ ಹಣದ ಹೆಚ್ಚಿನ ಭಾಗ ಭವ್ಯವಾದ ಕಟ್ಟಡ, ಫರ್ನಿಚರ್, ಕಪಾಟುಗಳು, ಹತ್ತೆಂಟು ಸೇವಕರು, ಮೇಲ್ವಿಚಾರಕರು, ಪ್ರಯೋಗ ಶಾಲೆಯ ಸಹಾಯಕರು, ಗುಮಾಸ್ತರು, ಮಾಲಿಗಳು, ಕಾವಲುಗಾರರು, ಹಿರಿಯ ವಿಜ್ಞಾನಿಯ ಡ್ರಾಯವರ ಇಂಥವರ ಸಂಬಳ, ಪೋಷಣೆಗೆ ಖರ್ಚಾಗುತ್ತದೆ. ಇವರಲ್ಲಿ ವಿಜ್ಞಾನಿವರ್ಗ, ಮಾಸಿಕ, ಅರ್ಧವಾರ್ಷಿಕ, ವಾರ್ಷಿಕ ಪ್ರಗತಿಯ ವರದಿಯನ್ನು ಕಾಲಕಾಲಕ್ಕೆ ಸರಕಾರಕ್ಕೆ ಕಳಿಸಿದರಾಯಿತು. ಇದರಲ್ಲಿ ಮಾಡಿದ ಸಂಶೋಧನೆಗಳಿಗಿಂತ ಮಾಡಬೇಕಾದ ಸಂಶೋಧನೆಗಳು, ಅವಕ್ಕೆ ಬರಬಹುದಾದ ಅಡೆ-ತಡೆಗಳು, ಹೆಚ್ಚಿನ ಧನಸಹಾಯ ಕೇಳಿ ಬರೆದ ವಿವರಗಳಿರುತ್ತವೆ. ಆಗೊಮ್ಮೆ ಈಗೊಮ್ಮೆ ದೇಶದ ಬೇರೆ ಬೇರೆ ಭಾಗಗಳಲ್ಲಿ ಪ್ರಕಟವಾಗುವ ವೈಜ್ಞಾನಿಕ ಸಂಚಿಕೆಗಳಲ್ಲಿ ಪಾಶ್ಚಾತ್ಯ ಪತ್ರಿಕೆಗಳಿಂದ ಎರವಲು ಪಡೆದೂ, ಅನುಕರಣೆ ಮಾಡಿಯೋ ಒಂದು ಚೋಟುದ್ದ ಸಂಶೋಧನಾ ಪೇಪರು, ಇವರ ಹೆಸರಿನಲ್ಲಿ ಪ್ರಕಟವಾಗಿರುತ್ತದೆ. ಇಂತಹ ನಾಲ್ಕು ಪೇಪರು ಪ್ರಕಟಿಸಿದವರು ಮುಂದಿನ ಬಡತಿಗಾಗಿ ಕಾಯುತ್ತಿರುತ್ತಾರೆ. ಸಂಶೋಧನಾ ಪೇಪರುಗಳ ಸಂಖ್ಯೆ ಏರಿಸಲು ಎಂತೆಂತಹ ಉಪಾಯಗಳನ್ನೂ ಕೈಕೊಳ್ಳಲು ನಮ್ಮ ವಿಜ್ಞಾನಿಗಳು ಹಿಂಜರಿಯುವುದಿಲ್ಲ. ನಮ್ಮ ಹಿರಿಯ ವಿಜ್ಞಾನಿಗಳೊಬ್ಬರು ಅಮೆರಿಕೆಯ ಸಂಶೋಧನಾಲಯ ಒಂದಕ್ಕೆ ಭೇಟಿ ಬಿತ್ತು ಅಲ್ಲಿ ನಡೆಯುತ್ತಿದ್ದ ಹೊಸ ಸಂಶೋಧನೆಗಳ ಬಗ್ಗೆ ಮಾಹಿತಿ ಪಡೆದರು. ಭಾರತಕ್ಕೆ ಮರಳಿದ ಮೇಲೆ ಅಲ್ಲಿ ಪಡೆದ ವಿವರಗಳ ಆಧಾರದ ಮೇಲೆಯೇ ತಾವೊಂದು ‘ಸಂಶೋಧನಾ’ ಪೇಪರನ್ನು ಪ್ರಕಟಿಸಿಬಿಟ್ಟರು !
ವಿದೇಶಗಳಲ್ಲಿ ಹೆಚ್ಚಿನ ಸಂಶೋಧನೆಗಳನ್ನು ಖಾಸಗಿ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ನಡೆಸುವದರಿಂದ ಪ್ರಾಯೋಗಿಕ ಸಂಶೋಧನೆಗಳಿಗೆ ಎಂದಿಗೂ ಹೆಚ್ಚು ಪ್ರಾಶಸ್ತ್ಯವಿದೆ. ಅಮೇರಿಕೆಯಲ್ಲಿ ಸರಕಾರ ತನಗೆ ಬೇಕಾದ ಸಂಶೋಧನೆಗಳನ್ನು ಬೆಲ್ ಟೆಲೆಫೋನ್ ಕಂಪನಿ, ಜನರಲ್ ಇಲೆಕ್ಟ್ರಿಕಲ್ಸ್‌, ಜನರಲ್ ಮೋಟರ‍್ಸ್‌, ಬೋಯಿಂಗ ಮುಂತಾದ ಖಾಸಗಿ ಸಂಸ್ಥೆಗಳಿಗೆ ಧನಸಹಾಯ ಮಾಡಿ ತಾನು ಪಡೆಯುತ್ತದೆ. ಚಂದ್ರಯಾನಕ್ಕೆ ಸರಕಾರಕ್ಕಿಂತ ಖಾಸಗೀ ಸಂಸ್ಥೆಗಳ ಸಹಾಯವೇ ಹೆಚ್ಚು ಇತ್ತು ಎಂಬ ಮಾತು ಗಮನಾರ್ಹವಾಗಿದೆ. ಇಂಥ ಸಂಸ್ಥೆಗಳಲ್ಲಿ ಸದಾಕಾಲ ಹೆಚ್ಚಿನ ಸ್ಪರ್ಧೆ ಇರುವದರಿಂದ ಅವರು ತಮ್ಮಲ್ಲಿದ್ದ ಅಥವಾ ಸರಕಾರದಿಂದ ಪಡೆದ ಹಣದ ಸದುಪಯೋಗ ಮಾಡಿಕೊಳ್ಳಲು ಉಳಿದೆಲ್ಲ ಖರ್ಚನ್ನು ಕಡಿಮೆ ಮಾಡಿರುತ್ತಾರೆ. ಭವ್ಯವಾದ ವಾತಾನುಕೂಲಿ ಕಟ್ಟಡಗಳಿಗೆ ಹಣ ಖರ್ಚು ಮಾಡದೇ ಹಳೆಯ ಕಟ್ಟಡದಲ್ಲಿಯೇ ಆಧುನಿಕ ಸಲಕರಣೆಗಳನ್ನು ಜೋಡಿಸಿ, ಹಿರಿಯ ವಿಜ್ಞಾನಿಗೆ ಒಪ್ಪಿಸಲಾಗುತ್ತದೆ. ಸಾಕಷ್ಟು ಧನಸಹಾಯ ನೀಡಲಾಗುತ್ತದೆ. ನಿರ್ವಹಣೆಯ ಪೂರ್ಣ ಜವಾಬ್ದಾರಿ ಆತನ ಕೈಯಲ್ಲಿ ಇರುವದರಿಂದ ತಿರ ಅವಶ್ಯವಿದ್ದ ಸಹಾಯಕರನ್ನಷ್ಟೇ ಆತ ನೇಮಿಸಿಕೊಳ್ಳುತ್ತಾನೆ. ಇವರಲ್ಲಿ ಹೊಸದಾಗಿ ವಿಜ್ಞಾನ ಕ್ಷೇತ್ರದಲ್ಲಿ ಕಾಲಿಡುತ್ತಿರುವ ತರುಣರೇ ಇರುವದರಿಂದ ಮೈಮುರಿ ದಡಿದು ಹೊಸ ಅನುಭವಗಳಿಗಾಗಿ ಕಾಯುವರು. ನೇಮಿಸಿಕೊಂಡವನಿಗೆ ‘ತೆಗೆದು ಹಾಕುವ ಅಧಿಕಾರವೂ ಇರುವದರಿಂದ ಕೆಲಸ ಮನಸ್ಸಿಗೆ ಒಪ್ಪಿಗೆಯಾಗದಿದ್ದರೆ ಅವರನ್ನು ಮನೆಗೆ ಕಳಿಸುವದರಲ್ಲಿ ಅವನು ಹಿಂದೆ ಮುಂದೆ ನೋಡುವದಿಲ್ಲ. ಹೀಗಾಗಿ ಸಂಶೋಧನೆಯಲ್ಲಿ ಪ್ರಗತಿಯಾಗುತ್ತದೆ. ಜೊಳ್ಳು ಪ್ರಬಂಧಗಳನ್ನು ಪ್ರಕಟಿಸುವ ಅವಶ್ಯಕತೆ ಆ ದೇಶದಲ್ಲಿ ಇಲ್ಲದ್ದರಿಂದ ತಮ್ಮ ಸಾಧನೆಗಳತ್ತ ವೈಯಕ್ತಿಕವಾಗಿ ಹೆಣಗುತ್ತಾರೆ. ಇಂಥವರ ವೈಯಕ್ತಿಕ ಮುನ್ನಡೆಯಲ್ಲಿ ದೇಶದ ಮುನ್ನಡೆಯೂ ಆಗುವದು ಸ್ವಾಭಾವಿಕ.
ಭಾರತೀಯ ವೈಜ್ಞಾನಿಕ ಕ್ಷೇತ್ರ ಎಲ್ಲೆಲ್ಲೂ ರಾಜಕಾರಣ ತಾಂಡವವಾಡುತ್ತಿರುವ ರಂಗವಾಗಿದೆ. ಸಮಯಸಾಧಕ ವಿಜ್ಞಾನಿಗಳ ತಂಡ ಇದನ್ನು ನಿಯಂತ್ರಿಸುತ್ತವೆ. ಇವರ ಕೃಪಾಕಟಾಕ್ಷಕ್ಕೆ ಪಾತ್ರರಾಗದವರು ತಲೆಯೆತ್ತಿ ಉಳಿಯುವ ಅವಕಾಶವಿಲ್ಲ ತೆರವಾದ ಸ್ಥಳಗಳಿಗಾಗಿ ವಿಜ್ಞಾನಿಗಳನ್ನು ನೇಮಿಸುವದರ ಬದಲಾಗಿ ವಿಜ್ಞಾನಿಗಳಿಗಾಗಿ ಸ್ಥಳಗಳ ನಿರ್ಮಾಣಗಳಾಗುತ್ತವೆ. ತಮಗೆ ಬೇಕಾದವರನ್ನು ನೇಮಿಸಿಕೊಳ್ಳಲು ಇವರು ಹೂಡುವ ಉಪಾಯಗಳು ಬಹುವಿಧ. ಒಬ್ಬನನ್ನು ಪರದೇಶಕ್ಕೆ ಹೋಗಿ ಬಂದನೆಂಬ ನೆಪದ ಮೇಲೆ ನೇಮಿಸಿದರೆ ಇನ್ನೊಬ್ಬನು ಕಾಲೇಜದಲ್ಲಿ ಚೆನ್ನಾಗಿ ಗುಣ ಗಳಿಸಿದ್ದನೆಂದು ಆರಿಸುವರು. ಬೇರಾವ ಉತ್ತಮ ಕ್ವಾಲಿಫಿಕೇಶನ್ ಇಲ್ಲದಿದ್ದರೆ ಇಂಟರವ್ಯೂದಲ್ಲಿ ದಿವ್ಯವಾಗಿ ಮಾಡಿದ್ದಾನೆಂದು ಆರಿಸುವರು. ಈಗ ಇಂಥವನ್ನು ಬಯಲಿಗೆಳೆದು ಜನ ಬಲವಾಗಿ ಟೀಕಿಸುವದರಿಂದ ಇತರ ಕೆಲ ಉಪಾಯಗಳು ಹುಟ್ಟಿಕೊಂಡಿವೆ. ವಿಶ್ವದ ಹಲವಾರು ದೇಶಗಳು ಮೂರು ತಿಂಗಳು, ಆರು ತಿಂಗಳ ತರಬೇತಿಯ ಹಲವಾರು ಶಿಷ್ಯವೇತನಗಳನ್ನು ಭಾರತಕ್ಕೆ ಕೊಡಮಾಡಿವೆ. ಈ ಆವಧಿಯಲ್ಲಿ ಯಾವ ಪದವಿ, ಡಿಪ್ಲೊಮಗಳನ್ನು ಗಳಿಸುವದು ಸಾಧ್ಯವಿಲ್ಲವಾದ್ದರಿಂದ ಹೆಚ್ಚಿನ ವಿದ್ಯಾರ್ಥಿಗಳು ಅವಕ್ಕೆ ಅರ್ಜಿ ಸಲ್ಲಿಸುವದಿಲ್ಲ. ರಾಜಕಾರಣಿಗಳು ಹಿರಿಯ ಅಧಿಕಾರಿಗಳು ಆಸಕ್ತಿ ವಹಿಸಿದ ಉಮೇದುವಾರರು ಬೆಲ್ಜಿಯಂ, ಹಂಗರಿಗಳಿಗೆ ಹೋಗುವಂತೆ ನೋಡಿಕೊಳ್ಳುವರು. ನಂತರ ಅವರಿಗೆ ವೃತ್ತ ಪತ್ರಿಕೆಗಳಲ್ಲಿ ಪ್ರಸಿದ್ದಿ ಬರುವಂತೆ ನೋಡಿಕೊಂಡು ಅವನ ಯೋಗ್ಯತೆಗೆ ಮೀರಿದ ನೌಕರಿ ಕೊಡಿಸುವರು. ಎಷ್ಟೋ ಬಾರಿ ವಿಜ್ಞಾನಿಗಳ ಸಂಗಡ ಅವರ ಪತ್ನಿ-ಮಕ್ಕಳೂ
ವಿದೇಶಕ್ಕೆ ಹೋಗಿ ಬರುವದುಂಟು. ಈ ಬಂಡವಲಿನ ಮೇಲೆಯೇ ಅವರೂ ನೌಕರಿ ಗಿಟ್ಟಿಸುವದುಂಟು. ಒಬ್ಬ ವಿಜ್ಞಾನಿ ಬಿ. ಎಸ್‌ಸಿ. ಸರಿಯಾಗಿ ಪಾಸು ಮಾಡಲಾಗದ ತನ್ನ ಮಗಳನ್ನು ಕಷ್ಟಪಟ್ಟು ಬಿ ಎಸ್ಸಿ. ಮಾಡಿಸಿ ತನ್ನ ನೇತೃತ್ವದಲ್ಲಿ ಆಕೆಯಿಂದ ಡಾಕ್ಷರೇಟ ಮಾಡಿಸಿ, ತಮ್ಮ ಸಂಸ್ಥೆಯಲ್ಲಿ ಆಕೆಯನ್ನು ಸೇರಿಸಿ ಆಕೆಯ ತರಬೇತಿ ತಮ್ಮ ಸಂಸ್ಥೆಗೆ ಅತ್ಯಗತ್ಯವೆಂದು ಮೇಲಧಿಕಾರಿಗಳಿಗೆ ಮನದಟ್ಟು ಮಾಡಿಸಿ ವಿದೇಶಕ್ಕೆ ಕಳಿಸಿದರು. ಆಕೆ ಹಿಂದಿರುಗಿದ ನಂತರ ಸಂಸ್ಥೆಯಿಂದ ಪ್ರಕಟವಾಗುವ ಸಂಶೋಧನಾ ಪೇಪರುಗಳಲ್ಲಿ ಅವಳ ಹೆಸರು ತಪ್ಪದೇ ಬರುವಂತೆ ನೋಡಿಕೊಂಡು ಸಾಕಷ್ಟು ಪ್ರಸಿದ್ಧಿಗೆ ಅವಕಾಶ ಕಲ್ಪಿಸಿ ತಾವು ನಿವೃತ್ತರಾಗುವ ಹೊತ್ತಿಗೆ ಆಕೆ ತಮ್ಮ ಹುದ್ದೆಗೆ ಬರುವಷ್ಟು ವ್ಯವಸ್ಥೆ ಮಾಡಿದ್ದಾರೆ. ರಾಜಕಾರಣಿಗಳ ವಂಶಪರಂಪರೆ ಸ್ಥಾಪಿತವಾಗುವಂತೆ ಆದ ದೇಶದಲ್ಲಿ ವಿಜ್ಞಾನಿಗಳ ವಂಶಪರಂಪರೆಯೂ ಬೆಳೆದು ಬಂದರೆ ಆಶ್ಚರ‍್ಯವೇನು ? ಬೆವರು ಸುರಿಸದೇ ಮೇಲಕ್ಕೇರಿದ ಈ ವಿಜ್ಞಾನಿ ಅಧಿಕಾರಿಗಳು ತಮ್ಮ ಸೇವಾವಧಿಯಲ್ಲಿ ಸಾಧ್ಯವಿದ್ದಷ್ಟು ಧನಸಂಗ್ರಹ, ಪ್ರಸಿದ್ಧಿಗಳನ್ನು ಗಿಟ್ಟಿಸಲು ಹವಣಿಸುತ್ತಾರೆ. ಆಳುಗಳ ಸಹಾಯ, ಸುಂದರ ಕಾರು, ಭವ್ಯ ಬಂಗಲೆ ಎಲ್ಲವೂ ಸಂಸ್ಥೆಯ ಹಣದಿಂದಲೇ ಆಗಬೇಕು. ಇಂತಹರು ಸರಕಾರಿ ಉಚ್ಚ ಅಧಿಕಾರಿಗಳೊಡನೆ ಸಂಪರ್ಕ ಸ್ಥಾಪಿಸಲು ಹೆಣಗುತ್ತಾರೆಯೇ ಹೊರತು ಉಳಿದ ವಿಜ್ಞಾನಿಗಳೊಂದಿಗೆ ಅಲ್ಲ.
ಭಾರತೀಯ ವಿಜ್ಞಾನಿಗಳನ್ನು ನಾಲ್ಕು ಪಂಗಡಗಳನ್ನಾಗಿ ವಿಂಗಡಿಸಬಹುದು. ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ದುಡಿಯುವ ಶಿಕ್ಷಕವರ್ಗ ‘ವಿಜ್ಞಾನ-ಜೀವಿ’ಗಳ ಗುಂಪಿಗೆ ಸೇರಿದೆ. ಇವರು ವಿಜ್ಞಾನವನ್ನೇ ವೃತ್ತಿಯನ್ನಾಗಿ ಮಾಡಿಕೊಂಡು ಪಾಶ್ಚಾತ್ಯ ಪ್ರಾಧ್ಯಾಪಕರಿಗೆ ಸಿಗುವ ಸೌಲಭ್ಯಗಳು ತಮಗೂ ಬೇಕೆಂದು ಹೆಣಗುವರು. ಆ ದೇಶಗಳಲ್ಲಿ ಪ್ರಾಧ್ಯಾಪಕರೇ ಸಿಪಾಯಿಯ ಕೆಲಸದಿಂದ ಆಡಳಿತಗಾರನವರೆಗಿನ ಎಲ್ಲ ಕಾರ್ಯ ಕಲಾಪಗಳನ್ನು ಕೈಗೊಳ್ಳಲು ಹಿಂಜರಿಯುವುದಿಲ್ಲವೆಂಬ ಮಾತನ್ನು ಮರೆತು ಅಲ್ಲಿಯಂತೆ ಹತ್ತು ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕನಿರಬೇಕೆಂದು ವಾದಿಸುವರು. ಮುಂದುವರಿದ ದೇಶಗಳಲ್ಲಿ ಪ್ರಾಧ್ಯಾಪಕರು ಕಲಿಸುವುದರ ಜೊತೆಗೆ ಸಂಶೋಧನ ಪ್ರಸಾರಗಳ ಹೊಣೆ ಹೊತ್ತಿರುತ್ತಾರೆ. ಇದು ನೀಗದವರಿಗೆ ಕೆಲಸದಿಂದ ವಜಾ ಮಾಡಲು ಹಿಂದೆ ಮುಂದೆ ನೋಡಲಾರರು. ನಮ್ಮವರು ಕಲಿಸುವುದಕ್ಕೆ ಕೂಡ ಶ್ರಮವಹಿಸದೇ ಎಂದೋ ತೆಗೆದ ಟಿಪ್ಪಣಿಗಳನ್ನು ಬಳಸಿ ದಿನಕ್ಕೆ ಒಂದೋ ಎರಡೋ ಭಾಷಣ ಬಿಗಿದರೆ ಅವರ ವೇತನಕ್ಕೆ ಧಕ್ಕೆ ಬಾರದು. ವಿದ್ಯಾರ್ಥಿಗಳ, ಸಹೋದ್ಯೋಗಿಗಳ ಸಹಕಾರದಿಂದ ಒಂದೆರಡು ಪೇಪರು ಪ್ರಕಟಿಸುವುದು, ವರ್ತಮಾನ ಪತ್ರಿಕೆಗಳಲ್ಲಿ ‘ವೈಜ್ಞಾನಿಕ’ ಲೇಖ ಬರೆಯುವದು, ಆಕಾಶಣಿಯಲ್ಲಿ ಭಾಷಣ ಮಾಡುವುದು ಕೆಲವರಿಗೆ ಆತ್ಮಪ್ರಸಿದ್ಧಿಯ ಸಾಧನಗಳಾಗಿ ಪರಿಣಮಿಸಿವೆ.
ಎರಡನೇ ಗುಂಪು ವಿಜ್ಞಾನಿ-ಆಡಳಿತಗಾರರದು. ಇವರು ಕಾಲೇಜಿನ ಪ್ರಿನ್ಸಿಪಾಲರಾಗಿಯೋ, ಸರಕಾರಿ ಸಂಶೋಧನಾ ಕೇಂದ್ರಗಳ ಮೇಲ್ವಿಚಾರಕರಾಗಿಯೋ, ವಿಶ್ವ ವಿದ್ಯಾಲಯಗಳ ಕುಲಪತಿಗಳಾಗಿಯೋ ಬಾಳುವವರು. ಈ ವರ್ಗ ಬಲು ಬೇಗ ವರ್ಚಸ್ವಿಯಾಗಬಲ್ಲದು. ಆಡಳಿತಾರನ ದೃಷ್ಟಿಕೋನ ಈ ವರ್ಗದವರಲ್ಲಿ ತೀಕ್ಷ್ಣವಾಗಿರುವದರಿಂದ ಸಂಶೋಧನೆಗಳೆಲ್ಲ ಹಿಂದೆಬಿದ್ದರೂ ತಾವು ವಯ್ಯಕ್ತಿಕವಾಗಿ ಮುಂದುವರೆದಿರುತ್ತಾರೆ. ಇವರು ಅಧಿಕಾರದಲ್ಲಿ ಇರುವ ತನಕ ಪ್ರತಿಯೊಂದು ಪ್ರತಿಷ್ಠಿತ ಕಾರ್ಯದಲ್ಲಿ
ಇವರ ಅಂಗವಿರುತ್ತದೆ. ಹಲವಾರು ಸಂಸ್ಥೆಗಳ ಸಂಘಟನೆಯಲ್ಲಿ ಅವರ ಭಾಗವಿರುತ್ತದೆ. ಅವರ ಹೆಸರಿನಲ್ಲಿ ಅನೇಕ ಸಂಶೋಧನಾಗ್ರಂಥಗಳು ಸಂಪಾದಿತವಾಗಬಹುದು. ಶಿಷ್ಯ ವೇತನಗಳ ತಜ್ಞರೆಂದು, ಇಂಟರ್‌ವ್ಯೂ ಕಮಿಟಿಗಳ ಸದಸ್ಯರೆಂದು ಸಲಹಾಕಾರರೆಂದು ವಿರಾಜಿಸುವರು. ವಿದೇಶಗಳಲ್ಲಿ ನಡೆಯುವ ವಿಚಾರಗೋಷ್ಠಿಗಳಲ್ಲಿ ಭಾಗವಹಿಸಲು ಆಗಾಗ ಹೊರಗೆ ಹೋಗುವರು. ದೇಶದಲ್ಲಿ ವಿಜ್ಞಾನದ ತರಬೇತಿ ಹೇಗಿರಬೇಕೆಂದು ಕಾಲಕಾಲಕ್ಕೆ ರಾಜ್ಯ ಕೇಂದ್ರ ಸರಕಾರಗಳಿಗೆ ಸಲಹೆ ನೀಡುವರು. ಇದಲ್ಲದೇ ದೇಶದ ಸಾಂಸ್ಕೃತಿಕ ಚಟುವಟಿಕೆಗಳಲ್ಲೆಲ್ಲ ಇವರ ಅಂಗವಿದ್ದೇ ಇರುತ್ತದೆ. ಹಲವು ಕಡೆಗೆ ಬೀರುವ ಇವರ ವರ್ಚಸ್ಸಿನಿಂದ ವಿಜ್ಞಾನ ಕ್ಷೇತ್ರದಿಂದ ರಾಜಕಾರಣ ಕ್ಷೇತ್ರಕ್ಕೆ ಬಲು ಬೇಗ ಹಾರಿಬಿಡುತ್ತಾರೆ. ತಮ್ಮ ಅನುಯಾಯಿಗಳ ಪಡೆಯನ್ನೇ ನಿರ್ಮಾಣ ಮಾಡುತ್ತಾರೆ. ಇವರು ಕಾರಣಾಂತರಗಳಿಂದ ಸಂಸ್ಥೆಯನ್ನು ಬದಲಿಸಿದರೆ ಈ ತಂಡವೂ ಬದಲಾಗುತ್ತದೆ. ದೇಶದ ಉಚ್ಚ ಸಂಶೋಧನಾ ಸಂಸ್ಥೆಯೆಂದು ಪರಿಗಣಿಸಲ್ಪಟ್ಟ ಸಿ. ಎಸ್. ಐ. ಆರ್ (Council of Scientific and Industrial Research) ದಲ್ಲಿ ಯಾವ ತರಬೇತಿ ಇಲ್ಲದವರನ್ನು ವೈಜ್ಞಾನಿಕರೆಂದು ನೇಮಿಸಿಕೊಂಡ ಘಟನೆಗಳು ಆ ಸಂಸ್ಥೆಯ ಆಗುಹೋಗುಗಳನ್ನು ಪರಿಶೀಲಿಸುವಾಗ ಬೆಳಕಿಗೆ ಬಂದವು.
ಮೂರನೆಯ ಗುಂಪು ರಾಜಕೀಯ-ವಿಜ್ಞಾನಿಗಳದ್ದು. ಇವರು ಸರಕಾರಕ್ಕೆ ಉಪದೇಶಕರೆಂದು ನೇಮಕ ಹೊಂದಿದರೂ ಅವರ ನಿಜವಾದ ಕಾರ್ಯಕಲಾಪಗಳು ಬೇರೆಯೇ. ದೇಶದ ನಾಯಕರು ರಾತ್ರಿ ಕಂಡ ಕನಸು ದೇಶದ, ಜನಸಾಮಾನ್ಯರ ಅಭ್ಯುದಯಕ್ಕೆ ಅತ್ಯವಶ್ಯಕವೆಂದು ಬೇರೆ ಬೇರೆ ಪ್ರಸಾರ ಮಾಧ್ಯಮಗಳ ಮೂಲಕ ತಿಳಿಯಪಡಿಸಬೇಕು. ಜಗತ್ತಿನ ಯಾವ ರಾಷ್ಟ್ರವೂ ಮಿಶ್ರ ಹಣಕಾಸಿನ ವ್ಯವಸ್ಥೆಯಿಂದ ಮುಂದವರೆಯದಿದ್ದರೂ ಭಾರತಕ್ಕೆ ಆದೇ ಉತ್ತಮವೆಂದು ಸಾರಿ ಹೇಳಬೇಕು. ಐವತ್ತು ಕೋಟಿ ರೂಪಾಯಿ ಬಂಡವಾಳ ಹಾಕಿದ ಕಾರಖಾನೆ ಇದಾಗಲೇ ಐವತ್ತೆಂಟು ಕೋಟಿ ರೂಪಾಯಿ ಹಾನಿ ಮಾಡಿಕೊಂಡರೂ ಅದನ್ನು ನಡೆಸುವದು ಕೆಲಸಗಾರರ ಹಿತದ ದೃಷ್ಟಿಯಿಂದ ಯೋಗ್ಯವಾದದ್ದೆಂದು ಸಾರಬೇಕು. ಸರಕಾರದ ವಶದಲ್ಲಿದ್ದ ಔಷಧದ ಕಾರಖಾನೆಗಳು ಹಾನಿಯಲ್ಲಿ ನಡೆಯುತ್ತಿದ್ದರೂ ರೋಗಿಗಳಿಗೆ ಕಡಿಮೆ ದರದಲ್ಲಿ ಉತ್ತಮ ಔಷಧಗಳನ್ನು ಪೂರೈಸುವದಕ್ಕಾಗಿ, ಖಾಸಗಿ ಕಂಪನಿಗಳ ಬೆಲೆಯೇರಿಕೆಯನ್ನು ತರುವದಕ್ಕಾಗಿ ಅವು ಅತ್ಯವಶ್ಯವೆಂದು ತೋರಿಸಿಕೊಡಬೇಕು. ಗಂಗಾ-ಕಾವೇರಿ ನದಿಗಳ ಜೋಡಣೆ, ವೈಜ್ಞಾನಿಕ ಅಸಾಧ್ಯತೆಯೆಂದು ಗೊತ್ತಿದ್ದರೂ ಆ ಯೋಜನೆ ಕೈಗೂಡಿದಾಗಲೇ ‘ರಾಮರಾಜ್ಯ’ ಬರುತ್ತದೆಂದು ಸಾರಬೇಕು. ಡಾ ಖುರಾನಾರು ತಮ್ಮ ಸಂಶೋಧನೆ, ಜೀವಿಯನ್ನು ಅರಿಯುವದರಲ್ಲಿ ಪ್ರಥಮ ಹೆಜ್ಜೆ ಎಂದು ಹೇಳಿದರೂ, ಇಲ್ಲಿಯ ಮಹನೀಯರು ಈ ಸಂಶೋಧನೆಯಿಂದ ನಮಗೆ ಬೇಕಾದ ವಿಜ್ಞಾನಿ, ಕಲಾಕಾರ, ಆಟಗಾರ, ಮಕ್ಕಳನ್ನು ಪಡೆಯುವ ದಿನಗಳು ದೂರ ಇಲ್ಲವೆಂದು ಸಾರಿ ಬಿಡವರು ! ಜನಸಾಮಾನ್ಯರ ವಿಚಾರಸರಣಿಯನ್ನು ಬದಲು ಮಾಡುವ ಮಾತಿನ ವೈಖರಿಯನ್ನು ಸಾಧಿಸಿಕೊಂಡವರ ನಾಲಗೆಯ ಮೇಲೆ ಅಂಕಿ-ಸಂಖ್ಯೆಗಳು ಕುಣಿಯುತ್ತಿರುತ್ತವೆ. ಸ್ವಲ್ಪದರಲ್ಲಿ ಹೇಳಬೇಕಾದರೆ ವಿಜ್ಞಾನಿಗಳಲ್ಲಿ ರಾಜಕಾರಣದ ಮಹತ್ವವನ್ನು ಬಿಂಬಿಸುವದು, ರಾಜಕಾರಣಿಗಳ ಚಟುವಟಿಕೆಗಳಿಗೆ ವೈಜ್ಞಾನಿಕ ತಳಹದಿಯನ್ನು ರೂಪಿಸಿಕೊಂಡುವದು ಈ ಗುಂಪಿನ ಚಟುವಟಿಕೆಯ ಮಹತ್ವದ ಭಾಗಗಳು. ದೇಶದ ವತಿಯಿಂದ ಪರ ರಾಷ್ಟ್ರಗಳೊಡನೆ ನಡೆಯುವ ವಿಚಾರವಿನಿಮಯ, ಕರಾರು, ಒಪ್ಪಂದಗಳಿಗೆ ಈತನೇ ಹೋಗಬೇಕು.
ತನ್ನ ಜೀವನವನ್ನು ಸಂಶೋಧನೆಗೆ ಮುಡುಪಿಟ್ಟವ, ನಾಲ್ಕನೇ ಅಲ್ಪ ಗುಂಪಿಗೆ ಸೇರಿದ ಧೀಮಂತ ವಿಜ್ಞಾನಿ. ಮೇಲೆ ವಿವರಿಸಿದ ಮೂರು ಬಗೆಯ ವಿಜ್ಞಾನಿಗಳು ಈ ಗುಂಪಿಗೆ ಸೇರಿರಲಿಲ್ಲ ಇಲ್ಲವೇ ಸೇರಬಯಸಲಿಲ್ಲ ಎಂದು ಹೇಳಲಾಗದು. ಆದರೆ ನಮ್ಮ ದೇಶದಲ್ಲಿ ಹೀಗಾಗುವದರಿಂದ ಯಾವ ಸೌಲಭ್ಯಗಳೂ ಸಿಗವು ಎಂಬುದು ಅನುಭವದಿಂದ ಕಂಡುಕೊಂಡವ ಉಳಿದವರ ಹಾದಿಯನ್ನೇ ತುಳಿಯುತ್ತಾನೆ. ಇಂತಹ ವಿಜ್ಞಾನಿಗೆ ವಿದೇಶಕ್ಕೆ ಹೋಗುವ ಅವಕಾಶ ಹಿಂದೊಮ್ಮೆ ಸಿಕ್ಕಿದ್ದರೆ, ಇಲ್ಲವೇ ತಾನು ಬಯಸುವ ವಾತಾವರಣ ಅಲ್ಲಿ ಇದೆ ಎಂದು ಅರಿವಾದರೆ, ತನ್ನ ವಿಚಾರ, ಯೋಗ್ಯತೆಗಳಿಗೆ ಮಾನ್ಯತೆ ಸಿಗಬಹುದಾದ ದೇಶಕ್ಕೆ ವಲಸೆ ಹೋಗುತ್ತಾನೆ. ಇಂಥ ಧೀಮಂತರನ್ನು ಸ್ವಾಗತಿಸಲು ಸದಾ ಸಿದ್ಧರಿದ್ದ ವಿದೇಶದವರು ಅವನಿಗೆ ಬರಮಾಡಿಕೊಂಡು, ಎಲ್ಲ ಸೌಕರ್ಯಗಳನ್ನು ಕೊಡಮಾಡಿ ಸಂಶೋಧನೆಗೆ ಅನುಕೂಲ ವಾತಾವರಣ ಕಲ್ಪಿಸುತ್ತಾರೆ. ಇಂದು ಅಮೇರಿಕ ಮುಂದುವರಿದ ರಾಷ್ಟ್ರವಾಗಿದ್ದರೆ ಅದಕ್ಕೆ ಅಲ್ಲಿ ಸಂಶೋಧನೆಯಲ್ಲಿ ನಿರತರಾಗಿರುವ ಜರ್ಮನ್, ಇಟಾಲಿಯನ್, ಇಂಗ್ಲಿಷ್, ಜಪಾನಿ, ಚೀನೀ ಮತ್ತು ಭಾರತೀಯ ವಿಜ್ಞಾನಿಗಳೇ ಕಾರಣ. ನೋಬೆಲ್ ವಿಜೇತ ಡಾ| ಖುರಾನಾರು ಭಾರತದಲ್ಲಿದ್ದರೆ ಆ ಸಾಧನೆ, ಗೌರವಗಳು ಅವರವಾಗುತ್ತಿರಲಿಲ್ಲ. ಡಾ | ಸಿ. ವಿ. ರಾಮನ್ನರು ಧೀಮಂತ ವಿಜ್ಞಾನಿಗಳಿದ್ದರೂ ಅವರ ಪ್ರತಿಭೆಗೆ ಯೋಗ್ಯ ವಾತಾವರಣ ನಮ್ಮ ದೇಶದಲ್ಲಿ ಇರದೇ ನಂತರದ ಎರ್ಷಗಳಲ್ಲಿ ಚಿಕ್ಕಪುಟ್ಟ ಸಂಶೋಧನೆಗಳಲ್ಲಿಯೇ ಅವರು ತೊಡಗಿರಬೇಕಾಯಿತು. ಉಳಿದ ವರ್ಗದ ವಿಜ್ಞಾನಿಗಳಿಗೆ ವಿದೇಶದಲ್ಲಿ ಬೇಡಿಕೆ ಇಲ್ಲದ್ದರಿಂದ ಮತ್ತು ಅವರ ಬೇಳೆ ಆ ದೇಶಗಳಲ್ಲಿ ಬೇಯದ್ದರಿಂದ ಅವರು ಭಾರತದಲ್ಲಿಯೇ ಇರುವರು. ಆದರೆ ಈ ಧೀಮಂತ ವಿಜ್ಞಾನಿವರ್ಗ ಆಶ್ರಯ ಹುಡುಕಿಕೊಂಡು ವಿದೇಶಗಳಿಗೆ ಹೋಗಲು ಯತ್ನಿಸಿದರೆ ಅವರನ್ನು ಗುರುತಿಸಲಾರದ ಸರಕಾರ, ಸಮಾಜಗಳು ಏಕೆ ತಡೆಗಟ್ಟಬೇಕು ? ಅವರ ಭವಿಷ್ಯ ಮತ್ತು ಮಾನವತೆಯ ಕಲ್ಯಾಣಕ್ಕಾಗಿಯೇ ಇಂತಹವರನ್ನು ಬೇಕಾದಲ್ಲಿ ಹೋಗಲು ಪ್ರೋತ್ಸಾಹಿಸಿ ಎಲ್ಲ ಸವಲತ್ತುಗಳನ್ನು ಒದಗಿಸಿಕೊಡಬೇಕು. ಇವರು ಇಲ್ಲಿಯೇ ಉಳಿಯುವದರಿಂದ ಇವರಿಗೂ ಲಾಭವಿಲ್ಲ ದೇಶಕ್ಕೂ ಲಾಭವಿಲ್ಲ ಅವರ ವಿದ್ಯಾಭ್ಯಾಸಕ್ಕೆ ಸರಕಾರ ಹಣ ಖರ್ಚು ಮಾಡಿದ್ದು ಇದ್ದರೆ ಹಲವಾರು ಕಂತುಗಳಲ್ಲಿ ಅವನ್ನು ಹಿಂದಕ್ಕೆ ಪಡೆಯುವ ಏರ್ಪಾಡು ಮಾಡಬಹುದು.
ಪಾಶ್ಚಾತ್ಯ ದೇಶಗಳಲ್ಲಿ ಎಲ್ಲ ವಿಜ್ಞಾನಿಗಳೂ ಧೀಮಂತರೇ ಇರುವರೆಂದು ಹೇಳುವ ಸಾಹಸ ಯಾರೂ ಮಾಡಲಾರರು. ಆದರೆ ಆ ದೇಶಗಳಲ್ಲಿ ಧೀಮಂತರಲ್ಲದವರಿಗೆ ಗೌರವ, ಮೇಲಿನ ಅಂತಸ್ತುಗಳು ದೊರೆಯುವದು ದುಃಸಾಧ್ಯವಾದ ಮಾತಾದ್ದರಿಂದ ಪ್ರತಿಯೊಬ್ಬನು ಆ ಹಂತವೇರಲಿಕ್ಕೆ ಹಂಬಲಿಸುತ್ತಾನೆ. ಶಕ್ತಿ ಮೀರಿ ಯತ್ನಿಸುತ್ತಾನೆ. ವೈಜ್ಞಾನಿಕ ಸಂಸ್ಥೆಗಳಲ್ಲಿ ಉಮೇದುವಾರರನ್ನು ಶಾಲಾ-ಕಾಲೇಜುಗಳಲ್ಲಿ ಅವರು ತೂರಿಸಿದ ವಿಜ್ಞಾನದ ಆಸಕ್ತಿ, ಪ್ರಾಧ್ಯಾಪಕರು ಅವರ ಬಗ್ಗೆ ಕಳಿಸಿದ ಶಿಫಾರಸ ಪತ್ರಗಳ ಆಧಾರದ ಮೇಲೆ ಆರಿಸಲಾಗುವದು. ಈ ಸಂಸ್ಥೆಗಳಲ್ಲಿ ಸಂಶೋಧನೆಗಳೇ ಅವರ ಪ್ರಗತಿಯ ಗುರುತಾದ್ದರಿಂದ ಮೈಮುರಿ ದುಡಿಯುವರು. ಮೇಲಧಿಕಾರಿಗಳು ಆತ ತಮ್ಮನ್ನು ಗೌರವಿಸುತ್ತಾನೋ, ಅಪರೋಕ್ಷದಲ್ಲಿ ಹೊಗಳುತ್ತಾನೋ ಎಂಬುದರ ಕಡೆಗೆ ಲಕ್ಷ್ಯವೀಯದೇ ಆತನ ಕೆಲಸದತ್ತ ಹೆಚ್ಚಿನ ಲಕ್ಷ್ಯ ಪೂರೈಸುತ್ತಾರೆ. ಕಾಫಿಯ ಹೊತ್ತಿಗೆ ಕಾಡು ಹರಟೆ, ಇತರರನ್ನು ಹೀಗಳೆಯುವ ಬದಲಾಗಿ ಸಂಶೋಧನೆಯ ಅಡಚಣೆಗಳನ್ನು, ಮೇಲು ಕೀಳೆಂಬ ಭಾವನೆ ಮರೆತು ಚರ್ಚಿಸುವರು. ಯೋಗ್ಯತಾವಂತ ವಿಜ್ಞಾನಿ ಬೇರೊಂದು ಸಂಸ್ಥೆಗೆ ಅರ್ಜಿ ಸಲ್ಲಿಸಬೇಕೆಂದಿಲ್ಲ. ಅವರಾಗಿಯೇ ಹೆಚ್ಚಿನ ವೇತನ, ಸೌಲಭ್ಯಗಳನ್ನು ಕೊಟ್ಟು ಬರಮಾಡಿಕೊಳ್ಳುವರು. ವೈಜ್ಞಾನಿಕ ಸಯೋಧನೆ ತನಗೆ ಸಾಧ್ಯವಿಲ್ಲ ಎಂದು ಮನಗಂಡವನು ಅದನ್ನು ಬಿಟ್ಟುಕೊಟ್ಟು ತನಗೆ ಸರಿಹೊಂದಿದ ಇತರ ವ್ಯವಸಾಯ ಕೈಕೊಳ್ಳಲು ಹಿಂದೆ ಮುಂದೆ ನೋಡುವದಿಲ್ಲ. ಡಾಕ್ಟರೇಟ್ ಪದವಿ ಪಡೆದೂ ಕೃಷಿಯನ್ನು ಕೈಕೊಂಡು ಸಮೃದ್ಧ ಜೀವನ ನಡೆಸಿದವರಿದ್ದಾರೆ. ನಮ್ಮ ವಿಜ್ಞಾನಿಗಳಿಗೆ ನೌಕರಿ ಸಿಗುವದೇ ಕಷ್ಟ. ಸಿಕ್ಕದ್ದು ಬಿಟ್ಟರೆ ಮತ್ತೆ ಸಿಗುವದಿಲ್ಲ. ತಾನು ಕಲಿತ ವಿಜ್ಞಾನದ ಭಾಗ
ಬಿಟ್ಟರೆ ಬೇರೆ ಏನೂ ಅವನಿಗೆ ಬಾರದು. ನಮ್ಮಲ್ಲಿ ಕೃಷಿ ವಿಜ್ಞಾನದಲ್ಲಿ ಹೆಚ್ಚಿನ ವ್ಯಾಸಂಗ ಮಾಡಿದವರಿಗೆ, ತಾನೇ ಕೃಷಿ ಕೈಕೊಂಡು ಹೊಟ್ಟೆ ಹೊರೆದುಕೊಳ್ಳುವನೆಂಬ ಧೈರ್ಯ ಎಷ್ಟು ಜನರಿಗಿದೆ ? ಅಮೇರಿಕೆಯಲ್ಲಿ ಮೇಲಧಿಕಾರಿಗಳು ಆಡಳಿತದ ಜೊತೆಯಲ್ಲಿ ಸಂಶೋಧನೆ ಮಾಡಲೇಬೇಕಾದ್ದರಿಂದ ಹಲವು ಜನ ವಿಜ್ಞಾನಿಗಳು ಆಡಳಿತಗಾರರಾಗಲು ಒಪ್ಪುವದೇ ಇಲ್ಲ. ಸರಕಾರಕ್ಕೆ ಸಲಹಾಗಾರರೆಂದು ನೇಮಕ ಹೊಂದಿದವರು ತಮ್ಮ ಸೇವಾವಧಿಯತ್ತ ಲಕ್ಷ್ಯ ಕೊಡದೇ ಬೆಳೆಯುತ್ತಿರುವ ದೇಶದ ಆವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಹತ್ತು, ಇಪ್ಪತ್ತು, ಐವತ್ತು, ನೂರು ವರ್ಷಗಳ ಸಂಶೋಧನೆಗಳ ಕರಡು ಪತ್ರಿಕೆ ತಯಾರಿಸಿ ಸರಕಾರ ಅವುಗಳತ್ತ ಮನಸ್ಸು ಹಾಕುವಂತೆ ನೋಡಿಕೊಳ್ಳುವರು.
ಪಾಶ್ಚಾತ್ಯ ದೇಶಗಳಲ್ಲಿ ಸ್ವಯಂಪ್ರೇರಣೆಯಿಂದ ಸಂಶೋಧನೆಗಳನ್ನು ಕೈಕೊಂಡರೆ ಚೀನ-ರಶಿಯಗಳಲ್ಲಿ ಸರಕಾರದ ಆಜ್ಞೆಯಂತೆ ಸಂಶೋಧನೆಗಳನ್ನು ವಿಜ್ಞಾನಿಗಳು ಕೈಕೊಳ್ಳಬೇಕಾಗುತ್ತದೆ. ಆದರೆ ನಿರ್ದೆಶನ ಪಾಲಿಸದವರಿಗೆ ಕಾರಾಗೃಹ ಹುಚ್ಚರಾಸ್ಪತ್ರೆ ತಪ್ಪಿಲ್ಲವೆಂದು ಅರಿತ ವಿಜ್ಞಾನಿಗಳು ಒಂದು ಶಿಸ್ತಿಗೆ ತಲೆಬಾಗಿ ನಡೆಯಬೇಕಾಗುತ್ತದೆ. ನಮ್ಮ ದೇಶದ ವಿಜ್ಞಾನಿಗಳಿಗೆ ಸ್ವಪ್ರೇರಣೆ ಇಲ್ಲದಿರುವಾಗ ಸರಕಾರಕ್ಕೆ ನಿರ್ದೇಶನ ಕೊಡುವಷ್ಟು ಅಧಿಕಾರವೂ ಬಂದಿಲ್ಲದೇ ಇರುವಾಗ ನಮ್ಮಲ್ಲಿ ವಿಜ್ಞಾನ ಸಾಯಲಾರದೇ ಬದುಕಲೂ ಆರದೇ ಬಳಲುತ್ತಿದೆ. ವೈಜ್ಞಾನಿಕ ಪ್ರಗತಿ ಸರ‍್ವತೋಮುಖವಾಗಿ ಬೆಳೆಯಬೇಕಾದರೆ, ಸಂಶೋಧನೆಗಳಿಂದ ಹಸಿವಿನ ನಿವಾರಣೆಯಾಗಬೇಕಾದರೆ, ಡಾ| ಜೋಸೆಫ್
ಡಾ | ವಿನೋದ ಶಾಹರಂಥವರು ಆತ್ಮಹತ್ಯೆ ಮಾಡಿಕೊಂಡಾಗ ಹರಿಸಿದ ಮೊಸಳೆಯ ಕಣ್ಣೀರು ಸುರಿಸದೇ ಶಾಲೆ-ಕಾಲೇಜುಗಳಲ್ಲಿ ವೈಜ್ಞಾನಿಕ ಅಭಿರುಚಿ ಬೆಳೆಯುವಂತಹ ಶಿಕ್ಷಣ ಕೊಡಮಾಡಿ, ಧೀಮಂತ ವಿಜ್ಞಾನಿಗಳನ್ನು ಗುರುತಿಸಿ, ಅವರಿಗೆ ಎಲ್ಲ ಬಗೆಯಲ್ಲಿ ಪ್ರೋತ್ಸಾಹಿಸಿ, ಸಂಶೋಧನಾ ಕೇಂದ್ರಗಳಲ್ಲಿ ರಾಜಕಾರಣ ಬರದಂತೆ ಎಚ್ಚರಿಕೆ ವಹಿಸಿ, ಪ್ರಾಧ್ಯಾಪಕರಿಂದ ಸಂಶೋಧನೆಗಳನ್ನು ಮಾಡಿಸಿ, ಖಾಸಗಿ ಉದ್ದಿಮೆಗಳಲ್ಲಿ ಸ್ಪರ್ಧೆಯಾಗುವಂತೆ ಪ್ರೋತ್ಸಾಹನೆ ಕೊಟ್ಟು ಅವೂ ಸಂಶೋಧನೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿದರೆ ಮಾತ್ರ ಭಾರತೀಯ ವಿಜ್ಞಾನಕ್ಕೆ ಭವಿಷ್ಯವಿದೆ, ಭಾರತಕ್ಕೂ ಭವಿಷ್ಯವಿದೆ ಎನ್ನಬಹುದು.

Close

ಎರಡು ಕವನಗಳು

ಎರಡು ಕವನಗಳು

ಅರವಿಂದ ನಾಡಕರ್ಣಿ

೧ ಸುಪುತ್ರ
ನಾನು, ಕೆಲಸಕ್ಕೆಬಾರದವ, ಭಡವಾ,
ಶಿಖಂಡಿತಂಡನಾಯಕ, ಉತ್ತರಕುಲಪುಂಗವ….
ಅಪವಾದದ ಖಂಡಿಪಾದವನಿಟ್ಟು
ಪಾತಾಳಕ್ಕಟ್ಟಿದಷ್ಟೂ ಕಮ್ಮಿ ಈ ದೊಡ್ಡ ಅಮ್ಮನಿಗೆ.
ಮುಟ್ಟಿದ್ದಕ್ಕೆಲ್ಲ ಭೂತಕರ್ತೃವಿನ ಸಿಕ್ಕಾ ಹೊಡೆದು
ಬೆಳಗಿದ ನರೋತ್ತಮರ ಹೆಸರ ಜಪಿಸಿದಷ್ಟೂ
ಸಾಲದಿವಳ ರೋಮಾಂಚನಕ್ಕೆ, ನನ್ನ ಬೈಯುವದಕ್ಕೆ
ನಾನಿವರ ತೊಡೆಗೆ ಭಾರತವಾದದ್ದಕ್ಕೆ.
ಗೋತ್ರಾಭಿಮಾನವಿಲ್ಲದೇ ನಾಡಾಡಿ ತಿರುಗಿದ್ದಕ್ಕೆ
ಸಿಕ್ಕ ವೇಷಗಳ ತೊಟ್ಟು ಎಂಜಲಗೂಳಿಯಾಗಿ ಕುಣಿದದ್ದಕ್ಕೆ
ಶಪಿಸಿದಷ್ಟೂ ತಂಪಾಗದಿವಳ ಹೊಟ್ಟೆ.
ಈ ಮಹಲು ಮೀನಾರ ಗಗನಗೋಪುರ
ಕೋಟೆಕೊತ್ತಳ ಬೇಲೂರುಗಳ ಚಕಚಕಿಸುವ ಪುರಾವೆ
ಕಂಡೂ ಕಾಣದಂತೆಂಡಲೆವ ಪರದೇಸಿಯಾದದ್ದಕ್ಕೆ
ತಿವಿದಷ್ಟೂ ತಿವಿಯುವ ಕಾತರ.
ಮಾತಾಯಿ, ಗೊತ್ತು, ನಿನ್ನ ಮಹತ್ತು.
ಹಿಮಾಚಲದ ಶಿಖರದಲ್ಲಿ ನೀ ನೆಟ್ಟ ಕನಸುಬೀಜಗಳೆಲ್ಲ
ಒಂದೊಂದಾಗಿ ಗಾಳಿಪಾಲಾಗಿ, ಮಿಡಿತೆ ಮೇವಾಗಿ,
ಮೆಟ್ಟಿಬಂದ ರಕ್ಕಸರ ಕಾಲಕಸವಾಗಿ
ನೆತ್ತರಹಳ್ಳದಲ್ಲಿ ಲಕ್ಷಗುಳ್ಳೆಗಳಾಗಿ
ಅಳಿದುಳಿದದ್ದು ಪಿಳ್ಳೆಗೂ ಬೇಡವಾಗಿ
ಕ್ಷಯಿಸುತ್ತಿವೆ ಸಂತೆ ಪಿಂಡಾರಿಗಳ ಭುಕ್ತಿಭಂಡಾರಿಗಳ
ಬೂಟುಗಾಲ ತುಳಿತ ಗದ್ದಲದಲ್ಲಿ.
ಇನ್ನು ಚಿಗುರುವದುಂಟೆ ? ನಿನಗಾದರೂ ಗೊತ್ತೇ ?

ಒಂದಾನೊಂದು ಕಾಲದಲ್ಲಿ ನಾನೂ ಒದರಿದ್ದೆ
ನಿನ್ನ ಅಭಿಮಾನಿ ಅಭಿಮನ್ಯುಗಳೊಂದಿಗೆ
ಗ್ರಾಮೊಫೋನಿನಂತೊದರುವ ಕೋಟಿಕಂಠಗಳೊಂದಿಗೆ
ಭಾರತಮಾತಾಕಿ ಜೈ ಎಂದು
ವಂದೇ ಮಾತರಂ ಎಂದು
ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ ಎಂದು.
ಅದು ಹಿಂದಿನ ಹಿಂದಿನ ಮಾತು

ಇಂದು
ಸ್ವದೇಶೀ ಸುರಭಿಗಳೆಲ್ಲ ಬತ್ತಿಹೋಗಿ
ಸೂತ್ರ ಋಕ್ಕುಗಳ ಶತಕ ವಚನಗಳ ಪೀಯೂಷ
ಸುರಿಸುವದಿಲ್ಲ, ಶಂಖ ಧ್ವನಿಸುವದಿಲ್ಲ,
ಬಾವುಟದಿ ಬುಭುಃಕಾರವಿಲ್ಲ. ಕಾರಣ,
ವಿದೇಶೀ ಹಾಲ ಕುಡಿದಷ್ಟಕ್ಕೆ
ಉಚ್ಚಿಷ್ಟವೆಂದು ಕೊಬ್ಬಿದ ಭ್ರಷ್ಟ ?
ನೀ ಸ್ಥಾಪಿಸಿದ ಗರಡಿಯಲ್ಲೇ ಮಾಗಿದ ಪೈಲವಾನ
ಗಾಳಿ ಬಂದಂತೆ ತೂರಿಕೊಂಡ ಭ್ರಮಿಷ್ಠ ?

ಅಥವಾ
ನಾನೂ ಗಡ್ಡ ಮೀಸೆಜಟೆ ಪಾಚಿಯಂತೆ ಬೆಳೆಯಿಸಿ
ಅಲೆಯಬೇಕೆನ್ನುವೆಯಾ ನೈಮಿಷಾರಣ್ಯ ಕುಂಡ ತೀರ್ಥಗಳಲ್ಲಿ
ಪುರಾತನ ಗುಹೆಗಳಲ್ಲಿ ಪುಣ್ಯಕ್ಷೇತ್ರಗಳಲ್ಲಿ ?
ಇಂದೆಲ್ಲೋ
ರೇಸುಮಟಕಾದಲ್ಲಿ ಕುಟುಕಿಕೊಂಡೆನೆಂದು
ಕಳ್ಳಸಾಗಾಣಿಕೆಯಲ್ಲಿ ದಂಡ ತೆತ್ತಿದೆನೆಂದು
ಹಾಳುದೇಗುಲದ ಹಿಂದೆ ಬೀರು ಕುಡಿದು ರಮ್ಮಿಯಾಡಿದೆನೆಂದು
ಕುಲಗೆಟ್ಟೆನೇ ನಾನು ?
ನಾನೂ ಸ್ಥಾನಮಾನ ಕಮಾಯಿಸಿದ
ಧನ ಜಮಾಯಿಸಿದ ಲೋಕ ವಿಚೇತ.
ಫಾರೀನಿಗೂ ಚಕ್ಕರ್ ಹೊಡೆದು ಬಂದವನು
ಮೂಗೆತ್ತಿ ನಡೆದವರ ಟಕ್ಕರ್ ಹೊಡೆದು ಬೀಳಿಸಿದವನು.
ಕುಲಗೆಟ್ಟೆನೇ ನಾನು ?

ಅವಳ ಹಳೆಹಳೆ ಸೌಧ ಲಡ್ಡಾಗಿ
ಜಂತಿಕಂಬಗಳೆಲ್ಲ ಲಟಲಟಿಸಿ ಚೀರುವಾಗ
ಕಟ್ಟಲಾರದುಳಿದರೂ
ಕೈ ಕೊಡಲೂ ಬಾರದಂಭಿಕುಲದೀಪಕನಾದೆ
ಎಂದಮ್ಮನ ನನ್ನ ಮೇಲಿನ ಕೇಸು.
ಕೋಟಿ ಕಂಠಗಳ ವೋಟು ನನಗಿದೆಯಮ್ಮ
ಕೇಳಿ ತಿಳಿಯುವದು ನಿನಗೂ ಲೇಸು.

೨ ಕಾಯುತ್ತಿದ್ದೇನೆ
ದ್ವೇಷರೋಷದ ಸ್ಫೋಟನ ಖಂಡಖಂಡಗಳಲ್ಲಿ.
ಸಾಲುಗಟ್ಟಿವೆ ಮನುಕುಲೋತ್ತಮರ ಭಸ್ಮಾಕೃತಿ.
ಚಿಗುರಿಸುತ್ತಿವೆ ಗುಹಾವಾಗಳ ಸತ್ತ ಸ್ಮೃತಿ.
ಸಾವಿರ ವರುಷ ಉತ್ತು ಬಿತ್ತು ಕಸಿಮಾಡಿದ ಹೊಲ
ಬಂಜರುವಿಶಾಲ. ಸಾಯು ಇಲ್ಲವೇ ಸಾಯಿಸು ಛಲ.
ಭಗ್ನ ಭಗೀರಥ ಬಲ. ಆದರೂ ಕಾಯುತ್ತಾ ಇದ್ದೇನೆ
ಮಾನವ್ಯತೆಯ ಗಂಗಾವತರಣಕ್ಕಾಗಿ.
ಕಾಯುತ್ತಿದ್ದೇನೆ.
ಕೃಷ್ಣಬುದ್ಧಗಾಂಧಿಯರು ಸತ್ತು
ಒರೆದದ್ದು ಬರೆದದ್ದು ಕೊರೆದದ್ದೆಲ್ಲ ಅಳಿದು
ಕುಸರಾವಣ ಸೇನೆ ತುಳಿತುಳಿದು ಸುಲಿಯುತ್ತಿರಲು
ಯುಗಯುಗಕೆ ಬರುತ್ತೆನೆಂದವನ ಧವಲಾಶ್ವ ದರ್ಶನಕ್ಕಾಗಿ
ಯಾರಿಗೂ ಕೇಳದ ಬಾನುಲಿಗಾಗಿ
ಕಾಯುತ್ತಿದ್ದೇನೆ.
ಕ್ಷೇತ್ರ ಬೆಳೆದಂತೆ ಕರ್ಮ ಅಕರ್ಮಗಳಲ್ಲಿ
ಕುಬ್ಜನಾಗಿ ಖೊಜ್ಜಿಯಾಗಿ
ಸದ್ದಿಲ್ಲದೇ ಸಾಯುವಾಗ, ಫಲಶ್ರುತಿಗಾಗಿ.
ಸೀಲು ಹಾಕಿಸಿಕೊಂಡ ವಚನಗಳೆಲ್ಲ
ಉಗೆಯಂತೆ ಹೊಗೆಯಂತೆ ಗಾಳಿಪಾಲಾದಾಗ
ಎಂದಿಗೂ ಸಿಗದ ಪ್ರಾಪ್ತಿಗಾಗಿ
ಕೊಟ್ಟ ಭಾಷೆಗಳ ನಿಜಾರ್ಥಕ್ಕಾಗಿ
ಕಾಯುತ್ತಾ ಇದ್ದೇನೆ.

ತೂಕಡಿಸುತ್ತೋಡುವ ಮೊಲದ ನಂಬರಿಗಾಗಿ
ತೂರಿಕೊಳ್ಳಲೆಂದೂ ಬೀಸದ ಗಾಳಿಗಾಗಿ
ಒತ್ತೊತ್ತುವ ಕ್ಯೂದಲ್ಲಿ ನಿಲ್ಲಲ್ಲೊಂದಡಿಗಾಗಿ.
ಮೂಗು ಮೂಗಿಗೆ ತಿವಿದು ಜಂಭದಿ ಹಾಯುವ
ನುಡಿಯದ ಸಾವಿರ ಮುಖಗಳಲ್ಲಿ
ನರನಾಡಿ ಮಿಡಿಸುವ ಅಪರೂಪದ ಕೃಷ್ಣಸ್ಮಿತಕ್ಕಾಗಿ.
.

Close

ಪಾಂಚಜನ್ಯ

ಜಯಂತಿ

ಪಾಂಚಜನ್ಯ

ನಿನ್ನೆ ಹಿಡಿದಿಟ್ಟ ಕನಸಿನಲ್ಲಿ,
“ನೀಲ ಹಿನ್ನೆಲೆಗೆಂಥ ಬಾಳು ಬೇಕು ?’
ಎಂಬವರ ಕಾಗುಣಿತದ ದಾರ್ಷ್ಟ್ರಕ್ಕೆ ಬಿಲ್ಲು ಹಿಡಿದು-
ಊದು,
ಗರ್ಜಿಸು ;
ಬಾನೆತ್ತರದ ಶತ ವಿಕ್ರಮಗಳೆಲ್ಲವನು ಹಿಮ್ಮೆಟ್ಟಿಸು.
ಸನ್ನಿಹಿತ ಕಷ್ಟಗಳ ಬೇಹು,
ಪರಿಕ್ರಮಗಳ ನಾಯಕತ್ವದ ಹೆಸರು,
ಹುಡಿ ಹಚ್ಚಿಸು.
ಅಕ್ಷೋಹಿಣಿಗಳ ಜಯಜಯತ್ವದ ಶಬ್ದ ನಿಲ್ಲಿಸು,
ಪಾರ್ಥಿವನ ಕನಸು ಹೂಡು.
ಅಂದು
ನಿತ್ತಿದ್ದೆ ನಿನ್ನ ಸುತ್ತಿ ಕತ್ತಲಿನಲ್ಲಿ,
ಹೂವು ಹಾವಾಗಿದ್ದ ಕೊಳಕು ರಾತ್ರಿ.
ಕೆಸರು ಕಾಮಿಸುವ
ಹೇಸಿಗೆ ಸೌಂದರ್ಯದ ನಿಧಿಯ
ಕಾಪಾಡುವ ಹೊಣೆಗೆ ಮಾಡು ಶಾಸ್ತಿ,
ನನ್ನ ದೈವತ್ವಕ್ಕೆ ಭೀತ ಮನ-
ಪ್ರಕೃತಿ-ಕಾಡುವನಗಳ ಕರ ಕರಾಳ ಮಹಾತ್ಮೆ;
ನಿನ್ನ ಸ್ವಾತಂತ್ರ್ಯಕ್ಕೆ
ಬೆನ್ನು ಬಾರಿಸಿಕೊಳ್ಳುವ ನಿಲುವಿನಲ್ಲೇ ಇದೆ
ಸೋಲು ಕೂಡ.
ನೀನು ನನ್ನಿಂದ ಹೆಚ್ಚಲ್ಲ
ಎಂಬುದನ್ನೇ ಹೇಳಬೇಕೆಂಬ ಬಯಕೆ,
ನೋವು ನಾಗರ.
ಸ್ವಂತ ಅಸ್ತಿತ್ವಕ್ಕೆ
ಒಂದೇ ಒಂದು ಸವಾಲು ಹಾಕುತ್ತೇನೆ,
ನೀನು ಹೇಗೋ, ಏನೋ,
ನನ್ನ ಕೈಗೊಂಬೆ.
.

Close

ಸಮುದ್ರಕ್ಕೆ ಸವಾರು ಭಾಷಾಂತರದ ಕೆಲವು ಸಮಸ್ಯೆಗಳು

ಸಮುದ್ರಕ್ಕೆ ಸವಾರರು
ಭಾಷಾಂತರದ ಕೆಲವು ಸಮಸ್ಯೆಗಳು

ಚಂದ್ರಶೇಖರ ಪಾಟೀಲ

ಐರಿಶ್ ನಾಟಕಕಾರ ಜೆ. ಎಮ್‌. ಸಿಜ್‌ನ ಪ್ರಖ್ಯಾತ ಏಕಾಂಕ Riders to the Sea ಕೃತಿಯ ಕನ್ನಡ ಅನುವಾದ ಸಾಕ್ಷಿ-17 ರಲ್ಲಿ ಪ್ರಕಟವಾಗಿದೆ. ಅನುವಾದಿಸಿದವರು ಅಶೋಕ ಕುಲಕರ್ಣಿ. ಈ ಅನುವಾದ ಓದಿದ ಮೇಲೆ ಮೂಲ ನಾಟಕವನ್ನೂ ಮತ್ತೆ ಓದಬೇಕಾಯಿತು. ಎರಡೂ ಕಣ್ಣ ಮುಂದೆ ಇದ್ದಾಗ, ನನ್ನನ್ನು ಆಗಾಗ ಕಾಡಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಕಣ್ಣು ಮೂಗು ಮೂಡಿದಂತಾಯಿತು.
ಕನ್ನಡದಲ್ಲಿ ನಾಟಕಯುಗ ಶುರುವಾದಂದಿನಿಂದ ಅನೇಕ ಅನುವಾದಗಳು ಬಂದು ಹೋಗಿವೆ. ನಾಡಿಗರ `ಬೊಕ್ಕ ತಲೆಯ ನರ್ತಕಿ’, ಕಾರಂತರ ‘ಏವಂ ಇಂದ್ರಜಿತ್‌”, ವೆಂಕಟರಾಮರ ‘ಬಾಕಿ ಇತಿಹಾಸ’, ಪಟ್ಟಣಶೆಟ್ಟಿ ಅವರ ‘ಆಷಾಢದ ಒಂದು ದಿನ’, ಲಂಕೇಶರ ‘ದೊರೆ ಈಡಿಪಸ್’, ಇತ್ಯಾದಿ. (ಸದ್ಯ ನೆನಪಾದುವು ಇಷ್ಟೇ. ಇನ್ನೂ ಅನೇಕ ಕೃತಿಗಳಿವೆ.) ಒಂದು ಭಾಷೆಯಿಂದ ಇನ್ನೊಂದಕ್ಕೆ ನಾಟಕವನ್ನು ಅಳವಡಿಸುವಾಗ ಅನುವಾದಕನಾದವನು ಅನೇಕ ಸಾಧಕ ಬಾಧಕಗಳನ್ನು ಕುರಿತು ಸಾರಾಸಾರ ವಿಚಾರ ಮಾಡಬೇಕಾಗುತ್ತದೆ. ಭಾಷೆ ಕೇವಲ ಅಭಿವ್ಯಕ್ತಿಯ ಒಂದು ನಿರ್ಲಿಪ್ತ ಮಾಧ್ಯಮವಾಗಿರದೆ ಒಂದು ಸಂಸ್ಕೃತಿ-ಇತಿಹಾಸ-ಪರಂಪರೆಯ ಜೀವಂತ ಮಾಧ್ಯಮವಾಗಿರುವುದರಿಂದ ಭಾಷಾಂತರದ ಅನೇಕ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಇವುಗಳನ್ನು ಮೊದಲೇ ಬಗೆಹರಿಸಿಕೊಂಡು ಆಮೇಲೆ ನಡೆ ಮುಂದೆ ನಡೆ ಮುಂದೆ ಅನ್ನಬೇಕಾಗುತ್ತದೆ.
ಮೂಲ ನಾಟಕದ ಕೇಂದ್ರ ಸನ್ನಿವೇಶ, ಧ್ವನಿಗಳನ್ನು ಗಮನದಲ್ಲಿಟ್ಟುಕೊಂಡು ಪಾತ್ರಗಳ ಹೆಸರು, ಘಟನೆಗಳ ನಿರೂಪಣೆ ಮುಂತಾದುವನ್ನು ಮತ್ತೊಂದು ಭಾಷಾ ಸನ್ನಿವೇಶಕ್ಕೆ ಸಂಪೂರ್ಣ ಅಳವಡಿಸುವುದು ನಾಡಿಗರ ರೀತಿ. ಮೈಸೂರು ಕಡೆಯ ಆಡುಮಾತಿನ ಹಿನ್ನೆಲೆಯಲ್ಲಿ ಪಾತ್ರಗಳು, ಘಟನೆಗಳು ಹರಿದಾಡುತ್ತವೆ. ಹೀಗಾಗಿ ನಾಟಕ ಹೇಳಬೇಕಾದುದನ್ನು ಹೇಳುತ್ತದೆ.
ಇದನ್ನೇ ಇಂದ್ರಜಿತ್, ಬಾಕಿ ಇತಿಹಾಸ, ಆಷಾಢಗಳು ಮಾಡುತ್ತವೆ. ಈ ನಾಟಕಗಳ ಕನ್ನಡ ಒಂದು ಬಗೆಯ ಗ್ರಾಂಥಿಕ ಹಾಗೂ ನಿರ್ಜಿವ ಭಾಷೆ. (ಇದನ್ನೇ ಕೆಲವು ನಾಟಕಕಾರರು ಹಾಗೂ ವಿಮರ್ಶಕರು ‘ನಿರ್ಲಿಪ್ತ’ ಭಾಷೆಯೆಂದೂ ಕರೆಯುತ್ತಾರೆ !) ಉತ್ತರ ಭಾರತದಿಂದ ಭರಭರಾಟೆಯಿಂದ ಬಂದ ಈ ಹಾಗೂ ಇಂಥ ನಾಟಕಗಳು ಕನ್ನಡ ರಂಗಭೂಮಿಯಲ್ಲಿ ಮೊದಮೊದಲು ಕ್ರಾಂತಿಯನ್ನೇ ಮಾಡಿದವು. ಇವುಗಳ ಪೊಳ್ಳುತನ ಈಗ ಗೊತ್ತಾಗುತ್ತಿದೆ. ಯಾವ ಕನ್ನಡ ನಾಟಕಕಾರನೂ ಇವುಗಳನ್ನು ಅನುಕರಿಸುತ್ತಿಲ್ಲ. ಅದೇ ಪುಣ್ಯ.
ಲಂಕೇಶರ ‘ದೊರೆ ಈಡಿಪಸ್‌’ನಲ್ಲಿ ಭಾಷೆಯ ತೊಂದರೆ ಅಷ್ಟು ತೀವ್ರವಾದುದಲ್ಲ’ ಪಾತ್ರಗಳು ಘಟನೆಗಳು ದೂರದ ಭೂತಕಾಲವಾದ್ದರಿಂದ ಹಾಗೂ ನಾಟಕದ ಇಡಿತನವೇ ಮುಖ್ಯವಾಗಿರುವುದರಿಂದ ಒಂದು ಬಗೆಯ ಪದ್ಯಗಂಧಿ ಗದ್ಯದ ಮೂಲಕ ಲಂಕೇಶ ಸಾಧಿಸಬೇಕಾದುದನ್ನು ಸಾಧಿಸುತ್ತಾರೆ. (ಅವರ ‘ಅಂತಿಗೊನೆ” ನಾನು ಓದಿಲ್ಲ.)
.
.
.
ಅಶೋಕ ಕುಲಕರ್ಣಿ ಅವರ ಅನುವಾದದ ಸಂದರ್ಭದಲ್ಲಿ ಇಷ್ಟೆಲ್ಲ ಮಾತು ಹೇಳಬೇಕಾಯಿತು. ಪಶ್ಚಿಮ ಐರ್‌ಲಂಡಿನಾಚೆಗಿನ ನಡುಗಡ್ಡೆಯೊಂದರ ಉಪಭಾಷೆಯನ್ನು ಬಹುಮಟ್ಟಿಗೆ ಇದ್ದಕ್ಕಿದ್ದಂತೆ ಬಳಸಿಕೊಂಡ ಸಿಙ್, ಭಾಷೆಯ ಮೂಲಕವೇ ನಾಟಕದ ದುರಂತವನ್ನು ಸ್ಫೋಟಿಸುತ್ತಾರೆ. ಮುದುಕಿ ಮಾರಿಯಾ ನಾಟಕದ ಕೊನೆಕೊನೆಯಲ್ಲಿ ಬಳಸುವ ಚಿಕ್ಕ ಚಿಕ್ಕ ಹಾಗೂ ಸ್ಪುಟವಾದ ವಾಕ್ಯಗಳು, ಅವಳು ಸಮುದ್ರ ತಂದೊಡ್ಡಿದ ದುರಂತವನ್ನು ಸಂಯಮದಿಂದ ಜಯಿಸುವ ಕ್ರಮವನ್ನು ನಾಟಕೀಕರಿಸುತ್ತವೆ. ಅವಳ ಮಾತುಗಳಲ್ಲಿಯ ಈ ಸೂಕ್ಷ್ಮ ಬದಲಾವಣೆ ನಾಟಕದ ಮುಖ್ಯ ಅಂಶಗಳಲ್ಲಿ ಒಂದು ಭಾಷೆ-ಭಾವ-ಪಾತ್ರ-ಘಟನೆ ಇಷ್ಟು ಒಂದರೊಳಗೊಂದು ತಳಕು ಹಾಕಿಕೊಂಡಿರುವ ಇಂಥ ಸಂಕಿರ್ಣ ಕೃತಿಯನ್ನು ಭಾಷಾಂತರಿಸುವುದು ಸಾಹಸದ ಮಾತೇ. ಇಂಥ ಸಾಹಸದಲ್ಲಿ ಅಲ್ಲಲ್ಲಿ ಅನಿವಾರ್ಯವಾದ ಹಿಂದೇಟುಗಳು ಕ್ಷಮ್ಯ, ಆದರೆ ಕುಲಕರ್ಣಿಯವರ ಅನುವಾದದಲ್ಲಿ ಬರೀ ಹಿಂದೇಟುಗಳೇ ಇರುವುದರಿಂದ ಓದುಗ / ಪ್ರೇಕ್ಷಕ ಉಸಿರು ಬಿಗಿಹಿಡಿಯಬೇಕಾದ ಪ್ರಸಂಗದಲ್ಲಿ ನಗಬೇಕಾಗುತ್ತದೆ. ಅನುವಾದಕ್ಕೆ ಬಳಸಿದ ಭಾಷಾ ಪ್ರಕಾರವೇ ದೊಡ್ಡ ಬಂಡೆಗಲ್ಲಾಗಿ ಅದರಾಚೆಗಿನ ನಾಟಕ ಕಾಣುವುದೇ ಇಲ್ಲ. ಇದು ಹೇಗೆ ಎಂಬುದನ್ನು ನೋಡೋಣ.
ಅನುವಾದಕ್ಕೆ ಕುಲಕರ್ಣಿ ಬಳಸಿರುವುದು ಉತ್ತರ ಕರ್ನಾಟಕದ ಕನ್ನಡವನ್ನು. (ಇದನ್ನು dialect ಅಥವಾ ಭಾಷಾ ಪ್ರಕಾರ ಅನ್ನಬಹುದು.) ಈ ಮೂಲ ಆಯ್ಕೆಯೇ ಅನೇಕ ಪೇಚುಗಳನ್ನು ತಂದೊಡ್ಡುತ್ತದೆ. ಈ ಕನ್ನಡ ಲಿಂಗಾಯಿತರರೋ, ಬ್ರಾಹ್ಮಣರದೋ, ಮುಸಲ್ಮಾನರದೊ, ಕ್ರಿಶ್ಚಿಯನ್ನರದೋ ಗೊತ್ತಾಗುವುದಿಲ್ಲ, ಏಕೆಂದರೆ ಈ ಕನ್ನಡ ಅನುವಾದದಲ್ಲಿಯ ಪಾತ್ರಗಳಲ್ಲಿ ಈ ನಾಲ್ಕು ಜಾತಿಯ ಅಂಶಗಳಿವೆ. ಇನ್ನು ಉತ್ತರ ಕರ್ನಾಟಕದ ಅಂದರೆ ಧಾರವಾಡ, ವಿಜಾಪುರ, ಬೆಳಗಾವಿ ಜಿಲ್ಲೆಗಳ ಕನ್ನಡಕ್ಕೆ ಸಮುದ್ರದ ಆಯಾಮವಿಲ್ಲ ; ಸಮುದ್ರಕ್ಕೆ ಸಂಬಂಧಿಸಿದ ಶಬ್ದಗಳು ಬಹಳ ಕಡಿಮೆ. ಹೀಗಾಗಿ ಮಂಗಳೂರು ಅಥವಾ ಕಾರವಾರದ ಕರಾವಳಿಯ ಸನ್ನಿವೇಶ ಹಾಗೂ ಭಾಷೆ ಈ ನಾಟಕಕ್ಕೆ ಸರಿಯಾಗಿ ಹೊಂದಿಕೆಯಾಗುತ್ತಿತ್ತೋ ಏನೋ. ಇರಲಿ.
ಈ ಭಾಷಾ ಪ್ರಕಾರವನ್ನು ಆಯ್ಕೆ ಮಾಡಿದ ನಂತರ ಅದರಿಂದ ಅನಿವಾರ್ಯವಾಗಿ ಹುಟ್ಟುವ ಸಾಂಸ್ಕೃತಿಕ ಸನ್ನಿವೇಶ, ಬಿಟ್ಟೆನೆಂದರೂ ಬಿಡದ ಮಾಯೆ ಇದ್ದಂತೆ. ಈ ವಾತಾವರಣಕ್ಕೆ ತಕ್ಕಂತೆ, ಕನಿಷ್ಠ ಸಂಭಾಷಣೆಯ ಮಟ್ಟದಲ್ಲಾದರೂ, ಪಾತ್ರಗಳು ನಡೆದುಕೊಳ್ಳದಿದ್ದರೆ, ಆಭಾಸ ಉಂಟಾಗುವುದು ಸಹಜವೇ. ಕೆಲವು ಕಡೆ ಕುಲಕರ್ಣಿ ಲೀಲಾಜಾಲವಾಗಿ ಸಹಜ ಭಾಷೆಯನ್ನು ಬಳಸಿದ್ದಾರೆ. ಉದಾ:
೧ ನಾವಿಬ್ಬರೂ ಇಲ್ಲಿ ನಿಂತು ಜೋರಾಗಿ ಮಾತಾಡಲಿಕ್ಕೆ ಹತ್ತಿ ಭಾಳ ಹೊತ್ತಾತು.
೨ ಗಾಳಿ ಒಂದ ಸವನ ಏರಲಿಕ್ಕೆ ಹತ್ತೇದ.
೩ ಬಾರ್ಟ್ಲೆ ಇದ್ದಾನರ ಎಲ್ಲೆ ?
೪ ತುಡುಗು ದನಗೊಳು ಹೊಕೊಳ್ಳಧಂಗ ನೋಡಿಕೊ.
೫ ಸಟ್ ಸಟ್ ಹೆಜ್ಜಿ ಹಾಕಿದರ ಸಾಧ್ಯದ.

ಇಷ್ಟೆ. ಇನ್ನೂ ಬಹಳವೆಂದರೆ ಐದಾರು ಉದಾಹರಣೆ ಸಿಗಬಹುದು. (ಇಲ್ಲಿಯೂ ‘ಹತ್ತೇದ” ‘ಸಾಧ್ಯದ’ ಮಂತಾದ ಕ್ರಿಯಾಪದಗಳು ಬರೋಬರಿ ಅನ್ನಿಸುವುದಿಲ್ಲ) : ಉಳಿದ ಕಡೆಯಲ್ಲೆಲ್ಲ ಭಾಷೆ ಮುಗ್ಗರಿಸಿದೆ ; ಕೆಲ ಸಲವಂತೂ ಕಡಕೊಂಡು ಬಿದ್ದಿದೆ. ಶಬ್ದಕ್ಕೆ ಶಬ್ದ ಇಟ್ಟು ನಾಟಕ ಹದಗೆಡಿಸಿದ ಉದಾಹರಣೆಗಳು :

೧ Nora puts her head in at the door.
ನೋರಾ ತನ್ನ ತಲೆಯನ್ನು ಬಾಗಿಲಲ್ಲಿ ಇಣಕಿಸುತ್ತಾಳೆ.
೨ Beginning to work with the rope.
ಹಗ್ಗದೊಂದಿಗೆ ಕೆಲಸ ಮಾಡುತ್ತ
೩ •••and she holding him from the Sea…..
ಸಮುದ್ರದಿಂದ ದೂರ ಸರಸಬೇಕೆಂದರೂ ಸರಿವಲ್ಲ.
೪ when the black night is falling
ಈ ಕತ್ತಲ ರಾತ್ರಿ ಬೀಳೋದರಾಗ….
೫ but in this place it is the young men do be leaving things behind for them that do be old.
ಆದರ ಈ ಜಗದಾಗ ಹರೆದವರ ಮುದುಕರಿಗೆ ಸಾಮಾನಾ ಬಿಟ್ಟು ಹೋಗ್ಯಾರ.
೬ though it was a hard birth I had with every one them and they coming into the World…
ನನಗ ಹಡಿಯೊ ಮುಂದ ತ್ರಾಸಾಗಿದ್ದರೂ ಅವರ‍್ನ ಈ ಜಗತ್ತಿನಾಗ ತಂದಿದ್ದೆ.

ಇನ್ನು, ಮೂಲ ನಾಟಕದ ಭಾಷೆಯ ಪರಿಜ್ಞಾನವಿಲ್ಲದೆ ಮೋಗಮ್ ಆಗಿ ಅನುವಾದ ಮಾಡಿ ಮೂಲ ಅರ್ಥವನ್ನೇ ತಿರುವು ಮುರುವು ಮಾಡಿದ ಉದಾಹರಣೆಗಳು :
(ಮೊದಲು ಇಂಗ್ಲಿಷ್ ವಾಕ್ಯ, ನಂತರ ಕುಲಕರ್ಣಿ ಅನುವಾದ, ನಂತರ ಸರಿಯಾದ ಅನುವಾದ ಕೊಡಲಾಗಿದೆ).

೧ How would it be washed up …
ಈ ಸಮುದ್ರಾ ನನ್ನ ಎಳಕೊಂಡು ಹೋಗಲಿಕ್ಕೆ ಹೆಂಗ ಸಾಧ್ಯದ ?
ಇಲ್ಲಿ it ಅಂದರೆ ಮೈಕೇಲನ ದೇಹ, ಬಾರ್ಟ್ಲೆಯದಲ್ಲ.
೨ He’s gone now, God spare us, and we’ll not see him again,
ಅಂವಾ ಹೋದಾ. ಅವನ್ನ ಇನ್ನೊಮ್ಮೆ ನನ್ನ ಕಡಿಂದ ನೋಡಲಿಕ್ಕೆ ಸಾಧ್ಯನಾ ಇಲ್ಲಾ.
ಇಲ್ಲಿ ‘ಅಂವಾ ಹೊಳ್ಳಿ ಬರೂದಿಲ್ಲಾ’ ಅನ್ನುವುದು ಮುಖ್ಯ.
೩ What will herself say when she hears this story, and Bartley On the sea ?
ಇದನ್ನ ಕೇಳಿದ ಮ್ಯಾಲ ಅವ್ವನ ಸ್ಥಿತಿ ಏನಾಗಬಹುದು ? ಅಥವಾ ಸಮುದ್ರದ ಮ್ಯಾಲಿನ ಬರ್ಟ್ಲೆಗ ಏನನಿಸಬಹುದು ?

ಬಾರ್ಟ್ಲೆಗೆ ಅನಿಸುವ ಸಂದರ್ಭವೇ ಇಲ್ಲ. ಸರಿಯಾದ ಅನುವಾದ : “….. ಅವ್ವನ ಗತಿ-ಏನಾದೀತು? ಬಾರ್ಟ್ಲೆ ನೋಡಿದರ ಸಮುದ್ರದಾಗದಾನ”.
(ಅವನೂ ಮನೆಯಲ್ಲಿಲ್ಲ-ಎಂಬರ್ಥ).
೪ I’ve had a husband, and a husband’s father.
ನನಗೊಬ್ಬ -ಗಂಡಿದ್ದಾ, ಗಂಡನ ತಂದಿ…..

ಇಲ್ಲಿ ಅನಿವಾರ್ಯವಾಗಿ ಜೋಕು ಹುಟ್ಟಿದೆ. “ಮನ್ಯಾಗ ಯಜಮಾನ ಇದ್ದಾ, ಮಾವ ಇದ್ದಾ” ಅಥವಾ “ಅವರಿದ್ದರು, ಮಾವ ಇದ್ರು” (ಅವರು”-ಪತಿಗೆ ಬಳಸುವ ಸರ್ವನಾಮ) ಅಂದಿದ್ದರೆ ಹೊಂದಿಕೆಯಾಗುತ್ತಿತ್ತು.
೫ It isn’t that 1 haven’t prayed for you, Bartley, to the Al-mighty God.
ದೇವರಿಗೆಲ್ಲಾ ನಾ ಇದ್ನs ಪ್ರಾರ್ಥಿಸಿಕೊಂಡಿದ್ದಿಲ್ಲಾ.
“ನಿನ್ನ ಹೆಸರಲೇ ದೇವರಿಗೆ ಹರಕಿ ಹೊತ್ತಿದ್ದಿಲ್ಲಾ ಅಂತ ಅಲ್ಲ, ಬಾರ್ಟ್ಲೆ ?”
೬ My heart’s broken from this day.
ಇವತ್ನಿಂದ ನನ್ನ ಎದಿ ಒಡದದ.
ಬಹಳ ಎಡಚಟ್ಟಾದ ವಾಕ್ಯ ಇದು. ಅನುವಾದಕನಿಗೆ ನಿಜವಾದ ಸವಾಲು.

ಅನುವಾದದ ಕೊನೆಕೊನೆಗಂತೂ ಕುಲಕರ್ಣಿ ಅನೇಕ ಕಠಿಣ ಭಾಗಗಳನ್ನು ಕತ್ತರಿಸಿ ಬಿಟ್ಟು ಅವಸರವಸರದಲ್ಲಿ ನಾಟಕ ಮುಗಿಸಿದ್ದಾರೆ. ಅದರಲ್ಲೂ ನಾಟಕದ ಒಟ್ಟು ಬಂಧದ ದೃಷ್ಟಿ ಯಿಂದ ಬಹು ಮುಖ್ಯವಾದ ಕೆಲ ಭಾಗಗಳನ್ನು – ಸಕಾರಣವಾಗಿಯೋ ವಿನಾಕಾರಣವೊ -ಬಿಟ್ಟಿರುವುದು ಅಕ್ಷಮ್ಯ. ತನ್ನ ಹಳವಂಡದಲ್ಲಿ ಮೈಕೇಲ್ ಹಾಗೂ ಬಾರ್ಟ್ಲೆ ಇಬ್ಬರನ್ನೂ ಕಂಡು, ಕಂಡದ್ದನ್ನು ಹೇಳುವಾಗ ಬೆದರಿದ ದನಿಯಲ್ಲಿ The grey pony behind him ಎಂದುಸುರಿದಾಗ ಮಾರಿಯಾಳ ಪಾತ್ರದಲ್ಲಿ ವಿಚಿತ್ರ ಬದಲಾವಣೆಯಾಗುತ್ತದೆ. ಆ ಕ್ಷಣದಿಂದ ಅವಳು ‘ಇಹ’ದಿಂದ ಬೇರೆಯಾಗತೊಡಗಿ ನಾಟಕದ ಕೊನೆಯ ಭಾಗದಲ್ಲಿ ಕೇವಲ ಸಾಕ್ಷಿಯಾಗಿ ನಿಂತು ಎಲ್ಲವನ್ನೂ ನಿರ್ಮಮತೆಯಿಂದ ಸ್ವೀಕರಿಸುತ್ತಾಳೆ-ಎಲ್ಲಾ ದೇವರ ಕರುಣೆ ಎಂಬ ಭಾವದಿಂದ. ಅಲ್ಲದೆ ಕೊನೆಗೆ ಬಾರ್ಟ್ಲೆಗಾಗಿ ಕಾಫಿನ್ ತಯಾರಾಗುತ್ತಿದ್ದಾಗ ಅವಳು ತನ್ನ ಮನೆಯ, ಮನೆತನದ ಎಲ್ಲರನ್ನೂ ನೆನೆಯುವಾಗ, ಭೂತವೆಲ್ಲವನ್ನೂ ವರ್ತಮಾನದಲ್ಲಿ ಹಿಡಿದು ಅದಕ್ಕೊಂದು ಅರ್ಥ ಕೊಡುವಾಗ, ಆಡುವ ಮಾತುಗಳು ನಾಟಕದ ಅನಿವಾರ್ಯ ಅಂಗ. ಟೇಬಲ್ಲಿನ ಮೇಲೆ ಕಪ್ಪನ್ನು ಡಬ್ಬು ಹಾಕಿ ಇಡುವುದು ಅವಳ ಪಾತ್ರಕ್ಕೇ ಸಾಂಕೇತಿಕವಾದ ಘಟನೆ. ಇವೆಲ್ಲ ಕುಲಕರ್ಣಿಯವರ ನಾಟಕದಲ್ಲಿ ಇಲ್ಲವೇ ಇಲ್ಲ. ಅವರ ಅನುವಾದದಲ್ಲಿ ಕ್ಯಾಥರಿನ್ ಮತ್ತು ನೋರಾ, ತಮ್ಮ ಕೊನೆಯ ಅಣ್ಣನನ್ನು ಕಳೆದುಕೊಂಡ ದುರಂತದಲ್ಲಿ ಭಾಗಿಯಾದ ಅಸಹಾಯ ಜೀವಿಗಳಾಗಿರದೆ, ಹಾದಿ ಹೆಣದ ಬಗ್ಗೆ ಒರಟಾಗಿ ವಿಚಾರಿಸುವ ಹಾದಿ ಹೋಕರ ಹಾಗೆ ಕಾಣುತ್ತಾರೆ. (“ಆ ದೇಹಾ ಬಾರಟ್ಲೆಂದ ಹೌದಲ್ಲೋ ? ಹೌದಂತ ಕಾಣಸ್ತದ”).
ಕುಲಕರ್ಣಿ ಆಯ್ದುಕೊಂಡ ಭಾಷಾಪ್ರಕಾರದ ಜಾಯಮಾನಕ್ಕೆ ಒಗ್ಗದ ಆನೇಕ ವಾಕ್ಯ ರಚನೆಗಳೂ ಶಬ್ದಗಳೂ ಅನುವಾದದಲ್ಲಿವೆ. ಉತ್ತರ ಕರ್ನಾಟಕದ ಹಳ್ಳಿಯ ಆಡುಮಾತಿನಲ್ಲಿ ಮನುಷ್ಯ ಇಂದು ಪ್ರಾರ್ಥನೆ, ನಿಮಿಷ, ಕ್ರೂರ, ದೇಹ, ಅಂತ್ಯ ಮುಂತಾದ ಶಬ್ದಗಳು ಇಲ್ಲ. `ಒಳಗೆ ಮಲಗಿಕೊಂಡಿರಬಹುದು’-ಈ ವಾಕ್ಯವ ಕ್ರಿಯಾಪದ ಅಸಂಬದ್ಧವಾದುದು. ‘ಮಕ್ಕೊಂಡಿರಬಹುದು’, ‘ಮಕ್ಕೊಂಡಿದ್ದಾಳು’ ಅಂದಿದ್ದರೆ ಸರಿಯಾಗುತ್ತಿತ್ತು. ಅಲ್ಲದೆ ಇಂಗ್ಲಿಷ್ ಭಾಷೆಯಲ್ಲಿ ಸಹಜವಾಗಿ ಕಾಣುವ direct speech, ಕನ್ನಡಕ್ಕೆ ಬಗೆ ಬೀಳುವುದಿಲ್ಲ. ಪಾದ್ರಿ ಹೇಳಿದ್ದನ್ನು ನೋರಾ ಮರುಹೇಳುವಾಗ ಈ ಸಂಗತಿ ಒಡೆದು ಕಾಣುತ್ತದೆ.
ಅನುವಾದದ ಭಾಷೆ ಹುಟ್ಟಿಸಿದ ಇಂಥ ಗಿಜಿಬಿಜಿಯಲ್ಲಿ ನಾಟಕದ ಐರನಿಗೆ ಸಂಬಂಧಪಟ್ಟ “ಕರಿಕಾಲಿನ ಹಂದಿ’, ‘ಬಿಳೆ ಫಳಿ’ ಮುಂತಾದ ಪ್ರತಿಮೆಗಳು ಕನ್ನಡ ಓದುಗನ ಕಲ್ಪನೆಯ ಹೊರ ಅಂಚಿಗೂ ತಟ್ಟುವುದಿಲ್ಲ. ಉತ್ತರ ಕರ್ನಾಟಕದ ಭಾಷೆಯ ಲಯದಿಂದಾಗಿ
ನಾಟಕದಲ್ಲಿ ಅದ್ಭುತ ಪರಿಣಾಮವನ್ನು ತರಬಹುದಿತ್ತು. ಕೊನೆಕೊನೆಗಂತೂ ಇಂಥ ಲಯ ನಾಟಕಕ್ಕೆ ಬೇಕೇಬೇಕು. ಅದರ ಬದಲಾಗಿ ಕುಲಕರ್ಣಿಯವರ ಪಾತ್ರಗಳು ಹೊತ್ತಾಗಿ ಮುಕ್ತಾಯಗೊಂಡ ಬೇಸರದ ಸಮಾರಂಭದಲ್ಲಿ ಲಗುಲಗು ಆಭಾರ ಮನ್ನಣೆಯ ಕರ್ಮ ಮುಗಿಸುವವರಂತೆ ವರ್ತಿಸುತ್ತವೆ.
ಮಾರಿಯಾಳಂತೆ ಓದುಗರೂ, “ಅಷ್ಟಕ್ಕ ಸಮಾಧಾನಾಪಟ್ಟಕೊಂಡರಾತು” ಎಂದುಕೊಳ್ಳಬೇಕೇ ?
.
.
.
ಇಷ್ಟೆಲ್ಲ ಕಸಬರಿಗೆ ಆಡಿಸಿದ ನಂತರವೂ ನಾಟಕದ ಭಾಷೆಯ ಬಗ್ಗೆ ಇನ್ನೂ ಬರೆಯಬೇಕು ಅನ್ನಿಸುತ್ತದೆ. ನಾಟಕದಲ್ಲಿ ಭಾಷೆ ಎಂಬುದು ಒಂದು ಅಂಗ ಮಾತ್ರ. ಆದ್ದರಿಂದ ಅದು ಅಷ್ಟೇನೂ ಮುಖ್ಯವಲ್ಲ-ಎಂಬ ವಾದವಿದೆ. ಕಾರ್ನಾಡರ ನಾಟಕಗಳ ಮೂಲ ಕೊರತೆಯನ್ನು ಮುಚ್ಚಲು ಅಷ್ಟೇ ಅಲ್ಲ, ಅದನ್ನೇ ವೈಭವೀಕರಿಸಲು, ಮುಂದೆ ಮಾಡಿದ ವಾದವಿದು. ಆದರೆ ಇತ್ತೀಚೆಗೆ ಕಾರಂತರು “ಹಯವದನ ನಾಟಕೋತ್ಸವ”ವನ್ನು (ನಾಟಕ ‘ಪ್ರಯೋಗ’ವನ್ನಲ್ಲ) ಬೆಂಗಳೂರಿನಲ್ಲಿ ನಡೆಸಿದ ಮೇಲೆ ಈ ವಾದದ ಪೊಳ್ಳುತನ ಬಯಲಿಗೆ ಬರತೊಡಗಿದೆ.
ನಾಟಕದಲ್ಲಿ ಭಾಷೆ ಮುಖ್ಯ ಎಂದು ನಾನು ಹೇಳಿದರೆ, ಭಾಷೆಯೇ ಮುಖ್ಯ ಅಂತ ಅರ್ಥವಲ್ಲ ; ಎಲ್ಲ ಪಾತ್ರಗಳೂ ಪ್ರತಿಮೆಗಳನ್ನು ಬಳಸಬೇಕು, ಕಾವ್ಯಮಯವಾಗಿ ಮಾತಾಡಬೇಕು ಅಂತ ಅಲ್ಲ ; ನಾಟಕಕಾರ ತನ್ನ ಪಾತ್ರಗಳನ್ನು ಸಂಕ್ರಮಣ-ಸಾಕ್ಷಿಗಳ ಲೇಖಕರ ಬಳಗದಿಂದ ಆಯ್ದುಕೊಳ್ಳಬೇಕು ಅಂತ ಅಲ್ಲ. ನಾಟಕದಲ್ಲಿ “ಕ್ರಿಯೆಯಾಗುವ ಮಾತಿನ ಶಕ್ತಿ” (ಅನಂತಮೂರ್ತಿ) ಬೇಕು. ಇಲ್ಲವಾದರೆ ಸಂಭಾಷಣೆ ಬರಿ ತುಟಿಯ ಪಿಟಿಪಿಟಿ ಆಗುತ್ತದೆ.
ಇತರ ಭಾಷೆಗಳಿಂದ ಕನ್ನಡಕ್ಕೆ ಎಷ್ಟು ಅನುವಾದ ಬಂದರೂ ಕಡಿಮೆಯೇ. ಆದರೆ ಈ ಕಾರ್ಯ ಮಾಡುವಾಗ ಮೈಮೇಲೆ ಸಾಕಷ್ಟು ಅರಿವು ಇರಬೇಕಾದುದು ಅವಶ್ಯ. ಮೂಲ ಭಾಷೆಯ (ಉದಾ: ಇಂಗ್ಲಿಷ್, ಹಿಂದಿ) ಸಂಪೂರ್ಣ ಜ್ಞಾನವಂತೂ ಬೇಕೇಬೇಕು. ಅದರ ಜೊತೆಗೆ ಕನ್ನಡದ ಸಾಧ್ಯತೆಗಳ ಅರಿವೂ ಬೇಕು. ಅನುವಾದವೆಂದರೆ ಒಂದು ಬಾಟಲಿಯಿಂದ ಇನ್ನೊಂದು ಬಾಟಲಿಗೆ ವಿಸ್ಕಿ ಸುರುವಿದಂತೆ ಅಲ್ಲ. ಕಾರಂತ – ವೆಂಕಟರಾಂ ರೀತಿ ಒಂದು ಬಗೆಯಲ್ಲಿ ಸಮಸ್ಯೆಯನ್ನು ಸರಳೀಕರಿಸುತ್ತದೆ. ಅಂಥ ಅನುವಾದಗಳ ಮಿತಿ ಅವುಗಳ ರಂಗಪ್ರಯೋಗಕ್ಕೆ ಮಾತ್ರ ಸೀಮಿತವಾದುದು ; ಪ್ರಯೋಗದ ಸಂಭ್ರಮದಲ್ಲಿ ಭಾಷೆಯನ್ನು ಮುಳುಗಿಸಿಬಿಡುವಂಥದು. ಆದರೆ ಅನುವಾದವು ಇಂಥ ಪ್ರಯೋಗಗಳನ್ನು ಮೀರಿಯೂ ಸಾಹಿತ್ಯದ ಅಂಗವಾಗಿ ಉಳಿಯಬೇಕಾದರೆ ಅನುವಾದಕ ಒಮ್ಮೆ ಬಿಟ್ಟು ಹತ್ತು ಸಲ ತಲೆ ಕೆರೆದುಕೊಳ್ಳಬೇಕಾಗುತ್ತದೆ; ಕನ್ನಡಕ್ಕೆ ಅನ್ಯಾಯವಾದರೆ ಆಗಲಿ, ಆದರೆ ಮೂಲ ಲೇಖಕನ (ಸಿಜ್‌ ಇತ್ಯಾದಿ) ಆತ್ಮ ಒದ್ದಾಡಿ ಒದ್ದಾಡಿ ಮತ್ತೊಮ್ಮೆ ಸಾಯುವಂತಾಗಬಾರದು ಎಂಬ ಮಾನವೀಯ ಕಳಕಳಿಯನ್ನಾದರೂ ಹೊಂದಿರಬೇಕಾಗುತ್ತದೆ.
.
.
.
ಕೊನೆಗೆ ಈ ವಾಕ್ಯಗಳನ್ನು ನೋಡಿರಿ;
೧ ದೇವರ ದಯೆಯಿಂದ ಅವನಿಗೆ ಒಳ್ಳೇ ಗೋರಿ ಸಿಕ್ಕಿತು.
೨ ದೇವರ ದಯೆಯಿಂದ ಗೋರಿ ಕಂಡಾನ ಅಂವಾ.
೩ ಈ ವಾರದಾಗಿನ ಯಾವದರ ಮುಂಜಾನ್ಯಾಗಲಿ ಅವಗೊಂದು ದೊಡ್ಡ ಗೋರಿ ತೊಡಬೇಕಾಗೇದ.

ಇವುಗಳನ್ನು ಓದಿದಾಗೊಮ್ಮೆ ನನಗೆ ‘ಅಂವಾ’ ಅಂದರೆ ‘ಜೆ. ಎಮ್. ಸಿಙ್’ ಎಂದೇ ಅನಿಸಿ ನಗುತ್ತಿದ್ದೆ. ನಡುನಡುವೆ ಅಳುತ್ತಿದ್ದೆ.

Close

ಪ್ರತಿಭಾವಂತ ನಾಟಕಕಾರ ಪಿ.ಲಂಕೇಶ್

ಪ್ರತಿಭಾವಂತ ನಾಟಕಕಾರ ಪಿ. ಲಂಕೇಶ

ಶಿವಪ್ರಕಾಶ ಶಿಗ್ಲಿ

ಕನ್ನಡ ನಾಟಕ ಸಾಹಿತ್ಯದ ಕ್ಷೇತ್ರದಲ್ಲಿ ಈಗಾಗಲೇ ಹೊಸ ಮನ್ವಂತರ ಪ್ರಾರಂಭವಾಗಿದೆ. ಇಲ್ಲಿಯವರೆಗೆ ಪ್ರೇಕ್ಷಕ ವೃಂದಕ್ಕೆ ಕಲ್ಪನಾತೀತವಾಗಿದ್ದ ಹೊಚ್ಚ ಹೊಸ ನಾಡೊಂದರಲ್ಲಿ ನಮ್ಮ ಸಾಹಿತ್ಯ ದಾಪುಗಾಲಿನಿಂದ ಮುನ್ನಡೆಯುತ್ತಲಿದೆ. ಇದು ಪಡುವಣ ಕಡಲ ಹೊನ್ನ ಹೆಣ್ಣಿನ ಪೀಳಿಗೆಯೊ ಅಥವಾ ‘ನಮ್ಮ ತೋಟದಿನಿಯ ಹೆಣ್ಣೊ’ ಅದನ್ನು ಬೇರೆ ಪ್ರಬಂಧದಲ್ಲಿ ಚರ್ಚಿಸಬಹುದು. ಈ ರಂಗಸಜ್ಜಿಕೆಯ ಸಾಹಿತ್ಯ ಹೊಸ ಪ್ರಜ್ಞೆಯಿಂದ ಆವಿಷ್ಕಾರಗೊಂಡಿದ್ದು ನಮ್ಮ ರಂಗಭೂಮಿಗೆ ಹೊಸ ತಿರುವನ್ನು ಕೊಡುವುದರ ಜೊತೆಗೆ, ಅರ್ಥ ಸಿರಿವಂತಿಕೆಯಿಂದ ಕೂಡಿದ ಹೊಸ ಆಯಾಮವನ್ನುಂಟುಮಾಡಿದೆ. ನಮ್ಮ ಊಹೆಯ ಎಲ್ಲೆಯನ್ನು ಮೀರಿ ಅವಿತುಕೊಂಡಿದ್ದ ಈ ಸಾಹಿತ್ಯ ಈಗ ಹಲವಾರು ಹಸ್ತಗಳಿಂದ ಪ್ರಕಟಗೊಳ್ಳುತ್ತಿದ್ದು, ವಿವಿಧ ಅನುಭವಗಳಿಗೆ ಸಮಕಾಲೀನ ಜೀವನದ ತುಡಿತಕ್ಕೆ ಸಮರ್ಪಕವಾದ ಮಾಧ್ಯಮವಾಗಿ ಬೇರೂರಿ ನಿಂತಿದೆ. ಈ ಹೊಸ ಪೀಳಿಗೆಯಲ್ಲಿ ಲಂಕೇಶರ ಸ್ಥಾನ ಉನ್ನತವಾದುದಾಗಿದೆ. ನಮ್ಮ ನವನಾಗರಿಕ ಸಮಕಾಲೀನ ಸಮಾಜದತ್ತ ವಿಮರ್ಶೆಯ ‘ಕ್ಷ’ ಕಿರಣ ಬೀರಿ ಅದನ್ನು ಲಂಕೇಶರಂತೆ ಅತ್ಯಂತ ಶಾಖವಾಗಿ, ಪ್ರಭಾವಶಾಲಿಯಾಗಿ ಬರಹದ ಸೆಳೆತವನ್ನು ಮೀರಿಸುವ ನಾಟಕಗಳು ಇನ್ನೂ ಕನ್ನಡದಲ್ಲಿ ಹುಟ್ಟಿಕೊಳ್ಳಬೇಕಾಗಿದೆ.
ಈಗಾಗಲೇ ಸುಮಾರು ಹತ್ತು ನಾಟಕಗಳನ್ನು ರಚಿಸಿರುವ ಲಂಕೇಶರು ನಿರ್ಭಿಡೆಯ ಪ್ರವೃತ್ತಿಗೆ ಹೆಸರಾದಂತೆ, ಲೆಕ್ಕಣಿಕೆಯ ಹರಿತಕ್ಕೂ ಹೆಸರಾದವರು. ಲಂಕೇಶರು ಕವನ, ಕಾದಂಬರಿ, ಸಣ್ಣಕಥೆ, ವಿಮರ್ಶೆಗಳನ್ನು ಬರೆದರೂ ಅವರು ನಾಟಕಕಾರರೆಂದೇ ಹೆಚ್ಚು ಜನರಿಗೆ ಪರಿಚಿತರಾದವರು. ಸಮಕಾಲೀನ ಜೀವನವನ್ನೇ ಆಯ್ಕೆ ಮಾಡಿ ಅಥವಾ ಅಂಥ ಜೀವನದ ಹಲವು ಘಟನೆಗಳನ್ನು ಆರಿಸಿ ಅದರಲ್ಲಿ ಮೈಗಳಲ್ಲಿಯೂ ಒಳಹೊಕ್ಕು, ತಡಕಾಡಿ, ಅಂತರಂಗವನ್ನು ಭೇದಿಸಿ ಅದರ ನೈಜ ಸ್ವರೂಪವನ್ನು ರಂಗಭೂಮಿ ಮೇಲೆ ನಾಟಕೀಕರಿಸಬೇಕೆಂದವರು. ಲಂಕೇಶರಿಗೆ ಕಥೆ ಮಹತ್ವದ್ದಲ್ಲ. ಅದರ ಬದಲು ಒಂದು ಘಟನೆಯನ್ನೆ ವಿಶ್ಲೇಷಿಸಿ ಪ್ರೇಕ್ಷಕನ ನಾಡಿಯ ಮಿಡಿತವನ್ನು ಇಮ್ಮಡಿಸುವ ಹಂಬಲ ಇವರದು. ಆ ಘಟನೆಗೆ ಹೊಸ ಆಯಾಮವನ್ನು ಸೇರಿಸಿ ಸಂವೇದನೆಯ ಸ್ಪಂದನವನ್ನು ಸಂವರ್ಧಿಸಬೇಕೆನ್ನುವ ಲಂಕೇಶರು, ಅದಕ್ಕೆಂದೆ ರೂಢಿಜಾಡ್ಯದ ನಾಟಕ ಸೃಷ್ಟಿಯಿಂದ ಸಿಡಿದು ಹೋದರು. ಎಲ್ಲಿಯಾದರೂ ಉಪಕಥೆ ಬಂದರೆ ಅದು ಕೇಂದ್ರಾಂಶವನ್ನೇ ಪುಷ್ಟಿಕರಿಸುವಂತಹದು. ಉದಾಹರಣೆಗೆ “ಟಿ, ಪ್ರಸನ್ನನ ಗ್ರಹಸ್ಥಾಶ್ರಮ” ನಾಟಕದಲ್ಲಿ ಬರುವ ಚಿಕ್ಕ ಕಥೆಯನ್ನು ನೋಡಬಹುದು. (ಪುಟ ೨೧೯ ‘ಲಂಕೇಶರ ಏಳು ನಾಟಕಗಳು’)
ಲಂಕೇಶರ ನಾಟಕಗಳಲ್ಲಿ ಎದ್ದು ಕಾಣುವ ಇನ್ನೊಂದು ದೊಡ್ಡ ಗುಣ ಅವರ ಕೃತಿಗಳು ನಮ್ಮ ಜೀವನಕ್ಕೆ ಅತ್ಯಂತ ಪ್ರಾಮಾಣಿಕವಾಗಿರುವದು. ಇದು ಲಂಕೇಶರು ನಮ್ಮ ಇಂದಿನ ಜೀವನದ ವಿಷಯವಾಗಿ ಹೊಂದಿರುವ ಕಾಳಜಿಯು ದ್ಯೋತಕವಾಗಿದೆ. ತಮ್ಮ ಪ್ರಾದೇಶಿಕ ಭಾಷೆಯ ನುಡಿಕಟ್ಟಿನಲ್ಲಿ ಕಾವ್ಯಕಾಂತಿಯೊಂದಿಗೆ ನೈಜ ಘಟನೆಗಳನ್ನು ವಸ್ತುನಿಷ್ಟವಾಗಿ ನಿರೂಪಿಸಬಲ್ಲ ಶಕ್ತಿ ಲಂಕೇಶರ ಹಸ್ತಕ್ಕೆ ಸಂಪೂರ್ಣ ದಕ್ಕಿದೆ. ಧಾರವಾಡದಲ್ಲಿ ಲಂಕೇಶರೊಂದಿಗೆ ನಡೆದ ಸಂದರ್ಶನವೊಂದರಲ್ಲಿ ಅವರು ಆಡಿದ ಒಂದು ಮಾತು ನನಗೆ ಇನ್ನೂ ನೆನಪಿದೆ : ದೈನಂದಿನ ಜೀವನದಲ್ಲಿ ಇರದಂಥ ಸೌಂದರವನ್ನೂ, ಲಾಲಿತ್ಯವನ್ನೂ, ಪ್ರಾಮಾಣಿಕತೆಯನ್ನೂ, ರಸವನ್ನೂ ಕೃತಿಗಳಲ್ಲಿ ಹೆಣೆದರೆ ಅದು ಕೃತ್ರಿಮವಾಗುವದು. ನಿಜವಾದ ಲೇಖಕ ದೈನಂದಿನ ವಾಸ್ತವಿಕ ಜೀವನದಿಂದಲೇ ತನ್ನ ಬರಹವನ್ನು ಪ್ರಾರಂಭಿಸುತ್ತಾನೆ. ಲಂಕೇಶರು ಹೇಳಿದ ಈ ಮಾತುಗಳನ್ನು ಅವರೆಲ್ಲ ಕೃತಿಗಳಲ್ಲಿ ನಾನು ಒಂದಲ್ಲ ಒಂದು ಮಟ್ಟಕ್ಕೆ ಕಂಡಿದ್ದೇನೆ.
ಲಂಕೇಶರಿಗೆ ಮಾನಸಿಕ ತುಮುಲದಿಂದ ಆವೃತವಾದ ಘಟನೆಗಳ ಪರಿಣಾಮವನ್ನು ಕೂಲಂಕಷವಾಗಿ ವಿಶ್ಲೇಷಣೆ ಮಾಡುವದರಲ್ಲಿ, ಅಂದರೆ ಅವುಗಳನ್ನು ತುಂಬು ಶಾಖದಿಂದ ನಾಟಕೀಕರಿಸುವದರಲ್ಲಿ ಹೆಚ್ಚು ಆಸಕ್ತಿ ಇದ್ದಂತೆ ತೋರುತ್ತದೆ. ಇಂತಹ ಮಾನಸಿಕ ಹೊಯ್ದಾಟ, ಎದೆಗುದಿ, ಒದ್ದಾಟ, ಗೊಂದಲ, ತಬ್ಬಿಬ್ಬಾಗುವಿಕೆಗೆ ಇನ್ನು ನವನಾಗರಿಕತೆಯ ಸಂಕೀರ್ಣ ಜೀವನವು ಕಾರಣವಾಗಿರಬೇಕು. ಮಾನವನ ಬದುಕು ಸತತವೂ ಸಂತಸದಿಂದ ಬಾಂದಳದೆತ್ತರಕ್ಕೆ ಪುಟಿಯುವ ಬೃಂದಾವನದ ಬಗ್ಗೆಯಲ್ಲ. ಸುತ್ತುಮುತ್ತಲಿನ ವಾತಾವರಣ, ವಾಸಿಸುವ ಗೃಹದ ಪರಿಸರ, ತನ್ನ ಕಾಳಜಿಗಳ ಸ್ವರೂಪ, ಆಸಕ್ತಿಗಳು, ‘ಉದಕದಲಿ ಬೈತಿಟ್ಟ ಬಯಕೆಯ ಕಿಚ್ಚಿನಂತೆ’ ಮನದಾಳದಲ್ಲಿ ಸುಳಿದಾಡುವ ಆಸೆಗಳು ಓರ್ವ ವ್ಯಕ್ತಿಯ ಜೀವನದ ಸ್ವರೂಪವನ್ನು ನಿರ್ಧರಿಸುತ್ತವೆ. ಈ ಬಗೆಯ ಆಕಾಂಕ್ಷೆಗಳು ಎಲ್ಲರಿಗಿದ್ದರೂ ಹಲವರ ಮೇಲೆ ಮಿತಿ ಮೀರಿದ, ಅದುದರಿಂದ ಸಹಿಸಲಾಗದ ನೋವಿನಿಂದ ಇರಿಯುತ್ತವೆ.
ಉದಾಹರಣೆಗೆ “ಸಿದ್ಧತೆ” ನಾಟಕದ ರಂಗಪ್ಪನನ್ನು ನೋಡಬಹುದು. ಅವನ ಮನಸ್ಸಿನಲ್ಲಿರುವ, ವಿಚಿತ್ರವಾಗಿ ವರ್ತಿಸಲು ಹಚ್ಚಿರುವ ಗುಂಗು, ವಾಸ್ತವ ಪ್ರಪಂಚದಿಂದ ಪಲಾಯನ ಮಾಡಲು ಸಮರ್ಥವಾದ ಹಳವಂಡ, ತಾನು ಹೊರಟಿರುವದು ಎಲ್ಲಿಗೆ ಎಂಬಂದನ್ನು ಅರಿಯದ ಮನಸ್ಥಿತಿ, ‘ಜಯ’ಬಂದರೆ ಎಲ್ಲ ಸಮಸ್ಯೆಗಳು ಕಾಲಿಗೆ ಬುದ್ಧಿ ಹೇಳುವವೆಂಬ ಭ್ರಮೆ, ತನ್ನದು ಕನಸು ಎಂದು ಕಂಡರಿಯದ ಅವಿವೇಕಗಳನ್ನು ಅತ್ಯಂತ ಶಕ್ತಿಯುತವಾಗಿ ಲಂಕೇಶರು ನಾಟಕೀಕರಿಸಿದ್ದಾರೆ.
ಈ ನಾಟಕದಲ್ಲಿರುವ ಹೆಚ್ಚಿನ ಸಂಭಾಷಣೆ ಅಸಂಬದ್ಧವಾದದ್ದು, ಅತಾರ್ಕಿಕವಾದದ್ದು. ಇಂಥ ಅಸಂಗತ ಸಂಭಾಷಣೆ ರಂಗಪ್ಪನ ಯಾತನೆಯನ್ನು ಪಟ್ಟುಗೊಳಿಸುತ್ತದೆ. ಆತನ ಗೋಳಾ ಗೂಳೆಯಾಗಿ ಹಿಗ್ಗಿ ಕಾಲಭೈರವ ಸದೃಶ ನಾಟ್ಯವನ್ನೆಸಗುತ್ತದೆ. ಆದರೆ ರಂಗಪ್ಪ ಪಡೆಯುವ ಪ್ರತಾಪವನ್ನು ಪತ್ನಿ ಲಲಿತ ಹಾಗೂ ರಾಮು (ಪತ್ರ) ಆ ಮಟ್ಟಕ್ಕೆ ಅನುಭವಿಸುವದಿಲ್ಲ. ಅವರೀರ್ವರು ವಾಸ್ತವಿಕ ಜೀವನಕ್ಕೆ ಅಂಟಿಕೊಂಡಿರುವದೇ ಪೀಡೆಯಿಂದ ಪಾರಾಗುವದಕ್ಕೆ ಕಾರಣವಾಗಿರಬಹುದು. ಸ್ವಪ್ನ, ಹಳವಂಡಿ, ಬರಿ ಕಲ್ಪನೆಗಳಿಗೆ ತವರುಮನೆಯಾಗಿರುವ ರಂಗಪ್ಪನಿಗೂ, ದೈನಂದಿನ ಜೀವನದಿಂದ ಪಲಾಯನಗೈಯದ ರಾಮು ಹಾಗೂ ಲಲಿತರಿಗೂ ಅಜಗಜಾಂತರವಿದೆ.
ಅತಾರ್ಕಿಕ ಸಂಭಾಷಣೆ, ಅಸಂಬದ್ಧ ನಾಟಕಗಳ ಅವಿಭಾಜ್ಯವಾದ ಅಂಶವಾದರೂ ಅದು ಎಲ್ಲ ನಾಟಕಕಾರರ ಕೃತಿಗಳಲ್ಲಿಯೂ ನೇರವಾಗಿ ನೋವಿಗೆ ಬೀಜವಾಗುತ್ತದೆಂದು ಇದರ ಅರ್ಥವಲ್ಲ. ಉದಾಹರಣೆಗೆ ಶ್ರೀ ಚಂದ್ರಶೇಖರ ಪಾಟೀಲರ “ಕುಂಟಾ ಕುಂಟಾ ಕುರವತ್ತಿ” ಅಸಂಗತ ಸಂಭಾಷಣೆಯಿಂದ ತುಂಬಿ ತುಳುಕುತ್ತದೆ. ಆದರೆ ಈ ಉಭಯ ನಾಟಕಕಾರರ ಕೃತಿಗಳಿಂದ ಹೊರಹೊಮ್ಮುವ ಸಂವೇದನೆಯ ಸ್ವರೂಪವೇ ಬೇರೆ. ಪಾಟೀಲರಿಗೆ ಜೀವನ ವ್ಯರ್ಥ, ಅರ್ಥಹೀನವೆಂದು ಬಿಂಬಿಸಬೇಕಾಗಿದೆ ಅಷ್ಟೆ. ಆದರೆ ಲಂಕೇಶರಿಗೆ ಜೀವನ ಬರಿ ವ್ಯರ್ಥವಲ್ಲ; ಅದು ಸಂಕಷ್ಟಗಳ ಸೌಧ, ಕಷ್ಟಕಾರ್ಪಣ್ಯಗಳ ಕುದರ ಎಂತಲೇ ಅವರ ಹೆಚ್ಚಿನ ನಾಟಕಗಳು ದುರಂತದ ಧ್ವನಿಯಿಂದ ಕೂಡಿವೆ. ಕೆಲವು ರುದ್ರನಾಟಕಗಳೇ ಆಗಿವೆ. ಜೀವನವು ಶೂನ್ಯ, ಅಪ್ರಾಮಾಣಿಕತೆ, ಅಭಿಜಾತವಾದ ಸ್ನೇಹದ ಅಭಾವ, ಚಿರಪರಿಚಿತೆಯ ಗೈರಹಾಜರಿ, ವಿಕೃತ ಅಂತರಂಗ, ಅಂತರಾಳದಲ್ಲಿ ಮೊಂಡ ಕರಿಕೆಯಾಗಿ ಹಿಗ್ಗಿ ಹಬ್ಬುತ್ತಿರುವ ಅಸೂಯೆ, ಜೀವನದ ಮೌಲ್ಯಗಳ ಅಪಹರಣ, ಅಡಿ ಇಟ್ಟಲ್ಲೆಲ್ಲ ಮುಡಿವರೆಗೆ ತುಂಬಿ ತುಳುಕುತ್ತಿರುವ ಅಶಾಂತಿ, ಎದೆಗುದಿಗಳನ್ನು ಲಂಕೇಶರ ನಾಟಕಗಳು-ಗೋಳಗುಮ್ಮಟದಲ್ಲಿ ಉಳಿದ ಉಕ್ತಿ ಪ್ರತಿಧ್ವನಿಸುವಂತೆ ಉಲ್ಬಣಿಸುತ್ತವೆ. ಉದಹರಣೆಗೆ “ಗಿಳಿಯು ಪಂಜರದೊಳಿಲ್ಲ” ನಾಟಕದಲ್ಲಿಯ ಮಾತೊಂದನ್ನು ಇಲ್ಲಿ ವೀಕ್ಷಿಸಬಹುದು. “ಈ ನಗರದಲ್ಲಿ ಲೆಕ್ಕವಿಲ್ಲದಷ್ಟು ಜನರಿದ್ದಾರೆ.
-ಲಕ್ಷಲಕ್ಷ ಜನ….ಮಾತಾಡಿ, ಬರೆದು, ಗಿಲೀಟು ಮಾಡಿ, ಜೂಜಾಡಿ, ದುಡಿದು ತಿನ್ನೋ ಜನ-ಪೂಜೆಯ ಮಂದಿ, ಮಂತ್ರದ ಮಂದಿ, ಮಾತಿನ ಮಂದಿ, ಮೋಸದ ಮಂದಿ… ಒಬ್ಬರಿಗೊಬ್ಬರು ಗೊತ್ತಿಲ್ಲದ ಹುಷಾರಾಗಿ ಬದುಕುವ ಜನ…ತಮ್ಮ ನೋವಿನ, ಕಣ್ಣೀರನ್ನು ಬಚ್ಚಿಟ್ಟ ಜನ (ಪುಟ ೧೦೧)… ಹತ್ತು ವರ್ಷಗಳಿಂದ ನಾನು ಬಲ್ಲ ಸ್ನೇಹಿತರು ಸಮಸ್ಯೆ, ಹತ್ತು ಜನರ ಪರಿಚಯ ನನ್ನ ಆಳಕ್ಕೆ ಇಳಿದು ಮನಸ್ಸನ್ನು ಅಲ್ಲಾಡಿಸುತ್ತೆ. ಅವರ ಚರ್ಮ ಹೊಕ್ಕು ನೋಡುವ ದಾರಿ ನಮಗಿಲ್ಲ. ಅವರನ್ನು ನೋಡಿದರೆ ಗೊತ್ತಾಗೊಲ್ಲ. ಅವರೊಂದಿಗೆ ಹರಟಿದರೆ ಗೊತ್ತಾಗೊಲ್ಲ. ಅವರೊಂದಿಗೆ ಜಗಳವಾಡಿದರೆ ಗೊತ್ತಾಗೊಲ್ಲ”. (ಪುಟ ೧೦೩) (“ಗಿಳಿಯು ಪಂಜರದೊಳಿಲ್ಲ”).
ಲಕೇಶರ ಅನೇಕ ಪಾತ್ರಗಳು ಗೊಂಡಾರಣ್ಯದ ಕೇಂದ್ರ ಸ್ಥಾನದಲ್ಲಿ ನಿಂತು ಅರಚುವಂತೆ ಭಾಸವಾಗುತ್ತದೆ. ಇದೇ ಈಗ ತಾಯಿ ಗರ್ಭದಿಂದ ಹೊರಬಂದ ಶಿಶುವಿನಂತೆ ಕಿರುಚುವಂತಿವೆ. ಅನಾಥಪ್ರಜ್ಞೆಯ ಅರಿವು ನಮ್ಮನ್ನು ಪ್ರತಿಕ್ಷಣವೂ ಇರಿಯುತ್ತದೆ. ಅನೇಕ ಪಾತ್ರಗಳು ಹುಚ್ಚರಾಗಿಯೋ, ಅರೆಹುಚ್ಚರಾಗಿಯೋ, ನಮ್ಮ ಸಾಮಾನ್ಯ ನಿಲುವಿಗೆ
ನಿಲುಕದ, ಅಳೆಯಲಾಗದ ಪ್ರತಾಪದಿಂದಲೊ ತುಂಬ ವಿಚಿತ್ರವಾಗಿ ವರ್ತಿಸುತ್ತದೆ.
ಮುನಿಸ್ವಾಮಿಯ ವಿಷಯವಾಗಿ ತುಂಬ ಕರುಣಾಮಯನಾದ-ಗಂಡ, ಆತ ಸಹಾಯವನ್ನು ಯಾಚಿಸಿದಾಗ ತಾನೆಂದೂ ಬಿಟ್ಟುಕೊಡದ ವಚನವನ್ನು ನೀಡಿ, ಮರಳಿ ಮುನಿಯಪ್ಪ ಬಂದಾಗ ನಡೆಯುವ ಸಂದರ್ಭ ಅಭ್ಯಸನೀಯವಾಗಿದೆ. “ನೀನು ಕೈಚಾಚಿದಾಗಲೆಲ್ಲ ಬಾರಯ್ಯಾ ನಿನಗೆ ದುಡ್ಡು ಕೊಡುತ್ತಾರೆ ?-…ಇಂಥ ಪಟ್ಟಣದಲ್ಲಿ ನಮ್ಮ ಹುಷಾರಿ ನಮ್ಮ ಕೈಯಲ್ಲಿರಬೇಕು” ಎಂದು ಮುನಿಯಪ್ಪನಿಗೆ ‘ಗಂಡ’ನು ನುಡಿಯುವ ಮಾತು ಸ್ವತಃ ಆತನಿಂದಲೇ ಸಿದ್ಧವಾಗುವದು ತುಂಬ ಅಭ್ಯಸನೀಯವಾಗಿದೆ. ಆತ ಎರಡನೇದು ಸಲ ಬಂದಾಗಲೂ “ಮನೆಯಲ್ಲಿಲ್ಲಾ ಅಂತಾ ಹೇಳು” ಎನ್ನುವ ಗಂಡನ ಮಾತು ಆಚಾರ ಹಾಗೂ ವಿಚಾರಗಳ ನಡುವಿರುವ ಬಿರುಕನ್ನೂ ಎತ್ತಿ ತೋರಿಸುತ್ತದೆ.
ನಾಟಕಕಾರ ಲಂಕೇಶರಿಗೆ ಜೀವನ ಒಂದು ‘ವಿಧ್ಯುಕ್ತ ಆಚರಣೆ’. ಅವರು ಪಾತ್ರಗಳನ್ನು ಗಭೀರವಾಗಿ ವಿಶ್ಲೇಷಿಸಿದಷ್ಟೂ ಸೂಕ್ಷ್ಮವಾಗಿ ಪದರು ಪದರಗಳನ್ನು ಬಿಚ್ಚಿದಷ್ಟೂ ನಿರಾಶೆಯನ್ನೆ: ಕಾಣುವ ವ್ಯಕ್ತಿ.
ಹೀಗೆ ಪದರುಗಳನ್ನು ಕೊರೆದು ಅಂತರಂಗವನ್ನೂ ಹೊಕ್ಕು ನೋಡಿದಾಗ ‘ವ್ಯಕ್ತಿ’ಗೈದ ವ್ಯವಹಾರಗಳು-ಆಗಲೆ ಕಾಲದ ಗರ್ಭದಲ್ಲಿ ಮಸುಕಾದವುಗಳು – ಪುನರ‍್ರೂಪಗೊಳ್ಳುತ್ತ ನಡೆಯುತ್ತವೆ. “ತೆರೆಗಳು” ನಾಟಕದಲ್ಲಿ ನಡೆಯುವ ಕ್ರಿಯೆ ಇದೇ ರೀತಿಯದು. ‘ವ್ಯಕ್ತಿ’ (ಈ ನಾಟಕದಲ್ಲಿ ನಡೆಯುವ ಒಂದು ಪಾತ್ರ) ತಾನು ಮಹಾಕಾವ್ಯದ ವ್ಯಕ್ತಿತ್ವವುಳ್ಳವನೆಂದು ತನ್ನಷ್ಟಕ್ಕೆ ತಾನೇ ಬೀಗಿಕೊಂಡು ನಾಟಕದ ಕೊನೆಯಲ್ಲಿ ದುರಂತದ ಕೇಂದ್ರವ್ಯಕ್ತಿಯಾಗುವದನ್ನು ಸ್ಪಷ್ಟವಾಗಿ ಕಾಣುತ್ತೇವೆ. ಇಲ್ಲಿಯ ಪಾತ್ರಗಳ ನಡುವೆ ಹಲವಾರು ಸಲ ಅನ್ಯೋನ್ಯವಾದ ಸ್ನೇಹವಿದ್ದಂತೆ ತೋರುತ್ತದೆ ; ವಿಚಿತ್ರವೆಂದರೆ ಮರುಕ್ಷಣದಲ್ಲಿಯೇ ವಿಷಮತೆಯನ್ನೂ, ಭಿನ್ನತೆಯನ್ನೂ ಕಾಣಬಹುದಾಗಿದೆ. (ಚಂದ್ರಕಾಂತ ಕುಸನೂರರ “ಹಳ್ಳಾ ಕೊಳ್ಳಾ ನೀರು” ನಾಟಕವನ್ನು ನೆನಪಿಸಿಕೊಳ್ಳಬಹುದು.)
ಲಂಕೇಶರ ದೃಷ್ಟಿಕೋನವೇ ದುರಂತ, ಸಂಕಷ್ಟಮಯ ವಿಷಯದೆಡೆಗೆ ಒಲಿದಂತಿದೆ. ಮೌಲ್ಯ ಹೀನವಾದ, ಅರ್ಥಶೂನ್ಯ ನಾಗರಿಕ ಜೀವನವನ್ನೆ ಅವರ ದೃಷ್ಟಿಕೋನ ನಿರೀಕ್ಷಿಸುತ್ತದೆ. ಇಂತಹ ಸಮಾಜದ ಸ್ಥಿತಿಯ ವಿಷಯವಾಗಿ ಲಂಕೇಶರ ಪ್ರಖರ ರೋಪವನ್ನು ಅವರ ಕಾವ್ಯದಲ್ಲಿಯಯೂ ಕಾಣಬಹುದಾಗಿದೆ. (ಉದಾ : ದೇಶಭಕ್ತ ಸೂಳೆಮಗನ ಗದ್ಯ ಗೀತೆ”. ಆದರೂ ಲಂಕೇಶರ ಮುದುಡಿಕೊಳ್ಳದ ವ್ಯಕ್ತಿತ್ವವನ್ನು ಬಹುಮಟ್ಟಿಗೆ ನಿಚ್ಚಳವಾಗಿ ಕಾಣುವದು ಅವರ ನಾಟಕದಲ್ಲಿಯೇ.) (ಧಾರವಾಡದಲ್ಲಿ ನಾವು ನಡೆಸಿದ ಲಂಕೇಶರ ಜತೆಯ ಚರ್ಚೆಯಲ್ಲೂ ಅವರೇ ಹೇಳಿದ-‘ನಾನು ಮಹತ್ವದ ಕವಿ ಎಂದು ಭಾವಿಸಿಕೊಂಡಿಲ್ಲ’-ಎಂಬ ಮಾತು ಇದಕ್ಕೆ ಪುಷ್ಟಿಯಾದೀತು.) ಲಂಕೇಶರ ಸಾಹಿತ್ಯಕ ಶಕ್ತಿಯಲ್ಲಿ ಸಮಾಜವನ್ನು ವಸ್ತುನಿಷ್ಠವಾಗಿ ಕಾಣುವ ಗುಣದೊಂದಿಗೆ ಅದನ್ನು ವಿಶ್ಲೇಷಿಸಿ ನೋಡುವ ಮನೋವಿಜ್ಞಾನಿಯ ಪ್ರತಿಭೆಯು ಹೆಣೆದುಕೊಂಡಿರುವದರಿಂದ ಅವರು ಬರೆದುದೆಲ್ಲವೂ ವರ್ತಮಾನದ, ಸಾಮಾಜಿಕ ಜೀವನದ ವಿಮರ್ಶೆಯಾಗಿ ವಿಜೃಂಭಿಸುತ್ತದೆ. ಈ ದ್ವಿಗುಣಗಳ ಮೇಳವೇ ಲಂಕೇಶರ ಪ್ರತಿಭೆಯಾಗಿದೆ ಹಾಗೂ ನಿಗೂಢವಾದದ್ದನ್ನು ಪದರು-ಪದರಾಗಿ ಬಿಚ್ಚಿ ನೋಡುವ ಶಕ್ತಿಯನ್ನು ಈ ಪ್ರತಿಭೆ ಸ್ವಾಭಾವಿಕವಾಗಿ ನೆರವೇರಿಸುತ್ತದೆ.
ಈ ಲೇಖನವನ್ನು ಮುಗಿಸುವ ಪೂರ್ವದಲ್ಲಿ ನನ್ನಲ್ಲಿ ಮೊಳಕೆಯೊಡೆದಿರುವ ಸಂದೇಹವನ್ನು ಪ್ರಕಟಿಸಿದರೆ ತಪ್ಪೆನಿಸಲಿಕ್ಕಿಲ್ಲ. ಶ್ರೀ ಲಂಕೇಶರು “ಸಿದ್ಧತೆ”, “ಗಿಳಿಯು ಪಂಜರದೊಳಿಲ್ಲ”ದಂತಹ ನಾಟಕಗಳನ್ನೆ ಮುಂದೆಯೂ ಬರೆದರೆ ವಿಷಯ ಎಲ್ಲಿ ಮರುಕಳಿಸುತ್ತದೆಯೋ ಎಂಬ ಭಯ ನನಗೆ. ಇದರ ಅರ್ಥ ಲಂಕೇಶರ ನಾಟಕ ರಚನೆಯ ಸತ್ವ ತೀರಿಹೋಯಿತು ಎಂದಲ್ಲ. “ಅಷ್ಟು ಸಲೀಸಾಗಿ ತೀರುವ ಮನುಷ್ಯ ನಾನಲ್ಲ-ಎಂದುಕೊಳ್ಳುವ ಆಸೆ ನನಗೆ” ಎನ್ನುವ ಲಂಕೇಶರ ಹೇಳಿಕೆ ಕನ್ನಡ ಸಾಹಿತ್ಯವನ್ನು ಇನ್ನೂ ಶ್ರೀಮಂತಗೊಳಿಸಿತು ಎಂಬ ಭರವಸೆಯನ್ನು ಹುಟ್ಟಿಸಿಕೊಡಬಹುದಾಗಿದೆ. ಈಗಾಗಲೇ ದಶಕವೊಂದರಷ್ಟು ನಾಟಕಗಳನ್ನು ರಚಿಸಿರುವ ಲಂಕೇಶರು ಮುಂದೆ ಹೇಗೆ ಬರೆದಾರು, ಏನು ಬರೆದಾರು ಎಂಬುದು ನನ್ನಂಥವರಿಗೆ ಭಾರಿ ಕುತೂಹಲದ ವಿಷಯವಾಗಿದೆ. ಅವರು ಬಳಸುವ ಭಾಷೆಯ ಕಾವ್ಯ, ಅದರ ಜೊತೆಗೆ ಬರುವ ಕಾವ್ಯವಂತಿಕೆ, ಅದೇ ಸಮಯದಲ್ಲಿ ಸ್ವಪ್ನ-ಸೃಷ್ಟಿಯಲ್ಲಿ ವಿಹರಿಸದ ವಸ್ತುನಿಷ್ಠತೆ, ಅವರು ಕನ್ನಡ ರಂಗಭೂಮಿಗೆ ಕೊಡುತ್ತಿರುವ ನೂತನ ತಿರುವು ಆವರ ನಾಟಕಗಳನ್ನು ಅಭ್ಯಸಿಸುವಂತೆ ಮಾಡಿವೆ.
ಲಂಕೇಶರು ಇನ್ನೂ ಬೆಳೆಯುವ ಹಂತದಲ್ಲಿರುವಂತೆ ತೋರುವದರಿಂದ ನಿಖರವಾಗಿ ಅವರ ಮನೋಧರ್ಮದ ವಿಷಯವಾಗಿ ಭವಿಷ್ಯವನ್ನು ಹೇಳಲಾಗದು. (ಕವಿ ಪಾಟೀಲರು, ನಾಟಕಕಾರ ಪಾಟೀಲರಾಗಬಹುದೆಂದು ಯಾರು ಊಹಿಸಿದ್ದರು ? ಆದರೆ ಒಂದು ಮಾತು ಮಾತ್ರ ಬಹುಮಟ್ಟಿಗೆ ನಿಜ : ಲಂಕೇಶರಲ್ಲಿ ರಚನಾತ್ಮಕ ಶಕ್ತಿ ಅಕ್ಷಯವಾದ ಪ್ರಮಾಣದಲ್ಲಿ ಇದ್ದಂತಿದೆ. ಈ ಶಕ್ತಿಯು ಯಾವ ಸಾಹಿತ್ಯಕ ಪ್ರಕಾರಗಳಲ್ಲಿ ತನ್ನ ಸ್ವರೂಪವನ್ನು ಪಡೆದೀತು. ಸಾಕ್ಷಾತ್ಕಾರವನ್ನು ಹೊಂದೀತು-ಎಂಬದೇ ಭಾರಿ ಕುತೂಹಲದ ಪ್ರಶ್ನೆ, ಅಕೇಶರು ಕತೆ, ಕವನ, ಕಾದಂಬರಿ, ವಿಮರ್ಶೆಗಳನ್ನು ಬರೆಯುತ್ತಿರುವದರಿಂದ ಇಂಥ ಕುತೂಹಲ ಮತ್ತಷ್ಟು ಪ್ರಖರವಾಗುತ್ತದೆ.
ಆದರೆ ಲಂಕೇಶರ ದೃಷ್ಟಿ ಒಟ್ಟು ದೃಷ್ಟಿಯಾಗಿಲ್ಲವೆಂದೂ ಭಾಸವಾಗುತ್ತದೆ. ಏಕೆಂದರೆ ನಮ್ಮಲ್ಲಿ ಪಡುವಣದ ನಾಗರಿಕತೆ ಹಾಜರಿರುವದೂ ನಿಜ. ನಮ್ಮ ಸಂಸ್ಕೃತಿಯು ನಿರ್ಬೀತವಾಗಿ-ಹಳ್ಳಿಯಲ್ಲಾದರೂ-ಅಳಿಯದಿರುವದೂ ಸತ್ಯ, ಆದರೆ ಲೇಖಕರ ಮನೋಧರ್ಮ ಹಾಗು ವಾತಾವರಣ ಬರವಣಿಗೆಯ ಹಂತದಲ್ಲಿ ಮಹತ್ವಪೂರ್ಣ ಪಾತ್ರ ವಹಿಸುತ್ತವೆ. (ಆವರದೇ “ಬಿರುಕು” ಕಾದಂಬರಿಯಲ್ಲಿ ಗ್ರಾಮ್ಯಜೀವನ ಹಾಗೂ ಶಹರ ಜೀವನಗಳ ನಡುವಿನ ತಾಕಲಾಟವನ್ನು ಬಿಂಬಿಸುವದನ್ನೂ ನೆನಪಿಸಿಕೊಳ್ಳಬಹುದು). ಮೇಲಾಗಿ ನಶಿಸುತ್ತಿರುವ ಭಾರತೀಯ ಸಂಸ್ಕೃತಿ, ಬಲಿಯುತ್ತಿರುವ ಪಶ್ಚಿಮದ ನಾಗರಿಕತೆಯಷ್ಟು ಪ್ರಭಾವ ಬೀರುವ ಸಾಧ್ಯತೆ ಕಡಿಮೆಯಾಗಿರುವದರಿಂದ ಲಂಕೇಶರ ನಾಟಕಗಳು ಪಡುವಣದ ಗಾಳಿಯನ್ನು ಉಸುರುವದು ಸಹಜವಾಗಿದೆ. ತನ್ಮೂಲಕ ನಿಮ್ಮ ನವನಾಗರಿಕ ಸಮಾಜದ ಅಂತರಂಗದಲ್ಲಿಯ ಟೊಳ್ಳನ್ನೂ, ಮೌಲ್ಯ ಹೀನತೆಯ ಚಿತ್ರವನ್ನೂ ಬಿಂಬಿಸುವದರಿಂದ ನಮ್ಮ ನಾಡಿನ ಮಣ್ಣಿನ ವಾಸನೆಯಿಂದ ಸುತ್ತುವರಿಯಲ್ಪಟ್ಟಿವೆ. ಆದುದರಿಂದ ಲಂಕೇಶರ ನಾಟಕಗಳು ‘ರ್ದೆಶಿಯವೇ’, ‘ವಿದೇಶಿಯವೇ’ ಎನ್ನುವ ಪ್ರಮೇಯವು ಉದ್ಭವಿಸುವದಿಲ್ಲ.

Close

ಕಾವ್ಯ

ಕಾವ್ಯ

ರಘುನಾಥ್ ಎಂ ಎಸ್

ನಾನೂ ಅದನಿಚ್ಛಿಸುವದಿಲ್ಲ; ಈ ಎಲ್ಲ ವಾದ್ಯಕ್ಕಿಂತ
ಮಹತ್ವ ಪೂರ್ಣದ್ದಿರುವಾಗ
ಸಂಪೂರ್ಣ ಅಸಡ್ಡೆಯಿಂದದನು ಓದಿದರೂ
ಅದರಲ್ಲಿ ಕಾಣುವುದು
ನೈಜತೆಗೆ ಸ್ಥಾನ ಮಾತ್ರ.
ಹಿಡಿಯಬಲ್ಲ ಕೈಗಳು, ಅಭಿವ್ಯಕ್ತಿಯ
ಕಣ್ಗಳು, ಪುಟಿದು ನಿಲ್ಲುವ ರೋಮಗಳು,
ಇವು ಮಹತ್ವದ್ದು, ಕಾರಣ,

ಉಚ್ಚಮಟ್ಟದ ವಿವರಣೆ ಕೊಡಬಹುದೆಂದಲ್ಲ,
ಆದರದು ಪ್ರಯೋಜಕವು. ಆಸ್ಪಷ್ಟ
ವಾಗುವಷ್ಟು ತೀವ್ರ ಸೂಚ್ಯವಾದಾಗ,
ನಮ್ಮೆಲ್ಲರ ಬಗ್ಗೆ ಹೇಳಬಹುದದನೆ.
ನಮಗೆ ಸ್ಪಷ್ಟವಾಗದುದನ್ನು ನಾವೆಂದಿಗೂ
ಹೊಗಳುವುದಿಲ್ಲ: ತಲೆಕೆಳಗಾಗಿದ್ದು ಅಥವ
ಏನಾದರೂ ತಿನಿಸು ಹುಡುಕುವ ಬಾವಲಿ.
ನೂಕುವ ಆನೆಗಳು, ಸುತ್ತುವ ಕಾಡುಕುದುರೆ,
ಮರದ ಕೆಳಗೆ
ನಿರಾಯಾಸದ ತೋಳ, ತೊಣಚಿ ಹೊಕ್ಕ ಕುದುರೆ
ಯಂತಾಡುವ ಸ್ಥಿರ ವಿಮರ್ಶಕ, ಬೇಸ್
ಬಾಲ್ ಎಸೆತ, ಸಂಖ್ಯಾಶಾಸ್ತ್ರ ಚತುರ-
ಅಥವಾ
ಉದ್ಯಮ ವರದಿಗೂ ಶಾಲಾ ಪುಸ್ತಕಕ್ಕೂ
ಭೇದ ಕಲ್ಪಿಸುವ ಅಸಾಧುತ್ವ;
ಎಲ್ಲವೂ ಮುಖ್ಯವೇ: ಹೇಗಾದರೂ
ಗುರುತಿಸಲೇಬೇಕು.
ಕುಕವಿಗಳನ್ನು ಮುಂದಕ್ಕೆ ತಂದಾಗ, ಕಡೆ
ಗುಳಿಯುವುದು ಕಾವ್ಯವಲ್ಲ,
ನಮ್ಮೊಳಗಿನ ಕವಿ ಹೃದಯ
ಸೊಕ್ಕು ಮತ್ತು ಸಾಧಾರಣತೆಗೆ ಮಿಕ್ಕು
ಕಲ್ಪನೆಯ ನಿರೂಪಕವಾಗಿ,
ಕಾಲ್ಪನಿಕ ಉದ್ಯಾನದಲ್ಲಿ ನಿಜವಾದ ನೆಲಗಪ್ಪೆ
ವೀಕ್ಷಣೆಗೆ ತೋರುವಲ್ಲಿ,
ಅದನ್ನನುಭವಿಸುತ್ತೇವೆ ನಾವು.
ಈ ಮಧ್ಯೆ ನೀವೊಂದಡೆ
ಅಪೇಕ್ಷಿಸಿದರೆ, ನಿಜಸ್ಥಿತಿಯ ಕಾವ್ಯ ಸರಕನ್ನು
ಮತ್ತೊಂದೆಡೆ ಅದು ನೈಜತೆಯದಾಗಿದ್ದರೆ,
ಆಗಿದೆ ನಿಮಗೆ ಕಾವ್ಯಾಸಕ್ತಿ.

ಇದು ಅನುವಾದ. ಮೂಲ : ಮರಿಯಾನ್ ಮೂರ್
.

Close

ಅಪೂರ್ಣ

ಅಪೂರ್ಣ

ಶಂಸ ಐತಾಳ

ಅವನನ್ನು ನಾನು ಕಳೆದ ತಿಂಗಳ ಅಂತ್ಯದವರೆಗೂ ನೋಡಿರಲಿಲ್ಲ. ಅವನ ಹೊರ ವ್ಯಕ್ತಿತ್ವವೂ ಯಾರಾದರೂ ನೋಡಬೇಕೆಂದು ಬಯಸುವಂಥದ್ದಾಗಿರಲಿಲ್ಲ. ಆದರೂ ಇನ್ನೂ ಮೊದಲೇ ಅವನನ್ನು ನೋಡಬೇಕಿತ್ತು ಎಂದು ನಂತರ ನನಗನಿಸಿತು. ಅವನನ್ನು ಆಗಲೂ ನೋಡದೆ ಇರುವ ಸಂದರ್ಭವೂ ಇರಬಹುದಿತ್ತು. ಏಕೆಂದರೆ ಸಾಮಾನ್ಯವಾಗಿ ಸಂದರ್ಭಗಳಲ್ಲಿ ನಿರೀಕ್ಷಿತವಾದುವುಗಳ ಸಂಖ್ಯೆ ತೀರ ಕಡಿಮೆ. ಅವನೂ ನಾನೂ ಭೇಟಿಯಾಗಲೇಬೇಕೆಂದೇ ದೈವ ನಿಯತಿಯಿರುವಾಗ ಅವನೇನು ಮಾಡಬಲ್ಲ ? ನಾನೇನು ಮಾಡಬಲ್ಲೆ ? ಅಥವಾ ಯಾರಾದರೂ ಏನು ಮಾಡಬಲ್ಲರು ? ಒಂದು ದಿನ, ಬಹುಶಃ ರವಿವಾರವಿರಬೇಕು, ಬೆಳಿಗ್ಗಿನಿಂದಲೇ ದಿನವನ್ನು ಹೇಗೆ ಸೋಮವಾರವನ್ನಾಗಿ ಮಾಡಲಿ ಎಂದು ಯೋಚಿಸಿ ಯೋಚಿಸಿ ತಿಳಿಯದೆ ಒಂಟಿತನದ ಅಸಹ್ಯ ಬೇಸರದಿಂದ ಏಕೆ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ನನ್ನನ್ನೇ ನಾನು ಕೇಳಿಕೊಂಡಿದ್ದೆ. ಪ್ರಪಂಚಕ್ಕೆ ನನ್ನಿಂದ ಏನೂ ಲಾಭವಿಲ್ಲ ! ಆದ್ದರಿಂದ ನನ್ನ ಸಾವು ಪ್ರಪಂಚಕ್ಕೆ ಯಾವುದೇ ನಷ್ಟವನ್ನೂ ಉಂಟುಮಾಡಲಾರದು. ಹೀಗೆ ಅನಿಸಿದಾಗ, ನಾನು ಸಾಯುವುದರಿಂದ ಅಥವಾ ಬದುಕಿರುವುದರಿಂದ ಪ್ರಪಂಚದಲ್ಲಿ ಏನೂ ಬದಲಾವಣೆಯಾಗಲಾರದು ಎಂಬ ವಾಸ್ತವ ವಿಚಾರದ ಅರಿವು ಉಂಟಾಗಿ ನಾನು ಸಾಯಬೇಕೇ ಅಥವಾ ಇರಬೇಕೇ ಎಂದು ಕೇಳಿಕೊಂಡು ಉತ್ತರ ಹುಡುಕಲು ಪೇಚಾಡುವುದರಲ್ಲಿ ಏನೂ ಹುರುಳಿಲ್ಲ ಅನಿಸಿತು. ಆದರೂ ಗಂಗೆ, ರೇಖಾ, ಅಪ್ಪಯ್ಯ ಇವರೆಲ್ಲ ನೆನಪಿಗೆ ಬಂದಾಗ, ನಾನು ಸತ್ತು ಅಥವಾ ಇದ್ದು ಇವರಿಗೆಲ್ಲ ಬುದ್ದಿ ಕಲಿಸಬೇಕು ಅನಿಸುತ್ತಿತ್ತು. ಸಂಜೆ ಕೆರೆದಡೆಯ ಮೇಲೆ ಹೊರಟಿದ್ದೆ. ಏಕೆಂದು ತಿಳಿದಿರಲಿಲ್ಲ. ಅಥವಾ ಹಾಗೆ ಉದ್ದಕ್ಕೆ ಹೊರಟದ್ದಕ್ಕೆ ಯಾವ ವಿಶೇಷ ಕಾರಣ ಅಥವಾ ನಿರ್ದಿಷ್ಟ ಗುರಿ ಇರಲಿಲ್ಲ ಹೊರಡಬೇಕೆಂದು ಹೊರಟಿದ್ದರ ವಿನಾ. ಆಗಲೇ ಆತ ಎದುರಾದ್ದು………..

ಎದುರಾದವ ನಿಂತ. ಸಾರ್ ಎಂದ. ಒಂದು ಮಾತು ಎಂದು ಮುಂದುವರಿಸುತ್ತಾ ಕಡ್ಡಿ ಪೆಟ್ಟಿಗೆ ಇದೆಯಾ? ಎಂದು ಕೇಳಿದ. ನನಗೆ ತಿಳಿದಿರಲಿಲ್ಲ, ಏಕೆಂದರೆ ನಾನು ಸಿಗರೇಟು ಸೇದುವುದನ್ನು ಅಭ್ಯಾಸವಾಗಿ ಮಾಡಿಕೊಂಡಿರಲಿಲ್ಲ, ಯಾರ ಮೇಲಾದರೂ ಸಿಟ್ಟು ಅಥವಾ ನನ್ನ ಮೇಲೆಯೇ ಬೇಸರ ಉಂಟಾದಾಗ ಮಾತ್ರ ಸಿಗರೇಟು ಕಹಿ ಎಂದು ತಿಳಿದಿದ್ದರೂ ಈ ಯಃಕಶ್ಚಿತ್‌ ಕಹಿಗೆ ಹೆದರುವುದು ಹೇಡಿತನ ಎಂದು ನಿರ್ಧರಿಸಿ ಸೇದುತ್ತಿದ್ದುದಿತ್ತು. ನೋಡುತ್ತೇನೆ ಎಂದು ಪ್ಯಾಂಟಿನ ಕಿಸೆಗೆ ಕೈಹಾಕಿದೆ. ಆಗಲೇ ಅವನು ಕೈ ನೀಡಿದ್ದ. ಇದ್ದಿತ್ತು. ಕೊಟ್ಟೆ. ತೆಗೆದುಕೊಂಡ. ಕಡ್ಡಿ ಗೀರಿದ. ಹಚ್ಚಿದ. ಎಳೆದ. ಥ್ಯಾಂಕ್ಸ್ ಎಂದೂ ಹೇಳದೆ ಎಳೆಯುತ್ತಾ ಪೆಟ್ಟಿಗೆ ವಾಪಸ್‌ ಕೊಟ್ಟು ಅತ್ತಿತ್ತ ನೋಡದೆ. ನನ್ನ ಮತ್ತು ಅವನ ಸಂಬಂಧ ಅಷ್ಟು ಬೇಗ ಮುಗಿಯಲು ಸಾಧ್ಯವಿಲ್ಲದಿದ್ದರೂ ಮುಗಿಯಿತು ಎನ್ನುವ ಧಾಟಿಯಲ್ಲಿ ಸರಸರ ಹೆಜ್ಜೆ ಹಾಕಿದ. ತಿರುಗಿ ನೋಡಿದೆ, ಬಿಳಿ ನೆಹರೂ ಶರ್ಟ್ ತೊಟ್ಟ ಬೆನ್ನು ಕಾಣಿಸಿತು. ಕೆಳಗೆ ಪೈಪೋಟಿಯಿಂದ ನಾಮುಂದು ತಾಮುಂದು ಎಂದು ಹೆಜ್ಜೆ ಕಿತ್ತು ಇಡುತ್ತಿದ್ದ, ಇಟ್ಟು ಕೀಳುತ್ತಿದ್ದ ಚಪ್ಪಲಿ ರಹಿತ ಪಾದಗಳು, ಪಾದಗಳ ಮೇಲೆ ಕಾಲುಗಳನ್ನು ಮುಚ್ಚಿದ ದೊಗಲೆ ಪೈಜಾಮಾ. ಅವನ ಮುಖವನ್ನ ಸರಿಯಾಗಿ ಗಮನಿಸದ ಬಗ್ಗೆ ವಿಷಾದವೆನಿಸಿತು. ಪ್ರಪಂಚದ ಲಕ್ಷ ಲಕ್ಷ ಕೋಟಿ ಕೋಟಿ ಮಂದಿಯಲ್ಲಿ ಇವನೂ ಒಬ್ಬ. ಅವನ ಕುಲಗೋತ್ರ ನನಗೇಕೆ ಬೇಕು ಎಂದು ತಿಳಿದು ಅನಾಸಕ್ತನಾಗಿ ಇರಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಏಕೆಂದರೆ ಎಷ್ಟೋ ದಿನಗಳಿಂದ ನಾನು ಯಾರೋ ಒಬ್ಬನನ್ನು ಹುಡುಕುತ್ತಿದ್ದೆ. ಏಕೆಂದು ಸ್ಪಷ್ಟವಾಗಿ ಹೇಳಲಾರೆ. ಆದರೆ ಆ ಒಬ್ಬನನ್ನು ನೋಡಲೇಬೇಕೆಂಬ ಇಚ್ಛೆ ದಿನ ದಿನಕ್ಕೂ ಬಲಿಯುತ್ತಾ ಇತ್ತು. ಆ ಒಬ್ಬನೇ ಇವನಾಗಿದ್ದರೆ ? ಛೇ, ಮುಖ ನೋಡಬೇಕಿತ್ತು. ಹೆಸರು ವಿಳಾಸ ವಯಸ್ಸು ವಿದ್ಯಾರ್ಹತೆ ಉದ್ಯೋಗ ವಿಚಾರಿಸಬೇಕಿತ್ತು. ತಪ್ಪು ಮಾಡಿದೆ ಅನಿಸಿ ವ್ಯಥೆಯೂ ಆಯಿತು. ತಿರುಗಾಟ ಮುಗಿಸಿ, ಊಟ ಮಾಡಿ, ರೂಮಿಗೆ ಬಂದು, ಹಾಸಿಗೆ ಬಿಡಿಸಿ, ತಲೆದಿಂಬಿನ ಮೇಲೆ ಕಾಲಿಟ್ಟು ಒರಗಿದೆ. ಬೆಳಿಗ್ಗೆ ಎಚ್ಚರವಾದಾಗಲೇ ರಾತ್ರಿಯಿಡೀ ಕುಂಭಕರ್ಣ ನಿದ್ರೆ ಬಂದಿತ್ತೆಂದು ಗೊತ್ತಾದ್ದು…..

ಮರುದಿನವೂ ಅದೇ ಹೊತ್ತಿಗೆ ಅದೇ ದಾರಿಯಲ್ಲಿ ಹೊರಟೆ. ಅದೇ ಅವನು ಎದುರಾದ -ಹಿಂದಿನ ದಿನದಂತೆಯೇ. ಆದರೆ ನಿಲ್ಲಲಿಲ್ಲ. ಸಾರ್ ಎನ್ನಲಿಲ್ಲ, ಒಂದು ಮಾತು ಎಂದು ಮುಂದುವರಿಸಿ ಕಡ್ಡಿಪೆಟ್ಟಿಗೆ ಇದೆಯಾ ? ಎಂದು ಕೇಳಲಿಲ್ಲ. ಹೊಗೆಯುಗುಳುತ್ತಲೇ ಇದ್ದ. ನಾನೇ ಅವನನ್ನು ನಿಲ್ಲಿಸಿದೆ. ಕಡ್ಡಿ ಪೆಟ್ಟಿಗೆ ಇದೆಯಾ? ಎಂದು ಕೇಳಿದೆ, ಇಲ್ಲ ಎಂದ. ಆ ಹೊತ್ತಿಗೆ ಅವನ ಮುಖ ಗಮನಿಸಿದ್ದೆ. ಕೋಲು ಮುಖ. ನನ್ನಷ್ಟೇ ವಯಸ್ಸು ಇರಬಹುದು. ಅಥವಾ ಒಂದರಡು ವರ್ಷ ಕಡಿಮೆ ಅಥವಾ ಒಂದೆರಡು ವರ್ಷ ಹೆಚ್ಚು, ಗುಳಿ ಬಿದ್ದ ಕೆಂಪಾದ ಕಣ್ಣುಗಳು, ತಲೆಯ ಕೂದಲುಗಳು ಬೆಳ್ಳಗಾಗ ಹೊರಟಿದ್ದವು, ಒಂದು ವಿಕೃತ ಚಿತ್ರದಂತಿದ್ದ. ಒಮ್ಮೆ ಕೆಮ್ಮಿದ. ಆಗಲೇ ಕಳೆದ ತಿಂಗಳ ಮೊದಲ ಅಥವಾ ಎರಡನೆಯ ವಾರದಲ್ಲಿ ಪುರಭವನದಲ್ಲಿ ನಡೆದ ಚಿತ್ರಕಲಾ ಪ್ರದರ್ಶನ ನೋಡಿದ್ದು ನೆನಪಾದ್ದು……

ಅಂದು ಪ್ರದರ್ಶಿತವಾದ ಎರಡು ಚಿತ್ರಗಳು ತುಂಬ ಸುದ್ದಿಯನ್ನು ಎಬ್ಬಿಸಿದ್ದುವು. ನಾನೂ ನೋಡಿದ್ದೆ. ಬಹಳ ಚೆನ್ನಾದ ಚಿತ್ರಗಳು. ಅದರಲ್ಲಿ ಒಂದು ‘ಚಿಗುರ ತೊಡಗಿದ ಒಣ ರೆಂಬೆ”, ಅದು ಐನೂರು ರೂಪಾಯಿಗಳಿಗೆ ಮಾರಾಟವಾಗಿ ಹೋಗಿತ್ತು. ಸ್ವಾರಸ್ಯವೆಂದರೆ ಆ ಚಿತ್ರ ಬರೆದ ಕಲಾವಿದ ಯಾರೆಂಬುದೇ ಯಾರಿಗೂ ತಿಳಿದಿರಲಿಲ್ಲ. ಎಲ್ಲರೂ ಅವನ ಕುರಿತು ತಿಳಿಯಲು ಕುತೂಹಲಿಗಳಾಗಿದ್ದರು. ಉತ್ತರ ಯಾರಿಗೂ ತಿಳಿದಿರಲಿಲ್ಲ. ಆ ರಹಸ್ಯ ಅರಿಯಲು ಬಯಸಿದ ನಾನು ಕಾರ್ಯದರ್ಶಿಯನ್ನು ಕೇಳಿದಾಗ ಆತ ಹೇಳಿದ್ದ : ತಿಳಿದಿಲ್ಲ ಸಾರ್‌,ಪ್ರದರ್ಶನದ ಉದ್ಘಾಟನೆಯ ದಿನವೇ ಬೆಳಿಗ್ಗೆ ಆತ ಸರ‍್ರನೆ ಬಂದ. ನನ್ನ ಎರಡು ಚಿತ್ರಗಳನ್ನೂ ಇಲ್ಲಿ ಪ್ರದರ್ಶಿಸಬಯಸುತ್ತೇನೆ ಎಂದ. ಈಗ ಸಾಧ್ಯವಿಲ್ಲ ಎಂದರ ಕೇಳದೆ ಜೋಡಿಸಿಟ್ಟು ಹೊರಟುಹೋದ. ತೆಗೆಯೋಣವೆಂದುಕೊಳ್ಳುತ್ತಿರುವಾಗಲೇ ಉದ್ಘಾಟಕರು ರಿಬ್ಬನ್ ಕತ್ತರಿಸಿ ಒಳಗೆ ಬಂದಿದ್ದರು. ನೋಡಿ ಮೆಚ್ಚಿದರು. ಜನರೂ ಮೆಚ್ಚಿದರು. ಮತ್ತೆ ಅದನ್ನು ತೆಗೆಯುವುದರಲ್ಲಿ ಅರ್ಥವಿರಲಿಲ್ಲ. ಅಲ್ಲದೆ ಆ ಚಿತ್ರಗಳು ಪ್ರದರ್ಶನಕ್ಕೆ ನಿವ್ವಳ ಲಾಭವನ್ನೂ ತಂದುವು. ಆದರೂ ಅವನು ಯಾರು ಎಂದು ತಿಳಿಯದ್ದು ಬೇಸರದ ವಿಚಾರ, ಅಲ್ಲವೇ ಸಾರ್ ಎಂದ. ನಿಮಗವನು ತಿಳಿದಿರಬಹುದೇ ಸಾರ್, ಏಕೆಂದರೆ ನೀವು ಪತ್ರಿಕೊದ್ಯೋಗಿಗಳು ಎಂದ. ‘ಆತ ಹೇಗಿದ್ದಾನೆ ? ಎಂದು ಕೇಳಿದೆ. ಅವನ ಮುಖಚಹರೆ ಹೇಳಿದ. ಕೋಲುಮುಖ, ಗುಳಿಬಿದ್ದ ಕೆಂಪಾದ ಕಣ್ಣುಗಳು, ವಯಸ್ಸು ನಿಮ್ಮಷ್ಟೇ ಇರಬಹುದು, ಅಥವಾ ಒಂದೆರಡು ವರ್ಷ ಕಡಿಮೆ, ಅಥವಾ ಒಂದೆರಡು ವರ್ಷ ಹೆಚ್ಚು, ಅಂದಿದ್ದ. ನನಗೂ ಆಸಕ್ತಿ ಕೆರಳಿ ಅವನನ್ನು ಹೇಗಾದರೂ ಪತ್ತೆಮಾಡಿ ಒಂದು ಸಂದರ್ಶನ ಲೇಖನ ಬರೆಯಬೇಕೆಂಬ ಆಸೆಯಾಗಿತ್ತು. ಆದ್ದರಿಂದಲೇ ಕಡ್ಡಿ ಪೆಟ್ಟಿಗೆ ಇಲ್ಲ ಎಂದು ತಲೆಯಾಡಿಸಿ ಹೊರಟಾಗ ನಾನು ಅವನನ್ನು ಹಿಂಬಾಲಿ ಸಿದ್ದು…..

ಆತ ಪಿರಿಪಿರಿ ನಡೆಯುತ್ತಲೇ ಇದ್ದ, ಸಾರ್ ಎಂದು ಕೂಗಿದರೂ ಹಿಂತಿರುಗಿ ನೋಡಲಿಲ್ಲ. ನಾನೂ ಹಿಂದೆ ಓಡಿದೆ. ಸಂದಿಗೊಂದಿಗಳಲ್ಲಿ ಸುತ್ತಿ ಒಂದು ಮನೆಗೆ ಬಂದ. ಆ ಮನೆಯ ಬಾಗಿಲು ತೆರೆದೇ ಇತ್ತು. ಒಳಗೆ ನಡೆದ. ಬರಲೇ ಕೇಳಿದೆ. ನಿಮ್ಮ ಇಷ್ಟ ಅಂದ ಒಳಗೆ ಹೋದೆ. ಅದು ಮನೆಯಿದ್ದಂತಿರಲಿಲ್ಲ. ಅಥವಾ ಮನೆಯೇ ಅಲ್ಲ. ಒಂದು ರೂಮು, ನೋಡಿದೆ. ಒಂದು ಮೂಲೆಯಲ್ಲಿ ಒಂದು ಸ್ಟವ್ ಮತ್ತು ಅಡುಗೆ ಪಾತ್ರೆಗಳು ಮತ್ತು ಸೀಮೆಎಣ್ಣೆ ಡಬ್ಬ ಮತ್ತು ಕಡ್ಡಿ ಪೆಟ್ಟಿಗೆ ಎಲ್ಲ ಇದ್ದುವು. ಅದಕ್ಕೆ ಎದುರಾದ ಮೂಲೆಯಲ್ಲಿ ಒಂದು ಕುರ್ಚಿ ಒಂದು ಮುರುಕು ಮೇಜು. ಒಂದು ಚಿಕ್ಕ ಆದರೆ ಎತ್ತರದ ಸ್ಟೂಲು ಇದ್ದಿತ್ತು. ಮೇಜಿನ ಮೇಲೆ ಕೆಲವು ಹಳೆಯ ಸುದ್ದಿ ಪತ್ರಿಕೆಗಳು, ಖಾಲಿಕಾಗದ, ರಟ್ಟು, ಶಾಯಿಬಾಟಲ್ಲು, ಇಂಡಿಯನ್ ಇಂಕ್ ಬಾಟಲ್ಲು, ಕುಂಚ, ಬಣ್ಣದ ಕುಡಿಕೆಗಳು ಇತ್ಯಾದಿ ಇದ್ದುವು. ಗೋಡೆಯ ಮೇಲೆಲ್ಲ ಹಲವು ಚಿತ್ರಗಳು ತೂಗಾಡುತ್ತಿದ್ದುವು. ಒಂದು ದೊಡ್ಡ ಕಪ್ಪು ಹಲಗೆಯ ಇತ್ತು. ಅದರ ಮೇಲೆಯೂ ಹಲವು ರೇಖೆಗಳು. ಒಂದೇ ಒಂದೂ ಸರಳರೇಖೆ ಇರಲಿಲ್ಲ. ಎಲ್ಲ ವಕ್ರರೇಖೆಗಳೇ. ನನಗೆ ಅದರ ಚಿತ್ರವೇ ಅಥವಾ ಮತ್ತೇನೋ ಎಂದೂ ಅರ್ಥವಾಗಲಿಲ್ಲ. ಅರ್ಥವಾಗಬೇಕಾಗಿಯೂ ಇರಲಿಲ್ಲ. ಆತ ಕುಳಿತುಕೊಳ್ಳಿ ಎನ್ನಲಿಲ್ಲ. ಆದರೂ ನಾನೇ ಸ್ಕೂಲಿನ ಮೇಲೆ ಕುಳಿತುಕೊಂಡೆ. ನನ್ನ ಹೆಸರು ಭಾರ್ಗವ ಎಂದೆ. ಸುಮ್ಮನೆ ಇದ್ದ. ನನಗೆ ನಿಮ್ಮ ಸಂದರ್ಶನ ತೆಗೆದುಕೊಳ್ಳ ಬೇಕಾಗಿದೆ ಎಂದೆ. ಅದು ನನಗಿಷ್ಟವಿಲ್ಲ ಎಂದ. ನಾನಾವ ದೊಡ್ಡ ಮನುಷ್ಯ ! ಎಂದೂ ಕೇಳಿದ, ಏಕಿರಬಾರದು ? ಎಂದು ಕೇಳಿದೆ. ಒಪ್ಪಲೇಬೇಕು ಎಂದೆ. ನಾಳೆ ಬನ್ನಿ ಎಂದ ಮರುದಿವಸ ಹೋದ, ಏನಾಗಬೇಕಿತ್ತು ? ಎಂದು ಕೇಳಿದ, ನಾನು ಭಾರ್ಗವ ಎಂದೆ. ಯಾವ ಭಾರ್ಗವ? ಎಂದು ಕೇಳಿದ. ಕಥೆಗಾರ ಭಾರ್ಗವ ಎಂದೆ, ಪತ್ರಿಕೋದ್ಯೋಗಿ ಎಂದೆ. ಸುದರ್ಶನ ತೆಗೆದುಕೊಳ್ಳಬೇಕಿತ್ತು ಎಂದೆ. ನೀವು ಚೆನ್ನಾಗಿ ಬರೆಯುತ್ತೀರಿ ಎಂದ. ನನಗೆ ಖುಷಿ ಎನಿಸಿದರೂ ಆ ಬಗ್ಗೆ ಉಬ್ಬಲು ಪರುಸೊತ್ತು ಇರಲಿಲ್ಲ. ಈ ಮಹಾರಾಜ ವಿಚಿತ್ರ ವ್ಯಕ್ತಿ, ಯಾವಾಗ ಹೇಗೆ….ನಾನು ಪ್ರಶ್ನೆ ಕೇಳಿದಾಗ ನಿನಗೇಕೆ ಎಂದು ಕೇಳಿದರೂ ಕೇಳಿದನೇ. ಹೊರಗೆ ದಬ್ಬಿದರೂ ದಬ್ಬಿದನೇ. ಆದುದರಿಂದ ಆದಷ್ಟು ಬೇಗ ಸಂದರ್ಶನ ಪೂರೈಸಬೇಕಾಗಿತ್ತು. ನಿಮ್ಮ ಹೆಸರು ತಿಳಿಯಬಹುದೇ ? ಎಂದು ಕೇಳಿದೆ. ಅದೇನು ಕೇಳುತ್ತೀರಿ? ಹೆಸರಿನಲ್ಲೇನಿದೆ ? ಯಾವುದೊ ಒಂದು ಎಂದ. ಆದರೂ ಎಂದೆ, ಚಿತ್ರಕಾರ ಅಥವಾ ಕಲಾವಿದ ಎಂದೇ ಇಟ್ಟುಕೊಳ್ಳಿ ಎಂದ, ಯಾವ ಪತ್ರಿಕೆಗಾಗಿ ಈ ಸುದರ್ಶನ? ಎಂದು ಕೇಳಿದ, ಹೇಳಿದೆ. ನಿಮಗೆ ಚಿತ್ರಕಲೆಯಲ್ಲಿ ಆಸಕ್ತಿ ಮೂಡಿದ್ದು, ಹಂಬಲ ಬೆಳೆದದ್ದು ಎಂದೆ. ತುಂಬ ಚಿಕ್ಕಂದಿನಲ್ಲಿಯೇ ಆಸಕ್ತಿ ಹುಟ್ಟಿತ್ತು. ಹುಟ್ಟಿದ್ದರಲ್ಲಿ ಹೆಚ್ಚಿನವು ಬೆಳೆದಂತೆ ಇದೂ ಬೆಳೆಯಿತು. ಸಾವು ಯಾವಾಗಲೋ ಎಂದ, ಹಾಗೆನ್ನಬೇಡಿ. ನಿಮ್ಮಂಥ ಕಲಾವಿದರು ನಮ್ಮ ನಾಡಿನ ಸಂಪತ್ತು ಎಂದೆ, ನಕ್ಕ, ನಿಮ್ಮೂರು ? ಎಂದು ಕೇಳಿದೆ. ಇದೇ: ಅಂದ. ಮನೆ, ತಂದೆ ತಾಯಿ ಎಂದು ಕೇಳಿದಾಗ ‘ಇದೇ ಮನೆ ಎಂದ. ಬೋರ್ಡು ಮಾತ್ರ ತೂಗಿಸಿಲ್ಲ ಎಂದ. ನನಗೆ ನಿಮ್ಮಂಥವರ ಭಯ ಎಂದ. ಏಕೆ ಎಂದೆ. ನನಗೆ ಒಂಟಿತನ ಇಷ್ಟ ಎಂದ.
ಮದುವೆಯಾಗಿಲ್ಲವೇ ? ಎಂದು ಕೇಳಿದೆ. ಏಕೆ ಆಗಬೇಕು ? ನೀವು ಆಗಿರಬಹುದು. ಅಲ್ಲವೇ ? ಎಂದು ಕೇಳಿದ. ಆಗಬೇಕೆಂದಿದೆ ಎಂದೆ, ಆಗಬಹುದಲ್ಲ ? ಎಂದ. ನೀವು ಆಗೋಲ್ಲವೇ ? ಎಂದು ಕೇಳಿದೆ. ನನ್ನಲ್ಲಿ ಒಂದು ಉದ್ಯೋಗವೇ ? ಹಣವೇ ? ಯಾವ ಹೆಣ್ಣು ನನ್ನ ಕೈಹಿಡಿದಾಳು? ಎಂದ. ಹಣಕ್ಕಾಗಿ ಹುಡುಗಿಯರು ಮದುವೆಯಾಗುವುದಿಲ್ಲ. ಮದುವೆಯೊಂದು ವ್ಯವಹಾರವಲ್ಲ. ಗಂಡುಹೆಣ್ಣಿನ ನಡುವೆ ಪರಿಗಣಿಸಲ್ಪಡುವುದು ಪ್ರೇಮ ಮಾತ್ರ ಎಂದೆ. ನಿಮಗೆ ಗೊತ್ತಿಲ್ಲ. ಹೆಣ್ಣುಗಳು ತಮ್ಮ ಗಂಡ ತಂದುಕೊಡುವ ಸೀರೆ ಮತ್ತು ತೋರಿಸುವ ಸಿನಿಮಾ ಇತ್ಯಾದಿ ಇತ್ಯಾದಿಗಳ ಆಧಾರದ ಮೇಲೆ ತಮ್ಮ ಗಂಡಂದಿರಿಗೆ ತಮ್ಮ ಮೇಲೆ ಇರುವ ಪ್ರೇಮದ ಸೇಕಡಾವಾರನ್ನು ಅಳೆಯುತ್ತಾರೆ ಎಂದು ಹೇಗೆ ಹೇಳುತ್ತೀರಿ? ಎಂದು ಕೇಳಿದೆ. ನನ್ನ ಅನುಭವ ಎಂದ. ನಿಮ್ಮ ಅನುಭವವೇ ಎಲ್ಲರಲ್ಲೂ ಏಕಾಗಬೇಕು ? ನನ್ನ ರೇಖಾ ಹಾಗಲ್ಲ. ಆಕೆ ನನ್ನನ್ನು ಪ್ರೀತಿಸುತ್ತಾಳೆ ಎಂದೆ. ನಿಮಗೆ ಉದ್ಯೋಗ, ಘನತೆ ಎಲ್ಲ ಇದೆ ಸಮಾಜದಲ್ಲಿ ಎಂದ. ಹಾಗೆಯೇ ತಿಳಿದುಕೊಳ್ಳಲಿ ಅನಿಸಿದ್ದರಿಂದ ಆ ವಿಚಾರ ಅಲ್ಲಿಗೆ ಬಿಟ್ಟು ಅಂದರೆ ನೀವು ಪ್ರೇಮದಲ್ಲಿ ವಿಫಲರಾದವರೆ? ಎಂದು ಕೇಳಿದೆ. ಕೇಳಬೇಡಿ ಎಂದ. ಕುತೂಹಲ ಕೆರಳಿತು. ಹೇಳಬಹುದಲ್ಲ? ಎಂದೆ. ನಿಮ್ಮ ವಿಚಾರ ಹೇಳಿ, ರೇಖಾ ಯಾರು? ಎಂದು ಕೇಳಿದ-ನನ್ನದೇ ಸಂದರ್ಶನ ತೆಗೆದುಕೊಳ್ಳುವವನಂತೆ. ಆಗಲೇ ಮತ್ತೆ ನೆನಪಿಗೆ ಬಂದದ್ದು…

ಪ್ರತಿಯೊಬ್ಬರ ಬದುಕಿನಲ್ಲಿ ಹಲವು ಕಹಿ ಸಿಹಿ ಘಟನೆಗಳು ಹೆಣೆದುಕೊಂಡಿರುತ್ತವೆ. ನನ್ನ ಬದುಕಿನಲ್ಲಿಯೂ ಹಾಗೆಯೇ. ಆದರೆ ಇವುಗಳಲ್ಲಿ ಹೇಳಬಾರದ್ದೇ, ಹೇಳಲಾರದ್ದೇ ಹೆಚ್ಚು. ನನ್ನ ಕಥೆಯನ್ನು ಯಾರೆದುರೂ ಹೇಳಲು ಈ ವರೆಗೆ ಸಾಧ್ಯವಾಗಿರಲಿಲ್ಲ. ಸರಿಯಾದ ಕೇಳುಗ ದೊರೆತಿರಲಿಲ್ಲ. ಆದ್ದರಿಂದ ಎಲ್ಲ ಬರೆದಿಟ್ಟಿದ್ದೆ. ಅಷ್ಟೇ. ಆದರೆ ಆ ದಿನ ಸಿಕ್ಕ ಹೇಳಿದೆ–ನನ್ನ ಎಲ್ಲ ಕಥೆಯನ್ನೂ, ಅದರಲ್ಲಿ ಮುಖ್ಯವಾದ್ದು…..

ರೇಖಾಳನ್ನು ನಾನು ಪ್ರೇಮಿಸಿದ್ದು, ಮದುವೆಯಾಗಬೇಕೆಂದು ಬಯಸಿದ್ದು, ಆದರೆ ಗಂಗೆಯನ್ನೇ ಮದುವೆಯಾಗಬೇಕು ಇಲ್ಲವಾದರೆ ತನ್ನ ಆಸ್ತಿಯಲ್ಲಿ ಕಿಲುಬುಕಾಸು ಸಿಗದಂತೆ ಮಾಡುತ್ತೇನೆ ಎಂದು ಅಪ್ಪಯ್ಯ ಬೆದರಿಸಿದ್ದು. ಡಿಗ್ರಿ ಪರೀಕ್ಷೆಯಲ್ಲಿ ಫೈಲಾದ್ದು, ಹೊಟ್ಟೆಪಾಡಿಗಾಗಿ ಪತ್ರಿಕಾ ಕಛೇರಿ ಸೇರಿದ್ದು, ರೇಖಾಳ ತಂದೆಯೂ ತನಗೆ ತಮ್ಮ ಮಗಳನ್ನು ಕೊಡಲು ನಿರಾಕರಿಸಿದ್ದು, ಮುಂತಾದ್ದು, ಮುಂತಾದ್ದು..

ಇಷ್ಟೇನಾ? ಅಂದ. ಇದಕ್ಕೆ ಇಷ್ಟು ನಿರಾಶೆಯೇ? ಎಂದು ಕೇಳಿದ. ಮದುವೆಯೇನೂ ಜೀವನದ ಅನಿವಾರ್ಯ ಭಾಗವಲ್ಲ ಎಂದ. ರೇಖಾ ಆದರೇನು? ಗಂಗೆ ಆದರೇನು ? ಯಾವಳಾದರೂ ಹೆಣ್ಣು ಹೆಣ್ಣೆ ಎಂದ. ಹೆಣ್ಣನ್ನು ಕೈಹಿಡಿಯಬೇಕಾದ್ದು ಗಂಡಿನ ಬಾಳಿನ ದುರಂತ ಎಂದ. ಹೆಣ್ಣಿನ ಕೈಹಿಡಿದೇ ನನ್ನ ಬಾಳು ನರಕವಾದ್ದು ಎಂದ. ಎಲಾ, ಈಗತಾನೇ ಮದುವೆಯಾಗಿಲ್ಲ ಎಂದ ಈ ಮನುಷ್ಯ ಈಗೇನು ಹೇಳುತ್ತಿದ್ದಾನೆ ಅನಿಸಿ ಅಚ್ಚರಿಯಾಯಿತು. ನನ್ನ ಕೈ ಹಿಡಿವವಳಿಗೆ ನನಗಿಂತ ಹೆಚ್ಚು ನನ್ನ ಹಣ ಬೇಕಿತ್ತು. ಹಣಕ್ಕಾಗಿ ಆಕೆ ಹೊರಟು ಹೋದಳು ಎಂದ. ಈಗೆಲ್ಲಿದ್ದಾಳೆ ? ಎಂದು ಕೇಳಿದೆ. ನೀವು ಪತ್ರಿಕೋದ್ಯೋಗಿಗಳಷ್ಟೇ ? ಎಂದಾದರೂ ಸುಪ್ರಸಿದ್ಧ ನಟಿ ಅಮೃತಾಳ ಸಂದರ್ಶನ ತೆಗೆದುಕೊಂಡದ್ದುಂಟೆ ? ಎಂದು ಕೇಳಿದ ಇಲ್ಲ ಎಂದಾಗ ತೆಗೆದುಕೊಳ್ಳಲು ಪ್ರಯತ್ನಿಸಿರಿ ಎಂದ. ಹೂ ಎಂದೆ. ನೋಡಿ, ಪ್ರಣಯದ ವಿಫಲತೆಗೆ ಹತಾಶರಾಗುವುದರಲ್ಲಿ ಅರ್ಥವಿಲ್ಲ. ಹಾಗೆ ನೋಡಿದರೆ ಈ ಕಾಮ, ಮದುವೆ, ಪ್ರೇಮ, ದಾಂಪತ್ಯ, ಸೃಷ್ಟಿ ಕ್ರಿಯೆ ಇವು ಬದುಕಿನ ಅನಿವಾರ್ಯವೇನೂ ಅಲ್ಲ ಎಂದ. ರೇಖಾಳೊ ಗಂಗೆಯೊ ಮದುವೆಯಾಗಲೇಬೇಕೆನಿಸಿದರೆ ಯಾವಳನ್ನಾದರೂ ಮದುವೆಯಾಗಿ ಸುಖವಾಗಿಯೋ ದುಃಖಿಯಾಗಿ ಬದುಕಿ, ಇಲ್ಲವಾದರೆ ಏನಾದರೂ ಕಥೆ ಕವನ ಬರೆಯುತ್ತಾ, ಹಾಯಾಗಿ ಇರಿ. ಸಾಯುವ ಮೂರ್ಖತನ ಮಾತ್ರ ಖಂಡಿತ ಬೇಡ ಎಂದ. ಹೋಗುತ್ತೀರಾ? ಇಷ್ಟು ಸಾಕೇ ನಿಮ್ಮ ಪತ್ರಿಕೆಗೆ? ಎಂದು ಕೇಳಿದ. ಒಂದೇ ಪ್ರಶ್ನೆ, ಈಗೇನು ಬರೆಯುತ್ತೀರಿ ? ಎಂದು ಕೇಳಿದೆ. ಕಪ್ಪು ಹಲಗೆ ತೋರಿಸಿದ, ಹಲವು ರೇಖೆಗಳನ್ನು ಎಳೆಯಲಾಗಿತ್ತು. ಒಂದೇ ಒಂದ ಸರಳರೇಖೆಯಿಲ್ಲ, ಎಲ್ಲವೂ ವಕ್ರರೇಖೆಗಳೇ. ಯಾವ ಚಿತ್ರ ಎಂದು ಕೇಳಿದೆ. ಅರ್ಥವಾಗಿಲ್ಲವೆ? ಎಂದು ಕೇಳಿದ. ಇಲ್ಲ ಎಂದೆ. ಬದುಕು ಎಂದ. ಅದಕ್ಕೆ ಸ್ಪಷ್ಟವಾಗಿ ಅರ್ಥವಾಗುತ್ತಿಲ್ಲ ಎಂದುಕೊಂಡೆ. ಹೊರಟು ಬಂದೆ. ಬಹುಶಃ ಮರುದಿನದ ಪತ್ರಿಕೆಯಲ್ಲಿಯೇ ಇರಬೇಕು ಅನಾಮಧೇಯ ಚಿತ್ರಗಾರನೊಬ್ಬನ ಆತ್ಮಹತ್ಯೆಯ ವಿಚಾರ ಅವನ ಚಿತ್ರದೊಂದಿಗೆ ಅಚ್ಚಾದ್ದು…

ಈಗ ಪ್ರಸಿದ್ಧ ತಾರೆ ಅಮೃತಾ ಅವರ ಸಂದರ್ಶನ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ.

Close

ಗತಿ, ಸ್ಥಿತಿ ವಿಮರ್ಶೆ ಬಗ್ಗೆ ಒಂದು ಪ್ರತಿಕ್ರಿಯೆ

ಗತಿ, ಸ್ಥಿತಿ ವಿಮರ್ಶೆ ಬಗ್ಗೆ
ಒಂದು ಪ್ರತಿಕ್ರಿಯೆ

ರಘುನಾಥ ರಾವ್ .ಡಿ

ಗಿರಿಯವರ ‘ಗತಿ, ಸ್ಥಿತಿ’ ಕಾದಂಬರಿಯನ್ನು ಮೊದಲಬಾರಿಗೆ ಓದಿದಾಗಲೇ ಇದೊಂದು ಅಪೂರ‍್ವ ಕೃತಿ ಎನ್ನಿಸಿತ್ತು. ಸಾಕ್ಷಿ-೧೭ ರಲ್ಲಿ ‘ಗತಿ, ಸ್ಥಿತಿ’ಯ ಬಗ್ಗೆ ಶ್ರೀ ಜಾಲಿಹಾಳರು ಬರೆದಿರುವ ವಿಮರ್ಶೆಯನ್ನು ಓದಿ, ಮತ್ತೊಂದು ಸಲ ಕಾದಂಬರಿಯನ್ನು ಓದಿದಾಗ ನನ್ನ ಮೊದಲಿನ ಅನ್ನಿಸಿಕೆ ಮತ್ತಷ್ಟು ದೃಢವಾಯಿತು. ಹಾಗಾಗಿ ಆ ವಿಮರ್ಶೆಯಲ್ಲಿ ಅವರು ಎತ್ತಿರುವ ಕೆಲವು ಅಂಶಗಳ ಬಗ್ಗೆ ಚರ್ಚಿಸಬೇಕೆಂಬ ಉದ್ದೇಶದಿಂದ ಈ ಪ್ರತಿಕ್ರಿಯೆಯನ್ನು ಬರೆಯುತ್ತಿದ್ದೇನೆ.

ಶ್ರೀ. ಯು. ಆರ್. ಅನಂತಮೂರ್ತಿಯವರು-“ಈಚಿನ ಸಾಹಿತ್ಯದ ಬಗ್ಗೆ” ಎಂಬ ಲೇಖನದಲ್ಲಿ (ಸಾಕ್ಷಿ-೧೩), ಶ್ರೀ ಜಿ. ಎನ್‌. ರಂಗನಾಥರಾವ್‌ ಅವರು “ಗಿರಿಯವರ “ಗತಿ, ಸ್ಥಿತಿ”, ಎಂಬ ಲೇಖನದಲ್ಲಿ (ಸಂಕ್ರಮಣ-೪೬) ಆ ಕಾದಂಬರಿಯ ಮಹತ್ವವನ್ನು ಸಾಕಷ್ಟು ಚೆನ್ನಾಗಿಯೇ ಗುರುತಿಸಿದ್ದಾರೆ. ಆದರೆ, ಜಾಲಿಹಾಳರನ್ನು ಅವರು ನಿರಾಸೆಗೊಳಿಸಿದ್ದಾರೆ. [ಒಂದು ಉತ್ತಮ ಕೃತಿಯ ಬಗ್ಗೆ ಬೇರೆ ಬೇರೆ ದೃಷ್ಟಿಗಳಿಂದ ಭಿನ್ನಾಭಿಪ್ರಾಯವಿರಲು ಸಾಧ್ಯ. ಆದರೂ, ಆ ಕೃತಿ ಉತ್ತಮ ಕೃತಿಯಾಗಿರಲು ಸಾಧ್ಯವಿದೆ. ಇಲ್ಲದೆ ಹೋದರೆ, ಸಾಹಿತ್ಯ-ವಿಮರ್ಶೆಯೇ ಸಾಧ್ಯವಾಗದೇ ಹೋದೀತು.]

‘ಪಕ್ವ ಮನಸ್ಸಿನ ಲೇಖಕನೊಬ್ಬನ ಲೇಖನಿಯಿಂದ ಹೊರಬಂದ ಒಂದು ಅಪಕ್ವ ಕೃತಿ ಅನ್ನಿಸಿತು ಗಿರಿ ಅವರ “ಗತಿ, ಸ್ಥಿತಿ”-ಹೀಗೆ ಪ್ರಾರಂಭದಲ್ಲಿ ಬರೆದವರು.

“ಇಷ್ಟೊಂದು ಆಳವಾಗಿ ಮತ್ತು ಸೂಕ್ಷವಾಗಿ ನಾವು ವಿಮರ್ಶಿಸಬೇಕಾಗಿರುವ ಈ ಕಾದಂಬರಿ ಸಾಮಾನ್ಯ ಕಾದಂಬರಿ ಅಲ್ಲವೆಂಬುದು ಸ್ಪಷ್ಟ.”-ಲೇಖನದ ಕೊನೆಯಲ್ಲಿ ಹೀಗೆ ಬರೆದಿದ್ದಾರೆ. [ಈ ಕಾದಂಬರಿ, “ಕನ್ನಡದ ಇತ್ತೀಚಿನ ಅಸಾಮಾನ್ಯ ಕಾದಂಬರಿ” ಗಳಲ್ಲಿ ಒಂದು ಎನ್ನುವ ಅಭಿಪ್ರಾಯ ಅವರದಾಗಿದ್ದರೆ ಅವರು ಲೇಖನದ ಶುರುವಿನಲ್ಲಿ ಬಳಸಿರುವ ‘ಅಪಕ್ವ’ -ಶಬ್ಬಕ್ಕೆ ಯಾವ ಅರ್ಥವೂ ಬರುವುದಿಲ್ಲ.] ಈ ವಿರೋಧಾಭಿಪ್ರಾಯ ಇಲ್ಲಿ ಅಷ್ಟು ಮುಖ್ಯವಲ್ಲ. ಆದರೆ ಯಾವ ಕಾರಣಗಳಿಗಾಗಿ ಈ ಕಾದಂಬರಿ ಅವರಿಗೆ Significant ಆಗಿ ಕಂಡಿದೆಯೋ, ಅವುಗಳ ಬಗ್ಗೆ ತುಸು ವಿವೇಚಿಸುವ ಅವಶ್ಯಕತೆಯಿದೆ ಎನ್ನಿಸುತ್ತದೆ.

“…ಈ ಕಾದಂಬರಿಯಲ್ಲಿ ನಮಗೆ “Significant’ ಅನ್ನಿಸುವ ಅನೇಕ ವಿಷಯಗಳಿವೆ”, –ಎಂದು ಹೇಳಿ, ತಮಗೆ ಕಾದಂಬರಿ ಯಾಕೆ “Significant’ ಎನ್ನಿಸಿತು ಎಂಬುದಕ್ಕೆ ಪಟ್ಟಿಯೊಂದನ್ನು ಕೊಟ್ಟಿದ್ದಾರೆ. [ಉದಾ: “……ವಿಚಾರಗಳಿವೆ ಮತ್ತು ವಾಕ್ಯಗಳಿವೆ. ಈ ಕೃತಿಯಲ್ಲಿ ಲೇಖಕರ ಭಾಷೆ……ಬೌದ್ಧಿಕತೆ ಮತ್ತು ವ್ಯಂಗ್ಯ ಇವು-ನಾವು ತಲೆ ದೂಗುವಷ್ಟು ಪರಿಣಾಮಕಾರಿಯಾಗಿವೆ……ಫ್ಯಾಂಟಸಿಯ (Fantasy) ಉಚಿತವಾದ ಬಳಕೆಯಾಗಿದೆ”-ಇತ್ಯಾದಿ (ಸಾಕ್ಷಿ-೧೭, ಪುಟ-೧೦೮, ೧೦೯)].

ಅವರು ಮೇಲೆ ತಿಳಿಸಿರುವ ‘ವಿಷಯ’ಗಳಿಗಾಗಿ ಕಾದಂಬರಿ, ನನ್ನ ದೃಷ್ಟಿಯಲ್ಲಿ ಮಹತ್ವದ್ದಾಗುವುದಿಲ್ಲ. ಒಂದು ಕೃತಿಯ, ಪ್ರತಿಯೊಂದು ಅವಯವವೂ ಇಡೀ ಕೃತಿಯ ಒಟ್ಟಿಗೆ ಸಂಗತವಾಗಿರಬೇಕು; ಕೃತಿಯ ಕೇಂದ್ರಾರ್ಥವನ್ನು ಹೊರಹೊಮ್ಮಿಸಲು ಆವಶ್ಯಕ ವಾಗಿರಬೇಕು, ಒಂದು ವಾಕ್ಯ, ಒಂದು ವರ್ಣನೆ, ಕೆಲವು ವಿಚಾರಗಳು-ಪ್ರತಿಮೆಗಳು ಚೆನ್ನಾಗಿದ್ದರೆ ಸಾಲದು, ಒಂದುವೇಳೆ ಅಷ್ಟೇ ಇದ್ದರೆ, ಅಂಥಾ ರಚನೆಗಳನ್ನು ಒಳ್ಳೆಯ ಕೃತಿಗಳೆಂದು ಒಪ್ಪುವುದಕ್ಕೆ ಆಗುವುದಿಲ್ಲ.

ಈ ಕಾದಂಬರಿ ಆಧುನಿಕ ನಗರದ ಸಂವೇದನೆಯನ್ನು ತುಂಬ ಶಕ್ತಿಯುತವಾಗಿ ಅಭಿವ್ಯಕ್ತಿಸಿದೆ. ಇಡೀ ಕಾದಂಬರಿ ಆಧುನಿಕ ಸಂವೇದನೆಗೆ ಒಂದು ಪ್ರತಿಮೆಯಾಗಿದೆ… ಜೀವನದ ನಿಸ್ಸಾರತೆ, ಅರ್ಥಹೀನತೆ, ಬರಡುತನ, ಬೇಸರ-ಬೇರ್‌ಡಂ, ಏಕತಾನತೆ-ಮನಾಟನಿಯನ್ನು ಪರಿಣಾಮಕಾರಿಯಾಗಿ ಚಿತ್ರಿಸಿದೆ. ನಗರದ ‘ಗಜಿಬಿಜಿ, ಗಲಭೆಗೊಂದಲ’ದ ನಡುವೆ ಜೀವನ ಕಳೆಯುವುದಿರಲಿ, ದಿನಗಳನ್ನು ಕಳೆಯುವುದೇ ಅತ್ಯಂತ ತಾಪದಾಯಕವಾಗುತ್ತದೆ. ನಾಗರಿಕತೆ ಎಲ್ಲರನ್ನೂ, ಸಪಾಟು ಮಾಡಿದೆ. ಸುಡುವ, ಬೇಯಿಸುವ, ಕುದಿಯಿಸುವ, ಉಸಿರುಕಟ್ಟಿಸುವ ಇಲ್ಲಿನ ವಾತಾವರಣದಿಂದ ಬಿಡಿಸಿ ಕಂಡು, ಓಡಿಹೋಗಲು ಪ್ರಯತ್ನಿಸುವ ‘ಆತ’ ನಮ್ಮೆಲ್ಲರ ಪ್ರತೀಕ. ಜನರು ಕ್ರಿಯೆಗಳನ್ನು ಮಾಡುತ್ತಿದ್ದರೂ ಎಲ್ಲರೂ ಸತ್ತಿದ್ದಾರೆ ಎನ್ನುವುದನ್ನು ; ಸಮಾಜ ಸತ್ತು ಕೊಳೆಯುತ್ತಿದೆ ಎನ್ನುವುದನ್ನು ; ಟೈಪ್‌ರೈಟರ್ ಯಂತ್ರದಂತೆ ಜೀವನ ಯಾಂತ್ರಿಕವಾಗಿದೆ ಎನ್ನುವುದನ್ನು ಈ ಕಾದಂಬರಿ ಸತ್ವಯುತವಾಗಿ ಅಭಿವ್ಯಕ್ತಿಸಿದೆ. […… ಯಾರೊಬ್ಬರೂ ಅಲ್ಲಾಡದೆ, ನೇರವಾಗಿ, ಸ್ಥಿರವಾಗಿ, ಉಸಿರಾಡಿಸುವ ಸೂಚನೆಯೂ ಇಲ್ಲದೆ ಇತ್ತು……ಅವರಲ್ಲಿ ಯಾರಿಗೂ ಜೀವ ಇಲ್ಲ. ಎಲ್ಲಾ ಸತ್ತುಹೋಗಿದ್ದಾರೆ.” -ಗತಿ, ಸ್ಥಿತಿ-ಪುಟ-೧೦, ೧೧]. ರೂಮು, ಊರು, ಗಲ್ಲಿ, ಬೆಟ್ಟ, ಆಫೀಸು. ಜವಾನರು, ಗುಮಾಸ್ತರು-ಬಾಸುಗಳು ಎಲ್ಲರೂ ಇಕ್ಕಟ್ಟಿನ ಉಸಿರುಕಟ್ಟಿಸುವ ವಾತಾವರಣಕ್ಕೆ ಪೋಷಕರಾಗಿದ್ದಾರೆ. ಅಲ್ಲಿರುವುದು ಅದುಮುವ, ಕುಗ್ಗಿಸುವ, ವಿಲಿವಿಲಿ ಒದ್ದಾಡಿಸುವ ಪರಿಸ್ಥಿತಿ ಮಾತ್ರ ಏನಾದರೂ ಮಾಡಬೇಕೆನ್ನುವವನಿಗೆ ಏನನ್ನೂ ಮಾಡಲು ಸಾಧ್ಯವಿಲ್ಲದ ವಾತಾವರಣ, [“ಇಲ್ಲಿ ಒಂದೇ ಒಂದು ಸಾಧ್ಯ, ಏನೂ ಮಾಡದೆ ಇರುವುದು”], ಅನಾಥತೆಯ ಅರಿವು ‘ಆತ’ನಿಗೆ ಆಗುತ್ತದೆ. ಉಳಿದವರೆಲ್ಲಾ ಜೀವನಕ್ಕೆ ಒಗ್ಗಿ ಹೋಗಿದ್ದಾರೆ. ಆತ ಮಾತ್ರ ಪರದಾಡುತ್ತಿದ್ದಾನೆ. ಆದರೆ, ಇದ್ದಂತೆ ಹಾಗೇ ಇರುವ ಈ ಸಮಾಜದಲ್ಲಿ ತಿಪ್ಪರಲಾಗ ಹಾಕಿದರೂ ಏನೂ ನಡೆಯುವುದಿಲ್ಲ, ಏನೂ ಆಗುವುದಿಲ್ಲ. ಈ ಹಿನ್ನೆಲೆಯಲ್ಲಿ, ಕಾದಂಬರಿಯ ಭಾಷೆಯ ಬಗ್ಗೆ ಜಾಲಿಹಾಳರು ಬರೆದಿರುವುದನ್ನು ವಿಮರ್ಶಿಸುವುದು ಉಚಿತವೆಂದು ಭಾವಿಸಿದ್ದೇನೆ.

ಅವರು, ‘ಗತಿ, ಸ್ಥಿತಿ ಮತ್ತು ‘ಹಳದಿಮೀನು’ವಿನ ಭಾಷೆಗಳ ಬಗ್ಗೆ ಬರೆಯುತ್ತಾ, ‘ಹಳದಿ ಮೀನು’ ಕಾದಂಬರಿಯ ಭಾಷೆಗಿರುವ ಕಾವ್ಯಗುಣ ಮತ್ತು ಆಳ, ‘ಗತಿ, ಸ್ಥಿತಿ ಕಾದಂಬರಿಯ ಭಾಷೆಗಿಲ್ಲ ಎನ್ನುತ್ತಾರೆ. ಆ ಕಾದಂಬರಿಗಳ ಹೋಲಿಕೆಯೇ ಅಪ್ರಸ್ತುತವೆನಿಸುತ್ತದೆ. ಈಗಾಗಲೇ ತಿಳಿಸಿರುವಂತೆ, ಸ್ವಲ್ಪ ಮುಂದೆ ಜಾಲಿಹಾಳರೇ ಹೇಳಿರುವಂತೆ ಭಾಷೆಯೊಂದರಿಂದಲೇ ಒಂದು ಕೃತಿ ಉತ್ತಮವಾಗುವುದಿಲ್ಲ. ಅನುಭವ ಅಥವಾ ಸಂವೇದನೆಯಿಂದಲೇ ಬೇರ್ಪಡಿಸಲು ಸಾಧ್ಯವಿಲ್ಲ. ಮೇಲುನೋಟಕ್ಕೆ ಗತಿ, ಸ್ಥಿತಿಯ ಭಾಷೆ (ಗದ್ಯ) ಸೀದಾ-ಸಾದಾ ಎನ್ನಿಸಬಹುದು. ಆದರೆ, ಅದು ಆ ಕಾದಂಬರಿಗೆ ಹೇಳಿ ಮಾಡಿಸಿದ ಭಾಷೆ ಎನ್ನುವದರಲ್ಲಿ ಅನುಮಾನವಿಲ್ಲ. ಹಾಗೆಯೇ ‘ಹಳದಿಮೀನು’ ಕಾದಂಬರಿಯ ಭಾಷೆಯೂ ಸಾರ್ಥಕವಾಗಿದೆ. ಭಾಷೆ ಸಾರ್ಥಕವಾಗಿದೆ ಎಂದರೆ, ಹೇಳಬೇಕಾದ್ದು -ಅದೂ ಮುಖ್ಯವಾದ್ದು-ಏನೋ ಇದೇ ಎಂಬುದಂತೂ ಖಚಿತ. ಆದ್ದರಿಂದ, “…….ನವ್ಯವಿಮರ್ಶೆಯು ಇತ್ತೀಚೆಗೆ ಕೇವಲ ಭಾಷೆ ಮತ್ತು ತಂತ್ರ – ಇವುಗಳಿಗೇ ಪ್ರಾಮುಖ್ಯತೆಯನ್ನು”-ಕೊಡುತ್ತಿದೆ ಎಂಬುದನ್ನು ಒಪ್ಪುವುದಕ್ಕೆ ಆಗುವದಿಲ್ಲ. ತಂತ್ರ-ಭಾಷೆಯ ಅಭ್ಯಾಸ, ಕೃತಿಯೊಂದರ ವಿವೇಚನೆಯೇ ಆಗಿರುತ್ತದೆ, ಆಗಬೇಕು. ಭಾಷೆ ಚೆನ್ನಾಗಿದೆ, ತಂತ್ರ, ನೂತನವಾಗಿದೆ – ಎನ್ನುವಂಥ ಮಾತುಗಳಿಗೆ ಬೆಲೆಯೇ ಇಲ್ಲ. ಅದರೆ, ಒಂದು ಕಲಾಕೃತಿಯ ಭಾಷೆ ತಂತ್ರ, ಆ ಅನುಭವ, ಆ ಭಾಷೆ-ತಂತ್ರದಲ್ಲದೆ ಬೇರೆ ಯಾವ ರೀತಿಯಲ್ಲಿಯೂ ಅಭಿವ್ಯಕ್ತವಾಗಲು ಸಾಧ್ಯವಿಲ್ಲ ಎನ್ನುವಂತಿರಬೇಕು. ಹಾಗಾಗಿದೆಯೋ ಇಲ್ಲವೋ ಎನ್ನುವುದನ್ನು ವಿಶ್ಲೇಷಿಸಿ ನೋಡುವುದು ಕೃತಿಯ ದೃಷ್ಟಿಯಿಂದ ಅನಿವಾರ್ಯವಾಗುತ್ತದೆ.

ಸಂಗ್ರಹಣಗುಣ ಸೂಚ್ಯತೆ, ಧ್ವನಿತ್ವ”-ಗತಿಸ್ಥಿತಿಯ ಭಾಷೆಗಿಲ್ಲ-ಎನ್ನುತ್ತಾರೆ ಜಾಲಿ ಹಾಳರು. ಲಂಕೇಶರ ಹಾಗೆಯೇ-ಗಿರಿಯವರ ಕಾದಂಬರಿಯಲ್ಲೂ ಸಾಂದ್ರತೆ ಇರುವುದನ್ನು ಗುರುತಿಸುವುದು ಕಷ್ಟವಾಗುವುದಿಲ್ಲ. ಇಡೀ ಕಾದಂಬರಿಯೇ ಅದಕ್ಕೆ ಪ್ರತ್ಯಕ್ಷ ಉದಾಹರಣೆ. ಇನ್ನು ಸೂಚ್ಯತೆ-ಧ್ವನಿತ್ವಗಳ ಬಗ್ಗೆ : ಕಾದಂಬರಿ ಆಧುನಿಕ ಸಂವೇದನೆಗೆ ಒಂದು ಪ್ರತಿಮೆಯಾಗಿದೆಯೆಂದು ಈ ಹಿಂದೆ ಹೇಳಿದೆ. ಅಲ್ಲಿನ ಪ್ರತಿಯೊಂದು ಪಾತ್ರ, ವಿವರ, ಸನ್ನಿವೇಶಗಳು ಇನ್ನೇನನ್ನೊ ಧ್ವನಿಸುತ್ತಿವೆ ಎಂದು ನನಗನ್ನಿಸುತ್ತದೆ.ಆಫೀಸು-ಬಾಸು-ಗುಮಾಸ್ತರುಗಳು- ನಡೆದುಕೊಳ್ಳುವ ರೀತಿ ಅರ್ಥಹೀನತೆಯನ್ನ ಧ್ವನಿಸುತ್ತದೆ. ಕಾದಂಬರಿಯ ಗದ್ಯವೇ ಸಂವೇದನೆಗೆ ಪ್ರತಿಮೆಯಾಗಿದೆ. ಫೋಟೋಗ್ರಾಫರನ ಹಾಗೆ ಚಿತ್ರಗಳ ಮಾಲೆಯನ್ನು ನಿರ್ಮಿಸುತ್ತಾ ಹೋಗುತ್ತಾನೆ; ವೀಕ್ಷಕ ವಿವರಣೆಯಂತೆ ಕಣ್ಣಿಗೆ ಕಂಡದ್ದನ್ನು ಹೇಳುತ್ತಾ ಹೋಗುತ್ತಾನೆ- ಅನ್ನಿಸಬಹುದು. ಕಣ್ಣಿಗೆ ಕಾಣುವುದಷ್ಟೇ ಮುಖ್ಯವಲ್ಲ. ವಾಸ್ತವವಾದ ಆ ವಿವರಗಳು ಇನ್ನೇನನ್ನೂ ಸೂಚಿಸುತ್ತಿವೆ ಎನ್ನುವುದು ಖಚಿತ. ಅಪರಿಚಿತ ನಗರದಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸುತ್ತಾರಲ್ಲ ಆ ಭಾಗವನ್ನು ಈ ದೃಷ್ಟಿಯಿಂದ ನೋಡಬಹುದು: ಸುತ್ತಿ ಸುತ್ತಿ, ತಪ್ಪಿಸಿಕೊಳ್ಳಲು ದಾರಿ ಸಿಗದ ಅಸಹಾಯಕರಾಗಿದ್ದಾರೆ. ಅವರ ಜೀವನದ ದೃಷ್ಟಿಯಿಂದ ಆ ಸಂದರ್ಭ ಮಹತ್ವದ್ದಾಗಿದೆ. ಅಲ್ಲಿಯೇ ಅಂಗಡಿಯಲ್ಲಿ ಕುಳಿತಿದ್ದ ಬೀಡಿಯಂಗಡಿಯವನನ್ನು ಕೇಳುತ್ತಾರೆ. ಅವರ ಪ್ರಶ್ನೆಗೆ ಗಮನವನ್ನೇ ಕೊಡದೆ ತನ್ನ ಕೆಲಸದಲ್ಲಿ ತೊಡಗುತ್ತಾನೆ. ವಿಕ್ಷಿಪ್ತ ವ್ಯಕ್ತಿಗಳ ಬಗ್ಗೆ ಸಮಾಜ ಕಠೋರ ನಿರ್ಲಕ್ಷವನ್ನ ತಳೆಯುತ್ತದೆ – ಎಂಬುದನ್ನು ಅವನ ರೀತಿ ಹೇಳುತ್ತದೆ. ಬೀಡಾ ಅಂಗಡಿಯವನನ್ನು ಶಬ್ದಗಳಲ್ಲಿ ಚಿತ್ರಿಸುವ ಈ ಭಾಗ:

“ಒಬ್ಬ ದೊಡ್ಡ ಹೊಟ್ಟೆಯ ಬೊಜ್ಜಿನ ವ್ಯಕ್ತಿ ಅಂಗಡಿಯಲ್ಲಿ ಗೋಣಿಚೀಲ ಹಾಸಿಕೊಂಡು ಅದರ ಮೇಲೆ ಚಕ್ಕಳಮಕ್ಕಳ ಹಾಕಿ ಕುಳಿತುಕೊಂಡಿದ್ದ……..ತೋಳಿಲ್ಲದ ಕಪ್ಪು ಕೋಟೊಂದನ್ನು ಹಾಕಿಕೊಂಡಿದ್ದ……..” ಇತ್ಯಾದಿ (೭೯) ಸಂಪ್ರದಾಯದ ಜಡತ್ವವನ್ನು, ಅದು ಅಲಗಾಡುವಂಥದಲ್ಲ ಎಂಬುದನ್ನು ಅದು ಸೂಚಿಸುವುದಿಲ್ಲವೇ? ಹಾಗೇ ಅವನ ಎಲೆಗೆ ಸುಣ್ಣ ಬಳಿದು, ಅಡಿಕೆ ಪುಡಿ ಹಾಕಿ, ಬೀಡಾ ಕಟ್ಟಿಡುವ ರೀತಿ ಹೊಸ ಭಾವನೆಗಳಿಗೂ ಕಿಲುಬುಕಾಸಿನಷ್ಟು ಬೆಲೆ ಇಲ್ಲ ಎನ್ನುವುದಕ್ಕೆ,. ನಿರ್ಜೀವ ಯಾಂತ್ರಿಕ ಸಮಾಜಕ್ಕೆ ಸಂಕೇತವಾಗುವುದಿಲ್ಲವೇ? (ಪ್ರಟ ೮೦, ೮೧). ಮೇಲುನೋಟಕ್ಕೆ ಈ ವರ್ಣನೆಗಳು ವೀಕ್ಷಕ ವಿವರಣೆಯ ಥರ ಕಾಣಿಸುತ್ತವೆ. ಆದರೆ, ಅದರ ಆತಂಕ, ಅಸಹಾಯಕತೆಯ ಸಂದರ್ಭದಲ್ಲಿ ಬೀಡಿಯಂಗಡಿಯವನ ನಿರ್ಲಕ್ಷತೆ ತುಂಬಾ ಧ್ವನಿ ಪೂರ್ಣವಾಗಿದೆ. ಕಾದಂಬರಿಯಲ್ಲಿನ ಬಹುಭಾಗ ವಾಚ್ಯ ಮತ್ತು ವ್ಯಂಗ್ಯ ಎರಡೂ ಮಟ್ಟದಲ್ಲಿಯೂ ಸಾರ್ಥಕವಾಗಿದೆ. ಆದ್ದರಿಂದ, ಭಾಷೆಯ ಮಟ್ಟದಲ್ಲಷ್ಟೇ, “ತನ್ನ ಸಾರ್ಥಕ್ಯವನ್ನು ಕಂಡುಕೊಂಡಂಥ ಅಲ್ಪ-ತೃಪ್ತಕೃತಿ”- ಎನ್ನುವ ಹಾಲಿಹಾಳ ಅಭಿಪ್ರಾಯವನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ.

ತಮ್ಮ ಲೇಖನದಲ್ಲಿ ಅವರು ಚರ್ಚಿಸುವ ಮತ್ತೊಂದು ವಿಷಯ – ‘ಆತನ’ ಪಾತ್ರ ಚಿತ್ರಣದ ದೃಷ್ಟಿಯಿಂದ ಕಾದಂಬರಿ ಯಶಸ್ವಿಯಾಗಿಲ್ಲ ಎಂಬುದು. ಅದಕ್ಕೆ ಸಂಬಂಧ ಪಟ್ಟ ಹಾಗೆ ಅವರು ಎತ್ತಿರುವ ಕೆಲವು ಅಂಶಗಳ ಬಗ್ಗೆ ಕೆಲವು ಮಾತುಗಳನ್ನು ಹೇಳ ಬಯಸುತ್ತೇನೆ.

“……(ನಾಯಕನ ಮನಸ್ಥಿತಿಯೇ ಇಲ್ಲಿನ ಕೇಂದ್ರ ವಸ್ತು.)” -ಎಂಬುವುದು ಜಾಲಿಹಾಳರ ಅಭಿಪ್ರಾಯ. ‘ಆತ’ ಕಾದಂಬರಿಯ ಕೇಂದ್ರದಲ್ಲಿದ್ದಾನೆ-ನಿಜ. ಆದರೆ ‘ಆತನೇ’ ಕೇಂದ್ರ ವಸ್ತುವಲ್ಲ. ‘ಆತ’ನಿಲ್ಲದೆ ಈಗಿರುವ ರೀತಿಯಲ್ಲಿ ಕಾದಂಬರಿ ತೆರೆದು ಕೊಳುವುದಕ್ಕೆ ಸಾಧ್ಯವೇ ಇಲ್ಲ ಎನ್ನುವುದೂ ನಿಜ. ‘ಆತ’ನ ವೀಕ್ಷಣೆಯ ಮೂಲಕ ಜೀವನದ ಅರ್ಥಹೀನತೆಯನ್ನು ತೋರಿಸಿದ್ದಾರೆ. ಹಾಗೆ ನೋಡಿದರೆ, ಅಪರಿಚಿತ ನಗರ, ಬೆಂಗಳೂರು, ಮೈಸೂರು ನಗರಗಳೇ ಇಲ್ಲಿ ಮುಖ್ಯ ಪಾತ್ರವನ್ನು ವಹಿಸಿವೆ. ಆಧುನಿಕ ನಗರದ ಜೀವನ ಸ್ಥಿತಿಯೇ ಈ ಕಾದಂಬರಿಯ ಮುಖ್ಯ ವಸ್ತು. ಈ ಅರ್ಥದಲ್ಲಿಯೇ ಅನಂತಮೂರ್ತಿಯವರು, “…..ಪ್ರಾಯಶಃ ಬೆಳವಣಿಗೆಯಿಲ್ಲ, ಬೇಕೂ ಇಲ್ಲ” ಎಂದು ಬರೆದಿರಬೇಕು, ಆದರೆ, ಕಾದಂಬರಿಗೆ ಎರಡು ಮುಖಗಳಿರುವದನ್ನು ಮರೆಯುವಂತಿಲ್ಲ. ಒಂದು-ಸಮಾಜದ್ದು: (ಜೀವನದ್ದು). ನ್ಯೂರಾಲಜಿ ರಿಸರ್ಚ್ ಪ್ರೊಫೆಸರ್, ಆಫೀಸು, ಗುಮಾಸ್ತರುಗಳ ವರ್ತನೆಯ ಯಾಂತ್ರಿಕತೆಯನ್ನೂ ಚೆನ್ನಾಗಿ ಚಿತ್ರಿಸಿದೆ. ನಿಜವಾದ ಪ್ರತಿಕ್ರಿಯೆ ಇಲ್ಲಿ ಸಾಧ್ಯವೇ ಇಲ್ಲ. [“ಅಂದ್ರೆ ಇವರೆಲ್ಲ ಬಾಯಿಂದ ಶಬ್ದಗಳನ್ನು ಆಚೆ ಹಾಕ್ತಾರೆ ಅಷ್ಟೆ. ವಾಕ್ಯವಿಲ್ಲ, ಅರ್ಥವಿಲ್ಲ, ಅನ್ನಿಸಿಕೆಯಿಲ್ಲ”] ಇನ್ನೊಂದು -‘ಆತ’ನ ಪ್ರತಿಕ್ರಿಯೆಯದು: ಕಾದಂಬರಿಯ ಪ್ರಾರಂಭದಲ್ಲಿಯೇ ‘ಆತ’ನ ವಿಕ್ಷಿಪ್ತ ವ್ಯಕ್ತಿತ್ವ ತಯಾರಾಗಿದೆಯೆಂದು ಹೇಳಿ, ಈ ಕಾದಂಬರಿಯಲ್ಲಿ ‘ಆತ’ನ ಪಾತ್ರದ ಬೆಳವಣಿಗೆಗಿಂತ, ಪ್ರತಿಕ್ರಿಯೆಯೇ ಮುಖ್ಯ ಎಂದು ವಾದಿಸಬಹುದು. ಬದುಕನ್ನು ವಿಶಿಷ್ಟ ಮನೋಧರ್ಮದಿಂದ ನೋಡುವ, ವಿಡಂಬಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ಈ ಪಾತ್ರಕ್ಕೆ ಸಾಕಷ್ಟು ಹಿನ್ನೆಲೆಬೇಕಿತ್ತು. ಕಾದಂಬರಿಯ ಕೇಂದ್ರಾರ್ಥಕ್ಕೆ ‘ಆತ’ನ ವಿಕ್ಷಿಪ್ತ-ವ್ಯಕ್ತಿತ್ವ ಬೇಕೇಬೇಕು. ಕೆಲಸ ಸಿಗದೆ ಪರದಾಡಿದ್ದು, ಆಫೀಸು-ಗುಮಾಸ್ತರ-ಬಾಸುಗಳ ವರ್ತನೆ ಮಾತ್ರ ‘ಆತ’ನ ತೀವ್ರ ಜಿಗುಪ್ಸೆಗೆ ಕಾರಣವಲ್ಲ. ಆದರೆ, ಕಾದಬರಿಯಲ್ಲಿ ಅಷ್ಟು ಮಾತ್ರ ಚಿತ್ರಿತವಾಗಿರುವುದರಿಂದ ಆ ಕೊರತ ಮುಖ್ಯವಾದ ದೋಷವನಿಸುತ್ತದೆ. ಈ ದೃಷ್ಟಿಯಿಂದ ಜಾಲಿಹಾಳರ ಅಭಿಪ್ರಾಯವನ್ನು ಒಪ್ಪಿಕೊಳ್ಳಬಹುದು. ಅದು ಕಾದಂಬರಿಯ ಕೊರತೆಯಾಗಿ ಕಾಣಿಸುತ್ತದೆಯೇ ವಿನಾ ಇಡೀ ಕೃತಿ ಅಯಶಸ್ವಿಯಾಯಿತೆಂದೆನಿಸುವುದಿಲ್ಲ.

ಕಾದಂಬರಿಯ ಪ್ರಾರಂಭದಲ್ಲಿ ‘ಆತ’ ಮತ್ತು ‘ಆಕೆ’ ಹೇಗಿದ್ದರೋ ಹಾಗೇ ಕೊನೆಯಲ್ಲ ಉಳಿಯುತ್ತಾರೆ ಎನ್ನುವ ಅವರ ಅಭಿಪ್ರಾಯವನ್ನು ಪೂರ್ಣವಾಗಿ ಒಪ್ಪಲಿಕ್ಕೆ ಆಗುವುದಿಲ್ಲ. ಅಪರಿಚಿತ ಊರಿಗೆ ಬರುವಾಗ ಕೆಲಸಕ್ಕೆ ಸೇರುವ ವಿಚಾರದಿಂದ ಬಂದಿದ್ದಾರೆ. […ಕೆಲಸಕ್ಕೆ ಸೇರಬೇಕಾದ ಆತುರ-ಆತುರಗಳಿಂದ ಬೆಳಿಗ್ಗೆ ಎಂದೂ ಎಂಟು ಘಂಟೆಗೆ ಏಳದವರಿಬ್ಬರ ಆರು ಘಂಟೆಗೆ ಎದ್ದು ಕುಳಿತರು”, ಪುಟ ೧೩] ಬಾಸುಗಳ ಮೇಲೆ ಬಾಸುಗಳನ್ನು ಕಾಣುತ್ತಾ ಹೋಗುತ್ತಾನೆ. ನಿಧಾನವಾಗಿ, ಉಸಿರು ಕಟ್ಟಿಸುವ ವಾತಾವರಣದಿಂದ ಬಿಡಿಸಿಕೊಳ್ಳಬೇಕೆನ್ನುವ ಅನ್ನಿಸಿಕೆ ತೀವ್ರವಾಗುತ್ತಾ ಹೋಗುತ್ತದೆ. ನ್ಯೂರಾಲಜಿಯ ಗುಮಾಸ್ತ ಡೈರೆಕ್ಟರು ಬಂದಿದ್ದಾರೆ, ನೋಡಬಹುದು ಎಂದರೆ, “ಇಲ್ಲ, ನನಗೆ ಈಗ ಅವರನ್ನು ನೋಡ್ಬೇಕಾಗಿಲ್ಲ” ಎಂದು ಹೇಳಿ ತನ್ನ ದಾರಿ ತಾನು ಹಿಡಿಯುತ್ತಾನೆ. ಅಪರಿಚಿತ, ಊರಿಗೆ ಬಂದ ಮೊದಲಲ್ಲಿ ಬಾಸುಗಳನ್ನು ಕಾಣಲು ಅನಾಸಕ್ತನಾಗಿರಲಿಲ್ಲ, ಈಗ ಅನಾಸಕ್ತನಾಗಿದ್ದಾನೆ. [“ಎಷ್ಟು ಹೊತ್ತಿಗೆ ನ್ಯೂರಾಲಜಿಗೆ ಹೋಗಬೇಕು ? ಎಷ್ಟು ಹೊತ್ತಾದರೇನು, ಈಗ ಎಲ್ಲಾ ಒಂದೆ”, ಇತ್ಯಾದಿ, ಪುಟ-೬೪] “ಇಲ್ಲಿಂದ ಓಡಿ ಹೋದರೆ ಸಾಕಾಗಿದೆ”-ಎನ್ನುವ ಘಟ್ಟಕ್ಕೆ ಬರುತ್ತಾನೆ. ಮಾನಸಿಕವಾಗಿ, ತಪ್ಪಿಸಿಕೊಂಡು ಓಡುವುದಕ್ಕೂ ಪ್ರಯತ್ನಿಸುತ್ತಾನೆ “ಏನಾದರೂ ಬದಲಾವಣೆ ಆದೀತೆ ?”- ಎನ್ನುವ ಚಡಪಡಿಕೆ. ಆದರೆ, ಬದಲಾವಣೆ ಆಗುವುದಿಲ್ಲವೆಂಬುದು ಖಚಿತವಾಗುತ್ತದೆ. “..ಹೇಗೆ ಸಾಯುವವರೆಗೆ ಬದುಕಲಿ…” ಎನ್ನುವ ಅನ್ನಿಸಿಕೆ ಬೆಳೆಯುತ್ತಾ, ಕೊನೆಗೆ ಸಾವೇ ಕ್ಷೇಮ ಎನ್ನುವಂತಹ ಹಂತದವರೆಗೂ ಅವನ ಪ್ರತಿಕ್ರಿಯೆ ಬೆಳೆದಿದೆ. [“ಈ ಮೂರು ವರ್ಷದಲ್ಲಿ, ವರ್ಷವೇನು, ಕಳೆದ ಮೂರು ತಿಂಗಳಲ್ಲಿ ನಾನಂತೂ ಬದಲಾಗಿದ್ದೇನೆ.” ಪುಟ-೧೧೭)

ಕಾದಂಬರಿ ‘ಸ್ಥಿತಿ’ಯ ಬಗ್ಗೆ ಹೇಳುತ್ತದೆ. ‘ಗತಿ’ ಈ ಸಮಾಜದಲ್ಲಿ ಸಾಧ್ಯವಿಲ್ಲ ಎನ್ನುವುದನ್ನೂ ಸೂಚಿಸಿದೆ. ಅಪರಿಚಿತ ನಗರದಲ್ಲಿ, ಬೆಂಗಳೂರಲ್ಲಿ, ಮೈಸೂರಲ್ಲಿ, ಕೊನೆಗೆ ಅವನ ಹುಟ್ಟೂರಿನಲ್ಲಿ ಅವನಿಗಾಗುವ ಅನುಭವ ಒಂದೇ. ಎಲ್ಲೂ ನಿಲ್ಲುವುದಕ್ಕೆ ಆಗದಂಥ ಪರಿಸ್ಥಿತಿ, ‘ಆತ’ ಓಡುವುದೊಂದೇ ಆಗುತ್ತದೆ. ಆದರೆ, ಅದು ಮಾತ್ರ ಯಾವ ಬದಲಾವಣೆಯನ್ನೂ ತರುವುದಿಲ್ಲ. “ಇದೀಗ ಬೇರೆ, ಇದೀಗ ತನಗೆ ಹೊಸದು, ಇದರಲ್ಲೀಗ ತನ್ನ ಮನಸ್ಸನ್ನು ಖುಷಿಯಾಗಿಸಬಹುದು ಎಂದು ಶುರುವಿನ ಕ್ಷಣಗಳಲ್ಲಿ ಅನ್ನಿಸಿದ್ದು ಮರುಕ್ಷಣದಲ್ಲೇ ಜನ್ಮಜನ್ಮಾಂತರದಿಂದ ತಾನು ಮಾಡುತ್ತಿದ್ದುದು ಇದೇ ಅಲ್ಲವೇ ಈ ಪ್ರಪಂಚದಲ್ಲಿ ಹೊಸದೇ ಇಲ್ಲವೆ ಎನ್ನಿಸಿ ತಾನು ಹೊರಟಲ್ಲಿಗೆ ಬಂದು ಮತ್ತೆ ನಿಲ್ಲುತ್ತಿದ್ದ.” (ಪುಟ ೧೨೩)

ಮನೋವೈಜ್ಞಾನಿಕ ಪ್ರಬಂಧಕ್ಕೂ, ಮನೋವೈಜ್ಞಾನಿಕ ಕಾದಂಬರಿಗೂ ತುಂಬಾ ವ್ಯತ್ಯಾಸವಿದೆಯೆಂದು ಬೇರೆ ಹೇಳಬೇಕಾಗಿಲ್ಲ. ಸುದೈವದಿಂದ ಗಿರಿಯವರು ಒಳ್ಳೆಯ ಕಾದಂಬರಿಯನ್ನು ಬರೆದುಕೊಟ್ಟಿದ್ದಾರೆ. ಹಾಗೇ-ಕಾಮು, ಕಫ್ಕಾರನ್ನು ಓದಿದ ನಮ್ಮಂಥವರಿಗೆ ಈ ಕಾದಂಬರಿ ಎರವಲು ತಂದದ್ದು ಎನ್ನುವ ಭಾವನೆಯನ್ನು ಮೂಡಿಸುವುದಿಲ್ಲ. ನಮ್ಮ ಜೀವನದಿಂದಲೇ ಹುಟ್ಟಿರುವ, ನಮಗೆಲ್ಲಾ ‘ಅಗದಿ’ ಹತ್ತಿರವಾಗಿ ರುವ ಕಾದಂಬರಿ ಎನ್ನಿಸುತ್ತದೆ.

ಮೈಸೂರಿನಿಂದ ಹಳ್ಳಿಗೆ ಮರಳಿದವನು, ಮನೆಯಲ್ಲಿದ್ದರೂ ಹೋಟೆಲೊಂದರಲ್ಲಿ ಇರುವಂತೆ ಇರುತ್ತಾನೆ ಎನ್ನುತ್ತಾರೆ. “ತನ್ನ ಮನೆಯ ಜನರ ಬಗ್ಗೆ ತನ್ನ ಹಾಗೂ ಅವರ ಸಂಬಂಧದ ಬಗ್ಗೆ (ಅಥವಾ ಸಂಬಂಧವಿಲ್ಲದಿರುವಿಕೆ) ವಿಚಾರ ಮಾಡುವುದಿಲ್ಲ. ಆತ ಹೊಟೆಲ್ಲಿನಲ್ಲಿ ತಂಗಿದ್ದ ‘Co-lodgers’ ಬಗ್ಗೆ ಯೋಚಿಸಿದ ಅರ್ಧದಷ್ಟು ಸಹ ತನ್ನ ಮನೆಯವರ ಬಗ್ಗೆ ಯೋಚಿಸುವುದಿಲ್ಲ” ಎಂಬುದಾಗಿ ಜಾಲಿಹಾಳರು ಹೇಳುತ್ತಾರೆ. ಇದು ಕಾದಂಬರಿಯ ಕೊರತೆಯಾಗಿ ಕಾಣುತ್ತದೆ. ಮೂರ್ತಿಯ ಬಗ್ಗೆ, ಆಕೆಯ ಬಗ್ಗೆ ಹೆಚ್ಚಿಗೆ ಏನನ್ನೂ ಹೇಳದಿರುವುದು, ‘ಆಕೆ’ಯ ಮನೆಯವರ ಬಗ್ಗೆಯೂ ಮೌನ ವಹಿಸಿರುವುದು ಈ ಕಾದಂಬರಿಯ ಒಂದು ಕೊರತೆ.

ತಮ್ಮ ಲೇಖನದ ಕೊನೆಯಲ್ಲಿ ಜಾಲಿಹಾಳರು ಎತ್ತಿರುವ ಆಕ್ಷೇಪಣೆಯನ್ನು ಸುಲಭವಾಗಿ ತಳ್ಳಿಹಾಕುವುದು ಸಾಧ್ಯವಿಲ್ಲ. ‘ಆತ’ ಕೇವಲ ಉದ್ಯೋಗಾಪೇಕ್ಷಿಯೆಂದು ತಿಳಿಯಬಾರದು. ಜೀವನವನ್ನು ವಿಶಿಷ್ಟ ದೃಷ್ಟಿಕೋನದಿಂದ ನೋಡುವುದನ್ನು, ಈ ಕಾದಂಬರಿ ತೊಡಗುವುದಕ್ಕಿಂತ ಮೊದಲೇ ‘ಆತ’ ಕಲಿತಿದ್ದಾನೆ. ಆದ್ದರಿಂದ, ಬದುಕಿನ ಎಲ್ಲ ಚಟುವಟಿಕೆಗಳೂ ‘ಆತ’ನಿಗೆ ಅರ್ಥಶೂನ್ಯವಾಗಿ ಕಾಣುತ್ತವೆ. ಒಂದೇ ರೀತಿಯ ಆಫೀಸು ಬಾಸುಗಳ ವರ್ಣನೆಯಿಂದ ಕಾದಂಬರಿಗೆ ತೀವ್ರತೆ ಬಂದಿದೆ. [ಮತ್ತೆ ಮತ್ತೆ ಅಂಥದೇ ಸಂಭಾಷಣೆ ವಿವರಗಳು ಬರುವುದರಿಂದ ಬೇಸರ ತರಿಸಬಹುದು. ಅಥವಾ ಹೊಸದೇನನ್ನು ಹೇಳದೆ ಹೋಗಬಹುದು-ಕೂಲಿಗಳ ವರ್ತನೆ ಮುಂತಾದುವು. ಅಂಥಾ ಕಡೆ ಕಾದಂಬರಿ ವೀಕ್ಷಕವಿವರಣೆಯ ತಂತ್ರದಲ್ಲಿಯೇ ಆಸಕ್ತಿ ವಹಿಸದಂತಿರುತ್ತದೆ.]

ಆಧುನಿಕ ಸಂವೇದನೆಯನ್ನು ‘ಗತಿ,ಸ್ಥಿತಿ’ಯಷ್ಟು ಯಶಸ್ವಿಯಾಗಿ ಕಂಡರಿಸಿರುವ ಕಾದಂಬರಿಗಳು ಕನ್ನಡದಲ್ಲಿ ಅಪರೂಪ. ‘ಗತಿ,ಸ್ಥಿತಿ’ಯ ಬಗ್ಗೆ ಯು. ಆ‌ರ್‌. ಅನಂತ ಮೂರ್ತಿಯವರು ಹೇಳಿರುವ ಕೆಲವು ಮಾತುಗಳನ್ನು ಉದ್ಧರಿಸಬಯಸುತ್ತೇನೆ. “ಯಾವುದರಲ್ಲೂ ಆಸಕ್ತಿಯಿಲ್ಲದ ಕಾದಂಬರಿಯ ‘ಈತ’ ವಿಲಕ್ಷಣ ವ್ಯಕ್ತಿ ; ನಮ್ಮೆಲ್ಲರಲ್ಲೂ ಅವನ ಒಂದು ಅಂಶವಿಲ್ಲದಿದ್ದಲ್ಲಿ ಈ ಕಾದಂಬರಿ ನಮ್ಮನ್ನು ಹೀಗೆ ಕವಿದು ಬಿಡುತ್ತಿರಲಿಲ್ಲ.” ಈ ಎಲ್ಲಾ ಚರ್ಚೆಯ ಹಿನ್ನೆಲೆಯಲ್ಲಿ, “ಇಡೀ ಕಾದಂಬರಿ ಬರಿ ಒಂದು ಮನೋವೈಜ್ಞಾನಿಕ ವೇಧಶಾಲೆಯಾಗಿ ಪರಿಣಮಿಸಿದೆ”-ಎನ್ನುವ ಜಾಲಿಹಾಳರ ಕಟ್ಟ ಕಡೆಯ ಹೇಳಿಕೆ ಕೃತಿಯ ಅರ್ಥವನ್ನು ತುಂಬಾ ಸಂಕುಚಿತಗೊಳಿಸಿದಂತೆ ಆಗಲಿಲ್ಲವೇ ?

Close

ಎರಡು ಕವಿತೆಗಳು

ಎರಡು ಕವಿತೆಗಳು

ಜಯಂತ ಕಾಯ್ಕಿಣಿ

೧ ಕನ್ನಡಿ
ನಮ್ಮ ಮನೆಯ ಕನ್ನಡಿ
ಯಲಿ ಮಾತ್ರ ನನಗೆ ನಾ ಚಂದ
ಉಳಿದಲ್ಲಿ ಪ್ರೇತ ನರಪೇತಲ
ಊದಿಕೊಂಡ ಗಲ್ಲ
ಚಿಂತೆ ತುರಿಸುವ ಮೂಗು
ಆಸೆ ಇಂಗಿದ ಕಣ್ಣು ತುಟಿ ಕಿವಿ ಥೇಟು ಗೊಲ್ಲ
ನ ರೂಪ ಇವೆಲ್ಲ
ಅತೀ ಠಾಕು ಠೀಕಾಗಿ
ಚದುರಿಕೊಂಡು ಕೂತುಕೊಳ್ಳುತ್ತವೆ
ನಮ್ಮ ಕನ್ನಡಿಯಲ್ಲಿ
ನನಗೆ ನನ್ನನ್ನೇ ಮರೆಸುತ್ತವೆ

ಮೊನ್ನೆ ಕಟ್ಟು ಕಳಚಿತ್ತದರದು
ರಿಪೇರಿಸಿ ತಿರುಗಿ ತಂದಾಗ
ಏನೂ ಬದಲಾವಣೆ ಅಷ್ಟಷ್ಟು ಇಷ್ಟಿಷ್ಟು
ತೂಕ ತಪ್ಪಿದ ಸ್ವಭಾವ
ಇಲ್ಲಾಗದವುಗಳೆಲ್ಲ ಅಲ್ಲಾದಂತೆ
ಕೆಟ್ಟವನಾಗಿದ್ದವ ಒಮ್ಮೆಗೇ ಸಾಧುವಾದಂತೆ
ಕೊನೆಗೆ ನಿರಾತಂಕ ನನ್ನ
ಅಕ್ಷರಸ್ಥ ಬದುಕು
ಶಬ್ದಗಳಲ್ಲಿ ಒಣಗಿದಂತೆ
ಕನ್ನಡಿಯ ಅದ್ಭುತ ಡೊಂಬರಾಟ
ಗೊತ್ತಿದ್ದೂ ಆಳದ ಮಿಥ್ಯಪರಿಪಾಠ
ನನಗೂ ಹೆದರಿಕೆಯಿಲ್ಲ ಸೋಗಿನ ವ್ಯಕ್ತಿತ್ವಕ್ಕೆ
ಒಂದೇ ಕಳವಳವೆಂದರೆ ಆಗಾಗ
ನಮ್ಮ ಕೆಲಸದ ನಾಗಿ ಸಂಜೆ ಆರರ ಅಪ್ಪ
ಪ್ರಿನ್ಸಿಪಾಲರು ಮತ್ತು ದೇವಸ್ಥಾನ ಭಟ್ಟ
ಹೀಗೆ ಇವರೆಲ್ಲ ಒಳಗೆ ಸೇರಿಕೊಂಡು ಗುಂಪಾಗಿ
ನನ್ನನ್ನೇ ಶೂನ್ಯ ಮಾಡುತ್ತಾರೆ
ಆಗ ಆ ನಾನು
ತಡೆಯಲಾರದೆ ಗಬಕ್ಕನೆ ಹೊರಬಂದು
ಈ ನನ್ನನ್ನು ತಬ್ಬಿಕೊಳ್ಳುತ್ತೇನೆ
ತಪ್ಪಾಯಿತು ತಪ್ಪಾಯಿತು ಅನ್ನುತ್ತೇನೆ
ಅತ್ತು ಅತ್ತು ಸತ್ಯವಾಗುತ್ತೇನೆ

ಆದರೂ ಈ ಕನ್ನಡಿ ಅಲ್ಲೇ
ಮತ್ತು ನಾನಿಲ್ಲೇ ಇರಬೇಕು ಅದೇ ನನಗೆ ಇಷ್ಟ
ಏಕೆಂದರೆ ಅದರ ಕಣ್ಣು ತಪ್ಪಿಸಿಕೊಂಡು
ನಾನು ಬದುಕುವದು
ತುಂಬಾ ತುಂಬಾ ಕಷ್ಟ.

೨ ಆತಂಕ

ಒಮ್ಮೆಗೇ ಆಗಸ ಕಚ್ಚಿದ ಗುಡುಗುಡು ಮುಗಿಲು
ಫಳ್ಳನೆ ಮಿಂಚುವ ಮಿಂಚು
ಪ್ರಬುದ್ಧ ಮಳೆ ತೊನೆಯುತ್ತ
ಇಳೆಗೆ ಇಳಿಯುವ ಕುರುಹು

ನೆಲದ ಮೈತುಂಬ ಸಂಭ್ರಮ ಕಾತರ
ಎಂದಿನದೇ ತೋಯುವಿಕೆ
ಮರಳಿ ಸುರಿಯುವದೆಂದು
ಬಿಸಿಲು ಕಾರುವ ಹಸಿರು ಹೊಳಪು ಸಸಿಗಳಿಗೆಲ್ಲ
ಒನಪು ವೈಯಾರ.
ಪುಳಕಿತ ಸ್ನಾನಕ್ಕಾಗಿ ಮಮ್ಮಲ ತುಡಿಯುತ್ತಿರುವ
ಹೂ ಜಿಗ್ಗು ಮಣ್ಣು ಮೊಳೆತ ಗರಿಕೆಗಳ
ಮಿರಿಮಿರಿವ ಕಣದಲ್ಲು ಬಿರಿಬಿರಿವ ಮನದಲ್ಲು
ಸಂದಿಗೊಂದಿಗಳಲ್ಲು
ಕಚಗುಳಿಯ ಮೈಬೆವರು.
ಹಾಲಿನ ಹಾಡಿನ ಜತೆಗೆ ಸಂತಸದ ಹೊಗರು
ಹೂ ಬಿಲ್ಲು ಚುಂಬನದ
ಸವಿಯ ರೋಮಾಂಚನಕಾಗಿ
ಹಸಿರುಗಳ ಒಕ್ಕೊರಲ ಜೀವಂತ ಕಾದಾಟ
ಆತನಕ ಆತಂಕ.

ಆದರೆ
ಇನ್ನೂ ತಿಂಗಳು ತುಂಬದ ಹೊಸ
ಹೊಚ್ಚ ಸಸಿಗಳಿಗೆ ಹಸಿ ಹುಲ್ಲು ಮರಿಗಳಿಗೆ
ಹಸಿರುಗಚ್ಚುತ್ತಿರುವ
ಎಳೆ ಪಾಚಿ ಗರಿಗಳಿಗೆ ಮಾತ್ರ
ಎಲ್ಲವೂ ಅನಿರೀಕ್ಷಿತ
ಹೆದರುಗಟ್ಟುವ ಬೆದರು
ಒಳಗೊಳಗೆ ನಡುಕ
ಮಾತ್ರ ಕಣ್ಣು ಪಿಳುಕಿಸುತ್ತಿರುವ
ಚಿಗಿತ ಎಳೆ ಸಸಿಗಳಿಗೆ
ಹೊಸತೊಂದೆ ಅನುಭವದ ಬದ್ದ ಕಾತರಿಕೆ
ಅಪ್ರಬುದ್ಧ ತಿಳುವಳಿಕೆ
ಏನೋ ಆಗಬಾರದ್ದು ಆಗಿ ಹೋಗಲಿರುವುದ
ಥರಗುಟ್ಟು ಮುಗಿಲು
ಮೈಮೇಲೆರಗುವದ
ನೆನೆದೇ ಮೈ ಮುರಿ ಚೂಪು.

ಕೊನೆಗೊಮ್ಮೆ
ಪುಟಪುಟಸಿ ಪುಳಕಿತ ಧಾರಾವರ್ಷ
ಹೂ ಎಸಳು ತೆಳುಮೊಗ್ಗು ಚಿಗುರಗಳ ತೊಯ್ಸುತ್ತ
ಪರಿಮಳದ ತಂಪನ್ನು ಕರಡುತ್ತ ಹರಡುತ್ತ
ಗಳಗಳಿಸಿ ಇಳಿದಾಗ

ಮೂಲೆ ಮೂಲೆಗಳಲ್ಲು
ಮಡುವುಗಟ್ಟುವ ಹರುಷ
ಎಲ್ಲೆಲ್ಲು ನಿಟ್ಟುಸಿರು ತಂಪು ಸ್ಪರ್ಶ
ಮತ್ತು…ಮತ್ತು…
ನೆಲೆನಿಂತ ನೀರಿಂದ ಹೊರಗೆ ಚಿಮ್ಮುತ್ತಿರುವ
ಏನೋ ಸಹಿಸಿದನೆಂಬ
ಏನೂ ಸಹಿಸುವನೆಂಬ
ಪುಟಾಣಿ ಹಸಿರು ತಲೆಗಳ ಖುಷಿ
ಮುದ್ದು ಧಿಮಾಕು.

Close

ಗತಿ, ಸ್ಥಿತಿ-ಒಂದು ವಿಮರ್ಶೆ ಐದು ಅನುಮಾನಗಳು

ಗತಿ, ಸ್ಥಿತಿ-ಒಂದು ವಿಮರ್ಶೆ
-ಐದು ಅನುಮಾನಗಳು

ಅವಧಾನಿ ಜಿ ಎಸ್

ಈಚಿನ ಅತ್ಯಂತ ಮುಖ್ಯ, ನಿಜವಾದ ಅರ್ಥದಲ್ಲಿ ಹೊಸದೆನ್ನಿಸುವಂಥ ಎರಡು ಕೃತಿಗಳು ನನ್ನ ಗಮನವನ್ನು ಸೆಳೆದಿದ್ದು, ಒಂದು : ಶ್ರೀ ಗಿರಿಯವರ ‘ಗತಿ, ಸ್ಥಿತಿ’, ಎರಡು : ಶ್ರೀ ಕೆ. ವಿ. ತಿರುಮಲೇಶರ ‘ಮಹಾಪ್ರಸ್ಥಾನ’, ಎರಡರ ಪ್ರಕಾರವೂ ಬೇರೆ ಬೇರೆ. ಒಂದು ಕಾದಂಬರಿ, ಇನ್ನೊಂದು ಕವಿತೆ. ಈ ಎರಡೂ ರಚನೆಗಳು ಆಯಾ ಕ್ಷೇತ್ರದಲ್ಲಿ ಹೊಸ ತಿರುವನ್ನ ಕೊಟ್ಟು ಸಮಕಾಲೀನ ಪ್ರಜ್ಞೆಯ ಸಾಚಾರೂಪವನ್ನು ಕಂಡರಿಸಿವೆ. ಈ ದೃಷ್ಟಿಯಿಂದಲೇ ಈ ಇವು ಅಭ್ಯಾಸ ಯೋಗ್ಯವೆನಿಸಿದ್ದು. ಈಗಾಗಲೇ ಗಿರಿಯವರ ಕಾದಂಬರಿಯ ಕುರಿತು ಮೂರು ಗಮನಾರ್ಹ ವಿಮರ್ಶೆಗಳು ಪ್ರಕಟವಾಗಿವೆ. ‘ಸಾಕ್ಷಿ’- ೧೩ ರಲ್ಲಿ ಡಾ. ಅನಂತಮೂರ್ತಿ, ‘ಸಂಕ್ರಮಣ-೪೬ ರಲ್ಲಿ, ಶ್ರೀ ಜಿ. ಎನ್. ರಂಗನಾಥ ರಾವ್, ಹಾಗೂ ಸಾಕ್ಷಿ ೧೭ ರಲ್ಲಿ ಶ್ರೀ ಜಾ.ಗೋ.

ಇಷ್ಟಾಗಿಯೂ ಜಾ. ಗೋ. ಅವರ ಲೇಖನವನ್ನೋದಿದ ನಂತರ ಕೆಲವು ಸಂದೇಹಗಳು ಹಾಗೇ ಉಳಿದವು. ಅಥವಾ ಹುಟ್ಟಿಕೊಂಡವು. ಇವು ಪ್ರೌಢ ವಿಮರ್ಶಕ ಪ್ರಜ್ಞೆಗೆ ತೀರ ಬಾಲಿಶ ಗುಮಾನಿಗಳಾಗಿ ಕಂಡರೂ, ನನ್ನಂಥ ತರುಣ ಸಾಹಿತ್ಯಾಭ್ಯಾಸಿಗೆ ತೊಡಕಾಗಿ -ನಿವಾರಣೆಯನ್ನ, ವಿವರಣೆಯನ್ನ ತಿಳಿದವರಿಂದ ಬಯಸುವುದೇನೂ ಅಸಹಜವಲ್ಲವಷ್ಟೆ ? ಅಷ್ಟಕ್ಕೇ ಈ ಪುಟ್ಟ ಬರಹದ ಉದ್ದೇಶ.

೧ ‘ಗಿರಿ ಅವರ ‘ಗತಿ, ಸ್ಥಿತಿ’ ತನ್ನ ಸಫಲತೆಗಾಗಿ ಮುಖ್ಯವಾಗಿ ಭಾಷೆ ಮತ್ತು ಪ್ರಜಾಪ್ರವಾಹ-ತಂತ್ರಗಳನ್ನು ಅವಲಂಬಿಸಿದಂಥ ಮತ್ತು ಅವುಗಳ ಮಟ್ಟದಲ್ಲಿಯಷ್ಟೇ ತನ್ನ ಸಾರ್ಥಕ್ಯವನ್ನು ಕಂಡುಕೊಂಡಂಥ ಒಂದು ಅಲ್ಪ-ತೃಪ್ತ ಕೃತಿ’-ಎನ್ನುತ್ತಾರೆ ಜಾ.ಗೋ. (ಪುಟ ೧೦೨/ಸಾಕ್ಷಿ).

-ನನಗನ್ನಿಸುವ ಮಟ್ಟಿಗೆ ವಸ್ತು ಮತ್ತು ತಂತ್ರ ಅವಿನಾಭಾವಿ. ಒಂದನ್ನುಳಿದರೆ ಇಷ್ಟೊಂದು ಇಲ್ಲ. ಇಂಥ ರಚನೆಯ ಇತ್ತೀಚಿನ ಅಥವಾ ನವ್ಯ ಕೃತಿಗಳ ಕಲಾತ್ಮಕತೆಯ ನವೀನತೆ ಎಂದು ಪರಿಗಣಿಸಲ್ಪಡುತ್ತದಲ್ಲವೆ? ಆ ಕಾರಣಕ್ಕಾಗಿಯೇ ಇಲ್ಲಿ ಕಥೆಯೂ ಬಹಳ ಗೌಣವೇನೊ. ಹಾಗೆ ನೋಡಿದರೆ ಈ ಕೃತಿ ಈ ವಿಧಾನದಲ್ಲಿ ಸಂಪೂರ್ಣ ಯಶಸ್ವಿಯಾಗಿದೆ ಎನ್ನಲೇ ಬೇಕಾಗುತ್ತದೆ. ಇಲ್ಲಿ ‘ಕೇವಲ ಸ್ಥಿತಿ ಇದೆ, ಗತಿ ಇಲ್ಲದಿರುವುದಕ್ಕೆ ವಸ್ತು ಮತ್ತು ತಂತ್ರಕ್ಕಿರುವ ನಿಕಟ ಸಂಬಂಧವೇ ಕಾರಣ. ಅಥವಾ ಸ್ಥಿತಿಯೇ ಗತಿ. ಇಲ್ಲವೆ ಗತಿಯೇ ಸ್ಥಿತಿ. ಆದ್ದರಿಂದ ‘ಇಬ್ಬರೂ ಕಾದಂಬರಿಯ ಪ್ರಾರಂಭದಲ್ಲಿ ಎಲ್ಲಿಯವರೋ ಮತ್ತು ಹೇಗಿರುವರೋ ಕಾದಂಬರಿಯ ಕೊನೆಯಲ್ಲಿಯೂ ಅಲ್ಲಿಯೇ ಮತ್ತು ಹಾಗೇ ಉಳಿಯುವರು.’

೨ “…..ಭಾಷೆದು ಸಂಗ್ರಹ ಗುಣ, ಸೂಚ್ಯತೆ, ಧ್ವನಿತ್ವ ಮುಂತಾದ ಕಾವ್ಯಗುಣಗಳಾಗ, ಆಳವಾಗಲೀ ಇಲ್ಲ-ಎಂದಿದ್ದು. (ಪುಟ ೧೦೨ / ಸಾಕ್ಷಿ)

-ಈ ಹೇಳಿಕೆಯು ವುದು ಕಷ್ಟ. ಕಾವ್ಯಗುಣವಿಲ್ಲವೆಂಬುದೇನೋ ಸುಳ್ಳಲ್ಲ. ಭಾಷೆಯ ಸಂಗ್ರಹಗುಣ ಹೊಡೆದು ಕಾಣುವಂತಿಲ್ಲದಿದ್ದರೂ, ಸೂಚ್ಯತೆ, ಆಳ, ಧ್ವನಿತ್ವ ಇದ್ದೇ ಇದೆ. ಇಲ್ಲವಾದಲ್ಲಿ ಈ ಕೃತಿ ಓದುಗನಲ್ಲಿ ಇಷ್ಟೊಂದು ಆಸಕ್ತಿಯನ್ನ, ಅನುಭವವನ್ನ ಉಂಟುಮಾಡುತ್ತಿರಲಿಲ್ಲವಲ್ಲ ? ಇಲ್ಲಿ ಜಿ. ಎನ್. ರಂಗನಾಥರಾಯರ –

“ಇಂದ್ರಿಯ ಗೋಚರವಾದುದನ್ನೆಲ್ಲ ಸಾಕ್ಷಿಚಿತ್ರದಂತೆ ನಮ್ಮ ಮುಂದಿಡುವ ಗಿರಿಯವರ ಭಾಷೆಗೆ ಎರಡು ಮುಖ, ವಸ್ತು, ಸ್ಥಿತಿ, ವ್ಯಕ್ತಿ, ಪರಿಸರ ಮತ್ತು ಅದರ ವರ್ಣನೆಗಳನ್ನು ಮುಂದಿಡುವ ಸಾಭಿನಯವಾಗಿ ತೋರಿಸುವ ರಂಜನೀಯ ಭಾಷೆ ಕಣ್ಣಿಗೆ ಕಟ್ಟುತ್ತದೆ. ಇನ್ನೊಂದು ಸಮಕಾಲಿನ ನೋವು-ಆತಂಕಗಳ ಮಿಡುಕ ಉಂಟುಮಾಡುವ ಧ್ವನಿ…. ಆ ಭಾಷೆ ಸಾಕ್ಷರ ಚಿತ್ರದಂತೆ……ಆತನ ಮನಃಸ್ಥಿತಿಯ ರೂಪವನ್ನ ತೋರಿಸುತ್ತದೆ. ನೋವು, ಸಂಕಟ, ಆತಂಕಗಳು ಭಾಷೆಯಲ್ಲಿ ಹಾಗೆ ಮಡುಗಟ್ಟುತ್ತದೆ…..ಎಲ್ಲ ವಿವರಗಳನ್ನೂ ಹೆಚ್ಚಿನ ಅರ್ಥಗಳಿಗೆ ಸಂಕೇತವಾಗಿಸುವ ಇಲ್ಲಿನ ಭಾಷೆ ನಮ್ಮ ಮುಖದಿಂದಲೇ ಹೊರಟಿದ್ದೇನೊ ಎನ್ನುವಷ್ಟು ಪರಿಚಿತವಾದದ್ದು’ (ಪುಟ ೬೦/ ಸಂಕ್ರಮಣ-೪೬) ಮತ್ತು ಅನಂತಮೂರ್ತಿಯವರ
‘ಕನ್ನಡ ಭಾಷೆಯನ್ನು ಯಾರೂ ಉಪಯೋಗಿಸದ ಹಾಗೆ ಗಿರಿ ಉಪಯೋಗಿಸುವುದನ್ನು ಕಲಿಯದಿದ್ದರೂ ಈ ಕೃತಿ ಹೀಗಿರುತ್ತಿರಲಿಲ್ಲ…ನಮಗೆ ಪರಿಚಿತವಾದ ಸಿಟ್ಟು, ತಾಪ, ಐರನಿಗಳನ್ನು ನಾಯಕನ ಮೂಲಕ ವ್ಯಕ್ತಗೊಳಿಸುತ್ತಿದ್ದೂ….’ (ಪುಟ ೧೧೨, ೧೧೬/ ಸಾಕ್ಷಿ ೧೩)
–ಎಂಬುದನ್ನ ನೆನಪಿಸಿಕೊಳ್ಳಬಹುದು, ಆಲೋಚಿಸಲೂಬಹುದು.

೩ ಗೆಳೆಯ ಮೂರ್ತಿ ಕೇಳಿದ ಪ್ರಶ್ನೆಗೆ ಆತ ‘ಏನೂ ಅನ್ನಿಸಲ್ಲ. ಹೀಗಾಯಿತು ಅಂತ ಮತ್ತೆ ಘಟನೆಗಳೇ-ಮರುಕಳಿಸುತ್ತವೆ. ಅನ್ನಿಸುವುದು ಮಾತ್ರ ಏನೂ ಇಲ್ಲ, ಅಥವಾ ಹೀಗೂ ಹೇಳಬಹುದು: ಇದು ಹೀಗೆ ಅನ್ನಿಸುತ್ತೆ. ಮೆಣಸಿನಕಾಯಿ ಖಾರವಾಗಿದೆ’ ಅಂದ ಹಾಗೆ, ಎಂದು ಉತ್ತರಿಸಿದ್ದು “ಆತನ ಆಗಿನ ಮನೆ ಸ್ಥಿತಿಯ ನಿಜವಾದ, ಪ್ರಾಮಾಣಿಕವಾದ ನಿರೂಪಣೆ ಅಲ್ಲ. ಹೀಗೆ ನಿರ್ವಿಕಾರವಾಗಿ ಸ್ಥಿತಪ್ರಜ್ಞನಂತೆ ಉತ್ತರಿಸುವುದು ಮನೋವೈಜ್ಞಾನಿಕವಾಗಿ ಪ್ರಾಮಾಣಿಕವಾದ ಉತ್ತರ ಅನ್ನಿಸುವುದಿಲ್ಲ’ ಎಂದು ಹೇಳಿ; ‘ಅದಕ್ಕೆ ಬದಲು ಆತ “ನನಗೆ ಅದನ್ನೆಲ್ಲ ನೆನಸಿಕೊಂಡರೆ ವಾಕರಿಕೆ ಬರುತ್ತದೆ” ಎಂದಿದ್ದರೆ ಹೆಚ್ಚು ಪ್ರಾಮಾಣಿಕವಾದ ಮತ್ತು ಯಥಾರ್ಥವಾದ ಉತ್ತರವಾಗುತ್ತಿತ್ತು’ ಎಂದಿದ್ದಾರೆ. ಜಾ.ಗೋ. (ಪುಟ » ೧೦೩,೧೦೪ / ಸಾಕ್ಷಿ-೧೭)

-ಈ ರೀತಿ ಉತ್ತರ ಬಯಸುವುದು ಯಾಕೆ ಅರ್ಥವಾಗುತ್ತಿಲ್ಲ. ನಮ್ಮ ಕಣ್ಮುಂದೆ ‘ಅವರ ಆ ಎಲ್ಲ ಬೇಸರ, ಕಷ್ಟ ಮತ್ತು ತತ್ತರಿಕೆಗಳ ವಿಸ್ತಾರವಾದ ಮತ್ತು ಕೂಲಂಕುಶವಾದ ಸೂಕ್ಷ್ಮ ಚಿತ್ರಣ’ ಇನ್ನೂ ಕಟ್ಟಿದಂತಿದ್ದರೂ, ಆತ ಯಾವ ಅನುಭವವನ್ನು ಮನಸ್ಸಿನ ಒಳಕ್ಕೆ, ಆಳಕ್ಕೆ ಇಳಿದು ಬೇರು ಬಿಡಗೊಡುವುದಿಲ್ಲ ತಾನೆ? ಆದುದರಿಂದಲೇ ಆತನ ನಿರ್ಲಿಪ್ತ ಮನಃಸ್ಥಿತಿಗನುಗುಣವಾಗಿ ಆ ಉತ್ತರವೇ ಸಕಾಲಿಕ. ಸೂಕ್ತವಲ್ಲವೇ? ಅಲ್ಲದೆ ನನಗನ್ನಿಸಿದ ಇನ್ನೊಂದು ಅನುಮಾನ: Psychological ತತ್ವ ಪ್ರಣಾಳಿಕೆ ಹಿಡಿದೇ ಆತನನ್ನ-ಕಾದಂಬರಿಯನ್ನ ವಿಮರ್ಶಿಸುವುದು ಅನಿವಾರ‍್ಯವಾಗುತ್ತದೆಯೇ? ಎಂಬುದು.

೪ ‘ಅಂತೂ ಆತನ ವ್ಯಕ್ತಿತ್ವ ಚಿತ್ರಣ ನಾವು ಯಾವ ದೃಷ್ಟಿಯಿಂದ ನೋಡಿದರೂ ಅಸಮಂಜಸವೆನ್ನಿಸುತ್ತದೆ’ ಎನ್ನುತ್ತಾರೆ. (ಪುಟ ೧೦೭/ ಸಾಕ್ಷಿ ೧೭).
“ಆತ ಬಹುಪಾಲು ತನ್ನ ಸುತ್ತಣ ಪರಿಸರ, ಬಾಹ್ಯ ಘಟನೆಗಳನ್ನ ನೋಡುವ ಕ್ರಿಯೆಗೆ ಕಾಲ ಕಳೆದಿದ್ದು : ‘ತನ್ನನ್ನು ಮತ್ತು ತನ್ನವರನ್ನು ಆ ಬಗೆಯ ಪರೀಕ್ಷೆಗಳ ಪಡಿಸಲು ಅಸಮರ್ಥನಾಗಿದ್ದಾನೆ ಎಂದ ಮಾತ್ರಕ್ಕೆ ಆತನ ‘ಇಡಿ’ಯಾದ ವ್ಯಕ್ತಿತ್ವಕ್ಕೇನೆ ಲೋಪ ಬಂದ ಹಾಗೆ?

“ಯಾವ ದೃಷ್ಟಿಯಿಂದ ನೋಡಿದರೂ’ ಎನ್ನುವಷ್ಟರ ಮಟ್ಟಿಗೆ ಆತನ ಪಾತ್ರಚಿತ್ರಣ ಹಗುರವಾದದ್ದೇ?

೫ ‘ಆದರೆ ಈ ಬಗೆಯ ತೀರ ವೈಯಕ್ತಿಕವೂ ಅ-ಸಾಮಾಜಿಕವೂ ಆದ ದೃಷ್ಟಿಕೋನದಿಂದಲೇ ಮತ್ತು ಮಾನದಂಡದಿಂದಲೇ ಸಮಾಜದ ಸಂಸ್ಥೆಗಳನ್ನು, ಸಮಸ್ಯೆಗಳನ್ನು ಮತ್ತು, ವ್ಯಕ್ತಿಗಳನ್ನು ನೋಡುವುದು ಮತ್ತು ಅಳೆಯುವುದು-ವಸ್ತು-ನಿಷ್ಟ ಎನಿಸಬಹುದೇ ಮತ್ತು ಯೋಗ್ಯವಾಗಬಹುದೇ ಎನ್ನುವುದನ್ನು ನಮ್ಮ ನಮ್ಮ ಪ್ರಜ್ಞಾವಂತರು -ಆಳವಾಗಿ ಯೋಚಿಸಬೇಕು’ ಎನ್ನುವುದು. (ಪುಟ ೧೦೭ / ಸಾಕ್ಷಿ ೧೭).

ಎಲ್ಲರೂ ತಿಳಿದಂತೆ : ಫೋಟೋಗ್ರಾಫರನಂತೆ ಅಥವಾ ವ್ಯಾಖ್ಯಾನಕಾರನಂತೆ ಯಥಾ ಸ್ಥಿತಿಯ ಕ್ಲಿಕ್ ಮಾಡುವುದಷ್ಟೆ, ಕಾಮೆಂಟ್ ಮಾಡುವುದಷ್ಟೆ ಅಥವಾ ನೋಡುವುದಷ್ಟೆ ‘ಆತ’ನದ್ದಾದ್ದರಿಂದ ಸಾಮಾಜಿಕವೂ, ಅ-ಸಾಮಾಜಿಕವೊ ಇಲ್ಲವೆ ವೈಯಕ್ತಿಕವೂ, ಸಾಮಯಿಕವೊ ಎನ್ನುವ ಪ್ರಶ್ನೆಯೇ ಏಳುವುದಿಲ್ಲವಲ್ಲ ? ಇನ್ನೊಂದು ಅರ್ಥದಲ್ಲಿ ಆ ಪರಿಸರದ ಮಟ್ಟಿಗೆ, ಆತನ ಕಣ್ನೋಟದ ನೇರಕ್ಕೆ ಯೋಗ್ಯವೂ, ವಸ್ತು-ನಿಷ್ಠವೂ ಆಗ ಬಲ್ಲದು ಎನ್ನಿಸುತ್ತದೆ ನನಗೆ.

Close

ಗಿರಿಯವರ ಗತಿ-ಸ್ಥಿತಿ: ವಿಮರ್ಶೆಗೆ ಒಂದು ಸೂಚನೆ

ಗಿರಿಯವರ ‘ಗತಿ-ಸ್ಥಿತಿ’:
ವಿಮರ್ಶೆಗೆ ಒಂದು ಸೂಚನೆ

ಕಿತ್ತೂರ ರಾಮಚಂದ್ರ

ಒಂದು ಕೇಂದ್ರ ಬಿಂದು : ಅದು ಹಿತ-ಅಹಿತವಾದ, ಹಿಂದೊಮ್ಮೆ ಆಗಿಹೋದ ಅನುಭವ, ಅಥವಾ ಘಟನೆ ಅಥವಾ ಸಂಶಯಗಳ ಸರಪಳಿ. ಎಷ್ಟೇ ಮರೆಯಬೇಕೆಂದರೂ ಮರೆಯಲಾರದ, ತಿರುಗಿ ತಿರುಗಿ ಬಂದು ಮನಸ್ಸಿನ ಮೇಲೆ ಅಪ್ಪಳಿಸುವ ಪ್ರವೃತ್ತಿ ಆ ಘಟನೆಯು ಕಥೆಯ ಕೇಂದ್ರ ವ್ಯಕ್ತಿಯ ಮನರಂಗದ ಮೇಲೆ ಬೀರುವ ಕ್ರಿಯೆ ಪ್ರಕ್ರಿಯೆಗಳ ತಾಕಲಾಟ. ಕೊನೆಗೆ ಅಸಹಾಯಕತೆ, ರಟ್ಟೆಯಲ್ಲಿಲ್ಲದ ಕೆಚ್ಚು,… ಯಾವುದನ್ನೂ ನಂಬದ, ಯಾವುದರಲ್ಲಿಯ ಶ್ರದ್ದೆಯಿಲ್ಲದ ತುಯಿತ…

ನಾನು ಇತ್ತೀಚಿಗಿನ ನವ್ಯ ಕಥೆ, ನೀಳ್ಗತೆಗಳಲ್ಲಿಯ ಪ್ರೊಸೆಸ್‌ನ್ನು ಈ ರೀತಿ ಕಂಡುಕೊಳ್ಳುತ್ತಿದ್ದೇನೆ. ಈ ಮಾತು ಇತ್ತೀಚಿಗಿನ ‘ಇನ್ನಷ್ಟು ಹೊಸ ಕತೆಗಳು’ ಸಂಕಲನದಲ್ಲಿ ಎದ್ದು ಕಾಣುತ್ತದೆ. ಖಾಸನೀಸರ ‘ಅಲ್ಲಾಉದ್ದೀನನ ಅದ್ಭುತ ದೀಪ’ದಲ್ಲಿ ಸತ್ಯಬೋಧ ಮತ್ತು ವೈನಿಯ ಬೆಳದಿಂಗಳ ರಾತ್ರಿ, ರಾಮಾನುಜಮ್‌ರ ‘ಅಣ್ಣಯ್ಯನ ಮಾನಸಶಾಸ್ತ್ರ’ದಲ್ಲಿ ಕೊನೆಗೆ ಬರುವ ಅವ್ವನ ವೈಧವ್ಯದ ಚಿತ್ರ, ಆರ‍್ಯರ ‘ಗುರು’ ಕಾದಂಬರಿಯಲ್ಲಿ ನಾಯಕನ ಮೂಲಭೂತ ಅನಾಥಪ್ರಜ್ಞೆ, ಇವೇ ಮುಂತಾದುವುಗಳನ್ನು ಹೆಸರಿಸಬಹುದು.

ಇಂಥ ಒಂದು ಕೇಂದ್ರ (Focus) ಮತ್ತು ಅದರ ಸುತ್ತಲೂ ಅಲೆಗಳಂತೆಯೋ, ಚೌಕು ಚೌಕಾಗಿಯೋ, ದುಂಡು ದುಂಡಾಗಿಯೂ ಬೆಳೆಯುವ ಕಥೆಯ ಹಂದರ ಮುಖ್ಯವಾ ಗಮನಿಸತಕ್ಕ ಅಂಶಗಳು. ಆದರೆ ಗಿರಿಯವರ ‘ಗತಿ-ಸ್ಥಿತಿ’ಯ ವಿಶೇಷ ಗುಣಮದರೆ ಈ ಕೇಂದ್ರ ಬಿಂದುವು ಇಲ್ಲದೇ ಇರುವದು. ಯಾವದೇ ತರಹದ ಕೇಂದ್ರ-ವಿಶೇಷವಿಲ್ಲದೆ ಜೀವನದಲ್ಲಿಯ ಬೇಜಾರನ್ನು, (Boredom) ಶುಷ್ಕತೆಯನ್ನು ಅತ್ಯಂತ ಯಥಾವತ್ತಾಗಿ ಚಿತ್ರೀಕರಿಸುವದು, ಇದರ ಗುಣವಿಶೇಷ. ಒಂದು ಶ್ರದ್ಧೆ, ಅದು ಬೀಳುವ ಪರಿಣಾಮವಾಗಿ ಉಂಟಾಗಬಹುದಾದ ಅಸಹಾಯಕತೆ, ಅನಾಥ ಅನಿಸಿಕೆಯೇ ಬೇರೆ. ಆದರೆ ಜೀವನವೇ, ಮೂಲಭೂತವಾಗಿ Bore ಆಗುವದು ಬೇರೆ. ಗತಿ-ಸ್ಥಿತಿಯಲ್ಲಿ ಶ್ರದ್ಧೆ, ಅದರ ಪತನ, ಮುಂತಾದ ಯಾವದೇ ನಾಟಕೀಯತೆ ಇಲ್ಲ. ಅದರ ಬದಲಾಗಿ ಜೀವನದ ಬರಡುತನವನ್ನು ಮೂಲರೂಪದಲ್ಲಿ ಚಿತ್ರಿಸುವ ಸಾಹಸ ಗಿರಿಯವರದು.

ಈ ಅಂಶವನ್ನು ‘ಗತಿ-ಸ್ಥಿತಿ’ಯ ವಿಮರ್ಶಕರು ಗಮನಿಸಬೇಕು ಎಂಬುದೇ ನನ್ನ ಆಶಯ.

Close

ಬೀದಿಗೆ ಬಿದ್ದವ

ಬೀದಿಗೆ ಬಿದ್ದವ

ಉಬರಡ್ಕ ಜಿ ಎಸ್

ಜಗವೆಲ್ಲ ಮಲಗಿರಲು ಎದ್ದಂಥವನ ಕತೆ ಬೇರೆ
ಇದು ಬೇರೆ:
ಅಜಗರದಂತೆ ನಗರದುದ್ದಕ್ಕು ಬಿದ್ದ ಬೀದಿಗಳಲ್ಲಿ
ಅಷ್ಟಾವಕ್ರ ಗಲೀಜು ಗಲ್ಲಿಗಳಲ್ಲಿ
ಗಲ್ಲಿಗೆ ಸೇರಿದ ಗಯ್ಯಾಳಿ ಸಂದಿಗಳಲ್ಲಿ
ಸಂದಿಗಳಲ್ಲಿ ಗೊಂದಿಗಳಲ್ಲಿ
ಎಡಕೆ ಬಲಕೆ ಹಿಂದೆ ಮುಂದೆ ಹೋಗಿ ಬರುವ ಜನರ
ಸಂಧಿಸುತ್ತ ಸಂಧಿಸುತ್ತ ಪೇಟೆ ಸುತ್ತುತ್ತೇನೆ
ಯಾವುದೇ ವಸ್ತುವಿಗಾಗಿ ಅಂಗಡಿ ಹತ್ತಿ
ಹುಡುಕುತ್ತ ಹುಡುಕುತ್ತ ಸಿಗಲಾರದ್ದಕ್ಕೆ ಇಳಿದು ಕಳವಳಿಸುತ್ತ
ಕಾತರದಲ್ಲಿ ನಿರೀಕ್ಷೆಯಲ್ಲಿ ಮತ್ತದೇ ಭ್ರಮೆಯಲ್ಲಿ
ಯಾಂತ್ರಿಕವಾಗಿ ಮುನ್ನುಗ್ಗುತ್ತ ಇಳಿಯುತ್ತ
ಬೇಟೆಗೆ ಸಿಲುಕಿದ ಪ್ರಾಣಿಯ ಹಾಗೆ ಭಯದಲ್ಲಿ ಬೆವರುತ್ತ
ದಿಕ್ಕುತಪ್ಪಿ ಓಡುತ್ತೇನೆ
ಹೆಳವನ ಹಾಗೆ ಅಸಹನೆಯಲ್ಲಿ
ಹೊರಳುತ್ತ ಹೊರಳುತ್ತ ಕುದಿಯುತ್ತೇನೆ
ಇಂಥ ಅಥವಾ ಇಂಥದೇ ಅಸಂಗತ ಸ್ಥಿತಿಯಲ್ಲಿ
ಅನಾಥ ಕಿರಿಚಿಕೊಳ್ಳುತ್ತೇನೆ :
ಅಯ್ಯಾ, ಒಬ್ಬಂಟಿ ನಾನು ಒಬ್ಬಂಟಿ….ಒಬ್ಬಂಟಿ.

ಈ ಭೋರ್ಗರೆವ ನಗರಾಂತರಾಳದೊಳಗೊಳಗೆ ಒಳಹೊರಗೆ
ಭೋಗೋಪಭೋಗ ಪ್ರದರ್ಶನ ರತಿ ವಿಲಾಸ ವಿಕ್ಷೇಪದಲ್ಲಿ
ಕಣ್ಣು ಕಿವಿ ಮಗು –
ಪೂರ್ಣ ತೆರೆದಿಟ್ಟು ಸಾಗಿದ್ದುಂಟು.
ಈ ಕ್ರಾಂತಿಯ ಈ ಭ್ರಾಂತಿಯ ಈ ಉನ್ಮತ್ತತೆಯ
ನಿರ್ವಿಘ್ನ ತುರಿಕೆ ಗುಹ್ಯಾಂಗ ರೋಗಕ್ಕೆ
ಯಾವ ಧನ್ವಂತರಿಗೂ ಮದ್ದು ಗೊತ್ತಿರಲಿಕ್ಕಿಲ್ಲ.

ಈ ನೂಕು ನುಗ್ಗಲಿನ ಬೋರ್ ಹೊಡೆಯುವ ಗೊಂದಲದ ರಾಜ್ಯದಲ್ಲಿ
ಬೀದಿಗೆ ಬಿದ್ದವನಯ್ಯಾ ನಾನು ಬೀದಿಗೆ ಬಿದ್ದವ.
ಅರಗಿನಮನೆಯಂಥ ಈ ನಗರದ ಒಗ್ಗದ ಪರಿಸರದಲ್ಲಿ
ಕರಗಿಹೋಗುವ ಮುನ್ನ
ನನ್ನೆಲ್ಲ ಸ್ವಂತಿಕೆಗಳ ಪ್ರಜ್ಞೆ ಹೊತ್ತು
ಓಡಿ ಹೋಗುತ್ತೇನೆ ಓಡೋಡಿ ಹೋಗುತ್ತೇನೆ
ಅಜ್ಞಾತವಾಸಕ್ಕೆ.

Close

ಪುಂಸ್ತ್ರೀಲಿಂಗ

ಪುಂಸ್ತ್ರೀಲಿಂಗ

ಕಲಬುರ್ಗಿ ಎಂ. ಎಂ.

ಸ್ವಾಮೀ,
ನಾವು ಮೈಸೂರಿನ ಹೆಣ್ಣೂ ಹೌದು, ಧಾರವಾಡದ ಗಂಡೂ ಹೌದು.

ಇಲ್ಲಿ ಇದ್ದಾಗ ಕಡಬ ಕುದಸತೀವಿ,
ಅಲ್ಲಿ ಹ್ವಾದಾಗ ಇಡ್ಲಿ ಬೇಯಿಸತೀವಿ,
ಹೊತ್ತ ಬಂದರ ಹೊತ್ತಸತೀವಿ-
ಹೋಗಿ ಎಬ್ಬಿಸಿ ಹೊಲಿಗೆಡಿಸಿಬಿಡತೀವಿ.
ಸ್ವಾಮಿ
ನಾವು ಮೈಸೂರಿನ ಹೆಣ್ಣೂ ಹೌದು, ಧಾರವಾಡದ ಗಂಡ ಹೌದು.

ಉಭಯ ಲಾಭ ನಮ್ಮ ವ್ರತ,
ಗೆದ್ದೆತ್ತಿನ ಬಾಲ ನಮಗೆ ಹಿತ.
ಬುಡ ಇಲ್ಲದ ಗಡಿಗಿ ಹಾಂಗ
ಹಾಂಗ ಹಾಂಗೂ ನಮ್ಮ ಮತ.
ಸ್ವಾಮಿ
ನಾವು ಮೈಸೂರಿನ ಹೆಣ್ಣೂ ಹೌದು, ಧಾರವಾಡದ ಗಂಡೂ ಹೌದು.

ಗುರುವಿನ ಗುಲಾಮನಾಗುವ ತನಕ
ದೊರೆಯದು ಗುಲಾಬ ಜಾಮನ ಅಂತೆ,
ಸಲಾಮು ಹೊಡದು ಮಲಾಮ ಹಚ್ಚಿ
ದಾಸರ‍್ಹಾಂಗ ನಡಕೋತೀವಿ,
ಸ್ವಾಮಿ
ನಾವು ಮೈಸೂರಿನ ಹೆಣ್ಣೂ ಹೌದು, ಧಾರವಾಡದ ಗಂಡೂ ಹೌದು.

“ಉಡುವಿನ ನಾಲಗೆಯಂತ ಎರಡಾದಡೆ
ಕೂಡಲ ಸಂಗಯ್ಯ ಮೆಚ್ಚುವನೆ?”
ಹೇಳತಾನ ದೊಡಮನಶ್ಯಾ.
ಇದರ‍್ಹಂಗ ನಡದರ
ಮಧ್ಯಾಹ್ನದಾಗ ಮುಳಗಬೇಕಾದೀತು ಇವನ್ಹಂಗ.
ಅದಕS
ಉತ್ತರಕ ಬಂದರ ಊಸರವಳ್ಳಿ,
ದಕ್ಷಿಣಕೆ ಹ್ಯಾದರ ಹೇಸರಗತ್ತೆ,
ಸ್ವಾಮಿ ನಾವು ಮೈಸೂರಿನ ಹೆಣ್ಣೂ ಹೌದು, ಧಾರವಾಡದ ಗಂಡೂ ಹೌದು.

ಧನಲಕ್ಷ್ಮೀ ಕೈಹಿಡೀಬೇಕಂತ
ದರಿದ್ರ ನಾರಾಯಣನ ಕಾಲಿಗೆ ಬಿದ್ದು,
ಹೊತ್ತ ಬಂದ್ಹಂಗ ಕೊಡಿ ಹಿಡಿವ,
ಗಾಳಿಗುಂಟ ಗಿರಕಿ ಹೊಡಿವ ‘ಗಾಳಿಕೋಳಿ’
ಸ್ವಾಮೀ
ನಾವು ಮೈಸೂರಿನ ಹೆಣ್ಣೂ ಹೌದು, ಧಾರವಾಡದ ಗಂಡೂ ಹೌದು.

ಜಯಜಯಕಾರ ಜನ್ಮಸಿದ್ಧ ಹಕ್ಕು.
“ಗಾಂಧೀ ಮಹಾರಾಜಕೀ ಜೈ’
“ನಂ ಇಂದ್ರಾಗಾಂಧಿ ಮಹರಾಜಕೀ ಜೈ’
ಪ್ರಸಂಗ ಬಂದರ-
ಗೋಡ್ಸೆ ಮಹಾರಾಜಕೀ ಜೈ’
ಸ್ವಾಮೀ
ನಾವು ಮೈಸೂರಿನ ಹೆಣ್ಣೂ ಹೌದು, ಧಾರವಾಡದ ಗಂಡೂ ಹೌದು.

ಆ ಕಮೀಟಿ ಈ ಕಮೀಟಿ
ಸುಟ್ಟ “ಸುಡಗಾಡ ಕಮಿಟಿ ಇರಲಿ,
ನಿಘಂಟ ಇರಲಿ, ಕಗ್ಗಂಟ ಇರಲಿ
ಬಾಲದ ಗಂಟ ಬಿಟ್ಟವ್ರಲ್ಲ.
ಸ್ವಾಮೀ
ನಾವು ಮೈಸೂರಿನ ಹೆಣ್ಣೂ ಹೌದು ಧಾರವಾಡದ ಗಂಡೂ ಹೌದು

ನಮಗ ಗೊತ್ತ, ಬಾಲ ಹಿಡಿದು ಬದುಕುವ ಗತ್ತ.
ಅದಕs
ಬಾಲ ಜಾಡಿಸಿದರ ಕಾಲ ಹಿಡೀತೀವಿ,
ಕಾಲ ಜಾಡಿಸಿದರ ಬಾಲ ಹಿಡೀತೀವಿ.
ಯಾಕs ?
ಬಾಲ ಹಿಡಿದರ ಕೋಲ ಬರತದ ಡುಂಡುಂ.
ಕಾಲ ಹಿಡಿದರ ಕಂಡದ್ದ ಬರತದ ಡುಂಡುಂ.
ಸ್ವಾಮೀ
ನಾವು ಮೈಸೂರಿನ ಹೆಣ್ಣೂ ಹೌದು, ಧಾರವಾಡದ ಗಂಡ ಹೌದು.

ಆದರs
‘ನಪುಂಸಕಲಿಂಗವಲ್ಲ ಸ್ವಾಮೀ, ನಾವು.
ಕೇಶಿರಾಜ ಹೇಳುವ ‘ಪುಂಸ್ತ್ರೀಲಿಂಗ.

Close

ಅನಿವಾರ್ಯ

ಅನಿವಾರ್ಯ

ರೇಣುಕ ಪ್ರಸನ್ನ ಮ ಗಂ

ಎಚ್ಚರವಾದಾಗ ಒಂಬತ್ತೂ ಮೂವತ್ತು ಮುಕ್ಕಾಲು ರಾತ್ರಿಯೆಲ್ಲಾ ಹೊರಳಾಡಿ ಕಣ್ಣು ಮುಚ್ಚುತ್ತಿದ್ದಾಗ ಫೈರ್ ಬ್ರಿಗೇಡಿನಲ್ಲಿ ಮೂರು ಹೊಡೆದದ್ದು ಕೇಳಿಸಿದ್ದರ ನೆನಪು !

ಸಂಜೆಯ ಸಮಾರಂಭವನ್ನೆಷ್ಟು ಮರೆಯಲು ಪ್ರಯತ್ನಿಸಿದರೂ ಹೋರಾಟದಲ್ಲಿ ಸೋಲೇ ನನ್ನ ಗಳಿಕೆಯಾಗಿತ್ತು.

‘ಥತ್ ನನ್ನ ಮುಂಡೆಯ ತಲೆಯಂತಹ ಬುದ್ದಿಗೆ ಬೆಂಕಿ ಹಾಕ’-ನನಗೆ ನಾನೇ ಬೈದುಕೊಂಡೆ.

ಒಂದು ನಿಮಿಷ ಪಿಳಿ-ಪಿಳಿ ಮಿಳಿ-ಮಿಳಿ ಕಣ್ಣು ಬಿಟ್ಟೆ, ನಿದ್ದೆಯ ಮಂಪರು ಸ್ವಲ್ಪ ಸ್ವಲ್ಪವಾಗಿ ಇಳಿಯುತ್ತಿರುವಂತೆ ಭಾಸವಾಯಿತು. ಕಿಟಕಿಯತ್ತ ತಿರುಗಿದೆ. ಪೇಪರ್‌ ಕಣ್ಣಿಗೆ ಬಿತ್ತು, ಹೊಸ ದಿನವನ್ನಾರಂಭಿಸುವ ಉತ್ಸಾಹದಿಂದ ಗಸಕ್ಕನೆ ಎದ್ದು ಕೈಗೆತ್ತಿಕೊಂಡೆ. ಮಡಿಕೆ ಬಿಚ್ಚಿದೆ, ತಿಂಡಿ ಕದ್ದು ತಿಂಡಿ ಸಹಿತ ಅಮ್ಮನ ಕೈಗೆ ಸಿಕ್ಕ ಮಗುವಾದೆ. ಪೇಪರನ್ನು ಮಡಿಚಿದೆ, ಅನುಮಾನ ಹೆಡೆಯಾಡಿತು ! ಪುನಃ ಕೈಗೆತ್ತಿಕೊಂಡೆ : ಮತ್ತೆ ಮಡಿಕೆ ಬಿಚ್ಚಿದೆ, ಅನುಮಾನವೇ ಇಲ್ಲ ! ನನ್ನದೇ ಚಿತ್ರ !ನಾನೇ..ನಾನೇ..ನಟರಾಜ ವಿಗ್ರಹ ಸ್ವೀಕರಿಸುತ್ತಿದ್ದೇನೆ…..ಸಾಹಿತ್ಯ ಅಕ್ಯಾಡೆಮಿಯ ಅಧ್ಯಕ್ಷರು ನನಗೆ ಶಾಲು ಹೊದ್ದಿಸುತ್ತಿದ್ದಾರೆ.
ಚಿತ್ರದ ಕೆಳಗಿನ ಒಕ್ಕಣೆಯನ್ನು ಒಮ್ಮೆ……ಮತ್ತೊಮ್ಮೆ….ಮಗ ದೊಮ್ಮೆ ಓದಿದೆ, ಸರಿಯಾಗಿಯೇ ಇತ್ತು.

ರಾತ್ರೆ ಹತ್ತರದಿಂದ ಮೂರರವರೆಗೆ ಹಾಸಿಗೆಯ ಮೇಲಿನ ಕತ್ತೆ ನಾನಾಗಿ ಕೊನೆಗೊಮ್ಮೆ ಬಂದಿದ್ದ ನಿದ್ದೆಯಿಂದುಂಟಾದ ಒಂದಿಷ್ಟು ಲವಲವಿಕೆಯೂ ಇಲ್ಲವಾಯಿತು. “ಭಾನುವಾರ ಪೇಪರಿಗೂ ರಜ ಕೊಡಬೇಕು, ಈ ಬಗ್ಗೆ ಇಂದೇ ‘ವಾಚಕರವಾಣಿ’ಗೆ ಬರೆಯಲೇ ಬೇಕೆಂದುಕೊಂಡೆ.”

ಪೇಪರನ್ನು ಕಿಟಕಿಯಿಂದಾಚೆ ದೂರ…ದೂರ…ದೂರ…ದೂರ, ನನ್ನ ಶಕ್ತಿಯನ್ನೆಲಾ ಒಟ್ಟಿಗೇ ಸೇರಿಸಿ ಎಸೆದು ಬಿಡೋಣವೇ ಎನ್ನಿಸಿತು.

ಆದರೆ –

ಹಾಳು ಚಟ!

ಪೇಪರೋದದಿದ್ದರೆ ಇಡೀ ದಿನವೆಲ್ಲಾ ಉಚ್ಚೆ ಕಟ್ಟಿದಷ್ಟು ಸಂಕಟ, ಪೇಪರನ್ನು ಎಸೆಯಲಾಗದೆ ಕಿಟಕಿಯಲ್ಲಿದ್ದ ಸಿಗರೇಟ್ ಬೆಂಕಿಪೊಟ್ಟಣ ಕೈಗೆತ್ತಿಕೊಂಡು ಒಂದು……. ಎರಡು………..ಮೂರು……..ಗೀರಿದೆ ……..ಗೀರಿದೆ ………..ಗೀರ‍್ರಿದೆ……ಕಿಟಕಿ ಯಿಂದಾಚೆ ದೃಷ್ಟಿಯನ್ನೆಸೆದೆ, ಚಿಟಿ……..ಚಿಟ…….ಹಿಡಿದಿದ್ದು ಅರಿವಿಗೆ ಬಂದು ಬೆಂಕಿಪೊಟ್ಟಣದ ಮೇಲೆ ಕನಿಕರಿಸಿ: ಮತ್ತೊಮ್ಮೆ ಗೀರಿದೆ, ಮೂರು ಕಡ್ಡಿಗಳ ನಷ್ಟವನ್ನು ನಾಲ್ಕನೆಯದು ತುಂಬಿಕೊಟ್ಟಿತು.

ಸಿಗರೇಟೆಳೆಯುತ್ತ ಮಂಚಕ್ಕೆ ಕಚ್ಚಿಕೊಂಡ ಪೇಪರೋದಲಾರಂಭಿಸಿದೆ. ನನ್ನ ‘ಸನ್ಮಾನ’ದ ಬಗ್ಗೆ ವರದಿಯಾಗಿರುವುದಷ್ಟನ್ನು ಬಿಟ್ಟು ಉಳಿದ ಸುದ್ದಿಯನ್ನಾದರೂ ಓದಲೇಬೇಕೆಂದು ಹಟ ತೊಟ್ಟೆ, ‘ಒಲಂಪಿಕ್ಸ್‌ನಲ್ಲಿ ದುರಂತ…….ರೈಲ್ವೆ ನೌಕರರ ಮುಷ್ಕರ……. ಪೋಲಿಸ್‌ ಕಾವಲಿನಲ್ಲಿ ರೈಲುಗಳ ಓಡಾಟ’ (ಐದನೇ ಪುಟದ ನಾಲ್ಕನೇ ಕಾಲಂ ನೋಡಿ). ಐದನೇ ಪುಟಕ್ಕೆ ತಿರುವಿದೆ ‘ಕನ್ನಡದ ಕ್ರಾಂತಿಕಾರಿ ಬರಹಗಾರ… …’ ಥತ್ ಮತ್ತೆ ನನ್ನ ಸುದ್ದಿ ಓದಿದ, ಮಡಿ ಹೆಂಗಸಾದರೂ ಆಗಿದ್ದರೆ ಅಗಸಗಿತ್ತಿ ಒಗೆದು ಸಿಂಬಿ ಸತ್ತಿಟ್ಟ ಸೀರೆಗೆ ಒಂದು ಚೆಂಬು ಮುಸಿಪಾಲಿಟಿ ನಲ್ಲಿ ನೀರು ಸುರಿದ ಶುದ್ಧಿ ಮಾಡಿಕೊಳ್ಳಬಹುದಿತ್ತು.
ಆದರೆ ನಾ ?

ಸಿಗರೇಟನ್ನು ಜೋರಾಗಿ ಎಳೆದೆ, ಬಾಯಿತುಂಬಾ ಹೊಗೆ ಬಿಟ್ಟೆ, ಈ ಒಂದು ದಮ್ಮಿಗೆ ಸಿಗರೇಟು ಕಾಲು ಭಾಗಕ್ಕಿಂತಲೂ ಹೆಚ್ಚು ಉರಿದು ಹೋಗಿತ್ತು. ಒಮ್ಮೆ ಸಿಗರೇಟನ್ನು, ಒಮ್ಮೆ ಗಾಳಿಯಲ್ಲಿ ಸ್ವಲ್ಪ ಸ್ವಲ್ಪವಾಗಿ ಲೀನವಾಗುತ್ತಿರುವ ಹೊಗೆಯನ್ನೇ ನೋಡುತ್ತ ಮತ್ತೆ ಪೇಪರನ್ನು ಬಿಚ್ಚಿದೆ. ಎಲೆಯಲ್ಲಿ ಬಡಿಸಿದ ಬೇಡದ ನಂಚಿಗೆಯನ್ನು ಸಹಿಸಿಕೊಳ್ಳಲಾರದೆ ಗಬಕ್ಕನೆ ನುಂಗುವಂತೆ ಓದತೊಡಗಿದೆ.

“ಕ್ರಾಂತಿಕಾರಿ ಬರಹಗಾರ ‘ರೇ’ಯವರಿಗೆ ಸಾಹಿತ್ಯಪ್ರೇಮಿಗಳ ನಮನ”

ಮುಂದಕ್ಕೆ ಕಣ್ಣಾಡಿಸಿದೆ-

‘ಕ್ರಾಂತಿ ರೇಯವರ ರಕ್ತದಲ್ಲಿಯೇ ಸೇರಿಬಿಟ್ಟಿದೆ. ರೇಯವರ ವಂಶವೆಂದರೇನೇ ಕ್ರಾತಿ! ಶ್ರೀಯುತರ ತಂದೆಯವರು ತಾವು ಪ್ರೀತಿಸಿದ ಹುಡುಗಿಗಾಗಿ ಇಡೀ ಜಹಗೀರಿಯನ್ನೇ ತ್ಯಾಗ ಮಾಡಿ ಸಮಾಜವನ್ನದುರಿಸಿದವರು !! ಅಂತಹ ವಂಶದ ರೇಯವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಸ್ಪೃಶ್ಯಳನ್ನು ಮದುವೆಯಾಗಿ ಕ್ರಾಂತಿ ಕೇವಲ ತಮ್ಮ ಬರವಣಿಗೆಯಲ್ಲಿ ಮಾತ್ರವಲ್ಲದೆ ತಮ್ಮ ಜೀವನದ ಆಚರಣೆಯಲ್ಲೂ ಇದೆಯಂದು ತೋರಿಸಿ ಕೊಟ್ಟಿದ್ದಾರೆ. ಶ್ರೀಯುತರ ಕ್ರಾಂತಿಕಾರಕ ಬರಹವನ್ನು ಗುರ್ತಿಸಿದ ನಮ್ಮ ಘನ ವಿಶ್ವ ವಿದ್ಯಾನಿಲಯವು, ಗೌರವ ಡಿ. ಲಿಟ್. ಪ್ರಶಸ್ತಿಯನ್ನು ತರುಣ ಸಾಹಿತಿಯೊಬ್ಬರಿಗೆ ಮೊದಲ ಬಾರಿಗೆ ನೀಡಿ ತನಗಂಟಿಕೊಂಡಿದ್ದ ಸಂಪ್ರದಾಯದ ಸೂತಕವನ್ನು ಕಳೆದು ಕೊಂಡಿದೆ.

ರೇಯವರ ಲೇಖಣಿ ಎಂದೆಂದೂ ಕ್ರಾಂತಿಗೇ ಮಿಸಲಾಗಿರಲಿ,

ವೈಚಾರಿಕತೆಗೆ ಮತ್ತೊಂದು ಹೆಸರು ರೇ…,

ಮಾನ್ಯ ರೇಯವರು ಸನ್ಮಾನಕ್ಕೆ ಉತ್ತರ ಕೊಡುತ್ತ-“ಸನ್ಮಾನಕ್ಕೆ ವಂದನೆಗಳು, ಬರೆಯುವುದು ಮುಖ್ಯವಲ್ಲ; ಬರೆದದ್ದನ್ನು ಜನ ಓದಬೇಕು, ಓದಿ ವಿಚಾರ ಮಾಡಬೇಕು, ವಿಚಾರವ ಒರೆಗಲ್ಲಿಗೆ ಹಚ್ಚಿ ಸಾಹಿತ್ಯ ಮೌಲ್ಯವನ್ನು ಸಹೃದಯರು ನಿರ್ಧರಿಸಿದಾಗಲೇ ಸಾಹಿತಿಗೆ ನಿಜವಾದ ಗೌರವ ಸಲ್ಲುವುದು” ಎಂದರು.

“ಜನರೇನಾದರೂ ವಿಚಾರ ಮಾಡಲಾರಂಭಿಸಿಯೇ ಬಿಟ್ಟರೆ…. ?” ಧೊಪ್ಪನೆ ಶಬ್ದವಾಯಿತು
ವಾಯಿತು, ಕತ್ತೆತ್ತಿದೆ. ಎದುರು ಮನೆಯ ಕಾಂಪೌಂಡಿನಲ್ಲಿ ಬೆಳೆದ ಮರಗಳ ಬೇರುಗಳ
ಬಲವಾಗಿದ್ದುದರಿಂದಲೋ, ರಾತ್ರಿಯೆಲ್ಲಾ ಜಿಟಿ……..ಜಿಟಿ ಹಿಡಿದು ತೊಯ್ದಿದ್ದರಿಂದಲೋ ಕಾಂಪೌಂಡು ಬಿರುಕು ಬಿಟ್ಟುಕೊಂಡಿತ್ತು, ಹಳೆಯ ಮರವೊಂದು ಈ ಬಿರುಕಿನ ಮೇಲೆ ಬಿದ್ದಿತ್ತು.

ಕೈಯಲ್ಲಿನ ಸಿಗರೇಟು ಇನ್ನು ಸೇದಲಾಗದಷ್ಟು ಉರಿದು ಹೋಗಿತ್ತು. ಆಷ್‌ಟ್ರೇಗೆ ತುರುಕಿ ಅದು ಉರಿಯುವುದನ್ನೇ ನೋಡುತ್ತ ಕುಳಿತೆ, ಉರಿದುರಿದು ಬೂದಿಯಾಯಿತು. ಮತ್ತೆ ಪೇಪರಿನ ಕಡೆ ಗಮನ ಹರಿಯಿತು-

ಮತ್ತೆ ಅದೇ ಹೆಡ್ ಲೈನ್ಸ್ ಕಣ್ಣಿಗೆ ಬಡಿದುವು-

ಸಿಗರೇಟಿನ ಬೂದಿ…ಪೇಪರಿನ ಹೆಡ್‌ಲೈನ್ಸ್‌…..ಹೆಡ್‌ಲೈನ್ಸ್‌….ಸಿಗರೇಟಿನ ಬೂದಿ. ನೋಡಿದೆ, ನೋಡಿದೆ, ನೋಡುತ್ತಲೇ ಇದ್ದೆ, ನೋಡುತ್ತಿದ್ದಂತೆ ಪಿ ಯು, ಸಿ. ಯಲ್ಲಿ ನಾನು ಪಿ ಸಿ ಎಂ ವಿದ್ಯಾರ್ಥಿಯಾಗಿದ್ದದ್ದು ನೆನಪಾಗಿ “ಯಾವುದೇ ವಸ್ತುವನ್ನು ಸೃಷ್ಟಿಸುವುದಾಗಲೀ ಅಥವಾ ನಾಶಪಡಿಸುವುದಾಗಲೀ ಸಾಧ್ಯವಿಲ್ಲ ; ಕೇವಲ ರೂಪ ಮಾರ್ಪಡಬಹುದು” ಎಂಬ ಕೆಮಿಸ್ಟ್ರಿಯ ತತ್ವ ನೆನಪಾಯಿತು.
ಒಳಗೆ ಮಗು ಒಂದೇ ಸಮನೆ ಅರಚಲಾರಂಭಿಸಿತು, ಹೊರಗೋ ಜಿಟಿ…….ಜಿಟಿ…….. ಮನಸ್ಸಿನೊಳಗೋ ಕ್ಯಾಬರೆ, ಆ ಜಿಟಿ ಜಿಟಿಯಲ್ಲೂ ಮುಟ್ಟಿದರೆ ಸುಡುವಂತಹ ಶಾಖ ನನ್ನ ಶರೀರದಲ್ಲಿ ಭೂತಚೇಷ್ಟೆಯನ್ನಾರಂಭಿಸಿತು.

‘ಮನೇಲಿ ಯಾರಾದ್ರೂ ಇದ್ದೀರೋ ಸತ್ತಿದ್ದೀರೋ, ಮಗು ಬಡ್ಕೊತಾ ಇದೆ. ಒಬ್ಬರಿಗಾದ್ರೂ ಪ್ರಜ್ಞೆ ಇಲ್ಲಾ, ಉಚ್ಚೆ ಹೊಯ್ಯಂಡಿದೆಯೋ ಏನೋ ?’-

ಕಿರುಚಿಕೊಂಡ.

ಒಳಗಿನಿಂದ ಬಂದ ನನ್ನ ಹೆಂಡತಿ-

‘ಯಾಕೆ ಏಳೂತ್ಮೆ ಜಗಳಾ ಕಾಯ್ತಿದ್ದೀರಿ, ಮಗು ಒಂದ್ನಿಮಿಷ ಅತ್ತರೆ ಏನೂ ಪ್ರಪಂಚ ಮುಳುಗಿ ಹೋಗಲ್ಲ. ಉಚ್ಚೆ ಬಟ್ಟೆ ತೆಗೆದು ಒಣ ಬಟ್ಟೆನೂ ಹಾಕಿದೆ, ಹಾಲೂ ಕುಡಿಸಿದೆ. ಕೈಗೆ ಆಟದ ಸಾಮಾನೂ ಕೊಟ್ಟಿದೆ ಸಾಲದ್ದಕ್ಕೆ ಅವರಜ್ಜಿ ತೊಡೆ ಮೇಲೇ ಹಾಕ್ಕೊಂಡಿದ್ದಾರೆ, ಆದ್ರೂ ಅಳ್ತಿದ್ರೆ ಏನು ಮಾಡೋಕಾಗುತ್ತೆ ? ಒಂದಷ್ಟು ಹೊತ್ತು, ಅತ್ತೂ ಅತ್ತು ಸುಮ್ಮನಾಗುತ್ತೆ, ಅದಕ್ಕೆ ಇಷ್ಟೊಂದು ಕಿರುಚಬೇಕೇ ?

‘ಏಳಿ ಸ್ನಾನ ಮಾಡಿ, ಬಿಸಿ ಬಿಸಿ ದೋಸೆ ಹುಯ್ಕೊಡ್ತೀನಿ, ಎಷ್ಟು ಶಾಂತ ಸ್ವರದಲ್ಲಿ ಹೇಳಿದಳು !

‘ನೋಡಿ, ಮತ್ತೆ ನಾನು ಬಂದು ಕರೆಯೋ ಹಾಗೆ ಮಾಡ್ಬೇಡಿ, ದೋಸೆ ಸೀದು ಹೋಗುತ್ತೆ’ ಎನ್ನುವಷ್ಟರಲ್ಲಿ ಅಡಿಗೆಮನೆ ಸೇರಿದ್ದಳೆಂದು ತೋರುತ್ತೆ.

‘ಮಗು ಒಂದಷ್ಟು ಹೊತ್ತು ಅತ್ತು ಅತ್ತು ಸುಮ್ಮನಾಗುತ್ತೆ…….’
‘ಅತ್ತು ಸುಮ್ಮನಾಗುತ್ತೆ….’

‘ಸು’
`ಮ್ಮ
‘ನಾ’
‘ಗು’
‘ತ್ತೆ’

‘ಮನುಷ್ಯ ?’
‘ನಾನು ?’
`ರೀ ಬೇಗ ಬನ್ನಿ ಮತ್ತೆ, ನಿಮ್ಮೊಬ್ಬರಿಗೇ ಹೆಂಚಿಡೋಕಾಗಲ್ಲ. ಮಗೂಗೆ ನೀರು ಹಾಕ್ಷೇಕು.’

ಟವಲನ್ನು ಹೆಗಲಿಗೇರಿಸಿಕೊಂಡು ಬಾತ್ರೂಮಿನತ್ತ ನುಗ್ಗಿದೆ. ಬಾತ್‌ರೂಮಿನೊಳಗಿಂದ ಬೋಲ್ಟ್ ಹಾಕಿಕೊಂಡೆ, ನೆಟ್ ಬನಿಯನ್, ಪಂಚೆ, ಅಂಡ್ರವೇರ್ ಬಿಚ್ಚಿದೆ. ನನ್ನ ನಗ್ನತೆಯನ್ನು ನಾನೇ ನೋಡಿಕೊಂಡೆ.

‘ನನ್ನ ಒಳತೋಟಿಯನ್ನೂ ಹೀಗೇ ನಗ್ನಗೊಳಿಸುವುದು ಸಾಧ್ಯವಿದ್ದಿದ್ದರೆ’ ಎನ್ನಿಸಿತು.

ಮತ್ತೆ ಸಂಜೆಯ ಸಮಾರಂಭ ನನಪಿನ ಸುಳಿಯಲ್ಲಿ ಗುದ್ದಿಕೊಂಡು ನುಗ್ಗಿತು.

‘ಕ್ರಾಂತಿ ರೇ ಯವರ ರಕ್ತದಲ್ಲಿಯೇ ಸೇರಿಬಿಟ್ಟಿದೆ……..ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಸ್ಪೃಶ್ಯಳನ್ನು ಮದುವೆಯಾಗಿ ಕ್ರಾಂತಿ ಕೇವಲ ತಮ್ಮ ಬರವಣಿಗೆಯಲ್ಲಿ ಮಾತ್ರವಲ್ಲದೆ ತಮ್ಮ ಜೀವನದ ಆಚರಣೆಯಲ್ಲಿ ಇದೆಯೆಂದು ತೋರಿಸಿಕೊಟ್ಟಿದ್ದಾರೆ…’

‘ಯಾಕ್ ಹಾಗ ಬಾಗಿಲು ಬಡೀತಿದ್ದೀರಿ, ಬಾಗಿಲು ವರಿದು ಹೋದೀತು, ನಾನು ಸ್ನಾನಕ್ಕಿಳಿದಾಗಲೇ ಬಾತ್‌ರೂಮಿಂದ ಏನಾದ ಸಾಮಾನು ತಕ್ಕೊಳ್ಳೋದಿರುತ್ತೆ.’

‘ಯಾರು ಬಾಗಿಲು ಬಡಿದು ? ಯಾರ ಬಡೀತಾ ಇಲ್ಲ, ಒಳಗೇನೊಬ್ಬರೆ ಹಗಲು ಗನಸು ಕಾಣಿದ್ದೀರೋ ಹೇಗೆ ?’

ಓಹ್ ! ಈಗ ಅರಿವಾಯಿತು : ನನಗೆ ನಟರಾಜ ವಿಗ್ರಹವನ್ನಿತ್ತು ಶಾಲು ಹೊದ್ದಿಸಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಹಾರ ಹಾಕುತ್ತಿದ್ದಂತೆಯೇ ಜನಗಳು ಕಿವಿ ಗಡ ಚಿಕ್ಕುವಂತೆ ತಟ್ಟಿದ ಚಪ್ಪಾಳೆಗಳೆಂದು.

ಬೋಲ್ಟ್ ಹಾಕಿಕೊಂಡಿದ್ದರೂ ಒಬ್ಬನೇ ಇದ್ದರೂ ಬಯಲಲ್ಲಿ ಕಕ್ಕಸಿಗೆ ಕುಳಿತ
ಹಳ್ಳಿಯ ಹೆಂಗಸು ಗಂಡಸನ್ನು ಕಂಡು ಧಿಗ್ಗನೆ ಎದ್ದು ನಿಂತಂತಾದೆ.

‘ಏನ್ ಮಾಡ್ತಿದ್ದೀರಿ ಒಳಗೆ, ನೀರಿನ ಸದಾ ಕೇಳಿಸ್ತಿಲ್ಲ. ದೋಸೆ ಹುಯ್ಯೋದು ಮುಗೀಲಿಕ್ಕೆ ಬಂತು, ನಿಮ್ಮ ಕ್ರಾಂತಿಕಾರಕ ಆಲೋಚನೆಗಳೆಲ್ಲ ಆಮೇಲಾಗಿ , ಮೊದಲು ಸ್ನಾನ ಮಾಡಿ ಬನ್ನಿ.
ಬೇಗಬೇಗನೆ ನೀರನ್ನು ತಲೆಯಿಂದ ಕಾಲಿನವರೆಗೆ ಸುರಿದುಕೊಂಡ, ತುಂಬಾ ಸೆಖೆಯಾಯಿತು, ಷವರ್ ತಿರುಗಿಸಿ ಮೈಯೊಡ್ಡಿದೆ. ತಣ್ಣೀರು ಇಡೀ ಶರೀರವನ್ನೆಲ್ಲಾ ತೋಯಿಸಿತು. ಹೊರಗೆ ಜಿಟಿ……..ಜಿಟಿ…….ಒಳಗೆ ತಣ್ಣೀರು ಸ್ನಾನ-ಆದರೂ ನನಗೆ ಬೆವರು !

‘ನೀರೊಳಗಿರ್ದುಂ ಬೆಮರ್ತನುರಗಪಶಾಕಂ’ ಎಂಬ ರನ್ನನ ಮಾತಿನಲ್ಲಿ ಅಡಕವಾಗಿರುವ
ಶಕ್ತಿಯ ಶಕ್ತಿ ಈಗ ಅರ್ಥವಾಯಿತು.

‘ರೀ………….ರೀ……………..ರೀ……………..’

ಸೀಗೆಪುಡಿ ಲೈಫ್‌ಬಾಯನ್ನು ಒಟ್ಟಿಗೇ ಉಜ್ಜಿ ಶರೀರದ ಕೊಳೆಯನ್ನು ಹೊರಹಾಕಿದೆ. ಮನಸ್ಸಿನ ತುಮುಲವನ್ನೂ ಹೊರಹಾಕಲು ಸಾಧ್ಯವೇಕಿಲ್ಲವೆಂದು ಚಡಪಡಿಸಿದೆ. ನನ್ನ ಪಾತ್ರಗಳ ಆಂತರ‍್ಯವನ್ನು ಚಿತ್ರಿಸಿರುವದನ್ನು ಕಂಡು ಮೆಚ್ಚಿದ ವಿಮರ್ಶಕರ ಮಾತುಗಳು ನನ್ನ ಒಳಗನ್ನು ಒಗೆದು ಒಣಹಾಕಿಕೊಳ್ಳಬೇಕೆಂದುಕೊಂಡಾಗ ಸುಳ್ಳಾಗುವುದೇಕೆ ?

‘ರೀ ಅಮ್ಮ ಹೇಳ್ತಿದ್ದಾರೆ-ಮಗು ಅಳ್ತಿದೆಯಂತೆ, ನೀರು ಹಾಕ್ಬೇಕಂತೆ, ಬೇಗ ಬನ್ನಿ ಮಾರಾಯ್ರೆ’.

ಷವರನ್ನು ಜೋರಾಗಿ ತಿರುಗಿಸಿದೆ. ಅವಸರವಸರವಾಗಿ ಒರೆಸಿಕೊಂಡು ಟವಲ್ ಸುತ್ತಿ ಕೊಂಡು ಬಾತ್ರೂಮಿನಿಂದ ಹೊರಬಿದ್ದೆ.

ಬ್ರೇಕ್‌ಫಾಸ್ಟ್ ಶಾಸ್ತ್ರವಾಯಿತು, ಭಾನುವಾರವಾಗಿದ್ದರೂ ಜಿಟಿ…ಜಿಟಿಯ ಕಾರಣ ರೂಮಿಗೇ ಅಂಟಿಕೊಳ್ಳಬೇಕಾಯ್ತು. ಮತ್ತೆ ಪೇಪರ್ ಕಣ್ಣಿಗಪ್ಪಳಿಸಿತು. ಕೈಗೆತ್ತಿಕೊಂಡೆ. “ಸಾಪ್ತಾಹಿಕ ಪ್ರರವಣಿ’ಯನ್ನಷ್ಟು ಉಳಿಸಿಕೊಂಡು-

‘ಏ ಅಂಬಕ್ಕ, ನೋಡು ಪಕ್ಕದ ಮನೆಯವರು ಕನ್ನಡ ಪೇಪರು ಕೇಳಿದ್ರು, ಅಂದೆಯಲ್ಲ, ತಗೋ ಕೊಟ್ಟು ಬಾ, ಉಳಿದದ್ದು ಆಮೇಲೆ ಕೊಡ್ತೀನಿ ನಮ್ಮಣ್ಣ ಓತ್ತಿದಾರೆ ಅಂತ ಹೇಳು’ ಎಂದು ಮುಟ್ಟಾದ ಹೆಂಗಸಿನಿಂದ ದೂರವಿರುವ ಮಡಿ ಹೆಂಗಸಿನಂತೆ ಸಂಜೆಯ ಸಮಾರಂಭದ ವರದಿಯುಳ್ಳ ಪೇಪರನ್ನು ಸಾಗಹಾಕಿದೆ.

ಸಾಪ್ತಾಹಿಕ ಪುರವಣಿಯಲ್ಲಿನ ಕತೆ, ಕವನ, ಚಿತ್ರಜಗತ್ತಿನ ಸುದ್ದಿಗಳನ್ನಾದರೂ ಓದೋಣವೆಂದು ಪುಟ ಬಿಚ್ಚಿದೆ. ಹೃದಯ ಸ್ತಂಭನವಾಗುತ್ತಿದೆಯೇ ಎನ್ನಿಸಿತು. ಕುಡಿದು ಕ್ಯಾಬರೆ ನೋಡುತ್ತಿದ್ದ ಲೆಕ್ಚರರ್‌ಗೆ ಇದ್ದಕ್ಕಿದ್ದಂತೆ ಅಲ್ಲಿ ತನ್ನ ಸ್ಕೂಡೆಂಟನನ್ನು ಕಂಡ ಆ ಲೆಕ್ಚರರ್‌ ನಾನೇನೋ ಎನ್ನಿಸಿತು

ಈ ಹಾಳಾದ ಪೇಪರಿನೋರು ಒಂದು ಡಿ. ಲಿಕ್, ಬಂದರೆ ಏಕಿಷ್ಟು ಪ್ರಚಾರ ಕೊಡ್ತಾರೋ ಎಂದು ರೇಗಿತು.

ನನ್ನನ್ನು ಕುರಿತು ವಿಶೇಷ ಲೇಖನ, ಪುನಃ ಅದೇ ಸೆಕೆಂಡ್‌ಹ್ಯಾಂಡ್ ಮಾತುಗಳು…

‘ನನ್ನನ್ನೂ ಭೂಮಿಯ ಮೇಲೆ ನಡೆಯಗೆಟ್ಟು ನಾನೂ ಒಬ್ಬ ಸಾಮಾನ್ಯ ಮನುಷ್ಯ’ ನಾಗಿ ಬದುಕಲು ಅವಕಾಶಕೊಡಬಾರದೇ-ಈ ಜನ ?’
ನಾಯಿಗಳು ಬೊಗಳುವುದು ನನ್ನ ಲಹರಿಯನ್ನು ತುಂಡರಿಸಿತು, ಕಿಟಕಿಯ ಬಳಿಗೆ ಹೋಗಿ ಕರ್ಟನ್ ಸರಿಸಿ ಹೊರಕ್ಕೆ ನೋಡಿದೆ. ಜಿಟಿ……ಜಿಟಿ….ಮುಂದುವರಿದೇ ಇತ್ತು, ಎದುರು ಮನೆಯ ಬಿರುಕು ಬಿಟ್ಟಿರುವ ಕಾಂಪೌಂಡ್ ಬಳಿ-ಎರಡು ನಾಯಿಗಳು…

ದಿಟ್ಟಿಸಿದ.

ಅದರಲ್ಲೊಂದು ಹೆಣ್ಣೆನಿಸಿತು !

ಎನ್ನಿಸುವುದೇನು ಬಂತು ? ಗುರ‍್ರೆಂದು ಅದರ ಬಾಲ ಮೂಸುತ್ತಿರುವ ಗಂಡನ್ನು ನೋಡಿದ ಮೇಲೆ ಅನುಮಾನವೇ ಉಳಿಯಲಿಲ್ಲ, ಮಳೆಯಲ್ಲಿ ಚೆನ್ನಾಗಿ ನೆನೆದಿರುವ ಅಷ್ಟೇನೂ ದಷ್ಟಪುಷ್ಟವಲ್ಲದ ಹೆಣ್ಣುನಾಯಿಯ ಜೋತಾಡುತ್ತಿರುವ ಬೆಲೆಗಳು ಅಸಹ್ಯವನ್ನುಂಟುಮಾಡುವಂತಿದ್ದರೂ ನಮ್ಮ ಪ್ರಾಚೀನ ಕವಿಗಳ ಕೈಗೆ ಈ ಮೊಲೆಗಳು ಸಿಕ್ಕಿದ್ದರೆ ಎನ್ನಿಸಿತು, ಗಂಡಿನ ಕಾಲೆರಡು ಹೆಣ್ಣಿನ ಬೆನ್ನಿನ ಮಧ್ಯಭಾಗವನ್ನು ಆಕ್ರಮಿಸಿದ್ದುವು, ಹೆಣ್ಣು ಕುಂಯ್‌ಗುಡುತ್ತಿತ್ತು, ಓಡಲು ಪ್ರಯತ್ನಿಸಿದರೂ ಗಂಡಿನ ಹಿಡಿತದಿಂದ ಅದಕ್ಕೆ ಮೋಕ್ಷ ದೊರಕುತ್ತಿಲ್ಲ, ಆದರೂ ಹೆಣ್ಣು ತನ್ನ ಶಕ್ತಿಯನ್ನೆಲ್ಲಾ ಒಟ್ಟು ಗಡಿಸಿ ಗಂಡಿನಿಂದ ಬಿಡಿಸಿಕೊಳ್ಳಲು ಯತ್ನಿಸಿ ಕೊಸರುತ್ತ…..ಕೊಸರತ್ತ…….. ಕೊಸರುತ್ತ…ಬಿಡಿಸಿಕೊಳ್ಳಲಾಗದ ಹಾಗೆಯೇ…….ಹಾಗೆಯೇ……..

ಗಂಡು ಸಹಿತವಾಗಿ

ನಿಧಾನವಾಗಿ…..ನಿಧಾನವಾಗಿ ..

ಮುಂದಕ್ಕೆ ಎಳೆಯುತ್ತಿತ್ತು,

ಕ್ರಮೇಣ ಎದುರು ಮನೆಯ ಕಾಂಪೌಂಡಿನ ಬಿರುಕಿನ ಮೇಲೆ ಬಿದ್ದಿದ್ದ ಮರ ಅಡ್ಡವಾಯಿತು.

ನಾನು ನೋಡುತ್ತಲೇ ಇದ್ದೆ, ನೋಡುತ್ತಲೇ ಇದ್ದೆ, ಮಳೆಯಲ್ಲಿ ತೊಯ್ದು ಮುದ್ದೆಯಾಗಿದ್ದಳು. ಮೈಮೇಲಿನ ಬಟ್ಟೆಗಳು ಮಾಂಸದ ಮುದ್ದೆಗಳನ್ನು ಕಣ್ಣಿಗೆ ಬಡಿಯುವಂತೆ ಬಿಗಿ ಹಿಡಿದು ಬಿಡಿಸಿ ತೋರಿಸುತ್ತಿದ್ದುವು, ಭೂಮಿಯ ಕಪ್ಪನ್ನು ಬಿಳುಪಾಗಿಸುವ ಅಸ್ಪೃಶ್ಯವನ್ನು ಸ್ಪೃಶ್ಯವಾಗಿಸುವ ಅವಳ ಪಾದಗಳು, ಒದ್ದೆಯಾದ ಸೀರೆ ತೊಡರುತದೆಯೆಂದು ಮೇಲಕ್ಕೆ ಎತ್ತಿ ಹಿಡಿದದ್ದರಿಂದ ಕಾಣುತ್ತಿರುವ ಅವಳ ಮೀನಖಂಡಗಳು ನನ್ನ ನೋಟವನ್ನು ಬೇರೆ ಕಡೆಗೆ ಹರಿಯಲು ಸಹಕರಿಸಲಿಲ್ಲ. ನನ್ನ ದೃಷ್ಟಿ ಮೇಲೆ ಮೇಲೆ ಬಂದಂತೆಲ್ಲ ಒದ್ದೆಯಿಂದ ಅವಳ ಸೀರೆ ಕುಪ್ಪಸಗಳೊಳಗಿನಿಂದ ಹಾಯ್ದು “ಎಕ್ಸ್-ರೇ? ಯಾಗಿ ಹರಿಯತೊಡಗಿತು.

‘ಸಾರ್…ಸಾರ್…ಸಡನ್ನಾಗಿ ಮಳೆ ಜೋರಾಗಿ ಬಂದ್ವಿಡು. ಹಿಂದಕ್ಕೆ ಮನೆಗೆ ಹೋಗಲಿಕ್ಕಾಗಲಿಲ್ಲ. ಬಂದ್ವಿಟ್ಟೆ, ಇವತ್ತು ಓಷನ್ ಬೇಡ ಸರ್, ಮಳೆ ಬಿಟ್ಟ ಕೂಡಲೇ ಹೊರಟು ಹೋಗ್ತಿನಿ.’

“Come in please, ನಮ್ಮನೇಲಿ ಈಗ ಯಾರಾದ್ರೂ ಹೆಂಗಸರಿದ್ದಿದ್ದರೆ ಒಣಗಿದ ಸೀರೆ ಕೊಡ್ತಿದ್ದೆ. ಹಾಳು ಇರುಚಲು ಗಾಳಿ ಎನ್ನುತ್ತ ಬೀದಿ ಬಾಗಿಲಿನ ಬೋಲ್ಟ್ ಹಾಕಿದೆ.

ಮನೆಯಲ್ಲಿ ನಾವಿಬ್ಬರೇ !

ಟ್ಯೂಷನ್ ಇಲ್ಲ.
“ನಿನಗೆ ನನ್ನ ಸಾಹಿತ್ಯಕೃತಿಗಳನ್ನು ಕಂಡರೆ ತುಂಬ ಇಷ್ಟ ಅಲ್ಲ’ ಅವಳ ಸಮೀಪಕ್ಕೆ
ಸರಿಯುತ್ತಿದ್ದೆ.

“ಮಾತಾಡು”

ಅವಳಿಗೆ ತಾಕುವಂತಿದ್ದೆ.
ಅವಳು ಸುಮ್ಮನಿದ್ದಳು.
ಅವಳ ಈ ಮೌನದ ಅರ್ಥ-ನನಗನುಕೂಲವಾಗುವಂತೆ ವಿವರಿಸಿಕೊಂಡೆ, ಅವಳ ಕೈ ನನ್ನಲ್ಲಿತ್ತು, ಅವಳ ದೇಹವನ್ನು ನನ್ನತ್ತ ಸೆಳೆದುಕೊಂಡ, ಬಿಗಿಯಾಗಿ ಅಪ್ಪಿದೆ……. ‘ಸಾರ್…ನಾ…ನು…ಅ…’ಅವಳ ಮಾತಿಗೆ ಅವಕಾಶವಿಲ್ಲದಂತೆ ತುಟೆತುಂಬ ಒತ್ತಿದೆ,

ಅಪ್ಪಿದೆ…………
ಒತ್ತಿದೆ……………
ಒ………….
ತಿ…………..
ದೆ…………..

ಎರಡೂ ನಾಯಿಗಳು ಕುಯ್ಯೋ ಹುಯ್ಯೋ ಎನ್ನುತ್ತ ಆ ಕಡೆಗೊಂದು ಈ ಕಡೆಗೊಂದು ಓಡಿದವು.

‘ಈ ಹಾಳಾದೋವಕ್ಕೆ ಇನ್ನೆಲ್ಲಿಯೂ ಜಾಗವಿಲ್ಲ, ಪಾಪಿ ವಲಂಡೇವು, ನಮ್ಮ ಕಾಂಪೌಂಡೇ ಆಗಬೇಕು, ನೋಡಿ ಸಾರ್ ಈ ದರಿದ್ರ ಮುನಿಸಿಪಾಲಿಟಿಯವರು ಈ ಬೀದಿನಾಯಿಗಳನ್ನು ಕೊಂದಾದರೂ ಹಾಕಬಾರದೇ ಆತೀನಿ ಏನ್‌ ಸಾರ್‌ ಅಷ್ಟೊಂದು ಗಾಢವಾಗಿ ಆಲೋಚನೆ ಮಾಡುತ್ತ ನಿಂತ್ಬಿಟ್ರಿ, ನಿಮ್ಮನ್ನೇ ಸಾರ್ ಮಾತಾಡಿಸಿದು. ಸಾರ್‌…….ಸಾರ್…’

ಯಾರೋ ನನ್ನನ್ನು ಕೂಗಿದಂತಾಗಿ ವಾಸ್ತವ ಜಗತ್ತಿಗೆ ಬಂದೆ. ತುಂಬಾ ನಾಚಿಕೆ ಯಾಯಿತು.

‘ಏನೋ ಸುಮ್ಮನೆ ನಿಂತುಬಿಟ್ಟೆ, ಕ್ಷಮಿಸಿ’ ಎಂದು ಕೈಲಿ ಕಲ್ಲು ಹಿಡಿದಿದ್ದ ಯಜಮಾನರ ಕ್ಷಮೆ ಕೇಳಿ ಕಿಟಕಿ ಬಿಟ್ಟು ರೂಮಿನೊಳಕ್ಕೆ ಹೋದೆ.

ಚರಂಡಿಯಲ್ಲಿ ಬಿದ್ದಿದ್ದ ನನ್ನ ಮೊದಲ ಮಗಳ ಚೆಂಡನ್ನು ಹಲ್ಲಿನಲ್ಲಿ ಕಟ್ಟಿಕೊಂಡು ನಮ್ಮ ಟಾಮಿ ಬಾಲ ಅಲ್ಲಾಡಿಸುತ್ತ ನನ್ನ ಬಳಿಗೆ ಬಂತು, ಅದರ ಹಿಂದೆಯೇ ನನ್ನ ಮಗಳ ಬಂದಳು.

‘ಏನು ಅಪ್ಪ ಮಗಳು ಟಾಮಿ ಜೊತೆ ಸೇರಿ ಪ್ರಪಂಚಾನೆ ಮರೆತಿರೋ ಹಾಗಿದೆ. ಭಾನುವಾರ ಊಟಕ್ಕೆ ಅಪ್ಲೈ ಆಗೋಲ್ಲ ಅನ್ನೋದು ಗೊತ್ತು ತಾನೇ ?’

ಕಂಕುಳಲ್ಲಿ ಎರಡನೆಯ ಮಗುವನ್ನತ್ತಿಕೊಂಡಿದ್ದ ಎರಡು ಮಕ್ಕಳ ತಾಯಿಯಾದ ಗೃಹಿಣಿಯಾದ ನನ್ನ ಹೆಂಡತಿಯ ಮುಖವನ್ನೇ ದಿಟ್ಟಿಸಿದೆ.

‘ಅದೆಷ್ಟು ಶಾಂತಳಾಗಿದ್ದಾಳೆ!
ಅಂದಿನ……ಆ ರಾತ್ರೆಯ…….ಅವಳೇನೇ ಇವಳು ?
ಮತ್ತೆ ದಿಟ್ಟಿಸಿದೆ.
‘ಹೌದು ಸಂಶಯವೇ ಇಲ್ಲ’
‘ನನಗೂ ಇವಳಿಗೂ ಇರುವ ಅಂತರವಾದರೂ ಏನು ?’
‘ಏನು ?’
ಚಿಂತಿಸುತ್ತಲೇ ದಿಟ್ಟಿಸಿದೆ.
‘ಯಾಕ್ ಹಾಗೆ ನೋಡುತ್ತಿದ್ದೀರಿ. ಯಾವತ್ತೂ ನೋಡಿಯೇ ಇಲ್ಲವೇ ?’
‘ಹೂಂ…….ಹಾಂ…….’
‘ಏನಿಲ್ಲ……ಏನಿಲ್ಲ……’
‘ನಡೀರಿ ಊಟ ಮಾಡೋಣ’.

Close

ತುಡುಗುಗವನ

ತುಡುಗುಗವನ

ಮಹಾದೇವ ದೇವನೂರು

ಮಾಂಸದ ರಿದಮಿಕ್ಕೇ ಹಿಂಗೋ ಹೆಂಗೊ
ಅದು ಹೊಂಟಂಗೇ ಹಾದಿ, ಚಾರು ಅಂದೆ.
ಚೆಗೆವಾರ ಅಂದೆ, ಅಂದು ಅಂದೂ ಅಂದವ
ಭಯಂಕರವಾಗಿ ಕೊಂದೆನಪ್ಪಾ, ಕೊಂದೆ, ಕೊಂದೆ.

ಹೊಟ್ಟೆ ಹೊರಲಾರದೆ ವೃಥಾ ಕಷ್ಟಕ್ಕೆ
ಸಿಲುಕಿದವರು, ಇಂಥವರು, ಮತ್ತು
ಮಯ್ಯಿ ತುಂಬಾ ವೃಥಾ ತುಂಬಿದ ಮಾತ
ಬುದ್ದಿ ಜೀವಿಗಳು, ಇಂಥವರು, ಮತ್ತು
ಯಾಕೆ ಮಾತು ?-ಹಿಂಗೇ ಲಿಸ್ಟು.

ನಾಡಲ್ಲಿ ಹಾಲಹಳ್ಳ ಹರಿಯಿತು. ಹರಿಯುವಂಥದ್ದು
ಮುಂದೆ ಡಿಳ್ಳಿಗೂ ಹೋಗಬೇಕಾದ್ದೆ. ಅಲ್ಲಿ
ಕುಡಿದ ಮಿಕ್ಕಿದ ಹಾಲಲ್ಲಿ ಪ್ರಧಾನಿ ಸ್ನಾನ ಮಾಡಿದ್ದು
ಬೆತ್ತಲೆ ಮುಚ್ಚಿಕೊಳ್ಳುವ ಯಃಕಶ್ಚಿತ್ ಕಾರಣ
ಬದಲಾಗಿ ಮಿಂಕ್ ಕೋಟು ಮಾತ್ರವೆ ಧರಿಸಿದ್ದು
(ಸೂರ‍್ಯ ಚಂದ್ರರ ಹಾಗೆ ಹೊಳೆಯುತ್ತ ಹೊರಬಂದು)
ತುಟಿಗನಿವಾರ್ಯವಾಗಿರುವ ಮಂದಸ್ಮಿತ ತುಳುಕಿಸಿದ್ದು
ಹಾಲಿನ ಹಂಗಲ್ಲ ಸ್ವಾಮಿ ಅಪ್ಪಟ ಅಪ್ಪಟ ಸತ್ಯ.

ಕಂಡ ಇಂಡಿಯಪ್ಪನ ಮಕ್ಕಳು ಹೊಟ್ಟೆ
ತುಂಬಿಕೊಂಡವು, ಕೈಕಾಲು ಆಡಿಸುತ್ತ ಕಿಲ
ಕಿಲ ನಗಲು ತೊಡಗಿದವು. ಬೆಳ್ಳಂ ಬೆಳ್ಳಗೆ.

Close

ವರ್ಧಮಾನ-ಒಂದು ಟಿಪ್ಪಣಿ

ವರ್ಧಮಾನ -ಒಂದು ಟಿಪ್ಪಣಿ

ರಾಮಚಂದ್ರದೇವ

ಚಂಡೆ ಮದ್ದಳೆಯಿಂದ ಅಡಿಗರು ಪುರಾಣಗಳನ್ನು ಮತ್ತು ಆಧುನಿಕ ಪ್ರತಿಮೆಗಳನ್ನು ಉಪಯೋಗಿಸಿಕೊಳ್ಳುತ್ತಾ ಬಂದಿರುವ ರೀತಿ ಅಭ್ಯಾಸಯೋಗ್ಯವಾದದ್ದು, ಅವುಗಳ ಉಪಯೋಗದಲ್ಲಾದ ಬದಲಾವಣೆಗೂ ‘ವರ್ಧಮಾನ’ದ ವರೆಗಿನ ಅವರ ಬೆಳೆವಣಿಗೆಗೂ ನಿಕಟವಾದ ಸಂಬಂಧವಿದೆ.

ಚಂಡೆ ಮದ್ದಳೆಯ ‘ಹಿಮಗಿರಿಯ ಕಂದರ’ ಮತ್ತು ‘ಗೊಂದಲಪುರ’ಗಳಲ್ಲಿ ಅವರು ಪುರಾಣಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಾರೆ. ನಗರ ಜೀವನದ ಆಚೆಗಿರುವ ನಾಯಕ ತಲುಪಲು ಆಶಿಸುವ ಹಿಮಗಿರಿಯ ಕಂದರದ ಸೃಷ್ಟಿ ಅಂಥಾ ಒಂದು ಪುರಾಣ, ರಾಕ್ಷಸ ಪಾತ್ರಗಳ ಮಾದರಿಯಲ್ಲಿ ಕತ್ತು ಹಿಚುಕುವ ನಿರಂಕುಶಾಧಿಕಾರಿಯಾಗಿ ಬರುವ ಗೊಂದಲಾ ಸುರ ಮತ್ತು ಗೊಂದಲಪುರ ಆಥರದ ಇನ್ನೊಂದು ಪುರಾಣ, ಅಂದರೆ ಈ ಕವನಗಳಲ್ಲಿ ಅಡಿಗರು ಉಪಯೋಗಿಸಿಕೊಳ್ಳುವ ಸಾಮಗ್ರಿ : ನಗರದ ವಾತಾವರಣ, ವೈಜ್ಞಾನಿಕ ಸಂಕೇತಗಳು ಮತ್ತು ಸೃಷ್ಟಿತ ಪುರಾಣಗಳು, ಗೊಂದಲಪುರ ಮುಖ್ಯವಾಗಿ ವ್ಯಕ್ತಿಯ ಸಾಮಾಜಿಕ ಪಾತ್ರದ ಬಗ್ಗೆ ಇರುವ ಕವನ ಮುಂದೆ ಬರುವ ಭೂಮಿಗೀತದ ಕವನಗಳಲ್ಲಿ ಅವರು ಪುರಾಣಗಳನ್ನು ಸೃಷ್ಟಿಸುವುದಿಲ್ಲ; ದತ್ತವಾಗಿ ಬಂದ ಈಡಿಪಸ್ಸು, ಧ್ರುವ ಬುದ್ಧ, ನೋಹ ಮೊದಲಾದ ಪುರಾಣ ವ್ಯಕ್ತಿಗಳನ್ನು ಉಪಯೋಗಿಸಿಕೊಳ್ಳುತ್ತಾರೆ. ಮತ್ತು ಬಹಳಷ್ಟು ಸಲ್ಟ ಇವರು ಧ್ರುವ, ಬುದ್ಧ, ನೋಹ-ಕವನ ಪ್ರತಿನಿಧಿಸುವ ಒಂದು ಮೌಲ್ಯದ ಕಡೆಗೂ ಕೈ ಮಾಡುತ್ತಾರೆ, ಇದರ ಜೊತೆಗೇ ಇಲ್ಲಿ ಬರುವ ಸಂಕೇತಗಳು ಹಳ್ಳಿಯಿಂದ, ಕೃಷಿ ಜೀವನದಿಂದ ತೆಗೆದುಕೊಂಡವುಗಳು. ಈ ಕವನಗಳು ಹೆಚ್ಚು ವಿಸ್ತಾರವಾದ ಅನುಭವವನ್ನು ಒಳಗೊಳ್ಳುವುದಕ್ಕೆ ದತ್ತ ಪುರಾಣಗಳಿಗೆ ಇರುವ ರೆಫರೆಸ್ಸಿನ ಕ್ಷೇತ್ರ ಹೆಚ್ಚು ವಿಸ್ತಾರವಾಗಿರುವುದೂ ಕಾರಣವಾಗಿರಬಹುದು, ಅಥವಾ ಇಂಥಲ್ಲಿ ಕವಿಗೆ ಹೆಚ್ಚು ಅವಕಾಶಗಳಿರುತ್ತವೆ. ‘ಶ್ರೀ ರಾಮನವಮಿಯ ದಿವಸ’ ಕವನದಲ್ಲಿ, ಮೊದಲಬಾರಿಗೆ, ವೈಜ್ಞಾನಿಕ, ಆಧುನಿಕ ಸಂಕೇತಗಳನ್ನೂ, ಪ್ರರಾಣಗಳನ್ನೂ, ಕೃಷಿ ಜೀವನದಿಂದ ಎತ್ತಿಕೊಂಡ ಪ್ರತಿಮೆಗಳನ್ನೂ ಒಟ್ಟಿಗೆ ಉಪಯೋಗಿಸಿಕೊಳ್ಳುವ ಪ್ರಯತ್ನವಿದೆ. ಇಲ್ಲಿ ಬರುವ ವಿಜ್ಞಾನದಿಂದ ಎತ್ತಿಕೊಂಡ ವಿವರ ಇದು :

ನೆಲಕ್ಕಂಟಿ ಬಿದ್ದ ಆಕಾಶಯಾನದ ಕನಸು
ಜೆಟ್ ವಿಮಾನವನೇರಿ ಕೆಂಚ ದರ
ತೇಲಿ ಮಣ್ಣಿಗೆ ಮರಳಿ, ರಾಕೆಟ್ಟು ಜಗಿದುಗುಳಿ
ತಿಂಗಳಿಗೆ ಬಡಿವಾಧುನಿಕ ವಿಕಾರ.

ಆದರೆ ಇಲ್ಲಿ ಬರುವ ವಿಜ್ಞಾನದ ಪ್ರತಿಮೆಗಳು ಪುರಾಣದ ಪ್ರತಿಮೆಗಳ ಜೊತೆಗೇ ಬೆಳೆಯುತ್ತಾ ಕವನಕ್ಕೆ ಹೊಸ ಆಯಾಮವನ್ನು ಕೊಡುವುದಿಲ್ಲ. ಇದರ ಅರ್ಥ “ಶ್ರೀರಾಮನವಮಿಯ ದಿವಸ’ ಒಳೆ ಯ ಕವನವಲ್ಲ ಎಂದಲ್ಲ, ಪ್ರತಿಮೆಗಳ ಉಪ ಯೋಗದ ದೃಷ್ಟಿಯಿಂದ ಈ ಕವನ ಹಿಂದಿನ ಕವನಗಳ-ಶರದ್ಗೀತ’, ‘ಭೂಮಿಗೀತ’ದಂಥ ಕವನಗಳ ಸಾಲಿಗೆ ಸೇರುವಂಥದ್ದು ಎಂದು. ಆದರೆ ನಗರ ಜೀವನದ ಮತ್ತು ಕೃಷಿ ಜೀವನದ ಪ್ರತಿಮೆಗಳು, ವಿಜ್ಞಾನದ ಸಿದ್ದಾಂತ ಮತ್ತು ಪುರಾಣದ ಕಲ್ಪನೆ ಇವುಗಳನ್ನು ಅವರು ಒಟ್ಟಿಗೇ ಹಿಡಿದಿಡುವುದು ಸಾಧ್ಯವಾದದ್ದು ‘ವರ್ಧಮಾನ’ ದಲ್ಲಿ, ಇಲ್ಲಿ ‘ನಾಣಿ ಮಗ ಶೀನಿಯ’ ಸ್ಥಿತ್ಯಂತರಗಳನ್ನೂ, ಡಾರ್ವಿನ್ನನ ವಿಕಾಸವಾದದ ಒಂದು ಪಂತವನ್ನೂ, ಹನುಮಂತ ಸ್ವಯಂಪ್ರಭೆಯಿಂದ ತನ್ನ ಶಕ್ತಿಯ ಆರಿವು ಪಡೆದು ಲಂಕೆಗೆ ಲಂಘಿಸಿದ ಎನ್ನುವ ರಾಮಾಯಣದ ಕಥಾಭಾಗವನ್ನೂ ಸಂಗಮಿಸಿ ಉಪಯೋಗಿಸಿಕೊಳ್ಳುವ ರೀತಿ ಕವನಕ್ಕೆ ಹೊಸ ಆಳವನ್ನೂ ವಿಸ್ತಾರವನ್ನೂ ಒದಗಿಸಿದೆ.

ಮೊದಲನೆಯ ಸಾಲುಗಳಲ್ಲಿ ನಾಣಿ ಮಗ ಶೀನಿಯ ರೊಚ್ಚನ್ನು ಒಂದು ಪ್ರಾಣಿಗೆ – ಹೋರಿಗೆ (ಕತ್ತಿನ ಕುಣಿಕೆ, ಮೊಳೆವ ಕೊಂಬು)-ಸೂಚನೆಗಳನ್ನು ಕೊಡುತ್ತಾ ಚಿತ್ರಿಸುತಾರೆ, ಆವನ ಈ ಸ್ಥಿತಿ, ಮಂದಿನ ಭಾಗದ ಹಿಪ್ಪಿ ಗೆಳೆಯರು ಮತ್ತು ಅವರ ವರ್ಣನೆ ಚೆಲ್ಲುವ ಬೆಳಕಿನ ಮೇಲೆ ನೋಡಿದಾಗ, ಕೋತಿಯ ಸ್ಥಿತಿ, ಮೊದಲನೆಯ ಭಾಗದುದ್ದಕ್ಕೂ ಈ ಸ್ಥಿತಿಯ ಬಗ್ಗೆ ವ್ಯಂಗ್ಯವಿದೆ, ಎರಡನೆಯ ಭಾಗದ ಮೊದಲಿನ ಸಾಲು ಗಳಲ್ಲಿ ನಗರ ಜೀವನದಿಂದ ಎತ್ತಿಕೊಂಡ ಕಿಲಾಡಿ ರಸ್ತೆ ಮತ್ತು ಅಪಘಾತದ ವಿವರದ ಜೊತೆಗೇ ಉಪನಿಷತ್ತಿನ ನಸ್ರಮದಿತವ್ಯ ಮಂತ್ರಕ್ಕೂ ಸೂಚನೆಯಿದೆ, “ಬಿದ್ದು ಮೊಣಕಾಲೂರಿ, ತರಿದ ಮೈಕೈ’ ಅಪಘಾತದ ನಂತರದ ಶೀನಿಯ ಸ್ಥಿತಿ, ‘ಹರಿದ ರೆಕ್ಕೆ, ಜಜ್ಜಿದ ಚಹರೆ? ಅವನ ಸ್ಥಿತಿ ಹೇಗೋ ಹಾಗೆ ಹನುಮಂತನ ಸ್ಥಿತಿಯೂ ಹೌದು. ಇದು ಸ್ಪಷ್ಟವಾಗುವುದು ಕೊನೆಯ ಸ್ಟಾನ್‌ಸಾ ಈ ಸಾಲುಗಳ ಮೇಲೆ ವರ್ತಿಸಿ, ನಭದ ತುರುಚೆಗೆ ಎನ್ನುವುದು ಹನುಮಂತ ಬಾಲ್ಯದಲ್ಲಿ ಹಣ್ಣೆಂದು ಸೂರಿನ ಕಡೆಗೆ ಹಾರಿ ಜಜ್ಜಿದ ಚಹರೆಯಿಂದ ಭೂಮಿಗೆ ಮರಳಿದ್ದನ್ನು ನೆನಪಿಸಿದಾಗ, ಮುಂದಿನ

……ಹಿಪ್ಪಿ ಗೆಳೆಯರು ದರ ದರ ಗೆಲ್ಲಿನ ಮೇಲೆ
ಹುಬ್ಬೇರಿಸುವರು, ಹಲ್ಕಿರಿಯುವರು……

ಸದ್ಯದ ಯುವಕನ ಅಸ್ತವ್ಯಸ್ತತೆ ಮತ್ತು ಹುಚ್ಚು ಉತ್ಸಾಹ ಕೋತಿಯ ಸ್ಥಿತಿಯೊಂದು ಒತ್ತಿ ಹೇಳುತ್ತದೆ, ರಾಮಾಯಣ ಮತ್ತು ಧ್ರುವನ ಕತೆಯನ್ನು ಸೂಚಿಸಿದ ಬಳಿಕ (ಇಲ್ಲಿ ಭೂತವಿರಾಧ ಯಾಕೆ ಬರಬೇಕು ಎನ್ನುವುದು ಸ್ಪಷ್ಟವಾಗುವುದಿಲ್ಲ.) ಮತ್ತೆ ಸೀತೆಯನ್ನು ಹುಡುಕುತ್ತಾ ಹೊರಟ ಹನುಮಂತನ ಚಿತ್ರ ಬರುತ್ತದೆ, ‘ತನ್ನ ಕಿಷ್ಕಂಧಕ್ಕೆ ತನ್ನ ಶಾಪಗ್ರಸ್ತ ಸೆರೆಗೆ ತಾನೇ ಪಹರೆ” ಎನ್ನುವುದರ ಬಗ್ಗೆ ಶ್ರೀ ಎನ್‌. ಎಸ್‌. ಲಕ್ಷ್ಮೀನಾರಾಯಣ ಭಟ್ಟರು ಹೀಗೆ ಬರೆಯುತ್ತಾರೆ:

`ಈ ಭಾಗದಲ್ಲಿ ಬರುವ ‘ತನ್ನ ಕಿಷ್ಕಂಧಕ್ಕೆ ತನ್ನ ಶಾಪಗ್ರಸ್ತ ಸೆರೆಗೆ ತಾನೇ ಪಹರೆ ಎಂಬ ಮಾತಿನಲ್ಲಿ ಕಿಷ್ಕಂಧ ಎಂಬ ಪದ ವಾಚ್ಯಾರ್ಥವನ್ನಷ್ಟೇ ಕೊಟ್ಟು ವಿರಮಿಸಿ ಬಿಡುತ್ತದೆ, ಸುಗ್ರೀವನ ಹೆಸರಿನ ಜೊತೆಜೊತೆಯಲ್ಲಿಯೇ ‘ಕಿಷ್ಕಿಂಧ’ ‘ಶಾಪಗ್ರಸ್ತ’ ಪದಗಳು ಪ್ರಯೋಗವಾಗಿರುವುದರಿಂದ ಪೌರಾಣಿಕ ಘಟನೆಗಳ ಸಂಬಂಧದಲ್ಲಿ ಅವು ಕೊಡುವ ಅರ್ಥವನ್ನೂ ಕವನಕ್ಕೆ ಒದಗಿಸಲು ಕವಿ ಯೋಚಿಸಿರುವಂತಿದೆ, ಆದರೆ ಕಿಷ್ಕಿಂಧ ಯಾರ ಪಾಲಿಗೂ ಸೆರೆಯಾಗಲಿಲ್ಲ. ಸುಗ್ರೀವನಿಗೆ ಮಾತ್ರ ಋಷ್ಯಮೂಕ ಕೆಲವು ಕಾಲ ಸೆರೆ ರಕ್ಷೆ ಎರಡೂ ಆಗಿತ್ತು ವಾಲಿಯ ಭಯದಿಂದ, ಆದ್ದರಿಂದ ಮೇಲಿನ ಮಾತು ಪೌರಾಣಿಕ ಘಟನೆಗಳ ಸಂಬಂಧದಲ್ಲಿ ಏನನ್ನೊ ಧ್ವನಿಸುವಂತೆ ತೋರಿ, ನಿಜವಾಗಿ ಅಂಥ ಧ್ವನಿಯೇನನ್ನೂ ಸ್ಫುರಿಸದೆ ಹೋಗುತ್ತದೆ. ಶ್ರೀ ಲಕ್ಷ್ಮೀನಾರಾಯಣ ಭಟ್ಟರಿಗೆ ಕವನದಲ್ಲಿ ಅಂತರ್ಗತವಾಗಿ ಬರುವ ಹನಮಂತನ ಕತ ಹೊಳೆದಿಲ್ಲವೆನ್ನುವುದು ಸ್ಪಷ್ಟ, ಮುಂದೆ ಬರುವ ಸ್ವಯಂಪ್ರಭೆಯನ್ನು ಜ್ಞಾಪಿಸಿ ಕೊಂಡಾಗ ‘ಶಾಪಗ್ರಸ್ತ ಸೆರೆ’ ಮತ್ತು `ಕಿಷ್ಕಿಂಧ’ ಅರ್ಥವಾಗುತ್ತವೆ. ಸ್ವಯಂಪ್ರಭೆ ಯನ್ನು ಭೇಟಿಯಾಗದೆ ಹೋಗಿದ್ದರೆ – ಅದಕ್ಕಾಗಿ ಹನುಮಂತ ಸೀತೆಯನ್ನು ಹುಡುಕುತ್ತಾ ಮುನ್ನುಗ್ಗದಿದ್ದರೆ–ಕಿಷ್ಕಿಂಧದಲ್ಲೇ, ತನ್ನ ಶಕ್ತಿಯ ಬಗೆಗಿನ ಅಜ್ಞಾನದಲ್ಲೇ ಸೆರೆಯಾಗಬೇಕಾದವನು, ಮೊದಲನೆಯ ಭಾಗದಲ್ಲಿ ವ್ಯಂಗ್ಯಕ್ಕೆ ಗುರಿಯಾಗಿದ್ದ “ಎಲ್ಲವನ್ನೆತ್ತಿತ್ತಿ ಕುತ್ತಿ ತೀರದ ತುರಿಕೆ, ಇಲ್ಲಿ, ಬೆಳೆವಣಿಗೆಯ ಹಂತವಾಗಬಹುದೆನ್ನುವ ಯೋಚನೆ ಮತ್ತು ತನ್ಮೂಲಕ ಇತ್ಯಾತ್ಮಕ ಮೌಲ್ಯವಾಗುವುದು ಹನುಮಂತನ ಬಾಲ್ಯದ ಹಾರಾಟಕ್ಕೂ ನಾಣಿ ಮಗ ಶೀನಿಯ ಅರ್ಥಹೀನ ದಂಗೆಗೊ ಸಂಬಂಧವಿರಬಹುದೆಂದು ಸೂಚಿಸುತ್ತಾ ಹನುಮಂತನ ಬೆಳೆವಣಿಗೆಯ ಒಂದು ಮೆಟ್ಟಲಿಗೆ ರೆಫರೆನ್ಸ್ ಕೊಡುವುದರಿಂದ.

ಮುಂದಿನ ಭಾಗ ಸದ್ಯದ ಸ್ಥಿತಿಯ ಮೇಲೆ ಅಪ್ಪನ ವಿಷಾದಪೂರ್ಣ ಯೋಚನೆಗಳು. ಮುತ್ತಜ್ಜ ಕಟ್ಟಿದ್ದ ಮನೆ ಮತ್ತು ಪಿತೃಪಿತಾಮಹರ ಮೂಲಕ ಒಂದು ಪುರಾಣವನ್ನು ಸೃಷ್ಟಿಸುವ ಪ್ರಯತ್ನವಿದೆ, ಆದರೆ ಈ ಸಾಲುಗಳಲ್ಲಿ ಅಪ್ಪ ಯೋಚಿಸುತ್ತಿರುವುದು ಕೆಟ್ಟು ಹೋದ ಆಚಾರದ ಬಗ್ಗೆ, ಇದೇ ಪರಮ ಮೌಲ್ಯವಲ್ಲವೆನ್ನುವುದು ನಾಲ್ಕನೆಯ ಭಾಗದಲ್ಲಿ ಇದನ್ನು ಮೌಲ್ಮೀಕರಿಸುತ್ತಾ ತನ್ನ ವ್ಯಕ್ತಿತ್ವದ ಬಗ್ಗೆ ಪರಮಸಿದ್ದಿಯಲ್ಲೇ ಗುರುದಕ್ಷಿಣೆಯನ್ನೂ ಹವ್ಯವನ್ನೂ ಕೊಡಬಹುದಾದ ವರ್ಧಮಾನನ ಚಿತ್ರ ಬಂದಾಗ ಸ್ಪಷ್ಟವಾಗುತ್ತದೆ.

ನಾಲ್ಕನೆಯ ಭಾಗದಲ್ಲಿ ನಾಣಿ ಮಗ ಶೀನಿಯ ಪೂರ್ಣತೆಯ ಬಗ್ಗೆ ಯೋಚನೆಯಿದೆ. ಮೂರನೆಯ ಭಾಗದಲ್ಲಿ ಬಂದ ಹನುಮಂತನನ್ನು ಕವಿ ಇಲ್ಲಿ ಮತ್ತೆ ಬೆಳೆಸಿಕೊಳ್ಳುತ್ತಾರೆ. ಹನುಮಂತನಿಗೆ ಶಾಪ ವಿಮೋಚನೆಯಾಗಿ ತನ್ನ ಶಕ್ತಿಯ ಪೂರ್ತಿ ಅರಿವಾದದ್ದು ಸೀತೆಯನ್ನು ಹುಡುಕುತ್ತಾ ಹೊರಟ ಅವನು ಸ್ವಯಂಪ್ರಭೆಯನ್ನು ಗುಹೆಯಲ್ಲಿ ಸಂಧಿಸಿದಾಗ, ತನ್ನ ಶಕ್ತಿಯ ಪೂರ್ತಿ ಆವಿಷ್ಕಾರವಾದ ಬಳಿಕ ಅವನು ವಿಕಾಸಗೊಳ್ಳುತಾನೆ. ಪುರಾಣದ ಹನುಮಂತನ ಈ ಪ್ರತಿಮೆ ಇಡಿಯ ಕವನದ ಮೇಲೆ ವರ್ತಿಸಿ ವರ್ಧಮಾನದ ಒಂದು ರೀತಿಯನ್ನು ಸೂಚಿಸುತ್ತದೆ. ಹನಮಂತ ಸೀತೆಯನ್ನು ಅವನು ಸ್ವಯಂಪ್ರಭೆಯನ್ನು ಗುಹೆಯಲ್ಲಿ ಭೇಟಿ ಯಾದದ್ದು ಆಕಸ್ಮಿಕವಾಗಿ ; ಆದ್ದರಿಂದಲೇ ಅವನಿಗೆ ಸ್ವಯಂಪ್ರಭೆ (ಸ್ವ-ಜ್ಞಾನ ಎನ್ನುವ ಅರ್ಥದಲ್ಲಿ) ಸ್ಫುರಿಸುತ್ತದೆ ಎನ್ನುವುದು ಮುಖ್ಯವಾದ ಪದ ಇದರ ಜೊತೆಗೇ ಬೆಳೆದು ಬಂದ ಇನ್ನೊಂದು ಪ್ರತಿಮೆ ಡಾರ್ವಿನ್ನನ ವಿಕಾಸವಾದದಿಂದ ಎತ್ತಿಕೊಂಡ ಪ್ರತಿಮೆ, ಇದು ಸ್ಪಷ್ಟವಾಗುವುದು ನಾಲ್ಕನೆಯ ಭಾಗದ ವಿಕಾಸದ ರೀತಿಯನ್ನು ಗಮನಿಸುತ್ತಾ ‘ಹಲ್ಲುಗುರು ಕೊಂಬು ಇವು ಅಷ್ಟಿಷ್ಟು ಸವೆದು’ ಎನ್ನುವಲ್ಲಿಗೆ ಬಂದಾಗ. ಈ ಸಾಲುಗಳು ಮೊದಲಿನ ಸಾಲುಗಳಲ್ಲಿ ಚಿತ್ರಿತವಾದ ಕೋಶಿಸ್ಥಿತಿಯ ಮೇಲೆ ವರ್ತಿಸಿ ಕೋತಿ ಮಾನವನಾದ ಎನ್ನುವ ಡಾರ್ವಿನ್ನನ ವಿಕಾಸವಾದವನ್ನು ಜ್ಞಾಪಿಸುತ್ತದೆ. ಇದು ನಿಧಾನವಾಗಿ-ಅಷ್ಟಿಷ್ಟು ಸವೆದು-ಆದ ಕ್ರಿಯೆ ; ಸ್ಫುರಿಸಿದ್ದಲ್ಲ. ಹನುಮಂತನ ಕತೆಯನ್ನು ಮತ್ತು ವಿಕಾಸವಾದವನ್ನು ಉಪಯೋಗಿಸಿಕೊಳ್ಳುವುದರ ಮೂಲಕ ಅಡಿಗರು ವರ್ಧಮಾನ ಸ್ಥಿತಿಯನ್ನು ತಲುಪುವುದು ಸ್ಪುರಿಸುವುದು ಮತ್ತು ಆಗುವುದು ಎರಡರ ಮೂಲಕವೂ ಹೌದು ಎನ್ನುವುದನ್ನು ಒಟ್ಟಿಗೇ ಸೂಚಿಸುತ್ತಾರೆ. ಅದೇ ಸ್ಟಾನ್‌ಸಾದ ‘ಸಿದ್ಧಪಡಿಸುವ ಕವ್ಯ’, ‘ತನ್ನ ತಾನೇ ತಿಕ್ಕಿ ತಿಕ್ಕಿ’ ಮತ್ತು ‘ಸಾಕ್ಷಾತ್ಕಾರಗೊಳ್ಳಬಹುದಾದ’, ‘ಅಂಶಾವತಾರ’ ಪದಗಳು ಅಭಿವ್ಯಕ್ತಿಸುವುದನ್ನು ಈ ಪ್ರತಿಮೆಗಳು ಪೋಷಿಸುತ್ತವೆ.

ಗಹ್ವರದ ಒಳಗತ್ತಲಲ್ಲಿ ಸುತ್ತಲು ತಡಕಿ ತಡೆದು ನಡೆಯುವ,
ನಡೆದು ಮುಗ್ಗರಿಸಿ ಬಿದ್ದೆದ್ದು ಹರೆವ, ಹರಿಯುವ ಜಾಡು
ಹಿಡಿವ, ಗುರುತಿಸುವ, ಬೇರ ಬಗೆವ, ಕಳೆದದ್ದನ್ನು ಪಡೆವ,
ಪಡೆದದ್ದಕ್ಕೆ ಪಡಿ ಹತ್ತು ಹಡೆವ ಕವನದ ಕರಡು
ಸಿದ್ಧಪಡಿಸುವ ಕವ್ಯ ವರ್ಧಮಾನಗೆ, ತನ್ನ ತಾನೇ ತಿಕ್ಕಿ
ತಿಕ್ಕಿ ಚಕಮಕಿಯ ಕಿಡಿಯುಕ್ತಿಯುಕ್ಕಿ, ಕತ್ತಲ ಹೊಟ್ಟೆ
ಹೊಕ್ಕು ಹೊಯ್ಯುವ ಹವ್ಯ, ಗಹ್ವರ ವಾಸದೆಕ್ಕಟಿ ಮೊಟ್ಟೆ
ಹೊತ್ತು ಸಲ್ಲುವುದೆ ಗುರುದಕ್ಷಿಣೆ, ದೂರದ ಕಡಲ ತೆರೆ ಸೊಕ್ಕಿ
ಬಡಿವ, ಬಾರಿಸುವ ಮರ್ಮರಲಾಲಿಲಯಕ್ಕೆ ಸರಿದೊರೆ ಬಡಿವ
ಕಡಿವ ಚಾಣದ ಪೆಟ್ಟು ಪೆಟ್ಟಿಗೂ ಹಲ್ಲುಗುರುಕೊಂಬು ಇವು ಅಷ್ಟಿಷ್ಟು
ಸವೆದು ಸಾಕ್ಷಾತ್ಕಾರಗೊಳ್ಳಬಹುದಾದ ಅಂಶಾವ ತಾರೆ ಹೋರೆ.

ಈ ಸಾಲುಗಳು ವರ್ಧಮಾನನ ಅತ್ಯಂತ ಕಷ್ಟಕರವಾದ ಮತ್ತು ಶ್ರಮದಾಯಕವಾದ ಹೋರಾಟವನ್ನು ಚಿತ್ರಿಸುತ್ತವೆ. ಈ ಕಷ್ಟ ಮತು ಶ್ರಮ ಈ ಸಾಲುಗಳನ್ನು ಓದುವಾಗ ನಮ್ಮ ಉಚ್ಚ್ವಾಸ ನಿಃಶ್ವಾಸಗಳಲ್ಲಾಗುವ ಬದಲಾವಣೆಯ ಮೂಲಕ ಇಂದ್ರಿಯಗಮ್ಮ ವಾಗುತ್ತದೆ. ‘ಸುತ್ತಲು ತಡಕಿ’ ಎನ್ನುವಲ್ಲಿಂದ ‘ಗುರುತಿಸುವ’ ಎನ್ನುವಲ್ಲಿಯ ವರೆಗಿನ ಪದಗಳು ಮಗು ನಡೆಯುವುದಕ್ಕೆ ಕಲಿಯುವುದನ್ನೂ ಚಿತ್ರಿಸುತ್ತವೆ, ಕವನ ಕೊನೆ ಯಾಗುವುದು ಹೀಗೆ :

ಗಹ್ವರದ ಮುಖ ಅಲ್ಲಿ; ಆಚೆ ಬಯಲ ಬನಾವು ;
ಹಣ್ಣು ಹಂಪಲು ಹಸುರ ಬಲ್ಲೆ, ಬಲ್ಲೆ; ಜೀವನನಿಧಾನಶ್ರುತಿ ಶುದ್ಧಿ ಮೊರೆವ ಕರಾವು :
ಹನುಮದ್ವಿಕಾಸಕ್ಕೆ ಇಲ್ಲ ಎಲ್ಲೆ.

ಇಲ್ಲಿನ ವಿವರಗಳು ಕೃಷಿ ಜೀವನದಿಂದ ಎತ್ತಿಕೊಂಡವುಗಳು, ಅತ್ಯಂತ ಶ್ರಮದಾಯಕವಾದ ಹೋರಾಟದ ಬಳಿಕ ಬರುವ ಈ ಸಾಲುಗಳನ್ನು ಓದಿದಾಗ ಸಮೃದ್ಧವಾದ ತೋಟದಲ್ಲಿ ನಿಂತ ಅನುಭವವಾಗುತ್ತದೆ. ಇಲ್ಲಿ, ಹನುಮದ್ವಿಕಾಸಕ್ಕೆ ಹೇಗೆ ಎಲ್ಲೆಗಳಿಲ್ಲವೋ ಹಾಗಯೇ ಮೊದಲನೆಯ ಭಾಗದ ನಾಣಿ ಮಗ ಹೀಗೂ ಎಲ್ಲೆಗಳಿಲ್ಲ. ಆದರೆ ಅವನಿಗೆ ಎಲ್ಲೆಗಳಿಲ್ಲದಿರುವುದು ತನ್ನ ರೊಚ್ಚಿನಲ್ಲಿ “ದೇಶ ಕಾಣದ ಹಾಗೆ ನೆರೆ”ದಿರುವುದರಿಂದ ; ತನ್ನನ್ನು ಹೊರತಾಗಿ ಬೇರೆ ಏನನ್ನೂ ಕಾಣಲಾಗದ ನಾರ್ಸಿಸಸ್ ಮನೋಭಾವದಿಂದ. ಆದ್ದರಿಂದಲೇ ಅವನ ಲಹರಿಗಳು ತೀರ, ನೆಲೆ, ಗುರಿ ಇಲ್ಲದವುಗಳು, ಕೊನೆಯಲ್ಲಿ ಹನುಮದ್ವಿಕಾಸಕ್ಕೆ ಎಳ್ಳೆಗಳಿಲ್ಲದಿರುವುದಕ್ಕೆ ಕಾರಣ ಅವನು ತನ್ನ ವ್ಯಕ್ತಿತ್ವವನ್ನು ತಡಕಿ ತಡೆದು, ಬೇರ ಬಗೆದು ಕಂಡುಕೊಂಡವನಾದ್ದರಿಂದ ; ಹೀಗೆ ಗಟ್ಟಿಯಾದ ವ್ಯಕ್ತಿತ್ವವನ್ನು ಪಡೆದ ಇವನು ಹೊರಗಿನ ಅವಕಾಶವನ್ನು ನೋಡಬಲ್ಲವನಾದ್ದರಿಂದ ; ಜೀವನದ ಮೂಲಾರ್ಕಗಳನ್ನು ಪಡೆದವನಾದ್ದರಿಂದ.

ಅಡಿಗರ ಹಿಂದಿನ ‘ಗೊಂದಲಪರ’, ‘ಬರುತ್ತಾರೆ’ಯಂಥ ಕವನಗಳು ಹೆಚ್ಚು, ಸಾಮಾಜಿಕ ವ್ಯಕ್ತಿಯ ಬಗ್ಗೆ, ಸಮಾಜದಲ್ಲಿ ಅವನ ಪಾತ್ರದ ಬಗ್ಗೆ ಬರೆದಂಥವುಗಳು. ‘ಕೂಪಮಂಡೂಕ’, ‘ಭೂಮಿಗೀತ’ದಂಥ ಕವನಗಳು, ಹೆಚ್ಚು, ವ್ಯಕ್ತಿಯ ಅಂತರ್ಗತ ತೊಳಲಾಟದ ಬಗ್ಗೆ ಬರೆದವುಗಳು, ‘ವರ್ಧಮಾನ’ ಸಮಾಜದಲ್ಲಿ ವ್ಯಕ್ತಿಯ ನಡವಳಿಕೆಯ ಬಗ್ಗೆ ಹೇಗೋ ಹಾಗೆ ಅವನ ಅಂತರ್ಗತ ತೊಳಲಾಟದ ಬಗ್ಗೆಯೂ ಹೌದು, ಉದಾಹರಣೆಗೆ ಈ ಸಾಲುಗಳು:

ಕಿಲಾಡಿ ರಸ್ತೆಯ ಸೆನೆದು ತಿರುವಿನಲ್ಲಪಘಾತ
ನಪ್ರಮದಿತವ್ಯ ಬೋರ್ಡಿನ ಕೆಳಗೆ.

ಈ ಸಾಲುಗಳು ನಾಣಿ ಮಗ ಶ್ರೀನಿಗೆ ಯಾವ ಮಾನಸಿಕ ಶಿಸ್ತೂ ಇಲ್ಲ ಎನ್ನುವುದನ್ನು ಸೂಚಿಸುವುದರ ಜೊತೆಗೆ: ಆವನು: ರಸ್ತೆಯ ನಿಯಮಗಳನ್ನು ಉಲ್ಲಂಘಿಸುತಾನೆ ಎನ್ನುವುದಕ್ಕೆ ಸೂಚಿಸಿ, ಅವನ ಸಾಮಾಜಿಕ ನಡವಳಿಕೆಯನ್ನೂ ಮೌಲ್ಯೀಕರಿಸುತ್ತದೆ ಈ ರೀತಿ ಎರಡನ್ನೂ ಒಟ್ಟಿಗೆ ಧ್ವನಿಸಲು ಸಾಧ್ಯವಾಗಿರುವುದು, ಮೇಲೆ ಹೇಳಿದ ಹಾಗೆ, ನಗರದ, ಸಾಮಾಜಿಕ ಜೀವನದ, ಕೃಷಿಜೀವನದ, ವಿಜ್ಞಾನದ, ಪ್ರರಾಣದ ಪ್ರತಿಮೆ ಗಳನ್ನು ಒಟ್ಟಿಗೇ ಸಂಗಮಿಸಿ, ಉಪಯೋಗಿಸಿರುವುದರಿಂದ.

Close

ಅವಕಾಶ-ಚಿತ್ರಕಲೆಯ ಒಂದು ಅಂಶ

ಅವಕಾಶ-ಚಿತ್ರಕಲೆಯ ಒಂದು ಅಂಶ

ಕಾಸರವಳ್ಳಿ ರವೀಶ ಜಿ

ಯಾವುದೇ ಚಿತ್ರವನ್ನು ಎಷ್ಟು ಸರಳವಾಗಿ ವಿಮರ್ಶಿಸಬೇಕೆಂದರೂ ಕನಿಷ್ಠ ಪಕ್ಷ ಐದು ಅಂಶಗಳನ್ನಾದರೂ ಗಮನಿಸಲೇಬೇಕು :

1. ರೇಖೆ-ರೇಖೆಗಳ ಚಲನೆ, ಆ ಚಲನೆಯಲ್ಲಿ ಕಾಣಬರುವ ತರಂಗಿತತೆ (rythm)ಇತ್ಯಾದಿ.
2. ಸಂಯೋಜನೆ (Composition)-ಚಿತ್ರದಲ್ಲಿ ಅಡಕವಾಗಿರುವ ಘಟಕ (entity)ಗಳ ರೂಪ, ಜೋಡಣೆ ಇತ್ಯಾದಿ,.
3. ಅವಕಾಶ (Space)-ಚಿತ್ರದ ವಿವಿಧ ಭಾಗಗಳ ಪಾತಳಿಗಳ ನಿರ್ದೇಶನ, ಅದರ ಮೌಲ್ಯ ಇತ್ಯಾದಿ. 4. ನೆರಳು ಬೆಳಕಿನ ವಿನ್ಯಾಸ (Pattern)-ಚಿತ್ರದ ಉದ್ದೇಶದ ಮೇಲೆ ನೆರಳು
ಬೆಳಕಿನ ಪ್ರಭಾವ, ಬೆಳಕಿನ ತೀವ್ರತೆ (intensity) ಇತ್ಯಾದಿ.
5. ವರ್ಣ (Hue)-ವರ್ಣಸಂಘಟನೆ, ವರ್ಣತೋಲನ (Hue balance), ವರ್ಣಭೇದ (Hue discrimination) ಇತ್ಯಾದಿ.

ಅಂದರೆ, ‘ಅವಕಾಶ’ವೆನ್ನುವುದು ಚಿತ್ರವಿಮರ್ಶೆಯಲ್ಲಿ ಅವಶ್ಯಕವಾದ ಒಂದು ಅಂತ ಎಂದಂತಾಯ್ತು, ಆದರೆ, ಅವಕಾಶ ಎಂದರೆ ಏನು ಎಂದು ಲಕ್ಷಣ ಹೇಳುವುದು ಕಷ್ಟ, ವಿವರಿಸಬಹುದಷ್ಟೆ, Sir Herbort Read ಅವಕಾಶವನ್ನು ಹೀಗೆ ವಿವರಿಸುತ್ತಾನೆ :

Space is inverse of mass, mass is a solid space; Light and shade are effects of mass in space ..All these are the artist’s feeling for Space.

ಉದಾಹರಣೆಗೆ, ಶುದ್ಧೋದನರ “ತುಂಗಭದ್ರಾ ಡ್ಯಾಂ’ ಎಂಬ ಚಿತ್ರ (ದಸರಾ 7೦ ರಲ್ಲಿ ಪ್ರಶಸ್ತಿ ಪಡೆದದ್ದು) ನೋಡೋಣ, ಮುನ್ನೆಲೆ (foreground) ಯಿಂದ ಚಿತ್ರವನ್ನು ಗಮನಿಸುತ್ತ ಹೋದಂತೆ, ನಮ್ಮ ದೃಷ್ಟಿಯ ಗುರಿ ಹಿಂದೆ ಹಿಂದಕ್ಕೆ ಸರಿದಂತೆ ಭಾಸವಾಗುತ್ತದೆ. ಎಲ್ಲಿಯವರೆಗೆ ? ಚಿತ್ರದಲ್ಲಿ ಕಾಣುವ ಕ್ಷಿತಿಜವನ್ನು ತಲುಪುವವರೆಗೆ. ಆನಂತರ ನೀಲ ಆಕಾಶದ ವರ್ಣಸಂಘಟನೆ ದಟ್ಟವಾಗುವುದರೊಡನೆ, ದೃಷ್ಟಿಪಥ ಚಿತ್ರಪಟದ ಮೇಲ್ಭಾಗವನ್ನು ತಲುಪಿ ಚೌಕಟ್ಟಿನ ಆಚೆ ಚಾಚುತ್ತದೆ. ಚಿತ್ರದ ಪಾರ್ಶ್ವ ದಲ್ಲಿ ನಿಂತುಕೊಂಡು ದೃಷ್ಟಿಪಥವನು ಹಿಂಬಾಲಿಸಿದರೆ, < – ಈ ಆಕೃತಿಯ ಒಂದು ಕೋನ ಗೋಚರವಾಗುತ್ತದೆ. ಇದರ ಕೂಡು ತುದಿ ಕ್ಷಿತಿಜದಲ್ಲಿ ನಟ್ಟಿರುತ್ತದೆ. ಬಾಹುಗಳು ಚಿತ್ರ ಚೌಕಟ್ಟಿನ ಮೇಲ್ಭಾಗ ಕೆಳಭಾಗದಲ್ಲಿ ಹಾಸಿರುತ್ತವೆ. ಇದರಲ್ಲಿ ಬಾಹುಮಧ್ಯದ ಮುಂಭಾಗದಲ್ಲೆಲ್ಲಾ ಅವಕಾಶವೇ ತುಂಬಿರುತ್ತದೆ. ಇದು ಅವಕಾಶ ನಿಯೋಜನೆಯು (Spacial organisation) ಒಂದು ಮಾದರಿ.

ಇದೇ ಚಿತ್ರಕಾರರ ಇನ್ನೊಂದು ಪ್ರಖ್ಯಾತ ಕೃತಿ ‘ನಂದಿಬೆಟ್ಟದ ನೀಲಗಿರಿ ಮರಗಳು’ ನಲ್ಲಿ ಅವಕಾಶನಿಯೋಜನೆಯ ಇನ್ನೊಂದು ಮಾದರಿಯಿದೆ: ಮುನ್ನೆಲೆಯಲ್ಲಿ ಎರಡು ನೀಲಗಿರಿ ಗಿಡಗಳು ; ಹಿನ್ನೆಲೆಯಲ್ಲಿ ತುಂಬಾ ಹಿಂದೆ ಇದ್ದಂತೆ ಕಾಣುವ ನೀಲ ಆಕಾಶ ಹಾಗೂ ಗುಡ್ಡಗಳು, ಇಲ್ಲಿ ಗುಡ್ಡಕ್ಕೂ ಮರಗಳಿಗೂ ಮಧ್ಯೆ ಅವಕಾಶ ಯೋಜಿತವಾಗಿದೆ. ಇಲ್ಲಿನ ಅವಕಾಶ II-ಈ ಎರಡು ಗೆರೆಗಳ ನಡುವೆ ಇರುವ ಆಂತರದಂತಿರುತ್ತದೆ. ಮೊದಲನೇ ಚಿತ್ರದಲ್ಲಿ, ಪರಿಸರದಲ್ಲಿರುವ ವಸ್ತುಗಳ ಮಧ್ಯೆ ಮುನ್ನೆಲೆಯಿಂದ ಕ್ಷಿತಿಜದವರೆಗೆ ಕಾಣುವ ಅಂತರದೊಂದಿಗೆ ತುಲನೆ ಮಾಡಿದಾಗಿ–ಅಂತರವೇ ಇಲ್ಲವೋ? ಎನಿಸುತ್ತದೆ, ಆದ್ದರಿಂದ ಅವುಗಳ ನಡುವಣ ಅವಕಾಶಕ್ಕೆ ತೌಲನಿಕ ಅಥವಾ
ತುಲನ-ಅವಕಾಶ (Counter-space) ಎನ್ನಬಹುದು. ಈ ತುಲನ-ಅವಕಾಶದಿಂದ ನಮ್ಮ ಆಕರ್ಷಣೆ ಮಧ್ಯೆ ಎಲ್ಲೂ ಕಡೆಯಿಲ್ಲದೆ ಕ್ಷಿತಿಜವನ್ನು ತಲುಪುತ್ತವೆ. < ಈ ಆಕೃತಿಯ ಮುಂಭಾಗದ ಇಂಥ ಸ್ಪಷ್ಟ ಜ್ಞಾನವನ್ನು ನಿಜಾವಕಾಶ (absolute-Space) ಎನ್ನಬಹುದು, ಎರಡನೇ ಚಿತ್ರದಲ್ಲಿ ನಿಜಾವಕಾಶ ಗಿಡಕ್ಕೂ ಗುಡ್ಡಕ್ಕೂ ಮಧ್ಯೆ ಇರುತ್ತದೆ ; ತುಲನ-ಅವಕಾಶ ಗಿಡಗಳ ನಡುವೆ ಇರುತ್ಯದೆ.
ಇನ ಒಂದು ಉದಾಹರಣೆ-ಹಲದಂಕರರ ‘ಕೊಡೈಕನಾಲಿನ ಗುಡ್ಡಗಳ ಸಾಲು’ :

ಕಣ್ಣು ಹಾಯುವಷ್ಟೂ ದೂರ ಮೇಘಾಚ್ಛಾದಿತ ಗಿರಿಶ್ರೇಣಿಗಳು, ಚಿತ್ರದ ಚೌಕಟ್ಟಿನೋಳಗೆ ಮೊಡ ಗುಡ್ಡಗಳನ್ನು ಬಿಟ್ಟು ಉಳಿದೆಲ್ಲ ಜಾಗವೂ ಅವಕಾಶದಿಂದಲೇ ತುಂಬಿರುತದೆ. ಇದು ಇಲ್ಲಿ ನಿಜಾವಕಾಶ. ಇಲ್ಲಿನ ತುಲನ-ಅವಕಾಶವೆಂದರೆ, ಪುನಃ, ಘಟಕ ಘಟಕಗಳ ಮಧ್ಯ ಇರುವ ಎಡೆ.

ರೇಖೆ, ಸಂಯೊಜನೆ, ವರ್ಣ, ನೆರಳು ಬೆಳಕು-ಎಲ್ಲವೂ ಅವಕಾಶದ ನಿಯೋಜನೆಯ ಮೇಲೆ ಸಾಕಷ್ಟು ಪ್ರಭಾವ ಬೀರುತ್ತವೆ. ಶೀತವರ್ಣಗಳು (Cold-colours) ಉಷ್ಣ ವರ್ಣಗಳು (Warm-colours) ಪರಸ್ಪರ ವಿರುದ್ಧ ವರ್ತಿಸಿ ಅವಕಾಶ ಭೇದ (Spacial discrimination) ವನ್ನು ಪ್ರದರ್ಶಿಸುವುದರಲ್ಲಿ ನೆರವಾಗುತ್ತವೆ. ಪ್ರಖರ (intense) ವರ್ಣಗಳು ನಮಗೆ ಹತ್ತಿರವಾಗಿಯೂ ಲಲಿತವರ್ಣಗಳು (light tones) ನಮ್ಮಿಂದ ದೂರವಾಗಿಯೂ ಕಾಣಿಸುತ್ತವೆ. ಹಾಗಾಗಿ, ವರ್ಣಗಳ ಶೈತ್ಯ, ಉಷ್ಣತೆ ಪ್ರಖರತೆ ಇತ್ಯಾದಿಗಳೆಲ್ಲ ನವ್ಯಕಲಾಕಾರನಿಗೆ ಸಾಂಕೇತಿಕ ಪರ‍್ಯಾಯ (symbolic alternative) ಗಳಾಗಿವ. ನೆರಳು ಬೆಳಕು ಚಿತ್ರದಲ್ಲಿ ವಸ್ತುಗಳ ಘನತ್ವ (solidity) ರಚನೆ (Texture)ಗಳನ್ನು ಸ್ಫುಟಗೊಳಿಸುವುದರಿಂದ, ಚಿತ್ರವಸ್ತುವಿನಲ್ಲಿ ಆಳದ ಮೌಲ್ಯ ನಿಷ್ಕರ್ಷೆಗೊಳಿಸಿ, ಅವಕಾಶವನ್ನು ರೂಪಿಸುತ್ತವೆ.

ರೇಖೆಗಳು ಲಂಬವಾಗಿದ್ದರೆ ಪಾತಳಿ (plane)ಯಲ್ಲಿದ್ದಂತೆ, ಓರೆಯಾಗಿದ್ದರೆ ಪಾತಳಿಯಿಂದ ಹೊರಬಂದಂತೆ ಅಥವಾ ಒಳಹೋದಂತೆ ಭಾಸವಾಗುತ್ತದೆ. ಪಾತಳಿಗಳ ವ್ಯತ್ಯಾಸವನ್ನು ಅವಕಾಶದಲ್ಲಿ ತೋರಿಸುವ ರೇಖೆಯ ಗತಿಗೆ ‘ಪರಿದೂರ’ (Perspective) ಎನ್ನುತ್ತಾರೆ. ಅಂತರಸೂಚಿಯ ಬಾಹುಗಳ ನಡುವೆ ಅಂತರ ಹೆಚ್ಚಿದಂತೆಲ್ಲಾ ಅದು ನಮ್ಮ ಹತ್ತಿರ ಬರುವಂತೆ ಭಾಸವಾಗುತ್ತದೆ. ಅಂತರಸೂಚಿಯ ಬಾಹಗಳು ಎಲ್ಲೋ ಒಂದೆಡೆ ಸೇರುವ ಸಾಧ್ಯತೆ ಇರುತ್ತದೆ ; ಅದು ಚಿತ್ರದಲ್ಲಿ ಕಾಣಿಸ ದಿದ್ದರೂ ಅದನ್ನು ಊಹಿಸಲು ಬರುತ್ತದೆ. ಹಾಗೆ, ಕಾಣಿಸದಿದ್ದರೂ ಊಹೆಗೆ ನಿಲುಕುವ, ಬಾಹುಗಳು ಸಂಧಿಸುವ ಬಿಂದುವನ್ನು ಆದೃಶ್ಯಬಿಂದು (vanishing point) ಎನ್ನುತ್ತೇವೆ, ಅದೃಶ್ಯಬಿಂದುವು ಚಿತ್ರದಲ್ಲಿರುವ ಅವಕಾಶಕ್ಕೆ ಒಂದು ಸೀಮೆಯನ್ನು ಸೃಷ್ಟಿಸುತ್ತದೆ.

ಸಂಯೋಜಿಸುವಾಗ ಬೇರೆ ಬೇರೆ ಸ್ಥಳಗಳಲ್ಲಿರುವ ವಸ್ತುಗಳ ನಿಜವಾದ ಅಳತೆಗಳನ್ನೂ ಪಾತಳಿಗಳನ್ನೂವ್ಯತ್ಯಸ್ತ (alter)ಗೊಳಿಸಿ ಅವುಗಳ ನಡುವೆ ಅವಕಾಶವನ್ನೇರ್ಪಡಿಸಲು ಸಾಧ್ಯ, ಒಂದೇ ಅಳತೆಯ ಮೂರು ಕೋಲುಗಳನ್ನು ತೆಗೆದುಕೊಂಡು, ಎರಡನ್ನು ಮುಂದೆ ನೆಟ್ಟು ಒಂದನ್ನು ಹಿಂದೆ ನೆಟ್ಟರೆ-ಹಿಂದಿರುವ ಕೋಲು ಗಿಡ್ಡವಾಗಿ ಕಾಣುವದು ಮತ್ತು ಮುಂದಿನವುಗಳಿಗಿಂತ ಎತ್ತರದ ಪಾತಳಿಯಲ್ಲಿದ್ದ ಹಾಗೆ ತೋರುವುದು. ಪರ‍್ಯಾಯವಾಗಿ–ಅವಕಾಶದ ದೃಷ್ಟಿಯಿಂದ ವಸ್ತುವನ್ನು ಹಿಂದೆ ಇಟ್ಟು ಪಾತಳಿಯನ್ನು ಮೇಲಕ್ಕೇರಿಸಿ ಅವಕಾಶ ಕಲ್ಪಿಸಬಹುದು.

ಪೌರ್ವಾತ್ಯ ಚಿತ್ರಗಳಲ್ಲಿ ಅವಕಾಶವನ್ನು ಮೌಲ್ಯವಾಗಿಟ್ಟುಕೊಂಡದ್ದು ಕಡಿಮೆ. ಪಾಶ್ಚಾತ್ಯರಿಂದ ‘ಆದರ್ಶವಾದಿ ಚಿತ್ರಕಾರ’ (Idealistic painters) ರೆಂದು ಕರೆಸಿಕೊಂಡ ಈ ಕಲಾವಿದರು, ಭಾವನೆಗೂ ವರ್ಣಗಳ ಪರಿಣಾಮಕ್ಕೂ ಗೆರೆಗಳ ಚಲನೆಗೂ ಹೆಚ್ಚು ಗಮನ ಕೊಡುತ್ತಿದ್ದರು, ನೆರಳು ಬೆಳಕಿನ ವಿನ್ಯಾಸದ ಬಗ್ಗೆ ಅವರು ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುವುದಿಲ್ಲ. ವರ್ಣಗಳನ್ನು ಪಾಶ್ಚಾತ್ಯ ವ್ಯಂಜನವಾದಿ (expressionist)ಗಳ ಧಾಟಿಯಲ್ಲಿ ಉಪಯೋಗಿಸುತ್ತಿದ್ದ ಅವರು, ವರ್ಣಗಳ ಪ್ರಖರತೆ ಉಷ್ಣತೆ ಇತ್ಯಾದಿಗಳ ಕಡೆ ಗಮನ ಕೊಡದೇ ಇದ್ದರು, (ಭಾರತೀಯ ಚಿತ್ರ ಕಾರರು ಪ್ರಾಯಃ, ಸಂಯೋಜನೆಯ ಬಗೆಗೂ ಅಷ್ಟು ಗಮನ ಕೊಟ್ಟಂತಿಲ್ಲ.) ಅಂತಹ ಚಿತ್ರಗಳಲ್ಲಿ ಅವಕಾಶ-ಭೇದ’ ಕಾಣುವುದು ಬಹಳ ಕಠಿಣ. ಈ ತರಹದ ಭಾರತೀಯ ಚಿತ್ರಗಳಿಗೆ ಹೊಸ ರೂಪ ಕೊಟ್ಟವರಾದ ಅಬನೀಂದ್ರನಾಥ ಠಾಕೂರರು ತಮ್ಮ ಚಿತ್ರಗಳಲ್ಲಿ, ತಮ್ಮದೇ ಶೈಲಿಯಲ್ಲಿ, ತ್ರಿಮಾನ (three dimension) ವನ್ನು ಅಳವಡಿಸಿಕೂಂಡರು. ಆದರೆ ಅಲ್ಲೂ, ಮುನ್ನೆಲೆಯ ‘ಅವಕಾಶದ ರೂಪಣ’ (spacial morphism) ಸಾಧ್ಯವಾಗಿದ್ದರೂ ಅವಕಾಶದ ಸಂಪೂರ್ಣ ಸಮರ್ಥನೆ ಸಾಧ್ಯವಾಗಿದೆ ಎನ್ನುವಂತಿಲ್ಲ, ಅನಂತರ ಒಂದು ಕ್ರಾಂತಿ ಎಬ್ಬಿಸಿದ ರವಿವರ್ಮರು ಮತ್ತು ಅವರ ಅನುಯಾಯಿಗಳು ಕೇವಲ ಪಾಶ್ಚಾತ್ಯರ ಅನುಕರಣೆಯನ್ನೇ ಶುರು ಮಾಡಿದರು. ಪಾಶ್ಚಾತ್ಯರಲ್ಲಿ ಅವಕಾಶದ ಬಗ್ಗೆ ಮುಂಚಿನಿಂದಲೂ ಸಾಕಷ್ಟು ತಿಳಿವಳಿಕೆಯಿತ್ತು. ಗೇನ್ಸ್ ಬರೊ, ಕಾನ್‌ಸ್ಟೆಬಲ್ (16 ನೇ ಶತಮಾನ) ನಿಂದ ಹೋಮರ್, ವಾನ್‌ಗಾನವರೆಗೆ (13 ನೇ ಶತಮಾನ) ಎಲ್ಲರ ಚಿತ್ರಗಳಲ್ಲೂ ಅವಕಾಶ ಭೇದ ಅಥವಾ ಅವಕಾಶ ನಿಯೋಜನೆ ಸುಷ್ಮಸ್ಥಿತಿಯಲ್ಲಿ ಕಾಣಸಿಕ್ಕುತ್ತವೆ. (ಅಂದರೆ ಪೌರ‍್ವಾತ್ಯರಿಗೆ ಅವಕಾಶದ ಜ್ಞಾನವೇ ಇರಲಿಲ್ಲವೆಂದು ಖಡಾಖಂಡಿತ ಹೇಳಲಿಕ್ಕಾಗದು. ಏಕೆಂದರೆ, ಅಂತರಸೂಚಿ’ಯ ಬಗ್ಗೆ ಭಾರತೀಯ ಕಲ್ಪನೆ, ಎಷ್ಟೋ ವರ್ಷಗಳ ಅವಹೇಳನ ಪಡೆದ ಅನಂತರವೂ, ಪರ್ಸಿ ಬ್ರೌನ್‌ನಿಂದ ‘ಇದು ತನ್ನದೇ ಹೊಸ ವೈಶಿಷ್ಟ್ಯವುಳ್ಳದ್ದು’ ಎಂದು ಪ್ರಶಂಸಿತವಾಗಿ ಹೊಸ ಹೆಸರು ಪಡೆದುಕೊಂಡಿತು, ಅಂತೆಯೇ, ಅವಕಾಶವಿಲ್ಲದ ಭಾರತೀಯ ಚಿತ್ರಗಳಲ್ಲಿನ ವೈಶಿಷ್ಟ್ಯ ಕಂಡುಕೊಳ್ಳಲು ನಾವು ಅಸಮರ್ಥರೂ ಇದ್ದಿರಬಹುದು.)

ರಿನೇಯಸೆತ್ಸ್ , ಆದರ್ಶವಾದಿ ಚಿತ್ರಕಾರರ ಎಷಯ ಹೀಗಿದ್ದರೆ, ನವ್ಯಪಂಥೀಯರಲ್ಲಿ ಆವಾಶದ ಬಗ್ಗೆ ಪ್ರಕ್ರಿಯೆ ಏನು ? ಪ್ರಾಯಶಃ 1$MIC ಕಲಾವಿದರೆಲ್ಲರಿಗೂ ಇದು ಆವಶ್ಯಕವೇ ಇದ್ದಿರಬೇಕು ಎನಿಸುತ್ತದೆ-ಅಮೂರ್ತವಾದಿ (abstractionists) ಗಳನ್ನು ಕೊಂಚ ಬಿಟ್ಟು, ಅದರಲ್ಲೂ ಘನಪಂಥೀಯ (cubists) ರಿಗೆ ಇದರ ಆವಶ್ಯಕತೆ ಹೆಚ್ಚು, ವಸ್ತುಗಳ ಘನತ್ವವನ್ನು ಹೆಚ್ಚಿಸಿ ಘನಾಕೃತಿಯ ಮಟ್ಟಕ್ಕೆ ಉತ್ಪ್ರೇಕ್ಷಿಸಿ ಕೊಡುವುದೇ ಇವರ ಧ್ಯೇಯವಾದ್ದರಿಂದ.

ಉತ್ತಮ ಘನಪಂಥೀಯ ಚಿತ್ರಕ್ಕಾಗಿ ಪಿಕಾಸೊ ಅಥವಾ ಬ್ರೇಕ್‌ (Braque) ನ ಯಾವುದೇ ಚಿತ್ರ ತೆಗೆದುಕೊಳಬಹುದು, ಫಿಕಾಸೋನ ಘನಪಂಥೀಯ ವ್ಯಕ್ತಿಚಿತ್ರ (portrait) ಗಳನ್ನು ಗಮನಿಸಿದರೆ, ವಿವಿಧ ಪಾತಳಿಗಳಲ್ಲಿ ಅನೇಕ ಚಪ್ಪಟೆ ತುಣುಕುಗಳನ್ನು ಜೋಡಿಸಿದಂತೆ ಕಾಣುತ್ತದೆ. ಅವಕಾಶದ ಹೊರಗೆ, ಒಳಗೆ ಬೇಕೆಂದಲೆಲ್ಲಾ ರೂಪಗಳು ನಾಟ್ಯವಾಡುತ್ತವೆ, ಇಲ್ಲಿ ನಿಜವಾದ ರೂಪಣ (morphism)ದ ಬಗ್ಗೆ ಊಹಿಸುವುದು ಸ್ವಲ್ಪ ಕಷ್ಟ, Feininger ನ ಸೇತುವೆಯ ಚಿತ್ರದಲ್ಲಿ ಒಂದೊಂದೇ ಘಟಕಗಳನ್ನು ಹಿಡಿದು ಪರಿಶೀಲಿಸುತ್ತಾ ಹೋದರೆ, ಎಲ್ಲವೂ ಮೇಲಿದ್ದಂತೆ ಕಂಡು ಎಲ್ಲವೂ ಒಳಗೆ ಸೇರಿದಂತಾಗಿ ವೀಕ್ಷಕನಿಗೆ ಭ್ರಮೆಯಾಗುತ್ತದೆ. ಇಂತಹ ಚಿತ್ರಗಳಲ್ಲಿ ಅವಕಾಶದ ರೂಪಣ (morphism) ದ ಬಗ್ಗೆ ಚರ್ಚಿಸುವುದಿರಲಿ, ಅದರ ಅಸ್ತಿತ್ವ (existance) ದ ಬಗ್ಗೆಯೇ ಕ್ಷಣಕಾಲ ಯೋಚಿಸಬೇಕಾಗುತ್ತದೆ, ಎಷ್ಟು ಯೋಚಿಸಿ ಕೂಡ ಅವಕಾಶ ಇದೆ ಅಥವಾ ಇಲ್ಲ ಎಂದಷ್ಟೇ ಹೇಳಬೇಕಾಗುತ್ತದೆ.

ಇನ್ನೊಂದು ಉದಾಹರಣೆ : ಭ್ರಮಾತ್ಮಕ (ballucinatary) ಅವಕಾಶಗಳನ್ನು ಚಿತ್ರಿಸುವುದರಲ್ಲಿ ಪ್ರಖ್ಯಾತನಾದ ಸಾಲ್ವೇಡರ್‌ ಡಾಲೀಯ ಪ್ರಖ್ಯಾತ ಚಿತ್ರ “Mae West” ನಲ್ಲಿ ಸ್ಟೂಲು, ಸೋಫಾ, ಪರದೆಗಳಿರುವ ಸುಸಜ್ಜಿತ ರಂಗಮಂಟಪ ಕಾಣುತ್ತದೆ. ತ್ರಿಮಾನಗಳ ದೃಷ್ಟಿ ಕೊಡುವುದರಿಂದ ಇದರಲ್ಲಿ ಸಾಕಷ್ಟು ಅವಕಾಶವೂ ಕಾಣಸಿಕ್ಕುತ್ತದೆ, ಆದರೆ, ಅದೇ ಚಿತ್ರ ಕೆಲವು ಕ್ಷಣಗಳ ಅನಂತರ ಮನುಷ್ಯನಾಗಿ-ಫರದೆ ಕೂದಲಾಗಿ, ಪಟ ಕಣ್ಣಾಗಿ, ಸ್ಟೂಲು ಮೂಗಾಗಿ, ಸೋಫಾ ತುಟಿಯಾಗಿ ಕಂಡಾಗ ವೀಕ್ಷಕನಿಗೆ ಹಿಂದೆ ಅನುಭವಕ್ಕೆ ಬಂದ ಅವಕಾಶ ಭ್ರಮೆಯಷ್ಟೇ ಅನ್ನಿಸಿಬಿಡುತ್ತದೆ. ಇದನ್ನು *ಊಹಾಸಿದ್ದ ಅವಕಾಶ’ (apparent space) ಎನ್ನಬಹುದು. ಹಿಂದೆ ಉದಾಹರಿಸಿದ ಚಿತ್ರಗಳಂತೆ ಇಲ್ಲಿ ಚಿತ್ರದ ಉದ್ದೇಶ ವಿಶಿಷ್ಟವಾದ ಒಂದು ವಸ್ತುವಲ್ಲ. ಉದಾಹರಣೆಗೆ, ಹಿಂದ ಹೇಳಿದ ‘ತುಂಗಭದ್ರಾ ಡ್ಯಾಮ್’ನಲ್ಲಿ ಯಾವಾಗ ಹೇಗೆ ನೋಡಿದರೂ ‘ಡ್ಯಾಮ್’ ಕಾಣಿಸುತ್ತದೆ. ಪ್ರಸ್ತುತ ಚಿತ್ರದಲ್ಲಿ (i) ರಂಗಮಂಟಪ (ii) ನಾಟಕೀಯವಾದ ಮುಖವಾಡ-ಹೀಗೆ ಎರಡು ವಸ್ತುಗಳಲ್ಲಿ ಯಾವುದೂ (ಒಮ್ಮೊಮ್ಮೆ ಒಂದೊಂದು) ಕಾಣಬಹುದು, ಮುಖವಾಡವೆಂದು ಭಾಸವಾಗುವಾಗ, ಚಿತ್ರದ ಘಟಕಗಳು ಮುಖವಾಡದ ಲಂಬವಾತಳಿಯಲ್ಲಿ ನಿಲ್ಲುತ್ತವೆ, ಅದೇ, ರಂಗಮಂಟಪ ಎಂದು ಕೊಂಡಾಗ, ರಂಗಸ್ಥಳದ ಕೋನಗಳು ಗೋಚರವಾಗುತ್ತವೆ. ಹೀಗೆ ಇಲ್ಲಿ, ಒಂದೇ ‘ಅವಕಾಶ’ ಎರಡು ರೀತಿಯ ರೂಪಣ ಪಡೆಯುವುದರಿಂದ ಇದನ್ನು ನಿಜವಾದ ಅವಕಾಶ ಎನ್ನುವಂತಿಲ್ಲ ; ಆದಕ್ಕಾಗಿ ಊಹಾಸಿದ್ದ (apparent) ಅವಕಾಶ ಎನ್ನಬೇಕಾಗುತ್ತದೆ.

ಇನ್ನೂ ಒಂದು ಉದಾಹರಣೆ-Adolph Gottlieb ನ “BLAST I’ : ಒಂದು ಬಿಳಿಯ ಭಿತ್ತಿಯಲ್ಲಿ ಮೇಲೊಂದು ತಿಳಿಬಣ್ಣದ ಗುಂಡಗಿರುವ ಬೊಟ್ಟು ; ಅದರ ಕೆಳಭಾಗದಲ್ಲಿ, ಸ್ವಲ್ಪ ಗಾಢ ವರ್ಣದ ಹರಕಲು ಚಿತ್ತು, ಮೇಲಿನ ಗುಂಡು ಬೊಟ್ಟಿಗೆ ಭಿತ್ತಿಯ ಬಿಳಿ ಮೇಲ್ಮೈ ಹಿನ್ನೆಲೆಯಾಗಿ ಕಂಡರೆ, ಕೆಳಗಿನ ಹರುಕಲು ಚಿತ್ತು, ಭಿತ್ತಿಯ ಹಿಂಭಾಗದಲ್ಲಿ ಇರಬಹುದಾದ ಅವಕಾಶವನ್ನು ಚಿತ್ರಿಸುತ್ತದೆ.

ಇನ್ನು, ಅಮೂರ್ತ ಪಂಥ (abstractionist) ದ ಕಲಾವಿದರ ಅವಕಾಶ ಚಿತ್ರಣ ಬೇರೆಯೇ ರೀತಿಯದಾಗಿದೆ, ಅವರು ಮೇಲಿನಂತೆ ಗೋಜಲುಗಳಲ್ಲಿ ತೊಡಗಿಕೊಳ್ಳುವುದಿಲ್ಲ, ಇದಕ್ಕೆ Jackson Pollock ನ “The Deep” ಎಂಬ ಚಿತ್ರ (ಮದ್ರಾಸ್ ಕಲಾವಿದರ ಪ್ರದರ್ಶನ-ಬೆಂಗಳೂರು 1972) ಉದಾಹರಣೆಯಾಗಿ ನೋಡಬಹುದು : ಶ್ವೇತ ಛಾಯೆಯ ಉಷ್ಣವರ್ಣದಲ್ಲಿ, ನಡುವೆ ಗಾಢ ಛಾಯೆಯ ಶೀತವರ್ಣದ ಚುಕ್ಕೆ ಕಾಣುತ್ತದೆ. ಈ ಚುಕ್ಕೆ ನಮ್ಮ ಆಕರ್ಷಣೆಯನ್ನು ಒಳಕ್ಕೆ ಒಯ್ಯುವುದರಿಂದ, ಶ್ವೇತ ಛಾಯೆಯ ಭಾಗಕ್ಕಿಂತ ಹಿಂದೆ ಅವಕಾಶವಿದೆ ಎನ್ನುವ ಅನಿಸಿಕೆಯನ್ನು ತಂದುಕೊಡುತದೆ, ಅದೇ ಪ್ರದರ್ಶನದ ಇನ್ನೊಂದು ಚಿತ್ರವನ್ನೂ-Alphanso ಅವರ The Force-ನೋಡಬಹುದು, ಇದರಲ್ಲಿ ಚಿತ್ತಭಿತ್ತಿಯ ಎರಡು ದಿಕ್ಕುಗಳಲ್ಲಿ ಎರಡು ಚುಕ್ಕೆಗಳಿವೆ, ಈ ಎರಡು ಚುಕ್ಕೆಗಳು ಚಿತ್ರದ ಹಿನ್ನೆಲೆಯಲ್ಲಿರಬಹುದಾದ ಅವಕಾಶವನ್ನು ಎತ್ತಿ ತೋರಿಸುತ್ತವೆ (ಈ ಚಿತ್ರದ ಎರಡು ಕಡೆ ಇರುವ ಎರಡು ಚುಕ್ಕೆಗಳು ಆಕರ್ಷಣವನ್ನು ಎರಡು ವಿರುದ್ಧ ದಿಕ್ಕಿನಲ್ಲಿ ಸೆಳೆಯುತ್ತವೆ ಮತ್ತು ಚಿತ್ರ ಇಂಥ ವಿರುದ್ದ ಸೆಳೆತವನ್ನು ತನ್ನ ಗರ್ಭದಲ್ಲಿ ಬಲವತ್ತರವಾಗಿ ಅಡಗಿಸಿಟ್ಟುಕೊಳ್ಳುತ್ತದೆ. ಈ ದೃಷ್ಟಿಯಿಂದ The Force ಎಂಬ ಹೆಸರು ಅತ್ಯಂತ ಸಮರ್ಪಕವಾಗಿದೆ ಎಂಬ ಮೆಚ್ಚಬೇಕಾದ ಅಂಶವನ್ನು ಇಲ್ಲಿ ಪ್ರಾಸಂಗಿಕವಾಗಿ ಸೂಚಿಸಬಯಸುತ್ತೇನೆ-ಅದಕ್ಕೂ ಅವಕಾಶದ ವಿಷಯಕ್ಕೂ ಯಾವುದೇ ಸಂಬಂಧವಿಲ್ಲದಿದ್ದರೂ).

ಈ ಸಲದ (1972) ದಸರಾ ವಸ್ತುಪ್ರದರ್ಶನದಲ್ಲಿದ್ದ ‘Landscape’ ಎಂಬ ಚಿತ್ರ ಗಮನಿಸಬಹುದು. (ಈ ಚಿತ್ರಕಾರನ ಹೆಸರು ಕುಲಗೋತ್ರಗಳನ್ನು ಪ್ರಕಟಿಸುವ ತೊಂದರೆ ತೆಗೆದುಕೊಂಡಿಲ್ಲ, ಪ್ರದರ್ಶಕರು.) ಇದು ಸ್ವಪ್ನಸತ್ಯತಾ ಪಂಥದ ಅಮೂರ್ತ ಚಿತ್ರ (Abstract-surrealistic) ಎನ್ನಬಹುದು. ಇದರ ಬಲದ ಅರ್ಧದಷ್ಟು ಭಾಗದಲ್ಲಿ ಅವಕಾಶದ ರಚನೆ ತೀವ್ರವಾಗಿದೆ, ಈ ಅವಕಾಶದಲ್ಲಿ ದೃಷ್ಟಿ ಅತ್ತಿತ್ತ ನಾಟ್ಯ ವಾಡಿದರೂ, ಕಡೆಗೊಮ್ಮ ಚಿತ್ರದ ಎಡಮೂಲೆಯಲ್ಲಿ ಅವಕಾಶದ ಅಂಶವೇ ಕಾಳಜಿ ತಟಸ್ಥಗೊಂಡು ನಿಲ್ಲಬೇಕಾಗುವುದು. ಅವಕಾಶದ ಆವಶ್ಯಕತೆ Landscape ಗಳಲ್ಲಿ ಹೆಚ್ಚು, ಯಾವಾಗಲೂ, ಅಂಥದರಲ್ಲಿ ಕಲಾವಿದ ಅವಕಾಶವಿಲ್ಲದ ಒಂದು ಕರುಡು ಜಾಗ (spaceless blind-spot)ಸೃಷ್ಟಿಸಿ ಸ್ವಲ್ಪಮಟ್ಟಿಗೆ ಸೂತಿದ್ದಾನೆ ಎನಿಸುತ್ತದೆ. ಮುಂಚೆಯೇ ಹೇಳಿದಂತೆ ಇದು ಸ್ವಪ್ನ ಸತ್ಯತಾ ಪಂಥದ (surrealistic)ಚಿತ್ರ; ಆದ್ದರಿಂದ ಇದೊಂದು ಅಸಾಧ್ಯತೆಯ ಚಿತ್ರಣ ಅಥವಾ ಅದ್ಭುತ-ಕಲ್ಪಕ (Fantasy) ಎಂದು ಪರಿಗಣಿಸಬಹುದಲ್ಲವೆ-ಎನ್ನಬಹುದು, ಆದರೆ ಎಷ್ಟೇ ಇಂಥ ವಿನಾಯಿತಿ ಕೊಟ್ಟರೂ ಮುನ್ನೆಲದಿಂದ ಕ್ಷಿತಿಜದವರೆಗೂ ಅವಕಾಶರಹಿತವಾಗಿರುವುದು ಅಸಂಭಾವ್ಯ. ಅಸಂಭಾವ್ಯವನ್ನೇ ತೋರಿಸಲು ಚಿತ್ರಕಾರೆ ಯತ್ನಿಸುತ್ತಿದ್ದಾನೆ–ಎಂದೂ ಹೇಳಬಹುದು. ಆದರೆ, ಹಾಗೆ ಭಾವಿಸಬೇಕಿದ್ದರೆ ಚಿತ್ರದ ಕುರುಡು-ಜಾಗಕ್ಕೆ ಪ್ರಾಯಶಃ ಬಹಳ ಘನಸ್ತಿಕ (solid look) ಕಡಬೇಕಿತ್ತು, ಕಲಾವಿದ ಅಂಥ ಪ್ರಯತ್ನ ಮಾಡಿಲ್ಲ.

ಅಮೂರ್ತ ಪಂಥದ Landscape ಗಳಲ್ಲಿ ಅತ್ಯಂತ ಪ್ರಖ್ಯಾತವಾದ Donglas Snow ಅವರ Storm and Sunset ಚಿತ್ರ: ಇದರಲ್ಲಿ ದೃಷ್ಟಿಪಥ ಕೆಳಭಾಗದ ಬಿಳಿ ಪಟ್ಟಿಯಿಂದ ಹಿಂದಕ್ಕೆ (ಚಿತ್ರದಲ್ಲಿ ಮೇಲಕ್ಕೆ) ಹೋಗಿ ಅಡ್ಡಪಟ್ಟಿಯೊಂದರ ಬಳಿ ನಿಲ್ಲುತದೆ. ಇಲ್ಲಿಂದ ಮುಂದೆ ಬರೀ ಅಡ್ಡ ಪಟ್ಟಿಗಳೇ ಕಂಡರೂ ಅವು ದೃಶ್ಯಪಥಕ್ಕೆ ಮೆಟ್ಟಿಲುಗಳಾಗಿ ದೃಷ್ಟಿಪಥವನ್ನು ಮೇಲ್ತುದಿಗೆ ತಂದು ಮುಟ್ಟಿಸುತ್ತವೆ. ಹೀಗಾಗಿ ಒಂದು ರೀತಿಯಲ್ಲಿ ಅವಕಾಶದ ಸಂಸ್ಥಾಪನೆ ಆಗುತ್ತದೆ.

ಇನ್ನೊಂದು ಅತ್ಯುತ್ತಮ ಉದಾಹರಣೆ, Cube and Perspective ಎಂಬ ಚಿತ್ರ: ಇದರಲ್ಲಿ ಹಲವಾರು ಘನ (cube) ಗಳು ಮತ್ತು ಕೆಲವು ರೇಖೆಗಳು ಇವೆ, ಯಾವುದೇ ರೇಖೆಯನ್ನು ಹಿಂಬಾಲಿಸಿ, ಅದು perspective (ಪರಿದೂರ) ಎಂಬ ಪ್ರಜ್ಞೆ ಇಟ್ಟುಕೊಂಡು ಹೊರಟರೆ ತಲೆ ಚಿಟ್ಟು ಹಿಡಿಸೀತು, ಇದು ಅವಕಾಶರೂಪಣದ ಬಗ್ಗೆ ವಿಭ್ರಮ ಹುಟ್ಟಿಸುವಂಥದು, ಇಲ್ಲಿ ಘನಗಳ ಅಸ್ತಿತ್ವ ಸರಿಯೇ ಅಥವಾ ಅವಕಾಶರೂಪಣದ ಅಸ್ತಿತ್ವ ಸರಿಯೇ ಎಂಬುದೇ ಸಮಸ್ಯೆಯಾಗಿಬಿಡುತ್ತದೆ.

ಅವಕಾಶದ ರಚನೆಯಲ್ಲಿ ರೇಖೆ ಮತ್ತು ರೂಪ (form) ಅಡಕವಾಗಿರುವುದಕ್ಕೆ ಇನ್ನೊಂದು ಉದಾಹರಣೆ-George Tookey ಅವರ “The Subway’ ಎಂಬ ಚಿತ್ರ, ದೊಡ್ಡ ಹಾಲ್‌ನಲ್ಲಿ ಅಲ್ಲಲ್ಲಿ ಬೂತ್ (booth) ಗಳಿದ್ದಂತೆ, ಅದರಲ್ಲಿ ಯಾರೋ ಅಡಗಿ ನಿಂತಂತೆ-ಒಟ್ಟಿನಲ್ಲಿ ವೀಕ್ಷಕನಿಗೆ ಕೆಲಿಡಿಯೊಸ್ಕೋಪ್‌ನಂಥ ದೃಶ್ಯಾಭಾಸವನ್ನು ಕಡುತ್ತದೆ. ಇಲ್ಲಿ ಅವಕಾಶರೂಪಣ ತುಂಬ ಭ್ರಮೆ ಹುಟ್ಟಿಸುವಂತೆ ಕಂಡರೂ ಸಹ ಅದರ ಅಸ್ತಿತ್ವ ನಿಜವಾಗಿರುತ್ತದೆ.

ಚಿತ್ರಗಳಲ್ಲಿ ಅವಕಾಶದ ಆವಶ್ಯಕತೆ ಸಾಮಾನ್ಯವಾಗಿ ಇದ್ದೇ ಇರುತ್ತದೆ ಎನ್ನಬಹುದಾದರೂ, ಎಲ್ಲ ಚಿತ್ರಗಳಲ್ಲೂ ಅವಕಾಶ ಇದ್ದೇ ತೀರಬೇಕು ಎನ್ನುವಂತಿಲ್ಲ, ಎಲ್ಲ ಚಿತ್ರಗಳಿಗಿಂತ ಅವಕಾಶದ ಹೆಚ್ಚಿನ ಅವಶ್ಯಕತೆ ಇರುವುದು landscape ಚಿತ್ರಗಳಲ್ಲಿ. ಅವಕಾಶದ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ ನಡೆಸಿದಷ್ಟೂ, ಹೊಸ ಹೊಸ ಮಾರ್ಗಗಳಲ್ಲಿ ಚಿತ್ರರಚನೆ ಮಾಡಲು ಕಲಾವಿದನಿಗೆ ಸಾಮರ್ಥ್ಯ ಒದಗಬಹುದೋ ಎನ್ನಿಸುತ್ತದೆ.

ಕೊನೆಯದಾಗಿ, ಈ ಲೇಖನ ‘ಅವಕಾಶ’ದ ಇಣಕು ನೋಟವಷ್ಟೇ ಎಂಬುದನ್ನು ಸೂಚಿಸಬೇಕಾಗುತ್ತದೆ, ಅವಕಾಶಕ್ಕೆ ಇನ್ನೂ ಹೆಚ್ಚಿನ ಅರ್ಥವ್ಯಾಪ್ತಿ ಇದೆ, ಅವನ್ನೆಲ್ಲ ಇಲ್ಲಿ ಕ್ರೋಢೀಕರಿಸಲು ಸಾಧ್ಯವಾಗಿಲ್ಲ.

Close

ಸಂಪಾದಕೀಯ: ಸಾಹಿತಿಗಳಲ್ಲಿ ಮನವಿ

ಸಂಪಾದಕೀಯ: ಸಾಹಿತಿಗಳಲ್ಲಿ ಮನವಿ

ಗೋಪಾಲಕೃಷ್ಣ ಅಡಿಗ

ನಮ್ಮ ದೇಶದಲ್ಲಿ ಈಗ ನಡೆಯುತ್ತಿರುವುದು ವಿಘಟನೆಯ ಕಾಲ, ಹಳೆಯ ಕಟ್ಟುಗಳೆಲ್ಲ ಕಳಚಿಬೀಳುತ್ತ ಬರುತ್ತಿವೆ. ರೂಢವಾಗಿರುವ ಮೌಲ್ಯಗಳು ಜನದ ಮನಸ್ಸನ್ನು ತಿದ್ದಿ ಬದುಕನ್ನು ಮೇಲಕ್ಕೆತ್ತುವ ಶಕ್ತಿಯನ್ನು ಕಳೆದುಕೊಂಡಿವೆ. ಪರಂಪರಾಗತ ಮೌಲ್ಯಗಳನ್ನು ಎತ್ತಿ ಹಿಡಿಯುತ್ತ ಬಂದಿರುವ ಧರ್ಮಾಧಿಕಾರ ಸ್ಥಾನಗಳು ತಮ್ಮ ಸತ್ವವನ್ನು ಕಳೆದುಕೊಂಡಿವೆ; ಅವುಗಳಲ್ಲಿ ಜನಕ್ಕೆ ನಂಬಿಕೆ ನಷ್ಟವಾಗಿದೆ. ಇಂಥ ಕಾಲದಲ್ಲಿ ಬದುಕಿನಲ್ಲಿ ಪ್ರವೃತ್ತರಾಗಿಯೂ ಅದನ್ನು ಬಿಟ್ಟು ಹರನಿಂತು ನೋಡಬಲ್ಲ, ಅಂತರಂಗದ ಕೋಲಾಹಲದಲ್ಲೂ ಹೊಸ ಅರ್ಥಗಳನ್ನು ಸೃಷ್ಟಿಸಲು ಹೋರಾಡಬಲ್ಲ ಸಾಹಿತಿಗಳಿಂದ ಸಾಮಾನ್ಯಜನ ಮಾರ್ಗದರ್ಶನ ಬಯಸಿದರೆ ಆಶ್ಚರ್ಯವಿಲ್ಲ. ಕವಿ ಸಾಹಿತಿಗಳಲ್ಲಿ ಜನಕ್ಕೆ ಪರಂಪರಾಗತವಾಗಿ ಬಂದಿರುವ ಗುರುಭಾವನೆ ಇನ್ನೂ ನಷ್ಟವಾಗಿಲ್ಲ. ಜನಜೀವನದ ಎಲ್ಲ ಅಂಗಗಳೂ ರೋಗಗ್ರಸ್ತವಾಗುತ್ತಿರುವಾಗ ಸಾಹಿತ್ಯವೊಂದರಲ್ಲಾದರೂ ಆರೋಗ್ಯ ದೃಷ್ಟಿ ಇದೆ ಎಂಬ ನಂಬಿಕೆ ಸಾಹಿತಿಗಳಲ್ಲದವರಲ್ಲಿ ಇರಬಹುದು. ಇಂಥ ಕಾಲದಲ್ಲಿ ಸಾಹಿತಿಗಳ ಜವಾಬುದಾರಿ ದೊಡ್ಡದು, ಆ ಜವಾಬುದಾರಿಯನ್ನು ಮನಗಂಡು ಸುತ್ತು ಮುತ್ತಲಿನ ಹಲವಾರು ರಾಜಕೀಯ ಆಮಿಷಗಳಿಗೆ ಬಲಿಯಾಗದೆ, ಜೀವಪೋಷಕವಾಗುವ ಮೌಲ್ಯಗಳಿಗೆ ಸಂಕೇತವಾಗುತ್ತ ಹೊಸ ಸಂಘಟನೆಯ ಹೊಸ ದಿಗಂತಕ್ಕೆ ಪಥಕಾರರಾಗಲು ಪ್ರಯತ್ನಿಸುವುದು ಸಾಹಿತಿಗಳಾದ ನಮ್ಮೆಲ್ಲರ ಕರ್ತವ್ಯ ಎಂದು ನಾನು ಭಾವಿಸುತ್ತೇನೆ. ರಾಜಕೀಯದ ಅರ್ಬುದ ಸರ್ವವ್ಯಾಪಿಯಾಗುತ್ತ ಅಂತರಂಗ ಜೀವನವನ್ನೇ ತಿಂದು ಹಾಕುತ್ತಿರುವಾಗ ಅದು ಸಾಹಿತ್ಯಕ್ಕೂ ವ್ಯಾಪಿಸುವುದರಲ್ಲಿ ಆಶ್ಚರ್ಯವೇನೂ ಇಲ್ಲ, ಹಾಗೆ ಆಗದ ಹಾಗೆ ನೋಡಿಕೊಳ್ಳುವುದೂ ಅದರಿಂದ ಆಗಬಹುದಾದ ಹಾನಿಯನ್ನು ಆದಷ್ಟು ಕಡಿಮೆ ಮಾಡುವುದೂ ವ್ಯಕ್ತಿಗಳಾಗಿಯೂ ಸಾಹಿತಿಗಳಾಗಿಯೂ ನಮ್ಮೆಲ್ಲರ ಕರ್ತವ್ಯ ಎಂದು ನನಗೆ ತೋರುತ್ತದೆ.

ಇತ್ತೀಚೆಗೆ ನಮ್ಮ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ನಡೆಯುತ್ತಿರುವ ಕೆಲವು ಘಟನೆಗಳು ಸಾಹಿತ್ಯದ ವಾತಾವರಣಕ್ಕೆ ಆರೋಗ್ಯಕರವಲ್ಲ. ಈ ಘಟನೆಗಳಿಂದ ಹೊಸ ಹೊಸ ಸಾಹಿತಿಗಳಲ್ಲಿ ಅಂತಃಸತ್ವವುಳ್ಳವರು ದಿಗ್ಭ್ರಾಂತರಾಗಿದ್ದರೆ, ಅಂತಹ ಸತ್ವವಿಲ್ಲದವರು ಅತಿಸ್ವಾರ್ಥ, ಅಸಹನೆ, ಅವಿವೇಕಗಳ ಆತ್ಮಹತ್ಯೆಯ ದಾರಿ ಹಿಡಿದಿರುವುದೂ ಕಂಡು ಬರುತ್ತದೆ. ಸಾಹಿತಿಗಳ ಲೋಕದಲ್ಲಿ ಒಳ್ಳೆಯತನ, ಸಹಾನುಭೂತಿ, ಪರಸ್ಪರ ಗೌರವ, ಯಥಾರ್ಥವಾದ, ಕ್ಷಮೆ, ನಿಗ್ರಹ, ಸಹಿಷ್ಣುತೆ ಇವು ಆಗತ್ಯವೇ ಇಲ್ಲವೇನೋ ಎಂಬ ಹಾಗೆ ಕ್ಷುದ್ರ ರಾಜಕೀಯ ತಲೆಯೆತ್ತುತ್ತಿರುವುದು ಸಾಹಿತಿಗಳ ಮತ್ತು ಒಟ್ಟು ಸಮಾಜದ ದೃಷ್ಟಿಯಿಂದ ಅಪಾಯಕಾರಿಯಾದ ಬೆಳವಣಿಗೆ, ಇದನ್ನು ಕುರಿತು ನಾವೆಲ್ಲರೂ ಶಾಂತವಾಗಿ ಕುಳಿತು ಉದ್ವೇಗವಿಲ್ಲದೆ ಯೋಚಿಸುವುದು ಅತ್ಯಗತ್ಯವಾಗಿದೆ. ಯೋಚಿಸಿ ನಮಗೆ ನಾವೇ, ನಮ್ಮಲ್ಲಿ ಪ್ರತಿಯೊಬ್ಬನೂ ತನಗೆ ತಾನೇ, ತಕ್ಕ ಆಚಾರಸಂಹಿತೆಯನ್ನು ನಿರ್ಮಿಸಿಕೊಂಡು ಅದನ್ನು ಕಟ್ಟುನಿಟ್ಟಾಗಿ ಅನುಸರಿಸಿಕೊಂಡು ಬರುವುದು ಕರ್ತವ್ಯ, ಒಟ್ಟು ಜನಸಮುದಾಯದ ಆತ್ಮಸಾಕ್ಷಿಗಳಾಗಿ ಸಾಹಿತಿಗಳು ವ್ಯವಹರಿಸದೆ ಹೋದರೆ ಭಯಂಕರ ಅಪರಾಧವಾಗುವುದು.

ಸಾಹಿತಿಗಳಾದ ನಾವೂ ಮನುಷ್ಯರು, ಸಾಹಿತಿಗಳಲ್ಲದ, ಆದರೆ ನಮ್ಮಷ್ಟೇ ಯೋಗ್ಯತಾ ಸಂಪನ್ನರಾಗಿರಬಹುದಾದ, ಇತರ ಮನುಷ್ಯರೊಡನೆ ಬದುಕಬೇಕಾದವರು, ಒಬ್ಬ ಮನುಷ್ಯನ ಬದುಕು ಸ್ವಸ್ಥವೂ ಸಂಪನ್ನವೂ ಆಗಬೇಕಾದರೆ ಯಾವ ಯಾವ ಮಾನವ ಗುಣಗಳು ಅಗತ್ಯವೋ ಆಗುಣಗಳು ಸಾಹಿತಿಗೂ ಅಗತ್ಯ, ನಾನು ಸಾಹಿತಿಯಾಗಿರುವುದರಿಂದ ಏನು ಬೇಕಾದರೂ ಹೇಳಬಹುದು, ಮಾಡಬಹುದು ಎನ್ನಲು ಸಾಧ್ಯವಿಲ್ಲ, ಸಮಾಜದ ಅವಗುಣಗಳನ್ನು ಬೆಳಕಿಗೆ ತರುತ್ತ ಸದ್ಗುಣಗಳ ಆವಿರ್ಭಾವವನ್ನು ಬಯಸುವ ಸಾಹಿತಿ ತನಗೆ ತಾನು ಯಾವ ವಿನಾಯಿತಿಯನ್ನೂ ಕೊಟ್ಟುಕೊಳ್ಳುವುದು ಸಲ್ಲದು, ಕ್ರಾಂತಿಕಾರಿ ಯಾದ ಸಾಹಿತಿ ಇರುವುದನ್ನು ಖಂಡಿಸಿದರೆ ಅದು ಇಲ್ಲದೆ ಇರುವುದರ ಕಣಸನ್ನು ಸಾಧ್ಯ ಮಾಡುವುದಕ್ಕಾಗಿ ಅಲ್ಲದೆ ಸುತ್ತುಮುತ್ತಲಿನವರಿಗೆ ಚಾಟಿಯೇಟು ಕೊಟ್ಟು ಸಂತೋಷ ಪಡುವುದಕ್ಕಾಗಿ ಅಲ್ಲ, ಸಾಹಿತಿಗಳಾದ ನಾವು ಯಾರೂ ಪರಿಪೂರ್ಣ ಮಾನವರಲ್ಲ- ನಿಜ, ನಮ್ಮ ಹಿಂದೆ ಇದ್ದ ಸಾಹಿತಿಗಳಲ್ಲೂ ಪರಿಪೂರ್ಣರಾದವರು ಯಾರು ಇದ್ದಿರ ಲಾರರು, ಆದರೆ ಅಪರಿಪೂರ್ಣರಾಗಿರುವುದೇ ಒಂದು ಗುರಿಯಾಗಲಾರದು. ಯಾವ ಕಾಲದಲ್ಲೇ ಆಗಲಿ ಪರಿಪೂರ್ಣತೆಯ ಅಥವಾ ಸಮಗ್ರತೆಯ ಕಲ್ಪನೆಯೊಂದು ಇಲ್ಲದೇ ಯಾರ ಬದುಕೂ ವಿಕಾಸಗೊಳ್ಳದು: ಅಂಥ ಪರಿಪೂರ್ಣತೆಯ ಅನುಸಂಧಾನವಿಲ್ಲದೆ ಯಾವ ಸಾಹಿತ್ಯವೂ ಕೃತಾರ್ಥವಾಗದು, ಯಾವ ಸಾಹಿತಿಯೂ ಸಫಲನಾಗಲಾರ’.

ನಮ್ಮ ಅಂತರಂಗದ ಪ್ರವೃತ್ತಿಗಳು ಅನೇಕಾನೇಕ, ಅವು ಸದಾಕಾಲವೂ ಮಾತಿನಲ್ಲೂ ಕೃತಿಯಲ್ಲೂ ಅಭಿವ್ಯಕ್ತಿಯನ್ನು ಬಯಸುತ್ತ ಇರುತ್ತವೆ. ಈ ಪ್ರವೃತ್ತಿಗಳಲ್ಲಿ ಕೆಲವು ಕೆಟ್ಟವು ಎಂದೂ ಕೆಲವು ಒಳ್ಳೆಯವು ಎಂದೂ ಭಾವಿಸುತ್ತೇವೆ, ತನ್ನ ಮತ್ತು ಪರರ ವಿಕಾಸಕ್ಕೆ ಬಾಧಕವಾಗುವುದು ಕೆಟ್ಟದ್ದೂ, ಸಾಧಕವಾಗುವುದು ಒಳ್ಳೆಯದೂ ಎನ್ನಬಹುದು, ಆದರೆ, ಒಳ್ಳೆಯದು ಕೆಟ್ಟದ್ದು ಇವು ಮೂಲತಃ ಭಿನ್ನ ಭಿನ್ನವಾಗಿರಲಾರವು ಎಂದು ತೋರುತ್ತದೆ. ಕೆಟ್ಟದ್ದು ಎಂದು ತೋರಿದ್ದೂ ಒಳ್ಳೆಯದಾಗಿ ಪರಿಣಮಿಸುವುದೂ ಒಳ್ಳೆಯದು ಎಂದು ಕಂಡದ್ದು ಕೆಟ್ಟದ್ದಾಗಿ ಪರ್ಯಾವಸಾನಗೊಳ್ಳುವುದೂ ಕಂಡುಬಂದಿದೆ, ಸ್ವಾರ್ಥ, ಕರುಬು, ದುರಾಶೆ, ಹಿಂಸಾಪರತೆ, ಸುಳ್ಳು, ಮೊಸ ದ್ರೋಹ ಇವು ನಮ್ಮಲ್ಲಿ ಪ್ರತಿಯೊಬ್ಬರ ಒಳಗೂ ವ್ಯಕ್ತವಾಗಿಯೋ ಅವ್ಯಕ್ತವಾಗಿಯೋ ಇರುವ ಹಾಗೇ ಅನುಕಂಪ, ಸಹಾನುಭೂತಿ, ಪ್ರೀತಿ, ಆತ್ಮಾರ್ಪಣಾಶಕ್ತಿ ಇತರರನ್ನು ಗೌರವಿಸಿ ಅವರಿಂದ ಒಳ್ಳೆಯ ಕೆಲಸ ನಡೆದರೆ ಹಿಗ್ಗುವ ಪ್ರವೃತ್ತಿ, ಸತ್ಯನಿಷ್ಠೆ, ನ್ಯಾಯಪರತೆ ಇವು ಕೂಡಾ ನಮ್ಮಲ್ಲಿ ಎಲ್ಲರಲ್ಲಿ ಇರುವ ಪ್ರವೃತ್ತಿಗಳೇ, ಇವು ಒಂದಕ್ಕೊಂದು ವಿರುದ್ಧವಾಗಿರುವ ಹಾಗೆ ತೋರುವ ಮೂಲಶಕ್ತಿಗಳು, ಇವುಗಳಲ್ಲಿ ಯಾವುದನ್ನೂ ತಡೆದು ಹಾಕಲು ಸಾಧ್ಯವಿಲ್ಲ, ಒಂದನ್ನು ಇನ್ನೊಂದರೊಡನೆ ತೂಗುತ್ತ ಯಾವುದು ನಮಗೆ ಒಳ್ಳೆಯದೆಂದು ತೋರುತ್ತದೋ ಅದನ್ನು ಎತ್ತಿ ಬೆಳಸುತ್ತ ಯಾವುದು ಕೆಟ್ಟದ್ದೆಂದು ತೋರುವುದೋ ಅದನ್ನು ನಿಗ್ರಹಿಸುತ್ತ, ಅದರ ಅರ್ಥವನ್ನು ಅರಿಯುತ್ತ ಅದನ್ನು ಒಳ್ಳೆಯದರ ಆಳಾಗಿ ಬಗ್ಗಿ ಸುತ್ತ-ಹೀಗೆ ಕಷ್ಟಪಟ್ಟು ನಾವು ನಮ್ಮ ನಮ್ಮ ಮನಸ್ಸನ್ನು ಸಂಸ್ಕಾರಗೊಳಿಸುತ್ತ ಬೆಳೆಯಬೇಕು, ನಮ್ಮ ದೇಹ ಮತ್ತು ಇಂದ್ರಿಯಗಳಿಗೆ ಅಗತ್ಯವಾದದ್ದು, ನಮ್ಮ ಅಂತರಂಗ ಬುದ್ದಿ ನೀತಿ ಪ್ರಶ್ನೆಗಳಿಗೆ ಅಗತ್ಯವಾದದ್ದು–ಈ ಎರಡರ ನಡುವೆ ಹುಟ್ಟುವ ತಿಕ್ಕಾಟವನ್ನು ಬಗೆಹರಿಸಿಕೊಳ್ಳುವುದು ಅಷ್ಟು ಸುಲಭವಾದ ಕೆಲಸವೇನೂ ಅಲ್ಲ. ಸಾಹಿತ್ಯಸೃಷ್ಟಿಗೆ ಬೇಕಾದ ಮೂಲಧಾತುಗಳ ಸಂಗ್ರಹವಾಗುವುದು ಇಂಥ ದ್ವಂದ್ವಗಳ ಹೋರಾಟದಿಂದಲೇ, ಹೀಗಿದ್ದರೂ ಕೂಡ ನಮ್ಮ ಪ್ರಜ್ಞೆಯ ತಡೆಗಳನ್ನೆಲ್ಲ ಮುರಿದು ಇವಿಲ್ ಅಥವಾ ರಾಕ್ಷಸ ನಮ್ಮ ಮನಸ್ಸಿನ ಒಳತಳಗಳಿಂದ ಆಗಾಗ್ಗೆ ಮೇಲೆದ್ದು ಬಂದು ವಿಜೃಂಭಿಸುತ್ತದೆ-ನಮಗೇ ಆಶ್ಚರ್ಯವಾಗುವ ಹಾಗೆ, ಆಗ ಅದನ್ನು ಸಂಪೂರ್ಣವಾಗಿ ಅರಿತು ಅದರ ಬೇರುಗಳನ್ನು ಕಿತ್ತು ಹಾಕಲು ತಕ್ಕ ಆತ್ಮ ನಿರೀಕ್ಷೆ ಅಗತ್ಯವಾಗುತ್ತದೆ. ಘಟಸಿದ ಪ್ರಮಾದವನ್ನು ತಿಳಿದು ಪಶ್ಚಾತ್ತಾಪ ಪಡುತ್ತ, ಕ್ಷಯಿಸಿ ಹೋದ ಅಂತರಂಗ ಶಕ್ತಿಗಾಗಿ ಪರಿತಪಿಸುತ್ತ ಮತ್ತೊಮ್ಮೆ ಅಂಥ ರಾಕ್ಷಸನೃತ್ಯ ನಡೆಯದ ಹಾಗೆ ನೋಡಿಕೊಳ್ಳುತ್ತ ನಾವು ಎಚ್ಚರದಿಂದ ಮುನ್ನಡೆಯಬೇಕು, ಇದು ಮಾನವನ ಸಂಸ್ಕಾರದ ಅಥವಾ ವಿಕಾಸದ ದಾರಿ, ಈ ದಾರಿ ಸಾಹಿತಿಗೂ ಸಲ್ಲುವ ದಾರಿಯೇ ಅಲ್ಲವೇ ?

ನಮ್ಮ ಎಲ್ಲ ಸತ್ಯತಿಗಳಿಗೂ ಹೇಗೋ ಹಾಗೆ ನಮ್ಮ ಎಲ್ಲಾ ಕಷ್ಟಗಳಿಗೂ ಪ್ರಮಾದಗಳಿಗೂ ಮೂಲಕಾರಣ ನಮ್ಮ ಅಹಂಕಾರ, ನಮಗೆ ವ್ಯಕ್ತಿತ್ವ ಸಿದ್ಧಿಸುವುದು ಈ ಅಹಂಕಾರದಿಂದಲೇ ವ್ಯಕ್ತಿತ್ವ ದೊಡ್ಡದಾದಾಗ ನಮ್ಮಲ್ಲಿ ವಿಶೇಷ ಶಕ್ತಿ ಇರುವಾಗ ಈ ಅಹಂಕಾರವೂ ದೊಡ್ಡದಾಗಿರುತ್ತದೆ. ಸಾಹಿತಿಗಳಲ್ಲೂ ಕಲೆಗಾರರಲ್ಲೂ ಇದು ಅತಿಶಯವಾಗಿ ಇರುವುದು ಸಹಜ, ಇದನ್ನು ನಾವು ಅರಿತು ಸದಾಕಾಲವೂ ಎಚ್ಚರಿಕೆ ವಹಿಸಬೇಕು, ಈ ಅಹಂಕಾರ ದುರಹಂಕಾರವಾಗಿ ವಿಕಾರಗೊಂಡು ಸರ್ವಾಧಿಕಾರಿಬುದ್ದಿಯಾಗಿ ಮಾರ್ಪಟ್ಟು ಬಲು ದೊಡ್ಡ ಪೀಡೆಯಾಗುವುದು ಹೇಗೆ ಸಾಧ್ಯವೋ ಹಾಗೆಯೇ ಅದು ಆತ್ಮಗೌರವ, ನಿಷ್ಠೆ, ಸ್ವತಂತ್ರಬುದ್ದಿ, ಅಪೂರ್ವ ಕಲ್ಪನೆ, ಮೂಲ ಚಿಂತನ-ಇವಕ್ಕೂ ಕಾರಣವಾಗಬಲ್ಲುದು. ಈ ಅಹಂಕಾರದ ಕೂಸೇ ಸ್ವಾರ್ಥ, ತಾನು ತನ್ನದು ಎಂಬ ಈ ಭಾವನೆ ಆತ್ಮರಕ್ಷಣೆಗೆ ಅತ್ಯಗತ್ಯವಾಗಿರುವುದರಿಂದ ತನಗೆ ತಾನೇ ತ್ಯಾಜ್ಯವೇನೂ ಅಲ್ಲ. ಆದರೆ ತನ್ನ ಸುತ್ತಮುತ್ತಲಿನವರನ್ನೆಲ್ಲ ಕಡೆಗಣಿಸಿ ತಾನೊಬ್ಬನೇ ಜಗತ್ತಿನಲ್ಲಿರುವುದೋ ಎನ್ನುವ ಹಾಗೆ, ಅನುಕಂಪ ಪ್ರೀತಿ ವಿಶ್ವಾಸ ಮುಂತಾದ ಸಹಜ ಪ್ರವೃತ್ತಿಗಳನ್ನು ಮೂಲೆಗೆ ತಳ್ಳಿ ವಿಜೃಂಭಿಸಿದರೆ ಆಗ ಅದು ಕೆಟ್ಟದ್ದಾಗುತ್ತದೆ. ತನ್ನ ಜಡ ಆಂಧ ಸ್ವಾರ್ಥಕ್ಕಾಗಿ ಎಲ್ಲ ಉತ್ತಮ ಮೌಲ್ಯಗಳನ್ನು ಬಲಿಗೊಡುವುದೂ, ಎಲ್ಲವನ್ನೂ ಎಲ್ಲರನ್ನೂ ಅದಕ್ಕಾಗಿ ಬಳಸಿಕೊಳ್ಳುವುದೂ, ಹಣಕಾಸು ಪದವಿ ಅಧಿಕಾರಗಳನ್ನು ಪಡೆದು ಜಳ್ಳು ಮನುಷ್ಯನಾಗಿ ಮೆರೆದಾಡುವುದೂ ನಾವು ಎಲ್ಲ ಕಾಲಗಳಲ್ಲೂ ಕಾಣಬಹುದಾದ ಸಾಧಾರಣ ದೃಶ್ಯ, ಈ ಅನಿಯಂತ್ರಿತ ಸ್ವಾರ್ಥದ ಅಪತ್ಯವೇ ಅಸೂಯೆ, ನಾನೊಬ್ಬ ಸಾಹಿತಿಯಾಗಿದ್ದು ನನ್ನ ಮುಂದ ಇನ್ನೊಬ್ಬ ಸಾಹಿತಿಯನ್ನು ಹೊಗಳಿದರೆ ನನ್ನ ಒಳಗೆ ಏನೋ ಒಂದು ತರಹ ಆಗುತ್ತದೆ. ಆ ತರಹವೇ ಅಸೂಯೆ. ಇದರಿಂದ, ಈ ಪ್ರವೃತ್ತಿಯಿಂದ ಯಾರೂ ಸಂಪೂರ್ಣವಾಗಿ ಮುಕ್ತರಲ್ಲ, ಅಂಥ ಪ್ರವೃತ್ತಿ ಮೊಳೆತಾಗ ಅದರ ಜೊತೆಗೇ ಅಷ್ಟೇ ಸಹಜವಾದ ಸಹನೆಯೂ ವಿವೇಕವೂ ನನ್ನ ನೆರವಿಗೆ ಬಂದರೆ ಆಗ ನನ್ನ ಹೊಟ್ಟೆಕಿಚ್ಚು ಕಾಳ್ಗಿಚ್ಚಾಗಿ ವ್ಯಾಪಿಸಿ ಮೊದಲು ನನ್ನಲ್ಲಿರುವ ಮೃದುಗುಣಗಳೆಲ್ಲವನ್ನೂ ಸುಟ್ಟು ಆನಂತರ ಹೊರಗಡೆ ತನ್ನ ನಾಲಗೆ ಚಾಚುವಷ್ಟರ ಮಟ್ಟಿಗೆ ಅದು ವಿಜೃಂಭಿಸಲು ಸಾಧ್ಯವಾಗುವುದಿಲ್ಲ, ಇಲ್ಲವಾದರೆ ಮೊದಲು ನನ್ನನ್ನು ಸುಟ್ಟುಕೊಂಡು ಸುತ್ತಮುತ್ತಲಿನ ಕೊಂಚ ಜಾಗವನ್ನೂ ಸುಟ್ಟು ನಾನು ಕೃತಜ್ಞನಾಗಬೇಕು, ಇಂಥ ಅಸೂಯೆಯ. ಪರಿಣಾಮವಾಗಿಯೇ ಮನುಷ್ಯ ತನಗಿಂತ ಉತ್ತಮವಾದದ್ದನ್ನು ಧಿಕ್ಕರಿಸುತ್ತಾನೆ: ತನ್ನ ಪ್ರತಿಸ್ಪರ್ಧಿಯನ್ನು ಕೊಲ್ಲುವುದು ಅಸಾಧ್ಯವಾಗಿರುವಾಗ ಅಥವಾ ಅಸಾಧ್ಯವಾಗಿರುವುದರಿಂದ ಅವನ ಮೇಣದ ಗೊಂಬೆಯನ್ನು ಮಾಡಿ ಅದಕ್ಕೆ ಸೂಜಿ ಚುಚ್ಚಿ ಚುಚ್ಚಿ ಸಂತೋಷಪಡುತ್ತಾನೆ: ನಿಧಾನವಾಗಿ ಅದು ಸುಟ್ಟುಹೋಗುವುದನ್ನು ನೋಡುತ್ತ ಕೇಕೆ ಹಾಕುತ್ತಾನೆ. ಈ ಎಲ್ಲ ಅಪಕ್ರಿಯೆಗಳೂ ಸೃಷ್ಟಿಕಾರ್ಯಕ್ಕೆ ಉಪಯೋಗವಾಗಬಹುದಾಗಿದ್ದ ಶಕ್ತಿಯ ದುರುಪಯೋಗ; ಅಂತರಂಗ ಜೀವನದ ದೃಷ್ಟಿಯಿಂದ ಆತ್ಯಹತ್ಯಾರತಿ, ಇಂಥ ಪ್ರವೃತ್ತಿಗಳೂ ಈಗ ನಮ್ಮ ಸಾಹಿತ್ಯದಲ್ಲಿ ಅಲ್ಲಲ್ಲಿ ಕಂಡು ಬರುತ್ತವೆ. ಈ ಬಗ್ಗೆ ನಾವು ಎಚ್ಚರಿಕೆ ವಹಿಸಬೇಕು. ಆದು ಅಂಟುಜಾಡ್ಯವಾಗದಂತೆ ನೋಡಿಕೊಂಡು ನಮ್ಮ ನಮ್ಮ ಮನಃಸ್ವಾಸ್ಥ್ಯವವನ್ನು ರಕ್ಷಿಸಿಕೊಳ್ಳಬೇಕು, ವೈಯಕ್ತಿಕವಾಗಿಯೂ ಸಾಮಾಜಿಕವಾಗಿಯೂ ಇದು ಪ್ರತಿಯೊಬ್ಬ ಸಾಹಿತಿಯ ಜವಾಬುದಾರಿ.

ಈಗ ನಾವು ನಮ್ಮ ಸುತ್ತಲೂ ದುರಾಶೆ, ಭ್ರಷ್ಟಾಚಾರ, ಅಂತರಂಗಮೌಲ್ಯ ನಿರಸನ ಇವುಗಳನ್ನು ಅನುಭವಿಸುತ್ತಿದ್ದೇವೆ, ಈ ಎಲ್ಲದರ ಹಿಂದಿರುವ ಪ್ರವೃತ್ತಿ ಕೈಕೆಸರಾಗದ ಬಾಯಿ ಮೊಸರಾಗಬೇಕೆನ್ನುವ ಆಶೆ; ಅಥವಾ ತತ್‌ಕ್ಷಣ ಫಲಾಪೇಕ್ಷೆ, ನಮ್ಮಜನ ಇದನ್ನು ರಾಜಕೀಯದಿಂದ ಕಲಿಯುತ್ತಾ ಬರುತ್ತಿದ್ದಾರೆ. ಈ ದಿನ ರಾಜಕೀಯ ಪ್ರವೇಶ, ನಾಳೆ ಜನಪ್ರಿಯತೆ, ನಾಳಿದ್ದು ಮಂತ್ರಿಯಾಗಿಯೋ ಆಗದೆಯೋ ಲಕ್ಷಾಧಿಪತಿತ್ವ -ಇದು ಈಗ ರಾಜಕೀಯದಲ್ಲಿ ಕಾಣುವ ತತ್‌ಕ್ಷಣ ಫಲನಕ್ರಿಯೆ, ಸಾಹಿತ್ಯದಲ್ಲೂ ಈ ಪ್ರವೃತ್ತಿ ಕಾಣುವುದು ರಾಜಕೀಯಕ್ಕೆ ಈಗ ದೊರೆತಿರುವ ಸಾರ್ವಭೌಮತ್ವದ ಸಂಕೇತ. ಇದೆಲ್ಲ ಒಂದು ಬಗೆಯ ಡೊಂಬರಾಟದ ಕಣ್ಕಟ್ಟು ಎಂಬುದು ವಿವೇಕಿಗಳಿಗೆ ತಿಳಿಯುತ್ತದೆ. ಅವಿವೇಕಿಗಳಿಗೂ ಕ್ರಮೇಣ ತಿಳಿಯಬಹುದು, ಆದರೆ ಸಾಹಿತಿಗಳೂ ಈ ಬಗೆಯ ತತ್‌ಕ್ಷಣ ಫಲದ ಪ್ರಲೋಭನೆಗೆ ತುತ್ತಾದರೆ ಅದು ತುಂಬ ದುಃಖಕರ, ಆಶೆ ಸಹಜ ಆದರೆ ಆಶೆಯನ್ನು ವಿವೇಕದಿಂದ ನಿಯಂತ್ರಣಗೊಳಿಸಬೇಕಾದ್ದೂ ಅಷ್ಟೇ ಸಹಜವಾದ ಕ್ರಿಯೆ ಆಗಬೇಕು, ಹಾಗಾಗದೆ ಹೋದರೆ ದಾರುಣವಾದ ನಿರಾಶೆ, ಕುಶ್ಸಿತವಾದ ಸ್ವಪ್ರದರ್ಶನ, ಉದ್ವೇಗ, ಮೈ ಪರಚಿಕೊಳ್ಳುವಿಕೆ, ಇನ್ನೊಬ್ಬರನ್ನು ಕಂಡು ಕರುಬುವಿಕೆ ಮುಂತಾದ ನಿಷ್ಫಲಕ್ರಿಯೆಗಳು ಆರಂಭವಾಗಿ ವಾತಾವರಣ ಕೆಟ್ಟುಹೋಗುತ್ತದೆ. ಇವುಗಳೆಲ್ಲ ಚಟುವಟಿಕೆಗಳೇನೋ ಹೌದು; ಆದರೆ ಇವು ಸಾಹಿತ್ಯಕ್ಕೆ ಸಂಬಂಧಪಟ್ಟ ಚಟುವಟಿಕೆಗಳಾಗಲಾರವು.

ಸಾಹಿತ್ಯ ನಿಜವಾಗಿಯ ಮನುಷ್ಯನ ಅಂತರಂಗಕ್ಕೆ, ಮನುಷ್ಯನ ಅಂತರ್ಲೋಕಕ್ಕೆ ಸಂಬಂಧಪಟ್ಟದ್ದಲ್ಲವೆ ? ಆದರ ಪರಿಣಾಮ ಆಗುವುದು ಭೌತಜೀವನದ ಮೇಲಲ್ಲ, ನಮ್ಮ ಅಂತರಂಗದ ಮೇಲೆ; ಮನಸ್ಸಿನ ಪದರುಗಳ ಮೇಲೆ: ನಮ್ಮ ಬುದ್ದಿ ಹೃದಯಗಳ ಮೇಲೆ ; ಸಂಕಲ್ಪ ವಿವೇಕಗಳ ಮೇಲೆ, ಅದು ಉದರನಿಮಿತ್ತವಾಗಿ ಮಾಡುವ ಕೆಲಸ ವಲ್ಲ, ಒಂದುವೇಳೆ ಅದು ಉದರನಿಮಿತ್ತವೇ ಆದರೂ ಉದರಕ್ಕೆ ಸಂಬಂಧಪಟ್ಟದ್ದಲ್ಲ. ಅದು ನಡೆಯುವ ಲೋಕ ನಮ್ಮ ಈ ದಿನನಿತ್ಯದ ಯಾಂತ್ರಿಕವಾದ ಅನ್ನಲೋಕವಲ್ಲ ;

ಈ ಲೋಕದಿಂದಲೇ, ಈ ಲೋಕವನ್ನು ಕುರಿತೇ ಇನ್ನೊಂದು ಲೋಕವನ್ನು, ಅಂತರ್ಲೋಕವನ್ನು ಸೃಷ್ಟಿಸುವಂಥದು, ಅದು ಈ ಕ್ಷಣದಲ್ಲಿ ಮಾಡಿದರೂ ಈ ಕ್ಷಣಕ್ಕೆ, ಈ ದಿನಕ್ಕೆ, ವರ್ತಮಾನಕ್ಕೆ ಮಾತ್ರ ಸಂಬಂಧಪಟ್ಟದಲ್ಲ; ಅದಕ್ಕಿಂತ ಹೆಚ್ಚಾಗಿ ಎಲ್ಲ ಕಾಲಕ್ಕೂ ಸಂಬಂಧ ಹುಟ್ಟಿಸಿಕೊಳ್ಳುವಂತಹುದು, ಮಾರ್ಕ್ಸ್ ಒಂದು ಕಡೆ ಹೇಳಿರುವ ಹಾಗೆ ಸಾಹಿತಿಯಾದವನು ಹೇಗಾದರೂ ಬದುಕಿದ್ದು ತನಗೆ ಸರಿಯೆಂದೂ ಸತ್ಯವೆಂದೂ ಕಂಡದ್ದನ್ನು ಕುರಿತು ಬರೆಯಬೇಕು, ಅದರಿಂದ ಧನಕನಕಗಳನ್ನು ಬಯಸಿ ಅದನ್ನು ವ್ಯಾಪಾರೀ ವೃತ್ತಿಯನ್ನಾಗಿ ಮಾಡಬಾರದು. ಉತ್ತಮ ಸಾಹಿತ್ಯಕ್ಕೆ ಅಂಥ ಉದ್ದೇಶವಿರುವುದು ಸಾಧ್ಯವಿಲ್ಲ, ನಿಜವಾದ ಸಾಹಿತ್ಯ ರಚನೆ ಮಾಡಿದ ಮೇಲೂ ಆಂಥ ಫಲಗಳನ್ನು ಅತಿಯಾಗಿ ಬಯಸಬಾರದು, ಸಾಹಿತಿಯೂ ಮನುಷ್ಯನೇ ಆಗಿರುವಾಗ ಅಂಥ ಅರ್ಥ ರೂಪದ ಫಲಗಳು ಬಂದರೆ ಬಿಡಬೇಕೆಂದೇನೂ ಅಲ್ಲ, ಆದರೆ ಸಾಹಿತ್ಯ ಅದಕ್ಕಾಗಿ ಅಲ್ಲ ಎಂಬುದನ್ನು ದೃಢವಾಗಿ ನಂಬಬೇಕು, ತತ್ಕಾಲದಲ್ಲಿ ಪ್ರಸಿದ್ದಿ ಪಡೆಯದ ಎಷ್ಟೋ ಸಾಹಿತಿಗಳು ದಾರಿದ್ರದಲ್ಲೇ ಸತ್ತು ಅನಂತರ ಪ್ರಸಿದ್ಧಿಗೆ ಬಂದದ್ದೂ ನವಗೆ ಗೊತ್ತಿದೆ. ತತ್‌ಕ್ಷಣ ಪ್ರಸಿದ್ದಿ ಪಡೆದ ಅನೇಕರು ಧನಕನಕಾದಿ ಸಕಲ ಭಾಗ್ಯಗಳನ್ನು ಪಡೆದೂ ಕೆಲವು ವರ್ಷಗಳಲ್ಲೇ ಹೇಳಹೆಸರಿಲ್ಲದ ಹಾಗೆ ಆದದ್ದೂ ನಮಗೆ ತಿಳಿದಿದೆ. ಎಲ್ಲೋ ಒಂದು ಸಲ ದೈವವಶಾತ್ ಉತ್ತಮನಾದೆಬ್ಬ ಸಾಹಿತಿ ತಾನು ಬದುಕಿದ್ದಾಗಲೇ ಎಲ್ಲ ಸುಖ ಸಂಪತ್ತುಗಳನ್ನು ಪಡೆಯುವುದೂ ಅಸಂಭವವಲ್ಲ. ಆದರೆ ಒಂದು ಕೃತಿಯ ಯೋಗ್ಯತೆ ಮತ್ತು ಅದಕ್ಕೆ ತತ್‌ಕ್ಷಣ ದೊರಕುವ ಖ್ಯಾತಿ ಮತ್ತು ಸಂಭಾವನೆ ಈ ಎರಡಕ್ಕೂ ತಾತ್ವಿಕವಾಗಿ ಯಾವ ಸಂಬಂಧವೂ ಇಲ್ಲ ಎಂದು ತಿಳಿಯುವುದು ಎಲ್ಲ ಸಾಹಿತಿಗಳಿಗೂ ಕ್ಷೇಮ, ಉತ್ತಮ ಸಾಹಿತಿಗೆ ತನ್ನ ಕೃತಿಗಳ ಬಗ್ಗೆ ಆತ್ಮವಿಶ್ವಾಸ ಇದ್ದೇ ಇರುತ್ತದೆ; ಆ ಯೋಗ್ಯತೆ ಇತರರ ಹೊಗಳಿಕೆಯಿಂದ ಬರತಕ್ಕದ್ದಲ್ಲ, ಆ ಕೃತಿಯಲ್ಲೇ ಇರತಕ್ಕದ್ದು ಎಂಬುದೂ ಚೆನ್ನಾಗಿ ಗೊತ್ತಿರುತ್ತದೆ. ಇವತ್ತಲ್ಲ ನಾಳೆ ಅದರ ಯೋಗ್ಯತೆಗೆ ತಕ್ಕ ಮನ್ನಣೆ ಸಿಕ್ಕಿಯೇ ಸಿಕ್ಕುತ್ತದೆ ಎಂಬ ನಂಬಿಕೆಯಿಂದಲೇ ಅವನು ಕೆಲಸ ಮಾಡುತ್ತ ಇರುತ್ತಾನೆ, ಸಾಹಿತ್ಯದಲ್ಲಿ ನಾನು ನನ್ನಲ್ಲಿರುವ ಅತ್ಯುತ್ತಮವಾದುದಕ್ಕೆ ಅಭಿವ್ಯಕ್ತಿ ಪಡೆಯುತ್ತೇನೆ, ಪಡೆದದ್ದನ್ನು ಜಗತ್ತಿಗೆ ಕೊಡುತ್ತೇನೆ , ಜಗತ್ತು ತತ್‌ಕ್ಷಣ ಒಪ್ಪಬಹುದು, ಒಪ್ಪದೆ ಇರಬಹುದು, ಆದರೆ ನಾನು ಮಾತ್ರ ಇನ ಇನ್ನೂ ಉತ್ತಮ ಕೃತಿಗಳನ್ನು ಸೃಷ್ಟಿಸುತ್ತ ಹೋಗಿ ಆ ಮೂಲಕ ಜನ್ಮಸಾಫಲ್ಯ ಕಾಣುತ್ತೇನೆ ಎಂಬ ದೃಢ ನಿರ್ಧಾರವನ್ನು ನಾವು ಕೈಕೊಳ್ಳಬೇಕು, ಅನಂತಕಾಲವೇ ತನ್ನ ಮುಂದೆ ಇದೆ ಎಂದು ನಂಬಿ ತನ್ನ ಕೃತಿಯಲ್ಲಿ ತನ್ನ ಸಂಪೂರ್ಣ ಸಾಫಲ್ಯ ಪಡೆಯಲು ಹೆಣಗುತ್ತಲೇ ಈ ಜಗತ್ತಿ ನಿಂದ ನಿರ್ಗಮಿಸಬೇಕು, ಸಾಹಿತ್ಯ ಅನಂತಕಾಲಕ್ಕೆ ಸಂಬಂಧಪಟ್ಟದ್ದು, ತತ್ಕಾಲಕ್ಕಲ್ಲ ಎಂದು ನಂಬಿದರೆ ನಮ್ಮ ಎಷ್ಟೋ ಮನಃಕಷಾಯಗಳು ಕಡಿಮೆಯಾಗುವುವು : ಸಾಹಿತ್ಯ ರಚನೆಗೆ ಬೇಕಾದ ಅದ್ಭುತ ತಾಳ್ಮೆ ನಮಗೆ ಸಿದ್ಧಿಸುವುದು.

ತನ್ನ ಕೃತಿಗಳಲ್ಲಿ ತನಗಿರುವ ಮೋಹವನ್ನು ಕ್ರಮೇಣ ತ್ಯಜಿಸುತ್ತ ಬರುವುದನ್ನು ಸಾಹಿತಿ ಯಾದವನು ಕಲಿಯುತ್ತ ಬರಬೇಕು, ಅಂಥ ಮೋಹ ಮಮಕಾರಗಳು ನಿರರ್ಥಕವೆಂಬುದನ್ನು ಆದಷ್ಟು ಬೇಗ ಗುರುತಿಸಿಕೊಳ್ಳಬೇಕು, ನಾನೊಂದು ಕವಿತೆ ಬರೆದರೆ ಅದು ಪ್ರಕಟವಾದ ಬಳಿಕ ಅದು ನನ್ನ ಭಾಷೆಗೆ ಸೇರಿದ್ದಲ್ಲದೆ ನನ್ನದಲ್ಲ, ಅದರ ಬಗ್ಗೆ ಯಾರೇ ಆಗಲಿ ಎಂಥ ಟೀಕೆ ಮಾಡಿದರೂ ಸಹಿಸುವುದನ್ನು ಕಷ್ಟಪಟ್ಟು ಕಲಿಯಬೇಕು. ಟೀಕೆ ವಿಚಾರದ ಮಟ್ಟದಲ್ಲಿ, ನಿಜವಾದ ಸಾಹಿತ್ಯ ಮೌಲ್ಯಗಳಿಗೆ ಬದ್ಧವಾಗಿ ವ್ಯಕ್ತಿದೂಷಣೆ ತರ್ಕಬದ್ಧವಲ್ಲದ ಹೇಳಿಕೆಗಳಿಲ್ಲದ ಶುದ್ಧ ವಿಮರ್ಶೆಯಾಗಿ ಬರಲಿ ಎಂದು ಮಾತ್ರ ನಾವು ಬಯಸಬಹುದು. ಒಂದು ವೇಳೆ ಆಂಥ ವಿಮರ್ಶೆ ಬಾರದಿದ್ದರೂ ತಲೆಕೆಡಿಸಿಕೊಳ್ಳಬಾರದು, ತಾನು ಬರೆಯುವುದು ತನ್ನ ಸುತ್ತಮುತ್ತಲಿನವರಿಗಾಗಿ ಮಾತ್ರವಲ್ಲ, ತನ್ನ ಮುಂದಿನ ಪೀಳಿಗೆಯವರಿಗಾಗಿಯರಾ ಕೂಡಾ ಎಂಬ ನಂಬಿಕೆ ಎಲ್ಲ ಸಾಹಿತಿಗಳಿಗೂ ಇರುತ್ತದೆ, ಆದಕಾರಣವೇ ಆತ ಎಂಥ ಟೀಕೆ, ವಿರೋಧ, ಅವಹೇಳನಗಳು ಬಂದರೂ ಸಹಿಸುವ ಶಕ್ತಿಯನ್ನು ಪಡೆಯುತ್ತಾನೆ. ಈ ನಿಲುವನ್ನು ಸಾಹಿತಿಗಳು ತಳೆಯುವುದು ಅವಶ್ಯ -ತಮಗಾಗಿ ಹೇಗೋ ಹಾಗೆ ಸಾಹಿತ್ಯದಲ್ಲಿ ಉತ್ತಮವಾದ ವಿಮರ್ಶೆ ಬೆಳೆದು ನಮ್ಮ ಸಂಸ್ಕೃತಿ ಪುಷ್ಟವಾಗುವುದಕ್ಕಾಗಿಯೂ ಕೂಡ.

ನಮ್ಮಲ್ಲಿ ಸಾಹಿತ್ಯಸೃಷ್ಟಿ ಮಾಡತಕ್ಕವರು ಸಾಹಿತ್ಯ ವಿಮರ್ಶಕರೂ ಆಗಬೇಕಾಗಿ ಬಂದದ್ದು ಅಷ್ಟು ಒಳ್ಳೆಯ ಸಂಗತಿಯಲ್ಲ. ಸಾಹಿತ್ಯಕೃತಿಯ ಇಂಗಿತವನ್ನು ತತ್‌ಕ್ಷಣ ಗ್ರಹಿಸಿ ಅಡರ ಬಂಧ ತಂತ್ರಗಳ ಮರ್ಮಗಳನ್ನು ಭೇದಿಸಿ ತಿಳಿದು ನಮ್ಮ ಸಂಸ್ಕೃತಿಯ ಇತಿಹಾಸದ ದೃಷ್ಟಿಯಲ್ಲಿ ಅದನ್ನು ವಿಮರ್ಶಿಸಬಲ್ಲ ವಿದ್ವಾಂಸರ ಸಂಖ್ಯೆ ಇನ್ನೂ ತಕ್ಕಷ್ಟು ಇಲ್ಲದೆ ಇರುವುದು ನಮ್ಮ ಸಾಹಿತ್ಯದ ಬಲು ದೊಡ್ಡ ಕೊರತೆ, ಆದಕಾರಣ ಸಾಹಿತ್ಯ ರಚನೆ ವಿಮರ್ಶೆ ಈ ಎರಡನ್ನೂ ಮಾಡಬೇಕಾಗಿ ಬಂದ ಸಾಹಿತಿಗಳ ಭಾರ ಬಹಳ ದೊಡ್ಡದು, ಇಂಥ ಕೆಲಸಕ್ಕೆ ಬೇಕಾಗುವ ನಿಗ್ರಹ ವಿವೇಕಗಳು ಸಾಮಾನ್ಯವಾಗಿ ತನ್ನ ಕೃತಿಯಲ್ಲೇ ತಲ್ಲೀನನಾಗಿರುವ, ಸಹಜವಾಗಿಯೇ ಭಾವೋದ್ವೇಗದಿಂದ ಕೂಡಿರುವ ಸಾಹಿತಿಗಳಲ್ಲಿ ಕಂಡುಬರುವುದಿಲ್ಲ. ಆದಕಾರಣ ಯಾವ ಸಾಹಿತಿಯೇ ಆಗಲಿ ತನಗೆ ಸಮಾನ ಸ್ಕಂಧರಾಗಿ, ತನಗೆ ಸಮವಯಸ್ಸಿನವರಾಗಿ ಬರೆಯುತ್ತಿರುವ ಇತರ ಸಾಹಿತಿಗಳ ಕೃತಿಗಳ ವಿಮರ್ಶೆಯನ್ನು ಬೇರೆಯವರಿಗೆ ಬಿಟ್ಟು ತಾನು ಬೇರೆ ಕೆಲಸಗಳನ್ನು ಕೈಕೊಳ್ಳುವುದೇ ಲೇಸು. ಒಬ್ಬ ಸಾಹಿತಿಗೆ ತನ್ನ ಕೃತಿಯೇ ಅತ್ಯುತ್ತಮ ಎನ್ನಿಸಿದರೂ, ಆ ಬಗ್ಗೆ ಆತ ಏನ ಹೇಳದೆ ಇರುವುದು ಅಗತ್ಯ. ಏಕೆಂದರೆ ನನ್ನ ಪಾಕದ ರುಚಿಯನ್ನು ನೋಡಿ ಅದರ ಬೆಲೆಕಟ್ಟುವುದು ನನ್ನ ಕೆಲಸವಲ್ಲ, ನನಗೆ ಸಮಕಾಲೀನನಾಗಿ ನನ್ನ ಸ್ನೇಹಿತನೊಬ್ಬ ಬರೆದ ಕೃತಿ ನಿಜವಾಗಿ ಉತ್ತಮ ಎನಿಸಿದರೆ ಅದರ ಬಗ್ಗೆ ಮುಕ್ತವಾಗಿ, ಆದರೆ ವಿಚಾರ ಪೂರ್ವಕವಾಗಿ, ಮೆಚ್ಚುಗೆಯನ್ನು ವ್ಯಕ್ತಪಡಿಸಿದರೆ ತಪ್ಪೇನೂ ಇಲ್ಲ, ಒಳ್ಳೆಯದನ್ನು ಗುರುತಿಸುವುದು ಸುಲಭವಲ್ಲ. ಗುರುತಿಸಿದಾಗ ಅದನ್ನು ಜಾಹೀರು ಮಾಡುವುದೂ ಕರ್ತವ್ಯವಾಗುತ್ತದೆ, ಬದಲಾವಣೆಗಳ ಮೂಲಕ ಸಂಸ್ಕೃತಿ ಸಂಪನ್ನವಾಗುವ ದಾರಿ ಇದೇ ಎಂದು ತೋರುತ್ತದೆ, ಹೀಗಿದ್ದರೂ ಎಷ್ಟು ವಸ್ತುನಿಷ್ಟವಾಗಿ, ನಿಷ್ಪಕ್ಷಪಾತವಾಗಿ ವಿಮರ್ಶೆ ಬರೆಯುತ್ತೇನೆಂದು ಹೊರಟರೂ ತನ್ನ ಮನಸ್ಸು ಸಂಪೂರ್ಣವಾಗಿ ಅಸೂಯೆಯೇ ಮೊದಲಾದ ಭಾವಾಂತರಗಳಿಂದ ದೂಷಿತವಾಗಿಲ್ಲ ಎಂದು ಯಾವ ಸಾಹಿತಿಗೂ ಹೇಳುವುದು ಕಷ್ಟ, ಆದಕಾರಣ ವಿಮರ್ಶೆ ಮಾಡ ಬಯಸುವ ಸಾಹಿತಿ ತನಗಿಂತ ಹಿರಿಯರಾದವರ ಅಥವಾ ತನಗಿಂತ ಭಿನ್ನ ಪ್ರಕಾರಗಳಲ್ಲಿ ಕೃತಿರಚನೆ ಗೈಯ್ಯುತ್ತಿರುವವರ ಕೃತಿಗಳನ್ನು ಮಾತ್ರ ವಿಮರ್ಶಿಸುವುದು ಮೇಲು.

ಕೆಲವೊಂದು ಸಲ ತೀರ ಹೊಸ ರೀತಿಯಲ್ಲಿ ಕೃತಿ ರಚನೆ ಮಾಡಲು ಹೊರಟ ಸಾಹಿತಿಗೆ ತನ್ನ ಹಿಂದಿನವರ ಕೃತಿಗಳಿಂದ ರೂಢವಾಗಿರುವ ಅಭಿರುಚಿಯನ್ನು ತಿದ್ದುವ ಸಲುವಾಗಿ ಅವರ ಕೃತಿಗಳನ್ನು ವಿಮರ್ಶಿಸುವುದು ಅಗತ್ಯ ಎನ್ನಿಸಬಹುದು, ಜೀವನ ಮತ್ತು ಸಾಹಿತ್ಯಗಳ ಬಗ್ಗೆ ಹೊಸ ದೃಷ್ಟಿ ಇರುವವರು ಆ ದೃಷ್ಟಿಯನ್ನು ವಿವರಿಸುವುದೂ ಅದರ ಸ್ಥಾಪನೆಗೆ ಯತ್ನಿಸುವುದೂ ಸಹಜವೇ ಆಗಿದೆ. ಆದರೆ ವಿವರ್ಶ ತಾತ್ವಿಕವಾಗಿ ಬುದ್ದಿಯ ಮಟ್ಟದಲ್ಲೇ ನಡೆಯಬೇಕಲ್ಲದೆ ವೈಯಕ್ತಿಕವಾಗಲೀ ನಿಂದೆ ಅವಹೇಳನಗಳಿಂದ ಕೂಡಿದ ಭಾವೋದ್ವೇಗದ ಆಭಿವ್ಯಕ್ತಿಯಾಗಲೀ ಆಗಬಾರದು, ನಮಗೆ ಮುಖ್ಯವಾಗಬೇಕಾದ್ದು ಕೃತಿಯೇ ಹೊರತು ಕೃತಿಕಾರನಲ್ಲ. ಈಗ್ಗೆ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನಾನು ಹೊಸ ರೀತಿಯಲ್ಲಿ ಬರೆಯಲು ಹೊರಟ ತರುಣದಲ್ಲಿ, ಅನೇಕ ತಡೆಗಳನ್ನು ದಾಟಿ ಹೋಗಬೇಕಾದ ಸಂದರ್ಭದಲ್ಲಿ ಒಂದೆರಡು ಕಡೆ ನಾನು ಅಭಿಪ್ರಾಯವನ್ನು ವ್ಯಕ್ತಪಡಿಸಿದ ರೀತಿ, ಬರೆದ ಒಂದು ಕವನ ಇವುಗಳ ಬಗ್ಗೆ ನನಗೆ ಈಗ ನಾಚಿಕೆಯಾಗುತ್ತಿದೆ. ನನ್ನ ಕಾವ್ಯವನ್ನು ಕ್ರಮೇಣ ಕೆಲವರಾದರೂ ಮೆಚ್ಚುತ್ತ ಬಂದಿದ್ದರೆ ಅದಕ್ಕೆ ಕಾರಣ ಆ ಕಾಲದಲ್ಲಿ ನಾನು ಮಾಡಿದ ವಿಮರ್ಶೆಯಾಗಲೀ, ಆಡಿದ ಮಾತು ಗಳಾಗಲೀ ಅಲ್ಲ ; ನಾನು ಬರೆಯುತ್ತ ಬಂದಿರುವ ಕವನಗಳೇ ಎಂದು ನನಗೆ ತೋರುತದೆ, ಹಿಂದಿನ ಸಾಹಿತ್ಯದ ನಿಜವಾದ ವಿಮರ್ಶೆಯನ್ನು ಒಬ್ಬ ಸಾಹಿತಿ ಮಾಡುವುದು ತನ್ನ ಹೊಸ ಕೃತಿಗಳ ಮೂಲಕವಾಗಿ ಅಲ್ಲದೆ, ತನ್ನ ವಿಮರ್ಶೆಕ್ರಿಯೆಗಳಿಂದಲ್ಲ, ತನ್ನ ಶಕ್ತಿಯನ್ನು ಇನ್ನೂ ಚೆನ್ನಾಗಿ, ಇನಂ ಪರಿಪಕ್ವವಾಗಿ ಬರೆಯುವುದರಲ್ಲಿ ಉಪಯೋಗಿಸುತ್ತ ಬರುವುದೇ, ಸಾಹಿತಿಗೆ ನಿಜವಾಗಿಯೂ ಶ್ರೇಯಸ್ಕರ.

ಸಾಹಿತ್ಯ ವಿಮರ್ಶೆಯನ್ನು ಯಾರು ಬೇಕಾದರೂ ಮಾಡಬಹುದು, ಅಭಿಪ್ರಾಯವನ್ನು ವ್ಯಕ್ತಪಡಿಸುವ ಸ್ವಾತಂತ್ರ ಎಲ್ಲರಿಗೂ ಇದೆ. ಆದರೆ ಈ ಸ್ವಾತಂತ್ರ್ಯ ಸ್ವೈರವರ್ತನೆಗೆ ರಹದಾರಿ ಅಲ್ಲ ಎಂದು ನಮಗೆ ಎಲ್ಲರಿಗೂ ತಿಳಿದಿದೆ, ಒಂದು ಕೃತಿಯನ್ನು ಯಾವ ಸೂತ್ರಗಳಿಗನುಸಾರವಾಗಿಯೂ ವಿವರ್ಶಿಸಬಹುದು. ಇಂದಿನವರಾದ ನಮ್ಮ ಕೃತಿಗಳನ್ನು ಪಂಪ ರನ್ನ ಕುಮಾರವ್ಯಾಸರನ್ನು ವಿಮರ್ಶಿಸುವ ಸೂತ್ರಗಳಿಗನುಸಾರ ವಾಗಿಯೋ ಅಥವಾ ಕಾಳಿದಾಸ ಭವಭೂತಿ ಮುಂತಾದವರನ್ನು ವಿಮರ್ಶಿಸಲು ಬಳಸುವ ಸೂತ್ರಗಳಿಗನುಸಾರವಾಗಿಯೋ ಸಮೀಕ್ಷಿಸಬಹದು, ಅಥವಾ ಇನ್ನು ಮುಂದೆ ಬರಬಹುದಾದ ಮಹಾಕೃತಿಗಳಿಗೆ ಯಾವ ಸೂತ್ರಗಳು ಅನ್ವಯವಾಗಬೇಕೆನ್ನಿಸುತ್ತದೆಯೋ ಹಾಗೆ ಕೂಡಾ ಮಾಡಬಹುದು, ಆದರೆ ಸಾಹಿತ್ಯ ಹೇಗಿರಬೇಕು ಎಂಬ ಬಗ್ಗೆ ಒಂದು ನಿಶ್ಚಿತ ಧೋರಣೆ, ಆ ಧೋರಣೆಯಿಂದ ಹುಟ್ಟುವ ಸೂತ್ರಗಳು-ಇವುಗಳಿಗನುಸಾರವಾಗಿ ಮಾತ್ರ ವಿಚಾರದ ಮಟ್ಟದಲ್ಲಿ ಈ ಕೆಲಸ ನಡೆಯಬೇಕು, ವಿಮರ್ಶ ನಿಷ್ಪಕ್ಷಪಾತವಾದ ಬುದ್ಧಿಯ ಕೆಲಸ ; ವಿವೇಚನೆಯ ಕೆಲಸ ; ಹೃದಯ ಅನುಭವಿಸಿದ್ದನ್ನು ಬುದ್ಧಿ ಗಮ್ಯವಾಗಿ ಮಾಡುವ ಕೆಲಸ.

ವಿಮರ್ಶೆ ಎಂದರೆ ನಮ್ಮ ಮನಸ್ಸಿನಲ್ಲಿರುವ ಅತೃಪ್ತಿ, ಅಸಹನೆ ರೊಚ್ಚು ಅಥವಾ ಸ್ನೇಹ, ಪಕ್ಷಪಾತ, ಬಂಧುಭಾವನೆ ಮುಂತಾದ ಭಾವಗಳನ್ನು ವ್ಯಕ್ತಪಡಿಸುವ ಲೇಖನ ವಲ್ಲ ; ಅಂಥ ಎಲ್ಲ ಭಾವನೆಗಳನ್ನು ಮೀರಿ ಕೆಲವು ನಿರ್ದಿಷ್ಟ ಸೂತ್ರಗಳಿಗನುಸಾರವಾಗಿ ಕೃತಿನಿಷ್ಠವಾಗಿ ನಡೆಯುವ ಕೆಲಸ, ಅದು ಹಾಗೆ ನಡೆದಾಗಲೇ ಕೃತಿಕಾರನಿಗೂ, ಸಂಸ್ಕೃತಿಯ ಸಂವರ್ಧನೆಗೂ ಪ್ರಯೋಜನಕಾರಿಯಾಗಬಲ್ಲುದು, ಈ ರೀತಿಯ ವಿಮರ್ಶೆ ಎಷ್ಟು ಬಂದರೂ ಗ್ರಾಹ್ಯವೇ, ಅನುಕೂಲವೇ, ಇಂಥ ವಿಮರ್ಶೆ ರೂಢವಾದ ಕೃತಿಗಳನ್ನು ಧ್ವಂಸ ಮಾಡುವಷ್ಟು ಪ್ರಬಲವಾಗಿರಬಹುದು, ರೂಢ ಅಭಿರುಚಿಯನ್ನು ಬೇರು ಸಹಿತ ಕಿತ್ತು ಹಾಕುವಷ್ಟು ಪ್ರಖರವಾಗಿರಬಹುದು, ಆದರೆ ಈಗ ನಮ್ಮಲ್ಲಿ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿರುವ ಒಂದು ಹೊಸ ರೀತಿಯ ವಿಮರ್ಶೆಯ ಅಭಾಸ ಈ ಬಗೆಯದಲ್ಲ, ಇದು ಕೃತಿವಿಮರ್ಶೆಯ ಹೆಸರಿನಲ್ಲಿ ಕೃತಿಕಾರನನ್ನು ಹಾಸ್ಯಾಸ್ಪದನನ್ನಾಗಿ ಮಾಡುವ, ದೂಷಿಸುವ, ನಿಂದಿಸುವ, ವ್ಯಂಗ್ಯ, ಕಟಕಿ ಮುಂತಾದ ವಿಡಂಬನೆಯ ಅಸ್ತ್ರಗಳನ್ನು ಧಾರಾಳವಾಗಿ ಬೆಳೆಸುವ ಒಂದು ಬಗೆಯ ನಿಯಮರಹಿತವಾದ ಕೆಲಸ, ಅತ್ಯಂತ ಆತ್ಮೀಯವಾಗಿ ಅಥವಾ ಮಾತಿನ ಪ್ರವಾಹದಲ್ಲಿ ತೇಲಿಹೋಗುತ್ತಿದ್ದಾಗ ಒಬ್ಬ ಸಾಹಿತಿ ಆಡಿರಬಹುದಾದ ಮಾತುಗಳನ್ನೂ, ಮಾತಿನ ಸಂದರ್ಭದಲ್ಲಿ ಒಂದು ಸರಿಯಾಗಿ ಯೋಚಿಸಿ ತೂಗಿ ನೋಡದೆ ವ್ಯಕ್ತಪಡಿಸಿದ ರಂಜಕವಾದ ಅಭಿಪ್ರಾಯಗಳನ್ನೂ, ವೈಯಕ್ತಿಕವಾಗಿ ಒಬ್ಬ ವ್ಯಕ್ತಿಗೆ ಮಾತ್ರ ಅನ್ವಯಿಸುವ ಹಾಗೆ ಬರೆದ ಆತ್ಮೀಯ ಪತ್ರ ಗಳಲ್ಲಿ ವ್ಯಕ್ತಗೊಂಡ ಮಿಶ್ರವಾಕ್ಯಗಳನ್ನೂ ಉಪಯೋಗಿಸಿಕೊಂಡು ಕೃತಿವಿಮರ್ಶೆಯ ನೆಪದಲ್ಲಿ ಮಾಡುವ ವೈಯಕ್ತಿಕ ಧಾಳಿಗಳನ್ನು ವಿಮರ್ಶೆ ಎನ್ನಲು ಸಾಧ್ಯವಿಲ್ಲ. ಸಾಹಿತ್ಯದ ವಿಷಯದಲ್ಲಿ ಅದು ಅಪ್ರಾಸಂಗಿಕ ; ಅದನ್ನು ಗಣನೆಗೆ ತಂದುಕೊಳ್ಳಬೇಕಾದ ಅಗತ್ಯವಿಲ್ಲ, ಆದರೆ ಸಾಹಿತಿಗಳ ನಡುವೆ ವೈಯಕ್ತಿಕವಾಗಿ ಸ್ನೇಹ ಸಂಬಂಧಗಳಲ್ಲವಾದರೂ ಮನುಷ್ಯ ಸಂಬಂಧವಾದರೂ ಇರುವುದು ಅಗತ್ಯ, ಪ್ರತಿಯೊಬ್ಬ ಸಾಹಿತಿಯೂ ತನ್ನ ತನ್ನ ಕೋಟೆಯ ಬಾಗಿಲು ಹಾಕಿ ಕುಳಿತು ಸದಾ ಬಂದೂದು ಧಾರಿಯಾಗಿಯೇ ಇರಬೇಕಾದ ಅಗತ್ಯ ಇರಬಾರದು ಎಂಬ ದೃಷ್ಟಿಯಿಂದ ಈ ಹೊಸ ಬೆಳವಣಿಗೆಗಳ ಬಗ್ಗೆ ನಮ್ಮ ಗಮನ ಹರಿದು ಆ ಬಗ್ಗೆ ನಾವು ನಮ್ಮ ಧೋರಣೆಯನ್ನು ನಿರ್ಧರಿಸಿಕೊಳ್ಳಬೇಕು.

ಮನುಷ್ಯ ಮನುಷ್ಯರ ನಡುವೆ ಎದ್ದಿರುವ ಅಥವಾ ಕಟ್ಟಲಾಗಿರುವ ಎಲ್ಲ ಗೋಡೆಗಳೂ, ದಾಟಲಾರದಂತೆ ಕಾಣುವ ಎಲ್ಲ ಕಂದಕಗಳೂ ಕೃತಕ, ಮನುಷ್ಯತ್ವವೊಂದೇ ನಿಜವಾದದ್ದು. ಈ ಜಗತ್ತಿನ ಅತ್ಯುತ್ತಮವಾದ ತತ್ವಜ್ಞಾನದ ತಿರುಳೇ ಇದು. ಇಂಥ ಉದಾತ್ತವಾದ ಭಾವನೆಗಳನ್ನು ಸಾಹಿತಿಗಳಲ್ಲದೆ ಇನ್ನು ಯಾರು ಕೃತಿಯಲ್ಲಿ ವ್ಯಕ್ತಗೊಳಿಸಲು ಸಾಧ್ಯ ? ಒಬ್ಬ ಸಾಹಿತಿ ಇನ್ನೊಬ್ಬ ಸಾಹಿತಿಯನ್ನು ತನ್ನಂತೆಯೇ ಸೃಷ್ಟಿಶಕ್ತಿಯುಳ್ಳ ಇನ್ನೊಬ್ಬ ಮನುಷ್ಯ ಎಂದು ತಿಳಿದು ಹಾಗೆಯೇ ವರ್ತಿಸಬೇಕಲ್ಲದೆ ಜಾತಿ ಮತ ಕುಲ ಇತ್ಯಾದಿ ಯಾವ ಗೋಡೆಗಳನ್ನು ಎಂದೂ ಕಟ್ಟಿಕೊಳ್ಳತಕ್ಕದ್ದಲ್ಲ. ಈ ವ್ರತವನ್ನು ನಾವು ಸಾಹಿತಿಗಳು ನಿಶ್ಚಲ ನಿಷ್ಠೆಯಿಂದ ಪಾಲಿಸಿಕೊಂಡು ಬರಬೇಕು, ಪ್ರಜಾತಂತ್ರ, ನಾಗರೀಕರಣ, ಹೊಸ ಶಿಕ್ಷಣ ಎಲ್ಲ ವೃತ್ತಿಗಳೂ ಎಲ್ಲರಿಗೂ ತೆರವಾಗಿರುವ ಹೊಸ ಪರಿಸ್ಥಿತಿ-ಇವುಗಳಿಂದಾಗಿ ನಮ್ಮ ಎಲ್ಲ ಪ್ರಗತಿಗೂ ನಮ್ಮ ಸಂಸ್ಕೃತಿಯ ನಿಜವಾದ ಮರುಹುಟ್ಟಿಗೂ ದೊಡ್ಡ ಪ್ರತಿಬಂಧಕವಾಗಿದ್ದ ಜಾತಿ ಪದ್ಧತಿ ತಾತ್ವಿಕವಾಗಿ ಆಗಲೇ ನಾಮಶೇಷವಾಗಿದ್ದರೂ ಹೊಸ ರಾಜಕೀಯದ ಪ್ರಭಾವದಿಂದಾಗಿ ಇನ್ನಷ್ಟು ಪ್ರಬಲವಾಗುತ್ತಿರುವಂತೆ ಕಾಣುತ್ತಿದೆ. ಪ್ರತಿಭೆಯಾಗಲೀ ಸದ್ಗುಣಗಳಾಗಲೀ ಯಾವ ಜಾತಿಗೂ ಮೀಸಲಿಲ್ಲ : ಮುಖ್ಯವಾದದ್ದು ನಿಜವಾದ ಪ್ರತಿಭೆ, ಯೋಗ್ಯತೆ, ಅಂತಃಸತ್ವ ಎಂಬ ಸತ್ಯವನ್ನು ಸಾಹಿತಿ ಗುರುತಿಸಿಕೊಳ್ಳುವುದು, ಅರಿತುಕೊಳ್ಳುವುದು ಮಾತ್ರವಲ್ಲ, ಆ ಅರಿವನ್ನು ತನ್ನ ಕೃತಿಗಳಲ್ಲೂ ತನ್ನ ಚರಿತ್ರದಲ್ಲೂ ಮೂರ್ತಗೊಳಿಸುವುದು ಅವನ ಸಾಮಾಜಿಕ ಜವಾಬುದಾರಿ. ವ್ಯಕ್ತಿ ಸತ್ಯ, ಜಾತಿ ಮಿಥ್ಯೆ ಎಂಬ ಸತ್ಯವನ್ನು ನಿಷ್ಟುರ ವ್ರತವಾಗಿ ಪರಿಪಾಲಿಸುವುದು ನಮ್ಮ ಕರ್ತವ್ಯ ಎಂದು ತಿಳಿಯಬೇಕು. ಯಾರೇ ಆಗಲಿ ಜಾತಿ ಭಾವನೆಯಿಂದ ಪ್ರಚೋದಿತರಾಗಿದ್ದಾರೆ ಎಂದು ನಮಗೆ ಅನ್ನಿಸಿದರೂ, ಆ ಅನ್ನಿಸಿಕೆಯನ್ನು ಬದಿಗೊತ್ತಿ ಅದು ಒಬ್ಬ ವ್ಯಕ್ತಿಯ ವಿಶಿಷ್ಟ ಮನೋರೋಗ ಎಂತಲೇ ಪರಿಗಣಿಸಿ ಆತನ ದುಷ್ಕೃತ್ಯಗಳನ್ನು ಟೀಕಿಸುವಾಗ ಅದು ಒಬ್ಬ ಮನುಷ್ಯನ ಕೃತಿ ಎಂದಷ್ಟು ಮಾತ್ರ ಭಾವಿಸಿ ಆ ಮನುಷ್ಯನನ್ನು ಧಿಕ್ಕರಿಸತಕ್ಕದ್ದಲ್ಲದೆ ಅವನ ಜಾತಿಯನ್ನೂ ವಾದಕ್ಕೆ ಎಳೆದು ತರಕೂಡದು, ಜಾತಿ ಭಾವನೆಯಿಂದ ಶತಶತಮಾನಗಳ ಕಾಲ ಎಷ್ಟು ಅನರ್ಥಗಳು ಆಗಬಹುದಾಗಿತ್ತೋ ಅಷ್ಟೆಲ್ಲ ಆಗಿ ಹೋಗಿದೆ. ಇನ್ನಷ್ಟು ಆಗಬಾರದು, ಯಾವ ಸಂದರ್ಭದಲ್ಲೂ, ಪ್ರಾಣೋತ್ಕ್ರಮಣ ಸ್ಥಿತಿಯಲ್ಲೂ, ಜಾತಿಭಾವನೆಯನ್ನು ಉಪಯೋಗಿಸಿಕೊಳ್ಳುವುದಿಲ್ಲ ಎಂಬ ಶಪಥವನ್ನು ಸಾಹಿತಿಗಳು ಮಾಡಬೇಕು, ಕೇವಲ ಮಾನವ ಭಾವನೆಯಿಂದ ನಮ್ಮ ದೃಷ್ಟಿ ಪರಿಪೂತವಾದರೆ ಈ ಜಗತ್ತಿನಲ್ಲಿ ಕೇವಲ ಮನುಷ್ಯರಲ್ಲದೆ ಜಾತಿ ನಮಗೆ ಕಾಣುವುದಿಲ್ಲ, ವ್ಯಕ್ತಿಯ ಮತ್ತು ದೇಶದ ನಿಜವಾದ ಶ್ರೇಯಸ್ಸಿನ ಹಾದಿ ಇದೇ.

ಈ ಮೇಲಣ ಮಾತುಗಳನ್ನು ಪ್ರಾಮಾಣಿಕವಾಗಿ – ಎಂದರೆ ಮನಸ್ಸಿಗೆ ಅನಿಸಿದ್ದನ್ನು ಕುರಿತು ತಕ್ಕಷ್ಟು ಕಾಲ ಯೋಚಿಸಿ ತೂಗಿ ನೋಡಿ- ವ್ಯಕ್ತಪಡಿಸಿದ್ದೇನೆ, ಸಾಹಿತಿ ಮಿತ್ರರೆಲ್ಲರೂ ಈ ಬಗ್ಗೆ ಯೋಚಿಸಿಬೇಕು ಎಂದು ನಮ್ರವಾಗಿ ಕೇಳಿಕಳುತ್ತೇನೆ.

ಅರಿಕೆ

ಸಾಕ್ಷಿ-೧೬ರಲ್ಲಿ ಪ್ರಕಟವಾದ ವಿನಿಯೋಗ’ ಎಂಬ ಕಥೆಯ ಭಾಗಗಳು ಶ್ರೀ ಹಿ.ವಿ. ಶಾಸ್ತ್ರಿಯವರ ‘ಪ್ರಥಮ ಸಾಮ್ರಾಟ್’ ಕಾದಂಬರಿಯಿಂದ ಎತ್ತಿ ಕೊಂಡದ್ದು ಎಂಬ ವಿಷಯ ಅನಂತರ ತಿಳಿಯಿತು, ಸಾಹಿತಿಯಾಗಬೇಕೆಂಬ ಆಸೆಯಿಂದ ಇಂಥ ಕೃತಿಚೌರ‍್ಯಕ್ಕೆ ಕೈಹಾಕಬಾರದು ಎಂದು ಸೂಚಿಸುತ್ತ, ಈ ಅಚಾತುರ‍್ಯಕ್ಕಾಗಿ ಮೂಲ ಲೇಖಕರ ಮತ್ತು ಓದುಗರ ಕ್ಷಮೆ ಕೇಳುತ್ತೇವೆ.

Close
By kanaja|2021-01-06T19:34:03+05:30April 27, 2018|ಕನ್ನಡ|0 Comments

ಈ ವಿಷಯವನ್ನು ಆಸಕ್ತರೊಂದಿಗೆ ಹಂಚಿಕೊಳ್ಳಿ ​!! ನಿಮ್ಮ ಉಪಕರಣವನ್ನು ಆಯ್ಕೆ ಮಾಡಿ

FacebookTwitterLinkedInRedditWhatsAppTumblrPinterestVkXingEmail

About the Author: kanaja

Related Posts

  • ಸಂಪುಟ-೩೪

    ಸಂಪುಟ-೩೪

  • ಸಂಪುಟ-೩೩

    ಸಂಪುಟ-೩೩

  • ಸಂಪುಟ-೩೨

    ಸಂಪುಟ-೩೨

  • ಸಂಪುಟ-೩೧

    ಸಂಪುಟ-೩೧

Leave A Comment Cancel reply

ವಿಭಾಗಗಳು

ಹೊಸ ಅಂಕಣಗಳು

  • ನಮ್ಮ ಜೀವನದಲ್ಲಿ ವೈರಾಣುಗಳ ಪಾತ್ರ
  • ಜೀವ-ನಿರ್ಜೀವ ಲೋಕಗಳ ನಡುವಿನ ಕೊಂಡಿ – ವೈರಾಣುಗಳು
  • ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆ
  • ಸೂಕ್ಷ್ಮಾಣುಜೀವಿಗಳ ಲೋಕದ ತೀವ್ರವಾದಿ – ಆರ್ಕಿಯ
  • ಮಕ್ಕಳ ಮೇಲೆ ಸೈಬರ್ ಅಪರಾಧಿಗಳ ದೌರ್ಜನ್ಯ

ಕನ್ನಡ ಭಾಷೆ,ಸಾಹಿತ್ಯ

  • ಸಂಪುಟ-೩೪
  • ಸಂಪುಟ-೩೩
  • ಸಂಪುಟ-೩೨
  • ಸಂಪುಟ-೩೧
  • ಸಂಪುಟ-೩೦

ಕಲೆ,ಸಂಗೀತ

  • ರಂಗ ವಿಮರ್ಶೆಯ ಬೆನ್ನು ಹತ್ತಿ..
  • ರಂಗಭೂಮಿಯೊಂದೇ ಸಮತಾವಾದದ ಪ್ರತೀಕ
  • ರಂಗಭೂಮಿಯ ನಡಿಗೆ
  • ರಂಗ ಪರದೆಗಳು : ಶಬ್ದಪಾರಮಾರ್ಗಮಶಕ್ಯಂ
  • ರಂಗ ಪರದೆಗಳು : ರಂಗ ಪರದೆಗಳ ಹಿನ್ನೆಲೆ

ವಿಜ್ಞಾನ , ತಂತ್ರಜ್ಞಾನ

  • ನಮ್ಮ ಜೀವನದಲ್ಲಿ ವೈರಾಣುಗಳ ಪಾತ್ರ
  • ಜೀವ-ನಿರ್ಜೀವ ಲೋಕಗಳ ನಡುವಿನ ಕೊಂಡಿ – ವೈರಾಣುಗಳು
  • ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆ
  • ಸೂಕ್ಷ್ಮಾಣುಜೀವಿಗಳ ಲೋಕದ ತೀವ್ರವಾದಿ – ಆರ್ಕಿಯ
  • ಮಕ್ಕಳ ಮೇಲೆ ಸೈಬರ್ ಅಪರಾಧಿಗಳ ದೌರ್ಜನ್ಯ

ಕೃಷಿ ,ರೈತರ ಅನುಭವ

  • ಅಂತಾರಾಷ್ಟ್ರೀಯ ಬೇಳೆಕಾಳು ವರ್ಷ: 2016
  • ಪದವಿನ್ಯಾಸ: ೧೨. ಸನಿಕೆ
  • ಪದವಿನ್ಯಾಸ: ೧೩. ಈಚು
  • ಪದವಿನ್ಯಾಸ: ೧೪. ಕಣಜ
  • ಪದವಿನ್ಯಾಸ: ೯. ಬೆಳೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ

http://www.kannadasiri.in

ಇತ್ತೀಚಿನ ಟ್ವೀಟ್‌ಗಳು

Tweets by KannadaKanaja

ಫೇಸ್ಬುಕ್ ಅಲ್ಲಿ ನಮ್ಮನ್ನು ಸಂಪರ್ಕಿಸಿ

ಇತ್ತೀಚಿನ ಕೃತಿಗಳು

ನಿಮ್ಮ ಇಮೇಲ್ ವಿಳಾಸವನ್ನು ನಮೂದಿಸಿ:

ಕೃತಿಸ್ವಾಮ್ಯ 2012 - 2017 ಕಣಜ | ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ |
ಕಣಜ ಯೋಜನೆಯ ಅಧಿಕೃತ ವಿಳಾಸ:
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇ-ಕನ್ನಡ ವಿಭಾಗ, ಮೊದಲನೆಯ ಮಹಡಿ, ಕನ್ನಡ ಭವನ ಜಯಚಾಮರಾಜೇಂದ್ರ ಒಡೆಯರ್ ರಸ್ತೆ,
ಬೆಂಗಳೂರು- 560 002 ದೂರವಾಣಿ: 080-22227478 /22212487, ಮಿಂಚಂಚೆ (ಇ-ಮೇಲ್) - developkanaja@gmail.com

ಸರ್ಕಾರದ ಸಂಪರ್ಕ ಕೈಪಿಡಿ | ಮಹತ್ವದ ಜಾಲತಾಣಗಳು | ಇ ಆಡಳಿತ ಜಾಲತಾಣ  | ಇ-ಸೇವೆಗಳು | ಸಾಮಾನ್ಯ ಅಂಕಿ ಅಂಶ | ಸರ್ಕಾರದ ಆ್ಯಪ್ ಗಳು | ಕೇಂದ್ರ ಸರ್ಕಾರದ ಜಾಲತಾಣಗಳು | ತಾಂತ್ರಿಕ‌ ಜಾಲತಾಣಗಳು | ಕನ್ನಡ ಸಂಬಂಧಿ ಜಾಲತಾಣಗಳು | ಆಯೋಗಗಳು | ನ್ಯಾಯಾಲಯಗಳು | ಡೌನ್‌ಲೋಡ್‌ಗಳು | ಪ್ರವಾಸಿ ಜಾಲತಾಣಗಳು | ಸಾರ್ವತ್ರಿಕ ರಜೆಗಳು

FacebookTwitterInstagramPinterest
Toggle Sliding Bar Area

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Email: developkanaja@gmail.com

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

E-ದಿನ

  • ಗಾಂಧೀ ೧೫೦
  • ನಮ್ಮ ಜೀವನದಲ್ಲಿ ವೈರಾಣುಗಳ ಪಾತ್ರ
  • ಜೀವ-ನಿರ್ಜೀವ ಲೋಕಗಳ ನಡುವಿನ ಕೊಂಡಿ – ವೈರಾಣುಗಳು
  • ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆ
  • ಸೂಕ್ಷ್ಮಾಣುಜೀವಿಗಳ ಲೋಕದ ತೀವ್ರವಾದಿ – ಆರ್ಕಿಯ

ಇತ್ತೀಚಿನ ಕೃತಿಗಳು

ಮಹತ್ವದ ಜಾಲತಾಣಗಳು


  • ವೆಬ್-ಡೈರೆಕ್ಟರಿ


  • ರಾಜ್ಯಪಾಲರ ಕಚೇರಿ


  • ಮುಖ್ಯಮಂತ್ರಿ ಕಚೇರಿ


  • ವಿಧಾನಸಭೆ


  • ವಿಧಾನ ಪರಿಷತ್ತು


  • ಮುಖ್ಯ ಕಾರ್ಯದರ್ಶಿ

ಇ ಆಡಳಿತ ಜಾಲತಾಣ


  • ಸಿ.ಇ.ಜಿ


  • ವೆಬ್ ಪೋರ್ಟಲ್


  • ಆಧಾರ್


  • ಇ-ಆಫೀಸ್


  • ಇ-ಪ್ರೊಕ್ಯೂರ್ಮೆಂಟ್


  • ಎಚ್‌ಆರ್‌ಎಂಎಸ್


  • ಕೆ.ಆರ್.ಡಿ.ಎಚ್


  • ಕೆ.ಎಸ್.ವಾನ್


  • ಡಿ.ಪಿ.ಎ.ಆರ್


  • ಕೆ.ಎಸ್.ಡಿ.ಸಿ

ಇ-ಸೇವೆಗಳು


  • ಸಕಾಲ


  • ಸೇವಾ ಸಿಂಧು


  • ಇ-ಗೆಜೆಟ್


  • ಆನ್‌ಲೈನ್ ಆರ್‌ಟಿಐ


  • ಇ-ಸ್ಪಂದನ


  • ಮಾಹಿತಿ ಕಣಜ

ಸಾಮಾನ್ಯ ಅಂಕಿ ಅಂಶ


  • ಇ-ಪ್ರಗತಿ


  • ಇ-ತಾಲ್


  • ಡೇಟಾ


  • ಕರ್ನಾಟಕ ಗೆಜೆಟ್


  • ಸಿಎಂ ಡ್ಯಾಶ್‌ಬೋರ್ಡ್

ಸರ್ಕಾರದ ಆ್ಯಪ್ ಗಳು


  • ಬಿಎಂಟಿಸಿ


  • ಭೂಮಿ


  • ಇ-ಸೆವಾಯ್ ಕರ್ನಾಟಕ


  • ಡಿಶ್ಯಾಂಕ್


  • ಕೆ.ಎಸ್.ಆರ್.ಟಿ.ಸಿ.


  • ಗ್ರಾಮ ಪಂಚಾಯಿತಿ


  • ಕರ್ನಾಟಕ ರಾಜ್ಯ ಪೊಲೀಸ್


  • ಎಲ್ಲಾ ವೀಕ್ಷಿಸಿ...

ಕೇಂದ್ರ ಸರ್ಕಾರದ ಜಾಲತಾಣಗಳು


  • ಸಂಸತ್ತು


  • ರಾಷ್ಟ್ರಪತಿ ಕಚೇರಿ


  • ಪ್ರಧಾನ ಮಂತ್ರಿಗಳ ಕಚೇರಿ


  • ಪಾಸ್ಪೋರ್ಟ್ ಸೇವಾ


  • Aadhaar


  • Karnataka Bhavan

ತಾಂತ್ರಿಕ‌ ಜಾಲತಾಣಗಳು


  • ಸಿ.ಡಿ.ಎ.ಸಿ


  • ಎನ್ಐಸಿ


  • ಎಸ್.ಟಿ.ಕ್ಯೂ.ಸಿ

ಕನ್ನಡ ಸಂಬಂಧಿ ಜಾಲತಾಣಗಳು


  • ಕನ್ನಡ ಮತ್ತು ಸಂಸ್ಕೃತಿ ಇಲಾಖೆ


  • ಕನ್ನಡ ಸಾಹಿತ್ಯ ಪರಿಷತ್ತು


  • ಕಣಜ


  • ಕನ್ನಡ ಅಭಿವೃದ್ಧಿ ಪ್ರಾಧಿಕಾರ


  • ಇ-ಕನ್ನಡ

ಆಯೋಗಗಳು


  • ಮಾನವ ಹಕ್ಕು ಆಯೋಗ


  • ವಿದ್ಯುತ್ ಆಯೋಗ


  • ಜ್ಞಾನ ಆಯೋಗ


  • ಚುನಾವಣಾ ಆಯೋಗ


  • ಇ-ಕನ್ನಡ


  • ಕರ್ನಾಟಕ ಕಾನೂನು ಪ್ರಾಧಿಕಾರ


  • ಮಕ್ಕಳ ಹಕ್ಕುಗಳ ಆಯೋಗ


  • ಮಹಿಳಾ ಆಯೋಗ


  • ಗ್ರಾಹಕ ವಿವಾದಗಳ ಪರಿಹಾರ ಆಯೋಗ

ನ್ಯಾಯಾಲಯಗಳು


  • ಸರ್ವೋಚ್ಚ ನ್ಯಾಯಾಲಯ


  • ಹೈಕೋರ್ಟ್


  • ಜಿಲ್ಲಾ ನ್ಯಾಯಾಲಯಗಳು


  • ಕೇಂದ್ರ ಆಡಳಿತ ನ್ಯಾಯಮಂಡಳಿ


  • ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ

ಡೌನ್‌ಲೋಡ್‌ಗಳು


  • ಪಿಡಿಎಫ್ ಡೌನ್‌ಲೋಡ್


  • ನುಡಿ


  • ಸಿಡಿಎಸಿ ಭಾಷಾಂತರಿಸಿ


  • ಇ-ಸ್ಪೀಕ್


  • ಕನ್ನಡ ಧ್ವನಿ ಟಿಪ್ಪಣಿಗಳು

Go to Top