ವಾಸನೆ
ವಾಸನೆ
ಸುಬ್ರಾಯ ಚೊಕ್ಕಾಡಿ
ದಟ್ಟೆಸಿ ಬಂದು ಮೂಗಿಗೆ ಗಿಡಿದ ಮನಸ್ಸಿಗೆ ಬಡಿದ
ಘವಂಘಮಾ ಪರಿಮಳ.
ಸುತ್ತ ನೋಡಿದೆ.
ಮೇಜಿನ ಮೇಲೆ, ರಾತ್ರಿ ನಲುಗಿ ಹೋಗುತ್ತೆ ಅಂತ
ಆಕೆ ತೆಗೆದಿಟ್ಟ ಅಬ್ಬಲಿಗೆ ದಂಡೆ
ಮೂಸಿ ನೋಡಿದೆ. ಇದಲ್ಲ
ದೇವರ ಕೋಣೆಯಲ್ಲಿ ಉರಿಯುವ ಊದುಬತ್ತಿ
ಯ ಪರಿಮಳ, ಆಘ್ರಾಣಿಸಿದೆ- ಊಹ್ಞೂ, ಇದಲ್ಲ
ಕೋಣೆ ಕೋಣೆಗೆ ಹೋಗಿ ಮೂಗಿನ ಹೊರಳೆಯನ್ನರಳಿಸಿ
ಉಸಿರೆಳೆದೆ. ಊಹ್ಞೂ, ಇದಲ್ಲವೇ ಅಲ್ಲ.
ಆಕೆ ಬಚ್ಚಲಲ್ಲಿ ಪಾತ್ರೆ ತೊಳೆಯುತ್ತಿರಬೇಕು.
ಪರಿಮಳ ಎಷ್ಟು ಉನ್ಮಾದಕವಾಗಿತ್ತೂ ಅಂದರೆ
ಕರೆಗೆ ವಶವಾಗಿ ಬೀದಿಗೆ ಇಳಿದೆ.
ಉರಿಯುತ್ತಿರುವ ನಿಯಾನ್ ದೀಪಗಳ ಬಣ್ಣಗಳ ಕೆಳಗೆ
ಅಲ್ಲಲ್ಲಿ ಕತ್ತಲೆ. ಬೆಳೆದ ಕಾಂಪೌಂಡು
ಗಳಲ್ಲಿ ಬೆಳೆದ ಹುಲುಸು ಸಸ್ಯಗಳ ಕತ್ತಲೆ.
ಕೊನೆಯ ಬಸ್ಸೂ ಹೊರಟು ಹೋಗಿರಬೇಕು
ಓಡುವ ರಿಕ್ಷಾಗಳು, ಅಡ್ಡಾಡುವ ಕಾಮಿನಿಯರು
ಕರೆಯುವ ಜಟಕಾ ಸಾಬಿಗಳು
ಧಾವಿಸುತ್ತಿರುವ ಗಂಡುಗಳು.
ಬೀದಿ ದೀಪದ ಕೆಳಗೆ ಕತ್ತಲೆಯ ಕಂಡಂತೆ
ಫಕ್ಕನೇ ನೆನಪಾಯ್ತು: ಯುರೇಕಾ ಅಂದೆ;
ಕತ್ತಲೆಯ ಹಿಂದೆ
ನೆರಳಾಗಿ ನಡೆದೆ ಉನ್ಮಾದದಲ್ಲಿ
ಅರಳಿದ್ದ ರಾತ್ರಿರಾಣಿಯ ಅರಸಿ.
ವಿಶಾಲ ಬೀದಿಗಳು ಅದರಾಚೆ ಇಕ್ಕಟ್ಟು ಗಲ್ಲಿಗಳು ಅದರಾಚೆ
ಹರಿಯುವ ಗಟಾರಗಳು ಅದರಾಚೆ
ಕತ್ತಲೆಯಲ್ಲಿ ಎದ್ದ ಮರಗಳ ಗುಂಪು ಅದರಾಚೆ
ವಿಸ್ತಾರಕ್ಕೆ ಮಲಗಿದ್ದ ಗಾರೆಕಿತ್ತ ಪುಟಾಣಿ ಮನೆಗಳು
ದಟ್ಟೈಸಿದ್ದ ಪರಿಮಳದ ಮೂಲ ಇಲ್ಲೇ?
ಉನ್ಮಾದದ ಮೂಲ ಇಲ್ಲೇ?
ಉಸಿರೆಳೆದೆ. ಮಿನುಗುತ್ತಿದ್ದ ದೀಪದ ಮಂದ ಬೆಳಕಲ್ಲಿ
ಅನ್ವೇಷಿಸಿದ್ದೆ:
ಮನೆಯೆದುರು ಕಪ್ಪ ಪೊದೆಗಳು: ಭಯಾನಕ ಪೊದೆಗಳು
ರಾತ್ರಿರಾಣಿಯದೇ ಪೊದೆಗಳು.
ರಾತ್ರಿರಾಣಿಯಿರುವಲ್ಲಿ ಸರ್ಪ ಇರುತ್ತೆ ಅಂತ ಪ್ರತೀತಿ
ಸಣ್ಣ ಹೂಗಳನ್ನಡಗಿಸಿಕೊಂಡ ವಿಕಾರ ಪೊದೆಗಳು.
ಹೂವು ಹಸಿರು ಮತ್ತು ಗಾರೆಕಿತ್ತ ಅಸ್ತವ್ಯಸ್ತ ಮನೆಗಳ ನಡುವೆ
ಗೊಂದಲದಲ್ಲಿ ನಿಂತೆ.
ಕರೆಯುವ ರಾತ್ರಿರಾಣಿಯ ಉನ್ಮಾದಕ ವಾಸನೆ
ಹಿಮ್ಮೆಟ್ಟಿಸುವ ಆಕ್ರಮಿಸುವ ಗಟಾರದ ವಾಸನೆ.
ಭಯ ಅಸಹ್ಯ ಉನ್ಮಾದ ವಸ್ತುಸ್ಥಿತಿಯ ಗೋಜಲಿನಲ್ಲಿ ಅನಿಸಿತು:
ಇದಲ್ಲ ಇದಲ್ಲ ಇದಲ್ಲ ಇದಲ್ಲ ……….
ಗಟಾರ ಗಲ್ಲಿ ಬೀದಿ ನಿಯಾನ್‌ನ ಬೆಳಕುಗಳು
ಅಟ್ಟುವ ವಾಸನೆ ಸೆಳೆಯುವ ವಾಸನೆ
ಕತ್ತಲೆ ಬೆಳಕಿನಾವರ್ತಗಳು
ಮನೆ ಸೇರಿದೆ.
ಕಿರುದೀಪ ಇನ್ನೂ ಉರಿಯುತ್ತಲೇ ಇತ್ತು.
ಇನ್ನೂ ಎಚ್ಚೆತ್ತೇ ಮಲಗಿದ್ದ ಅವಳು
ಎಲ್ಲಿ ಹೋಗಿದ್ದಿರಿ ? ಬನ್ನಿ ಮಲಕೊಳ್ಳಿ ಅಂತ ತೆಕ್ಕೆಹಾಸಿಗೆಯೊಡ್ಡಿದಳು
ಬಾಗಿಲೆಳೆದುಕೊಂಡಳು
ಬೆನ್ನಟ್ಟಿದ್ದ ವಾಸನೆ ಕರಗುತ್ತಾ ಹೋಗಿ
ಪರಿಚಿತ ಕೂದಲಿನ ಬೆವರಿನ ಹಾಸಿಗೆಯ ವಾಸನೆ
ವ್ಯಾಪಿಸುತ್ತಾ ಹೋಯಿತು.
೨
ಕಾಫಿಗೇಳಿ ಅಂತ ಈಕೆ ಕರೆದಾಗಲೇ ನನಗೆಚ್ಚರ
ಬೆಳಗುವ ಸೂರ್ಯ, ನಗುಮುಖ.
ಮುಡಿಯಲ್ಲಿ ಅಬ್ಬಲಿಗೆ ದಂಡೆ-ಇನ್ನೂ ನಲುಗಿರಲಿಲ್ಲ.
ಕಾಫಿ ಸೊಗಸಾಗಿತ್ತು.
ಕುಡಿದು ಹೊರಬಿದ್ದವನು ಬೀದಿ ಗಲ್ಲಿ ಗಟಾರಗಳಾಚೆ ನಡೆಯುತ್ತಾ ಹೋದೆ
ರಾತ್ರಿರಾಣಿ ಕಂಡಲ್ಲಿ ನಿಂತೆ.
ಈಗ ಪರಿಮಳವೇ ಇಲ್ಲ;
ಮುಖ ಮುಚ್ಚಿಕೊಂಡು ಬಾಗಿದ ಹೂಗಳೇ ಎಲ್ಲ.
ಮನೆಗೆ ಬಂದವನು
ಸಂಜೆ ಸಿನಿಮಾಕ್ಕೆ ಹೋಗೋಣ ಕಣೇ ಅಂದೆ.
ಅಪರೂಪದ ಕರೆಗೆ ಕರೆಯ ಧಾಟಿಗೆ
ಅವಳ ಕಣ್ಣುಗಳಲ್ಲಿ ಕೌತುಕ, ಸಂಭ್ರಮ.
ಅವಿನಾಶ ಬರೋದು ಬೇಡ
ಅವಿನಾಶ ಬರೋದು ಬೇಡ
(ನಾಟಕ)
ವೇಣುಗೆಪಾಲ ಸೊರಬ
ಪಾತ್ರಗಳು :
ಅಶ್ವತ್ಥ ಹೆಳವನಾದ ಮುದುಕ
ಅಂಬಾ ಅವನ ಹೆಂಡತಿ
ಅವಿನಾಶ ತರುಣ
ಅಚಲಾ ತರುಣಿ
ನಾರಾಯಣ ಇನ್ನೊಬ್ಬ ತರುಣ
ಅಶ್ವತ್ : ಹೆಜ್ಜೆ ಹೆಜ್ಜೆಗೂ ಸಮಸ್ಯೆ ಕ್ಲಿಷ್ಟವಾಗ್ತಾ ಹೋಗುತ್ತೆ.
ಅಂಬಾ : ಆಮೇಲೆ ದೊಡ್ಡ ಬಾಂಬಿನ ತರಹ ಆಸ್ಫೋಟಿಸಿ ಬಿಡುತ್ತೆ.
ಅಶ್ವತ್ಥ : ನಿನ್ನ ಸಲಹೆ ಕೇಳಲಿಲ್ಲ.
ಅಂಬಾ : ಸಲಹೆ ಅಂತ್ಯ ಅಲ್ಲ, ಸಂದರ್ಭ ಹೇಗೆ ಅನಿವಾರ್ಯ…..
ಅಶ್ವತ್ಥ : ನನ್ನ ಎದುರಲ್ಲಿ ಕುಳಿತ್ಕೊಂಡು ರೇಗಿಸಬೇಡ.
ಅಂಬಾ : ರೇಗಿಸೋದಲ್ಲ, ನನಗೆ ತೋಚಿದ್ದು
ಅಶ್ವತ್ಥ : ಅದೇ ಹೇಳಿದ್ದು ನಿನಗೆ ತೋಚಿದ್ದು, ಸಲಹೆ ಅಂತ ಆಗತ್ತೆ. ನಿನ್ನ ಪ್ರತಿಯೊಂದು ಸಲಹೇನೂ ನನ್ನನ್ನ ರೇಗಿಸತ್ತೆ.
ಅಂಬಾ : ಸರಿ, (ಬಾಗಿಲ ಹತ್ತಿರ ಮುಖ ಇಟ್ಟು) ಸುಸೀ, ಕಾಫಿ ತೆಗೆದುಕೊಂಡು ಬಾ…..
ಅಶ್ವತ್ಥ : ಕೆಲವು ಸಂದರ್ಭಗಳಿವೆ, ವ್ಯಕ್ತಿ ತನಗೆ ತಾನೇ ಹೊಸಬ ಆಗ್ತಾನೆ, ವೈರಿ ಆಗ್ತಾನೆ, ಅಸಹಜ ಆಗ್ತಾನೆ, ಅರ್ಥವಾಗದೇ ಇರೋ ಹಾಗೆ ಆಗ್ತಾನೆ…
(ಸುಸೀ ಬಾಗಿಲಲ್ಲಿ ಒಂದು ಟ್ರೇನಲ್ಲಿ ಕಾಫಿ ಕೆಟಲ್, ಕಪ್ಪು ಬಸಿ, ಹಾಲು ಸಕ್ಕರೆಗಳು ಪ್ರತ್ಯೇಕವಾಗಿದ್ದು, ತರುವಳು. ಅಂಬಾ ಅವಳಿಂದ ಟ್ರೇ ತೆಗೆದುಕೊಂಡು, ಟೇಬಲ್ ಮೇಲೆ ಇರಿಸಿ, ಎರಡು ಕಪ್ಪಗಳಲ್ಲಿ ಸ್ವಲ್ಪ ಸ್ವಲ್ಪ ಡಿಕಾಕ್ಷನ್ ಹಾಕಿ, ಬೆರಸುವಳು, ಈ ಕಾಫಿ ಬೆರಸುವ, ಕೊಡುವ ಕುಡಿಯುವ ಕ್ರಿಯೆ ಪ್ರತಿ ಐದು ನಿಮಿಷಗಳಿಗೊಮ್ಮೆಯಂತೆ, ನಾಟಕದುದ್ದಕ್ಕೂ ನಡೆಯುತ್ತಿರುವುದು, ಅಶ್ವತ್ಪನಿಗೆ ಕೊಡುವ ಕಾಫಿಗೆ ಸಕ್ಕರೆ ಹಾಕಲು ಹೋಗಿ, ಪ್ರತಿ ಬಾರಿ ಹಿಂದಕ್ಕೆ ತೆಗೆದುಕೊಳ್ಳುವಳು, ತನ್ನ ಮರೆವಿನ ಬಗ್ಗೆ ಅಸಹ್ಯಪಟ್ಟುಕೊಳ್ಳುವಳು.)
ಅಶ್ವತ್ಥ, : (ಸಕ್ಕರೆ ಇಲ್ಲದ ಕಾಫಿಯನ್ನು ಕೆಟ್ಟ ಮುಖ ಮಾಡಿ ಹೀರುತ್ತಾ) ಪ್ರಪಂಚ ನನ್ನನ್ನ ಯಾಕೆ ಹೀಗೆ ಒದ್ದಾಡಿಸ್ತಿದೆ
ಅಂಬಾ : ಅಂದರೆ ನಿಮಗೆ ನೀವೇ ವೈರಿ ಆಗೋದಿಕ್ಕೆ, ಹೊಸಬರಾಗೋದಿಕ್ಕೆ, ಅಸಹಜ ಆಗೊದಿಕ್ಕೆ……
ಅಶ್ವತ್ಥ : ಹಾಗಂದರೇನು ಅಂತ ಗೊತ್ತೇನು ?
ಅಂಬಾ : ಅದೇ ಮರದ ಕ್ಯಾಬಿನ್‌ನಿಂದ ಶ್ವೇತಭವನದವರೆಗೆ-ಅಜ್ಞಾತ ಮೂಲೆಯಿಂದ ಹಗಲ ಬೆಳಕಿನ ನಕ್ಷತ್ರ ಮಾಲೆಗೆ –ಯಾರಿಗೂ
ಅಶ್ವತ್ಥ : ಹ್ಹ ಹ್ಹ (ದೊಡ್ಡದಾಗಿ ನಕ್ಕು) ಸಾಕು, ಸಾಕು, ವಿವರಣೆಗೂ ಅರ್ಥಕ್ಕೂ ವ್ಯತ್ಯಾಸ ಇದೆ, ಕಾರ್ಯಕ್ಕೂ ಖುಷಿಗೂ ವ್ಯತ್ಯಾಸವಿದೆ. ಆದರೆ ಈ ವಿವರಣೆ, ಈ ಅರ್ಥ, ಈ ಕಾರ್ಯ, ಈ ಖುಷಿ……
ಅಂಬಾ : ವಿವರಣೆ ಅನ್ನೋದು ಹಿಮ ಇದ್ದ ಹಾಗೆ, ಹಿಂಜಿಕೊಂಡಿರತ್ತೆ – ಅರ್ಥ ಅನ್ನೋದು ಮೈಗಂಟಿಕೊಂಡ ಚರ್ಮ ಇದ್ದ ಹಾಗೆ –
ಅಶ್ವತ್ಥ : ಕಾರ್ಯ ಅನ್ನೋದು ಜಾತಿ ಇದ್ದ ಹಾಗೆ, ಜಾತಿಗಂಟಿಕೊಂಡ ನಿಷ್ಕ್ರಿಯತೆ ಇದ್ದ ಹಾಗೆ
ಅಂಬಾ : ಖುಷಿ ಅನ್ನೋದು
ಅಶ್ವತ್ಥ : ತನ್ಮಯರಾಗಿ ಕೆತ್ತುವ, ತಿದಿಯೊತ್ತುವ, ಕಲ್ಲು ಹೊರುವ, ಸುಣ್ಣವಾಗಿ ಕುದಿಯುವ, ಯಂತ್ರವಾಗಿ ತಿರುಗುವ, ಸದಾ ಆಗುತ್ತಿರುವ, ಆಗ ಬೇಕೆನ್ನಿಸುತ್ತಿರುವ……
ಅಂಬಾ : ಅವಿನಾಶ ಬಾರೋ ಹೊತ್ತಾಯಿತು-
ಅಶ್ವತ್ಥ : ಅವಿನಾಶ ಬರೋದು ಬೇಡ
ಅಂಬಾ : ಅವಿನಾಶ ಬಂದರೆ ಕಳೆ ಬರುತ್ತೆ, ನಿಂತದ್ದೆಲ್ಲ ತಿರುಗೋಕೆ ಶುರು ಆಗುತ್ತೆ
ಅಶ್ವತ್ಥ : ಅಂತಹ ಪ್ರವರ್ತಕರು ನಮಗೆ ಬೇಡ
ಅಂಬಾ : ವರ್ತಕರು
ಅಶ್ವತ್ಥ : ಉತ್ತಮ
ಅಂಬಾ : ವರ್ತಕರು ತುಂಬಿರೋ ಪ್ರಪಂಚದಲ್ಲಿ ದಗ ಮೋಸ ವಂಚನ ಕುಟಿಲತೆ ಮಾನಭಂಗ
ಅಶ್ವತ್ಥ : ಪ್ರವರ್ತಕರು ಹೇಳಿದ್ದೇ ಅದು
ಅಂಬಾ : ಎಂಥ ಪ್ರವರ್ತಕರು
ಅಶ್ವತ್ : ಗುಂಪುಗೂಳಿಗಳು-ಗುಂಪು ಕಟ್ಟಿಕೊಂಡು ಹೊಡೆದಾಡಿ, ವೈರಿ ಗುಂಪನ್ನು ಹೊಡೆದಟ್ಟಿ, ಎಲ್ಲ ಅನ್ನ ಎಲ್ಲ ಹೆಣ್ಣು ತಾನೇ ಅನುಭೋಗಿಸಿ
ಅಂಬಾ : ಇತಿಹಾಸಪೂರ್ವದ ನಿಮ್ಮ ಜ್ಞಾನ ನನ್ನ ಹೊಟ್ಟೆ ಉರಿಸತ್ತೆ……… ಆದರೆ ಅವಿನಾಶ ಇವೊತ್ತಿನವನು, ನಾನು ಹೇಳಿದ ವರ್ತಕರು ಇವೊತ್ತಿನವರು, ನಿಮ್ಮ ಪ್ರವರ್ತಕರಲ್ಲ…….,
ಅಶ್ವತ್ಥ : ನಾನೇನು ಮಾಡಲಿ ಅಂಬಾ, ನನಗೆ ಖುಷಿ ಬೇಕು, ಚರಿತ್ರೇನ ಹುಗಿದು ಬಿಡಬೇಕು…………ವರ್ತಕರು ಪ್ರವರ್ತಕರು-ಎಲ್ಲರನ್ನೂ ಸಾಲಾಗಿ ಗುಂಡಿಟ್ಟು ಕೊಲ್ಲಬೇಕು……ಆಗ ನಿಂತದ್ದು ಚಲಿಸುತ್ತೆ-ಮೂಡುವ ಸೂರ್ಯ ನಗತಾನೆ, ಗಾಳಿ ಪಲ್ಲವಿಸತ್ತೆ, ಪಿಸುಗುಟ್ಟತ್ತೆ-ಚಿಗುರು ಕೆಂಪೊಡೆಯುತ್ತೆ-
ಅಂಬಾ : ಅದೇ ನಾನೂ ಹೇಳೊದು, ಅವಿನಾಶ ಬರ‍್ತಾನೆ
ಅಶ್ವತ್ಥ : ಅವನು ಅವಿನಾಶ ಅಲ್ಲ, ವಿನಾಶ ಅವನು. ರಾಜಕಾರಣಿಗಳ ಹೆಜ್ಜೆನಲ್ಲಿ ಹೆಜ್ಜೆ ಬೆರಸಿ, ಅಧಿಕಾರದ ದರ್ಪದ ಹಬ್ಬ ಮಾಡಿ, ರಾಜದಂಡ ಹಿಡೀತಾನೆ, ಮಂತ್ರ ಹೇಳ್ತಾನೆ, ತಕ್ಕಡಿ ಹಿಡಿತಾನೆ, ಷೇರು ಮಾರ‍್ತಾನೆ ಕೊಳ್ತಾನೆ, ಕೊಟೇಷನ್ ಕರೀತಾನೆ ಕೊಡ್ತಾನೆ-ನೇಗಿಲಿನ ಕೂರಿಗೆ ಮೇಲೆ, ರೈತನ ಬೆನ್ನಿನ ಮೇಲೆ ಸವಾರಿ ಮಾಡ್ತಾನೆ – ಕೊಡಲಿ ಹಿಡೀತಾನೆ, ಕುಡುಗೋಲು ವರಿಸ್ತಾನೆ, ಸುತ್ತಿಗೆ ಜಡೀತಾನ-ಅಟ್ಟೆಗಳನ್ನು ತಯಾರಿಸ್ತಾನೆ
ಅಂಬಾ : ಅವಿನಾಶ ಅಂಥವನಲ್ಲ ಅಶ್ವತ್
ಅಶ್ವತ್ : ನಾನು ಎಷ್ಟು ಸಾರಿ ಹೇಳಿಲ್ಲ ಅಂಬಾ, ನನ್ನ ಆ ಹೆಸರಿನಿಂದ ಕರೀಬೇಡ ಅಂತ ? ನಾನು ಬರೀ ಆಶ್ವ ಅಥವಾ ಬರೀ ಅ-ಹೆಸರಾದರೂ ಯಾಕೆ ಬೇಕು ?…
ಅಂಬಾ : ಅವಿನಾಶ ನಮ್ಮ ಹೊಟ್ಟೆಯ ಮಗು, ನಮ್ಮ ಜೀವನದ ಸಾರಥಿ……. ನಮ್ಮ ಉಸಿರಿಗೆ ಕಂಪು ಕೊಡ್ತಾನೆ, ಕನಸಿಗೆ ಕಸುವು ಕೊಡ್ತಾನೆ-
ಅಶ್ವತ್ಥ : ಅವಿನಾಶ ಬರಬೇಕಾದ ಟ್ರೈನು ಬರೋಲ್ಲ, ಅವನು ತೆಗೆದುಕೊಳ್ಳಬೇಕು ಅಂದ ಟಿಕೆಟ್ಟು ಸಿಕ್ಕಲ್ಲ-ಅವನು ಕೇಳಿದ ಊಟ ಸಿಕ್ಕಲ್ಲ-ಷೂ ಸಿಕ್ಕರೆ ಸಾಕ್ಸ್ ಸಿಕ್ಕಲ್ಲ, ಟೈ ಸಿಕ್ಕಿದರೆ ಕಫ್‌ಲಿಂಕ್ಸ್ ಸಿಕ್ಕಲ್ಲ, ಎಣ್ಣೆ ಸಿಕ್ಕಿದರೆ ಕೂಂಬ್ ಸಿಕ್ಕಲ್ಲ
ಅಂಬಾ : ಈ ಪ್ರಪಂಚಾನೇ ನಿಮಗೊಂದು ಭ್ರಮೆ -ನೋಡಿ ಬರತಾ ಇದಾನೆ ಮಗು……(ಬಾಗಿಲ ಕಡೆ ಹೋಗುವಳು) ಅವಿನಾಶ : (ಪ್ರವೇಶಿಸುತ್ತಾ) ನನಗೋಸ್ಕರ ತುಂಬಾ ಕಾಯ್ತಾ ಇದ್ದಿರಿ ಅಂತ ಕಾಣುತ್ತೆ, ನಾನು ಬರೋದು ಹೇಗೆ ಗೊತ್ತಾಯ್ತು……
ಅಂಬಾ : ಪ್ರತೀವರುಷ ಈ ಸಮಯಕ್ಕೇ ಅಲ್ವೆ ನೀನು ಬರೋದು, ನಾಲ್ಕು ದಿನ ಹಿಂದೆ ಮುಂದೆ……
ಅಶ್ವತ್ಥ : ಅವನು ಬಂದದ್ದೇ ಸರಿ, ಅದೇ ಒಂದು ಲೆಕ್ಕ-ಮರ ಮುರಿಯೋದಿಕ್ಕೆ, ಮನೆ ಮಾಡು ಹಾರೊದಿಕ್ಕೆ, ಮಳೆ ಸುರಿಯೋದಿಕ್ಕೆ……ಹ ಹ್ಹ ಹ್ಹ (ನಗುವನು)
ಅಂಬಾ : ಅಂದಹಾಗೆ, ಇದ್ಯಾಕೆ ಮಗೂ, ಇಷ್ಟು ಕೊಳೆಬಟ್ಟೆ ಹಾಕ್ಕೊಂಡಿದೀಯ ಎಷ್ಟೊಂದು ಅಸ್ತವ್ಯಸ್ತವಾಗಿದೆ ನಿನ್ನ ಬಟ್ಟೆ. ಅವಿನಾಶ : ಇನ್ನೇಲೆ ಮಗ ಅಂತ ಕರೀಬೇಡ ನನ್ನನ್ನ……
ಅಶ್ವತ್ಥ : ನೋಡಿದೆಯ, ಹ್ಯಾಗೆ ಶುರುವಾಯ್ತು ಪ್ರವರ್ತನ…….
ಅಂಬಾ : ಅವನಿಂದ ಏನೂ ಆಗಲ್ಲ ಎಂದವರೂ ನೀವೇ
ಅಶ್ವತ್ಥ : ಅವನೇನೋ ಹೇಳಬೇಕೂಂತಿದಾನೆ ತಡೀ
ಅವಿನಾಶ : ಅದೇ, ದಾರೀಲಿ ಮುತ್ತಿಗೆ ಹಾಕಿಬಿಟ್ಟರು, ದರೋಡೆಕೋರರು ನಮ್ಮ ಕಾರ್‌ಗೆ-
ಅಂಬಾ : ಯಾಕೆ, ಈ ಸಾರಿ ಟ್ರೈನ್‌ನಲ್ಲಿ ಬರಲಿಲ್ಲವೇನು?
ಅವಿನಾಶ : ಟ್ರೈನ್‌ಗೆ ಸೀತ ಕೆಮ್ಮು ಜ್ವರ……..
ಅಶ್ವತ್ : ಪರವಾಗಿಲ್ಲ, ಹುಡುಗ ಚೂಟಿಯಾಗ್ತಿದಾನೆ–ಆಹ-ದರೋಡೆಕೋರರಿಗೆ ಏನು ಕೊಟ್ಟು ಬಂದೆ ?
ಅವಿನಾಶ : ಏನು ತಾನೆ ಕೊಡಲಿ ?
ಅಶ್ವತ್ಥ : ನಿನ್ನ ಉತ್ಸಾಹವನ್ನು, ನಿನ್ನ ಔದಾರ್ಯವನ್ನು, ನಿನ್ನ ಹೇಡಿತನವನ್ನು, ನಿನ್ನ ಮುಂಗುರುಳುಗಳನ್ನು, ನಿನ್ನ ಕೈಬೆರಳುಗಳನ್ನು, ನಿನ್ನ ಕುಲ ಗೋತ್ರಗಳನ್ನು.
ಅಂಬಾ : ಹಾಗಂದರೇನರ್ಥ ? ಅದನ್ನೆಲ್ಲ ತೆಗೆದುಕೊಂಡು ಅವರೇನ್ಮಾಡ್ತಾರ
ಅಶ್ವತ್ಥ : ಹಿಡಿದು ಹಿಂಡಿ ಜೇನುಹುಟ್ಟಿಗೆ ಹೊಯ್ತಾರೆ-ತುಂಬಿ ಕುಡೀತಾರೆ- ಎಲ್ಲ ಸಮಾಧಿ ಮಾಡಿ, ಅದರ ಮೇಲೆ ಕುಣೀತಾರೆ ಅಲ್ಲವೆ ಅವಿನಾಶ್ ? ಹೋಗಲಿ, ನೀನು ಅವರಿಗೆ ಕೊಟ್ಟಿದ್ದು ಏನು ಅದನ್ನಾದರೂ ಹೇಳು
ಅವಿನಾಶ : ದರೋಡೆಕೋರರ ರಾಣಿಗೆ ಮುತ್ತು ಕೊಟ್ಟೆ, ವಜ್ರ ವೈಢೂರ‍್ಯ ಕೊಟ್ಟೆ, ಅವನ ಮಗಳಿಗೆ ನನ್ನ ಎದೆಯನ್ನು ಕೊಟ್ಟೆ, ತೊಡೆಯನ್ನು ಕೊಟ್ಟೆ, ಸಂಭ್ರಮ ಕೊಟ್ಟೆ
ಅಶ್ವತ್ಥ : ಅವಿನಾಶ ಈಗ ಪ್ರವರ್ತಕನಾಗಿದ್ದಾನೆ-ತೊಡೆಯಿಂದ ಊರ್ವಶಿಯನ್ನು ಪಡೀತಾನೆ-(ಅವನ ಕಡೆ ತಿರುಗಿ) ನಿನ್ನ ಬೆಳವಣಿಗೆ ಚೆನ್ನಾಗಿ ಆಗಿದೆಯೋ, ಇಲ್ಲ…
ಅಂಬಾ: ಅಂದರೆ, ನನ್ನ ಮುದ್ದು ಅವಿನಾಶ್ ಇಷ್ಟು ಬೇಗ ಇಷ್ಟೊಂದು ಬೆಳೆದು ಬಿಟ್ಟನೆ?-
ಅಶ್ವತ್ಥ : ಗುಲಾಮರಿಗೆ ಬಯಲೇನು, ಬಚ್ಚಲೇನು ? ಎಲ್ಲ ಕಡೇನೂ ಬೆಳೀತಾರೆ ಪಾಪಾಸುಕಳ್ಳಿ ಹಾಗೆ
ಅವಿನಾಶ : ಸ್ವಾತಂತ್ರ್ಯ ಅನ್ನೋದು ಕೊಳಚೇಲಿ ಬೆಳೀಲಾರದು, ಬಯಲಿನಲ್ಲಿ ಉಳೀಲಾರದು
ಅಂಬಾ : ಯಾಕೆ ಅವಿನಾಶ್ ? ಬದುಕಿಗೆ ಕಣ್ಣು ಕಿವಿ ಮೂಗು ನಾಲಗೆ–ಸ್ವಯಂ ಚಾಲನೆ-ಏನೂ ಇಲ್ಲದೆ, ಗುಲಾಮತನ ಬಂತೇನು ?
ಅವಿನಾಶ : ಅದು ಆದದ್ದು ಹೀಗೆ – ಕಾವು ಕೂತಿದ್ದ ಕೋಳಿ ಹಾರಿ ಹೋಗತ್ತೆ. ಯಜಮಾನ ಮೊಟ್ಟೆ ಒಡೆಯೋದಕ್ಕೂ ಮೊದಲೇ ಕಬ್ಬಿಣದ ಕುಕ್ಕೆ ಹೇರಿ ಬಿಡ್ತಾನೆ……ಮಗು ಚೆಡ್ಡಿ ಜೇಬಲ್ಲಿ ಕೈಹಾಕೋದು ಕಲ್ತ್ ಕೊಳ್ಳೋವಾಗಲೇ ಉಸುಬಿನಲ್ಲಿ ಕಾಲುಸಿಕ್ಕೊಳ್ಳುತ್ತೆ-ಮೇಷ್ಟ್ರು ತಪ್ಪು ಎತ್ತಿ ತೋರಿಸೋದಕ್ಕೆ ಮೊದಲೇ ಇಟ್ಟಿಗೆಗಳು ತೂರಾಡ್ತವೆ-ಕಲ್ಲು ಬೀಳುತ್ತವೆ- ಪೋಸ್ಟ್‌ಮಾರ‍್ಟಮ್ ಆಗೋದಿಕ್ಕೆ ಮೊದಲೇ ಹಣಕ್ಕೆ ಚಲನೆ ಬಂದುಬಿಟ್ಟಿರತ್ತೆ- ಇರುವೆಗಳ ನೊಣಗಳ ಗೊದ್ದಗಳ ಹೆಗ್ಗಣಗಳ ಹೊಟ್ಟೆಯಲ್ಲಿ ಒಳಸಂಚು, ಸಂಚಕಾರ ಪ್ರವಹಿಸುತ್ತೆ – ಡಾಕ್ಷರಿಗೆ ಪೆಟ್ಟು ಬಿದ್ದದ್ದೂ ಕಾಣಲ್ಲ-ಡಾಕ್ಷರಿಗೆ ಕಣ್ಣೇ ಇರಲ್ಲ – ಸತ್ತವನಿಗೆ ಸಮಾಧಾನ ಇಲ್ಲ, ಬದುಕಿರೋರಿಗೆ ಉತ್ಸಾಹ ಇಲ್ಲ, ವ್ಯವಧಾನ ಇಲ್ಲ, ವಿಮರ್ಶೆ ಮಾಡೋ ಸ್ವಾತಂತ್ರ್ಯ ಇಲ್ಲ, ಕಾರ್ಮಿಕ ಮೃಗ ಆಗ್ತಾನೆ-ರೋಲರ್ ಅಡೀಗ್ ಸಿಕ್ಕು ಅಪ್ಪಚ್ಚಿ ಆಗ್ತಾನೆ-
(ಹೊರಗಡೆಯಿಂದ ‘ಅವಿನಾಶ್, ವಿನಾಶ್, ನಾಶ್” ಎಂಬ ಕೂಗು ಕೇಳುತ್ತದೆ.)
ಅವಿನಾಶ : ಓಹ್, ಅಚಲಾ, ಮರತೇ ಬಿಟ್ಟೆ-ಬಾ ಅಚಲಾ, ಒಳಗೆ ಬಾ.
(ಅಚಲೆ ಸಹ ಅವಿನಾಶನಂತೆಯೇ ಅಸಮರ್ಪಕವಾಗಿ ಬಟ್ಟೆ ತೊಟ್ಟಿದಾಳೆ, ಅವಳು ತೊಟ್ಟಿರುವ ಬಟ್ಟೆಗಳು ಅವಳಿಗೆ ಅಳಕವಾಗಿವೆ. ಒಳಗೆ ಪ್ರವೇಶಿಸಿದ ಅಚಲೆ ಕೊಂಚ ಬೆದರಿದ ಹಾಗೆ ನಿಲ್ಲುತ್ತಾಳೆ.)
ಅವಿನಾಶ : ಏನೂ ಗಾಬರಿ ಬೇಡ, ಬಾ-
ಅಂಬಾ : ಬಾಮ್ಮ……….
ಅವಿನಾಶ : ಸಂಕೋಚ ಪಡಬೇಡ, ಕುಳಿತುಕೊ.
ಅಶ್ವತ್ಥ : ಅವಳಿಗ್ಯಾಕೆ ತೊಂದರೆ ಕೊಡ್ತೀಯ ? ಅವಳಿಗೆ ಕುಳಿತೇ ಅಭ್ಯಾಸವಿಲ್ಲ.
ಅಚಲಾ : ಇಲ್ಲ ನಿಂತಿರ‍್ತೀನಿ, ಕೂತರೆ ಮಂಕಾಗ್ ಬಿಡ್ತೀನಿ-ನಿಂಡ್ಕೊಂಡಿದ್ದರೇ
ಅಂಬಾ : ತೊಗೋಮ್ಮ ಸ್ವಲ್ಪ ಕಾಫಿ……
ಅವಿನಾಶ : ಇವರು ನಮಗೆ ತುಂಬಾ ಬೇಕಾದವರು
ಅಚಲಾ : ಇಲ್ಲ, ನಾನು ಇಲ್ಲಿಗೆ ಬರ‍್ತಿರಲ್ಲ, ನಾನು ಹೋಗ್ತಿರ‍್ತೀನಿ –
ಅವಿನಾಶ : ಹಾಗಲ್ಲ, ಸ್ವಲ್ಪ ಇರು, ನಾನೂ ಬರೀನಿ ಆಮೇಲೆ
ಅಂಬಾ : ಯಾಕಮ್ಮ ಸಂಕೋಚ, ಕೊಂಚ ಕೂತ್ತೂ ಬಾ, ಸುಧಾರಿಸ್ಕೋ
ಅಚಲಾ : ಇಲ್ಲ ಇಲ್ಲ……ನಾನು ಹುಟ್ಟಿದಾಗಲೇ ತಾಯಿ ತಿಪ್ಪೆಗೆಸೆದು ಬಿಡ್ತಾರೆ, ಯಾರೂ ಪಾಪ ಸಾಕಿಕೊಳ್ತಾರೆ, ಶ್ರೀಮಂತರು, ಒಂದು ದಿನ ಒಬ್ಬ ಮಕ್ಕಳ ಕಳ್ಳ ನಾನು ಮನೆ ಬಾಗಿಲಲ್ಲಿ ಆಡುತಿರೋವಾಗ, ಬಾಯಿಗೆ ಬಟ್ಟೆ ತುರುಕಿ, ಉಂಡೆ ಮಾಡಿ, ಕೈಕಾಲು ಆಡಿಸ್ಲಿಕ್ಕೂ ಆಗದೆ ಇರೋ ಹಾಗೆ ಕದ್ದುಕೊಂಡು ಹೋಗ್ ಬಿಡ್ತಾನೆ, ನನಗೆ ಸತ್ತೆ ಅನಿಸ್ತಾ ಇರತ್ತೆ- ಹೊಟ್ಟೇಲೆಲ್ಲ ಒಂದ್ ತರಹ ಆಗ್ತಾ ಇರತ್ತೆ-ಬಟ್ಟೆಯೆಲ್ಲ ಓದ್ದೆ ಮಾಡ್ಕೊಂಡ್ ಬಿಟ್ಟಿರ‍್ತೀನಿ-ಅವನ ಮುಖ ನೋಡ್ಲಿಕ್ಕೂ ಆಗಿರಲ್ಲ-
ಅವನು, ಊರ ಹೊರಗೆ ಹೋದ ಮೇಲೆ
ಅಶ್ವತ್ಥ : (ಎತ್ತಿದ ದನಿಯಲ್ಲಿ) ಸಾಕು, ನಿಲ್ಲಿಸು, ನನಗೆ ಕೇಳಕ್ಕೆ ಆಗಲ್ಲ
ಅಂಬಾ : ಇಲ್ಲ, ಹೇಳಮ್ಮ, ನಿಮಗೆ ಬೇಡದೆ ಇದ್ದರೆ, ನೀವು ಸುಮ್ಮನೆ ಕುಳಿತು ಕೊಳ್ಳಿ –
ಅಶ್ವತ್ಥ : ನನಗ್ಗೊತ್ತಿತ್ತು……ಅದಕ್ಕೇ ನಾನು ಆಗಲೇ ಹೇಳಲಿಲ್ಲವೆ, ಅವಿನಾಶ ಬರೋದು ಬೇಡ ಅಂತ-
ಅಂಬಾ : ಹೇಳಮ್ಮ ಹೇಳು
ಅಚಲಾ : ಅವನು ಊರ ಹೊರಗೆ ಹೋಗ್ತಾನೆ–ಅಲ್ಲಿ ಒಬ್ಬ ಸಂನ್ಯಾಸಿ ಸಿಗ್ತಾನೆ, ಆ ಸಂನ್ಯಾಸಿ ಇವನನ್ನು ನೋಡಿ ತುಂಬಾ ರೇಗಿಬಿಡ್ತಾನೆ–ನನ್ನ ಒಂದು ಗುಡಿಸಿಲಿನಲ್ಲಿ ಬಿಟ್ಟುಬಿಟ್ಟು ಅವನೆಲ್ಲೋ ಹೊರಟು ಹೋಗ್ಬಿಡ್ತಾನೆ. ಆ ಸಂನ್ಯಾಸಿ ಗುಡಿಸಿಲಿನಿಂದ ದೂರ ಹೊರಗಡೆ ಇರ‍್ತಾನೆ. ಒಳಗೆ ಯಾರೂ ಇಲ್ಲ-ನೋಡಿ ನಾನು ಗಾಬರೀಲಿ ಕಿರಿಚಿಕೊಳ್ತೀನಿ -ನನಗೆ ಆಮೇಲೆ ಸ್ವಲ್ಪ ಹೊತ್ತು ಏನೂ ಗೊತ್ತಾಗಿರಲ್ಲ…….ಜ್ಞಾಪ್ಕಾನೇ ಇರಲ್ಲ – ನಾನು ಹಾಗೇ ಬೆಳೀತಾ ಇರ‍್ತೀನಿ-ಮೊದಲಿದ್ದವರು ಈಗ ಯಾರೂ ಇರಲ್ಲ-ನಾನು ಬೇರೆ ಗುಂಪಿನಲ್ಲಿ ಸೇರಿಬಿಟ್ಟಿದ್ದೀನಿ – ಇದು ದರೋಡೆಕೋರರ ಗುಂಪಾಗಿಬಿಟ್ಟಿರತ್ತೆ, ಇವರು ಅವರ ಹಾಗೆ ಮಕ್ಕಳನ್ನ ಕದೀತಿರಲ್ಲ, ವಿಕಾರ ಮಾಡ್ತಿರಲ್ಲ, ಬಲೀ ಕೊಡ್ತಾ ಇರಲ್ಲ-ಆದರೆ ಇವರೂ ಯಾರನ್ನಂದರೆ ಅವರನ್ನ ಹಾರಿಸ್‌ಬಿಡತಾ ಇರ‍್ತಾರೆ – ತುಂಬಾ ಒಂದ ತರಹ ಜನಗಳು –
ಅಂಬಾ : ನಿನಗಿದೆಲ್ಲ ಹೇಗೆ ಗೊತ್ತಾಯಿತಮ್ಮ
ಅಚಲಾ : ದರೋಡೆಕೋರರ ಗುಂಪಿನಲ್ಲಿ ಎಷ್ಟೋ ಬೇರೆ ಹುಡುಗೀರೂ ಇದ್ದಾರೆ, ಹೊಸಬರು, ಹಳಬರು-ಅವರು ಎಲ್ಲ ಹೇಳ್ತಾ ಇರ‍್ತಾರೆ, ಅವರಿಗೆಲ್ಲ ನನ್ನ ಕಂಡರೆ ತುಂಬಾ ಪ್ರೀತಿಯಿರತ್ತೆ
ಅಂಬಾ : ಆದೆಂತಹ ಪ್ರೀತೀನೋ ಕಟುಕರ ಪ್ರೀತಿ
ಅಚಲಾ : ಕಟುಕರು ? ಅವರ‍್ಯಾಕಾಗ್ತಾರೆ ಕಟುಕರು?
ಅಂಬಾ : ಆಗಲಿ, ನಿನ್ನ ಪಾಲಿಗೆ ಒಳ್ಳೆಯವರೇ ಇರಬಹುದು–ನಿನಗೆ ಇದೆಲ್ಲ ಹೀಗೇ ಆಯ್ತು ಅಂತ ಯಾರು ಹೇಳಿದ್ರು ಅಚಲಾ ?
ಅಚಲಾ : ನನಗೇ ಗೊತ್ತಾಗ್ತಿರತ್ತೆ
ಅಂಬಾ : ಅಲ್ಲಮ್ಮ, ಹಿಂದೆ ನಡೆದಿದ್ದೆಲ್ಲ
ಅಚಲಾ : ಹಿಂದಿನದು ಯಾವುದೂ ಇರಲ್ಲ –
ಅಶ್ವತ್ಥ : ಅವರು ಹಿಂದಿನದ್ದೆಲ್ಲ ನಂಬಲ್ಲ ಅಂಬಾ. ದರೋಡೆಕೋರರಿಗೆ, ಸಂನ್ಯಾಸಿಗಳಿಗೆ, ಮಂತ್ರಿಗಳಿಗೆ, ದುಬಾಷಿಗಳಿಗೆ ಇವರಿಗೆಲ್ಲ ಭೂತ ಅನ್ನೋದೇ ಇಲ್ಲ. ಭೌತಿಕವಾದ ದೇಹವೊಂದೇ ಇವರಿಗೆ ಲೆಕ್ಕಕ್ಕೆ ಸಿಕ್ಕುವಂಥಾದ್ದು -ದೇಹದಿಂದ ಹೊರಗೂ ನಾವಿದ್ದೇವೆ ಅಂತ ಯಾವಾಗ ನಾವು ತಿಳೀತೇವೆಯೋ ಆಗಲೇ ಭೂತ ನಮ್ಮನ್ನು ಆವರಿಸತ್ತೆ, ಭವಿಷ್ಯತ್ತು
ಗಹನವಾಗತ್ತೆ ಗುಂಭವಾಗತ್ತೆ-
ಅವಿನಾಶ : ನಿಮ್ಮ ಮಾತು ಬರೆತ ಬರತ ಕ್ರೂರವಾಗ್ತಿದೆ-
ಅಚಲಾ : ಅವಿನಾಶ್ ವಿನಾಶ್ ನಾಶ್ ಇನ್ನು ಹೋಗಿರೋಣ ನಡಿ-
ಅಂಬಾ : ಕೊಂಚ ಇರಮ್ಮ, ಬಚ್ಚಲು ಮನೇಲಿ ನೀರು ಕಾದಿದೆ, ಮಡಿ ಉಟ್ಕೊಳ್ಳಿ ಇಬ್ಬರೂ-
ಅಚಲಾ : ಇಲ್ಲ ನಾವು ಹೋಗ್ತಿರೋಣ –
ಅಂಬಾ : ಇವಳೆಲ್ಲಿ ಗಂಟುಬಿದ್ದಳು ನಿನಗೆ, ಅವಿನಾಶ್
ಅಶ್ವತ್ಥ : ಅವಳಾಗಿ ಗಂಟು ಬಿದ್ದಿಲ್ಲ, ಅವನೇ ಪಾಪ
ಅವಿನಾಶ : ಕುಂಟ್ತಾ ಇರೋದೇ ಬದುಕಲ್ಲ, ಬದುಕು ಕುಂಟುತ್ತಲೂ ಇರಬಾರದು-
ಅಂಬಾ : ಮಗು ಹೀಗೆ ದರೋಡೆಕೋರೆ ಆಗಬಹುದೂಂತ
ಅಶ್ವತ್ : ಇದು ಒಂದು ಮನೆ ಕತೆಯಲ್ಲ, ಅಂಬಾ, ಮನೆ ಮನೆಯಲ್ಲೂ ಇದೇ- ಮನೆ ಮನೆಯಲ್ಲೂ ಪ್ರವರ್ತಕರೇ, ಮನೆಮನೆಯಲ್ಲಿ ನಿಂತಿದ್ದ ಗಾಲಿ ಚಲಿಸತೊಡಗುತ್ತದೆ-
ಅಂಬಾ : ಇದೆಂತಹ ಚಲನೆ ?
(ಹೊರಗಡೆ ಯಾರೋ ‘ರಾಯರೇ’ ಎಂದು ಕೂಗಿದ ಶಬ್ದ. ಅಂಬಾ ಕುತೂಹಲದಿಂದ ಬಾಗಿಲವರೆಗೂ ಹೋಗಿ ನಾರಾಯಣನನ್ನು ಕರೆದುತರುತ್ತಾಳೆ.)
ಅಶ್ವತ್ಥ : ಬಾ ನಾರಾಯಣ, ಕುಳಿತುಕೋ
ಅಂಬಾ : ಚನ್ನಾಗಿದ್ದೀಯಾ ನಾರಾಯಣ್ ? ಅವಿನಾಶ್ ಬಂದಾಗಲೇ ನೀನೂ ಬಂದದ್ದು ಸಂತೋಷ
ನಾರಾಯಣ : ಓ ಎಲ್ಲಿ ಅವಿನಾಶ್ ? ಅವನನ್ನ ನೋಡದೇನೇ ಏಳೆಂಟು ವರ್ಷ ಆಯ್ತು-
ಅವಿನಾಶ : ಎದುರಿಗೇ ಕುಳಿತಿರೋರು ಹ್ಯಾಗೆ ತಾನೆ ಕಾಣಿಸ್ತಾರೆ-
ನಾರಾಯಣ : ಹೋ, ಅವಿನಾಶ್, ಇದೇನು ಹೀಗೆ ?
ಅಶ್ವತ್ಥ : ಅವನೀಗ ಪ್ರವರ್ತಕನಾಗಿದಾನೆ, ಹೊಸ ನೆಲಗಟ್ಟು ಹುಡುಕುತಾ ಇದಾನೆ –
ನಾರಾಯಣ : ಏನು ? (ಅಂಬಳ ಕಡೆ ನೋಡುವನು).
ಅಂಬಾ : ಅವರನ್ನು ಕೇಳು, ಇಲ್ಲದ್ದೆಲ್ಲ ಹೇಳ್ತಾರೆ
ಅವಿನಾಶ : ಪ್ರವರ್ತಕ ಅನ್ನಿ, ದರೋಡೆಕೋರ ಅನ್ನಿ, ಹಳೆಯದು ಹೋಗಲೇಬೇಕು, ಹೊಸದು–
ಅಶ್ವತ್ಥ : ಹಳೆಯದನ್ನೇ ಇಟ್ಟುಕೊಂಡು ವ್ಯವಹಾರ ಮಾಡಿದರೆ ಸಾಲದೇನು ?
ನಾರಾಯಣ : ಹೊಸದು ಅಂದರಾದರೂ ಏನು ? ಗಿಡಮರಗಳಾದರೆ, ಎಲ್ಲ ಎಲೆಗಳನ್ನ ಕಳೆದುಕೊಂಡು, ಒಂದಕ್ಕೆ ಹತ್ತರಷ್ಟು ಹೊಸದಾಗಿ ಚಿಗುರುತ್ತವೆ- ಆದರೆ ನಾವು ಹೊಸದು ಅಂತ ಒಪ್ಪಿಕೊಳ್ಳೋವಾಗ, ಹಳೆಯದನ್ನು ಕಳೆದುಕೊಳ್ಳೋದರ ಜತೆಗೇ-
ಅವಿನಾಶ : ಅಲ್ಲೇ ನಿಮ್ಮ ಹೊಸದರ ವ್ಯಾಖ್ಯಾನ ಎಡವೋದು-
ನಾರಾಯಣ : ಹಳೆಯದು ತಲೆಮಾರುಗಳಿಂದ ಶೇಖರವಾಗಿ ಆಗಿ, ಸಹಸ್ರಾರು ವರ್ಷಗಳಿಂದ ಕಾಲಕಾಲಕ್ಕೆ ಯಾವುದು ಒಳ್ಳೆಯದೋ ಅದನ್ನು ಕೂಡಿಸ್ಕೊಂಡು ಕೂಡಿಸ್ಕೊಂಡು
ಅವಿನಾಶ : ನೀನು ಹೇಳೋದು ಸಂಪ್ರದಾಯ ತಾನೆ, ನಾರಾಯಣ್.
ನಾರಾಯಣ : ಅದರ ಜಾಗದಲ್ಲಿ ಹೊಸದು ಬರಬೇಕು ಅಂತೀಯ ನೀನು-
ಅವಿನಾಶ : ಅನ್ನುವುದರಲ್ಲಿ ಪ್ರಯೋಜನವಿಲ್ಲ, ಮಾಡಿ ತೋರಿಸಬೇಕು. ನೋಡು, ದರೋಡೆಕೋರರು, ಅಂತ ಯಾರಿಂದ ಸಮಾಜ ದೂರ ಓಡಿಹೋಗುತ್ತದೆಯೋ, ಅವರೇ ಈಗ ನನ್ನ ಆತ್ಮೀಯರಾಗಿದ್ದಾರೆ–ನಮಗೆ ನಮ್ಮದೇ ಆದ ಒಂದು ನೆಲಗಟ್ಟು, ಕಾರ್ಯಕ್ಷೇತ್ರ.
ಅಶ್ವತ್ಥ : ಕ್ರೌರ್ಯಕ್ಷೇತ್ರ……
ಅವಿನಾಶ : ಕ್ರೌರ್ಯಕ್ಷೇತ್ರ, ಕುರುಕ್ಷೇತ್ರ ಅದು ನಿಮ್ಮ ಬಿಗಿ ಮುಷ್ಟೀಲಿದೆ, ನಿಮ್ಮ ಕಬ್ಬಿಣ ಪೆಟ್ಟಿಗೆಯ ಕೀಲಿಕೈಲಿದೆ-
ಅಂಬಾ : ಮನೆಗೆ ಮಾರಿಯಾಗಿ, ಹೀಗೆ ಯಾಕಾದರೂ ಬಂದೆ ಅವಿನಾಶ್?
ಅಶ್ವತ್ಥ : ಅವಿನಾಶ ಬರೋದು ಬೇಡ ಅಂತ ನಿನಗೆ ನಾನು ಆಗ ಹೇಳಿದ್ದು ತಿಳೀಲಿಲ್ಲ-
ಅಂಬಾ : ನಿಮಗೆ ಗೊತ್ತಿತ್ತೇನೂಂದ್ರೆ
ಅವಿನಾಶ : ಯಾವ ವಿಷಯಾನೂ ಗುಟ್ಟಾಗಿ ಮಾಡೋ ಅಂತಹ ಹೇಡಿಗಳಲ್ಲ ನಾವು
ಅಂಬಾ : ಮತ್ತೆ ನೀವು ಗೊತ್ತಿದ್ದೂ ಯಾಕೆ ?
ಅಶ್ವತ್ಥ : ಮಗನ್ನ ನೋಡಬೇಕು ಅನ್ನೋ ಆಸೆ ನಿನಗೊಬ್ಬಳಿಗೇ ಏನು ?
ಅಚಲಾ : ಅವಿನಾಶ್, ವಿನಾಶ್, ನಾಶ್, ನಾವಿನ್ನು ಹೊರಡ್ತಿರೋಣ.
ಅಂಬಾ : ನನಗೆ ಅವಳು ಆ ತರಹ ಕೂಗೋದು ಕೇಳಿದರೆ ಮೈ ಎಲ್ಲ ಉರಿಯುತ್ತೆ- ಅವಿನಾಶ ಯಾಕೆ ವಿನಾಶ ಆಗ್ತಾನೆ ? ಯಾಕೆ ನಾಶ ಆಗ್ತಾನೆ ?
ನಾರಾಯಣ : ಹಾಗಲ್ಲ, ಈ ಅನಾಗರಿಕ ಜನಗಳಲ್ಲಿ ಅದೊಂದು ಪದ್ಧತಿ-ಒಬ್ಬೊಬ್ಬರಲ್ಲಿ ಒಂದೊಂದು-ಅದರಿಂದ ಒಂದು ಮಾಂತ್ರಿಕ ಶಕ್ತಿ ಹುಟ್ಟತ್ತೆ ಅಂತ ಅವರ ನಂಬಿಕೆ. ಅಂದ ಹಾಗೆ ಈ ಹುಡುಗಿ?
ಅಂಬಾ : ಅಬ್ಬ ! ಅವಳ ಕತೆ ಕೇಳಿದರೆ ಕರುಳು ಕಿತ್ತುಕೊಂಡು ಬರುತ್ತೆ. ಅವಳು ಮಾಡೋದು ನೋಡಿದರೆ ಅಗಾಧವಾದ ಕೋಪವೂ ಬರುತ್ತೆ-ಎಷ್ಟು ನಿಜವೊ ? ಎಷ್ಟು ಸುಳ್ಳೋ ? ಎಷ್ಟು ಬಣ್ಣ ಕಟ್ಟಿದಾಳೊ ?
ಅಶ್ವತ್ : ನಾನು ಆಗಲೇನೇ ಅವಳ ಕತೆ ಹೇಳೋದು ಸಾಕು ಎಂದೆ-
ಅಚಲಾ : ಅವಿನಾಶ್, ವಿನಾಶ್, ನಾಶ್, (ಅವಿನಾಶ ಅವಳ ಎದುರು ನಿಲ್ಲುವನು.)
(ಅಂಬಾ ಅವರಿಬ್ಬರ ಮಧ್ಯೆ ಬಂದು ನಿಲ್ಲುವಳು. ಅಚಲಾ ಅವಳನ್ನು ಒರಟಾಗಿ ದೂಡುವಳು. ಆಕೆ ಮತ್ತೆ ಅಡ್ಡ ನಿಲ್ಲುವಳು. ಈಗ ಅಚಲಾ ಸ್ಥಳ ಬದಲಿಸುವಳು. ಅದನ್ನು ಕಂಡು ಅವಿನಾಶನೂ ಸ್ಥಳ ಬದಲಿಸಿ, ಅವಳ ಮುಂದೆ ನಿಲ್ಲುವನು. ಹೀಗೆ ಎರಡು ಮೂರು ಬಾರಿ ಮಾಡಿದ ಮೇಲೆ)
ಅಚಲಾ : ಅವಿನಾಶ್ ವಿನಾಶ್ ನಾಶ್
ಅಂಬಾ : (ಅಚಲಾ ಬಾಯಮೇಲೆ ಕೈಯಿಡುವಳು. ಅಚಲಾ ಅದನ್ನು ತಳ್ಳಿ ಹಾಕುತ್ತಿರುವಾಗಲೇ) ನೀನು ಇನ್ನೊಂದು ಸಾರಿ ಹಾಗನ್ನಕೂಡದು.
ನಾರಾಯಣ : ಅದರಲ್ಲೇನು ತಪ್ಪಿಲ್ಲ, ಹಾಗೆ ನೋಡಿದರೆ–
ಅಶ್ವತ್ವ : ಆ ಮಾತು ಅವಳಿಗೆ ಅರ್ಥವಾಗಲ್ಲ, ಕಣಯ್ಯ. ಅವಳಿಗೆ ಅರ್ಥವಾಗೋದು ಕೆಟ್ಟ ಕಣ್ಣು, ಕೆಟ್ಟ ಮಾತು, ಅಪಶಕುನ……..
ಅವಿನಾಶ : ಹತ್ತು ವರುಷದಿಂದ ಕಾಲು ಕಳಕೊಂಡು ಕೂತು, ನಿನಗಿನ್ನೂ ಮಾತಾಡೋದು ನಿಲ್ಲಿಸಬೇಕು ಅಂತ ತಿಳಿಯೋಲ್ಲ-
ಅಚಲಾ : ಅವಿನಾಶ್, ವಿನಾಶ್, ನಾಶ್, (ನಾರಾಯಣ, ಕುತೂಹಲದಿಂದ ಅವರು ಏನು ಮಾಡುತ್ತಾರೆ ಎಂದು ನೋಡಲು ಅವರ ಹತ್ತಿರ ಸರಿಯುವನು.)
ಅವಿನಾಶ : (ನಾರಾಯಣನಿಗೆ) ಇದು ನಿನಗೆಲ್ಲ ತಿಳಿಯೊಲ್ಲ ಕಣಮ್ಮ
ಅಂಬಾ : ಇದ್ಯಾಕೆ ಹೀಗಾಡ್ತಿದೀಯೋ ಅವಿನಾಶ
ಅಶ್ವತ್ಥ : ಈಗ ಅವನು ಏನೂ ಮಾಡ್ತಿಲ್ಲ-ಎಲ್ಲ ಅವಳದ್ದೆ-ನೋಡಿದಿಯಾ ಅವಳ ಕೈಯಲ್ಲಿ ಪಿಸ್ತೂಲು-
ನಾರಾಯಣ : (ಅಚಲಳಿಗೆ) ತಾಯಿ ಇದನ್ನೆಲ್ಲ ಉಪಯೋಗಿಸೋ ಜಾಗ ಅಲ್ಲಮ್ಮ ಇದು-
ಅವಿನಾಶ : ನೀನು ಸುಮ್ಮನಿರೋ ಸಾಕು-
(ಅಚಲಾ ಮತ್ತು ಅವಿನಾಶ ಇಬ್ಬರೂ ಎದುರುಬದುರು ನಿಲ್ಲುವರು. ಇಬ್ಬರೂ ಪಿಸ್ತೂಲುಗಳನ್ನು ಪರಸ್ಪರರ ಹೆಗಲಿನ ಮೇಲೆ ಇಟ್ಟು ಹೊಡೆಯುವರು, ಅವು ಲೋಡ್ ಆಗಿಲ್ಲ).
ನಾರಾಯಣ : ಇದೊಂದು ವಿಚಿತ್ರ……
(ಅದೇ ಹೊತ್ತಿಗೆ ಅವರಿಬ್ಬರೂ ರಭಸದಿಂದ ಹೊರಗೆ ಓಡುವರು.) (ಅಂಬಾಳ ಮುಖದ ಮೇಲೆ ಹೇಳಲಾಗದಷ್ಟು ಭಯ ಕಾಣುತ್ತಿದೆ.)
ಅಶ್ವತ್ಥ : ನೋಡಿದೇನೆ ಅವಿನಾಶನ್ನ
ಅಂಬಾ : ಸಾಕು ಇನ್ನು ಅವಿನಾಶ ಬರೋದು ಬೇಡ
ಅವಿನಾಶ : (ಒಬ್ಬನೇ ಹಿಂತಿರುಗಿ ಬಂದು) ಅವಿನಾಶ ಬರೋದು ಬೇಡವೆ ? ಯಾಕೆ, ನನಗೋಸ್ಕರ ಕಾದಿದ್ದು, ವರ್ಷ ವರ್ಷ ನನಗೆ ಆತಿಥ್ಯ ನೀಡಿ
ನಾರಾಯಣ : ಈ ವರ್ಷಾನೂ ಪ್ರತಿವರ್ಷದ ತರಹಾನೇ ಬಂದಿದ್ದರೆ–ನಮ್ಮ ಗುರುಪಾದ ಹೇಳತಿದ್ದನಲ್ಲೋ ಹಾಗೆ ACTING WITH GLORY ಹಾಗೆ-
ಅವಿನಾಶ : GLORY ಅನ್ನೋದಿಕ್ಕೆ ಅರ್ಥ ಗೊತ್ತಿದೆಯೇನೋ ನಿನಗೆ-
ನಾರಾಯಣ : ಯಾಕೆ ?
ಅವಿನಾಶ : ಅದು ಅಂತಹ ಮುದಿಗೊಡ್ಡುಗಳಿಗೆ ಹೇಳಿಸಿದ್ದು–ನಾನು ನೀನು ಇರೋದು ಗಂಡಸ್ತನದಿಂದ ನಡಕೊಳ್ಳೋದಿಕ್ಕೆ- ನಾರಾಯಣ : ಆ ಹುಡುಗೀ ಜತೇಲಿ ನೀನು ನಡಕೊಂಡೆಯಲ್ಲ ಹಾಗೇಂತಲೆ ?
ಅವಿನಾಶ : ಹುಡುಗಿ ? ಯಾರಿಗೆ ಹುಡುಗಿ ? ನನಗೆ ಅವಳು ಸಂಗಾತಿ-ಗುರು, ನೇತಾ, ನನ್ನ ಸರ್ವಸ್ವ…… (ಹಾಗೆನ್ನುತ್ತಿರುವಂತೆ ಅವಿನಾಶ್ ವಿನಾಶ್ ನಾಶ್ ಎಂದು ಮೂರು ಬಾರಿ ಕೂಗುವುದು. ಕೇಳುವುದು, ಕೂಡಲೇ ಪಿಸ್ತೂಲಿನಿಂದ ಗುಂಡು ಹಾರಿದ ಸದ್ದು, ಜೊತೆಗೇ ಆರ್ತನಾದ.)
ಅವಿನಾಶ : (ಓಡುತ್ತಾ) ಆಯ್ಕೆ ನನ್ನ ಕ್ರಾಂತಿ ದೇವತೆ ಹೊರಟೇ ಹೋದಳು.
ನಾರಾಯಣ : ಏನು, ಅವಿನಾಶ, ಏನು (ಎನ್ನುತ್ತಾ ಅವನ ಹಿಂದೆ ಓಡುವನು.)
ಅಶ್ವತ್ : ಅವಿನಾಶ ಬರೋದು ಬೇಡ.
ಅಂಬಾ : ಅವಿನಾಶ ಬರೋದು ಬೇಡ
ಎನ್ನುತ್ತಿರುವಂತೆ
ಕತ್ತಲೆ ಆವರಿಸುವುದು.
ಆಘಾತ
ಆಘಾತ
ಗಂಗಾಧರ ಚಿತ್ತಾಲ
ಸಿಡಿಲಿನಂತೆರಗಿತ್ತು ಹಾಸಗೈವಾಘಾತ
ಕಣ್ಣೆಲ್ಲ ಕವಿದಿತ್ತು ಕಗ್ಗತ್ತಲೆ
ತಾಣ ಉಡುಗಿದ ದೇಹ ದೊಪ್ಪೆಂದು
ಕುಸಿದಿತ್ತು.
ಆಕಾಶ ಕಳಚಿತ್ತು ತಲೆಯ ಮೇಲೆ.
ಇದುವೆ ಸರಿ ಕೊನೆಯು, ದುಃಸಹ್ಯದ ಪರಾಕಾಷ್ಠೆ
ಇನ್ನಿಲ್ಲ ಹಿಂದೆ ಮುಂದೆ
ಎನ್ನಿಸೆ ಭಯಾಕ್ರಾಂತನಾಗಿ ಆಕ್ರಂದಿಸಿದೆ
‘ಕಾವರಿಲ್ಲವೆ ಇಲ್ಲಿ ಯಾರು’ ಎಂದೆ.
ಒಂದಿಷ್ಟು ಚಲವಿಚಲಗೊಳದೆ
– ಮೈಮರೆತಿತ್ತು
ಜಗ ತನ್ನ ದಿನದ ವ್ಯವಹಾರದಲ್ಲಿ
ಏನೊಂದನೂ ಅರಿಯದಂತೆ ನಿರ್ದಯವಾಗಿ
ಉರಿದಿದ್ದ ಸೂರ್ಯ, ಅಲೆದಿತ್ತು ಗಾಳಿ.
ದಾರಿಗುಂಟೆಲ್ಲ, ಜನಜಂಗುಳಿಯ ಓಡಾಟ
ಪಾರ್ಕಿನಲಿ ಹಸುಳೆ ಕೇಕೆ.
ಒಬ್ಬೊಬ್ಬಗೊಂದೊಂದು ಥರದ ಭೋಗದ
ಸರಕು.
ನನ್ನ ಯಾತನೆ ಗೊಡವೆ ಅವರಿಗೇಕೆ ?
ಇಲ್ಲಿನೀ ನೋವು ನಗೆಗಳ ರೀತಿಯೇ ಈ
ಹೀಗೆ:
ಮೂಲೆಹಿಡಿದೊಬ್ಬ ನರ ನರಳುತಿರಲು
ಮುದದಿಂದಲಿನ್ನೊಬ್ಬ ಸಿಳ್ಳು ಹಾಕುತ ನಡೆವ
ಕಾಲಡಿಗೆ ನೆಲ ಸಲೀಸು ಉರುಳುತಿರಲು.
ಯಾವ ಸತ್ತೆಗಧೀನ ನಮ್ಮ ಜೀವನ ಮಾನ
ದಿನರಾತ್ರಿ ಯೋಚಿಸುತ ಬವಣೆಬಟ್ಟೆ.
ಕುಸಿದ ಕಂಬಿಗ ತ್ರಾಣ ಮೊಳವ ಸುಳಿವೇ ಇಲ್ಲ
ಮುದ್ದೆ ದೇಹದಿ ಮತ್ತೆ ಭಯವು ಹುಟ್ಟೆ,
ನರನಾಡಿಯಲ್ಲಿಳಿದ ನಡುಕ ನಿಲ್ಲದು ಮೊಳಗ-
ಹಯ್ಯೋ ಎಲ್ಲೂ ಅಭಯ ಸಾರುವ ಧ್ವನಿ,
ಕೂಗಿಕೊಂಡರು ಮತ್ತೆ ರೇಗಿಕೊಂಡರು ಕೊನೆಗೆ
ಬಂದಪ್ಪಳಿಸುವದು ನನ್ನದೇ ಮಾರ್ದನಿ.
ನೆಲ ಬಾನುಗಳ ನಿರರ್ಥಕದ ತೆಕ್ಕೆಯಲಿಲ್ಲಿ
ಸಿಕ್ಕು ಬಿದ್ದಿದ್ದೇನೆ, ಕೊನೆಯು ಎಂದು
ಮೈದಡವಿ ಮಂಪರಿಸಿ ಮ್ಲಾನಗ್ಲಾನಿಯ ತಂದು
ಎಚ್ಚರವೆ ಬರದ ಸುಖನಿದ್ದೆ ಬಂದು.
ಆರ್ಥಿಕ ಸ್ವಾತಂತ್ರ್ಯದ ಹೋರಾಟ (ಅನುವಾದ)
ಆರ್ಥಿಕ ಸ್ವಾತಂತ್ರ್ಯದ ಹೋರಾಟ
ಮೂಲ : ಡಾ|| ಪಿ ಜಿ ಸಹಸ್ರಬುದ್ಧೆ
ಅನು : ಎಂ ವಿ ಪಾಟೀಲ
ಇದೇ ಮೇ ತಿಂಗಳ ಕೊನೆಗೆ (೧೯೬೩) ಶರ್ತುಗಳಿಲ್ಲದೆ ರೈಲು ಕಾರ್ಮಿಕರ ಮುಷ್ಕರವನ್ನು ನಿಲ್ಲಿಸಿದ್ದು ನೆಮ್ಮದಿಯನ್ನುಂಟು ಮಾಡಿತು. ದೇಶದ ಎಲ್ಲ ಧಮನಿಗಳು ಮುಷ್ಕರದಿಂದ ಕುಗ್ಗಿದ್ದವು. ಶ್ವಾಸೋಚ್ಛಾಸವೂ ಮಂದವಾಗಿತ್ತು. ಆದ್ದರಿಂದ ಮುಷ್ಕರದ ಮುಕ್ತಾಯದ ನಂತರ, ದೇಶವೇ ನಿಃಶ್ವಾಸ ಬಿಟ್ಟಿತು.
ಇಂದಿರಾ ಸರಕಾರವು ನಿರ್ಧಾರದಿಂದ ಮುಷ್ಕರವನ್ನು ಮುರಿದ ಬಗ್ಗೆ ಅನೇಕರು ಸಮಾಧಾನಪಟ್ಟರು. ಆನಂದ ವ್ಯಕ್ತಮಾಡಿದರು.
ಈ ಮುಷ್ಕರ ಯಶಸ್ವಿಯಾಗಿದ್ದರೆ ದೇಶದ ಬೊಕ್ಕಸಕ್ಕೆ ೫೦೦ ಕೋಟಿ ರೂಪಾಯಿಗಳಿಗೂ ಮೇಲ್ಪಟ್ಟು ಹೊರೆ ಬೀಳುತ್ತಿತ್ತು. ನಿಜವೇ ಸರಿ. ಆದರೂ ಸಾಕಾಗುವಂತಿರಲಿಲ್ಲ. ರೇಲ್ವೆ: ಜನರ ಬೇಡಿಕೆಗಳ ಮಂಜೂರಿಯ ಜೊತೆಗೇ, ಇತರ ಕ್ಷೇತ್ರಗಳಲ್ಲಿಯ ಇದೇ ಮಾದರಿಯ ಮುಷ್ಕರವನ್ನು ಎದುರಿಸಬೇಕಾಗುತ್ತಿತ್ತು. ಪೋಸ್ಟ ಖಾತೆಯ ಮುಷ್ಕರ ಪ್ರಾರಂಭವಾಗಿಯೇ ಇತ್ತು, ಕೂಡಲೇ ಗಿರಣಿ, ಬ್ಯಾಂಕ, ಎಸ್. ಟಿ, ವಿಮಾನ, ದುರ್ಗಾಪುರ ಭಿಲಾಯಿಯಂತಹ ಸರಕಾರೀ ಕಾರಖಾನೆ, ಇವೆಲ್ಲವುಗಳಲ್ಲಿ ಮುಷ್ಕರ ಹೂಡಲಾಗುತ್ತಿತ್ತು. ಸಣ್ಣ ಸಂಬಳದ ಕಾರ್ಮಿಕರಷ್ಟೇ ಅಲ್ಲ, ನಾಲ್ಕಂಕಿನ ಸಂಬಳದವರೂ ಮುಷ್ಕರದಿಂದ ತಮ್ಮ ವೇತನಕ್ಕೆ ಇನ್ನೊಂದು ಅಂಕಿಯನ್ನು ಹೆಚ್ಚಿಸಿಕೊಳ್ಳಬಹುದಿತ್ತು. ಆಗ ಮಾತ್ರ ೫೦೦ ಅಲ್ಲ, ೫೦೦ ಕೋಟಿಗಳೂ ಸಾಲುವಂತಿರಲಿಲ್ಲ, ಹೀಗೆಂದರೆ ಈ ದೇಶ ಒಂದು ತಿಂಗಳಲ್ಲಿಯೇ ನಿರ್ಗತಿಕವಾಗುತ್ತಿತ್ತು. ಅಂತೆಯೇ ಸರಕಾರ ಮುಷ್ಕರವನ್ನು ಉರುಳಿಸಿತು. ಬಹು ಜನರಿಗೆ ಸಮಾಧಾನವಾಯಿತು.
ಆದರೆ ಇದರಿಂದ ಈ ಸಮಸ್ಯೆಯ ಪರಿಹಾರವಾಯಿತೇ ? ರೇಲ್ವೆ ಮತ್ತು ಇತರ ಉದ್ಯೋಗಗಳಲ್ಲಿಯ ಜನರಿಗೆ ಹೊಟ್ಟೆಗೆ ಸಾಲುವಷ್ಟು ದೊರಕುವುದೆಂದು (ವಾಸ್ತವಿಕವಾಗಿ ಇದು ನಿಜವಲ್ಲ) ಕಲ್ಪಿಸಿದರೂ, ಏನಾಯಿತು ? ಈ ದೇಶದಲ್ಲಿ ಇಡೀ ವರ್ಷ ಅರೆ ಹೊಟ್ಟೆಯಿಂದಿರುವ, ವಾಸಿಸಲು ಮನೆಗಳಿಲ್ಲದ ತೊಟ್ಟುಕೊಳ್ಳಲು ಬಟ್ಟೆಗಳಿಲ್ಲದೆ ಜನರು 8-10 ಕೋಟಿಗಳಿದ್ದಾರೆ. ಈ ರೇಲ್ವೆ ಕಾರ್ಮಿಕರ ಸಂಖ್ಯೆ 20 ಲಕ್ಷ. ಆದ್ದರಿಂದ ಆ ಜನರಿಗೆ ಅನ್ನ ವಸತಿ ಬಟ್ಟೆಗಳನ್ನು ಪೂರೈಸುವ ಪ್ರಚಂಡ ಸಮಸ್ಯೆ ಈ ದೇಶಕ್ಕಿದೆ. ಆ ಸಮಸ್ಯೆಯ ಪರಿಹಾರ ಹೇಗೆ ಮತ್ತು ಎಂದು ? ರೈಲು ಕಾರ್ಮಿಕರನ್ನೊಳಗೊಂಡು ಎಲ್ಲ ಕಾರ್ಮಿಕರ ಸಮಸ್ಯೆಯು ಈ ಮಹಾನ್ ಭಯಂಕರ ಸಮಸ್ಯೆಯ ಒಂದು ಭಾಗ ಮಾತ್ರ. ಆದ್ದರಿಂದಲೇ ಈ ಮೂಲಭೂತ ಸಮಸ್ಯೆಯ ಬಗ್ಗೆಯೇ ಚರ್ಚಿಸುವದವಶ್ಯವಾಗಿದೆ. ಸರಕಾರ ರೇಲ್ವೆ ಮುಷ್ಕರವೊಂದನ್ನು ಸದೆಬಡಿಯಿತೆಂದು ತೆಪ್ಪಗಿರಲಾರೆವು. ಸ್ವಾತಂತ್ರ ಪ್ರಾಪ್ತಿಯ ನಂತರ, ನಾವು ಪ್ರಸ್ತಾಪಿಸಿದ ಅರ್ಥವ್ಯವಸ್ಥೆ ನಾವು ಸ್ವೀಕರಿಸಿದ ಆರ್ಥಿಕ ತತ್ವಜ್ಞಾನ, ನಾವು ಅವಲಂಬಿಸಿದ ಆರ್ಥಿಕ ಧೋರಣೆ ಇವುಗಳ ಬಗ್ಗೆ ಕೂಲಂಕಷವಾಗಿ ಮತ್ತು ಗಂಭೀರವಾಗಿ ನಾವು ವಿಚಾರಮಾಡಬೇಕು.
ಅಭೂತಪೂರ್ವ ಸಮಸ್ಯೆ
ಇಂಥ ವಿಚಾರದಲ್ಲಿ ತೊಡಗಿದಾಗ ಮೊದಲಿಗೇ ಕಾಣುವುದೇನೆಂದರೆ, ನಮ್ಮ ಸಮಸ್ಯೆಯಂಥದು ಪ್ರಪಂಚದ ಯಾವ ದೇಶಕ್ಕೂ, ಯಾವ ಕಾಲಕ್ಕೂ ಬಂದಿರಲಿಲ್ಲ, ಮತ್ತು ಮುಂದಿನ ಇತಿಹಾಸದಲ್ಲಿ ಸಹ ಹಾಗೆ ಬಂದೀತೆಂದು ತೋರುವದಿಲ್ಲ. ಸ್ವತಂತ್ರರಾದ ಕೂಡಲೆ, ನಾವು ಪ್ರೌಢ ಮತದಾನದ ತತ್ವಗಳನ್ನು ಸ್ವೀಕರಿಸಿ, ಸಂಪೂರ್ಣ ಪ್ರಜಾಸತ್ತೆಯನ್ನು ಪ್ರಸ್ತಾಪಿಸಿದೆವು. ಸ್ವಾತಂತ್ರ, ಸಮತೆ, ಬಂಧುತ್ವ, ವಿಚಾರ ಸ್ವಾತಂತ್ರ್ಯ ಉಚ್ಚಾರ-ಆಚಾರ ಸ್ವಾತಂತ್ರ್ಯ, ಸಂಘಟನೆಯ ಸ್ವಾತಂತ್ರ‍್ಯ, ಮುಷ್ಕರ ಹೂಡುವ ಹಕ್ಕು, ನಿಷೇಧದ ಹಕ್ಕು, ಸಭೆ ಮೋರ್ಚಾಗಳ ಹಕ್ಕು ಈ ಎಲ್ಲ ಅಂಗೋಪಾಂಗಗಳ ಕೂಡ, ಸಂಪೂರ್ಣ ಸಮಗ್ರ ಪ್ರಜಾಪ್ರಭುತ್ವವನ್ನು ನಾವು ನೆಲೆಗೊಳಿಸಿದೆವು. ಆ ಕಾಲದಲ್ಲಿ ನಮ್ಮ ಆರ್ಥಿಕ ಸ್ಥಿತಿಯು ಬಹಳೇ ಹೀನಾಯವಾಗಿತ್ತು. ಪ್ರಪಂಚದಲ್ಲಿಯ ಹಿಂದುಳಿದ ೪೦ ದೇಶಗಳಲ್ಲಿ ನಮ್ಮ ದೇಶದ ಕ್ರಮಾಂಕವು ೩೬-೩೭ ನೆಯದಾಗಿತ್ತು. ಈಗಲೂ ಅದರಲ್ಲಿ ವಿಶೇಷವಾಗಿ ಬದಲಾವಣೆಯಾಗಿಲ್ಲ.
ಈ ಪರಿಸ್ಥಿತಿಯಲ್ಲಿ, ಇಂಥ ಸಮಗ್ರ ಸರ್ವಾಂಗ ಪರಿಪೂರ್ಣ ಪ್ರಜಾಸತ್ತೆ ಪ್ರಸ್ಥಾಪಿಸಿ, ಆರ್ಥಿಕ ವಿಕಾಸ, ಔದ್ಯೋಗಿಕ ಪ್ರಗತಿ, ಉತ್ಪಾದನ ಬೆಳವಣಿಗೆ ಇವು ಯಾವ ದೇಶಕ್ಕೂ ಎಂದಿಗೂ ಶಕ್ಯವಾಗಿಲ್ಲ. ಪ್ರೌಢ ಮತದಾನವುಳ್ಳ, ೨೧ ವಯಸ್ಸು ಮೀರಿದ ಪ್ರತಿಯೊಂದು ವ್ಯಕ್ತಿಗೂ ಮತದಾನದ ಹಕ್ಕುಳ್ಳ, ಪ್ರಜಾಸತ್ತೆಯ ಸ್ವೀಕಾರಮಾಡಿ, ಆರ್ಥಿಕ ಔದ್ಯೋಗಿಕ ಪ್ರಗತಿಯನ್ನು ಯಾರೂ ಸಾಧಿಸಿಲ್ಲ. ಇದು ತ್ರಿಕಾಲದಲ್ಲಿಯೂ ಶಕ್ಯವಿಲ್ಲವೆಂದು ಇತಿಹಾಸದ ಸಾಕ್ಷಿ. ಆದರೆ ನಮ್ಮೆದುರಿಗಿನ ಸಮಸ್ಯೆಯೇ ಹಾಗೆ.
ಈ ಹೇಳಿಕೆ ಮೊದಲುನೋಟಕ್ಕೆ ವಿಚಿತ್ರವೆನಿಸಬಹುದು. ಆದರೆ ಸ್ವಲ್ಪ ಲೆಕ್ಕಾಚಾರ ಮಾಡಿದರೆ ಅದರಲ್ಲಿಯ ಸತ್ಯ ಸ್ಪಷ್ಟವಾದೀತು, ಅನ್ನ, ಅರಿವೆ, ಆಸರ, ಆರೋಗ್ಯ, ಅರಿವು (ಶಿಕ್ಷಣ) ಇವುಗಳನ್ನು ಪ್ರತಿಯೊಬ್ಬನಿಗೆ ಕೊಡಲಿಕ್ಕೆ ಬೇಕಾಗುವ ಧನಕ್ಕೆ ನಾವು ಒಂದು ಸೇರು ಧನ ಎನ್ನೋಣ. ಈಗ ದೇಶದಲ್ಲಿ ನೂರು ಜನರಿದ್ದಾರೆಂದು ಕಲ್ಪಿಸಿರಿ. ಆಗ ಪೂರ್ಣ ಪ್ರಜಾಸತ್ತೆ ಸ್ಥಾಪಿತವಾಗಬೇಕಾದರೆ, ನೂರು ಸೇರು ಧನ ಬೇಕು. ಎಲ್ಲರಿಗೂ ಸ್ವಾತಂತ್ರ್ಯ ಉಂಟು, ಎಲ್ಲರಿಗೂ ಸಮಾನ ಹಕ್ಕುಗಳುಂಟು, ಇಂತಹ ರಾಜ್ಯ ವ್ಯವಸ್ಥೆಯಲ್ಲಿ ಸೇರಿಗಿಂತಲೂ ಕಡಿಮೆ ಯಾರಿಗೆ ಕೊಡಬೇಕು, ಮತ್ತು ಅವನಾದರೂ ಸ್ವೀಕರಿಸಬೇಕೇಕೆ ? ಪ್ರಜಾಸತ್ತೆ ಇಲ್ಲದಲ್ಲಿ, ಸಮತೆ ಇಲ್ಲದಲ್ಲಿ, ಸ್ವಾತಂತ್ರ್ಯವಿಲ್ಲದಲ್ಲಿ, ಕೆಲವು ಬಲಿಷ್ಠ ಜನರು ಉತ್ಪಾದಿಸಿದ ಧನದಲ್ಲಿ ದೊಡ್ಡ ಪಾಲನ್ನು ಪಡೆದುಕೊಂಡು, ಉಳಿದವರನ್ನು ಬಲಾತ್ಕಾರದಿಂದ ದುಡಿಸುತ್ತಾರೆ. ಸುಸ್ತಾಗುವವರೆಗೂ ಚಾಕರಿ ಮಾಡಿಸುತ್ತಾರೆ. ಈ ಪರಿಸ್ಥಿತಿಯಲ್ಲಿ ನೂರು ಜನರಿಗೆ ೩೦-೩೫ ಸೇರು ಧನ ಸಾಕು. ನೂರಕ್ಕೆ ೭೦ ಜನರಿಗೆ ನಾಲ್ಕೆದು ಸೇರು ಧನ ಕೊಟ್ಟು, ಶೇಕಡಾ ೩೦ ಜನ ಉಳಿದ ೩೦ ಷೇರು ಧನವನ್ನು ದಸ್ತುಮಾಡಿ, ಸುಖವಿಲಾಸ ಭೋಗಿಸುತ್ತಾರೆ. ಆದರೆ ಇದು ಅನಿಯಂತ್ರಿತ ರಾಜಸತ್ತೆ. ಇಂಥ ರಾಜ್ಯವ್ಯವಸ್ಥೆಯಲ್ಲಿ ಜನರು ಜಾಗೃತರಾಗಿರುವದಿಲ್ಲ. ಸಂಘಟಿತರಾಗಿರುವುದಿಲ್ಲ. ಪ್ರತೀಕಾರದ ಸಾಮರ್ಥ್ಯವಿರುವದಿಲ್ಲ. ಆದ್ದರಿಂದ ೩೦-೩೫ ಸೇರು ತಕ್ಕಷ್ಟಾಯಿತು, ಆದರೆ ನೂರು ಜನರಿಗೆ ಸ್ವಾತಂತ್ರ್ಯ ಕೊಡಮಾಡಿ, ಅವರನ್ನು ಜಾಗೃತಗೊಳಿಸಿ, ಸಂಘಟನೆಯ ಹಕ್ಕು ನೀಡಿ, ಪ್ರಜಾಸತ್ತೆಯನ್ನು ಸ್ಥಾಪಿಸುವದಾದಲ್ಲಿ ಮಾತ್ರ, ನೂರು ಸೇರು ಧನವಿಲ್ಲದೆ ನಡೆಯಲಾರದು. ಸ್ವಾತಂತ್ರದ ನಂತರ ನಾವು ಎಲ್ಲ ಪ್ರಕಾರದ ಹಕ್ಕುಗಳನ್ನು ಎಲ್ಲರಿಗೂ, ನೂರರಿಗೂ ದಯಪಾಲಿಸಿದೆವು. ಆದರೆ ಆಗ ನಮ್ಮ ಕಡೆಗೆ ಧನ ಮಾತ್ರ ೩೦-೩೫ ಸೇರಿನಷ್ಟೇ ಇತ್ತು. ನೂರರ ಪ್ರಜಾಸತ್ತೆ ಆದರೆ ೩೦ ಸೇರು ಮಾತ್ರ ಧನ-ಹೀಗೆ ದುಷ್ಕರವಾದ ಇಕ್ಕಟ್ಟು ಯಾವ ದೇಶಕ್ಕೂ ಬಂದಿರಲಿಲ್ಲ.
ಗ್ರೀಸ್ ರೋಮುಗಳಲ್ಲಿಯ ಪರಿಸ್ಥಿತಿ:
ಪ್ರಾಚೀನ ಗ್ರೀಸ್ ರೋಮುಗಳಲ್ಲಿ ಪ್ರಜಾಸತ್ತೆ ಇತ್ತೆಂದು ಇತಿಹಾಸ ಹೇಳುತ್ತದೆ. ಹೌದು ನಿಜ. ಆದರೆ ಸಮಗ್ರ ಸಂಪೂರ್ಣ ಪ್ರಜಾಸತ್ತೆಯಿರಲಿಲ್ಲ. ಗ್ರೀಸ್‌ದಲ್ಲಿ ಶೇಕಡ ಹತ್ತು ಜನರಿಗೇ ಮತದಾನದ ಹಕ್ಕುಗಳಿದ್ದವು. ಉಳಿದ ಶೇಕಡ ತೊಂಬತ್ತು ಜನರು ಗುಲಾಮರಾಗಿದ್ದರು. ಸತ್ತಾಧಾರಿಗಳಾದ ಶೇಕಡ ಹತ್ತು ಜನರಿಗೆ ಉಪಜೀವನಕ್ಕಾಗಿ ಶ್ರಮಿಸುವ ಅವಶ್ಯಕತೆಯೇ ಇರಲಿಲ್ಲ. ಗ್ರೀಸ್‌ನಲ್ಲಿ ಹಾಗೆ ಕಾನೂನೇ ಇತ್ತು. ಉಪ ಜೀವನಕ್ಕಾಗಿ ಕೆಲಸ, ಉದ್ಯೋಗ, ಶ್ರಮ ಮಾಡುವ ಜನರಿಗೆ ಮತದಾನದ ಹಕ್ಕುಗಳಿಲ್ಲ. ಇಂದು ನಾವು ಶ್ರಮದ ಮಹತಿಯನ್ನು ಹಾಡುತ್ತೇವೆ. ಆದರೆ ಗ್ರೀಸ್‌ನಲ್ಲಿ ಹೊಟ್ಟೆಗಾಗಿ ಶ್ರಮ ಮಾಡುವುದು ಗೌರವಕ್ಕೆ ಕುಂದು ತರುವಂತಹದೆಂದು ತಿಳಿಯಲಾಗಿತ್ತು. ಶೇಕಡ ತೊಂಬತ್ತು ಗುಲಾಮರ ದುಡಿತ ಮತ್ತು ಉಳಿದವರ ಅಧಿಕಾರ. ಆರಿಸ್ಟಾಟಲ್ ಆ ಕಾಲದ ಮಹಾ ಪಂಡಿತನು, ಅವನು ಗುಲಾಮಗಿರಿಯ ಸಮರ್ಥನೆಯನ್ನು ಮಾಡುತ್ತಿದ್ದನು. ಆ ಬಗ್ಗೆ ಅವನನ್ನು ಕೆರಳಿಸಿದಾಗ “ಇಲ್ಲಿ ಒಬ್ಬ ನೇಕಾರನಿದ್ದಾನೆ. ಈ ಚರಖದಿಂದ ಅವನು ಒಂದು ಸಲ ಒಂದು ನೂಲನ್ನು ಹೊಸೆಯುತ್ತಾನೆ. ಇಷ್ಟೇ ಶ್ರಮದಿಂದ ಇಷ್ಟೇ ವೇಳೆಯಲ್ಲಿ ಇಪ್ಪತ್ತು ನೂಲುಗಳು ಹೊರಟಾಗ ಗುಲಾಮ ಗಿರಿಯನ್ನು ನಷ್ಟಪಡಿಸಲು ಬಂದೀತು” ಹೀಗೆ ಅಂದನು. ಇದರ ಅರ್ಥವೇನೆಂದರೆ, ದೇಶದಲ್ಲಿ ಎಷ್ಟು ಸೇರು ಧನವಿದೆಯೋ, ಅಷ್ಟು ಜನರ ಪ್ರಜಾಸತ್ತೆ ಶಕ್ಯವಿದೆ. ಹತ್ತು ಸೇರು ಧನವಿದ್ದರೆ ಶೇಕಡ ಹತ್ತು ಜನರ ಪ್ರಜಾಸತ್ತೆ. ಆ ಧನ ಇಪ್ಪತ್ತು ಪಟ್ಟಿನಿಂದ ಬೆಳೆದಾಗ, ಒಂದು ನೂಲು ಹೊಸೆಯುವ ಶ್ರಮದಲ್ಲಿ ಇಪ್ಪತ್ತು ನೂಲುಗಳು ಹೊರಟಾಗ, ಎಲ್ಲರ, ನೂರರ ಪ್ರಜಾಸತ್ತೆ ಶಕ್ಯವಾದೀತು, ಭಾರತವು ಸಂಪೂರ್ಣ ಪ್ರಜಾಸತ್ತೆ, ನೂರರ ಪ್ರಜಾಸತ್ತೆ ಏರ್ಪಡಿಸಿತು. ಆದರೆ ತನ್ನ ಬಳಿ ಮಾತ್ರ, ಧನ ಮೂವತ್ತು ಸೇರು !
ಗ್ರೀಸ್ ರೋಮುಗಳ ಪ್ರಜಾಸತ್ತೆ ಪೂರ್ವಕಾಲದ ಇತಿಹಾಸವು. ಆ ನಂತರ ೧೭ ನೇ ಶತಮಾನದಲ್ಲಿ ಇಂಗ್ಲಂಡ್ ದೇಶ ಪ್ರಜಾಸತ್ತೆಯನ್ನು ಊರ್ಜಿತಗೊಳಿಸಿತು. ಆದರೆ ಭಾರತದಲ್ಲಿಯಂತೆ ಸಂಪೂರ್ಣ ಪ್ರಜಾಸತ್ತೆಯು ಇಂಗ್ಲಂಡದಲ್ಲಿ ೧೯೨೮ ರಲ್ಲಿ ಅವತರಿಸಿತೆಂಬುದನ್ನು ನಾವು ಲಕ್ಷಿಸಬೇಕು. ೧೭೬೦ ರಲ್ಲಿ ಇಂಗ್ಲಂಡದ ಔದ್ಯೋಗಿಕ ವಿಕಾಸ ಪ್ರಾರಂಭವಾಯಿತು. ಆಗ ಕಾನೂನಿನಿಂದ, ತಾತ್ವಿಕದೃಷ್ಟಿಯಿಂದ ಅಲ್ಲಿ ಪ್ರಜಾಸತ್ತೆ ಇತ್ತು. ಔದ್ಯೋಗಿಕ ವಿಕಾಸ ಪ್ರಚಲಿತವಿದ್ದಾಗ, ೧೮ ತಾಸು-ಗ್ರೀಕ್ ಗುಲಾಮರಕ್ಕಿಂತಲೂ ಹೆಚ್ಚು ಕೆಲಸ ಅಲ್ಲಿನ ಕಾರ್ಮಿಕರಿಗೆ ಮಾಡಬೇಕಾಗುತ್ತಿತ್ತು. ಆದರೂ ಹೊಟ್ಟೆ ತುಂಬ ಕೂಳು ಸಿಗುತ್ತಿರಲಿಲ್ಲ. ನಾಲ್ಕು-ಆರು ವರ್ಷದ ಮಕ್ಕಳಿಗೂ ೧೮ ತಾಸು ಕೆಲಸ ಮಾಡಬೇಕಿದ್ದಿತು. ಈ ಎಳೆ ಜೀವಿಗಳ ಸೊಂಟಕ್ಕೆ ಹಗ್ಗವನ್ನು ಕಟ್ಟಿ ಹೊಗೆ ಕುಲುಮೆಯಲ್ಲಿ ಬಿಡುತ್ತಿದ್ದರು. ೧೮೩೨ರ ನಂತರ ಈ ಸ್ಥಿತಿಯು ಅಲ್ಪ ಬದಲಾಯಿತು. ಮುಂದೆ ಕಾರ್ಮಿಕರಿಗೆ ಸಂಘಟನೆಯ ಹಕ್ಕು ಪ್ರಾಪ್ತವಾಯಿತು, ಕಳೆದ ಶತಮಾನದ ಕೊನೆಗೆ, ಮತದಾನದ ಹಕ್ಕು ಸಾವಧಾನವಾಗಿ ಸಿಕ್ಕಿತು. ಆದರೆ ಇದು ಎಂದು? ನೂರು ಸೇರು ಧನ ನಿರ್ಮಾಣವಾದಾಗ, ಇಂಗ್ಲಂಡದಲ್ಲಿ ಪೂರ್ಣ ಪ್ರಜಾಸತ್ತೆ ಸ್ಥಾಪಿಸುವುದು ಶಕ್ಯವಾಯಿತು. ಇದೂ ಅಲ್ಲದೆ, ಇಂಗ್ಲಂಡದ ಆರ್ಥಿಕ ಪ್ರಗತಿಯ ಕಾಲದಲ್ಲಿ, ಆ ದೇಶಕ್ಕೆ ಸಾಮ್ರಾಜ್ಯದಿಂದ ಲೂಟಿಮಾಡಲು ಬರುತ್ತಿತ್ತೆಂಬುದನ್ನು ಸಹ ನಾವು ಲಕ್ಷಿಸಬೇಕು. ಸ್ವದೇಶದ ಕಾರ್ಮಿಕರನ್ನು ಶೋಷಿಸಿ ಧನ ದೊರಕಿಸುವದು ಮತ್ತು ಸಾಮ್ರಾಜ್ಯದ ಪ್ರಜಾ ಜನರನ್ನು ಸುಲಿದು ಅಪ್ರಾಮಾಣಿಕ ಹಣ ತುಂಬುವದು ಮತ್ತು ಆನಂತರ ಪ್ರಜಾಸತ್ತೆಯ ಡೇಲು (ಜಂಬ) ಮೆರೆಸುವದು, ಹೀಗಿದೆ ಇಂಗ್ಲಂಡದ ಇತಿಹಾಸ. ಆದ್ದರಿಂದ ವಿಪುಲ ಧನವಿಲ್ಲದಾಗ, ನೂರಕ್ಕೆ ನೂರು ಸೇರು ಧನವಿಲ್ಲದಾಗ, ಯಾರನ್ನಾದರೂ ಸುಲಿಯದ ವಿನಾ, ಪ್ರಜಾಸತ್ತೆ ಶಕ್ಯವಿಲ್ಲ.
ನಿಗ್ರೋಗಳ ಅವಸ್ಥೆ :
೧೮ ನೇ ಶತಮಾನದ ಕೊನೆಗೆ ಅಮೆರಿಕ ಸ್ವತಂತ್ರವಾಯಿತು, ವಾಶಿಂಗ್ಟನ್, ಫ್ರಾಂಕಲಿನ್, ಜೆಫರಸನ್. ಮುಂತಾದ ಮುಂದಾಳುಗಳು ಪ್ರಜಾಸತ್ತೆಯನ್ನು ಘೋಷಿಸಿದರು. ಸಂಪೂರ್ಣ ಪ್ರಜಾಸತ್ತೆಯನ್ನು ಉದ್ಘೋಷಿಸಿದರು. ಆದರೆ ಅಲ್ಲಿ ನೀಗ್ರೋಗಳಿಗೆ ಮತದಾನದ ಹಕ್ಕುಗಳಿರಲಿಲ್ಲ. ಅಂದರೇನೆ ಅದು ಸಂಪೂರ್ಣ ಪ್ರಜಾಸತ್ತೆಯಿರಲಿಲ್ಲ. ಅತ್ಯಂತ ವೇಗದಿಂದ ಆರ್ಥಿಕ ಪ್ರಗತಿಯಾದ ನಂತರವೇ, ನೀಗ್ರೋಗಳನ್ನು ಮುಕ್ತ ಮಾಡಲು ಅಮೆರಿಕೆಗೆ ಸಾಧ್ಯವಾಯಿತು. ಅದೂ ಕಾಗದದ ಮೇಲೆ, ನಿಜವಾದ ಮುಕ್ತತೆ ಅಲ್ಲಿ ಇನ್ನೂ ಆಗಿಲ್ಲ, ಪ್ರತ್ಯಕ್ಷವಾಗಿ ನಿಗ್ರೋಗಳಿಗೆ ರಾಜಕೀಯ, ಸಾಮಾಜಿಕ ಸಮಾನತೆ ದೊರಕಿಲ್ಲ. ಆರ್ಥಿಕವಂತೂ ಇಲ್ಲವೇ ಇಲ್ಲ.
ಆರ್ಥಿಕ, ಔದ್ಯೋಗಿಕ ಪ್ರಗತಿಯಾದ ನಂತರ, ನೂರು ಸೇರು ಧನ ಪ್ರಾಪ್ತವಾದ ನಂತರ, ಪ್ರಜಾಸತ್ತೆಯ ಸಾಧ್ಯತೆಯು ಮಾತ್ರ ನಿರ್ಮಾಣವಾಗುತ್ತದೆ. ಆದರೆ ಅದು ಜನರಿಗೆ ಸಿಗುತ್ತದೆಂದಲ್ಲ, ಅಮೇರಿಕೆಯಲ್ಲಿ ಹೀಗೆಯೇ ಆಯಿತು. ೧೯೩೨ ರಲ್ಲಿ ಫ್ರಾಂಕಲಿನ್ ರೂಝವೆಲ್ಸ್ ಚುನಾಯಿಸಿ ಬಂದಾಗ, ಮೂರುಕೋಟಿ ಜನ-ಒಟ್ಟು ೧೨ ಕೋಟಿ ಜನರಲ್ಲಿ-೩ ಕೋಟಿ ಜನ-ಭಿಕಾರಿಗಳಿದ್ದರು, ಮತ್ತು ವಾಲಸ್ಟ್ರೀಟದ ಬಂಡವಾಳಗಾರರು ಇದನ್ನು ವಿಚಾರಿಸಲು ಸಹ ಸಿದ್ಧರಿರಲಿಲ್ಲ. ಅಧ್ಯಕ್ಷ ರೂಝುವೆಲ್ಟನು ಜನಶಕ್ತಿ ಜಾಗೃತಗೊಳಿಸಿ, ಅವರ ಹೆಮ್ಮೆಯನ್ನು ಇಳಿಸಿದಾಗ, ಉತ್ಪಾದಿತ ಧನದ ವಿಭಜನೆಗೆ ಅವರು ಸಿದ್ಧರಾದರು. ನಾವು ಉತ್ಪಾದನೆಯ ಸಮಸ್ಯೆಯನ್ನು ಪರಿಹರಿಸಿ ದ್ದೇವೆ ಈಗ ವಿಭಜನೆಯ ಪ್ರಶ್ನೆ ಮಾತ್ರ ಇದೆಯೆಂದು ರೂಝುವೆಲ್ಟನು ತನ್ನ ಭಾಷಣಗಳಲ್ಲಿ ಪ್ರತಿಸಾರೆ ಹೇಳುತ್ತಿದ್ದನು. ಈ ವಿಭಜನೆಯ ಸಮಸ್ಯೆಯನ್ನು ರೂಝವೆಲ್ಟನು
ಬಿಡಿಸಿದ ನಂತರವೇ, ಆರ್ಥಿಕ ಮತ್ತು ರಾಜಕೀಯ ಸಮತೆ ಜನರಿಗೆ ಪ್ರಾಪ್ತವಾಗಿ, ಅಲ್ಲಿಯ ಪ್ರಜಾಪ್ರಭುತ್ವ ಯಥಾರ್ಥವಾಯಿತು.
ಆದಕಾರಣ ಅಮೇರಿಕೆಯಲ್ಲಿ ಸಹ ಎಲ್ಲರಿಗೂ ಅನ್ನವಸ್ತ್ರ ನಿರ್ಮಾಣವಾದ ನಂತರವೇ ಪ್ರಜಾಸತ್ತೆಯು ಸಾಧ್ಯವಾಯಿತು. ನೂರು ಸೇರು ಧನ ನಿರ್ಮಾಣವಾದ ನಂತರವೂ ಜನಶಕ್ತಿ ಜಾಗೃತ ಮತ್ತು ಸಂಘಟಿತವಿರದಿದ್ದರೆ, ಕೆಲವು ಬಲಿಷ್ಠ ಹಿರಿಯಣ್ಣರು (ದಾದಾ ಜನರು) ನಾಲ್ಕು ಹತ್ತು ಸೇರು ಧನವನ್ನು ಅಪಹರಿಸಿ, ಪ್ರಜಾತಂತ್ರವನ್ನು ವಿಫಲಗೊಳಿಸುತ್ತಾರೆ. ಆದ್ದರಿಂದ ವಿಪುಲ ಧನ ದೊರಕಿದರೂ, ಪ್ರಜಾಸತ್ತೆ ಯಶಸ್ವಿಯಾದೀತೆಂದಲ್ಲ. ಆದ್ದರಿಂದ, ಎಲ್ಲರಿಗೂ ಪೂರೈಸುವಷ್ಟು ಅನ್ನ ವಸ್ತ್ರಗಳೇ ಇಲ್ಲದ ದೇಶದಲ್ಲಿ. ಪ್ರಜಾಸತ್ತೆಯ ಮಾತು ಶುಷ್ಕವೆಂದು ಹೇಳುವ ಅವಶ್ಯಕತೆಯೇ ಇಲ್ಲ. ೩೦-೪೦ ಜನರಿಗೆ ಸಾಲುವ ಧನವಿಲ್ಲದಾಗ ನಾವು ಸರ್ವಾಂಗ ಸಂಪೂರ್ಣ ಪ್ರಜಾಸತ್ತೆಯನ್ನು ಪ್ರಸ್ಥಾಪಿಸಿದ್ದೇವೆ.
ಆಧುನಿಕ ದಂಡಸತ್ತೆ :
ಈಗ ಕಾರ್ಮಿಕರ ಪ್ರಜಾಸತ್ತೆಯನ್ನು ಪ್ರಸ್ತಾಪಿಸಿ ಆರ್ಥಿಕ ವಿಕಾಸ ಸಾಧಿಸುವ ದೇಶಗಳನ್ನು ಅವಲೋಕಿಸುವ.
ಇಪ್ಪತ್ತನೆಯ ಶತಮಾನದಲ್ಲಿ ಅತಿಶಯ ವೇಗದಿಂದ, ಆರ್ಥಿಕ ಔದ್ಯೋಗಿಕ ಪ್ರಗತಿಯನ್ನು ಮಾಡಿದ ಎರಡು ದೊಡ್ಡ ದೇಶಗಳೆಂದರೆ-ರಶಿಯಾ ಮತ್ತು ಚೀನ. ಸೋವಿಯಟ್ ರಶಿಯಾ ಮೊದಲು ಅತಿಶಯ ಹಿಂದುಳಿದ ದೇಶ. ಆದರೆ ಔದ್ಯೋಗಿಕ ಪ್ರಗತಿಯ ದೃಷ್ಟಿಯಿಂದ, ಅಮೇರಿಕೆಯ ನಂತರ ಅಂದರೆ ಎರಡನೆಯ ಕ್ರಮಾಂಕವನ್ನು ಪಡೆಯುತ್ತದೆ. ಜರ್ಮನಿ ಜಪಾನದೇಶಗಳು ಔದ್ಯೋಗಿಕವಾಗಿ ಅತ್ಯಂತ ಪ್ರಗತಿಪರ ರಾಷ್ಟ್ರಗಳು. ಆದರೆ ಉತ್ಪಾದನೆಯ ವೇಗದಲ್ಲಿ ರಶಿಯಾ ಅವುಗಳನ್ನು ಹಿಮ್ಮೆಟ್ಟಿಸಿದೆ, ಚೀನದ ಪ್ರಗತಿಯ ಬಗ್ಗೆ ಬಹಳ ವಿರೋಧ ಅಭಿಪ್ರಾಯಗಳಿವೆ. ಅನೇಕರು ನಂದನವನವೇ ಅವತರಿಸಿದೆ ಎಂದಿದ್ದಾರೆ, ಅದರಲ್ಲಿಯ ಅತಿಶಯೋಕ್ತಿಯನ್ನು ಬಿಟ್ಟರೂ, ಚೀನದಲ್ಲಿ ಸರ್ವಸಾಮಾನ್ಯ ಜನರಿಗೆ ಅಲ್ಪಸ್ವಲ್ಪ ಅನ್ನ ವಸ್ತ್ರಗಳು ಸಿಗುವವು ಎಂಬುದರಲ್ಲಿ ಸಂದೇಹವಿಲ್ಲ. ಪ್ರೊ. ಜಾನ್ ಕೆನೆಥ್ ಗಾಲಭ್ರೆಥನಂಥ ಪರಿಶೀಲಕ ವಿದ್ವಾಂಸನೂ “ದಿ ಚಾಯನಾ ಪ್ಯಾಸೇಜ” ಎಂಬ ತನ್ನ ಗ್ರಂಥದಲ್ಲಿ ಆ ಬಗ್ಗೆ ದೃಢತೆಯನ್ನು ಕೊಟ್ಟಿದ್ದಾನೆ.
ರಶಿಯಾ ಮತ್ತು ಚೀನ ದೇಶಗಳು, ಆರ್ಥಿಕ ಸಂಪನ್ನತೆಯನ್ನು ಸಾಧಿಸಿದ್ದು, ಅತ್ಯಂತ ಕಠೋರ ದಂಡಸತ್ತೆಯ ಬಲದಿಂದ ಎಂದು ನಾವು ಗಮನಿಸಬೇಕು. ಆ ದೇಶಗಳಲ್ಲಿ ಕಾರ್ಮಿಕರ ಅಂದರೆ ಶೇಕಡ ೯೦ ಜನರ ಪ್ರಜಾಸತ್ತೆಯಿದೆ ಎಂದು ಹೇಳಲಾಗುತ್ತದೆ. ಆದರೆ ಅದು ಪ್ರಚಾರ ಭಾಗವೇ ಸರಿ. ಆ ದೇಶಗಳಲ್ಲಿಯೂ ಶೇಕಡ ೧೦-೧೫ ಜನರದೇ ಪ್ರಜಾಸತ್ತೆಯಿದೆ ಔದ್ಯೋಗಿಕವಾಗಿ ಪ್ರಗತಿ ಹೊಂದಿದ ಬಂಡವಾಳದಾರ ದೇಶದಲ್ಲಿಯೇ ಕಮ್ಯುನಿಸ್ಟ್ ಕ್ರಾಂತಿಯಾದೀತು ಮತ್ತು ಅಂಥ ದೇಶದಲ್ಲಿಯೇ ಕಾರ್ಮಿಕರ ಪ್ರಜಾಸತ್ವ ಸ್ಥಾಪಿಸಲು ಸಾಧ್ಯವಾದೀತೆಂದು ಸ್ವತಃ ಕಾರ್ಲಮಾರ್ಕ್ಸನೇ ಹೇಳಿದ್ದನು. ಅದರ ಕಾರಣ ಸ್ಪಷ್ಟವಿದೆ. ವಿಫುಲ ಉತ್ಪಾದನವಾದಲ್ಲಿ, ಎಲ್ಲರಿಗೂ ಅನ್ನವಸ್ತ್ರ ಪೂರೈಸಬಹುದು. ಧನವನ್ನು ನಿರ್ಮಿಸುವ ದೇಶದಲ್ಲಿ, ಧನದ ವಿಭಜನೆ ಮಾತ್ರ ಸಮಸ್ಯೆಯಿದ್ದ ದೇಶದಲ್ಲಿ, ಬಹುಸಂಖ್ಯ ಪ್ರಜಾಸತ್ತೆಯನ್ನು ಊರ್ಜಿತಗೊಳಿಸಬಹುದು. ರಶಿಯಾ ಚೀನಗಳಂಥ ಹಿಂದುಳಿದ ದರಿದ್ರ ದೇಶಗಳಲ್ಲಿ ಪ್ರಜಾಸತ್ತೆ ಅಸಾಧ್ಯ. ಸೋವಿಯತ್ ಮುಂದಾಳುಗಳು ರಶಿಯದಲ್ಲಿ ಸಮಾಜವಾದ ಅವತರಿಸಿದೆ ಎಂದು ಹೇಳುತ್ತಾರೆ. ಸ್ವಲ್ಪ ಲೆಕ್ಕಾಚಾರ ಮಾಡಿದಲ್ಲಿ ಈ ವಿಧಾನಗಳು ಅಸತ್ಯವೆಂದು ಕಾಣುತ್ತದೆ. ೧೯೫೬ ರಲ್ಲಿ ಸಮಾಜವಾದಿ ಸಮಾಜರಚನೆ ಪೂರ್ಣವಾಗಿದೆಯೆಂದು ರಶಿಯಾದಲ್ಲಿ ಘೋಷಿಸಲಾಯಿತು. ಆಗ ಕಾರ್ಮಿಕನೊಬ್ಬನಿಗೆ ೨೭೦ ರಿಂದ ೩೫೦ ರೂಬಲ ಸಂಬಳವಿತ್ತು. ಆದರೆ ಆಗ ಕೇವಲ ಅನ್ನಕ್ಕಾಗಿ ಖರ್ಚು ೩೫೦ ರೂಬಲ ಇತ್ತು. ಆದ್ದರಿಂದ ಸಂಬಳದಿಂದ ಅನ್ನ ವಸ್ತ್ರ ಆಸರ ಇವುಗಳ ಖರ್ಚು, ಮಕ್ಕಳ ಪಾಲನೆಯ ಖರ್ಚು ಸಾಕಾಗುವದು ಸಾಧ್ಯವಿದ್ದಿಲ್ಲವೆಂದು ಸ್ಪಷ್ಟವಿದೆ. ಆಗ “ಪ್ರವದಾ” ಪತ್ರಿಕೆಯು ಇನ್ನೊಂದು ಹತ್ತು ವರ್ಷಗಳಲ್ಲಿ ೬೦೦ ರೂಬಲ ಸಂಬಳ ಸಿಗಬಹುದೆಂದು ಆಶ್ವಾಸನೆ ನೀಡಿತ್ತು. ಅಂದರೂ ಇಬ್ಬರ ಅನ್ನಖರ್ಚಿಗೆ ಸಾಲದು. ಹೀಗೆ ಕಾರಖಾನೆಗಳಲ್ಲಿಯ ನಗರ ಕಾರ್ಮಿಕರ ಸ್ಥಿತಿ. ಕೃಷಿಜೀತಗಾರರಿಗೆ ಸಾಮುದಾಯಿಕ ಕೃಷಿಗಳಲ್ಲಿ ೧೦-೧೫ ರೂಬಲ ಕೂಲಿ ದೊರೆಯುತಿತ್ತು. ಅವರಿಗೆ ಕುಟುಂಬದ ಖರ್ಚು ನಿರ್ವಹಿಸಲು, ೮-೧೦ ತಾಸು ಸಾಮುದಾಯಿಕ ಕೃಷಿಯಲ್ಲಿ ದಣಿದ ನಂತರ, ಖಾಸಗಿ ಜಮೀನುಗಳಲ್ಲಿ ಇನ್ನೂ ೪-೫ ತಾಸು ದಿನಾಲು ಶ್ರಮಿಸಬೇಕಾಗುತ್ತಿತ್ತು.
೧೯೫೬ ರ ಈ ಲೆಕ್ಕ ಕಾರ್ಮಿಕರ ಕ್ರಾಂತಿಯಾಗಿ ೪೦ ವರ್ಷಗಳ ನಂತರ. ಇದಕ್ಕೂ ಪೂರ್ವದಲ್ಲಿ ಬಹಳೇ ಭಯಾನಕ ಸ್ಥಿತಿಯಿತ್ತು. ಯಾಕೆಂದರೆ ೧೯೧೭ ರಲ್ಲಿ, ರಶಿಯದ ಬಳಿ ಶೂನ್ಯ ಬಂಡವಾಳವಿತ್ತು. ಔದ್ಯಮಿಕ ಉತ್ಪಾದನೆ ಹೆಚ್ಚಿಸುವುದಕ್ಕಾಗಿ, ಜರ್ಮನಿ, ಫ್ರಾನ್ಸ್‌ಗಳಿಂದ ಯಂತ್ರ ಸಾಮಗ್ರಿ, ಶಾಸ್ತ್ರಜ್ಞ, ತಂತ್ರಜ್ಞರನ್ನು ತರುವದು ಅನಿವಾರ‍್ಯವಾಗಿತ್ತು. ಆ ವೆಚ್ಚವನ್ನು ಹೇಗೆ ಮಾಡುವದು? ಬೇಸಾಯಗಾರರು ಬೆಳಿಸಿದ, ಸಿದ್ದವಾದ ಪಯಿರನ್ನು ಸರಕಾರವು ಸೇನೆಯನ್ನು ಕಳಿಸಿ ಕೊಯ್ದು ಕೊಂಡು ಹೋಗುತ್ತಿತ್ತು. ಅಡ್ಡಿ ಮಾಡಿದಲ್ಲಿ ಗುಂಡಿಕ್ಕಲಾಗುತ್ತಿತ್ತು. ಅನ್ನ ಧಾನ್ಯ, ಹಾಲು, ಫಲ, ಮೊಟ್ಟೆಗಳಿಂದ ತುಂಬಿದ ಪೆಟ್ಟಿಗೆಗಳು ರೈಲಿನಿಂದ ಜರ್ಮನಿಗೆ ಹೋಗುತ್ತಿದ್ದ ಮತ್ತು ಎರಡೂ ಬದಿಗಳಲ್ಲಿ ಸಾವಿರಾರು ಹೆಣಗಳು ಬಿದ್ದಿರುತ್ತಿದ್ದ ದೃಶ್ಯಗಳು, ಆಗ ಅಸಾಮಾನ್ಯವಲ್ಲವೆಂದು ಮಾರಿಸ್ ಹಿಡ್ಸನ್ ವರ್ಣಿಸಿದ್ದಾನೆ. ಕಾನ್ಸಂಟ್ರೇಶನ್ ಕ್ಯಾಂಪುಗಳ ವರ್ಣನೆಗಳು ಇದೇ ಥರ ಭಯಾನಕವಾಗಿವೆ. ೧೮-೨೦ ತಾಸು ದುಡಿಸಿಕೊಂಡು ಹೊಟ್ಟೆತುಂಬ ಸಹ ನೀಡುತ್ತಿರಲಿಲ್ಲ. ಇಂಗ್ಲಂಡ ಅಮೇರಿಕೆಗಳ ೨೦ ವರ್ಷಗಳ ಸಾಧನೆ ರಶಿಯಕ್ಕೆ. ೨೫ ವರ್ಷಗಳಲ್ಲಿ ಸಾಧಿಸುವದಿತ್ತು. ಆದ್ದರಿಂದ ೨೦೦ ವರ್ಷಗಳಲ್ಲಿ ಕಾರ್ಮಿಕರು, ಶ್ರಮಿಕರು ಪಟ್ಟ ಯಾತನೆಗಳನ್ನು, ೨೫ ವರ್ಷಗಳಲ್ಲಿಯೇ ಗುರಿಪಡಿಸುವದು ಅಪರಿಹಾರ್ಯವಾಗಿತ್ತು. ಇಂಥ ಪರಿಸ್ಥಿತಿಯಲ್ಲಿ ಪ್ರಜಾತಂತ್ರ ಹೇಗೆ ಶಕ್ಯವಾದೀತು? ರಶಿಯದಲ್ಲಿ ಕಾರ್ಮಿಕರಿಗೆ ವ್ಯಕ್ತಿಸ್ವಾತಂತ್ರ್ಯ, ಸಂಘಟನಾ ಸ್ವಾತಂತ್ರ್ಯ, ಮುದ್ರಣ ಸ್ವಾತಂತ್ರ, ಯಾವದೇ ಸ್ವಾತಂತ್ರ, ಆಗಲೂ ಇದ್ದಿಲ್ಲ, ಮತ್ತು ಈಗಲೂ ಇಲ್ಲ. ಯಾಕೆಂದರೆ ಎಲ್ಲರಿಗೂ ಪೂರೈಸುವಷ್ಟು ಅನ್ನ ವಸ್ತ್ರಗಳನ್ನು ಕೊಡುವ ಧನ ಅಲ್ಲಿ ಇನ್ನೂ ಉತ್ಪನ್ನವಾಗಿಲ್ಲ.
ಚೀನದ ಪ್ರಾರಂಭ ಕಾಲದಲ್ಲಿ ಇದಕ್ಕೂ ಮೇಲ್ಪಟ್ಟು ಭಯಾನಕ ಸ್ಥಿತಿ ಇತ್ತು. ಚೀನೀ ಮುಂದಾಳುಗಳು ಕಂಗಾಲ ಬರಗಾಲದ ತತ್ವಜ್ಞಾನವನ್ನೇ ತಯಾರಿಸಿದರು. ದುಡಿತದ ಶ್ರಮಕ್ಕೆ ಮಜೂರಿ ಸಿಗಬೇಕು. ಹೊಟ್ಟೆಗೆ ಕೂಳು ದೊರೆಯಬೇಕು ಎಂಬ ಅಪೇಕ್ಷೆಗಳೇ ಬಂಡವಾಳಶಾಹೀ, ಬೂರ್ಜ್ವಾವೃತ್ತಿಯ ಲಕ್ಷಣಗಳೆಂದು ಬೋಧಿಸಲು ಪ್ರಾರಂಭಿಸಿದರು. ೧೬ ತಾಸು ದುಡಿಯುವ ಜೀತದಾರನಿಗೆ ಅವರು ಮಿತಾಹಾರದ ಉಪದೇಶವನ್ನು ಮಾಡುತ್ತಿದ್ದರು. ಇದರ ಅರ್ಥವೇನೆಂದರೆ ಚೀನೀ ಕಮ್ಯುನಿಸ್ಟರು ಚೀನಿ ಜನತೆಯನ್ನು ಉರುವಲದಂತೆ ಉಪಯೋಗಿಸಿದರು. ಉಕ್ಕಿನ ಕುಲುಮೆಗಳು ಆರಂಭಿಸಿದ ನಂತರ, ವಾಡಿಕೆಯಂತೆ ೧೬ ತಾಸುಗಳಿಗಿಂತಲೂ ೪-೫ ತಾಸು ಹೆಚ್ಚಿಗೆ ಕೆಲಸ ಮಾಡಿಸುತ್ತಿದ್ದರು, ಮತ್ತು ಒಮ್ಮೊಮ್ಮೆ ಅವಿಶ್ರಾಂತವಾಗಿ ೩-೪ ದಿವಸಗಳವರೆಗೆ ಕೆಲಸ ತಕ್ಕೊಳ್ಳುತ್ತಿದ್ದರು, “ಪೀಪಲ್ಸ್ ಡೇಲಿ” ಎಂಬ ಚೀನೀ ಕಮ್ಯುನಿಸ್ಟ್ ಪತ್ರಿಕೆಗೆ ಅನುಕಂಪ ಬಂದು, ಅವಿಶ್ರಾಂತವಾಗಿ ೪೮ ತಾಸುಗಳಿಗಿಂತಲೂ ಹೆಚ್ಚಿಗೆ ಕೆಲಸ ತಕ್ಕೊಳ್ಳಬಾರದೆಂದು ಬರೆಯಿತು. ಅತ್ಯಂತ ಪ್ರಗತಿಪರವಾದ ರಾಷ್ಟ್ರಗಳಿಗೆ ಮುಂಬರುವ ವರ್ಷಗಳ ಬಂಡವಾಳವೆಂದು ರಾಷ್ಟ್ರೀಯ ಉತ್ಪನ್ನದ ಶೇಕಡಾ ೧೫-೨೦ ರಷ್ಟೇ ಉಳಿತಾಯ ಸಾಧ್ಯವಾಗುತ್ತದೆ. ಜನರ ಅನ್ನಬಟ್ಟೆಗಳ ತುಬಾಗ್ರತೆ ಮಾಡದ ಹೊರತು, ಇದಕ್ಕೂ ಹೆಚ್ಚಿಗೆ ಉಳಿತಾಯ ಮಾಡಲಾರವು. ಆದರೆ ಹಿಂದುಳಿದ ದೇಶವಾದ ಚೀನವು ಹೀಗೆ ಶೇಕಡಾ ೨೫ ರಿಂದ ೩೦ ರವರೆಗೆ ಉಳಿತಾಯ ಮಾಡಿತೆಂದರೆ ಅದು ಶ್ರಮಿಕ ಜನತೆಯ ಜೀವನಾವಶ್ಯಕ ವಸ್ತುಗಳ ತುಟಾಗ್ರತೆ ಯಾವ ಮಟ್ಟದಲ್ಲಿ ಮಾಡಿರಬಹುದೆಂದು ಕಲ್ಪಿಸಬಹುದು.
ಆದರೆ ಈ ಎರಡೂ ದೇಶಗಳಲ್ಲಿ ಬೇರೆ ಏನೂ ಮಾಡಲಿಕ್ಕೆ ಸಾಧ್ಯವೇ ಇರಲಿಲ್ಲ. ಬಹು ಜನರ ರಕ್ತ ಶೋಷ ಮಾಡದೆ, ಔದ್ಯಮಿಕ ಪ್ರಗತಿ ಸಾಧಿಸುವದು ಅಶಕ್ಯ ಮತ್ತು ಹಾಗಾಗದ ಹೊರತು ಪೂರ್ಣ ಪ್ರಜಾಸತ್ತೆಯೂ ಅಶಕ್ಯ. ಆದರೆ ಭಾರತವು ಹಾಗೆ ಮಹತ್ವಾಕಾಂಕ್ಷೆಯನ್ನು ಇಟ್ಟುಕೊಂಡಿದೆ.
ಭಾರತಕ್ಕೆ ಶೇಕಡ ೭ ರಕ್ಕಿಂತ ಹೆಚ್ಚಿಗೆ ಉಳಿತಾಯ ಮಾಡಲು ಸಾಧ್ಯವಿಲ್ಲ. ಆಗಲೂ ಬಹಳಷ್ಟು ಜನರು ಅರೆಹೊಟ್ಟೆಯವರೆ. ಇಂಥ ಪರಿಸ್ಥಿತಿಯಲ್ಲಿ ನಾವು ಸರ್ವಾಂಗ ಸಂಪೂರ್ಣ ಪ್ರಜಾಸತ್ತೆಯನ್ನು ಸ್ಥಾಪಿಸಿಟ್ಟಿದ್ದೇವೆ. ಆದರೆ ಮೇಲೆ ಹೇಳಿದ ಇತಿಹಾಸ ಮಾತ್ರ, ಆರ್ಥಿಕ ಪ್ರಗತಿ ಮತ್ತು ಪ್ರಜಾಸತ್ತೆ ತ್ರಿಕಾಲದಲ್ಲಿಯೂ ಸಾಧ್ಯವಿಲ್ಲೆಂದು ಅಬ್ಬರಿಸುತ್ತದೆ. ನಾವು ರಾಜಕೀಯ ಸ್ವಾತಂತ್ರ್ಯ ದೊರಕಿಸಿದೆವು ಅಂದರೆ ಪರಕೀಯರ ಸಾಮ್ರಾಜ್ಯದಿಂದ ಸ್ವಾತಂತ್ರ್ಯ ದೊರಕಿಸಿದೆವು. ಆದರೆ ಆರ್ಥಿಕ ಸ್ವಾತಂತ್ರ‍್ಯ ಮಾತ್ರ ದೊರಕಿಸಲು ಸಾಧ್ಯವಾಗಿಲ್ಲ. ಪರಕೀಯರ ಸಾಮ್ರಾಜ್ಯ ಹೋಯಿತು ಆದರೆ ಸ್ವಕೀಯ ಬಂಡವಾಳಶಾಹಿಯು ಜನತೆಯನ್ನು ಪರಕೀಯರ ಸಾಮ್ರಾಜ್ಯದಂತೆಯೇ ಪಾರತಂತ್ರ್ಯದಲ್ಲಿಟ್ಟಿದೆ. ಆದ್ದರಿಂದ ನಮ್ಮ ಹೋರಾಟ ಆರ್ಥಿಕ ಸ್ವಾತಂತ್ರ‍್ಯಕ್ಕಾಗಿ ಅದೆ. ಆರ್ಥಿಕ ಪ್ರಗತಿಯಾಗದ ಹೊರ್ತು ಅದು ಯಶಸ್ವಿಯಾಗಲಾರದು. ಈ ಆರ್ಥಿಕ ಪ್ರಗತಿ ಪ್ರಜಾತಂತ್ರದ ಮಾರ್ಗದಿಂದ ಸಾಧ್ಯವಾದೀತೇ?
ಮೇಲೆ ಹೇಳಿದಂತೆ ಬೇರೆ ದೇಶಗಳ ಇತಿಹಾಸದಿಂದ ಈ ಬಗ್ಗೆ ನಿರಾಶೆಯ ಭಾವನೆ ಉಂಟಾಗುವದು. ಆದರೂ ಇಲ್ಲಿಯ ವಿದ್ಯಾಸಂಪನ್ನ, ಸುಶಿಕ್ಷಿತ, ಮಧ್ಯಮ ವರ್ಗಸಮಾಜದ ನೇತೃತ್ವವನ್ನು ವಹಿಸಿದ ವರ್ಗ-ಮನಸ್ಸು ಮಾಡಿದರೆ, ಇದರಲ್ಲಿಯೂ ನಿಶ್ಚಿತವಾಗಿ ಮಾರ್ಗ ಸಿಗಬಹುದು, ಆ ಮಾರ್ಗ ಯಾವದು ?
ಭಾರತದಲ್ಲಿ ನೂರು ಸೇರು ಧನವಿಲ್ಲ, ಆದರೆ ನೂರರ ಪ್ರಜಾಸತ್ತೆ ಸ್ಥಾಪಿಸಿಟ್ಟಿದ್ದೇವೆ. ಭಾರತದಂತೆ ನಿಕೃಷ್ಟ ಅವಸ್ಥೆಯಲ್ಲಿದ್ದ ರಶಿಯಾ ಚೀನ ದೇಶಗಳು ನೂರರ ಪ್ರಜಾಸತ್ತೆಯನ್ನು ಸ್ಥಾಪಿಸಿದವು. ಆದರೆ ಪ್ರತ್ಯಕ್ಷವಾಗಿ ಅದನ್ನು ಕಾಗದದ ಮೇಲಷ್ಟೇ ಇಟ್ಟು, ಉತ್ಪಾದನೆಯ ಸಲುವಾಗಿ ಕಾರ‍್ಮಿಕರಿಗೆ ಜುಲುಮೆಯಿಂದ ೧೮-೨೦ ತಾಸು ದುಡಿಸಿದರು. ಅವರು ಸಾಧಿಸಿದ ಆರ್ಥಿಕ ವಿಕಾಸ, ಪ್ರಜಾತಂತ್ರದ ಮಾರ್ಗದಿಂದಲ್ಲ, ಆದರೆ ನಿರ್ಘೃಣವಾದ ದಂಡಸತ್ತೆಯ ಆಧಾರದಿಂದ, ಬಂದೂಕಿನ ಬಲದಿಂದ. ಭಾರತವು ಆ ಮಾರ್ಗವನ್ನು ಮೆಚ್ಚುವದಿಲ್ಲ. ಆ ಮಾರ್ಗವು ನಮಗೆ ಶಕ್ಯವೂ ಇಲ್ಲ.
ಹಾಗಾದರೆ ಇನ್ನೊಂದು ದಾರಿ ಇಲ್ಲವೇ? ಚಾರಿತ್ರ್ಯವು ಇನ್ನೊಂದು ಶಕ್ತಿಯಿದೆ. ಬಂದೂಕಿನ ಭೀತಿಯಿಂದ, ದಂಡಸತ್ತೆಯ ಜುಲುಮೆಯಿಂದ ಅರೆಹೊಟ್ಟೆಯ ಜನ ೧೮-೨೧ ತಾಸು ಕೆಲಸ ಮಾಡುತ್ತಾರೆ, ನಿಜ. ಆದರೆ ರಾಷ್ಟ್ರದ ಧುರೀಣರು, ಸಮಾಜದ ನೇತೃತ್ವ ಮಾಡುವ ಎಲ್ಲ ಸುಶಿಕ್ಷಿತ ವರ್ಗ, ಚಾರಿತ್ರ ಸಂಪನ್ನವಿದ್ದು, ತ್ಯಾಗ ಧ್ಯೇಯ ವಾದಿಯಾಗಿದ್ದಲ್ಲಿ, ತಾನು ಸ್ವತಃ ಅರೆಹೊಟ್ಟೆಯಿಂದ ೧೮-೨೦ ತಾಸು ಕೆಲಸ ಮಾಡಲು ಸಿದ್ಧನಿದ್ದರೆ, ಆ ಪುಣ್ಯದ ಬಲದಿಂದ ಸಾಮಾನ್ಯ ಜನಕ್ಕೆ ಹಾಗೆಯೇ, ಅಷ್ಟೇ ಕೆಲಸ ಮಾಡಲು, ಪ್ರೇರಣೆ ಕೊಡಬಹುದು, ಮತ್ತು ಆಗ ಹಿಂದುಳಿದ ದೇಶ : ೩೦-೩೫ ಸೇರು ಧನವಿದ್ದ ದೇಶ, ಪೂರ್ಣ ಪ್ರಜಾಸತ್ತೆ ಸ್ಥಾಪಿಸಿದರೂ, ಆರ್ಥಿಕ ವಿಕಾಸ ಸಾಧಿಸಬಹುದು.
ಕಾಂಗ್ರೆಸ್ಸಿನ ಧುರೀಣರು ಸ್ವಾತಂತ್ರ್ಯ ಪ್ರಾಪ್ತಿಯ ನಂತರ ಅಧಿಕಾರಕ್ಕೆ ಬಂದ ನಂತರ, ಇದೇ ತತ್ವಜ್ಞಾನವನ್ನು ಹೇಳಲು ಪ್ರಾರಂಭಿಸಿದ್ದರು. ಕಲ್ಯಾಣಿಯಲ್ಲಿಯ (ಬಂಗಾಲ) ತಮ್ಮ ಭಾಷಣದಲ್ಲಿ ಪಂಡಿತ ನೆಹರು ಹೇಳಿದ್ದೇನೆಂದರೆ “ನಾವು ಯೋಗ್ಯ ದಾರಿಯಿಂದ ಹೋದರೆ, ಜನತೆಯ ಸಹಕಾರ ಒಳ್ಳೇ ರೀತಿಯಿಂದ ಸಿಗಬಹುದು, ಆದರೆ ಇನ್ನು ಮುಂದೆ ಅಪಯಶ ಬಂದರೆ, ಅದು ಜನತೆಯ ದೋಷವಲ್ಲ, ನಮ್ಮದು, ಕಾಂಗ್ರೆಸ್ ಕಾರ್ಯ ಕರ್ತರದು. ನಾವು ಸ್ವಾತಂತ್ರ‍್ಯ ಹೋರಾಟದ ಕಾಲದ ಧೈಯವಾದವನ್ನು ಮತ್ತೊಮ್ಮೆ ಉದ್ದೀಪನಗೊಳಿಸಿದರೆ, ಕಾಂಗ್ರೆಸ್ ಕಾರ್ಯಕ್ಷಮವಾದೀತು. ಆದ್ದರಿಂದ ಕ್ಷುದ್ರ ಜಗಳ ಮರೆತು, ಸ್ವಾರ್ಥ ಮತ್ತು ಅಧಿಕಾರ ಲೋಭಗಳ ಮೋಹ ನಾವು ಜಯಿಸಬೇಕು, ನಮ್ಮ ವಿದ್ಯಾಪೀಠಗಳು, ಅಲ್ಲಿನ ಶಿಕ್ಷಕ ವಿದ್ಯಾರ್ಥಿಗಳು ಇಂಥ ಶಕ್ತಿ ನಿರ್ಮಾಣದ ಕೇಂದ್ರಗಳಾಗಬೇಕು, ಅವುಗಳಿಂದ ಎಲ್ಲೆಡೆಗೂ ತೇಜದ ಪ್ರಸಾರವಾಗಬೇಕು, ಹೊಸ ನಾಯಕ ಉದಿಸಬೇಕು”.
ಸಂಸ್ಕಾರದ ಅವಶ್ಯಕತೆ
ಇನ್ನೊಂದು ಪ್ರಸಂಗದಲ್ಲಿ ನೆಹರುರವರು ದೇಶಕ್ಕೆ ಸಂದೇಶ ಕೊಟ್ಟಿದ್ದೇನೆಂದರೆ-“ಜನರು ಹಣದ ಮಹಿಮೆಯನ್ನು ಕೊಂಡಾಡುತ್ತಾರೆ. ಹಣ ಬೇಕೇಬೇಕು ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಇನ್ನು ಮುಂದೆ ನಿಜವಾದ ಮಾಹಿತಿ ಮಾನವನಿಗೆ ಅದೆ, ಮಾನವ -ಇತಿಹಾಸವನ್ನು ರೂಪಿಸುತ್ತಾನೆ. ನಾವು ಭಾರತದಲ್ಲಿ ಹೊಸ ಸಂಸ್ಕಾರದ ಯೋಗ್ಯ ಮಾನವಸಮೂಹವನ್ನು ನಿರ್ಮಿಸಬೇಕು. ಅಂದರೆ ಮುಂದಿನ ಕಾರ್ಯ ಸುಗಮವಾಗುವದು.”
ಜೋಧಪುರದಲ್ಲಿ ಸರದಾರ ವಲ್ಲಭಭಾಯಿ ಪಟೇಲರು ಕಾಂಗ್ರೆಸ್ ಕಾರ್ಯಕರ್ತರನ್ನುದ್ದೇಶಿಸಿ ಹೇಳಿದ್ದೇನೆಂದರೆ-“ಕಾಂಗ್ರೆಸ್ ಜನರ ಮೇಲೆ ಬಹು ದೊಡ್ಡ ಹೊಣೆಗಾರಿಕೆ
ಬಿದ್ದಿದೆ, ಅದನ್ನು ಪಾರುಗಾಣಿಸುವದಕ್ಕಾಗಿ ನೀವು ಅತ್ಯಂತ ಸಂಯಮದಿಂದ ವರ್ತಿಸಿ ಜನರಿಗೆ ಆದರ್ಶರಾಗಬೇಕು, ತ್ಯಾಗ, ನಿಗ್ರಹ, ರಾಷ್ಟ್ರಪ್ರೇಮ ಈ ಗುಣಗಳನ್ನು ನೀವು ಜೋಪಾಸನೆ ಮಾಡಬೇಕು. ಮತ್ತೊಮ್ಮೆ ಮದ್ರಾಸ್ ಚೇಂಬರ್ ಆಫ್ ಕಾಮರ್ಸದಲ್ಲಿ ಭಾಷಣ ಮಾಡುತ್ತ ಹೀಗೆಂದರು “ಸ್ವಾರ್ಥ, ಸತ್ತೆ ಅಧಿಕಾರಗಳ ಮೋಹ ನೀವು ಬಿಡದಿದ್ದರೆ ಭಯಾನಕ ಪರಿಣಾಮವಾದೀತು. ನಮ್ಮ ದೇಶದ ಮೇಲೆ ಈಗ ಸಂಕಟ ಬಂದದ್ದಾದರೆ ಅದು ಹೊರಗಿನಿಂದ ಅಲ್ಲ. ಒಳಗಿನಿಂದಲೇ. ಈಗ ನಾವು ಸೋತರೆ, ಆ ದೋಷ ನಮ್ಮದೇ. ಆದ್ದರಿಂದ ವ್ಯಾಪಾರಿಗಳೇ ಮತ್ತು ಕಾಂಗ್ರೆಸ್ ಜನರೇ ನೀವು ಸ್ವಾರ್ಥ ಹಣದಾಶೆಗಳ ತ್ಯಾಗಮಾಡಿ, ಲೋಕಸೇವೆಯ ವ್ರತವನ್ನು ಹಿಡಿಯಿರಿ”.
ನಾಗಪುರದಲ್ಲಿ ಪದವೀದಾನ ಸಮಾರಂಭದಲ್ಲಿ ಸ್ನಾತಕರಿಗೆ ಪಂಡಿತಜಿಯವರು ಏನು ಹೇಳಿದರು? ಅವರೆಂದರು “ಹೊಸ ವರುಷ ನಿಮಗೆ ಸುಖದಾಯಕವಾಗಲೆಂದು ಅಶೀರ್ವದಿಸಲಿಕ್ಕೆ ನನಗೆ ಸಾಧ್ಯವಿಲ್ಲ. ಅತಿಶಯ ಪರಿಶ್ರಮ, ಅತಿಶಯ ಪ್ರಯತ್ನದ ಅಖಂಡ ಉದ್ಯೋಗದ ವರ್ಷವಾಗಲೆಂದು ಹಾರೈಸುತ್ತೇನೆ”.
ಈ ಎಲ್ಲ ಹೇಳಿಕೆಗಳ ಭಾವಾರ್ಥ ಸ್ಪಷ್ಟವಿದೆ. ಭಾರತದಲ್ಲಿ ಪ್ರಜಾಸತ್ತೆ ಯಶಸ್ವಿಯಾಗಬೇಕಾದರೆ ಎಲ್ಲರೂ ಅಖಂಡ ಪರಿಶ್ರಮ ಮಾಡಬೇಕು. ಅಂದರೇನೇ ಸಮೃದ್ಧಿಯಾಗಿ ಈ ದೇಶದ ಉನ್ನತಿಯಾದೀತು. ಆದರೆ ಜನರ ಪರಿಶ್ರಮ ಮಾಡುವಂತೆ ಅವರನ್ನು ಪ್ರವೃತ್ತಗೊಳಿಸುವದು ಹೇಗೆ ? ಕಾಂಗ್ರೆಸ್ ಜನರು ಅಂಥ ಆದರ್ಶವನ್ನು ಜನರೆದುರು ಇಡಬೇಕು, ಧ್ಯೇಯವಾದ, ತ್ಯಾಗ, ಜನಸೇವೆ, ಸಂಯಮ, ನಿಗ್ರಹ, ರಾಷ್ಟ್ರನಿಷ್ಠೆ, ಈ ಗುಣಗಳನ್ನು ಸ್ವತಃ ಜೋಪಾಸನೆ ಮಾಡಿ, ಅವರು ಜನರ ಮೇಲೆ ಅವುಗಳ ಸಂಸ್ಕಾರ’ ಮಾಡಬೇಕು, ಅಂದರೇನೇ, ಸಮಾಜವಿಕಾಸ ಯೋಜನೆ, ಪಂಚವಾರ್ಷಿಕ ಯೋಜನೆಗಳು ಯಶಸ್ವಿಯಾಗಿ ಭಾರತಕ್ಕೆ ವೈಭವ ಪ್ರಾಪ್ತವಾದೀತು.
ಸ್ವಾರ್ಥದ್ದೇ ಚಲಾವಣೆ
ಆದರೆ ಕಾಂಗ್ರೆಸ್ಸಿನ ಹಿರಿಯ ಧುರೀಣರ ಸ್ವಾರ್ಥತ್ಯಾಗ, ಧೈಯವಾದದ ಉಪದೇಶವನ್ನು ಕಾಂಗ್ರೆಸ್ ಜನರು ಎಂದೂ ಮನ್ನಿಸಿಲ್ಲ, ಅಧಿಕಾರ ಬಂದ ನಂತರ, ಇಲ್ಲಿಯವರೆಗೆ ತ್ಯಾಗ ಮಾಡಿದ್ದಾಯಿತು, ಈಗ ಅದರ ನಷ್ಟ ಭರ್ತಿಮಾಡಿಕೊಳ್ಳಬೇಕು ಹೀಗೆ ಅವರ ವೃತ್ತಿಯಾಯಿತು. ಮೈಸೂರ ವಿಧಾನಸಭೆಯಲ್ಲಿ ಸರದಾರ ವಲ್ಲಭಭಾಯಿ ಹೇಳಿದರು “ಈಗ ಕಾಂಗ್ರೆಸ್ ಜನರಿಗೆ ಸ್ವಾರ್ಥದ ಹೊರ್ತು ಏನೂ ಕಾಣಲೊಲ್ಲದು, ನಾವೆಲ್ಲರೂ ತ್ಯಾಗದಿಂದ, ನಮ್ಮ ಸಾಮರ್ಥ್ಯ ವರ್ಧಿಸಿದೆವು. ಆದರೆ ಈಗ ಹಿಂದಿನ ನಷ್ಟವನ್ನು ತುಂಬಿಕೊಳ್ಳುವದನ್ನು ನಿಶ್ಚಯಿಸಿದೆಯೆಂದು ತೋರುತ್ತದೆ. ನಮ್ಮ ಚಾರಿತ್ರ್ಯದ ದರ್ಜೆ ಹೀನವಾಗಿದೆ. ಇಡೀ ಸನ್ನಿವೇಶ ದೂಷಿತವಾಗಿದ್ದು ಜನತೆಯ ಮೇಲೂ ಪರಿಣಾಮ ಬೀರತೊಡಗಿದೆ” (೨೫-೨-೧೯೪೯)
ಮದ್ರಾಸದಲ್ಲಿ ಕಾಂಗ್ರೆಸ್ ಅಧ್ಯಕ್ಷ ಪಟ್ಟಾಭಿ ಸೀತಾರಾಮಯ್ಯನವರು ನುಡಿದರು “ಮೊದಲು ಕಾಂಗ್ರೆಸ್ಸದಲ್ಲಿ ಭೇದಗಳಿದ್ದರೂ ನಾವು ಸಂಘಟಿತರಾಗಿದ್ದೆವು. ಆದರೆ ಸ್ವಾತಂತ್ರ್ಯದ ನಂತರ, ಕಾಂಗ್ರೆಸದಲ್ಲಿ, ಗುಂಪುಗಳಾಗಿದ್ದು, ಅವು ತತ್ವಕ್ಕಾಗಿ ಅಲ್ಲ. ಜನತಾ ಪ್ರತಿನಿಧಿಗಳು ಲಾಯಸೆನ್ಸ, ಪರಮಿಟ್ಟುಗಳಿಗೆ ವಶೀಲಿ (ದುರ್ವರ್ಚಸ್ಸು) ಹಚ್ಚುವದು ನಿಂದನೀಯವಗಿದೆ. ಅವರು ಕಪ್ಪು ವ್ಯಾಪಾರ ಮತ್ತು ಭ್ರಷ್ಟಾಚಾರ ಮಾಡುತ್ತಿರುವ ದೂರುಗಳು ಕೇಳಬರಹತ್ತಿವೆ” (೧೮-೧-೧೯೪೯)
ದಿಲ್ಲಿಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಮುಂದೆ ನೆಹರುರವರು ಕಾಂಗ್ರೆಸ್ ಜನರನ್ನು ತೆಗಳಿದರು “ಮೊದಲು ಈ ಸಂಘಟನೆಯು ಬಹಳ ಚೈತನ್ಯಯುಕ್ತವಾಗಿದ್ದಿತು. ಈಗ ಅದು ಜಡವಾಗಿದೆ. ಸ್ವಾತಂತ್ರ್ಯ ದೊರೆತು ಎರಡು ಎರಡೂವರೆ ವರ್ಷಗಳಾಗಿವೆ. ಈ ಅವಧಿಯಲ್ಲಿ ನಾವು ಮಾಡಿದ್ದೇನು ? ಅಧಿಕಾರ ಸ್ಪರ್ಧೆ, ಒಳಜಗಳ! ಕಾಂಗ್ರೆಸದ ಕ್ರಿಯಾಶೀಲ ಸಭಾಸದರನ್ನು ನೊಂದಾಯಿಸುವಲ್ಲಿ ಆದ ಪಾಪವನ್ನು ಸಂಶೋಧಿಸಲು ಏಳೆಂಟು ತಿಂಗಳು ಹಿಡಿದಾವು. ಬಹುಸಂಖ್ಯ ಕ್ರಿಯಾಶೀಲ ಸಭಾಸದರ ದಾಖಲೆಗಳು ಖೊಟ್ಟಿ ಅವೆ. ಅವುಗಳನ್ನು ಅಪ್ರಾಮಾಣಿಕವಾಗಿ ಮಾಡಲಾಗಿದೆ”. ಅಹಮ್ಮದಾಬಾದ ಭಾಷಣದಲ್ಲಿ ಪಂಡಿತಜಿಯವರ ಉದ್ವೇಗ ಸ್ಪಷ್ಟವಾಗಿ ಕಾಣುತ್ತದೆ. “ಕಾಂಗ್ರೆಸ್ಸು ಕೊಳೆತು ಹೋಗಹತ್ತಿದೆ, ನಾವು ಕಾಂಗ್ರೆಸ್ಸಿನ ಜಡ ದೇಹದ ಕಡೆಗೆ ಲಕ್ಷ ಕೊಡುತ್ತಿದ್ದೇವೆ. ಆತ್ಮದ ಕಡೆಗಲ್ಲ. ಈ ಸಂಘಟನೆಗೆ ಯಾವದೋ ಒಂದು ಭಯಾನಕ ರೋಗ ಹತ್ತಿದೆ. ಇಂದು ಕಾಂಗ್ರೆಸ್ಸಿನಲ್ಲಿ ಇತರರಿಗೆ ಪ್ರೇರಣೆಯನ್ನು ಕೊಡುವ ಸಾಮರ್ಥ ಉಳಿದಿಲ್ಲ. ನಾವು ಕೇವಲ ಬಹುಸಂಖ್ಯೆಯ ಬಲದಿಂದ ದೇಶದ ವಿಕಲತೆಯನ್ನು ಮುಚ್ಚಿಡಹತ್ತಿದ್ದೇವೆ.” ಅಹಮ್ಮದಾಬಾದ ಕಾಂಗ್ರೆಸ್ ಕಾರ್ಯಕಾರಿ ಮಂಡಳದಲ್ಲಿ ಐಕ್ಯತೆಯ ಗೊತ್ತುವಳಿಯನ್ನು ಮಂಡಿಸುತ್ತ ಅಬುಲಕಲಮ ಅಝಾದರು ವಿಷಮಾವಸ್ಥೆಯ ಉದ್ಘಾರಗಳನ್ನು ಹೊರಡಿಸಿದರು. “ಇಂದಿನ ಗೊತ್ತುವಳಿ ಕಾಂಗ್ರೆಸ್ಸನ್ನು ಬದುಕಿಸುವ ಕೊನೆಯ ಯತ್ನವಾಗಿದೆ. ಕಾಂಗ್ರೆಸ್ಸಿನ ವಿಘಟನೆಯಾಗುತ್ತಿದೆ. ಎಲ್ಲೆಡೆಯಲ್ಲೂ ಸ್ವಾರ್ಥ ಮತ್ತು ಗುಂಪುಗಾರಿಕೆಯು ತಲೆದೋರುತ್ತಿವೆ, ಆದ್ದರಿಂದ ಈ ಸಂಘಟನೆ ಕುಸಿದು ಬೀಳುವದು. ಇದು ಸ್ಪಷ್ಟ ಕಾಣಹತ್ತಿದೆ.”
ನೇತೃತ್ವಪ ಅಪಯಶ :
ರಶಿಯಾ ಚೀನ ದೇಶಗಳು ದಂಡಸತ್ತೆಯ ಬಲಾತ್ಕಾರದಿಂದ, ಬಂದೂಕಿನ ಬಲದಿಂದ, ಶ್ರಮಿಕ ಜನರ ರಕ್ತ ಶೋಷಿಸಿ, ಆರ್ಥಿಕ ವಿಕಾಸ ಸಾಧಿಸಿದವು. ಭಾರತದಲ್ಲಿ ಮುಂದಾಳುಗಳ, ಕಾಂಗ್ರೆಸ್ಸಿಗರ ಚಾರಿತ್ರ್ಯದ ಬಲದಿಂದ ಅದನ್ನು ಸಾಧಿಸಬಹುದಿತ್ತು. ಆರ್ಥಿಕ ವಿಕಾಸವೆಂದರೆ ರಕ್ತಶೋಷಣೆ ಎಲ್ಲಿಯೂ ತಪ್ಪಿದ್ದಲ್ಲ. ಆದರೆ ಧ್ಯೇಯವಾದದಿಂದ ಪ್ರೇರಿತರಾಗಿ ಜನ ತಾವೇ ಮಾಡುವದಕ್ಕೂ, ದುಂಡನೆಯ ಭೀತಿಯಿಂದ, ಜುಲುಮೆಯಿಂದ, ಸರಕಾರ ಮಾಡಿಸುವದಕ್ಕೂ, ಸ್ವರ್ಗ ನರಕಗಳ ಅಂತರವಿದೆ. ಈ ಮೊದಲೇ ಹೇಳಿದಂತೆ ಸ್ವಾತಂತ್ರ್ಯದ ನಂತರ, ಕಾಂಗ್ರೆಸ್ಸಿನ ಧ್ಯೇಯವಾದ ಭಂಗವಾಗದೆ ಉಳಿದಿದ್ದರೆ, ಕಾಂಗ್ರೆಸ್ಸಿಗರು ಜನತೆಯೆದುರು ಅವಿರತ ಶ್ರಮದ ಆದರ್ಶವಿಟ್ಟಿದ್ದರೆ, ಜನತೆ ಅರೆ ಹೊಟ್ಟೆಯಿಂದ ತಮ್ಮ ಎಲುವುಗಳನ್ನು ಸವೆಸುತ್ತಿದ್ದರು. ಆದರೆ ಕಾಂಗ್ರೆಸ್ಸಿನಲ್ಲಿ ಜನರಿಗೆ ಪ್ರೇರಣೆ ಕೊಡುವ ಸಾಮರ್ಥ್ಯ ಉಳಿದಿಲ್ಲವೆಂದು ಕಾಂಗ್ರೆಸ್ ಮುಂದಾಳುಗಳೇ ಹೇಳಿದ್ದಾರೆ. ಸ್ವಾರ್ಥ, ಕಪ್ಪು ವ್ಯಾಪಾರ, ಸ್ವಜನಪಕ್ಷಪಾತ, ಗುಂಪುಗಾರಿಕೆ, ಭ್ರಷ್ಟಾಚಾರ, ಈ ರೋಗಗಳಿಂದ, ಅದೇ ಶಿಥಿಲವಾಗಿ ಕುಸಿದು ಬೀಳುವದರಲ್ಲಿ ಅದೆ. ಹಾಗಾಗದೆ, ಕಾಂಗ್ರೆಸ್ ಸುದೃಢವಾಗಿದ್ದುಕೊಂಡು, ದೇಶದಲ್ಲಿ ಧ್ಯೇಯವಾದದ ಚೈತನ್ಯ ನಿರ್ಮಾಣ ಮಾಡಿದ್ದರೆ, ಪ್ರೌಢ ಮತದಾನದ ಪ್ರಜಾಸತ್ತೆಯನ್ನು ಸ್ಥಾಪಿಸಿದರೂ, ನಾವು ಆರ್ಥಿಕ ವಿಕಾಸವನ್ನು ಸಾಧಿಸಬಹುದಿತ್ತು,ಮತ್ತು ಜಗತ್ತಿನ ಇತಿಹಾಸದಲ್ಲಿ ಒಂದು ಅಪೂರ್ವವಾದ ಪ್ರಸಂಗ ಘಟಿಸುತ್ತಿತ್ತು. ಮಹಾತ್ಮಾಜಿಯವರು ಸತ್ಯಾಗ್ರಹದ ದಾರಿ ತೋರಿ, ಹಿಂಸಾತ್ಮಕ ಹೋರಾಟ ಮಾಡದೆ, ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟರು. ಇದು ಜಗತ್ತಿನಲ್ಲಿ ಅಪೂರ್ವವಾದದ್ದೇ. ಅದೇ ರೀತಿ, ಹಿಂದುಳಿದ ದೇಶದಲ್ಲಿ ಒಮ್ಮೆಲೆ ಪೂರ್ಣ ಪ್ರಜಾಸತ್ತೆ ಸ್ಥಾಪಿಸಿದರೂ, ಆರ್ಥಿಕ ವಿಕಾಸ ಸಾಧಿಸುವ ಅಪೂರ್ವವನ್ನು ಭಾರತವು ಇತಿಹಾಸದಲ್ಲಿ ಬರೆಯಿಸಬಹುದಿತ್ತು. ಆದರೆ ಕಾಂಗ್ರೆಸ್ (ಮತ್ತು ಒಟ್ಟಿನಲ್ಲಿ ಸುಶಿಕ್ಷಿತ ಮುಂದಾಳುತನ) ಸ್ವಾರ್ಥಿ, ನೀತಿಹೀನ, ಚಾರಿತ್ರಹೀನವಾಗಿದ್ದರಿಂದ, ಈ ದೇಶವನ್ನು ನರಕಕ್ಕೇ ಒಯ್ದು ಒಗೆಯಲಾಗಿದೆ. ಇಂದು ಭಾರತದ ತರುಣಶಕ್ತಿಗೆ, ರಾಷ್ಟ್ರದ ಉತ್ಕರ್ಷೆಯನ್ನು ಸಾಧಿಸುವದಿದ್ದರೆ, ನಾವೇನು ಮಾಡಬೇಕು ಮತ್ತು ಏನು ವರ್ಜಿಸಬೇಕು ಎಂದು ತಿಳಿಯಲೋಸುಗ, ಇದು ಹೇಗೆ ಕ್ರಮಕ್ರಮವಾಗಿ ಘಟಿಸುತ್ತ ಹೋಯಿತೆಂದು ನೋಡುವದು ಉದ್ಬೋಧಕವಾದೀತು.
ಕರ್ತೃತ್ವ ಶಕ್ತಿಯ ಲೋಪ
ಚಾರಿತ್ರ್ಯದ ಜೊತೆಗೆ ಕಾಂಗ್ರೆಸ್ಸಿನ ಕರ್ತೃತ್ವಶಕ್ತಿಯೂ ಲೋಪವಾಯಿತು. ಆರ್ಥಿಕ ವಿಕಾಸಕ್ಕಾಗಿ, ಅನೇಕ ಯೋಜನೆಗಳನ್ನು ಹಾಕಲಾಯಿತು. ಆದರೆ ಅವುಗಳಲ್ಲೊಂದೂ ಯಶಸ್ವಿಯಾಗಲಿಲ್ಲ. ಮಧ್ಯಭಾರತದಲ್ಲಿ, ಒಂದು ಭವ್ಯ ಯೋಜನೆಯನ್ನು ರೂಪಿಸಲಾಯಿತು, (೧೬-೩-೪೯) ಮೂರುನೂರು ಎಕರೆಗಳ ಒಂದು ತೋಟ. ಹೀಗೆ ಐದು
ಸಾವಿರ ತೋಟಗಳು, ಪ್ರತಿಯೊಂದು ತೋಟದಲ್ಲಿ ಮೂವತ್ತು ಕುಟುಂಬಗಳ ನಿವೇಶನ. ಅವರು ಸಹಕಾರೀ ತತ್ವದಿಂದ ಬೇಸಾಯ ಮಾಡಬೇಕು. ಇದಕ್ಕೆ ತಗಲುವ ೫೨ ಕೋಟಿ ರೂಪಾಯಿಗಳ ಬಂಡವಾಳವನ್ನು ಸರಕಾರ ಕೊಡಬೇಕು. ಹೀಗೆ ಆ ಯೋಜನೆಯಿತ್ತು. ಆ ಯೋಜನೆಯಿಂದ ಒಂದೂವರೆ ಲಕ್ಷ ಕುಟುಂಬ ಅಂದರೆ ಆರು ಲಕ್ಷ ಜನರಿಗೆ ಪ್ರಯೋಜನವಾಗುತ್ತಿತ್ತು. ಈ ಯೋಜನೆಗೆ ಮುಂದೇನಾಯಿತು ? ಅದು ಕಾಂಗ್ರೆಸ್ಸಿಗೇ ಗೊತ್ತು!
ಉತ್ತರ ಪ್ರದೇಶದಲ್ಲಿ ತರಾಯಿ ವಿಭಾಗದಲ್ಲಿ ಹತ್ತು ಲಕ್ಷ ಎಕರೆ ಬೀಳು ಭೂಮಿಯನ್ನು ಸಾಗು ಮಾಡುವ ಬಗ್ಗೆ ಇದೇ ತರಹದ ಯೋಜನೆ ಇತ್ತು. ಆ ತರಾಯಿ ವಿಭಾಗದಲ್ಲಿ ಈಗ ನಡೆದಿರುವ ಸ್ಥಿತಿಯ ವರ್ಣನೆ ೧೮ ನೇ ಜೂನ್ ೭೪ ರ ಟೈಮ್ಸ್ ಪತ್ರಿಕೆಯಲ್ಲಿ ಬಂದಿದೆ. ಆದ್ದರಿಂದ ಯೋಜನೆ ಸಫಲವಾದರೂ ಹೇಗಾಗುತ್ತದೆ ಎಂಬುದನ್ನು ಕಂಡುಕೊಳ್ಳಬಹುದು. ಈ ತರಾಯಿ ವಿಭಾಗದಿಂದ, ಕಾನೂನನ್ನು ಉಲ್ಲಂಘಿಸಿ ನಿಷೇಧಗಳನ್ನು ಲೆಕ್ಕಿಸದೆ, ಮೂರು ಕೋಟಿ ರೂಪಾಯಿಗಳ ಅಕ್ಕಿ, ಕಳ್ಳಸಾಗಾಣಿಕೆಯಿಂದ, ಕಲ್ಕತ್ತೆ ಮುಂಬಯಿವರೆಗೆ ತಲುಪುತ್ತದೆ. ಧಾನ್ಯ ವ್ಯಾಪಾರದ ಮೇಲಿನ ನಿಯಂತ್ರಣದಿಂದ ವ್ಯಾಪಾರಿಗಳು, ಸರಕಾರಿ ಅಧಿಕಾರಿಗಳು, ಪೋಲಿಸ್ ಇವರೆಲ್ಲರಿಗೂ ಬಂಗಾರದ ಗಣಿಯೇ ಸಿಕ್ಕಂತಾಗಿದೆ. ಸರಕನ್ನು ಸಾಗಾಣಿಕೆ ಮಾಡುವಾಗ, ಖೊಟ್ಟಿ ಸರ್ಟಿಫಿಕೇಟ್ ಖೊಟ್ಟಿ ಪರ್ಮಿಟ್ ಎಲ್ಲ ವ್ಯವಸ್ಥಿತವಾಗಿ ತಯಾರಾಗುತ್ತವೆ. ದೇಶವ್ಯಾಪಿಯಾದ ಈ ಕಾರುಭಾರು ಸರಕಾರೀ ಅಧಿಕಾರಿ, ಪೊಲೀಸ್, ಮಂತ್ರಿ ರೇಲ್ವೆ ಅಧಿಕಾರಿ, ಮುನಸೀ ಪಾಲಟಿಯ ಜಕಾತ ಅಧಿಕಾರಿ, ಇವರೆಲ್ಲರ ಸಹಕಾರ್ಯವಿಲ್ಲದೆ ನಡೆದೀತೇ ? ಒಬ್ಬ ತಲೆ ತಿರುಕ ಪೋಲೀಸ್ ಇನ್ಸ್‌ಸ್ಪೆಕ್ಟರನು ಒಂದು ಟ್ರಕ್ಕನ್ನು ನಿರ್ಬಂಧಿಸಿದಾಗ ಅವನಿಗೆ ಕೊಲೆಯ ಬೆದರಿಕೆ ಕೊಡಲಾಯಿತು !
ಸರಕಾರಿ ಯೋಜನೆಗಳು ಅಮಲು ಆಗುವ ರೀತಿಯನ್ನು ಶ್ರೀ ಗೋರವಾಲಾ ಆಗಲೇ ವರ್ಣಿಸಿದ್ದರು (ಕೇಸರಿ ೫-೧-೧೯೫೧) “ಇವೆಲ್ಲ ಯೋಜನೆಗಳು ಕೇವಲ ಕಾಗದದ ಮೇಲೆ ಇರುತ್ತವೆ. ಅವುಗಳನ್ನು ಅಮಲಿನಲ್ಲಿ ತರುವುದು ಸಾಧ್ಯವಾಗುವದಿಲ್ಲ, ಮಂಜೂರಾದ ಹಣ ಹೇಗೆ ವ್ಯಯವಾಯಿತೆಂದು ಯಾರೂ ನೋಡುವದಿಲ್ಲ. ಬೀಜಗಳನ್ನು ತಂದಾಗ ಅವುಗಳನ್ನು ಬಿತ್ತಲಾಯಿತೋ ಅಥವಾ ಮಾರಲಾಯಿತೋ, ಕೆರೆಯ ಹಣ ಹೇಗೆ ವ್ಯಯವಾಯಿತು, ಭತ್ತವನ್ನು ಹೊರಗೆ ಪೇಟೆಯಲ್ಲಿ ಮಾರಲಾಯಿತೇ-ಇವುಗಳ ಲೆಕ್ಕವೇ ಇರುವದಿಲ್ಲ. ಯೋಜನೆಯ ಸಲುವಾಗಿ ದೊರೆತ ಪರಮಿಟ್ಟ ಕಳ್ಳಪೇಟೆಯಲ್ಲಿ ಮಾರಲಾಗುತ್ತವೆ. ಯೋಜನೆಯ ಚಾಲಕರ ಸಭೆಗಳಾಗುತ್ತವೆ. ಆದರೆ ಆ ಕಡೆಗೆ ಯಾರ ಗಮನವೂ ಇರುವದಿಲ್ಲ”.
ಯಾವದೇ ವಾಹನದ ಚಾಲಕ ಅಮಲೇರಿದವನಿದ್ದಾಗ, ವಾಹನದ ಯಂತ್ರ ಕೆಟ್ಟಿದ್ದಾಗ, ಮಾರ್ಗ ಸುಗಮವಾಗಿಲ್ಲದಾಗ, ಹೋಗಬೇಕಾದ ಗುರಿ ನಿಶ್ಚಿತವಿಲ್ಲದಿದ್ದಾಗ ಏನಾಗುತ್ತದೆಯೋ ಹಾಗೆಯೇ ಈಗ ರೇಲ್ವೆ, ಎಸ್.ಟಿ. ಇವುಗಳು ಅದೇ ರೀತಿ ಈಗ ರಾಷ್ಟ್ರೀಯ ರಥದ ಸ್ಥಿತಿಯೂ ಆಗಿದೆ.
ಕಾಂಗ್ರೆಸ್ಸನ್ನು ನಾವು ಚುನಾವಣೆಯ ಯಂತ್ರವನ್ನಾಗಿ ಮಾಡಗೊಡುವದಿಲ್ಲವೆಂದು ಪಂಡಿತ ನೆಹರೂರವರು ಹೇಳಿದ್ದರು. ಆದರೆ ಅವರಿದ್ದಾಗಲೇ ಅದು ಹಾಗಾಗಿಬಿಟ್ಟಿತ್ತು. ಈಗಂತೂ ಅದರ ಬಗ್ಗೆ ಸಂಶಯಕ್ಕೆಡೆಯೇ ಇಲ್ಲ. ಕಾಂಗ್ರೆಸ್ಸಿಗರು ಮೊದಲು ಚುನಾವಣೆಯ ಮತ್ತು ನಂತರ ಸತ್ತೆಯ ಅಮಲಿನಲ್ಲಿರುತ್ತಾರೆ. ಇಲ್ಲಿಯ ಪ್ರಜಾತಂತ್ರ ಹೀಗಿದೆ. ಆದ್ದರಿಂದಲೇ ನಮ್ಮಲ್ಲಿ ನೂರು ಸೇರು ಧನ ನಿರ್ಮಾಣವಾಗುವದು ಅಶಕ್ಯವಾಗಿರುತ್ತದೆ.
ಚಾರಿತ್ರ್ಯವಿಲ್ಲ, ಕರ್ತೃತ್ವಶಕ್ತಿಯಿಲ್ಲ, ಇಷ್ಟೇ ಅಲ್ಲ, ಉತ್ಪಾದಿಸಿದ ಅಥವಾ ಪರದೇಶದಿಂದ ಕೊಂಡುತಂದ ಧನವನ್ನು, ಸುರಳೀತವಾಗಿ ರಕ್ಷಿಸಬೇಕೆಂಬ ದಕ್ಷತೆಯನ್ನೂ ಸಹ, ಈ ದೇಶದ ವಾಹಕರು ತಕ್ಕೊಳ್ಳುವದಿಲ್ಲ.
ರಾಷ್ಟ್ರ ಧನದ ಪೋಲು
ವಿಶಾಖಪಟ್ಟಣದಿಂದ ಬಿಹಾರಿಗೆ ಗೋಧಿಯನ್ನು ಸಾಗಿಸಲಾಯಿತು. ಅವುಗಳಲ್ಲಿಯ ೧೩೦೦೦ ಚೀಲ ಗೋಧಿ ಕೊಳೆತು ಹೋಯಿತು. ಇದರಿಂದ ಅಂದಾಜು ಮೂರು ಲಕ್ಷ ರೂಪಾಯಿಗಳ ನಷ್ಟವಾಯಿತು. ರಾಜ್ಯ ವ್ಯವಸಾಯ ಮಂತ್ರಿ ಬಿ. ಪಿ. ಮೌರ್ಯರು ಹೇಳಿದರು, “ಫುಡ್ ಕಾರ್ಪೊರೇಷನದ ಅಧಿಕಾರಿಗಳ ಅಜಾಗರೂಕತೆಯಿಂದ ಹೀಗಾಯಿತು. ಆ ಬಗ್ಗೆ ವಿಚಾರಣೆಮಾಡಿ ಅವರನ್ನು ಶಿಕ್ಷಿಸಲಾಗುವದು”, ಆದರೆ ಇದರ ಮೇಲೆ ಜನ ವಿಶ್ವಾಸ ಹೇಗಿಟ್ಟಾರು ? ಇಂತಹವುಗಳು ನಿತ್ಯದ ವಿಷಯಗಳೆಂದು ಜನರಿಗೆ ಗೊತ್ತಿದೆ. ಪ್ರತಿವರ್ಷ ಸಾವಿರಾರು ಟನ್ ಧಾನ್ಯ ಪೋಲಾಗುತ್ತದೆ. ಆದರೂ ಯಾರನ್ನೂ ಶಿಕ್ಷಿಸಿಲ್ಲ. ಬಹಳವಾದರೆ ವರ್ಗಾವಣೆಯಾಗುತ್ತದೆ. ಮತ್ತೆ ಅದೂ ಮೇಲಿನ ಅಧಿಕಾರ ಸ್ಥಾನಕ್ಕೆ !
ಈಗ ೪೪೦O ಮ್ಯಾಗ್ಯಾವ್ಯಾಟ್ ವಿದ್ಯುತ್ ನಿರ್ಮಾಣವಾಗುವಂತೆ ಬೇರೆ ಬೇರೆ ರಾಜ್ಯಗಳಲ್ಲಿ ಸಾಧನ ಸಾಮಗ್ರಿಗಳಿವೆ. ಆದ್ದರಿಂದ ವಿದ್ಯುತ್‌ಶಕ್ತಿಯ ತುಟಾಗ್ರತೆಯಾಗುವ ಕಾರಣಗಳೇನೂ ಇಲ್ಲವೆಂದು ಎಲ್ಲರಿಗೂ ವಿದಿತವಾದ ಸಂಗತಿ. ಆದರೆ ಇವೆಲ್ಲ ಸಾಮಗ್ರಿಗಳು ತುಕ್ಕು ಹಿಡಿದು ಬಿದ್ದಿರುತ್ತವೆ. ಎಲೆಕ್ಟ್ರಿಸಿಟಿ ಬೋರ್ಡುಗಳು ಪ್ರತಿರಾಜ್ಯಕ್ಕೂ ಇವೆ. ಆದರೆ ಅವುಗಳಿಗೆ ಈ ಸಾಮಗ್ರಿಗಳನ್ನು ಉಪಯೋಗಿಸಲು ಅವಧಾನವೇ ಇಲ್ಲ. ಆದ್ದರಿಂದ ವಿದ್ಯುತ್‌ಶಕ್ತಿಯ ಕಡಿತವಷ್ಟೇ ಅಲ್ಲ. ೧೦೦ ಕೋಟಿ ರೂಪಾಯಿಗಳ ವಿದೇಶ ವಿನಿಮಯ ದುರುಪಯೋಗವಾಗುತ್ತದೆ. ಆದರೂ ತಮಾಷೆಯ ಮಾತೆಂದರೆ – ಪ್ರದೇಶ ರಾಜ್ಯಗಳು ಇನ್ನೂ ಸಾಧನ ಸಾಮಗ್ರಿಗಳನ್ನು ಪೂರೈಸಬೇಕೆಂದು ಕೇಂದ್ರ ಸರಕಾರಕ್ಕೆ ಆಗ್ರಹ ಪಡಿಸುತ್ತವೆ. ತಮ್ಮ ಕಡೆಗೆನೇ ಇಂಥ ಸಾಮಗ್ರಿಗಳಿವೆಯೆಂಬ ಅರಿವು ಸಹ ಆ ಬೋರ್ಡುಗಳಿಗಿಲ್ಲ (ಟೈಮ್ಸ್ ೨೫-೪-೭೪)
ಕಳೆದ ೨೫ ವರ್ಷಗಳ ಆಡಿಟ್ ರಿಪೋರ್ಟ್, ಪಬ್ಲಿಕ್ ಅಕೌಂಟ್ಸ್ ಕಮಿಟಿ ರಿಪೋರ್ಟ್ಗಳನ್ನು ನೋಡಿದರೆ, ಈ ಅವಧಿಯಲ್ಲಿ ಕಾಂಗ್ರೆಸ್ಸಿಗರು ರಾಷ್ಟ್ರಧನವನ್ನು ಎಷ್ಟು ಪರಾಕಾಷ್ಠೆಯಿಂದ ನಾಶಗೊಳಿಸಿದ್ದಾರೆ ಮತ್ತು ನಾಶಮಾಡಗೊಟ್ಟಿದ್ದಾರೆ (೧೯೫೦-೫೧ ಒಂದು ಸಂವತ್ಸರದಲ್ಲಿ ಒಂದೇ ಸಂರಕ್ಷಣೆ ಶಾಖೆಯಲ್ಲಿ ೩ ಕೋಟಿ ೨೭ ಲಕ್ಷ ರೂಪಾಯಿ ಸ್ಟೋಅರ ಲಾಸೆಸ್ !) ಎಂದರೆ ಅವುಗಳಿಂದ ಅನೇಕ ರಾಷ್ಟ್ರೀಯ ಯೋಜನೆಗಳನ್ನು ನೆಲೆಗೊಳಿಸಬಹುದಾಗಿತ್ತು. ಕಾಂಗ್ರೆಸ್ಸಿಗೆ ವಾಸಿಯಾಗದ ರೋಗ ಹತ್ತಿದೆಯೆಂದು ಪಂಡಿತಜಿ ಮತ್ತು ಆ ಕಾಲದ ಇತರ ಧುರೀಣರು ಏಕೆ ಅನ್ನುತ್ತಿದ್ದರೆನ್ನುವದು ಇದರಿಂದ ಸ್ಪಷ್ಟವಾಗುವದು.
ನೀತಿಭ್ರಷ್ಟರಿಗೆ ಸಂರಕ್ಷಣೆ :
ಕಾಂಗ್ರೆಸ್ಸಿನ ಮುಂದಾಳುಗಳು ಕಾಂಗ್ರೆಸ್ಸಿಗಳ ಸ್ವಾರ್ಥ, ಭ್ರಷ್ಟಾಚಾರ, ಸತ್ತೆಯ ಲೋಭ ಲಂಚಬಡಕತನ, ನೀತಿಹೀನತೆಗಳ ಮೇಲೆ ತೀವ್ರ ಟೀಕೆಗಳನ್ನು ಮಾಡುತ್ತಿದ್ದರೂ, ಮುಂದೆ ಮುಂದೆ ಆ ಟೀಕೆಗಳಿಗೆ ಅರ್ಥವೇ ಉಳಿಯಲಿಲ್ಲ, ಯಾಕೆಂದರೆ ನೀತಿಭ್ರಷ್ಟರಿಗೆ, ಯಾವುದೇ ಶಿಕ್ಷೆಗಳಿಗೊಳಪಡಿಸದೇ, ಅದೇ ಜನರಿಗೆ ಬೆಂಬಲ ಮತ್ತು ಉಚ್ಚ ಪದಾಧಿಕಾರಗಳನ್ನು ಕೊಡಹತ್ತಿದರು.
“ಕಳ್ಳಪೇಟೆಗಾರರಿಗೆ ದೇಹಾಂತ ಶಿಕ್ಷೆ” ಕೊಡುವ ಪಂಡಿತ್‌ಜಿಯವರ ಘೋಷಣೆ ಪ್ರಸಿದ್ಧವಾಗಿಯೇ ಅದೆ. ಅದೇ ಪ್ರಕಾರ “ಜಾತೀಯವಾದಿ ಜನರನ್ನು ಕಾಂಗ್ರೆಸ್ಸಿನಿಂದ ಉಚ್ಚಾಟನೆ ಮಾಡೋಣ” “ವಿನಿಯಂತ್ರಣದ ಲಾಭ ಪಡೆದು ವ್ಯಾಪಾರಿಗಳು ಕೋಟ್ಯಾವಧಿ ರೂಪಾಯಿಗಳನ್ನು ದೊರಕಿಸಿದರು. ಇನ್ನು ಮುಂದೆ ಹೀಗೆ ಮಾಡಗೊಡುವುದಿಲ್ಲ”. “ಕಾಂಗ್ರೆಸ್ಸನ್ನು ಕೇವಲ ಚುನಾವಣೆಯ ಯಂತ್ರವನ್ನಾಗಿ ಮಾಡಗೊಡಲಾರೆ” ಹೀಗೆ ಅನೇಕ ಚಾಹೀರ ಆಶ್ವಾಸನೆಗಳನ್ನು ಅವರು ಕಾಲಕಾಲಕ್ಕೆ ಕೊಟ್ಟರು. ಆದರೆ ಒಂದನ್ನೂ ಎಂದೂ ಪಾಲಿಸಲಿಲ್ಲ. ನ್ಯಾಯಾಲಯ ಅಥವಾ ಕಮೀಶನರಿಂದ ವಿಚಾರಣೆಗಳಾಗಿ, ಭ್ರಷ್ಟಾಚಾರ ಮತ್ತು ಲಂಚಬಡಕತನದ ಆರೋಪಗಳು ಸಿದ್ಧವಾದಾಗ್ಯೂ, ಅಂಥ ಮಂತ್ರಿಗಳನ್ನು ದೂರವಂತೂ ಮಾಡಲೇ ಇಲ್ಲ, ವ್ಯತಿರಿಕ್ತವಾಗಿ ತಿರುಗಿ ತಿರುಗಿ ಅವರಿಗೇ ಮಂತ್ರಿಪದವಿಗಳನ್ನು ಕೊಟ್ಟರು, ಆದ್ದರಿಂದ ತ್ಯಾಗ, ಧೈಯವಾದ, ನಿಃಸ್ವಾರ್ಥ ವಾದ ಲೋಕಸೇವೆ ಇವುಗಳ ಆದರ್ಶ ಜನತೆಗೆ ಸಿಗುವ ಬದಲು, ಅನೀತಿ, ಚಾರಿತ್ರ್ಯ ಹೀನತೆ, ಪಾಪಾಚರಣೆ, ವಶೀಲಿ (ದುರ್ವರ್ಚಸ್ವ), ರಾಷ್ಟ್ರಘಾತುಕ ವರ್ತನೆ, ಇವುಗಳದೇ ಆದರ್ಶ ಜನತೆಯ ಮುಂದೆ ನೆಲೆಸಿತು. ಆರ್ಥಿಕ ವಿಕಾಸಕ್ಕೆ ಅವಶ್ಯವಾಗಿದ್ದ, ಅರೆಹೊಟ್ಟೆಯಿಂದಾದರೂ ಶ್ರಮಿಸುವ ಪ್ರೇರಣೆ, ಇವುಗಳಿಂದ ಹೇಗೆ ಪ್ರಾಪ್ತವಾದೀತು? ಇವೆಲ್ಲವುಗಳ ಪರಿಣಾಮವಾಗಿ, ಯಾವ ಜನಶಕ್ತಿಯ ಬಲದಿಂದ ಪ್ರಜಾಸತ್ತೆಯು ಯಶಸ್ವಿಯಾಗಬಲ್ಲದೋ, ಅಂಥ ಜನಶಕ್ತಿಯೇ ಭಾರತದ ಪ್ರಗತಿಯ ಬಗ್ಗೆ, ಸಂಪೂರ್ಣವಾಗಿ ಉದಾಸೀನವಾಗಿದೆ. ಈ ಮೊದಲೇ ಹೇಳಿದಂತೆ, ನೂರರ ಪ್ರಜಾಸತ್ತೆಯು ನೆಲೆಗೊಳಿಸಬೇಕಾದರೆ, ನೂರು ಸೇರು ಧನ ಬೇಕು. ಹಾಗಿಲ್ಲದಿದ್ದರೆ ಪ್ರಜಾಸತ್ತೆಯು ಯಶಸ್ವಿಯಾಗಲಾರದು. ಆದರೂ ಸಹ, ಇಲ್ಲಿಯ ವಿದ್ಯಾಸಂಪನ್ನ ಮುಂದಾಳುಗಳು ಭಾರತದ ಜನಶಕ್ತಿಯನ್ನು ಕಾರ್ಯಪ್ರವೃತ್ತರನ್ನಾಗಿ ಮಾಡಿದ್ದರೆ, ಈ ಅಸಾಧ್ಯವೂ ಸಾಧ್ಯವಾಗುತಿತ್ತು, ಆದರೆ ಶ್ರಮಿಸಿದ ಫಲವನ್ನು ಶ್ರೀಮಂತರು, ಜಮೀನ್ದಾರರು, ವ್ಯಾಪಾರಿಗಳು, ವಿಧಾನಸಭೆಯ ಸದಸ್ಯರು, ಲೋಕಸಭೆಯ ಸದಸ್ಯರು, ಮಂತ್ರಿಗಳು, ದಸ್ತು ಮಾಡಿ ಬಿಡುವದು ಎದ್ದು ಕಾಣುತ್ತಿರುವಾಗ, ಜನರಿಗೆ ಶ್ರಮಿಸಲಿಕ್ಕೆ ಉತ್ಸಾಹ ಹೇಗೆ ಬರಬೇಕು ? ಗರೀಬರ ಗರೀಬಿ ಯಾವ ರೀತಿಯಿಂದಲೂ ಹಟಾವವಾಗಿಲ್ಲ, ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಹೆಚ್ಚಾಗಹತ್ತಿದೆ. ವಿಕಾಸ ಯೋಜನೆಗಳ ಫಲವನ್ನು ಮಿರಾಸದಾರರೇ ದೋಚಿದ್ದಾರೆ ಎಂದು ಮೊದಲಾಗಿ ಇಂದು ಚವ್ಹಾಣ ಸುಬ್ರಹ್ಮಣ್ಯಮ್, ಧಾರಿಯಾರಂತಹ ಮಂತ್ರಿಗಳೇ ಹೇಳಹತ್ತಿದ್ದಾರೆ. ಗೇಣಿದಾರರ ಕಾನೂನು, ಪರಮಾವಧಿ ಹಿಡುವಳಿ ಕಾನೂನುಗಳ ‘ಒಳದಾರಿಗಳಿಂದ, ಶ್ರೀಮಂತರು ಅವುಗಳನ್ನು ವಿಫಲಗೊಳಿಸಿದ್ದಾರೆ. ಈ ದೇಶದಲ್ಲಿ ಇನ್ನೂ ನೂರು ವರ್ಷಗಳಲ್ಲಿ, ಏನೂ ಆಶೋತ್ತರಗಳಿಲ್ಲವೆಂದು ಸುಬ್ರಹ್ಮಣ್ಯ ಹೇಳಿದರು. ಅನ್ಯಾಯ, ವಿಷಮತೆ, ಸುಲಿಗೆ ಇವುಗಳನ್ನು ನಿಯಂತ್ರಿಸಿ, ಗರೀಬ ಜನರಿಗೆ ನ್ಯಾಯ ದೊರಕಿಸಿಕೊಡುವವರೇ ಹೀಗೆ ಹೇಳುತ್ತಿದ್ದರೆ, ಕಷ್ಟಪಟ್ಟು ಕೆಲಸ ಮಾಡುವ ಉತ್ಸಾಹ, ಗ್ರಾಮೀಣ ಜನರಿಗೆ, ಬೇಸಾಯಗಾರರಿಗೆ ಹೇಗೆ ಬಂದೀತು ? ಎಸ್ಟಿಮೇಟ್ ಕಮಿಟಿಯ ಪ್ರತಿ ವರದಿಯಲ್ಲಿಯೂ, ಸರಕಾರದ ಎಲ್ಲ ಯೋಜನೆಗಳ ಬಗ್ಗೆ, ಜನತೆ ಉದಾಸೀನವಿದೆಯೆಂದು ಹೇಳಲಾಗುತ್ತಿದೆ. ಜನತೆಗೆ ಅವುಗಳಲ್ಲಿ ಏನೂ ಸ್ವಾರಸ್ಯವಿಲ್ಲ.
ಜನತೆಯ ಪ್ರತಿಕ್ರಿಯೆ :
ಇಂದು ಪ್ರತಿಯೊಬ್ಬನ ಮನಸ್ಸಿನಲ್ಲಿಯೂ ಒಂದು ತೊಡಕಿದೆ. ರೇಲ್ವೆ ಕಾರ್ಮಿಕ, ವಿದ್ಯಾರ್ಥಿ, ಬೇಸಾಯಗಾರ, ಬಡಿಗ, ಕುಂಬಾರ, ಕೂಲಿಕಾರ, ಪೋಲೀಸ್ ಇವರೆಲ್ಲರ ಪ್ರಶ್ನೆ – ಒಂದೇ. ಅದೇನೆಂದರೆ, “ವಿಧಾನಸಭಾ ಸದಸ್ಯ, ಲೋಕಸಭಾ ಸದಸ್ಯ, ಜಿಲ್ಲಾ ಪರಿಷತ್ ಅಧಿಕಾರಿ, ದೊಡ್ಡ ಸರಕಾರಿ ಹುದ್ದೇದಾರ–ಇವರೆಲ್ಲರೂ ಈ ನೀತಿಯನ್ನು ಪಾಲಿಸುವದಿಲ್ಲ; ಅಂದಮೇಲೆ ನಮ್ಮ ಮೇಲೆಯೇ ಏಕೆ ಈ ಹೊರೆ ಹೊರಿಸುತ್ತೀರಿ? ಅವರು ದಸ್ತುಮಾಡುತ್ತಾರೆ, ಭ್ರಷ್ಟಾಚಾರವನ್ನೆಸಗುತ್ತಾರೆ, ಸ್ವಜನ ಪಕ್ಷಪಾತ ಮಾಡುತ್ತಾರೆ. ಆದರೆ ನಾವೇನು ಪಾಪ ಮಾಡಿದ್ದೇವೆ? ಏನೂ ಶ್ರಮ ಮಾಡದೆ, ಕಾಂಗ್ರೆಸ್ಸಿಗರ ಕೃಪಾ ಕಟಾಕ್ಷ ದೊರಕಿಸಿದರೆ, ಮೂರು ನಾಲ್ಕು ವರ್ಷಗಳಲ್ಲಿ ಒಬ್ಬ ಯಃಕಶ್ಚಿತ್ ಲಕ್ಷಾಧೀಶನಾಗುತ್ತಾನೆ. ಆದ್ದರಿಂದ ಕಷ್ಟಪಟ್ಟು ದುಡಿಯುವದು ಮೂರ್ಖತನವಲ್ಲವೇ? ಅವರು ಕೋಟ್ಯಾವಧಿ ರೂಪಾಯಿಗಳ ನಷ್ಟವಾಗಗೊಡುತ್ತಾರೆ, ಆದರೆ ನಾವೇ ವಿದ್ಯುತ್ ಕಡಿತ ಮಾಡಬೇಕು, ಲಗ್ನ ಸಮಾರಂಭಗಳಲ್ಲಿ ಅನ್ನ ಧಾನ್ಯಗಳ ದುಂದು ಮಾಡಬಾರದು, ನೀರು ಪೋಲು ಮಾಡಬಾರದು, ಇವೆಲ್ಲವುಗಳ ಪರಾಮರಿಕೆಯನ್ನು ಯಾತಕ್ಕಾಗಿ ಮಾಡಬೇಕು ? ವಿದ್ಯೆ ಇಲ್ಲದೆ, ಜ್ಞಾನವಿಲ್ಲದೆ, ಸಾಮಾನ್ಯ ತಿಳಿವಳಿಕೆಯೂ ಇಲ್ಲದೆ ಒಬ್ಬ ಮನುಷ್ಯ ಯಾವದೇ ಉಚ್ಚಪದ ಅಲಂಕರಿಸಲು ಸಾಧ್ಯವಿದೆಯೆಂದ ಮೇಲೆ, ವಿದ್ಯೆಯ ಉಪಾಸನೆ ಅಭ್ಯಾಸ ಇವುಗಳ ಕ್ಷೇಶವನ್ನು ನಾವೇಕೆ ಪಡಬೇಕು ?”
ಪ್ರಶ್ನೆ ಮಾತ್ರ ನಿರ್ವಿವಾದವಿದೆ. ನಿಜ, ಶ್ರೇಷ್ಠ ಜನರು ಆಚರಿಸಿದಂತೆ, ಇತರರು ಮಾಡುತ್ತಾರೆ. ಅವರು ಹಾಕಿಕೊಟ್ಟ ಪ್ರಮಾಣ, ಉದಾಹರಣೆಗಳಂತೆಯೇ ಜನರು ಅನುಕರಣೆ ಮಾಡುತ್ತಾರೆಂಬ ಗೀತಾ ವಚನ ಪ್ರಸಿದ್ಧವಾಗಿಯೇ ಅದೆ. ಆದಕಾರಣ ಕಾಂಗ್ರೆಸ್ ಮುಂದಾಳುಗಳು, ಮಂತ್ರಿ, ಲೋಕಸಭಾ ಸದಸ್ಯ, ವಿಧಾನಸಭಾ ಸದಸ್ಯ, ಸರಪಂಚ, ಮಹಾಪೌರ, ನಗರಪಿತರು, ಡಾಕ್ಟರ್, ವಕೀಲ, ಪ್ರಾಧ್ಯಾಪಕ, ಇಂಜಿನಿಯರ -ಈ ಶ್ರೇಷ್ಟ ಜನರು ವರ್ತಿಸಿದಂತೆ ಇತರ ಜನರು ವರ್ತಿಸಿದರೆ ಅವರನ್ನು ಆಕ್ಷೇಪಿಸಬಹುದೇ? ಹೀಗೆ ಆಕ್ಷೇಪಿಸಲಿಕ್ಕೆ ಬಾರದಿದ್ದರೆ, ಪ್ರಜಾತಂತ್ರದ ಮಾರ್ಗದಿಂದ ಭಾರತದ ಉತ್ಕರ್ಷ ಸಾಧಿಸುವದಿಲ್ಲವೆಂದು ನಿಶ್ಚಿತವಾಗಿ ತಿಳಿಯುವದೇ?
ಆದರೆ ಹಾಗೆ ತಿಳಿಯುವ ಕಾರಣವಿಲ್ಲ. ಈ ಪ್ರಶ್ನೆ ನಿರ್ವಿವಾದವಲ್ಲ. ಪ್ರಜಾತಂತ್ರದ ನಿಜವಾದ ಅರ್ಥ ತಿಳಿದುಕೊಳ್ಳುವದೇ ಈ ಪ್ರಶ್ನೆಗೆ ಉತ್ತರವಿದೆ.
ಪ್ರಗತಿಪರವಲ್ಲದ ದೇಶದಲ್ಲಿ, ಆರ್ಥಿಕವಾಗಿ ಹಿಂದುಳಿದ ದೇಶದಲ್ಲಿ, ಪ್ರಜಾಸತ್ತೆ ಎಂದಿಗೂ ಯಶಸ್ವಿಯಾಗುವದಿಲ್ಲ ಮತ್ತು ಪ್ರಜಾತಂತ್ರದ ಮಾರ್ಗದಿಂದ ಆರ್ಥಿಕಪ್ರಗತಿಯಾಗುವದು ಎಂದಿಗೂ ಶಕ್ಯವಿಲ್ಲೆಂದು, ಇತಿಹಾಸದ ಸಿದ್ಧಾಂತವನ್ನು ನಾವು ಈಗಾಗಲೇ ನೋಡಿದ್ದೇವೆ. ಆದರೂ ಅಂಥ ಸ್ಥಿತಿಯಲ್ಲಿಯೂ, ರಾಷ್ಟ್ರದ ಧುರೀಣರು ಮತ್ತು ಒಟ್ಟಾರೆ ಸುಶಿಕ್ಷಿತ ಮಧ್ಯಮವರ್ಗ, ಮುಂದುವರೆದ ವರ್ಗವು, ತ್ಯಾಗ, ನಿಃಸ್ವಾರ್ಥವೃತ್ತಿ, ಧ್ಯೇಯವಾದ, ನಿರಪೇಕ್ಷ ಲೋಕಸೇವೆ, ಈ ಗುಣಗಳಿಂದ ಸಂಪನ್ನವಾಗಿದ್ದರೆ, ಮತ್ತು ಸ್ವತಃ ಸ್ಟೇಚ್ಛೆಯಿಂದ ಬಡತನವನ್ನು ಸ್ವೀಕರಿಸಿ, ಅಖಂಡ ಉದ್ಯೋಗದ ವ್ರತವನ್ನು ಹಿಡಿದರೆ, ಆ ಆದರ್ಶವನ್ನು ನೋಡಿ, ಬಹು ಸಂಖ್ಯಾತರಾದ ಜನತೆಯೂ, ರಾಷ್ಟ್ರಕ್ಕಾಗಿ ಕೆಲವು ಕಾಲ ದಾರಿದ್ರವನ್ನು, ಆತ್ಮಸಂತೋಷದಿಂದ ಸಹಿಸಿ, ಅರೆಹೊಟ್ಟೆಯಿಂದ ಜೀವಿಸಿ, ಅಪರಿಮಿತ ಕಷ್ಟಕ್ಕೆ ಸನ್ನಾಹಗೊಳ್ಳಬಹುದು, ಮತ್ತು ಆ ನಂತರ, ಹಿಂದುಳಿದ ದೇಶ ಸಹ, ಪ್ರಜಾತಂತ್ರದ ದಾರಿಯಿಂದ, ಆರ್ಥಿಕವಿಕಾಸ ಸಾಧಿಸಲು ಸಾಧ್ಯ- ಈ ವಿಚಾರಗಳನ್ನೂ ನಾವು ತಿಳಿದುಕೊಂಡಿದ್ದೇವೆ. ಕಾಂಗ್ರೆಸ್ಸಿನ ಧುರೀಣರು ಈ ಅರ್ಥದಿಂದಲೇ ಪ್ರಾರಂಭದಲ್ಲಿ ಜನತೆಯ ಎದುರಿಗೆ ಆದರ್ಶ ಎತ್ತಿ ಹಿಡಿಯುವ ಬಗ್ಗೆ ಕರೆ ನೀಡಿದ್ದರು. ಆದರೆ ಅದನ್ನು ಯಾರೂ ಮನ್ನಿಸಲಿಲ್ಲ. ಮುಂದೆ ಮುಂದಾಳುಗಳೇ, ಉಚ್ಚವಾದ ಮೌಲ್ಯಗಳನ್ನು ಗಾಳಿಗೆ ತೂರಿ, ಇಂಥ ಭ್ರಷ್ಟವಾದ, ನೀತಿಹೀನ, ರಾಷ್ಟ್ರ ಭಾವಹೀನರಾದ ಕಾಂಗ್ರೆಸ್ಸಿಗರನ್ನು ಸಮೀಪವರ್ತಿಗಳಾಗುವ ಅವಕಾಶ ಕೊಟ್ಟು, ಅವರಿಗೆ ಬೆಂಬಲ ನೀಡಿ, ಎಲ್ಲ ಉಚ್ಚ ಅಧಿಕಾರ ಮುಖ್ಯವಾದ ಸ್ಥಾನ, ಸತ್ತೆಯ ಹುದ್ದೆ, ಇವುಗಳನ್ನು ಅವರಿಗೆ ಸ್ವಾಧೀನಪಡಿಸಿದರು. ಆದ್ದರಿಂದ ಆ ರೋಗ ಎಲ್ಲ ಸಮಾಜದಲ್ಲಿ ಪಸರಿಸಿ, ಇಂದು ಸಕಲ ಭಾರತೀಯ ಸಮಾಜವೇ, ನೀತಿಹೀನ, ರಾಷ್ಟಹೀನ, ದರಿದ್ರ, ಮತ್ತು ಸಂಸ್ಕೃತಿಶೂನ್ಯವಾಗಿದೆ. ಈ ಪರಿಸ್ಥಿತಿಯಲ್ಲಿ ಅದರ ಉತ್ಕರ್ಷದ ಉಪಾಯಗಳೇನಾದರೂ ಇವೆಯೋ ಎಂದು ನಾವು ಶೋಧಿಸಹತ್ತಿದ್ದೇವೆ.
ಪ್ರಜಾಪ್ರಭುತ್ವವನ್ನು ಸಾರ್ಥಮಾಡುವದೊಂದೇ ಈ ಸ್ಥಿತಿಯ ಪರಿಹಾರಕ ಉಪಾಯವಿದೆ. ಮುಂದಾಳುಗಳು ಭ್ರಷ್ಟರಾಗಿದ್ದಾರೆ, ನೀತಿಹೀನರಾಗಿದ್ದಾರೆ, ಅವರು ಕೇವಲ ತಮ್ಮ ಸ್ವಾರ್ಥವನ್ನೇ ಸಾಧಿಸುತ್ತಾರೆ, ಅಧಿಕಾರ ಲೋಭದಿಂದ ಅವರು ಎಲ್ಲ ತರಹದ ಅನನ್ವಿತ ಕೃತ್ಯಗಳನ್ನು ಮಾಡುತ್ತಾರೆ, ಸಿಕ್ಕ ಮಾರ್ಗಗಳಿಂದ ಹಣ ದೊರಕಿಸಿ, ಜನತೆಯನ್ನು ಸುಲಿದು ರಾಜವಿಲಾಸಗಳನ್ನು ಭೋಗಿಸುತ್ತಾರೆ-ಆದರೆ ನಾವು ಮಾತ್ರ ರಾಷ್ಟದ ಬಗ್ಗೆ ಏಕೆ ಕಳವಳ ಪಡಬೇಕು ? ನಾವೇ ನೀತಿಮೌಲ್ಯಗಳನ್ನು ಪಾಲಿಸುವ ಗುತ್ತಿಗೆಯನ್ನು ಹಿಡಿದಿರುತ್ತೇವೆಯೇ ? ಬಹು ಜನರ ಮನಸ್ಸಿನಲ್ಲಿ ಮೂಡುವ ಪ್ರಶ್ನೆಗಳಿವು.
ಪ್ರಜಾಪ್ರಭುತ್ವದ ಲಕ್ಷಣ !
ಈ ಪ್ರಶ್ನೆಗಳಿಗೆ ಉತ್ತರವೆಂದರೆ-ದೇಶ ಕೇವಲ ಕಾಂಗ್ರೆಸ್ಸಿಗರ, ಮಂತ್ರಿಗಳ, ಸರಪಂಚರ, ನಗರಪಿತರದಲ್ಲ. ದೇಶ ನಮ್ಮದೂ ಅದೆ. ಅಲ್ಲಲ್ಲ-ನಮ್ಮದೇ ಅದೆ. ಈ ವೃತ್ತಿ ಇರುವದೇ ನಿಜವಾದ ಪ್ರಜಾತಂತ್ರದ ಲಕ್ಷಣ. ಹಿಂದಕ್ಕೆ, ದೇಶ, ರಾಜನಾಗಿದ್ದಿತು, ರಾಜ್ಯ, ರಾಜಕುಲದ್ದಾಗಿದ್ದಿತು. ಆದರೆ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ, ಲೋಕಮಾನ್ಯ ತಿಲಕರು, ಸ್ವರಾಜ್ಯದಲ್ಲಿಯ “ಸ್ವ”ದ ಅರ್ಥ, ಲೋಕ ಅಥವಾ ಪ್ರಜೆ ಎಂದು ಹೇಳಿದರು. ಸ್ವರಾಜ್ಯವೆಂದರೆ ಪ್ರಜೆಗಳ ರಾಜ್ಯ, ಈಗ ಈ ಮಾತು ಸರಿಯಾದರೆ -ಕಾಂಗ್ರೆಸ್ಸಿನ ಮುಂದಾಳುಗಳು ಮಾತೃಭೂಮಿಯ ಅವಧಾನ ವಹಿಸುವದಿಲ್ಲ, ನಮ್ಮದೇನು ಸಿಕ್ಕಿಹಾಕಿಕೊಂಡಿದೆ ಎಂದು ಆಲೋಚಿಸುವದು ಯೋಗ್ಯವಾದೀತೇ-ಎಂದು ಭಾರತೀಯ ಜನತೆ, ಕಾರ್ಮಿಕರು, ಬೇಸಾಯಗಾರರು, ಶಿಕ್ಷಕರು, ಒಟ್ಟಾರೆ ಶ್ರಮಿಕ ಜನತೆ, ಮತ್ತು ಸುಶಿಕ್ಷಿತ ಮಧ್ಯಮ ವರ್ಗದ ವಿದ್ಯಾಸಂಪನ್ನರು-ವಿಚಾರಿಸಬೇಕು. ದೇಶವು ನಮ್ಮದಿದ್ದಾಗ, ಅಧಿಕಾರದಲ್ಲಿರುವವರು ಈ ದೇಶಕ್ಕೆ ದ್ರೋಹ ಬಗೆಯುತ್ತಾರೆಂದು-ನಾವೂ ಹಾಗೆಯೇ ಮಾಡೋಣ ಎಂಬ ಯುಕ್ತಿವಾದ ಪ್ರಜಾತಂತ್ರಕ್ಕೆ ಶೋಭಿಸಲಾರದು.
ಒಬ್ಬ ತಾಯಿಗೆ ಇಬ್ಬರು ಮಕ್ಕಳಿದ್ದಾರೆ, ದೊಡ್ಡವ ಶ್ರೀಮಂತನಿದ್ದಾನೆ, ಸಮರ್ಥನಿದ್ದಾನೆ. ಆದರೆ ಅವನು ತಾಯಿಯ ಯೋಗಕ್ಷೇಮವನ್ನು ನೋಡುವದಿಲ್ಲ. ಅವನಿಗೆ ತಾಯಿಯ ಪರಿವೆಯೇ ಇಲ್ಲ. ಕೇವಲ ತಾನು, ತನ್ನ ಕುಟುಂಬ ಇಷ್ಟೇ ಸ್ವಾರ್ಥ ಬಗೆಯುವನು. ಈ ಪರಿಸ್ಥಿತಿಯಲ್ಲಿ ಸಣ್ಣ ತಮ್ಮನ ಕರ್ತವ್ಯವೇನು? ಈ ಪ್ರಸಂಗದಲ್ಲಿ ಕೊಟ್ಟ ಉತ್ತರದ ಮೇಲೆಯೇ, ಸಕಲ ಮಾನವೀಯ ಸಂಸ್ಕೃತಿ, ಸರ್ವ ಉಚ್ಚ ಮೌಲ್ಯಗಳು, ಎಲ್ಲ ಧರ್ಮತತ್ವಗಳ ಭವಿತವ್ಯ ಅವಲಂಬಿಸಿದೆ. ಹಿರಿಯ ಅಣ್ಣನು ತಾಯಿಯನ್ನು ಅಲಕ್ಷಿಸಿದರೆ ನನ್ನದೇನು ಗಂಟು ಹೋಗುವದು? ತಾಯಿಯು ನನ್ನೊಬ್ಬನ ತಾಯಿಯಷ್ಟೇ ಅಲ್ಲ. ಅವನಿಗೆ, ಅವಳ ಪರಿವೆ ಇಲ್ಲದಿದ್ದರೆ–ನನಗೂ ಬೇಡ. ಅವಳನ್ನು ಫೋಷಿಸಲು ನನ್ನದೇ ಏನು ಗುತ್ತಿಗೆ ? ಹೀಗೆ ಕಿರಿಯ ತಮ್ಮನು ಅಂದರೆ, ಮಾನವೀಯ ಸಂಸ್ಕೃತಿ, ನೀತಿ, ಧರ್ಮ, ಇವೆಲ್ಲವುಗಳೂ ಸಂಪುಷ್ಟಕ್ಕೆ ಬಂದಂತಾಯಿತು. ಹಿರಿಯ ಅಣ್ಣನು ತಾಯಿಯನ್ನು ಅಲಕ್ಷಿಸಿದರೆ, ನನ್ನ ಹೊಣೆಗಾರಿಕೆ ದ್ವಿಗುಣಿತವಾಗಿದೆ. ತಾಯಿಯು ನನ್ನವಳೂ ಇದ್ದಾಳೆ. ಆದ್ದರಿಂದ ಎಷ್ಟೇ ಕಷ್ಟಗಳನ್ನು ಅನುಭವಿಸಿಯಾದರೂ, ಅರೆಹೊಟ್ಟೆಯಿಂದ ಇದ್ದೂ, ತ್ಯಾಗಕ್ಕೆ ಸಿದ್ಧನಾಗಿ, ತಾಯಿಗೆ ಸುಖವನ್ನಿಯಲೇಬೇಕು. ಹೀಗೆ ಅವನು ಭಾವಿಸಬೇಕೆಂದು, ಮಾನವತೆಯ ಧರ್ಮದ ಅಪೇಕ್ಷೆ ಇದೆ. ಅವನ ಈ ಭಾವನೆಗಳಲ್ಲಿಯೇ ಮಾನವ ಧರ್ಮದ ಸಾರವಿದೆ.
ಈ ಭಾವನೆಗಳು ಅವಶ್ಯ:
ತಾಯಿಯನ್ನು ಕುರಿತು ಇದ್ದ ಈ ಭಾವನೆಗಳೇ, ಪ್ರಜಾಸತ್ತೆಯಲ್ಲಿ, ಮಾತೃಭೂಮಿಯ ಬಗ್ಗೆ ಇದ್ದರೆ ಮಾತ್ರ, ಪ್ರಜಾತಂತ್ರ ಸಾರ್ಥವಾದೀತು, ಯಾಕೆಂದರೆ, ಪ್ರಜಾಪ್ರಭುತ್ವವೆಂದರೆ-ಪ್ರಜೆಗಳ ರಾಜ್ಯ. ಜನತೆಯ ಪ್ರಭುತ್ವ ಎಂಬುದಾಗಿ ಅದೆ. ದೇಶ ಜನತೆಯದು, ಭಾರತ ಈ ತಾಯಿನಾಡು ಜನತೆಯದು. ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಸ್ವಾರ್ಥ ಪ್ರೇರಿತವಾಗಿವೆ. ಅವು ತಾಯಿನಾಡಿನ ಯೋಗಕ್ಷೇಮವನ್ನು ನೋಡುವದಿಲ್ಲ. ನೋಡಲಿಕ್ಕಿಲ್ಲ ! ಅವರಿಗೆ ತಾಯಿನಾಡಿನ ಪರಿವೆ ಇಲ್ಲ. ಇರಲಿಕ್ಕಿಲ್ಲ! ಅವರ ಮೇಲೆ, ನಮ್ಮ (ಜನತೆಯ) ಮಾತೃಭಕ್ತಿ ಅವಲಂಬಿಸಿಲ್ಲ. ಅವರಿಗೋಸ್ಕರ ನಾವು ಭಾರತ ಭೂಮಿಯ ಮೇಲೆ ಪ್ರೇಮ ಮಾಡುವದಿಲ್ಲ. ಈ ದೇಶ ನಮ್ಮ ಮಾತೃಭೂಮಿ, ಆದ್ದರಿಂದ ಕಾಂಗ್ರೆಸ್ಸಿಗರು ದೇಶದ ಬಗ್ಗೆ ಕಳವಳಪಡದಿದ್ದರೆ–ನಮ್ಮ ಹೊಣೆಗಾರಿಕೆ ದ್ವಿಗುಣಿತವಾಗಿದೆ. ಎಂಥದಾದರೂ ತ್ಯಾಗ ಮಾಡಿ, ಕಷ್ಟ ಸಹಿಸಿ, ನಾವು ಮಾತೃಭೂಮಿಯನ್ನು ರಕ್ಷಣೆ ಮಾಡಬೇಕೆಂದು ಜನತೆ ಉತ್ತರವೀಯಬೇಕು.
ಈ ವೃತ್ತಿಯ ಜೋಪಾಸನೆಯನ್ನು ಭಾರತದ ಜನತೆ ಆಪತ್ಕಾಲದಲ್ಲಿ ಮಾಡುತ್ತಾರೆಯೇ ?
ರಾಷ್ಟ್ರನಿಷ್ಠೆ, ಪ್ರಜಾಪ್ರಭುತ್ವ ಇವುಗಳ ಅರ್ಥ ಹೀಗೆ ಅದೆ.
ಲೆನಿನ್‌ಗ್ರ‍್ಯಾಡದ ಉದಾಹರಣೆ:
೨೧ ನೇ ಜೂನ್ ೧೯೪೧ ರಂದು ಹಿಟ್ಲರನು ಲೆನಿನಗ್ರ‍್ಯಾಡದ ಮೇಲೆ ದಂಡೆತ್ತಿಹೋದನು. ಆ ಕಾಳಗ ಮತ್ತು ಆಗ ಶೂರ ರಶಿಯನ್ ಜನರು ಮಾಡಿದ ಪ್ರತೀಕಾರದ ರೋಮ ಹರ್ಷಕ ವೃತ್ತಾಂತವನ್ನು ಹ್ಯಾರಿಸನ್ ಸ್ಯಾಲಿಸಬರಿ ಎಂಬ ಲೇಖಕನು ತನ್ನ “ಸೀಜ್ ಆಫ್ ಲೆನಿನ್‌ಗ್ರ‍್ಯಾಡ್” ಪುಸ್ತಕದಲ್ಲಿ ಹೇಳಿದ್ದಾನೆ. ಅದು ನಮಗೆ ಉದ್ಬೋಧಕವಾಗಿದೆ. ಅದಕ್ಕೂ ಮೊದಲು ೧೦-೧೨ ವರ್ಷಗಳವರೆಗೆ ಸ್ಟಾಲಿನ್ ಮತ್ತು ಕಮ್ಯುನಿಸ್ಟ್ ಪಕ್ಷವು ರಶಿಯದ ಜನತೆಗೆ, ಕಾರ್ಮಿಕರಿಗೆ, ವ್ಯವಸಾಯಗಾರರಿಗೆ, ಮಧ್ಯಮವರ್ಗದವರಿಗೆ, ಅನನ್ವಿತ ಯಾತನೆಗಳನ್ನು ಕೊಟ್ಟಿದ್ದರು. ಕುಟುಂಬಕ್ಕೆ ಕುಟುಂಬಗಳನ್ನು ಅವರು ನಿರ್ನಾಮ ಮಾಡಿದ್ದರು. ಲಕ್ಷಾವಧಿ ಜನರ ಸಂಸಾರಗಳನ್ನು ಹಾಳುಮಾಡಿದ್ದರು. ಸೇರ್ಜಿ ಕಿರ್ವಾರ್ಹ ಎಂಬ ಲೆನಿನ್‌ಗ್ರ‍್ಯಾಡದ ಮುಂದಾಳು ಬಹಳ ಜನಪ್ರಿಯನಾಗಿದ್ದನು. ಸೆಂಟ್ರಲ್ ಕಮಿಟಿಯಲ್ಲಿ ಅವನು ಪ್ರಭಾವಶಾಲಿಯಾಗಿದ್ದನು. ಆದ್ದರಿಂದ ಈತನು ತನ್ನ ಪ್ರತಿಸ್ಪರ್ಧಿಯೇ ಎಂದು ತಿಳಿದು, ಸ್ಟಾಲಿನ್ನನು ಅವನನ್ನು ಕೊಲೆ ಮಾಡಿಸಿದ್ದನು, ಮತ್ತು ಆಗಿನಿಂದ ಲೆನಿನ್‌ಗ್ರ‍್ಯಾಡ ನಾಗರಿಕರ ಮೇಲೆ ಹಲ್ಲು ಮಸೆಯುತ್ತಿದ್ದು, ಅವರ ಮೇಲೆ ಭಯಂಕರವಾದ ಅತ್ಯಾಚಾರಗಳನ್ನು ಮಾಡಿದ್ದನು.
ಈ ಪರಿಸ್ಥಿತಿಯಲ್ಲಿ, ಹಿಟ್ಲರನು ಮುತ್ತಿಗೆ ಹಾಕಿದಾಗ ಆ ಜನರು ಹೇಗೆ ಆಲೋಚಿಸಿದರು?
ಸ್ಟಾಲಿನ್ ಮತ್ತು ಕಮ್ಯುನಿಸ್ಟರ ಮೇಲೆ ಸೇಡು ತೀರಿಸಿಕೊಳ್ಳವ ಉತ್ತಮ ಸಂಧಿ ಬಂದಿದೆ. ಅವರಿಗೆ ದೇಶದ ಪರಿವೆಯಿಲ್ಲ. ನಾವಾದರೂ ಏಕೆ ಕಳವಳಪಡಬೇಕು? ಅವರು ಕೇವಲ ಸ್ವಾರ್ಥ ಬಗೆಯುತ್ತಾರೆ, ನಾವಾದರೂ ಏಕೆ ಪ್ರಾಣಹಾನಿಯನ್ನು ಕೈಕೊಳ್ಳಬೇಕು ?-ಹೀಗೆ ಅವರು ವಿಚಾರ ಮಾಡಿದರೇ ? ಛೇ, ಛೇ, ಎಂದಿಗೂ ಇಲ್ಲ. ಅವರೆಂದರು-ದೇಶ ಸ್ಟಾಲಿನ್ನನದಲ್ಲ. ಲೆನಿನ್‌ಗ್ರ‍್ಯಾಡ ನಗರ ಅವನದಲ್ಲ. ರಶಿಯಾ ದೇಶ ನಮ್ಮದು, ನಗರ ನಮ್ಮದು, ಮತ್ತು ಕಾರ್ಮಿಕರ ಕ್ರಾಂತಿ ನಾವು ಮಾಡಿದ್ದೇವೆ. ನಾವು ಹೋರಾಟ ಮಾಡುವದು ಸ್ಟಾಲಿನ್ನನಿಗಾಗಿ ಅಲ್ಲ, ರಶಿಯಕ್ಕಾಗಿ. ಓಲ್ಲಾ ಬೆರಗೊಲ್ಟ ಎಂಬ ಕವಯಿತ್ರಿಯನ್ನು ಶುದ್ದೀಕರಣ ಚಳುವಳಿಯಲ್ಲಿ ಸ್ಟಾಲಿನ್ನನು ಬಂದೀವಾಸದಲ್ಲಿಟ್ಟಿದ್ದರೂ ಸಹ, ತನ್ನ ಮಾತೃಭೂಮಿಯ ಬಗ್ಗೆ ಭಾವನೆಗಳನ್ನು ಕವಿತೆಯಲ್ಲಿ ಹೀಗೆ ವ್ಯಕ್ತಗೊಳಿಸಿದ್ದಾಳೆ “ನಾನು ಯಾತನೆಗಳನ್ನು, ಅತ್ಯಾಚಾರಗಳನ್ನು ಇನ್ನೂ ಮರೆತಿಲ್ಲ. ಆದರೆ ಆ ಯಾತನೆಗಳು ನನ್ನವಲ್ಲ. ಹೇ, ಮಾತೃಭೂಮಿ, ಅವು ನಿನ್ನವು ಅವೆ, ಆದ್ದರಿಂದ ನಿನ್ನ ಮೇಲೆ ಕಪ್ಪು ಛಾಯೆ ಬಂದಾಗ, ನಾನು ನಿನ್ನವಳೇ ಆಗಿರುವವಳು, ನಿನ್ನಲ್ಲಿಯೇ ಏಕರೂಪಳಾಗಿರುವೆನು, ನಮ್ಮಲ್ಲಿ ಅದ್ವೈತವಿದೆ”.
ಈ ವೃತ್ತಿಯ ಜೋಪಾಸನೆಯನ್ನು ಭಾರತ ಜನತೆ ಮಾಡುವದೇ ? ಕಾಂಗ್ರೆಸ್ ಮುಂದಾಳುಗಳು, ಕಾಂಗ್ರೆಸ್ಸಿಗರು, ಇತರ ವಿರೋಧಿ ಪಕ್ಷಗಳು, ವ್ಯಾಪಾರಿಗಳು, ಕಪ್ಪು ಪೇಟೆಯವರು, ಕಳ್ಳ ಸಾಗಾಟದಾರರು-ಇವರು ತಮ್ಮ ಮನಬಂದಂತೆ ಮಾಡಲಿ. ಆದರೆ ಈ ದೇಶ ನಮ್ಮದು, ಈ ಮಾತೃಭೂಮಿ ನಮ್ಮದು. ಆದಕಾರಣ, ದೇಶದ ಕೂಡ ಏಕರೂಪರಾಗಿ, ದೇಶದ ಉದ್ಧಾರಕ್ಕಾಗಿ, ಈ ಆಪತ್ಪ್ರಸಂಗದಲ್ಲಿ, ಸರ್ವಸ್ವೀ ತ್ಯಾಗ ಮಾಡುವದೇ ನಮ್ಮ ಕರ್ತವ್ಯವಾಗಿದೆ. ಪ್ರತ್ಯಕ್ಷ ಮೃತ್ಯು ಸಹ ನಮ್ಮನ್ನು ಚ್ಯುತಿಗೊಳಿಸಲಾರದು ಎಂದು ಭಾರತೀಯರು ಮನೋಮನ ಪ್ರತಿಜ್ಞೆಗೈಯ್ಯುವರೇ ?
ಪ್ರತ್ಯಕ್ಷ ರಣಾಂಗಣದಲ್ಲಿ ಕಾಳಗ ನಡೆದಾಗ, ಇಂಥ ಭಾವನೆಗಳನ್ನು ಕೆರಳಿಸುವದು ಕೆಲ ಮಟ್ಟಿಗೆ ಸುಲಭ. ಆದರೆ ಶಾಂತತೆಯ ಕಾಲದಲ್ಲಿ, ಕೇವಲ ವಿವೇಕದ ಬಲದಿಂದ, ಇಂಥ ಭಾವನೆಗಳನ್ನು ಜೋಪಾಸನೆ ಮಾಡಬೇಕಾಗುತ್ತದೆ.
ಇಂಥ ವಿವೇಕ ಬಲವನ್ನು ಭಾರತದ ಜನತೆ ಪ್ರಕಟಿಸುವದೇ?
ವಿವೇಕದ ಕರೆ :
ದೇಶ ನನ್ನದು, ಮಾತೃಭೂಮಿ ನನ್ನದು ಎಂಬ ದೃಢಭಾವನೆಯನ್ನು ಪ್ರತಿಯೊಬ್ಬನು ಹೊಂದಿದ್ದರೇನೇ, ಈ ವಿವೇಕ ಸಾಧ್ಯವಿದೆ. ಇಂಥ ವಿವೇಕ ಎಚ್ಚರಗೊಂಡಾಗ, ಪ್ರತಿಯೊಬ್ಬನ ಕರ್ತವ್ಯವಾದರೂ ಏನು? ಭಾರತ ದೇಶದ ಪ್ರತಿಯೊಬ್ಬ ನಾಗರಿಕನೂ, ಕಾರಖಾನೆ, ಗಿರಣಿ, ಸರಕಾರಿ ಆರೆ ಸರಕಾರಿ ಖಾಸಗಿ ಉದ್ಯೋಗ, ವ್ಯವಸಾಯ, ಶಾಲೆ, ಕಾಲೇಜು, ಮುದ್ರಣಾಲಯ, ವೃತ್ತಪತ್ರಿಕೆ-ಎಲ್ಲ-ಎಲ್ಲ ಉದ್ಯೋಗ-ಇವುಗಳಲ್ಲಿಯ ಪ್ರತಿಯೊಬ್ಬ ನಾಗರಿಕ, “ನಾನು ದಿನಾಲು ಎಂಟು ತಾಸು ಕೆಲಸ ಮಾಡುತ್ತೇನೆಂದು ಪ್ರತಿಜ್ಞೆ ಮಾಡಬೇಕು. ನಮಗೆ ದೇಶವನ್ನು ಆರ್ಥಿಕವಾಗಿ ವಿಕಾಸಗೊಳಿಸಬೇಕಾಗಿದೆ. ಇಲ್ಲಿ ನೂರಕ್ಕೆ ನೂರರ ಪ್ರಜಾಪ್ರಭುತ್ವವಿದೆ, ಮತ್ತು ಹಾಗೆ ನಮಗೆ ಬೇಕಾಗಿದೆ. ಆದರೆ ಇಲ್ಲಿ ಧನ ಮಾತ್ರ ೩೦-೩೫ ಸೇರು ಅದೆ. ಆದ್ದರಿಂದ ನೂರು ಸೇರು ಧನ ಈ ದೇಶದಲ್ಲಿ ಹೇಗೆ ಹೆಚ್ಚಿತೆಂದು ಪ್ರತಿಯೊಬ್ಬನೂ ಎಚ್ಚರಿಕೆ ವಹಿಸಬೇಕು. ಹೀಗೆ ಎಚ್ಚರಿಕೆ ವಹಿಸುವದೇನೆಂದರೇನೇ, ಪ್ರತಿಯೊಬ್ಬನೂ ಪ್ರಾಮಾಣಿಕನಾಗಿ ಎಂಟು ತಾಸುಗಳ ಕೆಲಸ ಮಾಡಬೇಕು. ಇಲ್ಲದೇ, ನೂರು ಸೇರು ಧನ ಲಭಿಸುವದು ಅಶಕ್ಯ. ಹೀಗಾಗದಿದ್ದಲ್ಲಿ, ಇಲ್ಲಿ ಅರಾಜಕತೆಯಾದೀತು. ದಂಡಸತ್ತೆ ಪ್ರಸ್ಥಾಪಿತವಾದೀತು, ಅಥವಾ ಅದಕ್ಕಿಂತಲೂ ಭಯಂಕರವಾದುದೆಂದರೆ-ಟಿಬೇಟ್, ಝಕೊಸೊವಾಕಿಯಾಗಳಂತೆ ಚೀನ ರಶಿಯಗಳ ಅಪ್ರತ್ಯಕ್ಷ ಆದ ಸಾಮ್ರಾಜ್ಯ ಸತ್ತೆ ಪ್ರಸ್ಥಾಪಿತವಾದೀತು. ಲೆನಿನ್‌ಗ್ರ‍್ಯಾಡ್ ಕಾಳಗದ ವೇಳೆಯಲ್ಲಿ, ಸ್ಟಾಲಿನ್‌ನ ಮೇಲೆ ಜನತೆಯ ಸಂತಾಪವಿದ್ದರೂ, ಅವರು, ವಿವೇಕದಿಂದ, ತಮ್ಮ ಪರಾಭವವಾದರೆ, ರಶಿಯದಲ್ಲಿ, ಹಿಟ್ಲರನ ಸತ್ತೆ ಪ್ರಸ್ಥಾಪಿತವಾದೀತೆಂದು, ಅಧಿಕಾರದಲ್ಲಿದ್ದ ಪಕ್ಷದ ಮೇಲಿನ ಎಲ್ಲ ದ್ವೇಷ ಮರೆತು, ತಮ್ಮ ಮಾತೃಭೂಮಿಯ ರಕ್ಷಣೆ ಮಾಡಿದರು. ಅದು ಪ್ರತ್ಯಕ್ಷ ಶಸ್ತ್ರಾಸ್ತ್ರದ ಕಾಳಗವಿತ್ತು. ಭಾರತದಲ್ಲಿ ಆರ್ಥಿಕ ಹೋರಾಟವಿದೆ. ಇದು ಆ ರಣಾಂಗಣಕ್ಕಿಂತಲೂ ಹೆಚ್ಚು ಭಯಂಕರ, ಶಸ್ತ್ರಾಸ್ತ್ರದ ಕಾಳಗದಲ್ಲಿ ೧C-೨೦ ಲಕ್ಷದ ಪ್ರಶ್ನೆ ಇರುತ್ತದೆ. ಭಾರತದಲ್ಲಿಯ ಈ ಆರ್ಥಿಕ ಹೋರಾಟದಲ್ಲಿ ೩೦-೪೦ ಕೋಟಿ ಜನತೆಯ ಪ್ರಶ್ನೆ ಇದೆ. ಆದ್ದರಿಂದ ಪ್ರತಿಯೊಬ್ಬನೂ ಎಂಟು ತಾಸು ಕೆಲಸ ಮಾಡಿ, ಉತ್ಪಾದನೆಯನ್ನು ಹೆಚ್ಚಿಸುವ ದೃಢ ಪ್ರತಿಜ್ಞೆಯನ್ನು ಮಾಡಿದರೇನೇ – ಈ ಹೋರಾಟದಲ್ಲಿ ನಾವು ಜಯಗಳಿಸಬಹುದು.
ಉತ್ಪಾದನೆಯಲ್ಲಿ ನಷ್ಟ :
ಕಾರ್ಮಿಕ ಖಾತೆಯ ವರದಿ ನೋಡಿರಿ. ಪ್ರತಿ ವರ್ಷ ಅಂದಾಜು ಎರಡು ಕೋಟಿ ಕೆಲಸದ ದಿನಗಳು, ಮುಷ್ಕರ, ಬಂದ್, ಮುಂತಾದವುಗಳಿಂದ ವ್ಯರ್ಥವಾಗುತ್ತವೆ.
ಇದರಿಂದ ಉತ್ಪಾದನೆಯಲ್ಲಿ ಎಷ್ಟು ನಷ್ಟವಾಗುತ್ತದೆ ಎಂದು ಸಹಜವಾಗಿ ಕಲ್ಪನೆ ಬರುವದು. ಆದರೆ ಇದೇನೂ ಅಲ್ಲ, ನಾವು ಕೆಲಸದ ಮೇಲಿದ್ದಾಗ, ಎಂಟು ತಾಸುಗಳಲ್ಲಿ ಎಷ್ಟು ವೇಳೆ ಕೆಲಸ ಮಾಡುತ್ತೇವೆ ಎಂಬ ಬಗ್ಗೆ ಲೆಕ್ಕವನ್ನು ಪ್ರತಿಯೊಬ್ಬನೂ ಮನಸ್ಸಿನಲ್ಲಿಯೇ ತಾಳೆ ಹಾಕಿ ನೋಡಲಿ. ಇತ್ತೀಚೆಗೆ ಯಾರೂ ೩-೪ ತಾಸುಗಳಿಗಿಂತ ಹೆಚ್ಚಿಗೆ ಕೆಲಸವನ್ನೇ ಮಾಡುವದಿಲ್ಲ. ಆದ್ದರಿಂದ ಉತ್ಪಾದನೆಯಲ್ಲಿ ನಷ್ಟವಾಗುವದಲ್ಲದೇ, ಸಕಾಲದಲ್ಲಿ ಇರಬೇಕಾದ ದಕ್ಷತೆ ಇಲ್ಲದೆ, ಕಾರಖಾನೆಗಳಿಗೆ ತಗಲುವ ಕಚ್ಚಾ ಸರಕುಗಳು ಯೋಗ್ಯ ವೇಳೆಯಲ್ಲಿ ಸರಬರಾಜು ಆಗದೆ, ಮಾಲಮತ್ತೆಗಳ ಮಾರಾಟ, ಸಾಗಾಣಿಕೆ ಸರಿಯಾಗಿ ಆಗದೆ, ಹೀಗೆ ಅನಂತ ಅಸ್ತವ್ಯಸ್ತತೆಗಳು ನಿರ್ಮಾಣವಾಗುತ್ತವೆ. ಇವೆಲ್ಲವುಗಳ ಲೆಕ್ಕಾಚಾರ ಮಾಡಿದರೆ, ಈ ಪ್ರವೃತ್ತಿಗಳಿಂದ ಸಹಜವಾಗಿ ಸಾವಿರ ಕೋಟಿ ರೂಪಾಯಿಗಳ ನಾಶವಾಗುತ್ತವೆ. “ಓವ್ಹರ್ ಟಾಯಿಮ್” ಇದೊಂದು ದೇಶಕ್ಕೆ ತಗಲಿದ ದೊಡ್ಡ ಶಾಪವೇ ಆಗಿ ಪರಿಣಮಿಸಿದೆ. ನಿಯಮಿತ ವೇಳೆಯ ನಂತರ, ಕೆಲಸ ಮಾಡಿದರೆ, ಒಂದೂವರೆ ಪಟ್ಟು ಸಂಭಾವನೆ ಸಿಗುವದೆಂದು, ನಿಯಮಿತ ವೇಳೆಯಲ್ಲಿ ಕೆಲಸವನ್ನೇ ಮಾಡದೆ, ಓವರ್ ಟಾಯಿಮ್ ದೊರಕಿಸುವ ಧೋರಣೆಯನ್ನು ಈಗ ಲಕ್ಷಾವಧಿ ಕೆಲಸಗಾರರು ಅವಲಂಬಿಸಿದ್ದಾರೆ. ಆದ್ದರಿಂದ ಅದೇ ಕೆಲಸಕ್ಕೆ ಈಗ ಮೊದಲಿನದಕ್ಕಿಂತಲೂ ಎರಡರಷ್ಟು ಹಣ ವ್ಯಯವಾಗುತ್ತದೆ. ಇದಲ್ಲದೇ, ಉತ್ಪಾದನೆಯಲ್ಲಿ ನಷ್ಟವಂತೂ ಆಗಿರುತ್ತದೆ.
ಉತ್ಪಾದನೆಯಲ್ಲಿ ನಷ್ಟವಾದರೆ ಮಾಲಿಕನ ನಷ್ಟ, ಓವರ್‌ಟಾಯಿಮದಿಂದ ಸರಕಾರದ ನಷ್ಟ. ಅವುಗಳ ಬಗ್ಗೆ ನಮಗೇಕೆ ಚಿಂತೆ, ಎಂಬ ವೃತ್ತಿ, ಕಾರ್ಮಿಕರಲ್ಲಿ ಬೆಳೆದುಬಂದಿತ್ತು. ಆದರೆ ಇದರಿಂದಲೇ ಅಭಾವ, ಅಭಾವದಿಂದಲೇ ಕಳ್ಳಪೇಟೆ, ಮತ್ತು ಅದರಿಂದ ಹಣದುಬ್ಬರ, ಹೀಗೆ ಅನ್ಯೋನ್ಯಾಶ್ರಯದ ದುಷ್ಟ ಚಕ್ರದಿಂದ, ಕೊನೆಗೆ ನಮ್ಮದೇ ನಾಶವೆಂದು ಈಗ ಎಲ್ಲರೂ ಮನಗಾಣುತ್ತಿದ್ದಾರೆ. ವಿವೇಕದ ಅವಶ್ಯಕತೆಯು ಇರುವದು ಇಲ್ಲಿಯೇ ! ಎಂಟು ತಾಸು ಕೆಲಸಮಾಡದೆ, ನಾವು ಪೂರ್ಣ ಸಂಬಳ ಪಡೆದರೆ ಆಗುವ ಲಾಭ, ಓವರ್‌ಟಾಯಿಮದಿಂದ ಆಗುವ ಲಾಭ, ತಟ್ಟನೆ ಕಣ್ಣು ಮುಂದೆ ಕಾಣುವದು. ಆದರೆ ಅವುಗಳಿಂದ ರಾಷ್ಟ್ರದ ಅರ್ಥವ್ಯವಸ್ಥೆ ಕುಸಿದುಬಿದ್ದು, ಕೊನೆಗೆ ಇದರಿಂದಲೇ ಹಣದುಬ್ಬರವಾಗಿ, ನಮ್ಮದೇ ದ್ವಿಗುಣಿತ ನಷ್ಟವಾಗುವದು, ಈ ವಿಷಯ, ಪ್ರತ್ಯಕ್ಷವಾಗಿ ಕಾಣಲಾರದೆಂದು, ಅದನ್ನು ಗ್ರಹಿಸಲು, ಸ್ವಲ್ಪ ಶಾಂತ ವಿಚಾರ, ಕೊಂಚ ವಿವೇಕ ಬೇಕು, ಆದರೆ ಈ ವಿಚಾರಗಳನ್ನು ಕಾರ್ಮಿಕರಿಗೆ, ಶ್ರಮಿಕ ಕೆಲಸಗಾರರಿಗೆ, ಕಷ್ಟಜೀವಿ ಜನತೆಗೆ, ಅವರ ಮುಂದಾಳುಗಳು ತಿಳಿಹೇಳುವದಿಲ್ಲ. ವ್ಯತಿರಿಕ್ತವಾಗಿ, ಮೇಲೆ ಹೇಳಿದಂತೆ, ಶ್ರೇಷ್ಠ ಜನರು ಕೆಲಸಮಾಡದೆ ಹಣಗಳಿಸುತ್ತಾರೆ, ಶ್ರೇಷ್ಠ ಜನರು ಭ್ರಷ್ಟಾಚಾರ, ಲಂಚಬಡಕತನ, ಅಪಹಾರ ಈ ಪಾಪಗಳನ್ನೆಸಗುತ್ತಾರೆ. ಆ ಮೇಲೆ ನಮಗೇ ಏಕೆ. ಪುಣ್ಯದ ಉಪದೇಶ ಮಾಡುತ್ತೀರಿ? ಹೀಗೆ ಸಹ ಅವರ ವಿಚಾರಸರಣಿ ಇರುತ್ತದೆ.
ಆದರೆ ದೇಶ ನನ್ನದು, ದೇಶದ ಆರ್ಥಿಕ ಪ್ರಗತಿಯ ಹೊಣೆಗಾರಿಕೆ ನನ್ನ ಮೇಲೆ ಇದೆ. ನಾನು ಕರ್ತವ್ಯಚ್ಯುತಿ ಮಾಡಿದರೆ, ಅದರಿಂದ ಕೊನೆಗೆ ಸಮಾಜದ ಮತ್ತು ನನ್ನ ನಷ್ಟವಿದೆ ಎಂಬ ವಿವೇಕ, ನಾಗರಿಕರಿಗೆ ಬಂದರೇನೇ, ನಾವು, ಎಂಟು ತಾಸು ನಮ್ಮ ಕೆಲಸಗಳನ್ನು ಮಾಡಲೇಬೇಕೆಂದು ಜನರಿಗೆ ಅರಿವಾಗಬಹುದು. ಆದರೆ ದೇಶ ನನ್ನದೆಂಬ ಭಾವನೆ ಅವರ ಮನದಲ್ಲಿ ದೃಢಮೂಲವಾಗಿರಲೇಬೇಕು,
ಎಂಟು ತಾಸು ಕೆಲಸ ಮಾಡಲೇಬೇಕೆಂಬ ಪ್ರತಿಜ್ಞೆಯಂತೆ, ಇನ್ನೂ ಒಂದು ಪ್ರತಿಜ್ಞೆಯನ್ನು ರಾಷ್ಟ್ರನಿಷ್ಠೆಯುಳ್ಳ ಜನರು ಮಾಡಬೇಕು. ತಾವು ಕೆಲಸ ಮಾಡುತ್ತಿರುವ ಉದ್ಯೋಗಕ್ಷೇತ್ರದಲ್ಲಿಯ ಭ್ರಷ್ಟಾಚಾರ, ಲಂಚಬಡಕತನ, ಕಪ್ಪು ವ್ಯವಹಾರ ಇವುಗಳನ್ನು ಸಂಘಟಿತ ಪ್ರಯತ್ನದಿಂದ ಪ್ರತಿಬಂಧಿಸಬೇಕು. ಇದು ಎರಡನೆಯ ಪ್ರತಿಜ್ಞೆ. ರೇಲ್ವೆಯ ಉದಾಹರಣೆಯನ್ನು ತಕ್ಕೊಳ್ಳಿರಿ, ಕಲ್ಯಾಣದಿಂದ ಬೊಂಬಾಯಿ, ದಿಲ್ಲಿಯಿಂದ ಆಗ್ರಾಗಳಿಗೆ ದಿನಾಲು ಸಾವಿರಾರು ಜನರು ತಿಕೀಟವಿಲ್ಲದೆ ಪ್ರವಾಸ ಮಾಡುವರು. ಕಳ್ಳ ಸಾಗಾಟಗಾರರು ಬಹಿರಂಗವಾಗಿ ರೈಲಿನಿಂದ ಸರಕುಗಳನ್ನು ಸಾಗಿಸುತ್ತಾರೆ, ಮತ್ತು ಎಲ್ಲಿ ಬೇಕಾದಲ್ಲಿ ಗಾಡಿಗಳನ್ನು ನಿಲ್ಲಿಸುತ್ತಾರೆ, ಈ ಜನರನ್ನು ಯಾರೂ ಕೇಳುವವರಿಲ್ಲ, ಯಾಕೆಂದರೆ ಕೇಳುವವರೇ ಅವರಿಗೆ ವಶರಾಗಿರುತ್ತಾರೆ. ತಿಕೀಟುಗಳ ಕಪ್ಪವ್ಯಾಪಾರ, ರಿಝರ್ವೆಶನದ ಕಪ್ಪು ವ್ಯಾಪಾರ, ಸರಕುಗಳನ್ನು ಒಯ್ಯುವ ವಾಗೀನುಗಳ ಕಪ್ಪು ವ್ಯಾಪಾರ, ಮತ್ತು ಕಡೆಗೆ ರೇಲ್ವೆ ಇದ್ದಲಿಯ ಕಪ್ಪು ವ್ಯಾಪಾರ ! ಇವೆಲ್ಲವುಗಳನ್ನು ತಡೆಗಟ್ಟಿದರೆ, ಎರಡಾದರೂ ಸುಪರಿಣಾಮಗಳಾದಾವು, ಒಂದನೆಯದಾಗಿ ಈ ಕಪ್ಪು ವ್ಯವಹಾರದಿಂದ ಆಗುವ ಬೆಲೆ ಏರಿಕೆ (ಯಾವದೇ ಕಪ್ಪುವ್ಯವಹಾರದಿಂದ ಬೆಲೆ ಏರಿಕೆಯಾಗುವದು) ನಿಗ್ರಹವಾದೀತು ಮತ್ತು ಅದರಿಂದ ಕೋಟಿಗಟ್ಟಲೆ ರೂಪಾಯಿಗಳ ಉಳಿತಾಯವಾಗಿ, ಸ್ವಲ್ಪವಾದರೂ ವೇತನವನ್ನು ಹೆಚ್ಚಿಸಲು ರೇಲ್ವೆ ಶಾಖೆಗೆ ಸಾಧ್ಯವಾದೀತು, ರೇಲ್ವೆ ಶಾಖೆಯಂತೆಯೇ ಪ್ರತ್ಯೇಕ ಶಾಖೆಯ ಪರಿಸ್ಥಿತಿ, ತಹಸೀಲ್ದಾರ್ ಕಚೇರಿ, ಜಿಲ್ಲಾ ಪರಿಷತ್, ಬ್ಯಾಂಕುಗಳು, ಲೋಕೋಪಯೋಗಿ ಶಾಖೆ, ಮುನಸೀಪಾಲಿಟಿ, ಗೃಹನಿರ್ಮಾಣ ಖಾತೆ, ಪೋಲೀಸ್, ಶಾಲೆ, ಕಾಲೇಜುಗಳು-ಎಲ್ಲ ಎಲ್ಲ ಖಾತೆಗಳು ಲೋಡ್ಡು ಹಿಡಿದು ಹೋಗಿವೆ. ಅತಿಶಯ ಪ್ರಚಂಡ ಪ್ರಮಾಣದ ಮೇಲೆ ಭ್ರಷ್ಟಾಚಾರ, ಕಳ್ಳಪೇಟೆಗಳು ನಡೆಯುತ್ತವೆ ಎಂದೇ, ಬೆಲೆ ಏರಿಕೆ ವಿದ್ಯುತ್ ವೇಗದಿಂದ ಬೆಳೆಯ ಹತ್ತಿದೆ. ಈ ಪ್ರತಿಯೊಂದು ಖಾತೆಯಲ್ಲಿ, ದೇಶಭಕ್ತಿಯಿಂದ ಪ್ರೇರಿತವಾದ, ದೇಶ ನನ್ನದೆಂದು ಭಾವನೆಯುಳ್ಳ, ಮತ್ತು ಇಂದು ಲಾಭ ಕಂಡರೂ, ಇದರಿಂದಲೇ ಆರ್ಥಿಕ ಪ್ರಗತಿಗೆ ಅಗುಳಿ ಬೀಳುವದರಿಂದ ಕೊನೆಗೆ ಪ್ರತಿಯೊಬ್ಬರ ಆರ್ಥಿಕ ನಷ್ಟವೇ ಇದೆ ಎಂದು ತಿಳಿದುಕೊಳ್ಳುವ ವಿವೇಕವಿದ್ದ, ಒಂದು ಸಣ್ಣ ಸಂಘಟಿತ ವರ್ಗ, ನಿರ್ಮಾಣವಾದರೆ, ಎಲ್ಲ ಥರದ ಅಪಪ್ರಕಾರಗಳನ್ನು ತಡೆಗಟ್ಟಲು ಸಾಧ್ಯವಾದೀತು. ಆದರೆ ಈ ವರ್ಗ ಸಂಘಟಿತವಾಗಬೇಕು. ಒಬ್ಬಿಬ್ಬರಿಂದ ಆಗುವ ಮಾತಲ್ಲ. ಆದರೆ ಆರ್ಥಿಕ ಸ್ವಾತಂತ್ರ‍್ಯದ ಈ ಹೋರಾಟ, ರಾಜಕೀಯ ಸ್ವಾತಂತ್ರ್ಯದಷ್ಟೇ ಮಹತ್ವದ್ದಿದೆ: ಇಷ್ಟೇ ಅಲ್ಲ, ಆ ರಾಜಕೀಯ ಸ್ವಾತಂತ್ರ‍್ಯ ಈ ಆರ್ಥಿಕ ಸ್ವಾತಂತ್ರ‍್ಯದ ಮೇಲೆಯೇ ಅವಲಂಬಿಸಿದೆ ಎಂದು ನಿಶ್ಚಲ ಮನೋವೃತ್ತಿ, ಭಾರತದ ನಾಗರಿಕರಲ್ಲಿ ಬಂದರೆ, ಪ್ರತಿಯೊಂದು ಖಾತೆಯಲ್ಲಿ ಇಂಥ ಸಂಘಟಿತ ವರ್ಗ ನಿರ್ಮಾಣವಾಗುವದು ಬಹಳ ದುಷ್ಕರವಲ್ಲ.
ರಾಷ್ಟ್ರ ಹಿತದ ತಿಳಿವಳಿಕೆ :
ಶ್ರೀ ಎಸ್. ಎಮ್. ಜೋಶಿಯವರು ತಮ್ಮ ಇಡೀ ಆಯುಷ್ಯ ಕಾರ್ಮಿಕರ ಚಳುವಳಿಯಲ್ಲಿ ಸವೆಸಿದ್ದಾರೆ. ರೇಲ್ವೆ ಮುಷ್ಕರದ ಬಗ್ಗೆ ಮಾತಾಡುತ್ತ. ಅವರು ಹೀಗೆ ಹೇಳಿ ದರು. “ಸ್ವಾತಂತ್ರ್ಯದ ನಂತರ ವ್ಯಾಪಕವಾದ ಸಮಾಜವಾದೀ ಕ್ರಾಂತಿಯ ಬಗ್ಗೆ ಕಾರ್ಮಿಕರು ನಿರತರಾಗಿರುವದು ತಪ್ಪಿದೆ. ಅವರು ತಮ್ಮ ಕಾಲಕೆಳಗಷ್ಟೇ ನೋಡಹತ್ತಿದರು. ಒಟ್ಟಾರೆ ಕಟ್ಟನ್ನು ಸ್ಥಿರವಾಗಿಟ್ಟು ಲಾಭ ಗಿಟ್ಟಿಸುವ ಆಟವನ್ನು ಆಡಹತ್ತಿದರು. ಆದರೆ ಆ ವ್ಯವಸ್ಥೆಗೇ ಧಕ್ಕೆ ತಗಲದೆ, ಕಾರ್ಮಿಕರಿಗೆ ನ್ಯಾಯವಾದ ಮತ್ತು ಸುಸಂಗತವಾದ ಬೇಡಿಕೆಗಳು ಸಿಗಲಾರವೆಂದು, ರೈಲು ಮುಷ್ಕರದಿಂದ ತಿಳಿದುಬಂದಿದೆ. ಆದ್ದರಿಂದ ಒಂದು ಅರ್ಥದಿಂದ ಇದೊಂದು ಹೊಸ ಜಾಗೃತಿಯ ಅರುಣೋದಯವೆಂದು ನನ್ನ ಭಾವನೆಯಾಗಿದೆ” (ಸಾಧನಾ ೧೫-೬-೧೯೭೪), ಕಾರ್ಮಿಕರು ವ್ಯಾಪಕವಾದ ರಾಷ್ಟ್ರ ಹಿತದ ದೃಷ್ಟಿಯಿಟ್ಟರೆ, ಮತ್ತು ಮೇಲೆ ಹೇಳಿದಂತೆ ಕಳ್ಳಪೇಟೆ, ಲಂಚ ಬಡಕತನ ಇವುಗಳನ್ನು ಹತೋಟಿಯಲ್ಲಿಟ್ಟರೆ ಅವರಿಗೆ ಈ ವ್ಯವಸ್ಥೆಯನ್ನು, ಕಟ್ಟನ್ನು ಮುರಿಯಲಿಕ್ಕೆ ಬಹಳೇನೂ ಕಠಿಣವಲ್ಲ.
ಕಾರ್ಮಿಕ ಶಕ್ತಿಯಂತೆಯೇ ಯುವಕರ ಶಕ್ತಿ. ಆರ್ಥಿಕ ವಿಕಾಸದ ವಿಧಾಯಕ ಕಾರ್ಯಗಳಿಗೆ, ಈ ಶಕ್ತಿ ಒಲಿದರೆ, ದಾರಿದ್ರ‍್ಯಮುಕ್ತಿಯ ಹೋರಾಟವನ್ನು ಸಲೀಲವಾಗಿ ಜಯಿಸ ಬಹುದು, ಆರ್ಥಿಕ ವಿಕಾಸಕ್ಕಾಗಿ, ವಿದ್ಯುತ್, ತೈಲ, ಅಣು ಹೀಗೆ ಯಾವದೊಂದು ಶಕ್ತಿ (ಪಾವರ) ಬೇಕು, ಅರಬರಿಗೆ ತೈಲ ದೊರಕಿತು. ಆಫ್ರಿಕೆಯಲ್ಲಿಯ ನಾಯಜೇರಿ ಯಾಕ್ಕೂ ತೈಲ ಗೋಚರವಾಗಿದೆ, ನಾಯಗರ ಎಂಬ ಆಫ್ರಿಕೆಯಲ್ಲಿಯ ಇನ್ನೊಂದು ದೇಶದಲ್ಲಿ, ಥೋರಿಯಂ ಯುರೇನಿಯಂಗಳು ವಿಪುಲವಾಗಿ ಸಿಗಹತ್ತಿವೆ, ಕಾಂಗೋದ
ಹತ್ತಿರ ಅಪರಿಮಿತ ಅರಣ್ಯ ಸಂಪತ್ತಿದೆ. ದಕ್ಷಿಣ ಆಫ್ರಿಕೆಯಲ್ಲಿ ಬಂಗಾರ ವಜ್ರಗಳ ಸಮೃದ್ಧಿಯಿದೆ. ಭಾರತದಲ್ಲಿ ಏನಿದೆ? ಆಕಾಶದಿಂದ ಬೀಳುವ ನೀರು-ಇದೇ ರೀತಿ ಒಂದು ದೊಡ್ಡ ಶಕ್ತಿ ಇದೆ. ಬಂಗಾರವನ್ನು ಗಣಿಗಳಿಂದ ಅಗೆಯಬೇಕಾದ ಹಾಗೆ, ಈ ನೀರನ್ನು ಆಣೆಕಟ್ಟಿನಲ್ಲಿ ಸಂಗ್ರಹಿಸಬೇಕಾಗುತ್ತದೆ. ಇಂಥ ಲಕ್ಷ ಆಣೆಕಟ್ಟುಗಳನ್ನೂ, ಲಕ್ಷ ಒಡ್ಡುಗಳನ್ನೂ ಕಳೆದ ೨೫ ವರ್ಷಗಳಲ್ಲಿ, ಭಾರತವು ಕಟ್ಟಿದ್ದರೆ, ಇಲ್ಲಿ ಶಕ್ತಿಯ ಕೊರತೆ ಬೀಳುತ್ತಿರಲಿಲ್ಲ. ಜಾಗೃತ ಯುವಶಕ್ತಿ ಇಂಥ ಕೆಲಸಗಳನ್ನು ಕೈಕೊಳ್ಳಬೇಕು. ಭಾರತದಲ್ಲಿ ಏಳು ಲಕ್ಷ ಹಳ್ಳಿಗಳಿವೆ. ಏಳು ಹಳ್ಳಿಗೊಂದರಂತೆ ಆಣೆಕಟ್ಟು ಕಟ್ಟಿದರೂ, ಇಲ್ಲಿ ಪ್ರಚಂಡ ಆರ್ಥಿಕ ಕ್ರಾಂತಿಯಾದೀತು. ಅಣೆಕಟ್ಟುಗಳ ನಂತರ ಇಲ್ಲಿ ಗೋಶಾಲೆಗಳನ್ನು ಕಟ್ಟಬಹುದು. ಅವುಗಳ ಮೇಲೆ ಒಂದು ಲಕ್ಷ ಗೊಬ್ಬರದ ಗ್ಯಾಸ್‌ಪ್ಲ್ಯಾಂಟ್‌ಗಳನ್ನು ಮಾಡಬಹುದು, ಅದ್ದರಿಂದ ಆಣೆಕಟ್ಟು, ಗೋಶಾಲೆ, ಗ್ಯಾಸ್‌ಪ್ಲ್ಯಾಂಟ್, ಗೊಬ್ಬರ ಈ ಕಾರ‍್ಯಗಳಿಗೆ ವಿದ್ಯಾರ್ಥಿ ಶಕ್ತಿಯು ತನ್ನ ಎಲ್ಲ ಸಾಮರ್ಥ್ಯವನ್ನು ತಿರುಗಿಸಿದರೆ, ಇಲ್ಲಿ ನೂರು ಸೇರು ಧನ ಉಪಲಬ್ಧವಾಗಿ, ನಮ್ಮ ಮಹತ್ವದ ಸಮಸ್ಯೆಗಳ ಪರಿಹಾರವಾದೀತು.
ತರುಣರ ಮೇಲಿನ ಹೊಣೆಗಾರಿಕೆ
ಭಾರತ ಸರಕಾರವು ಈ ಬಗ್ಗೆ ಅವಶ್ಯವಿದ್ದ ಯೋಜನೆಗಳನ್ನು ಸಿದ್ದಪಡಿಸಿದೆ, ಒಂದು ಲಕ್ಷ ಗೊಬ್ಬರ ಗ್ಯಾಸ್‌ಪ್ಲ್ಯಾಂಟ್‌ಗಳನ್ನು ನಿರ್ಮಿಸುವದೆಂದು ನಿಯೋಜನ ಮಂಡಳವು ಇತ್ತೀಚೆಗೆ ಹೇಳಿದೆ. ಪಶುಧನದ ಅಭಿವೃದ್ಧಿಗೂ ಯೋಜನೆಗಳನ್ನು ಸಾರಿದ್ದಾರೆ. ಚಿಕ್ಕ ನೀರಾವರಿಯೋಜನೆಗಳ ಬಗ್ಗೆ, ಅನೇಕ ವರ್ಷಗಳ ಹಿಂದೆಯೇ ಘೋಷಿಸಲಾಗಿದೆ. ಆದರೆ ಸರಕಾರಿ ಯೋಜನೆಗಳಲ್ಲಿ ಕೇವಲ ಹಣವು ವೆಚ್ಚವಾಗುತ್ತದೆ, ೧೯೭೧ ರಲ್ಲಿ ಖೇಡ ತಾಲೂಕಿನ ಮುಂದಾಳುಗಳು, ಅಂದಾಜು ೨ ಕೋಟಿ ರೂಪಾಯಿಗಳನ್ನು, ಜಲ ಸಿಂಚನ ಯೋಜನೆಯ ಬಗ್ಗೆ ದೊರಕಿಸಿದರು. ಆದರೆ ನೀರಿನ ಒಂದು ಹನಿಯೂ ಜಮೀನಿಗೆ ತಟ್ಟಲಿಲ್ಲ. ಇಲ್ಲಿ ಯುವಶಕ್ತಿಯ ಕಾರ್ಯವಿದೆ, ಪ್ರತಿಯೊಂದು ತಾಲೂಕಿನಲ್ಲಿ ಸಾವಿರ-ಐನೂರು ತರುಣರು ಸಂಘಟಿತರಾದರೆ, ಸರಕಾರದಿಂದ ಬರುವ ಹಣ ನಿರ್ಧರಿಸಿದ ಯೋಜನೆಗೆ ಅಧಿಕಾರಿಗಳು ವ್ಯಯಮಾಡುವಂತೆ ಒತ್ತಾಯಿಸಬಹುದು. ಹೀಗೆಯೇ ಹಣವನ್ನು ದೊರಕಿಸಿ ಲಕ್ಷ ಆಣೆಕಟ್ಟುಗಳನ್ನು ಕಟ್ಟುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರಬಹುದು.
ಆದರೆ ಇದಕ್ಕಿಂತಲೂ ಒಂದು ಬಹು ದೊಡ್ಡ ಕಾರ್ಯ ಗ್ರಾಮೀಣ ಸಂಘಟನೆಯಿಂದ ಸಾಧಿಸಬಹುದು, ಗ್ರಾಮ ಪಂಚಾಯತಿಯಿಂದ ಜಿಲ್ಲಾ ಪರಿಷತ್‌ದವರೆಗೆ, ಎಲ್ಲೆಡೆಗೂ, ಹಿರಿಯಣ್ಣಗಳ (ದಾದಾಗಿರಿ) ರಾಜ್ಯವಿದ್ದು, ಅವರೇ ಎಲ್ಲ ತಿರುಳನ್ನು ಗಿಟ್ಟಿಸುತ್ತಾರೆಂದು ಕಾಂಗ್ರೆಸ್ ಕಾರ್ಯಕರ್ತರು ದೂರಿಕೊಳ್ಳುತ್ತಿದ್ದಾರೆ. ಗ್ರಾಮೀಣ ಮತ್ತು ನಗರದ ಯುವಶಕ್ತಿ ಸಂಘಟಿತವಾದರೆ, ಈ ಎಲ್ಲ ಭ್ರಷ್ಟಾಚಾರ, ಕಳ್ಳಪೇಟೆ, ಲಂಚಬಡಕತನವನ್ನು ನಿರ್ಮೂಲ ಮಾಡಬಹುದು, ಮತ್ತು ಕಾಳ ರಾಷ್ಟ್ರಘಾತುಕ ಶಕ್ತಿಗಳಿಗೆ ಬುಡದಲ್ಲಿಯೇ ಸಿಡಿಮದ್ದನ್ನು ಹಚ್ಚಿದರೆ, ವಿಧಾನಸಭೆ, ಲೋಕಸಭೆಗಳ ಶುದ್ದೀಕರಣ ಅಸಾಧ್ಯವಾದುದೇನೂ ಅಲ್ಲ. ಆಣೆಕಟ್ಟು, ಗೋಶಾಲೆ, ಗ್ಯಾಸ್‌ಪ್ಲ್ಯಾಂಟ್ ಇತ್ಯಾದಿಗಳಿಂದ ವಿಪುಲವಾಗಿ ಧನ ನಿರ್ಮಾಣಮಾಡುವ ಮತ್ತು ಸಂಘಶಕ್ತಿಯ ಬಲದಿಂದ, ಸತ್ತಾಧಾರಿಗಳಿಂದ ಆಗುವ ಅಪಹಾರವನ್ನು ತಡೆಯುವ-ಹೀಗೆ ಜೋಡು ಕಾರ್ಯಗಳನ್ನು ಯುವಶಕ್ತಿಯು ಮಾಡಿದರೆ, ಭಾರತದ ಪ್ರಜಾಪ್ರಭುತ್ವ ಇನ್ನೂ ಯಶಸ್ವಿಯಾಗುವದು ಶಕ್ಯವಿದೆ.
ಅಲಹಾಬಾದದಲ್ಲಿ ಶ್ರೀ ಜಯಪ್ರಕಾಶರ ಅಧ್ಯಕ್ಷತೆಯಲ್ಲಿ ಒಂದು ಅಖಿಲ ಭಾರತೀಯ ಯುವಕ ಪರಿಷತ್ತು ಕೂಡಿತ್ತು. ಈ ದೇಶದಲ್ಲಿ ಅಮೂಲಾಗ್ರವಾಗಿ ಕ್ರಾಂತಿಯನ್ನುಂಟು ಮಾಡುವದಕ್ಕಾಗಿ, ದೇಶದ ತರುಣರು ಯಾವದೇ ತ್ಯಾಗಕ್ಕೆ ಸಿದ್ಧರಾಗಬೇಕೆಂದು ಗೊತ್ತುವಳಿಯನ್ನು ಪರಿಷತ್ತು ಒಮ್ಮತದಿಂದ ಸ್ವೀಕರಿಸಿತು. ಇದು ನಿಜವಾಗಿ ಶುಭ ಚಿನ್ಹವೇ. ಇಂಥ ದೊಡ್ಡ ಧ್ಯೇಯವನ್ನು ಎಲ್ಲ ಭಾರತೀಯ ತರುಣರು ನೆನೆದುಕೊಂಡರೆ ಈಗ ಅವರಲ್ಲಿ ನಿರ್ಮಾಣವಾದ ಅಪಪ್ರವೃತ್ತಿಯು ಕೂಡಲೇ ನಷ್ಟವಾದೀತು, ಇತ್ತೀಚೆಗೆ ವಿದ್ಯಾರ್ಥಿಗಳು ಅಮೇರಿಕೆಯಲ್ಲಿಯಂತೆ ವ್ಯಸನಾಧೀನರಾಗುತ್ತಿದ್ದಾರೆ. ವಿದ್ಯೆಯ ಬಗ್ಗೆ ಅವರಿಗೆ ಭಕ್ತಿ ಇಲ್ಲ. ಪರೀಕ್ಷೆಯಿಲ್ಲದೆ ಉತ್ತೀರ್ಣರಾಗಬೇಕೆಂದು ವಿಪರೀತ ಬುದ್ಧಿ ನಿರ್ಮಾಣವಾಗಿದೆ. ಸುಡುವದು, ಧ್ವಂಸ, ಅತ್ಯಾಚಾರಗಳು ಪ್ರತಿ ಚಳುವಳಿಯ ಲಕ್ಷಣಗಳಾಗಿವೆ. ಇವೆಲ್ಲವುಗಳು ಹೋಗಿ, ಯುವಶಕ್ತಿಯು ವಿವೇಕ, ಸಂಯಮಯುಕ್ತ, ಚಾರಿತ್ರ ಸಂಪನ್ನ ಮತ್ತು ಧ್ಯೇಯವಾದಿಗಳಾದರೆ, ಸತ್ಯಾಗ್ರಹದ, ಗಾಂಧೀಜಿಯ ಮಾರ್ಗದಿಂದಲೇ. ಈ ಎರಡನೆಯ ಆರ್ಥಿಕ ಕ್ರಾಂತಿ ಘಟಿಸುವಾ ಎಂದು ನಿರ್ಧರಿಸಿದರೆ, ಪ್ರಜಾತಂತ್ರದಿಂದಲೂ, ಭಾರತದಲ್ಲಿ ನೂರು ಸೇರು ಧನ-ಪ್ರಜಾಪ್ರಭುತ್ವಕ್ಕೆ ಅವಶ್ಯವಿದ್ದ ಸಮೃದ್ಧಿಯನ್ನು ನಿರ್ಮಿಸಿತು, ಮತ್ತು ಈ ಭೂಮಿಯ ಭವಿತವ್ಯ ಇನ್ನೂ ಬೆಳಗಿಸಿತು!
ಗೋಕುಲಾಷ್ಟಮಿ
ಗೋಕುಲಾಷ್ಟಮಿ
ಚೆನ್ನಣ್ಣ ವಾಲೀಕಾರ
ವಿಶ್ವಗುರಿಯೇ ಚಲನೆ ಸ್ಥಿತ್ಯಂತರ ಬದಲಾವಣೆ
ಪ್ರಯಾಣದಲ್ಲಿ ವ್ಯರ್ಥವೆಂಬುದಿಲ್ಲ
ಹಗಲು ರಾತ್ರಿಯ ಗಾಲಿ ಬದುಕು ಉರುಳುವ ಬಂಡಿ
ಎದುರಿಸುವ ಮನಸ್ಥೈರ‍್ಯ ಮೂಲಭಾಂಡ
ಹುಟ್ಟಿದ ಜೀವಕ್ಕೆ ಕಷ್ಟಕಟ್ಟಿದ ಗಂಟು
ವ್ಯಕ್ತಿತ್ವ ವಿಕಸನವು ಚೇತೋಹಾರಿ
ಕತ್ತಲೆಗೂ ಕರುಳುಂಟು ಎಷ್ಟಂಥ ಎಳೆದಾಟ
ವಿಷದ ವಸ್ತುಗಳಿಂದ ಅಮೃತ ಲಹರಿ
ಹಗಲ ಹುಟ್ಟಿಗಾಗಿ ರಾತ್ರೆಲ್ಲ ತಯ್ಯಾರಿ
ಕತ್ತಲೆಯ ಕಾಡಾಟ ಮೋಹನಾಸ್ತ್ರ
ಒಂದು ಪಾಲು ಭೂಮಿ ಮೂರು ಪಾಲು ಜಲ
ಸುಖಕ್ಕಿಂತಲೂ ಕಷ್ಟ ಜೀವಶಾಸ್ತ್ರ
ಪಶುಪಕ್ಷಿ ಪ್ರಾಣಿಗಳು ಆದಿಮಾನವ ಮೂಲ
ತನ್ನ ವಂಶಕ್ಕವನು ನಂಬಿಗಸ್ಥ
ಬೇಡಿ ಬಂಧನ ಸೆರೆ ಮುಕ್ತಮಾಡಲು ಶಕ್ತ
ಅದರಿಂದವನಾದಾಗ ತಪ್ತ
ಮೇರೆ ಮೀರಲು ಕಷ್ಟ ಕೃಷ್ಣನಾಗಮನ
ಅಕ್ಷಯಾಂಬರ ಹೊತ್ತು ಬಂದ ಕುತ್ತು
ಆರ್ತಧ್ವನಿಯ ನಾದ ಆಕಾಶ ತಟ್ಟಿದರೆ
ಪ್ರಕೃತಿ ಪೋಷಣೆಗೆ ತಾನೆ ತೊತ್ತು
ಆಳೊ ಅಬ್ಬರದೊಳಗೆ ಮಣ್ಣು ಮುಕ್ಕುವ ಕಥೆ
ಕಂಸ ಕಾಂಗ್ರೆಸ್ಸಿಗೂ ಒಂದೇ ಫಲ
ಎಲ್ಲ ಕಾಲಕ್ಕುಂಟು ನಮ್ಮ ನಡೆ ನುಡಿ ಹಗೆ
ಅರಿವಿಲ್ಲದಿರಲಿಕ್ಕೆ ವೈರಿ ನೆಲ
ಮಂದಿ ಮಕ್ಕಳಲಿದ್ದು ಮುಗಿಲು ಮುಟ್ಟಿದ್ದುಂಟು
ಜಗದಲ್ಲಿ ಆಶ್ಚಯ್ಯವೆಂಬುದಿಲ್ಲ
ಮಾನವನ ಹೋರಾಟಕಾದಿ ಅಂತ್ಯಗಳೆಲ್ಲಿ
ಭೂಮಿತಾಯಿಗೆ ಬಂಜೆತನವೇ ಇಲ್ಲ.
ಸೃಷ್ಟಿಕ್ರಿಯೆಯಲ್ಲುಂಟು ಎಲ್ಲಕ್ಕೂ ವ್ಯಕ್ತಿತ್ವ
ತನ್ನ ಕೇರಿಗೆ ನಾಯಿ ಹುಲಿಯ ಬಾಯಿ
ಹಗುರು ಅರಿವಿಟ್ಟಲ್ಲಿ ಹಗೆಗೀವ ಆಹ್ವಾನ
ಪರೀಕ್ಷಿತಗೆ ಕೊಂದದ್ದು ಸಣ್ಣ ಜೀವಿ.
ಈ ಒಂದು ಜನ್ಮ ಸಾಕು ಎಲ್ಲವನುಣಲು
ದಿವ್ಯನೇತ್ರಗಳಿಂದ ವಿರಾಡ್ರೂಪ
ತಿಳಿವು ಬಾರದ ಜನುಮ ಮನುಷ್ಯನಾಗದ ಮಂಗ
ಇಷ್ಟಂತ ರವಿಗಿಲ್ಲ ಅಳತೆ ಆಳ.
ಪ್ರಕೃತಿ ಕಟ್ಟೆಗೆ ತರಲು ನ್ಯಾಯ ಪ್ರಳಯದ ಜ್ವಾಲೆ
ಕೆಟ್ಟಕುನ್ನಿಗಳೆಲ್ಲ ಕಪ್ಪು ಸಮುದ್ರ
ಸತ್ಯಕ್ಕೆ ಗೆಲುವುಂಟು ಬಾಲದೋಷಗಳಿಂದ
ಮರಣ ನಂತರ ಬರುವ ಸರದಿ ಬಹಳ.
ಉದಯವಾಗುವ ಹೊತ್ತು ಎಲ್ಲವೂ ಸ್ವಾಗತಿಕೆ
ರಾತ್ರಿಗೂ ಚಿಕ್ಕೆಗಳು ಹೊಳೆವದುಂಟು
ಬೆಳಗು ಮಾಡುವ ತಾಳ್ಮೆ ಆತ್ಮದೊಳು ಗಟ್ಟಿರಲು
ಎಲ್ಲವೂ ವರ್ಧಿಸಲು ತಾಯಿಕರುಳು
ಭೂಮಿ ಹದಗೊಳ್ಳಲು ಈ ಹೊಡ್ಡು ತೆಗ್ಗುಗಳು
ಎತ್ತುಬಿತ್ತಿಗೆ ಟ್ರಾಕ್ಟರ್ ಟ್ರಕ್ಕು ಪಂಪು
ಎಲ್ಲ ಕಾಲಕು ಕೃಷ್ಣನೊಕ್ಕಲತನವಿಟ್ಟಲ್ಲಿ
ಹಂಚಿ ಉಣ್ಣುವ ಮಾತಾಗ ತಂಪು.
ಧರ್ಮಸಂಗ್ರಹ ಕಾರ‍್ಯ ಅನುಭವದ ಸರ್ವಸ್ವ
ಸಾಮಾನ್ಯತೆಯ ಬದುಕಿಲ್ಲ ಶ್ರೇಯ
ಕೀಳು ಮೇಲಿನ ಭಾವ ತೊರೆದಂತೆ ಕೈವಶ
ತಾರಾಂಬರವನ್ನೆ ಹಿಡಿವ ಧೈಯ
ಎಡವಿ ಎದ್ದೇಳುವುದು ಸತ್ಸತ್ತು ಹುಟ್ಟುವುದು
ಸುತ್ತಿಕೊಂಡಿರುವಂಥ ಸೂತ್ರ
ಮೇರೆಯಲ್ಲಿದ್ದಾಗ ಇಷ್ಟೆಲ್ಲ ರಾದ್ಧಾಂತ
ಮೀರಿದಲ್ಲುಂಟು ಅಪಘಾತ.
ಕೃಷ್ಣಪಕ್ಷದ ರಾತ್ರಿ ಕಪ್ಪಿನಲಿ ಬೆಳಕುಂಟು
ಕಷ್ಟಕೋಟೆಯಲೆ ಸೌಖ್ಯವಾಸ
ಕುರುಕ್ಷೇತ್ರದ ಮೇಲ್ ಮಹಲೋಕದ ಪಾಯ
ಪೆಟ್ಟು ತಿಂದಂತೆಲ್ಲ ಲೆಕ್ಕ.
ಮುಗಿಲ ಮಣ್ಣಿನ ಬೇಟ ದೇವಮಾನವರಾಟ
ಬಿತ್ತಿದಂತೆ ಭರ್ತಿ ಫಲ
ಸ್ವರ್ಗ ನರಕದ ದೃಷ್ಟಿ ಕವಿಸಮಯದ ಸೃಷ್ಟಿ
ಮುಗಿಲಲ್ಲಿ ನಿಲ್ಲುವದೆ ಜಲ.
ಚಿಗುರುವದು ಫಲಿಸುವದು ಉಳಿದ ಗೃಹದೊಳಗೆಲ್ಲ
ಮಣ್ಣಿದ್ದಲುಂಟಯ್ಯ ಎಲ್ಲ
ಅವತಾರ ವೇದಾಂತ ಪುರಾಣ ಪುಣ್ಯ ಕಥೆ
ಬಂದದ್ದು ನೆಲವಾಗಲೆಲ್ಲ.
ಮನೆಯ ಹೊತ್ತಿರೊ ಪಾಯ ಲೋಕ ರಕ್ಷಕ ಕಾರ‍್ಯ
ನ್ಯಾಯ ನ್ಯಾಯದ ಮಾತು ಗೌಣ
ಅತ್ತಾಗ ನಕ್ಕಾಗ ಸಿಕ್ಕಾಗ ಸುಖ ಶಾಂತಿ
ಅದು ಒಂದೇ ಚರಮ ಗುರಿ ತಾಣ.
ಕೊನೆಗೂ ಪುರುಷೋತ್ತಮ ಲೀಲಾ ನಾಟಕಕಾರ
ಮಾಡಿದ್ದೆಲ್ಲಕ್ಕುಂಟು ಅರ್ಥ
ಸಮುದ್ರಕ್ಕನ್ನುವುದೇನು ಭರತಿ ಓಹಟಿ ಆಟ
ತಿಳಿಯದಿರಲಾಗುವದವರ್ಥ
ಕೆಟ್ಟವರ ಕೆಡುವಿಕೆಗೆ ಕಲ್ಯಾಣದ ಮೊಳಗು
ಕೃಷ್ಣನಾಮದ ಗೀತೆ ಚಕ್ರ
ಭಜನೆ ಮಾಡುವದಲ್ಲ ಜೀವನದ ಪ್ರಯೋಗ
ಈಸಿಜೈಸುವ ಕೃಷ್ಣಗಾಥಾ.
ಕವಿತೆ(ಅನುವಾದ)
ಕವಿತೆ
ಮೂಲ : ವಿನೋದ್ ಕುಮಾರ್ ಶುಕ್ಲ
ಅನು : ತಿಪ್ಪೇಸ್ವಾಮಿ
ಬೆಚ್ಚನೆಯ ಹೊಸ ಕೋಟು ತೊಟ್ಟ
ಆ ಮನುಷ್ಯ
ಹೊರಟು ಹೋದ
ವಿಚಾರದ ಹಾಗೆ.
ರಬ್ಬರ್ ಚಪ್ಪಲಿ ತೊಟ್ಟ
ನಾನು
ಹಿಂದೆಯೇ ಉಳಿದುಬಿಟ್ಟೆ
ಚಳಿಗಾಲದಲ್ಲಿ ಬೆಳಗಿನಾರರ ಸಮಯದಲ್ಲಿ
ಕಳಚಿಟ್ಟ ಬಟ್ಟೆಗಳಂತೆ ಬೆಳಗಿನಾರರ ಸಮಯ
ಬೆಳಗಿನಾರರ ಸಮಯದಂತೆ.
ಮರದ ಕೆಳಗೊಬ್ಬ ನಿಂತಿದ್ದ ;
ಮಂಜಿನಲ್ಲಿದ್ದ ಮಾನವಾಕೃತಿಯ ವ್ಯಕ್ತಿ
ಅವನೇ ಆಗಿದ್ದ
ಮರದ ಆಕೃತಿ ಮಾತ್ರ ಮರವಾಗಿಯೇ ಇತ್ತು.
ಬಲಕ್ಕೊಂದು ಕಂತ್ರಿ ಕುದುರೆಯಿದ್ದಂತಿತ್ತು
ಅದು ಕಂತ್ರಿ, ಕುದುರೆಯಂತೆಯೇ ಇತ್ತು
ಕುದುರೆ ಹಸಿದಿದ್ದರೆ
ಗಾಳಿಯಲಿ ಮೇವಾಗಿ ಅದಕ್ಕೆ ಮಂಜು ಬೆಳೆದಿತ್ತು
ಮತ್ತೆ ಮನೆಗಳು ಮರಗಳು ರಸ್ತೆಗಳು ಇತ್ಯಾದಿ…….
ಆದರೆ ಅದಾವುದು ಕುದುರೆಯಾಗಿರಲಿಲ್ಲ.
ಅಲ್ಲಿ ಇದ್ದುದೊಂದೇ ಕುದುರೆ
ನಾನು ಮಾತ್ರ ಕುದುರೆಯಲ್ಲ
ಆದರೆ ಮಂಜಿನುಸಿರಿನ ಹಾಗೆಯೇ
ಏದುಸಿರು ಬಿಡುತ್ತಿರುವೆ ನಾನೂ
ಅದೇ ವರದಡಿಯಲ್ಲಿ ಅದೇ ಸ್ಥಳದಲ್ಲಿ ನಿಂತಿದ್ದವನು
ಮಾಲೀಕನೇ ಆಗಿಬಿಟ್ಟಿದ್ದರೆ.
ನಾನಾಗ ಓಡುತ್ತಿದ್ದ – ಚಪ್ಪಲಿ ತೊಟ್ಟು
ಕುದುರೆ ಲಾಳ ಹೊಡೆದಿದ್ದ ಚಪ್ಪಲಿ ತೊಟ್ಟು.
ಕವಿತೆ(ಅನುವಾದ)
ಸಂಬಂಧಗಳು
ಶ್ರೀಕಂಠ ಕೂಡಿಗೆ
ಮುಖ: ಒಂದು
ಸುಮಾರು ಹೊತ್ತು ಕಾದದ್ದಾಯಿತು. ಯಾರ ಸುಳಿವೂ ಕಾಣಲಿಲ್ಲ. ನೀರಿನ ತಪಾಸಣೆಗೆಂದು ಗದ್ದೆಯ ಕೂಗಿನ ಒಳಗೆ ಹೋದವರು ತಿರುಗಿ ಬರಲಿಲ್ಲ, ಇಲಾಖೆಯ ಟ್ರಕ್ಕಾದರೂ ಜರೂರಿ ಬರಬಹುದೆಂದು ಯೋಚಿಸಿದೆ. ದಾರಿನೋಡಿದೆ. ಸುಳಿವೆಲ್ಲೂ ಕಾಣಲಿಲ್ಲ. ಕಾಯುವುದು ಕೂಡ ಬೇಸರವೇ. ಅದೂ ಕೂಡ ಒಂದು ರೀತಿ ಹೊಸ ಬಸುರಿನ ಹೆರಿಗೆ ನೋವು, ಎಲ್ಲೊ ದೂರದಲ್ಲಿ ಶಬ್ದ ಕೇಳಿಸಿತು. ಪಕ್ಕದಲ್ಲಿದ್ದ ಮೋರಿಕಟ್ಟೆಯ ಮೇಲೆ ಹತ್ತಿ ನಿಂತು ನೋಡಿದೆ. ಜಲಾಶಯದ ನಾಲೆ ದಂಡೆಯಮೇಲೆ ಟ್ರಕ್ಕೊಂದು ನಿಧಾನವಾಗಿ ಬರುತ್ತಿತ್ತು. ಅದಕ್ಕೆ ಬಣ್ಣ ಬಳಿದ ರೀತಿ, ಮಳೆ ಬಿಸಿಲುಗಳ ರಕ್ಷಣೆಗೆ ಕಟ್ಟಿದ ಕಮಾನು ಅಲ್ಲಲ್ಲಿ ಹಲ್ಲು ಚಿಲಿದಂತೆ ಹರಿದುಕೊಂಡು ಹಾರುತ್ತಿದ್ದ ಅದರ ಬಟ್ಟೆಯ ಮೇಲು ಹೊದಿಕೆ……ಇತ್ಯಾದಿ ಬಾಹ್ಯಸ್ವರೂಪದಿಂದ ಯಾವ ಇಲಾಖೆಯದೆಂದು ಊಹಿಸಲು ಹೆಚ್ಚು ಹೊತ್ತು ಬೇಕಾಗಿರಲಿಲ್ಲ. ಅದರ ಮಂದ ಚಲನೆಯಂತೂ ಮೋಟಾರು ಯುಗದ ಆರಂಭದ ಸ್ಥಿತಿಯನ್ನು ಸೂಚಿಸುವಂತಿದ್ದಿತು. ನಿಧಾನವಾಗಿ ಬರುತ್ತಿದ್ದ ಅದು ಹತ್ತಿರ ಹತ್ತಿರವಾಗಿ ನಿಲುಗಡೆಗೆ ಬಂತು. ಅದು ನಿಂತ ರೀತಿಯನ್ನು ಹಳ್ಳಿಯನೊಬ್ಬನಿಗೆ ತೋರಿಸಿ ಹೇಗೆ ಕಾಣುತ್ತಿದೆ ಎಂದು ಕೇಳಿದ್ದರೆ ‘ಮೇಲು ಷಿಕಾರಿಯವರ ಗುಢಾರದ ಹಾಗೆ’ ಎಂದು ತಕ್ಷಣ ಉತ್ತರಿಸುತ್ತಿದ್ದನೇನೋ ? ಅದೂ ಸರಿಯಾದ ಮಾತಿರಬಹುದು. ಒಂದು ಕಡೆ ನಿಲ್ಲದ ಒಂದು ವ್ಯವಸ್ಥಿತ ಕ್ರಮಕ್ಕೆ ಅಂಟಿಕೊಳ್ಳದ ಅವರ ರೀತಿಗೂ ನಮ್ಮ ಸುತ್ತಲಿನ ವ್ಯವಸ್ಥೆಗೂ ಸಂಬಂಧವಿರಬಹುದು ಎನ್ನಿಸಿತು. ಹೀಗೆ ಪುರಾತನ ಅವಶೇಷಗಳ ನೆನಪು ತರುವ ವಸ್ತುಗಳು ದೇಶದಲ್ಲೆಲ್ಲಾ ಹಲವು ಇರಬಹುದು – ಎಂದುಕೊಂಡೆ.
ನಾಲೆಯ ದಂಡೆಯುದ್ದಕ್ಕೂ ಓಡಾಡಿದೆ. ಇಕ್ಕೆಲದ ಗದ್ದೆಗಳಿಂದ ಐದಾರು ಜನ ರೈತರು ಬಂದು ನಮಸ್ಕಾರ ಮಾಡಿ ಹೋದರು. ಹಾಗೆಯೇ ಮುಂದೆ ಗದ್ದೆಯಂಚಿನಲ್ಲಿ ಹೋದೆ. ವ್ಯಕ್ತಿಯೊಬ್ಬ ತಲೆಬಗ್ಗಿಸಿಕೊಂಡು ಬದುವಿನ ಹೆಸರಿನಲ್ಲಿ ಏನೋ ಮಾಡುತ್ತಿದ್ದ. ಹತ್ತಿರ ಹೋಗಿ ನೋಡಿದೆ. ಮೇಲಿನ ಗದ್ದೆಯಿಂದ ಹನಿಹನಿಯಾಗಿ ಒಸರುತ್ತಿದ್ದ ನೀರನ್ನು ತನ್ನ ಗದ್ದೆಗೆ ತಿರುಗಿಸಲು ಪ್ರಯತ್ನಿಸುತ್ತಿದ್ದ. ನಾನು ನಿಂತು ನೋಡುತ್ತಿರುವಾಗಲೇ ಒಂದೆರಡು ಅಡಿ ನೀರು ಹರಿದುಹೋಗಿ ಇಂಗಿತು. ಪ್ರಯತ್ನ ವಿಫಲವೆಂದು ಕಂಡಾಗ ವ್ಯಕ್ತಿ ತಲೆಯೆತ್ತಿ ಆ ಕಡೆ ಈ ಕಡೆ ನೋಡಿತು, ಮುಖ ಕಂಡವನೆ ‘ನಮಸ್ಕಾರ ಬುದ್ದಿ ಏನ್ ಇಷ್ಟೊಂದು ದೂರ’ ಎಂದು ಎತ್ತಿದ ಕೈಯನ್ನು ಇನ್ನೂ ಮೇಲಕ್ಕೆತ್ತಿ ಹಲ್ಲು ಗಿಂಜಿತು, “ಹೆಂಗಿದೆಯಪ್ಪ ಈ ವರ್ಷ ಪೈರು’ ಎಂದುದಕ್ಕೆ ನೀವೇ ನೋಡಿದ್ರಲ್ಲಾ ಸ್ವಾಮಿ ನೀರಿನ ಪರದಾಟಾನಾ……ಇನ್ನೊಂದ್ವಾರ ನೀರು ಬಿಟ್ರೆ ಅಲ್ಪಸ್ವಲ್ಪನಾದ್ರು ಕೈಗೆ ಬತ್ತದೆ. ಬಡ ರೈತ ಹೊಟ್ಟೆಮ್ಯಾಲೆ ಹೊಡಿಬ್ಯಾಡಿ ಬುದ್ದಿ’ ದೀನನಾಗಿ ಆತ ಬಗ್ಗಿದ. ಎಲ್ಲಾ ನನ್ನ ಕೈಯಲ್ಲಿಯೇ ಇದೆ ಎಂದು ಭಾವಿಸಿದ ಅವನ ದೈನ್ಯತೆಗೆ ಪಾಪ ಎನ್ನಿಸಿತು. ಈ ದೈನ್ಯತೆಯೇ ಇವರನ್ನೆಲ್ಲಾ ಇಂಚು ಇಂಚು ತಿನ್ನುತ್ತಿರುವುದೇನೂ ಅನ್ನಿಸಿ ಸಿಟ್ಟೂ ಬಂತು. ಇನ್ನೂ ಆತ ನನ್ನೆದುರು ಕೈ ಜೋಡಿಸಿಯೇ ನಿಂತದ್ದು, ಇಂಥ ನೂರಾರು ಮೂಕವೇದನೆಗಳ ಭಾರಹೊತ್ತ ವ್ಯಕ್ತಿಗಳ ಪ್ರಾತಿನಿಧಿಕ ಪ್ರತಿಸ್ವರೂಪದಂತೆ ಕಾಣಿಸಿದ. ಏನೂ ಹೇಳಲು ಮುಂದೆ ತೋಚದೆ “ನೋಡೋಣಪ್ಪ ಪ್ರಯತ್ನ ಮಾಡೋಣ. ದೊಡ್ಡ ಸಾಹೇಬ್ರಿಗೆ ನೀವೆಲ್ಲಾ ಮತ್ತೊಮ್ಮೆ ಮನವಿ ಬರೆಸಿಕೊಡಿ’ ಅಂದೆ. ನನ್ನ ರಕ್ತಹೀನ ಶಿಷ್ಟ ಭಾಷೆ ಅವನಿಗೆ ಅರ್ಥವಾಯಿತೊ ಇಲ್ಲವೊ ಅಷ್ಟು ಮಾಡ್ತೀವಿ ದೇವರೆ’ ವ್ಯಕ್ತಿ ಮತ್ತೊಮ್ಮೆ ಕೈಮುಗಿದು ಹಿಂದಿರುಗಿತು.
ಮುಖ: ಎರಡು
ಅಸಹಾಯಕತೆ ಪ್ರತಿಯೊಬ್ಬ ವ್ಯಕ್ತಿಯ ಬೆನ್ನ ಹಿಂದೂ ಇದೆ, ಆದರೆ ಅದರ ರೀತಿ ಮಾತ್ರ ಬೇರೆ ಬೇರೆ. ಇಲ್ಲಿ ಈ ನೆಲದಲ್ಲಿ ಅದರಿಂದ ತಪ್ಪಿಸಿಕೊಳ್ಳುವುದು ಅನಿವಾರ್ಯವೇನೊ? ಕೈ ಮುಗಿದು ಗದ್ದೆಯ ಕಡೆ ಹೋದ ವ್ಯಕ್ತಿಯ ದೀನತೆಯನ್ನು ನೆನಸಿಕೊಂಡೆ. ಜಲಾಶಯದಲ್ಲಿ ನಿರೀಕ್ಷೆಗಿಂತ ಹೆಚ್ಚು ನೀರಿದ್ದರೂ ಜಮೀನಿಗೆ ನೀರು ಬಿಡದೆ ತಹಬಂಧಿಗೆ ಮಾಡುವುದರ ಉದ್ದೇಶವೇನು? ಇದಕ್ಕಾಗಿಯೇ ಮನವಿ ಮಾಡಿಕೊಂಡು ಆಫೀಸಿನ ಮುಂದೆ ರೈತರ ಜಾಥಾ ಬಂದರೂ ಅವರನ್ನು ಕಲ್ಲು ಕಂಬದಂತೊ, ಮರದಂತೊ ನೋಡುವ ಸಾಹೇಬನ ಮನಸ್ಸು ಎಂಥದ್ದಿರಬೇಕು. ಆಫೀಸಿನಲ್ಲಿಯೇ ಕುಳಿತು ಅತೀಂದ್ರಿಯ ದೃಷ್ಟಿಯಿಂದಲೇ ಗಮನಿಸಿ ಹೇಳುವ ಕಾರಣಿಕ ಪುರುಷನಂತೆ ತನ್ನ ಮೂಗಿನ ನೇರಕ್ಕೆ ಎಲ್ಲವನ್ನು ಅರ್ಥೈಸಿಕೊಳ್ಳುವ ಇಂಥ ಅಧಿಕಾರಿಗಳು ದೇಶದಲ್ಲೆಲ್ಲಾ ತುಂಬಿರಬಹುದೆ? ಎಂಬೆಲ್ಲ ಯೋಚನೆಗಳು ಬಂದುವು. ಇಲ್ಲಿನ ವ್ಯವಸ್ಥೆ ಕೊಂಡಿ ತಪ್ಪಿದ ರೈಲು ಬೋಗಿಗಳಂತೆ. ಅವು ಅವಕ್ಕಷ್ಟೇ ಸ್ವತಂತ್ರ. ‘ಎತ್ತಣ ಮಾಮರ ಎತ್ತಣ ಕೋಗಿಲೆ……ಒಂದರ ಸಂಬಂಧ ಇನ್ನೊಂದರದ್ದಲ್ಲ. ಇಲ್ಲದಿದ್ದರೆ ಈ ದೀನ ವ್ಯಕ್ತಿಗಳ ಕೂಗು ದೊಡ್ಡ ಸಾಹೇಬನಂಥವರಿಗೆ ಕೇಳಿಸಬೇಕಾಗಿತ್ತು. ಕೇಳಿಸುವುದಿಲ್ಲ. ಅವರ ರಕ್ತ ಕರಗಿ ಮಾಂಸ ಚಕ್ಕಳವಾದರೂ ಇಂಥವರ ಕಣ್ಣಿಗೆ ಈ ದೀನರು ದುಂಡಾದುಂಡಿಯಾಗೇ ಕಾಣುತ್ತಾರೆ. ಕೊಳಕು ದಾರಿದ್ರದಲ್ಲಿ ಸತ್ತು ಬಿದ್ದಿದ್ದರೂ ಅವರ ಕ್ಷೀಣ ಉಸಿರು ಶ್ರೀಮಂತ ಉಸಿರಾಗಿ ಕೇಳಿಸುತ್ತದೆ.
ಮೊನ್ನೆ ಮೊನ್ನೆ ಗಣರಾಜ್ಯೋತ್ಸವದ ಅಧ್ಯಕ್ಷ ಭಾಷಣದಲ್ಲಿ ಮಾನವೀಯತೆ, ವಿಶ್ವ ಭಾತೃತ್ವ, ಔದ್ಯಮೀಕರಣ, ಹಸಿರುಕ್ರಾಂತಿ ಮುಂತಾದವುಗಳ ಮೇಲೆ ಭಾವೋದ್ವೇಗದಿಂದ ಆಡಿದ ಮಾತುಗಳು ನೆನಪಿಗೆ ಬಂದವು. ಸ್ವಲ್ಪ ಹೊತ್ತು ಹಾಗೆಯೇ ನಿಲ್ಲುವಂತಾಯಿತು. ‘ಸಾರ್’ ಹಿಂದಿನಿಂದ ಬಂದ ಮಾತು ಕೇಳಿ ತಿರುಗಿದೆ, ಟ್ರಕ್ಕಿನ ಡ್ರೈವರ್ ಮದೀನ್ ಸಾಹೇಬ್ ನಿಂತಿದ್ದ, “ಏನಪ್ಪಾ’ ಎಂದೆ–ಪ್ರಶ್ನಾರ್ಥಕವಾಗಿ, ‘ಗಾಡಿಗೆ. ಇಸ್ಟಾರ್ಟಿಂಗ್ ಟ್ರಬಲ್ ಸಾರ್, ಹೇಗೇಗೋ ಚಾಲು ಮಾಡ್ಕೊಂಡು ಬಂದೆ” ಎಂದ. ನನಗೆ ಸಿಟ್ಟು ಬಂತು. “ಅದು ಸರಿ ಇದ್ದದ್ದು ಯಾವಾಗ? ಹಾಳಾಗಿ ಹೋಗಲಿ ಎಲ್ಲಾದರೂ ಡಿಕ್ಕಿ ಹೊಡೆಸು, ನೀನು ಸಾಯಿ’ ಅನ್ನಬೇಕೆನಿಸಿತು. ನನ್ನಿಂದ ಸ್ವಲ್ಪ ಹೊತ್ತು ಉತ್ತರ ಬಾರದಿದ್ದುದರಿಂದ ಬೀಡಿ ಹಚ್ಚಲೆಂದು ಅವನು ಟ್ರಕ್ಕಿನ ಹಿಂದೆ ಹೋದ.
ನಿಂತಿದ್ದೆ. ಕಾಲುಗಳ ಮೇಲೆ ಏನೋ ಬುಳು ಬುಳು ಅನ್ನಿಸಿತು. ನೋಡಿದೆ. ಹತ್ತಾರು ಕಪ್ಪು ಗೊದ್ದಗಳು. ಚಪ್ಪಲಿಯಿಂದ ಮೇಲಕ್ಕೆ ಪ್ಯಾಂಟಿನಿಂದ ಹರಿದು ಬರುತ್ತಿದ್ದುವು. ಅವುಗಳ ಸಾಲಿನ ಮೇಲೆ ನೋಡದೆ ಕಾಲಿಟ್ಟಿದ್ದೆ. ಕಚ್ಚಬಹುದೆಂದು ಹೆದರಿ ಜೋರಾಗಿ ಕಾಲು ಜಾಡಿಸಿದೆ. ಅವುಗಳಲ್ಲಿ ಕೆಲವು ನಾಲೆಯ ನೀರಿಗೆ ಬಿದ್ದುವು. ನೋಡುತ್ತಿರುವಂತೆ ಸ್ವಲ್ಪ ದೂರ ಕೊಚ್ಚಿ ಹೋದುವು. ಮುಳುಗುವ ಅವಸರದಲ್ಲಿ ತೇಲಿ ಬರುತ್ತಿದ್ದ ಹಂಚಿ ಕಡ್ಡಿ ತುಂಡೊಂದಕ್ಕೆ ಅಂಟಿಕೊಂಡುವು. ಕಡ್ಡಿ ಭಾರದಿಂದ ನೀರಿನಲ್ಲಿ ಮುಳುಗಿತು. ಮತ್ತೆ ಅವು ಅದೇ ರಭಸದಲ್ಲಿ ತೇಲಿ ಹೋದುವು. ರೈತನ ಅಸಹಾಯಕತೆಯ ನೆನಪು ಮತ್ತೆ ಆಯಿತು.
ಇತ್ತೀಚೆಗೆ ಈ ವ್ಯಕ್ತಿಯ ಬಗ್ಗೆಯೇ ಹೇಸಿಗೆ ಅನ್ನಿಸತೊಡಗಿದೆ. ಮೊದಲಿನಂತೆ ಯಾವುದೋ ಕಾಲೇಜಿನಲ್ಲಿ ಉಪನ್ಯಾಸಕನಾಗಿದ್ದರೆ ಚೆನ್ನಾಗಿತ್ತೇನೊ? ತನಗಿಂತ ಕೆಳಗಿನವರನ್ನು ಹೆದರಿಸಿಕೊಳ್ಳುವ ಅಥವಾ ಮೇಲಿನವರಿಗೆ ಹಂದಿಯ ಹಾಗೆ ತಲೆ ತಗ್ಗಿಸಿಕೊಳ್ಳುವುದು ತಪ್ಪುತ್ತಿತ್ತೇನೋ? ಅಲ್ಲಿಯೂ ಅಷ್ಟೇ, ಪ್ರಿನ್ಸಿಪಾಲನ, ಪ್ರೊಫೆಸರನ ರಾಜಕೀಯಕ್ಕೆ ಹೇಸಿ ಈ ಇಲಾಖೆಗೆ ಎಂಜಿನೀಯರಾಗಿ ಬಂದದ್ದು ತಾನೆ? ಆಳುವ ಆಳಿಸಿಕೊಳ್ಳುವ ಪ್ರವೃತ್ತಿ ರೂಪಾಂತರಗೊಳ್ಳುತ್ತಾ ಮತ್ತೊಂದು ಹೀನ ಅವಸ್ಥೆಗೆ ತಲುಪುತ್ತಿರುವಂತೆ ಅನ್ನಿಸಿತು. ಗಡಿಯಾರ ನೋಡಿಕೊಂಡ, ಗಂಟೆ ಹತ್ತಕ್ಕೆ ಸಮೀಪಿಸುತಿತ್ತು. ದೊಡ್ಡ ಸಾಹೇಬ ಇಷ್ಟೊತ್ತಿಗೆ ಆಫೀಸಿಗೆ ಬಂದಿರುತ್ತಾನೆ. ಆಫೀಸು ಬಾಗಿಲು ತೆಗೆಯುವ ಮೊದಲೇ ಕೆಲವು ಕಂಟ್ರಾಕ್ಟರುಗಳು ಬಂದು ಕಾದಿರುತ್ತಾರೆ. ದೊಡ್ಡ ಸಾಹೇಬನೂ ಹಾಗೆ ಅವರ ನಿರೀಕ್ಷೆಯಲ್ಲಿಯೇ ಇರುತ್ತಾನೆ. ಆಫೀಸಿನ ಜೂನಿಯರ್ ಎಂಜಿನೀಯರುಗಳು, ಸೂಪರ್‌ವೈಸರುಗಳು ಬರುವ ಮೊದಲೆ ಒಳವ್ಯವಹಾರಗಳ ಮಾತು ಮುಗಿದಿರುತ್ತದೆ. ಕೆಲವರು ಸಾಹೇಬನ ಮನೆಗೂ ಹೋಗುವುದುಂಟು, ಆಫೀಸು ಆರಂಭವಾದೊಡನೆ ನಿಯಮ ಕಾನೂನು ಅಂಥ ವ್ಯಾವಹಾರಿಕ ಮುಖವಾಡ ಹಾಕುತ್ತಾನೆ. ಸಾಹೇಬನೊಂದಿಗೆ ಸಾಮೀಲಾದವರು ಇರುತ್ತಾರೆ. ಇವು ನಿಯಮದ ಹಿಂದೆ ನಡೆಯುವ ಒಳವ್ಯವಹಾರಗಳು. ನಿರಂತರ ಕ್ರಿಯೆಗಳು ಇಂಥ ಕ್ರಿಯೆಯಲ್ಲಿಯೇ ಈ ದೇಶದ ಮೈಮೇಲೆಲ್ಲಾ ಹೆದ್ದಾರಿಗಳು, ಕೊರಕಲುಗಳು ಬಿದ್ದು ಜಡ್ಡುಗಟ್ಟಿ ಹೋಗಿವೆ. ಅವು ಎಂದೂ ತುಂಬಲಾಗದ ಕಂದಕಗಳೆ? ಹೀಗೆ ಯೋಚಿಸುತ್ತಿರುವಾಗಲೇ ಗದ್ದೆಯ ಕೋಗಿನ ನಡುವೆ ನೀರಿನ ತಪಾಸಣೆಗೆ ಹೋಗಿದ್ದ ಸೂಪರ್‌ವೈಸರುಗಳು ಹಿಂದಿರುಗಿದರು, ಏನೊ ದಿಗ್ವಿಜಯ ಸಾಧಿಸಿದ ಉತ್ಸಾಹದಲ್ಲಿರುವಂತೆ ಕಾಣಿಸಿದರು. ಆಫೀಸಿಗೆ ವೇಳೆಯಾಗುತ್ತಿದ್ದುದರಿಂದ ಧೂಳು ಹಿಡಿದ ಟ್ರಕ್ಕಿನೊಳಗೆ ನುಸುಳಿಕೊಂಡೆ. ಅವರು ಹತ್ತಿರ ಬರುವುದನ್ನೇ ಕಾಯುತ್ತಾ, ಯಾರು ಸುತ್ತಲೂ ಕಾಣಿಸದಿದ್ದರಿಂದ ನಿಲುಗಡೆಗೆ ಬಂದ ಮಾತು ಮುಂದುವರಿಯಿತು. ಒಬ್ಬ ಅಂದ “ನನ್ಗೇ ನಾಮ ಹಾಕಾಕೆ ಬರ‍್ತಾನೆ ಮಗ, ಐದು ಚೀಲ ಯೂರಿಯಾ ಕೊಡಿಸಿದ್ದು ಪುಕ್ಕಟೇನಾ ? ಕೊಡಲಿ ಮತ್ತೆ ಮಗ ಎರಡು ಖಂಡುಗ ಭತ್ತ’ ಮತ್ತೊಬ್ಬ ಏನೋ ಉತ್ತರ ಹೇಳುವುದರಲ್ಲಿದ್ದ. ನಾನು ಟ್ರಕ್ಕಿನೊಳಗೆ ಕುಳಿತದ್ದು ತಿಳಿಯಿತೇನೊ ಮಾತು ನಿಂತಿತು. ನನಗೆ ಎಲ್ಲಾ ಅರ್ಥವಾಯಿತು. ಅದೊಂದು ಆಂತರ್ಯದ ಭಾಷೆ. ಕಾನೂನಿನ ರಕ್ಷಣೆಯಲ್ಲಿ ನಡೆಯುವ ಒಳವ್ಯಾಪಾರ, ಹತ್ತಾರು ವರ್ಷಗಳ ಇಲಾಖೆಯ ಅನುಭವದ ಬಲದಿಂದಾಗಿ ಗ್ರಹಿಸಬಲ್ಲವನಾಗಿದ್ದೆ. ಥೂ! ರಣಹದ್ದುಗಳು. ಅರೆಜೀವವಿದ್ದ ಪ್ರಾಣಿಗಳನ್ನು ಪ್ರಾಣ ಹಾರುವ ಮೊದಲೆ ಸ್ವಾರ್ಥದ ಕೊಕ್ಕಿನಿಂದ ಕೊಚ್ಚಿ ತಿನ್ನುವ ಹದ್ದುಗಳು, ರೈತನ ದೈನ್ಯತೆ ಕಣ್ಮುಂದೆ ಬಂದಿತು. ಟ್ರಕ್ಕನ್ನು ನಾಲೆ ದಂಡೆಯ ಮೇಲೆ ಮುಂದೆ ತರಲು ಹೇಳಿ ಅದರಿಂದ ಇಳಿದು ಮುಂದೆ ಹೆಜ್ಜೆ ಹಾಕಿದೆ. ನಾಲೆಯ ಒಂದು ಕಡೆ ನೀರು ರಭಸವಾಗಿ ಹರಿಯುತ್ತಿತ್ತು. ವಿಶಾಲವಾದ ನಾಲೆಯನ್ನು ಸಿಮೆಂಟುಕಟ್ಟಣೆಯಿಂದ ಇಕ್ಕಟ್ಟು ಮಾಡಿದ್ದರು. ಆ ಸ್ಥಳಕ್ಕೆ ಒಮ್ಮೆಲೆ ನೀರು ನುಗ್ಗುತ್ತಿದ್ದುದರಿಂದ ಚಾಲನೆ ಒದಗುತಿತ್ತು. ಸುತ್ತಲಿನ ವ್ಯವಸ್ಥೆಯ ನೆನಪಾಯಿತು. ಇಲ್ಲಿಯೂ ಇಂಥದೇ ನೂರು ಇಕ್ಕಟ್ಟುಗಳು. ಉಸಿರಾಡುವುದೇ ಕಷ್ಟ. ಆದರೆ ಇಲ್ಲಿಯೂ ರಭಸದಿಂದ ಹರಿಯುವ ನೀರು ಬೇಕು. ರಭಸದ ಹರಿವಿನಲ್ಲಿ ದೊಡ್ಡ ಸಾಹೇಬನಂಥವರು ಕೊಚ್ಚಿಕೊಂಡು ಹೋಗಬೇಕು. ಆದರೆ ಅದಕ್ಕೆ ಈ ನೀರಿನ ಚಾಲನೆ ಸಾಲದು, ಕ್ಷಣಿಕ ವೇಗೋತ್ಕರ್ಷ. ಸ್ವಲ್ಪ ಹೊತ್ತಿನಲ್ಲಿಯೇ ವೇಗ ಸಾಧಾರಣ ಸ್ಥಿತಿಗೆ ಬರುತ್ತದೆ. ಹನಿಯೊಂದಿಗೆ ಹನಿಯಾಗಿ ಒಂದೇ ಆಗುತ್ತದೆ.
ಮುಖ: ಮೂರು
ಊಹಿಸಿದಂತೆ ನಾನು ಆಫೀಸಿನ ಹತ್ತಿರ ಬರುವ ಹೊತ್ತಿಗೆ ಕಂಟ್ರಾಕ್ಟರುಗಳು ಕಾಯುತ್ತಿದ್ದರು. ಆಫೀಸಿನೊಳಗೆ ಹೋಗಲು ಮೆಟ್ಟಿಲು ಹತ್ತುತ್ತಿದ್ದಾಗ ಅವರಲ್ಲಿ ಕೆಲವರು ಕಂಡೂ ಕಾಣದಂತೆ ಮುಖ ತಿರುಗಿಸಿದರು. ಕೆಲವರು ಬೇಕೊ ಬೇಡವೊ ಎನ್ನುವ ಹಾಗೆ ನಮಸ್ಕರಿಸಿದರು. ಆ ವಾತಾವರಣದಲ್ಲಿ ನಾನು ಪರಕೀಯನಾಗಿ, ಅಸ್ಪೃಶ್ಯನಾಗಿ ಕಂಡೆ.
ಆಫೀಸಿನ ಮೇಜಿನ ಮೇಲೆ ರಾಶಿ ರಾಶಿ ಫೈಲುಗಳು. ಸಂಬಂಧವಿಲ್ಲದುವುಗಳೆಲ್ಲಾ ಇಲ್ಲಿ ಬಂದು ಬಿದ್ದಿರಬೇಕೆಂದುಕೊಂಡೆ. ಕೈತಪ್ಪಿ ಇಲ್ಲೇನಾದರೂ ಬಂದು ಬಿದ್ದಿರಬಹುದೆ? ವಿಚಾರಿಸಬೇಕೆಂದು ಬಿಲ್ಲು ಬಾರಿಸಿದೆ. ಜವಾನ ಬಂದ. ಸಂಬಂಧಿಸಿದ ಗುಮಾಸ್ತರನ್ನು ಕರೆಕಳುಹಿಸಿ ಮೇಜಿನ ಮೇಲಿದ್ದ ಫೈಲುಗಳ ಕಡೆಗೇ ನೋಡುತ್ತಾ ಕುಳಿತೆ. ‘ಸಾರ್. ಆಫೀಸ್ನಲ್ಲಿಲ್ಲ. ಕಾಫಿ ಕುಡಿಯೋಕೆ ಹೋಗಿ’ ಮರಳಿ ಬಂದು ಅಂದ, ‘ಆಫೀಸು ಆರಂಭವಾಗಿ ಅರ್ಧ ಘಂಟೆ ಸರಿಯಾಗಿ ಆಗಿಲ್ಲ, ಆಗಲೇ ಕಾಫಿ……’ ಅವನ ಉತ್ತರಕ್ಕೆ ಸಿಟ್ಟು ಬಂತು. ಏನೂ ಮಾಡುವ ಹಾಗಿರಲಿಲ್ಲ. ದೊಡ್ಡ ಸಾಹೇಬನ ಕಡೆಯಿಂದ ಹೀಗೆ ಬರುವ ರಾಶಿ ರಾಶಿ ಫೈಲುಗಳನ್ನು ತನ್ನ ಕಡೆ ರವಾನಿಸುವುದರಲ್ಲಿ ಏನೋ ಪ್ರತೀಕಾರ ಇರಬೇಕೆಂದು ಊಹಿಸಿದೆ. ಒಂದೊಂದೆ ಫೈಲಿನ ಕಡೆ ಕಣ್ಣಾಡಿಸಿ ಪಕ್ಕಕ್ಕಿಡತೊಡಗಿದೆ. ವ್ಯಕ್ತವಾಗದ ಮೂಕ ಭಾಷೆಯಲ್ಲಿ ಅವುಗಳ ಒಂದೊಂದು ಕಥೆ ಇರುವಂತೆ ಅನ್ನಿಸಿತು. ಹೀಗೆ ಸ್ವಲ್ಪ ಹೊತ್ತು ಕಳೆದಿರಬೇಕು. ಜೋರಾಗಿ ಮಾತು ಕೇಳಿಸಿದವು. ಪಕ್ಕದ ಆಫೀಸಿನಿಂದ ಇರಬೇಕು. ಅತ್ತ ಗಮನಕೊಡದೆ ಪತ್ರಗಳ ಮೇಲೆ ಕಣ್ಣಿರಿಸಿದೆ. ಇನ್ನೂ ಗಲಾಟೆ ಜೋರಾಗುವಂತೆ ತೋರಿತು, ಮಾತಿನ ನಡುನಡುವೆ ಬದ್ಮಾಷ್, ಲಫಂಗ, ಮರ್ಯಾದೆ ಬೇಡವೇ’ ಕೋಪದ ಆರೋಹಣ ಅವರೋಹಣಗಳಿಗೆ ತಕ್ಕಂತೆ ಏಕವಚನ ಬಹುವಚನಗಳ ಆವರ್ತನೆಯಾಗುತ್ತಿತ್ತು. ಕಿಟಕಿ ಇಣುಕಿ ಮಾತುಗಳು ಎಲ್ಲಿಂದ ಬರುತ್ತಿವೆ ಎಂದು ಖಚಿತಪಡಿಸಿಕೊಂಡೆ. ದೊಡ್ಡ ಸಾಹೇಬನ ರೂಮಿನಲ್ಲಿ ಹೀಗೆ ತಿಂಗಳಿಗೊಮ್ಮೆ, ವಾರಕ್ಕೊಮ್ಮೆ ತನ್ನ ಕೆಳಗಿನವರಿಗೆ ಮಂಗಳಾರತಿ ಆಗುತ್ತಿದ್ದುದುಂಟು. ಧ್ವನಿ ತಗ್ಗಿಸಿ ಇಲ್ಲವೆ ಧ್ವನಿ ಏರಿಸಿ ಮಾತನಾಡುವ ಸಾಹೇಬನ ಒಂದೊಂದು ಮಾತಿಗೂ ಪ್ರತ್ಯೇಕ ಅರ್ಥವಿರುತ್ತದೆ. ಅದು ಕಾವ್ಯದ ಭಾಷೆಯ ಹಾಗೆ ಸಾಂಕೇತಿಕವಾದುದು. ತಿಂಗಳ ಮಾಮೂಲು ಕೊಡದಿದ್ದವರು ದೊಡ್ಡ ಸಾಹೇಬನ ಧ್ವನ್ಯರ್ಥಸೂಚಕ ಗದರಿಕೆಯ ವಾಚ್ಯಾರ್ಥದಲ್ಲಿ ಗ್ರಹಿಸಬೇಕು.
ಮುಖ: ನಾಲ್ಕು
ಎರಡನೆಯ ಟೇಬಲ್ಲಿನ ಮೇಲಿದ್ದ ಪೋನಿನ ರಿಂಗಾಯಿತು. ದೊಡ್ಡ ಸಾಹೇಬ ಸೂಪರಿಂಟೆಂಡೆಂಟಿಂಗ್ ಇಂಜಿನೀಯರ್ ರೂಮಿಂದ ರಿಸೀವರನ್ನು ಎತ್ತಿದೆ. ‘ಯಾರದು ಮಾತನಾಡುತ್ತಿರುವುದು’ ಧ್ವನಿ ಬಂತು, “ನಾನು ಖಂಡೆಬ’ ಎಂದೆ ಪ್ರತಿಯುತ್ತರವಾಗಿ, “ಸ್ವಲ್ಪ ಬಂದು ಹೋಗಿರೇನು?” ಧ್ವನಿ ಇನ್ನೂ ಮೊದಲಿಗಿಂತ ಗಡುಸಾಗಿ ಕೇಳಿಸಿತು “ಹೂಂ” ಎಂದೆ.
ಬಾಗಿಲು ದಾಟುವ ಮೊದಲೆ “ನಾನು ಆ ದಿನ ಹೇಳಿದ್ದು ಮರೆತು ಹೋಯ್ತೇನ್ರಿ. ಅವರ ಬಗ್ಗೆ ನಿಮಗೆ ಫೇವರಿದ್ರೆ ಆಗೋಲ್ಲ ಅಂತ ಹೇಳ್ರಿ. ಒಬ್ರಿಗೆ ಮನೆ ಖಾಲಿ ಮಾಡ್ಸತಾಕತ್ತಿಲ್ಲ. ನಿಯತ್ತು ನ್ಯಾಯ ನಿಮ್ಮಲ್ಲೇ ಹುಟ್ಟಿರೋರ ಹಾಗೆ ವರ್ತಿಸ್ತೀರಲ್ರಿ. “ಅನ್ ಆಥರೈಸ್ಡ್ ಆಕ್ಯುಪೇಶನ್ ಅಂಥ ನೋಟೀಸು ಇಸ್ಯೂ ಮಾಡಿ.’ ಒಂದೇ ಉಸುರಿಗೆ ದೊಡ್ಡ ಸಾಹೇಬ ಕಾರಿಕೊಂಡ. ಅವನ ಹೀನ ವ್ಯವಹಾರಗಳಲ್ಲಿ ಸಹಕರಿಸದ ಅತೃಪ್ತಿಯ ಹೊಲಸು ವಾಂತಿಯಾದಂತಿತ್ತು ಅವನ ಮಾತುಗಳು. ಏನೂ ಉತ್ತರಿಸಲಾಗಲಿಲ್ಲ. ಮೈ ಬೆವರಿತು. ಮೇಜಿನ ಮೇಲಿದ್ದ ಎಲ್ಲಾ ಫೈಲುಗಳನ್ನು ಎತ್ತಿ ಮುಖದ ಮೇಲೆ ರಾಚಿ ಹೋಗೋಣ ಎನ್ನಿಸಿತು. ಆದರೆ ಉದ್ಯೋಗದಲ್ಲಿ ಇಂಥವನ್ನು ಪ್ರತಿಭಟಿಸಿ ತೊಂದರೆ ಅನುಭವಿಸಿದ ದಿನಗಳ ನೆನಪು ಬಂದುವು. ಬೆಳೆದು ನಿಂತ ತಂಗಿಯರು, ತಮ್ಮಂದಿರು, ತಾಯಿ-ತಂದೆ ಕ್ಷಣದಲ್ಲಿ ಮನಸ್ಸಿನಲ್ಲಿ ಎದುರಾಗಿ ಹೋದರು. ಭೂಮಿ ಕುಸಿಯುತ್ತಿರುವಂತೆ ಅನ್ನಿಸಿತು. ಮಾತನಾಡದೆ ಹೊರಬಂದೆ.
ರೂಮಿಗೆ ಬಂದು ಮತ್ತೆ ಅದೇ ಫೈಲು ನೋಡುವ ಕೆಲಸ ಮುಂದುವರಿಸಿದೆ. ಮೆಮೋಗಳು, ರಿಕ್ವಿಜಿಷನ್‌ಗಳು, ರಿವೈಂಡರ್‌ಗಳು ಕಣ್ಮುಂದೆ ಯಾಂತ್ರಿಕವಾಗಿ ಹಾದುವು. ಹಲವು ಗೂಡಾರ್ಥಗಳ ಸಮಸ್ಯೆಗಳು ತಲೆಯಲ್ಲಿ ಸುತ್ತುತ್ತಿದ್ದುದರಿಂದ ಫೈಲುಗಳನ್ನು ಮಡಸಿಟ್ಟೆ. ಕೆಲಸ ಮಾಡಲಾಗಲಿಲ್ಲ. ಮೊನ್ನೆ ಮೊನ್ನೆ ಆರು ತಿಂಗಳ ಹಿಂದೆ ಈ ಊರಿಗೆ ವರ್ಗವಾಗಿ ಬಂದ ಬೇರೊಂದು ಇಲಾಖೆಯ ಗುಮಾಸ್ತರಿಗೆ, ತಮ್ಮವನೆಂಬ ಕಾರಣಕ್ಕಾಗಿಯೋ ಏನೋ ‘ಮನೆಯೊಂದನ್ನು ಅಲಾಟ್ ಮಾಡ್ರಿ. ಏನೋ ಹ್ಯುಮಾನಿಟೇರಿಯನ್ ಕನ್ಸಿಡರೇಷನ್’ ಎಂದು ಹೇಳಿದ್ದವನು ಈ ದೊಡ್ಡ ಸಾಹೇಬನೇ. ಆ ದಿನ ‘ಅಫಿಸಿಯಲ್ ಆಗಿ ತೊಂದ್ರೆ ಆಗಲ್ವಾ ಸಾರ್’ ಎಂದು ನಾನಂದುದಕ್ಕೆ “ಪಾರ‍್ವಾಗಿಲ್ಲ ಬಿಡಿ ಬೇರೆಯವರ ಹೆಸ್ರಿನಲ್ಲಿ ಆಕ್ಯುಪೈಡ್ ಅಂತ ತೋರಿಸಿದ್ರೆ ಆಗ್ತದೆ’ ಎಂದವನು ಈತನೇ. ಈಗ ಇದ್ದಕ್ಕಿದ್ದಂತೆ ‘ಅನ್ ಆಥರೈಸ್ಟ್ ಆಕ್ಯುಪೇಶನ್” ಎಂದು ನೋಟೀಸು ಕೊಡೆಂದು ತಗಾದೆ ಮಾಡುವುದರ ಒಳಾರ್ಥ ಸ್ಪಷ್ಟವಾಗಲಿಲ್ಲ. ಒಂದರ ಹುಟ್ಟಿನಲ್ಲಿಯೇ ಮತ್ತೊಂದರ ಒಳಿತು ಕೆಡಕುಗಳ ಮೂಲವಿದೆ. ಯಾವುದು ಯಾವುದಕ್ಕೂ ಸಂಬಂಧ ಕಾಣಲಿಲ್ಲ. ಇಲ್ಲಿ ಮೌಲ್ಯ, ನಂಬಿಕೆ ಕೊನೆಗೆ ಮಾತುಗಳೂ ಗಟ್ಟಿಯಾದುವಲ್ಲ. ಎಲ್ಲವೂ ಸಾಪೇಕ್ಷ.
ಮುಖ: ಐದು
ತಲೆ ಹೀಗೆ ಅರ್ಥವಿಲ್ಲದ ಸಂಬಂಧಗಳ ಹುಡುಕುವಿಕೆಯಲ್ಲಿ ಭಾರವಾಗಿತ್ತು. ಮನೆಯ ಕಡೆ ಹೊರಟೆ. ಘಟನೆಗಳು ತಲೆಯಲ್ಲಿ ಉಂಡೆ ಉಂಡೆಯಾಗಿ ಸುತ್ತತೊಡಗಿದುವು. ಈ ಮಣ್ಣಿಗೆ ಈ ವಾತಾವರಣಕ್ಕೆ ಸೂಕ್ಷ್ಮತೆ ಹೊಂದದ್ದು. ಏನಿದ್ದರೂ ವ್ಯವಹಾರದ ಸ್ವರದಲ್ಲಿ ಬದುಕಿದರೆ ಸ್ವಲ್ಪಕಾಲ ಉಸಿರಾಡಬಹುದೇನೋ? ಇಲ್ಲದಿದ್ದರೆ ಉಸಿರು ಕಟ್ಟುತ್ತದೆ. ಗದ್ದೆಯ ಹತ್ತಿರ ನೀರಿಗಾಗಿ ದೀನನಾಗಿ ಕರಗಿದ ರೈತ, ಆಫೀಸಿನ ನರಭಕ್ಷಕರು, ಗುಮಾಸ್ತರು ಒಂದೊಂದು ಸಂಬಂಧವಿಲ್ಲದ ಮುಖಗಳು ಮರುಕಳಿಸಿದುವು. ಇಲ್ಲಿ ಹಲವು ವೃತ್ತಗಳು, ಎಲ್ಲರೂ ಒಂದಲ್ಲ ಒಂದು ವೃತ್ತದ ಸುತ್ತ ಸುತ್ತುವವರೇ. ಒಂದು ಮೆಟ್ಟಿಲು ಮೇಲೆ ಅಥವಾ ಕೆಳಗೆ. ಸುತ್ತುವುದು ಮಾತ್ರ ತಪ್ಪುವುದಿಲ್ಲ. ಪ್ರಗತಿ ಇಲ್ಲ ಅಷ್ಟೇ – ಅನ್ನಿಸಿತು.
ಸಂಜೆ – ಬಾಗಿಲು ಕರೆ ಗಂಟೆ ಕೇಳಿಸಿತು. ಬಾಗಿಲಿಗೆ ಬಂದು ನೋಡಿದೆ. ಯಾರೋ ನಿಂತಿದ್ದರು, ಮುಖ ಕಾಣಿಸಲಿಲ್ಲ, ವರಾಂಡದ ಲೈಟು ಹಾಕಿದೆ. ರಂಗಯ್ಯ ಗುಮಾಸ್ತರು ನಿಂತಿದ್ದರು. ಒಳಗೆ ಆಹ್ವಾನಿಸಿದೆ. ‘ಪಕ್ಷಾಗಿಲ್ಲ ಬಿಡಿ ಸರ್” ಎನ್ನುತ್ತಾ ಹೆಚ್ಚು ಬೆಳಕು ಬೀಳದ ಕಡೆ ನಿಂತರು. ಏನೊ ಹೇಳವನಿದ್ದೆ. ಅಷ್ಟರಲ್ಲಿ ಅವರೇ “ನಿಮ್ಮ ನೋಟೀಸು ತಲುಪಿತು ಸರ್, ಮೊನ್ನೆ ದೊಡ್ಡ ಸಾಹೇಬರು ನನ್ನನ್ನು ಕರೆಸಿ ‘ನಿನ್ನ ಮಗನ ರಿಸಲ್ಟು ರಿಪೇರಿ ಮಾಡ್ಸಿಯಂತೆ; ಯಾರೋ ಹೇಳಿದ್ರು, ಹೌದಾ’ ಎಂದು ಕೇಳಿದಾಗಲೇ ಹೀಗಾಗಬೌದು ಅಂತ ಭಾವ್ಸಿದ್ದೆ. ಇರಲಿ ಬಿಡಿ ನಿಮ್ದೇನು ತಪ್ಪು” ನಿಧಾನವಾಗಿ ಅಂದರು. ಏನೂ ಹೇಳಲು ತೋಚಲಿಲ್ಲ. ಹಾಗೆ ನಿಂತೆ. ‘ನನ್ಮಗ ರ‍್ಯಾಂಕ್ ಬರ‍್ದಿದ್ರೆ ನೆಮ್ಮದಿ ಇರ‍್ತಿತ್ತೊ ಏನೊ’-ಸರಸರ ಗೇಟು ದಾಟಿದರು ಗುಮಾಸ್ತರು.
ಒಂದರೆ ನಿಮಿಷ ಸಬ್ಬನಾದೆ, ಬದುಕನ್ನು ಭಾವುಕತೆಯ ಮಾನದಂಡದಲ್ಲಿ ಅರ್ಥೈಸುವುದು ಅಲ್ಲ ಎಂದುಕೊಂಡಿದ್ದರೂ ಒಮ್ಮೆಲೆ ಭಾವನೆಗಳು ಮುಂದಾದುವು. ಘಟನೆಗಳ ಸತ್ಯವನ್ನು ನೆನೆದು, ಹಸಿವು, ಅನ್ನ ಕಾಮಗಳಂತಹ ಹಲವು ಪ್ರವೃತ್ತಿಗಳು ಅದಮ್ಯವಾಗಿರುವಂತೆ “ಅಹಂ” ಕೂಡ ಅಂತರದಲ್ಲಿ ಬಂದು. ಈ ಎಲ್ಲಾ ಸುಳಿಗಳ ನಡುವೆ, ಬಡವನ ನೆಮ್ಮದಿ ಅವನ ಏಳಿಗೆಯ ಮೊಟಕುತನದಲ್ಲಿಯೇ ಇರುವ ವಾಸ್ತವ್ಯದ ದುರಂತದ ಅಸಂಗತಿ ಹೊಳೆಯಿತು. ನಾವು ಕಟ್ಟಿಕೊಳ್ಳುವ ಮೌಲ್ಯಕ್ಕೂ ವಾಸ್ತವಿಕ ಕ್ರಿಯೆಗೂ ಇರುವ ಬಿರುಕು ಸ್ಪಷ್ಟವಾದಂತೆ ಸಾಹೇಬನ ನೆನಪಾಯಿತು. ಅವನ ಮನೆಗೆ ಹೋಗಿ. ಎಲ್ಲವನ್ನೂ ಉಗಿದು ಹೇಳಿಬಿಡಬೇಕು ಅನ್ನಿಸಿತು. ಸಾಧ್ಯವಾಗಲಿಲ್ಲ ಅಲ್ಲೆ ಕುಳಿತ. ಅರ್ಥವಿಲ್ಲದ ಸಂಬಂಧಗಳ ಆಳವನ್ನು ಹುಡುಕಲಾರದೆ.
ಸಂಬಂಧಗಳು
ಕವಿತೆ
ಮೂಲ : ಸೋಮದತ್ತ
ಅನು : ತಿಪ್ಪೇಸ್ವಾಮಿ
ಅವನು ಮನುಷ್ಯನ ರೂಪದಲ್ಲೇ ನೌಕರಿ ಮಾಡಿದ |
ಬಹಳ ದೊಡ್ಡ ನೌಕರಿ ಮಾಡಿದ
ಅವನು ಮನುಷ್ಯನ ರೂಪದಲ್ಲೇ ವ್ಯವಹಾರ ಮಾಡಿದ
ದೊಡ್ಡ ದೊಡ್ಡ ವ್ಯವಹಾರ ಮಾಡಿದ
ಅವನು ಮನುಷ್ಯ ರೂಪದಲ್ಲೇ ಚುನಾವಣೆಗೂ ನಿಂತ
ಉಗ್ರ ಚುನಾವಣೆಗೂ ನಿಂತ
ಇನ್ನೂ……….. ಇನ್ನೂ……………
ಅವನು ಮನುಷ್ಯನ ಮಾತಿನಲ್ಲೇ ಕವಿತೆಯನ್ನೂ ಬರೆದ
ಪ್ರತಿಷ್ಟಿತ ಕವಿತೆಯನ್ನೇ ಬರೆದ
ಆದರೆ ಸತ್ತ ಮೇಲೆ –
ಅವನ ಸ್ಮಾರಕವನ್ನು ತೋಳಗಳು ಕಟ್ಟಿದವು
ಏಕೆಂದರೆ
ಅವನೇ ನಿಜವಾದ ತೋಳವಾಗಿದ್ದ.
ಮಹತ್ವದ ತೋಳವಾಗಿದ್ದ.
ಜೈಲಿನಿಂದ ಜೈಲಿಗೆ
ಜೈಲಿನಿಂದ ಜೈಲಿಗೆ (ಹೋ-ಚಿ-ಮಿನ್ ಓದಿ)
ರಾಮಾನುಜನ್
೧
“ಜೈಲಿನಲ್ಲಿ ನಿದ್ದೆ
ಯ ಶರಭ
ಓಡಿ ಓಡಿ
ಇಂದ್ರಲೋಕ ಮುಟ್ಟಿತು.
ನಾ ಎದ್ದೆ.
೨
ರೇಷನ್ ನೀರು
ಅರ್ಧ ಬೇಸಿನ್ ನೀರು
ಸ್ನಾನಕ್ಕೆ ಚಹಕ್ಕೆ
ಎರಡಕ್ಕೆ-
ಸ್ನಾನ ಮಾಡಿದರೆ
ಚಹವಿಲ್ಲ, ಚಹ ಮಾಡಿದರೆ
ಸ್ನಾನವಿಲ್ಲ.
೩
ಜಜುಕೋರರಿಗೆ
ಈ ಸರೆಯಲ್ಲಿ ಊಟ
ಹಾಕುವುದಿಲ್ಲ.
ಬ್ಯಾಂಕಿನಲ್ಲಿ ಹಣ ಹೊಡೆದವರಿಗೆ
ಇಲ್ಲಿ ಕವಳಧ್ವಂಸ.
ಮಿಕ್ಕ ನಮಗೆ ಕಣ್ಣೀರಿನ ಉಪ್ಪು,
ಒಣಗಿದ ಜೊಲ್ಲು.
೪
ದಿನವೆಲ್ಲ ಕಲ್ಲುಮುಳ್ಳು
ನಡೆದು
ರಾತ್ರಿ
ಚಳಿ
ತಿಗಣೆಗಳಿಗೆ
ಸಮಾರಾಧನೆ,
ಆದರೂ
ಬೆಳಗ್ಗೆ
ಹಕ್ಕಿ, ಸೂರ‍್ಯ.
೫
ಇದು ಹೊಸ ಜೈಲು,
ಇನ್ನೂ ಗಾರೆಸಿಮೆಂಟಿನ ಘಾಟು.
ಸುತ್ತ ಲವಂಗ
ದ ಕಾಡಿಲ್ಲ;
ಕಣ್ಣೆತ್ತಿದರೆ ಪರ್ವತ,
ಪಾತಾಳದಲ್ಲಿ ನೀರು,
ಎಡಗಡೆ ರಾಕ್ಷಸ-
ಮರ, ಮುದಿಯಾಲ.
ಹಗಲು ಕತ್ತಲೆ,
ರಾತ್ರಿ ತೊಟ್ಟಿಕ್ಕುವ ತೇವ.
೬
‘ಸ್ವಾತಂತ್ರ ಎಲ್ಲಿದೆ ? ಎಲ್ಲಿ
ಲಿಬರ್ಟಿ, ಮರ್ದೆಕ, ಇಂಕಿಲಾಬ್,
ಎಲ್ಲಿ ?” ಎಂದೆ.
ಪೋಲೀಸಿನವನು
ಜೈಲು ಸೂಪರಿಂಡೆಂಟರ ಮನೆ
ಬೋಗನ್‌ವಿಲ್ಲ ಕುಂಕುಮ ವಿರಚಿದ ಜಾಲರಿ
ಮನೆ
ಬೆಟ್ಟು ಮಾಡಿ ತೋರಿಸಿದ.
ದೇಶಾಂತರದ
ಈ ಭರ್ಜರಿ ಜೈಲಿನಲ್ಲಿ
ಕಾಲಿಗೆ ಕಬ್ಬಿಣದ ಸರಪಣಿಯಿಲ್ಲ.
ಹಗಲೂ ರಾತ್ರಿ ಭಂಗಾರದ ಭಾರ
ಘಣ ಘಣ ಸದ್ದು
ಇಲ್ಲಿಲ್ಲ.
ಆದರೂ ವರ್ಷಗಟ್ಟಲೆ
ಕಬ್ಬಿಣ ಹೊತ್ತು ಅಭ್ಯಾಸ,
ಜೈಲಿನೊಳಗೆ ಶತಪಥ
ನಡೆದರು ನನ್ನ ಗತ್ತು
ಗಂಭೀರ,
ಸುಪ್ರೀಂ ಕೋರ್ಟಿನ ಜಡ್ಡಿಗಳು
ಮೆರವಣಿಗೆ ಹೋದ ಹಾಗೆ.”
೮
ಹೋ ಚಿ ಮಿನ್ಹ್,
ನಿನ್ನ ಕಣ್ಣು ಎರಡು ಗೆರೆ
ಗಡ್ಡಮೀಸೆ ಹನ್ನೊಂದು ಬೆಳ್ಳಿ ಎಳೆ
ಮೈ ಮತ್ತೆಮತ್ತೆ ಹರಿದು ಅಂಟಿಸಿದ ಭೂಮಿಯ ನಕ್ಷೆ
ಚರಿತ್ರೆ ನಿನ್ನ ರಹಸ್ಯಜಾತಕ
ಏಕಾಂತದ ಅನೇಕವಾದಿ
ಹುಲ್ಲುಬಣವೆಯ ಕಮ್ಯೂನಿಸ್ಟು
ಬಾಂಬುಬಿದ್ದ ಉರಿಬಿದಿರು
ಮೆಳೆಯಲ್ಲಿ ನೀನು ಮಕ್ಕಳಿಗೆ ಕಳ್ಳದಾರಿ
ದೊಡ್ಡ ಮನುಷ್ಯ, ಆದರೂ
ಕವಿ
ಕವಿಯಾದರೂ
ಸ್ನೇಹಿತ
ಅವನತಿ
ಅವನತಿ
ಕಮಲ ಹೆಮ್ಮಿಗೆ
ಅಂಬಕ್ಕನಿಗೆ ಬೆಳಿಗ್ಗಿನಿಂದ ಯೋಚಿಸಿ, ಯೋಚಿಸಿ ತಲೆ ತೂತಾಗಿತ್ತು, ಯಾಕೆ ನಮ್ಮ ಅಗ್ರಹಾರಕ್ಕೆ ಹೀಗೆ ಗ್ರಹಣ ಹಿಡಿಯಿತು-ಎಂದು ಆಕೆ ಯೋಚಿಸುತ್ತಲೇ ಇದ್ದರು. `ರಂಗರಾಜಪುರದಲ್ಲಿ ಇದ್ದುದು ಹಿಂದಿನ ತಲೆಯಲ್ಲಿ ಸುಮಾರು ನಲವತ್ತು ಒಕ್ಕಲು. ಗುಡಿಯ ಸುತ್ತ ಒಂದಕ್ಕೊಂದು ಹೆಣೆದುಕೊಂಡ ಓಣಿಗಳು ನಾಡು ಹೆಂಚಿನ, ಗಳದಿಂದ ಕಟ್ಟಿದ ಲವಲವಿಕೆಯ ಮನೆಗಳು, ಕತ್ತರಿಸಿದ ಲಿಂಬೆಯಾಕೃತಿಯ ಹೊಳೆ ದಡದಲ್ಲಿ ಸದಾ ಗಿಜಿ…ಗಿಜಿ ಗುಟ್ಟುತ್ತಿದ್ದ ಜನಗಳು……
ಅಂಬಕ್ಕ, ತುರುಬು ನೆನೆದು ಲೊಚಗುಟ್ಟಿದರು.
ಈಗ ಬ್ರಾಹ್ಮಣರಿಗೆ ಉಳಿಗಾಲವುಂಟ ? ಸ್ನಾನ ಘಟ್ಟದ ಮೇಲೆ ಸದಾ ಶೂದ್ರ ಮುಂಡೇವುಗಳ ಧಿಮಿಗುಣಿತ, ಸಗಣಿ ನಾತವೋ, ಮಿನು ರಾಶಿಯೋ ಅಸಹ್ಯವಪ್ಪ. ಮೀನಿನ ಬಲೆಯೊ, ಮತ್ತೊಂದೊ ಹಿಡಿದ ‘ಹೆಮ್ಮೆ’ ಬೆಳಗಿನಿಂದ ಸಂಜೆವರೆಗೆ ಘಟ್ಟ ಬಿಟ್ಟು ಏಳುವುದುಂಟ ? ನಾವು ಮುಸುಕಿನವರು ಹೌದಪ್ಪ ; ಹೆಂಗಸರು ಹೌದಲ್ಲವ? ಹಾಳಾದೋವು ಅಗಸರ ಕಡುವಿಗೋ, ಆನೆ ಬಂಡೆಗೋ ತೊಲಗಕೂಡದ ?
ಒಲೆ ಊದುತ್ತ, ತರಗು ತೂರುತ್ತ ಅಂಬಕ್ಕ ಯೋಚಿಸಿದರು. ಊರಲ್ಲಿ ಮಿಟಿ…ಮಿಟಿ ಅಂತ ನಾಲ್ಕು ಮನೆ ಈಗ, ನಾಲ್ಕು ಓಣಿಗೊಂದು ಮನೆ ಬೆಳಿಗ್ಗೆ ಎಂಟಕ್ಕೆ ಸ್ನಾನ ಮುಗಿಸಿ, ಒಂಭತ್ತಕ್ಕೆ ಉಂಡು, ಹೆಂಗಸರು-ನೆನೆಸಿದ ಮುತ್ತುಗದೆಲೆಗೆ ಕಡ್ಡಿ ಚುಚ್ಚುತ್ತ ಮುರಿಯುತ್ತಲೂ, ಗಂಡಸರು-ವಟವಟ ಎನ್ನುತ್ತಲೂ ಕಾಲ ನೂಕುತ್ತಾರೆ, ಇಲ್ಲ ಇನ್ನೂ ಕರೆಸಿಕೊಳ್ಳದ ರಂಗ-ನಿಗೆ ಮೊರೆಯಿಡುತ್ತಿರುತ್ತಾರೆ.
ಊರಲ್ಲಿ ಓಣ…ಓಣಿಯ ಹಾಳುಬಿದ್ದು ಮಾಳಗಳಾಗಿವೆ, ಊರಲ್ಲಿ `ರಂಗ’ನ ಮುಡಿಗೆ ಏರಿಸುವುದಕ್ಕೆ ಒಂದಾದರೂ ಹೂವು ?-ಕೊನೆಗೆ ಕಾಡು ಮಲ್ಲಿಗೆಯ, ಅದೂ ಇಲ್ಲ. ಸೊಂಟದುದ್ದ ಬೆಳೆದು ನಿಂತಿವೆ-ಎಕ್ಕದ ಗಿಡಗಳು.
ಇನ್ನು ಕಾಲಿಟ್ಟರೆ ಚುಚ್ಚಿ- ಆಳಕ್ಕೆ ಮುರಿದುಕೊಳ್ಳುವ ಗೊಬ್ಬಳಿ, ನೆಗ್ಗಿಲು ಮುಳ್ಳುಗಳ ರಾಶಿ ಬೇರೆ…ಗದನಾತದ ಹೇಲುಗುಪ್ಪೆಗಳು ಬೇರೆ, ಕೈಲಾಗದೇವು ಮನೆ ಮುಂದೆಯೇ ಹೇತುಕೊಂಡಿರುತ್ತವೆ (ಅಂಬಕ್ಕ, ಹೇವರಿಕೆಯಿಂದ ಮುಖ ಕಿವುಚಿದರು.)
ಬಿಡಾರ ತೆಗೆದ ಮನೆಗಳ ಪಾಡೊ! ಗೆದ್ದಲು…ಇಡೀ ವನೆಗೆ, ಕದಕ್ಕೆ ಜಂತೆಗೆ ಎಲ್ಲಕ್ಕು ಗೆದ್ದಲು: ಪಿಶಾಚಿ ತೋಳು ಚಾಚಿ ನಿಂತ ಹಾಗೆ ರಾತ್ರಿ ಹೊತ್ತು.
ಆದರೆ ಅಂಬಕ್ಕನಿಗೆ ನಿಜವಾಗಿ ಭಯವಿಲ್ಲ. ಯಾವತ್ತೂ ಒಂಟಿ ಅನಿಸಿಲ್ಲ. ಯಾಕೆ…. ಇಡೀ ಅಗ್ರಹಾರದವರು ‘ನಾಣಯ್ಯ’ನಿದ್ದ ಪಿಶಾಚಿ ಮನೆಗೆ ಹೆದರಿ ನಡುಗುತ್ತಿದ್ದಾಗ ಪಾಳು ಗೋಡೆ ನೆಗೆದು, ಹಾಳು ಮೂಳು ತುಕ್ಕಿನ ವಸ್ತುಗಳನ್ನ ಅಂಬಕ್ಕನಲ್ಲವೇ ಹೆಕ್ಕಿ ತಂದದ್ದು ?-ಅದೂ ನಡುರಾತ್ರೆ ಗೂಬೆ ಕೂಗುವ ಹೊತ್ತಲ್ಲಿ !
ಈ ಅಂಬಕ್ಕನಿಗೆ ಒಬ್ಬಳೇ ಮಗಳುಂಟು-ಮೈಸೂರಿನಲ್ಲಿ, ಅಳಿಯನೂ ತೋಟ ತುಡಿಕೆ ಉಳ್ಳವನು, ಆ ತಿಪ್ಪೆಮಾಳದಲ್ಲಿ ಯಾಕಿರುವುದು ಅಂತಲೇ ಅವರು ಅನ್ನುತ್ತಿರುತ್ತಾರೆ. ಅಂಬಕ್ಕೆ ಮಾತ್ರ ಕೈಕಾಲು ಹಣ್ಣಾಗುವವರೆಗೂ ಇಲ್ಲೇ ಇರುವುದು ಅನ್ನುತ್ತಾರೆ.
ಹಾಗೆ ನೋಡಿದರೆ ಅಂಬಕ್ಕನಿಗೆ ಅಗ್ರಹಾರದಲ್ಲುಳಿಯಲು ಬೇರೆಯೇ ಕಾರಣಗಳಿವೆ. ಕಾಲದಿಂದ ಹೊಸೂರು ಶೂದ್ರರಿಗೂ, ಅಂಬಕ್ಕನಿಗೂ ನಂಟು, ಅವರ ಕಾಲಿಂದ ತಲೆ ತನಕ ಲೇವಾದೇವಿ, ಅಡ ಇಟ್ಟುಕೊಳ್ಳುವುದು, ಹೆಬ್ಬೆಟ್ಟು ಒತ್ತಿಸಿಕೊಳ್ಳುವುದು ಇತ್ಯಾದಿ, ಇತ್ಯಾದಿ, ಅವಂತೂ ಅಸಲಿಗಿಂತ ಬಡ್ಡಿಯಲ್ಲೇ ತೇದು ಹೋಗುತ್ತವೆ: ಅಂಬಕ್ಕನಂತೂ ಮೇಲು ಮೇಲೆ………. ‘ನಿನ್ನ ವಸ್ತು ಯಾವತ್ತು ಬಿಡಿಸಿಕೊಳ್ಳುವುದೋ ಮುಂಡೇ ಮಗನೆ’ ಅನ್ನುತ್ತಲೇ ಇರುತ್ತಾರೆ.
ಎರಡನೇ ಕಾರಣ ತುಂಬ ಕುತೂಹಲದ್ದು, ಅಂಬಕ್ಕ- ಎಲ್ಲ ಮಡಿ ಹೆಂಗಸರ ಹಾಗಲ್ಲ. ಕೃಷ್ಣಮಾಚಾರ‍್ಯರ ಹೆಂಡತಿಯ ಹಾಗೆ ಒಂದ ಮಾಡಿದ್ದಕ್ಕೂ ಸೆಗಣಿಯು ನೀರು ಪ್ರೋಕ್ಷಿಸಿ ಕೊಳ್ಳುವವರಲ್ಲ. ಈರುಳ್ಳಿ ತಿನ್ನದವರಲ್ಲ. ಒಮ್ಮೆ ಹೀಗಾಯಿತು : ಅಂಬಕ್ಕ ಈರುಳ್ಳಿ ಪಕೋಡ ಮಾಡಿಕೊಂಡಿದ್ದರು. ಕೃಷ್ಣಮಾಚಾರ‍್ಯರು ಮೂಗು ಮುಚ್ಚಿ ಅಂಬಕ್ಕಗೆ ಕೇಳಿಸುವಂತೆಯೇ ‘ಅಶಿಶ್ಶೀ, ಹಾಳು ಬೆಳ್ಳುಳ್ಳಿ ನಾತವಪ್ಪ’ ಅಂದುಬಿಟ್ಟರು, ಅದು ಈರುಳ್ಳಿ ನಾತವೆಂದು ಗೊತ್ತಿದ್ದರೂ! ಅಂಬಕ್ಕೆ ಲಕ್ಷಿಸಿದರೆ ? ಆ ಮಾತುಗಳನ್ನೆಲ್ಲ ಅವರು ಕಿವಿಯ ಕೆಳಗೇ ಕೇಳುವವರು ; ಸುಮ್ಮನಾಗಿಬಿಟ್ಟರು. ಕೃಷ್ಣಮಾಚಾರ‍್ಯರ ನಾಲಗೆ ತುಂಬ ಚೂಪು. ಹಾಗೆ ಹೀಗೆ ಹೊರಳುತ್ತಲೇ ಇರುತ್ತದೆ. ಅವರ ಆಳದ ಕಣ್ಣಿಂದ ನರಪ್ರಾಣಿ ನುಣುಚುವುದೇ ಕಷ್ಟವೆಂದು ಅವರ ಹೆಮ್ಮ, ಅದು ನಾಲಿಗೆಗೂ ಸಮರ್ಥವಾಗಿ ಅನ್ವಯಿಸುತ್ತದೆ.
“ಅಂಬಕ್ಕ’ನನ್ನಂತೂ ಅವರು ನಿತ್ಯ ಹುರಿದು ಮುಕ್ಕಿಬಿಡುತ್ತಾರೆ. ದಿನಕ್ಕೊಮ್ಮೆ ಅವರನ್ನು ನೋಡದೆ ತೀರದು-ಅಂಬಕ್ಕನಿಗೆ ಮುಜುಗರವಾದರೂ, ಯಾಕೆಂದರೆ ಊರ ಗುಡಿಯ ಭಟ್ಟರು, ತೀರ್ಥ ಕೊಡುವವರು.
ಒಮ್ಮೆ ಖುಶಿಯ ಲಹರಿಯಲ್ಲಿ ಕೃಷ್ಣಮಾಚಾರ‍್ಯರು, ನರಸೀಪುರದ ಶಾಮಭಟ್ಟರೊಡನೆ ಹೇಳಿಕೊಂಡು ನಕ್ಕಿದ್ದರು. ‘ಆ ವಳ್ಳಕ್ಕಾರಿಗೆ (ಅಂಬಕ್ಕ-ನಿಗೆ ಅವರ ಬಿರುದು ಅದು.) ಮೊಲೆ ಜೋತರೂ ಅವಳ ಉತ್ಸಾಹ ನೋಡು, ಬದುಕಿನ ಆಶೆ ನೋಡು.’ ಪುಣ್ಯಕ್ಕೆ ಆ ಮಾತು ನೇರವಾಗಿ ಅಂಬಕ್ಕನ ಕಿವಿಗೆ ಬೀಳಲಿಲ್ಲ. ವಿಷಯ ತಿಳಿದೂ ಅಂಬಕ್ಕ ತುಟಿ ಪಿಟಕ್ ಅನ್ನಲಿಲ್ಲ. ಕೊಚ್ಚೆಗೆ ಯಾಕೆ ಕಲ್ಲು ಕುಟ್ಟುವುದು ?
ಸುಡುಗಾಡಿನ ಅಗ್ರಹಾರದಲ್ಲಿ ಅಂಬಕ್ಕನನ್ನು ನೀನೇ-ಎನ್ನುವವರಿಲ್ಲ. ಅವರಿಗದು ಬೇಕಾಗಿಯೂ ಇಲ್ಲ. ಹಗಲೆಲ್ಲ ಅವರು ಇಲಿಯಂತೆ ಮನೆಯೊಳಗೇ ಹೊಕ್ಕಿರುತ್ತಾರೆ. ಸಂಜೆ, ಒಂದಿಷ್ಟು ಸ್ತೋತ್ರ, ಕೃಷ್ಣಮಾಚಾರ‍್ಯರ ಮಗಳು ‘ಶಕ್ಕು’ವಿನೊಂದಿಗೆ ಸಿನಿಮಾ ಗಿನಿಮಾ ಕಥೆ, ರಾತ್ರೆ ಲಾಟೀನು ಬೆಳಕಿನಲ್ಲಿ ಹೊಸೂರಿನಿಂದ ತಂದ ಕತೆ ಪುಸ್ತಕ ಪಾರಾಯಣ, ಹೀಗೇ ಕಾಲ ಹೋಗುತ್ತದೆ.
ಇನ್ನ ತಾವು ಊರಿಗೆ ಹೋದರೆ ನೆಮ್ಮದಿಯ ? ಒಂದು ಸಿನಿಮಾ ಕನಿಷ್ಠ ನಾಟಕ ?
“ಅತ್ತೆ, ಹಾಯಾಗಿ ಮಲಗಿರಿ, ಒಂಭತ್ತಕ್ಕೆಲ್ಲ ವಾಪಸಾಗಿ ಬಿಡುತ್ತೇವೆ” ಅನ್ನುವ ಅಳಿಯನ ಮೇಲೆ ಹರಿ ಹಾಯುವಷ್ಟು ಸಿಟ್ಟು ಅಂಬಕ್ಕಗೆ.
ಅಂಬಕ್ಕ, ಪ್ರತಿಸಾರಿ ಮಗಳ ಮನೆಗೆ ಹೋದಾಗಲೂ ‘ನನಗೊಂದು ಶಾಂಪೂ ಶೀಸೆ ತರಿಸಿಕೊಡೇ’ ಎನ್ನುವ ಮಾತು ನಾಲಗೆ ತುದಿಯವರೆಗೆ ಬರುತ್ತದೆ. ಅದರ ನೊರೆ.. ಗಮ…ಗಮ ಎಲ್ಲ ಖುಶಿ ಅಂಬಕ್ಕಗೆ, ಆದರೆ ಮಗಳು ಯಾಕೊ ಸಿಡಿ…ಸಿಡಿ ಅನ್ನುತ್ತಾಳೆ. ಒಮ್ಮೆಯಂತೂ ‘ಅರುವತ್ತಾದರೂ ಸಂಸಾರ ಮಾಡೋ ಆಸೆ ಮುದುಕಿಗೆ’ ಅಂದ ಮಾತು ಅಂಬಕ್ಕನ ಕಿವಿ ಇರಿದಿದೆ. ಯಾಕೆ, ಒಂದು ವಾಸನೆ ಸೋಪು ತರಲು ಹೇಳಿದ್ದಕ್ಕೇ ಅಳಿಯ ಮುಗಳ್ನಕ್ಕಿರಲಿಲ್ಲವೆ ?
ಇಲ್ಲೋ, ಕಾಲಿಟ್ಟರೆ ಮುರಿದುಕೊಳ್ಳುವ ಮುಳ್ಳು – ಎಂದು ಚಪ್ಪಲಿ ಮೆಟ್ಟಿದ್ದಕ್ಕೆ ಕೃಷ್ಣಮಾಚಾರ‍್ಯರ ಹುಡುಗ ‘ಶೇಷ” “ವಳ್ಳಕ್ಕಾರಿ ಸವಾರಿ” ಅಂದು ಜೋರಾಗಿ ಕೂಗಿದ.
‘ಅಂಬಕ್ಕ’ನಿಗೆ ಕ್ರಮೇಣ ನಗು ಬಂತು, ‘ವಳ್ಳಕ್ಕಾರಿ’ ಅನ್ನುವ ಬಿರುದಿನಿಂದ ತಮಗೆ ಸಂತೋಷವಾಗಿಲ್ಲವೇ ಎಂದು ನೆನೆದು ಬಂದ ನಗು ಅದು.
ಅಂಬಕ್ಕ-ನೋಟಕ್ಕೇ ಸೂಕ್ಷ್ಮದ ವ್ಯಕ್ತಿಯಂತೆ ಕಂಡುಬಿಡುತ್ತಾರೆ. ಗಿಡ್ಡ ಆಕೃತಿ. ಬಾದಾಮಿ ಮೈ ಬಣ್ಣ, ನಿಧಾನಕ್ಕೆ ಚಲಿಸುವ ದೊಡ್ಡ-ಆದರೆ ಕೊಂಚ ಬಾಡಿದಕಣ್ಣು, ಮಿರಿ…ಮಿರಿ ಮಿಂಚುವ ಬೋಳುತಲೆ, ಚಿಗುರಿನ ಹಾಗಿದ್ದ-ಈಗ ಸ್ವಲ್ಪ ಮುರುಟಿದ – ಬೆರಳುಗಳಿಗೆ ಹರಳಿನ ಉಂಗುರಗಳು, ಅಂಬಕ್ಕ-ನಿಗೆ ಕೂದಲೊಂದು ಉಳಿದಿದ್ದರೆ…ಎಂದು ಎಷ್ಟೋ ಬಾರಿ ಅನಿಸಿದ್ದಿದೆ. ಗಂಡ ಹೋದಾಗ ತುರುಬು ತೆಗಿಸುವ ಮನಸ್ಸೇ ಅವರಿಗಿರಲಿಲ್ಲ. ಆ ಹಾಳು ‘ವರದಾಚಾರ‍್ಯ’ ತೆಗಿಸಿಯೇ ತೀರುವೆನೆಂದು ಶಪಥ ಮಾಡಿದ ಹಾಗೆ ಪಟ್ಟು ಹಿಡಿದು ಕೂತು ಹಜಾಮತ್ತು ಮಾಡಿಸಿಯೇ ಬಿಟ್ಟ.
ಈಗ ಕೂಡ ಅಂಬಕ್ಕನಿಗೆ ಅದನ್ನು ನೆನೆದರೆ ದುಃಖ ಉಮ್ಮಳಿಸಿ ಬರುತ್ತದೆ.
ಇಂದು ಬೆಳಿಗ್ಗೆ ಅಂಬಕ್ಕನ ತಲೆ, ಯೋಚನೆಯಿಂದ ತೂತಾದ್ದಕ್ಕೆ ಕಾರಣ ಇದು: ನಸುಕಿನಲ್ಲಿ ಮುದಿಕೊರಡು ‘ವರದಾಚಾರ‍್ಯ’ರ ಮನೆಯ ನಿಲುವು ಕಳಚಿ ಬಾಗಿಲನ್ನೆ ಯಾರೊ ಒಯ್ದು ಬಿಟ್ಟರಂತೆ, ಎಲ್ಲ ಪಾಳು ಮನೆಗಳು ಹಾಳಾಗಲಿ ಒಕ್ಕಲಿರುವಲ್ಲೆ ಹೀಗಾದರೆ…..!
ಶೂದ್ರರ ಹಾವಳಿ ಯಾಕೊ ವಿಪರೀತವಾಗಿಬಿಟ್ಟಿತು, ಕೋತಿಗಳ ಕಾಟದ ಹಾಗೆ, ಮನೆ ಮೇಲಿನ ಎಲೆಪಿಂಡಿ ಕೂಡ ಬಿಡುವುದಿಲ್ಲ ಅವು.
ಯೋಚಿಸಿ, ಯೋಚಿಸಿ ಸಾಕಾಗಿ ಅಂಬಕ್ಕ, ಹಂಡೆಗೆ ತುಂಬಿಸಿದ್ದ ನೀರಲ್ಲೆ ಮಿಂದರು. ಏನೊ ವಟಗುಟ್ಟಿಕೊಳ್ಳುತ್ತ ಸಾರಿಗೆ ಒಗ್ಗರಣೆ ಕೊಟ್ಟು, ಜೀರಿಗೆ ಮೆಣಸಿನ ಸಾರು ಸುರಿದರು. ಯಾಕೋ ರುಚಿಸದೆ ಅರ್ಧಕ್ಕೇ ಎದ್ದರು. ಒಂದು ಗಳಿಗೆ ಸುಧಾರಿಸಿಕೊಂಡವರು ಧಡ್ಡನೆದ್ದರು. ‘ಮಾವಿನ ಹಳ್ಳಿ’ ಯ ಟೆಂಟಿನಲ್ಲಿ ಬಂದಿರುವ ‘ಮಧುರೈ ವೀರನ್’ ನೋಡಲು ತಾವು ಮತ್ತು ‘ಶಕ್ಕು’ ಹೊರಟಿದ್ದುದು ನೆನಪಾದ್ದರಿಂದ ಮನೆ ಸವರಿಸ ತೊಡಗಿದರು, ಬೆಳ್ಳಿ ತಟ್ಟೆ ತೆಗೆದು ಎಲೆಪಿಂಡಿಯ ಡ್ರಮ್ಮಿನಲ್ಲಿ ಇಟ್ಟು ಮೇಲೆ ಬಿಡಿಎಲೆ ತುರುಕಿಟ್ಟರು. ಚಿಲ್ಲರೆ ಗಂಟನ್ನು, ಕಸಬರಿಕೆಯಿಂದ ಮುಚ್ಚಿಟ್ಟರು, ಇನ್ನೊಮ್ಮೆ ವಾಸನೆಯ ಸೋಪಿಂದ ಮುಖ ತೊಳೆದರು. ಆ ಮೇಲೆ ತಮ್ಮ ಮೈಗೊಪ್ಪುವ ಕೆಂಪು ಮಗುಟ ತೆಗೆದು ‘ಎದೆಕಟ್ಟು’ ಸೀರೆಯುಟ್ಟರು, ಆಮೇಲೆ ಕಿರ…ಕಿರ…ವೆಂದು ಗೊಣಗುವ ಬಾಗಿಲಿಗೆ ಬೀಗ ಜಡಿದು ಕೃಷ್ಣಮಾಚಾರ‍್ಯರ ಮನೆಯ ದಿಕ್ಕಿಗೆ ನಡೆದರು.
ಭಾಗ: ಎರಡು
ಇನ್ನೂ ಯಾಕೆ ನನಗೆ ಸಾವು ಬರಲಿಲ್ಲ-ಎಂದು ತಳಮಳಿಸುತ್ತ ವರದಾಚಾರ‍್ಯರು ಜಗುಲಿಯಲ್ಲಿ ಕೂತು ಹಣ್ಣಾದರು. ಮೊನ್ನೆ ರಥಸಪ್ತಮಿಗೆ ಆಚಾರ‍್ಯರಿಗೆ ನೂರು ತುಂಬಿತು. ಪುರೋಹಿತ ಕೃಷ್ಣಮಾಚಾರ‍್ಯರು ವ್ಯಂಗ್ಯ ಹೇಳುವುದು ಹೀಗೆ: “ಇದು, ಹೆಂಡತಿಮಕ್ಕಳು ಎಲ್ಲರನ್ನೂ ನುಂಗಿ ಕೂತ ಮುದಿ,” ಇಂಥವ ಯಾಕೆ ಬದುಕಬೇಕೆಂದರೆ ಏನು ಅರ್ಥ ? ಸಾಯುವುದು ಯಾರ ಕೈಲಿದೆ ?
ಗ್ರಹಚಾರಕ್ಕೆ ನಜ್ಜುಗುಜ್ಜು ಮುದುಕನಿಗೆ ಕಣ್ಣು ಬೇರೆ ಕುರುಡು, ಕಣ್ಣಲ್ಲಿ ಬಲಿತ ಪೊರೆ ತೆಗೆದುಹಾಕಿದರೆ ಕಣ್ಣು ಪಳಕ್ಕನೆ ಕಂಡೀತೇನೊ ಎಂದು ಮುದುಕನಿಗೆ ಆಶೆ. ಆದರೆ ಚಿಕಿತ್ಸೆಗೆ, ಆರೈಕೆಗೆ ದಿಕ್ಕು ಯಾರು ?
ಗುಡಿಯಲ್ಲಿ ವಿಶೇಷ ಇದ್ದ ದಿನಗಳಲ್ಲಿ ಗೊಣಗಿಕೊಂಡೇ ಕೃಷ್ಣಮಾಚಾರ‍್ಯರು, ಇವರ ಮನೆಗೆ ಬರುತ್ತಾರೆ, ಕಂಕುಳಿಗೆ ಕೈ ನೀಡಿ ಮೆಟ್ಟಿಲು ಹತ್ತಿಸುತ್ತಾರೆ, ಬಾಯಿ ಚಪಲದ ಜೀವ, ರಾತ್ರಿಗೂ ಒಂದಿಷ್ಟು ಹುಗ್ಗಿ-ಗಿಗ್ಗಿ, ಚಿತ್ರಾನ್ನ ಕೇಳಿಕೊಂಡು ದೊನ್ನೆ ಅಮುಕಿ ಕೊಂಡು-ಯಾರ ಭುಜದಿಂದಲೋ- ಅಂತೂ ಮನೆ ಸೇರುತ್ತಾರೆ. ಮೊನ್ನೆ ಹೀಗಾಯಿತು : ಗುಡಿಯಿಂದ ತಂದ ಹೋಳಿಗೆ ತುಂಬಿದ ಎಲೆಯನ್ನ ಆಚಾರ‍್ಯರು ನೆಲದ ಮೇಲಿಟ್ಟರು, ತುಪ್ಪ ತರುವುದಕ್ಕೆಂದು ತೆವಳುತ್ತ ಹೊರಟಾಗ ತಲೆಬಾಗಿಲು ಮುಚ್ಚುವುದನ್ನೇ ಮರೆತರು, ಕಾಯುತ್ತಿದ್ದ ಕೋಡಗ-ಒಳನುಗ್ಗಿಬಿಟ್ಟಿತು. ಸದ್ದಿಗೆ ಬೆಚ್ಚಿದ ಆಚಾರ‍್ಯರು `ಹಚ……..ಹಚ……. ಪ್ರಾರಬ್ದವೇ’ ಅಂದರು, ತೆವಳುತ್ತ ಬಂದು ಎಲೆ ಇದ್ದಲ್ಲಿ ಕೈಹಾಕಿದರೆ…….. ಅಲ್ಲೇನಿದೆ ? ತಮ್ಮ ದುರವಸ್ಥೆ ನೆನೆದು ಆಚಾರ್ರ ಗಂಟ ಲಲ್ಲಿ ನೋವಾಯಿತು. ಇದು ನಿತ್ಯದ ಗೋಳು, “ಇವತ್ತು ಕೋಡಗ ; ನಾಳೆ ಮನುಷ್ಯ” ಅಂದುಕೊಳ್ಳುತ್ತ, ಆಚಾರ‍್ಯರು ಮಂಡಿಗೆ ತಲೆ ಸಿಕ್ಕಿಸಿ ಗಳ….ಗಳ…ಅತ್ತುಬಿಟ್ಟಿದ್ದರು. ಆಚಾರರಿಗೆ ಕಾಲದಲ್ಲಿ–ಕಾಗೆ ಬಳಗ, ಊರಿಗೆಲ್ಲ ಹಗಲು ಪಾಠಶಾಲೆಯಲ್ಲಿ ಪಾಠ. ಸಂಜೆ, ಮನೆ ಜಗುಲಿಯಲ್ಲಿ `ತಿರುವಾಯ್ನುಡಿ’ ಚಂಡೆ ಇತ್ಯಾದಿ, ಒಂದು ಕಾಸು ಯಾರ
ಹತ್ತಿರವೂ ಇಸಿದುಕೊಂಡವರಲ್ಲ. ಅಂಥವರ ಗತಿ ಹೇಗಾಯಿತು ?
ಈಚೆಗೆ ಆಚಾರರ ದನಿ ದೊಡ್ಡದಾಗಿದೆ. ನಿದ್ದೆಯಿಲ್ಲದೆ ಹೋದಾಗೆಲ್ಲ ದಿಗಿಲು ಮುಚ್ಚಲು, ಅವರು ಅವೇಳೆಯಲ್ಲಿ ವೇದಘೋಷ ಶುರುಮಾಡಿಬಿಡುತ್ತಾರೆ, ಸ್ಮಶಾನದ ಹಾಗಿನ ಊರ ಮೌನವನ್ನು ಅದು ಗರಗಸದ ಹಾಗೆ ಕೊಯ್ದು ಬಿಡುತ್ತದೆ. ಕೃಷ್ಣ ಮಾಚಾರ‍್ಯ, ಹಿಡಿಶಾಪ ಹಾಕುತ್ತಾರೆ, ಬೈಯ್ಯುತ್ತಾರೆ. “ಗೂಬೆ ಸೂಳೆಮಗನಿಗೆ ಬಾಯಿ ತೀಟೆ”.
ಆಚಾರ‍್ಯರು ಈಗ ಉರಿಬಿಸಿಲಲ್ಲಿ ಶಲ್ಯೆಯಿಂದ ಗಾಳಿ ಬೀಸಿಕೊಳ್ಳುತ್ತ ಕೂತರಲ್ಲ ನೀನೇ…(?) ಅಂದವರು ಯಾರು? ಬಾಗಿಲಿಲ್ಲದ ಮನೆಯ ಗತಿ ಏನು ಎತ್ತ ಅಂತ ಒಬ್ಬರಾದರೂ – ದೊಡ್ಡವರು -ವಿಚಾರಿಸಕೂಡದ ?
ಕೃಷ್ಣಮಾಚಾರ‍್ಯರ ಹತ್ತುವರ್ಷದ ಹುಡುಗ – ‘ಶೇಷ’ ಮಾತ್ರ ವಿಚಾರಿಸಿತು, “ರಾತ್ರಿ ಸದ್ದಾದಾಗ ನಿಮಗೆ ಎಚ್ಚರವಾ ತಾತ ?” ಸದ್ದಾದ್ದು ಕೇಳಿತೆಂದಿದ್ದಕ್ಕೆ ‘ಹಾಗಾದರೆ ಯಾಕೆ ಬಾಯಿ ಬಡಿದುಕೊಳ್ಳಲಿಲ್ಲ’ ಎಂದು ಕಿಸಕ್ಕನೆ ನಕ್ಕಿತು, ನಕ್ಕ ಸದ್ದು ಕೇಳಿ ತುಂಬ ಸಂಕಟವಾಯಿತು ಆಚಾರ‍್ಯರಿಗೆ ರಾತ್ರಿಯಿಡೀ ಊಳಿ…ಊಳಿ ಅವರ ಗಂಟಲು ಅವಲಕ್ಕಿ ಆದ್ದು ಅವರೊಬ್ಬರಿಗಲ್ಲವೇ ಗೊತ್ತು! ಅವರಿಗೆ, ಶೇಷನಿಗೆ ‘ಒಂದು ಲೋಟ ಪಾನಕ ಮಾಡಿಕೊಡಯ್ಯ’ ಅನ್ನೋಣವೆನಿಸಿತಾದರೂ ಹಿಂದೊಮ್ಮೆ ತಾವು ನೀರು ಕೇಳಿದಾಗ ಅವ, ಆ ತಲೆಹೋಕ ಹೈದ, ತಾವು ರಾತ್ರೆ ಮಾತ್ರ ಹೊಯ್ಯುವ ಹಳೆಯ ಚೆಟ್ಟಿಯಲ್ಲಿದ್ದ ಮೂತ್ರವನ್ನೆ ಲೋಟಕ್ಕೆ ಬಗ್ಗಿಸಿ ಕೊಟ್ಟಿದ್ದನ್ನೂ, ತಾವು ತೊಟ್ಟು ಕುಡಿದು ಅದನ್ನು ತುಪ್ಪಿ, ಬಾಯಿ ಬಾಯಿ ಬಡಿದುಕೊಂಡು ಶಾಪ ಹಾಕಿದ್ದನ್ನೂ ನೆನೆದು ನಾಲಗೆಯಿಂದ ತುಟಿ ಒರೆಸಿಕೊಳ್ಳುತ್ತ ಸುಮ್ಮನಾದರು. ಶೇಷ, ಹೊರಟು ಹೋದ ಮೇಲೆ ಆಚಾರ‍್ಯರಿಗೆ ಬಿಸಿಲಿಂದ ಹೊಟ್ಟೆ ತೊಳೆಸಿತು, ಆದರೆ ಬಾಗಿಲಿಲ್ಲದ ಮನೆಯೊಳಕ್ಕೆ ಸೆತ್ತೆ ಸೆದೆ ಏನಾದರೂ ಹೊಕ್ಕರೋ ಎಂದು ದಿಗಿಲಾಗಿ, ಮನೆಯೊಳಕ್ಕೆ ತೆವಳದೆ ಹೆಜ್ಜೆ ಸದ್ದಿಗೆ ಹಾತೊರೆಯುತ್ತ ಕೂತರು.
ಭಾಗ: ಮೂರು
ಇನ್ನೇನು ಸೂರ ಮುಳುಗುವ ಹೊತ್ತಾಯಿತೆಂದು ಕೃಷ್ಣಮಾಚಾರ‍್ಯರ ಗುಡಿಗೆ ಹೊರಟರು, ಹತ್ತು ಹನ್ನೆರಡು ಮೆಟ್ಟಿಲೇರಿದರೆ ಗುಡಿಯ ದ್ವಾರ, ತುಕ್ಕು ಹಿಡಿದ ಬೀಗ ತೆಗೆದ ಕೃಷ್ಣಮಾಚಾರ‍್ಯರು ಬಾಗಿಲು ದೂಡಿದರು. ತೇಗು ಬಿಟ್ಟ ಶಬ್ದಮಾಡಿ ಅದು, ಹಿಂದೆ ಸರಿಯಿತು, ಎರಡೂ ಕೈ ಸೇರಿಸಿ ಚಪ್ಪಾಳೆ ಬಡಿದು, – ಗುಡಿಯಲ್ಲಿದ್ದ ದೇವರ ಹಾವು ದೂರ ಸರಿದು ಹೋಗಲೆಂಬಂತೆ – ಗರ್ಭಗುಡಿ ಹೊಕ್ಕರು.
ಇಪ್ಪತ್ತು ವರ್ಷಗಳ ಪರಿಪಾಠದಂತೆ ಹಣತೆಯಲ್ಲಿ ಕರಟಿದ ಬತ್ತಿ ತೆಗೆದು, ಹೊಸತು ಹಾಕಿ ಎಣ್ಣೆ ತುಂಬಿ ಬೆಳಕುಕೊಟ್ಟರು. ಆ ಬೆಳಕಲ್ಲಿ ಆಚಾರ‍್ಯರ ಕಪ್ಪಗಿನ ತೊಲೆಯ ಹಾಗಿದ್ದ ಮೈ ಕೊರೆದ ಹಾಗೆ ಕಾಣುತ್ತಿತ್ತು, ಆಚಾರ‍್ಯರ ಮೈ ಭರ್ತಿ ಕೂದಲು. ಎತ್ತರ ನಿಲುವು.
ಆಚಾರರು ಯಾಂತ್ರಿಕವಾಗಿ ಒಮ್ಮೆ ದೇವರಿಗೆ ಅಡ್ಡಬಿದ್ದು ಮಂಡಿಯೂರಿ ಕೂತರು. ಯಾಕೋ ಊರು ಚಿಟ್ಟು ಹಿಡಿಸುತ್ತಿದೆ ಅನಿಸಿತು.
ಕೃಷ್ಣಮಾಚಾರರಿಗೆ ಬೆಳಗಾಗ ಕಣ್ಣಿಗೆ ಬೀಳುವ ಮಡಿ ಹೆಂಗಸರೆಂದರೆ ಮೈ ಬೆಂಕಿ. ಅಂಬಕ್ಕ-ಶಾಪ ಹಾಕುವುದುಂಟು, “ಇವನವಳಿಗೂ ಮುಸುಕಿನ ಯೋಗ ಬೇಗ ಬರಲಿ”. ಆದರೆ ದೊಡ್ಡದನಿಯ ಕೃಷ್ಣಮಾಚಾರ‍್ಯರ ಎದುರು ಬಾಯಿಕೊಡಲು ಯಾರಿಗೆ ತಾಖತ್ತಿದೆ ? ಅವರ ತಾಳ್ಮೆಯೊ – ಸದಾ ಎಣ್ಣೆಗೇ ಕಾದ ಸಾಸಿವೆಯ ಹಾಗೆ, ಬೆಳಿಗ್ಗೆ ಸಂಜೆ ಒಣ ಮೂಸುಂಬೆ ಥರದ ಮುಖಗಳನ್ನು ನೋಡಿ ನೋಡಿ ಅವರಿಗೆ ರೋಸಿದೆ.
ಒಂದೇ ಥರ ಕೂತಿದ್ದರಿಂದ ಕೃಷ್ಣಮಾಚಾರ‍್ಯರಿಗೆ, ಮಂಡಿ ನೋವಾಗಿ ಅವರು ಭಂಗಿ ಬದಲಿಸಿ ಕೂತರು, ಓಣಿಯಲ್ಲಿ, ಹೊಳೆಯಲ್ಲಿ ಎಲ್ಲಾ ಕಡೆ ಅವೇ ಮುಖಗಳು, ಅವ ಲಕ್ಷಣಗಳು, ಒಂದಕ್ಕೆ ಕಣ್ಣು ಮಂಜು: ಭುಜ ಹಿಡಿದು ನಡೆಸು. ಒಂದಕ್ಕೆ ಸೊಂಟ ಬಿದ್ದಿದೆ: ನಡು ಬಳಸಿ ಹಿಡಿದುಕೊ. ಇನ್ನು ಒಂದನ್ನೊಂದು ಹರಿದು ತಿಂದುಕೊಳ್ಳುವಷ್ಟು ಜಗಳ, ಅಳು ಇತ್ಯಾದಿ, ತಮಗೂ ವ್ಯವಹಾರ ಸಾಕಾಗಿದೆ.
ಇನ್ನು ದೊಡ್ಡ ಪೀಡೆ-ಆ ವರದಾಚಾರ‍್ಯ, ಕಣ್ಣಿಲ್ಲದ ಅವನಿಗೆ ಮೈಯೆಲ್ಲ ಹೊಟ್ಟೆ, ಆ ಮುದಿಗೂಬೆ ಮೊನ್ನೆ ಕೂಗಿಕೊಂಡಿತು. ‘ಹಾವು ಕಿಟ್ಟಪ್ಪ…ಹಾವು…’ ಅಂತ. ಆಚಮನ ಮಾಡಿದ್ದವನು ಎದ್ದು ಓಡಿದೆ. ಅಲ್ಲ ತಾನೇನು ಹೊಣೆ ಹೊತ್ತಿದ್ದೇನೆಯೇ ಇವರದೆಲ್ಲ ? ಸಾಲದ್ದಕ್ಕೆ ಹಾವು ಮುಟ್ಟಿ ಹೆದರಿ ಜ್ವರ ಮಲಗಿದ ಮಂದಿಗೆ ತನ್ನ ಹೆಂಡತಿ ಶುಶೂಷೆ ಮಾಡಬೇಕಾಯಿತು.
ಅಂದ ಹಾಗೆ ಹಾವಿನ ಕಾಟ ವಿಪರೀತವಾಗಿ ಹೋಯಿತ್ತು ನಡುಹಗಲೇ ಓಣಿಗಳಲ್ಲಿ ಮನುಷ್ಯರ ಹಾಗೆ ಅವುಗಳ ಓಡಾಟ, ಜೀವ ಕೈಲಿ ಹಿಡಿದೇ ಇಲ್ಲಿ ಬದುಕಬೇಕು, ಹಾವು: ದಿನಕ್ಕೊಂದು ಬಡಿದು…ಬಡಿದು ಸಾಕಾಗಿದೆ, ಬಡಿದಷ್ಟೂ ಅವು ಯಾಕೆ…ಹೆಚ್ಚುತ್ತಿವೆ? ಕೃಷ್ಣಮಾಚಾರ‍್ಯರ ದಟ್ಟ ಹುಬ್ಬುಗಳು ಹೆಣೆದುಕೊಂಡುವು.
ಹಾಳುಬಿದ್ದ ಅಗ್ರಹಾರದಲ್ಲಿ ಇದ್ದಬಿದ್ದದ್ದನ್ನೂ ಸೂರೆ ಹೊಡೆಯುತ್ತವೆ – ಹಾಳು ಶೂದ್ರ ಮುಂಡೇವು, ಅವತ್ತು ‘ಯಗ್ಗಮ್ಮ’ನ ಬಾಗಿಲು ಕಳುವಾಯಿತು, ನಿನ್ನೆ ವರದಾಚಾರ‍್ಯರದ್ದು, ರಾತ್ರಿ ಆ ಮುದಿಯನ ಕೂಗು ಕೇಳಿಯೂ ತಾನು ಸುಮ್ಮನಿದ್ದೆ. ಯಾಕೆ ? ಅವರು ತುಂಬ ಜನವಿದ್ದು ತಾನೇನು ಮಾಡಬಹುದಿತ್ತು ? ಮುಖ್ಯ ಘಟ ಉಳಿಯಬೇಕಪ್ಪ. ಆಚಾರ‍್ಯರು, ಕೂದಲು ತುಂಬಿದ ಎದೆ ನೇವರಿಸಿಕೊಂಡರು.
ಅಗ್ರಹಾರದ ಸಮಸ್ಯೆ ಇರಲಿ, ಮನೆಯ ಸ್ಥಿತಿ ಚೆನ್ನಿದೆಯ – ಆ ಎದೆಯುದ್ದ ಬೆಳೆದ ‘ಶಕ್ಕು’ ಕಣ್ಣಿಗೆ ಮುಳ್ಳು. ದಿಲ್ಲಿ ದೀಪಾಂತರವೆಲ್ಲ ಶೋಧಿಸಿಯಾಯಿತು ಗಂಡನ್ನೂ ಪ್ರಾಣಿ ಸಿಗಲಿಲ್ಲ. ಒಟ್ಟು ಅವಳಿಗೆ ಇಲ್ಲ ನನಗೆ ಖಂಡಿತ ಶನಿಕಾಟ.
ಇಷ್ಟೆಲ್ಲ ಯೋಚಿಸುವಷ್ಟರಲ್ಲೇ ಮೆಟ್ಟಿಲ ಹತ್ತಿರ, ಶಿಂಗಾರಮ್ಮ, ತಿಮ್ಮಣ್ಣಿ, ತಂಗಮ್ಮ- ಬರುತ್ತಿರುವುದು ಕೃಷ್ಣಮಾಚಾರ‍್ಯರ ಕಣ್ಣಿಗೆ ಬಿತ್ತು, ಅವು, ಒಂದನ್ನೊಂದು ತಡವಿಕೊಂಡು ಮೆಟ್ಟಿಲು ದೇಕುತ್ತ ಮೇಲೆ ಬರುವುದು ಕಂಡು ಅಸಹ್ಯವಾಯಿತು.
ಕೃಷ್ಣಮಾಚಾರ‍್ಯರು ನಿರ್ವಿಕಾರವಾಗಿ ಆರತಿ ಬೆಳಗಿದರು, ಸರ‍್ರಂತ ತೀರ್ಥ ಕೊಟ್ಟು, ಕ್ಷಣ ನಿಂತರೆ ಅವು ಎಲ್ಲಿ ಮಾತಾಡಿಯಾವೊ ಎಂದು ಧಡಧಡ ಮೆಟ್ಟಿಲಿಳಿದು ಬಂದು ಬಿಟ್ಟರು, ಹಿಗ್ಗಾಮುಗ್ಗಾ ದಾರಿ ಸವೆಸಿ ತಿರುಚಿ ಬಿದ್ದುಕೊಂಡ ಓಣಿ ದಾಟಿ, ‘ವರದಾಚಾರ‍್ಯ’ರ ಜಗುಲಿ ಮುಟ್ಟಿದರು.
ಭಾಗ : ನಾಲ್ಕು
‘ಮಧುರೈ ವೀರನ್’ ನೋಡಿ ಆಂಬಕ್ಕನಿಗೆ ಖುಶಿ ಅನಿಸಿತ್ತು, ಶಕ್ಕುವಿನ ಮಾತು ಬೇರೆ ಒಗ್ಗರಣೆ ಬಿದ್ದ ಹಾಗೆ, ಇಬ್ಬರೂ ಜಾತ್ರೆಯ ಮಧ್ಯೆ ಬಂದು ಬಾಳೆಯ ಹಣ್ಣು, ಬೂಂದಿ ಕೊಂಡರು, ಶಕ್ಕು ಆದರದಿಂದ ಕೊಟ್ಟ ಬೂಂದಿಯನ್ನು ಅಂಬಕ್ಕ, ಒಲ್ಲದ ಮನಸ್ಸಿಂದಲೇ ನಿರಾಕರಿಸಿದರು, ಬಾಳೆಹಣ್ಣಿಗೆ ತಕರಾರಿಲ್ಲವಲ್ಲ!
ಬಸ್ಸಲ್ಲಿ ಕೂತ ಮೇಲೆ ಶಕ್ಕುವು ಅಪ್ಪನ ಹಠಮಾರಿತನ, ಬುಡುಬುಡಿಕೆ ಬಾಯಿ, ಅಮ್ಮನ ಮಡಿ, ತಮ್ಮನ ತಲೆಹೋಕತನ ಎಲ್ಲವನ್ನೂ ನಿದರ್ಶನ ಸಹಿತವಾಗಿ ವಿವರಿಸುತ್ತಿದ್ದಳು.
ಅಂಬಕ್ಕ, ಸಿನಿಮಾದ ಕತೆಗೆ ಹೀಗೆ ತಲೆ, ಹೀಗೆ ಬಾಲ ಸೇರಿಸಬಹುದಿತ್ತು ಅಂತ ಊಹಿಸುತ್ತ ಮಧ್ಯೆ ಮಧ್ಯೆ ಪ್ರಕಟವಾಗಿಯೂ ಹೇಳುತ್ತ ಇದ್ದರು.
ಚೂಪು ಮೂತಿಯ ಬಸ್ಸು ಊರು ಸೇರಿದ ಮೇಲೆ ಅಂಬಕ್ಕೆ ‘ಶಕ್ಕು’ವಿನ ಮನೆಯ ಮೇಲಿಂದ ಹೊರಟರು. ಮಾತಿಂದ ಗುರುತುಹಿಡಿದ ಕೃಷ್ಣಮಾಚಾರ‍್ಯರು ಓ ಹೋಯ್ ಅಂಬಕ್ಕಾ…ಆ ವರದಾಚಾರ‍್ಯರ ಮನೆಯ ಹತ್ತಿರ ಕ್ಷಣ ಹೊತ್ತಿರಿ, ಮೊಸರನ್ನ ಉಂಡು. ಬರುವೆ.’ ಅಂದು ಕೂಗು ಹಾಕಿ–ಸರಸರ…ಸಾರು ಸುರಿಯತೊಡಗಿದರು.
ಮಾತಾಡದ ಅಂಬಕ್ಕ, ಒಳಗೊಳಗೇ ಗೊಣಗುತ್ತ “ನಾನು ಯಾಕೆ ಇವನ ಬಾಗಿಲು ಕಾಯಬಾರದು” ಅಂದು ವರದಾಚಾರ‍್ಯರ ಜಗುಲಿ ಹಾದು ಹೋಗುವವರಿದ್ದರು. ಮನೆ ಯೊಳಗೆ ಲಾಟೀನು ಮಕ…ಮಕ… ಉರಿಯುತ್ತಿತ್ತು, ಜಗುಲಿಯ ಮೇಲೆ ಕುಕ್ಕುರು. ಬಡಿದ ನರ ಪ್ರಾಣಿಯತ್ತ ಕಣ್ಣು ಹರಿಯಿತು, ಆಚಾರ‍್ಯರಿಗೆ ದನಿ ಉಡುಗಿತ್ತು, ಪಿಳಿ… ಪಿಳಿ ಕುರುಡುಗಣ್ಣು ಬಿಟ್ಟು ಕೂತಿದ್ದರು. ಕ್ಷಣ ಹೊತ್ತು ನಿಂತ ಅಂಬಕ್ಕ, ಮೆಲ್ಲನೆ ಮನೆಯೊಳಗೆ ನುಸುಳಿದರು, ತೊಂಬೆಗೆ ಅನಿಸಿಟ್ಟ ಇಡಿದ ಹುಳಿ ಗುಂಡನ್ನೂ, ಹಚ್ಚಿಟ್ಟ ಮುತ್ತುಗದೆಲೆಗಳನ್ನೂ ಅಮುಕಿ ಹಿಡಿದವರೇ, ಸದ್ದಾಗದಂತೆ ಜಗುಲಿ ಇಳಿದು ಕತ್ತಲಲ್ಲಿ ಕರಗಿ ಹೋದರು.
ಪಿತಾಮಹರಿಗೆ
ಪಿತಾಮಹರಿಗೆ
ಜಯಸುದರ್ಶನ
ಕರ್ಮಾಂತರಗಳ ಅನಂತರಗಳ ನುಂಗಿಕೊಂಡು
ಖಾತರಿಯಾಗಿ ಬೆನ್ನಿಗೊತ್ತಾಸೆ ಪುಷ್ಟ ನಿಂತರೆ
ಸಾಜ ಸದ್ಯದ ತುರ್ತು ನಿಜ,
ಇಲ್ಲಿ ಹೀಗೆ ಹಸುಬೆಯ ನೆಲಕ್ಕೆ ಚೆಲ್ಲಿ
ಒಂದಷ್ಟು ಆರಾಮ ಕಾಲು ಚಾಚಿದರೆ ದ್ವಿಜ,
ಕಣ್ಣ ಮುಂದೆ ಬೆಳಕಿನ ಕೊಂಡಿಕೊಂಡಿಗಳು,
ತುಂಡುತುಂಡಾದ ಸರಪಳಿಗಳು
ಗಾಳಿಯಲೆಯುತ್ತ, ಅಲ್ಲಲ್ಲಿ ಇಂಗುತ್ತ.
ತಪ್ಪಿದರೆ ತಂಗುತ್ತ ಸುತ್ತುತ್ತ ಹಂಗಿಸುವ
ನೀವು ಯಾರು ?
ಮಣ್ಣತಾಕದ ನಿಮ್ಮ ಅತೃಪ್ತಿಗಳು
ಜನಿವಾರ ಹಾಕಿಕೊಂಡ ಬಳಿಕವೇ
ನನ್ನೊಡಲ ಕಾಡುವ ಬಯಕೆಗಳು;
ತಲೆಯ ಮಡಕೆಯೊಳಗೆ ಆಗೀಗ
ಸುಳಿಯುವುವು ನಿಮ್ಮ ಹಳೆಯ ಗಾಳಿಗಳು.
ನಾನೆಂಬುವೀ ಹಗಲ ನಿರಾಳಕ್ಕೆ ಒಪ್ಪಿಸುವಿರೇಕೆ,
ಚಲಿಸುವ ನೆರಳುಗಳೆ, ನಿಮ್ಮನನುಗಾಲವೂ
ಅಭಿವ್ಯಕ್ತಿಸುವ ಬಯಸಿರದಿದ್ದ ವಿರಕ್ತಿ ?
ಅಯ್ಯಾ, ನನ್ನ ಪಿತಾಮಹರೆ, ಪೂರ್ವಕ್ಕೆ ಸಹಜರೇ.
ನಾನಿದ್ದಲ್ಲಿ ಖರೆ ನಿಮ್ಮ ಚಹರೆಯ ಮುದ್ರೆ.
ನಾನುಸಿರಾಡಿಸುವುದೂ ನಿಮ್ಮ ಹಳೆಯುಸಿರೇ.
ಕಾಲೆಳೆವ ಕಾಲನ ಪಕ್ಕ ನಡೆದು ತೇಕುವ, ಸಾಚ ಶೂದ್ರ
ತಾಜ ವಾಸನೆಗಳ ಹಿಂದೆ ಸಹಜ ಸೊಕ್ಕಿ ನಾಯಿಯಲೆವ
ನನ್ನ ಬ್ರಾಹ್ಮಣಿಕೆಗೆ ನಿಮ್ಮ ಗಾಯತ್ರಿ ಲಗಾಮು
ಹಾಕಿದರು ಸರೆ, ನಾನು ಚಲಿಸುವ ಕಡೆ ನೀವು ಬರೆ ನುಗ್ಗದಿರಿ;
ಸ್ವಪ್ನಸ್ವಲನಗಳು ಕರೆಗಟ್ಟಿದ ಮಡಿವಂತಿಕೆಯ
ಲಂಗೋಟಿಯೊಳಗೆ ಉಕ್ಕುಕ್ಕಿ ಬರುವ
ಕಾವುಗಳ ಹಿಡಿಯದಿರಿ ; ಹುಟ್ಟಿಸದೆ ಕೊಲ್ಲದಿರಿ.
ಹಳೆಯ ಮೋಹಗಳ ಮುಂದೆ ನಾನು ನಿಂತಾಗ
ಹಠಾತ್ತು ಬಾಲವಾಡಿಸುವ ಜನ್ಮಾಂತರಗಳೇ,
ನನ್ನ ಬೀಜಗಳಲ್ಲಿ ಮಲಗಿ, ಮೈದುಂಬಿಕೊಂಡು
ಇನ್ನೊಮ್ಮೆ ಹುಟ್ಟಿ ಬನ್ನಿ ಆಶಾಪೂರ್ತಿಗೆ
ನನಗು ನಿನಗು ಶುದ್ಧಾಂಗ ಧಾತು ಸಂಬಂಧ
ಭೂತವಾಗಲೆಯದಿರಿ ಕ್ಷಣಗಳವಸರಕ್ಕೆ
ಶಾಪಗಳಿಗೊಲಿಯದಿರಿ ತಕ್ಷಣಗಳ ಭಾರಕ್ಕೆ,
ತೊಡೆಮಧ್ಯೆ ಘನ ಗುರುತ್ವ ಕೇಂದ್ರ ಸ್ಥಾಪಿಸಲು
ಪಾದರಸವಾಗಿ ಅಲ್ಲಿ ಮಡುಗಟ್ಟುವ ಸಹನೆ ಕಲಿತುಕೊಳ್ಳಿ,
ಕಲಿಸಿ ನನಗೂ ಚಪಲವಾದಾಗೆಲ್ಲ.
ನೆಲದ ಆರ್ಧ್ರತೆಗೆ ಮಾತ್ರ ಸ್ಖಲಿಸುವ ಬಾಳ ನಿಧಾನ,
ಹೆಣ್ಣಿನ ಸಂಗದಲ್ಲಿ ಪಡೆದು ಗಂಡಸುತನ ಹೊಸಹೊಸತು,
ಪಿತೃತ್ವಕ್ಕೆ ಅರ್ಹವಾಗುವ ಹಳೇ ವಿಧಾನ;
ಪಡೆದುಕೊಳ್ಳಿರಯ್ಯಾ, ಅಲ್ಲೇ ನಿಮ್ಮ ಸಂತೃಪ್ತ ನಿಧನ.
ಎದ್ದೆನೆನ್ನಿ, ಮುಂದೆ ಹೊರಟಾಗ ಇಮ್ಮಡಿ ವೇಳೆ ಹುಟ್ಟಿದಾತ
ನೆಲದನೆಟುಕಿಸಿಕೊಳ್ಳದ ಕಾಲುಗಳ ಬಡಿಯುತ್ತ ಬೆನ್ನಟ್ಟದಿರಿ,
ಹುಟ್ಟಿಬಯಸದೆ ಮತ್ತೆ ಮತ್ಸರಕ್ಕೆ
ನನ್ನ ನಿಜಗಳ ಹಾದಿಗಡ್ಡ ಮಲಗದಿರಿ,
ನನ್ನ ಸ್ವಪ್ನಗಳ ಹಳಸುಗೈಯಲ್ಲಿ ಮುಟ್ಟದಿರಿ.
ನಿಮ್ಮ ಗಾಳಿಗೋಪುರಗಳಿಗೆ ನೆಲದಲ್ಲಸ್ತಿವಾರ ಹಾಕುವ
ನನ್ನ ಮಣ್ಣಗೆವ ಮೂಲ ಕರ್ತೃ ಕರ್ಮ ಕ್ರಿಯೆಯ
ದಾಹವ ಎಂಜಲಿಂದ ತಣಿಸದಿರಿ ; ಮಣಿಸದಿರಿ ಹಳೆಯ ವೃತ್ತಕ್ಕೆ
ಭವಿಷ್ಯಗಳ ಸರಳರೇಖೆಯ ಪರಿ. ಇ
ಇಡಿಯಾಗಿ ನನ್ನ ದಿನರಾತ್ರಿಗಳಲ್ಲಿ ತುಂಬಿಕೊಳ್ಳುವ
ಜೈವಿಕ, ಧ್ಯಾನವಾಗಿ, ಕಾರಣಪುರುಷರೇ,
ಸೃಷ್ಟಿ ರಹಸ್ಯ ಮೂಡಿಸುವ, ಬಿಡಿಸಿ ರೂಢಿಸುವ
ಸೇಂದ್ರಿಯ ಕ್ರಿಯೆಗೆ,
ಗರ್ಭನಿಶೆಯಲ್ಲಿ ಮೂಡಿ ಬೆಳೆಯುವ ಬೆಳಕಿನಾಮಿಷಗಳಿಗೆ
ಶಿಸ್ತಾಗಿ, ಚೌಕಟ್ಟಾಗಿ ನಿಲ್ಲಬನ್ನಿ.
ಸತ್ತವರ ನೆರಳು-ನಾಟಕದ ತತ್ವಗಳು
ಸತ್ತವರ ನೆರಳು-ನಾಟಕದ ತತ್ವಗಳು
(ನಮ್ಮ ಸಾಹಿತ್ಯದ ಪ್ರತೀಕಗಳ ಬಗ್ಗೆ ಕೆಲವು ಸಂದೇಹಗಳು)
ಜಿ ರಾಜಶೇಖರ್
ಈಗ ಕೆಲವು ತಿಂಗಳ ಹಿಂದೆ ಉಡುಪಿಯ ಎಂ. ಜಿ. ಎಂ. ಕಾಲೇಜಿನ ರಂಗಭೂಮಿಯಲ್ಲಿ ಹಿಂದಿ ಲೇಖಕ ಶ್ರೀ ಧರ್ಮವೀರ ಭಾರತಿಯವರ “ಅಂಧಯುಗ” ನಾಟಕ ಬಿ. ವಿ. ಕಾರಂತರ ನಿರ್ದೇಶನದಲ್ಲಿ ಪ್ರದರ್ಶಿತವಾಯಿತು, ಉಡುಪಿಯಲ್ಲೇ ಅಲ್ಲದೆ ಮೈಸೂರು, ದೆಹಲಿ, ಬೊಂಬಾಯಿಗಳಲ್ಲೂ ಅದು ಉತ್ಸಾಹೀ ಪ್ರೇಕ್ಷಕರೆದುರು ಅಭಿನಯಿಸಲ್ಪಟ್ಟ ವರದಿಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ತನ್ನ ಯೋಗ್ಯತೆಗೆ ಮೀರಿ ರಸಿಕರ ಗಮನವನ್ನು ಸೆಳೆದ ನಾಟಕ ಅದು, ಮಹಾಭಾರತದ ಪ್ರಸಂಗವೊಂದನ್ನು ಎತ್ತಿಕೊಂಡು ವರ್ತಮಾನದ ನಮ್ಮ ಬದುಕಿನ ಬಗ್ಗೆ ನಿರ್ಣಯಗಳನ್ನು ಕೊಡುವ ಆ ನಾಟಕದ ಸಮೀಕರಣಗಳು ಸರಳವಾದವು ; ನಾಟಕದ ಕೆಲವು ಭಾಗಗಳಂತೂ ಮನಸ್ಸಿಗೆ ರಗಳೆಯಾಗುವಂತಹವು, ಆದರೆ ನಾಟಕ ಪ್ರದರ್ಶನದ ತಂತ್ರ, ಅಭಿನಯ ಇವು ಪ್ರತಿ ಮಾತಿಲ್ಲ ಎಂಬಂತಿದ್ದವು ; ಸಮರ್ಥ ನಿರ್ದೆಶಕ, ಪುಸ್ತಕದ ರಟ್ಟಿನೊಳಗಿರುವ ನಾಟಕಕ್ಕೆ ರಂಗಸ್ಥಳದಲ್ಲಿ ಎಂತಹ ಕಾಯಕಲ್ಪ ನೀಡಬಲ್ಲ ಎಂಬುದಕ್ಕೆ ನಿದರ್ಶನಗಳಾಗಿದ್ದವು, (ಈ ಮಾತಿಗೆ ಬಿ. ವಿ. ಕಾರಂತರೇ ನಿರ್ದೆಶಿಸಿದ ಶ್ರೀರಂಗರ ‘ರಂಗಭಾರತ’, ಜಡಭರತರ ‘ಸತ್ತವರ ನೆರಳು’ ಇನ್ನೂ ಒಳ್ಳೆಯ ಉದಾಹರಣೆಗಳು) ಇವಿಷ್ಟೇ ಸಾಲದೆ ಎಂದು ಕೇಳುವವರಿಗೆ ನನ್ನಲ್ಲಿ ಉತ್ತರವಿಲ್ಲ. ಆದರೆ ಇಸ್ತೇಟನಲ್ಲದ ಪ್ರೇಕ್ಷಕನಿಗೆ, ಓದುಗನಿಗೆ, ಅಂದರೆ ಸಾಹಿತ್ಯ, ಕಲೆಗಳು ತನ್ನ ಮತ್ತು ತನ್ನ ಸುತ್ತಲಿನ ಬದುಕು ತಿಳಿದುಕೊಳ್ಳುವುದಕ್ಕೆ ಅವಶ್ಯವಾದದ್ದು ಎಂದು ತಿಳಿಯುವವನಿಗೆ ಕೃತಿಯೊಂದರ ಮೌಲ್ಯ ನಿರ್ಣಯಗಳ ಬಗ್ಗೆ ಯೋಚಿಸುವ ಒಪ್ಪಿರೆಳ್ಳುವ ಯಾ ತಿರಸ್ಕರಿಸುವ ತೊಡಕು ಇದ್ದೇ ಇದೆ. ನಮ್ಮ ಮಧ್ಯಮ ಕೆಳ ಮಧ್ಯಮ ವರ್ಗದ ಪ್ರೇಕ್ಷಕರೆದುರು (ಸದ್ಯಕ್ಕೆ ಇಂತಹ ನಾಟಕಗಳನ್ನು ನೋಡುವವರು ಈ ಜನ ಮಾತ್ರ ಅಲ್ಲವೆ ?) ಅಂಧಯುಗದಂತಹ ನಾಟಕಗಳು ಏಕೆ
ಯಶಸ್ವಿಯಾಗುತ್ತಾನೆ? ಮಹಾಭಾರತದಂತಹ ಕೃತಿಯ ಪಾತ್ರಗಳೂ ಅಲ್ಲಿನ ಸಂಘರ್ಷಗಳೂ, ನಿರ್ಣಯಗಳೂ ಎಲ್ಲ ಕಾಲಕ್ಕೂ ಬೆಲೆಯುಳ್ಳವು ಎಂಬ, ನಮ್ಮ ವರ್ಗದ ಜನ ತಮ್ಮ ದಿನನಿತ್ಯದ ಭ್ರಷ್ಟ ಲೌಕಿಕ ಬದುಕನ್ನು ಮುಚ್ಚಿಟ್ಟುಕೊಳ್ಳಲು, ಆಗಾಗ ತೋರುವ ಸಾಂಸ್ಕೃತಿಕ ದುರಭಿಮಾನ ಇದಕ್ಕೆ ಕಾರಣವಿರಬಹುದೆ ? (ಒಂದು ಕೃತಿಯ ಸಾಹಿತ್ಯದ ಶ್ರೇಷ್ಠತೆಯನ್ನು ಮೆಚ್ಚಿಕೊಳ್ಳುವುದು ಮತ್ತು ಅದು ಸಾರ್ವಕಾಲಿಕ ಮಹತ್ವವುಳ್ಳದ್ದು
ಎಂದು ತಿಳಿಯುವುದು-ಎರಡೂ ಒಂದೇ ಎಂಬ ಹಠವನ್ನು ಭಾರತ, ರಾಮಾಯಣ ದಂತಹ ಕೃತಿಗಳ ಬಗ್ಗೆ ನಾವು ಅನೇಕ ಸಲ ತೋರಿಸುತ್ತೇವೆ.) ಅಥವಾ ಇದು ತಂತ್ರವಿದ್ದರೆ ಮಂತ್ರ ಮರೆತುಬಿಡುವ ಅಪ್ಪಟ ಹಿಂದೂ ಪ್ರವೃತ್ತಿಯಂತೆ ನಾಟಕದ ಅಭಿನಯದಲ್ಲಿ ತಾಂತ್ರಿಕತೆ, ನೆರಳು-ಬೆಳಕಿನ ವ್ಯವಸ್ಥೆ, ಫರದೆ ಇರುವುದು ಯಾ ಇಲ್ಲದಿರುವುದು – ಇವೇ ಅಂಶಗಳು ಕಣ್ಣಿಗೆ ಹೊಡೆಯುವಂತೆ ಇದ್ದರೆ ಕೃತಿಯ ವೈಚಾರಿಕತೆಯನ್ನೂ ತತ್ವಗಳನ್ನೂ ನಿರ್ಣಯಗಳನ್ನೂ ಮರೆತುಬಿಡುವ Philistine ಲಂಪಟತನವೆ ?
ಯಾಕೆ ಈ ಮಾತುಗಳನ್ನು ಬರೆಯುತ್ತಿದ್ದೇನೆಂದರೆ ಹೆಚ್ಚು ಕಡಿಮೆ ಇದೇ ಪ್ರೇಕ್ಷಕರೆದುರು ಕ್ರಾಂತಿ ಪ್ರತಿಪಾದಿಸುವ ನಾಟಕಗಳ ಪ್ರದರ್ಶಿತವಾಗುತ್ತವೆ. ಇದೊಂದು ವಿಚಿತ್ರವಾದ ಸಾಂಸ್ಕೃತಿಕ ಸನ್ನಿವೇಶ; ರೈತಕ್ರಾಂತಿಯ ನಾಟಕ ಒಬ್ಬ ರೈತನನ್ನೂ ಮುಟ್ಟದೆ, ಸಿಟ್ಟುಗೊಂಡರೆ ಸಿಟ್ಟಿನ ಚಂದ ನೋಡುವ, ಬೈದರೆ ಬೈಗುಳದ ಶೈಲಿ ಚಪ್ಪರಿಸುವ, ಏನು ಮಾಡಿದರೂ ತಮ್ಮ ಕೋಶ ಬಿಟ್ಟು ಹೊರಬಾರದ ಮಧ್ಯಮ ವರ್ಗದ ಪಡಪೋಶಿ ಜನಗಳಿಗೆ ಗ್ರಾಸವಾಗುವ, ನೈಜ folk ಸತ್ವವುಳ್ಳದ್ದು ಮತ್ತು ಬರೀ folky ಗಳ ನಡುವೆ ವ್ಯತ್ಯಾಸ ಮರೆಯಾಗಿಬಿಡುವ, ಜನತೆಗೂ ಸಾಹಿತ್ಯ ಕಲೆಗಳಿಗೂ ಎರಡೂ ಬೆಳೆಯಬೇಕಾದರೆ ಅವಶ್ಯ ಇರಬೇಕಾದ ಸಜೀವ ಸಂಬಂಧವೇ ಇಲ್ಲದಂತಹ ಸನ್ನಿವೇಶ, ಇದು ಯಾಕೆ ಹೀಗೆ ? ಸದ್ಯಕ್ಕೆ ನಮ್ಮ ಬಹುಪಾಲು ಜನರಿಗೆ ಮೂರು ಹೊತ್ತಿನ ಊಟದ್ದೇ ಒಂದು ದೊಡ್ಡ ಸಮಸ್ಯೆಯಾಗಿರುವುದು ಒಂದು ಕಾರಣವಾದರೆ ನಮ್ಮ ತೀರ ಅಲ್ಪಸಂಖ್ಯಾಕ ಓದುಗ ಪ್ರೇಕ್ಷಕರಂತೆ, ನಮ್ಮ ಸಾಹಿತಿ, ನಾಟಕಕಾರರೂ ಮಧ್ಯಮ ವರ್ಗದಿಂದಲೇ ಬಂದವರಾಗಿದ್ದು. ಈ ವರ್ಗದ ಸೀಮಿತ ಅನುಭವವನ್ನೇ ಒಟ್ಟು ಜನತೆಯ ಅನುಭವವೆಂದು ಬಣ್ಣಿಸಿದ್ದೂ ಒಂದು ಕಾರಣವೆಂದು ನನಗನ್ನಿಸುತ್ತದೆ, ಇಲ್ಲದಿದ್ದರೆ ಕಥೆ, ಕವಿತೆ ಕಾದಂಬರಿಗಳು ಹೋಗಲಿ ನಾಟಕದಂತಹ ಒಂದು ಸಮೂಹ ಮಾಧ್ಯಮ ಕೂಡ ಕೆಲವರನ್ನು ಮಾತ್ರ ಆಕರ್ಷಿಸಲು ಕಾರಣವೇನು?
ನನ್ನ ಈ ‘ಪೂರ್ವ ಗ್ರಹ’ಗಳೊಡನೆ ಜಡಭರತರ ‘ಸತ್ತವರ ನೆರಳು’ ನಾಟಕ ಓದಿದಾಗ ನನಗೆ ಬಂದ ಸಂದೇಹಗಳನ್ನು ವಿವರಿಸುತ್ತೇನೆ. ಶ್ರದ್ಧಾಕೇಂದ್ರವಾದ ಮಠದ ಪೀಠ ಲೌಕಿಕ ಬ್ರಾಹ್ಮಣರ ಒಳಸಂಚಿಗೆ ತುತ್ತಾಗುವುದು ನಾಟಕದ ವಸ್ತುವಿನ ಒಂದು ಮುಖ್ಯ ಎಳೆ, ವಿರಕ್ತಿಯ ಸಂಕೇತವಾದ ಮಠ ಸ್ವಾರ್ಥದ ಕಾರಸ್ಥಾನವಾಗಿರುವುದು, ಶ್ರದ್ಧೆ ನೆಲೆ ಕಳೆದುಕೊಂಡಿರುವುದು, ಪರಂಪರೆ ಸಂಪ್ರದಾಯದ, ರಢ ಆಚಾರಗಳ ವಿಕೃತ ರೂಪ ತಳೆದಿರುವುದು-ಈ ‘ಅವನತಿ’ಯ ಬಗ್ಗೆ ವಿಷಾದದ ಧ್ವನಿಯೊಂದು ನಾಟಕದ ಉದ್ದಕ್ಕೂ ಇದೆ. ಬಲವಂತಕ್ಕೆ ಒಳಗಾಗಿ ಸನ್ಯಾಸ ಸ್ವೀಕಾರಮಾಡಿದ, ಅಷ್ಟೇ ಬಲವಂತಕ್ಕೊಳಗಾಗಿ ಪೀಠದಿಂದ ಹೊರದೂಡಲ್ಪಟ್ಟ ನಾರಾಯಣ ನಾಟಕದ ಆರಂಭದಲ್ಲಿ ಭುಮಿಷ್ಠ ವ್ಯಕ್ತಿಯಾಗಿ ಮಠವನ್ನು ಪ್ರವೇಶಿಸಿ ಆಚಾರ‍್ಯರಿಗೆ ಕೇಳುವ ‘ಜೀವದ ಸುತ್ತ ಕಟ್ಟಿದ ದೇಹದ ಸುತ್ತ ವೃಂದಾವನ : ವೃಂದಾವನದ ಸುತ್ತ ಮಠ, ಮಠದ ಸುತ್ತ ಸಮಾಜ, ಈ ಧರ್ಮಶಿಲ್ಪದ ಅರ್ಥವೇನು ಆಚಾರ್ಯರೆ ?” (ಪುಟ ೮) ಎಂಬ ಪ್ರಶ್ನೆ ಇಡೀ ನಾಟಕದ World view ಎನ್ನಿಸುತ್ತದೆ. “ಇದೆಲ್ಲ ಆಸ್ತಿಕನಾದವನೇ ಕೇಳುವ ಪ್ರಶ್ನೆಗಳು, ಅವನಿಗೆ ಬರಬಹುದಾದ ಸಂಶಯ……” (ಪುಟ ೭) ಎನ್ನುವ ಮಾತು ನಾಟಕದ ಮೌಲ್ಯ ನಿರ್ಣಯಗಳಿಗೆ ಉದಾಹರಣೆಯಾಗಿದೆ, ನಾಟಕಕಾರರಿಗೆ ಮಠ ಶಿಥಿಲವಾಗಿರುವುದರ ಬಗ್ಗೆ ವ್ಯಥೆ ಇದೆಯೇ ಹೊರತು ಮಠವನ್ನು ಕಟ್ಟಿರುವ ಶ್ರದ್ಧೆಯ ಬಗ್ಗೆ ಅವರಿಗೆ ಯಾವ ಪ್ರಶ್ನೆಗಳೂ ಇಲ್ಲವೆನ್ನಿಸುತ್ತದೆ, (“………ಆದರೆ ಈ ನಂಬಿಕೆ ಉಳಿಯಲೇಬೇಕಾದ ಅಗತ್ಯ ಇದೆಯೇ ಎಂಬ ಮೂಲಭೂತ ಪ್ರಶ್ನೆಯೊಂದು ನಾಟಕಕಾರರಿಗೆ ಎಲ್ಲೂ ಕಾಡಿದಂತೆ ಕಾಣುವುದಿಲ್ಲ, ಧಾರ್ಮಿಕ ವ್ಯವಸ್ಥೆಯ ದುರಂತವೊಂದನ್ನು ನೋಡುವಾಗ ಈ ಪ್ರಶ್ನೆಯೂ ಅಷ್ಟೇ ಮುಖ್ಯವಾಗಿ ಕಾಣುತ್ತದೆ” -ಜಿ. ಎಸ್. ೧೯೭೫ ಫೆಬ್ರವರಿ ೧೬ ರ ಪ್ರಜಾವಾಣಿಯಲ್ಲಿ ) ಒತ್ತಾಯಕ್ಕೆ ಸನ್ಯಾಸಿಯಾದ ನಾರಾಯಣನನ್ನು ಬಿಟ್ಟರೆ ಮಠ ಪ್ರತಿನಿಧಿಸುವ ಶಕ್ತಿಗಳನ್ನು ಎದುರು ಹಾಕಿಕೊಂಡಿರುವ ಆಳಪುಡಿ ಶೀನ ಮಠದ ದಿವಾನ ಕೃಷ್ಮಾಚಾರ್ಯರಿಗೆ ಹೇಳುವ ಮಾತುಗಳೂ ಇದನ್ನೇ ಸಮರ್ಥಿಸುತ್ತವೆ. ಉದಾ: “ದಿನ ಬಳಕೆ ಇಲ್ಲ ಗುನಿಗಡದಬಿಟ್ಟದಲ್ಲೂ ನಿನ್ನ ಜ್ಞಾನ)……” (ಪುಟ ೨೫)………”ಶಬ್ದದ ಜೋಡಿ ವ್ಯಭಿಚಾರ ಮಾಡಿ, ಧರ್ಮದ ದಾಂಪತ್ಯ ಕೆಡಿಸಿದ ನಾವು ಮಹಾ ಪಂಡಿತರಲ್ಲ…”……”ನೀ ಇನ್ನೂ ಬದುಕಿದ್ದೀ- ಆದರೆ ಬದುಕಿ ಕಲ್ಲಾಗೀದಿ, ನಾನು ಊರಿಗೆ ಒಕ್ಕಲಾಗಲಿಲ್ಲ. ಸುಡುಗಾಡಕ ಹೆಣಾ ಆಗಲಿಲ್ಲ. ಬಹುತೇಕ ಪಾಪ ಅಂದರೆ ಇದೇ ಇರಬೇಕು… ” (ಪುಟ ೨೬-೨೭)”ಕಟ್ಟೋ ಕೆಲಸ ನಿಂದು, ವೃಂದಾವನ ಕಟ್ಟೋ ಗುತ್ತಿಗೀನ ತಗೊಂಡೀದಿ, ಕಟ್ಟು ಕಟ್ಟು, ಕೆಟ್ಟ ಅನಸತದ ಒಂದು ಮಾತಿನ ಬಗ್ಗೆ…..ಪಡಕೊಂಡ ಜ್ಞಾನ ನಿನಗ ಕಲ್ಲು, ಇಟ್ಟಂಗಿ, ಮಣ್ಣು ಆತಲ್ಲೊ ……ನನಗೋ ಉರಿಯೋ ದಂಡ ಕಾಷ್ಠ ಆತು…..” ಈ ಮಾತುಗಳೆಲ್ಲ ಶೀನನ ಬಂಡಾಯ ಕೇವಲ ಆತ್ಮ ಜಿಜ್ಞಾಸೆಯ ವೈಯಕ್ತಿಕ ಬಂಡಾಯವೇ ಹೊರತು ಮಠದ institution ನ ವಿರುದ್ಧವಲ್ಲ ಎಂಬುದನ್ನೂ ಸೂಚಿಸುತ್ತವೆ, ವಿರಕ್ತಿಯ ಬದುಕು ಜುಗುಪ್ಸೆಯಾಗಿರುವ ನಾರಾಯಣನಿಗೆ ಆತ ಹೇಳುವ ಮಾತುಗಳನ್ನು ನೋಡಿರಿ, “…… ಸದಾ ನನ್ನ ಕಣ್ಣಿಗೆ ಕಾಣುವುದು ಅಂದರೆ ಉರಿಯೋ ದಂಡ ಕಾಷ್ಠ, ಕಣ್ಣು ಮುಚ್ಚಿದರೆ ಸಾಕು ಕಾಣೋದು ಅದು ಒಂದೇ, ಯುಗ ಯುಗಗಳಿಂದ ಬ್ರಾಹ್ಮಣ ಆಸೆಬುರುಕುತನದಿಂದ ಸಂಗ್ರಹಿಸಿಕೊಂಡು ಬಂದ ತಪಶ್ಯಕ್ತಿ ಬಿತ್ತಿ ಬೆಳೆಯೋದು ಆಗಲಿಲ್ಲ. ನೂರು ಮಠ, ಸಾವಿರ ವೃಂದಾವನ ಕಟ್ಟ ಈ ಉರಿಯನ್ನು ದಮನ ಮಾಡಬೇಕು, ಅಂದರ ಸಾಧ್ಯ ಆಗಿಲ್ಲ” (ಪುಟ ೬೮), ಈ ಮಾತುಗಳು ಶೀನನ ಬಂಡಾಯದ ಮಿತಿಯನ್ನು ತೋರಿಸುತ್ತವೆ, ಆತನ ಸಿಟ್ಟೆಲ್ಲ ಮಡಿ ಮೈಲಿಗೆಗಳ ಸಂಕೋಚಗಳಲ್ಲಿ, ಸಂಪ್ರದಾಯದ ಕಟ್ಟು ಕಟ್ಟಳೆಗಳಲ್ಲಿ ಸಿಕ್ಕಿಬಿದ್ದಿರುವ ಮಠದ ಸ್ಥಿತಿಯ ಬಗ್ಗೆಯೇ ಹೊರತು ಮಠದ ಬಗ್ಗೆ ಅಲ್ಲ.
ಮಠದ ಹಿಂದಿರುವ ಶ್ರದ್ಧೆ ಪ್ರತಿಯೊಬ್ಬನಿಗೂ ಅವನವನ ಮಟ್ಟಿಗೆ ತೀರ ವೈಯಕ್ತಿಕ ವಾದದ್ದಿರಬಹುದು. ಆದರೆ ಮಠ ಒಂದು ಸಾಮಾಜಿಕ ಸಂಸ್ಥೆ, ಈ ಅರ್ಥದಲ್ಲೇ ಧರ್ಮ, ಶ್ರದ್ಧೆ, ನಂಬಿಕೆ ಇವು ಎಷ್ಟು ವೈಯಕ್ತಿಕವೋ ಅಷ್ಟೇ ಸಾರ್ವತ್ರಿಕವಾದವು ಕೂಡ, ಆದರೆ ನಾಟಕದಲ್ಲಿ ಮಠದ ಸಾರ್ವತ್ರಿಕತೆಗೆ ಸಾಮಾಜಿಕತೆಗೆ, ನಾಟಕದ ಪ್ರಾರಂಭದಲ್ಲಿ ಬರುವ ಭಕ್ತಾದಿಗಳು ಮಾತ್ರ ಸಾಕ್ಷಿಯಾಗಿದ್ದಾರೆ; ಮತ್ತು ಇವರ ವೇಷ ಭೂಷಣಗಳ ವಿವರಗಳಿಂದ ಮಾತ್ರ ನಾಟಕದ ಕಾಲ ವರ್ತಮಾನವೆಂದು ಗುರುತಿಸಬಹುದಾಗಿದೆ, ಇವರಿಗೆ ನಾಟಕದ ಕ್ರಿಯೆಯಲ್ಲಿ ಪಾಲಿಲ್ಲ. ಮಠದಂತಹ ಶ್ರದ್ಧಾಕೇಂದ್ರ ವೊಂದು ಇವರಿಗೆ ಅನಿವಾರ್ಯ : ಇರುವ ಮಠದಲ್ಲಿ ನಂಬಿಕೆ ಹೋಗಬೇಕಾದರೆ ಇನ್ನೊಂದು ಮಠವೇ ಬೇಕು ಎಂಬ ಧ್ವನಿ ನಾಟಕದಲ್ಲಿದೆ. ಉದಾ: “ಮಠ ಧಮ್ಮಗಳ ಸಂಬಂಧ ಶಬ್ದಾರ್ಥಗಳ ಸಂಬಂಧದಂತೆ ಅವಿಭಾಜ್ಯವಾದದ್ದು, ಅವುಗಳ ವಿಘಟನೆ ಆದಾಗಲೆಲ್ಲ ಅನರ್ಥ ಉಂಟಾಗಬೇಕು, ಅದಕ್ಕಾಗಿಯೇ ಮಠ ನಿಲ್ಲಬೇಕು, ಅದನ್ನು ನಿಲ್ಲಿಸುವವರು ಬೇಕು……..” (ಪುಟ ೩೫), ಇದು ಗುಂಪಿನ ಮಾತು, (ಭಕ್ತಾದಿಗಳ) ಗುಂಪಿನ ಮಾತುಗಳು ನಾಟಕದ ಪ್ರಾರಂಭದಲ್ಲಿ, ಯಾವುದೇ ಮೂಢನಂಬಿಕೆಗಳ ಭಕ್ತಾದಿಗಳ ಗುಂಪು ಶ್ರದ್ದೆಯನ್ನು ಪ್ರಶ್ನಿಸುವ ಎದೆಗಾರನಿಗೆ ತೋರಿಸುವ ಪ್ರತಿಕ್ರಿಯೆಯನ್ನೇ ತೋರಿಸುತ್ತದೆ. (ಸಂದರ್ಭ-ಮೈಲಿಗೆಯಲ್ಲಿರುವ ಭ್ರಮಿಷ್ಠ ನಾರಾಯಣ, ಆರಾಧನೆಯ ದಿನ ವೃಂದಾವನದಲ್ಲಿದ್ದ ಮಡಿ ಬ್ರಾಹ್ಮಣರ ಸನಿಹಕ್ಕೆ ಹೋಗಿ ವೃಂದಾವನದ ಸತ್ಯತೆಯನ್ನ ಸಂಸ್ಕೃತದಲ್ಲಿ ಪ್ರಶ್ನಿಸುವುದು, (ಪುಟ ೧೧, ೧೨೭), ಆದರೆ ಒಮ್ಮಿಂದೊಮ್ಮೆಗೆ ಗುಂಪಿನ ಮಾತುಗಳು ಕಾವ್ಯಮಯವಾದ ಅತಿ ಶೈಲೀಕೃತಭಾಷೆಯಲ್ಲಿ ಮಠಕ್ಕೆ ಜೋತುಬಿದ್ದ ಜನ ಮಠದ ಬಗ್ಗೆ ತಳಮಳ ಹೊಂದಿರುವುದನ್ನು ಹೇಳ ತೊಡಗುತ್ತದೆ. ಈ ಹಠಾತ್ stylization ನಿಂದಾಗಿ ನಾಟಕದ ಕಾಲ ವರ್ತಮಾನವೇ ಆಗಿದ್ದರೂ ಅದು ಓದುಗನಿಂದ ಕಾಲ ದೇಶಗಳಲ್ಲಿ ಬಹುದೂರದಲ್ಲಿ ನಡೆಯುತ್ತಿರುವಂತೆ ಭಾಸವಾಗುತ್ತದೆ, ಮಠವನ್ನು ಒಂದು ‘ಸಾಮಾಜಿಕ ಸಂಸ್ಥೆ’ ಎಂದು ತಿಳಿಯದೆ ಕೇವಲ ಅದರಷ್ಟಕ್ಕೆ ಅದು ಒಂದು ಅಮೂರ್ತ ಶ್ರದ್ದೆಯ ಪ್ರತೀಕ ಎಂದು ತಿಳಿದದ್ದರಿಂದ ಹೀಗಾಗುತ್ತದೆ ಎನಿಸುತ್ತದೆ. ಇಲ್ಲದಿದ್ದರೆ ಜನಸಮೂಹವನ್ನೇ ಪ್ರತಿನಿಧಿಸುವ ಗುಂಪಿನ ಮಾತುಗಳು ಅಷ್ಟು ಶೈಲೀಕೃತವಾಗಬೇಕಾದ್ದಿರಲಿಲ್ಲ. ಇದು ಕೇವಲ ಭಾಷೆ, ಶೈಲಿಗಳಿಗೆ ಸಂಬಂಧಿಸಿದ ಪ್ರಶ್ನೆಯಲ್ಲ. ನಾಟಕದ ಧೋರಣೆಯೇ ಗುಂಪಿನ ಮಾತುಗಳ ಕಾವ್ಯಮಯತೆಯನ್ನು ಅನಿವಾರ್ಯವನ್ನಾಗಿ ಮಾಡಿದೆ, ಬಿ. ವಿ. ಕಾರಂತರ ನಿರ್ದೆಶನದಲ್ಲಿ ನಡೆದ ಈ ನಾಟಕದ ರಂಗಪ್ರಯೋಗವನ್ನು (ಉಡುಪಿಯ ಎಂ. ಜಿ. ಎಂ. ಕಾಲೇಜಿನಲ್ಲಿ ಬೆಂಗಳೂರಿನ ಶಕಶೈಲೂಷರು ತಾ, ೧೩-೩-೭೫ ರಂದು ನಡೆಸಿದ್ದು.) ನೋಡಿದಾಗ ನನ್ನ ಸಂದೇಹ ಇನ್ನಷ್ಟು ದೃಢವಾಯಿತು. ರಂಗಭೂಮಿಯ ಮೇಲೆ ಸೊಗಸಾಗಿ ಭರ್ಜರಿಯಾಗಿ ಆಡಲ್ಪಟ್ಟ ನಾಟಕ ಕೊಟ್ಟ ಅನುಭವ ಗಾಢವಾದದ್ದು, ಆದರೆ ಇಡೀ ನಾಟಕಕ್ಕೆ ನಾಟಕವೇ (ನಾಟಕದ ಪ್ರಾರಂಭದ ದೃಶ್ಯ ಮತ್ತು ಹಿರಿಯ ಸ್ವಾಮಿಗಳು ತಮ್ಮ ಅವಸಾನ ಕಾಲದಲ್ಲಿ ಪಟ್ಟ ಪಾಡು ಚಿತ್ರಿಸುವ ದೃಶ್ಯ ಇವುಗಳನ್ನು ಹೊರತು ಪಡಿಸಿ) ಶೈಲೀಕೃತವಾಗಿಬಿಟ್ಟಿತ್ತು; ಈ ನಾಟಕದ ವಸ್ತು ವರ್ತಮಾನದ ಒಂದು ಸ್ಥಿತಿಯ ಕುರಿತದ್ದು ಎಂದು ಕೂಡ ಅನ್ನಿಸುತ್ತಿರಲಿಲ್ಲ. ಪುರಂದರದಾಸರ ಹಾಡುಗಳ ವ್ಯಂಗ್ಯವಾಗಲೀ, ಭಕ್ತಾದಿಗಳ ಗುಂಪಿನ ಬದಲು ಕೀರ್ತನೆ ದಾಸರನ್ನು ತಂದದ್ದಾಗಲೀ ಇದನ್ನು ಸರಿಪಡಿಸಲಿಲ್ಲ.
ನಾಟಕದ ದ್ವಂದ್ವಗಳನ್ನು ಸಂಘರ್ಷವನ್ನು ಆಡಿ ತೋರಿಸುವವರು ನಾಲ್ಕೇ ಜನ – ಹಿರಿಯ ಸ್ವಾಮಿಗಳು, ಕಿರಿಯ ಸ್ವಾಮಿಯಾದ ನಾರಾಯಣ, ಕೃಷ್ಣಾಚಾರ್ಯ ಮತ್ತು ಆಳಪುಡಿ ಶೀನ, ಸಾತ್ವಿಕರಾಗಿದ್ದ ಆದರೆ ಮಠದಿಂದ ದೂರವಿರುವ ಹಿರೇ ಆಚಾರ್ಯರೂ ಈ ಸಂಘರ್ಷದಿಂದ ಹೊರತು, ಪೀಠದ ವಿರುದ್ದ ನಾರಾಯಣ ಮತ್ತು ಆಳಪುಡಿ ಶೀನರದ್ದು ಕೇವಲ ವೈಯಕ್ತಿಕ ಬಂಡಾಯ, ವರ್ತಮಾನದಲ್ಲಿ ಮಠವೊಂದರ ಅಗತ್ಯದ ಬಗ್ಗೆ ಅವರಿಗೆ ಸಂಶಯಗಳಿಲ್ಲ, ಸುಳ್ಳಿನ ಮೇಲೆ ನಿಂತ ಮಠ ಕೆಡವಬೇಕೆನ್ನುವ ನಾರಾಯಣನಲ್ಲಿ ಕೃಷ್ಣಾಚಾರ್ಯನ “………ಇನ್ನ ಈ ನಂಬಿಗಿ ಹೋಗಬೇಕಾದರ ಅವರಿಗೆ ಇನ್ನೊಂದು ನಂಬಿಗೀನ ಬೇಕು ಹೊರತು ಮತ್ತೇನೂ ಅಲ್ಲ. ಹಾಂಗ ಈ ಮಠ ಹೋಗಬೇಕಾದರೂ ಇನ್ನೊಂದು ಮಠ ಬೇಕು……” ಎಂಬ ವಾದಕ್ಕೆ ಉತ್ತರವಿಲ್ಲ. ಕೃಷ್ಣಾಚಾರ್ಯ ಪ್ರತಿನಿಧಿಸುವ ಮಠದ ಸಂಪ್ರದಾಯದ ಮೌಲ್ಯಗಳೆದುರು ನಾರಾಯಣ “ನಿಸ್ಸತ್ವ, ನಿರ್ವಿಯ್ರ’ (ನಾಟಕಕಾರರದ್ದೇ ಮಾತು, ಪುಟ ೮೫), ಕೃಷ್ಣಾಚಾರ್ಯ ಹಿರೇ ಆಚಾರ್ಯರಂತಹ ಸಾತ್ವಿಕ ಜೀವವಲ್ಲ. ಆದರೆ ಆತ ಒಂದು ವ್ಯವಸ್ಥೆಯ ಪೀಠದ ಅವಿಚ್ಛಿನ್ನತೆಯನ್ನು ಕಾದುಕೊಂಡು ಬರುವ ಹೊಣೆ ಹೊತ್ತವನು; ಸಂಪ್ರದಾಯದ ಪ್ರತೀಕ, ಕೃಷ್ಣಾಚಾರ್ಯನಲ್ಲದಿದ್ದರೆ ಅವನಂತಹ ಇನ್ನೊಬ್ಬ ಈ ವ್ಯವಸ್ಥೆಗೆ ಬೇಕು.
ಪೀಠದ ಉತ್ತರಾಧಿಕಾರಿಯನ್ನು ನಿರ್ಣಯಿಸುವ ಹಕ್ಕನ್ನು ಆತ ಜುಲುಮೆಯಿಂದ ತನ್ನ ಇಟ್ಟುಕೊಳ್ಳದಿದ್ದರೆ, ಪೀಠ ಕಬಳಿಸಲು ನರಸಿಂಹಾಚಾರ್ಯರು, ವಿಷ್ಣುಪಾದಾಚಾರ್ಯರು, ಬೋಧರಾಯಾಚಾರ್ಯರಂತಹ ಹದ್ದಿನ ಹಾಗೆ ಕಾದಿರುವ ಇತರ ಶ್ವಪಚ ಬ್ರಾಹ್ಮಣರಿದ್ದಾರೆ, ಹೀಗೆ ಶ್ರದ್ದೆ ಪರಂಪರೆ, ಮಠ, ಸಂಪ್ರದಾಯ ಈ ದ್ವಂದ್ವ ಸಮೃದ್ಧಿಯ ಪ್ರಶ್ನೆಗಳನ್ನು ಕೇವಲ ವೈಯಕ್ತಿಕ ನೆಲೆಯಲ್ಲಿ, ಒಂದು ಸೀಮಿತ ಕಕ್ಷೆಯೊಳಗೆ ಪ್ರತಿಭಟಿಸುವ ದುರ್ಬಲ ವ್ಯಕ್ತಿಗಳು (ನಾರಾಯಣ, ಆಳಪುಡಿ ಶೀನ, ಸ್ವಲ್ಪ ಮಟ್ಟಿಗೆ ಹಿರೇಸ್ವಾಮಿಗಳು.) ಮತ್ತು ವ್ಯವಸ್ಥೆ ಇವುಗಳ ನಡುವಿನ ಸಂಘರ್ಷವನ್ನಾಗಿ ಮಾಡಿದ್ದರಿಂದ, ನಾಟಕ ಸಂಘರ್ಷದ ನಿಜಸ್ವರೂಪವನ್ನು ಮರೆಮಾಡುತ್ತದೆ. ಈ ಕಾರಣದಿಂದ ನಾಟಕದ ಕಡೆಯ ಭಾಗದಲ್ಲಿ ನಾರಾಯಣ ಕೃಷ್ಣಾಚಾರ್ಯನೆದುರು ನಿರ್ವಿಣ್ಣನಾಗಿ, “……ನನ್ನ ಯಜ್ಞಪಶುವನ್ನ ಮಾಡಿ ಬಲಿತೆಗೊಂಡು ನೀವು ಗೆದ್ದಿರಲ್ಲ ಸ್ವಾಮಿ” ಎಂದಾಗ, ಕೃಷ್ಣ ಹೇಳುವ, “ಏನು ಗೆದ್ದೆ ನಾನು ನಾರಾಯಣ ! ನಾ ಸೋತದ್ದು ನಿನಗೆ ಕಾಣಿಸೋದಿಲ್ಲ; ನಿನಗ ಯಾಕ ಯಾರಿಗೂ ಕಾಣಿಸೂದಿಲ್ಲ……ಈ ಮೈತುಂಬ ಮುಚ್ಚಿದ ಶಾಲಿನ ಮರಿಯೊಳಗ ಅದು ಅಡಗೇದ……”(ಪುಟ ೮೪, ೮೫) ಎನ್ನುವ ಮಾತು ಅಸಂಬದ್ದವಾಗುತ್ತದೆ. ಯಾಕೆಂದರೆ ನಾಟಕದ ಒಳಗೆ ಕೃಷ್ಣಾಚಾರ್ಯ ಹೇಳಿಕೊಳ್ಳುವ ತನ್ನ ಸೋಲಿಗೆ ದೃಷ್ಟಾಂತಗಳಿಲ್ಲ. ನಾಟಕದ ಕೊನೆಯಲ್ಲಿ ಬರುವ ಭಕ್ತ ಮಹಿಳೆಯರ ಸಂಭಾಷಣೆ ಈ ಅಸಂಬದ್ಧತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ, ಮಠದ ಪ್ರತೀಕವಾದ ಕೃಷ್ಣಾಚಾರ್ಯನ ಸೋಲಿನ ನಂತರವೂ ಮಠ ಗಟ್ಟಿಯಾಗಿಯೇ ಉಳಿದಿದೆ ಎಂಬ ಭಾವ ಆ ಸಂಭಾಷಣೆಯಲ್ಲಿದೆ. ಉದ್ದಕ್ಕೂ ಇದೇ ನಾಟಕದ dominant ಧ್ವನಿ ಕೂಡಾ, ಆದರೆ ಇಂತಹ ಒಂದು ಹತಾಶ ಸಿದ್ಧಾಂತಕ್ಕೆ ಕಾರಣವಾದ ಸಂಘರ್ಷವೇ ನಾಟಕದಲ್ಲಿ ದುರ್ಬಲವಾಗಿರುವುದರಿಂದ, ಅ೦ದರೆ ಶ್ರದ್ದೆ ಸಂಪ್ರದಾಯಗಳಿಗಿರುವ ಸಾಮಾಜಿಕ ಸ್ವರೂಪವನ್ನು ಗಣನೆಗೆ ತೆಗೆದುಕೊಳ್ಳದೆ ಅದು ಕೇವಲ ದುರ್ಬಲ ವ್ಯಕ್ತಿಗಳು ಮತ್ತು ಮಠಗಳ ನಡುವಿನ ಸಂಘರ್ಷವಾದ್ದರಿಂದ ನಾಟಕದ ಧೋರಣೆಗಳು, ತತ್ವಗಳು ಪ್ರಶ್ನಾರ್ಹವಾಗುತ್ತವೆ, “ಯಾವ ಧರ್ಮದ ಟೀಕೆಯೂ (ಆ ಧರ್ಮಕ್ಕೆ ಆವರಣ ಒದಗಿಸುವ) ಸಮಾಜದ ಟೀಕೆಯಿಲ್ಲದೆ ಸಂಪೂರ್ಣವಾಗಲಾರದು ; (ಆದ್ದ ರಿಂದಲೇ) ಧರ್ಮದ ವಿರುದ್ಧ ಹೋರಾಟವೆಂದರೆ (ಸದ್ಯದ) ಜಗತ್ತಿನ ಸ್ಥಿತಿಯ ವಿರುದ್ಧ ಹೋರಾಟ ಕೂಡ” ಎನ್ನುವ ಮಾರ್ಕ್ಸ್‌ನ ಮಾತುಗಳಿಂದ ನನ್ನ ಈ ನಿಲುವನ್ನು ಸಮರ್ಥಿಸಿಕೊಳ್ಳುತ್ತೇನೆ. ನಾಟಕದ ಪುಟ ೭೦ ರಲ್ಲಿ ರಕ್ಷಣೆಯ ವ್ಯವಸ್ಥೆಯೊಳಗಿಂದಲೇ ವಿನಾಶದ ಸಿಡಿಮದ್ದು ತಯಾರಾಗುವ, ಪ್ರತಿಯೊಂದು ವ್ಯವಸ್ಥೆಯ ತನ್ನ ಮೃತ್ಯುವನ್ನು ತಾನೇ ಹುಟ್ಟಿಸಿಕೊಳ್ಳುವ ಬದುಕಿನ ಅಡಿವಿಯೊಳಗೇ ಪ್ರಳಯದ ಕಸ ಹುಟ್ಟುವ ಮಾತು ಬರುತ್ತದೆ, ಆದರೆ ಈ ಕ್ರಾಂತಿಕಾರಕ ಸ್ಥಿತ್ಯಂತರಕ್ಕೆ ನಾಟಕದ ಒಳಗೆ ಯಾವ ಪುರಾವೆಯೂ ಇಲ್ಲ, ಮಾರ್ಕ್ಸ್ ಕೂಡ ಪ್ರತಿಯೊಂದು ವ್ಯವಸ್ಥೆಯೂ ತನ್ನ ವಿನಾಶದ ಬೀಜಗಳನ್ನೂ ಹೊಸ ವ್ಯವಸ್ಥೆಯೊಂದರ ಹುಟ್ಟನ್ನೂ ತನ್ನ ಗರ್ಭದಲ್ಲೇ ಧರಿಸಿಕೊಂಡಿರುವುದರ ಮಾತು ಹೇಳುತ್ತಾನೆ. ಹೊಸ ವ್ಯವಸ್ಥೆಯ ಮೌಲ್ಯಗಳ ಬಗ್ಗೆ ಆತನ ಕಲ್ಪನೆಗಳೇನು ಎಂಬುದು ನಮಗೆ ಚೆನ್ನಾಗಿ ಗೊತ್ತು, ಈ ನಾಟಕಕಾರರ ಹೊಸ ವ್ಯವಸ್ಥೆಯ ಕಲ್ಪನೆಗಳೇನು ? ಹಿರೇ ಆಚಾರ್ಯರಂತಹ ಸಾತ್ವಿಕರು ಪೀಠವನ್ನು ಏರು ವಂತಹ ಸ್ಥಿತಿಯೆ ? ಸ್ವಾರ್ಥಿ ಲೌಕಿಕ ಬ್ರಾಹ್ಮಣರಿಂದ ಮುಕ್ತವಾದ ಮಠವೆ ? ಅಥವಾ ಮುದುಕರನ್ನು ಮಾತ್ರ ಆಕರ್ಷಿಸುವ ಸುತ್ತಿ ಸುತ್ತಿ ಪಾದೆಗಲ್ಲು ಸವೆದುಹೋಗುವ ಪ್ರದಕ್ಷಿಣೆಗಳ ರೂಢ ಆಚಾರಗಳಿಲ್ಲದ ಮಠವೆ ? ನಾಟಕದಲ್ಲಿ ನನಗೆ ಉತ್ತರ ಸಿಕ್ಕದ ಪ್ರಶ್ನೆ ಇದು.
ಧಾರ‍್ಮಿಕ ಶೃದ್ಧೆ, ನಂಬಿಕೆಗಳ ಸಾಮಾಜಿಕ ಸ್ವರೂಪವನ್ನು ನಾಟಕ ಕಡೆಗಣಿಸುತ್ತದೆ ಎಂದೆ. ಇದನ್ನು ಸ್ವಲ್ಪ ವಿವರಿಸಬಹುದೋ ಏನೋ ನಾಟಕ ಮಠವನ್ನು, ಮಠದ ಹಿಂದಿರುವ ಶ್ರದ್ಧೆಯನ್ನು ನಮ್ಮ ಬದುಕನ್ನು ಸಮಗ್ರ ಕಟ್ಟುವ, ಅರ್ಥಪೂರ್ಣವನ್ನಾಗಿ ಮಾಡುವ ಒಂದು organic integrated entity ಎಂದು ಭಾವಿಸಿದೆ. ಉದಾಹರಣೆಗೆ ಗುಂಪಿನ ಈ ಮಾತುಗಳನ್ನು ನೋಡಿರಿ,-“ಆದರೂ ನಮಗೆ ಬದುಕಬೇಕು; ಅದನ್ನು ಎತ್ತಿ ಹಿಡಿಯಲು ಧರ್ಮ ಬೇಕು, ವೃಂದಾವನದ ಸುತ್ತ ಪ್ರದಕ್ಷಿಣೆ ಹಾಕಬೇಕು, ಪಾದಗಲ್ಲು ಸವೆದುಹೋಗಬೇಕು, ನಮಗಿಂತ ಪವಿತ್ರವಾದದ್ದು, ಎತ್ತರವಾದದ್ದು, ಅರ್ಥಪೂರ್ಣವಾದದ್ದು ಇನ್ನೊಂದು ಇರಬೇಕು ಅಂತಲೇ ನಮಗೆ ಆಧಾರ ನಂಬಿಕೆ, ಗುಡಿಯಲ್ಲಿ ಆಚಾರ್ಯರು ಪುರಾಣ ಹೇಳುತ್ತಿರುವಾಗ ಅವರ ರಾಗದ ಪೆಟ್ಟಿಗೆಯ ಸ್ವರ ಪುರಾಣದ ಶಬ್ದಗಳೊಡನೆ ಕೂಡಿಕೊಂಡು ವಾತಾವರಣ ಸೃಷ್ಟಿಸಬೇಕು, ಪ್ರತಿ ಕಂಬಕ್ಕೆ ಒಬ್ಬೊಬ್ಬ ವಿಧವೆ, ಕೈಯಲ್ಲಿ ಹೂಬತ್ತಿ ಹಿಂಜಿದ ಹತ್ತಿ ಹುರಿಗೊಂಡು ಬತ್ತಿಯಾಗಿ ಕೈಯಲ್ಲಿ ಆಡಬೇಕು, ಪುರಾಣದಲ್ಲಿ ಹೇಳಿದ್ದು ಅವರಿಗೆ ತಿಳಿಯುವುದಿಲ್ಲ, ಆದರೆ ಇದು ನಂಬಿಕೆಯ ಚಿತ್ರ………….. ನಮಗೆ ರೂಪವಿಲ್ಲ, ಆಕೃತಿಯಿಲ್ಲ, ವ್ಯಕ್ತಿತ್ವವಿಲ್ಲ, ಆದರೆ ಇದೇ ಸಮೂಹಕ್ಕೆ ಆಕಾರವಿದೆ. ನಮಗೆ ಹೆಸರಿಲ್ಲ, ದೆಶೆಯಿಲ್ಲ. ಮುಖದ ಆಕೃತಿ ಮಸುಕಾಗುತ್ತದೆ. ಸತ್ತವರ ನೆರಳಿನಲ್ಲಿ ನಡೆಯುತ್ತೇವೆ……..ಋತುಮಾನಕ್ಕೆ ತಕ್ಕ ಹಾಗೆ ನಮ್ಮ ಬದುಕು, ಪೂಜೆ, ಉತ್ಸವ, ಜಾತ್ರೆ, ಆಟ ನೋಟಗಳಲ್ಲಿ ನಮ್ಮ ಬಾಳಿಗೊಂದು ಗೆಲುವು ಬರಬೇಕು.” ಮಠ ತನ್ನ ಸುಸ್ಥಿತಿಯಲ್ಲಿ ಒಟ್ಟು ಜನತೆಯ ಶ್ರದ್ದಾ ಕೇಂದ್ರ ಎಂದು ಲೇಖಕರು ಭಾವಿಸುವುದರಿಂದ, ಮಠದ, ಶ್ರದ್ದೆಯ ವಿಘಟನೆ ಲೇಖಕ ರಿಗೆ ಅನರ್ಥವಾಗಿ ಕಾಣಿಸುತ್ತದೆ. ಉದಾಹರಣೆಗೆ ; “……..ಬಿಂದುವಿನ ಸುತ್ತ ಪರಿಧಿ, ಅದರ ಆಚೆ ಇನ್ನೊಂದು ಪರಿಧಿ ಅದರ ಆಚೆ ಮತ್ತೊಂದು, ಆದರೆ ಈ ತರಂಗಲೀಲೆ ಗೆಲ್ಲ ಒಂದೇ ಕೇಂದ್ರ……….ಆದರೆ ಕೇಂದ್ರ ಹೊಯ್ದಾಡಿದರೆ ಬಂತು ಸಂಕಟ, ಅದಕ್ಕಾಗಿ ಕೇಂದ್ರದ ಕಡೆಗೆ ನಮ್ಮ ಲಕ್ಷ, ಅದು ಗಟ್ಟಿಯಾಗಿರಬೇಕು, ಸ್ಥಿರವಾಗಿರಬೇಕು,
ಅಲುಗಾಡದಂತಿರಬೇಕು, ಅಂದರೆ ನಾವು ಬದುಕಿಯೇವು, ನಮ್ಮ ಬಾಳಿನ ಚಲನೆಗೆ ಒಂದು ಅರ್ಥ ಬಂದೀತು, ಅದಕ್ಕೆ ವೃಂದಾವನ ಬೇಕು, ಅದನ್ನು ಕಟ್ಟಬೇಕು” (ಪುಟ ೫೨), ಆದರೆ ಕ್ರಿಶ್ಚಿಯನ್ನರ ಚರ್ಚ್‌ನಂತೆ, ಮುಸ್ಲಿಮರ ಮಸೀದಿಯಂತೆ, ಮಠ ಎಲ್ಲ ಹಿಂದೂಗಳಿಗೂ ಒಂದೇ ಅರ್ಥ, ಒಂದೇ ಮಹತ್ವ ಉಳ್ಳ ಸಂಸ್ಥೆಯೆ ? ಈ ದೇಶದ ಜಾತಿ ವ್ಯವಸ್ಥೆಯ ಸತ್ಯ ತಿಳಿಯದವರು ಅಥವಾ ಮರೆಮಾಚುವವರು ಮಾತ್ರ ಹೀಗೆ ಭಾವಿಸ ಬಲ್ಲರು, ವೇದ, ಉಪನಿಷತ್ತು, ಗೀತೆ, ತ್ರಿಮತಾಚಾರ್ಯರ ಬೋಧನೆಗಳು, Bhavan’s Journal, ಡಾ. ಸರ್ವಪಳ್ಳಿ ರಾಧಾಕೃಷ್ಣನ್‌ರ ಗ್ರಂಥಗಳು–ಇವು ಪ್ರತಿ ಪಾದಿಸುವ ಹಿಂದೂ ಧರ್ಮದ ತತ್ವಗಳಿಗೂ ಹೊಲೆಯನೊಬ್ಬನ ಮೂಢನಂಬಿಕೆಗಳಿಗೂ ಇರುವ ವ್ಯತ್ಯಾಸವನ್ನೂ, ಈ ಎರಡು ತುದಿಗಳ ನಡುವೆ ಇರುವ ಹಿಂದೂ ಧಾರ್ಮಿಕ ನಂಬಿಕೆಯ ಅಸಂಖ್ಯ ವಿನ್ಯಾಸಗಳನ್ನೂ ಗೌಣವೆಂದೋ, unity in diversity ಎಂದೂ ತಿಳಿಯುವವರಿಗೆ ಈ ದೇಶದ ಚರಿತ್ರೆಯಲ್ಲಿ ಆಸ್ತಿ, ಜಾತಿ, ವರ್ಗ, ನಂಬಿಕೆ ಸದಾ ಒಂದು ಇನ್ನೊಂದನ್ನು ರೂಪಿಸುತ್ತ ಹೋದ, ಮನುಷ್ಯ ಸಂಬಂಧಗಳನ್ನು ವಿಕೃತಗೊಳಿಸುತ್ತ ಹೋದ ದುರಂತದ ಕಥೆ ಗೊತ್ತಿಲ್ಲ, ಅಥವಾ ಅವರು ನಾಲ್ಕನೆಯ ದರ್ಜೆಯ ಹಿಂದೂ ಮತ ಪ್ರಚಾರಕರು, ವಸ್ತುನಿಷ್ಟವಾಗಿ, ಹಿಂದೂ ನಂಬಿಕೆಗಳನ್ನೂ, ಶ್ರದ್ಧಯನ್ನೂ, ಅವಕ್ಕೆ ಸಂಬಂಧಿಸಿದ ಉಳಿದ ವಿಷಯಗಳನ್ನೂ ಕಾಣಬಲ್ಲ ಲೇಖಕ ನಂಬಿಕೆಯ ಚಿತ್ರವನ್ನು ಹೇಗೆ ಮುಂದಿಡಬಲ್ಲ ಎಂಬುದಕ್ಕೆ ನನಗೆ ನಮ್ಮ ಸಾಹಿತ್ಯದ ಒಂದು ಅದ್ಭುತ ಕೃತಿ ಎನ್ನಿಸುವ ಚೋಮನದುಡಿ ಉದಾಹರಣೆಯಾಗಿ ಕಾಣಿಸುತ್ತದೆ, ಅದರ ಅಂತಹ ವಿಶೇಷ ವಿವರಣೆ ಏನೂ ಬೇಕಿಲ್ಲದ ಒಂದೆರಡು ದೃಷ್ಟಾಂತಗಳನ್ನು ಕೊಡುತ್ತೇನೆ.
ಮೊದಲನೆಯದು ಚೋಮನ ಹಳ್ಳಿಯ ಪಕ್ಕದ ಊರಿನ ಜಾತ್ರೆಗೆ ಹೋಗಿಬಂದವರ ಪ್ರತಿಕ್ರಿಯೆಗಳ ವಿವರ, “……………………….ದಾರಿಯುದ್ದಕ್ಕೂ ಆ ಕಥೆ ಈ ಕಥೆಯೆಂದು ಹೇಳುತ್ತ ನಡೆದು ಸಾಗಿದರು, ‘ಇವತ್ತು ಅವನ ವಾದ್ಯ ಬಹಳ ಚೆನ್ನಾಗಿತ್ತು ; ಉತ್ಸವ ಮೂರ್ತಿಯನ್ನು ಹೊತ್ತು ಕುಣಿದದ್ದು ತೀರ ವಿಶೇಷವಾಗಿತ್ತು ; ಆ ಮುದಿ ಪೂಜಾರಿಯು ಮಂತ್ರದಲ್ಲಿ ಮುಕ್ಕಾಲು ಪಾಲು ತಿಂದ ಹಾಗೆಯೇ ಕಾಣುತ್ತದೆ ಎಂಬೆಲ್ಲ ಪುರಾಣಗಳನ್ನು ಕೆಲವರು ಬಿಚ್ಚಿದರು. ಅಷ್ಟು ನಿಕಟ ಪರಿಚಯವಿಲ್ಲದವರು ‘ಇವತ್ತು ಇಡೀ ಸಂತೆಯಲ್ಲಿ ಒಳ್ಳೆಯ ಹುರಿಯಕ್ಕಿ ಇಲ್ಲವೆಂದರೆ…………… ಎಂಬಿವೇ ನೂರಾರು ಸಂಗತಿಗಳನ್ನು ಮಾತನಾಡುತ್ತ ಸೂಡಿಯ ಬೆಳಕಿನಲ್ಲಿ ಸಾಗಿದರು.” (ಪುಟ ೪).
ಕಾದಂಬರಿಯ ಮೊದಲ ಪುಟಗಳಲ್ಲಿ ಬರುವ ಈ ವಿವರ ಕಾದಂಬರಿಯ ದುರಂತಕ್ಕೆ ಓದುಗನನ್ನು ಸಿದ್ಧಗೊಳಿಸುತ್ತದೆ, ಹೊಲೆಯನಾದ ಚೋಮ ಬೇಸಾಯಗಾರನಾಗುವಂತಿಲ್ಲ, ಆದರೆ ಸಾಯುವುದರೊಳಗೆ ಒಮ್ಮೆ ನೇಗಿಲು ಹಿಡಿಯಬೇಕೆಂದು ಚೋಮನ ಆಶೆ, ಚೋಮ ಅದನ್ನು ತನ್ನ ಧನಿ ಸಂಕಪ್ಪಯ್ಯನವರಲ್ಲಿ ತೋಡಿಕೊಂಡರೂ ಉಪಯೋಗವಿಲ್ಲ, ಸಂಕಪ್ಪಯ್ಯನವರಿಗೇನೋ ಚೋಮನಿಗೆ ಒಂದು ತುಂಡು ಹೊಲ ಕೊಟ್ಟರಾದೀತೆಂದು ಇದೆ. ಆದರೆ ಅವರ ತಾಯಿ ಬಿಡುವಂತಿಲ್ಲ, “………………ಅದೇ ವಿಷಯವನ್ನು ಪ್ರಸ್ತಾಪಿಸಲು ಒಳಕ್ಕೆ ತಮ್ಮ ತಾಯಿಯ ಬಳಿಗೆ ಹೋದರು………………….ಧನಿಗಳು ತಿರುಗಿ ಬಂದು ‘ಚೋಮ, ಇದುವರೆಗೆ ನಮ್ಮ ಹಿರಿಯರು ನಿಮ್ಮವರಿಗೆ ಗೇಣಿಗೆ ಗದ್ದೆ ಕೊಟ್ಟದ್ದಿಲ್ಲ ಈಗ ಹಾಗೆ ಕೊಡಲಿಕ್ಕೆ ಬರುವ ಹಾಗಿಲ್ಲ’ ಅಂದರು, ಆ ಮಾತಿಗೆ ಪ್ರತಿ ಮಾತಿಲ್ಲ. ವಿಷಯ ಅಲ್ಲಿಗೆ ಮುಗಿಯಿತು, ಮನೆಯೊಳಗಿಂದ ಸಂಕಪ್ಪಯ್ಯನವರ ತಾಯಿ “ಅಬ್ಬಾ ! ಈ ಹೊಲೆಯರಿಗೆ ಬಂದ ಸೊಕ್ಕೇ” ಎಂದು ಶಪಿಸುತ್ತಿದ್ದಳು (ಪುಟ ೨೨).
ಸಂಕಪ್ಪಯ್ಯನವರು ಹೊಲ ಕೊಟ್ಟರೂ ಊರವರು ಅದನ್ನು ಒಪ್ಪಲಿಕ್ಕಿಲ್ಲ. “ಅವರು (ಹೊಲೆಯರು) ಬೇಸಾಯಗಾರರಾಗಿ ಸ್ವತಂತ್ರರಾದರೆ ನಾಳೆ ನಾವು ನೇಗಿಲು ಹಿಡಿದರೆ ಸರಿ’ ಎಂದು ತಿಳಿಯಬಹುದು ಜನರು.” (ಪುಟ ೪೧), ಕಾದಂಬರಿಯ ಈ ವಿವರ ಜಾತಿ ವರ್ಗ ಭೇದಗಳುಳ್ಳ ಒಂದು ವ್ಯವಸ್ಥೆಯಲ್ಲಿ ವ್ಯಕ್ತಿಯೊಬ್ಬನ ಒಳ್ಳೆಯತನದ ಮಿತಿಗಳನ್ನು ತೋರಿಸುತ್ತದೆ. ಸಂಕಪ್ಪಯ್ಯನವರ ಒಳ್ಳೆಯತನ, ತನ್ನ ತಾಯಿಯ, ಊರವರ ಕುರುಡು ನಂಬಿಕೆಗಳ ಎದುರು ಸೋಲುತ್ತದೆ, ಶೋಷಣೆ, ತುಳಿಯುವವರು ಮತ್ತು ತುಳಿತಕ್ಕೊಳಗಾದವರು-ಇಬ್ಬರ ಮನುಷ್ಯ ಗೌರವಕ್ಕೂ ಅವಮಾನಕಾರಿಯಾದದ್ದು. ವರ್ಗ ಜಾತಿಗಳ ಹಿತದ ಸ್ವಾರ್ಥ ಮತ್ತು ಪ್ರಶ್ನಿಸದೆ ಒಪ್ಪಿಕೊಂಡ ತಲತಲಾಂತರದಿಂದ ಬಂದ ಹಿಂದೂ ಧರ್ಮದ ವಿಧಿ ನಿಷೇಧಗಳು ಕೂಡಿಕೊಂಡು ಚೋಮನ ದುಡಿಯಲ್ಲಿ ಇಂತಹದೊಂದು ವಿಷಮ ಸನ್ನಿವೇಶವನ್ನು ಸೃಷ್ಟಿಸುತ್ತದೆ, ಇದರಲ್ಲಿ ನಂಬಿಕೆಯ ಪಾಲೆಷ್ಟು, ನಂಬಿಕೆಯ ಹೊರಗೆ ನಿಲ್ಲುವ ಲೌಕಿಕದ ವ್ಯವಹಾರದ ಪಾಲೆಷ್ಟು ಎನ್ನುವುದು ಸರಳವಾಗಿ ಅಂದಾಜು ಹಾಕಲಾರದ್ದು, ಈ ಕಾರಣಕ್ಕಾಗಿಯೇ ನಂಬಿಕೆಯ ಸುಳ್ಳು ಸತ್ಯಗಳ ವಿವೇಚನೆಯೇ ವಸ್ತುವಾದ ‘ಸತ್ತವರ ನೆರಳು’ ನಂಬಿಕೆಯ ಬಗ್ಗೆ ಕೂಡದ ಒಳ ನೋಟಗಳು ಚೋಮನದುಡಿಯಲ್ಲಿವೆ ಎಂದು ನನಗನ್ನಿಸುತ್ತದೆ, ಕಾದಂಬರಿ ಯುದ್ದಕ್ಕೂ ಇದಕ್ಕೆ ಉದಾಹರಣೆಗಳನ್ನು ಕೊಡುತ್ತ ಹೋಗಬಹುದು, ಪುಟ ೧೦೩ ರಲ್ಲಿ ಬರುವ ಚೋಮನ ಕಿರಿಯಮಗ ನೀಲನ ಸಾವಿನ ಪ್ರಕರಣ ನೋಡಿರಿ, ತೋಡಿನ ನೀರಿನಲ್ಲಿ ಕೈಸೋತು ಮುಳುಗುತ್ತಿದ್ದ ನೀಲನನ್ನು ಉಳಿಸಲು ಒಬ್ಬ ಬ್ರಾಹ್ಮಣ ತರುಣ ಧಾವಿಸುತ್ತಾನೆ, ಆದರೆ ತೋಡಿನ ದಂಡೆಯಲ್ಲಿರುವ ಇತರರು, ‘ಅವನು ಹೊಲೆಯ ನಲ್ಲವೆ’ ಎಂದು ತರುಣನನ್ನು ತಡೆಯುತ್ತಾರೆ. ಚೋಮನಿಗೆ ಈಜು ಬಾರದು. ಬೊಬ್ಬಿಡ ತೊಡಗಿದ, “ಆಗ ಬ್ರಾಹ್ಮಣ ತರುಣ ನೀರಿನಲ್ಲಿ ಧುಮುಕಿದ, ಇತರರು ಅವನನ್ನು ತಡೆಯಲು ಯತ್ನಿಸಿ ಹತಾಶರಾಗಿ ನಿಂತರು! ನೀಲನ ಶವವೇನೋ ಮೇಲಕ್ಕೆ ಬಂದಿತು, ಪ್ರಾಣವಿರಲಿಲ್ಲ! ಆ ತರುಣ ಮುಖವನ್ನು ತಗ್ಗಿಸಿಕೊಂಡು ಹೊರಟು ಹೋದ ! ಚೂಮನ ಬಾಯಿಂದ ಸೊಲ್ಲು ಹೊರಡಲಿಲ್ಲ…..” (ಪುಟ ೧೦೩)
ಜೋಮನಿಗೆ ಹೊಲ ಕೊಡಲು ಅಸಮರ್ಥನಾದ ಸಂಕಪ್ಪಯ್ಯ, ನೀಲನ ಜೀವ ಉಳಿಸಲು ಅಸಮರ್ಥನಾದ ಬ್ರಾಹ್ಮಣ ತರುಣ-ಇಬ್ಬರೂ ಒಂದೇ ಜೀವನ ಮೌಲ್ಯಗಳನ್ನು ಪ್ರತಿನಿಧಿಸುತ್ತಾರೆ, ಕಡೆಯದ್ದರಲ್ಲಿ ಅಂಧಶ್ರದ್ಧೆಯಿದ್ದರೆ ಮೊದಲನೆಯದ್ದರಲ್ಲಿ ಅಂಧ ಶ್ರದ್ದೆಯ ಜೊತೆಗೆ ವರ್ಗದ ಹಿತಾಸಕ್ತಿಗಳೂ ಸೇರಿಕೊಂಡಿವೆ, ಆಂದ್ರೆ ಬೈಸನ್‌ನ *La Mouehe’ಯಲ್ಲಿ ಬೇಟೆಗಾರನ ಬಲೆಯಲ್ಲಿ ಸಿಕ್ಕಿಕೊಂಡ ಹಕ್ಕಿ ಒಂದು ಮಟ್ಟದಲ್ಲಿ, ಬೀಸಿದ ಬಲೆಯನ್ನೇ ತದೇಕಚಿತ್ತನಾಗಿ ನೋಡುತ್ತ ಹೊರಜಗತ್ತಿನ ಇತರ ವಿಷಯಗಳಿಗೆ ಕುರುಡಾಗಿರುವ ಬೇಟೆಗಾರ ಇನ್ನೊಂದು ಮಟ್ಟದಲ್ಲಿ ಬಂಧಿಗಳಾಗಿರುವಂತೆ, ಚೋಮ ಒಂದು ಮಟ್ಟದಲ್ಲಿ, ಸಂಕಪ್ಪಯ್ಯ, ಮತ್ತು ಈ ಬ್ರಾಹ್ಮಣ ತರುಣ ಇನ್ನೊಂದು ಮಟ್ಟದಲ್ಲಿ ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಂಡು ವಿಕೃತರಾದವರು. ಸಂಕಪ್ಪಯ್ಯ, ಅವರ ತಾಯಿ, ಮತ್ತು ಇತರರ ನಂಬಿಕೆ ಒಂದಾದರೆ ಚೋಮನದ್ದು ಇನ್ನೊಂದು ಥರದ್ದು. ಹೊಲ ಸಿಗುವುದಾದರೆ ಕ್ರಿಶ್ಚಿಯನ್ನನಾದರೂ ಸರಿಯೇ ಎಂದು ಊರು ಬಿಟ್ಟು ಹೊರಟ ಚೋಮ, ಊರಿನ ಹೊರಗಿರುವ ಪಂಜುರ್ಲಿ ಗುಡಿ ಬಂದೊಡನೆ, ಅವನ ನಾಯಿ ಕೇವಲ ಅಭ್ಯಾಸಬಲದಲ್ಲಿ ನಿಂತುಬಿಡುವಂತೆ ಅವನೂ ಡೊಗ್ಗಾಲು ಹಾಕಿ ನಮಸ್ಕರಿಸಿ ಬಿಡುತ್ತಾನೆ. ತಾನು ನಂಬಿದ ಭೂತವನ್ನು ಮರೆತರೆ ಸಾಯುವ ತನಕ ಅದರ ಉಪದ್ರವ ನಿಲ್ಲಲಾರದೆಂದು ತಿಳಿದು ಬಂದದ್ದನ್ನ ಅನುಭವಿಸುವುದೆಂದು ನಿಶ್ಚಯಿಸಿಕೊಂಡು ಮತಾಂತರದ ತನ್ನ ನಿರ್ಧಾರವನ್ನು ಬಿಟ್ಟುಬಿಡುತ್ತಾನೆ ! (ಪುಟ ೧೯-೧೧೦).
೧೯೩೩ ರಲ್ಲಿ ಪ್ರಕಟವಾದ ಈ ಕಾದಂಬರಿ ನಮ್ಮ ಸಮಾಜದ ಮನುಷ್ಯ ಸಂಬಂಧಗಳನ್ನೂ, ನಂಬಿಕೆಗಳನ್ನೂ ವಸ್ತುನಿಷ್ಠವಾಗಿ, ನಿಷ್ಟುರವಾಗಿ ವಿಶ್ಲೇಷಿಸಿದ ರೀತಿ ನೋಡಿ ಕಾದಂಬರಿ ಓದಿದಷ್ಟು ಸಲವೂ ನಾನು ಬೆರಗಾಗಿದ್ದೇನೆ. ಈ ಕಾದಂಬರಿ ಈಗಲೂ ನಮಗೆ ಸಮಕಾಲೀನವಾಗಿರುವುದಕ್ಕೆ ಕಾರಣ, ಅದು ನಾವು ಬದುಕುತ್ತಿರುವ ಸಮಾಜದ ಶ್ರದ್ದೆ, ನಂಬಿಕೆ, ಆಸ್ತಿ ಸಂಬಂಧಗಳು, ಮತಾಂತರ, ಕಾಮ-ಪ್ರೇಮಗಳ ತೊಡಕುಗಳು…ಎಲ್ಲ ವನ್ನೂ ಅಖಂಡವಾಗಿ ನೋಡುವುದರಿಂದ, ಕಾದಂಬರಿಯ ಸಂಕಪ್ಪಯ್ಯ, ಚೋಮ ಮತ್ತಿತರರು, ಗುಣವಿಶೇಷಗಳುಳ್ಳ ವ್ಯಕ್ತಿಗಳಾಗಿರುವಂತೆ ನಮ್ಮ ಸಮಷ್ಟಿ ಬದುಕಿನ ಪ್ರತೀಕ (archetypes) ಗಳೂ ಆಗುತ್ತಾರೆ. ಕಾದಂಬರಿಯ ವಿವರಗಳು ಪ್ರತೀಕಗಳಾಗಿ ಕಲಾತ್ಮಕ ಸತ್ಯಗಳು ಮಾತ್ರವಲ್ಲ ; ಅಕ್ಷರಶಃ ಕೂಡಾ ಸತ್ಯಗಳು, ಈಗಲೂ ಚಿಕ್ಕಮಗಳೂರು, ಹಾಸನ ಜಿಲ್ಲೆಗಳ ಕಾಫಿ ತೋಟಗಳಲ್ಲಿ ದುಡಿಯುವವರಲ್ಲಿ ಕೇರಳ, ತಮಿಳುನಾಡುಗಳಿಂದ ವಲಸೆ ಬಂದ ಕೀಳು ಜಾತಿಯ ಜನರನ್ನು ಬಿಟ್ಟರೆ ದಕ್ಷಿಣ ಕನ್ನಡ ಜಿಲ್ಲೆಯ ಹೊಲೆಯರೇ ಮುಂತಾದ ಕಾರ್ಮಿಕರ ಸಂಖ್ಯೆಯೇ ಜಾಸ್ತಿ, (ಮತಾಂತರದ ವಿಷಯವೂ ಅಷ್ಟೆ, ಕಳೆದ ಎರಡು ಶತಮಾನಗಳಲ್ಲಿ ಕ್ರಿಶ್ಚಿಯನ್ನರಾಗಿ ಮತಾಂತರಗೊಂಡ ಹಿಂದೂಗಳಲ್ಲಿ ಎಷ್ಟು ಜನ ಫರಂಗಿ ಆಳರಸರ ಕೃಪೆಯಿದ್ದ ಮಿಶನರಿಗಳ ಜುಲುಮೆಗೆ ಒಳಗಾದವರು, ಎಷ್ಟು ಜನ ಹಿಂದೂ ವಿಷಮ ಸಂಬಂಧಗಳನ್ನು ಸಹಿಸಲಾರದೆ ಮತಾಂತರಗೊಂಡವರು ಎಂಬುದು ಒಂದು ಸಂಶೋಧನೆಗೇ ವಿಷಯವಾಗಬಹುದು.) ತಮ್ಮ ಹಳ್ಳಿಗಳಲ್ಲಿ ಬದುಕು ನಡೆಸಲಾರದೆ, ಬುಡ ಬೇರು ಕಿತ್ತುಕೊಂಡು ಹೊಸಬದುಕನ್ನು ಆರಿಸಿಕೊಂಡು ಬಂದ ಜನ ಇವರು, ಈ ವಲಸೆ, ಈ ಶತಮಾನದಲ್ಲಿ ಭಾರತಾದ್ಯಂತ ನಡೆದಿದೆ. ತಮ್ಮ ಹಳ್ಳಿಗಳಲ್ಲಿ ನಿರ್ಗತಿಕರಾಗಿ ಲಕ್ಷಾಂತರ ಜನ ಕೆಟ್ಟು ಪಟ್ಟಣ ಸೇರಿದ್ದು, ಅಲ್ಲಿಯೂ ಅನ್ಯರಾಗಿ ನಗರದ ಹೊರವಲಯಗಳ ಕೊಳಚೆ ಪ್ರದೇಶಗಳಲ್ಲಿ (ನಮ್ಮ ಯಾವ ನಗರ ಇದರಿಂದ ಮುಕ್ತವಾಗಿದೆ ?) ವಾಸಮಾಡಬೇಕಾಗಿ ಬಂದದ್ದು ನಮ್ಮ ಬದುಕಿನ ಢಾಳವಾಗಿ ಕಾಣಿಸುವ ಸತ್ಯ, ಭಾಷೆಯ ಮಟ್ಟದಲ್ಲಿಯೂ ಈ ಭೇದ ಕೆಲಸ ಮಾಡಿದೆ. ಹಳ್ಳಿಗಳಿಂದ ನಗರಗಳಿಗೆ ಬಂದ ನಮ್ಮ ಮೇಲು ವರ್ಗ, ಜಾತಿಗಳ ಆಸ್ತಿವಂತರ ಮಕ್ಕಳು ಬಹು ಬೇಗ ತಮ್ಮ ಗ್ರಾಮ್ಯ ಮರೆತು ಪಟ್ಟಣದ ಬದುಕಿನಲ್ಲಿ ಒಂದಾದರು, ಆದರೆ ಈ ಜನ ಮಾತ್ರ ತಲೆಮಾರು ಕಳೆದರೂ ತಮ್ಮ ಗ್ರಾಮ್ಯ ಮರೆಯಲಾರರು. ಈ ದುರಂತ ನಮ್ಮ ಯಾವ ಬುದ್ದಿಜೀವಿಯ ನಿದ್ರೆಗೆಡಿಸಿದೆ ? ಯಾವ ಲೇಖಕನಿಗೆ ದುಃಸ್ವಪ್ನವಾಗಿ ಕಾಡಿದೆ? ನಮ್ಮ ಸಾಹಿತ್ಯದಲ್ಲಿ ಕಾಣಸಿಕ್ಕುವ `ಸ್ವಸ್ಥ’ ಗ್ರಾಮಜೀವ ನದ ಪ್ರತೀಕಗಳು ಎಂತಹವು ? ನಮ್ಮ ನವ್ಯ ಸಾಹಿತ್ಯದ ‘ನಗರ ಜೀವನದ ಸಂಕೀರ್ಣತೆ’ ಯಲ್ಲಿ ಅನಾಥರಾದವರು ಯಾರು ?-ಹೀಗೆ ಯೋಚಿಸಿದಾಗ ನಮ್ಮ ಸಾಹಿತ್ಯದ ಜೀವನ ಪ್ರತೀಕಗಳು ಎಂತಹ ಭಯಂಕರ ಸುಳ್ಳುಗಳ ಮೇಲೆ ನಿಂತಿವೆ ಎಂಬುದು ತಿಳಿಯುತ್ತದೆ. ಅಲ್ಲಿ ಇಲ್ಲಿ ಒಂದೆರಡು ಅಪವಾದ ಕಾಣಿಸಬಹುದು. (ಉದಾಹರಣೆಗೆ. -ಚೋಮನದುಡಿ, ತೇಜಸ್ವಿಯವರ ಕೆಲವು ಕಥೆಗಳು ಅನಂತಮೂರ್ತಿಯವರ ಬರಹಗಳಲ್ಲಿ ಕೆಲವು.) ಸ್ವತಃ ಕಾರಂತರೇ ಚೋಮನದುಡಿಯಲ್ಲಿ ನಮ್ಮ ಬದುಕಿನ ಬಗ್ಗೆ ಅವರು ತಳೆದ ನಿಷ್ಟುರ ಧೋರಣೆಯನ್ನು ಉಳಿದ ಕಾದಂಬರಿಗಳಲ್ಲಿ ತೋರಿಸಲಿಲ್ಲ. ಉದಾಹರಣೆಗೆ ಕಾಲ ದೇಶ ಪರಿಸ್ಥಿತಿಯಲ್ಲಿ, ನಂಬಿದ ಮೌಲ್ಯಗಳಲ್ಲಿ ಚೋಮನದುಡಿಯ ಸಂಕಪ್ಪಯ್ಯನ ಪಾತ್ರಕ್ಕೆ ಸಮಕಾಲೀನವೂ, ಸಮಾನ ಧರ್ಮವುಳ್ಳದ್ದೂ ಆದ ಮರಳಿ ಮಣ್ಣಿಗೆ (೧೯೪೨) ಯ ರಾಮೈತಾಳನ ಪಾತ್ರ, (ವೃತ್ತಿಯಲ್ಲಿ ರಾಮೈತಾಳ ಪುರೋ ಹಿತನಾಗಿದ್ದರೂ) ಸಂಕಪ್ಪಯ್ಯನಂತೆ ಒಂದು ಶ್ರದ್ಧೆ, ಜೀವನಕ್ರಮಗಳ ವಿಕೃತಿಯ ಪ್ರತೀಕವಲ್ಲ, ಆದ್ದರಿಂದಲೇ ಮೂರು ತಲೆಮಾರುಗಳ ಬದುಕಿನ ಚಿತ್ರಣದ ವಿಶಾಲ ಹರಹು ಉಳ್ಳ ೪೦೦ ಪುಟಗಳ ಈ ಕಾದಂಬರಿ ಚೋಮನದುಡಿ ಕೊಡುವ ಗ್ರಾಮ್ಯ
1 ಈ ಸಂಬಂಧಿಸಿ ಲೇಖನದ ಅಂತ್ಯದಲ್ಲಿ ಕೊಟ್ಟಿರುವ ಟಿಪ್ಪಣಿ ನೋಡಿ
ಜೀವನದ ವಸ್ತುನಿಷ್ಠ ಚಿತ್ರಣವನ್ನು, ವೈಷಮ್ಯದ ಒಳನೋಟಗಳನ್ನು ಕೊಡುವುದಿಲ್ಲ; ಬದಲು ಒಂದು ಕುಟುಂಬದ ಗೋಳಿನ ಕಥೆಯಾಗಿಯೇ ಉಳಿದು ಬಿಡುತ್ತದೆ. ಆದ್ದರಿಂದ ಇಲ್ಲೂ ತಲೆಮಾರುಗಳ ಅಂತರವೇ ಗೌಣವಾಗಿ ಬಿಡುತ್ತದೆ. ‘ಮರಳಿ ಮಣ್ಣಿಗೆ ಎರಡು ತಲೆಮಾರುಗಳಿಗೇ ನಿಂತುಬಿಡಬಹುದಾಗಿತ್ತು, ನಾಲ್ಕು ತಲೆಮಾರುಗಳ ಕಥೆಯೂ ಆಗ ಬಹುದಿತ್ತು’ (‘ಕಾರಂತ ಪ್ರಪಂಚ’ದಲ್ಲಿ ಮರಳಿ ಮಣ್ಣಿಗೆಯ ಮೇಲೆ ಲೇಖನದಲ್ಲಿ ಗೋಪಾಲಕೃಷ್ಣ ಅಡಿಗರ ಅಭಿಪ್ರಾಯ) ಬಡತನದ ಬಗ್ಗೆಯೇ ಇರುವ ‘ಮುಗಿದ ಯುದ್ಧ’ (೧೯೪೮) ವೂ ಇದೇ ಕಾರಣಕ್ಕೆ ಸೋಲುತ್ತದೆ. ಸ್ವಾತಂತ್ರ್ಯ ಚಳುವಳಿಯ ವೈಫಲ್ಯದ ಕುರಿತೇ ಇರುವ, “ಔದಾರ್ಯದ ಉರುಳಲ್ಲಿ” (೧೯೪೭) ರಾಜಕೀಯ ಸ್ವಾತಂತ್ರ‍್ಯ ಈ ದೇಶದ ಬಹುಪಾಲು ಜನಕ್ಕೆ ಏಕೆ ನಿರುಪಯೋಗಿ ಎಂಬ ಮೂಲಭೂತ ಪ್ರಶ್ನೆಯನ್ನೇ ಹಾಕಿಕೊಳ್ಳುವುದಿಲ್ಲ, ಚೋಮನದುಡಿಯಲ್ಲಿ ಕಾಣಿಸುವ ಬದುಕಿನ ಬಗ್ಗೆ ಕಾರಂತರ ಅಖಂಡ ದೃಷ್ಟಿ ಅವರ ಬೇರೆ ಯಾವ ಕೃತಿಯಲ್ಲಿಯೂ ಕಾಣಿಸುವುದಿಲ್ಲ. ಇದು ಕುತೂಹಲಕಾರಿಯಾದದ್ದು.
ಕಳೆದ ನೂರು ವರುಷಗಳಲ್ಲಿ ಈ ದೇಶದ ಆರ್ಥಿಕ, ಸಾಮಾಜಿಕ ಬದಲಾವಣೆಗಳಿಂದ ನೆಲ ಕಳೆದುಕೊಂಡ, ಉದ್ಯೋಗ ಕಳೆದುಕೊಂಡ ಹೊತ್ತಿನ ಊಟದ ಖಾತ್ರಿ ಇಲ್ಲದ, ಲೋಹಿಯಾ ಹೇಳುವ ನಾಲ್ಕಾಣೆ ವರಮಾನದ ಕ್ಷಾಮಡಾಮರಗಳಲ್ಲಿ ಬರೀ ಹಸಿವು ನಿಶ್ಯಕ್ತಿಗಳಿಂದ ಹುಳ ಸತ್ಯಂತೆ ಸಾಯುವ ಅಸಂಖ್ಯ ಭಾರತೀಯರು ಒಂದು ಕ್ಷಣ ತಮ್ಮ ಮತ್ತು ತಮ್ಮ ಪರಿಸರದ ಬಗ್ಗೆ ಸ್ಪಷ್ಟ ಯೋಚಿಸಬಲ್ಲರಾದರೆ ಆಗ ಅವರಿಗೆ ಮಠದ ಬಗ್ಗೆ, ಶ್ರದ್ಧೆಯ ಬಗ್ಗೆ, ರಾಜಕೀಯದ ಬಗ್ಗೆ ಏನು ಅನ್ನಿಸೀತು ? ಸದ್ಯದ ಭಾರತದಲ್ಲಿ ಬರೆಯುವ ಲೇಖಕ ಹೀಗೆ ಯೋಚಿಸಿದಾಗ ಮಾತ್ರ ಆತ ವರ್ತಮಾನಕ್ಕೆ ಪೂರ್ಣ ಸ್ಪಂದಿಸ ಬಲ್ಲ. ಆಗ ಅಸಮಾನ ವ್ಯವಸ್ಥೆಯೊಂದರಲ್ಲಿ ಮೇಲು ಜಾತಿ ಮೇಲು ವರ್ಗಗಳವರ ಶ್ರದ್ದೆಯ ಮಿತಿ, ಮಠದ ಮಿತಿ (ಅವುಗಳ ನೆಲೆ ಗಟ್ಟಿಯಾಗಿದ್ದಾಗಲೂ), ಅನುಭವದ ಮಿತಿ, ವ್ಯಕ್ತಿಗಳ ಸಾತ್ವಿಕತೆಯ ಮಿತಿ ಗೊತ್ತಾಗುತ್ತದೆ.
ಈ ಸಾಹಿತ್ಯದ archetypes ನಮ್ಮ ಸಮಾಜದ ಸತ್ಯಗಳಿಗೆ ದೂರವಾದವು, ಸಾಮಾಜಿಕ ಆರ್ಥಿಕ ಬೆಳವಣಿಗೆಗಳನ್ನು ಗಮನಕ್ಕೆ ತೆಗೆದುಕೊಳ್ಳದವು ಎಂದ ತಕ್ಷಣ ಬರಬಹುದಾದ ಒಂದು stock ಪ್ರತಿಕ್ರಿಯೆ ನನಗೆ ಗೊತ್ತಿದೆ-ಅದು ಸಾಹಿತ್ಯ ಪತ್ರಿಕಾ ವರದಿಯಾಗಿರಬೇಕೆ ? ಇತಿಹಾಸ, ಅರ್ಥಶಾಸ್ತ್ರ, ಸಮಾಜ ಶಾಸ್ತ್ರಗಳ ಪಠ್ಯಪುಸ್ತಕಗಳಾಗಬೇಕೆ ? ಎಂಬುದು ಖಂಡಿತ ಹಾಗಾಗಕೂಡದು. ಆದರೆ ನಮ್ಮ ಮುಖ್ಯ ಸಾಹಿತಿಗಳೆಲ್ಲ ಎಂದೂ ಕಾಫ್ಕಾನಂತ ತೀರ ವೈಯಕ್ತಿಕವಾಗಿ ಬದುಕಿಗೆ ಪ್ರತಿಕ್ರಿಯೆ ತೋರಿದವರಲ್ಲ. (ಕಾಫ್ಕಾನ ದುಃಸ್ವಪ್ನಗಳ ಹಿನ್ನೆಲೆಯಲ್ಲಿ ಎರಡು ಮಹಾಯುದ್ಧಗಳಿಗೆ ಕಾರಣವಾದ Paranoiac ಜರ್ಮನಿ ಇರುವುದನ್ನು ನಾವು ಮರೆಯಲಾಗದು). ನಮ್ಮ ನವ್ಯರೂ ತಮ್ಮ ಸಾಹಿತ್ಯದ ಸಮರ್ಥನೆಗೆ, ಬದಲಾದ ಭಾರತ ಸ್ವಾತಂತ್ರ್ಯೋತ್ತರ ಭ್ರಮನಿರಸನ, ನಗರ ಜೀವನದ ಸಂಕೀರ್ಣತೆ ಇತ್ಯಾದಿ ‘ಸಾಮಾಜಿಕ ಕಾರಣಗಳನ್ನೇ ಕೊಟ್ಟವರು, ನಮ್ಮ ಎಲ್ಲ ಮುಖ್ಯ ಸಾಹಿತಿ ಹಾಗೂ ಕವಿಗಳ ಧ್ವನಿ ತಾವು ಒಂದು ಸಂದಿಗ್ಧ ಕಾಲದ ಜನಾಂಗದ ವಕ್ತಾರರು ಎಂಬಂತಹದ್ದು, (ಸತ್ತವರ ನೆರಳು ನಾಟಕದ ಧ್ವನಿ ಕೂಡಾ ಇದೇ. ಸಾಹಿತಿಯೊಬ್ಬನಲ್ಲಿ ಈ ಧೋರಣೆ ಅತ್ಯಂತ ಸ್ವಾಗತಾರ್ಹವಾದದ್ದು, ಆದರೆ ಮಾತ್ರ ಆತ ತನ್ನ ಕಾಲದ ಸಮಸ್ತವನ್ನೂ ತಿಳಿದಿರಬೇಕು; ಔದ್ಯಮಿಕ ಕ್ರಾಂತಿಯ ಸಂಕ್ರಮಣ ಕಾಲದ ಇಂಗ್ಲೆಂಡ್ ಬಗ್ಗೆ ಬರೆದ ಡಿಕನ್ಸ್‌ನಂತೆ, ಫ್ರಾನ್ಸ್ ಬಗ್ಗೆ ಬರೆದ ಬಾಲ್ಹಾಕ್‌ನಂತೆ ಕ್ರಾಂತಿಯ ಹೊಸ್ತಿಲಲ್ಲಿ ನಿಂತಿದ್ದ ರಷ್ಯದ ಬಗ್ಗೆ ಬರೆದ ಟಾಲ್‌ಸ್ಟಾಯ್, ಡಾಸ್ಕೊವಸ್ಕಿಯಂತೆ.)
‘ಸತ್ತವರ ನೆರಳು’ ನಾಟಕದ ಬಗ್ಗೆ ಯೋಚಿಸುವಾಗ, ನನಗೆ ಇತ್ತೀಚೆ ತೆರೆ ಕಂಡ ಖ್ಯಾತ ಮಲೆಯಾಳಂ ಸಿನೇಮ ‘ನಿರ್ಮಾಲ್ಯಂ’ ನೆನಪಾಗುತ್ತದೆ, ನಿರ್ಮಾಲ್ಯಂ ಕೂಡ ಶ್ರದ್ದೆಯ ಅವನತಿಗೆ ಸಂಬಂಧಿಸಿದ್ದು, ಆದರೆ ಅದು ಚಿತ್ರದ ಒಂದು ಎಳೆ ಮಾತ್ರ ಶಿಥಿಲವಾದ ದೇವಸ್ಥಾನ (ಸಾಂಕೇತಿಕವಾಗಿ ಮಾತ್ರವಲ್ಲ, ವಸ್ತುಶಃ ಜೀರ್ಣವಾಗಿರುವ, ಗೋಡೆಗಳೆಲ್ಲ ಬಿರುಕು ಬಿಟ್ಟಿರುವ ಒಂದು ಭಾರೀ ಹಳೆಯ ದೇವಸ್ಥಾನ ಸಿನೇಮದುದ್ದಕ್ಕೂ ತಾನೇ ತಾನಾಗಿದ್ದು ಅದೂ ಒಂದು ಪ್ರಧಾನ ಪಾತ್ರ ವಹಿಸುತ್ತಿದೆ ಎಂಬಂತಿದೆ), ಜಾತಿವ್ಯವಸ್ಥೆ, ಮೂಢನಂಬಿಕೆಯ ಮಟ್ಟಕ್ಕಿಳಿದ ಧರ್ವಶ್ರದ್ಧೆ, ಕಿತ್ತು ತಿನ್ನುವ ಬಡತನ, ನಿರುದ್ಯೋಗ, ಕಾವ ಪ್ರೇಮಗಳ ತೊಡಕುಗಳು-ಬದುಕನ್ನು ರೂಪಿಸುವ ಈ ಎಲ್ಲವೂ ‘ನಿರ್ಮಾಲ್ಯಂ’ ನ ಕಥೆಯನ್ನು ರೂಪಿಸುತ್ತ ಹೋಗುತ್ತವೆ. ಇವೆಲ್ಲವನ್ನೂ ಅಖಂಡವಾಗಿ, ಕಲಾತ್ಮಕ ವಾಗಿ ಕೂಡ ಪ್ರೇಕ್ಷಕರ ಮುಂದಿಡುವಲ್ಲಿ ನಿರ್ದೇಶಕ ಎಂ. ಟಿ. ವಾಸುದೇವನ್ ನಾಯರ್ (ಮಲೆಯಾಳಂನ ಶ್ರೇಷ್ಠ ಲೇಖಕರಲ್ಲಿ ಒಬ್ಬರು) ಸಫಲರಾಗಿದ್ದಾರೆ. ಕಥೆಯ ಮುಖ್ಯ ಪಾತ್ರವಾದ ದೇವಸ್ಥಾನದ ಪಾತ್ರೆ, ತನ್ನ ನಂಬಿಕೆ ತನ್ನ ಬದುಕಿಗೆ ಅಸಂಗತವಾದದ್ದನ್ನು ಕಂಡು ನಂಬಿದ ದೈವವನ್ನು ಉಗುಳಿ ತಿರಸ್ಕರಿಸಿಬಿಡುತ್ತಾನೆ, ದೈವವೆಂದು ಆತ ತಿರಸ್ಕರಿಸಿದ್ದು ಬರಿ ಕಲ್ಲು ಎಂದು ಆಕ್ಷಣ ಪ್ರೇಕ್ಷಕನಿಗೆ ಹೊಳೆದುಬಿಡುತ್ತದೆ, ಅದು ಪಾತ್ರಿಯ ಜೀವನದ ಕೊನೆಯ ಘಳಿಗೆ ಎನ್ನುವುದು ಅವನ ಬಂಡಾಯದ ನೈತಿಕ ಮಹತ್ವವನ್ನೇನೂ ಕಡಿಮೆ ಮಾಡುವುದಿಲ್ಲ. ‘ಸತ್ತವರ ನೆರಳು’ ನಾಟಕಕ್ಕಿಂತ ನಿರ್ಮಾಲ್ಯಂ ನನಗೆ ಹೆಚ್ಚು ಪ್ರಿಯವಾಗುವುದು ನಿರ್ಮಾಲ್ಯಂ ಹೆಚ್ಚು ಸಮಕಾಲೀನವಾಗಿದೆ; ಮತ್ತು ಆ ಸಿನೇಮದ archetypes ಮುಖಾಂತರ ಬರುವ ಜೀವನ ಚಿತ್ರಣ ಹೆಚ್ಚು ನೈಜವಾದದ್ದು ಎಂಬ ಕಾರಣಕ್ಕೆ. ನಾನು ‘ಸತ್ತವರ ನೆರಳು’ ನಾಟಕದ ತಾತ್ವಿಕ ಧೋರಣೆಗಳನ್ನು ತಿರಸ್ಕರಿಸಲು ಕಾರಣ, ಆ ಧೋರಣೆಗಳನ್ನು ರೂಪಿಸಿದ ಜೀವನಾನುಭವ ಅಖಂಡವಲ್ಲದ್ದು ಎಂಬುದು, ಜಡಭರತರಿಗೆ ಮಠದ ಗೋಡೆಗಳು ಬಿರುಕು ಬಿಟ್ಟದ್ದು ಮಾತ್ರ ಕಾಣಿಸುತ್ತದೆ, ನನಗೆ ೧೯೭೫ರಲ್ಲಿಯೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧರ್ಮಸ್ಥಳ ದೇವರಿಗೆ ಹುಯಿಲು ಆಡುವ ಬೆದರಿಕೆ ಹಾಕಿ, ತಲೆತಲಾಂತರದಿಂದ ಕೃಷಿ ಮಾಡಿಕೊಂಡು ಬಂದ ಗೇಣಿ ಒಕ್ಕಲುಗಳಿಂದ ಭೂಮಿ ಕಸಿದ ಭೂಮಾಲಿಕರ ಚಿತ್ರ ಕಾಣಿಸುತ್ತದೆ, ಕರ್ನಾಟಕ ಸರ್ಕಾರ ಇತ್ತೀಚಿಗೆ ಜಾರಿಗೆ ತಂದ ಭೂ ಸುಧಾರಣಾ ಕಾಯಿದೆ ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಹೇಗೆ ಕಾರ‍್ಯಗತವಾಗುತ್ತಿದೆಯೋ ನನಗೆ ಗೊತ್ತಿಲ್ಲ. ಈ ಜಿಲ್ಲೆಯ ಮಟ್ಟಿಗಂತೂ ಕಾನೂನು ಏನೇ ಇರಲಿ, ಬಲಿಷ್ಟನಾದವ ಮಾತ್ರ ಬದುಕುವ, ಬಲಹೀನನಾದವ ಕಂಗಾಲಾಗಿರುವ ಪರಿಸ್ಥಿತಿ ಇದೆ. ದೊಡ್ಡ ಭೂಮಾಲಿಕರು ಹೇಗೆ ಹೇಗೋ ಕಾನೂನಿನ ರಂಗೋಲೆಯಡಿ ನುಸುಳಿಕೊಂಡಿದ್ದಾರೆ ; ಸರಕಾರ, ನ್ಯಾಯಾಂಗ, ರೆವೆನ್ಯೂ ಇಲಾಖೆಗಳು ಇವರಿಗೇ ಹೆಚ್ಚು ಅನುಕೂಲವಾಗಿವೆ. ಸಣ್ಣ ಪ್ರಮಾಣದ ಧನಿಗಳು, ಅಂದರೆ ಒಕ್ಕಲು ಕೊಡುವ ಗೇಣಿಯೇ ಹೊಟ್ಟೆಪಾಡಾಗಿರುವವರು, ತೊಟ್ಟ ಕೊಳೆ ಜನಿವಾರ ಬಿಟ್ಟರೆ ಬೇರೆ ಬಂಡವಾಳವಿಲ್ಲದ ಬಡ ಬ್ರಾಹ್ಮಣರು ಮತ್ತು ವಿಧವೆಯರು ಬರಿ ಹೊಟ್ಟೆಯ ಭವಿಷ್ಯತ್ತನ್ನು ಎದುರಿಸುತ್ತಿದ್ದಾರೆ. ಇವರಿಗೆ ಗದ್ದೆ ಉತ್ತು ಗೊತ್ತಿಲ್ಲ : ನೇಜಿ ನೆಟ್ಟು ಗೊತ್ತಿಲ್ಲ. ಬೀಡಿ ಕಟ್ಟುವುದು, ಚಾಪೆ ಹೆಣಿಯುವುದು, ನೆಯ್ಗೆ, ಮರದ ಕೆಲಸ, ಮಣ್ಣಿನ ಕೆಲಸ, ಹೈನ ವ್ಯವಸಾಯ-ಅಂತಹ ವಿಶೇಷ ಬಂಡವಾಳ ಏನೂ ಬೇಡದ ಹೊಟ್ಟೆ ತುಂಬುವ ಯಾವ ಉತ್ಪಾದನಾ ಕೌಶಲ್ಯವೂ ಇರಲಿಲ್ಲ. ಮಠ ಕಟ್ಟಿದ ಸಂಸ್ಕೃತಿ ವ್ಯಕ್ತಿಗಳನ್ನು ಇಂತಹ ಅಸಹಾಯಕತೆಯಲ್ಲಿ ಇಟ್ಟ ಕರುಣಾಜನಕ ಚಿತ್ರ ನನಗೆ ಕಾಣಿಸುತ್ತಿದೆ. ಇದರ ಜೊತೆಗೆ, ಜಿಲ್ಲೆಯಲ್ಲಿ ಸಾವಿರಾರು ಒಕ್ಕಲುಗಳು (ಆ ಜಾತಿ ಈ ಜಾತಿ ಎನ್ನದೆ) ಭೂಮಾಲಿಕರ (ಜಾತಿಬೇಧವಿಲ್ಲದೆ) ಬಲವಂತಕ್ಕೆ ಒಳಗಾಗಿ ನೆಲ ಕಳೆದುಕೊಂಡು ಒಂದೋ ಹಳ್ಳಿ ಬಿಡಬೇಕಾದ ಇಲ್ಲ ಹಳ್ಳಿಯಲ್ಲಿಯೇ ವರ್ಷದ ಮೂರು ನಾಲ್ಕು ತಿಂಗಳು ಕೃಷಿ ಕೂಲಿಗಳಾಗಿ (ಇನ್ನು ಅದು ಸಿಕ್ಕುವ ಸಂಭವವೂ ಕಡಿಮೆ) ಉಳಿದ ಭಾಗವೆಲ್ಲ ನಿರುದ್ಯೋಗಿಗಳಾಗಿ ದಿನ ನೂಕಬೇಕಾದ ಪರಿಸ್ಥಿತಿ ಇದೆ. ಈಗಾಗಲೇ ನಮ್ಮ ಹಳ್ಳಿಗಳಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಭೂಹೀನ ಕೃಷಿ ಕಾರ್ಮಿಕರ ಪಡೆಯನ್ನು ಇವರೂ ಸೇರಿಕೊಳ್ಳುತ್ತಿದ್ದಾರೆ. ಒಂದು ಇಡೀ ಜನಾಂಗಕ್ಕೆ ಜನಾಂಗವೇ ನಮ್ಮ ವರ್ಗ ವ್ಯವಸ್ಥೆಯಲ್ಲಿ ದಿವಾಳಿ ಏಳುತ್ತಿರುವ ದುರಂತದ ಚಿತ್ರ ಇದು ; ನಮ್ಮ ಸುತ್ತಮುತ್ತ ನಡೆಯುತ್ತಿರುವಂತಹದು. ದೇಶಾದ್ಯಂತ ಇರುವ Pattern ಇದು. ಇಂತಹ ಒಂದು ಕರುಳು ಕಿತ್ತುಬರುವ ಜನತೆಯ ಮೂಕ ಅಸಹಾಯಕತೆಯಲ್ಲಿ ಮಠ ಪ್ರತಿನಿಧಿಸುವ ಮೌಲ್ಯಗಳ ಪಾಲೆಷ್ಟು ? ಮಠದ ಹೊರಗಿರುವ ಲೌಕಿಕ ವರ್ಗ ಹಿತಾಸಕ್ತಿಗಳ ಪಾಲೆಷ್ಟು ? ಎರಡೂ ಒಂದರಲ್ಲಿ ಇನ್ನೊಂದು ಇನ್ನು ಗಾಢವಾಗಿ ಬೆಸೆದುಕೊಂಡಿರುವಾಗ ಇದನ್ನು ಬೇರ್ಪಡಿಸಿ ನೋಡುವುದಾದರೂ
ಹೇಗೆ ? ಆದರೆ ‘ಸತ್ತವರ ನೆರಳು’ ನಾಟಕ ಶ್ರದ್ದೆಯ ಸಾಮಾಜಿಕ ಸ್ವರೂಪವನ್ನೇ ಗಣನೆಗೆ ತೆಗೆದುಕೊಳ್ಳದೆ, ಅದು ಕೇವಲ ಒಂದು metaphysical ಸಮಸ್ಯೆ ಎಂದು ತಿಳಿಯುತ್ತದೆ. ಈ ಕಾರಣದಿಂದ, ನಾಟಕ ಶ್ರದ್ದೆಯ ಬಗ್ಗೆ ಕೇಳುವ ಪ್ರಶ್ನೆಗಳು ನ್ಯಾಯವಾದದ್ದೇ ಆದರೂ ಸಮಗ್ರವನ್ನೂ ಒಳಗೊಳ್ಳುವಂತಹವಲ್ಲ. ಉದಾಹರಣೆಗೆ ಪುಟ ೫೭ರ ಈ ಮಾತುಗಳನ್ನು ನೋಡಿರಿ, “ಬಂಧನ ಬಿಡುಗಡೆ ಇವುಗಳನ್ನು ಮೀರಿದ ನಿಯಮವೊಂದಿದೆಯಂತೆ, ಅದು ನಮಗೆ ತಿಳಿದಿಲ್ಲ, ತಿಳಿಯುವುದೂ ಇಲ್ಲ. ಬಹುತೇಕ ಹಿರೆ ಆಚಾರ‍್ಯರಿಗೆ ಅದು ಗೊತ್ತಿದ್ದಿರಬೇಕು, ಅಥವಾ ಅದೂ ಸಂಶಯವೇ, ಬಹಿರ‍್ಮುಖವಾದ ಇಂದ್ರಿಯಗಳನ್ನು ಕೊಟ್ಟು, ಅಂತಮುರ್ಖವಾದ ಮನಸ್ಸನ್ನು ಕೊಟ್ಟು, ಅವುಗಳ ನಡುವೆ ಜಗಳ ಹಚ್ಚಿ ದಿಗ್ಟಂಧನ ದ್ರಶ್ಚಂಧನ ಮಾಡಿ, ನಿನ್ನ ಹಾದಿ ನೀನು ನೋಡಿಕೋ ಅಂತ ಹೇಳಿದರೆ ಏನು ಕಾಣಬೇಕು ?”, ಇಂದ್ರಿಯಗಳ ಅನುಭವಕ್ಕೆ ಸಿಕ್ಕುವ ಮೂರ್ತವಸ್ತು ಜಗತ್ತಿನ ಸತ್ಯ ಮತ್ತು ನಂಬಿದ ಅಮೂರ್ತ ತತ್ವ ಇವುಗಳ ದ್ವಂದ್ವ ಬಗೆಹರಿಯದ ಒಂದು ಸನಾತನ ಪ್ರಶ್ನೆ, ಆದರೆ ಧಾರ್ಮಿಕ ಶ್ರದ್ದೆಯ ಬಗ್ಗೆ ೧೯೭೫ ರಲ್ಲಿ ನಾವು ಕೇಳಲೇ ಬೇಕಾದ, ಅದಕ್ಕಿಂತ ಮುಖ್ಯವಾದ ಬೇರೆ ಪ್ರಶ್ನೆಗಳೂ ಇವೆ ಅಲ್ಲವೆ ?
ಈ ನಾಟಕದ ತತ್ವಗಳ ವಿಮರ್ಶೆಯಲ್ಲಿ ನಾನು ಕೊಟ್ಟ ಉದಾಹರಣೆಗಳಲ್ಲಿ ಒಂದು ಕಾದಂಬರಿ ಇನ್ನೊಂದು ಚಲನಚಿತ್ರ, ನಾಟಕ, ಕಾದಂಬರಿ, ಚಲನಚಿತ್ರ ಈ ಮೂರು ಮಾಧ್ಯಮಗಳ ನಡುವಿನ ವ್ಯತ್ಯಾಸ, ಹೆಚ್ಚೆಂದರೆ ಮೂರು ಘಂಟೆಗಳ ಒಳಗೆ ಮುಗಿಯಬೇಕಾದ ನಾಟಕದ ಮಾಧ್ಯಮದ ಮಿತಿಗಳನ್ನು ನಾನು ಮರೆತಿಲ್ಲ. “ನಾಟಕ ಎಂದರೆ ಬಹುಮುಖ ಪ್ರಜ್ಞೆಯ ಅನುಭವವನ್ನು ಏಕಮುಖವಾಗಿ ಮೂಡಿಸುವ ಮಾಧ್ಯಮ”
ಎಂಬ ಕೀರ್ತಿನಾಥ ಕುರ್ತುಕೋಟಿಯವರ ಮಾತು (ಸತ್ತವರ ನೆರಳು ಮುನ್ನುಡಿ) ಒಪ್ಪಬೇಕಾದ್ದೆ, ಆದರೆ ನಾಟಕದ ವಸ್ತುವಿನ ವಿಶಿಷ್ಟತೆಯನ್ನು ಗಮನದಲ್ಲಿಟ್ಟು ನಾನು ಈ ಮಾತುಗಳನ್ನು ಬರೆದಿದ್ದೇನೆ, ಅಲ್ಲದೆ ಇಂತಹ ಒಂದೊಂದು ಕೃತಿಯೂ ಸೇರಿ ಒಂದು ಸಾಹಿತ್ಯ ಪರಂಪರೆಯನ್ನೂ, ನಮ್ಮ ಬದುಕಿಗೆ ನಮ್ಮ ಸಂಸ್ಕೃತಿಯ response ಅನ್ನೂ ರೂಪಿಸುವುದರಿಂದ, (ಮತ್ತು ನಮ್ಮ ಸಾಹಿತ್ಯದ ಮಿತಿಗಳನ್ನು ಕುರಿತು ಯೋಚಿಸುವಾಗ) ಈ ಮಾತುಗಳನ್ನು ಹೇಳಲೇಬೇಕು ಎನ್ನಿಸುತ್ತದೆ. ನಾನು ನಾಟಕದ ಅನುಭವವನ್ನು ನಿರಾಕರಿಸುತ್ತಿಲ್ಲ, ಅದರ ಧೋರಣೆಗಳನ್ನು ಮಾತ್ರ ಪ್ರಶ್ನಿಸುತ್ತಿದ್ದೇನೆ. ಇಷ್ಟೆಲ್ಲ ಹೇಳಿದ ಮೇಲೂ ನಾಟಕ ನಮ್ಮಲ್ಲಿನ್ನೂ ಇರಬಹುದಾದ ಮಡಿವಂತರನ್ನು ಕೆರಳಿಸುವ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ, (ಆದರೆ ೧೯೫ರಲ್ಲಿ ಇದು ಅಂತಹ ದೊಡ್ಡ ಸಾಧನೆ ಏನಲ್ಲ.) ಒಂದು ಶ್ರದ್ದೆ ಸಡಿಲವಾಗುತ್ತಿರುವುದನ್ನು ನಾಟಕ ಅರ್ಥವತ್ತಾಗಿ ಗುರುತಿಸುತ್ತದೆ, ಅಷ್ಟರ ಮಟ್ಟಿಗೆ ಇದು ಕ್ರಾಂತಿಕಾರೀ ನಾಟಕವೇ ಸರಿ, ಭಾಷೆ, ಪಾತ್ರ ಚಿತ್ರಣದ ಸಂಭಾವ್ಯತೆ (ಒಂದು ಮಿತಿಯೊಳಗೆ) ಇತ್ಯಾದಿ ಬರೇ ಸಾಹಿತ್ಯಕ ಮಾನದಂಡದಿಂದ ಅಳೆದಾಗ ಇದು ಕನ್ನಡದ ಶ್ರೇಷ್ಠ ನಾಟಕಗಳಲ್ಲಿ ಒಂದು ಎನಿಸುತ್ತದೆ. ಆದರೆ ಮೂಕ ಬಲಿ (ಇತ್ತೀಚೆ ಆ ಊರು ಈ ಊರು ಎಂಬ ಹೆಸರಲ್ಲಿ ಇನ್ನಷ್ಟು ವಿಸ್ತಾರಗೊಂಡ ನಾಟಕ) ಕದಡಿದ ನೀರು-ನಾಟಕಗಳನ್ನು ಕನ್ನಡಕ್ಕೆ ಕೊಟ್ಟ ಲೇಖಕನ ಬಗ್ಗೆ ಇವನ್ನೆಲ್ಲ ಕೊರೆಯುತ್ತ ಕೂಡಬೇಕಾದ ಅಗತ್ಯ ಇಲ್ಲ, ನಮ್ಮ ಬದುಕಿನ ಒಂದು ಮುಖವನ್ನು ಒಂದು essence ಅನ್ನು ಇವರು ಚೆನ್ನಾಗಿ ಹಿಡಿದಿದ್ದಾರೆ ಎನ್ನಿಸುವಾಗಲೂ ಇವರ ಧೋರಣೆಗಳನ್ನು ಒಪ್ಪಿಕೊಳ್ಳುವ ಬಿಡುವ ತೊಡಕು ಇದ್ದೇ ಇದೆ. ನಮ್ಮ ಸಾಹಿತ್ಯದ ಹೆಚ್ಚಿನ ಶ್ರೇಷ್ಠ ಕೃತಿಗಳಲ್ಲಿ ಕಾರಂತರ ಕಾದಂಬರಿಗಳಲ್ಲಿ, ಮಾಸ್ತಿಯವರ ಕಥೆಗಳಲ್ಲಿ, ಅಡಿಗರ ಕವಿತೆಗಳಲ್ಲಿ ಇರುವ ತೊಡಕು ಇದು, ‘ಸತ್ತವರ ನೆರಳು’ ನಾಟಕ
ಇದಕ್ಕೆ ಹೊರತಲ್ಲ.
ಜಾನಪದ ಆಡುವಾತುಗಳ ಉಪಯೋಗ: ಒಂದು ಟಿಪ್ಪಣಿ
ನಮ್ಮ ಸಮಷ್ಟಿ ಬದುಕನ್ನು ನಿರ್ದೇಶಿಸುವ ಮೌಲ್ಯಗಳ, ಶಕ್ತಿಗಳ ಕಲ್ಪನೆಯೇ ಲೇಖಕ ನಿಗಿಲ್ಲವಾದಾಗ ಆತ ಬರೆದದ್ದು ಸಾಹಿತ್ಯಕವಾಗಿ ಎಷ್ಟು ಸುಂದರವಾಗಿದ್ದರೂ ದುರ್ಬಲವಾಗುತ್ತದೆ. ಇಂತಹ ಸಾಹಿತ್ಯಆಡುಮಾತು, ಜಾನಪದ motifs ನಿತ್ಯ ಜೀವನದ ವಿವರಗಳು-ಇವುಗಳನ್ನೂ ಬಳಸಿಕೊಂಡಾಗಲೂ ಅದು ಕೊಡುವ ಬದುಕಿನ ಚಿತ್ರ ಒಟ್ಟಂದದಲ್ಲಿ ಸುಳ್ಳಾಗಿರಬಹುದು. ಈ ನಾಡಿನ ಆಡುಮಾತಿನ ನುಡಿಗಟ್ಟುಗಳನ್ನೂ, ಜಾನಪದವನ್ನೂ ಸೃಷ್ಟಿಸಿದ ಬಹುತೇಕ ಗರೀಬ ಜನ ಇಂದು ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಎಂತಹ ಅತಂತ್ರ ಸ್ಥಿತಿಯಲ್ಲಿದ್ದಾರೆ ಎಂಬುದನ್ನೇ ಗಮನಿಸದೆ, ಅವರ ಆಡುಮಾತಿನ ಸೊಬಗು, ಲಯ ಇತ್ಯಾದಿಗಳನ್ನು ಚಪ್ಪರಿಸುವುದು ತೀರ ಬರ್ಬರ ವಾದದ್ದು. (ಸ್ವಾತಂತ್ರಾನಂತರ, ಬುಡಕಟ್ಟು ಜನಾಂಗಗಳನ್ನು ದರಿದ್ರಾವಸ್ಥೆಗೆ ತಳ್ಳಿದ ನಮ್ಮ ದೆಹಲಿ ದೊರೆಗಳು, ದೆಹಲಿಗೆ ಬರುವ ವಿದೇಶೀಯ ಪ್ರವಾಸಿಗರಿಗೆ ಮಾತ್ರ, ಅವರ ಜಾನಪದ ಹಾಡು, ಕುಣಿತಗಳನ್ನು ಉಣಬಡಿಸುವುದರ ಹಿಪಾಕ್ರಸಿಯನ್ನು ತಮ್ಮ “The continent of circe ನಲ್ಲಿ ಶ್ರೀ ನೀರದ ಚೌಧುರಿ ಕಟುವಾಗಿ ಟೀಕಿಸಿದ್ದು ನನಗೆ ನೆನಪಿಗೆ ಬರುತ್ತಿದೆ.) ಜಾನಪದ, ಆಡುಮಾತುಗಳ ಉಪಯೋಗ ಅವುಗಳಷ್ಟಕ್ಕೇ ಅವು ಸ್ವಯಂಪೂರ್ಣವಾಗಲಾರವು, ಉದಾಹರಣೆಗೆ ಕಾರಂತರ ಹೆಚ್ಚಿನ ಕಾದಂಬರಿಗಳು ಕನ್ನಡದ ಆಡುಮಾತಿನ ವಿಶಿಷ್ಟತೆಯನ್ನು ಹೊಂದಿರುವ ದಕ್ಷಿಣ ಕನ್ನಡ, ಉತ್ತರ ಕನ್ನಡ
ಜಿಲ್ಲೆಗಳು ಮತ್ತು ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದ ಆವರಣವನ್ನು ಪಡೆದಿವೆ. ಆದರೆ ಅವರ ಒಂದು ಕಾದಂಬರಿಯಲ್ಲೂ ಅವರು ಈ ಪ್ರದೇಶಗಳ ಆಡುಮಾತನ್ನು ಉಪಯೋಗಿಸಿಲ್ಲ : (ಕಾದಂಬರಿಗಳ ಪಾತ್ರಗಳ ಸಂಭಾಷಣೆಗಳಲ್ಲೂ ಕೂಡ ಇಲ್ಲ), ತೀರ ಶಿಷ್ಟವೂ ಅಲ್ಲದ, ಆಡುಮಾತಿನದ್ದೂ ಅಲ್ಲದ ಒಂದು ಭಾಷೆಯಲ್ಲಿ ಅವರ ಕಾದಂಬರಿಗಳ ಕಥಾನಕ ಸಾಗುತ್ತದೆ. ಸ್ವಾರಸ್ಯವೆಂದರೆ ಅವರ ಕಾದಂಬರಿಗಳನ್ನು ಓದುವಾಗ ಈ ಅಂಶವೇ ನಮ್ಮ ಗಮನಕ್ಕೆ ಬರುವುದಿಲ್ಲ. ಮನುಷ್ಯ ಸಂಬಂಧಗಳ ಬಗ್ಗೆ ಮತ್ತು ಜೀವನ ಮೌಲ್ಯಗಳ ಬಗ್ಗೆಯೇ ಅವರ ಗಮನವಿರುವುದರಿಂದ, ಅವರ ಧೋರಣೆಗಳನ್ನು ನಾವು ಒಪ್ಪಿಕೊಳ್ಳದಿದ್ದಾಗಲೂ ಅವರು ಕೊಡುವ ಬದುಕಿನ ಚಿತ್ರ, ಆಡುಮಾತಿನ ಉಪಯೋಗ ಇತ್ಯಾದಿ ತಂತ್ರಗಳು ಇಲ್ಲದೆಯೂ ಗಾಢವಾದದ್ದು ಎನ್ನಿಸುತ್ತದೆ. ಚೋಮನ ದುಡಿಯಂತಹ ಕಾದಂಬರಿ ಕೊಡುವ ಅನುಭವ ಮತ್ತು ಹಾಡು ಕುಣಿತಗಳ ಸಂಭ್ರಮದಲ್ಲಿ ನಮ್ಮನ್ನು ಮೈಮರೆಸುವ, “ಉಳುವವನೇ ನೆಲದೊಡೆಯ’ ಎಂಬ ತತ್ವದ ಬಗ್ಗೆ ಇದೆ ಎಂದು ಹೇಳಲಾದ ಕಂಬಾರರ ‘ಜೋಕುಮಾರ” (ಬೆಂಗಳೂರಿನಲ್ಲಿ ಈಗ ೩ ವರುಷಗಳ ಹಿಂದೆ ಬಿ. ವಿ. ಕಾರಂತರ ನಿರ್ದೇಶನದ ಈ ನಾಟಕದ ಪ್ರದರ್ಶನವನ್ನು ನೋಡಿದಾಗ ನನಗೆ ಅನ್ನಿಸಿದ್ದು “ಎಷ್ಟು ಮುದ್ದಾದ ಪ್ರಯೋಗ!” ಎಂದು ಮಾತ್ರ), ನಾಟಕ ಕೊಡುವ ಅನುಭವಗಳನ್ನು ಹೋಲಿಸಿದಾಗ ನನ್ನ ಅಭಿಪ್ರಾಯ ಸ್ಪಷ್ಟವಾಗಬಹುದು. ಈ ಮಾತುಗಳನ್ನು, “ಸತ್ತವರ ನೆರಳು” ನಾಟಕಕ್ಕೆ ಇವು ಸಂಬಂಧಿಸಿದವಲ್ಲವಾದರೂ ನನ್ನ ಪ್ರಬಂಧ ನಮ್ಮ ಸಾಹಿತ್ಯದ ಪ್ರತೀಕಗಳ ಬಗ್ಗೆ ಕೂಡ ಇರುವುದರಿಂದ ಹೇಳುತ್ತಿದ್ದೇನೆ.
Leave A Comment