Skip to content
ದೂರವಾಣಿ : | 22212487|developkanaja@gmail.com
  • ಕಣಜ ತಿಳಿಯಿರಿ
  • ಮಾಹಿತಿ ಬಳಕೆ ಸೂಚನೆ
  • ಅಬಾಧ್ಯತೆ ಘೋಷಣೆ
  • ಕಣಜವನ್ನು ಕನ್ನಡದಲ್ಲೇ ಕೇಳಿ!
  • ಕಣಜವನ್ನು ತುಂಬಿ!
  • ನಮ್ಮನ್ನು ಸಂಪರ್ಕಿಸಿ
ಕಣಜ Logo ಕಣಜ Logo
  • ಮುಖಪುಟ
  • ವ್ಯಕ್ತಿ ಪರಿಚಯ
  • ವಿಭಾಗಗಳು
    • ಅಂಕಣಗಳು
      • ಋಾ ಬಿಟ್ಟ ಮೇಲೆ ಋ ಬೇಕೇ ?
      • ಸ್ಮಾರ್ಟ್ ಕಾರ್ಡ್ ತಂತ್ರಜ್ಞಾನ
      • ವನ್ಯಜೀವಿಗಳು ಹಾಗೂ ವನ್ಯಜೀವಿ ವಿಜ್ಞಾನ
      • ಶಿಷ್ಟಭಾಷೆ ಎಂದರೆ ಯಾವುದು?
      • ಮಾಹಿತಿ ಕಳವು ತಡೆಯಲು ತಂತ್ರಜ್ಞಾನ
      • ಬ್ರಾಹ್ಮಿ- ಪ್ರಾಕೃತವನ್ನು ಹಿಮ್ಮೆಟ್ಟಿಸಿದ ಸಂಸ್ಕೃತ ಕನ್ನಡ
      • ಪಕ್ಷಿ ವೀಕ್ಷಣೆಯ ದಾಖಲೀಕರಣ
      • ಶಿಕ್ಷಣ ಮಾಧ್ಯಮವಾಗಿ ಕನ್ನಡ
    • ಲೇಖನಗಳು
      • ಉಷ್ಟ್ರಪಕ್ಷಿ ವಿದೇಶಿ ಅಲ್ಲ!
      • ದೆಹಲಿ ಕರ್ನಾಟಕ ಸಂಘ
      • ನವ ದೆಹಲಿಯ ಕರ್ನಾಟಕ ವಾರ್ತಾ ಕೇಂದ್ರ
      • ಆರೋಗ್ಯ
    • ಪತ್ರಿಕೆಗಳು
      • ಮಕ್ಕಳ ಕತೆಗಳು
      • ವಿಜ್ಞಾನ
      • ನಿಯತಕಾಲಿಕೆಗಳು
  • ಶಬ್ದಕೋಶ
  • e-ಲೋಕ
    • e-ಲೋಕ

      ಜಗತ್ತು ನಾಗರಿಕತೆ ಪರಿಕಲ್ಪನೆಗಳು ಅರಳುವ ಮುನ್ನ ದಿನಗಳಿಂದಲೂ ಅಸ್ತಿತ್ವದಲ್ಲಿದ್ದೂ ನಿರಂತರವಾಗಿ ವಿಕಾಸಗೊಳ್ಳುತ್ತಿದೆ. ಸಂಜ್ಞೆಗಳು, ಸಂಕೇತಗಳು, ಶಿಲಾಚಿತ್ರಗಳು, ಲಿಪಿಕಂಡರಣೆಗಳು,ತಾಳೆಗರಿಗಳು, ಶಾಸನಗಳು, ಪುಸ್ತಕಗಳು ಹೀಗೆ ಬಹುಮಾಧ್ಯತಮ ಸಾಧ್ಯತೆಯಲ್ಲಿ ಸಾಗುತ್ತಾ ಬಂದ ಜ್ಞಾನ ಮತ್ತು ಮಾಹಿತಿ ಪ್ರಸಾರಕ್ಕೆ ಇತ್ತೀಚಿನ ಆಧುನಿಕ ಸ್ಪರ್ಶ ದೊರಕಿದ್ದು ತಂತ್ರಜ್ಞಾನದಿಂದ.ಆಧುನಿಕ ತಂತ್ರಜ್ಞಾನದಲ್ಲಿ ಬಹುಮಾಧ್ಯಮ ಸಾಧ್ಯತೆಯನ್ನು ಯಶಸ್ವಿಯಾಗಿ ಬಳಸುತ್ತಾ ಕನ್ನಡ ಭಾಷೆಯಲ್ಲಿ ಜ್ಞಾನವನ್ನು ಒದಗಿಸುವ ಮಹತ್ವದ ಪ್ರಯತ್ನ ಇ-ಲೋಕ.

    • e-ಲೋಕ
      • e-ದಿನ
      • e-ಪುಸ್ತಕ
      • e-ಜಗ
      • e-ದೃಶ್ಯ
      • e-ದನಿ
  • ದೃಶ್ಯಾಂಕಣ
  • ಚಿತ್ರಾಂಕಣ
  • ದಿನಮಣಿಗಳು
  • ಹುಡುಕಿ

ಸಂಪುಟ-೨೦

Home/ಕನ್ನಡ/ಸಂಪುಟ-೨೦
Previous Next

ಸಂಪುಟ-೨೦

  • ಪರಾಧೀನ ಸರಸ್ವತಿ
  • ಭಾರತೀಪುರ-ಒಂದು ಸಮೀಕ್ಷೆ
  • ವಂಶವೃಕ್ಷ-ಒಂದು ವಿಮರ್ಶೆ
  • ಶಾಂತಿನಾಥ ದೇಸಾಯಿ ಅವರ ವಿಕ್ಷೇಪ
  • ಹೊಸ ಆವಿಷ್ಕಾರದ ಕವಿ ಶ್ರೀ ನಿಸಾರ್ ಅಹಮದ್
  • ಏಕಲವ್ಯ-ಒಂದು ತೌಲನಿಕ ವ್ಯಾಸಂಗ
  • ಸಖಾರಾಮ ಬೈಂಡರ್-ಮರಾಠಿ ರಂಗಪ್ರಯೋಗ
  • ಅನಾಮಧೇಯನ ಡೈರಿಯಿಂದ
  • ಇನ್ನಾದರು ಬದುಕಬೇಕು
  • ಮನುಷ್ಯ, ಪ್ರಾಣಿ ಮತ್ತು ಬೇಟೆ
  • ನಾನು
  • ಪ್ಯಾರಾಸೈಟ್
  • ನೆನಪುಗಳು
  • ಬೆಟ್ಟವೇರಿದ ಮೇಲೆ
  • ಒಂದು ಕಥನ ಕವನ
  • ಗತಿ, ಸ್ಥಿತಿಯ ವಿಮರ್ಶೆಯ ವಿವೇಚನೆ

ಪರಾಧೀನ ಸರಸ್ವತಿ

ಪರಾಧೀನ ಸರಸ್ವತಿ

ಡಾ. ಪು.ಗ. ಸಹಸ್ರಬುದ್ಧೆ

ಕ್ರಿ. ಶ. ೧೧೮೮ ರಲ್ಲಿ ಮಹಾರಾಷ್ಟ್ರದ ಆದ್ಯಕವಿ ಮುಕುಂದರಾಜ “ವಿವೇಕಸಿಂಧು” ಎಂಬ ಗ್ರಂಥವನ್ನು ಬರೆದರು. ಅನಂತರ ಮುಂದಿನ ೬೦೦-೬೫೦ ವರ್ಷಗಳಲ್ಲಿ ಪ್ರಾಚೀನ ಮರಾಠೀ ಸಾಹಿತ್ಯಗಂಗೆ ಅಖಂಡವಾಗಿ ಹರಿಯುತ್ತಿದ್ದರು. ಸಂತ ವಾ‍‍ಙ್ಮಯ, ಪಂಡಿತ ವಾ‍‍ಙ್ಮಯ, ಶಾಹಿರೀ ವಾ‍‍ಙ್ಮಯ ಹೀಗೆ ಭಿನ್ನರೂಪಗಳನ್ನು ಕಾಲಕಾಲಕ್ಕೆ ಧಾರಣ ಮಾಡಿದ್ದಳು. ಅವಳ ಪ್ರವಾಹ ಮಾತ್ರ ಅಖಂಡ ಮತ್ತು ವಿಪುಲವಾಗಿದ್ದಿತು. ಹೀಗಿದ್ದರೂ ಆ ಕಾಲಖಂಡದಲ್ಲಿ ಕಾದಂಬರಿ, ನಾಟಕ, ಸಣ್ಣಕತೆ, ಭಾವಕಾವ್ಯ, ನಿಬಂಧ ಇತಿಹಾಸ, ಚರಿತ್ರ ಇತ್ಯಾದಿ ಬಹು ವಿಧವಾವ ವಾ‍‍ಙ್ಮಯ ಪ್ರಕಾರಗಳು ಮಹಾರಾಷ್ಟ್ರ ಸಾರಸ್ವತದಲ್ಲಿ ಏಕೆ ನಿರ್ಮಾಣವಾಗಿಲ್ಲ ಎಂಬ ಒಂದು ಪ್ರಶ್ನೆ, ಈ ಸಾಹಿತ್ಯದ ಹಿಂದಿನ ಇತಿಹಾಸ ಓದುತ್ತಿರುವಾಗ, ಸತತವಾಗಿ ಮೂಡುತ್ತದೆ. ಆ ಆರುನೂರು ವರ್ಷಗಳಲ್ಲಿ ರಾಜಕಾರಣ, ಅರ್ಥಶಾಸ್ತ್ರ, ಸಮಾಜಕಾರಣ, ರಸಾಯನ, ಪದಾರ್ಥವಿಜ್ಞಾನ ಈ ವಿಷಯಗಳ ಮೇಲೂ ಗ್ರಂಥಗಳಾಗಲಿಲ್ಲ. ಮರಾಠಿಗೆ ಆ ಕಾಲದಲ್ಲಿ ಯಾರೂ ವ್ಯಾಕರಣದ ಶಿಸ್ತು ಹಚ್ಚಲಿಲ್ಲ. ಯಾರೂ ಭಾಷೆಯ ಶಬ್ದಭಾಂಡಾರವನ್ನು ನಿಘಂಟಿಸಲಿಲ್ಲ. ಭಾಷಾಶಾಸ್ತ್ರದ ದೃಷ್ಟಿಯಿಂದ ಯಾರೂ ಮರಾಠಿಯ ಪರೀಕ್ಷಣ ಮಾಡಲಿಲ್ಲ! ಪ್ರತಿಯಾಗಿ, ಆ ೬೦೦-೬೫೦ ವರ್ಷಗಳಲ್ಲಿ ಆಗದಿದ್ದುದು ನಂತರದ ೧೦೦-೧೨೫ ವರ್ಷಗಳಲ್ಲಿ ಸಹಜವಾಗಿ ಆಯಿತು. ಈ ಎಲ್ಲ ತರದ ಗ್ರಂಥಗಳಿಂದ ಸಾಹಿತ್ಯಪ್ರಕಾರಗಳಿಂದ ಮರಾಠಿ ಸಾಹಿತ್ಯ ಈಗ ಸಮೃದ್ಧವಾಗಿ ಕಾಣುತ್ತದೆ. ವಿಷ್ಣುಶಾಸ್ತ್ರೀ, ತಿಲಕ, ಆಗರಕರ, ಕೇಳಕರ ಇಂಥ ನಿಬಂಧಕಾರ ಗ್ರಂಥಕಾರರು: ರಾಜವಾಡೆ, ತೆಲಂಗ, ಶಂ.ಬಾ. ದೀಕ್ಷಿತ, ಚಿಂ.ವಿ. ವೈದ್ಯ ಇಂಥ ಸುಶೋಧಕರು; ದಾದೋಬಾ ಪಾಂಡುರಂಗ, ಕೃಷ್ಣಶಾಸ್ತ್ರೀ ಚಿಪಳೂಣಕರ, ದಾಮಲೆ, ವಾ, ಕೇತಕರ ಇಂಥ ವ್ಯಾಕರಣಕಾರ-ಕೋಶಕಾರರು, ಹರಿಭಾವು ಆಪಟೆ, ವಾ. ಮ, ಜೋಶಿ, ಫಡಕೆ, ಮಾಡಬೋಲಕರ ಇವರಂತಹ ಕಾದಂಬರಿಕಾರರು. ಖರೆ, ಸರದೇಸಾಯಿ, ಪಾರಸನೀಸ, ಭಾವೆ, ಪಾಂಗಾರಕರ ಇಂಥ ಇತಿಹಾಸ ಲೇಖಕರು, ಕಿರ್ಲೋಸ್ಕರ, ದೇವಲ, ಖಾಡಿಲಕರ, ಗಡಕರಿ ಇವರಂತಹ ನಾಟಕಕಾರರು, ಕೇಶವಸಂತ, ಬಾಲಕವಿ, ಸಾವರಕರ, ತಾಂಬೆ ಈ ಕವಿಗಳು-ಇವರೆಲ್ಲರೂ ೫೦-೬೦ ವರ್ಷಗಳಲ್ಲಿ ಮರಾಠಿ ಸಾಹಿತ್ಯವನ್ನು ಸಮೃದ್ಧಗೊಳಿಸಿದರು. ಇಲ್ಲಿ ಶಾಸ್ತ್ರಜ್ಞರಾದರು. ಗಣಿತಜ್ಞರಾದರು, ರಸಾಯನಶಾಸ್ತ್ರ ಪಂಡಿತರಾದರು, ಪದಾರ್ಥಶಾಸ್ತ್ರಜ್ಞರಾದರು, ಜ್ಯೋತಿರ್ವಿದ್ಯಾಪರಿಣತರಾದರು, ಭಾಷಾಶಾಸ್ತ್ರಜ್ಞರಾದರು ಮತ್ತು ಮಹಾರಾಷ್ಟ್ರದ ಬುದ್ಧಿ ವೈಭವದ ಈ ಎಲ್ಲ ಆವಿಷ್ಕಾರ ಕೇವಲ ಒಂದು ಶತಮಾನದ ಕಾಲಾವಧಿಯಲ್ಲಿ ಆಯಿತು. ಆದ್ದರಿಂದಲೆ, ಹಿಂದಿನ ೬೦೦-೭೦೦ ವರ್ಷಗಳ ಪ್ರದೀರ್ಘ ಕಾಲದಲ್ಲಿ ಈ ತರದ ನಿರ್ಮೀತಿಯ ಅತ್ಯಂತ ಅಭಾವವಿರುವಂತೆ ಕಾಣುವದು ಏಕೆ ಎಂಬ ಪ್ರಶ್ನೆ ಮಾಡುತ್ತದೆ.

ಆದರೆ ಈ ಸಮಸ್ಯೆಯ ಬಗ್ಗೆ ವಿಚಾರ ಮಾಡಹತ್ತಿದಾಗ ಇನ್ನೂ ಅನೇಕ ಪ್ರಶ್ನೆಗಳು ಬರುತ್ತದೆ. ಈ ದೀರ್ಘ ಕಾಲಾವಧಿಯಲ್ಲಿ ಮಹಾರಾಷ್ಟ್ರದಿಂದ ಯಾರಾದರೂ ಪರದೇಶಗಳಿಗೆ ಪ್ರವಾಸಕ್ಕಾಗಿ ಹೋಗಿದ್ದರೊ? ಇಂಗ್ಲಂಡ, ಫ್ರಾನ್ಸ್, ಪೋರ್ತುಗಾಲ, ಜರ್ಮನಿ, ಸ್ಪೇನ, ಹಾಲಾಡ್‌ ದೇಶಗಳಿಂದ ಪಾಶ್ಚಾತ್ಯ ಜನರು ಸಾವಿರಾರು ತಂಡಗಳಾಗಿ ಬಂದರು. ಆದೇ: ತರಹ ಇಜಿಪ್ತ, ಆರಬಸ್ಥಾನ, ಇರಾಣ, ಮಧ್ಯ ಏಶಿಯಾಗಳಿಂದ ಅನೇಕ ಮುಸಲ್ಮಾನರು ಭಾರತ ಮತ್ತು ಮಹಾರಾಷ್ಟ್ರರಲ್ಲಿ ಬಂದರು. ಆದರೆ ಮಹಾರಾಷ್ಟ್ರದ ಅಥವಾ ಭಾರತದಿಂದ ಅವರ ದೇಶಗಳಿಗೆ ಯಾವ ಹಿಂದುವೂ ಎಂದೂ ಹೋಗಲಿಲ್ಲ. ವ್ಯಾಪಾರ ಧರ್ಮಪ್ರಸಾರ, ಮತ್ತು ರಾಜ್ಯ ಎಂಬ ಮರು ವಿಧ ನಿಮಿತ್ತಗಳಿಂದ ಆ ಜನರು ಬರುತ್ತಿದ್ದರು. ಆದರೆ ಇವುಗಳಲ್ಲಿಯ ಯಾವದೇ ನಿಮಿತ್ತವಾಗಿ ಮಹಾರಾಷ್ಟ್ರೀಯನೊಬ್ಬ ಪರದೇಶಕ್ಕೆ ಎಂದೂ ಹೋಗಲಿಲ್ಲ. ಎಂದೂ ಜಗತ್ತನ್ನು ನೋಡಲಿಲ್ಲ. ಕೂಪಮಂಡೂಕನಾಗಿಯೇ ಉಳಿದನು. ಈ ಮಾತೇನಾದರೂ ಸಾಹಿತ್ಯಕ್ಕೆ ಸಂಬಂಧವಿರಬಹುದೇ? ಜಗಪ್ರವಾಸ ಮಾಡಲಿಲ್ಲ, ಮಹಾರಾಷ್ಟ್ರದಲ್ಲಿಯಾದರೂ ವ್ಯಾಪಾರದ ಅಥವಾ ಧರ್ಮಹಾನಿಯ ವಿಚಾರಗಳನ್ನು ಇಲ್ಲಿಯ ರಾಜ ಕರ್ತರು ಮಾಡಿದರೆ? ಪೇಶವೆಯರು ಸದಾ ಸಾಲಗಾರರಾಗಿದ್ದರು. ಆದರೆ ಮಹಾರಾಷ್ಟ್ರದಲ್ಲಿ ವ್ಯಾಪಾರ ಅಭಿವೃದ್ಧಿಯಾಗಲೇಬೇಕು, ವ್ಯಾಪಾರ ಮತ್ತು ರಾಜ್ಯ ಇವುಗಳಿಗೆ ದೃಢ ಸಂಬಂಧ ಉಂಟು ಎಂಬ ತಿಳುವಳಿಕೆಯಾಗಲೀ ಸಿಂದೆ, ಹೋಳಕರ, ಭೋಸಲೆ, ಗಾಯಕವಾಡ, ಅನೇಕ ಇಂತಹ ಸರದಾರರಿಗಾಗಲೀ ಎಂದಾದರೂ ಆಗಿತ್ತೇ? ಸಮಾಜದಲ್ಲಿಯ ಇತರ ಧುರೀಣರಿಗೆ ವ್ಯಾಪಾರ ಮತ್ತು ಮಾರುಕಟ್ಟೆಗಳ ಮಹತ್ವ ಅರಿವಾಗಿತ್ತೇ? ಮಹಾರಾಷ್ಟ್ರದಲ್ಲಿ ಬಹಳಷ್ಟು ಧನಿಕರಿದ್ದರು. ಆದರೆ ಸಮಗ್ರ ಭಾರತದಲ್ಲಿ ಅಥವಾ ಮಹಾರಾಷ್ಟ್ರದಲ್ಲಿ ವ್ಯಾಪಾರದ ಮಾರುಕಟ್ಟೆಗಳ ಜಾಳಿಗೆಗಳನ್ನು ಹೆಣೆಯುವ ಒಬ್ಬ ವರ್ತಕನಾದರೂ ಆ ಕಾಲಕ್ಕೆ ಇದ್ದನೇ ? ಸರ್ವಥಾ ಇಲ್ಲ. ಛತ್ರಪತಿ, ಪೇಶವೆ ಇವರೆಲ್ಲ ಮುಸಲ್ಮಾನ, ಯುರೋಪಿಯನ್ ವರ್ತಕರ ಉದ್ದಂಡವಾದ ಆಶ್ರಯವಿತ್ತಿದ್ದರು. ಹಾಗೆ ಅವರು ಮಹಾರಾಷ್ಟ್ರದ ವ್ಯಾಪಾರಿಗಳಿಗೂ ಕೊಡಬಹುದಿತ್ತು. ಆದರೆ ಅಂತಹ ವ್ಯಾಪಾರಿಯೇ ಇರಲಿಲ್ಲ. ಇಲ್ಲಿ ಅರ್ಥಶಾಸ್ತ್ರದ ಮೇಲೆ ಗ್ರಂಥಗಳಾಗಲಿಲ್ಲ. ಆರ್ಥಿಕ ವ್ಯವಹಾರಗಳನ್ನೂ ಮರಾಠಿಗರು ಮಾಡಲಿಲ್ಲ. ಮಹಾರಾಷ್ಟ್ರದಲ್ಲಿ ಆಗಲೂ ಮೇಲಿಂದ ಮೇಲೆ ಕ್ಷಾಮ ಬೀಳುತ್ತಿತ್ತು. ಆದರೆ ಕೆರೆಗಳನ್ನು ಕಟ್ಟಿಸಬೇಕು, ಧರಣಗಳನ್ನು ಕಟ್ಟಿಸಬೇಕು, ಕಾಲುವೆಗಳನ್ನು ತೋಡಬೇಕು ಎಂಬ ವಿಚಾರಗಳೂ ಕೂಡ ಯಾರ ಮನಸ್ಸಿನಲ್ಲಿಯೂ ಬರಲೇ ಇಲ್ಲ, ಆರ್ಥಿಕ ವಿಚಾರಗಳು ಹಾಗಿರಲಿ, ಇಲ್ಲಿ ಧರ್ಮ ಜಾಗೃತಿಯಾದರೂ ಆಗಿತ್ತಲ್ಲ. ಆದರೆ ಹತ್ತನೆಯ ಶತಮಾನದಿಂದ ಇಜಿಪ್ತ, ಅರಬಸ್ತಾನಗಳಿಂದ ಮುಸಲ್ಮಾನ ಧರ್ಮಪ್ರಸಾರಕರು ಮಹಾರಾಷ್ಟ್ರದಲ್ಲಿ ಬಂದು ನೆಲಸಿದ್ದ ಅವರು ಸಾವಿರಾರು ಜನರನ್ನು ಮತಾಂತರಗೊಳಿಸಿ, ಸಂಘಟಿಸಿ ಯಾದವರ ಮತ್ತು ದಕ್ಷಿಣದ ಇತರ ರಾಜಸತ್ತೆಗಳ ವಿನಾಶದ ಸನ್ನಾಹವನ್ನು ಮಾಡಿಟ್ಟಿದ್ದರು; ಇದರ ಬಗ್ಗೆಯಾದರೂ ಧರ್ಮಪಂಡಿತರಿಗೆ, ರಾಜ್ಯಕರ್ತರಿಗೆ ಎಚ್ಚರಿಕೆ ಇತ್ತೇನು? ಮತಾಂತರಗೊಳಿಸಿದ ಜನರನ್ನು ಪುನಃ ಸ್ವಧರ್ಮದಲ್ಲಿ ಸ್ವೀಕರಿಸಲೇಬೇಕು ಇಲ್ಲವಾದರ ಮುಂದೆ ಅನರ್ಥವಾದೀತು ಎಂಬ ವಿಚಾರಗಳು ಇಲ್ಲಿ ಯಾರಿಗೂ ಎಂದೂ ಬರಲಿಲ್ಲ. ರಾಜ್ಯ ರಕ್ಷಣ, ಯುದ್ದ ಇವು ರಾಜ್ಯಕರ್ತರ ಮುಖ್ಯ ಉದ್ಯೋಗಗಳು. ಆದರೆ ಉತ್ತರ ಹಿಂದುಸ್ಥಾನದಲ್ಲಿ ಮುಸ್ಲಿಮರ ಆಕ್ರಮಣವಾಗಿ ಮೂರುನೂರು ವರ್ಷಗಳಾಗಿದ್ದವು. ಮುಸಲ್ಮಾನರು ಇಡಿಯ ಉತ್ತರವನ್ನು ಆಕ್ರಮಿಸಿದ್ದರು. ಅಲ್ಲಿಯ ಮೂಲ ಹಿಂದು ಬೌದ್ಧ, ಜೈನರ ರಾಜ್ಯಗಳನ್ನು ಮಣ್ಣುಪಾಲು ಮಾಡಿದ್ದರು. ಈ ಸಂಕಟ ನಾಳೆ ತಮ್ಮ ಮೇಲೂ ಬಂದೀತು ಅದನ್ನೆದುರಿಸುವ ಸನ್ನಾಹ ತಾವು ಮಾಡಲೇಬೇಕು ಎಂಬ ವಿಚಾರ ದಕ್ಷಿಣದಲ್ಲಿಯ ಯಾವದೇ ಅರಸು ಅಥವಾ ಅವನ ಪ್ರಧಾನಿಗೆ ಹೊಳೆದಿತ್ತೇ? ಕನಸಿನಲ್ಲಿಯೂ ಇಲ್ಲ. ಆದ್ದರಿಂದ ಕ್ರಿ.ಶ. ೧೩೦೪ ರಿಂದ ೧೩೨೦ ಈ ೧೫-೧೬ ವರ್ಷಗಳಲ್ಲಿಯೇ ಸಮಗ್ರ ದಕ್ಷಿಣ ಮಣ್ಣುಮುಕ್ಕಿತು. ಹೀಗೇಕೆ ಘಟಿಸಿತು ಎಂದು ವಿಶ್ಲೇಷಣೆಯನ್ನಾದರೂ ಅನಂತರ ಮಾಡಲಾಯಿತೇ ? ಅಲ್ಲಾಉದ್ದೀನ ಮಲ್ಲಿಕ ಕಾಫರರ ಗೆಲುವಿನ ಗುಟ್ಟಿನ ವಿಷಯವಾಗಿ ಯೋಚಿಸಿದರೆ?

ಈ ಮೊದಲು ಹೇಳಿದಂತೆ, ದಾರಿದ್ರ‍್ಯ ದಿವಾಳಿತನ ಸಾಹಿತ್ಯ ಕ್ಷೇತ್ರದಲ್ಲಿಯಷ್ಟೇ ಅಲ್ಲ. ಜೀವನದ ಸರ್ವ ಕ್ಷೇತ್ರಗಳಲ್ಲಿಯೂ ವ್ಯಾಪಿಸಿತ್ತು. ರಾಜ್ಯಕಾರಭಾರ, ವ್ಯಾಪಾರ ವ್ಯವಸಾಯ, ಶಿಕ್ಷಣ, ಧರ್ಮಪ್ರಸಾರ ಎಲ್ಲ ಕಡೆಗೂ ಹೀಗೆಯೇ. ಈ ವಿಷಯಕ್ಕೂ ಸಾಹಿತ್ಯದಲ್ಲಿಯ ದರಿದ್ರಾವಸ್ಥೆಗೂ ಏನಾದರೂ ಸಂಬಂಧವಿರಬಹುದೇ ?
೨
ಅವರು ಉದಾಸೀನರಾಗಿದ್ದರು–

ಕಳೆದ ನೂರು ವರ್ಷಗಳ ನಿಬಂಧ ಕಾದಂಬರಿ ನಾಟಕ ಕಾವ್ಯ ಇತಿಹಾಸ ಚರಿತ್ರ ಈ ಥರದ ಸಾಹಿತ್ಯ, ಸ್ವರೂಪ ಮತ್ತು ವಿಷಯಗಳನ್ನು ಪರಿಶೀಲಿಸಿದರೆ, ಅದಕ್ಕೂ ಹಿಂದಿನ ೬೦೦-೭೦೦ ವರ್ಷಗಳಲ್ಲಿ ಅಂತಹ ಸಾಹಿತ್ಯ ರಚನೆ ಏಕಾಗಲಿಲ್ಲವೆನ್ನುವದರ ಒಂದು ಮುಖ್ಯ ಕಾರಣ ನಮ್ಮ ಲಕ್ಷದಲ್ಲಿ ಸಹಜವಾಗಿ ಬರಬಹುದು. ಈ ಸಾಹಿತ್ಯ ಲೇಖಕರಿಗೆ ಏನು ಹೇಳಲೇಬೇಕೆನಿಸಿತೋ ಅದನು, ಅವರ ಹಿಂದಿನ ಕಾಲದಲ್ಲಿ ಯಾರಿಗೂ ಹೇಳಬೇಕೆಂದೆನಿಸಿರಲಿಲ್ಲ. ಈ ಪಂಡಿತರ ವಿದ್ವಾಂಸರ ಕಾದಂಬರಿಕಾರರ ಮನದಲ್ಲಿ ಯಾವ ಆಕಾಂಕ್ಷೆಗಳು ಇದ್ದವೊ, ಅವರ ಮನದಲ್ಲಿ ಯಾವ ವಿಚಾರಗಳು ಸಿಡಿದೇಳುತ್ತಿದ್ದವೊ ಅಂಥವು ಮೊದಲಿನ ಕಾಲದಲ್ಲಿ ಯಾರ ಮನದಲ್ಲಿಯೂ ಬರುತ್ತಿರಲಿಲ್ಲ. ನಮಗೆ ಪಾರ್ಲಿಮೆಂಟ್ ಬೇಕು ಎಂದು ಲೋಕಹಿತವಾದೀ ನುಡಿದರು. ಆ ಪಾರ್ಲಿಮೆಂಟಿನಲ್ಲಿ ಗಾಣಿಗ, ವೀಳೆ ಮಾರುವವ, ಅಗಸ, ಮಹಾರ ಇವರೂ ಬ್ರಾಹ್ಮಣ ಕ್ಷತ್ರಿಯರ ಜೊತೆಯಾಗಿ ಅಸನ ಮಾಡಬೇಕು. ನಮ್ಮ ಜನರು ವಾಣಿಜ್ಯವನ್ನು ಬೆಳೆಸಬೇಕು, ಕಾರ್ಖಾನೆಗಳನ್ನು ಪ್ರಸ್ಥಾಪಿಸಬೇಕು, ಇಲ್ಲಿಯ ಚಾಕೂ ಕತ್ತರಿಗಳು ಇಂಗ್ಲಂಡದಲ್ಲಿ ವಿಕ್ರಯವಾಗಬೇಕು ಎಂದ ಅವರು ಹೇಳುತ್ತಿದ್ದರು. ಮೊದಲಿನ ಕಾಲದಲ್ಲಿ ಹೀಗೆ ಯಾರೂ ಬರೆಯ ಲಿಲ್ಲ, ಯಾಕೆಂದರೆ ಈ ಬಗ್ಗೆ ಆಗಿನ ಜನರು ಬಹಳೇ ಉದಾಸೀನರಿದ್ದರು. ರಾಜ್ಯ, ವ್ಯಾಪಾರ, ಕಾರ್ಖಾನೆ, ಕೆರೆ, ಕಾಲುವೆಗಳ ಬಗ್ಗೆ ಏನಾದರೂ ಯೋಚಿಸಬೇಕೆಂದು ಅವರಿಗೆ ತೋಚಿರಲಿಲ್ಲ. ಶಿವಾಜಿಯ ಜನ್ಮತಾರೀಖು ಯಾವದು, ಅವನು ದಿಲ್ಲಿಗೆ ಹೋಗುವ ರಾಜಕಾರಣವೇನು, ಪಾಣಿಪತ್ತಿನ ಕಾಳಗದಲ್ಲಿ ಪರಾಭವ ಏಕೆ ಆಯಿತು, ಅದರಲ್ಲಿ ಭಾವು ಸಹೇಬನಿಗೆ ಆಪಶ್ರೇಯಸ್ಸೆಷ್ಟು, ಗೋವಿಂದ ಪಂತ ಬುಂದೇಲೆ ಎಷ್ಟು ದೋಷಿ. ಇವೆಲ್ಲವು ಅಭ್ಯಾಸವಾಗಲೇ ಬೇಕು, ಜನರಿಗೆ ಸ್ಪಷ್ಟೀಕರಿಸಿ ಹೇಳಲೇಬೇಕು ಎಂಬ ಒಳಗಿನ ಹಂಬಲ ರಾಜವಾಡೆಯವರಿಗೆ ಇತ್ತೆಂದೇ, ಒಂದೊಂದು ಕಾಗದ ಪತ್ರ ಹುಡುಕುತ್ತ, ಅವರು ಹೆಣಗಾಡುತ್ತ ತಿರುಗುತ್ತಿದ್ದರು. ದೇಶದ ಉನ್ನತಿಯ ದೃಷ್ಟಿಯಿಂದ ಇತಿಹಾಸಕ್ಕೆ ಮಹತ್ವವಿದೆಯೆಂದು ಅವರು ಭಾವಿಸಿದ್ದರು. ಈ ಭಾವನೆ ಆ ಪ್ರಾಚಿನ ಮರಾಠೀ ಕಾಲದಲ್ಲಿ ಆ ಶಾಸ್ತ್ರಿ ಪಂಡಿತರಿಗಿದ್ದರೆ, ಏನೂ ಶ್ರಮವಿಲ್ಲದೇ ರಾಜವಾಡೆಯವರಿಗಿಂತಲೂ ಸಾವಿರಪಟ್ಟು ಕಾಗದ ಪತ್ರಗಳು ಅವರಿಗೆ ಉಪಲಬ್ಬವಾಗುತಿದ್ದವು. ಆದರೆ ಅವರಿಗೆ ಈ ಬಗ್ಗೆ ಏನೂ ಕರ್ತವ್ಯವೇ ಇದ್ದಿಲ್ಲ! ಹಳೆಯ ಶ್ರುತಿ ಸ್ಮೃತಿಗಳ ಮೇಲೆ, ವೇದಾಂತ ಗ್ರಂಥಗಳ ಮೇಲೆ, ಅಥವಾ ವ್ಯಾಕರಣ ಗ್ರಂಥಗಳ ಮೇಲೆ ಆದ ಟೀಕೆಗಳ ಮೇಲೆ ದೀಪಿಕೆಗಳು, ದೀಪಿಕೆಗಳ ಮೇಲೆ ಚಂದ್ರಿಕೆಗಳು, ಚಂದ್ರಿಕೆಗಳ ಮೇಲೆ ಮನೋರಮೆಗಳು ಹೀಗೆ ಭಾಷ್ಯಗಳನ್ನು ಬರೆಯುವದು, ವ್ರತ ವೈಕಲ್ಯ ಉದ್ಯಾಪನೆಗಳ ಮೇಲೆ ಪ್ರಚಂಡ ಗ್ರಂಥಗಳನ್ನು ರಚಿಸುವದು ಅವರಿಗೆ ಸಾಕಷ್ಟಾಗಿತ್ತು. ಇಂಗ್ಲೀಷರ ರಾಜ್ಯ ಇಲ್ಲಿಂದ ನಷ್ಟವಾಗಬೇಕೆಂದು ವಿಷ್ಣುಶಾಸ್ತ್ರಿಯವರಿಗೆ ತೋರುತ್ತಿತ್ತು. ಆದ್ದರಿಂದ ಅವರು ಆ ಚಿಕಿತ್ಸೆಯನ್ನು ಮಾಡಿದರು. ನಮ್ಮ ಜನರಲ್ಲಿ ದೇಶಾಭಿಮಾನವಿಲ್ಲ, ಪೂರ್ವ ದೇಶಗಳಲ್ಲಿ ಎಂದೂ ಇದ್ದಿಲ್ಲ: ಜಾತಿಭೇದ ಅದಕ್ಕೊಂದು ಕಾರಣವಿದೆ ಹೀಗೆ ಸಿದ್ಧಾಂತಗಳನ್ನು ಹೇಳಿದರು, ನಮ್ಮ ಭಾಷೆಯ ಸ್ಥಿತಿ ಏನು ; ನಮ್ಮ ದೇಶದ ಅವಸ್ಥೆ ಏನು ; ಪೂರ್ವದಲ್ಲಿ ಏನಿತ್ತು : ಆ ಪೂರ್ವ ವೈಭವ ಯಾತರಿಂದ ಕಳೆಯಿತು; ಅದನ್ನು ಪುನಃ ದೊರಕಿಸಲು ಜ್ಞಾನದ ಉಪಾಸಣೆಯನ್ನು ಹೇಗೆ ಮಾಡಬೇಕು ಎಂಬ ವಿಷಯಗಳನ್ನು ಜನರಿಗೆ ತಿಳಿಸಬೇಕೆಂದು ಶಾಸ್ತ್ರಿಯವರಿಗೆ ಯಾವ ಕಳಕಳಿಯಿತೋ ಹಾಗೆ ಹಿಂದಿನ ಕಾಲದಲ್ಲಿ ಕೆಲವು ಅಪವಾದಗಳನ್ನು ಬಿಟ್ಟು ಯಾರಿಗೂ ಇರಲಿಲ್ಲ. ಸಮರ್ಥ ರಾಮದಾಸರಿಗೆ ಈ ಹಂಬಲವಿತ್ತು. ಆದ್ದರಿಂದ ಅವರು ಆ ಬಗ್ಗೆ ಬರೆದರು. ಆದರೆ ಉಳಿದ ಸಮಸ್ತ ಜನರು ಶೀತಲವಾಗಿದ್ದರು. ತಮಗೆ ಸಂಬಂಧವೇ ಇಲ್ಲೆಂದು ಅವರ ಪ್ರಾಮಾಣಿಕ ಶ್ರದ್ದೆಯಾಗಿತ್ತು. ಭಾರತದಲ್ಲಿ ಪ್ರಜಾಪ್ರಭುತ್ವ ಪ್ರಸ್ತಾಪನೆಯಾಗಬೇಕು; ಜನಜಾಗ್ರತಿ ಮಾಡಲೇಬೇಕು; ಜನರಲ್ಲಿ ಅಸಂತೋಷ ಕೆರಳಿಸಬೇಕು; ಇಡಿಯ ಭಾರತದಲ್ಲಿ ಈ ಅಸಂತೋಷ ಪ್ರಜ್ವಲಿಸಿ ಅದರಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಆಹುತಿ ಕೊಡಲೇಬೇಕು; ಇಂತಹ ಪ್ರಕ್ಷೇಭ ತಿಲಕರ ಮನಸ್ಸಿನಲ್ಲಿ ಆಗುತ್ತಿತ್ತು. ಆದ್ದರಿಂದ ಪ್ರತಿದಿನ ಅವರು ಆ ವಿಷಯಗಳ ಮೇಲೆ ಬರೆಯುತಿದ್ದರು. ಮರಣದಂಡನೆಯ ಶಿಕ್ಷೆ ಕೊಟ್ಟರೂ ಅವುಗಳ ಬಗ್ಗೆ ಬರೆಯಲೇಬೇಕು, ಹೇಳಲೇಬೇಕೆಂದು ಅವರ ಆಂತರಿಕ ಭಾವನೆಯಾಗಿತ್ತು. ಆದರಿಂದ ಅವರು ೪೦ ವರ್ಷಗಳವರೆಗೆ ಈ ಥರದ ಸಾಹಿತ್ಯ ನಿರ್ಮಾಣ ಮಾಡಿದರು. ಮರಾಠಿ ಸಾಹಿತ್ಯದ ಹಿಂದಿನ ದೀರ್ಘ ಕಾಲಾವಧಿಯಲ್ಲಿಯ ಪೂರ್ವಾರ್ಧದಲ್ಲಿ ಅಂದರೆ ೧೬ ನೇ ಶತಮಾನದ ಕೊನೆಯವರೆಗೆ ಬಹಾಮನಿ ರಾಜ್ಯದ ಬಗ್ಗೆ ಇಂತಹ ವಿಚಾರಗಳು ಇಷ್ಟು ಉತ್ಕಟವಾಗಿ ಯಾರ ಮನದಲ್ಲಿಯೂ ಸ್ಫುರಿಸಲಿಲ್ಲ. ಮರಣದಂಡನೆಯ ಶಿಕ್ಷೆ ಕೊಟ್ಟರೂ ಅವುಗಳನ್ನು ಬರೆಯಲೇ ಬೇಕೆಂದು ಯಾರಿಗೂ ತೋರಲಿಲ್ಲ. ಆದ್ದರಿಂದಲೇ ಅಂತಹ ಬರಹಗಳಾಗಲಿಲ್ಲ, ಅತ್ಯಂತ ಸರಳವಾದ ಕಾರಣ !

ಆ ಕಾಲದ ಜನರು ತಮ್ಮ ಕೊರಗು ಇದ್ದ ವಿಷಯಗಳ ಬಗ್ಗೆ ತಮಗೆ ಮಹತ್ವವಾದದ್ದೆಂದು ತೋರಿದ ವಿಷಯಗಳ ಬಗ್ಗೆ ವಿಪುಲ ಸಾಹಿತ್ಯ ಬರೆದರು. ಇದನ್ನು ನಾವು ನೋಡುತ್ತಿದ್ದೇವೆ, ಆತ್ಮಾ, ಪರಮಾತ್ಮಾ, ಮೋಕ್ಷ, ಜಗದ ಕ್ಷಣಭಂಗುರತ್ವ, ಭಕ್ತಿಮಾರ್ಗ, ಕರ್ಮಮಾರ್ಗ, ಯೋಗಮಾರ್ಗ, ಪಂಚೀಕರಣ, ನಾಮಮಹಿಮೆ, ಸಂತ ಮಹಿಮೆ, ಪಂಢರೀ ಮಹಾತ್ಮೆ, ಕಥಾಕೀರ್ತನೆ, ವಾಸನಾತ್ಯಾಗ, ವೈರಾಗ್ಯ ಇವುಗಳ ಬಗ್ಗೆ ಅವರಿಗೆ ಪರಾಕಾಷ್ಠೆಯ ಆಸೆ ಇತ್ತು. ಎಲ್ಲ ಸಂತ ಸಾಹಿತ್ಯದ ನಿರ್ಮಾಣ ಈ ಆಸ್ಥೆಯಿಂದ ಈ ಹಂಬಲದಿಂದಲೇ ಆಯಿತು. ಅದು ಕೇವಲ ಜ್ಞಾನೇಶ್ವರ, ನಾಮದೇವ, ಏಕನಾಥ, ತುಕಾರಾಮ ಇಂಥ ಸಂತಶ್ರೇಷ್ಟರಿಂದಲೇ ನಿರ್ಮಾಣವಾಯಿತೆಂದಲ್ಲ. ಸಮಾಜದಲ್ಲಿಯ ಎಲ್ಲ ದರ್ಜೆಯ ನೂರಾರು ಜನರು ವೇದಾಂತ ಭಕ್ತಿ ಮೋಕ್ಷ ಇವುಗಳ ಮೇಲೆ ತಮ್ಮ ವಿಚಾರಗಳನ್ನು ಮಂಡಿಸಿದ್ದಾರೆ. ನಾವಲಿಗ, ಗಾಣಿಗ, ಕುಂಬಾರ, ಮಹಾರ, ಸಮಗಾರ ಜಾತಿಗಳಲ್ಲಿಯ ಜನರೂ ವೇದಾಂತ ಬರೆದಿದ್ದಾರೆ. ಸ್ತ್ರೀಯರಲ್ಲಿ ಸಹ ಶ್ರೇಷ್ಠ ಮಹಿಳೆಯರು ಸಾಹಿತ್ಯ ಬರೆದಿದ್ದಾರೆ, ದಾಸಿಗಳು ಬರೆದಿದ್ದಾರೆ, ವೇಶ್ಯಯರು ಬರೆದಿದ್ದಾರೆ, ಇಂತಹ ಒಂದು ವರ್ಗದ ಇಂತಹ ಒಂದು ಜಾತಿಯ ಸಮಾಜದಲ್ಲಿ ಇಂತಹ ದರ್ಜೆಯ ಜನರು ಇದರಲ್ಲಿ ಇನ್ನಿಲ್ಲವೆಂತಲ್ಲ, ಆಧ್ಯಾತ್ಮದ ವಿಠಲಭಕ್ತಿಯ ಆ ಸ್ಫುರಣ ಸಮಗ್ರ ಮಹಾರಾಷ್ಟ್ರಕ್ಕಾಗಿತ್ತು ಸಕಲ ಮಹಾರಾಷ್ಟ್ರ ಆಧ್ಯಾತ್ಮ ಸಾಹಿತ್ಯ ನಿರ್ಮಿಸುತಿತ್ತು. ಈಗ ಸ್ಪಷ್ಟವಾಗುವದೆಂದರೆ – ಮೇಲೆ ಹೇಳಿದ ಪಾರ್ಲಿಮೆಂಟ, ಮುಸಲ್ಮಾನರ ಆಕ್ರಮಣ, ಪಾನಿಪತ್‌ ಕಾಳಗದ ಪರಾಭವ, ದೇಶಾಭಿಮಾನ, ಪ್ರಜಾರಾಜ್ಯ, ಸ್ವರಾಜ್ಯ, ಸ್ವಾತಂತ್ರ, ವಾಣಿಜ್ಯ, ಕಾರವಾನೆ, ಕೆರೆ, ಕಾಲುವೆ ಇವುಗಳೆಲ್ಲ ಆ ಜನರಿಗೆ ವಿಷಯವಲ್ಲದವುಗಳಾಗಿದ್ದವು. ಹಂಬಲಿಸಿ ಏನಾದರೂ ಬರೆಯಬೇಕೆನ್ನುವ ವಿಷಯಗಳಾಗಿವೆ ಎಂದು ಅವರಿಗೆ ತೋರುತ್ತಿರಲಿಲ್ಲ. ಆದ್ದರಿಂದಲೇ ಅವುಗಳ ಬಗ್ಗೆ ಏನೂ ಬರೆಯಲಿಲ್ಲ. ತಾವು ಬರೆಯಲಿಲ್ಲ ಇಷ್ಟೇ ಅಲ್ಲ ಆಧ್ಯಾತ್ಮ ವಿಷಯಗಳನ್ನುಳಿದು ಇತರ ವಿಷಯಗಳ ಬಗ್ಗೆ ಯಾರೂ ಬರೆಯುವದು ಅವರಿಗೆ ಮಾನ್ಯವಿದ್ದಿಲ್ಲ. ಜ್ಯೋತಿಷ, ಶಿಲ್ಪಶಾಸ್ತ್ರ, ನೀತಿ ವೈದ್ಯಶಾಸ್ತ್ರ, ಕಾವ್ಯ, ನಾಟಕ ವ್ಯಾಕರಣ ಶಬ್ದಕೊಶಗಳ ಜ್ಞಾನ ಆಧ್ಯಾತ್ಮ ಜ್ಞಾನವಿಲ್ಲದಿದ್ದರೆ ವ್ಯರ್ಥವೆಂದು ಜ್ಞಾನೇಶ್ವರರ ಮತವಿತ್ತು. ಇಂತಹ ಜ್ಞಾನಕ್ಕೆ ಬೆಂಕಿಯನ್ನಿಕ್ಕೆಂದು ಅವರು ನುಡಿದಿದ್ದಾರೆ, “ಲೌಕಿಕದ ಪ್ರೇಮವಿದ್ದವರು, ಲೌಕಿಕ ವಿಷಯವಾಗಿ ಆಸ್ಥೆಯಿಂದ ನುಡಿಯುವವರನ್ನು ಅಜ್ಞರೆಂದು ತಿಳಿಯಬೇಕು” ಎಂದು ಅವರು ಹೇಳಿದಾರೆ-(ಜ್ಞಾನೇಶ್ವರೀ-೧೩ನೇ ಅಧ್ಯಾಯ ಶ್ಲೋಕ ೮೨೫ ರಿಂದ ೮೩೫) ದಾದೋಬಾ ಪಾಂಡುರಂಗ, ಕೃಷ್ಣಶಾಸ್ತ್ರಿ, ಲೋಕಹಿತವಾದಿ, ವಿಷ್ಣುಶಾಸ್ತ್ರೀ, ರಾಜವಾಡೆ, ಡಾ. ಕೇತಕರ, ಇವರೆಲ್ಲ ಆ ಕಾಲದ ಜನರ ಮತದಂತೆ ಇಂತಹ ಅಜ್ಞವರ್ಗದಲ್ಲಿಯೇ ಬರಬಹುದಾಗಿತ್ತು. ಇವರೆಲ್ಲ ಲೌಕಿಕ ವಿಷಯಗಳ ಬಗ್ಗೆ ಮಾತನಾಡುತ್ತಿದ್ದರು, ಬರೆಯುತ್ತಿದ್ದರು. ಇವರೆಲ್ಲ ಆಧ್ಯಾತ್ಮ ವಿದ್ಯಾವಿಹೀನರೇ ಇದ್ದರು; ಅಲ್ಲದೇ ಆ ವಿದ್ಯೆಯ ಬಗ್ಗೆ ಅವರಿಗೆ ಏನೂ ಮಮತೆ ಇರಲಿಲ್ಲ, ಶ್ರದ್ಧೆ ಇರಲಿಲ್ಲ. ಇವರಲ್ಲಿ ಕೆಲವರಾದರೂ ನಾಸ್ತಿಕರೇ ಇದ್ದರು!

ಹರಿಭಾವು ಇವರು ತಮ್ಮ ಪೂರ್ವದಲ್ಲಿ ೨೫೦ ವರ್ಷಗಳ ಹಿಂದೆ ಆಗಿ ಹೋದ ಶಿವಛತ್ರ ಪತಿಯ ಜೀವನದ ಮೇಲೆ ಕಾದಂಬರಿಗಳನ್ನು ಬರೆದರು. ಅದಕ್ಕೂ ಹಿಂದಿನ ಕಾಲದಲ್ಲಿ ಸೇರಿ ಅವರು ಪೃಥ್ವಿರಾಜ-ಜಯಚಂದ ಇವರ ಕತೆ ಬರೆದರು. ಅನಂತರ ಅದರ ಹಿಂದೆ ಸಾವಿರ ವರ್ಷಗಳ ಕಲ್ಪನೆಯನ್ನು ಹಾರಿಸಿ, ಸಾಮ್ರಾಟ ಚಂದ್ರಗುಪ್ತನ ಜೀವನವನ್ನು ಮೂರ್ತಗೊಳಿಸಿ ಮಹಾರಾಷ್ಟ್ರದ ಮುಂದೆ ನಿಲ್ಲಿಸಿದರು. ಸಾವರಕರರು ಈ ಥರದ ವಿಷಯಗಳನ್ನೇ ಕಾವ್ಯಕ್ಕೆ ಆಯ್ದುಕೊಂಡರು. ವಿನಾಯಕರು ರಜಪೂತ ರಮಣಿಯರ ಗೀತಗಳನ್ನು ಹಾಡಿದರು. ಅನಂತರ ಅನೇಕ ಕವಿಗಳು ಕಾದಂಬರಿಕಾರರು “ಪೂರ್ವದಲ್ಲಿ ದಿವ್ಯ ಯಾರದಿತ್ತೊ ಅವರಿಗೆ ರಮ್ಯ ಭಾವೀಕಾಲ” ಎಂಬ ಶ್ರದ್ಧೆಯನ್ನಿಟ್ಟು ತಮ್ಮ ವೈಭವಶಾಲಿಗಳಾದ ಪೂರ್ವಜರ ಜೀವನವನ್ನು ಕತೆ ಕಾವ್ಯಗಳಲ್ಲಿ ಅಭಿಮಾನದಿಂದ ಚಿತ್ರಿಸಿದರು. ಹಿಂದಿನ ೬೦೦ ವರ್ಷಗಳ ಕಡೆಗೆ ಈ ದೃಷ್ಟಿಯಿಂದ ನೋಡಿದರೆ ಏನು ಕಾಣುವದು? ಶಿವಾಜಿಯ ಕಾಲದವರೆಗಾದರೂ ನಮಗೆ ಇಂತಹ ದಿವ್ಯ ಪೂರ್ವ ಇತಿಹಾಸವಿದೆ ಎಂಬ ಎಚ್ಚರಿಕೆ ಯಾರೂ ತಕ್ಕೊಳ್ಳಲಿಲ್ಲ. ಚಂದ್ರಗುಪ್ತ, ಅಶೋಕ, ಕುಮಾರ ಗುಪ್ತ, ಸಮುದ್ರಗುಪ್ತ, ಹರ್ಷ, ಪುಲಿಕೇಶಿ, ಯಶೋವರ್ಮ, ಸಿಂಘಣ ಈ ಪ್ರಕಾರವಾಗಿ ಎಷ್ಟೋ ಮಹಾಪರಾಕ್ರಮಿ ಐತಿಹಾಸಿಕ ಪುರುಷರು ಈ ಭೂಮಿಯಲ್ಲಿ ಆಗಿ ಹೋಗಿದ್ದರು. ಆದರೆ ಕ್ರಿ.ಶಕ ೧೨೦೦ ರಿಂದ ೧೮೦೦ ರಲ್ಲಿಯ ಕಾಲದ ಜನರ ದೃಷ್ಟಿಯಲ್ಲಿ ಈ ಪುರುಷರು ಇಲ್ಲಿ ಆಗಿಲ್ಲವೆಂದೇ ಇತ್ತು. ಈ ಹಿಂದಿನ ಪೂರ್ವಜರ ವಿಷಯ ಹಾಗಿರಲಿ. ವಿಜಯನಗರದ ಇತಿಹಾಸವಾದರೂ ಈ ಜನರ ಕಣ್ಣು ಮುಂದೆ ಸಂಭವಿಸುತ್ತಿತ್ತು. ಅತ್ಯಂತ ನೆರೆಯಲ್ಲಿ ಸಂಭವಿಸುತ್ತಿತ್ತು, ಬಾಪ್ಪಾರಾವಳ, ಚಕ್ರವರ್ತಿ ಹಮೀರ ಇವರ ದಿವ್ಯ ಚರಿತ್ರೆ ಅವರಿಗೆ ಕೇಳಿಸುತ್ತಿದ್ದವು. ಆದರೆ ತಪ್ಪಿಯಾದರೂ, ಇವರ ಉಲ್ಲೇಖ ಯಾರೂ ಮಾಡಲಿಲ್ಲ. ಪಂಡಿತರು ರಾಮಾಯಣ ಮಹಾಭಾರತ ಪುರಾಣಗಳಲ್ಲಿಯ ಕತೆಗಳ ಮೇಲೆ ಕಾವ್ಯಗಳನ್ನು ಬರೆದರು. ಆದರೆ ಈ ಐತಿಹಾಸಿಕ ಪುರುಷರು ಅವರ ಲೆಕ್ಕಣಿಕೆಯಲ್ಲಿ ಆ ಭೂಮಿಯಲ್ಲಿ ಆಗಿಯೇ ಇದ್ದಿಲ್ಲ. ಹೀಗಿದ್ದರ ಕಾರಣವಾದರೂ ಅದೇ ಮೇಲೆ ಹೇಳಿದಂತೆ. ಅವರ ಚರಿತ್ರಗಳನ್ನು ಹಾಡಿ ಈ ಭವಸಾಗರದೊಳಗಿಂದ ದಾಟಿ ಹೋಗಬಹುದೆಂದು ಅವರಿಗೆ ತೋರುತ್ತಿರಲಿಲ್ಲ. ರಾಮ, ಕೃಷ್ಣ, ಹರಿಶ್ಚಂದ್ರ, ಅಂಬರೀಷ ಕತೆಗಳನ್ನು ಹಾಡಿದ್ದು ಆ “ದಾಟುವುದಕ್ಕೋಸ್ಕರ,” ಮೋಕ್ಷಕೋಸ್ಕರ ! ಸಮುದ್ರ ಗುಪ್ತ, ಹರ್ಷರ ಕವನಗಳಿಂದ ಆ ಪ್ರಯೋಜನವಾಗುತ್ತಿರಲಿಲ್ಲ. ಆಗ ಅವುಗಳನ್ನು ವ್ಯರ್ಥವಾಗಿ ಏಕೆ ಹಾಡಬೇಕು? ಆ ಚರಿತ್ರಗಳಿಂದ ಸ್ವರಾಜ್ಯ, ಸ್ವಾತಂತ್ರ‍್ಯ, ಸಾಮ್ರಾಜ್ಯಗಳ ಬಗ್ಗೆ ಸ್ಫೂರ್ತಿಯನ್ನೀಯಬಹುದಿತ್ತು, ಆದರೆ ಬಹು ಜನರಲ್ಲಿ ಮೋಕ್ಷದ ಚಿಂತೆ ಇದ್ದಂತೆ ಸ್ವರಾಜ್ಯ ಸಾಮ್ರಾಜ್ಯದ ಬಗ್ಗೆ ಇರಲಿಲ್ಲ, ಆದ್ದರಿಂದ ಅಂತಹ ಜೀವನಗಳ ಮೇಲೆ ಕಾದಂಬರಿ ಕತೆ ಕಾವ್ಯ ಬರೆಯಲಿಲ್ಲ. ಹರಿಭಾವು ಸಾವರಕರ, ಗಡಕರಿ, ವಿನಾಯಕರಿಗೆ ಈ ಎರಡನೆಯ ಬಗೆಯ ತಲ್ಲಣವಿತ್ತು. ಆದಕಾರಣ ಅವರು ಆ ಐತಿಹಾಸಿಕ ಪರಂಪರೆಯ ದಿವ್ಯ ವೈಭವ ಕೊಂಡಾಡುವ ಸಾಹಿತ್ಯ ನಿರ್ಮಾಣ ಮಾಡಿದರು. ಅನಂತರದ ಅವಧಿಯಲ್ಲಿ ಅಂದರೆ ಸ್ವರಾಜ್ಯ ಸ್ಥಾಪನೆಯಾದ ಅನಂತರ ಜನರ ವೃತ್ತಿ ಸ್ವಲ್ಪ ಬದಲಾಯಿತು. ಮರಾಠಾ ವೀರರ ಲಾವಣಿಗಳನ್ನು ಹಾಡಹತ್ತಿದರು. ಅವರ ವೃತ್ತಾಂತಗಳನ್ನು ರಚಿಸಹತ್ತಿದರು. ಕಾರಣವಿಷ್ಟೇ, ಸ್ವರಾಜ್ಯ ಸ್ವಾತಂತ್ರ್ಯ, ದಿಲ್ಲಿ ಪಾದಾಕ್ರಾಂತ ಮಾಡುವದು. ತುರ್ಕಸ್ಥಾನದ ಮೇಲೆ ಸ್ವಾರೀ ಮಾಡುವದು, ಈ ಆಕಾಂಕ್ಷೆ ಈ ಪರಾಕ್ರಮಗಳ ಬಗ್ಗೆ ಅವರ ದೃಷ್ಟಿಯಲ್ಲಿ ಪ್ರಾಧಾನ್ಯತೆ ಇತ್ತು. ಆದರೂ ಅರ್ವಾಚೀನ ಕಾಲದಂತೆ ಇತಿಹಾಸ ಚರಿತ್ರಗಳು ನಿರ್ಮಾಣವಾಗಲಿಲ್ಲ. ವೃತ್ತಾಂತ ಲಾವಣಿಗಳು ಸಾಹಿತ್ಯವಾದವು: ಆದರೆ ಅವುಗಳಲ್ಲಿ ಐತಿಹಾಸಿಕ ದೃಷ್ಟಿ ಇರಲಿಲ್ಲ. ಆ ಬಗ್ಗೆ ಮುಂದೆ ವಿಚಾರ ಮಾಡುವಾ. ಈಗ ಗಮನಿಸುವದೆಂದರೆ-ಈ ವಿಷಯಗಳ ಐಹಿಕ ಪರಾಕ್ರಮದ ಪ್ರಾಮುಖ್ಯತೆ ಕಂಡವರು ಅವುಗಳ ಬಗ್ಗೆ ಬರೆದರು. ಯಾರಿಗೆ ತೋರುತ್ತಿರಲಿಲ್ಲ ಅವರು ಬರೆಯಲಿಲ್ಲ.

ಮಹಾರಾಷ್ಟ್ರ ಸಾಹಿತ್ಯದ ಕ್ರಿ. ಶ.೧೨೦೦ ರಿಂದ ೧೮೦೦ ರ ಪ್ರಾಚೀನ ಕಾಲದಲ್ಲಿ ನಿಬಂಧ ಕಾದಂಬರಿ ನಾಟಕ ವಿನೋದ ಭಾವಕಾವ್ಯ ಇತಿಹಾಸ ಚರಿತ್ರೆ ಇತ್ಯಾದಿ ಸಾಹಿತ್ಯ ಏಕೆ ನಿರ್ಮಾಣವಾಗಲಿಲ್ಲೆಂಬುದರ ಬಗ್ಗೆ ಆ ಸಾಹಿತ್ಯದ ವಿಷಯಗಳ ದೃಷ್ಟಿಯಿಂದಲೇ ಈಗ ನಾವು ವಿಶ್ಲೇಷಣೆ ಮಾಡುತ್ತಿದ್ದೇವೆ. ಮುಂದೆ ಅನೇಕ ದೃಷ್ಟಿಯಿಂದ ಸಮೀಕ್ಷೆ ಮಾಡತಕ್ಕದ್ದಿದೆ. ಆದರೆ ಮೊದಲು ಅತ್ಯಂತ ಸ್ಥೂಲವಾಗಿ ಕಾಣುವ ವಿಷಯವನ್ನು ಹೇಳಿದೆ. ಐಹಿಕ ವೈಭವ, ಪರಾಕ್ರಮ, ಸ್ವಾತಂತ್ರ‍್ಯ, ಪಾರತಂತ್ರ್ಯ, ಸ್ವರಾಜ್ಯ ಸಾಮ್ರಾಜ್ಯ ವ್ಯಾಪಾರ ವ್ಯವಸಾಯ ಇಂತಹ ವಿಷಯಗಳಲ್ಲಿ ಹಿಂದಿನ ಸಮಾಜ ಆಗ ಅತ್ಯಂತ ಉದಾಸೀನವಾಗಿದ್ದಿತು. ಆದ್ದರಿಂದ ಆ ವಿಷಯಗಳ ಬಗ್ಗೆ ಬರೆಯಲಿಲ್ಲ. ಆಧ್ಯಾತ್ಮದ ಬಗ್ಗೆ ಬಹಳೇ ಪ್ರಾಮುಖ್ಯ ತೋರುತ್ತಿತ್ತು. ಆದ್ದರಿಂದ ಆ ಥರದ ವಿಪುಲ ಸಾಹಿತ್ಯ ನಿರ್ಮಾಣ ಮಾಡಿದರು.

ಅರ್ವಾಚೀನ ಕಾಲದಲ್ಲಿಯ ಸಾಮಾಜಿಕ ಲಲಿತ ಸಾಹಿತ್ಯ ನೋಡಿದರೂ ಇದೇ ನಿರ್ಣಯ ದೃಢವಾಗುತ್ತದೆ. ಈ ಲಲಿತ ಲೇಖಕರು: ಆಯ್ದುಕೊಂಡವುಗಳು ಹಳೆಯ ಬರಹಗಾರರ ಅಭಿಪ್ರಾಯದಲ್ಲಿ ಸಾಹಿತ್ಯ ವಿಷಯಗಳಾಗಲು ಶಕ್ಯವಿದ್ದಿಲ್ಲ. ಸ್ತ್ರೀ ಜೀವನ ದಲಿತ ಜೀವನಗಳಿಂದ, ನಮ್ಮ ಕಾದಂಬರಿ, ಸಣ್ಣ ಕತೆ, ನಾಟಕ, ಕಾವ್ಯ ಸಾಹಿತ್ಯದ ಬಹುಭಾಗ ವ್ಯಾಪಿಸಿಕೊಂಡಿದೆ. “ಯಾರು ಲಕ್ಷಿಸುವರು” ಕಾದಂಬರಿಯಲ್ಲಿ ಯಮುನೆ, ಅವಳ ಅಜ್ಜಿ, ತಾಯಿ, ಮಲತಾಯಿ, ಉಮಾ ಅತ್ತೆ, ಗೆಳತಿ ದುರ್ಗಿ, ಈ ಎಲ್ಲ ಸ್ತ್ರೀಯರ ಆಕ್ರಂದನ ನಮಗೆ ಕೇಳಿಸುತ್ತದೆ. ಅಸ್ಪೃಶ್ಯ, ಒಕ್ಕಲಿಗ, ಕೂಲಿಕಾರ ಆದಿವಾಸಿಗಳ ಬಗ್ಗೆಯೂ ಅದೇ. “ಕಾಲ ಬಹಳ ವಿಷಮ”, “ಅಂತ್ಯಜ ಬಾಲಕನ ಸಮಸ್ಯೆ”, “ಕೂಲಿಕಾರರ ಉಪವಾಸ
ಪ್ರಸಂಗ” ಈ ಕತೆ ಕಾವ್ಯಗಳಿಂದ ಇತ್ತೀಚಿನ “ಕುರುಬಹಟ್ಟಿ”, “ಬೀದಿ”, “ಫಕೀರ”, “ಲಿಲಾವ” ಇವುಗಳವರೆಗೆ ಅವರ ಜೀವನದ ಬಹುವಿಧ ದರ್ಶನವನ್ನು ಲೇಖಕರು ರೂಪಿಸುತ್ತಿದ್ದಾರೆ. ಅವರ ಸುಖದುಃಖದ, ಪ್ರಾಮುಖ್ಯವಾಗಿ ದುಃಖದ ಆಖ್ಯಾನಗಳನ್ನು ಕೇಳಿಸುತ್ತಿದ್ದಾರೆ. ಆದರೆ ಇವರಿಗೆ ಯಾವ ಸುಖದುಃಖವಿಲ್ಲವೆಂಬತೆ ಹಿಂದಿನ ಕವಿಗಳು ಭಾವಿಸಿದಂತಿತ್ತು. ನಾರಿ ನರಕದ ದಾರಿಯಾಗಿದ್ದಳು. ಮೋಕ್ಷಮಾರ್ಗದಲ್ಲಿ ಪಾಷಾಣಳಾಗಿದ್ದಳು. ಪುರುಷನಿಗೆ ಮಾಯಾಮೋಹದಲ್ಲಿ ತೊಡಕಿಸುವವಳು, ನಾರಾಯಣ, ಅವಳ ಸಂಗ ನಮಗೆ ಸಂಭವಿಸದಂತೆ ಮಾಡು–ಹೀಗೆ ಅವಳ ಸಮಸ್ಯೆಗಳನ್ನೆಲ್ಲ ಪರಿಹರಿಸಿದ್ದರು, ಮಹಿಳೆಗೆ ಸ್ವತಂತ್ರ ಜೀವನವಿದೆ, ಪ್ರತಿಷ್ಠೆ ಇದೆ, ಸಮಸ್ಯೆಗಳಿವೆಂದು ಅವರಿಗೆ ಮಾನ್ಯವೇ ಇದ್ದಿಲ್ಲ, ವೈಧವ್ಯ, ಪರಾಧೀನತೆ, ಕಷ್ಟ ಹೀಗೇನಾದರೂ ಆಕೆಗೆ ದುಃಖಗಳಿದ್ದರೂ ಅವುಗಳ ವರ್ಣನೆಗಳ ಬಗ್ಗೆ ಸ್ವತಂತ್ರ ಕಾವ್ಯ ಕತೆಗಳನ್ನು ರಚಿಸಬೇಕೆನ್ನುವ ಯೋಚನೆ ಅವರಿಗೆ ಕನಸಿನಲ್ಲಿಯ ಬರಲಿಲ್ಲ. ಅವುಗಳ ಮಹತ್ವವೇ ಅವರಿಗೆ ತೋರುತ್ತಿರಲಿಲ್ಲ, ದಲಿತರ ಬಗ್ಗೆ ಬಹುಮಟ್ಟಿಗೆ ಸಹಾನುಭೂತಿ ಇತ್ತು. ಆದರೆ ಅವರ ಮೋಕ್ಷದ ಬಗ್ಗೆ ! ತಮ್ಮ ಮತ್ತು ಇತರರ ದುಃಖಗಳನ್ನು ವರ್ಣಿಸುತ್ತಿದ್ದರು ನಿಜ. ಆದರೆ ಈ ಸಂಸಾರ ಎಷ್ಟು ದುಃಖಮಯ ದಾರುಣ, ಹೇಸಿಕೆಯದಿದೆ ಎಂದು ತೋರಿಸಿ ಆ ವಿಷಯಗಳ ಬಗ್ಗೆ ಉದಾಸೀನರಾಗಿರುವುದು ಹೇಗೆ ಅವಶ್ಯವಿದೆಯೆಂದು ಮನಸ್ಸಿನ ಮೇಲೆ ಬಿಂಬಿಸುವದಕ್ಕಾಗಿ ಅವರು ಇಂತಹ ವರ್ಣನೆಗಳನ್ನು ಮಾಡುತ್ತಿದ್ದರು. ಅರ್ಥಾತ್ ಆ ವಿಷಯಗಳು ಕೇವಲ ಆನುಷಂಗಿಕವಾಗಿ ಮುಖ್ಯ ವಿಷಯಗಳೆಂದರೆ ಆತ್ಮಾ, ಪರಮಾತ್ಮಾ, ಮೋಕ್ಷ, ಭಕ್ತಿ, ನಾಮಮಹಿಮೆ, ಇವುಗಳ ಕಡೆಗೆ ಜನರು ಒಲಿಯುವಂತೆ ಸ್ತ್ರೀನಿಂದೆ ಸಂಸಾರನಿಂದೆ ಮಾಡುತ್ತಿದ್ದರು.

“ಮಹಾರಾಷ್ಟ್ರ ಭಾಷೆಯ ಬೆಳವಣಿಗೆ” ಎಂಬ ತಮ್ಮ ನಿಬಂಧದಲ್ಲಿ ಲೋಕಮಾನ್ಯ ತಿಲಕರು ಬರೆದಿದ್ದಾರೆ : “ಯಾವದೇ ಭಾಷೆಯ ಮಹಾ ಪ್ರಸಿದ್ಧ ಗ್ರಂಥಕಾರರನ್ನು ತಕೊಳ್ಳಿರಿ, ಅವರ ಅಂತಃಕರಣ ಹೃದ್ಗತ ಜನರಿಗೆ ತಿಳಿಸುವ ಸಲುವಾಗಿ ಅತ್ಯಂತ ಉತ್ಸುಕರಾಗಿರುತ್ತಾರೆಂದು ಗೋಚರವಾಗುತ್ತದೆ. ತಮ್ಮ ವಿಚಾರಗಳು ಸತ್ಯವಾದವುಗಳೂ ದೇಶಹಿತಕ್ಕಾಗಿವೆಯೆಂದೂ ಸ್ವಂತದ ಭರವಸೆ ಇರುತ್ತದೆ. ಆ ವಿಚಾರಗಳನ್ನು ಪ್ರಸಾರ ಮಾಡಲೆಂದೇ ಈಶ್ವರನು ತಮಗೆ ಜನ್ಮ ಕೊಟ್ಟಿದ್ದಾನೆಂಬ ದೃಢವಾದ ನಂಬುಗೆ ಇರದಿದ್ದರೆ, ಯಾರಿಂದಲೂ ಸ್ವಭಾಷೆಯ ಸೇವೆಯಾಗುವದು ಸಾಧ್ಯವಿಲ್ಲ”.

ಹಿಂದಿನ ಕಾಲದಲ್ಲಿ ಆಧ್ಯಾತ್ಮ ಸಾಹಿತ್ಯ ವಿಪುಲವಾಯಿತು, ಕಾದಂಬರಿ, ನಾಟಕದಂತೆ ಲಲಿತ ಸಾಹಿತ್ಯ, ಇತಿಹಾಸ ರಾಜಕಾರಣದಂತೆ ತಾತ್ವಿಕ ಸಾಹಿತ್ಯ ನಿರ್ಮಾಣವಾಗಲಿಲ್ಲ. ಕಾರಣ ಈಗ ವ್ಯಕ್ತವಾಗಬಹುದು, ಮೊದಲ ಥರದ ಸಾಹಿತ್ಯ ರಚಿಸುವ ಹಂಬಲ ಆ ಕಾಲದ ಜನರಲ್ಲಿತ್ತು. ಎರಡನೆ ಥರದ ಸಾಹಿತ್ಯದ ಬಗ್ಗೆ ಅವರು ಉದಾಸೀನರಾಗಿದ್ದರು. ಒಂದು ಕಾರಣ ಹೇಳಿದಂತಾಯಿತು, ಈಗ ಇನ್ನೂ ಏನಾದರೂ ಕಾರಣಗಳಿವೆಯೋ ಹೇಗೆ ನೋಡಣ.
೩
ಬದ್ಧ ಪ್ರತಿಭೆ–

ಅರ್ವಾಚೀನ ಸಾಹಿತ್ಯದ ರೂಪಗಳನ್ನು ಪರಿಶೀಲಿಸಿದರೆ–ಆ ಥರದ ಸಾಹಿತ್ಯ ಆ ಪ್ರಾಚೀನ ಕಾಲದಲ್ಲಿ ನಿರ್ಮಾಣವಾಗುವದು ಅಸಾಧ್ಯವೆಂದು ಗಮನಿಸಬಹುದು. ಕೇಶವ ಸುತರ ಉದಾರ ನೋಡಿರಿ: “ಹಳೆಯದೆಲ್ಲ ಅಳಿಯಲಿ, ತೀರಿಹೋಗಲಿ, ದಹಿಸಲಿ, ಇಲ್ಲವೆ ಸಮಾಧಿ ಮಾಡಿರಿ”, ‘ಪ್ರಾಪ್ತಕಾಲವೆ ವಿಶಾಲ, ಭೂಧರ ಸುಂದರ ಶೃಂಗಾರ ಚಿತ್ರಿಸಿರಿ” “ಕಳೆದ ಶತಮಾನದ ಪಾಪಗಳು ಘೋರವಾಗಿದೆ. ತೊಳೆಯಲು ನಿಮ್ಮ ರಕ್ತ ಅಗತ್ಯ” “ನಿಯಮನ ಮನುಷ್ಯನಿಗಾಗಿ, ಮಾನವ ನಿಯಮನಕ್ಕಾಗಿ ಅಲ್ಲಿ ತಿಳಿಯಿರಿ” “ದೇವ ದಾನವರು ಮನುಷ್ಯ ನಿರ್ಮಿತ”, “ಪದ್ಯಪಂಕ್ತಿಗಳನ್ನಾಧರಿಸಿ,…ಜಗವ ಸುತ್ತಿ ಹೇಗೆ ಸಮರ್ಪಿಸಲಿ”-ಇವು ಮತ್ತು ಇಂತಹ ಉದ್ದಾಮ ವಿಚಾರಗಳನ್ನು ಹಿಂದಿನ ಕಾಲದಲ್ಲಿ ಹೇಳುವದು ಯಾರಿಗಾದರೂ ಸಾಧ್ಯವಿತ್ತೇ ? “ದಸರೆ” “ಸ್ಮಶಾನದಲ್ಲಿಯ ಗೀತ” ಇಂತಹ ಕವಿತೆಗಳನ್ನು ಆ ಕಾಲಕ್ಕೆ ರಚಿಸಿ ಪ್ರಸಿದ್ಧ ಮಾಡಲು ಬರಬಹುದಿತ್ತೇ ? ದಾದೋಬಾ, ಪಾಂಡುರಂಗ, ಜ್ಯೋತಿಬಾ ಫುಲೆ, ಲೋಕಹಿತವಾದೀ, ವಿಷ್ಣುಶಾಸ್ತ್ರಿ, ತಿಲಕ ಆಗರಕರ, ಮತ್ತು ಅವರ ಅನುಯಾಯಿಗಳು ಸಮಾಜ ಕಾರಣ, ಪರ್ವ ಕಾರಣ, ರಾಜಕಾರಣಿಗಳ ಮೇಲೆ ಅತ್ಯಂತ ಕ್ರಾಂತಿಕಾರಕ ವಿಚಾರಗಳನ್ನು ಮಂಡಿಸಿದರು. ತಮ್ಮದೆಂದು ಮಂಡಿಸಿದರು, ಇತಿಹಾಸ ಮತ್ತು ಅನುಭವಗಳ ಆಧಾರಗಳಿಂದ ಅವುಗಳನ್ನು ಸಮರ್ಥಿಸಿದರು: “ಇಂಗ್ಲಿಷ ವಿದ್ವಾಂಸ ಆ ಕಾಲದಲ್ಲಿ ಒಬ್ಬನಾದರೂ ಹಿಂದು ಸ್ಥಾನದಲ್ಲಿರುತ್ತಿದ್ದರೆ ರಾಜ್ಯ ಕಳೆದುಹೋಗುತ್ತಿದ್ದಿಲ್ಲ”, “ವಾಸ್ತವಿಕವಾಗಿ ನನಗೆ ಇಂಗ್ಲಿಷ ವಿದ್ವಾಂಸನಂತೆ ಧರ್ಮಿಷ್ಟರಾರೂ ಕಾಣುವದಿಲ್ಲ.” “ಮಹಿಳೆಯರ ಅಧಿಕಾರ ಮಾನ್ಯಮಾಡದ ದೇಶದಲ್ಲಿ ಜನರ ಸ್ಥಿತಿ ಹೀನವಾಗಿರುತ್ತವೆ.” “ಶಾಸ್ತ್ರವೆಂದರೆ ಜನರಿಗೆ ಸುಖವಾಗುವ ರೀತಿ; ಅದು ವಿಪರೀತದೇನಾದರೂ ಇದ್ದಲ್ಲಿ ಕಟ್ಟಿಡಲು ಕಾತರವೇಕೆ? (ಲೋಕಹಿತವಾದಿ), “ಈ ಕಡೆಯ ದೇಶದಲ್ಲಿ ದೇಶಾಭಿಮಾನವೆಂಬ ಮನೋವೃತ್ತಿ ಸಾಕಷ್ಟು ಜನರಿಗೆ ಅರಿವಿಲ್ಲ. ಈ ರಾಷ್ಟ್ರದ ವಿಸ್ತೀರ್ಣತೆ, ಜಾತಿಭೇದಗಳು ಮುಖ್ಯ ಕಾರಣಗಳಾಗಿವೆ, ನಾವು ಅದರ ನಾಯಕ ಬೀಗದ ಕೈಯನ್ನು ಪಾಶ್ಚಾತ್ಯರಿಂದ ತಕ್ಕೊಳ್ಳಲೇಬೇಕು” (ವಿಷ್ಣು ಶಾಸ್ತ್ರಿ). “ಜಾತಿಭೇದವು ರಾಜನೀತಿ ಹಾಳಾದ ಲಕ್ಷಣ”. “ಪ್ರಜೆಗಳೆಲ್ಲ ಒಂದು ಕುಟುಂಬ ಎಂಬ ನಿಜವಾದ ರಾಜನೀತಿಯ ವಿನಾ ತಾಳಲಾರೆವು” (ವಿಷ್ಣುಬುವಾ ಬ್ರಹ್ಮಚಾರೀ), “ಲಗ್ನಾನಂತರ ವಧು ತಾಯಿತಂದೆಗಳ ಮನೆ ತ್ಯಜಿಸಿ ಒಮ್ಮೆಲೆ ಗಂಡನ ಸ್ವತಂತ್ರ ಸಂಸಾರದ ಅಧಿಪತ್ಯವನ್ನು ವಹಿಸಬೇಕು”, “ಮನುಷ್ಯ ಜಾತಿಯ ಪೂರ್ಣಾವಸ್ಥೆ ಇನ್ನೂ ಮುಂದೆ ಬರತಕ್ಕದ್ದದೆ”, “ತೀವ್ರ ಹಸಿವು ಮತ್ತು ವಿಷಯ ವಾಸನೆಗಳನ್ನು ಉತ್ತಮ ರೀತಿಯಿಂದ ತೃಪ್ತಿಪಡಿಸಿದಾಗ ಆಗುವ ಸಮಾಧಾನ ಅದ್ವಿತೀಯ ಅವರ್ಣನೀಯ”, “ಯಾರೋ ಕಾಣದ ಮನು-ಪಾರಾಶರರ ಕತೆ ಏನು?” “ಇಷ್ಟವಾದುದನ್ನು ನುಡಿಯುತ್ತೇನೆ, ಸಾಧ್ಯವಾದುದನ್ನು ಮಾಡುತ್ತೇನೆ” (ಆಗರಕರ್) -ಇವು ಮತ್ತು ಇಂತಹ ತತ್ವಜ್ಞಾನವನ್ನು ನಿಬಂಧಕಾರರು ಮತ್ತು ಗ್ರಂಥಕಾರರು ಮಂಡಿಸಿದರು. ಅದರಿಂದಲೇ ಕಾದಂಬರಿ, ಸಣ್ಣಕತೆ, ನಾಟಕ, ವಿನೋದ, ಭಾವಗೀತದಂತೆ ಅರ್ವಾಚೀನ ಸಾಹಿತ್ಯ ನಿರ್ಮಾಣವಾಯಿತು. ಹಿಂದಿನ ಆ ದೀರ್ಘ ಕಾಲಾವಧಿಯಲ್ಲಿ ಈ ತತ್ವಜ್ಞಾನ ಯಾರೂ ಮಂಡಿಸಲಿಲ್ಲ. ಆ ಥರದ ಧೈರ್ಯ ಯಾರೂ ಪ್ರಕಟಿಸಲಿಲ್ಲ. ಆದ್ದರಿಂದಲೇ ಅದರ ಆಧಾರದಿಂದ ಪ್ರಕಟವಾಗುವ ಲಲಿತಸಾಹಿತ್ಯವೂ ನಿರ್ಮಾಣವಾಗಲಿಲ್ಲ.

ನಾವು ಪರಿಶೀಲಿಸುತ್ತಿರುವ ಮರಾಠಿ ಸಾಹಿತ್ಯದ ಕಾಲಖಂಡದಲ್ಲಿಯ ಪಶ್ಚಿಮ ಯೂರೋಪದ ದೇಶಗಳ ಸಾಹಿತ್ಯ ಇತಿಹಾಸ ಪರಿಶೀಲಿಸಿದರೆ, ನಾಟಕ ಕಾದಂಬರಿ ವಿನೋದ ಈ ಥರದ, ರಾಜಕಾರಣ ಇತಿಹಾಸ ಚರಿತ್ರ ಈ ಥರದ ಸಾಹಿತ್ಯ ನಮ್ಮ ಕಡೆಗೆ ಏಕಾಗಲಿಲ್ಲವೆನ್ನುವುದು ಸಹಜವಾಗಿ ತಿಳಿಯಬಹುದು. ಹದಿನಾರನೇ ಶತಮಾನದ ಕೊನೆಯವರೆಗೆ ಯುರೋಪಲ್ಲಿ ತಮೋಯುಗವಿತ್ತು. ಮತ್ತು ಎಲ್ಲ ಸಮಾಜ ಶಬ್ದ ಪ್ರಾಮಾಣ್ಯವಾದೀ, ಪರಮಾರ್ಥ ನಿಷ್ಠ, ಇಹವಿಮುಖ-ಹೀಗೆಯೇ ಇತ್ತು. ಆನಂತರ ಗ್ರೀಕ ವಿದ್ಯೆಯ ಪುನರುಜೀವನದಿಂದ ಅಲ್ಲಿ ಮಾನವನ ಬುದ್ದಿ ಸಾವಕಾಶವಾಗಿ ಸ್ವತಂತ್ರವಾಗ ಹತ್ತಿದ ಹಾಗೆ ಸಾಮಾಜಿಕ ರೂಢಿ ಧಾರ್ಮಿಕ ಬಂಧನ ಮತ್ತು ರಾಜಸತ್ತೆಯ ನಿಯಂತ್ರಣದಿಂದ ಮುಕ್ತವಾಗ ಹತ್ತಿತು. ಆ ಪ್ರಕಾರ ಮುಕ್ತವಾದ ಹಾಗೆ, ಪ್ರತಿಯೊಬ್ಬನ ವ್ಯಕ್ತಿತ್ವ, ಅವನ ಅಹಂವೃತ್ತಿ, ಆತ್ಮನಿಷ್ಠೆ, ಜಾಗೃತ ಮತ್ತು ಸಮರ್ಥವಾಗ ಹತ್ತಿದವು; ಮತ್ತು ಅನಂತರ ಅನಂತ ಪ್ರಕಾರಗಳಿಂದ ಆವಿಷ್ಕಾರವಾಗ ಹತ್ತಿದವು. ಆ ಆವಿಷ್ಕಾರವೆಂದರೇನೇ, ಮೇಲೆ ಹೇಳಿದ ಬಹುವಿಧವಾದ ಲಲಿತ ಮತ್ತು ತಾತ್ವಿಕ ಸಾಹಿತ್ಯವೇ ಸರಿ. ಮಾನವನ ಬುದ್ದಿ ಮುಕ್ತವಾಗುತ್ತಲೇ ಅದು ಜಗದ ಅವಲೋಕನೆಯನ್ನು ಮಾಡಹತ್ತುತ್ತದೆ ಮತ್ತು ಆ ಜಗದ ವ್ಯವಹಾರಗಳ ಬಗ್ಗೆ ಸ್ವಂತದ ಸಿದ್ದಾಂತವನ್ನು ರಚಿಸುವ ಸಾಮರ್ಥ್ಯ ಹೊಂದುತ್ತದೆ. ಈ ಲೋಕ ವ್ಯವಹಾರಗಳ ಮಾನವಜೀವನದ ವಿಷಯವಾಗಿ ವ್ಯಕ್ತಿಯು ಸ್ವಂತಕ್ಕಾಗಿ ಸ್ವತಂತ್ರವಾದ ಅರ್ಥ ಹಚ್ಚುತ್ತಾನೆ. ಆ ಜೀವನದ ಮೇಲೆ ಸ್ವಂತದ ಭಾಷ್ಯವನ್ನೂ ರಚಿಸುತ್ತಾನೆ. ಲಲಿತ ಸಾಹಿತ್ಯವು ಈ ಭಾಷ್ಯದಿಂದಲೇ ನಿರ್ಮಾಣವಾಗುತ್ತದೆ. ಈ ಭಾಷ್ಯಸಾವರ್ಥವಿಲ್ಲದ ಬುದ್ದಿ ಕಾದಂಬರಿ ನಾಟಕ ಬರೆಯಲಾರದು. ಅವಲೋಕನದಿಂದ ಸ್ವತಂತ್ರ ನಿರ್ಣಯ ಮಾಡಿ ಸಾಮಾನ್ಯ ಸಿದ್ದಾಂತ ಪ್ರಸ್ತಾಪಿತ ಮಾಡುವ ಶಕ್ತಿ ಇಲ್ಲದ ಬುದ್ದಿಯು ಇತಿಹಾಸ ಮೀಮಾಂಸೆಯನ್ನೇನು ಮಾಡುವದು? ರಾಜಕಾರಣ ಶಾಸ್ತ್ರ ಹೇಗೆ ನಿರ್ಮಾಣ ಮಾಡುವುದು ? ೧೪-೧೫ ಶತಮಾನಗಳಲ್ಲಿ ಪಶ್ಚಿಮ ಯುರೋಪದ ಮಾನವನು ಧಾರ್ಮಿಕ ಮತ್ತು ರಾಜಕೀಯ ಸಂಗ್ರಾಮಗಳನ್ನು ಮಾಡಿ, ಮೊದಲು ತನ್ನ ಬುದ್ದಿ ತನ್ನ ಪ್ರಜ್ಞೆ ತನ್ನ ಪ್ರತಿಭೆ ಅಂದರೇನೇ ಸಾಹಿತ್ಯ ಜನನಿ–ಸರಸ್ವತಿಯನ್ನು ಬಂಧಮುಕ್ತ ಮಾಡಿದನು, ಸ್ವಾತಂತ್ರ್ಯ ಪ್ರಾಪ್ತಮಾಡಿಕೊಟ್ಟನು. ಆದ್ದರಿಂದಲೇ ವ್ಯಕ್ತಿ ವ್ಯಕ್ತಿಗಳ ಚಿತ್ರಗಳಿಂದ ಮಾನವೀ ಜೀವನದ ಎಲ್ಲ ಕ್ಷೇತ್ರಗಳಲ್ಲಿ ಅಬ್ಬರ ಸ್ಪುರಣವಾಗಹತ್ತಿತು. ಜೀನ್‌ಫ್ರಾಯಿ ಸ್ಮಾರಟ್ (ಜನ್ಮ ೧೩೩೮) ಇಂಗ್ಲಂಡದ ಇತಿಹಾಸ ಬರೆದನು. ರಿಚರ್ಡ್ ಹ್ಯಾಕಲುಯಿಟ್ (ಜನ್ಮ ೧೫೫೨) ಇಂಗ್ಲಂಡಿನ ಜಲಪರ್ಯಟನದ ಇತಿಹಾಸ ರಚಿಸಿದನು. ರಾಫೆಲ ಹಾಲಿನ್‌ಶೆಡ್ ಇವನೂ ಸಹ ಕ್ರಿ. ಶಕ ೧೫೭೭ ರಲ್ಲಿ ಇಂಗ್ಲಂಡದ ಇತಿಹಾಸ ಪ್ರಸಿದ್ಧ ಮಾಡಿದನು. ಮಾಂಟೇನನ ನಿಬಂಧಗಳು ೧೫೮೧ ರಲ್ಲಿ ಪ್ರಕಟವಾದವು. ಬೇಕನ್ನನ ನಿಬಂಧಗಳು “ಅಡ್ವಾನ್ಸ್ಮೆಂಟ್ ಆಫ್ ಲರ್ನಿಂಗ್” ಮತ್ತು “ನೋವ್ಹಮ್ ಆರ್ಗ್ಯಾನಮ್” ಗ್ರಂಥಗಳು ೧೬೦೫ ರಿಂದ ೧೬೨೦ ರಲ್ಲಿ ಪ್ರಕಾಶಿತವಾದವು. ಶೇಕ್ಸಪಿಯರನ ನಾಟ್ಯ ರಚನೆ ಈ ಕಾಲದಲ್ಲಿಯದೇ. ಹದಿನೇಳನೇ ಶತಮಾನದಲ್ಲಿಯಂತೂ ಪಶ್ಚಿಮ ಯುರೋಪದಲ್ಲಿ ಎಲ್ಲ ತರದ ಸಾಹಿತ್ಯಕ್ಕೆ ಉದಾನ ಬಂದಿತು. ರೇಸಿನ, ಕಾರ್ನೆಲೀ, ಮೋಲಿಯರ ಈ ಫ್ರೆಂಚ್‌ ನಾಟಕಕಾರರು ತಮ್ಮ ಕಲಾಕೃತಿಗಳನ್ನು ಈ ಶತಮಾನದಲ್ಲಿಯೇ ನಿರ್ಮಾಣ ಮಾಡಿದರು. ಸ್ಯಾಮ್ಯುಯೆಲ್ ಬಟ್ಲರನ “ಹ್ಯೂಡಿಬ್ರಾಸ್” ಕಾವ್ಯ ೧೬೬೦ರ ಸರಿಸುಮಾರಿಗೆ ಪ್ರಸಿದ್ಧವಾಯಿತು. ಇದೊಂದು ಒಳ್ಳೇ ನಂಜಿನ ವಿಡಂಬನೆಯಾಗಿದೆ. ಪ್ಯೂರಿಟನ್‌ ಜನರ ಅತಿರೇಕದ ಕರ್ಮಠತನದ ಮೇಲೆ ಅಲ್ಲಿ ವಕ್ರೋಕ್ತಿಪೂರ್ಣ ಟೀಕೆಯಿದೆ. ಜಾನ್ ಈವ್ಹಲೀನ ಮತ್ತು ಸ್ಯಾಮ್ಯುಯೆಲ್ ಪೆಪೀ ಇವರು ತಮ್ಮ ಪ್ರಚಂಡ ದಿನಚರಿಗಳನ್ನು ಈ ಶತಮಾನದಲ್ಲಿಯೇ ರಚಿಸಿದರು. ತಮ್ಮ ಕಾಲದ ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಆಗುಹೋಗುಗಳ ಬಗ್ಗೆ ಅವರು
ತಮ್ಮ ವಿಚಾರಗಳನ್ನು ಇವುಗಳಲ್ಲಿ ಸಂಗ್ರಹಿಸಿದ್ದಾರೆ. ಸರವ್ಹ್ಯಾಂಟೀಸನ “ಡಾನ್ ಕ್ವಿಕೋಟ”” ಕಾದಂಬರಿ ಈ ಶತಮಾನದ ಪ್ರಾರಂಭದಲ್ಲಿ ಮತ್ತು ಡ್ಯಾನಿಯಲ್ ಡೆಫೋನ “ರಾಬಿನ್ಸನ್ ಕ್ರೂಸೋ” ಕಾದಂಬರಿ ಮತ್ತು “ಕಾಪ್ಟನ್ ಸಿಂಗಲ್ಬನ್” ಇತ್ಯಾದಿ ಇತರೆ ಕಾದಂಬರಿಗಳು ಮುಂದಿನ ಶತಮಾನದ ಆರಂಭದಲ್ಲಿ ಪ್ರಸಿದ್ಧವಾದವು. ಮಾಕಿಯಾವ್ಹೆಲಿಯ “ಪ್ರಿನ್” ಎಂಬ ರಾಜಕಾರಣ ಗ್ರಂಥವನ್ನು ೧೬ನೇ ಶತಮಾನದ ಜಗವು ಓದಿತ್ತು. ಹ್ಯೂಗೋ ಗ್ರೊಶಸ್‌ನ “ರಾಯಿಟ್ಸ ಆಫ್ ವಾರ್ ಆಂಡ ಪೀಸ್” ಎಂಬ ಅಂತರ ರಾಷ್ಟ್ರೀಯ ಕಾನೂನಿನ ಗ್ರಂಥ ಥಾಮಸ್ ಹಾಬ್ಸನ “ಲೆವ್ಹಿಯಾಥನ್” ಎಂಬ ರಾಜಕಾರಣ ಶಾಸ್ತ್ರದ ಗ್ರಂಥ ಇದೇ ಶತಮಾನದಲ್ಲಿ ಪ್ರಸಿದ್ಧವಾದವು.

ಈ ಎಲ್ಲ ಸಾಹಿತ್ಯ ನಿರ್ಮಾಣವಾಗುವ ಪೂರ್ವದಲ್ಲಿ ಮಾನವನ ಬುದ್ದಿ ಮುಕ್ತವಾಗಿತೆಂದು ಮೇಲೆ ಹೇಳಿಯೇ ಅದೆ. ಆದರೆ ಅದರ ಜೊತೆಗೆ ಆ ಮುಕ್ತಬುದ್ದಿಯ ಜಗದ ತುಂಬೆಲ್ಲ ವಿಭ್ರಮಣ ಮಾಡುತ್ತಿದ್ದುದನ್ನು ನಾವು ಗಮನಿಸಬೇಕು. ಮಾರ್ಕೊಪೊಲೋ ೧೨೯೮ರಲ್ಲಿ ಏಶಿಯಾ ಖಂಡ ನೋಡಿ ತಿರುಗಿ ಹೋಗಿದ್ದ, ಅನಂತರ ಕೊಲಂಬಸ್, ವಾಸ್ಕೋ-ಡಿ-ಗಾಮಾ ಹಳೆ ಹೊಸ ಜಗವನ್ನು ನೋಡಿ ಬಂದರು, ಮತ್ತು ಅನಂತರ ಯುರೋಪದ ನಾಗರಿಕರು ವಿಶ್ವ ಸಂಚಾರ ಮಾಡಹತ್ತಿದರು. ಅವರು ಬಾಹ್ಯ ಪೃಥಿವಿಯನ್ನು ನೋಡಿದರು; ಅಂತರಂಗವನ್ನೂ ನಿರೀಕ್ಷಿಸಿದರು. ಸಾಗರಗಳನ್ನು ನೋಡಿದರು ಮತ್ತು ಅವುಗಳ ಆಳಗಳನ್ನೂ ಅಳೆದರು. ಇದೇ ವೇಳೆಗೆ ಕೊಪರ್ನಿಕಸ್, ಕೆಪ್ಲರ್‌, ಗ್ಯಾಲಿಲಿಯೋ, ನ್ಯೂಟನ್ ಮೊದಲಾದವರು ಮೂವತ್ತು-ಮೂವತ್ತು ವರ್ಷಗಳವರೆಗೆ ನಭೋಮಂಡಲದಲ್ಲಿದ್ದು, ನಕ್ಷತ್ರ, ಗ್ರಹ, ತಾರೆ, ಸೂರ್ಯ ಚಂದ್ರ ಇವರ ಸಂದರ್ಶನ ತೆಗೆದುಕೊಂಡರು. ಸಾರಾಂಶವಾಗಿ ಮಾನವನ ಬುದ್ದಿ ಮುಕ್ತವಾದನಂತರ, ಜಡ, ಚೇತನ ಚರಾಚರ ಎಲ್ಲ ವಿಶ್ವವನ್ನೂ ಅದರ ದೃಷ್ಟಿಪಥ ವ್ಯಾಪಿಸಿಕೊಂಡಿತು: ಅವುಗಳ ಸೂಕ್ಷ್ಮ ಅವಲೋಕನೆಯನ್ನು ಮಾಡಿತು. ಆದ್ದರಿಂದಲೇ ಅದಕ್ಕೆ ಒಂದು ಅದ್ಭುತವಾದಂತಹ ಸೃಜನಶಕ್ತಿ, ನವನಿರ್ಮಾಣ ಶಕ್ತಿ ಪ್ರಾಪ್ತವಾಯಿತು. ಈ ಸರಸ್ವತಿಯ ಕೃಪೆಯಿಂದಲೇ ಯುರೋಪವು ಮೇಲೆ ಹೇಳಿದ ಕಾವ್ಯ ನಾಟಕಾದಿ ಸಾಹಿತ್ಯ ನಿರ್ಮಾಣ ಮಾಡಿತು. ಜಗತ್ಪ್ರವಾಸ, ವ್ಯಾಪಾರ, ಸ್ವರಾಜ್ಯ, ಸ್ವಾತಂತ್ರ್ಯ, ರಾಜಕಾರಣ ಇವುಗಳ ಮತ್ತು ಸಾಹಿತ್ಯದ ಸಂಬಂಧವೇನಾದರೂ ಇರಬಹುದೇ ಎಂದು ಪ್ರಶ್ನೆಯನ್ನು ನಾವು ಆರಂಭದಲ್ಲಿ ಕೇಳಿದ್ದೆವು. ಯುರೋಪದ ಇತಿಹಾಸದ ಮೇಲಿಂದ, ಈ ಮಾನವೀ ಪ್ರಜ್ಞೆಯ ಎಲ್ಲ ಆವಿಷ್ಕಾರವು ಪರಸ್ಪರಾವಲಂಬಿ, ಪರಸ್ಪರ ಸಂಬದ್ಧ ಇವೆ, ಬಹುಧಾ ಅವಿಭಾಜ್ಯವಿವೆಯೆಂದು ನಮಗೆ ತೋರುವದು. ಕೇವಲ ಆಧ್ಯಾತ್ಮಜ್ಞಾನ ಬೇಕಾಗಿದ್ದರೂ, ಕೇವಲ ಪರಮೇಶ್ವರ ಪ್ರಾಪ್ತಿಯಷ್ಟೇ ಹೇತುವಿದ್ದರೂ, ಭೂಗರ್ಭ, ಆಕಾಶ, ಭೂಗೋಳ ರಚನೆ, ಚಂದ್ರ, ಸೂರ್ಯ, ತಾರಾಮಂಡಲ, ಗ್ರಹಮಂಡಲ, ಮೇಘ ಮಂಡಲ, ನವ ಖಂಡ, ಹದಿನಾಲ್ಕು ಭುವನ, ರಾಗಜ್ಞಾನ, ತಾಲಜ್ಞಾನ, ರೋಗ ಚಿಕಿತ್ಸೆ, ಔಷಧಿ ಜ್ಞಾನ ಇಂತಹ ಎಲ್ಲ ಪಿಂಡಬ್ರಹ್ಮಾಂಡ ರಚನೆಯ ಶ್ರವಣ ಮಾಡಬೇಕೆಂದು ಸಮರ್ಥರು 1(1 ಸ್ವಾಮಿ ರಾಮದಾಸರು) ಹೇಳಿದ್ದಾರೆ. ಆದ್ದರಿಂದ ಮಾನವೀ ಜೀವನವ ವಿಷಯದ ಮೇಲೆ ಸಾಹಿತ್ಯ ನಿರ್ಮಾಣ ಮಾಡುವವರು ಲೋಕ ವ್ಯವಹಾರದ ಚರಾಚರ ವಿಶ್ವದ, ಪಿಂಡ ಬ್ರಹ್ಮಾಂಡದ ಬಗ್ಗೆ ಎಷ್ಟು ಶ್ರವಣ ಮಾಡಲೇಬೇಕು, ಎಷ್ಟು ಸಮೀಪದಿಂದ ಅವಲೋಕಿಸಬೇಕು-ಇದನ್ನು ಹೇಳಬೇಕೇ? ಶ್ರವಣ ಭಕ್ತಿಯಿಲ್ಲದೇ ಸರಸ್ವತಿಯು ಎಂದೂ ಪ್ರಸನ್ನಳಾಗುವದಿಲ್ಲ.
೪
ಆಹಂವೃತಿಯ ಅಭಾವ —

ನಾವು ಪ್ರಾಚೀನ ಮರಾಠೀ ಕಾಲವನ್ನು ಪರಿಶೀಲಿಸಿದಾಗ ಕಾಣುವದೇನೆಂದರೆ–ಮನುಷ್ಯನ ಯಾವ ಅಹಂವೃತ್ತಿಯಿಂದ, ವ್ಯಕ್ತಿತ್ವದ ಆರ್ಭಟದಿಂದ, ಆತ್ಮಸ್ವಾತಂತ್ರ‍್ಯದಿಂದ ಎಲ್ಲ ಸಾಹಿತ್ಯ ನಿರ್ಮಾಣವಾಗುತ್ತದೆಯೋ ಆ ಸ್ವಾತಂತ್ರ್ಯ, ಆ ಅಹಂವೃತ್ತಿ, ಆ ವ್ಯಕ್ತಿತ್ವ ಇಲ್ಲಿ ಎಚ್ಚರಗೊಂಡಿರಲೇ ಇಲ್ಲ. ಯಾಕೆಂದರೆ ಸಾಮಾಜಿಕ ರೂಢಿ, ಧಾರ್ಮಿಕ ಸತ್ತೆ ಮತ್ತು ರಾಜಸತ್ತೆ ಇವುಗಳ ಜೊತೆ ಸಂಗ್ರಾಮಗಳನ್ನು ಮಾಡಿ ಯುರೋಪಿಯನ್ನರು ತಮ್ಮ ಬುದ್ದಿ ತಮ್ಮ ಪ್ರಜ್ಞೆ ಮುಕ್ತ ಮಾಡಿಕೊಂಡ ಹಾಗೆ ಭಾರತದ ನಾಗರಿಕರು ಮಾಡಿಕೊಂಡಿದ್ದಿಲ್ಲ, ವೇದ ಪ್ರಾಮಾಣ್ಯ, ಗುರುವಚನ ಪ್ರಾಮಾಣ್ಯ, ಪೂರ್ವಕರ್ಮ, ಜಾತಿಬಂಧನ, ಕರ್ಮಕಾಂಡದ ವಿಧಿನಿಷೇಧ ಈ ಬಂಧನಗಳಿಂದ ಅವರ ಬುದ್ದಿಯು ದೀರ್ಘಕಾಲದವರೆಗೆ ಬಿಗಿಯಲ್ಪಟ್ಟಿತ್ತು. ಅದಕ್ಕೆ ಸ್ವಾತಂತ್ರ್ಯವೇ ಇದ್ದಿರಲಿಲ್ಲ. ಆದ್ದರಿಂದ ಅತ್ಯಂತ ಕುಂಟಾಗಿತ್ತು. ಇಂಥ ಹೆಳವ ಬುದ್ದಿಯು “ಯಾರು ಲಕ್ಷಿಸುವರು”, “ಉಷಃಕಾಲ”, “ಶಾರದಾ”, “ಸವಾಯಿ ಮಾಧವರಾಯನ ಮೃತ್ಯು”, “ಸ್ಫೂರ್ತಿ”, “ತುತೂರಿ”, “ಭೃಂಗ, “ಆ ಎರಡನೆಯ ಮೂರ್ತಿ”, “ಸಾಗರಕ್ಕೆ”, “ನಿರ್ಝರ”, “ಆರುಣಿ ಇಂತಹ ಕಲಾಕೃತಿಗಳನ್ನು ನಿರ್ಮಾಣ ಮಾಡಲು ಸಾಧ್ಯವಿಲ್ಲ. “ವಕ್ರೃತ್ವ”, “ಇತಿಹಾಸ”, “ವಿದ್ವತ್ವ”, “ಕವಿತ್ವ”, “ಮಹಾರಾಷ್ಟ್ರಧರ್ಮ”, “ಭಾರತೀಯ ವಿವಾಹಪದ್ಧತಿ” …”, “ಶಿವಾಜಿಕಾಲದ ಸಮಾಜರಚನ” “ಮನುಷ್ಯ ಸಮಾಜದ ಪೂರ್ವಾವಸ್ಥೆ”, “ಸ್ವಯಂವರ”, “ಪ್ರಿಯಾರಾಧನ”, “ವಿವಾಹ ವಿಚ್ಛೇದ”, “ನಮ್ಮ ಭವಿತವ್ಯವೇನು, “ಸ್ತ್ರೀಶಿಕ್ಷಣ”, “ಎರಡು ಶಬ್ದಗಳಲ್ಲಿ ಎರಡು ಸಂಸ್ಕೃತಿ”, “ಮೃಗಶಿರೆ”, “ಆರ್ಯರ ಮೂಲಸ್ಥಾನ” ಇಂತಹ ನಿಬಂಧ ಪ್ರಬಂಧಗಳನ್ನು ರಚಿಸುವ ಸಾಧ್ಯತೆ ಇಲ್ಲ.

ಪೂರ್ವಸೂರಿ ಬರೆದ ಕಾವ್ಯಗಳ, ಪೂರ್ವಜರು ಬರೆದ ಪುರಾಣಕತೆಗಳ ಆಧಾರಗಳಿಂದಲೇ ಅವರು ನಡೆಸುವವರು. ಅವುಗಳಲ್ಲಿಯ ಧರ್ಮ, ನೀತಿ, ಆಧ್ಯಾತ್ಮಜ್ಞಾನಗಳನ್ನು ಹೇಳುವವರು, “ನಿಯಮಗಳು ಮನುಷ್ಯರಿಗಾಗಿ ಮಾನವನು ನಿಯಮನಗಳಿಗಾಗಿ ಅಲ್ಲ”, “ದೇವದಾನವರು ಮನುಷ್ಯ ನಿರ್ಮಿತ” ಈ ವಿಚಾರಗಳು ಅವರಿಗೆ ತಾಳುತ್ತಿರಲಿಲ್ಲ. ಅಥವಾ ಸಕಲ ವಿಶ್ವದೆದುರು ನಿಂತು “ಇಷ್ಟವಾದುದನ್ನು ನುಡಿಯುತ್ತೇನೆ ಮತ್ತು ಸಾಧ್ಯವಾದುದನ್ನು ಮಾಡುತ್ತೇನೆ” ಎಂದು ಎದೆತಟ್ಟಿ ಹೇಳುವ ಧೈರ್ಯ ಅವರಿಗೆ ಆಗುತ್ತಿರಲಿಲ್ಲ. ಇವೆಲ್ಲ ಅಹಂವೃತ್ತಿಯ, ವ್ಯಕ್ತಿತ್ವದ ಆವಿಷ್ಕಾರಗಳು. ಅವೇ ಆ ಕಾಲಕ್ಕೆ ಬಹುಮಟ್ಟಿಗೆ ಅಭಾವವಾಗಿದ್ದರಿಂದ, ಅವುಗಳ ಆವಿಷ್ಕಾರಗಳೆಲ್ಲಿಂದ ನಿರ್ಮಾಣವಾಗಬೇಕು? ಪ್ರಬಲ ಅಸ್ಮಿತೆಯೇ ಸಾಹಿತ್ಯದ ಜನನಿ ಸರಸ್ವತಿಯೇ ಸರಿ. ಅವಳೇ ಪರಾಧೀನಳಾದನಂತರ ಸಾಹಿತ್ಯ ಹೇಗೆ ನಿರ್ಮಾಣವಾಗಬೇಕು?

ಬಹುಮಟ್ಟಿಗೆ ಅಭಾವವಿತ್ತೆನ್ನುವ ಕಾರಣವೆಂದರೆ-ಜ್ಞಾನೇಶ್ವರ, ನಾಮದೇವ, ಏಕನಾಥ, ತುಕಾರಾವ, ರಾಮದಾಸ ಈ ಮಹಾ ವಿಭೂತಿಗಳು ಇದೇ ಕಾಲದಲ್ಲಿ ಜನ್ಮಿಸಿದ್ದರು. ಅವರ ಸ್ವಪ್ರತಿಷ್ಟೆ, ಅವರ ಅಹಂವೃತ್ತಿ ಪ್ರಬಲವಾಗಿತ್ತೆಂದೇ ಅವರ ಮಹಾಸಾಹಿತ್ಯ ನಿರ್ಮಾಣವಾಯಿತು. ವೇದಕ್ಕೂ ಆಕ್ಷೇಪಿಸುವ ಧೈರ್ಯವನ್ನು ಜ್ಞಾನೇಶ್ವರರು ತೋರಿದರು. ಅಮ್ಮತವನ್ನು ಗೆಲ್ಲುವ ಭಾಷೆಯನ್ನು ಬರೆಯೋಣ ಎಂದು ಆತ್ಮವಿಶ್ವಾಸ ಅವರಿಗಿತ್ತು. ಮಹಾರರ ಮನೆಯಲ್ಲಿ ಭೋಜನಕ್ಕೆ ಹೋಗುವ, ಅಸ್ಪೃಶ್ಯ ಬಾಲಕನನ್ನು ಎತ್ತಿಕೊಳ್ಳುವ ರೂಢಿಭಂಗಗಳನ್ನು ಮಾಡುವ ಶಕ್ತಿ ಏಕನಾಥರಲ್ಲಿತ್ತು. ತುಕಾರಾಮರಾದರೋ ಕಲಿಕಾಲಕ್ಕೂ ಪಾದರಕ್ಷೆಗಳಿಂದ ಹೊಡೆಯಲು ಅಂಜುತ್ತಿರಲಿಲ್ಲ. “ವೇದದಲ್ಲಿಯ ಮರ್ಮ ನಮಗೇ ಗೊತ್ತು. ಮಿಕ್ಕವರು ಅದರ ಭಾರ ತಲೆಯ ಮೇಲೆ ಹೊರಲಿ” ಎಂದು ಹೇಳಿ ಶಿಷ್ಟ ಬ್ರಾಹ್ಮಣರನ್ನು ತಾತ್ಸಾರ ಮಾಡುವ ಸ್ವಭಾವ ಅವರು ಹೆಜ್ಜೆ ಹೆಜ್ಜೆಗೆ ಪ್ರಕಟ ಮಾಡಿದರು. ಪ್ರಪಂಚಪರಮಾರ್ಥದಲ್ಲಿಯ ಶ್ರೇಷ್ಠ ಕನಿಷ್ಠ ಭಾವವನ್ನು ಮಗುಚಿಹಾಕಿ “ಮೊದಲು ಪ್ರಪಂಚ ಮಾಡಬೇಕು ಅಚ್ಚುಕಟ್ಟಾಗಿ” ಎಂದು ಸಮರ್ಥರು ಹೇಳಿದರು. ಈ ಅಹಂವೃತ್ತಿ ಈ ವ್ಯಕ್ತಿತ್ವ ಅಸಾಮಾನ್ಯವೆಂಬುದರಲ್ಲಿ ಸಂಶಯವಿಲ್ಲ. ಆದರೂ ಗಮನಿಸಬೇಕಾದ್ದೆಂದರೆ-ಈ ಮಹಾಪುರುಷರು ಸ್ವತಃ ಇಷ್ಟ್ರ ಬಂದದ್ದನ್ನು ನುಡಿಯುವ ಮತ್ತು ಸಾಧ್ಯವಾದದ್ದನ್ನು ಮಾಡುವ ಧೈರ್ಯ
ತೋರಿದರೂ ಮನುಷ್ಯನ ವ್ಯಕ್ತಿತ್ವವನ್ನು ಅವನ ಪ್ರಜ್ಞೆಯನ್ನು ಮುಕ್ತ ಮಾಡುವ ತತ್ವಜ್ಞಾನ ಹೇಳಲಿಲ್ಲ. ಆ ವಿಷಯದಲ್ಲಿ ಅವರು ಹಳೆಯ ತತ್ತ್ವಜ್ಞಾನವನ್ನೇ ಆಗ್ರಹದಿಂದ ಪಟ್ಟು ಹಿಡಿದು ಪುರಸ್ಕರಿಸಿದ್ದು ಕಾಣುತ್ತದೆ. “ಶ್ರುತಿ ತರಹ ತಾಯಿ ಜಗದಲ್ಲಿಲ್ಲ”, “ಜನ್ಮ ಪ್ರಾಪ್ತಿಯಿಂದ ಬಂದ ಕರ್ಮ ಯಾರಿಗೂ ನಿರಾಕರಿಸಲಿಕ್ಕಾಗದು”. “ಸದ್ಗುರುವಿಲ್ಲದೆ ಅನುವು ಇಲ್ಲ” ಇತ್ಯಾದಿ ತತ್ವಜ್ಞಾನವನ್ನು ಜ್ಞಾನೇಶ್ವರರು ಎಲ್ಲೆಡೆಯಲ್ಲಿ ಹೇಳಿದ್ದಾರೆ.

ಏಕನಾಥರು ಒಮ್ಮೆ ಮಹಾರನ ಮನೆಯಲ್ಲಿ ಭೋಜನ ಮಾಡಿದರು. ಆದರೆ ಆ ವಿಚಾರವನ್ನು ಅವರು ಸಮಾಜಕ್ಕೆ ಕಲಿಸಲಿಲ್ಲ, ಮತ್ತು ಅಂತ್ಯಜರ ಬಾಲಕರನ್ನು ಎಂದಿಗೂ ಎತ್ತಿಕೊಳ್ಳುವ ರೂಢಿಯನ್ನು ಪ್ರಸ್ತಾಪಿಸಲಿಲ್ಲ. ವೇದಪ್ರಾಮಾಣ್ಯ, ಪೂರ್ವಕರ್ಮ, ಜನ್ಮಪ್ರಾಪ್ತಕರ್ಮ, ಸದ್ಗುರು ಸೇವೆ ಮತ್ತು ಕಲಿಯುಗ ಈ ಮಾನವೀ ಬುದ್ಧಿಯ ಶೃಂಖಲೆಗಳ ಮೇಲೆ ಅವರಲ್ಲಿ ಯಾರೂ ತಪ್ಪಿಯಾದರೂ ಪ್ರಹಾರ ಮಾಡಲಿಲ್ಲ.

ಕೆಲವು ವಿಷಯಗಳಲ್ಲಿ ಸಮರ್ಥರ ತತ್ವಜ್ಞಾನ ಕೆಲಮಟ್ಟಿಗೆ ಭಿನ್ನವಾಗಿ ತೋರುತ್ತದೆ. ಆದರೆ ಅದು ಅವರ ಸಮಸ್ತ ಗ್ರಂಥ ಸಮುದಾಯದಲ್ಲಿ ಸಮುದ್ರದಲ್ಲಿಯ ಒಂದು ಹನಿಯಂತೆ. ಭಿನ್ನವಾದದ್ದೇನೆಂದು ಈಗ ಮೂರುನೂರು ವರ್ಷಗಳ ಅನಂತರ ಶೋಧಿಸಬೇಕಾಗಿದೆ.

ಯುರೋಪದ ಸಮಾಜ ಧುರೀಣರು ಹಳೆಯ ಶಬ್ದ ಪ್ರಾಮಾಣ್ಯದ, ಗುರುಗುಲಾಮತೆಯ ವಿಷಮತೆಯ ತತ್ವಜ್ಞಾನವನ್ನು ಬುದ್ಧಿಪೂರ್ವಕವಾಗಿ ನಿರಾಕರಿಸಿ, ವ್ಯಕ್ತಿ ಸ್ವಾತಂತ್ರ್ಯದ ಮತ್ತು ಇಹಲೋಕವಾದದ ಸಿದ್ಧಾಂತಗಳನ್ನು ಪ್ರಾಣಾರ್ಪಣೆ ಮಾಡಿ ಪ್ರಸ್ತಾಪಿಸಿದರು. ನೂರಾರು ಗ್ರಂಥಕಾರರು, ಶಾಸ್ತ್ರಜ್ಞರು, ತತ್ವವೇತ್ತರು ಮತ್ತು ಧರ್ಮಸುಧಾರಕರು ಅದೇ ರೀತಿ ಮಾಡಿದರು. ಧಾರ್ಮಿಕ, ಸಾಮಾಜಿಕ ಅನ್ಯಾಯಗಳ ಪ್ರತೀಕಾರ ಮಾಡಲು ಅವರು ಆತ್ಮಬಲಿದಾನ ಮಾಡಿದರು, ಶತಮಾನಗಳವರೆಗೆ ಸಂಗ್ರಾಮ ಮಾಡಿದರು. ಇಷ್ಟು ದೀರ್ಘ ಪ್ರಯತ್ನದ ನಂತರ ಅಲ್ಲಿಯ ಜನರ ಬುದ್ದಿ ಮುಕ್ತವಾಯಿತು ಮತ್ತು ಅದಕ್ಕೆ ಸೃಜನರ ಶಕ್ತಿ ಬಂದಿತು. ಇಲ್ಲಿ ಅಂತಹ ಪ್ರಯತ್ನವೇ ಆಗಲಿಲ್ಲ. ವಿಪರೀತವಾಗಿ, ಅಹಂವೃತ್ತಿ ಪ್ರಬಲವಿದ್ದವರೂ ಸಹ ಹಳೆಯ ತತ್ವಗಳನ್ನು ಆಗ್ರಹದಿಂದ ಪುರಸ್ಕರಿಸಿದರು. ಆದ್ದರಿಂದ ಕೆಲವು ಆಪವಾದಗಳನ್ನು ಬಿಟ್ಟರೆ, ಇಲ್ಲಿ ಸಮಾಜದ ಮನಸ್ಸಿನಲ್ಲಿ ಸಾಹಿತ್ಯದ ನಿರ್ಮಿತಿಗೆ ಅಗತ್ಯವಿದ್ದ ಆ ಅಹಂವೃತ್ತಿಯ ಮತ್ತು ವ್ಯಕ್ತಿತ್ವದ ಅಭಾವವಿತ್ತೆಂದು ಹೇಳುವುದೇ ಯೋಗ್ಯವಾದುದು. ಮುಂದೆ ರಾಜಕೀಯ ಕ್ಷೇತ್ರದಲ್ಲಿಯೂ ಇದೇ ದೃಶ್ಯ ಕಾಣುತ್ತದೆ. ಶ್ರೀಶಿವಛತ್ರಪತಿಯೊಬ್ಬ ಅಸಾಮಾನ್ಯ ಅಸ್ಮಿತೆಯ ಸ್ಪುರಣವೇ ಸರಿ. ಆ ಅಸ್ಮಿತೆಯಿಂದಲೇ ಮಾಹಾರಾಷ್ಟ್ರ ಮತ್ತು ಭಾರತದ ಇತಿಹಾಸ ಬದಲಾಯಿತು. ಶಿವಛತ್ರಪತಿ ಹೊಸ ತತ್ವಜ್ಞಾನವನ್ನು ಹೇಳಿದ್ದರು : ಅದರಂತೆ ಅನೇಕ ಬಾರಿ ಆಚರಣೆಯನ್ನು ಮಾಡಿದರು. ಆದರೆ ಬೇರೆ ಒಂದು ಲೇಖದಲ್ಲಿ (ಶಿವಛತ್ರಪತಿಯ ಕ್ರಾಂತಿಕಾರ್ಯ – “ವಸಂತ”.ದೀಪಾವಳಿಯ ಅಂಕ ೧೯೬೦) ಹೇಳಿದಂತೆ ಆ ಕಾಲದ ಯಾವ ಶಾಸ್ತ್ರಿ ಪಂಡಿತರೂ ಆ ಕ್ರಾಂತಿಕಾರಕ ತತ್ವಜ್ಞಾನವನ್ನು ಗ್ರಂಥಸ್ಥ ಮಾಡದೆ ಇದ್ದುದರಿಂದ ಒಂದೇ ತಲೆಮಾರಿನಲ್ಲಿ ಬಂಡಿಯು ಮೊದಲಿನ ಚಕ್ರದ ಮೇಲೆಯೇ ಉರುಳಲಾರಂಭಿಸಿತ್ತು. ಕೃತಿಯ ಹಿಂದೆ ತತ್ವಜ್ಞಾನವು ಸತತವಾಗಿದ್ದರೆ ಮಾತ್ರ ಸಮಾಜಮನದ ಕ್ರಾಂತಿಯಾಗುತ್ತದೆ. ಪೇಶವೆಯರ ಕಾಲದಲ್ಲಿ ನೂರಾರು ರಾಮದಾಸರು ಬೇಕಾಗಿದ್ದರು ಎಂದು ರಾಜವಾಡೆಯವರು ಹೇಳಿದ್ದರ ಅಥವಿಷ್ಟೇ. ಆ ಲೇಖದಲ್ಲಿ ಗ್ರಂಥಸಮುದಾಯ ಧರ್ಮವ್ಯಾಖ್ಯಾನಗಳ ಮಹತ್ವವನ್ನು ಹೇಳಿದ್ದಾರೆ. ತೋಫಿನಷ್ಟೇ ವ್ಯಾಖ್ಯಾನಗಳ ವಿಚಾರೀಪುರುಷರ ಪ್ರಯೋಜನವು ರಾಷ್ಟ್ರದಲ್ಲಿ ಜನಮನ ಪರಿವರ್ತಿಸುವುದಕ್ಕಾಗಿ ಉಂಟು ಎಂದು ಮಂಡಿಸಿದ್ದಾರೆ.

ಡಾ. ಕೆ. ನಾ. ವಾಟವೆಯವರು “ಸಂಸ್ಕೃತ ಕಾವ್ಯದ ಪಂಚಪ್ರಾಣ” ಎಂಬ ತಮ್ಮ ಗ್ರಂಥದಲ್ಲಿ ಕಾಲಿದಾಸ, ಭಾರತೀ, ಮಾಘ ಮತ್ತು ಶ್ರೀಹರ್ಷ ಇವರ ಮಹಾಕಾವ್ಯಗಳನ್ನು ನಿರೀಕ್ಷಿಸಿ ಮಹಾಕವಿ ಪದವಿ ಯಾರಿಗೆ ಸಲ್ಲುವರೆಂದು ವಿವೇಚನೆ ಮಾಡಿದ್ದಾರೆ. ಯಾರ ಕಾವ್ಯದಲ್ಲಿ ಕವಿಯ ವ್ಯಕ್ತಿತ್ವದ ಆವಿಷ್ಕಾರವಾಗುತ್ತದೋ ಅವರೇ ಮಹಾಕವಿ ಸರಿ. ಇತರ ಕವಿಗಳು ಕೇವಲ ಪುರಾಣಿಕರಾಗುತ್ತಾರೆಂದು ಅವರ ಮತ. ಅವರ ಅಭಿಪ್ರಾಯದ ಮೇರೆಗೆ ಕಾಲಿದಾಸ ಭಾರವೀ ಇವರು ಮಹಾಕವಿಗಳಾಗಿದ್ದಾರೆ. ಮಾಘ ಮಾತ್ರ ಕೇವಲ ಪುರಾಣಿಕನು. ಅವರು ಹೇಳುವ ಕಾರಣವೆಂದರೆ-ಮಾಘನ ಕಾವ್ಯದಲ್ಲಿ ಮಾಘನಲ್ಲಿಯೂ ಕಾಣುವದಿಲ್ಲ. ಕಾಲಿದಾಸನು “ಕುಮಾರ ಸಂಭವ”, “ರಘುವಂಶ” ಕಾವ್ಯಗಳಿಗಾಗಿ ಹಳೆಯ ಪುರಾಣದಲ್ಲಿಯ ವಿಷಯಗಳನ್ನೇ ಆಯ್ಕೆ ಮಾಡಿದ್ದನು. ಆದರೆ ಅವನು ಕೇವಲ ಶಿವ ಪಾರ್ವತಿಯರ ವಿವಾಹದ ಅಥವಾ ಸೂರ್ಯವಂಶದ ವೃತ್ತಾಂತಗಳನ್ನಷ್ಟೇ ಹೇಳಿಲ್ಲ. ಆ ಕತೆಗಳಲ್ಲಿಯ ಘಟನೆಗಳಿಗೆ ಅವನು ಒಂದು ಸ್ವತಂತ್ರ ಅರ್ಥವನ್ನು ಹಚ್ಚಿದ್ದನು. ಅವುಗಳಿಗೆ ಅವನು ಒಂದು ಸನ್ನಿವೇಶವನ್ನು ಕಲ್ಪಿಸಿದ್ದು, ಕುಮಾರಸಂಭವದಲ್ಲಿ ಸ್ವಾರ್ಥ ತ್ಯಾಗದ ಒಂದು ಭವ್ಯ ಮತ್ತು ಮಹಾ ಆದರ್ಶವನ್ನು ಅವನಿಗೆ ತೋರಿಸಬೇಕಾಗಿತ್ತು. ಸ್ತ್ರೀಪುರುಷರ ಪ್ರೇಮವು ಕೇವಲ ಕಾಮತೃಪ್ತಿಗಾಗಿಯಲ್ಲ. ಹಾಗೆ ತಿಳಿದ ಸಮಾಜದ ತೇಜ ಸಾಮರ್ಥ್ಯಗಳು ನಷ್ಟವಾಗುತ್ತವೆ; ಪ್ರತಿಯಾಗಿ ಶರೀರ ಪ್ರೇಮವನ್ನು ಕರ್ತವ್ಯದ ಬೆಂಕಿಯಲ್ಲಿ ಆಹುತಿ ಕೊಟ್ಟರೇನೇ ಅದರೊಳಗಿಂದ ಪ್ರಚಂಡ ತೇಜ ಪ್ರಚಂಡ ಪ್ರತೀಕಾರಕ ಶಕ್ತಿ ನಿರ್ಮಾಣವಾಗುತ್ತವೆ. ಈ ರೀತಿ ಶಿವಪಾರ್ವತಿಯರ ಪ್ರೇಮದ ಅರ್ಥವನ್ನು ಕಾಲಿದಾಸನು ಹಚ್ಚಿ ಆಗ ಆ ಬೀಜದೊಳಗಿಂದ ಮಹಾಕಾವ್ಯವೃಕ್ಷ ನಿರ್ಮಾಣ ಮಾಡಿದನು. ರಘುವಂಶದಲ್ಲಿ ಅವನಿಗೆ ರಾಜಧರ್ಮದ ಆದರ್ಶ ನಿರ್ಮಾಣ ಮಾಡುವದಿತ್ತು. “ತ್ಯಾಗವೇ ರಾಜಧರ್ವುದ ಪ್ರಾಣ” ಎನ್ನುವದನ್ನು ತನ್ನ ಕಾಲದ ಸಮಾಜಕ್ಕೆ ಸಂದೇಶ ಕೊಡಬೇಕಾಗಿತ್ತು. “ಕಿರಾತಾರ್ಜುನೀಯ” ರಚಿಸುವುದರಲ್ಲಿ ಭಾರವಿಯ ಹೇತುವು ಇಂತಹದೇ. ಹೇಡಿ ಸನ್ಯಾಸವೃತ್ತಿಯನ್ನು ನಿಷೇಧಿಸಿ ಅವರಿಗೆ ಕ್ಷಾತ್ರಧರ್ಮದ ಪ್ರೇರಣೆಯನ್ನು ತನ್ನ ಸಮಾಜಕ್ಕೆ ಕೊಡುವದಿತ್ತು, ಮತ್ತು ಆ ಸೂತ್ರಗಳಲ್ಲಿ ಆ ಘಟನೆಗಳನ್ನು ಹೆಣೆದಿದ್ದನು. ಹೊಸ ನಿರ್ಮಿತಿಗೆ ಈ ಅರ್ಥವಿದೆ. ಹಳೆಯ ಕತೆಯನ್ನು ಕಚ್ಚಾ ಪದಾರ್ಥವೆಂದು ತಿಳಿದು ಕವಿಯು ತನ್ನ ಮನದಲ್ಲಿಯೆ ವಿತರದ ಬೀಜಗಳನ್ನು ಅಥವಾ ತತ್ವ ಬೀಜಗಳನ್ನು ಅದರಲ್ಲಿ ಬಿತ್ತುತ್ತಾನೆ. ಆ ಕಚ್ಚಾ ಪದಾರ್ಥದಿಂದ, ಆ ಮಣ್ಣಿನಿಂದ ಹೊಸ ವೃಕ್ಷವನ್ನು ನಿರ್ಮಾಣ ಮಾಡುತ್ತಾನೆ. ಆ ಮೂಲ ಮಣ್ಣು ಹೊಸ ನಿರ್ಮಿತಿಯಲ್ಲ. ಕವಿಚಿತ್ತದಿಂದ ಅವನ ವ್ಯಕ್ತಿತ್ವದಿಂದ ಅಲಂಕೃತವಾದಾಗ ಅದಕ್ಕೆ ಕಾವ್ಯಪದವಿ ಸಲ್ಲುತ್ತದೆ ಹೀಗಾಗಲಿಕ್ಕೆ ಕವಿಯು ಚಿತ್ತದಲ್ಲಿ ತನ್ನ ಸಮಾಜಕ್ಕೆ ಸ್ವತಂತ್ರ ವಿಚಾರ, ಕಲ್ಪನೆ ಅಥವಾ ತತ್ವ ಹೇಳುವ ಹಂಬಲವಿರಲೇಬೇಕು. ಸಮಾಜದ ಕೂಡ ಅದರ ಸುಖದುಃಖ ಕೂಡ ಏಕರೂಪವಾಗದೆ ಸಮರಸವಾಗದೆ ಮಹಾಕವಿ ಎಂದಿಗೂ ಆಗಲಾರ. ಮಾಘನ ಕವಿಮನಕ್ಕೆ ಈ ಹಿರಿಮೆ ಇಲ್ಲ. ತನ್ನ ಸಮಾಜಕ್ಕೆ ಹೇಳುವ ಸ್ವತಂತ್ರ ಪ್ರತಿಪಾದ್ಯವು ಅವನ ಬಳಿ ಇರಲಿಲ್ಲ. ಆದ್ದರಿಂದಲೇ ಡಾ. ವಾಟವೆಯವರು ಅವನಿಗೆ ಕೇವಲ ಪುರಾಣಿಕನು ಎನ್ನುತ್ತಾರೆ.

ಮರಾಠೀ ಪಂಡಿತ ಕವಿಗಳಿಗೂ ಇದೇ ಪದವಿ ಸಲ್ಲುತ್ತದೆ. ಅವರ ಕವಿತೆಗಳಿಗೆ ಮರಾಠಿ ಕವಿತೆಯೆನ್ನುವುದು ವಿಷ್ಣುಶಾಸ್ತ್ರಿಗಳಿಗೆ ಮಾನ್ಯವಿಲ್ಲ. ವಾಮನ ಪಂಡಿತ ಮೋರೋ ಪಂತರ ಕವಿತೆಗಳು ಕೇವಲ ಸಂಸ್ಕೃತ ಭಾಷೆಯ ಶೈಲಿಯಲ್ಲಿದ್ದುದರಿಂದ ಅವುಗಳಿಗೆ ಮರಾಠಿ ಕವಿತೆಗಳೆನ್ನದೆ ಸಂಸ್ಕೃತ ಕವಿತೆಗಳ ರೂಪಾಂತರಗಳೆನ್ನುವುದು ಯೋಗ್ಯವೆಂದು “ಕವಿತೆ ನಿಬಂಧದಲ್ಲಿ ಹೇಳಿದ್ದಾರೆ. “ಮೋರೋಪಂತರ ಕವಿತೆಗಳು” ನಿಬಂಧದಲ್ಲಿ ಮೊದಲು ಕವಿಗೆ ದೊಡ್ಡ ಗೌರವ ಮಾಡಿ, ಸಮಾರೋಪದಲ್ಲಿ “ನಮ್ಮ ಮಹಾರಾಷ್ಟ್ರ ಕವಿಗಳು ಸಾಮಾನ್ಯತಃ ಅರ್ಥವ್ಯಂಜನಗಳ ಆಚೆ ಗಮನಿಸಿಲ್ಲ. ಅವರು ಗ್ರಂಥ ರಚನೆ ಮಾಡುವ ಉದ್ದೇಶ, ಕೇವಲ ಭಕ್ತಿ, ಜ್ಞಾನ, ವೈರಾಗ್ಯ ಇವುಗಳಷ್ಟೇ ಇದ್ದದ್ದರಿಂದ, ಭಾಷೆಯನ್ನು ರೂಪಿಸುವ ಅಪ್ರಧಾನ ಉದ್ಯೋಗವನ್ನು ಅವರು ಉಪೇಕ್ಷೆ ಮಾಡಿದರು. ಹೀಗಿದ್ದುದು ಬಹಳ ಆಶ್ಚರ್ಯವೇನಲ್ಲ” ಎಂದು ಅಭಿಪ್ರಾಯ ವ್ಯಕ್ತ ಮಾಡಿದ್ದಾರೆ. “ವಿದ್ವತ್ವ ಮತ್ತು ಕವಿತ್ವ” ನಿಬಂಧದಲ್ಲಿ ಮೋರೊಪಂತರಂತಹ ಕವಿಗಳನ್ನು ಗೌರವಿಸುವವರು ಅಪ್ರಬುದ್ಧರೆಂದು ನಿರ್ಣಯಿಸಿದ್ದಾರೆ. ಇದೇ ಸಂದರ್ಭದಲ್ಲಿ ಶಾಸ್ತ್ರಿಗಳು ಹಳೆಯ ಶಾಸ್ತ್ರಿ ಪಡಿತರ ರಸಿಕತೆಯ ಬಗ್ಗೆ ಕೆಟ್ಟ ಅಭಿಪ್ರಾಯ ಗಮನಿಸುವದು ಪ್ರಯೋಜಕಾರಿಯಾಗಿದೆ. “ಆ ಹಳೆಯ ಶಾಸ್ತ್ರಿಗಳಿಗೆ ಕವಿತೆಯ ರಮಣೀಯತೆ ಮುಗ್ಧ ವಿಲಾಸಗಳೇನ್ನೂ ತಿಳಿಯುವದಿಲ್ಲ. ಅವರ ಕಾವ್ಯಾಭಿರುಚಿಯ ಮಟ್ಟವನ್ನು ಅವರ ಟೀಕೆಗಳಿಂದ, ಸಂಭಾಷಣ ಪ್ರಸಂಗಗಳಲ್ಲಿ ಸಂಸ್ಕೃತ ಕವಿಗಳ ಗ್ರಂಥಗಳಿಂದ ಹೇಳುವ ಸುಭಾಷಿತಗಳಿಂದ ಅತ್ಯಂತ ಸ್ಪಷ್ಟವಾಗಿ ಗುರುತಿಸಬಹುದು. ಯುರೋಪದಲ್ಲಿಯ ಸಾಮಾನ್ಯ ಪಂಡಿತರು ತಮ್ಮ ಕಾವ್ಯಗ್ರಂಥಗಳನ್ನು ಗ್ರಹಿಸುವಂತೆ ಇಲ್ಲಿಯ ಶಾಸ್ತ್ರಿಗಳಿಗೆ ಬರುವದಿಲ್ಲ. ಅವುಗಳಲ್ಲಿಯ ಅಪ್ರತಿಮ ರಸಾಸ್ವಾದ ಸವಿಯಲು ಆ ಪರದೇಶದ ಜನರು ನಮಗೆ ಕಲಿಸದಿದ್ದರೆ ನಮಗೆ ಗೊತ್ತಾಗುತ್ತಿರಲಿಲ್ಲವೆಂಬುದರಲ್ಲಿ ಏನೂ ಶಂಕೆಯಿಲ್ಲ.” ಹೀಗೆ ಅತ್ಯಂತ ನಿರ್ದಾಕ್ಷಿಣ್ಯವಾದ ಅಭಿಪ್ರಾಯವನ್ನು “ವಿದ್ವತ್ವ ಮತ್ತು ಕವಿತ್ವ” ನಿಬಂಧದ ಪ್ರಾರಂಭದಲ್ಲಿ ಹೇಳಿದ್ದಾರೆ. ಹಳೆಯ ಪ್ರಖ್ಯಾತ ಸಂಸ್ಕೃತ ಟೀಕಾಕಾರನಾದ ಮಲ್ಲಿನಾಥನ ಬಗ್ಗೆಯೂ ಶಾಸ್ತ್ರಿಗಳು ಹೀಗೆಯೇ ಅಭಿಪ್ರಾಯವಿತ್ತಿದ್ದಾರೆ. ಶಬ್ದಾರ್ಥ ವ್ಯಾಕರಣಗಳಾಚೆ ಅವನು ಸಾಗುವದಿಲ್ಲ. “ಆ ಹಳೆಯ ಟೀಕಾಕಾರರ ದೃಷ್ಟಿಯಲ್ಲಿ ಎಲ್ಲ ಕವಿಗಳೂ ಸರಿಸಮರೇ, ಎಲ್ಲರ ಕಾವ್ಯ ಉತ್ಕೃಷ್ಟವೇ. ಎಲ್ಲ ಪದ್ಯಗಳ ಉತ್ತಮ ದರ್ಜೆಯವೇ ಎಂಬಂತೆ ತೋರುತ್ತದೆ”-ಹೀಗೆ ಅವರು ಉಪಹಾಸಮಾಡುತ್ತಾರೆ. ಡಾ. ಕೇತಕರರ “ಮಹಾರಾಷ್ಟ್ರ ಕಾವ್ಯಪರೀಕ್ಷಣ” ಗ್ರಂಥದಲ್ಲಿ ಹಳೆಯ ಪಂಡಿತ ಕವಿಗಳ ರಸಿಕತೆಯ ಬಗ್ಗೆ ಹೀಗೆಯೇ ಬರೆದಿದ್ದಾರೆ. ಆ ಕವಿಗಳು ಹಿಂದಿನ ಕವಿಗಳ ಚರಿತ್ರೆಗಳನ್ನು ಬರೆದರು. ಆದರೆ ಕವಿಗಳ ಕಾವ್ಯ ಪೃಥಃಕರಣ ಮಾಡಿ, ಗುಣಾವಗುಣಗಳ ಪರೀಕ್ಷಣ ಮಾಡುವ ಪದ್ಧತಿಯಿರಲಿಲ್ಲ. ಶ್ರದ್ಧೆಯಿಂದ ಅವರ ಪರೀಕ್ಷಣ ಮಾಡುವ ಶಕ್ತಿಯೇ ದುರ್ಬಲವಾಗಿತ್ತು. ಪರೀಕ್ಷಿಸಲಿಕ್ಕೆ ಅಗತ್ಯವಿದ್ದ ಮಾನಸಿಕ ಸ್ವಾತಂತ್ರ್ಯ ಆ ಸಂಪ್ರದಾಯಬದ್ಧ ಕವಿಗಳಿಗಿರಲಿಲ್ಲ.

ಮಾನಸಿಕ ಸ್ವಾತಂತ್ರ್ಯವಿದ್ದಿಲ್ಲ! ಡಾ. ಕೇತಕರರು ಸಾಹಿತ್ಯ ವಿಮರ್ಶೆಯ ಬಗ್ಗೆ ಹೇಳಿದಂತೆ ಎಲ್ಲ ಕ್ಷೇತ್ರಗಳಿಗೂ ಅನ್ವಯಿಸುತ್ತದೆ. ನಿವೃತ್ತಿ, ಉದಾಸೀನತೆ, ಸದ್ಗುರು, ಶಬ್ದ ಪ್ರಾಮಾಣ್ಯ, ದೈವವಾದ, ಪೂರ್ವಕರ್ಮದಿಂದ ನಿರ್ಮಾಣವಾದ ಅಗಶಿಕತೆ, ಇವುಗಳಿಂದ ಇಲ್ಲಿಯ ಜನರ ಮನ ನಿಸ್ಸತ್ವವಾಗಿತ್ತು: ಅವರ ಚಿತ್ತದಲ್ಲಿಯ ಸರಸ್ವತಿಯಂ ಪರಾಧೀನಳಾಗಿದ್ದಳು. ಅವರ ಚಿತ್ತ ಕುಂಟಾಗಿತ್ತು. ಹೆಳವಚಿತ್ತದಿಂದ ಹೊಸ ಸೃಷ್ಟಿ ಹೇಗೆ ನಿರ್ಮಿತವಾಗಬೇಕು?
೫
ಜೀವನದ ಅರ್ಥ-

ಪರಿಸರದ ಸೃಷ್ಟಿಯನ್ನು ನೋಡಿ, ಜಗದ, ಸಂಸಾರದ ಮತ್ತು ಮಾನವೀ ಜೀವನದ ಅವಲೋಕನೆಯನ್ನು ಮಾಡಿ ಅವುಗಳಲ್ಲೊಂದು ಅರ್ಥವನ್ನು ಲೇಖಕನು ಗ್ರಹಿಸುವನು. ನಂತರ ಅದನ್ನು ಸಮಾಜಕ್ಕೆ ಹೇಳಲು ಹಂಬಲಿಸುವನು. ಈ ಆಂತರಿಕ ಪ್ರೇರಣೆಯಿಂದಲೇ ಸಾಹಿತ್ಯ ನಿರ್ಮಾಣವಾಗುತ್ತದೆ; ಅದು ಕಾದಂಬರಿ ನಾಟಕಗಳಂತೆ ಲಲಿತ ಸಾಹಿತ್ಯವಿರಲಿ ಅಥವಾ ಇತಿಹಾಸ ರಾಜಕಾರಣ ರಸಾಯನಗಳಂತೆ ಶಾಸ್ತ್ರೀಯುವಿರಲಿ, ಅದು ಸೃಜನವಾಗುವ ಪ್ರಕ್ರಿಯೆಯೇ ಹೀಗೆ. ‘ಉಷಃಕಾಲ’ ಕಾದಂಬರಿಯನ್ನು ಹರಿಭಾವು ಹೇಗೆ ಬರೆದರು. ಅದರ ನಿರ್ಮಿತಿಯ ಪ್ರಕ್ರಿಯೆ ಹೇಗೆ ಸಂಭವಿಸಿತು ಎಂಬುದನ್ನು ತಿಳಿಯುವದು ಉದ್ಬೋಧಕವಾದೀತು. ಮರಾಠರ ಸ್ವರಾಜ್ಯದ ಉದಯ ಕಾಲದ ಬಗ್ಗೆ
ಯೋಚಿಸುವಾಗ ಕ್ರಾಂತಿ ಸಂಭವಿಸುವ ಬಗೆಯ ಒಂದು ಕಲ್ಪನೆ, ಸಿದ್ದಾಂತವನ್ನು ಹರಿಭಾವು ರೂಪಿಸಿಕೊಂಡರು. ಆ ಸೂತ್ರದಲ್ಲಿ ಘಟನೆಗಳನ್ನು ಪೋಣಿಸಿ ಏಕಜೀವವಾದ ಈ ಕಲಾಕೃತಿಯನ್ನು ನಿರ್ಮಿಸಿದರು. ಅವರ ಮನದಲ್ಲಿ ಮೊದಲು ಏನಾಯಿತು ನಂತರ ಏನು ಹಳೆಯಿತೆಂಬುದು ಗೌಣವಾದದ್ದು ಯಾವ ಸೂತ್ರದಲ್ಲಿ ಹೆಣೆದರೆಂಬುದು ಮಹತ್ವವಾದದ್ದು. ಕ್ರಾಂತಿ ಸಂಭವಿಸುವಾಗ ಸಮಗ್ರ ದೇಶದಲ್ಲಿ ನೂರಾರು ಜನರ ಮನ ಇಲ್ಲಿ ಮೊದಲು ಅಸಂತೋಷ ಕನಲುವದು. ಈ ರಾಜ್ಯ ಪಲ್ಟೀ ಹೊಡೆದು ಬೀಳಬೇಕು ನಷ್ಟವಾಗಬೇಕು. ಯಾರಾದರೂ ಈ ಉನ್ಮತ್ತರಿಗೆ ಮಣ್ಣು ಮುಕ್ಕಿಸಬೇಕು ಎಂದು ತೀವ್ರ ಬಯಕೆ ಜನರಲ್ಲಿ ಉದ್ಭವಿಸುತ್ತದೆ. ಸಾಮಾನ್ಯ ಜನರು ಅಗತಿಕರಿರುತ್ತಾರೆ ಪುಕ್ಕಲರಿರುತ್ತಾರೆ; ಆದರೆ ಸಂತಪ್ತ ಮಾತ್ರ ಇರುತ್ತಾರೆ. ಕೈ ತಿಕ್ಕುತ್ತ ಕುಳಿತು, ನಿಂದೆ ಶಾಪಕ್ಕಿಂತಲೂ ಹೆಚ್ಚಿಗೇನೂ ಮಾಡುವದಿಲ್ಲ. ಆದರೆ ಅವರ ಬಯಕೆ ತೀವ್ರವಾಗಿರುತ್ತದೆ. ಈ ಅಪೇಕ್ಷೆ ತೇಜಸ್ವಿ ಪುರುಷನೊಬ್ಬನ ರೂಪದಿಂದ ಮೂರ್ತವಾಗುತ್ತದೆ. ಅನಂತರ ಸಾವಿರಾರು ಜನರು ಅವನ ಸುತ್ತು ಶೇಖರಿಸುತ್ತಾರೆ, ಸಂಘಟನೆಯಾಗುತ್ತದೆ. ಸಾಮರ್ಥ್ಯ ನಿರ್ಮಾಣವಾಗುತ್ತದೆ. ಅನಂತರ ಭುಗಿಲ್ಲೆಂದು ಜ್ವಾಲೆ ಪ್ರಜ್ವಲಿಸುತ್ತದೆ, ಕಥಾವಸ್ತುವಿನಲ್ಲಿ ಹತ್ತು ಹನ್ನೆರಡು ಸನ್ನಿವೇಶಗಳಲ್ಲಿ ಹರಿಭಾವು ಈ ಸೂತ್ರ ಈ ತತ್ವ
ಪುನಃಪುನಃ ಹೇಳಿದ್ದಾರೆ. ಮರಾಠರ ಕ್ರಾಂತಿಯ ಬಗ್ಗೆ ಇಂತಹ ಇನ್ನೂ ಎರಡು ಮರು ತತ್ವಗಳನ್ನು ಅವರಿಗೆ ಹೇಳುವದಿತ್ತು. ಸ್ತ್ರೀ ಪಾವಿತ್ರ್ಯದ ಬಗ್ಗೆ ರಜಪೂತರ ಅತಿರೇಕದ ಕಲ್ಪನೆ ಅವರ ಅವಿವೇಕದ ಶೌರ್ಯ ಮತ್ತು ಸಾಹಸ ಇವುಗಳನ್ನು ಮರಾಠರು, ಶಿವಾಜಿ ರಾಜನು, ಸಮರ್ಥರು ಮಾರ್ಪಡಿಸಿದರು. ಶೌರ್ಯಕ್ಕೆ ಸಾವಧಾನತೆಯ, ಕಾರಸ್ಥಾನದ, ಮುತ್ಸದ್ದಿತನದ ಬುದ್ದಿಯ ಜೊತೆ ಸೇರಿಸಿದರು-ಇದು ಮಹಾರಾಷ್ಟ್ರದ ವೈಶಿಷ್ಟ್ಯವೆಂದು ಅವರಿಗೆ ಹೇಳುವದಿತ್ತು.

ಕ್ರಾಂತಿಗಾಗಿ ಧರ್ಮದ ಯಾತ್ರಿಕ1(1 ಪಂಢರಪುರಕ್ಕೆ ವರ್ಷಕ್ಕೆ ಎರಡು ಬಾರಿಯಾದರೂ ಹೋಗುವ ವಾರಕರಿ ಎಂಬ ಪಥದ ಕಲ್ಪನೆ.) ಕಲ್ಪನೆಯನ್ನು ಪರಿವರ್ತಿಸಿ “ಸ್ವರಾಜ್ಯ ಸಂಸ್ಥಾಪನವೇ ನಿಮ್ಮ ಕರ್ತವ್ಯ. ಇದೇ ಸನ್ನಾಹ. ನಿಮ್ಮ ತಪಶ್ಚರ್ಯವಿದೇ” ಎಂಬ ರಣವೀರ ಕಲ್ಪನೆ ರೂಢವಾಗುವದು ಅವಶ್ಯವೆಂದು ಹರಿಭಾವು ಇವರಿಗೆ ಹೇಳುವದಿತ್ತು.

ಶೇಕ್ಸಪಿಯರನು ಹೇಳಿದಂತೆ, ಇದೆಲ್ಲ ಮೊದಲು ಅವರ ಕಲ್ಪನೆಯಲ್ಲಿ ಸಿದ್ಧವಾಯಿತು. ಅವರು ತಮ್ಮ ಅತಶ್ಚಕ್ಷುಗಳಿಂದ ನೋಡಿ ಅನಂತರ ಬರಹದಲ್ಲಿ ಮೂರ್ತಿಮತ್ತಾಗಿ ಮಾಡಿ ನಾಮ, ರೂಪ ಕೊಟ್ಟರು. ಮರಾಠರ ಇತಿಹಾಸ ವ್ಯಾಸಂಗ ಮಾಡುವಾಗ, ಇತರ ಗ್ರಂಥಗಳನ್ನು ಅಧ್ಯಯನಮಾಡುವಾಗ, ಮಾನವ ವ್ಯವಹಾರಗಳ ಅವಲೋಕನೆ ಮಾಡುವಾಗ ಅವುಗಳನ್ನು ಅರ್ಥೈಸಿ ಕೆಲವು ಸಿದ್ಧಾಂತಗಳನ್ನು ನಿಶ್ಚಯಿಸಿ ಆ ಜೀವನದ ಮೇಲೆ ಸ್ವತಂತ್ರ ಭಾಷ್ಯಮಾಡುವ ಸಾಮರ್ಥ್ಯ ಹರಿಭಾವು ಇವರಲ್ಲಿತ್ತು. ಈ ಸಾಮರ್ಥ್ಯ ಪ್ರಾಪ್ತವಾಗುವ ಮಾನಸಿಕ ಸ್ವಾತಂತ್ರ್ಯ ಇತ್ತೆಂದೇ ಅವರಿಗೆ ಈ ಕಾದಂಬರಿ ನಿರ್ಮಿಸಲು ಸಾಧ್ಯವಾಯಿತು. ಶಬ್ದಪ್ರಾಮಾಣ್ಯದಿಂದ, ಅವಲೋಕನ-ನಿರ್ಣಯ ಸಾಮರ್ಥ್ಯಗಳನ್ನೇ ಕಳೆದುಕೊಂಡ ಬುದ್ದಿ ಐತಿಹಾಸಿಕ ಘಟನೆಗಳ ಅರ್ಥವನ್ನು ಹೇಗೆ ಗ್ರಹಿಸೀತು? ಅದನ್ನು ತಿಳಿದುಕೊಳ್ಳುವ ಪಾತ್ರತೆ ಅದಕ್ಕೆಲ್ಲಿಂದ ಬಂದೀತು ? ಹಾಗಿಲ್ಲವೆಂದ ಮೇಲೆ ನಾಟಕ ಕಾದಂಬರಿಗಳು ಸಾಹಿತ್ಯ ಹೇಗೆ ನಿರ್ಮಾಣವಾಗಬೇಕು?

ಸಾಹಿತ್ಯ ನಿರ್ಮಿತಿಗೆ ಅವಶ್ಯವಿದ್ದ ಅಹಂವೃತ್ತಿ, ಹಿಂದೆಗೆಯದ ವ್ಯಕ್ತಿತ್ವ ಸ್ವನಿಶ್ಚಯ ಪ್ರಾಚೀನ ಮರಾಠಿ ಕಾಲಾವಧಿಯಲ್ಲಿ ನಷ್ಟವಾಗಿದ್ದವು, ಮತ್ತು ಆದ್ದರಿಂದಲೇ ಜೀವನ ಸಾಹಿತ್ಯ ನಿರ್ಮಿತಿಯಾಗಲಿಲ್ಲವೆಂದು ಈಗ ಸ್ಪಷ್ಟವಾಗಿರಬಹುದೆಂದು ಭಾವಿಸುತ್ತೇನೆ. ವ್ಯಕ್ತಿತ್ವದ ಅಳಿವು, ಶಬ್ದ ಪ್ರಾಮಾಣ್ಯ, ಗುಲಾಮ ಗುರುಭಕ್ತಿ, ಕರ್ಮಸಿದ್ಧಾಂತ, ಜಾತಿ ಸಿದ್ದಾಂತ, ಈ ಕಾರಣಗಳನ್ನು ಮೇಲೆ ಹೇಳಿದ್ದಾಯಿತು. ಇನ್ನೂ ಒಂದು ಪ್ರಬಲ ಕಾರಣದ ಬಗ್ಗೆ ಚರ್ಚಿಸೋಣ. ರಾಜವಾಡೆ, ಖರೆ ಮೊದಲಾದವರ ಇತಿಹಾಸ ಸಂಶೋಧನ ಹನಿಭಾವು ಮೊದಲಾದವರ ಕಾದಂಬರಿಗಳ ಹಿಂದೆ ಪ್ರೇರಣೆಯೇನಿತ್ತು ? “ಪೂರ್ವದಲ್ಲಿ ದಿವ್ಯ ಯಾರದಿತೋ ಅವರಿಗೆ ರಮ್ಯ ಭಾವೀಕಾಲ” ಎಂಬ ವಿಶ್ವಾಸ ದೃಢವಾದ ಅವಿಚಲ ಶ್ರದ್ದೆ ಅವರ ಮನದಲ್ಲಿತ್ತು. ದಿವ್ಯ ಪೂರ್ವದ ಇತಿಹಾಸ ಪ್ರೇರಣೆಯಿಂದ ಗತವೈಭವವನ್ನು ಪುನಃ ದೊರಕಿಸಿ ಭವಿಷ್ಯಕಾಲ ರಮ್ಯವಾಗುವ ಉಮೇದು ಜನರಲ್ಲಿ ಬರಲೆಂದು, ವಿಷ್ಣುಶಾಸ್ತ್ರಿಯವರು ಪೂರ್ವಪರಂಪರೆಯ ಅಭಿಮಾನವನ್ನು ಉತ್ಸಾಹದಿಂದ ಪವಿತ್ರ ಭಸ್ಮದಂತೆ ಜಾಗ್ರತೆಯಿಂದಿಡಲು ಯತ್ನಿಸಿದರು ಆದರೆ ಭವಿಷ್ಯಕಾಲದ ಬಗ್ಗೆ ಎಲ್ಲ ಆಶೆಗಳು ಯಾರ ಮನದಲ್ಲಿ ದಹಿಸಿಹೋಗಿದ್ದವೋ, ಯಾರ ಮನದಲ್ಲಿ ಧರ್ಮವು ಭಾವಿಕಾಲದ ಬಗ್ಗೆ ಸಂಪೂರ್ಣ ನಿರಾಶೆಯನ್ನೇ ತುಂಬಿತ್ತೋ, ಅವರಿಗೆ ಈ ಉಮೇದವೆಲ್ಲಿಂದ ಬರಬೇಕು? ಭಾರತದಲ್ಲಿ ನೂರಾರು ವರ್ಷಗಳಿಂದ ಕಲಿಯುಗ ಕಲ್ಪನೆಯು ಜನರ ಕೊರಳನ್ನು ಹತೋಟಿಯಲ್ಲಿಟ್ಟಿದೆ. ಇನ್ನು ಮುಂದೆ ಎಲ್ಲವೂ ಅಧಃಪಾತವೇ ಸಂಭವಿಸುವದು, ಧರ್ಮವು ಅಳಿಯುವದು, ವಿನಾಶ ಹೊಂದುವಮ ಈ ಪ್ರಕಾರವಾಗಿ ಧರ್ಮಧುರಿಸು ಪದೇ ಪದೇ ಜನರ ಕಿವಿಗಳಲ್ಲಿ ಬೊಬ್ಬೆ ಹಾಕಿದ್ದಾರೆ, ಸತ್ಯಯುಗ ಗತಿಸಿತು ಇನ್ನು ಮನುಷ್ಯರಿಂದ ಪಾಪವೇ ಘಟಿಸುವದು. ಸ್ತ್ರೀಯರು ಪುರುಷರಿಗೆ ವಿಧೇಯರಾಗಿರುವದಿಲ್ಲ, ಎಲ್ಲ ಕಡೆಗೂ ನಾಸ್ತಿಕತೆ ಪಸರಿಸುವದು. ನೆಲವು ಪಯಿರುವದಿಲ್ಲ, ಮೋಡಗಳು ಮಳೆ ಕರೆಯುವದಿಲ್ಲ, ಎಲ್ಲೆಡೆಯೂ ಪ್ರಳಯವಾಗುವದು ಮತ್ತು ಈ ಸರ್ವನಾಶ ಅನಿವಾರ್ಯವಾಗಿದೆ. ಮಾನವನ ಸ್ವಾಧೀನದಲ್ಲಿಲ್ಲ, ಈ ತತ್ವಜ್ಞಾನ ಸಮಾಜದ ಮನವನ್ನು ಸಮರ್ಥ ಪುರುಷರ ಬುದ್ಧಿಯನ್ನು ನೂರಾರು ವರ್ಷಗಳಿಂದ ವೀರ್ಯಗುಂದಿಸುತ್ತಿದೆ ಮಾನವನು ವೇದಾಧೀನನಿದ್ದಂತೆ, ಕರ್ಮಾಧೀನನಿದ್ದಂತೆ, ಜನ್ಮಾಧೀನನಿದ್ದಂತೆ, ಕಾಲಾಧೀನನೂ ಇದ್ದಾನೆ ಎಂಬ ವಿಚಾರಗಳು ದೃಢವಾದವರಿಗೆ, ಸಾಹಿತ್ಯ ನಿರ್ಮಿತಿಗೆ ಗ್ರಂಥ ರಚನೆಗೆ ಶಾಸ್ತ್ರ ಸಂಶೋಧನೆಗೆ ಅಗತ್ಯವಾಗಿದ್ದ ವ್ಯಕ್ತಿತ್ವ ಆತ್ಮಸ್ವಾತಂತ್ರ‍್ಯಗಳು ಹೇಗೆ ಪ್ರಾಪ್ತವಾಗಬೇಕು ? ಅವರಿಗೆ ಸರಸ್ವತಿಯು ಹೇಗೆ ಪ್ರಸನ್ನಳಾದಾಳು ? ಲಲಿತ ಸಾಹಿತ್ಯದ ಬಗ್ಗೆ ಇಲ್ಲಿಯವರೆಗೆ ಯೋಚಿಸಿದೆವು. ಇನ್ನು ರಾಜಕಾರಣ, ಅರ್ಥಶಾಸ್ತ್ರ ರಸಾಯನಪದಾರ್ಥ ವಿಜ್ಞಾನಗಳ ದೃಷ್ಟಿಯಿಂದ ಪರಿಶೀಲಿಸೋಣ.
೬
ಜಿಜ್ಞಾಸೆಯ ಆಭಾವ–

ಮರಾಠರ ಇತಿಹಾಸ ವ್ಯಾಸಂಗ ಮಾಡುವಾಗ ಒಂದು ಸಮಸ್ಯೆ ಸತತವಾಗಿ ನನ್ನನ್ನು ವ್ಯಾಕುಲಗೊಳಿಸುತ್ತದೆ. ಹದಿನೇಳನೇ ಶತಮಾನದ ಪ್ರಾರಂಭದಲ್ಲಿಯೇ ಇಂಗ್ಲೀಷರು ಭಾರತಕ್ಕೆ ತಲುಪಿದರು ಮತ್ತು ಅಂದಿನಿಂದ ವ್ಯಾಪಾರ ರಾಜಕಾರಣ ಕ್ಷೇತ್ರಗಳಲ್ಲಿ ಭಾರತಾದ್ಯಂತ ಅವರ ಪ್ರಚಂಡ ಉದ್ಯೋಗ ಇಲ್ಲಿಯ ಮರಾಠರ, ಮುಸಲ್ಮಾನರ, ರಜಪೂತ ಮತ್ತು ಇತರ ಪಂಗಡಗಳಿಗಿಂತ ಎಲ್ಲ ರೀತಿಯಲ್ಲಿಯೂ ಭಿನ್ನವಾಗಿದ್ದಿತು. ಅವರ ಸೈನ್ಯ ಅತ್ಯಂತ ಶಿಸ್ತಿನದಾಗಿತ್ತು. ಅವರ ಶಸ್ತ್ರಾಸ್ತ್ರಗಳು ಹೆಚ್ಚು ಮಾರಕವಾಗಿದ್ದವು. ಅವರ ಆಡಳಿತ ಕಟ್ಟುನಿಟ್ಟಿನದಾಗಿತ್ತು. ವ್ಯಾಪಾರಕ್ಕೆ ಪ್ರಾಶಸ್ತ್ಯವಿದ್ದು ಅವರಿಗೆ ಅಪರಿಮಿತ ಹಣ ದೊರಕುತ್ತಿತ್ತು. ಅವರ ಸೇನಾಪತಿಗಳು ಸಾಲಗಾರರಾಗಿರಲಿಲ್ಲ. ಅವರ ಹತ್ತಿರ ಮುದ್ರಿತ ಪುಸ್ತಕಗಳಿದ್ದವು ಮತ್ತು ಇಲ್ಲಿಯೂ ಅಚ್ಚು ಮಾಡಲು ಪ್ರಾರಂಭಿಸಿದ್ದರು. ಇವೆಲ್ಲ ನಮ್ಮ ಜೀವನ ಸಂಸ್ಕೃತಿಗಳಿಗೆ ಅತ್ಯಂತ ಭಿನ್ನವಾಗಿದ್ದವು. ಹೀಗಿದ್ದರೂ ಅವರು ಯಾರು, ಅವರ ನಡವಳಿಕೆಗಳೇನು, ಈ ಶಿಸ್ತು, ಅವರಿಗೇಕೆ ಸಾಧ್ಯ, ಹಣವನ್ನು ಹೇಗೆ ಸಂಪಾದಿಸುತ್ತಾರೆ, ಮುದ್ರಣ ಯಂತ್ರದ ಕಲ್ಪನೆಯೇನು ಇವುಗಳ ಕುತೂಹಲ ಭಾರತೀಯರಿಗೆ ಇಲ್ಲಿಯ ಬುದ್ದಿವಂತರಿಗೆ, ಕೆಲಸಗಾರರಿಗೆ, ವ್ಯಾಪಾರಿಗಳಿಗೆ, ಪಂಡಿತರಿಗೆ ಸ್ವಲ್ಪಾದರೂ ಎನಿಸಲಿಲ್ಲವೆಂಬುದರ ಅರ್ಥವೇನು ? ಮನುಷ್ಯ ಜೀವಂತವಿದ್ದ ಲಕ್ಷಣವೇ ಇದು? ಎದುರು ನಡೆಯುತ್ತಿರುವದನ್ನು ನೋಡುವದು ಮತ್ತು ಅದರ ಅರ್ಥಗ್ರಹಣ ಮಾಡುವ ಶಕ್ತಿಯೇ ಈ ಸಮಾಜದಲ್ಲಿ ನಷ್ಟವಾಗಿತ್ತೇ ? ಆಗಿನ ರಾಜಕಾರಣಿಗಳು ಕೆಲವು ಸಂಗತಿಗಳನ್ನಾದರೂ ಗಮನಿಸಬೇಕಾಗಿತ್ತು. ಶಿವಛತ್ರಪತಿಯ ಪೂರ್ವದಲ್ಲಿ ಇಹಲೋಕದ ಉತ್ಕರ್ಷೆಯ ವಿಷಯವಾಗಿ ಜನರು ಉದಾಸೀನರಾಗಿದ್ದರು. ಆದರೆ ಸ್ವರಾಜ್ಯ ಸ್ಥಾಪನೆಯಾದ ನಂತರ ಪ್ರತ್ಯಕ್ಷವಾಗಿ ರಾಜ್ಯದ ಆಡಳಿತ ನಡೆಸುವವರು, ಸೇನಾವೃತ್ತಿಯವರು, ಯುದ್ಧಶಾಸ್ತ್ರಜ್ಞರು ಉದಾಸೀನರಿದ್ದಿಲ್ಲವಲ್ಲ? ಸ್ವರಾಜ್ಯ ಸಾಮ್ರಾಜ್ಯಗಳು, ಅವರ ಉದ್ದೇಶಗಳು, ನಿತ್ಯದ ಉದ್ಯೋಗಗಳು, ಹಾಗಾದರೆ, ಈ ದೇಶದ ಯಾವದೇ ರಾಜ್ಯದನ, ಯಾವದೇ ಧರ್ಮದವ ಅಲ್ಪ ಕಾರಣಕ್ಕಾಗಿ ಸ್ವಜನದ್ರೋಹ ಬಗೆಯುತ್ತಾನೆ. ಪಕ್ಷಾಂತರ ಮಾಡುತ್ತಾನೆ, ಶತ್ರುಗಳನ್ನು ಸೇರಿ ಶತ್ರು ಪಕ್ಷದಿಂದ ಹೋರಾಡುತ್ತಾನೆ. ಆದರೆ ಇದಕ್ಕೆ ಪ್ರತಿಯಾಗಿ ಒಬ್ಬ ಇಂಗ್ಲೀಷ್ ಅಥವಾ ಫ್ರೆಂಚನು ಅಪವಾದಕ್ಕಾಗಿಯಾದರೂ ಹಾಗೆ ಮಾಡುವದು ತೋರುವದಿಲ್ಲ-ಇದೇನು ಚಮತ್ಕಾರ ಎಂದು ಕೊಂಚಾದರೂ ಜಿಜ್ಞಾಸೆ. ಈ ಧುರಂಧರ ಜನರಿಗೆ ಬಂದಿತೇ? ಜಿಜ್ಞಾಸೆಯೇ ಮಾನವತ್ವದ ಪ್ರಥಮಲಕ್ಷಣ. ಅದೇ ಈ ಭೂಮಿಯಿಂದ ಹೇಗೆ ನಷ್ಟವಾಯಿತು? ನಾನಾ ಫಡನೀಸ, ಸಖಾರಾಮ ಬಾಪೂ ಇತ್ಯಾದಿ ಆ ಕಾಲದ ಮೂರುವರೆ ನೂರು ತೀಕ್ಷ್ಣಮತಿಗಳ ಸಮ್ಮುಖದಲ್ಲಿ ಇಂಗ್ಲೀಷರ ರಾಜ್ಯದಾಡಳಿತದಲ್ಲಿ ಒಂದು ವಿಲಕ್ಷಣವಾದ ಸಂಗತಿ ಘಟಿಸುತ್ತಿತ್ತು. ವಾರನಹೇಸ್ಟಿಗ್ಸನು ನಿನ್ನೆ ಸರ್ವಸತ್ತಾಧೀಶನಿದ್ದೂ ಇಂದು ಕಾರ್ನವಾಲೀಸ ವಿಲಾಯತಿಯಿಂದ ಬಂದ ಕ್ಷಣದಲ್ಲಿ ಆ ಎಲ್ಲ ಸತ್ತೆ ಅಧಿಕಾರ, ಕೆಳಗಿಳಿಸಿ ಅವನ ಕೈಯಲ್ಲಿ ಆಡಳಿತ ಸೂತ್ರಗಳನ್ನು ಒಪ್ಪಿಸುತ್ತಾನೆ-ಇದರ ಅರ್ಥವೇನು? ಹಿಂದುಸ್ಥಾನದಲ್ಲಿಯ ಅಧಿಕಾರಿ ಸಾಯದೆ ಆಥವಾ ಸಾಯಿಸದೆ ತನ್ನ ಸ್ಥಾನದಿಂದ ಸರಿಯುವದಿಲ್ಲ. ಆದರೆ ಇಲ್ಲಿ ಸರ್ವಾಧಿಕಾರಸಂಪನ್ನ ಮನುಷ್ಯನ ಅತ್ಯಂತ ಸಂತೋಷದಿಂದ ಹೊಸ ಅಧಿಕಾರಿಯ ಸ್ವಾಗತ ಮಾಡಿ ಅವನಿಗೆ ಅಧಿಕಾರ ವಶಪಡಿಸುತ್ತಾನೆ-ಇದರ ರಹಸ್ಯವೇನು? ಈ ಇಬ್ಬರನ್ನೂ ನಿಯಂತ್ರಿಸುವ ಶಕ್ತಿಯಾವದು, ಅದನ್ನು ನೋಡಬೇಕು, ತಿಳಿದುಕೊಳ್ಳಬೇಕು, ಸಾಧ್ಯವಾದಲ್ಲಿ ತಾವೂ ಆ ಶಕ್ತಿಯನ್ನು ಪಡೆಯಬೇಕು ಎಂಬ ಹಂಬಲ ವಿಚಾರಗಳು ಆ ಮೂರುವರೆ ನೂರ ಜಾಣ ಒಬ್ಬರಲ್ಲಿಯೂ ಏಕೆ ಬರಲಿಲ್ಲ ?

ಈ ಹಂಬಲವಿದ್ದರೆ ಅದೇ ವೇಳೆಗೆ ಅವರು ರಾಜಕಾರಣ ಶಾಸ್ತ್ರದ ಮೇಲೆ ಗ್ರಂಥಗಳನ್ನು ರಚಿಸಲು ಉದ್ಯುಕ್ತರಾಗುತ್ತಿದ್ದರು. ನಂತರ ಅವರು ಹಳೆಯ ಗ್ರಂಥಗಳನ್ನು ಪರಿಶೀಲಿಸಬಹುದಿತ್ತು. ಜೀವನವನ್ನು ಅವಲೋಕಿಸಬಹುದಿತ್ತು, ಮತ್ತು ಅನಂತರ ಸಿದ್ದಾಂತ
____________
1 ಪೇಶವೆಯರ ಕಾಲದಲ್ಲಿ ಸಖಾರಾಮ ಭಗವಂತ ಬೊಕೀಲ, ದಿವಾಕರ ಪುರುಷೋತ್ತಮ, ಚೋರಘೋಡೆ, ವಿಠಲ ಸುಂದರ ಪರಶರಾಮಿ ಮತ್ತು ನಾನಾಫಡನೀಸ ಈ ಪ್ರಕಾರ ನಾಲ್ವರು ಮುತ್ಸದ್ಧಿಗಳಿದ್ದು ಅವರಲ್ಲಿ ನಾನಾಫಡನೀಸನಿಗೆ ಯುದ್ಧ ಕಲೆಯ ಜ್ಞಾನವಿಲ್ಲದ್ದರಿಂದ ಅವನಿಗೆ ಅರ್ಧ ಜಾಣ ಉಳಿದವರು ಪೂರ್ಣ ಜಾಣ ಎಂದು ಪರಿಗಣಿಸಿ, ಪೇಸವೆಯರ ಕಾಲದಲ್ಲಿ ಮೂರುವರೆ ಜಾಣರಿದ್ದರೆಂದು ಪ್ರತೀತಿಯಿದೆ.
________________

ಮಾಡುವ, ಪರಿಸ್ಥಿತಿಯನ್ನು ಅವಲೋಕಿಸಿ ನಿಷ್ಕರ್ಷೆಗಳನ್ನು ಹೇಳುವ ಸಾಮರ್ಥ್ಯವನ್ನು ಪಡೆಯಬಹುದಿತ್ತು. ದುರ್ದೈವವೆಂದರೆ ಭಾರತದಲ್ಲಿ ಆ ಸಾಮರ್ಥ್ಯದ ಲೋಪವೇ ಆಗಿದ್ದಿತು, ಇದೇ ಸಾಮರ್ಥ್ಯಶಾಸ್ತ್ರ ನಿರ್ಮಿತಿಯ ಆಧಾರ. ಅದರ ಅಭಾವದಲ್ಲಿ ಶಾಸ್ತ್ರಗಳು ಹೇಗೆ ನಿರ್ಮಾಣವಾಗಬೇಕು?
೭
ಸಿದ್ಧಾಂತ ಸಾಮರ್ಥ್ಯ–

ಹತ್ತು, ಇಪ್ಪತ್ತು, ಐವತ್ತು, ನೂರು ವನಸ್ಪತಿಗಳನ್ನು ನೋಡಿದಾಗ ಮತ್ತು ಎಲ್ಲದರಲ್ಲಿಯ ಸಾಮಾನ್ಯ ಧರ್ಮಗಳನ್ನು ಗಮನಿಸಿದಾಗ ವನಸ್ಪತಿಶಾಸ್ತ್ರ ಉತ್ಪತ್ತಿಯಾಗುತ್ತದೆ. ಆಕಾಶದಲ್ಲಿಯ ಗ್ರಹಗೋಲವನ್ನು ತಾರೆಗಳನ್ನು ವರ್ಷಾನುವರ್ಷ ವಿವರವಾಗಿ ಪರೀಕ್ಷಿಸಿದಾಗ ಅವುಗಳಲ್ಲಿಯ ಸಾಮಾನ್ಯ ಧರ್ಮಗಳು ಅವುಗಳ ಗತಿ, ಸ್ಥಿತಿಗಳ ನಿಯಮಗಳು ತಿಳಿಯುತ್ತವೆ. ಅವುಗಳಿಂದಲೇ ಗ್ರಹಜ್ಯೋತಿಷ್ಯಶಾಸ್ತ್ರ, ಖಗೋಲಶಾಸ್ತ್ರ ಉತ್ಪತ್ತಿಯಾಗುತ್ತವೆ. ಸಾವಿರಾರು ಜನರ ಮನವನ್ನು ಅಭ್ಯಾಸ ಮಾಡಿದಾಗ, ಆ ವಿಷಯದಲ್ಲಿ ಕೆಲವು ಸಾಮಾನ್ಯ ಸಿದ್ಧಾಂತಗಳನ್ನು, ನಿಷ್ಕರ್ಷೆಗಳನ್ನು ಹೇಳುವ ಶಕ್ತಿ ಪ್ರಾಪ್ತವಾಗುತ್ತದೆ. ರಸಾಯನ ಪದಾರ್ಥ ವಿಜ್ಞಾನ ಶಾಸ್ತ್ರಗಳ ಬಗೆಯೂ ಹೀಗೆಯೇ. ಅದರಂತೆಯೇ ಅರ್ಥಶಾಸ್ತ್ರ ರಾಜಕಾರಣ. ಆದರೆ ಅದಕ್ಕಾಗಿ ಮೊದಲು ಆರ್ಥಿಕ ಪರಿಣಾಮಗಳನ್ನು ಅಭ್ಯಸಿಸಬೇಕು. ರಾಜಕೀಯ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಬೇಕು. ಭಾರತದಲ್ಲಿ ಹಿಂದೆ ಹೀಗಾಗುತ್ತಿರಲೇಬೇಕು, ಇಲ್ಲವಾದರೆ ರಾಸಾಯನ, ವೈದ್ಯಕ, ಖಗೋಲ ಶಾಸ್ತ್ರಗಳು ಅದರಂತೆ ವ್ಯಾಕರಣ ಭಾಷಾಶಾಸ್ತ್ರಗಳು ರಾಜನೀತಿ ಅರ್ಥವಿದ್ಯಾಶಾಸ್ತ್ರಗಳು ನಿರ್ಮಾಣವಾಗುತ್ತಿರಲಿಲ್ಲ. ನಂತರದ ಕಾಲದಲ್ಲಿ ಈ ಅವಲೋಕನ ವೃತ್ತಿಯು, ಅಭ್ಯಾಸ ವೃತ್ತಿಯು ಲುಪ್ತವಾಯಿತಂದೆ ಹೊಸ ಶಾಸ್ತ್ರಗಳು ಉತ್ಪತ್ತಿಯಾಗಲಿಲ್ಲ ಮತ್ತು ಹಳೆಯವು ಕೊಳೆತು ಹೋದವು. ನಿತ್ಯಪ್ರಯೋಗ, ನಿತ್ಯ ಅನುಭವ, ನಿತ್ಯ ದೃಢೀಕರಣ, ನಿತ್ಯ ಸಂಶೋಧನೆ-ಇವು ಶಾಸ್ತ್ರಜ್ಞಾನಕ್ಕೆ, ಅವರ ಉತ್ಪತ್ತಿ ವಿಕಾಸ ಪರಿಣತಿಗೆ ಅಗತ್ಯವಾದವುಗಳು. ಅವುಗಳಿಲ್ಲದಿದ್ದರೆ, ಸಮ್ಮುಖದಲ್ಲಿ ಸಂಭವಿಸುವ ಆಗು ಹೋಗುಗಳನ್ನು ಸಂಕಲನ ಮಾನವ ಮನದ ಸಾಮರ್ಥ್ಯವೇ ನಷ್ಟವಾಗುತ್ತದೆ. ಅವನ ಚಿತ್ತದಿಂದ ಸರಸ್ವತಿಯು ಅಂತರ್ಧಾನವಾಗುತ್ತಾಳೆ.

ಶಾಸ್ತ್ರೀಯ ಮತ್ತು ಲಲಿತಸಾಹಿತ್ಯಗಳ ವಿವೇಚನವನ್ನು ಈ ನಿಬಂಧದಲ್ಲಿ ನಾನು ಕಲಸು ಮಲಸು ಮಾಡಿದ್ದೇನೆ. ಯಾಕೆಂದರೆ ಈ ಎರಡೂ ತರದ ವಾಙ್ಮಯಗಳ ಜೀವಿತ ತತ್ವಗಳು ಭಿನ್ನವಾಗಿದ್ದರೂ, ಜಗದ ಬಗೆಗಿನ ಪ್ರೇಮ, ಸಂಸಾರದ ವಿಷಯಕ್ಕೆ ಉತ್ಸಾಹ ಸಡಗರ, ಭವಿಷ್ಯಕಾಲದ ಬಗ್ಗೆ ಗೆಲುವು ನೋಟ, ಜೀವನದ ಅವಲೋಕನ ಇವುಗಳೆಲ್ಲ ಎರಡೂ ತರದ ಸಾಹಿತ್ಯಗಳಿಗೆ ಅಷ್ಟೇ ಅವಶ್ಯಕವಾಗಿವೆ. ಪಂಡಿತ ಕವಿಗಳ ಕಾವ್ಯಗಳಲ್ಲಿಯ ನಿಸರ್ಗ ವರ್ಣನೆಗಳನ್ನು ನೋಡಿದರೆ, ಅವರು ನಿಸರ್ಗದ ಪ್ರತ್ಯಕ್ಷ ಅವಲೋಕನೆಯನ್ನು ಎಷ್ಟರ ಮಟ್ಟಿಗೆ ಮಾಡಿದ್ದರೆಂಬುದನ್ನು ಗಮನಿಸಬಹುದು. ಎಲ್ಲ ಸ್ಥಳಗಳಲ್ಲಿಯೂ, ಎಲ್ಲ ಕಾಲದಲ್ಲಿಯೂ ಎಲ್ಲ ಋತುಗಳಲ್ಲಿಯೂ ಅವರ ಕಾವ್ಯಗಳಲ್ಲಿ ಮರತರುಗಳು ಹೂ ಕಾಯಿಗಳಿಂದ ಅರಳಿರುತ್ತವೆ. ಹಿಮಾಲಯವಿರಲಿ, ಸಾತಪುಡ ಸಹ್ಯಾದ್ರಿ ಪರ್ವತಗಳಿರಲಿ, ಗಂಗೆ, ಯಮುನೆ, ನರ್ಮದೆ, ಗೋದಾವರಿ, ಕೃಷ್ಣ ಯಾವದೇ ನದಿಗಳಿರಲಿ, ಅವರ ಬರಹಗಳಲ್ಲಿ ಎಲ್ಲ ವನಸ್ಪತಿ ಸೃಷ್ಟಿ ಸಾದೃಶವಾಗಿರುತ್ತದೆ. ಡಾ. ಮ.ವಿ. ಆಪಟೆಯವರು ಹಿಂದೆ ಅನೇಕ ಲೇಖನಗಳನ್ನು ಬರೆದು ಕಾಲಿದಾಸನ ಕಾವ್ಯಗಳಲ್ಲಿ ಸೃಷ್ಟಿ ವರ್ಣನೆಗಳು ಈಗಿನ ವನಸ್ಪತಿ ಶಾಸ್ತ್ರದ ಪ್ರಕಾರವಾದರೂ ತಪ್ಪಿಲ್ಲದಂತೆ ಇವೆಯೆಂದು ತೋರಿಸಿದ್ದಾರೆ. ಮೇಘದೂತದಲ್ಲಿಯ “ಸಾರಂಗ” ಇದನ್ನು “ಕುರಂಗ” ಎಂದು ಭಾಷಾಂತರಿಸಿದರೆ ಪ್ರಮಾದವಾದೀತೆಂದು ಆಪಟೆಯವರು ಹೇಳುತ್ತಾರೆ. ಯಾಕೆಂದರೆ ಎರಡು ಜಿಂಕೆಗಳ ಜಾತಿಯವೇ ಇದ್ದರೂ ಅವುಗಳಲ್ಲಿ ವ್ಯತ್ಯಾಸವಿದೆ ಮತ್ತು ಕಾಲಿದಾಸನು ಆ ಬಗ್ಗೆ ಬಹಳೇ ಸಾವಧನಿರುವಾಗ ನಾವು ಆ ಭೇದವನ್ನು ತೊಡೆದು ಹಾಕುವದು ಯೋಗ್ಯವಲ್ಲವೆಂದು ಹೇಳುತ್ತಾರೆ. ಸೃಷ್ಟಿಯ ಈ ಅವಲೋಕನವೆಲ್ಲಿ ಮತ್ತು ಮರಾಠಿ ಪಂಡಿತ ಕವಿಗಳ ಸಂಮಿಶ್ರತೆಯೆಲ್ಲಿ! ಸೃಷ್ಟಿಯ ಅವಲೋಕನೆ ಕವಿಗೆ ಪ್ರಯೋಜನಕಾರಿಯಾದಂತೆ, ಇನ್ನೂ ಆಳವಾಗಿ ಅಭ್ಯಸಿಸಿದ ನಂತರ ವನಸ್ಪತಿ ವೈದ್ಯಕಶಾಸ್ತ್ರಗಳಿಗೂ ಫಲದಾಯಕವಾಗುತ್ತದೆ. ಆದರೆ ಅವಲೋಕನೆಯೇ ಇಲ್ಲವಾದರೆ ಶಾಸ್ತ್ರವೂ ಇಲ್ಲ, ಕಾವ್ಯವೂ ಇಲ್ಲ, ಕವಿಗಳ ಕಲ್ಪನೆಗಳಿಗೂ ವಸ್ತುಸ್ಥಿತಿಯ ಭದ್ರವಾದ ಆಧಾರ ಅಗತ್ಯ, ಹೀಗೆ ಕಾಲಿದಾಸನದಾದರೂ ಅಭಿಪ್ರಾಯವಿತ್ತು.

ಪ್ರಾಚೀನ ಮರಾಠಿಯ ಉತ್ತರ ಕಾಲಖಂಡದಲ್ಲಿ, ಸ್ವರಾಜ್ಯ ಸಂಸ್ಥಾಪನೆಯ ನಂತರದ ಕಾಲದಲ್ಲಿ, ಮರಾಠರು ಐಹಿಕ ಸಂಸಾರಕ್ಕೆ ಉನ್ಮುಖರಾಗಿದ್ದರೂ ಸಹ ಇತಿಹಾಸ ಚರಿತ್ರ ರಾಜನೀತಿ ಅರ್ಥವಿದ್ಯಾ ಶಾಸ್ತ್ರಗಳು ಏಕೆ ನಿರ್ಮಾಣವಾಗಲಿಲ್ಲವೆಂಬುದನ್ನು ನಾವು ಈಗ ಗಮನಿಸಬಹುದು. ಈ ಕಾಲದಲ್ಲಿಯಾದರೂ ಆಧ್ಯಾತ್ಮದ, ನಿವೃತ್ತಿಯ ಹಿಡಿತದಿಂದ, ಶಬ್ದ ಪ್ರಾಮಾಣ್ಯದ ಆತಂಕ ಅಪ್ಪುಗೆಯಿಂದ, ಪೂರ್ವಕರ್ಮ, ಕಲಿಯುಗ, ಸದ್ಗುರು ಇವುಗಳ ವ್ಯಾಕುಲವಶತೆಯಿಂದ, ಮರಾಠೀಯರ ಮನಪೂರ್ಣ ಮುಕ್ತವಾಗಿರಲಿಲ್ಲ. ಜೀವನದ ಹೊಸ ತತ್ವಜ್ಞಾನವನ್ನು ಊರ್ಜಿತಗೊಳಿಸಬೇಕೆಂದು ಭಾವಿಸುವಷ್ಟು ಜೀವನದ ಬಗ್ಗೆ ಉತ್ಕಟ ಉತ್ಸಾಹ ಜನರ ಮನಸ್ಸಿನಲ್ಲಿ ಆಗಲೂ ಇದ್ದಿಲ್ಲ. ಪರದೇಶಕ್ಕೆ ಹೋಗಬೇಕು. ಪರಭಾಷೆಯನ್ನು ಕಲಿಯಬೇಕು, ಕನಿಷ್ಠ ಪಕ್ಷ ಭಾರತದಲ್ಲಿಯ ಪ್ರಾಂತಗಳಲ್ಲಿ ಅಲೆದಾಡಿ ಅಲ್ಲಿಯ ರಾಜಕಾರಣವನ್ನು ಅವಲೋಕಿಸಬೇಕು. ಅನೇಕ ಪ್ರಾಂತ ಭಾಷೆಗಳನ್ನಾದರೂ ಕಲಿಯಬೇಕು, ಯುದ್ದದೃಷ್ಟಿಯಿಂದ ಬೇರೆ ಪ್ರಾಂತಗಳಲ್ಲಿಯ ಹವಾಮಾನ ನದಿಪರ್ವತಗಳು ಭೂಗೋಲ ರಚನೆಗಳನ್ನು ಅಭ್ಯಸಿಸಬೇಕೆಂದು ಕನಸಿನಲ್ಲಿಯೂ ಸಹ ಮರಾಠೀಯರ ಮನಸ್ಸಿನಲ್ಲಿ ಬರಲಿಲ್ಲ. ವ್ಯತಿರಿಕ್ತವಾಗಿ ಒಬ್ಬ ಇಂಗ್ಲೀಷ್ ಅಧಿಕಾರಿ ತನ್ನ ರಾಜಕೀಯ ಜವಾಬ್ದಾರಿಗಳನ್ನು ನಿರ್ವಹಿಸಿ, ಹೀಗೇನಾದರೂ ಉದ್ಯೋಗ ಮಾಡುತ್ತಲೇ ಇದ್ದನು. ವಾರನಹೇಸ್ಟಿಂಗ್ಸನು ಭಾಗವತದ ಅಭ್ಯಾಸ ಮಾಡುತ್ತಿದ್ದನು. ಸರ ಮಿಲ್ಯಮ್‌ ಜೋನ್ಸ್ ೧೭೮೩ ರಲ್ಲಿ ತನ್ನ ವಯಸ್ಸಿನ ೩೭ ನೇ ವರ್ಷದಲ್ಲಿ ಕಲಕತ್ತೆಗೆ ನ್ಯಾಯಾಧೀಶನಾಗಿ ಬಂದನು. ಆದರೆ ಅದರ ಪೂರ್ವದಲ್ಲಿ ತನ್ನ ಇಪ್ಪತ್ತನೆಯ ವರ್ಷದಿಂದ ಏಶಿಯಾ ಖಂಡದಲ್ಲಿಯ ಕಾವ್ಯವಾಙ್ಮಯಗಳ ಮೇಲೆ ಗ್ರಂಥರಚನೆಯನ್ನು ಮಾಡಲಿಕ್ಕೆ ಪ್ರಾರಂಭಿಸಿದ್ದನು. ನಾದಿರಶಹನ ಚರಿತ್ರದ ಭಾಷಾಂತರವನ್ನು ಮಾಡಿದ್ದನು. ಮತ್ತು ೧೭೮೧ ರಲ್ಲಿ ಆರಬಸ್ತಾನದ ಪ್ರಾಚೀನ ಹತ್ತು ಕಾವ್ಯಗಳನ್ನು ಭಾಷಾಂತರಿಸಿದ್ದನು. ಅವನು ಮುಖ್ಯವಾಗಿ ಕಾಯದೆ ಪಂಡಿತನು. ಆದರೆ ಇಲ್ಲಿ ಬಂದ ನಂತರ ಸಂಸ್ಕೃತ ಭಾಷೆಯನ್ನು ಅಭ್ಯಸಿಸಲು ಆರಂಭಿಸಿದನು. ಆ ಭಾಷೆಯು ಲ್ಯಾಟಿನ್ ಮತ್ತು ಗ್ರೀಕ ಭಾಷೆಗಳಿಗಿಂತ ಹೆಚ್ಚು ವಿಕಸಿತವಾದದ್ದೆಂದು ಅಭಿಪ್ರಾಯಪಟ್ಟು, ಸಂಸ್ಕೃತ ಭಾಷೆಯ ಅಭ್ಯಾಸದ ಬಗ್ಗೆ ಒಂದು ಸಂಸ್ಥೆಯನ್ನು ಸ್ಥಾಪಿಸಿದನು, ಮತ್ತು ಕೆಲವೇ ಅವಧಿಯಲ್ಲಿ “ಶಕುಂತಲ” “ಮನುಸ್ಮೃತಿ” ಗಳನ್ನು ಭಾಷಾಂತರಿಸಿ ಪ್ರಸಿದ್ಧ ಮಾಡಿದನು. ಗ್ರಾಂಟಡಫ್‌ನು ಆ ಉದ್ರೇಕಗೊಂಡ ಕಾಲದಲ್ಲಿಯೂ ಅವಕಾಶ ಮಾಡಿಕೊಂಡು ಮರಾಠರ ಕಾಗದ ಪತ್ರಗಳನ್ನು ಕಲೆಹಾಕಿ “ಮರಾಠರ ಇತಿಹಾಸವನ್ನು ಬರೆದನೆಂಬುವುದು ಪ್ರಸಿದ್ಧವಿದೆ. ಪ್ರವಾಸ, ಸೃಷ್ಟಿ ನಿರೀಕ್ಷಣೆ, ಲೋಕವ್ಯವಹಾರದ ಅವಲೋಕನೆ, ಗ್ರಂಥಗಳ ಅಭ್ಯಾಸ, ಪರಭಾಷೆಯು ಪರಧರ್ಮದ ಅಭ್ಯಾಸ ಇವೆಲ್ಲವುಗಳಿಂದ ಮನುಷ್ಯನ ಸಿದ್ದಾಂತಶಕ್ತಿ ವಿಕಸಿತಗೊಳ್ಳುತ್ತದೆ. ಮಹಾರಾಷ್ಟ್ರದಲ್ಲಿ ಅತ್ಯಲ್ಪ ಪ್ರಮಾಣದ ಸಾಮಾನ್ಯವಾದ ಈ ಶಕ್ತಿಯ ಉದಾಹರಣೆಯೆಂದರೆ ರಾಮಚಂದ್ರಪಂತ ಅಮಾತ್ಯರ “ಆಜ್ಞಾಪತ್ರ”. ಈ ಗ್ರಂಥ ಪ್ರಾಥಮಿಕ ಸ್ವರೂಪದ್ದಿದ್ದರೂ ಈಗ ನಮಗೆ ಅಲೌಕಿಕವೆನಿಸುತ್ತದೆ. ಹೀಗೆ ಆ ಕಾಲದ ಇಂಥ ಸಾಮರ್ಥ್ಯದ ಸಂಪೂರ್ಣ ದಾರಿದ್ರ‍್ಯದ ನಿದರ್ಶನವಾಗಿದೆ. ಭಾರತೀಯರಲ್ಲಿ ಮರಾಠರಲ್ಲಿ ಈ ಸಾಮರ್ಥ್ಯವಿಲ್ಲದ್ದರಿಂದ ಇಲ್ಲಿ ಶಾಸ್ತ್ರ ನಿರ್ಮಿತಿಯೂ ಆಗಲಿಲ್ಲ ಮತ್ತು ಕಾವ್ಯ ನಿರ್ಮಿತಿಯೋ ಆಗಲಿಲ್ಲ.

ಪ್ರಾಚೀನ ಮರಾಠೀ ಕಾಲಖಂಡದಲ್ಲಿ ಅರ್ವಾಚೀನ ಕಾಲದಂತೆ ಕಾದಂಬರಿ ನಾಟಕಾದಿ ಲಲಿತ ಸಾಹಿತ್ಯ ಅಥವಾ ಅರ್ಥ ರಾಜಕಾರಣಾದಿ ಶಾಸ್ತ್ರೀಯು ಸಾಹಿತ್ಯ ಏಕೆ ನಿರ್ಮಾಣವಾಗಲಿಲ್ಲವೆಂಬುದರ ಮೀಮಾಂಸೆ ಮಾಡುವಾಗ ಇಹವಿಮುಖವೃತ್ತಿ, ಮಾನಸಿಕ ಪಾರತಂತ್ರ್ಯ
ಅಹಂವೃತ್ತಿಯ ಅಭಾವ ಮತ್ತು ಸಿದ್ಧಾಂತಶಕ್ತಿಯ ದೌರ್ಬಲ್ಯ ಈ ಕಾರಣಗಳನ್ನು ಹೇಳಿದ್ದಾಯಿತು, ಈಗ ಇನ್ನೂ ಒಂದು ಮಹತ್ವದ ಕಾರಣವನ್ನು ಪರಿಶೀಲಿಸಿ ಈ ಮೀಮಾಂಸೆಯನ್ನು ಮುಗಿಸೋಣ.

ಇದು ಅಪೂರ್ಣತೆಯ ಸಾಹಿತ್ಯ-

ಆಧ್ಯಾತ್ಮ ವಿದ್ಯೆ ಪರಿಪೂರ್ಣತೆಯ ವಿದ್ಯೆ. ಆದರೆ ಪ್ರತಿಯಾಗಿ ಮೇಲೆ ಹೇಳಿದ ಎರಡೂ ಪ್ರಕಾರದ ಸಾಹಿತ್ಯಗಳು ಅಪೂರ್ಣ ಮಾನವನ ಸಂಸಾರದ ಸಾಹಿತ್ಯಗಳಾಗಿವೆ.ಆಧ್ಯಾತ್ಮದಲ್ಲಿ ಪರಮೇಶ್ವರನು ಸರ್ವಗುಣಸಂಪನ್ನ, ಸರ್ವಸಮರ್ಥ, ಸರ್ವವ್ಯಾಪೀ ಹಾಗೂ ಪೂರ್ಣನಿದ್ದಾನೆ. ಭಕ್ತನು ಪ್ರಾರಂಭದಲ್ಲಿ ಹಾಗಿಲ್ಲದಿದ್ದರೂ ಕೊನೆಗೆ ಅದೇ ಅವಸ್ಥೆ ಪಡೆಯುತ್ತಾನೆ. ಮೊದಲು ಸಾಧಕ ಅವಸ್ಥೆಯಲ್ಲಿ ಅವನಿಗೆ ಪೂರ್ಣತೆ ಲಭಿಸದಿದ್ದರೂ, ಪರಮೇಶ್ವರನು ಹಗಲಿರುಳೂ ಅವನ ಪರಾಮರಿಕೆ ವಹಿಸಿರುವುದರಿಂದ ಅವನ ಜೀವನದಲ್ಲಿ ವೈಗುಣ್ಯವನ್ನು ಉಳಿಯಗೊಡುವುದಿಲ್ಲ. ಆಧ್ಯಾತ್ಮವಾದೀ ಸಾಹಿತ್ಯಕ್ಕೆ ಎಲ್ಲ ಕಡೆಗೂ ಆ ಪೂರ್ಣಪರಮೇಶ್ವರನ ಮತ್ತು ಆ ಶ್ರೇಣಿಯ ಮಾನವರ ಕತೆಗಳಿವೆ. ಆದರೆ ಮೇಲೆ ಹೇಳಿದ ಸಾಹಿತ್ಯ-ಕಾದಂಬರಿ, ನಾಟಕ, ಸಣ್ಣಕತೆ, ಮತ್ತು ಇತಿಹಾಸ ರಾಜಕಾರಣ ಇತ್ಯಾದಿ ಅಪೂರ್ಣ ಮಾನವನ ವೈಗುಣ್ಯ, ಅಪಯಶ, ದುಃಖ, ನಿರಾಶೆಗಳಿಂದ ತುಂಬಿದ ಸಾಹಿತ್ಯವಾಗಿದೆ. ಆಧ್ಯಾತ್ಮವೃತ್ತಿ ಪ್ರಬಲವಾಗಿದ್ದ ಸಮಯದಲ್ಲಿ ಪರಮಾರ್ಥದಲ್ಲಿ ಸತತವಾಗಿ ನಿರತರಾದವರಿಗೆ “ದಾಟುವದಕ್ಕಾಗಿ” ಬರಹ ಕೀರ್ತನೆಗಳನ್ನು ಮಾಡುವವರಿಗೆ ಈ ಸಾಹಿತ್ಯನಿರ್ಮಿತಿ ಸಾಧ್ಯವಾಗುವದಿಲ್ಲ. ರಾಮಾಯಣದಲ್ಲಿಯ ಅನೇಕ ಕತೆಗಳನ್ನು ಏಕನಾಥ, ಶ್ರೀಧರ, ವಾಮನ ಇತ್ಯಾದಿ ಮರಾಠೀ ಕವಿಗಳು ತಮ್ಮ ಕಾವ್ಯಕ್ಕಾಗಿ ಆಯ್ದು ಕೊಂಡರು, ಮೂಲ ರಾಮಾಯಣದಲ್ಲಿ ರಾಮ ಲಕ್ಷ ಣ, ಭರತ, ಸೀತೆ, ಹನುಮಂತ ಇವರು ಅಪೂರ್ಣ ಮಾನವರಂತೆ ಕಾಣುತ್ತಾರೆ. ಕಾಮಕ್ರೋಧಾದಿಗಳಿಂದ ನಮ್ಮ ನಿಮ್ಮ ಹಾಗೆಯೇ ವಶರಾಗುತ್ತಾರೆ. ಮಹಾಭಾರತದಲ್ಲಿಯ ಕೃಷ್ಣನ ಕತೆಯೂ ಮಾನವ ಕತೆಯೇ ಆಗಿದೆ. ಆದರೆ ಮರಾಠಿ ಕವಿಗಳಿಗೆ ಆ ವ್ಯಕ್ತಿಗಳ ಮಾನವತ್ವವೇ ಮಾನ್ಯವಿದ್ದಿಲ್ಲ. ಅವರಲ್ಲಿಯ ಮಾನವೀ ಅಂಕಗಳನ್ನು ನಷ್ಟ ಮಾಡಿ, ಅವರನ್ನು ಪೂರ್ಣತೆಗೆ ಮುಟ್ಟಿಸಿ, ಅನಂತರ ಅವರ ಕತೆಗಳನ್ನು ರಚಿದರು. ಏಕನಾಥರ ಕಾವ್ಯದಲ್ಲಿ ರುಕ್ಮಿಣಿ ಮತ್ತು ಶ್ರೀಕೃಷ್ಣ ಎಂದರೆ ಜೀವ-ಶಿವರಾಗುತ್ತಾರೆ. ಅವರು ಮಾನವೀ ಪ್ರಾಣಿಗಳೇ ಅಲ್ಲ, “ಈ ಗ್ರಂಥದ ನಿರೂಪಣೆ ಜೀವ ಶಿವ ಇವರ ಲಗ್ನ” ವೆಂದು ಹೇಳುತ್ತಾರೆ, ಮತ್ತು ಅದೇ ಸಂಪ್ರದಾಯದಲ್ಲಿ ಭೀಷ್ಮನೆಂದರೆ ವಿವೇಕ, ಶುದ್ಧಮತಿಯೆಂದರೆ ಶ್ರದ್ದೆ ಹೀಗೆ ವರ್ಣನೆ ಮಾಡಿದ್ದಾರೆ. ರುಕ್ಕಿಣಿಯು ಒಂಬತ್ತು ತಿಂಗಳುಗಳ ಕಾಲ ತಾಯಿಯ ಗರ್ಭದಲ್ಲಿದ್ದಳೆಂದರೆ ಅವಳು ಒಂಬತ್ತು ವಿಧ ಭಕ್ತಿಯನ್ನು ಆಚರಿಸುತ್ತಿದ್ದಳು. ಅವಳ ಕಾಲ್ಗಡಗ ಯಾವಾಗಲು ಸೋsಹಂ ಎಂದು ಗರ್ಜಿಸುತ್ತಿದ್ದವು. ಅವಳ ದಂತಪಂಕ್ತಿ ಓಂಕಾರದ ಶ್ರುತಿಯುತ್ತಿತ್ತು !

ಏಕನಾಥರು ರಾಮಾಯಣದ ಅವಸ್ಥೆಯನ್ನು ಹೀಗೆಯೇ ಮಾಡಿದ್ದಾರೆ. ರಾಮನು ಬ್ರಹ್ಮ, ಸೀತೆಯು ಆದಿಶಕ್ತಿ, ಕೌಸಲ್ಯೆಯು ಸದ್ವಿದ್ಯಾ ಹೀಗೆ ವರ್ಣಿಸಿದ್ದಾರೆ. ಈಗ ಇಂಥ ವ್ಯಕ್ತಿಗಳಿಗೆ ಕಾಮ, ಕ್ರೋಧ, ಮತ್ಸರ, ಅಸೂಯೆ, ಸಂತಾಪ, ಸ್ವಾರ್ಥ, ಲೋಭ, ಆಶೆ ನಿರಾಶೆ, ವಿರಹದುಃಖ, ಮಿಲನದಿಂದಾಗುವ ಆನಂದ ಈ ವಿಕಾರಗಳೆಲ್ಲಿಂದ ಬರುವವು ! ಏಕನಾಥರ ಭಾವಾರ್ಥದಂತೆ ರಾಮಾಯಣದಲ್ಲಿ ಸೀತೆ ಲಂಕೆಗೆ ಹೋಗಿರಲೇ ಇಲ್ಲ. ಕೇವಲ ಅವಳ ನೆರಳು ಹೋಗಿತ್ತು. ಅವಳನ್ನು ರಾವಣನು ಒಯ್ದನೆಂದರೆ ಅದು ಅಪೂರ್ಣ ಮತ್ತು ದುರ್ಬಲ ಮಾನವರ ಕತೆಯಾಗುತ್ತದೆ ! ಅಹಲ್ಯೆಯನ್ನು ಇಂದ್ರನು ಭ್ರಷ್ಟಮಾಡಿದನು. ಆಗ ಗೌತಮ ಋಷಿಯುು ಮೊದಲು ಕೆರಳಿದನು ಅದರ ನಂತರ ಇದರಲ್ಲಿ ರೊಚ್ಚಿಗೇಳಲು ಕಾರಣವೇನು ಎಂದು ವಿಚಾರ ಮಾಡಿದನು, ಸರ್ವಾಂತರ್ಯಾಮೀ ಭೋಗಿಸುವವರು ಒಬ್ಬನೇ ಇದ್ದಾನೆಂದು ನನಗೆ ತಿಳಿದಿದೆಯೆಂದ ಮೇಲೆ ಕ್ರೋಧಕ್ಕೆ ಕಾರಣವೇನು ? “ನನ್ನ ಸ್ತ್ರೀ, ನನ್ನ ಮನೆ | ಇವೇ ಕಾಮಕ್ರೋಧಗಳ ಮಂದಿರಗಳು, ಇಲ್ಲಿಯೇ ದೊಡ್ಡವರೂ ವಂಚಿತರಾಗಿದ್ದಾರೆ, ನನ್ನನ್ನೂ ಕ್ರೋಧ ಮೋಸ ಮಾಡಿತು || ಕಾ ತೇ ಕಾಂತಾ । ಕಸ್ತೆ ಪುತ್ರ: ಇವುಗಳನ್ನು ನಾನು ಓದಿದ್ದೆ ಆದರೆ ಅದೆಲ್ಲ ವ್ಯರ್ಥವಾಯಿತು” (ಬಾಲಕಾಂಡ-೧೫- ೮೫ ರಿಂದ ೯೫) ಹೀಗೆ ವಿಚಾರಗಳು ಬಂದು ಗೌತಮನಿಗೆ ಅಹಲ್ಯೆಯ ಮೇಲೆ ರೋಷಗೊಂಡ ಬಗ್ಗೆ ಪಶ್ಚಾತ್ತಾಪವಾಯಿತು, ದುಃಖವೂ ಆಯಿತು ! ಶ್ರೀಧರ ಸ್ವಾಮಿಗಳು ರಾಮಕತೆಯನ್ನು ಹೀಗೆಯೇ ವರ್ಣಿಸಿದ್ದಾರೆ. ಭವದು ದುಃಖನಿವಾರಣೆಯೇ ಅವರ ಬರಹಗಳ ಮುಖ್ಯ ಉದ್ದೇಶವಾಗಿದ್ದಿತು. ಆದ್ದರಿಂದ ರಾಮ – ಸೀತೆ, ಪರಮಾತ್ಮಾ-ಆತ್ಮಾ ಆದಂತೆಯೇ. ಅಲ್ಲದೇ ಭೋಜನದಲ್ಲಿ ಅನ್ನವೆಂದರೆ ನಿಜಭೋಧ, ಪಡೆಯೆಂದರೆ ಅಭೇದ. ಗಂಜಿಯೆಂದರೆ ಕ್ಷಮೆ, ಮಜ್ಜಿಗೆ ಸಾರು ಎಂದರೆ ಸಮತೆ ಹೀಗೆ ಮಾನವ ಸಂಸಾರವನ್ನು ಅವರು ಪೂರ್ಣತೆಗೆ ಸಾಗಿಸಿದ್ದಾರೆ. ನಾಟಕ, ಕಾದಂಬರಿಗಳು ಅಪೂರ್ಣ ಮಾನವನ ಕತೆಗಳಿವೆ, ಮಡದಿಯ ಮೇಲೆ ಆತ್ಯಾಚಾರವಾದಾಗ ಸಂತಾಪದಿಂದ ಉದ್ರೇಕಗೊಂಡ ಜನಸಾಮಾನ್ಯನ ಕತೆಯಾಗಿದೆ. ಗೌತಮನಂತೆ ಅಥೆಲ್ಲೋನು ವಿಚಾರ ಮಾಡಿದ್ದರೆ, ಶೇಕ್ಸಪಿಯರನಿಗೆ ನಾಟಕ ರಚಿಸಕ್ಕೆ ಸಾಧ್ಯವಾಗುತ್ತಿರಲಿಲ್ಲ. ಜನಸಾಮಾನ್ಯರಾದ ನಮಗೆ ನಮ್ಮ ರಾಗದ್ವೇಷದ ಕತೆಗಳು ರುಚಿಸುತ್ತವೆ. ಆದರೆ ವಿಕಾರಗಳನ್ನು ಪ್ರಕಟಪಡಿಸಿದರೆ ಹಿರಿಯರು ಕೋಪಗೊಳ್ಳುತ್ತಿದ್ದರು. ಮನೆಯಲ್ಲಿಯ ಸಣ್ಣ ಬಾಲಕನ ಹುಟ್ಟಿದ ಹಬ್ಬ ನಮಗೆ ಆನಂದೋತ್ಸಾಹದಿಂದ ನಲಿಯುವ ಪ್ರಸಂಗ. ಆದರೆ ಜ್ಞಾನೇಶ್ವರರು ಅದನ್ನು ನಿಷೇಧಿಸಿದರು. ಅವರೆದುರು ನಮ್ಮ ವಾತ್ಸಲ್ಯದ ಕತೆ ಹೇಳುವ ಧೈರ್ಯವಾಗದೇ ಒಳಗೇ ಕಮರುತ್ತದೆ. ಸಣ್ಣ ಮಕ್ಕಳಿಗೆ ತಿನ್ನಲು ಸಿಗದಿದ್ದರೆ ನಮ್ಮ ಜೀವ ಮರುಗುತ್ತದೆ, ನಮ್ಮ ಕರುಳು ಕರುಬುತ್ತದೆ. ಆದರೆ “ಆ ಭಾವನೆಗಳು ನಿಮ್ಮಲ್ಲಿ ಬಂದಿಲ್ಲವೆಂದು ತಿಳಿಯಿರಿ” ಎಂದು ತುಕಾರಾಮ ಮಹಾರಾಜರು ಆಜ್ಞಾಪಿಸಿದ್ದಾರೆ. ಆಗ ನಮ್ಮ ದುಃಖ ಹತ್ತಿಕ್ಕಿ ತಳಮಳಗೊಳ್ಳುತ್ತೇವೆ; ಆದರೆ ಅದರ ಆವಿಷ್ಕಾರ ಮಾಡುವ ಧೈರ್ಯವಾಗುವದಿಲ್ಲ. ಯಾಕೆಂದರೆ ನಮಗೆ ಮಹಾರಾಜರ ಭಯ. ಹೀಗೆಂದ ಮೇಲೆ ಎಲ್ಲಿಯ ಕಾದಂಬರಿ ಎಲ್ಲಿಯ ನಾಟಕ!

ಜೀವೊವ್ಹ್ಯಾನಿ ಬೋಕ್ಯಾಶಿಯೋ (ಕ್ರಿ. ಶ. ೧೩೧೩-೧೩೭೫) ಹದಿನಾಲ್ಕನೇ ಶತಮಾನದಲ್ಲಿ ಯುರೋಪದಲ್ಲಿಯ ಪ್ರಥಮ ಕಾದಂಬರಿ ಬರೆದನು. ಅವನ ಡೆಕ್ಯಾಮೆರಾನ್ ಮಾನವನ ರಾಗ ದ್ವೇಷ, ಪ್ರೇಮ, ರಂಗವಿಲಾಸ, ಸ್ವಾರ್ಥ, ಲೋಭಗಳ ಕತೆ. ಹದಿನಾಲ್ಕನೇ ಶತಮಾನದ ಇಟಾಲಿಯನ್ ಸ್ತ್ರೀಪುರುಷರ ನಿಜವಾದ ಚಿತ್ರಣವುಂಟು. ಸಾಮಾನ್ಯ ಜನ ನಲಿದಾಡಲಿಕ್ಕೆ, ಆನಂದ ವ್ಯಕ್ತ ಮಾಡಲಿಕ್ಕೆ, ಅಭ್ಯಂತರವೇನೂ ಇಲ್ಲ. ಯಾವಾಗಲೂ ಗಂಭೀರ ಅಥವಾ ಮೈಲಿಗೆಯಾದಂತಿರಲೇ ಬೇಕೆಂದಲ್ಲ ಎಂಬ ಭಾವ ಗ್ರೀಕ್ ಪುನರುಜ್ಜೀವನದಿಂದ ಉದ್ಭವಿಸಿತು. ಆದ್ದರಿಂದ ಸಂಸಾರೀ ಸ್ತ್ರೀ ಪುರುಷರ ಕತೆ ಕಾದಂಬರಿಗಳು ರಚಿತವಾಗಹತ್ತಿದವು. ಮೊದಲಿನ ಕಾಲದಲ್ಲಿ ಆಧ್ಯಾತ್ಮವೃತ್ತಿಯ ಭದ್ರ ಹಿಡಿತ ಯುರೋಪದಲ್ಲಿಯಾದರೂ ಹೇಗಿತ್ತೆಂದು ಮೋಲಿಯರನ “ತಾರ್ತೂಫ್‌” ನಾಟಕದಲ್ಲಿ ನೋಡಬಹುದು. ಅರಗ್ಯಾನ ಎಂಬ ಗೃಹಸ್ಥನು ತಾರ್ತೂಫ್ ಎಂಬ ಧರ್ಮ ಗುರುವನ್ನು ಮನೆಗೆ ಆಮಂತ್ರಿಸಿ ಅವನ ಶಿಷ್ಯತ್ವವನ್ನು ಸ್ವೀಕರಿಸಿದನು. ನಂತರ “ಈ ಮಾಯಾಮಯ ಸಂಸಾರದಿಂದ ನಾನು ಗುರುಕೃಪೆಯಿಂದ ಮುಕ್ತನಾಗಿದ್ದೇನೆ. ನನ್ನ ಮಡದಿ ಮಕ್ಕಳು ನನ್ನ ಕಣ್ಣ ಮುಂದೆಯೇ ಮಡಿದು ಬಿದ್ದರೂ ನನಗೇನೂ ದುಃಖವಾಗುವದಿಲ್ಲ” ಎಂದು ಅವನ ಮಿತ್ರರಿಗೆ ಹೇಳಹತ್ತಿದನು. ಇದೆಲ್ಲ ಎಷ್ಟು ಕೃತ್ರಿಮ ಎಷ್ಟು ತಿಳಿಗೇಡಿ, ಎಷ್ಟು ಅನೈಸರ್ಗಿಕವಾದದ್ದು, ಮತ್ತು ತಾರ್ತೂಫ್‌ನು ಎಂಥ ಕಪಟ ಗುರುವಿದ್ದನು ಎನ್ನುವದನ್ನು ಈ ನಾಟಕದಲ್ಲಿ ನಿರೂಪಿಸಿದೆ: ಮತ್ತು ಈ ನಿರೂಪಣೆ ವಿನೋದದಿಂದ ನಮ್ಮ ಕಡೆಗೆ ಆ ವೈರಾಗ್ಯದ ಕಾಲದಲ್ಲಿ ವಿನೋದವೆಂದರೆ ಅಬ್ರಹ್ಮಣ್ಯವಾಗಿತ್ತು. ಯಾಕೆಂದರೆ ವಿನೋದವು ವಿಸಂಗತಿಯನ್ನು ತೋರಿಸುತ್ತದೆ, ವಿಕೃತಿಯನ್ನು ಪ್ರಕಟಪಡಿಸುತ್ತದೆ ಮತ್ತು ಮನುಷ್ಯನನ್ನೆ ನಕ್ಕು ನಲಿದಾಡಿಸುತ್ತದೆ. ಹಾಸ್ಯ ನಿವೃತ್ತಿ ಮಾರ್ಗಕ್ಕೆ ಪರಮಾರ್ಥಕ್ಕೆ ಮಂಜೂರವಿಲ್ಲ. ಆದರೆ ಹಾಸ್ಯವು ಜೀವನದ ಪುಷ್ಟಿಯಿದೆ ಎಂಬ ವಿಚಾರವನ್ನೇ ಯುರೋಪದಲ್ಲಿ ಪುನರುಜ್ಜೀವನವು ಜನಗಳಿಗೆ ಬೋಧಿಸಿತು. ಗ್ರೀಕವಿದ್ಯೆಯು ಮಾನವನನ್ನು ಮಾನವನನ್ನಾಗಿ ಮಾಡಿತು, ಕಾವು ಕ್ರೋಧ ಮದಮತ್ಸರ ಪ್ರೇಮ ಶೃಂಗಾರ ವಾತ್ಸಲ್ಯ ಇವು ಸಂಸಾರದ ಭೂಷಣಗಳೆಂದು ಉಪದೇಶಿಸಿತು. ಆದ್ದರಿಂದ ಉಲ್ಹಸಿತನಾಗಿ ಮಾನವನು ಸ್ವಂತದ ಕತೆ ಕಾದಂಬರಿಗಳನ್ನು ಬರೆಯಲಾರಂಭಿಸಿದನು. ನಮ್ಮಲ್ಲಿ ಇಂಗ್ಲೀಷ ವಿದ್ಯೆಯ ಪ್ರಸಾರವಾದಾಗ ವಿಷ್ಣುಶಾಸ್ತ್ರಿಗಳು ಹೇಳಿದ್ದೇನೆಂದರೆ “ಷಡ್ವಿಕಾರಗಳು ಶತ್ರುಗಳಲ್ಲ. ಜಗದ ಹಿತಕಾರಿಯಾದ ಮಿತ್ರರೂ ಆಗಿವೆ. ಪರಮೇಶ್ವರನೇ ಮನಸ್ಸಿನ ಈ ಶಕ್ತಿಗಳನ್ನು ನಿರ್ಮಿಸಿದ್ದಾನೆ. ಅವು ಅನರ್ಥವಾದವುಗಳೆಂದು ಬಗೆಯುವದು ಧರ್ಮದ ದೃಷ್ಟಿಯಿಂದ ಪಾಪ ಮತ್ತು ನ್ಯಾಯದ ದೃಷ್ಟಿಯಿಂದ ಮುರ್ಖತನವೇ ಸರಿ. ಈ ವೃತ್ತಿಗಳು ಅಪಾಯಕಾರಿಗಳಲ್ಲ, ಅವುಗಳನ್ನು ಶರೀರ ಅವಯವಗಳಂತೆ ಮನುಷ್ಯನ ಕಲ್ಯಾಣಕ್ಕಾಗಿಯೇ ಕೊಟ್ಟಿದೆ” (ಗರ್ವ-ನಿಬಂಧ ಮಾಲೆ). ಈ ಪ್ರಕಾರ ಪುನಃ ಪರಿವರ್ತನೆಯಾಯಿತು. ಅದರಿಂದಲೇ ಕಾದಂಬರಿ ಉದ್ಭವಿಸಿತು.
ಮೇಲೆ ಹೇಳಿದ ಪೂರ್ಣ ಅಪೂರ್ಣತೆಯ ವಿಚಾರಗಳನ್ನು ಪರಿಶೀಲಿಸಿದರೆ ಇತಿಹಾಸ ಚರಿತ್ರ, ರಾಜಕಾರಣ, ರಸಾಯನ ಪದಾರ್ಥವಿಜ್ಞಾನ ಇವುಗಳ ಅಭಾವಕ್ಕೆ ಮೂಲದಲ್ಲಿ ಇವೇ ಕಾರಣಗಳೆಂದು ಗ್ರಹಿಸಬಹುದು. ಹಿಂದಿನ ಜನರು ಶೋಕಾಂತಿಕ ನಾಟಕಗಳನ್ನು ನಿರಾಕರಿಸಿದ್ದರು. ಸ್ವತಃ ಪರಮೇಶ್ವರನು ಅವತರಿಸಿ, ಈ ದುರಂತವನ್ನು ಸುಖಾಂತ ಮಾಡಿದಾಗ ಈ ಸಂಸಾರದಲ್ಲಿಯ ಅಪೂರ್ಣತೆಯು ನಷ್ಟವಾಗುತ್ತದೆ. ಆಗ ಮಹೀಪತಿಯು ಈ ಸಂಸಾರದ ಕತೆಯನ್ನು ಅವಶ್ಯವಾಗಿ ಬರೆಯುತ್ತಾನೆ. ಅವನ “ಸಂತ ವಿಜಯ” “ಭಕ್ತಿ ವಿಜಯ” ಚರಿತ್ರಗ್ರಂಥಗಳು ಈ ಪೂರ್ಣತೆಯ ಕತೆಗಳಾಗಿವೆ. ಆದರೆ ನಿಜವಾದ ಚರಿತ್ರವು ಹೀಗಿರುವುದು ಅಸಾಧ್ಯ. ನಿಜವಾದ ಸಂಸಾರದಲ್ಲಿ ಗೋರಾ ಕುಂಬಾರ1 ನಿಗೆ ಕೆಸರಿನಲ್ಲಿ ಕೂಸು ಸತ್ತ ದುಖಃವಾಗುತ್ತದೆ, ಮತ್ತು ಅದನ್ನು ವಿಠಲನು ಎಂದೂ
______________
1. ಗೋರಾ ಕುಂಬಾರ (ಕಿ. ಶ. ೧೨೬೭-೧೩೧೭) ಮಹಾರಾಷ್ಟ್ರದ ಪ್ರಸಿದ್ದ ಸಂತ. ಅವನು ವೃತ್ತಿಯಿಂದ ಕುಂಬಾರನಾಗಿದ್ದು ಅದಕ್ಕಾಗಿ ಮಣ್ಣು ತಂದು ಆವಿಗೆಯಲ್ಲಿ ಹಾಕಿ ಮೆತ್ತಗೆ ಮಾಡುವ ಸಲುವಾಗಿ ಅದರ ಮೇಲೆ ಕುಣಿಯುತ್ತಿದ್ದನು. ಕುಣಿಯುವಾಗ ಪಂಢರೀನಾಥನ ಭಜನೆಗಳನ್ನು ಪಠಿಸುತ್ತಿದ್ದನು. ಒಂದು ದಿನ ಭಜನಾನಂದದಲ್ಲಿದ್ದಾಗ ಕೆಸರಿನಲ್ಲಿ ಸಿಕ್ಕ ತನ್ನ ಕೂಸನು ತುಳಿದು ನರ್ತಿಸಿದನು. ಕೂಸು ಕಾಲಲ್ಲಿ ಸಿಕ್ಕು ಸತ್ತದ್ದು ಅವನಿಗೆ ತಿಳಿಯಲಿಲ್ಲ. ಅವನ ಹೆಂಡತಿಯಾದ ಸಂತ್ರಿ ಒಂದು ದಿವಸ ಸಹಜವಾಗಿ ತನ್ನನ್ನು ಸ್ಪರ್ಶಿಸಬೇಡ ಎಂದು ವಿಠೋಬನ ಮೇಲೆ ಆಣೆ ಇಟ್ಟು ಹೇಳಿದಳು. ಗೋರಾ ಕುಂಬಾರನು ಆಕೆಯನ್ನು ಆ ನಂತರ ಎಂದೂ ಸ್ಪರ್ಶಿಸಲಿಲ್ಲ. ಆಕೆಯು ಮಾರ್ಗವಿಲ್ಲದ ವಂಶೋದ್ಧಾರಕ್ಕಾಗಿ ತನ್ನ ತಂಗಿ ರಾಮಿ ಇವಳನ್ನು ಲಗ್ನ ಮಾಡಿಸಿದಳು, ಲಗ್ನ ಸಮಯದಲ್ಲಿ ಅವಳ ತಂದೆಯು ಇಬ್ಬರೂ ಅಕ್ಕತಂಗಿಯರನ್ನು ಸಮಾನವಾಗಿ ನೋಡಬೇದೆಂದು ಉಪದೇಶಿಸಿದನು. ಆದ್ದರಿಂದ ಗೋರಾ ಕುಂಬಾರನು ತನ್ನ ಎರಡನೆಯ ಹೆಂಡತಿಯಾದ ರಾಮಿಯನ್ನೂ ಸ್ಪರ್ಶಿಸಲೇ ಇಲ್ಲ.
___________________
ಜೀವಂತ ಮಾಡಲಾರನು, ಸಮರ್ಥರಿಗೆ 1 ಹದ್ದನ್ನು ಜೀವಂತ ಮಾಡಲು ಬರುತ್ತಿದ್ದರೂ, ಶಿವಾಜಿ ಅಥವಾ ಸಂಭಾಜಿಯವರನ್ನು 2 ಜೀವಂತ ಮಾಡಲಿಕ್ಕಾಗಲಿಲ್ಲ. ಅರ್ಥಾತ್ ಅವರ ಚರಿತ್ರಗಳನ್ನು ಮಹೀಪತಿ ಬರೆಯಲಾರನು. ಅಪೂರ್ಣ ಮಾನವರ ಚರಿತ್ರೆಯಲ್ಲಿ ಅವನಿಗೆ ಆಸಕ್ತಿಯಿಲ್ಲ. ಇತಿಹಾಸ ಬರೆದರೂ ಹಾಗೇನೇ. ಮುಸಲ್ಮಾನರು ಆಕ್ರಮಣ ಮಾಡಿದರು. ಪರಮೇಶ್ವರನಿಗೆ ತಡೆಯಲು ಸಾಧ್ಯವಾಗಲಿಲ್ಲ. ಸಾವಿರಾರು ಸ್ತ್ರೀಯರ ಮಾನಭಂಗವಾಯಿತು. ಅವರನ್ನು ಪರಮೇಶ್ವರನಿಗೆ ಸಂರಕ್ಷಿಸುವದು ಆಗಲಿಲ್ಲ. ಹೀಗೆಯೇ ಬರೆಯಬೇಕಾಗುತ್ತಿತ್ತು. ಇವುಗಳನ್ನು ಬರೆಯುವ ಸಾಮರ್ಥ್ಯ ಆ ಕಾಲದಲ್ಲಿ ಯಾರಲ್ಲಿಯ ಇದ್ದಿಲ್ಲ, ಸೇವಾ ನ್ಹಾವೀ 3 ಇವನಿಗೆ ಬಾದಶಹರ ಕ್ಷೌರಕ್ಕೆ ಹೋಗಿ ಸಮಯವಾಯಿತು. ಬಾದಶಹನು ಕೋಪೋದ್ರೇಕವಾದಾಗ ಭಕ್ತನ ಬಗ್ಗೆ ಕನಿಕರವೆನಿಸಿ ತ್ರೈಲೋಕ್ಯನಾಯಕನಾದ ಪರಮೇಶ್ವರನೇ ಹಜಾಮನಾಗಿ ಬಾದಶಹನ ಕ್ಷೌರ ಮಾಡಿದನು. ಇಂಥ ಕತೆಗಳನ್ನು ಬರೆಯುವದರಲ್ಲಿದ್ದ ಸ್ವಾರಸ್ಯ, ಛತ್ರಪತಿ ಸಂಭಾಜಿ ಮಹಾರಾಜನ 4 ಧೀರೋದಾತ್ತ ಆತ್ಮ ಸಮರ್ಪಣದ ಕತೆಯಲ್ಲಿಲ್ಲ. ಆ ದಿವ್ಯವನ್ನು ಸಂಭಾಜಿಯು ಧರ್ಮಸಂರಕ್ಷಣಕ್ಕಾಗಿ ಮಾಡಿದರೂ ಇಲ್ಲ.
__________________
1. ಸಮರ್ಥ ಅಥವಾ ಶ್ರೀ ಸಮರ್ಥರೆಂದು ಪ್ರಸಿದ್ಧರಾಗಿರುವ ಇವರು ೧೬0೮ ರಲ್ಲಿ ಜನಿಸಿದರು. ಹನ್ನೆರಡನೇ ವರ್ಷದವರಿದ್ದಾಗ ಲಗ್ನ ಸಮಯದಲ್ಲಿ “ಸುಮುಹೂರ್ತೇ ಸಾವಧಾನ” ಎಂಬ ಮಂತ್ರೋಚ್ಛಾರವಾದ ಕೂಡಲೇ ಲಗ್ನ ಮಂಟಪದಿಂದ ಓಡಿ ಹೋಗಿ ಅನೇಕ ವರ್ಷ ತಪಶ್ಚರ‍್ಯ ಮಾಡಿದರು. ಇವರನ್ನು ಮಹಾರಾಷ್ಟ್ರ ರಾಜ್ಯ ಸಂಸ್ಥಾಪಕ ಶಿವಾಜಿಯ ಗುರು ಎಂದು ಪರಿಗಣಿಸಲಾಗುತ್ತದೆ.

2. ಸಂಭಾಜಿಯು ಮಹಾರಾಷ್ಟ್ರ ರಾಜ್ಯ ಸಂಸ್ಥಾಪಕ ಶಿವಾಜಿಯ ಹಿರಿಮಗನು, ಇವನ ಬಗ್ಗೆ ವಿಸ್ತ್ರತ ಟಿಪ್ಪಣಿ ಮುಂದೆ ನೋಡಿರಿ.
3. ಸೇನಾನ್ಹಾವೀ ಹದಿನೈದನೇ ಶತಮಾನದ ಸಂತ. ಇವನು ವೃತ್ತಿಯಿಂದ ಒಬ್ಬ ಕ್ಷೌರಿಕ. ಇವನ ಬಗ್ಗೆ ಜ್ಞಾನೇಶ್ವರದ ಅಭಂಗಗಳಲ್ಲಿ ಉಲ್ಲೇಖಗಳುಂಟು.

4. ಛತ್ರಪತಿ ಸಂಭಾಜಿಯು ಮಹಾರಾಷ್ಟ್ರ ರಾಜ್ಯಸಂಸ್ಥಾಪಕ ಶಿವಾಜಿಯ ಹಿರಿಯ ಮಗನು. ಮರಾಠರ ಎರಡನೆಯ ಛತ್ರಪತಿ. ಶೇಖನಿಜಾಮನೆಂಬ ಔರಂಗಜೇಬನ ಸರದಾರನು ಇವನನ್ನು ಸೆರೆಹಿಡಿದು ಬಾದಷಹನ ಕಡೆಗೆ ಕಳಿಸಿದನು. ಮುಸಲ್ಮಾನೀ ಧರ್ಮ ಸ್ವೀಕಾರ ಮಾಡುವಂತೆ ಒತ್ತಾಯಿಸಿದಾಗ ಸಂಭಾಜಿಯು ಅದನ್ನು ಧಿಕ್ಕರಿಸಿದನು. ಮೊದಲು ಎರಡೂ ಕಣ್ಣುಗಳನ್ನು ಕೀಳಿಸಿದರು, ಮತ್ತು ಹದಿನೈದು ದಿನಗಳವರೆಗೆ ಒಂದೊಂದು ಅವಯವ ಕತ್ತರಿಸಿ ನಾಯಿಗಳಿಗೆ ಹಾಕುತ್ತಿದ್ದರು, ಮತ್ತು ಕೊನೆಗೆ ಶಿರಚ್ಛೇದ ಮಾಡಿ ಅವನನ್ನು ಕೊಲ್ಲಲಾಯಿತು. ಆಗ ಅವನಿಗೆ ೩೨ ವರ್ಷಗಳಾಗಿದ್ದವು.
________________

ಯಾಕೆಂದರೆ ಅವನನ್ನು “ದಾಂಟಿಸಲು ಅಲ್ಲಿ ವಿಠೂ 1 ಬಂದಿಲ್ಲ.

ಲೋಕಮಾನ್ಯ ತಿಲಕರು ನಮ್ಮಲ್ಲಿ ಮೊದಲು ರಸಾಯನ ಪದಾರ್ಥವಿಜ್ಞಾನ ಇತ್ಯಾದಿ ಶಾಸ್ತ್ರಗಳು ಏಕೆ ನಿರ್ಮಾಣವಾಗಲಿಲ್ಲ ಎಂಬ ಬಗ್ಗೆ ಹೇಳುವಾಗ ಮೊದಲಿನಿಂದಲೂ ನಮ್ಮಲ್ಲಿದ್ದ ನಿವೃತ್ತಿಮಾರ್ಗದತ್ತ ಪ್ರವೃತ್ತಿ ಮತ್ತು ನಮ್ಮ ಸಮಾಧಾನ ವೃತ್ತಿ ಇವುಗಳು ಕಾರಣಳೆಂದು ಹೇಳಿದ್ದಾರೆ. ಈ ಸಮಾಧಾನವೃತ್ತಿಯೇನು ನಿದರ್ಶಿಸುವದು? ಅದು ಆಧ್ಯಾತ್ಮದಿಂದ ಬಂದುದು. ಆ ಶಾಸ್ತ್ರಕ್ಕೆ ಅಜ್ಞಾತವೆಂಬುದೇ ಇಲ್ಲ. “ತದ್ ಜ್ಞಾನತ್ವ ಸರ್ವಮಿದಮ್‌ ಜ್ಞಾತಮ್ ಇತಿ ಭವತಿ”-ಅದನ್ನು ತಿಳಿದುಕೊಂಡಾಗ ಎಲ್ಲವನ್ನೂ ತಿಳಿದುಕೊಂಡಂತಾಗುತ್ತದೆ. ಹೀಗೆ ಅದರ ಸಿದ್ದಾಂತ, ಆದ್ದರಿಂದಲೇ ಅದರಲ್ಲಿ ಪೂರ್ಣ ಸಮಾಧಾನವಿದೆ. ಏನದರ ಅಜ್ಞಾತವಿದ್ದರೇನೇ ಜಿಜ್ಞಾಸೆ ಹುಟ್ಟುತ್ತದೆ. ಆದರೆ ಎಲ್ಲ ಜ್ಞಾನವಾದ ನಂತರ ಜಿಜ್ಞಾಸೆಯಲ್ಲಿಯದು ! ಇದಕ್ಕೆ ವ್ಯತಿರಿಕ್ತವಾಗಿ ಭೌತಿಕ ಶಾಸ್ತ್ರದಲ್ಲಿ ಪ್ರತಿದಿನ ಅಜ್ಞಾನದ ಕ್ಷೇತ್ರವೇ ವಿಸ್ತಾರವಾಗುತ್ತಿದೆ. ನನ್ನ ಜ್ಞಾನವೆಂದರೆ ಒಂದು ಉಸುಕಿನ ಕಣದಷ್ಟೂ ಅಲ್ಲವೆಂದು ನ್ಯೂಟನ್ ಹೇಳಿದನು. ಈ ಅಸಮಾಧಾನದಿಂದಲೇ ಈ ಅಪೂರ್ಣತೆಯಿಂದಲೇ ಸಂಶೋಧನವೃತ್ತಿಯ ಜನ್ಮವಾಗುತ್ತದೆ. ಇಲ್ಲಿ ಪೂರ್ಣತೆಯೇ ಇದ್ದಿಲ್ಲ, ಎಲ್ಲ ಕಡೆಗೂ ಸಮಾಧಾನವಿತ್ತು. ಆಗ ಸಂಶೋಧನ ಏತರ ಬಗ್ಗೆ ಮಾಡಬೇಕು? ಪ್ರಾಚೀನ ಮರಾಠಿ ಕವಿಗಳ ನಿಸರ್ಗವರ್ಣನೆಗಳಲ್ಲಿ ಮರ ತರುಗಳು ಯಾವಾಗಲೂ ಹೂಕಾಯಿಗಳಿಂದ ಅರಳಿರುತ್ತವೆ. ಜಲಾಶಯಗಳು ನೀರಿನಿಂದ ತುಂಬಿರುತ್ತವೆ. ಅವುಗಳಲ್ಲಿ ಕಮಲಗಳು ಸದಾ ವಿಕಸಿತವಾಗಿರುತ್ತವೆ. ಇದನ್ನು ಮೊದಲೇ ಹೇಳಿದೆ. ಅವರು ಹಾಗೇಕೆ ವರ್ಣನೆಗಳನ್ನು ಮಾಡುತ್ತಿದ್ದರೆಂಬುದು ಈಗ ಅರಿವಾಗಬಹುದು. ಅದು ಅವರ ಪೂರ್ಣಸೃಷ್ಟಿಯ ವರ್ಣನೆ. ಫಲಹೀನ ಪುಷ್ಟಹೀನ ವನಸ್ಪತಿಗಳು ಅವರ ಬರಹಗಳಲ್ಲಿ ಎಂದು ಎಲ್ಲಿಯೂ ಇಲ್ಲ. ಆದ್ದರಿಂದ ಅವುಗಳನ್ನು ಹಾಗೆ ವರ್ಣಿಸಲಿಲ್ಲ ಮತ್ತು ಆದ್ದರಿಂದಲೇ ಸಂಶೋಧನೆಯನ್ನೂ ಮಾಡಲಿಲ್ಲ. ಒಂದು ಹಳೆಯ ಶ್ಲೋಕದಲ್ಲಿ “ಯಾ ಬ್ರಹ್ಮಾಚ್ಯುತಶಂಕರಪ್ರಭೃತಿಭಿರ್‌ ದೇವೈಃ ಸದಾ ವಂದಿತಾ” ಹೀಗೆ ಸರಸ್ವತಿಯ ವರ್ಣನೆಯಿದೆ. ಆ ಕವಿಗೆ ವಿದ್ಯೆಯ ನಿಜವಾದ ಮಹಿಮೆ ತಿಳಿದಿತ್ತು. ಸೃಷ್ಟಿಯ ಉತ್ಪತ್ತಿ ಸ್ಥಿತಿ ಲಯ ಮಾಡುವ ದೇವರೂ ಸಹ ಸರಸ್ವತಿಗೆ ನಮಿಸುತ್ತಾರೆ. ಅವಳಿಗೆ ವಂದಿಸುತ್ತಾರೆ. ಯಾಕೆಂದರೆ ಅವರ ಸಾಮರ್ಥ್ಯವೂ ವಿದ್ಯೆಯ ಉಪಾಸನೆಯಲ್ಲಿದೆ. ಸರಸ್ವತಿಯ ಈ ಮಹನೀಯ ಸ್ಥಾನದ ಮರವು ಆ ಸಮಾಜಕ್ಕಾಯಿತು.
________________
1 ಪಂಢರಪುರದ ವಿಠ್ಠಲನಿಗೆ ಪಂಢರೀನಾಥನೆಂತಲೂ, ವಿಠೋಬಾ ಎಂದೂ ಮತ್ತು ಭಕ್ತರು ಆತ್ಮೀಯತೆಯಿಂದ ವಿಠೂ ಎಂದೂ ಕರೆಯುವರು.
________________

ದೇವರು, ಅವರಿಂದ ವಿಶ್ವಾಸವಾದ ವೇದ, ಬ್ರಹ್ಮಲಿಖಿತ ಪೂರ್ವಕರ್ಮ ಅಚ್ಯುತ ಭಕ್ತಿ ಇವುಗಳನ್ನು ಈ ಹೃದಯದಸ್ಥಿ ದೇವತೆಗಿಂತಲೂ ಶ್ರೇಷ್ಟವೆಂದು ಮನ್ನಿಸಲಾರಂಭಿಸಿದ್ದರಿಂದ, ಅವಳು ಅವರ ಮೇಲೆ ಕೋಪಿಸಿಕೊಳ್ಳುವದಲ್ಲದೇ, ದೇವರೂ ಸಹ ಅವರಿಗೆ ವಿಮುಖರಾಗುತ್ತಾರೆ. ಯಾಕೆಂದರೆ ಅವಳೇ ಅವರನ್ನು ನಿರ್ಮಿಸಿದವಳು. ಸರಸ್ವತಿ ಮತ್ತು ದೇವರು ವಿಮುಖರಾದಾಗ ಸಮಾಜದ ಭವಿತವ್ಯದ ಬಗ್ಗೆ ಹೇಳುವ ಅವಶ್ಯಕತೆಯೇ ಇಲ್ಲ. ಮಹಾರಾಷ್ಟ್ರ ಸಮಾಜದ ಮತ್ತು ಆದ್ದರಿಂದಲೇ ಸಾರಸ್ವತದ ಸ್ಥಿತಿಯ ಆ ಪ್ರಾಚೀನ ಕಾಲದಲ್ಲಿ ಹೀಗಾಗಿತ್ತು. ವ್ಯಾಸ, ವಾಲ್ಮೀಕಿ, ಕೌಟಿಲ್ಯ, ಪಾಣಿನಿ, ಆರ್ಯಭಟ್ಟ, ವರಾಹಮಿಹಿರ, ನಾಗಾರ್ಜುನ, ಸುಶ್ರುತ-ಮಹಾಕಾವ್ಯ, ಅರ್ಥಶಾಸ್ತ್ರ, ಭಾಷಾಶಾಸ್ತ್ರ, ವ್ಯಾಕರಣಶಾಸ್ತ್ರ, ಜ್ಯೋತಿಷ, ಗಣಿತ, ರಸಾಯನ, ವೈದ್ಯಕ ಇವುಗಳ ಮಹನೀಯ ಪರಂಪರೆಯನ್ನು ಹೇಳುವ ಈ ಭೂಮಿಯಲ್ಲಿ ಎಂದಾದರು ಎಂಟು ನೂರು ವರ್ಷಗಳಲ್ಲಿ ಈ ಥರದ ಒಂದೂ ಉನ್ಮೇಷ, ಒಂದೂ ಆವಿಷ್ಕಾರ ಗ್ರಂಥರೂಪದಿಂದ ಆಗಲಾರದು ಎನ್ನುವದಕ್ಕೆ ಮತ್ತೊಂದೇನಾದರೂ ಅರ್ಥವಿದೆಯೇ ?

ಅನುವಾದಕರು : ಎಂ.ವಿ. ಪಾಟೀಲ

Close

ಭಾರತೀಪುರ-ಒಂದು ಸಮೀಕ್ಷೆ

ಭಾರತೀಪುರ-ಒಂದು ಸಮೀಕ್ಷೆ

ಎಸ್ ವೆಂಕಟರಾಮ್

ಸಂಸ್ಕಾರವನ್ನು ಬರೆದ ಡಾ. ಅನಂತಮೂರ್ತಿಯವರ ಮತ್ತೊಂದು ಕಾದಂಬರಿ ಎಂಬುದರಿಂದಲೇ ಪರ ವಿರೋಧ ಭಾವನೆಗಳನ್ನು ಕೆರಳಿಸಬಲ್ಲ ಕೃತಿ ಭಾರತೀಪುರ ಸಂಸ್ಕಾರ ಓದಿ ಸಿಟ್ಟಾದವರು ಮತ್ತಷ್ಟು ಸಿಟ್ಟಾಗಬಹುದಾದ, ಖುಷಿಯಾದವರು ಮತ್ತಷ್ಟು ಖುಷಿಯಾಗಬಹುದಾದ ಕಾದಂಬರಿ ಇದು.

ಭಾರತೀಪುರ ಎಂಬುದು ಅನ್ವರ್ಥನಾಮ : ಪುರದ ಅಳತೆಗೆ ಭಟ್ಟಿ ಇಳಿಸಿದ ಭಾರತ ಐದೋ ಹತ್ತೋ ಸಾವಿರ ಪ್ರಜಾ ಸಂಖ್ಯೆಯುಳ್ಳ ನೂರಾರು ಊರುಗಳಲ್ಲಿ ಒಂದು. ಮಾತ್ರವಲ್ಲ, ಅಂಥ ಗಾತ್ರದ ತೀರ್ಥಯಾತ್ರೆಯ ಕೆಲವೇ ಊರುಗಳಲ್ಲಿ ಒಂದೂರು. ಅದು ಹರಿದ್ವಾರ, ನಾಸಿಕ್ ಅಥವಾ ತಿರುಚನಾಪಳ್ಳಿ ಇಂಥ ಯಾವುದಾದರೂ ಆಗಿರಬಹುದು. ಆದರೂ ಈ ಊರುಗಳಿಗಿಂತಾ ಭಿನ್ನವಾದ ಊರು ಭಾರತೀಪುರ, ಏಕೆಂದರೆ, ಈ ಊರುಗಳಲ್ಲಿ ಈಗ ಒಂದೋ, ಹಲವೋ ಭಾರಿ ಪ್ರಮಾಣದ ಕಾರ್ಖಾನೆಗಳಿವೆ. ಅಂತೆಯೇ ಅವು ಯಾವುವೂ ಈಗ “ಭಾರತೀಪುರ” ಆಗಿ ಉಳಿದಿಲ್ಲ, ಅಲ್ಲೆಲ್ಲಾ ಪಾವನವಾದ ನದಿಗಳು, ಮಹಿಮಾಪೂರ್ಣವಾದ ದೇವಸ್ಥಾನಗಳೂ ಇದ್ದರೂ ಕೂಡ “ಹೊಸ ದೇವಾಲಯ” ಎನ್ನಿಸಿಕೊಂಡ ದೈತ್ಯ ಕಾರ್ಖಾನೆಗಳಿವೆ. ಅಲ್ಲಿ ಮೊಳಗುವ ತುಂಬು ಗಂಭೀರದ ದೇವಾಲಯದ ಘಂಟಾನಾದದ ಜೊತೆಗೆ ಗಾಳಿಯನ್ನು ಸೀಳಿಕೊಂಡು ಚೀರುವ ಕಾರ್ಖಾನೆಯ ಸೀಟಿ ಪೈಪೋಟಿಗೆ ನಿಂತಿದೆ. ಆದುದರಿಂದ ಭಾರತವನ್ನು ಭಾರತೀಪುರವಾಗಿ ಭಟ್ಟಿ ಇಳಿಸುವಾಗ ಡಾ. ಅನಂತಮೂರ್ತಿ ಉದ್ದೇಶಪೂರ್ವಕವಾಗಿಯೇ ಅದನು ಔದ್ಯೋಗಿಕರಣದ ಸೋಂಕು, ಹೊಡೆತಗಳಿಲ್ಲದ ಭಾರತದ ತದ್ರೂಪವಾಗಿ ಇಳಿಸಿದ್ದಾರೆ.

ಈ ನಗರದ ಬಗ್ಗೆ ನಾಲ್ಕಾರು ಮಾತು ಹೇಳುವುದು ಅಗತ್ಯ. ಏಕೆಂದರೆ ಒಂದು ಅರ್ಥದಲ್ಲಿ ಈ ಊರೇ ಈ ಕಾದಂಬರಿಯ “ಹೀರೋ”.

ಭಾರತೀಪುರ ಇನ್ನೂ ಭಟ್ಟರ ಊರು, ಫಿಟ್ಟರ ಊರು ಆಗಿಲ್ಲ. ಅದರ ಪತಾಕೆ ದರ್ಭೆ: ಸ್ಪ್ಯಾನರ್ ಅಲ್ಲ, ಅಲ್ಲಿ ಅಡಿಕೆ ತೋಟಗಳಿವೆ, ಮಂಡಿಗಳಿವೆ, ಲೇವಾದೇವಿಯಿದೆ, ಗೇಣಿ ದಾರರಿದ್ದಾರೆ, ಪುರೋಹಿತರಿದ್ದಾರೆ, ಪೂಜಾರರಿದ್ದಾರೆ, ಕಚ್ಚಾ ಕಕ್ಕಸುಗಳಿವೆ, ಪಾಯಿ ಖಾನೆ ತಲೆ ಮೇಲೆ ಹೊರುವ ಹೊಲೆಯರಿದ್ದಾರೆ, ಕಟ್ಟುನಿಟ್ಟಾದ ಜಾತಿಪದ್ಧತಿಯಿದೆ. ಇಂಥ ಇನ್ನೂ ಹಲವಾರು ಅಂಶಗಳನ್ನು ಒಳಗೊಂಡ ಒಟ್ಟು ಸಮಾಜಪದ್ಧತಿಯಲ್ಲಿ ಕೇಂದ್ರ ಬಿಂದುವಾದ ಮಂಜುನಾಥಸ್ವಾಮಿಯಿದ್ದಾನೆ: ಅವನ ಮಹಿಮೆ ಇದೆ. ಎಲ್ಲರನ್ನು, ಎಲ್ಲವನ್ನು, ಯಥೋಚಿತ ಸ್ಥಾನದಲ್ಲಿ ನಿಲ್ಲಿಸಿರುವವನು ಅವನು ಹಿಂದೆ ಈ ಸ್ವಾಮಿಯ ಎಡೆಯಲ್ಲಿ ಕ್ಷುದ್ರ ದೇವತೆಯಾದ ಭೂತರಾಯನಿದ್ದನಂತೆ, ಮಂಜುನಾಥ ಸ್ವಾಮಿ ಅವನನ್ನು ತನ್ನಲ್ಲಿ ಲೀನ ಮಾಡಿಕೊಂಡಿದ್ದರೂ ಇನ್ನೂ ಜನರ ಭಯ ಭಕ್ತಿ, ಭೂತರಾಯನ ಬಗ್ಗೆ ಹಸಿರಾಗಿಯೇ ಇದೆ. ಮಂಜುನಾಥನ ಮಹಿಮೆ ತನ್ನ ಕೆಲಸ ಮಾಡದ ಪಕ್ಷದಲ್ಲಿ ಭೂತರಾಯನ ಭಯ ಕೆಲಸಮಾಡುತ್ತದೆ. ಜನ ಮಂಜುನಾಥ ಸ್ವಾಮಿಯನ್ನು ನಂಬಿಯೇ ಬದುಕಬೇಕು. “ಶ್ರೀ ಮಂಜುನಾಥಸ್ವಾಮಿ ಸಕ್ಕರೆ ಕಾರ್ಖಾನೆ” ಬರುವ ತನಕ ಅವನದು ಏಕಾಧಿಪತ್ಯ.

ಭಾರತೀಪುರದಲ್ಲಿ ಏನಿವೆ, ಏನಿಲ್ಲ ಎನ್ನುವ ಈ ವಿವರಗಳು ಬಹು ಮುಖ್ಯ. ಏಕೆಂದರೆ ಕಾದಂಬರಿಯ ಘಟನೆಗಳು ನಡೆಯುವುದು ಈ ಎಲ್ಲಾ ಇವೆ-ಇಲ್ಲಗಳ ಹಿನ್ನೆಲೆಯಲ್ಲಿ. ಈ ಎಲ್ಲಾ ಇವೆ-ಇಲ್ಲಗಳು ಕಾದಂಬರಿಯ ಘಟನೆಗಳನ್ನು ರೂಪಿಸುತ್ತವೆ. ಅವುಗಳ ಅಂತರಾರ್ಥವನ್ನು ನಿರ್ಣಯಿಸುತ್ತವೆ. ಇದನ್ನು ಹೀಗೂ ಹೇಳಬಹುದು, ಮಸಲಾ, ಭಾರತೀಪುರ “ಭಾರತೀಪುರ” ಆಗಿಲ್ಲದಿದ್ದರೆ….ಅಲ್ಲಿ ಒಂದು ಕಾರ್ಖಾನೆ ಇದ್ದಿದ್ದರೆ ? ನೀಲಿ ಆಕಾಶದ ಮುಖಕ್ಕೆ ಹೊಗೆ ಉಗುಳುವ ಚಿಮಣಿಯ, ಕೆಲಸದ ಪಾಳಿಗೆ ಜನರನ್ನು ಕರೆದುಕೊಳ್ಳುವ, ಹೊರದಬ್ಬುವ ಹೆಬ್ಬಾಗಿಲ, ನೀಲಿ ಬಟ್ಟೆ ತೊಟ್ಟು ಟಿಫನ್ ಕ್ಯಾರಿಯರ್ ಹಿಡಿದು ಕೆಲಸದಿಂದ ಅಥವ ಕೆಲಸಕ್ಕೆ ಧಾವಿಸುವ ಜನರ ಕಾರ್ಖಾನೆಯನ್ನು ಅಲ್ಲಿ ಸೃಷ್ಟಿಸಿದ್ದರೆ ? ಭಾರತೀಪುರದ ಹೀನದೀನನಾದ ಚಮ್ಮಾರ ಅಲ್ಲಿ ಪ್ರಾಯಶಃ ಕನ್ವೇಯರ್ ಬೆಲ್ಸ್ ಹೊಲೆಯುವ ಕೆಲಸಗಾರನಾಗಿರುತ್ತಿದ್ದ. ದೇವಸ್ಥಾನದ ಪೂಜಾರಿ ಹುಡುಗ ಆವನ ಕೈಕೆಳಗಿನ ಹೆಲ್ಪರ್ ಆಗಿರುತ್ತಿದ್ದ, ಊರಿನ ಮಹಾಪಂಡಿತರಾದ ಶಾಸ್ತ್ರಿಗಳು ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರುವ ದುರ್ದೈವದ ಪ್ರಸಂಗ ಬಂದಿದ್ದರೆ, ಅವರ ಕೌಶಲ್ಯಗಳು, ವಿದ್ವತ್ತು ಅಲ್ಲಿ ಯಾವ ಕೆಲಸಕ್ಕೂ ಬರುತ್ತಿರಲಿಲ್ಲ ಎಂದು ಕಂಡುಕೊಳ್ಳು ತಿದ್ದರು, ಅನಿವಾರ್ಯವಾಗಿ ಅವರು ಕ್ಯಾಂಟೀನಿನಲ್ಲಿ ಅಡಿಗೆಯವನಾಗಿ, ಆಫೀಸು ಜವಾನನಾಗಿ ಇಲ್ಲವೇ ರಾತ್ರಿ ವಾಚ್‌ಮನ್‌ನಾಗಿ ಮಾತ್ರ ಸೇರಬೇಕಾಗುತ್ತಿತ್ತು ಅದಕ್ಕಿಂತ ಮುಖ್ಯವಾದ ವಿಷಯವೆಂದರೆ ಈ ಮವರೂ ಒಂದೇ ಕ್ಯಾಂಟೀನಿನಲ್ಲಿ ಜೊತೆಗೆ ತಿಂಡಿ ತಿಂದು ಒಂದೇ ಜಯಕಾರ ಧಿಕ್ಕಾರಗಳನ್ನು ಕೂಗಿ ಒಂದೇ ಸಾಲಿನಲ್ಲಿ ಮೆರವಣಿಗೆ ಹೋಗುತ್ತಿದ್ದರು. ಮಡಿ, ಮೈಲಿಗೆ, ಜಾತಿಯ ಬದಲು ಗ್ರೇಡಿನ, ಪ್ರಮೋಷನ್ನಿನ, ಬೋನಸ್ಸಿನ ವ್ಯಾಮೋಹ ಅವರ ತಲೆಗೆ ಹೆಚ್ಚು ಹತ್ತುತ್ತಿತ್ತು, ಕಾರ್ಖಾನೆಯ ಮ್ಯಾನೇಜರರು, ದೇವಸ್ಥಾನದ ಮಹಂತರು ಎಂದೂ ಕಂಡು ಕೇಳದಷ್ಟು ಅಧಿಕಾರ ವೈಭವಗಳಲ್ಲಿ ಓಲಾಡುತ್ತಿದ್ದರು. ನಗರದ ಮೇಲೆ ತಮ್ಮ ಪ್ರಭಾವ ಬೀರುತ್ತಿದ್ದರು. ಮಂಜುನಾಥನ ಮಹಿಮೆ ಸ್ವಲ್ಪ ಕಡಿಮೆಯಾಗಿ, ನಗದಿನ ಮಹಿಮೆ ಸ್ವಲ್ಪ ಜಾಸ್ತಿಯಾಗುತಿತ್ತು, ಇದು ಕೇವಲ ವಾಕ್ಛಾತುರ್ಯದ ಮಾತಲ್ಲ ಎನ್ನುವುದನ್ನು ಸಾಬೀತು ಮಾಡಲು ಒಂದು ಉದಾಹರಣೆ ಸಾಕು. ಇಡೀ ದೇಶದ ಸಕ್ಕರೆ ಉದ್ಯಮದಲ್ಲಿನ ಎಲ್ಲ ನೌಕರಿಗಳನ್ನು ಮೌಲ್ಯಮಾಪನ ಮಾಡಿದ ಸಕ್ಕರೆ ಉದ್ಯೋಗ ವೇತನ ಮಂಡಲಿ, ಮೋಚಿಯನ್ನು ಅರೆಕುಶಲ ಕೆಲಸಗಾರನೆಂತಲೂ, ಸಕ್ಕರೆ ಕಾರ್ಖಾನೆಗಳಿಗೆ ಹೊಂದಿಕೊಂಡಿರುವ ದೇವಸ್ಥಾನಗಳ ಪೂಜಾರಿಯನ್ನು ಅಕುಶಲ ಕೆಲಸಗಾರನಂತಲೂ ನಿರ್ಧರಿಸಿದೆ. ಇಲ್ಲಿ ಔದ್ಯೋಗಿಕರಣವೇ ಆಧುನಿಕಕರಣವೆಂದಾಗಲಿ, ಅಥವಾ ನಗರೀಕರಣ ಇಂಥ ಜಟಿಲ ಸಮಸ್ಯೆಗಳನ್ನು ತಂತಾನೆ ನೇರವಾಗಿ ಬಗೆಹರಿಸುತ್ತದೆಂದಾಗಲಿ, ಸರಳೀಕರಿಸುವುದು ಉದ್ದೇಶವಲ್ಲ, ಏಕೆಂದರೆ ಭಾರತದ ಅತಿ ದೊಡ್ಡದಾದ ನಗರವಾದ ಕಲ್ಕತ್ತದಲ್ಲಿ ಕಾಳಿಗುಡಿ ಇನ್ನೂ ಖಾಲಿ ಆಗಿಲ್ಲ, ಉದ್ಯೋಗಗಳು ಆಧುನೀಕರಣದ ಅನಿವಾರ್ಯ ಅಂಗವಾಗಿದೆ, ಎಂದಷ್ಟೆ ಸ್ಪಷ್ಟಿಕರಿಸಲು ಇದೆಲ್ಲಾ ಹೇಳಲಾಗಿದೆ, ಜಗನ್ನಾಥ ಸ್ವತಃ ಉಂಟುಮಾಡಬೇಕಾಗಿರುವ ಅಲ್ಲೋಲ ಕಲ್ಲೋಲವನ್ನು, ಅವನು ಮಂಜುನಾಥಸ್ವಾಮಿಗೆ ತನ್ನ ಯಥೋಚಿತ ಮೂಲೆ ತೋರಿಸಬೇಕಾದುದನ್ನು, ಹೊಲೆಯನ ಮನಸ್ಸಿನಲ್ಲಿ ಹೊಸ ಲಾಲಸೆಗಳನ್ನು ಹುಟ್ಟಿಸುವುದನ್ನು ಕಾರ್ಖಾನೆ ಇದ್ದಿದ್ದರೆ ಅದು ಮಾಡುತ್ತಿತ್ತು. ಭಾರತೀಪುರದಲ್ಲಿ ಈ ಆಭಾವ ನಾಯಕನ ಸಮಸ್ಯೆಯ ಒಂದು ಮುಖ್ಯ ಆಯಾಮ.

ವಸ್ತುಸ್ಥಿತಿಯ ಮಟ್ಟದಲ್ಲಿ, ಕಾದಂಬರಿಯ ಮುಖ್ಯ ಗೊಡವೆ ಸಂಪ್ರದಾಯಬದ್ಧ ಸಮಾಜದ ಆಧುನೀಕರಣ : ಆ ಸಮಾಜದ ಮೂರ್ತಿ, ಅಮೂರ್ತ ಸಂಕೇತಗಳನ್ನು ತೊಡೆದುಹಾಕುವುದು, ಕನಿಷ್ಟ ಅವುಗಳನ್ನು ಅಪಮೌಲ್ಯಗೊಳಿಸುವುದು, ಹೊಸ ವಸ್ತು ಸ್ಥಿತಿಯನ್ನು, ಮೌಲ್ಯಗಳನ್ನು ನಿರ್ಮಿಸುವುದು, ವ್ಯಕ್ತಿಸ್ಥಿತಿಯ ಮಟ್ಟದಲ್ಲಿ ಅದರ ಮುಖ್ಯ ಗೊಡವೆ ಬ್ರಾಹ್ಮಣ ಜಮೀನ್ದಾರನ ಕುಟುಂಬದಲ್ಲಿ ಹುಟ್ಟಿದ ಧೀಮಂತನೊಬ್ಬ ತನ್ನ ಜಾತಿ ಹಾಗೂ ವರ್ಗಗಳಿಂದ ಮುಕ್ತನಾಗಿ ತನ್ನ ವರ್ಗ-ಜಾತಿಯ ಶೋಷಣೆಗೆ ಗುರಿಯಾಗಿದ್ದ ದಲಿತರ ಜೊತೆಗೆ ಏಕೀಭಾವ ಸಾಧಿಸುವುದರ ಸಂಕಟ. ಈ ಎರಡೂ ಗೊಡವೆಗಳನ್ನು ಹಾಸುಹೊಕ್ಕಾಗಿ ಮೈತುಂಬಿಸಿಕೊಂಡ ಈ ಕಾದಂಬರಿ ಅತ್ಯಂತ ಅರ್ಥವತ್ತಾದ ವಿವರಪೂರ್ಣವಾದ ಕಥೆಯನ್ನು ನೇಯುತ್ತದೆ.

ಈ ಗೊಡವೆಗಳ ಸುತ್ತ ಹೆಣೆದ ಕಥೆ ಸಾಕಷ್ಟು ಸರಳವಾಗಿದೆ. ಭಾರತೀಪುರದ ಬ್ರಾಹ್ಮಣ ಜಮೀನ್ದಾರರ ಒಬ್ಬನೇ ಮಗ ಜಗನ್ನಾಥ ಇಂಗ್ಲೆಂಡಿನಲ್ಲಿ ಕಲಿತು ತನ್ನ ಊರಿಗೆ ಹಿಂತಿರುಗುವಾಗ ಒಬ್ಬ ವಿಚಾರವಂತ ಮಾತ್ರವಲ್ಲ, ತನ್ನ ವಿಚಾರಶೀಲ ನಂಬುಗೆಗಳಂತೆ ನಡೆಯಲೂ ಕೂಡಾ ತುಂಬಾ ಪ್ರತಿಬದ್ಧನಾಗಿರುತ್ತಾನೆ, ತನ್ನ ವಿಚಾರಗಳಂತೆ ನಡೆಯುವುದು, ಯಾವುದನ್ನೂ ಯಾರನ್ನೂ ಪರೀಕ್ಷಿಸದೇ ಪ್ರಮಾಣವೆಂದು ಒಪ್ಪದಿರುವುದು, ತನ್ನೆಲ್ಲಾ ಕ್ರಿಯೆಗಳ ಜವಾಬ್ದಾರಿಗಳನ್ನು ತಾನೇ ವಹಿಸಿಕೊಳ್ಳವುದು, ಅವನು ಇಂಗ್ಲೆಂಡಿನಲ್ಲಿ ರೂಪಿಸಿಕೊಂಡ ವ್ಯಕ್ತಿತ್ವದ ತಿರುಳು, ಆದರೆ ಆತ ಈ ನಿಟ್ಟಿನಲ್ಲಿ ಇಡುವ ಪ್ರತಿ ಹೆಜ್ಜೆಗೂ
ತನ್ನ ಸುತ್ತಲಿನ ವಾಸ್ತವಿಕ ಸ್ಥಿತಿ ಅಡಚಣೆಯಾಗುತ್ತದೆ. ಈ ಪರಿಸ್ಥಿತಿಯಲ್ಲಿ ಆತ ಈ ಇಡೀ ಸ್ಥಿತಿ, ಮೌಲ್ಯಗಳ ವಿರುದ್ಧ ಸೆಟೆದು ನಿಲ್ಲುವ ಒಂದು ಭಂಗಿಯಾಗಿ, ತನ್ನೂರಿನ ಒಂದು ಹೊಲೆಯ ಯುವಕರ ತಂಡವನ್ನು ಮಂಜುನಾಥನ ದೇವಸ್ಥಾನದ ಒಳಗೆ ಕರೆದೊಯ್ಯಲು ನಿರ್ಧರಿಸಿ ತಯಾರು ಮಾಡತೊಡಗುತಾನೆ, ಈ ಹೊಲೆಯರಲ್ಲಿ ಬಂಡಾಯದ ಮನೋವೃತ್ತಿಯನ್ನು ಹುಟ್ಟು ಹಾಕಲು, ಅವರಲ್ಲಿ ಜಾಗೃತಿ ಮೂಡಿಸಿ ಮನುಷ್ಯರಾಗಲು ನೆರವಾಗುವ ಮೂಲಕ ತನ್ನ ಸ್ವಾತಂತ್ರ್ಯವನ್ನು ರೂಢಿಸಿಕೊಳ್ಳಲು, ಊರಿನಲ್ಲಿ ಆಧುನೀಕರಣದ ಒಂದು ಕಿಡಿ ಹೊತ್ತಿಸಲು ಅತ್ಯಂತ ತೀವ್ರತೆಯಿಂದ ಪ್ರಯತ್ನಿಸುತ್ತಾನೆ. ಇದರ ಪರಿಣಾಮವೆಂದರೆ ತನ್ನ ಬಂಧು ಬಾಂಧವರಿಂದ ತಾವು ದೂರವಾಗುವುದು, ಊರಿನ ಯಾವತ್ತು ಕುಲೀನರಿಂದ ಬಹಿಷ್ಕೃತನಾಗುವುದು. ಆದರೂ ಯಾವ ಹೊಲೆಯರ ಸಲುವಾಗಿ ತಾನು ಇದೆಲ್ಲಾ ಮಾಡತೊಡಗುತ್ತಾನೋ ಅವರೊಡನೆ ಆತ್ಮೀಯತೆ ಏಕೀ ಭಾವ ಅವನು ಸಾಧಿಸಲಾರ, ಅವರು ಜಾಗೃತರಾಗುವುದಿಲ್ಲ ; ಕಡೆಗೆ “ಮಾತನಾಡುವು‌ದೂ” ಇಲ್ಲ. ಪರಿಣಾಮವಾಗಿ ವಾತಾವರಣ ಕೆದಡುತ್ತದೆ: ಕಲುಷಿತವಾಗುತ್ತದೆ. ಈ ನಡುವೆ ಸನಾತನ ಕಿಡಿಗೇಡಿಯೊಬ್ಬ ಹರಿಜನರ ಗುಡಿಸಲುಗಳಿಗೆ ಬೆಂಕಿ ಹೊತ್ತಿಸುತ್ತಾನೆ. ಒಬ್ಬ ಹೊಲೆಯ ಯುವಕನ ವಿರುದ್ಧ ಪೊಲೀಸರ ಅತ್ಯಾಚಾರ ನಡೆಯುತ್ತದೆ. ಅತ್ಯಂತ ನಿರಾಶಾದಾಯಕ ಸ್ಥಿತಿ ಏರ್ಪಡುತ್ತದೆ. ಆಗ ಸ್ಥಿತಿಯನ್ನು ಏನಾದರೂ ಮಾಡಿ ಗತಿಶೀಲ ವಾಗಿಸಲು ಇಡೀ ಹಳೆಯ ನಂಬುಗೆಗಳ ಹಂದರ‍್ಕು ಸಿಡಿಮದ್ದಿಡಲು ಆತ ನಾಟಕೀಯವಾದ ಒಂದು ಚಮತ್ಕೃತ್ತಿ ಆರಿಸುತ್ತಾನೆ. ತನ್ನ ಮನೆಯ: ಅತ್ಯಂತ ಪವಿತ್ರ ಪೂಜಾವಸ್ತುವಾದ ನರಸಿಂಹ ಸಾಲಿಗ್ರಾಮವನ್ನು ಬೀದಿಗೆ ತಂದು ಹೊಲಿಯರನ್ನು ಅದನ್ನು ಮುಟ್ಟುವಂತೆ ಕಾಡಿ ಬೇಡಿ ಮುಟ್ಟಿಸುತ್ತಾನೆ, ಪರಿಸ್ಥಿತಿ ಮತ್ತಷ್ಟು ಕೆಡುತ್ತದೆ, ಅತ್ಯಂತ ಗೊಂದಲದ, ವಿರೋಧದ ನಡುವೆ ಆತ ಹೊಲೆಯರನ್ನು ದೇವಸ್ಥಾನಕ್ಕೆ ಕರೆದೊಯ್ಯುತ್ತಾನೆ; ದೇವಾಲಯದ ಪ್ರವೇಶ ಶಾಸ್ತ್ರ ಆಗುತ್ತದೆ. ಆದರೆ ಸನ್ನಿ ಹಿಡಿದ ದೇವಸ್ಥಾನದ ಪೂಜಾರಿ ಹುಡುಗ ಹಿಂದಿನ ದಿನ ಕಳ್ಳತನದಿಂದ ದೇವರ ವಿಗ್ರಹವನ್ನು ಕಿತ್ತು ಹೊಳೆಗೆ ಎಸೆದಿರು ತಾನೆ. ಆದುದರಿಂದ ದೇವರಿಲ್ಲದ ದೇವಸ್ಥಾನಕ್ಕೆ ಹೊಲೆಯರು ಪ್ರವೇಶಿಸುತ್ತಾರೆ. ಭಕ್ತರು, ಹೊಲೆಯರ ಪ್ರವೇಶದಿಂದ ದೇವರು ಆಪವಿತ್ರನಾಗುವದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಮಂಜುನಾಥಸ್ವಾಮಿ ಮೆರದ ಪವಾಡ ಇದು ಎಂದು ಅವನ ಮಹಿಮೆಯನ್ನ ಕೊಂಡಾಡುತ್ತಾರೆ, ಆದರೂ ಪರಂಪರಾಗತ ನಂಬಿಕೆಗಳ, ಚೌಕಟ್ಟಿನ ತಳಹದಿ ಅಲುಗಿದೆ. ಪ್ರಶಾಂತ “ಗಂಗಾಮಾಯಿಗೆ” ಕಲ್ಲು ಹಾಕಿದ್ದಾಗಿದೆ.

ಕಥೆಯ ಮುಖ್ಯ ಅಂಶಳು ಇವು: ದೇವಸ್ಥಾನದ ಮೇಲೆ ಪೂರಾ ಆಧರಿಸಿದ, ಪಾಚಿಕಟ್ಟಿ ಕೊಳೆತುನಿಂತ ಗಂಗಾಮಾಯಿ ನೀರಿನಂತಹ ಜನಜೀವನ : ಪ್ರಜಾವಾತ್ಸಲ್ಯದ ಮುಖವಾಡ ಹೊತ್ತ ಜಮೀನ್ದಾರಿ ಸುಲಿಗೆ; ದಮನಕಾರರು, ದಮನಕ್ಕೆ ಈಡಾದವರು ಇಬ್ಬರೂ ದೈವ ನಿಯಾಮಕ, ಚಿರಂತನ ಎಂದು ನಂಬಿದ ಜಾತಿ ಕಟ್ಟುಪಾಡು ; ಸ್ವಾತಂತ್ರ್ಯೋತ್ತರದ ಭ್ರಷ್ಟ, ಧೂರ್ತ ರಾಜಕೀಯ ಮುಖಂಡರು : ಬರಡು ಗಾಂಧಿ ವಾದ, ಬಾಲಿಶಃ ಸಮಾಜವಾದ ; ವಿದೇಶದಲ್ಲಿ ಕಲಿತು, ಆಧುನೀಕರಣ ಪ್ರಕ್ರಿಯೆಯನ್ನು ಮುಂದಲೆ ಹಿಡಿದಾದರೂ ಎಳೆತರಲು ನಿರ್ಧರಿಸುವ ಜಮೀನ್ದಾರ ಮನೆತನದ ಯುವಕ: ಮೇಲಿನಿಂದ ದೊರೆವ ಈ ಪ್ರೇರಣೆಗೆ ಓಗೊಡಲಾರದ, ಜಾಗೃತಿವಿಹೀನರಾದ ದಲಿತರು; ಈ ಪ್ರಕ್ರಿಯೆಗೆ ವಿವಿಧ ರೀತಿಯಲ್ಲಿ ಪ್ರತಿಕ್ರಿಯೆ ತೋರುವ ನಾನಾ ವ್ಯಕ್ತಿಗಳು

ಭಾರತೀಘ್ರರವನ್ನು ಸಂಸ್ಕಾರಕ್ಕೆ ಹೋಲಿಸುವ ಚಪಲು ಸ್ವಾಭಾವಿಕ, ಎರಡು ಕಾದಂಬರಿಗಳು ಆಧುನೀಕರಣವನ್ನು ಅನ್ವೇಷಿಸುತ್ತವೆ; ಶೋಧಿಸುತ್ತವೆ, ಆದರೂ ಸಂಸ್ಕಾರದ ಗೊಡವೆ ಹೆಚ್ಚು ವ್ಯಕ್ತಿಯೊಡನೆ, ಭಾರತೀಪುರ ವ್ಯಕ್ತಿಯನ್ನೂ, ವಸ್ತುಸ್ಥಿತಿಯನ್ನೂ ಸಮಸಮವಾಗಿ ಅನ್ವೇಷಿಸಿ ಶೋಧಿಸುತ್ತದೆ.

ಸಂಸ್ಕಾರದಲ್ಲಿ ಪ್ರಜ್ಞೆ ಕತ್ತಲಿನಿಂದ ಬೆಳಕಿಗೆ ಹೋಗುತ್ತದೆ : ಭಾರತೀಪುರದಲ್ಲಿ ಬೆಳಕಿನಿಂದ ಕ್ರಿಯೆಗೆ ಹೋಗುತ್ತದೆ, ಮಾತ್ರವಲ್ಲ, ಭಾರತಿಪುರದಲ್ಲಿ, ಸಂಸ್ಕಾರದಲ್ಲಿ ಕಾಣಸಿಗದ ಸಮಾಜ ಶಾಸ್ತ್ರದ ದೃಷ್ಟಿಯಿಂದ ಅರ್ಥವೂರ್ಣವಾದ ಅಸಂಖ್ಯ ಇಣಕು ನೋಟಗಳಿವೆ. ಘಟನಾಚಕ್ರವಷ್ಟೇ ಅಲ್ಲದೇ ತರ್ಕಚಕ್ರವನ್ನೂ ಮನೋವ್ಯಾಪಾರವನ್ನು ಕೂಡಾ ಈ ಕಾದಂಬರಿ ನಿರ್ದಯವಾಗಿ ಎಳೆಎಳೆಯಾಗಿ ಬಿಡಿಸಿ ಬಯಲಿಗಿಡುತ್ತದೆ.

ಕಾದಂಬರಿಯ ಬೆಳವಣಿಗೆಯ ಘಟನಾಚಕ್ರದ ಚಲನೆಯ ಮುಖ್ಯ ಅಶ್ವಶಕ್ತಿ ಜಗನ್ನಾಥನ ಪ್ರಜ್ಞೆ ಹಾಗೂ ವಸ್ತುಸ್ಥಿತಿಗಳ ನಡುವ ತಾಳಮೇಳವಿಲ್ಲದಿರುವುದು. ನಿಲ್ಲಲ್ಲು ಆಪರೇಷನಲ್ ಬೇಸ್‌ಏ ಇಲ್ಲದೇ ಆತ ಚಲನೆಗೆ ತೊಡಗಬೇಕಾಗಿದೆ, ಇಲ್ಲಿಯೇ ಅನಂತ ಮೂರ್ತಿಯವರು ಆರಿಸಿಕೊಂಡಿರುವ ಭಾರತೀಪುರದ ನಗರಲಕ್ಷಣ ವಿಶೇಷ ಮಹತ್ವ ಪಡೆಯುತ್ತದೆ. ಅವರಿಗೆ ಪ್ರಿಯವಾದ ಮಾತುಗಳಲ್ಲಿ ಹೇಳಬೇಕಾದರೆ
ಪರಿಸರದ ನೆರವಿಲ್ಲದೆ ಪ್ರಜ್ಞೆ ಇಲ್ಲಿ ಮುನ್ನಡೆಯಬೇಕಾಗುತ್ತದೆ. ಈ ಪ್ರಶ್ನೆಗೆ ದಾರ್ಶನಿಕ ಆಯಾಮವಿದೆ. ಯಾವುದು ಪ್ರಬಲ : ಮನೋನಿರ್ಧಾರವೋ, ಪರಿಸರವೋ ? ಅವುಗಳ ಪರಸ್ಪರ ಸಂಬಂಧ ಎಂಥದ್ದು?

ಆ ಊರಿನಲ್ಲಿ ಹುಟ್ಟಿದವನಾದರರೂ ಜಗನ್ನಾಥ ತನ್ನೂರಿನಲ್ಲಿಯೇ ಪೂರಾ ಪರಕೀಯ. ಇಂಗ್ಲೆಂಡಿನಲ್ಲಿರುವ ಆರೆ ಇಂಗೀಷ್ ಗಳತಿಯೊಡನೆ ತನ ತೊಳಲಾಟವನ್ನು ಮನಬಿಚ್ಚಿ ಕಾಲ್ಪನಿಕವಾಗಿ ತೋಡಿಕೋಳ್ಳುತ್ತಾನೆ. ತನ್ನೂರಿಗೆ ಹೊರಗಿನಿಂದ ಬಂದ ಮೊದಲ ಪರಿಚಯದ ಒಬ್ಬ ರಾಜಕೀಯ ಕಾರ್ಯಕರ್ತನೊಡನೆಯೂ ಆತ ಮಾತನಾಡಬಲ್ಲ. ಆದರೆ ಆತನನ್ನು ಅರ್ಥಮಾಡಿಕೊಳ್ಳಬಲ್ಲವರು ಆ ಊರಿನಲ್ಲಿ ಯಾರೂ ಇಲ್ಲ. ಕಡೆಗೆ ಅವನು ಬಂಡಾಯಕ್ಕೆ ಅಣಿ ಮಾಡಿಕೊಳ್ಳುತ್ತಿರುವ ಹೊಲೆಯರೂ ಕೂಡಾ, ಕಡೆಗೆ ಆಧುನೀಕರಣ, ರೈತರ ಹೋರಾಟ, ಗಣಿಗಾರಿಕೆ, ಕೈಗಾರಿಕೆಗಳ ಮುಖಾಂತರ ಬರುತ್ತದೆಂದು ಆತ ಅರಿಯುತ್ತಾನೆ. ಆದರೂ ಮನುಷ್ಯ ಬದಲಾಗದಿದ್ದರೆ, ಬಾಕಿ ಎಲ್ಲವು ಮೇಲೆ ಮೇಲಿನ ಬದಲಾವಣೆಯೊ ಎಂದೂ ಶಂಕಿಸುತ್ತಾನೆ, ಆದರೆ ಮನಸ್ಸನ್ನು ವಿಮುಕ್ತಗೊಳಿಸುವ ಕರ್ತವ್ಯವನ್ನು ಆತ ಪೂರ್ವಭಾವಿಯಾಗಿ ಆರಿಸಿಕೊಂಡಿದ್ದಾನೆ, ಅದಕ್ಕಾಗಿಯೇ ದಾಸ್ಯದ ಚಿಹ್ನೆಯಾದ ದೇವಾಲಯದ ಮೇಲೆ ಆತನ ಧಾಳಿ, ಹೀಗಾಗಿ ಆತನ ಕ್ರಾಂತಿ ದರ್ಬಾರಿ ಕ್ರಾಂತಿ ಆಗುತ್ತದೆ-ಜನತಾ ಕ್ರಾಂತಿ ಅಲ್ಲ, ಅವನ ಎಲ್ಲಾ ಸಂಕಟದ ಮೂಲ ಕೂಡಾ ಇದೇ : ಪ್ರಜ್ಞೆ ಮತ್ತು ಪರಿಸರದ ನಡುವೆಯೇ ವಿರಸ, ಕಡೆಗೆ, ಪರಿಣಾಮ ವಿಕೃತವಾಗುವ ಸಂಭವದ ಮೂಕಾಲ ಕೂಡಾ ಇದೇ.

ಭಾರತೀಪುರ, ಸೃಷ್ಟ್ಯಾತ್ಮಕ ಬರಹಗಾರನೊಬ್ಬ ಕಂಡ ಆಳವಾದ ಒಂದು ವಿರಸದ ಸಮ್ರಗ ಪರಿಕಲ್ಪನೆಯೇ ಆಸಲು ಚಿತ್ರ, ಮೌಲ್ಯಗಳ, ಕಟ್ಟಡಗಳ, ವ್ಯಕ್ತಿಗಳ ನಡುವಣ ಈ ವಿರಸಕ್ಕೆ ಸಾಹಿತ್ಯಕವಾದದ್ದೇ ಅಲ್ಲದೇ, ಬಹುಬಾರಿ ಸಮಾಜಶಾಸ್ತದ್ದು ಹಾಗೂ ಒಮ್ಮೊಮ್ಮೆ ದಾರ್ಶನಿಕವಾದದ್ದು ಆದ ಆಯಾಮವೂ ಉಂಟು. ಈ ಕಾದಂಬರಿಯು ಎಲ್ಲ ಪ್ರಮುಖ ಅಂಶಗಳನ್ನು ಉಲ್ಲೇಖಿಸುವುದು ಅಸಾಧ್ಯವಾದರೂ, ಅದರ ಪರಿಕಲ್ಪನೆಯು ವಿಸ್ತಾರವನ್ನೂ, ಆಳವನ್ನೂ ಸೂಚಿಸಬಲ್ಲ ಕೆಲ ಅಂಶಗಳನ್ನು ಮಾತ್ರ ಗಮನಿಸಬೇಕು.

ಈ ಕಾದಂಬರಿಯ ಅತ್ಯುತ್ತಮ ಭಾಗ ಜಗನ್ನಾಥ ಹೊಲೆಯರನ್ನು ಸಾಲಿಗ್ರಾಮ ಮುಟ್ಟುವಂತೆ ಮಾಡುವುದು ಒಂದು ವ್ಯಾಪಕ ಅರ್ಥದಲ್ಲಿ ಅದರ ತಿರುಳು ಕೂಡಾ ಇಲ್ಲಿದೆ, ಇಲ್ಲಿ ಕಾದಂಬರಿ ಹಲವು ಸ್ತರಗಳಲ್ಲಿ ಹರಿಯುತ್ತದೆ, ಊರಿನ ಪ್ರತಿಷ್ಠಿತ ಶ್ರೀಮಂತ ಬ್ರಾಹ್ಮಣ ಕುಟುಂಬದ ವಾರಸುದಾರ ಇಲ್ಲಿ, ತನ್ನ ಮನೆತನದ ಹೂಲೆ ಆಳುಗಳ ಕೈಯಿಂದ ತನ್ನ ಮನೆತನಕ್ಕೆ ಅತ್ಯಂತ ಪವಿತ್ರವೆನಿಸಿ, ಸಾವಿರ ವರುಷದಿಂದ ಪೂಜೆಗೊಂಡ ನರಸಿಂಹ ಸಾಲಿಗ್ರಾಮವನ್ನು ಮುಟ್ಟಿಸಹೋಗುತ್ತಾನೆ, ಏಕೆಂದರೆ ಈ ಎಲ್ಲಾ ಧರ್ಮ-ಜಾತಿಗಳ ನಿಗೂಢ ರಹಸ್ಯಗಳ ಅಭಿನ್ನ ಅಂಗವಾದ ಇದು ಕೇವಲ ಒಂದು ಕಲ್ಲು ಎಂಬುದನ್ನು ಅವರು ಮನಗಾಣಬೇಕು. ಅದನ್ನು ಮುಟ್ಟುವಂತೆ ಅವನು ಅವರನ್ನು ಗೋಗರೆಯುತ್ತಾನೆ. ಉಹುಂ, ಅವರು ಹೆದರಿ ಕಂಗಾಲಾಗಿ ಹಿಂತೆಗೆಯುತಾರೆ, ಅವನು ತಾಳ್ಮೆಗೆಡುತ್ತಾನೆ, ಅದನ್ನು ಮುಟ್ಟುವಂತೆ ಅವನು ಅವರಿಗೆ ಜಬರಿಸುತ್ತಾನೆ. ಆಗ ಹೆದರಿ ಮುಟ್ಟುವ ಶಾಸ್ತ್ರ ಮಾಡುತ್ತಾರೆ, ರಾಜಕಾರಣದ ಒಂದು ಚಿರ ದುರಂತ ಇದ. ಎಲ್ಲಾ ಕ್ರಾಂತಿಗಳೂ ಜನರ ಮನ ಒಲಿಸಿ ಪ್ರಾರಂಭವಾಗುತ್ತದೆ. ಕಡೆಗೆ. ಒಂದು ಘಟ್ಟದಲ್ಲಿ ಅವರಿಗೆ ಆಜ್ಞೆ ನೀಡಬೇಕಾಗುತ್ತದೆ ಅವರ ಒಳಿತಿಗಾಗಿಯೇ 1

ಈ ಘಟನೆಯ ಇನ್ನೊಂದು ಆಯಾಮ ಇದು: ಜಗನ್ನಾಥ ವರ್ಗಮುಕ್ತನಾಗವ ಸಂಕಟ, ಜಗನ್ನಾಥನ ಈ ಸಂಕಟ ತುಂಬಾ ವಾಸ್ತವಿಕವಾದದ್ದು, ಮನುಷ್ಯನನ್ನು ಮೇಲೆತ್ತುವಂಥದ್ದು ; ಇತಿಹಾಸಕ್ಕೆ ತುಂಬಾ ಅಗತ್ಯವಾದದ್ದು, ಒಂದು ಆಳುವ ವರ್ಗ ಅಥವಾ ಜಾತಿಯಲ್ಲಿ ಹುಟ್ಟಿ, ಅದರ ಸಂಸ್ಕಾರದಲ್ಲಿ ಪಳಗಿದವನು ತದ್ವಿರುದ್ಧವಾದ ಮೌಲ್ಯಗಳಿಗೆ ಮಾರುಹೋಗಿ ತನ್ನ ಪ್ರಜ್ಞೆಯಲ್ಲಿಯೇ ಕ್ರಾಂತಿಗೆ ಒಳಗಾದವನು, ತನ್ನ ಒಳಗು ಹೊರಗುಗಳ ನಡುವೆ ಸಾಮರಸ್ಯ ಸಾಧಿಸುವ ತೊಳಲಾಟದ ಸಂಕಟ ಇದು. ತನ್ನ ವರ್ಗ ಅಥವ ಜಾತಿಯಿಂದ ಅವನು ಮುಕ್ತನಾಗಿ ಬೇರೆ ಜಾತಿ ಅಥವಾ ವರ್ಗ ದೊಡನೆ ಪೂರ್ತಿಯಾಗಿ ಮಿಳಿತವಾದರೆ ಮಾತ್ರ ಈ ಸಂಕಟದಿಂದ ಪೂರ್ತಿಮುಕ್ತನಾಗಲು, ಅಂತಶ್ಯಾಂತಿ ಸಾಧಿಸಲು ಸಾಧ್ಯ, ಹೀಗೆ “ಡಿ ಕ್ಲಾ ಸಾ”ಗುವ ಬಹು ಮುಖ್ಯ ಸಮಸ್ಯೆಯನ್ನು ಜಗನ್ನಾಥ ಎದುರಿಸುತ್ತಾನೆ. ಅವನ ಪ್ರಜ್ಞೆ ಕೂಡ ಇಲ್ಲಿನ ಪರಿಸರಕ್ಕೆ ಪರಕೀಯವಾಗಿ ಅವನಿಗೆ ಸಾಧಕವಾದ ಅಂಶಗಳೇ ಇಲ್ಲ, ಅಂತೇ ತೊಳಲಾಟ ಇನ್ನಷ್ಟು ವ್ಯಗ್ರವಾಗುತ್ತದೆ. ಅವನ ವಿವೇಕಕ್ಕೆ ಆದಷ್ಟೂ ಹತ್ತಿರವಾದ ಶ್ರೀಪತಿರಾಯರು ಅವನನ್ನು ತುಂಬಾ ಪ್ರೀತಿಸುವ ಆವನ ಚಿಕ್ಕಿ ಕೂಡಾ ಅವನನ್ನು ಅರ್ಥಮಾಡಿಕೊಳ್ಳುವುದಿಲ್ಲ. ಅವನು ಎತ್ತಿ ನಿಲ್ಲಿಸ ಬಯಸುವ ಹೊಲೆಯರೂ ಮೂಕರಾಗಿ ದೂರ ನಿಲ್ಲುತ್ತಾರೆ, ಮುಂದೆ ಎಂದಾದರೂ ಅವನನ್ನು ಅವರು ಪೂರ್ಣವಾಗಿ ಸ್ವೀಕರಿಸಿಯಾರೇ ಅಥವಾ ಅವನು ಪೂರ್ಣ ಸ್ವೀಕಾರಾರ್ಹನಾದಾನೇ ಎಂಬುದು ಅನುಮಾನ, ಇವತ್ತು ಅವನದು ತ್ರಿಶಂಕು ಸ್ಥಿತಿ, ಈ ಅಸಹನೀಯವಾದ ದುಃಖದ ನಿರಂತರತೆಯನ್ನು ಆನಂತಮೂರ್ತಿ ಇಲ್ಲಿ ಚಿತ್ರಿಸಿದ್ದಾರೆ.

ಕಾದಂಬರಿಯ ಶಿಖರ ಕೂಡಾ ಈ ಭಾಗದಲ್ಲಿದೆ, ಅದು ಜಗತ್ತನ್ನು ಗ್ರಹಿಸುವ ಬಗ್ಗೆ ದಾರ್ಶನಿಕ ಪ್ರಶ್ನೆ, ಹೊಲೆಯರನ್ನು ಸಾಲಿಗ್ರಾಮವನ್ನು ಮುಟ್ಟುವಂತೆ ಒತ್ತಾಯ ಮಡುವಾಗ್ಗೆ ಹಠಾತ್ತನೆ ಅವನಿಗೆ ಒಂದು ಒಗಟು ಹೊಳೆಯುತ್ತದೆ. ಅವನು ಅವರಿಗೆ ಒಡ್ಡಿರುವುದು ಕಲ್ಲು. ಆದರೂ ಅವರು ಅದನ್ನು ಮುಟ್ಟಬೇಕೆಂಬ ಹಠ ಏಕೆ ? ಅವನ ಜನ ಹಾಗೂ ಹೊಲೆಯರು ಇಬ್ಬರೂ ಅದನ್ನು ಸಾಲಿಗ್ರಾಮ ಎಂದು ನಂಬಿದ್ದಾರೆ. ಆದರೆ ಅವನಿಗೆ ಮಾತ್ರ ಅದು ಕಲ್ಲು. ಹಾಗಾದರೆ ಅವನ ಕ್ರಿಯೆ ಅವರ ನಂಬಿಕೆಯ ಮೇಲೆ ಏಕೆ ಆಧಾರ ಪಡಬೇಕು ? ಅದು ನಿಜವಾಗಿ ಕಲ್ಲೇ, ಅಥವಾ ಸಾಲಿಗ್ರಾಮವೇ ? ಅಥವಾ ಬಹಳ ಹಳೆಯ ಮಾತುಗಳಲ್ಲಿ ಹೇಳಬೇಕಾದರೆ, ಅದು ಹಗ್ಗವೇ, ಹಾವೇ ? ಗ್ರಹಿಸುವವನ ಸ್ಥಿತಿಯನ್ನು ಅನುಸರಿಸಿ ಅದು ಎರಡೂ ಆಗಬಲ್ಲದು, ಎಚ್ಚರದಲ್ಲಿ ಕಲ್ಲು; ಅವಿದ್ಯೆಯಲ್ಲಿ ಸಾಲಿಗ್ರಾಮ, ಪರಿಕಲ್ಪನೆಯ ಈ ಮೋದಕವಾದ ಪ್ರಶ್ನೆಯನ್ನು ಅನಂತಮೂರ್ತಿ ಯಾವುದೋ ಕ್ಷಣದಲ್ಲಿ ಅನಿರೀಕ್ಷಿತವಾಗಿ ಸೆರೆಹಿಡಿದಂತೆ ಕಾಣುತ್ತದೆ.

ಜಗನ್ನಾಥನ ನಡವಳಿಕೆಯಲ್ಲಿ ಆಯ್ಕೆಯ ಸಂಕಟಕ್ಕಿಂತ ನಿರ್ಧಾರ ಶಕ್ತಿಯ ದೌರ್ಬಲ್ಯ ಹೆಚ್ಚು ಪ್ರಕಟವಾಗುತ್ತದೆ. ಈ ಸಮಸ್ಯೆಯನ್ನು ಸ್ವಲ್ಪ ಹತ್ತಿರದಿಂದ ಬಗೆದು ನೋಡು ಇದು ಉಪಯುಕ್ತ ಎಂದು ಎನಿಸುತ್ತದೆ. ಒಬ್ಬ ವಿಚಾರವಂತ, ಕ್ರಿಯೆಗೆ ತೊಡಗುವಾಗ ಎದುರಾಗುವ ವಾಸ್ತವಿಕತೆಯು ತುಮುಲಕ್ಕೆ ಕಾರಣವಾಗುವಂಥದ್ದು. ಅದರಲ್ಲೂ ಇಲ್ಲಿ, ಜಗನ್ನಾಥನ ತುಮುಲ ಗಂಭೀರವಾದದ್ದು.. ಕ್ರಿಯೆಯ ಬಗ್ಗೆ ಧೀಮಂತರದು ಕೆಲವು ಓರಣವಾದ, ಅಚ್ಚುಕಟ್ಟಾದ ಕಲ್ಪನೆಗಳಿರುತ್ತವೆ. ಧೀಮಂತರು ಕಲ್ಪಿಸಿಕೊಂಡ ಕ್ರಿಯೆಗೂ ವಾಸ್ತವಿಕವಾಗಿ ನಡೆಯುವ ಕ್ರಿಯೆಗೂ ಇರುವ ಬಿರುಕು ಮಹತ್ವಪೂರ್ಣವಾದದ್ದು. ಏಕೆಂದರೆ, ಅದಕ್ಕೆ ಮಹತ್ವಪೂಣ೯ ಪರಿಣಾಮವಿದೆ. ಇದು ಅನಿವಾರ್ಯ, ನಿಜ. ಆದರೆ ಇವಾಸ್ತವಿಕತೆ ಧೀಮಂತನನ್ನು ದಿಗ್ಭ್ರಮೆಗೊಳಿಸುತ್ತದೆ. ಹಿಮ್ಮೆಟ್ಟಿಸುತ್ತದೆ, ಹೆದರಿಸುತ್ತದೆ, ನಿರಾಶಗೊಳಿಸುತ್ತದೆ. ಅದರಂತೆಯೇ, ಬಹುಮಂದಿ ಕ್ರಿಯೆಯಿಂದ ವಿಮುಕ್ತರಾಗುತ್ತಾರೆ. ಕೆಲವರು ಈ ಬಿದುಕಿನ ಅರ್ಥ ಹುಡುಕುತ್ತಾರೆ, ಅದೂ ಸಹಜ. ಇಲ್ಲಿ ಕ್ರಿಯೆಯ ಚಿಂತನೆ, ಸಿದ್ಧತೆ ಮಾಡುವವನು, ಅದಕ್ಕೆ ಚಾಲನೆ ಮಾಡು ನೀಡುವವನು, ಜಗನ್ನಾಥ ಆದರೆ ಚಾಲನೆ ಷುರುವಾದಾಗ ಅವನಿಗೆ ಏನೆ: ಇರಿಸುಮುರಿಸ; ಅತೃಪ್ತಿ ; “ಇದಲ್ಲ” ಅನ್ನಿಸುತ್ತದೆ, ಕ್ರಿಯೆಯು ಚಿಂತನೆಯ ಹಂತದಲ್ಲಿದ್ದಾಗ, ನಾಯಕ ಜಗನ್ನಾಥ: ಪ್ರಾರಭವಾದಾಗ ನೀಲಕಂಠಸ್ವಾಮಿ, ಇನ್ನೂ ಮುಂದೆ ಹೋದಾಗ ಪಿಳ್ಳ “ಡಾರ್ಕನೆಸ್ ಆಟ್‌ ನೂನ್‌”ನ ನಿಕರ್ಟ ಇದ್ದ ಹಾಗೆ. ಎಲ್ಲ ಬಗೆಯ ಕ್ರಾಂತಿಕಾರಿಗಳ ಬಗ್ಗೆ ಧಿಮಂತರದು ಇದೇ ತಕರಾರು, ಮತ್ತು ಧೀಮಂತರ ಬಗ್ಗೆ ಕ್ರಾಂತಿಕಾರಿಗಳದೂ ಇದೇ ತಲೆನೋವು. ಜಗನ್ನಾಥನ ಸಂಕಟದ ಒಂದು ಭಾಗ ಇದು. ಆದುದರಿಂದ ಸಂಕಟವನ್ನು ಮೀರಿ, ಸಂದಿಗ್ಧ ತಲೆದೋರುತ್ತದೆ.

ಶ್ರೀ ಸತ್ಯಪ್ರಕಾಶರೊಡನೆ ಜಗನ್ನಾಥನ ಸಂದರ್ಶನ ಸಮಾಜಶಾಸ್ತ್ರದ ದೃಷ್ಟಿಯಿಂದ ತುಂಬಾ ಅರ್ಥಗರ್ಭಿತವಾದದ್ದು ಅನಿಸುತ್ತದೆ. ಆದರೆ ಅದು ಸ್ವತಃ ಅನಂತಮೂರ್ತಿಗಳ ಗಮನವನ್ನು ಸೆಳೆದಿಲ್ಲ; ಏಕೆಂದರೆ ಅಲ್ಲಿ ಅವರ ಗಮನ ಬೇರೆ ಕಡೆಗೆ ಕೇಂದ್ರೀಕೃತವಾಗಿದೆ. ಇಲ್ಲಿ ಕಛೇರಿ ಮೇಜಿನ ಎರಡೂ ಬದಿಗೆ, ಬಹುಶಃ ಹೊಲೆಯ ದಿನಗೂಲಿಕಾರನ ಮಗನಾದ, ಇಂದು ಡೆಪ್ಯೂಟಿ ಕಮಿಷನರ್ ಆದ, ಸತ್ಯಪ್ರಕಾಶ್ ಮತ್ತು ಪ್ರತಿಷ್ಠಿತ ಆಚಾರವಂತ ಬ್ರಾಹ್ಮಣ ಜಮಿನ್ದಾರರ ಮಗನಾದ ಜಗನ್ನಾಥ ಕುಳಿತು ಮಾತನಾಡ ಬಲ್ಲರು, ಕಾಫಿ ಕುಡಿಯಬಲ್ಲರು, ಅವರ ತಂದೆಯವರುಗಳ ನಡುವೆ ಈ ತೆರನ ಸಂಬಂಧ ಅನೂಹ್ಯ, ಇವರಿಬ್ಬರು ಜಾತಿ ಸಮಾಜದ ಎರಡು ಧ್ರುವಗಳಿಂದ ಬಂದರೂ, ಒಂದು ನವಮಧ್ಯಮ ವರ್ಗಕ್ಕೆ ಈಗ ಸೇರಿರುವುದರಿಂದ ಇದು ಸಾಧ್ಯ, ಅವರನ್ನು ಇನ್ನೂ ಬೇರ್ಪಡಿಸುವುದು ಅವರಿಬ್ಬರ ಭೂತಕಾಲದ ಜಾತಿ: ಒಂದುಗೂಡಿಸುವುದು ವರ್ತಮಾನ ಕಾಲದ ವರ್ಗ, ಮತ್ತೊಂದು ವಿಪರ್ಯಾಸವೂ ಇಲ್ಲದೆ ಇಲ್ಲಿ ಸತ್ಯಪ್ರಕಾಶ್ ವ್ಯವಸ್ಥೆಯ ರಕ್ಷಕ, ಜಗನ್ನಾಥ ಅದರ ವಿರುದ್ಧ ಬಂಡಾಯಗಾರ, ಜಾತಿ ವರ್ಗವಾಗಿ ಪರಿವರ್ತನೆ ಗೊಳ್ಳುತ್ತಿದೆಯಾದ್ದರಿಂದ ಈ ಎಲ್ಲಾ ಸಾಧ್ಯ ಆಗಿದೆ, ಈ ಸಂಗತಿಯನ್ನು ಆನಂತಮೂರ್ತಿಮತ್ತಷ್ಟು ಒತ್ತಿ ಹೇಳುತ್ತಾರೆ, ಡೆಪ್ಯೂಟಿ ಕಮಿಷನರ್ ಜವಾನ ಜಾತಿಯಲ್ಲಿ ಬ್ರಾಹ್ಮಣ ಅದನ್ನು ಅವನ ಹಣೆಯಲ್ಲಿ ಘೋಷಿಸಿಕೊಂಡಿದ್ದಾನೆ. ಆದರೆ ಆತ ವರ್ಗದಲ್ಲಿ ಕೆಲಸಗಾರ, ತನ್ನ ಯಜಮಾನನ ಜತೆ ವರ್ಗ ಸಂಬಂಧದಲ್ಲಿ ಅವನ ಮೇಲು ಜಾತಿ ಹಾಸ್ಯಾಸ್ಪದ ಆಗುತ್ತದೆ, ಮಾತ್ರವಲ್ಲ, ಅವನಿಗೆ ಹೊರೆಯಾಗುತ್ತದೆ.

ಆಧುನೀಕರಣ ನಿಂತು ನಿಂತು ಅಂಕುಡೊಂಕು ದಾರಿಗಳಿಂದ ಶ್ರಮಿಸುವ ಪ್ರಕ್ರಿಯೆ ಜಗನ್ನಾಥನ ಒತ್ತಾಯಕ್ಕೆ ಪಿಳ್ಳ, ಮಾದರು ಪಂಚೆ ಉಡುತ್ತಾರೆ. ವನ ಕೈವಾಡ ಅವರನ್ನು ಅವರ ಸ್ಥಿತಿಯಿಂದ ಬೇರ್ಪಡಿಸಿ ಅಂತರಪಿಶಾಚಿಗಳನ್ನಾಗಿ ಮಾಡಹೊರಟಿದೆ. ಅವರು ಆ ಬಟ್ಟೆಯಲ್ಲಿ ಆರಾಮವಾಗಿಲ್ಲ, ನಡೆಯುವಂತಹ ಸ್ನಾಭಾವಿಕ ಕ್ರಿಯೆಯನ್ನೂ ಅವರು ವಿಕಾರವಾಗಿ ಮಾಡುತ್ತಾರೆ, ಪಂಚೆ ಉಟ್ಟು ನೆಲದ ಮೇಲೆ ಮುಂಚಿನಂತೆ ಕೂಡಲಾರರು, ಜಗನ್ನಾಥನೊಡನೆ ಸರಿಸಮಾನವಾಗಿ ಚಿಟ್ಟೆಯ ಮೇಲೆಯೂ ಕೂಡ ಲಾರರು, ಅದರ ಬೇರುಗಳನ್ನು ಕಿಂಚಿತ್ತಾದರೂ ಅವನು ಕದಲಿಸಿದ್ದಾನೆ. ಸಮಾಜದ ಎರಡು ಧ್ರುವಗಳ ನಡುವೆ ಜಗನ್ನಾಥ ಒಂದು ಕಡೆ ಇವರು ಮತ್ತೊಂದು ಕಡೆ ಶೂನ್ಯ ಭೂಮಿಯನ್ನು ಆಕ್ರಮಿಸಿದ್ದಾರೆ.

ನಾಗಮಣಿಗೆ, ಯೌವನ, ಸೌಂದರ್ಯ, ಒಳ್ಳೆಯತನ ಎಲ್ಲ ಇದೆ, ಆದರೆ ಸಾಮಾಜಿಕ ಸ್ಥಿತಿ ಜೀವನ ಸಂತೋಷದ ಈ ಸ್ವಾಭಾವಿಕ ಅಂಶಗಳನ್ನು ದುರಂತದ ಅಲಂಕಾರಗಳನ್ನಾಗಿಸಿವೆ, ಅವಳ ಪರಿಸರವೇ ಕಲುಷಿತವಾದುದು, ತನ್ನ ಗಂಡನೊಂದಿಗೆ ಬಾಳುವೆ ಮಾಡಬೇಕಾದವಳು ಅವಿಭಕ್ತಕುಟಂಬದ ಕಾರಣ ಮಾವನ ಮನೆವಾರ್ತೆ ನೋಡಿಕೊಳ್ಳಬೇಕು. ಅವಳೊಡನೆ ಮಾವ ಅನೈತಿಕ ಸಂಬಂಧ ಬೆಳೆಸಿದ್ದಾನೆ ಎಂಬ ಕಳಂಕದ ಕುವದಂತಿ ಕೂಡಾ ಇದೆ. ಅವಳಿಗೆ ಇನ್ನು ಮುಂದೇನು ಆಸೆಗಳಿಲ್ಲ. ವಿಷಯುಕ್ತವಾದ ಅವಳ ಪರಿಸರ ಅವಳನ್ನು ಉಸಿರು ಕಟ್ಟಿಸಿ ಎಂದೋ ಕೊಂದುಬಿಟ್ಟಿದೆ. ಅವಳು ಆ ಸತ್ತಳೆಂದು ಜಗನ್ನಾಥ ತಿಳಿಯುವುದು ಸಾವಿನ `ಕ್ಲಿನಿಕಲ್ ಡಿಕ್ಲರೇಷನ್’ ಅಷ್ಟೇ, ಅವಳ ವಿಚಾರದಲ್ಲಿ ಸಾವು ಬಾಳುವೆಗಳ ನಡುವೆ ಗರೆಯೇ ಇಲ್ಲ, ಅಂತೆಯೇ ಅವಳು ಜಗನ್ನಾಥನ ಬಗ್ಗೆ ಅಷ್ಟು ಉದಾಸೀನ: ಅವಳು ಸತ್ತಿರುವುದರಿಂದ ಪ್ರತಿಕ್ರಿಯೆಯೇ ಇಲ್ಲ. ಇಲ್ಲಿ ಅವಳ ಜಾತಿ ಮೇಲಿನದಾದರೂ ಅವಳು ವ್ಯವಸ್ಥೆಯಲ್ಲಿ ಹೊಲೆಯರಷ್ಟೆ ಬಲಿ, ಅವಳು ಬಲಿಯಾದ ಕ್ರಮ ಬೇರೆ, ಹಿಂದೆ ಕ್ರೂರಿಗಳಾದ ಕೆಲ ದೊರೆಗಳು ತಮ್ಮ ಸೆರೆಯಾಳುಗಳನ್ನು ಗಿಣಿಗೆ ಹಾಕುವಷ್ಟು ಹಾಲು ಅನ್ನವನ್ನು ಉಣಿಸಿ ಪಂಜರಗಳಲ್ಲಿಟ್ಟು ಸಾಯಿಸಿದ್ದಂತೆಯೇ ಅವಳ ಜಾತಿಯ ಹಿರಿಮೆ ಅವಳನ್ನು ಸಾಯಿಸಿದೆ, ಈ ಭಾಗವನ್ನು ಅನಂತಮೂರ್ತಿಗಳು ತುಂಬಾ ಅನುಕಂಪದಿಂದ, ಕೌಶಲ್ಯದಿಂದ, ಸಂಯಮದಿಂದ ಮತ್ತು ಆಶ್ಚರ್ಯವೆನಿಸುವಷ್ಟು, ಭಾಷೆಯ ಮಿತವ್ಯಯದಿಂದ ನಿರ್ವಹಿಸಿದ್ದಾರೆ,

ಕಾದಂಬರಿಯಲ್ಲಿ ತುಂಬಾ ಸ್ಫುಟವಾಗಿ ಮೂಡಿ ಬಂದಿರುವ ಒಂದು ಚಿತ್ರ ಚಿಕ್ಕಿಯದು, ಜಗನ್ನಾಥನ ಸಂಕಟದ ಒಂದು ಮುಖ್ಯ ಮುಖ ಚಿಕ್ಕಿಯೊಡನೆ ಆತನ ಸಂಬಂಧದಿಂದ ಬಂದಿದ್ದು, “ವಿನಾಕಾರಣ” ಆಕೆ ತೀವ್ರಯಾತನೆಗೆ ಗುರಿಯಾಗುತ್ತಾಳೆ, ಆಕೆಗೆ ಜಗನ್ನಾ ಥನ ನಡವಳಿಕೆಯಿಂದ ಆಗಾಧ ಹಿಂಸೆ ಆಗುತ್ತದೆ, ಅವನ ಮಂಖ, ಅನಿಸಿಕೆ ಯಾವುದೂ ಆಕೆಗೆ ಎಂದೂ ತಿಳಿಯುವುದೂ ಇಲ್ಲ. ಆದರೂ ಆತನ ಮೇಲೆ ಆಕೆಗೆ ಅಪಾರ ಪ್ರೀತಿ ಯದ ಆವನು ಆರಿಸಿಕೊಂಡಿರುವ ಕ್ರಿಯೆಗೆ ಅಡ್ಡಲಾಗುವ ಪ್ರೀತಿ, ಇಂಥ ಕಲುಷಿತ ವ್ಯವಸ್ಥೆ ತಾಳಿಕೆ ಬರುವುದರಲ್ಲಿ ಇಂತಹ ಪ್ರೀತಿಯೂ ಒಂದು ಮುಖ್ಯ ಕಾರಣವಾಗುತ್ತದೆ. ಈ ವ್ಯಾಮೋಹದೊಡಣನೆ ಕೂಡಾ ಆಧುನಿಕ ಪ್ರಜ್ಞೆ ಬಡಿದಾಡಬೇಕಾಗುತ್ತದೆ. ಮನಸ್ಸನ್ನು ತುಂಬ ದಣಿಸಬಲ್ಲ ಶಕ್ತಿ ಇದು.

ಅನಂತಮೂರ್ತಿ ಅವರು ಭಕ್ತಿಯನ್ನು ವರ್ಣಿಸುವ ರೀತಿ ಅತ್ಯಂತ ಮಾರ್ಮಿಕವಾಗಿದೆ ಹನ್ನೆರಡು ಗಂಟೆಗೆ ದೇವಸ್ಥಾನದ ದೊಡ್ಡ ಗಂಟೆ ಬಾರಿಸುತ್ತದೆ. ಎಲ್ಲಿದ್ದವರು ಅಲ್ಲೇ ಒಂದು ಕ್ಷಣ “ಸ್ಥಬ್ಬರಾಗಿ ನಿಲ್ಲುತ್ತಾರೆ, ಬಾಯಿಯಿಂದ ಪ್ರಣಾಮದ ಮಾತು ಹೊರಡುತ್ತದೆ. ಅದು ಊಟದ ಹೊತ್ತು, ಥಾಲಿ ಹಿಡಿದು ಜನ ಸಾಲಾಗಿ ಊಟಕ್ಕೆ ಹೊರಡುತ್ತಾರೆ. ಇಲ್ಲಿ ಭಕ್ತಿ ಘಂಟಾನಾದದ ಶಬ್ದಕ್ಕೆ ಕೈಯೆತ್ತುವ, ಜೊಲ್ಲು ಸುರಿಸುವ, ಬರೇ ಕಂಡೀಷನ್ಡ್ ರಿಫ್ಲೆಕ್ಸ್ ಆಗುತ್ತದೆ. ಭಕ್ತಿಯ ಬಗ್ಗೆ ನವುರಾದ ವ್ಯಂಗ್ಯ ಬೆರೆತ, ವೈಜ್ಞಾನಿಕ ವರ್ಣನೆ ಇದು.

ಆಧುನೀಕರಣ ಕೆಲವು ವಿಲಕ್ಷಣ ಪರಿಣಾಮಗಳಿಗೂ ಎಡೆ ಕೊಡುತ್ತದೆ. ಉದಾಹರಣೆಗೆ ಪುರಾಣಿಕರು, ಈತನ ಹೆಸರು ಪುರಾಣಿಕರು, ಹಿಂದೆ ತುಂಬಾ ಆಸ್ತಿವಂತ, ತನ್ನ ಕಾಲಕ್ಕೂ ಮುಂದೆ ಹೋಗಿ ವಿಧವೆಯನ್ನು ಮದುವೆಯಾಗಿದ್ದವನು, ತನ್ನ ಊರಿನ “ಮಧ್ಯ ಯುಗದ” ಜನರ ಬಗ್ಗೆ ಅಪಾರ ಭರ್ತ್ಸನೆ ಇದೆ, ತನ್ನ ಪ್ರಸ್ತಕಗಳು, ತನ್ನ ವಿಸ್ಕಿಯೊಡನೆ ತನ್ನ ಕಲ್ಪನಾ ಜಗತ್ತಿನಲ್ಲಿ ಮನೆ ಬಾಗಿಲನ್ನು ಭದ್ರ ಮಡಿಕೊಂಡು ಸೇರಿಬಿಟ್ಟಿದ್ದಾನೆ. ಮನೆಯನ್ನು ಆಧುನಿಕ ದ್ವೀಪವನ್ನಾಗಿ ಮಾಡಿದ್ದಾನೆ, ಮನೆಯಲ್ಲಿ ಸೀಸೆಯಲ್ಲಿ ಬೆಳೆಸಿದ ಗಿಡದಂತಹ ಆಧುನೀಕರಣ ಇದು. ಸಮಾಜದ ಆಧುನೀಕರಣದ ತಿರುವು ಮುರುವುಗಳ, ನೋವು ನಲಿವುಗಳ ಜೀವಂತ, ಶ್ರೀಮಂತ ಪ್ರತೀಕ ಅಲ್ಲ. ಅವರ ಮನೆ ಕೂಡಾ “ಕಂಪಾರ್ಟ್‌ಮಂಟಲೈಸ್’ ಆಗಿದೆ, ಅವರ ಅಸ್ವಸ್ಥ ಪತ್ನಿ ಮಂಜುನಾಥನ ಚಿತ್ರವನ್ನು, ಉಡುಪಿ ಪಂಚಾಂಗವನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ, ಆವಿನಾಶಿಯಾದ ಯಾವುದೋ ಕೀಟದಂತೆ ಮಂಜುನಾಥ ಎಲ್ಲಾ ಬಿಲಗಳನ್ನು, ಸಂದುಗಳನ್ನು ಹೊಕ್ಕಿದ್ದಾನೆ.

ಕಾದಂಬರಿಯ ಎಲ್ಲಾ ವ್ಯಕ್ತಿಗಳನ್ನು ಗಮನಿಸುವುದಾದರೆ ತುಂಬಾ ಉದ್ದವಾದಗುತ್ತದೆ. ಎದ್ದು ಕಾಣುವ ಕೆಲವರ ಬಗ್ಗೆ ಗಮನ ಅಗತ್ಯ. ಶ್ರೀಪತಿರಾವ್ ಹಳೆಯ ಕಾಲದ ಗಾಂಧೀವಾದಿ, ರಾಜಕೀಯ ಸತ್ಯ, ಕೆಳ ಜಾತಿಯವರಿಗೆ ಹಸ್ತಾಂತರವಾದಂತೆಲ್ಲಾ, ಆತನ ಗಾಂಧೀವಾದ ಹಿಂದೆ ಸರಿದು ಬ್ರಾಹ್ಮಣ ಜಾತೀವಾದಿ ಆಗುತ್ತಾನೆ ಗುರಪ್ಪ ಗೌಡ ಕಾಂಗ್ರೆಸ್‌ ಎಂ.ಎಲ್.ಎ. ಸ್ವಾತಂತ್ರ್ಯೋತ್ತರದ ಕಾಂಗ್ರೆಸ್ ಪುಡಾರಿ ಜನ, ಎಲ್ಲೆಲ್ಲಾದರೂ ನುಗ್ಗಿ ಮುಂದೆ ಬರಬಲ್ಲ, ಸಂಧಿಸಾಧಕತನ ಮತ್ತು ವ್ಯವಹಾರ ಜ್ಞಾನ ಸಮ ಸಮವಾಗಿದೆ. ಅಡಿಗ ತಿಂಡಿಪೋತ, ವಾಚಾಳಿ ಬ್ರಾಹ್ಮಣ ಹೇಗೆ ಬೇಕಾದರೂ ವಾದಿಸಿ, ಇನ್ನು ಹೇಗೆ ಬೇಕಾದರೂ ನಡೆಯಬಲ್ಲ. ನೀಲಕಂಠಸ್ವಾಮಿ ರಾಜಕೀಯದಲ್ಲಿ ಹೊಸದಾಗಿ ತಲೆಯೆತ್ತಿದ ಉದ್ದಟ : ತಿಕ್ಕಡದ ರಾಜಕೀಯಕ್ಕೆ ಹೇಳಿ ಮಾಡಿಸಿದವನು : ಜನ ಅವನಿಗೆ ರಾಜಕೀಯದ ಕಚ್ಚಾ ಮಾಲು, ರಾಜಕೀಯದ ಸೃಷ್ಟಿಕರ್ತರಲ್ಲ, ಇತರ ಜನ ರಾಜಕಾರಣಿಗಳಂತೆ ಅವನಿಗೂ ಆಳವಾದ ಕಳಕಳಿಯೇ ಇಲ್ಲ, ಬಾಟಲುಗಳಲ್ಲಿ ಸೀಲಾದ ಪಂಚಗವ್ಯವನ್ನೂ, ಇಂಗರಸಾಲನ ನಾಸ್ತಿಕವಾದಿ ಪ್ರಸಕಗಳನ್ನೂ ಸಮದೃಷ್ಟಿಯಿಂದ ತನ್ನ ಅಂಗಡಿಯಲ್ಲಿ ಮಾರಬಲ್ಲ, “ಲಾಭವವ ಜಯತೆ” ಎಂದು ನಂಬಿರುವ ವಾಣಿಜ್ಯ ಬಂಡವಾಳವನ್ನು ಔದ್ಯಮಿಕ ಬಂಡವಾಳವಾಗಿ ತೊಡಗಿಸಲು ತವಕಿಸುತ್ತಿರುವ ವ್ಯಕ್ತಿ ಪ್ರಭು, ಇವೆಲ್ಲ ಈ ಜೀವನಕ್ಕೆ ತದ್ರೂಪವಾದ ವ್ಯಕ್ತಿಚಿತ್ರಗಳು-ಕುಶಲಕೃತಿಯ ಪರಿಣಾಮಗಳು.

ಅನಂತಮೂರ್ತಿಗಳು ಕನ್ನಡವನ್ನು ಬಳಸಿರುವ ರೀತಿ ತುಂಬಾ ವಿಶಿಷ್ಟವಾದದ್ದು, ಆಕರ್ಷಕವಾದದ್ದು. ಅದೊಂದು ಕನ್ನಡ ಹೊಸರೀತಿಯ ಬಳಕೆಯನ್ನು ಸೃಷ್ಟಿಸಿದ್ದಾರೆ. ಇದು ಸಂಸ್ಕಾರದ ರೀತಿಯೇ ಆದರೂ, ಆ ಪ್ರಯೋಗ ಇನ್ನು ತುಂಬಾ ಮುಂದುವರಿದಿದೆ ಅತ್ಯಂತ ಕುಶಲ ಕೆಲಸಗಾರನಂತೆ ಇವರು ಕನ್ನಡವನ್ನು ಚಮ್ಮಟಿಗೆಯಂತೆಯೂ, ಚೂರಿಯಂತೆಯೂ, ಸ್ಟ್ಯಾನರಿನಂತೆಯೂ, ಸೂಜಿಯಂತೆಯೂ ಬಳಸಬಲ್ಲರು. ಸ್ಥಿತಿಯ ಬಗ್ಗೆ ಹೇಸಿಗೆ ಈ ಕಾದಂಬರಿಯು ಒಟ್ಟು ಧ್ವನಿಯಾಗಿದ್ದು, ಮಾತಿನ ಸಾಧ್ಯತೆಗಳ ಬಗ್ಗೆ ಒಂದು ಬಗೆಯ ಸ್ವಸ್ಥವಾದ ಅಪನಂಬಿಕೆಯಿದ್ದು ಕ್ರಿಯೆಯನ್ನೇ ಆರಿಸಿರುವುದರಿಂದ ಇದು ಸಾಧ್ಯವಾಗಿದೆ ಎನ್ನಿಸುತ್ತದೆ.

ಕಾದಂಬರಿಯಲ್ಲಿ ಒಂದು ಮೋಹಕವಾದ ದಾರ್ಶನಿಕಅರಾಜಕತೆಯಿದೆ. ಅದರಲ್ಲಿ ಮಾರ್ಕ್ಸ್, ಸಾರ್ತ್ರೆ, ಲೋಹಿಯಾ ಒಬ್ಬರೊನ್ನಬ್ಬರು ತಳ್ಳಾಡುತ್ತಾರೆ, ಒಂದೊಂದು ಕಡೆ ಒಬ್ಬೊಬ್ಬರ ದರ್ಬಾರೂ ಇದೆ. ಇದಂತೂ ಅತ್ಯಂತ ಸ್ವಾಗತಾರ್ಹ. ಏಕೆಂದರೆ ಈ ಮೂವರೂ ನೀಡಬಲ್ಲ ಮಹತ್ವಪೂರ್ಣವಾದ ಒಳನೋಟಗಳಿವೆ. ಈ ಮೂವರನ್ನು ಸಮಗ್ರೀಕರಿಸುವ ಹೊಸ ದರ್ಶನ, ಇತಿಹಾಸಕ್ಕೆ ತಿರುವು ಕೊಡಬಲ್ಲ ಒಬ್ಬ ಹೊಸ ದಾರ್ಶನಿಕನಿಂದ ಮಾತ್ರ ಸಾಧ್ಯ. ಅನಂತಮೂರ್ತಿಯವರು ಈ ಮೂವರು ದಾರ್ಶನಿಕರು ನೀಡುವ ಬೆಳಕಿನಲ್ಲಿ ಮಾನವನ ಪಾಡನ್ನು ಶೋಧಿಸಬಲ್ಲ ಸಾಮರ್ಥ್ಯ ಉಳ್ಳವರು.

ತುಂಬಾ ಸಹಾನುಭೂತಿ ದೃಷ್ಟಿಯಿಂದ ಅನಂತಮೂರ್ತಿಗಳು ಸೃಷ್ಟಿಸಿದ ಅಡಿಗರ ವ್ಯಕ್ತಿತ್ವ ತನ್ನ ಸೃಷ್ಟಿಯ ಗುರಿಯನ್ನು ಸಾಧಿಸುವಲ್ಲಿ ಸೋಲುತ್ತದೆ. ಹಿಂದೂ ಧರ್ಮದಲ್ಲಿ ಯಾವುದು ಶ್ರೇಷ್ಠವೋ, ಅದನ್ನು ರೂಪವೆತ್ತ ಹೊರಟಿರುವ ಈ ವ್ಯಕ್ತಿತ್ವ ಒಂದು ಬಗೆಯ ಎಲುಬಿಲ್ಲದ ಅದ್ಭುತವಾಗಿ ಪರಿಣಮಿಸಿದ, ಮನುಷ್ಯ “ತಲುಪಿದ” ಮೇಲೆ ಬಾಹ್ಯಸ್ಥಿತಿ ಮುಖ್ಯವಲ್ಲ ಎಂಬುದು ಹಿಂದೂ ಧರ್ಮದ ತಿರುಳೆಂದು ಕಾಣುತ್ತದೆ. ಅಡಿಗರ ‘ಪಕ್ಕಾದ’ ಮೇಲೆಯೂ ಹಾಗೆಯೇ ಇರುತ್ತಾರೆ; ಪರಿಸರ ಬದಲಿಸಬೇಕೆಂದು ಅವರಿಗೆ ಅನಿಸುವುದಿಲ್ಲ. ಮಾಮ್‌ರೇಜರ್ಸ್ ಎಡ್ಜ್‌ನಲ್ಲಿ ಝಳಪಿಸಿದ ದರ್ಶನ ದೃಷ್ಟಿ ಕೂಡಾ ಇದೆ. ಭಾರತದ ದರ್ಶನದಲ್ಲಿ ಅತ್ಯಂತ ಪ್ರಾಣಾಂತಿಕ ದೋಷವೇ ಬಹುಶಃ ಇದೇ, ಮನವೆಂಬ ಮರ್ಕಟ ಹಿಡಿತಕ್ಕೆ ಬಂದರೆ ಪರಿಸರದ ಬಗ್ಗೆ ಕಾಳಜಿ ಅನಗತ್ಯ, ಯಾವ ಸಿದ್ಧಾಂತ ಯಾವ ಆಚರಣೆ ಜೊತೆಗೂ ಕೂಡಿ ನಡೆಯುತ್ತದೆ. ಎಲ್ಲಾ ಆಚರಣೆಗೂ ಒಂದೊಂದು ಸಿದ್ದಾಂತ ತಯಾರು, ಹಿಂದೂ ಧರ್ಮದಲ್ಲಿ ಶ್ರೇಷ್ಠವಾದುದನ್ನು ಎರಕ ಯಾವಾಗ ಯಾರು ಹುಯ್ದರೂ ಹೀಗೆ ಆಗುತ್ತದೆ, ಅಲ್ಲವೇ ?

ಕಾದಂಬರಿಯಲ್ಲಿ ಕೇವಲ ಒಂದೆರಡು ಕಡೆ, ಅಂತಮೂರ್ತಿಗಳು ರಚಿಸಿದ ವ್ಯಕ್ತಿತ್ವಗಳು ತಮ್ಮ
ನಡವಳಿಕೆ ಮೂಲಕವೇ ಮಾತನಾಡುವುದನ್ನು ಬಿಟ್ಟು ಬಾಯಿ ಮಾತಿನ ಮೂಲಕ ನಡೆಯಹೋಗುತ್ತವೆ. ಆಗ ಕಾದಂಬರಿಯ ಭಾವ “ಏರ್ ಬಂಪ್ಸ್” ಅನುಭವಿಸಿದಂತೆ, ಕಾಣುತ್ತದೆ.

ಆದರೆ ಈ ಕಾದಂಬರಿಯ ಒಟ್ಟು ಮಹತ್ವದಲ್ಲಿ ಲೆಕ್ಕಕ್ಕೆ ಬಾರದ ದೋಷಗಳು ಇವು ಚಿಂತನೆಯ ಒಂದು ಸರಪಣಿಯನ್ನು ಪ್ರಾರಂಭಿಸಬಲ್ಲ ಒಂದು ಅಪೂರ್ವ ಅನುಭವ ಈ ಕಾದಂಬರಿ.

Close

ವಂಶವೃಕ್ಷ-ಒಂದು ವಿಮರ್ಶೆ

ವಂಶವೃಕ್ಷ – ಒಂದು ವಿಮರ್ಶೆ

ಎನ್ ಎಸ್ ರಘುನಾಥ್

ಬದುಕನ್ನು ಅರ್ಥಮಾಡಿಕೊಳ್ಳುವ ರೀತಿಯಲ್ಲಿ ಒಂದೊಂದು ತತ್ವಶಾಸ್ತ್ರ ಒಂದೊಂದು ಮಾರ್ಗವನ್ನು ಹಿಡಿಯುತ್ತದೆ. ಆದರೆ ಮನುಷ್ಯನನ್ನು ತೊಡಗಿಸುವ ಬದುಕು ಯಾವುದೇ ತತ್ವಶಾಸ್ತ್ರ ವಿವರಿಸುವುದಕ್ಕಿಂತ ಸಂಕೀರ್ಣವಾದುದು, ನಿಗೂಢವಾದುದು. ತತ್ವದಿಂದ ಬದುಕಲ್ಲ, ಬದುಕಿನಿಂದ ತತ್ವ. ಎಲ್ಲಾ ದಾರ್ಶನಿಕರ ತತ್ವಭಂಡಾರ ವೇದ, ಉಪನಿಷತ್, ಗೀತೆ, ಬೈಬಲ್, ಖೂರಾನ್ ಅಥವಾ ಕಿರ್ಕೆಗಾರ್ಡ್, ಕಾಂಟ್, ಹೆಗಲ್, ನೀಚೆ, ಸಾರ್ತ್ರ್‌ ಇತ್ಯಾದಿ ತತ್ವಶಾಸ್ತ್ರಜ್ಞರ ತತ್ವಸಿದ್ದಾಂತ. ವೇದಾಂತಗಳ ಚೌಕಟ್ಟಿಗೆ ಒಳಪಟ್ಟು ಇನ್ನೂ ಮಿಕ್ಕಿರುವುದು. “ಅಹ್’ ಎನಿಸಿಕೊಳ್ಳುವಂತಹದ್ದು ಬದುಕು. ‘ವಂಶವೃಕ್ಷ’ ಕಾದಂಬರಿಯಲ್ಲಿ ಬದುಕಿನಲ್ಲಿ ತೊಡಗುವ ಶ್ರೀನಿವಾಸ ಶ್ರೋತ್ರಿ, ಕಾತ್ಯಾಯಿನಿ, ಡಾ. ಸದಾಶಿವರಾವ್ ಮತ್ತು ರಾಜಾರಾಯರ ಬದುಕಿನ ಮತ್ತು ವ್ಯಕ್ತಿಗಳ ಸತ್ವಗಳ ಇತಿಮಿತಿ ಪರೀಕ್ಷೆ ನಡೆಯುವುದಿಲ್ಲ. ಆರಂಭದಲ್ಲೇ ತೀರ್ಮಾನವಾಗಿ ಬಿಟ್ಟಿರುತ್ತದೆ. ಕಾದಂಬರಿಯಲ್ಲಿ ಉನ್ನತ ಪ್ರಜ್ಞೆ ಶ್ರೋತ್ರಿಯವರದೆ. ಇವರ ಪ್ರಜ್ಞೆಯ ಮೂಲಕ-ಇವರ ಬದುಕಿನಲ್ಲಾಗುವ ಘಟನೆಗಳ ಮೂಲಕ ಮತ್ತು ಅವರ ಪ್ರಜ್ಞೆ ಅದನ್ನು ಅರ್ಥಮಾಡಿಕೊಳ್ಳುವ ಮೂಲಕ -ಭೈರಪ್ಪನವರು ಬದುಕಿನ ಇತಿಮಿತಿಗಳನ್ನು ಅಳೆಯಲು ಹೋರಾಡುತ್ತಾರೆ. ಅವರ ಪ್ರಕಾರ ತತ್ವ ಮೊದಲು ನಂತರ ಅಸ್ತಿತ್ವ.

ಎಲ್ಲವೂ ಮನುಷ್ಯನ ಕರ್ಮಾನುಸಾರ” (ಪು. 195)
“ಅವರವರ ಕರ್ಮಾನುಸಾರ ಪ್ರತಿಯೊಬ್ಬರೂ ಅನುಭವಿಸಬೇಕು” (ಪು. 215)
“ಯಾರು ಧರ್ಮಕ್ಕೆ ತಮ್ಮನ್ನು ಸಮರ್ಪಿಸಿಕೊಳ್ಳುತ್ತಾರೋ ಅವರನ್ನು ಧರ್ಮವೇ ಯಾವ ಕಷ್ಟವೂ ಇಲ್ಲದೆ ಕೈಹಿಡಿದು ನಡೆಸುತ್ತದೆ” (ಪು. 188)

ಹೀಗೆ ಶ್ರೋತ್ರಿಯರು ತತ್ವನಿಷ್ಠರು. ಆದರೆ ಇದೂ ‘ವಂಶವೃಕ್ಷ’ ಕಾದಂಬರಿಯಲ್ಲಿ ಪರೀಕ್ಷೆಗೊಳಪಡುವುದಿಲ್ಲ. ಶ್ರೋತ್ರಿಯರ ತಾತ್ವಿಕ ಮಟ್ಟಕ್ಕೆ ಮತ್ತೊಂದು ತಾತ್ವಿಕ ಮಟ್ಟದಲ್ಲಿ ಅಥವಾ ಮಾನವೀಯ ಮಟ್ಟದಲ್ಲಿ ಸರಿತೂಗುವ ವ್ಯಕ್ತಿಯೇ ಇಲ್ಲ. ಇದು ಬಹಳ ಮುಖ್ಯ. ಹೀಗಾಗಿ ಬದುಕು ಮತ್ತು ತತ್ವಗಳು ಅಥವಾ ಎರಡು ತತ್ವಗಳ ಮುಖಾಮುಖಿಯಾಗುವುದೇ ಇಲ್ಲ. ಅವಿರೋಧವಾಗಿ ಶ್ರೋತ್ರಿಯವರದೇ ಮೊದಲಿನಿಂದಲೂ ಮೇಲುಗೈಯಾಗುತ್ತಾ ಹೋಗುತ್ತದೆ.

ಯಾವುದೇ ತತ್ವ ಕಾದಂಬರಿಯಲ್ಲಿ ಬರಬಾರದೆಂದು ನಾನು ಹೇಳುತ್ತಿಲ್ಲ. ಆದರೆ ಒಂದು ತತ್ವ ಪ್ರತಿಪಾದನೆಗೆ ಒಂದು ಕಾದಂಬರಿಯಿರುವುದು ಸಾಧ್ಯವಿಲ್ಲ. ಡಾಸ್ಟವಸ್ಕಿ ತನ್ನ ಕಾದಂಬರಿಗಳು ‘Crime and Punishment’ ಅಥವಾ ‘The Brothers Karamazov’ ಗಳಲ್ಲಿ ತತ್ವ ಪ್ರತಿಪಾದಕರುಗಳನ್ನಿಟ್ಟುಕೊಂಡಿದ್ದಾನೆ. (ಡಾಸ್ಟವಸ್ಕಿ ಮತ್ತು ಭೈರಪ್ಪನವರನ್ನು ಒಂದೇ ಉಸಿರಿನಲ್ಲಿ ಮಾತನಾಡುವುದು ನನ್ನ ಉದ್ದೇಶವಲ್ಲ.) “The Brothers Karamazov’ ನಲ್ಲಿ The Grand Inquisiter ಪ್ರಸಂಗವನ್ನು ಉದಾಹರಣೆಗೆ ತೆಗೆದುಕೊಳ್ಳಬಹುದು. ಆಧುನಿಕ ಧೀಮಂತರನ್ನು ನಿರಂತರವಾಗಿ ಆವರಿಸಿರುವ ವ್ಯಕ್ತಿಸ್ವಾತಂತ್ರ್ಯ (Freedom) ಮತ್ತು ಸಂತುಷ್ಟಭಾವ (happiness) ಮತ್ತು ನೆಮ್ಮದಿ (Security) ತಂತ್ರಗಳನ್ನು ಅತ್ಯಂತ ಧೈರ್ಯದಿಂದ ಮುಖಾಮುಖಿ ಮಾಡಿಸುತ್ತಾನೆ; ಕಲಾತ್ಮಕವಾಗಿ ಪರೀಕ್ಷೆಗೊಳಪಡಿಸುತ್ತಾನೆ, ‘ವಂಶವೃಕ್ಷ’ ಕಾದಂಬರಿಯಲ್ಲಿ ಹೀಗೆ ಮೌಲ್ಯಗಳ ಘರ್ಷಣೆಗೆ ಅವಕಾಶವಿಲ್ಲ. ತತ್ವನಿಷ್ಠರಾಗಿ ಹೋರಾಡುವ ಶ್ರೋತ್ರಿಯರಿಗೆ ತತ್ವಕ್ಕಿಂತ ಬದುಕು ಸಂಕೀರ್ಣವಾದುದು ಎಂದು ಅನುಭವವಾದಾಗಲೂ ತಾವು ನಂಬಿದ ತತ್ವಗಳನ್ನು ಪ್ರಶ್ನಿಸುವುದೇ ಇಲ್ಲ. ಕಾದಂಬರಿಯ ಆರಂಭದಲ್ಲಿ ತಾವು ಕಾಶ್ಯಪ ಗೋತ್ರಕ್ಕೆ ಸೇರಿದವರೆಂದು, ತಮ್ಮ ಬದುಕಿನ ಅರ್ಥ ಆ ಗೋತ್ರಕ್ಕೆ ಸೇರಿದ ತಮ್ಮ ಪೂರ್ವಜರ ಪಿತೃಋಣವನ್ನು ತೀರಿಸುವುದು ಎಂದು ನಂಬಿಕೊಂಡಿರುತ್ತಾರೆ.

“ಕಾಶ್ಯಪಾವತ್ತಾರನೈದ್ರವ ಪ್ರವರ ತ್ರಯಾನ್ವಿತ ಆಶ್ವಲಾಯನ ಸಮನ್ವಿತಃ”

ಋಕ್ ಶಾಕಾಧ್ಯಾಯೀ ಶ್ರೀ ಶ್ರೀನಿವಾಸ ಶ್ರೋತ್ರಿಯೋsಹಂ ಭೋ ಈಶ್ವರ ತ್ಯಾಮಭಿವಾದಯಾಮೀ” ಎಂದು ತಮ್ಮ ಪ್ರವರವನ್ನು ದಿನವೂ ಸಂಧ್ಯಾವಂದನೆಯ ಕಾಲದಲ್ಲಿ ಪಠಿಸುವಾಗ ಅವರಿಗೆ ಒಂದು ವಿಧವಾದ ಉನ್ನತ ಮಟ್ಟದ ಅನುಭವವಾಗುತ್ತಿತ್ತು……(ಪು. 55)

ತಮ್ಮ ವಂಶಜರ ಸ್ಮರಣೆ ಮಾಡುವಾಗ ಒಂದು ರೀತಿಯ ಆಧ್ಯಾತ್ಮಿಕ ಅನುಭವವಾಗುತ್ತದೆ. ಈ ರೀತಿ ಆಧ್ಯಾತ್ಮಿಕ ಮಟ್ಟದಲ್ಲಿ ನಿಂತು ಬದುಕಿನ ಆಗುಹೋಗುಗಳನ್ನು ನಿರ್ಲಿಪ್ತವಾಗಿ ನೋಡುವ ಶಕ್ತಿಯನ್ನು ಪಡೆಯುತ್ತಾರೆ. ಆದರೆ ಕಾದಂಬರಿಯ ಕೊನೆಯಲ್ಲಿ ತಾವು ಶೋತ್ರಿಯವರ ವಂಶಕ್ಕೆ ಹುಟ್ಟಿಲ್ಲವೆಂದು ತಮ್ಮ ರಹಸ್ಯವನ್ನು ತಿಳಿದುಕೊಂಡಾಗ, ತಮಗಾಗುತ್ತಿದ್ದ ಆಧ್ಯಾತ್ಮಿಕ ಅನುಭವ ವಂಶದ ಪುಣ್ಯಫಲವನ್ನು ರಕ್ತದಲ್ಲಿ ಹೊತ್ತು ಬಂದುದರಿಂದ ಅಲ್ಲ, ತಾವು ಆ ರೀತಿ ನಂಬುತ್ತಿದ್ದುದರಿಂದ ಎಂದು ಸಂಭೀಭೂತರಾಗುವುದೇ ಇಲ್ಲ. ಹೀಗೆ ಅವರು ರಕ್ತ ಮಾಂಸಗಳ ವ್ಯಕ್ತಿಯಾಗದೆ ಮಾನವೀಯ ರೂಪದ ತತ್ವನಿಷ್ಟೆ ಯಂತ್ರವಾಗಿ ಕಾದಂಬರಿಕಾರರ ಕೈಗೊಂಬೆಯಾಗಿದ್ದಾರೆ. ಸಿದ್ಧಾಂತಗಳನ್ನೊಪ್ಪಿಕೊಂಡೇ ಬದುಕನ್ನು ಆರಂಭಿಸುವುದರಿಂದ ಅವರು ವ್ಯಕ್ತಿಸ್ವಾತಂತ್ರ್ಯವಿಲ್ಲದೆ ಕಾದಂಬರಿಕಾರರು ಬದುಕಿನ ಬಗ್ಗೆ ನಂಬುವ ತತ್ವಗಳ ಪ್ರತಿನಿಧಿಯಾಗಿದ್ದಾರೆ.

“ಕಾದಂಬರಿಯಲ್ಲಿ ವೈಚಾರಿಕತೆ’ ಎಂಬ ಲೇಖನದಲ್ಲಿ ವೈಚಾರಿಕತೆಯನ್ನೇ ಬೆನ್ನೆಲುಬಾಗಿ ಪಡೆದ ಕಾದಂಬರಿಗಳ ಬಗ್ಗೆ ವಿವೇಚಿಸುತ್ತಾ ಗಿರಡ್ಡಿ ಗೋವಿಂದರಾಜರು ಈ ರೀತಿ ಬರೆಯುತ್ತಾರೆ:

“ತಾತ್ವಿಕ ಸಿದ್ಧಾಂತಗಳಿಂದಲೇ ಅವರ (ಭೈರಪ್ಪನವರ) ಕಾದಂಬರಿಗಳು ಆರಂಭವಾಗುತ್ತವೆ. ಅವನ್ನು ಪಾತ್ರ-ಸನ್ನಿವೇಶಗಳ ಮೂಲಕ ಉದಹರಿಸುವಾಗ ಅವರ ಲಕ್ಷವೆಲ್ಲಾ ಮೂಲತತ್ವದ ಮೇಲೆ ಉಳಿದುಬಿಡುತ್ತದೆ. ಹಾಗಾಗಿ ಕಾದಂಬರಿಯಲ್ಲಿಯ ಬದುಕಿನ ಸಂಕೀರ್ಣತೆಯನ್ನು ಅವರು ತಪ್ಪಿಸುತ್ತಾ ಹೋಗಿ ಕೊನೆಗೆ ಉಳಿಯುವುದು ಜೀವನದ ಅರ್ಥಪೂರ್ಣತೆಯಲ್ಲಿ ಎನಿಸುತ್ತದೆ. ‘ವಂಶವೃಕ್ಷ’ ಅವರ ಕಾದಂಬರಿಗಳಲ್ಲೆಲ್ಲಾ ಹೆಚ್ಚು ಮಹತ್ವದ್ದು. ಆದರೆ ಇಲ್ಲಿಯೂ ವೈಚಾರಿಕತೆಯೇ ಮುಖ್ಯ…… ಅಲ್ಲದೆ ಭೈರಪ್ಪನವರ ವೈಚಾರಿಕತೆಗೂ ಅದನ್ನು ನಾಟ್ಯೀಕೃತಗೊಳಿಸಲು ಆಯ್ದುಕೊಂಡ ಜೀವಾನುಭವಗಳಿಗೂ ಕಂದರವೇರ್ಪಟ್ಟು ಇಡಿಯ ಕಾದಂಬರಿಯೇ ತನ್ನ ಉದ್ದೇಶದಲ್ಲಿ ವಿಫಲವಾಗಿದೆ”.

ಇಲ್ಲಿ ಗಿರಡ್ಡಿಯವರು ವಿಫಲತೆಯನ್ನು ಗುರುತಿಸಿದ್ದರಾದರೂ ವೈಚಾರಿಕತೆಯನ್ನು ನಾಟ್ಯೀಕೃತಗೊಳಿಸುವ ಪ್ರಯತ್ನವಿದೆ ಎಂದು ಹೇಳಿದಂತಾಗಿದೆ. ಆದರೆ ಕಾದಂಬರಿಯಲ್ಲಿ ಆ ಪ್ರಯತ್ನವಿಲ್ಲ, ಯಾವ ತಾತ್ವಿಕ ಗೊಂದಲದ ಗೋಜಿಗೂ ಸಿಕ್ಕಿಬೀಳದೆ, ಮಾನವೀಯ ಮಟ್ಟದಲ್ಲಿ ಜೀವಿಸುವ ವ್ಯಕ್ತಿಗಳು ಭಾಗೀರಥಮ್ಮ, ಲಕ್ಷ್ಮಿ, ಕಾತ್ಯಾಯಿನಿ ಮತ್ತು ಡಾ. ಸದಾಶಿವ ರಾಯರು ಅಲ್ಲಲ್ಲಿ ವಿರುದ್ಧ ಸೆಣಸುವ ಸಾಧ್ಯತೆಗಳನ್ನು ತೋರಿಸುತ್ತಾರೆ. ಉದಾಹರಣೆಗೆ, ನಂಜುಂಡ ಶ್ರೋತ್ರಿಯ ಸಾವಾದ ಮೇಲೆ ಒಂದು ರಾತ್ರಿ ಕಾತ್ಯಾಯಿನಿಗೆ ಉತ್ತರ ಕೊಡುತ್ತಾ ಭಾಗೀರಥಮ್ಮ ನುಡಿಯುತ್ತಾರೆ:

“ಅದೇನೋ ನಿಜ. ಆದರೂ ಮನುಷ್ಯರು ತೀರ ಹೀಗಿರಬಾರದು. ಎಲ್ಲರ ಹಾಗೆ ಅಳುವಾಗ ಅಳಬೇಕು. ಹಾಗಿದ್ದರೆ ನಮಗೂ ಸಮಾಧಾನ. ಒಂದೂವರೆ ವರ್ಷದಿಂದ ನಾವು ಏನಿದ್ದರೂ ಒಳಗೇ ಮನಸ್ಸು ಪೂರ್ತ ಅಳಬೇಕೆ ಹೊರತು ಅವರ ಎದುರಿಗೆ ಕಣ್ಣೀರು ಹಾಕೋ ಹಾಗಿಲ್ಲ, ಅವರೆದುರಿಗೇ ನಾವು ಅತ್ತು ನಮ್ಮೆದುರಿಗೇ ಅವರೂ ಕಣ್ಣೀರು ಹಾಕಿದರೆ ಇಬ್ಬರಿಗೂ ಎಷ್ಟೋ ಸಮಾಧಾನ ಅಲ್ಲವೇ? (ಪು. 49)

ಕರುಣಾರತ್ನೆಯ ಜೊತೆ ಮಾತನಾಡುತ್ತಾ ಡಾ. ರಾಯರು ಒಂದು ಕಡೆ ನುಡಿಯುತ್ತಾರೆ:

“ಪ್ರಾಚೀನಕಾಲದಲ್ಲಿ ಗೃಹಸ್ಥಧರ‍್ಮಕ್ಕಾಗಿ ವಂಶೋದ್ಧಾರಕ್ಕಾಗಿ ವಿವಾಹ ಎಂಬ ಕಲ್ಪನೆಯಿತ್ತು. ಈಗ ಮೊದಲನೆಯ ದೃಷ್ಟಿ ಸ್ವಲ್ಪಮಟ್ಟಿಗೆ ಉಳಿವಿದ್ದರೂ ಎರಡನೇ ಅಂಶವೂ ಮುಖ್ಯವಾದ ಧೈಯವಲ್ಲ. ವಂಶೋದ್ಧಾರ ಎಂಬ ಕಲ್ಪನೆ ಇತ್ತೀಚೆಗೆ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತಿದೆ. ನನಗೂ ಒಬ್ಬ ಮಗನಿದ್ದಾನೆ.ಅವನಿಂದ ನನ್ನ ಹೆಸರು ನಿಲ್ಲುವುದೋ ಇಲ್ಲವೋ ನಾ ಕಾಣೆ”. (ಪು. 107)

ಡಾ. ರಾಯರು ಬುದ್ಧಿಜೀವಿಗಳು. ವಿಶ್ವವಿದ್ಯಾನಿಲಯದಲ್ಲಿ ಮಹಾ ಪ್ರಾಧ್ಯಾಪಕರು. ಆದರೆ ಇವರು ಕಾದಂಬರಿಯಲ್ಲಿ ಪ್ರಮುಖವಾಗುವುದು ‘ಪ್ರಾಚೀನ ಭಾರತೀಯ ರಾಜ್ಯಶಾಸ್ತ್ರಕ್ಕೆ ಧರ್ಮದ ಆಧಾರ’ ಎಂಬ ಗ್ರಂಥ ಬರೆಯುತ್ತಾರೆಂಬುದಕ್ಕಾಗಿ. ಆದುದರಿಂದ ಇವರ ಈ ಅಭಿಪ್ರಾಯ ಹರಿದು ಹಂಚಿ ಹೋಗಿದೆ. ಯಾರೂ ಶ್ರೋತ್ರಿಯವರನ್ನು ಬದುಕಿನಲ್ಲಿ ಅಥವಾ ತಾತ್ವಿಕ ಮಟ್ಟದಲ್ಲಿ ನೇರವಾಗಿ ಸಾಧಿಸುವುದೇ ಇಲ್ಲ. ಒಂದು ಮಟ್ಟದಲ್ಲಿ ಅವರನ್ನು ಎದುರಿಸುವ ವ್ಯಕ್ತಿ ಕಾತ್ಯಾಯಿನಿಯೊಬ್ಬಳೆ. ಆದರೆ ಅಲ್ಲಿಯೂ ಕಾತ್ಯಾಯಿನಿಯ ಪಾತ್ರ ಬೆಳವಣಿಗೆಯನ್ನು ಒಡ್ಡಾಗಿ ಮೊಟಕುಗೊಳಿಸಿ ಭೈರಪ್ಪನವರು ತಮ್ಮ ಮಾರ್ಗವನ್ನು ಸುಲಭ ಮಾಡಿಕೊಳ್ಳುತ್ತಾರೆ.

ಸಾಧಾರಣ ಓದುಗನಿಗಲ್ಲದೆ ವಿಮರ್ಶಕನಿಗೂ ಈ ಕಾದಂಬರಿಯನ್ನು ಯಾವ ರೀತಿ ಓದಬೇಕು ಎನ್ನುವಲ್ಲಿ ಗೊಂದಲ ಕಾಣಬಹುದು. ಸನಾತನ ಬದುಕನ್ನು ಪ್ರತಿನಿಧಿಸುವ ಶ್ರೋತ್ರಿಯವರ ಬದುಕನ್ನು ಆದರ್ಶ ಮಾಡಿಕೊಂಡು ಅದರ ಮಸೂರದ ಮೂಲಕ ಬರಹಗಾರರು ಬದುಕಿನ ರೀತಿ ನೀತಿಗಳನ್ನು ನೋಡುತ್ತಿದ್ದಾರೆಯೇ? ಅಥವಾ ವಂಶ ಪ್ರಜ್ಞೆಯನ್ನು ಮೊದಲಿನಿಂದಲೂ ಹೊತ್ತು ವಂಶೋದ್ಧಾರ, ಪಿತೃಋಣ ತೀರಿಸುವುದು ಇತ್ಯಾದಿಗಳನ್ನು ತಲೆತುಂಬಾ ತುಂಬಿಕೊಂಡು ಅದನ್ನೇ ಜೀವನದ ಅರ್ಥವೆಂದು ನಂಬಿ ಕೊನೆಗೆ ಯಾವ ವಂಶದ ಮುಂದುವರಿಕೆಗಾಗಿ ಬದುಕಬೇಕೆಂದು ಹೊರಡುತ್ತಾರೋ ಆ ವಂಶಕ್ಕೆ ತಾವು ಹುಟ್ಟಿಲ್ಲವೆಂದು ಗೊತ್ತಾದ ಮೇಲೆ ಅದರ ಆದರ್ಶಗಳ ಬಗ್ಗೆ ಅಭಿಮಾನ (ತಮಗರಿವಿಲ್ಲದ ಅಂಧ ಅಭಿಮಾನ?) ತೋರಿಸುವ ಶ್ರೋತ್ರಿಯರ ಮೂಲಕ ಆ ರೀತಿಯ ಬದುಕನ್ನೇ ವಿಮರ್ಶೆಗೊಳಪಡಿಸುತ್ತಿದ್ದಾರೆಯೇ? ಹಾಗಿದ್ದರೆ ಕಾತ್ಯಾಯಿನಿಯ ಎರಡನೆಯ ಮದುವೆಯಾದ ಮೇಲೆ ವಿಕಾರವೆನಿಸುವಷ್ಟು ಮಟ್ಟದಲ್ಲಿ ಗರ್ಭಸ್ರಾವ ಮಾಡಿಸಿ ಆಕೆಯನ್ನು ದೈಹಿಕ ವೇದನೆಗೊಳಪಡಿಸುವುದರ ಅರ್ಥವೇನು ? ಎರಡೂ ಪಾತ್ರಗಳನ್ನು ಮತ್ತು ಎರಡೂ ರೀತಿಯ ಬದುಕುಗಳನ್ನು ಬರಹಗಾರರು ಸಮಾನ ಅನುಕಂಪದಿಂದ ಕಂಡಿದ್ದಾರೆಯೇ? ಶ್ರೋತ್ರಿಯವರು ಕೊನೆಗೆ ಬದುಕಿನಿಂದ ಪಲಾಯನ ಮಾಡುವುದೇಕೆ? ಹೀಗೆ ಕಾದಂಬರಿಯ ಬಗ್ಗೆ ಮೂಲಭೂತ ಸಮಸ್ಯೆಗಳೇಳುತ್ತವೆ.

ನಾನು ಮೊದಲೇ ಹೇಳಿದಂತೆ ಶ್ರೀನಿವಾಸ ಶ್ರೋತ್ರಿಯರದೆ ಕಾದಂಬರಿಯಲ್ಲಿ ಉನ್ನತ ಪ್ರಜ್ಞೆ. ಬದುಕಿನ ಮೌಲ್ಯಗಳನ್ನು ಶ್ರೋತ್ರಿಯರಂಥ ತಾತ್ವಿಕ ಕಟ್ಟು ಕಟ್ಟಳೆಗೆ ಬಲಿಬಿದ್ದವರ ಸೀಮಿತ ಪ್ರಜ್ಞೆಯ ಮೂಲಕ ಬದುಕಿನ ಸಾಧ್ಯತೆಗಳು, ಮಾನವೀಯ ಸಾಧ್ಯತೆಗಳು, ಮಾನವೀಯ ಪ್ರಕೃತಿ ಮತ್ತು ಸ್ವತಂತ್ರತೆಯನ್ನು ಪರೀಕ್ಷಿಸಲು ಸಾಧ್ಯವೇ ಇಲ್ಲ. ಶ್ರೋತ್ರಿಯ ಪ್ರಕಾರ ಮದುವೆಯ ಉದ್ದೇಶ ವಂಶೋದ್ಧಾರ ಪಿತೃ-ಋಣ ತೀರಿಕೆ.
“ಶ್ರೋತ್ರಿಯರು ಸನಾತನ ಧರ್ಮವನ್ನು ಜೀವಿಸುತ್ತಿದ್ದರು. ಅವರ ಪರಿಪೂರ್ಣ ವಿಶ್ವಾಸದ ಪ್ರಕಾರ ಮನುಷ್ಯನ ಮದುವೆಯಾಗುವುದು ಗೃಹಸ್ಥ ಧರ್ಮಕ್ಕಾಗಿ, ಗೃಹಸ್ಥನಾಗುವುದು ಈ ಲೋಕದಲ್ಲಿರುವ ತನ್ನ ಕರ್ತವ್ಯಗಳನ್ನು ಪೂರೈಸುವುದಕ್ಕಾಗಿ, ಸಂತಾನವಿಲ್ಲದೇ ಸಾಯುವ ಮನುಷ್ಯ ವಂಶದ ಕೊನೆಯ ಮಗನಾಗಿ ತನ್ನಿಂದ ಮುಂದೆ ಬರಿ ಶೂನ್ಯವನ್ನು ಬಿಟ್ಟು ಸಾಯಬೇಕು, ಪಿತೃಗಳಿಂದ ಪಡೆದ ಈ ಜೀವವು ಪಿತೃ-ಋಣ ತೀರಿಸುವುದು ತನ್ನ ಸಂತಾನದ ಮೂಲಕವೇ” (ಪು. 55)

ಇದನ್ನು ಎಲ್ಲಿಯೂ ಅವರು ಅನುಮಾನಿಸುವುದಿಲ್ಲ. ತಮ್ಮ ಮತ್ತು ಕಾತ್ಯಾಯಿನಿಯರ ಬದುಕಿನಲ್ಲಿ ನಡೆದ ಘಟನೆಗಳು ಮತ್ತೊಂದು ಸ್ವರದಲ್ಲಿ ಜೀವನವನ್ನು ನಡೆಸುವ ಅವಶ್ಯಕತೆಯನ್ನು ರೂಪಿಸಿದರೂ ಶ್ರೋತ್ರಿಯರು ತಮ್ಮ ತತ್ವಕ್ಕೆ ಬದ್ಧರಾಗಿಯೇ ಉಳಿಯುತ್ತಾರೆ. ಬದುಕಿನ ಸಂಕೀರ್ಣತೆಯನ್ನು, ಹಲವಾರು ಪದರಗಳಲ್ಲಿರಬಹುದಾದ ಅರ್ಥಗಳನ್ನು ತತ್ವದ ಅರ್ಥಕ್ಕೆ ಅಳವಡಿಸಿಕೊಳ್ಳುತ್ತಾ ಹೋಗುತ್ತಾರೆ. ಹೆಂಡತಿಗೆ ಹೆರಿಗೆಯಾದ ಮೇಲೆ ಪ್ರಾಣಾಪಾಯವನ್ನು ಸೂಚಿಸಿದ ಡಾಕ್ಟರರ ಸಲಹೆಯ ಮೇರೆಗೆ ಹೆಂಡತಿಯಿಂದ ದೂರ ಸರಿಯುತ್ತಾರೆ.

“ಡಾಕ್ಟರರು ಬೇಡ ಅಂದಮೇಲೆ ನಿನ್ನ ಜೀವ ತೆಗೆಯೋಕೆ ನಾನು ಮನುಷ್ಯ ಅಲ್ಲವೇ ? ಅಂತ ಅವರು ಹಿತ್ತಲು ಕಡೆಗೆ ಹೊರಟುಹೋಗಿಬಿಟ್ಟರು.” (ಪು. 203)

ಇಲ್ಲಿ ಅವರ ಮಾನವೀಯತೆ, ಅನುಕಂಪಗಳನ್ನು ನಾವು ಗೌರವಿಸಿದರೂ ಅದರ ಜೊತೆಗೆ ಆದರ್ಶ ಪಾಲನೆಯ ಕರ್ತವ್ಯ ನಿಷ್ಠೆಯೂ ಇದೆ ಎಂಬುದನ್ನು ಮರೆಯುವಂತಿಲ್ಲ. ನಂತರ ಲಕ್ಷ್ಮಿಯನ್ನು ಆಕೆಯೇ ಒಪ್ಪಿ, ಬಯಸಿ ಬಂದಾಗಲೂ ಅವಳನ್ನು ದೈಹಿಕವಾಗಿ ಕೂಡದೆ ದೂರ ಬರುತ್ತಾರೆ. ಆದರೆ ಮಾನಸಿಕವಾಗಿ ಕೂಡುತ್ತಾರೆ. ಈ ರೀತಿ ಸತ್ವಪರೀಕ್ಷೆಯ ಮೂಸೆಯಲ್ಲಿ ಗೆದ್ದೆನೆಂದು ತಿಳಿದುಕೊಂಡು ತಮ್ಮ ಆದರ್ಶಗಳನ್ನು ಉಳಿಸಿಕೊಂಡರೂ ಪ್ರಜ್ಞಾರಹಿತ ಸ್ಥಿತಿಯಲ್ಲಿ ಮಾನವೀಯ ಪ್ರಕೃತಿ ಗೆದ್ದು ಅವರ ತತ್ವ ಸೋಲುತ್ತದೆ. ಮಾನವೀಯ ಪ್ರಕೃತಿಯ ಸಹಜ ಪರೀಕ್ಷೆಯಾಗುವುದು ಪ್ರಜ್ಞಾರಹಿತ ಸ್ಥಿತಿಯಲ್ಲಿ. ಶೋತ್ರಿಯವರು ಪ್ರಜ್ಞಾವಂತ ಪ್ರಪಂಚದಲ್ಲಿ ಕಾಮವನ್ನು ಒತ್ತಿ ಹಿಡಿದರೂ, ಪ್ರಜ್ಞಾ
ರಹಿತ ಪಾತಾಳದಲ್ಲಿ ಕಾಮದ ಅದಮ್ಯ ಶಕ್ತಿಗೂ ಮತ್ತು ತತ್ವನಿಷ್ಟೆ ಹಾಗೂ ಬೌದ್ಧಿಕ ಹಿಡಿತಕ್ಕೂ ಕಾಳಗ ನಡೆದೇ ಇರುತ್ತದೆ.

“ಗಂಡ ಬಲವಂತವಾಗಿ ತನ್ನನ್ನು ಮುಟ್ಟಲಾರನೆಂಬ ಧೈರ್ಯ ಸದಾ ಇದ್ದಿತಾದರೂ ಗಂಡನ ಮನಸ್ಸಿನಲ್ಲಿ ಆಗುತ್ತಿದ್ದ ಸಹಜ ವಿಕಾರಗಳನ್ನು ಆ ಗುರುತಿಸುತ್ತಿದ್ದಳು.” (ಪು. 198)

“ನಂಬಿದ್ದ ಜೀವನಾದರ್ಶಗಳಿಗೂ ಅದಮ್ಯ ಶಕ್ತಿಯ ಪ್ರಕೃತಿಗುಣಗಳಿಗೂ ಶ್ರೋತ್ರಿಯರ ವ್ಯಕ್ತಿತ್ವದಲ್ಲಿ ಹೋರಾಟ ನಡೆದೇ ಇತ್ತು. ಪ್ರಕೃತಿಯ ಹಿಡಿತದಿಂದ ಮುಕ್ತಿ ಹೊಂದದೆ ಮನುಷ್ಯನಿಗೆ ಬಿಡುಗಡೆ ಇಲ್ಲ ಎನ್ನುವುದನ್ನು ಅವರು ತಮ್ಮ ಅಧ್ಯಯನದ ಈ ವರ್ಷಗಳಲ್ಲಿ ತಿಳಿದುಕೊಂಡಿದ್ದರು. ಅವರ ತಿಳುವಳಿಕೆಯು ಈಗಿನ ವಾಸ್ತವ ಜೀವನದ ಅನುಷ್ಠಾನದಲ್ಲಿ ಬಂದು, ಪ್ರಕೃತಿಯ ಪ್ರಭಾವವನ್ನು ಗೆಲ್ಲಬೇಕಾಗಿತ್ತು. ಅದಕ್ಕಾಗಿ ತಮ್ಮ ಶಕ್ತಿಮೀರಿ ಹೆಣಗುತ್ತಿದ್ದರು.” (ಪು.201)

ಬಹು ದಿನಗಳಿಂದ ಒತ್ತಿ ಹಿಡಿದಿದ್ದ ಲೈಂಗಿಕ ತೃಷೆ ಪ್ರಜ್ಞಾರಹಿತ ಪಾತಾಳದಿಂದ ಎದ್ದು ತಮಗರಿವಿಲ್ಲದಂತೆ ಶ್ರೋತ್ರಿಯರ ವ್ಯಕ್ತಿತ್ವವನ್ನೇ ಅಲ್ಲಾಡಿಸಿಬಿಡುತ್ತದೆ.

“ಪ್ರಕೃತಿಯ ಮೂಲ ಶಕ್ತಿಯೆಲ್ಲವೂ ಈ ದಿನ ತನ್ನ ಹುಚ್ಚು ಸ್ವರೂಪವನ್ನು ತಾಳಿ ಅವರ ಮನೋರಂಗದಲ್ಲಿ ನರ್ತಿಸುತ್ತಿತ್ತು”. (ಪು. 205)

ಧರ್ಮದ ಕಟ್ಟುಪಾಡಿಗೆ ಒಳಪಟ್ಟ ಮನುಷ್ಯ ಪ್ರಜ್ಞಾವಸ್ಥೆಯಲ್ಲಿ ಏನನ್ನು ಬೇಕಾದರೂ ಉದ್ದೇಶಪೂರ್ವಕವಾಗಿ ತಡೆಹಿಡಿಯಬಹುದು. ಆದರೆ ಸುಪ್ತಚೇತನದಲ್ಲಿ ನಡೆಯುವ ಕ್ರಿಯೆ ನಿಜವಾದುದು, ಪ್ರಕೃತಿದತ್ತವಾದುದು. ಅದು ನಿಜವಾದ ಒರೆಗಲ್ಲು, ಈ ರೀತಿ “ಪ್ರಕೃತಿಯ ಮೂಲಶಕ್ತಿಯ” ಹಿಡಿತಕ್ಕೆ ಸಿಕ್ಕಿದ ಶ್ರೋತ್ರಿಯರು ಮಾನಸಿಕವಾಗಿ ಲಕ್ಷಿಯ ಜೊತೆ ಸಂಭೋಗ ನಡೆಸುತ್ತಾರೆ.

“ಅವಳ ಸರ್ವಾಂಗಗಳನ್ನು ನಗ್ನವಾಗಿ ಚಿತ್ರಿಸಿಕೊಂಡು ಕಲ್ಪನೆಯು ವಿವರ ವಿವರವಾಗಿ ಆ ಶರೀರದೊಡನೆ ಭೋಗವನ್ನು ಪ್ರಾರಂಭಿಸಿತ್ತು. ಸುಮಾರು ಹತ್ತು ನಿಮಿಷ ಮನಸ್ಸು ವಿವೇಕವು ಪ್ರಜ್ಞೆಯ ಕೈಯಲ್ಲಿರಲಿಲ್ಲ. ಪುನಃ ಅವರು ಬೆವತರು”. (ಪು. 207)

ಕೊನೆಯ ವಾಕ್ಯ “ಅವರು ಬೆವತರು” ಎನ್ನುವುದು ಲೈಂಗಿಕ ಕ್ರಿಯೆಯಾದ ಮೇಲೆ ಗಂಡಸಿನ ಸ್ಥಿತಿಯನ್ನು ಸೂಚಿಸುತ್ತದೆ. ಈ ರೀತಿ ಪ್ರಜ್ಞಾರಹಿತ ಸ್ಥಿತಿಯಲ್ಲಿ, ಕಾದಂಬರಿಯಲ್ಲೇ ಒಂದು ಬಾರಿ ಮಾನವೀಯ ಮಟ್ಟದಲ್ಲಿ ಶ್ರೋತ್ರಿಗಳು ಲಕ್ಷ್ಮಿಯನ್ನು ಮಾನಸಿಕವಾಗಿ ಭೋಗಿಸುತ್ತಾರೆ. ಆದರೆ ಇವರು ತತ್ವನಿಷ್ಟ್ರರಾದುದರಿಂದ ತತ್ವದ ಕೈಗೊಂಬೆಯಾದುದರಿಂದ ದೈಹಿಕವಾಗಿ ಆಕೆಯನ್ನು ಕೂಡುವುದಿಲ್ಲ. ಇದು ಕಾದಂಬರಿಯಲ್ಲಿ ಮತ್ತು ಶ್ರೋತ್ರಿಯರ ವ್ಯಕ್ತಿತ್ವದಲ್ಲಿ ಇರುವ ಬಿರುಕು. `ಇದು ಶ್ರೋತ್ರಿಯರ ವ್ಯಕ್ತಿತ್ವದ ಮಿತಿಯಲ್ಲೇ ಆಗುವುದಿಲ್ಲ. ಭೈರಪ್ಪನವರು ತಮ್ಮ ತತ್ವ ಪ್ರತಿಪಾದನೆಗೆ ಉಪಯೋಗಿಸುವ ಕ್ರಿಯೆಯಲ್ಲಿ ಆಗುವ ಕೆಲಸ. ಹೀಗೆ ಕಾದಂಬರಿಯಲ್ಲಿ ಬಿರುಕುಂಟಾಗಿ ಕಲಾತ್ಮಕವಾಗಿ ಸೋಲುತ್ತದೆ. ಇದರ ಜೊತೆಗೆ ಅವರಿಬ್ಬರ ಸಮಾಗಮದಿಂದ ಇಬ್ಬರು ವ್ಯಕ್ತಿಗಳಿಗೂ ಸಿಗಬಹುದಿದ್ದ ಅನುಭವದ ವಿಸ್ತಾರವನ್ನೇ ಮೊಟಕುಗೊಳಿಸಿ ಕಾದಂಬರಿಯನ್ನು ಮತ್ತಷ್ಟು ಸುಲಭ ಮಾಡಿಕೊಳ್ಳುತ್ತಾರೆ.

ಮಾನವೀಯ ಪ್ರಕೃತಿ ಇವರಿಗೆ ಮುಖ್ಯವಲ್ಲವಾದುದರಿಂದ ಬದುಕಿನ ನಿರ್ಣಾಯಕ ಘಳಿಗೆಗಳಲ್ಲೆಲ್ಲ ಇವರು ಸೋಲುತ್ತಾ ಹೋಗುತ್ತಾರೆ-
ಹೆಂಡತಿ, ಲಕ್ಷ್ಮಿ ಮತ್ತು ಕಾತ್ಯಾಯಿನಿಗೆ ಎರಡು ಬಾರಿ ನಿಖರವಾಗಿ ಉತ್ತರ ಹೇಳುವಲ್ಲಿ-ಇದೇ ಅವರ ಬದುಕಿನ ದುರಂತ. ಇದನ್ನು ಗಿರಡ್ಡಿ ಗೋವಿಂದರಾಜರು “ಮೂಲಭೂತವಾದ ಅವರ ಆದರ್ಶಗಳ ಬದುಕಿನ ಎಲ್ಲ ಸಂಕೀರ್ಣ ಸಮಸ್ಯೆಗಳಿಗೆ ಉತ್ತರ ಕೊಡಲು ಅಸಮರ್ಥವಾಗುವುದನ್ನು ಶ್ರೋತ್ರಿಯರ ಬದುಕಿನ ದುರಂತ ಎತ್ತಿ ತೋರಿಸುತ್ತದೆ. ಇಂಥ ಪ್ರಸಂಗದಲ್ಲಿ ಶ್ರೋತ್ರಿಯರು ತಮ್ಮ ಮೌಲ್ಯಗಳ ವಿಷಯವಾಗಿ ಏಳುವ ಆಹ್ವಾನವನ್ನು ಎದುರಿಸದೆ ತಪ್ಪಿಸಿಕೊಳ್ಳುತ್ತಾರೆ. ಆದರೆ ಇದು ಬದುಕಿನ ಬಗ್ಗೆ ಹೋರಾಟ ನಡೆಸಿ ಸಂಕೀರ್ಣತೆಯ ಪರಾಕಾಷ್ಠತೆಯನ್ನು ಒಪ್ಪಿಕೊಳ್ಳುವ ದುರಂತವಲ್ಲ. ಸಿದ್ಧಾಂತಗಳನ್ನೊಪ್ಪಿಕೊಂಡೆ ಬದುಕನ್ನಾರಂಭಿಸಲು ಹೊರಡುವ ದುರಂತ. ಇದನ್ನು ಮತ್ತೆ ಕೆಲವು ವಿಮರ್ಶಕರು ಉದಾಹರಣೆಗೆ ಜಾಲೀಹಾಳರು (ವಂಶವೃಕ್ಷ ಮತ್ತು ಸಂಸ್ಕಾರ) ಶ್ರೋತ್ರಿಯವರ ವ್ಯಕ್ತಿತ್ವ ಬೆಳೆಯುವುದಿಲ್ಲ ಎಂದು ವಿವರಿಸಿದ್ದಾರೆ. ಅವರ ಪಾತ್ರ ಚಪ್ಪಟೆಯೆನೋ ನಿಜ; ಏಕೆಂದರೆ ಅವರನ್ನು ಚಪ್ಪಟೆಯಾಗಿ ಸೃಷ್ಟಿ ಮಾಡಿಕೊಳ್ಳಲಾಗಿದೆ. ಆರಂಭದಲ್ಲೇ ನಮಗೆ ಗೊತ್ತು ಶ್ರೋತ್ರಿಯರು ಹಳೆಯ ಪರಂಪರೆಯನ್ನು ಬಿಟ್ಟು ಹೊಸದನ್ನೊಪ್ಪಿಕೊಳ್ಳಲಾರರೆಂದು ಊರಿನವರೆಲ್ಲ ತಮಗಾದ ಹಾನಿಯಿಂದ ಪ್ರವಾಹ ತಂದ ನದಿಯನ್ನು ನಿಂದಿಸಿದರೂ ತಾವು ಮಾತ್ರ “ಗಂಗೇಚ ಯಮುನೇ ಚೈವ” ಎಂದು ಹೇಳಿಕೊಂಡು ಮನೆಯ ಹತ್ತಿರವೇ ಮುಳುಗು ಹಾಕುತ್ತಾರೆ, ಮನೆ ಬಿಡಬೇಕೆಂದು ಎಲ್ಲರೂ ಒತ್ತಾಯಿಸಿದಾಗ

“ಇಷ್ಟು ವರ್ಷ ನಮ್ಮನ್ನು ಕಾಪಾಡಿದ ತಾಯಿ ಈಗ ಸ್ವಲ್ಪ ಉಗ್ರರೂಪದಲ್ಲಿ ಕಾಣಿಸಿಕೊಂಡಿದ್ದಾಳೆ ಅಂತ ಓಡಿಹೋಗಿಬಿಡೋದೆ? ಮಹಡಿ ಮೇಲೆ ಒಲೆ ಹತ್ತಿಸಿ ಅಡಿಗೆ ಮಾಡಿ’ ಎಂದು ಹೇಳಿದರು” (ಪು. 2)

ಆರಂಭದಿಂದಲೂ ಸ್ಥಿತಪ್ರಜ್ಞರು, ನಿರ್ಲಿಪ್ತರು: “ನಿರ್ಲಿಪ್ತ, ಜೀವನವನ್ನು ಮೊದಲಿನಿಂದಲೇ ಬೆಳೆಸಿಕೊಂಡು ಬಂದಿದ್ದರು” (ಪು. 56) ಏಕೈಕ ಪುತ್ರನ ಸಾವನ್ನು ಯಾವ ಚಿತ್ತವಿಕಾರಕ್ಕೂ ಎದೆಕೊಡದೆ ಸಹಿಸಬಲ್ಲರು.

“ಮಗು ಇಂಥಾ ಕಾಲದಲ್ಲಿ ನಾವು ಧೈರ್ಯ ತಂದುಕೊಳ್ಳಬೇಕು. ಪರಮಾತ್ಮ ನಮ್ಮನ್ನು ಪರೀಕ್ಷೆ ಮಾಡೋಕ ಹೀಗೆ ಮಾಡ್ತಾನೆ” ‘ ಅಂದರು” (ಪ. 49)
ಡಾ. ರಾಯರಿಗೆ ಅದನ್ನು ತಿಳಿಸಿದಾಗಲೂ ವಸ್ತುನಿಷ್ಠರಾಗಿರಬಲ್ಲರು.

“ಇಲ್ಲ ನಿಮ್ಮ ಶಿಷ್ಯನನ್ನು ಕಪಿಲೆ ತಗೊಂಡುಬಿಟ್ಟಳು. ಹೋದ ಜ್ಯೇಷ್ಠದಲ್ಲಿ ಕಾಲು ಜಾರಿ ಬಿದ್ದು ಬಿಟ್ಟ. ಮತ್ತೆ ದಡ ಸೇರಲಿಲ್ಲ’ ” (ಪು. 10)

ಈ ರೀತಿಯ ಮಾನವ-ಸಹಜ ದೌರ್ಬಲ್ಯಾತೀತ ವ್ಯಕ್ತಿಯನ್ನು ಆರಂಭದಲ್ಲಿ ಸೃಷ್ಟಿಸಿಕೊಂಡು ಹೊರಟ ಕಾದಂಬರಿಕಾರರ ಉದ್ದೇಶ ಬದುಕಿನ ಚಿತ್ರಣವಲ್ಲ, ವ್ಯಕ್ತಿ ಪರೀಕ್ಷೆಯಲೂ ಅಲ್ಲ. ಅಥವಾ ತತ್ವದ ಆಂತರಿಕ ಸತ್ವ ಪರೀಕ್ಷೆಯೂ ಅಲ್ಲ. ತತ್ವದ ಹಿರಿಮೆಯ ಸಾರಿಕೆ. ಆದುದರಿಂದ ಜಾಲೀಹಾಳರಂತೆ ಶ್ರೋತ್ರಿಯರು ಬೆಳೆಯುತ್ತಾರೋ, ಕುಗ್ಗುತ್ತಾರೋ, ಚಪ್ಪಟೆಯೋ, ದುಂಡೋ ಎಂದು ಶೋಧಿಸುವುದಕ್ಕಿಂತ ಈ ಸ್ವರದ ವ್ಯಕ್ತಿಪ್ರಜ್ಞೆಯ ಮೂಲಕ ಬದುಕಿನ ಸಾಧ್ಯತೆಯ ಸಂಕೀರ್ಣತೆಯನ್ನು ಸರಳಗೊಳಿಸುವುದರ ಅಪಾಯದತ್ತ ಗಮನಹರಿಸುವುದು ಹೆಚ್ಚು ಸೂಕ್ತ.

ಕಾದಂಬರಿಕಾರರ ಅನುಕಂಪ ಮೊದಲಿನಿಂದ ಕೊನೆಯವರೆಗೂ ಶ್ರೋತ್ರಿಯವರ ಮೇಲೆ ಇರುವುದರಿಂದ, ಶ್ರೋತ್ರಿಯವರ ಜೀವನ ದೃಷ್ಟಿಯೊಂದಿಗೆ ಅವರ ದೃಷ್ಟಿಯಲ್ಲೂ ಬೆರೆತುಕೊಂಡಿರುವುದರಿಂದ ಇದೊಂದು ಕಲಾಕೃತಿಯಾಗದ ತತ್ವ ಪ್ರತಿಪಾದನಾ ಗ್ರಂಥವಾಗುತ್ತದೆ; ಶ್ರೋತ್ರಿಯರು ಬದುಕಿನಲ್ಲಿ ಸೋಲುವುದಕ್ಕೆ ತಾತ್ವಿಕ ಆದರ್ಶವೇ ಕಾರಣ.

“ಸಹಜ ಧರ್ಮವೆನ್ನುವುದೇ ಧರ್ಮವಲ್ಲ’-ಅವರು ಆ ಸ್ಥಿತಿಯಲ್ಲೂ ನಕ್ಕು ಹೇಳಿದರು. `ಸಂಸಾರವನುಭವಿಸುವುದೇ ಜೀವನದ ಪರಮ ಗುರಿಯಲ್ಲ. ವಂಶೋತ್ಪತ್ತಿಗಾಗಿ ಗೃಹಜೀವನ. ವಂಶ ಬೆಳೆದ ಮೇಲೆ ಆಕಸ್ಮಾತ್ ಗೃಹ ನಷ್ಟವಾದರೆ ಪುನಃ ಅದಕ್ಕೆ ತಿರುಗಿಹೋಗುವುದು ಧರ್ಮವಲ್ಲ” (ಪು. 188)

ಇದು ಶತ್ರಿಯವರು ಎರಡನೆ ಮದುವೆಯಾಗಲು ಅಪ್ಪಣೆ ಕೇಳುವ ಕಾತ್ಯಾಯಿನಿಗೆ ಹೇಳುವ ಉತ್ತರವಾದರೆ ಭೈರಪ್ಪನವರು ಅವರ ವ್ಯಕ್ತಿತ್ವವನ್ನು ಕಾದಂಬರಿಯ ಆರಂಭದಲ್ಲಿ ಈ ರೀತಿ ಚಿತ್ರಿಸುತ್ತಾರೆ.

“ಶ್ರೋತ್ರಿಯರು ಸನಾತನ ಧರ್ಮವನ್ನು ಜೀವಿಸುತ್ತಿದ್ದರು. ಅವರ ಪರಿಪೂರ್ಣ ವಿಶ್ವಾಸದ ಪ್ರಕಾರ ಮನುಷ್ಯನ ಮದುವೆಯಾಗುವುದು ಗೃಹಸ್ಥ ಧರ್ಮಕ್ಕಾಗಿ, ಗೃಹಸ್ಥನಾಗುವುದು ಈ ಲೋಕದಲ್ಲಿ ತನ್ನ ಕರ್ತವ್ಯಗಳನ್ನು ಪೂರೈಸುವುದಕ್ಕಾಗಿ, ನಂತರ ಮಕ್ಕಳಾಗುವುದು ವಂಶವೃಕ್ಷದ ಕೊನೆ ಮುಂದುವರಿಯುವುದಕ್ಕಾಗಿ ; ಸಂತಾನವಿಲ್ಲದೆ ಸಾಯುವ ಮನುಷ್ಯ ವಂಶವೃಕ್ಷದ ಕೊನೆಯ ಮಗನಾಗಿ ತನ್ನಿಂದೆ ಮುಂದೆ ಬರಿ: ಶೂನ್ಯವನ್ನು ಬಿಟ್ಟು ಸಾಯಬೇಕು. ಪಿತೃಗಳಿಂದ ಪಡೆದ ಈ ಜೀವವು ಪಿತೃ-ಋಣ ತೀರಿಸುವುದು ತನ್ನ ಸಂತಾನದ ಮೂಲಕವೇ? (ಪು. 55)

ಈ ರೀತಿ ಭೈರಪ್ಪನವರು ತಮ್ಮ ತತ್ವಗಳನ್ನ ಮೊದಲಿನಿಂದಲೂ ವ್ಯಕ್ತಿಗಳ ಮೂಲಕ ಇಡುತ್ತಾ ಹೋಗುತ್ತಾರೆ. ಕಾದಂಬರಿಯಲ್ಲಿ ಇದಕ್ಕೆ ಇನ್ನೊಂದು ಉದಾಹರಣೆಯಿದೆ. ಅದು ರಾಜಾರಾಯರು ಬರೆಯುವ (The Primordial) ಮೂಲತತ್ವ ನಾಟಕ. “ನಾಟಕದಲ್ಲಿ ಚಿರನೂತನಳೂ ಚಿರಚೇತನಳೂ ಆದ ಪ್ರಕೃತಿಗೆ ಕೃತಕ ಧರ್ಮದ ಕೆಟ್ಟು ಹಾಕುವುದು ಅಧರ್ಮ”, “ಪ್ರಕೃತಿ ಚಿರಯೌವನೆ; ಅವಳ ಸುಂದರ ಸ್ವರೂಪವನ್ನು ತುಳಿಯಲೆತ್ನಿಸುವ ಧರ್ಮವು ತನಗೆ ತಾನೆ ನಾಶವಾಗುತ್ತದೆ” ಎಂಬುದನ್ನು ದೇವರು ವಾದದಲ್ಲಿ ಗೆಲ್ಲಲಾರದವನಾಗುತ್ತಾನಾದರೂ, ರಂಗಮಂಟಪದ ಮೇಲೆ ಪ್ರಕೃತಿ ಪುರುಷರ ಮದುವೆ ನಡೆಯುತ್ತದೆಯಾದರೂ (ರಾಜಾರಾಯ ಕಾತ್ಯಾಯಿನಿಯರ) ನೈಜ ಜೀವನದಲ್ಲಿ ಅಂತಹ ಮದುವೆ ಒಂದು ಭಯಂಕರ ಅಪಘಾತವಾಗುತ್ತದೆ. ಆದುದರಿಂದ ಇಡೀ ನಾಟಕವನ್ನು ಇಲ್ಲಿ ವ್ಯಂಗ್ಯವಾಗಿ ಬಳಸಿಕೊಳ್ಳಲಾಗಿದೆ. ಮತ್ತು ಇದು ಶ್ರೋತ್ರಿಯರ ನಂಬುಗೆಯನ್ನೇ ಎತ್ತಿ ಹಿಡಿಯುತ್ತದೆ. ಆದುದರಿಂದ ಕಾದಂಬರಿಯ ಮೂಲಕ ಕಾದಂಬರಿಕಾರರು ಒಂದು ತತ್ವವನ್ನು ಪ್ರತಿಪಾದಿಸುತ್ತಿರುವುದು ಸ್ಪಷ್ಟವಾಗುತ್ತದೆ. ಶ್ರೋತ್ರಿಯವರನ್ನು ತಮ್ಮ ತಾತ್ವಿಕ ನಂಬುಗೆಗಳ ಪ್ರತಿನಿಧಿಯಾಗಿ ಬಳಸಿಕೊಂಡಿದ್ದಾರೆ. ಇದಕ್ಕಾಗಿಯ ಕಾದಂಬರಿಯಲ್ಲಿ ಶ್ರೋತ್ರಿಯರಿಗೆ ವ್ಯಕ್ತಿ ಸ್ವಾತಂತ್ರ್ಯವಿಲ್ಲ-ಕಾದಂಬರಿಕಾರರು ದಯಪಾಲಿಸುವುದಿಲ್ಲ.

ರಾಜಾರಾಯ ಮತ್ತು ಕಾತ್ಯಾಯಿನಿಯರ ಮೂಲಕವೂ ಇದನ್ನೇ ಪ್ರತಿಪಾದಿಸುತ್ತಾರೆ. ಕಾತ್ಯಾಯಿನಿ ವ್ಯಕ್ತಿಸ್ವಾತಂತ್ರ್ಯ ಪಡೆದವಳು.

“ನಿಮ್ಮ ಮತ್ತು ನನ್ನ ಜೀವನದೃಷ್ಟಿಯೇ ಬೇರೆ. ವಂಶಕ್ಕಾಗಿ ವ್ಯಕ್ತಿ ಎಂದು ನೀವು ಭಾವಿಸಿದರೆ, ವ್ಯಕ್ತಿಯ ಜೀವನಕ್ಕೆ ನಾನು ಅತ್ಯಂತ ಮಹತ್ವ ಕೊಡುತ್ತೀನಿ” (ಪ. 254)

ಆದುದರಿಂದ ಆಕೆ ಪ್ರಕ್ರತಿಸಹಜವಾದ ದೈಹಿಕ ಒತ್ತಡದ ಗೌರವಕ್ಕೆ ತಲೆಬಾಗಿ ಮದುವೆಯಾಗುತ್ತಾಳೆ. ಗಂಡನನ್ನು ಕಳೆದುಕೊಂಡಾಗಿನಿಂದಲೂ ಅವಳ ದೇಹದಲ್ಲಿ ಕಾಮದ ತುಡಿತ ಹಿಂಸಿಸುತ್ತಲೆ ಇರುತ್ತದೆ.

“ನಿದ್ರೆಯಲ್ಲಿ ನೀಳವಾಗಿ ಉಸಿರಾಡತಾ ಪಕ್ಷದಲ್ಲಿ ನಿದ್ರಿಸುವ ಮಗುವನ್ನು ತಬ್ಬಿಕೊಂಡು ಮಲಗಿರುವ ಕಾತ್ಯಾಯಿನಿಗೆ, ತನ್ನ ಪಾಲಿಗೆ ಮುಕ್ತಾಯವಾದ ಸೌಭಾಗ್ಯಜೀವನದ ನೆನಪು ಬರುವುದು.”

“ರಾತ್ರಿ ಮಗುವನ್ನು ಮಲಗಿಸಿಕೊಂಡು ಮಲಗಿದ್ದಾಗ ಅವಳಿಗೆ ತನ್ನ ಸೌಭಾಗ್ಯ ಜೀವನದ ನೆನಪು ಬರುವುದು, ಪತಿಯಿದ್ದಾಗ ಅವನೊಡನೆ ಆಡುತ್ತಿದ್ದ ಸರಸ ಸಲ್ಲಾಪ, ಭೋಗ ಜೀವನ…………..ಅವಳ ಸ್ಮೃತಿಯಲ್ಲಿ ಮರಳಿ ಬರುವುದು…” (ಪು. 42)

ರಾಜಾರಾಯರಿಗೆ ಮಾತು ಕೊಟ್ಟು ಬಂದು “ಮನಸ್ಸು ವಿರುದ್ಧ ಗತಿಯಲ್ಲಿ ತಿರುಗಿದಾಗ

“ಈ ಪರೀಕ್ಷೆಯ ಓದು ವಂಂಗಿದ ಮೇಲೆ ಅವರ ಕೈಲಿ ಭಗವದ್ಗೀತೆ ಉಪನಿಷತ್ತುಗಳನ್ನು ಹೇಳಿಸಿಕೊಂಡು ದಿನವೂ ಶ್ರದ್ದೆಯಿಂದ ಅಧ್ಯಯನ ಮಾಡಬೇಕು’ ಎಂದು ತನ್ನಲ್ಲಿ ತಾನೇ ನಿರ್ಧರಿಸಿಕೊಂಡಳು” (ಪು. 153-4)

ಈ ನಿರ್ಧಾರವೂ ಕಾಮದ ತುಡಿತದ ವಿರುದ್ಧ ಹೋರಾಟದ ಕುರುಹು. ರಾಜಾರಾಯನೂ ಸಹ ಕಾಮವನ್ನು ನಿಗ್ರಹಿಸಲಾರ.

“ಆದರೆ ಮತ್ತೆ ಎರಡು ದಿನಗಳಲ್ಲಿ ಅವನ ನಿರ್ಧಾರ ವಿಚಲಿತವಾಯಿತು. ತನ್ನ ಪ್ರಕೃತಿಗುಣದ ಮೇಲೆ ತನಗೇ ನಂಬಿಕೆ ತಪ್ಪಿತು. ಬ್ರಹ್ಮಚರ್ಯೆಯು ತನಗೆ ಅಸಾಧ್ಯವೆಂದು ನಿರ್ಧರಿಸಿ ಅತ್ಯಂತ ಕಷ್ಟದಿಂದ ಕೊನೆಯ ನಿರ್ಣಯವನ್ನು ಕೈಕೊಂಡ.” (ಪು. 202)

ಹೀಗೆ ಇಂದ್ರಿಯ ಬಯಕೆಯನ್ನು ಅಪ್ರಕೃತವಾಗಿ ನಿಗ್ರಹಿಸಲಾರದೆ ಮದುವೆಯಾಗುವ ಇವರ ಬದುಕು ಒಂದು ದುರಂತ. (ಇಲ್ಲಿ ಮತ್ತೊಂದನ್ನು ನಾವು ಗಮನಿಸಬೇಕು. ಶ್ರೋತ್ರಿಯವರು ತಮ್ಮ ಮೇಲೆ ತಾವು ಹೇರಿಕೊಂಡ ಲೈಂಗಿಕ ನಿರ್ಬಂಧದ ದೈಹಿಕ ಪರಿಣಾಮವೇನು ಎಂಬುದನ್ನು ಮೊಟಕುಮಾಡಿ ಭೈರಪ್ಪನವರ ಕಾದಂಬರಿಯನ್ನು ಮತ್ತೂ ಸರಳ ಮಾಡಿಕೊಳ್ಳುತ್ತಾರೆ). ಈ ಮದುವೆಯ ದುರಂತವನ್ನು ಆಕೆಯಲ್ಲಿ ಉಂಟಾದ ಪಾಪಭೀತಿಯ ಮಾನಸಿಕ ಪರಿಣಾಮಕ್ಕಾಗಿ ಎಂದು ತಪ್ಪು ಗ್ರಹಿಸಲಾಗಿದೆ. ಕೆ. ವಿ. ನಾರಾಯಣ್‌ ಎಂಬುವರೊಬ್ಬರು “ಕಾತ್ಯಾಯಿನಿಯು ಕೊನೆಯವರೆಗೂ ತನ್ನ ಪುನರ್ವಿವಾಹದ ಬಗ್ಗೆ ಒಂದು ಬಗೆಯ ಅಪರಾಧಿ-ಮನೋವೃತ್ತಿಯನ್ನು, ಒಂದು ಬಗೆಯ ಪಾಪಪ್ರಜ್ಞೆಯನ್ನು ತನ್ನ ಸುಪ್ತ ಮನಸ್ಸಿನಲ್ಲಿ ಉಳಿಸಿಕೊಂಡು ಮತ್ತು ಬೆಳೆಸಿಕೊಂಡು ಹೋಗುತ್ತಾಳೆ, ಮತ್ತು ಆ ಪಾಪ-ಪ್ರಜ್ಞೆಯೇ ಅವಳ ಗರ್ಭಪಾತಗಳಿಗೆ ಮತ್ತು ಅವಳ ಅಸ್ವಸ್ಥತೆ ಮತ್ತು ಸಾವಿಗೆ ಕಾರಣವಾಗುತ್ತದೆ” ಎಂದು (ಸಂಕೀರ್ಣ-2) ಬರೆದಿದ್ದಾರೆ. ಓದುಗರು ಗರ್ಭಸ್ರಾವಗಳ ಹಿನ್ನೆಲೆಯನ್ನು ಪರೀಕ್ಷಿಸಿದರೆ ಅದು ಯಾವ ಮಾನಸಿಕ ರೋಗದ ಪರಿಣಾಮವೂ ಅಲ್ಲ. ಶ್ರೋತ್ರಿಯರ ಧರ್ಮದ ವಿರುದ್ದ ಮದುವೆಯಾದುದರ ಪರಿಣಾಮ ಎಂದು ತಿಳಿಯುತ್ತದೆ. ಮೊದಲನೆ ಗರ್ಭಸ್ರಾವದ ವಿವರಣೆ ಹೀಗೆ ಆರಂಭವಾಗುತ್ತದೆ.

“ಕಾತ್ಯಾಯಿನಿ ಆರೋಗ್ಯವಾಗಿಯೆ ಇದ್ದಳು, ಇನ್ನೂ ಆರನೇ ತಿಂಗಳು ನಡೆಯುತ್ತಿತ್ತು….. (ಪು. 289)
ಎರಡನೆಯದು
“ಕಾತ್ಯಾಯಿನಿ ಮತ್ತೊಮ್ಮೆ ಗರ್ಭಿಣಿಯಾದಳು. ಈ ಸಲವೂ ಮೂರನೇ ತಿಂಗಳಲ್ಲಿ ಗರ್ಭಸ್ರಾವವಾಯಿತು” (ಪು. 288)
ಮತ್ತು ಮೂರನೆಯದು
“ಅಷ್ಟರಲ್ಲಿ ಅವಳು ಪುನಃ ತಾಯಿಯಾಗುವ ಸೂಚನೆಗಳು ಕಂಡುಬಂದವು. …..ಲೇಡಿ ಡಾಕ್ಟರು ಕಾತ್ಯಾಯಿನಿಯನ್ನು ಪರೀಕ್ಷಿಸಿದರು……… ಮೈಯ್ಯಲ್ಲಿ ಕಾಣಿಸಿದ ನಿಶ್ಯಕ್ತಿ ಆಲಸಿಕೆಗಳನ್ನು ಬಿಟ್ಟರೆ ಆರೋಗ್ಯವಾಗಿಯೇ ಇದ್ದಳು” (ಪು. 293)

ನಂತರ ಯಥಾರೀತಿ ಗರ್ಭಸ್ರಾವವಾಗುತ್ತದೆ. ಇವೆಲ್ಲವೂ ಆದಮೇಲೆ ಅಪಾರ ವೇದನೆಯನ್ನನುಭವಿಸಿದ ಕಾತ್ಯಾಯಿನಿ:

“ತಾನೊಬ್ಬಳೇ ಮಲಗಿರುವಾಗ, ಮತ್ತು ರಾತ್ರಿಯ ವೇಳೆ ನಿದ್ರೆ ಬಾರದಿದ್ದಾಗ ಅವಳ ಮನಸ್ಸು ಗಾಢವಾದ ಆಲೋಚನೆಯಲ್ಲಿ ಮುಳುಗಿಹೋಗುತ್ತದೆ. ಮೂರು ಸಲವೂ ತನಗೆ ಹೀಗಾದುದರ ಕಾರಣವನ್ನು ಮನಸ್ಸು ವಿವೇಚಿಸುತ್ತದೆ. ಈ ಸಲ ಅವರು, ಮನುಷ್ಯ ಪ್ರಯತ್ನದಲ್ಲಿ ಸಾಧ್ಯವಿದ್ದ ಎಲ್ಲಾ ಎಚ್ಚರಿಕೆಯನ್ನೂ ತೆಗೆದುಕೊಂಡಿದ್ದರು, ತಜ್ಞರಾದ ಲೇಡಿ ಡಾಕ್ಟರರೇ ಪರೀಕ್ಷಿಸುತ್ತಿದ್ದರು. ಚೀನಿ ಹುಟ್ಟಿದಾಗ ಇಂತಹ ಯಾವ ವೈದ್ಯಕೀಯ ಸೌಲಭ್ಯವೂ ಇರಲಿಲ್ಲ. ಭಾಗೀರಥಮ್ಮ ಐದನೇ ತಿಂಗಳಲ್ಲಿ ಅವರಿಗೆ ಗೊತ್ತಿದ್ದ ಯಾವುದೂ ಔಷಧಿಯನ್ನು ತಿರುವಿ ಸೋಸಿ ಕುಡಿಸಿದ್ದರು. ಮನೆಯಲ್ಲಿ ದಿನವೂ ತಿನ್ನುವ ಊಟ ತಿಂಡಿಗಳ ಮೇಲೆ ಸ್ವಲ್ಪ ಹೆಚ್ಚಾಗಿ ಹಾಲು, ತುಪ್ಪ ಹಾಕುತ್ತಿದ್ದರು. ಉಳಿದ ಯಾವ ಟಾನಿಕ್ಕುಗಳೂ ಇರಲಿಲ್ಲ. ಆದರೂ ಚೀನಿಯ ಹೆರಿಗೆ ಸುಸೂತ್ರವೂ ಫಲಪ್ರದವೂ ಆಯಿತು. ಇವು ಮೂರೂ ಯಾಕೆ ಹೀಗಾದವು ? ಆಸ್ಪತ್ರೆಯ ದೊಡ್ಡ ಡಾಕ್ಟರು ರಾಜನ ಸಂಗಡ ಹೇಳಿದ್ದ ಸಂಗತಿಯನ್ನು ಅವನು ಈಗ ಎರಡು ದಿನಗಳಲ್ಲಿ ತಾನೇ ಅವಳಿಗೆ ತಿಳಿಸಿದ್ದ. ಇನ್ನು ಮುಂದೆ ತಾನು ಗರ್ಭವತಿಯಾದರೂ ಹೀಗಾಗುವ ಸಂದರ್ಭವೇ ಹೆಚ್ಚು … ಮತ್ತೆ ಹೀಗಾದರೆ ಖಂಡಿತ ತನ್ನ ಪ್ರಾಣ ಉಳಿಯುವುದಿಲ್ಲ.

ಇವೆಲ್ಲದರ ಅರ್ಥವೇನು ? ಕಾರಣವೇನು ?..

ಚೀನಿಯನ್ನು ಕೇಳಲು ನಂಜನಗೂಡಿಗೆ ಹೋಗಿದ್ದಾಗ ಶ್ರೋತ್ರಿಯರು ಹೇಳಿದ್ದ ಮಾತು ಈಗಲೂ ಸ್ಪಷ್ಟವಾಗಿ ಅವಳ ನೆನಪಿನಲ್ಲಿತ್ತು. `ಒಂದು ವಂಶದ ಬೀಜವು ಮುಂದುವರಿಯುವುದಕ್ಕಾಗಿಯೇ ಒಂದು ಕ್ಷೇತ್ರವನ್ನು ಬೇರೊಂದು ವಂಶದವರು ದಾನ ಮಾಡುತ್ತಾರೆ. ಆ ವಂಶದ ಬೀಜವನ್ನು ತನ್ನಲ್ಲಿ ಬೆಳಸಿ ವೃಕ್ಷವನ್ನಾಗಿ ಮಾಡಿದ ಮೇಲೆ ಆ ಕ್ಷೇತ್ರವು ತನ್ನ ಸಾರ್ಥಕ್ಯವನ್ನು ಪಡೆಯಿತು.’ ಅವಳು ಶ್ರೋತ್ರಿಯ ವಂಶದ ಬೀಜವನ್ನು ತನ್ನ ಉದರದಲ್ಲಿ ಮೊಳೆಸಿ ಆ ವಂಶವೃಕ್ಷದ ಮತ್ತೊಂದು ಕೊನೆಯನ್ನು ಚಿಗುರಿಸಿದ್ದಳು. ತನ್ನ ಸ್ತ್ರೀತನದ ಸಾರ್ಥಕತೆಯೂ ಅಲ್ಲಿಗೆ ಪೂರ್ಣವಾಗಿ ಮುಕ್ತಾಯವಾಯಿತೇ? ಹೊಸ ವಂಶವೊಂದರ ತಾಯಿಯಾಗುವ ಶಕ್ತಿ ತನಗಿಲ್ಲವೇ ?” (ಪು. 298-99)

ಪಾಪ ಭೀತಿಯ ಸಂಚನೆ, ಶ್ರೋತ್ರಿಯವರ ವಾದದ ಮರುಕಳಿಕೆ ಅಲ್ಲಲ್ಲಿ ಬಂದರೂ ಮೂರು ಸಾರಿ ಗರ್ಭಸ್ರಾವ ಮಾಡಿಸುವಷ್ಟು ಮಟ್ಟದಲ್ಲಿ ಮಾನಸಿಕ ವಿಕಾರಕ್ಕೆ ಎಡೆ ಕೊಡುವಷ್ಟು ಪ್ರಬಲವಾಗಿಲ್ಲ. ಕಾದಂಬರಿಯ ಘಟನೆಗಳು ನಡೆಯುವ ಕಾರಣ, ಅದನ್ನು ನಿರೂಪಿಸಿರುವ ಭಾಷೆ, ಧೋರಣೆ ಮತ್ತು ಧ್ವನಿ ಎಲ್ಲವೂ ಕಾತ್ಯಾಯಿನಿಯ ದೈಹಿಕ ಹಿಂಸೆ, ಆಕೆಯ ಮೇಲೆ ನಡೆಯುವ ದೈಹಿಕ ಕ್ರೌರ್ಯ ಯಾವುದೂ ಆಕೆಯ ಮಾನಸಿಕ ವೇದನೆಯ ಫಲವಲ್ಲ. ಶ್ರೋತ್ರಿಯರ ಧಾರ್ಮಿಕ-ತಾತ್ವಿಕ ನಿಲುವನ್ನು ವಿರೋಧಿಸಿದುದರ ಪ್ರತಿಫಲ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ. ಭೈರಪ್ಪನವರು ಕಲೆಯನ್ನು ಬಲಿಕೊಟ್ಟು ತತ್ವವನ್ನು ಎತ್ತಿ ಹಿಡಿಯುತ್ತಾರೆ. ಗಿರಡ್ಡಿ ಗೋವಿಂದರಾಜರು (ಸಂಕ್ರಮಣ-20) “ಕಾದಂಬರಿಯಲ್ಲಿ ಸನಾತನ ಆದರ್ಶಗಳನ್ನು ಎತ್ತಿ ಹಿಡಿಯುವ ಪ್ರಯತ್ನವನ್ನು ಖಂಡಿತವಾಗಿಯೂ ಮಾಡಿಲ್ಲ” ಎಂದು ಬರೆದಿದ್ದಾರೆ. ಇದು ತಮ್ಮ ಗ್ರಹಿಕೆ ಎಂಬುದಕ್ಕೆ ಕಾದಂಬರಿಯಲ್ಲಿ ಮತ್ತೊಂದು ಉದಾಹರಣೆ ಕೊಡುತ್ತೇನೆ. ಕಾತ್ಯಾಯಿನಿಯನ್ನು ಮದುವೆಯಾದುದಕ್ಕೆ ಅಣ್ಣ ತಮ್ಮಂದಿರಿಬ್ಬರೂ ಕ್ಷಮೆ ಬೇಡುತ್ತಾರೆ ;
“ನನ್ನ ತಮ್ಮನ ಮದುವೆಯಾದದ್ದು, ಅದರ ಬೆಳವಣಿಗೆ ನನಗೆ ಏನೂ ಗೊತ್ತಿರಲಿಲ್ಲ, ತಿಳಿದಿದ್ದರೆ ಏನಾದರೂ ಮಾಡುತ್ತಿದ್ದೆನೋ ಏನೋ!……

…ಈ ಸಂಸಾರದ ವಿಷಯದಲ್ಲಿ ಅವನಿಗೆ ಗೊತ್ತಿಲ್ಲ. ಅವನ ಪರವಾಗಿ ನಾನು ನಿಮ್ಮಲ್ಲಿ ಕ್ಷಮೆ ಯಾಚಿಸಬೇಕು” (ಪ. 350)

ನಂತರ ರಾಜಾರಾಯ:
“ನಿಮಗೆ ನನ್ನಿಂದ ತುಂಬಾ ಅಪಕಾರವಾಗಿದೆ, ನಿಮ್ಮ ಪರಿಚಯವಿದ್ದು. ನಿಮ್ಮ ವ್ಯಕ್ತಿತ್ವ ತಿಳಿದಿದ್ದರೆ ನಾನು ಇವಳನ್ನು ಮದುವೆಯಾಗುತ್ತಿರಲಿಲ್ಲ. ನೀವು ನನ್ನನ್ನು ಕ್ಷಮಿಸಬೇಕು” ಎಂದು ಅವನು ಬಾಗಿ ಪಾದಗಳನ್ನು ಹಿಡಿದ…… (ಪು. 483)

ಇಲ್ಲಿ ಇವರುಗಳ ಧ್ವನಿ ಶ್ರೋತ್ರಿಯರ ಧರ್ಮದ ವಿರುದ್ದ ವರ್ತಿಸಿದುದರ ಅಪರಾಧದ ಅಗಾಧತೆಯ ಭಾರವನ್ನು ಸೂಚಿಸುತ್ತದೆ. ಅಂದರೆ ಅವರ ಧರ್ಮ, ತತ್ವಗಳೆ ಮುಖ್ಯ. ಆದುದರಿಂದ ಇದು ಶ್ರೋತ್ರಿಯರಿಗೆ ರಾಜಾರಾಯ ಬೇಡುವ ಕ್ಷಮೆಯಲ್ಲ, ಅವರು ಪ್ರತಿನಿಧಿಸುವ ತತ್ವಸಿದ್ಧಾಂತಕ್ಕೆ, ವ್ಯಕ್ತಿಸ್ವಾತಂತ್ರ್ಯ, ಅವರಲ್ಲಿ ಸ್ಥಾನವಿಲ್ಲದಿರುವ ಪುರುಷಾರ್ಥಗಳಲ್ಲಿ ಒಂದಾದ ಕಾಮಜೀವಿಗಳು ಕೋರುವ ಬುದ್ಧಿಪೂರ್ವಕ ಬಲವಂತ ಕ್ಷಮೆ, ಅಂದರೆ ಶ್ರೋತ್ರಿಯರ ತತ್ವದ ಗೆಲುವು, ಆದುದರಿಂದ ಇದು ಕಾದಂಬರಿ ಎನ್ನುವ ಹೆಸರಿಗೆ ಅರ್ಹವಾಗದೆ ತತ್ವಪ್ರತಿಪಾದನಾ ಗ್ರಂಥವಾಗುತ್ತದೆ.

ಕೊನೆಕೊನೆಯಲ್ಲಿ ‘ವಂಶವೃಕ್ಷ’ ಕಾದಂಬರಿಯ ಗುಣಗಳನ್ನೆಲ್ಲಾ ಕಳೆದುಕೊಂಡು ಬಿಡುತ್ತದೆ. ತಮ್ಮ ನಿರ್ಲಿಪ್ತತೆಯನ್ನು ಬದುಕಿನಿಂದ ಪಲಾಯನ ಮಾಡಲು ರಕ್ಷಾಕವಚವನ್ನಾಗಿ ಮಾಡಿಕೊಳ್ಳುತ್ತಾರೆ, ಶ್ರೋತ್ರಿಯವರು, ಜನ್ಮರಹಸ್ಯ ತಿಳಿದುಕೊಂಡ ಮೇಲೆ ಶ್ರಾದ್ಧದಲ್ಲಿ ಪಿತೃಗಳಿಗೆ ಪಿಂಡ ಕೊಡುವ ಹಕ್ಕಿಲ್ಲ ಎಂದು ಅವರಿಗೆ ಅರಿವಾದ ಮೇಲೂ ಶ್ರಾದ್ಧವನ್ನು ನಿಲ್ಲಿಸದೆ ಮೊಮ್ಮಗನಿಗೆ ವಹಿಸಿಕೊಡುತ್ತಾರೆ. ತಾತ್ವಿಕ ಜೀವನ ಅವರ ಬದುಕು, ತತ್ವ ಸುಳ್ಳಾದರೆ ಅವರಿಗೆ ಬದುಕಿಲ್ಲ. ಆದುದರಿಂದ ತತ್ವದ ಸೋಲನ್ನು ಅವರು ಒಪ್ಪಿಕೊಳ್ಳಲಾರರು.

“ನಾನೊಬ್ಬ ದಿಕ್ಕುಗಾಣದ ಅನಾಥ; ಅಪವಿತ್ರ ಉದ್ದೇಶಕ್ಕಾಗಿ ಅಪವಿತ್ರ ರೀತಿಯಲ್ಲಿ ಹುಟ್ಟಿದ ಶಿಶು, ದೇವರೆ ಯಾವ ಜನ್ಮದ ನನ್ನ ಪಾಪಕ್ಕಾಗಿ ಈ ಅವಸ್ಥೆಯಲ್ಲಿ ನೀನು ನನ್ನನ್ನು ಸೃಷ್ಟಿಸಿದೆ”.

ಎಂದು ಗಿರಡ್ಡಿಯವರು ಹೇಳುವಂತೆ ಪೂರ್ವಜನ್ಮದ ಮೇಲೆ ಜವಾಬ್ದಾರಿ ಹೊರಿಸಿ ತಾವು ವೈಯಕ್ತಿಕವಾಗಿ ತಪ್ಪಿಸಿಕೊಳ್ಳುತ್ತಾರೆ.

ಕೊನೆಯದಾಗಿ ಅವರ ಘನ ವ್ಯಕ್ತಿತ್ವ, ಔದಾರ್ಯ ಎಲ್ಲವೂ ಅವರ ತತ್ವಪಾಲನೆಯ ತಪಃಶಕ್ತಿಯಿಂದ ಬಂದುದೆಂದು ತಿಳಿದುಕೊಂಡಿರುತ್ತಾರೆ. ಜನ್ಮರಹಸ್ಯ ಅದನ್ನು ಸುಳ್ಳು ಮಾಡಿದಾಗ ಅದು ಅವರ ವೈಯಕ್ತಿಕ ಸಾಧನೆಯಾಗಿ ತಾತ್ವಿಕವಾಗಿಯೂ ‘ವಂಶವೃಕ್ಷ’ ಸೋಲುತ್ತದೆ.

Close

ಶಾಂತಿನಾಥ ದೇಸಾಯಿ ಅವರ ವಿಕ್ಷೇಪ

ಶಾಂತಿನಾಥ ದೇಸಾಯಿ ಅವರ ವಿಕ್ಷೇಪ
-ಒಂದು ವಿವೇಚನೆ

ಬಾಲಸುಬ್ರಹ್ಮಣ್ಯ

೧
ದುರ್ಬಲ ಮನಸ್ಸಿನ ಸೂಕ್ಷ್ಮಪ್ರಜ್ಞೆಯ ವ್ಯಕ್ತಿಯ ಪ್ರಣಯ ಕಥೆಯ ಹಿನ್ನೆಲೆಯಲ್ಲಿ ಪ್ರಕ್ಷುಬ್ಧ ಮನಸ್ಸಿನ ಅನುಭವಗಳನ್ನು ಬೆಳೆದ ಮನಸ್ಸಿನ ವಿವೇಕ ಬುದ್ಧಿಯ ತೀಕ್ಷ್ಣ ಬೆಳಕಿನಲ್ಲಿ ವಿವೇಚಿಸುವ ರೀತಿಯ ತಂತ್ರವನ್ನು ‘ಮುಕ್ತಿ’ಯಲ್ಲಿ ಪ್ರಯೋಗಿಸಿ ಯಶಸ್ವಿಯಾದ ಶಾಂತಿನಾಥ ದೇಸಾಯಿಯವರು ತಮ್ಮ ಎರಡನೇ ಕಾದಂಬರಿ ‘ವಿಕ್ಷೇಪ’ದಲ್ಲಿ ಅದಕ್ಕಿಂತ ಭಿನ್ನವಾದ ತಂತ್ರವೊಂದನ್ನು ಪ್ರಯೋಗಿಸಿದ್ದಾರೆ.
“ತನ್ನ ಬದುಕನ್ನು ತಾನೇ ಬದುಕಬೇಕು ; ತನ್ನ ಅನುಭವಗಳ ಶಿಲುಬೆಯ ಭಾರವನ್ನು ತಾನೇ ಹೊರಬೇಕು ; ತನ್ನ ಜೀವನದ ನೀತಿ ನಿಯಮಗಳನ್ನು ಮೌಲ್ಯಗಳನ್ನು ತನ್ನ ಇರುವಿಕೆಯೇ ನಿಶ್ಚಯಿಸಬಲ್ಲುದೇ ಹೊರತು ಪರರಿಂದ ಎರವಲು ತಂದ ಮೌಲ್ಯಗಳು ತನಗೆ ಸಾಲವು”1 ಎಂಬ ಪ್ರಜ್ಞೆಯನ್ನು ಮುಕ್ತಿಯಲ್ಲಿ ಕಂಡರೆ, ನನ್ನನ್ನು ನಾನೆಂದೇ ನೋಡಬೇಕು ; ಜೀವನವನ್ನು ಜೀವನವೆಂದೇ ಕಾಣಬೇಕು ; ಜೀವನದ ನಗ್ನತೆಯನ್ನು

1 ಯಶವಂತ ಚಿತ್ತಾಲ-‘ಸಂಕ್ರಮಣ’

ದರ್ಶಿಸಿ ತಳದಲ್ಲೇನಿದೆ ಎಂದು ಆಳಕ್ಕೆ ಇಳಿದು ತಿಳಿಯಬೇಕು – ಎಂಬ ಸಂವೇದನೆಯನ್ನು ವಿಕ್ಷೇಪ ಚಿತ್ರಿಸುತ್ತದೆ.
‘ಮುಕ್ತಿ’ ಕಾದಂಬರಿಯಲ್ಲಿ ಭೂತವನ್ನು ವರ್ತಮಾನದಲ್ಲಿಟ್ಟು ನೋಡುವುದರಿಂದ ಕಾಲದ ಹಿನ್ನೆಲೆಯಲ್ಲಿ ಘಟಿಸಿದ ಅನುಭವಗಳು ಅರ್ಥ ಪಡೆಯುತ್ತವೆ. ಮಹತ್ವದವಾಗುತ್ತವೆ. ಅಂದರೆ ಗೌರೀಶ ತನ್ನ ಪ್ರಬುದ್ಧ ಸ್ಥಿತಿಯಲ್ಲಿ ಪ್ರಕ್ಷುಬ್ದ ಮನಸ್ಸಿನ ಅನುಭವಗಳ ವಿಶ್ಲೇಷಣೆ ನಡೆಸುವುದರಿಂದ ಮೊದಲಿನ ಅನುಭವಗಳು ಈ ಹಿನ್ನೆಲೆಯಲ್ಲಿ ಅರ್ಥಪೂರ್ಣವಾಗುತ್ತವೆಯೇ ಹೊರತು ಸ್ವತಂತ್ರವಾಗಿ ಅಲ್ಲ. ಆದರೆ ವಿಕ್ಷೇಪದ ರಾಹುಲನ ಒಂದೊಂದು ಅನುಭವದ ಬಿಂದುಗಳೂ ತಮಗೆ ತಾವು ಸ್ವತಂತ್ರವಾದುವು. ಕಥಾನಕ ದೃಷ್ಟಿಯಿಂದ ಒಂದಕ್ಕೊಂದಕ್ಕೆ ಸಾವಯವ ಸಂಬಂಧವಾಗಲೀ ಅಥವಾ ಹಿಂದಿನ ಘಟನೆಗಳು ಮುಂದಿನ ಘಟನೆಗಳಿಗೆ ಪೂರಕ ಎಂಬ ಕಥಾನಕ ರೀತಿಯಾಗಲೀ ಇಲ್ಲಿ ಕಂಡುಬರುವುದಿಲ್ಲ. ಆದರೂ ಸೂಕ್ಷ್ಮತಂತು ಈ ಎಲ್ಲ ಅನುಭವಗಳನ್ನೂ, ಘಟನೆಗಳನ್ನೂ ಕಾದಂಬರಿಯ ಕೇಂದ್ರ ವಸ್ತುವಿಗೆ ಜೋಡಿಸಿರುವುದು ಕಾದಂಬರಿಕಾರರು ತೋರಿಸಿರುವ ಹೊಸ ರೀತಿಯ ಕೌಶಲ ಎನ್ನಬಹುದು. ಒಂದೊಂದು ಘಟನೆಯೂ ಏಕಾಂಗಿಯಾಗಿ ನಿಂತು ರಾಹುಲನ ವ್ಯಕ್ತಿತ್ವವನ್ನು ತನ್ನದೇ ಆದ ನಿಲುವಿನಲ್ಲಿ ಚಿತ್ರಿಸುತ್ತದೆ. ಅಂದರೆ ‘ಮುಕ್ತಿ’ಯಲ್ಲಿ ಕಾಲ ಮಹತ್ವ ಪಡೆದಿದ್ದು, ಕಾಲದ ಹಿನ್ನೆಲೆಯಲ್ಲಿ ಗೌರೀಶನ ವ್ಯಕ್ತಿತ್ವವನ್ನು ಚಿತ್ರಿಸಿದ ದೇಸಾಯಿಯವರು ‘ವಿಕ್ಷೇಪದಲ್ಲಿ ಘಟನೆಗಳಿಗೆ ಪ್ರಾಮುಖ್ಯ ಕೊಟ್ಟು ಘಟನೆಗಳ ಪರಿಪಾಕದಲ್ಲಿ ರಾಹುಲನನ್ನು ಮೂರ್ತೀಭವಿಸುತ್ತಾರೆ.
ವಿಕ್ಷೇಪ ಯೋಗಮೀಮಾಂಸೆಯು ಹೆಸರಿಸಿದ ಒಂದು ಮಾನಸಿಕ ಅವಸ್ಥೆ, ಕುಂಡಲಿನೀ ಶಕ್ತಿಯನ್ನು ಜಾಗೃತಗೊಳಿಸಿ ಸುಷುನ್ಮನಾಡಿಗಳ ಮೂಲಕ ಸಹಸ್ರಾರಕ್ಕೆ ಮುಟ್ಟಿಸುವುದು ಯೋಗದ ಉದ್ದೇಶ. ಕುಂಡಲಿನೀ ಶಕ್ತಿ ಜಾಗೃತವಾಗಿ ಅದು ಇನ್ನೂ ಸಹಸ್ರಾರಕ್ಕೆ ತಲುಪದ ಸ್ಥಿತಿಯನ್ನು ವಿಕ್ಷಿಪ್ತಸ್ಥಿತಿ ಎಂದು ಕರೆಯಬಹುದು. ಈ ಅವಸ್ಥೆಯಲ್ಲಿ ಬುದ್ಧಿಯ ಕ್ರಿಯೆಯೂ ಮಹತ್ವದ್ದಾಗಿರುತ್ತದೆ. ಯೋಗಮೀಮಾಂಸೆಯಲ್ಲಿ ಈ ಸ್ಥಿತಿಗೆ ಸಹಸ್ರಾರವನ್ನು ತಲುಪುವ ಒಂದು ಗುರಿ ಇರುತ್ತದೆ. ಶಾಂತಿನಾಥ ದೇಸಾಯಿಯವರ “ವಿಕ್ಷೇಪ’ದಲ್ಲಿ ಈ ಸ್ಥಿತಿಯನ್ನು ರಾಹುಲನ ವ್ಯಕ್ತಿತ್ವವನ್ನಾಗಿಸಿದ್ದರೂ ಇಲ್ಲಿ ನಿಶ್ಚಿತ ಗರಿಯಿಲ್ಲ. ಕಾದಂಬರಿಯ ಅಂತ್ಯದಲ್ಲಿ ರಾಹುಲ ವಿದೇಶಕ್ಕೆ ಹೋಗುವ ಹಂಬಲ ವ್ಯಕ್ತಪಡಿಸಿದರೂ ಅವನು ಹೋಗುವುದರ ಬಗ್ಗೆ ಸ್ಪಷ್ಟವಾಗಿ ತಿಳಿಯುವುದಿಲ್ಲ. ರಾಹುಲ ವಿಕ್ಷಿಪ್ತ ಸ್ಥಿತಿಯಲ್ಲಿಯೇ ಉಳಿಯುತ್ತಾನೆ. ಶಾಂತಿನಾಥರು ತಮ್ಮ ‘ಮುಕ್ತಿ’ ಕಾದಂಬರಿಯಲ್ಲಿ ಗೌರೀಶನ ವಿದೇಶಗಮನವನ್ನು ಸ್ಪಷ್ಟಪಡಿಸಿ ಒಂದು ನಿಶ್ಚಿತ ನಿಲುವನ್ನು ತಳೆದಿದ್ದರು. ‘ವಿಕ್ಷೇಪ’ದಲ್ಲಿ ಒಂದು ಸ್ಥಿತಿಯನ್ನು ಚಿತ್ರಿಸಿ ಹಿಂದೆ ಸರಿದು ನಿರ್ಣಯ ನೀಡದಿರುವುದು ಬೆಳವಣಿಗೆಯ ಹಂತವನ್ನು ನಿರ್ದೇಶಿಸುತ್ತದೆ.
೨
ದೇಸಾಯಿಯವರು ಮುಖ್ಯವಾಗಿ ಯುವಜನಾಂಗದ ಮನಃಸ್ಥಿತಿಯ ಚಿತ್ರಣವನ್ನೇ ತಮ್ಮ ಎರಡೂ ಕಾದಂಬರಿಯಲ್ಲಿ ವಸ್ತುವನ್ನಾಗಿ ಆರಿಸಿಕೊಂಡಿದ್ದರೂ ‘ಮುಕ್ತಿ’ಯ ಗೌರೀಶನಿಗೂ ‘ವಿಕ್ಷೇಪ’ ದ ರಾಹುಲನಿಗೂ ಬಹಳಷ್ಟು ಅಂತರವಿದೆ.
ಮುಕ್ತಿಯ ಗೌರೀಶ ಶ್ರೀಕಾಂತನ ವ್ಯಕ್ತಿತ್ವದ ಪರಿಧಿಯಲ್ಲಿ ಬಂಧಿತನಾಗಿ ತನ್ನನ್ನು ತಾನು ಕಂಡುಕೊಳ್ಳುವ, ತನ್ನ ಬದುಕನ್ನು ತಾನೇ ಬದುಕಬೇಕು ಎನ್ನುವ ಅರಿವನ್ನು ಶ್ರೀಕಾಂತನ ಸಾವಿನ ನಂತರ ಕಂಡುಕೊಳ್ಳುತ್ತಾನೆ. ಅಂದರೆ ಶ್ರೀಕಾಂತನ ಸಾವು ಗೌರೀಶನ ಅರಿವು. ಶ್ರೀಕಾಂತನು ಬದುಕಿರುವವರೆಗೂ ಗೌರೀಶನಿಗೆ ಅವನ ವ್ಯಕ್ತಿತ್ವದ ಪ್ರಭಾವದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಷ್ಟರಮಟ್ಟಿಗೆ ಗೌರೀಶ ದುರ್ಬಲ ವ್ಯಕ್ತಿತ್ವವುಳ್ಳವನು. ಆದರೆ ವಿಕ್ಷೇಪದ ರಾಹುಲ ಗೌರೀಶನಂತೆ ದುರ್ಬಲ ವ್ಯಕ್ತಿಯಲ್ಲ. ಯಾರ ಪ್ರಭಾವಕ್ಕೂ ಒಳಗಾಗದೆ, ಪ್ರಭಾವದ ಪ್ರಖರತೆ ತನ್ನ ಸ್ವಂತಿಕೆಯನ್ನು ಆಕ್ರಮಿಸುತ್ತದೆ ಎನ್ನುವಾಗ ಅಲ್ಲಿಂದ ತಪ್ಪಿಸಿಕೊಂಡು ಹೋಗುತ್ತಾನೆ. ಮಾಧವಿಯೊಡನೆ ಸಲೀಸಾಗಿ ಸರಸ-ಸಲ್ಲಾಪ ನಡೆಸಿ ಅವಳು ತನ್ನ ಆಂತಃಸತ್ವಕ್ಕೆ ಲಗ್ಗೆಯಿಡುತ್ತಾಳೆ ಎಂದು ಕಂಡುಕೊಂಡಾಗ ಆ ಬಂಧನದಿಂದ ತಪ್ಪಿಸಿಕೊಳ್ಳುತ್ತಾನೆ. ಇಲ್ಲಿಯ ರಾಹುಲ ಯಾವ ಪ್ರಕಾರಕ್ಕೂ ತನ್ನನ್ನು ಗಂಟುಹಾಕಿಕೊಂಡವನಲ್ಲ. ಮಾಧವಿಯ ಆಕರ್ಷಣೆಯಿಂದ, ವೈದೇಹಿಯ ಪರಿಣತ ವ್ಯಕ್ತಿತ್ವದಿಂದ, ಕುಂದಾಳ ವೈವಾಹಿಕ ಬಂಧನದಿಂದ, ವಿಲಿಯಮ್ಸ್ ದಂಪತಿಗಳ ಸಂಪ್ರದಾಯ ತತ್ವಗಳಿಂದ-ಯಾವುದರಿಂದಲೂ ಪ್ರಭಾವಿತನಾಗದೆ, ಎಲ್ಲರಿಂದಲೂ ತಪ್ಪಿಸಿಕೊಂಡು ‘ತನ್ನತನ’ವನ್ನು ತನ್ನ ಕ್ಷೇತ್ರದಲ್ಲಿಯೇ ಕಂಡುಕೊಳ್ಳಲು ಪ್ರಯತ್ನಿಸುತ್ತಾನೆ.
ಗೌರೀಶ ವಿವಿಧ ನೆಲೆಯಲ್ಲಿ ಇತರ ಪಾತ್ರಗಳ ಸುತ್ತ ಸುತ್ತಿದರೆ, ರಾಹುಲನ ಸುತ್ತ ವಿವಿಧ ಪಾತ್ರಗಳು ಬಂದು, ಸಂದರ್ಶಿಸಿ ನಿಷ್ಕ್ರಮಿಸುತ್ತವೆ. ಗೌರೀಶ ಶ್ರೀಕಾಂತನಲ್ಲಿ ತನ್ನನ್ನು ವಿಲೀನಗೊಳಿಸಿ, ಕಾಮಿನಿಯಲ್ಲಿ ಕರಗಿ, ಡೂಲಿಯ ತಣ್ಣನೆಯ ನೆರಳಿನಲ್ಲಿ ನಿರ್ಧಿಷ್ಟ ರೂಪ ಪಡೆಯಲು ಪ್ರಯತ್ನಿಸುತ್ತಾನೆ. ಆದರೆ ರಾಹುಲ ಅನೇಕರೊಡನೆ ಕೂಡಿ ರಮಿಸಿದರೂ ಯಾರಲ್ಲೂ ವಿರಮಿಸದೆ ಕೊನೆಗೂ ವಿಕ್ಷಿಪ್ತ ಸ್ಥಿತಿಯಲ್ಲಿಯೇ ಉಳಿಯುತ್ತಾನೆ.
ಎಲ್ಲ ವ್ಯಕ್ತಿಗಳಿಗೂ ಜೀವನದಲ್ಲಿ ಮಹತ್ವದ ಘಟನೆಗಳು ಬಹುಪಾಲು ಸಮನಿಸುವುದು ಅವರ ತಾರುಣ್ಯದ ದಿನಗಳಲ್ಲಿ. ಬಾಲ್ಯ ಕಳೆದು ಯೌವನ ಕಾಲೂರಿದಾಗ ಜೀವನಕ್ಕೆ ಒಂದು ದೃಷ್ಟಿ ಮೂಡುತ್ತದೆ ; ಜಗತ್ತನ್ನು ನೋಡುವ ಕಣ್ಣು ಮೊನಚಾಗುತ್ತದೆ. ಇಂಥ ಸನ್ನಿವೇಶದಲ್ಲಿ ರಕ್ತದ ನಾಗಾಲೋಟದೊಡನೆ ಉಳಿದ ಸಂವೇದನೆಗಳು ಸೋತು ಹೋಗುವುದರಿಂದ ರಕ್ತದ ಒತ್ತಡಕ್ಕೆ ಸಿಕ್ಕುವ ಅನುಭವಗಳು ಮನಸ್ಸಿನ ಆಳಕ್ಕೆ ಇಳಿದು ಕೆದಕುತ್ತವೆ. ಈ ಪಾತಳಿಯ ಅನುಭವಗಳನ್ನು ರಾಹುಲನ ಪಾತ್ರದಲ್ಲಿ ಪದರು ಪದರಾಗಿ ಬಿಡಿಸುತ್ತ, ಅದರ ಹಿನ್ನೆಲೆಯಲ್ಲಿ ಜೀವನದ ಬಗೆಗಿನ ದೃಷ್ಟಿಕೋನವನ್ನು ರೂಪಿಸಲು ಯತ್ನಿಸಿರುವುದು ದೇಸಾಯಿಯವರ ಸಾಧನೆ. ಈ ದೃಷ್ಟಿಯಿಂದ ಕಾದಂಬರಿಯಲ್ಲಿ ಬರುವ ಮಾಧವಿ, ವೈದೇಹಿ, ಕುಂದಾ-ಈ ಪಾತ್ರಗಳು ಮಹತ್ವದವಾಗುತ್ತವೆ.
ವೈವಿಧ್ಯಮಯವಾದ ಬದುಕನ್ನು ವಿವಿಧ ನೆಲೆಯಲ್ಲಿ ನಿಂತು, ಭಿನ್ನ ಕೋನಗಳಿಂದ ವಿಶ್ಲೇಷಿಸುವುದು ದೇಸಾಯಿಯವರ ಕಾದಂಬರಿಗಳಲ್ಲಿ ಕಂಡುಬರುವ ಅಂಶ. ಬುದ್ಧಿವಾದಿಯಾದ ಬಿಸಿ ರಕ್ತದ ರಾಹುಲನ ಸಮಸ್ಯೆಗಳನ್ನು ಸಂಪ್ರದಾಯವಾದಿಗಳಾದ ವಿಲಿಯಮ್ಸ್ ದಂಪತಿಗಳಲ್ಲಿ ನಿಕಷಕ್ಕೆ ಹಚ್ಚಿ ಸಮಸ್ಯೆಯ ಸೂಕ್ಷ್ಮತೆಗಳನ್ನು ವಿಶ್ಲೇಷಿಸುತ್ತಾರೆ. ಆದ್ದರಿಂದಲೇ ರಾಹುಲನ ವೈಚಾರಿಕತೆ ಹಾಗೂ ಅವನ ಅನುಭವ ಗಟ್ಟಿತನವನ್ನು ಕಂಡುಕೊಳ್ಳುವುದು.
೩
ಆಸ್ಪಷ್ಟ ಹಂಬಲಗಳು, ಕನಸುಗಳು, ಆಸೆ-ಅಪೇಕ್ಷೆಗಳು ಅವಿರತವಾಗಿ ಸುಳಿದಾಡುವ ಅನುಭವದ ಸನ್ನಿವೇಶದಲ್ಲಿ ಸೂಕ್ಷ್ಮ ಪ್ರಜ್ಞೆಯ ಮೊನಚು ಕೂಡಿದಾಗ ಇಲ್ಲದ ಒತ್ತಡಗಳಿಗೆ ಬಲಿಯಾಗಿ ಮಾನಸಿಕವಾಗಿ ಅತೃಪ್ತಿಗೊಳ್ಳುವ ಸ್ಥಿತಿ ಒದಗುತ್ತದೆ. ರಾಹುಲ ಇಂಥ ಒಂದು ಸ್ಥಿತಿಯಲ್ಲಿ ಸಿಕ್ಕು ತೊಳಲಾಡುವ ವ್ಯಕ್ತಿಯಾದ್ದರಿಂದಲೇ ಅವನ ಅನುಭವಗಳು ಸಂಕೀರ್ಣಗೊಳ್ಳುತ್ತಾ ಹೋಗುವುದು. ರಾಹುಲನಂತೆ ಅರವಿಂದನೂ ಪ್ರೇಮ ಮಾಡಿದವ. ಆದರೆ ಅವನ ಪ್ರೇಮ ಪ್ರಕರಣ ರಾಹುಲನ ಪ್ರೇಮಪ್ರಕರಣಗಳಂತೆ ಸಮಸ್ಯೆಯಾಗಿ ಪರಿಣಮಿಸುವುದಿಲ್ಲ. ತೀರ ಸರಳವಾಗಿ, ಲೆಕ್ಕಾಚಾರ ಹಾಕಿದ ಹಾಗೆ ಕೊನೆಗೊಳ್ಳುತ್ತದೆ. ಆದರೆ ರಾಹುಲನಲ್ಲಿ ಮಾತ್ರ ಈ ಪ್ರೇಮದ ಅನುಭವ ಅವನ ವ್ಯಕ್ತಿತ್ವದ ಕೇಂದ್ರಬಿಂದುವನ್ನೇ ಅಲ್ಲಾಡಿಸಿ ವ್ಯಸ್ತನನ್ನಾಗಿಸುತ್ತದೆ. ಸೂಕ್ಷ್ಮಪ್ರಜ್ಞೆಯ ವ್ಯಕ್ತಿಯ ಸಂಕೀರ್ಣ ಬದುಕಿಗೆ ಸಮಾನಾಂತರವಾಗಿ-ಸರಳವಾದ, ಸುಲಲಿತವಾದ ಸುಖ ಜೀವನವನ್ನು ಅನುಭವಿಸುವ ವ್ಯಕ್ತಿಗಳನ್ನು ಕಾದಂಬರಿಯಲ್ಲಿ ತಂದು, ತನ್ಮೂಲಕ ದೇಸಾಯಿಯವರು ನಾಯಕನ ಅನುಭವಗಳನ್ನು ಸಾಂದ್ರಗೊಳಿಸುತ್ತಾ ಹೋಗುತ್ತಾರೆ.
ಇವರ ಇದೇ ತಂತ್ರವನ್ನು ನಾವು ಮುಕ್ತಿಯಲ್ಲೂ ಕಾಣಬಹುದು. ವಿಕ್ಷೇಪದ ಅರವಿಂದನ ಬದುಕು ಒಂದು ರೀತಿಯಲ್ಲಿ ಮುಕ್ತಿಯ ಸತ್ಯೇಂದ್ರನ ಬದುಕೇ ಹೌದು. ‘ಬದುಕು ಬೀಜ ಗಣಿತದ ಸೂತ್ರದಂತೆ ಸರಳವೂ ಸುಲಭವೂ ಅಲ್ಲ; ಬದುಕಿನ ಜೀವಂತಿಕೆ ತಾನು ಎದುರಿಸುವ ಸಮಸ್ಯೆಗಳ ಸಭೆಯಲ್ಲಿದೆ’-ಎಂಬ ಜೀವನದೃಷ್ಟಿಯ ನಾಯಕನನ್ನು ನಿರ್ಮಿಸಿ, ತಮ್ಮ ಧೋರಣೆಯನ್ನು ಮೂರ್ತಗೊಳಿಸುವ ದೇಸಾಯಿಯವರು ಇದಕ್ಕೆ ವ್ಯತಿರಿಕ್ತವಾಗಿಯೇ ಎಂಬಂತೆ ಸತ್ಯೇಂದ್ರ, ಅರವಿಂದರನ್ನು ಸೃಷ್ಟಿಸುವುದರಿಂದ ಆ ಪಾತ್ರಗಳು ಪ್ರಜ್ಞಾಪೂರ್ವಕವಾಗಿ ಹುಟ್ಟಿಕೊಂಡವು ಅನ್ನಿಸಿ ಆ ಪಾತ್ರಗಳು ಅಳ್ಳಕವಾಗಿ ಬಿಡುವ ಸಾಧ್ಯತೆ ಹೆಚ್ಚಾಗುತ್ತದೆ.
ಮುಕ್ತಿಯ ಗೌರೀಶ ಸೂಕ್ಷ್ಮ ಪ್ರಜ್ಞೆಯುಳ್ಳವನಾದರೂ ಭಾವನಾಜೀವಿ. ಸತ್ಯಜಗದ ಪರಿವೆ-ಅರಿವು ಇಲ್ಲದ, ಬರಿಯ ಹೂವಿನಂತಹ ಕನಸುಗಳನ್ನು ಕಟ್ಟುವುದರಲ್ಲಿಯೇ ಕಾಲವನ್ನು ಕಳೆಯುವವನು. ಆದ್ದರಿಂದ ಮುಕ್ತಿಯ ಕಥಾನಕದ ರೀತಿಯಲ್ಲಿಯೇ ಸಹಜವಾಗಿ ತೀವ್ರತೆ, ಉತ್ಕಟತೆ ಒದಗಿ ಬಂದಿದೆ. ಆದರೆ ವಿಕ್ಷೇಪದ ರಾಹುಲ ಪ್ರಮುಖವಾಗಿ ವೈಚಾರಿಕ ಪಾತಳಿಯಲ್ಲಿ ನಿಂತು ತೆಕ್ಕೆಗೆ ಸಿಕ್ಕಿದ ಅನುಭವಗಳನ್ನು ವಿಶ್ಲೇಷಿಸುವನಾದ್ದರಿಂದ ‘ಮುಕ್ತಿ’ಯಲ್ಲಿ ಸಹಜವಾಗಿ ಒದಗಿಬಂದಿದ್ದ ಉತ್ಕಟತೆ ಇಲ್ಲಿ ಇಲ್ಲವಾಗಿದೆ. ದೇಸಾಯಿಯವರು ಇದನ್ನು ರಾಹುಲನ ಪ್ರಣಯ ಪ್ರಪಂಚದಿಂದಲೂ, ವೈಚಾರಿಕ ಸಂಘರ್ಷದಿಂದಲೂ ತುಂಬಲು ಪ್ರಯತ್ನಿಸಿದ್ದಾರೆ ಅನ್ನಿಸುತ್ತದೆ.
೪
ಗೌರೀಶ ಭಾವನಾಜೀವಿಯಾದುದರಿಂದಲೇ ತನ್ನನ್ನು ತಾನು ಶ್ರೀಕಾಂತ-ಕಾಮಿನಿಯರಿಗೆ ಅರ್ಪಿಸಿಕೊಳ್ಳುತ್ತಾನೆ. ಅವರ ವ್ಯಕ್ತಿತ್ವದ ಕೇಂದ್ರಬಿಂದುವಿನ ಸುತ್ತ ಈತನ ಜೀವನ ವೃತ್ತ ರೂಪಗೊಳ್ಳುತ್ತದೆ. ಆದರೆ ರಾಹುಲ ಗೌರೀಶನಂತೆ ತನ್ನನ್ನು ತಾನು ಯಾರಿಗೂ ಸುಲಭವಾಗಿ ಸಮರ್ಪಿಸಿಕೊಳ್ಳುವುದಿಲ್ಲ. ಬದಲಾಗಿ ಅನೇಕ ಹೂವಿನ ಹೃದಯಗಳ ಆಕರ್ಷಕ ಬಿಂದುವಾಗುತ್ತಾನೆ. ಸೂಕ್ಷ್ಮವಾದ ಆತ್ಮವಿಶ್ಲೇಷಣೆಯ ಮೂಲಕ ಆತ್ಮ ಪ್ರದರ್ಶನ ಮಾಡಿ ತಾನೊಬ್ಬ ಹ್ಯಾಮ್ಲೆಟ್‌ನಂಥ ಟ್ರಾಜಿಕ್ ಹೀರೋ ಎಂಬಂತೆ ತನ್ನನ್ನು ವರ್ಣಿಸಿ ಅನೇಕ ಹುಡುಗಿಯರು ಸಂತೈಸಲು ಮುಂದಾಗುವಂತೆ ಮಾಡುತ್ತಾನೆ. ಈ ಆತ್ಮವಿಶ್ಲೇಷಣೆಯೇ ಮಾಧವಿಯನ್ನೂ ಅವನ ಕಕ್ಷೆಯಲ್ಲಿ ಸರಿಸುತ್ತದೆ.
ಮಾಧವಿ ಶ್ರೀಮಂತಿಕೆಯ ವರವನ್ನು ಪಡೆದ ಚಂದದ ಹುಡುಗಿ. ರಾಹುಲನ ಅಭಿಮಾನದ ಬೀಜಕ್ಕೆ ಸೊಗಸಾದ ಕ್ಷೇತ್ರ. ಆಂತೆಯೇ ಕಾಲೇಜಿನಲ್ಲಿ ಅಸೂಯೆ ತುಂಬಿದ ನೂರಾರು
ಕಣ್ಣುಗಳು ಇವರಿಬ್ಬರ ಜೋಡಿಯತ್ತ ನೋಡುವಾಗ ಅವನಿಗೆ ಮಾಧವಿಯ ಸಹವಾಸ ಹಿತವಾಗುತ್ತದೆ. ಅಂದರೆ ಮಾಧವಿ ರಾಹುಲನ ಸುಪ್ತ ಆಹಂಭಾವವನ್ನು ತೃಪ್ತಿಗೊಳಿಸುವ ಒಂದು ಸಾಧನ ಮಾತ್ರ. ತೋಳಲ್ಲಿ ತೋಳು ಜೊಡಿಸಿ, ಪ್ರಣಯ ಕಾವ್ಯದ ಧಾರೆ ಹರಿಸಿ ಎದೆ ಮೇಲೆ ತಲೆ ಇಟ್ಟು ಅಪ್ಪಿಕೊಳ್ಳಲು, ಬೆಚ್ಚಗೆ ಒತ್ತಿ ಕುಳಿತು ಹರಟೆ ಹೊಡೆಯಲು ಅವನಿಗೆ ಮಾಧವಿ ಬೇಕು. ಆದರೆ ಇದು ಗಂಭೀರ ಸನ್ನಿವೇಶ ಪಡೆದಾಗ ರಾಹುಲ ಅವಳಿಂದ ದೂರ ಸರಿಯುತ್ತಾನೆ. ಮಾಧವಿ ಕಕ್ಕನ ಎಲ್ಲವನ್ನೂ ನುಂಗಬಲ್ಲ ಆತ್ಮವಿಶ್ವಾಸ, ಆಕೆಯ ತಾಯಿಯ ಎಲ್ಲವನ್ನೂ ಕಬಳಿಸಬಲ್ಲ ದೇಹಸುಂತುಷ್ಟಿ-ಈ ಪರಿಸರದಲ್ಲಿ ಬೆಳೆದ ಮಾಧವಿ ತನ್ನ ಅಂತಸ್ಸತ್ವವನ್ನು ಅರಗಿಸಿ ಕುಡಿದಾಳೆಂಬ ಕಾರಣದಿಂದ ರಾಹುಲ ಮಾಧವಿಯನ್ನು ಬದಿಗಿಡುತ್ತಾನೆ. ಆದ್ದರಿಂದಲೇ ಅವಳ ಕಣ್ಣು-ತುಟಿ– ಕೈ-ಕಾಲು-ಎದೆಗಳ ಆಪಾರ ಸೀಮೆಯಲ್ಲಿ, ಅವಳ ಪ್ರೀತಿ-ಸೌಂದರ್ಯ-ಸಂಸ್ಕೃತಿ-ಐಶ್ವರ‍್ಯಗಳ ಅದ್ಭುತ ವಿಶ್ವದಲ್ಲಿ ಅವನ ಅಂತಃಸತ್ವ ಬೇರು ಬಿಡುವುದಿಲ್ಲ.
ಗಮನಿಸಬೇಕಾದ ಅಂಶವೆಂದರೆ-ರಾಹುಲ ತನ್ನ ಈ ಎಲ್ಲ ಕ್ರಿಯೆಗಳ ಬಗ್ಗೆ ಜಾಗೃತನಾಗಿದ್ದಾನೆ. ಅವನು ತನ್ನ ಆತ್ಮವಿಶ್ಲೇಷಣೆ ಮಾಡಿಕೊಳ್ಳುವಾಗಲೇ ತನ್ನ ಸ್ಥಿತಿಯನ್ನೂ ನಿರೂಪಿಸುತ್ತಾನೆ ಆದ್ದರಿಂದಲೇ ಅವನ ಪ್ರಣಯ ಪ್ರಪಂಚಕ್ಕೆ ಅರ್ಥಪೂರ್ಣತೆ ಒದಗುವುದು. ಅವನ ಎಲ್ಲ ಸರಸ-ಸಲ್ಲಾಪ ಬರಿಯ ತಮಾಷೆಯಾಗಿ ಉಳಿಯದೆ ಗಂಭೀರತೆಯನ್ನು ದೊರಕಿಸಿಕೊಳ್ಳುವುದು.
ವೈದೇಹಿ ರಾಹುಲನಿಗೆ ನೀಡಿದ ಅನುಭವ ಮಾಧವಿಯದಕ್ಕಿಂತ ತೀರ ಭಿನ್ನವಾದದ್ದು. ಮಾಧವಿ ರಾಹುಲನನ್ನು ಬಯಸಿ ಬಂದವಳು. ರಾಹುಲನಿಗೆ ಈಕೆಯ ಬಗ್ಗೆ ಆಸಕ್ತಿಯಿದ್ದರೂ ಅದಕ್ಕಿಂತಲೂ ಭಿನ್ನವಾದ ಬಲವಾದ ಆಕರ್ಷಣೆಯ ತುಡಿತ ಅವನಿಗೆ ವೈದೇಹಿಯ ಬಗೆಗಿತ್ತು. ರಾಹುಲನ ವ್ಯಗ್ರಸ್ಥಿತಿ ವೈದೇಹಿಯ ಪರಿಣತವಾದ, ಜೀವನದ ಆಘಾತಗಳಿಂದ ಹದಗೊಂಡ ವ್ಯಕ್ತಿತ್ವದಲ್ಲಿ ಸಮಸ್ಥಿತಿಗೆ ಬರುವ ಸಾಧ್ಯತೆಯಿತ್ತು. ವೈದೇಹಿ ಸಮುದ್ರದ ನೀರಾಗದೆ ಕುಡಿಯುವ ನೀರಾಗಬಹುದಿತ್ತು. ಆದರೆ ವೈದೇಹಿಯ ವ್ಯಕ್ತಿತ್ವದ ಪ್ರಖರತೆಯಲ್ಲಿ ತನ್ನ ವ್ಯಕ್ತಿತ್ವ ಲೀನವಾಗುತ್ತದೆ. ಅನುಭವದಿಂದ ಮಾಗಿದ ಅವಳ ದಗ್ಧದೇಹದಲ್ಲಿ ತನ್ನ ಪುರುಷ ವ್ಯಕ್ತಿತ್ವವನ್ನೇ ಮೂದಲಿಸಿ ಮೂಗು ಮುರಿಯುವ ಶಕ್ತಿಯಿದೆ ಎಂದು ತಿಳಿದಾಗ ರಾಹುಲ ವೈದೇಹಿ-ಅರವಿಂದರನ್ನು ಒಂದುಗೂಡಿಸಿ ಅಲ್ಲಿಂದ ಹೊರಬರುತ್ತಾನೆ.
ಕುಂದಾಳ ಹೊಸದಾಗಿ ತುಂಬಿದ ದೇಹದಲ್ಲಿ ನಲಿದಾಡುತ್ತಿರುವ ತಾರುಣ್ಯ, ಅವರ ಮಾತುಗಳಲ್ಲಿ ಕಣ್ಣುಗಳಲ್ಲಿ ಅಂಗವಿನ್ಯಾಸದಲ್ಲಿ ಬಿರಿದು ನಿಂತ ತುಟಿಗಳಲ್ಲಿ ಕಂಡುಬಂದ
ನೇರವಾದ ಆಹ್ವಾನದಿಂದ ರಾಹುಲ ಆಕರ್ಷಿತನಾಗಿ ಪ್ರಾಸಂಗಿಕವಾಗಿ ಪ್ರಣಯ ನಡಸುತ್ತಾನೆ. ಅವನು ಕುಂದಾಳೊಡನೆ ನಡೆಸಿದ ಪ್ರಣಯ ಪ್ರಸಂಗ ತೀರ ಆತ್ಮಕೇಂದ್ರಿತವಾಗಿತ್ತು. ಬೇರೆ ಯಾವ ತೊಡಕು-ಸಂಬಂಧ-ಜವಾಬ್ದಾರಿಗಳಿಂದ ಸ್ವತಂತ್ರವಾಗಿತ್ತು. ಆದ್ದರಿಂದಲೇ ರಾಹುಲ ಸುಲಭವಾಗಿ ಆಕೆಯ ರಕ್ತಕ್ಕೆ ಲಗ್ಗೆಯಿಟ್ಟರೂ, ಧುತ್ತೆಂದು ಜವಾಬ್ದಾರಿ ಮೈ ಮೇಲೆ ಬಿದ್ದಾಗ ಕಸಿವಿಸಿಗೊಳ್ಳುತ್ತಾನೆ.
“ನೀನು ಬೇಕಾದ್ದು ಮಾಡು ಒಡೆಯಾ, ನಿನ್ನ ಸ್ವತ್ತಲ್ಲವೇ ನಾನು” ಎಂಬ ಭಾವದಿಂದ ರಾಹುಲನ ಮಾತಿನಂತೆ ಚಾಚೂ ತಪ್ಪದೆ ಜಿಗಿ ಎಂದರೆ ಜಿಗಿದು, ನಗು ಎಂದರೆ ನಕ್ಕು, ಅಳು ಎಂದರೆ ಅತ್ತು ತನ್ನ ವ್ಯಕ್ತಿತ್ವವನ್ನು ಮಣ್ಣಿನ ಮುದ್ದೆ ಮಾಡಿಟ್ಟು ಕೂತ ಕುಂದಾಳಿಗೆ ರಾಹುಲನ ವ್ಯಕ್ತಿತ್ವದ ಕೇಂದ್ರಬಿಂದುವನ್ನು ಮುಟ್ಟಿತಟ್ಟುವುದು ಸಾಧ್ಯವಾಗಲಿಲ್ಲ. ಗೋವಾದಲ್ಲಿ ರಾಹುಲನ ಮಿತಿಮೀರಿದ ಮದ್ಯಪಾನ, ಡ್ಯಾನ್ಸ್, ಮೇಬಲ್ಲಳ ಜೋಡಿ ಕುಂದಾಳ ವೈವಾಹಿಕ ಜೀವನದ ಗತಿಯನ್ನು ನಿರ್ದೇಶಿಸುತ್ತವೆ. ಮುಂದೆ ರಾಹುಲ ಪಾರ್ಟಿಯೇರ್ಪಡಿಸಿದ್ದಾಗ ನಡೆಯುವ ಘಟನೆ ಕುಂದಾಳಿಗೆ ರಾಹುಲನ ಹಿಂದಿನ ಬದುಕಿನ ಪರಿಚಯ ಮಾಡಿಕೊಡುತ್ತದೆ. ಹೀಗಾಗಿ ರಾಹುಲನ ವಿಕ್ಷಿಪ್ತ ಸ್ಥಿತಿಯ ಭಾರವನ್ನು ಹೊರುವುದು ಕುಂದಾಳ ಮಧುರ ಹೃದಯಕ್ಕೆ ಸಾಧ್ಯವಾಗದೆ ಅವರ ವೈವಾಹಿಕ ಜೀವನ ಕವಲೊಡೆಯುತ್ತದೆ’.
ಕುಂದಾಳನ್ನು ತನ್ನ ಜೀವನದ ಕೇಂದ್ರವನ್ನಾಗಿ ಮಾಡಿ ಬದುಕಲು ಯತ್ನಿಸಿದ ರಾಹುಲ ಅದರಲ್ಲಿಯೂ ವಿಫಲನಾಗುತ್ತಾನೆ. ಆದ್ದರಿಂದ, ಅವಳನ್ನು ಬಿಟ್ಟು ಇಲ್ಲಿಯ ಎಲ್ಲ ಸಂಬಂಧವನ್ನು ಕಡಿದು-ವಿದೇಶಕ್ಕೆ ಹೋಗುವ ಹಂಬಲ. ಇದರಿಂದ ದಿಕ್ಕುತಪ್ಪುವ ಕುಂದಾಳ ಬಗ್ಗೆ ಆತನಿಗೆ ಸಹಾನುಭೂತಿಯಿದೆ. ಆದರೆ ಆ ಸಹಾನುಭೂತಿಯ ಆಳಾಗಿ ಅವನ ಆತ್ಮ ಇರಲಾರದು. ಅವನ ರೀತಿಯಲ್ಲಿಯೇ, ಅವನ ವ್ಯಕ್ತಿತ್ವದ ಪರಿಧಿಯಲ್ಲಿಯೇ ಅವನು “ತನ್ನತನ” ಶೋಧಿಸಬೇಕಾಗಿದೆ; ಬೇಕಾದಾಗ ನಿರ್ಲಿಪ್ತತೆಯಿಂದ, ಬೇಕಾದಾಗ ಆಸಕ್ತಿಯಿಂದ, ಬೇಕಾದಾಗ ಒಳಗೆ, ಬೆಳಕಾದಾಗ ಹೊರಗೆ-ಒಟ್ಟಿನಲ್ಲಿ ಸ್ವಚ್ಛಂದವಾಗಿ ಇರಲು ಸಾಧ್ಯವಾಗುವ ಪರಿಸರ ಆತನಿಗೆ ಬೇಕಾಗಿದೆ. ಹಾಗೆ ಜೀವಿಸಲು ಹೆಣಗಿದ ರಾಹುಲ-“….ಊರಿಂದ ಊರಿಗೆ, ದೇಶದಿಂದ ದೇಶಕ್ಕೆ, ಸಂಸ್ಕೃತಿಯಿಂದ ಸಂಸ್ಕೃತಿಗೆ, ಹೆಣ್ಣಿನಿಂದ ಹೆಣ್ಣಿಗೆ ಜಿಪ್ಸಿಯಂತೆ ತಿರುಗಿದ. ಆತನಿಗೆ ಬೇರೊಂದಿಲ್ಲ, ತಳವಿಲ್ಲ, ಬುಡವಿಲ್ಲ…….*

1 ಮಾರುತಿ ಶಾನುಭೋಗ-ಸಂಕ್ರಮಣ

೫
ವಿಕ್ಷೇಪ ಕಾದಂಬರಿಯಲ್ಲಿ ದೇಸಾಯಿಯವರು ವಿವಿಧ ಸ್ತರಗಳಲ್ಲಿ ರಾಹುಲನನ್ನು ದುಡಿಸಿಕೊಂಡಿದ್ದರೂ ಒಂದೇ ಪಾತಳಿಯಲ್ಲಿ ಎಲ್ಲ ಕ್ರಿಯೆಗಳೂ ಜರಗುತ್ತವೆ. ಜೀವನದ ಒಂದು ಆಯಾಮದ ಅನುಭವದ ಸಾಧ್ಯತೆಗಳನ್ನು ಸ್ವತಂತ್ರ ಘಟಕಗಳಾಗಿ ಚಿತ್ರಿಸುವುದರ ಮೂಲಕ ರಾಹುಲನ ವ್ಯಕ್ತಿತ್ವದ ಸಂಪೂರ್ಣ ದರ್ಶನವನ್ನು ಸಮರ್ಥವಾಗಿ ಮಾಡಿಕೊಡುವ ದೇಸಾಯಿಯವರ ಈ ವಿಧಾನ ವಿಶಿಷ್ಟವಾದುದು.
ಬುದ್ಧನ ಕತೆಯಲ್ಲಿ ‘ರಾಹುಲ’ ಸಿದ್ದಾರ್ಥನ ಮಗನ ಹೆಸರು. ಸಿದ್ದಾರ್ಥನಿಗೆ ಮಗು ಹುಟ್ಟಿದಾಗ ಆತನಿಗೆ ಒಂದು ರೀತಿಯ ಬಂಧನವೆನ್ನಿಸಿದ್ದರಿಂದ ಆತನಿಗೆ ‘ರಾಹುಲ’ ಎಂದು ಹೆಸರಿಟ್ಟನಂತೆ. ರಾಹುಲ ಎಂದರೆ ಬಂಧನ ಎಂಬರ್ಥ-ಇದು ಒಂದು ಕಥೆ. ಈ ಹಿನ್ನಲೆಯಲ್ಲಿ ರಾಹುಲ ಎಂಬ ಹೆಸರೂ ಕಾದಂಬರಿಯ ನಾಯಕನ ವ್ಯಕ್ತಿತ್ವವನ್ನು ವ್ಯಂಜಿಸುತ್ತದೆ. ಈ ಎಲ್ಲ ಬಂಧನದಿಂದ ತಪ್ಪಿಸಿಕೊಂಡು ಸ್ವಚ್ಛಂದ ಜೀವನ ಬಯಸುವ ನಾಯಕ ಎಲ್ಲ ರೀತಿಯ ಬಂಧನಗಳಿಗೂ ಸಿಕ್ಕಿ ತೊಳಲಾಡಿ ಕೊನೆಗೂ ವಿಕ್ಷಿಪ್ತನಾಗಿಯೇ ಉಳಿಯುತ್ತಾನೆ.
ಶಾಂತಿನಾಥ ದೇಸಾಯಿ ಯಾವುದೇ ಮೌಲ್ಯಗಳನ್ನು ಬುನಾದಿಯನ್ನಾಗಿಟ್ಟುಕೊಂಡು ಪಾತ್ರ ಸೃಷ್ಟಿಸಿಲ್ಲ. ಇದು ಒಳ್ಳೆಯದು, ಇದು ಕೆಟ್ಟದ್ದು (Good and evil) ಎಂದು ಸ್ಥಾಪಿಸಿ ಅದರ ಮೇಲೆ ಪಾತ್ರಗಳನ್ನು ಬೆಳೆಸುವುದಿಲ್ಲ. ‘ಸಂಧ್ಯಾರಾಗದ ಲಕ್ಷಣ’, ‘ಚಂದವಳ್ಳಿಯ ತೋಟ’ದ ಚಂದ್ರೇಗೌಡ ಮೊದಲಿನಿಂದ ಕಡೆಯವರೆಗೂ ಒಳ್ಳೆಯವರಾಗಿಯೇ ಉಳಿಯುವುದು ಕಾದಂಬರಿಕಾರರು ಅವರನ್ನು ಒಳ್ಳೆಯವರನ್ನಾಗಿಯೇ ಮಾಡಬೇಕೆಂದು ತೀರ್ಮಾನಿಸಿದ್ದರಿಂದ. ಒಂದು ರೀತಿಯಲ್ಲಿ ಇದು ಮುಖ್ಯವಾಗಿ ಕಾದಂಬರಿಕಾರರ ಸೋಲು. ಇದನ್ನು ಮೀರಿದಂಥ ಕಾದಂಬರಿಗಳಲ್ಲಿ ಕಾಣುವ ಅಂಶವೆಂದರೆ ಈ ಒಳ್ಳೆಯದು, ಕೆಟ್ಟದ್ದನ್ನು ಸ್ಥಾಪಿಸಲು ಹೊರಡುವುದಿಲ್ಲವಾದರೂ ಕಡೆಗೆ ಪಾತ್ರಗಳಲ್ಲಿ ಅದರ realisation ಕಂಡುಬಂದು ಕಾದಂಬರಿಕಾರರು ಮೊದಲಿಗೇ ಒಳ್ಳೆಯದು, ಕೆಟ್ಟದು ಎಂಬುದನ್ನು ಮೌಲ್ಯಗಳಾಗಿ ಸ್ವೀಕಾರ ಮಾಡಿರುವುದು ಕಂಡುಬರುತ್ತದೆ. ಆದರೆ ದೇಸಾಯಿಯವರ ಕಾದಂಬರಿಯಲ್ಲಿ ಇಂಥ ಮೌಲ್ಯಗಳಿಗೆ ಯಾವ ಮಹತ್ವವೂ ಇಲ್ಲದೆ ಪಾತ್ರಗಳು ತೆಕ್ಕೆಗೊಗ್ಗಿದ ಎಲ್ಲ ಅನುಭವಗಳನ್ನೂ ವಿಶ್ಲೇಷಿಸಿ “ತನ್ನತನ”ವನ್ನು ಅರಸುತ್ತಾ ಹೋಗುತ್ತವೆ. ಈ ಒಂದು ಮುಖ್ಯ ಕಾರಣವೂ ದೇಸಾಯಿಯವರನ್ನು ಉಳಿದ ಕಾದಂಬರಿಕಾರರಿಗಿಂತ ಭಿನ್ನರನ್ನಾಗಿಸಿ, `ವಿಶಿಷ್ಟ ಕಾದಂಬರಿಕಾರ’ರನ್ನಾಗಿ ಮಾಡಿದೆ.

Close

ಹೊಸ ಆವಿಷ್ಕಾರದ ಕವಿ ಶ್ರೀ ನಿಸಾರ್ ಅಹಮದ್

ಹೊಸ ಆವಿಷ್ಕಾರದ ಕವಿ
ಶ್ರೀ ನಿಸಾರ್ ಅಹಮದ್

ವೇಣುಗೋಪಾಲ್‌ ಸೊರಬ

ನಾವು ಒಬ್ಬ ಕವಿಯನ್ನು ಮಹತ್ವದ ಕವಿ ಎಂದು ಗುರುತಿಸುವುದು, ಆತ ಬೇರೆ ಕವಿಗಳಿಗಿಂತ ವಿಭಿನ್ನ ರೀತಿಯಲ್ಲಿ ಬರೆಯುತ್ತಾನೆ ಎಂಬುದಷ್ಟಕ್ಕೇ ಅಲ್ಲ. ಆ ಕವಿ ಬೇರೆಯವರಿಗಿಂತ ವಿಭಿನ್ನ ವಸ್ತುಗಳನ್ನು ಕುರಿತು ಬರೆಯುತ್ತಾನೆ ಎನ್ನುವುದಕ್ಕೂ ಅಲ್ಲ. ಇವುಗಳಿಗಿಂತ ಮುಖ್ಯವಾಗಿ ಆತನಿಗೆ ತನ್ನದೇ ಆದ ಕೆಲವು ಅಥವಾ ಒಂದಾದರೂ-ಮೂಲಭೂತ ಕಾಳಜಿಗಳಿವೆ ಎಂಬ ದೃಷ್ಟಿಯಿಂದ. ಹಾಗೆ ಹೇಳುವಾಗ, ಪ್ರತಿಯೊಬ್ಬ
ಕವಿಯನ್ನೂ ಇವನು ರಾಷ್ಟ್ರೀಯತಾವಾದದ, ವಾಮ ಪಂಥದ, ಇಲ್ಲ ಲಿಬಿಡೊ ಪ್ರಜ್ಞೆಯ ಕವಿ ಎಂದು ಗುರುತಿಸಬೇಕೆಂದಲ್ಲ. ಆದರೆ ಈ ಯಾವುದೋ ಒಂದು ಧೋರಣೆ. ಪ್ರಜ್ಞೆ ಅವನ ಕಾವ್ಯದಲ್ಲಿ ಅತ್ಯವಶ್ಯವಾದ ಅಂಶವಾಗಿಯೂ, ಅನೈಚ್ಛಿಕವಾದ ಅಂಶವಾಗಿಯೂ ಇರುತ್ತದೆ. ಅಷ್ಟೇ ಅಲ್ಲದೆ, ಬೆಳವಣಿಗೆಯ ಬೇರೆ ಬೇರೆ ಘಟ್ಟಗಳಲ್ಲಿ, ಪುನಃ ಪುನಃ ಪ್ರಸ್ತಾಪಿಸಲ್ಪಟ್ಟು -ಪ್ರತಿಮೆಯ ಮೂಲಕವಾಗಲೀ, ಲಯದ ಮೂಲಕವಾಗಲೀ, ಸನ್ನಿವೇಶಗಳ ಪುನರ್‌ನಿರ್ಮಾಣದಲ್ಲಿಯಾಗಲೀ-ಕವಿಗೂ ಆ ವಸ್ತುವಿಗೂ ಇರುವ ನೇರ ಸಂಪರ್ಕ, ಸಹಭಾಗಿತ್ವ, ಆತ್ಮೀಯತೆಗಳು ವ್ಯಕ್ತವಾಗುತ್ತವೆ. ಹೀಗೆ ಆಗದೆ ಇದ್ದಾಗ, ಹಲವಾರು ಕವನಗಳನ್ನು ಬರೆದೂ, ಯಾವುದರಲ್ಲೂ ಕವಿ ತನ್ನ ಮೂಲಭೂತ ಕಾಳಜಿಯನ್ನು ವ್ಯಕ್ತಪಡಿಸದೆ ಇದ್ದಾಗ, ಆತನ ಕಾವ್ಯ ಬಹಳ ಮಟ್ಟಿಗೆ ತನ್ನ ಮಹತ್ವ ಕಳೆದುಕೊಳ್ಳುತ್ತದೆ. ಆತ ಬಿಡಿ ಕವನಗಳಿಗಾಗಿ ಮಾತ್ರ ನಮ್ಮ ನೆನಪಿನಲ್ಲಿ ಉಳಿಯುತ್ತಾನೆ.
ಈ ರೀತಿ ನಾವು ಮಹತ್ವದ ಮತ್ತು ಹಾಗಲ್ಲದ ಕವಿಗಳೆಂದು, ಇರುವ ಕವಿಗಳೆಲ್ಲರನ್ನೂ ಯಾವುದಾದರೂ ಒಂದು ಗುಂಪಿಗೆ ದೂಡುವುದು ಸರಿಯಲ್ಲ. ಜಿವಂತ, ಸಮಕಾಲೀನ ಕವಿಗಳಲ್ಲಿಯಂತೂ, ಅವರ ಕೃತಿಯ ಜೀವಂತಿಕೆ ಮುಖ್ಯ. ಉಳಿದದ್ದು ಆಮೇಲೆ. ಆದರೆ ಅವರಲ್ಲಿ ಅವನು ಯಾವುದೇ ವಯಸ್ಸಿನವನಾಗಿರಲಿ, ಹಿಂದಿರಲಿ, ಮುಂದಿರಲಿ, ಒಂದು ಮಹತ್ವದ ಕವನ ಪ್ರಕಟಿಸಿದರೆ, ಅದನ್ನು ಅವಶ್ಯಕವಾಗಿ ಗಮನಿಸಬೇಕಾದ್ದು ವಿಮರ್ಶಕನ ಕರ್ತವ್ಯ. ಗಮನಿಸುವುದರ ಜೊತೆಗೇ, ಮೌಲ್ಯಮಾಪನ ಮಾಡಿ, ಆ ಕೃತಿಗೆ ಸಲ್ಲತಕ್ಕ ಸ್ಥಾನವನ್ನು ನಿರ್ದೇಶಿಸಬೇಕಾದುದು ಅವನ ಹೊಣೆ. ಪ್ರಸ್ತುತ. ‘ನಾನೆಂಬ ಪರಕೀಯ’ದಲ್ಲಿ ‘ಸಮಾವೇಶ’ ‘ಪ್ರಾಬ್ಬಂಧಗಳು’ ‘ಪ್ರಾಪ್ತಿ’ ‘ಅಂತಃಸತ್ವ’-ನಾಲ್ಕು ಮಹತ್ವಪೂರ್ಣ ಕವಿತೆಗಳನ್ನು ರಚಿಸಿರುವ ಶ್ರೀ. ನಿಸಾರ್ ಅಹಮದರ ಒಟ್ಟು ಕವನಗಳ ಬಗ್ಗೆ, ಅವರ ಕಾವ್ಯಕರ್ಮದ ಬಗ್ಗೆ ಜಾಗರೂಕತೆಯಿಂದ, ಜವಾಬ್ದಾರಿಯಿಂದ ಚರ್ಚಿಸಬೇಕಾದ ಸವಯ ಈಗ ಬಂದಿದೆ.
ಈಗಾಗಲೇ ಹನ್ನೆರಡು ವರ್ಷಗಳಿಗೂ ಮಿಕ್ಕು ಕಾವ್ಯರಚನೆಯಲ್ಲಿ ತೊಡಗಿರುವ, ನಿಸಾರರು ಜನಪ್ರಿಯತೆಯನ್ನು ಗಳಿಸಿದ್ದಾರೆ. ಭಾವಗೀತಾತ್ಮಕವಾದ, ಯಾವುದೇ ಒಂದು ಭಾವವನ್ನು ನೇರವಾಗಿ ರೂಪಿಸುವುದೇ ಇವರ ಮೂಲ ಕವನಗಳ ಗುಣ. ಆಡುಭಾಷೆಯನ್ನು ಬಹಳವಾಗಿ ಬಳಸಿ, ಆಡುಮಾತಿನ ಲಯಕ್ಕೆ ತಮ್ಮ ಸಾಲುಗಳನ್ನು, ಪದಪುಂಜಗಳನ್ನು ಪಳಗಿಸಿ, ಆತ್ಮೀಯತೆಯ ಕಂಪನ್ನು ತಮ್ಮ ಕವನಗಳಲ್ಲಿ ಸಾಧಿಸಿದ್ದಾರೆ. ಆದರೆ ಇವರ ಮೂಲಭೂತ ಕಾಳಜಿಗಳನ್ನು ವ್ಯಕ್ತಪಡಿಸುವ ಕವನಗಳು ಇವರ ಮೊದಲ ನಾಲ್ಕು ಕವನ ಸಂಗ್ರಹಗಳಲ್ಲಿ ಇಲ್ಲದಿರುವುದು ಆಶ್ಚರ್ಯವಾದರೂ ಸತ್ಯ. ಇದಕ್ಕೆ ಕಾರಣವೆಂದರೆ, ಇವರು ಹಲವಾರು ಬಗೆಯ ಕೃತಿ ರಚನೆಗೆ ತೊಡಗಿಸಿದ್ದುದು ಎನ್ನಬಹುದು. ಅದಕ್ಕಿಂತ ಬೇರೆಯುವ ವೈಯಕ್ತಿಕ ಕಾರಣಗಳೂ ಇರಬಹುದು. ಆದರೆ ಈಗ, ಅವರು ಹೆಚ್ಚು ತೂಕವುಳ್ಳ ಕವಿತೆಗಳನ್ನು ಕೊಟ್ಟಿರುವಾಗ, ಆ ಕವಿತೆಗಳ ಬಗೆಗೆ ಹೆಚ್ಚು ಗಮನಿಸಬಹುದು. ಅಲ್ಲದೆ ತಮ್ಮ ಪ್ರತ್ಯೇಕತೆಯನ್ನು, ತಮ್ಮ ವೈಯಕ್ತಿಕತೆಯನ್ನು ಬೆಳೆಸಿಕೊಳ್ಳಲು ಬಹಳ ಹಿಂದಿನಿಂದಲೇ ಅವರು ಮಾಡಿದ ಪ್ರಯತ್ನ ಇಲ್ಲಿ ಸಾರ್ಥಕಗೊಳ್ಳುವ ದಿಕ್ಕಿನಲ್ಲಿ ಏನಾದರು ಸೂಚನೆಗಳಿವೆಯೆ ? ಎಂದೂ ನೋಡಬಹುದು.
೧
‘ವಾಸ್ತವಿಕ ಕವಿತೆಯಲ್ಲಿ ಕವಿ ಇಂದ್ರಿಯಗೋಚರ ಜಗತ್ತಿನ ಆಚೆಗಿರುವುದನ್ನು ಗ್ರಹಿಸಲು ನಡೆಸಿದ ಪ್ರಪ್ರಥಮ ಯತ್ನ ಕಾಣುತ್ತದೆ-
ಮಲಗಿ ಮರೆಯಲಿ ಮರವ ನಿಲ್ಲಿಸಿದ ಬೀಜಗಳು
ಕಾಣಿಸದ ಗೂಢಗಳು
ವಾಸ್ತವಿಕ ;
ಪ್ರಕೃತಿಗೆ ಹತ್ತು ಮುಖ.

ಮರದ ಪ್ರತಿಮೆ ಈ ಕವಿಗೆ ಮತ್ತೆ ಮತ್ತೆ, ವ್ಯಕ್ತಿತ್ವವನ್ನು ಸ್ಥಾಪಿಸುವುದರ ಪ್ರತೀಕವಾಗಿ ಬರುತ್ತದೆ-
ನಾನು ನಾನೇ ಆಗಿ, ಈ ನೆಲದಲ್ಲೆ ಬೇರೊತ್ತಿದರೂ ಬೀಗಿ
ಪರಕೀಯನಾಗಿ
ತಲೆಯೆತ್ತುವುದಿದೆ ನೋಡಿ
ಅದು ಬಲು ಕಷ್ಟದ ಕೆಲಸ.

ಅಂದರೆ, ಈ ನೆಲದಲ್ಲೇ ಬೇರೊತ್ತಿದರೂ, ಮೇಲೆ ತನ್ನ ಪ್ರತ್ಯೇಕತೆಯನ್ನು ಸಾರುವ ಚಿಹ್ನೆಯಾಗಿ ಕಂಡರೆ, ಮರವ ನಿಲ್ಲಿಸುವ ಬೀಜಗಳು ಭೂಮಿಯಲ್ಲಿಯೇ ಮರೆಯಾಗಿ, ಅದೃಶ್ಯಶಕ್ತಿಗೆ ಪ್ರತೀಕವಾಗಿ ಕಂಡುಬರುತ್ತದೆ. ಕವಿಯ ವ್ಯಕ್ತಿತ್ವದ ಬೆಳವಣಿಗೆಯಲ್ಲಿ-ಈ ಎರಡೂ ಅಂಶಗಳು-ಅದೃಶ್ಯಶಕ್ತಿ ಮತ್ತು ಅದರದೇ ಪ್ರಪಂಚ ಹಾಗೂ ಮೇಲೆ ತನಗೆ ಕಂಡುಬರುವ, ತಾನು ಸಾಧಿಸಲಿಚ್ಛಿಸುವ ಪ್ರತ್ಯೇಕತೆ-ಇವೆರಡೂ ಪ್ರಮುಖ ಅಂಶಗಳಾಗಿ ಗೋಚರವಾಗುತ್ತವೆ.
ಪರಕೀಯತೆಗೂ ಪ್ರತ್ಯೇಕತೆಗೂ ಹೆಚ್ಚು ಸಂಬಂಧವಿಲ್ಲವಾದರೂ, ನಿಸಾರ್‌ ಅವರಿಗೆ ಈ ಎರಡೂ ಭಾವನೆಗಳೂ ಒಂದಕ್ಕೊಂದು ಬೆಸೆದುಕೊಂಡಿರುವ ಹಾಗೆ, ಅವೆರಡೂ ತಮ್ಮ ವ್ಯಕ್ತಿತ್ವದ ವಿಶಿಷ್ಟ ಲಕ್ಷಣ ಎಂಬ ಭಾವನೆ ಮೂಡಿಬಂದಿದೆ. ಅಲ್ಲದೆ ಪರಕೀಯತೆ ಪ್ರತ್ಯೇಕತೆಗಳು ಒಂದೇ ಯಾಕಾಗಬಾರದು ? ಎಂಬ ಪ್ರಶ್ನೆಯೂ ಅವರಲ್ಲಿ ಮೂಡಿರುವ ಹಾಗಿದೆ.
ಸ್ವಾಮಿ, ಈ ನಾನೆನ್ನುವ ಅಸ್ತಿತ್ವದ ಚೂರಿನ ಸ್ಪಷ್ಟ
ಅರ್ಥೈಸುವುದು ದೇಶದ ಹವಾಮಾನದಂತೆಯೇ ಕಷ್ಟ.

ಎನ್ನುವ ನಿರ್ಣಯಕ್ಕೆ ತೊಡಗುವ ಅವರು, ಕೆಡುವ ಸಮರ್ಥನೆ ಹೀಗಿದೆ-

ದಾರಿಯಲ್ಲಿನ ಮುಖ ಡಿಸೆಂಬರಿನ ಬೆಳಗಿನ ಬೆಟ್ಟವಾಗಿ
ತಟಕ್ಕನೆ “ಎಲ್ಲೋ ಕಂಡಂತಿದೆಯಲ್ಲ’ ಎನಿಸುವುದಿಲ್ಲವೆ ನಿಮಗೆ ?

ಅಗೋ ಹಾಗೆ–ನಾನೆಂಬ ಪರಕೀಯ ಹಠಾತ್ತನೆ ಭವಿಸಿ
ಮಡದಿಯೆದುರು ಪರ ಹೆಣ್ಣ ದಿಟ್ಟಿಸಿದ ಕಸಿವಿಸಿ
ಯಂತೆ ಕಿರಿದಾದ ಚಿಂತೆ; ಆ ನೆಪದಲ್ಲಿ ಹುಡುಕುವೆ :
ದಾಡಿಗಡ್ಡ ನಮಾಜಿನ ದಿವ್ಯ ಚಹರೆಯ,
ತುರ್ಕೀ ಟೋಪಿಯ ಓರೆಯ ಪರಿಚಿತನ ಮೋರೆಯ ;
ಬದಲು ಟೈ ಸೂಟಿನ ಪರದೇಶಿ ನೆತ್ತರು ತೊಗಲಿನ,
ದೇವರ ಶುಕಿಸಿ, ಶಂಕಿಸಿವರೆಂತೊ ಎನ್ನುವ ದಿಗಿಲಿನ,
ಐದು ದೆವ್ವಗಳ-ಹಾಂಗೊಮ್ಮೆ ಹೀಂಗೊಮ್ಮೆ
ಕುಣಿಯೋಣು ಬಾರಾ-ದ ದ್ವಂದ್ವ.

ಅಂದರೆ ಐದು ದೆವ್ವಗಳ ದ್ವಂದ್ವ, ದೇವರನ್ನು ಶಂಕಿಸಲು ಅವಕಾಶ ಕೊಡದೆ, ತನ್ನ ಅಸ್ತಿತ್ವ ಸ್ವಂತವೆ ? ಪರಕೀಯವೆ ? ಎನ್ನುವುದು ನಿರ್ಧಾರಗೊಳ್ಳದೆಯೆ ಹೋಗುತ್ತದೆ. ನಮಾಜಿನ ದಿವ್ಯ ಚಹರೆಯ, ಪರಿಚಿತನ ಮೋರೆಯ ಇದುರಿನಲ್ಲಿ ತನ್ನ ಪ್ರತ್ಯೇಕತೆ ಕಂಡು, ಅದನ್ನು ಒಪ್ಪಿಕೊಳ್ಳಬೇಕೆ ? ಬೇಡವೆ ? ಎಂಬ ಶಂಕೆಗೆ ಹಾದಿ ಮಾಡುತ್ತದೆ. ಹೀಗೆ ಪರಕೀಯತೆ, ಪ್ರತ್ಯೇಕತೆಗಳ ಪ್ರಶ್ನೆಗಳಿಂದಾಗಿ, ತಮ್ಮ ಅಸ್ತಿತ್ವದ ಬಗ್ಗೆ ಕವಿ ಯಾವುದನ್ನೂ ನಿರ್ಧರಿಸಲು ಕಷ್ಟವಾಗುತ್ತದೆ. ತನ್ನ ಅಸ್ತಿತ್ವ ಬದಲಾಗುತ್ತಿರುವ ಕ್ಷಣಗಳಿಗೆ ಸಿಕ್ಕು, ಯಾವುದೇ ಒಂದು ಸ್ಪಷ್ಟರೂಪವನ್ನು ಪಡೆಯಲಾರದ್ದು ಎಂದು ಕವಿ ಭಾವಿಸುತ್ತಾರೆ. (ದೇಶದ ಹವಾಮಾನದಂತೆಯೇ ಕಷ್ಟ.) ಅಲ್ಲದೆ ಪರಸ್ಪರ ವಿರೋಧಿ ಭಾವನೆಗಳನ್ನು ತಾನು ಸಮನ್ವಯಗೊಳಿಸುತ್ತೇನೆ ಎಂಬ ಹುಸಿ ವಿಶ್ವಾಸ ಕೂಡ ಕವಿಯಲ್ಲಿಲ್ಲ-
ನಿರ್ಧರಿಸುವೆನೀಗ ಬ್ರಾಹ್ಮೀ ಮುಹೂರ್ತದ ರಂಜಾನಿನಲ್ಲಿ :
ಎದೆ ಸೀಯುವಾತಂಕದಲ್ಲಿ :
ಸಮಜಾಯಿಷಿಯ ಸುಲಭೋಪಾಯದಲ್ಲಿ ಕೊರಗುವುದಿಲ್ಲ :
ವಿರುದ್ದಗಳನ್ನೊಪ್ಪುವೆ, ಆದರೆ ಕೊಡಿಸದೆ,
ಭಿನ್ನತೆಯನರಿಯುವೆ, ಆದರೆ-ತಿಕ್ಕಾಡಿಸಿದೆ.

ಇಂತಹ ದ್ವಿಧಾವೃತ್ತಿ ಕೆಲವರಿಗೆ ಅಸಮರ್ಪಕವಾದ, ಭೋಳೇ ಸ್ವಭಾವದ, ಬೇಜವಾಬ್ದಾರಿಶನದ, ಮೇಲು ನೋಟಕ್ಕೆ ಖುಷಿ ಕೊಡುವ, ಬಂಡವಾಳ ರಹಿತವಾದ, ತನ್ನನ್ನು
ತಾನೇ ಮೋಸಗೊಳಿಸಿಕೊಳ್ಳುವ ಹಗುರ ಮಾತಾಗಿ ಕಾಣಬಹುದು. ಆದರೆ, ಮೇಲೆ ಹೇಳಿದ ಪರಕೀಯತೆಯ ಹಾಗೂ ಪ್ರತ್ಯೇಕತೆಯ ಬಗೆಗೆ ಚಿಂತನೆಗೆ ತೊಡಗಿರುವ ಕವಿ ಸಮನ್ವಯಿ ಹೇಗೆ ತಾನೆ ಆಗಬಲ್ಲ ? ಆದ್ದರಿಂದ ಈ ಮಾತಿನಲ್ಲಿ, ಅದು ಭಾರತ-ಅರಬ್ಬೀ ಅಥವಾ ತುರ್ಕೀ ಸಂಸ್ಕೃತಿಗಳಿಗೆ ಸಂಬಂಧಿಸಿದಂತೆಯೇ ಆಗಲಿ, ಹಗುರವಾದ ಮಾತು ಎಂದು ಹೇಳಲಾಗದು. ಕವಿಗೆ ಇಲ್ಲಿ ತನ್ನ ವ್ಯಕ್ತಿತ್ವದ ಅನ್ವೇಷಣೆಯಲ್ಲಿ, ಕಾಣ್ಕೆಯಲ್ಲಿ ಬಹಳ ಮಟ್ಟಿನ ಅನುಭವದಿಂದ ಉಂಟಾದ ಅನಿಸಿಕೆಯನ್ನೇ. ತನ್ನ ಜೀವನನಿಷ್ಠೆಯ ಪ್ರಣಾಳಿಕೆಯಾಗಿ ಕೊಟ್ಟಿದ್ದಾರೆ ಎನ್ನಬಹುದು.
ಇಲ್ಲಿ ಗಮನಿಸಬೇಕಾದ “ಇನ್ನೊಂದಂಶ ಎಂದರೆ, ವಿಲಿಯಂ ಒಟ್ಲರ್ ಯೇಟ್ಸ್ ತನ್ನ ವೈಯಕ್ತಿಕ ಜೀವನದ ಹಲವಾರು ಸಂದರ್ಭಗಳನ್ನೇ ಬಳಸಿದಂತೆ, ನಿಸಾರ್ ಅವರೂ ಸಹ ಬಳಸಿಕೊಂಡು ಉತ್ತಮ ಕಾವ್ಯರಚನೆ ಮಾಡಿದ್ದಾರೆ ಎನ್ನುವುದು. ಕನ್ನಡದ ಇನ್ನಾವ ನವ್ಯ ಕವಿಯೂ ಈ ಕೆಲಸವನ್ನು ಮಾಡಿಲ್ಲ ಎನ್ನುವುದೂ ಅಷ್ಟೇ ಮುಖ್ಯ ವಿಷಯ.
ಇದುವರೆಗೂ ವಿಶ್ಲೇಷಿಸಿದ ಕವನಗಳಿಂದ ಕಂಡುಬರುವ ಒಂದು ಮುಖ್ಯ ಅಂಶ ಎಂದರೆ, ಕವಿಯ ಪರಕೀಯ ಪ್ರಜ್ಞೆ ಅಥವಾ ಪ್ರತ್ಯೇಕತಾ ನಿಷ್ಠೆ. ಇದನ್ನು ನಿಸಾರ್ ಅವರ ಮೂಲಭೂತ ಕಾಳಜಿಗಳಲ್ಲಿ ಒಂದು ಎಂದು ನಿಸ್ಸಂದೇಹವಾಗಿ ಪರಿಗಣಿಸಬಹುದು. ಇದು ಇವರು ಬೆಳೆದುಬಂದ ವಾತಾವರಣ ಹಾಗೂ ಮತ, ಕುಟುಂಬ ಹಾಗೂ ದೇಶೀಯ ಸಂಸ್ಕಾರಗಳು ಕಾರಣ ಎನ್ನುವುದನ್ನು ಲಕ್ಷಿಸಬೇಕು.
೨
ಕಾಮ ಬದುಕಿನ ಮೂಲ ಸ್ರೋತವಾದರೂ, ನಿಸಾರ್‌ ಅಹಮದ್‌ರವರ ಮೊದಲ ಕವಿತೆಗಳಲ್ಲಿ ಕಾಮ ಒಂದು ವಸ್ತುವಾಗಿ ಬಳಕೆಯಾಗಿಲ್ಲ. ಇವರ ‘ಪ್ರಾಗ್ಭಂಧಗಳು’ ಮತ್ತು “ಅಂತಃಸತ್ವ’ವನ್ನು ಅಭ್ಯಸಿಸಿದಾಗ ಇದಕ್ಕೆ ತಕ್ಕ ಮಟ್ಟಿನ ಕಾರಣ ವ್ಯಕ್ತವಾಗುತ್ತದೆ. ವಿಜ್ಞಾನದ ವಿದ್ಯಾರ್ಥಿಯಾದ ನಿಸಾನ್ ಫ್ರಾಯ್ಡ್‌ ಅಥವಾ ಯೂಂಗ್‌ನನ್ನು ತಿಳಿದುಕೊಂಡಿರುವುದಕ್ಕಿಂತ ಹೆಚ್ಚಾಗಿ ಡಾರ್ವಿನ್‌ನನ್ನು ಅವಲಂಬಿಸಿರುವಂತೆ ಕಾಣುತ್ತದೆ.
ಜೀವದ ಅಂತರಾಳದ ಅವ್ಯಕ್ತಶಕ್ತಿ ಇವರಿಗೆ ಸದಾ ಮನಸ್ಸನ್ನು ತುಂಬಿಕೊಂಡಿದೆ. ‘ಮಲಗಿ ಮರೆಯಲಿ ಮರವನಿಲ್ಲಿಸಿದ ಬೀಜದ ವಾಸ್ತವಿಕತೆ ಇವರ ಮನೋಧರ್ಮದ ನೆಲಗಟ್ಟಾಗಿದೆ.
ಋತು ವಿಧೇಯ ಹೂಚಿಗುರಿನಡಿಯ ಹೆಬ್ಬೇರು
ಅಲ್ಲಲ್ಲಿ ನೆಲದಾಚೆ ಹೊರಳಬಹುಮ. (ಅಂತಃಸತ್ವ)
-ಜೀವದ ಒಳತಿರುಳು ಕವಿಗೆ ಹೀಗೆ ಈತೂಹಲವನ್ನು ಕೆರಳಿಸುತ್ತದೆ. ಆದರೆ ಜೀವದ ಹಿಂದಿರುವ ಹೆಬ್ಬೇರನ್ನು ಕವಿ, ದೈವ ಎಂದೋ ಅದೃಷ್ಟ ಎಂದೋ ಕರೆದುಬಿಟ್ಟು, ತನ್ನ ವ್ಯಕ್ತಿತ್ವವನ್ನು ಪರಂಪರಾಗತ ಪ್ರಜ್ಞೆಗೆ ತಳಕು ಹಾಕುವುದಿಲ್ಲ. ಆದ್ದರಿಂದ ಕವಿಯಲ್ಲಿ ವಿಜ್ಞಾನ ಪ್ರಭಾವಕಾರಿಯಾದ ಶಕ್ತಿಯಾಗಿ ವರ್ತಿಸುತ್ತದೆ. ಇದೇ ಕವನದಲ್ಲಿ, ಕವಿ ತಾನು ಅನುಭವಿಸಿದ ಆತ್ಮೀಯ ವಿವರಗಳನ್ನು ಇಡೀ ಜೀವನದ, ವಿಶ್ವದ ಒಟ್ಟು ಸಾರರೂಪದ ಒಂದು ಕೊಂಡಿಯಾಗುವುದನ್ನು ಕಂಡುಕೊಳ್ಳುವುದರ ಸ್ಪಷ್ಟನೆ, ಸುಂದರವಾಗಿ ಮೂಡಿದೆ-
ಕ್ಷಣದ ಮಿತಿಯಲ್ಲಿ ಶಾಶ್ವತ ಹಾಯುವಂತೆನ್ನಿಸುವ
ಹಾಯೆನಿಸುವನುಭವಗಳಲ್ಲಿ
ಪರಿಮಿತ ಬಾಳಿಗಸೀಮ ಕಾಲದ ಬೆಸೆಯುವರ್ಥದ
ಕೊಂಡಿಯಾಗುತ್ತೀಯೆ;
ಸರಕ್ಕನೆ ನಿನ್ನ ನಾವರಿಸಿ ಹಗುರನರಳಿಸುವ
ನೋವೋ ನಲಿವೋ ಅನ್ನಿಸುವ ಧನ್ಯ ಪ್ರಿಯಾಘಾತಗಳಲ್ಲಿ (ಅಂತಃಸತ್ವ)

ಹೀಗೆ ಜೀವವನ್ನು, ಜೀವನದ ವೈವಿಧ್ಯದಲ್ಲೂ, ಜೀವದ ಮೂಲ ರೂಪದಲ್ಲಿ ಕಾಣುವ ಕವಿ, ವರ್ತಮಾನವನ್ನು ಭೂತಕ್ಕೆ ಹೊಂದಿಸಿ, ವರ್ತಮಾನವನ್ನು ಭೂತಕಾಲದ ಆವಿಷ್ಕಾರವಾಗಿ ಕಾಣುವುದು ಸಹಜ. ಆದರೆ ವರ್ತಮಾನ ಭೂತಗಳ ನಡುವ ಹೇಳಿಕೊಳ್ಳಬಹುದಾದ ಯಾವ ಗೆರೆಯೂ ಇಲ್ಲ. ಆದ್ದರಿಂದ ವೈಜ್ಞಾನಿಕ ಹಿನ್ನೆಲೆಯ ಈ ಕವಿಗೆ ಘಟಕದ ಗತಾನುಗತಿಕೆಗಳೇ ಜೀವನದ ನಿಜಸ್ವರೂಪವನ್ನು ಎಚ್ಚರಿಸುವ ಅನುಭವಗಳಾಗುತ್ತವೆ.
ನಿಧಾನ ವ್ಯಾಪಿಸಿ ಕಾಡುವ ವನಗಳ ಆನಾಕಾರ ಘನ ಮೌನಗಳು
ನಿನ್ನವೇ, ಆರ್ಷೇಯದ ಲೋಕಾರೋಪಿತ ಮರುಕಳಿಕೆಗಳು ;
ಕಾಡಿ ಆಗಾಗ್ಗೆ ಸ್ವರೂಪವನೆಚ್ಚರಿಸುವ ಗತಾನುಭೂತಿಯ ಉಳಿಕೆಗಳು.

-ಇಲ್ಲಿಲ್ಲೂ ಕವಿ ಕಾಮವನ್ನು ಕುರಿತು ಯಾವ ಸೂಚನೆಯನ್ನು ಕೂಡ ಕೊಡುವುದಿಲ್ಲ. ಇಡೀ ಚಿತ್ರವೇ ಚರಿತ್ರ ಪೂರ್ವಕಾಲದ ರೋಮಾಂಚಕಾರೀ ಜಗತ್ತಿಗೆ ನಮ್ಮನ್ನು
ಕೊಂಡೊಯ್ಯುತ್ತದೆ. ನಮ್ಮ ಜೀವನಕ್ಕೆ ಅದೇ ಸದ್ಯ ಪ್ರಜ್ಞೆಯನ್ನು ಒದಗಿಸಿದೆ ಎಂಬ ತವಕದಿಂದದ, ಕಾಳಜಿಯಿಂದ, ಇಂತಹುದೇ, ಆದರೆ ಇಂತಹ ಆತ್ಮೀಯತೆಯಿಲ್ಲದ, ಅನುಭವ ‘ಪ್ರಾಗ್ಬಂಧಗಳು’ ಪದ್ಯದಲ್ಲಿ ನಾವು ಕಾಣುತ್ತೇವೆ.
ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶ ಎಂದರೆ, ಕವಿಯ ವರ್ತಮಾನಕಾಲ ಈ ಸದಾ ವರ್ತಮಾನ ಭೂತಕಾಲಕ್ಕೂ ಇರುವ ಸಂಬಂಧ, ಬೇರು-ಹೂತಳಿರುಗಳ ನಡುವಿನ ಸಂಬಂಧವಾದರೂ, ಇಲ್ಲಿ ಪಾಪ ಪ್ರಜ್ಞೆಯಾಗಲೀ, ಕರ್ಮಕಾಂಡಗಳ ಬಗೆಗಿನ ಸಂಬಂಧವಾಗಲೀ ಇಲ್ಲ. ಪಿತೃಲೋಕ ದೇವಲೋಕಗಳಾಗಲೀ, ಆಡಮ್‌-ಈವ್‌ರ ಪ್ಯಾರಡೈಸ್ ಆಗಲೀ ಕವಿಗೆ ಸಂಗತವಾದ ವಿಷಯವಾಗಿ ಎಲ್ಲಿಯೂ ಅನಿಸುವುದಿಲ್ಲ.
ನಿಜ, ‘ಪ್ರಾಗ್ಬಂಧಗಳು’ ಪದ್ಯದಲ್ಲಿ ಈ ಕೆಳಕಂಡ ಸಾಲುಗಳು ಕಾಣಸಿಗುತ್ತವೆ-
ಬರೇ ಹೊಟ್ಟೆ ಹುಟ್ಟುಗಳ ಊಳಿಗಕ್ಕೆ ಹುಟ್ಟಿದವಕ್ಕೆ
ಗೋರಿ ಪಕ್ಷ ನಲವತ್ತನೆಯ ದಿನದ ಪುನಸ್ಕಾರ
ಹೇಗೆ ಸಿಕ್ಕಬೇಕು ? ಸ್ಮೃತಿ ಸ್ಮಾರಕಗಳು
ಹೇಗೆ ನಿಲ್ಲಬೇಕು ?

-ಆದರೆ ಈ ಮಾತುಗಳಲ್ಲಿ ಚಾರಿತ್ರಿಕ ಕಾಲದ ಸುತ್ತಲ ಅಥವಾ ಸುಮಾರು ಎರಡು ಮೂರು ಸಾವಿರ ವರ್ಷಗಳ ಬದುಕಿಗೂ, ಆಮೂಲಾಗ್ರವಾಗಿ ಜಗತ್ತಿನ ಹುಟ್ಟಿನಿಂದ ಇರುವ ಜೀವದೆರಕಗಳಿಗೂ, ಆಕೃತಿಕೊಂಡರೂ ರೂಪ ಪಡೆಯಲಾರದ ವಿಕೃತಿಗಳನ್ನು ಜೀವಕ್ಕಂಟಿದ ಪ್ರಾಗ್ಬಂಧಗಳನ್ನು ಕುರಿತು ಕವಿ ಹೇಳುತ್ತಾರೆ ಎಂಬುದು ಮುಖ್ಯ. ಈ ಬದುಕನ್ನು ತನ್ನ ಬದುಕಿನಿಂದ, ತನ್ನ ಸುತ್ತಲಿನ ಜಂಜಡದಿಂಡ ಬೇರೆಯಾಗದೆಯೆ ನಿಂತು ನೋಡುವ ಕವಿಯ ಸಮಗ್ರ ದೃಷ್ಟಿಯನ್ನು ನಾವು ಮುಖ್ಯವಾಗಿ ನೋಡಬೇಕು.
ಒಟ್ಟಿನಲ್ಲಿ ತನ್ನ ಬೇರನ್ನು ಆಳವಾಗಿ ಬಿಡಬೇಕೆಂದು ಹಾತೊರೆಯುವ ಈ ಪ್ರತ್ಯೇಕತೆಯನ್ನೇ ಅನಿವಾರ್ಯ ಪರಕೀಯತೆಯಾಗಿ ಅನುಭವಿಸುವ ಈ ಕವಿ, ವೈಜ್ಞಾನಿಕ ದೃಷ್ಟಿಯಿಂದಾಗಿ, ತನಗೂ ತನ್ನ ವರ್ತಮಾನಕ್ಕೂ ಯಾವುದೇ ವಿಧದ ಅಸ್ತಿತ್ವ ಸಾಧಿತವಾಗಿದ್ದರೂ, ಅದಕ್ಕೆ ಚರಿತ್ರ ಪೂರ್ವದ ಜೀವದೆರಕಗಳೇ ಕಾರಣ ಎಂಬ ಧೋರಣೆಯನ್ನು ಹೊಂದಿದ್ದಾರೆ. ಅಲ್ಲದೆ ಆ ಪ್ರಾರ್ಚಿನ ಜೀವದೆರಕಗಳೇ ಹಲವು ಹತ್ತು ವಿಧದಲ್ಲಿ ತನ್ನ ಬದುಕಿಗೆ ರೂಪಕೊಡುತ್ತವೆ. ಅರ್ಥ ಕಲ್ಪಿಸುತ್ತವೆ, ಸಹನೀಯವಾಗಿ ಮಾಡುತ್ತವೆ; ಭಯವನ್ನೂ ವಿಸ್ಕೃತಿಯನ್ನೂ ಒಡ್ಡಿ ದುರ್ಭರವನ್ನಾಗಿ ಮಾಡುತ್ತವೆ ಎಂದೂ ಭಾವಿಸಿದ್ದಾರೆ. ಆ ಜೀವದೆರಕಗಳಿಲ್ಲದೆ, ಈ ಬದುಕು ಬಾಳದು ಎಂದು ನಿಷ್ಠೆಯಿಂದ ಭಾವಿಸಿದ್ದಾರೆ.
ಈಗ ‘ಸಮಾವೇಶ’ದತ್ತ ಹೊರಳಬಹುದು. ಸಮಾವೇಶ-ಎರಡು ದೃಷ್ಟಿಯಿಂದ ಮುಖ್ಯವಾಗಿದೆ. ಒಂದು ಇಲ್ಲಿ ಕಾಮ ಪ್ರಧಾನವಾದ ‘ಹೋರಿಸುವ’ ಪ್ರತಿಮೆಯನ್ನು ಕೇಂದ್ರವನ್ನಾಗಿಟ್ಟುಕೊಂಡಿದ್ದಾರೆ. ಎರಡು, ಸಾಂಪ್ರದಾಯಿಕ ಮೌಲ್ಯಗಳನ್ನು ಪ್ರತಿನಿಧಿಸುವ ಪೂರ್ವ-ಪಶ್ಚಿಮಗಳನ್ನು ಕವಿ ಬಳಸಿಕೊಂಡಿದ್ದಾರೆ. ತಮ್ಮ ಸ್ವಂತಿಕೆಗೆ ಯಾವುದೇ ವಿಧದಲ್ಲಿ ಪೂರಕವಲ್ಲದ ಈ ಅಂಶಗಳನ್ನು ಬಳಸುವ ಮೂಲಕ ಕವಿ, ಸ್ವಲ್ಪ ಅಡಚಣೆಯನ್ನು ತಂದುಕೊಂಡಿದ್ದಾರೆ. ಪದ್ಯ ನಿರೀಕ್ಷಿತ ಯಶಸ್ಸನ್ನು ಮುಟ್ಟದೇ ಇರಲು ಅದೇ ಕಾರಣ. ಅಲ್ಲದೆ, ಪದ್ಯದಲ್ಲಿ ಪ್ರಧಾನವಾಗಿ ಕಂಡುಬರುವ ಯಾಜಮಾನ್ಯವನ್ನು ಸ್ಥಾಪಿಸಿಕೊಂಡಿರುವ ಧ್ವನಿಯೊಂದು, ಪದ್ಯದ ಅನನ್ಯವೂ ಆತ್ಮೀಯವೂ ಇರಬೇಕಾಗಿದ್ದ ಸ್ಥಿತಿಗೆ ಮಾರಕವಾಗಿ, ಕೇಂದ್ರಕ್ರಿಯೆ ಹೊರಗಿನ ಪ್ರಜ್ಞೆಯಲ್ಲಿ ತಡವರಿಸುತ್ತದೆ. ಹೀಗಾಗಿ ಕವನ ಸೋಲುತ್ತದೆ.
ಆದರೂ ಕವಿ ತನ್ನ ಮಿತಿಯಲ್ಲಿ ಮಾಡಿರುವ ಪ್ರಯತ್ನವನ್ನು ಕಡೆಗಣಿಸುವಂತಿಲ್ಲ. ಯಾಕೆಂದರೆ ಕಾಮಪ್ರಧಾನವಾದ, ನಿಸಾರ್‌ ಅವರ ಪೂರ್ಣ ಆವಿಷ್ಕಾರ ಹೊಂದಿರುವ ಕವಿತೆಯಾದ ‘ಪ್ರಾಪ್ತಿ’ಯ ಕಡೆಗೆ, ಸಮಾವೇಶ ಒಂದು ದಿಕ್ಸೂಚಿಯಾಗಿದೆ. ಆ ಅರ್ಥದಲ್ಲಿ ಸಮಾವೇಶದ ಸೋಲು ತಕ್ಕಮಟ್ಟಿಗೆ ಅರ್ಥಪೂರ್ಣವಾಗುತ್ತದೆ.
‘ಸಮಾವೇಶ’ದಲ್ಲಿ ದೇಶೀಯ ಗಿಡ್ಡ ಗೌರಿಗೂ, ವಿಲಾಯಿತಿ ತಳಿಗೂ ನಡೆಯುವ ಹೋರಿಸುವ ಕೆಲಸವನ್ನು ಕವಿ ಎರಡು ಸಂಸ್ಕೃತಿಗಳ ನಡುವಣ ವಾಣಿಜ್ಯಕ್ಕೆ, ಸಾಂಸ್ಕೃತಿಕ, ಅನ್ಯ ಸಾಂಸ್ಕೃತಿಕ ಸಂಬಂಧಕ್ಕೆ ಪ್ರತಿಮೆಯಾಗಿ ಬಳಸುತ್ತಾರೆ. ಹೀಗೆ ಹೇಳುವಾಗ ಪೂರ್ವಪಶ್ಚಿಮಗಳ ನಡುವಣ ವೈಷಮ್ಯವನ್ನು ‘ಪೂರ್ವದ ಪರಾವಲಂಬಿ ಶೋಂಬೇರಿತನ’ ಹಾಗೂ ‘ಪಶ್ಚಿಮದ ಭವಾಸಕ್ತಿಯ ಧಂದೆ’ ಎಂಬ ಪಟ್ಟಿಗಳನ್ನು ಲೇಪಿಸುತ್ತಾರೆ. ಆದರೆ ಯಾವ ಒಂದು ಸಂಸ್ಕೃತಿಯೂ, ಒಂದು ದೇಶದ ಮೀಸಲಾಗಿ ಉಳಿಯಲಾರದು. ಸಂಸ್ಕೃತಿ -ಸಂಸ್ಕೃತಿಗಳ ನಡುವಣ ಘರ್ಷಣೆ ಸಹಜವಾದದ್ದಾದರೂ, ಅಂತಹ ಘರ್ಷಣೆಗೆ ಆಯಾ ದೇಶಗಳ ಸಂಸ್ಕೃತಿಯನ್ನು ಕಾರಣವಾಗಿ ಭಾವಿಸುವುದು ಸರಿ ಎನಿಸುವುದಿಲ್ಲ. ಅಲ್ಲದೆ ‘ಗೌರಿಯ ಬಿಚ್ಚೋಲೆತನಕ್ಕೆ ನಾಗರನಯ’ ಎಂಬುದಾಗಲೀ, “…… ಕಳ್ಳ ಗುಟುರಿನ ಕಂತರಿ ತೀಟೆಗೆ ಬಾಲವೆತ್ತದಿರಲಿ” ಎಂಬುದಾಗಲೀ, ಕವನವನ್ನು ತನ್ನ ಸಾಂಪ್ರದಾಯಕ ಚೌಕಟ್ಟಿನಲ್ಲಿ ಬಂಧಿಸುತ್ತದೆಯೇ ಹೊರತು, ಅದಕ್ಕಿಂತ ಹೆಚ್ಚಿನ ಅರ್ಥವಂತಿಕೆಗೆ ಎಡೆಮಾಡಿಕೊಡುವುದಿಲ್ಲ.
‘ಪ್ರಾಪ್ತಿ’ಯಲ್ಲಿ ಕವಿ ಹೇಗೆ, ಇಂತಹುದೇ ವಸ್ತುವನ್ನು ಆಧರಿಸಿ ಇನ್ನೂ ಉತ್ತಮ ರೀತಿಯಲ್ಲಿ ಯಶಸ್ಸನ್ನು ಪಡೆದಿದ್ದಾರೆ ಎಂದು ನೋಡಬಹುದು.
೩
“ಪ್ರಾಪ್ತಿ’ ಇಂದಿನ ಜೀವನವನ್ನು ಕುರಿತು ಹೇಳುತ್ತದಾದರೂ, ಇಡೀ ಬದುಕಿನ ಬಗೆಗೆ ಚಿಂತನೆಯನ್ನೂ, ವ್ಯಾಖ್ಯೆಯನ್ನೂ ಒಳಗೊಂಡಿದೆ. ಗಂಡು ಹೆಣ್ಣುಗಳನ್ನು ಎರಡು ವಿರೋಧೀ ಶಕ್ತಿಗಳಾಗಿ ಮಾತ್ರ ಕವಿ ನೋಡುವುದಿಲ್ಲ. ಬದಲಾಗಿ, ಹೆಣ್ಣುಗುಂಡುಗಳನ್ನು ಸಂಸ್ಕೃತಿ ಹಾಗೂ ಸೂಕ್ಷ್ಮತೆಗಳ ಅರಿವು ಹಾಗೂ ವಿಸ್ಮೃತಿ, ಸುಕುಮಾರತೆ-ಗಡಸುತನ, ಪ್ರಕೃತಿ-ಪುರುಷ, ಕನಸು-ವಾಸ್ತವ್ಯ, ಕಲೆ-ಜೀವನ ಇತ್ಯಾದಿ ದ್ವಂದ್ವಗಳ ಪ್ರತೀಕವನ್ನಾಗಿ ನೋಡಿದ್ದಾರೆ. ಈ ಎರಡೂ ಪರಸ್ಪರ ವಿರೋಧಿಗಳು. ಆದರೂ ಆಯಸ್ಕಾಂತದ ಎರಡು ಮುಖಗಳಂತೆ, ಧ್ರುವಗಳಂತ ಒಂದನ್ನೊಂದು ತೊರೆದು ಇರಲಾರವು. ಆದರೆ ಇವುಗಳ ಸಾಮರಸ್ಯ ಹಾಗೂ ಸಹಯೋಗ ಸಾಧ್ಯವೆ? ಕವಿಗೆ ಅದು ಸಾಧ್ಯ ಎನ್ನುವ ಆತ್ಮವಿಶ್ವಾಸವಿದೆ. ಅಲ್ಲದೆ ಹಾಗೆ ಸಾಧಿತವಾದಾಗಲೇ ಬದುಕಿಗೆ ಪರಿಪೂರ್ಣತ್ವ ಒದಗುತ್ತದೆ ಎಂಬ ಆಶಾಭಾವನೆಯೂ ಇದೆ. ಈ ಪರಸ್ಪರ ವಿರೋಧೀ ಶಕ್ತಿಗಳನ್ನು ಸಮಾವೇಶದಲ್ಲಿ, ಹೋರಿಸುವ ಪ್ರತಿಮೆಯಿದ್ದರೂ, ಅಲ್ಲಿ ಕವಿ ಹೆಚ್ಚಾಗಿ ನೈತಿಕ ತತ್ವಕ್ಕೇ ಗಂಟುಬಿದ್ದು, ಕವನ ಹದ ಪಡೆಯುವುದಿಲ್ಲ. ಇಲ್ಲಿಯಾದರೋ ‘ಪ್ರಾಪ್ತಿ’ ಎಂಬ ಹೆಸರಿಗೆ ತಕ್ಕ ರೀತಿಯಲ್ಲಿ, ಅದು ಸಾರ್ಥಕ್ಯವನ್ನು ಪಡೆದಿದೆ.
ಕವನದ ಆರಂಭದಲ್ಲಿ ಕವಿ ಆತ ಮತ್ತು ಆಕೆಯನ್ನು ಪರಿಚಯಿಸುವ ರೀತಿ ಕುತೂಹಲಕಾರಿಯಾಗಿದೆ. ಅವರುಗಳ ಬಗ್ಗೆ ನಮ್ಮಲ್ಲಿ ಆದರವನ್ನು ಹುಟ್ಟಿಸುತ್ತದೆ. ಅವಳನ್ನು ಪರಿಚಯಿಸುವ ಈ ಸಾಲುಗಳಲ್ಲಿ, ಅವಳಲ್ಲಿ ಅಡಕವಾಗಿರುವ ಹಲವಾರು ಸಂಸ್ಕಾರಗಳನ್ನು ನೋಡಬಹುದು-
ವಾಸನೆಯ ಜೀರ್ಣಿಸಿಕೊಂಡು ಸಿಂಬೆಸುತ್ತವ ಬಲಿಷ್ಠ ನೆರಳುಗಳ
ಮಾಂಸದೊತ್ತಡವ ತಡೆದೊಳಕ್ಕೊತ್ತರಿಸುವ ಗರ್ವಿಷ್ಠ ಸರಳುಗಳ
ಒಳಗೆ ಸೇದಿ ಸಂಕುಚಿಸಿ ಆಕೆ
ವರ್ಣ ತಂತಾನೆ ಏರಿಳಿವ ಸ್ಫಟಿಕದ ಸಲಾಕೆ.
ಪರಂಪರಾಗತವಾಗಿ ಬಂದ ಸಂಸ್ಕಾರಗಳಿಂದ ಆಕೆ ಪುಟಗೊಂಡಿದ್ದಾಳೆ. ಆದರೆ ಯಾವುದು ಸಂಸ್ಕಾರದಿಂದ ಬಂದಿದೆಯೋ ಅದನ್ನು ಒಳಗೆ ಸೇದಿ, ಸಂಕೋಚಗೊಳಿಸಿ, ಆಕೆ ವರ್ಣ ತಂತಾನೆ ಏರಿಳಿವ ಸ್ಪಟಿಕದ ಸಲಾಕೆ. ಇಷ್ಟಾದರೂ ಅವಳದು ಸ್ವಚ್ಛಾವೃತ್ತಿಯಲ್ಲ. ಹೊಸ್ತಿಲು, ಅವಳನ್ನು ಹೊರ ಪ್ರಪಂಚದಿಂದ ಪ್ರತ್ಯೇಕಿಸುವ ರೇಖೆಯಾಗಿದೆ. ಅತಃಪುರದ ಅಮೂಲ್ಯರತ್ನ ಅವಳು. ಇವನಾದರೊ ದೂಳಿನರಳಲ್ಲಿ ಸುಡುತ್ತಾನೆ. ಹೊರಗಿನ ಝಳಕೊಪ್ಪಿಸಿಕೊಳ್ಳುವ; ತಲೆಯ ಮೇಲೆ ಒಂದು ಚಾವಣಿಯನ್ನೂ ಕಾಣದ, ಪ್ರಾಕೃತಿಕಜೀವಿ ಆತ. ಕವನದ ಈ ವಿವರಗಳನ್ನು ಒಳಗೊಂಡ ಮೊದಲ ಭಾಗ ಒಂದು ಪೀಠಿಕೆಯಂತಿದೆ.
ಎರಡನೆಯ ಭಾಗದಲ್ಲಿ ಇವರಿಬ್ಬರಲ್ಲಿ ಇರುವ ಪರಸ್ಪರ ಸೆಳೆತ ಚಿತ್ರಿತವಾಗಿದೆ. ಎಲ್ಲ ಸಂಸ್ಕಾರಗಳನ್ನೂ ಭಟ್ಟಿಯಿಳಿಸಿದಂತಹ ಪರಿಸರದಲ್ಲಿ ಬೆಳೆದ ಹೆಣ್ಣು, ಸಂಸ್ಕಾರದ ಪರಿಚಯವೂ ಇಲ್ಲದ ರೂಕ್ಷ ಗಂಡು-ಇವರಿಬ್ಬರಲ್ಲಿ ವ್ಯಕ್ತವಾಗುವ ಪರಸ್ಪರ ಆಕಾಂಕ್ಷೆ. ಆಕರ್ಷಣೆ ಎರಡು ಸಂಸ್ಕೃತಿಗಳಲ್ಲಿ ಉಂಟಾಗಬಹುದಾದ ಘರ್ಷಣೆಗಿಂತ ವಿಪರೀತವಾದದ್ದು. ಈ ಕವನದ ಮುಖ್ಯ ಅಂಶವೆಂದರೆ, ಇಂದಿನ ಸಾಹಿತ್ಯಿಕ ಮೌಲ್ಯವಾಗಿ ಚಲಾವಣೆ ಪಡೆಯುತ್ತಿರುವ ಶೂದ್ರ-ಬ್ರಾಹ್ಮಣ ಪ್ರಜ್ಞೆಗಳನ್ನು ನಿಸಾರ್‌ರವರು ತಪ್ಪಿಸಿರುವುದು. ಹೀಗೆ ಪರಂಪರಾಗತ ಪ್ರಜ್ಞೆಗಳನ್ನು ಪ್ರತಿನಿಧಿಸಿಯೂ ತಪ್ಪುದಾರಿಗೆಳೆಯಬಹುದಾದ, ಅದರ ಲೇಬಲ್‌ಗಳನ್ನು ತಪ್ಪಿಸಿರುವುದು ಒಂದು ಒಳ್ಳೆಯ ಗುಣ. ಆದರೆ ತನ್ನ ಅಭಿಪ್ರಾಯವನ್ನು ಕವಿ ಹೇಗೆ ಸಮರ್ಥಿಸಿಕೊಳ್ಳುತ್ತಾನೆ ಎನ್ನುವುದನ್ನು ಆತ ಉಪಯೋಗಿಸಿರುವ ಪ್ರತಿಮೆಗಳ ಮೂಲಕ ನೋಡಬೇಕು. ಅಡಿಗರ ಸರ್ವಶ್ರೇಷ್ಠ ಕೃತಿಗಳಾದ ‘ಭೂತ’ ಮತ್ತು ‘ಕೂಪ ಮಂಡೂಕ’ಗಳಲ್ಲಿ ಇದೇ ರೀತಿಯ ಯಾವುದೇ ಒಂದು ಪಂಗಡಕ್ಕೆ ಅಥವಾ ಗುಂಪಿಗೆ ಸೇರಿದ ಧಾರ್ಮಿಕ ನೈತಿಕ ಪದಗಳನ್ನು ಉಪಯೋಗಿಸದೆಯೇ ಪ್ರಜೆಗಳ ಮೂಲಕವಾಗಿಯೇ ತಮ್ಮ ಮೂಲ ಉದ್ದೇಶವನ್ನು ಸಮರ್ಥಿಸುವ ರೀತಿಯಲ್ಲಿ ಸಾಧಿಸಿರುವುದನ್ನು ನೋಡಬಹುದೋ ಹಾಗೆಯೇ ಟಿ. ಎಸ್. ಎಲಿಯಟ್. ತನ್ನ ಕೃತಿಗಳಲ್ಲಿ ಎಲ್ಲಿ ಕ್ರಿಶ್ಚಿಯನ್ ಪ್ರತಿಮೆಗಳನ್ನು ಹೆಚ್ಚಾಗಿ ಬಳಸಿಲ್ಲವೋ ಅಲ್ಲಿ ಇದೇ ರೀತಿಯ ಯಶಸ್ಸು ಗಳಿಸಿರುವುದನ್ನು ನೋಡಬಹುದು. (ಮುಖ್ಯವಾಗಿ The Four Quartets ನ ಕೆಲವು ಭಾಗಗಳನ್ನು ಗಮನಿಸಬೇಕು.) ಇಲ್ಲಿ ಕವಿ ಉಪಯೋಗಿಸುವ ಪ್ರತಿಮೆಗಳು : ಅವನ ಹೊಲ, ಅವಳ ಹಿತ್ತಲ ತೋಟ ಆಥವಾ ಕೈತೋಟ ಹಾಗೆಯೇ ಮುಂಡಾಸಿನ ಪ್ರತಿಮೆ. (ಇದು ಎರಡು ರೀತಿಯಲ್ಲಿ ಕೆಲಸ ಮಾಡುತ್ತದೆ.)
ಆಕೆ ತಾನಾಗಿ ಆತನನ್ನು ತನ್ನ ತೋಟಕ್ಕೆ ಹಿಂದಿಂದ ಹೊಗಿಸಿಕೊಳ್ಳುವಳು. ತನಗೆ ಬರಿಯ ಕನಸೇ ಆಗಿರುವ ಬದುಕನ್ನು ಅವನ ಪ್ರಖರತೆಯಲ್ಲಿ ಕಾಸಿ ಗಟ್ಟಿಗೊಳಿಸುವಳು. ಆದರೆ ಸಂಸ್ಕಾರವಿಲ್ಲದ ಆತನಿಗೆ ಹಿಂಜರಿಕೆ. ಅಲ್ಲದೆ ಆತ ಬಹಳವಾಗಿ ಕಷ್ಟಪಟ್ಟು, ದೈಹಿಕ ಶ್ರಮವಹಿಸಿ ದುಡಿಯುವಾಗ ಸ್ವಲ್ಪವೇ ಅವನ ಮುಂಡಾಸು ಜಾರಿದರೂ, ಆಕೆ ಮಾರು ದೂರ ಹಾರಪಳು ಪ್ರಮಾದಕ್ಕೆ. ಇದು ಆತನಲ್ಲಿಯೂ ಸಂಕೊಚ ಉಂಟುಮಾಡುತ್ತದೆ. ಕಾಡುಮೃಗವಾಗಿ ಆತ ಆಕೆಯ ಮಳೆ ಬೀಳಲಾರ. ಅವನು ಪ್ರಾಕೃತಿಕವಾದ, ಸಂಸ್ಕಾರರಹಿತವಾದ ಚೈತನ್ಯ ಪಡೆದವನಾದರೂ, ಕ್ಯಾಲಿಬಾನ್‌ನಂತೆ ರಾಕ್ಷಸೀ ರಕ್ತದವನಲ್ಲ ಆದ್ದರಿಂದಲೇ ಅವಳ ಹಲವು ಬಗೆಯ ಸೌಂದರ್ಯದೆದುರು ಮುಗ್ಧನಾಗುತ್ತಾನೆ ಆದರೆ ಬೇರೆತನವನ್ನು, ಅವರ ಸುಸಂಸ್ಕೃತ ವ್ಯಕ್ತಿತ್ವಕ್ಕಿಂತ ಭಿನ್ನವಾದ ತನ್ನ ಒರಟುತನವನ್ನು ಕಂಡು ಶಾನೇ ಹೆದರಿಕೊಳ್ಳುತ್ತಾನೆ-
….. ಬೆಳ್ದಿಂಗಳಲ್ಲಿ ಬೆಳ್ಳಿ ಗಂಟೆಯಾಡಿಸಿದ ಹಾಗೆ
ಕೆನ್ನೆಗುಳಿಯತ್ತಿತ್ತ ಗುಲುಗಲು ಗಿಲಿಗಿಲಿಸಿ ಹಿತೋಷ್ಠವಾದವಳು
ಜಾರುಬಂಡೆಯ ಮೇಲಿನೇಕಾಗ್ರ ಹಗಲಂತೆ ತೀಕ್ಷ್ಣವಾದವಳು
ತಟಕ್ಕನೇಳುವ ತನ್ನ ಬೇರೆತನದರಿವಲ್ಲಿ
ಘಾಟಿಂದ ತಳ್ಳಿದ ಹಾಗೆ ತಟಸ್ಥೆಯಾದರೆ-ಹೆದರುವ :
ತಟಸ್ಥೆಯಾದರೆ-ಅಂದರೆ ತಾನಾಗಿಯೇ ಆಹ್ವಾನಿಸಿ ಮನಸ್ಸು ಕೊಡದೇ ಹೋದರೆ, ಅವನು ಸಹಜವಾಗಿಯೇ ಹೆದರಬೇಕಾಗಿಲ್ಲ. ಯಾಕೆಂದರೆ, ಇದು ಅಮೃತಮತಿ-ಅಷ್ಟವಂಕರ ಪ್ರಣಯದಂತಹ ಸಂದರ್ಭವಲ್ಲ. ಆದರೂ ಅವನು ಹೆದರುವುದು ಏತಕ್ಕೆ ?-ಜಯ ಬಂಡೆಯ ಮೇಲಿನೇಕಾಗ್ರ ಹಗಲಂತೆ-ಅವಳು ಸಮಸ್ತ ಸಂಸ್ಕಾರಗೊಂಡವಳು. ಅವಳ ಕಾಮತೃಷೆಯೂ ಅಷ್ಟೇ ತೀಕ್ಷ್ಣ. ಅದು ಜಾರುಬಂಡೆಯ ಹಾಗೆ. ಅದರ ಮೇಲಿನ ಅವಳ ಸಂಸ್ಕಾರ ಮಾತ್ರ ಆ ಬಂಡೆಯ ಮೇಲಿನ ಹಗಲಿನಂತೆ. ಆದ ಆವಿಚಲಿತ. ಇದು ಆತನಲ್ಲಿ ಹೆದರಿಕೆ ಉಂಟುಮಾಡುವುದು ಸಹಜವೇ. ಕವಿ ಮತ್ತೆ ಮುಂದುವರಿಸುತ್ತಾರೆ-
ಬೇಸಿಗೆಗೆ ಧಗೆಯಷ್ಟು ಚೆಲ್ಲು ವಯಸ್ಸಿಗೆ ನಗೆಯಷ್ಟು
ನೈಜವಾದವಳ ಅನ್ಯತನಕ್ಕೆ : ಅವಳ
ಸುತ್ತಾ ನಿಧಿ ಕಾದ ಸನಾತನಕ್ಕೆ ; ಅವಳ
ಕಿರಣಗಳ ಲಾಳಿಯಾಡದ ದಟ್ಟ ನೆರಳಿಗೆ
ಊದೂದಿ ಉರಿಸಿ ತಾನೇ ಮರಳೆರಚುವ ಮರುಳಿಗೆ ಹೆದರುವ
ಇಲ್ಲಿನ ಪ್ರತಿಯೊಂದು ವಿವರವೂ ಆತನಿಗೂ ಅವಳಿಗೂ ಇರುವ ಅಂತರವನ್ನು ಎತ್ತಿ ಹೇಳುತ್ತದೆ. ಅಂತಹವಳ ಜತೆ ಸಂಸರ್ಗ ಸಾಧ್ಯವೆ ? ಸಾಧ್ಯವಾದರೂ ಕೂಡ, ಅದು ಆಳವಾಗುತ್ತಾ ಹೋದಂತೆ, ಆತನಿಗೆ ಹೊಂದಿಕೊಳ್ಳುವುದು ಕಷ್ಟವಾಗುತ್ತದೆ-
……ಕ್ರಮೇಣ ಒಳಕ್ಕೂರಿ ಭೂಮಿ ಸಡಿಲಿಸುವ
ಬಿಕ್ಕಟ್ಟು ಜಾಲವಾದರೆ-ಹೆದರುವ;
-ಇಷ್ಟಾದರೂ ಕನಸಲ್ಲಿ ಅವಳು ಅವನ ರಾಣಿ. ವಾಸ್ತವ್ಯದಲ್ಲಿ ಮಾತ್ರ ಅಷ್ಟು ದೂರ. ಅವನು ಬೆಳೆದ ದವನವನ್ನು ಅವನೆದುರೇ ತೊಳೆದು ಮುಡಿದುರುವ ಸಂಪ್ರದಾಯ ಅವಳದು. ಕನಸಲ್ಲಿ ತನ್ನವಳಾಗಿಯೂ, ವಾಸ್ತವ್ಯದಲ್ಲಿ ಹಾಗೆ ದೂರ ನಿಲ್ಲುವ ಿಮ್ಮೊಗದ ಈ ಕ್ಲಿಷ್ಟಕ್ಕೆ ಆತ ಆವಶ್ಯಕವಾಗಿ ಹೆದರಿಕೊಳ್ಳುತ್ತಾನೆ.
ಮೂರನೇ ಭಾಗದಲ್ಲಿ ಈ ಹೆದರಿಕೆಯನ್ನು ಮೀರಿ ನಿಂತ ಚಿತ್ರ ಪ್ರಭಾವಕಾರಿಯಾಗಿ ಮೂಡಿದೆ. ಎರಡನೆಯ ಭಾಗದಲ್ಲಿ ಅವಳೇ ಪ್ರೇರೇಪಣೆಯನ್ನು ಒದಗಿಸಿದರೆ, ಇಲ್ಲಿ ಕೂಡ ಅವಳೇ ನೆಟ್ಟಗೆರಳುತ್ತಾಳೆ. ಅವನ ಹಟ್ಟಿಗತ್ತಲೊಳಕ್ಕೆ. ಆದರೆ ಈಗಲೂ ಅವನ ಸ್ಥಿತಿಯಲ್ಲಿ ಹೆಚ್ಚಿನ ಬದಲಾವಣೆಯಿಲ್ಲ. ಆಕೆ ಹುರಿದುಂಬಿಸಿದರೆ, ದಿಗಿಲುಗೊಳ್ಳುತ್ತಾನೆ. ಇವನಿಗೂ ಯಾವುದೋ ಅನುಭವ ತೀಕ್ಷ್ಣವಾಗಿಯೇ ಆಗುತ್ತದೆ-
ಬಾಳತೆರವಲ್ಲಿ
ನಡುಹಗಲ, ತಪ್ಪಿದರೆ ಕಾರಿರುಳ ಉಂಡವನ ;
ಆದರೆ ಇದಕ್ಕೂ ತೀಕ್ಷ್ಣವಾಗಿ ಆಕೆ ಸ್ವಯಂಪ್ರೇರಣೆಯಿಂದ ತನ್ನನ್ನು ತಾನಾಗಿ ಕೊಟ್ಟು ಕೊಂಡಾಗ ಅವನು ಒಪ್ಪಿಕೊಳ್ಳದಿರುತ್ತಾನೆಯೆ ?
ಮೂರನೆಯ ಭಾಗದಲ್ಲಿ, ಅವಳು ಕೊಡುವ ಆಹ್ವಾನ ರೋಮಾಂಚಕಾರಿಯಾಗಿದೆ-
ತಿಕ್ಕುತ್ತಾ ಹೋಗು, ಕೊಡವಿ ಪ್ರದರ್ಶನದ ಬಣ್ಣ
ನಿಧಾನವಾಗಿ ಹೊರಳಿಸುತ್ತೇನೆ ಒಳಗೆಂಪ-ನಿನ್ನ ನಾಡಿಗಳ ನಲಿಯು
ವಂಥದ್ದೇ-
ಎನ್ನುವಾಗ, ಮೂಲಭೂತವಾಗಿ ಅವರಿಬ್ಬರಲ್ಲಿ ಹರಿಯುವ ಸತ್ವ ಒಂದೇ ಎನ್ನುವುದರ ತಿಳುವಳಿಕೆ ಆಕೆಯಲ್ಲಿ ಮೂಡಿರುವುದು, ಆಕೆಯ ಕಾತರದ ಅಂಶವಾಗಿ ಕೂಡ ಪರಿಗಣಿಸಬಹುದು. ಮತ್ತೆ-
ಹಿಡಿ ಹಿಡಿ, ಇದ ಹಿಡಿ ಬರೀ ತಿರುಳಾಗುತ್ತೇನೆ ;
ಕಾಡ, ನೀನು ಕುದಿವ ಕಂಬನಿಗರೆವ ಕರುಳಾಗುವೆ :
ಚಪ್ಪರಿಸು, ಏರುವೆ.
ಝಳಪಿಸುವೆ ನಿನ್ನ ಝಳಪಿಸಿಕೊಂಡಂತೆ ನಾನೂ :
-ಇಲ್ಲಿ ಹೆಜ್ಜೆಹೆಜ್ಜೆಗೂ ಅವಳ ಸಮರ್ಪಣ ಭಾವವನ್ನೂ, ಜತೆಯಲ್ಲಿಯೇ ಅವನ ಗುಣಗಳನ್ನು ಉಜ್ವಲಗೊಳಿಸುವ ಧಾರ್ಷ್ಟ್ಯತೆಯನ್ನೂ ಕಾಣುತ್ತೇವೆ. ಹಾಗೆಯೇ ವಿಧಿ ನಿಷೇಧಳಿಗೆ ಒಳಗಾಗಿ, ತನ್ನ ಅಂತರ್ಯದ ಪ್ರಕಾಶಕ್ಕೆ ಅವಕಾಶವಿಲ್ಲದ ಅವಳು ಈಗ ಅವನನ್ನು ಆಹ್ವಾನಿಸುವುದರ ಮೂಲಕ ತನ್ನ ಸ್ವಂತ ನಿಧಿಯನ್ನು ಇನ್ನಷ್ಟು (ಬರಿಯ ತಿರುಳಾಗುತ್ತೇನೆ) ಶ್ರೀಮಂತಗೊಳಿಸಿಕೊಳ್ಳುತ್ತಾಳೆ. ಅವನ ಝಳದಲ್ಲಿ ಆಕೆ ಹರಿತಗೊಂಡ ಶಕ್ತಿಯಂತೆ ಝಳಪಿಸುತ್ತಾಳೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ತನ್ನಲ್ಲಿ ಅಡಕವಾಗಿರುವ ಪ್ರಾಚೀನ ಕಾಲದಿಂದ ನಡೆದುಬಂದ ದಿವ್ಯತ್ವದ, ಜ್ಞಾನದ ಪ್ರಭೆಯನ್ನು ಅವನಿಗೆ ಪರಿಚಯಿಸುತ್ತಾಳೆ.
ನಿನ್ನವರ ಒಳಗುಗಳ ಧಿಗ್ಗನುರಿಸಿದ ನನ್ನ ಸಂಬಂಧಿಗಳ
ಆರಿವು ಹೊಡಕರಿಸುವ ದಿವ್ಯದೊಂದಿಗಳ
-ಅವನು ತನ್ನಲ್ಲಿ ಕಾಣಬೇಕೆಂದು ತವಕಿಸುತ್ತಾಳೆ. ಇಂತಹವಳ ಒಡನಾಟ, ಆತ್ಮೀಯ ಸಂಬಂಧ ಆತನಿಗೆ ಇನ್ನೂ ಕೆಲವು ಭ್ರಮೆಗಳನ್ನು ಒಡ್ಡಿದಂತೆ ತೋರುತ್ತದೆ. ಆದರೆ ಅದರಲ್ಲೂ ಆತ ಒಂದು ಬಗೆಯ ಹಿತಕರವಾದ ಗುಣವನ್ನು ವ್ಯಕ್ತಪಡಿಸುವುದು, ಆತನಲ್ಲಿ ಉಂಟಾಗಿರುವ ಪರಿವರ್ತನೆಯ ಸೂಚನೆಯಾಗಿದೆ-
ಸಂಜೆ ಮೈಗೂಡಿಸಿಕೊಂಡ ಕೆರೆಯಂತೆ ಧಗಧಗಿಸನೆ ತಣ್ಣಗೆ ?
ಕಣ್ಣು ಕುಕ್ಕಿ ಹೊರಳನೆ, ಎರೆಹುಳದಂತೆ ಆಪ್ತ ಮಣ್ಣಿಗೆ ?
ನಾಲ್ಕನೆಯ ಭಾಗದಲ್ಲಿ ಧನ್ಯತೆಯ, ಪ್ರಸನ್ನತೆಯ ಚಿತ್ರ ಆಪ್ಯಾಯಮಾನವಾಗಿ ಮೂಡಿದೆ. ಇಲ್ಲಿನ ಆಸ್ಖಲಿತವಾದ ಸುಂದರ ವಾತಾವರಣ, ಇಂದಿನ ನವ್ಯಕಾವ್ಯದಲ್ಲಿ ಬೇರೆಲ್ಲಿಯೂ ಸಿಗುವುದಿಲ್ಲ. ನವ್ಯ ಕಾವ್ಯಕ್ಕೆ ಸಹಜ ಎನಿಸಿರುವ ವ್ಯಂಗ್ಯದ ಮೊನಚು, ಕಟಕಿಗಳು ಇಲ್ಲಿಲ್ಲ. ಇಲ್ಲಿಯ ಪ್ರಸಾದ ಗುಣ, ಇಡೀ ಕವನದ ಆರೋಗ್ಯಕರ ಬೆಳವಣಿಗೆಗೆ ಕಿರೀಟಪ್ರಾಯವಾಗಿದೆ. ಇಲ್ಲಿನ ಸಾಲುಗಳು ಅವರಿಬ್ಬರಲ್ಲಿ ಪರಸ್ಪರ ಉಂಟಾದ ಪರಿವರ್ತನೆ-ಪರಿಪೂರ್ಣತೆಯ ಕಡೆಗಿನ ಪರಿವರ್ತನೆಯನ್ನು, ಪ್ರಾಮಾಣಿಕವಾಗಿ (Authentic) ಮೂರ್ತೀಭವಿಸುತ್ತವೆ-
ನೋಡುತ್ತಿದ್ದಂತೆ ಹಿಗ್ಗುವಳು ಹಿಗ್ಗುವಳು ಹಿಗ್ಗುವಳು
ತನ್ನ ಹಿತ್ತಲ ತೋಟ ಅವನ ಹೊಲವಾದಂತೆ :
ಅರಿವಿನೆಳೆ ನಾಜೂಕು ಬದುಕಲ್ಲಿ ಹೊಕ್ಕು ಬಲವಾದಂತೆ.
ಇದುವರೆಗೂ ಕೇವಲ ಅಮೂರ್ತವಾಗಿದ್ದ, ಕನಸಿನ ಗಂಟಾಗಿದ್ದ ಅವರ ಬದುಕಿಗೆ ಅರಿವಿನೆಳೆ ನಾಜೂಕು ಹೊಕ್ಕು, ಅದು ಬಲಿ ಪಡೆಯಿತು. ಮೂರ್ತರೂಪ ಪಡೆಯಿತು. ಅವನ ಸಂಸರ್ಗದಿಂದಾಗಿ ಅವಳಿಗೆ ಹೊಸ ಚೈತನ್ಯ ಪ್ರಾಪ್ತಿಯಾಯಿತು. ಪರಸ್ಪರ ಆಕರ್ಷಣೆ ಮತ್ತು ಲೈಂಗಿಕ ಕ್ರಿಯೆ ಕೂಡ. ಈಗ ನಿರ್ಭಿತವಾಗಿ ನಡೆಯುವುದಕ್ಕೆ ದಾರಿಯಾಯಿತು-
ಮುಂಡಾಸು ಮೂಸಿ, ತೊಟ್ಟರಿವೆ ಹಾಸಿ ಒರಗಿಸುವಳು.
ಮೊದಲು ಯಾವ ಮುಂಡಾಸು ಕೊಂಚ ತಗಲಿದರೂ, ಪ್ರಮಾದವೆಂದು ಭಾವಿಸುತ್ತಿದ್ದಳೊ, ಈಗ ಅದೇ ಹುಡುಗಿಯಲ್ಲಿ ಎಂತಹ ಪರಿವರ್ತನೆ ! ತಾನು ಅವನಿಂದ ಒಂದು ರೂಪ ಪಡೆದ ಹಾಗೆಯೇ. ಅವನಲ್ಲೂ ಹೊಸ ಒಗರನ್ನು ಚಿಗುರನ್ನು ಪ್ರೇರೇಪಿಸುತ್ತಾಳೆ-
ಮೃದುತ್ವದ ಬೆಚ್ಚನೆಯ ಸಮತ್ವದಲ್ಲಿ
ಸವರುತ್ತಾಳೆ ಒಗರ
ಹೇರುತ್ತಾಳೆ ಅವನತ ಕೊರಡಲ್ಲೂ ಮಾರ್ದವತೆಯ ಚಿಗುರ.
ಹೀಗೆ ಇವರಿಬ್ಬರ ಸಮ್ಮಿಲನ, ಅವರಿಬ್ಬರನ್ನೂ ಒಂದು ಹೊಸ ಸ್ವರಕ್ಕೆ ಎಳೆದೊಯ್ಯುತ್ತದೆ.
ಕೊನೆಯ ಭಾಗದಲ್ಲಿ ಕವಿ. ಆ ಹೊಸ ಸ್ವರದ ಬಗ್ಗೆ ಸೂಚ್ಯವಾಗಿ ತಿಳಿಸಿದ್ದಾರೆ-
ಹತ್ತಿಸಿ ಅವನ ಘಾಟಿಂದ ಕಂಪಿಗೆ
ಪರಿಣಮಿಸಿ ತಾನು ಬಿಳುಪಿಂದ ರಕ್ತಕ್ಕೆ
ಮೌನಿ, ಪ್ರಬಲಿಸಿಕೊಂಡು ಮಾತು
ಹಡಿಸಿಕೊಳ್ಳುತ್ತಾಳೆ ಬಿಸಿಲಧಾತು.
ಇದು ಪರಸ್ಪರ ಅರಿವಿನ, ಒಳಕೊಳ್ಳುವುದರ ಒಂದು ಉನ್ನತ ಮಜಲು. ಈ ಮಟ್ಟದಲ್ಲಿ ನಮಗೆ ಅವಳಲ್ಲಿ ಉಂಟಾಗಿರುವ ಪರಿವರ್ತನೆ (ಬಿಳುಪಿಂದ-ರಕ್ತ, ಬಿಸಿಲಧಾತು ಹೂಡಿಸಿಕೊಳ್ಳುವಿಕೆ) ಅಸಾಮಾನ್ಯವೆಂದು ತಿಳಿಯುತ್ತದೆ.
ಆದರೆ ಇಡೀ ಕವನ ಯಾವುದರ ಕಡೆಗೆ ಕೈಚಾಚಿ ತೋರಿಸುತ್ತದೆಯೋ ಅಂತಹ ಒಂದು ಹೊಸ ಪ್ರಪಂಚದ, ಹೊಸ ದೃಷ್ಟಿಕೋನದ, ಹೊಸ ಆವಿಷ್ಕಾರದ, ಹೊಸ ಮೌಲ್ಯಗಳ ಸೃಷ್ಟಿ. ಅವುಗಳ ತೊಡಗುವಿಕೆಯನ್ನು ಈ ಸಾಲುಗಳಲ್ಲಿ ಮಾರ್ಮಿಕವಾಗಿ ಚಿತ್ರಿಸಿದ್ದಾರೆ-
ಕೋಳಿಗಳ ಗೂಡೆಗಳ ರೊಪ್ಪಗಳ ಜೀವೋತ್ತೇಜಕ ಮೂಲ ವಾಸನೆಯಲ್ಲಿ
ನಿಸ್ಸಂಕೋಚ ಬೆರೆಯುತ್ತಾಳೆ: ಹದವಾಗಿ ಬೆವರುತ್ತಾಳೆ.
ಆಗಷ್ಟೇ ಉತ್ತ ನೇಗಿಲ ಹಸಿ ಹಸಿ ಮಣ್ಣಂತೆ ಕಚ್ಚಿಕೊಂಡಾಕೆ
ಮೃದುವಾಗುತ್ತಾಳೆ ಹೊಸದಾಗಿ;
ತನ್ನಾತ್ಮಕ್ಕೆ ಮೂರ್ತತ್ವ ದಕ್ಕಿಸಿಕೊಂಡ ಸ್ವಲಾಭದಲ್ಲಿ
ಅವನ ಓರೆ ಕೋರೆಗೆ ನಯದ ಒರೆಯಾಗುತ್ತಾಳೆ.
ನಾಗರಿಕತೆಯ ಮೂಲಕ ಉಂಟಾಗಿರುವ ನಾಗರಿಕ ಹಾಗೂ ಗ್ರಾಮ್ಯ ಎಂಬ ಧ್ರುವೀಕರಣ, ಸಂಸ್ಕೃತ-ಪ್ರಾಕೃತ ಪ್ರಭೇದಗಳು, ಉಚ್ಚ-ನೀಚ ಎಂಬ ವರ್ಗಗಳ – ಇವುಗಳನ್ನು ಮೀರಿದ ಹೊಸ ಮೌಲ್ಯಗಳ ಸೃಷ್ಟಿಯಾಗಬೇಕಾದರೆ, ಇಂತಹ ಸಹಯೋಗದಿಂದ ಮಾತ್ರ ಸಾಧ್ಯ ಎಂದು ಕವಿ ನಂಬಿದ್ದರೆ, ಅತನ ಆದರ್ಶಗಳನ್ನು ಪುಷ್ಟೀಕರಿಸಲು ಮೇಲಿನ ಸಾಲುಗಳು ಸಹಾಯ ಮಾಡುತ್ತವೆ.
೪
ಕೊನೆಯದಾಗಿ, ನಿಸಾರ್‌ ಅವರ ಈಚಿನ ಮುಖ್ಯ ಕವಿತೆಗಳನ್ನು ಗಮನಿಸಿದಾಗ, ಅವರ ಸ್ವಂತಿಕೆಯನ್ನು ಸಾಧಿಸುವ ಚಪಲವೊಂದೇ ಅವರ ಗುರಿಯಾಗಿಲ್ಲ ಎಂದು ದೃಢಪಡುತ್ತದೆ. ಎರಡನೆಯದಾಗಿ, ತನ್ನ ಮತ್ತು ಹೊರಗಿನ ಸಂಸ್ಕೃತಿಗಳ ಸಮನ್ವಯ ಸಾಧ್ಯವಿಲ್ಲವೆಂದು ಭಾವಿಸಿದರೂ, ಎರಡು ವಿರೋಧೀ ಶಕ್ತಿಗಳ, ಬಣಗಳ ಸಮನ್ವಯ ಹಾಗೂ ಪರಸ್ಪರ ಮುಖಾಮುಖಿಗಳಿಂದಲೇ ಹೊಸದರ ಆವಿಷ್ಕಾರ ಸಾಧ್ಯ ಎಂದು ಭಾವಿಸಿದ್ದಾರೆ ಎನ್ನುವುದು ವ್ಯಕ್ತವಾಗುತ್ತದೆ. ಮೂರನೆಯದಾಗಿ, ಈ ಕವಿ ತನ್ನ ಪರಿಸರದಿಂದಾಗಿ, ಬೇರೆಯೆಲ್ಲ ಸಮಕಾಲೀನ ಕವಿಗಳಿಗಿಂತ ಹೆಚ್ಚಾಗಿ ವೈಜ್ಞಾನಿಕ ದೃಷ್ಟಿ ಕೋನ, ಅದರ ಅನ್ವೇಷಣೆ ಮತ್ತು ವಿಚಕ್ಷಣೆ-ಇವುಗಳಿಂದ ಪ್ರಭಾವಿತರಾಗಿದ್ದಾರೆ ಎಂದು ತಿಳಿದು ಬರುತ್ತದೆ. ಇಂತಹ ಕವಿಯ ಮುಂದಿನ ಬರೆವಣಿಗೆಯನ್ನು ನಾವು ಕುತೂಹಲದಿಂದ ಎದುರು ನೋಡಬೇಕಾದದ್ದು ನಮ್ಮ ಕರ್ತವ್ಯವೇ ಆಗಿದೆ.
ಸೂಚನೆ :
1 ಈ ಲೇಖನದಲ್ಲಿ ಪ್ರಸ್ತಾಪಿಸಿರುವ ಕವನಗಳಲ್ಲಿ ‘ವಾಸ್ತವಿಕ’ ಮತ್ತು ‘ನಿಮ್ಮೊಡನಿದ್ದೂ ನಿಮ್ಮಂತಾಗದೆ’ ಎರಡು ಕವಿತೆಗಳನ್ನು ಬಿಟ್ಟು ಉಳಿದವು ನಾನೆಂಬ ಪರಕೀಯದಲ್ಲಿ ಸೇರ್ಪಡೆಯಾಗಿವೆ.
2 “ಪ್ರಾಗ್ಭೇಧಗಳು” ಕವಿತೆಯ ಬಗ್ಗೆ ನನ್ನ ಲೇಖನ ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ
ವಿದ್ಯಾರ್ಥಿಗಳು ಪ್ರಕಟಿಸುತ್ತಿರುವ ಸಂಕೀರ್ಣ ಪತ್ರಿಕೆಯ ಜೂನ್ ೧೯೭೧ರ ಸಂಚಿಕೆಯಲ್ಲಿ ಪ್ರಕಟವಾಗಿದೆ. ಆಸಕ್ತಿಯುಳ್ಳವರು ಅದನ್ನು ನೋಡಬಹುದಾಗಿದೆ.

Close

ಏಕಲವ್ಯ-ಒಂದು ತೌಲನಿಕ ವ್ಯಾಸಂಗ

ಏಕಲವ್ಯ -ಒಂದು ತೌಲನಿಕ ವ್ಯಾಸಂಗ

ನಾಗಲಕ್ಷ್ಮಿ ಹರಿಹರೇಶ್ವರ

ಏಕಲವ್ಯನ ಕಥೆಯನ್ನು ಎಲ್ಲರೂ ಬಲ್ಲರು. ನಾವು ಅವನನ್ನ ಮೊಟ್ಟಮೊದಲು ಸಂಧಿಸುವುದು ಮಹಾಭಾರತದ ಆದಿಪರ್ವದಲ್ಲಿ. ವ್ಯಾಧರಾಜ ಹಿರಣ್ಯಧನುಷನ ಮಗನಾದ ಈತ ಚಾಪವಿದ್ಯಾ ಪ್ರವೀಣನಾಗಲು ದ್ರೋಣನ ಬಳಿ ಸಾಗುತ್ತಾನೆ. ವ್ಯಾಧನೆಂಬ ಕಾರಣದಿಂದಲೂ, ಮಿಕ್ಕ ಶಿಷ್ಯರಿಗೆ ಗಮನ ಕೊಡಬೇಕೆಂಬ ಉದ್ದೇಶದಿಂದಲೂ, ದ್ರೋಣ ಏಕಲವ್ಯನನ್ನು ಶಿಷ್ಯನನ್ನಾಗಿ ತೆಗೆದುಕೊಳ್ಳಲಿಲ್ಲ. ಆದರೆ ಇವನು ಕಾಡಿಗೆ ಮರಳಿ, ದ್ರೋಣನ ಮೃಣ್ಮೂರ್ತಿಯೆದುರು, ತುಂಬು ಶ್ರದ್ಧೆಯಿಂದ ಅಭ್ಯಸಿಸಿ, ಬಿಲ್ಲುಗಾರಿಕೆಯಲ್ಲಿ ನಿಷ್ಣಾತನಾಗುತ್ತಾನೆ. ಈ ಸುದ್ದಿ ಎಲ್ಲೆಡೆ ಹರಡಿ, ಅರ್ಜುನನ ಅಸೂಯೆಯನ್ನು ಕೆರಳಿಸಿ, ದ್ರೋಣ ಏಕಲವ್ಯನ ಬಳಿಗೆ ಬರುತ್ತಾನೆ. ಗುರುದಕ್ಷಿಣೆಯಾಗಿ ಏಕಲವ್ಯನ ಬಲಗೈ ಹೆಬ್ಬೆರಳನ್ನು ಕೇಳುತ್ತಾನೆ. ಏಕಲವ್ಯನು ನಗುಮೊಗದಿಂದಲೇ ಬೆರಳನ್ನು ಕತ್ತರಿಸಿ ಕೊಡುತ್ತಾನೆ. ಅಲ್ಲಿನ ವಸ್ತುವನ್ನಾಧರಿಸಿ, ಏಕಲವ್ಯನನ್ನು ಮರಂತ ನಾಯಕನನ್ನಾಗಿ ಚಿತ್ರಿಸುತ್ತಾ ಶ್ರೀ ಗೋವಿಂದ ಪೈಗಳು “ಹೆಬ್ಬೆರಳು” ವನ್ನೂ, ಶ್ರೀ ಕುವೆಂಪುರವರು “ಬೆರಳ್‌ಗೆ ಕೊರಳ್”ನ್ನೂ ಮತ್ತು ಶ್ರೀ ಕೈಲಾಸಂರವರು ‘ಪರ್ಪಸ್’ ನ್ನು (The Purpose) ಬರೆದಿದ್ದಾರೆ. (ಶ್ರೀ ಬಿ. ಎಸ್. ರಾಮರಾಯರು ‘ಪರ್ಪಸ್‌’ ನ್ನು ‘ಏಕಲವ್ಯ’ವನ್ನಾಗಿ ಕನ್ನಡಿಸಿದ್ದಾರೆ.) ಇನ್ನುಳಿದ ಎರಡು ನಾಟಕಗಳೊಡನೆ ‘ಪರ್ಪಸ್’ ನ ತೌಲನಿಕ ವ್ಯಾಸಂಗವೇ ಈ ಪ್ರಬಂಧದ ಉದ್ದೇಶ.
ಕವಿ ಒಬ್ಬ ದ್ರಷ್ಟಾರ. ತನ್ನ ದರ್ಶನ ಕಾಣ್ಕೆಯನ್ನು ಓದುಗನ ಅನುಭವಿಸುವಂತೆ ಅವನನ್ನು ಕವಿಯ ಮಟ್ಟಕ್ಕೆ ಏರಿಸುವ ಬಯಕೆ ಕೈಲಾಸಂರವರದು :
“These scenes and words, you will see, you will hear, I have seen and heard before, As King or Priest, Poltroon or Peer, Some where…Somewhen of yorel”
ಕುವೆಂಪುರವರ ‘ಬೆರಳ್ಗೆ ಕೊರಳ್‌’ ಗುರು-ಶಿಷ್ಯ ಸಂಬಂಧವಾದ ತತ್ವ, ಕರ್ಮತತ್ವ ಸಮರ್ಪಣರೂಪವಾದ ಯಜ್ಞ ತತ್ವಗಳು ಪ್ರತಿಮಾ ವಿಧಾನದಿಂದ ಧ್ವನಿತವಾದ ಒಂದು ವಿಶಿಷ್ಟ ರೂಪರೇಷೆ’, ‘ಹೆಬ್ಬೆರಳ್‌’ ಲೌಕಿಕ ದೃಷ್ಟಿಯನ್ನು ಹೊತ್ತು ಸವರ್ಣ ಆಸವರ್ಣಗಳ ಅನೈಕ್ಯವನು ಎತ್ತಿ ತೋರಿಸಲು ಪ್ರಯತ್ನಿಸಿದ ಕೃತಿ. ಗುರಿಗೂ ಗಮ್ಯಕ್ಕೂ ಇರುವ. ಸಿದ್ಧಿಗೂ ಸಾಧನೆಗೂ ಇರುವ, ನಿಲುವಿಗ ನಡೆಗೂ ಇರುವ ಸಂಬಂಧದ ವಿವೇಚನೆ Purposeನ ಉದ್ದೇಶ. Purpose ನಾಟಕದ ಶಿಲ್ಪದ ಕೇಂದ್ರತತ್ವ ಮೂರು ಬಗೆಯ ಉದ್ದೇಶಗಳ ಹೋಲಿಕೆ: ಒಂದೆಡೆ, ಪಾರ್ಥನ “ಕರ್ಮಣಾ ಸ್ವಾರ್ಥಃ’ ದೃಷ್ಟಿ. “A man whose, labour is no more but, means to gain his selfish ends,” ಇನ್ನೊಂದೆಡೆ, ‘ಕರ್ಮಣಾ ಪರಾರ್ಥಃ” ದ ಸಂಕೇತವಾಗಿ. ಏಕಲವ್ಯ, “He whose one aim in his labour is that others might reap the harvest of his toils without the least profit to himself.” ಇವೆರಡರ ನಡುವೆ ಧ್ರುವಗಳಷ್ಟು ಅಂತರ. ಈ ವೃತ್ತದ ಏರುಪೇರುಗಳ ಸಮತೋಲನಕ್ಕೊ ಎನ್ನುವಂತೆ ಕೇಂದ್ರ ಬಿಂದುವಾಗಿ, ಗುರುವಾಗಿ, ‘ಕರ್ವ ಏವ ಅರ್ಥಃ’ ಪ್ರತಿಪಾದಿಸುವ ದ್ರೋಣ. ಕರ್ಮಕ್ಕಾಗಿ ಕರ್ಮ. “He, whose labour is in itself the end and aim of his labour.”
೨
ವಸ್ತು ಒಂದೇ ಆದರೂ ವಿನ್ಯಾಸದಲ್ಲಿನ ವೈವಿಧ್ಯ ಮೇಲುನೋಟಕ್ಕೆ ಗುರುತಿಸಬಹುದಾದ ಒಂದು ಅಂಶ. ‘ಹೆಬ್ಬೆರಳು’ವಿನಲ್ಲಿ ಗ್ರೀಕ್ ನಾಟಕಗಳಂತೆ, ಜಪಾನಿನ ನೋ (Noh) ನಾಟಕಗಳಂತೆ ಗೊಂದಳದವರು (chorus ನವರು) ಪಾತ್ರಗಳೊಡನೆ ಮಿಳಿತವಾಗಿ ಕಥೆಯ ಸುರುಳಿಯನ್ನು ಬಿಚ್ಚುತ್ತಾ ಹೋಗುತ್ತಾರೆ. ಅದೇ ‘ಬೆರಳ್‌ಗೆ ಕೊರಳ್’ ನಲ್ಲಿ
ಏಕಲವ್ಯ ತಾನು “ಗುರುವಿನೆಡೆಗೆಯ್ದಿ ಬಿಲ್ ಬಿಜ್ಜೆಯಂ ಕಲ್ತು ಬರ್ಪೆನ್” ಎಂದ ದ್ರೋಣನೆಡೆ ಸಾಗಿದ ಪರಿಯನ್ನೂ, ಅಲ್ಲಿ ನಡೆದ ಘಟನೆಯನ್ನೂ ತನ್ನ ಅಬ್ಬೆಗೆ ನಿರೂಪಿಸುತ್ತಾನೆ. “ಹೆಬ್ಬೆರಳು’ ವಿನ ಏಕಲವ್ಯನಿಗೆ ತನ್ನೆಡೆಗೆ ಗುರು ಬರುವನೆಂಬ ಸೂಚನೆಯಿತ್ತು: “ಗುರು ಬಂದಪನಿತ್ತ ಎಂದರಿಯುತ್ತೆ, ಇಮ್ಮಡಿ ಮುಮ್ಮಡಿಸಿತು ನಲವು.” “ಬರಲ್‌ಗೆ ಕೊರಳ್’ ನಲ್ಲಿ ಸಹ ಹಾಗೆಯೇ-“ದಿಟಂ ಇಂದು ಗುರು ಬರ್ಪ ಎನ್ನೀ ವನ ಸ್ಥಳಕೆ”, ಎಂದು ಭಾವೋದ್ವೇಗದಿಂದ ಚಡಪಡಿಸುತ್ತಿರುವ ಏಕಲವ್ಯನ ಸಂಭ್ರಮದ ಸ್ವಾಗತ ದ್ರೋಣನಿಗೆ ಕಾದಿದೆ. ‘ಪರ್ಪಸ್”ನದು ಈ ಬಗೆಗೆ ವಿಭಿನ್ನ ರೀತಿಯದು. ಏಕಲವ್ಯನ ಇತಿವೃತ್ತದಲ್ಲಿಯೇ ಅತಿ ಮುಖ್ಯವಾದ ‘ಗುರು ಸಮಾಗಮ’ವನ್ನು ನಾವು ನಮ್ಮೆದುರೇ ನೇರವಾಗಿ ಕಾಣುತ್ತೇವೆ. ಇಲ್ಲಿ, ಬಿಲ್ಲುಗಾರಿಕೆಯ ಮೊದಲ ಪಾಠಗಳನ್ನು ಆಚಾರ್ಯ ದ್ರೋಣ ಬೋಧಿಸುತ್ತಿದ್ದಾಗ ಒಮ್ಮೆ ಪಾರ್ಥನಾಗಿ, ಇನ್ನೊಮ್ಮೆ ಏಕಲವ್ಯನಾಗಿ ನಾವೂ ಕಲಿಯತೊಡಗುತ್ತೇವೆ. ಅಲ್ಲದೆ, ನಾಟಕಕ್ಕೆ ಕಿರೀಟಪ್ರಾಯವಾದ ಕೊನೆಯ ದೃಶ್ಯದಲ್ಲಿ ಮತ್ತೆ ಆಗುವ ಗುರು-ಶಿಷ್ಯ ಸಮಾಗಮ ಆಕಸ್ಮಿಕ.
ಸಾಹಿತ್ಯದ ಬೇರೆ ಪ್ರಕಾರಗಳಲ್ಲಿನದಕ್ಕಿಂತ ನಾಟಕದಲ್ಲಿನ ಆಕಸ್ಮಿಕಕ್ಕೆ ಹೆಚ್ಚು ಗಮ್ಮತ್ತು ಉಂಟು. ಘಟನಾ ಪರಂಪರೆ ಸಹಜ ರೀತಿಯಲ್ಲಿ ಮುನ್ನಡೆಯುತ್ತಿದ್ದಾಗ ವಿವಿಧ ಪಾತ್ರಗಳು ಇಂತಿಂಥ ರೀತಿ ಸಂಗತವಾಗಿ ವರ್ತಿಸಬೇಕು ಎಂದು ನಿರೀಕ್ಷಿಸುತ್ತೇವೆ. ಆಕಸ್ಮಿಕದ ಸಿಡಿಲೆರಗಿದಾಗಲೇ ಪಾತ್ರಗಳ ಹೊರಕವಚ ಬಿರಿದು, ನೈಜ ವ್ಯಕ್ತಿತ್ವ ಬಯಲಾಗುತ್ತದೆ. ಆದರೆ ಈ ಆಕಸ್ಮಿಕ ಅಸಂಭವವಾದ, ಅಸಾಧ್ಯವಾದ ಕಾಕತಾಳಿಯಗಳಿಗೆ ಪೌರಾಗಿದ್ದರೆ ನಾಟಕದ ಒಟ್ಟು ಪ್ರಭಾವದ ಮೇಲೆ ಋಣ ಪರಿಣಾಮಕ್ಕೆ ಆಹ್ವಾನ ಕೊಟ್ಟಂತಾಗುತ್ತದೆ. ಕೈಲಾಸಂರವರ ‘ಪರ್ಪಸ್‌’ನಲ್ಲಿನ ಆಕಸ್ಮಿಕ ಮೊದಲ ವರ್ಗದ್ದು. ಅಲ್ಲದೆ ಇಲ್ಲಿ ಇನ್ನೊಂದು ವಿಚಾರ ಗಮನಾರ್ಹ : “ಹುಡುಗಾಟದಿಂದ ಆಕಸ್ಮಿಕಗಳು ದರಂತಗಳಾಗುವುದಿಲ್ಲ; ಅಪಘಾತಗಳಾಗುತ್ತವೆ. ಅಪಘಾತಗಳು ದುರಂತ ನಾಟಕಕ್ಕೆ ವಸ್ತುವಾಗುವುದಿಲ್ಲ’.
೩
ಕಲಿಯಲು ಏಕಲವ್ಯ ಏಕೆ ಹೊರಟ ? ಈ ದಿಶೆಯಲ್ಲಿ ‘ಪರ್ಪಸ್’ನ ಏಕಲವ್ಯ ರಸಾರ್ದ್ರವೂ ನಾಟಕೀಯವೂ ಆದ ಪರಿಭಾಷೆಯಲ್ಲಿ ದ್ರೋಣನೊಡನೆ ಸಂಭಾಷಿಸುವುದು ಇನ್ನೆರಡು ಕೃತಿಗಳಿಗಿಂತ ತೀರ ಭಿನ್ನ. “Will you kindly help me, Sir ? Will you kindly help me become the greatest archer in the world ? ” ಎಂದು ಬೇಡಿಕೊಳ್ಳುತ್ತಾನೆ. ಏಕಲವ್ಯ, ಏಕಂತೆ ? “I must dare anything to Save my poor little fawrs.” ಅಲ್ಲದೆ, “His one aim in life is to slay all tbe beasts of prey in all the forests on this earth, in order that all the deer, fawns and other innocent creatures may live free from fear of death and hurt,”
ಎಂಥ ಉದಾತ್ತ ಧ್ಯೇಯ! ತನ್ನ ಕಲಿಕೆಯ ಉದ್ದೇಶದಲ್ಲಿ ಏಕಲವ್ಯ ಸಫಲನಾದನೇನು? ಸಫಲನಾದುದೊಂದೇ ಅಲ್ಲ, “ಶಿಷ್ಯಾತ್ ಇಚ್ಛೇತ್ ಪರಾಜಯಂ” ಎಂಬುದಕ್ಕೆ ಅನ್ವರ್ಥವಾಗಿ, “Amazing Partha, this is bow-craft beyond the wildest stretch of my imagination” ಎಂದು ದ್ರೋಣನೇ ಉದ್ಗರಿಸುವಂತೆ, “who-ever he is, he is not only not behind you in archery, Partha, but, so far ahead of you and me too, that we shall never in this life come within yojanas of his bow•manship” ಎಂದು ಅವನ ಚಾಪವಿದ್ಯಾ ಚಾಕ-ಚಕ್ಯತೆಯನ್ನು ಹೊಗಳುವಂತೆ ಆಯಿತು.
ಪ್ರತ್ಯಕ್ಷವಾಗಿ ಗುರು ಏನನ್ನೂ ಕಲಿಸಲಿಲ್ಲವಲ್ಲ ಹಾಗಾದರೆ ಪರೋಕ್ಷದಲ್ಲಿ ಕಲಿಕೆ ಸಿದ್ಧಿಸಿದ ಬಗೆ ಹೇಗೆ ? ಇಲ್ಲಿದೆ ಅದಕ್ಕೆ ಉತ್ತರ : *À pupil can learn more from his guru than what the guru himself knows, if the purpose of the pupil for learning is nobler than what the purpose of the guru was when he learnt from his guru.”
ಇಲ್ಲಿ ವಾಚ್ಯವಾಗಿ, ಇನ್ನಿತರ ಪೌರಾಣಿಕ ನಾಟಕಗಳಲ್ಲಿ ಸೂಚ್ಯವಾಗಿ ಕೈಲಾಸಂ ಬೇಕೆಂದೇ “ಉದ್ದೇಶ’ದ ಮೇಲೆ ಒಜ್ಜೆ ಬೀಳಿಸಿದ್ದಾರೆ. ಏಕೆಂದರೆ, ಕಲಿಕೆಯಲ್ಲಾಗಲೀ ಅಥವಾ ನಿಲುವಿನಲ್ಲಾಗಲೀ “ಉದ್ದೇಶ ಮತ್ತು ಉದ್ದೇಶದ ಸರಿಯಾದ ಕಲ್ಪನೆ ಕೈಲಾಸಂರಿಗೆ ಆತ್ಯಂತಿಕ ಮಹತ್ವದವು.”
ಇದರೊಂದಿಗೆ, ‘ಪರ್ಪಸ್‌ನಲ್ಲಿನ, ಆದರ್ಶ ಶಿಕ್ಷಣ ಕ್ರಮಕ್ಕೆ ಅವಶ್ಯವಾದ ಐದು ಮೂಲ ಸೂತ್ರಗಳು ಇಗೋ ಇಲ್ಲಿವೆ:
೧ A perfect mastery of the ground Work of archery. ಬಿಲ್ಲುಗಾರಿಕೆ ಮೂಲತತ್ವಗಳ ಸ್ವಾಮ್ಯ ಯಾವ ತೆರನಾದ ವಿದ್ಯಾಭ್ಯಾಸಕ್ಕೂ ಈ ಬುನಾದಿ ಆನಿವಾರ‍್ಯ.
೨ A Power to concentrate. ಏಕಾಗ್ರಚಿತ್ತನಾಗುವ ಸಂಕಲ್ಪ ಶಕ್ತಿ. ಅನನ್ಯ
ಚಿಂತನೆ ಅತ್ಯವಶ್ಯವಾದ ಅಂಶ.
೩ A deep and fervent love to one s guru. ಶಿಷ್ಯನಿಗೆ ಗುರುವಿನಲ್ಲಿ ಗಾಢವಾದ ಭಕ್ತಿಯುತವಾದ ಪ್ರೇಮ, ಅಗಾಧವಾದ ಶ್ರದ್ಧಾನ್ವಿತವಾದ ಭಕ್ತಿ.
೪ Guru’s whole-hearted willingness to teach the pupil. ಶಿಷ್ಯನಿಗೆ ಬೋಧಿಸಲು ಗುರುವಿನ ಹತ್ಪೂರ್ವಕವಾದ ಇಚ್ಛೆ, ಮನಃಪೂರ್ವಕವಾದ ಸಂಕಲ್ಪ.
೫ Assiduous practice, ಸತತವಾದ ಅಭ್ಯಾಸ, ಅವಿಶ್ರಾಂತ ಸಾಧನೆ.
೪
ಪಾತ್ರ ಪೋಷಣೆಯಲ್ಲೀಗ ಸಾಮ್ಯ-ವೈಷಮ್ಯಗಳನ್ನು ಗುರುತಿಸೋಣ : “ತಮ್ಮಡಿಯ ಶಿಷ್ಯನೆನೆ ಇನ್ನು ಆನ್ ಅನರ್ಹನೆಂ”, ಎಂದುಕೊಳ್ಳುತ್ತಲೇ ಪ್ರವೇಶಿಸುವ ‘ಹೆಬ್ಬೆರಳು’ ವಿನ ಅರ್ಜುನ ನಾಟಕದುದ್ದಕ್ಕೂ ಅಪಕ್ವ ಬುದ್ಧಿಯ ತರುಣನಂತೆ ವರ್ತಿಸುತ್ತಾನೆ. “ಬೆರಳ್‌ಗೆ ಕೊರಳ್” ನಲ್ಲಿ ಅರ್ಜುನನ ಪಾತ್ರ ಹಿನ್ನೆಲೆಯಲ್ಲಿ ಮಾತ್ರ. ಶಬ್ದವೇದಿ ವಿದ್ಯೆಯಲ್ಲಿ ಅಪ್ರತಿಮ ಲಾಘವ ತೋರಿಸಬಲ್ಲ ಬಿಲ್ಲ ಬಾಲಕನೊಬ್ಬ ಇಲ್ಲಿ ಬಳಿಯಲ್ಲಿಹನೆಂಬ ಚಾಡಿ ಸುದ್ದಿಯನ್ನ ದ್ರೋಣನ ಕಿವಿಗೊರೆಯುವ ‘ಹೆಬ್ಬೆರಳು’ ವಿನ ಅರ್ಜುನ, “ಎಂತುಟೋ ವಿಧಾತನ ಆ ಸಂಕಲ್ಪವಂತೆ ತಾನ್ ಅಹುದಲ್ಲದೆ ಪೇಚಾಡಿದೊದು ಅನ್ಯಥಾ ಅಹುದೆ” ಎನ್ನುವ ಮನೋಭಾವದವನು.
ಕೈಲಾಸಂರ ಪಾರ್ಥ ಸ್ವಾರ್ಥಿ. ನಿಜ, ಅವನು ಸೂಕ್ಕಿ, ಕೆರಳುಗೊರಳಿನಲ್ಲಿ ಕಟಕಿ ಮಾತನಾಡುವ ಅಸೂಯೆಯ ಮುದ್ದೆಯೂ ಹೌದು. ಕಾರಣ ? ಒಡಹುಟ್ಟಿದವರಲ್ಲೆಲ್ಲಾ ಬಿಲ್ಲುಗಾರಿಕೆಯಲ್ಲಿ ಅತ್ಯಂತ ಸಮರ್ಥ ತಾನೆಂಬ ಹೆಮ್ಮೆ. ಬೆಳೆವಾಗ ಮುದ್ದು ಮಿತಿ ಮಿಾರಿ, ಹಿರಿಯರು ಗುರುಗಳು ಮಿಕ್ಕೆಲ್ಲರಿಗಿಂತ ಹೆಚ್ಚಾಗಿ ತನ್ನ ಶ್ರೇಯೋಭಿಲಾಷಿಗಳು ಎಂದು ತಿಳಿದಾಗ ಮೈಯುಂಡ ಮೇಲರಿಮೆ. ತಾನು ಆರ್ಯನೆಂಬ ಅಭಿಮಾನ. ಈ ಸವ್ಯಸಾಚಿಯ ಕಲಿಕೆಯ ಉದ್ದೇಶ ಅಧಮರೀತಿಯದಾದ್ದರಿಂದ ಏಕಲವ್ಯನಷ್ಟು ಸಿದ್ಧಿಯನ್ನು ಪಡೆಯಲಾಗಲಿಲ್ಲ. “ಜಗತ್ತಿನಲ್ಲೆಲ್ಲಾ ಅದ್ವಿತೀಯ ಬಿಲ್ಲುಗಾರನನ್ನಾಗಿಸುವೆ”-ಎಂದು ದ್ರೋಣ ಕೊಟ್ಟ ವಚನ ದ್ರೋಣನಿಂದಲೇ ಪರೋಕ್ಷವಾಗಿ ಭಾಗವಾಯಿತು. ಎಂದು ಚುಚ್ಚು ಮಾತಾಡಿ, ಗುರುವನ್ನು ನೋಯಿಸಿ, ಏಕಲವ್ಯನನ್ನು ಕೆರಳಿಸಿ, ಏಕಲವ್ಯ ತಾನೇ ತನ್ನ ಹೆಬ್ಬೆರಳನ್ನು ಕತ್ತರಿಸಿ ಗುರುವಿನಡಿ ಇಡುವ ಕಾಯಕ್ಕೆ ಕಾರಣನಾಗುತ್ತಾನೆ. ಕೈಲಾಸಂರ ಅರ್ಜುನ. ಈ ಫಲ್ಗುಣನಿಗೆ ಯಾರಾದರೂ ಸಹಾನುಭೂತಿ ತೋರಿಸುವುದಾದರೆ ಅದು ಮರುಕದ ಅಪವ್ಯಯ.
‘ಹೆಬ್ಬೆರಳು’ ವಿನ ದ್ರೋಣನ ಚಿತ್ರಣ ಅಸಮಂಜಸ. “…ನಿನ್ನೆ ಕಂಡಿಹೆನವನ, ಚಾಪಾಗಮವ ಕಲಿವನಂತೆ ! ನನ್ ಅದನವಗೆ ಕಲಿಸ ಬೇಕಂತೆ!!! ಏನ್ ಉದ್ಧಟೆ!!!, ನಿಷಾದಗೆ ಅಮಮೂ ಧನುರ್ವೆದವೇ ?……ರಾಸಭಕ್ಕೀಯಲೆ ಪುರೋಡಾಶ ? ಕುರುವೃದ್ಧರು ಏನೆನ್ನರು ನನಗೆ ? ಹಾ ನಾನೊಲ್ಲೆ” -ಎನ್ನುವ ಬಿಲ್ಲೋಜ ಆ ದ್ರೋಣ. “ನನಗರಿದು ಕಂದ, ನೀ ಬೇರೆ ಎಲ್ಲಿಗೆ ಐಯ್ದಿ ಕಲಿ”, ಎಂದು ಏಕಲವ್ಯನನ್ನು ಸಾಗಹಾಕುತ್ತಾ, ತಂಟಿ ಮರುಕದ ನೆಪದಿಂದ, “ಕಾಮಿತಾರ್ಥವ ನಿನ್ನ ಪೂರೈಸಲಿ ಈಶ್ವರಂ, ಬಿಲ್ಜಾಣನಾಗು ; ಜಗದಲಿ ಜಸವೊಡೆ, ಕಂದ”-ಎಂದು ಹರಸುವ ಹಾರವ. ಮುಂದೆ ನೇರವಾಗಿ ಗುರುದಕ್ಷಿಣೆಯನ್ನು ಕೇಳುತ್ತಾ, “ನಿನ್ನ ಬಲಗೈ ಹೆಬ್ಬೆರಳನು ಈ ಎನೆ, ಕಂದ, ಏನೆಂಬೆ” ಎಂದು ಕೇಳಿದಾಗ, ಏಕಲವ್ಯ “ಇತ್ತೆನಿದೋ ಗುರುದೇವ” ಎನ್ನುತ್ತಾ ತತ್ ಕ್ಷಣ ತನ್ನ ಹೆಬ್ಬೆರಳನ್ನು ಕಡಿದು ದ್ರೋಣನಿಗೆ ಸಮರ್ಪಿಸಿದಾಗ, “ಏಂ ಗೆಯ್ದೆ ? ಏಂ ಗೆಯ್ದೆ ?……ಅಕಟಕಟ ಬಿನದವನ್ ಏರೆಣಿಸಿದೆಯಾ ಕಂದ !” ಎನ್ನುವ ಈ ದ್ರೋಣನನ್ನು ಕವಿ ಎಷ್ಟು ಕೆಳಮಟ್ಟಕ್ಕೆ ಇಳಿಸಿದ್ದಾರಲ್ಲ ಎಂದು ಪರಿತಪಿಸುತ್ತೇವೆ.
“ಬೆರಳ್‌ಗೆ ಕೊರಳ್’ ನಲ್ಲಿಯಾದರೋ ಪರಿಸರದ ಒತ್ತಡಕ್ಕೆ ಸಿಲುಕಿದ ದ್ರೋಣನ ಪರಿಸ್ಥಿತಿ ಇತ್ತ ದರಿ ಅತ್ತ ಪುಲಿ’, ಇಲ್ಲಿ ‘ಏಕಲವ್ಯ, ಅವನಿತ್ತುದೇ ಆ ಪೆಸರ್.’ ಅಲ್ಲದೆ, “ಆಸೆಗೆಡದಿರ್, ನೀನೆಮ್ಮ ಮನೆಯೊಳ್‌ ಆಳಾಗಿರು. ಈ ಗರುಡಿಗೆನ್ನ ಸೇವೆ ಗೈತರಂತೆ, ದೂರದಿಂ ಕಂಡು ಕಲಿ” ಎಂದು ಸ್ವಲ್ಪವಾದರೂ ಪ್ರೋತ್ಸಾಹಿಸುವ ಮನೋಭಾವದ ವ್ಯಕ್ತಿ. “ನಾನಂತುಂ ಕಟುಕಂ ದಿಟಂ. ನಂಬಿದವನಂ ಕೊರಲ್ ಕೊರೆವ ಕಜ್ಜಮಂ ಕೈಕೊಂಡು ಬಂದೆನಂ”, ಎಂದು ವ್ಯಸನ ವೈತರಣಿಯಲ್ಲಿ ಮುಳುಗೇಳುತ್ತಿರುವ ಈ ದ್ರೋಣ ‘ಹೆಬ್ಬೆರಳು’ ವಿನ ಕುಂಭಸಂಭವನಿಗಿಂತ ಎಷ್ಟೋ ಉತ್ತಮ. ಆದರೆ, ಇಲ್ಲೂ ಗುರುವೇ ಗುರುದಕ್ಷಿಣೆಯನ್ನು ಕೋರುತ್ತಾನೆ: “ದಕ್ಷಿಣೆಗೆ ದಕ್ಷಿಣದ ಪೆರ್ ಬೆರಳ್‌. ನಿನ್ನ ಬಿಲ್ ಬಿಜ್ಜೆಗೆ ಉಸಿರಪ್ಪ ಪೆರ್ ಬೆರಳ್. ಬಾಣಮಂ ಪಿಡಿದು ಸಿಂಜಿನಿಗೊಯ್ಯುವ ಪೆರ್ ಬೆರಳ್”. ಅನಂತರ, “ಕೆಮ್ಮನಿರ್ದಪೆ ಏಕೆ ? ದುಮ್ಮಾನವೋ ವತ್ಗ ?” ಎಂದು ಪ್ರಶ್ನಿಸುತ್ತಾನೆ. ಮಡುಗಟ್ಟಿ ನಿಂತಿದ್ದ ರಕ್ತವನ್ನ ಬಾಗಿ ನೋಡಿದಾಗ ದ್ರೋಣನಿಗೆ ತನ್ನ ವಿಕೃತವಾದ ಬಿಂಬ ಪ್ರತಿಫಲಿತವಾಗುತ್ತದೆ. “ಕರ್ಮದ ಪಾಂಗುಮರಿಗೆ ಮರಿ, ಬೆರಳ್‌ಗೆ ಕೊರಳ್” ಎಂದು ಭೀಕರ ಭವಿಷ್ಯದ ಮುನ್ಸೂಚನೆಯೀಯುತ್ತಾನೆ.
ದ್ರೋಣನ ಮೇಲೆ ಕೈಲಾಸಂ ಚೆಲ್ಲುವ ನೆಳಲು-ಬೆಳಕು ಅವರ ಎಲ್ಲಾ ನಾಟಕಗಳಲ್ಲಿ ಕಂಡು ಬರುವ ಪೌರಾಣಿಕ ದೃಷ್ಟಿಯ ಒಂದು ಉತ್ತಮ ನಿದರ್ಶನ. ಗಗನದಂತೆ ವಿಶಾಲ ಸ್ವಭಾವ, ಸಮುದ್ರದಂತೆ ಗಂಭೀರ ವರ್ತನೆಯ ಈ ದ್ರೋಣಾಚಾರ್ಯ ಮನೋರಾಗವನ್ನು ಅನುಭವಿಸುತ್ತಿರುವಾಗಲೇ ಅದನ್ನು ವಿಶ್ಲೇಷಿಸುವ ಸಾಮರ್ಥ್ಯವುಳ್ಳ ಸೀಮಾ ಪುರುಷ. “My little man, I love all little men of all castes alike.” ಎನ್ನುವ ವಿಶಾಲ ಮನೋಭಾವ ಈತನದು. ವೇಳೆಯೊಂದಿಲ್ಲ ಎನ್ನುವ ಒಂದೇ ಒಂದು ಕಾರಣಕ್ಕಾಗಿ ಏಕಲವ್ಯನನ್ನು ಶಿಷ್ಯನನ್ನಾಗಿ ಸ್ವೀಕರಿಸಲಿಲ್ಲ ಅಷ್ಟೆ. ಏಕಲವ್ಯ ಕೇಳುತ್ತಾನೆ: “If you bad had the time, sir, and Ware free to teach me Sir, Would you have liked, the least bit liked to teach me ?” ಅದಕ್ಕೆ ದ್ರೋಣನ ಉತ್ತರ ಕೇಳಿ : “Liked ? The least bit liked ? Why my little man, if I had only the least chance, I should love to teach you” ಎನ್ನುತ್ತಾನೆ. ಪ್ರಾಮಾಣಿಕವಾಗಿ, ಕೈಲಾಸಂ ಪೌರಾಣಿಕ ಪಾತ್ರಗಳನ್ನ ಚೊಕ್ಕವಾಗಿ ನಿರ್ಮಿಸುವುದರಲ್ಲಿ ಸಿದ್ಧಹಸ್ತರು. ಭಾರತೀಯ ಸಂಸ್ಕೃತಿಗೆ ಅನುಗಣವಾಗಿ ಒಬ್ಬ ಗುರುವಿನ ಘನತೆ-ಗೌರವಗಳು ಮೈವೆತ್ತ ಉದಾತ್ತ ಪಾತ್ರ ಇವರ ದ್ರೋಣ. ತನ್ನ ಶಿಷ್ಯನೆಂದು ಹೇಳಿಕೊಳ್ಳುವಾತ ಬಿಲ್ಗಾರಿಕೆಯಲ್ಲಿ ತನ್ನನ್ನೂ ಮೀರಿಸುವಷ್ಟರಮಟ್ಟಿಗೆ ನಿಸ್ಸೀಮನೆಂದು ಮನಗಂಡ ಮೇಲೂ ಆತನ ಬಳಿ ಸಾರಿ ‘ಗುರುದಕ್ಷಿಣೆಯಾಗಿ ನಿನ್ನ ಹೆಬ್ಬೆರಳನ್ನು ತಾ’-ಎಂದು ಕೇಳುವ ಮಟ್ಟಕ್ಕೆ ಆಚಾರ್ಯ ದ್ರೋಣರಂತಹವರು ಇಲ್ಲಿಯಲಾರರು ಎಂಬುದೇ ಕೈಲಾಸಂರವರ ದೃಷ್ಟಿ. ಇದು ಸಮಂಜಸವೂ ಹೌದು. ತನ್ನ ಗುರು ವಚನಭ್ರಷ್ಟನಾಗದಂತೆ ಇರಲು ಬೇರೇನೂ ಸಾಧ್ಯವಿಲ್ಲವೆಂದುಕೊಂಡು, ಏಕಲವ್ಯ “Guruji, you will keep up your promise and I will stop his mouth for ever” ಎಂದು ಹೇಳಿ, ದ್ರೋಣನಿಗೆ ಏನಾಗುತ್ತಿದೆ ಎಂದು ತಿಳಿಯುವ ಮೊದಲೇ ಏಕಲವ್ಯ ತನ್ನ ಬೆರಳನ್ನು ಕತ್ತರಿಸಿ ಸಮರ್ಪಿಸಿ ಬಿಡುತ್ತಾನೆ. ಒಡನೆಯೇ ಚೀತ್ಕರಿಸುತ್ತಾನ ದ್ರೋಣ : *Little man, what have you done?”
೫
‘ಹೆಬ್ಬೆರಳು’ ವಿನಲ್ಲಿ ಗೊಂದಳದವರನ್ನು ತಂದುದನ್ನು ಉಳಿದು ಬೇರೇನೂ ವೈಶಿಷ್ಟ್ಯ ಕಾಣದು. ಹಾಲು ಹಸುಳೆಯಂದದ ಕಿಶೋರ ನಿಷಾದನ ಸುತ್ತ ಹೆಣೆದ ತತ್ವಜಾಲದ ಪರಿಪೋಷಣೆ ಕುವೆಂಪುರವರ ಪ್ರತಿಭೆ, ಕಲ್ಪನಾ ಸಾಮರ್ಥ್ಯಕ್ಕೆ ನಿದರ್ಶನ. ಅದಕ್ಕಾಗಿ ಬಳಸಿಕೊಂಡಿರುವ ಚೇತೋಹಾರಿ ನಿಸರ್ಗದ ಹರವು-ಚೆಲವು. ಅಬ್ಬೆಯ ಒಲವು, ‘ಬಟ್ಟೆಯಿರದೆಡೆ ಬಟ್ಟೆಯರಸುವವರ’ ಬರವು, ಗುರುವಿನ ಅರಿವು, ಶಿಷ್ಯನ ನಲಿವು-ನೋವು, ನಿಲುವು-ಲಲಿತ ಶೈಲಿಯ ಒಂದು ಉತ್ತಮ ಕಾವ್ಯವನ್ನಾಗಿಸಿದೆ. ನಾಟಕಕ್ಕಿಂತ ಕಾವ್ಯವಾಗಿ ಮೆರೆಯುವ ಈ ‘ಬೆರಳ್‌ಗೆ ಕೊರಳ್’ ನಲ್ಲಿ ಪೌರಾಣಿಕ ಸಾಮಗ್ರಿಯಲ್ಲಿ ಜೀವನ ದರ್ಶನವನ್ನು ಮೂಡಿಸುವಂತೆ ಬಳಸಿಕೊಳ್ಳುವಾಗ ನಾಟಕ-ಮಾಧ್ಯದ ಅನಿವಾರ್ಯತೆ ಕಾಣಿಸುವುದಿಲ್ಲ.”
ಆದರೆ ಕೈಲಾಸಂರವರಲ್ಲಿ ಅಭಿವ್ಯಕ್ತಿಗಾಗಿ ನಾಟಕ ಮಾಧ್ಯಮದ ಅನಿವಾರ್ಯತೆ ಎದ್ದು ಕಾಣುವ ಅಂಶ. “ಪರ್ಪಸ್” ಕಾಲ ದೇಶಗಳ ಎಲ್ಲೆಯನ್ನು ಮೀರಿ ನಿಲ್ಲಬಲ್ಲ ಸತ್ಯವನ್ನೊಳಗೊಂಡ ಭಾವಭೂಮಿಕೆ. ಮನುಷ್ಯನ ದೊಡ್ಡತನವನ್ನೇ ಕಾಣುವ, ಕಾಣಿಸುವವ ಹಂಬಲದಿಂದ ಕೈಲಾಸಂ ಪುನರ್‌ನಿರ್ಮಿಸಿದ ಪೌರಾಣಿಕ ಪಾತ್ರಗಳು ಜೀವನದ ವಿವಿಧ ಮೌಲ್ಯಗಳ ಪ್ರತಿನಿಧಿಗಳು. ‘ಪರ್ಪಸ್” ಈ ಮೌಲ್ಯಗಳ ಒಂದು ತಕ್ಕಡಿ. `ಅಂತಃಕರಣವನ್ನು ಅಲುಗಾಡಿಸುವುದೇ ಕಲೆಯ ಕೆಲಸ’ ಎಂದ ಕೈಲಾಸಂ, ರಸಸ್ಥಾನವನ್ನು ಹಿಡಿದು ಮಿಡಿಯಬಲ್ಲರೆಂಬುದನ್ನು ಇಲ್ಲಿ ಚೆನ್ನಾಗಿ ತೋರಿದ್ದಾರೆ. ಸವೆದ ಜಾಡನ್ನೇ ಸವೆಸದ ನಡೆ ಇವರದು. ವಸ್ತುವಿಗೆ ಹೊಸ ತಿರುವುಗಳನ್ನು ಕಲ್ಪಿಸುವುದರಲ್ಲಿ, ಪಾತ್ರಗಳ ಒಳತೋಟಿಯ ಚಿತ್ರಣದಲ್ಲಿ, ಪರಿಸರದ ಪ್ರಭಾವಲಯವನ್ನು ಸೃಜಿಸುವುದರಲ್ಲಿ, ನೈತಿಕ ಸಿದ್ಧಾಂತದ ಹೃದಯಂಗಮ ನಿರೂಪಣೆಯಲ್ಲಿ ಕೈಲಾಸಂರವರ ಮಾರ್ಗ ವಿನೂತನ ; ಸಿದ್ದಿ ಅಪೂರ್ವ. ಆದರೆ, ದ್ರೋಣ, ಏಕಲವ್ಯ ಪಾತ್ರಗಳ ಆದರ್ಶಿಕರಣದ ಪರಿಣಾಮವಾಗಿ ಪಾರ್ಥ ಪಾತ್ರದ ಪರಂಪರಾಗತ ಮಟ್ಟ ಕುಸಿದಿದೆ. ಇದು ಅನಿವಾರ್ಯವೇನೋ. ಅಲ್ಲಲ್ಲಿ ಇಣಕುವ ಅತಿ ಪ್ರಾಸ ಪ್ರಯೋಗ. ಆವಶ್ಯಕ ಶ್ಲೇಷೆಯ ಬಳಕೆ ನಾಟಕದ ರಸಾಸ್ವಾದದ ಓಟಕ್ಕೆ ತಡೆಯೊಡ್ಡದಿರವು.
೬
ಕೊನೆಯದಾಗಿ ಏಕಲವ್ಯನನ್ನು ಕೈಲಾಸಂ ಚಿತ್ರಿಸಿರುವ ಬಗೆಯನ್ನು ವಿವೇಚಿಸೋಣ;
ದುರಂತ ನಾಯಕನಲ್ಲಿರಬೇಕಾದ ಎರಡು ಮುಖ್ಯ ಗುಣಗಳು : ಅತಿ ಕಠಿಣ ಯಾತನೆ ಮತ್ತು ಸ್ಥೈರ್ಯ. ‘ಎತ್ತರ ಇರುವುದು ಎಲ್ಲರೂ ಹತ್ತುತ್ತಾರೆಂದಲ್ಲ; ಎಲ್ಲರೂ ಹತ್ತಬೇಕೆಂದು. ಈ ಆದರ್ಶದ ಬೆನ್ನು ಹತ್ತಿದ ಹದಿವಯಸ್ಸಿನ ಹಮ್ಮೀರ. ತಾನು ಕಲಿಸಲು ಬಂದ ಉದ್ದೇಶವನ್ನು ದ್ರೋಣನಿಗೆ ತಿಳಿಹೇಳುವುದನ್ನು ಈಗಾಗಲೇ ಕಂಡಿದ್ದೇವೆ.
ಅದೆಂಥ ವಿನಯ! ಈ ನಿಷ್ಕಪಟ ಹೃದಯಕ್ಕೆ ಎಷ್ಟು ಚೆನ್ನಾಗಿ ಕನ್ನಡಿ ಹಿಡಿದಿದ್ದಾರೆ. ಕೈಲಾಸಂ! ಪಕ್ಕದ ಆಶ್ರಮದಲ್ಲಿ ಅಲ್ಲಿನ ಸನ್ಯಾಸಿಯ ತಪಃಪ್ರಭಾವದಿಂದ ಹುಲ್ಲೆಗಳೂ ತೋಳಗಳೂ ಸ್ವಜಾತಿ ವೈರವನ್ನು ಮರೆತು ಹೊಂದಿಕೊಂಡಿರುವುವಂತೆ. ತಾನಾದರೋ ಆರ್ಯನಲ್ಲ. ನಿರುಪದ್ರವಿ ಪ್ರಾಣಿಗಳ ನೋವನ್ನು ತಪಸ್ಸಿನಿಂದ ಪರಿಹರಿಸಲು ತಕ್ಕ ಸಂಸ್ಕಾರವಿಲ್ಲ. ಆದರೆ, “then Sir, a wonderful thought came to my mind. If in this life alone I slay all the wolves in all the forests in the whole world, then all the deer and fawns will be free from fear of hurt and death,” ಈಗಾಗಲೇ ಬಿಲ್ಲುಗಾರಿಕೆಯ ಭದ್ರ ಬುನಾದಿ ಅವನಲ್ಲಿ ಬಿದ್ದಿತ್ತು. “I had the least chance I would love to teach you, ಎಂದು ಗುರು ಹೇಳಿದೊಡನೆ ತನಗೆಲ್ಲ ಸಿಕ್ಕಿತು. ಬೇಕಾದದು ದಕ್ಕಿತು ಎಂಬ ಸಂತೋಷಾತಿಶಯದಿಂದ “Guruji, from almost this very moment my fawns and deer are safe”, ಎಂದು ಓಡಿಹೋಗುತ್ತಾನೆ. ಏಕಲವ್ಯನಿಗೆ ತನ್ನಲ್ಲಿ ಅದೆಷ್ಟು ದೃಢ ವಿಶ್ವಾಸ!
ಭಾವಾತಿರೇಕವೇ ಏಕಲವ್ಯನ ಬೆರಳಿಗೆ ಉರುಳಾಗುತ್ತದೆ. ಬೇರೊಬ್ಬ ಶಿಷ್ಯನಿಗೆ ಗುರು ಇತ್ತ ವಚನ ಭಂಗವಾಗದಿರಲಿ, ತನ್ನ ಗುರುವನ್ನು ಯಾರೂ ಎಂದೆಂದಿಗೂ “Liar” ಸುಳ್ಳುಗಾರ ಎನ್ನದಿರಲಿ -ಎನ್ನುವ ಅತಿ ಭಾವುಕತೆಯ ಆಕಾಂಕ್ಷೆ ಏಕಲವ್ಯನನ್ನು ತನ್ನ ಗುರಿಯನ್ನೇ ಕ್ಷಣಕಾಲ ಮರೆಸಿ ಕರುಡಾಗಿಸುತ್ತದೆ. ತಾನೆಂದೂ ಬಿಲ್ಲು ಹಿಡಿಯೆನೆಂದು ವಚನವಿತ್ತರೂ ಅರ್ಜುನನಿಗೆ ತೃಪ್ತಿಯಿಲ್ಲ. ತಾನು ಎಲ್ಲಾದರೂ ಬಿಲ್ಲು ಹಿಡಿದಾಗಲೆಲ್ಲ, ಎಲ್ಲಿಯೂ ಕಾಡಿನ ಒಂದು ಮೂಲೆಯಲ್ಲಿರುವ ನಿಷಾದನೊಬ್ಬ ‘ತನಗೆ ಬೇಕೆಂದರೆ ನನಗಿಂತ ಉತ್ತಮವಾಗಿ ಬಿಲ್ಲುಬಾಣ ಹಿಡಿಯಬಲ್ಲ’ ಎಂಬ ಅಳುಕು ಕೊರೆದೇ ಕೊರೆಯುವುದಂತೆ ಅರ್ಜುನನ ಅತರಾಳದಲ್ಲಿ! ಆದ್ದರಿಂದ, ಹೇಳುತ್ತಾನೆ ಅರ್ಜುನ, “will certainly not save the Guruji from the ignomy of being known as a liar”. “Stop-ಎಂದು ಕಿರುಚುತ್ತಾನೆ ಏಕಲವ್ಯ. ಆದರೆ ಯಾರೂ ಅರ್ಜುನನ ಬಾಯಿ ಮುಚ್ಚಲಾರರು ಆಗ.
ದ್ರೋಣನೇ ತನ್ನ ನಿಸ್ಸಹಾಯಕತೆಯನ್ನು ಪ್ರದರ್ಶಿಸಿದಾಗ, “Guruji, you will keep your promise”, ಎಂದು ಆದೇ ದೃಢವಿಶ್ವಾಸದಿಂದ ಅಬ್ಬರಿಸಿ ಅರ್ಜುನನ ಕಡೆ ತೋರಿಸಿ, “and I will stop his mouth for ever”, ಎಂದು ಮಿಂಚಿನ ವೇಗದಲ್ಲಿ ದ್ರೋಣನ ಪ್ರತಿಮೆಯೆಡೆ ಸಾರಿ, ಈ ಜೀವಂತ ದ್ರೋಣನಿಗೆ ಏನಾಗುತ್ತಿದೆ ಎಂದು ತಿಳಿಯುವ ಮೊದಲೇ, ಒಂದೇ ಏಟಿಗೆ ಹೆಬ್ಬೆರಳನ್ನು ಬಾಣದಿಂದ ಕತ್ತರಿಸಿ, ರಕ್ತ ಕಾರಂಜಿ ಚಿಮ್ಮುತ್ತಿರಲು ಆ ಬಿದ್ದ ಬೆರಳನ್ನು ಎತ್ತಿಕೊಂಡು ಈ ಸಮರ್ಪಿಸುತ್ತಾನೆ. “Little man, what have you done?”-ದಿಗ್ಭ್ರಮೆಗೊಂಡ ದ್ರೋಣ ಚೀತ್ಕರಿಸುತ್ತಾನೆ. “My Guruji has kept up his promies ಎನ್ನುವುದೊಂದೇ ತನ್ನ ಎಲ್ಲಾ ನೋವು ಪರಿಹರಿಪ ಸ್ಥೈರ್ಯಸ್ಫೂರ್ತಿ. ಆಗ ಅರ್ಜುನನ ಬಳಿ ಸಾರಿ, “you see ? Even if I want to, I cannot any more !” ಎಂದು ಹೆಬ್ಬೆರಳಿಲ್ಲದ ಬಲಹಸ್ತವನ್ನು ಚಾಚಿ, ಅಲುಗಿಗಿ ತೋರುತ್ತಾನೆ. ಏನೋ ಹೇಳಹೊರಟ ಏಕಲವ್ಯನಿಗೆ ತಕ್ಷಣ ತಲೆಗೆ ಮಿಂಚೊಂದು ಹೊಡೆದಂತಾಗಿ Gods ! I have forgot my fawns” ಎಂದು ಕೂಗಿಕೊಳ್ಳುತ್ತಾನೆ. ಸಂತೈಸಲು ಬಂದ ದ್ರೋಣ, ಅರ್ಜುನರಿಗೆ-“will you please leave me alons, leave me to my own self” ಎಂದು ಕೇಳಿಕೊಳ್ಳುತ್ತಾನೆ.
ದ್ರೋಣಾರ್ಜುನರು ತೆರಳಿದ ಬಳಿಕ ಏಕಲವ್ಯ ಕುಸಿಯುತ್ತಾನೆ. ತನ್ನ ಹೆಬ್ಬೆರಳನ್ನು ಗಾಯವಾದ ಕೈಯನ್ನು ನೋಡಿ ಬಿಕ್ಕಿ ಬಿಕ್ಕಿ ಅಳತೊಡಗುತ್ತಾನೆ. ದೂರದಲ್ಲೆಲ್ಲೋ ಹುಲ್ಲೆಗಳ ಆಕ್ರಂದನ ಹಠಾತ್ತನೆ ಕೇಳಿಬರುತ್ತಿದೆ. ಕ್ಷಣಕ್ಷಣಕ್ಕೂ ಅವುಗಳ ಆಕ್ರಂದನ ಜಾಸ್ತಿಯಾಗುತ್ತಿದೆ. ಅವನ್ನು ಕೇಳುತ್ತಾ, ತಾನು ಅವುಗಳನ್ನು ಉಳಿಸಿಕೊಳ್ಳಲಾಗುವುದಿಲ್ಲವಲ್ಲಾ ಎಂಬ ದುಃಖ ಉಮ್ಮಳಿಸಿ, ಏಕಲವ್ಯ ಹೃದಯ ಕಿವಿಚಿಕೊಳ್ಳುತ್ತಿದ್ದಾನೆ. ತಾನು ಮಾಡುತ್ತಿದ್ದುದು ತನಗೆ ತಿಳಿಯಲಿಲ್ಲವಾದರೂ ತನ್ನ ಗುರುವಿಗೆ ತಿಳಿದಿರಲೇಬೇಕಿತ್ತು ಎಂಬ ಯೋಚನೆ ಹೊಳೆದೊಡನೆ ತಾನು ಹಾಗೆ ಹೆಬ್ಬೆರಳನ್ನು ಕತ್ತರಿಸುವಾಗ ಗುರುವೇಕೆ ನಿಷ್ಕ್ರಿಯನಾಗಿದ್ದ ಎಂದು ಕೋಪ ಉಕ್ಕಿ, ಹುಚ್ಚೆದ್ದ ರೋಷದಿಂದ ಮೃಣ್ಮೂರ್ತಿಯನ್ನು ಇನ್ನೇನು ಕೊಚ್ಚಿ ಪುಡಿ ಪುಡಿ ಮಾಡಬೇಕೆಂದಿದ್ದಾನೆ. ಅಷ್ಟರಲ್ಲಿ ಮೂರ್ತಿಯ ಮಂದಸ್ಮತವನದ ಏನೋ ಒಂದು ಅನಿರ್ವಚನೀಯ ಇವನನ್ನು ತಡೆದಂತಾಗಿ, “ಅಯ್ಯೋ ದೇವರೇ ನಾನೇನು ಮಾಡುತ್ತಿದ್ದೇನೆ” ಎಂದು ಕುಸಿಯುತ್ತಾನೆ. ಮೂರ್ತಿಯ ಪಾದದಲ್ಲಿ.
“Forgive me, Guruji, I did not know what I Was doing! But yet How Could you ? Hom could you ? How could you ? ಎಂದು
ಬಿಕ್ಕಿ ಅಳುತ್ತಿರುತ್ತಾನೆ.
ಇದು ಕೈಲಾಸಂ ಚಿತ್ರಿಸಿರುವ ಏಕಲವ್ಯ.
ಅಡಿಟಿಪ್ಪಣಿಗಳು
1 ಕುವೆಂಪು : ‘ಬೆರಳ್‌ಗೆ ಕೊರಳ್‌’ ಚಿಪ್ಪಣಿ ಪುಟ 61. ಈ ಉದ್ದೇಶದಿಂದಲೇ ನಾಟಕದ ಮೂರು ದೃಶ್ಯಗಳಿಗೆ ಕ್ರಮವಾಗಿ ಗುರು, ಕರ್ಮ ಮತ್ತು ಯಜ್ಞ-ಎಂದು ಹೆಸರಿಸಿದ್ದಾರೆ, ಕುವೆಂಪು.
2 ತ. ಸು. ಶಾಮರಾಯ : `ಕನ್ನಡ ನಾಟಕ’ ಪುಟ 258, ‘ಹೆಬ್ಬೆರಳು’ವಿನ ಗೊಂದಳದವರ ಮಾತೂ ಇದನ್ನು ಸ್ಪಷ್ಟೀಕರಿಸುತ್ತದೆ :
“ಹೆಬ್ಬೆರಳ ಹೊರತನ್ಯ ಬೆರಳುಗಳ ಪೂರ್ಣವೆಂ
ಬಂತನಾರ್ಯರ ವಿನಾ ಆರ್ಯಜಾತಿಯ ಪೂರ್ಣ
ವೆಂಬ ಸತ್ಯವ ಛಲಾ ತನ್ನ ತರಿವಿತ್ತ ಹೆ
ಬ್ಬೆರಳಿಂದಕಟ ಸುಟ್ಟಿ ತೋರಿಸಿದನೀ ಹಸುಳೆ !”
3 ನೋಡಿ : ಜಿ. ಎಸ್‌. ಆಮೂರ. “ಕೈಲಾಸುರ ಇಂಗ್ಲಿಷ್ ನಾಟಕಗಳು” ಪ್ರಬಂಧ. ‘ಏಕಲವ್ಯ’
ನಾಟಕದ ಅನುಬಂಧದಲ್ಲಿ. ಪುಟ 83.
4 ಕೆ. ಮರುಳಸಿದ್ದಪ್ಪ : ‘ಕನ್ನಡ ನಾಟಕಗಳಲ್ಲಿ ದುರಂತ ಮತ್ತು ವಿನ್ಯಾಸ’ ಪ್ರಬಂಧ, ‘ಕನ್ನಡ ನಾಟಕ : ಪರಂಪರೆ ಮತ್ತು ಪ್ರಯೋಗ’ ಪುಸ್ತಕದಲ್ಲಿ. ಫಟ 55.
5 ಜಿ. ಎಸ್. ಅಮೂರ : “ಕೈಲಾಸಂರ ಇಂಗ್ಲಿಷ್ ನಾಟಕಗಳು” ಪುಟ 83.
6 ಎಲ್. ಎಸ್. ಶೇಷಗಿರಿರಾವ್ : “ಕನ್ನಡ ನಾಟಕಗಳ ವಸ್ತು : ಐತಿಹಾಸಿಕ ಮತ್ತು ಪೌರಾಣಿಕ” ಪ್ರಬಂಧ, ‘ಕನ್ನಡ ನಾಟಕಗಳ ವಸ್ತು : ಐತಿಹಾಸಿಕ ಮತ್ತು ಪೌರಾಣಿಕ ಪ್ರಬಂಧ. ‘ಕನ್ನಡ ನಾಟಕ, ಪರಂಪರೆ ಮತ್ತು ಪ್ರಯೋಗ’ ಪುಸ್ತಕದಲ್ಲಿ ಪುಟ 23.

Close

ಸಖಾರಾಮ ಬೈಂಡರ್-ಮರಾಠಿ ರಂಗಪ್ರಯೋಗ

ಸಖಾರಾಮ ಬಾಯಿಂಡರ್‌
-ಮರಾಠಿ ರಂಗಪ್ರಯೋಗ

ಚಂದ್ರಕಾಂತ ಕುಸನೂರು

ರಂಗಪ್ರೇಮಿಗಳಿಗೆ ‘ವಿಜಯ ತೇಂಡೂಲಕರ್‌’ ಒಂದು ಚಿರಪರಿಚಿತ ಹೆಸರು. ಮರಾಠಿ ರಂಗಭೂಮಿಗೆ ಹೊಸ ತಿರುವು ಮತ್ತು ಜೀವಕಳೆಯನ್ನು ತಂದುಕೊಟ್ಟ ವ್ಯಕ್ತಿ. ಅವರ ಇತ್ತೀಚಿನ ಎರಡು ಹೊಸ ನಾಟಕಗಳೆಂದರೆ ಸಖಾರಾಮ ಬಾಯಿಂಡರ್‌ ಮತ್ತು ಘಾಸಿರಾಮ ಕೋತವಾಲ. ಈ ಎರಡೂ ನಾಟಕಗಳಿಂದ ಬಂದ ಕೀರ್ತಿ ಮತ್ತು ಅಪಕೀರ್ತಿಯಿಂದ ಶ್ರೀ ತೇಂಡೂಲಕರರು ಭಾರತೀಯ ರಂಗಮಂಚದ ಒಂದು ಚರ್ಚಾಸ್ಪದ ವ್ಯಕ್ತಿಗಳಾದರು.
ಅವರ ‘ಸಖಾರಾಮ ಬಾಯಿಂಡ‌ರ್‌’ ಅಶ್ಲೀಲ ನಾಟಕವೆಂದು ಭಾವಿಸಿ ಕೆಲವರು ಅದರ ರಂಗಪ್ರವೇಶವನ್ನು ನಿಲ್ಲಿಸಬೇಕೆಂದು ಕೋರಿ ಕೋರ್ಟಿಗೆ ಹೋದರು. ಕೋರ್ಟಿನಲ್ಲಿ ವಿಚಾರಣೆ ನಡೆದು ಕೊನೆಗೆ ಪ್ರದರ್ಶನಕ್ಕೆ ಪರವಾನಗಿ ಸಿಕ್ಕಿತು. ಇದರಿಂದ ನಾಟಕ ತಾನಾಗಿಯೇ ಇನ್ನಷ್ಟು ಪ್ರಚಾರ ಪಡೆದುಕೊಂಡಿತು. ನಂತರ ಈ ನಾಟಕ ತಂಡದವರು ಭಾರತದ ಅನೇಕ ಭಾಗಗಳಲ್ಲಿ ಪ್ರವಾಸ ಕೈಗೊಂಡು ರಂಗಪ್ರದರ್ಶನವನ್ನು ಮಾಡಿದರು. ನಾಟಕ ನೋಡಿದವರು ತಮ್ಮ ಮಿಶ್ರಪ್ರತಿಕ್ರಿಯೆಯನ್ನು ತೋರಿಸಿದರು.
ನಾಟಕದ ಕಥಾವಸ್ತು ಹೀಗಿದೆ-
ಸಖಾರಾಮಂ ಒಬ್ಬ ಬ್ರಾಹ್ಮಣ ಯುವಕ. ಚಿಕ್ಕವನಿದ್ದಾಗಲೇ ತಂದೆ ತಾಯಿಯ ಪ್ರೀತಿಯಿಂದ ವಂಚಿತನಾದ ತನಗೆ ಚಿಕ್ಕವಯಸ್ಸಿನಲ್ಲಿ ಬೇಕಾದ ಸಂಸ್ಕಾರ ಸಿಗದೇ “ಕೆಟ್ಟವ’ನಾದ. ಅವನು ಒಬ್ಬೊಂಟಿಗ. ಉಪಜೀವನಕ್ಕಾಗಿ ಒಂದು ಛಾಪಖಾನೆಯಲ್ಲಿ ಬಾಯಿಂಡರ್‌ ಕೆಲಸ ಮಾಡುತ್ತಿದ್ದ. ತಿರಸ್ಕೃತ ಹೆಂಗಸರನ್ನು ತಂದಿಟ್ಟುಕೊಳ್ಳುವುದು ಅವನಿಗೊಂದು ‘ಹಾಬಿ’. ತಂದಿಟ್ಟ ಹೆಂಗಸಿನ ಜೊತೆಗೆ ಮಲಗುವುದು, ಬೇಕಾದಷ್ಟು ಭೋಗಿಸುವುದು, ಕೊನೆಗೆ ಸಾಕಾದಾಗ ಕೈಬಿಟ್ಟು ಬಿಡುವುದು. ದಯೆ, ಮಾಯೆ, ಅನುಕಂಪ, ಕರ್ತವ್ಯ
ಇಂತಹ ವಿಚಾರಗಳಿಂದ ತುಂಬ ದೂರಿದ್ದ ಮನುಷ್ಯನಿವನು.
ಮೊದಲನೆಯ ದೃಶ್ಯದಲ್ಲಿ ಸುಖಾರಾಮ ಲಕ್ಷ್ಮೀ ಎಂಬಾಕೆಯನ್ನು ಕರೆದುಕೊಂಡು ಬರುತ್ತಾನೆ. ಲಕ್ಷ್ಮೀ ನಡುವಯಸ್ಸಿನ ಒಂಟೆಲುಬಿನ, ಬಡಕಲು ಹೆಣ್ಣು, ಮುಖದ ಮೇಲಿನ ಕಾಂತಿ ಮತ್ತು ಮೈಯಲ್ಲಿನ ರಸ ಕಳೆದುಕೊಂಡ ಹೆಂಗಸು. ದೈವಭಕ್ತಿ, ನಿಷ್ಠೆ, ಮೊದಲಿನ ಮನೆಯ ಸಂಸ್ಕಾರ ಇವುಗಳೊಂದಿಗೆ ಲಕ್ಷ್ಮೀ ಸಖಾರಾಮನ ಮನೆ ಸೇರುತ್ತಾಳೆ.
ಸಖಾರಾಮನದು ಎರಡು ಖೋಲಿಯ ಒಂದು ಚಿಕ್ಕಮನೆ. ಒಂದು ಅಡಿಗೆಮನೆ, ಮತ್ತೊಂದು ಮಲಗುವ ಖೋಲಿ. ಅಡಿಗೆ ಮನೆಯಲ್ಲಿ ದೇವರ ಪಟಗಳು, ಟಿನ್ ಡಬ್ಬಗಳು, ಬಚ್ಚಲು, ಎಲ್ಲವು ಕಾಣಿಸಿಕೊಳ್ಳುತ್ತವೆ. ಲಕ್ಷ್ಮೀ ಅಷ್ಟರಲ್ಲಿಯೆ ಇರಬೇಕು, ಅವಳು ತನ್ನ ಪಾಲಿಗೆ ಬಂದ ಈ ಪರಿಸ್ಥಿತಿಯನ್ನು ಯಾವ ತಕರಾರಿಲ್ಲದೆ, ಸ್ವೀಕರಿಸುತ್ತಾಳೆ. ಸಖಾರಾಮ ಬಂದ ಕೂಡಲೇ ಲಕ್ಷ್ಮೀಗೆ ತನ್ನ ವ್ಯವಹಾರವನ್ನೆಲ್ಲ ತಿಳಿಸಿಬಿಡುತ್ತಾನೆ.
ಸಖಾರಾಮನ ಗೆಳೆಯ ದಾವೂದ ಫಟಿಂಗ. ಅವನು ನಡುನಡು ಸಖಾರಾಮನ ಮನೆಗೆ ಬರುತ್ತಿರುತ್ತಾನೆ. ಇವನ ಮಾತು, ಹಾವಭಾವ, ನಡತೆ
ನಡಾವಳಿಗಳಿಂದ ಒಬ್ಬ ಕೆಟ್ಟ ವ್ಯಕ್ತಿಯೆಂದು ಗೊತ್ತಾಗುತ್ತದೆ. ಲಕ್ಷ್ಮೀ ಮನೆಯಲ್ಲಿದ್ದಾಗ್ಗೆ ದಾವೂದ ಒಂದೆರಡು ಸಲ ಬಂದು ಹೋಗಿರುತ್ತಾನೆ.
ಲಕ್ಷ್ಮೀಯ ವಯಸ್ಸು, ಗಾಂಭೀರ್ಯ, ತಂಪುದೇಹದಿಂದ ಸಖಾರಾಮ ಆಕೆಯಲ್ಲಿಯ ಆಸಕ್ತಿಯನ್ನು ಕಳೆದುಕೊಳ್ಳುತ್ತಾನೆ. ಬರಬರುತ್ತಾ ನಿರಾಸಕ್ತಿ ಹೆಚ್ಚಾಗಿ ಇವನು ಲಕ್ಷ್ಮೀಯನ್ನು ಮನೆಯಿಂದ ಹೊರಗೆ ಹಾಕುತ್ತಾನೆ.
ಇದಾದ ಮೇಲೆ ಸಖಾರಾಮ, ಒಬ್ಬ ಕುಡುಕ, ಅರ್ಧ ವಿಕ್ಷಿಪ್ತ ಫೌಜುದಾರನ ಹೆಂಡತಿಯನ್ನು ತನ್ನ ಬಲೆಗೆ ಹಾಕಿಕೊಳ್ಳುತ್ತಾನೆ. ಈಕೆ ಹೆಸರು ಚಂಪಾ. ಚಂಪಾ ರೂಪವತಿ. ತಾರಣ್ಯದಿಂದ ತುಂಬಿ ತುಳುಕುವ ದೇಹ, ಆಕರ್ಷಕ ಮೈಕಟ್ಟು, ಮುಟ್ಟಿದರೆ ರಸ ಚಿಮ್ಮುವಂತಹ ಕಾಮೋದ್ದೀಪಕ ಚರ್ಮದಿಂದ ತನ್ನ ‘ಎಂಟ್ರಿ’ಯಿಂದಲೇ ರಂಗ ತರುತ್ತಾಳೆ. ಈಕೆಯ ಮಾತಿನಲ್ಲಿಯ ಮಾದಕತೆ ಮತ್ತು ಚಾಲಚಲನದಲ್ಲಿನ ಬೇಖಬರತನದಿಂದ ಸಖಾರಾಮನನ್ನು ಸಾಕು ಪ್ರಾಣಿಯಂತೆ ಮಾಡಿಬಿಡುತ್ತಾಳೆ. ಲಕ್ಷ್ಮೀಯ ಮುಂದೆ `ಗುರ‍್ರೆ’ನ್ನುವ ಸಖಾರಾಮ ಚಂಪಾಳ ಮುಂದೆ ಬಾಲ ಅಲ್ಲಾಡಿಸುತ್ತಾನೆ. ಅವಳು ಬಂದ ಕೂಡಲೇ ತಿಂಡಿ, ಚಹ ಕೇಳುತ್ತಾಳೆ. ಸಖಾರಾಮ ಸುಮ್ಮನೆ ತಂದುಕೊಡುತಾನೆ. ಅವಳ ಮುಂದೆ ಆಜ್ಞಾಧಾರಕ ಬಾಲಕನಂತೆ ವರ್ತಿಸುತ್ತಾನೆ.
ಸಖಾರಾಮ ದೇಹ ಮತ್ತು ಮನಸ್ಸಿನಿಂದ ಸೋತ ವ್ಯಕ್ತಿ. ಚಂಪಾ ಬೇಕೆನಿಸಿದಾಗ ಹತ್ತಿರ ಹೋದರೆ ಆಕೆಯ ಸಿಡುಕತನದಿಂದ ಅಪಮಾನಿತನಾಗುತ್ತಾನೆ. ಆಗ ಸಂತಾಪವಾದರೂ ಸುಮ್ಮನಾಗುತ್ತಾನೆ. ತನ್ನಲ್ಲಿ ಬೆಳೆಯುತ್ತಿರುವ ಅರ್ಥವಾಗದ ನಿರ್ಬಲತೆಯಿಂದ ಒದ್ದಾಡುತ್ತಾನೆ.
ಚಂಪಾನ ನಪುಂಸಕ ಗಂಡ ಒಂದು ದಿನ ಸಖಾರಾಮನ ಮನೆಗೆ ಬಂದು ನಾಚಿಕೆ ಬಿಟ್ಟು ಚಂಪಾ ನಿತಂಬಗಳನ್ನು ವರ್ಣಿಸುತ್ತಾನೆ. ಕಾಮ, ಶೀಲ, ನೈತಿಕತೆಗಳ ಅರ್ಥ ಅವನಿಗೆ ಗೊತ್ತಾಗುವದಿಲ್ಲ. ಅವನೊಂದು ಹೇಸಿ ಪ್ರಾಣಿಯಂತೆ ಜೀವಿಸುತ್ತಾನೆ.
ಈ ನಡುವೆ ಸಖಾರಾಮನ ಗೆಳೆಯ ದಾವೂದ ಮತ್ತು ಚಂಪಾ ಇವರ ಸಖ್ಯ ಬೆಳೆಯುತ್ತದೆ. (ನಾಟಕದಲ್ಲಿ ಪ್ರತ್ಯಕ್ಷವಾಗಿ ಯಾವ ಸನ್ನಿವೇಶವೂ ಕಲ್ಪಿಸಿಲ್ಲ. ಒಂದಾದರೂ ಪ್ರಸಂಗ ಹಾಗೆ ಕಾಣಿಸುವದಿಲ್ಲ.) ಮೊದಮೊದಲು ಸಖಾರಾಮನಿಗೆ ಇದರ ಸುಳಿವು ಸಿಗುವದೇ ಇಲ್ಲ. ಸಖಾರಾಮ ಇಂಥದರ ಮೇಲೆ ವಿಶ್ವಾಸ ಇಡುವ ವ್ಯಕ್ತಿಯೂ ಅಲ್ಲ-ದಾವೂದ ಸಖಾರಾಮನ ಆತ್ಮೀಯ ಗೆಳೆಯನಾಗಿದ್ದರಿಂದ ಸಖಾರಾಮನ ಸುಖ ದುಃಖದಲ್ಲಿ ಅವನು ಪಾಲುಗಾರನಾಗಬೇಕೆಂದು ಸಖಾರಾಮ ಭಾವಿಸುತ್ತಿದ್ದ. ಅವನು ಮುಸ್ಲಿಮನಾದರು ಸಖಾರಾಮನ ಮನೆಗೆ ಗಣಪತಿ ತರುತ್ತಾನೆ. ಆರತಿ ಪೂಜೆಯಲ್ಲಿ ಭಾಗವಹಿಸುತ್ತಾನೆ. ಲಕ್ಷ್ಮೀ ಒಂದು ಪ್ರಸಂಗದಲ್ಲಿ ಇದನ್ನು ವಿರೋಧಿಸಿದರೆ- ಸಖಾರಾವರಿ ಆಕೆಯನ್ನು ಚೆನ್ನಾಗಿ ಥಳಿಸುತ್ತಾನೆ.
ಸಖಾರಾಮ ಮತ್ತು ಚಂಪಾ ಇವರಿಬ್ಬರ ನಡುವೆ tension ಬೆಳೆಯುತ್ತ ಹೋಗುತ್ತದೆ. ಸಖಾರಾಮ ಬಯಸಿದ ಸುಖ ಚಂಪಾ ಕೊಡುವದಿಲ್ಲ. ಸಖಾರಾಮನಿಗೆ trritate ಆಗುತ್ತದೆ. ಹೀಗೆ ಕೆಲವು ದಿನಗಳುರುಳುತ್ತವೆ.
ಒಂದು ದಿನ ಮನೆ ಬಿಟ್ಟು ಹೋದ ಲಕ್ಷ್ಮೀ ಮತ್ತೆ ಸಖಾರಾಮನ ಮನೆಗೆ ಬರುತ್ತಾಳೆ. ಸಖಾರಾಮ ಯಾವ ಪ್ರತಿಕ್ರಿಯೆಯನ್ನು ತೋರಿಸದೆ ಸುಮ್ಮನಾಗಿರುತ್ತಾನೆ, ಲಕ್ಷ್ಮೀ ಮತ್ತೆ ತನ್ನ ಮನೆ ಸೇರಿದಂತೆ ಅನುಭವಿಸುತ್ತಾಳೆ. ಮನೆಯ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತಾಳೆ.
ಕೆಲವು ದಿನಗಳಾದ ಮೇಲೆ ಲಕ್ಷ್ಮೀ ಚಂಪಾಳ ಅಸ್ತಿತ್ವ ನಿರಾಕರಿಸುತ್ತಾಳೆ. ಸ್ಪಷ್ಟ ವಾಗಿ ತೋರಿಸಿಕೊಳ್ಳದಿದ್ದರೂ ಅವಳ ನಡತೆಯಲ್ಲಿ ಅದರ ನೆರಳು ಕಂಡು ಬರುತ್ತದೆ. ಹೇಗಾದರೂ ಮಾಡಿ ಚಂಪಾನ್ನ ಮನೆ ಹೊರಗೆ ಹಾಕಬೇಕೆಂದು ವಿಚಾರ ಮಾಡುತ್ತಾಳೆ. ಲಕ್ಷ್ಮೀ ಸಖಾರಾಮನಲ್ಲಿ ಬೆಳೆಯುತ್ತಿದ್ದ ಸಂಶಯ ಪಿಶಾಚವನ್ನು ಗುರುತಿಸಿ ‘ಪ್ಲಾನ್” ಮಾಡುತ್ತಾಳೆ. ಒಂದು ದಿನ ‘ಸಖಾರಾಮನ ಮುಂದೆ ದಾವೂದೆ ಮತ್ತು ಚಂಪಾ ಇವರ ಅವೈಧ ಸಂಬಂಧದ ಬಗೆಗೆ ತಿಳಿಸುತ್ತಾಳೆ. ಸಖಾರಾಮ ಕ್ರೂರಾಗುತ್ತಾನೆ. ರಾತ್ರಿ ಚಂಪಾನ ಕೊಲೆ ಮಾಡುತ್ತಾನೆ. ಲಕ್ಷ್ಮೀ ಮತ್ತು ಸಖಾರಾಮ ಕೂಡಿ ಅಡಿಗೆ ಮನೆಯಲ್ಲಿಯೇ ಕುಣಿ ತೋಡಿ ಚಂಪಾಳ ದೇಹವನ್ನು ಅದರಲ್ಲಿ ಹಾಕಿ ಮುಚ್ಚಿಬಿಡುತ್ತಾರೆ. ನಾಟಕ ಇಲ್ಲಿಗೆ ಮುಗಿಯುತ್ತದೆ. ಮೇಲಿನ ಕಥೆ ನಾಟಕದ ಹೊರಗಿನ ಹಂದರವಿದೆ. ಇದರಲ್ಲಿ ರಕ್ತ ಮಾಂಸ ತುಂಬಿದ ಅನೇಕ ಪ್ರಸಂಗಗಳಿವೆ. ಈ ಪ್ರಸಂಗಗಳಲ್ಲಿ ಕೆಲವು ಅಶ್ಲೀಲ ಇವೆ ಎಂದು ಕೆಲವರ ಅಭಿಪ್ರಾಯ.
ಮೊದಲನೆಯ ಪ್ರಸಂಗ-ಚಂಪಾ ಬಂದೊಡನೆಯೇ ತನ್ನ ‘ಸೂಟ್‌ಕೇಸ್‌ನಿಂದ ಸೀರೆ ಹೊರತೆಗೆದು ಸ್ಟೇಜಿನ ಮೇಲೆಯೇ ಉಟ್ಟಿದ್ದನ್ನು ಬಿಚ್ಚಿ ಇನ್ನೊಂದು ಉಡುತ್ತಾಳೆ. (ಈ ಪ್ರಸಂಗ ಸ್ವಲ್ಪ ಬದಲಾಯಿಸಿಕೊಂಡಿದ್ದಾರೆ. ಮೊದಲು ರಂಗಪ್ರಯೋಗದಲ್ಲಿ ಮತ್ತು ನಾಟಕದ ಸ್ಕ್ರಿಪ್ಪಿನಲ್ಲಿ ಸೀದ ಸೀರೆ ಬದಲಾಯಿಸುವ ಸನ್ನಿವೇಶವಿದೆಯಂತೆ. ಆದರೆ ಇತ್ತೀಚಿಗೆ ಮಾಡುತ್ತಿರುವ ಪ್ರಯೋಗಗಳಲ್ಲಿ ಆಕೆ, ಕೇವಲ ಸೆರಗು ತಗದಂತೆ ಮಾಡಿ, ನಿರಿ ಬಿಚ್ಚಿದಂತೆ ಮಾಡಿ ಮತ್ತೆ ಉಟ್ಟ ಸೀರೆಯನ್ನ ಸರಿಪಡಿಸಿಕೊಂಡು ಬರುತ್ತಾಳೆ.)
ಒಂದೆರಡು ‘ಬೆಡ್ ರೂಮು’ ದೃಶ್ಯಗಳೂ ಕಾಣಿಸುತ್ತವೆ. ಇವೂ ಅಶ್ಲೀಲವೆಂದು ಕೆಲವರ ಕಲ್ಪನೆ. ಇನ್ನೊಂದು ಕಡೆಗೆ ಚಂಪಾನ ಗಂಡ ಬಂದು ಆವಳ ನಿತಂಬಗಳನ್ನು ವರ್ಣಿಸುತ್ತಾನೆ, ಇದೂ ಕೂಡ ಅಶ್ಲೀಲವೆಂದು ನಂಬಿಕೆ. ನಾಟಕದ ಭಾಷೆಯಲ್ಲಿಯೂ ಕೂಡ “ಶಿಷ್ಟ’ ಎನ್ನುವ ಶಬ್ದ ಪ್ರಯೋಗಗಳಿಲ್ಲದಿರುವುದು ಮಡಿವಂತರಿಗೆ ಚಿಂತೆಯನ್ನುಂಟುಮಾಡಿರಬೇಕು.
ಇನ್ನು ರಂಗಪ್ರಯೋಗದ ದೃಷ್ಟಿಯಿಂದ ನೋಡಿದಾಗ ನಾಟಕದ ‘ಗಟ್ಟಿಮುಟ್ಟ’ತನ ಗೊತ್ತಾಗುತ್ತದೆ. ನಾಟಕದ ಕಥಾವಸ್ತು ಪೂರಾ ಪರ್ಸನಲ್ ಆಗಿದ್ದರಿಂದ ಸಖಾರಾಮನ Values, ಸಮಾಜದಲ್ಲಿದ್ದ, ಇರಬೇಕಾದ Values ಗಳಿಗಿಂತ ಬೇರೆಯಾಗಿವೆ. ಆವನು ತಾನೇ ಹಾಕಿಕೊಂಡಂತಹ ನಿಯಮಗಳ ಪ್ರಕಾರ ಲಕ್ಷ್ಮೀಯನ್ನು ಮನೆಯಿಂದ ಹೊರಗೆ ಕಳಿಸುವಾಗ ಐವತ್ತು ರೂಪಾಯಿ, ದಾರಿ ಖರ್ಚು ಮತ್ತು ಹೊಸ ಸೀರೆಯನ್ನು ಕೊಡಿಸಿಕಳಿಸುತ್ತಾನೆ. ಒಂದೇ ದನಿಯಲ್ಲಿ ತನ್ನ ಮನೆ ನಿಯಮಗಳನ್ನು ತಿಳಿಸುವದರಲ್ಲಿ ವಿಶೇಷ ಆಸಕ್ತಿಯನ್ನು ತೋರಿಸುತ್ತಾನೆ. ಇದರಿಂದ ಅವನು ತುಂಬ ನಿಯಮ ನಿಷ್ಠುರ, ಸ್ಪಷ್ಟ ವಾದಿ ಎಂದು ಗೊತ್ತಾಗುತ್ತದೆ. ಆದರೆ ಲಕ್ಷ್ಮೀಯ ಆಗಮನದಿಂದ ಕ್ರಮೇಣ ತನ್ನ ಮೈ ಮನಸ್ಸಿನ ಮೇಲೇರಿದ್ದ, ಅಸಭ್ಯ, ಅಸಾಂಸ್ಕೃತಿಕ ಬಣ್ಣವನ್ನು ಕಳೆದುಕೊಳ್ಳುತ್ತಾನೆ. ಲಕ್ಷ್ಮೀಕಿಂತ ಮುಂಚೆ ಆರು ಹೆಂಗಸರು ಅವನ ಮನೆಯಲ್ಲಿದ್ದು ಹೋಗಿದ್ದರು. ಯಾರೂ “ಅವನತನ”ವನ್ನು ಅಳಿಸಿರಲಿಲ್ಲ. ಲಕ್ಷ್ಮೀ ಮಾತ್ರ ತನ್ನ ಸಭ್ಯತೆಯಿಂದ, ಶಿಷ್ಟಸ್ವಭಾವದಿಂದ ಸಖಾರಾಮನಲ್ಲಿ behavioural change ತರುತ್ತಾಳೆ. ಈ ಸನ್ನಿವೇಶವನ್ನು ಕಟ್ಟುವದರಲ್ಲಿ ಲೇಖಕ ಮತ್ತು ಕಲಾಕಾರರಿಗೆ ಸಾಧ್ಯವಾಗಿದೆ. ಚಂಪಾ ಬರುವ ತನಕ ಸಖಾರಾಮ ರಂಗಮಂಚದ ಮೇಲೆ superior ಆಗಿರುತ್ತಾನೆ. ಲಕ್ಷ್ಮೀ ಯಾವ ಹಂತದಲ್ಲಿಯೂ ಪ್ರಭಾವ ಬೀರುವದಿಲ್ಲ. ಆಕೆ ಮುಂದಾಗುವ ಘಟನೆಗಳಿಗೆ-ಕೊಂಡಿಯಂತೆ ಇರುತ್ತಾಳೆ. ಲಕ್ಷ್ಮೀಯ ಕಲ್ಪನಾಲೋಕ, ವಿಕ್ಷಿಪ್ತತೆ, ಮಾತಾಡುವ ಶೈಲಿ- ಎಲ್ಲದರಲ್ಲಿಯೂ ಭಯದ ನೆರಳು ಕಾಣಿಸುತ್ತದೆ. ಅಂಜಿಕೆಯ ವಾತಾವರಣದಲ್ಲಿಯೇ ಲಕ್ಷ್ಮೀ ತಿರುಗಾಡುತ್ತಾಳೆ.
ಚಂಪಾ ಲಂಗುಲಗಾಮಿಲ್ಲದೆ ವರ್ತಿಸುವ ಹೆಂಗಸು. ಆಕೆ ತನ್ನ ನಪುಂಸಕ, ವಿಕ್ಷಿಪ್ತ ಕುಡುಕ ಗಂಡನಿಂದ ಪಾರಾಗಿ ಬಂದಿದ್ದಾಳೆ. ಸಖಾರಾಮ ತನ್ನ ಆಶ್ರಯದಾತನಲ್ಲವೆಂದು ತಿಳಿದ ಸ್ವಚ್ಚಂದ ಮನೋಭಾವದ ಹೆಂಗಸು. ಸಖಾರಾಮ ತನಗೆ ಗೊತ್ತಾಗದೆ ಬೆಳೆಯುತ್ತಿರುವ ನಪುಂಸಕತೆಯಿಂದ ಇನ್ನಷ್ಟು ಕಾಮುಕನಾಗುತ್ತಾನೆ. ಹಗಲೂ ರಾತ್ರಿ ಚಂಪಾ ತನ್ನ ಮಗ್ಗಲಲ್ಲಿ ಮಲಗಬೇಕೆಂದು ಬಯಸುತ್ತಾನೆ. ಚಂಪಾ ಸಖಾರಾಮನ ಸ್ಪರ್ಶದಿಂದಲೇ ಸಿಡಿದೇಳುತ್ತಾಳೆ. ಕೊನೆಗೆ ಶರಾಬಿನ ಮಸ್ತಿಯಲ್ಲಿ ಸಖಾರಾಮ ಚಂಪಾ ಜೊತೆಗೆ ಕೂಡುತ್ತಾನೆ. ಅವನ ಸೆಕ್ಸಿನ ಹಸಿವೆ ಹಿಂಗುವದಿಲ್ಲ. ಇಷ್ಟಾದರೂ ಚಂಪಾ ಅತೃಪ್ತಳಿರುತ್ತಾಳೆ. ಇಳಿವಯಸ್ಸಿನ ಸಡಿಲು ನರಗಳಿಂದ ಆಕೆಯ ದಾಹ ಕಮ್ಮಿಯಾಗುವದಿಲ್ಲ, ಅಂತೆಯೇ ದೃಷ್ಟಿ ತಪ್ಪಿಸಿ ದಾವೂದನ ಮೈಗಂಟುತ್ತಾಳೆ. ಲಕ್ಷ್ಮೀಯಿಂದ ಈ ಮಾತನ್ನು ಕೇಳಿ ಸಳಾರಾಮ ಕಿಡಿಕಿಡಿಯಾಗಿ ಚಂಪಾಗೆ ಜವಾಬು ಕೇಳುತ್ತಾನೆ. ಆಗ ಚಂಪಾ ನೇರವಾಗಿ ಸಖಾರಾಮನ ಗಂಡಸುತನದ ಮೇಲೆಯೇ ಹಲ್ಲೆ ಮಾಡುತ್ತಾಳೆ. ಸಖಾರಾಮ ಪಶುವಿನಂತೆ ಆಕೆಯ ಮೇಲೆರಗಿ ಕೊಂದು ಬಿಡುತ್ತಾನೆ. ಲಕ್ಷ್ಮೀ ಇದೆಲ್ಲದಕ್ಕೂ ಸಾಕ್ಷಿಯಾಗಿರದೆ ತಾನೂ ಪಾಲುಗಾರತಿಯಾಗುತ್ತಾಳೆ. ಕುಣಿ ತೋಡಿ ಹೆಣ ಮುಚ್ಚುವದರಲ್ಲಿ ಸಹಾಯ ಮಾಡುತ್ತಾಳೆ. ಈ ಪ್ರಸಂಗಗಳೆಲ್ಲ ಅತ್ಯಂತ dramatic ಆಗಿದೆ.
ಈ ಪ್ರಸಂಗಗಳಲ್ಲಿ ನಾಟಕಕ್ಕೆ speed ಸಿಗುತ್ತದೆ. ಘಟನೆಗಳ ಚಾಕಿಗೆ ದರ್ಶಕರ ಮನಸ್ಸು ಸಿಕ್ಕು, ಓಡುತ್ತದೆ. ಚಂಪಾ ನಾಟಕದ ಕೇಂದ್ರದಲ್ಲಿ ಬಂದು ನಿಲ್ಲುತ್ತಾಳೆ. ಸಖಾರಾಮನ ಬದಲಾಗಿ ಚಂಪಾ ತಾನು ನಾಟಕದ ಗರ್ಭಪಿಂಡ ಆಗುತ್ತಾಳೆ. ಪೂರಾ ನಾಟಕದಲ್ಲಿ ಚಂಪಾ ಬೇಕೆನ್ನಿಸುವ ಪಾತ್ರ ಆಗುತ್ತಾಳೆ. ಈ ಮರಾಠಿ ರಂಗಪ್ರದರ್ಶನದಲ್ಲಿ ಚಂಪಾಳ ಪಾತ್ರ ವಹಿಸಿದ್ದ ಲಾಲನ ಸಾರಂಗ ನಾಟಕದ ಜೀವಾಳವಾಗಿ ನಿಲ್ಲುತ್ತಾರೆ. ಮರಾಠಿ ಗ್ರಾಮ್ಯ ಭಾಷೆಯಲ್ಲಿ ತುಂಬ ಸಮರ್ಥ ರೀತಿಯಿಂದ ಲಾಲನ ಸಾರಂಗ ಮಾತಾಡುತ್ತಾರೆ. ಲಾಲನ ವರು ನೋವು ಅತೃಪ್ತಿ, ಕಾಮ, ಜಿಗುಪ್ಪಗಳಂತಹ ಅತ್ಯಂತ ಸೂಕ್ಷ್ಮ ಮನೋಭಾವಗಳನ್ನು ತಮ್ಮ ಸ್ವಾಭಾವಿಕ ಕ್ರಿಯೆಯಿಂದ ತೀಕ್ಷ್ಣತೆಯಿಂದ ಅಭಿವ್ಯಕ್ತಗೊಳಿಸುತ್ತಾರೆ.
ದಾವೂದ ಅಷ್ಟೊಂದು ಒಳ್ಳೆಯ ಪಾತ್ರವಲ್ಲ-ಈ ಪಾತ್ರಕ್ಕೆ ಬೇಕಾಗುವ ಕೆಟ್ಟತನ ಅವನಲ್ಲಿ ಕಾಣಿಸುವದಿಲ್ಲ-ಅಭಿನಯಕ್ಕೆ ಆಸ್ಪದ ಇಲ್ಲದಿರುವದೇ ಇದರ ಅಸಫಲತೆಗೆ ಕಾರಣವಿರಬಹುದು.
ದಾವೂದನ ಅನಾವಶ್ಯಕ ‘ಎಂಟ್ರಿ’ ಗಳಿಂದ, ಅಸಹ್ಮ ಮಾತುಗಳಿಂದ ಅವನು ಬೇಸರ ತರುವ ಪಾತ್ರವಾಗಿ ಉಳಿಯುತ್ತಾನೆ.
ಎರಡುವರೆ ಗಂಟೆಗಳ ಕಾಲ ನಡೆಯುವ ರಂಗಪ್ರಯೋಗದಲ್ಲಿ ಕೇವಲ ನಾಲ್ಕು ಪಾತ್ರಗಳಿವೆ ; ಆದರೆ ಎಲ್ಲರಿಗೂ ಬೇಕಾಗುವ dynamic activity ಸಖಾರಾಮ ಮತ್ತು ಲಕ್ಷ್ಮೀ ಇವರುಗಳಲ್ಲಿ ಹೆಚ್ಚಾಗಿ ಕಾಣಿಸುವದಿಲ್ಲ. ಇದರಿಂದಾಗಿ ನಾಟಕ ಅನೇಕ ಸಲ ‘ಬೋರ್’ ಮಾಡುತ್ತದೆ.
ಇಷ್ಟೆಲ್ಲ ಇದ್ದರೂ ಈ ನಾಟಕಕ್ಕೆ ತನ್ನದೇ ಆದ ಮಹತ್ವವಿದೆ. ಯಾಕೆಂದರೆ ಬದಲಾಗುತ್ತಿರುವ ಸಮಾಜದಲ್ಲಿ ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿರುವ ಆನೇಕ Valuesಗಳನ್ನು-ಅವುಗಳ ಒಂಕುಡೊಂಕಾದ ರೂಪದಲ್ಲಿಯೇ ತೋರಿಸುತ್ತದೆ. ಧರ್ಮ, ನೀತಿ, ಶೀಲ, ಅಶ್ಲೀಲ, ವಿವಾಹ ಸಂಸ್ಥೆ, ಪರಂಪರೆ ಇವುಗಳಿಗೆಲ್ಲ ‘ಸಖಾರಾಮ ಬಾಯಿಂಡರ್’ ಸವಾಲಾಗಿ ನಿಲ್ಲುತ್ತಾನೆ. Sex ತನ್ನ ತುಂಬ Vulgar ರೂಪಕ್ಕಿಳಿದರೆ ಸಂಭವಿಸುವ ದುರಂತವನ್ನು ದೃಶ್ಯಬಂಧದಲ್ಲಿ ತರುವದು ಒಂದ: bold ಹೆಚ್ಚೆಯೆನ್ನಬಹುದು. ಇಂಥ ಸಾಹಸದ ಹೆಜ್ಜೆಯನ್ನು-ಸಿರಾಕರಿಸಿದ ಜನ ಅನೇಕರಿದ್ದಾರೆ. ನಾಟಕದ ಸಂದರ್ಭದಲ್ಲಿ ತೀರಾ ಹಳೆಯದಾದ ‘ಕಲೆ ಯಾತಕ್ಕಾಗಿ?” ಎನ್ನುವ ವಿಷಯ ಮತ್ತೊಮ್ಮೆ ಚರ್ಚೆಗೀಡಾಯಿತು. ಇಂಥ ನಾಟಕಗಳಿಂದ ಆಗುವ ಪರಿಣಾಮಗಳ ಬಗ್ಗೆ ಗಂಭೀರ ಚರ್ಚೆ ನಡೆಯಿತು. ಈ ನಾಟಕದಿಂದ ಸಾಧಿಸಿದ ಗುರಿ ಯಾವದೆಂದು ಕೆಲವರು ಸವಾಲು ಹಾಕಿದರು. ಇದರಿಂದ ಸಂಸ್ಕೃತಿ, ಧರ್ಮ, ವಿವಾಹ ಸಂಸ್ಥೆಗಿದ್ದ ಪವಿತ್ರತೆ, ಸಮಾಜದ ಆರೋಗ್ಯ ಇವೆಲ್ಲವು ಹಾಳಗುತ್ತದೆ ಎಂದು ಅನೇಕರು ಹಳಹಳಿಸಿದರು. (ಘಾಸೀರಾಮ ಕೋತವಾಲ ಬಂದ ನಂತರವಂತೂ ಕಲ್ಲೆಸೆದು ಪ್ರದರ್ಶನ ನಿಲ್ಲಿಸುವ ನಿರ್ಧಾರ, ಸಂಸ್ಕೃತಿ ರಕ್ಷರು ಮಾಡಿದರು. ಪ್ರತ್ಯುತ್ತರವಾಗಿ ಸಾಹಿತಿಗಳು ಶ್ರೀ ವಿಜಯ ತೇಂಡೂಲಕರ್‌ರ ಪರವಾಗಿ ಶಿಫಾರಸ ಪತ್ರ ಹೊರಡಿಸಿದರು.)
ಶ್ರೀ ವಿಜಯ ತೇಂಡೂಲಕರ್‌ ಈ ನಾಟಕ ಹೇಗೆ ಹುಟ್ಟಿಕೊಂಡಿತೆಂದು ತಿಳಿಸಿದರು. ಸಖಾರಾಮ ಅವರು ಕಂಡ ಜೀವಂತ ವ್ಯಕ್ತಿ. ಅವನ ಬದುಕಿನಲ್ಲಿ ಅವರಿಗೆ ಆಸಕ್ತಿ ಹುಟ್ಟಿತು. ಅವನು ತುಂಬ ಸರಳ ಮನುಷ್ಯ, ಮಣ್ಣಿನಲ್ಲಿರುವವನು. ಯಾವ ಒಳಗಂಟಿನವನೂ ಅಲ್ಲ-ಅವನ ಜೀವನ ಕ್ರಿಯೆಗಳೇನಾಗಿದ್ದರೂ ಅವನು ಸೀದ ಸಾದಾ ಮನುಷ್ಯ, ಎಂದು ತಿಳಿದು ಅವನನ್ನು ರಂಗಕ್ಕಿಳಿಸಿದರಂತೆ.
Theatre Unit ಗಾಗಿ ಶ್ರೀ ಸತ್ಯದೇವ ದುಬೆ ಅವರು ‘ಸಖಾರಾಮ ಬಾಯಿಂಡರ್‌ದ ಹಿಂದಿ ರೂಪಾಂತರ ರಂಗಮಂಚದ ಮೇಲೆ ತಂದರು. ಗುಜರಾತಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿಯೂ ಇದರ ಪ್ರಯೋಗಗಳಾಗಿವೆ.
ಡ್ರಾಯಿಂಗ ರೂಮ ಸಂಸ್ಕೃತಿಯ ಜನರನ್ನು ಅಲುಗಾಡಿಸಿ ಎಬ್ಬಿಸುವ ಸಾಮರ್ಥ್ಯ ನಾಟಕದಲ್ಲಿದೆ. ಹುಬ್ಬೇರಿಸಿಕೊಂಡು ತಮ್ಮ Ivory towers ನಲ್ಲಿ ಕುಳಿತು ಸಮಾಜದ ಕಡೆಗೆ ಬೆರಳು ಮಾಡಿ ತೋರಿಸುವ ಜನರು, ಸಹಜತೆಯಿಂದ ಕೆಳಗಿಳಿದು, ಬಂದು ನೋಡಿದರೆ ಅವರಿಗೆ ಸುಖಾರಾಮನ ಜೀವನ ದರ್ಶನ ಅರ್ಥಾಗುತ್ತದೆ. ಸುಖಾರಾಮನ ಸಿಟ್ಟು, ನಪುಂಸಕತೆ, ಪಾಪ, ವ್ಯಭಿಚಾರ, ಚಂಪಾ, ಲಕ್ಷ್ಮಿಯರಂತಹ ಹೆಂಗಸರ ಜೀವಕ್ರಮ ಅವರ ಪರಿಪ್ರೇಕ್ಷದಲ್ಲಿದ್ದುಕೊಂಡು ನೋಡಿದರೇ ಗೊತ್ತಾಗುತ್ತದೆ. ಮಡಿ ಪಂಚೆಯನ್ನು ಕಣ್ಣೆದುರು ಹಿಡಿದುಕೊಂಡು ನೋಡಿದರೆ ಇಂತಹ bold ನಾಟಕಗಳ ಅರ್ಥ ಹೇಗಾಗಬೇಕು?

Close

ಅನಾಮಧೇಯನ ಡೈರಿಯಿಂದ

ಅನಾಮಧೇಯನ ಡೈರಿಯಿಂದ

ಎಂ ಎನ್ ಜೈಪ್ರಕಾಶ್

ಪ್ರಿಯ ಡೈರಿ,
ನೋಡು, ಈ ಊರಲ್ಲಿ ಏನೂ ಮಾಡೋಕಾಗಲ್ಲ. ನಿಷ್ಕ್ರಿಯನಾಗಿ ಸಾಯ್ತಾ ಇದೀನಿ. ಹಾಗಂತ ಆಗ ಓದ್ತಾ ಇದ್ದಾಗ ಇದ್ದ ಆಸೆಗಳು ಯೋಚನೆಗಳು ಈಗಲೂ ಮನಸ್ಸಿನಲ್ಲಿ ಇವೆ. ಅವೂ ದಿನೆ ದಿನೇ ಬೆಳಿತಾ ಇವೆ. ಆದರೆ ಒಂದೂ ನವಮಾಸ ತುಂಬಿ ಜೀವಂತ ಹೊರಗೆ ಬರೋಲ್ಲ. ಎಲ್ಲವಕ್ಕೂ ಭ್ರೂಣಹತ್ಯೆ ಆಗುತ್ತೆ. ಆದರೆ ಈ ಮನಸ್ಸಿನ ಗರ್ಭದಲ್ಲಿ ಈ ಅಭೀಪ್ಸೆಗಳು ಪುನಾಃ ಗರ್ಭಕಟ್ಟುತ್ತವೆ; ಪುನಾಃ ಗರ್ಭಪಾತವಾಗುತ್ತದೆ. ಇಷ್ಟೆ ನೋಡು ಇಲ್ಲಿನ ಬದುಕು. ಇಲ್ಲಿ ಬದುಕಿನ ವ್ಯಾಖ್ಯೆಯೇ ಸೀಮಿತವಾಗಿ ಬಿಡುತ್ತದೆ. ಮುನ್ನೂರರವತ್ತೈದು ದಿನವೂ ಒಂದೇ ಥರಾ, ಮೂರಕ್ಕಿಂತ ಕಮ್ಮಿ ಇಲ್ಲ; ಆರಕ್ಕಿಂತ ಹೆಚ್ಚಿಲ್ಲ. ಒಟ್ಟಿನಲ್ಲಿ ಸಮ್ನೆ ಕೊಳಿತಾ ಹೋಗೋದು ಅಷ್ಟೆ. ಈ ಊರಿಂದ ತಪ್ಪಿಸಿಕೊಂಡರೆ ಏನಾದರೂ ನಾನು ಉದ್ಧಾರವಾದೇನು. ಆದರೆ ಹೇಗೆ ತಪ್ಪಿಸಿಕೊಳ್ಳದು ಹೇಳು? ಕಂಡಕಂಡ ವಾಂಟೆಡ್ ಕಾಲಂಗಳಿಗೆ ಅರ್ಜಿ ಗುಜರಾಯ್ಸಿ ಗುಜರಾಯ್ಸಿ ಅಕ್ಷರಗಳು ಗುಂಡಗಾದವು. ಆದರೂ ಶ್ರಮದ ಫಲಿತಾಂಶ ಮಾತ್ರ ನಪಾಸು. ಅಲ್ಲಿ ಕೆಲಸ ಸಿಗದಾದ್ರು ಹೇಗೆ ನಮ್ಮಂಥವರಿಗೆ ? ನನ್ಹತ್ರ ಏನು ಹಣಾ ಉಂಟಾ ? ಶಿಫಾರಸು ಮಾಡುವ ಜನರುಂಟಾ ? ಏನೇನೂ ಇಲ್ಲ, ಓದುವ ಮಹಾಪರಾಧ ಮಾಡಿದ್ದಕ್ಕೆ ಯೂನಿವರ್ಸಿಟಿ ಎಂಬ ಸರ್ಟಿಫಿಕೇಟುಗಳ ಕಾರ್ಖಾನೆ ಕೊಟ್ಟ ಸರ್ಟಿಫಿಕೇಟ್‌ ಇದೆ. ಆದರೆ ಈ ಕಾಗದದ ಚೂರಿಗೆ ಇವತ್ತು ಏನು ಬೆಲೆ ಇದೆ ಹೇಳು ? ಇನ್ನು ರಾಜಕೀಯ ಮಾಡೋಕೆ ನನಗೆ ಬರೋಲ್ಲ ಆದ್ರೆ ನೋಡು, ಈ ಊರಿನ ಚುಚ್ಚುವ ಕಣ್ಣುಗಳೆದರು ನಾನು ಜುಜುಬಿಯಾಗಿ, ಚಿಲ್ಲರೆಯಾಗುತ್ತಾ ಹೊಗುವ, ಬರೀ ವಾಂಟೆಡ್ ಕಾಲಂನಲ್ಲೇ ಮೈಮನಸ್ಸುಗಳನ್ನು ಸೀಮಿತಗೊಳಿಸಿಕೊಳ್ಳುವುದರ ಅಸಹ್ಯ ವೇದನೆ ಸಾಮಾನ್ಯವಲ್ಲ. ಹೋಗ್ಲಿ ಇಲ್ಲೇ ಬೇರೇನಾದ್ರೂ ಉದ್ಯೋಗ ಮಾಡೋಣ ಅಂದ್ರೆ ಈ ಊರೋ….ರಾಮ ರಾಮಾ…ಇರೋ ಆರು ಬೀದಿಲಿ ಯಾರಾದರೂ ಗಟ್ಟಿಯಾಗಿ ಹೂಸುಬಿಟ್ಟರೆ ಉಳಿದೆಲ್ಲ ಬೀದಿಗೆ ಗೊತ್ತಾಗಿ, ಆ ಕೆಲಸವಿಲ್ಲದ ಬಾಯಿಗಳ ಹರಟೆಯ ಮಾತಿಗೆ ಮೇವಾಗಿ ಬಿಡುತ್ತದೆ.
.
.
.
ಪ್ರಿಯ ಡೈರಿ,
ಬೆಳಿಗ್ಗೆ ಗಡ್ಕಕ್ಕೆ ದುಡ್ಡಿರಲಿಲ್ಲ. ಕೂಲಿ ಮಾಡೋಣಾಂತ ಹೋದರೆ ಏನಾಯ್ತು ಗೊತ್ತಾ ? ಕೂಲಿ ಇಮಾಮ್‌ ಅಡ್ಡ ಬಂದ: ಏನ್ ಸಾಮಿ ! ನೀವು ಇಷ್ಟು ಓದ್ದೋರು ಈ ಬೇವಾರ್ಸಿ ಕೆಲ್ಪಕ್ಕೆ ಬರೋದ ? ನಮ್ಮನ್ನ ಹಾಸ್ಯ ಮಾಡೋಕೆ ಬಂದ್ರಾ? ದಯ ವಿಟ್ಟು ಬೇಡ ಅಂದ. ಕೈ ಮುಗಿದ. ಅಷ್ಟರಲ್ಲೆ ಊರೆಲ್ಲಾ ಗುಲ್ಲೋಗುಲ್ಲು. ಕೂಲಿ ಮಾಡೋಕೆ ಹೊರಟಿದ್ದ ನನ್ನ ನೋಡೋಕೆ ಏನು ಜನ ಸೇರಿದ್ದರು ಅಲ್ಲಿ ಅತಿಯಾ. ಅಬ್ಬಾ ನೆನೆಸಿಕೊಂಡರೆ ನನಗೇ ನಾಚಿಕೆಯಾಗುತ್ತೆ. ಒಬ್ಬ ವ್ಯಕ್ತಿ ಅಸಹಾಯಕತೇಲಿ ಕ್ಷಣ ಕ್ಷಣವೂ ಸಾಯೋದನ್ನ ನೋಡಿ ಖುಷಿಪಡುವ ಜನ ಇವರು. ಕೊನೆಗೆ ಶ್ರೀಪತಿ ಬಂದ ಅಂತ ನನಗೆ ಕೂಲಿ ಮಾಡೋಕೆ ಬಿಡಲಿಲ್ಲ. ನಾವು ವಾರದನ್ನ ಮಾಡಿ ಕಲಿತ ವಿದ್ಯೆ ನಮಗೇ ಶತ್ರುವಾಗೋದು ಇಲ್ಲೇ. ಇಂದಿನ ವಿಪರ್ಯಾಸ ಎಂದರೆ ಇದೇನೇ. ಕೊನೆಗೆ ಪುರಪ್ರಮುಖರು ಅನ್ನೋ ಮಂದಿ, ಛೇ ಛೇ ಎಂಥ ಅಪಮಾನ. ಓದಿದೋನಾಗಿ, ಬ್ರಾಹ್ಮಣನಾಗಿ, ಕೂಲಿ ಮಾಡ್ತಾನಂತೆ. ಡಿಗ್ನಿಟಿ ಅನ್ನೋದು ಸ್ವಲ್ಪನೂ ಬೇಡವಾ. ಛೇ ಛೇ ಈಗಿನ ಹುಡುಗರಿಗೆ ಸಾರಾಸಾರ ವಿವೇಚನೆಯೇ ಇಲ್ಲ-ಅಂತ ಬೆನ್ನ ಹಿಂದೆ ಆಡಿಕೊಂಡರು. ಕಂಡೆಯಾ, ಹೇಗಿದೆ ಪ್ರಪಂಚ
.
.
.
ಪ್ರಿಯ ಡೈರಿ,
ನಾನು ದುಡಿದು ಗಳಿಸೋಕೆ ಈ ಜನ, ಈ ಊರು ಬಿಡೋಲ್ಲ. ಮತ್ತೆ ಆಗಸ್ಟ್ ೧೫, ಗಾಂಧಿಜಯಂತಿ ದಿನಗಳಲ್ಲಿ ಇವರೇ ಮಾತನಾಡೋದು ಕೇಳಬೇಕು ನೀನು: ಯಾವ ಕೆಲಸ ಆದ್ರೆ ಏನು. Dignity of labour ಮುಖ್ಯ ಅಲ್ಲ. ಬಸವಣ್ಣ ಸಹಾ ಹೇಳಿದ್ದೇನು-ಕಾಯಕವೇ ಕೈಲಾಸ ಅಂತ ! ದುಡಿಮೆಯಲ್ಲಿ ಮೇಲು ಕೀಳು ಇಲ್ಲ. ಗಾಂಧಿ ತಮ್ಮ ಬಟ್ಟೆ ತಾವೇ ಒಗಿತಾ ಇದ್ರು : ತಮ್ಮ ಮಲ ತಾವೇ ತೆಗೀತಿದ್ದರು….. ಆದರೆ ನಮ್ಮ ಯುವಕರಲ್ಲಿ ತಮ್ಮ ಲಗ್ಗೇಜ್‌ಗಳನ್ನು ತಾವು ಹೊರೋದು ಅಂದರೆನೇ ಕೀಳು ಅನ್ನೋ ಸಂಕುಚಿತ ದೃಷ್ಟಿ ಇದೆ. ಇದು ಹೋಗ್ದ ಹೊರ‍್ತೂ ಸಮಾಜ ಉದ್ಧಾರವಾಗೋಲ್ಲ….. ಹಾಗೇ ಹೀಗೆ ಅಂತ ಕ್ಲಿಷೆಭಾಷಣ ಕಾರಿಕೊಳ್ತಾರೆ. ಮತ್ತೆ ನಾನು ಕೂಲಿ ಮಾಡೋಕೆ ಹೊರಟರೆ ತಮ್ಮದೇ ಮಾನ ಹೋದ್ಹಾಗೆ ಅಡ್ಡಗಾಲು ಹಾಕುತ್ತಾರೆ. (‘ವಿರೋಧಾಭಾಸ’ದ ಅಲಂಕಾರಕ್ಕೆ ಇದೊಳ್ಳೆ ಉದಾಹರಣೆ ಆಗಬಹುದು. ಅಲ್ವಾ?) ಈ ಇವರ ಮಾತು ಕೇಳಿದರೇನೆ ವಾಂತಿಯೊಳಗೆ ಕೈಯಾಡಿಸಿದಷ್ಟು ಅಸಹ್ಯವಾಗುತ್ತೆ. ಇಂಥಾ ಊರಲ್ಲಿ ಉಸಿರಾಡೋದು ಅಂದರೆ ಸಾಯ್ತಾ ಹೋಗಧು ಅಷ್ಟೆ……….
.
.
.
ಪ್ರಿಯ ಡೈರಿ,
ಮೊನ್ನೆ ಚಂಪಾ ಬಂದಿದ್ದಳು. ಯಾಕ ಮದುವೆಗೆ ಬರಲಿಲ್ಲ? ಇನ್ವಿಟೇಷನ್ ಸಿಗಲಿಲ್ವ? ಆರೋಗ್ಯ ಇರಲಿಲ್ಪಾ ? ಅಂತ ಒಂದೇ ಉಸುರಿಗೆ ಕಾತರದಿಂದ ಬಡಬಡಿಸಿದಳು. ಸಿಗ್ತು ಬರ್ಲಿಕ್ಕೆ ಆಗ್ಲಿಲ್ಲ ಅಂದಿದ್ದಕ್ಕೆ ಗಲ್ಲ ಊದಿಸಿಕೊಂಡಳು. ನಂಗೊತ್ತು ನಿನಗೆ ನಾವೆಲ್ಲ ಈಗ ಬೇಡ ಆಗಿದೆ. ಎರಡು ವರ್ಷ ಒಟ್ಟಿಗೆ ಓದಿದ್ದು ಎಲ್ಲಾ ನಿಂಗೆ ಮರೆತು ಹೊಗಿದೆ ಅಂದಳು.
ಆದರೆ ನೋಡು, ನನ್ನ ಸ್ಥಿತಿ ಅವಳಿಗೆ ಅರ್ಥವಾಗಲ್ಲ. ಜೀವನದ ವಿರೋಧಾಭಾಸ ಅವಳಿಗೆ ಗೊತ್ತಿಲ್ಲ. ಮೊದಲಿನಿಂದಲೂ ಬರೀ ಕಾಲೇಜು- ಸಿನಿಮಾ – ಶತ್ರುಘ್ನಸಿನ್ಹಾ -ಜಯಾಬಾಧುರಿ-ಮದುವೆ-ಬೇಂದ್ರೆ ಪುಟ್ಟಪ್ಪ ಅಡಿಗ-ರಮ್ಯ ನವ್ಯ – ಪ್ರೊಫೆಸರು-ಪಂಪನ ಮೇಲೆ ಸೆಮಿನಾರ್‌ ಪೇಪರು-ಪಿಕ್‌ನಿಕ್-ಅಂತ ಕೊನೇವರೆಗೂ ಉಲ್ಲಾಸದಿಂದ ಕುಣಿದಳು. ತಿಂಗಳ ಮೊದಲಿಗೆ ಅವಳಪ್ಪ ಮರೆಯದೆ T.M.O. ಕಳುಹಿಸುತ್ತಿದ್ದರು. ಆಂದಮೇಲೆ Strugglefor Existence ಅನ್ನುವ ಪದದ ಅರ್ಥ ಅವಳಿಗೆಲ್ಲಿ ಪಾಪ ಅರಿವಾಗಬೇಕು. ಪರಿಕ್ಷೆ ಮುಗಿದ ತಕ್ಷಣ ನನ್ನ ಹಾಗೆ ಅವಳು ಕೆಲಸಕ್ಕೆ ಆಲಿಬೇಕಾ ? ಏನಿಲ್ಲ. ಆರಾಮಾಗಿ ಅಪ್ಪ ಆಯ್ಕೆಮಾಡಿದ ಭರ್ಜರಿ ಗಂಡನ್ನ ಮದುವೆಯಾದಳು. ಅವಳಿಗೆ ನನ್ನ ತಹತಹ, ನನ್ನ ಕಸಿವಿಸಿ, ನನ್ನ ನಿರುದ್ಯೋಗ ಎಲ್ಲಾ ಎಲ್ಲಿ ಅರ್ಥವಾಗುತ್ತೆ ಹೇಳು ?
ಈ ಚಂಪಾ ಮತ್ತೆ ಅವಳಂಥ ಹುಡುಗಿಯರನ್ನು ಕಂಡಾಗ ಅವರ ಮೇಲೆ ನನಗೆ ತುಂಬ ತುಂಬಾ ಹೊಟ್ಟೆಕಿಚ್ಚು ಆಗುತ್ತದೆ. ಗಾಳಿ ಬಂದು ರೆಕ್ಕೆ ಬಿಚ್ಚಿ ಹಾರುತ್ತಾ ಅಲ್ಲೇ ತಮ್ಮ ಸುಂದರ ವರ್ಣಮಯ ಜಗತ್ತನ್ನು ಸೃಷ್ಟಿಸಿಕೊಂಡು ಸಮಾಧಾನವಾಗಿ ಬಾಳುವ ಕಲೆ ಕಂಡು ದಿಗ್ಭ್ರಮೆಯಾಗುತ್ತದೆ. ಹೀಗೆ ಬದುಕಿನೊಡನೆ ರಾಜಿ ಮಾಡಿಕೊಂಡು ಬದುಕುವ ಚಾತುರ್ಯ ನನಗಿಲ್ಲದ್ದು ತಿಳಿದು ನನ್ನ ಬಗೆಗೇ ಖೇದವಾಗುತ್ತದೆ.
.
.
.
ಪ್ರಿಯ ಡೈರಿ,
ಕೇಳು. ವಿಳಾಸ, ದಿನಾಂಕ, ವಾರ, ಕಂಟ್ಯೂನಿಟಿ ಇಲ್ಲದ ಈ ನನ್ನ ದಿನಚರಿಯಂತೆ ನನ್ನ ಆಸೆ ಅಭಿವ್ಯಕ್ತಿಗಳೂ ಸಹಾ ವಿಳಾಸವಿಲ್ಲದ ಅಪರಿಚಿತ ಅನಾಮಧೇಯರಾಗಬಾರದು ಅಲ್ಲವಾ? ಆದರೆ ಈ ನಮ್ಮಂತಹ ಸಾವಿರಾರು ದನಿಗಳ ಅಂತರಾಳದಲ್ಲಿ, ರಕ್ತ ಹರಿಯುವ ಧಮನಿ ಧಮನಿಗಳಲ್ಲಿ ತಮ್ಮ ಸಹಜ ರಹದಾರಿಗಳಿಗಾಗಿ ಕಾಯುತ್ತಿರುವ ಉಸಿರಾಡಲು ಹಾತೊರೆಯುತ್ತಿರುವ ಅಸಂಖ್ಯ ಭಾವಗಳಿಗೆ ಕಾಲುವೆಗಳನ್ನೇ ಮುಚ್ಚಿರುವ ಈ ಸಮಾಜದ ಬಗ್ಗೆ ನನಗೆ ದ್ವೇಷ ಇದೆ. ಈ ಸಮಾಜದ ಒಂದು ಅಂಶವಾದ ನಮ್ಮನ್ನೇ ತೊತ್ತಳ ತುಳಿಯುವ ಈ ವಿಘಟನೆಯಲ್ಲಿ ನಮ್ಮನ್ನು ಗುರುತಿಸುವ ಒಂದಾದರೂ ಪ್ರಾಮಾಣಿಕ ಜೀವ ಇದೆಯೆ ? ಇದೆಯೆಂಬ ನನ್ನ ನಂಬಿಕೆಯೂ ಈಗ ದಿನ ದಿನಕ್ಕೆ ನಿಮಿಷ ನಿಮಿಷಕ್ಕೆ ಮೇಲಕ್ಕೆ ಜರಿಯುತ್ತಿದೆ…….
.
.
.
ಪ್ರಿಯ ಡೈರಿ,
ಇವನು ಎಷ್ಟು Mean ಆದ ಅಂತ ನಿನಗೆ ಅನ್ನಿಸಬೌದು. ಆದರೆ ನಿಜಾ ಹೇಳುತ್ತೇನೆ. ಬೇಸರ ಮಾಡ್ಕೊಬೇಡಾ. ಸಾವಿರ ಸಾರಿ ನನಗೆ ಅನ್ನಿಸುತ್ತೆ -ನಾನು ಹೆಣ್ಣಾಗಿ ಹುಟ್ಟ ಬೇಕಿತ್ತು ಅಂತ. ಹೆಣ್ಣಾಗಿದ್ದರೆ ಇಂದು struggle for existenceಗೆ ಈ ರೀತಿ ತಲೆ ಕೆಡಿಸಿಕೊಂಡು ಭಯಪಡೋದು ಇರುತ್ತಿರಲಿಲ್ಲ. ನೀತಿ ನಿಯತ್ತು ಕೊಂಚ ಬಿಡಬೇಕಾಗುತಿತ್ತು ಅಷ್ಟೆ. ಅಲ್ಲದೆ ನೀತಿ ನಿಯತ್ತು ಎಂದು ಕೂತರೆ ಈ ಕಾಲದಲ್ಲಿ ತಲೆಯೆತ್ತಲು ಸಾಧ್ಯಾನಾ. ಇಷ್ಟಕ್ಕೂ ಈ ದಿನ ಮೊರಾಲಿಟಿಗೆ ಬೆಲೆ ಎಲ್ಲಿದೆ ಹೇಳು ? ದೊಡ್ಡ ದೊಡ್ಡ ಮಹಲು ಕಟ್ಟಿಕೊಂಡು ಸದಾ ಫಿಯೆಟ್, ಪ್ಲಿಮತ್, ರೋಲ್ಸರಾಯ್ಸ್‌ ಕಾರುಗಳಲ್ಲಿ ಓಡಾಡೋ ಗಣ್ಯರು ಸಭ್ಯರು ಅನ್ನೋ ಮಂದೀಲಿ ಎಷ್ಟು ಜನಕ್ಕೆ ನೀತಿ ನಿಯತ್ತು ಉಂಟು ? ಎಲ್ಲ ಹೊರಗಿನ ಆಡಂಬರ. ಒಳಗೆ ನೋಡಿದರೆ ಗೊತ್ತಾಗೋದು-ಅವನ ಹೆಂಡತಿ ಇವನ ಜೊತೆ ಮಜಾ ಮಾಡ್ತಿರ‍್ತಾಳೆ. ಅವನು ಗುಪ್ತ ಖಾಯಿಲೆ ಅಂಟಿಸಿಕೊಂಡು ಸೂಳೆಗೇರಿಲಿ ಯಾವುದೋ ಹಣ್ಣಿನ ತೊಡೆ ಮೇಲೆ ಬಿದ್ದಿರ‍್ತಾನೆ, ಮೇಲಕ್ಕೆ ನೋಡುವವರಿಗೆ ಇವೆಲ್ಲಾ ತಿಳಿಯುತ್ತದಾ ? ಹಗಲಿನ ಕಥನೇ ಬೇರೆ; ರಾತ್ರಿ ಕಥನೇ ಬೇರೆ. ಯಾರು ಯಾರಿಗೋ ಗಂಡ ಮಿಂಡ ಆಗಿರುತ್ತಾರೆ. (ಹೀಗೆ ಮನಸ್ಸು ಮತ್ತು ದೇಹದ ಮೇಲೆ ಏಕಕಾಲಕ್ಕೆ ನಿರಂಕುಶ ವ್ಯಭಿಚಾರದ ಧ್ವಜ ಹಾರಿಸುವ ಇಲ್ಲಿ ‘ಶೀಲ’ ಆನ್ನುವ ಒಂದು ಪದ ಇದೆಯೆ ? ಮಾನವೀಯ ಸಂಬಂಧಗಳು ಇದೆಯೆ ? ಮನಸ್ಸು ಆನ್ನುವುದು ಇದೆಯೆ ? ಅಂದಮೇಲೆ ಇಲ್ಲಿ ಆತ್ಮವಂಚನೆ ಆತ್ಮಸಾಕ್ಷಿಯೆನ್ನುವ ಸಂದಿಗ್ಧತೆ ಉದ್ಭವಿಸಲಾರದು.) ಆದರೆ ಇದೆಲ್ಲವೂ ಬಯಲಾಗುತ್ತದೇನು? ಇಲ್ಲ. ಎಲ್ಲಾ ಹಣದ ದೊಂಬರಾಟದ ಮರೆಯಲ್ಲಿ ಹೂತುಹೋಗುತ್ತದೆ. ಆದರೆ ನನ್ನಂತಹ ಸಾಮಾನ್ಯ ಅಥವಾ ಒಬ್ಬಳು ಪ್ರತಿಭಟಿಸಿದರೆ ಈ ಸಮಾಜ ಹೇಗೆ ವರ್ತಿಸುತ್ತೆ ನೋಡು! ವಾರದ ಹಿಂದೆ ಇದೆ ಊರಲ್ಲಿ ನಡೆದಿದ್ದು ಇದು : ಯಾರೋ ಒಬ್ಬಳು. ಕ್ಷಾಮದ ಗಲಾಟೇಲಿ ದೂರದ ಗುಲ್ಬರ್ಗಾದಿಂದ ಕೆಲ್ಸ ಹುಡುಕಿಕೊಂಡು ಬಂದವಳು. ಎಲ್ಲೂ ಕೆಲಸ ಸಿಗದೆ ಇಲ್ಲಿನ ಸಮಾಜ ಸುಧಾರಕ ಶೀನಪ್ಪನವರಲ್ಲಿ ಊಳಿಗಕ್ಕೆ ನಿಂತಳು. ಆದರೆ ಈ ಶೀನಪ್ಪಯ್ಯ ಒಂದು ರಾತ್ರಿ ತನಗೆ ಸೆರೆಗು ಹಾಸಕ್ಕೆ ಹೇಳಿದ್ನಂತೆ. ಆಕೆ ಒಪ್ಪದಿದ್ದಕ್ಕೆ ತನ್ನ ಮನೆಲಿ ತನ್ನ ಮಗುವಿನ ಸೊಂಟದ ಬೆಳ್ಳಿ ನ್ಯಾವಳ ಕದ್ದಳು ಅಂತ ಪೊಲೀಸರಿಗೆ ಛೂಕೊಟ್ಟ. ಸರಿ, ಅವು ಬಂದಾಯ್ತು, ಹೌದೇನೇ ಬೋಸುಡಿ ಹೌದೇನೆ ರಂಡೆ ಮುಂಡೆ ಅಂತ ಕೂದಲು ಹಿಡಿದು ಬೂಟ್ಸ್ ಕಾಲಲ್ಲಿ ಒದ್ದು ಜೇಲಿಗೆ ದಬ್ಬಿದವು. ಕೊನೆಗೆ ಶಿವಮೊಗ್ಗಾ ಕೋರ್ಟಿಗೆ ಹಾಜರ್‌ ಮಾಡಿ ಎರಡು ತಿಂಗಳ ಶಿಕ್ಷೆ ಕೊಟ್ಟರು. ಹೇಗಿದೆ ? ನಿಯತ್ತಿಗೆ ಸಿಗುವ ಮರ್ಯಾದೆ ಇದು ! ಅದೆ ಈ ದೊಡ್ಡ ಮನುಷ್ಯರು ಮಾಡುವ ಪುಂಡುಪೋಕರಿತನಕ್ಕೆ ಯಾವ ಮಗನಿಗೆ ಶಿಕ್ಷೆ ಕೊಡುವ ಛಾತಿಯಿದೆ?
.
.
.
ಪ್ರಿಯ ಡೈರಿ,
ಇಷ್ಟೆಲ್ಲ ವಿಶ್ಲೇಷಣೆ ಮಾಡುವ ನಾನು ಸಹಾ ಪ್ರಾಮಾಣಿಕ ಅಂತ ನಾನೇನೂ ತಿಳ್ಕೊಂಡಿಲ್ಲ. ನನಗೂ ಸರಿಯಾದ ಒಂದು ಹಸಿವಿಲ್ಲದ ನೆಲೆ ಇದ್ದು ಆರಾಮಾಗಿದ್ದರೆ ಇದನ್ಸೆಲ್ಲ ನಾನು ಯೋಚನೆ ಮಾಡುತ್ತಿದ್ನೆ- ಎಂಬ ಗುಮಾನಿ ನನಗೂ ಇದೆ. ನಾನು ದಿನದಿನಕ್ಕೂ ಹೆಚ್ಚು ಹೆಚ್ಚು “ಸಭ್ಯ ಗಣ್ಯ” ಆಗಲು ಇರುವ ಒಳದಾರಿಗಳನ್ನು ಹುಡುಕುವ ಹಲ್ಕಾ ಉದ್ಯಮಕ್ಕೆ ಇಳಿತಿದ್ನೇನೋ ? ಯಾರಿಗೆ ಗೊತ್ತು?
ಇದನ್ನೆಲ್ಲ ಬರೆಯುವುದಕ್ಕೆ ನನಗೇನೂ ಪ್ರೇಮ್ ಅನ್ನಿಸುವುದಿಲ್ಲ. ಏಕೆಂದರೆ ನಮ್ಮ ಇತಿಹಾಸ ನೋಡು ನೀನು. ತಲೆತಲಾಂತರದಿಂದಲೂ ನಮ್ಮ ದೇಹದಲ್ಲಿ ಈ ಸ್ವಾರ್ಥದ ಪ್ರಲೋಭನಯ ಅಸ್ವಂತಿಕೆಯ ರಕ್ತವೇ ಹರಿತಾ ಬಂದಿರೋದು ತಿಳಿಯುತ್ತದೆ. ಇದನ್ನೆಲ್ಲ ಬಿಟ್ಟು ನಾವು ನಿಜವಾಗುವುದು, ಪ್ರಾಮಾಣಿಕರಾಗುವುದು ಹೇಗೆ? ಇದಕ್ಕೆ ಪ್ರಾಯಶಃ ಆ ವಿದೇಶಿಯರು ಇನ್ನೊಮ್ಮೆ ನಮ್ಮ ಮೇಲೆ ಆಕ್ರಮಣ ಮಾಡಬೇಕು. ನಮ್ಮ ಆಸ್ತಿ ಪಾಸ್ತಿ ಎಲ್ಲ ದೋಚಬೇಕು. ಕುಡಿಯೋಕೆ ಒಂತೊಟ್ಟು ನೀರು ಸಿಗದ ಹಾಗೆ ನಮ್ಮನ್ನು ಅವರು ಶೋಷಣೆ ಮಾಡಬೇಕು. ಆಗಲಾದರೂ ನಾವು ಈ ಜೊಳ್ಳು ಜೊಳ್ಳು ಬಡಾಯಿ ಹೊಡೆಯುವುದು ಬಿಟ್ಟು ಮಾನವೀಯ ಸಂಬಂಧಗಳನ್ನು ಕಾರ್ಯರೂಪಕ್ಕೆ ನಿಜವಾಗಿ ತರುವ ಅನಿವಾರ್ಯಕ್ಕೆ ಸಿದ್ಧರಾಗಬಹುದೇನೋ…
.
ಪ್ರಿಯ ಡೈರಿ,
ಇದೆಲ್ಲ ನನ್ನ Perverted ಫಿಲಾಸಫಿ ಸಿನಿಕತನ ಎಂದು ನೀನು ವಾದಿಸಬಹುದು. ಕೆಲವು ಅಂಶ ನಿನ್ನ ವಾದದಲ್ಲಿ ಸತ್ಯ ಇರಬಹುದು. ಆದರೆ ನನ್ನ ಹಾಗೆ ಪರಿಸ್ಥಿತಿಯ ವಿಪರ್ಯಾಸದಿಂದ, ಈ ಮಹನೀಯರ ಸ್ವಾರ್ಥದ ವ್ಯಭಿಚಾರದಿಂದ ಅನಾಮಧೇಯರಾಗಿರುವವರು ಈ ದೇಶದಲ್ಲಿ ಕೋಟಿ ಕೋಟಿಗಟ್ಲೆ ಜನ ಇದಾರೆ ಅನ್ನೋದನ್ನ ನೀನು ಮರೆತಿಲ್ಲ ತಾನೆ. ಸರಾಸರಿ ನಾವೆಲ್ಲರೂ ಒಂದೇ ಸಮಸ್ಯೆಯಲ್ಲಿ ನರಳುತ್ತಾ ಇರೋದ್ರಿಂದ ನಮ್ಮೆಲ್ಲರ ಈ ಆಕ್ರೋಶಕ್ಕೆ, ಈ ಸಿನಿಕತನಕ್ಕೆ, ಈ ಹತಾಶೆಗೆ, ಈ ಭ್ರಮನಿರಸನಕ್ಕೆ ಅರ್ಥ ಇದೆ. ಈ ಎಲ್ಲದರ ಅಗ್ನಿಕುಂಡದಲ್ಲಿ ದಿನೇ ದಿನೇ ಸುಡುತ್ತಾ ಬೇಯುತ್ತಾ ಕ್ಷೀಣವಾಗುತ್ತಿರುವ ಈ ಅನಾಮಧೇಯರ ದನಿಗಳಿಗೆ ನಾಮಧೇಯರಾಗುವ ಯೋಗ್ಯತೆ ಬೆಲೆ ಖಂಡಿತಾ ಇದೆ. ಆದರೆ,
ಈ ಸಹಿಸಲಾಗದ ಯಾತನೆ ಯಾರಿಗೆ ತಾನೆ ತಲುಪುತ್ತದೆ ? ತಲುಪಿದರೂ ಅದರಿಂದ ತಾನೆ ಏನು ?
.
ಪ್ರಿಯ ಡೈರಿ,
ಕೋಗಿಲೆ ಹಾಡದ ಗಿಣಿಗಳು ಕೂಡ್ರದ
ಈ ಮಾಮರಗಳ ಇಪ್ಪತ್ತೈದು ವಸಂತದುದ್ದಕ್ಕೂ
ಟೊಂಗಿ ಟೊಂಗಿಗಳಲ್ಲಿ ಆಸೆಗಳು ಮಾತ್ರ ಅರಳಿ
ಜಲಜನಕ ತುಂಬಿದ ಬಲೂನುಗಳಂತೆ
ಹಾರಿ–ಹಾರಿ-ಹಾರಿ ಆಗಸಕ್ಕೆ ಹೂ ಮುಡಿಸಿದವು.
ಈಗಾಗಲೇ ಬರಡಾಗಿರುವ ಈ ಮಾಮರಗಳನ್ನು ಮರಳಿ ಫಲವತ್ತಾಗಿಸುವ ಜೀವಧಾತುವಿಗೆ ಕಾದು ಕೂರಲೆ ನಾನು ? ನಂಬಿಕೆ ಸ್ಥೈರ್ಯ ತಾಳ್ಮೆಗಳೆಲ್ಲವೂ ಕೈಕಾಲು ಮುರಿದು ಧೂಳಿಪಟವಾಗಿರುವಾಗ ಹೇಗೆ ಕಾಯಲಿ ನಾನು ?

Close

ಇನ್ನಾದರು ಬದುಕಬೇಕು

ಇನ್ನಾದರು ಬದುಕಬೇಕು

ಜಯಸುದರ್ಶನ

ಶಬ್ದ ಮೌನಕ್ಕೆ ಮನಸೋತ ಹೊತ್ತು
ಬೆಳಕು ಬಯಲಾಗಿ ತನ್ನ ಮರೆತ ವೇಳೆ
ಇನ್ನಾದರು ಇನ್ನಾದರು ಇನ್ನಾದರು ಬದುಕಬೇಕು
ಕನಸುಗಳ ಮರೆಯಬೇಕು,
ಕಣ್ಣ ಸ್ಪರ್ಶಕ್ಕೆ ಸಿಗುವ ನೀರಿಗೆ ತೆರೆದು ಮನಸ್ಸು,
ಅದರಾಚೆ ಗಾಳಿಪಟ ಚಾಚಬೇಕು.

ಮರೆತರೂ ಮರೆಯದೋ ಸಮಯ ಪೋಣಿಸುತ್ತಿರುವ ಉಸಿರಾಟ
ಹೃದಯಕ್ಕೆ ಬೇಸರವಿರದ ಜೀತ
ಸಾವನ್ನೆ ಮರೆತಂತಿರುವ ಬದುಕಿನನವರತ ತುಡಿತ.
ಕಣ್ಣನ್ನು ಕವಿದ ರೆಪ್ಪೆಯಾಚೆ ಬಾಗಿಲು ಬಡಿವ ಬೆಳಕಿನ-
ಮೂರ್ತ ಸ್ವರೂಪ ಬಯಲಲ್ಲಿ ಹುಟ್ಟಿ ಬಯಲನ್ನೆ ತಳೆವ ಸೋಜಿಗ,
ಮರೆಯದೋ ಒಳಗೆ ಬಿಡುಗಡೆ ಹಂಬಲಿಸುತ್ತಿರುವ ಕತ್ತಲ ಮೊರೆತ.

ಇನ್ನಾದರು ಬದುಕಬೇಕು,
ಕೋಳಿ ಕಾಳಗಗಳನ್ನ
ಪಯೋನಿರ್‌ ಅಂತರ್ಗ್ರಹ ಯಾತ್ರಗಳನ್ನ
ಚಂದ್ರ ದಿಗ್ವಿಜಯವನ್ನ
ನೆರೆಮನೆಯ ಹುಡುಗಿ ಹರಯಕ್ಕೆ ಕಾಲಿಟ್ಟಿದ್ದನ್ನ
ಗ್ರಂಥ ಭಂಡಾರಗಳಲ್ಲಿ ಜ್ಞಾನ ಕೈಗೆಟುಕದೆ ಪುಸ್ತಕಗಳಲ್ಲಿ ತೂಗಡಿಸುವುದನ್ನ
ವೃತ್ತಪತ್ರಿಕೆಗಳಲ್ಲಿ ಈ ಹೊತ್ತು ಸುದ್ದಿ ಹತ್ತು ಸಾವಿರ ಹೆಡೆಯಾಡಿ,
ಆ ಕ್ಷಣವೆ ನೆಲವಂಟಿ, ಚಾಚಿ ಸರಿದು ಮರೆಯಾಗುವುದನ್ನ
ಸಂಜೆಗೆ ಮುಂಜಾನೆಗಳ ಗರ್ಭಪಾತವಾಗುವುದನ್ನ
ತಟಸ್ಥ ನೋಡುವುದಕ್ಕೆ,
ಮತ್ತು ಬಾಳುವುದಕ್ಕೆ.
ಭೂಮಿಗೆ ನೆತ್ತಿಯನ್ನೊತ್ತಿ ಅಂತರಾಳದಲಿ ಕಾಲ ಬಡವ
ಶೂನ್ಯವನ್ನು ಕಡೆದು ಮುಷ್ಟಿ ಮೈಥುನದ ನಿಟ್ಟುಸಿರು ಬಿಡುವ
ಗಡಿಯಾರಗಳಲ್ಲಿ ಜಿನುಗಿ ಗಾಳಿಯಲ್ಲಿ ಕರಗುವ
ಜೀವದ ಬಯಕೆಗಳ ಮೇಲೆ ಕಾವು ಕುಳಿತಿರುವ ನೆಪದ ಹೊರೆ ಹೊತ್ತ
ಕಾಲನಿಗೆ ಇಲ್ಲ ಹಾದಿ,
ಕ್ಷಣಗಳಕ್ಷೋಹಿಣಿಯ ಅಸ್ತಮಾನಕ್ಕೆ ಒಂದೆ ಹೊಸ ಕ್ಷಣದ ಹುಟ್ಟು ಒಮ್ಮಗೆ,
ಭೂತಕ್ಕೆ ಬಂಧಿಯಾಗಿರುವ ವರ್ತಮಾನಕ್ಕೆ ಹುಟ್ಟಿನಲ್ಲೇ ಸಾವು.
ಇಲ್ಲದಾಗಲು ಹಾದಿ, ಕಾಲ ನಿಂತಲಲ್ಲೆ ಗಿರಿಕಿ ಹೊಡೆಯುವ ಚತುರ,
ತನ್ನ ಕಣ್ಣಿಗೆ ತಾನೆ ಮಣ್ಣೆರಚಿಕೊಂಡು ಲಾಗ ಹಾಕುವ ಆತ್ಮವಂಚಕ ಪಾರಂಗತ.
ಇನ್ನಾದರು ಬಾಗಿಲ ಕಾಯುವ ಬದುಕನ್ನು ಎದೆ ತೆರೆದು
“ಒಳಗೆ ಬಾ” ಎನ್ನಬೇಕು.
ಮುಲಾಜಿಲ್ಲವೆಂದಿಟ್ಟುಕೊಂಡರೂ,
ಅದು ಬಾಗಿಲ ಕಾಯುವ ಕೆಲಸ ತಪ್ಪಿಸುವುದಿಲ್ಲ.
ಆಗ,

ಒಳಗೆ ಧ್ಯಾನ ಎಚ್ಚರ ತಪ್ಪುತ್ತೆ
ಕಣ್ಣಿಗೆ ಕತ್ತಲಿನ ಅಮಲೇರಿ
ಮಂಜುಗವಿದು, ಬೆಳಕನ್ನೆ ಹಡೆದ ಭ್ರಮೆಯಾಗುತ್ತೆ
ಕಿವಿ ಕೇಳಿಸದೆ, ಬಾಗಿಲ ತಟ್ಟುವ ಶಬ್ದ ದಿನಗಳೆದಂತೆ ಕರ್ಕಶವಾಗುತ್ತೆ
ಇಲ್ಲಿ ಸಲ್ಲದವರು ಎಲ್ಲೂ ಸಲ್ಲರೆಂಬ ಹಳೇ ಅರ್ಥವಿರದ ರಾಗಕ್ಕೆ ಹೊಸ
ಅರ್ಥಗಳು ಮೂಡಿ ವ್ಯರ್ಥ, ಜೀವ ಶಪಿಸಿಕೊಳ್ಳುತ್ತೆ. ಪರಿಧಿ ದಾಟುವ ತನ್ನ ಹಂಬಲವ,
ದಾಟಲಾಗದ ಅಸಹಾಯಕತಯ ಮತ್ತು ಸ್ಪರ್ಶದಾಚೆಗೆ ದಕ್ಕದೆ ನಿಂತ ವಿಸ್ಮಯವ.
ಕೊನೆಗೆ, ಕೊಠಡಿಯಲ್ಲಿ ಏಕಾಕಿ ಕಲಿತದ್ದು ಸೊನ್ನೆ
ಮರತದ್ದು ಅದರ ಪರಿಧಿ ಎಂಬ ಸತ್ಯ ನಿರ್ದಯವಾಗಿ ಎದೆಯನ್ನಿರಿಯುತ್ತೆ.
ಆಮೇಲೆ ಸರ್ವಸ್ವ ಅವಸರದಲ್ಲಿ ಬಾಗಿಲ ತೆರೆದರೂ, ಬಡಿವ ಶಬ್ದ ಮಾಯವಾಗಿ
ಹೊರಗೆ
ವ್ಯರ್ಥ ಚೆಲ್ಲಿತ್ತು ಎನಿಸಿದ್ದ ಬೆಳಕೆಲ್ಲ ಕತ್ತಲೆಗೆ ಜಾಗ ತೆರವು ಮಾಡಿ,
ಆಕಾಶಕ್ಕೆ ಹಾರಿ ಅಲ್ಲಿ ಕುಪ್ಪಳಿಸಿದ್ದು ಕಾಣುತ್ತೆ,
ಕೈಗೆಟುಕದೆ ಕಣ್ಣು ಹೊಡೆಯುತ್ತೆ.

ಇನ್ನಾದರು ಬದುಕಬೇಕು,
ರೆಪ್ಪೆಗಳ ಕಿತ್ತು ಹೊರಗಿದ್ದ ಬೆಳಕನ್ನು ಮನೆ ತುಂಬಿಸಿಕೊಳ್ಳಬೇಕು.
ನೋಡಲಾ, ಕಣ್ಣು ತೆರೆದು ಹೆಪ್ಪಾದ ಕತ್ತಲೆಯ, ನಿನ್ನ ಬೆತ್ತಲೆಯ,
ನಿಜ ನೋಯಿಸದು ಅನಗತ್ಯ, ಅದರ ಸೀಮೆ ನಿನ್ನ ನೋವು-ನಲಿವುಗಳಾಚೆ.
ಹೊತ್ತಿಗಿಲ್ಲ ಅವಕಾಶ ಈ ಕ್ಷಣವೆ ಅನಂತದೊಡನೆ ಪ್ರಣಯ ನಡೆಸಿರುವಾಗ
ಕಾಲ ಇದ್ದಲ್ಲೆ ಇತ್ತು, ಎಂದ ಸತ್ತು.
ಕಣ್ಣು ಇನ್ನಲ್ಲ ಟಪಟಪ ರೆಕ್ಕೆ ಬಡಿವ ಬಾವಲಿ,
ಇರುಳಿನ ಮೇಲೆ ಅದರ ನಿಸ್ಸಂಶಯದ ಗರುಡ ಸವಾರಿ,
ನಕ್ಷತ್ರಕ್ಕೆ ಕತ್ತಲಲ್ಲೇ ದಾರಿ.

ಮೌನ ಕಾವು-ಕುಳಿತ ಶಬ್ದ ತನ್ನ ಪರಿಧಿ ಮೀರುವ ಹೊತ್ತು, ಏಳಲಾ, ಇನ್ನೇನು
ಮೌನಕ್ಕೆ ಕನ್ನಡಿಯಾಗಿ ಅರಳುವುದು ಶಬ್ದ, ತನ್ನನ್ನೇ ಮರೆತು,
ಸಂವಾದಕ್ಕೆ ಸಮಯ ಇಲ್ಲಿ ತೆರವು ಮಾಡಿದವಕಾಶದಲ್ಲಿ,
ಎಚ್ಚರಕೆ ಇರದು ಸ್ವಂತಿಕೆಯ ಪರಿವೆ, ಕಾಣುವ ಕಣ್ಣೇ ನೋಟ.
ಕನಸುಗಳೆ ಇರದು ನಿದ್ರೆಯಲ್ಲಿ.
.

Close

ಮನುಷ್ಯ, ಪ್ರಾಣಿ ಮತ್ತು ಬೇಟೆ

ಮನುಷ್ಯ, ಪ್ರಾಣಿ ಮತ್ತು ಬೇಟೆ

ಜಿ ಎಸ್ ಉಬರಡ್ಕ

ಒಂದನ್ನೊಂದು ತಿಂದು ಬದುಕುವ ಈ ಜೀವಜಗತ್ತಿನಲ್ಲಿ ಅನಾದಿಯಿಂದಲೂ ಬದುಕಿಗಾಗಿ ಹೋರಾಟ ನಡೆಯುತ್ತಲೇ ಬಂದಿದೆ. ಇಂಥದೊಂದು ಜಗತ್ತಿನಲ್ಲಿ ಮಾನವನೂ ಒಂದು ಪ್ರಾಣಿಯೆ. ಆದರೂ ಅತಿಯಾದ ಬುದ್ಧಿಯುಳ್ಳ ಪ್ರಾಣಿ-ಮನುಷ್ಯನೆಂದು ತಿಳಿಯತೊಡಗಿದಂದಿನಿಂದ, ಮನುಷ್ಯ ಮತ್ತು ಪ್ರಾಣಿ ಇವೆರಡರ ಸಂಬಂಧ ದೂರವಾಗುತ್ತ ಬಂದ ಹಾಗೆ, ಮನುಷ್ಯ ತನ್ನ ನೆರೆಯ ಪ್ರಾಣಿಗಳ ಮೇಲೆ ಅಧಿಕಾರ ಸ್ಥಾಪಿಸತೊಡಗಿದ. ಅವೆಲ್ಲ ತನಗಾಗಿಯೇ ಇರುವ ಮಾಂಸದ ತುತ್ತಿನ ಚೀಲಗಳೆನ್ನುವಂತೆ ಕಾಣತೊಡಗಿದ. ಎಷ್ಟಾದರೂ ಬುದ್ಧಿಶಾಲಿ ಪ್ರಾಣಿಯಲ್ಲವೆ ?
ಮನುಷ್ಯರಾದ ನಮಗೆ ವಾಸಿಸುವುದಕ್ಕೆ ಗಟ್ಟಿಯಾದ ನೆಲ ಬೇಕು. ಹಾಗಾದರೆ ಪ್ರಾಣಿಗಳಿಗೂ ಬದುಕುವುದಕ್ಕೊಂದು ತಾವು ಬೇಡವೆ ? ಮನುಷ್ಯನಿರುವಲ್ಲಿ ಅವಕ್ಕೂ ನೆಲೆ. ಜಲ ಜೀವಿಗಳನ್ನು ಬಿಟ್ಟರೆ ಉಳಿದವುಗಳಿಗೆ ನೆಲವೇ ಆಶ್ರಯ. ಕೆಲವಕ್ಕೆ ನೆಲ-ಜಲ ಎರಡೂ ಬೇಕು.
ನೆಲೆಸಬಲ್ಲವುಗಳಿಗೆ ಆಯಾಯ ನೆಲದ ಗುಣ, ಹವೆ ಮತ್ತು ನೀರಿನ ಆಸರೆ ಕಾರಣವಾಗುತ್ತವೆ. ಎಲ್ಲ ಸಸ್ಯಗಳ, ಎಲ್ಲ ಪ್ರಾಣಿಗಳ ದೇಹದ ಅರ್ಧ ಮುಕ್ಕಾಲು ಪಾಲಷ್ಟು ನೀರೇ ತುಂಬಿಕೊಂಡಿದ್ದ ಮೇಲೆ, ಈ ಎಲ್ಲ ಜೀವಿಗಳ ಬದುಕಿನ ಛಲ ನೀರಿಲ್ಲದೆ ನಡೆಯುವಂತಿಲ್ಲ. ತುಂಬ ಮಳೆ ಬೀಳುವಲ್ಲಿ ದಟ್ಟವಾದ ಕಾಡು ಬೆಳೆದು, ನೀರಿನ ಆಸರೆಯೂ ಇದ್ದರೆ ಅದರ ಸೊಗಸು ಹೇಳತೀರದು. ನಮ್ಮ ಪಶ್ಚಿಮ ಘಟ್ಟದ ಕಾಡುಗಳು ಆಂಥವು. ಸಾವಿರಾರು ದೈತ್ಯ ಮರಗಳು, ಅವನ್ನು ಹೆಬ್ಬಾವಿನಂತೆ ತಬ್ಬಿ ಬೆಳೆದಿರುವ ಬಳ್ಳಿಗಳು, ಮರದಿಂದ ಕೆಳಕ್ಕೆ ಸಂನ್ಯಾಸಿಯ ಗಡ್ಡದಂತೆ ಜೋತು ಬಿದ್ದಿರುವ ಬೀಳಲುಗಳು, ಅವುಗಳ ಸಂದಿಗೊಂದಿಗಳಲ್ಲಿ ಗಿಡ, ಪೊದರು, ಬಲ್ಲೆ-ಎಲ್ಲೆಲ್ಲೂ ಕಾಡಿನ ಮಯ. ಅವುಗಳ ಮರೆಯಲ್ಲಿ ನೂರಾರು ಬಗೆ ಬಣ್ಣದ ಹೂವು. ಕಾಯಿ, ಹಣ್ಣುಗಳಿದ್ದರೆ ಓ- ಎಷ್ಟು ಸಂತಸ ! ವಿಧವಿಧದ ಚಿತ್ರವಿಚಿತ್ರ ಕೀಟಗಳ, ಪಕ್ಷಿಗಳ ದೊಡ್ಡದೊಂದು ಸಮ್ಮೇಲನವೇ ಅಲ್ಲಿ ಜರಗುತ್ತದೆ. ಅಲ್ಲೇ ಕೊಂಬೆಯಿಂದ ಕೊಂಬೆಗೆ ತೂಗಿ, ಹಾರಿ, ಲಾಗ ಹಾಕುವ ಮಂಗಗಳು ಕಂಡವರನ್ನು ಅಣಕಿಸುವ ಮೋಜೆ: ಮೋಜು ! ಈ ಪ್ರದೇಶ-ಹುಲ್ಲುಗಾವಲುಗಳಿಂದ, ಸಿಹಿ ನೀರಿನ ಝರಿ, ತೊರೆ, ಕೊಳಗಳಿಂದ ಕೂಡಿದ್ದು, ಇಲ್ಲಿ ವಾಸಿಸುವ ಅಳಿಲು, ಮೊಲ, ಬರ್ಕ (mouse-deer), ಕೆಮ್ಮ (wild sheep), ಕಡವೆ (stag), ಜಿಂಕೆ (deer), ಚಿತ್ರಾಂಗ (Chital, ದುಡ್ಡು (Wild Buffalo), ಕಾಟಿ (Bison), ಆನೆ ಮೊದಲಾದ ಸಸ್ಯಾಹಾರಿ ಪ್ರಾಣಿಗಳ ಆಹಾರಕ್ಕೆ ಏನೇನೂ ಕೊರತೆಯಿಲ್ಲ. ಇವುಗಳನ್ನು ತಿಂದು ಬದುಕುವ ಹುಲಿ, ಚಿರತೆ, ತೋಳ ಮುಂತಾದ ಕ್ರೂರ ಮೃಗಗಳಿಗೂ ಇದು ನಿವಾಸ. ಅಡವಿಯಲ್ಲಿ ಕಿಂಚಿತ್ತಾದರೂ ದಯಾ ದಾಕ್ಷಿಣ್ಯವಿಲ್ಲ. ದೊಡ್ಡವರು-ಸಣ್ಣವರು ಎಂಬ ಭೇದವಿಲ್ಲ. ಹಸಿವಾದಾಗ ಒಂದು ಇನ್ನೊಂದಕ್ಕೆ ಬಲಿಯಾಗಲೇಬೇಕು. ಇದು ಅಡವಿಯ ಜೀವನ ಕೂಟದ ಮರ್ಮ.
ಅಡವಿಯಲ್ಲಿರುವ ಪ್ರತಿಯೊಂದು ಜೀವಜಂತುವಿಗೂ ಆತ್ಮರಕ್ಷಣೆಯ ಸಾಧನ-ಸೌಲಭ್ಯಗಳನ್ನು ಪ್ರಕೃತಿ ಒದಗಿಸಿದೆ. ಇದರಿಂದ ವನಚರ ಜೀವಿಗಳಲ್ಲಿ ಪ್ರಕೃತಿಬದ್ಧವಾದ ಸವತೋಲ ಕಾಯ್ದುಕೊಂಡು ಬಂದಿದೆ. ಹುಲಿ, ಚಿರತೆ, ಹಾವು, ಹರಿಣ ಪ್ರತಿಯೊಂದೂ ತನ್ನ ಬಲವೆಷ್ಟು ? ದೌರ್ಬಲ್ಯವೇನು ? ಎಂದು ಮುಂತಾಗಿ ಅರಿತಿರುವುದರಿಂದಲೆ ಪ್ರಸಂಗಾನುಸಾರವಾಗಿ ಅವುಗಳ ಜೀವನನಿರ್ವಾಹ ನಡೆಯುತ್ತದೆ.
ಕಾಡು ಪ್ರಾಣಿಗಳಿಗೆ ಅಂಟಿದ ನಂಟು : ಇಂದು ವಿವೇಕವಿಲ್ಲದೆ ನಮ್ಮ ಜನ ಮರಗಳನ್ನು ಕೆಡಹುವುದರಲ್ಲಿ ಆಸಕ್ತಿ ತೋರಿಸುತ್ತಿದ್ದಾರೆ. ಖಾಲಿಯಾದ ಸ್ಥಳಗಳಲ್ಲಿ ಗಿಡಗಳನ್ನು ನೆಡುತ್ತಿಲ್ಲ. ನೆಟ್ಟರೂ ಅವುಗಳಿಗೆ ಸರಿಯಾದ ರಕ್ಷಣೆಯಿಲ್ಲ. ಕಾಡು ನಾಶವಾಯಿತೆಂದರೆ ಮಳೆಯಿಲ್ಲದೆ ಕ್ಷಾಮ ತಲೆದೋರುತ್ತದೆ. ಆಗ ಈ ಭೂಮಿಯ ಎಲ್ಲ ಪ್ರಾಣಿಗಳ ಅವತಾರ ಮುಗಿದರೂ ಮುಗಿದೀತೆ.
ಒಂದು ದೇಶದ ಪ್ರಗತಿ ಅಲ್ಲಿನ ನಿಸರ್ಗ ಸಂಪತ್ತಿನ ಸಂರಕ್ಷಣೆಯ ಮೇಲೆ ಅವಲಂಬಿಸಿದೆ. ಇದು ಎಲ್ಲ ದೇಶಗಳಿಗೆ ಎಲ್ಲ ಕಾಲಕ್ಕೆ ಅನ್ವಯಿಸತಕ್ಕ ಮಾತು. ನಾವು ಮನುಷ್ಯರು ವಿವೇಚನಾಪರರು : ಇತರ ಜೀವಿಗಳ ಹಾಗೆ ಸಂತಾನೋತ್ಪಾದನೆಯೇ ನಮ್ಮ ದ್ಯೇಯವಾಗಿ ಉಳಿದಿಲ್ಲ. ಅಂಥ ನಾವು ನಮ್ಮ ಜೀವನಕ್ಕೆ ಸಂಚಕಾರ ಕೊಡುವಷ್ಟು ತಿಳಿಗೇಡಿಗಳಾಗಿ ಹೋದರೆ, ಇನ್ನು ಅದಕ್ಕಿಂತ ಹೆಚ್ಚಿನ ದುಃಖದ ಸಂಗತಿ ಬೇರೊಂದಿಲ್ಲ.
ಇಂದಿಗೆ ಹತ್ತು ವರ್ಷಗಳ ಹಿಂದೆ, ನಾನು ನಮ್ಮ ಹಳ್ಳಿಯ ಕಾಡುಗಳಲ್ಲಿ ಸಂಚರಿಸುತ್ತಿದ್ದ ವೇಳೆ ಕಾಣಸಿಗುತ್ತಿದ್ದ ಉಡ (Monitor), ಬೇರು (Toddy cat), ಕೆಂಚಳಿಲು (Red-squlrrel), ಮುಸುವ (ಕಪಿಗಳಲ್ಲಿ ಒಂದು ಭೇದ) ಗಳು ಈಗ ಅಷ್ಟಾಗಿ ಕಂಡು ಬರುತ್ತಿಲ್ಲ. ಕೆಂಚಳಿಲನ್ನಂತೂ ನೋಡಿಯೇ ಇಲ್ಲ. ಇದಕ್ಕೆ ಕಾರಣ ಆಸುರೀ ಪ್ರವೃತ್ತಿಯ ಬೇಟೆಗಾರ ಮಾನವ. ಹಗಲು ಇರುಳೆನ್ನದೆ ಬಗಲ ಮೇಲೆ ಕೋವಿ ಹೊತ್ತು ಇಂಥ ಸಾಧು ಜೀವಿಗಳ ಬೇಟೆಯಾಡುವುದನ್ನು ನಾನು ಕಣ್ಣಾರೆ ಕಂಡು ವ್ಯಥೆಪಟ್ಟಿದ್ದೇನೆ. ಒಂದು ದೃಷ್ಟಾಂತ : ಕಳೆದ ವರ್ಷ ಕಡವೆಯೊಂದನ್ನು ಏಳೆಂಟು ಬೇಟೆಗಾರರು ನಮ್ಮ ಊರಿನ ಹತ್ತಿರದ ಕಾಡಿನಿಂದ ಸುಮಾರು ನಾಲ್ಕು ಮೈಲಿ ದೂರ ಅಟ್ಟಿಸಿಕೊಂಡು ಹೋದರು. ಕಡವೆ ಅವರಿಂದ ತಪ್ಪಿಸಿಕೊಳ್ಳಲು ಸಾಕಷ್ಟು ಹೆಣಗಾಡಿತು. ಕೊನೆಗೆ ಓಡಲಾಗದೆ ಯಾರದೋ ತೋಟವೊಂದರಲ್ಲಿ ಬಿದ್ದುಬಿಟ್ಟಿತು. ಅಲ್ಲಿಗೂ ಬಂದ ಈ ಬೇಟೆಗಾರರು ಅದರ ಆಹುತಿ ತೆಗೆದುಕೊಂಡರು. ಇಂಥ ಪ್ರಕರಣ ನಮ್ಮ ಹಳ್ಳಿಯವರಿಗೆ ಹೊಸದೇನೂ ಅಲ್ಲ. ಹಳ್ಳಿಗಳಲ್ಲಿ ಬೇಟೆ ಎಂದರೆ ಅಷ್ಟು ಸಾಮಾನ್ಯವಾಗಿಬಿಟ್ಟಿದೆ.
ಭಾರತವು ನವಿಲನ್ನು ತನ್ನ ರಾಷ್ಟ್ರೀಯ ಹಕ್ಕಿಯೆಂದು ಸಾರಿ, ಬಹಳ ಹಿಂದಿನಿಂದಲೂ ನಮ್ಮ ಕವಿ, ಕಲಾವಿದ, ರಾಜರಿಗೆ ಪ್ರಿಯವೆನಿಸಿದ ಈ ಮೋಹಕ ಪಕ್ಷಿಗೆ ದೊಡ್ಡ ಗೌರವ ನೀಡಿದುದು ಸಹಜವೇ ಆಗಿದೆ. ದೇಶದ ಅತಿ ಸುಂದರ ಪಕ್ಷಿಯನ್ನು ಆರಿಸುವುದು ತುಂಬ ತೊಡಕಿನ ಕೆಲಸ. ಒಬ್ಬರಿಗೆ ಚೆಲುವಾದದ್ದು ಇನ್ನೊಬ್ಬರಿಗೆ ಚಂದವೇ ಕಾಣಿಸದು. ನಮ್ಮ ದೇಶದ ಕಾಡುಗಳಲ್ಲಿ ಎಷ್ಟೊಂದು ಬಗೆಯ ಪಕ್ಷಿಗಳಿಲ್ಲ… ಆದರೂ ನವಿಲು ಭಾರತದಲ್ಲಷ್ಟೇ ಅಲ್ಲ, ಪ್ರಪಂಚದ ಅತಿ ಮನೋಹರ ಪಕ್ಷಿಯೆಂದು ತಿಳಿಸಲಾಗಿದೆ.
ನವಿಲು ಪೂರ್ವ ದೇಶಗಳ ವಿಶೇಷ ನಿವಾಸಿ. ಜಾವಾದ ಹಸಿರು ಕಂಠದ ನವಿಲು, ವಿಯತ್‌ನಾವಿನ ಕಪ್ಪು ಕಂಠದ ‘ಜಪಾನಿ’ ನವಿಲು, ಆಫ್ರಿಕ ಮತ್ತು ಅಪರೂಪವಾಗಿ ಪಶ್ಚಿಮ ಭಾರತದಲ್ಲಿರುವ ಶುದ್ಧ ಬಿಳಿ ನವಿಲು-ಇವೆಲ್ಲವುಗಳಿಗಿಂತ ಭಾರತ ಮತ್ತು ಸಿಂಹಳದಲ್ಲಿ ಸಾಧಾರಣ ಎಲ್ಲ ಕಡೆಗೂ ಕಾಣಬರುವ ನೀಲಕಂಠ ನವಿಲು ನವಿಲುಗಳಲೆಲ್ಲ ಅತಿ ಸುಂದರವಾದುದೆಂದು ಪರಿಗಣಿಸಲ್ಪಟ್ಟಿದೆ. ಭಾರತದಲ್ಲಿ ಇವು ಬಹುವಾಗಿ ವೃಂದಾವನ, ರಾಜಸ್ಥಾನ, ಚಿತ್ರಕೂಟಗಳಲ್ಲಿ ಹಿಂಡು ಹಿಂಡಾಗಿ ಕಾಣಸಿಗುತ್ತವೆ. ಇಲ್ಲೆಲ್ಲ ಲೆಕ್ಕವಿಲ್ಲದಷ್ಟು ನವಿಲುಗಳು ಬೆ:ಟೆಗಾರರಿಗೆ ಬಲಿಯಾಗುತ್ತವೆ ಎನ್ನುವ ವಿಚಾರ ಅತ್ಯಂತ ವಿಷಾದನೀಯ.
ನವಿಲುಗಳಿಗೆ ಮನುಷ್ಯ ಮಾತ್ರ ಶತ್ರುವಲ್ಲ: ಎಷ್ಟೇ ಜಾಗ್ರತೆಯಾಗಿದ್ದರೂ ಚಿಟ್ಟೆ ಹುಲಿಗಳಿಗೆ ಇವು ಬಹು ಸುಲಭವಾಗಿ ಸಿಕ್ಕಿಬೀಳುತ್ತವೆ. ಹುಲಿ ಹತ್ತಿರ ಹತ್ತಿರವಾಗುತ್ತಿರುವಾಗ ನವಿಲು ಕಂಡರೂ ಹರಿದಾಡುವುದಿಲ್ಲ. ಅದರ ಮೈಯ ಬಣ್ಣದ ಚಿಟ್ಟೆಗಳ ಸೊಬಗಿನ ಮೈಮರೆತು ಮುಗ್ಧವಾಗಿ ನೋಡುತ್ತ ನಿಂತೇ ಇರುತ್ತದೆ. ನವಿಲಿನ ಬೇಟೆಗಾರರಿಗೆ ಇದರ ಗುಟ್ಟು ಗೊತ್ತು. ಕೆಲವೇಳೆ ಚಿಟ್ಟೆಹುಲಿಯ ಚರ್ಮವನ್ನು ಹೊದ್ದು ಇವನ್ನು ಹಿಡಿಯುವ ಕ್ರಮವೂ ಉಂಟು. ಹೀಗಿರುವಲ್ಲಿ ನವಿಲು ನಮ್ಮ ರಾಷ್ಟ್ರೀಯ ಲಾಂಛನವಾಗಿ ಮಾತ್ರ ಉಳಿದುಕೊಂಡರೆ ಸಾಕೆ ? ಅವುಗಳ ಸುಖದುಃಖ ನೋಡಿಕೊಳ್ಳುವುದು ಬೇಡವೆ? ಇಲ್ಲವಾದರೆ ನ್ಯೂಸಿಲೆಂಡ್ ಜನರ ರಾಷ್ಟ್ರೀಯ ಚಿಹ್ನೆಯಾದ ವಿಚಿತ್ರ ‘ಕಿವಿ’ (kiwi) ಹಕ್ಕಿಯ ಗತಿಯೇ ನಮ್ಮ ನವಿಲಿಗೂ ಬಂದೀತು.
ನಮ್ಮ ದೇಶದಲ್ಲಿ ಸುಮಾರು ೧೫೦೦ ಜಾತಿಯ ಪಕ್ಷಿಗಳು ಕಾಣಸಿಗುತ್ತವೆ. ಅವುಗಳಲ್ಲಿ ಯಾರು ೫೦೦ ಜಾತಿಯವು ಚಳಿಗಾಲದಲ್ಲಿ ಉತ್ತರದ ಚಳಿ ದೇಶಗಳಿಂದ ನಮ್ಮ ಬೆಚ್ಚನ್ನ ನಾಡಿಗೆ ವಲಸೆ ಬರುವ ಪಕ್ಷಿಗಳೆಂದು ಪಕ್ಷಿ ಶಾಸ್ತ್ರಜ್ಞರು ಲೆಕ್ಕ ಹಾಕಿದ್ದಾರೆ. ಈ ಸ್ವಚ್ಛಂದ ಗಗನ ವಿಹಾರಿಯು ರಾಷ್ಟ್ರ ಸೀಮೆಗಳ ಸಂಕುಚಿತ ಮೇರೆಯನ್ನು ಮೀರಿ, ಎಷ್ಟೋ ಸಾವಿರ ಮೈಲಿ ದೂದ ಹೊರನಾಡಿನಿಂದ ನಮ್ಮ ಉತ್ತರದ ಗಡಿಯನ್ನು ದಾಟಿ ದಕ್ಷಿಣಾಭಿಮುಖವಾಗಿ ಹಾರಿ ಬರುತ್ತವೆ. ಚಳಿಗಾಲ ಕಳೆದು ವಸಂತಕಾಲ ತಲೆದೋರುತ್ತಲೇ ಅವು ಮತ್ತೆ ಉತ್ತರಾಭಿಮುಖವಾಗಿ ಯಾತ್ರೆ ಮಾಡುತ್ತವೆ. ಇಂಥ ರಹಸ್ಯಪೂರ್ಣ ಪಕ್ಷಿಯಾತ್ರೆ ನಿಸರ್ಗಪ್ರಿಯರನ್ನು ಚಕಿತಗೊಳಿಸಿದೆ.
ಪಕ್ಷಿಯಾತ್ರೆಯ ಕುರಿತು ಭಾರತದ ಸುಪ್ರಸಿದ್ದ ಪಕ್ಷಿಶಾಸ್ತ್ರಜ್ಞ ಹಾಗೂ ಮುಂಬಯಿಯ ನ್ಯಾಚುರಲ್‌ ಹಿಸ್ಟರಿ ಸೊಸೈಟಿ ಡೈರೆಕ್ಟರ್ ಶ್ರೀ ಸಾಲಿಂ ಅಲಿ ಅವರು ಹೀಗೆ ಅಭಿಪ್ರಾಯ ಪಡುತ್ತಾರೆ. “ಬಿಸಿನೆತ್ತರು, ತುಪ್ಪಳದ ಹೊದಿಕೆ, ಅಪ್ರತಿಮವಾದ ಹಾರಾಟದ
ಸಾಮರ್ಥ್ಯ ಇವುಗಳಿಂದ ಪಕ್ಷಿಗಳಲ್ಲಿ ವಲಸೆ ಹೋಗುವ ಪ್ರವೃತ್ತಿ ಪರಮಾವಧಿ ಬೆಳವಣಿಗೆ ಹೊಂದಿರುತ್ತದೆ”. ತುಪ್ಪಳದ ಬಿಸಿ ಹೊದಿಕೆ ಚಳಿಗಾಲವನ್ನು ಕಳೆಯುವುದಕ್ಕೆ ಸಾಕಾದೀತು. ಆದರೆ ಅಂಥ ಸಮಯ ಚಳಿನಾಡುಗಳಲ್ಲಿ ಆಹಾರ ದೊರಕುವುದು ತೀರ ಕಷ್ಟಗುತ್ತದೆ, ಆದಕ್ಕಾಗಿಯೇ ಅವು ನಮ್ಮ ದೇಶದತ್ತ ಸಾಗಿಬರುತ್ತವೆ. ಇಂಥದೊಂದು ಪರಿಸ್ಥಿತಿಯಲ್ಲಿ ನಮ್ಮ ದೇಶದಲ್ಲಿ ಬೇಟೆಗೆ ಬಲಿಯಾಗುವ ಪಕ್ಷಿ-ಸೈಬೀರಿಯ ಹಂಗರಿಯಿಂದ, ಜರ್ಮನಿಯಿಂದ ಇಲ್ಲವೇ ನಮ್ಮದೇ ಹಿಮಾಲಯದಿಂದ ಬರಬಹದು ; ನಮ್ಮ ಹಿತ್ತಲಿನದೆ ಆಗಿರಬಹುದು.
ಇಂದು ನಾವು ಹೆಸರು ಕೂಡ ಕೇಳರಿಯದ ಎಷ್ಟೆಲ್ಲ ಜಾತಿಯ ಮೃಗ-ಪಕ್ಷಿಗಳು ನಿರ್ವಂಶವಾಗಿ ಹೋಗಿಲ್ಲ ! ಮಾನವ ಪ್ರಾಣಿ ಜನ್ಮ ತಳೆಯುವುದಕ್ಕೆ ಮುನ್ನ ಇವುಗಳೂ ಭೂಮಿಯ ಮೇಲೆ ನಿರಾತಂಕವಾಗಿ ಬಾಳುವೆ ಸಾಗಿಸುತ್ತಿದ್ದವು ಎಂದು ತಿಳಿದಾಗ, ಮಾನವನ ದೌರ್ಜನ್ಯದ ಪರಮಾವಧಿ ಎಲ್ಲಿಗೆ ತಲಪಿದೆ ಎನ್ನುವುದರ ಪೂರ್ಣ ಅರಿವು ನಮಗುಂಟಾಗುತ್ತದೆ. ಇದಕ್ಕೊಂದು ದೃಷ್ಟಾಂತ: ಅಫ್ರಿಕಾ ಖಂಡದ ಪೂರ್ವ ದಿಕ್ಕಿಗೆ ಹಿಂದೂ ಮಹಾಸಾಗರದಲ್ಲಿ ಮೂರಿಷಸ್ ಎಂಬ ದ್ವೀಪವೊಂದಿದೆ. ೧೬ನೇ ಶತಮಾನಕ್ಕಿಂತ ಮುನ್ನ ಇಲ್ಲೊಂದು ದ್ವೀಪವಿದೆಯೆಂದು ಯಾರಿಗೂ ಗೊತ್ತಿರಲಿಲ್ಲ. ೧೫೯೮ ರಲ್ಲಿ ಹೊಸ ನೆಲೆಗಳ ಅನ್ವೇಷಕರಾಗಿ ಹೊರಟ ಕೆಲ ಡಚ್ ವಲಸೆಗಾರರು ಈ ದ್ವೀಪವನ್ನು ಕಂಡುಹಿಡಿದರು. ಆ ಮೇಲೆ ಫ್ರೆಂಚ್‌ರೂ ಇಂಗ್ಲಿಷರೂ ಇಲ್ಲಿ ಬಂದು ನೆಲೆಯೂರಿದರು. ಡಚ್ಚರು ಮೊಟ್ಟಮೊದಲಿಗೆ ಈ ದ್ವೀಪದಲ್ಲಿ ಕಾಲಿರಿಸಿದಾಗ ಮಾನವರಿದ್ದ ಗುರುತಿನ ಲಕ್ಷಣಗಳಾವುವೂ ಕಂಡುಬರಲಿಲ್ಲ. ದ್ವೀಪವೆಲ್ಲ ಖರ್ಜೂರದ ಮರಗಳಿಂದ, ಸೊಂಪದ ಹಸಿರು ಕಾನನಗಳಿಂದ ತುಂಬಿತ್ತು. ಇಲ್ಲಿನ ನಿಸರ್ಗ ಒದಗಿಸಿದ ಖರ್ಜೂರದ ಹಣ್ಣುಗಳನ್ನು ಯಥೇಚ್ಛ ತಿಂದುಸುಖವಾಗಿ ಕಾಲ ಕಳೆಯುತ್ತಿದ್ದ ಪಾರಿವಾಳದ ಜಾತಿಗೆ ಸೇರಿದ ಪಕ್ಷಿಯೊಂದು ಅವರ ಗಮನಕ್ಕೆ ಬಂದಿತು. ಅದನ್ನು ಅವರು ‘ಡೋಡೋ’ (Dodo) ಪಕ್ಷಿಯೆಂದು ಕರೆದರು. (ಡೋಡೋ ‘ಎಂದರೆ ಪೋರ್ಚುಗೀಸ್ ಭಾಷೆಯಲ್ಲಿ ಮಂಕು ಇಲ್ಲವೇ ದಡ್ಡನೆಂದಾಗುತ್ತದೆ.) ಹೆಸರಿಗೆ ತಕ್ಕ ದಡ್ಡ ಪಕ್ಷಿಯೇ ಆಗಿತ್ತದು. ಗಾತ್ರದಲ್ಲಿ ಹಂಸಕ್ಕಿಂತ ತುಸುವೇ ದೊಡ್ಡದಾಗಿದ್ದರೂ ಆ ಹಕ್ಕಿಗೆ ಹಾರಲು ಬರುತ್ತಿರಲಿಲ್ಲ. ಇದ್ದ ಎರಡು ಚಿಕ್ಕ ರೆಕ್ಕೆಗಳು ನಿಷ್ಪ್ರಯೋಜಕವಾಗಿದ್ದವು. ಇಂಥ ಹಕ್ಕಿಯೊಂದನ್ನು ಹಿಡಿಯುವುದೆಷ್ಟು ಸುಲಭ ಎಂದೂ ಮನುಷ್ಯನನ್ನೇ ನೋಡಿ ಗೊತ್ತಿರದ ಈ ಮುಗ್ಧ ಪಕ್ಷಿಗಳು ಅವನನ್ನು ಕಂಡು ಹೆದರಿಕೊಳ್ಳಲಿಲ್ಲ. ಬದಲು ಅವನನ್ನೇ ವಿಕಿ ಮಿಕಿ ನೋಡುತ್ತ ನಿಂತು ಬಿಟ್ಟವು. ಈ ಎರಡು ಕಾಲಿನ ದುಷ್ಪಪ್ರಾಣಿ ಮುಂದೆ ತಮ್ಮ ಕುಲವಿನಾಶದ ದೀಕ್ಷಿತನಾಗಬಹುದೆಂದು ಪಾಪ. ಅದಕ್ಕೇನು ಗೊತ್ತು ? ಡಚ್ಚರ ಹಸಿವಿನ ಬಾಯಿಗೆ, ಅವರ ಜತೆಯಲ್ಲಿ ಬಂದ ನಾಯಿ, ಬೆಕ್ಕು, ಹಂದಿಗಳಿಗೆ ಈ ಹಕ್ಕಿಗಳೆಲ್ಲ ಬಲಿಯಾದ ಕತೆ ಹೃದಯ ವಿದ್ರಾವಕ. ಕ್ರಿ.ಶ. ೧೭೦೦ರ ಸುಮಾರಿಗೆ ಈ ಪಕ್ಷಿ ನಿರ್ವಂಶವಾಯಿತೆಂದು ತಿಳಿದುಬರುತ್ತದೆ. ಡಚ್ಚರ ನಂತರ ಮೂರಿಷಸ್‌ಗೆ ಬಂದ ಫ್ರೆಂಚರಿಗೆ, ಇಗ್ಲಿಷರಿಗೆ ಈ ಪಕ್ಷಿಯ ಗುರುತಿನ ಲೇಶ ಮಾತ್ರ ಕಾಣಸಿಗಲಿಲ್ಲ. ಇಂದು ಡೋಡೋ ಹಕ್ಕಿಯದೆಂದು ಹೇಳಲಾಗುವ ಮೊಟ್ಟೆಯೊಂದು ಬ್ರಿಟಿಷ್ ಮ್ಯೂಸಿಯಮ್ಮಿನಲ್ಲಿದೆ.
ಡೋಡೋದಂತೆ ಹಾರಲು ಬರದ ‘ಮೋವಾ’ (Moa) ಪಕ್ಷಿಯು ೬೦೦ ವರ್ಷಗಳ ಹಿಂದೆ ನ್ಯೂಜಿಲೆಂಡ್‌ನಲ್ಲಿ ಜೀವಿಸಿಕೊಂಡಿತ್ತು. ಆಹಾರದಲ್ಲಿ ಪೆಂಗ್ವಿನ್ ಪಕ್ಷಿಯನ್ನು ಹೋಲುತ್ತಿದ್ದ ‘ದೊಡ್ಡ ಆಕ್’ ಎಂಬ ಪಕ್ಷಿ ಲ್ಯಾಬ್ರಡಾರ್, ಗ್ರೀನ್‌ಲಂಡ್, ಐಸ್‌ಲಂಡ್ ಮತ್ತು ನ್ಯೂ ಫೌಂಡ್ಲಡಿನಲ್ಲಿ ವಾಸವಾಗಿತ್ತು. ೧೮೪೪ ರಲ್ಲಿ ಈ ಜಾತಿಯ ಕೊನೆಯ ಜೋಡಿ ಕೊಲ್ಲಲ್ಪಟ್ಟಿತು. ಬೆಲ್ಲ ಈಗ ನಿರ್ವಂಶವಾಗಿದೆ.
“ನಮ್ಮ ದೇಶದ ಮಟ್ಟಿಗೆ ಬಹು ಅಪರೂಪವಾದ ಪಕ್ಷಿಗಳು ಮೂರು-ಪರ್ವತದ ಕ್ವೇಲ್‌(Ophrysia supercilosa), ಜೆರ್ಡಾನ್ಸ್ ಕರ್ಸರ್ (Rhinoptilus bitorquatus) ಹಾಗೂ ಕೆಂಪು ತಲೆಯ ಬಾತುಕೋಳಿ, ಮೊದಲನೆ ಜಾತಿಯ ಪಕ್ಷಿಗಳು ಹಿಮಾಲಯದ ಆರೇಳು ಸಾವಿರ ಅಡಿಗಳ ಎತ್ತರ ಪ್ರದೇಶದಲ್ಲಿ, ಕೆಳಗೆ ಮಸಲಾರಿ, ನೈನಿತಾಲ ಪ್ರದೇಶಗಳಲ್ಲಿ ದೊರೆತಂತಹವು. ೧೮೬೬ ರಿಂದ ಈಚೆಗೆ ಆ ಪಕ್ಷಿಗಳ ಸುಳಿವನ್ನು ಯಾರೂ ಕೇಳಿಯೂ ಇಲ್ಲ, ಕಂಡೂ ಇಲ್ಲ. ಎರಡನೆಯದು ಆಂಧ್ರಪ್ರದೇಶದ ಗೋದಾವರಿ ಕಣಿವೆಯಲ್ಲಿ, ನಲ್ಲೂರು, ಕಡಪಾ, ಭದ್ರಾಛಲಂ, ಅನಂತಪುರಗಳ ಸುತ್ತ ಮುತ್ತಲಿನಲ್ಲಿ ೬೦ ವರ್ಷಗಳ ಹಿಂದೆ ಕಾಣಸಿಗುತ್ತಿತ್ತು. ೧೯೦೦ ರಿಂದ ಈಚೆಗಿನ ದಿನಗಳಲ್ಲಿ ಅದನ್ನು ಹುಡುಕಲು ಪಟ್ಟ ಶ್ರಮ ನಿರರ್ಥಕವಾಗಿದೆ. ಕೊನೆಯದು ನೇಪಾಳದಿಂದ ಆಸಾಮದವರೆಗೆ ಮಾಲಯದ ಕೆಳಪಟ್ಟಿಯಲ್ಲಿ ಸಿಗುತ್ತಿತ್ತು. ಮಣಿಪುರದಲ್ಲಿಯೂ ಅದನ್ನು ಕಂಡ ದಾಖಲೆಯಿದೆ. ೧೯೩೫ ರಲ್ಲಿ ಈ ಹಕ್ಕಿ ಗುಂಡಿಗೆ ಆಹುತಿಯಾದ ವರದಿಯ ನಂತರ ಅದರ ಸುಳಿವು ಯಾರಿಗೂ ಸಿಕ್ಕಿದ್ದಿಲ್ಲ” ಎಂದು ಶ್ರೀ ಸಾಲಿಂ ಅಲಿಯವರು ಅಭಿಪ್ರಾಯ ಪಡುತ್ತಾರೆ.
ಅಮೇರಿಕದಲ್ಲಿಂದು ಬೆಳೆಗಳನ್ನು ನಾಶಗೊಳಿಸುವ ಪಕ್ಷಿಗಳ ನಿಯಂತ್ರಣಕ್ಕೆ ಕೆಲ ಉಪಾಯಗಳನ್ನು ಕಂಡುಕೊಂಡಿದ್ದಾರೆ. ಭತ್ತ, ಗೋಧಿ, ಜೋಳ ಮುಂತಾದ ಪ್ರದೇಶಗಳಲ್ಲಿ ಆದರು ದೊಡ್ಡ ದೊಡ್ಡ ಸರಕಾರಿ ಪಕ್ಷಿಧಾಮಗಳನ್ನು ಯೋಜಿಸಿದ್ದಾರೆ. ಇಲ್ಲಿ ಹಕ್ಕಿಗಳಿಗೆ ಪ್ರಿಯವಾದ ಭತ್ತ ಮತ್ತು ಇತರ ಬೀಜಯುಕ್ತ ಹುಲ್ಲಿನ ಗಿಡಗಳನ್ನು ಬೆಳೆಸುತ್ತಾರೆ.
ಪಕ್ಷಿಗಳನ್ನು ಹೊಡೆಯುವಂತಿಲ್ಲವಾಗಿ ಅವು ಇಲ್ಲಿ ಬಂದು ನೆಲಸಿ, ಸಂತೋಷದಿಂದ ಜೀವಿಸಲು ಸಾಧ್ಯವಾಗಿದೆ. ಇದರಿಂದಾಗಿ ರೈತರ ಹೊಲಗಳಲ್ಲಿ ಅವುಗಳ ಹಾವಳಿ ಕಡಿಮೆಯಾಗಿದೆ. ಈ ಹಾವಳಿಯನ್ನು ನಿರುತ್ಸಾಹಗೊಳಿಸಲು ಅವುಗಳನ್ನು ಭಯಗೊಳಿಸುವ ತರತರದ ಸ್ಫೋಟಕಗಳನ್ನು ಹಾರಿಸಲಾಗುತ್ತದೆ.
ನಮ್ಮ ದೇಶದ ಹಳ್ಳಿಗಳಲ್ಲಿ ರೈತರು ಹೊಲಗಳ ಸುತ್ತುಮುತ್ತಲು ಸಣ್ಣ ಸಣ್ಣ ಕಾವಲು ಜೋಪಡಿಗಳನ್ನು ಕಟ್ಟಿಕೊಂಡು ಕಾಯುವ ಪದ್ದತಿ ಸರ್ವಸಾಮಾನ್ಯ. ಮೃಗ ಪಕ್ಷಿಗಳು ಬಾರದ ಹಾಗೆ ನಾಯಿಗಳನ್ನು ಕಟ್ಟಿಹಾಕುವುದು, ತಮಟೆ, ಡಬ್ಬ ಮೊದಲಾದ ಧ್ವನಿಯುಕ್ತ ಸಾಧನಗಳನ್ನು ಬಡಿಯುವುದು, ಒಬ್ಬರಿಗೊಬ್ಬರು ಎತ್ತರದ ಧ್ವನಿಯಲ್ಲಿ ಕೂಗುಹಾಕುವುದು ಇವೇ ಮುಂತಾದ ಉಪಾಯಗಳ ಬಳಕೆಯಲ್ಲಿವೆ. ಜತೆಯಲ್ಲಿ ಮೃಗ ಪಕ್ಷಿಗಳನ್ನು ಕೊಂದು ಹೊಲದ ಪಕ್ಕದಲ್ಲಿ ತೂಗುಹಾಕುವ ಹಿಂಸಾಕೃತ್ಯವೂ ನಡೆಯತ್ತಿದೆ. ಇದನ್ನು ಸಂಪೂರ್ಣವಾಗಿ ನಿಲ್ಲಿಸಿಬಿಡುವುದು ಎಲ್ಲ ದೃಷ್ಟಿಯಿಂದಲೂ ಕ್ಷೇಮಕರ. ಹೊಲಗಳಿಗೆ ಮುತ್ತಿಗೆ ಹಾಕಿ ಬೆಳೆಗೆ ಹಾನಿ ಮಾಡುವ ಎಷ್ಟೋ ಜಾತಿಯ ಕೀಟಗಳು ಅಲ್ಲಿಗೆ ಬರುವ ಗುಬ್ಬಿ, ಗಿಳಿ ಇಂಥವೇ ಪಕ್ಷಿಗಳ ಬಾಯಿಗೆ ತುತ್ತಾಗುತ್ತವೆ ಎನ್ನುವ ಜ್ಞಾನ ನಮಗಿರಬೇಕು. ಅಮೇರಿಕದವರ ಹಾಗೆ ನಮ್ಮಲ್ಲಿ ಹಕ್ಕಿಗಳಿಗಾಗಿ ಉಪಹೊಲಗಳನ್ನು ನಿರ್ಮಿಸುವ ಯೋಜನೆ-ನಮ್ಮ ದೇಶದ ಆಹಾರ ಸಮಸ್ಯೆ ಪರಿಹಾರಗೊಳ್ಳುವ ತನಕ ಸಾಧ್ಯವಾಗುವಂತಹುದಲ್ಲ. ಅದರೆ ಜೀವಿಗಳಿಗೆ ಅಪಾಯವಾಗದಂತೆ ಸ್ಫೋಟಕಗಳನ್ನು ಹಾರಿಸುವುದಕ್ಕೆ ಯಾವ ತೊಂದರೆಯೂ ಇಲ್ಲವಷ್ಟೆ?
ಪಕ್ಷಿಗಳ ಕತೆ ಹೀಗಾದರೆ, ಮೃಗಗಳದೇ ಬೇರೆ. ನಮ್ಮ ದೇಶದಲ್ಲಿ ಸಿಂಹಗಳ ಕುಲ ನಾಮಾವಶೇಷವಾಗುತ್ತಾ ಬಂದಿದೆ. ಈ ಶತಮಾನದ ಆದಿಯಲ್ಲಿ ಭಾರತದಾದ್ಯಂತ ೪೦ ಸಾವಿರ ಹುಲಿಗಳು ಬದುಕಿಕೊಂಡಿದ್ದವು. ಈಗ ಅವುಗಳ ಸಂಖ್ಯೆ ೧೮೨೬ ಕ್ಕೆ ಇಳಿದಿದೆ. ನಮ್ಮ ಸರಕಾರ ಇತ್ತೀಚೆಗೆ ಹುಲಿಯನ್ನು ರಾಷ್ಟ್ರೀಯ ಮೃಗವೆಂದು ಘೋಷಿಸಿ, ಅದರ ಸಂತತಿ ಉಳಿಸಿ ಬೆಳಸುವ ೪ ಕೋಟಿ ರೂಪಾಯಿಗಳ ೬ ವರ್ಷಗಳ ಯೋಜನೆಯನ್ನು ಆರಂಭಿಸಿದ್ದು ಸ್ವಾಗತಾರ್ಹ. ಆದರೆ ಈ ಯೋಜನೆ ಫಲಕಾರಿಯಾಗುವ ಹೊತ್ತಿಗೆ ನೀವು-ನಾವು ನಮ್ಮ ಮಕ್ಕಳಿಗೆ ಹುಲಿಗಳ ಛಾಯಾಚಿತ್ರವನ್ನಷ್ಟೇ ತೋರಿಸುವ ಗತಿ ಒದಗದಿದ್ದರೆ ಸಾಕು.
ಬಿಳಿ ಹುಲಿ (white tiger) ದಿಲ್ಲಿಯ ಮೃಗಾಲಯದಲ್ಲಷ್ಟೇ ಉಳಿದುಕೊಂಡಿದೆ. ಕಾಡ ಬೆಕ್ಕುಗಳಲ್ಲೆಲ್ಲ ಅತ್ಯಂತ ಮನೋಹರವಾದ ಬಂಗಾರದ ಮೈಬಣ್ಣದ ಬೆಕ್ಕು (Golden cat) ತೀರ ಅಪರೂಪ. ಎರಳೆಯ ಜಾತಿಗೆ ಸೇರಿದ, ಕಾಟಿಯಷ್ಟೇ ಎತ್ತರಕ್ಕೆ ಬೆಳೆಯುವ ನೀಲಗಾಯಿ ಇಲ್ಲವೆ ‘ನೀಲದನ’ ನೀಲಗಿರಿಯ ಪರ್ವತ ಪ್ರದೇಶಗಳಲ್ಲಿ ಮಾತ್ರ ಉಳಿದಿದೆ. ನಮ್ಮದೇ ಪಶ್ಚಿಮ ಘಟ್ಟದ ಗೊಂಡಾರಣ್ಯಗಳಲ್ಲಿ ವಾಸಿಸುವ ಕಪ್ಪು ಚಿರತೆ (Black Panther) ಅತ್ಯಂತ ವಿರಳವಾಗಿದೆ. ಖಡ್ಗ ಮೃಗಗಳ ಸಂಖ್ಯೆ ಜಗತ್ತಿನಲ್ಲೇ ಕೇವಲ ಐನೂರು |
ದ. ಕ. ಜಿಲ್ಲೆಯ ಉಪ್ಪಿನಂಗಡಿಯಿಂದ ಸಕಲೇಶಪುರಕ್ಕೆ ಹೋಗುವ ಮುಖ್ಯ ರಸ್ತೆಯ ಅಕ್ಕಪಕ್ಕಗಳಲ್ಲಿ ಕಾಣಿಸುವ ‘ಶಿರಾಡಿಘಾಟಿ’ಯ ದೃಶ್ಯ ರಮಣೀಯವಾದದು. ಘಾಟಿಯ
ಪ್ರದೇಹಗಳಲ್ಲಿ ವಾಸಿಸುವ ಚಿತ್ರಾಂಗ, ಕಡವೆ ಸಿಂಗಲೀಕ (ಕೇಸರವುಳ್ಳ ಕರಿಯ ಬಣ್ಣದ ಕೋತಿ) ಮೊಲ ಮುಂತಾದ ಪ್ರಾಣಿಗಳು ಬೇಟೆಗೆ ಬಲಿಯಾಗುತ್ತವೆ. ಕತ್ತಲಾದೊಡನೆ ರಸ್ತೆಯಲ್ಲಿ ಅಡ್ಡದಾಟುವ ಪ್ರಾಣಿಗಳನ್ನು ಕೋವಿಯಿಂದ ಹೊಡೆಯುವುದು ಬಲು ಸುಲಭ. ಇದಕ್ಕಾಗಿ ಎಷ್ಟೋ ಜನ ಮೋಟಾರುಗಳಲ್ಲಿ ಬಹಳ ದೂರದಿಂದಲೂ
ಇಲ್ಲಿಗೆ ಬರುತ್ತಾರೆ. ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಮೈಸೂರು, ಕೇರಳ ಮುಂತಾದ ದೇಶದ ಬೇರೆ ಬೇರೆ ಪ್ರಾತ್ಯಗಳ ಹಳ್ಳಿಯ ಕಾಡುಗಳಲ್ಲಿ ಲೆಕ್ಕವಿಲ್ಲದಷ್ಟು ಮೃಗ ಪಕ್ಷಿಗಳು ಬೇಟೆಗೆ ಬಲಿಯಾಗುತ್ತಿವೆ.
ವನ್ಯಪ್ರಾಣಿ ಸಂರಕ್ಷಣೆ ಭಾರತದಲ್ಲಿ ಬಹುದೊಡ್ಡ ಸಮಸ್ಯೆ, ಹೊರ ದೇಶಗಳಲ್ಲೂ ಈ ಸಮಸ್ಯೆ ಕಾಡದೆ ಇಲ್ಲ. ಆದರೆ ಅಲ್ಲೆಲ್ಲ ಅವುಗಳ ರಕ್ಷಣೆಗಾಗಿ ಶ್ರೇಷ್ಠ ಮಟ್ಟದ ಮೃಗಾಲಯಗಳಿವೆ, ಪಾರ್ಕುಗಳಿವೆ. ಇಷ್ಟೇ ಅಲ್ಲ, ಚಿಕ್ಕ ಮಕ್ಕಳಿಗೆ ಮೃಗ ಪಕ್ಷಿಗಳ ಬಗ್ಗೆ ತಿಳಿಯಪಡಿಸುವ ಸೊಗಸಾದ ಪುಟ್ಟ ಪುಸ್ತಕಗಳಿವೆ. ದೊಡ್ಡವರಿಗಾಗಿ ಒಳ್ಳೆಯ ಪತ್ರಿಕೆಗಳಿವೆ. ಬೆಲೆ ಬಾಳುವ ಪುಸ್ತಕಗಳಿವೆ: ಮೃಗ ಪಕ್ಷಿಗಳ ಸಂಘಗಳಿವೆ ; ಅವುಗಳಿಗಾಗಿ ಸಂಶೋಧನೆ ನಡೆಸುವವರಿದ್ದಾರೆ: ಕೇವಲ ಸುತೋಷಪಡುವುದಕ್ಕಾಗಿ ದೂರ ದೇಶಗಳಿಗೆ ಪ್ರಯಾಣ ಮಾಡುವವರಿದ್ದಾರೆ.
ನಮ್ಮ ದೇಶದ ಮಕ್ಕಳಿಗೆ ಪ್ರಾಣಿಗಳ ವಿಚಾರವಂತಿರಲಿ, ಸದ್ಯ ಓದು ಕಲಿಯುವುದಕ್ಕೂ ಸರಿಯಾದ ಪುಸ್ತಕಗಳಿಲ್ಲ. ‘ಇಂದಿನ ಮಕ್ಕಳೇ ನಾಳಿನ ಜನಾಂಗ’ ಎಂದು ತಿಳಿಯುವಲ್ಲಿ, ಮಕ್ಕಳಿಗಾಗಿ ಉತ್ತಮ ಪಾಠ ಪುಸ್ತಕಗಳ ಜತೆಗೆ ಪ್ರಾಣಿ ಸಂಬಂಧವಾದ ಬಣ್ಣಬಣ್ಣದ ಸಚಿತ್ರ ಪುಸ್ತಕಗಳೂ ಪ್ರಾದೇಶಿಕ ಭಾಷೆಗಳಲ್ಲಿ ಪ್ರಕಟವಾಗಬೇಕು. ಮೃಗ, ಪಕ್ಷಿ, ಹಾವು, ಹಾತೆಗಳ ಬಗ್ಗೆ ಕೆಲವು ಉತ್ತಮ ಗ್ರಂಥಗಳು ಇಂಗ್ಲಿಷ್‌ನಲ್ಲಿ ಪ್ರಕಟವಾಗಿವೆ. ಕನ್ನಡ ಹಾಗೂ ಇತರ ಭಾಷೆಗಳಲ್ಲಿ ಇಂಥ ಗ್ರಂಥಗಳ ಪ್ರಕಟಣೆ ಬಹುವಾಗಿ ಆಗಬೇಕು. ಹಳ್ಳಿ ಹಳ್ಳಿಗಳಲ್ಲಿ ವನ್ಯಪ್ರಾಣಿ ಸಂರಕ್ಷಣೆಯ ಕುರಿತು ಉಪನ್ಯಾಸಗಳನ್ನು ಏರ್ಪಡಿಸುವುದರ ಜತೆಗೆ, ಕಡ್ಡಾಯವಾಗಿ ಮೃಗಬೇಟೆಯನ್ನು ನಿಲ್ಲಿಸುವ ಕಾನೂನು ಕ್ಷಿಪ್ರವಾಗಿ ಆಗಬೇಕಾದ ಕೆಲಸ. ನಮ್ಮ ಧೀಮಂತ ವರ್ಗ ಇತ್ಯ ಆಳವಾಗಿ ದೃಷ್ಟಿ ಹರಿಸಬೇಕು.
ಇಂದು ಮುಂಬಯಿಯಲ್ಲಿರುವ ‘ನ್ಯಾಚುರಲ್ ಹಿಸ್ಟರಿ ಸೊಸೈಟಿ’, ದೆಹಲಿಯ ಕೆಂಪುಕೋಟೆಯ ಹತ್ತಿರವಿರುವ ಪಕ್ಷಿಗಳ ಆಸ್ಪತ್ರೆ-ಇವೆರಡೂ ಶ್ರದ್ಧೆಯಿಂದ ಕಾರ್ಯಮಗ್ನವಾಗಿರುವ ಸಂಸ್ಥೆಗಳು. ಇಂಥ ಸಂಘ ಸಂಸ್ಥೆಗಳು ದೇಶದಲ್ಲಿ ಹೆಚ್ಚು ಹೆಚ್ಚಾಗಿ ಸ್ಥಾಪಿತವಾಗಬೇಕು. ನಮ್ಮ ದೇಶದ ಮೃಗಾಲಯಗಳು ವಿದೇಶಿ ಮೃಗಾಲಯಗಳಿಗೆ ಸರಿಗಟ್ಟಲಾರವಾದರೂ ಕನಿಷ್ಠ ಸೌಲಭ್ಯ ಸೌಕರ್ಯ ಒದಗುವಂತಾಗಬೇಕು. ಮೃಗಪಕ್ಷಿಗಳ ಆಶ್ರಯಸ್ಥಾನ (Sanetuary) ಗಳಿಗೆ ಜನ ಬಂದು ನೋಡುವುದಕ್ಕೆ ತಕ್ಕ ಅನುಕೂಲತೆ ಇರಬೇಕು. ಆದುದರಿಂದ ತೀರ ತಡವಾಗುವ ಮುನ್ನ ಪ್ರಾಣಿಗಳನ್ನು ಉಳಿಸಿಕೊಳ್ಳುವುದಕ್ಕೆ ನಾವು ಮುಂದಾಗಬೇಕು. ಜೀವ ಜೀವಗಳ ಸಂಬಂಧವನ್ನು ಅರಿಯಲಾರದಂತಹ ಅಂಧತ್ವ ನಮಗೆ ಯಾವ ಕಾಲಕ್ಕೂ ಬೇಡ.
.
ಲೇಖನ ಗ್ರಂಥಋಣ
BIRD LIFE-By Noko Tinbergen.
THE BIRDS-By Roger Tory Peterson And the aditors of Life.
THE BOOK OF INDIAN BIRDS-BySalim Ali.
THE BOOK OF INDIAN ANIMALS-By S.H.Praber.
ಜೀವ, ಜೀವನ-ಡಾ.ಶಿವರಾಮ ಕಾರಂತ.
.

Close

ನಾನು

ನಾನು

ಎಂ. ಪಿ. ಮನೋಹರ ಚಂದ್ರನ್

ಕೊಳಕುಮಂಡಲದೊಳಗೆ ಸರ್ಪದ ಗೊಂದಲ. ಕಾರ್ಗತ್ತಲೆಯ
ಸೀಳಿ ಮಿಂಚಿನ ಪ್ರವಾಹ, ಗುಡುಗಿಲ್ಲದ ಮಳೆ ಬಂದಾಗ
ಅಣುರೂಪಿ ಬ್ರಹ್ಮನ ಸೃಷ್ಟಿ.
ಅಹಂ ಬ್ರಹ್ಮಾಸ್ಮಿ.

ಬೆಳೆದೆ : ಅ ಆ ಇ ಈ, ಸತ್ಯ, ಧರ್ಮ, ಪ್ರಾಮಾಣಿಕತೆ ಇತ್ಯಾದಿ
ವಿಟಮಿನ್ ಪಾಠ ಗುಳಿಗೆಗಳ ವರ್ಷಕೊಂದು ನುಂಗುವ ಪರಿಪಾಟ.
ಬೆಳೆದೆ: ಬೆಲೂನ್ ಊದಿದೆ. ದಂಗುರುಗಿನ ಬಣ್ಣ ತುಂಬಿದೆ.
ಕಾಲೇಜಿನಿಂದ ಹೊರಬಂದೆ.
ಜಗತ್ತು ಕಂಡೆ.

ಹರಿಶ್ಚಂದ್ರ, ಧರ್ಮರಾಯ, ಗಾಂಧಿ ಎಲ್ಲರನ್ನೂ ಪಣ ಒಡ್ಡಿ
ಪಗಡೆ ಸೋತೆ, ದುರ್ಯೋಧನಗೆ ಖುಷಿ ಖುಷಿ
ಯಾಗಿ ಕೆಲಸ ಕೊಟ್ಟ. ಶಕುನಿಯಾದೆ.
ಕುಗ್ಗಿದೆ: ಕುಗ್ಗಿ ಕುಗ್ಗಿ ವಾಮನನಾದೆ, ಕಪ್ಪ ಬೆಲೂನ್ ಊದಿ ಹಿಗ್ಗಿದೆ.

ಸುಕ್ಕುಗಳು; ಮಡಚುವ ಸುಕ್ಕುಗಳು.
ಲೆಕ್ಕ ಹಾಕಿ ಹಾಕಿ ಸೋತೆ ಆದರೂ ಸತ್ತಿಲ್ಲ.
ಕೊಳಕುಮಂಡಲದಿಂದ ಹೊರಬಿದ್ದಿವೆ
ಕ್ರಿಮಿಗಳು, ಲಾಡಿಹುಳುಗಳು, ಕೆಲವಕ್ಕೆ ಮುಖ ನನ್ನದು
ಉಳಿದವಕ್ಕೆ ನನ್ನ ಬಾಲ.
ನಾನು ಸತ್ತಿಲ್ಲ.

Close

ಪ್ಯಾರಾಸೈಟ್

ಪ್ಯಾರಾಸೈಟ್

ಎ. ಎನ್. ಪ್ರಸನ್ನ

ಮಲಗಿಕೊಂಡೆ ಕಿಟಕಿಯಿಂದ ಆಚೆ ದೃಷ್ಟಿ ಎಸೆದೆ. ಗೋಪಿ ಗಿಡಗಳಿಗೆ ನೀರು ಹಾಕುತ್ತಿದ್ದ. ಅವನು ಎದ್ದು ಆಗಲೇ ಒಂದು ಗಂಟೆಯಾಗಿರಬೇಕು. ನಾನು ನಿನ್ನ ಸಾಯಂಕಾಲ ಹುರುಪಿನಿಂದ ಚರ್ಚಿಸಿದ್ದ Of Human Bondage ಪುಸ್ತಕಕ್ಕೆ ಮನಸ್ಸನ್ನು ಗುತ್ತಿಗೆ ಕೊಟ್ಟಿದ್ದರಿಂದ ರಾತ್ರಿ ನಿದ್ದೆ ಸರಿಯಾಗಲಿಲ್ಲ. ಈಗಲೂ ರೆಪ್ಪೆಗಳ ಮೇಲೆ ಫಿಲಿಪ್‌ನ ಕುಂಟು ನಡಿಗೆ, ಮತ್ತೆ ಗೋಪಿಯನ್ನು ನೋಡಿ, ಕುಂಟುವ ಫಿಲಿಪ್‌ಗೂ ಫಿಟ್ಸ್ ಅಟ್ಯಾಕ್‌ಗಳಿಂದ ಕೃಶವಾದ ಅವನಿಗೂ ತಾಳೆ ಹಾಕಲು ಪ್ರಯತ್ನಿಸಿದ. ಸರಿ ಹೋಗಲಿಲ್ಲ.

ಈಗ ನೋಡಿದೆ. ಸ್ಕೂಲಿಗೆ ಹೊರಟ ಹುಡುಗರ ಗುಂಪು ಆ ಕಡೆ ಮರದ ಮೇಲಿಂದ ಮರಿಯನ್ನು ಗಟ್ಟಿಯಾಗಿ ಅವುಚಿಕೊಂಡು ಇಳಿದು, ಕಾಂಪೌಂಡ್ ಹತ್ತಿ ಚಜ್ಜಾ ಮೇಲೆ ಎಗರಲು ಪ್ರಯತ್ನಿಸುತ್ತಿದ್ದ ಕೋತಿಯನ್ನು ಕಂಡು ಬೊಬ್ಬೆ ಹಾಕಿ ರೇಗಿಸಿದರು. ಹುಚ್ಚು ಮುಂಡೇವು ಅನ್ನಿಸಿತು. ರೂಮಿನೊಳಕ್ಕೆ ಬಂದ ವಾಣಿಗೆ ಅದನ್ನು ತೋರಿಸಿದೆ.

ಅವಳು ಏನೂ ಹೇಳದೆ ಗೋಪಿ ಕಡೆ ನೋಡಿದಳು.

“ಇವತ್ತು ರಜ ಹಾಕಿದೀರಾ ?” ಕಾಫಿ ಕುಡಿದು ಮತ್ತೆ ಮಲಗಲು ಹವಣಿಸುತ್ತಿದ್ದ ನನ್ನನ್ನು ನೋಡಿ ಕೇಳಿದಳು.

ಕಣ್ಣು ಬಿಟ್ಟೆ. ದಿಂಬಿನ ಕೆಳಗೆ ಕೈ ಹಾಕಿ ವಾಚು ತೆಗೆದೆ. ಆಗಲೆ ಏಳೂವರೆ. ಎದ್ದು ಬಚ್ಚಲಿಗೆ ಓಡಿದೆ.

“ಶೇವಿಗೆ ನೀರು” ಎಂದಂ ಗೋಪಿ ನೀರಿನ ಕಪ್ಪು ತಂದಿಟ್ಟ.
“ಪಿಲ್ಸ್ ತೊಗೊಂಡೆಯಾ”-ನನ್ನದು ಮಾಮೂಲು ಪ್ರಶ್ನೆ.
“ಇಲ್ಲ”

ರೆಜರ್‌ಗೆ ಬ್ಲೇಡು ಸೇರಿಸುತ್ತಿದ್ದವನು ಅವನ ಮುಖ ನೋಡಿದೆ. ಬೆಳೆದಿದ್ದ ಗಡ್ಡ ಚುಚ್ಚಿತು.

“ಪಿಲ್ಸೆಲ್ಲ ಮೊನ್ನೆಗೇ ಮುಗಿದು ಹೋಯ್ತು…. ನೀನು ನಿನ್ನೆ ತರ‍್ತೀನೀಂತ ಹೇಳಿದ್ದಿ ?”
“ಹೋಗು ಶೇವ್‌ ಮಾಡಿಸಿಕೊಂಡು ಬಾ” ಎಂದೆ.

ಮರೆತು ಹೋಗಿತ್ತು. ಹಳೇ ದೋಸ್ತ್ ನಾಗರಾಜ ಸಿಕ್ಕು ಇಡೀ ಸಾಯಂಕಾಲ ಹರಟೆ. ಸಿಗರೇಟ್‌ಗೇ ಟೈಂ ಸಾಲಲಿಲ್ಲ. ಇವತ್ತು ಎಷ್ಟೊತ್ತಿದ್ದರೂ ತರಬೇಕು. ಈ ಮೂರು ವರ್ಷಗಳಿಂದ ನೂರೆಂಟು ಡಾಕ್ಟರು, ಔಷಧಿ ಟ್ರೈ ಮಾಡಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಕಲೀಗು ವೆಂಕಟರಾಮ್ ರೆಕಮೆಂಡ್ ಮಾಡಿದ ಡಾಕ್ಟರು ಪ್ರಿಸ್‌ಕ್ರೈಬ್ ಮಾಡಿದ್ದು ಒಂದಿಷ್ಟು ಉಪಯೋಗ ಕಂಡಿದೆ. ಆದರೆ ಅವರದ್ದು ಒಂದು ಮುಖ್ಯವಾದ ಪಾಯಿಂಟು : ಪಿಲ್ಸ್ ತೆಗೆದುಕೊಳ್ಳುವುದನ್ನ ಬ್ರೇಕ್ ಮಾಡಕೂಡದು ಅಂತ. ಈಗ ತಾನೆ ಅವರು ಆ ಮಾತು ಹೇಳಿದಂತೆ ಭಾವನೆ. ಮನಸ್ಸೆಲ್ಲ ಕಸಿವಿಸಿ.

ಅಲ್ಲಿ ನಿಂತು ಎಲೆಕ್ಟ್ರಿಕ್ ಮೀಟರ್‌ ನೋಡಿ, “ಆಗಲೇ ಎಷ್ಟೊಂದು ಯುನಿಟ್ಟಾಗ್ಹೋಗಿದೆ… ….ಇನ್ನೂ ಎಂಟು ದಿನ ಇದೆ ಅವನು ರೀಡಿಂಗ್‌ಗೆ ಬರೋದು” ಎಂದ.
“ಸ್ವಿಚ್ ಹಾಕಿದ್ದು ಯಾವಾಗ ?” ಎಂದೆ.
“ಆರೂ ಕಾಲು”.

ಸ್ನಾನಕ್ಕೆ ಹೊರಟೆ. ಬಿಸಿಬಿಸಿ ನೀರು ಮೈಮೇಲೆ ಸುರಿದುಕೊಳ್ಳುವಾಗಲೂ ಪಿಲ್ಸ್ ಮರೆಯಬಾರದಿತ್ತು ಅಂದುಕೊಂಡೆ. ಪಿಲ್ಸ್ ತೆಗೆದುಕೊಳ್ಳುವುದು ಬ್ರೇಕ್ ಆದ್ದರಿಂದ ಇವತ್ತು ಅಟ್ಯಾಕ್ ಆದರೆ ? ಗಾಬರಿಯಾಯ್ತು, ಈ ಮೊದಲು ಅಟ್ಯಾಕ್ ಆದ ಸಂದರ್ಭಗಳು ಮುತ್ತಿಗೆ ಹಾಕಿದವು. ಮೈ ತುಂಬ ಭಯ, ಅಸಹ್ಯದ ಮುಳ್ಳು…. ರಜ ಹಾಕಿ ತಂದುಕೊಟ್ಟರೆ ಹೇಗೆ ?…. ಆದರೆ ಹಾಳಾದ್ದು ವರ್ಷದ ಕೊನೆ ಸಿ ಎಲ್. ಕೂಡ ಇಲ್ಲ. ಸಾಲದ್ದಕ್ಕೆ ಹೆಡ್ ಆಫೀಸ್‌ಗೆ ಇವತ್ತು ಅರ್ಜಂಟ್ ಸ್ಟೇಟ್‌ಮೆಂಟ್ ಕಳಿಸಬೇಕು, ಫ್ರೆಂಚ್ ಲೀವೂ ಮಾಡಕ್ಕಾಗಲ್ಲ, ಅವನಿಗೆ ಇವತ್ತು, ಅದು ಇದು ಕೆಲಸ ಮಾಡಿ ಸ್ಟ್ರೇನ್ ಮಾಡಿಕೋ ಬೇಡ ಅಂತ ಹೇಳಬೇಕು.

ಸ್ನಾನ ಮುಗಿಸಿ ಬರುವಾಗ ಅಡಿಗೆ ಮನೆ ಕಡೆ ನೋಡಿದೆ. ಗೋಪಿ ಚಟ್ನಿ ತಿರುವುತ್ತಿದ್ದ, ಸಿಟ್ಟು ಪುಟಿಯಿತು.
“ಏಳೋ….ಎದ್ದೇಳೋ..” ಎಂದು ಕೈ ಹಿಡಿದೆಳೆದೆ.
ತಕ್ಷಣ ವಾಣಿ ಕಡೆ ತಿರುಗಿ, “ಅಲ್ವೆ ಅವನಿಂದ ಇಷ್ಟು ಚಾಕರಿ ಮಾಡಿಸ್ಕೊ ಬೇಡ ಅಂತ ಸಾವಿರ ಸಲ ಹೇಳಿದೀನಿ… ತಲೇಲೇನಿದೆ… ಕೆಲಸದವರ ಹಾಗೆ ಅಕ್ಕಿ ಆರಿಸೋದರಿಂದ ಹಿಡಿದ ಹಂಡೆಗೆ ನೀರು ತುಂಬೋವರೆಗೂ ಎಲ್ಲ ಅವನಿಂದ ಮಾಡಿಸ್ತೀಯಲ್ಲ ನಾಚಿಕೆ
ಯಾಗಲ್ವ ನಿಂಗೆ…ಅವನ್ನ ಏನೂಂತ ತಿಳ್ಕೊಂಡಿದೀಯ ?…”

ಕೂಗಾಡಿದ್ದರಿಂದ ಮುಖ ಕೆಂಪಗಾಯಿತು, ಗೋಪಿ ತೋಚದೆ ನಿಂತಿದ್ದ.

“ನೋಡಿ ಇದಕ್ಕೆಲ್ಲ ನೀವು ತಲೆ ಹಾಕ್ಬೇಡಿ…ನೀವು ಏನು ಹೇಳಿದ್ರೂ ಅಷ್ಟೇ…ಅಲ್ಲ. ಅಷ್ಟು ಕನಿಕರ ಇರೋರು ಅವನಿಗೊಂದು ಕೆಲ್ಸ ಕೊಡ್ಸಿ ನಾಲ್ಕು ಜನರ ಹಾಗೆ ಮಾಡಿ ನೋಡೋಣ ? ” ಎಂದು ಪ್ರಶ್ನೆ ಬೀರಿದಳು.

“ನೋಡ್ತಾ ಇರು, ಅದೂ ಆಗತ್ತೆ, ಅವನಿಗೆ ಕೆಲ್ಸ ಕೊಡಿಸುವಷ್ಟು ಇನ್‌ಫ್ಲುಯನ್ಸ್ ನಂಗಿಲ್ಲ ಅಂತ ತಿಳ್ಕೊಂಡಿದಿ ತಾನೆ?…ರಾಮಚಂದ್ರನಿಂದ ಉತ್ತರ ಬರ‍್ಲಿ ಆವಾಗ ನಿಂಗೆ ತಿಳಿಯುತ್ತೆ. “

“ಓ…ನೀವು ಟ್ರೈ ಮಾಡಿದ್ದಾಯಿತು. ಈಗ ನಿಮ್ಮ ಫ್ರೆಂಡ್ಸ್‌ಗೆ ಜೋತುಬಿದ್ದಿದ್ದೀರಾ …ಆಗ್ಲಿ, ಅದೂ ಆಗ್ಲಿ….ನಂಗೊತ್ತಿಲ್ಲವೆ…ಇವೆಲ್ಲ ”.

“ನಿಂಗೆ ಅವನ್ನ ಕಂಡರೆ ದ್ವೇಷ, ತಾತ್ಸಾರ” ಎಂದೆ.

ಅವಳು ಮಾತಾಡಲಿಲ್ಲ.

ಅವಳ ವಾದ, ವರ್ತನೆ ಜಿಗುಪ್ಸೆ ತರಿಸಿತ್ತು. ಹೆಚ್ಚು ಕಡಿಮೆ ತನ್ನೆಲ್ಲ ಕೆಲಸ ಮಾಡಿಕೊಡುವ ವ್ಯಕ್ತಿಯ ಬಗ್ಗೆ ಎಲಿಮೆಂಟರಿ ಗ್ರಾಟಿಟ್ಯೂಡ್ ಇಲ್ಲವಲ್ಲ. ಅವಳ ಸ್ವಾರ್ಥ’ ಎಕ್ಸೆಂಟ್ರಿಸಿಟಿ ಆಶ್ಚರ್ಯ ಹುಟ್ಟಿಸಿತ್ತು. ಇದೆಂಥ ಹೆಂಗಸು ಎನ್ನುವ ಮುಜುಗರದ ಒತ್ತಡ ಮೈಯೊಳಗೆ, ಪ್ರಾಯಶಃ ನಾನು ಎಚ್ಚರವಾಗಿರುವ ಸಮಯವನ್ನೆಲ್ಲ ಆವರಿಸುವ ಗೋಪಿಯ ಸುತ್ತ ಮತ್ತೆ ಮತ್ತೆ ಮನಸ್ಸು ಬಗುರಿಯಾಡುತ್ತೆ. ಅದಕ್ಕೆ ಅವನ ಅಸಹಾಯಕತೆ ಕಾರಣವೇ ಅಥವಾ ರೂಢಿಸಿಕೊಂಡಿರುವ ನನ್ನ ಪ್ರವೃತ್ತಿ ಕಾರಣವೇ ಬಗೆ ಹರಿದಿಲ್ಲ. ಇನ್ನೊಂದು ಸೆಂಟಿಮೆಂಟಲ್‌ ವ್ಯಕ್ತಿ ಅನ್ನುವುದರ ಬಗ್ಗೆ ಅನುಮಾನ -ಅಲ್ಲದೆ ಹಾಗೆಂದು ಒಪ್ಪಿಕೊಳ್ಳಲೂ ಮನಸ್ಸಿಲ್ಲ. ಅವನ ಬಗ್ಗೆ ಯೋಚಿಸುವುದು ಎಷ್ಟೋ ಸಾರಿ ಸಿಟ್ಟು, ಬೇಸರ, ಮುಜುಗರ ತರಿಸಿದರೂ ಅವನ ವಿಷಯಕ್ಕೇ ನಾನು ಬಾಲಂಗೋಚಿ. ಅವನು ಎದುರಿಗಿದ್ದರೆ ಒಂದು ರೀತಿ ಸಂಕಟ; ಸಮಾಧಾನ. ಎದುರಿಗಿಲ್ಲದಾಗ ಆತಂಕ; ನಿರಾಳ. ನಾನು ಅವನಿಗೆ ಕಾವಲು. ಅವನು ಅವಳಿಗೆ ಬೇಟೆ.

“ಸಾಯಂಕಾಲ ಬರ‍್ತಾ ಪಿಲ್ಸ್ ತರ‍್ತೀನಿ” ಎಂದು ಊಟ ಮುಗಿಸಿ ಆಫೀಸಿಗೆ ಹೊರಟೆ.

ಆಫೀಸೊಂದು ಸಂತೆ. ಜನರು-ಪೇಪರುಗಳ ಬಿಡುವಿಲ್ಲದ ಓಡಾಟ. ಗುಜುಗುಜು ಮಾತು, ಆ ಕಡೆ ಟೈಪ್‌ರೈಟರ್‌ಗಳ ಚಟಪಟ ಶಬ್ದ. ಫೋನುಗಳ ಟ್ರಿನ್‌ಟ್ರಿನ್ ಶಬ್ದ. ಇವನ್ನೆಲ್ಲ ಕೇಳಿಸಿಯೂ ಕೇಳದ ಹಾಗೆ ಸುತ್ತ ವೃತ್ತ-ಗೋಡೆ ಎಬ್ಬಿಸಿ ಫೈಲುಗಳ ಮಧ್ಯೆ ತಲೆ ಹೂಳಿದೆ.

ಬೆನ್ನ ಮೇಲೆ ಯಾರೊ ಕೈಯಿಟ್ಟಂತಾಗಿ ತಿರುಗಿದೆ. ಆಂ ! ರಾಮಚಂದ್ರ, ಎಕ್ಸೈಟ್‌ ಆದೆ. “ಓ ಯಾವಾಗ ಬಂದೆಯೋ….ನಿನ್ನ ಕಾಗದ ಎಕ್ಸ್‌ಪೆಕ್ಟ್‌ ಮಾಡ್ತಿದ್ದೆ” ಎಂದು ಕೈಕುಲುಕಿ, “ಒಂದ್ನಿಮಿಷ ಇರು” ಎಂದು ಕುರ್ಚಿ ತೋರಿಸಿದೆ. ಅವಸರದಲ್ಲಿ ಪೇಪರುಗಳನ್ನ ಸರ‍್ಟ್‌ ಮಾಡಿ “ಸುಬಾನ್” ಎಂದು ಕೂಗಿದೆ. ಅವನು ಬರುವಷ್ಟರಲ್ಲಿ ಒಮ್ಮೆ, ರಾಮಚಂದ್ರನ ಕಡೆ ಸ್ಮೈಲ್ ಎಸೆದು ಕಾದೆ. ಸುಬಾನ್‌ಗೆ ಪೇಪರುಗಳನ್ನು ತೋರಿಸಿದೆ. “ಸಾಹೇಬರಿಗಾ” ಎಂದ. ತಲೆ ಹಾಕಿ, ಎದ್ದೆ.

ಕ್ಯಾಟೀನಿಗೆ ಹೋಗಿ ಕುಳಿತು ಕಾಫಿ ಆರ‍್ಡರ್‌ ಮಾಡಿದೆವು. ಅನಂತರ ರಾಮಚಂದ್ರ ಸಿಗರೇಟ್ ಹಚ್ಚುತ್ತಾ, “ಈಗ್ಹೇಳು” ಅಂದ.

“ನನ್ನ ಕಾಗದ ಬಂತ?
“ಏನು ವಿಷಯ ?
“ಕಾಗದದಲ್ಲಿ ಡಿಟೇಲಾಗಿ ಬರೀಲಿಕ್ಕೆ ಆಗ್ಲಿಲ್ಲ….ಅದಕ್ಮುಂಚೆ ನಿನ್ನ ಪ್ರೋಗ್ರಾಂ ಏನು….

ಅರ್ಜಂಟಾ”.
“ಅಂಥಾದ್ದೇನಿಲ್ಲ….ಡೈರೆಕ್ಟರ್ ಆಫೀಸಿನಲ್ಲಿ ಸ್ವಲ್ಪ ಕೆಲ್ಸ ಇದೆ. ಇರ‍್ಲಿ ಹೇಳು”.
“ನೋಡು ನಂಗೊಬ್ಬ ತಮ್ಮ ಇದಾನೆ–ಗೋಪಿ…”
“ನೀನು ಹಿಂದೆ ಯಾವಾಗ್ಲೋ ಅವನ ಹೆಸರು ಹೇಳಿದ್ದು ನೆನಪಿದೆ”.
ಅವನೀಗ ಬಿ.ಎಸ್ಸಿ. ಪಾರ್ಟ್ ಗ್ರಾಜುಯೇಟ್. ಈಗ ಮೂರು ವರ್ಷದಿಂದ್ಲೂ ಅವನ್ಗೆ ಕಂಪ್ಲೀಟ್‌ ಮಾಡ್ಲಿಕ್ಕೆ ಆಗ್ಲಿಲ್ಲ. ಆಗ್ತಿತ್ತೇನೋ ಆದ್ರೆ, ಅವನ್ಗೆ ಇದ್ದಕ್ಕಿದ್ದಂತೆ ಫಿಟ್ಸ್ ಬರೋದಕ್ಕೆ ಶುರುವಾಯ್ತು…ಯಾವಾಗ್ಲಿಂದ ಅದ್ರೆ.., ನನ್ನ ಮದ್ವೆಗೆ ಒಂದು ತಿಂಗಳು ಮುಂಚೆ. ಮದ್ವೆಗೆ ನೀನು ಬಂದಾಗ ಹೇಳಿದೆನೋ ಇಲ್ಲವೋ ಗೊತ್ತಿಲ್ಲ. ಮೊದ ಮೊದಲು ಹದಿನೈದಿಪ್ಪತ್ತು ದಿನಕ್ಕೆ ಅಟ್ಯಾಕ್ ಆಗಿತ್ತು, ಬರ‍್ತಾ ಬರ‍್ತಾ ಇಂಟರ್‌ವಲ್‌ ಕಡಿಮೆ ಆಗ್ತಾ ಬಂತು. ಇದರಿಂದ ಅವನು ಮೆಂಟಲಿ, ಫಿಸಿಕಲಿ ತುಂಬ ವೀಕ್‌ ಆಗಿದ್ದಾನೆ. ಬಹುಶಃ ಅವನ್ಗೆ ಡಿಗ್ರಿ ಮುಗಿಸಕ್ಕೆ ಆಗಲ್ಲ. ಆದ್ದರಿಂದ….”

“ಪ್ರೀಟ್‌ಮೆಂಟ್ ಕೊಡಿಸಿದ್ಯಾ ?”
“ಆಯ್ತು. ಎಲ್ಲ ಥರ ಟ್ರೈ ಮಾಡಿದ ಮೇಲೆ ಈಗ ಯಾವುದೋ ಒಂದು ಕ್ಲಿಕ್ ಆಗಿದೆ. ಅದೂ ಕೂಡ ಸೆಂಟ್‌ಪರ್‌ಸೆಟ್ ಇಫೆಕ್ಟಿವ್ ಅಲ್ಲ. ಆದರೆ ಉಳಿದ ಎಲ್ಲಕ್ಕಿಂತ ಉತ್ತಮ. ಅವನೂ ಕೂಡ ಅದನ್ನು ಮನಸ್ಸಿಗೆ ತೀರ ಹಚ್ಚಿಕೊಂಡಿದಾನೆ ಅಂತ ಕಾಣುತ್ತೆ. ಯಾವಾಗ್ಲೂ ತೀರ ಮಂಕಾಗಿ, ಹುಚ್ಚುಚ್ಚಾಗಿ ಕಾಣ್ತಾನೆ”.
“ಆದ್ದರಿಂದ…”
“ಆದ್ದರಿಂದ ಅವನಿಗೊಂದು ಕೆಲ್ಸ ಕೊಡಿಸಿದರೆ ಒಂದು ಹವ್ಯಾಸ ಮಾಡಿಕೊಟ್ಟ ಹಾಗಾಗುತ್ತೆ.”

“ಹುಂ”
“ನನ್ನ ಪೊಸಿಷನ್ ನಿಂಗೊತ್ತಿದೆ. ಅದಕ್ಕೆ ನಿನ್ನನ್ನ ಕೇಳೋಣಾಂತ ಡಿಸೈಡ್ ಮಾಡ್ದೆ ಏನಂತೀ…”
ರಾಮಚಂದ್ರ ಕೊನೆ ಗುಟುಕು ಕಾಫಿ ಕುಡಿದು ಮತ್ತೆ ಸಿಗರೇಟು ಹಚ್ಚಿ ಹೊಗೆಯ ರಿಂಗುಗಳನ್ನು ಬಿಡುತ್ತಾ ಯೋಚಿಸಿದ. ಅವನ ಮುಖವನ್ನೇ ನೋಡಿದೆ.
“ಹುಂ…ಆಗ್ಲಿ…ಒಂದು ಅವಕಾಶ ಇದೆ….ನಿಂಗೆ ಛಾನ್ಸ್ ತಗೊಳ್ಳೋದಕ್ಕೆ ಮನಸ್ಸಿದ್ದರೆ ನಾಳೆ ನನ್ನ ಜೊತೆ ಕಳಿಸು ನೋಡೋಣ” ಎಂದ

“ಓ ಎಸ್ ಐ ಆಮ್ ರೆಡಿ” ಎಂದೆ.

“ಸರಿ ಹಾಗಾದ್ರೆ, ನಾಳೆ ನೋಡ್ತೀನಿ” ಎಂದು ರಾಮಚಂದ್ರ ಹೊರಟ ಅಭಿಮಾನದಿಂದ ವಿಶ್ ಮಾಡಿದೆ. ಗೋಪಿಗೊಂದು ಸ್ಥಾನ ನಿರ್ಮಾಣವಾದರೆ ಸಾಕು ಅದುಕೊಂಡು ಕಾಲು ಹಾಕಿದೆ.

ಮತ್ತೆ ಆಫೀಸಿಗೆ ಬಂದು ಕುಳಿತು ಖುಷಿಯಿಂದ ಕೆಲಸ ಮಾಡಿದ, ಒಳಗೆಲ್ಲೋ ಮೆಲ್ಲನೆ ಸರಿಯುವ ಲಹರಿ. ಇನ್ನರ್ಧ ಗಂಟೆ ಕಳೆದರೆ ಮನೆಗೆ ಹೋಗಿ ರಾಮಚಂದ್ರ ಬಂದಿದ್ದರ ವಿಷಯ ಹೇಳಬೇಕು. ಬೆಳಿಗ್ಗೆ ತಾನೆ ಉರಿದುಬಿದ್ದ ಅವಳಿಗೆ ನಿಜಸ್ಥಿತಿ ತಿಳಿಸಿ ಛೇಡಿಸಬೇಕು.

“ಸರ್ ನಿಮ್ಗೆ ಪಿ ಅಂಡ್ ಟಿ ಫೋನು” ಎಂದು ಹತ್ತಿರ ಬಂದು ಹೇಳಿದ ಸುಬಾನ್. ಎದ್ದು ಕ್ಯಾಜುಯಲ್ಲಾಗಿ ರಿಸೀವರ್ ತೆಗೆದುಕೊಂಡೆ. ಆ ಕಡೆಯಿಂದ ಕಾತರದ ಧ್ವನಿ. ಆಶ್ಚರ್ಯವಾಯ್ತು. ಮಾತಾಡಿದವರು ಅಂಗಡಿ ಶೆಟ್ಟರು.

‘ಬನ್ನಿ ಸಾರ್…ತಕ್ಷಣ ಬನ್ನಿ….ಇಲ್ಲಿ ನಿಮ್ಮ ಬ್ರದರ‍್ರು ಫಿಟ್ಸ್‌ ಬಂದು ಬಿದ್ ಬಿಟ್ಟಿದಾರೆ..”
“ಆಂ”
“ಇವನು ಗಾಬರಿಯಾಗ್ಬೇಕಿಲ್ಲ….ಏನೋ ನಮ್ಮಲ್ಲಾದ್ರಿಂದ….”

ಒಮ್ಮೇಲೆ ಆಫೀಸು ಕರಗಿ ಕೋರ್ಟಿನಲ್ಲಿ ನಿಂತ ಅಪರಾಧಿಯಾದೆ. ಶೆಟ್ಟರಂಗಡಿಯಲ್ಲಿ ಸಂಭವಿಸಿರಬಹುದಾದ ವಿವರಗಳ ಕುದುರೆ ಜಿಗಿಯಿತು ಮನಸ್ಸಿನಲ್ಲಿ. ಆಫೀಸಿನಲ್ಲಿದ್ದವರು ದಿಢೀರನೆ ಅರ್ಥ ಕಳೆದುಕೊಂಡು ತಲೆಯಲ್ಲಿ ಒಂದು ಬಗೆಯ ವ್ಯಾಕ್ಯೂಮ್‌ ಕವಿಯಿತು. ಸಾವರಿಸಿಕೊಂಡೆ. ಮೆಲ್ಲನೆ ಉಸಿರಿನ ಉಯ್ಯಾಲೆ ನಾರ್ಮಲ್ ಆದ ನಂತರ ಪರ್‌ಮಿಷನ್ ತೆಗೆದುಕೊಂಡು ಹೊರಟೆ. ವಿಷಯವೇನೆಂದು ವೆಂಕಟರಾಮ್ ಕೇಳಿರಬೇಕು. ನನ್ನಿಂದ ಉತ್ತರ ಸೊನ್ನೆ. ಯಾಕೆ ಹೀಗೆ ಎಲ್ಲರಿಂದಲೂ ತಪ್ಪಿಸಿಕೊಳ್ಳಬೇಕು ಅನ್ನಿಸುತ್ತೆ. ಅರ್ಥವಾಗುವುದಿಲ್ಲ, ಯೋಚಿಸಿದರೂ ಕೂಡ ವಿಷಯಗಳನ್ನ ಹೆಚ್ಚು ಅಥವಾ ಕಡಿಮೆ ಸೀರಿಯಸ್ಸಾಗಿ ತೆಗೆದುಕೊಳ್ಳುತೇನೆಂದು ನಂಬಿಕೆಯಾಗುವುದಿಲ್ಲ.

ಅಂಗಡಿಯಲ್ಲಿ ಮೊದಲು ಮಾತು ಪ್ರಾರಂಭಿಸಲು ಸಾಧ್ಯವಾಗದಷ್ಟು ಉದ್ವಿಗ್ನಗೊಂಡಿದ್ದೆ. ಪೆದ್ದನ ಹಾಗೆ ಕಣ್ಣು ಬಿಡುತ್ತಾ ಆಯಾಸದಿಂದ ಕುಳಿತಿದ್ದ ಗೋಪಿ. ತಲೆಯ ತುಂಬ ಕಟ್ ಪೀಸ್‌ ಯೋಚನೆಗಳು. ಮಾತಾಡದಿರುವುದೂ ಕಷ್ಟವಾಯ್ತು.

“ನೋಡಿ ಸಾರ್‌ ಆರೋಗ್ಯ ಸರಿಯಿಲ್ಲದೆ ಹುಡುಗ, ಹೀಗೆಲ್ಲ ಬೀದಿ ತಿರುಗಿದರೆ ಹೇಗೆ ? …ಸಾಮಾನನ್ನು ಹೇಗೆ ತೆಗೆದುಕೊಂಡು ಹೋಗಬೇಕು ಜವಾಬ್ದಾರಿ ಕೆಲಸ. ಅವನ ಕೈಲಿ ಸಾಧ್ಯವೇ ?…ಆದಿರ‍್ಲಿ. ಏನೊ: ಇಲ್ಲೆ ಇಲ್ಲಿ ನಮ್ಮಿ: ಹೀಗಾಯ್ತು, ಪರವಾಗಿಲ್ಲ. ತಕ್ಷಣ ಕೈಯಲ್ಲಿ ಬೀಗದ ಕೈಗೊಂಚಲು ಕೊಟ್ಟೆವು. ಒಂದ್ಪಕ್ಷ ರಸ್ತೇಲಿ ಹೀಗಾದ್ರೆ ಗತಿ ಏನು ಸಾರ್, ಸಿಕ್ಕಾಪಟ್ಟೆ ಟ್ರಾಫಿಕ್ಕಿರುತ್ತೆ…”

ನಾನೂ ಬೆಪ್ಪಟೆ ಕೊತ ಒಂದೆರಡು ಕ್ಷಣ. ಅನಂತರ ಮಾತಾಡಿದೆ. “ಇಲ್ಲ, ಈ ನಡುವ ಅಟ್ಯಾಕ್ ಆಗಿರ‍್ಲಿಲ್ಲ….ಯಾಕೆ ಹೀಗಾಯ್ತೋ ಏನೋ….ಸದ್ಯ ಇನ್ನೇನೂ ಹೆಚ್ಚು ಅಪಾಯವಾಗ್ಲಿಲ್ಲವಲ್ಲ…ತುಂಬ ಥ್ಯಾಂಕ್ಸ್” ಎಂದೆ.

ಶೆಟ್ಟರು ಭಾಷಣ ಶುರುಮಾಡಿರಬೇಕು, ನಾನು ಗೋಡೆಯಾಗಿ ಆ ಕಡೆ ದೌರ್ಬಲ್ಯದಿಂದ ಮಂಕಾಗಿ ಕುಳಿತ ಗೋಪಿ ಕಡೆ ನೋಡಿದೆ ಜಿಗುಪ್ಸೆ, ಸಿಟ್ಟು, ಮರಕ ಭಾವನೆಗಳು ಮತ್ತೆ ಪರಸ್ಪರ ಕಚ್ಚಾಡಿದವು.

“ಇನ್ಮೇಲಾದ್ರೂ ಹುಷಾರಾಗಿರಿ, ಹೀಗೇ ಬಿಟ್ಟರೆ ಬೀದಿ ಪಾಲಾಗ್ತಾನೆ ಅಷ್ಟೆ. ಅಂ….. ನೋಡಿ, ನಿಮ್ಮ ಮನೆಯವರು ಕೊಟ್ಟಿದ್ದ ಚೀಟಿಯ ಪ್ರಕಾರ ಎಲ್ಲ ಪ್ಯಾಕ್‌ ಮಾಡ್ಸಿದೀನಿ. ಇಗೋ ತಗೊಳ್ಳಿ ಬುಕ್ಕು” ಎಂದು ಕೊಟ್ಟರು.

ಈಗಲೂ ಗೋಪಿ ಮೂಕನಂತೆ ಕೂತು ಇದಕ್ಕೆಲ್ಲ ಹೊರತಾಗಿದ್ದ. ಆಟೋದಲ್ಲಿ ಸಾಮಾನು ಮತ್ತು ಗೋಪಿನ ಕೂಡಿಸಿಕೊಂಡು ಹೊರಟೆ. ದಾರಿಯಲ್ಲಿ ಒಂದು ಕಡೆ ನಿಲ್ಲಿಸಿ ಅವನಿಗೆ ಪಿಲ್ಸ್ ತೆಗೆದುಕೊಂಡೆ.

ಮನೆಯೊಳಗೆ ಕಾಲಿಟ್ಟವನೇ ಆಡಿದ, “ಬೆಳಿಗ್ಗೆ ನಾನಷ್ಟು ಬಡಕೊಂಡರೂ ಕೇಳ್ಲಿಲ್ಲ ನೀನು, ನಂಗೊತ್ತಿಲ್ವ ಅವನ್ನ ಯಾಕೆ ಕಳಿಸಿದೆ ಅಂಗಡಿಗೆ ಅಂತ, ಮಧ್ಯೆ ಯಾವುದಾದ್ರು ವೆಹಿಕಲ್‌ಗೆ ಸಿಕ್ಕು ನೆಗೆದು ಬೀಳಲಿ ಅಂತ ತಾನೇ”…ಒತ್ತಡಕ್ಕೆ ಸಿಟ್ಟು ಅಣೆಕಟ್ಟು ಒಡೆದಂತಾಗಿತ್ತು. ಅತಿಯಾಗಿ ಉದ್ವಿಗ್ನಗೊಂಡಿದ್ದರಿಂದ ಸಿಟ್ಟನ್ನು ವ್ಯಕ್ತಪಡಿಸಲೂ ತೊಡಕಾಯಿತು.

ವಾಣಿ ಪ್ರತಿಭಟಿಸಲಿಲ್ಲ. ಅತ್ತಳು. ಅದರಿಂದ ನನಗೂ ಉತ್ಸಾಹ ಕುಗ್ಗಿತು. ನಮ್ಮಿಬ್ಬರ ಮಧ್ಯ ಪ್ರಶ್ನೆಯ ಹಾಗೆ ಬೆನ್ನು ಬಗ್ಗಿಸಿ ಕುಳಿತ ಗೋಪಿಯ ಕಡೆ ದೃಷ್ಟಿ ನೆಟ್ಟು ಮೌನ ಮುಕ್ಕುತ್ತಾ ಕೂತೆ.

ಮಾರನೆಯ ದಿನ ಗೋಪಿ ರಾಮಚಂದ್ರನ ಜೊತೆ ಹೊರಡುವ ತಯಾರಿಗೆ ವಾಣಿ ಸಹಾಯ ಮಾಡುತ್ತಿದ್ದಳು. ಅವನ ಬಟ್ಟೆ, ಸರ್ಟಿಫಿಕೇಟುಗಳು ಇತ್ಯಾದಿಯ ಬಗ್ಗೆ ತೂರಿಸಿದ ಮುತುವರ್ಜಿ ಆಶ್ಚರ್ಯ ಹುಟ್ಟಿಸಿತು. ಒಳಗೆ ಗೋಪಿ ಹೇಳುತ್ತಿದ್ದ. “ಧೋಬಿ ಗುರುವಾರ ಬಟ್ಟೆ ಕೊಡ್ತೀನೀಂತ ಹೇಳಿದಾನೆ…ಹಾಲಿನೋನು ಈ ತಿಂಗಳು ಮೂರು ದಿನ ಬಂದಿಲ್ಲ….ಕಾಫಿಪುಡಿ ಪುಸ್ತಕ ಶೆಟ್ಟರ ಹತ್ತಿರವೇ ಇದೆ…” ಈ ಮೂರು-ನಾಲ್ಕು ವರ್ಷದಲ್ಲಿ ಊರು ಬಿಟ್ಟೇ ಹೋಗಿಲ್ಲವಾದ್ದರಿಂದ ಗೋಪಿ ತುಂಬ ಗೆಲುವಾಗಿದ್ದ. ಅವನನ್ನು ಕಳಿಸಿಬರಲು ಬಸ್ ಸ್ಟಾಂಡಿಗೆ ಹೊರಟ ನಾನು ಗೋಪಿ ಒಂದು ನೆಲೆಗೆ ಬರುವುದನ್ನು ಕನಸಿದೆ. ನನಗೀಗ ಅವನನ್ನು ಬಿಟ್ಟು ಇರುವುದರ ಬಗ್ಗೆ ಕಲ್ಪನೆಯಿಲ್ಲ. ನನ್ನ ಅಸ್ತಿತ್ವದಲ್ಲೇ ಅವನದೊಂದು ಪಾಲು ಎನ್ನುವ ಅನ್ನಿಸಿಕೆ.

ರಾಮಚಂದ್ರ ಉತ್ಸಾಹದಿಂದ ಮಾತಾಡಿದ. ಅವನ ಉದ್ದುದ್ದ ಮಾತುಗಳಿಗೆ ನನ್ನದು ಚುಟುಕು ಉತ್ತರ, “ಐ ವಿಲ್ ಡು ಮೈ ಬೆಸ್ಟ್” ಎಂದ. ಅವನನ್ನು ವಿಚಿತ್ರ ನಿರೀಕ್ಷಣೆಯಿಂದ ನೋಡಿದೆ. ಬಸ್ಸು ಹೊರಟಿತು.

ಸಿಗರೇಟು ಹಚ್ಚಿದೆ. ಸೇದಿದ ಮೊದಲನೆ ಪಫ್ ಖುಷಿ ಕೊಟ್ಟದ್ದು ತಮಾಷೆ ಅನ್ನಿಸಿತು. ಆಚೆ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ಹುಡುಗರನ್ನು ನೋಡಿ ಕಾಲೇಜಿನಲ್ಲಿದ್ದಾಗ ಒಮ್ಮೆ ಸೆಂಚುರಿ ಹೊಡೆದದ್ದು ನೆನಪಿಗೆ ಬಂತು. ಏನಾದರಾಗಲಿ ಈ ಸಲ ದುಲೀಪ್ ಟ್ರೋಫಿ ಫೈನಲ್ಸ್ ನೋಡಬೇಕು ಅಂದುಕೊಂಡೆ.

ವಾಣಿಗೆ ಸರ್‌ಪ್ರೈಸ್ ಮಾಡಬೇಕೆನ್ನಿಸಿತು. ಹಣ್ಣಿನಂಗಡಿಯಲ್ಲಿ ದ್ರಾಕ್ಷೆ ಕೊಂಡೆ. ಹೀಗೆ ಹಣ್ಣು ತಗೆದುಕೊಂಡು ಹೋಗಿ ಎಷ್ಟು ದಿನವಾಯ್ತು ಅಂತ ನೆನಪು ಮಾಡಿಕೊಳ್ಳಲು ಪ್ರಯತ್ನಿಸಿದೆ. ಲೆಕ್ಕ ತಪ್ಪಿತು.

ನನ್ನ ಎಕ್ಸ್‌ಪೆರಿಮೆಂಟ್ ಕ್ಲಿಕ್‌ ಆಯ್ತು. ಮನೆಗೆ ಹೋದ ಕೂಡಲೆ ವಾಣಿ ಆಶ್ಚರ್ಯದಿಂದ ನಗು ತೂರಿದಳು, ನೀಟಾಗಿ ಡ್ರೆಸ್ ಮಾಡಿದ್ದ ಅವಳನ್ನು ನೋಡಿ, “ತುಂಬ ಫ್ರೆಶ್ ಆಗಿ ಕಾಣ್ತಿದೀಯ” ಎಂದೆ.

“ಪ್ರಭುಗಳಿಗೆ ಒಪ್ಪಿಗೆಯಾಯಿತಲ್ಲ, ಧನ್ಯೆ” ಎಂದಳು ಪೋಜು ಕೊಟ್ಟು.
ತಟ್ಟನೆ ನೆನಪಾಯ್ತು. “ಅಂದ ಹಾಗೆ ಕಲಾಕ್ಷೇತ್ರದಲ್ಲಿ ಒಳ್ಳೆಯ ನಾಟಕ ಇದೆ-ಹೋಗೋಣ ನಡಿ” ಎಂದೆ.

ನನ್ನ ಮಾತು ನಂಬದೆ ಪ್ರಶ್ನಿಸಿ ನೋಡಿದಳು.

“ರಾಯರಿಗೆ ಕಲಾಕ್ಷೇತ್ರ ಇರೋದೂ ನೆನಪಿದೆ ಹಾಗಾದ್ರೆ” ಎಂದಳು ವ್ಯಂಗ್ಯವಾಗಿ.

ಅವಳ ಕಡೆ ನೋಡಿದೆ. ಅಷ್ಟು ದಿನದಿಂದಲೂ ಪೇರಿಸಿಟ್ಟ ನೋವು ಚಚ್ಚಿತು, ತಡೆಯಲಾಗಲಿಲ್ಲ. ಅಪ್ಪಿ ಮುತ್ತಿಟ್ಟೆ, ಇನ್ನೂ ಬಿಗಿದುಕೊಂಡೆ ಇದ್ದ ಅವಳನ್ನು ಮತ್ತಷ್ಟು ರಮಿಸಿ ಹೊರಡಿಸಬೇಕಾದರೆ ಸಾಕುಸಾಕಾಯ್ತು.

ನನಗೀಗ ಮೆಲ್ಲನೆ ಪೊರೆ ಕಳಚಿದ ಭಾವನೆ. ಮಗ್ಗುಲಾದ ಅನ್ನಿಸಿಕೆ. ಬಿಚ್ಚಿ ಹರಡಿದ ಮನಸ್ಸು. ತಮ್ಮಿಬ್ಬರ ಮಧ್ಯದ ಪರದೆ ಗೋಪಿಯ ಬಗ್ಗೆ ಅವನ ತೀವ್ರ ಅಸಮಾಧಾನ ಮತ್ತು ಖುಷಿ ಬಯಸುವ ಆವಳ ಸ್ವಾರ್ಥ ತೀರ ಸಮರ್ಪಕವೆನ್ನಿಸುತ್ತೆ, ಮದುವೆಯಾದ ಮೇಲೆ ಹನಿಮೂನಿಗೆ ಹೋಗಬೇಕೆಂದು ಅವಳ ಇಷ್ಟವಿತ್ತು. ಅದರ ಬಗ್ಗೆ ಪ್ರತ್ಯೇಕ ಭಾವನೆಯಿಲ್ಲ. ನಂಬಿಕೆಯಿಲ್ಲವೆಂದು ಸುಳ್ಳು ಹೇಳಿದೆ, ಅದು ಪ್ರಾರಂಭ. ಅನಂತರ ಹೆಚ್ಚು ಕಡಿಮೆ ಅವಳ ಪ್ರತಿಯೊಂದು ಸಲಹೆಗೂ ನನ್ನದು ನೆಗಟಿವ್ ಪ್ರತಿಕ್ರಿಯೆ. ನಾನು ಹೀಗೆ ವರ್ತಿಸಿದ್ದು ನೊಬಿಲಿಟಿಯ ಹಂಬಲದಿಂದಲೇ-ಅರ್ಥವಾಗುವುದಿಲ್ಲ. ಈ ಮೂರು ವರ್ಷಗಳನ್ನು ವ್ಯರ್ಥ ಸಂದಿಗ್ಧದಲ್ಲಿ ಸವೆಸಿದ್ದು ಪೆದ್ದುತನ. ಇವೆಲ್ಲ ಯೋಚನೆಗಳಿಂದ ಇದ್ದಕ್ಕಿದ್ದಂತೆ ಸಂಕಟ ಹೆಚ್ಚಾದರೂ ಈಗ ದೊರಕಿದ ವ್ಯವಧಾನ ಮೈಯಲ್ಲಿ ಚೈತ್ರ ತುಂಬಿಸಿತ್ತು. ಇಷ್ಟಿಷ್ಟ, ಇಷ್ಟಿಷ್ಟೆ, ಅಲ್ಲ ಒಟ್ಟಿಗೆ ಬಕ ಬಕ ನಿಮಿಷಗಳಿಗೆ ಹನಿ ಬೆರೆಸಿ ಮುಕ್ಕಬೇಕೆನ್ನಿಸುತ್ತೆ.

ಆಮೇಲೆ ಮೂರು ದಿನ ಆಫೀಸಿಗೆ ರಜ ಹಾಕಿ ನಂದಿಬೆಟ್ಟಕ್ಕೆ ಹೋಗಿ ಬಂದದ್ದು ಸಾಲ ತೀರಿಸಿದ ಹಾಗೆ. ವಾಣಿ ಈಗ ಪೂರಾ ಎಕ್ಸೈಟ್ ಆಗಿದ್ದಳು. ಅನಂತರ ದಿನಕ್ಕೊಂದು ಬಗೆಯ ಕಾರ್ಯಕ್ರಮ. ಮೆಲ್ಲನೆ ಸುಖದ ಏರ್‌ಕಂಡೀಶನ್ ಅನುಭವ, ಅದರ ಉದ್ವೇಗ ತೀವ್ರತೆಗಳ ಜ್ವರ ಏರುತ್ತಿತ್ತು.

ತಟ್ಟನೆ ಗೋಪಿಯ ನೆನಪಾಗುತ್ತದೆ. ಪ್ಯಾರಾಸೈಟ್ ಥರ ಇರುವ ಅವನಿಗೆ ರಾಮಚಂದ್ರ ಒಂದು ದಾರಿ ಮಾಡಿಕೊಟ್ಟರೆ ಪ್ರಾರಬ್ಧ ತೊಲಗಿದ ಹಾಗೆ; ಪೀಡೆ ಕಳೆದ ಹಾಗೆ ಆದರೂ ಅನುಮಾನ ನುಸುಳಿ ಒಳಗೆ ಸಣ್ಣಗೆ ಆತಂಕದ ಝರಿ.

ರಾಮಚಂದ್ರ ಗೋಪಿಯನ್ನು ಕರೆದುಕೊಂಡು ಹೋಗಿ ಇಪ್ಪತೈದು ದಿನಗಳೊ ಅಥವಾ ತಿಂಗಳೊ ಆಗಿರಬೇಕು. ಆಫೀಸಿನಲ್ಲಿ ಫೈಲುಗಳ ಮಧ್ಯೆ ಮುಳುಗಿದವನಿಗೆ ಸುಬಾನ್ ಹತ್ತಿರ ಬಂದು ಕಾಗದ ಕೊಟ್ಟ. ನೋಡಿದೆ. ಉದ್ವೇಗ ಪುಟಿಯಿತು. ರಾಮಚಂದ್ರನ ಕಾಗದ :… ಓದಿದೆ. ವೆರಿ ಸಾರಿ ಮೈ ಬಾಯ್‌… ಗೋಪೀನ ಈ ದಿನ ಬಸ್ಸಿನಲ್ಲಿ ಕೂಡಿಸಿ ಕಳಿಸ್ತೀನಿ. ಬಸ್ ಸ್ಟ್ಯಾಂಡಿಗೆ ಬಂದು ಕರೆದುಕೊಂಡು ಹೋಗು……ಎಂದು ಬರೆದಿದ್ದ.

ತನ್ನೊಳಗಿನ ಚೈತ್ರದಲೆಗಳು ಉರಿದು ಬೂದಿಯಾಗುವ ಸೂಚನೆ. ಈ ಮೊದಲು ಗೋಪಿಗೆ ಅಟ್ಯಾಕ್ ಆದ ಸಂದರ್ಭಗಳು, ನಂದಿಯ ಟ್ರಿಪ್ ಇತ್ಯಾದಿಗಳು ಪೆರೇಡು ಹೊರಟವು ಮನಸ್ಸಿನಲ್ಲಿ. ಒಂದೆರಡು ಕ್ಷಣ ಸುಮ್ಮನಿದ್ದು ಮತ್ತೆ ಆಫೀಸಿನ ಮಾಮೂಲು ಕಾಗದಕ್ಕೆ ಡ್ರಾಫ್ಟ್ ಹಾಕಲು ಪೆನ್ನು ತೆಗೆದೆ.

Close

ನೆನಪುಗಳು

ನೆನಪುಗಳು

ಜಯಸುದರ್ಶನ

ಒಂದು ವಿಚಿತ್ರ ಹಕ್ಕಿ ಇರುವುದಂತೆ, ಅದು
ಹಿಂದಕ್ಕೆ ಮಾತ್ರ ಹಾರುವುದಂತೆ, ತಲುಪುವುದು
ಎಲ್ಲೆಂಬುದನಗತ್ಯ, ಕಣ್ಣೆದುರೆ ಕಳೆದಿದ್ದ ದಾರಿ
ಮಾಸುವುದು, ಹಿನ್ನೋಟಕ್ಕೆ ಇಲ್ಲ ನೋಟ, ಗುರಿ.

ಸಮಯದ್ದು ಹಾಗಲ್ಲ, ಎಂದೂ ಅದಕ್ಕೆ ಒಂದೇ
ಮುನ್ನೋಟ, ಬಂದ ದಾರಿಯ ಗುರುತಂತು
ಇದೆ, ಪಥವೆಂದು ಇಲ್ಲ, ಇನ್ನು ತಲುಪುವುದೆಂತು,
ಎಲ್ಲಿ ? ಭೂತಕ್ಕೆ ವರ್ತಮಾನವಾಗುವುದೆ ದಂಧೆ.

ನೆನಪುಗಳು ಸೋಜಿಗದ ಹಕ್ಕಿಯ ಹಾಗೆ ವಿರುದ್ಧ
ದಿಕ್ಕಿನಲಿ ಓಡುತ್ತವೆ, ಕಾಲನಿಗು ನೆನಪಿಗು ನಿಷಿದ್ಧ
ಪಥ, ಆದರೂ ನೆನಪಿಗೆ ಗತವ ತಿಳಿಯುವುದಗತ್ಯ.
ಸಮಯಕ್ಕೆ ಮುಂದೆ ಹೋಗುವುದಷ್ಟೇ ಸತ್ಯ.

ಕೇಳುವೆಯ, ನೆನಪಿಗು ಸಮಯಕ್ಕು ಎಂಥ ನಂಟು ?
ನಿಜವೆ, ನೋಟಕ್ಕು ಕಣ್ಣಿಗೂ ನಡುವೆ ಕಾಲ ಉಂಟು.

Close

ಬೆಟ್ಟವೇರಿದ ಮೇಲೆ

ಬೆಟ್ಟವೇರಿದ ಮೇಲೆ

ಸುಬ್ರಾಯ ಚೊಕ್ಕಾಡಿ

೧
ಏರುತ್ತ ಏರುತ್ತ ಏರುತ್ತ ಆಯಾಸ
ವಾದದ್ದು ಕಡಿಮೆಯಾಗುತ್ತ ಖುಶಿಯುಕ್ಕಿ
ಇಲ್ಲಿ ಬಂದು ನಿಂತಾಗ
ಹಲವು ಬೆಟ್ಟಗಳು ನಾಚಿ ಕುಗ್ಗಿ ಹೋದವು.
ನೀಲಿ ಹಚ್ಚಡ ಹೊದ್ದು ಮುದುರಿ ಮಲಗಿಕೊಂಡವು.

ತೃಪ್ತಿಯಲ್ಲಿ ಉಸಿರೆಳೆಯುತ್ತ ನಿಂತು
ಒಂದು ಕಲ್ಲನ್ನೆತ್ತಿ ಕೆಳಗೆಸೆದಾಗ
ಆಳದಲ್ಲೆಲ್ಲೋ ಕಂಪನವುಂಟಾಗಿರಬೇಕು
ನನಗೆ ತಿಳಿಯಲಿಲ್ಲ.
ಆಕಾಶದವಕಾಶದಲ್ಲಿ ತೇಲುವ ಸೂರ್ಯ
ನ ಮಂದ ಕಿರಣಗಳು ಬೆಟ್ಟಗಳ ತಲೆಸವರಿದಾಗ
ದಿಗಂತದಂಚಿನಲಿ ಭಾನುವಿಲ್ಲದ ಬಾನು
ನೆಲದೊಡನೆ ಪ್ರಣಯಕ್ಕೆ ತೊಡಗಿದಾಗ
ನನಗೆ ನಗೆಯೋ ನಗೆ.

ಕೆಳಗೆ ಬಗ್ಗಿ ನಾನು ಹೊರಟ ಸ್ಥಳ : ನನ್ನ ಮನೆ
ಗುರುತಿಸುವ ಪ್ರಯತ್ನ ನಡೆಸಿದೆ
ಗೊತ್ತಾಗಲಿಲ್ಲ. ಆ ಗುಡ್ಡದಾಚಿನ ಆಳವಿರಬಹುದೇ?

ಆ ಅಡಿಕೆಯ ಸೋಗೆಯ ನೆರಳಲ್ಲಿದಬಹುದೇ ?
ಆ ಬಂಡೆಯ ಹಿಂದೆ ದಿಂಡುಗೆಡೆದಿರಬಹುದೇ ?
ಇರಬಹುದು ಎಂದುಕೊಂಡಲ್ಲಿ ಸಂಶಯ ಹುಟ್ಟಿ
ಕ್ಷಣ ಕಸಿವಿಸಿ ಪಟ್ಟೆ.

ವಾಸಂತಿ ಬಂದಿದ್ದಳು ಜತೆಗೆ–ಶ್ಯಾಮಲ ವರ್ಣೆ.
ಮೇಲಿನ ಹಾಗೂ ಕೆಳಗಿನ ನೀಲಿಯ ನಡುವೆ
ಕಾಣದ ಹಾಗೆ ಬೆರೆತು ಮರೆತಂತಾಗಿದ್ದಳು
ದನಿಯೆತ್ತರಿಸಿ ಕೇಳಿದಳು : ಆಕಾಶಕ್ಕಿನ್ನು ಸಮಿಾಪ ಅಲ್ವೇ ?
ಮೋಡ ತುಂಬಿದಾಕಾಶ, ಕೆಳಗಿನಾಳದ ತುಲನಾತ್ಮಕ ಜಾಲದಲ್ಲಿ
ನನಗೂ ಹಾಗೇ ಅನ್ನಿಸಿತ್ತು.

ಬೆಟ್ಟದ ತಲೆ ತುಳಿಯುತ್ತ ಅಲೆದಾಡಿದವು ಖುಶಿಯಲ್ಲಿ.
ಬಂದದ್ದಕ್ಕೆ ನೆನಪಾಗಿ ತುದಿಯಲ್ಲಿ ನಿಶಾನಿ ಕುತ್ತೋಣ ಅಂದಳು.
ಸರಿಯೆನ್ನಿಸಿ ನನ್ನ ಮತ್ತು ಆಕೆಯ ಕರ್ಚೀಫನ್ನೇ ಪತಾಕೆ ಮಾಡಿ
ಬೆಟ್ಟದ ನೆತ್ತಿಯ ಮೇಲೆ ಹಾರಿಸಿದೆವು.
ಮರದ ನೆರಳಲ್ಲಿ ತಂದ ಬುತ್ತಿಯ ಬಿಚ್ಚಿ
ತಿಂದೆವು. ಸಾಕಾಗಲಿಲ್ಲ. ಪರವಾ ಇಲ್ಲ
ಒಂದು ಹೊತ್ತಿಗೆ ಇದೇನು ಮಹಾ ಅಂದುಕೊಂಡು
ಕಾಲು ಚಾಚಿದವು.

ಸೂರ್ಯ ಪಶ್ಚಿಮಕ್ಕೆ ತಿರುಗುತ್ತ ಹೋದ.
ವಾಸಂತಿ ಸುಂದರಳಾಗುತ್ತಾ ಹೋದಳು.
ಬೆಟ್ಟ ಕಾಡು ಬಾನು ಸೂರ್ಯ ಎಲ್ಲ ಮಸುಕಾಗುತ್ತಾ ಹೋಗಿ
ವಾಸಂತಿ ಎಲ್ಲ ಕಡೆ ವ್ಯಾಪಿಸುತ್ತಾ ಹೋದಳು.
ನನ್ನ ಮನಸ್ಸಿನಲ್ಲಿ ಆಶೆ ತಳಮಳ ಹೆಗೆದು ಭುಗಿಲೆದ್ದು ಆಕ್ರಮಿಸುತ್ತ ಹೋಗಿ
ವಾಸಂತಿ ನನ್ನಲ್ಲಿ ಕರಗುತ್ತಾ ಹೋದಳು.
೨
ಎಚ್ಚರಾದಾಗ, ವಾಸಂತಿ ಮೈಮುರಿಯುತ್ತಾ ಎದ್ದಳು,
ಆಕೆಯ ಕಣೆ ಶರೀರದ ತುಂಬ ಒಣಹುಲ್ಲು ಧೂಳು.

ಮೋಡ ಕಳೆದ ಆಕಾಶ, ಪ್ರಶ್ಚಿಮಕ್ಕೆ ತಲುಪಿದ ಸೂರ್ಯ.

ಹೊರಡೋಣವೇ ಎಂದು ಗಡಬಡಿಸಿ ಎದ್ದೆ.
ಬ್ಯಾಗು ಹೆಗಲಿಗೇರಿಸಿ ಹೊರಟೆವು ಮೌನವಾಗಿ
ಬೆಟ್ಟದ ಮೇಲೆ ನಡೆಯುತ್ತಾ ಹೋದೆವು
ಬಂದ ದಾರಿಯ ಹುಡುಕುತ್ತಾ ನಡೆದೆವು.

ಏರುವ ಉಮೇದಿನ ಗಡಿಬಿಡಿಯಲ್ಲಿ ನೆನಪಿಟ್ಟುಕೊಳ್ಳೋದು ಮರೆತಿತ್ತು
ಹುಡುಕುತ್ತಾ ಹೋದೆವು.

ಮೋಡಕಳೆದಾಕಾಶ ನೋಡುತ್ತ ವಾಸಂತಿ ಹೇಳಿದಳು:
ಆಕಾಶ ತುಂಬ ಎತ್ತರಕ್ಕೇರಿದೆ ನೋಡಿ.
ಹೌದೆನಿಸಿತು ನನಗೆ, ಸೂರ್ಯನ ಕಿರಣಕ್ಕೆ ಪಶ್ಚಿಮದ
ಎತ್ತರದ ಹಲವು ಬೆಟ್ಟಗಳು ಕಾಣಿಸಿಕೊಂಡು ನಮ್ಮತ್ತ ನೋಡಿ ನಕ್ಕವು.
ನೆಲೆ ಸೇರುವ ಅರಿವಿನಲ್ಲಿ ಇದೆಲ್ಲ ನುಂಗಿಕೊಂಡು
ಕಾಡಿನ ನಡುವೆ ಹಾದಿ ಹುಡುಕುತ್ತಾ ಹೋದೆವು.

ಅಲೆದು ಅಲೆದು ಇದೀಗ ಸಿಕ್ಕಿತು.
ಅಂದುಕೊಂಡರೆ, ಹೊರಟ ನೆತ್ತಿಗೇ ಮತ್ತೆ ಬಂದಿದ್ದೆವು.
೩
ಹಾಗಾದರೆ ನಾವು ಬಂದ ದಾರಿಯೆಲ್ಲಿ ?
ಹೀಗಾದರೆ ಹೋಗಬೇಕಾದ ದಾರಿಯೆಲ್ಲಿ ?

ಬೆಳಕು ಕೆಂಪಾಗುತ್ತಾ ಬರುತ್ತಿದ್ದಂತೆ ವಾಸಂತಿ
ಭಯದಿಂದ ಮುಲುಗುಟ್ಟಿದಳು. ನನಗೋ ?
ಹೇಳಲಾಗದ ಭಯದ ಗೋಜಲು.

ದಾರಿ ಸಿಕ್ಕೋಲ್ಲ ಅಂದರೇನೇ ? ಇಲ್ಲೆ ಬಾ
ಇದೆ ದಾರಿ–ಅಂದು ಗಟ್ಟಿಯಾಗಿ ಹೇಳುತ್ತಾ ನಕ್ಕೆ.
ನಡೆಯುತ್ತಿದ್ದಂತೆ ಕೆಳನೋಡಿದೆ:
ಕಪ್ಪುಗಟ್ಟುತ್ತಿರುವ ಆಳ. ಆಳ
ದಿಂದೆದ್ದು ಬಂದಂತೆ ಕಾಣಿಸುತ್ತಿರುವ ಬೃಹದಾಕೃತಿಗಳು
ಮೇಲೆ ನೋಡಿದರೆ ಕಪ್ಪಾಗುತ್ತಿರುವ ಆಕಾಶ
ಮರೆಯಾದ ಸೂರ್ಯ.
ಮುನ್ನಡೆದವು.
ಮುನ್ನಡೆದಂತೆ ಕಪ್ಪುಕಾಡು ಹೆಚ್ಚುತ್ತಾ ಹೋಯಿತು
ಪರಸ್ಪರ ತಬ್ಬಿಕೊಳ್ಳುತ್ತ ನಡೆದೆವು ಧೈರ್ಯದಿಂದ.

ಯಾವುದೋ ಸಮ ಪ್ರದೇಶಕ್ಕೆ ಬಂದಂತಾಗಿ
ಕೊಂಚ ನಿರಾಳತೆಯಿಂದ-ಇನ್ನು ಪರವಾ ಇಲ್ಲ.
ಪಾರಾದಂತೆಯೇ, ಸಮಿಾಪ ಮನೆಯಿರಬಹುದು
ಅಂದೆ.
ಅನತಿ ದೂರದಲ್ಲೆಲ್ಲೋ ಏನೋ ಧಡ್ಡನೆ ಬಿದ್ದ ಸದ್ದು.
ಭಯದಲ್ಲಿ ನನ್ನ ಅಪ್ಪಿಕೊಂಡಳು ವಾಸಂತಿ.
ಏನಿರಬಹುದೆಂದು ಕಲ್ಪಿಸುತ್ತಾ, ಘಕ್ಕನೆ ನೆನಪಾಗಿ
ನಿಶಾನಿ ಕಂಭವಿರಬೇಕು. ಆಗಲೇ ತೂಗಾಡ್ತಿತ್ತು
ಅಂದಳು.

ಅಂದ ಮೇಲೆ ಮಾತ್ರ ಎದೆ ಧಡಧಡ ಹೊಡಕೊಳ್ಳಹತ್ತಿತು.
ನಾವಿನ್ನೂ ಬೆಟ್ಟದ ನೆತ್ತಿಯ ಸವಿಾಪದಲ್ಲೆಲ್ಲೋ ಇರಬೇಕು
ಅಂತ ಪಿಸುಗುಟ್ಟಿದಳು ಭೀತಿಯಲ್ಲಿ.
ನನಗೆ ಮಾತು ಬರಲಿಲ್ಲ.
ಮರದ ಬುಡದ ತರಗೆಲೆ ಮೇಲೆ ಕುಳಿತೆ,
ಮಲಗಿದೆ
ವಾಸಂತಿ ಸಮೀಪ ಬಂದು, ಒತ್ತಿ ಮಲಗಿಕೊಂಡಳು.
ಅಪ್ಪಿಕೊಂಡೆವು
ಪ್ರಣಯ ನೆನಪಾಗಲಿಲ್ಲ
ಪಯಣ ನೆನಪಾಗಲಿಲ್ಲ.

Close

ಒಂದು ಕಥನ ಕವನ

ಒಂದು ಕಥನ ಕವನ

ಹಾ ಮು ಪಟೇಲ

ಅರಳ್ಳಿಯಿಂದ ತಿಮ್ಮೇನಹಳ್ಳಿಯ ವರೆಗೆ,
ಬೆಳ್ಳಗಿನ ಟಿನೋಪಾಲ್ ಸೀರೆಯಲ್ಲಿ
ಬೋಡಾಕಳಿನ ಹೋರೀ ಕರದ ಹಾಗೆ
ಜಿಗಿದು ನೆಗೆದಾಡುತ್ತಿದ್ದ ವಿಂಡ್‌ವೈಫ್ ಸಿಸಿಲಿ-
ಅದೇ ಅರಳುತ್ತಿದ್ದ ನನ್ನ ಮತ್ತು
ಮಾರುದ್ರ ಮಾವನ ಕಾಮಕ್ಕೆ ಕಸಿಮಾವು.

ಮುಗಿಲು ಸ್ಖಲಿಸಿದ ದಿವಸ ಲೋಹಿಯಾ ಚಿತ್ರ
ಖುಷಿಪಡುವ, ಹೆಚ್ಚಿನಂಶ ಕತ್ತಲಗೆರೆಯ
ಕೆಂಪು ಹೆಂಚಿನ ಮನೆಗಳಿಂದಲೇ ಕೂಡಿದ
ಕಾರಿಗನೂರಿನಂಥ ರೇಷನಲ್ ಪರಿಸರದಲ್ಲೂ
ಗಂಡಬಿಟ್ಟ ಗಿರಿಜವ್ವ, ಹೇಗಾದರೂ ಒಡಮೂಡಿದಳೋ
ನಾನು ಮಾರುದ್ರ ಮಾವ ತಲೆಕೆಡಿಸಿಕೊಂಡದ್ದುಂಟು.

ಹಡದಿಟ್ಟ ಕೂಳಿನ ಮಿಣಿಸುತ್ತು ಮೈ ಸೆಕ್ಯೂರಿಟಿಗಾಗಿ
ಈ ಗಿರಿಜವ್ವ ಬಾಯಿ ಬಿಚ್ಚಿದರೆ-ಸಿದ್ಧಾರೂಡನ
ಬಿರುಕು ಸಿದ್ಧಾಂತಗಳ ಗುಹ್ಯಾಣುಕೀಟಗಳು.

ನಮ್ಮೂರಿನ ಬರಡೆಮ್ಮೆಗಳ ಮೇಲೆ ಈ ಕೋಣ
ಹಾರಿ, ಸೋಂಕಿನ ಬಸಿರು ಪ್ರಸಾದಿಸುವಲ್ಲಿ
ಕ್ರಿಶ್ಚಿಯನ್ ಸಿಸಿಲಿ ಮೈಯೊಡ್ಡಿದ್ದಾದರೂ ದುರಂತಕ್ಕೇ!

ಬಿಳೀ ರುಮಾಲಿನ ಚಂದ್ರ ಸೂಳೇಮನೆಗೆ ಹೊರಟ
ಹುಣ್ಣಿಮೆಯಂದು ಈ ವಠಾರಕ್ಕೆ ಕೊಂಪೇರ
ತೋಪುಗಳಲ್ಲಿ ಆಧ್ಯಾತ್ಮಿಕ ಹೊರಸಂಚಾರ.
ಈ ವೇಳೆಯಲ್ಲೇ ಇರಬೇಕು-ಬಾಡದ
ಕಾಮುಕ ಈರ ಸಿಸಿಲಿಗೆ ಒಳಸಂಚಾರ ಮಾಡಿದ್ದು.

ರುದ್ರನಂಥ ಎರಡು ಗುಂಡಿಗೆಯ
ಮುದುಕನನ್ನೇ ಹಾಡೇ ಹಗಲು ಚಿಗಳ್ಳದ
ಒರತೆಗಳಲ್ಲಿ ಗೋಣು ಮುರಿದ
ಮುರಿಗೆಪ್ಪನ ಬಾವಿಯ ಬ್ರಹ್ಮರಾಕ್ಷಸ,
ಸಿಸಿಲಿಯಂಥ ಹಸಿ ಬಸುರಿಯಂನ್ನು ಬಿಟ್ಟು
ಹೇಗಾದರೂ ಬದುಕಿತು.

Close

ಗತಿ, ಸ್ಥಿತಿಯ ವಿಮರ್ಶೆಯ ವಿವೇಚನೆ

ಗತಿ ಸ್ಥಿತಿಯ ವಿಮರ್ಶೆಯ ವಿವೇಚನೆ

ಜಾ ಗೋ

ಗಿರಿ ಅವರ “ಗತಿ ಸ್ಥಿತಿ” (ಅಕ್ಷರ ಪ್ರಕಾಶನ, ಸಾಗರ) ಯನ್ನು ಕುರಿತು ನಾನು “ಸಾಕ್ಷಿ -17” ರಲ್ಲಿ ಬರೆದ ವಿಮರ್ಶೆಯು ಈವರೆಗೆ “ಸಾಕ್ಷಿ”ಯ ಪುಟಗಳಲ್ಲಿ ನಾಲ್ಕು ವಿಭಿನ್ನ ರೀತಿಯ ಪ್ರತಿಕ್ರಿಯೆಗಳನ್ನು ಪ್ರಚೋದಿಸಿರುವುದು ಸಂತೋಷದ ಸಂಗತಿ. ಇಲ್ಲಿ ನಾನು ನನ್ನ ವಿಮರ್ಶೆಯನ್ನು ಕುರಿತು “ಸಾಕ್ಷಿ-19* ರಲ್ಲಿ ಶ್ರೀ ಡಿ. ರಘುನಾಥರಾಯರು ತೋರಿಸಿದ ಪ್ರತಿಕ್ರಿಯೆಯನ್ನೂ ಶ್ರೀ ಜಿ. ಎಸ್. ಅವಧಾನಿಯವರು ಎತ್ತಿದ ಕೆಲವು ಅನುಮಾನಗಳನ್ನೂ ಪರಿಶೀಲಿಸಿ ನೋಡುತ್ತೇನೆ.

1.“ಗತಿ, ” ಇದು “ಸಂಸ್ಕಾರ”ದ ನಂತರ ಬಂದ ನಮ್ಮ ಇತ್ತೀಚಿನ ಕಾದಂಬರಿಗಳಲ್ಲಿ ಓದುಗರಲ್ಲಿ ಮತ್ತು ವಿಮರ್ಶಕರಲ್ಲಿ ಅತ್ಯಂತ ತೀವ್ರವಾದ (ಪರವಾಗಿ ಹಾಗೂ ವಿರೋಧವಾಗಿ) ಪ್ರತಿಕ್ರಿಯೆಯನ್ನು ಪ್ರಚೋದಿಸಿದಂಥ ಕಾದಂಬರಿಯಾಗಿದೆ. ಪರಿಸ್ಥಿತಿ ಹೀಗಿರುವಾಗ,”ಗತಿ, ಸ್ಥಿತಿ” ಯನ್ನು ಮೊದಲ ಬಾರಿಗೆ ಓದಿದಾಗಲೇ ಅದೊಂದು ಆಪೂರ್ವ ಕೃತಿ ಎಂದು ಅನಿಸಿದ ಶ್ರೀ ಡಿ. ರಘುನಾಥರಾಯರಿಗೆ ಅದನ್ನು ಕುರಿತ ನನ್ನ ತೀವ್ರವಾದ ಮತ್ತು ಖಚಿತವಾದ ನಿಲುವನ್ನೊಳ್ಳ ವಿಮರ್ಶೆಯನ್ನು ಓದಿ “ಗತಿ, ಸ್ಥಿತಿ” ಯನ್ನು ಮತ್ತೊಮ್ಮೆ ಓದಿದ ನಂತರ ಅವರ ಮೊದಲಿನ ಅನ್ನಿಸಿಕೆಯು ಮತ್ತಷ್ಟು ದೃಢಗಂಡುದನ್ನು ಕೇಳಿ ನನಗೆ ಅಂಥ ಆಶ್ಚರ್ಯವೇನೂ ಆಗಿಲ್ಲವಾದರೂ ತಾವು ಬರೀ ಹೀಗೆ ಘೋಷಿಸಿದ ಮಾತ್ರಕ್ಕೆ ನನ್ನ ವಿಮರ್ಶೆಯ ಲಘುತ್ವವು ತಂತಾನೇ ತಾರ್ಕಿಕವಾಗಿ ಸಿದ್ಧವಾಗುತ್ತದೆ ಎಂದು ಒಂದು ವೇಳೆ ರಘುನಾಥರಾಯರು ತಿಳಿದಿದ್ದರೆ ಮಾತ್ರ ನನಗೆ ಮಹದಾಶ್ಚರ್ಯವಾಗುತ್ತದೆ.

2. ಶ್ರೀ ರಘುನಾಥರಾಯರು “ಶ್ರೀ ಯು. ಆರ್.ಅನಂತಮೂರ್ತಿಯವರು ‘ಈಚಿನ ಸಾಹಿತ್ಯದ ಬಗ್ಗೆ’ ಎಂಬ ಲೇಖನದಲ್ಲಿ (ಸಾಕ್ಷಿ.13), ಶ್ರೀ ಜಿ.ಎನ್.ರಂಗನಾಥರಾಯರು ‘ಗಿರಿ ಅವರ ಗತಿ, ಸ್ಥಿತಿ’ ಎಂಬ ಲೇಖನದಲ್ಲಿ (ಸಂಕ್ರಮಣ-46) ಆ ಕಾದಂಬರಿಯ ಮಹತ್ವವನ್ನು ಸಾಕಷ್ಟು ಚೆನ್ನಾಗಿಯೇ ಗುರುತಿಸಿದ್ದಾರೆ. ಆದರೆ ಜಾಲೀಹಾಳರನ್ನು ಅವರು ನಿರಾಸೆಗೊಳಿಸಿದ್ದಾರೆ” ಎಂದು ಬರೆದಿದ್ದಾರೆ (ಸಾಕ್ಷಿ-19, ಪುಟ: 91). ಆದರೆ ಅವರು ತಮ್ಮ ಈ ಮೇಲಿನ ಹೇಳಿಕೆಯಲ್ಲಿನ ‘ಸಾಕಷ್ಟು ಚೆನ್ನಾಗಿಯೇ ಗುರುತಿಸಿದ್ದಾರೆ’ ಎಂದರೆ ಏನು ಮತ್ತು ಹೇಗೆ ಅನ್ನುವುದನ್ನು ತಮ್ಮ ಲೇಖನದಲ್ಲಿ ಎಲ್ಲಿಯೂ ವಿವರಿಸಿಲ್ಲ, ಹೀಗಾಗಿ ರಘುನಾಥರಾಯರ ಈ ಹೇಳಿಕೆಯು ವಿಮರ್ಶಾತ್ಮಕವಾಗಿ ಅರ್ಥಪೂರ್ಣವೆನ್ನಿಸುವುದಿಲ್ಲ; ಅದು ಕೇವಲ ಅವರ ‘ಅನಿಸಿಕೆ” ಅಷ್ಟೇ ಆಗಿ ಉಳಿಯುತ್ತದೆ.
3. ಮೂರನೆಯದಾಗಿ ರಘುನಾಥರಾಯರು ತೋರಿಸಿರುವ “ಗತಿ, ಸ್ಥಿತಿ” ಇದು ಒಂದು ಅಪಕ್ವ ಕೃತಿಯಾಗಿದೆ ಎಂಬ ಮತ್ತು ಅದು ಒಂದು ಅ-ಸಾಮಾನ್ಯ ಕಾದಂಬರಿಯಾಗಿದೆ ಎಂಬ ನನ್ನ ಹೇಳಿಕೆಗಳಲ್ಲಿನ ಪರಸ್ಪರ ವಿರೋಧಾಭಿಪ್ರಾಯದ ವಿಚಾರ, ನಿಜವಾಗಿ (ಮತ್ತು ಸರಿಯಾಗಿ) ನೋಡಿದರೆ ನನ್ನ ಈ ಎರಡು ಹೇಳಿಕೆಗಳು ಪರಸ್ವರ ವಿರೋಧಿ ಹೇಳಿಕೆಗಳಲ್ಲ, ಯಾಕೆಂದರೆ, ಯಾವುದೊಂದು ಕೃತಿಯು ಅಸಾಮಾನ್ಯ (Extra-ordinary)ವಾಗಿದ್ದೂ ಅಪಕ್ವ (Unripe or Immature) ವಾಗಿರಲು ಸಾಧ್ಯ ಅಸಾಮಾನ್ಯವಾದ ಫಲವೊಂದು ಇನ್ನೂ ಅಪಕ್ವವಾಗಿರುವುದು ಸಾಧ್ಯವಿರುವಂತೆ. ಅಸಾಮಾನ್ಯವಾಗಿದ್ದು ಪಕ್ವವೂ ಆಗಿದ್ದರೆ ಕಲಾಕೃತಿಯು ಲೋಕೋತ್ತರವೆಂದು ಪರಿಗಣಿಸಲ್ಪಡುತ್ತದೆ-ಪಿಕಾಸೋನ ಚಿತ್ರಗಳಂತೆ, ಅಥವಾ ಕಾಮೂ, ಕಾಫ್ಕಾ, ಸಾರ್ತ್ರ ಇವರುಗಳ ಬರೆಹಗಳಂತೆ. ಕಲಾಪಕ್ವತೆಯಿಲ್ಲದೇ ಕೃತಿಯು ಕೇವಲ ಅಸಾಮಾನ್ಯವಾಗಿದ್ದರೆ–ನನ್ನ ಅಭಿಪ್ರಾಯದಲ್ಲಿ “ಗತಿ, ಸ್ಥಿತಿ”ಯು ಆಗಿರುವಂತೆ- ಅದು ಹೆಚ್ಚೆಂದರೆ ಒಂದು ಅದ್ಭುತ ಸಾಧನೆ (a marvel) ಎಂದು ಅನಿಸಿಕೊಳ್ಳುತ್ತದೆ ಮತ್ತು ಆ ಅರ್ಥದಲ್ಲಿ ಮಾತ್ರ ನಮ್ಮ ಮೆಚ್ಚಿಗೆಗೆ ಪಾತ್ರವಾಗುತ್ತದೆ. ಅಷ್ಟೇ.

4. ಇನ್ನು “ಈ ಕಾದಂಬರಿಯಲ್ಲಿ ನಮಗೆ Significant ಅನ್ನಿಸುವ ಅನೇಕ ವಿಷಯಗಳಿವೆ’ ಎಂದು ಪ್ರಾರಂಭವಾಗುವ ನನ್ನ ಲೇಖನದ ಭಾಗದ ವಿಚರ, ಅವನು ಕುರಿತು ಬರೆಯುತ್ತ ರಘುನಾಥರಾಯರು “ಅವರು ಮೇಲೆ ತಿಳಿಸಿರುವ ‘ವಿಷಯ’ಗಳಿ ಗಾಗಿ ಕಾದಂಬರಿ ನನ್ನ ದೃಷ್ಟಿಯಲ್ಲಿ ಮಹತ್ವದ್ದಾಗುವದಿಲ್ಲ. ಒಂದು ಕೃತಿಯ ಪ್ರತಿಯೊಂದು ಅವಯವವೂ ಇಡೀ ಕೃತಿಯ ಒಟ್ಟಿಗೆ ಸಂಗತವಾಗಿರಬೇಕು ; ಕೃತಿಯ ಕೇಂದ್ರಾರ್ಥವನ್ನು ಹೊರ ಹೊಮ್ಮಿಸಲು ಆವಶ್ಯಕವಾಗಿರಬೇಕು. ಒಂದು ವಾಕ್ಯ.ಒಂದು ವರ್ಣನೆ ಕೆಲವು ವಿಚಾರಗಳು-ಪ್ರತಿಮೆಗಳು ಚೆನ್ನಾಗಿದರೆ ಸಾಲದು, ಒಂದು ವೇಳೆ ಅಷ್ಟೇ ಇದ್ದರೆ, ಅಂಥಾ ರಚನೆಗಳನ್ನು ಒಳ್ಳೆಯ ಕೃತಿಗಳೆಂದು ಒಪ್ಪುವುದಕ್ಕೆ ಆಗುವದಿಲ್ಲ” ಎಂದಿದ್ದಾರೆ. ಹೌದು (ಈ ಥಿಯರಿ ನನಗೆ ಗೊತ್ತಿದೆ ಮತ್ತು ಸಮ್ಮತವೂ ಇದೆ): ಆದ್ದರಿಂದಲೇ “ಗತಿ, ಸ್ಥಿತಿ ಇದು ಒಂದು ಉತ್ತಮ ಕಲಾಕೃತಿ ಎಂದು ನಾನು ತಿಳಿದಿಲ್ಲ.

5.“ಇಡೀ ಕಾದಂಬರಿ ಆಧುನಿಕ ಸಂವೇದನೆಗೆ ಒಂದು ಪ್ರತಿಮೆಯಾಗಿದೆ” ಅನ್ನುವ ರಘುನಾಥರಾಯರ ಮಾತು ಬಹಳೇ ಜನರಲ್ (General) ಮತ್ತು ವ್ಹೇಗ್ (Vague) ಆಗುತ್ತದೆ. ಮತ್ತೊಂದೆಂದರೆ, ಕಾದಂಬರಿಯು ಒಂದು ಒಳ್ಳೆಯ ಕಲಾಕೃತಿ ಎಂದೆನಿಸಳ್ಳಬೇಕಾದರೆ ಅದು ಮುಖ್ಯವಾಗಿ ಹಾಗೂ ಸಮಂಜಸವಾಗಿ ಪ್ರತಿಮೀಕರಿಸಬೇಕಾದ್ದು ಅದರಲ್ಲಿನ ಮುಖ್ಯ ಪಾತ್ರಗಳ ವೈಯಕ್ತಿಕ ಸಂವೇದನೆ (ಅದು ಆಧುನಿಕವಾಗಿರಬಹುದು, ಸಾಂಪ್ರದಾಯಿಕವಾಗಿರಬಹುದು, ಇಲ್ಲವೇ ಸಂಮಿಶ್ರವಾದದ್ದೂ ಆಗಿರಬಹುದು) ಯನ್ನು, ಕೇವಲ ಸಾಮಾಜಿಕ ಸಂವೇದನೆಯನ್ನಲ್ಲ. “ಗತಿ, ಸ್ಥಿತಿ”ಯು ನಮ್ಮ ಆಧುನಿಕ ನಗರ-ಜೀವನದ ಸಂವೇದನೆಯನ್ನು ಸಾಮಾಜಿಕ ಸ್ತರದಲ್ಲಿ ಚೆನ್ನಾಗಿ ಚಿತ್ರಿಸಿದೆಯಾದರೂ ಆ ಸಂವೇದನೆಯನ್ನು ‘ಆತ’ನ ವ್ಯಕ್ತಿತ್ವದ ಒಳಾವರಣದಲ್ಲಿ, ಆತನ ವೈಯಕ್ತಿಕ ಪರಿಸರ ಮತ್ತು ಸಮಸ್ಯೆಗಳ ಹಿನ್ನೆಲೆಯಲ್ಲಿ ಸಮಂಜಸವಾಗಿ ಮತ್ತು ಸಂಭವನೀಯ (plausible) ವಾಗಿ ಚಿತ್ರಿಸುವ ಕೆಲಸದಲ್ಲಿ ಯಶಸ್ವಿಯಾಗಿಲ್ಲ, ಇದೇ “ಗತಿ, ಸ್ಥಿತಿ” ಯನ್ನು ಕುರಿತ ನನ್ನ ಮುಖ್ಯ ಆಕ್ಷೇಪ

6. ರಘುನಾಥರಾಯರ ಅಭಿಪ್ರಾಯದಲ್ಲಿ (ಸಾಕ್ಷಿ-19, ಪುಟ, 95) ‘ಆತ’ನು ಕಾದಂಬರಿಯ ಕೇಂದ್ರದಲ್ಲಿದ್ದರೂ ‘ಆತ’ನೇ ಕಾದಂಬರಿಯ ಕೇಂದ್ರ-ವಸ್ತು ಅಲ್ಲ, ಅವರ ಪ್ರಕಾರ “ಆಧುನಿಕ ನಗರ ಜೀವನದ ಸ್ಥಿತಿಯೇ ಈ ಕಾದಂಬರಿಯ ಮುಖ್ಯ ವಸ್ತು.” ಆದರೆ ನನ್ನ ಅಭಿಪ್ರಾಯವಲ್ಲಿ ‘ಆತ’ನ ಸಂವೇದನೆಯೇ ಕಾದಂಬರಿಯ ಮುಖ್ಯ ವಸ್ತು; ಆಧುನಿಕ ನಗರ ಜೀವನದ ಸ್ಥಿತಿಯು ಆತನ ಸಂವೇದನೆಯ ಒಂದು ಸ್ವಾಭಾವಿಕವಾದ ಮತ್ತು ವಿಭಾಜ್ಯವಾದ ಪರಿಸರ ಮತ್ತು ಅಂಗ, ಅಷ್ಟೇ,

ಕಾದಂಬರಿಯನ್ನು ನೋಡುವ ದೃಷ್ಟಿಕೋನದ ವಿಷಯದಲ್ಲಿಯೇ ನನಗೂ ಹಾಗೂ ರಾಯರಿಗೂ**** ಭಿನ್ನಾಭಿಪ್ರಾಯವಿರುವಾಗ ಅವರಿಗೂ ನನಗೂ ಈ ಕಾದಂಬ
-ಮಾಪನದ ವಿಷಯದಲ್ಲಿ ಇಷ್ಟೊಂದು ಭಿನ್ನಾಭಿಪ್ರಾಯ ಉಂಟಾದುದ ಇಲ್ಲ.

ಇನ್ನು “ಗತಿ, ಸ್ಥಿತಿ ಯನ್ನು ಕುರಿತ ನನ್ನ ವಿಚಾರಗಳ ಬಗ್ಗೆ ಶ್ರೀ ಜಿ.ಎಸ್.ಅವಧಾನಿ ಯವರಿಗೆ ಬಂದಿರುವ ಐದು ಅನುಮಾನಗಳ (ಸಾಕ್ಷಿ-19, ಪುಟ 103) ವಿಷಯ ತಮ್ಮ ಲೇಖನಕ್ಕೆ “ಐದು ಅನುಮಾನಗಳು” ಎಂಬ ಶೀಷಿಕೆಯನ್ನು (ಅಥವಾ ಉಪ-ಶೀರ್ಷಿಕೆಯನ್ನು) ಅವಧಾನಿಯವರು ಕೊಟ್ಟಿದ್ದರೂ ಲೇಖನದಲ್ಲಿ “ಗತಿ, ಸ್ಥಿತಿ” ಯನ್ನು ಕುರಿತ ನನ್ನ ಅಭಿಪ್ರಾಯಗಳಿಂದ ಭಿನ್ನವಾದ ಮತ್ತು ಕೆಲವು ಸಲ ಅವುಗಳಿಗೆ ವಿರುದ್ಧವಾದ ತಮ್ಮ ಖಚಿತವಾದ ಅಭಿಪ್ರಾಯಗಳನ್ನು ಅವರು ಕೊಟ್ಟಿದ್ದಾರಾದ್ದದರಿಂದ ಕೇವಲ “ಐದು ಅನುಮಾನಗಳು” ಎಂದು ಅವಧಾನಿಯವರು ತಮ್ಮ ಲೇಖನಕ್ಕೆ ಹೆಸರಿಟ್ಟದುದು ಒಂದೋ ಅವರ “ಅತಿ-ವಿನಯ’ವನ್ನು, ಇಲ್ಲವೆ ‘ಅನುಮಾನ ಮತ್ತು ಭಿನ್ನಾಭಿಪ್ರಾಯ’ ಇವುಗಳ ನಡುವಿನ ಅಂತರದ ಬಗ್ಗೆ ಅವರಿಗಿರುವ ಅಜ್ಞಾನವನ್ನು ತೋರಿಸುತ್ತದೆ, ಮತ್ತು ಮುಂದೆ ಅವರು “ಇಷ್ಟಾಗಿಯೂ ಜಾ.ಗೋ. ಅವರ ಲೇಖನವನ್ನೋದಿದ ನಂತರ ಕೆಲವು ಸಂದೇಹಗಳು ಹಾಗೇ ಉಳಿದವು, ಅಥವಾ ಹುಟ್ಟಿಕಂಡವು ಇವು ಪ್ರೌಢ ವಿಮರ್ಶಕ ಪ್ರಜ್ಞೆಗೆ ತೀರ ಬಾಲಿಶ ಗುಮಾನಿಗಳಾಗಿ ಕಂಡರೂ ನನ್ನಂಥ ತರುಣ ಸಾಹಿತ್ಯಾಭ್ಯಾಸಿಗೆ ತೊಡಕಾಗಿ–ನಿವಾರಣೆಯನ್ನ, ವಿವರಣೆಯನ್ನ ತಿಳಿದವರಿಂದ ಬಯಸುವುದೇನೊ ಅಸಹಜವಲ್ಲವಷ್ಟೇ ?” ಎಂದು ಕೇಳುವಲ್ಲಿ ಅವರಲ್ಲಿನ ಅತಿ ವಿನಯ’ವು ಮತ್ತಷ್ಟು ‘ಅತಿ’ ಆಗುತ್ತದಲ್ಲದೆ ವ್ಯಂಗ್ಯ ಮತ್ತು ಕುಚೋದ್ಯ (*) ಗಳೊಂದಿಗೆ ತನ್ನ ಒಳ-ಸಖ್ಯವನ್ನು ಬೆಳೆಸುತ್ತದೆ, ಇಂಥ “ತರುಣ ಸಾಹಿತ್ಯಭ್ಯಾಷಿ”‘ ಮಿತ್ರರಾದ ಶ್ರೀ ಅವಧಾನಿಯವರಿಗೆ ಪ್ರಾರಂಭದಲ್ಲೇ ನನ್ನ ಧನ್ಯವಾದಗಳನ್ನರ್ಪಿಸಿ ಅವರ ಕೆಲವು “ಅನುಮಾನ” ಗಳನ್ನು ಇಲ್ಲಿ ಪರಿಶೀಲಿಸಿ ನೋಡುತ್ತೇನೆ.

ಅನುಮಾನ – 1

ಹೌದು, ವಸ್ತು ಮತ್ತು ತಂತ್ರಗಳು ಅವಿನಾಭಾವಿ-ಅರ್ಥಾತ್‌ ಯಶಸ್ವಿ ಕಲಾಕೃತಿಯಲ್ಲಿ, ಆದರೆ “ಗತಿ, ಸ್ಥಿತಿ” ಯಲ್ಲಿ ಈ ಅವಿನಾಭಾವ ಎಷ್ಟರ ಮಟ್ಟಿಗೆ ಸಾಭಿತವಾಗಿದೆಯೆನ್ನುವುದು ಇನ್ನೂ ಕೂಲಂಕಷವಾಗಿ ಚರ್ಚಿಸಲ್ಪಡಬೇಕಾಗಿರುವ ವಿಷಯ, ಅದನ್ನು ಅವಧಾನಿಯವರು ಮಾಡಿರುವಂತೆ ಗ್ರಹೀತವೆಂದು ತೆಗೆದುಕೊಳ್ಳಲಿಕ್ಕಾಗುವುದಿಲ್ಲ. ನನಗನಿಸುವಂತೆ, ಕಾದಂಬರಿಯಲ್ಲಿ ಮುಖ್ಯ ವಸ್ತುವಿನ-ಎಂದರೆ ‘ಆತ’ನ ಪ್ರಜ್ಞೆ- ಪರಿಸರ-ಸಂವೇದನೆಗಳ-ಓಟಕ್ಕಿಂತ ಹೆಚ್ಚು ಭರಾಟೆಯ ಓಟವು ಮತ್ತು ವಸ್ತುವಿನ ಸಂಕೀರ್ಣತೆಗಿಂತ ಹೆಚ್ಚಿನ ಸಂಕೀರ್ಣತೆಯು ಅವರ ತಂತ್ರಕ್ಕೆ ಮತ್ತು ಶೈಲಿಗೆ ಬಂದು ಬಿಟ್ಟಿದೆ, ಹೀಗಾಗಿ ಅವೆರಡರಲ್ಲಿ ಅವಿನಾ-ಸಂಬಂಧ ಏರ್ಪಟ್ಟಿಲ್ಲ. ಆದರೆ ಈ ವಿಷಯ ದಲ್ಲಿ ಇನ್ನೂ ಹೆಚ್ಚಿನ ವಿವೇಚನೆ ಅಗತ್ಯ,

ಅನುಮಾನ – 2

ಹಿಂದಿ ಸಾಹಿತ್ಯ ಕೃತಿಯ ಭಾಷೆಯಲ್ಲಿ ಸೂಚ್ಯತೆ, ಆಳ, ಧ್ವನಿತ್ವ ಈ ಗುಣಗಳು ಇಲ್ಲದೇ ಇದ್ದಾಗ್ಯೂ ಅದರಲ್ಲಿರಬಹುದಾದ ಇನ್ನಿತರ ಕೆಲವು ಗುಣವಿಶೇಷಗಳಿಂದಾಗಿ (ಉದಾ : ನಿರಲಂಕಾರಿಕತೆ, ನೇರತನ ಪಾರದರ್ಶಕ ಗುಣ, ಅಭಿನಯ ಗುಣ, ವ್ಯಂಗ್ಯ, ವಸ್ತು ನಿಷ್ಠತೆ ಇತ್ಯಾದಿಗಳಿಂದಾಗಿ) ಆ ಕೃತಿಯು (“ಗತಿ, ಸ್ಥಿತಿ”ಯು ಮಾಡುವಂತೆ) ಓದುಗರಲ್ಲಿ ಆಸಕ್ತಿಯನ್ನು” ಮತ್ತು “ಅನುಭವವನ್ನು ಉಂಟುಮಾಡುವ ಸಾಧ್ಯತೆ ಇದೆ ಅನ್ನುವುದನ್ನು ಅವಧಾನಿಯವರು ಗಮನಿಸಬೇಕು.

ಅನುಮಾನ – 3

ಆ ಊರಿನ ಜೀವನ ‘ಆತ’ನಿಗೆ ಮತ್ತು ‘ಆಕೆ’ಗೆ (ಬರೀ ಓದುಗರಿಗಲ್ಲ) ಉಸಿರುಗಟ್ಟಿಸುವಂತಾಗಿದ್ದರಿಂದಲೇ ಅವರಿಬ್ಬರೂ ಆ ಊರನ್ನು ಬಿಟ್ಟು ಓಡಿ ಬಂದಿರುವರಾದರೂ ಆ ದಾರುಣ ಅನುಭವಕ್ಕೆ ಅಥವಾ ಅದರ ಸ್ಮೃತಿಗೆ ಸಂಬಂಧಿಸಿದಂತೆ ‘ಆತ’ನಿಗೆ ಏನೂ ಆನಿಸುವದೇ ಇಲ್ಲ, ಕಾದಂಬರಿಕಾರರು ಹೇಳುವಂತೆ “ಬರೀ ಘಟನೆಗಳೇ ಮರುಕಳಿಸುತ್ತವೆ” ಎಂದು ಹೇಳುವುದು ಸಾಮಾನ್ಯ ಮಾನವರ (ಅವರು ಎಷ್ಟೇ ವಿಕ್ಷಿಪ್ತ ಮನಃಸ್ಥಿತಿಯಲ್ಲಿದ್ದರೂ) ಅನುಭವಕ್ಕೆ ‘ಸಾಚಾ’ ಆಗದಂಥ ಮಾತು, ಇನ್ನು ಶ್ರೀ ಅವಧಾನಿಯವರೇ ಆಗಲಿ, ಅಥವಾ ಕಾದಂಬರಿಕಾರರೇ ಆಗಲಿ ‘ಆತ’ ಒಬ್ಬ ಸಾಮಾನ್ಯ ಮಾನವನೇ ಅಲ್ಲ ; ಗೀತೆಯ ‘ಸ್ಥಿತಪ್ರಜ್ಞ’ನಂತೆ ಎಲ್ಲ ಅನುಭವಗಳಿಂದ ಮತ್ತು ಎಲ್ಲ ಭಾವನೆಗಳಿಂದ ನಿರ್ಲಿಪ್ತನಾದ ಒಬ್ಬ ನರೋತ್ತಮ ಅನ್ನುವುದಾದರೆ ಮಾತೇ ಮುಗಿಯಿತು, ಅದರ ಮಂದ ನನ್ನ ವಾದವಿಲ್ಲ.

ಅನುಮಾನ – 4

ಇಲ್ಲಿ ಮಾತ್ರ ಅವಧಾನಿಯವರ ಅನುಮಾನ ಸ್ವಲ್ಪ ಸರಿಯಾಗಿದೆ, ಅವರು ಉದ್ಧರಿಸಿರುವ ನನ್ನ ಹೇಳಿಕೆಯು (ಸಾಕ್ಷಿ-19; ಪುಟ: 105) ಕಾದಂಬರಿಯಲ್ಲಿ ‘ಆತ’ನ ಪಾತ್ರ ಚಿತ್ರಣ ಬಹಳೇ ಹಗುರವಾಗಿದೆ ಎಂಬ ಅರ್ಥವನ್ನು ಒಂದು ವೇಳೆ ಯಾರಿಗಾದರೂ ಕೊಡುತ್ತಿದ್ದರೆ ಅದಕ್ಕಾಗಿ ನಾನು ವಿಷಾದಿಸುತ್ತೇನೆ, ಆ ನನ್ನ ಹೇಳಿಕೆಯ ಅರ್ಥ “ಯಾವ ದೃಷ್ಟಿಯಿಂದ ನೋಡಿದರೂ ಒಟ್ಟಿನಲ್ಲಿ ಆತನ ಪಾತ್ರಚಿತ್ರಣ ಅಸಮಂಜಸ” ಎಂಬುದಾಗಿದೆ, “ಪಾತ್ರಸೃಷ್ಟಿ ಹಗುರವಾಗಿದೆ” ಅನ್ನುವುದಕ್ಕೂ “ಪಾತ್ರ ಸೃಷ್ಟಿ ಅಸಮಂಜಸ ವಾಗಿದೆ” ಅನ್ನುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆಯಲ್ಲವೇ ಅವಧಾನಿಯವರೇ ?

ಅನುಮಾನ – 5
ಅವಧಾನಿಯವರ ಪ್ರಕಾರ ಎಲ್ಲರೂ ತಿಳಿದಂತ-ಫೋಟೋಗ್ರಾಫರನಂತೆ ಅಥವಾ ವ್ಯಾಖ್ಯಾನಕಾರನಂತೆ ಯಥಾಸ್ಥಿತಿಯ ಕ್ಲಿಕ್ ಮಾಡುವುದಷ್ಟೇ ಅಥವಾ ನೋಡುವುದಷ್ಟೇ ‘ಆತ’ನ ಕೆಲಸವಾದ್ದರಿಂದ ಸಾಮಾಜಿಕವೊ, ಅ-ಸಾಮಾಜಿಕವೊ ಇಲ್ಲವೆ ವೈಯಕ್ತಿಕವೊ, ಸಾಮಾಜಿಕವೋ ಎನ್ನುವ ಪ್ರಶ್ನೆಯೇ ಏಳುವದಿಲ್ಲ ಅನ್ನುವುದಾದರೆ “ಗತಿ, ಸ್ಥಿತಿ” ಇದು ಬರೀ ಒಂದು ಫೋಟೋಗ್ರಾಫಿಕ್ ಕ್ಯಾಮೆರಾ ಎಂದೋ, ಅಥವಾ ಒಂದು ರನಿಂಗ್ ಕಾಮೆಂಟರಿಯ ಸ್ಮಾಂಡು ಎಂದು ನಾವೆಲ್ಲರೂ ತಿಳಿಯಬೇಕಾಗುತ್ತದಲ್ಲ?

[‘ಗತಿ, ಸ್ಥಿತಿ’ಗೆ ಸಂಬಂಧಪಟ್ಟ ಹಾಗೆ ನಡೆದ ವಾದವಿವಾದಗಳ ಸರಣಿಯಲ್ಲಿ ಇದೇ ಕೊನೆಯ ಲೇಖನ
-ಸಂಪಾದಕ ‘ಸಾಕ್ಷಿ]

Close
By kanaja|2021-01-06T19:33:22+05:30April 27, 2018|ಕನ್ನಡ|0 Comments

ಈ ವಿಷಯವನ್ನು ಆಸಕ್ತರೊಂದಿಗೆ ಹಂಚಿಕೊಳ್ಳಿ ​!! ನಿಮ್ಮ ಉಪಕರಣವನ್ನು ಆಯ್ಕೆ ಮಾಡಿ

FacebookTwitterLinkedInRedditWhatsAppTumblrPinterestVkXingEmail

About the Author: kanaja

Related Posts

  • ಸಂಪುಟ-೩೪

    ಸಂಪುಟ-೩೪

  • ಸಂಪುಟ-೩೩

    ಸಂಪುಟ-೩೩

  • ಸಂಪುಟ-೩೨

    ಸಂಪುಟ-೩೨

  • ಸಂಪುಟ-೩೧

    ಸಂಪುಟ-೩೧

Leave A Comment Cancel reply

ವಿಭಾಗಗಳು

ಹೊಸ ಅಂಕಣಗಳು

  • ನಮ್ಮ ಜೀವನದಲ್ಲಿ ವೈರಾಣುಗಳ ಪಾತ್ರ
  • ಜೀವ-ನಿರ್ಜೀವ ಲೋಕಗಳ ನಡುವಿನ ಕೊಂಡಿ – ವೈರಾಣುಗಳು
  • ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆ
  • ಸೂಕ್ಷ್ಮಾಣುಜೀವಿಗಳ ಲೋಕದ ತೀವ್ರವಾದಿ – ಆರ್ಕಿಯ
  • ಮಕ್ಕಳ ಮೇಲೆ ಸೈಬರ್ ಅಪರಾಧಿಗಳ ದೌರ್ಜನ್ಯ

ಕನ್ನಡ ಭಾಷೆ,ಸಾಹಿತ್ಯ

  • ಸಂಪುಟ-೩೪
  • ಸಂಪುಟ-೩೩
  • ಸಂಪುಟ-೩೨
  • ಸಂಪುಟ-೩೧
  • ಸಂಪುಟ-೩೦

ಕಲೆ,ಸಂಗೀತ

  • ರಂಗ ವಿಮರ್ಶೆಯ ಬೆನ್ನು ಹತ್ತಿ..
  • ರಂಗಭೂಮಿಯೊಂದೇ ಸಮತಾವಾದದ ಪ್ರತೀಕ
  • ರಂಗಭೂಮಿಯ ನಡಿಗೆ
  • ರಂಗ ಪರದೆಗಳು : ಶಬ್ದಪಾರಮಾರ್ಗಮಶಕ್ಯಂ
  • ರಂಗ ಪರದೆಗಳು : ರಂಗ ಪರದೆಗಳ ಹಿನ್ನೆಲೆ

ವಿಜ್ಞಾನ , ತಂತ್ರಜ್ಞಾನ

  • ನಮ್ಮ ಜೀವನದಲ್ಲಿ ವೈರಾಣುಗಳ ಪಾತ್ರ
  • ಜೀವ-ನಿರ್ಜೀವ ಲೋಕಗಳ ನಡುವಿನ ಕೊಂಡಿ – ವೈರಾಣುಗಳು
  • ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆ
  • ಸೂಕ್ಷ್ಮಾಣುಜೀವಿಗಳ ಲೋಕದ ತೀವ್ರವಾದಿ – ಆರ್ಕಿಯ
  • ಮಕ್ಕಳ ಮೇಲೆ ಸೈಬರ್ ಅಪರಾಧಿಗಳ ದೌರ್ಜನ್ಯ

ಕೃಷಿ ,ರೈತರ ಅನುಭವ

  • ಅಂತಾರಾಷ್ಟ್ರೀಯ ಬೇಳೆಕಾಳು ವರ್ಷ: 2016
  • ಪದವಿನ್ಯಾಸ: ೧೨. ಸನಿಕೆ
  • ಪದವಿನ್ಯಾಸ: ೧೩. ಈಚು
  • ಪದವಿನ್ಯಾಸ: ೧೪. ಕಣಜ
  • ಪದವಿನ್ಯಾಸ: ೯. ಬೆಳೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ

http://www.kannadasiri.in

ಇತ್ತೀಚಿನ ಟ್ವೀಟ್‌ಗಳು

Tweets by KannadaKanaja

ಫೇಸ್ಬುಕ್ ಅಲ್ಲಿ ನಮ್ಮನ್ನು ಸಂಪರ್ಕಿಸಿ

ಇತ್ತೀಚಿನ ಕೃತಿಗಳು

ನಿಮ್ಮ ಇಮೇಲ್ ವಿಳಾಸವನ್ನು ನಮೂದಿಸಿ:

ಕೃತಿಸ್ವಾಮ್ಯ 2012 - 2017 ಕಣಜ | ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ |
ಕಣಜ ಯೋಜನೆಯ ಅಧಿಕೃತ ವಿಳಾಸ:
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇ-ಕನ್ನಡ ವಿಭಾಗ, ಮೊದಲನೆಯ ಮಹಡಿ, ಕನ್ನಡ ಭವನ ಜಯಚಾಮರಾಜೇಂದ್ರ ಒಡೆಯರ್ ರಸ್ತೆ,
ಬೆಂಗಳೂರು- 560 002 ದೂರವಾಣಿ: 080-22227478 /22212487, ಮಿಂಚಂಚೆ (ಇ-ಮೇಲ್) - developkanaja@gmail.com

ಸರ್ಕಾರದ ಸಂಪರ್ಕ ಕೈಪಿಡಿ | ಮಹತ್ವದ ಜಾಲತಾಣಗಳು | ಇ ಆಡಳಿತ ಜಾಲತಾಣ  | ಇ-ಸೇವೆಗಳು | ಸಾಮಾನ್ಯ ಅಂಕಿ ಅಂಶ | ಸರ್ಕಾರದ ಆ್ಯಪ್ ಗಳು | ಕೇಂದ್ರ ಸರ್ಕಾರದ ಜಾಲತಾಣಗಳು | ತಾಂತ್ರಿಕ‌ ಜಾಲತಾಣಗಳು | ಕನ್ನಡ ಸಂಬಂಧಿ ಜಾಲತಾಣಗಳು | ಆಯೋಗಗಳು | ನ್ಯಾಯಾಲಯಗಳು | ಡೌನ್‌ಲೋಡ್‌ಗಳು | ಪ್ರವಾಸಿ ಜಾಲತಾಣಗಳು | ಸಾರ್ವತ್ರಿಕ ರಜೆಗಳು

FacebookTwitterInstagramPinterest
Toggle Sliding Bar Area

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Email: developkanaja@gmail.com

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

E-ದಿನ

  • ಗಾಂಧೀ ೧೫೦
  • ನಮ್ಮ ಜೀವನದಲ್ಲಿ ವೈರಾಣುಗಳ ಪಾತ್ರ
  • ಜೀವ-ನಿರ್ಜೀವ ಲೋಕಗಳ ನಡುವಿನ ಕೊಂಡಿ – ವೈರಾಣುಗಳು
  • ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆ
  • ಸೂಕ್ಷ್ಮಾಣುಜೀವಿಗಳ ಲೋಕದ ತೀವ್ರವಾದಿ – ಆರ್ಕಿಯ

ಇತ್ತೀಚಿನ ಕೃತಿಗಳು

ಮಹತ್ವದ ಜಾಲತಾಣಗಳು


  • ವೆಬ್-ಡೈರೆಕ್ಟರಿ


  • ರಾಜ್ಯಪಾಲರ ಕಚೇರಿ


  • ಮುಖ್ಯಮಂತ್ರಿ ಕಚೇರಿ


  • ವಿಧಾನಸಭೆ


  • ವಿಧಾನ ಪರಿಷತ್ತು


  • ಮುಖ್ಯ ಕಾರ್ಯದರ್ಶಿ

ಇ ಆಡಳಿತ ಜಾಲತಾಣ


  • ಸಿ.ಇ.ಜಿ


  • ವೆಬ್ ಪೋರ್ಟಲ್


  • ಆಧಾರ್


  • ಇ-ಆಫೀಸ್


  • ಇ-ಪ್ರೊಕ್ಯೂರ್ಮೆಂಟ್


  • ಎಚ್‌ಆರ್‌ಎಂಎಸ್


  • ಕೆ.ಆರ್.ಡಿ.ಎಚ್


  • ಕೆ.ಎಸ್.ವಾನ್


  • ಡಿ.ಪಿ.ಎ.ಆರ್


  • ಕೆ.ಎಸ್.ಡಿ.ಸಿ

ಇ-ಸೇವೆಗಳು


  • ಸಕಾಲ


  • ಸೇವಾ ಸಿಂಧು


  • ಇ-ಗೆಜೆಟ್


  • ಆನ್‌ಲೈನ್ ಆರ್‌ಟಿಐ


  • ಇ-ಸ್ಪಂದನ


  • ಮಾಹಿತಿ ಕಣಜ

ಸಾಮಾನ್ಯ ಅಂಕಿ ಅಂಶ


  • ಇ-ಪ್ರಗತಿ


  • ಇ-ತಾಲ್


  • ಡೇಟಾ


  • ಕರ್ನಾಟಕ ಗೆಜೆಟ್


  • ಸಿಎಂ ಡ್ಯಾಶ್‌ಬೋರ್ಡ್

ಸರ್ಕಾರದ ಆ್ಯಪ್ ಗಳು


  • ಬಿಎಂಟಿಸಿ


  • ಭೂಮಿ


  • ಇ-ಸೆವಾಯ್ ಕರ್ನಾಟಕ


  • ಡಿಶ್ಯಾಂಕ್


  • ಕೆ.ಎಸ್.ಆರ್.ಟಿ.ಸಿ.


  • ಗ್ರಾಮ ಪಂಚಾಯಿತಿ


  • ಕರ್ನಾಟಕ ರಾಜ್ಯ ಪೊಲೀಸ್


  • ಎಲ್ಲಾ ವೀಕ್ಷಿಸಿ...

ಕೇಂದ್ರ ಸರ್ಕಾರದ ಜಾಲತಾಣಗಳು


  • ಸಂಸತ್ತು


  • ರಾಷ್ಟ್ರಪತಿ ಕಚೇರಿ


  • ಪ್ರಧಾನ ಮಂತ್ರಿಗಳ ಕಚೇರಿ


  • ಪಾಸ್ಪೋರ್ಟ್ ಸೇವಾ


  • Aadhaar


  • Karnataka Bhavan

ತಾಂತ್ರಿಕ‌ ಜಾಲತಾಣಗಳು


  • ಸಿ.ಡಿ.ಎ.ಸಿ


  • ಎನ್ಐಸಿ


  • ಎಸ್.ಟಿ.ಕ್ಯೂ.ಸಿ

ಕನ್ನಡ ಸಂಬಂಧಿ ಜಾಲತಾಣಗಳು


  • ಕನ್ನಡ ಮತ್ತು ಸಂಸ್ಕೃತಿ ಇಲಾಖೆ


  • ಕನ್ನಡ ಸಾಹಿತ್ಯ ಪರಿಷತ್ತು


  • ಕಣಜ


  • ಕನ್ನಡ ಅಭಿವೃದ್ಧಿ ಪ್ರಾಧಿಕಾರ


  • ಇ-ಕನ್ನಡ

ಆಯೋಗಗಳು


  • ಮಾನವ ಹಕ್ಕು ಆಯೋಗ


  • ವಿದ್ಯುತ್ ಆಯೋಗ


  • ಜ್ಞಾನ ಆಯೋಗ


  • ಚುನಾವಣಾ ಆಯೋಗ


  • ಇ-ಕನ್ನಡ


  • ಕರ್ನಾಟಕ ಕಾನೂನು ಪ್ರಾಧಿಕಾರ


  • ಮಕ್ಕಳ ಹಕ್ಕುಗಳ ಆಯೋಗ


  • ಮಹಿಳಾ ಆಯೋಗ


  • ಗ್ರಾಹಕ ವಿವಾದಗಳ ಪರಿಹಾರ ಆಯೋಗ

ನ್ಯಾಯಾಲಯಗಳು


  • ಸರ್ವೋಚ್ಚ ನ್ಯಾಯಾಲಯ


  • ಹೈಕೋರ್ಟ್


  • ಜಿಲ್ಲಾ ನ್ಯಾಯಾಲಯಗಳು


  • ಕೇಂದ್ರ ಆಡಳಿತ ನ್ಯಾಯಮಂಡಳಿ


  • ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ

ಡೌನ್‌ಲೋಡ್‌ಗಳು


  • ಪಿಡಿಎಫ್ ಡೌನ್‌ಲೋಡ್


  • ನುಡಿ


  • ಸಿಡಿಎಸಿ ಭಾಷಾಂತರಿಸಿ


  • ಇ-ಸ್ಪೀಕ್


  • ಕನ್ನಡ ಧ್ವನಿ ಟಿಪ್ಪಣಿಗಳು

Go to Top