ಕನ್ನಡ ಮತ್ತು ವಿಜ್ಞಾನ: ಒಂದು ಸಮೀಕ್ಷೆ
ಕನ್ನಡ ಮತ್ತು ವಿಜ್ಞಾನ : ಒಂದು ಸಮೀಕ್ಷೆ
ಡಿ ಎಸ್ ನಾಗಭೂಷಣ
ಇತ್ತೀಚೆಗೆ ಕನ್ನಡದಲ್ಲಿ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದ ಸಾಹಿತ್ಯ ಅಲ್ಲಲ್ಲಿ ಪ್ರಕಟವಾಗತೊಡಗಿದೆ. ಹಿಂದಿನ ಕೆಲವು ದಶಕಗಳಿಗೆ ಹೋಲಿಸಿದಲ್ಲಿ, ಇಂದು ಕನ್ನಡದಲ್ಲಿ ನಡೆಯುತ್ತಿರುವ ವಿಜ್ಞಾನದ ಬರವಣಿಗೆ ಗಮನಾರ್ಹವಾಗಿಯೇ ಇದೆ. ಇದಕ್ಕೆ ಬಹುಶಃ ಕನ್ನಡಿಗರಲ್ಲಿ ಹೆಚ್ಚಾದ ಆತ್ಮಾಭಿಮಾನ ಹಾಗೂ ಕನ್ನಡಕ್ಕೆ ಸರ್ಕಾರ ನೀಡಲಾರಂಭಿಸಿದ ಅಷ್ಟಿಷ್ಟು ಪ್ರೋತ್ಸಾಹಗಳು ಭಾಗಶಃ ಕಾರಣವಾಗಿವೆ. ಕರ್ನಾಟಕದ ಮೂರೂ ವಿಶ್ವ ವಿದ್ಯಾಲಯಗಳು, ಕನ್ನಡದಲ್ಲಿ ವಿಜ್ಞಾನ ಪುಸ್ತಿಕೆಗಳನ್ನು ಪ್ರಕಟಿಸಲು, ತಮ್ಮ ವಾರ್ಷಿಕ ಆಯವ್ಯಯ ಪತ್ರದಲ್ಲಿ, ಒಂದಿಷ್ಟು ಹಣ ಎತ್ತಿಡುವಷ್ಟು ಕನ್ನಡ ಜಾಗೃತಿ ಉಂಟಾಗಿದೆ. ಮೂರೂ ವಿಶ್ವವಿದ್ಯಾಲಯಗಳೂ ತಮ್ಮ ಅಧಿಕೃತ ಪತ್ರಿಕೆಗಳಲ್ಲಿ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದ ಕನ್ನಡ ಲೇಖನಗಳನ್ನು ಪ್ರಕಟಿಸುತ್ತಿವೆ. ಒಂದಷ್ಟು ಜನ ಕನ್ನಡಾಭಿಮಾನಿಗಳು ಸೇರಿ, ವಿಜ್ಞಾನಕ್ಕೆ ಮೀಸಲಾದ ಮಾಸ ಪತ್ರಿಕೆಯೊಂದನ್ನು ನಡೆಸುತ್ತಿದ್ದಾರೆ. ಮೈಸೂರಿನ ಆಹಾರ ಸಂಶೋಧನಾ ಕೇಂದ್ರವು, ಕನ್ನಡದಲ್ಲಿಯೇ ಪತ್ರಿಕೆಯೊಂದನ್ನು ಪ್ರಕಟಿಸುತ್ತಿದೆ. ನಾಡಿನ ಹೆಚ್ಚು ಕಡಿಮೆ ಎಲ್ಲಾ ಜನಪ್ರಿಯ ಪತ್ರಿಕೆಗಳೂ ನಿಯಮಿತವಾಗಿ ವೈಜ್ಞಾನಿಕ ಲೇಖನಗಳನ್ನು ಪ್ರಕಟಿಸುತ್ತಿವೆ. ಆಕಾಶವಾಣಿ ಸಹ ಆಗಾಗ್ಗೆ ವಿಜ್ಞಾನ ವಿಷಯಗಳ ಬಗ್ಗೆ ಕನ್ನಡ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ. ಕೆಲವೆಡೆ ಕಾಲೇಜುಗಳಲ್ಲೂ ಸಹ ವಿಜ್ಞಾನ ವಿಷಯಕ್ಕೆ ಕನ್ನಡ ಮಾಧ್ಯಮವನ್ನು ಆರಿಸಿಕೊಂಡಿರುವ ವಿದ್ಯಾರ್ಥಿ ಸಮುದಾಯವೂ ಕಂಡು ಬರುತ್ತದೆ. ಇವೆಲ್ಲವೂ ಒಂದು ವಿಸ್ತ್ರತವಾದ ಸಾಧನೆಯ ವಿವರಗಳು. ಈ ಸಾಧನೆ ಒಂದೆರಡು ದಶಕಗಳಲ್ಲಿ ಆದದ್ದು ಎಂಬುದನ್ನು ಗಮನಿಸಿದಾಗ ಇದು ಸಾಧಾರಣವಾದದ್ದೇನಲ್ಲ ಎನಿಸುತ್ತದೆ. ಆದರೆ ಈ ಸಾಧನೆ, ತನಗೆ ಪ್ರಸ್ತುತವಾದ ಕ್ಷೇತ್ರಗಳಲ್ಲಿ, ತಾನು ಬೀರಬೇಕಾದ ಪ್ರಭಾವವನ್ನು ಬೀರಿಲ್ಲ ಎಂಬುದು. ಇಷ್ಟೆಲ್ಲಾ ಸಾಧನೆಯ ಗಟ್ಟಿತನದ ಬಗ್ಗೆಯೇ ಸಂಶಯ ಹುಟ್ಟಿಸಿಬಿಡುತ್ತದೆ. ಇಲ್ಲಿ ನಾನು ‘ತನಗೆ ಪ್ರಸ್ತುತವಾದ ಕ್ಷೇತ್ರಗಳು’ ಎಂದು ಪ್ರಸ್ತಾಪಿಸಿರುವುದು ವಿಜ್ಞಾನ ಕ್ಷೇತ್ರದ ವಿವಿಧ ಸ್ತರಗಳಲ್ಲಿನ ವಲಯಗಳನ್ನು; ಅರ್ಥಾತ್, ವಿಜ್ಞಾನ ವಿಷಯಗಳ ಉಪಾಧ್ಯಾಯರುಗಳು, ವಿಜ್ಞಾನಿಗಳು, ವಿಜ್ಞಾನದ ವಿದ್ಯಾರ್ಥಿಗಳು, ವಿಜ್ಞಾನ ವಿಷಯಗಳನ್ನು ಕುರಿತ ಪಠ್ಯಪುಸ್ತಕಗಳ ಬರಹಗಾರರು ಹಾಗೂ ವಿಜ್ಞಾನಾಸಕ್ತ ಓದುಗರು, ಶಿಕ್ಷಣಕ್ಕೆ ಅತ್ಯಂತ ಸೂಕ್ತ ಮಾಧ್ಯಮವೆಂದರೆ ಮಾತೃಭಾಷೆ ಎಂಬುದನ್ನು ಈ ಎಲ್ಲರೂ ಒಪ್ಪುತ್ತಾರೆ (ಕೆಲವು ಕಟ್ಟಾ ಆಂಗ್ವಾಭಿಮಾನಿಗಳನ್ನುಳಿದು). ಆದರೆ, ವಿಜ್ಞಾನದ ವಿಷಯ ಬಂದಾಗ ಇವರು, ಯಾವುದೇ ನಿರ್ಧಾರಾತ್ಮಕ ಅಭಿಪ್ರಾಯ ನೀಡಲು ಹಿಂಜರಿಯುತ್ತಾರೆ!
ಸಾರ್ವಜನಿಕಾಭಿಪ್ರಾಯವೂ ಸಹ ನಿರ್ಧಾರಾತ್ಮಕವಾಗಿ ವಿಜ್ಞಾನವನ್ನು ಕನ್ನಡದಲ್ಲಿ ಕಲಿಸುವ ಪದ್ದತಿಯ ಪರವಾಗಿದೆ ಎಂದು ಹೇಳಲಾಗುವುದಿಲ್ಲ ಎಂಬುದನ್ನು, ಯಾವುದೇ ನಿರ್ಲಿಪ್ತ ವೀಕ್ಷಕನೂ ಒಪ್ಪುತ್ತಾನೆ. ಹೀಗೇಕೆ ? ಎರಡು ದಶಕಗಳಲ್ಲಿ ನಡೆದಿದೆ ಎಂದು ಮೇಲೆ ಹೇಳಲಾದ ಸಾಧನೆ, ಕೇವಲ ಕಾಗದದ ಮೇಲಿನ ಸಾಧನೆಯೆ? ಇದು. ಸರ್ಕಾರದ ಪ್ರೋತ್ಸಾಹಕ್ಕೆ ಮಣಿದ ತಿಣುಕಿನ ಬರಹವೇ? ಅಥವಾ ಕೆಲವು ಸಮರ್ಥ ಕನ್ನಡದ ವಿಜ್ಞಾನ ಲೇಖಕರ ಆದರ್ಶದ ಒಣ ಅನುಕರಣೆ ಮಾತ್ರವೇ ?
ಇದು ಕನ್ನಡವೊಂದೇ ಎದುರಿಸುತ್ತಿರುವ ಸಮಸ್ಯೆಯಾಗಿರದೆ ಒಂದು ಮಟ್ಟದಲ್ಲಿ ಹಿಂದಿಯನ್ನಕ್ಕಿಳಿದು ಇತರ ಎಲ್ಲಾ ಭಾರತೀಯ ಭಾಷೆಗಳು ಎದುರಿಸುತ್ತಿರುವ ಸಮಸ್ಯೆಯಾಗಿದೆ. ಈ ಸಮಸ್ಯೆಯ ಮೂಲ ಬೇರುಗಳನ್ನು ಹುಡುಕಬೇಕಾದುದು ಶಿಕ್ಷಣ ತಜ್ಞರ, ವಿಜ್ಞಾನವನ್ನೂ ಪ್ರಾದೇಶಿಕ ಭಾಷೆಗಳಲ್ಲಿ ಬರೆಯುವ, ಹಾಗೂ ಪ್ರಕಟಿಸುವವರ ಆದ್ಯ ಕರ್ತವ್ಯವಾಗಿದೆ. ಸಮಸ್ಯೆಯನ್ನು ಎದುರಿಸದೆ, ಅವುಗಳಿಗೆ ಸೂಕ್ತ ಉತ್ತರ ಕಂಡು ಕೊಳ್ಳದೇ, ವಿಜ್ಞಾನವನ್ನು ಪ್ರಾದೇಶಿಕ ಭಾಷೆಗಳಲ್ಲಿ ಬರೆಯುವ ಅಥವಾ ಬರೆಸುವ ಪ್ರಯತ್ನ ಕೇವಲ ಬಲವಂತ ಮಾಘಸ್ನಾನವಾಗುತ್ತದೆ. ಅದರಿಂದಾಗಿ ಸಾರ್ವಜನಿಕ ಹಣ ಹಾಗೂ ಶ್ರಮ ವ್ಯರ್ಥವಾಗುತ್ತದೆ. ಈ ಬಗ್ಗೆ ಒಂದಿಷ್ಟು ಹುಡುಕಾಟ ನಡೆಸುವುದೇ ಪ್ರಸ್ತುತ ಲೇಖನದ ಉದ್ದೇಶವಾಗಿದೆ.
ಕೆಲವು ಅತ್ಯಾಧುನಿಕವಾದ ವೈಜ್ಞಾನಿಕ ಪರಿಕಲ್ಪನೆಗಳ ಪ್ರಸ್ತಾಪ ನಮ್ಮ ವೇದೋಪನಿಷತ್ತು ಹಾಗೂ ಇತರ ಪ್ರಾಚೀನ ಗ್ರಂಥಗಳಲ್ಲಿ ಕಂಡು ಬರುತ್ತವೆ ಎಂದು ಹೇಳುವವರಿದ್ದಾರೆ. ವಿಜ್ಞಾನದಂತಹ ಅತ್ಯಂತ ಶಾಸ್ತ್ರೀಯವಾದ ಹಾಗೂ ತರ್ಕಬದ್ಧವಾದ ವಿಷಯವು ತನ್ನ ಬೇರುಗಳನ್ನು ಕಾಲ ಸಮಷ್ಟಿಯಲ್ಲಿಯೇ ಬಿಟ್ಟಿರಬೇಕು. ಇಂದಿನ ವಿಜ್ಞಾನ ವಿಷಯಗಳ ಬೀಜವಸ್ತುಗಳ ಅಸ್ಪಷ್ಟರೂಪವನ್ನು ನಮ್ಮ ಪ್ರಾಚೀನರು ಗಮನಿಸಿರಬಹುದು; ಅವುಗಳ ಬಗ್ಗೆ ಚಿಂತಿಸಿರಬಹುದು. ಅಂದಮಾತ್ರಕ್ಕೆ ಇಡೀ ವಿಜ್ಞಾನಕ್ಕೆ ಭಾರತ ತವರಾಗಿತ್ತು ಎಂದು ಹೇಳುವುದು. ಕೇವಲ ಅಂಧಾಭಿಮಾನದಿಂದ ಹುಟ್ಟುವ ಅರ್ಥಹೀನ ಆವೇಶವಾಗುತ್ತದೆ. ಸ್ಪಷ್ಟವಾದ ದಾಖಲೆಗಳೇ ಹೇಳುವಂತೆ, ವಿಜ್ಞಾನದ ಬಗ್ಗೆ ‘ನಿಜ’ವಾದ ಆಸಕ್ತಿ ಮಾನವನಲ್ಲಿ ಎದ್ದು ಕಾಣುವಂತೆ ಕಂಡುಬಂದದ್ದು ೧೬ ನೇ ಶತಮಾನದಲ್ಲಿ. ಇದು ೧೪-೧೬ ನೇ ಶತಮಾನದಲ್ಲಿ ಹಿಂದಿನ ರೋಮ್ ಹಾಗೂ ಗ್ರೀಕ್‌ನ ಪ್ರೌಢ ಆದರ್ಶಗಳ ಪ್ರಭಾವದಿಂದ ಯೂರೋಪ್‌ನಲ್ಲಿದ್ದ ಹೊಸ ಚಿಂತನೆಯ ಅಲೆಗಳ ಮೇಲೆ ತೇಲಿಬಂದ ಪ್ರತಿಭಾವಂತರ ಶತಮಾನ. ವಿಜ್ಞಾನದಲ್ಲಿ ಮೂಲ ಆಸಕ್ತಿ ಆರಂಭವಾದದ್ದು ಸೂರ್ಯ, ಗ್ರಹ, ಚಂದ್ರ-ಈ ಮುಂತಾದ ಆಕಾಶಕಾಯಗಳ ಚಲನೆಯನ್ನು ಕುರಿತು ಕುತೂಹಲದಿಂದ ಈ ಕಾಲಕ್ಕಿಂತ ಮುನ್ನವೇ ತಾಲೆಮಿ, ಪ್ಲೇಟೋ ಮುಂತಾದವರು ಈ ಚಲನೆಯ ಬಗ್ಗೆ, ಪೈಥಾಗೊರಸನು ಜಾಮಿತಿಯ ಬಗ್ಗೆ ಒಂದಿಷ್ಟು ಸಂಶೋಧನೆಗಳನ್ನು ನಡೆಸಿದ್ದರಾದರೂ, ಅವಕ್ಕೆಲ್ಲಾ ಸ್ಪಷ್ಟ ರೂಪ ದೊರೆತದ್ದು ೧೪-೧೬ ನೇ ಶತಮಾನದ ಪುನರುಜ್ಜೀವನ ಯುಗದಲ್ಲೇ. ನಂತರ ಕಿಪ್ಲರ್, ಗೆಲಿಲಿಯೋ, ನ್ಯೂಟನ್‌ರಿಂದ ಹಿಡಿದು ಈ ಶತಮಾನದ ಐನ್‌ಸ್ಟೀನ್‌ವರೆಗೆ ಎಲ್ಲಾ ಉತ್ತುಂಗ ವಿಜ್ಞಾನಿಗಳೂ ಪಾಶ್ಚಿಮಾತ್ಯರೇ ಆಗಿದ್ದಾರೆ. ಬ್ರಿಟನ್, ಜರ್ಮನಿ, ಇಟಲಿ ಮುಂತಾದ ರಾಷ್ಟ್ರಗಳಲ್ಲಾದ ಹೊಸ ಹೊಸ ಸಂಶೋಧನೆಗಳು ಸಹಜವಾಗಿ ಇಂಗ್ಲಿಷ್, ಜರ್ಮನ್, ಫ್ರೆಂಚ್ ಮುಂತಾದ ಪಾಶ್ಚಿಮಾತ್ಯ ಭಾಷೆಗಳಲ್ಲಿಯೇ ನಡೆದವು. ಆದುದರಿಂದ ವಿಜ್ಞಾನದ ಪರಿಭಾಷೆಗೆ ಗ್ರೀಕ್, ಲ್ಯಾಟಿನ್, ಫ್ರೆಂಚ್, ಜರ್ಮನ್ ಮುಂತಾದ ಪಾಶ್ಚಿಮಾತ್ಯ ಶಬ್ದ ಭಂಡಾರವೇ ಆಧಾರವಾಗಿದೆ. ಆದುದರಿಂದ ಆ ಸಂಶೋಧನೆಗಳು ಭಾರತಕ್ಕೆ ಬಂದುದು ಸಹ ಇಂಗ್ಲಿಷಿನಲ್ಲಿಯೇ; ಅಲ್ಲದೆ, ಅಷ್ಟು ಹೊತ್ತಿಗೆ ಭಾರತವೂ ಸಹ ಬಿಳಿತೊಗಲಿನವರ ಕೈಕೆಳಗಿದ್ದು, ಇಂಗ್ಲಿಷ್ ಕೂಡ ಪ್ರತಿಷ್ಠೆಯ ಸ್ಥಾನದಲ್ಲಿದ್ದು, ನಮ್ಮವರಿಗೂ ಇಂಗ್ಲಿಷ್ ಕಲಿಕೆ ಒಂದು ಪ್ರತಿಷ್ಠೆಯ ವಿಷಯವಾಗಿ-ನಂತರ ಒಂದು ಹುಚ್ಚಾಗಿ–ಅದು, ಯಾವುದೇ ಹೊಸ ವಿಷಯಗಳ ಅಭಿವ್ಯಕ್ತಿ ಮಾಧ್ಯಮವಾಗಿ ಸುಭದ್ರ ಸ್ಥಾನ ಗಳಿಸಿತು; ಭಾರತೀಯ ಭಾಷೆಗಳು ನೆಲ ಕಚ್ಚಿದವು. ಇಂಗ್ಲೀಷಿನ ಈ, ‘ಸುಭದ್ರತೆ ಎಷ್ಟು ‘ಸು’ ಆಗಿದೆ ಎಂಬುದು, ಅದನ್ನು ಬಿಡಲೂ ಆಗದ, ಇಟ್ಟುಕೊಳ್ಳಲೂ ಆಗದ ಅನಿಶ್ಚಿಯತೆಯ ಸ್ಥಿತಿಯಲ್ಲಿ ತೊಳಲಾಡುವ ಇಂದಿನ ನಮ್ಮ ಅಸ್ಪಷ್ಟ ಧೋರಣೆಯಲ್ಲಿ ವ್ಯಕ್ತವಾಗುತ್ತಿದೆ.
ಸ್ವಾತಂತ್ರ‍್ಯದೊಂದಿಗೆ, ಆತ್ಮವಿಶ್ವಾಸ-ನಂತರ ಸಹಜವಾಗಿ ಆತ್ಮಾಭಿಮಾನ ನಮ್ಮಲ್ಲಿ ಮೂಡಿತು. ಆರ್ಥಿಕ, ಸಾಮಾಜಿಕ ಕ್ಷೇತ್ರಗಳಲ್ಲಿನ ಪುನರ್‌ಚಿಂತನೆ ಹಾಗೂ ಸ್ವಾವಲಂಬನೆಯ ಪ್ರಜ್ಞೆ ಎಚ್ಚತ್ತಂತೆ, ಶಿಕ್ಷಣ ಕ್ಷೇತ್ರದಲ್ಲೂ ಸಹ, ಹೊಸ ಮಾರ್ಗಗಳ ಅನ್ವೇಷಣೆ ಆರಂಭವಾಯಿತು. ಯಾವುದೇ ಇತರ ಭಾಷೆ ಯಾವುದೇ ಹಂತದಲ್ಲಿ ಎಷ್ಟೇ ಮಹತ್ವದ ಪಾತ್ರ ನಿರ್ವಹಿಸುತ್ತಿರಲಿ-ಅದು ಎಷ್ಟೇ ಸಮರ್ಥ ಭಾಷೆ ಎನಿಸಿರಲಿ-ಮಾತೃಭಾಷೆಗೆ ಮಿಗಿಲಾದ ಶಿಕ್ಷಣ ಮಾಧ್ಯಮ ಮತ್ತೊಂದಿಲ್ಲ ಎನ್ನುವ (You cannot jump out of your skin ಎನ್ನುವ ಹಾಗೆ) ವಿಶ್ವ ಸತ್ಯವನ್ನು ನಾವು ಒಪ್ಪಿಕೊಂಡೆವು. ಆದರೆ ಸತ್ಯವನ್ನು ಒಪ್ಪಿಕೊಂಡಷ್ಟು ಸುಲಭವಾಗಿ, ಆ ಸತ್ಯದ ಅನ್ವಯದಿಂದ ಉಂಟಾಗುವ ಸಂದರ್ಭಗಳನ್ನು ಎದುರಿಸುವುದು ಸುಲಭವಲ್ಲ ಎಂಬ ಮತ್ತೊಂದು ಸತ್ಯವೂ ನಮಗೆ ಗೋಚರಿಸಿತು. ಹೀಗೆ ಎರಡು ಸತ್ಯಗಳು ಒಂದಕ್ಕೊಂದು ವಿರುದ್ಧ ದಿಕ್ಕಿನಲ್ಲಿ ನಿಂತ ಗೊಂದಲಮಯ ವಾತಾವರಣ ಉಂಟಾಯಿತು. ಇದು ಸಾಲದಂತೆ, ದೇಶಕ್ಕೊಂದು (ಅದೂ ಒಂದೇ ಒಂದು ಮಾತ್ರ!) ಭಾಷೆ ಇರಬೇಕು-ಆದುದರಿಂದ ಅದು ಹಿಂದಿಯಾಗಿರಬೇಕೆಂಬ ಧ್ವನಿ ಮೊದಲು ರಂಗದ ಇಕ್ಕೆಲಗಳಿಂದ ಆರಂಭವಾಗಿ, ನಂತರ ದೇಶದ ಜನಪ್ರಿಯ ರಾಜಕೀಯ ಮುಖಂಡರುಗಳ ಆಶೀರ್ವಾದ ಪಡೆದು, ನೇರವಾಗಿ ರಂಗದ ಮಧ್ಯಭಾಗದಲ್ಲಿಯೇ ಪ್ರತಿಧ್ವನಿತವಾಯಿತು. ಲೋಹಿಯಾರಂತಹ ಚಿಂತನ ಶೀಲರೂ ಒಂದಷ್ಟು ಕಾಲ ಭಾವಾವೇಶದಲ್ಲಿ ಮುಳುಗಿ, ಹಿಂದಿ ಭಾರತದ ಏಕೈಕ ಭಾಷೆ (ಅಧಿಕೃತ) ಯಾಗಬೇಕೆಂದು ಬಯಸಿದರೂ, ನಂತರ ಸಹಜವಾಗಿ ಮನಸ್ಸು ಬದಲಿಸಿದರು. ಯಾವುದನ್ನೂ ಒತ್ತಾಯ ಪೂರ್ವಕವಾಗಿ ಹೇರಲು ಬಯಸದ, ಉನ್ನತ ಪ್ರಜಾಸತ್ತಾವಾದಿಯಾಗಿದ್ದ ನೆಹರೂ ಅವರೂ ಸಹ ಹಿಂದಿಯೇತರರಿಗೇ, ಬೇಕು ಎನಿಸುವವರೆಗೆ ಹಿಂದಿ ಹೇರಿಕೆ ಸಲ್ಲದು ಎಂದರು. ಆದರೆ ರಾಜಕೀಯವೇ ದೊಡ್ಡ ಉದ್ಯಮವಾಗಿರುವ ನಮ್ಮ ಅವಿದ್ಯಾವಂತ ರಾಷ್ಟ್ರದಲ್ಲಿ, ಭಾವ ವಿಕಾರ, ಮಿಥ್ಯ ಆತ್ಮಪ್ರತಿಜ್ಞೆಗಳೊಂದಿಗೆ ಸಖ್ಯ ಬೆಳೆಸಿದ ಯಾವುದಕ್ಕೆ ಆಗುವಂತೆ, ಭಾಷೆಯ ಜಟಿಲತೆಯ ಬಣ್ಣ ಬಳಿದುಕೊಂಡಿತು. ಶಾಲಾ ಕಾಲೇಜುಗಳ ಅಸಂಖ್ಯಾತ ಚರ್ಚಾ ಸ್ಪರ್ಧೆಗಳಿಗೆ ವಿಷಯವಾಗಿ ಸವೆಯಿತು. ಆದರೆ ಮೂಲಭೂತ ಸತ್ಯವನ್ನು ಎಂದೂ ಸಂಪೂರ್ಣವಾಗಿ ತುಳಿಯಲು ಅಸಾಧ್ಯ. ವಿಷಯ ಜಟಿಲವಾಗುತ್ತಾ, ಕೊನೆಗೆ ತರಲೆಯಾಗುತ್ತಾ ನಡೆದರೂ ಸಹ, ಪ್ರಾದೇಶಿಕ ಭಾಷೆಗಳ ಬೆಳವಣಿಗೆಗೆ ಬುದ್ದಿಜೀವಿಗಳಂತಹವರ, ನಿಷ್ಠ ಶಿಕ್ಷಣತಜ್ಞರಂತಹವರ ಹಾಗೂ ಪ್ರಾದೇಶಿಕ ಭಾಷೆಗಳ ನಿಜವಾದ ಸಾಮರ್ಥ್ಯದ ಅರಿವುಳ್ಳ ಲೇಖಕರಂತಹವರ ವಲಯಗಳಿಂದ, ಉತ್ಸಾಹಪೂರ್ಣ ಪ್ರೋತ್ಸಾಹ ದೊರಕಿತು. ಇದರಿಂದಾಗಿ ಆಕ್ರಮಣಗಳ ಮೇಲೆ ಆಕ್ರಮಣಗಳ ನಡುವೆಯೂ ಸಮರ್ಥ ಪ್ರಾದೇಶಿಕ ಭಾಷೆಗಳು ಸಾಯದಂತೆ ಉಳಿದವು.
ಮೊದಲೇ ಹೇಳಿದಂತೆ ಸಂವಹನ ಶೀಲತೆಯ ದೃಷ್ಟಿಯಿಂದ ಕನ್ನಡ ಎದುರಿಸುತ್ತಿರುವ ಸಮಸ್ಯೆಯು ಯಾವುದೇ ಪ್ರಾದೇಶಿಕ ಭಾಷೆ ಎದುರಿಸುತ್ತಿರುವ ಸಮಸ್ಯೆಯಾಗಿರುವುದರಿಂದ, ಮುಂದೆ ಕನ್ನಡದ ಮಟ್ಟಿಗೆ ವ್ಯಕ್ತಪಡಿಸಲಾಗುವ ಅಂಶಗಳು ಯಾವುದೇ ಪ್ರಾದೇಶಿಕ ಭಾಷೆಗೂ ಅನ್ವಯಿಸಬಹುದೆಂದು ಕಾಣುತ್ತದೆ. ಸಾಹಿತ್ಯ, ಚರಿತ್ರೆ ಮುಂತಾದ ಸಾಂಪ್ರದಾಯಿಕ ಶಾಸ್ತ್ರಗಳು ಇಂಗ್ಲಿಷ್ ಆಕ್ರಮಣದ ಮುನ್ನವೇ (ಸಂಸ್ಕೃತರ ಆಕ್ರಮಣಕ್ಕೆ ಮಣಿದು-ನಂತರ ಅದನ್ನು ತನ್ನ ಸಾಕುತಾಯಿಯೆಂದು ಒಪ್ಪಿಕೊಂಡುಕೊನೆಗೆ ಶತಶತಮಾನಗಳಷ್ಟು ಕಾಲ ಪ್ರವಾಹದಲ್ಲಿ ಅದರೊಂದಿಗೆ ನೀನೇ ನಾನು, ನಾನೇ ನೀನು ಎನ್ನುವಷ್ಟು ಆತ್ಮೀಯವಾಗಿ ಬೆರೆತು) ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲ್ಪಟ್ಟದಾದುದರಿಂದ, ಭಾಷೆಯ ಸಮಸ್ಯೆ ವಿಜ್ಞಾನದ ವಿಷಯಗಳನ್ನು ಕಾಡಿದಷ್ಟು ಇದನ್ನು ಕಾಡಲಿಲ್ಲ. ವಿಜ್ಞಾನ ಕೇವಲ ತಾಂತ್ರಿಕ ಶಬ್ದಗಳ ಸಮಸ್ಯೆಯನ್ನು ಮಾತ್ರ ಎದುರಿಸಬೇಕಾಗಿದ್ದಲ್ಲದೆ, ವೈಜ್ಞಾನಿಕ ಪರಿಕಲ್ಪನೆಗಳ ಸಮರ್ಥ ನಿರೂಪಣೆಗೆ ಪೂರಕವಾಗುವಂತಹ ಭಾಷೆಯ ಶೈಲಿಯ ಸಮಸ್ಯೆಯನ್ನೂ ಎದುರಿಸಬೇಕಾಯಿತು. ಅಂತೂ ಈ ವಿಷಯದಲ್ಲಿ ಕನ್ನಡ (ಅಂದರೆ ಯಾವುದೇ ಪ್ರಾದೇಶಿಕ ಭಾಷೆ) ಒಂದು ಅಗ್ನಿ ಪರೀಕ್ಷೆಗೆ ಸಿದ್ಧವಾಗಬೇಕಾಯಿತು. ಆ ಅಗ್ನಿ ಪರೀಕ್ಷೆ ಇನ್ನೂ ನಡೆಯುತ್ತಲೇ ಇದೆ!
ಕನ್ನಡದಲ್ಲಿ ಮೊಟ್ಟ ಮೊದಲ ವಿಜ್ಞಾನ ಪುಸ್ತಕ ೧೮೧೭ ರಲ್ಲಿಯೇ ಪ್ರಕಟವಾಯಿತೆಂದು ಮೈಸೂರು ವಿಶ್ವವಿದ್ಯಾನಿಲಯ ಪ್ರಕಟಿಸಿರುವ ‘ಕನ್ನಡ ಗ್ರಂಥ ಸಂಪುಟ-೧’ ತಿಳಿಸಿದರೂ ಸಹ, ಕನ್ನಡವನ್ನು ವಿಶ್ವವಿದ್ಯಾಲಯದ ಆವರಣಕ್ಕೆ ತರಲು ಯತ್ನಿಸಿದ್ದು ೧೯೨೫ ರಲ್ಲಿ. ಆ ಶ್ರೇಯಸ್ಸು ಸೆಂಟ್ರಲ್ ಕಾಲೇಜಿನಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಚುನಾವಣಾ ಕ್ಷೇತ್ರದಿಂದ ಮೈಸೂರು ಪ್ರಜಾಪ್ರತಿನಿಧಿ ಸಭೆಗೆ ಚುನಾಯಿತರಾಗಿದ್ದ, ಶ್ರೀ ಬೆಳ್ಳಾವೆ ವೆಂಕಟನಾರಣಪ್ಪನವರಿಗೆ ಸಲ್ಲುತ್ತದೆ. ಅವರು ಆ ಸಭೆಯಲ್ಲಿ,
“ಜನ ಸಾಮಾನ್ಯರಲ್ಲಿ ತಕ್ಕಷ್ಟು ಇಂಗ್ಲಿಷ್ ಜ್ಞಾನವನ್ನು ಹರಡುವುದು ಸದ್ಯದಲ್ಲಿ ಸಾಧ್ಯವಿಲ್ಲವಾದ್ದರಿಂದ, ಅವರಿಗೆ ಪಾಶ್ಚಾತ್ಯ ವಿಜ್ಞಾನದ ಮೂಲಾಂಶಗಳ ತಿಳುವಳಿಕೆಯಾದರೂ (ಕನ್ನಡದಲ್ಲಿ) ಲಭ್ಯವಾಗುವಂತೆ ಮಾಡುವುದಕ್ಕಾಗಿ, ಸರ್ಕಾರದವರು ತಕ್ಕ ಸಿಬ್ಬಂದಿಯನ್ನು ನೇಮಿಸಿ, ಒಂದು ಸಕಲ ವಿಷಯ ಸಂಗ್ರಹವಾದ ಇಂಗ್ಲೀಷು-ಕನ್ನಡ ನಿಘಂಟನ್ನು ಮತ್ತು ಕನ್ನಡದಲ್ಲಿ ಒಂದು ವಿಶ್ವಕೋಶ- ಇವುಗಳ ರಚನೆಗೆ ತಕ್ಕ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕೆಂದು-ಈ ಸಭೆ ಶಿಫಾರಸ್ಸು ಮಾಡುತ್ತದೆ.”
-ಎಂಬ ನಿರ್ಣಯವನ್ನು ಮಂಡಿಸಿದರು. ಈ ನಿರ್ಣಯವು ಸರ್ವಾನುಮತದಿಂದ ಅಂಗೀಕಾರವಾಯಿತು. ಅಂಗೀಕಾರದ ಎಂಟು ವರ್ಷಗಳ ನಂತರ ವಿಜ್ಞಾನ ಶಬ್ದಗಳೂ ಸೇರಿದ ಇಂಗ್ಲಿಷ್-ಕನ್ನಡ ನಿಘಂಟು ರಚನೆ ಆರಂಭವಾಗಿ, ೧೯೪೬ ರ ಕೊನೆಯ ಹೊತ್ತಿಗೆ ಮುಗಿಯಿತು. ಆದರೆ ಈ ನಿಘಂಟು ಹೊರಬರುವ ಮುನ್ನವೇ ಯಾವುದೇ ಅಧಿಕೃತ ಕಾರ‍್ಯಕಲಾಪದಗಳ ತಕರಾರುಗಳಿಲ್ಲದೆ, ಕೇವಲ ಅಭಿಮಾನ, ಉತ್ಸಾಹ ಹಾಗೂ ಕ್ರಿಯಾಶೀಲ ಕಾರ್ಯವೊಂದನ್ನು ಮಾಡಬೇಕೆಂಬ ಛಲದಿಂದಾಗಿ, ಕನ್ನಡದಲ್ಲಿ ವಿಜ್ಞಾನದ ಬರವಣಿಗೆಯ ಹರಿಕಾರರೆಂದೆನಿಸಿರುವ ಶ್ರೀ ಶಿವರಾಮ ಕಾರಂತರು ೧೯೩೧ ರ ಹೊತ್ತಿಗೇ ಮಕ್ಕಳಿಗಾಗಿ ಬಾಲಪ್ರಪಂಚವನ್ನು ಸಿದ್ದಪಡಿಸಿದರು. ಇದನ್ನೇ ನಾವು ಕನ್ನಡದಲ್ಲಿ ವಿಜ್ಞಾನವನ್ನು ಬರೆಯಲು ಇಟ್ಟ ಮೊದಲ ಹೆಜ್ಜೆ ಎಂದು ಗುರುತಿಸಬಹುದು.
ಈಗಲೂ ಕೂಡ ಕನ್ನಡದ ನಿಜವಾದ ಸಮಗ್ರ ವಿಜ್ಞಾನ ಬರಹಗಾರರೆಂದರೆ ಶಿವರಾಮ ಕಾರಂತರೊಬ್ಬರೇ. ಕಾರಂತರೇ ಒಮ್ಮೆ ಹೇಳಿದಂತೆ, ಅವರು ಸಾಹಿತಿಗಳಾಗಿದ್ದರೂ, ಸಾಹಿತ್ಯ ಕೃತಿಗಳನ್ನು ಓದುವುದು ಅಪರೂಪ. ಅವರು ಓದುವುದು ವಿಜ್ಞಾನದ ಪುಸ್ತಕಗಳನ್ನು ಎಳೆಯರಿಗಾಗಿ ಬರೆದ ‘ಬಾಲ ಪ್ರಪಂಚ’ವನ್ನು ಈಗ್ಗೆ ಕೂಡಾ ಯಾವುದೇ ಭಾಷೆಯಲ್ಲಿನ ಆ ಪ್ರಕಾರಕ್ಕೆ ಸೇರಿದ ಪುಸ್ತಕಗಳಿಗೆ ಹೋಲಿಸಬಹುದಾಗಿದೆ. ನಂತರ ಬರೆದ, ವಿಜ್ಞಾನ ಪ್ರಪಂಚದ ನಾಲ್ಕು ಸಂಪುಟಗಳಂತೂ ಕನ್ನಡಕ್ಕೆ ನೀಡಿದ ಅಪೂರ್ವ ಕೊಡುಗೆಗಳಾಗಿವೆ. ವಿಜ್ಞಾನದ ಇತಿಹಾಸದಿಂದ ಹಿಡಿದು ಈ ಶತಮಾನದ ಅದೈತ ಸಿದ್ಧಾಂತವೆನಿಸಿದ ಐನ್‌ಸ್ಟೀನ್‌ನ ಸಾಪೇಕ್ಷ ಸಿದ್ಧಾಂತದವರೆಗೆ, ಕಾರಂತರು ಈ ಸಂಪುಟಗಳಲ್ಲಿ ಎಲ್ಲಾ ವೈಜ್ಞಾನಿಕ ವಿಷಯಗಳನ್ನು ಕುರಿತೂ (ಭೌತ, ರಸಾಯನ, ಪ್ರಾಣಿ, ಸಸ್ಯ, ವೈದ್ಯ, ಇಂಜನಿಯರಿಂಗ್ ವಿಜ್ಞಾನ) ಈಗಿನ ಪದವಿ ಮಟ್ಟದ ಪಠ್ಯಕ್ರಮಕ್ಕೆ ಸರಿ ಸಮಾನವಾದ ವಿವರಗಳನ್ನು, ವಿಜ್ಞಾನದ ಬಗ್ಗೆ ಕನಿಷ್ಠ ಜ್ಞಾನ (ಕಾರಂತರು ನಿಗದಿ ಮಾಡಿರುವುದು ಎಸ್. ಎಸ್. ಎಲ್. ಸಿ ಮಟ್ಟ) ಇರುವವರಿಗೂ ಅರ್ಥವಾಗುವಂತೆ ನೀಡಿದ್ದಾರೆ. ೧೯೬೪ ರ ಹೊತ್ತಿಗೇ ವಿಜ್ಞಾನದ ಬಗ್ಗೆ ಇಷ್ಟು ವ್ಯಾಪಕವಾದ ವಿವರಣೆಗಳಿರುವ ಪುಸ್ತಕ ಕನ್ನಡದಲ್ಲಿ ಬಂದಿದ್ದರೂ, ಇಂದೂ ಕೂಡಾ, ಕನ್ನಡವು ಶಿಕ್ಷಣ ಮಾಧ್ಯಮವಾಗಲು ಹೆಣಗಾಡುತ್ತಿರುವುದಕ್ಕೆ ಕಾರಣವೇನೆಂದು ಯೋಚಿಸಿದಾಗ ಹೊಳೆಯುವುದು, ಒಂದೇ ಕಾರಣ: ಕಾರಂತರ ನಂತರ ಇಷ್ಟು ಅಮೂಲ್ಯವಾದ ಹಾಗೂ ಪೂರ್ಣವಾಗಿ ಕನ್ನಡದ್ದೇ ಆದ ವಿಜ್ಞಾನ ಗ್ರಂಥ ಬಂದೇ ಇಲ್ಲ ಎನ್ನುವುದು. ಒಂದು ಭಾಷೆ ಶಿಕ್ಷಣ ಮಾಧ್ಯಮವಾಗಲು ಒಂದು ಆಕರ ಗ್ರಂಥ ಸಾಕೇ? ಈ ಮಟ್ಟದ ಹಲವಾರು ಗ್ರಂಥಗಳು ಕನ್ನಡದಲ್ಲಿ ಬರದಿರಲು ಕಾರಣವೇನು? ಈ ಬಗ್ಗೆ ಶ್ರೀ ಜಿ. ಟಿ. ನಾರಾಯಣರಾಯರು ಮಂಡ್ಯದಲ್ಲಿ ನಡೆದ 48 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿನ ವಿಜ್ಞಾನಗೋಷ್ಟಿಯಲ್ಲಿ ಓದಿದ ಪ್ರಬಂಧ (ಸಾಕ್ಷಿ-೨೪ ನೋಡಿ) ದಲ್ಲಿ ಇದು ಹೀಗೇಕೆ ?’ ಎಂಬ ಶೀರ್ಷಿಕೆಯಡಿ ಭೌತವಿಜ್ಞಾನಗಳ ಬಗ್ಗೆ ಮಾಡಿರುವ ವಿಶ್ಲೇಷಣೆ ಇಡೀ ವಿಜ್ಞಾನಕೆ ಅನ್ವಯಿಸುತ್ತದೆ.* ಕಾರಂತರ ವಿಜ್ಞಾನ ಪ್ರಪಂಚ ಗೌರಿಶಂಕರ ಶಿಖರದಂತಿದ್ದರೆ, ಕರ್ನಾಟಕ ಸಹಕಾರೀ ಪ್ರಕಾಶನ ಮಂದಿರದ ಪ್ರಕಟಣೆಯಾದ ‘ಜ್ಞಾನ ಗಂಗೋತ್ರಿ’ಯ ಏಳು ಸಂಪುಟಗಳು, ಶ್ರೀ ಡಿ. ಎಸ್. ಶಿವಪ್ಪನವರು ಸಿದ್ದಪಡಿಸಿದ ವೈದ್ಯ ವಿಜ್ಞಾನಕ್ಕೆ ಸಂಬಂಧಪಟ್ಟ ಇಂಗ್ಲಿಷ್-ಕನ್ನಡ ನಿಘಂಟು ಹಾಗೂ ಪ್ರಬುದ್ಧ ಕರ್ನಾಟಕದ ಚಿನ್ನದ ಹಬ್ಬದ ಸ್ಮರಣಾರ್ಥ ಪ್ರಕಟಿಸಲಾದ ವಿಜ್ಞಾನ ವಿಭಾಗದ ಎರಡು ಸಂಚಿಕೆಗಳು, ಇತರ ಉತ್ತುಂಗ ಶಿಖರಗಳಂತಿವೆ. ಈಗ ಮೈಸೂರು ವಿಶ್ವವಿದ್ಯಾಲಯವು ಅರ್ಧದಷ್ಟು ಮುಗಿಸಿರುವ ಕನ್ನಡ ವಿಶ್ವಕೋಶವು ವಿಜ್ಞಾನವನ್ನು ಒಳಗೊಂಡಿರುವುದರಿಂದ ಅದು ಸಹ ಕನ್ನಡದಲ್ಲಿನ ವೈಜ್ಞಾನಿಕ ಬರಹದಲ್ಲಿ ಒಂದು ಮೈಲಿಗಲ್ಲಾಗುವುದೆಂದು ನಿರೀಕ್ಷಿಸಲಾಗಿದೆ. ಇವಲ್ಲದೇ ಎರಡು ದಶಕಗಳ ಹಿಂದೆಯೇ ಶ್ರೀ ಕೆ. ವಿ. ಪುಟ್ಟಪ್ಪನವರು ಮೈಸೂರು ವಿಶ್ವ ವಿದ್ಯಾನಿಲಯದ ಉಪಕುಲಪತಿಗಳಾಗಿದ್ದಾಗ, ಕನ್ನಡದಲ್ಲಿ ವಿಜ್ಞಾನ ಪ್ರಸಾರವಾಗಬೇಕು ಹಾಗೂ ಶಿಕ್ಷಣಮಾಧ್ಯಮವಾಗಬೇಕೆಂಬ ಘನೋದ್ದೇಶದಿಂದ ವಿಜ್ಞಾನವನ್ನು ಕುರಿತ ಪುಸ್ತಕ ಮಾಲೆಯೊಂದನ್ನೇ ಆರಂಭಿಸಿದರು. ಆದರೆ, ಅಭಿಮಾನ, ಉತ್ಸಾಹ ಹಾಗೂ ಘನೋದ್ದೇಶಗಳೇ ಯೋಜನೆಯೊಂದನ್ನು ಯಶಸ್ವಿಯನ್ನಾಗಿ ಮಾಡಲಾರವೆಂದು, ಈ ಪುಸ್ತಕಗಳು ತೋರಿಸಿಕೊಟ್ಟವು. ಈ ಪುಸ್ತಕಗಳು ಕೇವಲ ಅಧಿಕೃತ ಗ್ರಂಥ ಭಂಡಾರಗಳಲ್ಲಿ ಹಾಗೂ ವಿಶ್ವವಿದ್ಯಾಲಯದ ಗೋಡೌನಂಗಳಲ್ಲಿ ಹೂಳು ತುಂಬಿ ಕೂತಿರುವುದನ್ನು ಕಂಡರೆ, ವಿಷಾದವಾಗುತ್ತದೆ’ ಪದವಿ ಮಟ್ಟಕ್ಕೆ ಯೋಗ್ಯವಾದ ಕೆಲವು ಪುಸ್ತಕಗಳು ಈ ಮಾಲೆಯಲ್ಲಿದ್ದರೂ, ಕನ್ನಡವನ್ನು ಶಿಕ್ಷಣ ಮಾಧ್ಯಮವನ್ನಾಗಿ ಆರಿಸಿಕೊಳ್ಳಲು ವಿದ್ಯಾರ್ಥಿಗಳನ್ನು ಪ್ರಚೋದಿಸಬಲ್ಲ ಯಾವ ಶಕ್ತಿಯೂ ಇಲ್ಲದಿದ್ದಾಗ, ಪುಸ್ತಕಗಳೇನನ್ನು ಮಾಡಿಯಾವು? ಕನ್ನಡವಾದರೂ ಏನು ಮಾಡೀತು? ನಂತರ ಅಥವಾ ಜತೆ ಜತೆಗೇ ವಿಜ್ಞಾನವನ್ನು ಕನ್ನಡದಲ್ಲಿ ಜನಪ್ರಿಯಗೊಳಿಸುವ ಪ್ರಯತ್ನ ನಡೆಯಿತು.ಈ ದಿಸೆಯಲ್ಲಿ ಶ್ರೀ ಆರ್.ಎಲ್.ನರಸಿಂಹಯ್ಯನಂತಹವರು ಭೌತವಿಜ್ಞಾನದ ಬಗ್ಗೆ ಕನ್ನಡದಲ್ಲಿ ಬರೆಯಲಾರಂಭಿಸಿದರು. ಮೈಸೂರು ವಿಶ್ವವಿದ್ಯಾಲಯ ಕೇವಲ ನಾಲ್ಕಾಣೆ ಬೆಲೆಗೆ ವಿಜ್ಞಾನ ಪುಸ್ತಕಗಳನ್ನು ಪ್ರಕಟಿಸುವ ಯೋಜನೆಗೆ ಪ್ರಚೋದನೆ ದೊರಕಿ, ಹಲವಾರು ಪುಸ್ತಕಗಳು ಪ್ರಕಟವಾದವು. ಈಗಲೂ ಕೂಡಾ ಪ್ರಕಟವಾಗುತ್ತಿವೆ.
__________________________
* ಲೇಖಕರ ಸರಾಸು ಬೌದ್ಧಿಕ ಮಟ್ಟದಲ್ಲಿ ಕುಸಿತ, ಅಂದೂ ಇಂದೂ ಕನ್ನಡದಲ್ಲಿ ಭೌತ ವಿಜ್ಞಾನಗಳ ಮೇಲೆ ಬರೆಯಬಲ್ಲ ಸಮರ್ಥರಲ್ಲಿ ಹೆಚ್ಚಿನವರು ಶಾಲಾ ಕಾಲೇಜುಗಳಲ್ಲಿನ ಅಧ್ಯಾಪಕರೇ, ಅಧ್ಯಾಪಕೇತರರಾಗಿದ್ದು ಈ ಕ್ಷೇತ್ರದಲ್ಲಿ ಕೆಲಸ ಮಾಡಿದವರು ಬಲು ಕಡಿಮೆ ಮಂದಿ. ಗಡಿಗೆರೆಯ ಈಚೆಗಿನ ವರ್ಷಗಳಲ್ಲಿ ಅಧ್ಯಾಪಕ ವೃತ್ತಿ ಅತ್ಯುತ್ಕೃಷ್ಟ ಮಿದುಳುಗಳನ್ನು ಆಕರ್ಷಿಸುತ್ತಿಲ್ಲ; ಅಥವಾ ಅಂಥ ಮಿದುಳುಗಳೇನಾದರೂ ಬಂದರೆ ಈ ವೃತ್ತಿ ಅವುಗಳಿಗೆ ಲಭಿಸುತ್ತಿಲ್ಲ; ಅಥವಾ ಹಾಗೇನಾದರೂ ಲಭಿಸಿದರೆ ಅಂಥ ವ್ಯಕ್ತಿಗಳಿಗೆ ಕನ್ನಡದಲ್ಲಿ ಬರೆಯುವುದರ ವಿಚಾರ ನಿರ್ಲಕ್ಷ ಇಲ್ಲವೇ ತಾತ್ಸಾರ ಇಲ್ಲವೇ ಎರಡೂ, ಇವುಗಳೆಲ್ಲವುಗಳ ಪರಿಣಾಮವಾಗಿ ಬರವಣಿಗೆಗಳ ಮಟ್ಟ ಇಳಿಮುಖವಾಗಿದೆ.
________________
ಅಲ್ಲದೆ, ಬೆಂಗಳೂರು ಹಾಗೂ ಕರ್ನಾಟಕ ವಿಶ್ವವಿದ್ಯಾಲಯಗಳೂ ಈ ಯೋಜನೆಗಳನ್ನು ಆರಂಭಿಸಿವೆ. ಈ ಮಾಲೆಯಲ್ಲಿ ಪ್ರಕಟವಾಗಿರುವ ಕೆಲವು ಗ್ರಂಥಗಳು (ಉದಾ: ಮೈಸೂರು ವಿಶ್ವವಿದ್ಯಾಲಯದ ‘ಅಲೆಗಳು’, ಬೆಂಗಳೂರು ವಿಶ್ವವಿದ್ಯಾಲಯದ ‘ಬೆಳಕಿನ ಸ್ವರೂಪ’ ಹಾಗೂ ‘ಉಕ್ಕು: ತಯಾರಿಕೆ ಮತ್ತು ರಚನೆ’ ಇತ್ಯಾದಿ…) ಕನಿಷ್ಟ ವಿಜ್ಞಾನ ಜ್ಞಾನವಿರುವ ಶ್ರೀಸಾಮಾನ್ಯನಿಗೂ ಸಹ ಉಪಯುಕ್ತವಾಗಿವೆ. ಇವು ಸುಲಭ ಬೆಲೆಗೂ ಸಹ ದೊರೆಯುವಂತಾಗಿರುವುದರಿಂದ, ಕನ್ನಡದಲ್ಲಿ ಬರೆಯಲಾಗಿರುವ ಪುಸ್ತಕಗಳಲ್ಲಿ ಇವು ಮಹತ್ವದ ಸ್ಥಾನ ಗಳಿಸುತ್ತವೆ. ವಿಜ್ಞಾನವನ್ನು ಕನ್ನಡದ ಮೂಲಕ ಜನಪ್ರಿಯಗೊಳಿಸುವ ಪ್ರಯತ್ನಗಳಲ್ಲಿ ಇದು, ಅತ್ಯಂತ ರಚನಾತ್ಮಕ ಕಾರ್ಯಕ್ರಮವಾಗಿದೆ. ಈ ಪ್ರಯತ್ನಗಳಿಗೆ ವಿಶ್ವವಿದ್ಯಾಲಯಗಳ ಧನ ಸಹಾಯದ ಬೆಂಬಲವಿದ್ದು, ಇವುಗಳಿಗೆ ಸೂಕ್ತ ಪ್ರಮಾಣದ ಪ್ರಚಾರ ದೊರಕಿದರೆ, ಯಾವುದೇ ಬೃಹತ್ ಯೋಜನೆ ಮಾಡಬಹುದಾದ ಸಾಧನೆಯನ್ನು ಇದು ಮೀರಿಸಬಲ್ಲುದು. ಇತ್ತೀಚೆಗೆ ಇಂಡಿಯಾ ಬುಕ್ ಹೌಸ್‌ನವರು ಸಹ “ಮೂಲ ವಿಜ್ಞಾನಗಳ ಪಾಠಮಾಲೆ”ಯ ಆಂಗ್ಲ ಪುಸ್ತಕಗಳನ್ನು ಸಮರ್ಥರಿಂದ ಅನುವಾದಿಸಿ, ಯಾವುದೇ ಪಾಶ್ಚಿಮಾತ್ಯ ಪುಸ್ತಕದ ಅಂದ ಚೆಂದಕ್ಕೆ ಹೋಲಿಸಬಹುದಾದ ಮಟ್ಟದಲ್ಲಿ ಪ್ರಕಟಿಸಿದ್ದಾರೆ, ಶ್ರೀ ಶಿವರಾಮ ಕಾರಂತ ಅವರ ನೇತೃತ್ವದಲ್ಲಿ ಸಿದ್ಧವಾದ ಈ ಪುಸ್ತಕಗಳು, ಕೊಂಚ ದುಬಾರಿಯ ಬೆಲೆಯವಾದರೂ, ಮಕ್ಕಳಿಗಾಗಿ ವಿಜ್ಞಾನದ ಮೊದಲ ಪಾಠಗಳ ಪರಿಚಯ ಆತ್ಯಂತ ವೈಜ್ಞಾನಿಕ ವಿಧಾನದಲ್ಲಿ ನಿರೂಪಿತವಾಗಿದ್ದು, ಅತ್ಯಂತ ಸಮರ್ಪಕ ರೀತಿಯ ಹಾಗೂ ಮಕ್ಕಳಿಗೆ ಆಕರ್ಷಕವಾಗಿ ಕಾಣುವಂತಹ ಚಿತ್ರಗಳಿಂದ ಒಡಗೂಡಿದ್ದು, ಕನ್ನಡದ ಮೂಲಕ ವಿಜ್ಞಾನವನ್ನು ಪರಿಚಯಿಸುವ ದಿಸೆಯಲ್ಲಿ ಅಮೂಲ್ಯ ಕೊಡುಗೆಗಳಾಗಿವೆ. ಇಲ್ಲಿ ಗಮನಿಸಬೇಕಾದ ಅತ್ಯಂತ ವಿಶೇಷವಾದ ಹಾಗೂ ಕನ್ನಡಿಗರು ಸ್ವಾಗತಿಸಬೇಕಾದ ಅಂಶವೆಂದರೆ, ವಾಣಿಜ್ಯ ಸಂಸ್ಥೆಯೊಂದು ಇಷ್ಟೊಂದು ದೊಡ್ಡ ಹಾಗೂ ಅತ್ಯಾಧುನಿಕ ರೀತಿಯಲ್ಲಿ ಈ ಕ್ಷೇತ್ರಕ್ಕೆ ಧುಮುಕಿರುವುದು; ಹಾಗೂ ಇಂತಹ ವಾಣಿಜ್ಯಕ ಸಂಸ್ಥೆಯೊಂದು, ಶ್ರೀ ಕಾರಂತರಂತಹ ಸಮರ್ಥರನ್ನು ಗುರುತಿಸಿ, ಅವರ ಸೇವೆಯನ್ನು ಸಾರ್ಥಕಗೊಳಿಸಿಕೊಳ್ಳಲು ಆರಂಭಿಸಿರುವುದು, ನಿಜವಾಗಿ ಇದೊಂದು ಶುಭ ಸೂಚನೆಯಾಗಿದೆ.
ಶ್ರೀ ಶಿವರಾಮ ಕಾರಂತರನ್ನು ಬಿಟ್ಟರೆ, ಕನ್ನಡದಲ್ಲಿ ವಿಜ್ಞಾನವನ್ನು ಬರೆಯುವವರು ಹೆಚ್ಚಾಗಿ ವಿಶ್ವವಿದ್ಯಾನಿಲಯಗಳ ಅಧ್ಯಾಪಕರುಗಳೇ ಆಗಿದ್ದಾರೆ. ಅಧ್ಯಾಪಕರುಗಳಲ್ಲದೆ, ವಿಜ್ಞಾನದ ವಿದ್ಯಾರ್ಥಿಗಳು ಸಹ ಜನಪ್ರಿಯ ಪತ್ರಿಕೆಗಳಲ್ಲಿ ವೈಜ್ಞಾನಿಕ ಲೇಖನಗಳನ್ನು ಬರೆಯಲಾರಂಭಿಸಿದ್ದಾರೆ. ಕನ್ನಡ ಪತ್ರಿಕೋದ್ಯಮ ಕಳೆದ ಇಪ್ಪತ್ತು ವರ್ಷಗಳಲ್ಲಿ ಅಭೂತಪೂರ್ವ ಸಾಧನೆ ಸಾಧಿಸಿದೆ, ಅದರ ಜೊತೆಯಲ್ಲಿಯೇ ಸಹಜವಾಗಿ, ಓದುಗರಲ್ಲಿ ವಿಜ್ಞಾನತೃಷೆಯನ್ನೂ ಸಹ ಹುಟ್ಟಿಸಿದೆ. ಇತ್ತೀಚೆಗೆ ಕನ್ನಡ ನಿಯತಕಾಲಿಕಗಳು ಒಂದೆರಡು ಪುಟಗಳನ್ನು ವೈಜ್ಞಾನಿಕ ಲೇಖನಗಳಿಗೇ ಮೀಸಲಿಡಲಾರಂಭಿಸಿವೆ, ರಸಾಯನ ಶಾಸ್ತ್ರದಲ್ಲಿ ಶ್ರೀ ಜೆ. ಆರ್. ಲಕ್ಷ್ಮಣರಾವ್, ಶ್ರೀ ಕೆ. ಎಸ್ ಲಕ್ಷ್ಮಣರಾವ್, ಇತ್ತೀಚೆಗೆ ಶ್ರೀ ಎಸ್, ವೆಂಕಟೇಶಮೂರ್ತಿ, ಭೌತ ವಿಜ್ಞಾನದಲ್ಲಿ ಶ್ರೀ ಪಾ.ಸಂ. ವೆಂಕಟಸ್ವಾಮಿ ಶೆಟ್ಟಿ, ಶ್ರೀ ಕೆ. ಶೇಷಾದ್ರಿ ಅಯ್ಯಂಗಾರ್, ಶ್ರೀ ಬೆ.ಗೋ. ರಮೇಶ್, ಪ್ರಾಣಿಶಾಸ್ತ್ರದ ಬಗ್ಗೆ ಶ್ರೀ ಹೆಚ್. ಬಿ. ದೇವರಾಜ ಸರ್ಕಾರ್, ತಂತ್ರಜ್ಞಾನ ವಿಷಯಗಳಲ್ಲಿ ಶ್ರೀ ಕ. ರಾ. ಮೋಹನ್, ಖಗೋಳ ಶಾಸ್ತ್ರದ ಬಗ್ಗೆ ಶ್ರೀ ಜಿ. ಟಿ. ನಾರಾಯಣರಾವ್, ವೈದ್ಯ ವಿಜ್ಞಾನದಲ್ಲಿಶ್ರೀ ಡಿ. ಎಸ್. ಶಿವಪ್ಪ ಮುಂತಾದ ಮಹನೀಯರುಗಳು ಜನಸಾಮಾನ್ಯರಿಗೆ ಅರ್ಥವಾಗುವಂತಹ ರೀತಿಯಲ್ಲಿ ಜನಪ್ರಿಯ ಪತ್ರಿಕೆಗಳಲ್ಲಿ, ಲೇಖನಗಳನ್ನು ಬರೆದು, ವಿಜ್ಞಾನ ವಿಷಯಗಳ ನಿರೂಪಣೆಗೆ ಪ್ರಯತ್ನಿಸಿದರೆ ಕನ್ನಡವನ್ನು ಹೇಗೆ ಬಗ್ಗಿಸಬಹುದು ಎಂದು ತೋರಿಸಿದ್ದಾರೆ. ಶ್ರೀಯುತ ಡಿ. ಎಸ್. ಶಿವಪ್ಪನವರು ಕೇವಲ ಶುದ್ದ ವೈದ್ಯಕೀಯ ವಿಷಯಗಳನ್ನಲ್ಲದೆ, ‘ರೋಗ ಮತ್ತು ಸಾಮಾಜಿಕ ವಾತಾವರಣ’ ‘ರೋಗ ಮತ್ತು ಭಯ’, ‘ನಕಲಿ ವೈದ್ಯರುಗಳು’ ಮುಂತಾದ ಸಾರ್ವಜನಿಕ ಆಸಕ್ತಿಯುಳ್ಳ ಲೇಖನಗಳನ್ನು ಬರೆದು, ಕನ್ನಡದ ಮೂಲಕ ವಿಜ್ಞಾನವನ್ನು ಜನಮನಕ್ಕೆ ಮತ್ತಷ್ಟು ಹತ್ತಿರ ತಂದಿದ್ದಾರೆ. ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಕೃಷಿಕರೆಲ್ಲರೂ ಇಂಗ್ಲಿಷ್ ಬರದ ಜನವಾಗಿದ್ದಾರೆ. ಅವರಿಗೆ ಅಗತ್ಯವಾದ ಕೃಷಿ ಜ್ಞಾನವನ್ನು ಕನ್ನಡದ ಮೂಲಕ ಒದಗಿಸು ವುದೇ ನ್ಯಾಯಸಮ್ಮತ ಮಾರ್ಗವಾಗಿದೆ, ಈ ದಿಸೆಯಲ್ಲಿ ನಮ್ಮ ಪತ್ರಿಕೆಗಳೂ ಸಹ ರಚನಾತ್ಮಕ ಕಾರ್ಯ ನಿರ್ವಹಿಸುತ್ತಿವೆ. `ಪ್ರಜಾವಾಣಿ ವಾರಕ್ಕೊಮ್ಮೆ ‘ಬದುಕಿನ ಬೆನ್ನೆಲುಬು ಬೇಸಾಯ’ ಎಂಬ ಶೀರ್ಷಿಕೆಯಡಿಯ, ‘ಸಂಯುಕ್ತ ಕರ್ನಾಟಕ’ ‘ಒಕ್ಕಲುತನ ಎಂಬ ಶೀರ್ಷಿಕೆಯಡಿಯೂ, ರೈತರ ಹಲವಾರು ಪ್ರಶ್ನೆಗಳಿಗೆ ಉತ್ತರಿಸುತ್ತಿವೆ ಮತ್ತು ಹೆಚ್ಚಿನ ಮಾಹಿತಿ ನೀಡುತ್ತಿವೆ. ‘ಕನ್ನಡ ಪ್ರಭ’ ಪತ್ರಿಕೆ ಸಹ `ಕೃಷಿ, ಕೈಗಾರಿಕೆ, ವಾಣಿಜ್ಯ ಪುರವಣಿಯಲ್ಲಿ ಕೃಷಿಗೆ ಸಂಬಂಧಿಸಿದ ಲೇಖನಗಳನ್ನು ಪ್ರಕಟಿಸುತ್ತಿದೆ. ಆದರೆ ಈ ದಿಸೆಯಲ್ಲಿ ಕೃಷಿವಿಶ್ವವಿದ್ಯಾಲಯವು ಯಾವುದೇ ಪ್ರಯತ್ನ ಕೈಗೊಳ್ಳದಿರುವುದು ಆಶ್ಚಯ್ಯಕರ. ಹೋದ ಘಟಿಕೋತ್ಸವ ಸಂದರ್ಭದಲ್ಲಿ, ಈ ವಿಶ್ವವಿದ್ಯಾಲಯದ ಉಪಕುಲಪತಿ ಶ್ರೀ ಅರಕೇರಿಯವರು ಕೃಷಿಗೆ ಸಂಬಂಧಪಟ್ಟ ವಿಷಯಗಳಬಗ್ಗೆ ಕನ್ನಡದಲ್ಲಿ ಪುಸ್ತಕಗಳನ್ನು ಬರೆಸುವುದಾಗಿ ಆಶ್ವಾಸನೆ ನೀಡಿರುವುದರ ಫಲಿತಾಂಶಗಳನ್ನು, ಕಾದು ನೋಡಬೇಕಾಗಿದೆ.
ವಿಜ್ಞಾನವನ್ನು ಮನರಂಜನೆ ಹಾಗೂ ಸಾಧಾರಣ ಮನೋವಿಕಾಸಕ್ಕೆ ಉಪಯೋಗಿಸಿಕೊಳ್ಳುವ ಕಲೆಯನ್ನು ಕನ್ನಡಕ್ಕೆ ತಂದ ಶ್ರೀ ರಾಜಶೇಖರ ಭೂಸನೂರಮಠ
________________
1 ಕೃಷಿ ವಿಶ್ವವಿದ್ಯಾಲಯವು, ಈ ಲೇಖನ ಪ್ರಕಟವಾಗುವ ಹೊತ್ತಿಗೆ ಹಲವು ಉಪಯುಕ್ತ ಕನ್ನಡ ಪುಸ್ತಕಗಳನ್ನು ಪ್ರಕಟಿಸಿರುವುದು ಗೊತ್ತಾಗಿದೆ. ಇದು ಸಂತೋಷದ ವಿಷಯ.
________________
೧೪ / ಸಾಕ್ಷಿ
ಅವರ ಪ್ರಯತ್ನ ಅಭಿನಂದನಾರ್ಹವಾಗಿದೆ. ಇವರು ಜನಪ್ರಿಯ ಪತ್ರಿಕೆಗಳಲ್ಲಿ ಪ್ರಕಟಿಸಿರುವ ವೈಜ್ಞಾನಿಕ ಕಥೆಗಳು ಹಾಗೂ ಕಿರು ಕಾದಂಬರಿಗಳು ಜನಸಾಮಾನ್ಯರಲ್ಲಿ ವೈಜ್ಞಾನಿಕ ಪರಿಕಲ್ಪನೆಗಳ ಬಗ್ಗೆ ಕುತೂಹಲ ಹುಟ್ಟಿಸಿವೆ. ಇಷ್ಟರಮಟ್ಟಿಗೆ, ರಾಜಶೇಖರ ಭೂಸನೂರಮಠ ಅವರು ಓದುಗರಲ್ಲಿ ವೈಜ್ಞಾನಿಕ ಅಭಿರುಚಿಯನ್ನು ಬೆಳೆಸುತ್ತಿದ್ದಾರೆ. ಇವರ ಕಂಪ್ಯೂಟರ್ ಶಕದ ಹಾಗೂ ಇನ್ನೂ ಇತರ ಮಾದರಿಯ ಕಥೆಗಳು ವಿಜ್ಞಾನದ ತರ್ಕಕ್ಕೆ ಹೊಂದದ ಕೆಲವು ಭ್ರಮಾಧೀನ ಕಲ್ಪನೆಗಳಿಗೆ ಬಲಿಯಾಗಿ, ತೀರಾ ಬಾಲಿಶವಾಗಿ ಕಂಡುಬರುವ ಸಾಧ್ಯತೆ ಇದ್ದರೂ, ‘ಕಸ್ತೂರಿ’ ವಸಂತ ಸಂಚಿಕೆಗಳಲ್ಲಿ ಇವರೂ, ‘ವಿಶ್ವದ ಸೃಷ್ಟಿ’ ಬಗ್ಗೆ ಬರೆದ ಲೇಖನ, ಹಾಗೂ ‘ಪರಮಾಣು ವಿಲಾಸ’ವನ್ನು ಕುರಿತ ಗೀತ ನಾಟಕ – ಈ ಪ್ರಕಾರದಲ್ಲಿ ಕನ್ನಡಕ್ಕೆ ಹೊಸದಾಗಿವೆ. ಇತ್ತೀಚೆಗೆ ಅವರು ತಮ್ಮ ವಿಜ್ಞಾನದ ಪುಸ್ತಕಗಳನ್ನು ಒಟ್ಟಿಗೆ ಓದುಗರಿಗೆ ಒದಗಿಸುವ ಯೋಜನೆಯೊಂದನ್ನು ಆರಂಭಿಸಿರುವುದು ಅವರಿಗೆ ಕನ್ನಡದಲ್ಲಿರುವ ಆಸಕ್ತಿಯ ದ್ಯೋತಕವಾಗಿದೆ. ಶ್ರೀ ರಾಜಶೇಖರ ಭೂಸನೂರಮಠ ಅವರಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ, ವೈಜ್ಞಾನಿಕ ಲೇಖನಗಳನ್ನು ಬರೆಯಲು ಭಾಷೆಯಲ್ಲಿ ಇಳಿಸಬೇಕಾದ ಖಚಿತತೆ ಹಾಗೂ ತರ್ಕವಿಚಾರ ಪ್ರಜ್ಞೆಯಷ್ಟೇ ಭಾಷೆಯ ಶೈಲಿಯನ್ನು ಕುರಿತ ಸಾಹಿತ್ಯ ಪ್ರಜ್ಞೆಯೂ ಇವರಲ್ಲಿ ಇರುವುದನ್ನು, ಅವರ ಭಾಷೆ ಯಾವುದೇ ಕನ್ನಡದ ಸಾಮಾನ್ಯ ಕಥೆಗಾರನ ಕಲಾತ್ಮಕ ಭಾಷೆಯಷ್ಟೇ ಸೊಗಸಾಗಿದೆ. ನಿಜವಾಗಿಯೂ ಇದು ಕನ್ನಡಕ್ಕೆ ಹೊಸದೇ !
ಇವಲ್ಲದೆ, ‘ಕನ್ನಡ ಪ್ರಭ’ ಪತ್ರಿಕೆಯಲ್ಲಿ ಈ ಹಿಂದೆ ಪ್ರಕಟವಾದ ಶ್ರೀ ಹೆಚ್. ಬಿ. ದೇವರಾಜ ಸರ್ಕಾರ್ ಅವರ ವಿಜ್ಞಾನದ ಮೂಲ ಪಾಠಗಳ ಲೇಖನ ಮಾಲೆ, ಶ್ರೀ ಎಸ್. ವೆಂಕಟೇಶಮೂರ್ತಿಯವರು ಸ್ವತಃ ಪ್ರಕಟಿಸಿರುವ ‘ಜೀವನದಲ್ಲಿ ರಸಾಯನ ಶಾಸ್ತ್ರ’ ಹಾಗೂ ಮನೋಹರ ಗ್ರಂಥ ಮಾಲೆ ಪ್ರಕಟಿಸಿರುವ ಶ್ರೀ ಕೃಷ್ಣಾನಂದ ಕಾಮತ ಅವರ “ಪ್ರಾಣಿ ಪರಿಸರ’- ಈ ಪುಸ್ತಕಗಳೂ ಗರ್ವನಾರ್ಹವಾಗಿವೆ.
ಆದರೆ ವಿಷಾದಪಡಬೇಕಾದ ಒಂದು ಸಂಗತಿ ಎಂದರೆ, ಶ್ರೀ ವಿ. ಕೆ. ದೊರೆಸ್ವಾಮಿಯವರು ಮನರಂಜನಾ ಗಣಿತದ ಬಗ್ಗೆ ಬರೆದಿರುವ ಒಂದಿಷ್ಟನ್ನು ಬಿಟ್ಟರೆ, ಗಣಿತದ ವಿಸ್ತಾರ, ಅಮೂರ್ತತೆ, ಉಪಯುಕ್ತತೆಗಳ ಬಗ್ಗೆ ಈವರೆಗೆ ಯಾವುದೇ ಗಮನಾರ್ಹ ಪುಸ್ತಕ ಬರದಿರುವುದು.
ನಿಯತಕಾಲಿಕಗಳ ವಿಷಯಕ್ಕೆ ಬಂದರೆ, ‘ಕನ್ನಡದಲ್ಲಿ ವಿಜ್ಞಾನ’ ಎಂದಾಕ್ಷಣ ವಿದ್ಯಾವಂತರೆನಿಸಿಕೊಂಡವರಲ್ಲಿ ಹೆಚ್ಚಿನವರು ಮರೆಯಲ್ಲಿ ನಗುವಂತಿರುವ ಸಂದರ್ಭದಲ್ಲಿ, ವಿಜ್ಞಾನ
ವಿಷಯಗಳಿಗೆಂದೇ ಮೀಸಲಾದ ಕನ್ನಡ ನಿಯತಕಾಲಿಕಗಳನ್ನು ಕೊಳ್ಳುವವರಿರಲಿ, ಅದರ ಪುಟಗಳನ್ನು ತುಂಬುವವರೂ ಸಹ ಸಿಗುವುದು ಕಷ್ಟವಾಗುತ್ತದೆ. ಈ ದಿಸೆಯಲ್ಲಿ ಧೈರ್ಯವಾಗಿ ಮೊದಲ ಹೆಜ್ಜೆ ಇಟ್ಟ ಶ್ರೇಯಸ್ಸು ಮೈಸೂರು ವಿಶ್ವವಿದ್ಯಾಲಯಕ್ಕೆ ಸಲ್ಲುತ್ತದೆ. ಮೊದಲಿಂದಲೂ ಎಲ್ಲ ರಂಗಗಳಲ್ಲೂ ಕನ್ನಡವನ್ನು ಪೋಷಿಸಿಕೊಂಡು ಬಂದಿರುವ ಈ ಸಂಸ್ಥೆಯು, ‘ಪ್ರಬುದ್ಧ ಕರ‍್ನಾಟಕ’ದ ಸ್ವರ್ಣಮಹೋತ್ಸವ ಸಂದರ್ಭದಲ್ಲಿ ವಿಜ್ಞಾನಕ್ಕೆಂದೇ ಮೀಸಲಾದ ಎರಡು ಬೃಹತ್‌ಸಂಪುಟಗಳನ್ನು ಅಚ್ಚುಕಟ್ಟಾಗಿ ಪ್ರಕಟಿಸಿದ್ದಲ್ಲದೆ, ‘ವಿಜ್ಞಾನ ಕರ್ನಾಟಕ’ವೆಂಬ ಕನ್ನಡ ತ್ರೈಮಾಸಿಕವೊಂದನ್ನು ಆರಂಭಿಸಿತು. ಕನ್ನಡದಲ್ಲಿ ವಿಜ್ಞಾನವನ್ನು ಬರೆಯುವ ಹವ್ಯಾಸ, ಹಾಗೂ ಓದುವ ಅಭಿರುಚಿಯನ್ನು ಪೋಷಿಸುವ ದೃಷ್ಟಿಯಿಂದ ಈ ಸಂಚಿಕೆಗಳನ್ನು ಬಹಳ ಸುಲಭ ಬೆಲೆಗೆ ದೊರೆಯುವಂತೆ ಮಾಡಿದ ವಿಶ್ವವಿದ್ಯಾಲಯದ ಕ್ರಮ ಸ್ತುತ್ಯರ್ಹ. ಆದರೆ ಸ್ವರ್ಣಮಹೋತ್ಸವ ಸಂದರ್ಭದ ಸಂಪುಟಗಳಲ್ಲಿ ಅಡಕವಾಗಿದ್ದ ವಿಷಯ ವೈವಿಧ್ಯವಾಗಲೀ, ಪ್ರಬುದ್ಧ ನಿರೂಪಣಾ ಸಾಮರ್ಥ್ಯವಾಗಲೀ ಅಥವಾ ಭಾಷೆಯಲ್ಲಿನ ಕನ್ನಡತನವಾಗಲೀ ಈ ನಿಯತಕಾಲಿಕವಾದ ಸಂಚಿಕೆಗಳಲ್ಲಿ ಪ್ರಕಟವಾಗುವ ಲೇಖನಗಳಲ್ಲಿ ಕಾಣುವುದು ದುರ್ಲಭವಾಗಿದೆ. ಈ ಸಂಚಿಕೆಗಳಲ್ಲಿ ಆಗಾಗ್ಗೆ ಪ್ರಕಟವಾಗುವ ಕೆಲವೇ ಕೆಲವು ಲೇಖನಗಳನ್ನುಳಿದರೆ, ಮಿಕ್ಕೆಲ್ಲಾ ಹೆಚ್ಚಿನ ಲೇಖನಗಳು ಬರೆಯಲೇಬೇಕೆಂಬ ಹಠದಿಂದ ಬಹು ಪ್ರಯಾಸ ಪಟ್ಟು ಬರೆದ ಲೇಖನಗಳಂತಿರುತ್ತವೆ. ಅಲ್ಲದೆ ಈ ಲೇಖನಗಳಿಗೆ ಆಯ್ದುಕೊಂಡ ವಿಷಯಗಳೂ ಸಹ ಸಾರ್ವಜನಿಕ ಆಸಕ್ತಿ ಇರಲಿ ವಿಜ್ಞಾನದ ವಿದ್ಯಾರ್ಥಿಗಳಲ್ಲಿ ಸಹ ಕುತೂಹಲ ಹುಟ್ಟಿಸದಂತಿದ್ದು. ಅವು ಸಾಮಾನ್ಯ ಪಠ್ಯಪುಸ್ತಕಗಳಲ್ಲಿ ಇಂಗ್ಲಿಷ್‌ನಲ್ಲಿ ಓದಿದ ಪರಿಕಲ್ಪನೆಗಳ, ಪೇಲವವಾದ ಕನ್ನಡ ರೂಪಗಳಾಗಿರುತ್ತವೆ. ಉದಾಹರಣೆಗೆ ಹೇಳುವುದಾದರೆ, ಈಗ್ಗೆ ಎರಡು ಮೂರು ಸಂಪುಟಗಳ ಹಿಂದಿನ ಸಂಚಿಕೆಗಳಲ್ಲಿ ಆಧುನಿಕ ಗಣಿತ” ಎಂಬ ಶೀರ್ಷಿಕೆಯಡಿ ‘ಗಣ ಸಿದ್ದಾಂತ’ ಹಾಗೂ ‘ಸಂಖ್ಯಾ ಸಿದ್ಧಾಂತಗಳ ಬಗ್ಗೆ ಪ್ರಕಟವಾದ ಲೇಖನಗಳು ಸುಮಾರು ಒಂದು ಶತಮಾನದ ಹಿಂದಿನ ಗಣಿತ ಪರಿಕಲ್ಪನೆಗಳ ಅವ್ಯವಸ್ಥಿತ ನಿರೂಪಣೆಗಳಾಗಿದ್ದು, ಇಂಗ್ಲಿಷಿಗಿಂತಲೂ ಕನ್ನಡದಲ್ಲೇ ಹೆಚ್ಚು ಕ್ಲಿಷ್ಟವಾಗಿ ಕಾಣುತ್ತಿದ್ದವು! ಕನ್ನಡದಲ್ಲಿ ವಿಜ್ಞಾನ ಬರಬೇಕು; ಆದರೆ ಈ ಜಟಿಲತೆಯೊಂದಿಗಲ್ಲ. ಈ ಬಗ್ಗೆ ನಾವು ತೀವ್ರವಾಗಿ ಚಿಂತಿಸದಿದ್ದರೆ, ಕನ್ನಡದಲ್ಲಿ ವಿಜ್ಞಾನವನ್ನು ಬರೆಯುವುದರ ಸಾಧುತ್ವವನ್ನೇ ಪ್ರಶ್ನಿಸುವ ಕಾಲ ಬಂದರೆ ಆಶ್ಚರ್ಯವಲ್ಲ ! ‘ವಿಜ್ಞಾನ ಕರ್ನಾಟಕ’ವಲ್ಲದೆ, ಬೆಂಗಳೂರು ವಿಶ್ವವಿದ್ಯಾಲಯದ ‘ಸಾಧನೆ’ಯ ಕೆಲವು ಪುಟಗಳಲ್ಲ ಹಾಗೂ ಕರ್ನಾಟಕ ವಿಶ್ವವಿದ್ಯಾಲಯ ಇತ್ತೀಚೆಗೆ ಆರಂಭಿಸಿದ ‘ವಿಜ್ಞಾನ ಭಾರತಿ’ಯಲ್ಲಿ ಪ್ರಕಟವಾಗುವ ಲೇಖನಗಳಿಗೂ ಇದೇ ಮಾತು ಅನ್ವಯಿಸುತ್ತದೆ. ಆದರೆ ಇತ್ತೀಚೆಗೆ ಈ ಸಂಚಿಕೆಗಳಲ್ಲಿ ಕೆಲವು ಉತ್ಸಾಹಿಗಳು ಪ್ರಕಟಿಸುವ ವೈಜ್ಞಾನಿಕ ಸಂಶೋಧನ ಲೇಖನಗಳನ್ನು ನೋಡಿದಾಗ, ಈ ಎಲ್ಲ ದೋಷಗಳೂ ಮರೆತು, ಆನಂದವಾಗುತ್ತದೆ.
ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ತು’ ಸಹ ಸಾಹಿತ್ಯವೆಂದರೆ, ಬರೀ ಕಲಾ ಸಾಹಿತ್ಯ ಎಂಬ ತಪ್ಪು ತಿಳುವಳಿಕೆಯಿಂದ ಎಚ್ಚೆತ್ತುಕೊಂಡು, ತನ್ನ ಸಾಹಿತ್ಯ ಸಮ್ಮೇಳನಗಳಲ್ಲಿ ಕವಿಗೋಷ್ಠಿ ಹಾಗೂ ಮಹಿಳಾ ಗೋಷ್ಠಿಗಳೊಂದಿಗೆ ವಿಜ್ಞಾನಗೋಷ್ಠಿಯನ್ನೂ ವ್ಯವಸ್ಥೆ ಮಾಡುತ್ತಿದೆ. ಇದು ಅತ್ಯಂತ ಸ್ವಾಗತಾರ್ಹ ಕ್ರಮ. ಇದಲ್ಲದೆ ಇತ್ತೀಚೆಗೆ ಪರಿಷತ್ತು ಸಾರ್ವಜನಿಕರಲ್ಲಿ ವಿಜ್ಞಾನದಲ್ಲಿ ಆಸಕ್ತಿ ಹುಟ್ಟಿಸುವ ದೃಷ್ಟಿಯಿಂದ ಕೆಲವು ವಿಜ್ಞಾನ ವಿಷಯಗಳ ಬಗ್ಗೆ ಜನಪ್ರಿಯ ಪುಸ್ತಕಗಳನ್ನು ಪ್ರಕಟಿಸಲು ಸಹ ಆರಂಭಿಸಿದೆ. ಇದೂ ಸಹ ಮೆಚ್ಚಬೇಕಾದ ಅಂಶವೇ, ಆದರೆ ಈ ಪ್ರಕಟಣೆಯ ಕೆಲವು ಪುಸ್ತಕಗಳ ಬಗ್ಗೆ ಪತ್ರಿಕೆಗಳಲ್ಲಿ ಬರುತ್ತಿರುವ ವಿಮರ್ಶೆಗಳನ್ನು ನೋಡಿದರೆ, ಈ ವಿಷಯದಲ್ಲಿ ಪರಿಷತ್ತಿಗೆ ಸಮರ್ಥ ಸಂಪಾದಕ ಮಂಡಳಿಯೊಂದರ ಕೊರತೆ ಇದೆ ಎಂದೆನಿಸುತ್ತದೆ.
ಇದೆಲ್ಲಾ ಸಹಾಯಧನ ಪಡೆದ ಸಂಸ್ಥೆಗಳ ಪ್ರಯತ್ನವಾದರೆ, ಯಾವ ಸಹಾಯಧನವೂ ಇಲ್ಲದೆ, ಕೇವಲ ಉತ್ಸಾಹವೊಂದನ್ನೇ ಬಂಡವಾಳವಾಗಿಟ್ಟುಕೊಂಡು ದಕ್ಷಿಣ ಕನ್ನಡದ ಶ್ರೀನಿವಾಸಪುರದ ವಿಜ್ಞಾನ ಸಂಘದವರು ಶ್ರೀ ಅಡ್ಯನಡ್ಕ ಕೃಷ್ಣಭಟ್ಟರ ಸಂಪಾದಕತ್ವದಲ್ಲಿ ಪ್ರಕಟಿಸುತ್ತಿರುವ ‘ವಿಜ್ಞಾನ ಲೋಕ’ವೆಂಬ ಪುಟ್ಟ ನಿಯತಕಾಲಿಕವು ಕನ್ನಡಕ್ಕೆ ಅಳಿಲ ಸೇವೆ ಸಲ್ಲಿಸುತ್ತಿದೆ.
ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘದ ಚಿನ್ನದ ಹಬ್ಬದ ಅಂಗವಾಗಿ ಸಂಘವು ಪ್ರಕಟಿಸಿದ ‘ಸಮಾಜ ಮತ್ತು ವಿಜ್ಞಾನ’ ಎಂಬ ಪುಸ್ತಕವು ಸಾರ್ವಜನಿಕ ಆಸಕ್ತಿಯನ್ನು ಕೆರಳಿಸಿ ಬಲ್ಲದೆಂಬ ದೃಷ್ಟಿಯಿಂದ ಅಮೂಲ್ಯವಾಗಿದೆ. ಈ ಪುಸ್ತಕದ ಯಾವ ಲೇಖನವೂ ಆಳವಾದ ವಿಜ್ಞಾನ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ, ಇಂದಿನ ಸಮಾಜದಲ್ಲಿ ವಿಜ್ಞಾನದ ಹಲವಾರು ಪರಿಕಲ್ಪನೆಗಳು ಹಾಗೂ ಸಂಗತಿಗಳು ನಮಗೆ ಗೊತ್ತಿಲ್ಲದ ರೀತಿಯಲ್ಲಿ ಹೇಗೆ ಹಾಸುಹೊಕ್ಕಾಗಿವೆ ಎಂಬುದರ ಬಗ್ಗೆ ಸರಳವಾಗಿ ಹಾಗೂ ನೇರವಾಗಿ ಬರೆದ ಉಪಯುಕ್ತ ಲೇಖನಗಳಾಗಿವೆ. ಇದು ಇಂದಿನ ಸಂದರ್ಭಕ್ಕೆ ಪ್ರಸ್ತುತ’ವಾದ ಪುಸ್ತಕವಾಗಿದೆ.
ಇನ್ನು ಪಠ್ಯಪುಸ್ತಕಗಳ ವಿಷಯಕ್ಕೆ ಬಂದರೆ, ಅದೊಂದು ಖೇದದ ಅಧ್ಯಾಯವೆನಿಸುತ್ತದೆ. ಶ್ರೀ ಕೆ.ವಿ. ಪುಟ್ಟಪ್ಪನವರು ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದಾಗ, ಕನ್ನಡಕ್ಕೊಂದು ಗಣ್ಯಸ್ಥಾನ ದೊರಕಿಸಬೇಕೆಂಬ ಇಚ್ಛೆಯಿಂದ ಆರಂಭಿಸಿದ ವಿಜ್ಞಾನ ಪುಸ್ತಕಗಳ ಮಾಲಿಕೆಯು ಆವತ್ತಿನ ದಿನಗಳಲ್ಲಿ ಹೇಗೆ ನಿಷ್ಟ್ರಯೋಜಕವಾಗಿ ಕಂಡವು ಎಂಬುದನ್ನು ಹಿಂದೆಯೇ ತಿಳಿದಿದ್ದೇವೆ. ಆ ಪರಿಸ್ಥಿತಿ ಇಂದಿಗೂ ಬಹುಮಟ್ಟಿಗೆ ಮುಂದುವರಿದಿದೆ. ಆದರೂ ಪುಸ್ತಕಗಳ ಪ್ರಕಟಣೆಯನ್ನೇನೂ ವಿಶ್ವವಿದ್ಯಾಲಯ ನಿಲ್ಲಿಸಿಲ್ಲ.
ಈ ವಿಶ್ವವಿದ್ಯಾಲಯದ ಜೊತೆಗೆ ಬೆಂಗಳೂರು ಹಾಗೂ ಕರ್ನಾಟಕ ವಿಶ್ವವಿದ್ಯಾಲಯಗಳೆರಡೂ, ಸ್ಪರ್ಧೆಗಿಳಿದಂತೆ ವಿಜ್ಞಾನದ ಪುಸ್ತಕಗಳನ್ನು ಪ್ರಕಟಿಸುತ್ತಿವೆ. ವಿಶ್ವವಿದ್ಯಾಲಯ ಧನಸಹಾಯ ಮಂಡಳಿಯೂ ಸಹ ಪ್ರಾದೇಶಿಕ ಭಾಷೆಗಳ ಅಭಿವೃದ್ಧಿಗಾಗಿ ಅಪಾರ ಹಣವನ್ನು ನೀಡುತ್ತಿದ್ದು, ಪಠ್ಯಪುಸ್ತಕಗಳ ಪ್ರಕಟಣೆಗೆ ಇಂಬು ದೊರೆತಂತಾಗಿದೆ. ವಿಶ್ವವಿದ್ಯಾಲಯಗಳು ವಿಜ್ಞಾನ ಪುಸ್ತಕಗಳನ್ನು ಪ್ರಕಟಿಸುತ್ತಿರುವ ವೇಗವನ್ನು ನೋಡಿದರೆ, ಕನ್ನಡದಲ್ಲಿ ಸಾಕಷ್ಟು ವಿಜ್ಞಾನ ಪುಸ್ತಕಗಳಿಲ್ಲದೆ, ಕನ್ನಡ ಶಿಕ್ಷಣ ಮಾಧ್ಯಮ ಹೇಗಾದೀತು?” ಎಂದು ಕೇಳುವ ವ್ಯಕ್ತಿಗಳನ್ನೇ ಪುಸ್ತಕಗಳ ರಾಶಿಯಲ್ಲಿ ಮುಳುಗಿಸುವ ಮೂಲಕ ಸೂಕ್ತ ಉತ್ತರ ನೀಡುವ ಸನ್ನಾಹ ವಿಶ್ವವಿದ್ಯಾಲಯಗಳದಾಗಿವೆಯೇನೋ ಎಂದು ಅನುಮಾನವಾಗುತ್ತದೆ ನಿಜ. ಹತ್ತು ಹನ್ನೆರಡು ವರ್ಷಗಳ ಹಿಂದೆಯೇ ಶ್ರೀ ಶಿವರಾಮ ಕಾರಂತರೇ, ‘ಯಾವ ವಿಷಯದಲ್ಲೂ ಗ್ರಂಥಗಳೇ ಇಲ್ಲದಿರುವ ಒಂದು ಭಾಷೆಯಲ್ಲಿ – ಎಷ್ಟೆಲ್ಲಾ ಕೆಲಸವಾಗಬೇಡ? ಗ್ರಂಥ ಸಮುದಾಯ ಬೆಳೆದು, ಅವುಗಳಲ್ಲಿ ಬರುವ ವಿಷಯಗಳನ್ನು ಕುರಿತು ಇನ್ನಷ್ಟು ತಿಳಿಯಲು ಬಯಸುವವರಿಗೆ, ಆಧಾರ ಗ್ರಂಥಗಳು ಬೇಕು; ಅನಂತರ ವಿಶ್ವಕೋಶವೂ ಬೇಕು’ ಎಂದು ಹೇಳಿದ್ದಾರೆ. ಆದರೆ ಶ್ರೀ ಕಾರಂತರು ಈ ಮಾತು ಹೇಳಿದಾಗ, ‘ಮೊದಲು ಪುಸ್ತಕಗಳ ರಾಶಿ ನಿರ್ಮಾಣವಾಗಲಿ-ನಂತರ ಶಿಕ್ಷಣ ಮಾಧ್ಯಮದ ಮಾತು’ ಎಂಬ ಅರ್ಥದಲ್ಲಿ ಈ ಮಾತನ್ನು ಹೇಳಿರಲಿಲ್ಲ ಎಂದು ನನ್ನ ನಂಬಿಕೆ. ಅಂದರೆ, ಇಲ್ಲಿ ನನ್ನ ವಿರೋಧವಿರುವುದು ಪಠ್ಯಪುಸ್ತಕಗಳ ಪ್ರಕಟಣೆಯ ಬಗ್ಗೆ ಅಲ್ಲ; ಆದರೆ ಪಠ್ಯಪುಸ್ತಕಗಳ ಪ್ರಕಟಣೆ ಮತ್ತು ಶಿಕ್ಷಣ ಮಾಧ್ಯಮದ ಜಾರಿ – ಈ ಮಧ್ಯೆ ಸಮನ್ವಯ ಇಲ್ಲದಿರುವ ಬಗ್ಗೆ. ಏಕೆಂದರೆ, ಪಠ್ಯಪುಸ್ತಕಗಳು ಪ್ರಕಟವಾಗುತ್ತಿರುವ ವೇಗಕ್ಕೂ, ಕನ್ನಡವನ್ನು ಶಿಕ್ಷಣ ಮಾಧ್ಯಮವನ್ನಾಗಿ ಜಾರಿಗೆ ತರುತ್ತಿರುವ ವೇಗಕ್ಕೂ ಏನೇನೂ ಸಂಬಂಧವಿಲ್ಲದಂತಾಗಿ, ಪ್ರಕಟವಾಗುತ್ತಿರುವ ಪುಸ್ತಕಗಳು-ಅವು ಎಂತಹವೇ ಆಗಿರಲಿ ಕೇವಲ ಗೋಡೌನ್ ತುಂಬಿಸುವ ಸಾವಂಗಿಗಳಾಗುತ್ತಿವೆ. ಅಲ್ಲದೆ, ಇಂದಿನ ಆರ್ಥಿಕ ಪರಿಸ್ಥಿತಿಯ ದೃಷ್ಟಿಯಿಂದ ನೋಡಿದರೆ, ಇವುಗಳ ಮೇಲೆ ಹಾಕುವ ಸಾರ್ವಜನಿಕ ಹಣ ಸಹ ಪೋಲಾಗುತ್ತಿದೆ ಎಂದೆನಿಸುತ್ತಿದೆ. ಈ ಪುಸ್ತಕಗಳು ಮುಂದೆ ಪ್ರಯೋಜನವಾಗುವುವು ಎಂದು ಭಾವಿಸಿದರೂ ಸಹ, ಇವುಗಳ ಮೇಲೆ ಹಾಕುವ ಹಣ ಇಂದಿಗೆ ಸತ್ಯ ಬಂಡವಾಳವೇ ಆಗಿದೆ. ಇದಕ್ಕೆ ಬದಲಾಗಿ, ಪುಸ್ತಕಗಳನ್ನು ಪ್ರಕಟಿಸುವ ಹಕ್ಕನ್ನು ಪಡೆದುಕೊಂಡಿರುವ ವಿಶ್ವವಿದ್ಯಾಲಯಗಳು, ಶಿಕ್ಷಣ ಮಾಧ್ಯಮದ ಬಗ್ಗೆ ಸಹ ತನ್ನ ದನಿ ಎತ್ತಲು ಹಕ್ಕು ಪಡೆದುಕೊಳ್ಳಬೇಕು. ಅಂದರೆ, ಕನ್ನಡ ಮಾಧ್ಯಮವನ್ನು ಜನಪ್ರಿಯವಾಗಲು ಅಣಿಯಾಗುವಂತೆ, ಎಲ್ಲ ವಲಯಗಳಲ್ಲೂ ಅದರ ಪರವಾದ ಅಭಿಪ್ರಾಯ ಮಂಡಿಸಲು ತನ್ನ ವಕ್ತಾರರನ್ನು ಸೃಷ್ಟಿಸಿಕೊಳ್ಳಬೇಕು. ಆಗ ಮಾತ್ರ ಪಠ್ಯಪುಸ್ತಕಗಳ ಪ್ರಕಟಣೆ ಅರ್ಥಪೂರ್ಣವೆಂದೆನಿಸುತ್ತದೆ. ಓದುಗರೇ ಇಲ್ಲದ, ‘ಪಠ್ಯ’ವೇ ಅಲ್ಲದವು ಪಠ್ಯಪುಸ್ತಕಗಳು ಹೇಗಾದಾವು ?
ಇನ್ನು ಪಠ್ಯಪುಸ್ತಕಗಳ ಗುಣಮಟ್ಟಕ್ಕೆ ಬಂದರೆ, ಅಲ್ಲಿಯೂ ಸಹ ನಾವು ನಿರಾಶೆ ಹೊಂದಬೇಕಾಗುತ್ತದೆ. ಪ್ರಕಟವಾಗಿರುವ ಹೆಚ್ಚಿನ ಪಠ್ಯಪುಸ್ತಕಗಳ ಮೊದಲ ಕೆಲವು ಪುಟಗಳನ್ನು ಓದುತ್ತಿದ್ದಂತೆಯೇ, ‘ಇದು ಹೇಗೆ ಕನ್ನಡ ಪುಸ್ತಕವಾದೀತು!” ಎಂಬ ಭಾವನೆ ಬಂದುಬಿಡುತ್ತದೆ. ವಿಜ್ಞಾನವನ್ನು ಕನ್ನಡದಲ್ಲಿ ಕಲಿಸಬೇಕೆಂದು ವಾದಿಸುವ ಮೂಲ ಉದ್ದೇಶ, ಕನ್ನಡವನ್ನು ‘ನಮ್ಮ ಭಾಷೆ’ ಎಂದು ಎತ್ತಿ ಹಿಡಿಯುವ ಸಣ್ಣ ಹಂಬಲದ ತೀರಿಕೆಯಲ್ಲ; ಬದಲಾಗಿ ವಿಷಯವನ್ನು ಶೀಘ್ರವಾಗಿ, ಸ್ಪಷ್ಟ ಹಾಗೂ ಖಚಿತವಾಗಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಆತ್ಮೀಯ ಭಾವನೆಯೊಡನೆ ಕಲಿಯುವುದು ಸಾಧ್ಯ ಎಂದು ತೋರಿಸಿಕೊಡುವುದು. ಆದರೆ ಈ ಪುಸ್ತಕಗಳಲ್ಲಿ ಬರೆದಿರುವ ಕನ್ನಡದಲ್ಲಿನ ವಿಜ್ಞಾನ, ಮತ್ತೇನೂ ಆಗಿರದೆ, ಇಂಗ್ಲಿಷ್ ಪುಸ್ತಕಗಳಲ್ಲಿನ ಆಹಾರವನ್ನು ಅರಬರೆ ಜೀರ್ಣಿಸಿಕೊಂಡು ಕನ್ನಡದ ಬಟ್ಟಲೊಳಕ್ಕೆ ಮಾಡಿರುವ ವಾಂತಿಯಾಗಿದೆ. ಇದಕ್ಕೆಲ್ಲ ಮುಖ್ಯ ಕಾರಣ, ಬರೆಸುವವರಿಗೆ ಮತ್ತು ಬರೆಯುವವರಿಗೆ ‘ಭಾಷೆ’ಯ ಬಗ್ಗೆ ಸರಿಯಾದ ಪರಿವೆ ಇಲ್ಲದಿರುವುದು ಹಾಗೂ ಬರೆಸುವವರು, ಸಮರ್ಥ ಬರಹಗಾರರನ್ನು ಹುಡುಕಿ ತೆಗೆದು ಅವರಿಂದ ಮಾತ್ರ ಬರೆಸದೆ, ಸಲ್ಲದ ಆತುರವನ್ನು ತೋರಿಸುತ್ತಿರುವುದು, ನಮ್ಮ ಪಠ್ಯ ಪುಸ್ತಕಗಳ ಪ್ರಮುಖ ದೋಷಗಳೆಂದರೆ, ಎಲ್ಲಾ ಪಠ್ಯಪುಸ್ತಕಗಳಲ್ಲಿ ತಾಂತ್ರಿಕ ಶಬ್ದಗಳು, ಭಾಷೆಯ ಶೈಲಿ ಹಾಗೂ ನಿರೂಪಣೆಯ ಬಗ್ಗೆ ಸಾಮಾನ್ಯ ಧೋರಣೆಯೊಂದರ ಕೊರತೆ ಇರುವುದು, ಇಂಗ್ಲಿಷಿನಂಥ ವಿಶ್ವ ಸಮ್ಮತ ಭಾಷೆಯಲ್ಲಿ ಪ್ರಕಟವಾಗುವ ಪುಸ್ತಕಗಳಲ್ಲಿ ಈ ವಿಷಯಗಳ ಬಗ್ಗೆ ಸಾಮಾನ್ಯ ಧೋರಣೆ ಇಲ್ಲದಿದ್ದರೂ ನಡೆಯುತ್ತದೆ. ಆದರೆ ನಾವು ಹೊರಟಿರುವುದು ಭಾಷೆಯೊಂದನ್ನು ಸೃಷ್ಟಿಸುವುದಕ್ಕೆ (ವಿಜ್ಞಾನದ ನಿರೂಪಣೆಗೆ ಒಗ್ಗಿಸುವ ಮಟ್ಟಿಗೆ) ಎಂಬ ಪ್ರಜ್ಞೆ ನಮ್ಮ ಲೇಖಕರಲ್ಲಿ ಉಂಟಾಗಬೇಕಾಗಿದೆ. Square ಎನ್ನುವ ಇಂಗ್ಲಿಷ್ ಪದಕ್ಕೆ ಕರ್ನಾಟಕ ವಿಶ್ವವಿದ್ಯಾಲಯದ ಪ್ರಕಟಣೆಗಳಲ್ಲಿ ‘ಕಾಟಕೋನ ಚೌಕೆನ’ವೆಂದಿದ್ದರೆ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅದು ‘ಚಚೌಕ’ವಾಗಿರುತ್ತದೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ‘ಚೌರಸ’ವಾಗಿಬಿಡುತ್ತದೆ. ಇದೊಂದು ಅತ್ಯಂತ ಸರಳ ಉದಾಹರಣೆಯಾಗಿದೆಯಷ್ಟೆ, ಗಣಿತಕ್ಕೆ ಸಂಬಂಧಿಸಿದಂತೆ ಕರ್ನಾಟಕ ವಿಶ್ವವಿದ್ಯಾಲಯದ ಪ್ರಕಟಣೆಗಳಲ್ಲಿ ‘ಭಾಜಕ’ “ಭಾಜ್ಯ’ ‘ಭಾಗಲಬ್ದ ‘ ಮುಂತಾದ ಅತ್ಯಂತ ಪ್ರಾಥಮಿಕ ಶಬ್ದಗಳೇ ಗೊಂದಲಕ್ಕೆ ಸಿಕ್ಕಿ, ಲೇಖಕರು ಓದುಗರ ಹಾಗೂ ವಿಮರ್ಶಕರ ನಗೆಗೀಡಾಗಿದ್ದಾರೆ. ಹಾಗೆಯೇ ಇತರ ವಿಶ್ವವಿದ್ಯಾಲಯಗಳ ಪುಸ್ತಕಗಳಲ್ಲಿ ಸಹ ಉಷ್ಣ’ ಹಾಗೂ ‘ಉಷ್ಣತೆ’ ಎಂಬ ಚಿರಪರಿಚಿತ ಶಬ್ದಗಳನ್ನು ಬೇರೆ ಬೇರೆ ಅರ್ಥಗಳಲ್ಲಿ ಉಪಯೋಗಿಸಿರುವುದು ಕಂಡುಬರುತ್ತದೆ ! ಇಂತಹ ಹಾಸ್ಯಾಸ್ಪದ ಗೊಂದಲಗಳಿಗೆ ಮುಖ್ಯ ಕಾರಣವೆಂದರೆ, ಕನ್ನಡದಲ್ಲಿ ಬರೆಯುವುದಕ್ಕೆ ಬೇಕಾದ ಏಕೈಕ ಅರ್ಹತೆ ಎಂದರೆ, ಕನ್ನಡ ಭಾಷೆಯ ಸಾಮಾನ್ಯ ಪರಿಚಯ ಎಂಬ ಭಾವನೆ ಇರುವುದು ಮತ್ತು ಬರೆಸುವವರೂ ಸಹ ಆತುರಾವೇಶಗಳಲ್ಲಿ ಯಾರೆಂದರೆ ಅವರಿಂದಲೇ ಪುಸ್ತಕಗಳನ್ನು ಬರೆಸಿ, ಹಸ್ತಪ್ರತಿಗಳನ್ನು ಮುದ್ರಣ ಪೂರ್ವ ಪರಿಷ್ಕರಣೆಗೆ ಒಳಪಡಿಸದೆಯೇ ಅಚ್ಚಿನ ಮನೆಗೆ ಕಳುಹಿಸುತ್ತಿರುವುದು. ಇದು ತೀರಾ ಅತಿಯಾದರೆ, ಆತುರಾವೇಶಗಳು ನಿರ್ಲಕ್ಷ ಎಂದು ಅರ್ಥವಾಗುತ್ತದೆ. ಕನ್ನಡದ ಪ್ರಾಥಮಿಕ ತಾಂತ್ರಿಕ ಶಬ್ದಗಳ ಪರಿಚಯವೇ ಇಲ್ಲದವರಿಂದ ಕೇವಲ ಖಯಾಲಿಯಿಂದ ಪುಸ್ತಕ ಬರೆಸಿದರೆ, ಅಥವಾ ಬರೆಯುವವರೂ ಸಹ ಹೆಸರಿಗಾಗಿ ಹಣಕ್ಕಾಗಿ ಬರೆಯಲಾರಂಭಿಸಿದರೆ, ಏನು ಸಾಧಿಸಿದಂತಾಯಿತು? ವಿಜ್ಞಾನ ಪ್ರಪಂಚದ ನಾಲ್ಕನೇ ಭಾಗದ ಮುನ್ನುಡಿಯಲ್ಲಿ ಶಿವರಾಮ ಕಾರಂತರು, ಕನ್ನಡದಲ್ಲಿನ ಪಠ್ಯಪುಸ್ತಕಗಳ ಬಗ್ಗೆ ಅನುಷಂಗಿಕವಾಗಿಯಾದರೂ ಪ್ರಸ್ತಾಪಿಸಿ “ನಾವೆಲ್ಲರೂ ಶಿಕ್ಷಣ ಮಾಧ್ಯಮ, ಕನ್ನಡವಾಗಬೇಕೆಂದು ಘರ್ಜಿಸುವವರೇ ! ಅದು ಮಾಧ್ಯಮವಾಗಲು ಗ್ರಂಥಬಾಹುಳ್ಯ ಕನ್ನಡದಲ್ಲಿ, ವಿವಿಧ ವಿಷಯಗಳಲ್ಲಿ ಬರದೆ ಹೋದರೆ ಏನಾದೀತು?” ಎಂದು ಪ್ರಶ್ನಿಸುವ ಜೊತೆಗೇ, “ಕೇವಲ ಟೆಕ್ಸ್ಟ್ ಬರವಣಿಗೆ ಮತ್ತು ವ್ಯಾಪಾರ ಮೋಹಗಳಿಂದ ದುಡಿದರೆ, ಕನ್ನಡ ನುಡಿ ಪುಷ್ಪವಾದೀತೇ? ಶಿಕ್ಷಣ ಮಾಧ್ಯಮ ಸಾಧ್ಯವಾದೀತೆ?” ಎಂದು ಕೇಳಿರುವುದು ಅರ್ಥಪೂರ್ಣವಾಗಿದೆ. ಈ ಸಂದರ್ಭದಲ್ಲಿ ಮೈಸೂರು ವಿಶ್ವ ವಿದ್ಯಾಲಯದ ಇಂಗ್ಲಿಷ್-ಕನ್ನಡ ನಿಘಂಟಿನ ಸಂಪಾದಕರು ಭಾಷೆಯ ಸ್ವರೂಪದ ಬಗ್ಗೆ ಅನುಸರಿಸುವ ಧೋರಣೆ ವಿಜ್ಞಾನ ಭಾಷೆಗೂ ಸಂಪೂರ್ಣವಾಗಿ ಅನ್ವಯಿಸುತ್ತದೆ.*
ಇನ್ನು ಶೈಲಿಯ ವಿಷಯಕ್ಕೆ ಬಂದರೆ, ವಿಜ್ಞಾನವನ್ನು ಕನ್ನಡ ಭಾಷೆಯಲ್ಲಿ ಅರಳಿಸುವುದಕ್ಕೆ ಬೇಕಾದ ನಿರೂಪಣಾ ಸಾಮರ್ಥ್ಯವನ್ನು ನಮ್ಮ ಪಠ್ಯಪುಸ್ತಕಗಳಲ್ಲಿ ಕಾಣಲಾರೆವು. ಆದರೆ ಇದು ಭಾಷೆಯ ತಪ್ಪೆಂದು ಯಾರೂ ಆಪಾದಿಸಲಾಗದ ರೀತಿಯಲ್ಲಿ ಶಿವರಾಮ
_________________
* ಇಲ್ಲಿ ‘ಕನ್ನಡ” ಎನ್ನುವದನ್ನು-ಅದರಲ್ಲಿ ಸೇರಿರುವ ಪದಗಳ ಮೂಲವನ್ನು ಲಕ್ಷಿಸದೆ. “ಕನ್ನಡ ನಾಡಿನ ಜನರ ಪ್ರಚಲಿತ ಭಾಷೆಯಲ್ಲಿರುವ ಶಬ್ದ ಕೋಶವೆಲ್ಲಾ’ ಎಂದು ಅರ್ಥಮಾಡಿದೆ. ಪ್ರಗತಿಪರರಾದ ಜನರ ಬೆಳೆಯುತ್ತಿರುವ ಭಾಷೆಯ ಅವಶ್ಯಕತೆಗಳಿಗೆ ಶಬ್ದ ಪಾರಿಶುದ್ಧ್ಯದ ನಿರ್ಬಂಧಗಳಿಗೂ ಎಲ್ಲ ಕಾಲದಲ್ಲೂ ಹೊಂದಾಣಿಕೆ ಸಾಧ್ಯವಿಲ್ಲ. ನಮ್ಮ ಕೃತಿ ಮುಖ್ಯವಾಗಿ ಜನಸಾಮಾನ್ಯರ ಉಪಯೋಗಕ್ಕಾಗಿ ಉದ್ದೇಶಿಸಿದ್ದಾಗಿದೆ. ಕನ್ನಡ ನುಡಿಯ ಭಂಡಾರಕ್ಕೆ ಅದರ ಸಾಕು ತಾಯಿಯಂತಿರುವ ಸಂಸ್ಕೃತ ಮಾತ್ರವೇ ಅಲ್ಲ-ಬಳಕೆಯ ಭಾಷೆಯಲ್ಲಿ ಕೂಡಾ ಅನೇಕ ಕನ್ನಡ ಪದಗಳ ಬದಲು ಸಂಸ್ಕೃತ ಪದಗಳು ಬಂದು ಬಿಟ್ಟಿವ-ಪರ್ಷಿಯನ್, ಅರಬ್ಬಿ, ಉರ್ದು, ಮರಾಠಿ ಭಾಷೆಗಳು ಕೂಡಾ ಪದಗಳನ್ನು ತುಂಬಿಕೊಟ್ಟಿವೆ. ಆದರೂ ನಮ್ಮ ಭಂಡಾರಕ್ಕೆ ಹೊರಗಿನಿಂದ ಇನ್ನೂ ತರಬೇಕಾಗಿದೆ ಹಲವು ಇಂಗ್ಲಿಷ್ ಪದಗಳಿಗೆ ಭಾರತದ ಯಾವ ಭಾಷೆಯೂ, ಕಡೆಗೆ ಸಂಸ್ಕೃತ ಭಾಷೆಯ ಕೂಡಾ ಸಮಾನಾರ್ಥಗಳನ್ನು ಒದಗಿಸಲಾರದ ಸಂದರ್ಭಗಳು ಅಪರೂಪವೇನಲ್ಲ. ಆದ್ದರಿಂದ ಇಂತಹ ಕೆಲವು ಸಂದರ್ಭಗಳಲ್ಲಿ ಕನ್ನಡದ ಅಕ್ಷರಗಳಲ್ಲಿ ಬರೆದ ಆ ಇಂಗ್ಲಿಷ್ ಪದಗಳನ್ನೇ ಬಳಕೆಗೆ ತರಬೇಕೆಂದು ಹೇಳುವ ನಿರ್ಬಂಧ ಸಂಪಾದಕ ಮಂಡಳಿಗೆ ಒದಗಿ ಬಂತು.
ಕಾರಂತರು ತಮ್ಮ ವಿಜ್ಞಾನ ಪ್ರಪಂಚದಲ್ಲಿನ ಬರವಣಿಗೆಯಲ್ಲಿ ತೋರಿಸಿದ್ದಾರೆ. ಈ ದಿಶೆಯಲ್ಲಿ ಕಾರಂತರಿಗೆ ಸಿದ್ಧಿಸಿರುವ ಸಾಮರ್ಥ್ಯವನ್ನು ವಿಜ್ಞಾನ ಪ್ರಪಂಚದ ೩ ನೇ ಭಾಗದಲ್ಲಿನ “ಅದ್ಭುತ ಪರಮಾಣು’ ಹಾಗೂ ‘ಸಾಪೇಕ್ಷ ಸಿದ್ದಾಂತ’ ಎಂಬ ಎರಡು ಅಧ್ಯಾಯಗಳಲ್ಲಿ ಕಾಣಬಹುದು. ಅತ್ಯಂತ ಅಮೂರ್ತ ಸ್ವರೂಪ ಹೊಂದಿರುವ, ಹಾಗೆಯೇ ಕೆಲವು ಸೂಕ್ಷ ಗಣಿತ ಪರಿಕಲ್ಪನೆಗಳನ್ನು ಬೆನ್ನೆಲುಬಾಗಿ ಉಳ್ಳ ಸಾಪೇಕ್ಷ ಸಿದ್ದಾಂತವನ್ನು ಗಣಿತ ಪರಿಕಲ್ಪನೆಗಳ ಗೊಂದಲದಿಂದ ಮುಕ್ತವಾಗಿಟ್ಟು, ಆಶ್ಚರ್ಯವಾಗುವಷ್ಟು ಸರಳ ಕನ್ನಡದಲ್ಲಿ ಅದರೆಲ್ಲಾ ಸಾರವನ್ನು ಖಚಿತ ಹಾಗೂ ಸ್ಪಷ್ಟವಾದ ಶಬ್ದಗಳಲ್ಲಿ ಕಾರಂತರು ಹಿಡಿದಿಟ್ಟಿದ್ದಾರೆ. ನಮ್ಮ ಪಠ್ಯಪುಸ್ತಕಗಳ ಭಾಷೆಯ ಬಗ್ಗೆ ಈ ಲೇಖಕರು, 1970ರಲ್ಲಿ ಮೈಸೂರಿನಲ್ಲಿ ನಡೆದ ವಿಜ್ಞಾನ ಸಾಹಿತ್ಯ ನಿರ್ಮಾಣ ಶಿಬಿರದಲ್ಲಿ ಆಡಿರುವ ಈ ಮಾತುಗಳು ಗಮನಾರ್ಹವಾಗಿವೆ: “ನಮ್ಮ ಅಜ್ಜಿಯ ಕನ್ನಡ ಭಾಷೆಯಲ್ಲಿರುವ ಓಘ, ಓಟ, ಅರ್ಥವತ್ತಾದ ರೀತಿ, ದೇಸಿ ನುಡಿಗಟ್ಟುಗಳ ಪ್ರಯೋಗ ಮನಸ್ಸಿಗೆ ಬಂದ ಭಾವನೆಯನ್ನು ಕೂಡಲೇ ತಬ್ಬಿಹಿಡಿಯತಕ್ಕಂಥ ಸೆಳವು ಇವೆಲ್ಲಾ ಆಡು ಮಾತಿನಲ್ಲಿ ತುಂಬಿದಷ್ಟು ಚೆನ್ನಾಗಿ ನಾವು ನೋಡತಕ್ಕಂಥ ಕನ್ನಡ ಬರವಣಿಗೆಯಲ್ಲಿ ಕಾಣಿಸುವುದಿಲ್ಲ. ಅನೇಕ ಕನ್ನಡ ಪಠ್ಯಪುಸ್ತಕಗಳನ್ನು ನೋಡುವಾಗ, ಇದೆಲ್ಲಿಂದ ಬಂತು ಈ ಕನ್ನಡ ? ಜರ್ಮನ್ ಮಿಶನರಿಗಳು ಸೃಷ್ಟಿ ಮಾಡಿದ್ದೇ ಅಥವ ಬೇರಾವುದಾದರೋ ? ಎಂಬೀ ಪ್ರಶ್ನೆಗಳು ಮೂಡುತ್ತವೆ. ಇದು ಯಾಕೆ ಹೀಗಾಯಿತೆಂದರೆ, ಮೊದಲಿಗೆ ಪ್ರಾಯಃ ಸಂಸ್ಕೃತ ಗ್ರಂಥಗಳಿಂದ ತೆಗೆದುಕೊಂಡು ಆ ಆಲೋಚನೆಯನ್ನು, ಭಾಷಾ ರೀತಿಯನ್ನೂ ಅನುಕರಿಸಿ ಕನ್ನಡದ ಮೇಲೆ ಹೊರಿಸಿದ್ದರಿಂದ ಆಗಿರಬಹುದು. ಆಮೇಲೆ ಇಂಗ್ಲಿಷಿನಿಂದ ನಮ್ಮ ಜ್ಞಾನ ಸಂಪಾದನೆ ನಡೆದ ಹಾಗೆ, ಆ ಭಾಷೆಯಲ್ಲಿ ನಮಗೆ ಪಾಂಡಿತ್ಯವಿಲ್ಲದೇ ಹೋದರೂ ಅಲ್ಲಿನ ವಾಕ್ಯರಚನಾ ಕ್ರಮ ಮುಂತಾದ ಕಲ್ಪನೆಗಳು ಕನ್ನಡಕ್ಕೆ ನೇರವಾಗಿ ಇಳಿದಿದ್ದರಿಂದ, ನಾವು ಮನೆಯಲ್ಲಿ ಕನ್ನಡ ಮಾತಾಡುತ್ತಿದ್ದರೂ ಕೂಡಾ, ಲೇಖನಿ ಹಿಡಿದಕೂಡಲೇ ಬರುವಂಥ ಕನ್ನಡದ ಜಾತಿಯೇ ಬೇರೆ ಆಗುತ್ತದೆ. ಇದು ನೇರವಾಗಿ ನಮ್ಮ ಮನಸ್ಸನ್ನು ತೋಡಿಕೊಳ್ಳಲು, ಇನ್ನೊಬ್ಬರ ಮನಸ್ಸನ್ನು ತಿಳಿದುಕೊಳ್ಳಲು, ಅಡಚಣೆ ತರುತ್ತದೆಂದು ನನಗನ್ನಿಸುತ್ತದೆ.”
ಈ ಅಡಚಣೆಗಳನ್ನು ನಿವಾರಿಸಿಕೊಳ್ಳುವವರೆಗೂ ಕನ್ನಡ ವಿಜ್ಞಾನ ವಿಷಯಗಳ ನಿರೂಪಣೆಗೆ ಬಗ್ಗಲಾರದು. ಭಾಷೆಗೆ ಬಗ್ಗದ ಯಾವುದೇ ವಿಷಯವೂ ಸೊರಗಿ ಅನಾಕರ್ಷಕವಾಗಿ ಕಾಣುವಂತೆ ವಿಜ್ಞಾನ ಸಹ ತನ್ನ ಸೂಕ್ಷ್ಮತೆ ಹಾಗೂ ಬಿಗಿಯನ್ನು ಕಳೆದುಕೊಂಡು ದುರ್ಬಲವಾಗುತ್ತದೆ. ಆದುದರಿಂದ ವಿಜ್ಞಾನದಲ್ಲಿ ಆಸಕ್ತಿಯುಳ್ಳ ಓದುಗರಿಗೆ ಕನ್ನಡ ಮಾಧ್ಯಮದ ಬಗ್ಗೆ ಭ್ರಮ ನಿರಸನವಾಗುವುದರಲ್ಲಿ ಆಶ್ಚರ್ಯವೇನೂ ಕಾಣದು. ಇದು ಖಂಡಿತ ಸ್ವಾಗತಾರ್ಹ ಹಾಗೂ ನಿರೀಕ್ಷಿಸತಕ್ಕ ಬೆಳವಣಿಗೆಯಾಗಲಾರದು. ನಮ್ಮ ಪಠ್ಯ ಪುಸ್ತಕಗಳನ್ನು ಬರೆಸುವವರು ಹಾಗೂ ಬರೆಯುವವರೂ ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳದ ಹೊರತು, ಪಠ್ಯ ಪುಸ್ತಕಗಳ ಯೋಜನೆ ಹಾಗೂ ಆ ಮೂಲಕ ಕನ್ನಡ ಮಾಧ್ಯಮದ ಯಶಸ್ಸು ಸಾಧ್ಯವಾಗಲಾರದೆಂದು ಕಾಣುತ್ತದೆ.
ಈ ಎಲ್ಲ ದೌರ್ಬಲ್ಯಗಳು, ಕೊರತೆ ಹಾಗೂ ಅವ್ಯವಸ್ಥೆಗಳ ನಡುವೆಯೂ ಕನ್ನಡ ವಿಜ್ಞಾನ ಭಾಷೆಯಾಗಿ ಹಿಮ್ಮೆಟ್ಟದಿರುವುದು ಸಂತೋಷದ ವಿಷಯವಾಗಿದೆ. ನಮ್ಮ ರಾಜ್ಯದ ವಿಶ್ವವಿದ್ಯಾಲಯಗಳ ಮುಖ್ಯಸ್ಥರುಗಳ ಹಾಗೂ ಕೆಲವು ಜ್ಞಾನವಂತರ ಉತ್ತೇಜನವೇ ಇದಕ್ಕೆ ಕಾರಣವಾಗಿದೆ. ಆದರೆ ಇಂತಹ ಬರೀ ಉತ್ತೇಜನಗಳಿಂದ ಭಾಷೆಯು ವಾಸ್ತವ ಮಟ್ಟದಲ್ಲಿ ಏನನ್ನೂ ಸಾಧಿಸದು ಎಂಬುದು ಕನ್ನಡವಿನ್ನೂ ವಿಜ್ಞಾನ ಮಾಧ್ಯಮದ ಭಾಷೆಯಾಗಿ ತನ್ನ ಸ್ಥಾನವನ್ನು ಪಡೆಯದಿರುವುದರಿಂದಲೇ ತಿಳಿಯುತ್ತದೆ. ಪುಸ್ತಕಗಳನ್ನು ಬರೆಸುವವರು ಹಾಗೂ ಬರೆಯುವವರು ಇನ್ನಷ್ಟು ಜವಾಬ್ದಾರಿಯಿಂದ ತಮ್ಮ ಕಾರ್ಯಗಳನ್ನು ನಿರ್ವಹಿಸಿದರೆ ಮತ್ತು ಸರ್ಕಾರವು ಸಹ, ಕನ್ನಡದ ಅಭಿವೃದ್ಧಿಯಲ್ಲಿ, ತನ್ನ ಪಾತ್ರವೆಂದರೆ, ವಾರ್ಷಿಕ ಆಯ-ವ್ಯಯ ಪತ್ರದಲ್ಲಿ ಒಂದಿಷ್ಟು ಹಣ ಮೀಸಲಿಡುವುದು ಮಾತ್ರ ಎಂಬ ತಪ್ಪು ತಿಳುವಳಿಕೆಯಿಂದ ಪಾರಾಗಿ, ಒಂದಿಷ್ಟು ವಾಸ್ತವಿಕ ಕ್ರಮಗಳನ್ನು ಕೈಗೊಂಡರೆ, ಈ ದಿಸೆಯಲ್ಲಿ ಕನ್ನಡದ ಬಗ್ಗೆ ಒಂದಿಷ್ಟು ಆಶಯ ಹೊಂದಬಹುದು. ಕನ್ನಡದಲ್ಲಿ ಹಲವಾರು ಉಪಯುಕ್ತ ವಿಜ್ಞಾನ ಗ್ರಂಥಗಳು ಹೊರ ಬಂದು, ನಮ್ಮ ಮುಂದಿನ ಜನಾಂಗದ ಅಗತ್ಯಗಳನ್ನಾದರೂ ಪೂರೈಸಬಹುದು. ಶ್ರೀ ಶಿವರಾಮ ಕಾರಂತರು ತಮ್ಮ ‘ವಿಜ್ಞಾನ ಪ್ರಪಂಚ’ದ ಕೆಲಸವನ್ನು ಮುಗಿಸಿ ನಿಟ್ಟುಸಿರು ಬಿಟ್ಟು ನೆಮ್ಮದಿಯ ನಡುವೆಯೇ ಆಡಿರುವ ಎಚ್ಚರಿಕೆಯ ಮಾತುಗಳನ್ನು ನಾವು ಗಮನಿಸಬೇಕು: “ಇನ್ನೆಂಥ ಸಮಾಜವಾದೀ ಸರ್ಕಾರವೇ ಬರಲಿ, ಅಥವಾ ಹೊಸತಾಗಿ ಸೃಷ್ಟಿಯಾಗಲಿ, ನಮ್ಮ ನಮ್ಮ ಮಕ್ಕಳನ್ನು ನಾವು ಪ್ರೀತಿಸುವುದಕ್ಕಿಂತ ಅಧಿಕವಾಗಿ .ಮಲ-ಮಲ-ಮಲ-ತಾಯಿಗಿಂತ ಕೀಳಾದ ಸರಕಾರ ಪ್ರೀತಿಸಬಲ್ಲುದೆಂದು ನಾನು ತಿಳಿಯಲಾರೆ. ತಮ್ಮ ಮಕ್ಕಳ ಸುಖವನ್ನು ಜನರು ತಾವಾಗಿಯೇ ಎಷ್ಟು ಶ್ರಮಪಟ್ಟಾದರೂ ಸಾಧಿಸದೆ ಹೋದರೆ. ಅವರ ಪಾಲಿನ ಭವಿಷ್ಯ ಅಷ್ಟೊಂದು ಬರಡಾದಂತೆಯೇ ಸರಿ”,
ತಾಂತ್ರಿಕ ಪದಗಳ ಸೃಷ್ಟಿ ಸುತ್ತು ಆಯ್ಕೆ : ಒಂದು ಟಿಪ್ಪಣಿ
ಕನ್ನಡ, ವಿಜ್ಞಾನಕ್ಕೆ ಒಗ್ಗದ ಭಾಷೆ ಎಂಬ ಕಟ್ಟಾ ಇಂಗ್ಲಿಷ್ ಹುಚ್ಚರ ಟೀಕೆಗಳ ನಡುವೆಯೂ, ಸರ್ಕಾರದ ಅಷ್ಟೇನೂ ಉತ್ಸಾಹದಾಯಕವಲ್ಲದ ಪ್ರತಿಕ್ರಿಯೆಯ ದೃಷ್ಟಿಯಿಂದಲೂ, ಕನ್ನಡ, “ಆಗತಾನೇ ಹುಟ್ಟಿದ ಮಗು ನಡೆಯದಿದ್ದಲ್ಲಿ, ಅದನ್ನು ತೆಗೆದತ್ತ ಎಸೆಯಬೇಕು’ ಎಂಬ ಸಹನಾಹೀನ ಧೋರಣೆಗೆ ಬಲಿಯಾಗಬೇಕಾಯಿತು. ಇತ್ತ, ಶಿಕ್ಷಣ ಮಾಧ್ಯಮ ಕನ್ನಡವಾಗಬೇಕೆಂಬ ಸಾತ್ವಿಕ ಆದರ್ಶ, ಅತ್ತ ಆ ಸಾಮರ್ಥ್ಯದ ದೃಷ್ಟಿಯಿಂದ ಭಾಷೆಯೇ ಶೂನ್ಯವಾಗಿ ಕಾಣುವ ಅಂದಿನ ವಾಸ್ತವಾಂಶಗಳ ನಡುವಣ ಘರ್ಷಣೆ, ಹಾಗೂ ಶ್ರೀ ಬೆಳ್ಳಾವೆ ವೆಂಕಟನಾರಣಪ್ಪ, ನಂತರ ಶ್ರೀ ಕೆ. ವಿ. ಪುಟ್ಟಪ್ಪನವರಂತಹ ಅಧಿಕಾರ ವಹಿಸಿಕೊಂಡಿದ್ದ ವ್ಯಕ್ತಿಗಳ ಕನ್ನಡ ಭಾಷಾಭಿಮಾನ. ಮುನ್ನೋಟ ಹಾಗೂ ಶ್ರೀ ಕಾರಂತರಂತಹವರ ಕಾರ್ಯಶೀಲತೆ ಮುಂತಾದವುಗಳಿಂದ ಕನ್ನಡದಲ್ಲಿ ತೊದಲ ಬರವಣಿಗೆ ಆರಂಭವಾಯಿತು. ವಿಜ್ಞಾನ ವಿಷಯಗಳೇನೂ ಪವಾಡ ಅಥವಾ ವಿಚಾರಾತೀತ ವಿಷಯಗಳಲ್ಲವಾದ್ದರಿಂದ, ಅದರ ಪರಿಕಲ್ಪನೆಗಳೆಲ್ಲವೂ ಸುಸಂಬದ್ಧವಾದ ವಿಚಾರತರ್ಕಗಳ ಅಡಿಪಾಯಗಳನ್ನು ಹೊಂದಿರುವುದರಿಂದ, ಮತ್ತು ಕನ್ನಡ ಭಾಷೆಯು ಸಂಸ್ಕೃತದಂತಹ ಅತ್ಯಂತ ಶಕ್ತಿಯುತವಾದ ಹಾಗೂ ಶತಶತಮಾನಗಳ ಕಾಲ ವಿಸ್ತಾರವಾದ ವಿಚಾರ ಸಾಹಿತ್ಯಕ್ಕಾಗಿ ದುಡಿದ ಭಾಷೆಯ ಮೊಲೆ ಹಾಲುಂಡು ಬೆಳೆದಿರುವುದರಿಂದ, ಮೂಲಭೂತವಾದ ವೈಜ್ಞಾನಿಕ ಶಬ್ದಗಳಿಗಾಗಿ ತಡಕಾಟ ಊಹಿಸಿದಷ್ಟು ಕಷ್ಟವಾಗಲಿಲ್ಲ. ಆರ್ಯಭಟನಂತಹ ಖಗೋಳ ಶಾಸ್ತ್ರಜ್ಞನೂ, ಭಾಸ್ಕರಾಚಾರ್ಯನಂತಹ ಗಣಿತಜ್ಞನ ಶತಮಾನಗಳ ಹಿಂದೆಯೇ ಸಂಸ್ಕೃತದಲ್ಲಿ ವಿದ್ವತ್ಪೂರ್ಣ ಗ್ರಂಥಗಳನ್ನು ರಚಿಸಿದ್ದರು. ಹೀಗಾಗಿ, ವಿಜ್ಞಾನದ ಬರಹಗಾರರು ಮಾಡಬೇಕಾಗಿದ್ದು, ಸಂಸ್ಕೃತದ ಅಕ್ಷಯ ಪಾತ್ರೆಯಲ್ಲಿ ಸೂಕ್ತ ಪದಗಳನ್ನು ಆದಷ್ಟೂ ಹುಡುಕುವ ಕೆಲಸ. ನಿಜ-ಸಂಸ್ಕೃತ, ಬಳಕೆಯ ದೃಷ್ಟಿಯಲ್ಲಿ ಮಹತ್ವವನ್ನು ಕಳೆದುಕೊಂಡು, ಕೇವಲ ಭಾರತೀಯ ಭಾಷೆಗಳ ಪೋಷಕವಾಗಿ ದುಡಿಯಲಾರಂಭಿಸಿದ ಕಾಲದ ನಂತರ, ವಿಜ್ಞಾನ ಹಲವಾರು ಜನ್ಮಗಳನ್ನೆತ್ತಿದೆ. ನ್ಯೂಟನ್ನನ ಪ್ರಪಂಚ ಮಾಯವಾಗಿ, ಅದನ್ನು ನುಂಗಿ ನಿಂತ ಐನ್‌ಸ್ಟೀನ್‌ನ ಪ್ರಪಂಚ ಸೃಷ್ಟಿಯಾಗಿದೆ! ಹಲವಾರು ನಂಬಿಕೆಗಳು ಹುಸಿಯೆಂದು ಸಿದ್ದವಾಗಿ, ಪ್ರಪಂಚದ ಪ್ರತಿಯೊಂದು ಚಲನೆಯ ಹೊಸ ಹೊಸ ಹಾಗೂ ವಿಸ್ತಾರವಾದ ಅರ್ಥಗಳನ್ನು ಪಡೆದುಕೊಳ್ಳುತ್ತಿದೆ. ಆಗ್ಗೆ ಕೇವಲ ಸಂಖ್ಯೆಗಳ ಆಟವಾಗಿದ್ದ ಗಣಿತಶಾಸ್ತ್ರ ಈಗ ಎಲ್ಲ ವಿಜ್ಞಾನಗಳಿಗೂ ನರನಾಡಿಯಾಗಿ, ಎಲ್ಲವನ್ನೂ ಅಮೂರ್ತತೆಯ ತುತ್ತ ತುದಿಗೆ ತಂದಿಟ್ಟುಬಿಟ್ಟಿದೆ. ಹೀಗಾಗಿ, ವಿಜ್ಞಾನ ಸಂಪೂರ್ಣ ಪುನರುಜೀವನಕ್ಕೆ ಒಳಗಾಗಿ ಹೊಸ ಹೊಸ ಆಯಾಮಗಳನ್ನು ಸೃಷ್ಟಿಸಿಕೊಂಡು, ಪ್ರಪಂಚವನ್ನೇ ಒಂದು ಸಂಕೀರ್ಣ ಸಮಷ್ಟಿಯೆಂದು ಅರ್ಥೈಸಿ, ತನ್ನ ತೋಳತೆಕ್ಕೆಯಲ್ಲಿ ಸೇರಿಸಿಕೊಂಡು ಬಿಟ್ಟಿದೆ! ಈ ಎಲ್ಲ ರೂಪ ಪರಿವರ್ತನೆ, ಸಂಸ್ಕೃತ ಅಥವಾ ಯಾವುದೇ ಭಾರತೀಯ ಆವರಣದಲ್ಲಿ ನಡೆಯದಿದ್ದುದರಿಂದ, ಮತ್ತು ಅಷ್ಟಿಷ್ಟು ನಡೆದಿರುವುದೂ ಇಂಗ್ಲಿಷ್ ಮೂಲಕವೇ ಆಗಿರುವುದರಿಂದ, ಎಲ್ಲ ವಿಚಾರಗಳಿಗೂ ಸೂಕ್ತವಾದ ಸಿದ್ಧ ತಾಂತ್ರಿಕ ಶಬ್ದಗಳನ್ನು ಹುಡುಕುವುದು ಅಸಾಧ್ಯ. ಆಗ ಹೊಸ ಹೊಸ ಶಬ್ದಗಳನ್ನು ಸೃಷ್ಟಿಸಬೇಕಾಗುತ್ತದೆ.
ಪರಿಕಲ್ಪನೆ ಏನು ಹೇಳುತ್ತದೆಂಬುದನ್ನು ಅರ್ಥ ಮಾಡಿಕೊಂಡು, ಅದರ ನಿಜವಾದ ಅರ್ಥ ಹೊರಡಿಸುವಂತಹ ಪದಗಳ ಸೃಷ್ಟಿ ಸಾಮಾನ್ಯವಾದ ಕೆಲಸವೇನಲ್ಲ. ಈ ಕೆಲಸದ ಮೇಲೆ ಹಲವಾರು ಪರಿಮಿತಿಗಳನ್ನು ಹಾಕಿಕೊಳ್ಳಬೇಕು: ಆ ಪದಗಳು ಸುಲಭವಾಗಿ ಅರ್ಥವಾಗುವಂತಹವಿರಬೇಕು; ವಿಜ್ಞಾನ ಬರವಣಿಗೆಯ ಶೈಲಿಗೆ ಹೊಂದಿದಂತಿರಬೇಕು ಹಾಗೂ ವಿಜ್ಞಾನದ ವಿಶಿಷ್ಟ ಲಕ್ಷಣಗಳಾದ ಖಚಿತತೆ ಹಾಗೂ ಸಂಕ್ಷಿಪ್ತತೆ (Precise and brief) ಆ ಶಬ್ದಗಳಲ್ಲಿ ಪ್ರಕಟವಾಗಿರಬೇಕು. ಇದು ಸ್ವದೇಶೀ ಮಡಿವಂತಿಕೆಯ ವೃತ್ತದಲ್ಲಿ ಮಾತ್ರ ಸುತ್ತಿದರೆ ಸಾಧ್ಯವಾಗದು.
ಏಕೆಂದರೆ ನಾವು ಬರೆಯ ಹೊರಟಿರುವುದು, ಭಾರತೀಯ ಸಂಸ್ಕೃತಿ, ಇತಿಹಾಸ ಅಥವಾ ಪುರಾಣಗಳನ್ನು ಕುರಿತಲ್ಲ; ಅಥವಾ ಗತ ವೈಭವಗಳ ವಿಮರ್ಶೆಯನ್ನಲ್ಲ. ನಾವು ಬರೆಯ ಹೊರಟಿರುವುದು ವಿಶ್ವಸಾಮಾನ್ಯವಾದ ಹಾಗೂ ಸಾರ್ವಕಾಲಿಕವೆಂದು ಸಿದ್ಧವಾದ ಸತ್ಯಗಳನ್ನು ಕುರಿತು. ಆಗ ನಾವು ಸಹಜವಾಗಿ, ಕೇವಲ ಸಂಸ್ಕೃತದತ್ತ ನೋಡಿದರೆ ಸಾಲದು. ಒಂದು ವೈಜ್ಞಾನಿಕ ಪರಿಕಲ್ಪನೆಯನ್ನು ಅರ್ಥಮಾಡಿಕೊಂಡರೂ, ಅದಕ್ಕೆ ಅರ್ಥಪೂರ್ಣವಾದ ಹೆಸರು ಸೃಷ್ಟಿಸುವುದು (ಮೇಲೆ ಸೂಚಿಸಿದ) ಸಂಸ್ಕೃತ ಭಾಷೆಯ ಪರಿಮಿತಿಗಳ ದೃಷ್ಟಿಯಿಂದ ಸಾಧ್ಯವಾಗದೇ ಹೋಗಬಹುದು. ಆಗ ಇಂಗ್ಲಿಷ್ ಕಡೆ ಅನಿವಾರ್ಯವಾಗಿ ನೋಡಲೇಬೇಕು. ಈ ದೃಷ್ಟಿಯಿಂದ, ಮೈಸೂರು ವಿಶ್ವ ವಿದ್ಯಾಲಯದ ಇಂಗ್ಲಿಷ್-ಕನ್ನಡ ನಿಘಂಟಿನ ಸಂಪಾದಕರು ತಳೆದಿರುವ ದಿಟ್ಟ ಅಭಿಪ್ರಾಯ ಈಗಲೂ ಮನ್ನಣಾರ್ಹವಾಗಿದೆ. ಇಂಗ್ಲಿಷ್ ಪದಗಳಿಗೆ ಪೂರಾ ಭಾರತೀಯವಾದ ಆದರೆ ತೀರಾ ಅಪರಿಚಿತವಾದ (ಉದಾ: Oxygen : ಜಾರಕ, Carbon : ಪ್ರಾಂಗಾರ) ಪದಗಳನ್ನು ನೀಡಿರುವ ಲಾಹೋರದ ಆಂಗ್ಲ ಭಾರತೀಯ ಮಹಾಕೋಶವನ್ನೂ, ಮತ್ತು ಇಂಗ್ಲಿಷ್ ತಾಂತ್ರಿಕ ಪದಗಳಿಗೆ ಹತ್ತಿರವಾದ ಪದಸೃಷ್ಠಿಯಿರುವ (ಉದಾ: Oxygen : ಅಕ್ಷಜನ, Hydrogen : ಆರ್ದ್ರಜನ) ಪ್ರೊ|| ಫಣೀಂದ್ರನಾಥ ಬ್ಯಾನರ್ಜಿಯವರ “A system of Indian Scientibc Terminology” ಎಂಬ ನಿಘಂಟುಗಳನ್ನು ಸಂಪಾದಕ ಮಂಡಳಿಯು ಪರಿಶೀಲಿಸಿ, “ನಮ್ಮ ಈ ನಿಘಂಟಿನಲ್ಲಿ ಇಂಥಹ ಯಾವುದೇ ಪ್ರಯತ್ನ ಮಾಡಿಲ್ಲವೆಂದು ತಿಳಿಸಿ, ತನ್ನ ನಿಲುವನ್ನು ಹೀಗೆ ಸ್ಪಷ್ಟಪಡಿಸಿದೆ: “ವೈಜ್ಞಾನಿಕ ಮತ್ತು ಯಂತ್ರ ಪರಿಕರ್ಮದ ಪದಗಳಿಗೆ ಅವುಗಳ ಗರ್ಭಿತಾರ್ಥಗಳನ್ನೆಲ್ಲಾ ಸ್ಪಷ್ಟವಾಗಿ ತಿಳಿಯುವಂತೆ ಸಂಪೂರ್ಣವಾದ ಲಕ್ಷಣ ನಿರೂಪಣೆಯಲ್ಲಿ ಕನ್ನಡದಲ್ಲಿ ಕೊಡಲಾಗಿದೆ. ಹೆಚ್ಚು ವಿವರಣಾತ್ಮಕವಾದ ಮತ್ತು ಹೆಚ್ಚು ಖಚಿತವಾದ ಲಕ್ಷಣ ನಿರೂಪಣೆಯನ್ನು ಕೋರುವ ವೈಜ್ಞಾನಿಕನಿಗೆ ನಾವು ಕೊಟ್ಟಿರುವ ಲಕ್ಷಣ ನಿರೂಪಣೆ ತೃಪ್ತಿಕರವಾಗಿಲ್ಲದಿರಬಹುದು……..ಆದರೆ ಇಂಡಿಯಾದ ಭಾಷೆಗಳು ಬಳಸಬೇಕಾದ ವೈಜ್ಞಾನಿಕ ಪರಿಭಾಷೆಯನ್ನು ಅಖಿಲ ಭಾರತಕ್ಕೂ ಅನ್ವಯಿಸುವ ತಳಹದಿಯ ಮೇಲೆ ರಚಿಸಬೇಕೆಂದು ಈ ಸಂಪಾದಕ ಮಂಡಲಿ ಅಭಿಪ್ರಾಯ ಪಡುತ್ತದೆ.”
ಇಂಗ್ಲಿಷ್ ಪದಗಳಿಗೆ ಕನ್ನಡದ ಸಮಾನಾರ್ಥಕಗಳನ್ನು ಹುಡುಕುವುದರಲ್ಲಿಯ ಈ ಸಂಪಾದಕ ಮಂಡಳಿ ಅತ್ಯಂತ ಆರೋಗ್ಯಕರ ನಿಲುವನ್ನು ತಾಳಿದೆ: “ಆದರ್ಶಾತ್ಮಕವಾದ ನಿರ್ದುಷ್ಟ ಪದರೂಪ ಅಥವಾ ಖಚಿತವಾದ ಲಕ್ಷಣ ನಿರೂಪಣೆ -ಇವುಗಳಿಗಿಂತ ಅಡಕ, ಸರಳತೆ ಮತ್ತು ಅರ್ಥಸುಲಭತೆ-ಇವು ಮುಖ್ಯವೆಂದು ನಾವು ಪರಿಗಣಿಸಿದೆವು. ಬಳಕೆಯಲ್ಲಿ ಬಂದು ಪದ ಸಿದ್ಧವಾಗಿದ್ದಾಗ, ಅದು ಅನಿಷ್ಕೃಷ್ಟವಾಗಿದ್ದರೂ ಒರಟಾಗಿದ್ದರೂ, ಪಾಂಡಿತ್ಯದ ನಿಷ್ಕೃಷ್ಟತೆಗೆ ಹೆಚ್ಚು ತೃಪ್ತಿಕರವಾದ ಪದವನ್ನು ಕೈ ಬಿಟ್ಟು, ಸಾಮಾನ್ಯವಾಗಿ ಆ ಬಳಕೆಯ ಪದವನ್ನೇ ಉಪಯೋಗಿಸಿದ್ದೇವೆ”. ಇದು, ಬೆಳೆಯಬೇಕಾದ ಪರಿಭಾಷೆಯ ಬಗ್ಗೆ ತೋರಬೇಕಾದ ಉದಾರ ಧೋರಣೆಯಾಗಿದೆ, [ಇದಕ್ಕೆ ಸಮನಾಂತರವಾದ ಹಾಗೂ ಈ ಸಂದರ್ಭಕ್ಕೆ ಪ್ರಾತಿನಿಧಿಕವಾದ ಪ್ರಯೋಗವೊಂದನ್ನು ಕೆಲವು ವರ್ಷಗಳ ಹಿಂದೆ ಬೆಂಗಳೂರು ವಿಶ್ವವಿದ್ಯಾಲಯ ನಡೆಸಿತು. ಅದೆಂದರೆ, ಎರಡು ಗಣಿತ ಪುಸ್ತಕಗಳನ್ನು ಜೊತೆ ಜೊತೆಯಾಗಿ ಕನ್ನಡ-ಇಂಗ್ಲಿಷ್-ಎರಡರಲ್ಲೂ ಪ್ರಕಟಿಸಿತು. ಅಂದರೆ, ಒಂದೇ ಪುಸ್ತಕದಲ್ಲಿ, ಒಂದು ಪುಟದಲ್ಲಿ ಇಂಗ್ಲಿಷ್ ನಿರೂಪಣೆ ಇದ್ದರೆ, ಪಕ್ಕದ ಪುಟದಲ್ಲಿಯೆ ಅದೇ ವಿಷಯದ ಕನ್ನಡ ನಿರೂಪಣೆ. ಕನ್ನಡ ತಾಂತ್ರಿಕ ಪದಗಳನ್ನು ಮತ್ತಷ್ಟು ಆತ್ಮೀಯವನ್ನಾಗಿ ಮಾಡುತ್ತಿದ್ದ ಈ ರಚನಾತ್ಮಕ ಪ್ರಯೋಗವನ್ನು ವಿಶ್ವವಿದ್ಯಾಲಯ ನಿಲ್ಲಿಸಬಾರದಿತ್ತು].
ತಾಂತ್ರಿಕ ಶಬ್ದಗಳನ್ನು ಸೃಷ್ಟಿಸುವ ನಮ್ಮ ಲೇಖಕರು ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಿದರೆ, ಕನ್ನಡವನ್ನು ಶ್ರೀಮಂತಗೊಳಿಸುವುದು ಕಷ್ಟದ ಕೆಲಸವೇನೂ ಆಗುವುದಿಲ್ಲ.
ಹಿನ್ನುಡಿ:
ಕೊನೆಯಲ್ಲಿ ಒಂದು ಮಾತು ಹೇಳಲೇಬೇಕು. ಕನ್ನಡ ಭಾಷೆಗೂ ತನ್ನದೇ ಆದ ಪರಿಮಿತಿಗಳಿವೆ. ಕನ್ನಡ ಅಥವಾ ಯಾವುದೇ ಭಾರತೀಯ ಭಾಷೆಯ ವಿಜ್ಞಾನದ ಮಟ್ಟಿಗೆ ವಿಶ್ವಮಾನ್ಯ ಭಾಷೆಯಲ್ಲ, ಅದಕ್ಕೆ ಕಾರಣ, ಈ ಭಾಷೆಯನ್ನಾಡುವ ಜನ ಕಡಿಮೆಯೆಂದಲ್ಲ; ಅದೇ ಆಧಾರವಾಗಿದ್ದರೆ, ಫ್ರೆಂಚ್, ಜರ್ಮನ್ ಹಾಗೂ ಜಪಾನೀ ಭಾಷೆಗಳು ವಿಶ್ವಮಾನ್ಯ ಭಾಷೆಗಳಾಗುತ್ತಿರಲಿಲ್ಲ. ಜರ್ಮನ್ ಭಾಷೆಯನ್ನೇ ತೆಗೆದುಕೊಂಡರೆ, ಆ ಭಾಷೆಯಲ್ಲಿ ಯಾವುದೇ ವಿಜ್ಞಾನಿಯ ನಿರ್ಲಕ್ಷ ಮಾಡಲಾಗದಂತಹ ಕೆಲವು ಮೂಲಭೂತ ಸಂಶೋಧನೆಗಳು ನಡೆದಿವೆ. ಆದುದರಿಂದ ಜರ್ಮನ್ ಭಾಷೆ ವೈಜ್ಞಾನಿಕ ಸಂಶೋಧನಾ ಮಾಧ್ಯಮವಾಗಿ ದುಡಿದು ಸಮರ್ಥ ಭಾಷೆಯಾಯಿತು. ಆದರೆ ಕನ್ನಡಕ್ಕೆ ಅಂತಹ ಯಾವುದೇ ಭಾಗ್ಯವಿಲ್ಲ. ಆದುದರಿಂದ ಅದಕ್ಕೆ ಮಾನ್ಯತೆ ಇಲ್ಲ. ನಿಕಟ ಭವಿಷ್ಯದಲ್ಲೂ ಸಹ ಈ ದೃಷ್ಟಿಯಲ್ಲಿ ಮಾನ್ಯತೆ ಪಡೆಯುವ ಸಂಭವವಿಲ್ಲ. ವಿಶ್ವಮಾನ್ಯತೆ ಪಡೆಯಬೇಕಾದರೆ, ವಿಶ್ವಮಾನ್ಯ ಸಂಶೋಧನೆ ಕನ್ನಡದಲ್ಲಿ ಆಗಬೇಕು. ಇದು ಹುಚ್ಚು ಬಿಡುವವರೆಗೂ ಮದುವೆ ಇಲ್ಲ ; ಮದುವೆಯಾಗುವವರೆಗೂ ಹುಚ್ಚು ಬಿಡುವುದಿಲ್ಲ ಎಂಬ ಪರಿಸ್ಥಿತಿಯಾಗಿದೆ. ಆದುದರಿಂದ ಇಲ್ಲಿ ರಾಜಿ ಅಗತ್ಯ, ಉನ್ನತ ಮಟ್ಟಗಳಲ್ಲಿ, ಅಂದರೆ-ಸ್ನಾತಕೋತ್ತರ ಹಾಗೂ ಸಂಶೋಧನೆಯ ಮಟ್ಟದಲ್ಲಿ ಸದ್ಯಕ್ಕೆ ಕನ್ನಡ ದುಡಿಯಲಾರದು. ಇದಕ್ಕೆ ಅಗತ್ಯವಾದ ವೈಜ್ಞಾನಿಕ ಸಾಹಿತ್ಯವನ್ನು ಕನ್ನಡದಲ್ಲಿ ಬರೆಯುವುದಿರಲಿ, ಅದನ್ನು ಕನ್ನಡಕ್ಕೆ ಅನುವಾದಿಸುವುದು ಸಹ ಅತ್ಯಂತ ಕ್ಲಿಷ್ಟ ಕೆಲಸವಾಗಿದೆ. ಅಲ್ಲದೆ, ಸಂಶೋಧನೆಗೆ ಬೇಕಾದ ಆಕರ ಗ್ರಂಥಗಳೆಲ್ಲವೊ, ಇಂಗ್ಲಿಷಿನಲ್ಲಿದೆ. ಕನ್ನಡವನ್ನು ಒಂದೊಂದೇ ಮೆಟ್ಟಿಲು ಹತ್ತಿಸಿಕೊಂಡು ಬರುವುದು ಆರೋಗ್ಯಕರ ಬದಲಾವಣೆ. ಆತುರ ಏನನ್ನೂ ಸಾಧಿಸಲಾರದು ಆದ್ದರಿಂದ ವಿಜ್ಞಾನ ವಿದ್ಯಾರ್ಥಿಗಳೆಲ್ಲರೂ ಸ್ನಾತಕೋತ್ತರ ಅಥವ ಸಂಶೋಧನಾ ಮಟ್ಟವನ್ನು ತಲುಪುವುದಿಲ್ಲ-ಎಂಬುದನ್ನು ಗಮನಿಸಿ, ಶಿಕ್ಷಣ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆಗಳನ್ನು ತರುವುದರ ಮೂಲಕ, ಕನ್ನಡದ ಸ್ಥಾನವನ್ನು ನಿರ್ಧರಿಸಬೇಕಾಗುತ್ತದೆ.
ಇಪ್ಪತ್ತೆಂಟನೆಯ ಸ್ವಾತಂತ್ರ್ಯೊತ್ಸವ
ಇಪ್ಪತ್ತೆಂಟನೆಯ ಸ್ವಾತಂತ್ರ್ಯೋತ್ಸವ
-ಶಾಮಸುಂದರ ಬಿದರಕುಂದಿ
…………ಶಕ್ಯವಿದ್ದರೆ ತಡೆ ಭಾವಾತಿರೇಕವಾಗಿ ಹರಿಯುವುದ
ನಿಲ್ಲಿಸು. ಕಟ್ಟುವ ಕೆಲಸ ಸ್ಮೃತಿಗಷ್ಟೇ ಪರಿಮಿತವಲ್ಲ
ವಾಸ್ತವದ ಅನುದಿನದ ಬಡಪೆಟ್ಟಿಗೂ ಪ್ರತಿ-
ತಾಡನ, ಕುತ್ತಿಗೆ ಮರ್ದನಗಳಟಾಟೋಪ
ಪ್ರಕೃತದಲನಿವಾರ್ಯ……………..
ಸಪ್ಪಳದಾಚೆ ಏನೋ ಇದೆ ಅವ್ಯಕ್ತ
ಖಂಡಿತ ನಿಷ್ಕ್ರಿಯ ಮೌನವಂತೂ ಅಲ್ಲ
ಸಂಕಟದ ಆತಂಕದ ಛಿದ್ರ ಭಾವಗಳ
ಅವಸರವೂ ಅಲ್ಲ ಇಂದಿನ ಸಹಾಯತೆಯ
ಗಂಭೀರ ಗೋರಿಯ ಮೇಲೆ ನಾಳೆ ಚಿಗಿವ ವೆ
ಮೊಳೆವ ಎಳ ಗರುಕೆ.
ಮೊದಲು ಕಳೆ, ಕಸ, ಪಾರ್ಥಿನಿಯಂ ಪಿಡುಗಿನಾಭಾಸ.
ಕಿತ್ತು, ಸುಟ್ಟು ಕರಕಾದಾಗಲೇ ಕಿತ್ತ ಕೈ ಸಾರ್ಥಕ.
ಚಿಗಿತ ಎಳ ಮೊಳಕೆಗಿಲ್ಲ ಈ ಪಿಡುಗಿನಾಭಾಸದ ಕೊಂಕು ಕ್ರಿಯಾಹೀನ;
ಮಿಡಿ ಕಾಣಿಸಿ ಮೊಗ್ಗೆಯಾಗರಳಿ, ಸ್ವಚ್ಚಂದ ನಗುವ ಬಯಕೆ
ಮತ್ತೆ ಹಣ್ಣಾಗಿ ನಿಷ್ಪತ್ತಿಯಾಗಿ ಉದುರುವ ಮುಕ್ತಿ ಆಸೆ.
ಈ ಮರ-ಬೀಜ, ಬೀಜ-ಮರದಾಟದಲ್ಲೇ ಇದ್ದೀತು
ಸಂಗ್ರಾಮ ಕ್ರಾಂತಿ ನವೋದಯಗಳ ವಿಲಾಸ-ವೈಭವ.
ವಿಮುಖ
ವಿಮುಖ
-ಎನ್ ಪ್ರಕಾಶ್
ಇದಕ್ಕೆಲ್ಲ ಯಾಕೆ ಹೇಗೆ ಅಂತ ಕೇಳಿದರೆ ನಾನೇನಂತ ಹೇಳಲಿ ಸಾವಿತ್ರಿ ? ದೈವಲೀಲೆ ಅನ್ನು, ಅಂಥಾದೊಂದಿದ್ದರೆ. ನಮ್ಮ ಕರ್ಮ ಅಥವಾ ಹಣೆಬರಹ ಅನ್ನು, ಅದರಲ್ಲಿ ನಿನಗೆ ನಂಬಿಕೆ ಇದ್ದರೆ. ಏನೇ ಅಂದರೂ ಇದನ್ನು ವಿವರಿಸಿದ ಹಾಗೆ ಆಗಲಿಲ್ಲ. ಇದಕ್ಕೆ ಉತ್ತರ ಸಿಗೋದು ನಮ್ಮ ಬುದ್ದಿಯಾಚೆಗಿನ ಮಾತು. ಆದರೆ ಯಾವುದೇನೇ ಇರಲಿ ಇದರಂಥಾ ವಸ್ತು ಇನ್ನೊಂದಿಲ್ಲ ಅಂತ ಮಾತ್ರ ಗೊತ್ತು. ಅದು ನಿನಗೂ ಗೊತ್ತು. ನೀನು ಕೇಳೋ ಪ್ರಶ್ನೆಗೆ ಖಚಿತವಾದ ಉತ್ತರ ಸಿಗೋ ಹಾಗಿದ್ದರೆ ಈ ಪ್ರಶ್ನೇನೆ ಏಳುತ್ತಿರಲಿಲ್ಲ, ಈ ಪ್ರಸಂಗಾನೇ ಬರುತ್ತಿರಲಿಲ್ಲ.
ನೋಡು ಇದಕ್ಕೊಂದು ಉದಾಹರಣೆ ಕೊಡಬೇಕೂಂದರೆ ನನಗೆ ಸಮುದ್ರ ಅಂದರೆ ಬಹಳ ಇಷ್ಟ, ಯಾಕೇಂತ ಕೇಳಿದರೆ ನಾನೇನಂತ ಹೇಳಲಿ ? ಇವತ್ತಿನಿಂದ ಅಲ್ಲ, ಮುಂಚಿನಿಂದಲೂ, ನಾನು ಸಣ್ಣವನಿದ್ದಾಗಿನಿಂದಲೂ ಸಮುದ್ರದ ಮೇಲೆ ಬಹಳ ಪ್ರೀತಿ. ನನಗೆ ಇವತ್ತಿಗೂ ಚೆನ್ನಾಗಿ ನೆನಪಿದ. ನಾನು ಆವಾಗ ಎಂಟನೆ ಕ್ಲಾಸಿನಲ್ಲಿದ್ದೆ. ಭೂಗೋಳದ ಮೇಷ್ಟ್ರು ಮ್ಯಾಪ್ ಬರಕೊಂಡು ಬರೋಕೆ ಹೇಳಿದ್ದರು, ಇಂಡಿಯಾದ್ದು. ನಾನೂ ಎಲ್ಲರಂತೆ ಮ್ಯಾಪ್ ಬರೆದಿದ್ದೆ. ಆದರೆ ಸುತ್ತಲೂ ಇರೋ ಸಮುದ್ರಕ್ಕೆ ಬಣ್ಣ ಕೊಡಬೇಕಲ್ಲ. ಆಗ ಬಂತು ನಿಜವಾದ ತೊಂದರೆ. ನೀಲಿ ಬಣ್ಣ ಎಷ್ಟು ಕೊಟ್ಟರೂ ಸಾಕಾಗಲಿಲ್ಲ. ಬಣ್ಣದ ಪೆನ್ಸಿಲ್ಲಿನಿಂದ ಒತ್ತಿ ಒತ್ತಿ ಬರೆದೆ. ಬರೆದದ್ದನ್ನೆ ಮತ್ತೆ ಮತ್ತೆ ತೀಡಿದೆ. ಒಂದೆರಡು ಕಡೆ ಪೇಪರ್ ಹರಿದು ತೂತಾಯಿತು. ಪೆನ್ಸಿಲ್ ಮುಗೀತಾ ಬಂತು, ಆದರೂ ಸಮಾಧಾನ ಸಿಗಲಿಲ್ಲ. ಮೇಷ್ಟು ಬಂದವರೆ ಮ್ಯಾಪ್ ನೋಡಿ, ಅದನ್ನು ಕಸಕೊಂಡು ಎಲ್ಲರಿಗೂ ತೋರಿಸ್ತಾ ಹೇಳಿದರು ನೋಡೋ ಮ್ಯಾಪ್ ಎಷ್ಟು ಚೆನ್ನಾಗಿ ಬರೆದಿದಾನೆ, ಸಮುದ್ರ ನೋಡ್ರೋ ಹೇಗೆ ಬಂದಿದೆ, ಎದ್ದು ಬಂದಿದೆ ಉದ್ಭವ ಆಗಿಹೋಗಿದೆ ಇವನ ಮ್ಯಾಪಿನಲ್ಲಿ. ಎಷ್ಟು ಬಣ್ಣ ಕೊಟ್ಟಿದಾನೆ ನೋಡ್ರೋ. ಏ ಅವಿನಾಶ, ಏಳೋ ಮೇಲೆ. ಎಷ್ಟು ಆಳ ಇದೆಯೋ ನಿನ್ನ ಸಮುದ್ರ ? ಹೋಗಿ ಬೀಳು ಅದರಲ್ಲಿ-ಅಂತ. ಎಲ್ಲಾ ಹುಡುಗರೂ ನಕ್ಕರು. ನಾನು ನಗಲಿಲ್ಲ, ಒಂದು ನಿಮಿಷ ಸುಮ್ಮನಿದ್ದೆ. ಆಮೇಲೆ ಮೆಲ್ಲನೆ ನಾನೂ ನಕ್ಕೆ.
ಹೌದು, ನಾನೂ ನಕ್ಕೆ. ಆದರೆ ಅದೇ ಒಂದು ಬೇರೆ ಥರಾ ನಗು. ಅಲ್ಲೀವರೆಗೂ ನಾನು ಆ ಥರಾ ನಕ್ಕಿರಲಿಲ್ಲ. ಆ ನಗುವಿನಲ್ಲಿ ಬರೀ ತಮಾಸೆ ಅಥವಾ ಸಂತೋಷ ಇರಲಿಲ್ಲ. ನಿಜವಾಗಲೂ ಸಮುದ್ರ ನೋಡಬೇಕು ಅನ್ನೋ ಅದಮ್ಯ ಆಸೆ ಇತ್ತು. ಸಮುದ್ರ ಎದುರಿಗಿಲ್ಲವಲ್ಲ ಅನ್ನೋ ದುಃಖ ಇತ್ತು: ಇನ್ನೂ ಏನೇನೋ ಇತ್ತು. ಅಲ್ಲಿಯವರೆಗೂ ಇದ್ದ ಒಂದೇ ಒಂದು ಅರ್ಥದ, ಭಾವನೆಯ ನಗು ಮಾಯವಾಗಿತ್ತು. ಬಹಳಷ್ಟು ಅರ್ಥವಿರುವ, ಏನೇನನ್ನೋ ಹೇಳಲಾಗದ್ದನ್ನೆಲ್ಲಾ ಹೇಳುವ ನಗು ನಕ್ಕೆ. ಆಮೇಲೆ ಇದೇ ನಗು ನನಗೆ ಅಭ್ಯಾಸ ಆಗಿಹೋಯಿತು. ಈಗ ನನಗೆ ಬೇರೆ ಥರಾ ನಗೋಕೆ ಬರಲ್ಲ.
ಇದಕ್ಕೆಲ್ಲ ಏನು ಹೇಳ್ತೀಯಾ ಸಾವಿತ್ರಿ? ಇದಕ್ಕಿಂತ ವಿಚಿತ್ರ ಅಂದರೆ ನಾನು ಮೊದಲ ಸಲ ಸಮುದ್ರ ನೋಡಿದ್ದು. ಅಷ್ಟು ಹೊತ್ತಿಗಾಗಲೇ ನಾನು ಕಾಲೇಜಿನಲ್ಲಿ ಓದುತ್ತಾ ಇದ್ದೆ. ಟೂರ್‌ಗೆ ಹೋಗಿದ್ದೆ. ಕನ್ಯಾಕುಮಾರಿ ದಾರಿ, ಸಮುದ್ರ, ಸಮುದ್ರದ ದಡದಲ್ಲಿ ಹಾಯಾಗಿ ಮಲಗಿದ ಮರಳು. ಪಕ್ಕದಲ್ಲಿ ಎದ್ದು ನಿಂತ ತೆಂಗಿನ ಮರಗಳು. ಅದರ ಪಕ್ಕದಲ್ಲಿ ಹಾದುಹೋಗುವ ರಸ್ತೆ. ಸಾಯ೦ಕಾಲ ಆಗಿತ್ತು. ಒಂದೇ ಸಮನೆ ಅದನ್ನು ನೋಡ್ತಾನೇ ಇದ್ದೆ. ಮನಸ್ಸಿಗೆ ಸಮಾಧಾನ ಇರಲಿಲ್ಲ. ಯಾವಾಗ ಬಸ್ಸಿನಿಂದ ಇಳಿದೇನೋ ಅನ್ನಿಸಿತ್ತು. ಕನ್ಯಾಕುಮಾರೀಲಿ ಇಳಿದವನೇ ಓಡಿಹೋದೆ ಸಮುದ್ರದ ಹತ್ತಿರ. ತಡಮಾಡಿ ಹೋದರೆ ಎಲ್ಲಿ ಸಮುದ್ರವೇ ಓಡಿ ಹೋಗತ್ತೋ ಅಂತ. ಆಗ ಏನೇನೋ ಅನ್ನಿಸಿತು. ಆದರೆ ಒಂದೂ ಹೇಳೋಕೆ ಬರಲ್ಲ. ಯಾರೋ ಒಬ್ಬ ಅತಿ ದೊಡ್ಡ ಮನುಷ್ಯನ್ನ ನೋಡಿದ ಹಾಗೆ. ಜೊತೇಲಿದ್ದ ಹುಡುಗರು ಗಲಾಟೆ ಮಾಡುತ್ತಿದ್ದರು. ತಮಾಷೆ, ಕೇಕೆ, ಪೋಲಿ ಮಾತು, ವ್ಯವಹಾರ ಎಲ್ಲಾ ಅಲ್ಲೇ ಶುರುವಾಗಿತ್ತು. ನಾನು ಹೋಟೆಲ್‌ಗೆ ವಾಪಸ್ ಬಂದೆ.
ರಾತ್ರಿ ಎಲ್ಲಾ ಮಲಗಿದ ಮೇಲೆ ಒಬ್ಬನೇ ಆ ಮಹಾಸಾಗರಕ್ಕೆ ಹೋದೆ. ಅದರ ಎದುರು ನಿಂತೆ. ಅವತ್ತು ಕತ್ತಲು. ಅಮಾವಾಸ್ಯೆಗೆ ಒಂದೋ ಎರಡೋ ದಿನ ಇತ್ತು. ಆ ಕತ್ತಲಿನಲ್ಲಿ ಒಂದಾದ ಇನ್ನೊಂದು ದಂಡೆಯೇ ಕಾಣದ ಸಮುದ್ರ. ಅದರ ಬಿಳೇ ಅಲೆಗಳು. ನೋಡೇ ನೋಡಿದೆ. ನೋಡೇ ನೋಡಿದೆ. ಅದರ ಎದುರಿಗೆ ನಾನು ಎಷ್ಟು ಸಣ್ಣವನಾಗಿ ಕಂಡೆ. ನಾನೊಬ್ಬನೇ ಏನು, ಎಲ್ಲರೂ-ಅಪ್ಪ, ಅಮ್ಮ, ನಾಗೇಶ. ಕಾಲೇಜು, ಮೇಷ್ಟ್ರು, ಮಹಾತ್ಮರು, ನಮ್ಮೂರು, ನಮ್ಮ ದೇಶ. ಇಡೀ ಪ್ರಪಂಚಕ್ಕೆ ಪ್ರಪಂಚವೇ ಅದರ ಎದುರಿಗೆ ಎಳ್ಳು ಕಾಳಿನ ಹಾಗೆ ಅನ್ನಿಸಿತು. ನೋಡ ನೋಡಿದಷ್ಟೂ ಬಿಳೀ ಅಲೆಗಳು ನನ್ನನ್ನೇ ಕರೆಯುತ್ತಿರುವಂತೆ ಕಾಣುತ್ತಿದ್ದವು. ನಾನು ಮರಳದಂಡೆಯ ಮೇಲೆ ಸುಮ್ಮನೆ ನಿಂತಿದ್ದೆ. ಅತ್ಯಂತ ಸಂತೋಷ ಆದಾಗಲೂ ಕೂಡ ಮನುಷ್ಯ ಎಷ್ಟು ನಿಷ್ಕ್ರಿಯನಾಗಿರಬಹುದು, ಜಡಭರತನಾಗಿರಬಹುದು-ಅವತ್ತು ಮೊದಲ ಬಾರಿಗೆ ಅನುಭವಕ್ಕೆ ಬಂತು. ಏನು ಮಾಡಬೇಕೂಂತ ತೋಚಲಿಲ್ಲ. ಆದರೆ ಅಲೆಗಳ ಕೂಗು ಸುಮ್ಮನಿರೋಕೆ ಬಿಡಲಿಲ್ಲ. ನಾನು ಮುಂದೆ ನಡೆದೆ. ಸಮುದ್ರದ ಒಳಗೇ ಹೆಜ್ಜೆ ಇಟ್ಟೆ, ಸಾವಿನ ಹಾಗೆ ನಿಂತ ಸಮುದ್ರ. ಜೀವನದ ಹಾಗೆ ಅದರಲ್ಲಿರೋ ಅಲೆಗಳು. ಈ ಅಲೆಗಳನ್ನು ದಾಟಿ ಅದರೊಳಕ್ಕೆ ಹೋಗಬೇಕೂಂತ ನುಗ್ಗಿದೆ. ಅಲೆಗಳ ಮೇಲೆ ಯಾರೋ ಸವಾರ ಹೊಳೆಯುವ ಕಣ್ಣಿದ್ದವನು ನನ್ನ ಕಡೆಗೇ ಬರ‍್ತಿದ್ದ. ಇನ್ನೇನು ನನ್ನ ಮುಟ್ಟ ಬೇಕು ಅಷ್ಟರಲ್ಲಿ ಹಿಂದೆ ಹೋಗ್ತಿದ್ದ. ಮತ್ತೆ ಬರ‍್ತಿದ್ದ. ನನ್ನ ಕರೀತಿದ್ದ. ಮತ್ತೆ ವಾಪಸ್ ಹೋಗ್ತಿದ್ದ. ಅವನ ಈ ಆಟ ಮೊದಲು ಮೋಜೆನಿಸಿದರೂ, ಆಮೇಲೆ ಬರ‍್ತಾಬರ‍್ತಾ ಅವನನ್ನು ಹಿಡೀಬೇಕು ಅನ್ನೋ ಹಟ ಬಂತು. ಕೊನೆಗೆ ಅದೇ ಹುಚ್ಚಾಯ್ತು. ನಾನು ನೀರಿನಲ್ಲಿ ಓಡಿಹೋದೆ. ಪಾದವನ್ನು ಮುತ್ತಿಟ್ಟ ನೀರು, ಸೊಂಟವನ್ನು ತೋಯಿಸಿ, ಎದೆಗೇರಿ ಒಳಗೆ ಹೋಯಿತು. ಆ ಸವಾರ ಪ್ರತಿಸಲವೂ ನನಗೇನೇನೋ ತಂದುಕೊಡುತ್ತಿದ್ದ. ನಾನು ಅದನ್ನೆಲ್ಲಾ ನನ್ನೊಳಗೆ ತುಂಬಿಕೊಳ್ಳುತ್ತಲೇ ಹೋದೆ. ಎಷ್ಟು ತುಂಬಿಕೊಂಡರೂ ಮುಗೀಲಿಲ್ಲ. ಆದರೆ ನನ್ನೊಳಗೆ ಸ್ವಲ್ಪವೂ ಜಾಗ ಇರಲಿಲ್ಲ. ತುಂಬೀ ತುಂಬೀ ಸಾಕಾಗಿ ಇನ್ನೂ ಎಷ್ಟು ತುಂಬಿಕೊಳ್ಳೋದು ಅಂತ ನೋಡ್ತಾ ನಿಂತಾಗ ಆ ಸವಾರ ತೀರಾ ನನ್ನ ಮೇಲೆ ಬಂದ. ಅಯ್ಯೋ ಇದನ್ನೆಲ್ಲಾ ಹೇಗೆ ತುಂಬಿಕೊಳ್ಳಲಿ ಅಂತ ಗಾಬರಿಯಲ್ಲಿ ಓಡಿದೆ.
ಬೆಳಿಗ್ಗೆ ಎಲ್ಲಾ ಬೈತಿದ್ದರು, ರಾತ್ರಿ ಹೊತ್ತು ಹಾಗೆ ಒಬ್ಬನೇ ಹೋಗಬೇಡ ಅಂದರೆ ಕೇಳಲ್ಲ ಅಂತ. ಹುಡುಗ ನೀರಿಗೆ ಹೆದರಿದ ಅಂದರು. ಕೆಲವರು ತಮಾಷೆ ಮಾಡಿದರು. ಆದರೆ ನನಗೆ ಅದು ಯಾವುದೂ ಕೇಳಿಸುತ್ತಿರಲಿಲ್ಲ. ಯಾರೋ ಒಬ್ಬನು ನನ್ನ ಜೊತೆಗೆ ಇದ್ದ ಹಾಗೆ ಅನ್ನಿಸುತ್ತಿತ್ತು. ಬೇರೆ ಯಾರೂ ಬೇಡ ಅನ್ನಿಸ್ತು. ನಾನು
ಯಾರ ಜೊತೆಗೆ ಮಾತಾಡುತ್ತಲೇ ಇದೀನಿ ಅನ್ನಿಸುತ್ತಿತ್ತು. ಆದರೆ ಎಲ್ಲರೂ, ಕೊನೆಗೆ ನಾಗೇಶ ಕೂಡ, ನನಗೇನೋ ಆಯಿತು ಅಂದುಕೊಂಡರು. ನಾಗೇಶ ಮತ್ತೆ ಕೇಳೇ ಕೇಳಿದ, ಯಾಕೋ ಒಬ್ಬಂಟಿ ಆಗಿದ್ದೀಯಾ. ಯಾಕೆ ನೀನು ಮಾತೇ ಆಡಲ್ಲ. ಏನಾಗಿದೆ ನಿನಗೆ ಅಂತ. ನಾನು ಏನು ಹೇಳಿದರೂ ಅವನಿಗೆ ಸಮಾಧಾನ ಆಗಲಿಲ್ಲ. ಕೊನೆಗೆ ಸಮುದ್ರಕ್ಕೆ ಹೆದರಿದ (ಇದೇ ಅತ್ಯಂತ ದೊಡ್ಡ ಸುಳ್ಳು ಅಂತ ನನಗೆ ಗೊತ್ತಿತ್ತು) ಅಂತ ಅಪಪ್ರಚಾರ ಆಗುವುದು ಬೇಡ ಅಂತ ಮತ್ತೆ ಮೊದಲಿನ ಹಾಗೆ ಅವರ ಜೊತೆಗೆ ಸೇರೋಕೆ ಪ್ರಯತ್ನಿಸಿದೆ. ಮಾತಿಗೆ ಪ್ರಾರಂಭಿಸಿದೆ. ಆದರೆ ಎಲ್ಲರ ಜೊತೆಗೆ ಇದ್ದಾಗಲೂ ಇದ್ದಕ್ಕಿದ್ದ ಹಾಗೇ ಆ ಸವಾರ ಬರುತ್ತಿದ್ದ. ನನ್ನ ಮಾತು ಇದ್ದಕ್ಕಿದ್ದಂತೆ ನಿಂತುಹೋಗುತ್ತಿತ್ತು. ಇದರಿಂದ ಬಹಳ moody ಅನ್ನೋ ಬಿರುದು ಬಂತು. ಆದರೆ ಇದನ್ನು ತಪ್ಪಿಸೋಕೆ ಸಾಧ್ಯ ಆಗಲಿಲ್ಲ.
ಒಂದು ದಿವಸ ಊರಲ್ಲಿ ಹೀಗೆ ವಂಲಗಿಕೊಂಡಿದ್ದಾಗ ಮಧ್ಯರಾತ್ರಿ ಇದ್ದಕ್ಕಿದ್ದ ಹಾಗೇ ಎಚ್ಚರ ಆಯಿತು. ಆ ಸವಾರ ಯಾರು ಅಂತ ಗೊತ್ತಾಗಿ ಹೋಯಿತು. ಅವನ ಕಣ್ಣಿನ ಗುರುತು ಸಿಕ್ಕಿಬಿಡ್ತು.
ನಾನಾಗ ಸಣ್ಣ ಹುಡುಗ. ಸುಮಾರು ಆರೇಳು ವರ್ಷ ಇರಬಹುದು. ವಿಪರೀತ ಕಾಯಿಲೆ ಆಗಿತ್ತು. ಉಳಿಯೋದೇ ಕಷ್ಟ ಅಂತ ಹೇಳುತ್ತಿದ್ದರು. ಡಾಕ್ಟರು ಬಂದವರು ಕೊನೆಗೊಂದು ದಿನ ಎಲ್ಲರ ಸಮಾಧಾನಕ್ಕೆ ನನಗೊಂದು ಸೂಜಿ ಚುಚ್ಚಿ ಅಪ್ಪನಿಗೆ ದೇವರ ಮೇಲೆ ಭಾರ ಹಾಕಿ ಅಂತ ಹೇಳಿಹೋದರಂತೆ. ಆ ರಾತ್ರಿ ನನಗೊಂದು ಕನಸು. ನಮ್ಮೂರ ಗುಡಿ ಹತ್ತಿರ, ಅಲ್ಲಿ ನಮ್ಮ ಮನೆ ಇರೋದು, ನಾನು ಆಟ ಆಡುತ್ತಿದ್ದೆ. ಯಾರೋ ಒಬ್ಬ ಹುಡುಗ ಬಂದ. ಸ್ವಲ್ಪ ಎತ್ತರವಾಗಿ ದಪ್ಪಗೆ ಇದ್ದ. ನೋಡೋಕೆ ಸ್ವಲ್ಪ ಹೆದರಿಕೆ ಬರುತ್ತಿತ್ತು. ಆದರೂ ಅವನ ಕಣ್ಣಲ್ಲಿ ಎಂಥದೋ ಒಂದು ಸೆಳೆತ ಪೆಪ್ಪರಿಮೆಂಟಿನ ಆಸೆಯ ಹಾಗೆ ಇತ್ತು. ಅವನೂ ನನ್ನ ಜೊತೆ ಆಟಕ್ಕೆ ಬಂದ. ಅರ್ಧಕ್ಕೇ ಆಟ ಬಿಟ್ಟು ಹೊರಟ. ನಾನೂ ಅವನ ಹಿಂದೇ ಹೋದೆ. ಆಟ ತೋರಿಸಿ ಹೋಗು ಅಂತ. ಆದರೆ ಅವನು ನನ್ನನ್ನು ಗಮನಕ್ಕೆ ತೆಗೆದುಕೊಳ್ಳಲಿಲ್ಲ. ಜೇಬಿನಿಂದ ಎಂಥದೋ ಪೀಪಿ ತೆಗೆದು ಊದುತ್ತಾ ಹೊರಟ. ನನಗೆ ಪೀಪಿಯ ಹುಚ್ಚು ಹಿಡೀತು. ಅವನ ಬೆನ್ನು ಹತ್ತಿದೆ. ಆಟ ತೋರಿಸು ಇಲ್ಲದಿದ್ದರೆ ಪೀಪಿ ಕೊಡು ಅಂತ. ಅವನು ಕೊಡ್ತೀನಿ ನನ್ಜೊತೆ ಬಾ ಅಂತ, ನಾನು ಬರಲ್ಲ ಇಲ್ಲೆ ಪೀಪಿ ಕೊಡು ಅಂತ. ಕೊನೆಗೂ ಅವನು ಕೇಳಲಿಲ್ಲ ನಾನು ಬಿಡಲಿಲ್ಲ. ಅವನಿಗೆ ಸಿಟ್ಟು ಬಂದು, ನನ್ಜೊತೆ ಬಾ ಅಂದರೆ ಬರಲ್ಲ ಅಂತೀಯಾ ಅಂತ ನನ್ನ ಕೈಹಿಡಿದು ದರದರ ಎಳೆದುಕೊಂಡು ಹೊರಟ. ನಾನು ಕೆಳಗೆ ಬಿದ್ದೆ. ಮೊಳಕಾಲು ತರೀತು. ಅಳುತ್ತಲೇ, ಪೀಪಿ ಕೊಡು ಅಂದರೆ ಖಂಡಿತ ಬರ‍್ತೀನಿ ಅಂದೆ. ಅವನಿಗೆ ಏನನ್ನಿಸಿತೋ ನನ್ನ ಕೈಬಿಟ್ಟು, ಈ ಸಲ ಬೇಡ ಇನ್ನೊಂದು ಸಲ ಅನ್ನುತ್ತಾ ಓಡಿಹೋದ. ಪೀಪಿ ಕೆಳಗೆ ಬಿತ್ತು. ನಾನು ತಕ್ಷಣ ಅದನ್ನು ತೊಗೊಂಡೆ.
ಆ ಪೀಪಿಗೂ ಐದಾರು ಕಣ್ಣು ಆ ಹುಡುಗನ ಕಣ್ಣಿನಂಥಾದ್ದೆ. ನಾನು ಅದನ್ನು ಊದಿಯೇ ಊದಿದೆ. ಆದರೆ ಕೊನೆಗೂ ಸ್ವರ ಹೊರಡಲಿಲ್ಲ. ಆ ಹುಡುಗನ ಜೊತೆಗೇ ಅದರ ಸ್ವರ ಕೂಡಾ ಮಾಯವಾಗಿತ್ತು.
ಮರುದಿವಸ ಬೆಳಿಗ್ಗೆ ಜ್ವರ ಇಳಿಯಿತು. ನಾನು ಬದುಕಿ ಬಂದೆ ಅಂತ ಎಷ್ಟೋ ದೇವರಿಗೆ ಲಾಭ ಆಯಿತು. ಆದರೆ ನನಗೆ ಮಾತ್ರ ಆ ಹುಡುಗನ ಕಣು, ಅವನ ಪೀಪಿಯ ಸ್ವರ ಮರೆಯಲು ಸಾಧ್ಯವಾಗಲೇ ಇಲ್ಲ. ಅದರ ಹುಚ್ಚು ಹೋಗಲೇ ಇಲ್ಲ, ಹುಡುಗ ಜ್ವರದಿಂದೇನೋ ಉಳಿದ, ಆದರೆ ಮೊದಲಿನ ಹಾಗೆ ಆಗಲೇ ಇಲ್ಲ ಅಂತ ಅಮ್ಮ ಈಗಲೂ ಹೇಳುತ್ತಿರುತ್ತಾರೆ…… ಎಲ್ಲಾ ಮೊದಲಿನ ಹಾಗೆ ಆಗೋಕೆ ಹೇಗೆ ಸಾಧ್ಯ ಹೇಳು.
ನನಗೆ ಆಶ್ಚರ್ಯ ಅಂದರೆ ಆ ಹೊಳೆವ ಕಣ್ಣಿನ ಹುಡುಗ ಸಮುದ್ರದಲ್ಲಿ ಸವಾರನಾಗಿ ಬಂದದ್ದು. ಕಣ್ಣಿನಿಂದಲೇ ನಾನು ಅವನ ಗುರುತು ಹಿಡಿದೆ. ಕೆಲವು ಸಲ ಹೀಗೇ. ಏನು ಬೇಕಾದರೂ ಮೋಸಮಾಡಬಹುದು, ಆದರೆ ಕಣ್ಣನ್ನಲ್ಲ. ಏನು ಬೇಕಾದರೂ ಮರೆಯಬಹುದು, ಆದರೆ ಕಣ್ಣನ್ನಲ್ಲ.
ಮತ್ತೂ ಒಂದು ಆಶ್ಚರ್ಯ ಅಂದರೆ ನಾನು ಆ ಕಣ್ಣನ್ನು ಎಲ್ಲೆಲ್ಲಿ ಹುಡುಕಿದರೂ ಸಿಕ್ಕಿರಲಿಲ್ಲ, ಆದರೆ ಅದು ನಿನ್ನಲ್ಲಿ ಸಿಕ್ಕಿದ್ದು. ಮೊದಲ ಸಲ ಅದನ್ನು ನಿನ್ನಲ್ಲಿ ನೋಡಿದ್ದು ನನಗೆ ಇನ್ನೂ ಚೆನ್ನಾಗಿ ನೆನಪಿದೆ.
ಅವತ್ತು ನಮ್ಮೂರಿಗೆ ಬಂದಾಗ ಅವಿನಾಶ ಬಾಬೂ ಅನ್ನುತ್ತಾ ನೀನು ಓಡಿ ಬಂದೆ. ನೀನು ಯಾರೂಂತ ನನಗೆ ಆವಾಗ ಗೊತ್ತಿರಲಿಲ್ಲ. ನೀನಂದೆ ನಾನು ನಾಗೇಶನ ತಂಗಿ ಸಾವಿತ್ರಿ. ಮತ್ತೆ ಹೇಳಿದೆ ಬಂಗಾಲಿ ಬಾಬುಗಳ ಹಾಗೆ ನಿಮ್ಮ ಹೆಸರು ಬಹಳ ವಿಚಿತ್ರವಾಗಿದೆ. ಹೌದು, ನಮ್ಮಪ್ಪನಿಗೆ ಬಂಗಾಲೀ ಕಾದಂಬರಿಗಳು ಅಂದರೆ ಬಹಳ ಇಷ್ಟ ಅಂತ ನಾನಂದೆ. ನಿಮಗೆ ? ನನಗೂ ಅಂದೆ.” ನೀವು ಶರಶ್ಚಂದ್ರರ ಶ್ರೀಕಾಂತ ಓದಿದೀರಾ ಅಂದೆ. ಹೌದು ಅಂದೆ ನಾನು. ಅದರಲ್ಲಿ ಇಂದ್ರದತ್ತ ಅಂತ ಬರ‍್ತಾನಲ್ಲ ಅವನು ಮಧ್ಯದಲ್ಲಿ ಇದ್ದಕ್ಕಿದ್ದ ಹಾಗೇ ಮಾಯವಾಗ್ದಾನಲ್ಲ ಅವನು ಎಲ್ಲಿಗೆ ಹೋಗ್ತಾನೆ ಯಾಕೆ ಹೊಗ್ತಾನೆ ಅಂತ ನೀನು ಕೇಳಿದೆ.
ನಾನು ಏನು ಉತ್ತರ ಕೊಟ್ಟೆ ಅಂತ ನೆನಪಿಲ್ಲ. ಆವಾಗ ನಿನ್ನ ಕಣ್ಣನ್ನೇ ನಾನು ನೋಡುತ್ತಾ ಇದ್ದೆ. ಅದರಲ್ಲೇ ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿತು, ನನ್ನ ಕನಸಿನ ಹುಡುಗಿ ಸಿಕ್ಕ, ಅವನಿಗೆ ಇಂದ್ರದತ್ತ ಅಂತ ಹೆಸರಿಟ್ಟೆ.
ನನಗೆ ಈಗನ್ನಿಸತ್ತೆ ನಾವಿಬ್ಬರೂ ಒಬ್ಬರನ್ನೊಬ್ಬರು ಸಂಧಿಸಲೇಬಾರದಿತ್ತು, ನೋಡಲೇಬಾರದಾಗಿತ್ತು ಅಂತ. ಈಗಲೂ ನಾಗೇಶ ಬೈತಾ ಇರ‍್ತಾನೆ ನನ್ನ ತಂಗಿ ಸಾವಿತ್ರಿ ಎಷ್ಟು ಗೆಲುವಾಗಿದ್ದಳು ಅವಳನ್ನು ಹಾಳುಮಾಡಿ ಬಿಟ್ಟೆ ಈಗ ಎಷ್ಟು ಮಂಕಾಗಿರ‍್ತಾಳೆ ಗೊತ್ತಾ ಅಂತ. ನನಗೂ ಕೆಲವು ಸಲ ಅದು ನಿಜ ಅನ್ನಿಸತ್ತೆ. ಜಡಭರತತನ ನನ್ನಿಂದ ನಿನ್ನಲ್ಲೂ ಪ್ರವೇಶ ಆಯ್ತು ಅಂತ. ಇದನ್ನೇ ನಾನು ನಿನಗೆ ಬರೆದೆ. ಅದಕ್ಕೆ ನೀನು ಬರೆದೆ ಅವಿನಾಶ, ನಮ್ಮಿಬ್ಬರ ಕಣ್ಣೂ ಕಪ್ಪು. ಆದರೆ ನಾಗೇಶನ ಕಣ್ಣು ಬೂದಗಪ್ಪು. ಅವನಿಗೆ ಬೆಕ್ಕಿನ ಕಣ್ಣು ಅವನು ಏನಂದರೇನಂತೆ ನಮಗೆ ಅಂತ.
.
.
.
ಪ್ರತಿವರ್ಷವೂ ಊರಿಗೆ ಬಾ ಅಂತ ಕರೆಯೋದು ನಾಗೇಶನ ಪದ್ದತಿ. ಅದನ್ನು ಪ್ರತಿಸಲ ತಪ್ಪಿಸುವುದು ಕೂಡ ನನ್ನ ರೂಢಿ. ಆದರೂ ಕೊನೆಗೊಂದು ಸಲ ನಿಮ್ಮೂರಿಗೆ ಬಂದೆ. ಆದರೆ ಹಾಗೆ ಅಂಥಾ ಸಂದರ್ಭದಲ್ಲಿ ಬಡ್ತೀನಿ ಅಂತ ಅನ್ನಿಸಿರಲಿಲ್ಲ.
ಊರಲ್ಲಿ ಕೂತು ಬೇಜಾರಾಗಿ ಶಿವಮೊಗ್ಗಾಕ್ಕೆ ಬಂದೆ. ಅಲ್ಲಿ ಕೇಳಿದರೆ ನಾಗೇಶ ಊರಿಗೆ ಹೋಗಿದ್ದಾನೆ ಅಂತ ತಿಳಿಯಿತು, ಸರಿ ಅಂತ ನಾನೂ ಬಸ್ ಹತ್ತಿದೆ. ಬಸ್ಸಿನಿಂದಿಳಿದಾಗ ಸಾಯಂಕಾಲ ಸುಮಾರು ಏಳು- ಏಳೂವರೆ ಗಂಟೆ. ನನ್ನ ಜೊತೆಗೇ ಇಳಿದ ಹಳ್ಳಿಯವನೊಬ್ಬ ನೀವು ಇದೇ ಕಾಲುದಾರೀಲಿ ಹೋಗಿ ಬುದ್ದಿ ಅವರ ಮನೆ ಸಿಗ್ತೈತೆ ಎರಡು-ಎರಡೂವರೆ ಮೈಲಿ ಆಗಬಹುದು ಅಂದ. ಅವನು ನೇರ ರಸ್ತೆ ಹಿಡಿದ, ನಾನೊಂದು ನಿಮಿಷ ನಿಂತು ಸುತ್ತಮುತ್ತಲೂ ನೋಡಿದೆ. ಮಬ್ಬು ಬೆಳದಿಂಗಳಿನ ಅರೆಗತ್ತಲು. ಕಪ್ಪು ಕಾಡು. ಶ್ರಾವಣದ ಮಳೆ ಬಂದು ಕೆಸರಾಗಿದ್ದ ದಾರಿ. ಆ ಕೆಸರನ್ನು ಸಿಡಿಸಿಕೊಳ್ಳುತ್ತಲೇ ಹಾಗೂ ಹೀಗೂ ನಡೆದೆ. ಮೇಲೆ ಜಿನುಗುವ ಮಳೆ. ಮರದ ಕೆಳಗೆ ಬಂದಾಗ ದೊಡ್ಡ ದೊಡ್ಡ ಹನಿಗಳು. ರಸ್ತೆಯ ಪ್ರತಿಯೊಂದು ತಿರುವಿಗೂ ದಾರಿ ಅಲ್ಲಿಗೇ ಮುಗಿಯತ್ತೆ. ಅಲ್ಲೊಂದು ಗುಹೆ ಇರಬೇಕು ಅನ್ನಿಸಿ ಬೇಗಬೇಗ ಹೆಜ್ಜೆ ಹಾಕುತ್ತಿದ್ದೆ. ಆದರೆ ಪ್ರತಿ ಸಲವೂ ನಿರಾಸೆ ಕಾದಿತ್ತು. ಹಾದಿ ಮುಗಿಯದೆ ಅದಕ್ಕೊಂದು ತಿರುವು ಸಿಗುತ್ತಿತ್ತು. ನಿಜ ಹೇಳಬೇಕೂಂದರೆ ನಿಮ್ಮ ಮನೆಗೆ ಹೊರಟಿದ್ದೇ ಮರೆತುಬಿಟ್ಟಿದ್ದೆ ಸ್ವಲ್ಪ ಹೊತ್ತು. ಹೀಗೆ ಆಗಿದ್ದೇ ಒಳ್ಳೆಯದಾಯಿತೇನೋ. ದೂರ ಗೊತ್ತಾಗಲಿಲ್ಲ. ಆಮೇಲೆ ನೋಡಿದರೆ ಇದ್ದಕ್ಕಿದ್ದ ಹಾಗೆ ನಿಮ್ಮ ಮನೆ ಬಂದಿತ್ತು. ಬಾಗಿಲು ತಟ್ಟಿದೆ.
ನಾಗೇಶ ಇರಬೇಕು ಅನ್ನುತ್ತಾ ಬಾಗಿಲು ತೆರೆದವಳು ನೀನು. ನನ್ನನ್ನು ನೋಡಿ ಹುಬ್ಬೇರಿಸಿ ನಕ್ಕೆ, ನನ್ನ ಹಾಗೇ. ಒಳಗೆ ಕಂದೀಲಿನ ಮಬ್ಬು ಬೆಳಕು. ನಿನ್ನನ್ನೇ ಹಿಂಬಾಲಿಸಿದೆ.
ನೀನು ಮಾತಾಡಲಿಲ್ಲ. ಅಮ್ಮನೂ ಅಷ್ಟೆ. ಒಂದು ಗಳಿಗೆ ಏನೂ ಗೊತ್ತಾಗಲಿಲ್ಲ. ಆಮೇಲೆ ಒಳಗೆ ಕೋಣೆಯಲ್ಲಿ ಮಲಗಿದ್ದ ವ್ಯಕ್ತಿಯನ್ನು ನೋಡಿ ಊಹಿಸಿಕೊಂಡೆ. ಎಷ್ಟು ದಿವಸದಿಂದ ಅಂದೆ. ಹತ್ತು ದಿನದಿಂದ ಅಂದರು ಅಮ್ಮ. ಈಗ ಹೇಗಿದ್ದಾರೆ ಅಂದೆ, ಹಾಗೇನೇ ಅಂದರು. ಏನು ಕಾಯಿಲೆ ಅಂದೆ. ಕಾಮಾಲೆ ಮರುಕಳಿಸಿದೆ ಅಂದರು. ಡಯಾಬಿಟೀಸೂ ಇದೆ ಅಂತ ನೀನಂದೆ. ನಾಗೇಶ ಎಲ್ಲಿ ಅಂದೆ. ಯಾವ ಸುಡುಗಾಡಿಗೆ ಹೋದನೋ ಯಾರಿಗೆ ಗೊತ್ತು ಅಂತ ಅಪ್ಪ ಅಸಹಾಯಕ ಸಿಟ್ಟಿನಲ್ಲಿ ಕೂಗಲಾರದೆ ಕೂಗಿದರು. ಅವನೆಲ್ಲಿಗೆ ಹೋಗಿದ್ದಾನೋ ಗೊತ್ತಿಲ್ಲ, ಶಿವಮೊಗ್ಗಾದಲ್ಲೂ ಇಲ್ಲವಂತೆ, ಇವತ್ತು ನೀನು ಬಂದಾಗ ಅವನೇ ಅಂದುಕೊಂಡಿದ್ದೆ ಅಂದರು ಅಮ್ಮ. ಅವನೆಲ್ಲಿ ಬಾರ‍್ತಾನೇ ನಿನ್ನ ಮಗ, ನಾಟಕ, ಸಾಹಿತ್ಯ ಅಂತ ಊರೂರು ಅಲೀತಾ, ಕುಡೀತಾ ತಿರುಗ್ತಿರ‍್ತಾನೆ-ಅಪ್ಪ ಮತ್ತೆ ಕೂಗಿದರು. ನನ್ನ ಗುರುತು ಹಿಡಿದರು. ಏನಯ್ಯಾ ನರಪೇತಲ, ಈಗೆಷ್ಟು ನಿನ್ನ ತೂಕ ನಾಕು ಕೆ.ಜಿ.ನೋ ಐದೋ ಅಂದರು. ಸುಸ್ತಾಗಿ ಏದುಸಿರು ಬಿಟ್ಟರು. ನಾನು ಹೊರಗೆ ಬಂದೆ. ಯಾವ ಡಾಕ್ಟರು ಎಷ್ಟು ಹೊತ್ತಿಗೆ ಬರ‍್ತಾರೆ ಅಂತ ಎಲ್ಲಾ ವಿಚಾರಿಸಿದೆ. ಆಯುರ್ವೇದ ಪಂಡಿತ ಕೃಷ್ಣಭಟ್ಟರು ನೋಡಿ ಸ್ವಾಮಿ ಡಾಕ್ಷರಿಗೆ ತೋರಿಸಿದರಂತೆ. ಅವರು ಮಣಿಪಾಲಿನ ದೊಡ್ಡ ಆಸ್ಪತ್ರೆಗೆ ಹೋಗಬೇಕು ಅಂತಾರೆ ಅಂತ ಅಮ್ಮ ಅಂದರು. ಹಾಗೆ ಹೋಗಬೇಕೂಂದರೆ ಬೆಳಿಗ್ಗೆನೆ ಕರಕೊಂಡು ಹೋಗೋಣಾಂದೆ. ನೀನು ದೇವರ ಹಾಗೆ ಬಂದೆ ಅಂತ ಅಮ್ಮ ಅಂದದ್ದು ಕೇಳಿ ದೇವರಿಗೆ ನಾನು ಕೊಡೋ ಒಂದೇ ಅರ್ಥ ಕಲ್ಪಿಸಿಕೊಂಡು ಅದನ್ನು ಹೇಳಿದರೆ ಅಮ್ಮನಿಗೆ ಬೇಜಾರಾಗತ್ತೆ ಅಂತ ಹೇಳಲಾರದೆ ಸುಮ್ಮನಾದೆ.
ರಾತ್ರಿ ಊಟ ಆಯಿತು. ಅಮ್ಮ ಅಪ್ಪನ ಕೋಣೆಗೆ ಹೋಗಿ ಅಲ್ಲೇ ತೂಕಡಿಸುತ್ತಾ, ಅರ್ಧ ನಿದ್ದೆ ಮಾಡುತ್ತಾ ಕೂತರು. ಹಿಂದೆಂದೂ ನೋಡದ ಮಲೆನಾಡು, ಮನೆಯ ಗಂಭೀರ ಪರಿಸ್ಥಿತಿಯಿಂದ ನನಗೆ ನಿದ್ದೆ ಬರಲಿಲ್ಲ. ಎದ್ದು ಹೊರಗೆ ಬಂದು ಅಂಗಳದಲ್ಲಿ ಒಬ್ಬನೇ ನಿಂತೆ. ಆಗ ನೀನೂ ಬಂದೆ. ಮೇಲೆ ಆಕಾಶದ ಕಡೆ ನೋಡ್ತಾ ನಿನಗೇನನ್ನಿಸತ್ತೆ ಅಂದೆ. ಏನಾದರೂ ಯಾಕನ್ನಿಸಬೇಕು ಬೆಳಿಗ್ಗೆ ಡಾಕ್ಟರು ಬತ್ತಾರಲ್ಲ ನೋಡೋಣ ಅಂತ ನಾನು ಉತ್ತರಕೊಟ್ಟೆ. ಸ್ವಲ್ಪ ಸುಮ್ಮನಿದ್ದು ನೀನು ಮತ್ತೆ ಹೇಳಿದೆ ಅದನ್ನಲ್ಲ ಕೇಳಿದ್ದು, ಮೇಲೆ ಆಕಾಶ ನೋಡಿ ಏನನ್ನಿಸತ್ತೆ ಅಂತ. ಅಲ್ಲ ಅಷ್ಟೊಂದು ಹೊಳೀತಾ ಇವೆಯಲ್ಲ ನಕ್ಷತ್ರಗಳು ಪ್ರತಿಯೊಂದೂ ಸಾವಿನ ಒಂದೊಂದು ಚುಕ್ಕೆ, ಒಂದೊಂದು ಪೂರ್ಣ ವಿರಾಮ. ಅದರ ಹಿಂದೆ ಯಾವ ಸಾಲುಗಳಿದ್ದವೊ ಎಂತಹ ವಾಕ್ಯಗಳಿದ್ದವೊ ಅವೆಲ್ಲ ಅರ್ಥ ಕಳಕೊಂಡು ಮರೆಯಾಗಿ ಆ ಚುಕ್ಕೆಗಳೇ ಎದ್ದು ಕಾಣುತ್ತವೆ ಅಂದೆ ನೀನು. ನನಗೆ ಷಾಕ್ ಆಯಿತು. ನೀನು ಈ ಮಾತು ಆಡ್ತೀಯಾಂತ ಊಹಿಸಿರಲಿಲ್ಲ. ನನಗೆ ಆ ಹೊಳೆಯೋ ತಾರೆಗಳನ್ನ ಮುಟ್ಟಬೇಕು ಅವುಗಳಲ್ಲಿ ಒಂದಾಗಬೇಕು ಅಂತ ಸಣ್ಣವಳಿದ್ದಾಗಿನಿಂದಲೂ ಆಸೆ. ಅದು ಸಾಧ್ಯವಾಗಿಲ್ಲ ಅಂತ ದುಃಖ ಅಂದೆ. ನನಗೆ ಇದ್ದಕ್ಕಿದ್ದ ಹಾಗೆ ಏನೇನೋ ಆಯಿತು. ನಾನು ನೋಡಿದಾಗ ನಿನ್ನ ಕಣ್ಣಲ್ಲಿ ಎರಡು ಹನಿ ನೀರಿತ್ತು. ನನಗೆ ಇಂದ್ರದತ್ತನ ಕಣ್ಣು ಕಾಣಿಸಿತು. ಕನಸಿನ ಹುಡುಗನ ಮೈ ಕಾಣಿಸಿತು. ಸಮುದ್ರ ಕಾಣಿಸಿತು. ನಿನ್ನ ತಬ್ಬಿಕೊಂಡು ಸಾವಿತ್ರಿ ಅಂದೆ. ನೀನೂ ನನ್ನ ಎದೆಗೊರಗಿ ಏನೇನೋ ಮಾತಾಡಿದೆ. ನತದೃಷ್ಟ, ನನಗೆ ಅದರ ನೆನಪಿಲ್ಲ. ನಾವಿಬ್ಬರೂ ಒಂದಾಗಿದ್ದೆವು. ಬೇರೆ ಯಾವುದರ ಜೊತೆಗೋ.
ಇಂದ್ರದತ್ತನ್ನ ನಿನಗೆ ತೋರಿಸಿದೀನಾ ಸಾವಿತ್ರಿ ಅಂದೆ. ನೀನು ಇಲ್ಲ ಅಂದೆ. ಒಳಗೆ ಬಾ ತೋರಿಸ್ತೀನಿ ಅಂದೆ. ಎಲ್ಲಿ ಅಂದೆ, ಅಪ್ಪನ ರೂಮಲ್ಲಿ ಅಂದೆ. ಅಲ್ಲಿ ಹೋದಾಗೆ ಅಪ್ಪನ ಹೊದಿಕೆ ಅಲ್ಲಾಡಿ ತೆಪ್ಪಗಾಯಿತು. ನೋಡು ಅಲ್ಲೆ ಅಂದೆ. ಅಮ್ಮನಿಗೆ ನಿದ್ದೆ. ಏನು ಹೇಳೋದೂಂತ ಸುಮ್ಮನಾದೆವು.
ಮತ್ತೆ ಹೊರಗೆ ಬಂದಾಗ ನೀನು ಹೇಳಿದೆ ಏನೋ ಆಗತ್ತೆ ಫಡ್ ಅಂತ ಡಬ್ಬಿ ಮುಚ್ಚಳ ಒಡೆದ ಹಾಗೆ ಅಂದುಕೊಂಡಿದ್ದೆ. ಎಷ್ಟು ಸಲೀಸಾಗಾಯ್ತು ನೋಡು ಕರಗಿಹೋಗೋದು ಅಂದರೆ ಇದೇ ಅಲ್ಲವಾ ಅಂದೆ. ಅವತ್ತು ಬೆಳಗಾಗುವವರೆಗೂ ಒಬ್ಬರ ಕಣ್ಣು ಒಬ್ಬರು ನೋಡುತ್ತಾ ಕೂತಿದ್ದ ನೆನಪು.
.
.
.
ನೆನಪಿದೆಯಾ ಸಾವಿತ್ರಿ, ನೀನು ಒಂದು ಕಾಗದದಲ್ಲಿ ಬರೆದಿದ್ದೆ ಅವಿನಾಶ, ಬರ‍್ತಾ ಬರ‍್ತಾ ನಾಗೇಶಣ್ಣ ಎಷ್ಟು ಸ್ವಾರ್ಥಿ ಆಗ್ತಿದಾನೆ ಅಂತೀಯಾ, ಅವನಿಗೊಂದು ಕಾರ್ ಬೇಕಿತ್ತಂತೆ. ಅದಕ್ಕೆ ತನ್ನ ಲಾಯರ್ ಬುದ್ಧಿ ಉಪಯೋಗಿಸಿ ಲಕ್ಷ್ಮೀನಾರಾಯಣನ ಜಮೀನೆಲ್ಲ ತನ್ನ ಹೆಸರಿನಲ್ಲಿ ಮಾರಿಬಿಟ್ಟ. ಈಗ ಲಕ್ಷ್ಮೀನಾರಾಯಣ ಏನು ಮಾಡಬೇಕು ಹೇಳು ? ಪಾಪ, ಅವನಿಗೆ ಓದಿಲ್ಲ ವಿದ್ಯೆಯಿಲ್ಲ. ಜಮಾನು ಕೆಲಸ ಒಂದು ಚೆನ್ನಾಗಿ ಮಾಡ್ತಿದ್ದ. ಈಗ ಅದೂ ಹೋಯ್ತು. ಈಗ ಅವನು ಅಮ್ಮನೆದುರಿಗೆ ಗೊಳೋ ಅಂತ ಅಳ್ತಾನೆ. ನಾಗೇಶ ಎಷ್ಟೇ ಕೆಟ್ಟವನಾದರೂ ಸ್ವಂತ ತಮ್ಮನಿಗೇ ದ್ರೋಹ ಮಾಡ್ತಾನೇಂತ ತಿಳಿದಿರಲಿಲ್ಲ. ಇಂಥ ಜನಗಳನ್ನು ನೋಡಿದರಂತೂ ಈ ಪ್ರಪಂಚ ಯಾಕೆ ಬೇಕು, ಸಾಯೋದೇ ಮೇಲು ಅನ್ನಿಸತ್ತೆ. ಇನ್ನೂ ಏನೇನೋ ಬರೆದು ಕೊನೆಗೆ ಎರಡು ಸಾಲು ಮತ್ತೆ ನಾಗೇಶನ ಬಗ್ಗೆ ಬರೆದಿದ್ದೆ ನಾಗೇಶ ಮೊದಲು ಹೀಗಿರಲಿಲ್ಲ. ಈಗ ಯಾಕೆ ಹೀಗೆ ಬದಲಾಗ್ತಿದಾನೊ ಗೊತ್ತಿಲ್ಲ ಅಂತ.
ಸಾವಿತ್ರಿ, ನಿನ್ನ ಕಾಗದ ಓದಿದ ಮೇಲೆ ನನಗಿಂತ ನೀನೇ ಪರವಾಗಿಲ್ಲ ಅನ್ನಿಸ್ತು. ನಿನಗೆ ಕೆಲವು ಸಲವಾದರೂ ಖಚಿತವಾಗತ್ತೆ ಈ ಜೀವನ ಯಾಕೆ ಬೇಡ, ಸಾವೇ ಯಾಕೆ ಬೇಕು ಅಂತ. ಆದರೆ ನನ್ನ ಪಾಲಿಗೆ ಅದಿನ್ನೂ ಖಚಿತವಾಗೇ ಇಲ್ಲ. ನಾನೂ ಈ ಪ್ರಪಂಚ ನೋಡಿದೀನಿ, ಇದರ ಮೋಸ, ಸುಳ್ಳು, ಕಳ್ಳತನ ಎಲ್ಲಾ ಅನುಭವಿಸಿದ್ದೇನೆ. ಆದರೆ ನನಗೆ ಇದು ಯಾವುದರ ಮೇಲೂ ಸಿಟ್ಟಿಲ್ಲ. ಇಲ್ಲಿ ಎಲ್ಲವೂ ಸಹಜ ಅನ್ನಿಸತ್ತೆ. ಆದರೂ ಸಾವೇ ಏಕೆ ಬೇಕು ಅನ್ನೋದಕ್ಕೆ ಉತ್ತರ ಸಿಕ್ಕಿಲ್ಲ. ಒಂದೇ ಒಂದು ಸಲ ಆ ಉತ್ತರಕ್ಕೆ ಬಹಳ ಹತ್ತಿರ ಬಂದಿದ್ದೆ.
ಜಾಗ ಇದೆ ಆಲಿಕೆ ಅಲ್ಲಿಂದ ಹತ್ತು ಮೈಲಿ ದೂರಕ್ಕೆ ಖುಫ್ರಿ ಅನ್ನೋ
ನಾನಾಗ ಸಿಮಾಕ್ಕೆ ಹೋಗಿದ್ದೆ, ಅಲ್ಲಿಂದ ಹತ್ತು ಮೈಲಿ ದೂರಕ್ಕೆ ಖುಫ್ರಿ ಅನ್ನೋ ಜಾಗ ಇದೆ ಅಲ್ಲಿಗೆ ಹೋದರೆ ಗೌರೀಶಂಕರದ ನೆತ್ತಿ ಕಾಣಿಸತ್ತೆ ಅಂತ ಯಾರೋ ಹೇಳಿದರು ಅಂತ ಅಲ್ಲಿಗೆ ಹೋದೆ. ಎಲ್ಲಿ ನೋಡಿದರೂ ಬಿಳೀ ಬಣ್ಣ ಮೆತ್ತಿಕೊಂಡಿರುವ ದೊಡ್ಡ ದೊಡ್ಡ ಗುಡ್ಡಗಳು. ಆಶ್ಚರ್ಯ ಅಂದರೆ ಅವತ್ತು ನನಗೆ ಏನೂ ಅನ್ನಿಸಲಿಲ್ಲ. ಎಷ್ಟೋ ಜನ ಸಾಧುಸಂತರು ಹಿಮಾಲಯಕ್ಕೆ ಬಂದು ತಪಸ್ಸು ಮಾಡ್ತಾರಂತೆ. ಜೀವನದಲ್ಲಿ ಬೇಜಾರಾದವರೆಲ್ಲ ಹಿಮಾಲಯಕ್ಕೆ ಬರಬೇಕು ಅಂತಾರೆ. ಆದರೆ ನನಗೆ ಮಾತ್ರ ಬೇಜಾರಾಯಿತು. ಇಲ್ಲಿ ಏನೂ ಹೊಸದಿಲ್ಲ ಬೋಳು ಗುಡ್ಡಗಳು ಅನ್ನಿಸಿತು. ನಮ್ಮೂರ ಥರಾನೇ ಗುಡಗಳು. ಇನ್ನೂ ಎತ್ತರ. ಅದರ ಮೇಲೆ ಮಂಜು ಬಿದ್ದಿದೆ. ನಮರಲ್ಲೂ ಚಳಿಗಾಲದಲ್ಲಿ ಮಂಜು ಬಿದ್ದಾಗ ಹೀಗೇ ಇರತ್ತೆ ಅನ್ನಿಸಿತು. ಹೀಗೆ ನನಗೆ ಹಿಮಾಲಯದ ಪರಿಚಯ ಆಯಿತು. ಅದರಿಂದ ಪರಿಚಯ ಇದ್ದವರ ಪರಿಚಯ ಸಿಕ್ಕಿತು. ಅವರ ನೆನಪಾಯಿತು. ಬೇಜಾರಾಯಿತು. ಚಳಿ ತಡೆಯಲಾರದೆ ವಾಪಸ್ ಬಂದೆ. ಬರುವಾಗ ಗೊತ್ತಾಯಿತು ನನಗೆ ಗೊತ್ತಿರುವುದು ಯಾವುದೂ ಬೇಕಿಲ್ಲ, ಅದೊಂದರ ಬಗ್ಗೆಯೂ ನನಗೆ ಇಷ್ಟ ಇಲ್ಲ, ಅದರಲ್ಲಿ ಆಸಕ್ತಿ ಇಲ್ಲ. ನನಗೆ ಗೊತ್ತಿಲ್ಲದೆ ಇರುವುದು ಏನೋ ಒಂದು ಬೇಕು. ಗೊತ್ತಿರುವ ಎಲ್ಲ ವಿಷಯ ವಸ್ತುಗಳಿಂದ ಬಿಡುಗಡೆ ಬೇಕು.
ನಾನು ಇದೇ ಗುಂಗಿನಲ್ಲಿದ್ದಾಗಲೇ ನಾಗೇಶ ಒಂದು ಸಲ ಕೇಳಿದ ಈ ಪ್ರಪಂಚ ನಿಶ್ಚಿತ, ಖಚಿತ. ಆದರೆ ಸಾವು ಒಂದು ದೊಡ್ಡ ಪ್ರಶ್ನೆ, ಸಂದಿಗ್ಧತೆ. ಇಷ್ಟಾದರೂ ಸಾವಿನ ಮೇಲೆ ಏಕೆ ನಿನಗೆ ಪ್ರೀತಿ ಅಂತ. ಅದಕ್ಕೋಸ್ಕರವೇ ನಾನು ಅದನ್ನು ಇಷ್ಟಪಡೋದು
ಅಂತ ಅವನಿಗೆ ಉತ್ತರ ಕೊಟ್ಟೆ.
ಈಗ ನಿನ್ನ ಕಾಗದ ನೋಡಿದ ಮೇಲೆ ಅನ್ನಿಸಿತು ನಾವು ಬರೀ ಒದರಾಡುತ್ತಿದ್ದೇವೆ. ಆದರೆ ನಿಜವಾಗಲೂ ಸಾಯುತ್ತಾ ಇರೋನು ಅಂದರೆ ನಾಗೇಶ. ನೋಡು ಅವನು ಹೇಗೆ ತನ್ನ ಜನಗಳಿಂದ, ಮೌಲ್ಯಗಳಿಂದ ದಿನೇದಿನೇ ದೂರ ಆಗ್ತಿದಾನೆ, ಅವನು ಹೇಗೆ ತನಗೆ ಗುರುತಿರುವ ಎಲ್ಲದಕ್ಕೂ ಸಾಯ್ತಾ ಇದ್ದಾನೆ-ಬಿಡಿಬಿಡಿಯಾಗಿ, ಸ್ವಲ್ಪ ಸ್ವಲ್ಪವಾಗಿ ಸಾವಿನತ್ತ ಸಾಗ್ತಾ ಇದ್ದಾನೆ ಅಂದೆ.
ಕಾಗದ ಮುಟ್ಟುವ ಪುರಸೊತ್ತಿಲ್ಲ ಗುಂಡಿನ ಹಾಗೆ ಬಂತು ನಿನ್ನ ಉತ್ತರ. ಅವಿನಾಶ ನಾಗೇಶನ ಬದುಕನ್ನು ಸಾಯೋದು ಅಂತೀಯಾ ? ಏನು ತಮಾಷೆ ಮಾಡ್ತಿದೀಯಾ ಅಥವಾ ಸುಳ್ಳು ಸಮಾಧಾನ ಕೊಡೋಕೆ ಪ್ರಯತ್ನ ಮಾಡ್ತಿದೀಯಾ ? ನಾಗೇಶ ಹೇಗಾದರೂ ಬದುಕುವ ಪ್ರಯತ್ನದಲ್ಲಿದ್ದಾನೆ. ನೀನು ಹೇಳುವ ಹಾಗೆ ಅವನು ಸಾಯುತ್ತಿರುವುದೇ ನಿಜ ಆದರೆ ಈ ಭೂವಿಗಂಟಿಕೊಳ್ಳದೆ ಇದ್ದರೆ ಚೆನ್ನಾಗಿತ್ತು. ನೀನಿದ್ದಿಯಲ್ಲ ಹಾಗೆ. ನಿನಗೇನೂ ಬೇಡ. ಅಪ್ಪ ಕೇಳಿದಷ್ಟು ದುಡ್ಡು ಕಳಿಸ್ತೀಯಾ, ಅಮ್ಮನ ಮಾತಿಗೆ ಗೋಣಲ್ಲಾಡಿಸುತ್ತೀಯಾ, ತಂಗಿ ಕೇಳಿದ್ದಕ್ಕೆ ಹೂಂ ಅಂತೀಯಾ. ಊಟ ಮಾಡಿದರೆ ಮಾಡ್ತೀಯಾ, ಬಿಟ್ಟರೆ ಬಿಡ್ತೀಯಾ. ಒಂದೇ ಸಮನೆ ಕುಡಿದರೂ ಸೈ, ಬಿಟ್ಟರೂ ಸೈ. ನಾನು ನಿನಗೆ ಹೆಂಡತಿ ಆದರೂ ಸರಿ, ತಂಗಿ ಆದರೂ ಸರಿ, ತಾಯಿ ಆದರೂ ಸರಿ. ನಿನಗೆ ಯಾವುದರ ಬಗ್ಗೆಯೂ ಸ್ವಲ್ಪವೂ ಕಾಳಜಿ ಇಲ್ಲ. ಯಾವ ಕೆಲಸವೇ ಆಗಲಿ ಮಾಡಿದರೆ ಎಷ್ಟೋ ಮಾಡದೆ ಬಿಟ್ಟರೂ ಅಷ್ಟೆ. ಒಂದು ಥರಾ ನೋಡಿದರೆ ನೀನು ಏನೂ ಮಾಡೋದೇ ಇಲ್ಲ. ಪ್ರತಿಯೊಂದೂ ನಿನಗೆ ಘಟಿಸತ್ತೆ. ಸಾಯೋದು ಅಂದರೆ ಬಹುಶಃ ಇದೇ ಇರಬೇಕು.
ಮತ್ತೆ ಇನ್ನೂ ಬರೆದಿದ್ದೆ. ಬಿಡಿಬಿಡಿಯಾಗಿ ಸಾಯೋದು ಅಂತ ಬೇರೆ ಇರತ್ತಾ? ಎಂಥ ಗುಳ್ಡೂ ಮಾತಾಡ್ತೀಯಾ ? ಪೂರ್ತಿಯಾಗಿ ಬದುಕಬೇಕು ಇಲ್ಲವೇ ಪೂರ್ತಿ ಸಾಯಬೇಕು. ಇದರಲ್ಲಿ ರಾಜಿ, ಹೊಂದಾಣಿಕೆ ಸಾಧ್ಯ ಇಲ್ಲ ಅಂತ.
ನಾವು ಒಂದೇ ಒಂದು ಸಲ ಇಡಿಯಾಗಿ ಸಾಯೋದಕ್ಕೆ, ಪೂರ್ತಿಯಾಗಿ ಇಲ್ಲವಾಗುವುದಕ್ಕೆ ಸಂದರ್ಭ ಒದಗಿತ್ತು.
ಅಮ್ಮ ಗೋಕರ್ಣಕ್ಕೆ ಹೋಗ್ತಾಳಂತೆ ಬರ‍್ತೀಯಾ ಅಂತ ಕಾಗದ ಬರೆದೆ. ಉತ್ತರದ ರೂಪದಲ್ಲಿ ನಾನೇ ಬಂದೆ ನಿಮ್ಮೂರಿಗೆ. ಅಲ್ಲಿ ಮೊದಲು ನೀನು ಸಮುದ್ರ ನೋಡಿದ್ದು. ಸುಡುವ ಮರಳಿನ ಮೇಲೆ ನಿಂತು ಕಾದ ಬಾಣಲೆಯಲ್ಲಿ ಕುದಿವ ಕಡಲನ್ನು ನೋಡಿದೆ. ಮೈ ಉಪ್ಪಾಗುವುದನ್ನು ಗಮನಿಸದೆ ಸಮುದ್ರದಲ್ಲಿ ಮತ್ತೆ ಮತ್ತೆ ಮುಳುಗಿ ಎದ್ದೆ. ನೀರಲ್ಲೇ ನಿಂತು ನಾನು ಜಲಕನ್ಯೆ ನೆಲಕ್ಕೆ ಸೇರಿದವಳಲ್ಲ ಅಂದೆ. ನಿನಗೊಂದು ಹೊಸ ಹುಚ್ಚು ಹಿಡಿಯಿತು. ಮರಳಲ್ಲಿ ನಮ್ಮಿಬ್ಬರ ಹೆಸರು ಬರೆಯೋದು, ಅಲೆ ಬಂದು ಅದನ್ನು ಅಳಿಸಿ ಹೋಗೋದನ್ನು ನೋಡಿ ಸಂತೋಷ ಪಡೋದು. ನಮಗೆ ಸಮುದ್ರದ ಉದ್ದಕ್ಕೂ ಹೋಗುವ ಹಂಬಲ ಆಯಿತು. ಅಷ್ಟು ಹೊತ್ತಿಗೆ ಸರಿಯಾಗಿ ಅಮ್ಮ ನನಗೆ ಬೇಜಾರಾಗಿದೆ ತಿಂಗಳೊಪ್ಪತ್ತು ಇಲ್ಲೇ ಇದ್ದು ಬಿಡ್ತೀನಿ, ನೀವೇನು ಮಾಡ್ತೀರಿ ಅಂದರು. ನಮಗ ಬೇಜಾರಾಗಿದೆ, ನಾವೂ ಹೀಗೇ ಊರೂರು ತಿರುಗಾಡಿಕೊಂಡು ಬರ‍್ತೀವಿ ಅಂದೆ. ಆಮೇಲೆ ಕಾರವಾರ, ಕಾರವಾರದಿಂದ ವಾಸ್ಕೊ, ವಾಸ್ಕೋದಿಂದ ಪಣಜಿಗೆ ಬಂದದ್ದು ನಿನಗೆ ನೆನಪಿರಬೇಕಲ್ಲ ಸಾವಿತ್ರಿ.
ಅವತ್ತು All Souls’ Day. ಚರ್ಚುಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯುತ್ತಿತ್ತು. ಯಾರೋ ಹೇಳಿದರು ವಾಗ್ತಾರ್ ಬೀಚ್ ಬಹಳ ಚೆನ್ನಾಗಿದೆ, ಗಲಾಟೆ ಇರಲ್ಲ ನೋಡ್ಕೊಂಡು ಬರಬಹುದು ಅಂತ.
ನಾವು ವಾಗ್ತಾರ್‌ಗೆ ಹೋದಾಗ ಸಂಜೆ ಐದು-ಐದೂವರೆ ಗಂಟೆ ಆಗಿತ್ತು. ಸೂರ್ಯ ಸಾಯೋದರಲ್ಲಿದ್ದ. ಅವನು, ಆಕಾಶ, ನೀರು ಎಲ್ಲಾ ಕೆಂಪು. ದಡದ ಮೇಲಿದ್ದ ಪರಂಗಿ ಹಿಪ್ಪಿಗಳು ಕೆಂಪು. ಅಲ್ಲಿದ್ದ ಮರಗಳ ಗುಂಪಲ್ಲಿ, ಕಲ್ಲು ಸಂದಿಗಳ ನಡುವೆ ಇದ್ದ ಗುಹೆಯಂಥ ಗೂಡುಗಳಲ್ಲಿ, ಯಾರೂ ಇರದ ಆ ಕೆಂಪು ಮರಳ ದಂಡೆಯ ಮೇಲೆ ಹೊರಗಿನ ಪರಿವೆಯೇ ಇರದ ಬತ್ತಲೆ ಹಿಪ್ಪಿಗಳ ಆಟ ಸಾಗಿತ್ತು. ಸಮುದ್ರದಲ್ಲಿ ಈಜುವ, ಸಣ್ಣ ಹಲಗೆಗಳ ಮೇಲೆ ತೇಲುವ, ಅಲೆಗಳೊಡನೆ ಬಂದು ದಂಡೆಗೆ ಅಪ್ಪಳಿಸಿದಾಗ ಒಬ್ಬರ ಮೇಲೊಬ್ಬರು ಬೀಳುವ, ಹೊರಳಾಡುವ ಹಿಪ್ಪಿಗಳು. ನಿನ್ನ ನೋಡಿದೆ. ನೀನು ಅವರಿಗಿಂತಾ ಕೆಂಪು. ಗಾಳಿಯಲ್ಲಿ ಬಂದದ್ದಕ್ಕೇ ಇರಬೇಕು ನಿನ್ನ ಕಣ್ಣು ಕೆಂಪಾಗಿತ್ತು. ಹೊರಗಿನ ಕೆಂಪಿಗೆ ಕಪ್ಪು ಆವರಿಸಿದಂತೆ ನಿನ್ನ ಕೆಂಪು ಹೆಚ್ಚಾಗಿತ್ತು. ನಿನ್ನ ಸೊಂಟ ಬಳಸಿ ಎಷ್ಟು ಹೊತ್ತು ಹೀಗೇ ಅಂದೆ. ನೀನು ನಡಿ ಹೋಗೋಣ ಅಂದೆ. ಸಮುದ್ರದ ಒಳಗೆ ಏಳೆಂಟು ಹೆಜ್ಜೆ ನಡೆದು ಅಲ್ಲೊಂದು ಬಂಡೆಯ ಮೇಲೆ ಕುಳಿತೆವು. ನನಗೆ ಸಮುದ್ರ, ನೀನು ನಾನು ಜೊತೆಯಾಗಿದ್ದುದರಿಂದ ವಿಚಿತ್ರ ಸಂತೋಷ ಆಯಿತು. ನಾನು ಈಗಲೇ ನಿರ್ಧಾರ ಅಗಬೇಕು ಅಂದೆ, ನೀನು ರೆಡಿ ಅಂದೆ. ಇಬ್ಬರೂ ಸಮುದ್ರಕ್ಕೆ ಹಾರಿದ್ದು ಗೊತ್ತು.
ಆಗ ನಾನು ಪೂರ್ತಿ blank ಆಗಿದ್ದೆ. ಎಚ್ಚರವೇ ಇರಲಿಲ್ಲ. ಆಮೇಲಷ್ಟೆ ಒಂದೊಂದೇ ನೆನಪು. ಈಜಿದ ಹಾಗೆ, ಹಲಗೆಯ ಮೇಲೆ ತೇಲಿದ ಹಾಗೆ, ನೀನು ಮಿಾನು ಹಿಡಿದ ಹಾಗೆ…..ಈಜುತ್ತಾ ಈಜುತ್ತಾ ಒಳಗೆ ಹೋಗುತ್ತಾ ಪಾತಾಳದ ಬಳಿಗೆ ಬಂದೆ. ಅಲ್ಲೊಂದು ಗುಹೆ. ಅದಕ್ಕೊಂದು ಮುಚ್ಚಿದ ಬಾಗಿಲು. ಅದರೊಳಗೆ ಯಾರಿರಬಹುದು ? ಸೈಕ್ಲೋಪಸ್ ರಾಕ್ಷಸ ಇದ್ದರೆ ನಾನು ಯೂಲಿಸಿಸ್ ; ಸೇಸಮ ಇದ್ದರೆ ನಾನು ಅಲಿಬಾಬ. ಬಾಗಿಲು ತೆಗೆ ಸೇಸಮ, ಬಾಗಿಲು ತೆಗೆ ಸೇಸಮ ಎಂದೆ. ಬಾಗಿಲು ತೆಗೆಯಲಿಲ್ಲ. ಹಾರೆಯಿಂದ ಒಡೆಯಬೇಕು. ಇದ್ದಕ್ಕಿದ್ದ ಹಾಗೇ ಸವಾರ ಕಂಡ. ಅವನನ್ನು ನೋಡಿ ನನ್ನ ಹಾಗೆ ಕೆಳಗೆ ಬಿತ್ತು. ಮುಂದೆ ಅವನೊಂದಿಗೆ ಹೋದ ಹಾಗೆ, ಅವನು ನಮ್ಮನ್ನು ಕೊಚ್ಚಿ ಕೊಚ್ಚಿ ಹೊರಗೆ ಹಾಕಿದ ಹಾಗೆ ಜಾಳುಜಾಳು ಲೋಳೆಲೋಳೆ ನೆನಪುಗಳು ನೂರೆಂಟು.
ಮೈ ಕೊರೆವ ಗಾಳಿಗೆ ಎಚ್ಚರ ಆಯಿತು. ನೀನು ನನ್ನ ಮೈ ಸಿಕ್ಕನ್ನು ಬಿಡಿಸಿಕೊಳ್ಳುತ್ತಾ, ಸೀರೆ ಉಡುತ್ತಾ, ಸೀರೆ ಹರಿದಿಲ್ಲ ಅನ್ನುತ್ತಾ ವ್ಯರ್ಥಗಣ್ಣುಗಳಲ್ಲಿ ನನ್ನನ್ನು ನೋಡುತ್ತಾ ನಿಂತೆ. ಆಗಿನ ನಿನ್ನ ಕಪ್ಪುಗಣ್ಣಿನ ನೋಟವೇ ಸಾವಿರಬಹುದೆ ಅಂತ ನನಗೆ ಈಗಲೂ ಸಂದೇಹ. ಆದರೆ ಅವತ್ತು ನನಗೆ ಸ್ಪಷ್ಟವಾಗಿ ಅನ್ನಿಸಿದ್ದು ಅಂದರೆ ಒಂದು ನಾನು ಮಹಾಷಂಢ, ಇನ್ನೊಂದು ನನಗೆ ಆತ್ಮಹತ್ಯೆ ಸಾಧ್ಯವಿಲ್ಲ ಅಂತ. ಯಾಕೆಂದರೆ ನನಗೆ ಯಾವುದರಲ್ಲೇ ಆಗಲಿ-ಅದು ಕಾಮವೇ ಆಗಿರಲಿ ಅಥವಾ ಆತ್ಮಹತ್ಯೆ ಇರಲಿ, ತೊಡಗುವಿಕೆ ಸಾಧ್ಯವಿಲ್ಲ. ಉದ್ದೇಶಪೂರ್ವಕ ಯಾವ ಕೆಲಸವನ್ನೂ ಮಾಡಲಾರೆ. ಯಾಕಂದರೆ ಅಂತಹದರಲ್ಲಿರುವ ಗುರಿ ಮುಂಚೆಯೇ ಗೊತ್ತಿರುವಂತಹದ್ದು. ಇದನ್ನೆ ನೀನು ಇನ್ನೂ ಚೆನ್ನಾಗಿ ಹೇಳಿದ್ದೆ ನೀನು ಯಾವ ಕೆಲಸವನ್ನೂ ಮಾಡಲಾರೆ ನಿನಗೆ ಎಲ್ಲವೂ ಘಟಿಸಬೇಕು ಅಂತ. ನನ್ನ ಕಣ್ಣಲ್ಲಿ ನೀರು ನೋಡಿ ನೀನು ನನ್ನನ್ನು ಅಪ್ಪಿಕೊಂಡು ಮುತ್ತಿಟ್ಟೆ. What a cold and religious kiss it was !
.
.
.
ಜನಗಳಿಗೆ ನಾವು ಮಾಡೋ ಕ್ರಿಯೆ ಮುಖ್ಯ, ಅದರ ಹಿಂದಿನ ಭಾವನೆ ಅಲ್ಲ. ನಾಗೇಶ ಮತ್ತೆ ಮತ್ತೆ ಸಿಟ್ಟಿನ ಕಾಗದ ಬರೆದ ನೋವಿನಲ್ಲಿ. ನಿನ್ನಷ್ಟು ಕೈ ಕೊಡೋ ಗೆಳೆಯನ್ನ ನಾನು ನೋಡೇ ಇಲ್ಲ. ಇಷ್ಟು ಸಲ ನಿನ್ನ ಮದುವೆ ಮಾತೆತ್ತಿದರೂ ಸುಮ್ಮನೆ ಇದ್ದೀಯಾ. ಇತ್ರ ಸಾವಿತ್ರಿನೂ ಸುಮ್ಮನಾಗಿದ್ದಾಳೆ. ಯಾವುದರ ಬಗ್ಗೆಯೂ ಆಸಕ್ತಿ ಇಲ್ಲದ ಹಾಗೆ. ಅವಳೊಂದಿಗೆ ಮದುವೆ ಪ್ರಸ್ತಾಪ ಎತ್ತಿದಾಗ ನನಗೆ ಯಾರನ್ನೂ ಕೊನೆಗೆ ಅವಿನಾಶನನ್ನೂ ಮದುವೆ ಆಗುವ ಆಸಕ್ತಿ ಇಲ್ಲ, ಮದುವೇನೆ ಬೇಡ ಅತಾಳೆ. ಅಮ್ಮನಿಗೆ ಸದಾ ಇದೇ ಯೋಚನೆ. ಒಂದೊಂದು ಸಲ ಅನ್ನಿಸತ್ತೆ ನೀನು ಸಾವಿತ್ರಿಗೆ ಅಥವಾ ಅವಳು ನಿನಗೆ ಏನೂ ಮೋಸ ಮಾಡಿರಬೇಕು ಅಂತ. ಆದರೆ ನಿಮ್ಮ ನಡುವೆ ಓಡಾಡುವ ಕಾಗದಗಳಿಂದ ನನ್ನ ಅನುಮಾನ ಬುಡವಿಲ್ಲದ್ದು ಅಂತ ತೋರತ್ತೆ ಅಂತ ಬರೆದಿದ್ದಾನೆ.
ಸಾವಿತ್ರಿ, ಅವನಿಗೇನಂತ ಉತ್ತರ ಬರೀಲಿ ? ನಿನಗೆ ಉಪದೇಶ ಮಾಡೋದೂ ಸಾಧ್ಯವಿಲ್ಲ. ನಿನಗೆ ಮದುವೆ ಮಾಡಿದರೂ ಮಹಾದೇವಿಯಕ್ಕನ ಹಾಗೆ, ಮೀರಾಬಾಯಿ ಹಾಗೆ ಗಂಡನ್ನ ಬಿಟ್ಟು ಓಡಿಹೋಗ್ತೀಯಾ ಅಂತ ಗೊತ್ತು.
ಈ ಮಧ್ಯೆ ನಿನ್ನ ಕಾಗದ ಬೇರೆ. ಪ್ರಶ್ನೆಗೆ ಪರಿಹಾರ ಹುಡುಕೋದಕ್ಕಿಂತ ಪ್ರಶ್ನೆ ಯಾಕೆ ಬಂತು, ಹೇಗೆ ಬಂತು, ಅನ್ನೋದರಲ್ಲಿ ಆಸಕ್ತಿ ನಿನಗೆ, ಅದರಲ್ಲಿ ನಿನಗೆ ಸಮಾಧಾನ.
.
.
.
ಈಗ ನಾನು ನೀನು ಸಮುದ್ರ ಎಲ್ಲಾ ಒಂದೊಂದು ದಿಕ್ಕಿಗೆ. ನನಗೆ ಇಲ್ಲಿಂದ ಯಾವುದೋ ಊರಿಗೆ ವರ್ಗವಾಗಿದೆ. ಅಲ್ಲಿ ಸಮುದ್ರ ಇಲ್ಲದಿದ್ದರೂ ಕೆರೆ ಇದೆಯಂತೆ. ನಮ್ಮಮ್ಮ
ಯಾರೋ ಸುಜಾತ ಅನ್ನೋ ಹುಡುಗಿಯ ಜೊತೆಗೆ ನನ್ನ ಮದುವೆ ಮಾಡುವ ಸಂಚು ನಡೆಸಿದ್ದಾಳೆ. ಒಂದೇ ಸಮನೆ ಅವಳ ಗುಣಗಾನ ಮಾಡಿ ಬಲವಂತ ಮಾಡುತ್ತಿದ್ದಾಳೆ.
ಈಗಲೂ ಒಳಗೆ ಅಡಿಗೆಮನೆಯಲ್ಲಿ ಅಮ್ಮನ ಸುಜಾತಾ ಗೀತಧಾರೆ ಶುರುವಾಗಿದೆ. ನಾನು ಶರೀಫ್ ಸಾಹೇಬರ ಅಲ್ಲೀಕೇರಿಗೆ ಹೋಗೋಣ ಬರ‍್ತೀರೇನ್ರೊ ಗುಣಗುಣಿಸುತ್ತಾ ನಿನಗೆ ಬರೆದ ಕಾಗದ ಪೋಸ್ಟ್ ಮಾಡಲು ಹೊರಗೆ ಬರುತ್ತೇನೆ.
ನಮ್ಮ ಈಗಿನ ಕಾವ್ಯಪ್ರಪಂಚ
ನಮ್ಮ ಈಗಿನ ಕಾವ್ಯ ಪ್ರಂಪಚ
-ಮಾಧವ ಕುಲಕರ್ಣಿ
ಪ್ರಜ್ಞೆ ಮತ್ತು ಸುಷುಪ್ತಿ ಒಂದಕ್ಕೊಂದು ಉಜ್ಜಿಕೊಳ್ಳುವುದರಿಂದ ಮತ್ತೂ ಸಂಬಂಧ ರಚಿಸಿಕೊಳ್ಳುವುದರಿಂದ ಉತ್ತಮ ಕಾವ್ಯ ಹುಟ್ಟುತ್ತದೆಂಬ ಸತ್ಯವೊಂದು ಪ್ರಚಲಿತವಿರುವುದಷ್ಟೇ ಅಲ್ಲ ಈ ಸತ್ಯವನ್ನು ಸ್ಥಿರೀಕರಿಸುವಂಥ ಕಾವ್ಯವೂ ಹೊರಬಂದು ಭಾಷೆಯ ಬಗ್ಗೆ ಒಂದು ನಿರ್ದಿಷ್ಟವಾದ ನಿಲುವು ಕಾವ್ಯಾಭ್ಯಾಸಿಗಳಲ್ಲಿ ಮೂಡಿದ ನಂತರ ಎಂಥ ಕಾವ್ಯ ಹೊರಬರಬಹುದು ? ಅಡಿಗರ ನಂತರದ ಕನ್ನಡ ಕಾವ್ಯ ಈ ಪ್ರಶ್ನೆಯನ್ನು ಎದುರಿಸಬೇಕಾಯಿತು. ಈ ಸತ್ಯ ಸ್ಥಿರೀಕರಣಗೊಳ್ಳಬೇಕಾದರೆ ಕಾವ್ಯ ಎರಡು ಮಹತ್ವದ ಸೂತ್ರಗಳನ್ನು ಈ ಸತ್ಯದ ಅವಿಭಾಜ್ಯ ಅಂಗಗಳೆಂಬಂತೆಯೇ ಉಪಯೋಗಿಸಿತು: ‘ಪ್ರತಿಮಾ ವಿಧಾನ’ ಹಾಗೂ ‘ಸಾವಯವ ಶಿಲ್ಪ ಸಮಗ್ರೀಕರಣ’, ಅಂದರೆ ಎಲ್ಲ ಬಗೆಯ ಕಾವ್ಯಕ್ಕೂ ಈ ಎರಡು ಕಾವ್ಯ ಮೌಲ್ಯಗಳು ಬೇಕಾಗದಿದ್ದರೂ ಪ್ರಜ್ಞೆ ಹಾಗೂ ಸುಷುಪ್ತಿಗಳ ತಿಕ್ಕಾಟದಿಂದ ಹುಟ್ಟುವ ಕಾವ್ಯಕ್ಕೆ ಇವು ಅನಿವಾರ್ಯ. ಒಳಗಿನ ಆಮೂರ್ತವನ್ನು, ಚಿಂತನೆಯ ನೆಲೆ ಹೊಂದಿದ ಮನಸ್ಸನ್ನು ಹೊರಗಿನ ಸಾಮಾಜಿಕತೆಯ ಮೂಲಕ ಭಾಷೆಯಲ್ಲಿ ವ್ಯಕ್ತಪಡಿಸುವಾಗ, ವ್ಯಕ್ತಪಡಿಸಿದ ಒಂದೊಂದಕ್ಕೂ ಇರುವ ಸಂಬಂಧವನ್ನು ಗುರುತಿಸುವಾಗ ಪ್ರತಿಮೆಗಳ ಉಪಯೋಗ ಹಾಗೂ ಅವುಗಳ ನಡುವೆ ಏರ್ಪಡುವ ಸಂಬಂಧ ಅನಿವಾರ್ಯ ಹಾಗೂ ಒಳ್ಳೆಯ ಕಾವ್ಯದ ಲಕ್ಷಣ ಕೂಡಾ ಹೌದು. ಪ್ರಾಯಶಃ ಅಡಿಗರ ಕಾವ್ಯದ ಒಟ್ಟು ಶಕ್ತಿ ಹೊರಗಿನ ವಸ್ತುಗಳನ್ನು ನಿರೂಪಿಸುತ್ತಲೇ ಅವುಗಳನ್ನು ಅಮೂರ್ತ ಮನಃಸ್ಥಿತಿಯ ಮೂರ್ತತೆಗಾಗಿ ಉಪಯೋಗಿಸುವುದರಲ್ಲಿಯೇ ಇದೆ. ಇದಕ್ಕಾಗಿಯೇ ಅವರ ಕಾವ್ಯದಲ್ಲಿ ಭಾಷೆ ಬೇರೆ ಬೇರೆ ವಿನ್ಯಾಸಗಳನ್ನು ಪಡೆಯುತ್ತದೆಂದು ಬೇರೆ ಹೇಳಬೇಕಾಗಿಲ್ಲ. ಪರಿಸರವೆ ಪ್ರಜ್ಞೆಯನ್ನು ನಿರೂಪಿಸುತ್ತದೆಂಬ ಮಾತನ್ನು ಹಾಗೂ ಸುಷುಪ್ತಿ ನಮ್ಮ ಭೂತಕಾಲದ ಒಟ್ಟು ಮೊತ್ತವಾಗಿರುತ್ತದೆಂಬುದನ್ನು ನಾವು ಸ್ವೀಕರಿಸಿದರೆ-ಅಡಿಗರ ನಂತರದ ಕವಿಗಳೆಲ್ಲ ನಿಜವಾಗಿಯೂ ಬೇರೆ ಪರಿಸರ ಹೊಂದಿದುದೇ ಆಗಿದ್ದು, ಬೇರೆ ರೀತಿಯ ಪ್ರಜ್ಞೆಯನ್ನು ಹಂದಿ ಈ ರೀತಿಯ ಕಾವ್ಯದ ವಿವಿಧ ಆಯಾಮಗಳನ್ನು ತೆರೆಯಬೇಕಾಗಿತ್ತು. ಆದರೆ ಇಂದು ಈ ಕಾವ್ಯ ಸಂಪ್ರದಾಯದ ಬಲು ತೆಳುವಾದ ಝರಿಯೊಂದು ಕನ್ನಡ ಕಾವ್ಯದಲ್ಲಿ ಕಾಣುತ್ತಿದೆಯಲ್ಲ ಏಕೆ ? ಈ ಪ್ರಶ್ನೆಗೆ ಉತ್ತರಿಸುವುದು ಸುಲಭದ ಕೆಲಸವಲ್ಲ ಮತ್ತೂ ಉತ್ತರಿಸುವ ಅವಸರದಲ್ಲಿ ಜೀವನದಿಂದ ಅಥವಾ ಪರಿಸರದಿಂದ ಕಾವ್ಯದ ಕಡೆ ಹೋಗಿ ವೈದಿಕ ಕಾವ್ಯ, ಶೂದ್ರ ಕಾವ್ಯ, ಮಾನವೀಯ ಕಾವ್ಯ ಎಂಬಂಥ ಸರಳ ವಿಭಾಗಗಳನ್ನು ಮಾಡಿಬಿಡುವ ಸಾಧ್ಯತೆಗಳಿವೆ. ಈ ಸಂದರ್ಭದಲ್ಲಿ ಕಾವ್ಯದಿಂದ ಜೀವನದ ಕಡೆಗೆ ಹೊರಡುವ ಚಿಂತನೆ ಮಾತ್ರ ಅರ್ಥಪೂರ್ಣವಾಗುತ್ತದೆ. ಪ್ರಜ್ಞೆ, ಸುಷುಪ್ತಿ ಹಾಗೂ ಪ್ರಜ್ಞಾತೀತಗಳ ಫಲವಾದ ಕಾವ್ಯವನ್ನು ವಾಸ್ತವಿಕ ನೆಲೆಗಟ್ಟಿನಿಂದ ಅಳೆಯಹೊರಟರೆ ನಮಗೆಲ್ಲ ಪರಿಸರದ ಹೆಜ್ಜೆಗಳನ್ನು ಪರಿಷ್ಕರಿಸುವ ಮನಸೊಂದಿದೆ ಎಂಬ ಸತ್ಯವನ್ನೇ ನಾವು ಮರೆತು ಬಿಡಬಹುದು.
೧
ಸ್ಥಿತಿ ಹೀಗಿರುವಾಗ- ಇದನ್ನು ಒಪ್ಪಲೇಬೇಕೆಂಬ ನಿಯಮವೂ ಇಲ್ಲದಿರುವಾಗ- ಅಡಿಗರ ನಂತರ (ವಯಸ್ಸಿನಲ್ಲಿ ಅಲ್ಲ) ನನಗೆ ಮಹತ್ವದ ಕವಿಗಳಾಗಿ ಕಾಣುವ ಗಂಗಾಧರ ಚಿತ್ತಾಲ, ಚಂದ್ರಶೇಖರ ಕಂಬಾರ, ಎ. ಕೆ. ರಾಮಾನುಜನ್ ಹಾಗೂ ಕೆ. ಎಸ್. ನರಸಿಂಹ ಸ್ವಾಮಿಗಳ ಕಾವ್ಯದಲ್ಲಿ ಏನು ನಡೆದಿದೆ ಎಂಬುದನ್ನು ಮೊದಲು ನೋಡಬಹುದು. ಮುಖ್ಯವಾಗಿ ಈ ಕವಿಗಳು ಕೂಡ ಈ ಮೇಲೆ ವಿವರಿಸಿದಂಥ ಕಾವ್ಯ ಸಂಪ್ರದಾಯದಲ್ಲಿಯೇ ಇದ್ದಾರೆಂಬುದನ್ನು ಮರೆಯುವಂತಿಲ್ಲ. ಒಂದು ಅನುಭವವನ್ನು ನಿರ್ಲಿಪ್ತವಾಗಿ, ಚೊಕ್ಕಟವಾಗಿ ವರ್ಣಿಸುವುದು ಚಿತ್ತಾಲರ ಕಾವ್ಯದ ಮೂಲಗುಣ. ಅಲ್ಲಲ್ಲಿ ಈ ಅನುಭವವನ್ನು ಕವಿ ತನ್ನ ಮನಸ್ಸಿನ ಒಳತೋಟಿಗಳನ್ನು ಗುರುತಿಸಿಕೊಳ್ಳುವುದಕ್ಕಾಗಿ ಉಪಯೋಗಿಸಿಕೊಳ್ಳುತ್ತಾನೆ. ಆದರೆ ಇದು ಮಿಂಚಿ ಮಾಯವಾಗುವ ಸೆಳಕಾಗುತ್ತದೆಯೆ ಹೊರತು ಕವನದ ಒಟ್ಟು ಶಕ್ತಿಯಾಗುವುದಿಲ್ಲ. “ದುಃಖಗೀತ’ದಂಥ ಮಹತ್ವಾಕಾಂಕ್ಷಿ ಕವನ ಕೂಡ ಹೊರನೆಟ್ಟ ಕಣ್ಣುಗಳಿಂದ ದುಃಖದ ಮೂಲವನ್ನು ಹುಡುಕುತ್ತದೆಯೇ ಹೊರತು ಆ ಮೂಲಗಳು ಬೀರಿದ ಪರಿಣಾಮದ ಬಗೆಗಿನ ಕವನವಾಗುವುದಿಲ್ಲ. ಇದಕ್ಕೆ ಬೇಕಾಗುವ ತಾತ್ವಿಕ ನೆಲೆಯೂ ಚಿತ್ತಾಲರ ಕಾವ್ಯದಲ್ಲಿ ಸಿಕ್ಕುವುದಿಲ್ಲ. ಆದರೆ ಭಾಷೆಯೊಂದೇ ಈ ಕವಿಯ ಅಭಿವ್ಯಕ್ತಿಗೆ ಸಾಧನವಾಗಿರುವುದರಿಂದ ಪ್ರಯೋಗಿಸುವ ಶಬ್ದದ ಅರ್ಥ ಹಾಗೂ ಸಾಲುಗಳಲ್ಲಿ ಬರುವ ವಿವಿಧ ಧ್ವನಿ ಬಿಟ್ಟು ಬೇರೆ ಯಾವುದೂ ಚಿತ್ತಾಲರ ಶಕ್ತಿಯಾಗುವುದಿಲ್ಲ. ಇತ್ತೀಚೆಗೆ `ಸಾಕ್ಷಿ’ಯಲ್ಲಿ ಬಂದ ಇವರ ‘ಆಘಾತ’ ಎನ್ನುವ ಕವನ ಈ ಒಂದು ಮಿತಿಯನ್ನು ಮೀರುವ ಪ್ರಯತ್ನವಾಗಿದೆ. ಸಮುದಾಯಕ್ಕೆ ಬಂದ ಆಘಾತ ಹಾಗೂ ವೈಯಕ್ತಿಕ ಆಘಾತವನ್ನು ಏಕಗೊಳಿಸುವಲ್ಲಿ ಕವನ ಯಶಸ್ವಿಯಾಗುತ್ತದೆ. ಆದರೆ ‘ಚಿತ್ತಾಲ ಕಾವ್ಯ’ದ ಪರಾಕಾಷ್ಠೆ ಇಷ್ಟೆ ಎನ್ನಿಸುತ್ತದೆ.
“ದುಃಖಗೀತದಲ್ಲಿ ತಂದೆಯ ಬವಣೆಯನ್ನು ಬಣ್ಣಿಸುವಲ್ಲಿ ಕವಿ ಹೇಳುತ್ತಾನೆ :
ಹಸುವಿಗೆ ಹಯನು ಬತ್ತಿ
ಉಳುವ ರೈತನೆ ಹೊಲವ ಮೇದು
ಕಾಸಿನ ಗಳಿಕೆಯೂ ಬರದೆ ಕ್ಷಯಿಸಿ ವ್ಯವಸಾಯ
ಇಳಿದು ನಡೆದಿತ್ತು ಕಾಲ್ಕೆಳಗೆ ಬಂದ ಭಾಗ್ಯದ ಪೂರ.
ಇಂಥ ಸಾಲುಗಳಲ್ಲಿ ಕವಿಯ ಒಟ್ಟು ಧೋರಣೆ ಎಂಥದು ಎಂಬುದು ಸ್ಪಷ್ಟವಾಗುತ್ತದೆ. “ಉಳುವ ರೈತನು ಹೊಲವ ಮೇದು’ ಎನ್ನುವುದೂ ದುಃಖದ ಮೂಲವಾಗಿರುವಾಗ ಮತ್ತು ಇದರ ವಿರುದ್ಧ ಪ್ರವೃತ್ತಿಯ ಸನ್ನಿವೇಶವನ್ನು ಬೆದಕುವ ಒಂದು ಕವನವೂ ಇವರ ಕಾವ್ಯದಲ್ಲಿ ಇಲ್ಲದಿರುವುದರಿಂದ, ಇಂಥ ಪ್ರಶ್ನೆ ಬಂದಾಗಲೆಲ್ಲ ಈ ಕಾವ್ಯ ಮೂಕವಾಗುತ್ತದೆ. ಚಂದ್ರಶೇಖರ ಕಂಬಾರರ ಕಾವ್ಯ ‘ಅಡಿಗ ಸಂಪ್ರದಾಯ’ದಲ್ಲಿ ಬಂದ ಕಾವ್ಯದಲ್ಲಿಯೇ ಶ್ರೇಷ್ಠ ಶಕ್ತಿಯುತವಾದ ಕಾವ್ಯವಾಗಿದೆ. ಅಲ್ಲದೇ, ಈ ಐದು ಕವಿಗಳಲ್ಲಿಯೇ ಅವರು ಮಹತ್ವದವರಾಗಿದ್ದಾರೆ. ಅಡಿಗರಿಗೆ ಇರುವ ಸುಷುಪ್ತಿಯ ಮಡಕೆ ಕಂಬಾರರಿಗೆ ತಾವು ದಿನಬಳಕೆಯಲ್ಲಿ ಉಪಯೋಗಿಸಲಾಗದ ಆದರೆ ಇದೇ ಜೀವನದ ಪ್ರಾರಂಭದಲ್ಲಿ ರಕ್ತದಷ್ಟು ಸಹಜವಾಗಿ ಬಂದ ಭಾಷೆಯಲ್ಲೇ ಇದೆ. ಇವರ ‘ಹೋರಿ’ ಮತ್ತು ‘ಗಂಗಾಮಾಯಿ’ಯಂಥ ಕವನಗಳಲ್ಲಿ ಅಡಿಗರಿಗೆ ಶಕ್ತಿಯಾಗಿರುವ ಪಾರದರ್ಶಕತೆಯನ್ನು ಸುಲಭವಾಗಿ ಕಾಣಬಹುದು. ‘ಗಂಗಾಮಾಯಿ’ಯಂಥ ಕವನ ಒಂದು mythನ್ನು ಸೃಷ್ಟಿಸುವ ಅದ್ಭುತ ರೀತಿ ಹಾಗೂ ಆ ಮೂಲಕ ಒಂದು ಕ್ರಮಬದ್ಧವಾದ ಚಿಂತನೆಯನ್ನು ಸಮಕಾಲೀನ ಜೀವನದ ಬಗ್ಗೆ ವ್ಯಕ್ತಪಡಿಸುವ ಪರಿಯನ್ನು ನೋಡಿದಾಗ, ಈ ಕವಿ ಒಂದು ಶ್ರೀಮಂತ ಕಾವ್ಯಸಂಪ್ರದಾಯದ ಅವಿಭಾಜ್ಯ ಅಂಗವಾಗಿ ಹೇಗೆ ನಿಲ್ಲುತ್ತಾರೆ ಎಂಬುದು ಗೊತ್ತಾಗುತ್ತದೆ. ಗುಪ್ತವಾಗಿ ಬೆಳೆಯುತ್ತ ಹೋಗುವ ಅಡಿಗರ ಪ್ರತಿಮೆಗಳಿಗೆ ಪ್ರತಿಯಾಗಿ ಒಂದು ಇಡೀ ಸಂದರ್ಭವನ್ನೇ ಸಮಕಾಲೀನ ಜೀವನದತ್ತ ನಿರ್ದೇಶಿಸುವ ತಂತುಗಳನ್ನಿಟ್ಟುಕೊಂಡು ದಂತಕಥೆಯ ಮಟ್ಟಕ್ಕೆ ಬೆಳೆಸುವ ಕಲೆ ಇವರ ಕಾವ್ಯಕ್ಕೆ ಪಾರದರ್ಶ ಕತೆಯನ್ನಲ್ಲದೇ ನಮ್ಮ ಕಾವ್ಯಕ್ಕೇ ಹೊಸದಾದ ಸೂಕ್ಷ್ಮ ವ್ಯಂಗ್ಯವೊಂದನ್ನು ಒದಗಿಸುತ್ತದೆ. ಅಂದರೆ ಅಂತರಂಗದ ಅಭಿವ್ಯಕ್ತಿಗೆ ಸಾಮಾಜಿಕತೆ (ಬಾಹ್ಯ) ವಾಹಕವಾಗುವುದರಿಂದ ಅಡಿಗರ ಕಾವ್ಯಕ್ಕೆ ಲಭಿಸುವ ಲಂಬಕ ಚಲನೆ, ಕಂಬಾರರಿಗೆ ತಾವು ಸೃಷ್ಟಿಸುವ ಒಂದು myth ಹಾಗೂ ಸಮಕಾಲೀನತೆಯ ಅಥವಾ ಕವಿಯ ಚಿಂತನೆಯ ಮಧ್ಯದ ಲಂಬಕ ಚಲನೆಯಾಗುತ್ತದೆ. ‘ಬೆಳಕಿನ ಬಯಲಿಗೆ’ ಅಥವಾ ಕೇವಲ ಪ್ರಜ್ಞಾಲೋಕಕ್ಕೇ ಸೇರಿದ ‘ಮಾವೊತ್ಸೆ ತುಂಗನಿಗೆ’ ಯಂಥ ಕವನವನ್ನು ಬರೆದಾಗಲೂ ಕೂಡ ಈ ಕವಿ ಅಡಿಗರ ಇಂಥ ಕವನಗಳಲ್ಲಿಯ ವಿವಿಧತೆಯನ್ನೇ ಸಾಧಿಸುತ್ತಾರೆಂಬುದನ್ನು ಗಮನಿಸಬೇಕು. ಅಡಿಗರ ಶಕ್ತಿಯ ಸರಿಯಾದ ಅರಿವಿನಿಂದ ಪಡೆದ ಕಾವ್ಯಕರ್ಮದ ಮೂಲತಂತುಗಳನ್ನು ಕಂಬಾರರು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಬಳಸಿಕೊಂಡಾಗ ಉಂಟಾದ ಚಿಂತನೆಯಲ್ಲಿಯ ಪಲ್ಲಟ ನಮ್ಮ ಇತ್ತೀಚಿನ ಕಾವ್ಯದ ಅತಿಮುಖ್ಯ ಘಟನೆ.
ನಾಗರಿಕ ಭಾಷೆಯ ಎಲ್ಲ ಸ್ತರಗಳನ್ನೂ ದೋಚಿಬಿಟ್ಟಾಗ ಭಾಷೆ ಮುರುಟಿಕೊಳ್ಳುವ ಆದರೂ ಬುದ್ದಿವಂತಿಕೆಯ ಕಾವ್ಯವನ್ನು ರಚಿಸುವ ಪರಿಯನ್ನು ಎ. ಕೆ. ರಾಮಾನುಜನ್ ಅವರಲ್ಲಿ ಕಾಣಬಹುದು. ಅಡಿಗರ ಶಕ್ತಿಯ ಅರಿವು ಈ ಕಾವ್ಯಕ್ಕಿದೆ. “ನಲವತ್ತು ನೆರಳು’ ‘ತೆರೆದರೆ ಬಾಗಿಲು’ ಇತ್ತೀಚೆಗೆ ಬಂದ “ಮತ್ಸ್ಯಾವತಾರ’ ‘ಜೈಲಿನಿಂದ ಜೈಲಿಗೆ’-ಕವನಗಳಲ್ಲಿ ಅಂತರಾಳದ ಮೇಲ್ಮೈ ಪಾತಳಿಗೆ ಅಭಿವ್ಯಕ್ತಿ ಒದಗಿಸಲು ಬಾಹ್ಯವನ್ನು ಮಾರ್ಗ ಮಾಡಿಕೊಂಡದ್ದನ್ನು ಕಾಣುತ್ತೇವೆ. ಇವರ ಕವನಗಳಲ್ಲಿ ಕಾಣುವ casualness ಕಾವ್ಯ ಕರ್ಮದ ಬಗ್ಗೆ ಅಡಿಗರ ನಂತರದ ಕೆಲ ಕವಿಗಳಲ್ಲಿ ಕಾಣುತ್ತಿದ್ದ ಗಂಭೀರತೆಯ ಸೋಗನ್ನು ಕಿತ್ತಿಹಾಕಿದೆ. ಬಿಗಿ ಮುಷ್ಟಿಯಲ್ಲಿದ್ದ ಕಾವ್ಯವನ್ನು ಬಿಡಿಸಿ, ಅದರ ಶಕ್ತಿಗೆ ಕುಂದು ತರದೇ ಹೊರಗೆ ಹರಿಯಬಿಟ್ಟ ಶ್ರೇಯಸ್ಸು ರಾಮಾನುಜನ್‌ರಿಗೆ ಸಲ್ಲುತ್ತದೆ. ಇಂಥ ಕಾವ್ಯ ಒಂದು ಕಾವ್ಯಸಂಪ್ರದಾಯದ ಪ್ರಾರಂಭದ ಬಿಂದುವಾಗುವ ಸಾಧ್ಯತೆ ಮಾತ್ರ ಇಲ್ಲ. ಈ ಮಾತನ್ನು ರಾಮಾನುಜನ್ ಅನುಕರಣೆಯಲ್ಲಿ ಬಂದ ಕಳಪೆ ಕಾವ್ಯ ಈಗಾಗಲೇ ಋಜುವಾತುಪಡಿಸಿದೆ. ಆದರೆ ಜೈಲಿನಿಂದ ಜೈಲಿಗೆ’ ಕವನವನ್ನು ಓದಿದ ನಂತರ ಒಂದು ಶಂಕೆ ರಾಮಾನುಜನ್‌ರ ಕಾವ್ಯದ ಬಗ್ಗೆ ನನಗೆ ಹುಟ್ಟಿದೆ. ಈ ಕವನಕ್ಕೂ, “ನಲವತ್ತು ನೆರಳಿ” ನಂಥ ಕವನಕ್ಕೂ ಕಾವ್ಯವಸ್ತುವೊಂದನ್ನು ಬಿಟ್ಟು ಬೇರೆ ಯಾವ ವ್ಯತ್ಯಾಸವೂ ಕಾಣುವುದಿಲ್ಲ. ಇದೇ ಧೋರಣೆ ಮುಂದುವರೆದರೆ ಇವರ ಕಾವ್ಯ Stereotype ಆಗುವ ಸಂಭವವಿದೆಯೋ ಏನೋ ಎನ್ನಿಸುತ್ತದೆ. ಪಾರದರ್ಶಕತೆಯ ಶಕ್ತಿ, ಸಂಪೂರ್ಣ ನಾಗರಿಕ ಭಾಷೆ ಹಾಗೂ ಸರಳತೆಯ ಒಂದು ಅಪೂರ್ವ ಸಂಗಮವನ್ನು ಕೆ. ಎಸ್. ನರಸಿಂಹಸ್ವಾಮಿಯವರ ಇತ್ತೀಚಿನ ಕವನಗಳಲ್ಲಿ ನಾವು ಕಾಣುತ್ತೇವೆ. ‘ಮನೆಯಿಂದ ಮನೆಗೆ’ ಮತ್ತು ‘ತೆರೆದರೆ ಬಾಗಿಲು’ ಈ ಎರಡು ಕವನಗಳು ಇಂಥ ಒಂದು ಸಂಗಮಕ್ಕೆ ಒಳ್ಳೆಯ ಉದಾಹರಣೆಗಳಾಗಿವೆ. ಇಷ್ಟಾದರೂ ಇವರ ಕವನಗಳು ಇತರ ನಾಲ್ಕು ಕವಿಗಳ ಕಾವ್ಯದಷ್ಟು ಪ್ರಭಾವವನ್ನಾಗಲೀ, ಕಾವ್ಯಾಭ್ಯಾಸಿಗಳನ್ನು ಕಲಕಿರುವುದನ್ನಾಗಲೀ ಕಾಣುವುದಿಲ್ಲ. ಆಳವಾದ ದುಃಖದ ಬಗ್ಗೆ ಚಿತ್ತಾಲರಿಗಿರುವ ಅರಿವು, ಮೌಲ್ಯಗಳ ಬಗ್ಗೆ ಅಡಿಗರಿಗಿರುವ ಕಾಳಜಿ, ದಟ್ಟವಾದದ್ದನ್ನು ಭೇದಿಸಿಕೊಂಡು ಒಳಹೋಗುವ ಕಂಬಾರರ ಶಕ್ತಿ, Casual ಆಗಿದ್ದರೂ ಸಂಸ್ಕೃತಿಯ ಬಗೆಗಿರುವ ರಾಮಾನುಜನ್‌ರ ಕುತೂಹಲ-ಇವು ಈ ಕವಿಗಳ ಕಾವ್ಯದ ಶಕ್ತಿಯ ಸೆಲೆಗಳಾಗಿವೆ. ಆದರೆ ಇಂಥ ಒಂದು ಗಂಭೀರ ಆಸಕ್ತಿ, ಪ್ರಯತ್ನ ಮತ್ತು ಶಬ್ದಾತೀತವಾದದ್ದನ್ನು ಧ್ವನಿಸುವ ಕಾವ್ಯಕ್ಕೇ ಮೀಸಲಾದ ಪರಿಯನ್ನು ಕೆ. ಎಸ್. ಎನ್. ಕಾವ್ಯದಲ್ಲಿ ಕಾಣದೇ ಹೋಗುವುದರಿಂದ ಮತ್ತು ಅವರ ಕಾವ್ಯ ತಾಂತ್ರಿಕ ಮಟ್ಟದಲ್ಲಿಯೇ ಹೆಚ್ಚು ಸಫಲತೆಯನ್ನು ಪಡೆಯುವುದರಿಂದ ಇವರ ಕಾವ್ಯ ಪ್ರಧಾನ ಕಾವ್ಯದ ಅಂಗವಾಗಿ ಉಳಿಯುವ ಸಾಧ್ಯತೆಗಳು ಕಡಿಮೆ.
೨
ಇದೇ ಸಂದರ್ಭದಲ್ಲಿ ಹೊರಬಂದಿರುವ ಅಡಿಗರ ‘ವರ್ಧಮಾನ’ ಹಾಗೂ ‘ಇದನ್ನು ಬಯಸಿರಲಿಲ್ಲ’ ಕವನ ಸಂಕಲನದಲ್ಲಿಯ ಧಾಟಿ ಧೋರಣೆಗಳನ್ನು ಹೀಗೆ ಗುರುತಿಸಬಹುದು : ಸುಷುಪ್ತಿ ಹಾಗೂ ಪ್ರಜ್ಞೆಯ ತಿಕ್ಕಾಟದಿಂದ ಹೊರಬರುವ ಕವನಗಳಾದ “ರಾಮನವಮಿಯ ದಿವಸ’ ‘ಕೂಪ ಮಂಡೂಕ’ ‘ವರ್ಧಮಾನ” “ಅಜ್ಜನೆಟ್ಬಾಲ’ “ನೀ ಬಳಿಯೊಳಿರುವಾಗ್ಗೆ’ ‘ಇದನ್ನು ಬಯಸಿರಲಿಲ್ಲ’ ಕವನಗಳು ಹೊರಬಂದಿದ್ದರೆ, ವ್ಯಂಗ್ಯದ ಮೊನುಚುಳ್ಳ ‘ಎಡ ಬಲ’ ‘ಗಜೇಂದ್ರ ಮೋಕ್ಷ’ ಕವನಗಳೂ ಹೊರಬಂದಿವೆ. ಆದರೆ ಈ ಎಲ್ಲ ಕವನಗಳಲ್ಲಿಯೂ ಅಡಿಗರ ಹಿಂದಿನ ಕವನಗಳಾದ ‘ಭೂತ’ ‘ಪ್ರಾರ್ಥನೆ’ “ಭೂಮಿಗೀತ’ಗಳ ಧಾಟಿ ಧೋರಣೆಗಳ ಮುಂದಿನ ರೂಪವನ್ನೇ ಕಾಣುತ್ತೇವೆ. “ಭಗ್ನ’ `ದೆಹಲಿಯಲ್ಲಿ’ ‘ಅಂತಃಕರಣ’ ‘ಮನೆಯಿಲ್ಲದವರು’ ‘ಇದನ್ನು ಬಯಸಿರಲಿಲ್ಲ’ ಮುಂತಾದ ಕವನಗಳಲ್ಲಿ ಅಡಿಗರ ಹಿಂದಿನ ಧೋರಣೆಯಲ್ಲಾದ ತೀವ್ರ ಬದಲಾವಣೆಯೊಂದನ್ನು ಗುರುತಿಸಬಹುದು. ಅಂತರಂಗಕ್ಕೆ ಬಾಹ್ಯವನ್ನು ಪ್ರತಿಮೆಯನ್ನಾಗಿಸಲೇಬೇಕೆಂಬ ಅಡಿಗರ ನಿಷ್ಠುರತೆಯನ್ನು ಈ ಕವನಗಳಲ್ಲಿ ಕಾಣುವುದಿಲ್ಲ. ಆದರೆ ಕಣ್ಣು ಹೊರನೆಟ್ಟು ರಚಿಸಿದ ಕವನಗಳು ಇವು. ಈ ಧೋರಣೆ ಅಡಿಗರ ಪ್ರಾರಂಭದ ದಿಶೆಯಲ್ಲಿಯ ಬಂದ ಕವನಗಳನ್ನು ನೆನಪಿಗೆ ತರುವಂಥವು. ಪ್ರಾರಂಭದ ದಿಶೆಯಲ್ಲಿಯ ಕಾವ್ಯಕರ್ಮಕ್ಕೂ ಮತ್ತು ಮಾಗಿದ ಅಡಿಗರ ಹೊರನೆಟ್ಟ ಈ ಕಣ್ಣಿಗೂ ಒಂದು ಮೊಲಭೂತವಾದ ವ್ಯತ್ಯಾಸವನ್ನು ಗುರುತಿಸಬಹುದು- ಅದೇ ಆಳವಾದ ದುಃಖ ; ಇದು ಗೋಳಲ್ಲ. `ಭಗ್ನ’ ಕವನದಲ್ಲಿ ಕವಿ ತನ್ನ ವಿಫಲತೆಯನ್ನು ಅರುಹಿ, ದೂರ ನಿಂತು ವಿಷಣ್ಣತೆಯ ಮುಗುಳ್ನಗೆ ನಗುವ ರೀತಿ ನಮ್ಮ ಕಾವ್ಯಕ್ಕೆ ಹೊಸದು :
ಕೂದಲೆಳೆಕತ್ತಿ ಕೆಳಕುಳಿತು ತೇದರು ಬೆರಳು
ಕೊರಡು ಸವೆದರು ಸೊಗಡು ಹರಡಲಿಲ್ಲ.
ತುಟಿ ಕಚ್ಚಿ ಕೆಂಡಗಳ ಮೇಲೆ ನಡೆದದ್ದಕ್ಕೆ
ಬೊಕ್ಕೆಗಳ ಮಿಕ್ಕಿ ಸುಖ ದಕ್ಕಲಿಲ್ಲ.
ಎನ್ನುವ ಸಾಲುಗಳಲ್ಲಿ ಬರುವ ಕಷ್ಟದ ರೂಪ, ಹಾಗೆಯೇ ಇಂದಿನ ಫಲಾಪೇಕ್ಷೆಯ ಆಸೆಯನ್ನು ವರ್ಣಿಸುವ ಈ ವೈಖರಿ :
ನೆರೆಮನೆಯ ನಾಯಿ ದಂಡಿಗೆಯೇರಿ ಕುಳಿತದ್ದು ಕಂಡರೂ
ಅಡ್ಡಪಾಲಕಿಯಾಸೆ ಹಿಂಗಲಿಲ್ಲ.
ಮತ್ತು ‘ರಾಮನವಮಿಯ ದಿವಸ’ದ ಕೊನೆಗೆ ಬರುವ :
“ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು
ಪುರುಷೋತ್ತಮನ ಆ ಅಂಥ ರೂಪರೇಖೆ ?
ಸಾಲುಗಳ ಬಾಹ್ಯರೂಪದ ಭಾಷ್ಯ ‘ಭಗ್ನ’ದಲ್ಲಿ :
ಮಾಡಿ ಮಡಿಯದೆ ಬದುಕಿ ಉಳಿಯಬಾರದು, ಮಡ್ಡಿ :
ಕರ್ಪೂರವಾಗದೇ ಬೆಂಕಿ ಬಳಿಗೆ
ಸುಳಿಯಬಾರದು ; ಹೊತ್ತಿ ಹೊಗೆವ ಮಡ್ಡಿಯ ಕಂಪು
ಹೊರಗಡೆಗೆ: ಒಳಗೆ ಕೊನೆಯಿಲ್ಲದ ಧಗೆ.
ಈ ಎಲ್ಲ ದೃಷ್ಟಿಯಿಂದ ನೋಡಿದಾಗ ಅಡಿಗರ ‘ಇದನ್ನು ಬಯಸಿರಲಿಲ್ಲ’ ಕವನ ಸಂಗ್ರಹದ ಪ್ರಾರಂಭದ ಕವನವಾದ ‘ಭಗ್ನ’ ನಮ್ಮ ಇಂದಿನ ಕಾವ್ಯಲೋಕದ ಅನನ್ಯ ಕವನವಾಗಿದೆ. ಅಡಿಗ ಸಂಪ್ರದಾಯದಿಂದಲೇ ಬಿಡಿಸಿಕೊಂಡ ಈ ಕವನ ಅವರ ಮುಂದಿನ ಕವನಗಳಾದ ‘ದೆಹಲಿಯಲ್ಲಿ’, ‘ಅಂತಃಕರಣ’ ಕವನಗಳಿಗೆ ದಾರಿಮಾಡಿಕೊಟ್ಟಿದೆ. “ದೆಹಲಿಯಲ್ಲಿ ನಮ್ಮ ಸುತ್ತಲಿನ ವಾತಾವರಣಕ್ಕೆ ಹಿಡಿದ ಕನ್ನಡಿಯಾದರೆ, ‘ಅಂತಃಕರಣ’ ದಲ್ಲಿ
“ಶಾಖೋಪಶಾಖೆ ಟಿಸಲೊಡೆದ ಜೀವದ ನಾಳ
ಒಣಗುತ್ತಲಿದೆ ನದಿಗಳೊಂದೊಂದಾಗಿ’
ಮತ್ತು
“ಬಿಸಿ ಮುಟ್ಟಿಸುವ ಹವಿಸ್ಸೆರೆವ ಕಾಯಕದ ಖುಷಿ
ತಪ್ಪಿ ತಪಿಸುವ ಭಗೀರಥರ ಗಾಂಧಾರೀ ಮನೋರಥದ
ಗಾಲಿ ಹೂತಿದೆ ಉಸುಬಿನಲ್ಲಿ ಎಲುಬುಗಳ ಜೊತೆ’.
ಎನ್ನುವಲ್ಲಿ ಅಡಿಗರು ಸುತ್ತಲಿನ ವಾತಾವರಣದ ಬಗ್ಗೆ ಮಾತನಾಡುತ್ತಿರುವಾಗಲೇ ನಮ್ಮ ಕಾವ್ಯಲೋಕದ ಬಗ್ಗೆಯೂ ಮಾತನಾಡುತ್ತಿದ್ದಾರೆ ಎನ್ನಿಸುತ್ತದೆ. ಇಷ್ಟಾಗಿಯೂ ಅಡಿಗರ ಕಾವ್ಯದ ಮೂಲಬೇರುಗಳು ಪ್ರತಿಮಾ ವಿಧಾನದಲ್ಲಿಯೇ ಇವೆ. ವರ್ತಮಾನ “ನಿನ್ನೆ’ಯ ಪ್ರತಿಫಲ, ಈ ವರ್ತಮಾನವನ್ನು ಅರಿಯುವುದಕ್ಕಾಗಿ ನಾವು ‘ನಿನ್ನೆ’ಗಳಿಗೆ ಹೋಗಲೇಬೇಕು. ಅಡಿಗರು ಪುರಾಣಗಳ ಪ್ರತಿಮೆಗಾಗಿ ತಡಕಾಡುವುದು ಈ ಕಾರಣಕ್ಯಾಗಿ -ಅವರು ವೈದಿಕರಿರುವುದರಿಂದಲ್ಲ. ತನ್ನ ಶಕ್ತಿಯ ಅರಿವನ್ನು ಆಧುನಿಕ ತರುಣ ಪಡೆದಿಲ್ಲ ಹಾಗೂ ಅದಕ್ಕೆ ಅವಕಾಶವೂ ಇಲ್ಲ ಎನ್ನುವುದನ್ನು “ವರ್ಧಮಾನ” ಕವನದ “ಹನುಮದ್ವಿಕಾಸಕ್ಕೆ ಇಲ್ಲ ಎಲ್ಲೆ” ಎನ್ನುವಲ್ಲಿ ಗುರುತಿಸಿದ ಅಡಿಗರು “ರಾಮನವಮಿಯ ದಿವಸ”ದಲ್ಲಿ ಅರ್ಥಪೂರ್ಣವಾದದ್ದು ಘಟಿಸಬೇಕಾದರೆ ಬೇಕಾದ ಪಕ್ವಕಾಲದ ಬಗ್ಗೆ ಚಿಂತಿಸುತ್ತಾರೆ. ಹಾಗೆ ನೋಡಿದರೆ, ಕಾವ್ಯಕ್ರಿಯೆಯ ಸಮಸ್ಯೆ ಅಡಿಗರನ್ನು ಕಾಡಿದಷ್ಟು ಬೇರೆ ಯಾವ ಕವಿಯನ್ನೂ ಕಾಡಿಲ್ಲ. “ಕೂಪ ಮಂಡೂಕ’ದ ಸಮಸ್ಯೆ ಅದೇ ಆದರೆ “ರಾಮನವಮಿಯ ದಿವಸ” ಇದೇ ವಸ್ತುವಿನ ಕಾಲಮಾನ ಪರಿಮಿತಿಯನ್ನು ಎತ್ತಿ ತೋರಿಸುತ್ತದೆ. “ಇದನ್ನು ಬಯಸಿರಲಿಲ್ಲ” ಕವನ ಸಂಕಲನ ಅಡಿಗರ ಕಾವ್ಯ ಬೆಳವಣಿಗೆಯ ಒಂದು ಮಹತ್ವದ ತಿರುವನ್ನು ತೋರಿಸುತ್ತದೆ. ಅವರ ವಿಡಂಬನೆಯಲ್ಲಿಯ ಉದ್ವಿಗ್ನತೆ ಮಾಯವಾಗಿ, ಪರಿಪೂರ್ಣವಾಗಿ ಪಕ್ವವಾದ ಹೃದಯವೊಂದು ಜೀವನದ ಆಳವಾದ ದುಃಖಕ್ಕೆ ಮಿಡಿಯುತ್ತಿರುವುದನ್ನು ಇಲ್ಲಿ ಕಾಣಬಹುದು. ನಮ್ಮ ಪ್ರಧಾನ ಕಾವ್ಯದ ಮೂಲಶಕ್ತಿಯಾದ ‘ಪ್ರಜ್ಞೆ’ ಮತ್ತು ‘ಸುಷುಪ್ತಿ’ಯ ಉಜ್ಜುವಿಕೆ ಹಾಗೂ ಪ್ರತಿಮಾ ವಿಧಾನ ಇವು ಅಡಿಗರ ಕಾವ್ಯದ ಅವಿಭಾಜ್ಯ ಅಂಗಗಳಾಗಿವೆಯಲ್ಲದೇ ನಮ್ಮ ಅಪ್ರಧಾನ ಕಾವ್ಯದ ಗುಣವಾದ ‘ಬೆಳಕಿನ ಬಯಲಿಗೆ” ಸೇರಿದಂಥ ಕಾವ್ಯ ಕೂಡ ಶ್ರೇಷ್ಠ ಕಾವ್ಯವಾಗುವ ಸಾಧ್ಯತೆಗಳನ್ನು ಅಡಿಗರು ತಮ್ಮ ಇತ್ತೀಚಿನ ಕವನಗಳಲ್ಲಿ ಗುರುತಿಸುತ್ತಿರುವುದರಿಂದ, ಅವರು ಇಂದೂ ನಮಗೆ ಅರ್ಥಪೂರ್ಣ ಕವಿಯಾಗಿ ಕಾಣುತ್ತಾರಲ್ಲದೇ ಕನ್ನಡದ ಶ್ರೇಷ್ಠ ಕವಿಯಾಗಿ ಉಳಿಯುತ್ತಾರೆ.
ಇನ್ನುಳಿದ ಕನ್ನಡದ ಇತ್ತೀಚಿನ ಕಾವ್ಯದ ಒಂದು ತುದಿಗೆ ನಿಸಾರ್ ಅಹಮದ್ ಇದ್ದರೆ ಇನ್ನೊಂದೆಡೆಗೆ ಕೆ. ವಿ. ತಿರುಮಲೇಶ್ ಇದ್ದಾರೆ. ನಿಸಾರ್ ಅಹಮದ್‌ರ ‘ಆಯ್ದ ಕವಿತೆ’ ಗಳು ಇತ್ತೀಚೆಗೆ ಪ್ರಕಟವಾಗಿದೆ. ಇದನ್ನು ಒಮ್ಮೆ ಅವಲೋಕಿಸಿದಾಗ ಒಂದು ವಿಷಯ ಸ್ಪಷ್ಟವಾಗುತ್ತದೆ : ಸುಷುಪ್ತಿಯನ್ನು ಬಗೆಯುವುದು ನಿಸಾರ್‌ರಿಗೆ ಪ್ರಧಾನ ಕಾವ್ಯ ಮೌಲ್ಯವಾಗುವುದಿಲ್ಲ. ಆದರೆ ಹೊರಗಣ್ಣು ನೆಟ್ಟು ಬರೆಯುವಾಗಲಾದರೂ ಗಂಭೀರ ಆಸಕ್ತಿಯಿದ್ದರೆ ಕಾವ್ಯ ಪ್ರಧಾನವಾಗುವ ಸಾಧ್ಯತೆಗಳಿರುತ್ತವೆ. ಇಲ್ಲವಾದರೆ ಕಾವ್ಯ ಮಿಂಚಿ ಮಾಯವಾಗುವ ಸೆಳಕಾಗುತ್ತದೆ. ನಿಸಾರ್ ಅಹಮದ್‌ರ “ರಾಮನ್ ಸತ್ತ ಸುದ್ದಿ’. “ಸಂಜೆ ಐದರ ಮಳೆ’ ಮುಂತಾದ ಕವನಗಳು ಅವರ ಪ್ರಜ್ಞಾಲೋಕದಲ್ಲಿಯೇ ನಿಂತು ಬರೆಯುವ ಶಕ್ತಿಯನ್ನು ತೋರಿಸಿದರೂ ಪ್ರಧಾನಕಾವ್ಯಕ್ಕೆ ಬೇಕಾದ ಆಸಕ್ತಿಯನ್ನು ತೋರುವುದಿಲ್ಲ. ಇಂಥ ಕಾವ್ಯ ಪ್ರಧಾನ ಕಾವ್ಯವಾಗುವ ಸಾಧ್ಯತೆಯತ್ತ ಮತ್ತೆ ಅಡಿಗರೇ ಇತ್ತೀಚಿನ ತಮ್ಮ ಕಾವ್ಯದಲ್ಲಿ ತೋರುಗೈಯಾಗಿರುವುದರಿಂದ, ನಿಸಾರ್‌ರ ಕಾವ್ಯ ತನ್ನ ಎಲ್ಲ ವಿಸ್ತಾರ, ವಿವಿಧತೆ, ಗೇಯತೆಗಳಿಂದ ಒಡಗೂಡಿದ್ದೂ ತನ್ನ ಓರಗೆಯವರ ಉತ್ತಮ ಕಾವ್ಯಕ್ಕಿಂತ ಎಲ್ಲಿ ಶ್ರೇಷ್ಠವಾಗುತ್ತದೆ ಎಂದು ಹೇಳುವುದು ಕಷ್ಟದ ಕೆಲಸ. ಆದರೆ ನಿಸಾರ್ ಮನಮುಟ್ಟುವಂತೆ ಬರೆದ ಎಲ್ಲ ವರ್ಗದ ಓದುಗರನ್ನು ಆಕರ್ಷಿಸುವ ಶಕ್ತಿಯನ್ನು ಪಡೆದವರಾಗಿದ್ದಾರೆ. ಕೆ. ವಿ. ತಿರುಮಲೇಶರ ಮಹತ್ವದ ಕೃತಿಯಾದ ‘ಮಹಾಪ್ರಸ್ಥಾನ’ ನಮ್ಮ ಪ್ರಧಾನ ಕಾವ್ಯದ ಎಲ್ಲ ಶಕ್ತಿಯ ಅರಿವಿನಿಂದ ಬರೆದುದಾಗಿದ್ದರೂ ವಿಮರ್ಶಾ ಲೋಕವನ್ನು ಆಕರ್ಷಿಸದೇ ಹೋದದ್ದು ಆಶ್ಚರ್ಯ. ಈ ಕವನ ಯಶಸ್ವಿ ಕವನವಾಗಿರದಿದ್ದರೂ, ನಿರಾಶೆಯ ವಿವಿಧ ವಿನ್ಯಾಸಗಳನ್ನು ಸೆರೆಹಿಡಿಯುವಲ್ಲಿ ಮಾಡಿದ ಒಂದು ಅದ್ಭುತ ಪ್ರಯತ್ನವಾಗಿದೆ. ಅಡಿಗರ ವ್ಯಕ್ತಿನಿಷ್ಠ ಕಾವ್ಯದಿಂದ ಬಿಡಿಸಿಕೊಂಡು ಚಿತ್ತಾಲರ ಭಾಷಾ ಸಂಯಮವನ್ನು ರೂಢಿಸಿಕೊಂಡ ತಿರುಮಲೇಶರ ಈ ಕವನ ಅವರು ನಮ್ಮ ಪ್ರಧಾನಕಾವ್ಯದ ಮುಂದಿನ ಹೆಜ್ಜೆಯಾಗುವ ತೀವ್ರವಾದ ಸೂಚನೆ ನೀಡಿದ್ದಾರೆ. ಆದರೆ “ಮಹಾಪ್ರಸ್ಥಾನ”ದ ನಂತರ ಅವರು ಬರೆದ ‘ಸಹಾರಾ’ ದಂಥ ಕವನಗಳು ಮಾತ್ರ ಅವರು ತಮ್ಮ ದಾರಿಯನ್ನು ಹೇಗೆ ಗುರುತಿಸಿಕೊಂಡು ಗೆದ್ದು ಬರುತ್ತಾರೆ ಎಂಬುದನ್ನು ಇನ್ನೂ ಕಾದು ನೋಡುವಂತೆ ಮಾಡುತ್ತವೆ.
ನಮ್ಮ ಶ್ರೇಷ್ಠ ಗದ್ಯ ಲೇಖಕರುಗಳಾಗಿ ಕಾವ್ಯವನ್ನು ರಚಿಸಿರುವವರಲ್ಲಿ-ಆದರೆ ಪ್ರಧಾನ ಕಾವ್ಯದಿಂದ ಬೇರೆಯಾಗಿಯೂ ಶ್ರೇಷ್ಠ ಕಾವ್ಯ ರಚಿಸದೇ ಇರುವವರು-ಮೂವರು ಮಹತ್ವದವರಾಗಿದ್ದಾರೆ. ಯು. ಆರ್. ಅನಂತಮೂರ್ತಿಯವರ ‘ಹತ್ತೊಂಬತ್ತು ಕವನಗಳು’ ಸಂಗ್ರಹದಲ್ಲಿರುವ ‘ಮತ್ತೆ ಮಳೆ ಹೊಯ್ಯುತಿದೆ’ “ಕಿಳ್ಳೆಕ್ಯಾತರ ಹುಡುಗಿ’ ‘ಎಲ್ಲಿ ಮೌನ ಮಧ್ಯಾಹ್ನ ಹೊತ್ತು ತುಂಬಿದ ಹಾಗೆ’ ಎನ್ನುವ ಕವನಗಳು ವಿಷಯವನ್ನು ಬಿಗುವಿನಿಂದ ನಿರೂಪಿಸುವ ಹಾಗೂ ಕಾವ್ಯಕ್ಕೆ ಮಾತ್ರ ಸಾಧ್ಯವಿರುವ ಸನ್ನಿವೇಶಗಳನ್ನು ಅಳವಡಿಸಿಕೊಳ್ಳುವ ಕಲೆಗಾರಿಕೆಯನ್ನು ತೋರಿಸುತ್ತವೆ. ಹೀಗಾಗಿ
“ಒಲಿದು ಒಲ್ಲದ ಗಂಡಿನವಮಾನವ ತೊಳೆದೆ”
(ಮತ್ತೆ ಮಳೆ ಹೊಯ್ಯುತಿದೆ)
‘ಶೂದ್ರನತ್ತ ನೆಲ ಕಚ್ಚಲೆಂದು ಬೇ-ರು-ಗಳೊ-ಡೆದು
ಧಾನ್ಯ ದ್ವಿಜವಾದಂತೆ?
(ಕಿಳ್ಳೆಕ್ಯಾತರ ಹುಡುಗಿ)
“ಗುರಿಫಲಿಸಿಕೊಳ್ಳುವ ರಸ್ತೆಯ ಹಾಗೆ”
(ಎಲ್ಲಿ ಮೌನ ಮಧ್ಯಾಹ್ನ ಹೊತ್ತು ತುಂಬಿದ ಹಾಗೆ)
ಎನ್ನುವ ಸಾಲುಗಳು ನೆನಪಿನ ಪಟಲಗಳಲ್ಲಿ ಉಳಿಯುತ್ತವೆಯಾದರೂ ಗಂಭೀರವಾದ ಆಸಕ್ತಿ ಇದ್ದೂ ಪ್ರಧಾನಕಾವ್ಯವಾಗುವುದಿಲ್ಲ. ಆದರೆ ಅವರ ಇತ್ತೀಚಿನ ‘ಆಕ್ರಮಣ’ ದಂಥ ಕತೆಯಲ್ಲಿ ಆಕ್ರಮಣವೆಂಬ ಸಾಹಿತ್ಯಕ ವಸ್ತುವಿನ ವಿವಿಧ ಮಗ್ಗುಲಗಳನ್ನು ಒಳ್ಳೆಯ ಬೀಸಿನಿಂದ ಸೆರೆಹಿಡಿಯುವುದನ್ನು ನೋಡಿದರೆ ನಮ್ಮ ಪ್ರಧಾನಕಾವ್ಯದ ಎಲ್ಲ ಶಕ್ತಿ ಮೈದಾಳಿ ಬಂದಿರುವ ಗದ್ಯಲೇಖಕರು ಇವರು ಎನ್ನುವುದು ಫಕ್ಕನೇ ಗೋಚರಿಸುತ್ತದೆ. ಪಿ. ಲಂಕೇಶ ಬರೆದಿರುವ ‘ಅವ್ವ’ ಕವನ, ಅವರ ಶ್ರೇಷ್ಠ ಕವನವಾಗಿಯೇ ಉಳಿದಿದೆ ಎಂದರೆ ಅವರ ಇತ್ತೀಚಿನ ಕವನಗಳಲ್ಲಿ ನಮ್ಮ ಹೊಸ ಕವಿಗಳು ಬರೆಯುವುದಕ್ಕಿಂತ ಒಂದು ಮಟ್ಟ ಮೇಲಿನ ಕವಿತೆಗಳನ್ನು ರಚಿಸಿಲ್ಲ ಎಂದಂತೆಯೆ. ಆದರೆ ಅವರ ‘ಅವ್ವ’ ಕವಿತೆ ಮಾತ್ರ ಕನ್ನಡದ ಈ ಮೂರು ಕವಿಗಳು ರಚಿಸಿದ ಕವಿತೆಗಳಲ್ಲಿಯೇ ಉತ್ತಮವಾಗಿದೆ. ಕವಿಯ ‘ಅಜ್ಜ’ ಹಾಗೂ ‘ಗಾಂಧೀಜಿ’ಯನ್ನು ಕುರಿತು ಬರೆದ ಕವನ ಮಾತ್ರ ಲಂಕೇಶ್ ಈ ಸಾಹಿತ್ಯದ ಪ್ರಕಾರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರೆ ಇಲ್ಲಿಯ ಮುಚ್ಚಿದ ಹೊಸಬಾಗಿಲೊಂದನ್ನು ತೆರೆಯಬಹುದೆಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಆದರೆ ಈ ಕವನದ ನಂತರ ಬಂದ ಅವರ ಕವನಗಳು ಇಂಥ ಯತ್ನವನ್ನು ಮತ್ತೆ ತೋರುವುದಿಲ್ಲ. ಶ್ರೀಕೃಷ್ಣ ಆಲನಹಳ್ಳಿ ಮಾತ್ರ ಇದಕ್ಕೆ ಹೊರತಾಗಿದ್ದಾರೆ. ಇತ್ತೀಚೆಗೆ ಪ್ರಕಟವಾದ. “ಕಾಡುಗಿಡದ ಹಾಡು-ಪಾಡು” ಕವನ ಸಂಗ್ರಹದಲ್ಲಿಯ ಅದೇ ಹೆಸರಿನ ಕವಿತೆ ಹಾಗೂ ‘ಕರಿಯ’ ಎನ್ನುವ ಕವಿತೆ, ಈ ಕವಿಯ ಸ್ಪಷ್ಟವಾದ ಹೊಸ ಬೆಳವಣಿಗೆಯ ದಿಶೆಯನ್ನು ಸೂಚಿಸುತ್ತವೆ. ‘ಕಾಡುಗಿಡದ ಹಾಡು-ಪಾಡು’ ಕವಿಯ ಸದ್ಯದ ಸಂದರ್ಭವನ್ನು ಭಾವಗೀತೆಯ ಲಯಗಳಿಂದ ನಿರೂಪಿಸುವ ಒಂದು ಶಕ್ತಿಯುತ ಪ್ರಯತ್ನವಾಗಿದೆ. ಈ ನಿರೂಪಣೆಯ ಹದವನ್ನು ಅವರ ‘ಕರಿಯ’ ಕವನದಲ್ಲಿಯೂ ಕಾಣಬಹುದು.
ತನ್ನ ಅಸ್ತಿತ್ವಕ್ಕೆ ತನಗೆಷ್ಟೇ ಅತೃಪ್ತವೆನಿಸಿದರೂ ಆಗೊಂದು ಸ್ವಂತ ಬದುಕಿತ್ತು
ನೋವು ನಲಿವಿಗದು ಮಿಡಿದಿತ್ತು, ಕ್ಷೀಣಿಸಿತ್ತು ಮತ್ತೆ ಕಾದಿತ್ತು ರಕ್ತಾಭಿಸರಣಕ್ಕೆ
ಈಗೆಲ್ಲವೂ ಮುಗಿದುಹೋದಂತೆ ಕಾಲದೇಶಕ್ಕಿರಲಿ ಹಸಿವು ನಿದ್ರೆ ಮೈಥುನಕ್ಕೂ
ಊಂಗುಟ್ಟದೆ, ಇನ್ನೊಂದು ಸ್ಥಿತಿಯಿರದೆ, ಸಂದಿದೆ ಅವಸಾನದ ಕ್ರೂರ ಮೌನಕ್ಕೆ,
ಎನ್ನುವ ‘ಕಾಡುಗಿಡದ ಹಾಡು-ಪಾಡು’ ಕವನದ ಕೊನೆಗೆ ಬೇಕಾದ ಕವನದಲ್ಲಿಯ ಪೂರ‍್ವವೇದಿಕೆ ಎಷ್ಟು ಶಕ್ತಿಶಾಲಿಯಾಗಿದೆ ಎಂದರೆ, ಪ್ರತಿಮಾ ವಿಧಾನ ಮತ್ತು ಸಾವಯವ ಶಿಲ್ಪ ಸಮಗ್ರೀಕರಣವಿಲ್ಲದೆಯೂ ನಮ್ಮ ಮನಸ್ಸಿನಾಳಕ್ಕಿಳಿಯುತ್ತದೆ. ಅದರಂತೆಯೇ ‘ಕರಿಯ’ ಎನ್ನುವ ಕವನದಲ್ಲಿಯ ಸಾವಿನ ಗಾಢತೆ ಮುಗ್ಧತೆಯಿಂದಲೇ ಹೊರಹೊಮ್ಮುತ್ತದಾದ್ದರಿಂದ, ಮನಸ್ಸನ್ನು ತೀವ್ರವಾಗಿ ಕಲಕುತ್ತದೆ. ಕಾವ್ಯದ ಉಗಮದಲ್ಲಾದ ಈ ಪಲ್ಲಟ ನಮ್ಮ ಮುಂದಿನ ಪ್ರಧಾನ ಕಾವ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆಂಬುದನ್ನು ಕಾದುನೋಡಬೇಕು.
ನಮ್ಮ ಅಪ್ರಧಾನ ಕಾವ್ಯದಲ್ಲಿಯ ಇಬ್ಬರು ಮಹತ್ವದ ಕವಿಗಳೆಂದರೆ : ರಾಮಚಂದ್ರ ಶರ್ಮ ಹಾಗೂ ಸುಮತೀಂದ್ರ ನಾಡಿಗ್. ಶರ್ಮರ ‘ಏಳು ಸುತ್ತಿನ ಕೋಟೆ’ ಯ ನಂತರ ಬಂದ ಅವರ ಉಳಿದ ಕೆಲ ಕವನಗಳು ಆ ಕವನದ ಪಡಿಯಚ್ಚುಗಳೆನ್ನಿಸುತ್ತವೆ. ಅವರ ‘ಹೇಸರಗತ್ತೆ’ ಕವನ ಸಂಗ್ರಹದಲ್ಲಿಯ ‘ಇಷ್ಟ ಪತ್ರ’ ಅವರ ಶ್ರೇಷ್ಠ ಕವನ. ಕಳೆದು ಹೋದುದರ ಬಗೆಗೆ ನಿಧಾನವಾಗಿ ಚಿಂತಿಸುವ ಅವರ ಸ್ಥಾಯಿಭಾವ ಇಂಥ ಕವನಗಳಿಗೆ ಮೆರಗು ಕೊಡುತ್ತದೆ. ಆದರೆ ಒಟ್ಟು ಬದುಕಿನಂದದಲ್ಲಿ ಈ ಭಾವದ ವ್ಯಾಪ್ತಿಯನ್ನು ಗುರುತಿಸದೇ ಹೋದದ್ದು ಶರ್ಮರ ಕಾವ್ಯಕ್ಕೆ ದೊಡ್ಡ ಮಿತಿಯನ್ನೂ ತಂದೊಡ್ಡುತ್ತದೆ. ಸುಮತೀಂದ್ರರ ಶ್ರೇಷ್ಠ ಕವನವಾಗಿ ಇನ್ನೂ ‘ಕಪ್ಪು ದೇವತೆ’ಯೇ ಉಳಿದಿದೆ. ಈ ಕವನ ಈ ಕವಿಯ ಬಗ್ಗೆ ಹುಟ್ಟಿಸಿದ್ದ ಭರವಸೆಯನ್ನು ಅವರ ನಂತರದ ಕವನಗಳು ಹುಸಿಯಾಗಿಸಿವೆ. ‘ಕಪ್ಪುದೇವತೆ’ಯಲ್ಲಿ ಕಾಣುವ ಮನೋನಿಷ್ಠೆ ಮಾತ್ರ ಆಗಾಧವಾದದ್ದು. ಇಲ್ಲಿ ಕವಿ ಸೃಷ್ಟಿಸುವ ವಾತಾವರಣ ಮತ್ತು ಆ ಆವರಣವನ್ನೇ ಪ್ರತಿಮೆಯನ್ನಾಗಿಸುವ ಕಲೆ ಓದುಗನನ್ನು ವರಿಕನನ್ನಾಗಿಸುತ್ತದೆ. ಮತ್ತೆ ಇಲ್ಲಿ ಕೂಡ-ಆಲನಹಳ್ಳಿಯ ‘ಕಾಡುಗಿಡದ ಹಾಡು-ಪಾಡು’ ಕವಿತೆಯಲ್ಲಿಯಂತೆ ತನ್ನ ವರ್ತಮಾನ ಸ್ಥಿತಿಯ ವಿಶ್ಲೇಷಣೆ ಕವನದ ಹಂದರದಲ್ಲಿ ನಡೆದಾಗ ಮಾತ್ರ ಉತ್ತಮ ಕಾವ್ಯ ರಚನೆ ಸಾಧ್ಯ ಎಂಬುದು ಗೊತ್ತಾಗುತ್ತದೆ. ಇಲ್ಲಿ ಬರುವ ಅಜ್ಞ ಪರದೆಯ ಹಿಂದಿನ ನೆರಳಿನಂತೆ ಬಂದು ಉರುಳಿ ಹೋಗುತ್ತಾನೆ. ಅದನ್ನು ಚಿತ್ರಿಸುವಲ್ಲಿ ಇರುವ ಭಾಷೆಯ ಉಪಯೋಗದ ಹಿಂದಿರುವ ಸಂಯಮ ಹಾಗೂ ಹಿಡಿತ, ಅಂತರಂಗಕ್ಕೆ ಇದೆಲ್ಲ ಪ್ರತಿಮೆಯಾಗುವ ಕ್ರಿಯೆ ಇವೆಲ್ಲ ಸುವಂತೀಂದ್ರರ ಕಾವ್ಯಶಕ್ತಿಗೆ ಸಾಕ್ಷಿಗಳಾಗಿವೆ. ಆದರೆ ಈ ದುರ್ಗಮ ದಾರಿಯಲ್ಲಿ ಈ ಕವಿ ಮತ್ತೆ ಹೋಗದಿರುವುದು ಆಶ್ಚರ್ಯವನ್ನುಂಟುಮಾಡುತ್ತದೆ.
ನಮ್ಮ ಪ್ರಧಾನ ಕಾವ್ಯದ ಲಕ್ಷಣಗಳು ವಿಮರ್ಶೆಯ ಮೂಲಕ ವ್ಯವಸ್ಥಿತವಾಗಿಯಲ್ಲದಿದ್ದರೂ ಅಲ್ಲಲ್ಲಿ ಮೂಡಿಬಂದಾಗ ಆ ಲಕ್ಷಣಗಳ ಚೌಕಟ್ಟಿನ ಮೇಲೆ ಕಾವ್ಯವನ್ನು ನಿಲ್ಲಿಸುವ ಪ್ರಯತ್ನ ಕೆಲ ಕವಿಗಳಲ್ಲಿ ನಡೆಯಿತು. ಇದು ಅನುಕರಣೆಯಲ್ಲ ; ಆದರೆ ತಮ್ಮ ಕಾವ್ಯಪ್ರತಿಭೆಯನ್ನು ಗುರುತಿಸಿಕೊಳ್ಳದೆ ಮಾಡಿದ ಅವಸರದ ಪ್ರಯತ್ನಗಳಾದವು. ಇಂಥ ಕಾವ್ಯ ರಚಿಸಿಯೂ ಅಲ್ಲಲ್ಲಿ ಒಂದೊಂದು ಚೆನ್ನಾದ ಕವನವನ್ನು ಬರೆದ ಸಾಕಷ್ಟು ಕವಿಗಳು ಹುಟ್ಟಿದರು. ಇತ್ತೀಚೆಗೆ ಬಂದ ಲಕ್ಷ್ಮೀನಾರಾಯಣ ಭಟ್ಟರ ‘ಅವತಾರ’, ರಾಮದಾಸರ ‘ಭಸ್ಮಾಸುರ’, ದೊಡ್ಡ ರಂಗೇಗೌಡರ ‘ಕೇಳಿಸುತ್ತಿದೆ ಗೋಳು’, ಕ. ವೆಂ. ರಾಜಗೋಪಾಲರ “ನನ್ನ ಮಗನಿಗೆ ಮೊದಲ ಹಾಡು’, ಲಕ್ಷ್ಮಣರಾವ ಅವರ “ಟುವಾಟರ್, ಎಸ್. ಎಸ್. ಪರಮೇಶರ ‘ಬೆಂಗಳೂರಿನ ಮಹಿಮೆ’, ಗಿರಡ್ಡಿ ಗೋವಿಂದ ರಾಜರ ‘ಮರ್ಲಿನ್ ಮನ್ರೊ’, ಸಿದ್ಧಲಿಂಗ ಪಟ್ಟಣಶೆಟ್ಟಿಯವರ ‘ಔರಂಗ ಜೇಬ’ ಚೆನ್ನಣ್ಣ ವಾಲೀಕಾರರ “ಕರಿತೆಲಿ ಮಾನವ’, ಸಿಂಹ ಕೊಳ್ಳೇಗಾಲರ ‘ಕಿಸ್ಮಿ, ಸುಬ್ರಾಯಚೊಕ್ಕಾಡಿಯವರ “ಬದುಕಿಗಂಟಿದ ಹಾಡು’ ಮುಂತಾದವು ಇಂಥ ಚೆನ್ನಾದ ಪದ್ಯಗಳು. ಈ ಕವಿಗಳ ಸಾಧನೆಯನ್ನು ಗುರುತಿಸುವುದು ಈ ಲೇಖನದ ಮಿತಿಯೊಳಗೆ ಸಾಧ್ಯವಾಗದ ಮಾತು. ಆದರೆ ಒಳ್ಳೆಯ ವಿಶ್ಲೇಷಣೆಯೊಂದು ನಾನು ಹೇಳುವ ಈ ಮಾತನ್ನು ಋಜುವಾತು ಪಡಿಸಬಹುದಲ್ಲದೇ ಈ ಕವಿಗಳ ಶಕ್ತಿಯನ್ನೂ ಗುರುತಿಸಬಹುದು. ಅಲ್ಲದೇ ಈ ಕವಿಗಳಲ್ಲಿ ಬೆಳೆಯುವ ಭರವಸೆಯನ್ನು ತೋರುತ್ತಿರುವ ರಾಮದಾಸ್, ದೊಡ್ಡರಂಗೇಗೌಡ, ವಾಲೀಕಾರರ ಬಗ್ಗೆ ವಿಮರ್ಶಕ ಈಗ ಏನು ಹೇಳಿದರೂ ಅವಸರದ ಮಾತಾಗುತ್ತದೆ.
ಇಷ್ಟಾಗಿಯೂ ನಮ್ಮ ಪ್ರಧಾನಕಾವ್ಯದ ಶಕ್ತಿಯ ಅರಿವಿನೊಂದಿಗೇ ತಮ್ಮ ಕಾವ್ಯವನ್ನು ಬೇರೆ ದಿಶೆಗೆ ತಿರುಗಿಸುವ ಪ್ರಯತ್ನ ಮಾಡುತ್ತಿರುವ ತರುಣ ಕವಿಗಳಲ್ಲಿ ಇಬ್ಬರು ಮುಖ್ಯರಾಗಿ ಕಾಣುತ್ತಾರೆ : ಜಯಂತ ಕಾಯ್ಕಿಣಿ, ಹಾ. ಮು. ಪಟೇಲ ಇಬ್ಬರೂ ತಮ್ಮ ಕವನ ಸಂಗ್ರಹಗಳನ್ನು ಪ್ರಕಟಿಸಿದ್ದಾರೆ. ಜಯಂತ ಕಾಯ್ಕಿಣಿಯವರ “ಬಟ್ಟ ಬಯಲು’ ಕವನದಲ್ಲಿ ಪ್ರತಿಮೆಗಳು ಜೀವನದಲ್ಲಿ ಫಲಿಸುವ ಕ್ರಮ ಇನ್ನೂ ಅವಗತವಾಗಿಲ್ಲವೆಂಬುದನ್ನು ತೋರಿಸಿದರೂ, ಆ ದಿಶೆಯಲ್ಲಿಯ ಪ್ರಾಮಾಣಿಕ ಪ್ರಯತ್ನ ಇವರ ಕಾವ್ಯದ ಬಗ್ಗೆ ಕುತೂಹಲವನ್ನು ಹುಟ್ಟಿಸುತ್ತದೆ.
ನನ್ನ ಸಂಬಂಧಿಗಳು ಅಪ್ಪನದೋ ಅಮ್ಮನದೋ ಕಡೆಯಿಂದ ಬಂದು
ತಾವೇ ಬಯಲುದ್ದಕ್ಕೂ ಬೆಳೆದೂ ಬೆಳೆದೂ
ಧುತ್ತೆಂದು ಬೆತ್ತಲಾಗಿ ಬಿದ್ದಿದ್ದಾರೆ ಈಗಲೂ
ಎನ್ನುವಲ್ಲಿಯ ಭಾಷೆಯ ಮೇಲಿನ ಹಿಡಿತ ಹಾಗೂ ಭಾವಕ್ಕೆ ತಕ್ಕಂತೆ ಭಾಷೆಯಲ್ಲಾಗುವ ಬದಲಾವಣೆ ಈ ಕವಿಯ ಕಾವ್ಯ ಮತ್ತೆ ಪ್ರತಿಮಾವಿಧಾನದ ಬೇರುಗಳತ್ತ ತಿರುಗುತ್ತಲೇ ಗಟ್ಟಿಗೊಳ್ಳಬೇಕೆಂಬುದನ್ನು ತೋರಿಸುತ್ತದೆ. ಹಾ. ಮು. ಪಟೇಲರ ‘ಶೂದ್ರ’ ಹಲವು ಲಘು ಹಾಗೂ ಗಂಭೀರ ಕವನಗಳ ಸಂಕಲನ. ಇದರಲ್ಲಿಯ ‘ನುಗ್ಗೇಗಿಡದ ದುರಂತ ಕತೆ’ಯಲ್ಲಿಯ ದ್ವಂದ್ವರಹಿತ ಭಾಷೆ ಹಾಗೂ ವಿಷಣ್ಣತೆ-ನಮ್ಮ ಕಾವ್ಯ ಬೇರೆಡೆಗೆ ಕುಡಿಯೊಡೆದೀತೆ ಎನ್ನುವ ಪ್ರಶ್ನೆಯ ಬಗ್ಗೆ ಉತ್ಸುಕರಾಗಿ ಚಿಂತಿಸುವಂತೆ
ಮಾಡುತ್ತವೆ.
ಕನ್ನಡದ ಇತ್ತೀಚಿನ ಕಾವ್ಯದ ಅವಲೋಕನ ಒಂದು ಸಂಗತಿಯನ್ನು ಸ್ಪಷ್ಟವಾಗಿ ನಿದರ್ಶನಕ್ಕೆ ತಂದಿದೆ. ನಮ್ಮ ಕಾವ್ಯ ಪ್ರತಿಮಾವಿಧಾನದ ಶ್ರೇಷ್ಠತೆ ಹಾಗೂ ಉದ್ದೇಶರಹಿತ ನಿರೂಪಣೆಯ ಮಧ್ಯೆ ತೂಗುತ್ತಿದೆ. ಪ್ರತಿಮಾವಿಧಾನ ಕೂಡ ಒಂದು ಬಗೆಯ ಯೋಚನಾಕ್ರಮವಿದ್ದುದಾದರೆ ಉದ್ದೇಶರಹಿತ ನಿರೂಪಣೆ ಸೋದ್ದಿಶ್ಯ ಕಾವ್ಯವಾಗಬೇಕಾದರೆ, ನಮ್ಮ ಯೋಚನಾಕ್ರಮದಲ್ಲಿಯ ಪಲ್ಲಟ ಈಗ ತೀರಾ ಅವಶ್ಯಕವಾಗಿದೆ. ಕಂಬಾರ ಹಾಗೂ ರಾಮಾನುಜನ್ ಅವರು ಈ ದಿಶೆಯಲ್ಲಿ ತಮ್ಮ ನೆಲವನ್ನು ಗಟ್ಟಿಗಳಿಸಿಕೊಂಡಂತೆ ಇತರ ತರುಣ ಕವಿಗಳು ಎಷ್ಟನ್ನು, ಏನನ್ನು ಮತ್ತು ಮುಖ್ಯವಾಗಿ ಅನುಕರಣೆಯನ್ನು ಬಿಟ್ಟು ಸಾಧಿಸುತ್ತಾರೆ ಎನ್ನುವುದರ ಮೇಲೆ ನಮ್ಮ ಮುಂದಿನ ಪ್ರಧಾನ ಕಾವ್ಯದ ಲಕ್ಷಣಗಳು ಅವಲಂಬಿಸಿವೆ.
ಗೊಲ್ಗೊಥಾ ಮತ್ತು ವೈಶಾಖಿ-ಒಂದು ವಿಮರ್ಶೆ
ಗೊಲ್ಗೊಥಾ ಮತ್ತು ವೈಶಾಖಿ-ಒಂದು ವಿಮರ್ಶೆ
-ಯು ಎಸ್ ಶ್ರೀಧರ ಆರಾಧ್ಯ
ಕನ್ನಡದ ಒಂದು ಸಂಕ್ರಮಣ ಕಾಲದಲ್ಲಿ ಬದುಕಿದ್ದ ಪಂಡಿತ ಗೋವಿಂದ ಪೈಗಳು ಪಾಂಡಿತ್ಯಪ್ರಿಯರಾದಷ್ಟೇ ಕವಿಗಳಾಗಲೂ ಬಯಸಿದವರು. ಆದ್ದರಿಂದಲೇ ಅವರು ಕಾವ್ಯದಲ್ಲಿ ಭಾವುಕತೆಯ ಸುತ್ತ ಪಾಂಡಿತ್ಯದ ಕವಚದಿಂದ ಅಲಂಕರಿಸಲೆತ್ನಿಸುತ್ತಾರೆ. ಪಾಂಡಿತ್ಯದಲ್ಲಿ ಅವರ ನಿಷ್ಠುರತೆ, ನಿಷ್ಕೃಷ್ಟತೆ ಎಷ್ಟೋ ಅಷ್ಟೇ ಅವರ ಕಾವ್ಯದ ಮುಖ್ಯ ಧೋರಣೆಯಾದ ಆರಾಧನಾ ಭಾವದಲ್ಲಿ ತಲ್ಲೀನರಾಗುತ್ತಾರೆ. ಆದರೆ ಇದೇ ಅವರ ಕಾವ್ಯದಲ್ಲಿ ಅನುಭವ ವಾಹಕತೆಗೆ ಅಡ್ಡಿಯನ್ನುಂಟು ಮಾಡುತ್ತದೆ. ‘ಗೊಲ್ಗೊಥಾ ಮತ್ತು ವೈಶಾಖಿ’ ಗಳೂ ಕೂಡ ಇಂಥ ಆರಾಧನಾ ಪ್ರವೃತ್ತಿಯಿಂದಲೇ ಹುಟ್ಟಿ ಬಂದದ್ದೆನಿಸುತ್ತದೆ. ಅದೇ ಇಲ್ಲಿ ಕವಿ ಪಾಕ್ಷಿಕವಾಗಲು ಕಾರಣವಾಗಿದೆ. ಈ ಆರಾಧನಾ ಭಾವ ಗೊಲ್ಗೊಥಾವನ್ನು ತನ್ನ ತಮ್ಮಂದಿರ ಮಕ್ಕಳಿಗೆ ಅರ್ಪಿಸಿರುವ ಪದ್ಯದ ಭಾವದಿಂದಲೂ ಗ್ರಹಿಸಬಹುದು.
ಕ್ರಿ. ಪೂ. ೨೦೦೦ ದಷ್ಟು ಹಳೆಯದಾದ ಏಸುಕ್ರಿಸ್ತನ ಜೀವನದ ಅಂತ್ಯ ದಿನವನ್ನು ಕಾವ್ಯವಸ್ತುವನ್ನಾಗಿ ಆಯ್ದುಕೊಳ್ಳಲಾಗಿದೆ. ಒಮ್ಮೊಮ್ಮೆ ಕವಿ ವರ್ತಮಾನದಿಂದ ಈ ಘಟನೆಯನ್ನು ಪರಿಶೀಲಿಸುತ್ತಾರೇನೋ ಎನ್ನುವ ಸಂಶಯ ಬಂದರೂ ಮಾನವೀಯತೆಯ ಸೋಂಕನ್ನು ಕೊಡಲೆತ್ನಿಸುವ ಪ್ರಯತ್ನವನ್ನು ಬಿಟ್ಟರೆ ಅಂಥ ಮಹತ್ವದ ದೃಷ್ಟಿಕೋನವೇನೂ ಕಂಡುಬರುವುದಿಲ್ಲ. ಇವರ ಭಕ್ತಿ ಅಥವಾ ಆರಾಧನಾ ಭಾವವೇ ಅವರ ನಿರ್ಲಿಪ್ತತೆಗೆ ಕುಂದುತಂದ ಅವರ ಒಟ್ಟು ಕಾವ್ಯಧೋರಣೆಯೇ ಈ ರೀತಿಯ ಪರವಹಿಸಿಕೊಂಡದ್ದಾಗಿ ಬಿಡಲು ಕಾರಣವಾಗಿದೆ.
ಕಾವ್ಯ ಉತ್ತಮವಾಗಿಯೇ ಪ್ರಾರಂಭವಾಗುತ್ತದೆ. ದುರ್ದಿನದ ದುರಂತದ ತೀವ್ರತೆಯನ್ನು ಚಿತ್ರಿಸಲು ಪ್ರಕೃತಿಯನ್ನು ಬಳಸಿಕೊಳ್ಳುತ್ತಾರೆ. ಕೋಳಿ ಕೂಗಿದುದು ‘ಯಹ್ಯೂದ್ಯರ ವನಸ್ಸಾಕ್ಷಿ’ಯಂತೆ ತೋರುತ್ತದೆ. ಚಂದ್ರನು ಮುಳುಗುವುದು “ಕಾಯಫನು ನಡೆಸಿದ ಕೆಟ್ಟ ನೀತಿಗೆ ಹೇಸಿ’ ಎಂಬಂತೆ ತೋರುತ್ತದೆ. ತಂಗಾಳಿ ಬೀಸುವುದು ಏಸುವಿನ ಬಲಿಯಿಂದ ‘ಜಗದ ಪಾಪ ಇಂದು ಪರಿಹಾರವಾಗುತ್ತದೆ’ ಎಂಬುದನ್ನು ಸಾರಲೆಂಬಂತೆ ತೋರುತ್ತದೆ. ಮಿತವಾದ ಚೌಕಟ್ಟಿನೊಳಗೆ ಹೇಳಬೇಕಾಗಿರುವ ಅನುಭವದ ತೀವ್ರತೆಯನ್ನು ಮನಗಾಣಿಸಲು ಇದು ಒಳ್ಳೆಯ ತಂತ್ರವಾಗುತ್ತದೆ. ಏಸುವನ್ನು ಪಿಲಾತನೆದುರಿಗೆ ವಿಚಾರಣೆಗೆ ನಿಲ್ಲಿಸಿ ಪಿಲಾತನಿಗೆ ಆಗ ಏಸು ಏನಾಗಿ ಕಾಣುತ್ತಿದ್ದ, ಅವನ ಬಗ್ಗೆ ಏನೆಂದು ಭಾವಿಸಿದ್ದ ಇತ್ಯಾದಿ ವಿವರಗಳನ್ನು ಕವಿ ತಮ್ಮ ಮಾತಿನಲ್ಲಿ ಹೇಳುತ್ತಾ ಹೋಗುವ ವಿವರಣೆ ಇಲ್ಲಿ ಅನಿವಾರ್ಯವಾಗಿ ಕೊಡಲೇಬೇಕಾದ ಅವನ ಬದುಕಿನ ಬೇರೆ ವಿವರಗಳನ್ನು ಕೊಡುವುದಕ್ಕಾಗಿ ತಂತ್ರವಾಗಿ ಬಳಕೆಯಾಗುತ್ತದೆ. ಇಲ್ಲಿ ಅವರು ಪಾಕ್ಷಿಕವಾಗಿ ನಿಂತು ಪಿಲಾತನನ್ನು ತೆಗಳುತ್ತಾ ಹೋಗುತ್ತಾರೆ. ಏಸುವಿನ ಪರವಾಗಿ ಬರುವ ಉದ್ಗಾರಯುಕ್ತ ವಿಶೇಷಣಗಳು, ಹೊಗಳಿಕೆಗಳು ಕವಿಯ ವಿವರಣೆಯಾಗುತ್ತದೆಯೇ ಹೊರತು ಅದು ಹೇಗೆ ಏಸುವಿಗೆ ಅನ್ವಯವಾಗುತ್ತದೆ ಎನ್ನುವುದನ್ನು ಕಾವ್ಯದಲ್ಲಿ ಸಾಧಿಸಿ ತೋರಿಸದೆ ಓದುಗನನ್ನು ಅನಾಥಸ್ಥಿತಿಯಲ್ಲಿ ನಿಲ್ಲಿಸುತ್ತದೆ. ಏಸುವಿನ ಈ ಹಿರಿಮೆ ಮಹಿಮೆಗಳನ್ನೆಲ್ಲ ಸಾಧಿಸಿ ತೋರಿಸಲು ಸಾಧ್ಯವಿಲ್ಲದಷ್ಟು ಮಿತಿಯಲ್ಲಿದೆ ಈ ಕವನ. ಆಂತರಿಕ ಸಮರ್ಥನೆ ಇಲ್ಲದುದರಿಂದ ಇವೆಲ್ಲ ಬಾಹ್ಯ ಸಮರ್ಥನೆಯಿಂದ ಪುಷ್ಟಿಯನ್ನು ಬಯಸುತ್ತವೆ.
ಏಸುವಿನ ಸಾವಿನ ಸಂದರ್ಭವನ್ನು ಚಿತ್ರಿಸ ಹೊರಟರೂ ಆ ಸಾವಿಗೆ (ಆ ಜನ ಕಂಡುಕೊಳ್ಳುವ) ಸಮರ್ಥ ಕಾರಣವಿಲ್ಲದೆ ಅದಕ್ಕೆ ಕಾರಣವಾದ ಅವಿವೇಕ, ಅನ್ಯಾಯ, ಪಾಪ ಕಾರ್ಯ ಮತ್ತು ಅದರಿಂದಾಗುವ ನೈತಿಕ ಮತ್ತು ಮೌಲಿಕ ಅನಾಹುತ ಯಾವುದು ಎಂಬುದು ಎಷ್ಟು ಪ್ರಖರವಾಗಿ ತೋರಬೇಕೋ ಅದಕ್ಕೆ ತಕ್ಕಷ್ಟು ಹಿನ್ನೆಲೆಯ ವ್ಯಕ್ತಿತ್ವ ಇಲ್ಲಿ ರೂಪುಗೊಳ್ಳದಿರುವುದರಿಂದ ಕಾವ್ಯ ತನ್ನ ಚೌಕಟ್ಟಿನಲ್ಲಿಯೇ ಸೋಲನ್ನು ಅನುಭವಿಸುತ್ತದೆ. ಕವನದ ಮುಖ್ಯ ಧೋರಣೆ, ಏಸುವಿನ ದೇವತನವನ್ನು ಒಪ್ಪಿಕೊಂಡು ಅದಕ್ಕಾಗಿ ಆರಾಧಿಸುವ, ಮೆಚ್ಚುವ ರೀತಿಯದಾಗಿದೆ. ಅವನನ್ನು ಹಾಗೆ ಏಕೆ ಗೌರವಿಸಬೇಕೆಂಬುದರ ಪರೀಕ್ಷೆ ಇಲ್ಲಿಯದಲ್ಲ. ಆದ್ದರಿಂದ ಅವನ ಸಾವಿನಲ್ಲಿರುವ ಮಾನವೀಯ ದುರಂತಗಳಿಗಾಗಿ ಮೆಚ್ಚುವುದಕ್ಕಿಂತ ಅವನಲ್ಲಿರುವ ತಾವು ಹೇಳುವ ದೇವತ್ವಕ್ಕಾಗಿ ಕಾವ್ಯವನ್ನು ಮೆಚ್ಚಬೇಕೆಂಬ ಧೋರಣೆಯಿದೆ. ಆದರೆ ಕಾವ್ಯವನ್ನು ಆ ಕಾರಣಕ್ಕಾಗಲ್ಲದೆ ಮಾನವೀಯ ಕಾರಣಗಳಿಗಾಗಿಯೇ ನಮ್ಮನ್ನು ಸೆಳೆಯುವ ಸಾಧ್ಯತೆಯಿರುವುದರಿಂದ ಕಾವ್ಯದಲ್ಲಿ ಮೂಲಭೂತವಾದ ಅಸಂಬದ್ಧತೆ ಉಂಟಾಗಿದೆ. ಅವರ ಧೋರಣೆಗನುಸಾರವಾಗಿಯಾದರೂ ಅವನು ದೇವಸುತನೇ ಹೌದು ಎಂಬ ಖಚಿತ ನಂಬಿಕೆಗೆ ಸಾಕ್ಷಿ ದೊರೆಯುವುದಿಲ್ಲ. ಅವನ ಸಾವಿಗಾಗಿಯೇ ದುರಂತ ಪ್ರತೀಕವಾಗುವ ಪ್ರಕೃತಿ ವರ್ಣನೆ ಅವನ ಅಸಾಮಾನ್ಯತೆಯನ್ನು ಸಂಶಯಪಡಲು ಕಾರಣವಾಗುತ್ತದೆಯೇ ಹೊರತು-ಅಂದರೆ ಹೀಗೆಲ್ಲ ಆಗುವುದರಿಂದ ಇವನು ದೇವಸುತನೇ ಇರಬೇಕು ಎಂದು ಊಹಿಸಲು ಸಾಧ್ಯವೇ ಹೊರತು–ಸಾಧಿಸಿ ತೋರಿಸುವುದಿಲ್ಲ. (ಇದನ್ನು ಸಾಧ್ಯ ಮಾಡಬಹುದಾದ ಅವನ ಪವಾಡ’ ಇತ್ಯಾದಿಗಳು ಮುನ್ನುಡಿಯಲ್ಲಿವೆ).
ಲೌಕಿಕವಾಗಿ ಪಿಲಾತ ಏಸುವನ್ನು ಕಂಡು ಏನನ್ನು ಭಾವಿಸುತ್ತಾನೋ ಅದಕ್ಕೆ ಏಸುವಿನ ವ್ಯಕ್ತಿತ್ವ ತದ್ವಿರುದ್ಧವಾದ ಅಲೌಕಿಕಮೂಲ ಚೋದಿತವಾದದ್ದು. ಇವನದು ಸ್ವಾರ್ಥ ಮೂಲವಾದ ಆಲೋಚನೆಯಾದರೆ ಏಸುವಿನದು ಕಲ್ಯಾಣಕಾರಕ ಧೋರಣೆ-ಎನ್ನುವುದರಲ್ಲಿ ಇಬ್ಬರಿಗೂ ಇರುವ ಅಂತರ ಮತ್ತು ಅವರಿಬ್ಬರ ಯೋಗ್ಯತೆಯನ್ನು ಸೂಚಿಸಿ, ಇಂಥ ಏಸುವನ್ನು ವಿಚಾರಣೆ ನಡೆಸಲು ಅಂಥ ಅಯೋಗ್ಯನಿಗೆ ನೈತಿಕ ಅಧಿಕಾರವಿಲ್ಲವೆಂಬುದನ್ನೂ ಪರೋಕ್ಷವಾಗಿ ಸೂಚಿಸಿ, ಆದರೂ ಅವನೇ ಮುಂದೆ ಅವನ ಸಾವನ್ನು ನಿರ್ಧರಿಸುತ್ತಾನೆ ಎಂಬುದರಲ್ಲಿರುವ-ಅಸಂಗತವನ್ನೂ, ಈ ಮೂಲಕ ಆಗುತ್ತಿರುವ ಅನ್ಯಾಯವನ್ನೂ ಸೂಚಿಸಬಹುದಾದರೂ, ಎರಡು ರೀತಿಯಿಂದಲೂ ಇದು ಸಾಧ್ಯವಾಗದೇ ಹೋಗುತ್ತದೆ. ಒಂದು ; ಏಸುವಿನ ಅಂಥ ವ್ಯಕ್ತಿತ್ವದ ಸಾಬೀತು ಇಲ್ಲಾಗದಿರುವುದು. ಮತ್ತೊಂದು: ಪಿಲಾತ ಅವರೇ ಹೇಳುವಷ್ಟು ದುಷ್ಟನಾಗಿರದಿರುವುದು. ಪಿಲಾತನ ಪಾತ್ರ ಈ ಮಿತಿಯಲ್ಲಿ ಇರುವ ರೀತಿಯಲ್ಲೇ ಬಹುವ೦ಟ್ಟಿಗೆ ಮೈದುಂಬಿಕೊಂಡು ಸಹ್ಯ ಎನಿಸಿದರೂ, ಏಸುವಿನ ಬಗೆಗಿನ ಮಾತುಗಳೆಲ್ಲ ಕೇವಲ ಸ್ತುತಿಪರ ಘೋಷಣೆಗೆ ವ್ಯಾಖ್ಯಾನಗಳಾಗಿಯೇ ನಿಲ್ಲುತ್ತವೆ. ಇದಕ್ಕೆ ಉತ್ತರವೆಂಬಂತೆ ಕವಿಗಳು ಏಸುವಿನ ಮಹತ್ಕಾರ್ಯ, ಪವಾಡ ಇತ್ಯಾದಿಗಳನ್ನು ಮುನ್ನುಡಿಯಲ್ಲಿ ನಿರೂಪಿಸಿದ್ದಾರೆ. ಆದರೆ ಅದನ್ನು ಕಾವ್ಯದ ಅಂಗವೆಂದು ಪರಿಗಣಿಸಲು ಸಾಧ್ಯವೇ ಎಂಬುದು ಪ್ರಶ್ನೆ. ಏಕೆಂದರೆ ಹಿನ್ನೆಲೆಯನ್ನು ನಿರೂಪಿಸುವುದಕ್ಕೂ ಅದನ್ನು ಕಾವ್ಯದಲ್ಲಿ ಜೀವಂತವಾಗಿಸುವುದಕ್ಕೂ ವ್ಯತ್ಯಾಸವಿದೆ.
ಕೊನೆಗೂ ಏಸುಕ್ರಿಸ್ತನ ಪಾತ್ರವನ್ನು ಕ್ರಿಯಾತ್ಮಕವಾಗಿಸುವ ಮೂಲಕ ಅರ್ಥೈಸುವ ಪ್ರಯತ್ನ ಇಲ್ಲಿ ಫಲಿಸುವುದಿಲ್ಲ. ಈ ದೃಷ್ಟಿಯಿಂದಲೇ ಕೊನೆಯ ದಿನಕ್ಕಷ್ಟೇ ತನ್ನನ್ನು ತಾನು ಮಿತಗೊಳಿಸಿಕೊಂಡಿರುವುದೂ ಅದರ ಕಾವ್ಯತನದ ಪೂರ್ಣತ್ವಕ್ಕೆ ಹಾಕಿಕೊಂಡ ಮಿತಿಯೂ ಆಗುತ್ತದೆ. ಹೀಗೆ ಮೇಲ್ಮೈ ದೃಷ್ಟಿಯಿಂದಲೇ ಉತ್ತಮ ಕಾವ್ಯವೆನಿಸಿದರೂ ಆಂತರಿಕವಾಗಿ ತನ್ನದೇ ಆದ ಮಿತಿಯಿಂದ ನರಳುತ್ತಿದೆ ಎನ್ನಿಸುತ್ತದೆ. ಮುನ್ನುಡಿಯನ್ನೂ ಓದಿ, ಏಸುವಿನ ಬಗ್ಗೆ ತಿಳಿದುಕೊಳ್ಳುವುದನ್ನೆಲ್ಲಾ ತಿಳಿದು ಅನಂತರ ಕಾವ್ಯ ಓದಿದಾಗ (ಅನಿವಾರ್ಯವಾಗಿ ಇಷ್ಟನ್ನೂ ಪೂರೈಸಿಕೊಂಡೇ ಈ ಕಾವ್ಯವನ್ನು ಪ್ರವೇಶಿಸಬೇಕಾಗಿದೆ.) ಬರುವ ಒಟ್ಟು ಅನುಭವದಲ್ಲಿ ಕಾವ್ಯ ಒದಗಿಸಿಕೊಡುವ ಅನುಭವಕ್ಕಿಂತ ನಾವು ಹೊರಗಡೆಯಿಂದ ಪರಿಭಾವಿಸಿಕೊಳ್ಳುವ ಅನುಭವವೇ ಜಾಸ್ತಿಯಾಗಿ ಅದೇ ಇದಕ್ಕೆ ಊರಗೋಲಾಗುತ್ತದೆ ಎಂಬುದೇ ಈ ಕೃತಿಯ ಆಂತರಿಕ ಸೋಲಿಗೆ ಒಂದು ಪ್ರಮುಖ ಕಾರಣವಾಗುತ್ತದೆ. ಇದನ್ನು ಇನ್ನೊಂದು ರೀತಿಯಿಂದ ಸಮರ್ಥಿಸಿಕೊಳ್ಳುವುದಾದರೆ ; ರಾಮಾಯಣ, ಭಾರತದಂಥ ಮಹಾಕಾವ್ಯಗಳನ್ನು ಅಲ್ಲಿಯೇ ಪರಿಚಯ ಮಾಡಿಕೊಳ್ಳುವಷ್ಟು ಅಪರಿಚಿತರಾಗಿ ಪ್ರವೇಶಿಸಿದರೂ ಅದರ ಅಪಾರ ಕಾವ್ಯತನವನ್ನು ಅವು ಸಾಧಿಸಿ ತೋರಿಸಿಕೊಡುತ್ತವೆ. ಆದರೆ ಇಂಥ ಕಾವ್ಯಗಳಲ್ಲಿನ ಕಾವ್ಯದ ಮುಖ್ಯ ಹರಿವಿನೊಂದಿಗೆ ಜೀವಂತ ಮತ್ತು ಅನಿವಾರ್ಯ ಸಂಬಂಧವಿಟ್ಟುಕೊಂಡಿರುವ ಪಾತ್ರಗಳನ್ನು ಬೇರೆಯಾಗಿ ಹೆಕ್ಕಿಕೊಂಡು ಕಾವ್ಯ ಬರೆಯಹೋದರೆ ಅದರ ಹಿನ್ನೆಲೆ ಬೇಕೇಬೇಕಾಗುತ್ತದೆ. ಕವಿ ಅಂಥ ಒಂದು ಮಹಾಕಾವ್ಯದಿಂದ ಯಾವ ಪಾತ್ರವನ್ನಾಯ್ದುಕೊಂಡಿರುತ್ತಾನೋ ಅದನ್ನು ಅಲ್ಲಿಗಿಂತ ವಿಕಸಿತಗೊಳಿಸಲು ಬೇಕಾದ ಚೌಕಟ್ಟೊಂದನ್ನು ರೂಪಿಸಿಕೊಂಡಾಗ ಅಲ್ಲಿ ಇಂಥ ಮಾನದಂಡದ ಆವಶ್ಯಕತೆಯೇ ಇರುವುದಿಲ್ಲ. ಕಾರಣ ತಾನು ಯಾವ ಪಾತ್ರಕ್ಕಾಗಿ ಚೌಕಟ್ಟನ್ನು ನಿರ್ಮಿಸಿಕೊಂಡಿದೆಯೋ ಅದೇ ಪರಿಧಿಯಲ್ಲಿ ವಿಮರ್ಶೆಗೆ ಅವಕಾಶವೀಯುತ್ತದೆ. (ಉದಾ : ಅಹಲ್ಯೆ) ಆ ಪಾತ್ರ ಪ್ರಧಾನ ಪಾತ್ರವೇ ಆದರೆ ಅದಕ್ಕೆ ಮಿತಿ ಹೇರುವುದು ಅಸಂಗತವಾಗುತ್ತದೆ. ಇಲ್ಲಿ ನಡೆದಿರುವುದೂ ಅಂಥ ಕಾರ್ಯವೇ. ಆದರೆ ಇಂಥದನ್ನು ವಸ್ತುವನ್ನಾಗಿ ಆಯ್ದುಕೊಂಡಾಗ ರನ್ನನಂತೆ ತನ್ನ ಚೌಕಟ್ಟಿನಲ್ಲೇ ಯಶ ಸಾಧಿಸಬಲ್ಲಂಥ ತಂತ್ರವೊಂದನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಅವನು ಸಿಂಹಾವಲೋಕನದಂಥ ತಂತ್ರವೊಂದನ್ನು ಕಂಡುಕೊಂಡು ಅದನ್ನು ಜೀವಂತವಾಗಿ ಬಳಸಿಕೊಂಡ, (ಅವನ ಕಾವ್ಯದ ಸೋಲಿಗೆ ಬೇರೆಯೇ ಆದ ಕಾರಣಗಳಿರಬಹುದು. ಅದು ಇಲ್ಲಿ ಅಪ್ರಕೃತ) ಮತ್ತು ದುಡಿಸಿಕೊಂಡ ಉತ್ತಮ ಕವಿ. ವ್ಯಾಪ್ತವಸ್ತುವೊಂದಕ್ಕೆ ಮಿತಿ ಹೇರಿಕೊಂಡಾಗ ಇಂಥ ಏನಾದರೊಂದನ್ನು ಪರಿಹಾರವಾಗಿ ಕಂಡುಕೊಳ್ಳಬೇಕಾಗುತ್ತದೆ. ಇಲ್ಲಿ ರನ್ನನ ಕಾವ್ಯದ ಸಿಂಹಾವಲೋಕನಕ್ಕೂ ‘ಗೊಲ್ಗೊಥಾ’ಕ್ಕೆ ಮಾಡಿರುವ ಆರೋಪವೇ ಅನ್ವಯಿಸಬಹುದಲ್ಲವೇ ಎಂಬ ಪ್ರಶ್ನೆಯೂ ಉದ್ಭವಿಸಬಹುದು. ಆದರೆ `ರನ್ನ’ನಿಗೆ ಇರುವ, ‘ಪೈ’ ಅವರಿಗೆ ಇಲ್ಲದಿರುವ ಒಂದು ಅನುಕೂಲವೆಂದರೆ ‘ತಾನು ಕಾವ್ಯ ರಚಿಸುತ್ತಿರುವ ಭಾಷೆಗೆ ನೇರ ಸಂಬಂಧವಿರುವಂತಹ ಮಹಾಕಾವ್ಯವೊಂದು ಆಗಲೇ ಅಸ್ತಿತ್ವದಲ್ಲಿದ್ದು ಅದು ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿರುವುದು’. ಕನ್ನಡದ ಸಂದರ್ಭದಲ್ಲಿ ಪೈ ಅವರ ಕೃತಿ ತನ್ನ ಚೌಕಟ್ಟಿನಿಂದಾಗಿಯೇ ಸೋಲುವುದು ಈ ಕಾರಣಕ್ಕಾಗಿ.
ಮೇಲೆ ವ್ಯಕ್ತಪಡಿಸಿದ ತೊಂದರೆಯನ್ನು ಓದುಗ ಅನುಭವಿಸುತ್ತಿರುವಾಗ ಸಮಾಧಾನ ರೂಪವಾಗಿ ಅದನ್ನು ತುಂಬಿಕೊಡಲು ಯತ್ನಿಸುವಂತೆ ತೋರುವ ೨೬ ನೇ ಪಂಕ್ತಿಯಿಂದ ೯೫ ನೇ ಪಂಕ್ತಿಯವರೆಗಿನ ಏಸುವಿನ ವ್ಯಕ್ತಿತ್ವದ ವ್ಯಾಖ್ಯಾನವೂ ತಂತ್ರವಾಗಿ ಫಲಿಸದೆ ಕವಿಯ ನಿರಪೇಕ್ಷತೆಗೆ ಧಕ್ಕೆಯೊದಗುವಂತೆ ಮಾಡಿದೆ ಮತ್ತು ಕವಿಯ ಆರಾಧನಾ ಪ್ರವೃತ್ತಿಯನ್ನು ವ್ಯಕ್ತಪಡಿಸಲು ಒಂದು ಅವಕಾಶವನ್ನು ಕಲ್ಪಿಸಿಕೊಟ್ಟಿದೆ.
ಈ ಕಾವ್ಯದ ಸೋಲಿಗೆ ಕಾರಣವಾದ ಮತ್ತೊಂದು ಪ್ರಮುಖ ಅಂಶ ಇಲ್ಲಿನ ಉಪಮೆಗಳ ಮೂಲಕ ನಡೆಯುವ ವಿವರಣೆಯಲ್ಲಿರುವ ಅನಿಶ್ಚಿತತೆ (inconsistency). ಇದಕ್ಕೆ
ಒಂದೆರಡು ಉದಾಹರಣೆಗಳನ್ನು ಕೊಟ್ಟು ಸಮರ್ಥಿಸಬಹುದು.
ಮೊದಲನೆಯದಾಗಿ ಇಡೀ ಕಾವ್ಯ ಹುಟ್ಟಿಸುವ ಅನುಭವದ ತೀವ್ರತೆಯನ್ನೇ ಪ್ರಶ್ನಿಸುವಂಥ ಏಸುವಿನ ಸಾವಿಗೆ ಕೊಡುವ
“ಜಗದ ಪಾಪದ ಸಾಲ ಎಂದು ಹರಿದಪುದೆಂದು
ಸಾರೆ ತಂಗಾಳಿ ಸುತ್ತಲು ತೀಡೆ……”
ಎಂಬ ಸಾಂಪ್ರದಾಯಿಕ ವಿವರಣೆಯೊಂದನ್ನು ಒಪ್ಪಿಕೊಂಡಿರುವುದು. ಇದು ಆ ಧರ್ಮದವರಿಗೆ ಒಪ್ಪಿಗೆಯಾದ ನಂಬುಗೆಯಿರಬಹುದು. ಮೊದಲು ‘Adam ಮತ್ತು Eve’ ಮಾಡಿದ ಪಾಪದ ಪರಿಹಾರಕ್ಕೆ ಪುಣ್ಯದ ಬಲಿಯನ್ನು ಕೊಡಬೇಕೆಂಬ ಅನಿವಾರ್ಯತೆ ಆ ಪಾಪದ ಫಲವಾಗಿ ಬಂದ ಮೌಢ್ಯದ್ದು. ಆ ಸಾಲ ಏಸುವಿನಂಥ ಪುಣ್ಯನೊಬ್ಬನನ್ನು ಬಲಿಯಾಗಿಸದೆ ಹರಿಯುವಂತಿರಲಿಲ್ಲ. ಆದ್ದರಿಂದ ಅವನ ಬಲಿ ನಡೆಯಿತು. ಅನಂತರ ಅವರಿಗೆ ಈ ‘ಬಲಿಯ’ ಪ್ರಜ್ಞೆ ಬಂದು ಅದರ ಅನಿವಾರ್ಯತೆಯನ್ನು ಕಲ್ಪಿಸಿಕೊಂಡು ತಟಸ್ಥರಾಗಿ ಅವನನ್ನು ಗೌರವಿಸುತ್ತಾರೆ. (ಈ ಕಾರಣಕ್ಕಾಗಿಯೇ ಏಸು ಅವರಿಗೆ ಪೂಜನೀಯನಾಗುತ್ತಾನೆ). ಆ ಮೂಲಕ ಏಸುವಿನ ಸಾವಿಗೆ ಇಲ್ಲಿ ಮರುಗಬೇಕಾದಷ್ಟು ಮರುಗುವ ಆವಶ್ಯಕತೆಯೂ ಅವರಿಗೆ ಉಳಿದಿಲ್ಲವೆಂಬುದೂ ಸೂಚಿತವಾಗುತ್ತದೆ. ಆದರೆ ಕಾವ್ಯದಲ್ಲಿ ಇದರ ಒಪ್ಪಿಗೆ ಜೀವಂತಿಕೆಯನ್ನುಳಿಸಬಹುದಾದ ಅವನನ್ನು ಬಲಿಯಿತ್ತವರ ಅವಿವೇಕ, ಅನ್ಯಾಯ, ಮೌಢ, ಕ್ರೌರ‍್ಯ, ಜಡತೆ ಇತ್ಯಾದಿಗಳ ಪ್ರಖರತೆಯನ್ನು ಕಡಿಮೆ ಮಾಡಿ ಪೇಲವತೆಯನ್ನು ತಂದೊಡ್ಡುತ್ತದೆ.
“ನೇಸರಂ ಸೆರೆಬಿಗಿದು ರಾತ್ರಿಗೊ
ಪ್ಪಿಸುವ ಮೋಡದ ಗಡಣದಂತೆ ಕೈಸೆರೆವಿಡಿದ
ಯೇಸುವಂ ಕೈಸರನ ಪ್ರತಿನಿಧಿ ಪಿಲಾತನರ
ಮನೆಗೊಯ್ದು ……..” ಎಂಬ ಮಾತು ಮತ್ತು
“……. ದೇವತನದೀ ಸುಧಾಸಿಂಧು ಯೋರ್ದನಿನಂತೆ
ಸುರಿವುದಕಟಾ ಮೃತ ಸಮುದ್ರದಲಿ ನೋಡ !”
ಎಂಬ ವಿವರಗಳ ಅಸಂಬದ್ಧತೆಯನ್ನು ವಿವೇಚಿಸಬಹುದು.
ಮೇಲುನೋಟಕ್ಕೆ ‘ದೇವತನದೀ ಸುಧಾಸಿಂಧು ಮೃತ ಸಮುದ್ರದಲ್ಲಿ ಬೀಳುತ್ತದೆಂ’ಬ ಹತಾಶೆಯ ವಿಸ್ಮಯಾವಹ ಉದ್ಗಾರ ‘ಸಾಯಲಾರದ್ದು ಸಾವಿನಲ್ಲಿ ಬೀಳುತ್ತಿದೆ, ಅದಕ್ಕೆ ಸಾವಿಲ್ಲ ಮತ್ತು ಆದರೂ ಅದನ್ನು ಸಾಯಿಸಲು ಮುಂದಾಗಿರುವುದರ ಅಸಂಬದ್ಧತೆಯನ್ನು ಅಥವಾ ಅಸಂಗತವನ್ನು ಮತ್ತು ಕೊಲ್ಲುವವರ ಮೌಡ್ಯವನ್ನೂ ಧ್ವನಿಸುತ್ತದೆಂದು ಹೇಳಬಹುದು. ಇದಕ್ಕೆ ಅಂತ್ಯದಲ್ಲಿ ಏಸುವಿನ ತತ್ವಕೀರ್ತಿ ಬದುಕುತ್ತದೆ ಎಂಬ ಅಂಶವೂ ಗಮನಾರ್ಹ ಪೂರಕಾಂಶವಾಗುತ್ತದೆ. ಅಲ್ಲದೆ ಇದೇ ಭಾವವನ್ನು ‘ನೇಸರು ಬಿಗಿದು ರಾತ್ರಿಗೊಪ್ಪಿಸುವ ಮೋಡದ ಗಡಣದಂತೆ’ ಎಂಬ ವಾಕ್ಯವೂ ಸಮರ್ಥನೆಯನ್ನೊದಗಿಸುತ್ತದೆ. ಏಸುವಿಗೆ ಹೋಲಿಸುವ ಸೂರ್ಯ ಸ್ಥಿರಪ್ರಕಾಶಯುಕ್ತ. ಜನರಿಗೆ ಹೋಲಿಸಿರುವ ಮೋಡ ಅಸ್ಥಿರ ಚಂಚಲ. ಮೋಡ ಮುಸುಕಿದರೂ ಕತ್ತಲೆಯನ್ನು ಅಳಿಸುವಷ್ಟು ಬೆಳಕು ಇದ್ದೇ ಇರುತ್ತದೆ. ಅಲ್ಲದೆ ಆ ಮುಸುಕೂ ತಾತ್ಕಾಲಿಕ. ಸೂರ್ಯ ಪುನಃ ಕಾಣಿಸಿಕೊಳ್ಳುತ್ತಾನೆ. ಹೀಗೆ ಏಸುವಿನ ಶಾಶ್ವತತನವೇ ಖಾತ್ರಿಯಾಗುವ ಅಂಶವಾದಾಗ ಅವನು ಸಾಯುತ್ತಾನೆ ಎಂದು ಹುಯ್ಯಲಿಡುವುದರ ಔಚಿತ್ಯವೇನು ? ಮತ್ತು ಅವನು ಮಾನವನಾಗಿ ಅದು ದುರಂತವೆಂದು ಅದರ ದಾರುಣತೆಯನ್ನು ಗುರುತಿಸಲು ಅವಕಾಶವೆಲ್ಲುಳಿಯಿತು ? ಎಂಬುದು ಪ್ರಶ್ನೆಯಾಗುತ್ತದೆ. ಮೇಲಿನ ಧೋರಣೆಯನ್ನೇ ಒಪ್ಪಿದರೆ ಕಾವ್ಯದುದ್ದಕ್ಕೂ ಪ್ರತ್ಯೇಕವಾಗಿಯಾದರೂ ಅದರ ದಾರುಣತೆಯನ್ನು ಅನುಭವಕ್ಕೆ ತಂದುಕೊಡುವುದರ ಔಚಿತ್ಯವನ್ನು ಪ್ರಶ್ನಿಸಬೇಕಾಗುತ್ತದೆ. ಅಲ್ಲದೆ ‘ಯೋರ್ದನ್’ ನದಿ ಹರಿಯುವಷ್ಟೂ ಹರಿದು ತಾನು ಸೇರಲೇಬೇಕಾದ ಸಮುದ್ರವನ್ನು ಸೇರುವುದರಿಂದ ಅದು ಏಸುವಿನ ಅಕಾಲ ಮರಣವನ್ನು ಧ್ವನಿಸಲು ಸಮಂಜಸವಾದ ಹೋಲಿಕೆಯಾಗುತ್ತದೆಯೇ ಎಂಬುದನ್ನು ಯೋಚಿಸಬೇಕಾಗುತ್ತದೆ. ಇದನ್ನು ಸಮಗ್ರವಾಗಿ ಕಾವ್ಯದ ಸಂದರ್ಭದಲ್ಲಿ ವಿಶ್ಲೇಷಿಸುವುದರಿಂದಲೇ ಇದರ ಯುಕ್ತಾಯುಕ್ತತೆಯನ್ನು ನಿರ್ಧರಿಸಬಹುದು.
ಏಸು ಸತ್ತ ಮೇಲೆ ಪರಮಾತ್ಮನನ್ನು ಸೇರುತ್ತಾನೆ. “ಮಮಾತ್ಮವಂ ನಿನ್ನ ಕೈಗೊಪ್ಪಿಸುವೆ’ ‘ತುದಿ ಬೆಟ್ಟದಿಂ ತಾಯೆಡೆಗೆ ಮರಿಜಿಂಕೆ ಜಿಗಿವಂತೆ” “ಸುಗ್ಗಿಯೆಡೆಗಯ್ಧುವಾ ಬಾನಕ್ಕಿಯಂತೆ” “ದಿನಮುಖದೊಳಿರುಳಿನ ಸೊಡರು ನೇಸರಂಬುಗುವಂತೆ’ ಎಂದು ಮುಂದೆ ವರ್ಣಿಸುವುದಕ್ಕೆ ಇದು ವಿರೋಧವಾಗಿದೆ. ಅಲ್ಲಿನ ಈ ಊರ್ಧ್ವಮುಖತೆ ಪಡೆದುಕೊಳ್ಳಬೇಕಾದ ಅರ್ಥವಂತಿಕೆಯನ್ನು ಇದರಿಂದಾಗಿ ಕಳೆದುಕೊಳ್ಳಬೇಕಾಗುತ್ತದೆ. ಇದರ ಪ್ರಕಾರ ಏಸು ನಿರಂತರ ಸಾವನ್ನು ಅಪ್ಪಲೇಬೇಕಾಗುತ್ತದೆ. ಆದರೆ ಹಿಂದೆ ಉದಾಹರಿಸಿರುವ ಉಪಮೆಗಳ ಪ್ರಕಾರ ಅವನು ಅವಿನಾಶಿ ಮತ್ತು ಪರಮಾತ್ಮನನ್ನು ಸೇರುತ್ತಾನೆ. ಅಲ್ಲದೆ ಅವನ ವ್ಯಕ್ತಿತ್ವಕ್ಕೆ ಭೂಮಿಯಲ್ಲಿ ಸಾವಿಲ್ಲ. ಆದರೆ “ಯೊರ್ದನ್” ನದಿ ಮೃತ ಸಮುದ್ರದಲ್ಲಿ ಧುಮುಕುತ್ತದೆ. ಹೀಗಾಗಿ ಏಸುವಿನ ವ್ಯಕ್ತಿತ್ವವನ್ನನುಸರಿಸಿ ಒಂದು ಕಡೆ ಕೊಡುವ ಉಪಮೆಗೂ ಮತ್ತೊಂದು ಕಡೆ ಕೊಡುವ ಉಪಮೆಗಳಿಗೂ ಸಂಗತವಾಗದೆ ಕಾವ್ಯದಲ್ಲಿಯೇ ಅನಿಶ್ಚಿತತೆ (inconsistency) ಹುದುಗಿದೆ. ಕೇವಲ ಸನ್ನಿವೇಶದಲ್ಲಿ ಏಸುವಿನ ವ್ಯಕ್ತಿತ್ವದಿಂದ ಆಕರ್ಷಿತರಾಗಿ, ಆ ಕ್ಷಣಕ್ಕಾಗಿ, ಆ ಉದ್ಯೋಗದಲ್ಲಿ ಪುಂಖಾನುಪುಂಖವಾಗಿ ಉಪಮೆಗಳ ಮಾಲೆಯನ್ನೇ ಕೊಡುತ್ತಾರಷ್ಟೆ. ಎಚ್ಚರಿಕೆಯಿಂದಿದ್ದರೆ ಪರಿಣಾಮಕತೆಗೆ ಅಪೂರ್ವತೆಯನ್ನು ತಂದುಕೊಡುವ ವೈಶಿಷ್ಟ್ಯವಾಗಬಹುದಾಗಿದ್ದ ಕವಿಯ ಈ ಒಲವು ದೋಷಕ್ಕೆ ಪಕ್ಕಾಗಿದೆ. ಕೇವಲ ಖಯಾಲಿಯಾಗಿದೆ. ಆ ಕ್ಷಣಕ್ಕಾಗಿಯೇ ಆ ಉಪಮೆಗಳ ಅರ್ಥವನ್ನು ಗ್ರಹಿಸಬೇಕೆಂದು ಹೇಳುವುದಾದರೆ ಅಂಥ ಒಂದೊಂದು ಕ್ಷಣಗಳು ಒಂದಕ್ಕಿಂತ ಒಂದು ಭಿನ್ನವಾಗಿ ಅಂಥ ನೂರಾರು ಕ್ಷಣಗಳಿಂದ ಒಟ್ಟು ಅನುಭವವನ್ನು ಕ್ರೋಢೀಕರಿಸಿಕೊಳ್ಳಲು ಸಾಧ್ಯವಾಗದೇ ಹೋಗುತ್ತದೆಂದೇ ಹೇಳಬೇಕಾಗುತ್ತದೆ. ಇದಕ್ಕೆ ಕಾರಣ ಇಂಥ ಉಪಮೆಗಳು ಭಗ್ನ ಪ್ರತಿಮೆಗಳ ರೀತಿಯಲ್ಲಿ ಕೆಲಸ ಮಾಡುವ ಉದ್ದೇಶ ಈ ಕಾವ್ಯದ ಸಂದರ್ಭದಲ್ಲಿ ಇದ್ದಂತೆ ತೋರುವುದಿಲ್ಲ. ಆದ್ದರಿಂದ ಪ್ರತ್ಯೇಕತೆಯ್ಲಲೂ ಒಟ್ಟರ್ಥಕ್ಕೆ ಪೂರಕವಾಗುವ ಅರ್ಥವನ್ನು ಕೊಡುವ ಘನತೆಯನ್ನು ಪಡೆದುಕೊಳ್ಳುವುದಿಲ್ಲ. ಹೀಗಲ್ಲದೆ ಈ ಉಪವೆಗಳನ್ನು ಅಷ್ಟೊಂದು ಆಳವಾಗಿ ವಿಶ್ಲೇಷಿಸದೆ ಉದಾಹರಣೆಗೆ ಯೋರ್ದನ್ ನದಿಯ ಹೋಲಿಕೆಯನ್ನು ಕೇವಲ ಪುಣ್ಯನೊಬ್ಬ ಸಾಯುತ್ತಿರುವುದಕ್ಕೆ ಕೊಟ್ಟ ಹೋಲಿಕೆಯಾಗಷ್ಟೇ ನೋಡಬೇಕೆಂದೂ, ಹಾಗೆಯೇ ‘ಸೂರ್ಯನನ್ನು ಮುಸುಕಿದ ಮೋಡದ ಗಡಣ’ ಎಂಬುದನ್ನು ಅವನ ಅಮರತೆಯನ್ನು ಧ್ವನಿಸದೆ ಅವನಂಥ ವಹಾ ಸತ್ವನನ್ನು ಯಹೂದ್ಯರಂಥ ಚಿಕ್ಕ ಅಂದರೆ ಸಾಮಾನ್ಯ ಜನರು ಹಿಡಿದು ಸಾವಿಗೆ ದೂಡುತ್ತಿರುವರೆಂಬ ಅರ್ಥಕ್ಕಷ್ಟೇ ಸೀಮಿತಗೊಳಿಸಬೇಕೆಂದು-ತೇಲು ಅರ್ಥವನ್ನು ಮಾತ್ರ ಗಮನಿಸಿದರೆ ಸಾಕೆಂದು ಒಪ್ಪಿಕೊಳ್ಳುವುದಾದರೆ ಕಾವ್ಯದಲ್ಲಿ ಭಾಷೆಯ ಬಳಕೆಯ ಮಹತ್ವವನ್ನು ಅಲ್ಲಗಳೆದಂತಾಗುತ್ತದೆ. ಕಾವ್ಯ ತನ್ನ ಇನ್ನೊಂದು ಪ್ರಮುಖ ಅಂಶವಾದ ಭಾಷಾಸ್ತರದಲ್ಲೂ ತೀವ್ರವಾದ ಸೋಲನ್ನನುಭವಿಸುತ್ತಿದೆ ಎಂಬುದನ್ನು ಗುರುತಿಸಿದಂತಾಗುತ್ತದೆ. ಏಕೆಂದರೆ ಕಾವ್ಯದಲ್ಲಿ ಒಂದು ಸನ್ನಿವೇಶದಲ್ಲಿ ಆ ಭಾಷೆಯ ಪದ ಬಳಕೆಯಾಗಬೇಕಾದರೆ ಅದರ ಎಲ್ಲ ಒಳ ಅರ್ಥ ಪದರಗಳನ್ನೂ, ಧ್ವನಿ ತರಂಗಗಳನ್ನೂ ಬಳಸಿಕೊಂಡಾಗ ಮಾತ್ರ ಆ ಅನುಭವದ ಪೂರ್ಣ ಅಭಿವ್ಯಕ್ತಿ ಸಾಧ್ಯವಾಗುತ್ತದೆ ಅಥವಾ ಕಾವ್ಯವಾದುದಕ್ಕೆ ಸಾಕ್ಷಿಯಾಗುತ್ತದೆ ಎಂಬುದು ಯಾರೂ ಒಪ್ಪುವ ಅಭಿಪ್ರಾಯವೇ.
ಪಿಲಾತನ ಬಗೆಗೆ ಅವರು ಕೊಡುವ ಉಪಮೆಯ ಅರ್ಥವನ್ನು ಅವರೇ ಮುಂದೆ ಸೃಷ್ಟಿ ಸುವ ಪಿಲಾತನ ಪಾತ್ರದ ರೀತಿಯೇ ತಿರಸ್ಕರಿಸುತ್ತದೆ.
“……… ಜ್ಞಾನವೃಕ್ಷದ ಬಳಿಯೆ
ವೆಂಟಣಿಸಿ ಕುಳಿತದರ ಫಲವ ಮೆಲಲಾರದದ
ನಕ್ಕಜದೊಳೀಕ್ಷಿಸುವ ಹಳೆಯ ಹಾವೆ……….”
ಎಂಬ ಕ್ರಿಶ್ಚಿಯನ್ ಪುರಾಣದ ಹೋಲಿಕೆಯ ಪ್ರಕಾರ ಹಾವು ಸೈತಾನ. ಅದು “Adam ಮತ್ತು Eve” ರಿಗೆ ಕೆಡುಕನ್ನು ಮಾಡಲೇ ಪ್ರೇರೇಪಿಸುತ್ತದೆ. ಆದರೆ ಇಲ್ಲಿ ಪಿಲಾತ ಅಂಥ ಕೆಡುಕಿನ ಪ್ರತೀಕವಾಗಲು ಸಾಧ್ಯವಿಲ್ಲ. ಅವನು ನ್ಯಾಯಪರನಾಗಿಯೇ ಕಂಡುಬರುತ್ತಾನೆ. ಏಸು ಅವನ ವಿಚಾರಣೆಯಲ್ಲಿ ‘ಸತ್ಯವೆನ್ನಯ ರಾಜ್ಯ’ ಇತ್ಯಾದಿ ತನ್ನ ತತ್ವಗಳನ್ನು ಹೇಳಿದಾಗ “ಇದೋ ಯಹೂದ್ಯರೇ ಇವನೊಳೇನುಮಪರಾಧವಂಕಾಣೆ’ ಎನ್ನುತ್ತಾನೆ. ಆದರೆ ಜನ ‘ಬರಬ್ಬನನೆ ಬಿಡಿಸಿ ಇವನನ್ನೇ ಗಲ್ಲಿಗೇರಿಸಿ’ ಎಂದಾಗ ಅವರಿಗೆ ‘ತಬ್ಬವನದೇಂ ? ಮರಣದಂಡವನೀಯಲಿವನೊಳೇಂಕಾಣೆನ್’ ಎಂದು ಆದರೂ ಅವರಿಗೆ ಏಸುವನ್ನು ಶಿಕ್ಷಿಸಲೇಬೇಕೆಂಬ ಹಟವಿದ್ದರೆ ಕೊರಡೆಯಂ ಬಡಿಸಿ ವನ ಬಿಡಿಸಿದರೆ ಸಾಲದೇ’ ಎಂದೂ ಕೇಳುತ್ತಾನೆ. ಆದರೆ ಅವರು ತನ್ನ ಸುರಕ್ಷಿತತೆಯ ಬಗೆಗೇ ಬೆದರಿಕೆಯೊಡ್ಡಿದಾಗ ಅವರಿಂದ ಹಿಂದಾದ ಸಂಕಟವನ್ನು ನೆನೆದು ಒತ್ತಾಯಕ್ಕೆ ಮಣಿಯುತ್ತಾನೆ. “ಇವನ ನೆತ್ತರ ತೃಷೆಗೆ ನಿರ್ದೋಷಿ ಈತನನ್ನೀಯುವುದೆ ನಿಶ್ಚಯಂ’ ಎಂದು ನಿರ್ಧರಿಸಿ ಕೊನೆಗೂ ತನಗೆ ಅನ್ಯಾಯವೆಂದು ಕಂಡಿದ್ದನ್ನೇ ಮಾಡಬೇಕಾದ ಪರಿಸ್ಥಿತಿ ಬಂದಾಗ ‘ಇನ್ನು ಯತ್ನಿಸಿ ನಿರರ್ಥಕವೆಂದು’ ‘ನಿರಪರಾಧಿಯ ರಕ್ತಕಿದೆಕೋ ಹೊಣೆ ನಾನಲ್ಲ’ ಎನ್ನುತ್ತಾನೆ. ಅವನು ಏಸುವಿನ ವ್ಯಕ್ತಿತ್ವವನ್ನು ಗೌರವಿಸುತ್ತಾನೆಂಬುದಕ್ಕೆ ಶಿಲುಬೆಯಲ್ಲಿ ‘ಯಹೂದ್ಯರ ರಾಜ ನಜರೇತಿನವನೇಸು’ ಎಂದೇ ಬರೆಸಿ ಬದಲಾಯಿಸದೆ ಹೋಗುವುದು ಸಮರ್ಥನೆಯನ್ನು ನೀಡುತ್ತದೆ. ಇವೆಲ್ಲವನ್ನು ನೋಡಿದಾಗ ಅವನ ವೈಯಕ್ತಿಕ ದೋಷಗಳೇನಾದರೂ ಇರಲಿ ಪಿಲಾತ ಏಸುವಿನ ಮಹಿಮೆಯನ್ನು ಅರಿಯಲು ಅರ್ಹನಲ್ಲ ಎನ್ನುವುದಕ್ಕಿಂತ, ಈ ಹಿಂದೆ ಏಸುವಿನ ಬಗ್ಗೆ ಅವನಿಗೆ ಏನೂ ಗೊತ್ತಿಲ್ಲವೆಂಬುದಕ್ಕೇ ಆಧಾರ ದೊರೆಯುತ್ತದೆ. ಆದರೂ ಅವನು ನ್ಯಾಯಪರನಾಗಿಯೇ ಇದ್ದಾನೆಂಬುದನ್ನು ಸೂಚಿಸುತ್ತದೆ. ಆದರೆ ನ್ಯಾಯನಿಷ್ಠುರನಲ್ಲದ ಸ್ವಹಿತಕ್ಕಾಗಿ ನ್ಯಾಯವನ್ನೂ ಬಲಿಕೊಡಲು ಇಚ್ಛಿಸುವಂಥ ಅಸಹಾಯಕತೆಗೆ ತನ್ನನ್ನು ತಾನೇ ಸಿಕ್ಕಿಸಿಕೊಂಡ ದುರ್ಬಲನಾಗಿ ಕಾಣಿಸಿಕೊಳ್ಳುತ್ತಾನೆ.
ಏಸುವಿನ ವ್ಯಕ್ತಿತ್ವ ಚಿತ್ರಣದಲ್ಲಿಯೇ ಕಂಡುಬರುವ ಇನ್ನೂ ಕೆಲವು ಪ್ರಮುಖ ಬಿರುಕುಗಳನ್ನು ಇಲ್ಲಿ ನೋಡಬಹುದು. ಏಸುವನ್ನು ಶಿಲುಬೆಯಲ್ಲಿ ವರ್ಣಿಸುವಾಗ ಕೊಡುವ ಹೋಲಿಕೆಗಳು ಒಂದಕ್ಕೊಂದು ವಿರುದ್ದವಾಗಿವೆ. ಅವನನ್ನು ಶಿಲುಬೆಗೇರಿಸಿ ಮೊಳೆ ಜಡಿದಾಗಲೂ ಅಪಾರ ತಾಳ್ಮೆಯನ್ನು ತೋರುತ್ತಾನೆಂದು ವರ್ಣಿಸಲಾಗಿದೆ. ತನಗೆ ಒದಗುತ್ತಿರುವ ನೋವು
“ನರದೇಹವೆತ್ತವನಿಗಾತನುವಗುಣಧರ್ಮ
ವಹ ಬೇನೆ ಇಲ್ಲದಿಹುದೆಂತು’
ಎಂದು ಸಮಾಧಾನಪಡಿಸಿಕೊಳುವನೆಂದೂ ಸಿಲುಬೆಯೊಳುರಿಯ ತಣ್ಣನೆ ತಳಿದು ತಾಯ ಮೊಗ ನೋಡೆ ಮಗು ಬೆಸಲಳನೋತು ಸೈರಿಸುವಂತೆ” ಸೈರಿಸುತ್ತಾನೆಂದೂ ವರ್ಣಿಸಲಾಗಿದೆ. ಮೇಲಿನ ಸನ್ನಿವೇಶದಲ್ಲಿ ಏಸುವಿಗೆ ಜನರಿಂದ ಯಾವ ಸುಖವೂ ಇಲ್ಲ ಕೇವಲ ನೋವಿಗೆ ಕಾರಣರಾದವರು ಎಂಬುದನ್ನು ಸ್ಪಷ್ಟಪಡಿಸಿದಂತಾಗುತ್ತದೆ. ಹಾಗಾದರೆ ಮುಂದೆ ಬರುವ ‘ತನ್ನ ತೊರೆದರ್ಭಕರ ಹುಬಲಿಸುವ ಮುಮೂರ್ಷು ತಾಯಂತೆ’ ಎನ್ನುವಲ್ಲಿನ ಅವರ ನಡುವಿನ ತಾಯಿಮಕ್ಕಳ ಸಂಬಂಧದ ಅರ್ಥವೇನು ? ಇಷ್ಟೆಲ್ಲ ತೊಡಕುಗಳಿದ್ದರೂ ಇಲ್ಲಿ ಸೃಷ್ಟಿಯಾಗುವ ವಾತ್ಸಲ್ಯಭಾವ ಕ್ಷಮಾಪೂರ್ಣ ವ್ಯಕ್ತಿತ್ವ, ಮುಂದಿನ ‘ತನ್ನ ಕಡಿವರ್ಗೆ ತಣ್ಣೆಳಲೀವ ಮರದಂತೆ’ ಎಂಬ ಉಪಮೆಯಿಂದ ಸಂಪೂರ್ಣ ಸಮರ್ಥಿತರಾಗಿ ‘ಕ್ಷಮಿಸಿವರನೆಲೆ ತಂದೆ ತಾವೇನನೆಸಗಿದಪೆವೆಂದರಿಯರಿವರು’ ಎನ್ನುವಲ್ಲಿ ಅತ್ಯಂತದ ಸ್ಥಿತಿಯನ್ನು ಮುಟ್ಟುತ್ತದೆ-ಈ ಮಾತಿನಲ್ಲಿ ಏಸು ತಾನು ಶ್ರೇಷ್ಠ ಅಥವಾ ಯೊಗ್ಯ ತನ್ನನ್ನು ಇವರು ಕೊಲ್ಲುತ್ತಿರುವುದು ಅನ್ಯಾಯ ಎಂದು ತನ್ನ ಬಗ್ಗೆ ತಾನೇ ನಿರ್ಧರಿಸಿಕೊಂಡ ಅಂಶವೂ ಇದೆ-ಇಂಥ ಅತಿಮಾನವನೆತ್ತರಕ್ಕೇರಿಸಿದವರು ಮುಂದೆ
“ಸಿಲುಬೆಯೊಳೆಲೀ ! ಎಲೀ ! ಲಮ್ಮಾ ಸಬಖ್ಥಾನಿ ?
(ದೇವರೇ ! ದೇವರೇ! ಯಾಕೆನ್ನ ಕೈಬಿಟ್ಟಿ?)
ಎಂದು ದಾವೀದನೃಪನಂದಿನಾರ್ತಧ್ವಾನ
ದಿಂದರಚೆ ಯೇಸು–”
ಎನ್ನುವಾಗ ಅತಿಯಾದ ಮನುಷ್ಯತನಕ್ಕಿಳಿಸಿದಂತೆ ಅನ್ನಿಸುತ್ತದೆ. ದೇವಸುತನೆಂದು ಹೇಳಿಕೊಳ್ಳುವ ಅದಕ್ಕೆ ತಕ್ಕ ಮಾನವ ಸಹಜ ನೋವನ್ನೂ ಮೆಟ್ಟಿನಿಲ್ಲುವ ನೀತಿಯನ್ನೂ ಹಿಂದೆ ತೋರಿದವನು ಇಲ್ಲಿ ಮಾನವನಾಗಿ ಅತ್ಯಂತ ಸ್ವಂತದ ವ್ಯಕ್ತಿಗತ ಪ್ರತಿಕ್ರಿಯೆಯನ್ನು ತೋರುವುಮ ದೈವಿಕತೆಯ ಪೊರೆ ಕಳಚಿ ದುರಂತ ದರ್ಶನವನ್ನು ಮೂಡಿಸುತ್ತದೆ. (ಮಾನವೀಯ ದೃಷ್ಟಿಯಿಂದ) ಹಿಂದೆ ಪ್ರಜ್ಞಾವಂತ ಸ್ಥಿತಿಯಲ್ಲಿ ತನ್ನ ಬದುಕಿನ ರೀತಿಯ ಫಲವಾಗಿ ಕಂಡುಕೊಂಡ ತನ್ನ ಮೌಲ್ಯದ ದೃಷ್ಟಿಕೋನದಿಂದ ಜನತೆಯ ಚಟುವಟಿಕೆಯನ್ನು ಗಮನಿಸಿದವನ ಪ್ರತಿಕ್ರಿಯೆ. ಇಲ್ಲಿ ಅದನ್ನು ಮೀರಿದ ಅತ್ಯಂತ ಸ್ವಂತದ ಆಪ್ತ ಮೊರೆಯಾಗುತ್ತದೆ. ಈಗ ಆ ಮೌಲ್ಯಗಳಿಗೆಲ್ಲ ಅರ್ಥ ಕಳಚಿಹೋಗುತ್ತದೆ. ಅಂದರೆ ಅವನ ಸಾವಿನ ಬಗ್ಗೆ ಅವನಿಗೆ ಅತೃಪ್ತಿಯಿದೆ. ಅ-ಸಹ್ಯ ಭಾವನೆಯಿದೆ. ಇಲ್ಲಿ ಅವನು ಯಾವ ಮಹಾ ಮೌಲ್ಯದ ಪ್ರತಿನಿಧಿಯೂ ಆಗದೆ ಕೇವಲ ಮನುಷ್ಯನಾಗುತ್ತಾನೆ. ಹಿಂದಿನ ಅತಿ ದೈವಿಕತೆಯ ಚಿತ್ರಣಕ್ಕೆ ಇದು ಸಂಗತವಾಗುವುದಿಲ್ಲ ಎನ್ನಿಸುತ್ತದೆ. ಆ ಧೋರಣೆಯನ್ನು ಬಿಟ್ಟು ಮಾನವತೆಯ ಮಿತಿಯಲ್ಲಿಯೇ ಚಿತ್ರಿಸಿದ್ದರೆ, ಇದು ಅತ್ಯಂತ ತೀವ್ರಸ್ಥಿತಿಯಲ್ಲಿ ತಾನು, ತನ್ನ ಸಮಾಜ, ತನ್ನ ಮೌಲ್ಯ ಯಾವುದೂ ತನ್ನ ರಕ್ಷಣೆಗೆ ಬರುವುದಿಲ್ಲ ಎಂಬ ಪ್ರಜ್ಞೆ ಬರುವುದಕ್ಕೆ ಮುಂಚಿನ ಮತ್ತು ಅನಂತರದ (ಅನಾಥ ಪ್ರಜ್ಞೆ !) ಮಾನವಿಯ ಪ್ರತಿಕ್ರಿಯೆಗಳಾಗಿ ಅಸಂಗತತೆಯಲ್ಲಿ ಅರ್ಥಪೂರ್ಣತೆಯನ್ನು ಪಡೆದುಕೊಳ್ಳಬಹುದಿತ್ತು. ಕವಿಯ ಏಸುವಿನ ದೇವತ್ವಪರ ಧೋರಣೆ ಮತ್ತು ಮತೀಯ ಪೂಜ್ಯತೆಯ ಚೌಕಟ್ಟಿನಲ್ಲಿಯೇ ಚಿತ್ರಿಸುವ ದೃಢ ನಿರ್ಧಾರ ಇದಕ್ಕೆ ಆಸ್ಪದ ಕೊಡದೆ ಅಸಾಂಗತ್ಯವನ್ನು ಉಳಿಸಿಕೊಳ್ಳುತ್ತದೆ.
ಕೊಲೆಗಡುಕ ಬರಬ್ಬನನ್ನಾದರೂ ಬಿಡು ಏಸುವನ್ನು ಗಲ್ಲಿಗೇರಿಸು ಎಂಬ ಜನರ ಕೋಪೋದ್ರಿಕತೆಗೆ ಕೃತಿಯಲ್ಲಿ ಯಾವುದೇ ಸಮರ್ಥ ಕಾರಣ ದೊರೆಯುವುದಿಲ್ಲ. ಅವರು ರಾಜನೆದುರಿಗೆ ಏಸುವಿಗೆ ಹೊರಿಸುವ ರಾಜದ್ರೋಹದ ಆಪಾದನೆ ಕೇವಲ ರಾಜನಿಂದ ಅವನನ್ನು ಕೊಲ್ಲಿಸಲು ತಮಗೆ ಬೇಕಾದ ಹಾಗೆ ತಿರುಗಿಸಿಕೊಂಡ ನೆಪವಾಗಿ, ಕೆಟ್ಟ ತಂತ್ರವಾಗಿ ಮಾತ್ರ ಗೋಚರವಾಗುತ್ತದೆಯೇ ಹೊರತು ಅದಕ್ಕೆ ಪ್ರಚೋದಕವಾದ ನಿಜವಾದ ಕಾರಣವಾಗುವುದಿಲ್ಲ.
ಇಷ್ಟೆಲ್ಲ ದೋಷಗಳಿದ್ದರೂ ಕೆಲವು ಭಾಗಗಳು ಪ್ರತ್ಯೇಕವಾಗಿ ಮನಸೆಳೆಯುತ್ತವೆ. ಪಿಲಾತನ ಪಾತ್ರ ಅದು ಇರುವ ರೀತಿಯಲ್ಲಿ ತಕ್ಕಮಟ್ಟಿಗೆ ಮೈದುಂಬಿಕೊಂಡಿದೆ ಎನ್ನಿಸುತ್ತದೆ. ಏಸುವಿನಂಥ ಪುಣ್ಯಪುರುಷನೊಬ್ಬನನ್ನು ಅವಿವೇಕದಿಂದ ಬಲಿ ಕೊಡುತ್ತಿರುವ ಯಹೂದ್ಯರ ಮೌಡ್ಯವನ್ನು ಚಿತ್ರಿಸುವಲ್ಲಿ ಅಲ್ಲಲ್ಲಿ ಅದರ ತೀವ್ರತೆಗಾಗಿ ದುಡಿಯುವ ಸಂದರ್ಭಗಳು ದೊರೆಯುತ್ತವೆ. ಪಸ್ಕ ಹಬ್ಬದ ದಿನ ಮಡಿಯಾಗಿ ಮತ್ತು ವ್ರತಹಿತನಾಗಿ ಶುಚಿಯಾಗಿರಬೇಕಾಗಿದ್ದದ್ದು ಅವರ ಏಸುವನ್ನು ಕೊಲ್ಲುವ ಪಾಪಕಾರ್ಯಕ್ಕೆ ವ್ಯಂಗ್ಯವಾಗಿ ಪರಿಣಮಿಸಿ ಒಂದು ವಿಧದ ಕಲಾತ್ಮಕ ಅಣಕನ್ನು ಮೈಗೂಡಿಸಿಕೊಂಡಿದೆ. ನಿರಪರಾಧಿ ಏಸುವನ್ನು, ಅಪರಾಧಿಯನ್ನೂ ಬಿಡಿಸಿಕೊಳ್ಳುವ ಪಸ್ಕ ಹಬ್ಬದ ದಿನವೇ ಬಲಿಕೊಡಲೇಬೇಕೆಂದು ಒತ್ತಾಯ ಹೇರುವುದೂ, ಶುಚಿಯಾಗಿದ್ದು ಹಬ್ಬವನ್ನುಣದೆ “ರೋಮಕನ ಮನೆ ಹೊಗಲು ಮಡಿಗೆಡುವುದೆಂದಳುಕಿ ರಾಜಾಂಗಣದೊಳೇ” ನಿಲ್ಲುವುದೂ ಈ ವ್ಯಂಗ್ಯವನ್ನು ತೀವ್ರಗೊಳಿಸುತ್ತಾ ಹೋಗುತ್ತವೆ.
“…….ನಾವಾರನಾದೊಡಂ ಕೊಲಬಾರ
ದೆಂದೆ ಹನನೀಯನೀತನನನಿಲ್ಲಿಗೆಯ್ದು ರೋ
ಮೀಯ ಶಾಸನಕೊಪ್ಪಿಸಿದೆವು…”
ಎಂಬ ಮಾತು ಕೂಡ ಕೇವಲ ನಿಯಮಕ್ಕಾಗಿ ಆಚರಿಸುವ, ತಮ್ಮ ಸ್ವಂತ ಕೈಯಿಂದ ಕೊಲೆ ನಡೆಯದಿದ್ದ ಮಾತ್ರಕ್ಕೆ ಅದು ಧರ್ಮಸಮ್ಮತವೆಂದು ಭಾವಿಸುವ ಈ ಜನರೆ ಧರ್ಮಜಡತೆಯನ್ನು, ಮೂಢತೆಯನ್ನು ಸೂಚಿಸುವ ಮಾತಾಗಿ ಏಸುವಂಥವನನ್ನು ಶಿಕ್ಷಿಸಬಯಸಲು ಅವರ ಅಯೋಗ್ಯತನವನ್ನೂ ಸೂಚಿಸಿ ಅವನ ಸಾವಿನ ಹಿನ್ನೆಲೆಗಿರುವ ಅನ್ಯಾಯದ ಭಾವನೆಯನ್ನು ಆಳವಾಗಿಸುತ್ತವೆ. ಮುಂದೆ,
‘…….! ಅಕಟೆಮ್ಮ
ಧರ್ಮಶಾಸ್ತ್ರದಿ ಮರಣದಂಡಕೆಡೆಯಿರೆ ಪರರ
ಬಾಗಿಲಿಗೆ ನೀತಿ ಭಿಕ್ಷೆಗೆ ಬರುವೆವೇನಿಂತು……….’
ಎನ್ನುವ ಮಾತುಗಳೂ ಇವಕ್ಕೆ ಪೂರಕವಾಗುತ್ತವೆ. ಏಸುವಿಗೆ ಬೆತ್ತಪ್ರಹಾರ ಮಾಡುತ್ತಾ “ಯಹೂದ್ಯರರಸನೆ ಸ್ವಸಿ’ ಎಂದು ಗೊಳ್ಳನೆ ನಕ್ಕು ಮೂದಲಿಸಿದಾಗ ಅವರ ಮೌಢ್ಯ, ಕ್ರೌರ‍್ಯಕ್ಕೆ ತಿರುಗುವುದನ್ನು ಮತ್ತು ಕಳ್ಳರ ಜೊತೆಯಲ್ಲಿ ಅವನನ್ನು ಶಿಲುಬೆಗೇರಿಸುವ ಅಸಂಗತತೆಯನ್ನು ಕಂಡಾಗ ಅವು ಏಸುವಿಗಾಗುತ್ತಿರುವ ಅನ್ಯಾಯಕ್ಕೆ ಸಂವೇದಿಸುವಂತೆ ಮಾಡುತ್ತದೆ.
“ನರನೋ ನಾರಿಯೋ ಪೇಳಸದಳಂ !…. …..’
ಇತ್ಯಾದಿ ಮಾತುಗಳು ಬರಿಯ ಹೇಳಿಕೆಗಳಾಗಿಯೇ ನಿಲ್ಲುವುವಾದರೂ ಏಸು ಪೂರ್ಣ ವ್ಯಕ್ತಿತ್ವವನ್ನು (ಪ್ರಕೃತಿ ಮತ್ತು ಪುರುಷಾಂಶ) ಪೂರ್ಣ ಮಾನವತೆಯನ್ನು ವಿರೋಧಾತ್ಮಕ ನಿರೂಪಣೆಯಿಂದ ಪ್ರತಿಪಾದಿಸಲೆಳಸುತ್ತವೆ.
ಶಿಲುಬೆಯಲ್ಲಿ ಏಸು ಹೇಗೆ ಕಾಣುತ್ತಿದ್ದನೆಂಬುದರ ಉಪಮಾ ವಿವರ (ಬಿಲ್ಲಿಗೆ ತೂಟ್ಟ ಸರಳಂತೆ ಇತ್ಯಾದಿ) ಆ ಚೇತನದ ಊರ್ಧ್ವಮುಖತೆಯನ್ನು ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ. (ಇಲ್ಲಿ ಯೋರ್ದನ್ ನದಿಯ ಹೋಲಿಕೆಯನ್ನು ಅಲಕ್ಷಿಸಬೇಕಾಗುತ್ತದೆ.) ‘ಹದ್ದು ಬಿಗಿವಿಡಿದ ಲಾವಿಗೆಯಂತೆ’ ಎಂಬ ಉಪಮೆ ಶಿಲುಬೆಗೆ ನೇತುಹಾಕಿರುವ ಏಸುವಿನ ಭಯಂಕರ ಚಿತ್ರವನ್ನು ಕೊಡುವುದರ ಜೊತೆಗೆ ಅವನು ಲಾವಿಗೆಯಂತೆ ಆಕ್ರಮಣಕ್ಕೊಳಗಾಗಿರುವುದನ್ನೂ ಸೂಚಿಸುತ್ತದೆ. ‘ಮರಣವೃಕ್ಷದೊಳಮ್ಮತಫಲದಂತೆ ತೂಗುತಿರೆ’ ಎಂಬ ಮಾತು ಜಗದ ಹಿತಚಿಂತಕನಾದ ಏಸು, ಇವರ ಉದ್ಧಾರಕ್ಕಾಗಿಯೇ ಹಂಬಲಿಸಿ, ತನ್ನ ಬಲಿಯಿಂದ ಜಗದ ಪಾಪ ಪರಿಹಾರ ಮಾಡಿದ ಎಂಬ ಕಲ್ಪನೆಯ ಹಿನ್ನೆಲೆ ಯಲ್ಲಿ ಮಾತ್ರ ಅರ್ಥವತ್ತಾಗುತ್ತದೆ. (ಪುಣ್ಯದ ಫಲ ಅನುಭವಿಸುವವರು ಜನರು, ಅದು ಏಸುವಿನ ಮೃತ್ಯುವಿನ ಫಲವಾಗಿ ಬಂದದ್ದು, ಆದ್ದರಿಂದ ಆ ಮೃತ್ಯು ಬಿಟ್ಟ ಫಲ ‘ಮರಣವೃಕ್ಷದೊಳಮ್ಮತಫಲ’)
ತನ್ನ ಕಡಿವರ್ಗೆ ತಣ್ಣೆಳಲೀವ ಮರದಂತೆ ಇರುವ ಏಸುವಿನ ಅಪಾರ ತಾಳ್ಮೆಯ ವಿವರದ ತಕ್ಷಣವೇ ಬರುವ ಜನರು ಜಟಕರಿಸುವ ಅತಿಯಾದ ಕ್ರೂರತನ ಮತ್ತು ಏಸುವಿನ ಅತಿಯಾದ ಶಾಂತತೆ, ವಾತ್ಸಲ್ಯ ಕ್ಷಮಾಗುಣ ಇವೆರಡರ ತಕ್ಷಣದ ಸಮೀಕರಣದಿಂದ ಎರಡು ಅತ್ಯಂತ ವಿರುದ್ಧ ಸ್ಥಿತಿಯನ್ನು ಪರಸ್ಪರ ಎದುರಿಸಲ್ಪಡುವುದರ ಮೂಲಕ ಅವರ ಅವಿವೇಕವನ್ನು ಚೆನ್ನಾಗಿ ಮನದಟ್ಟು ಮಾಡಿಕೊಡುವುದರಲ್ಲಿ ಸನ್ನಿವೇಶ ಗೆಲುವನ್ನು ಪಡೆದಿದೆ. ಮುಂದೆ ಪ್ರಕೃತಿಯಲ್ಲಿ ನಡೆಯುತ್ತವೆಂದು ವರ್ಣಿಸಲಾಗಿರುವ ಘಟನಾವಳಿಗಳು (ಪಂಕ್ತಿ ೩೧೫ ರಿಂದ ೩೨೪ ರ ವರೆಗೆ) ಕಾಪಾಡಿಕೊಳ್ಳಬೇಕಾದದ್ದನ್ನು ಕೈಯಾರ ನಷ್ಟ ಮಾಡಿಕೊಳ್ಳುತ್ತಿರುವುದರ ಅನಾಹುತವನ್ನು ಸೂಚಿಸುವುದಲ್ಲದೆ ಏಸುವಿನ ಘನ ವ್ಯಕ್ತಿತ್ವವನ್ನೂ ಮಹಾತ್ಮೆಯನ್ನೂ ಸೂಚಿಸಲು ಯತ್ನಿಸುತ್ತವೆ.
ಏಸುವಿನ ಮಹಿವೆಯನ್ನು ಸಾಬೀತುಪಡಿಸಲೆಂಬಂತೆ ೨೭೧ ರಿಂದ ೨೮೦ ರ ವರೆಗಿನ ಸಾಲುಗಳು (ಅಂದಿದೋ ಭಗುವಾರದಾ ನಡುಹಗಲ ಸಿರಿಹೊತ್ತು ಭಾಸ್ಕರನ ಸುಳಿವಿಲ್ಲ ……ಇತ್ಯಾದಿ) ಮತ್ತು ೩೪೧ ರಿಂದ ೩೪೭ ರ ವರೆಗಿನ ಪಂಕ್ತಿಗಳೂ ನಿರೂಪಿಸಲ್ಪಟ್ಟಿವೆ. ಇದು ಏಸುವಿಗೂ ಅವರಿಗೂ ಇರುವ ಅಂತರವನ್ನು ಸ್ಪಷ್ಟಪಡಿಸುವುದರಿಂದ ಏಸುವಿನ ಬಗೆಗೆ ಈ ಕಾವ್ಯದಲ್ಲಿ ನಮಗುಂಟಾಗುವ ಅನುಭವಕ್ಕೆ ಆಳವನ್ನು ನೀಡುತ್ತದೆ. ಈ ರೀತಿ ಇಲ್ಲಿ ಪ್ರಕೃತಿಯನ್ನು ಅನುಭವದ ತೀವ್ರವಹನಕ್ಕೋಸ್ಕರ ಬಳಸಿಕೊಳ್ಳುವ ನೈಪುಣ್ಯ ಕೆಲಮಟ್ಟಿನ ಯಶಸ್ಸನ್ನು ಸಂಪಾದಿಸಿದೆ.
ಹೀಗೆ ಅನುಭವ ತನ್ನ ಶಿಖರವನ್ನು ಮುಟ್ಟಿದ ಮೇಲೆ (climax) ‘ಆಗಬಾರದ್ದೆಲ್ಲ ಆಗಿ ಹೋಯಿತು’ ಎಂಬ ಭಾರವಾದ ಭಾವದಿಂದ ವಾತಾವರಣದ ಪುನರ್ನೋಟವನ್ನು ಕೊಡುತ್ತಾರೆ. “ಮನೆಗೆ ತೆರಳಿದರೆಲ್ಲ ಸದ್ದಿಲ್ಲ ಸುಳಿವಿಲ್ಲ” ಎನ್ನುವಲ್ಲಿ ಜನರ ಮನೋವ್ಯಾಪಾರವನ್ನು ಅತ್ಯುತ್ತಮವಾಗಿ ಚಿತ್ರಿಸಲಾಗಿದೆ. ಇಲ್ಲಿ ಮಾತು ಮೂಕವಾಗಿದೆ. ಮೌನ ವಾಚಾಳಿಯಾಗಿದೆ ಎಂದೇ ಹೇಳಬಹುದು. (ಇಲ್ಲಿ ವೈಶಾಖಿಯಲ್ಲಿ ಬರುವ “ಭಿಕ್ಷುಗಳ ಸೊಲ್ಲಿಲ್ಲ ಸದ್ದಿಲ್ಲ ಸರವಿಲ್ಲ” ಎಂಬುದನ್ನೂ ನೆನಪು ಮಾಡಿಕೊಳ್ಳಬಹುದು. ಎರಡೂ ಕಾವ್ಯದ ರಚನೆಯಲ್ಲಿಯೂ ಈ ರೀತಿಯ ನಿರ್ಧಾರಿತ ರೀತಿಯನ್ನು ಸುಲಭವಾಗಿ ಗುರುತಿಸಬಹುದು.) ಈ ರೀತಿಯ ಪುನರ್ನೋಟ ತೀವ್ರಾನುಭವದಿಂದ ತಪ್ತವಾದ ಮನಸ್ಸಿನ ಶಾಂತಿಗೆ ಒಂದು ತಂತ್ರವಾಗಿ ಬಳಕೆಯಾದಂತೆ ತೋರುತ್ತದೆ.
ಕೊನೆಯ ಭಾಗದಲ್ಲಿ ಪ್ರಾರಂಭವಾಗುವ
‘ಮೂಗು ಹರಕಾವೊಂದು ಹಳೆಯ ತಲೆಬುರುಡೆ ನಡು
ಸಿಲುಬೆಯಡಿಯಿಂ ಜಗವ ಬಾಯ್ಕಿಸಿದು ನಗುತಲಿದೆ…’
ಎಂಬ ನಿರೂಪಣೆ ಜನತೆಯ ಅವಿವೇಕವನ್ನು ಅಣಕಿಸುವುದರಲ್ಲಿ ಯಶಸ್ವಿಯಾಗುತ್ತದೆ. ಅಲ್ಲದೆ ದುರಂತದ ಪುನರಾವಲೋಕನವನ್ನೂ ಮಾಡುತ್ತದೆ. ‘ಮಗ್ದಲದ ಮರಿಯೆ’ ಏಸುವಿನ ‘ತನ’ಕ್ಕೆ ಸಂಕೇತವಾಗಿ ಅದು ಭೂಮಿಯಲ್ಲಿ ಉಳಿಯುವುದರ ಸೂಚನೆಯೂ ಆಗುತ್ತಾಳೆ. ಕವಿ ಆಕೆಯನ್ನು ‘ದಾವೀದ ಕುಲದಾದಿತ್ಯನವ ಪ್ರಬೋಧನದ ಮುಂಗೋಳಿ’ ಎನ್ನುತ್ತಾರೆ. ಕಾವ್ಯ ಏಸುವಿನ ತತ್ವದ ಕೀರ್ತಿಗೆ ಅದರ ಆಪ್ಯಾಯನತೆಗೆ ಸಂಕೇತವೆಂಬಂತೆ ಬೆಳದಿಂಗಳಾಗುವುದರ ಮೂಲಕ ಮುಕ್ತಾಯವಾಗುತ್ತದೆ. ಅಂತ್ಯದ ನಿಷ್ಪಂದ ಮೆತ್ತಲುಂ ಶಾಂತು’ ಎಂಬ ಮಾತು ತನ್ನದೇ ಆದ ಪರಿಣಾಮವನ್ನು ಕಾವ್ಯಕ್ಕುಂಟು ಮಾಡಿದೆ.
ಹೀಗೆ ಕಾವ್ಯದ ಭಾಗವನ್ನು ಅಪಾರವಾದ ಮಿತಿಯಲ್ಲಿ ಪ್ರತ್ಯೇಕ ಪ್ರತ್ಯೇಕವಾಗಿ ಕಂಡಾಗ ಉತ್ತಮವಾಗಿಯೇ ಕಂಡರೂ ಅವುಗಳೆಲ್ಲದರ ಒಟ್ಟು ದುಡಿಮೆಯಲ್ಲಿ ಸಾಂಗತ್ಯದ ಕೊರತೆಯಿಂದ ಸೋಲನ್ನನುಭವಿಸುತ್ತದೆ. ಕಾವ್ಯ ಒಂದು ಕಡೆ ಮಾನವೀಯತೆಯನ್ನು ಮೀರಿದ ದೈವಿಕತೆಯನ್ನೂ ಒಪ್ಪಿಕೊಂಡಿದೆ. ಅದು ಇದ್ದೂ ಕಾವ್ಯ ಮಾನವೀಯ ದುರಂತಕ್ಕಾಗಿಯೇ ಮನಸ್ಸಿಗೆ ತಾಗುವಂತಿದೆ. ಹೀಗೆ ದೈವಿಕ ಮತ್ತು ಮಾನವೀಯ ಅಂಶಗಳ ಅರ್ಥಪೂರ್ಣ ಹೊಂದಾಣಿಕೆಯಿಲ್ಲದೆ ಹೋಗುತ್ತದೆ. ಹಲವಾರು ಕಡೆ ಈ ಎರಡು ವಿಧವಾದ ಧೋರಣೆಗಳಿಗನುಗುಣವಾದ ಉಪಮೆಗಳು ಭಗ್ನ ಪ್ರತಿಮೆಗಳಂತೆ ಕಾರ್ಯ ನಿರ್ವಹಿಸಿದಂತೆ ತೋರಿದರೂ ಅದರಲ್ಲಿ ಯಶಸ್ವಿಯಾಗದೆ ಹೊಂದಾಣಿಕೆಯನ್ನು ಸಾಧಿಸಿಕೊಳ್ಳದೇ ಹೋಗುತ್ತವೆ.
“ಯೋರ್ದನ್ ನದಿಯಂತೆ ಮೃತಸಮುದ್ರದಲ್ಲಿ ಬೀಳುವುದು’ ಎಂಬ ವರ್ಣನೆಯನ್ನು ಹೊರತುಪಡಿಸಿದಾಗ ಏಸುವನ್ನು ಪ್ರಾರಂಭದಲ್ಲಿ ಸೂರ್ಯನಿಗೆ ಹೋಲಿಸಿ ಅಂತ್ಯದಲ್ಲಿ ತಾತ್ವಿಕವಾಗಿ ಚಂದ್ರನ ಬೆಳಕಂತೆ ಬದುಕುತ್ತಾನೆಂದು ಬೆಳುದಿಂಗಳ ವರ್ಣನೆಯೊಂದಿಗೆ ಮುಕ್ತಾಯ ಮಾಡಿರುವುದು ಅರ್ಥಪೂರ್ಣವಾಗಿದೆ. ಅವನು ಜೀವಿಸಿದ್ದಾಗ ಸೂರ್ಯನಂತಿದ್ದು ಅವನ ಧೋರಣೆಗಳು ತತ್ವಗಳು ನೇರವಾಗಿಯೇ ಲಭಿಸುವಂತಿದ್ದರೆ ಸತ್ತ ಮೇಲೆ ಅವನದೇ ಆದ ತತ್ವಗಳು ಸೂರ್ಯನವೇ ಆದ ಕಿರಣಗಳು ಪರೋಕ್ಷವಾಗಿ ಚಂದ್ರನಿಂದ ಪ್ರತಿಫಲಿಸಿ ಬಂದಂತೆ ಬರುತ್ತದೆ ಎಂಬುದರಲ್ಲಿರುವ ಚಿರಂತನತೆಯ ವಿಶಿಷ್ಟ ರೀತಿಗೆ ಪ್ರತಿಮಾತ್ಮಕವಾಗಿರುವುದು ಆಸ್ವಾದನೀಯವಾಗುತ್ತದೆ.
“ವೈಶಾಖಿ”ಯನ್ನು ಪ್ರವೇಶಿಸುವ ಮುನ್ನ ಅವರು ಮುನ್ನುಡಿಯಲ್ಲಾಡುವ “ಇದನ್ನು ರಚಿಸುವಲ್ಲಿ ಸಹಜವಾಗಿ ಬೌದ್ಧ ಧರ್ಮ ಗ್ರಂಥವಾದ ಪಾಲಿಭಾಷೆಯ ‘ಮಹಾಪರಿನಿಬ್ಬಾನಸುತ್ತ’ವನ್ನು ಆಧರಿಸಿರುತ್ತೇನೆ… …….ಆದರಲ್ಲಾದರೂ ಈ ಕಾವ್ಯದ ಮಟ್ಟಿಗೆ ಅಸಂಗತವೆನಿಸಿದ ಆಯಾ ಕೆಲವು ಮಾತುಗಳನ್ನು ವಿಸರ್ಜಿಸಿ, ಈ ಕಾವ್ಯದಲ್ಲಿ ಸಂದರ್ಭೋಚಿತವಾಗಿ ಅಲ್ಲಲ್ಲಿ ಬುದ್ಧನ ಧರ್ಮದೇಶನೆ ಬಾರದಿದ್ದರೆ ಇದೊಂದು ಅಪ್ಪಟ ಬೌದ್ಧ ಕಾವ್ಯವೆನಿಸಲಾದ ಕಾರಣ, ಆ ತಕ್ಕ ಜೀವಕಳೆ ಇಲ್ಲಿ ಮಿಸುಕಾಡುವಂತೆ ಆ ಸೂತ್ರದಲ್ಲಿ ಇಲ್ಲದ ಕೆಲವು ಅಂಶಗಳನ್ನು ಇತರ ಬೌದ್ಧಗ್ರಂಥಗಳಿಂದ ಈ ಕಾವ್ಯದಲ್ಲಿ ಇಸಗೊಂಡಿದೆ” ಎಂಬ ಮಾತುಗಳನ್ನು ಈ ಕಾವ್ಯದ (ಗಳ) ಮಿತಿಯನ್ನು ಗುರುತಿಸಿಕೊಳ್ಳಲು ಗಮನಿಸಬಹುದಾಗಿದೆ. ಅಪ್ಪಟ ಬೌದ್ದ ಕಾವ್ಯವನ್ನಾಗಿಸುವ ಬದ್ದ ಉದ್ದೇಶದ ಫಲವಾಗಿ ಕಾವ್ಯ ತನ್ನ ಬಹಳಷ್ಟು ಭಾಗಕ್ಕೆ ಬೌದ್ಧಗ್ರಂಥದ ಆಕರಗಳಿಗೆ ಋಣಿಯಾಗಿದೆ. ಹೀಗೆ ಭಾವಾನುವಾದಕ್ಕಿಂತ ಸ್ವಲ್ಪ ಹೆಚ್ಚಿನ ಸ್ವಾತಂತ್ರವನ್ನು ಮಾತ್ರ ಪಡೆದುಕೊಂಡ ಈ ಕಾವ್ಯದಲ್ಲಿ ಜೀವಕಳೆ (ಅವರದೇ ಮಾತನ್ನು ಬಳಸಿ ಹೇಳುವುದಾದರೆ) “ಮಿಸುಕಾಡುತ್ತದೆ” ಅಷ್ಟೆ.
ಕಾವ್ಯ ಬುದ್ಧನು ಆನಂದನನ್ನು ಭಿಕ್ಷುಗಳನ್ನು ಎಚ್ಚರಿಸುವಂತೆ ಎಚ್ಚರಿಸುವುದರಿಂದ ಪ್ರಾರಂಭವಾಗುತ್ತದೆ. ಬುದ್ಧನ ಉಪದೇಶದ ಹಿಂದೆಯೂ ಮತ್ತು ಅವನ ಪರಿನಿರ್ವಾಣದ ಅನಂತರವೂ ಅವರು ‘ಅವೀತರಾಗರೇ’ ಆಗಿರುವುದನ್ನು ಲಕ್ಷಿಸಿದರೆ ಈ ಆರಂಭ ಅರ್ಥಪೂರ್ಣವಾಗುತ್ತದೆ. ಬುದ್ಧ ತನ್ನ ಜೀವನದ ವಿವರವನ್ನು ಕೊಡುತ್ತಾ ‘ಮಾರ’ನು ಹಿಂದೆ ತನ್ನನ್ನು ಪರಿನಿರ್ವಾಣ ಹೊಂದು ಎಂದು ಕೇಳಿದುದನ್ನೂ, ತಾನು ಧರ್ಮವು ಜಗತ್ತಿನಲ್ಲಿ ಹರಡುವವರೆಗೂ, ದೃಢವಾಗುವವರೆಗೂ ತಾನು ಪರಿನಿರ್ವಾಣ ಹೊಂದುವುದಿಲ್ಲವೆಂದೂ ಹೇಳಿದ್ದನ್ನೂ, ಈಗ ಸಂತೃಪ್ತಿಯಿಂದ ನಿರ್ವಾಣ ಹೊಂದುವುದಾಗಿಯೂ ಅದಕ್ಕೆ ‘ಚುಂದನ’ ಮನೆಯಲ್ಲಿ ತಿಂದ ‘ಸೂಕರ ಮದ್ದವ” ಒಂದು ನೆಪ ಮಾತ್ರವೆಂದೂ ಹೇಳುತ್ತಾನೆ. ತಾನು ಮೊದಲನೆಯ ಸಲ ಮಾರನ ಆದೇಶವನ್ನು ತಿರಸ್ಕರಿಸಿದೆನೆಂದು ಹೇಳುವಾಗ ಕವಿ ಬಳಸುವ
“…. …. ……ಬದುಕಿಂದ
ತೊಲಗನೀ ಜಗದೊಳಗೆ ವಿಸ್ತಾರಿಸದ ಮುನ್ನ ಪೃಥು
ಭೂತವಾಗದ ಮುನ್ನ ಸ್ಪೀತವಾಗದ ಮುನ್ನ
ಮನುಜರಲಿ ಸುಪ್ರಕಾಶಿಸದ ಮುನ್ನಾಂ ಕಣಾ
ತೊಲಗನೆಂದವಗೆಂದೆ……”
ಎಂಬ ಒಂದೇ ಅರ್ಥದ ಪದಗಳ ಪ್ರಯೋಗದ ಮೂಲಕ ಮಾಡುವ ಅರ್ಥದ ಪುನರಾವರ್ತನೆ ದೃಢ ನಿರ್ಧಾರದ ಅರ್ಥದ ಪರಿಣಾಮದೃಷ್ಟಿಯಿಂದಲೂ ಪರಣಾಮಕಾರಿಯಾಗಿದೆ. ‘ಗೊಲ್ಗೊಥಾ’ದಲ್ಲಿ ಇದೇ ಉದ್ದೇಶಕ್ಕಾಗಿ ಇದೇ ಶೈಲಿಯನ್ನು ಬಳಸಲು ಯತ್ನಿಸಿ ಒಟ್ಟಾರೆ ಸೋಲನ್ನನುಭವಿಸಿದರೂ ಅಷ್ಟು ಸಂಕೀರ್ಣವಲ್ಲದ ಈ ಕಾವ್ಯ ಸಂದರ್ಭದಲ್ಲಿ ಶೈಲಿಯ ವೈಶಿಷ್ಟ್ಯವಾಗಿಯೂ ತಂತ್ರವಾಗಿಯೂ ಫಲಕಾರಿಯಾಗಿದೆ. ತಂತ್ರದಲ್ಲಿ ಈ ಎರಡೂ ಕಾವ್ಯಗಳನ್ನು ಒಂದೇ ಅಚ್ಚಿನಲ್ಲಿ ಎರಕ ಹೊಯ್ಯಲು ಯತ್ನಿಸಲಾಗಿದೆ, ಇದನ್ನು ಅಲ್ಲಲ್ಲೇ ಗುರುತಿಸಿಕೊಂಡು ಹೋಗಬಹುದು.
ಬುದ್ಧ ಪಾವೆಯಿಂದ ಕುಶಿನಾರಕ್ಕೆ ಹೊರಟು ಸಾಲ ವನವನ್ನು ಹೊಕ್ಕು ಭಿಕ್ಷುಗಳಿಗೆ ಧರ್ಮೋಪದೇಶ ಮಾಡಿ ಅಲ್ಲಿಯೇ ಪರಿನಿರ್ವಾಣವನ್ನು ಹೊಂದುತ್ತಾನೆ. ಈ ಹಾದಿಯಲ್ಲಿ ಅವನನ್ನು ಪುಕ್ಕಸ, ಆನಂದ ಭಿಕ್ಷುಗಳು, ಸುಭದ್ರ ಮತ್ತು ಕುಶಿನಾರದ ಮಲ್ಲರು ಭೇಟಿಯಾಗಿ ಧರ್ಮೋಪದೇಶವನ್ನು ಪಡೆಯುತ್ತಾರೆ.
ಬುದ್ಧ ತಾನು ಸಾಯುವ ರೀತಿಯನ್ನು ತಾನೇ ಆನಂದನಿಗೆ ಬಣ್ಣಿಸುವಾಗ ವಿಶ್ಲೇಷಿಸಿಕೊಳ್ಳುವ `ಕಾಸಿದ ಕಾಂಚನಂ ಕೀಳನುಳಿವಂತೆ’ ಎಂಬ ರೀತಿಯ ಮಾತು ‘ಗೊಲ್ಗೊಥಾ’ದಲ್ಲಿಯೂ ಬರುತ್ತದೆ (ಕೋವೆಯಲಿ ಕಾವ ಕಾಂಚನದಂತೆ). ಹೀಗೆ ಅನೇಕ ಕಡೆ ಇಬ್ಬರನ್ನೂ ಒಂದೇ ರೀತಿಯಲ್ಲಿ ವಿಶೇಷಿಸಿ ವರ್ಣಿಸುವುದಕ್ಕೆ ಆಧ್ಯಾತ್ಮಿಕವಾಗಿ ಇಬ್ಬರ ಮೂಲ ಸತ್ವವನ್ನೂ ವ್ಯಕ್ತಿತ್ವವನ್ನೂ ಒಂದೆಂದು ಭಾವಿಸುವುದೇ ಕಾರಣವೆಂದು ತೋರುತ್ತದೆ. ಆದರೆ ಇದರಿಂದ ಇವೆರಡರಲ್ಲಿ ಯಾವುದೇ ಕೃತಿಯನ್ನು ಮೊದಲು ಓದಿ ಅನಂತರ ಓದುವ ಇನ್ನೊಂದರಲ್ಲಿ ಅದು ಆಗಲೇ ಕ್ಲೀಷೆಯಾದಂತಾಗಿ ಬೇಸರದ ಛಾಯೆಯನ್ನು ಬೀಸುವುದನ್ನೂ ಗುರುತಿಸಬಹುದು. ಇದನ್ನು ಹೇಳುವ ರೀತಿಯಲ್ಲಿ ಬೇರೆ ಮಾಡಿ ಕಡಿಮೆ ಮಾಡಲು ಯತ್ನಿಸಿರುವುದನ್ನೂ ಗಮನಿಸಬಹುದು. ಬುದ್ದನ ಹಿಂದಿನ ಚಂದ್ರಾಸ್ತ್ರವನ್ನು
“…….ಅಸ್ತಮಿಪ ಪೂರ್ಣಚಂದ್ರಂ ತಥಾ
ಗತನ ಪರಿನಿರ್ವಾಣ ನಾಟಕವನೊಂದಿನಕೆ
ಮುನ್ನೆ ನಟಿಸುವನೇನೋ…..”
ಎಂದು ವರ್ಣಿಸುವುದಕ್ಕೂ
‘ಗೊಲ್ಗೊಥಾ’ದಲ್ಲಿ
“ಅನಿತರೊಳೆ ಬಿರುಗತ್ತ
ಲೊಂದು ಬಾವೆಲ್ಲವಂ ಬಾಸಣಿಸಿ ದೇವಸುತ
ನಮ್ಮತನೀ ಮೃತಿನಾಟಕದ ಕಡೆಯ ತೆರೆಯಂತೆ”
ಎಂದು ವರ್ಣಿಸುವುದಕ್ಕೂ ಸಾಮ್ಯವನ್ನು ಗುರುತಿಸಬಹುದು. ಜೀವನ ಚಟುವಟಿಕೆಯ ಲಕ್ಷಣಗಳಾದ (ಆಯ್ದ ?) ವಿವರಗಳನ್ನೆಲ್ಲ ಕೊಟ್ಟು ಬುದ್ಧ ಅದೆಲ್ಲಕ್ಕೂ ನಿರ್ಲಿಪ್ತನಾಗಿ ಗಮನಿಸದೆ ಹೋದ ಎಂದು ವರ್ಣಿಸುವುದು ‘ಬೆಳಗಾಯಿತು’ ಎಂಬುದಷ್ಟನ್ನೇ ಹೇಳಲು ಪರ‍್ಯಾಯ ದಾರಿಯನ್ನು ಕಂಡುಕೊಂಡಂತಾಯಿತೇ ಹೊರತು ಹೆಚ್ಚಿನದೇನನ್ನೂ ಸಾಧಿಸದೆ ಕೃತಿಯ ವಿಸ್ತರಣೆಗೆ ಸಹಾಯ ಮಾಡಿದೆ ಅಷ್ಟೆ. ಮುಂದೆ ಕತ್ತಲಾಯಿತು ಎನ್ನುವಾಗ ಇಲ್ಲಿ ಕೊಟ್ಟ ವಿವರಗಳ ವಿರುದ್ಧದ ವರ್ಣನೆಯನ್ನೇ ಮಾಡುತ್ತಾರೆ.
ಬುದ್ಧ ಪದೇ ಪದೇ ನೀರನ್ನು ಕೇಳಿ ಕೊನೆಗೆ ಕದಡಿದ ನೀರನ್ನೇ ತರಿಸಿ ಕುಡಿಯಲು ಯತ್ನಿಸಿದಾಗ ನೀರು ಪವಾಡವೆಂಬಂತೆ ತಿಳಿಯಾಗುವುದು ಬುದ್ಧನ ಉಪದೇಶದ ಫಲವಾಗಿ ಆನಂದನ ಮನಸ್ಸು, ಹಾಗೆಯೇ ಲೋಕವೇ ಪುನೀತವಾಗುವ ರೀತಿಗೆ ಸಂಕೇತವಾಗುವಂತಿದೆ. ಇಲ್ಲಿ ಆನಂದನು
‘…. …..ಅಮಮೇನಚ್ಚರಿಯೋ ತಥಾ
ಗತನಾಮರ್ದ್ಧಿಕತೆ ! ಏನದ್ಭುತವೋ ಅಮಮ
ಸುಗತನ ಮಹಾನುಭಾವತೆ……’
ಎಂಬ ಮಾತುಗಳ ಪುನರಾವರ್ತನೆಯೂ ಇದಕ್ಕೆ ಒತ್ತುಕೊಡಬಹುದು.
ಬುದ್ದನು ಕುಶಿನಾರಕ್ಕೆ ಹೋಗುವ ದಾರಿಯಲ್ಲಿ ಮರದಡಿಯಲ್ಲಿ ಮಲಗಿದನು ಎನ್ನುವಲ್ಲಿಗೆ ಕಾವ್ಯವನ್ನು ನಿಲ್ಲಿಸಿ ಕವಿಗಳು ತಾವು ಭಾವಿಸಿರುವ ತಂತ್ರವೊಂದರ ಅಳವಡಿಕೆಗೆ ತೊಡಗುತ್ತಾರೆ. ಅವನ ವ್ಯಕ್ತಿತ್ವ ನಿರ್ಮಾಣಕ್ಕೆ ತಮ್ಮ ಸ್ವಂತ ಮಾತಿನಲ್ಲಿ- ‘ಬಾರೆನ್ನ ಮನಸೆ ನೋಡಲ್ಲಿ’ ಮುಂತಾಗಿ ಸ್ವ-ಆಹ್ವಾನದ ನೆಪದಲ್ಲಿ ಚಿತ್ರಿಸತೊಡಗುತ್ತಾರೆ. ಇದು ‘ಗೊಲ್ಗೊಥಾ’ ದಲ್ಲಿಯೂ ಪಿಲಾತನೆದುರಿನಲ್ಲಿ ಏಸುವನ್ನು ನಿಲ್ಲಿಸಿ “ಏನರಿವನಾ ರಜೋಮತಿ ರೋಮಕಂ’ ಇತ್ಯಾದಿ ಪ್ರಾರಂಭಿಸುವ ರೀತಿಗೆ ಸಂವಾದಿಯಾಗಿದೆ. ವರ್ಣನೆ ಅಲ್ಲಿನಂತೆ ಬುದ್ಧನ ಆಧ್ಯಾತ್ಮಿಕ ವ್ಯಕ್ತಿತ್ವದ ಚಿತ್ರಣಕ್ಕೆ ತಕ್ಕ ಉಪಮೆ ವಿಶೇಷಣಗಳೊಂದಿಗೆ ಇದೆ. ಈ ಸ್ವನಿರೂಪಣೆಯ ಅಂತ್ಯವೂ ‘ಗೊಲ್ಗೊಥಾ’ ದಲ್ಲಿರುವ ಶೈಲಿಯ ರೀತಿಯದೇ ಆಗಿದೆ. ಅಲ್ಲಿ ೯೪ ನೇ ಪಂಕ್ತಿಯಿಂದ ಪ್ರಾರಂಭವಾಗುವ `ಈ ಹರೆಯದೀ ಶೋಭೆಯೀ ಜಗತ್ಪ್ರೇಮದೀ……..’ ಇತ್ಯಾದಿ ಸಾಲುಗಳನ್ನು ಇಲ್ಲಿನ ೧೫೮ ರಿಂದ ಆರಂಭವಾಗುವ ‘ಜ್ಞಾನದೀ ಧ್ಯಾನದೀ ಶಾಂತಿ ಕಾಂತಿಯೇ……’ ಎಂಬ ಸಾಲುಗಳಿಗೂ ಹೋಲಿಸಿದಾಗ ಇದು ಮನವರಿಕೆಯಾಗುತ್ತದೆ. ಆ ಪ್ಯಾರಾದ ಅಂತ್ಯವೂ ಎರಡರಲ್ಲೂ “ನೋಡ ! ಎಂಬುದರಿಂದಲೇ ಅಂತ್ಯವಾಗುತ್ತದೆ. ಪುಕ್ಕುಸ ಬುದ್ಧನ ಉಪದೇಶವನ್ನು ಕೇಳಿ ಹೊಗಳುವಾಗ ಕೊಡುವ ಉಪಮಾನಗಳು ‘…. ……ವ್ಯಾಪಾರಿಯಾದ ಆತನ ಬಾಯಲ್ಲಿ……..ಅವನ ಮನೋಧರ್ಮಕ್ಕೆ ತಕ್ಕಂತಿವೆ’ (ಡಾ| ವರದರಾಜರಾವ್) ಇಂಥ ಕಡೆಗಳಲ್ಲಿ ಕವಿಗಳು ಎಚ್ಚರದಿಂದಿದ್ದು ಔಚಿತ್ಯದೃಷ್ಟಿಯಿಂದ ಸ್ವಲ್ಪ ಸ್ವಾರಸ್ಯ ಉಳಿಯುವಂತೆ ಮಾಡಿದ್ದಾರೆ. ಅವನು ಹೊದಿಸಿದ ಹೊಂಬಟ್ಟೆ ‘ಸಂಧ್ಯಾರುಣಂ ಕೌಮುದಿಸುವಂತೆ’ ಕಳೆಗುಂದುವುದು ಲೌಕಿಕದ ವಸ್ತುವಿನಿಂದ ಅವನು ಬೆಳಗಬೇಕಾಗಿರದೆ ಅವನಿಂದಲೇ ಲೌಕಿಕವೂ ಒಂದು ಹದಕ್ಕೆ ಸಂಸ್ಕರಿಸಲ್ಪಡುತ್ತದೆ ಎಂಬುದನ್ನು ಧ್ವನಿಸುವಂತೆ ತೋರುತ್ತದೆ. ಅದಕ್ಕೆ ‘ಹೊಟ್ಟುಡುಗಿದಾ ನೆಲ್ಲಂತೆ’ ಎಂಬ ವರ್ಣನೆಯೂ ಪೂರಕವಾಗುತ್ತದೆ. ‘ಕೌಮುದಿಸುವಂತೆ’ ಎಂಬ ಮಾತು ಗಮನಾರ್ಹ. ‘ಶಾಂತತೆ’ಯ ಅನುಭವವನ್ನು ತಂದುಕೊಡುವಲ್ಲಿ ಅದು ಸಹಾಯ ಮಾಡುತ್ತದೆ. ಸಾಲವನದಲ್ಲಿ ಅವನು ಮಲಗಿದಾಗ ಪ್ರಕೃತಿಯೇ ಅವನಿಗೆ ಪೂಜೆ ಸಲ್ಲಿಸಿತೆಂದು ಹಳೆಯ ರೀತಿಯಲ್ಲಿಯೇ ವರ್ಣಿಸಲಾಗಿದೆ.
೩.೨೨ ರಿಂದ ೩೩೧ ರ ವರೆಗಿನ ಪಂಕ್ತಿಗಳ ಆನಂದ ಮತ್ತು ಬುದ್ಧರ ಪ್ರಶೋತ್ತರಗಳು ಚಿಕ್ಕ ಚಿಕ್ಕ ವಾಕ್ಯಗಳಿಂದ ಸಂಭಾಷಣೆಯ ಸ್ವಾರಸ್ಯದಲ್ಲಿ ಮುಂದುವರಿದು ನಾಟಕೀಯ ಅಂಶವನ್ನು ಸೇರಿಸಲು ಯತ್ನಿಸುತ್ತದಾದರೂ ಪ್ರಶ್ನೆಯ ಮಹತ್ವದ ದೃಷ್ಟಿಯಿಂದ ಆನಂದನ ಪ್ರಶ್ನೆ ಪ್ರಶ್ನಾರ್ಹವಾಗುತ್ತದೆ. ಇಷ್ಟು ದಿನ ಬುದ್ಧನ ಜೊತೆಗೇ ಇದ್ದು ಆನಂದನಿಗೆ ಸ್ತ್ರೀಯರ ವಿಷಯದಲ್ಲಿ ಹೇಗೆ ವರ್ತಿಸಬೇಕೆಂಬ ವಿಚಾರವೇ ತಿಳಿದಿರಲಿಲ್ಲ ಎಂಬುದು ಹಾಸ್ಯಾಸ್ಪದವಾಗುತ್ತದೆ. ಅವನು ಪ್ರಶ್ನೆ ಕೇಳುವ ರೀತಿಯೂ ಕೂಡ. ಮುಂದೆ ಬುದ್ಧನೇ ಹೇಳುವ
‘ಮರುಗದಿರು ದೀರ್ಘಕಾಲದ ಮನೋವಾಕ್ಕಾಯ
ಮೈತ್ರದಿ ತಥಾಗತನಿಗತಿ ನಿಕಟನಹೆ’
ಎಂಬ ಮಾತನ್ನು ಇಲ್ಲಿ ಸಮರ್ಥನೆಗೆ ಗಮನಿಸಬಹುದು.
ಬುದ್ಧನ ಪರಿನಿರ್ವಾಣದ ಅನಂತರ (ಗೊಲ್ಗೊಥಾ’ದಲ್ಲಿನಂತೆ)
‘ಈ ಶೋಕವಾರ್ತೆಯಂ ಮುಂದಿಳುಹಲೆನೆ ಗಾಳಿ
ಚಿಟ್ಟೆಯೂ ಟಿಟ್ಟಿಭಂ ಟಿಟ್ಟಿಸುತ ತೊಳಲಾಡೆ’
ಇತ್ಯಾದಿ ಪ್ರಕೃತಿಯು ಭಾಗವಹಿಸುವುದರ ವರ್ಣನೆ ಬುದ್ಧನ ಮಹಾತ್ಮೆಯನ್ನು ಪ್ರತಿಪಾದಿಸಲು ಬಂದದ್ದಾಗಿದೆ. ಆದರೆ ಮುಂದೆ
“……..ಬಂಧುವಿನ ದೇಹಾತ್ಯಯ
ಕಾಣಲಾರದೆ ಅಕಟ : ಆದಿತ್ಯನಸ್ತಮಿಸೆ”
ಎಂದೂ ವರ್ಣಿಸಲಾಗಿದೆ.
ಇದು ಪುನಃ ಅರ್ಥದ ಜಾಳುತನವನ್ನು ಒಟ್ಟು ಬಂಧದಲ್ಲಿ ಒಳಗೊಂಡಿರುವುದಕ್ಕೆ ಉದಾಹರಣೆಯಾಗುತ್ತದೆ. ಸೂರ್ಯನನ್ನು ದೇವರೆನ್ನುವ ಕಲ್ಪನೆ ಎಲ್ಲ ಧರ್ಮಗಳಲ್ಲೂ ಇದ್ದದ್ದೇ. ಇದೇ ಕೃತಿಯಲ್ಲಿ ಹಿಂದೆ ‘ಯಾವುದಕೆ ಹುಟ್ಟಿದೆಯೋ, ಇರವಿದೆಯೋ ಬೆಳೆವಿದೆಯೋ ಅದಕ್ಕೆ ನಷ್ಟ ಸಾಜ’ ಎಂಬ ಸತ್ಯವನ್ನು ಬುದ್ದನೇ ಆನಂದನಿಗೆ ಬೋಧಿಸುತ್ತಾನೆ. ಭೂಮಿಯ ಜೀವಿಗಳ ಬಗೆಗಿನ ಅವರೇ ತಿಳಿಯಬೇಕಾದ ಸತ್ಯ ಸೂರ್ಯನ ದೃಷ್ಟಿಯಿಂದ ಮಾತ್ರ ಬೇರೆಯಾಗಲು ಸಾಧ್ಯವಿಲ್ಲ. ಆದರೆ ತನ್ನ ಬಂಧುವಿನದೇ ದೇಹಾತ್ಯಯವನ್ನು ಕಾಣಲಾರದೆ ‘ಅಕಟ ಆದಿತ್ಯ ನಸ್ತಮಿಸೆ” ಎನ್ನುವ ವರ್ಣನೆ ಎಷ್ಟರ ಮಟ್ಟಿಗೆ ಸಂಗತ ಎಂಬುದು ಯೋಚಿಸಬೇಕಾದ ವಿಚಾರ. ಅದರಲ್ಲೂ ದೇಹದ ಅಂತ್ಯಕ್ಕೆ ಸೂರ್ಯನಂಥವನು ಚಿಂತಿಸುವುದರಲ್ಲಿ ಅರ್ಥವಿಲ್ಲ ಏಕೆಂದರೆ ಅವನ ಬಂಧುತ್ವ ದೇಹದೊಂದಿಗಲ್ಲ. ಹೀಗೆ ಮರ್ತ್ಯದ ವಿಚಾರಕ್ಕೆ ಅವರ್ತ್ಯದ ಸರಿಜೋಡಿ ಮಾಡುವ ಅಯಶಸ್ವಿ ಕ್ರಿಯೆ ನಡೆದುಕೊಂಡೇ ಬರುತ್ತದೆ.
ಆನಂದ ಮಲ್ಲರನ್ನು ಕುಲಕ್ರಮದಿಂದ ವಿಂಗಡಿಸಿ ಬುದ್ಧನ ಬಳಿಗೆ ಕಳಿಸುವ ವರ್ಣನೆಯನ್ನು
“ಕಾರಿರುಳಿನಲಿ ರಾಜಬೀದಿಯಲಿ ಕೆಯ್ಪಂಜ
ನೆತ್ತಿ ಹೋಹಂದು ಬೆಳಕೊಂದಂದೆ ಮನೆದೋರಿ
ಮಿಕ್ಕವಂ ಬಿಡುವಂತೆ… ….”
ಎಂಬುದು ಉಚಿತವಾಗಿದೆ. ಆದರೆ ಕಾಳಿದಾಸ ಇಂದುಮತಿಯ ಸ್ವಯಂವರದಲ್ಲಿ ಇದೇ ರೀತಿಯ ‘ಸಂಚಾರಿಣೀದೀಪಶಿಖೇವರಾತ್ರೌ…… ….’ ಎಂಬ ವರ್ಣನೆಯ ಸಾರ್ಥಕ್ಯ ಇಲ್ಲಾಗಿಲ್ಲ.
ಬುದ್ಧ ತನ್ನ ಪರಿನಿರ್ವಾಣದ ಕಡೆಯ ಹೊತ್ತಿನಲ್ಲಿ ಏನೇ ಅನುಮಾನವಿದ್ದರೂ ಕೇಳಿಬಿಡಿ ಎಂದು ಮತ್ತೆ ಮತ್ತೆ ಭಿಕ್ಷುಗಳನ್ನು ಕೇಳಿದಾಗ ‘ಭಿಕ್ಷುಗಳ ಸೊಲ್ಲಿಲ್ಲ ಸದ್ದಿಲ್ಲ ಸರವಿಲ್ಲ’ ಎಂಬ ವರ್ಣನೆ ತುಂಬ ಮನೋಹರವಾಗಿದೆ. ಇಲ್ಲಿನ ಮೌನ ಹೆಚ್ಚು ಪರಿಣಾಮಕಾರಿಯಾಗಿದೆ. ಅವರ ಆಗಿನ ಮನಸ್ಥಿತಿಯನ್ನು ಮಾತಿಗಿಂತ ಮಿಗಿಲಾಗಿ ವ್ಯಕ್ತಪಡಿಸುತ್ತದೆ. ಆದರೆ ಇದಕ್ಕೆ ಮುಂದೆ ‘ಬುದ್ಧನ ಧರ್ಮದಲ್ಲಿ ಸಂಘದಲ್ಲಿ ಮಾರ್ಗದಲ್ಲಿ ಶಂಕೆಯಿಲ್ಲ ಮಿತಿಯಲ್ಲ’ ಎಂದು ಸಂಕುಚಿತ ರೀತಿಯಲ್ಲಿ ವ್ಯಾಖ್ಯಾನಿಸಿ ಮನ ಧ್ವನಿಸುವ ಸಂಕೀರ್ಣ ಸ್ಥಿತಿಯನ್ನು ಸರಳಗೊಳಿಸಿಬಿಡಲಾಗಿದೆ.
೬೫೫ ನೇ ಪಂಕ್ತಿಯಿಂದ ಆರಂಭವಾಗುವ ವರ್ಣನೆಗೂ ಗೊಲ್ಗೊಥಾದ ೩೩೨ ನೆಯ ಪಂಕ್ತಿಯಿಂದ ಪ್ರಾರಂಭವಾಗುವ ವರ್ಣನೆಗೂ ಇರುವ ಸಾಮ್ಯ ವ್ಯತ್ಯಾಸಗಳೂ ಗಮನಾರ್ಹ. ತಂತ್ರದಲ್ಲಿ ಸಾಮ್ಯವಿದೆ. ವಿವರಣೆಯ ರೀತಿಯಲ್ಲಿ ವ್ಯತ್ಯಾಸವಿದೆ. ಅಲ್ಲಿ ಏಸು “ದೇವಸುತ”ನೆಂದು ಕಲ್ಪಿತನಾಗಿರುವುದರಿಂದ ಅವನು ಪುನಃ ಪರಮಾತ್ಮನನ್ನು ಸೇರಬೇಕಾಗಿರುವುದರಿಂದ ಉಪಮಾ ವಿವರಗಳೆಲ್ಲವೂ ಊರ್ಧ್ವಗಾಮಿತ್ವವನ್ನೇ ತಿಳಿಸುತ್ತವೆ. ಇಲ್ಲಿ ಬುದ್ಧ ಭಗವಂತನ ಅವತಾರವೇ ಎಂದು ಕಲ್ಪಿತವಾಗಿರುವುದರಿಂದ ಸರ್ವಾಂತರ‍್ಯಾಮಿಯೆಂಬುದರಿಂದ ಉಪಮಾ ವಿವರಗಳೆಲ್ಲವೂ ಅವನು ಪ್ರಕೃತಿಯಲ್ಲಿ ಲೀನವಾಗುವುದನ್ನು ತಿಳಿಸುವಂತಿವೆ. ಅವನ ಸಾವಿನ ಯೌಗಿಕ ವಿಧಾನದ ವಿವರವೂ ಇದನ್ನೇ ಸಮರ್ಥಿಸುತ್ತದೆ. ಅವರಿಬ್ಬರು ಸಾಯುವ ಸ್ಥಳ ಮತ್ತು ಅದಕ್ಕನುಸಾರವಾಗಿ ಇಟ್ಟಿ ರುವ (ಕಾವ್ಯಕ್ಕೆ) ಹೆಸರುಗಳೂ ಗಮನಾರ್ಹ. ಈ ಭೇದ ಅವರಿಬ್ಬರೂ ಬೋಧಿಸಿದ ತಾತ್ವಿಕ ದರ್ಶನಕ್ಕೂ ಸಂಬಂಧಪಡುವುದಾದರೆ ಕಲ್ಪನೆ ತೀರ ಪೇಲವವಾಗಿ ಕೃತಕವೆನಿಸುತ್ತದೆ. ಏಕೆಂದರೆ ಏಸುವಿನ ಆತ್ಮವನ್ನು ಊರ್ಧ್ವಗಾಮಿಯಾಗಿಯೂ ಬುದ್ಧನನ್ನು ಆಕಾಶದಲ್ಲಿ ಲೀನವಾಗುವಂತೆ ವರ್ಣಿಸಿದರೂ ಅವರಿಬ್ಬರ ತಾತ್ವಿಕ ದರ್ಶನ ಇಲ್ಲಿಯೇ ಬದುಕುವಂಥವು. ಪರಮಾತ್ಮ ಸರ್ವಾಂತಯ್ಯಾಮಿಯೆಂದಾಗ ಏಸುವಿನ ಆತ್ಮದ ಊರ್ಧ್ವಗಾಮಿತ್ವದ ವರ್ಣನೆಯ ಅರ್ಥವಿಲ್ಲದೇ ಹೋಗುತ್ತದೆ.
ಬುದ್ಧನ ‘ವ್ಯಯಧರ್ಮವೀ ಸಂಸ್ಕಾರ’ (ಜೀವಜಂತುಗಳೆಲ್ಲ ನಶ್ವರ) ಎಂಬ ಮಾತು ಇಡೀ ಬುದ್ಧನ ಜೀವನದ ಹಿನ್ನೆಲೆಯಲ್ಲಿ ಅರ್ಥಪೂರ್ಣವಾದುದು. ಇದು ಬುದ್ದ ಕಂಡುಕೊಂಡ ಸತ್ಯ. ಅದೇ ಅವನ ಅಂತಿಮ ವಾಕ್ಯವಾಯಿತು. ಆದರೆ ಇದು ಅವನ ಪ್ರಾರಂಭದ ವೈರಾಗ್ಯಕ್ಕೆ ಕಾರಣವಾದ ಇದೇ ಜೀವಜಂತುಗಳ ನಶ್ವರತೆಗೆ ಪರಿಹಾರವನ್ನು ಹುಡುಕುವ ಉದ್ದೇಶವನ್ನೇ ತಿರಸ್ಕರಿಸಿ ಅಥವಾ ಬಿಟ್ಟುಕೊಟ್ಟು ಕೊನೆಗೂ ಪ್ರಕೃತಿ ನಿಯಮಕ್ಕೆ ಬಾಗಿ ಅದುವರೆಗೂ ಇದ್ದ ಧೋರಣೆಯನ್ನೇ ತನ್ನದೇ ಆದ ರೀತಿಯಲ್ಲಿ ಹೇಳುವುದರಲ್ಲಷ್ಟರಲ್ಲಿಯೇ ಪರ‍್ಯಾವಸಾನವಾದ ಈ ಅರ್ಥಪೂರ್ಣ ವಿಫಲತೆ ಮತ್ತು ಜೀವನದ ಈ ನಿಗೂಢ ಅಸಂಗತತೆಯನ್ನು ಕಾವ್ಯವಸ್ತುವನ್ನಾಗಿಸಿಕೊಂಡು ಚಿತ್ರಿಸಬಹುದಾದ ಉತ್ತಮ ಅವಕಾಶವೆಂದನು. ಇಂಥ ಅನೇಕ ಉದಾಹರಣೆಗಳನ್ನು ಇತಿಹಾಸದಲ್ಲಿ ಗಮನಿಸಿಯೂ-ಕಳೆದುಕೊಂಡು ಕೇವಲ ಬುದ್ಧತತ್ವ ಬದ್ಧರಾಗಿ ಅವುಗಳನ್ನು ನಿರೂಪಿಸುವ ಸಾಧಾರಣ ಕಾರ್ಯದಲ್ಲಿಯೇ ತೃಪ್ತರಾಗಿದ್ದಾರೆ. ಇದೇ ಕಾವ್ಯವಸ್ತುವಾಗಿದ್ದಾಗ ಈ ಅರ್ಥದಲ್ಲಿ ಈಗ ಕೇವಲ ವಿವರವೆನ್ನಿಸುವ ಬೆಳಗು ಬೈಗುಗಳ (ಚಟುವಟಿಕೆಯ ಮೂಲಕ ವರ್ಣಿಸುವ) ವರ್ಣನೆಗಳಿಗೂ ವಿಶಿಷ್ಟ ಅರ್ಥ ಬರುತ್ತಿತ್ತು. (ಪಂಕ್ತಿ ೭೦ರಿಂದ ೯೩ರ ವರೆಗೆ ಮತ್ತು ೨೬೧ ರಿಂದ ೨೮೦ರ ವರೆಗೆ)-ಈ ಊಹೆಗೆ ಕೃತಿಯೊಳಗೇ ನೆಮ್ಮು ಸಿಕ್ಕುವುದರಿಂದ ಇದು ವಿಪರೀತವಾದದ್ದಲ್ಲವೆಂದು ಭಾವಿಸುತ್ತೇನೆ-ಬುದ್ಧನ ಅತ್ಯವೂ ಸಹಜವಾದದ್ದೇ ಆಗಿದ್ದು ಏಸುವಿನ ಸಾವಿನಲ್ಲಾದಂತೆ ನಾವು ಏನನ್ನೋ ಕಳೆದುಕೊಳ್ಳುತ್ತಿರುವಂತೆ ಅನ್ನಿಸುವುದಿಲ್ಲ. ಅದು ಹಾಗನ್ನಿಸಬೇಕಾಗಿತ್ತೆಂದರ್ಥವಲ್ಲ. ಅದು ಹಾಗಿರುವುದರಿಂದಲೇ ಕೃತಿಯ ಅನುದ್ವಿಗ್ನತೆಗೆ ಕಾರಣವಾಗಿದೆ. ಆದರೆ ಅದಿಷ್ಟೇ ಕೃತಿಗೆ ಮಹತ್ವ ತಂದುಕೊಟ್ಟಿಲ್ಲವೆಂಬುದಷ್ಟೇ ಗಮನಿಸಬೇಕಾದ ಅಂಶ.
ಗೊಲ್ಗೊಥಾದ ಕಡೆಯ ಭಾಗ ಪ್ರಾರಂಭವಾಗುವ ರೀತಿಯಲ್ಲಿಯೇ ವೈಶಾಖಿಯ ಭಾಗವೂ ಪ್ರಾರಂಭವಾಗುತ್ತದೆ,
ಗೊಲ್ಗೊಥಾ : ‘ಅಂದಿದೋ ವಸಂತ ಪೂರ್ಣಮಯ ಭೃಗುವಾರದಾ…… …….’
ವೈಶಾಖಿ : ಅಂದು ವೈಶಾಖ ಪೂರ್ಣಮಯ ಕುಜವಾರದಾ….. …….’
ಪ್ರತಿ ಅಂಶವೂ ಒಂದೇ ಆದರೂ (ವಾರವೊಂದನ್ನು ಬಿಟ್ಟು) ಪದ ಬಳಕೆಯಲ್ಲಿನ ಭಿನ್ನತೆಯಿಂದ ಕಾವ್ಯದ ಏಕತಾನತೆಯನ್ನು ತಪ್ಪಿಸುವ ಪ್ರಜ್ಞೆ ಮಾತ್ರ ಕಂಡುಬರುತ್ತದೆ.-ಈ ಏಕತಾನತೆಯ ಅಂಶ ಮೂಲಭೂತವಾಗಿ ಎರಡರ ವಸ್ತುವಿನಲ್ಲಿಯೇ ಇದೆ
ಸಾವಿನ ನಂತರದ ಪರಿಣಾಮವನ್ನು ವರ್ಣಿಸುವಾಗಲೂ ಎರಡೂ ಕಡೆಯೂ ‘ಗಡಗಡನೆ ಪೊಡವಿ ನಡುಗಿತು’ ಎಂದೇ ಪ್ರಾರಂಭಿಸುತ್ತಾರೆ.
ಮಲ್ಲರಿಗೂ ಬುದ್ಧನಿಗೂ, ಭಿಕ್ಷುಗಳಿಗೂ ಬುದ್ಧನಿಗೂ ಇರುವ ಅನಿವಾರ್ಯ ಸಂಬಂಧ (ಆನಂದನೊಬ್ಬನನ್ನು ಬಿಟ್ಟು) ಇರಬೇಕಾದಷ್ಟು ತೀವ್ರವಾಗಿ ಕೃತಿಯಲ್ಲಿ ಸ್ಪಷ್ಟವಾಗದೆ ಬುದ್ಧನ ಸಾವಿನ ಸುದ್ದಿಯಿಂದ ಅವರು ಬಿದ್ದು ಬಿದ್ದು ಗೋಳಾಡುವುದು ಕಾವ್ಯದಲ್ಲಿ ಅನಿರೀಕ್ಷಿತವಾಗಿ ಅಹಿತವೆನ್ನಿಸುತ್ತದೆ. ಹಾಸ್ಯಾಸ್ಪದ ಅನ್ನಿಸಿದರೂ ಆಶ್ಚರ್ಯವಿಲ್ಲ. ಅದೂ ಅಲ್ಲದೆ ಬುದ್ಧನದು ತುಂಬಿದ ಬಾಳಾದುದರಿಂದ ಅವನಿಂದ ದೊರೆಯಬಹುದಾದ ಲಾಭವೆಲ್ಲಾ ಆಗಲೇ ಸಂದಿರುವುದರಿಂದ ಈ ಮಟ್ಟದ ಗೋಳುಗರೆಯುವಿಕೆ ಅತಿ ಹೆಚ್ಚೆನಿಸುತ್ತದೆ. ಬುದ್ಧನೂ ಸಾಯುವಾಗ ಏಸುವಿನಂತೆ ಆರ್ತಧ್ವಾನದಿಂದ ಅರಚುವುದಿಲ್ಲ. ಅವನ ಸಾವಿಗೂ ಇವನ ಸಾವಿಗೂ ವ್ಯತ್ಯಾಸವಿದ್ದರೂ ಸಾವಿನ ಸಂಕಟ ಇವನ ಒಡಲಲ್ಲೂ ಇದ್ದೇ ಇರುತ್ತದೆ. ಆದರೆ ಏಸುವಿನ ಆರ್ತಧ್ಯಾನ ಕೇವಲ ನೋವಿಗಾಗಿಷ್ಟೇ ಅಲ್ಲ. ಅದರ ಹಿಂದೆ ಅಪಾರವಾದ ಅರ್ಥದ ಭಾವಕೋಶವಿದೆ.
ಕಾವ್ಯದ ಅಂತ್ಯ ಶಾಂತ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ಚಿತ್ರಿಸಿದ್ದರಿಂದ ಕಥನ ಕವನ ಆರಂಭದಿಂದಲೂ ಪಾಲಿಸಿಕೊಂಡು ಬಂದ ಅನುದ್ವಿಗ್ನತೆಯ ವಾತಾವರಣಕ್ಕೆ ಉಚಿತ ಮುಕ್ತಾಯವಾಗಿದೆ. ಕಾವ್ಯದ ಸಾಮಾನ್ಯತೆಯ ನಡುವೆಯೂ ಗಮನ ಸೆಳೆಯುವ ಅಂಶ ಇದೊಂದೇ. ‘ಗೊಲ್ಗೊಥಾ’ದ ಭಾವತೀವ್ರತೆ ಇಲ್ಲಿಲ್ಲದೆ ಬುದ್ದನೆಂದ ಕೂಡಲೇ ನೆನಪಾಗುವ ಶಾಂತಭಾವಕ್ಕೆ ತಕ್ಕಂತೆಯೇ ಕಾವ್ಯದ ನಡಿಗೆ ಮತ್ತು ಕೆಲಮಟ್ಟಿಗೆ ಸ್ವಭಾವ ರೂಪುಗೊಂಡಿದೆ.
ಇಲ್ಲಿ ಬುದ್ಧನಿಗೆ ಪರ‍್ಯಾಯವಾಗಿ ತಥಾಗತ, ಭದಂತ, ಭಗವಂತ, ಶಾಸ್ತ್ರ, ಅಮಿತಾಭ, ಗೌತಮ ಇವೇ ಮೊದಲಾದ ಹೆಸರುಗಳನ್ನು ವೈವಿಧ್ಯಕ್ಕಾಗಿ ಬಳಸಿದಂತೆ ತೋರುತ್ತದೆ. ಅದು ತಕ್ಕಮಟ್ಟಿಗೆ ಸಾಧಿತವಾದರೂ ಪ್ರತಿಯೊಂದು ಹೆಸರಿಗೂ ತನ್ನದೇ ಆದ ಅರ್ಥವಿದ್ದು ಅವುಗಳನ್ನು ಸನ್ನಿವೇಶದಲ್ಲಿ ಅರ್ಥವತ್ತಾಗಿ ಬಳಸುವ ಯತ್ನ ಕಂಡುಬರುವುದಿಲ್ಲ. ಕಾವ್ಯದ ಚೌಕಟ್ಟಿನಲ್ಲಿ ಅಷ್ಟೊಂದು ಅವಕಾಶವೂ ಇಲ್ಲ.
ವೈಶಾಖಿಯಲ್ಲಿ ತತ್ವಗಳನ್ನು ಕಾವ್ಯವನ್ನಾಗಿ ಪರಿವರ್ತಿಸುವ ಹಂಬಲವಿದೆಯಾದರೂ ಆ ರೂಪವನ್ನು ಮಾತ್ರ ತೊಡಿಸಲಾಗಿದೆಯಷ್ಟೆ. ಅದೇ ಜೀವವಾಗಬೇಕಾಗಿದೆಯಾದರೂ ಕಾವ್ಯಾತ್ಮಕತೆಯಲ್ಲಿ ಜೀವಾತುವಾಗಿ ಕಾವ್ಯವನ್ನು ನಡೆಸುತ್ತಿಲ್ಲ. ಅವರು ಅದೆಷ್ಟೇ ಆಲಂಕಾರಿಕವಾಗಿ ಹೇಳಿದ್ದರೂ ಆ ತತ್ವಗಳು ಒಬ್ಬ ಪಂಡಿತ ವಾಕ್ಚಾತುರ್ಯದಿಂದ ಬೇಸರ ಬರದಂತೆ ಉಪದೇಶ ಮಾಡಿದ ಉಪನ್ಯಾಸದ ಅನುಭವವೂ ಅಲ್ಲಲ್ಲಿ ಉಂಟಾಗುತ್ತದೆ. ಬೌದ್ಧಮತದ ತತ್ವಶಾಸ್ತ್ರದ ಪಾರಿಭಾಷಿಕ ಪದಗಳಿಗೆ ಇಲ್ಲಿ ಅರ್ಥ ತಿಳಿಯುತ್ತದೆ. (ಬ್ರಹ್ಮವಿಹಾರ, ಸಪ್ತಧನ, ಆರ್ಯವಷ್ಟಾಂಗಿಕ ಮಾರ್ಗ ಇತ್ಯಾದಿ) ಇವುಗಳನ್ನು ಬೋಧನೆಯ ರೂಪದಲ್ಲಿ ವಿಸ್ತರಿಸುವುದೇ ಈ ಕಾವ್ಯದ ಬಹುಭಾಗವನ್ನು ಆಕ್ರಮಿಸಿದೆ.
ರಗಳೆಯ ಉಪಯೋಗದ ರೀತಿ ಇಲ್ಲಿ ಗಮನಿಸಬೇಕಾದ ಒಂದು ಪ್ರಮುಖ ಅಂಶ. ಐದೈದು ಮಾತ್ರೆಗಳ ನಾಲ್ಕು ಗಣಗಳ ಸಾಲುಗಳುಳ್ಳ ದ್ವಿಪದಿಯಿಂದ ಇದು ರಚಿತವಾಗಿದೆ. ಹರಿಹರನ ರಗಳೆಯ ರೀತಿಯನ್ನೇ ಇಲ್ಲಿ ಅನುಸರಿಸಲಾಗಿದೆ ಎಂದರೆ ತಪ್ಪೇನೂ ಆಗಲಾರದು. ಪ್ರಾಸಗಳ ಕಟ್ಟಿಲ್ಲದಿರುವುದೇ (ಆದಿ ಅಂತ್ಯ ಪ್ರಾಸ) ಅದಕ್ಕಿಂತ ಭಿನ್ನವಾದ ಅಂಶ. ಆದರೆ ಅನುಪ್ರಾಸ ಮತ್ತು ಅಂತ್ಯಪ್ರಾಸವನ್ನು ಸಾಧ್ಯವಾದಷ್ಟು ಮಟ್ಟಿಗೆ ಉಳಿಸಿಕೊಳ್ಳಲಾಗಿದೆ. ಛಂದಸ್ಸಿನ ಬಗೆಗೆ ಅವರಿಗೆ ಇದು ಆಂಗ್ಲ ಸಾಹಿತ್ಯದಿಂದ ಅನುಕರಿಸಿದ್ದೆಂದು ಹೇಳಿಕೊಳ್ಳುವುದಕ್ಕಿಂತ ಪಂಪನ ಲಲಿತ ರಗಳೆಯ ಅನುಕರಣೆ ಎಂದರೆ ಹೆಚ್ಚು ಸಮಾಧಾನವಾಗುವಂತೆ ತೋರುತ್ತದೆ.’ (ಮುನ್ನುಡಿಯನ್ನು ಓದಿದಾಗ). ಛಂದಸ್ಸಿನ ವೈಶಿಷ್ಟ್ಯಗಳ ಬಗೆಗೆ ಅವರ ಮಾತುಗಳನ್ನೇ ಇಲ್ಲಿ ಉದ್ದರಿಸಬಹುದು. “……..ಆಂಗ್ಲ ಕವಿಗಳ “ಸರಳ ರಗಳೆಯಿಂದ ಎತ್ತಿಕೊಂಡಿರುವಂತೆ ತೋರಬಹುದಾದರೂ ಆ ಭಾವನೆ ಬರೇ ಹೋಲುವೆಯನ್ನು ಕುರಿತು ಮಾತ್ರ ಒಪ್ಪಬಹುದಲ್ಲದೆ ಅದರ ಜೀವಾಳವನ್ನು ಕುರಿತದ್ದಲ್ಲ. ಏಕೆಂದರೆ ಆಂಗ್ಲ ಸರಳ ರಗಳೆಯ ಪ್ರತ್ಯೇಕ ಚರಣದಲ್ಲಿ ೩-೩ ಮಾತ್ರೆಗಳ ಗುರ್ವಂತವಾದ ೫ ಗಣಗಳ ಒಟ್ಟಾರೆ ೧೫ ಮಾತ್ರೆಗಳಿವೆ. ನಮ್ಮ ಛಂದಸ್ಸಿನಲ್ಲಾದರೆ ೫-೫ ಮಾತ್ರೆಗಳ ೪ ಗಣಗಳ ಒಟ್ಟಾರೆ ೨೦ ಮಾತ್ರೆಗಳಿವೆ. ಪ್ರತ್ಯೇಕ ಚರಣವೂ ಗುರ್ವಂತವಾಗಬೇಕೆಂಬ ನಿರ್ಬಂಧವೂ ಇಲ್ಲ……..ಪಂಪ ಭಾರತದಲ್ಲಿಯ ರಗಳೆಯಂತೆ ಪ್ರಾಸದ ತೊಂದರೆಯೇ ಇಲ್ಲ ; ಮತ್ತು ಆ ಲಲಿತ ರಗಳೆ ಹಾಗೆ ಪ್ರಾಸಬದ್ದವಾದ ದ್ವಿಪದಿಗಳಿಂದ ಒಟ್ಟಯಿಸಿದೆಯಾದರೆ ಇದರ ಒಂದೊಂದು ಖಂಡದಲ್ಲಿ ಇಂತಿಷ್ಟೇ ಚರಣ ಗಳು ಇರಬೇಕೆಂಬ ಆ ನಿಯಮವೂ ಇಲ್ಲ. ಎಷ್ಟು ಚರಣಗಳೂ ಇರಬಹುದು…….” ಆದ್ದರಿಂದ ಇದನ್ನು “ಲಲಿತ ರಗಳೆಯೆಂದು ಕರೆಯಲೊಪ್ಪದೆ” ….. ….. .೫-೫ ಮಾತ್ರೆಗಳ ೪-೪ ಗಣಗಳು (ಪ್ರತಿಖಂಡದ ಕೊನೆಯ ಚರಣದ ಅಂತಿಮ ಗಣದಲ್ಲಿ ಮಾತ್ರ ವಿರಾಮದ ಬಗ್ಗೆ ತಾನೆ ಗುರ‍್ವಂತವಾದ ನಾಲ್ಕು ಮಾತ್ರೆಗಳೂ) ಇದ್ದು ಇದು ‘ಝಂಪೆ” ಎಂಬ ಲೋಕ ವಿಶ್ರುತ ತಾಳವನ್ನು ಇಷ್ಟು ಪ್ರತ್ಯೇಕವಾಗಿ ಒಂದೇ ಒಂದು ಇಳಿಯಷ್ಟಾದರೂ ತಪ್ಪದ ಅನುಸರಿಸುವುದರಿಂದ ಈ ಛಂದಸ್ಸಿಗೆ ‘ಝಂಪೆ’ ಎಂಬ ಅನ್ವರ್ಥ ನಾಮವೇ ನೇರಾಗಿ ಒಪ್ಪುತ್ತದೆ ಎಂದು ಯಥಾವತ್ತಾಗಿ ಇತ್ಯರ್ಥಿಸಬಹುದು. ಈ ಬಗ್ಗೆ ತ್ರಿಪುಡೆ ಎಂದು ಹೆಸರಾದ ಛಂದಸ್ಸಿನ ಉದಾಹರಣೆಯ ಸಾಂಪ್ರದಾಯಿಕ ಬೆಂಬಲವೂ ಬೇಕಾದಷ್ಟಿದೆ”. ಮೇಲಿನ ಉದ್ದರಣೆಯಿಂದ ಅವರ ಛಂದಸ್ಸಿನ ವೈಶಿಷ್ಟ್ಯ ಅವರೇ ಭಾವಿಸಿದಂತೆ ಏನು ಎಂಬುದು ತಿಳಿಯುವುದಷ್ಟೇ ಆಲ್ಲ ಹೀಗೆ ತಮ್ಮ ಕಾವ್ಯಕ್ಕಿಂತ ಮಿಗಿಲಾಗಿ ಕಾವ್ಯದ ಛಂದಸ್ಸಿನ ಮತ್ತು ಇತರ ಶಾಸ್ತ್ರೀಯತೆಯ ಬಗೆಗೆ ಹೆಚ್ಚು ಗಮನ ನೀಡಿದ್ದಾರೆಂಬುದು ಅರಿವಾಗುತ್ತದೆ.
ಈ ಕಾವ್ಯದ ಇತರ ವೈಶಿಷ್ಟ್ಯಗಳನ್ನು ಹೀಗೆ ಗುರುತಿಸಬಹುದು.
೧ ಭಾಷೆಯ ಓಟದಲ್ಲಿ ನಿರರ್ಗಳತೆ. ಆದರೆ ಅರ್ಥದ ಕ್ಲಿಷ್ಟತೆ ಅಂದರೆ ಪಾಂಡಿತ್ಯ ಪ್ರಿಯತೆ ;
೨ ಟಿಪ್ಪಣಿಗಳಲ್ಲಿ ಶುಷ್ಕ ಪಾಂಡಿತ್ಯದ ಕಡೆ ಹೆಚ್ಚು ಒಲವು ;
೩ ಎರೆಡೂ ಮಹಾ ಪುರುಷರ ಅಂತ್ಯ ದಿನಗಳನ್ನೇ ಆಯ್ದುಕೊಂಡಿರುವುದು ;
೪ ಒಂದು ಸಾವು ಸಹಜವಾದರೆ ಮತ್ತೊಂದು ಅಸಹಜ ;
೫ ಇಂಗ್ಲಿಷ್, ಲ್ಯಾಟಿನ್, ಹೀಬ್ರೂ ಮುಂತಾದ ಭಾಷೆಯ ಪದಗಳನ್ನು ಕನ್ನಡಕ್ಕೆ ಮೊಟ್ಟಮೊದಲು ಅನುವಾದಿಸುವ ಸವಾಲನ್ನೆದುರಿಸಿರುವುದು ; ಅದರಲ್ಲಿ ತಮ್ಮದೇ ಆದ ರೀತಿಯನ್ನು ಅನುಸರಿಸಿರುವುದು ಮತ್ತು ಅಲ್ಲಿ ಭಾಷಾ ಶಾಸ್ತ್ರೀಯ ವಿಧಾನವನ್ನು ಅನುಸರಿಸಲು ಯತ್ನಿಸಿರುವುದು;
೬ ಸಾಧ್ಯವಾದ ಕಡೆಯಲ್ಲೆಲ್ಲಾ ಆಧಾರ ಗ್ರಂಥದ ಸಾಲುಗಳನ್ನೇ ಅನುವಾದಿಸಿ ಕೊಟ್ಟಿರುವುದು.
‘ಪೈ’ಗಳಿಗೆ ಕಾವ್ಯವಾಗಿಯೇ ಅದರ ಸಂಗತ ಪ್ರತಿಪಾದನೆಗಿಂತ ಬಾಹ್ಯದ ಹಿರಿಮೆಗಳು ಮುಖ್ಯವಾಗಿವೆ. ಕಾವ್ಯದ ಪಾಂಡಿತ್ಯಮಯತೆ ಹೊಸ ಪದಗಳ ಸೃಷ್ಟಿ ಅನುವಾದದಲ್ಲಿನ ವೈಶಿಷ್ಟ್ಯ ವಸ್ತುವಿನ ವಿವರದ ಚಾರಿತ್ರಿಕ ನಿಖರತೆ ಇದು ಪಡೆದುಕೊಂಡಿರುವ ಆಧ್ಯಾತ್ಮಿಕ ಪರಿವೇಷವನ್ನು ಸಾಧ್ಯವಾದಷ್ಟು ಅದಕ್ಕೆ ಬದ್ಧರಾಗಿದ್ದು ಕಾಯ್ದುಕೊಳ್ಳುವುದು ಇವುಗಳ ಬಗ್ಗೆ ಗಮನವಿದ್ದಷ್ಟು ಅದೊಂದು ಮನುಷ್ಯ ಜೀವವಾಗಿ ಅಂಥ ತೀವ್ರ ಸ್ಥಿತಿಯಲ್ಲಿ ಅದರ ಸ್ಥಿತಿ ಪ್ರತಿಕ್ರಿಯೆ ಏನು ಎಂಬುದರ ಬಗ್ಗೆ ಹೆಚ್ಚು ಗಮನವಿಲ್ಲ. ಹೀಗಾಗಿ ಆಧ್ಯಾತ್ಮಿಕತೆಯನ್ನು ಸದಾ ಕಾಪಾಡಿಕೊಳ್ಳಲು ಯತ್ನಿಸಲಾಗಿದ್ದೂ ಮಾನವೀಯವಾಗಿ ಅದಕ್ಕೆ ತಾವು ಮಿಡಿದ ಭಾವನೆಗಳನ್ನೂ ಕೊಡಲು ಯತ್ನಿಸಿದ್ದಾರೆ. ಆದರೆ ಈ ಎರಡರ ಸಮೀಕರಣದಲ್ಲಿ ಬರುವ ಅತಾರ್ಕ್ಯ ಮತ್ತು ಸಾಂಗತ್ಯರಾಹಿತ್ಯವನ್ನು ಅವರು ಗಮನಿಸಿದಂತಿಲ್ಲ. ಆದ್ದರಿಂದ ಈ ಎರಡೂ ಅಂಶಗಳನ್ನೂ ಗುರುತಿಸಲೇಬೇಕಾದುದು ಅನಿವಾರ್ಯವಾದಂತೆಯೇ ಅದರ ಫಲವಾಗಿ ಈ ದೋಷವನ್ನೂ ಗುರುತಿಸಲೇಬೇಕಾಗಿದೆ. ಆ ಪ್ರಯತ್ನವನ್ನು ಇಲ್ಲಿ ಮಾಡಿದ್ದೇನೆಂದು ಭಾವಿಸಿದ್ದೇನೆ.
ಒಟ್ಟಿನಲ್ಲಿ ಮಹಾತ್ಮರ ಕೊನೆಯ ದಿನದಂಥ ವಸ್ತುವನ್ನೇ ಕಾವ್ಯವಸ್ತುವಾಗಿಸಿಕೊಂಡು ವಿಶಿಷ್ಟ ರೀತಿಯಲ್ಲಿ ಕನ್ನಡಕ್ಕೆ ಹೊಸ ಕಾವ್ಯದ ಕೊಡುಗೆಯನ್ನು ನೀಡಲು ಯತ್ನಿಸಿ, ಪಾಂಡಿತ್ಯಪ್ರಿಯತೆಯಲ್ಲೂ ಸುಲಲಿತತೆಯನ್ನು ಕಾಯ್ದುಕೊಂಡು, ಛಂದಸ್ಸಿನಲ್ಲಿಯೂ ವೈಶಿಷ್ಟ್ಯ ವನ್ನು ಮರೆಯಲೆತ್ನಿಸಿದ ಅಪೂರ್ವ ಅವಳಿ ಪ್ರಯತ್ನವಾಗಿ ಮೊದಲು ಹೊರಬಂದ ಕೃತಿಗಳಿವು. ಆ ದೃಷ್ಟಿಯಿಂದ ಕನ್ನಡ ಕಾವ್ಯದ ಇತಿಹಾಸದಲ್ಲಿ ಚಾರಿತ್ರಿಕವಾಗಿ ತನ್ನ ಮಹತ್ವವನ್ನು ಉಳಿಸಿಕೊಳ್ಳುತ್ತವೆ ಎನ್ನಬಹುದು. ಗುಣದೋಷ ಎರಡರಲ್ಲಿಯೂ ‘ಗೊಲ್ಗೊಥಾ’ ಮತ್ತು ‘ವೈಶಾಖಿ’ಗಳೆರಡರಲ್ಲಿ ‘ಗೊಲ್ಗೊಥಾ’ವೇ ಹೆಚ್ಚು ಗಮನ ಸೆಳೆಯುತ್ತದೆ.
.
ಗ್ರಂಥ ಋಣ :
‘ಗೊಲ್ಗೊಥಾ ಮತ್ತು ವೈಶಾಖಿ’
ಮೂರನೆಯ ಮುದ್ರಣ ೧೯೬೬
ಎರಡು ಕವನಗಳು
ಎರಡು ಕವನಗಳು
-ಆನಂದ ಝಂಜರವಾಡ
೧ ರಾಜ್ಯೋತ್ಸವದ ಪದ್ಯ
ರಾಜ್ಯೋತ್ಸವದ ದಿನ ಧ್ವಜಕಟ್ಟೆಗೆ ಸುಣ್ಣ-ಬಣ್ಣ ಬಳಿದು
ಅಜ್ಜನ ಭಾವಚಿತ್ರಕ್ಕಿಷ್ಟು ಹೂಮಾಲೆ ಹಾಕಿ, ಈಬತ್ತಿ ಎಳೆದು,
ತೆಂಗಿನಕಾಯಿ ಒಡೆದು,
ಹಸಿ ಕೊಬ್ಬರಿ-ಚುರಮುರಿ-ಚಹಾ ಸವಿದು
ಬೀದಿಯ ತುಂಬ ಬೆಳ್ಳನೆ ಯುನಿಫಾರ‍್ಮಿನ-
ಮಕ್ಕಳ ಕೂಚು-ಮಿಲ್ಟ್ರಿ ಬ್ಯಾಂಡು–ಕಾಂಗ್ರೆಸ್ ಭಾಷಣಗಳ
ಸಂಭ್ರಮದ ಸಂದಣಿಯಲ್ಲಿ ಸಿಕ್ಕು-
ಘಟ ಘಟನೆ ರೆಕ್ಕೆ ಬಡಿಯುತ್ತಿರುವ ತ್ರಿವರ್ಣ ಬಾವುಟದ ಕೆಳಗೆ
ಬೀಗಿ-ಹೆಮ್ಮೆಯಿಂದ ನಡೆಯುತ್ತಲೇ ಇದ್ದೇವೆ.
ರಜೆಯ ಬೇಸರ ಕಳೆಯಲಾಗದೆ,
ಮ್ಯಾಟ್ನಿ ನೋಡಿ, ವ್ಹಾಲಿಬಾಲ್ ಆಡಿ,
ಹತ್ತಿರದ ಹಳ್ಳಿಯ ಹಸಿರು ಹೊಂಡದಲ್ಲೀಜಾಡಿ,
ಉರಿ ಬಿಸಿಲ ಸುಖದಲ್ಲಿ ಮೈ ಮರೆಯುತ್ತಲೇ ಇದ್ದೇವೆ.
ಕೆಲಸ ಸಿಕ್ಕದೇ ಒದ್ದಾಡಿ, ಸಿಕ್ಕನಂತರ ಸಂಬಳಕ್ಕಾಗಿ ಬಡಿದಾಡಿ-
ಸಂಪು-ಮುಷ್ಕರ-ಘೇರಾವೋಗಳ ಗುಂಪಿನಲ್ಲಿ
ದುರ್ಬಲ ತೋಳುಗಳನೆತ್ತಿ, ಜಯಕಾರ ಹಾಕುತ್ತ-
ಬಗ್ಗು ಬಡಿಯುತ್ತಿರುವ ಪ್ರಜಾತಂತ್ರದ ಬೀಸುದೊಣ್ಣೆಯ ಲಾಠೀಪ್ರಹಾರಗಳ
ಬೆನ್ನ ಬಾಸುಂಡೆಗೆ ಬಿಸಿ ಶಾಖದ ನೋವು ನರಳುತ್ತ-
ಘಾಯಗಳಿಗೆಲ್ಲ ಪೇಟೆ ಧಾರಣೆಯ ಉಪ್ಪು-ಮೆಣಸಿನಕಾಯಿ
ಭಗ-ಭಗ ಉರಿಯುತ್ತ,
ಕ್ಷಣ-ಕ್ಷಣಕ್ಕೂ ಕ್ಷೀಣಿಸುತ್ತಲೇ ಇದ್ದೇವೆ.
ಫೈಲು-ರಜಿಸ್ಟರು-ಕ್ಲಾರ್ಕು-ಕೌಂಟರುಗಳಲ್ಲಿ
ಕೆಂಪು-ನೀಲಿ ಮನೆಯ ಶಬ್ದಗಳು ಒಣಗುತ್ತ,
ನೋಟಿನ ಕಟ್ಟುಗಳ ಸುಟ್ಟು ಮೈ ಕಾಸಿದರೂ
ನಡುಕ ನಿಲ್ಲದೇ ಚಳಿ ಕೊರೆಯುತ್ತಲೇ ಇದೆ.
ಎರಡರ ನೋಟು ಜಾರದೇ ಪೇ ಬಿಲ್ಲು ದಾಟುವದಿಲ್ಲ.
ಕಟ್ಟಿದ ಬೀದಿ-ಬ್ರಿಜ್ಜು-ಕೆರೆ-ಬಾವಿಗಳು
ಹೊಸ ಕನಸುಗಳತ್ತ ಹೆಜ್ಜೆಗಳ ಒಲಿಸಲಿಲ್ಲ
ರೆಕ್ಕೆಗಳ ಬಲಿಸಲಿಲ್ಲ.
ಬೇಸಿಗೆಯ ಜವುಳು-ಬಂಜರಿನಲ್ಲಿ ತ್ರಸ್ತ ಜೀವಿಗಳು ಕಂಡ ನನಸು-ಯಾತನೆ
-ಗಳಿಗೆ ಯಾವ ಹೊಸ ಯೋಜನೆಗಳು ತಂಪು ಹನಿಸಲಿಲ್ಲ.
ಸೊಂಪಾದ ಹಸಿರು ಮಿರುಗಲ್ಲು.
ದಿನಪತ್ರಿಕೆಯ ಸುದ್ದಿಗಳಲ್ಲಿ ಹುಟ್ಟಿ ಸಾಯುತ್ತಿರುವ
ಹಡಗು-ಲಂಗರು-ಆಯಾತ-ನಿರ್ಯಾತ-ಸಾಲ-ಸಹಾಯ-ಶೋಧನೆಗಳು
ತುಟ್ಟಿಭತ್ತೆ-ಚುನಾವಣೆ-ವಿರೋಧದ ನೂರೆಂಟು ಸೌಲಭ್ಯ ಸುಗ್ರೀವಾಜ್ಞೆಗಳು ಸಮಿತಿ-ಸಭೆ-ಸೇವಾಶ್ರಮ-ಭಜನೆ-ಪುರಾಣ-ಪ್ರಾರ್ಥನೆ-ಮೌನಗಳು
ಸಂಕಲನ-ವೇದಿಕೆ-ಬಿಸಿ ಚರ್ಚೆ ಪ್ರಕ್ರಿಯೆಗಳು
ಯಾವುದಕ್ಕೂ ಸಮೃದ್ಧಿಯ ನೆಲ ಉಕ್ಕಲಿಲ್ಲ
ಹೊಕ್ಕಳ ಹುರಿಗೆ ಜಂಗು ಹರಿದ ನಂಜೇರಿ
ಸಂಬಂಧಿಗಳ ಕಿಲುಬು ಕಕ್ಕುವ ಸೊಕ್ಕು ಮುರಿಯಲ್ಲು
ಸಂಜೆವರೆಗೂ ಸುಡುವ ಭಟ್ಟಿಗಳಲ್ಲಿ ಸುಟ್ಟು,
ಕರಕಾದ ಹೆಬ್ಬೆಟ್ಟನ್ನೊತ್ತಿ, ಚಿಲ್ಲರೆ ಎಣಿಸಿ,
ಊರ ಹೊರಗೆಲ್ಲೊ ಕಾವಳದಲ್ಲಿ ಬೆಂಕಿ ಹೊತ್ತಿಸಿ,
ಕಾಳು-ಕುದಿಸಿ,
ಅರೆ-ಬತ್ತಲೆಯಾಗಿ ಮುದುಡಿ ಮಲಗಿದವರೆಲ್ಲ
ನಮ್ಮವರೇ ಎಂದು
ನಮಗೆಂದೂ ಎನಿಸಲೇ ಇಲ್ಲ.
ಹೊತ್ತಿ ದಳ್ಳುರಿಯಲ್ಲಿ ಕಾಡು ದಹಿಸುತ್ತಿದೆ.
ಚಿಗುರುತ್ತಿರುವ ಸಸಿ-ಕಣ್ಣೊಡೆದ ಮೊಳಕೆಗಳು –
ಕಮರುತ್ತಿವೆ. ತಾಂಡವ ಢಮರು ಗಡುಚಿಕ್ಕಿ
ಕ್ರೂರ ಮೃಗ-ಪಶು-ಪಕ್ಷಿ-ಗಣ-
ಬೊಬ್ಬಿಡುತ ದಿಕ್ಕೆಟ್ಟು ಓಡುತ್ತಿವೆ.
ಹಂಗಿಸುತ್ತಿದೆ ನಿಗಿ-ನಿಗಿ ಮುಗಿಲು-
ಹಲ್ಕಿರಿಯುತಿವೆ ಹಸಿದ ಪ್ರೇತಗಳು
ಸ್ವತಂತ್ರ ದೇಶದ-
ಇ ಕ್ಲಾರ್ಕು-ಕವಿ-ದೇಶಭಕ್ತ-ಸ್ವಾಮೀಜಿ
‘ಜನಗಣಮನ’ಗಳ ಜಾತ್ರೆ ನಡದೇ ಇದೆ
ಘಟಫಟ ರೆಕ್ಕೆ ಬಡಿಯುತ್ತ ತ್ರಿವರ್ಣ ಬಾವುಟ
ಚಡಪಡಿಸುತ್ತಲೇ ಇದೆ.
೨ ಆತ್ಮೀಯನೊಬ್ಬನಿಗೆ
ನಿನ್ನ ಬೂಟಿನ ಕೆಳಗೆ ಸಿಕ್ಕು ಚೀರುತ್ತಿವೆ
ಗುಲಾಬಿ ತುಟಿಗಳು-ಮುಗ್ಧಕಣ್ಣು-ಹೃದಯಗಳು.
ಕ್ರೂರ ನಗೆ ಕೊಚ್ಚೆಯಲಿ ಕೊಚ್ಚಿ ಹೋಗುತ್ತಿವೆ,
ಸಾವಿರ ನಿಷ್ಪಾಪ ಎಲೆ-ಕೊಂಬೆ-ಹೂ ಚಿಗುರು-ಕನಸುಗಳು.
ಸೂಟು-ಕೋಟಿನ ಸುಖದ ಸುಪ್ಪತ್ತಿಗೆಯ ಧಗೆಯಲ್ಲಿ
ಕ್ರೂರವಾಗಿ ಸುಡುತ್ತಿವೆ ಬತ್ತಲೆ ಆತ್ಮಗಳು.
ಚಿಕನ್-ಸೂಪುಗಳ ತೇಗುಗಳ ಮದದಲ್ಲಿ
ಕಾಯ್ದು ಚಡಪಡಿಸುತ್ತಿವೆ ಹಸಿದ ಹೊಟ್ಟೆಗಳು
ನಿನ್ನ ಪಿಸುಮಾತು-ಕುತಂತ್ರ-ಕಣ್ಸನ್ನೆ-ಕ್ರೂರ ವೇದಾಂತಗಳ
ಪಂಜು ಹೊಡೆತಕ್ಕೆ ಕಣ್ಣುಗೊಂಬೆಯ ತುಂಬ ಉರಿಯುತ್ತಿದೆ ತೀವ್ರ,
ಚಲಾವಣೆಯ ಮೆರವಣಿಗೆ ಸಂಭ್ರಮದಲ್ಲಿ ಕಾಣದೋ ನಿನಗೆ
ಸುತ್ತಲೂ ಕಾಗೆ ಕುಕ್ಕುತ್ತಿರುವ ತಂಗಳು ಹೆಣದ ಹಳಸು ದೃಶ್ಯ.
ಕೇಳಿಸದು, ಬತ್ತಿದ ಮೊಲೆ ಹೀರಿ ಕಿರಚುತ್ತಿರುವ ಮುಗ್ಧ ಕೂಸಿನ
ಕ್ರೂರ ಆಕ್ರಂದನ. ಸುಡುಬೂದಿಯಲ್ಲಿ ಬೇಯುತ್ತಿರುವ ತೊಗಲು-ಮಾಂಸ
-ದ ಗಾಟು ಘಾಯದ ಅಸಹ್ಯ ಉರುಪು.
ನಿನ್ನ ಕಾರು ಸ್ಕೂಟರು-ತುಂಬಿದ ಸಿನೀಮ ಮಂದಿರ
-ಲಾಡ್ಜು -ಸೂಳೆಯರ ಗಲ್ಲಿ,
ಅಂತಸ್ತುಗಳ ಮಹಡಿ-ರೇಡಿಯೋ-ಫ್ಯಾನುಗಳಲ್ಲಿ-
ನಿನ್ನ ತೆಕ್ಕೆಗೆ ಸಿಕ್ಕು ನರಳುತ್ತಿರುವ ಹೆಣ್ಣುಗಳ ಹರಿದ
ಪಕಳೆಯ ಮುಳ್ಳು ರಕ್ತ-ಸಿಕ್ತ.
ನೋಟುಗಳ ಹುಗಿದ ತೀಜೋರಿಯ ಗೋರಿಯೊಡೆದು
ಹಲ್ಕಿರೀದಿತು, ಕತ್ತು ಹಿಚುಕೀತು ಹಸಿದ ಪ್ರೇತ,
ಕಣ್ಣುರಿಯಲ್ಲಿ ಸುಟ್ಟ ಬೂದಿಯೊಳಗಿನಿಂದಲೇ ಎದ್ದಾವು
ಅತೃಪ್ತ-ಬುಭುಕ್ಷಿತ-ಭೂತಗಣ ಸಹಿತ.
ಬೇಡ. ಬೆನ್ನಿಗೆ ಬಿದ್ದು ಚೂರಿ ಇರಿಯಬೇಡ
ಸಾಯುತ್ತಿರುವ ಜೀವಗಳ ಕೊನೆ ಗುಟಕ ಕಸಿಯಬೇಡ.
ಎಳೆಯ ಮಕ್ಕಳ ಶಾಂತಿ-ಸಂತೋಷದ ತುಂಬಿದ ಕಣ್ಣುಗಳಿಗೆ
ಉರಿಗೊಳ್ಳಿ ಚುಚ್ಚಿ ಕತ್ತಲೆಯ ಭವಿಷ್ಯವನ್ನುಳಿಸಬೇಡ.
ಬದುಕಗೊಡು. ಕಾವಳಿಸಿದ ಕಣ್ಣುಗಳಿಗೆ ನಿಲ್ಲಲಷ್ಟು ನೆಲೆ ಕೊಡು
ನಾವು ಕ್ಷುದ್ರರು. ಗಟಾರು ಬಳಿದು, ಗುಡಿಸಲೊಳಗೆ,
ದಂಟು-ಹೊಗೆಯ ಕಂಬನಿಗಳ ಸೋಸಿ-ಕುದಿಸಿ ಕುಡಿಯುವವರು.
ನಿನ್ನ ತಿಕ ತೊಳೆದರೂ,-ಬೂಟು ನೆಕ್ಕಿ ಕಳೆದರೂ,
ಬದುಕುವಾಶೆಗೆಡೆ ಕೊಡು.
ಬದುಕಲು ಬಿಡುಗಡೆ ಕೊಡು.
.
ಹೆಬ್ಬೆರಳು-ಒಂದು ಟಿಪ್ಪಣಿ
ಹೆಬ್ಬೆರಳು : ಒಂದು ಟಿಪ್ಪಣಿ
-ಡಿ ರಘುನಾಥರಾವ್
ಮಹಾಭಾರತದ ಏಕಲವ್ಯನ ಕಥೆಯೇ ಗೋವಿಂದ ಪೈ ಅವರ ‘ಹೆಬ್ಬೆರಳು’ ನಾಟಕದ ವಸ್ತು. ಇದೇ ವಸ್ತುವನ್ನು ಬಳಸಿಕೊಂಡು ನಾಟಕಗಳನ್ನು ಬರೆದಿರುವ ಕೈಲಾಸಂ ಕುವೆಂಪು ಅವರಿಗಿಂತ ಭಿನ್ನವಾದ ರೀತಿಯಲ್ಲಿ ಪೈಗಳು ಏಕಲವ್ಯನ ಕಥೆಯನ್ನು ಉಪಯೋಗಿಸಿಕೊಂಡಿದ್ದಾರೆ. ತಮ್ಮ ಸಮಕಾಲೀನ ಸಮಾಜದ ಸಮಸ್ಯೆಯೊಂದನ್ನು ಹೇಳಲು ಪೌರಾಣಿಕ ಕಥೆ ಮತ್ತು ಪಾತ್ರಗಳ ನೆರವನ್ನು ಪಡೆದಿದ್ದಾರೆ : ಏಕಲವ್ಯನಿಗೆ ಕಲಿಯುವುದಕ್ಕೆ ದ್ರೋಣರಿಗೆ ಕಲಿಸುವುದಕ್ಕೆ ಅಡ್ಡ ಬಂದದ್ದು ಜಾತಿ ಅಥವಾ ವರ್ಣಭೇದ (ಮೇಲು-ಕೀಳುಗಳೆಂಬ ಕಲ್ಪನೆ) ಮತ್ತು ಬ್ರಾಹ್ಮಣ್ಯ ಎಂಬುದನ್ನು ಗೋವಿಂದ ಪೈಗಳು ತುಂಬಾ ಹಿಂದೆಯೇ ಕಂಡುಕೊಂಡಿರುವುದು ನಮಗೆ ಆಗದಿ ಮುಖ್ಯವಾದದ್ದಾಗಿದೆ. ಅವರು, ಮಹಾಭಾರತದ ಆ ಕಥೆಯ ಹಿಂದಿರುವ ಜಾತಿಭೇದದ ಎಳೆಯನ್ನು ಸ್ಪಷ್ಟವಾಗಿ ಗುರುತಿಸಿದ್ದಾರೆ. ಕುವೆಂಪು ಅವರ ನಾಟಕದಲ್ಲೂ ಈ ವಿಷಯ ಬರುತ್ತದೆ. ಆದರೆ, ಅದೇ ಪ್ರಧಾನವಾಗುವುದಿಲ್ಲ. ‘ಹೆಬ್ಬೆರಳು’ ಜಾತಿಭೇದವನ್ನು ನಿರ್ಮೂಲನ ಮಾಡಬೇಕೆಂಬುದನ್ನು ಪ್ರತಿಪಾದಿಸಿದೆ.
ಕೆಳವರ್ಗದವನಾದರೂ ತಾನೂ ಏಕೆ ಕಲಿಯಬಾರದೆಂಬ ಏಕಲವ್ಯ ; ಕಾಲ ಬದಲಾಗಿದೆ, ಕಲಿತರೆ ತಪ್ಪೇನು ಎಂದು ಕೇಳುವ ಗೊಂದಲದವರು ; ವರ್ಣಾಶ್ರಮ ಧರ್ಮವನ್ನು, ಸಮಾಜದ ನಿಯಮಗಳನ್ನು ಮೀರಲಾರದೆ ಚಡಪಡಿಸುವ ದ್ರೋಣ ; ವ್ಯವಸ್ಥೆಗೆ ಒಗ್ಗಿರುವ ಹಿರಣ್ಯಧನ ; ಮೇಲೆ ಬರುವದಕ್ಕೆ ಹಾತೊರೆಯುವ ಕೆಳವರ್ಗದವರನ್ನು ಹತ್ತಿಕ್ಕಲು ಮೇಲ್ವರ್ಗದವರು ಮಾಡುವ ಪ್ರಯತ್ನ-ಇವೇ ಮುಂತಾದುವನ್ನು ನಾಟಕ ಖಚಿತವಾಗಿ ಅಲ್ಲದಿದ್ದರೂ ಅಸ್ಪಷ್ಟವಾಗಿಯಾದರೂ ಹೇಳಲು ತಡಕಾಡಿದೆ. ಸ್ವಾತಂತ್ರ್ಯ ಪೂರ್ವದ ಸಮಾಜದ ಸ್ಥಿತಿಗೆ ನಾಟಕ ಪ್ರತಿಸ್ಪಂದಿಸಲು ಪ್ರಯತ್ನಿಸಿದೆ.
“ಹೆಬ್ಬೆರಳು’ ಮಹಾಭಾರತದ ಪಾತ್ರಗಳನ್ನು ಉದಾತ್ತೀಕರಿಸುವುದಿಲ್ಲ. ಕೈಲಾಸಂಕುವೆಂಪು ಅವರ ನಾಟಕಗಳು ದ್ರೋಣ-ಏಕಲವ್ಯರನ್ನು ಉದಾತ್ತೀಕರಿಸುತ್ತವೆ. “ಹೆಬ್ಬೆರಳು’ವಿನ ದೋಣ-ಏಕಲವ್ಯರು ಸಾಮಾನ್ಯರಾಗಿರುವುದು ನಾಟಕದ ಒಟ್ಟು ಉದ್ದೇಶಕ್ಕೆ ಅನುಗುಣವಾಗಿದೆ. ಇಲ್ಲಿನ ಏಕಲವ್ಯನಿಗೆ ಉಳಿದ ಕ್ಷತ್ರಿಯರಂತೆ ತಾನೂ
ಯಾಕೆ ಬಿಲ್ವಿದ್ಯೆಯನ್ನು ಕಲಿಯಬಾರದೆಂಬ ಆಸೆಯಿದೆ. ಜಗತ್ತಿನಲ್ಲಿ ತನ್ನ ಬಿಲ್ವಿದ್ಯೆಯನ್ನು ಮೆರೆಸಬೇಕೆಂಬ ಹಂಬಲವೂ ಇದೆ. ಘನವಾದ ಉದ್ದೇಶವೇನೂ ಇಲ್ಲ. ಕೆಳವರ್ಣ ಅಥವಾ ಜಾತಿಯವನು ಆ ರೀತಿ ತನ್ನ ಜಾತಿಗೆ ಸಲ್ಲದ್ದನ್ನು ಬಯಸುವುದೂ ಆ ಕಾಲಕ್ಕೆ ತಪ್ಪಾಗುತ್ತಿತ್ತು.
“ಹೆಬ್ಬೆರಳು’ ನಾಟಕದ ಪ್ರಾರಂಭದಲ್ಲಿಯೇ ಬಿಲ್ವಿದ್ಯೆಯಲ್ಲಿ ಏಕಲವ್ಯ ಸಾಕಷ್ಟು ಪರಿಣತನಾಗಿರುವ ವಿಷಯ ಬರುತ್ತದೆ. “ಇನ್ನೆನಿತೊ ಕಲಿಯಲಿಹುದೆನಗೆ”-ಎಂದುಕೊಳ್ಳುವ ಏಕಲವ್ಯನನ್ನು ಪ್ರಾರಂಭದಲ್ಲಿಯೇ ಕಾಣುತ್ತೇವೆ. ಬ್ರಾಹ್ಮಣ್ಯ-ವರ್ಣ ನಿನ್ನ ಕಲಿಕೆಗೆ ಅಡ್ಡಿಯಾಗುತ್ತದೆ : ನಿನ್ನನ್ನು ಅವರು ತಳ್ಳುತ್ತಾರೆ; ಆದ್ದರಿಂದ ನೀನು ದ್ರೋಣರ ಬಳಿಗೆ ಕಲಿಯುವುದಕ್ಕೆ ಹೋಗುವುದು ಬೇಡ ಎಂದು ಹಿರಣ್ಯಧನು ಎಷ್ಟು ಹೇಳಿದರೂ ಕೇಳದೆ ಹೋಗುತ್ತಾನೆ. ದ್ರೋಣರು ಏಕಲವ್ಯನನ್ನು ಖಡಾಖಂಡಿತವಾಗಿ ತಿರಸ್ಕರಿಸಿಬಿಡುತ್ತಾರೆ. ಕೈಲಾಸಂ-ಕಂವೆಂಪು ಅವರ ದ್ರೋಣರ ವರ್ತನೆಗೂ ಇಲ್ಲಿನ ದ್ರೋಣರ ವರ್ತನೆಗೂ ಇರುವ ವ್ಯತ್ಯಾಸವನ್ನು ಗಮನಿಸಿ. ಏಕಲವ್ಯನ ಬಗ್ಗೆ ಸಹಾನುಭೂತಿ ಇದ್ದರೂ ಇಲ್ಲಿನ ದ್ರೋಣ ಜಾತಿವ್ಯವಸ್ಥೆಗೆ ಬದ್ಧನಾದ ಬ್ರಾಹ್ಮಣನ ಹಾಗೆ ವರ್ತಿಸುತ್ತಾನೆ. ಅವನೂ ತನ್ನ ಕಾಲದ ಸಮಾಜವ್ಯವಸ್ಥೆಯ ಬಂಧಿ ಎಂಬುದನ್ನು ಪೈ ಅವರು ಮರೆತಿಲ್ಲ. ವರ್ಣಭೇದ (ಜಾತಿಭೇದ) ನೀತಿಯಿಂದಾಗಿ ಏಕಲವ್ಯ ದ್ರೋಣರ ಶಿಷ್ಯನಾಗುವುದಕ್ಕೆ ಸಾಧ್ಯವಾಗಲಿಲ್ಲ. ಏಕಲವ್ಯನ ದುರಂತಕ್ಕೆ ಅರ್ಜುನನ ಹೊಟ್ಟೆಕಿಚ್ಚು ಕಾರಣವಾಯಿತೆಂಬಂತೆ ಚಿತ್ರಿಸಿ ಉಳಿದವರು ದ್ರೋಣರನ್ನು ಬಚಾವ್ ಮಾಡಿದ್ದಾರೆ. ಈ ನಾಟಕ ಏಕಲವ್ಯನ ದುರಂತಕ್ಕೆ ಅಂದಿನ ಸಮಾಜವ್ಯವಸ್ಥೆಯೇ ಕಾರಣವಾಯಿತೆಂಬುದನ್ನು ಸೂಚಿಸಲು ಪ್ರಯತ್ನಿಸಿದೆ. ಎರಡನೆಯ ನೋಟದಲ್ಲಿನ ದ್ರೋಣರ ಕೆಲವು ಮಾತುಗಳು ; ನಾಲ್ಕನೆಯ ನೋಟದ ದ್ರೋಣರ ಸ್ವಗತ ; ಗೊಂದಲದವರಾಡುವ ಕೆಲವು ಮಾತುಗಳು- ಮೇಲಿನ ಅಭಿಪ್ರಾಯವನ್ನು ಖಚಿತಪಡಿಸುವಂತಿವೆ. ಎರಡನೆಯ ನೋಟದಲ್ಲಿ, ‘ಬೇಡರಿಗೆ ಬಿಲ್ವಿದ್ಯೆಯನ್ನು ಕಲಿಸಿದರೆ ತಪ್ಪೇನು’ ಎಂದು ಗೊಂದಲದವರು ದ್ರೋಣರನ್ನು ಕೇಳುತ್ತಾರೆ. ಅದಕ್ಕೆ ದ್ರೋಣರ ಉತ್ತರ ಹೀಗಿದೆ :
“ಮೊದಲೊಳಾಂ
ಬ್ರಾಹ್ಮಣಂ, ವರ್ಣಧರ್ಮವನಧಃಪಾತಿಸಲೆ ?
….. ….. …. ….. …… ….. ಮೇಲೆ ಕ್ಷತ್ರೋಪಜೀವಿಯಾಂ,
ವರ್ಣ ಸಂಕರವಾಗದಂತೆ ಪಾಲಿಪ ರಾಜ
ನೀತಿಗಾಂ ವ್ಯಾಘಾತ ಒಡ್ಡಲೆ? ವೃಥಾ ರಾಜ
ರವಕರುಣೆ ಸಂಪಾದಿಸಲೆ ?… ……. ……… …….” (ಹೆಬ್ಬೆರಳು : ಸಾಲು-೬೫-೭೦)
(ದ್ರೋಣರ ಮಾತುಗಳಲ್ಲಿ ಅವರ ಅಸಹಾಯಕತೆ ವ್ಯಕ್ತವಾಗಿದೆ.) ಇನ್ನೂ ಸ್ವಲ್ಪ ಮುಂದೆ, ನಮ್ಮ ಆರ್ಯಧರ್ಮದ ಮತ್ತು ಸಮಾಜ ನಿಯಮಗಳು ತುಂಬಾ ಕಠೋರ ಎನ್ನುತ್ತಾರೆ. ನಾನು ಅತಿಕ್ರಮಿಸುವುದಿಲ್ಲ ಎನ್ನುತ್ತಾರೆ. ‘ಕುರುವೃದ್ಧರೇನೆನ್ನರೆನೆಗೆ ?” ಎನ್ನುವ ಭೀತಿ ಬೇರೆ. ವ್ಯವಸ್ಥೆಯ ಬಿಗಿಮುಷ್ಟಿಯಲ್ಲಿರುವ ದ್ರೋಣರು ಸ್ವತಂತ್ರವಾಗಿ ವರ್ತಿಸುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ, ಏಕಲವ್ಯನನ್ನು ತಿರಸ್ಕರಿಸುತ್ತಾರೆ. ಆದರೆ ಆಶೀರ್ವದಿಸಿ ಕಳುಹಿಸಿಕೊಡುತ್ತಾರೆ. ವ್ಯವಸ್ಥೆ-ವ್ಯಕ್ತಿಗಳ ನಡುವಿನ ತಿಕ್ಕಾಟದಲ್ಲಿ ವ್ಯಕ್ತಿ ಹೇಗೆ ಅಸಹಾಯಕನಾಗಿಬಿಡುತ್ತಾನೆ ಎಂಬುದನ್ನು ಹೇಳುವುದಕ್ಕೆ ಪೈ ಅವರು ದ್ರೋಣರ ಪಾತ್ರವನ್ನು ಬಳಸಿಕೊಂಡಂತೆ ಕಾಣುತ್ತದೆ.
ದ್ರೋಣ, ಹಿರಣ್ಯಧನು, ಏಕಲವ್ಯ ಎಲ್ಲರೂ ಇಕ್ಕಟ್ಟಿನಲ್ಲಿ ಸಿಕ್ಕಿಬಿದ್ದಿದಾರೆ. ಹಿರಣ್ಯಧನು ಇರುವ ಸಮಾಜ ವ್ಯವಸ್ಥೆಯನ್ನು ಒಪ್ಪಿಕೊಂಡು ಬಿಟ್ಟಿದ್ದಾನೆ. ಆದರೆ, ಏಕಲವ್ಯ ಹಾಗಲ್ಲ. ಆರ್ಯರಿಗೆ ಮೀಸಲಾಗಿರುವುದನ್ನು ನಾವೂ ಯಾಕೆ ಕಲಿಯಬಾರದೆಂಬ ಮನೋಭಾವ ಅವನದು. ದ್ರೋಣರು ತಿರಸ್ಕರಿಸಿದರೂ ನಿರಾಶನಾಗದೆ ಸಾಧನೆ ಮಾಡುತ್ತಾನೆ. ಹಿರಣ್ಯಧನುವಿಗೆ ಮಗನ ಈ ಆಸೆ ಭೀತಿಯನ್ನುಂಟುಮಾಡಿದೆ. “ಈಗ ಕಲಿತಿರುವುದೇ ಸಾಲದೆ”-ಎನ್ನುತ್ತಾನೆ ಹಿರಣ್ಯಧನು. ಆಗ, ಗೊಂದಲದವರು ಅವನನ್ನು ಸಮಾಧಾನಿಸಲು ಆಡುವ ಈ ಮಾತುಗಳು ಮುಖ್ಯವಾಗಿವೆ :
“ಅಂತಲ್ಲ ಭಿಲ್ಲವರ, ನಿನ್ನ ಕಾಲು ಬೇರೆ,
ಅವನ ಕಾಲು ಬೇರೆ !… ….. …. …..
….. …. ….. …… …… …ತಾನುಮಂ
ತೆಸಗೆಬೇಕೆಂಬುವ ಸ್ಫೂರ್ತಿಯಾದರೆ ತಪ್ಪೊ
(ನೋಟ-೩, ಸಾಲು : ೩೭-೪೧)
ಏಕಲವ್ಯ ತಂದೆಯಿಂದ ಭಿನ್ನನಾಗುತ್ತಾನೆ. ಹೀಗೆ, ಕಾಲದ ಬಗ್ಗೆಯೂ ಯೋಚಿಸಿರುವ ಪೈ ಅವರನ್ನು ಮೆಚ್ಚಬೇಕಾಗುತ್ತದೆ. ರೂಢವಾಗಿರುವ ರೀತಿ-ರಿವಾಜುಗಳನ್ನು ಪ್ರಶ್ನಿಸುವ ಏಕಲವ್ಯನ ಪಾತ್ರ ನಾಟಕದ ಉದ್ದೇಶಕ್ಕೆ ಅಗತ್ಯವಾಗುತ್ತದೆ.
ವರ್ಣಭೇದವನು ನಾಶಮಾಡದೇ ಹೋದರೆ ಸಮಾಜಕ್ಕೆ ಉಳಿಗಾಲವಿಲ್ಲವೆಂಬುದನ್ನು ನಾಟಕ ಹೇಳಿದೆ. ನಾಟಕದ ಕೊನೆಕೊನೆಯಲ್ಲಿ ಬರುವ ಗೊಂದಲದವರ ಮಾತುಗಳನ್ನು ಈ ದೃಷ್ಟಿಯಿಂದ ನೋಡಬಹುದು : “ನಾವು ನೀವೆಂಬ ಹಳಭೇದಗಳನುಳಿದು* ಬಾಳುವುದನ್ನು ಕಲಿಯಬೇಕು ; ಇಲ್ಲದಿದ್ದರೆ, ಇಡೀ ಸಮಾಜವೇ ಒಳಗಿಂದೊಳಗೇ ಸೀದು ಹೋಗುತ್ತದೆಂಬ ಎಚ್ಚರಿಕೆಯನ್ನು ಗೊಂದಲದವರು ಕೊಡುತ್ತಾರೆ. ಭೇದ ನಾಶವಾದರೆ ಮಾತ್ರ ಏಕಲವ್ಯನ ಬೆರಳಿಗೆ ಬೆಲೆ ಬರುತ್ತದೆ. ‘ಅಂತಹುದೆ ?” ಎಂಬ ಗೊಂದಲದವರ ನುಡಿ ಸಂಶಯದಿಂದ ಕೂಡಿದೆ. ನಾಟಕದ ಕೊನೆಯಲ್ಲೂ ಹೀಗೆ ಸಂಶಯವನ್ನು ಪೈ ಅವರು ವ್ಯಕ್ತಪಡಿಸಿರುವುದು, ಜಾತಿ ಸಮಸ್ಯೆಯ ಕಠೋರ ವಾಸ್ತವತೆಯನ್ನು ಮನಗಂಡಿದ್ದರೆನ್ನುವುದನ್ನು ಖಾತ್ರಿಪಡಿಸುತ್ತದೆ. ಜಾತಿ ಅಥವಾ ವರ್ಣ ಸಮಸ್ಯೆ ಸುಲಭವಾಗಿ ಪರಿಹಾರವಾಗುವಂತಹುದಲ್ಲ. ಅದರ ನಾಶಕ್ಕೆ ದೊಡ್ಡ ಯುದ್ಧವೇ (ಕ್ರಾಂತಿ) ಆಗಬೇಕಾಗುತ್ತದೇನೋ ಎನ್ನುವ ಸಂಶಯವನ್ನು ನಾಟಕ ನಮ್ಮ ಮುಂದೆ ಇಟ್ಟಿದೆ. ನಾಲ್ಕನೆಯ ನೋಟದಲ್ಲಿನ ದ್ರೋಣರ ಮಾತುಗಳು ಅದನ್ನು ಶ್ರುತಪಡಿಸುತ್ತವೆ : “ಮಹಾಯುದ್ಧ ವಿನ್ನಾಗದೀ ಸೆಣಸಾಟ ತೀರುವಂತಿಲ್ಲ, ನಾವವರೊಡನೆ ಸೇರುವಂತಿಲ್ಲ” (ಸಾಲು: ೨೯-೩೦)
ಮೇಲೆ ನಮೂದಿಸಿರುವ ವಿಚಾರಗಳನ್ನು ‘ಹೆಬ್ಬೆರಳು’ ಹೇಳಲು ತೊಡಗಿರುವುದರಿಂದಲೆ. ನಮಗೂ ಅದು ಸಂಬಂಧಿಸಿದ್ದಾಗುತ್ತದೆ. ಆದರೆ, ಆ ವಿಚಾರಗಳನ್ನು ಒಳಗೊಂಡು ಕೃತಿಯಾಗುವ ಹವಣಿಕೆಯಲ್ಲಿ ಪೂರ್ಣ ಸೋತಿದೆ. ಅಸ್ಪಷ್ಟತೆ-ತೊಡಕುಗಳಿಂದ ನಾಟಕ ಗೊಂದಲದಲ್ಲಿ ಬಿದ್ದಿದೆ. ಆಧ್ಯ-ಆನಾರ‍್ಯ ಭೇದದ ಬಗ್ಗೆ ಮಾತ್ರ ಹೇಳುತ್ತಿದ್ದಾರೋ ಅಥವಾ ಜಾತಿ ಪದ್ಧತಿಯ ಬಗ್ಗೆ ಬರೆಯುತ್ತಿದ್ದಾರೋ ಎನ್ನುವುದೇ ಕೆಲವು ಕಡೆ ಗೊ೦ದಲದಲ್ಲಿ ಬಿದ್ದು ಬಿಡುತ್ತದೆ. ಆರ‍್ಯ-ಅನಾರ‍್ಯ, ಜಾತ್ಯಭಿಮಾನ, ಧರ್ಮ, ಬ್ರಾಹ್ಮಣ್ಯ, ವರ್ಣ ಸಂಕರ ಮುಂತಾದ ಶಬ್ದಗಳನ್ನು ಬಳಸುತ್ತಾರೆ. ಗಾಂಧೀಜಿಯವರ ಚಳುವಳಿ ಪೈ ಅವರ ಮೇಲೆ ಪ್ರಭಾವ ಬೀರಿದೆ. ಆದ್ದರಿಂದ, ಈ ನಾಟಕ ವರ್ಣಭೇದ ನೀತಿಯನ್ನು ವಿರೋಧಿಸುವ ಉದ್ದೇಶದಿಂದಲೇ ಹುಟ್ಟಿದೆ ಎಂಬುದರ ಬಗ್ಗೆ ಅನುಮಾನಕ್ಕೆ ಆಸ್ಪದವಿಲ್ಲ. ಆದರೂ, ವರ್ಣ-ಜಾತಿ, ಆರ‍್ಯ-ಅನಾರ‍್ಯ ಶಬ್ದಗಳನ್ನು ಅವರು ಖಚಿತವಾದ ರೀತಿಯಲ್ಲಿ ಬಳಸಿಕೊಂಡಂತೆ ಕಾಣುವುದಿಲ್ಲ.
ವರ್ಣ (ಜಾತಿ), ಧರ್ಮ, ಸಮಾಜನಿಯಮ, ಬದಲಾದ ಕಾಲ ಇವೇ ಮುಂತಾದ ವಿಚಾರಗಳನ್ನು ಏಕಲವ್ಯನ ಕಥೆಗೆ ಹೊರಗಿನಿಂದ ತಂದು ಅಂಟಿಸಿದಂತಿವೆ. ಅಂದರೆ, ಅವು ವಸ್ತುವಿನಿಂದ ಚಾಚಿಕೊಳ್ಳುವುದಿಲ್ಲ. ಅವು ಕೇವಲ ಹೇಳಿಕೆಗಳಾಗಿ ಬಿಡುತ್ತವೆ. ಹೆಬ್ಬೆರಳಿನ ತರ್ಪಣ ಕೆಳವರ್ಗದವರ ಅಸಹಾಯಕತೆಗೆ ಸಂಕೇತವಾಗಬಹುದಿತ್ತು, ಆಗಿಲ್ಲ. (ಈ ದಿಸೆಯಲ್ಲಿ ನಾಟಕ ತುಸು ಪ್ರಯತ್ನಿಸಿರುವುದನ್ನು ಗಮನಿಸಿಯೂ ಮೇಲಿನ ಮಾತನ್ನು ಹೇಳಿದ್ದೇನೆ.) ಆದ್ದರಿಂದ ನಾಟಕ ಗಟ್ಟಿಯಾಗುವುದಿಲ್ಲ.
ಹೆಬ್ಬೆರಳನ್ನು ಕತ್ತರಿಸಿಕೊಡುವಂಥ ಘಟನೆಯೂ ಕೂಡ ನಾಟಕದ ಕೇಂದ್ರದಿಂದ ಹೊರೆಗುಳಿದುಬಿಡುತ್ತದೆ. ಇಲ್ಲಿನ ದ್ರೋಣರು ಹೆಬ್ಬೆರಳನ್ನು ಪಡೆಯುವ ಉದ್ದೇಶದಿಂದ ಬರುವುದಿಲ್ಲ. ಅರ್ಜುನನ ಹೊಟ್ಟೆಕಿಚ್ಚೂ ಅದಕ್ಕೆ ಕಾರಣವಾಗುವುದಿಲ್ಲ. ಪರಿಸ್ಥಿತಿಯ ಒತ್ತಡಕ್ಕೆ ಒಳಗಾಗಿ ದ್ರೋಣರು ಕೇಳಿದ್ದಲ್ಲ. ಅದು ಈ ನಾಟಕದಲ್ಲಿ ಆಕಸ್ಮಿಕವೆಂಬಂತೆ ನಡೆದುಹೋಗುತ್ತದೆ. (ಕುವೆಂಪು ಅವರ ನಾಟಕದಲ್ಲಿ ದ್ರೋಣ-ಆರ್ಜುನರಿಬ್ಬರೂ ಅದಕ್ಕೆ ಜವಾಬ್ದಾರರಾಗುತ್ತಾರೆ.) ಏಕಲವ್ಯನ ಪಾತ್ರದಲ್ಲೂ ತೊಡಕಿದೆ. ಹಳೆಯದನ್ನು ಪ್ರತಿಭಟಿಸುವ, ಪ್ರಶ್ನಿಸುವ, ಬಂಡೇಳುವ ಪಾತ್ರವಾಗಿ ಅದು ಬೆಳೆಯಬೇಕಿತ್ತು. ನಾಟಕದ ಉದ್ದೇಶಕ್ಕೆ ಇದು ಅಗತ್ಯ. ಆಗ-ನಾಟಕದಲ್ಲಿ ಘರ್ಷಣೆ ಇರುತ್ತಿತ್ತು. ವ್ಯಕ್ತಿ ಸಮಾಜ ಮತ್ತು ಮೇಲ್ವರ್ಗ ಮತ್ತು ಕೆಳವರ್ಗದ ನಡುವಿನ ಹೋರಾಟದ ಚಿತ್ರವನ್ನಾಗಿ ಚಿತ್ರಿಸಲು ಸಾಧ್ಯವಾಗುತ್ತಿತ್ತು. ಘರ್ಷಣೆ ಇಲ್ಲದೆ, ಕಾವಿಲ್ಲದೆ ನಾಟಕ ಒಣಗಿದೆ. ನಾಟಕೀಯ ಗುಣವಿಲ್ಲದಿರುವುದಕ್ಕೂ ಅದೇ ಕಾರಣ. ಭಾಷೆ ಸಮರ್ಥವಾಗಿಲ್ಲದಿರುವುದಕ್ಕೂ ಅದೇ ಕಾರಣವೇನೋ ಎನ್ನಿಸುತ್ತದೆ. ಒಟ್ಟಿನಲ್ಲಿ ನಾಟಕ ತೀವ್ರವಾಗದಿರುವುದಕ್ಕೂ ಮತ್ತು ಯಶಸ್ವಿಯಾಗದಿರುವುದಕ್ಕೂ ಇವು ಕಾರಣವಾಗಿವೆ.
ಆದರೂ ಪೌರಾಣಿಕ ಕಥೆಯೊಂದರ ಹಿಂದಿರುವ ನಿಜವನ್ನು ಗ್ರಹಿಸಿ, ಅದನ್ನು ವರ್ತಮಾನದ ಸ್ಥಿತಿಗೆ ಹೊಂದಿಸಿಕೊಳ್ಳಲು ಮಾಡಿರುವ ಪ್ರಯತ್ನವನ್ನು ಮೆಚ್ಚಬೇಕಾಗುತ್ತದೆ. ಆರಿಸಿಕೊಂಡಿರುವ ವಸ್ತುವನ್ನು ನಾಟಕವನ್ನಾಗಿಸುವಲ್ಲಿ ನಾಟಕ ಸೊತಿದೆ. ಆದರೆ, ಅವರ ಪ್ರಯತ್ನ ಸ್ವಾತಂತ್ರ್ಯಪೂರ್ವದ ಸಂದರ್ಭಕ್ಕಷ್ಟೇ ಅಲ್ಲ ; ನಮ್ಮ ಇಂದಿನ ಸಂದರ್ಭಕ್ಕೂ ಅರ್ಥಪೂರ್ಣವಾಗಿದೆ. ‘ಹೆಬ್ಬೆರಳು’ ತನ್ನ ಸಾಮಾಜಿಕ ಕಾಳಜಿಯಿಂದಾಗಿ ಗಮನಾರ್ಹ ಬರೆಹವಾಗಿದೆ. ಆದರೆ, ಅದು ಸಾಹಿತ್ಯಕೃತಿಯಾಗಿ ತೃಪ್ತಿಕೊಡದಿರುವುದೂ ನಮಗೆ ಅಷ್ಟೇ ಮುಖ್ಯವಾಗಿದೆ. ಸದ್ಯದ ಸಾಮಾಜಿಕ ಸ್ಥಿತಿಗೆ ಸ್ಪಂದಿಸಬೇಕಾಗುತ್ತದೆ. ಜತೆಗೇ, ತಮ್ಮ ಅನುಭವವನ್ನು ಲೇಖಕರು ಕಲೆಯನ್ನಾಗಿಸುವ ಪ್ರಯತ್ನವನ್ನೂ ವಾಡಲೇಬೇಕಾಗುತ್ತದೆ.
ಅಶ್ವತ್ಥಾಮ
ಅಶ್ವತ್ಥಾಮ
– ಪಿ ಶ್ರೀಪತಿ ತಂತ್ರಿ
“ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೇ ಭಯಾವಹಃ ” (ಗೀತೆ)
(ತನ್ನ ಧರ್ಮ ಅಂದರೆ ತನ್ನ ಸ್ವಭಾವಕ್ಕೆ ಸಹಜವಾದ ಕರ್ತವ್ಯ ಮಾಡುತ್ತಾ ಸಾಯುವುದಾದರೂ ಒಳ್ಳೆಯದು, ಆದರೆ ಅದನ್ನು ಬಿಟ್ಟು ಬೇರೆಯವರ ಕರ್ತವ್ಯವನ್ನು ಮಾಡುವುದು ಭಯಾವಹ.)
ಮಹಾ ಭಾರತದಲ್ಲಿ ಬರುವ ಅಶ್ವತ್ಥಾಮನಿಗೆ ಈ ಮಾತು ಪೂರ್ತಿಯಾಗಿ ಹೊಂದಿಕೊಳ್ಳುತ್ತದೆ. ಅವನು ಬ್ರಾಹ್ಮಣನಾಗಿ ಹುಟ್ಟಿ, ಕ್ಷತ್ರಿಯನಾಗಲು, ರಾಜನಾಗಲು ಬಯಸಿದ, ಸೇನಾಧಿಪತಿಯಾಗಲು ಆಶಿಸಿದ, ಇದರಿಂದಾಗಿ ಕೊನೆಗೆ ಸಾವಿಗಿಂತಲೂ ಭಯಂಕರವಾದ ಬದುಕನ್ನು ಸಾವಿರ ಸಾವಿರ ವರ್ಷ ಬದುಕುವಂತೆ ಆಯಿತು ಅವನ ಪರಿಸ್ಥಿತಿ.
ಅಶ್ವತ್ಥಾಮನು ಹುಟ್ಟಿದ್ದು ಒಂದು ಬಲುದೊಡ್ಡ ಬ್ರಹ್ಮಜ್ಞಾನಿಗಳಾದ ಬ್ರಾಹ್ಮಣರ ವಂಶದಲ್ಲಿ, ಅವನ ತಂದೆ ದ್ರೋಣ, ಅಜ್ಜ ಭಾರಧ್ವಾಜ, ಮುತ್ತಜ್ಜ ಸರ್ವಜ್ಞನೂ, ದೇವತೆಗಳು ಮತ್ತು ಋಷಿಗಳಿಗೆಲ್ಲ ಗುರುವೆನಿಸಿದವನೂ ಆದ ಬೃಹಸ್ಪತ್ಯಾಚಾರ. ಅಶ್ವತ್ಥಾಮನ ತಾಯಿಯ ಕಡೆಯ ದೊಡ್ಡ ಕುಲವೇ, ಗೌತಮ ಋಷಿಯ ವಂಶದವಳು ಆಕೆ, ಹೀಗೆ ಎರಡು ಸುಪ್ರಸಿದ್ದ ಬ್ರಾಹ್ಮಣ ಮನೆತನದವರ ವಂಶದ ಕುಡಿಯಾಗಿ ಹುಟ್ಟಿದ ಅಶ್ವತ್ಥಾಮ, ಒಬ್ಬ ಸುಜ್ಞಾನಿಯೂ, ಸಂಯಮಶೀಲನೂ, ಅತ್ಯಂತ ಗೌರವಕ್ಕೆ ಪಾತ್ರನೂ ಆಗಿ ಬದುಕಬೇಕಿತ್ತು. ಆದರೆ ಆತನ ದುರ್ದೈವ! ವಿಧಿಯು ಅವನನ್ನು ಬೇರೆಯೇ ಆಗಿ ರೂಪಿಸಿತು. ಬಹುಮಟ್ಟಿಗೆ ಇದಕ್ಕೆ ಕಾರಣ ಅವನಲ್ಲ. ಅವನ ತಂದೆ ದ್ರೋಣನೇ ಇದಕ್ಕೆ ಕಾರಣವೆನ್ನಬಹುದು, ಯಾವಾಗ ದ್ರೋಣನು ಬ್ರಾಹ್ಮಣ ವೃತ್ತಿಯನ್ನು ಬಿಟ್ಟುಕೊಟ್ಟು ದ್ರುಪದನ ರಾಜ್ಯದ ಅರ್ಧಭಾಗವನ್ನು ತಾನು ಇಟ್ಟುಕೊಂಡು, ರಾಜನಾಗಿ, ಕ್ಷತ್ರಿಯನಾಗಿ ಬಾಳಲು ಪ್ರಾರಂಭಿಸಿದನೋ,-ಆಗ ಅಶ್ವತಾಮನ ಗತಿಯೂ ಬದಲಾಯಿಸಿತು.
ಕ್ಷತ್ರಿಯರ ಕುಟುಂಬಕ್ಕೆ ಸಂಬಂಧಿಸಿದ ಮಹಾಭಾರತ ಕತೆಯೊಳಗೆ ಸೇರಿಕೊಂಡು, ಮೊದಲಿನಿಂದ ಕೊನೆಯ ತನಕ ಕಾಣಿಸಿಕೊಳ್ಳುವ ಬ್ರಾಹ್ಮಣರಲ್ಲಿ ವ್ಯಾಸ, ದೊಣ, ಕೃಪಾಚಾರ ಮತ್ತು ಅಶ್ವತ್ಥಾಮ-ಇವರು ಪ್ರಮುಖರು, ಕುರುವಂಶದಲ್ಲಿ ಸಂತಾನವಿಲ್ಲದಿರಲು, ಅಂಬಿಕೆ ಮತ್ತು ಅಂಬಾಲಿಕೆಯರಿಗೆ ಪುತ್ರಪ್ರಾಪ್ತಿಯನ್ನು ಕರುಣಿಸಿ, ರಾಜ ವಂಶವನ್ನುಳಿಸುವುದಕ್ಕೆ ವ್ಯಾಸರು ಕಾರಣರು, ಆದರೆ, ಆ ಬಳಿಕ ಅವರು ಅರಮನೆಯೊಳಗಿನ, ಹಸ್ತಿನಾವತಿಯ ದಿನನಿತ್ಯದ ವ್ಯವಹಾರದೊಟ್ಟಿಗೆ ಸೇರಿಕೊಂಡು ಸಂಪರ್ಕ ವಿರಿಸಿಕೊಂಡವರಲ್ಲ. ಕೃಪಾಚಾರ‍್ಯರಾದರೋ ಕುರುವಂಶದ ಪಾರಂಪತ್ಯದ ರಾಜಗುರುಗಳಾಗಿದ್ದವರು ಯಾರು ರಾಜರಾಗಿರುತ್ತಾರೋ, ಅವರ ಹತ್ತಿರವಿದ್ದು ಕೇಳಿದಾಗ ಸಲಹೆಯನ್ನು ಕೊಡುತ್ತ, ಸಿಂಹಾಸನಕ್ಕೆ ನಿಷ್ಠೆಯನ್ನು ತೋರಿಸಿ ಕೆಲಸಮಾಡುವವರು.
ಆದರೆ, ದ್ರೋಣ ಮತ್ತು ಅಶ್ವತ್ಥಾಮರು ಹೀಗಲ್ಲ. ಅವರಿಗೂ ಕುರುವಂಶಕ್ಕೂ ಮೊದಲು ಯಾವ ಸಂಬಂಧವೂ ಇರಲಿಲ್ಲ. ದ್ರೋಣನೊಬ್ಬ ಬಡಬ್ರಾಹ್ಮಣನಾಗಿದ್ದವನು. ಪಾಂಚಾಲ ದೇಶದ ರಾಜನಾದ ದ್ರುಪದನು ಬಾಲ್ಯದಲ್ಲಿ ಶಿಕ್ಷಣ ಪಡೆಯುತ್ತಿದ್ದಾಗ ದ್ರೋಣನು ಅವನ ಸಹಪಾಠಿ. ಈ ಸಂಬಂಧವನ್ನು ಆಧಾರವಾಗಿಟ್ಟುಕೊಂಡು ಒಮ್ಮೆ ಅವನು ದ್ರುಪದನ ಆಸ್ಥಾನಕ್ಕೆ ಹೋಗುತ್ತಾನೆ. ದ್ರುಪದನು ಬಾಲ್ಯದಲ್ಲಿ ದೋಣನ ಸಹಪಾಠಿಯಾಗಿದ್ದ ನಿಜ. ಆದರೆ ಈಗ ಅವನು ಸಿಂಹಾಸನದಲ್ಲಿ ಕುಳಿತಿರುವ ರಾಜ, ದ್ರೋಣನೀಗ ಒಬ್ಬ ಬ್ರಾಹ್ಮಣ, ದ್ರುಪದನು ಬ್ರಾಹ್ಮಣನಿಗೆ ತಕ್ಕುದಾದ ಮರ್ಯಾದೆಯನ್ನು ಕೊಟ್ಟು ಅವನನ್ನು ಸನ್ಮಾನಿಸಲು ಸಿದ್ಧನಾಗಿದ್ದ, ಆದರೆ ದ್ರೋಣನು ಬಾಲ್ಯದಲ್ಲಿದ್ದಂತೆಯೇ ಈಗಲೂ ತನ್ನನ್ನು ಆಪ್ತ ಸ್ನೇಹಿತನೆಂದೇ ಪರಿಗಣಿಸಿ ನಡೆದುಕೊಳ್ಳಬೇಕೆಂದು ಬಯಸುತ್ತಾನೆ, ಒಂದು ರೀತಿಯಿಂದ ದ್ರೋಣನ ಬಯಕೆ ಸರಿಯಂದು ನಮಗೆ ಅನಿಸಿದರೂ, ಆಳವಾಗಿ ಯೋಚಿಸಿದರೆ, ಇದು ಯೋಗ್ಯವಲ್ಲವೆಂದು ಅನಿಸುತ್ತದೆ, ಬಾಲ್ಯದಲ್ಲಿ ಸ್ಥಾನಮಾನಗಳ ಪರಿವೆಯಿರುವುದಿಲ್ಲ. ಬೆಳೆದು ಜೀವನಕ್ಕೆ ಕಾಲಿಟ್ಟ ಬಳಿಕ, ಪ್ರತಿಯೊಬ್ಬನೂ ತನ್ನ ಸ್ಥಾನದ ನೀತಿನಿಯಮಗಳಿಗೆ ಸರಿಯಾಗಿ ನಡೆದುಕೊಳ್ಳಬೇಕಾಗುತ್ತದೆ. ಅನೇಕ ವೇಳೆ ತಂದೆ ಮತ್ತು ಮಗನ ನಡುವೆಯೂ ಈ ಸ್ಥಾನವ್ಯತ್ಯಾಸದಿಂದ ಮೊದಲಿನ ಸಂಬಂಧ ಬದಲಾಗಲು ಸಾಧ್ಯವಿದೆ, ಮಗನು ಧರ್ಮಪೀಠದ ಅಧಿಪತಿಯಾದ ಮೇಲೆ, ತಂದೆಯೂ ಅವನನ್ನು ಬಹುವಚನದಿಂದ ಕರೆಯುವ, ಗೌರವದಿಂದ ಕಾಣುವ ಪದ್ದತಿಯನ್ನು ನಾವು ಈಗಲೂ ನೋಡುತ್ತೇವೆ. ಹೀಗೆ ಬ್ರಾಹ್ಮಣನಾದ ದ್ರೋಣ, ತನ್ನ ಸ್ಥಾನಕ್ಕೆ ತಕ್ಕ ಮರ್ಯಾದೆಯನ್ನು ದ್ರುಪದನು ಕೊಟ್ಟಾಗ ಅದರಲ್ಲೇ ಸಂತುಷ್ಟನಾಗಬೇಕಾಗಿತ್ತು, ಶಾಂತಿ, ತೃಪ್ತಿ, ಸಂಯಮ, ಉದಾರ ಹೃದಯ, ಸಹನೆ ಇವು ಜ್ಞಾನಿಗಳಲ್ಲಿ ಇರಬೇಕಾದ ಗುಣಗಳು, ದ್ರೋಣನು ಜ್ಞಾನಿಯಾಗಿದ್ದರೂ, ಆವ ನಲ್ಲಿ ಈ ಗುಣಗಳಿರಲಿಲ್ಲವೆಂದು ಕಾಣುತ್ತದೆ. ವಿವೇಕಿಗಳಾದವರು ಯಾವಾಗಲೂ ತಮ್ಮ ಸ್ನೇಹವನ್ನು ಸಮಾನ ಅಂತಸ್ತಿನವರಲ್ಲಿ ಮಾತ್ರ ಇಟ್ಟುಕೊಳ್ಳುತ್ತಾರೆ. ತಮಗಿಂತ ದೊಡ್ಡ ಸ್ಥಾನದವರಿಂದ ಇದನ್ನು ಅಪೇಕ್ಷಿಸುವುದು, ಗಳಿಸಿಕೊಳ್ಳಲು ಪ್ರಯತ್ನಿಸುವುದು ಮಹತ್ವಾಕಾಂಕ್ಷೆ ಅಥವಾ ಪ್ರಯೋಜನದ ದೃಷ್ಟಿಯಿಂದ ಮಾತ್ರ ಎನ್ನಬಹುದು.
ತಾನು ಬಯಸಿದ ಸ್ನೇಹ ಸಂಬಂಧವನ್ನು ದ್ರುಪದನು ನಿರಾಕರಿಸಿದಾಗ ದ್ರೋಣನಿಗೆ ಅವಮಾನವಾಯಿತು. “ಇದರ ಸೇಡನ್ನು ತೀರಿಸಿಕೊಂಡೇ ಸಿದ್ದ”-ಎಂದು ನಿರ್ಧರಿಸುತ್ತಾನೆ. ಬಳಿಕ ಕೆಲಸವನ್ನು ಹುಡುಕುತ್ತ, ಬಾಲಕನಾಗಿರುವ ಮಗ ಅಶ್ವತ್ಥಾಮನೊಡನೆ ಹಸ್ತಿನಾವತಿಗೆ ಬರುತ್ತಾನೆ. ಅಲ್ಲಿ ಅವನ ಭಾವ ಅಂದರೆ ಹೆಂಡತಿಯ ಅಣ್ಣನಾದ ಕೃಪಾಚಾರರ ಒಟ್ಟಿಗೆ ಸೇರಿಕೊಳ್ಳುತ್ತಾನೆ. ಕೃಪಾಚಾರರ ಶಿಫಾರಸಿನ ಮೇಲೆ, ಹಸ್ತಿನಾ ವತಿಯ ರಾಜಕುಮಾರರಾದ ಕೌರವರು ಮತ್ತು ಪಾಂಡವರಿಗೆ ಶಸ್ತ್ರಾಸ್ತ್ರ ವಿದ್ಯೆಯನ್ನು ಕಲಿಸಿಕೊಡುವ ಕೆಲಸದಲ್ಲಿ ಭೀಷ್ಮನು ಅವನನ್ನು ನೇಮಿಸುತ್ತಾನೆ. ಇಲ್ಲಿಂದ ಮುಂದಕ್ಕೆ ದ್ರೋಣ ಮತ್ತು ಅಶ್ವತ್ಥಾಮ ಅರಮನೆಯ ಜೀವನದ ಒಮ್ಮೊಟ್ಟಿಗೇ ಸೇರಿಕೊಂಡು ಮುಂದಿನ ಎಲ್ಲ ಘಟನೆಗಳಲ್ಲಿ ಮಹತ್ವಪೂರ್ಣವಾದ ಪಾತ್ರವನ್ನು ವಹಿಸುವ ಇಬ್ಬರು ಬ್ರಾಹ್ಮಣರಾಗುತ್ತಾರೆ.
ಮುಂದಕ್ಕೆ ದ್ರೋಣನು ಯಾವಾಗಲೂ ತನಗೆ ಅನ್ನದಾತನಾದ ಭೀಷ್ಮನಿಗೆ ವಿಧೇಯನಾಗಿ ವರ್ತಿಸುತ್ತ ಅವನ ಮತವನ್ನೇ ತನ್ನ ಮತವೆಂದು ಹೇಳಿಕೊಳ್ಳುತ್ತ ಇರುತ್ತಾನೆ. ರಾಜ ಕುಮಾರರಿಗೆ ವಿದ್ಯೆಯನ್ನು ಕಲಿಸಿಕೊಟ್ಟ ಬಳಿಕ ಗುರುದಕ್ಷಿಣೆಯ ಅವಕಾಶವನ್ನು ತನ್ನ ದ್ವೇಷಸಾಧನೆ ಮತ್ತು ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಾನೆ. ದ್ರುಪದನನ್ನು ಹೆಡೆಮುರಿ ಗಟ್ಟಿ ತನ್ನ ಮುಂದೆ ತಂದು ನಿಲ್ಲಿಸುವಂತೆ ಆಜ್ಞಾಪಿಸುತ್ತಾನೆ, ಶಿಷ್ಯರಲ್ಲಿ ಎಲ್ಲರಿಗಿಂತ ನಿಪುಣನಾದವನು ಅರ್ಜುನ, ಅವನು ಗುರುವಿನ ಆಜ್ಞೆಯನ್ನು ನೆರವೇರಿಸಿಯೇ ಬಿಡುತ್ತಾನೆ, ಅವಮಾನಿತನಾದ ದ್ರುಪದನನ್ನು ಮತ್ತೆ ಹಿಂಸಿಸದೆ. ಅಲ್ಲೇ ಕ್ಷಮಿಸಿದ್ದ ಪಕ್ಷದಲ್ಲಿ, ಅದು ದ್ರೋಣನು ಹುಟ್ಟಿದ ಕುಲದ ಘನತೆಗೂ, ಅನುಸರಿಸಿದ ಕ್ಷತ್ರಿಯ
ಧರ್ಮಕ್ಕೂ ಒಪ್ಪುತ್ತಿತ್ತು, ಸೋತು ಸೆರೆಯಾಳಾಗಿ ಬಂದವನನ್ನು ಮತ್ತೆ ಕ್ಷಮಿಸುವುದು ಆಗಿನ ಕಾಲದ ಕ್ಷತ್ರಿಯರ ಗುಣ. ಅಲ್ಲದೆ ಒಬ್ಬರ ವಂಶಪಾರಂಪಯ್ಯದ ರಾಜ್ಯವನ್ನು ಕಸಿದುಕೊಳ್ಳುವುದು ಆಗಿನ ಕಾಲದ ಕ್ಷತ್ರಿಯಂ ಧರ್ಮಕ್ಕೆ ವಿರೋಧವಾದುದು. ಯುದ್ಧ ಮಾಡಬಹುದು, ಯುದ್ದದಲ್ಲಿ ರಾಜನನ್ನು ಕೊಲ್ಲಬಹುದು, ಆದರೆ ರಾಜ್ಯವನ್ನು ಮಾತ್ರ ಸತ್ತವನ ವಂಶದವರಿಗೇ ಮತೆ ಬಿಟ್ಟುಕೊಡುವುದು, ವಿನಯದಿಂದ ಬಾಳುವಂತೆ ಬುದ್ಧಿವಾದ ಹೇಳುವುದು ಆಗಿನ ರಾಜನೀತಿ, ಕೃಷ್ಣನು ಜರಾಸಂಧನನ್ನು, ಶಿಶುಪಾಲನನ್ನು ಹೀಗೆ ಅನೇಕರನ್ನು ಕೊಂದಿದ್ದ, ಅಥವಾ ಕೊಲ್ಲಿಸಿದ್ದ. ಆದರೆ ಅವರೆಲ್ಲರ ರಾಜ್ಯವನ್ನು ಅವರವರ ಮಕ್ಕಳಿಗೇ ಮರಳಿಸಿದ್ದ ಬ್ರಾಹ್ಮಣನಾದ ದ್ರೋಣ ಈ ಧರ್ಮವನ್ನು ಉಲ್ಲಂಘಿಸಿದ, ದ್ರುಪದನ ಅರ್ಧ ರಾಜ್ಯವನ್ನು ತನ್ನಲ್ಲೇ ಇಟ್ಟುಕೊಂಡ.
ಅಶ್ವತ್ಥಾಮನಿಗೂ ಬಾಲ್ಯದಿಂದ ಹಿಡಿದು ಯಾವತ್ತೂ ಬ್ರಾಹ್ಮಣನಿಗೆ ಯೋಗ್ಯವಾದ ಸಂಸ್ಕಾರವನ್ನು ದ್ರೋಣನು ಕಲಿಸಲಿಲ್ಲ. ಅತ್ತ ಬಾಲ್ಯದಲ್ಲೇ ಬ್ರಾಹ್ಮಣ ಸಮಾಜದ ಸಂಪರ್ಕವನ್ನೂ ಕಳೆದುಕೊಂಡ ಇತ್ತ ಕ್ಷತ್ರಿಯರ ಕುಟುಂಬದ ಹೊರಗೆ ಉಳಿದ. ಅವರಿಗೆ ಅನ್ವಯಿಸುವ ಕ್ಷಾತ್ರಗುಣಗಳು ಅವನಿಗೆ ಬರಬೇಕಾದರೆ, ಅವರ ಕುಟುಂಬದೊಳಗೆಯೇ ಅವನು ಬೆಳೆದಿದ್ದರೆ ಅದು ಸಾಧ್ಯವಾಗುತ್ತಿತ್ತು. ಇತ್ತ ಬ್ರಾಹ್ಮಣರ ಕುಟುಂಬಕ್ಕೂ ಹೊರಗೆ, ಅತ್ತ ಕ್ಷತ್ರಿಯರದ್ದಕ್ಕೂ ಹೊರಗೆ, ಹೀಗೆ ಎರಡೂ ವರ್ಗದ ಜೀವನಕ್ರಮ, ಅದರಿಂದ ಹುಟ್ಟಿಕೊಳ್ಳುವ ಗುಣಗಳು–ಇವುಗಳಿಂದ ಅವನು ವಂಚಿತನಾದ, ತಂದೆಯಿಂದ ಶಸ್ತ್ರಾಸ್ತ್ರ ವಿದ್ಯೆಯನ್ನು ಕಲಿತನಾದರೂ, ಕ್ಷತ್ರಿಯನ ಶೀಲ-ನಡತೆಯನ್ನವನು ಕಲಿತು ಕೊಳ್ಳಲಿಲ್ಲ. ಭಾಗವತದಲ್ಲಿ ಬ್ರಾಹ್ಮಣರು ಎಂಥವರಾಗಿರಬೇಕೆಂದು ಸ್ಪಷ್ಟವಾಗಿ
ಹೇಳಿದೆ :
ಶಮೋ ದವಃ ತಪಃ ಶೌಚಂ ಸಂತೋಷಂ ಕ್ಷಾಂತಿರಾರ್ಜವಂ
ಜ್ಞಾನ ದಯಾಚ್ಯುತಾತ್ಮತ್ವಂ ಸತ್ಯಂಚ ವಿಪ್ರಲಕ್ಷಣಂ.
ಅಂದರೆ, ಶಾಂತಗುಣ, ಇಂದ್ರಿಯನಿಗ್ರಹ, ತಪಸ್ಸು, ಮನಸ್ಸು ಮತ್ತು ದೇಹದಲ್ಲಿ ಶುಚಿತ್ವ, ಸಂತುಷ್ಟಭಾವ, ಕ್ಷಮಾಗುಣ, ಋಜುತ್ವ, ಜ್ಞಾನ, ದಯೆ, ಚ್ಯುತಿಯಿಲ್ಲದ ಪರತತ್ವದ ಕಡೆಗೆ ಆಸಕ್ತಿ, ಸತ್ಯ-ಇವು ಬಾಹ್ಮಣನಲ್ಲಿರಬೇಕಾದ ಗುಣಗಳು, ಆದರೆ ಈ ಯಾವ ಗುಣಗಳನ್ನೂ ಅಶ್ವತ್ಥಾಮನು ಬೆಳೆಸಿಕೊಂಡಿರಲಿಲ್ಲ, ಶಸ್ತ್ರವಿದ್ಯೆಯನ್ನು ಮಾತ್ರ ಕಲಿತಿದ್ದ. ಶಾಸ್ತ್ರವಿದ್ಯೆಯನ್ನಲ್ಲ. ಹೀಗಾಗಿ ಅವನು ತನ್ನ ಸ್ವಧರ್ಮದಿಂದ ವಂಚಿತನಾದ.
ಇತ್ಯ ಕ್ಷತ್ರಿಯ ಗುಣಗಳೂ ಅವನಲ್ಲಿಲ್ಲ ;
ಶೌರ‍್ಯಂ ವೀರ‍್ಯಂ, ನೃತಿಸ್ತೇಜಃ ತ್ಯಾಗ ಆತ್ಮಜಯಕ್ಷಮಾ |
ಬ್ರಾಹ್ಮಣ್ಯತಾ ಪ್ರಸಾದಶ್ಚ ರಕ್ಷಾಚ ಕ್ಷಾತ್ರಲಕ್ಷಣಂ |
ಶೌಯ್ಯ, ವೀರ‍್ಯ, ಧೈರ್ಯ, ತೇಜಸ್ಸು, ತ್ಯಾಗಬುದ್ಧಿ, ತನ್ನ ಮನಸ್ಸನ್ನು ಗೆದ್ದಿರುವುದು, ಕ್ಷಮಾಶೀಲ, ಬ್ರಾಹ್ಮಣರನ್ನು ಕಾಪಾಡುವುದು, ರಕ್ಷಾಬುದ್ಧಿ-ಇವು ಕ್ಷತ್ರಿಯರಿಗೊಪ್ಪುವ ಗುಣಗಳು. ಅಶ್ವತ್ಥಾಮನ ಬದುಕನ್ನು ನೋಡಿದಾಗ ಅವನೊಬ್ಬ ಯೋಧನೆಂದು ಒಪ್ಪಿಕೊಂಡರೂ, ಈ ಕ್ಷಾತ್ರಗುಣಗಳನ್ನು ನಾವು ಅವನಲ್ಲಿ ಕಾಣುವುದಿಲ್ಲ.
ದ್ರೋಣನು ಭೀಷ್ಮನ ಪಕ್ಷ ವಹಿಸಿದರೆ, ಅಶ್ವತ್ಥಾಮನದು ಪೂರ್ತಿ ದುರ್ಯೋಧನನ ಪಕ್ಷ, ಅನೇಕ ಸಂದರ್ಭಗಳಲ್ಲಿ ಭೀಷ್ಮನು ದುರ್ಯೋಧನನ ವಿಚಾರಗಳನ್ನು ಒಪ್ಪದೆ. ಬುದ್ಧಿವಾದ ಹೇಳುತ್ತಿದ್ದ. ಆಗ ದ್ರೋಣನೂ ಭೀಷ್ಮನ ಮಾತನ್ನೇ ಅನುಮೋದಿಸುತ್ತಿದ್ದ, ಅಲ್ಲದೆ ಪಾಂಡವರೂ ದ್ರೋಣನ ಶಿಷ್ಯರೇ ಆಗಿದ್ದರು, ಹಾಗಿರುವಾಗ ಅವರ ಮೇಲೂ ದ್ರೋಣರಿಗೆ ಪ್ರೀತಿ-ಸಹಾನುಭೂತಿಗಳಿರುವುದು ಸಹಜವೇ, ಆದರೆ ಅಶ್ವತ್ಥಾಮನಿಗೆ ಮಾತ್ರ ಪಾಂಡವರ ಬಗ್ಗೆ ಎಳ್ಳಷ್ಟೂ ಸಹನೆಯಿದ್ದಂತೆ ತೋರುವುದಿಲ್ಲ. ಇದಕ್ಕೆ ಇನ್ನೊಂದು ಕಾರಣವೂ ಇರಬಹುದು, ಪಾಂಡವ ಮತ್ತು ಕೌರವರ ಒಟೊಟ್ಟಿಗೆ ಅಶ್ವತ್ಥಾಮನೂ ದ್ರೋಣನಿಂದ ಧನುರ್ವಿದ್ಯೆಯನ್ನು ಕಲಿತವನು, ಹೀಗಿರುವಾಗ ತನ್ನ ಸಹಪಾಠಿಯಾದ ಅರ್ಜುನನು ಎಲ್ಲರಿಗಿಂತ ನಿಪುಣನು ಎನ್ನುವ ಪ್ರಸಿದ್ದಿ ಅವನಿಗೆ ಅಸಹನೀಯವಾಗಿದ್ದಿರಲೂಬಹುದು. ಕೌರವರ ಕಡೆಯ ಎಲ್ಲರಿಗೂ ಅರ್ಜುನನ ಯುದ್ಧ ಚಾತುರ‍್ಯ ಮತ್ತು ಭೀಮನ ಒರಟುತನ ಮತ್ತು ಅಣಕಿಸುವ ಬುದ್ದಿ-ಇವುಗಳ ಮೇಲೆ ಸಹಿಸಲಾರದಷ್ಟು ದ್ವೇಷ, ಇದರಲ್ಲಿ ಅಶ್ವತ್ಥಾಮನೂ ಪಾಲುಗಾರ, ದುರ್ಯೋಧನ ಮತ್ತು ದುಶ್ಯಾಸನರಿಗೆ ವಿಶೇಷವಾಗಿ ಭೀಮನ ಮೇಲೆ ವೈಯಕ್ತಿಕವಾಗಿ ವೈರ. ಹಾಗೆಯೆ ಕರ್ಣ ಮತ್ತು ಅಶ್ವತ್ಥಾಮರಿಗೆ ಅರ್ಜುನನ ಬಗ್ಗೆ ಅಸಹನೆ, ಇಷ್ಟು ಮಾತ್ರವಲ್ಲ. ಅರ್ಜುನನು ತನ್ನ ತಂದೆಯ ಶತ್ರುವಾವ ದ್ರುಪದನ ಅಳಿಯನೂ ಆದನು. ಪಾಂಡವರು ದ್ರುಪದನ ಅಳಿಯಂದಿರಾದದ್ದು, ಅಶ್ವತ್ಥಾಮನ ಭವಿಷ್ಯಕ್ಕೆ ಒಂದು ಕಂಟಕವೆಂದು ಅವನು ಯೋಚಿಸಿರಬಹುದು. ಒಂದಲ್ಲ ಒಂದು ದಿನ, ದ್ರೋಣನಿಗೆ ವಿರೋಧವಾಗಿ ಪಾಂಡವರು ಹೋಗದಿದ್ದರೂ, ಆ ಬಳಿಕವಾದರೂ, ದ್ರುಪದನ ರಾಜ್ಯವಾಗಿದ್ದ ಉತ್ತರ ಪಾಂಚಾಲಕ್ಕೆ ತಾನು ಉತ್ತರಾಧಿಕಾರಿಯಾಗುವುದಕ್ಕೆ ತೊಡಕು ಬಂದೀತು ಎನ್ನುವ ಭಯವೂ ಅವನಿಗಿದ್ದಿರಬಹುದು, ಅವನ ಮನಸ್ಸಿನಲ್ಲಿ ತಾನೂ ಅರ್ಜುನನಷ್ಟೇ ಶಸ್ತ್ರಾಸ್ತ್ರನೈಪುಣ್ಯವುಳ್ಳವನು-ಎನ್ನುವ ಭಾವನೆಯಿತ್ತು, ಮಾತ್ರವಲ್ಲ, ಅವನ ತಂದೆಯೇ ಗುರುವಾದ್ದರಿಂದ ತನಗೆ ಗೊತ್ತಿರುವ ಎಲ್ಲ ಅಸ್ತ್ರವಿದ್ಯೆಯನ್ನೂ ಅವನಿಗೆ ಕಲಿಸಿಕೊಟ್ಟಿದ್ದ. ಯುಧಿಷ್ಠಿರನಿಗೆ ಮೊದಲಿಂದಲೂ ಇದರ ಬಗ್ಗೆ ಸಂದೇಹವಿತ್ತೆಂದು ಕಾಣುತ್ತದೆ. “ದ್ರೋಣನು ಕೆಲವು ಮಹಾ ಅಸ್ತ್ರಗಳ ಪ್ರಯೋಗಗಳನ್ನಾದರೂ ಅರ್ಜುನನಿಗೆ ಹೇಳದೆ ಬಚ್ಚಿಡಬಹುದು, ಅವನ್ನು ತನ್ನ ಮಗನಿಗೆ ಮಾತ್ರ ಗುಟ್ಟಾಗಿ ಹೇಳಿಕೊಡಬಹುದು”- ಎನ್ನುವುದು ಅವನ ಸಂದೇಹ, ಇದಕ್ಕಾಗಿಯೇ ಮುಂದೆ ವನವಾಸದ ಸಮಯದಲ್ಲಿ ಯುಧಿಷ್ಠಿರನು ಅರ್ಜುನನನ್ನು ಇನ್ನೂ ಹೆಚ್ಚಿನ ಅಪೂರ್ವ ಅಸ್ತ್ರಪ್ರಯೋಗವನ್ನು ಕಲಿಯಲು ಇಂದ್ರಕೀಲಕ್ಕೆ ಕಳುಹಿಸಿಕೊಡುತ್ತಾನೆ, ಇದರಿಂದಾಗಿ, ಅಶ್ವತ್ಥಾಮನೂ ಕಲಿಯದ ಅನೇಕ ಅಸ್ತ್ರಗಳ ಪ್ರಯೋಗವನ್ನು ಅರ್ಜುನನು ಕಲಿತುಕೊಂಡ.
ಮೊದಲಿನಿಂದಲೂ ಅರ್ಜುನನಿಗೆ ಸರಿಸಾಟಿಯಾಗಿದ್ದವನು ಕೌರವರ ಪಕ್ಷದಲ್ಲಿ ಯಾರೂ ಇಲ್ಲ, ಕೌರವರೆಲ್ಲ ಒಟ್ಟಾಗಿ ಬಂದರೂ ಅವರು ಅರ್ಜುನನಿದಿರು ಸೋತ ದೃಷ್ಟಾಂತ ಅನೇಕ ವಿವೆ. ದುರ್ಯೋಧನನನ್ನು ಒಮ್ಮೆ ಒಬ್ಬ ಗಂಧರ್ವನು ಕಟ್ಟಿಹಾಕಿದಾಗ, ಅವನನ್ನು ಬಿಡಿಸಿ ಕೊಳ್ಳಲು ಯಾರಿಗೂ ಆಗಲಿಲ್ಲ. ಕೊನೆಗೆ ಅರ್ಜುನನೊಬ್ಬನೇ ಗಂಧರ್ವನನ್ನು ಸೋಲಿಸಿ, ದುರ್ಯೋಧನನನ್ನು ಬಿಡಿಸಿಕೊಂಡು ಬರುತ್ತಾನೆ. ಅದೇ ರೀತಿ ವಿರಾಟನ ಹಸುಗಳನ್ನು ಇವರೆಲ್ಲ ಒಟ್ಟಾಗಿ ಕದ್ದುಕೊಂಡು ಹೋದರು. ಆಗ ಅರ್ಜುನನೊಬ್ಬನೇ ಅವರ ಬೆನ್ನಟ್ಟಿ ಹೋಗಿ, ಅವರನ್ನು ಯುದ್ಧದಲ್ಲಿ ಸೋಲಿಸಿ, ಹಸುಗಳನ್ನು ಬಿಡಿಸಿಕೊಂಡು ಬಂದ. ದ್ರುಪದನನ್ನು ಸೋಲಿಸಲಿಕ್ಕೂ ದ್ರೋಣನು ಅರ್ಜುನನನ್ನೇ ಆರಿಸಿದ ಒಂದುವೇಳೆ ಅದು ಅವನಿಗೆಯೇ, ಅಥವಾ ಮಗ ಅಶ್ವತ್ಥಾಮನಿಗೆ ಸಾಧ್ಯವಾಗುವದೆಂದು ಅವನು ಭಾವಿಸಿದ್ದರೆ, ಅದಕ್ಕಿಂತ ಮೊದಲೇ ದ್ರುಪದನನ್ನು ಅವನು ಯಾಕೆ ಯುದ್ಧ ಮಾಡಿ ಸೋಲಿಸಲಿಲ್ಲ ? ದ್ರೋಣನು ಬುದ್ದಿವಂತ, ಒಂದು ರಾಜ್ಯದ ಅರಸನ ಮೇಲೆ ಒಬ್ಬ ಬ್ರಾಹ್ಮಣ ಮತ್ತು ಅವನ ಮಗ ಹೋರಾಡಲು ಹೋದರೆ, ಅದರ ಪರಿಣಾಮವೇನಾದೀತೆಂದು ಅವನಿಗೆ ಗೊತ್ತು, ಅದಕ್ಕಾಗಿ ಒಂದು ಪ್ರಬಲವಾದ ರಾಜಕುಟುಂಬದವರನ್ನೇ ದ್ರುಪದನಿಗೆ ಇದಿರುನಿಲ್ಲಿಸಿ ತನ್ನ ಕೆಲಸವನ್ನು ಸಾಧಿಸುವ ನಿರ್ಧಾರ ಅವನದ್ದು !
ಅಶ್ವತ್ಥಾಮನಿಗೂ, ದೋಣನಿಗೂ ಅರ್ಜುನನನ್ನು ಸೋಲಿಸುವ ಧೈರ್ಯವಿಲ್ಲ. ಮಹಾ ಭಾರತ ಯುದ್ಧ ವಾಗುವಾಗ, ದ್ರೋಣನು ಸೇನಾಧಿಪತಿಯಾದ ಕೂಡಲೇ, ಪಾಂಡವರ ಕಡೆಯ ಆದಷ್ಟು ವೀರರನ್ನು ಕೊಲ್ಲುವ ನಿರ್ಧಾರ ಮಾಡಿದ, ಇದನ್ನು ಸಾಧಿಸಬೇಕಾದರೆ, ಮುಖ್ಯಕಣದಲ್ಲಿ ಅರ್ಜುನನಿರಬಾರದು, ಉಪಾಯದಿಂದ ಅರ್ಜುನನನ್ನು, ಕೃಷ್ಣನು ದುರ್ಯೋಧನನಿಗೆ ಕೊಟ್ಟ ನಾರಾಯಣೀಯ ಸೈನ್ಯದ ಸಮಸಪ್ತಕರೊಡನೆ ಕಾದಾಡುತಿರುವಂತೆ ತಿರುಗಿಸಿದ ಬಳಿಕ ತಾನು, ಕೌರವರ ವೀರಾಧಿವೀರರೆಲ್ಲರನ್ನು ಸೇರಿಸಿ ಚಕ್ರವ್ಯೂಹವನ್ನು ನಿರ್ಮಿಸಿ, ಪಾಂಡವರನ್ನು ಸದೆಬಡಿಯುವ ಉಪಾಯ ಹೂಡಿದ, ಮೊದಲ ದಿನ ಅಭಿಮನ್ಯುವನ್ನು, ಪಾಂಡವರ ಕಡೆಯ ಅನೇಕ ವೀರರನ್ನೂ ಕೊಂದ, ಆದರೆ ಎರಡನೆಯ ದಿನ, ಮಗನ ಕೊಲೆಯಿಂದ ಕುಪಿತನಾದ ಅರ್ಜುನನು ತಾನೇ ಅಲ್ಲಿಗೆ ಬಂದಾಗ, ದ್ರೊಣನು ಕಂಗಾಲಾದ, ದ್ರೋಣನೂ, ಕೌರವರ ಸೈನ್ಯದ ಎಲ್ಲರೂ ಒಟ್ಟಾಗಿ, ದುರ್ಯೋಧನನ ಭಾವ ಜಯದ್ರಥನನ್ನು ರಕ್ಷಿಸುವ ಸರ್ವಪ್ರಯತ್ನ ಮಾಡಿದರು, ಆದರೆ ಅರ್ಜುನನು ತಾನು ಮಾಡಿದ ಶಪಥದಂತೆ, ಆ ದಿನದ ಸೂರ್ಯ ಮುಳುಗುವುದರೊಳಗೆ ಜಯದ್ರಥನನ್ನು ಕೊಂದೇ ಬಿಟ್ಟ, ಮೂರನೆಯ ದಿನ ದ್ರೋಣನೇ ಸತ್ತ, ಹದಿನೆಂಟು ದಿನದ ಮಹಾಭಾರತ ಯುದ್ಧದ ಆದ್ಯಂತ, ದ್ರೋಣ, ಕರ್ಣ, ಶಲ್ಯ, ಮುಂತಾದವರು ವೀರಯೋಧರಾಗಿ ಹೋರಾಡಿದ್ದು, ಅನೇಕರನ್ನು ವಧಿಸಿದ್ದು ನಮ್ಮ ಗಮನವನ್ನು ಸೆಳೆಯುತ್ತದೆ. ಮೊದಲ ಹತ್ತು ದಿನಗಳಲ್ಲಿ ಭೀಷ್ಮನು ಸೇನಾಧಿಪತಿಯಾಗಿದ್ದ, ಅವನ ಅವಧಿಯಲ್ಲಿ ಮಾತ್ರ, ಉದ್ದೇಶಪೂರ್ವಕವಾಗಿ, ಯುದ್ಧಕ್ಕೆ ಹೆಚ್ಚು ಕಾವು ಏರದಂತೆ ನೋಡಿಕೊಂಡಿದ್ದ, ಆದಷ್ಟು ಸಾವು- ನೋವನ್ನು ತಪ್ಪಿಸಿ, ಸಮಯವನ್ನು ಮುಂದೂಡುತ್ಯ, ಸಾಧ್ಯವಾದರೆ ದುರ್ಯೋಧನನನ್ನು ಯುದ್ಧವನ್ನು ಬಿಟ್ಟು ಬಿಡುವ ಕಡೆಗೆ ಮನವೊಲಿಸುವ ಪ್ರಯತ್ನದಲ್ಲಿದ್ದ, ಕುಲದ ಹಿರಿಯವನಾದವನು ಮಾಡ ಬೇಕಾದದ್ದೂ ಇದೇ.
ಆದರೆ ಅಶ್ವತ್ಥಾಮನೊಬ್ಬ ವೀರಯೋಧ-ಎಂದು ನಮಗೆ ಅನ್ನಿಸುವ ಹಾಗೆ ಅವನು ಯುದ್ಧದಲ್ಲಿ ಹೋರಾಡಿದ್ದು ಕತೆಯಲ್ಲಿ ಕಂಡಂತೆ ಅನಿಸುವುದಿಲ್ಲ, ಅವನೊಬ್ಬ ಸಾಮಾನ್ಯ ಯೋಧನಾಗಿಯೇ ನಮಗೆ ಕಾಣುತ್ತಾನೆ. ಕೊನೆಗೆ ಹದಿನೆಂಟನೆಯ ದಿನ, ಎಲ್ಲ ಸೇನಾ ಪತಿಗಳೂ ಸತ್ತಮೇಲೆ ದುರ್ಯೋಧನನ ಸೈನ್ಯ ಕಂಗೆಟ್ಟು, ಅಸ್ತವ್ಯಸ್ತವಾಗಿ ಓಡಲಾರಂಭಿಸುತ್ತದೆ, ಅದರೊಟ್ಟಿಗೆ ಓಡಿಹೋದವರಲ್ಲಿ ಅಶ್ವತ್ಥಾಮನೂ ಒಬ್ಬ. ಅವನೊಬ್ಬ ಧೀರಯೋಧನಾಗಿದ್ದರೆ ಅಲ್ಲೇ ನಿಂತು ದುರ್ಯೋಧನನಲ್ಲಿ ಧೈರ್ಯವನ್ನು ತುಂಬುತ್ತಿದ್ದ ಕೃಪ ಕೃತವರ್ಮರೊಡನೆ ಅವನು ಓಡಿಹೋಗಿ ಅಡವಿಯಲ್ಲಿ ತಲೆಮರೆಸಿಕೊಳ್ಳುತ್ತಿರಲಿಲ್ಲ.
ಬಳಿಕ ಎಲ್ಲರೂ ಓಡಿಹೋದ ಮೇಲೆ, ಒಬ್ಬಂಟಿಗನಾದ ದುರ್ಯೋಧನನೂ ಹತ್ತಿರದ ಅರಣ್ಯದೊಳಗಿರುವ ವೈಶಂಪಾಯನ ಸರೋವರದೊಳಗೆ ಅವಿತುಕೊಂಡ, ಬಹುಶಃ ಅವನಲ್ಲಿ ಒಂದು ಆಶೆಯಿದ್ದಿರಬೇಕು, ತಂದೆ ಧೃತರಾಷ್ಟ್ರನು ಯುಧಿಷ್ಠಿರನೊಡನೆ ತನ್ನನ್ನು ಉಳಿಸುವಂತೆ ಕೇಳಿಕೊಂಡಾನು ಇದನ್ನು ಯುಧಿಷ್ಠಿರನ ಮನ್ನಿಸಿಯಾನು, ಅದುವರೆಗೆ ತಾನು ಪಾಂಡವರ ಕೈಗೆ ಸಿಕ್ಕದೆ ತಲೆಮರೆಸಿಕೊಂಡಿರಬೇಕು ಎಂದು, ಅದಕ್ಕಾಗಿಯೇ ತಾನು ಅವಿತುಕೊಂಡಿರುವ ವರ್ತಮಾನವನ್ನು ತಂದೆಗೆ ಸಂಜಯನ ಮೂಲಕ ಕಳುಹಿಸಿದ್ದು, ದಾರಿಯಲ್ಲಿ ಸಂಜಯನಿಗೆ ಅಶ್ವತ್ಥಾಮ ಸಿಕ್ಕಿದ, ದುರ್ಯೋಧನನ ವರ್ತಮಾನವನ್ನು ಸಂಜಯನಿಂದ ತಿಳಿದ ಅಶ್ವತ್ಥಾಮ ತನ್ನ ಸಂಗಡಿಗರೊಡನೆ ಸರೋವರದ ಬಳಿಗೆ ಬಂದ. ದಡದಲ್ಲಿ ನಿಂತು ಗಟ್ಟಿಯಾಗಿ ದುರ್ಯೋಧನನನ್ನು ಕರೆದು, ತಾನು ಬಂದಿರುವುದನ್ನು ಅವನಿಗೆ ಹೇಳಿದ, ಹೊರಗೆ ಬಂದು ಯುದ್ದವನ್ನು ಪುನಃ ಆರಂಭಿಸುವಂತೆ ಒತ್ತಾಯಿ ಸಿದ, ಗಟ್ಟಿಯಾಗಿ ದಡದಿಂದಲೇ ವಾದವನ್ನಾರಂಭಿಸಿದ ಆ ಹಚ್ಚ ಹಗಲಲ್ಲಿ ಎಲ್ಲರಿಗೂ ಕೇಳುವಂತೆ ! ಇದರ ಪರಿಣಾಮವಾಗಿ ದುರ್ಯೋಧನನ ಗುಟ್ಟು ರಟ್ಟಾಗುತ್ತದೆ, ಭೀಮನಿಗಾಗಿ ಮಾಂಸದ ಬೇಟೆಗೆ ಬಂದ ಬೇಡರು ಹತ್ತಿರದಲ್ಲೇ ಕಾಡಿನಲ್ಲಿದ್ದವರು ಇದನ್ನು ಕೇಳಿದರು, ಕೂಡಲೇ ಓಡಿಹೋಗಿ ಭೀಮನಿಗಿದನ್ನು ಹೇಳಿದರು, ಅವರಿಗೂ ಗೊತ್ತು, ಭೀಮನಿಗೆ ಈ ಸಮಾಚಾರ ಮಾಂಸಕ್ಕಿಂತಲೂ ಹೆಚ್ಚು ರುಚಿಯಾಗುತ್ತದೆ- ಎಂದು, ಕೂಡಲೇ ಭೀಮ, ತನ್ನ ಸೋದರರೊಡನೆ ಸರೋವರರದ ಕಡೆಗೆ ಧಾವಿಸಿ ಬಂದ. ಪಾಂಡವರೆಲ್ಲ ಕೊಳದ ಕಡೆ ಬರುತ್ತಿದ್ದಾಗ ರಥಗಳ ಸದ್ದು ಅಶ್ವತ್ಥಾಮ ಮತ್ತವನ ಸಂಗಡಿಗರ ಕಿವಿಗೆ ಬಿದ್ದಿದ್ದೇ ತಡ ಮೂವರೂ ದುರ್ಯೋಧನನನ್ನು ಅಲ್ಲೇ ಬಿಟ್ಟು ಮತ್ತೆ ಅರಣ್ಯದೊಳಗೆ ಪರಾರಿ!
ದುರ್ಯೋಧನ ಮತ್ತೆ ಸರೋವರದೊಳಗೆ ಇಳಿದು ಅಡಗಿಕುಳಿತ, ಭೀಮ ಮತ್ತವನ ಸೋದರರು ಹಾಗೂ ಪಾಂಚಾಲರೆಲ್ಲ, ದುರ್ಯೊಧನನಿಗೆ ಛೀಮಾರಿ ಹಾಕಿ ಕೆಣಕಿ, ಅವನು ಕೊಳದಿಂದ ಹೊರಗೆ ಬರುವಂತೆ ಮಾಡಿದರು. ಬಿಲದೊಳಗಿದ್ದ ಹಾವನ್ನು ಕೆರಳಿಸಿ ಹೊರಬರುವಂತೆ ಮಾಡಿ ಮತ್ತೆ ಅದನ್ನು ಹೊಡೆದು ಕೊಲ್ಲುವಂತೆ ಇತ್ತು ಆಗಿನ ಪರಿಸ್ಥಿತಿ, ಭೀಮನು ದುರ್ಯೋಧನನ ತೊಡೆಗೆ ಗದೆಯಿಂದ ಹೊಡೆದು ನೆಲಕ್ಕುರುಳಿಸಿದ, ಆಮೇಲೆ ತಲೆಯನ್ನು ತುಳಿದ, ಸಾಯುವ ಅವಸ್ಥೆಯಲ್ಲಿ ಅವನನ್ನು ಬಿಟ್ಟು ಪಾಂಡವರೂ ಪಾಂಚಾಲರೂ ಮರಳಿದರು.
ಎಲ್ಲರೂ ಹೋದಮೇಲೆ ಕತ್ತಲಾದ ಬಳಿಕ, ಅಶ್ವತ್ಥಾಮ, ಕೃಪ ಕೃತವರ್ಮರು ಮೆಲ್ಲನೆ ಸರೋವರದ ಬಳಿಗೆ ಬಂದರು. ಮರಣಾವಸ್ಥೆಯಲ್ಲಿ ತೋಡೆಮುರಿದು, ತಲೆಯೊಡೆದು ಬಿದ್ದಿರುವ ದುರ್ಯೋಧನನನ್ನು ನೋಡಿದರು, ಆದರೆ ಪ್ರಯೋಜನವೇನು ? ಅಶ್ವತ್ಥಾಮನು ಇದಕ್ಕೆ ತಾನು ಸೇಡು ತೀರಿಸುತ್ತೇನೆಂದು ದುರ್ಯೋಧನನೊಡನೆ ಹೇಳಿದ. ತನ್ನನ್ನು ಸೇನಾಧಿಪತಿಯಾಗಿ ಮಾಡಿ ಕಳುಹಿಸಿಕೊಡು-ಎಂದು ಪೀಡಿಸಿದ, ಇವನ ಪೀಡೆಯನ್ನು ತೊಲಗಿಸಲೋ ಎಂಬಂತೆ, ದುರ್ಯೋಧನನು ಬಿದ್ದಲ್ಲಿಂದಲೇ ಅಶ್ವತ್ಥಾಮನಿಗೆ ಸೇನಾಧಿಪತ್ಯದ ಅಭಿಷೇಚನ ಮಾಡುತ್ತಾನೆ, ಅಶ್ವತ್ಥಾಮನ ಯೋಗವಿಷ್ಟೇ, ಅವನ ಮೊದಲಿನ ಎಲ್ಲ ಸೇನಾಧಿಪತಿಗಳೂ ಅರಮನೆಯಲ್ಲಿ ಸಂಭ್ರಮದ ಅಭಿಷೇಕವನ್ನು ರಾಜನಾಗಿರುವವನ ಕೈಯಿಂದ ಮಾಡಿಸಿಕೊಂಡಿದ್ದರು. ಅದಕ್ಕೆ ಅಶ್ವತ್ಥಾಮನದನ್ನು ಹೋಲಿಸಿದರೆ, ಅವನ ಅಭಿಷೇಕದ ರೀತಿ ಹಾಸ್ಯಾಸ್ಪದವೂ ಅಸಹ್ಯವೂ ಆಗಿ ಕಾಣು ವುದು! ಅಭಿಷೇಕವಾದದ್ದೇ ತಡ ! ಮೂವರೂ ಮತ್ತೆ ಕಾಡಿನೊಳಗೆ ಹೋಗುತ್ತಾರೆ.
ಅಶ್ವತ್ಥಾಮನು ಮನಸ್ಸಿನಲ್ಲಿ ದುರ್ಯೋಧನನಿಗಾದ ಅವಸ್ಥೆಯನ್ನು ಕಂಡು ಮರುಗುತ್ತಿದ್ದ ನಿಜ, ಹೇಗಾದರೂ ಮಾಡಿ ದುರ್ಯೋಧನ ಸಾಯುವ ಮೊದಲು ಅವನ ಈ ಅವಸ್ಥೆಗೆ ಕಾರಣರಾದವರ ಮೇಲೆ ಸೇಡನ್ನು ತೀರಿಸಿಕೊಳ್ಳಬೇಕು, ಇದರಿಂದ ತಾನೂ ಒಬ್ಬ ಶೂರನೆಂದು ದುರ್ಯೋಧನನಿಗೆ ಮನವರಿಕೆ ಮಾಡಿಕೊಡಬೇಕು ಎನ್ನುವುದು ಅವನ ಆಸೆಯಾಗಿರಬಹುದು, ಆದರೆ ಇದಕ್ಕಿಂತಲೂ ಹೆಚ್ಚಾಗಿ ಅವನಿಗೆ ತನ್ನ ತಂದೆಯ ಮರಣದಿಂದ ಪಾಂಡವರು ಮತ್ತು ಪಾಂಚಾಲರ ಮೇಲೆ ಕೋಪ, ವೀರಾವೇಷದಿಂದ ಹರಾಡುತ್ತಿದ್ದ ತನ್ನ ತಂದೆಗೆ, ಯುಧಿಷ್ಠಿರ ಮತ್ತು ಭೀಮ “ಅಶ್ವತ್ಥಾಮನು ಸತ್ಯ”
ಎಂದು ಸುಳ್ಳು ಹೇಳಿದರು, ಪರಿಣಾಮವಾಗಿ ದುಃಖದಿಂದ ದ್ರೋಣನು ವಿಸ್ಮೃತಿಹೊಂದಿ ಸುಮ್ಮನೆ ಸ್ವಲ್ಪ ಹೊತ್ತು ನಿಂತಾಗ, ಆ ಅವಕಾಶವನ್ನು ಉಪಯೋಗಿಸಿ ದೃಷ್ಟದ್ಯುಮ್ನನು ಅವನ ರಥದೊಳಗೆ ನೆಗೆದು ಒರೆಯಿಂದ ಖಡ್ಗವನ್ನು ತೆಗೆದು ರುಂಡವನ್ನು ಹಾರಿಸಿದ, ಹೀಗೆ ತನ್ನ ತಂದೆಯನ್ನು ಮೋಸದಿಂದಲ್ಲವೇ ಇವರು ಕೊಂದದ್ದು ? (ಇಂತಹ ಮೋಸವನ್ನು ದ್ರೊಣನೂ ಮಾಡಿದ್ದ, ಅಭಿಮನ್ಯುವನ್ನು ದ್ರೋಣ ಕಂದದ್ದೂ ಮೋಸದಿಂದಲೇ, ಆದರೆ ಮನುಷ್ಯರೆಲ್ಲರೂ ತಾವು ಮಾಡಿದ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ.) ಅರ್ಜುನನ ಉದ್ದೇಶ ದ್ರೋಣನನ್ನು ಸೆರೆಹಿಡಿಯುವುದು ಕೊಲ್ಲುವುದಲ್ಲ, ಆದರೆ ದೃಷ್ಟದ್ಯುಮ್ನನ ದುಡುಕಿನಿಂದ ಕಾರ್ಯ ಮಿಂಚಿಹೋಯಿತು. ದೃಷ್ಟದ್ಯುಮ್ನ ಹುಟ್ಟಿದ್ದೇ ಅದಕ್ಕಾಗಿ, ಪುತ್ರಕಾಮೇಷ್ಠಿಯಾಗ ಮಾಡಿ ದ್ರುಪದನು ದ್ರೋಣನನ್ನು ಕೊಲ್ಲಲಿಕ್ಕೆಂದೇ ದೃಷ್ಟದ್ಯುಮ್ಮನನ್ನು ಪಡೆದಿದ್ದ. ಹೀಗಾಗಿ ದೃಷ್ಟದ್ಯಮ್ನ ತನ್ನ ಬಾಳಿನ ಉದ್ದೇಶ ತೀರಿಸಿಯೇ ಬಿಟ್ಟ.
ದ್ರೋಣನು ಸತ್ತುದ್ದರಿಂದ ಅಶ್ವತ್ಥಾಮನಿಗೆ ಪಿತೃವಿಯೋಗದ ದುಃಖ ಮಾತ್ರವಲ್ಲ, ತಾನು ರಾಜನಾಗುವ ಅವಕಾಶವೂ ತಪ್ಪಿದಹಾಗಾಯಿತು, ದ್ರುಪದನಿಂದ ದ್ರೋಣನು ಕಸಿದುಕೊಂಡಿದ್ದ ಉತ್ತರ ಪಾಂಚಾಲವೂ ಇನ್ನು ಕೈಬಿಟ್ಟು ಹೋದಂತೆಯೇ, ಪಾಂಡವರು, ದೃಷ್ಟದ್ಯಮ್ನ ಮತ್ತು ಇತರ ಪಾಂಚಾಲರು ಇರುವ ತನಕ, ಅವರು ತನಗೆ ರಾಜನಾಗಲು ಬಿಡಲಿಕ್ಕಿಲ್ಲ, ದ್ರೋಣನು ಗುರುವಾದ್ದರಿಂದ, ಗುರುದಕ್ಷಿಣೆಯಾಗಿ ಒಪ್ಪಿಸಿದ ಭೂಮಿಯನ್ನು ಅವನಿರುವ ವರೆಗೆ ದೃಷ್ಟದ್ಯುಮ್ನನು ಮರಳಿ ಪಡೆಯುವುದಕ್ಕೆ ಪಾಂಡವರು ನೆರವಾಗದೆ ಇರಬಹುದು, ಆದರೆ ಈಗೆ ಅಶ್ವತ್ಥಾಮನಿಗೆ ಅದು ಹೋಗುವಾಗ ದೃಷ್ಟದ್ಯುಮ್ನ ಸುಮ್ಮನಿರಲಾರ, ಅಲ್ಲದೆ ಪಾಂಡವರೂ ದೃಷ್ಟದ್ಯುಮ್ನನನ್ನೇ ಅನುಮೋದಿಸಿ ಯಾರು ಪರಂಪರೆಯ ರಾಜಮನೆತನಕ್ಕೆ ಭೂಮಿಯು ಸಲ್ಲಬೇಕಾದ್ದು ಅಂದಿನ ಕ್ಷತ್ರಿಯ
ಧರ್ಮ, ಈ ಧರ್ಮವನ್ನೇ ಮೊದಲಿನಿಂದ ಕೊನೆಯ ತನಕ ಎತ್ತಿಹಿಡಿದವನು ಕೃಷ್ಣ; ಅಶ್ವತ್ಥಾಮನಿಗೆ ಈ ಎಲ್ಲ ಯೋಚನೆಗಳು ತಲೆಕೆಡಿಸಿರಬೇಕು, ರಾಜನಾಗುವ ಮೋಹ, ಅವನ ಸ್ಮೃತಿವಿಭ್ರಮೆ ಮಾಡಿರಬೇಕು, ಇವರನ್ನೆಲ್ಲ ಕೊಲ್ಲಬೇಕು, ಹೇಗೆ ? ಇದಿರುನಿಂತು ಯುದ್ಧ ಮಾಡಲು ಧೈರ್ಯಸಾಲದು, ಏನಾದರೂ ಮೋಸದಿಂದಲೇ ಇದನ್ನು ಸಾಧಿಸಬೇಕು. ಇದು ಅಶ್ವತ್ಥಾಮನ ನಿರ್ಧಾರ.
ಕಾಡಿನೊಳಗೆ ಬಂದಮೇಲೆ ಕೃಪ ಮತ್ತು ಕೃತವರ್ಮ ನಿದ್ರಿಸಿದರು, ಅಶ್ವತ್ಥಾಮನಿಗೆ ನಿದ್ದೆ ಬಾರದು, ಹಾಗೆಯೇ ಆ ಕಾಳರಾತ್ರಿಯಲ್ಲಿ ಕಣ್ಣು ಬಿಟ್ಟುಕೊಂಡು ಕುಳಿತಿದ್ದ. ಆಗ ಒಂದು ದೊಡ್ಡ ಗೂಗೆ ಸುಖವಾಗಿ ಮಲಗಿ ನಿದ್ರಿಸುತ್ತಿದ್ದ ಕೆಲವು ಕಾಗೆಗಳ ಮೇಲೆ ಬಿದ್ದು ಕೊಂದಿತು, ಈ ದೃಶ್ಯದಿಂದ ಅವನಿಗೆ ಒಂದು ಯೋಚನೆ ಹೊಳೆಯಿತು ! “ಪಾಂಡವರೀಗ ನಿದ್ರಿಸುತ್ತಿದ್ದಾರೆ. ಅವರನ್ನೂ ಹೀಗೆಯೇ ಕೊಲ್ಲಬೇಕು” ಎಂದುಕೊಂಡು, ಮಲಗಿದ್ದ ಕೃಪ-ಕೃತವರ್ವರನ್ನು ಎಬ್ಬಿಸಿ, ಅವರಿಗೆ ತನ್ನ ನಿರ್ಧಾರವನ್ನು ಹೇಳಿದ. ಅವರೆಷ್ಟು ಬೇಡವೆಂದು ಹೇಳಿದರೂ ಕೇಳದೆ, ಕೂಡಲೇ ಎದ್ದು ಪಾಂಡವರ ಶಿಬಿರದ ಕಡೆಗೆ ಹೊರಟ, ಅವರ ಹಿಂಬಾಲಿಸಿದರು, ಇವನು ಶಿಬಿರದೊಳಗೆ ಹೊಕ್ಕ, ಅವರು ಹೊರಗೆಯೇ ನಿಂತುಕೊಂಡರು. ಹೊಕ್ಕವನೇ ಮೊದಲು ಕತ್ತಲಲ್ಲಿ ದೃಷ್ಟದ್ಯುಮ್ನನ್ನು ಕೊಂದ, ಬಳಿಕ ಐವರು ಒಟ್ಟಿಗೆ ಮಲಗಿದ್ದಲ್ಲಿಗೆ ಹೋಗಿ ಅವರನ್ನು ತಲೆಗಡಿದ, ಕೊನೆಗೆ ಸಿಕ್ಕಸಿಕ್ಕವರನ್ನು ಕೊಲ್ಲಲಾರಂಭಿಸಿದ. ಕತ್ತಲಲ್ಲಿ ಯಾರನ್ನೂ ಗುರುತಿಸಲಾಗುವುದಿಲ್ಲ. ಬಂದ ಶತ್ರುಗಳು ಯಾರು ? ಎಷ್ಟು ಜನರಿದ್ದಾರೆ ? ಎಂಬುದೊಂದೂ ತಿಳಿಯದ ಪಾಂಡವರ ಸೈನಿಕರು ಕಂಗಾಲಾಗಿ ಅತ್ತಿಂದಿತ್ತ ಓಡತೊಡಗಿದರು. ಆಗ ಹೊರಗಿನಿಂದ ಕೃಪ ಮತ್ತು ಕೃತವರ್ಮ ಶಿಬಿರಕ್ಕೆ ಬೆಂಕಿಯಿಕ್ಕಿ ಒಳಗಿದ್ದವರನ್ನು ಮತ್ತೂ ಕಂಗಾಲುಗೊಳಿಸಿದರು, ಅಶ್ವತ್ಥಾಮನು ಹೊರಬಂದ.
ಆದರೆ ಪಾಂಡವರು ಮಾತ್ರ ಆಗ ಅಲ್ಲಿರಲಿಲ್ಲ. ಅವನು ಕೊಂದದ್ದು ಪಾಂಡವರ ಐವರು ಮಕ್ಕಳನ್ನು ಕೃಷ್ಣನಿಗೆ ಮೊದಲೇ, ರಾತ್ರೆಗೆ ಅಶ್ವತ್ಥಾಮನು ಏನೋ ಮೋಸ ಮಾಡಲು ಪ್ರಯತ್ನಿಸುತ್ತಿದ್ದಾನೆ ಎಂಬ ಸಂಶಯ ಬಂದು ಅವನು ದ್ರೌಪದಿ ಮತ್ತು ಪಾಂಡವರನ್ನು ಕೌರವರ ಶಿಬಿರಕ್ಕೆ ಕರೆದುಕೊಂಡು ಹೋಗಿ ಅಲ್ಲಿ ರಾತ್ರಿ ತಂಗಿದ್ದ, ಕೃಷ್ಣನಿಗೂ ನಿರ್ದಿಷ್ಟವಾಗಿ ಏನಾಗಬಹುದೆಂದು ಗೊತ್ತಿರಲಿಲ್ಲ. ಆದರೆ ಆ ದಿನವಿಡೀ ಅಶ್ವತ್ಥಾಮನ ಚಲನವಲನ, ಅವನು ದುರ್ಯೋಧನನ ಬಳಿಗೆ ಬಂದದ್ದರ ವರ್ತಮಾನವು ಅವನಿಗೆ ಸಿಗುತ್ತಲೇ ಅವನು ಈ ರೀತಿ ಮಾಡಿದ್ದ.
ಅಶ್ವತ್ಥಾಮನು ನೇರವಾಗಿ ದುರ್ಯೋಧನನಿದ್ದಲ್ಲಿಗೆ ಬಂದು ಅವನಿಗೆ ತನ್ನ ಶೌರ್ಯವನ್ನು ವಿವರಿಸಿದ, ದುರ್ಯೋಧನನಿಗೂ, ತನ್ನಂತೆಯೇ ಪಾಂಡವರೂ ಮಕ್ಕಳನ್ನು ಕಳೆದುಕೊಂಡರೆಂಬ ಕೂರ ಸಮಾಧಾನವಾಗಿರಬೇಕು, ಸಾಯುವ ಮೊದಲು ಅವನ ಶಹಭಾಸ್‌ಗಿರಿ ಸಿಕ್ಕಿದ್ದರಲ್ಲೇ ಅಶ್ವತ್ಥಾಮನಿಗೂ ತೃಪ್ತಿಯಾಗಿರಬೇಕು !
ಆದರೆ ಅಷ್ಟರಲ್ಲೇ, ಪಾಂಡವರು ಇನ್ನೇನು ತನಗೆ ಮಾಡಿಯಾರೋ-ಎನ್ನುವ ಭಯ ಕಾಡತೊಡಗಿತು. ದುರ್ಯೋಧನನು ಸಾಯುತ್ತಲೇ, ಸರೋವರದ ಬಳಿಯಿಂದ ಅವನು ದೂರದ ಗಂಗಾತೀರದಲ್ಲಿರುವ ವ್ಯಾಸರ ಆಶ್ರಮಕ್ಕೆ ನಡೆದ. ಅಲ್ಲಿ ಅವಿತುಕೊಂಡ, ಕೃಷ್ಣಮೊಡನೆ ಪಾಂಡವರೂ ಅವನ ಹಿಂದೆಯೇ ಬಂದರು, ಅವರನ್ನು ಕಾಣುತ್ತಲೇ ಹೆದರಿದ ಅಶ್ವತ್ಥಾಮ, ಮುಂದೇನಾದೀತೆಂಬ ಪರಿವೆಯಿಲ್ಲದೆ, ತ೦ದೆಯು ಹೇಳಿಕೊಟ್ಟಿದ್ದ (ಅದನ್ನೂ ಸರಿಯಾಗಿ ಕಲಿತಿರಲಿಲ್ಲ.) .ಬ್ರಹ್ಮಾಸ್ತ್ರವನ್ನು ಮಂತ್ರಿಸಿ ಅವರ ಮೇಲೆ ಪ್ರಯೋಗಿಸಿದ ! ಇದಕ್ಕೆ ಪ್ರತಿಯಾಗಿ ಅರ್ಜುನನೂ ಅಷ್ಟೇ ಭಯಂಕರವಾದ ಅಸ್ತ್ರವನ್ನು ಪ್ರಯೋಗಿಸಿದ, ಎರಡೂ ಅಸ್ತ್ರಗಳು ನಡುದಾರಿಯಲ್ಲಿ ಸಂಘರ್ಷಗೊಂಡಾಗ, ಲೋಕಕ್ಕೇ ಅಪಾಯವಾಗಲಿತ್ತು, ಅಷ್ಟರಲ್ಲಿ ವ್ಯಾಸನು ವಂಧ್ಯೆಬಂದು, ಇಬ್ಬರೂ ತಂತಮ್ಮ ಅಸ್ತ್ರಗಳನ್ನು ಹಿಂತೆಗೆದುಕೊಳ್ಳುವಂತೆ ಬುದ್ದಿ ಹೇಳುತ್ತಾನೆ. ಅರ್ಜುನನು ಒಬ್ಬ ನಿಜವಾದ ಕ್ಷತ್ರಿಯ, ಅವನು ತನ್ನ ಅಸ್ತ್ರವನ್ನು ಕೂಡಲೇ ಹಿಂತೆಗೆದುಕೊಂಡ. ಆದರೆ ಅಶ್ವತ್ಥಾಮನಿಗೆ ಇದು ಸಾಧ್ಯವಾಗಲಿಲ್ಲ. ಅವನ ಅಸ್ತ್ರವು ಉತ್ತರೆಯ ಗರ್ಭವನ್ನು ಹೊಕ್ಕು ಅಲ್ಲಿದ್ದ ಶಿಶುವನ್ನು ಕೊಂದಿತು. ಆದರೆ ಕೃಷ್ಣನು ಮಗುವನ್ನು ಬದುಕಿಸಿದ, ಮಹಾ ಪಾತಕಗಳಲ್ಲಿ ಶಿಶುಹತ್ಯೆ ಸ್ತ್ರೀ ಹತ್ಯೆ ಮತ್ತು ಭ್ರೂಣ ಹತ್ಯೆಗಳು ಸೇರಿದೆ. ಉತ್ತಮ ಬ್ರಾಹ್ಮಣ ಕುಲದಲ್ಲಿ ಜನಿಸಿದ ಅಶ್ವತ್ಥಾಮ ರಾತ್ರಿ ಮಲಗಿದ್ದ ಶಿಶುಗಳನ್ನು ಅದಾಗಲೇ ಕೊಂದಾಗಿದೆ. ಇದೀಗ ಗರ್ಭಿಣಿಯಾದ ಉತ್ತರೆ ಮತ್ತವಳ ಭ್ರೂಣವನ್ನು ಕೊಲ್ಲಲು ಹೊರಟಿದ್ದಾನೆ. ಕೃಷ್ಣನು ಅವರನ್ನು ರಕ್ಷಿಸಿದ, ಆದರೆ ಅಶ್ವತ್ಥಾಮನ ಕೃತ್ಯಕ್ಕೆ ತಕ್ಕುದಾದ ಶಾಪವನ್ನೇ ಕೊಟ್ಟ. ಇಡೀ ಲೋಕವೇ ಎಂದೆಂದಿಗೂ ಮರೆಯಲಾಗದಷ್ಟು ಭಯಂಕರವಾದ ಶಾಪವದು ! “ಅನೇಕ ಸಾವಿರ ವರ್ಷ ನೀನು ಬದುಕಿರು, ಬದುಕಿರುವ ಯಾವ ಮನುಷ್ಯನೂ, ಯಾರ ಮನೆಯಲ್ಲೂ ನಿನಗೆ ಅನ್ನ ನೀರು ಕೊಡದಿರಲಿ, ಹಸಿವು, ನೀರಡಿಕೆ, ನಿದ್ರೆ, ತಾಪದಿಂದ ಬಳಲಿಕೊಂಡು, ನಿರಂತರ ಕಾಡು, ಮರಳುಕಾಡುಗಳಲ್ಲಿ ಸಂಚರಿಸುತ್ತಿರು.”
ಕೌರವ ಸೇನೆಯ ಕೊನೆಯ ಸೇನಾಪತಿಯವನು ! ಅವನಿಗಿಂತ ಹಿಂದಿನ ಸೇನಾಪತಿಗಳೆಲ್ಲ ರಣರಂಗದಲ್ಲಿ ಕಡುಗಲಿಗಳಾಗಿ ಕಾದಾಡಿ, ಸತ್ತು ವೀರರೆನಿಸಿಕೊಂಡರು, ಅಂದಿನ ಕಾಲದ ನಂಬುಗೆಯ ಪ್ರಕಾರ ಅವರು ವೀರಸ್ವರ್ಗವನ್ನು ಸೇರಿಸಬೇಕು, ಆದರೆ ಅಶ್ವತ್ಥಾಮನ ಬದುಕಿ ಪಿಶಾಚಿಯುಂತಾದ ಕಾರಣ, ಅವರದ್ದು ಹಗಲಿನ ಹೋರಾಟವಾದರೆ, ಇವನದ್ದು ಕಾಳರಾತ್ರಿಯ ಪೈಶಾಚಿಕ ಕೃತ್ಯ, ಮಲಗಿದ್ದವರನ್ನು ಕೊಲ್ಲುವುದು, ಅಪಹರಿಸು ವುದು-ಇವೆಲ್ಲವೂ ಪೈಶಾಚಿಕ ಕೃತ್ಯಗಳು, ತಂದೆ ದ್ರೋಣನು ಮುದುಕನಾಗಿದ್ದರೂ ರುದ್ರರೂಪದಿಂದ ರಣರಂಗದಲ್ಲಿ ಹೋರಾಡಿ ಸತ್ತ, ಆದರೆ ಬಿಸಿರಕ್ತದ ವಯಸ್ಸಿನ ಮಗನು ಮಾತ್ರ ಬದುಕುವ ಆಸೆಯಿಂದ, ಯುದ್ಧರಂಗದಲ್ಲಿ ಹಿಂದೆ ಹಿಂದೆಯೇ ಉಳಿಯುತ್ತಿದ್ದ, ಕೊನೆಗೆ ಎಲ್ಲರೂ ಸತ್ತಮೇಲೆ ತಾನು ಮುಂದೆ ಬರಬೇಕಾದ ಪ್ರಸಂಗ ಬಂದಾಗ ಪಲಾಯನ ಮಾಡಿದ ರೌದ್ರಾವೇಶದಿಂದ ದ್ರೋಣನು ಹೋರಾಡುತ್ತಿದ್ದಾಗ ಭೀಮನು ಹೇಳಿದ್ದ, “ನೀವು ಬ್ರಾಹ್ಮಣರಾದವರು ಹಿಂಸೆಗೆ ಇಳಿಯದೆ ಇದ್ದರೆ, ನಾವು ಕ್ಷತ್ರಿಯರಾದವರು ಸ್ವಲ್ಪ ಕಾಲಬದುಕಲು ಸಾಧ್ಯವಾದೀತು!” ಎಂದು. ಹಿಂಸೆಯು ಬ್ರಾಹ್ಮಣ ಧರ್ಮವಲ್ಲ-ನಿಜ, ಆದರೆ ಕ್ಷತ್ರಿಯನಾದವನಿಗೆ ಧರ್ಮಕ್ಕಾಗಿ ಹಿಂಸೆಯ ಅಗತ್ಯವಾಗಬಹುದು. ಅದಕ್ಕಾಗಿ ಅವರು ಹೋರಾಡುವಾಗ ಅದು ಹಿಂಸೆಯಾಗುವುದಿಲ್ಲ, ಹೋರಾಟಕ್ಕೂ ನಿಯಮಗಳಿವೆ. ಹಗಲಲ್ಲಿ ಧರ್ಮಯುದ್ಧವಾದರೆ ಅದು ಹಿಂಸೆಯಲ್ಲ. ಆದರೆ ಆಶ್ವತ್ಥಾಮನ ಹಾಗೆ ರಾತ್ರಿ ಮನೆ ಅಥವಾ ಶಿಬಿರವನ್ನು ಹೊಕ್ಕು ಕೊಲ್ಲುವುದನ್ನು ಯಾವ ಆರ್ಯರೂ ಮಾಡುತ್ತಿರಲಿಲ್ಲ. ಅದು ರಾಕ್ಷಸರ ಮಾರ್ಗ, ಅನಾರ್ಯಕೃತ್ಯ. ಅಶ್ವತ್ಥಾಮ ಹೀಗೆ ಮಾಡದೆ ಗೌರವದಿಂದ ಬಾಳಬಹುದಿತ್ತು, ಆದರೆ ಹಾಗಾಗಲಿಲ್ಲ.
ಒಟ್ಟಿನಲ್ಲಿ ಮಹಾಭಾರತವು ಒಂದು ಕುಟುಂಬದ ಅಣ್ಣ-ತಮ್ಮಂದಿರ ಮಕ್ಕಳಲ್ಲಿದ್ದ ಮಾತ್ಸರ‍್ಯದ ಪರಿಣಾಮವಾಗಿ ಬೆಳೆದುಬಂದ ಜಗಳ, ಅದರಲ್ಲಿ ಪಾಂಡವರು ಮತ್ತು ಕೌರವರು ನೇರವಾಗಿ ವೈರವನ್ನು ಬೆಳೆಸಿಕೊಂಡ ದಾಯಾದಿಗಳು, ಅವರಿಗೆ ಹೆಣ್ಣು ಕೊಟ್ಟು ಸಂಬಂಧವನ್ನು ಬೆಳೆಸಿಕೊಂಡ ಉಳಿದ ರಾಜಕುಟುಂಬಗಳೂ ತಂತಮ್ಮ ಅಳಿಯ-ಭಾವಂದಿರ ಪಕ್ಷವಹಿಸಿದರೆ, ಅದು ಅಸ್ವಾಭಾವಿಕವಾಗಲಾರದು. ಸಹಜವಾಗಿ ತಾವು ಹೆಣ್ಣು ಕೊಟ್ಟ ಕುಟುಂಬದ ಅಭ್ಯುದಯ, ರಾಜಾಧಿಕಾರ ಪ್ರಾಪ್ತಿಯ ಬಗ್ಗೆ ಅವರು ಆಸಕ್ತಿ, ತಳೆಯುವಂಥಾದ್ದೇ, ಅದಕ್ಕೆ ತಮ್ಮಿಂದಾದಷ್ಟು ನೆರವನ್ನು ನೀಡುವಂಥಾದ್ದೇ. ಹೀಗಾಗಿ ಯದುಗಳು, (ಅದರಲ್ಲೂ ವೃಷ್ಣಿ, ಶೈನೇಯ ಶಾಖೆ.) ವಿರಾಟರು, ದ್ರುಪದರರಿ ಮುಂತಾದವರು ಪಾ೦ಡವರ ಪಕ್ಷವಹಿಸಿ ಯುದ್ದದಲ್ಲಿ ನೆರವಾದರೆ, ಅದು ತಪ್ಪಲ್ಲ. ಅಂತೆಯೇ ಶಕುನಿಯ, ಜಯದ್ರಧನ ಪಾತ್ರವನ್ನೂ ನಾವು ಸರಳವಾಗಿ ಅರ್ಥಮಾಡಿಕೊಳ್ಳಬಹುದು. ಇನ್ನು ಕರ್ಣ, ಸೂತನೆಂದು ಲೋಕವು ತನ್ನನ್ನು ಕೀಳಾಗಿ ನೋಡುತ್ತಿದ್ದ ಸಮಯದಲ್ಲಿ, ಅಂಗಾಧಿಪತ್ಯ ಮತ್ತು ಸ್ನೇಹವನ್ನಿತ್ತು ಕ್ಷಾತ್ರ ವರ್ಗದವರೊಡನೆ ಬಾಳುವಂತೆ ಮಾಡಿದವ ದುರ್ಯೋಧನ, ಹಾಗಿರುವಾಗ, ಕುಮಾರವ್ಯಾಸ ಕವಿಯು ಹೇಳುವಂತೆ, “ವೀರ ಕೌರವ ರಾಯನೇ ದಾತಾರ, ಆತನ ಹಗೆಯ ಹಗೆ” ಯೆಂಬ ಸಂಪೂರ್ಣ ಮನೋಧರ್ಮದಿಂದ ಆತನು ಬಾಳಿ ಬದುಕಿದ್ದನಾದರೆ ಅದು ತಪ್ಪಲ್ಲ. ಇನ್ನು ಪುತ್ರಮೋಹದಿಂದ ಅಂಧನಾದ ಧೃತರಾಷ್ಟ್ರನು ಮಗನ ಪಕ್ಷ ವಹಿಸಿದರೆ, ಅದನ್ನು ಸರಳವಾಗಿ ಅರ್ಥಮಾಡಿಕೊಳ್ಳಬಹುದು, ಈ ಹಿನ್ನೆಲೆಯಲ್ಲಿ ನಮಗೆ ನಾಲ್ಕು ಪಾತ್ರಗಳು ಸೂಕ್ಷ್ಮವಾಗಿ ಪರಿಶೀಲಿಸುವಷ್ಟು ಮುಖ್ಯವಾಗಿವೆ. ಅವು : ಭೀಷ್ಮ, ದ್ರೋಣ, ಕೃಪ ಮತ್ತು ಅಶ್ವತ್ಥಾಮ.
ಭೀಷ್ಮನ ಪಾತ್ರವು ಈ ಯುದ್ಧದಲ್ಲಿ ಆತನ ದೀರ್ಘಕಾಲದ ಹಿಂದಿನ ಬಾಳಿನ ತತ್ವ ಭೂಮಿಕೆಯಲ್ಲೇ ಯುದ್ಧದ ವೇಳೆಯಲ್ಲೂ ಸ್ಥಿರವಾಗಿನಿಂತಿದೆ. ಅವನು ಕುಲದ ಹಿರಿಯ. ಕುಲದ ಅಳಿವಾಗಬಾರದು, ಅದರ ಅಭ್ಯುದಯಕ್ಕಾಗಿ ತಾನು ಹೆಣಗಬೇಕು, ಅವರ ನಾಶವಾಗುವುದನ್ನು ಸರ್ವ ಪ್ರಯತ್ನದಿಂದ ತಪ್ಪಿಸಬೇಕು ತಪ್ಪಿಸಲಿಕ್ಕಾಗಿ ತಾನು ಬದುಕಿ ಉಳಿಯಬೇಕು ಎನ್ನುವ ತತ್ವಭೂಮಿಕೆಯದು. ಯುದ್ದವಾಗಬಾರದೆಂದು ಸಾಕಷ್ಟು ಪ್ರಯತ್ನಿಸಿದ. ಕೊನೆಗೂ ಯುದ್ಧವೇ ನಿಶ್ಚಿತವೆಂದಾಗ, ತಾನೇ ಸೇನಾಧಿಪತಿ ಯಾಗುತ್ತೇನೆಂದು ಮುಂದಾದ, ಇದು ಅವನ ವೀರತ್ವದಿಂದ ಸ್ಫೂರ್ತವಾದ ಬಯಕೆಯಲ್ಲ, ಕುಟುಂಬದ ವೃದ್ಧನಾದ, ಎಲ್ಲರಿಗಿಂತ ದೊಡ್ಡಸದಸ್ಯನ ವರ್ತನೆಗೆ ಒಪ್ಪುವ ಬಯಕೆಯಂತೆ ನನಗದು ತೋರುತ್ತದೆ. ಕಿರಿಯರ ಜಗಳದಲ್ಲಿ ಹಿರಿಯನು ಮುಂದೆನಿಂತು ಆಗುವ ಪೆಟ್ಟನ್ನು ತಪ್ಪಿಸುವ ವರ್ತನೆಯ ರೀತಿಯದು, ಅವನ ಉದ್ದೇಶ, ಸಮರವನ್ನು ಆದಷ್ಟು ಕ್ಷೀಣರೂಪಕ್ಕಿಳಿಸಿ, ಆದಷ್ಟು ಕುಟುಂಬದ ಸದಸ್ಯರ ಸಾವನ್ನು ತಪ್ಪಿಸಿ, ಏತನ್ಮಧ್ಯೆ ದರ್ಯೊಧನನಿಗೆ ಯುದ್ಧದಿಂದ ಪ್ರಯೋಜನವಿಲ್ಲವೆಂದು ಮನವರಿಕೆ ಮಾಡಿ ಕೊಡಲು ಪ್ರಯತ್ನಿಸುವುದು, ಹಾಗೆಯೇ ಮಾಡಿದ, ಹತ್ತು ದಿನದ ಸುದೀರ್ಘ ಸಮರದಲ್ಲಿ ಪಾಂಡವ ಮತ್ತು ಕೌರವ ಸೋದರರಲ್ಲಿ ಯಾರೂ ಸಾಯದಂತೆ ನೋಡಿಕೊಂಡ, ಇದರ ನಡುವೆ ತನಗೆ ಸಿಕ್ಕ ಎಲ್ಲ ಅವಕಾಶಗಳನ್ನೂ ಬಳಸಿಕೊಂಡು, “ಪಾಂಡವರು ಅಜೇಯರು, ಆದ್ದರಿಂದ ನೀನವರೊಡನೆ ಸಂಧಿ ಮಾಡಿಕೊಳ್ಳುವುದೇ ಶ್ರೇಯಸ್ಕರ” ಎಂದು ಪದೇ ಪದೇ ಹೇಳುತ್ತಿದ್ದ, ಕೊನೆಗೂ .ತಾನು ರಣರಂಗದಲ್ಲಿ ಉರುಳುವ ಮೂಲಕ, ಅರ್ಜುನನ ಅಜೇಯತ್ವವನ್ನು ತೋರಿಸಿಕೊಟ್ಟ, ಭೀಷ್ಮನಿಗೆ ತನ್ನ ಕರ‍್ತವ್ಯದ ಬಗ್ಗೆ ವಿಸ್ಕೃತಿಯು ಎಂದಿಗೂ ಕಾಣಿಸಿಕೊಂಡಿದ್ದಿಲ್ಲ.
ಕುಲದ ಹಿರಿಯನಾದವನಿಗೆ “ವಿಪರೀತವಾಯಿತು” ಎಂದು ಅನಿಸಿದ ಪ್ರಸಂಗದಲ್ಲಿ ಕುಲಕ್ಕೆ ಸಂಬಂಧವಿಲ್ಲದ, ಹೊರಗಿನವರಾದ ಆಚಾರ‍್ಯರುಗಳು ಅತಿರೇಕ ಆಸಕ್ತಿಯನ್ನು ತಳೆಯಬಾರದಾಗಿತ್ತು. ದ್ರೋಣ, ಕೃಪ, ಅಶ್ವತ್ಥಾಮರಿಗೆ ಭೀಷ್ಮನಿಗಿಂತ ಹೆಚ್ಚಿನ ಆಸಕ್ತಿ ಕೌರವ ವಿಜಯದಲ್ಲಿತ್ತೆನ್ನುವುದು ಸ್ಪಷ್ಟ, ರಾಜಕುಲದ ಉಳಿವು ಮತ್ತು ಒಂದು ನಿರ್ದಿಷ್ಟ ರಾಜನ ಉಳಿವು-ಇವೆರಡೂ ಬೇರೆ ಬೇರೆ ಮೌಲ್ಯಗಳು, ರಾಜಕುಲವು ಉಳಿಯಬೇಕೆನ್ನುವುದು ಒಪ್ಪಿಕೊಂಡು ಬಂದ ಒಂದು ಪರಂಪರೆ ಉಳಿಯಬೇಕೆನ್ನುವ ಕಾಂಕ್ಷೆ, ಈ ಪರಂಪರೆ ವ್ಯಕ್ತಿನಿಷ್ಠವಲ್ಲ, ಅಂದಿನ ಆರ್ಯ ಸಮಾಜವು, ನಾವಿಂದು ಪ್ರಜಾಪ್ರಭುತ್ವದ ವಿಧಾನವನ್ನು ಹೇಗೆ ಪರಂಪರೆಯೆಂದು ಒಪ್ಪಿಕೊಂಡಿದ್ದೇವೆಯೋ ಅದೇ ರೀತಿ ಒಪ್ಪಿಕೊಂಡಿತ್ತು, ಇದನ್ನುಳಿಸುವುದು ರಾಜಕುಲದ ಹಿರಿಯನಾದವನ ಕರ್ತವ್ಯ, ಭೀಷ್ಮನಿದಕ್ಕೆ ತನ್ನ ಜೀವನವನ್ನೇ ವಂಡಿಪಾಗಿಟ್ಟಿದ್ದ. ಆದರೆ, ದ್ರೋಣ, ಕೃಪ, ಅಶ್ವತ್ಥಾಮರ ನಡತೆಯಲ್ಲಿ ವಿಸ್ಕೃತಿಯು ತಲೆದೋರಿದ್ದನ್ನು ನಾವು ಕಾಣುತ್ತೇವೆ. ದ್ರೋಣನ ಸೇನಾಧಿಪತ್ಯದ ಅವಧಿಯಲ್ಲಿ ಅವನ ಉದ್ದೇಶ-ಪಾಂಡವರನ್ನು ಸೋಲಿಸುವುದರ ಮೂಲಕ ಅವರು ಯುದ್ಧದಿಂದ ಮನಸ್ಸನ್ನು ಹಿಂತೆಗೆದುಕೊಳ್ಳುವಂತೆ ಮಾಡುವುದಾಗಿತ್ತೇ ?- ಎಂದೂ ಅನಿಸುತ್ತದೆ, ಅವನು ಹತ್ಯಾಕಾಂಡವನ್ನು ಆದಷ್ಟು ತೀವ್ರ ಗೊಳಿಸಿದ, ಪಾಂಡವರನ್ನು ಕೊಲ್ಲದಿದ್ದರೂ, ಉಳಿದೆಲ್ಲರನ್ನೂ ಸಂಹರಿಸಲು ಪ್ರಯತ್ನಿಸಿದ, ಪಾಂಡವರ ಸಂತಾನ ಹತ್ಯೆಗೂ ಹಿಂಜರಿಯಲ್ಲಿಲ್ಲ. (ಅಭಿಮನ್ಯು ವಧೆ.) ಕೌರವರ ವಿಜಯಕ್ಕೆ ಸಾಕಷ್ಟು ಹೆಣಗಾಡಿದ. ಭೀಷ್ಮನ! ಉದ್ದೇಶವನ್ನು ಸಂಪೂರ್ಣ ಮಣ್ಣಪಾಲು ಮಾಡಿದ. ಇಲ್ಲಿ ನಮಗೆ ಬ್ರಾಹ್ಮಣನಾದ ದ್ರೋಣನಿಗಿಂತ ಸೂತನಾದ ವಿದುರನೇ ಹೆಚ್ಚಿನ ವಿವೇಕಿಯೆಂಬಂತೆ ಅನ್ನಿಸುತ್ತದೆ.
ಅಶ್ವತ್ಥಾಮ ಮತ್ತು ಕೃಪಾಚಾರ‍್ಯರು ಕೌರವನ ಪತನವಾದ ಬಳಿಕವಾದರೂ ಸುಮ್ಮನಾಗ ಬಹುದಿತ್ತು, ಕುರುವಂಶದ ಸಂತತಿಯು ಧಾರ್ತರಾಷ್ಟರ ಕಡೆಯಲ್ಲಿ ಸಂಪೂರ್ಣ ನಾಶವಾಗಿದೆ. ಈಗ ಉಳಿದಿರುವುದು ಪಾಂಡುವಿನ ಸಂತತಿ ಮಾತ್ರ ಹೀಗಿರುವಾಗ, “ಕೌರ ವನು ಸತ್ತ ಬಳಿಕ ಈ ಭೂಮಿಯನ್ನು ಉಳಿದ ಇವರೂ ಆಳದಂತೆ ಮಾಡುವೆವು” ಎಂದು ಹೇಳುವ ರೀತಿಯಲ್ಲಿ ಅವರು ವರ್ತಿಸಬಾರದಿತ್ತು, ಕುರುವಂಶದ ಆಚಾರ‍್ಯರಾಗಿದ್ದ ಕೃಪಾಚಾರ‍್ಯರೂ ಹೀಗೆ ಮಾಡಿದ್ದು ತಪ್ಪ, ತನ್ನ ಮನೆತನಕ್ಕೆ ಆಶ್ರಯವಿತ್ತು ಪೋಷಿಸಿದ ಕುರುಸಂತಾನದವರು ಮಲಗಿರುವ ಶಿಬಿರಕ್ಕೆ ಬೆಂಕಿ ಕೊಡುವಷ್ಟು ಮುಂದೆ ಹೋಗಬಾರದಿತ್ತು ಈ ಆಚಾರ‍್ಯರು ! “ಸುಪ್ತಘಾತಕಕೃತ್ಯಕ್ಕೆ ಕೈಹಾಕಬಾರದಿತ್ತು ! ! ಇದು ಅವರ ಧರ್ಮವಿಸ್ಕೃತಿಯಿಂದಲೇ ಆದದ್ದು. ಸಿಂಹಾಸನಕ್ಕೆ ನಿಷ್ಠೆಯನ್ನು ಒಬ್ಬ ಆಚಾರ‍್ಯನಾಗಲೀ ಸೇನಾಧಿಪತಿಯಾಗಲೀ ತೋರಿಸುತ್ತ ಬದುಕುವಾಗ, ಕ್ರಮೇಣ ಆತನು ಆ ಸಿಂಹಾಸನದಲ್ಲಿರುವ ವ್ಯಕ್ತಿಯ ಮೇಲೆಯೇ ಆ ನಿಷ್ಠೆಯನ್ನು ನೆಟ್ಟುಬಿಡುತ್ತಾನೆ. ಸ್ಥಾನನಿಷ್ಠೆಯು ಒಂದು ಸಾಮಾಜಿಕ ಮೌಲ್ಯವಾಗಬಹುದೇ ಹೊರತು. ಅದು ವ್ಯಕ್ತಿನಿಷ್ಠೆಯಾದಾಗ ಮೌಲ್ಯವಾಗಿ ಉಳಿಯಲಾರದು. ಇದು ವ್ಯಕ್ತಿಯ ಬಗೆಗಿನ ಮೋಹದಿಂದ ಬರುವುದು. ಮಹಾಭಾರತದಲ್ಲಿ ಕೃಷ್ಣನು ಈ “ಮೋಹ” ಮತ್ತು ಅದರಿಂದ ಪರಿಣಮಿಸುವ “ಸ್ಕೃತಿಯ ವಿಭ್ರಮೆ”ಯ ಬಗ್ಗೆ ಸಾಕಷ್ಟು ಎಚ್ಚರವಿತ್ತಿದ್ದಾನೆ. (ಗೀತೆ.) ಕ್ಷತ್ರಿಯತ್ವಕ್ಕೆ ನಿಷ್ಠೆಯನ್ನು ತೋರಿಸುವುದು “ಸ್ಥಾನ-ಪಾತ್ರ ನಿಷ್ಠ” ಕರ್ತವ್ಯನಿಷ್ಠೆ, ಅದೇ ಕೆಲವು ವ್ಯಕ್ತಿಗಳನ್ನು ತನ್ನವರೆಂದು ತಿಳಿಯುವುದಾಗಲೀ, ಉಳಿದವರನ್ನು ವೈರಿಗಳೆಂದು ಭಾವಿಸುವುದಾಗಲೀ, -ಇವೆಲ್ಲ ವ್ಯಕ್ತಿನಿಷ್ಠೆಯ ಲಕ್ಷಣಗಳು, ಕೃಷ್ಣನಿಂದಾಗಿ ಅರ್ಜುನನು “ನಷ್ಟೋ ಮೋಹಃ ಸ್ಮೃತಿರ್ಲಬ್ಧಾ” ಎನ್ನುವಂತಾಗಿ ಉಳಿದುಕೊಂಡ, ಭೀಷ್ಮನಿಗೆ ಸ್ಕೃತಿಯೊಂದೇ ಆಧಾರವಾಗಿತ್ತು. ತಂದೆಗಾಗಿ ತನ್ನ ದೇಹದ ಸುಖವನ್ನೇ ಬಿಟ್ಟುಕೊಟ್ಟ. ಆತನ ಮನಸ್ಸಿಗೆ ಮೋಹದ ಸೋಂಕು ಬರಲು ಸಾಧ್ಯವೇ ಇಲ್ಲ. (ಅರಮನೆಯ ಪ್ರಾಂಗಣದೊಳಗೇ, ಕೌರವ ಕುಟುಂಬಕ್ಕೆ ತಾಗಿಕೊಂಡೇ ವಿನಯದಿಂದ ಜೀವಿಸಿಕೊಂಡಿದ್ದ ವಿದುರನೂ, ತನ್ನ ಹುಟ್ಟು, ಸ್ನಾನ, ಮತ್ತು ಕರ್ತವ್ಯಗಳ ಬಗ್ಗೆ ಸಂರ್ಪೂಣ “ಸ್ಮೃತಿ” ಯುಳ್ಳವನಾಗಿ ಜಾಗರೂಕತೆಯಿಂದ ಬದುಕುತ್ತಿದ್ದ.) ಆದರೆ ದೊಣ-ಕೃಪ-ಅಶ್ವತ್ಥಾಮರಿಗೆ ಈ ವಿಸ್ಕೃತಿಯ ಸೋಂಕು ಬಡಿದಿತ್ತು-ಎನ್ನಬೇಕಾಗಿದೆ. ಅವರ ಅನ್ನದ ಋಣ ಕುರು ಮನೆತನದ ಋಣವಾಗಿತ್ತೇ ಹೊರತು, ದುರ್ಯೋಧನನ ಋಣವಲ್ಲ, (ಕರ್ಣನಿಗಾದರೆ ಅದು ದುರ್ಯೋಧನನ ಋಣವೇ ನಿಜ.) ದ್ರೋಣರನ್ನು ನೇಮಿಸಿದವ ಭೀಷ್ಮ, ಹಾಗಾಗಿ ಅವರು ಕುರುವಂಶಕ್ಕೆ ನಿಷ್ಠೆಯನ್ನು ತೋರಿಸಿದ್ದಲ್ಲಿ ಸಾಕಾಗುತ್ತಿತ್ತು. ಭೀಷ್ಮನ ಮಾರ್ಗದಲ್ಲೇ ವರಿ೦ಂದುವರಿಯುವುದು ಅವರಿಗೆ ಒಪ್ಪುತ್ತಿತ್ತು.
ಕೌರವನು ಸರೋವರದಲ್ಲಿ ಅಡಗಿ ಕುಳಿತದ್ದು ಜೀವ ರಕ್ಷರ್ಣೆಗಾಗಿ, ಆಗ ಅಶ್ವತ್ಥಾಮ ಮತ್ತು ಕೃಷ ಇನ್ನೊಂದು ರೀತಿಯಲ್ಲಿ ನೆರವಾಗಲು ಪ್ರಯತ್ನಿಸಬಹುದಿತ್ತು, ಅದು ಅವನನ್ನು ಉಳಿಸುವ ದಿಸೆಯಲ್ಲಿ, ಭೀಷ್ಮನಿನ್ನೂ ಬದುಕಿದ್ದ. ಧೃತರಾಷ್ಟ್ರ, ಭೀಷ್ಮಇವರ ಮೂಲಕ, ಧರ್ಮನಿಗೆ-ದುರ್ಯೋಧನನನ್ನು ಕ್ಷಮಿಸಿ, ಒಂದು ಪಾಲು ಭೂಮಿಯನ್ನು ಅವನಿಗೆ ಬಿಟ್ಟುಕೊಡುವಂತೆ ಮನವೊಲಿಸುವ ಪ್ರಯತ್ನ ಅವರು ಮಾಡಬೇಕಾಗಿತ್ತು, ದುರ್ಯೋಧನನಿಗೂ ಅದು ಆ ಕಾಲಕ್ಕೆ ಹೆಚ್ಚು ಆವಶ್ಯಕವಾಗಿತ್ತು, ಆದರೆ ಅದನ್ನವರು ಮಾಡಲಾರರು, ಕಾರಣ, ಮೊದಲಿನಿಂದಲೂ ಅಶ್ವತ್ಥಾಮನು ವೈಯಕ್ತಿಕವಾಗಿ ಪಾಂಡವರೊಡನೆ ಹಗೆತನದ ಭಾವನೆಯನ್ನೇ ಬೆಳೆಸಿಕೊಂಡವ, ಅವನು ಸ್ಥಾನ ನಿಷ್ಟೆಯ ಚೌಕಟ್ಟನ್ನು ಎಂದೋ ಮೀರಿಹೋಗಿದ್ದ, ದುರ್ಯೋಧನನ ಬಗ್ಗೆ ವ್ಯಕ್ತಿನಿಷ್ಠೆ ಅವನ ಹಗೆಗಳೊಡನೆ ವೈಯಕ್ತಿಕವಾಗಿ ಹಗೆತನವನ್ನು ಅನಗತ್ಯವಾಗಿ ಬೆಳೆಸಿಕೊಂಡಿದ್ದ. ಇಂಥವನ ಮಾವ ಮತ್ತು ಬೆಂಬಲಿಗ ಕೃಪಾಚಾರ್ಯ, ಅಧಿಕಾರದಲ್ಲಿದ್ದ ದುರ್ಯೋಧನನ ಮೆಚ್ಚುಗೆಯನ್ನು ಗಳಿಸಲು, ಆಚಾರ‍್ಯತ್ವದ ಗೌರವವನ್ನು ಮರೆತು ಬಿಟ್ಟುಕೊಟ್ಟು, ಲಘುವಾದ, ಪಕ್ಷಪಾತಿಯಾಗಿ ಬದುಕಿದ, ಹೀಗಾಗಿ, ಅವರಿಬ್ಬರೂ ಈ ಕೊನೆಯ ಹಂತದಲ್ಲಿ ಸಂಧಾನಕ್ಕೆ ಮುಂದೆಬರುವಷ್ಟು ವೈಯಕ್ತಿಕ ವರ್ಚಸ್ಸನ್ನು ಉಳಿಸಿಕೊಂಡಿಲ್ಲ. ರಾಜ ಕುಟುಂಬದೊಳಗಿನ ವೈರದ ಪ್ರವಾಹದಲ್ಲಿ ಕೌರವೇಶ್ವರನಿಗಿಂತ ಹೆಚ್ಚಾಗಿ ಕುಟುಂಬದ ಹೊರಗಿನವರಾದ ಇವರು ಬಿದ್ದು ತೇಲಿಹೋಗಿದ್ದಾರೆ, ಇದೀಗ ಈ ಪ್ರವಾಹದಿಂದ ಮೇಲೆ ಬರಲು ಸಾಧ್ಯವೇ ?
ಅಶ್ವತ್ಥಾಮನನ್ನು ಹಾಳುಮಾಡಿದ್ದು ಅವನಲ್ಲಿದ್ದ ಕಾಮ ಮತ್ತು ಮೋಹ, ರಾಜನಾಗಬೇಕೆಂಬ, ಸೇನಾಧಿಪತಿಯಾಗಬೇಕೆಂಬ, ಸಾಯದೆ ಬದುಕಬೇಕೆಂಬ, ಅವನ ಅಂತರಾಳದಲ್ಲಿ ಅಡಗಿದ್ದ ಕಾವನೆಗಳು ಅವನನ್ನು ಮೋಹಿತನನ್ನಾಗಿ ಮಾಡಿದವು. ಇದರಿಂದಾಗಿ ಅವನು ವಿಸ್ಮೃತಿಯನ್ನು ತಳೆದ, “ಸಂಮೋಹಾತ್ ಸ್ಮೃತಿವಿಭ್ರವಃ” ಎನ್ನುವ ಕೃಷ್ಣನ ಮಾತುಗಳಿಗೆ ಆರ್ಯರ “ಬ್ರಾಹ್ಮಣ-ಕ್ಷತ್ರಿಯ ಯುಗ”ದ ಕೊನೆಯ ಅವಧಿಯಾದ ಮಹಾಭಾರತದ ಕೊನೆಯ ಬ್ರಾಹ್ಮಣನಾದ ಈತನು ಒಂದು ಉತ್ತಮ ಪ್ರತೀಕವಾಗಿ ನಿಲ್ಲುತ್ತಾನೆ, “ಕಾಮ ಏಷ ಕ್ರೋಧ ಏಷ” ಕಾಮ ಬೇರೆಯಲ್ಲ, ಕ್ರೋಧ ಬೇರೆಯಲ್ಲ. ಕಾಮವಿದ್ದವನಿಗೆ ಕ್ರೋಧವಿದ್ದೇ ಇರುತ್ತದೆ. “ಕ್ರೋಧಾತ್ ಭವತಿ ಸಂಮೋಹಃ ಸಂಮೋಹಾತ್ ಸ್ಮೃತಿ ವಿಭ್ರಮಃ” ಕ್ರೋಧದಿಂದ ಸಂಮೋಹವುಂಟಾಗುತ್ತದೆ. ಸಂಮೋಹದಿಂದ ಸ್ಮೃತಿ ವಿಭ್ರಮೆಯಾಗುತ್ತದೆ. “ಸ್ಮೃತಿ ಭ್ರಂಶಾತ್ ಬುದ್ಧಿನಾಶೋ ಬುದ್ಧಿನಾಶಾತ್ ಪ್ರಣಶ್ಯತಿಃ” ಸ್ಮೃತಿಭ್ರಂಶದಿಂದ ಬುದ್ದಿ ನಾಶ, ಬುದ್ಧಿನಾಶದಿಂದ ಆತ್ಮನಾಶ, ಬುದ್ದಿಗಾಗಿ ನಿತ್ಯ ತ್ರಿಕಾಲಗಳಲ್ಲಿ ಧಿಯೋಯೋನಃ ಪ್ರಚೋದಯಾತ್” ಎಂದು ಧ್ಯಾನಿಸುತ್ತಿರುವ ಬ್ರಾಹ್ಮಣರೆಲ್ಲಿ ? ಅಶ್ವತ್ಥಾಮನೆಲ್ಲಿ ? ವಿಸ್ಕೃತಿಯಿಂದ ಪರ ಧರ್ಮವನ್ನು ಅವಲಂಬಿಸಿ, ಸ್ವಕರ್ಮಮಾರ್ಗಿಯಾಗುವ ಬದಲು ವಿಕರ್ಮಿಯಾಗಿ, ಬುದ್ಧಿ ನಾಶವನ್ನು ತಂದುಕೊಂಡು ಸರ್ವನಾಶವನ್ನು ತಂದುಕೊಂಡ.
ಮಹಾಭಾರತದ ಕೊನೆಯಲ್ಲಿ ನಮ್ಮ ನೆನಪಿಗೆ ಅತ್ಯಂತ ದಾರುಣವಾಗಿ ಉಳಿದು ಬರುವ ಎರಡು ವ್ಯಕ್ತಿಗಳಲ್ಲಿ ಒಬ್ಬನು ದುರ್ಯೋಧನ; ವಂತ್ತೊಬ್ಬ ಅಶ್ವತ್ಥಾಮ, ದುರ್ಯೋಧನನ ಸಾವೋ ಭೀಕರ ! ಅಶ್ವತ್ಥಾಮನ ಉಳಿವೂ ಭೀಕರ ! ಕ್ಷತ್ರಿಯ ಧರ್ಮವನ್ನು, ಕೌಟುಂಬಿಕ ಮೌಲ್ಯವನ್ನು ಮರೆತು ವಿಸ್ಕೃತನಾದ ದುರ್ಯೋಧನನಿಗೂ, ಬ್ರಾಹ್ಮಣ ಧರ್ಮವನ್ನು ಮರೆತು ವಿಸ್ಮೃತನಾದ ಅಶ್ವತ್ಥಾಮನಿಗೂ ಹೆಚ್ಚಿನ ಸಾಮ್ಯವಿದೆ. ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ !
ಸಾಹಿತ್ಯ ಮತ್ತು ಸಮಾಜ-ಕೆಲವು ಯೋಚನೆಗಳು
ಸಾಹಿತ್ಯ ಮತ್ತು ಸಮಾಜ-ಕೆಲವು ಯೋಚನೆಗಳು
-ರಾಮಚಂದ್ರ ದೇವ
೧
ಕನ್ನಡ ವಿಮರ್ಶಕರು ಕೆಲವರು ಸಾಹಿತ್ಯದಲ್ಲಿ ಸಾಮಾಜಿಕ ರೆಲವನ್ಸ್ ಇರಬೇಕು, ಸಾಮಾಜಿಕ ಸಮಸ್ಯೆಗಳನ್ನು ಲೇಖಕ ತನ್ನ ಕೃತಿಯಲ್ಲಿ ವಿಶ್ಲೇಷಿಸಿರಬೇಕು ಎಂದು ಮೇಲಿಂದ ಮೇಲೆ ಹೇಳುತ್ತಿದ್ದಾರೆ, ಅಂದರೆ ಇವರು ಸಾಹಿತ್ಯದಿಂದ ಅಪೇಕ್ಷಿಸುವುದು ಏನನ್ನು ? ಸಾಮಾಜಿಕ ಸಮಸ್ಯೆಗಳನ್ನು ಕೃತಿಯಲ್ಲಿ ತಂದಮಾತ್ರಕ್ಕೆ ಅದು ಅರ್ಥಪೂರ್ಣವಾಗುತ್ತದೆಂದು ಇವರು ಬಗೆಯುತ್ತಿರಬಹುದೇ ? ಅಥವಾ ಸಾಮಾಜಿಕ ವಿವರಗಳುಳ್ಳ ಕೃತಿ ಮಾತ್ರ ಇವರಿಗೆ ಗ್ರಾಹ್ಯವೇ ? ಹಾಗಾದರೆ ಸಾಹಿತ್ಯಕೃತಿ ಮನುಷ್ಯನ ಆಳ ಅಗಲಗಳನ್ನು ಹೊಕ್ಕು ನೋಡಲು ಪ್ರಯತ್ನಿಸಬೇಕು ಎನ್ನುವುದರ ಅರ್ಥವೇನು ? ಈ ಮನುಷ್ಯ ಎಂಬವನಾದರೂ ಯಾರು ? ಆತ ಸಾರ್ವಕಾಲಿಕನಾದ ಒಬ್ಬನೇ ಅಥವಾ ಸಾರ್ವಕಾಲಿಕನಿದ್ದರೂ ಕಾಲದೇಶ ಪರಿಸ್ಥಿತಿಗಳಿಂದ ಬದ್ಧನಾದವನೇ ? ಈ ಕಾಲದೇಶ ಪರಿಸ್ಥಿತಿಗಳು ಯಾವುವು? ಸಾಹಿತ್ಯಕ್ಕೂ ಸಮಾಜಕ್ಕೂ ಇರುವ ಸಂಬಂಧ ಏನು ? ಏನಿರಬಹುದು ? ಸಾಹಿತ್ಯದಲ್ಲಿ ಸಮಾಜ ಹೇಗೆ ವ್ಯಕ್ತವಾಗುತ್ತದೆ ? ನನಗೆ ಉತ್ತರೆ ಹುಡುಕಬೇಕೆನ್ನಿಸಿದೆ, ನನ್ನ ಈ ಹುಡುಕಾಟವನ್ನು ಒಂದು ಉದಾಹರಣೆಯ ಮೂಲಕ ಪ್ರಾರಂಭಿಸಬಹುದು.
ಶಿವರಾಮ ಕಾರಂತರ ‘ನಂಬಿದವರ ನಾಕ, ನರಕ’ದ ಒಂದು ವಸ್ತು ಜಾತೀಯತೆ. ಕಾದಂಬರಿಯ ಪ್ರಾರಂಭದಲ್ಲಿ ಅಂತರ್-ಒಳಜಾತಿಗಳೊಳಗೆ ಮೋಸದಿಂದ ವಿವಾಹವಾದ ಒಂದು ಪ್ರಸಂಗ ಬರುತ್ತದೆ, ಶಂಕರಯ್ಯ ಎಂಬ ಬಡ ಹವ್ಯಕ ಬ್ರಾಹ್ಮಣ ಘಟ್ಟದ ಮೇಲಿನ ನಾಗೇಂದ್ರ ಎಂಬ ಶ್ರೀಮಂತನಿಗೆ ತನ್ನ ಐವರು ಹೆಣ್ಣು ಮಕ್ಕಳಲ್ಲಿ ಮೊದಲ ನೆಯವಳಾದ ವಾಗದೇವಿಯನ್ನು ಮದುವೆ ಮಾಡಿಕೊಡುತ್ತಾನೆ, ಮದುವೆಯಾದ ಮೇಲೆ ಶಂಕರಯ್ಯ ಮತ್ತು ಅವನ ಹೆಂಡತಿಗೆ ನಾಗೇಂದ್ರ ಹವ್ಯಕರವನಲ್ಲ, ಷಟ್ಪುಚ್ಛ ಎಂಬ ಮಾಲೇರರಿಗಿಂತಲೂ ಕೆಳಗಿನ ಒಂದು ಜಾತಿ ಎಂಬುದು ಗೊತ್ತಾಗುತ್ತದೆ. ಇಡೀ ಕಾದಂಬರಿಯ ಒಂದು ಮಟ್ಟದ ಬೆಳವಣಿಗೆ ಈ ಪ್ರಸಂಗದ ಮೇಲೆ ನಿಂತಿದೆ.
ಶಿವರಾಮ ಕಾರಂತರು ಉದ್ದಕ್ಕೂ ಅಂತರ್‌ಜಾತಿಯ ವಿವಾಹದಿಂದ ಸಾಮಾಜಿಕ ವ್ಯವಹಾರಗಳಲ್ಲಿ ಉಂಟಾಗುವ ಪರಿಣಾಮಗಳನ್ನು ನಿರೂಪಿಸುತ್ತಾರೆ: ಶಂಕರಯ್ಯ ಮಗಳ ಮನೆಗೆ, ಮಗಳು ಅಪ್ಪನ ಮನೆಗೆ ಹೋಗುವುದಿಲ್ಲ; ವಾಗ್ಧೇವಿಯ ತಂಗಿಯರಿಗೆ ಮದುವೆಯಾಗುವುದು ಕಷ್ಟವಾಗುತ್ತದೆ; ಶಂಕರಯ್ಯ ಊರಿನಲ್ಲಿ ದುರ್ಜನೆಕೇಳಬೇಕಾಗುತ್ತದೆ; ನಾಗೇಂದ್ರನ ಮನೆಯಲ್ಲಿ ನಿಷ್ಠಾವಂತ ಬ್ರಾಹ್ಮಣರು ಊಟ ಮಾಡುವುದಿಲ್ಲ ಇತ್ಯಾದಿ, ಇಲ್ಲೆಲ್ಲಿಯೂ ಕೂಡಾ ವ್ಯಂಗ್ಯವಿಲ್ಲ, ಕುಹಕವಿಲ್ಲ; ಈ ಬಗೆಯ ವಿವಾಹಗಳಿಂದ ಜಾತಿಪದ್ಧತಿ ನಷ್ಟವಾಗುತ್ತದೆ ಎಂಬ ಹೇಳಿಕೆಯಿಲ್ಲ; ಅವರವರ ನಂಬಿಕೆ ಅವರವರಿಗೆ, ಈ ನಂಬಿಕೆಗೆ ಬದ್ಧರಾಗುವ ಸ್ವಾತಂತ್ರ್ಯ ಅವರಿಗೆ ಎನ್ನುವ ವಿಶಿಷ್ಟ ಕಾರಂತದೃಷ್ಟಿ ಇದೆಯೇನೋ ಎಂದೂ ಅನ್ನಿಸುತ್ತದೆ, ಕಾದಂಬರಿ ನಾನು ಮೇಲೆ ಮಾತುಗಳಲ್ಲಿ ಹೇಳಿದಷ್ಟೇ ಆಗಿದ್ದರೆ ಭಾವೋದ್ವೇಗಗೊಂಡು ಒಂದೆರಡು ಬಕೀಟು ಕಣ್ಣೀರು ಸುರಿಸುವಂತೆ ಮಾಡಿ ಕೊನೆಗೊಳ್ಳುತ್ತಿತ್ತು, ಆದರೆ ಕಾರಂತರಲ್ಲಿ ಇದು ಯಾವುದೂ ಆಗುವುದಿಲ್ಲ. ಬದಲು ಇದು ಒಂದು ಅತ್ಯುತ್ತಮ ಕಾದಂಬರಿಯಾಗಿ ರೂಪುಗೊಂಡಿದೆ, ಬಹುಶಃ ಜಾತೀಯತೆಯ ಮೇಲೆ ಕನ್ನಡದಲ್ಲಿ ಬಂದ ಅತ್ಯುತ್ತಮ ಕಾದಂಬರಿಗಳಲ್ಲಿ ಇದೂ ಒಂದು. ಕಾರಂತರಿಗೆ ಇದನ್ನು ಸಾಧಿಸುವುದು ಹೇಗೆ ಸಾಧ್ಯವಾಯಿತೆಂಬುದನ್ನು ನೋಡಿದರೆ ಸಾಹಿತ್ಯದಲ್ಲಿ ಸಾಮಾಜಿಕ ಸಮಸ್ಯೆಯ ಬಗ್ಗೆ ಕೆಲವೊಂದು ವಿಚಾರಗಳನ್ನು ಮಂಡಿಸುವುದು ಸಾಧ್ಯವಾಗಬಹುದು.
ಇದು ಕಾರಂತರಿಗೆ ಸಾಧ್ಯವಾಗುವುದು ಈ ನಂಬಿಕೆ, ಜಾತಿಯತೆ ಅಲ್ಲದೆ ಹೋಗಿದ್ದರೆ. ಅತ್ಯಂತ ಸಹಜವಾಗಿರಬಹುದಾಗಿದ್ದ ಮಾನವರು ಮತ್ತು ಮಾನವೀಯ ಸಂಬಂಧಗಳು ಇದರಿಂದಾಗಿ ಹೇಗೆ ವಿಕೃತಿ ಹೊಂದಿದವು ಎಂದು ತೋರಿಸುವುದರಿಂದ, ಕಾದಂಬರಿಯ ಮೊದಲಿನ ಪುಟಗಳನ್ನೇ ನೋಡಬಹುದು, ಮದುವೆಯಾದ ಮೇಲೆ ಉಂಟಾಗುವ ಮಾನವೀಯ ಸಂಬಂಧಗಳ ಏಕೃತಿಗಳನ್ನು ಸೂಚಿಸುವುದಕ್ಕಾಗಿ ಅವರು ಭಾರತೀಯ ಸಂದರ್ಭದಲ್ಲಿ ಅತ್ಯಂ ಅರ್ಥವಂತಿಕೆಯಿಂದ ಕೂಡಿದ, ಮಾನವೀಯ ಸಂಬಂಧ ಸಹಜ
ವಾಗಿರುವುದನ್ನು ಸೂಚಿಸುವ ಕೆಲವು ಸಂಗತಿಗಳು ಜರುಗದೆ ಇರುವುದನ್ನು ಸೂಚಿಸುತ್ತಾರೆ : ಮದುವೆಯ ದಿನ ನಾಗೇಂದ್ರನ ಮನೆಗೆ ಬಂದವರು ಊಟ ಮಾಡದೆ ಹೋಗುತ್ತಾರೆ : ಶಂಕರಯ್ಯ ಮತ್ತು ಅವರ ಹೆಂಡತಿಗೆ ಮದುವೆಯಿಂದ ಸಂತೋಷವಾಗುವ ಬದಲು ಪಾಪಪ್ರಜ್ಞೆ ಕಾಡುತ್ತದೆ ಮತ್ತು ಮಹಾಲಕ್ಷ್ಮಿ ಈ ದುಃಖದಲ್ಲಿ ನೊಂದು ಸಾಯುತ್ತಾಳೆ, ಎಲ್ಲಕ್ಕಿಂತ ಹೆಚ್ಚಾಗಿ ಕಾರಂತರು ನಂಬಿಕೆಗಳಿಂದುಂಟಾಗುವ ವಿಕೃತಿಯನ್ನು ಸೂಚಿಸುವುದು ವಾಗ್ದೇವಿ-ನಾಗೇಂದ್ರರ ಸಂಬಂಧದ ಕೃತಕತೆಯನ್ನು ಸೂಚಿಸುವುದರ ಮೂಲಕ: ವಾಗ್ದೇವಿ ಯೌವನ ಸಹಜ ಭಾವನೆಗಳನ್ನು ಕಳೆದುಕೊಳ್ಳುವುದರ ಕಡೆಗೆ ನಮ್ಮ ಗಮನವನ್ನು ಸೆಳೆಯುವುದರ ಮೂಲಕ, ತಾನು ಮೇಲುಜಾತಿಯವಳು ಎಂಬ ಭಾವನೆಯಿಂದ ಅವಳಿಗೇ ಗೊತ್ತಿಲ್ಲದೆ ಹುಟ್ಟುವ ಅವಳ ವರ್ತನೆಗಳನ್ನು ಗಮನಿಸುವುದರ ಮೂಲಕ, ಈ ವಾಕ್ಯಗಳನ್ನು ನೋಡಿ:
“…….. ಅವನ (ನಾಗೇಂದ್ರನ) ಅಪರಾಧದಿಂದ ಅವಳ ಗಾತ್ರ ದಿನೇ ದಿನೇ ಬೆಳೆಯುವಂತೆ ಕಾಣಿಸಿತು. ಅವಳ ಚೆಲುವನ್ನು ಕಂಡು, ಅವಳನ್ನು ಮುದ್ದಿಸಬೇಕೆ ? ಪೂಜಿಸಬೇಕೇ-ಎಂಬುದು ಅವನಿಗೆ ತಿಳಿಯದಾಯಿತು.
ಈಯೊಂದು ಘಟನೆಯಿಂದ, ವಾಗ್ದೇವಿಯ ಬದುಕು ಬಾಲ್ಯದಿಂದ ಒಮ್ಮೆಗೇ ಪ್ರಬುದ್ಧತೆಗೆ ಜಿಗಿದಂತೆ ಕಾಣಿಸುತ್ತದೆ. ದೊಡ್ಡವರ ಮಾತುಗಳು ಅವಳಿಂದ ಬರಲಾರವಾದರೂ ಅಂಥದೇ ಮನಸ್ಸಿನ ಪ್ರವೃತ್ತಿ, ನಡಿಗೆ, ಆಳು ಮಕ್ಕಳೊಡನೆ, ಮನೆಗೆ ಬಂದು ಹೋಗುವ ಜನರೊಡನೆ, ಅವಳ ನಡತೆಗಳಿಂದ ಕಾಣಿಸುತ್ತದೆ, ಒಂದಿಷ್ಟೂ ತಲೆತಗ್ಗಿಸದೆ ಮಾತನಾಡ ಬಲ್ಲಳೀಗ, ಅವಳಿಗೆ ತನ್ನ ಯೌವನವೆಂಬ ವಸ್ತುವು ಗಾಳಿಗೆ ತೇಲಿಹೋದಂಥ ಹೂವಿನ ಪರಿಮಳದಂತೆ ಕಾಣಿಸುತ್ತಿದೆ.” (ಪುಟ ೨೪).
ಜಾತೀಯತೆಯ ಈ ಭಾವನೆ ಆಕೆಯನ್ನು ಎಷ್ಟು ವಿಕೃತಗೊಳಿಸಿದೆಯೆಂಬುದರ ಅತ್ತ್ಯುತ್ತಮ ಅಭಿವ್ಯಕ್ತಿ “ಯೌವನವೆಂಬ ವಸ್ತುವು ಗಾಳಿಗೆ ತೇಲಿಹೋದಂಥ ಹೂವಿನ ಪರಿಮಳದಂತೆ ಕಾಣಿಸುತ್ತಿದೆ” ಎಂಬ ಮಾತುಗಳಲ್ಲಿದೆ. ಯೌವನ ಸಹಜ ಭಾವನೆಗಳೂ ಆಕೆಗೆ ಜಾತಿಯ ಪರಿಮಿತಿಯೊಳಗೆ ಸಂಭವಿಸಬೇಕು.
ಈ ರೀತಿ ವಿಕೃತಗೊಳ್ಳುತ್ತಾ, ನೊಂದುಕೊಳ್ಳುತ್ತಾ ಹೋದ ವಾಗ್ದೇವಿಯ ಚಿತ್ರ ಕಾದಂಬರಿಯುದ್ದಕ್ಕೂ ಇದೆ. ಅವಳಿಗೆ ಯಾರ ಜೊತೆಗೂ ಸಹಜ ಸಂಬಂಧ ಸಾಧ್ಯವಾಗದೆ ಹೋಗುತ್ತದೆ. ಆಕೆ ಒಂಟಿಯಾಗುತ್ತಾ ತನ್ನೊಳಗೆ ತಾನೇ ಮುದುಡಿಕೊಳ್ಳುತ್ತಾ ಹೋಗುತ್ತಾಳೆ, ತನ್ನ ನಂಬಿಕೆಯ ಪರಿಧಿಯೊಳಗೇ ಸಿಗಬೇಕಾದ ಪ್ರೀತಿ ಸಿಗದೆ ಆಕೆ ಸ್ವ_ವಿನಾಶದ ಕಡೆ ಸಾಗುತ್ತಿರುತ್ತಾಳೆ. ತನ್ನ ಒಂಟಿತನವನ್ನು ಆಕೆ ನೀಗಿಸಿಕೊಳ್ಳಲು ಪ್ರಯತ್ನಿಸುವುದು ಕೊಲ್ಲೂರು ಮೂಕಾಂಬಿಕೆಯೊಂದಿಗಿನ ಮೂಕ ಸಂಭಾಷಣೆಯಿಂದ, ಆದರೆ ಇದೂ ಕೂಡಾ ಆಕೆಯ ಸ್ವ-ವಿನಾಶಕಾರಕವಾದ ನೋವಿನ ಇನ್ನೊಂದು ಮುಖವಾಗುತ್ತದೆ, ಕಾದಂಬರಿಯುದ್ದಕ್ಕೂ ವಾಗ್ದೇವಿಯ ಬಗ್ಗೆ ಮತ್ತು ಈ ಬಗೆಯ ನಂಬಿಕೆಯ ಇತರ ವ್ಯಕ್ತಿಗಳ ಬಗ್ಗೆ ಸಹಾನುಭೂತಿಯಿದ್ದೂ ಇದರಿಂದ ಹುಟ್ಟುವ ದುರಂತವನ್ನು ಸೂಚಿಸುವುದು ಕಾರಂತರಿಗೆ ಸಾಧ್ಯವಾಗಿರುವುದು ಈ ವಿಕೃತಿಗಳನ್ನು ತೋರಿಸುವುದು ಮೂಲಕ ; ಮತ್ತು ಇಂಥದೇ ದುಃಖಪೂರ್ಣ ದಾಂಪತ್ಯದ ಸಂದರ್ಭದಲ್ಲಿ ವಾಗ್ದೇವಿಗೆ ವಿರುದ್ಧವಾದ ನಂಬಿಕೆಗಳನ್ನು ತೋರಿಸುವ, ದೇವರಲ್ಲಿ, ಜಾತಿಯಲ್ಲಿ, ಸಾಂಪ್ರದಾಯಿಕ ನೀತಿಶಾಸ್ತ್ರಗಳಲ್ಲಿ ನಂಬಿಕೆ ಕಳೆದುಕೊಂಡು, ತನ್ನ ಜೀವನಕ್ಕೊಂದು ತಿರುವು ತಂದು ವಿಕಾರವಾಗದೆ, ಸಹಜತೆಯನ್ನು ಉಳಿಸಿಕೊಳ್ಳುವ ಸತ್ಯಭಾಮೆಯೊಂದಿಗೆ ಹೋಲಿಸುವುದರ ಮೂಲಕ.
ಇಲ್ಲಿ ಒಳಪಂಗಡಗಳೊಳಗೆ ನಡೆದ ಮದುವೆ ಒಂದು ಹಿನ್ನೆಲೆ; ಹಾಗೇ ಸತ್ಯಭಾಮೆಯ ಗಂಡ ಸುಬ್ರಾಯ ಆಧುನಿಕ ನಾಗರಿಕತೆಯ ಆಳವಲ್ಲದ ಪ್ರಭಾವದಿಂದ ಲಚ್ಚನಂಥ ಅಂತರಪಿಶಾಚಿ ಪಾತ್ರವಾಗುವುದು ಒಂದು ಹಿನ್ನೆಲೆ: ಜಾತಿ ಮತ್ತು ವ್ಯಕ್ತಿಗಳ ನಂಬಿಕೆಗಳಿಗಿರುವ ವ್ಯತ್ಯಾಸ ಒಂದು ಹಿನ್ನೆಲೆ, ಆದರೆ ಅವುಗಳ ಪರಿಣಾಮಗಳನ್ನು ಕಾರಂತರು ತೋರಿಸುವುದು ಮಾನವರು, ಮಾನವೀಯ ಸಂಬಂಧಗಳು ಹೇಗೆ ವಿಕೃತಿ ಹೊಂದಿದವು, ಅಸಹಜವಾದವು ಎಂದು ತೋರಿಸುವುದರಿಂದ ಅಂದರೆ ಕಾರಂತರು, ಜಾತಿ, ನಂಬಿಕೆಗಳ ಬಗ್ಗೆ ಭಾಷಣ ಕೊಡದೆ, ಉದ್ವೇಗದಿಂದ ಕತ್ತಿ ಮಸೆಯದೆ, ಅವುಗಳನ್ನು ಮಾನವೀಯ ಪರಿಭಾಷೆಯಲ್ಲಿ ಚಿತ್ರಿಸುತ್ತಾರೆ, ಸಮಾಜದ ಸಮಸ್ಯೆಗಳಾಗಿದ್ದರೂ ಅವುಗಳ ಬಗ್ಗೆ ಬರೆಯಬೇಕಾಗಿರುವುದಕ್ಕೆ ಕಾರಣ ಅವು ಮನುಷ್ಯನನ್ನು ಅಸಹಜವಾಗಿಸುತ್ತವೆ. ಮನುಷ್ಯನಾಗಿ ಆತ್ಮಗೌರವದಿಂದ ಬದುಕುವ ಸ್ವಾತಂತ್ರವನ್ನು ಕಸಿದುಕೊಳ್ಳುತ್ತವೆ ಎಂಬ ಧೋರಣೆ ಬರವಣಿಗೆಯ ಕುರಿತು ಇದೆ ಎಂದು ಕಾದಂಬರಿಯನ್ನೋದಿದಾಗ ಅನ್ನಿಸುತ್ತದೆ.
ಈ ಮಾನವೀಯ ಸಂಬಂಧದ ವಿಕೃತಿಯ ಚಿತ್ರಣ ಇಲ್ಲದೆ ಹೋಗಿದ್ದರೆ ಈ ಕಾದಂಬರಿ ಹೇಗಿರುತ್ತಿತ್ತೆಂದು ಊಹಿಸಿಕೊಳ್ಳಬಹುದು, ವ್ಯಂಗ್ಯವೂ ಇಲ್ಲದೆ ಅದು ವಾಗ್ದೇವಿಗೆ ಮತ್ತು ಬಡ ಶಂಕರಯ್ಯನಿಗೆ ಶ್ರೀಮಂತನೊಬ್ಬ ಮಾಡಿದ ಮೋಸದ ಗೋಳಿನ ಕತೆಯಾಗಿ ಅದು ಕೊನೆಗೊಳ್ಳುವುದು ಸಾಧ್ಯವಿತ್ತು, ಈ ಬಗೆಯ ಮೋಸದ ಕತೆಗಳು ಸಾಕಷ್ಟು ಇರುವ ಪ್ರಗತಿಶೀಲ ಕೃತಿಗಳನ್ನು ನೋಡಬಹುದು. ಪ್ರಗತಿಶೀಲ ಸಾಹಿತ್ಯ ಸಾಹಿತ್ಯವೇ ಅಲ್ಲದೆ ಹೋಗಿರುವುದಕ್ಕೆ ಕಾರಣ ಸಾಮಾಜಿಕ ಸಮಸ್ಯೆಗಳನ್ನು ಮಾನವೀಯ ಪರಿಭಾಷೆಯಲ್ಲಿ ಆ ಲೇಖಕರು ಚಿತ್ರಿಸಲಿಲ್ಲ ಎಂಬುದು.2 ಮಾನವ ಎನ್ನುವಾಗ ದುಃಖಿಸುವ, ನೋವು ತಿನ್ನುವ, ತಾಳಿಕೊಂಡು ಅನುಭವಿಸುವ, ಆದರೂ ಸುಖದ ಕಲ್ಪನೆಯುಳ್ಯ, ಸಮಾಜದಲ್ಲಿ ಬದುಕುವ ವ್ಯಕ್ತಿಯ ಬಗ್ಗೆ ನಾನು ಯೋಚಿಸುತ್ತಿದ್ದೇನೆ. ಕಾರಂತರ ಕಾದಂಬರಿಗಳಲ್ಲಿ ಬರುವ ಮಾನವರು ಇಂಥವರು.
ಅಂದರೆ ಸಾಮಾಜಿಕ ಸಮಸ್ಯೆಗಳನ್ನು ಕೃತಿಯಲ್ಲಿ ತರುವುದಕ್ಕೆ ಒಂದೇ ಒಂದು ಮಾರ್ಗವಿದೆ : ಮನುಷ್ಯನ ಮನಸ್ಸಿನ ಮೇಲೆ, ಮನುಷ್ಯ ಸಂಬಂಧಗಳ ಮೇಲೆ ಅವುಗಳಿಂದ ಯಾವ ಪರಿಣಾಮವಾಯಿತು ಎಂಬುದನ್ನು ಘಟನೆಗಳ ಮೂಲಕ ನಿರೂಪಿಸುವುದು ಇದನ್ನು ಗಟ್ಟಿಯಾದ ಮೌಲ್ಯಗಳ, ಕಲ್ಪನೆಯಿದ್ದು ಮಾಡಬೇಕಾಗುತ್ತದೆ, ಯಾಕೆಂದರೆ, ದುಃಖವನ್ನು, ದುರಂತವನ್ನು ಕಾಣುವುದರಿಂದಷ್ಟೇ ಲೇಖಕನೊಬ್ಬ ದೊಡ್ಡವನಾಗುವುದಿಲ್ಲ, ಮೌಲ್ಯಗಳ, ಸಂತೋಷಗಳ ಕಲ್ಪನೆಯಿದ್ದು ಆತ ದುರಂತವನ್ನು, ನೋವನ್ನು ಕಾಣುತ್ತಾನೆ. ಭಾಷೆಯಲ್ಲಿ ಕಾಣಿಸುತ್ತಾನೆ ಎಂಬುದರಿಂದ ದೊಡ್ಡವನಾಗುತ್ತಾನೆ. ಹೀಗಲ್ಲದೆ ಸಾಮಾಜಿಕ ಸಮಸ್ಯೆಗಳ ಬಗ್ಗೆ ಗಾಡಿ ಬಿಡುವ ಲೇಖಕ ಸಮಾಜಶಾಸ್ತ್ರಜ್ಞನೋ ಸುಧಾರಕ ಮಹಾಶಯನೋ ಘಟನೆಗಳನ್ನು ದಾಖಲಿಸುವ ಶಾನುಭೋಗನೋ ಆಗುತ್ತಾನೆ.
೨
ಸಾಮಾಜಿಕ ಸಮಸ್ಯೆಗಳನ್ನು ಅಥವಾ ಹೊರಗಿನ ಯಾವುದೇ ಒಂದನ್ನು ವಿವರಿಸುತ್ತಾ ಹೋಗುವುದು ಮತ್ತು ಅವುಗಳನ್ನು ಮಾನವೀಯ ಪರಿಭಾಷೆಯಲ್ಲಿ ಅರ್ಥೈಸುವುದು ಒಬ್ಬ ಲೇಖಕನ ಶೈಲಿಯನ್ನೂ ನಿರೂಪಿಸುತ್ತದೆ. ಈ ಶೈಲಿಗಳಲ್ಲಿರುವ ವ್ಯತ್ಯಾಸವನ್ನು ಜಾರ್ಜ್ ಲುಕಾಚ್ಸ್‌ಮ ಉದಾಹರಣೆಯೊಂದರ ಮೂಲಕ ತಿಳಿದುಕೊಳ್ಳಲು ಸಾಧ್ಯವಾಗಬಹುದು.
ಎಮಿಲ್ ಸೋಲಾನ ‘ನಾನಾ’ ಕಾದಂಬರಿಯಲ್ಲಿ ಕುದುರೆ ಪಂದ್ಯದ ಚಿತ್ರಣ ಬರುತ್ತದೆ. ಆತ ಕುದುರೆ ಪಂದ್ಯದ ಎಲ್ಲಾ ವಿವರಗಳನ್ನೂ ಒಂದಾದ ಮೇಲೊಂದರಂತೆ- ಒದಗಿಸುತ್ತಾ ಹೋಗುತ್ತಾನೆ, ಪ್ಯಾರಿಸ್ಸಿನ ಜನವರ್ಗ, ಅವರ ಉತ್ಸಾಹ, ಕೇಕೆ, ಕುದುರೆಗಳು, ಬೆಟ್ಟಿಂಗ್, ಗಲಭೆಯಲ್ಲಿ ಮುಕ್ತಾಯವಾಗುವ ಪಂದ್ಯ ಇತ್ಯಾದಿ ಎಲ್ಲಾ ವಿಷಯಗಳ ಬಗ್ಗೆಯೂ ಆತ ಬರೆಯುತ್ತಾನೆ. ಆದರೆ ಈ ವಿವರಗಳಿಗೂ ಕಥಾವಸ್ತುವಿಗೂ ಇರುವ ಸಂಬಂಧ ಮಾತ್ರ ಬಹಳ ತೆಳ್ಳಗಿನದು, ಯಥಾರ್ಥವಾದದ ಪ್ರಕಾರ ಇದ್ದುದನ್ನು ಇದ್ದಂತೆ ಚಿತ್ರಿಸುವ ಕೆಲಸವನ್ನು ಸೋಲಾ ತುಂಬಾ ಸಮರ್ಥವಾಗಿ ಮಾಡುತ್ತಾನೆ, ಅಷ್ಟೇ.
ಇದನ್ನು ಟಾಲ್‌ಸ್ಟಾಯ್‌ನ ‘ಎನ್ನಾ ಕೆರೆನಿನಾ’ದ ಕುದುರೆ ಪಂದ್ಯದ ಜೊತೆಗೆ ಲುಕಾಚ್ಸ್ ಹೋಲಿಸುತ್ತಾನೆ. ಸೋಲಾಗೆ ಹೋಲಿಸಿದರೆ ಟಾಲ್‌ಸ್ಟಾಯ್‌ನಲ್ಲಿ ಕುದುರೆ ಪಂದ್ಯದ ಬಗ್ಗೆ ಇಲ್ಲವೇ ಇಲ್ಲವೆನ್ನುವಷ್ಟು ಕಮ್ಮಿ ಮಾಹಿತಿಯಿದೆ. ಆದರೆ ಈ ಕುದುರೆ ಪಂದ್ಯ ಇಡೀ ಕಾದಂಬರಿಯ ವ್ಯಕ್ತಿಗಳ ಜೀವನದೊಂದಿಗೆ ಸಂಬಂಧ ಹೊಂದಿದೆ, ರಾನ್‌ಸ್ಕಿಯ ಕುದುರೆ ಬಿದ್ದ ನಂತರದ ಭಾಗಗಳು ಎನ್ನಾಗೆ ರಾನ್‌ಸ್ಕಿ ಬಗ್ಗೆ ಇರುವ ಕಾತರ, ಕಳವಳ ವನ್ನು ತೋರಿಸುತ್ತವೆ ; ಎಲ್ಲರ ಎದುರು ವ್ಯಕ್ತವಾಗುವ ಅವಳ ವರ್ತನೆ ರಾನ್‌ಸ್ಕಿ ಬಗ್ಗೆ ಅವಳ ಪ್ರೀತಿ ಈಗಾಗಲೇ ಸಮಾಜವನ್ನು ನಿರ್ಲಕ್ಷಿಸುವಷ್ಟು ಬೆಳೆದಿದೆ-(ಮುಂದೆ ಇದೇ ಕಾದಂಬರಿಯಲ್ಲಿ ಒಂದು ಮುಖ್ಯ ವಸ್ತುವಾಗುತ್ತದೆ) ಎನ್ನುವುದನ್ನು ಸೂಚಿಸುತ್ತದೆ; ಈಗ ಆಕೆ ತನಗೆ ರಾನ್‌ಸ್ಕಿ ಜೊತೆಗಿರುವ ಸಂಬಂಧವನ್ನು ಗಂಡನಿಗೆ ತಿಳಿಸಲು ನಿಶ್ಚಯಿಸುತ್ತಾಳೆ, ಪಂದ್ಯ ರಾನ್‌ಸ್ಕಿಗೆ ತನ್ನ ಮಹತ್ವಾಕಾಂಕ್ಷೆಯನ್ನು ನಿಜಮಾಡಿಕೊಳ್ಳಲು ಇದ್ದ ಕೊನೆಯ ಅವಕಾಶ; ಕುದುರೆ ಮಧ್ಯದಲ್ಲಿ ಬೀಳುವುದು-ಅದೂ ಅವನೇ ಮಾಡಿದ ತಪ್ಪಿಗಾಗಿ ಬೀಳುವುದು ಅವನ ಮಹತ್ವಾಕಾಂಕ್ಷೆಯ ಪತನವನ್ನೂ ತೋರಿಸುತ್ತದೆ. ಇಡಿಯ ದೃಶ್ಯವನ್ನು ಟಾಲ್‌ಸ್ಟಾಯ್ ಅದಕ್ಕೆ ಸಂಬಂಧಪಟ್ಟ ಪಾತ್ರಗಳ ಜೀವನದೊಂದಿಗೆ ಮತ್ತು ತನ್ಮೂಲಕ ಇಡಿಯ ಕಾದಂಬರಿಯೊಂದಿಗೆ ತಳಕು ಹಾಕುತ್ತಾ ನಿರೂಪಿಸುತ್ತಾನೆ, ಕುದುರೆ ಪಂದ್ಯ ಕಾದಂಬರಿಗೆ ಎಷ್ಟನ್ನ ಕೊಡಬಹುದೋ ಅಷ್ಟನ್ನು ಕೊಟ್ಟ ಬಳಿಕ ಅದರ ಬಗ್ಗೆ ಬರೆಯುವ ಅಗತ್ಯವೂ ಟಾಲ್ಸ್‌ಟಾಯ್‌ಗೆ ಇಲ್ಲ, ರಾನ್‌ಸ್ಕಿಯ ಕುದುರೆ ಬಿದ್ದಾಗ ಉಂಟಾಗುವ ಗೊಂದಲಕ್ಕೆ ಆತ ಆ ಅಧ್ಯಾಯವನ್ನು ಮುಗಿಸುತ್ತಾನೆ ; ಮುಂದಿನ ಅಧ್ಯಾಯವನ್ನು ಕೆರೆನಿನ್ ಹೇಗೆ ತನ್ನ ನೋವನ್ನು ಗುರುತಿಸಿಕೊಳ್ಳದೆ ಆತ್ಮವಂಚನೆ ಮಾಡಿಕೊಳ್ಳುತ್ತಾ ಕೃತಕವಾಗುತ್ತಾ ಹೋದ ಎಂಬುದನ್ನು ನಿರೂಪಿಸಲು ಮೀಸಲಾಗಿಡುತ್ತಾನೆ. ಮತ್ತೆ ಕುದುರೆ ಪಂದ್ಯದ ದೃಶ್ಯ, ರಾನ್‌ಸ್ಕಿ ಬಿದ್ದ ವಿಷಯ ಬಂದಾಗ ನಾವು ನೋಡುವುದು ಎನ್ನಾಳ ವರ್ತನೆಯನ್ನು.
ಇಲ್ಲಿ ಸೋಲಾ ಮಾಡುವ ಕೆಲಸ ಹೊರಗಿನದೊಂದನ್ನು ವಿವರಿಸುತ್ತಾ ಹೋಗುವುದು; ಟಾಲ್‌ಸ್ಟಾಯ್ ಮಾಡುವ ಕೆಲಸ ಮನುಷ್ಯನ ಅವಸ್ಥೆಗಳನ್ನು ನಿರೂಪಿಸುವುದು. ಹೊರಗಿನದ್ದನ್ನು ವಿವರಿಸುವ ಸೋಲಾ ಕಾದಂಬರಿಗೆ ಬೇಕೋ ಬೇಡವೋ ಎಂದು ನೋಡದೆ ಕುದುರೆ ಪಂದ್ಯದ ಬಗ್ಗೆ ತಾನು ಕಲೆ ಹಾಕಿದ ಮಾಹಿತಿಗಳನ್ನೆಲ್ಲಾ (ಸೋಲಾ ನಿಜವಾಗಿಯೂ ಪಂಡಿತನ ಹಾಗೆ ಬರೆಯುವುದಕ್ಕೆ ಬೇಕಾದ ಮಾಹಿತಿಗಳನ್ನು ಕಲೆಹಾಕುತ್ತಿದ್ದ ; ತಾನು ಕಂಡ ಅನುಭವದಿಂದ ಬರೆಯುತ್ತಿರಲಿಲ್ಲ) ದಾಖಲಿಸುತ್ತಾ ಹೋಗುತ್ತಾನೆ, ಟಾಲ್‌ಸ್ಟಾಯ್ ತನ್ನ ವ್ಯಕ್ತಿಗಳ ಅವಸ್ಥೆಗೆ ಎಷ್ಟು ಬೇಕೋ ಅಷ್ಟು ವಿವರಗಳನ್ನು ಆಯ್ದುಕೊಳ್ಳುತ್ತಾನೆ, ಸೋಲಾ ಆಯ್ದುಕೊಳ್ಳದೆ ಎಲ್ಲದಕ್ಕೂ ಸಮಾನ ಮಹತ್ವ ಕೊಡುತ್ತಾ-ಪರಿಣಾಮವಾಗಿ ಯಾವುದಕ್ಕೂ ಮಹತ್ವ ಕೊಡದೆ ವಿವರಿಸುತ್ತಾ ಹೋಗುತ್ತಾನೆ. ಆಯ್ದುಕೊಳ್ಳದೆ ಇರುವುದರಿಂದ ಅವನ ಪುಟಗಳ ಹಿಂದೆ ಮೌಲ್ಯ ನಿರ್ಣಯ ಮಾಡುವ ಜೀವಂತ ವ್ಯಕ್ತಿಯನ್ನು ನಾವು ಕಾಣುವುದಿಲ್ಲ, ದಾಖಲೆ ಕೊಡಿಹಾಕುವ ಶಾನುಭಾಗನನ್ನು ಕಾಣುತ್ತೇವೆ. ವಿವರಿಸುವ ಸೋಲಾ ಬರಿಯ ಪ್ರೇಕ್ಷಕ ; ನಿರೂಪಿಸುವ ಟಾಲ್‌ಸ್ಟಾಯ ತನ್ನ ಪಾತ್ರಗಳ ವಿಧಿಯೊಂದಿಗೆ ಬೆರೆಯುವವ ; ಜೀವನ ಪಡೆಯುವ ತಿರುವುಗಳಾದರೂ ಏನಿರಬಹುದು. ಆ ತಿರುವುಗಳ ಅವಸ್ಥೆ ಏನಿರಬಹುದು ಎಂದು ಮೌಲ್ಯ ನಿರ್ಣಯ ಮಾಡುವ ಸೃಷ್ಟಿಕಾರ, ಸೋಲಾ ರೀತಿಯ ನಮ್ಮ ಪ್ರಗತಿಶೀಲರ, ಅಥವಾ ವಿವರಿಸುತ್ತಾ ಹೋಗುವ ‘ಕಾನೂರು ಹೆಗ್ಗಡಿತಿ’ಯಂಥ ಕಾದಂಬರಿ ಯಲ್ಲಿ ಅರ್ಥಗಳಿಂದ ಗರ್ಭಿತವಾದ ಪದಗಳು ಕೃತಿಯ ಬಂಧವನ್ನು ನಿರ್ಣಯಿಸುವುದಿಲ್ಲ.
‘ಕಾನೂರು ಹೆಗ್ಗಡಿತಿ’ ನಮ್ಮ ಸಮಾಜದ ಅನೇಕ ಚಿತ್ರಗಳನ್ನು ಹಿಡಿದಿಡುತ್ತಿದ್ದರೂ ಅದೊಂದು ದಾಖಲೆ ಮಾತ್ರ, ರಾಮಯ್ಯ ಮತ್ತು ಸೀತೆ ಮದುವೆಯ ಬಳಿಕ ಅಗ್ರಹಾರಕ್ಕೆ ಹೋಗುವ ಭಾಗವನ್ನು ತೆಗೆದುಕೊಳ್ಳಿ: ಸೋಮ, ಕದ್ದು ಮಾಂಸ ತಿಂದು ಪ್ರಾಣ ಹೋಗುವ ಪ್ರಸಂಗ ಬರುವುದನ್ನು ತೆಗೆದುಕೊಳ್ಳಿ ; ಕಿಲಿಸ್ತರ ಜಾಕಿಯ ಕೌರ‍್ಯವನ್ನು ತೆಗೆದುಕೊಳ್ಳಿ, ಇಲ್ಲಿ ಕುವೆಂಪು ವಿವರಗಳ ಲೋಲುಪತೆಯಲ್ಲಿ ದಾಖಲಿಸುತ್ತಾ ಹೋಗುತ್ತಾರೆ ಹೊರತು ಅವನ್ನು ಇಡಿಯ ಕಾದಂಬರಿಗೆ .ಸಂಬಂಧಿಸುವುದಿಲ್ಲ ; ಮಾನವನ ಅವಸ್ಥೆಗಳನ್ನು ಒಟ್ಟು ಜೀವನ ದರ್ಶನದಲ್ಲಿ ನಿರೂಪಿಸುವುದಕ್ಕಾಗಿ ಅವು ಬರುವುದಿಲ್ಲ; ಅಥವಾ ಅದಕ್ಕೆ ಹೊಂದಿ ಅವರು ವಿವರಗಳನ್ನು ಆರಿಸುವುದಿಲ್ಲ, ಸೋಮನ ಮಾಂಸದ ಆಸೆಯನ್ನು ‘ಚೋಮನ ದುಡಿ’ಯ ಚೋಮನ ಕುಡಿತದೊಂದಿಗೆ ಹೋಲಿಸಬಹುದು. ಕಾರಂತರು ದಾಖಲಿಸುವ ಬದಲು ಒಂದು ವಿವರಕ್ಕೂ ಅದಕ್ಕೆ ಸಂಬಂಧಪಟ್ಟ ವ್ಯಕ್ತಿಗಳಿಗೂ ಇರುವ ಸಂಬಂಧವನ್ನು, ಪಾತ್ರಗಳ ಅಂತರ್‌ನಾಟಕವನ್ನು ಚಿತ್ರಿಸುತ್ತಾರೆ. ಕುವೆಂಪು ಅವರೇ ತಮ್ಮ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಈ ಬಗೆಯ ಅಂತರ್‌ನಾಟಕವನ್ನು ಚಿತ್ರಿಸಲು ಪ್ರಯತ್ನಿಸುತ್ತಾರೆ. ಈ ಹೋಲಿಕೆಗಳನ್ನು ನೋಡಿ: ‘ ಕಾನೂರು ಹೆಗ್ಗಡಿತಿ ‘ ಯಲ್ಲಿ ಓಬಯ್ಯ ಮತ್ತು ಅವನ ತಂದೆ ಚಂದ್ರಯ್ಯ ಗೌಡರಿಂದ ಸ್ವತಂತ್ರರಾಗುವುದಕ್ಕಾಗಿ ಕದ್ದು ಓಡಿಹೋಗಲು ಪ್ರಯತ್ನಿಸುವ ಪ್ರಸಂಗ ಬರುತ್ತದೆ. ಇದು ಕಾದಂಬರಿಯಲ್ಲಿ ಒಂದು ವಿವರಣೆ ಮಾತ್ರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಬರುವ ಇಂಥದ್ದೇ ಕದ್ದು ಓಡಿಹೋಗುವ ಪ್ರಸಂಗಗಳು ಪಾತ್ರಗಳ ಅಂತರ್‌ನಾಟಕವನ್ನು ಚಿತ್ರಿಸಲು ಪ್ರಯತ್ನಿಸುತ್ತವೆ; ಜೊತೆಗೇ ಹೀಗೆ ಕದ್ದು ಓಡಿ ಹೋಗುವುದೊಂದೇ ಅನಿವಾರ‍್ಯ ಮಾರ್ಗವಾಗುವ, ಸ್ವಾತಂತ್ರ್ಯಕ್ಕಾಗಿ ಸದಾ ಒಳದಾರಿಗಳನ್ನು ಹುಡುಕುತ್ತಲೇ ಇರಬೇಕಾದ ಆ ಸಮಾಜದ ಆರ್ಥಿಕ ವ್ಯವಸ್ಥೆ ಸಾಮಾಜಿಕ ಕಟ್ಟುಪಾಡುಗಳ ಮೇಲೆ ವ್ಯಾಖ್ಯೆ ಬರೆಯುತ್ತದೆ, (ಆದರೆ ಈ ಕಾದಂಬರಿಯ ಬಗ್ಗೆ ನನಗಿನ್ನೂ ಅನುಮಾನಗಳಿವೆ; ಅಲ್ಲಿನ ಅನೇಕ ಪುಟಗಳಲ್ಲಿರುವ ಸುಳ್ಳು ಬರವಣಿಗೆ, ಅತಿ ರಂಜಿಸುವ ರೀತಿ ನನಗೆ ಕಿರಿಕಿರಿಯುಂಟುಮಾಡಿದೆ.) ಹೇಗಿದ್ದರೂ ಆಯ್ಕೆಯ ಜವಾಬ್ದಾರಿ ಸೃಷ್ಟಿಕ್ರಿಯೆ ಕುರಿತ ಕುವೆಂಪು ಅವರ ಯೋಚನೆಯ ಕ್ರಮದಲ್ಲಿಯೇ ಇಲ್ಲ.)
ಆದರೆ ಆಯ್ಕೆಯ ಜವಾಬ್ದಾರಿಯೊಂದೇ ಸಾಹಿತ್ಯಕೃತಿಯ ಇರುವಿಕೆಯ ಸ್ಥಿತಿಯೇ ಅದಕ್ಕೆ ಈ ದುರಂತ ಪ್ರಪಂಚದಲ್ಲಿ ತಾತ್ವಿಕ ಸ್ಥಾನಮಾನಗಳನ್ನು ಕೊಡುತ್ತದೆ, ಅಸಂಗತವಾದ, ಅಸಂಬದ್ಧವಾದ ಈ ಪ್ರಪಂಚವನ್ನು, ಈ ಸಮಾಜವನ್ನು ಮಾನವೀಯ ಪರಿ ಭಾಷೆಯಲ್ಲಿ ನಿರೂಪಿಸುತ್ತಾ ಮೌಲ್ಯಗಳ ಕಲ್ಪನೆಯ ಮೂಲಕವಾಗಿ ಸುಖದ ಪ್ರಪಂಚವೊಂದರ ಕಡೆಗೆ ಲೇಖಕ ಬೊಟ್ಟು ಮಾಡುತ್ತಾನೆ ಎಂಬುದರಿಂದ ಮಾತ್ರವೇ ಅಲ್ಲ. ಜೀವನದಲ್ಲಿ ಅಸಂಬದ್ಧವಾದವುಗಳನ್ನು, ಅಸ್ತವ್ಯಸ್ತವಾದವುಗಳನ್ನು ಆರಿಸಿಕೊಂಡು. ಅವನು ಭಾಷೆಯಲ್ಲಿ ಒಂದು ಸುಸಂಬದ್ಧವಾದ ಶಿಲ್ಪವನ್ನು ಕಡೆಯುತ್ತಾನೆ, ಅರ್ಥ ಪೂರ್ಣ ಸಾಹಿತ್ಯ ಕೃತಿಯ- ದುರಂತಗಳನ್ನು ಮರೆಯದೆ ಸೃಷ್ಟಿಸಿದ ಕೃತಿಯ-ಸಂಬಂಧತೆ, ಸಾಂಗತ್ಯ-ಶಿಲ್ಪ, ಬಂಧ, ರಚನೆ-ಈ ಮೂಲಕ ತನ್ನ ಇರುವಿಕೆಯ ರೀತಿಯಿಂದಾಗಿಯೇ ಈ ಅಸಂಗತ ದುರಂತ ಪ್ರಪಂಚದ ವಿರುದ್ಧ ಹೂಡಿದ ಒಂದು ಯುದ್ಧ. ಲೇಖಕ ತನ್ನ ಮೌಲ್ಯಗಳ ಕಲ್ಪನೆಯ ಮೂಲಕವಾಗಿ ಮಾತ್ರವಲ್ಲದೆ ತನ್ನ ಅರ್ಥಪೂರ್ಣ ಸೃಷ್ಟಿಕ್ರಿಯೆಯ ಮೂಲಕವಾಗಿಯೂ ಪ್ರಪಂಚದ ಅಸಂಬದ್ಧತೆಯನ್ನು, ಸಮೃದ್ಧವಾದ, ಆದರೆ ತಾಳಮೇಳಗಳಿಲ್ಲದ ಪ್ರಕೃತಿಯ, ಸಮಾಜದ ಅರ್ಥಹೀನ ಸೃಷ್ಟಿಯನ್ನು ಪ್ರತಿಭಟಿಸುತ್ತಾನೆ. ಹೀಗಾಗಿ, ಆರಿಸದೆ, ಬರಿಯ ವಿವರಗಳನ್ನು ದಾಖಲಿಸುತ್ತಾ ಹೋಗುವವನ ದುರಂತ ಸಾಹಿತ್ಯ ಪ್ರಪಂಚದಲ್ಲಿ ಮಾತ್ರವೇ ಅಲ್ಲ ; ಆತ ಜೀವನದಲ್ಲಿಯ ಅಸಂಗತವಾದುದನ್ನು, ಅರ್ಥಹೀನವಾದುದನ್ನು ಎತ್ತಿಹಿಡಿಯುತ್ತಾನೆ. ಸಾಹಿತಿಯಾಗಿ ಈ ಪ್ರಪಂಚವನ್ನು ಪ್ರತಿಭಟಿಸುವ ಒಂದೇ ಒಂದು ಅವಕಾಶವನ್ನು ಅವನು ಕಳೆದುಕೊಳ್ಳುತ್ತಾನೆ, ಆದ್ದರಿಂದ ಆತನಿಗೆ ಮನುಷ್ಯನ ವಿಧಿಯ ಬಗ್ಗೆ ಇರುವ ಕಾಳಜಿಯನ್ನೇ ಪ್ರಶ್ನಿಸ ಬೇಕಾಗುತ್ತದೆ. ಆದ್ದರಿಂದ ಆತ ಸಾಹಿತಿ ಎನ್ನುವ ಮಾತನ್ನೇ ಪ್ರಶ್ನಿಸಬೇಕಾಗುತ್ತದೆ.
ಸಮಾಜವನ್ನು ಸಾಹಿತ್ಯದಲ್ಲಿ ಚಿತ್ರಿಸುವ ಲೇಖಕ ಈ ಸಮಸ್ಯೆಗಳನ್ನೆದುರಿಸದೆ ನಿರ್ವಾಹವಿಲ್ಲ, ಈಗಾಗಲೇ ಸ್ಪಷ್ಟವಾಗಿರಬಹುದಾದ ಹಾಗೆ ನಿರೂಪಿಸುವುದು ಮತ್ತು ವಿವರಿಸುವುದು ಬರಿಯ ಎರಡು ಶೈಲಿಗಳ ಸಮಸ್ಯೆಗಳ ಮಾತ್ರವೇ ಅಲ್ಲ ; ವಾಸ್ತವಕ್ಕೆ ಮತ್ತು ಜೀವನಕ್ಕೆ ಲೇಖಕನಿಗಿರುವ ದೃಷ್ಟಿಕೋನದ ಸಮಸ್ಯೆ, ವಿವರಿಸುವ ಲೇಖಕನಿಗೆ ಜೀವನ, ವ್ಯಕ್ತಿಗಳು ವಸ್ತು ಮಾತ್ರ, ಅವುಗಳ ಬಗ್ಗೆ ಅವನಿಗಿರುವ ಆಸಕ್ತಿ, ಪ್ರೇಕ್ಷಕನದ್ದು ; ಅಥವಾ ಅವು ಎಷ್ಟು ರಂಜನೆಯನ್ನೊದಗಿಸಬಲ್ಲವು ಎಂಬುದು, ನಿರೂಪಿಸುವವನಿಗೆ ಜೀವನವಾಗಲೀ, ವಾಸ್ತವವಾಗಲೀ ಜಡವಸ್ತುಗಳೆಲ್ಲ, ದಾಖಲೆಯ ಸಾಮಗ್ರಿಗಳಲ್ಲ; ತನ್ನ ಪಾತ್ರಗಳು ಜೀವಿಸುತ್ತಾ ಸಿಕ್ಕಿಕೊಂಡ ತೊಡಕುಗಳು, ಈ ಕಾರಣಕ್ಕಾಗಿಯೇ ವಿವರಿಸುವವನ ಗದ್ಯ ಆ ವಿವರಣೆಗೆ ಸಂಬಂಧಪಟ್ಟ ವಸ್ತುವಿನ ಪಾರಿಭಾಷಿಕ ಪದಗಳಲ್ಲಿ ಯಷ್ಟೇ ಇರುತ್ತದೆ. ನಿರೂಪಿಸುವವನ ಗದ್ಯ ಏಕಕಾಲಕ್ಕೆ ವೈಯಕ್ತಿಕ ಸಾಮಾಜಿಕ ತಾತ್ವಿಕ ಸಂಬಂಧಗಳನ್ನು ಸೂಚಿಸುತ್ತದಾದ್ದರಿಂದ ಅರ್ಥಗರ್ಭಿತವಾಗಿ ಸಂಕೀರ್ಣವಾಗಿರು ತದೆ.
ಇಲ್ಲಿಯೇ ಇನ್ನೊಂದು ಮಾತನ್ನು ಹೇಳಬಹುದೆಂದು ಕಾಣುತ್ತದೆ. ಹೊರಗಿನ ವ್ಯವಸ್ಥೆ ಗಳನ್ನಾಗಲೀ ಸಾಮಾಜಿಕ ಸಮಸ್ಯೆಗಳನ್ನಾಗಲೀ ವಿವರವಾಗಿ ಬರೆಯುವುದರ ಮೂಲಕ ಅವುಗಳು ಓದುಗನ ಭಾವಗಳನ್ನು ಉದ್ದೀಪಿಸುತ್ತವೆ ಎನ್ನುವುದು ಸುಳ್ಳು ; ಮನುಷ್ಯನ ವಿಧಿಗೂ ಅವುಗಳಿಗೂ ಇರುವ ಸಂಬಂಧದ ಬಗ್ಗೆ ಬರೆಯುವುದರ ಮೂಲಕ ಮಾತ್ರ ಮನುಷ್ಯನ ಮನಸ್ಸನ್ನು ಜೀವನದ ಬಗ್ಗೆ ಮತ್ತು ಹೊರಗಿನ ಸಂಗತಿಗಳ ಬಗ್ಗೆ ಎಚ್ಚರಿಸುವುದು ಸಾಧ್ಯ, ಹೊರಗಿನ ಸಂಗತಿಗಳು ಮಾನವೀಯ ಪರಿಭಾಷೆಯಲ್ಲಿ ವ್ಯಕ್ತವಾದಾಗ ಮಾತ್ರ ಅವು ತಮ್ಮ ಜಡಸ್ಥಿತಿಯನ್ನು ಕಳೆದುಕೊಂಡು ಜೀವಂತವಾಗುವುದು ಸಾಧ್ಯ. ಈ ಪ್ರಕ್ರಿಯೆಗೆ ಉದಾಹರಣೆಯಾಗಿ ನಂಬಿದವರ ನಾಕ, ನರಕ ದಲ್ಲಿ ಬರುವ ನಾಗೇಂದ್ರನ ಕೋಣೆಯ ಚಿತ್ರವನ್ನು ನೋಡಬಹುದು, ಈ ಕೋಣೆಯ ಶೃಂಗಾರ ನಾಗೇಂದ್ರನ ಸ್ವಭಾವವನ್ನು, ಅದರ ಬಗ್ಗೆ ವಾಗ್ದೇವಿಯ ಪ್ರಕ್ರಿಯೆ ಅವಳ ಸ್ವಭಾವ, ಸಂಸ್ಕೃತಿಗಳನ್ನೂ, ತನ್ಮೂಲಕ ವಾಗ್ದೇವಿ ಮದುವೆಯಾದ ಮೊದಲಿಗೆ ಎದುರಿಸಬೇಕಾಗಿರುವ ಸಮಸ್ಯೆಗಳನ್ನು ಒಟ್ಟಿಗೇ ಚಿತ್ರಿಸುತ್ತದೆ, ‘ನಂಬಿದವರ ನಾಕ, ನರಕ’ದ ಈ ಭಾಗವನ್ನು ಎಂ.ಕೆ. ಇಂದಿರಾ ಅವರ ‘ಸದಾನಂದ’ ಕಾದಂಬರಿಯಲ್ಲಿ ಬರುವ ಸದಾನಂದನ ಕೋಣೆಯ ವಿಸ್ತಾರವಾದ ವೈಭವಪೂರಿತ ಚಿತ್ರದೊಂದಿಗೆ ಹೋಲಿಸಬಹುದು. ಸದಾನಂದನ ಕೋಣೆ ಅಷ್ಟೆಲ್ಲಾ ವಿವರಗಳ ಬಳಿಕವೂ ಜೀವರಹಿತವಾಗಿಯೇ ಉಳಿಯಲು ಕಾರಣ ಅದು ಮಾನವೀಯ ಪರಿಭಾಷೆಯಲ್ಲಿ ನಿರೂಪಿತವಾಗಿಲ್ಲ ಎಂಬುದು, ಜಡವಾದ ವಸ್ತುವೊಂದು ಜೀವಂತವಾಗುವ ಪ್ರಕ್ರಿಯೆಗೆ ಇನ್ನೊಂದು ಉದಾಹರಣೆಯಾಗಿ ‘ಭಾರತೀಪುರ’ ದಲ್ಲಿ ಹೊಲೆಯರು ಉಡುವ ಬಿಳಿಪಂಚೆಗಳನ್ನು ನೋಡಬಹುದು. ಪಂಚೆ – ಜಡವಸ್ತುವಾದ ಪಂಚೆ-ಜಗನ್ನಾಥನ ಕ್ರಾಂತಿಯನ್ನು, ಅದರ ಹಿಂದಿರುವ ಕಾಮೆಡಿ ಯನ್ನು, ನಮ್ಮ ಆರ್ಥಿಕವ್ಯವಸ್ಥೆ, ಮೂಢ ನಂಬಿಕೆಗಳನ್ನು, ಇವುಗಳು ಹೊಲೆಯರ ಮನಸ್ಸಿನ ಆಳಕ್ಕೆ ಇಳಿದಿರುವ ರೀತಿಯನ್ನು ಗರ್ಭಿಸಿಕೊಂಡು ಜೀವಂತವಾಗುತ್ತದೆ.
ಈ ಕಾರಣಗಳಿಗಾಗಿ ವಿವರಣೆಯ ಮೂಲಕ ಹಂತಗಳು (levels) ನಿರ್ಮಾಣವಾದರೆ ಆಯ್ಕೆಯಿಂದ ಹುಟ್ಟಿದ ನಿರೂಪಣೆಯ ಮೂಲಕ ಪ್ರಮಾಣಗಳು (proportions) ನಿರ್ಮಾಣವಾಗುತ್ತವೆ. ‘ಕಾನೂರು ಹೆಗ್ಗಡಿತಿ’ಯಲ್ಲಿ ಸೋಮ ಮತ್ತು ಹೂವಯ್ಯನಿಗಿರುವ ಸಂಬಂಧವನ್ನು ನೋಡಿ. ಸೋಮ ಹೂವಯ್ಯನಲ್ಲಿ ಕೆಲಸಕ್ಕಿರುವವ ಎಂಬುದನ್ನು ಬಿಟ್ಟರೆ ಒಬ್ಬರ ಪ್ರಪಂಚವನ್ನು ಇನ್ನೊಬ್ಬರಿಂದ ಪ್ರತ್ಯೇಕಿಸಿ ವಿವೇಚಿಸುವ ಮೌಲ್ಯವಾಗಲೀ ಪ್ರಮಾಣವಾಗಲೀ ಕಾದಂಬರಿಯಲ್ಲಿ ಇಲ್ಲ, ಈ ಪ್ರಮಾಣಗಳಿದ್ದರೆ ಹೂವಯ್ಯ ಸೋಮನನ್ನು, ಸೋಮ ಹೂವಯ್ಯನನ್ನು ಅಳೆಯುವ ಸಾಧನವಾಗಬೇಕಿತ್ತು, ಹಾಗಿಲ್ಲದೆ ಬರಿಯ ದಾಖಲಿಸುವುದರಿಂದ ಅವರು ಬಿಡಿಬಿಡಿಯಾದ ಪಾತ್ರಗಳಾಗಿ ಉಳಿದು ಕೊಳ್ಳುತ್ತಾರೆ.
ಈ ಕಾದಂಬರಿಯಲ್ಲಿ ಒಬ್ಬ ಲೇಖಕ ಪ್ರಮಾಣಗಳನ್ನು ಹೇಗೆ ಏರ್ಪಡಿಸುತ್ತಾನೆ ಎಂಬು ದನ್ನು ಮತ್ತೆ `ನಂಬಿದವರ ನಾಕ, ನರಕ’ದ ಉದಾಹರಣೆಯಿಂದಲೇ ನೋಡಬಹುದು. ಕಾದಂಬರಿಯುದ್ದಕ್ಕೂ ವಿವಿಧ ನಂಬಿಕೆಗಳುಳ್ಳ ವ್ಯಕ್ತಿಗಳು ಮತ್ತು ಅವರ ಜೀವನದ ವಿವರಗಳು ಬರುತ್ತವೆ: ಜನಪ್ರಿಯವಾದದ್ದನ್ನು ನಂಬುವ ನಾಗೇಂದ್ರ, ಸಂಪ್ರದಾಯದಲ್ಲಿ ಶ್ರದ್ದೆಯಿರುವ ಸಾವಿತ್ರಮ್ಮ, ಭಾರತೀಯ ಹಳ್ಳಿಗಳಲ್ಲಿ ಇನ್ನೂ ಇರುವ ಅರಿಸ್ಟಾ ಕ್ರೆಟಿಕ್ ಜೀವನದ (ಯೇಟ್ಸ್ ಅರ್ಥದ ಅರಿಸ್ಟ್ರಾಕ್ರೆಸಿ) ಸಿಂಗಾರಮ್ಮ, ಕೊಲ್ಲೂರು ಮೂಕಾಂಬಿಕೆ, ಜಾತಿಗಳಲ್ಲಿ ನಂಬಿಕೆಯಿಟ್ಟ ವಾಗ್ದೇವಿ, ಸಂಪ್ರದಾಯ, ದೇವರು, ಜಾತಿ ಗಳಲ್ಲಿ ನಂಬಿಕೆ ಕಳೆದುಕೊಂಡು ಹೊಸತೇ ಮೌಲ್ಯಗಳನ್ನು ರೂಪಿಸಿಕೊಂಡ ಸತ್ಯಭಾಮೆ, ಅರೆಹೊರೆದ ನಂಬಿಕೆಗಳ ಮೇಲೆ ಕಾವು ಕೂತು ತನ್ನನ್ನು ರೂಪಿಸಿಕೊಳ್ಳಲೆತ್ನಿಸುವ ಪರಮಯ್ಯ, ತಮ್ಮ ಜೀವನವನ್ನು ಬೇರೆ ಬೇರೆ ರೀತಿಗಳಲ್ಲಿ ತಾನೇ ರೂಪಿಸಿಕೊಂಡ ವಿನಾಯಕ ಇಡಗುಂಜಿ ಮತ್ತು ರಾಮಕೃಷ್ಣ, ಕಾರಂತರ ಪ್ರೀತಿಯ ಬೇಟೆಯಾದ ಸ್ವಾಮಿಗಳು, ಡೋಂಗಿ ಭಕ್ತರು, ಎಡೆಬಿಡಂಗಿಗಳು-ಇವರೆಲ್ಲರೂ ವಿವಿಧ ನಂಬಿಕೆಗಳುಳ್ಳ ವ್ಯಕ್ತಿಗಳು, ಕಾರಂತರು ಎಲ್ಲಿಯೂ ಈ ನಂಬಿಕೆ ಸರಿ ಅಥವ ಇದು ಕೆಟ್ಟದು ಎಂದು ಹೇಳಿಕೆ ಕೊಡುವುದಿಲ್ಲ: ಈ ಹೇಳಿಕೆಗಳನ್ನು ಅವರು ಕೊಡುವವರೇ ಎಂದು ನೆನಪಿಟ್ಟುಕೊಂಡು ಹೇಳುತ್ತಿದ್ದೇನೆ, ಆದರೆ ಕಾದಂಬರಿಯ ಮುಖ್ಯ ವ್ಯಕ್ತಿಗಳಾದ ವಾಗ್ದೇವಿ ಮತ್ತು ಸತ್ಯಭಾಮೆ ಒಬ್ಬರಿಗೊಬ್ಬರು ವಿರುದ್ಧವಾಗಿ ನಿಲ್ಲುತ್ತಾರೆ. ಸತ್ಯಭಾಮೆ ಜೀವನದ ಆಘಾತಗಳಿಂದಾಗಿ ತನ್ನ ನಂಬಿಕೆಗಳನ್ನು ಬದಲಿಸುತ್ತಾ ಮತ್ತು ಅದಕ್ಕನುಗುಣವಾಗಿ ಬದುಕುವ ಧೈರ್ಯವನ್ನು ತೋರಿಸುತ್ತಾ ಹೋಗುತ್ತಾಳೆ, ಸಂಪ್ರದಾಯ ಶರಣರಲ್ಲಿ ಬೆಳೆದುಬಂದ ಈಕೆ ತನ್ನ ಯಾವ ತಪ್ಪೂ ಇಲ್ಲದೆಯೇ ಅನುಭವಿಸಬೇಕಾಗಿ ಬಂದ ಶಿಕ್ಷೆಯಿಂದಾಗಿ ದೇವರಲ್ಲಿ, ಜಾತಿಯಲ್ಲಿ, ಸಂಪ್ರದಾಯದಲ್ಲಿ ನಂಬಿಕೆ ಕಳೆದುಕೊಳ್ಳುತ್ತಾಳೆ. ಪರಮಯ್ಯ ಮತ್ತು ಸತ್ಯಭಾಮೆಗೆ ವಂಧ್ಯೆ ನಡೆಯುವ ಈ ಸಂಭಾಷಣೆಯನ್ನು ನೋಡಿ :
“ನಿನ್ನ ಆ ದೇವರನ್ನು ಕೋಣೆಯಲ್ಲಿ ಹಾಕಿ ಬೀಗ ಹಾಕಿಬಿಡು. ಈಗ ಅವನೂ ಒಬ್ಬ ನಿದ್ದಾನೆಂದು ನಿನ್ನ ಲೆಕ್ಕವೋ ! ಹಾಗಿದ್ದದ್ದು ನಿಜವಾದರೆ, ಅಂಥ ದೇವರು ಇರದಿದ್ದರೂ ತೊಂದರೆಯಿಲ್ಲ” ಎಂದಳು’ (ಪುಟ ೧೬೩-೧೬೪),
‘ಸತ್ಯಭಾಮೆ ಆಚೀಚೆ ನೋಡಿ, ಸಮೀಪ ಯಾರೂ ಇಲ್ಲವೆಂಬುದನ್ನು ಗಟ್ಟಿ ಮಾಡಿಕೊಂಡು ಬಾಯಿ ತೆರೆದಳು : “ಹತ್ತಿರ ಯಾರಿಲ್ಲವಲ್ಲ : ಕೇಳಿದರೆ ನನ್ನನ್ನು ಬೈದಾರು ; ಅಪ್ಪಯ್ಯನ ದಾಕ್ಷಿಣ್ಯಕ್ಕೆ, ನಾನು ದಿನಕ್ಕೆರಡು ಬಾರಿ ದೇವರಕೋಣೆಯ ಮುಂದೆ ಹೋಗಿ ನಿಂತು, ನಮಸ್ಕಾರ ಮಾಡಿ ಬರುತ್ತೇನೆ. ತೀರ್ಥವನ್ನು ತೆಗೆದುಕೊಳ್ಳುತ್ತೇನೆ ; ಪ್ರಸಾದ ತೆಗೆದುಕೊಳ್ಳುತ್ತೇನೆ ಸರಿಯೆ, ನಮ್ಮಪ್ಪನಿಗೆ ನಂಬಿಕೆ-ದೇವರಿದ್ದಾನೆ ಎಂದೇ ತಿಳಿದು ಅಷ್ಟೆಲ್ಲಾ ಮಾಡುತ್ತಾರೆ. ನನ್ನನ್ನು ಕೇಳುತ್ತೀಯಾ ? ಇಲ್ಲ ಎಂಬವರಿಗೂ ಇದ್ದಾನೆ ಎಂಬವರಿಗೂ-ಒಂದಿಷ್ಟಿಷ್ಟೂ ವ್ಯತ್ಯಾಸವಿಲ್ಲ. ಆ ದೇವರ ಸುದ್ದಿ, ನಮ್ಮಷ್ಟೇ ಅವರಿಗೂ ಗೊತ್ತಿರುವುದು.”
“ಹಾಗಿದ್ದರೆ ಇಲ್ಲ ಅನ್ನುತ್ತೀಯಾ ?”
“ನಾನು ಕಾಣಲಿಲ್ಲ ; ನನಗೆ ಗೊತ್ತಿಲ್ಲ. ನನ್ನನ್ನು ನಡೆಯಿಸಿದ ರೀತಿ ನೋಡಿದರೆ ನನ್ನ ಪಾಲಿಗೆ ಅವನಿಲ್ಲ; ಇದ್ದೂ ಇಲ್ಲ.” (ಪುಟ ೨೪೬) .
ಇದಕ್ಕೆ ವಿರುದ್ಧವಾದ ನಂಬಿಕೆಯುಳ್ಳವಳು ವಾಗ್ದೇವಿ, ಸತ್ಯಭಾಮೆಗೆ ಆದ ರೀತಿಯದ್ದೇ ಹೆಚ್ಚು ಕಡಿಮೆ ಆಕೆಗೂ ಆಗಿದೆ. ಆದರೆ ಇದರಿಂದಾಗಿ ಆಕೆಗೆ ದೇವರಲ್ಲಿ ನಂಬಿಕೆ ಜಾಸ್ತಿಯಾಗುತ್ತದೆ ; ಕೊಲ್ಲೂರು ಮೂಕಾಂಬಿಕೆಯೊಬ್ಬಳೇ ಎಲ್ಲವನ್ನೂ ಪರಿಹರಿಸುವವಳಾಗಿ ಕಾಣುತ್ತಾಳೆ. (ಅಮ್ಮ ನಡೆಸುತ್ತಾರೆ’, ಪುಟ ೧೮೪ ; ‘ಆಕೆ ವಾರವಾರವೂ ಜನ ಕಳುಹಿಸಿ ಕೊಲ್ಲೂರಿಂದ ಪ್ರಸಾದ ತರಿಸಿಕೊಳ್ಳುತ್ತಾಳೆ. ಪ್ರಸಾದರೂಪದ ಕುಂಕುಮವನ್ನು ಈ ಅರ್ತಿಗಳಿಗೆ ಕೊಡುತ್ತಾಳೆ. ಹಾಗೆಂದು, ಇನ್ನೊಮ್ಮೆ ಅದೇ ಜನಗಳು ಮನೆಗೆ ಬಂದಾಗ ‘ಗುಣವಾಯಿತೇ ನಿನ್ನ ಕೂಸಿಗೆ ?” ಎಂದು ಅವಳು ಕೇಳಿದುದಿಲ್ಲ, ಅವರಾಗಿ ಹೇಳಿದರೆ, ಗುಣವಾಯಿತು ಎಂದರೆ, ‘ಆ ಅಮ್ಮ ಗುಣಮಾಡದೆ ಇನ್ಯಾರು ಮಾಡುತ್ತಾರೆ ?” ಎನ್ನುತ್ತಾಳೆ.’ ಪುಟ: ೧೮೫) ಆಕೆ ಒಂಟಿಯಾಗುತ್ತಾಳೆ; ಸತ್ಯಭಾಮೆ ತನ್ನ ಬದಲಾದ ನಂಬಿಕೆಗಳಿಂದಾಗಿ ಹೊರಗಿನ ಪ್ರಪಂಚದೊಡನೆ ಸಂಪರ್ಕ ಸಾಧಿಸಿದರೆ ವಾಗ್ದೇವಿ ಹೆಚ್ಚು ಹೆಚ್ಚು ತನ್ನೊಳಗೇ ಮುದುಡಿಕೊಳ್ಳುತ್ತಾಳೆ.
ಇಲ್ಲಿ ಕಾರಂತರು ಈ ಎಲ್ಲಾ ನಂಬಿಕೆಗಳನ್ನೂ ಮೌಲ್ಯಮಾಪನ ಮಾಡುವುದಕ್ಕಾಗಿ ಒದಗಿಸುವ ಪ್ರಮಾಣ ಕಾದಂಬರಿಯ ಬಂಧದಲ್ಲೇ ವ್ಯಕ್ತವಾಗುವ ನಾಕ, ನರಕಗಳ ಅರ್ಥದಲ್ಲಿದೆ. ಯಾವ ಬದುಕು, ಯಾವ ನಂಬಿಕೆ ಬದುಕನ್ನು ನಾಕವಾಗಿಸುತ್ತದೆ, ಯಾವುದು ಅದನ್ನು ನರಕವಾಗಿಸುತ್ತದೆ ಎಂಬ ಕಾದಂಬರಿಯುದ್ದಕ್ಕೂ ಅಂತರ್ಗಾಮಿಯಾಗಿ ಹರಿಯುವ ವಿವೇಚನೆ ಈ ಕಾದಂಬರಿಗೊಂದು ಪ್ರಮಾಣವನ್ನೊದಗಿಸಿದೆ, ಈ
ಪ್ರಮಾಣದಿಂದಾಗಿ ವಾಗ್ದೇವಿ, ಸತ್ಯಭಾಮೆ ಮತ್ತು ಉಳಿದ ಪಾತ್ರಗಳನ್ನು ಅಥವಾ ಆ ರೀತಿಯ ಜೀವನವನ್ನು ಬದುಕಿನ ಸಂದರ್ಭದಲ್ಲಿ ತೂಗಿ ನೋಡುವುದು ಕಾರಂತರಿಗೆ ಸಾಧ್ಯವಾಗಿದೆ, ಸ್ಪಷ್ಟವಾದ ಪ್ರಮಾಣಗಳಿಲ್ಲದ, ವಿಚಾರಗಳ ಮುದ್ದೆಗಳಾದ, ಅಥವಾ ವರ್ಷಕ್ಕೊಂದು ಕಾದಂಬರಿ ಬರೆಯಬೇಕು ಎಂಬ ಹಠಕ್ಕಾಗಿಯೋ ಎಂಬಂತೆ ಬರೆದ ಕಾದಂಬರಿಗಳು ಕಾರಂತರಲ್ಲಿ ಇವೆ. ಆದರೆ ಇದಕ್ಕೆ ಹೊರತಾದ ಅವರ ಉತ್ತಮ ಕೃತಿಗಳಲ್ಲಿ ‘ನಂಬಿದವರ ನಾಕ, ನರಕ’ವೂ ಒಂದು. ಅದು ಅತ್ಯಂತ ಅಲಕ್ಷ್ಯಕ್ಕೊಳಗಾದ ಕಾದಂಬರಿಗಳಲ್ಲಿ ಒಂದೂ ಹೌದು.
ಈ ಲೇಖನದ ಪ್ರಾರಂಭದಲ್ಲಿ ನಾನು ಬರೆದ ವಿಶ್ಲೇಷಣೆಯನ್ನೋದಿದವರಿಗೆ ಒಂದು ಅನುಮಾನ ಬಂದಿರಬಹುದು: ಜಾತಿಯ ಒಳಗೆ ಮದುವೆಯಾದರೆ ಜೀವನ ವಿಕೃತವಾಗುವುದಿಲ್ಲವೆಂದು ಕಾರಂತರು ಸೂಚಿಸುತ್ತಿದ್ದಾರೆಯೇ ? ಕಾರಂತರು ಹೀಗೆ ಸೂಚಿಸದೆ ಜೀವಪರವಾದದ್ದನ್ನು ಸೂಚಿಸುತ್ತಿರುವುದಕ್ಕೆ, ಕಾದಂಬರಿಯನ್ನೋದಿದಾಗ ಈ ಅನುಮಾನ ಬಾರದೆ ಇರುವುದಕ್ಕೆ ಕಾರಣ ಈ ಪ್ರಮಾಣ; ಕಾದಂಬರಿಯಲ್ಲಿ ಅಂತರ್ಗಾಮಿಯಾಗಿರುವ ಪ್ರಮಾಣ.
ಅಂದರೆ, ಪ್ರಮಾಣಗಳಿಲ್ಲದೆ ಬರಿಯ ವಿವರಿಸುವುದರಿಂದ, ಪಾತ್ರಗಳನ್ನು ಪುಂಖಾನು ಪುಂಖವಾಗಿ ಸೃಷ್ಟಿಸುತ್ತಾ ಅವುಗಳ ಬಗ್ಗೆ ಗಾಡಿ ಬಿಡುತ್ತಾ ಹೋಗುವುದರಿಂದ ಸಾಹಿತ್ಯದಲ್ಲಿ ಅರ್ಥಪೂರ್ಣವಾದದ್ದನ್ನು ಸಾಧಿಸಲಾಗುವುದಿಲ್ಲ; ಮಾತ್ರವಲ್ಲ, ಇದು ಅಮಾನುಷ, ಯಾಕೆಂದರೆ, ಈ ರೀತಿಯ ಲೇಖಕರಿಗೆ ಮನುಷ್ಯ ಒಂದು ವಸ್ತು ಮಾತ್ರ; ಅಂತರ್‌ನಾಟಕದಲ್ಲಿ ಆಸಕ್ತಿಯಿಲ್ಲದ ಈ ಬಗೆಯ ಲೇಖಕರಿಗೆ ಮನುಷ್ಯ ವಿವರಿಸಬೇಕಾದ ಒಂದು ಸಾಧನ ಮಾತ್ರ: ತಿಳಿದುಕೊಳ್ಳಬೇಕಾದ ಸಂಕೀರ್ಣ ಅಲ್ಲ.
ಈ ಬಗೆಯ ಕೃತಿಗಳು ಬೆಂಗಳೂರಿನ ಮಧ್ಯಮ ವರ್ಗವನ್ನು ರಂಜಿಸುವುದಕ್ಕಾಗಿ ಬರೆದ ಕೃತಿಗಳು–ಗಂಭೀರ ಸಾಹಿತ್ಯವೆಂದೂ ಬಚಾವಾಗುತ್ತಿವೆ, ಆಧುನಿಕ ಸಂವೇದನೆಯನ್ನು ಜಾನಪದ ಭಾಷೆಯಲ್ಲಿ ಒಡಮೂಡಿಸುತ್ತೇವನ್ನುವವರು, ಹರಿಜನರ, ಕೂಲಿಗಳ ಸಮಸ್ಯೆಗಳನ್ನು ರಂಜನೀಯವಾಗಿ ಪತ್ರಿಕೆಗಳಲ್ಲಿ ಬರೆಯುವ ಅನೇಕರು ಇಂಥಾ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ಮಧ್ಯಮ ವರ್ಗದವರನ್ನು ರಂಜಿಸಿ, ಹೊಸತು ಎನ್ನಿಸಿಕೊಂಡು, ಚಪ್ಪಾಳೆ ಗಿಟ್ಟಿಸುವ ಪ್ರಯತ್ನ ಇವರಲ್ಲಿ (ಅಪ್ರಜ್ಞಾಪೂರ್ವಕವಾಗಿಯೇ ಇರ ಬಹುದು ; ಆದರೆ ಲೇಖಕನೊಬ್ಬ ಅಪ್ರಜ್ಞಾಪೂರ್ವಕವಾಗಿ ತನ್ನ ಮನಸ್ಸಿನಲ್ಲಿ ನಡೆಯುವುದರ ಬಗ್ಗೆ ಪ್ರಜ್ಞಾಪೂರ್ವಕವಾಗಿರುತ್ತಾನೆಂದು ನಾನು ನಂಬುತ್ತೇನೆ) ಮೊದಲಿ ನಿಂದಲೂ ಕೆಲಸ ಮಾಡುತ್ತಾ “ಒಂದಿದೆ. ಇಲ್ಲವಾದರೆ, ಜಾನಪದ ಭಾಷೆಯನ್ನಾಡುವ ಜನರಲ್ಲಿ ಆಸಕ್ತಿಯಿಲ್ಲದೆ ಬರಿಯ ಆಭಾಷೆಯೊಂದರಲ್ಲೇ ಇವರಿಗೆ ಹೇಗೆ ಆಸಕ್ತಿಯುಂಟಾಗಲು ಸಾಧ್ಯ ? ಆಧುನಿಕ ಸಂವೇದನೆಯನ್ನು ಕಚ್ಚಾ ಜಾನಪದ ಭಾಷೆಯಲ್ಲಿ ಪಡಿ ಮೂಡಿಸುವುದಾದರೂ ಸಾಧ್ಯವೇ ? ಜಾನಪದ ಭಾಷೆಯನ್ನು ಕಚ್ಚಾ ಆಗಿ ಬಳಸಿದಾಗ ಆ ಭಾಷೆಯನ್ನು ಹಾಗೆ ರೂಪಿಸಿದ ಪ್ಯೂಡಲ್ ಸಮಾಜವನ್ನು ಇವರು ಒಪ್ಪುವುದಿಲ್ಲವೇ. 5 ಹಾಗೆ ಒಪ್ಪಿದ ಮೇಲೆ ಈ ಸೃಷ್ಟಿ ಬ್ರಹ್ಮರು ಸಂವೇದನೆ, ಪರಕೀಯತೆ, ಮಾನವೀಯ ಸಂಬಂಧ ಎಂದಲ್ಲಾ ರೈಲು ಬಿಡುವುದು ಎಂಥದಕ್ಕೆ ? ಇದು ಯಾರಿಗೆ ಹೊಡೆಯುವ ಪೂಸಿ ? ವಸ್ತುವಿನಲ್ಲಿ ಮಾನವಜೀವನದ ಬೇರುಗಳನ್ನೇ ಹುಡುಕುತ್ತೇವೆನ್ನುವುದು, ಪ್ಯೂಡಲ್ ಸಮಾಜ ವ್ಯವಸ್ಥೆಯನ್ನು ಪ್ರತಿಬಿಂಬಿಸುವ ಭಾಷೆಯನ್ನು ಕಚ್ಚಾ ಆಗಿಯೇ ಬಳಸುವುದು, ಬಡತನ, ರೋಗರುಜಿನಗಳನ್ನು ಹೊರತುಪಡಿಸಿ ಕುಣಿತ, ನಾಟ್ಯಗಳನ್ನಷ್ಟೇ ಜಾನಪದ ಸಂಸ್ಕೃತಿಯೆನ್ನುವುದು ಸುಂದರ ಸುಳ್ಳುಗಳಿಂದ ವಾಸ್ತವವನ್ನು ಮರೆ ಮಾಚುವುದೊಂದೇ ಅಲ್ಲ ; ಇದು ಅಮಾನುಷ, ಯಾವನಿಗೇ ಆದರೂ ಮಾನವೀಯವಾಗುವ ಅಧಿಕಾರ ಮಾತ್ರ ಇದೆ; ಹಾಗೆಯೇ ಮಾನವೀಯವಾದ ಮೇಲೆ ಆತ ಉಳಿದ ಎಲ್ಲಾ ಅಧಿಕಾರಿಗಳಿಗೂ ಬಾಧ್ಯನಾಗುತ್ತಾನೆ.
ಆದರೆ ಸಾಹಿತ್ಯದಲ್ಲಿ ಸೋಷಿಯಲ್ ರೆಲವನ್ಸ್‌ನ ಚರ್ಚೆ ಪ್ರಾರಂಭವಾದದ್ದು ನಮ್ಮ ಸಾಹಿತ್ಯಕ್ಕೆ ಪ್ರತಿಕ್ರಿಯೆ ಯಾಗಿ, ಈ ವಾದದ ಚರ್ಚಿಸಬಹುದಾದ ಒಂದು ಅಂಶವೆಂದರೆ ನವ್ಯಸಾಹಿತ್ಯ ಪಾಶ್ಚಾತ್ಯಸಾಹಿತ್ಯದ ಅನುಕರಣೆಯಾಗಿದೆ ; ಇದಕ್ಕೂ ಭಾರತೀಯ ಸಾಹಿತ್ಯಕ್ಕೂ ಯಾವ ಸಂಬಂಧವೂ ಇಲ್ಲ ಎಂಬುದು, ಇದನ್ನು ಚರ್ಚಿಸುವುದರ ಮೂಲಕ ಸಾಹಿತ್ಯದಲ್ಲಿ ಸಮಾಜದ ಇನ್ನೊಂದು ಮುಖವನ್ನು ಗುರುತಿಸಬಹುದು. ಅಥವಾ ಮಾನವೀಯ ಪರಿಭಾಷೆಯಲ್ಲಿ ಅರ್ಥೈಸುವುದು ಎಂದರೆ ಏನು ಎಂಬುದನ್ನು ನಮ್ಮ ಸಾಹಿತ್ಯ ಮತ್ತು ನಮ್ಮ ಸಮಾಜದ ಹಿನ್ನೆಲೆಯಲ್ಲಿ ಹೆಚ್ಚು ಸ್ಪಷ್ಟವಾಗಿ ವಿವರಿಸಬಹುದು,
ನವ್ಯಸಾಹಿತ್ಯದ ಅರ್ಥಪೂರ್ಣ ಕೃತಿಗಳು- ತೇಜಸ್ವಿಯವರ ‘ಸ್ವರೂಪದಂತಹ ಕೃತಿ ಚೌರ‍್ಯವನ್ನು ಬಿಟ್ಟುಬಿಡಿ-ಪಾಶ್ಚಾತ್ಯರ ಅನುಕರಣೆ ಎಂಬುದನ್ನು ಒಪ್ಪುವುದು ನನಗೆ ಸಾಧ್ಯವಿಲ್ಲ, ಅಂದರೆ ನವ್ಯಸಾಹಿತ್ಯಕ್ಕೂ ನಮ್ಮ ಸಮಾಜಕ್ಕೂ ಸುಬಂಧ ಇದೆ ಎಂದಂತಾಯಿತು, ಅದು ಯಾವ ಥರದ ಸಂಬಂಧ ಎಂಬುದನ್ನು ಈಗ ನೋಡಬಹುದು.
ನವ್ಯಸಾಹಿತ್ಯ ಮುಖ್ಯವಾಗಿ ಚಿತ್ರಿಸುವುದು ಮಧ್ಯಮ ವರ್ಗದ ಆಸೆ, ನಿರಾಶೆ, ದುಃಖ, ದುರಂತಗಳನ್ನು, ಮಧ್ಯಮ ವರ್ಗದ ವಿವಿಧ ಮುಖಗಳನ್ನು ಈ ಲೇಖಕರು ಸಮರ್ಥವಾಗಿ, ವೈವಿಧ್ಯಪೂರ್ಣವಾಗಿ ತೋರಿಸಿದ್ದಾರೆ. ಮಧ್ಯಮ ಬ್ರಾಹ್ಮಣವರ್ಗದ ಜೀವನ ಕ್ರಮ ಮತ್ತು ಠೊಳ್ಳುತಗಳನ್ನು ವಿಶಾಲ ಆಯಾಮದಲ್ಲಿ ಬಯಲಿಗೆಳೆಯುವ ಅನಂತಮೂರ್ತಿಯವರ ‘ಪ್ರಶ್ನೆ’ಯ ಕತೆಗಳು, ‘ ಆವಾಹನೆ ‘, ಮಧ್ಯಮ ವರ್ಗದ ಸಣ್ಣತನವನ್ನು, ತನ್ಮೂಲಕ ಪ್ರಾಣಿತನವನ್ನು ತೆರೆದು ತೋರಿಸುವ ಲಂಕೇಶರ ಕತೆಗಳು. ನಾಟಕಗಳು ಭಾರತದ ಮಧ್ಯಮ ವರ್ಗದ ಅರ್ಥಹೀನ ಬುದುಕಿನ ವಿವಿಧ ಮುಖಗಳನ್ನು ಚಿತ್ರಿಸುತ್ತವೆ. ಜಿ.ಎಸ್. ಸದಾಶಿವರ ವಿಕ್ಷಿಪ್ತ ನಾಯಕರು, ವಿಕ್ಷಿಪ್ತತೆ ಯನ್ನು ಒಳಗೊಂಡೂ ಜೀವನದ ಸೆಲೆಯನ್ನು ಗುರುತಿಸುವ ವೈಕುಂಠರಾಜು ಅವರ ಎರಡು ಕಾದಂಬರಿಗಳ ಹೀರೋಗಳು 6, ಕೆ. ಸದಾಶಿವ ಅವರ ಮಧ್ಯಮವರ್ಗದ ರಂಪರಗಳೆಗಳ ಕತೆಗಳು, ತಿರುಮಲೇಶರ ಪದ್ಯಗಳು -ಇವೆಲ್ಲವೂ ಮಧ್ಯಮವರ್ಗದ ಒಂದಿಬ್ಲೊಂದು ಮುಖವನ್ನು ತೋರಿಸುತ್ತವೆ. ಮಧ್ಯಮವರ್ಗವನ್ನು, ಅದರ ಸಮಸ್ಯೆಗಳನ್ನು, ಅದರ ಪೊಳ್ಳನ್ನು ಭಾರತೀಯವಲ್ಲವೆಂದು ತಳ್ಳಿಹಾಕುವ ಮೂರ್ಖತನವನ್ನು ಯಾರೂ ಮಾಡಲಾರರು, ಮಧ್ಯಮ ವರ್ಗ ಪಾಶ್ಚಾತ್ತೀಕರಣಗೊಂಡೋ, ಠೊಳ್ಳು ಭ್ರಮೆಯಿಂದಾಗಿಯೋ, ಸಣ್ಣತನದಿಂದಾಗಿಯೋ ಸತ್ತುಹೋಗಿದೆಯೆಂಬುದನ್ನು ಈ ಎಲ್ಲ ಲೇಖಕರೂ ಗುರುತಿಸಿದ್ದಾರೆ.
ಆದರೆ ಮಧ್ಯಮವರ್ಗ ಹೇಗೆ ಇದರ, ವಸ್ತುವಾಗಿದೆಯೋ ಹಾಗೇ ಹಲವು ಪರಿಮಿತಿಯೂ ಆಗಿದೆ. ಈ ಪರಿಮಿತಿ ಅತಿಗೆ ಹೋದಾಗ, ಮೌಲ್ಯದ ಕಲ್ಪನೆಯಲ್ಲಿ, ಭಾಷೆಯ ಉಪಯೋಗದಲ್ಲಿ ಅದು ಹೇಗೆ ವ್ಯಕ್ತವಾಗಿದೆ ಎಂದು ನೋಡಬಹುದು. ಈ ಮೂಲಕ ಶ್ರೇಷ್ಠವೆಂದು ನಿರ್ಣಯವಾದ ಕೃತಿಗಳು ನನಗೆ ಯಾಕೆ ಶ್ರೇಷ್ಠವೆಂದು ಕಂಡಿಲ್ಲವೆಂಬುದನ್ನು ಅವುಗಳ ಪುನರ್ಮೌಲೀಕರಣದ ಮೂಲಕ ತೋರಿಸುವುದೂ ಸಾಧ್ಯವಾಗುತ್ತದೆ.
ಮೊದಲನೆಯದಾಗಿ ಅನಂತಮೂರ್ತಿಯವರ ‘ಸಂಸ್ಕಾರ’ ಕಾದಂಬರಿಯನ್ನು ತೆಗೆದುಕೊಳ್ಳೋಣ, ಸಂಸ್ಕಾರದ ಮುಖ್ಯವಸ್ತು ಮತ್ತು ಮೌಲ್ಯ ಸ್ವಾತಂತ್ರ್ಯ: ಪರಂಪರಾಗತವಾದ ಜಡಸಮಾಜದಲ್ಲಿ ಸಿಕ್ಕಿ ಮುರುಟಿರುವ ಚೇತನ ಮತ್ತೆ ಹೇಗೆ ಸ್ವತಂತ್ರಗೊಂಡು ಜೀವಂತವಾಗಬಲ್ಲದು ಎಂಬುದು ಕಾದಂಬರಿಯ ಪರಂಪರಾಗತ ಜಡಸಮಾಜ- ಪ್ರಾಣೇಶಾಚಾರ‍್ಯರು ಬದುಕುವ ಸಮಾಜ-ಮಧ್ಯಮ ವರ್ಗದ ಬ್ರಾಹ್ಮಣ ಸಮಾಜ. ಪ್ರಾಣೇಶಾಚಾರ‍್ಯರಿಗಾಗಲೀ ನಾರಣಪ್ಪನಿಗಾಗಲೀ ಈ ಸಮಾಜದಿಂದ ಸ್ವಾತಂತ್ರ್ಯ ಸಿಕ್ಕುವುದು ತಮ್ಮ ಮಧ್ಯಮ ವರ್ಗದ ಸಂಸ್ಕೃತಿಯ ಹೊರಗಿರುವ ಶೂದ್ರಲೋಕದ ಜೀವಶಕ್ತಿಯೊಂದಿಗಿನ ಸಂಸರ್ಗದಿಂದ.
ಆದರೆ ಸ್ವಾತಂತ್ರ್ಯದ ಅರ್ಥ ಇಲ್ಲಿ ಪ್ರಾಣೇಶಾಚಾರ‍್ಯ, ನಾರಣಪ್ಪ ಅಥವಾ ಇವರು ಪ್ರತಿ ನಿಧಿಸುವ ಸಮಾಜಕ್ಕಷ್ಟೇ ಮೀಸಲಾಗಿದೆ, ಪ್ರಾಣೇಶಾಚಾರ‍್ಯ ಮತ್ತು ನಾರಾಣಪ್ಪ ಚಂದ್ರಿಯ ಮೂಲಕವಾಗಿ ಸ್ವಾತಂತ್ರ್ಯ ಪಡೆಯುತ್ತಾರೆ. ಆದರೆ ಚಂದ್ರಿಯ ಸ್ವಾತಂತ್ರ್ಯದ ಬಗ್ಗೆ ಆಕೆ ಸೂಳೆಯೆಂಬುದರ ಬಗ್ಗೆ ಮತ್ತು ಅದರ ದುರಂತದ ಬಗ್ಗೆ – ಅನಂತಮೂರ್ತಿಯವರಿಗೆ ಕಾಳಜಿ ಇಲ್ಲ. ಇದಕ್ಕೆ ಕಾರಣ ಅವರು ಶೂದ್ರಲೋಕದ ದೈನ್ಯ, ಬಡತನ, ಕೊರಗುಗಳು, ದೇವದಾಸಿ ಪದ್ಧತಿಯ ಹಿಂದಿರುವ ಕ್ರೌರ‍್ಯಗಳನ್ನು ನೋಡದೆ ಬರಿಯ ಅಲ್ಲಿಯ ಜೀವಶಕ್ತಿಯೊಂದನ್ನೇ ನೋಡುತ್ತಿರುವುದು, ಇವುಗಳನ್ನೆಲ್ಲಾ ನೋಡಿದ್ದರೆ ಕಾದಂಬರಿಯಲ್ಲಿ ‘ಸ್ವಾತಂತ್ರ’ದ ನಿರ್ವಚನೆಯೇ ಬೇರೆಯಾಗಬೇಕಿತ್ತು, ಹಾಗೆ ಆಗದಿರುವುದಕ್ಕೆ ಕಾರಣ ಶೂದ್ರಲೋಕವನ್ನು ಅತಿರಂಜಿಸಿ ನೋಡುವ ಮಧ್ಯಮವರ್ಗದ ದೃಷ್ಟಿ ಕಾದಂಬರಿಯ ಹಿಂದೆ ಕೆಲಸ ಮಾಡಿರುವುದು, ಅನಂತಮೂರ್ತಿಯವರ ‘ ಬ್ರಾಹ್ಮಣ ಮತ್ತು ಶೂದ್ರ ‘ ಲೇಖನದಲ್ಲಿ, ‘ ಪ್ರಶ್ನೆ’ ಕತೆಯ ಲಚ್ಚಿಯ ಬಗೆಗೆ ವ್ಯಕ್ತವಾಗುವ ಪ್ರತಿಕ್ರಿಯೆಯಲ್ಲಿ ಇದೇ ದೃಷ್ಟಿಯನ್ನು ಕಾಣುತ್ತೇವೆ. ಇದು ಅತಿರಂಜಿತ ಎಂಬುದನ್ನು ನೋಡುವುದಕ್ಕಾಗಿ ಸಮಾಜ ಶಾಸ್ತ್ರಕ್ಕೆ ಹೋಗಬೇಕಾಗಿಲ್ಲ. ಕಾರಂತರ ‘ ಬತ್ತದ ತೊರೆ ‘ಯಲ್ಲಿ ಬರುವ ದೇವದಾಸಿಯರ-ಸಂಗೀತ, ನೃತ್ಯ ಬಲ್ಲ ದೇವದಾಸಿ ಯರ-ಬವಣೆ, ಸಂತೋಷಗಳ ಚಿತ್ರದೊಂದಿಗೆ ‘ ಸಂಸ್ಕಾರ ‘ದ ಚಂದ್ರಿ, ಪದ್ಮಾವತಿಯರನ್ನು ಹೋಲಿಸಬಹುದು, ಮಧ್ಯಮ ವರ್ಗದ ಈ ಬಗೆಯ ಸ್ವಾತಂತ್ರದ ಕಲ್ಪನೆಯು ದೆಸೆಯಿಂದಾಗಿಯೆ ಅನಂತಮೂರ್ತಿ ಪ್ರಾಣೇಶಾಚಾರ‍್ಯರ ಮನಸ್ಸಿನ ಬೆಳವಣಿಗೆಗೆ ಮಾತ್ರ ಗಮನಕೊಡುತ್ತಾರೆ, ಮನಸ್ಸು ಇನ್ನೂ ಬೆಳೆಯದ ವರ್ಗಗಳ-ಬೆಳೆಯುವುದಕ್ಕೆ ಅವಕಾಶವಿಲ್ಲದ ವರ್ಗಗಳ ಸ್ವಾತಂತ್ರ್ಯದ ಪ್ರಶ್ನೆ ಬಂದಾಗ ‘ಸಂಸ್ಕಾರ’ ಕಾದಂಬರಿ ಯಲ್ಲಿ ಬರುವ ಸ್ವಾತಂತ್ರ್ಯ ವೌಲ್ಯದ ನಿರ್ವಚನೆ ಅರ್ಥಹೀನವಾಗುತ್ತದೆ; ಪರಂಪರಾಗತ ಜಡಸಮಾಜದಿಂದ ಪ್ರಾಣೇಶಾಚಾರ‍್ಯರಂಥವರಿಗೆ ಸಿಗಬೇಕಾದ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುತ್ತಾ ಅನಂತಮೂರ್ತಿ ಚಂದ್ರಿಯಂಥವರಿಗಿರಬಹುದಾದ ನೋವನ್ನು ಮರೆಯುತ್ತಾರೆ, ಪದ್ಮಾವತಿಯಂಥವರನ್ನು ಸಾಧ್ಯಮಾಡಿದ ದೇವದಾಸಿ ಪದ್ಧತಿಯನ್ನೂ ಎತ್ತಿಹಿಡಿಯುತ್ತಾರೆ ಎನ್ನಿಸುತ್ತದೆ. ಅಂದರೆ ಸ್ವಾತಂತ್ರ್ಯದ ಮೌಲ್ಯ ಅರ್ಥ ಹೀನವೆಂದು ನಾನು ಹೇಳುತ್ತಿಲ್ಲ, ಕಾದಂಬರಿಯಲ್ಲಿ ಆ ಮೌಲ್ಯಕ್ಕೆ ಸಿಕ್ಕಿರುವ ನಿರ್ವಚನೆಯ ಮತ್ತು ನಿಕಷದ ಪರಿಮಿತಿಯ ಮೂಲಕ ಅದನ್ನು ಪ್ರತಿಪಾದಿಸುವುದು ಅರ್ಥ ಹೀನವಾಗುತ್ತದೆ. ಒಟ್ಟು ಸ್ವಾತಂತ್ರದ ಮೌಲ್ಯವನ್ನು ಎತ್ತಿಹಿಡಿಯುವ ಕೃತಿಯಾಗಿ ಕಾರಂತರ ‘ಚೋಮನ ದುಡಿ’ಯನ್ನು ಇಲ್ಲಿ ಉದಾಹರಿಸಬಹುದು, ಚೋಮನ ಸ್ವಾತಂತ್ರ್ಯ ಇಡಿಯ ಸಮಾಜದ ವ್ಯವಸ್ಥೆಯ ಕಾರಣದಿಂದ ಮೊಟಕಾಗದೆ ಅದನ್ನು ಮೀರುವುದು, ಮೀರಿ ಸಮಾಜದ ನೆಲೆಯಲ್ಲಿ ಸ್ವಾತಂತ್ರ್ಯ ಪಡೆಯುವುದು ಅವನಿಗೆ ಸಾಧ್ಯವಿಲ್ಲ ; ಆದರೆ ಯಾತನೆ ಪಡುತ್ತಾ, ತನ್ನವರೆಲ್ಲರೂ ತನ್ನನ್ನು ಕೈಬಿಟ್ಟಿದ್ದಾರೆಂದು ನೊಂದುಕೊಳ್ಳುತ್ಯಾ, ಪರಕೀಯತೆಯನ್ನು ಒಪ್ಪಿಕೊಳ್ಳುತ್ತಾ ಆತ ಕಾದಂಬರಿಯ ಕೊನೆಯಲ್ಲಿ ಪ್ರಬುದ್ಧತೆಯನ್ನು, ಎಲ್ಲವನ್ನೂ ಒಂದು ಕ್ಷಣ ಮೀರಿ ನಿಲ್ಲುವ ಮಾನಸಿಕ
ಸ್ವಾತಂತ್ರ್ಯವನ್ನು ಪಡೆಯುತ್ತಾನೆ, ಈ ವಾಕ್ಯಗಳನ್ನು ನೋಡಿ : ” ನನ್ನ ಬೆಳ್ಳಿ ನನ್ನನ್ನು ವ೦ಚಿಸಿಬಿಟ್ಟಳೇ !” ಎಂದುಕೊಂಡ. ಕೊನೆಗೆ ಅವಳ ತಾರುಣ್ಯ, ತಾನವಳ ಮದುವೆಯಾಗಿ ಮುಂದುವರಿಸಿದ ತಪ್ಪು, ತನಗಾಗಿ ಅವಳು ಕಾಫಿ ತೋಟಕ್ಕೆ ಹೋದುದು, ತನ್ನ ಮಣವನ್ನು ಬೇಗನೆ ತೀರಿಸಿ ಬಂದುದು-ಎಲ್ಲ ಸ್ಮರಣೆಗಳೂ ಬಂದುವು. “ಪಾಪ!” ಎಂದ, “ನಾನು ಅವಳಂತೆ ಹೆಣ್ಣಾಗಿದ್ದರೆ, ನನ್ನ ಪಾಡೇನು’ ಎಂದು ಅನಿಸಿತು” (ಪುಟ : ೧೦೨), ಈ ಸ್ವಾತಂತ್ರ್ಯವೊಂದೇ ಅವನಿಗೆ ಸಾಧ್ಯವಿರುವುದು ಎಂಬ ವಿಷಾದ ಈ ವಾಕ್ಯಗಳ ಹಿಂದೆ ಇದೆ.
ಸ್ವಾತಂತ್ರದ ಈ ದ್ವಂದ್ವಾರ್ಥಗಳನ್ನು, ಒಟ್ಟು ಬದುಕಿನಲ್ಲಿ ಅದರ ಪರಿಮಿತಿ, ಅನಿ ವಾರರ್ತ ಆರಗೆ ಅಸಾಧ್ಯತೆಗಳನ್ನು ಮಂಡಿಸಲು ಕಾರಂತರಿಗೆ ಸಾಧ್ಯವಾದದ್ದು ಸ್ವಾತಂತ್ರ್ಯದ ‘ ವರ ಕಲ್ಪನೆ ಒಂದು ವರ್ಗದಿಂದ ಸೀಮಿತವಾದದ್ದಲ್ಲ ಎಂಬುದರಿಂದ ಅಂದರೆ “ಚೊಮನ ದುಡಿ’ ಯಲ್ಲಿ ಕಾರಂತರ ಪ್ರಯತ್ನ ಭಾರತದ ಸಮಾಜದ ನೆಲೆ ಯಲ್ಲಿ ಸ್ವಾತಂತ್ರ್ಯದ ಅರ್ಥವನ್ನು ಹುಡುಕುವುದು ; ‘ಸಂಸ್ಕಾರ’ ದಲ್ಲಿ ಅನಂತಮೂರ್ತಿ ಯವರ ಪ್ರಯತ್ನ ಮಧ್ಯಮ ವರ್ಗದ ನೆಲೆಯಲ್ಲಿ ಸಾತಂತ್ರ್ಯದ ಅರ್ಥವನ್ನು ಹುಡುಕು ವುದು, ೬೯೬ ಕಾದಂಬರಿಯಲ್ಲಿ ಮಧ್ಯಮ ವರ್ಗವಲ್ಲದೆ ಬೇರೆ ವರ್ಗಗಳ ಚಿತ್ರವೂ ಇದೆ.
‘ಸಂಸ್ಕಾರ’ದ ಈ ಮೇಲಿನ ನನ್ನ ವಿಶ್ಲೇಷಣೆಗೆ ಬರುವ ಪ್ರತಿಕ್ರಿಯೆಯೆಂದರೆ ‘ಸಂಸ್ಕಾರ’ ಒಂದು ಸಾಲ ಸಾಂಕೇತಿಕ ಕಾದಂಬರಿ, ಅಲ್ಲಿ ಬರುವ ಶೂದ್ರರನ್ನು ಸಂಕೇತಗಳೆಂದಷ್ಟೇ ತೆಗೆದು ಕೊಳ್ಳಬೇಕು ಎಂಬುದು, ಆದರೆ ಈ ಮಾತನ್ನು ಒಪ್ಪುವುದು ಕಷ್ಟವಾಗುತ್ತದೆ. ಯಾಕೆಂದರೆ ಅಲ್ಲಿ ಬರುವ ಬ್ರಾಹ್ಮಣಲೋಕ, ಅವರನ್ನು ವಿವರಿಸುವ ಬರವಣಿಗೆ ಸಾಂಕೇತಿಕ ಅಲ್ಲ; ಅಲ್ಲದೆ ಇಡಿಯ ಕಾದಂಬರಿ ಬ್ರಾಹ್ಮಣ ಸಮಾಜದ ಸಾಮಾಜಿಕ ಸಮಸ್ಯೆಗಳನ್ನು ಎತ್ತುತ್ತದೆ. ಇದೇ ದೃಷ್ಟಿಕೋನವನ್ನು ಮತ್ತು ಬರವಣಿಗೆಯ ರೀತಿ ಯನ್ನು ಲೇಖಕರು ಶೂದ್ರಲೋಕದ ಬಗ್ಗೆಯೂ ಹೊಂದಿರಬೇಕೆಂದು ಅವರೇ ಕಾದಂಬ ರಿವು ಪ್ರಾರಂಭದಲ್ಲಿ ಬ್ರಾಹ್ಮಣಲೋಕದ ಬಗೆಗೆ ಬರೆದ ಮಾತುಗಳಿಂದ ಹುಟ್ಟಿದ ಅಪೇ ಕೆಯ ಕಾರಣವಾಗಿ ಓದಂಗ ಬಯಸುತ್ತಾನೆ.
‘ಸಂಸ್ಕಾರ’ದ ವಿಶ್ಲೇಷಣೆಯ ಹಿಂದಿರಬಹುದಾದ ಅಸಹನೆಯ ಧ್ವನಿಯನ್ನು ಕ್ಷಮಿಸ ಬೇಕು, ಈ ಕಾದಂಬರಿಯನ್ನು ಮತ್ತೆ ಓದಿದಾಗ ನನಗೆ ರೇಗಿದೆ ; ಶ್ರೇಷ್ಠ ಕೃತಿಗಳಾದ ‘ಪ್ರಕೃತಿ’, ‘ಘಟಶ್ರಾದ್ಧ’, ‘ಮೌನಿ’, ‘ಭಾರತೀಪುರ’ಗಳು ತೋರುವ ಜೀವಪರವಾದ ಧೋರಣೆಯ ಜೊತೆಗೆ ಹೋಲಿಸಿಕೊಂಡು ರೇಗಿದೆ.
ಮಧ್ಯಮ ವರ್ಗದ ಅರಿವಿನಿಂದ ಮಾತ್ರ ಹುಟ್ಟಿದ ವಸ್ತು ಉಳಿದ ಲೇಖಕರಲ್ಲಿಯೂ ಕಾಣಬಹುದು, ಉದಾಹರಣೆಗೆ “ಗತಿ, ಸ್ಥಿತಿ’, ‘ಬಿರುಕು’ಗಳ ಪರಕೀಯತೆಯ ಕಲ್ಪನೆಯನ್ನು ನೋಡಬಹುದು, ಮಧ್ಯಮ ವರ್ಗದ ಪರಿಮಿತಿಯ ಕಾರಣವಾಗಿ ಪರಕೀಯತೆಯೆಂದರೆ ಪ್ರಜ್ಞಾವಂತನ ಅನ್ನಿಸಿಕೆಯಷ್ಟೇ ಆಯಿತು. ಹೊಟ್ಟೆಗಿಲ್ಲದೆ ಸಾಯುವ ಸಾವಿರಾರು ಜನರ, ಮಲಗುವುದೂ ಯಾಂತ್ರಿಕವಾದ ಅನೇಕ ಕೂಲಿಗಾರರ, ಜೀತದವರ ಪರಕೀಯತೆ, ಮೃತ್ಯಪ್ರಜ್ಞೆ ಇವರ ನಿದ್ದೆ ಕೆಡಿಸಲಿಲ್ಲ, ಅಂದರೆ ಮಧ್ಯಮ ವರ್ಗದ ಬಗ್ಗೆ ಬರೆದ ಸಾಹಿತ್ಯರಾಶಿಯನ್ನೆಲ್ಲಾ ತಳ್ಳಿಹಾಕುವ ಧೋರಣೆಯಲ್ಲಿ ನಾನು ಬರೆಯುತ್ತಿಲ್ಲವೆಂದು ನಂಬಿದ್ದೇನೆ, ಆದರೆ, ನಮ್ಮ ಸಾಹಿತ್ಯಕೃತಿಗಳು ಇಡೀ ಭಾರತವನ್ನು ಒಳಗೊಳ್ಳುವುದು ಯಾಕೆ ಸಾಧ್ಯವಾಗಿಲ್ಲವೆಂದು ನಾನು ಯೋಚಿಸುತ್ತಿದ್ದೇನೆ. ಅಂದರೆ ಇಡೀ ಸಮಾಜದ ಅರಿವು ಕೃತಿಯ ವಿಸ್ತಾರವನ್ನು, ಮೌಲ್ಯಗಳ ನಿಕಷವನ್ನು, ಸಮಕಾಲೀನತೆಯ ಅರ್ಥವನ್ನು ಅರ್ಥಪೂರ್ಣವಾಗಿ ಬದಲಾಯಿಸುತ್ತದೆ. ಸಾರ್ವಕಾಲಿಕವಾದ ಮೌಲ್ಯಗಳು ಕೆಲವೇ ಇವೆ, ನಿಜ, ಆದರೆ ಅವುಗಳನ್ನು ನಿರ್ವಚಿಸುವ ರೀತಿ ಸಮಕಾಲೀನತೆಯ ಅರಿವಿನಿಂದಾಗಿ ಕಾಲದಿಂದ ಕಾಲಕ್ಕೆ ಬದಲಾಗುತ್ತದೆ. ಮಧ್ಯಮ ವರ್ಗದ ಮೌಲ್ಯಗಳನ್ನು ಪ್ರತಿಪಾದಿಸುವ ಕೃತಿಗಳೆಲ್ಲವನ್ನೂ ನಿರಾಕರಿಸುವ ಧಾರ್ಷ್ಟ್ಯವನ್ನು ಯಾರೂ ತೋರಲಾರರು, ಹಾಗೆ ಮಾಡಿದರೆ ಶೇಕ್‌ಸ್ಪಿಯರನನ್ನೊಳಗೊಂಡು ಎಲ್ಲಾ ಲೇಖಕರನ್ನೂ ನಿರಾಕರಿಸಬೇಕಾಗುತ್ತದೆ. ಆದರೆ ಮೌಲ್ಯಗಳ ನಿಕಷ ಬರಿಯ ಒಂದು ವರ್ಗ ಮಾತ್ರವೇ ಆಗಿದ್ದಾಗ ಕೃತಿ ಪ್ರತಿಪಾದಿಸುವ ರೀತಿಯಲ್ಲಿ ಆ ಮೌಲ್ಯವನ್ನು ಒಪ್ಪುವುದು ಸಾಧ್ಯವಾಗುವುದಿಲ್ಲ, ‘ಸಂಸ್ಕಾರ’ ಅರ್ಥಪೂರ್ಣ ಕೃತಿ ಅಲ್ಲದಿರುವುದಕ್ಕೆ ಕಾರಣ ಇದು ; ಹಾಗೆಯೇ ‘ಮೌನಿ’, ‘ಭಾರತೀಪುರ’ಗಳು ಅರ್ಥಪೂರ್ಣ ಕೃತಿಗಳು ಎನ್ನಿಸುವುದಕ್ಕೂ ಈ ಮೌಲ್ಯಗಳ ನಿಕಷವೇ ಕಾರಣ.
ಅಡಿಗರ ಸಾಧನೆಯನ್ನು ಪ್ರತ್ಯೇಕವಾಗಿ ಪರಿಶೀಲಿಸಬೇಕಾಗಿದೆ. ಅದರ ಮೊದಲು ಅವರ ಬಗ್ಗೆ ನನ್ನ ಒಂದು ಅನ್ನಿಸಿಕೆಯನ್ನು ಹೇಳಬೇಕು.
ಇದು ಅಡಿಗರ ತಾತ್ವಿಕ ಪ್ರಣಾಳಿಗೂ ಹತ್ತೊಂಭತ್ತನೇ ಶತಮಾನದಲ್ಲಿ ನಡೆದ ಭಾರತೀಯ ರಿನ್ಯಾಸ್ಸೆನ್ಸ್‌ಗೂ ಇರುವ ಕೊಂಡಿಗಳಿಗೆ ಸಂಬಂಧಪಟ್ಟದ್ದು, ಅಡಿಗರು ತಮ್ಮ ಕಾವ್ಯದಲ್ಲಿ ಪ್ರತಿಪಾದಿಸುವ ಆರ್ಷೇಯ ಮೌಲ್ಯಗಳು ಭಾರತದಲ್ಲಿ ಪುನರುತ್ಥಾನವಾದದ್ದು ಹತ್ತೊಂಭತ್ತನೇ ಶತಮಾನದಲ್ಲಿ ; ಮಧ್ಯಮವರ್ಗ ರೂಪುಗೊಳ್ಳಲು ಪ್ರಾರಂಭವಾದದ್ದೂ ಆಗಲೇ, ಆಗ ಬಂದ ಬಂಕಿಮಚಂದ್ರ, ಶರಶ್ಚಂದ್ರ ಮೊದಲಾದವರ ಕೃತಿಗಳನ್ನೋದಿದರೆ ಅವರು ಪುನರುತ್ಥಾನದ ಮೌಲ್ಯಗಳನ್ನು ಎತ್ತಿಹಿಡಿಯುವುದು ಮಾತ್ರವಲ್ಲದೆ ಮಧ್ಯಮವರ್ಗದ ಉದಯದ ಬಗ್ಗೆ, ಅದು ಕಂಡುಕೊಳ್ಳುತ್ತಿರುವ ವಿಷಯಗಳ ಬಗ್ಗೆ, ಮಧ್ಯಮವರ್ಗದ ಕೋಣೆಯ ಅಥವಾ ಷಿಕಾರಿಯ ಅಂದ ಚೆಂದಗಳ ಬಗ್ಗೆ, ಹಡಗು ಪ್ರಯಾಣದ ಬಗ್ಗೆ ಉತ್ಸಾಹದಿಂದ ಬರೆಯುವುದನ್ನು ಕಾಣುತ್ತೇವೆ. ಆದರೆ ಅಡಿಗರಿಗೆ ಮಧ್ಯಮವರ್ಗದ ಹೊರಗಿನ ಈ ಕ್ರಿಯೆಗಳನ್ನು ಒಪ್ಪುವುದು ಸಾಧ್ಯವಿರಲಿಲ್ಲ, ಯಾಕೆಂದರೆ ಮಧ್ಯಮವರ್ಗ ತನ್ನ ಜಂಭ, ಡೊಳ್ಳುಗಳಿಂದಾಗಿ ಅವರು ಬರೆಯಲು ಪ್ರಾರಂಭಿಸಿದ ಕಾಲದಲ್ಲಿ ಕೊಳೆಯುತ್ತಿದ್ದ ವರ್ಗವಾಗಿದೆ. ಅವರು ತಮ್ಮ ಕೆಲವು ಕವನಗಳಲ್ಲಿ ಮಧ್ಯಮವರ್ಗದ ಈ ಕೊಳಕನ್ನು ಸಮರ್ಥವಾಗಿ ಹೊರಗೆ ಹಾಕುತ್ತಾರೆ, “ಹಳೆಮನೆಯ ಮಂದಿ’, ‘ಶರದ್ಗೀತ’ದ ಕೆಲವು ಭಾಗಗಳ ಈ ಮಾತಿಗೆ ಉದಾಹರಣೆಯಾಗಬಲ್ಲವು, ಆದರೆ ಅವರು ಪ್ರತಿಪಾದಿಸುವ ಆರ್ಷೇಯ ಮೌಲ್ಯಗಳು ರಿನ್ಯಾಸೈನ್ಸ್ ಕಾಲದಲ್ಲಿ, ಪುನರುತ್ಥಾನಗೊಂಡವು, ಎಲ್ಲಾ ಶ್ರೇಷ್ಠ ಕವಿಗಳಂತೆ ಅವರು ಇಷ್ಟಕ್ಕೇ ಸೀಮಿತರಾಗದೆ ಮೀರಿಹೋಗುತ್ತಾರೆ. ಆದರೆ ಹಾಗೆ ಮೀರಿ ಹೋಗದಾಗ ಅವರ ಕವನಗಳು ಸಂಕುಚಿತವಾಗುತ್ತವೆ. ಇದಕ್ಕೆ ಉತ್ತಮ ಉದಾಹರಣೆಯಂದರೆ `ಭೂತ’ ಕವನದ ಕೊನೆ, ಭಯ ಹುಟ್ಟಿಸುವ ಕಾಟಗಳನ್ನು ಚಿತ್ರಿಸಿದ ಬಳಿಕ ಸಮೃದ್ಧಿಯನ್ನು ಸಂಕೇತಿಸುವ ಕೊನೆಯ ಸಾಲುಗಳು ಇವು:
ಅಗೆದುತ್ತ ಗದ್ದೆಗಳ ಕರ್ಮಭೂಮಿಯ ವರಣ
ಭತ್ತಗೋಧುವೆ ಹಣ್ಣು ಬಿಟ್ಟ ವೃಂದಾವನ
ಗುಡಿ ಗೋಪುರಗಳ ಬಂಗಾರ ಶಿಖರ.
ಅಗೆದುತ್ತ ಗದ್ದೆಗಳ ಕರ್ಮಭೂಮಿಯ ವರಣವನ್ನೂ ಗುಡಿಗೋಪುರಗಳ ಬಂಗಾರ ಶಿಖರವನ್ನೂ ಸಮೃದ್ದಿಯ ಎರಡು ಮಜಲುಗಳನ್ನು ಸಂಕೇತಿಸುವುದಕ್ಕಾಗಿ ಅಡಿಗರು ಉಪಯೋಗಿಸುತ್ತಿದ್ದಾರೆ. ಆದರೆ ಕೊನೆಯ ಗುಡಿಗೋಪುರಗಳ ಬಂಗಾರ ಶಿಖರವನ್ನು ದೇವಸ್ಥಾನದ ಧಗಾ, ಅನವಶ್ಯಕತೆ ಇತ್ಯಾದಿಗಳನ್ನು ಮರೆತು ಓದುವುದು ನನಗೆ ಸಾಧ್ಯವಾಗಿಲ್ಲ, ಅಂದರೆ ಈ ಚಿತ್ರ ಒಟ್ಟು ಮಾನವೀಯತೆಗೆ ಸಂಬದ್ಧಿಸದೆ ಆರ್ಷೇಯ ಮೌಲ್ಯದ ನೇರ ನಿರೂಪಣೆಗಷ್ಟೇ ಸೀಮಿತವಾಗಿದೆ; ರಿನ್ಯಾಸೈನ್ಸ್ ಕಾಲದಲ್ಲಿ ಪುನರುತ್ಥಾನವಾದ ಮೌಲ್ಯಗಳಿಗಷ್ಟೇ ಸೀಮಿತವಾಗಿದೆ.
ನಾನು ಹೇಳುತ್ತಿರುವುದು ದೇವಸ್ಥಾನವೊಂದು ಕಾವ್ಯದಲ್ಲಿ ಸಂಕೇತವಾಗಿ ಬರಬಾರದು ಎಂದಲ್ಲ, ಅದು ಸಂಕೇತವಾಗಬಲ್ಲದು, ಶ್ರೇಷ್ಠ ಕವನವೊಂದರ ಸಂಕೇತವಾಗಬಲ್ಲುದು ಎಂಬುದಕ್ಕೆ ‘ಉಳ್ಳವರು ಶಿವಾಲಯವ ಮಾಡುವರು’ ಎಂದು ಪ್ರಾರಂಭವಾಗುವ ಬಸವಣ್ಣನವರ ವಚನವನ್ನು ನೋಡಬಹುದು, ಬಸವಣ್ಣನವರು ಉಳ್ಳವರು ಮಾಡುವ ಶಿವಾಲಯವನ್ನು ಧಿಕ್ಕರಿಸುವುದರ ಮೂಲಕ, ತಾನೇ ದೇವಸ್ಥಾನವಾಗುತ್ತೇನೆ
ಎನ್ನುವುದರ ಮೂಲಕ, ದೇವಸ್ಥಾನದ ಹಿಂದಿನ ಕಲ್ಪನೆಯ ಕಡೆಗೆ ನಮ್ಮ ಗಮನ ಸೆಳೆಯುತ್ತಾರೆ, ಎನ್ನ ಕಾಲೇ ಕಂಬ, ಶಿರವೇ ಹೊನ್ನ ಕಳಶ ಎನ್ನುವುದರ ಮೂಲಕ ಜಂಗಮಕ್ಕಳಿವಿಲ್ಲ ಎಂಬುದನ್ನು ನಾಟ್ಯೀಕರಿಸುತ್ತಾರೆ, ಆದರೆ `ಭೂತ’ ಗುಡಿ, ಗೋಪುರಗಳು ಸಂಕೇತಿಸುವುದರ ಕಡೆಗೆ ನಮ್ಮ ಗಮನ ಸೆಳೆಯುವುದಿಲ್ಲ; ಹೊರಗಿನ ಗುಡಿ, ಗೋಪುರಗಳ ಬಗ್ಗೆ ನಮ್ಮ ಗಮನ ಸೆಳೆಯುತ್ತದೆ, ‘ಭೂತ’ ಕವನ ಸಮಷ್ಟಿಯ, ಸಮಾಜದ ಅಭಿವೃದ್ಧಿಯ ಬಗ್ಗೆಯೂ ಯೋಚಿಸುವ ಕವನ ಎಂಬುದನ್ನು ಗಮನಿಸಿದಾಗ (ನಾವು ಎನ್ನುವ ಬಹುವಚನ, ಉತ್ತ ಗದ್ದೆ ಎಂಬಿತ್ಯಾದಿ ಬಾಹ್ಯ ವಿವರಗಳು) ‘ಗುಡಿಗೋಪುರಗಳ ಬಂಗಾರ ಶಿಖರ’ದ ಬಗ್ಗೆ ನಾನು ಮೇಲೆ ಹೇಳಿದ ಮಾತುಗಳು ಅರ್ಥವಾಗ ಬಹುದು.
ಈ ರೀತಿಯ ಕೊನೆಯನ್ನು ಮನುಷ್ಯನಿಗೆ ವಿಧಿಗೆ ಸಂಬಂಧಿಸದೆ ನೇರವಾಗಿ ಆರ್ಷೇಯ ಮೌಲ್ಯಗಳನ್ನು ಪ್ರತಿನಿಧಿಸುವ ಕೊನೆಯನ್ನು-ಆನಂದತೀರ್ಥರಿಗೆ’ ಕವನದಲ್ಲಿಯೂ ಕಾಣಬಹುದು, ಈ ಕವನದ ಕೊನೆಯನ್ನು ಓದುವಾಗ “ನಿಮ್ಮನಿಮ್ಮಂಥವರ ಬರವು’ ಅದರ ಹಿಂದಿನ ಸ್ಟಾನ್‌ಸಾಗಳಲ್ಲಿ ಹೇಳಿದ ವಿನಾಶವನ್ನು ನಮ್ಮ ಸಮಾಜದ ಸಂದರ್ಭ ದಲ್ಲಿ ಹೇಗೆ ಇಲ್ಲವಾಗಿಸುತ್ತದೆ ಎಂಬ ಪ್ರಶ್ನೆ ನನ್ನನ್ನು ಕಾಡುತ್ತದೆ.
ಇದು ಮೌಲ್ಯಗಳ ಚೌಕಟ್ಟಿನಲ್ಲಿರುವ ವೈಯಕ್ತಿಕ ಭಿನ್ನಾಭಿಪ್ರಾಯದ ಪ್ರಶ್ನೆಯಲ್ಲ ಎಂದು ನಾನು ತಿಳಿದಿದ್ದೇನೆ, ಅಂದರೆ ನನ್ನ ಮೇಲಿನ ಪ್ರತಿಕ್ರಿಯೆಗಳನ್ನು ಹೆಚ್ಚು ಕಟ್ಟು ನಿಟ್ಟಾದ ಭಾಷೆಯಲ್ಲಿ ಮತ್ತೊಮ್ಮೆ ಪ್ರತಿಪಾದಿಸಬೇಕಾಗುತ್ತದೆ.
ಈ ಎರಡು ಕವನಗಳಲ್ಲೂ ನಮ್ಮ ಸಮಾಜದ-ಸಮಗ್ರ ಸಮಾಜದ-ಭಯಾನಕ ದುರಂತದ ಚಿತ್ರಗಳಿವೆ. ‘ಭೂತ’ ಕವನದಲ್ಲಿ ಮೇಲಿಂದ ಮೇಲೆ ಬರುವ ಕಾಟ, ಏನೂ ಕಾಣಿಸದ ಕತ್ತಲು, ವಿಲಿವಿಲಿ ಒದ್ದಾಡುವ ಹೊಕ್ಕುಳ ಬಳ್ಳಿ, ಕಂಕಾಲಗಳು ನರ್ತನ ಗೈಯುವ ಸಾವಿನ ಚಿತ್ರ-ಸಂಕೇತಗಳಲ್ಲಿ ವ್ಯಕ್ತವಾದ ನಮ್ಮ ಭಗ್ನ ಸಮಾಜದ ಮತ್ತು ಅಲ್ಲಿನ ವ್ಯಕ್ತಿಗಳ ಚಿತ್ರ ಇದೆ, “ಆದಂದತೀರ್ಥರಿಗೆ” ಕವನಗಳಿಗೆ ಬಟ್ಟಲು ಮುಳುಗಿ, ತಳಪಾ ಯವೇ ಜರಿದು ಬೀಳುತ್ತಿರುವ ಶಿಥಿಲ ಸಮಾಜದ ಚಿತ್ರವಿದೆ, ಆದರೆ ಅವು ಕೊನೆಯಲ್ಲಿ ಪ್ರತಿನಿಧಿಸುವ ಮೌಲ್ಯಗಳು ಘಟ್ಟಿಯಲ್ಲದ ಆಶಾವಾದವನ್ನಷ್ಟೇ ಸೂಚಿಸುತ್ತವೆ. ಅಂದರೆ `ಭೂತ’, ‘ಅನಂದತೀರ್ಥರಿಗೆ’ ಕವನದ ಮೌಲ್ಯಗಳು ಕವನದ ಶರೀರದಲ್ಲೇ ವ್ಯಕ್ತವಾದ ಸಮಗ್ರ, ದುಸ್ಥಿತಿಯ ಚಿತ್ರವನ್ನು ಸಂಘರ್ಷಿಸಿಯೇ ಇಲ್ಲ; ಆ ಚಿತ್ರಗಳಿಂದಲೇ ಅವು ಹುಟ್ಟಿಲ್ಲ. ಈ ಬಗೆಯ ನೇರ ಪ್ರತಿಪಾದನೆ ಇಲ್ಲದ-ಸೀಮಿತ ಕಲ್ಪನೆಗಳಿಂದ ಬದ್ಧ ವಾಗದ-ಕೂಪ ಮಂಡೂಕ, ಭೂಮಿಗೀತ, ಪ್ರಾರ್ಥನೆ, ವರ್ಧಮಾನದಂತಹ ಕವನಗಳು ಪ್ರತಿಪಾದಿಸುವ ಮೌಲ್ಯಗಳು ನಮ್ಮ ಸಮಗ್ರ ಸಮಾಜದಲ್ಲಿ ಅರ್ಥಪೂರ್ಣವಾಗುತ್ತವೆ ; ಇವು ಮಾನವನ ವಿಧಿಯ ಬಗ್ಗೆ ಕಾಳಜಿಯನ್ನು ತೋರಿಸುತ್ತವೆ. ಇಲ್ಲಿ ಮೌಲ್ಯಗಳನ್ನು ಮಾನವೀಯ ಪರಿಭಾಷೆಯಲ್ಲಿ ನಮ್ಮ ಸಮಾಜದ ಸಂದರ್ಭದಲ್ಲಿ ಅಡಿಗರ ಅರ್ಥೈಸುತ್ತಾರೆ. ಅಡಿಗರನ್ನು ಈಗ ಬರೆಯುತ್ತಿರುವ ಅತ್ಯಂತ ಶ್ರೇಷ್ಠ ಭಾರತೀಯ ಕವಿಯೆಂದು ಹೇಳುವಾಗ ಅದಕ್ಕೆ ಪುರಾವೆಯಾಗುವುದು ಇಂಥಾ ಕವನಗಳು.
ಮೇಲೆ ಹೇಳಿದ ರೀತಿಯ ಪರಿಮಿತಿ ವ್ಯಕ್ತವಾಗುವುದು ನವ್ಯಸಾಹಿತ್ಯದ ಕೆಲವು ಕೃತಿಗಳಲ್ಲಿ ಮಾತ್ರವೇ ? ‘ಕಾನೂರು ಹೆಗ್ಗಡಿತಿ’ಯನ್ನು ನಾನು ಸಾಹಿತ್ಯಕೃತಿಯೆಂದು ಒಪ್ಪದಿರುವುದರಿಂದ ಅದು ಪ್ರತಿಪಾದಿಸುವ ಪ್ಯೂಡಲ್ ಮೌಲ್ಯಗಳ ಬಗ್ಗೆ ಬರೆಯಬೇಕಾಗಿಲ್ಲ. ಆದರೆ ‘ಚೋಮನ ದುಡಿ’ಯ ನಂತರದ ಕಾರಂತರ ಕೆಲವು ಮೌಲ್ಯಗಳೂ ಮಧ್ಯಮ ವರ್ಗದ ನಿಕಷದಿಂದ ಪರಿಮಿತವಾಗಿವೆ, ಮುಖ್ಯವಾಗಿ ಪ್ರಾಮಾಣಿಕತೆ ಮತ್ತು ಒಳ್ಳೆಯ ತನಗಳಷ್ಟೇ ಮಾನದಂಡವಾಗಿರುವ ಅವರ ಆರ್ಥಿಕ ಮತ್ತು ರಾಜಕೀಯ ವಿಚಾರಗಳು. ಈ ವಿಷಯದ ಚರ್ಚೆ ಇನ್ನೊಂದು ಲೇಖನದ ವಸ್ತುವೇ ಆಗಬಹುದಾದ್ದರಿಂದ ಅದನ್ನು ಇಲ್ಲಿ ಲಂಬಿಸುವ ಬದಲು ಇನ್ನೊಂದು ಲೇಖನ ಬರೆಯುವ ಅವಕಾಶವನ್ನೇ ಉಪಯೋಗಿಸಬಹುದು.
ನಾನು ಸಾಹಿತ್ಯದಲ್ಲಿ ಸಮಾಜ ಹೇಗೆ ವ್ಯಕ್ತವಾಗುತ್ತದೆ ಎಂದು ಬರೆಯುತ್ತಾ -ಶ್ರೇಷ್ಠ ಕೃತಿಯಲ್ಲಿ ಅದು ಮಾನವೀಯ ಪರಿಭಾಷೆಯಲ್ಲಿ ವ್ಯಕ್ತವಾಗುತ್ತದೆ; ಈ ಮಾನವೀಯ ಪರಿಭಾಷೆಯಲ್ಲಿ ವ್ಯಕ್ತವಾದದ್ದು ವರ್ತಮಾನಸ್ಥ ಮತ್ತು ಸಾರ್ವಕಾಲಿಕವಾಗಿ ಸಂಪೂರ್ಣ ಅರ್ಥವನ್ನು ಪಡೆಯಬೇಕಾದರೆ ಲೇಖಕನ ಮೌಲ್ಯಗಳ ನಿಕಷ ಇಡೀ ಸಮಾಜದ ಸ್ಥಿತಿ ಯಾಗಬೇಕಾಗುತ್ತದೆ; ಅಂದರೆ ಇಡೀ ಸಮಾಜ ಅವನ ಕೃತಿಯಲ್ಲಿ ಕಲೆಯಾಗಿ ಬರ ಬೇಕಾಗುತ್ತದೆ ಎಂದೆ, ಇದನ್ನು ತೋರಿಸಲು ಪ್ರಯತ್ನಿಸುತ್ತಾ ನವ್ಯಸಾಹಿತ್ಯದ ಭಾಷೆ ಮತ್ತು ಇತರ ಸಾಧನೆಗಳ ಬಗ್ಗೆ ನಾನು ಮಾತಾಡದಿದ್ದರೆ, ಅದಕ್ಕೆ ಕಾರಣ ಅವುಗಳ ಬಗ್ಗೆ ಈಗಾಗಲೇ ಸಾಕಷ್ಟು ಲೇಖನ ಬಂದಿವೆ ಎಂಬುದು ; ಈ ದಿಸೆಯಲ್ಲಿ ನನಗೆ ಹೊಸತೇನೂ ಹೇಳುವುದಿಲ್ಲ ಎಂಬುದು, ಇಲ್ಲಿ, ಹರಡಿಕೊಂಡಿದೆ ಎನ್ನಿಸಬಹುದಾದ ನನ್ನ ವಿಚಾರಗಳಿಗಿರುವ ಒಟ್ಟು ಸಂಬಂಧ ಸ್ಪಷ್ಟವಾಗುತ್ತದೆ ಎಂದು ತಿಳಿದಿದ್ದೇನೆ.
ಇಂದಿನ ಪರಿಸ್ಥಿತಿಯಲ್ಲಿ ಸಮಗ್ರ ಸಮಾಜವನ್ನು ಎದುರು ಹಾಕಿಕೊಂಡು ಯೋಚಿಸುವುದು, ಮೌಲ್ಯಗಳನ್ನು ಪರೀಕ್ಷೆಗೊಡ್ಡುವುದು ಅತ್ಯಂತ ಅಗತ್ಯವಾಗಿದೆ. ಯಾಕೆಂದರೆ ಈಗಿನ ನಮ್ಮ ದುರಂತ, ಅಪಮಾನಗಳ ಬಗ್ಗೆ, ಬಂಧಿಯಾದ ಇಲ್ಲಿನ ಮನುಷ್ಯನ ವಿಧಿಯ ಬಗ್ಗೆ ಯೋಚಿಸದವ ಸಮಕಾಲೀನವಾದದ್ದನ್ನು ಅರ್ಥಪೂರ್ಣವಾಗಿ ಸಾರ್ವ ಕಾಲಿಕವಾದದ್ದನ್ನು ಸೃಷ್ಟಿಸುವುದು ಸಾಧ್ಯವಾಗುವುದಿಲ್ಲ.
1 ಹೆಚ್ಚು ವಿಸ್ತಾರವಾದ ಸಾಮಾಜಿಕ ಪಾತಳಿಯಲ್ಲಿ ಜಾತಿಯ ಸಮಖ್ಯೆಯನ್ನು ವಿಶ್ಲೇ ಷಿಸುವ ‘ಚೋಮನ ದುಡಿ’ಯಲ್ಲಿಯೂ ಕಾರಂತರು ಇದನ್ನೇ ಮಾಡುತ್ತಾರೆ.
2 ಚದುರಂಗರ ಕೆಲವು ಕೃತಿಗಳು ಮಾತ್ರ ಇದಕ್ಕೆ ಅಪವಾದವಾಗಿವೆ.
3 ಇವನ ಅಲೆಮಾರಿ ಜೀವನ ಇವನ ಮನಃಸ್ಥಿತಿಯನ್ನು ಸಂಕೇತಿಸುತ್ತದೆ, ವಾಸ್ತವ ವಿವರದಂತೆ ಕಾಣುವ ಈ ಬಗೆಯ ಸಂಕೇತ ಕಾರಂತರು ತಮ್ಮ ಕಾದಂಬರಿಗಳಲ್ಲಿ ಸಂಕೇತವನ್ನು ಉಪಯೋಗಿಸಿಕೊಳ್ಳುವುದಕ್ಕೆ ಒಂದು ಮಾದರಿಯಾಗಬಹುದು.
4 ಇದರ 1971 ರ ಆವೃತ್ತಿಗೆ ಕಾರಂತರೇ ಬರೆದ ಮುಖಚಿತ್ರವಿದೆ. ತಮ್ಮ ಇನ್ನೂ ಅನೇಕ ಕೃತಿಗಳಿಗೆ ಅವರದ್ದೇ ಚಿತ್ರಗಳಿವೆ. ಈಗ ಐ.ಬಿಹೆಚ್‌ನವರು ಪ್ರಕಟಿಸುತ್ತಿರುವ ಆವೃತ್ತಿಗಳಲ್ಲಿ ಈ ಚಿತ್ರಗಳು ಮಾಯವಾಗುತ್ತಿವೆ, ಅವುಗಳು ಕಾಣುವುದಕ್ಕೆ ಸಿಗದಕಾಲ ಬರಬಹುದು, ಚಿತ್ರಗಳಾಗಿ ಅವುಗಳಿಗೆ ಮಹತ್ವವಿರಲಾರದು. ಆದರೆ ಕಾರಂತ ಪ್ರತಿಭೆಯ ಒಂದು ಮುಖವಾದ್ದರಿಂದ ಅವುಗಳನ್ನು ರಕ್ಷಿಸುವ ಕೆಲಸವನ್ನು ಸಂಸ್ಕೃತಿ ಯಲ್ಲಿ ಆಸಕ್ತಿಯುಳ್ಳ ಸಂಸ್ಥೆಗಳು ವರಡಬೇಕು.
5 ಹೈದರಾಬಾದು ಕರ್ನಾಟಕದ ಭಾಷೆಯಲ್ಲಿಯೇ ಬರೆದ ಚೆನ್ನಣ್ಣ ವಾಲೀಕಾರ ಅವರ ‘ಬೆಳ್ಯ’ ಓದಿದಾಗ ನನಗೆ ಗೊತ್ತಿರುವ ದಕ್ಷಿಣ ಕನ್ನಡದ ಹವ್ಯಕರ ಭಾಷೆಯಲ್ಲಿ ಒಂದು ಕತೆ ಬರೆಯುವ ಸಾಧ್ಯತೆ ನನಗೆ ಹೊಳೆಯಿತು. ಈ ಸಾಧ್ಯತೆ ಮತ್ತು ಅದರ ಪರಿಣಾಮಗಳ ಬಗ್ಗೆ ನನಗನ್ನಿಸಿದ ವಿಚಾರಗಳನ್ನು ಹೇಳಿದರೆ ನನ್ನ ವಿಚಾರಗಳು ಸ್ಪಷ್ಟ ವಾಗಬಹುದು, ದಕ್ಷಿಣ ಕನ್ನಡದ ಹವ್ಯಕರ ಭಾಷೆಯಲ್ಲಿ ಸ್ತ್ರೀಲಿಂಗ ಇಲ್ಲ: ಪುಲ್ಲಿಂಗ ಮತ್ತು ನಪುಂಸಕ ಲಿಂಗ ಮಾತ್ರ ಇವೆ: ಈ ಭಾಷೆಯಲ್ಲಿ ‘ಅಮ್ಮ ಬಂತು ; ಹೆಂಡತಿ ಬಂತು ; ಎನ್ನ ತಂಗಿ ಬಹಳ ಜಗಳ ಮಾಡುತ್ತು, ಅದಕ್ಕೆ ಬುದ್ಧಿಯೇ ಇಲ್ಲೆ ; ಅಜ್ಜಿ ಸತ್ತು ಹೋತು ; ನಾಯಿ ಬಂತು ; ಬೆಕ್ಕು ಎನ್ನ ಹತ್ತರ ಜಗಳ ಮಾಡುತ್ತು; ಎಮ್ಮೆ ಸತ್ತು ಹೋತು ; ಅದು ಕಲ್ಲು ಅಲ್ಲದೋ ? ಅಪ್ಪ ಬಂದ ; ಅವ ಎನ್ನ ಅಣ್ಣ.’ ಹಾಗೆಯೇ ಈ ಭಾಷೆಯಲ್ಲಿ ಬ್ರಾಹ್ಮಣರನ್ನು ಹೊರತು ಬೇರೆ ಜಾತಿಯವರನ್ನು ನಪುಂಸಕಲಿಂಗದಿಂದ ನಿರ್ದೇಶಿಸುತ್ತಾರೆ : `ಪುತ್ತೇರ‍್ಯ ಇಂದು ಕೆಲಿಸಕ್ಕೆ ಬಂದಿದಿಲ್ಲೆ, ಅದಕ್ಕೆ ಸೋಮಾರಿತನ ಸುರುವಾಯಿದು : ತ್ಯಾಂಪಣ್ಣ ಭಂಟ ಅಥವಾ ರಾಮಣ್ಣಗೌಡ ಅಥವ ಮಾನಗಾಣಿಗ ಎನಗೆ ದಾರಿಲಿ ಸಿಕ್ಕಿತ್ತು ; ಅವಕ್ಕೆ ಹತ್ತು ರೂಪಾಯಿ ಸಾಲ ಬೇಕಡ.’
ಸ್ತ್ರೀಯನ್ನು ಮತ್ತು ಬ್ರಾಹ್ಮಣೇತರರನ್ನು ನಪುಂಸಕ ಲಿಂಗದಿಂದ ನಿರ್ದೇಶಿಸುವ ಈ ಭಾಷೆಯನ್ನು ರೂಪಿಸಿದ ಸಾಮಾಜಿಕ ವ್ಯವಸ್ಥೆ, ಮನುಷ್ಯನ ಬಗ್ಗೆ ಅಲ್ಲಿರುವ ಕ್ರೂರ ದೃಷ್ಟಿ, ದುರಂತಗಳನ್ನು ಊಹಿಸಿಕೊಳ್ಳಬಹುದು, ಈ ಭಾಷೆಯನ್ನು ಕಚ್ಚಾ ಆಗಿ ಬಳಸಿ ನಾನೊಂದು ಕತೆ ಬರೆದರೆ ನಾನು ಆ ಭಾಷೆಯನ್ನು ರೂಪಿಸಿದ ಸಮಾಜ ವ್ಯವಸ್ಥೆಯನ್ನು ಎತ್ತಿಹಿಡಿಯಬೇಕಾಗುತ್ತದೆ. ಪ್ರತಿಯೊಂದು ಉಪಭಾಷೆಯ ಹಿಂದೆಯೂ ಅದನ್ನು ರೂಪಿಸಿದ ಸಾಮಾಜಿಕ ವ್ಯವಸ್ಥೆ, ಅದರ ಮೌಲ್ಯಗಳು ಇದ್ದೇ ಇವೆ. ಆದ್ದರಿಂದ ಮನುಷ್ಯನ ವಿಧಿಯ ಬಗ್ಗೆ ಆಸಕ್ತಿಯಿರುವವನು ಈ ರೀತಿ ಕಚ್ಚಾ ಭಾಷೆಗಳನ್ನು ಬಳಸ ಲಾರ, ಅಲ್ಲದೆ ಕಚ್ಚಾ ಆಗಿ ಬಳಸುವುದೆಂದರೆ ಯಥಾರ್ಥವಾದವನ್ನು ಒಪ್ಪಿಕೊಳ್ಳುವುದೂ ಕೂಡಾ ಅಂದರೆ ಈ ಅಸಂಗತ ಪ್ರಪಂಚವನ್ನು ಸಾಹಿತಿಯಾಗಿ ತನ್ನ ಕೃತಿಯ ಇರುವಿಕೆಯ ಸ್ಥಿತಿಯಲ್ಲಿಯೇ ಪ್ರತಿಭಟಿಸುವ ಅವಕಾಶವನ್ನು ಕಳೆದುಕೊಳ್ಳುವುದು.
ಅಂದರೆ ನಾನು ಗ್ರಾಂಥಿಕ ಭಾಷೆಯನ್ನು ಬಳಸಬೇಕೆಂದು ಹೇಳುತ್ತಿಲ್ಲ. ಜಾನಪದ ಭಾಷೆಯ ಸತ್ಯ ಕೃತಿಗೆ ಅಗತ್ಯ, ಆದರೆ ಸತ್ಯವನ್ನು ಪಡೆಯುವುದು, ಅಥವಾ ವ್ಯಂಗ್ಯದ ಮೂಲಕ ಉಪಯೋಗಿಸುವುದು ಬೇರೆ, ಕಚ್ಚಾ ಆಗಿಯೇ ಬಳಸುವುದು ಬೇರೆ. ಈ ಸಂದರ್ಭದಲ್ಲಿ ಶ್ರೀ ಜಿ. ರಾಜಶೇಖರ್ ಅವರು ‘ಸತ್ತವರ ನೆರಳು’ ಬಗ್ಗೆ ಬರೆದ ಲೇಖನದ ಟಿಪ್ಪಣಿಯಲ್ಲಿ ಭಾಷೆಯ ಉಪಯೋಗದ ಕುರಿತು ಹೇಳಿದ ಬೆಲೆಯುಳ್ಳ ಮಾತುಗಳನ್ನು ನಾನು ಆನುಮೋದಿಸುತ್ತೇನೆಂದು ಹೇಳಬೇಕು.
6 ನಾನು ಈ ಮೊದಲು ವೈಕುಂಠರಾಜು ಅವರಿಗೆ ಮಾಡಿದ ಒಂದು ಅನ್ಯಾಯಕ್ಕಾಗಿ ಮೊದಲು ಅವರಲ್ಲಿ ಕ್ಷಮೆ ಕೇಳಿಕೊಳ್ಳಬೇಕು, ಸಾಕ್ಷಿ-೨೬ ರಲ್ಲಿ ‘ಅಂತ್ಯ’ದ ರೆವ್ಯೂ ಮಾಡುತ್ತಾ ನಾನದನ್ನು ಹೀಗೆ ಮುಗಿಸಿದ್ದೆ: “ನಾವು ಅನಂತಮೂರ್ತಿ, ಲಂಕೇಶ ಮೊದಲಾದವರಿಂದ ತಿಳಿದುಕೊಳ್ಳಬೇಕಾದ್ದಕ್ಕಿಂತ ಕಾರಂತ, ಮಾಸ್ತಿಯವರಿಂದ ತಿಳಿದು ಕೊಳ್ಳಬೇಕಾದ್ದು ಹೆಚ್ಚು”, ಆಮೇಲೆ ನನ್ನ ಸ್ನೇಹಿತರು ಹೇಳಿದ ಹಾಗೆ ಈ ವಾಕ್ಯ ಅಸ್ಪಷ್ಟವಾಗಿದೆಯಷ್ಟೇ ಅಲ್ಲ, ವೈಕುಂಠರಾಜು ಅವರ ಬಗ್ಗೆ ತಪ್ಪು ಅಭಿಪ್ರಾಯವನ್ನು ಉಂಟುಮಾಡುತ್ತದೆ. ಯಾಕೆಂದರೆ ಸ್ವಂತ ಶೈಲಿಯ ಮೂಲಕ ಹೊಸ ಜೀವನ ಕ್ಷೇತ್ರಗಳ ಕಡೆಗೆ ಬೊಟ್ಟು ಮಾಡಿದ ನಮ್ಮ ಒಳ್ಳೆಯ ಲೇಖಕರಲ್ಲಿ ವೈಕುಂಠರಾಜು ಅವರೂ ಒಬ್ಬರು, ನನ್ನ ಅರ್ಥವಿದ್ದದ್ದು ವೈಕುಂಠರಾಜು ಅವರೂ ಮಧ್ಯಮ ವರ್ಗದ ಬಗ್ಗೆ ಬರೆಯುತ್ತಿದ್ದಾರೆ ಎಂದಷ್ಟೇ, ಆದರೆ ರೆವ್ಯೂ ಸೂಚಿಸುವ ಅಸ್ಪಷ್ಟತೆ ಮತ್ತು ತಪ್ಪು ಅಭಿಪ್ರಾಯ ನನ್ನ ಭಾಷೆಯ ಸಡಿಲು ಬಳಕೆಯಿಂದಾಗಿ ಬಂದಿದೆ.
7 ಅವರು ತಮ್ಮ ಈ ದೃಷ್ಟಿಯನ್ನು ವಿಮರ್ಶಿಸುತ್ತಿದ್ದಾರೆ ಎನ್ನುವುದಕ್ಕೆ ‘ಭಾರತೀ ಪುರ’ದಲ್ಲಿ ಬರುವ ಜಗನ್ನಾಥ-ಕಾವೇರಿಯರ ಸಂಬಂಧ ಉದಾಹರಣೆ. ಆದರೆ ಇಲ್ಲಿಯೂ ಕಾವೇರಿಗೆ ಒಂದು ಮನಸ್ಸಿರಬಹುದು ನೊಂದುಕೊಳ್ಳುವ ಒಂದು ಮನಸ್ಸಿರಬಹುದು ಎಂಬುದನ್ನು ಅನಂತಮೂರ್ತಿ ಗುರುತಿಸಿಲ್ಲ.
8 ಇಲ್ಲಿ ನನ್ನ ಒಂದು ಅನ್ನಿಸಿಕೆಯನ್ನು ಹೇಳಬಹುದು: ಕಾರಂತರು ಹೊರಗೆ ಹೋದಾಗ, ಬೇರೆ ಬೇರೆ ವರ್ಗದ ಅನುಭವಗಳನ್ನು ಕೊಡಬಲ್ಲ ವ್ಯಕ್ತಿಗಳನ್ನು ಭೇಟಿ ಯಾಗುತ್ತಾರೆ, ‘ ಆಬೂವಿನಿಂದ ಬರಾಮಕ್ಕೆ’ ಎಂಬ ಅವರ ಪ್ರವಾಸ ಕಥನದಲ್ಲಿ ಡೆಲ್ಲಿಯ ಮದ್ರಾಸು ಹೋಟೆಲಿನ ಯಜಮಾನನ ಪರಿಚಯ, ಸ್ನೇಹ ಬೆಳೆಸಿದ ಭಾಗವನ್ನು ನೋಡಬಹುದು, ಅನಂತಮೂರ್ತಿಯವರೋ ನಮ್ಮಂಥವರೋ ಹೊರಗೆ ಹೋದರೆ, ನಮ್ಮ ವರ್ಗದ, ನಮ್ಮ ಅಭಿರುಚಿಯುಳ್ಳ, ಅದರಲ್ಲೂ ನಾವು ಓದಿರುವ ಪುಸ್ತಕಗಳನ್ನೇ ಓದಿರಬಹುದಾದ ವ್ಯಕ್ತಿಗಳನ್ನು ಭೇಟಿಯಾಗುತ್ತೇವೆ. ಇದು ವೈಯಕ್ತಿಕ ವಿಷಯ. ಆದರೆ ಅನುಭವ ಸ್ವೀಕರಣೆಯ ರೀತಿಗೆ ಉದಾಹರಣೆಯೆಂದು ಇದನ್ನಿಲ್ಲಿ ದಾಖಲಿಸಿದ್ದೇನೆ.
ಮಲೆಯಾಳಂ ಸಾಹಿತ್ಯದಲ್ಲಿ ಸಂಘಯುಗಪ್ರವರ್ತಕ ಕರೂರ್ ನೀಲಕಂಠ ಪಿಳ್ಳೆ
ಮಲೆಯಾಳಂ ಸಾಹಿತ್ಯದಲ್ಲಿ ಸಂಘಯುಗಪ್ರವರ್ತಕ
ಕರೂರ್ ನೀಲಕಂಠ ಒಳ್ಳೆ
ಮೂಲ ಇಂಗ್ಲಿಷ್ – ಎಂ ಗೋವಿಂದನ್ |
ಅನುವಾದ ಕನ್ನಡ – ಗೋಪಾಲಕೃಷ್ಣ ಅಡಿಗ
ತಾನು ಯಾರನ್ನು ಇಲ್ಲಿಂದ ಸೆಳೆದುಕೊಂಡು ಹೋಗುತ್ತದೋ ಅವರಿಗೂ ಅವರ ಆಪ್ತ ಮಿತ್ರರಿಗೂ ತುಂಬ ನೋವುಂಟುಮಾಡುವುದು ಸಾವಿನ ಮೂಲಗುಣ, ಕರೂರ್ ನೀಲಕಂಠ ಪಿಳ್ಳೆಯವರ ಸಾವು ಅವರಿಗೆ ಆತ್ಮೀಯರಾಗಿದ್ದ ಎಲ್ಲರಿಗೂ ತುಂಬ ದುಃಖವನ್ನುಂಟುಮಾಡಿತು, ತಮ್ಮ ಎಪ್ಪತ್ತೇಳನೆಯ ವಯಸ್ಸಿನಲ್ಲಿ, ೧೯೭೫ ನೇ ಇಸವಿ ಸೆಪ್ಟೆಂಬರ್ ೩೦ ರಲ್ಲಿ ಅವರು ಅಜ್ಞಾತಲೋಕಕ್ಕೆ ಕೈಕೊಂಡ ಈ ಪ್ರಯಾಣ ಅಂಥ ಗಡಿ ಬಿಡಿ ಏನೂ ಇಲ್ಲದ ಒಂದು ಪ್ರಶಾಂತ ಪ್ರಸಂಗ, ಆ ದಿನ ಬೆಳಿಗ್ಗೆ ಹತ್ತು ಗಂಟೆ ಹೊತ್ತಿಗೆ ಅವರನ್ನು ಕೊಟ್ಟಾಯಮ್ಮಿನ ಮೆಡಿಕಲ್ ಸೆಂಟರಿಗೆ ಸೇರಿಸಲಾಯಿತು, ಆನಂತರ ಎರಡೇ ಗಂಟೆಗಳಲ್ಲಿ ಅವರ ಮೃತ್ಯು ಸಂಭವಿಸಿತು. ಅವರು ಉಬ್ಬಸದ ದೀರ್ಘರೋಗಿ, ಆ ರೋಗ ಅವರೊಡನೆ ನಿರಂತರವಾಗಿ ಹೋರಾಡಿ ಅನೇಕ ವರ್ಷಗಳ ಕಾಲ ಕಾದು ಕೊಂಡಿದ್ದು ಕೊನೆಗೆ ಅವರನ್ನು ಇಲ್ಲಿಂದ ಕಿತ್ತುಕೊಂಡು ಹೋಯಿತು. ಕರೂರರದು ಮಧ್ಯಮ ಪ್ರಮಾಣದ ದೇಹ, ಮೈ ಬಣ್ಣ ತಕ್ಕಮಟ್ಟಿಗೆ ಕಂದು, ಮಾತು ಮೃದು ಕೊಂಚ ಧಾರಾಳ ಎನ್ನುವಷ್ಟು ನಸುನಗೆ, ನಗು, ಅವರು ನೂರಕ್ಕೆ ನೂರರಷ್ಟು ಮಲೆಯಾಳಿ, ಆಕೃತಿಯಲ್ಲಿ, ತಂತುಬಂಧನ, ಅಂತಃಸತ್ವದಲ್ಲಿ ಆತ ಕೊಟ್ಟಾಯಂ ಪಟ್ಟಣದ ಸುತ್ತುಮುತ್ತಲ ಪರ್ವತ ಶ್ರೇಣಿಯಲ್ಲಿ ಧಾರಾಳವಾಗಿ ದೊರೆಯುವ ತೇಗದ ಮರದಲ್ಲಿ ಜೀವಂತ ವ್ಯಕ್ತಿಯ ಪ್ರಮಾಣದಲ್ಲಿ ಕಡೆದು ಮಾಡಿದ ವಿಗ್ರಹದಂತೆ ಇದ್ದರು. ಬೆಂಕಿ ಕಾರುವ ಗುಣ ಅವರದ್ದಲ್ಲ. ಯಾವ ಕಾಲದಲ್ಲೇ ಆಗಲಿ ಆತ ಕೋಪೋದ್ರಿಕ್ತನಾದದ್ದೇ ಇಲ್ಲ. ಆದರೆ ಕೊನೆಯುಸಿರಿನ ತನಕವೂ ಕಾರ್ಯನಿಷ್ಠ ಜೀವನ ನಡೆಸಿದರು, ಅಲ್ಲದೆ ಅವರು ಒಬ್ಬ ಸಾಮಾನ್ಯ ಮನುಷ್ಯ ಎಂತಲೂ ಹೇಳಬಹುದು, ಆದರೆ ಈ ಸಾಮಾನ್ಯ ಎಷ್ಟು ಅಸಾಮಾನ್ಯವಾದುದು! ಸರ್ವಭಕ್ಷಕನಾದ ಮೃತ್ಯು ಕೂಡಾ ಆತನ ಮುಂದೆ ಸ್ವಲ್ಪ ಹೊತ್ತು ದಿಗ್ಬ್ರಾಂತನಾಗಿ ಪೂಜ್ಯ ಭಾವನೆಯಿಂದ ನಿಂತಿದ್ದಿರಬೇಕು.
ಜೀವನಕ್ಕೆ ಅದರದೇ ಆದ ಒಂದು ಲಯ, ನೆಲೆ ಇದೆ. ಅದು ತಾಯ ಹೊಟ್ಟೆಯಿಂದ ಮಸಣಕಟ್ಟೆಯವರೆಗೆ ನಾವು ಹೂಡಿ ಇರುವ ಬಿಡಾರ ; ಅಜ್ಞಾತದಿಂದ ಮೇಲೆದ್ದು ಬರುವಿಕೆ, ಮುನ್ನಡೆಯುವಿಕೆ, ಅದೃಶ್ಯವಾಗುವಿಕೆ ಎಂಬ ಪ್ರಮಾಣಬದ್ದ ಪೂರ್ವ ಯೋಜಿತ ಚಿತ್ರವಿದೆ, ಕಾಲದ ಕೈ ತೊಟ್ಟಿಲನ್ನು ತೂಗಿ ಹೆಣದ ಚಟ್ಟವನ್ನೂ ಸಾಗಿಸಿ ಕೊಂಡು ಹೋಗುತ್ತದೆ, ಈ ಎರಡು ಅಂಕಗಳ ನಡುವಣ ಅಂತರವೇ ಜೀವನ, ಯಾರಿಗೇ ಆಗಲಿ ಸಾವೇ ಕೊನೆಯಲ್ಲ, ಅದು ಸ್ವಯಂಪೂರ್ಣ ಆಗಬೇಕಾದರೆ ಅದಕ್ಕೆ ಬದುಕಿನ ಸಹಕಾರ ಅಗತ್ಯ, ಏಕೆಂದರೆ ಕೊನೆಗೆ ಒಬ್ಬನ ಸಾವನ್ನು ವಿಮರ್ಶಿಸಿ ತೀರ್ಪು ಕೊಡುವುದು ಆತ ಬದುಕಿದ ರೀತಿ, ಆ ಬದುಕಿನ ನೀತಿಬಂಧಗಳನ್ನು ಗಮನಿಸುವುದರ ಮೂಲಕವೇ ; ಆ ಬದುಕು ಗಳಿಸಿದ ಅರ್ಥ, ಉಳಿದವರಿಗೆ ಅದು ಹಾಕಿಕೊಟ್ಟ ಮೇಲ್ಪಂಕ್ತಿ-ಇವುಗಳ ಮೂಲಕವೇ, ಈ ದೃಷ್ಟಿಯಿಂದ ಸಾವನ್ನು ನೋಡಿದಾಗ ಸಾಗದುಃಖದ ಸಾಮಾನ್ಯ ಭಾವನೆಗೇ ಸಾಂತ್ವನದ ಗುಣ ಹುಟ್ಟುತ್ತದೆ. ನೀಲಕಂಠ ಪಿಳ್ಳೆ ಬದುಕಿದ್ದ ಇದು ತುಂಬು ಜೀವನ ಎನ್ನುವಷ್ಟು ಪರಿಪೂರ್ಣವಾದ ಬದುಕು-ಒಳ ತಿರುಳಿನವರೆಗೂ ಪ್ರಾಮಾಣಿಕವಾದ ಸರಳ ಜೀವನ ; ಅದು ತನ್ನ ಎಲ್ಲ ಸಣ್ಣಪುಟ್ಟ ಪದರುಗಳಲ್ಲೂ, ತನ್ನ ತೀರ ಅಮುಖ್ಯ ಎನ್ನುವಂಥ ವ್ಯವಹಾರಗಳಲ್ಲೂ ಅರ್ಥಪೂರ್ಣವಾಗಿ ಭವ್ಯ ಎನ್ನುವಷ್ಟು ಪರಿಷ್ಕಾರೆವಾಗಿ, ಆತನ ಸಾಹಿತ್ಯದ ಹಿರಿಮೆ ಈ ಉನ್ನತ ಗುಣಗಳ ಶಬ್ದರೂಪ, ಜೀವನವೂ ಸಾಹಿತ್ಯವೂ ಹೀಗೆ ಸೃಷ್ಟಿಕರ್ಮದಲ್ಲಿ ಒಂದಾಗಿ ಎರಕಗೊಂಡಿದೆ, ಆಳವಾಗಿ ನೆಲದಲ್ಲಿ ಬೇರೂರಿ ಇದ್ದರೂ ಮೇಲಿನ ಸೂರ್ಯರಶ್ಮಿಯಲ್ಲಿ ವಿಸ್ತಾರವಾಗಿ ತನ್ನನ್ನು ಅದ್ದಿಕೊಂಡು ನಿಂತಿರುವ ಮರದಿಂದ ಹೊರಹೊಮ್ಮುವ ಹೂವುಗಳಂತೆ ಕರೂರರಿಂದ ಕಥೆಗಳು ಸಹಜಮೋಹಕತೆಯಿಂದಲೂ ಪರಿಶುದ್ದಿಯಿಂದಲೂ ರೂಪುಗೊಂಡಂಥವು, ಲೇಖನ ಕಲೆಯಲ್ಲಿ ವಿವಿಧ ಮೂಲವಸ್ತುಗಳನ್ನು ಹೊಂದಿಸಿ ಜೀವಕಳೆ ತುಂಬುವಂತೆ ಯೋಜಿಸುವ ರಾಸಾಯನಿಕ ಪ್ರಕ್ರಿಯೆ ಅವರಿಗೆ ಚೆನ್ನಾಗಿ ತಿಳಿದಿತ್ತು. ಆತನಿಗೆ ಕಥನಕಲೆಯಲ್ಲಿದ್ದ ಪ್ರಭುತ್ವ ಶುಷ್ಕವಸ್ತು ಘಟನೆಗಳಿಗೆ ಪತ್ರಹರಿತ್ತನ್ನು ತುಂಬಿ ಅವು ಸದಾ ಹಸುರಾಗಿಯೂ ತಾಚಾ ಆಗಿಯೂ ಆದರೂ ಒಂದು ಕೋಮಲ ರುಚಿಯುಳ್ಳವುಗಳಾಗಿಯೂ ಇರುವಂತೆ ಮಾಡಿವೆ. ಈ ಕ್ಷೇತ್ರದಲ್ಲಿ ಅವರ ಕೊಡುಗೆ ಅನ್ಯಾದೃಶ ತನ್ನ ಸ್ವಂತ ಪ್ರತಿಭೆಯಿಂದಲೇ ಈತ ಮಲೆಯಾಳಿ ಕಥಾಸಾಹಿತ್ಯದಲ್ಲಿ ಹೊಸ ಮಾರ್ಗವೊಂದನ್ನು ಸೃಷ್ಟಿಸಿದರು, ಏಕೆಂದರೆ ಈತ ಏಕಭಾಷಾ ಪ್ರಭುತ್ವವುಳ್ಳ ಲೇಖಕ, ಇವರ ಬರವಣಿಗೆಯ ಮೇಲೆ ಪರಭಾಷಾ ಸಾಹಿತ್ಯಗಳ ಪ್ರಭಾವ ಆಗುವಂತೆಯೇ ಇರಲಿಲ್ಲ, ಎಷ್ಟೊಮಂದಿ ವಿಮರ್ಶಕರು ಈ ಅಂಶಕ್ಕೆ ತೀರ ಹೆಚ್ಚು ಪ್ರಾಧಾನ್ಯ ಕೊಟ್ಟು ಒಳ್ಳೆಯ ಉದ್ದೇಶದಿಂದಲೇ ಆದರೂ ಹೆಚ್ಚು ವಿವೇಚನೆ ಇಲ್ಲದೆ ಇವರ ಎಲ್ಲ ಕಥೆಗಳಿಗೂ ‘ಮಣ್ಣಿನ ವಾಸನೆ’ ಎಂಬ ತಲೆಚೀಟಿಯನ್ನು ಅಂಟಿಸಿಬಿಟ್ಟಿದ್ದಾರೆ. ಕಥನಕಲೆ ಕರೂರರಲ್ಲಿ ರಕ್ತಗತವಾಗಿಯೇ ಬಂದದ್ದು. ಅಭಿವ್ಯಕ್ತಿಯಲ್ಲಿ ಅವರು ಏಕಭಾಷಾ ಪರರು ನಿಜ, ಆದರೆ ಅವರ ಅನುಭವಕ್ಕೆ ಅನೇಕ ಪದರುಗಳಿದ್ದು ಅವುಗಳ ಒಟ್ಟು ಕಟ್ಟಿನಿಂದಲೇ ಅವರ ಸೃಜನಕ್ರಿಯೆಯ ಸೆಲೆಗಳು ಚಿಮ್ಮಿದುವು, ಒಟ್ಟಿನಲ್ಲಿ ಅವರ ಕಥಾಕೃತಿಗಳು ಅಷ್ಟೇನೂ ಮೃಣ್ಮಯಗಳಲ್ಲ, ಕೆಲವು ವಿಮರ್ಶ ಕರು ಸಾರಿರುವ ಹಾಗೆ, ಅವುಗಳಲ್ಲಿ ಆಕಾಶದ ಮತ್ತು ಭೂಗರ್ಭ ಖನಿಜಗಳ ಅಂಶಗಳೂ ಇವೆ, ಅವುಗಳ ಪ್ರವಾಹಗಳೂ ಕಿಡಿಗಳೂ ಮನುಷ್ಯನ ಮನಸ್ಸಿನ ಗುಪ್ತ ಮೂಲೆಮೂಲೆಗಳ ಮೇಲೂ ಪ್ರಕಾಶ ಚೆಲ್ಲಿ ಆ ಗುಪ್ತ ಆಳಗಳ ವಿವಿಧ ವರ್ಣಮಯತೆಯನ್ನೂ ಸಾಂದರ್ಭಿಕ ವಿನ್ಯಾಸಗಳನ್ನೂ ತೆರೆದು ತೋರುತ್ತವೆ. ಮಾನವ ಚಿತ್ರದ ಮಲ ಮಾದರಿಗಳ ಸಾಹಚರ್ಯವನ್ನೂ ಗಾಢ ಮನಃಶಾಸ್ತ್ರದ ಅರಿವನ್ನೂ, ಫ್ರಾಯ್ಡನ ಮನಃಶಾಸ್ತ್ರ ಸೂತ್ರಗಳ ನೆಲೆಗಳನ್ನೂ ಅವುಗಳಲ್ಲಿ ಕಾಣಬಹುದು, ತುಂಬ ಸೂಕ್ಷಜ್ಞ ವಿವಂರ್ಶಕರೂ ಖ್ಯಾತ ನಾಟಕಕಾರರೂ ಆಗಿದ್ದ ದಿವಂಗತ ಐ.ಜೆ. ಥಾಮಸ್ ಅವರು ಕರೂರರ “ಪೂವನ್’ ಪಜಮ್” ಎಂಬ ಕಥೆಯ ಮೇಲೆ ಅರ್ಥಪೂರ್ಣವಾದೊಂದು ಪ್ರಬಂಧವನ್ನು ಬರೆದು ಆ ಕಥೆಯ ವಸ್ತುವನ್ನೂ ಬಂಧವನ್ನೂ ಫ್ರಾಯ್ಡನ ದೃಷ್ಟಿಯಿಂದ ವಿಶ್ಲೇಷಿಸಿದ್ದಾರೆ, ಅವರ “ಮರದ ಗೊಂಬೆಗಳು” ಎಂಬ ಇನ್ನೊಂದು ಕಥೆ ವಿಮರ್ಶಕರ ಸಾಧಾರಣೀಕೃತ ವರ್ಗಿಕರಣವನ್ನು ನಿರಾಕರಿಸಿ ನಿಲ್ಲುತ್ತದೆ. ಮಲೆಯಾಳಿ ಸಾಹಿತ್ಯದಲ್ಲಿ “ಇದು ಕರೂರರದ್ದು” ಎಂದು ಮಾತ್ರ ಹೇಳಲು ಸಾಧ್ಯ ಎನ್ನುವಂಥ ಅನೇಕ ಕಥೆಗಳನ್ನು ಇವರು ರಚಿಸಿದ್ದಾರೆ. ಮಲೆಯಾಳಿಯಲ್ಲಿ ಸಾರ್ಥಕ ಕಥಾರಚನೆ ಮಾಡಿದ ಹಳೆಯ ತಲೆಮಾರಿನ ಸಾಹಿತಿಗಳಲ್ಲಿ ವೈಕೋಮ್ ಮಹಮ್ಮದ್ ಬಶೀರ್ ಮತ್ತು ಕರೂರ್ ನೀಲಕಂಠ ಪಿಳ್ಳೆ ಈ ಇಬ್ಬರ ಹೆಸರುಗಳು ಎದ್ದು ಕಾಣುವಂಥವು, ಈ ಇಬ್ಬರದೂ ಬೇರೆ ಬೇರೆ ಸ್ವತಂತ್ರ ಕ್ಷೇತ್ರ: ಆದರೆ ಗುಣ ದೃಷ್ಟಿಯಿಂದ ಹೆಚ್ಚುಕಡಿಮೆ ಸರಿಸಮಾನ ಸ್ಥಾನ, ಕರೂರರು ಎರಡು ಕಾದಂಬರಿಗಳನ್ನೂ ಒಂದು ಸಣ್ಣ ನಾಟಕವನ್ನೂ ರಚಿಸಿದ್ದಾರೆ. ಆದರೆ ಬಾಲಕರಿಗಾಗಿ ಕಥೆಗಳನ್ನು ಬರೆದವರ ಪೈಕಿ ಕರೂರರಿಗೆ ಸಮಾನರಾದವರು ಬೇರೆ ಇಲ್ಲ. ಇವರಂ ಎಳೆಯರಿಗೆ ಅತ್ಯಂತ ಪ್ರೀತಿಯ ಪ್ರೀತಿಪಾತ್ರ, ಕಥೆಗಾರ ಅಜ್ಜ; ತರುಣ ಲೇಖಕರಿಗೆ ಮಾರ್ಗದರ್ಶಕ; ಹಿರಿಯ ಲೇಖಕರಿಗೆ ಸಮರ್ಥ ಸಮಾನಸ್ಕಂಧ.
ಈಗ ಕರೂರ್ ನೀಲಕಂಠ ಪಿಳ್ಳೆ ತಮ್ಮ ಅಸಂಖ್ಯ ಸಹೃದಯರಿಗೆ ತಾವೇ ಒಂದು ಕಥೆಯಾಗಿ ಬಿಟ್ಟಿದ್ದಾರೆ, ಇದು ಸಂಕಲ್ಪಿಸಿ ಪರಿಶ್ರಮದಿಂದ ದುಡಿದು ತನ್ನ ಬದುಕನ್ನಷ್ಟೆ ರೂಪಿಸಿಕೊಂಡವನ ಕಥೆ ಅಷ್ಟೆ ಅಲ್ಲ, ತನ್ನ ಅನೇಕ ಸಹಲೇಖಕರಿಗೆ ಜೀವನೋಪಾಯವನ್ನು ಒದಗಿಸಿಕೊಟ್ಟ ಮನುಷ್ಯನೊಬ್ಬನ ಕಥೆ, ಕೋಟಾಯಮ್ಮಿನಲ್ಲಿ ತನ್ನ ಮುಖ್ಯ ಕಾರ‍್ಯಾಲಯವಿರುವ ‘ಸಾಹಿತ್ಯ ಪ್ರವರ್ತಕ ಸಹಕರಣ ಸಂಘಂ’ ಎಂಬ ಸಂಸ್ಥೆ ಮುಖ್ಯವಾಗಿ ಈತನ ದರ್ಶನ ಮತ್ತು ಮೇಲ್ವಿಚಾರಣೆಯಲ್ಲಿ ಸಫಲವಾಗಿ ರೂಪುಗೊಂಡ ಧನಾತ್ಮಕ ಪರಿಣಾಮ, ಈ ಸಂಸ್ಥೆಯ ಬೆಳವಣಿಗೆಯಲ್ಲಿ ಎಂ. ಪಿ. ಪಾಲ್, ಡಿ.ಸಿ.ಸಿ.ಕೆ. ಮಣಿ, ಸಿ.ಜೆ.ಥಾಮಸ್, ಕೇಶವದೇವ, ಪೊಂಕನ್ನನ್ ವಾರ್ಕಿ,
ಎನ್. ಕೃಷ್ಣ ಪಿಳ್ಳೆ, ಪಿ.ಕೆ. ಬಾಲಕೃಷ್ಣನ್, ಎಸ್.ಕೆ. ಪೊಟೈಕಾಟ್, ಸಿ.ಪಿ. ಶ್ರೀಧರನ್ ಅಲ್ಲದೆ ಇನ್ನೂ ಅನೇಕರು ತಮ್ಮ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ ಎಂಬ ಸಂಗತಿಯನ್ನು ಸರ್ವಥಾ ಬೆಲೆ ತಗ್ಗಿಸಿ ಹೇಳುವಂತಿಲ್ಲ, ಅಲ್ಲದೆ, ಪರಿಶ್ರಮವಹಿಸಿ ಕೆಲಸಮಾಡಿದ ಸಹಕಾರಿಗಳ ಹೆಸರುಗಳ ಪಟ್ಟಿ ಈ ಕೆಲವರ ಹೆಸರುಗಳಲ್ಲೇ ಮುಗಿಯುವಂಥದೂ ಅಲ್ಲ. ಸಹಕಾರ ಸಂಘದಲ್ಲಿ ಪ್ರತಿ ಸದಸ್ಯನೂ ಅಧಿಕಾರದ ಪ್ರತ್ಯೇಕ ಸ್ವತಂತ್ರ ಘಟಕ, ನಿರ್ಣಾಯಕ ಸಹಭಾಗಿ, ಈ ಎಸ್.ಪಿ.ಸಿ.ಎಸ್. ಸಂಘಕ್ಕೂ ಹಲ್ಲು ಮೊಳೆಯುವಾಗಿನ ಜಡ್ಡು, ಬಾಲಗ್ರಹ ಪೀಡೆ ತಪ್ಪಲಿಲ್ಲ. ಸಹಕಾರದ ಪರಿಧಿಯೊಳಗೇ ವಿರೋಧ ಶಕ್ತಿ ಬೆಳೆಯುವುದು ಒಂದು ವಿರೋಧಾ ಭಾಸವೇ ಸರಿ, ಆದರೆ ಈ ಸಂಘ ಈ ಎಲ್ಲ ದಡಾರದಂಥ ರೋಗಗಳನ್ನು ಕೊರೆದು ಸುಟ್ಟು ತಿಂದು ಹಾಕಬಲ್ಲ ಎಲ್ಲ ಅಂತರ್ವಿರೋಧಗಳನ್ನು ಗೆದ್ದು ಬದುಕಿಕೊಂಡಿತು. ಈ ಅದ್ಭುತಕ್ಕೆ ಮುಖ್ಯ ಅಭಿನಂದನೆ ಕರೂರ್ ನೀಲಕಂಠ ಪಿಳ್ಳೆಯರಿಗೇ ಸಲ್ಲಬೇಕು. (ತಮ್ಮ ವಿಶಿಷ್ಟ ರೀತಿಯಲ್ಲಿ ಆತ ಆಯುರ್ವೇದ ವೈದ್ಯರೂ ಕೂಡ.) ಅವರು ತಮ್ಮ ಕಾರ್ಯನಿರತ ಜೀವನದ ಇಪ್ಪತ್ತು ವರ್ಷಗಳನ್ನು ಈ ಸಂಘವನ್ನು ಸರಿಯಾಗಿ ನಡೆಸಿ ಕೊಂಡು ಹೋಗುವುದಕ್ಕೂ ಅದನ್ನು ಸುದೃಢಗೊಳಿಸುವುದಕ್ಕೂ ವಿನಿಯೋಗಿಸಿದರು. ಇಷ್ಟು ಸತ್ವಶಾಲಿಯೂ ನೀತಿನಿಯಮಬದ್ಧನೂ ಆದ ಈ ಮಹಾಶಯ ಈ ಹೊಸ ಹಡಗನ್ನು ತೆರೆತೆರೆಗಳಿಂದ ಅಲ್ಲೋಲ ಕಲ್ಲೋಲವಾಗಿ ದುಸ್ತರವಾದ ಸಮುದ್ರದ ಮೇಲೆ ಮುನ್ನುಗ್ಗಿಸುತ್ತ, ನೀರ್ಗಲ್ಲು ಗುಡ್ಡಗಳಿಂದಲೂ, ಅತ್ತಿತ್ತ ಹೊಂಚುಹಾಕಿ ಸುಳಿಯುತ್ತ ಹಡಗೊಡೆದರೆ ಸಾಕು ಒಳಗಿರುವವರನ್ನೆಲ್ಲ ನುಂಗಲು ಯತ್ನಿಸುತ್ತಿದ್ದ ಹುಲಿ ಮೀನುಗಳಿಂದಲೂ ತಪ್ಪಿಸಿಕೊಳ್ಳುತ್ತ ದೃಢವಾಗಿ ನಿಂತಿದ್ದರಲ್ಲಿ ಆಶ್ಚರ್ಯವಿಲ್ಲ.
ಕರೂರ್ ಹುಟ್ಟಾ ಶಿಕ್ಷಕ, ಸಹಕಾರಿ ಪ್ರಾಥಮಿಕ ಶಾಲೆಯ ಅಧ್ಯಾಪಕರಾಗಿ ಈತ ಮಕ್ಕ ಳಿಗೆ ಪಾಠ ಕಲಿಸಿದರು, ಶಿಕ್ಷಕ ಸೇವೆಯಿಂದ ನಿವೃತ್ತರಾದ ಮೇಲೂ ಅದೇ ಕೆಲಸವನ್ನು ಮುಂದುವರಿಸಿದರು, ಲೇಖಕರು ತರುಣರೇ ಆಗಿರಲಿ, ಹಿರಿಯರೇ ಆಗಿರಲಿ, ತಮ್ಮ ಸರಕನ್ನು ತೆಗೆದುಕೊಂಡು ಪ್ರಕಾಶಕರ ಬಾಗಿಲಲ್ಲಿ ಭಿಕ್ಷುಕರಂತೆ ನಿಂತು ಯತ್ಕಿಂಚಿತ್. ಸಂಭಾವ ಭಾವನೆಯಿಂದಲೂ ವರ್ತಿಸಿದರೆ ದೊರೆಯುವ ಪ್ರತಿಫಲಗಳು ಎಂಥವು ಎಂಬುದನ್ನು ಕುರಿತು ಆಗ ಪಾಠ ಹೇಳಲು ತೊಡಗಿದರು, ಕಥೆಗಾರರಾಗಿ ಕರೂರರು ಕಲಾರೂಪದ ಸೌಂದರ್ಯಕ್ಕೆ ಬೆಲೆಕೊಡುತ್ತಿದ್ದರೆ ಸಂಘದ ಸಂಸ್ಥಾಪಕ ಕಾರ್ಯದರ್ಶಿಯಾಗಿ ನೀತಿ ಸೂತ್ರಗಳಿಗೆ ಬೆಲೆ ಕೊಡುತ್ತಿದ್ದರು.
ಲೇಖಕರು ಮೂಲತಃ ಶಬ್ದಗಳನ್ನು ವ್ಯವಸ್ಥೆಗೊಳಪಡಿಸುವವರು, ಹಾಗೆ ಮನುಷ್ಯ ರನ್ನು ವ್ಯವಸ್ಥೆಗೊಳಪಡಿಸುವುದರಲ್ಲಿ ನಿಪುಣರಲ್ಲ, ತೀರ ಸೂಕ್ಷವೇದಿಗಳೂ, ಹೊರಗಡೆಯ ಬದಲಾವಣೆ ಬಲವಂತಗಳಿಗೆ ಬದ್ಧ ವಿರೋಧಿಗಳೂ ಆಗಿ ಕೆಲವರು ಲೇಖಕರು ವ್ಯಕ್ತಿ ಪ್ರತ್ಯೇಕತೆಯನ್ನು ಬಯಸುವಂಥವರು. ಅವರಲ್ಲಿ ಕೆಲವರು ಆ ಆ ಕಾಲದ ಫ್ಯಾಶನ್ನು ಅಥವಾ ಖಯಾಲಿಗನುಸಾರವಾಗಿ ತೀರ ಪೆದ್ದುಪೆದ್ದಾಗಿ ದುರಹಂಕಾರವನ್ನು ಮೆರೆಯುವಂಥವರೂ ಆಗಿರುತ್ತಾರೆ. ಒಟ್ಟಿನಲ್ಲಿ ಯಾವುದೇ ರೀತಿಯಲ್ಲಿ ತಾಳಿ ಬಾಳಬಲ್ಲ ಸಂಘವನ್ನು ಕಟ್ಟಿ ರೂಪುಗೊಡಲು ಅಸಾಧ್ಯವೆನ್ನುವಂಥ ಸಾಮಗ್ರಿಗಳಾಗಿ ಲೇಖಕರು ಇರುತ್ತಾರೆ.
ಈ ಅಸಾಧ್ಯ ಸಂಗತಿಯನ್ನು ಸಾಧ್ಯಮಾಡಿದವರು ಕರೂರ್, ಅವರು ಇದನ್ನು ಸಾಧ್ಯ ಮಾಡಿದ್ದು ಸಹಜವಾಗಿ, ನಯವಾಗಿ, ಮೃದುವಾಗಿ, ಉದ್ದೇಶದ ದೃಢತೆಯಿಂದ, ಬಿಗಿಗೊಳಿಸಿದ ಶಿಸ್ತಿನಿಂದ. ಈ ಗುಣಗಳನ್ನು ಅವರು ಆ ಆ ಸನ್ನಿವೇಶಕ್ಕೆ ಅನುಗುಣವಾಗಿ ತಾತ್ಪೂರ್ತಿಕವಾಗಿ ಅಥವಾ ವೈಯಕ್ತಿಕವಾಗಿ ಉಪಯೋಗಿಸುತ್ತಿದ್ದರು. ಎಸ್.ಪಿ.ಸಿ.ಎಸ್.ಗೆ ಅವರು ಕರ್ಣಧಾರರಾಗಿ ಇದ್ದ ತನಕವೂ ಆ ಸಂಸ್ಥೆಗೆ ಮಾರ್ಗದರ್ಶಕವಾಗಿದ್ದುದ್ದು ಕರೂರರ ಅಚಲ ಶ್ರದ್ದೆಯೇ, ರೂಪದಲ್ಲಿ ಅದು ಸಹಕಾರ ಸಂಘ : ಅಂತಃ ಸ್ವರೂಪದಲ್ಲಿ ಅದು ಅವಿಭಕ್ತ ಕುಟುಂಬ ; ಹಿರಿಯರೊಬ್ಬರು ಎಲ್ಲರ ಒಳಿತಿಗಾಗಿ ವ್ಯವಹಾರಗಳನ್ನು ನಡೆಸಿಕೊಂಡು ಹೋಗುವ ರೀತಿ, ಜಗಲಿಸಾರಿಗಳಲ್ಲಿ ಮರ್ಮರಿಸುವ ಪಿಸು ಮಾತು, ಸಮ್ಮುಖವಾಗಿ ನಡೆಯುವ ಕೃತಕವಾದ ಜಗಳಗಳು -ಇವುಗಳಿಗೆ ಅವರು ಎಂದೂ ಲಕ್ಷ್ಯ ಕೊಡುತ್ತಿರಲಿಲ್ಲ, ಯಾರಾದರೂ ಚಾಡಿ ಹೇಳಲು ಹೋದರೆ ಅವರು ಅದನ್ನು ನಗುವಿನಲ್ಲಿ ತೇಲಿಸಿಬಿಡುತ್ತಿದ್ದರಲ್ಲದೆ ಚಾಡಿಖೋರರನ್ನು ನಿಷ್ಟುರವಾಗಿ ತರಾಟೆಗೆ ತೆಗೆದುಕೊಂಡು ಎಚ್ಚರಿಕೆ ಕೊಡುತ್ತಿದ್ದರು. ಆಡಳಿತ ಮಂಡಳಿಯ ಅಥವಾ ಸರ್ವ ಸದಸ್ಯರ ಸಭೆಗಳಲ್ಲಿ ಟೀಕೆಗಳನ್ನು ಧೈರ್ಯವಾಗಿ ಎದುರಿಸಿ ಟೀಕೆ ಮಾಡುವವರ ವಾದದಲ್ಲಿನ ದೋಷಗಳನ್ನೂ ಮಿಥ್ಯಾಭಿಪ್ರಾಯಗಳನ್ನೂ ತೆರೆದು ತೋರಿಸಿ ಟೀಕಾಕಾರರನ್ನು ಸಮಾಧಾನ ಪಡಿಸುತ್ತಿದ್ದರು. ಅಂಕೆ ಸಂಖ್ಯೆಗಳಿಂದ ಕೂಡಿ ಮೃದುಮಧುರವೂ ತರ್ಕ ಬದ್ಧವೂ ಆಗಿರುತ್ತಿದ್ದ ಅವರ ಉತ್ತರಗಳು ಸತ್ಯಸಂಗತಿ ಮತ್ತು ಕಲ್ಪನೆ ಇವುಗಳ ನಡುವಣ ನೀರೂಪಾಂತ್ಯವನ್ನು ಅಸಂದಿಗ್ಧವಾದ ಸ್ಪಷ್ಟ ರೀತಿಯಲ್ಲಿ ಚಿತ್ರಿಸುತ್ತಿದ್ದುವು, ಅವರಲ್ಲಿ ಮನವೊಲಿಸುವ ಶಕ್ತಿ ಇತ್ತು; ಅದು ಮನುಷ್ಯ ಸಂಬಂಧಗಳಲ್ಲೂ ವ್ಯವಹಾರಗಳಲ್ಲೂ ಅಲಕ್ಷದ, ಸೋಮಾರಿತನದ, ಅಥವಾ ತಪ್ಪು ತಿಳಿವಳಿಕೆಯ ಪ್ರಸಂಗಗಳು ಕಣ್ಣಿಗೆ ಬಿದ್ದಾಗ ಅವುಗಳನ್ನು ತಿದ್ದಿ ಬಂಡವಳಿಕೆ ತರಬೇಕೆಂಬ ಆಂತರಿಕ ಬಲವಂತ.
ಕರೂರ್ ನೀಲಕಂಠ ಪಿಳ್ಳೆ ಈಗ ಮೃತರು. ಆದರೆ ಅವರು ಇನ್ನು ಇಲ್ಲ ಅಂತಲ್ಲ. ಈಗಲೂ ಅವರು ಕೇರಳದಲ್ಲಿ ಅವರ ಬಂಧುಬಳಗದ. ಸ್ನೇಹಿತರ, ಸಾಹಿತಿ ಬಂಧುಗಳ ಹೃದಯಂಗಳಲ್ಲಿ ಇನ್ನೂ ಇದ್ದಾರೆ. ಆತ ಕೇರಳದ ಗಡಿಯಾಚೆಯೂ ಅವರ ಸ್ನೇಹಿತರುಗಳಾದ ಶ್ರೀನಗರದ ಅಖ್ತಾರ್ ಮೊಹಿಯುದ್ದೀನ್, ಬೊಂಬಾಯಿಯ ಗುಲಾಬ್ ದಾಸ್ ಬ್ರೋಕರ್, ಆಂಧ್ರದ ಪದ್ಮರಾಜು, ಬೆಂಗಳೂರಿನ ಗೋಪಾಲಕೃಷ್ಣ ಅಡಿಗ, ಡಾ. ಪ್ರಭಾಕರ ಮಚ್ಚೆ, ಕ ನಾ, ಸುಬ್ರಹ್ಮಣ್ಯಂ, ವಸಂತ ದೇವಕರ್, ಸಿ, ಎಸ್. ಚೆಲ್ಲಪ್ಪ, ಗಂಗಾಧರ ಗಾಡ ಗೀಳ್ ಇವರಲ್ಲಿ, ವೈಯಕ್ತಿಕವಾಗಿ ಬಲ್ಲ ಇನ್ನೂ ಎಷ್ಟೋ ಮಂದಿ ಗೆಳೆಯರಲ್ಲಿ, ಎಲ್ಲಕ್ಕಿಂತ ಹೆಚ್ಚಾಗಿ ತಾವು ಸೃಷ್ಟಿಸಿರುವ ಪಾತ್ರಗಳಲ್ಲಿ ಜೀವಂತವಾಗಿ ಉಳಿಯುತ್ತಾರೆ. ಆ ಎಲ್ಲ ಪಾತ್ರಗಳೂ ಕರೂರರ ಮಾತನ್ನು ಆಡುತ್ತವೆ, ಆತನ ಚೈತನ್ಯವನ್ನೇ ಉಸಿರಾಡಿಸುತ್ತವೆ; ಆತನ ಭಾವಚಿತ್ರವನ್ನೂ ಆತನ ಆಂತರಿಕ ವೈಯಕ್ತಿ ಕತೆಯನ್ನೂ ಅವು ಮತ್ತೆ ಮತ್ತೆ ಅನಾವರಣಗೊಳಿಸುತ್ತವೆ. ಇವರ ಹಿರಿಯ ಮಗಳು ಶ್ರೀಮತಿ ಬಿ. ಸರಸ್ವತಿ ಸಣ್ಣ ಕಥೆಗಳ ಲೇಖಕಿ ಹೈಸ್ಕೂಲಿನಲ್ಲಿ ಶಿಕ್ಷಕಿ ಆಗಿದ್ದಾರೆಂಬ ಮಾತನ್ನು ಇಲ್ಲಿ ಸೇರಿಸಬಹುದು.
ಅವರ ಬದುಕು ಎಷ್ಟರ ಮಟ್ಟಿಗೆ ಪರಿಪೂರ್ಣ ಆಗಿತ್ತು ? ಅದು ಆಗಲೇ ಹೇಳಿದಂತೆ ಮುಕ್ಕಾಲು ಮೂರು ವೀಸ ತುಂಬು ಬದುಕು, ಕರೂರರು ಲೇಖಕರಿಗೂ ವಾಚಕರಿಗೂ ಬಿಟ್ಟು ಹೋಗಿರುವ ಆಸ್ತಿ ತುಂಬ ಶ್ರೀಮಂತ, ಅವರು ಉಳಿದವರಿಂದ ಏನೂ ಬಯಸಲಿಲ್ಲ: ಕೃತಜ್ಞತೆಯನ್ನಾಗಲೀ ಗೌರವವನ್ನಾಗಲೀ, ಆತ ಕನಸಿಗ, ಆಶೆಬುರುಕದಲ್ಲ. ಅವರು ಕಂಡ ಕನಸು ಇದು: ಈ ದೇಶದ ಎಲ್ಲ ಕಡೆಗಳಲ್ಲೂ ಲೇಖಕರ ಸಹಕಾರ ಸಂಘ ಗಳನ್ನು ಸ್ಥಾಪಿಸಿ ಬೇರೆ ಬೇರೆ ಭಾಷೆಗಳ ಲೇಖಕರನ್ನೆಲ್ಲ ಒಂದುಗೂಡಿಸಿ ಅವರು ತಮ್ಮ ಕಾಲಮೇಲೆ ತಾವು ನಿಂತು ತಮ್ಮ ಕೃತಿಗಳ ಭಾಷಾಂತರಗಳ ಮೂಲಕ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಆ ರೀತಿಯಲ್ಲಿ ಬದುಕನ್ನೂ ಬರಹವನ್ನೂ ಒಂದಕ್ಕೊಂದು ಜೋಡಿಸುವುದು, ಈ ದೇಶದ ಮುಖ್ಯ ನದಿಗಳನ್ನೆಲ್ಲ ಒಂದುಗೂಡಿಸುವ ಕನಸಿನ ಹಾಗೆ. ಇರುವ ಸಾಂಸ್ಕೃತಿಕ ಶಿಲ್ಪವ್ಯವಸ್ಥೆಯ ಕನಸು ಇದು, ತಮಿಳುನಾಡಿನಲ್ಲಿ ಲೇಖಕರ ಸಹಕಾರ ಸಂಘವೊಂದು ಉದಯಿಸಿದೆ. ಹೆಚ್ಚುಕಡಿಮೆ ಅದು ಚೆನ್ನಾಗಿ ಕೆಲಸ ಮಾಡುತ್ತಲೂ ಇದೆ. ಇತ್ತೀಚೆಗೆ ಜಸ್ಟೀಸ್ ಜಿ.ಡಿ. ಖೋಸ್ಲಾ ಮತ್ತು ಡಿ.ಆರ್. ಮಂಕೇಕರರ ನೇತೃತ್ವದಲ್ಲಿ ರೂಪುಗೊಂಡಿರುವ `ರೈಟರ‍್ಸ್ ಗಿಲ್ಡ್’ (Writers’Guild) ಎಂಬ ಸಂಸ್ಥೆ ಬೇರೆ ಬೇರೆ ಭಾಷಾ ಪ್ರದೇಶಗಳ ಸಾಹಿತ್ಯ ಸಂಸ್ಥೆಗಳ ಪ್ರಾಮಾಣಿಕ ಸಹಕಾರದಿಂದಲೂ ಸಹಾಯದಿಂದಲೂ ಈ ಬಗೆಯು ಒಂದು ಸಾರ್ವತ್ರಿಕ ಕಾರಕ್ರಮವನ್ನು ಹಾಕಿಕೊಳ್ಳಬಹುದು. ಆದರೆ ಲೇಖಕರಲ್ಲಿ ಅವರ ಶಬ್ದಗಳೇ ಅವರ ಕೃತಿಗಳನ್ನು ಸಾಮಾನ್ಯವಾಗಿ ಮುಳುಗಿಸಿಬಿಡುತ್ತವೆ–ಈ ಶಬ್ದಗಳು ಕೆಲವು ಸಲ ಆರೋಗ್ಯಕರವಾಗಿ : ಇನ್ನೂ ಕೆಲವು ಸಲ ಪೊಳ್ಳಾಗಿ, ಕ್ಲೀಷೆಯಾಗಿ ಇರುತ್ತವೆ. ಬೇರೆಯವರ ಕುದುರೆಗಳನ್ನು ಓಡಿಸುವ ಚಾಕಿಗಳಾಗಿ ಭಾರತೀಯ ಲೇಖಕರು ಪರಿವರ್ತನೆಗೊಳ್ಳುವ ಅಪಾಯದಿಂದ ಭವಿಷ್ಯದ ಬಗ್ಗೆ ಒಂದು ಭಯಂಕರ ಚಿತ್ರ ಮೂಡುತ್ತದೆ, ಅಂಥ ಪ್ರಮಾದಗಳನ್ನೂ ಪತನಗಳನ್ನೂ ತಡೆದು ನಿವಾರಿಸಿಕೊಳ್ಳುವ ಹಾಗೆ ತಮ್ಮ ನಡವಳಿಕೆಯನ್ನು ರೂಪಿಸಿಕೊಳ್ಳುವುದು ನಮ್ಮ ಲೇಖಕರಿಗೆ ಭೂಷಣ.
ಈಗ್ಗೆ ಹತ್ತು ವರ್ಷಗಳ ಕೆಳಗೆ ಕರೂರರು ಲೇಖಕರ ಸಹಕಾರಿ ಸಂಘದ ಕಾರ್ಯದರ್ಶಿ ಪಧವಿಯಿಂದ ನಿವೃತ್ತರಾಗುವ ಕಾಲದಲ್ಲಿ ಕೊಟ್ಟಾಯಮ್ಮಿನಲ್ಲಿ ಒಂದು ಲೇಖಕರ ಗೋಷ್ಠಿ ನಡೆಯಿತು. ಅದರ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸಿದ್ದ ಕಾಶ್ಮೀರದ ಸಣ್ಣ ಕಥೆಗಾರ ಕಾದಂಬರಿಕಾರ ಅಖ್ತರ್ ಮೊಹಿಯುರ್ದ್ದೀ ತುಂಬ ಕಲ್ಪನಾಮಯವಾದ ಆದರೆ ಸುಸಂಗತವೂ ಆದ ಒಂದು ಮಾತು, ಭಾರತೀಯ ಸಾಹಿತ್ಯದ ಸ್ವಾರ್ಥಸಾಧಕ ಕಾವಲುಗಾರರಿಗೂ ಸಂಪ್ರದಾಯಬದ್ಧ ಮಹನೀಯರಿಗೂ ಕೊಂಚ ಅತಿ ಎನ್ನಿಸಿದರೂ-ಆಡಿದರು : “ಕರೂರ್ ನೀಲಕಂಠ ಪಿಳ್ಳೆ ಶಂಕರಾಚಾರ್ಯರ ಜನ್ಮಸ್ಥಳವಾದ ಕಾಲಟಿಗೆ ಹತ್ತಿರವಾಗಿರುವ ಕೊಟ್ಟಾಯಮ್ಮಿನಲ್ಲಿ ಜನಿಸಿದವರು, ಕೇರಳದಿಂದ ಕಾಶ್ಮೀರದವರೆಗೆ ಅನೇಕ ಸಾಂಸ್ಕೃತಿಕ ವಿದ್ಯಾಕೇಂದ್ರಗಳನ್ನು ಸಂಸ್ಥಾಪಿಸಿ ಶಂಕಾರಾ ಚಾರ್ಯರು ತಮ್ಮ ಕಾಲದ ಸಂಸ್ಕೃತಿಯನ್ನು ಸಮನ್ವಯ ಗೊಳಿಸಿದರು. ಒಂದು ದೃಷ್ಟಿಯಲ್ಲಿ ಶ್ರೀ ಕರೂರರೂ ಆಚಾರ‍್ಯರೇ, ಗುರುಗಳೇ, ಅವರು ಸ್ಥಾಪಿಸಿದ್ದು ಒಂದು ಸಾಹಿತ್ಯ ಮಠ-ಕೊಟ್ಟಾಯಮ್ಮಿನ ಎಸ್.ಐ.ಸಿ.ಎಸ್, ಈ ಬಗೆಯ ವಂಠಗಳು ದೇಶದ ಎಲ್ಲ ಕಡೆಗಳಲ್ಲೂ ಇದ್ದಿದ್ದರೆ……”
ಪುರಾತನ ಕಾಲದಲ್ಲಿ ಪಾಂಡ್ಯರಾಜ್ಯದ ರಾಜಧಾನಿಯಾಗಿದ್ದ ಮಧುರೆಯಲ್ಲಿ ತಮಿಳು ಭಾಷಾ ಸಾಹಿತ್ಯದ ಮೂರು ಸಂಘಗಳಿದ್ದುವೆಂದು ಹೇಳುತ್ತಾರೆ. ಅವು ತಮಿಳುನಾಡಿನಲ್ಲಿ ಸಾಹಿತ್ಯ ಕಲಾಚಿಂತನಗಳ ಮಹಾ ಸ್ವರ್ಣಯುಗಗಳು, ಈ ಸಂಘಗಳಿಂದ ಮೂರು ಮಹಾ ಕೃತಿಗಳು ಹೊರಬಂದುವು: ತಿರುಕ್ಕುರುಳ್, ಶಿಲಪ್ಪದಿಕಾರಂ ಮತ್ತು ಮಣಿ ಮೇಖಲೆ ಇತ್ಯಾದಿ. ಈ ಮಹಾಕೃತಿಗಳು ಆ ಕಾಲಗಳ ಮಹಾಸ್ಕೃತಿಗಳನ್ನು ತಲೆ ಮಾರಿನಿಂದ ತಲೆಮಾರಿಗೆ ದಾಟಿಸಿ ಉಳಿಸಿಕೊಂಡು ಬಂದು ಇಂದಿಗೂ ತಮಿಳು ಅಂತರಂಗವನ್ನು ಪುಳಕಗೊಳಿಸಿ ಶ್ರೀಮಂತವಾಗಿಸುತ್ತವೆ. ವಿರೋಧಾಭಾಸ ಭಾರದ ಹಾಗೆ ಸ್ಥಿತಿ, ಪರಿವರ್ತನೆ, ಸಾಂಪ್ರದಾಯ, ನವೀಕರಣ-ಇವುಗಳನ್ನು ಇಂದಿಗೂ ಉಳಿಸಿಕೊಂಡು ಬಂದಿರುವ ಒಂದು ಜನಾಂಗದ ಮುಖ್ಯ ಚಿತ್ತವೃತ್ತಿಯನ್ನು ಇಂದಿಗೂ ಅವು ಚುರುಕುಗೊಳಿಸಿ ಶ್ರೀಮಂತವಾಗಿಸುತ್ತವೆ.
ಮಲೆಯಾಳಿಗಳು ಒಂದೇ ಒಂದು ಸಂಘವನ್ನು ಕುರಿತು ಬಡಾಯಿ ಕೊಚ್ಚಿಕೊಳ್ಳಬಹುದು : ಅದಕ್ಕೆ ಇನ್ನೂ ಮೂವತ್ತು ವರ್ಷ ವಯಸ್ಸು, ಆದರೆ ಈ ಸ್ವಲ್ಪ ಕಾಲದಲ್ಲೇ ಅದರ ಬೆಳವಣಿಗೆಯನ್ನು ನಿಷ್ಕೃಷ್ಟವಾಗಿ ಅಳೆದರೆ ಅದು ಸುಮಾರು ಮೂರು ಶತ ಮಾನಗಳಷ್ಟು ಹಿಂದಕ್ಕೆ ಸರಿಯಬೇಕಾಗಬಹುದು. ನಂಬುವುದು ಕಷ್ಟ ಹೌದು ; ಆದರೂ ಮುಗ್ಧ ಸತ್ಯ.
ಮಲೆಯಾಳಂ ಸಾಹಿತ್ಯದಲ್ಲಿ ಈ ಆಧುನಿಕ ಸಂಘದ ಪ್ರವರ್ತಕ ಹರಿಕಾರ ನಿಜವಾಗಿಯೂ ಕರೂರ್ ನೀಲಕಂಠ ಪಿಳ್ಳೆ ಅಲ್ಲದೆ ಬೇರೆ ಯಾರೂ ಅಲ್ಲ.
Leave A Comment